ಕ್ಷೇಮಾಭಿವೃದ್ಧಿ ಹೆಸರಲ್ಲಿ ಸರ್ವಾಧಿಕಾರ
ಪ್ರಜಾವಾಣಿ, ಸೆಪ್ಟೆಂಬರ್ 4, 2026
ಅತಿ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಮಹಾನಗರದಲ್ಲಿ ಪ್ರತಿಷ್ಠಿತ ಸಂಸ್ಥೆಗಳು ಕಟ್ಟಿದ ವಸತಿ ಸಮುಚ್ಚಯಗಳಲ್ಲಿ ಮಾಲಕರ ಅಥವಾ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ತಮ್ಮ ಉದ್ದೇಶಗಳಿಗೆ ತದ್ವಿರುದ್ಧವಾಗಿ ಸಮುಚ್ಚಯದ ಕ್ಷೇಮವನ್ನು ಹಾಳುಗೆಡಹುವ ಸಂಘಗಳಾಗುತ್ತಿವೆ. ಈ ಬಗ್ಗೆ ಸರಕಾರವು ತುರ್ತಾಗಿ ಗಮನ ಹರಿಸದಿದ್ದರೆ ಬೆಂಗಳೂರಿನ ವಾಣಿಜ್ಯಿಕ ಮೌಲ್ಯವೇ ಕುಸಿಯುವ ಭೀತಿ ಎದುರಾಗಲಿದೆ.
ವಸತಿ ನಿರ್ಮಾಣ ಸಂಸ್ಥೆಗಳು ಮನೆಗಳನ್ನು ಮಾಲಕರಿಗೆ ಹಸ್ತಾಂತರಿಸುತ್ತಿದ್ದಂತೆ ಈ ಸಂಘಗಳನ್ನು ರಚಿಸುವುದಕ್ಕೆ ತರಾತುರಿಯಲ್ಲಿ ಸಭೆಗಳನ್ನು ಕರೆಯುತ್ತವೆ. ಇದನ್ನೇ ಕಾದುಕೊಂಡಂತಿರುವ ಕೆಲವರು ಈ ಅವಸರವನ್ನು ಬಳಸಿಕೊಂಡು ಅಧ್ಯಕ್ಷರೋ, ಕಾರ್ಯದರ್ಶಿಗಳೋ ಆಗಿ ಸಂಘವನ್ನೇ ಕಬಳಿಸಿಕೊಳ್ಳುತ್ತಾರೆ. ಇವರು ವಸತಿ ಸಮುಚ್ಚಯದ ಮನೆಗಳ ನಿರ್ವಹಣಾ ಶುಲ್ಕದ ನಿರ್ಣಯ ಮತ್ತು ಸಂಗ್ರಹ, ಸುರಕ್ಷತೆ ಮತ್ತು ಸ್ವಚ್ಚತಾ ಕರ್ಮಿಗಳ ನೇಮಕಾತಿ ಮತ್ತು ನಿಭಾವಣೆ ಇತ್ಯಾದಿಗಳನ್ನು ತಮಗೆ ಬೇಕಾದಂತೆ ಮಾಡಿಕೊಂಡು ಇಡೀ ಸಮುಚ್ಚಯವನ್ನೇ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಾರೆ, ಉಳಿದೆಲ್ಲ ನಿವಾಸಿಗಳ ಮೇಲೆ ತಮ್ಮ ದರ್ಪವನ್ನು ಹೇರತೊಡಗುತ್ತಾರೆ.
ಈ ಪದಾಧಿಕಾರಿಗಳು ಸುರಕ್ಷತೆಯನ್ನು ಕಡೆಗಣಿಸಿ, ಯಾವುದೇ ಪರವಾನಿಗೆಯನ್ನು ಪಡೆಯದೆ ಸಮುಚ್ಚಯದೊಳಗೆ ಏನೇನೋ ಕಟ್ಟುವುದು, ನಿರ್ವಹಣೆ ಶುಲ್ಕದ ಹಣವನ್ನು ದುರುಪಯೋಗಿಸುವುದು, ಸುರಕ್ಷತೆ ಮತ್ತು ಸ್ವಚ್ಚತಾ ಸಿಬ್ಬಂದಿಗಳನ್ನು ನಿಯಮ ಮೀರಿ ದುಡಿಸುವುದು ಇತ್ಯಾದಿಯಾಗಿ ಅಧಿಕಾರ ದುರ್ಬಳಕೆ ಮಾಡುತ್ತಲೇ ಹೋಗುತ್ತಾರೆ. ಇವನ್ನು ಪ್ರಶ್ನಿಸುವ ನಿವಾಸಿಗಳನ್ನು ಬೆದರಿಸುವುದು, ವಾಟ್ಸಾಪ್ ಮುಂತಾದ ಮಾಧ್ಯಮ ಬಳಗಗಳಲ್ಲಿ ನಿಂದಿಸುವುದು, ಅಂಥವರ ಮನೆಗಳಿಗೆ ಬರುವ ಬಂಧುಗಳು ಮತ್ತು ಪೂರೈಕೆದಾರರನ್ನು ಒಳಬಿಡದೆ ತಡೆಯುವುದು, ಸುರಕ್ಷತಾ ಕರ್ಮಿಗಳ ಮೂಲಕ ತೊಂದರೆ ನೀಡುವುದು ಎಲ್ಲವೂ ನಡೆದು, ಕೋಟಿ ಹಣ ಕೊಟ್ಟು ಖರೀದಿಸಿದ ಮನೆಯಲ್ಲಿ ಬದುಕುವುದೇ ಅಸಹನೀಯವಾಗುವಂತೆ ಮಾಡಲಾಗುತ್ತದೆ. ಅನ್ಯ ರಾಜ್ಯಗಳವರು ಪದಾಧಿಕಾರಿಗಳಾಗಿರುವಲ್ಲಿ, ಹೆಚ್ಚಿನ ಸುರಕ್ಷತಾ ಕರ್ಮಿಗಳೂ ಕೂಡ ಹೊರಗಿನವರಾಗಿರುವಲ್ಲಿ ಕನ್ನಡಿಗ ನಿವಾಸಿಗಳಿಗೂ, ಮನೆ ಕೆಲಸಗಳಿಗೆ ಬರುವ ಸ್ಥಳೀಯರಿಗೂ ಹೆಚ್ಚಿನ ತೊಂದರೆಗಳಾಗುತ್ತಿರುವ ಬಗ್ಗೆ, ಅನ್ಯ ಭಾಷೆಗಳಲ್ಲೇ ಮಾತಾಡುವಂತೆ ಬೆದರಿಕೆಗಳಾಗುತ್ತಿರುವ ಬಗ್ಗೆಯೂ ವರದಿಗಳಾಗುತ್ತಲೇ ಇವೆ. ಹೆಚ್ಚಿನವರು ಇಂಥ ಕಷ್ಟಗಳೇ ಬೇಡವೆಂದು ತೆಪ್ಪಗಿರುತ್ತಾರೆ, ಬೇಸತ್ತು ಮನೆಗಳನ್ನು ಮಾರಿ ಹೋದವರೂ ಇದ್ದಾರೆ.
ಈ ಸಂಘಗಳ ಅಕ್ರಮಗಳು ಮತ್ತು ದುಷ್ಟತನಗಳ ಬಗ್ಗೆ ಪೋಲೀಸು, ಬಿಬಿಎಂಪಿ, ಅಗ್ನಿಶಾಮಕ ದಳ, ಕಾರ್ಮಿಕ ಇಲಾಖೆ ಮುಂತಾದೆಡೆ ಲಿಖಿತ ದೂರನ್ನಿತ್ತರೂ ಪ್ರಯೋಜನವಾಗದೆ ಮೇಲಧಿಕಾರಿಗಳನ್ನೇ ಮೊರೆ ಹೋಗಬೇಕಾಗಿ ಬಂದ ಪ್ರಕರಣಗಳೂ ಇವೆ. ಪ್ರತಿಷ್ಠಿತ ಕಂಪೆನಿಯ ಸಮುಚ್ಚಯವೊಂದರಲ್ಲಿ ಆಟದ ಕೋಣೆಯನ್ನು ನಿಯಮಬಾಹಿರವಾಗಿ ನಿರ್ಮಿಸಿದ ಬಗ್ಗೆ ಎಲ್ಲ ಕಡೆ ದೂರಿತ್ತರೂ ಏನೂ ಆಗದೆ, ಸಂಘದವರು ಅಲ್ಲಿನ ಶಾಸಕರಿಂದಲೇ ಉದ್ಘಾಟನೆ ಮಾಡಿಸಿ ಅವರ ಪಟವನ್ನು ಅದರೊಳಗೆಯೇ ನೇತಾಡಿಸಿರುವುದೂ ನಡೆದಿದೆ!
ನಿವಾಸಿಗಳ ಸಂಘಗಳ ಈ ದೌರ್ಜನ್ಯಗಳೆದುರು ವಸತಿ ನಿರ್ಮಾಣ ಸಂಸ್ಥೆಗಳವರು ಕೂಡ ನಿರ್ಲಿಪ್ತರಾಗಿ ಸುಮ್ಮನಿರುತ್ತಾರೆ. ತಾವು ನಿರ್ಮಿಸಿದ ಸಮುಚ್ಚಯಗಳು ಹೀಗೆ ಕೆಲವು ಪದಾಧಿಕಾರಿಗಳ ದುರಾಡಳಿತದಿಂದ ನಲುಗುತ್ತಿದ್ದರೂ, ತಮ್ಮಿಂದ ಮನೆಗಳನ್ನು ಖರೀದಿಸಿದವರಿಗೆ ತೀವ್ರ ಸಮಸ್ಯೆಗಳಾಗುತ್ತಿದ್ದರೂ, ತಮ್ಮ ಸಂಸ್ಥೆಯ ಪ್ರತಿಷ್ಠೆಯೇ ಅಪಮೌಲ್ಯಗೊಳ್ಳುತ್ತಿದ್ದರೂ ತಮಗೇನೂ ಸಂಬಂಧವೇ ಇಲ್ಲದಂತೆ ವಿಮುಖರಾಗಿರುವುದು ಮನೆ ಮಾಲಕರನ್ನು ಮತ್ತಷ್ಟು ದಿಕ್ಕೆಡಿಸುತ್ತದೆ.
ಒಟ್ಟಿನಲ್ಲಿ, ಲಕ್ಷಗಟ್ಟಲೆ, ಕೋಟಿಗಟ್ಟಲೆ ಹೂಡಿ ಮನೆಗಳನ್ನು ಖರೀದಿಸಿದವರೆಲ್ಲರೂ ಯಾವ ನೆರವೂ ದೊರೆಯದೆ ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳ ಪದಾಧಿಕಾರಿಗಳಿಗೆ ತಮ್ಮ ಆಸ್ತಿಯನ್ನೂ, ಸೌಲಭ್ಯಗಳನ್ನೂ, ನೆಮ್ಮದಿಯನ್ನೂ ಒತ್ತೆಯಿಟ್ಟು ಬದುಕಬೇಕಾದಂತಹ ಸ್ಥಿತಿಯು ಬೆಂಗಳೂರಿನ ವಸತಿ ಸಮುಚ್ಚಯಗಳಲ್ಲಿದೆ ಎಂದರೆ ತಪ್ಪಾಗದು.
ಆದ್ದರಿಂದ ರಾಜ್ಯ ಸರಕಾರವು ಕೂಡಲೇ ಈ ಬಗ್ಗೆ ಕ್ರಮ ವಹಿಸಲೇ ಬೇಕಾಗಿದೆ. ಬೆಂಗಳೂರಿನ ವಸತಿ ಸಮುಚ್ಚಯಗಳಲ್ಲಿ ಉನ್ನತ ಮಟ್ಟದ ಸಮೀಕ್ಷೆ ನಡೆಸಿ ಎಷ್ಟು ಕಡೆ ಯಾವ ಯಾವ ರಾಜ್ಯಗಳವರು ಪದಾಧಿಕಾರಿಗಳಾಗಿದ್ದಾರೆ, ಸುರಕ್ಷತಾ ಸಿಬ್ಬಂದಿಗಳಾಗಿದ್ದಾರೆ, ನಿವಾಸಿಗಳಿಗೆ ಆಗುತ್ತಿರುವ ಸಮಸ್ಯೆಗಳೇನಿವೆ, ಎಲ್ಲೆಲ್ಲಿ ಎಷ್ಟು ದೂರುಗಳು ಸಲ್ಲಿಕೆಯಾಗಿವೆ, ಅವುಗಳ ಬಗ್ಗೆ ಏನೇನು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದನ್ನು ಪರಿಶೀಲಿಸುವ ತುರ್ತು ಅಗತ್ಯವಿದೆ.
ಎಲ್ಲಾ ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳನ್ನು ಕಡ್ಡಾಯವಾಗಿ ಸರಕಾರದ ಇಲಾಖೆಗಳಡಿಯಲ್ಲಿ ನೋಂದಾಯಿಸುವುದು, ಎಲ್ಲಾ ನಿವಾಸಿ ಸಂಘಗಳ ಮಾಹಿತಿ, ಪದಾಧಿಕಾರಿಗಳ ವಿವರಗಳು ಮತ್ತು ಸುರಕ್ಷತಾ ಕರ್ಮಿಗಳ ವಿವರಗಳನ್ನು ಕಡ್ಡಾಯವಾಗಿ ನೋಂದಾಯಿಸುವ ವೆಬ್ ಪೋರ್ಟಲ್ ರೂಪಿಸುವುದು, ವಸತಿ ಸಮುಚ್ಚಯಗಳಲ್ಲಿ ನಡೆಯುವ ಅಕ್ರಮಗಳ ಬಗ್ಗೆ ಅಥವಾ ಯಾವುದೇ ಕಾನೂನು ಬಾಹಿರ ಕೆಲಸಗಳ ಬಗ್ಗೆ ದೂರುಗಳನ್ನು ಸಲ್ಲಿಸುವುದಕ್ಕೂ ಅದೇ ಪೋರ್ಟಲ್ನಲ್ಲಿ ಅವಕಾಶ ಕಲ್ಪಿಸುವುದು ಮತ್ತು ಅಂತಹ ದೂರುಗಳ ಬಗ್ಗೆ ಸಮಾಧಾನಕರ ಪರಿಹಾರ ದೊರೆಯುವಂತೆ ಖಾತರಿ ಪಡಿಸುವುದು, ನಿವಾಸಿಗಳ ಆಸ್ತಿ, ಸುರಕ್ಷತೆ, ಸೌಲಭ್ಯಗಳು, ನೆಮ್ಮದಿಗಳಿಗೆ ಭಂಗವೊದಗಿದರೆ ತಕ್ಷಣ ಕ್ರಮ ಕೈಗೊಳ್ಳುವಂತೆ ಎಲ್ಲಾ ಪೋಲೀಸ್ ಠಾಣೆಗಳಿಗೆ ಸ್ಪಷ್ಟ ಕಾರ್ಯಸೂಚಿಯನ್ನು ಹೊರಡಿಸುವುದು ಕೂಡ ಅಗತ್ಯವಾಗಿವೆ. ಎಲ್ಲಾ ನಿವಾಸಿ ಸಂಘಗಳ ಆಡಳಿತ ಸಮಿತಿಗಳ ಸದಸ್ಯರಲ್ಲಿ ಮೂರನೇ ಒಂದರಷ್ಟು ಮತ್ತು ಸುರಕ್ಷತಾ ಕರ್ಮಿಗಳಲ್ಲಿ ಶೇ. 40ರಿಂದ 50ರಷ್ಟು ಕನ್ನಡಿಗರೇ ಆಗಿರಬೇಕೆಂಬ ನಿಯಮವನ್ನು ಮಾಡುವುದು ಕೂಡ ಅಪೇಕ್ಷಣೀಯವಾಗಿದೆ.

Leave a Reply