ದಿ ಸ್ಟೇಟ್‌ನಲ್ಲಿ ಇಲಾಜು – 1

ಇಲಾಜು 12 – ಕೊಬ್ಬು, ಕೊಲೆಸ್ಟರಾಲ್ ಕುರಿತು ನೀವು ತಿಳಿದಿರುವುದು ಸತ್ಯವಲ್ಲ!

(ಎಪ್ರಿಲ್ 16, 2018)

ಸಮೂಹ ಮಾಧ್ಯಮಗಳು ದುಡ್ಡಿದ್ದವರ, ಅಧಿಕಾರವಿದ್ದವರ ಪ್ರಭಾವಕ್ಕೊಳಗಾಗಿ, ಅನುಕೂಲವೆನಿಸಿದ್ದನ್ನು ಪ್ರಕಟಿಸುವುದು, ಇಲ್ಲದ್ದನ್ನು ಬಿಸುಕುವುದು, ಖಳರನ್ನು ಮಹಾಮಹಿಮರಾಗಿಸುವುದು, ಸುಳ್ಳುಗಳನ್ನು ತಿರುಚಿ ಸತ್ಯವಾಗಿಸುವುದು ನಿತ್ಯದ ಸಂಗತಿಗಳಾಗಿವೆ. ಸುಳ್ಳುಗಳನ್ನು ಹುದುಗಿಸಿ ಮತಿಭ್ರಮಣೆಗೊಳಪಡಿಸುವ ಇಂಥ ಕೆಲಸವನ್ನು ವೈದ್ಯಕೀಯ-ವೈಜ್ಞಾನಿಕ ಪ್ರಕಟಣೆಗಳೂ ಮಾಡುತ್ತಿರುತ್ತವೆ. ಇಪ್ಪತ್ತನೇ ಶತಮಾನದ ಮಧ್ಯದಿಂದ ವೈದ್ಯ ವಿಜ್ಞಾನದ ಸಂಶೋಧನೆಗಳಲ್ಲಿ ಖಾಸಗಿ ಸಂಸ್ಥೆಗಳ ಭಾಗೀದಾರಿಕೆ ಹೆಚ್ಚಿದಂತೆ ಸತ್ಯಗಳನ್ನು ಅಡಗಿಸಿಟ್ಟು, ಸುಳ್ಳುಗಳನ್ನೇ ಸತ್ಯಗಳೆಂದು ಬಿಂಬಿಸಿದ ಹಲವು ನಿದರ್ಶನಗಳು ಬಯಲಾಗಿವೆ.

ಬೊಜ್ಜು, ಮಧುಮೇಹ, ಹೃದ್ರೋಗ ಮುಂತಾದ ಆಧುನಿಕ ಕಾಯಿಲೆಗಳಿಗೆ ಕಾರಣಗಳೇನೆನ್ನುವ ಬಗ್ಗೆ 1950ರಿಂದ ಹಲವು ಅಧ್ಯಯನಗಳು ನಡೆದಿದ್ದವು. ಕೆಲವು ಸಕ್ಕರೆಯ ಅತಿ ಸೇವನೆಯಲ್ಲಿ ದೋಷವನ್ನು ಕಂಡರೆ, ಇನ್ನು ಕೆಲವು ಕೊಬ್ಬಿನ ಸೇವನೆಯನ್ನು ದೂಷಿಸಿದವು. ಆಹಾರೋದ್ಯಮದ ಒತ್ತಡದಿಂದಾಗಿ, ಸಕ್ಕರೆಯೇ ರೋಗಕಾರಕವೆಂದ ವರದಿಗಳಿಗೆ ಪ್ರಕಟಣೆಯ ಭಾಗ್ಯ ದೊರೆಯಲಿಲ್ಲ, ಆ ಅಧ್ಯಯನಗಳ ನೇತೃತ್ವ ವಹಿಸಿದ್ದ ವೈದ್ಯ ವಿಜ್ಞಾನಿಗಳೂ ಮೂಲೆ ಸೇರಬೇಕಾಯಿತು. ಅದಕ್ಕಿದಿರಾಗಿ, ಕೊಬ್ಬಿನಿಂದ ರೋಗಗಳುಂಟಾಗುತ್ತವೆ ಎಂದು ಸಾಧಿಸಿ, ಕೊಬ್ಬು ಸೇವನೆಯನ್ನು ಕಡಿತಗೊಳಿಸಬೇಕೆಂದು ವಾದಿಸಿದ್ದವರು ಪ್ರತಿಷ್ಠಿತ ಟೈಮ್ಸ್‌ ಪತ್ರಿಕೆಯೂ ಸೇರಿದಂತೆ ಎಲ್ಲೆಡೆ ರಾರಾಜಿಸಿದರು. ಅಮೆರಿಕಾದ ಸರಕಾರವೂ ಕೊಬ್ಬಿನಿಂದ ರೋಗವೆನ್ನುವ ವಾದಕ್ಕೆ ಬೆಂಬಲ ನೀಡಿತು, ಕೊಲೆಸ್ಟರಾಲ್ ಸೇವನೆಯನ್ನು ದಿನಕ್ಕೆ 300 ಮಿಗ್ರಾಂಗೆ ಮಿತಗೊಳಿಸಬೇಕೆಂದು ತನ್ನ ಆಹಾರ ಮಾರ್ಗದರ್ಶಿಯಲ್ಲಿ 1980ರಿಂದಲೂ ಹೇಳುತ್ತಲೇ ಬಂತು. ಇಂತಹ ಬೆಂಬಲದೊಂದಿಗೆ ಕಡಿಮೆ ಕೊಬ್ಬು-ಹೆಚ್ಚು ಸಕ್ಕರೆಯ ತಿನಿಸುಗಳನ್ನು ಸಿದ್ಧಪಡಿಸುವ ಉದ್ಯಮವು ವರ್ಷಕ್ಕೆ ನಾಲ್ಕು ಲಕ್ಷ ಕೋಟಿಗಳ ವಹಿವಾಟು ನಡೆಸುವಷ್ಟು ಬೆಳೆಯಿತು.

ನಂತರದ ವರ್ಷಗಳಲ್ಲಿ ಕೊಬ್ಬಿಗಿಂತ ಸಕ್ಕರೆಯೇ ದೊಡ್ಡ ವೈರಿ ಎನ್ನುವುದಕ್ಕೆ ಹಲವಾರು ಸಾಕ್ಷ್ಯಗಳು ದೊರೆತರೂ ಅವನ್ನೆಲ್ಲ ಮುಚ್ಚಿಡಲಾಯಿತು. ಮಕ್ಕಳಲ್ಲಿ ಬೊಜ್ಜುಂಟಾಗಲು ಸಕ್ಕರೆಯೇ ಕಾರಣವೆಂದು ಹೇಳಿದ 2002ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ವರದಿಯು ಕೂಡ ಸಕ್ಕರೆ ತಯಾರಕರ ಒತ್ತಡದಿಂದಾಗಿ ಬದಿಗೆ ಸರಿಯಿತು. ಅಮೆರಿಕಾ ಸರಕಾರದ ಆಹಾರ ಮಾರ್ಗದರ್ಶಿಯ 2015ರ ಕರಡಿನಲ್ಲಿ ಕೊಲೆಸ್ಟರಾಲ್ ಸೇವನೆಗೆ ಮಿತಿಯಿರಬೇಕಿಲ್ಲವೆಂದೂ, ಸಕ್ಕರೆಯ ಸೇವನೆಯೇ ಆಧುನಿಕ ರೋಗಗಳಿಗೆ ಕಾರಣವೆಂದೂ ಹೇಳಲಾಗಿತ್ತಾದರೂ, ಅಂತಿಮ ಪ್ರಕಟಣೆಯಲ್ಲಿ ಮತ್ತೆ ಕೊಲೆಸ್ಟರಾಲ್‌ಗೆ ಮಿತಿಯನ್ನು ಹೇರಿ, ಸಕ್ಕರೆಯ ಮೇಲಿನ ಆರೋಪವನ್ನು ತಗ್ಗಿಸಲಾಯಿತು.

ಯಾರ ವಾದಗಳ ಆಧಾರದಲ್ಲಿ ಈ ಆರು ದಶಕಗಳಲ್ಲಿ ಕೊಬ್ಬನ್ನು ದೂಷಿಸಿ ಸಕ್ಕರೆಯನ್ನು ತಿನ್ನಿಸಲಾಯಿತೋ, ಅವರೇ ನಡೆಸಿದ್ದ ಅಧ್ಯಯನಗಳಲ್ಲಿ ಕೊಬ್ಬನ್ನು ದೂಷಿಸುವುದಕ್ಕೆ ಪುರಾವೆ ದೊರೆತಿರಲಿಲ್ಲ ಎನ್ನುವುದನ್ನು ಅವರದೇ ಸಂಸ್ಥೆಯ ಸಂಶೋಧಕರು ಹೊರಗೆಳೆದು ಎಪ್ರಿಲ್ 2016ರಲ್ಲಿ ಬ್ರಿಟಿಷ್ ಮೆಡಿಕಲ್ ಜರ್ನಲ್‌ನಲ್ಲಿ ಪ್ರಕಟಿಸಿದರು. ಯಾವ ಅಮೆರಿಕದ ಹೃದ್ರೋಗ ತಜ್ಞರ ಸಮಿತಿಯು ಕೊಲೆಸ್ಟರಾಲ್ ಪ್ರಮಾಣವನ್ನಿಳಿಸಲು ಔಷಧಗಳನ್ನು ಸೇವಿಸಲು ಸೂಚಿಸಿತ್ತೋ, ಅದೇ ಸಮಿತಿಯು ನವಂಬರ್ 2013ರಲ್ಲಿ ಪ್ರಕಟಿಸಿದ ವರದಿಯಲ್ಲಿ ಅಂತಹಾ ಔಷಧಗಳನ್ನು ಮೊದಲಿನಂತೆ ಸೇವಿಸುವ ಅಗತ್ಯವಿಲ್ಲವೆಂದೂ, ಹಾಗೆ ಸೇವಿಸುವುದರಿಂದ ಹೃದಯಾಘಾತವೂ ಸೇರಿದಂತೆ ರಕ್ತನಾಳಗಳ ಕಾಯಿಲೆಯನ್ನು ತಡೆಯಬಹುದೆನ್ನುವುದಕ್ಕೆ ಸಾಕಷ್ಟು ಆಧಾರಗಳಿಲ್ಲವೆಂದೂ ಹೇಳಿತು. ಹಿಂದೆ ಹೇಳಿದ್ದ ಸುಳ್ಳುಗಳು ಹೀಗೆ ಬಯಲಾದರೂ ಕೂಡ, ಮಾಧ್ಯಮಗಳಲ್ಲಿ ಕೊಬ್ಬು ಮತ್ತು ಕೊಲೆಸ್ಟರಾಲಿನ ದೂಷಣೆಯು ಇನ್ನೂ ನಿಂತಿಲ್ಲ.

ಮಧುಮೇಹಕ್ಕೆ ಬಳಸುವ ಕೆಲವು ಮಾತ್ರೆಗಳು ಮತ್ತು ಕೃತಕ ಇನ್ಸುಲಿನ್, ಮೂಳೆಗಳಿಗೆಂದು ನೀಡತೊಡಗಿದ ಕ್ಯಾಲ್ಸಿಯಂ, ಮುಟ್ಟು ನಿಂತ ಬಳಿಕ ಮಹಿಳೆಯರಿಗೆ ನೀಡತೊಡಗಿದ ಇಸ್ಟ್ರೋಜನ್ ಮುಂತಾದ ಕೆಲವು ಔಷಧಗಳ ವಿಚಾರದಲ್ಲೂ ಹೀಗೆಯೇ ಪ್ರಯೋಜನಗಳನ್ನು ಉತ್ಪ್ರೇಕ್ಷಿಸಿ, ಅಡ್ಡ ಪರಿಣಾಮಗಳನ್ನು ಅಡಗಿಸಿಡುವ ಪ್ರಯತ್ನಗಳಾಗಿದ್ದವು. ಮೂಳೆಸವೆತವನ್ನು ತಡೆಯುವುದಕ್ಕಾಗಿ ಮುಟ್ಟು ನಿಂತ ಮಹಿಳೆಯರೆಲ್ಲರೂ ಇಸ್ಟ್ರೋಜನ್ ಮಾತ್ರೆಗಳನ್ನು ಸೇವಿಸಬೇಕೆಂದು ಹೇಳಿ, ಹೃದಯಾಘಾತ, ಪಾರ್ಶ್ವವಾಯು, ಅಲ್ಜೀಮರ್ಸ್ ಕಾಹಿಲೆ, ದಂತ ಕ್ಷಯ ಇತ್ಯಾದಿಗಳನ್ನು ತಡೆಯುವುದಕ್ಕೂ ಅದು ನೆರವಾಗುತ್ತದೆಂದು ಡಂಗುರ ಹೊಡೆದು, 1990ರಿಂದ 2000ದ ದಶಕದಲ್ಲಿ ಅದನ್ನು ಭರ್ಜರಿಯಾಗಿ ಮಾರಲಾಯಿತು. ಆದರೆ, ಇಸ್ಟ್ರೋಜನ್ ಬಳಕೆಯು ಮಹಿಳೆಯರನ್ನು ರಕ್ಷಿಸುವ ಬದಲಿಗೆ, ಸ್ತನದ ಕ್ಯಾನ್ಸರ್, ಹೃದಯಾಘಾತ, ಪಾರ್ಶ್ವವಾಯು ಹಾಗೂ ರಕ್ತ ಹೆಪ್ಪುಗಟ್ಟುವ ಸಮಸ್ಯೆಗಳನ್ನು ಶೇ. 26-41ರಷ್ಟು ಹೆಚ್ಚಿಸುತ್ತದೆ ಎಂದು ದೊಡ್ಡ ಅಧ್ಯಯನವೊಂದು ಗುರುತಿಸಿದ ಬೆನ್ನಿಗೆ, ಇಸ್ಟ್ರೋಜನ್ ಮಾರಾಟವೂ ಅರ್ಧಕ್ಕರ್ಧ ಇಳಿಯಿತು. ಇಸ್ಟ್ರೋಜನ್‌ ಅನ್ನು ಹೊಗಳಿ ವಿದ್ವತ್ ಪತ್ರಿಕೆಗಳಲ್ಲಿ ಬರೆದಿದ್ದ ಹಲವು ಲೇಖನಗಳು ಡಿಸೈನ್ ರೈಟ್ ಎಂಬ ಕಂಪೆನಿಯೇ ಸಿದ್ಧಪಡಿಸಿದ್ದ ಪ್ರೇತಬರಹಗಳಾಗಿದ್ದವೆನ್ನುವುದೂ ಬಯಲಾಯಿತು.

ವಿದ್ವತ್ ಪತ್ರಿಕೆಗಳು ಮಾತ್ರವಲ್ಲ, ವೈದ್ಯ ವಿಜ್ಞಾನದ ಪ್ರಮುಖ ಪಠ್ಯ ಪುಸ್ತಕಗಳ ಬರವಣಿಗೆಯಲ್ಲೂ ಹಣದ ಪ್ರಭಾವವಿರಬಹುದೆಂದು ಇದೇ ಫೆಬ್ರವರಿ 5ರಂದು ಅಮೆರಿಕನ್ ಜರ್ನಲ್ ಆಫ್ ಬಯೋ ಎಥಿಕ್ಸ್‌ನಲ್ಲಿ ಪ್ರಕಟವಾದ ಅಧ್ಯಯನವೊಂದು ಗುರುತಿಸಿದೆ. ವೈದ್ಯ ವಿಜ್ಞಾನದ ವಿದ್ಯಾರ್ಥಿಗಳು ಅತಿ ಹೆಚ್ಚು ಪಾಲಿಸುವ ಹಾರಿಸನ್ಸ್ ಪ್ರಿನ್ಸಿಪಲ್ಸ್ ಆಫ್ ಇಂಟರ್ನಲ್ ಮೆಡಿಸಿನ್ ಹಾಗೂ ಇನ್ನಿತರ ಐದು ಪ್ರಮುಖ ಪಠ್ಯ ಪುಸ್ತಕಗಳ ಒಟ್ಟು 1473 ಲೇಖಕರ ಹೆಸರಲ್ಲಿರುವ ಹಕ್ಕೋಲೆಗಳು ಮತ್ತು ಅವರಿಗೆ ಸಂದ ಸಂಭಾವನೆಗಳನ್ನು ಈ ಅಧ್ಯಯನದಲ್ಲಿ ಪರಿಶೀಲಿಸಲಾಗಿತ್ತು. ಈ ಪುಸ್ತಕಗಳಲ್ಲಿ ಒಟ್ಟು 772 ಅಧ್ಯಾಯಗಳನ್ನು ಬರೆದಿದ್ದ ಈ ಲೇಖಕರು ಬಗೆಬಗೆಯ ಚಿಕಿತ್ಸಾ ಕ್ರಮಗಳು ಹಾಗೂ ಔಷಧಗಳ ಒಟ್ಟು 677 ಹಕ್ಕೋಲೆಗಳನ್ನು ಹೊಂದಿದವರಾಗಿದ್ದರು, ಮತ್ತು 2009-14ರ ಅವಧಿಯಲ್ಲಿ ಒಬ್ಬರಿಗೆ ಗರಿಷ್ಠ 8.7 ಲಕ್ಷ ಡಾಲರ್ (ರೂಪಾಯಿ ಐದೂವರೆ ಕೋಟಿಗೂ ಹೆಚ್ಚು) ನಂತೆ ಔಷಧ ಹಾಗೂ ವೈದ್ಯಕೀಯ ಉಪಕರಣಗಳನ್ನು ತಯಾರಿಸುವ 17 ಕಂಪೆನಿಗಳಿಂದ ಒಟ್ಟು 20 ದಶಲಕ್ಷ ಡಾಲರ್ (ಸುಮಾರು 130 ಕೋಟಿ ರೂಪಾಯಿ) ಸಂಭಾವನೆಗಳನ್ನು ಪಡೆದಿದ್ದರು ಎಂದು ಈ ವರದಿಯಲ್ಲಿ ಹೇಳಲಾಗಿದೆ. ಮಾತ್ರವಲ್ಲ, ಯಾವ ಲೇಖಕನೂ ತಾನು ಪಡೆದ ಸಂಭಾವನೆಗಳ ಬಗ್ಗೆ, ಮತ್ತು ಹೊಂದಿರುವ ಹಕ್ಕೋಲೆಗಳ ಬಗ್ಗೆ, ಈ ಪಠ್ಯಪುಸ್ತಕಗಳಲ್ಲಿ ಘೋಷಿಸಿಕೊಂಡಿಲ್ಲ ಎನ್ನುವುದನ್ನೂ ವರದಿಯಲ್ಲಿ ಎತ್ತಿ ತೋರಿಸಲಾಗಿದೆ. ಹೆಚ್ಚಿನ ವಿದ್ವತ್ ಪತ್ರಿಕೆಗಳು ಹೀಗೆ ಹಿತಾಸಕ್ತಿಯ ಸಂಘರ್ಷಗಳನ್ನು ಘೋಷಿಸಿಕೊಳ್ಳುವುದನ್ನು ಇತ್ತೀಚಿನ ವರ್ಷಗಳಲ್ಲಿ ಕಡ್ಡಾಯಗೊಳಿಸಿದ್ದರೂ, ಪಠ್ಯಪುಸ್ತಕಗಳಲ್ಲಿ ಆ ಕ್ರಮವಿನ್ನೂ ಬಂದಿಲ್ಲ. ಹದಿನಾಲ್ಕು ಭಾಷೆಗಳಲ್ಲಿ, ಒಂದು ಕೋಟಿಗೂ ಹೆಚ್ಚು ಪ್ರತಿಗಳಾಗಿ ವೈದ್ಯ ವಿದ್ಯಾರ್ಥಿಗಳ ಮೇಲೆ ಬಹಳಷ್ಟು ಪ್ರಭಾವ ಬೀರುವ ಹಾರಿಸನ್ಸ್‌ನಂತಹ ಪಠ್ಯಗಳಲ್ಲಿ ಲೇಖಕರ ಹಿತಾಸಕ್ತಿ ಸಂಘರ್ಷಗಳ ಬಗ್ಗೆ ಘೋಷಣೆಗಳಿರಬೇಕೆನ್ನುವ ಬೇಡಿಕೆಯನ್ನು ಈ ಅಧ್ಯಯನವು ಗಟ್ಟಿಗೊಳಿಸಿದೆ. ಸಮೂಹ ಮಾಧ್ಯಮಗಳಿಗೂ ಇದೇ ನೀತಿ ಕಡ್ಡಾಯವಾಗಬಾರದೇಕೆ?

ಈ ವರದಿಯ ಬೆನ್ನಿಗೆ, ಮಾರ್ಚ್ 17ರಂದು, ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಪ್ರಕಟಗೊಂಡ ವರದಿಯಲ್ಲಿ, ಮದ್ಯಪಾನದ ಪರಿಣಾಮಗಳ ಬಗ್ಗೆ ನಾಲ್ಕು ಖಂಡಗಳ 7000 ಜನರ ಮೇಲೆ ನಡೆಸಲಾಗುತ್ತಿರುವ 6 ವರ್ಷಗಳ ಅಧ್ಯಯನವೊಂದಕ್ಕೆ ಮದ್ಯ ತಯಾರಿಸುವ ದೊಡ್ಡ ಕಂಪೆನಿಗಳಿಂದ 10 ಕೋಟಿ ಡಾಲರ್‌ (650 ಕೋಟಿ ರೂಪಾಯಿ) ನೆರವನ್ನು ಪಡೆಯಲಾಗುತ್ತಿದೆ, ಮಾತ್ರವಲ್ಲ, ಈ ಅಧ್ಯಯನದ ವಿವರಗಳನ್ನೆಲ್ಲ ಆ ಕಂಪೆನಿಗಳಿಗೆ ಒದಗಿಸಲಾಗಿದೆ ಎನ್ನುವುದು ಬಯಲಾಗಿದೆ. ಮಿತವಾದ ಮದ್ಯಪಾನವು ಹೃದಯಾಘಾತದಿಂದ ರಕ್ಷಿಸುತ್ತದೆ ಎಂದು ಈ ಹಿಂದೆ ಹಲವು ವರದಿಗಳನ್ನು ಪ್ರಕಟಿಸಿದ್ದ ಹಾವರ್ಡ್ ವಿಶ್ವವಿದ್ಯಾಲಯದ ಕೆನೆತ್ ಮುಕಮಲ್ ಅವರೇ ಈ ಹೊಸ ಅಧ್ಯಯನದ ನೇತೃತ್ವ ವಹಿಸಿದ್ದಾರೆ, ಅದರಲ್ಲಿ ಭಾಗಿಗಳಾಗುವವರಿಗೆ ವಾರಕ್ಕೆ ಮೂರು ಸಲ ಕುಡಿಯುವುದಕ್ಕೆ ಬೇಕಾದಷ್ಟು ಮದ್ಯವನ್ನು ಕಂಪೆನಿಗಳೇ ಪೂರೈಕೆ ಮಾಡಲಿವೆ; ಹಾಗಿರುವಾಗ, ಆ ಅಧ್ಯಯನದ ಫಲಿತಾಂಶವು ಏನಿರಬಹುದೆಂದು ಊಹಿಸುವುದು ಕಷ್ಟವಲ್ಲ. ಒಂದಿಷ್ಟು ಮದ್ಯ ಸೇವಿಸುವವರಲ್ಲೂ ಮಿದುಳಿನ ಸಮಸ್ಯೆಗಳು ಮತ್ತು ಕೆಲವು ಕ್ಯಾನ್ಸರಿನ ಸಾಧ್ಯತೆಗಳು ಹೆಚ್ಚುತ್ತವೆ ಎನ್ನುವುದು ಈಗಾಗಲೇ ದೃಢಪಟ್ಟಿರುವಾಗ, ಮೂರೂವರೆ ಸಾವಿರ ಮಂದಿಗೆ ಕುಡಿಸಿ ಪರೀಕ್ಷಿಸುವುದರ ಔಚಿತ್ಯವೇನು?

ವಿಜ್ಞಾನ-ತಂತ್ರಜ್ಞಾನಗಳು ಅತಿಯಾಗಿ ನೆಚ್ಚಿಕೊಂಡಿರುವ ಸಾಕ್ಷ್ಯಾಧಾರಗಳನ್ನೇ ಬುಡಮೇಲು ಮಾಡಲು ಹಣ ಮತ್ತು ಅಧಿಕಾರವುಳ್ಳವರು ಪ್ರಯತ್ನಿಸುತ್ತಲೇ ಇರುತ್ತಾರೆ, ಆದರೆ, ಇವಕ್ಕೆಲ್ಲ ಬಗ್ಗದ ವಿಜ್ಞಾನಿಗಳು ಅಂತಹಾ ಹುನ್ನಾರಗಳನ್ನು ಬಯಲಿಗೆಳೆಯುತ್ತಲೇ ಇರುತ್ತಾರೆ. ಅಂತಹ ಛಲವೇ ವಿಜ್ಞಾನವನ್ನು ಬೆಳೆಸುತ್ತದೆ, ಸತ್ಯವನ್ನು ಇನ್ನಷ್ಟು ನಿಚ್ಚಳವಾಗಿಸುತ್ತದೆ.

ಇಲಾಜು 11 – ಜಾತಿ, ಭಾಷೆ ಶ್ರೇಷ್ಠತೆಯ ವ್ಯಸನಿಗಳಿಗೆ ನನ್ನ ವೋಟಿಲ್ಲ; ನಿಮ್ಮದು?

(ಎಪ್ರಿಲ್ 3, 2018)

ಸರ್ವಜನಾಂಗದ ಶಾಂತಿಯ ತೋಟದಲ್ಲಿ ವಿಧಾನಸಭಾ ಚುನಾವಣೆಗಳು ಮತ್ತೆ ಬಂದಿವೆ. ಸರ್ವರಿಗೂ ಒಳಿತಾಗುವಂತೆ ಈ ಕೆಳಗಿನ ಬೇಡಿಕೆಗಳನ್ನು ಈಡೇರಿಸಬಲ್ಲವರಿಗೆ ನನ್ನ ಮತವನ್ನು ಒತ್ತಲಿದ್ದೇನೆ.

ಮಕ್ಕಳಿಗೆ ಬಿಸಿಯೂಟದಲ್ಲಿ ನಿತ್ಯವೂ ಮೊಟ್ಟೆ ಕೊಡಬೇಕು: ರಾಜ್ಯದ ಎಲ್ಲಾ ಶಾಲೆಗಳಲ್ಲಿ ಬಿಸಿಯೂಟದಲ್ಲಿ ಮೊಟ್ಟೆಯನ್ನು ಒದಗಿಸಬೇಕೆನ್ನುವ ದಶಕದಷ್ಟು ಹಳೆಯ ನಮ್ಮ ಬೇಡಿಕೆಯು ಇನ್ನೂ ಈಡೇರಿಲ್ಲ. ಬಿಸಿಯೂಟದಲ್ಲಿ ಮೊಟ್ಟೆಯನ್ನು ನೀಡಬಾರದೆನ್ನುವುದು ಜಾಜದ-ಭಾಜಪ ಸಮ್ಮಿಶ್ರ ಸರಕಾರದ ಜನವರಿ 20, 2007 ರ ನಿರ್ಣಯವಾಗಿತ್ತು. ಆಗ ನಡೆದಿದ್ದ ಸಮೀಕ್ಷೆಯಲ್ಲಿ ಶೇ. 90ರಷ್ಟು ಮಕ್ಕಳು ಮೊಟ್ಟೆ ತಿನ್ನಲು ಇಷ್ಟ ಪಡುತ್ತಾರೆಂದು ವ್ಯಕ್ತವಾಗಿತ್ತು. ಆದರೆ, ನಾಲ್ಕೈದು ಪೀಠಾಧಿಪತಿಗಳ ಒತ್ತಡಕ್ಕೆ ಮಣಿದು ಮೊಟ್ಟೆಯನ್ನು ನಿರಾಕರಿಸಲಾಗಿತ್ತು. ಸಿದ್ದರಾಮಯ್ಯನವರ ಆಡಳಿತದಲ್ಲೂ ಮಕ್ಕಳ ಬಯಕೆಯು ಈಡೇರಲಿಲ್ಲ, ಬದಲಿಗೆ, ಬಯಸಿರದ ಕ್ಷೀರ ಭಾಗ್ಯವಷ್ಟೇ ದಕ್ಕಿತು. ಅಂಗನವಾಡಿಗಳ ಮಕ್ಕಳಿಗೆ, ಕಳೆದ ಅಕ್ಟೋಬರ್‌ ಬಳಿಕ ಗರ್ಭಿಣಿಯರಿಗೆ ಮತ್ತು ಹಾಲೂಡಿಸುವ ತಾಯಂದಿರಿಗೆ, ಮೊಟ್ಟೆ ಸಹಿತವಾದ ಬಿಸಿಯೂಟ ನೀಡುವ ಯೋಜನೆಗಳನ್ನು ಆರಂಭಿಸಲಾದರೂ, ಶಾಲಾ ಮಕ್ಕಳಿಗೆ ಮೊಟ್ಟೆ ಭಾಗ್ಯ ಮಾತ್ರ ದೊರೆಯಲೇ ಇಲ್ಲ. ರಾಷ್ಟ್ರೀಯ ಪೋಷಣ ಸಂಸ್ಥೆ ಮತ್ತು ರಾಷ್ಟೀಯ ಮಾನವ ಹಕ್ಕು ಆಯೋಗಗಳು ಶಾಲೆಗಳ ಬಿಸಿಯೂಟದಲ್ಲಿ ಮೊಟ್ಟೆಗಳನ್ನು ಕಡ್ಡಾಯವಾಗಿ ನೀಡಬೇಕೆಂದು ತಾಕೀತು ಮಾಡಿದ್ದರೂ ಪ್ರಯೋಜನವಾಗಲಿಲ್ಲ. ನಾಲ್ಕೈದು ಪೀಠಾಧಿಪತಿಗಳ ವಿರೋಧವೂ, ಬಿಸಿಯೂಟದಲ್ಲಿ ಅಕ್ಷಯ ಪಾತ್ರೆಯಂತಹ ಸಂಸ್ಥೆಗಳ ಭಾಗೀದಾರಿಕೆಯೂ ಮೊಟ್ಟೆಯನ್ನು ಒದಗಿಸುವುದಕ್ಕೆ ತೊಡಕಾಗಿವೆ. ಆದ್ದರಿಂದ, ಮಕ್ಕಳಿಗೆ ಪ್ರತಿನಿತ್ಯ ಬಿಸಿಯೂಟದಲ್ಲಿ ಮೊಟ್ಟೆ ನೀಡುವ ಧೈರ್ಯವಿದ್ದವರಿಗೆ ಮಾತ್ರ ನನ್ನ ಓಟು.

ಮಾಂಸಾಹಾರ ಸೇವನೆಗೆ ಯಾವ ಅಡ್ಡಿಗಳೂ ಇಲ್ಲ ಎಂದು ಘೋಷಿಸಬೇಕು: ಮಾಂಸಾಹಾರ ಸೇವಿಸುವುದು ಪಾತಕ, ದೈವದ್ರೋಹ, ನಾಚಿಕೆಗೇಡು ಎಂಬಿತ್ಯಾದಿ ವ್ಯಾಖ್ಯೆಗಳ ಜೊತೆಗೆ, ಯಾರು ಯಾವ ಮಾಂಸವನ್ನು ಎಲ್ಲಿ ಹೇಗೆ ತಿಂದರು, ನಂತರ ಸ್ನಾನ ಮಾಡಿದರೇ, ದೇವಳಕ್ಕೆ ಹೊಕ್ಕರೇ ಎಂಬೆಲ್ಲವೂ ಚುನಾವಣೆಯ ಚರ್ಚೆಗಳಾಗುತ್ತಿವೆ! ಹಾಗಿರುವಾಗ, ಮಾಂಸಾಹಾರಕ್ಕೆ ಸಂಬಂಧಿಸಿದ ಇನ್ನೂ ಕೆಲವನ್ನು ಚುನಾವಣಾ ಕಣಕ್ಕೆ ಇಳಿಸಬೇಡವೇ? ರಾಷ್ಟೀಯ ಕುಟುಂಬ ಆರೋಗ್ಯ ಸಮೀಕ್ಷೆ 2015-16ರನುಸಾರ, ಕರ್ನಾಟಕದಲ್ಲಿ ಶೇ. 60 ರಷ್ಟು ಮಕ್ಕಳಲ್ಲೂ, ಶೇ. 45ರಷ್ಟು ಮಹಿಳೆಯರಲ್ಲೂ ರಕ್ತಹೀನತೆಯಿದೆ, ಶೇ. 36ರಷ್ಟು ಮಕ್ಕಳಲ್ಲಿ ಬೆಳವಣಿಗೆಯು ಕುಂಠಿತಗೊಂಡಿದೆ. ರಕ್ತವರ್ಧನೆ, ಶಾರೀರಿಕ ಬೆಳವಣಿಗೆ, ಮಾತ್ರವಲ್ಲ, ಸಮಗ್ರ ಮನೋದೈಹಿಕ ಆರೋಗ್ಯಕ್ಕೆ ಮಾಂಸಾಹಾರವು ಅತ್ಯುತ್ತಮವೆನ್ನುವುದು ನಿರ್ವಿವಾದಿತವಾಗಿದ್ದು, ಅದನ್ನು ಹೀಗಳೆದು ತಡೆಯುವುದರಿಂದ ಇಡೀ ಸಮಾಜದ ಸ್ವಾಸ್ಥ್ಯಕ್ಕೇ ಕೆಡುಕಾಗುತ್ತದೆ; ಸ್ವಾಮಿ ವಿವೇಕಾನಂದರು ಹೇಳಿದಂತೆ, ದೇಶದ ಸ್ವಾತಂತ್ರ್ಯಕ್ಕೇ ಧಕ್ಕೆಯಾಗುತ್ತದೆ. ಭಾರತೀಯ ಆಹಾರ ಸುರಕ್ಷಣೆ ಮತ್ತು ಮಾನದಂಡಗಳ ಪ್ರಾಧಿಕಾರವು ಕೂಡ ಶಾಲಾ ಮಕ್ಕಳ ಆಹಾರದಲ್ಲಿ ಮೊಟ್ಟೆ, ಮೀನು, ಮಾಂಸಗಳು ಮುಖ್ಯವಾಗಿರಬೇಕು ಎಂದು ಹೇಳಿದೆ. ಆದ್ದರಿಂದ ಜನರ ಆಹಾರದ ಆಯ್ಕೆಯನ್ನು ಗೌರವಿಸಿ, ಮಾಂಸಾಹಾರವು ಆರೋಗ್ಯವರ್ಧನೆಗೆ ಪೂರಕವೇ ಹೊರತು, ಅಮಾನುಷವಲ್ಲ, ಮತದ್ರೋಹವೂ ಅಲ್ಲ ಎಂದು ಘಂಟಾಘೋಷವಾಗಿ ಸಾರಿ, ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳು, ಮತ್ತು ಸರಕಾರಿ ಸಂಸ್ಥೆಗಳ ಭೋಜನಾಲಯಗಳಲ್ಲಿ ಮಾಂಸಾಹಾರ ಸೇವನೆಗೆ ಮುಕ್ತ ಅವಕಾಶವನ್ನು ಕಲ್ಪಿಸುವವರಿಗೆ ನನ್ನ ಮತವನ್ನು ಮೀಸಲಿಡುತ್ತೇನೆ.

ಸಂವಿಧಾನದತ್ತ ಸ್ವಾತಂತ್ರ್ಯಗಳನ್ನು ಸುರಕ್ಷಿತಗೊಳಿಸಲೇ ಬೇಕು: ಯಾರೊಂದಿಗಾದರೂ, ಎಲ್ಲಿಗೇ ಆದರೂ, ಯಾವುದೇ ಬಟ್ಟೆ ಧರಿಸಿ ಹೋಗುವುದಕ್ಕೆ, ಮನ ಬಿಚ್ಚಿ ಮಾತಾಡುವುದಕ್ಕೆ, ಬರೆಯುವುದಕ್ಕೆ, ಚಿತ್ರಿಸುವುದಕ್ಕೆ, ಬೇಕಾದದ್ದನ್ನು ಓದುವುದಕ್ಕೆ, ನೋಡುವುದಕ್ಕೆ, ತಿನ್ನುವುದಕ್ಕೆ, ಇಷ್ಟದ ನೌಕರಿಯಲ್ಲಿ ತೊಡಗುವುದಕ್ಕೆ ಸಂವಿಧಾನವಿತ್ತ ಸ್ವಾತಂತ್ರ್ಯಗಳನ್ನು ಅನುಭವಿಸುವುದಕ್ಕೆ, ಗಂಡು-ಹೆಣ್ಣೆಂದಿಲ್ಲದೆ ನಡುರಾತ್ರಿಯಲ್ಲೂ ನಿರ್ಭಯವಾಗಿ ಸಂಚರಿಸುವುದಕ್ಕೆ ಮುಕ್ತ, ಸ್ವಸ್ಥ, ಸುರಕ್ಷಿತ ವಾತಾವರಣವನ್ನು ಕಲ್ಪಿಸಬಲ್ಲವರಿಗೆ ಮಾತ್ರ ನನ್ನ ಮತ.

ಲೈಂಗಿಕ ಶಿಕ್ಷಣವನ್ನು ಎಳೆಯ ವಯಸ್ಸಿನಿಂದಲೇ ಉತ್ತೇಜಿಸಬೇಕು: ಮಾಂಸ-ಮೊಟ್ಟೆಗಳನ್ನೂ, ವೈಯಕ್ತಿಕ ಸ್ವಾತಂತ್ರ್ಯಗಳನ್ನೂ ವಿರೋಧಿಸುವ ಸಂಪ್ರದಾಯವಾದಿಗಳು ಶಾಲೆ-ಕಾಲೇಜುಗಳಲ್ಲಿ ಲೈಂಗಿಕ ಶಿಕ್ಷಣವನ್ನೂ ವಿರೋಧಿಸುತ್ತಾರೆ, ಪ್ರಬುದ್ಧವಾದ, ಸ್ವಸ್ಥವಾದ ಸಮಾಜ ನಿರ್ಮಾಣಕ್ಕೆ ಅಡ್ಡಿಯಾಗುತ್ತಾರೆ. ಲೈಂಗಿಕ ಬೆಳವಣಿಗೆ, ವೈವಿಧ್ಯ, ಮನೋಭಾವ, ವರ್ತನೆ ಇತ್ಯಾದಿಗಳ ಬಗ್ಗೆ ವೈಜ್ಞಾನಿಕ ಅರಿವನ್ನು ಮೂಡಿಸುವುದು ಅತ್ಯಗತ್ಯವೆಂದು ತಜ್ಞರೆಲ್ಲರೂ ಹೇಳುತ್ತಾರೆ. ಇಂದಿನ ಮಕ್ಕಳು 9-10 ವಯಸ್ಸಿಗೇ ಪ್ರೌಢರಾಗುತ್ತಿರುವಾಗ, ಹೆಣ್ಮಕ್ಕಳ ಮೇಲಿನ ದೌರ್ಜನ್ಯಗಳೂ, ಲೈಂಗಿಕ ಹಿಂಸಾಚಾರವೂ ಹೆಚ್ಚುತ್ತಿರುವಾಗ, ಲೈಂಗಿಕತೆಯ ಬಗ್ಗೆ ವೈಜ್ಞಾನಿಕವಾದ ಅರಿವನ್ನು ಮೂಡಿಸುವ ಕೆಲಸವನ್ನು ತುರ್ತಾಗಿ ಆರಂಭಿಸಬೇಕಾಗಿದೆ. ಒಬಾಮ ಆಡಳಿತವು, ವಿವಾಹಪೂರ್ವ ಲೈಂಗಿಕ ಕ್ರಿಯೆಗಳು ಅಪರಾಧವೆಂಬಂತೆ ಬಿಂಬಿಸುತ್ತಿದ್ದ ಲೈಂಗಿಕ ಶಿಕ್ಷಣ ಕ್ರಮಗಳ ಬದಲಿಗೆ, ಹೆಚ್ಚು ವೈಜ್ಞಾನಿಕವಾದ ಶಿಕ್ಷಣವನ್ನು ಉತ್ತೇಜಿಸಿದ್ದರಿಂದಾಗಿ ಅಮೆರಿಕದಲ್ಲಿಂದು ಹದಿಹರೆಯದವರ ಗರ್ಭಧಾರಣೆಯು ಬಹಳಷ್ಟು ಇಳಿಕೆಯಾಗಿದೆ. ಆದ್ದರಿಂದ, ಅತಿ ಕಿರಿಯ ವಯಸ್ಸಿನಿಂದ ತೊಡಗಿ ಕಾಲೇಜಿಗೇರುವವರೆಗೆ, ಹಂತ ಹಂತವಾಗಿ, ಪ್ರಜನನಾಂಗಗಳು, ಲೈಂಗಿಕ ಬೆಳವಣಿಗೆ, ಪ್ರಜನನ ಕ್ರಿಯೆ, ಲೈಂಗಿಕತೆ, ಮನೋಭಾವಗಳು ಮತ್ತು ಆಕರ್ಷಣೆಗಳು, ಲೈಂಗಿಕತೆಯ ವೈವಿಧ್ಯಗಳು, ಲೈಂಗಿಕ ಕ್ರಿಯೆ, ಒಪ್ಪಿತ ಸಂಬಂಧಗಳು, ಲೈಂಗಿಕ ಸಮಸ್ಯೆಗಳು, ಗರ್ಭ ನಿರೋಧಕ ಕ್ರಮಗಳು ಇತ್ಯಾದಿಗಳ ಬಗ್ಗೆ ಸ್ಪಷ್ಟವಾದ, ವೈಜ್ಞಾನಿಕವಾದ ಲೈಂಗಿಕ ಶಿಕ್ಷಣವನ್ನು ಉತ್ತೇಜಿಸುವವರಿಗೆ, ಹಾಗೂ ಭಿನ್ನ ಲೈಂಗಿಕತೆಯವರಿಗೆ ತಮ್ಮಿಷ್ಟದವರೊಂದಿಗೆ ಕೂಡಿ ಬಾಳುವ ಸ್ವಾತಂತ್ರ್ಯವನ್ನೂ, ಸಮಾನ ಅವಕಾಶಗಳನ್ನೂ ಒದಗಿಸುವವರಿಗೆ ನನ್ನ ಮತ.

ಆಧುನಿಕ, ವೈಚಾರಿಕ ಶಿಕ್ಷಣ ಪದ್ಧತಿಯನ್ನು ಬೆಳೆಸಬೇಕು: ಇಪ್ಪತ್ತನೇ ಶತಮಾನದ ಮೊದಲಲ್ಲಿ ನಮ್ಮ ಅರಿವಿನ ಕಣಜವು 100 ವರ್ಷಗಳಿಗೊಮ್ಮೆ ದುಪ್ಪಟ್ಟಾಗುತ್ತಿತ್ತು, ಈಗ ಒಂದೇ ವರ್ಷದಲ್ಲಾಗುತ್ತಿದೆ, ಇನ್ನು ಕೆಲವೇ ವರ್ಷಗಳಲ್ಲಿ ಪ್ರತೀ 12 ಗಂಟೆಗಳಲ್ಲೇ ದುಪ್ಪಟ್ಟಾಗಲಿದೆಯಂತೆ. ವಿಜ್ಞಾನ-ತಂತ್ರಜ್ಞಾನಗಳು ಹೀಗೆ ಬೆಳೆಯುತ್ತಿರುವಾಗ ನಮ್ಮ ಮಕ್ಕಳೂ, ಯುವಜನರೂ ಅವನ್ನೆಲ್ಲ ಅರಗಿಸಿಕೊಂಡರೆ ಮಾತ್ರ ಭವಿಷ್ಯದ ಸವಾಲುಗಳನ್ನೆದುರಿಸಲು ಸನ್ನದ್ಧರಾಗಬಹುದು. ಹೊಸ ತಂತ್ರಜ್ಞಾನಗಳ ಅರಿವಿಲ್ಲದೆ ಈ ಎರಡು ವರ್ಷಗಳಲ್ಲೇ ಲಕ್ಷಗಟ್ಟಲೆ ಯುವಕರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡರೆನ್ನುವುದು ಎಲ್ಲರಿಗೂ ಎಚ್ಚರಿಕೆಯ ಗಂಟೆಯಾಗಿದೆ. ಆದ್ದರಿಂದ, ನಮ್ಮ ಯುವ ಪೀಳಿಗೆಯನ್ನು ಲೋಕಸಾಟಿಯಾಗಿ ಬೆಳೆಸುವುದಕ್ಕೆ ನಮ್ಮ ಶಿಕ್ಷಣ ಕ್ರಮವನ್ನು ಪ್ರಾಥಮಿಕ ಹಂತದಿಂದಲೇ ಬದಲಿಸುವ ತುರ್ತು ಅಗತ್ಯವಿದೆ; ವಿಜ್ಞಾನ-ತಂತ್ರಜ್ಞಾನಗಳ ಬೆಳವಣಿಗೆಗಳನ್ನು ಅಳವಡಿಸಿಕೊಂಡು, ವೈಚಾರಿಕತೆ, ವೈಜ್ಞಾನಿಕ ಮನೋವೃತ್ತಿ, ಮತ ನಿರಪೇಕ್ಷತೆ ಮತ್ತು ಮಾನವೀಯತೆಗಳನ್ನು ರೂಢಿಸಿ, ಅತ್ಯಾಧುನಿಕ ತಂತ್ರಜ್ಞಾನ ಕೌಶಲ್ಯವನ್ನು ಬೆಳೆಸಬೇಕಾಗಿದೆ. ಮಾಧ್ಯಮಿಕ ಹಂತದ ಬಳಿಕ ವಿದ್ಯಾರ್ಥಿಗೆ ಕಷ್ಟವೆನಿಸುವ ಪಠ್ಯಗಳ ಬದಲಿಗೆ ಇಷ್ಟವಿರುವ ವಿಷಯಗಳನ್ನು ಹೆಚ್ಚು ಕಲಿಯುವುದಕ್ಕೆ ಅವಕಾಶವೊದಗಿಸುವ ಮೂಲಕ ಶಿಕ್ಷಣವು ನಿರಾತಂಕವಾಗಿ ಸಾಗುವಂತೆ ಮಾಡಬಹುದು. ಯೋಗ ಕಲಿಸಿ ಮಕ್ಕಳನ್ನು ಧ್ಯಾನಕ್ಕೆ ದೂಡುವ ಬದಲು, ಮನೋದೈಹಿಕ ಕೌಶಲ್ಯಗಳನ್ನು ಬೆಳೆಸಬಲ್ಲ ದೈಹಿಕ ವ್ಯಾಯಾಮ ಮತ್ತು ಆಟೋಟಗಳನ್ನು ಉತ್ತೇಜಿಸಬೇಕು. ಶಿಕ್ಷಣ ಕ್ಷೇತ್ರದಲ್ಲಿ ಇಂತಹ ದೂರಗಾಮಿ ಬದಲಾವಣೆಗಳನ್ನು ತರುವ ಇಚ್ಛೆಯುಳ್ಳವರಿಗೆ ನನ್ನ ಓಟು.

ಸಾರ್ವಜನಿಕ ಸೇವೆಗಳಿಗೆ ಭ್ರಷ್ಟತೆಯಿಲ್ಲದೆ ಹೆಚ್ಚು ವಿನಿಯೋಗಿಸಬೇಕು: ಅವರು ರಾಮ ನವಮಿ ಮಾಡಿದರೆ ನಾವು ಕೃಷ್ಣಾಷ್ಟಮಿ, ಅವರು ಯೋಗ ಶಿಬಿರ ನಡೆಸಿದರೆ ನಾವು ಆಯುಷ್, ಅವರು ಚರ್ಚುಗಳಿಗೆ ಹೋದರೆ ನಾವು ಮಸೀದಿಗಳಿಗೆ, ಅವರು ಹತ್ತು ಜಾತಿಯ ಮಠಗಳಿಗೆ ಕೊಟ್ಟರೆ ನಾವು ಇಪ್ಪತ್ತಕ್ಕೆ ಎಂಬ ಜಿದ್ದಿನಲ್ಲಿ ಮುಳುಗಿರುವವರಿಗಿಂತ, ಎಲ್ಲಾ ಜಾತಿ-ಮತ-ಪಂಥಗಳ ಆಬಾಲವೃದ್ಧರೆಲ್ಲರಿಗೆ ಒಳಿತನ್ನುಂಟು ಮಾಡುವ ಸಾರ್ವಜನಿಕ ಸೇವೆಗಳಿಗೆ ಹಣ ಹೂಡುವವರಿಗೆ ನನ್ನ ಮತ ಮೀಸಲು. ಪೌಷ್ಟಿಕವಾದ ಬಿಸಿಯೂಟ, ಪಡಿತರದಲ್ಲಿ ಪೌಷ್ಠಿಕ ಆಹಾರ, ಅಂಗನವಾಡಿ ಸೇವೆಗಳು, ಸಾರ್ವಜನಿಕ ಶಿಕ್ಷಣ, ಸಾರ್ವಜನಿಕ ಆಸ್ಪತ್ರೆಗಳು, ಅದರಲ್ಲೂ ತಾಯಿ-ಮಕ್ಕಳ ಆರೈಕೆ ಮತ್ತು ತುರ್ತು ಸೇವೆಗಳು, ಕುಡಿಯುವ ನೀರು ಮತ್ತು ನೈರ್ಮಲ್ಯ, ಪರಿಸರ ಮತ್ತು ವನ್ಯ ರಕ್ಷಣೆ ಇತ್ಯಾದಿಗಳಿಗೆ ಹೆಚ್ಚಿನ ಹಣವನ್ನು ಒದಗಿಸಿ, ಯಾವುದೇ ಭ್ರಷ್ಟಾಚಾರವಿಲ್ಲದೆ ಅವು ಫಲಪ್ರದವಾಗಿ ವಿನಿಯೋಗವಾಗುವಂತೆ ಖಾತರಿ ಪಡಿಸಬಲ್ಲವರಿಗೆ ನನ್ನ ಮತ.

ಒಟ್ಟಿನಲ್ಲಿ, ಸಂಪ್ರದಾಯವಾದಿ ಹುನ್ನಾರಗಳನ್ನು ಸೋಲಿಸಿ, ಸಾಂವಿಧಾನಿಕ ಮೌಲ್ಯಗಳನ್ನು ಉಳಿಸಿ, ಬಲ ಪಡಿಸುವವರಿಗೆ ನನ್ನ ಓಟು. ನೆಲ, ಮರ, ಮರುಳು, ಅದಿರು ಇತ್ಯಾದಿಗಳನ್ನು ಕದಿಯುವವರಿಗೆ, ನದಿಗಳನ್ನು ತಿರುಗಿಸುವವರಿಗೆ, ಎಲ್ಲೆಂದರಲ್ಲಿ ಕಾಂಕ್ರೀಟು ಸುರಿಯುವವರಿಗೆ, ಜಾತಿ-ಮತ-ಭಾಷೆಗಳ ಶ್ರೇಷ್ಠತೆಯ ವ್ಯಸನಿಗಳಿಗೆ ನನ್ನ ಓಟಿಲ್ಲ.

ಇಲಾಜು 10 – ಮಹಾ ಹೀರೋ, ಅಸಹಾಯಕ ವಿಲನ್: ಚುನಾವಣೆ ಗೆಲ್ಲಲು ಸುಲಭ ಸೂತ್ರ

(ಮಾರ್ಚ್ 22, 2018)

ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾದಂತೆ ಮತದಾರರನ್ನು ಕೆರಳಿಸುವ-ಓಲೈಸುವ ಕೆಲಸಗಳೂ ಜೋರಾಗುತ್ತಿವೆ. ಕಳೆದ ವಿಧಾನಸಭಾ ಚುನಾವಣೆಯ ಬಳಿಕ ದೇಶದ ರಾಜಕೀಯ ಸ್ವರೂಪವೇ ಬದಲಾಗಿದ್ದು, ರಾಜಕಾರಣವು ಪ್ರತಿಯೋರ್ವರ ಮನೆ-ಮನಗಳನ್ನು ಪ್ರವೇಶಿಸಿ, ನಿತ್ಯ ಚರ್ಚೆಯ ವಿಷಯವಾಗಿಬಿಟ್ಟಿದೆ.

ಮೊದಲೆಲ್ಲ ಭಿತ್ತಿಪತ್ರ-ಬ್ಯಾನರ್-ಮನೆ ಭೇಟಿಗಳ ಮೂಲಕ ಮತದಾರರನ್ನು ಆಕರ್ಷಿಸಲಾಗುತ್ತಿತ್ತು, ಹಣ-ಹೆಂಡಗಳ ಹಂಚಿಕೆಯ ಬಗ್ಗೆಯೂ ವರದಿಗಳಾಗುತ್ತಿದ್ದವು. ಆದರೆ 2014ರ ಲೋಕಸಭಾ ಚುನಾವಣೆಯಲ್ಲಿ ಸಾವಿರಾರು ಕೋಟಿಗಳನ್ನು ಸುರಿದು ದೇಶ-ವಿದೇಶಗಳ ಜಾಹೀರಾತು-ಪ್ರಚಾರ ಸಂಸ್ಥೆಗಳನ್ನು ರಂಗಕ್ಕಿಳಿಸಲಾಯಿತು. ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಲಾಗಿದ್ದವರನ್ನು ಎಲ್ಲರ ಕೈಯೊಳಗಿನ ಮೊಬೈಲ್ ಫೋನುಗಳಲ್ಲಿ, ಕಂಪ್ಯೂಟರ್ ಪರದೆಗಳಲ್ಲಿ, ಟಿವಿ-ರೇಡಿಯೋ-ಚಿತ್ರಮಂದಿರಗಳಲ್ಲಿ, 3ಡಿ ಹಾಲೋಗ್ರಾಂಗಳಲ್ಲಿ ಪ್ರದರ್ಶಿಸಲಾಯಿತು. ಮೊಸಳೆ ದಾಟಿ ತ್ರಿವರ್ಣ ಹಾರಿಸಿದ, ಹಿಮಾಲಯದಲ್ಲಿ ತಪಸ್ಸು ಮಾಡಿದ, ದೇಶಕ್ಕಾಗಿ ಹೆಂಡತಿ-ಕುಟುಂಬವನ್ನೆಲ್ಲ ತ್ಯಜಿಸಿದ, ಅಪಾರ ಜ್ಞಾನವುಳ್ಳ, ಅಗಾಧ ಸಾಮರ್ಥ್ಯವುಳ್ಳ, ದೇಶದ ಸಕಲ ಸಮಸ್ಯೆಗಳಿಗೂ ತ್ವರಿತ ಪರಿಹಾರಗಳನ್ನು ಹೊಂದಿದ್ದ ಅತ್ಯದ್ಭುತ ವ್ಯಕ್ತಿಯೆಂದು ವಿಜೃಂಭಿಸಲಾಯಿತು. ಮುಖ್ಯಮಂತ್ರಿಯಾಗಿ ಮಾಡಿರದ ಕೆಲಸಗಳನ್ನು ಮಾಡಲಾಗಿದ್ದೆಂದೂ, ಮಾಡಿದ್ದ ಅಲ್ಪ ಸಾಧನೆಗಳನ್ನು ಮಹತ್ಸಾಧನೆಗಳೆಂದೂ ವೈಭವೀಕರಿಸಲಾಯಿತು. ಈ ಅತಿ ವಿಜೃಂಭಣೆಯ ನಡುವೆ ವಿರೋಧಿಗಳು ಪೇಲವವಾದರು, ಪ್ರಶ್ನಿಸಿದವರ ದನಿಯೂ ಉಡುಗಿ ಹೋಯಿತು. ಅಂಕಿ-ಅಂಶಗಳೂ, ಸಾಕ್ಷ್ಯಾಧಾರಗಳೂ ಗೌಣವಾಗಿ, ದಕ್ಷಿಣದ ಎಲ್ಲಾ ರಾಜ್ಯಗಳಲ್ಲಿ ಅತ್ಯುತ್ತಮ ಸಾಧನೆಗಳಾಗಿದ್ದುದೆಲ್ಲವೂ ಮರೆತೇ ಹೋಯಿತು.

ಈ ಸುಪರ್ ಹೀರೋನಿಂದ ಒದೆಸಿಕೊಳ್ಳುವುದಕ್ಕೆ ವಿಲನ್‌ಗಳು ಬೇಡವೇ? ಆಡಳಿತದಲ್ಲಿದ್ದವರನ್ನು ಅಶಕ್ತರೆಂದೂ, ಕಡು ಭ್ರಷ್ಟರೆಂದೂ ಜರೆಯಲಾಯಿತು, ಆಡಳಿತ ಪಕ್ಷದ ನಾಯಕರನ್ನು ದೇಶದ್ರೋಹಿಗಳೆನ್ನಲಾಯಿತು, ಅತಿ ಪೆದ್ದರೆಂದು ಲೇವಡಿ ಮಾಡಲಾಯಿತು. ಮಹಾ ಹೀರೋ-ತುಚ್ಚ ವಿಲನ್‌ಗಳ ನಡುವಿನ ಈ ಕದನದಲ್ಲಿ ಸಹಜವಾಗಿಯೇ ಮಹಾ ಹೀರೋಗೆ ಗೆಲುವಾಯಿತು. ಮಾಧ್ಯಮಗಳು ಇನ್ನಷ್ಟು ಶರಣಾಗಿ ವೈಭವೀಕರಣ ಮತ್ತಷ್ಟು ಸುಲಭವಾಯಿತು, ಇತರ ರಾಜ್ಯಗಳ ಚುನಾವಣೆಗಳಲ್ಲಿ ಇದೇ ಹೀರೋಗಿರಿ ಬೆಳೆದು ಜಯದ ಸರಣಿಯೂ ಮುಂದುವರಿಯಿತು.

ಮತದಾರರ ನೇರ ಓಲೈಸುವಿಕೆಗಿಂತಲೂ ಜಾಹೀರಾತು-ಪ್ರಚಾರ ಸಂಸ್ಥೆಗಳ ತಂತ್ರಗಾರಿಕೆಯೇ ಚುನಾವಣೆಗಳಲ್ಲಿ ಗೆಲುವನ್ನು ತರುತ್ತದೆ ಎನ್ನುವುದು ಇದರಿಂದ ಶತಸಿದ್ಧವಾಯಿತಲ್ಲ? ಮಹಾ ಹೀರೋ-ತುಚ್ಚ ವಿಲನ್‌ಗಳನ್ನು ಸಿದ್ಧಗೊಳಿಸಿ, ಅವರೊಳಗೆ ಕದನವೇರ್ಪಡಿಸಿ ಮಹಾ ಹೀರೋನಿಗೆ ಜಯವನ್ನು ತರುವ ಈ ತಂತ್ರವು ಮನುಷ್ಯರ ವರ್ತನೆಯನ್ನೇ ಆಧರಿಸಿದೆ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ನರ ಹಾಗೂ ಮನಶಾಸ್ತ್ರ ವಿಜ್ಞಾನಿಯಾಗಿರುವ ಮೋಲಿ ಕ್ರಾಕೆಟ್ ಅವರ ಪ್ರಕಾರ, ಮನುಷ್ಯರು ತಮಗಾಗಬಹುದಾದ ತೊಂದರೆಗಳನ್ನೂ ಲೆಕ್ಕಿಸದೆ ಅನ್ಯರನ್ನು ಶಿಕ್ಷಿಸುವುದಕ್ಕೆ ಹಾತೊರೆಯುತ್ತಿರುತ್ತಾರೆ. ಅಂತಹ ಸ್ವಭಾವದಿಂದಾಗಿಯೇ, ಆಡಳಿತವನ್ನು ಶಿಕ್ಷಿಸುವ ಭರದಲ್ಲಿ ಅದಕ್ಕೆ ಬದಲಿಯಾಗಿ ಸ್ಪರ್ಧಿಸುತ್ತಿರುವವರ ಬಗ್ಗೆ ಅಥವಾ ಅವರಿಂದಾಗಬಹುದಾದ ತೊಂದರೆಗಳ ಬಗ್ಗೆ ಪರಾಂಬರಿಸದೆ, ಆಡಳಿತದ ವಿರುದ್ಧ ಮತ ಚಲಾಯಿಸುತ್ತಾರೆ, ಮಾತ್ರವಲ್ಲ, ಹೀಗೆ ಶಿಕ್ಷಿಸುವುದನ್ನು ನೈತಿಕವಾಗಿಯೂ ಸಮರ್ಥಿಸಿಕೊಳ್ಳುತ್ತಾರೆ. ನೋಟು ರದ್ದತಿಯಿಂದ ಶ್ರೀಮಂತರಿಗೂ ಒಂದಿಷ್ಟು ಶಿಕ್ಷೆಯಾಯಿತೆಂದು ಅತ್ಯಂತ ಕಷ್ಟಕ್ಕೀಡಾದ ಕೆಲವರು ಸಮಾಧಾನಪಟ್ಟುಕೊಳ್ಳುವುದಕ್ಕೂ ಇಂಥದ್ದೇ ಕಾರಣಗಳಿರಬಹುದು!

ಎರಡು ದಶಕಗಳಿಗೂ ಹೆಚ್ಚು ಕಾಲ ಮತದಾರರ ವರ್ತನೆಯನ್ನು ಅಭ್ಯಸಿಸಿದ ಅಮೆರಿಕಾದ ಒಹಾಯೊ ವಿಶ್ವವಿದ್ಯಾಲಯದ ಮನಶಾಸ್ತ್ರ ಹಾಗೂ ರಾಜ್ಯಶಾಸ್ತ್ರ ತಜ್ಞ ಜಾನ್ ಕ್ರಾಸ್ನಿಕ್ ಕೂಡ ಈ ಅಭಿಮತವನ್ನು ಬೆಂಬಲಿಸುತ್ತಾರೆ. ಜನರು ಒಳ್ಳೆಯವರನ್ನು/ಒಳ್ಳೆಯದನ್ನು ಆಯುವುದಕ್ಕಿಂತ ಕೆಟ್ಟದ್ದನ್ನು ತಿರಸ್ಕರಿಸುವುದನ್ನೇ ಹೆಚ್ಚು ಇಷ್ಟ ಪಡುತ್ತಾರೆ, ಯಾರ ಮೇಲಾದರೂ ದ್ವೇಷವಿದ್ದರೆ ಅಥವಾ ಯಾರಿಂದಾದರೂ ತೊಂದರೆಯಾಗುವುದಿದ್ದರೆ ಅಂಥವರನ್ನು ತಡೆಯಬಯಸುತ್ತಾರೆ. ಅಂದರೆ, ಚುನಾವಣೆಯಲ್ಲಿ ಮತ ಬೀಳಬೇಕಿದ್ದರೆ ಮತದಾರರ ಮನದೊಳಗೆ ದ್ವೇಷವನ್ನೂ, ಭಯವನ್ನೂ ಬಿತ್ತುವುದೇ ಅತ್ಯುತ್ತಮ ವಿಧಾನ ಎಂದಾಯಿತು! ತಮ್ಮೆದುರಿರುವ ಸಮಸ್ಯೆಗಳಿಗಿಂತ ಅಭ್ಯರ್ಥಿಗಳ ತುಲನೆಯೇ ಹೆಚ್ಚು ನಿರ್ಣಾಯಕವಾಗುತ್ತದೆ ಎಂದೂ ಕ್ರಾಸ್ನಿಕ್ ನೇತೃತ್ವದ ಅಧ್ಯಯನದಲ್ಲಿ ವ್ಯಕ್ತವಾಗಿದೆ. ರಾಜಕಾರಣಿಗಳನ್ನು ಆಯ್ಕೆ ಮಾಡುವ ರೀತಿಗೂ, ಬಾಳ ಸಂಗಾತಿಯನ್ನು, ತಿಂಡಿ-ತಿನಿಸು ಇತ್ಯಾದಿಗಳನ್ನು ಆಯ್ಕೆ ಮಾಡುವ ರೀತಿಗೂ ಹೆಚ್ಚಿನ ವ್ಯತ್ಯಾಸವಿಲ್ಲವೆಂದೂ, ತಮಗೆ ಹೆಚ್ಚೇನೂ ಪರಿಚಯವಿಲ್ಲದ ವ್ಯಕ್ತಿಗಳನ್ನು ತೆರೆದ ಮನದಿಂದ, ಹೆಚ್ಚಿನ ನಿರೀಕ್ಷೆಗಳೊಂದಿಗೆ ಸ್ವೀಕರಿಸುವ ಸಾಧ್ಯತೆಗಳು ಬಹಳಷ್ಟಿರುತ್ತವೆ ಎಂದೂ ಆ ಅಧ್ಯಯನವು ತೋರಿಸಿದೆ. ಹೊಸಬನೊಬ್ಬನನ್ನು ಆಕರ್ಷಕವಾಗಿ ಪ್ರದರ್ಶಿಸಿ, ಆತನ ಬಗ್ಗೆ ಬಹಳಷ್ಟು ನಿರೀಕ್ಷೆಗಳನ್ನು ಹುಟ್ಟಿಸಿ, ಜೊತೆಗೆ, ಎದುರಾಳಿಗಳ ಬಗ್ಗೆ ದ್ವೇಷವನ್ನೂ, ಭಯವನ್ನೂ ಹಬ್ಬಿಸಿ ಬಿಟ್ಟರೆ ಗೆಲ್ಲುವುದು ಸುಲಭವಾಗುತ್ತದೆ!

ಕ್ರಾಕೆಟ್ ಹೇಳುವಂತೆ, ಮನುಷ್ಯನು ತಾನೇ ಹೇರಿಕೊಂಡ ನೈತಿಕತೆಯ ನೆಪಕ್ಕೆ ಇನ್ನೊಬ್ಬರನ್ನು ಶಿಕ್ಷಿಸುವ ಮೂಲಕ ಸಂತೃಪ್ತಿ, ಸಂತೋಷಗಳನ್ನು ಪಡೆಯುತ್ತಾನೆ, ಮತ್ತು ಇನ್ನಷ್ಟು ಶಿಕ್ಷಿಸುವ ಹಠಕ್ಕೆ ಬೀಳುತ್ತಾನೆ. ತೀವ್ರವಾದ ಮಾನಸಿಕ, ಸಾಮಾಜಿಕ, ಆರ್ಥಿಕ ಒತ್ತಡಗಳಿದ್ದಾಗ ಈ ಪ್ರವೃತ್ತಿಯು ಇನ್ನಷ್ಟು ತೀವ್ರವಾಗುತ್ತದೆ. ಇಂತಹಾ ಒತ್ತಡಗಳನ್ನು ಉತ್ಪ್ರೇಕ್ಷಿಸಿ, ಹಗೆ ಸಾಧಿಸುವಂತೆ ಪ್ರಚೋದಿಸುವಲ್ಲಿ ಹೊಸ ಮಾಧ್ಯಮಗಳು ಬಹು ದೊಡ್ಡ ಪಾತ್ರ ವಹಿಸುತ್ತವೆ ಎನ್ನುತ್ತಾರೆ ಕ್ರಾಕೆಟ್. ವಾಟ್ಸಪ್, ಟ್ವಿಟರ್ ಮುಂತಾದವುಗಳ ಮೂಲಕ ಅನ್ಯರ ಬಗ್ಗೆ ಹೀಯಾಳಿಕೆ, ದ್ವೇಷ, ಆಕ್ರೋಶಗಳನ್ನು ವ್ಯಕ್ತಪಡಿಸಿ, ಅವಕ್ಕೆ ಮೆಚ್ಚುಗೆ ಪಡೆದು, ಮತ್ತಷ್ಟು ದ್ವೇಷ-ನಿಂದನೆಗಳನ್ನು ಹರಡುವ ಪ್ರವೃತ್ತಿಯು ವಿಷವರ್ತುಲವಾಗುತ್ತಾ, ಜನರೊಳಗಿನ ಒಡಕನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂಬ ಚಿಂತೆಯನ್ನೂ ಕ್ರಾಕೆಟ್ ವ್ಯಕ್ತ ಪಡಿಸುತ್ತಾರೆ.

ಜನರು ನಿಜ ಸುದ್ದಿಗಳಿಗಿಂತ ಸುಳ್ಳು ಸುದ್ದಿಗಳನ್ನೇ ಹೆಚ್ಚು ಹರಡುತ್ತಾರೆ ಎಂದೂ ಅಧ್ಯಯನಗಳು ತೋರಿಸಿವೆ. ಹಾಗಾಗಿ, ಹೀರೋಗಳ ವೈಭವೀಕರಣ, ವಿಲನ್‌ಗಳ ತುಚ್ಚೀಕರಣ, ದ್ವೇಷ-ಭಯಗಳ ಪ್ರಸರಣ ಎಲ್ಲವನ್ನೂ ಸುಳ್ಳುಗಳ ಮೂಲಕ ನಡೆಸುವುದೇ ಹೆಚ್ಚು ಸುಲಭವಾಗುತ್ತದೆ! ಇದೇ ಮಾರ್ಚ್ 9ರಂದು ಪ್ರತಿಷ್ಠಿತ ಸಯನ್ಸ್ ವಿದ್ವತ್ಪತ್ರಿಕೆಯಲ್ಲಿ ಪ್ರಕಟವಾದ ಮಸಚುಸೆಟ್ಸ್ ತಂತ್ರಜ್ಞಾನ ಸಂಸ್ಥೆಯ ಸೊರೂಷ್ ವಸುಗಿ, ದೆಬ್ ರಾಯ್ ಮತ್ತು ಸಿನಾನ್ ಅರಾಲ್ ಅವರ ಅಧ್ಯಯನವು, ಟ್ವಿಟರ್ ಬಳಕೆದಾರರು ಸುಳ್ಳುಗಳನ್ನೇ ಹೆಚ್ಚು ಹರಡುತ್ತಾರೆನ್ನುವುದನ್ನು ಖಚಿತಪಡಿಸಿದೆ. ಟ್ವಿಟರ್‌ನಲ್ಲಿ 2006ರಿಂದ 2017ರವರೆಗೆ ಸುಮಾರು 1,26,000 ವದಂತಿಗಳು 30 ಲಕ್ಷ ಜನರಿಗೆ ಹರಡಿದ ಬಗೆಯನ್ನು ಈ ಅಧ್ಯಯನದಲ್ಲಿ ವಿಶ್ಲೇಷಿಸಲಾಗಿತ್ತು. ಮೇಲ್ಪಂಕ್ತಿಯ ಶೇ. 1ರಷ್ಟು ಸುಳ್ಳು ಸುದ್ದಿಗಳು ಒಂದು ಸಾವಿರದಿಂದ ಒಂದು ಲಕ್ಷ ಜನರನ್ನು ತಲುಪಿದರೆ, ನಿಜ ಸುದ್ದಿಗಳು ಸಾವಿರದಷ್ಟು ಮಂದಿಯನ್ನೂ ತಲುಪಲಿಲ್ಲ ಹಾಗೂ ಸುಳ್ಳು ಸುದ್ದಿಗಳು ನಿಜ ಸುದ್ದಿಗಳಿಗಿಂತ ದುಪ್ಪಟ್ಟು ಆಳಕ್ಕೆ, ಹತ್ತು ಪಟ್ಟು ವೇಗವಾಗಿ ಹರಡಿದವು. ಅದರಲ್ಲೂ, ರಾಜಕೀಯದ ಸುಳ್ಳು ಸುದ್ದಿಗಳು ಇತರ ಸುಳ್ಳು ಸುದ್ದಿಗಳಿಗಿಂತ ಮೂರು ಪಟ್ಟು ಹೆಚ್ಚು ವೇಗದಲ್ಲಿ, ಹೆಚ್ಚು ವ್ಯಾಪಕವಾಗಿ, ಹೆಚ್ಚು ಆಳಕ್ಕೆ, ಹೆಚ್ಚು ಜನರಿಗೆ ಹರಡಿದವು. ಸುಳ್ಳು ಸುದ್ದಿಗಳು ಹೆಚ್ಚು ವಿನೂತನವೆನಿಸುವುದರಿಂದಲೇ ಬೇಗನೇ ಪಸರಿಸುತ್ತವೆ ಮತ್ತು ಇಂತಹ ‘ವಿನೂತನ’ ಸುದ್ದಿಗಳನ್ನು ಹರಡುವವರು ಅದೇನೋ ವಿಶೇಷ ಪಾಂಡಿತ್ಯದ ಹುಸಿ ಹಮ್ಮು ಪಡೆದು, ಇನ್ನಷ್ಟು ಜನರಿಗೆ ಇನ್ನಷ್ಟು ಸುಳ್ಳುಗಳನ್ನು ಹಂಚುತ್ತಾರೆ ಎಂದು ಈ ವಿಜ್ಞಾನಿಗಳು ಅಭಿಪ್ರಾಯ ಪಡುತ್ತಾರೆ.

ಬುದ್ಧಿವಂತ, ಸುಶಿಕ್ಷಿತರೆನಿಸಿಕೊಂಡವರೂ ಸುಳ್ಳುಗಳನ್ನು ಅತಿ ಸುಲಭವಾಗಿ ನಂಬಿ ಬಿಡುತ್ತಾರೆ. ಸುಳ್ಳುಗಳು ತಾವಂದುಕೊಂಡದ್ದನ್ನು ಸಮರ್ಥಿಸುವಂತಿದ್ದರೆ, ಮೊದಲೆಲ್ಲೋ ಕೇಳಿದ್ದಕ್ಕೆ ತಾಳೆಯಾಗುವಂತಿದ್ದರೆ, ಸುಲಭವಾಗಿ ಮನಸ್ಸಿಗೆ ನಾಟುವಂತಿದ್ದರೆ, ಕಾಣಲು ಆಕರ್ಷಕವಾಗಿರುವವರು ಆಕರ್ಷಕ ಸುಳ್ಳುಗಳನ್ನು ಹೊಸೆದಿದ್ದರೆ, ಒಂದಷ್ಟು ಜನರು ಪದೇ ಪದೇ ಅದನ್ನೇ ಹೇಳುತ್ತಿದ್ದರೆ, ಯಾವುದೇ ವಿವೇಚನೆಯಿಲ್ಲದೆ ಸುಳ್ಳುಗಳನ್ನು ನಂಬುತ್ತಾರೆ ಮತ್ತು ಅವೇ ಸರಿಯೆಂದು ಹಠ ಹಿಡಿಯುತ್ತಾರೆ, ಮಾತ್ರವಲ್ಲ, ಇನ್ನಿತರರಿಗೂ ಹಂಚಿ ಸಂಭ್ರಮಿಸುತ್ತಾರೆ.

ಚುನಾವಣೆಗಳಲ್ಲಿ ಗೆಲ್ಲುವುದಕ್ಕೆ ಮನುಷ್ಯರ ಈ ಮನೋವರ್ತನೆಯ ಆಧಾರದಲ್ಲೇ ಸೂತ್ರಗಳನ್ನು ತಯಾರಿಸಿಕೊಂಡರೆ ಒಳ್ಳೆಯದಲ್ಲವೇ? ಭರ್ಜರಿ ಸುಳ್ಳುಗಳನ್ನು ಹೊಸೆದು ಎಲ್ಲೆಂದರಲ್ಲಿ ಪಸರಿಸಿ, ವಿರೋಧಿಗಳನ್ನು ತುಚ್ಚ ವಿಲನ್‌ಗಳಾಗಿಸಿ ಮತದಾರರಲ್ಲಿ ಸಿಟ್ಟೇರಿಸಿ, ಸಕಲ ಸಮಸ್ಯೆಗಳನ್ನೂ ಚಿಟಿಕೆಯಲ್ಲಿ ಪರಿಹರಿಸಬಲ್ಲ ಮಹಾ ಹೀರೋನನ್ನು ಸೃಷ್ಟಿಸಿ ವೈಭವೀಕರಿಸಿದರೆ ಗೆಲ್ಲುವುದು ಗ್ಯಾರಂಟಿ; ಆ ಅಬ್ಬರದಲ್ಲಿ ಕಿತ್ತು ತಿನ್ನುವ ಸಮಸ್ಯೆಗಳು, ಅನುಭವಿಸಿರುವ ಅನ್ಯಾಯ-ಅಪರಾಧಗಳು, ವಾಸ್ತವ ಅಂಕಿ-ಅಂಶಗಳು ಎಲ್ಲವೂ ಗೌಣವೇ ಆಗುತ್ತವೆ.

ಸಾವಿನ ದವಡೆಯಲ್ಲಿ ನರಳುತ್ತಿರುವ ರೋಗಿಯ ದಯಾಮರಣದ ನಿರ್ಧಾರ ಸರಳವಲ್ಲ

(ಮಾರ್ಚ್ 10, 2018)

ಸಾವಿನಂಚಿನಲ್ಲಿರುವವರು ಚಿಕಿತ್ಸೆಯನ್ನು ನಿರಾಕರಿಸಿ ಸಾವನ್ನಪ್ಪುವುದಕ್ಕೆ ಸರ್ವೋಚ್ಚ ನ್ಯಾಯಾಲಯವು ನೀಡಿರುವ ಹೊಸ ತೀರ್ಪಿನಿಂದ ಅವಕಾಶವೊದಗಿದಂತಾಗಿದೆ. ಕಳೆದ ಕೆಲವು ವರ್ಷಗಳಿಂದ, ಅದರಲ್ಲೂ, ಮುಂಬಯಿಯ ಆಸ್ಪತ್ರೆಯೊಂದರಲ್ಲಿ ಅತ್ಯಾಚಾರಕ್ಕೀಡಾಗಿ ನಾಲ್ಕು ದಶಕಗಳ ಕಾಲ ಮರಣಶಯ್ಯೆಯಲ್ಲಿದ್ದ ಅರುಣಾ ಶ್ಯಾನಭಾಗ್ ಪ್ರಕರಣವು ಸರ್ವೋಚ್ಚ ನ್ಯಾಯಾಲಯದ ಮೆಟ್ಟಲೇರಿದ ಬಳಿಕ, ದಯಾಮರಣದ ವಿಚಾರವು ಸಾಕಷ್ಟು ಚರ್ಚೆಯಲ್ಲಿತ್ತು. ದಯಾಮರಣಕ್ಕೆ ಅವಕಾಶ ನೀಡುವ ಉದ್ದೇಶದಿಂದಲೇ ಕಾನೂನು ಆಯೋಗದ 241ನೇ ವರದಿ ಮತ್ತು ಸಾವಿನಂಚಿನಲ್ಲಿರುವ ರೋಗಿಗಳ ವೈದ್ಯಕೀಯ ಆರೈಕೆ (ರೋಗಿಗಳು ಮತ್ತು ವೈದ್ಯರ ಸುರಕ್ಷತೆ) ಮಸೂದೆಯ ಕರಡು ಕೂಡ ಸಿದ್ಧವಾಗಿದ್ದವು. ಅಂತಹ ಸನ್ನಿವೇಶದಲ್ಲಿ ಸರ್ವೋಚ್ಚ ನ್ಯಾಯಾಲಯವು 538 ಪುಟಗಳಷ್ಟು ಸುದೀರ್ಘವಾದ, ದೇಶ-ವಿದೇಶಗಳ ಅಭಿಮತಗಳನ್ನು ಒಳಗೊಂಡ ತೀರ್ಪನ್ನು ನೀಡಿದೆ.

ಸಾವನ್ನುಂಟು ಮಾಡುವುದರಲ್ಲಿ ದಯೆ ಹೇಗಿದ್ದೀತು ಎನ್ನುವ ಕಾರಣಕ್ಕೆ ದಯಾಮರಣ ಎಂಬುದೇ ವಿರೋಧಾಭಾಸವುಳ್ಳದ್ದಾಗುತ್ತದೆ. ಆದರೆ ಮನುಷ್ಯರ ಜೀವಿತಾವಧಿಯು ಹೆಚ್ಚುತ್ತಿರುವಂತೆ, ವೈದ್ಯಕೀಯ ಚಿಕಿತ್ಸೆಗಳು ಹೆಚ್ಚು ಹೆಚ್ಚು ಯಾಂತ್ರೀಕೃತವೂ, ವೆಚ್ಚದಾಯಕವೂ ಆಗುತ್ತಿರುವಂತೆ ಖಂಡಿತಕ್ಕೂ ಗುಣವಾಗದೇ ಇರುವ ಕಾಯಿಲೆಗಳಿಂದಾಗಿ ಸಾವು-ಬದುಕಿನ ನಡುವೆ ಹೋರಾಡುತ್ತಿರುವವರಿಗೆ ಚಿಕಿತ್ಸೆ ನೀಡಬೇಕೇ ಬೇಡವೇ ಎನ್ನುವುದು ರೋಗಿಗೆ, ಕುಟುಂಬಕ್ಕೆ ಮತ್ತು ವೈದ್ಯರಿಗೆ ಎಲ್ಲರಿಗೂ ಜಟಿಲವಾದ ಸಮಸ್ಯೆಯೇ ಆಗುವ ಸಂದರ್ಭಗಳು ಸಾಮಾನ್ಯವಾಗುತ್ತಿವೆ.

ಅಂತಹಾ ಕಷ್ಟವನ್ನು ಅನುಭವಿಸುವ ಕೆಲವರು ತಾವೇ ಆತ್ಮಹತ್ಯೆ ಮಾಡಿಕೊಳ್ಳುವುದಿದೆ, ಅದರಿಂದ ಅವರ ಘನತೆಗೆ ಚ್ಯುತಿಯಾಗುವುದಿದೆ. ಅಂತಹಾ ರೋಗಿಗಳು ವೈದ್ಯರ ನೆರವಿನಿಂದ ಸಾವು ಪಡೆಯುವ, ನೇರ ದಯಾಮರಣ ಹೊಂದುವ, ಅವಕಾಶಗಳನ್ನು ಬೆರಳೆಣಿಕೆಯ ಕೆಲವು ದೇಶಗಳಲ್ಲಿ ನೀಡಲಾಗಿದೆ. ನಮ್ಮ ದೇಶವೂ ಸೇರಿದಂತೆ ಹೆಚ್ಚಿನ ದೇಶಗಳಲ್ಲಿ ನೇರ ದಯಾಮರಣಕ್ಕೆ ಕಾನೂನಿನ ಸಮ್ಮತಿಯಿಲ್ಲ, ಈ ಹೊಸ ತೀರ್ಪಿನಲ್ಲೂ ಸರ್ವೋಚ್ಚ ನ್ಯಾಯಾಲಯವು ಅದಕ್ಕೆ ಸಮ್ಮತಿಸಿಲ್ಲ.

ಆದರೆ, ಖಂಡಿತಕ್ಕೂ ಗುಣ ಹೊಂದದ, ಮಾರಣಾಂತಿಕವಾದ ಕಾಯಿಲೆಗಳಿದ್ದು, ಸಾವಿನ ಸನಿಹದಲ್ಲಿರುವವರು ಚಿಕಿತ್ಸೆಯನ್ನು ನಿರಾಕರಿಸಿ ಮರಣ ಹೊಂದುವುದಕ್ಕೆ, ಅಂದರೆ ಪರೋಕ್ಷವಾಗಿ ದಯಾಮರಣಕ್ಕೀಡಾಗುವುದಕ್ಕೆ, ಈ ತೀರ್ಪು ಅವಕಾಶ ನೀಡುತ್ತದೆ. ಸಂವಿಧಾನದ 21ನೇ ವಿಧಿಯಲ್ಲಿ ಹೇಳಲಾಗಿರುವ ಜೀವಿಸುವ ಹಕ್ಕು ಎನ್ನುವುದು ಘನತೆಯಿಂದ ಜೀವಿಸುವ ಹಕ್ಕಾಗಿಯೆಂದೂ, ಅದಕ್ಕೆ ಚ್ಯುತಿಯಾಗುವ ಸಾಧ್ಯತೆಗಳಿದ್ದಲ್ಲಿ ವ್ಯಕ್ತಿಯು ಅದೇ ಹಕ್ಕಿನಡಿಯಲ್ಲಿ ತನ್ನ ಜೀವನವನ್ನು ಅಂತ್ಯಗೊಳಿಸಿಕೊಳ್ಳುವ ಅವಕಾಶವನ್ನೂ ಹೊಂದಬಹುದೆಂದು ಈ ತೀರ್ಪಿನಲ್ಲಿ ಹೇಳಲಾಗಿದೆ.

ಸಾವಿನಂಚಿನಲ್ಲಿರುವವರಿಗೆ ಚಿಕಿತ್ಸೆಯನ್ನು ತಡೆಹಿಡಿಯುವುದಕ್ಕೆ ವಿವರವಾದ ಕ್ರಮಗಳನ್ನು ತೀರ್ಪಿನಲ್ಲಿ ನೀಡಲಾಗಿದೆ. ವ್ಯಕ್ತಿಯು ಸಂಪೂರ್ಣ ಆರೋಗ್ಯದಿಂದಿರುವಾಗಲೇ ಮುಂಗಡ ವೈದ್ಯಕೀಯ ನಿರ್ದೇಶನ ಪತ್ರವನ್ನು ಸಿದ್ಧಪಡಿಸಬಹುದು. ಯಾವ ಸಂದರ್ಭಗಳಲ್ಲಿ, ಹೇಗೆ ಚಿಕಿತ್ಸೆಯನ್ನು ಸ್ಥಗಿತಗೊಳಿಸಬೇಕೆನ್ನುವುದನ್ನು ಅತ್ಯಂತ ಸ್ಪಷ್ಟವಾಗಿ ಬರೆದು, ಇಬ್ಬರು ಸಾಕ್ಷಿಗಳ ಸಮ್ಮುಖ ಸಹಿ ಮಾಡಿ, ಪ್ರಥಮ ದರ್ಜೆಯ ನ್ಯಾಯಿಕ ದಂಡಾಧಿಕಾರಿಯವರ ಸಹಿಯನ್ನು ಪಡೇಯಬೇಕಾಗುತ್ತದೆ ಮತ್ತು ಈ ಪತ್ರದ ಪ್ರತಿಯನ್ನು ಜಿಲ್ಲಾ ನ್ಯಾಯಾಲಯದಲ್ಲಿ ದಾಖಲಿಸಿ, ಸ್ಥಳೀಯಾಡಳಿತಗಳಿಗೂ ನೀಡಬೇಕಾಗುತ್ತದೆ. ಆ ವ್ಯಕ್ತಿಯು ಸಾವಿನಂಚಿನಲ್ಲಿದ್ದು, ತನ್ನ ಮುಂಗಡ ನಿರ್ದೇಶನವನ್ನು ಜಾರಿಗೊಳಿಸಲು ಇಚ್ಚಿಸಿದರೆ, ವೈದ್ಯರಿಗೆ ಅದನ್ನು ತಿಳಿಸಬೇಕಾಗುತ್ತದೆ, ಮತ್ತು ಆ ವೈದ್ಯರು ಆ ಪತ್ರದ ಸತ್ಯತೆಯನ್ನು ಜಿಲ್ಲಾ ನ್ಯಾಯಾಲಯದ ಮೂಲಕ ದೃಢ ಪಡಿಸಿ, ರೋಗಿಯು ನಿಜಕ್ಕೂ ಸಾವಿನಂಚಿನಲ್ಲಿರುವುದನ್ನು ದೃಢ ಪಡಿಸಲು ಮೂರು ಹಿರಿಯ ವೈದ್ಯರ ಸಮಿತಿಯನ್ನು ರಚಿಸಿ ಅಭಿಪ್ರಾಯವನ್ನು ಪಡೆಯಬೇಕಾಗುತ್ತದೆ. ಹಾಗೆ ಒಪ್ಪಿಗೆ ಸಿಕ್ಕರೆ, ವೈದ್ಯರು ಜಿಲ್ಲಾಧಿಕಾರಿಗಳಿಗೆ ತಿಳಿಸಬೇಕಾಗುತ್ತದೆ, ಹಾಗೂ ಜಿಲ್ಲಾಧಿಕಾರಿಗಳು ಮತ್ತೊಂದು ತ್ರಿಸದಸ್ಯ ಸಮಿತಿಯನ್ನು ನೇಮಿಸಿ ಅದನ್ನು ದೃಢ ಪಡಿಸಬೇಕಾಗುತ್ತದೆ. ಈ ಸಮಿತಿಯೂ ಒಪ್ಪಿದರೆ, ಪ್ರಥಮ ದರ್ಜೆಯ ನ್ಯಾಯಿಕ ದಂಡಾಧಿಕಾರಿಯವರ ಗಮನಕ್ಕೆ ತಂದು, ಅವರು ಸ್ವತಃ ರೋಗಿಯನ್ನು ಕಂಡು ಅನುಮತಿ ನೀಡಬೇಕಾಗುತ್ತದೆ. ಮುಂಗಡ ವೈದ್ಯಕೀಯ ನಿರ್ದೇಶನ ಪತ್ರವನ್ನು ಸಿದ್ಧಪಡಿಸದ ರೋಗಿಗಳು ಕೂಡ ಸಾವಿನಂಚಿನಲ್ಲಿರುವಾಗ ಇಂಥದ್ದೇ ಪ್ರಕ್ರಿಯೆಗೆ ಒಳಗಾಗಬಹುದು; ರೋಗಿಯು ಅಂತಹಾ ಕೋರಿಕೆಯನ್ನು ಮುಂದಿಡುವ ಸ್ಥಿತಿಯಲ್ಲಿಲ್ಲದಿದ್ದರೆ, ವೈದ್ಯರು ಅಥವಾ ಕುಟುಂಬಿಕರು ಅಂತಹಾ ನಿರ್ಣಯಕೆ ಬಂದು ಜೊತೆಯಾಗಿ ಚರ್ಚಿಸಿ ಇದೇ ನ್ಯಾಯಿಕ ವಿಧಾನದ ಮೂಲಕ ದಯಾಮರಣಕ್ಕೆ ಪ್ರಯತ್ನಿಸಬಹುದು. ಈ ಯಾವುದೇ ಪ್ರಕ್ರಿಯೆಯಲ್ಲಿ ಅನುಮತಿ ದೊರೆಯದಿದ್ದರೆ, ರೋಗಿ ಅಥವಾ ಮನೆಯವರು ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ಈ ತೀರ್ಪು ಸಾವಿನಂಚಿನಲ್ಲಿರುವವರಿಗೂ, ಅವರ ಕುಟುಂಬಿಕರಿಗೂ, ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೂ ಪರೋಕ್ಷ ದಯಾಮರಣದ ಅವಕಾಶವನ್ನು ನೀಡುತ್ತದೆ ಎನ್ನುವುದು ನಿಜವಾದರೂ, ಮೋಸದಿಂದ ಕೊಲ್ಲುವುದನ್ನು ತಪ್ಪಿಸಲು ಈ ಸುದೀರ್ಘವಾದ, ಹಲವು ಹಂತಗಳ ಅನುಮತಿ ಪ್ರಕ್ರಿಯೆಯು ಸರಿಯೆಂದಾದರೂ, ಸಾವಿನ ದವಡೆಯಲ್ಲಿ ನರಳುತ್ತಿರುವ ರೋಗಿಗೂ, ಕುಟುಂಬಿಕರಿಗೂ ಆ ಸನ್ನಿವೇಶದ ನಿಭಾವಣೆಯನ್ನು ಇದು ಸರಳಗೊಳಿಸುವುದಿಲ್ಲ, ಸುಲಭವಾಗಿಸುವುದಿಲ್ಲ.

ಇಲಾಜು 9 – ಸಾಮಾನ್ಯರ ಸ್ವಂತ ಖರ್ಚಿನಲ್ಲಿ ಆಯುಷ್ಮಾನ್ ಭಾರತ, ಆರೋಗ್ಯ ಕರ್ನಾಟಕ!

(ಮಾರ್ಚ್ 5, 2018)

ಕೇಂದ್ರ ಸರಕಾರದ ಆಯುಷ್ಮಾನ್ ಭಾರತ, ರಾಜ್ಯ ಸರಕಾರದ ಆರೋಗ್ಯ ಕರ್ನಾಟಕ. ಇವು ಚುನಾವಣಾ ಕಾಲದಲ್ಲಿ ಆರೋಗ್ಯ ಸೇವೆಗಳ ಬಗ್ಗೆ ದೇಶದ ಎರಡು ಪ್ರಮುಖ ರಾಜಕೀಯ ಪಕ್ಷಗಳ ಪ್ರಣಾಳಿಕೆಗಳು. ಸರಕಾರಿ ಆಸ್ಪತ್ರೆಗಳನ್ನು ಸುಧಾರಿಸುವ ಬದಲು, ಕಡು ಬಡವರನ್ನು ಕೂಡ ಖಾಸಗಿ ಆಸ್ಪತ್ರೆಗಳೊಳಕ್ಕೆ ತಳ್ಳುವ ಯೋಜನೆಗಳು. ಸಮಗ್ರ ಆರೋಗ್ಯ ಸೇವೆಯ ಹೆಸರಲ್ಲಿ ಆಯ್ದ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಆಯ್ದ ಕೆಲವು ಚಿಕಿತ್ಸೆಗಳಿಗೆ ಬೊಕ್ಕಸದಿಂದ ಒಂದಿಷ್ಟು ಕೊಟ್ಟು, ಬಾಕಿ ಒಂದಷ್ಟನ್ನು ಜನರ ಕಿಸೆಗಳಿಂದಲೇ ಕೊಡಿಸುವ ತಂತ್ರಗಳು. ಇವುಗಳಿಂದ ಪ್ರಾಥಮಿಕ ಆರೋಗ್ಯ ಸೇವೆಗಳು ಎಂತೂ ಸುಧಾರಣೆಯಾಗವು, ಆಯುಷ್ಯ-ಆರೋಗ್ಯ ಸುಧಾರಿಸುವ ಖಾತರಿಯೂ ಇಲ್ಲ.

ಆಯುಷ್ಮಾನ್ ಭಾರತ ಯೋಜನೆಯು ಭೂಲೋಕದಲ್ಲೇ ಅತ್ಯಂತ ದೊಡ್ಡ ಆರೋಗ್ಯ ಸುರಕ್ಷಾ ಯೋಜನೆ ಎಂದು ಕೇಂದ್ರದ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿಕೊಂಡಿದ್ದಾರೆ. ಅದರಡಿಯಲ್ಲಿ, ಸಮಗ್ರ ಆರೋಗ್ಯ ರಕ್ಷಣೆ ಮತ್ತು ತಾಯಿ-ಮಕ್ಕಳ ಆರೋಗ್ಯ ಸೇವೆಗಳಿಗೆ ಈಗಾಗಲೇ ಇರುವ ಒಂದೂವರೆ ಲಕ್ಷ ಉಪಕೇಂದ್ರಗಳನ್ನು ಆರೋಗ್ಯ-ಸೌಖ್ಯಾಲಯಗಳಾಗಿ ಅಭಿವೃದ್ಧಿ ಪಡಿಸಲಾಗುವುದು ಮತ್ತು ಹತ್ತು ಕೋಟಿ ಬಡ-ದುರ್ಬಲ ಕುಟುಂಬಗಳ 50 ಕೋಟಿ ಜನರಿಗೆ ಉನ್ನತ ಚಿಕಿತ್ಸೆಗಳಿಗಾಗಿ ರಾಷ್ಟ್ರೀಯ ಆರೋಗ್ಯ ಸುರಕ್ಷಾ ಯೋಜನೆ ಎಂಬ ಹೆಸರಲ್ಲಿ ಪ್ರತೀ ಕುಟುಂಬಕ್ಕೆ ವಾರ್ಷಿಕ 5 ಲಕ್ಷ ರೂಪಾಯಿಗಳ ವಿಮೆಯನ್ನು ಒದಗಿಸಲಾಗುವುದು ಎಂದು ಸಚಿವರು ಘೋಷಿಸಿದ್ದಾರೆ. ಸೌಖ್ಯಾಲಯಗಳಿಗೆ 1200 ಕೋಟಿ ರೂಪಾಯಿ ಹಾಗೂ ಆರೋಗ್ಯ ಸುರಕ್ಷಾ ಯೋಜನೆಗೆ ಸಾಕಷ್ಟು (ಎಷ್ಟು ಎಂದಿಲ್ಲ!) ಹಣವನ್ನು ಒದಗಿಸಲಾಗುವುದೆಂದೂ ಹೇಳಿದ್ದಾರೆ.

ಆದರೆ, ಆರೋಗ್ಯ ಇಲಾಖೆಯ 2018-19ರ ಅನುದಾನ ಪಟ್ಟಿಯಲ್ಲಿ ಈ ಯೋಜನೆಗಳು ಕಾಣಸಿಗುವುದಿಲ್ಲ! ಒಂದೂವರೆ ಲಕ್ಷ ಸೌಖ್ಯಾಲಯಗಳಿಗೆ 1200 ಕೋಟಿ ನೀಡಿದರೂ, ಒಂದು ಸೌಖ್ಯಾಲಯಕ್ಕೆ ವರ್ಷಕ್ಕೆ 80 ಸಾವಿರ, ತಿಂಗಳಿಗೆ 7000 ರೂಪಾಯಿಗಳಾಗುತ್ತವೆ! ಅಷ್ಟಾದರೂ ಕೊಟ್ಟಿದ್ದಾರಲ್ಲಾ ಎಂದು ಸಂಭ್ರಮಿಸುವವರು ಅನುದಾನದ ವಿವರಗಳನ್ನು ನೋಡಬೇಕು: ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನಕ್ಕೆ 2017-18ರಲ್ಲಿ ಒದಗಿಸಿದ್ದು 21189 ಕೋಟಿ, ಪರಿಷ್ಕೃತ ಅಂದಾಜು 25459 ಕೋಟಿ, 2018-19ಕ್ಕೆ ಒದಗಿಸಿರುವುದು 24280 ಕೋಟಿ! ತಾಯಿ-ಮಕ್ಕಳ ಆರೋಗ್ಯ ಸೇವೆಗಳಿಗೆ 2017-18ರಲ್ಲಿ ಒದಗಿಸಿದ್ದು 5967 ಕೋಟಿ, ಪರಿಷ್ಕೃತ ಅಂದಾಜು 11113 ಕೋಟಿ, 2018-19ಕ್ಕೆ ಒದಗಿಸಿರುವುದು 7411 ಕೋಟಿ! ಕಳೆದ ವರ್ಷದ ಖರ್ಚನ್ನು ಸರಿದೂಗಿಸುವಷ್ಟು ಮೊತ್ತವನ್ನೂ ಈ ವರ್ಷ ನೀಡಿಲ್ಲ ಎಂದ ಮೇಲೆ ಸೌಖ್ಯಾಲಯಗಳಲ್ಲಿ ಸುಖವಿದ್ದೀತೇ?

ಹೊಸ ವಿಮಾ ಯೋಜನೆಯ ಕಥೆಯೂ ಹಾಗೆಯೇ! ಅದಕ್ಕೆ ಸಾಕಷ್ಟು ಹಣ ಒದಗಿಸಲಾಗುವುದೆಂದು ಬೆಳಗ್ಗೆ ಭಾಷಣದಲ್ಲಿ ಹೇಳಲಾಗಿದ್ದರೆ, ಸಂಜೆಯ ವೇಳೆಗೆ, ಆಯವ್ಯಯದಲ್ಲಿ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಗೆ ಒದಗಿಸಿರುವ 2000 ಕೋಟಿಗಳೇ ಈ ಹೊಸ ಯೋಜನೆಯ ಮೊತ್ತ ಎನ್ನಲಾಯಿತು. ಎರಡು ದಿನಗಳ ದೊಡ್ಡ ಪ್ರಚಾರದ ಬಳಿಕ ಅಕ್ಟೋಬರ್ 2ರ ವೇಳೆಗಷ್ಟೇ ಈ ಯೋಜನೆ ಜಾರಿಯಾಗಲಿದೆ ಎಂದು ಹೇಳಲಾಯಿತು! ದಿನ ಉರುಳಿದಾಗ, ‘ಜಗತ್ತಿನ ಅತಿ ದೊಡ್ಡ ಯೋಜನೆ’ಯು 2008ರಿಂದಲೇ ಜಾರಿಯಲ್ಲಿರುವ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯ ಹೊಸ ಹೆಸರಷ್ಟೇ ಎನ್ನುವುದು ಸುಸ್ಪಷ್ಟವಾಯಿತು! ಈ ಮಹಾ ಯೋಜನೆಗಾಗಿ ಶೇ. 1 ರ ಅಧಿಕ ಕರದ ಮೂಲಕ ಸಂಗ್ರಹಿಸಲಾಗುವ 11 ಸಾವಿರ ಕೋಟಿಗಳ ಗತಿಯೇನೆನ್ನುವುದು ಮಾತ್ರ ಅಸ್ಪಷ್ಟವಾಗಿಯೇ ಉಳಿಯಿತು!

ಇನ್ನೆರಡು ದಿನ ಕಳೆದಾಗ ಹೆಸರೂ ಹೊಸತಲ್ಲ ಎಂದಾಯಿತು! ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯಲ್ಲಿ ಪ್ರತೀ ಕುಟುಂಬಕ್ಕೆ ವರ್ಷಕ್ಕೆ 30 ಸಾವಿರವಿದ್ದ ವಿಮಾ ಮೊತ್ತವನ್ನು ಒಂದು ಲಕ್ಷಕ್ಕೇರಿಸಿ ರಾಷ್ಟ್ರೀಯ ಆರೋಗ್ಯ ಸುರಕ್ಷಾ ಯೋಜನೆ ಎಂಬ ಹೆಸರನ್ನೇ 2017-18ರ ಆಯವ್ಯಯದಲ್ಲಿ ಇದೇ ವಿತ್ತ ಸಚಿವರು ಘೋಷಿಸಿದ್ದರು! ಅದು ಅಲ್ಲಿಗೇ ಉಳಿದು, ಯೋಜನೆಯ ಸ್ವರೂಪವನ್ನೇ ಅಂತಿಮಗೊಳಿಸಲಾಗಿಲ್ಲ ಎಂದು ಡಿಸೆಂಬರ್ 15, 2017ರಂದು ಲೋಕಸಭೆಗೆ ತಿಳಿಸಲಾಗಿತ್ತು! ಆಗ ಎದ್ದೇಳೆದ ಯೋಜನೆ ಈಗ 5 ಲಕ್ಷ ವಿಮೆಯೊಂದಿಗೆ ಬಂದಿದೆ! ಹತ್ತು ಕೋಟಿ ಕುಟುಂಬಗಳಿಗೆ ವಿಸ್ತರಿಸಲಾಗುತ್ತದೆ ಎಂದುದರಲ್ಲೂ ಹೊಸತೇನಿಲ್ಲ; ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯು 2017ರ ಮಾರ್ಚ್ ಅಂತ್ಯಕ್ಕೆ 7 ಕೋಟಿ ಕುಟುಂಬಗಳನ್ನು ತಲುಪುವ ಗುರಿಯು ಮೊದಲೇ ಇತ್ತು!

ಆದರೆ ಈ ಹತ್ತು ವರ್ಷಗಳಲ್ಲಿ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯನ್ನೂ ಸರಿಯಾಗಿ ನಡೆಸಲಾಗಿಲ್ಲ. ಯೋಜನೆಯು 2017ರ ವೇಳೆಗೆ ಗುರಿಯ ಅರ್ಧದಷ್ಟು, 3.6 ಕೋಟಿ, ಕುಟುಂಬಗಳನ್ನಷ್ಟೇ ತಲುಪಿತ್ತು. ಈ ಯೋಜನೆಗೆ 2016-17 ಮತ್ತು 17-18ರಲ್ಲಿ ಕೇಂದ್ರವು ಒದಗಿಸಿದ್ದ ರೂ. 724 ಕೋಟಿ ಮತ್ತು 1000 ಕೋಟಿಗಳಲ್ಲಿ ಅರ್ಧದಷ್ಟೇ, ರೂ. 329 ಮತ್ತು 470 ಕೋಟಿ, ಬಳಕೆಯಾಯಿತು. ಇಂತಹ ಅರ್ಧಂಬರ್ಧ ಬಳಕೆಯಿಂದಾಗಿ ಯೋಜನೆಯ ಮೂಲೋದ್ದೇಶವೇ ವಿಫಲವಾಗಿ, ಬಡ ಜನರು ಚಿಕಿತ್ಸೆಗಳಿಗಾಗಿ ತಮ್ಮ ಕಿಸೆಯಿಂದಲೇ ಖರ್ಚು ಮಾಡಿ ಮತ್ತಷ್ಟು ಬಡವರಾಗುವುದು ಹಾಗೆಯೇ ಮುಂದುವರಿದಿದೆ. ರಾಷ್ಟ್ರೀಯ ಆರೋಗ್ಯ ವೆಚ್ಚದ ಅಂದಾಜಿನ ಅಕ್ಟೋಬರ್ 2017ರ ವರದಿಯಂತೆ, 2014-15ರಲ್ಲಿ ಒಟ್ಟು ಆರೋಗ್ಯ ಸಂಬಂಧಿತ ವೆಚ್ಚವು ರೂ. 4,83,259 ಕೋಟಿಗಳಿದ್ದು, ಅದರಲ್ಲಿ ರೂ. 3,02,425 ಕೋಟಿ (ಶೇ. 63) ಯಷ್ಟು ಜನರ ಕಿಸೆಗಳಿಂದಲೇ ಖರ್ಚಾಗಿದೆ.

ನಿಜವೆಂದರೆ, ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ ಆರಂಭಗೊಂಡ ಬಳಿಕ ಬಡವರಾದಿಯಾಗಿ ಎಲ್ಲರೂ ಖಾಸಗಿ ಆಸ್ಪತ್ರೆಗಳನ್ನೇ ಅವಲಂಬಿಸಿ ಹೆಚ್ಚು ವ್ಯಯಿಸುವಂತಾಗಿದೆ. ಯೋಜನೆಯಡಿ ನೋಂದಾಯಿಸಲ್ಪಟ್ಟಿರುವ 7226 ಆಸ್ಪತ್ರೆಗಳಲ್ಲಿ 4291 (ಶೇ. 60) ಖಾಸಗಿ ಆಸ್ಪತ್ರೆಗಳಾಗಿವೆ. ಕೆಲವು ಖಾಸಗಿ ಆಸ್ಪತ್ರೆಗಳು ಯೋಜನೆಯ ನಿಗದಿತ ದರಕ್ಕಿಂತ ಹೆಚ್ಚಿನ ದರವನ್ನು ಪ್ರತ್ಯೇಕವಾಗಿ ವಸೂಲಿ ಮಾಡಿ, ಅನಗತ್ಯವಾದ ಚಿಕಿತ್ಸೆಗಳನ್ನು ನೀಡಿ ಹೆಚ್ಚಿನ ವೆಚ್ಚಕ್ಕೆ ಕಾರಣವಾಗುತ್ತಿವೆ ಎಂದೂ ಹಲವು ಅಧ್ಯಯನಗಳು ತೋರಿಸಿವೆ.

ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಅಲಕ್ಷಿಸಿ, ಬೊಕ್ಕಸದ ಹಣದಿಂದ ಕಾರ್ಪರೇಟ್ ಆಸ್ಪತ್ರೆಗಳಲ್ಲಿ ಆಯ್ದ ಉನ್ನತ ಚಿಕಿತ್ಸೆಗಳನ್ನು ಖರೀದಿಸುವ ಇಂತಹಾ ಯೋಜನೆಗಳಿಗೆ ಚಾಲನೆ ನೀಡಿದ ಕೀರ್ತಿ ಕರ್ನಾಟಕದ್ದು. ಬೆಂಗಳೂರಿನ ಕಾರ್ಪರೇಟ್ ಆಸ್ಪತ್ರೆಯ ಮಾಲಕರೊಬ್ಬರ ಮಹಾ ಯೋಚನೆಯಂತೆ ಸರಕಾರದ ಪಾಲುದಾರಿಕೆಯೊಂದಿಗೆ 2003ರಲ್ಲಿ ಆರಂಭಗೊಂಡ ಯಶಸ್ವಿನಿ ಯೋಜನೆಯೇ ಮೊದಲಿನದು. ಈಗ ಕರ್ನಾಟಕ ಸರಕಾರವು ಮತ್ತೊಂದು ಹೆಜ್ಜೆ ಮುಂದಿಟ್ಟು, ಯಶಸ್ವಿನಿ, ವಾಜಪೇಯಿ ಆರೋಗ್ಯಶ್ರೀ, ರಾಜೀವ್ ಆರೋಗ್ಯಭಾಗ್ಯ, ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ ಮತ್ತು ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಯೋಜನೆಗಳನ್ನು ಸೇರಿಸಿ ಆರೋಗ್ಯ ಕರ್ನಾಟಕ ಎಂದು ಹೆಸರಿಟ್ಟಿದೆ. ಅವಕ್ಕೆ ರೂ. 900 ಕೋಟಿ ವ್ಯಯಿಸಲಾಗುವುದೆಂದು ಹೇಳಲಾಗಿದ್ದರೂ 2018-19ರ ರಾಜ್ಯ ಆಯವ್ಯಯದಲ್ಲಿ ವಿವರಗಳೇನೂ ಸಿಗುವುದಿಲ್ಲ. ರಾಜ್ಯ ಸರಕಾರವೂ ಕೂಡ, ಕೇಂದ್ರವು ಹೇಳಿದಂತೆ, ಉಪ ಕೇಂದ್ರಗಳನ್ನು ಸೌಖ್ಯಾಲಯಗಳಾಗಿ ಅಭಿವೃದ್ಧಿಪಡಿಸುವ ಭರವಸೆ ನೀಡಿದೆಯೇ ಹೊರತು, ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಸುಧಾರಿಸುವ ಇಂಗಿತವಿಲ್ಲ.

ಒಂದು ಅಂದಾಜಿನಂತೆ, ಖಾಸಗಿ ಸಹಭಾಗಿತ್ವದಲ್ಲಿ ಆರೋಗ್ಯ ಸೇವೆಗಳನ್ನು ಒದಗಿಸುವುದಕ್ಕೆ ವರ್ಷಕ್ಕೆ ತಲಾ ರೂ. 1713ರಷ್ಟು ಬೇಕಾಗುತ್ತದೆ. ಅಂದರೆ ಕರ್ನಾಟಕವು ವರ್ಷಕ್ಕೆ 11 ಸಾವಿರ ಕೋಟಿಗಳನ್ನು, ಕೇಂದ್ರವು ಕನಿಷ್ಠ 215 ಸಾವಿರ ಕೋಟಿಗಳನ್ನು ಒದಗಿಸಬೇಕಾಗುತ್ತದೆ, ಹಾಗಾಗುವ ಲಕ್ಷಣಗಳೇ ಇಲ್ಲ. ಬದಲಿಗೆ, ಆರೋಗ್ಯ ಸೇವೆಗಳನ್ನು ಖಾಸಗಿ ರಂಗಕ್ಕೆ ವಹಿಸಿಕೊಟ್ಟು, ಖರ್ಚನ್ನು ಜನರಿಗೆ ಬಿಟ್ಟು, ಹೊಸ ಹೊಸ ಯೋಜನೆಗಳನ್ನು ಘೋಷಿಸಿ ಮರುಳು ಮಾಡುವ ತಂತ್ರಕ್ಕೆ ದೇಶದ ಪ್ರಮುಖ ರಾಜಕೀಯ ಪಕ್ಷಗಳೆರಡೂ ಶರಣಾಗಿವೆ. ಎಲ್ಲ ಫಲಾನುಭವಿಗಳಿಗೆ ಆಧಾರ್ ಜೋಡಣೆ ಕಡ್ಡಾಯಗೊಳಿಸುವ ಮೂಲಕ ಆರೋಗ್ಯ ಮಾಹಿತಿಯನ್ನು ಖಾಸಗಿಯವರಿಗೆ ಒಪ್ಪಿಸುವ ಯೋಜನೆಗೂ ಅವಕಾಶ ನೀಡುತ್ತಿವೆ.

ಇಲಾಜು 8 – ಯೋಗದ ನೆಪದಲ್ಲಿ ಕಾಸಿನ ಸುಗ್ಗಿ ಮಾಡುತ್ತಿವೆ ಉಪ್ಪರಿಗೆ ಶಾಲೆಗಳು

(ಫೆಬ್ರವರಿ 22, 2018)

ಮಕ್ಕಳ ಕೂತು, ಎದ್ದು, ಹೊರಳಾಡಿ, ನಡೆದು, ಓಡಿ, ಬಿದ್ದು, ಈಜಿ, ಆಡಿದಂತೆ ಎಲುಬುಗಳು, ಸ್ನಾಯುಗಳು, ಮೆದುಳು, ನರಮಂಡಲ, ಹೃದಯ, ಶ್ವಾಸಾಂಗಗಳೆಲ್ಲ ಬಲಿಯುತ್ತವೆ, ಕೈಕಾಲುಗಳು ಕುಶಲಗೊಳ್ಳುತ್ತವೆ. ದೈಹಿಕ ವ್ಯಾಯಾಮಗಳು ಮತ್ತು ಆಟೋಟಗಳು ಮಕ್ಕಳ ಚಾತುರ್ಯ, ಸ್ವಾಭಿಮಾನ, ಸನ್ನದ್ಧತೆ, ಸ್ಪರ್ಧೆ ಮತ್ತು ಕ್ರೀಡಾ ಮನೋಭಾವಗಳನ್ನು ಹೆಚ್ಚಿಸಿ, ಕೂಡುದುಡಿಮೆ, ತಾಳ್ಮೆ, ಶಿಸ್ತು, ಬದ್ಧತೆ, ನಾಯಕತ್ವದ ಗುಣಗಳೆಲ್ಲವನ್ನೂ ಬೆಳೆಸುತ್ತವೆ.

ಮಕ್ಕಳ ಆಟೋಟಗಳಿಗೆ ಅಗತ್ಯವಾದ ಸೌಲಭ್ಯಗಳನ್ನು ಖಾತರಿ ಪಡಿಸುವ ನೀತಿಗಳು ಹೆಚ್ಚಿನ ದೇಶಗಳಲ್ಲಿವೆ. ನಮ್ಮ ದೇಶವು ಸ್ವಾತಂತ್ರ್ಯದ ಹೊಸ್ತಿಲಲ್ಲಿದ್ದಾಗಲೇ ಮಕ್ಕಳ ಆರೋಗ್ಯ ರಕ್ಷಣೆಯ ಬಗ್ಗೆ ಚಿಂತನೆಗಳಾಗಿದ್ದವು. ಬ್ರಿಟಿಷ್ ಸರಕಾರವು ಸರ್ ಜೋಸೆಫ್ ಭೋರ್ ಅಧ್ಯಕ್ಷತೆಯಲ್ಲಿ ರಚಿಸಿದ್ದ ಆರೋಗ್ಯ ಸಮೀಕ್ಷೆ ಹಾಗೂ ಅಭಿವೃದ್ಧಿ ಸಮಿತಿಯು 1946ರಲ್ಲಿ ನೀಡಿದ ವರದಿಯಲ್ಲಿ, ಮಕ್ಕಳ ಆರೋಗ್ಯ ಪೋಷಣೆಗಾಗಿ ಶಾಲಾ ಆರೋಗ್ಯ ಸಮಿತಿಗಳು ಮಕ್ಕಳಿಗೆ ಪೌಷ್ಠಿಕ ಆಹಾರ, ನೈರ್ಮಲ್ಯ, ಆರೋಗ್ಯ ಶಿಕ್ಷಣಗಳ ಜೊತೆಗೆ ಕಸರತ್ತುಗಳು, ಆಟೋಟಗಳು, ಕ್ರೀಡೆಗಳು, ಹಾಗೂ ಮನರಂಜನೆಗಳನ್ನೊಳಗೊಂಡ ದೈಹಿಕ ಶಿಕ್ಷಣವನ್ನು ಒದಗಿಸಬೇಕೆಂದು ಶಿಫಾರಸು ಮಾಡಿತ್ತು. ಇಂಗ್ಲೆಂಡ್, ಆಸ್ಟ್ರೇಲಿಯಾ, ಅಮೆರಿಕಾ, ಡೆನ್ಮಾರ್ಕ್, ಜರ್ಮನಿ, ರಷ್ಯಾ ಮುಂತಾದ ದೇಶಗಳಲ್ಲಿ ಆ ಕಾಲದಲ್ಲೇ ಇದ್ದ ದೈಹಿಕ ಶಿಕ್ಷಣ ಕಾರ್ಯಕ್ರಮಗಳಿಗೆ ಸಾಟಿಯಾಗುವ ವ್ಯವಸ್ಥೆಯನ್ನು ಭಾರತದ ಶಾಲೆ-ಕಾಲೇಜುಗಳಲ್ಲೂ ರೂಪಿಸುವುದು ಭೋರ್ ಸಮಿತಿಯ ಆಶಯವಾಗಿತ್ತು. ಸ್ವತಂತ್ರ ಭಾರತದಲ್ಲಿ ಆಬಾಲವೃದ್ಧರೆಲ್ಲರಿಗೂ ಅತ್ಯುತ್ತಮವಾದ, ಅತ್ಯಾಧುನಿಕವಾದ, ವೈಜ್ಞಾನಿಕವಾದ, ಸೌಲಭ್ಯಗಳು ದೊರೆಯಬೇಕೆನ್ನುವ ಆಶಯವಿದ್ದುದರಿಂದಲೇ, ಒಟ್ಟು 1128 ಪುಟಗಳ ಆ ವರದಿಯಲ್ಲಿ ಯೋಗಾಭ್ಯಾಸದ ಬಗ್ಗೆಯಾಗಲೀ, ಆಯುರ್ವೇದದಂತಹ ಚಿಕಿತ್ಸಾ ಪದ್ಧತಿಗಳನ್ನು ಅಳವಡಿಸುವ ಬಗ್ಗೆಯಾಗಲೀ ಒಂದಕ್ಷರವೂ ಕಾಣಸಿಗುವುದಿಲ್ಲ.

ಆದರೆ ಭೋರ್ ಸಮಿತಿ ಹಾಗೂ ನೆಹರೂ ಸರಕಾರದ ಸದಾಶಯಗಳು ದಶಕಗಳುರುಳಿದಂತೆ ಮುಕ್ಕಾಗಿವೆ. ಐವತ್ತರ ದಶಕದ ಮೊದಲಿಗೆ ದೇಶದಲ್ಲಿ 2.3 ಲಕ್ಷ ಶಾಲೆಗಳಿದ್ದರೆ, ಈಗ 19 ಕೋಟಿ ಮಕ್ಕಳಿಗಾಗಿ 15 ಲಕ್ಷ ಶಾಲೆಗಳಾಗಿವೆ. ಎಪ್ಪತ್ತರ ದಶಕಕ್ಕೆ ಹೋಲಿಸಿದರೆ, ಖಾಸಗಿ ಶಾಲೆಗಳು ನಾಲ್ಕು ಪಟ್ಟು ಹೆಚ್ಚಿ, ಶೇ. 40ರಷ್ಟಾಗಿದೆ. ಖಾಸಗೀಕರಣ ಹಾಗೂ ನಗರೀಕರಣಗಳ ಭರಾಟೆಯಲ್ಲಿ ಮಕ್ಕಳ ಆರೋಗ್ಯವೂ, ಭೋರ್ ಸಮಿತಿಯೂ ಮರೆತು ಹೋಗಿವೆ. ಎಲ್ಲೆಂದರಲ್ಲಿ, ವಾಣಿಜ್ಯ ಮಳಿಗೆಗಳ ಉಪ್ಪರಿಗೆಗಳಲ್ಲಿ ಶಾಲೆಗಳು ತೆರೆದಿವೆ, ಆಟಕ್ಕೆ ಬಯಲುಗಳಿಲ್ಲದಂತಾಗಿವೆ. ಜಿಲ್ಲಾವಾರು ಶೈಕ್ಷಣಿಕ ಮಾಹಿತಿಯನುಸಾರ, ಕರ್ನಾಟಕವೂ ಸೇರಿದಂತೆ ದೇಶದ ಹೆಚ್ಚಿನ ರಾಜ್ಯಗಳಲ್ಲಿ ಶೇ. 40ರಷ್ಟು ಸರಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಆಟದ ಬಯಲುಗಳೇ ಇಲ್ಲ; ಬೆಂಗಳೂರು, ಮುಂಬಯಿಗಳಂತಹ ನಗರಗಳಲ್ಲಂತೂ ಬಯಲಿಲ್ಲದ ಶಾಲೆಗಳು ಶೇ. 50-75ರಷ್ಟಿವೆ. ಶಾಲೆಗೆ ಕನಿಷ್ಠ 1.5-2 ಎಕರೆ (ಮಹಾನಗರಗಳಲ್ಲಿ ಕನಿಷ್ಠ 1 ಎಕರೆ) ವಿಸ್ತೀರ್ಣದ ಜಾಗವಿರಲೇಬೇಕು ಎಂಬ ನಿಯಮ ಅದೃಶ್ಯವಾಗಿದೆ; ಹತ್ತಿರದ ಬಯಲಿನಲ್ಲೋ, ಸಾರ್ವಜನಿಕ ಉದ್ಯಾನದಲ್ಲೋ ಮಕ್ಕಳಿಗೆ ಸ್ಥಳಾವಕಾಶ ಸಿಕ್ಕರೆ ಸಾಕೆಂದು ಶಿಕ್ಷಣ ಹಕ್ಕು ಕಾಯಿದೆಯನ್ನೂ ತಿದ್ದಿಯಾಗಿದೆ.

ಆಟಕ್ಕೆ ಅವಕಾಶಗಳಿಲ್ಲದಿದ್ದಲ್ಲಿ ಯೋಗಾಭ್ಯಾಸವನ್ನು ಕಲಿಸಿದರೂ ಸಾಕು ಎಂದಾದ ಬಳಿಕವಂತೂ ಉಪ್ಪರಿಗೆ ಶಾಲೆಗಳಿಗೆ ಸುಗ್ಗಿಯೇ ಆಗಿದೆ. ಎಂತಹಾ ಕ್ರೂರ ವ್ಯಂಗ್ಯವೆಂದರೆ, ಯೋಗದ ಬಗ್ಗೆ ಒಂದಕ್ಷರವಿಲ್ಲದ ಭೋರ್ ಸಮಿತಿಯ ಶಿಫಾರಸನ್ನೇ ಬಳಸಿಕೊಂಡು ಶಾಲೆಗಳಲ್ಲಿ ಯೋಗಾಭ್ಯಾಸಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ! ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು 2005ರಲ್ಲಿ ಪ್ರಕಟಿಸಿದ ರಾಷ್ಟ್ರೀಯ ಪಠ್ಯಕ್ರಮ ನೆಲೆಗಟ್ಟಿನಲ್ಲಿ, ಭೋರ್ ಸಮಿತಿಯು 1940ರ ದಶಕದಲ್ಲಿ ಮಾಡಿದ್ದ ಶಿಫಾರಸುಗಳು ಅತಿ ಪ್ರಸ್ತುತವೆಂದು ಹೇಳುತ್ತಲೇ, ಪೌಷ್ಠಿಕ ಆಹಾರ, ನೈರ್ಮಲ್ಯ, ಆರೋಗ್ಯ ಶಿಕ್ಷಣ ಹಾಗೂ ದೈಹಿಕ ಶಿಕ್ಷಣ ಎಂದಿದ್ದುದರ ನಡುವೆ ಯೋಗ ಎಂಬುದನ್ನೂ ಸೇರಿಸಲಾಗಿದೆ, ಎಲ್ಲೆಲ್ಲ ದೈಹಿಕ ಶಿಕ್ಷಣ ಎಂದಿದೆಯೋ ಅಲ್ಲೆಲ್ಲ ಯೋಗವನ್ನೂ ಜೋಡಿಸಲಾಗಿದೆ, ಮಾತ್ರವಲ್ಲ, ಅದು ಕಡ್ಡಾಯವೆಂದೂ ಹೇಳಲಾಗಿದೆ! ಈ ಶಿಫಾರಸನ್ನು ಮಾಡಿದ ಸಮಿತಿಯಲ್ಲಿ, ಆರಂಭದಲ್ಲಿ ಪುಣೆಯ ಕೈವಲ್ಯಧಾಮ ಯೋಗ ಕೇಂದ್ರದ ಒಬ್ಬರಷ್ಟೇ ಸದಸ್ಯರಿದ್ದರೆ, ಕೊನೆಕೊನೆಗೆ ಅದೇ ಸಂಸ್ಥೆಯ ಇನ್ನೂ 11 ಮಂದಿ ಆಹ್ವಾನಿತರಾಗಿ, ಯೋಗಾಭ್ಯಾಸದ ಬೆಂಬಲಕ್ಕೆ 25 ಸದಸ್ಯರಲ್ಲಿ 12 ಸದಸ್ಯರಿದ್ದರು!

ಕೇಂದ್ರದ ನೀತಿಯಲ್ಲಿ ಮಕ್ಕಳಿಗೆ ಯೋಗಾಭ್ಯಾಸವನ್ನು ಸೇರಿಸಿದ ಬೆನ್ನಿಗೆ ರಾಜ್ಯದ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯೂ (ಡಿಎಸ್‌ಇಆರ್‌ಟಿ) ಅದೇ ದಾರಿ ಹಿಡಿಯಿತು. ದೈಹಿಕ ಶಿಕ್ಷಣದ ಬಗ್ಗೆ 2006-7ರಲ್ಲಿ ರಚಿಸಲಾದ ಎಲ್‌ಆರ್ ವೈದ್ಯನಾಥನ್ ನೇತೃತ್ವದ ತಜ್ಞರ ಸಮಿತಿಯು, ಕಲಿಕೆಯ ಒತ್ತಡಗಳು ಹೆಚ್ಚಿ, ನಗರಗಳಲ್ಲಿ ದೈಹಿಕ ಚಟುವಟಿಕೆಗಳಿಗೆ ಸ್ಥಳಾವಕಾಶದ ಕೊರತೆಯಿರುವ ಸನ್ನಿವೇಶದಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಬಲಪಡಿಸುವ ಭಾರತೀಯ ಮೂಲದ ಅಮೂಲ್ಯ ವಿದ್ಯೆಯಾದ ಯೋಗಾಭ್ಯಾಸವನ್ನು ಶಾಲೆಗಳಲ್ಲಿ ಆರಂಭಿಸುವ ಅಗತ್ಯವಿದೆ ಎಂದು ಹೇಳಿತು. ನಂತರ, ಸಾರ್ವಜನಿಕ ಶಿಕ್ಷಣ ಆಯುಕ್ತರು ಫೆಬ್ರವರಿ 28, 2009ರಂದು ಹೊರಡಿಸಿದ ಸುತ್ತೋಲೆ [ಸಂ. ಸಿ 4(6) ಯೋ. ಶಿ. ಎ 58/08-09]ಯಲ್ಲಿ ಯೋಗಾಭ್ಯಾಸದಿಂದ ಖಿನ್ನತೆ, ಭಯ, ದುರಾಸೆ, ಜಿಪುಣತನ, ಉದ್ಧಟತನ, ಪ್ರೇಮ, ಕಾಮಾಸಕ್ತಿಗಳಂತಹ ಮಾನಸಿಕ ಸಮಸ್ಯೆಗಳನ್ನು ಶಾಶ್ವತವಾಗಿ ನಿರ್ಮೂಲನೆಗೊಳಿಸಬಹುದು ಎಂದು ಹೇಳಲಾಯಿತು. ಮನುಷ್ಯ ಸಹಜ ವರ್ತನೆಗಳನ್ನೇ ಮಾನಸಿಕ ರೋಗಗಳನ್ನಾಗಿಸಿ, ಯೋಗದಿಂದ ಪರಿಹಾರ ಎನ್ನಲಾಯಿತು! ಇವಕ್ಕೆಲ್ಲ ಆಧಾರವಿದೆಯೇ ಎಂಬ ಪ್ರಶ್ನೆಗೆ ಇಲ್ಲ ಎಂದು ಡಿಎಸ್‌ಇಆರ್‌ಟಿ ಉತ್ತರಿಸಿತು; ಯೋಗಾಭ್ಯಾಸವು ದೈಹಿಕ ವ್ಯಾಯಾಮ ಅಥವಾ ಆಟೋಟಗಳಿಗೆ ಸಮವೆಂದು ಹೇಳಲಾಗದಿದ್ದರೂ, ಬಯಲುಗಳಿಲ್ಲದಿರುವ ಶಾಲೆಗಳಲ್ಲಿ ಅದರಿಂದ ಒಂದಿಷ್ಟಾದರೂ ಪ್ರಯೋಜನವಾಗಬಹುದೆಂದೂ ಹೇಳಿತು.

ಯೋಗಾಭ್ಯಾಸವು ದೈಹಿಕ ಚಟುವಟಿಕೆಗಳಿಗೆ ಪರ್ಯಾಯವೂ ಅಲ್ಲ, ಪೂರಕವೂ ಅಲ್ಲ ಎನ್ನುವುದಕ್ಕೆ ಮಕ್ಕಳಲ್ಲಿ ಯೋಗಾಭ್ಯಾಸದ ಬಗ್ಗೆ ನಡೆಸಲಾಗಿರುವ ಅಧ್ಯಯನಗಳೇ ಪುರಾವೆಯೊದಗಿಸುತ್ತವೆ. ಚುರುಕಾದ ದೈಹಿಕ ವ್ಯಾಯಾಮಗಳು ಮತ್ತು ಆಟೋಟಗಳು ಮಕ್ಕಳ ಮನೋದೈಹಿಕ ಬೆಳವಣಿಗೆಯನ್ನು ಪ್ರಚೋದಿಸುತ್ತವೆ ಎನ್ನುವುದನ್ನು ಲಕ್ಷಗಟ್ಟಲೆ ಮಕ್ಕಳಲ್ಲಿ ನಡೆಸಲಾಗಿರುವ ಅಧ್ಯಯನಗಳು ದೃಢಪಡಿಸಿವೆ. ಅದೇ ಕಾರಣಕ್ಕೆ, ಮಕ್ಕಳು ಮತ್ತು ಹದಿಹರೆಯದವರು ಪ್ರತಿನಿತ್ಯ, ವಾರಕ್ಕೇಳು ದಿನ, ಕನಿಷ್ಠ 60 ನಿಮಿಷಗಳಷ್ಟು ಹೊತ್ತು ಚುರುಕಾದ ದೈಹಿಕ ಚಟುವಟಿಕೆಗಳಲ್ಲಿ ತೊಡಗಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ, ಅಮೆರಿಕಾದ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ, ಯುರೋಪಿಯನ್ ಕಮಿಶನ್ ಸೇರಿದಂತೆ ಹಲವು ಸಂಸ್ಥೆಗಳು ಶಿಫಾರಸು ಮಾಡಿವೆ. ಆದರೆ, ಯೋಗಾಭ್ಯಾಸದ ಪ್ರಯೋಜನಗಳ ಬಗ್ಗೆ ನಡೆಸಲಾಗಿರುವ ಅಧ್ಯಯನಗಳೆಲ್ಲವೂ ಸಣ್ಣ ಸಂಖ್ಯೆಯ ವಿದ್ಯಾರ್ಥಿಗಳನ್ನು ಒಳಗೊಂಡಿದ್ದು, ಅಲ್ಪಕಾಲಿಕವೂ, ಅಸಂಪೂರ್ಣ ಮಾಹಿತಿಯುಳ್ಳವೂ ಆಗಿವೆ. ಮಕ್ಕಳಲ್ಲಿ ಯೋಗಾಭ್ಯಾಸದ ಬಗ್ಗೆ 1980ರಿಂದ 2014ರವರೆಗೆ ನಡೆಸಲಾದ ಅಧ್ಯಯನಗಳ ಪೈಕಿ, ಕೇವಲ 9 ಅಧ್ಯಯನಗಳಷ್ಟೇ ಪರಿಗಣನೆಗೆ ಯೋಗ್ಯವೆಂದೂ, ಹೆಚ್ಚಿನವು ಕಳಪೆ ದರ್ಜೆಯವೆಂದೂ, ಮಕ್ಕಳ ಮನೋದೈಹಿಕ ಬೆಳವಣಿಗೆಗೆ ಯಾವುದೇ ನಿರ್ದಿಷ್ಟ ಪ್ರಯೋಜನಗಳನ್ನು ಅವು ತೋರಿಸುವುದಿಲ್ಲವೆಂದೂ ವಿಶ್ಲೇಷಣೆಯೊಂದರಲ್ಲಿ ಹೇಳಲಾಗಿದೆ. ಯೋಗಾಭ್ಯಾಸದಿಂದ ಮಕ್ಕಳ ಮನೋಬಲವು ವೃದ್ಧಿಸುತ್ತದೆ ಎನ್ನುವುದಕ್ಕೂ ಯಾವುದೇ ಆಧಾರಗಳಿಲ್ಲ; ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ದೈಹಿಕ ವ್ಯಾಯಾಮ, ಯೋಗ, ನೃತ್ಯ, ದೇಹದಾರ್ಢ್ಯ ಬೆಳೆಸುವುದು ಇತ್ಯಾದಿ ಚಟುವಟಿಕೆಗಳ ಪ್ರಭಾವದ ಬಗ್ಗೆ ನಡೆಸಲಾಗಿರುವ ಹಲವು ಅಧ್ಯಯನಗಳಲ್ಲಿ, ಚುರುಕಾದ ದೈಹಿಕ ವ್ಯಾಯಾಮವೇ ಮಕ್ಕಳ ಮಾನಸಿಕ ಆರೋಗ್ಯಕ್ಕೆ ಅತ್ಯುತ್ತಮವೆಂದು ದೃಢಪಟ್ಟಿದೆ.

ಆದ್ದರಿಂದ ನಮ್ಮ ದೇಶದ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪ್ರತಿ ನಿತ್ಯವೂ ಕನಿಷ್ಠ 60 ನಿಮಿಷಗಳ ಚುರುಕಾದ ದೈಹಿಕ ವ್ಯಾಯಾಮ, ಕ್ರೀಡೆಗಳು ಮತ್ತು ಮನರಂಜನೆಗಳಿಗೆ ಅವಕಾಶವನ್ನು ಕಲ್ಪಿಸಬೇಕು, ಅದಕ್ಕೆ ಅಗತ್ಯವುಳ್ಳ ಸೌಲಭ್ಯಗಳನ್ನು ಕಡ್ಡಾಯಗೊಳಿಸಬೇಕು. ಬದಲಿಗೆ, ಶಾಲೆಯ ಆಡಳಿತಗಳಿಗೆ ನೆರವಾಗುವ ಉದ್ದೇಶದಿಂದ, ಯೋಗಾಭ್ಯಾಸವನ್ನು ಹೇರಿದರೆ ಮಕ್ಕಳಿಗೆ ಅನ್ಯಾಯ ಮಾಡಿದಂತೆಯೇ ಆಗುತ್ತದೆ. ಪೌಷ್ಠಿಕ ಆಹಾರದ ಬದಲಿಗೆ ಸಕ್ಕರೆಭರಿತ ತಿನಿಸುಗಳನ್ನು ಕೊಟ್ಟು, ಮನರಂಜನೆಯ ಬದಲಿಗೆ ಮೊಬೈಲ್ ಫೋನುಗಳನ್ನು ಕೊಟ್ಟು, ಆಟೋಟಗಳ ಬದಲಿಗೆ ಧ್ಯಾನಸ್ಥರನ್ನಾಗಿಸಿ ನಮ್ಮ ಮುಂದಿನ ಜನಾಂಗದ ದೇಹ-ಮನಸ್ಸುಗಳ ವಿಕಾಸವನ್ನು ಕೆಡಿಸುವುದು ಬೇಡ.

ಇಲಾಜು 7 – ಆಧಾರ್‌ನಿಂದ ಜನರ ಆರೋಗ್ಯ, ಚಿಕಿತ್ಸೆಯ ವೈಯಕ್ತಿಕ ಮಾಹಿತಿ ಬಟಾಬಯಲು!

(ಫೆಬ್ರವರಿ 6, 2018)

ಈಗಷ್ಟೇ ಹುಟ್ಟಿದ ಮಗುವಿನಿಂದ ಹಿಡಿದು, ಕೊನೆಗಾಲದಲ್ಲಿರುವ ವೃದ್ಧರವರೆಗೆ ಎಲ್ಲರ ಕೈಬೆರಳುಗಳು, ಕಣ್ಣಿನ ಪಾಪೆಗಳು ಮತ್ತು ಭಾವಚಿತ್ರಗಳು ಈಗ ಭಾರತ ಸರಕಾರದ ಸೊತ್ತು. ಕನಿಷ್ಠ ಸರಕಾರ, ಗರಿಷ್ಠ ಆಡಳಿತ ಎಂದವರು ಪ್ರತಿಯೊಬ್ಬ ಭಾರತೀಯನ ಪ್ರತಿಯೊಂದು ಕೆಲಸಕ್ಕೂ ಕೇಂದ್ರದ ಅನುಮತಿಯಿರಬೇಕೆಂಬ ವ್ಯವಸ್ಥೆಯನ್ನು ಸ್ಥಾಪಿಸಿದ್ದಾರೆ. ವ್ಯವಹರಿಸುವುದಕ್ಕೆ, ಪಡಿತರದ ಊಟಕ್ಕೆ, ವಿಮೆಗೆ, ರೋಗದ ಚಿಕಿತ್ಸೆಗೆ, ಗರ್ಭಪಾತಕ್ಕೆ ಆಧಾರ್ ಬೆರಳಚ್ಚಿನ ಒಪ್ಪಿಗೆ ಪಡೆಯಬೇಕಾದ ಅಮಾನವೀಯ ವ್ಯವಸ್ಥೆಗೆ ಪಕ್ಷಭೇದವಿಲ್ಲದೆ ರಾಜ್ಯ ಸರಕಾರಗಳೂ ಒಪ್ಪಿವೆ, ರೋಗಿಗಳ ಹಿತರಕ್ಷಕರಾಗಬೇಕಾದ ವೈದ್ಯರೂ ಮೌನವಾಗಿದ್ದಾರೆ.

ಮೊದಲೆಲ್ಲ ಅಪರಾಧ ನಡೆದ ಸ್ಥಳದಿಂದ ಬೆರಳಚ್ಚುಗಳನ್ನು ಸಂಗ್ರಹಿಸಿ, ಶಂಕಿತರ ಬೆರಳಚ್ಚಿನೊಂದಿಗೆ ತಾಳೆ ಹಾಕಿ, ಅಪರಾಧಿಗಳನ್ನು ಗುರುತಿಸುವುದಿತ್ತು. ಈ ಆಧಾರ್ ವ್ಯವಸ್ಥೆಯಲ್ಲಿ, ಎಲ್ಲ ಭಾರತೀಯರೂ ಕಳ್ಳ-ಸುಳ್ಳರೇನೋ ಎಂಬಂತೆ, ಎಲ್ಲರ ಬೆರಳಚ್ಚುಗಳನ್ನು ಸಂಗ್ರಹಿಸಿಟ್ಟುಕೊಂಡು, ಬ್ಯಾಂಕ್ ಖಾತೆ, ಮೊಬೈಲ್ ಸಂಪರ್ಕ ಮತ್ತದರ ಜಿಪಿಎಸ್, ಎಲ್ಲ ಬಗೆಯ ವಿಮೆ, ಆರೋಗ್ಯ ಸೇವೆ, ಶಾಲೆ-ಕಾಲೇಜು-ಪರೀಕ್ಷೆ-ಉದ್ಯೋಗಗಳಿಗೆ ದಾಖಲಾತಿ, ಮದುವೆ ಇತ್ಯಾದಿಯಾಗಿ ಹುಟ್ಟಿನಿಂದ ಸಾವಿನವರೆಗೆ ಎಲ್ಲವನ್ನೂ ಆಧಾರ್ ಸಂಖ್ಯೆಗೆ ಗಂಟು ಹಾಕಿ, ಆ ಬೆರಳಚ್ಚಿನ ವ್ಯಕ್ತಿಯು ಎಲ್ಲಿ, ಯಾವಾಗ, ಏನು ಮಾಡಿದ್ದಾನೆ ಎಂದು ಹಿಂಬಾಲಿಸಲಾಗುತ್ತದೆ, ಪ್ರತೀ ನಾಗರಿಕನ ಬಗ್ಗೆ ಅಂತಹ ಅಗಾಧ ಪ್ರಮಾಣದ ಮಾಹಿತಿನ್ನು ಸರಕಾರವು ಸಂಗ್ರಹಿಸಿಟ್ಟುಕೊಳ್ಳುವುದಕ್ಕೂ, ಖಾಸಗಿ ಕಂಪೆನಿಗಳೊಂದಿಗೆ ಹಂಚಿಕೊಳ್ಳುವುದಕ್ಕೂ ಸಾಧ್ಯವಾಗುತ್ತದೆ.

ಆಧಾರ್ ಯೋಜನೆ, ಅದರ ಗೌಪ್ಯತೆ ಮತ್ತು ಬಳಕೆಗಳಿಗೆ ನಮ್ಮ ಸಂಸತ್ತು ಇನ್ನೂ ಪೂರ್ಣ ಅನುಮೋದನೆಯನ್ನು ನೀಡಿಲ್ಲ. ಹಾಗಿದ್ದರೂ, ಸರಕಾರದ ನೆರವನ್ನು ಪಡೆಯಲು ಆಧಾರ್ ಕಡ್ಡಾಯವೆಂದು ಆಯವ್ಯಯ ಪಟ್ಟಿಯೊಳಗೆ ತೂರಿಸಿ, ಮೊಬೈಲ್ ಸಂಪರ್ಕದಿಂದ ಹಿಡಿದು ಆರೋಗ್ಯ ಸೇವೆಗಳವರೆಗೆ ಎಲ್ಲಕ್ಕೂ ಆಧಾರ್ ಬೇಕೇ ಬೇಕೆಂದು ಬೆದರಿಸಲಾಗುತ್ತಿದೆ. ಅತ್ತ, ಆಧಾರ್ ಮೂಲಕ ಸೋರಿಕೆಯನ್ನು ತಡೆದುದರಿಂದ ಹೆಚ್ಚೇನೂ ಉಳಿಸಲಾಗಿಲ್ಲ ಎಂದು ರಿಸರ್ವ್ ಬ್ಯಾಂಕಿನ ವರದಿಯೇ ಒಪ್ಪಿದೆ. ಇವನ್ನೆಲ್ಲ ನೋಡುವಾಗ, ಸರಕಾರದ ನೆರವಿಗೆ ಆಧಾರ್ ಪಡೆಯಬೇಕೆನ್ನುವ ನೆಪದಲ್ಲಿ ಎಲ್ಲರ ವೈಯಕ್ತಿಕ ಮಾಹಿತಿಯನ್ನು ಕಲೆ ಹಾಕಿ, ಖಾಸಗಿ ಸಂಸ್ಥೆಗಳಿಗೆ ಒಪ್ಪಿಸುವುದೇ ಆಧಾರ್ ಹಿಂದಿನ ಮುಖ್ಯ ಉದ್ದೇಶವೆಂಬ ಸಂಶಯಗಳೇಳುತ್ತವೆ. ಆಧಾರ್‌ ಯೋಜನೆಯ ಹಿಂದಿರುವ ದಿಗ್ಗಜ ತಂತ್ರಜ್ಞರೆಲ್ಲರೂ ಆಧಾರ್ ಆಧಾರಿತ ಕಾರ್ಪರೇಟ್ ಯೊಜನೆಗಳಲ್ಲೂ, ತೆರಿಗೆ ಸಂಗ್ರಹದ ವ್ಯವಸ್ಥೆಯಲ್ಲೂ ಭಾಗಿಗಳಾಗಿದ್ದಾರೆ ಎನ್ನುವುದು ಇದನ್ನು ಪುಷ್ಟೀಕರಿಸುತ್ತದೆ.

ವೈಯಕ್ತಿಕ ಮಾಹಿತಿಯ ಸಂಗ್ರಹ, ಬಳಕೆ ಮತ್ತು ಹಂಚಿಕೆಯ ಬಗ್ಗೆ ಸ್ಪಷ್ಟವಾದ ನಿರ್ಬಂಧಗಳಿಲ್ಲದೆ, ಖಾಸಗಿ ಕಂಪೆನಿಗಳಿಗೂ ಅವಕಾಶವಿತ್ತಿರುವುದರಿಂದ, 125 ಕೋಟಿ ಭಾರತೀಯರ ಮಹಾ ಮಾಹಿತಿಯ ಬಗ್ಗೆ ಕಾರ್ಪರೇಟ್ ಹಾಗೂ ತಂತ್ರಜ್ಞಾನ ಕಂಪೆನಿಗಳು ಅತ್ಯಾಸಕ್ತಿಯಿಂದ ದುಡಿಯತೊಡಗಿವೆ. ಅನ್ಯ ದೇಶಗಳೂ ಈ ಮಾಹಿತಿಯನ್ನು ಪಡೆಯುವುದಕ್ಕೆ ಉತ್ಸುಕವಾಗಿವೆ; ನಮ್ಮ ರೈತರ (ಅಂದರೆ ಬಹುತೇಕ ಭಾರತೀಯರ) ಆಧಾರ್ ಮಾಹಿತಿಯನ್ನು ಹಂಚಿಕೊಳ್ಳುವ ಬಗ್ಗೆ ಇಸ್ರೇಲ್‌ ಈಗಾಗಲೇ ಪ್ರಸ್ತಾಪಿಸಿದೆ. ಕೋಟಿಗಟ್ಟಲೆ ಭಾರತೀಯರಿಗೆ ಅತಿ ಕಡಿಮೆ ದರದಲ್ಲಿ ಮೊಬೈಲ್ ಒದಗಿಸಿರುವ ಅತಿ ದೊಡ್ಡ ಕಂಪೆನಿಯು ಮಹಾ ಮಾಹಿತಿ ವಿಶ್ಲೇಷಣೆಗಾಗಿ ಇಸ್ರೇಲ್ ಜೊತೆ ಒಡಂಬಡಿಕೆಗೆ ಹೊರಟಿದೆ. ಒಟ್ಟಿನಲ್ಲಿ ಆಧಾರ್ ಜೋಡಿತ ಮಾಹಿತಿಗೆ ಈಗಾಗಲೇ ವಿಪರೀತ ಬೇಡಿಕೆ ಕುದುರಿದೆ.

ಅದರಲ್ಲೂ, ಪ್ರತೀ ನಾಗರಿಕನ ಜನ್ಮಾರಭ್ಯ ಆರೋಗ್ಯ ಮಾಹಿತಿಯನ್ನು ಕಲೆ ಹಾಕುವುದೇ ಆಧಾರ್ ಯೋಜನೆಯ ಮುಖ್ಯ ಉದ್ದೇಶವಿರುವಂತೆ ತೋರುತ್ತಿದೆ. ಆಧಾರ್ ಯೋಜನೆಯ ರೂವಾರಿ ನಂದನ್ ನಿಲೇಕಣಿ ಮೊದಲಿನಿಂದಲೂ ಅದನ್ನು ಹೇಳುತ್ತಲಿದ್ದಾರೆ. ಕೇಂದ್ರ ಸರಕಾರವು ಹೆಣೆಯುತ್ತಿರುವ ತಂತ್ರಗಳೂ ಅದನ್ನೇ ಸೂಚಿಸುತ್ತಿವೆ. ಆರೋಗ್ಯ ಸಂಬಂಧಿ ಮಿಂದಾಖಲೆಗಳ ಮಾನದಂಡಗಳನ್ನು ಫೆಬ್ರವರಿ 2016ರಲ್ಲಿ ಪ್ರಕಟಿಸಲಾಗಿದ್ದು, ಆಧಾರ್‌ ಜೋಡಣೆಗೆ ಆದರಲ್ಲಿ ಮಹತ್ವ ನೀಡಲಾಗಿದೆ. ಸರಕಾರಿ ನೆರವಿಗೆ ಆಧಾರ್ ಕಡ್ಡಾಯಗೊಳಿಸಿ ಮಾರ್ಚ್ 2016ರಲ್ಲಿ ತಂದ ಆಧಾರ್ ಕಾಯಿದೆಯಲ್ಲಿ [2(ಕೆ)] ವ್ಯಕ್ತಿಯ ವೈದ್ಯಕೀಯ ವಿವರಗಳನ್ನು ಸಂಗ್ರಹಿಸುವಂತಿಲ್ಲ ಎಂದು ಹೇಳಲಾಗಿದ್ದರೂ, ಸರಕಾರವೇ ಅದನ್ನು ಮೀರಿ, ಆಸ್ಪತ್ರೆ ದಾಖಲಾತಿ, ವೈದ್ಯಕೀಯ ಪರೀಕ್ಷೆಗಳು ಮತ್ತು ಕೆಲವು ಚಿಕಿತ್ಸೆಗಳಿಗೆ ಆಧಾರ್ ಕಡ್ಡಾಯಗೊಳಿಸತೊಡಗಿದೆ. ಮಾರ್ಚ್ 2017ರಲ್ಲಿ ಪ್ರಕಟಿಸಿದ ರಾಷ್ಟ್ರೀಯ ಆರೋಗ್ಯ ನೀತಿಯಲ್ಲಿ ರಾಷ್ಟ್ರೀಯ ಗಣಕೀಕೃತ ಆರೋಗ್ಯ ಪ್ರಾಧಿಕಾರವನ್ನು ರಚಿಸಿ, 2025ರ ವೇಳೆಗೆ ದೇಶದ ನಾಗರಿಕರ ರೋಗಗಳು ಮತ್ತು ಆರೋಗ್ಯ ಸರ್ವೇಕ್ಷಣೆಯ ವಿವರಗಳಿರುವ ಆಧಾರ್ ಜೋಡಿತ ಆರೋಗ್ಯ ಮಾಹಿತಿ ಜಾಲವನ್ನೂ, ಆರೋಗ್ಯ ಮಾಹಿತಿ ವಿನಿಮಯ ವ್ಯವಸ್ಥೆಯನ್ನೂ ಎಲ್ಲೆಡೆ ಸ್ಥಾಪಿಸುವ ಬಗ್ಗೆ ಹೇಳಲಾಗಿದೆ. ದೇಶದ ಎಲ್ಲಾ ಖಾಸಗಿ ಹಾಗೂ ಸರಕಾರಿ ಆರೋಗ್ಯ ಸಂಸ್ಥೆಗಳಲ್ಲಿ, ಜನರ ಮೊಬೈಲ್ ಮತ್ತು ಇತರ ಧರಿಸುವ ಸಾಧನಗಳಲ್ಲಿ ಮತ್ತು ಮಿಂಬಲೆಯಲ್ಲಿ ಲಭ್ಯವಾಗುವ ಎಲ್ಲಾ ಭಾರತೀಯರ ಆರೋಗ್ಯ ಸಂಬಂಧಿ ಮಿಂದಾಖಲೆಗಳನ್ನು ಸಂಯೋಜಿಸುವ ಬಗ್ಗೆಯೂ ಅದರಲ್ಲಿ ಹೇಳಲಾಗಿದೆ. ಈ ಮಾಹಿತಿಗಳ ಸಂಗ್ರಹ, ವಿಶ್ಲೇಷಣೆ ಹಾಗೂ ಹಂಚಿಕೆಗಳಲ್ಲಿ ಖಾಸಗಿ ವಲಯವು ಭಾಗಿಯಾಗಲಿದೆ ಎಂದೂ ಹೇಳಲಾಗಿದೆ.

ಹುಟ್ಟಿನಿಂದ ಸಾವಿನವರೆಗೆ ಪ್ರತಿಯೊಬ್ಬ ಭಾರತೀಯನ ಆರೋಗ್ಯದ ಸ್ಥಿತಿಗತಿ, ವೈದ್ಯಕೀಯ ಭೇಟಿಗಳು, ಪರೀಕ್ಷೆಗಳು, ಪಡೆದ ಲಸಿಕೆಗಳು ಮತ್ತು ಚಿಕಿತ್ಸೆಗಳು ಮುಂತಾದ ಸಕಲ ವಿವರಗಳನ್ನು ನಿಜಕಾಲದಲ್ಲಿ ದಾಖಲಿಸುವುದು, ವಿಶ್ಲೇಷಿಸುವುದು, ಮತ್ತು ಖಾಸಗಿ ಆಸ್ಪತ್ರೆಗಳು, ಸಂಶೋಧನಾ ಸಂಸ್ಥೆಗಳು ಹಾಗೂ ತಂತ್ರಜ್ಞಾನ ಸಂಸ್ಥೆಗಳೊಂದಿಗೆ ಇವನ್ನು ಹಂಚಿಕೊಳ್ಳುವುದು ಆಧಾರ್ ಯೋಜನೆಯ ಮಹಾ ಉದ್ದೇಶವೆನ್ನಲು ಇಷ್ಟು ಸಾಲದೇ? ಯಾವ ಪ್ರದೇಶದಲ್ಲಿ ಯಾರಿಗೆ ಯಾವ ರೋಗವಿದೆ, ಯಾವ ವೈದ್ಯರು ಯಾರಿಗೆ ಯಾವ ಚಿಕಿತ್ಸೆ ನೀಡುತ್ತಾರೆ, ಯಾವ ವ್ಯಕ್ತಿ ಯಾವ ರೋಗಕ್ಕೆ ಯಾರಿಂದೆಲ್ಲ ಏನೆಲ್ಲ ಚಿಕಿತ್ಸೆ ಪಡೆಯುತ್ತಾನೆ ಎಂಬುದೆಲ್ಲವನ್ನೂ ತಿಳಿದು ಅಂಥವರನ್ನು ವಹಿವಾಟಿನ ದಾಳಗಳಾಗಿಸಲು ಖಾಸಗಿ ಕಂಪೆನಿಗಳಿಗೆ ಇದರಿಂದ ಅತಿ ಸುಲಭವಾಗಲಿದೆ. ಹಾಗೆಯೇ, ವ್ಯಕ್ತಿಗೆ ತಗಲಿದ ರೋಗದ ಕಳಂಕವನ್ನು ಶಾಶ್ವತಗೊಳಿಸಿ, ಸತಾಯಿಸುವುದಕ್ಕೂ, ವಿಮೆಯನ್ನು ನಿರಾಕರಿಸುವುದಕ್ಕೂ, ಕಂತನ್ನು ಬೇಕಾಬಿಟ್ಟಿ ಹೆಚ್ಚಿಸುವುದಕ್ಕೂ ಸಮರ್ಥನೆಯೊದಗಲಿದೆ.

ವೈದ್ಯಕೀಯ ದಾಖಲೆಗಳನ್ನು ಆಧಾರ್‌ ಜೊತೆ ಗಣಕೀಕರಿಸುವುದರಿಂದ ಎಲ್ಲೇ ಹೋದರೂ ತ್ವರಿತ ಚಿಕಿತ್ಸೆ ಪಡೆಯುವುದು ಸುಲಭವಾಗಲಿದೆ ಎಂಬ ಸಬೂಬನ್ನು ನೀಡಲಾಗುತ್ತಿದೆ. ಆದರೆ ಮಿಂದಾಖಲೆಗಳ ಮಾನದಂಡಗಳನ್ನು ಗಮನಿಸಿದರೆ ಈ ಬಗ್ಗೆಯೂ ಸಂಶಯಗಳೇಳುತ್ತವೆ. ಈ ದಾಖಲೆಗಳನ್ನು ನೋಡುವುದಕ್ಕೆ, ಪಡೆಯುವುದಕ್ಕೆ, ಸೇರಿಸುವುದಕ್ಕೆ ರೋಗಿ ಹಾಗೂ ವೈದ್ಯನ ಬೆರಳಚ್ಚುಗಳ ಸಮ್ಮತಿ ಬೇಕಾಗುತ್ತದೆ; ಬೇರೆ ವೈದ್ಯರ ಬಳಿಗೆ ಹೋದರೆ ಮತ್ತೆ ಎಲ್ಲರೂ ಬೆರಳೊತ್ತಬೇಕಾಗುತ್ತದೆ. ತುರ್ತು ಸ್ಥಿತಿಗಳಲ್ಲಿ ಬೇರೆ ವೈದ್ಯರಿದ್ದರಂತೂ ಇದು ಇನ್ನಷ್ಟು ಜಟಿಲವಾಗುತ್ತದೆ. ಎಲ್ಲೋ ಒಂದೆಡೆ ಮಾಹಿತಿಯನ್ನು ಸೇರಿಸುವಾಗ ತಪ್ಪಾಗಿದ್ದರೆ, ಅದನ್ನು ಸರಿಪಡಿಸಲು ರೋಗಿಯು ಮತ್ತಷ್ಟು ಹೆಣಗಾಡಬೇಕಾಗುತ್ತದೆ. ನಮ್ಮ ದೇಶದಲ್ಲಿ ರೋಗ ಪತ್ತೆ ಮತ್ತು ಚಿಕಿತ್ಸೆಯ ಕ್ರಮಗಳು, ಕೌಶಲ್ಯಗಳು, ಸೌಲಭ್ಯಗಳು ಹಲತೆರನಾಗಿರುವುದರಿಂದ ಇಂತಹ ಕೇಂದ್ರೀಕೃತ ವ್ಯವಸ್ಥೆಯು ಅಪಾರ ತೊಂದರೆಗಳನ್ನುಂಟು ಮಾಡುವ ಸಾಧ್ಯತೆಗಳೇ ಹೆಚ್ಚು. ವೈದ್ಯಕೀಯ ಸಿಬಂದಿಯು ಈ ದಾಖಲೆಗಳನ್ನು ತುಂಬುವುದಕ್ಕೇ ಕಾಲವ್ಯಯ ಮಾಡಬೇಕಾಗಿ, ರೋಗಿಗಳ ಆರೈಕೆಯೂ ಇನ್ನಷ್ಟು ಬಳಲಲಿದೆ, ಹೊಟ್ಟೆಗೆ ಹಿಟ್ಟಿಲ್ಲದಲ್ಲಿ ಜುಟ್ಟಿಗೆ ಮಲ್ಲಿಗೆ ಹೂವಾಗಲಿದೆ.

ಆಹಾರ ಮತ್ತು ಸರಕಾರಿ ಆರೋಗ್ಯ ಸೇವೆಗಳಿಗೆ ಆಧಾರ್ ಕಡ್ಡಾಯ ಮಾಡಿದ್ದರಿಂದ ಈಗಾಗಲೇ ಅನೇಕರಿಗೆ ಸಮಸ್ಯೆಗಳಾದ ಬಗ್ಗೆ ವರದಿಗಳಾಗಿವೆ. ಬೆರಳಚ್ಚು ತಾಳೆಯಾಗದೆ, ಸರ್ವರ್ ದೊರಕದೆ, ಪಡಿತರ ತಪ್ಪಿ ಹಸಿವಿನಿಂದ ಸತ್ತದ್ದು, ಕುಷ್ಠದಿಂದ ಬೆರಳುಗಳು ಮತ್ತು ಮುಖಚರ್ಯೆ ಬದಲಾಗಿ ಆಹಾರ-ಔಷಧ ಸಿಗದಾಗಿದ್ದು, ಆಧಾರ್ ಕಾರಣಕ್ಕೆ ಆಸ್ಪತ್ರೆಗಳಲ್ಲಿ ಗರ್ಭಪಾತ ಮಾಡಿಸದೆ ನಕಲಿಗಳಿಂದ ಮಾಡಿಸಿ ಸಾವನ್ನಪ್ಪಿದ್ದು, ಆಧಾರ್ ಗುರುತಿಸಿಕೊಳ್ಳಲು ಒಪ್ಪದೆ ಎಚ್‌ಐವಿ ಚಿಕಿತ್ಸೆ ತೊರೆದದ್ದು ಎಲ್ಲ ಆಗಿವೆ. ಆಧಾರ್ ಇಲ್ಲದೆ ಆರೋಗ್ಯ ಸೇವೆ ಇಲ್ಲ ಎಂಬಂತಾದರೆ, ಬೆರಳಚ್ಚು ತಪ್ಪಿದರೆ, ಎಂದಿನ ವೈದ್ಯರು ಇಲ್ಲದಿದ್ದರೆ, ಮಾಹಿತಿಯಲ್ಲಿ ತಪ್ಪಿದ್ದರೆ, ಸರ್ವರ್ ಮೌನವಾದರೆ ಚಿಕಿತ್ಸೆಯೇ ಸಿಗದಂತಾಗಲಿದೆ. ಅದೇನೇ ಆದರೂ ಮಾಹಿತಿ ಕಣಜವನ್ನು ನಿಯಂತ್ರಿಸುವ ಮಹಾ ಬಂಡವಾಳಗಾರರಿಗೆ ಒಳ್ಳೆಯದೇ ಆಗಲಿದೆ.

ಇಲಾಜು 6 – ವೈದ್ಯರನ್ನೂ ಕಾಡುತ್ತಿದೆ ಹಿಟ್ಲರ್‌ ಕಾಲದ ಒಂದು ಅಪಾಯಕಾರಿ ರೋಗ!

(ಜನವರಿ 24, 2018)

ಎಲ್ಲಾ ಮನುಷ್ಯರನ್ನು ಜಾತಿ, ಮತ, ಲಿಂಗ, ಪ್ರದೇಶ, ಭಾಷೆ, ರಾಜಕಾರಣಗಳನ್ನು ಲೆಕ್ಕಿಸದೆ ಸಮಾನರೆಂದು ಕಾಣುವುದು, ಯಾರಿಗೂ ಹಾನಿ ಮಾಡದಿರುವುದು, ಎಷ್ಟೇ ಒತ್ತಡಗಳಿದ್ದರೂ ವಿಷ ನೀಡದಿರುವುದು, ವೈಯಕ್ತಿಕ ಆಕಾಂಕ್ಷೆಗಳನ್ನು ಕಡೆಗಣಿಸುವುದು ಎಲ್ಲ ದೇಶ-ಕಾಲಗಳಲ್ಲಿ ವೈದ್ಯರೆಲ್ಲರ ಪ್ರತಿಜ್ಞೆಗಳು, ಬದ್ಧತೆಗಳು. ಅಂತಹ ಅದೆಷ್ಟೋ ವೈದ್ಯರು ರಾಜಕಾರಣಿಗಳಾಗಿದ್ದಾರೆ; ನಮ್ಮಲ್ಲೂ ಹಲವರು ಶಾಸಕರಾಗಿದ್ದಾರೆ, ಸಚಿವರಾಗಿದ್ದಾರೆ. ಆದರೆ, ವೈದ್ಯನ ರಾಜಕೀಯ ನಿಲುವುಗಳು ವೃತ್ತಿಯೊಳಗೆ ಬೆರೆತರೆ, ವೃತ್ತಿಯ ಬದ್ಧತೆಗಳು ಮರೆತರೆ ಏನಾದೀತು? ವೈದ್ಯನೊಳಗೂ ಮತೀಯವಾದ, ಜನಾಂಗ ದ್ವೇಷಗಳಿದ್ದರೆ ಹೇಗಾದೀತು? ಬಹುವಾಗಿ ಕಾಡುವ, ಅತಿ ಗಂಭೀರವಾದ, ಪ್ರಶ್ನೆಗಳಿವು.

ಎಲ್ಲ ವೈದ್ಯರೂ, ಎಂದೆಂದಿಗೂ ನೆನಪಿಡಬೇಕಾದ ಪಾಠಗಳಾದ ಕೆಲವು ಕರಾಳ ಅಧ್ಯಾಯಗಳು ವೈದ್ಯಕೀಯ ಇತಿಹಾಸದಲ್ಲಿ ದಾಖಲಾಗಿವೆ. ಹಿಟ್ಲರನಾಳ್ವಿಕೆಯಲ್ಲಿ, 1933-45ರ ನಡುವೆ, ಎರಡು ಕೋಟಿಯಷ್ಟು ಜನರ ಹತ್ಯೆಗಳಾದುದರಲ್ಲಿ ಹಿಟ್ಲರ್ ನಿಷ್ಠ ವೈದ್ಯರ ಪಾತ್ರವೂ ಇತ್ತು. ಅದಕ್ಕೂ ಮೊದಲು, 1915ರಲ್ಲಿ, ತುರ್ಕಿಯ ಒಟೊಮಾನ್ ಆಡಳಿತವು ಹತ್ತು ಲಕ್ಷಕ್ಕೂ ಹೆಚ್ಚು ಅರ್ಮೇನಿಯನರನ್ನು ಕೊಂದುದರಲ್ಲಿ ಕೆಲ ವೈದ್ಯರೂ ಆಪಾದಿತರಾಗಿದ್ದರು. ಅರ್ಜೆಂಟೀನಾದಲ್ಲಿ (1976-83) ರಾಜಕೀಯ ಕೈದಿಗಳ ಹಸುಗೂಸುಗಳನ್ನು ಹೊತ್ತೊಯ್ದು ಆಗಸದಿಂದ ಅಟ್ಲಾಂಟಿಕ್ ಸಾಗರಕ್ಕೆಸೆದುದರಲ್ಲೂ ವೈದ್ಯರ ಪಾಲಿತ್ತು. ತೊಂಬತ್ತರ ದಶಕದ ಮೊದಲ ಭಾಗದಲ್ಲಿ ಬೋಸ್ನಿಯಾ ಹಾಗೂ ರುವಾಂಡಾಗಳಲ್ಲಿ ನಡೆದ ಜನಾಂಗೀಯ ಹತ್ಯೆಗಳಿಗೂ ವೈದ್ಯರ ನೆರವಿತ್ತು. ಅಮೆರಿಕಾದ ಗ್ವಂಟನಮೋ ಜೈಲಲ್ಲಿ ಬಂಧಿತರ ಮುಖಕ್ಕೆ ಉಪ್ಪು ಮಿಶ್ರಿತ ನೀರು ಸುರಿದು ಹಿಂಸಿಸುವುದನ್ನು ವೈದ್ಯರೇ ಕಲಿಸಿದ್ದರು.

ಈ ವೈದ್ಯರು ಕೊಲೆಗಡುಕರಾಗಿ ಬದಲಾದವರೇ ಅಥವಾ ಕೊಲೆಗಡುಕರ ಮನಸ್ಥಿತಿಯಿದ್ದು ವೈದ್ಯ ವೃತ್ತಿಗಿಳಿದಿದ್ದವರೇ? ಉತ್ತರ ಕಷ್ಟವೇ. ಬೋಸ್ನಿಯಾ ನರಮೇಧಗಳಿಗಾಗಿ ಜೈಲುಪಾಲಾದ ರಾದೊವಾನ್ ಕರಾಜಿಕ್ ಮನೋವೈದ್ಯನೇ! ವೈದ್ಯರು ಹಿಟ್ಲರನಿಗೆ ಮಾರು ಹೋಗಿದ್ದರೇ ಅಥವಾ ಹಿಟ್ಲರನೇ ವೈದ್ಯರಿಂದ ಸ್ಫೂರ್ತಿ ಪಡೆದಿದ್ದನೇ ಎಂದರಿಯದಷ್ಟು ಅವರೊಳಗಿನ ನಂಟಿತ್ತು! ಹಿಟ್ಲರ್ ಆಳ್ವಿಕೆಯಲ್ಲಿ ಸರಕಾರ, ವೈದ್ಯಕೀಯ ವ್ಯವಸ್ಥೆ, ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು ಮತ್ತು ದೈತ್ಯ ಕಂಪೆನಿಗಳು ಪರಸ್ಪರ ಪೂರಕವಾಗಿ ಒಟ್ಟು ಸೇರಿ, ರಾಜಕೀಯ, ಆರ್ಥಿಕ, ವೈಜ್ಞಾನಿಕ ಶಕ್ತಿಗಳೆಲ್ಲದರ ಸಂಗಮವಾದುದರಿಂದಲೇ ಅಷ್ಟೊಂದು ಭೀಕರವಾದ ಕ್ರೌರ್ಯಗಳನ್ನು ನಡೆಸುವುದಕ್ಕೆ ಸಾಧ್ಯವಾಯಿತು.

ವಿಪರ್ಯಾಸವೆಂದರೆ, ಇಪ್ಪತ್ತನೇ ಶತಮಾನದ ಆರಂಭದಲ್ಲಿ ಆಧುನಿಕ ವೈದ್ಯ ವಿಜ್ಞಾನದ ಬೆಳವಣಿಗೆಯಲ್ಲಿ ಜರ್ಮನಿಯು ಇಡೀ ವಿಶ್ವದಲ್ಲೇ ಅಗ್ರಣಿಯಾಗಿತ್ತು, ಅಮೆರಿಕವೂ ಸೇರಿದಂತೆ ಜಗತ್ತಿನ ಎಲ್ಲೆಡೆಗಳಿಂದ ವೈದ್ಯ ವಿಜ್ಞಾನಿಗಳೂ, ವಿದ್ಯಾರ್ಥಿಗಳೂ ಉನ್ನತ ತರಬೇತಿಗಾಗಿ ಜರ್ಮನಿಗೆ ತೆರಳಬೇಕಾಗಿತ್ತು. ಆ ಕಾಲದಲ್ಲಿ ವೈದ್ಯವಿಜ್ಞಾನ ಹಾಗೂ ರಸಾಯನಶಾಸ್ತ್ರದ ನೊಬೆಲ್ ಪುರಸ್ಕಾರಗಳಲ್ಲಿ ಹೆಚ್ಚಿನವು ಜರ್ಮನಿಯ ವಿಜ್ಞಾನಿಗಳಿಗೇ ದೊರೆಯುತ್ತಿದ್ದವು. ಜರ್ಮನಿಯ ವೈದ್ಯಕೀಯ ಸೇವೆಗಳಲ್ಲಿ ಮಹಿಳೆಯರೂ, ಯಹೂದಿಗಳೂ ಸಾಮಾನ್ಯವಾಗಿದ್ದರು; ಮೊದಲ ವಿಶ್ವ ಯುದ್ಧದಲ್ಲೂ ಜರ್ಮನ್ ಸೇನೆಯ ವೈದ್ಯಕೀಯ ವಿಭಾಗಗಳಲ್ಲಿ ಅವರು ಸಕ್ರಿಯರಾಗಿದ್ದರು. ಫ್ರಾನ್ಸ್‌ನಲ್ಲಿ 1930ರ ಕಾಲಕ್ಕೆ 560 ಮಹಿಳಾ ವೈದ್ಯರಿದ್ದಲ್ಲಿ, ಜರ್ಮನಿಯಲ್ಲಿ 4300ಕ್ಕೂ ಹೆಚ್ಚಿದ್ದರು. ಜರ್ಮನಿಯ ವೈದ್ಯರಲ್ಲಿ ಶೇ. 16ರಷ್ಟು ಯಹೂದ್ಯರೇ ಆಗಿದ್ದರು; ಯಹೂದಿ ವಿದ್ಯಾರ್ಥಿಗಳಿಗೆ ಅಮೆರಿಕಕ್ಕಿಂತ ಸುಲಭವಾಗಿ ಜರ್ಮನಿಯಲ್ಲೇ ವೈದ್ಯಕೀಯ ವ್ಯಾಸಂಗಕ್ಕೆ ಅವಕಾಶವೊದಗುತ್ತಿತ್ತು. ಅಂತಹಾ ಜರ್ಮನಿಯು ಹಿಟ್ಲರನ ರಾಷ್ಟ್ರವಾದದ ಹುಚ್ಚಿಗೆ ಸಿಲುಕಿ ಮಹಿಳೆಯರಿಗೂ, ಯಹೂದ್ಯರಿಗೂ ಅತಿ ಭಯಂಕರ ಕಂಟಕವಾಯಿತು, ತಾನೂ ನಾಶಗೊಂಡಿತು.

ಇಪ್ಪತ್ತನೇ ಶತಮಾನದ ಮೊದಲಲ್ಲಿ ಮಾನವ ತಳಿ ಶುದ್ಧೀಕರಣ ಎಂಬ ವಿಷಯವು ಹಲವು ವೈದ್ಯರನ್ನೂ, ವಿಜ್ಞಾನಿಗಳನ್ನೂ ಆಕರ್ಷಿಸಿತ್ತು. ಅನುವಂಶೀಯ ರೋಗವುಳ್ಳವರು, ವಿಕಲಾಂಗರು, ಬುದ್ಧಿಮಾಂದ್ಯರು, ಮನೋರೋಗಿಗಳು ಮುಂತಾದವರನ್ನು ಪ್ರತ್ಯೇಕಿಸಿ, ಸಂತಾನಹರಣ ಚಿಕಿತ್ಸೆಗೆ ಗುರಿಪಡಿಸಿ, ಅಂಥವರ ತಳಿಯನ್ನೇ ಮುಗಿಸಿ, ಮನುಕುಲವನ್ನು ಶುದ್ಧೀಕರಿಸಬೇಕೆನ್ನುವ ಪ್ರಯತ್ನಗಳಾಗುತ್ತಿದ್ದವು. ಜರ್ಮನಿಯ ವೈದ್ಯ ವಿಜ್ಞಾನಿ ಯೂಜನ್ ಫಿಶರ್, ಸಸ್ಯ ವಿಜ್ಞಾನಿ ಇರ್ವಿನ್ ಬಾರ್ ಹಾಗೂ ತಳಿ ತಜ್ಞ ಫ್ರಿಟ್ಜ್ ಲೆಂಜ್ ಎಂಬವರು 1921ರಲ್ಲಿ ಬರೆದಿದ್ದ ‘ಮಾನವ ಅನುವಂಶೀಯತೆ’ ಎಂಬ ಕೃತಿಯು ಸಾಕಷ್ಟು ಖ್ಯಾತಿ ಪಡೆದಿತ್ತು. ಅದೇ ಕಾಲಕ್ಕೆ ಯೂರೋಪಿನಲ್ಲಿ ಯಹೂದಿ ದ್ವೇಷವೂ ಬೆಳೆಯುತ್ತಲೇ ಇತ್ತು, ಹಿಟ್ಲರನೊಳಕ್ಕೂ ಹೊಕ್ಕಿತ್ತು. ನಾಜಿ ಪಕ್ಷವು ಜರ್ಮನ್ ಸರಕಾರವನ್ನು ಕಿತ್ತೊಗೆಯಲು ಯತ್ನಿಸಿದ್ದಕ್ಕಾಗಿ ಹಿಟ್ಲರ್ 1923ರಲ್ಲಿ ಜೈಲು ಸೇರಿದ್ದಾಗ, ‘ಮಾನವ ಅನುವಂಶೀಯತೆ’ಯ ಪ್ರತಿಯನ್ನು ಆತನಿಗೆ ತಲುಪಿಸಲಾಗಿತ್ತು. ಜೈಲಲ್ಲಿರುವಾಗಲೇ ಮೈನ್ ಕೆಂಫ್ ಬರೆದ ಹಿಟ್ಲರ್, ಅದರಲ್ಲಿ ತನ್ನ ಜನಾಂಗ ದ್ವೇಷದ ವಾದವನ್ನು ಸಮರ್ಥಿಸಿಕೊಳ್ಳಲು ಇದೇ ‘ಮಾನವ ಅನುವಂಶೀಯತೆ’ ಪುಸ್ತಕವನ್ನು ಉದ್ದರಿಸಿದನು; ಅಲ್ಲಿಂದಲೇ ನಾಜಿ ವಾದ ಮತ್ತು ಜರ್ಮನ್ ವೈದ್ಯರೊಳಗಿನ ನಂಟು ಬೆಸೆದುಕೊಂಡಿತು. ಹಿಟ್ಲರ್ ಅಧಿಕಾರಕ್ಕೇರಿದ ಬೆನ್ನಿಗೆ ಫಿಶರ್ ಮತ್ತು ಲೆಂಜ್ ಇಬ್ಬರೂ ನಾಜಿ ಪಕ್ಷದಲ್ಲೂ, ಕೈಸರ್ ವಿಲೆಂ ಸಂಶೋಧನಾ ಕೇಂದ್ರದಲ್ಲೂ ಉನ್ನತ ಹುದ್ದೆಗಳನ್ನು ಪಡೆದರು.

ಹಿಟ್ಲರ್ 1933ರ ಜನವರಿಯಲ್ಲಿ ಅಧಿಕಾರಕ್ಕೇರಿದಾಗ ರಾಷ್ಟ್ರೀಯ-ಜನಾಂಗೀಯ ಶ್ರೇಷ್ಠತೆಯ ಹುಚ್ಚನ್ನು ಜಾರಿಗೊಳಿಸುವ ಕೆಲಸವು ವೈದ್ಯಕೀಯ ಕ್ಷೇತ್ರದಿಂದಲೇ ಆರಂಭಗೊಂಡಿತು. ಅದೇ ಎಪ್ರಿಲ್-ಜೂನ್‌ನಲ್ಲಿ ಮಹಿಳಾ ವೈದ್ಯರು ಪ್ರಸೂತಿಯಲ್ಲದೆ ಬೇರಾವ ಕೆಲಸಗಳನ್ನು ಮಾಡದಂತೆ ನಿರ್ಬಂಧಿಸಲಾಯಿತು, ಯಹೂದಿ ವೈದ್ಯರನ್ನು ಎಲ್ಲ ಕೆಲಸಗಳಿಂದಲೂ ತೆಗೆದು ಹಾಕಿ, ವಿದ್ಯಾರ್ಥಿಗಳನ್ನು ಅಲ್ಲಿಗೆ ನೇಮಿಸಲಾಯಿತು. ಇತರ ವೈಜ್ಞಾನಿಕ-ವೈಚಾರಿಕ ಸಂಸ್ಥೆಗಳಿಂದಲೂ ಯಹೂದ್ಯರನ್ನು ಹೊರಗಟ್ಟಲಾಯಿತು. ಯಹೂದಿ ವೈದ್ಯರನ್ನೂ ಹೊಂದಿದ್ದ ಜರ್ಮನ್ ವೈದ್ಯಕೀಯ ಸಂಘಕ್ಕೆ ಪರ್ಯಾಯವಾಗಿ ನಾಜಿ ಪಕ್ಷದ ವೈದ್ಯಕೀಯ ಸಂಘವನ್ನು ಆರಂಭಿಸಲಾಯಿತು; ಈ ಸಂಘದಲ್ಲಿ 1933ರ ಜನವರಿಯಲ್ಲಿ 2786 ಸದಸ್ಯರಿದ್ದುದು, ಅದೇ ಅಕ್ಟೋಬರ್‌ ವೇಳೆಗೆ 11 ಸಾವಿರವಾಯಿತು, 1942ಕ್ಕೆ 42 ಸಾವಿರವಾಯಿತು, ಶೇ. 45 ವೈದ್ಯರು ನಾಜಿಗಳಾದರು.

ಅತ್ತ ಹೆಚ್ಚಿನ ಯಹೂದಿ ವೈದ್ಯರು ಮತ್ತು ವಿಜ್ಞಾನಿಗಳು ಜರ್ಮನಿಯನ್ನೇ ತೊರೆದು ಅಮೆರಿಕ ಮತ್ತು ಯೂರೋಪಿನ ಇತರೆಡೆಗಳಿಗೆ ಓಡಿ ಹೋದರು. ಅವರಿದ್ದ ಸ್ಥಾನಗಳಲ್ಲಿ ಅನರ್ಹರೇ ತುಂಬತೊಡಗಿ, ಯಹೂದಿ ವೈದ್ಯರೇ ಹೆಚ್ಚಿದ್ದ ಚರ್ಮ ರೋಗ ಚಿಕಿತ್ಸೆಯಂತಹ ವಿಭಾಗಗಳು ಸಂಪೂರ್ಣವಾಗಿ ನೆಲಕಚ್ಚಿದವು. ದೇಶ ಬಿಟ್ಟು ಓಡಲು ಸಿದ್ಧರಿಲ್ಲದೆ ಉಳಿದುಕೊಂಡ ಹಲವು ಯಹೂದಿ ವೈದ್ಯರೂ, ವಿಜ್ಞಾನಿಗಳೂ ಮುಂದೆ ತಮ್ಮ ಜೀವಗಳನ್ನೇ ಕಳೆದುಕೊಳ್ಳಬೇಕಾಯಿತು, ಈ ಹತ್ಯೆಗಳಿಗೆ ಜರ್ಮನ್ ವೈದ್ಯರೇ ನೆರವಾದರು.

ನಾಜಿ ಪಕ್ಷದ ಎಸ್‌ಎ, ಎಸ್‌ಎಸ್‌ ನಂತಹ ಹತ್ಯಾ ಘಟಕಗಳಲ್ಲಿ ಸಾಕಷ್ಟು ವೈದ್ಯರಿದ್ದರು, ವರ್ನರ್ ಹೈಡ್, ಕಾರ್ಲ್ ಬ್ರಾಂಡ್ ಹಾಗೂ ಲಿಯೊನಾರ್ಡೊ ಕಾಂಟಿಯಂಥ ತಜ್ಞ ವೈದ್ಯರೇ ಅದರ ಉನ್ನತಾಧಿಕಾರಿಗಳಾಗಿದ್ದರು. ಸಂತಾನಶಕ್ತಿ ಹರಣ, ನಾಜಿ ಕೂಡು ಶಿಬಿರಗಳು, ಬಗೆಬಗೆಯ ವೈದ್ಯಕೀಯ ಪ್ರಯೋಗಗಳು, ಸಾಮೂಹಿಕ ಹತ್ಯೆಗಳು ಎಲ್ಲಕ್ಕೂ ಜನರನ್ನು ಆಯುವ ಹಾಗೂ ಗುರಿಪಡಿಸುವ ಕೆಲಸಗಳನ್ನು ಎಸ್‌ಎಸ್‌ ವೈದ್ಯಕೀಯ ಘಟಕವೇ ನಡೆಸುತ್ತಿತ್ತು. ಇವಕ್ಕೆ ಬಳಸಿದ ಔಷಧಿಗಳು, ಲಸಿಕೆಗಳು ಮತ್ತು ವಿಷಾನಿಲಗಳನ್ನು ಹಿಟ್ಲರನನ್ನು ಅಧಿಕಾರಕ್ಕೇರಿಸಿದ್ದ ದೈತ್ಯ ಕಂಪೆನಿಗಳೇ ಒದಗಿಸಿದ್ದವು. ಒಟ್ಟಿನಲ್ಲಿ ನಾಲ್ಕು ಲಕ್ಷ ಜನರ ಸಂತಾನಶಕ್ತಿ ಹರಣವಾಯಿತು, ನಾಲ್ಕು ಲಕ್ಷಕ್ಕೂ ಹೆಚ್ಚು ಮಕ್ಕಳು, ಮನೋರೋಗಿಗಳು, ಯಹೂದ್ಯರು, ಜಿಪ್ಸಿಗಳು ಮತ್ತಿತರರನ್ನು ರಾಸಾಯನಿಕಗಳನ್ನು ಚುಚ್ಚಿ, ವಿಷಾನಿಲಗಳನ್ನು ಬಿಟ್ಟು ಹತ್ಯೆಗೈಯಲಾಯಿತು. ಕೂಡು ಶಿಬಿರಗಳಲ್ಲಿ ಜನರನ್ನು ಹತ್ಯೆಗೆ ದೂಡುವುದಕ್ಕೆ ಹೆಚ್ಚಿನ ನಾಜಿ ವೈದ್ಯರಿಗೆ ಕಂಠಪೂರ್ತಿ ಮದ್ಯ ಸೇವಿಸಬೇಕಾಗುತ್ತಿತ್ತು, ಆದರೆ ಸಾವಿನ ದೂತನೆಂದೇ ಕುಖ್ಯಾತನಾಗಿದ್ದ ವೈದ್ಯ ಯೋಸೆಫ್ ಮೆಂಗೆಲೆಗೆ ಅದೂ ಬೇಕಿರಲಿಲ್ಲ.

ಮಹಾಯುದ್ಧದ ಬಳಿಕ ಹಿಟ್ಲರ್ ಗುಂಡಿಟ್ಟುಕೊಂಡು ಸತ್ತರೆ, ಕಾಂಟಿ ಮತ್ತು ಹೈಡ್ ನೇಣು ಹಾಕಿಕೊಳ್ಳಬೇಕಾಯಿತು, ಬ್ರಾಂಡ್ ಮರಣದಂಡನೆಗೆ ಒಳಗಾಗಬೇಕಾಯಿತು. ಆದರೆ ಜನಾಂಗ ದ್ವೇಷವಾಗಲೀ, ಅದನ್ನು ತುಂಬಿಕೊಂಡಿರುವ ವೈದ್ಯರಾಗಲೀ ಅಲ್ಲಿಗೇ ಕೊನೆಯಾಗಲಿಲ್ಲ. ಕೆಟ್ಟ ಸೋಂಕುಗಳಂತಿರುವ ಅನ್ಯ ಜನಾಂಗೀಯರನ್ನು ಇಲ್ಲವಾಗಿಸಿ ಜರ್ಮನಿಯನ್ನು ಶುದ್ಧಗೊಳಿಸಬೇಕೆಂದು ನಾಜಿ ವೈದ್ಯರು ಹೇಳುತ್ತಿದ್ದಂತೆಯೇ, ಕ್ಯಾನ್ಸರಿನಂತಿರುವ ಅನ್ಯಧರ್ಮೀಯರನ್ನು ಕತ್ತರಿಸಬೇಕೆಂದು ನಮ್ಮ ದೇಶದ ಕ್ಯಾನ್ಸರ್ ತಜ್ಞನೊಬ್ಬ ಹೇಳಿದ್ದನ್ನು ಕಡೆಗಣಿಸಲಾದೀತೇ? ಪ್ರಸೂತಿ ತಜ್ಞೆಯೊಬ್ಬಳು ಮತೀಯ ಹತ್ಯೆಗಳಿಗಾಗಿ ದೀರ್ಘ ಸೆರೆವಾಸದ ಶಿಕ್ಷೆಗೀಡಾದ್ದನ್ನು ಮರೆಯಲಾದೀತೇ?

ಇಲಾಜು 5 – ನಿಮ್ಮ ಆಸ್ಪತ್ರೆ ಖರ್ಚು ಹಲವು ಪಟ್ಟು ಹೆಚ್ಚುತ್ತಿರುವುದೇಕೆ ಗೊತ್ತೇ?

(ಜನವರಿ 9, 2018)

ಮೊನ್ನೆ ದಿಲ್ಲಿಯಲ್ಲಿ ಎರಡು ಮಹಾ ಆಸ್ಪತ್ರೆಗಳಲ್ಲಿ ಇಬ್ಬರು ಡೆಂಗಿ ಪೀಡಿತರಿಗೆ 2-3 ವಾರಗಳ ಚಿಕಿತ್ಸೆಗೆ ತಲಾ 15-16 ಲಕ್ಷ ವಿಧಿಸಿದ್ದು ದೇಶವಿಡೀ ಸುದ್ದಿಯಾಗಿತ್ತು. ತಮ್ಮ ಶಿಷ್ಟಾಚಾರಗಳಿಗೆ ಅನುಗುಣವಾಗಿ, ಯಾವುದೇ ಲೋಪಗಳಿಲ್ಲದೆ, ಅತ್ಯುತ್ತಮವಾದ ಚಿಕಿತ್ಸೆ ನೀಡಿದ್ದೇವೆ, ವಿಧಿಸಿದ ದರಗಳಿಗೆ ಸವಿವರವಾದ ಪಟ್ಟಿಯನ್ನೂ ಕೊಟ್ಟಿದ್ದೇವೆ ಎಂದು ಈ ಆಸ್ಪತ್ರೆಗಳು ಸಮರ್ಥಿಸಿಕೊಂಡವು; ಭಾರತೀಯ ವೈದ್ಯಕೀಯ ಸಂಘವೂ ಆಸ್ಪತ್ರೆಗಳ ಬೆನ್ನಿಗೆ ನಿಂತಿತು. ಎರಡು ವಾರಗಳ ಚಿಕಿತ್ಸೆಗೆ 660 ಸಿರಿಂಜುಗಳು ಹಾಗೂ 2700 ಕೈಗವಸುಗಳನ್ನು ಬಳಸಲಾಗಿತ್ತೆಂದು ಆ ಪಟ್ಟಿಯಲ್ಲೇ ಸ್ಪಷ್ಟವಾಗಿ ಹೇಳಲಾಗಿತ್ತು. ಆದರೆ, ಸಿರಿಂಜುಗಳಿಗೆ 17 ಪಟ್ಟು, ಕೈಗವಸುಗಳಿಗೆ 3 ಪಟ್ಟು, ಔಷಧಗಳಿಗೆ 9 ಪಟ್ಟು ಹೆಚ್ಚಿನ ದರವನ್ನು ವಿಧಿಸಲಾಗಿತ್ತೆನ್ನುವುದು ತನಿಖೆಯಲ್ಲಿ ಹೊರಬಂತು.

ದಿನಕ್ಕೊಂದು ಲಕ್ಷ ವಿಧಿಸುವಂತೆ ಮಾಡಿದ, ಅದನ್ನೆಲ್ಲ ಪಟ್ಟಿ ಮಾಡಿ ಕೊಟ್ಟು ಕೋಪಕ್ಕೆ ತುತ್ತಾಗುವಂತೆಯೂ ಮಾಡಿದ ಆ ಶಿಷ್ಟಾಚಾರಗಳೇನು? ಅವನ್ನು ಮಾಡಿದವರಾರು, ಹೇರುತ್ತಿರುವವರಾರು, ಅವುಗಳ ಸಾಧಕ-ಬಾಧಕಗಳೇನು? ಆ ಮಹಾ ಆಸ್ಪತ್ರೆಗಳ ಮಹಾ ‘ಬಿಲ್ಲು’ಗಳ ಮಹಾ ಚರ್ಚೆಗಳಲ್ಲಿ ಈ ಪ್ರಶ್ನೆಗಳನ್ನು ಯಾರೂ ಕೇಳಲೇ ಇಲ್ಲ.

ವೈದ್ಯರು ಮತ್ತು ಆಸ್ಪತ್ರೆಗಳು ಅನುಸರಿಸುವ ಶಿಷ್ಟಾಚಾರಗಳು ಹಲವಿವೆ: ಕಡ್ಡಾಯವಾಗಿ ಪಾಲಿಸಬೇಕಾದ ವೃತ್ತಿ ಸಂಹಿತೆಗಳಿವೆ, ನ್ಯಾಯಿಕ ನಿಯಂತ್ರಣಗಳೂ ಇವೆ, ಚಿಕಿತ್ಸೆ ಮತ್ತು ಸುರಕ್ಷತೆಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯೂ ಸೇರಿದಂತೆ ದೇಶ-ವಿದೇಶಗಳ ಹಲವಾರು ಸಂಸ್ಥೆಗಳು ಆಗಿಂದಾಗ ಹೊರಡಿಸುವ ಸಲಹಾವಳಿಗಳೂ ಇವೆ. ಇವು ಎಲ್ಲಾ ವೈದ್ಯರಿಗೆ, ಎಲ್ಲಾ ಆಸ್ಪತ್ರೆಗಳಿಗೆ ಒಂದೇ ತೆರನಾಗಿರುತ್ತವೆ. ಇಂತಹಾ ಸಾಮಾನ್ಯ ಶಿಷ್ಟಾಚಾರಗಳು ಲಕ್ಷಗಟ್ಟಲೆ ಖರ್ಚಿಗೆ ಕಾರಣವಾಗುತ್ತವೆಯೇ? ಅಥವಾ, ಈ ಕಾನೂನು-ಸಂಹಿತೆಗಳಿಗೆ ಹೊರತಾದ, ಚಿಕಿತ್ಸೆಗೆ ಅತ್ಯಗತ್ಯವೂ ಅಲ್ಲದ, ಯಾವುದೋ ವಿಶಿಷ್ಟ ಮಾನ್ಯತೆಗಳ ಶಿಷ್ಟಾಚಾರಗಳನ್ನು ಅಳವಡಿಸಿಕೊಳ್ಳುತ್ತಿರುವುದು ಕಾರಣವಾಗುತ್ತಿದೆಯೇ? ರೋಗಗಳನ್ನು ಹುಟ್ಟಿಸುವುದು, ಪತ್ತೆ ಹಚ್ಚುವುದು ಮತ್ತು ಚಿಕಿತ್ಸೆ ನೀಡುವುದು ಎಲ್ಲವೂ ವ್ಯಾಪಾರವೇ ಆಗಿರುವಾಗ, ಆಸ್ಪತ್ರೆಗಳ ಮಾನ್ಯತೆಯೂ ವ್ಯಾಪಾರವಾಗುತ್ತಿದೆಯೇ?

ಆರೋಗ್ಯ ಸೇವೆಗಳಿಗೆ ವಿಶಿಷ್ಟ ಮಾನ್ಯತೆಗಳನ್ನು ನೀಡುವ ವ್ಯವಸ್ಥಿತ ಯೋಜನೆಗಳು ಈಗೊಂದು ದಶಕದಿಂದ ಬೆಳೆಯುತ್ತಿವೆ. ಅಂತರರಾಷ್ಟ್ರೀಯ ಜಂಟಿ ಆಯೋಗ (ಜೆಸಿಐ), ರಾಷ್ಟ್ರೀಯ ಆಸ್ಪತ್ರೆಗಳ ಮಾನ್ಯತಾ ಮಂಡಳಿ (ಎನ್‌ಎಬಿಎಚ್), ಆಸ್ಟ್ರೇಲಿಯಾದ ಆರೋಗ್ಯ ಸೇವಾ ಸಂಸ್ಥೆಗಳ ಮಾನದಂಡಗಳ ಪರಿಷತ್ತು, ಅಮೆರಿಕಾದ ರೋಗನಿದಾನ ಹಾಗೂ ಪ್ರಯೋಗಾಲಯಗಳ ಮಾನ್ಯತಾ ಪರಿಷತ್ತು ಮುಂತಾದ ಖಾಸಗಿ ಮಾನ್ಯತಾ ಸಂಸ್ಥೆಗಳು ರೂಪುಗೊಂಡಿದ್ದು, ಅವುಗಳಿಂದ ಮಾನ್ಯತೆಯನ್ನು ಪಡೆಯುವಂತೆ ಆಸ್ಪತ್ರೆಗಳನ್ನೂ, ವೈದ್ಯಕೀಯ ಸಂಸ್ಥೆಗಳನ್ನೂ ಉತ್ತೇಜಿಸಲಾಗುತ್ತಿದೆ. ಕಳೆದೊಂದು ದಶಕದಲ್ಲಿ ದೇಶದಲ್ಲಿರುವ ಸುಮಾರು 50000 ಆಸ್ಪತ್ರೆಗಳ ಪೈಕಿ 800ರಷ್ಟು ಆಸ್ಪತ್ರೆಗಳು ಎನ್‌ಎಬಿಎಚ್ ಮಾನ್ಯತೆಯನ್ನು, 32 ಆಸ್ಪತ್ರೆಗಳು ಜೆಸಿಐ ಮಾನ್ಯತೆಯನ್ನು ಪಡೆದುಕೊಂಡಿವೆ; ರಾಜ್ಯದಲ್ಲಿರುವ ಸುಮಾರು 5000 ಆಸ್ಪತ್ರೆಗಳಲ್ಲಿ 37 ಆಸ್ಪತ್ರೆಗಳು (30 ಬೆಂಗಳೂರಲ್ಲಿ) ಎನ್‌ಎಬಿಎಚ್ ಹಾಗೂ 4 ಆಸ್ಪತ್ರೆಗಳು (ಎಲ್ಲ ಬೆಂಗಳೂರಲ್ಲಿ) ಜೆಸಿಐ ಮಾನ್ಯತೆಯನ್ನು ಪಡೆದುಕೊಂಡಿವೆ, ಅಂದರೆ ಶೇ. 98ರಷ್ಟು ಆಸ್ಪತ್ರೆಗಳು ಈ ಖಾಸಗಿ ಮಾನ್ಯತೆಗಳನ್ನು ಪಡೆಯುವ ಗೋಜಿಗೇ ಹೋಗಿಲ್ಲವೆಂದಾಯಿತು.

ಈ ಮಾನ್ಯತೆಯನ್ನು ಪಡೆಯಬೇಕಾದರೆ ಆಸ್ಪತ್ರೆಗಳು ಶುಲ್ಕವನ್ನು ತೆರಬೇಕು ಮಾತ್ರವಲ್ಲ, ಹಲತರದ ಬದಲಾವಣೆಗಳನ್ನೂ ಮಾಡಿಕೊಳ್ಳಬೇಕು. ಆಸ್ಪತ್ರೆ ಕೊಠಡಿಗಳ ಅಳತೆ-ವಿನ್ಯಾಸಗಳು, ಉಪಕರಣಗಳು ಮತ್ತಿತರ ಸೌಲಭ್ಯಗಳು, ವೈದ್ಯಕೀಯ ಹಾಗೂ ಇತರ ಸಿಬಂದಿ ವರ್ಗ, ಸ್ವಾಗತಿಸುವಲ್ಲಿಂದ ಬಿಡುಗಡೆಯವರೆಗಿನ ಸಭ್ಯತೆಗಳು ಮತ್ತು ಉಪಚಾರಗಳು, ರೋಗಿಯ ಬಗೆಗಿನ ಎಲ್ಲಾ ವಿವರಗಳನ್ನು ದಾಖಲಿಸುವುದು ಇತ್ಯಾದಿ ನೂರಕ್ಕೂ ಹೆಚ್ಚು ‘ಶಿಷ್ಟಾಚಾರಗಳನ್ನು’ ಈ ಖಾಸಗಿ ಮಾನ್ಯತಾ ಸಂಸ್ಥೆಗಳು ವಿಧಿಸುತ್ತವೆ. ಇವನ್ನು ಅಳವಡಿಸಿ ಪೂರ್ಣ ಪ್ರಮಾಣದ ಮಾನ್ಯತೆಯನ್ನು ಪಡೆಯಬೇಕಾದರೆ ಹಲವು ಲಕ್ಷಗಳನ್ನು ವ್ಯಯಿಸಬೇಕಾಗುತ್ತದೆ, ಮತ್ತು ಅದನ್ನು ಊರ್ಜಿತದಲ್ಲಿಡಲು ಇನ್ನಷ್ಟು ಲಕ್ಷಗಳು ಬೇಕಾಗುತ್ತವೆ.

ಉದಾಹರಣೆಗೆ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಈ ಖಾಸಗಿ ಮಾನ್ಯತೆಗಾಗಿ 620 ಚದರ ಮೀಟರ್ ಕಟ್ಟಡವಿರಬೇಕು, 23 ಸಿಬಂದಿಯಿರಬೇಕು, ಸರಕಾರದ ಸಾರ್ವಜನಿಕ ಆರೋಗ್ಯ ಮಾನದಂಡಗಳನುಸಾರ (ಐಪಿಎಚ್‌ಎಸ್) 385 ಚದರ ಮೀಟರ್ ಕಟ್ಟಡ ಹಾಗೂ 13-18 ಸಿಬಂದಿಯಿದ್ದರೆ ಸಾಕು; ಖಾಸಗಿ ಮಾನ್ಯತೆಗಾಗಿ ಉಪಕರಣಗಳು ಮತ್ತಿತರ ಸೌಲಭ್ಯಗಳೂ ಹೆಚ್ಚಿನ ಪ್ರಮಾಣದಲ್ಲಿರಬೇಕು. ಆಸ್ಪತ್ರೆಯ ಮಟ್ಟವು ಮೇಲೇರಿದಂತೆ ಈ ಪಟ್ಟಿಯೂ ಹಿರಿದಾಗುತ್ತದೆ. ರೋಗಿಯನ್ನು ಮುಟ್ಟುವುದಕ್ಕೆ ಕೈಗವಸುಗಳನ್ನು ಧರಿಸುವುದು, ಪ್ರತಿಯೊಂದು ಶಸ್ತ್ರಕ್ರಿಯೆಯಲ್ಲೂ ಮರು ಬಳಕೆಯಿಲ್ಲದ ಸಾಧನಗಳನ್ನೇ ಬಳಸುವುದು ಇತ್ಯಾದಿ ನಿರ್ಬಂಧಗಳನ್ನೂ ಈ ಖಾಸಗಿ ಮಾನ್ಯತೆಗಳು ಹೇರುತ್ತವೆ. ಈ ಅನಗತ್ಯವಾದ ಸವಲತ್ತುಗಳು, ಸಾಧನಗಳು ಮತ್ತು ಕ್ರಮಗಳಿಗೆ ಮಾಡುವ ವೆಚ್ಚಗಳಿಂದಾಗಿ ಮತ್ತು ಅವೆಲ್ಲಕ್ಕೂ ಸೇರಿಸುವ ಲಾಭಾಂಶಗಳಿಂದಾಗಿ ಈ ಖಾಸಗಿ ಮಾನ್ಯತೆಗೆ ಒಳಪಟ್ಟ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ವಿಧಿಸಲಾಗುವ ದರವೂ ಹಲವು ಪಟ್ಟು ಹೆಚ್ಚಾಗುತ್ತದೆ.

ಇಷ್ಟೆಲ್ಲ ವಿಶೇಷತೆಗಳಿಂದ ರೋಗಿಗಳಿಗೆ ಒಳಿತಾಗುತ್ತದೆಯೇ? ಸುರಕ್ಷತೆ ಹೆಚ್ಚುತ್ತದೆಯೇ? ಚಿಕಿತ್ಸೆಯ ಫಲಿತಾಂಶ ಸುಧಾರಿಸುತ್ತದೆಯೇ? ಹೌದೆನ್ನುವುದಕ್ಕೆ ಆಧಾರಗಳಿಲ್ಲ. ಇಂತಹಾ ಮಾನ್ಯತಾ ಪ್ರಕ್ರಿಯೆಗಳ ಬಗ್ಗೆ ನಡೆಸಲಾಗಿರುವ 122 ಅಧ್ಯಯನಗಳ ವಿಮರ್ಶೆಯೊಂದು, ಅವುಗಳಿಂದ ಹೆಚ್ಚಿನ ಪ್ರಯೋಜನಗಳಿಲ್ಲ ಎಂದಿದೆ. ಆಗಬಹುದಾದ ಪ್ರಯೋಜನಗಳು ಅದಕ್ಕಾಗುವ ವೆಚ್ಚವನ್ನು ಸರಿದೂಗುವುದಿಲ್ಲ ಎಂದು ಇನ್ನೊಂದು ಅಧ್ಯಯನ ಹೇಳಿದೆ. ಈ ಶಿಷ್ಟಾಚಾರಗಳ ಪಾಲನೆಗಾಗಿ ವೈದ್ಯರೂ, ದಾದಿಯರೂ ಮತ್ತಿತರ ಸಿಬಂದಿಯೂ ರೋಗಿಗಳ ವಿವರಗಳನ್ನು ದಾಖಲಿಸುವ ಕೆಲಸದಲ್ಲೇ ಮುಳುಗಿ, ರೋಗಿಯ ಆರೈಕೆಗೆ ಹಿನ್ನಡೆಯಾಗುತ್ತದೆ ಎಂದು ಹಲವು ವರದಿಗಳು ಹೇಳಿವೆ. ಅಮೆರಿಕಾದಲ್ಲಿ ಇಂತಹ ಹಲವು ನಿಬಂಧನೆಗಳಿಂದಾಗಿ ಪ್ರತೀ ರೋಗಿಗೆ ಸೇವೆಯೊದಗಿಸುವಲ್ಲಿ 30-60 ನಿಮಿಷಗಳಷ್ಟು ವಿಳಂಬವಾಗುತ್ತಿದೆ, ರೋಗಿಗಿಂತ ರೋಗಿಯ ದಾಖಲೆಗಳೇ ದೊಡ್ಡವೆಂಬ ಸ್ಥಿತಿಯುಂಟಾಗಿದೆ; ಇದೇ ಕಾರಣಕ್ಕೆ, ದಾಖಲೀಕರಣದ ಪ್ರಕ್ರಿಯೆಯನ್ನು ತೀರಾ ಸರಳಗೊಳಿಸುವ ಬಗ್ಗೆ ಚಿಂತನೆ ಆರಂಭಗೊಂಡಿದೆ. ಇಂತಹಾ ಶಿಷ್ಟಾಚಾರಗಳು ಸಾಮಾನ್ಯವಾಗಿರುವ ಅಮೆರಿಕದಲ್ಲಿ ವರ್ಷಕ್ಕೆ ಒಂದು ಲಕ್ಷದಷ್ಟು ರೋಗಿಗಳು ವೈದ್ಯಕೀಯ ತಪ್ಪುಗಳಿಂದ ಸಾಯುತ್ತಾರೆ, ಮಾನ್ಯತೆಯನ್ನು ಪಡೆದಿದ್ದ ಕೊಲ್ಕತಾದ ಆಸ್ಪತ್ರೆಯೊಂದರಲ್ಲಿ ಬೆಂಕಿ ಹೊತ್ತಿ, ನೂರಕ್ಕೂ ಹೆಚ್ಚು ಸಾವುಗಳಾಗಿವೆ ಎನ್ನುವುದನ್ನು ಪರಿಗಣಿಸಿದರೆ, ಈ ‘ಶಿಷ್ಟಾಚಾರಗಳಿಂದ’ ಸುರಕ್ಷತೆ ಹೆಚ್ಚುತ್ತದೆ ಎನ್ನುವುದು ಸಂಶಯಾಸ್ಪದವಾಗುತ್ತದೆ.

ಈ ಖಾಸಗಿ ಮಾನ್ಯತೆಗಳನ್ನು ಪಡೆಯಲು ಹೆಚ್ಚಿನ ಆಸ್ಪತ್ರೆಗಳು ಒಲವು ತೋರದಿರುವುದರಿಂದ ಬಗೆಬಗೆಯ ಯೋಜನೆಗಳನ್ನು ಹೂಡಲಾಗುತ್ತಿದೆ. ಹಲವು ಲಕ್ಷಗಳ ಅಗತ್ಯವಿರುವ ಪೂರ್ಣ ಮಾನ್ಯತೆಯ ಬದಲಿಗೆ ಪ್ರವೇಶ ಮಟ್ಟದ ಮಾನ್ಯತೆ, ವಿಭಾಗೀಯ ಮಾನ್ಯತೆ ಇತ್ಯಾದಿಗಳನ್ನು ಈಗ ಆರಂಭಿಸಲಾಗಿದೆ. ಮಾನ್ಯತೆ ಪಡೆದ ಆಸ್ಪತ್ರೆಗಳಲ್ಲಷ್ಟೇ ನಗದುರಹಿತ ಆರೋಗ್ಯ ವಿಮಾ ಸೌಲಭ್ಯವಿರುವಂತೆ ಭಾರತೀಯ ವಿಮಾ ನಿಯಂತ್ರಣ ಮತ್ತು ವಿಕಾಸ ಪ್ರಾಧಿಕಾರದ ನಿಯಮಗಳನ್ನು ಜುಲೈ 2016ರಲ್ಲಿ ತಿದ್ದುವ ಮೂಲಕ ಎಲ್ಲ ಆಸ್ಪತ್ರೆಗಳ ಮೇಲೆ ಒತ್ತಡ ಹೇರಲಾಗುತ್ತಿದೆ. ಕರ್ನಾಟಕ ಜ್ಞಾನ ಆಯೋಗದ ಆರೋಗ್ಯ ನೀತಿಯ ಉಪಸಮಿತಿಯ ವರದಿಯಲ್ಲೂ ಎನ್‌ಎಬಿಎಚ್ ಮಾನದಂಡಗಳನ್ನು ಅಳವಡಿಸಬೇಕೆಂಬ ಸಲಹೆಗಳನ್ನು ಹಲವೆಡೆ ಸೇರಿಸಲಾಗಿದೆ. ವಿವಿಧ ಆರೋಗ್ಯ ಖಾತರಿ ಯೋಜನೆಗಳಲ್ಲಿ ಈ ಖಾಸಗಿ ಮಾನ್ಯತೆಗಳನ್ನು ಪಡೆದ ಆಸ್ಪತ್ರೆಗಳಿಗೆ ಹೆಚ್ಚು ಹಣವು ಸಂದಾಯವಾಗುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಈ ಆಸ್ಪತ್ರೆಗಳಿಗೆ ನೇರವಾಗಿ ಮಾನ್ಯತೆ ನೀಡಬೇಕೆಂಬ ಪ್ರಸ್ತಾಪವು ಕೆಪಿಎಂಇ ಸಮಿತಿಯೆದುರು ಬಂದಿತ್ತಾದರೂ, ವಿರೋಧದಿಂದಾಗಿ ಅಲ್ಲಿಗೇ ನಿಂತಿತ್ತು. ಹಾಗಿದ್ದರೂ, ಅದರ ಸನದೊಂದನ್ನು ಕಾಯಿದೆಯೊಳಗೆ ಸೇರಿಸಿ, ಇನ್ನೆಲ್ಲೂ ಇಲ್ಲದ ಮನ್ನಣೆಯನ್ನು ನೀಡಲಾಗಿದೆ.

ಖಾಸಗಿ ಮಾನ್ಯತೆಯನ್ನು ಹಾಗೋ ಹೀಗೋ ಹೇರಿ, ಆರೋಗ್ಯ ಸೇವೆಗಳನ್ನು ದುಬಾರಿಯಾಗಿಸಿ, ವೈದ್ಯರ ಕೆಲಸಗಳನ್ನು ಕ್ಲಿಷ್ಟಗೊಳಿಸಿ, ಸಣ್ಣ ಮತ್ತು ಮಧ್ಯಮ ಆಸ್ಪತ್ರೆಗಳನ್ನು ಹೊರಗುಳಿಸಿ ಮುಚ್ಚಿಸುವ ಈ ತಂತ್ರಗಳೆಲ್ಲ ಅರ್ಥವಾಗದಿದ್ದರೆ ಮುಂದಿನ ದಿನಗಳಲ್ಲಿ ಭಾರೀ ತೊಂದರೆಗಳಾಗುವುದು ನಿಶ್ಚಿತ.

ಇಲಾಜು 4 – ಎನ್ ಎಂ ಸಿ ಆರಂಭವಾದರೆ ಬಹುಶಃ ವೈದ್ಯರು ವೈದ್ಯರಾಗಿ ಉಳಿಯುವುದಿಲ್ಲ

(ಡಿಸೆಂಬರ್ 25, 2017)

ನಮ್ಮ ದೇಶದ ವ್ಯವಸ್ಥೆ ಹೇಗಾಗಿದೆ ಎಂದರೆ ಎಲ್ಲೆಡೆ ಭ್ರಷ್ಟರನ್ನು ನುಗ್ಗಿಸಿ ಸೂರೆಗೈದವರು ಇನ್ನಷ್ಟು ಭ್ರಷ್ಟವಾದ ಕುಟಿಲ ಯೋಜನೆಗಳನ್ನು ಹಾಕಿಕೊಳ್ಳಬಹುದು, ಅವಕ್ಕೆ ಭ್ರಷ್ಟಾಚಾರವನ್ನು ನಿಗ್ರಹಿಸುವ ನೆಪವನ್ನೂ, ದೇಶಪ್ರೇಮದ ಲೇಪವನ್ನೂ ಕೊಟ್ಟುಬಿಟ್ಟರೆ ಚಳುವಳಿಗಾರರಿಂದ ಹಿಡಿದು ವಿದ್ಯಾವಂತರೆನಿಸಿಕೊಳ್ಳುವ ವೈದ್ಯರವರೆಗೆ ಎಲ್ಲರನ್ನೂ ಮರುಳು ಮಾಡಬಹುದು, ಈ ಕುಟಿಲತೆಯನ್ನು ತೆರೆದಿಟ್ಟವರನ್ನು ದೇಶದ್ರೋಹಿಗಳೆಂದೂ ಬಿಂಬಿಸಬಹುದು.

ದೇಶದಲ್ಲಿಂದು ಹಳೆಯ ಸೋಂಕುಗಳು ಮರಳುತ್ತಿವೆ, ಹೊಸ ರೋಗಗಳು ಹೆಚ್ಚುತ್ತಿವೆ, ಒಳ್ಳೆಯ ವೈದ್ಯರ ಕೊರತೆಯಿದೆ, ಡಾಂಬರು-ಕಾಂಕ್ರೀಟಿಗೆ ಲಕ್ಷಗಟ್ಟಲೆ ಕೋಟಿ ಸುರಿಯುವ ಸರಕಾರಕ್ಕೆ ಜನರ ಆರೋಗ್ಯ ರಕ್ಷಣೆ ಬೇಡವಾಗಿದೆ, ಆಧುನಿಕ ತಂತ್ರಜ್ಞಾನ ಅತಿ ದುಬಾರಿಯಾಗಿದೆ, ಅವನ್ನು ಅಳವಡಿಸುವ ದೊಡ್ಡ ಖಾಸಗಿ ಆಸ್ಪತ್ರೆಗಳಿಗೆ ದೊಡ್ಡ ಲಾಭವೂ ಬೇಕಾಗಿದೆ, ಈ ಎಲ್ಲ ಕಾರಣಗಳಿಂದಾಗಿ, ಅಲ್ಪ ಸಂಬಳಕ್ಕೆ ದುಡಿಯಬಲ್ಲ ವೈದ್ಯರಿಗೆ ವಿಪರೀತ ಬೇಡಿಕೆಯುಂಟಾಗಿದೆ.

ವೈದ್ಯರ ಮತ್ತು ವೈದ್ಯಕೀಯ ಶಿಕ್ಷಣದ ನಿಯಂತ್ರಣವನ್ನು ವಶಪಡಿಸಿಕೊಂಡರೆ ಇದನ್ನು ಸಾಧಿಸುವುದು ಸುಲಭವಾಗುತ್ತದೆ. ಆದ್ದರಿಂದಲೇ, ಸ್ವಾಯತ್ತವಾಗಿದ್ದ ಭಾರತೀಯ ವೈದ್ಯಕೀಯ ಪರಿಷತ್ತನ್ನು (ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ – ಎಂಸಿಐ) ನಿರ್ನಾಮ ಮಾಡಿ, ಆಳುವವರ ಕೈಗೊಂಬೆಗಳಿಂದ ತುಂಬಿದ ಬದಲಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ (ನ್ಯಾಷನಲ್ ಮೆಡಿಕಲ್ ಕಮಿಶನ್ – ಎನ್‌ಎಂಸಿ) ಸ್ಥಾಪಿಸಲು ಪಕ್ಷಭೇದವಿಲ್ಲದೆ ಎಲ್ಲರೂ ಒಗ್ಗಟ್ಟಾಗಿದ್ದಾರೆ. ಲಂಚ ಪಡೆದವರಿಗೆ, ಲಂಚ ಕೊಟ್ಟವರಿಗೆ ಯಾವ ಶಿಕ್ಷೆಯೂ ಇಲ್ಲ, ಅವರ ಲಂಚದಾಟದಲ್ಲಿ ಕೆಟ್ಟ ಎಂಸಿಐಗೇ ಮರಣದಂಡನೆ! ಎಂಸಿಐ ಭ್ರಷ್ಟವಾಗಿದೆ ಎಂದ ಸಂಸತ್ತಿನ ಸ್ಥಾಯಿ ಸಮಿತಿ ಮತ್ತು ಸರ್ವೋಚ್ಚ ನ್ಯಾಯಾಲಯ ಕೂಡ ಭ್ರಷ್ಟರ ಬಗ್ಗೆ ಮೌನ ತಾಳಿ, ಎಂಸಿಐಯನ್ನೇ ಕಿತ್ತೊಗೆಯಬೇಕು ಎಂದಿರುವುದು ವಿಶೇಷವಲ್ಲವೇ?!

ಎಂಸಿಐ ಸ್ಥಾಪನೆಯಾದದ್ದು ಬ್ರಿಟಿಷರಾಳ್ವಿಕೆಯಲ್ಲಿ, 1934ರಲ್ಲಿ. ವೈದ್ಯರಿಂದಲೇ ಆಯ್ಕೆಯಾಗುವ ಈ ಸ್ವಾಯತ್ತ, ಸಾಂವಿಧಾನಿಕ ಸಂಸ್ಥೆಯ ಮೂಲ ಉದ್ದೇಶ ಆಧುನಿಕ ವೈದ್ಯವಿಜ್ಞಾನದಲ್ಲಿ ತರಬೇತಾದ ವೈದ್ಯರನ್ನು ನೋಂದಾಯಿಸಿ ಸರಕಾರದ ಮನ್ನಣೆ ನೀಡುವುದು, ಎಲ್ಲ ವೈದ್ಯರೂ ವೃತ್ತಿಸಂಹಿತೆಯನ್ನು ಪಾಲಿಸುವಂತೆ ನಿಗಾ ವಹಿಸುವುದು, ಮತ್ತು ತಪ್ಪಿತಸ್ಥರನ್ನು ಎಚ್ಚರಿಸುವುದು ಅಥವಾ ವೃತ್ತಿಯಿಂದಲೇ ತೆಗೆದು ಹಾಕುವುದು. ವಿಶ್ವದೆಲ್ಲೆಡೆ, ವೈದ್ಯವೃತ್ತಿಯಷ್ಟೇ ಅಲ್ಲ, ಅತಿ ಸಂಕೀರ್ಣವಾದ ವಕೀಲ, ಲೆಕ್ಕಪಾಲ ಮತ್ತಿತರ ವೃತ್ತಿಗಳೆಲ್ಲವೂ ಇಂತಹ ಸ್ವ-ನಿಯಂತ್ರಣದ ವ್ಯವಸ್ಥೆಯನ್ನೇ ಹೊಂದಿವೆ. ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾಗಳಲ್ಲಿ ವೈದ್ಯರಲ್ಲದವರಿಗೂ ಇಂತಹ ಸಂಸ್ಥೆಗಳಲ್ಲಿ ಸದಸ್ಯತನವಿದ್ದರೂ, ಶೇ. 70-90ರಷ್ಟು ಸದಸ್ಯರು ವೈದ್ಯರೇ ಆಗಿರುತ್ತಾರೆ. ಎಂಸಿಐಯಲ್ಲೀಗ 104 ವೈದ್ಯರು ಸದಸ್ಯರಾಗಿದ್ದು, ಅವರಲ್ಲಿ 71 ಸದಸ್ಯರು ಎಲ್ಲಾ ರಾಜ್ಯಗಳಿಂದ ಚುನಾಯಿತರಾದವರು. ಇನ್ನು ಬರಲಿರುವ ಎನ್‌ಎಂಸಿಯಲ್ಲಿ 20 ಸದಸ್ಯರಿರಲಿದ್ದು, ಕೇವಲ 5 ವೈದ್ಯರಷ್ಟೇ ಚುನಾಯಿತರಾಗಲಿದ್ದಾರೆ. ಸ್ವಾಯತ್ತತೆ, ಸ್ವ-ನಿಯಂತ್ರಣಗಳೆರಡೂ ನಾಶವಾಗಿ ವೈದ್ಯವೃತ್ತಿಯ ಸಕಲ ನಿಯಂತ್ರಣವೂ ಸರಕಾರದ ಕೈಗೊಂಬೆಗಳ ಪಾಲಾಗಲಿದೆ.

ವೈದ್ಯರನ್ನು ನಿಯಂತ್ರಿಸುವುದಷ್ಟೇ ಕೆಲಸವಾಗಿದ್ದ ಎಂಸಿಐ ತನ್ನಿಂತಾನೇ ಭ್ರಷ್ಟಗೊಂಡಿತೇ? ಖಾಸಗೀಕರಣದ ಯುಗ ಆರಂಭಗೊಂಡಾಗ, 1993ರಲ್ಲಿ, ವೈದ್ಯಕೀಯ ಶಿಕ್ಷಣವನ್ನು ನಿಯಂತ್ರಿಸುವ ಅಧಿಕಾರವನ್ನು ಎಂಸಿಐಗೆ ನೀಡಲಾಯಿತು. ನಂತರದಲ್ಲಿ, ಚುನಾವಣೆಗಳು ಹೆಸರಲ್ಲಷ್ಟೇ ಆಗಿ, ತಾಳಕ್ಕೆ ಕುಣಿಯುವವರೇ ಎಂಸಿಐಯೊಳಗೆ ತುಂಬಿದರು. ಭ್ರಷ್ಟರೆಂದು ಬಂಧಿಸಲ್ಪಟ್ಟವರು ಎಂಸಿಐಯೊಳಕ್ಕೆ ಮತ್ತೆ ನುಗ್ಗುವುದಕ್ಕೆ ಪ್ರಮುಖ ರಾಜಕೀಯ ಪಕ್ಷಗಳೆರಡೂ ನೆರವಾದವು. ಆ ಬಲದಲ್ಲೇ ರಾಜಕಾರಣಿಗಳು ಮತ್ತು ಹಣವಂತರು ಎಲ್ಲೆಡೆ ವೈದ್ಯಕೀಯ ಕಾಲೇಜುಗಳನ್ನು ತೆರೆದರು, ಮಾನದಂಡಗಳು ಸಡಿಲವಾಗುತ್ತಲೇ ಸಾಗಿದವು, ವೈದ್ಯ ಶಿಕ್ಷಣದ ಗುಣಮಟ್ಟ ಸೊರಗಿತು, ವೈದ್ಯರ ನಿಯಂತ್ರಣವೂ ದುರ್ಬಲವಾಯಿತು.

ಇವೇ ಪಕ್ಷಗಳ ಕೂಡಾಟದಲ್ಲಿ ಭ್ರಷ್ಟರನ್ನು ರಕ್ಷಿಸಿ, ಎಂಸಿಐಯನ್ನು ಶಿಕ್ಷಿಸುವ ಎನ್‌ಎಂಸಿ ಎಂಬ ಕುಟಿಲ ಯೋಜನೆ ಸಿದ್ಧಗೊಂಡಿದೆ. ವೈದ್ಯರ ಕೌಶಲ್ಯ ಹಾಗೂ ನೈತಿಕತೆಗಳನ್ನು ಗೌಣವಾಗಿಸಿ, ಅಲ್ಪ ಸಂಬಳಕ್ಕೆ ದುಡಿಯುವ ವೈದ್ಯರೆಂಬ ಮಾನವ ಯಂತ್ರಗಳನ್ನು ತಯಾರಿಸುವುದೇ ಇದರ ಉದ್ದೇಶವಾಗಿದೆ. ಈಗ ಮರ್ಯಾದೆಗಾದರೂ ಲಾಭರಹಿತ ದತ್ತಿ ಸಂಸ್ಥೆಗಳಷ್ಟೇ ವೈದ್ಯಕೀಯ ಕಾಲೇಜುಗಳನ್ನು ತೆರೆಯಬಹುದೆಂಬ ನಿಯಮವಿದ್ದರೆ, ಎನ್‌ಎಂಸಿ ನಂತರ ಲಾಭಕೋರರಿಗೂ ಅವಕಾಶವೊದಗಲಿದೆ. ಕಾಲೇಜು ತೆರೆಯುವ ಮೊದಲೇ ಸವಲತ್ತುಗಳಿರಬೇಕೆಂಬ ಶರತ್ತುಗಳೂ ಹೋಗಿ, ಕಾಗದದ ಘೋಷಣೆಯಷ್ಟೇ ಸಾಕೆನಿಸಲಿದೆ. ಪೂರ್ವಾನುಮತಿಯಿಲ್ಲದೆಯೇ ಸೀಟುಗಳನ್ನು ಹೆಚ್ಚಿಸಿಕೊಳ್ಳುವುದಕ್ಕೂ ಸಾಧ್ಯವಾಗಲಿದೆ, ಕಾಲೇಜುಗಳ ವಾರ್ಷಿಕ ಪರಿಶೀಲನೆಯೂ ಇಲ್ಲವಾಗಲಿದೆ. ಶುಲ್ಕದ ಮೇಲಿನ ನಿಯಂತ್ರಣವೂ ಹೋಗಿ, ಶೇ. 60ರಷ್ಟು ಸೀಟುಗಳಿಗೆ ಲಾಭಕೋರರೇ ಶುಲ್ಕ ನಿರ್ಧರಿಸಿಸುವಂತಾಗಲಿದೆ.

ವೈದ್ಯಕೀಯ ಕಾಲೇಜಿನೊಳಕ್ಕೆ ಹೊಕ್ಕುವುದು, ಮುಗಿಸಿ ಹೊರಹೋಗುವುದು, ಬಳಿಕ ಸ್ನಾತಕೋತ್ತರ ಪ್ರವೇಶ ಎಲ್ಲವೂ ಕೇಂದ್ರ ಸರಕಾರದ ಏಕಕಿಂಡಿಯಿಂದಲೇ ನಡೆಯಲಿವೆ. ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳು ನಡೆಸುವ ಎಲ್ಲಾ ಪರೀಕ್ಷೆಗಳೂ ಅಪ್ರಸ್ತುತವಾಗಲಿದ್ದು, ವೈದ್ಯಕೀಯ ಸೀಟುಗಳನ್ನು ಖರೀದಿಸುವವರು, ಮಾರುವವರು, ಪರೀಕ್ಷೆಗಳಲ್ಲಿ ಅನುತ್ತೀರ್ಣರಾದವರು ಎಲ್ಲರೂ ಈ ಕಿಂಡಿಯಲ್ಲೇ ಇಣುಕುವಂತಾಗಲಿದೆ. ಇದೇ ಸರಕಾರದ ನಿಗಾವಣೆಯಲ್ಲಾದ ಸ್ನಾತಕ-ಸ್ನಾತಕೋತ್ತರ ಪ್ರವೇಶ ಪರೀಕ್ಷೆಗಳೆಲ್ಲದರಲ್ಲೂ ಮೋಸ ಹಾಗೂ ಸ್ವಜನ ಪಕ್ಷಪಾತಗಳ ಆರೋಪಗಳೆದ್ದು, ಸಿಬಿಐ ವಿಚಾರಣೆಯೂ, ಉಚ್ಚ ನ್ಯಾಯಾಲಯಗಳಲ್ಲಿ ಮತ್ತು ಸರ್ವೋಚ್ಚ ನ್ಯಾಯಾಲಯದಲ್ಲಿ ದಾವೆಗಳೂ ಆದವು ಎಂದ ಮೇಲೆ ಈ ಏಕಕಿಂಡಿಯ ವ್ಯವಸ್ಥೆ ಹೇಗಿರಬಹುದೆಂದು ಊಹಿಸಿಕೊಳ್ಳಬಹುದು.

ಆಧುನಿಕ ರೋಗಗಳ ಪತ್ತೆ ಹಾಗೂ ಚಿಕಿತ್ಸೆಗೆ ಅನೇಕ ಹೊಸ ತಂತ್ರಜ್ಞಾನಗಳು ಲಭ್ಯವಾಗಿದ್ದರೂ ಅವನ್ನು ಬಳಸಬಲ್ಲ ವೈದ್ಯರ ಸಂಖ್ಯೆ ಹೆಚ್ಚಿಲ್ಲದಿರುವುದು ಹಣ ಹೂಡಿದ ಖಾಸಗಿ ಆಸ್ಪತ್ರೆಗಳಿಗೆ ಸಮಸ್ಯೆಯಾಗುತ್ತಿದೆ. ಅದಕ್ಕಾಗಿ, ಎಂಬಿಬಿಎಸ್ ಬಳಿಕ ಸ್ನಾತಕೋತ್ತರ ವ್ಯಾಸಂಗವಿಲ್ಲದೆಯೇ ನೇರವಾಗಿ ಕ್ಷಿಪ್ರ ತರಬೇತಿ ನೀಡುವುದು, ಜಿಲ್ಲಾಸ್ಪತ್ರೆಗಳಲ್ಲಿ ಡಿಎನ್‍ಬಿ ವ್ಯಾಸಂಗದ ಹೆಸರಲ್ಲಿ ಅರೆಬೆಂದ ತಜ್ಞರನ್ನು ತಯಾರಿಸುವುದು ಈ ಮಹಾ ಯೋಜನೆಯಲ್ಲಿವೆ. ನೀಟ್ ಪರೀಕ್ಷೆಯನ್ನು ವರ್ಷಕ್ಕೆರಡು ಬಾರಿ ನಡೆಸಿ, ವೈದ್ಯಕೀಯ ಪ್ರವೇಶವನ್ನೂ ದುಪ್ಪಟ್ಟಾಗಿಸುವ ಯೋಜನೆಯಿದೆಯೇ ಎಂದು ಕಾದು ನೋಡಬೇಕಷ್ಟೇ.

ಈಗ ಕಟ್ಟುನಿಟ್ಟಿನ ಎಂಬಿಬಿಎಸ್ ವ್ಯಾಸಂಗವನ್ನು ಪೂರೈಸಿದವರಷ್ಟೇ ಆಧುನಿಕ ವೈದ್ಯ ವೃತ್ತಿಯಲ್ಲಿ ತೊಡಗಬಹುದಾಗಿದ್ದು, ಎನ್‌ಎಂಸಿ ಅಡಿಯಲ್ಲಿ ಹೊಸದೊಂದು ಅನುಬಂಧವನ್ನು ಸೇರಿಸಿ, ಆಯುರ್ವೇದ, ಹೋಮಿಯೋಪತಿ ಮುಂತಾದ ಪದ್ಧತಿಗಳವರಿಗೂ ಆಧುನಿಕ ವೈದ್ಯರಾಗಿ ಮನ್ನಣೆ ನೀಡಲಾಗುತ್ತದೆ ಎನ್ನಲಾಗಿದೆ. ಹೃದಯದಿಂದ ರಕ್ತ ಚಲನೆಯಾಗುತ್ತದೆ ಎನ್ನುವುದನ್ನೇ ಒಪ್ಪದ ಆಯುರ್ವೇದವನ್ನು ಕಲಿತವರು ಮುಂದಿನ ದಿನಗಳಲ್ಲಿ ಹೃದ್ರೋಗಗಳ ಚಿಕಿತ್ಸೆಗೆ ಅತ್ಯಾಧುನಿಕ ಉಪಕರಣಗಳನ್ನು ಬಳಸತೊಡಗಿದರೆ ಅಚ್ಚರಿಯಿಲ್ಲ. ದೇಶಪ್ರೇಮಕ್ಕಾಗಿ ಅಷ್ಟನ್ನಾದರೂ ಮಾಡಬೇಡವೇ?

ಭ್ರಷ್ಟಾಚಾರಕ್ಕೆ ಏಕಕಿಂಡಿ, ದೇಶಪ್ರೇಮಕ್ಕೆ ಆಯುರ್ವೇದ ಹೃದಯ ತಜ್ಞರು ಎಂದಾದ ಬಳಿಕ, ವೈದ್ಯರನ್ನು ನಿಯಂತ್ರಿಸುವುದಕ್ಕೆ ವೈದ್ಯರಲ್ಲದವರಿಗೂ ಅವಕಾಶವಿರಬೇಡವೇ? ಹೊಸ ಎನ್‌ಎಂಸಿಯಲ್ಲಿ ಸರಕಾರಿ ಅಧಿಕಾರಿಗಳೂ ವೈದ್ಯರಲ್ಲದವರೂ ಬಹುಮತದ ಸದಸ್ಯರಾಗಿರಲಿದ್ದು, ವೈದ್ಯರು ಅವರ ಭಯದಡಿಯಲ್ಲೇ ವೃತ್ತಿ ನಿರ್ವಹಿಸಬೇಕಾಗಲಿದೆ; ಹಾಗಾದಾಗ, ವೈದ್ಯರನ್ನು ಅಲ್ಪ ಸಂಬಳದಲ್ಲಿ ಕುಣಿಸುವುದು ಸುಲಭವಾಗಲಿದೆ. ಈಗಿನ ವ್ಯವಸ್ಥೆಯಲ್ಲಿ ಪ್ರತೀ ರಾಜ್ಯದಲ್ಲೂ ಇರುವ ಚುನಾಯಿತ ವೈದ್ಯಕೀಯ ಪರಿಷತ್ತುಗಳು ವೈದ್ಯರ ವಿಚಾರಣೆ ನಡೆಸುತ್ತವೆ; ಎನ್‌ಎಂಸಿಯಲ್ಲಿ ರಾಜ್ಯಗಳಿಗೆ ಪ್ರಾತಿನಿಧ್ಯವಿಲ್ಲ ಮಾತ್ರವಲ್ಲ, ರಾಜ್ಯದಲ್ಲೂ ಕೈಗೊಂಬೆ ಆಯೋಗಗಳಾಗಿ, ಅವೆಲ್ಲವೂ ಎನ್‌ಎಂಸಿಗೇ ಅಧೀನವಾಗಲಿವೆ. ವಿಚಿತ್ರವೆಂದರೆ, 2012ರಲ್ಲಿ ತಂದಿದ್ದ ಆರೋಗ್ಯ ಸಂಪನ್ಮೂಲಗಳ ಆಯೋಗದ ಮಸೂದೆಯನ್ನು ರಾಜ್ಯಗಳಿಗೆ ಪ್ರಾತಿನಿಧ್ಯವಿಲ್ಲ ಎನ್ನುವ ಕಾರಣಕ್ಕೆ ಸಂಸತ್ತಿನ ಸ್ಥಾಯಿ ಸಮಿತಿಯು ತಿರಸ್ಕರಿಸಿತ್ತು, ಈಗ ಅದೇ ಸ್ಥಾಯಿ ಸಮಿತಿಯು ಅದನ್ನೇ ಒಪ್ಪಿಕೊಂಡಿದೆ!

ಎನ್‌ಎಂಸಿ ಬಂದ ಬಳಿಕ ದೇಶದ ಆರೋಗ್ಯ ಸೇವೆ ಬಹುಷಃ ಹೀಗಿರಬಹುದು: ವೈದ್ಯಕೀಯ ಅರ್ಹತೆ ಏನೆಂದು ನಿರ್ಧರಿಸುವುದು ಸರಕಾರಿ ಅಧಿಕಾರಿಗಳು, ಯಾವ ಆಸ್ಪತ್ರೆಗೆ ಹೋಗಬೇಕೆಂದು ನಿರ್ಧರಿಸುವುದು ವಿಮಾ ಕಂಪೆನಿಗಳು, ಯಾವ ಚಿಕಿತ್ಸೆ ಎಂದು ನಿರ್ಧರಿಸುವುದು ಖಾಸಗಿ ಆಸ್ಪತ್ರೆಗಳ ವ್ಯವಹಾರಾಧಿಕಾರಿಗಳು, ಚಿಕಿತ್ಸೆ ಹಾಗೂ ವೆಚ್ಚದ ಸರಿ-ತಪ್ಪುಗಳನ್ನು ನಿರ್ಣಯಿಸುವುದು ಚಳುವಳಿಗಾರರು, ಇವನ್ನೆಲ್ಲ ಪಾಲಿಸಿ ರೋಗಿಗಳಿಗೆ ತೊಂದರೆಯಾದರೆ ಏಟು ತಿಂದು, ವೈದ್ಯರಲ್ಲದವರಿಂದ ವಿಚಾರಣೆಗೊಳಗಾಗುವ ಪಾಡು ವೈದ್ಯರದ್ದು. ಈ ‘ಒಳ್ಳೆಯ ದಿನ’ಗಳಿಗಾಗಿ ಚಳುವಳಿಗಾರರೂ, ಖಾಸಗಿ ಆಸ್ಪತ್ರೆಗಳ ಮಾಲಕರೂ ಒಟ್ಟಾಗಿ ಎದುರು ನೋಡುತ್ತಿದ್ದಾರೆ.

ಇಲಾಜು 3 – ಕರ್ನಾಟಕದಲ್ಲಿ ಘಟಿಸುತ್ತಿರುವ ತಾಯಂದಿರ ಸಾವಿಗೆ ಹೊಣೆ ಯಾರು?

(ಡಿಸೆಂಬರ್ 11, 2017)

ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಹೆರಿಗೆಯ ಬಳಿಕ ತಾಯಂದಿರು ಅತಿ ಹೆಚ್ಚು ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿರುವುದು ಇಡೀ ವ್ಯವಸ್ಥೆಯ ಅಕ್ಷಮ್ಯ ನಿಷ್ಕಾಳಜಿಯನ್ನೂ, ರಾಷ್ಟ್ರೀಯ ಆರೋಗ್ಯ ಅಭಿಯಾನದಂತಹ ಕಾರ್ಯಕ್ರಮಗಳ ವೈಫಲ್ಯವನ್ನೂ ಎತ್ತಿ ತೋರಿಸುತ್ತದೆ.

ವಿಶ್ವದಲ್ಲೀಗ ವರ್ಷವೊಂದಕ್ಕೆ ಸುಮಾರು 13 ಕೋಟಿ ಮಕ್ಕಳು ಜನಿಸುತ್ತಾರೆ, ಸುಮಾರು 280000 ತಾಯಂದಿರು ಹೆರಿಗೆ ಸಂಬಂಧಿತ ಕಾರಣಗಳಿಂದ ಸಾವನ್ನಪ್ಪುತ್ತಾರೆ. ಅಂದರೆ ಪ್ರತೀ ಲಕ್ಷ ಸಜೀವ ಜನನಗಳಾದಾಗ ಸುಮಾರು 200ರಷ್ಟು ತಾಯಂದಿರು ಪ್ರಾಣ ಕಳೆದುಕೊಳ್ಳುತ್ತಾರೆ. ಇವುಗಳಲ್ಲಿ ಐದರಲ್ಲೊಂದು (55000) ಸಾವುಗಳು ನಮ್ಮ ದೇಶದಲ್ಲೇ ಆಗುತ್ತವೆ, ಲಕ್ಷ ಜನನಗಳಲ್ಲಿ ತಾಯಂದಿರ ಮರಣ ಪ್ರಮಾಣವು 170ರಷ್ಟಾಗುತ್ತದೆ. ಅತ್ಯಂತ ಹಿಂದುಳಿದ ದೇಶಗಳಲ್ಲಿ ಲಕ್ಷ ಜನನಗಳಿಗೆ ತಾಯಂದಿರ ಮರಣದ ಪ್ರಮಾಣವು 430 ರಷ್ಟಿದ್ದರೆ, ಅತ್ಯಂತ ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿ ಕೇವಲ 12 ರಷ್ಟಿದೆ. ನಮ್ಮ ದೇಶದೊಳಗೂ, ಹಿಂದುಳಿದ ಅಸ್ಸಾಂ, ಬಿಹಾರ್, ಮಧ್ಯ ಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ, ಒಡಿಶಾಗಳಲ್ಲಿ ತಾಯಂದಿರ ಮರಣ ಪ್ರಮಾಣವು 210-300ರಷ್ಟಿದ್ದರೆ, ಕೇರಳ, ತಮಿಳುನಾಡು, ಆಂಧ್ರಗಳಲ್ಲಿ ಕೇವಲ 60-80ರಷ್ಟಿದೆ.

ಹೂಡಿಕೆಯಲ್ಲೂ, ಅಭಿವೃದ್ಧಿಯಲ್ಲೂ ದೇಶದಲ್ಲೇ ಮುಂಚೂಣಿಯಲ್ಲಿದೆಯೆಂದು ಕೊಚ್ಚಿಕೊಳ್ಳುವ ಕರ್ನಾಟಕವು ತಾಯಂದಿರ ಮರಣ ಪ್ರಮಾಣದಲ್ಲೂ ದಕ್ಷಿಣ ಭಾರತದಲ್ಲಿ ಅಗ್ರ ಸ್ಥಾನದಲ್ಲಿದೆ. ಕಳೆದ 3 ವರ್ಷಗಳಲ್ಲಿ ಉಡುಪಿ, ಬೆಂಗಳೂರು ನಗರ, ಮೈಸೂರು ಜಿಲ್ಲೆಗಳಲ್ಲಿ ತಾಯಂದಿರ ಸಾವುಗಳು ಗಣನೀಯವಾಗಿ ಇಳಿಕೆಯಾಗಿದ್ದರೂ, ಯಾದಗೀರ್, ರಾಯಚೂರು, ಕೊಪ್ಪಳ, ಬಳ್ಳಾರಿ, ಚಿಕ್ಕಬಳ್ಳಾಪುರ, ಧಾರವಾಡ, ಬೆಳಗಾವಿ, ವಿಜಯಪುರ, ಕಲಬುರ್ಗಿ, ಕೊಡಗು, ಚಾಮರಾಜನಗರ, ಚಿತ್ರದುರ್ಗ ಜಿಲ್ಲೆಗಳಲ್ಲಿ ಹೆಚ್ಚೇ ಇದೆ, ಶೇ. 60ರಷ್ಟು ಸಾವುಗಳು ಈ ಜಿಲ್ಲೆಗಳಲ್ಲೇ ಆಗಿವೆ.

ಈ ಬಗ್ಗೆ ನಡೆಸಲಾಗಿರುವ ಹಲವು ಅಧ್ಯಯನಗಳನುಸಾರ, ಹೆರಿಗೆಯ ಸಮಸ್ಯೆಗಳಿಂದ ಸಾವನ್ನಪ್ಪಿರುವವರಲ್ಲಿ ಶೇ. 75-80ರಷ್ಟು 20-29 ವರ್ಷ ವಯಸ್ಸಿನವರು, ಶೇ. 5ರಷ್ಟು 16-19 ವಯಸ್ಸಿನವರು. ಕೆಎಸ್‌ಎಚ್‌ಆರ್‌ಸಿ ನಡೆಸಿರುವ ವಿಶ್ಲೇಷಣೆಯನುಸಾರ, 2015-16ರಲ್ಲಾಗಿರುವ 635 ಪ್ರಕರಣಗಳಲ್ಲಿ, 260 ಸಾವುಗಳು ಹೆರಿಗೆಯಾದ 24 ಗಂಟೆಗಳೊಳಗೆ ಸಂಭವಿಸಿವೆ, 196 ಸಾವುಗಳು ಎರಡರಿಂದ ಮೂವತ್ತು ದಿನಗಳಲ್ಲಾಗಿವೆ, ಹಾಗೂ 107 ಗರ್ಭಿಣಿಯರು ಹೆರಿಗೆಗೆ ಮೊದಲೇ ಸಾವನ್ನಪ್ಪಿದ್ದಾರೆ. ಆಸ್ಪತ್ರೆಗೆ ಸಾಗುತ್ತಿರುವಾಗಲೇ 128 ಮಹಿಳೆಯರು ಮೃತರಾದರೆ, 72 ಸಾವುಗಳು ಮನೆಗಳಲ್ಲೇ ಆಗಿವೆ; ಅಂದರೆ ಮೂರರಲ್ಲೊಬ್ಬರು ಯಾವ ವೈದ್ಯಕೀಯ ಆರೈಕೆಯೂ ಇಲ್ಲದೆ ಪ್ರಾಣ ಕಳೆದುಕೊಂಡಿದ್ದಾರೆ.

ಹೆರಿಗೆಯ ನಂತರ ತೀವ್ರ ರಕ್ತಸ್ರಾವವು ಹೆಚ್ಚಿನ ಸಾವುಗಳಿಗೆ ಕಾರಣವಾಗಿದ್ದರೆ, ರಕ್ತದ ಏರೊತ್ತಡ, ಹೃದಯದ ವೈಫಲ್ಯ ಹಾಗೂ ಸೋಂಕುಗಳು ಇತರ ಪ್ರಮುಖ ಕಾರಣಗಳಾಗಿವೆ. ಹೆರಿಗೆಯ ಬಳಿಕ ತೀವ್ರ ರಕ್ತಸ್ರಾವವಾಗುವುದಕ್ಕೆ ಹಲವು ಕಾರಣಗಳಿದ್ದು, ಗರ್ಭಕೋಶವು ಸಂಕುಚಿಸದಿರುವುದು, ಮಾಸು ಹೊರಬರದೇ ಉಳಿದಿರುವುದು, ನಿಧಾನವಾದ ಹೆರಿಗೆ, ತಾಯಿಯ ಬೊಜ್ಜು, ಮಗುವಿನ ತೂಕ ಹೆಚ್ಚಿರುವುದು ಪ್ರಮುಖವಾಗಿವೆ. ಗರ್ಭಿಣಿಯಿದ್ದಾಗಲೇ ರಕ್ತದ ಕೊರತೆಯಿದ್ದವರಿಗೆ, ಹೆರಿಗೆಯಲ್ಲಾಗುವ ರಕ್ತಸ್ರಾವವು ಮಾರಕವಾಗುತ್ತದೆ; ರಾಜ್ಯದಲ್ಲಿ ಹೀಗೆ ಮೃತಪಟ್ಟವರಲ್ಲಿ ಶೇ. 85ರಷ್ಟು ಮಹಿಳೆಯರು ಗರ್ಬಿಣಿಯರಿದ್ದಾಗಲೇ ರಕ್ತದ ಕೊರತೆಯಿಂದ ಬಳಲುತ್ತಿದ್ದರೆಂದು ಅಧ್ಯಯನಗಳು ತೋರಿಸಿವೆ. ಜುಲೈ 2017ರಲ್ಲಿ ಪ್ರಕಟವಾಗಿರುವ ಕೇಂದ್ರ ಮಹಾಲೆಕ್ಕಪಾಲರ ವರದಿಯಂತೆ, ಕರ್ನಾಟಕದಲ್ಲಿ ಶೇ. 3.7ರಷ್ಟು ಗರ್ಭಿಣಿಯರು ತೀವ್ರ ರಕ್ತಹೀನತೆಯಿಂದ ಬಳಲುತ್ತಿದ್ದು, ಇದು ದೇಶದಲ್ಲೇ ಅತ್ಯಧಿಕವಾಗಿದೆ.

ಗರ್ಭ ಹಾಗೂ ಹೆರಿಗೆಯ ಕಾರಣದಿಂದಾಗುವ ಸಾವುಗಳನ್ನು ತಡೆಯಬೇಕಾದರೆ ಹಲವು ಹಂತಗಳಲ್ಲಿ ಕ್ರಮ ಕೈಗೊಳ್ಳಬೇಕು, ಸಾಮಾಜಿಕ, ಆರ್ಥಿಕ, ವೈದ್ಯಕೀಯ ಸಂಪನ್ಮೂಲಗಳೆಲ್ಲವೂ ಜೊತೆಗೂಡಿ ಬಳಕೆಯಾಗಬೇಕು. ಸಣ್ಣ ವಯಸ್ಸಿನಲ್ಲಿ ಗರ್ಬಿಣಿಯಾಗದಂತೆ ತಡೆಯುವುದು ಹಾಗೂ ಹದಿಹರೆಯದಿಂದಲೇ ಹೆಣ್ಮಕ್ಕಳಲ್ಲಿ ರಕ್ತಹೀನತೆಯನ್ನು ತಡೆಯುವುದು ಅತಿ ಮುಖ್ಯ. ಕನಿಷ್ಠ ನಾಲ್ಕು ಪ್ರಸವಪೂರ್ವ ಪರೀಕ್ಷೆಗಳು, ಆಸ್ಪತ್ರೆಗಳಲ್ಲೇ ಹೆರಿಗೆ, ತಪ್ಪಿದಲ್ಲಿ ಮನೆಯಲ್ಲಿ ಹೆರಿಗೆಗೆ ತರಬೇತಾದ ಸಿಬಂದಿಯ ನೆರವು, ಹೆರಿಗೆಯ ಬಳಿಕ ತಾಯಿ-ಮಗುವಿನ ಆರೈಕೆ ಇವೆಲ್ಲವನ್ನು ಒದಗಿಸುವುದೂ ಅತ್ಯಗತ್ಯ.

ಇವನ್ನೆಲ್ಲ ಮಾಡುವುದಕ್ಕೆ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಕಳೆದೈದು ವರ್ಷಗಳಲ್ಲಿ ಒಂದು ಲಕ್ಷ ಕೋಟಿಗೂ ಹೆಚ್ಚು ಹಣವನ್ನು ಒದಗಿಸಲಾಗಿದೆ. ಹೆಣ್ಮಕ್ಕಳಲ್ಲಿ ರಕ್ತಹೀನತೆಯನ್ನು ತಡೆಯುವುದಕ್ಕಾಗಿ ಕಬ್ಬಿಣಾಂಶವುಳ್ಳ ಮಾತ್ರೆಗಳನ್ನು ನೀಡುವ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮ, ಗರ್ಭಿಣಿಯರಿಗಾಗಿ ಜನನಿ ಸುರಕ್ಷಾ ಯೋಜನೆ, ತಾಯಿ ಭಾಗ್ಯ, ಮಾತೃ ಪೂರ್ಣ, ಪ್ರಸೂತಿ ಆರೈಕೆ ಇತ್ಯಾದಿ ಕಾರ್ಯಕ್ರಮಗಳನ್ನು ರಾಜ್ಯದಲ್ಲೂ ಹಮ್ಮಿಕೊಳ್ಳಲಾಗಿದೆ. ಹಾಗಿದ್ದರೂ ಕೆಲವು ಜಿಲ್ಲೆಗಳಲ್ಲಿ ಇಷ್ಟೊಂದು ಸಾವುಗಳಾಗುತ್ತಿರುವುದೇಕೆ?

ಕೇಂದ್ರದ ಮಹಾಲೆಕ್ಕಪಾಲರ ವರದಿಯಲ್ಲೇ ಅದಕ್ಕೆ ಉತ್ತರವಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಪಡೆದ ಹಣದ ಬಳಕೆಯಲ್ಲಿ 2013-14, 14-15, 15-16ರಲ್ಲಿ ಕರ್ನಾಟಕದಲ್ಲಿ ಶೇ. 42, 47 ಹಾಗೂ 50ರಷ್ಟು ಕೊರತೆಯಾಗಿದೆ. ರಸ್ತೆ-ಸೇತುವೆಗಳಿಗೆ ಹಣ ಸುರಿಯುವುದಕ್ಕಿರುವ ಅತ್ಯುತ್ಸಾಹವು ತಾಯಂದಿರ ಜೀವವುಳಿಸುವುದರಲ್ಲಿ ಕಾಣುವುದಿಲ್ಲ! ನಾಲ್ಕು ಪ್ರಸವಪೂರ್ವ ಪರೀಕ್ಷೆಗಳ ಬಗ್ಗೆ ರಾಜ್ಯದಲ್ಲಿ ಮಾಹಿತಿಯೇ ಲಭ್ಯವಿಲ್ಲವೆಂದು ವರದಿಯಲ್ಲಿ ಹೇಳಿರುವುದು ಕೂಡ ಸರಕಾರದ ನಿರ್ಲಕ್ಷ್ಯಕ್ಕೆ ಪುರಾವೆಯಾಗಿದೆ. ರಾಜ್ಯದಲ್ಲಿ ಶೇ. 88ರಷ್ಟು ಗರ್ಭಿಣಿಯರಿಗೆ ಕಬ್ಬಿಣ-ಫೋಲಿಕ್ ಆಮ್ಲಗಳ ಮಾತ್ರೆಗಳನ್ನು ನೀಡಲಾಗಿದ್ದರೂ, ರಕ್ತಹೀನತೆಯು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಅದರಲ್ಲಿ ಹೇಳಿರುವುದು ಈ ಮಾತ್ರೆಗಳು ಹೆಣ್ಮಕ್ಕಳು ಹಾಗೂ ಗರ್ಭಿಣಿಯರ ಹೊಟ್ಟೆಗಳನ್ನು ಸೇರುತ್ತಿಲ್ಲವೆನ್ನುವುದನ್ನೇ ಸೂಚಿಸುತ್ತವೆ. ಶೇ. 38ರಷ್ಟು ಹೆರಿಗೆಗಳು ಮನೆಗಳಲ್ಲೇ ಆಗುತ್ತಿವೆ, ಹೆರಿಗೆಯ ವೇಳೆ ಸಮಸ್ಯೆಗಳ ಪ್ರಮಾಣವು 2011ರಲ್ಲಿ ಶೇ. 4.4 ಇದ್ದುದು, ಏರುತ್ತಲೇ ಸಾಗಿ 2016ರಲ್ಲಿ ಶೇ. 7.6ನ್ನು ತಲುಪಿದೆ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಪ್ರಸೂತಿ ಹಾಗೂ ಅರಿವಳಿಕೆ ತಜ್ಞರ ಕೊರತೆಯು ಕ್ರಮವಾಗಿ ಶೇ. 48 ಮತ್ತು 84ರಷ್ಟಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಧಾರವಾಡ ಹಾಗೂ ಬೆಳಗಾವಿಗಳಂತಹ ಅಷ್ಟೊಂದು ಹಿಂದುಳಿಯದ ಜಿಲ್ಲೆಗಳಲ್ಲೂ ತಾಯಿ ಮರಣವು ಹೆಚ್ಚಿರುವುದು ಆತಂಕ ಹುಟ್ಟಿಸುತ್ತದೆ. ಅಲ್ಲಿನ ಹಿರಿಯ ಪ್ರಸೂತಿ ತಜ್ಞರನುಸಾರ, ಗ್ರಾಮೀಣ ಭಾಗಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿರುವ ನಕಲಿ ವೈದ್ಯರಿಂದಾಗಿ ಗರ್ಭಿಣಿಯರು ಸೂಕ್ತ ಪರೀಕ್ಷೆ ಹಾಗೂ ಸಲಹಾ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಸುಸಜ್ಜಿತ ಆಸ್ಪತ್ರೆಗಳು ಜಿಲ್ಲಾ ಕೇಂದ್ರಗಳಲ್ಲಷ್ಟೇ ಇರುವುದು, ಹಳ್ಳಿಗಳಿಂದ ಅವನ್ನು ತಲುಪುವುದಕ್ಕೆ ಸರಿಯಾದ ರಸ್ತೆಗಳು ಹಾಗೂ ವಾಹನಗಳ ಸೌಕರ್ಯವಿಲ್ಲದಿರುವುದು ಗರ್ಭಿಣಿಯರ ಪಾಲಿಗೆ ಕಂಟಕಗಳಾಗುತ್ತಿವೆ. ಗರ್ಭಿಣಿಯರಲ್ಲಿ ಗಂಭೀರ ಸಮಸ್ಯೆಗಳನ್ನು ಗುರುತಿಸುವಲ್ಲಿ ಮತ್ತು ಅವರನ್ನು ಸರಿಯಾದ ಆಸ್ಪತ್ರೆಗೆ ಕಳಿಸುವಲ್ಲಿ ಗೊಂದಲ ಹಾಗೂ ವಿಳಂಬವಾಗುತ್ತಿರುವುದು ದಾರಿಯಲ್ಲಿ ಅಥವಾ ಆಸ್ಪತ್ರೆ ತಲುಪಿದ ಕೆಲವೇ ಹೊತ್ತಲ್ಲಿ ಸಾವನ್ನಪ್ಪುವುದಕ್ಕೆ ಕಾರಣವಾಗುತ್ತಿವೆ. ಜೊತೆಗೆ, 108 ಆರೋಗ್ಯ ಕವಚದ ರುಗ್ಣವಾಹಕಗಳು ತೊಂದರೆಗೀಡಾಗಿರುವ ಗರ್ಭಿಣಿಯರನ್ನು ಸುಸಜ್ಜಿತ ಹೆರಿಗೆ ಆಸ್ಪತ್ರೆಗಳಿಗೆ ಒಯ್ಯದೆ ತಮಗಿಷ್ಟ ಬಂದಲ್ಲಿಗೆ ಒಯ್ಯುತ್ತಿರುವುದು ಕೂಡ ಜೀವಹಾನಿಗೆ ಕಾರಣವಾಗುತ್ತಿದೆ ಎಂದು ಈ ತಜ್ಞರು ಬೇಸರಿಸುತ್ತಾರೆ. ಹೋಲಿಕೆಗಾಗಿ, ಬೆಂಗಳೂರು, ಮೈಸೂರು, ಉಡುಪಿಗಳಲ್ಲಿ ತಾಯಿ ಮರಣಗಳು ಅತಿ ಕಡಿಮೆಯಿರುವುದಕ್ಕೆ ಸುಸಜ್ಜಿತ ಆಸ್ಪತ್ರೆಗಳು ಹತ್ತಿರದಲ್ಲಿ, ಸುಲಭದಲ್ಲಿ ಲಭ್ಯವಿರುವುದೇ ಮುಖ್ಯ ಕಾರಣವಾಗಿದೆ.

ರಾಜ್ಯದಲ್ಲಿ ತಾಯಂದಿರ ಸಾವುಗಳನ್ನು ತಡೆಯಬೇಕಿದ್ದರೆ, ಮೇಲೆ ಹೇಳಿರುವ ಲೋಪಗಳನ್ನು ಕೂಡಲೇ ಸರಿಪಡಿಸುವ ಜೊತೆಗೆ, ಕೆಲವು ವಿನೂತನ ಪ್ರಯತ್ನಗಳನ್ನೂ ಮಾಡಬಹುದು. ರಾಜ್ಯದ ಒಳಭಾಗಗಳಲ್ಲಿ ಪ್ರಸೂತಿ ಹಾಗೂ ಅರಿವಳಿಕೆ ತಜ್ಞರ ಗಂಭೀರ ಕೊರತೆಯನ್ನು ನೀಗಿಸುವುದಕ್ಕಾಗಿ ಸರಕಾರಿ ವೈದ್ಯಾಧಿಕಾರಿಗಳಿಗೆ ನೀಡುತ್ತಿರುವ ತುರ್ತು ಚಿಕಿತ್ಸಾ ತರಬೇತಿಯನ್ನು ಆ ಪ್ರದೇಶಗಳಲ್ಲಿ ದುಡಿಯುತ್ತಿರುವ ಖಾಸಗಿ ವೈದ್ಯರಿಗೂ ನೀಡಬಹುದು. ಎಲ್ಲಾ ಸರಕಾರಿ ಆರೋಗ್ಯ ಕೇಂದ್ರಗಳಲ್ಲಿ ಹೆರಿಗೆ ಸೌಲಭ್ಯಗಳನ್ನು ಸುಸಜ್ಜಿತಗೊಳಿಸುವುದಕ್ಕೆ ಆದ್ಯತೆ ನೀಡಲೇ ಬೇಕು. ಅದು ಸಾಧ್ಯವಾಗದೆಡೆ ಪ್ರಸೂತಿ ಹಾಗೂ ಅರಿವಳಿಕೆ ತಜ್ಞರಿರುವ ಸಣ್ಣ ಖಾಸಗಿ ಆಸ್ಪತ್ರೆಗಳನ್ನು ಸುಸಜ್ಜಿತಗೊಳಿಸಲು ನೆರವಾಗಬಹುದು, ಅಥವಾ ಒಪ್ಪಂದದ ಮೇಲೆ ಬಳಸಿಕೊಳ್ಳಬಹುದು.

ಹಣವನ್ನು ಖಜಾನೆಯಲ್ಲಿಟ್ಟು, ಕಾನೂನನ್ನು ಕಾಗದದಲ್ಲಿಟ್ಟು, ಬಾಯಲ್ಲಿ ಹೇಳಿದ್ದನ್ನು ಅಲ್ಲಿಗೇ ಬಿಟ್ಟರೆ ತಾಯಂದಿರ ಜೀವವುಳಿಸಲಾಗದು.

ಇಲಾಜು 2 – ಆರೋಗ್ಯ ಸೇವೆ ಬಲಪಡಿಸಲು ವೈದ್ಯರಿಗೆ ಬೇಕಿದೆ ಜನಬೆಂಬಲ

(ನವೆಂಬರ್ 28, 2017)

ಎಲ್ಲರಿಗೂ ಅತ್ಯಗತ್ಯವಾದ ಆರೋಗ್ಯ ಸೇವೆಗಳು ಬಯಸಿದಂತೆ ದೊರೆಯುತ್ತಿಲ್ಲ ಎನ್ನುವ ಹತಾಶೆ ಕೆಪಿಎಂಇ ಮಸೂದೆಯ ಬಗ್ಗೆ ನಡೆದ ಚರ್ಚೆಗಳಲ್ಲಿ ಎದ್ದು ತೋರುತ್ತಿತ್ತು. ವಿಪರ್ಯಾಸವೆಂದರೆ, ರಾಜ್ಯದಲ್ಲಿ ಶೇ. 80ರಷ್ಟು ಆರೋಗ್ಯ ಸೇವೆಗಳನ್ನು ಒದಗಿಸುತ್ತಿರುವ ಖಾಸಗಿ ವೈದ್ಯರನ್ನೇ ಅದಕ್ಕೆ ಹೊಣೆಯಾಗಿಸಿ, ಮನಬಂದಂತೆ ದೂಷಿಸಲಾಯಿತು, ಸೇವೆಯೆಂದರೇನೆಂದು ಬೋಧಿಸಲಾಯಿತು. ಖರ್ಚು ಮಾಡಿ ಆಸ್ಪತ್ರೆಗಳನ್ನು ನಡೆಸುವ ಕರ್ತವ್ಯ ವೈದ್ಯರದು, ಅದರ ದರ ನಿಗದಿ ಮಾಡುವ ಹಕ್ಕು ಸರಕಾರದ್ದು ಎಂಬರ್ಥದ ಕಾನೂನು ಜನಪರವಾಗಿದೆ ಎಂದು ಕೂಗಲಾಯಿತು. ವೈದ್ಯ ವೃತ್ತಿ ಎಂದರೆ ಏನು, ವೈದ್ಯಕೀಯ ಸೇವೆ ಎಂದರೆ ಏನು, ಆರೋಗ್ಯ ಸೇವೆಗಳನ್ನು ಒದಗಿಸುವ ಜವಾಬ್ದಾರಿ ಯಾರದು, ವೈದ್ಯನಾದವನು ಸಮಾಜಕ್ಕೆ ಕೊಡಬೇಕಾದುದೇನು, ಸಮಾಜವು ವೈದ್ಯನಿಗೆ ಕೊಡಬೇಕಾದುದೇನು, ವೈದ್ಯ ಮತ್ತು ರೋಗಿಯ ನಡುವಿನ ಸಂಬಂಧ ಹೇಗಿರಬೇಕು ಇತ್ಯಾದಿ ಮೂಲಭೂತ ಪ್ರಶ್ನೆಗಳ ಬಗ್ಗೆ ನಿರುದ್ವಿಗ್ನವಾದ, ಸಮಚಿತ್ತದ ಚರ್ಚೆಗಳು ಎಲ್ಲೂ ಕಾಣಲಿಲ್ಲ.

ವೈದ್ಯಕೀಯ ಸೇವೆ ಎಂದರೇನು? ಸಚಿವರಾದಿಯಾಗಿ ಕೆಲವರು ಅಪ್ಪಣೆ ಕೊಡುವಂತೆ, ಉಚಿತವಾಗಿ ಅಥವಾ ಅತಿ ಕಡಿಮೆ ಶುಲ್ಕ ಯಾ ಸಂಬಳ ಪಡೆದು ಮದ್ದು ಕೊಡುವುದೇ ವೈದ್ಯಕೀಯ ಸೇವೆಯೇ? ಅಥವಾ, ತನ್ನ ವೈಯಕ್ತಿಕ ಸುಖ-ದುಃಖಗಳೆಲ್ಲವನ್ನೂ ಬದಿಗಿಟ್ಟು ತನ್ನ ವೃತ್ತಿಗೇ ಪ್ರಾಶಸ್ತ್ಯ ನೀಡಿ, ರೋಗಿಯ ಸಮಸ್ಯೆಗಳನ್ನು ಸರಿಯಾಗಿ ಅರ್ಥೈಸಿಕೊಂಡು, ನಿಖರವಾಗಿ ರೋಗ ಪತ್ತೆ ಮಾಡಿ, ಸೂಕ್ತವಾದ ಆರೈಕೆ ಮಾಡಿ, ರೋಗಿ ಹಾಗೂ ಮನೆಯವರ ವಿಶ್ವಾಸವನ್ನು ಗೆದ್ದು, ಅವರೆಲ್ಲರಿಗೆ ಆರೋಗ್ಯ ರಕ್ಷಣೆಯ ಮಾರ್ಗದರ್ಶಕನಾಗಿರುವುದು ಸೇವೆಯೇ?

ಒಂದು ವೃತ್ತಿಗೆ ಸಲ್ಲಬೇಕಾದ ಸಂಭಾವನೆಯು, ಅದನ್ನು ಕಲಿತು ಮೈಗೂಡಿಸಿಕೊಳ್ಳುವುದಕ್ಕೆ ತಗಲುವ ಸಮಯ ಮತ್ತು ಶ್ರಮ, ನಿಭಾಯಿಸುವುದಕ್ಕೆ ಅಗತ್ಯವಿರುವ ಧೈರ್ಯ, ಶ್ರದ್ಧೆ, ಕೌಶಲ್ಯ, ಮನೋದೈಹಿಕ ಸಾಮರ್ಥ್ಯ, ಆ ವೃತ್ತಿಯವರು ಉಳಿಸಿಕೊಳ್ಳಬೇಕಾದ ನಂಬಿಕೆ ಮತ್ತು ಗೌರವ ಇವೆಲ್ಲವನ್ನೂ ಅವಲಂಬಿಸಿರುತ್ತದೆ. ವೈದ್ಯವೃತ್ತಿಯಲ್ಲಿ ಇವೆಲ್ಲವೂ ಅತ್ಯುನ್ನತವಾಗಿರಬೇಕೆನ್ನುವ ಕಾರಣಕ್ಕಾಗಿಯೇ ಎಲ್ಲಾ ಕಾಲಗಳಲ್ಲಿ, ಎಲ್ಲಾ ದೇಶಗಳಲ್ಲಿ ವೈದ್ಯವೃತ್ತಿಯ ಸಂಭಾವನೆಗಳು ಅತ್ಯುನ್ನತ ಮಟ್ಟದಲ್ಲಿರುವುದನ್ನು ಕಾಣಬಹುದು. ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿರುವ ಸಮಾಜವಾದಿ ಕ್ಯೂಬಾದಿಂದ ಹಿಡಿದು, ಆರೋಗ್ಯ ರಕ್ಷಣೆಯಲ್ಲಿ ಅತ್ಯುನ್ನತ ಮಟ್ಟದಲ್ಲಿರುವ ಡೆನ್ಮಾರ್ಕ್ ಹಾಗೂ ಅತಿ ಹೆಚ್ಚು ವ್ಯಯಿಸುವ ಅಮೆರಿಕಾಗಳವರೆಗೆ ಎಲ್ಲೆಡೆ ವೈದ್ಯರ ಸಂಭಾವನೆಯು ಇತರೆಲ್ಲಾ ಉದ್ಯೋಗಗಳ ಸರಾಸರಿ ಸಂಬಳಕ್ಕಿಂತ ಒಂದೂವರೆಯಿಂದ ಎರಡು ಪಟ್ಟು ಹೆಚ್ಚಿದೆ. ಅತ್ಯಂತ ಕ್ಲಿಷ್ಟವಾದ ತಮ್ಮ ವೃತ್ತಿಯನ್ನು ವೈದ್ಯರು ನಿರಾತಂಕವಾಗಿ ನಡೆಸಬೇಕಿದ್ದರೆ ಅವರ ವೈಯಕ್ತಿಕ ಜೀವನವನ್ನು ನಿರಾತಂಕವಾಗಿರಿಸುವ ಜವಾಬ್ದಾರಿಯು ಸಮಾಜದ್ದಾಗಿರುತ್ತದೆ ಎಂಬುದನ್ನೇ ಇವು ಎತ್ತಿ ತೋರಿಸುತ್ತವೆ. ನಮ್ಮ ಆರೋಗ್ಯದ ಜವಾಬ್ದಾರಿ ನಿಮ್ಮದು, ನಿಮ್ಮ ಮನೆಮಂದಿಯ ಜವಾಬ್ದಾರಿಯೂ ನಿಮ್ಮದೇ ಎಂಬಲ್ಲಿ ವೈದ್ಯರು ನಿರಾತಂಕವಾಗಿ ತಮ್ಮ ವೃತ್ತಿಯನ್ನು ನಡೆಸುವುದು ಸಾಧ್ಯವೇ?

ನಾಡಿ ನೋಡಿ ಮದ್ದು ಕೊಡುತ್ತಿದ್ದ ಕಾಲದಲ್ಲಿ ಎಲ್ಲವೂ ಚೆನ್ನಾಗಿತ್ತು ಎಂದರೆ, ಆಗ ಆರೋಗ್ಯದ ಗುಣಮಟ್ಟವೇನಿತ್ತು ಎನ್ನುವುದನ್ನೂ ಹೇಳಬೇಕಾಗುತ್ತದೆ. ಇಂದು ಅತ್ಯುನ್ನತ ತಂತ್ರಜ್ಞಾನಗಳಿಂದಾಗಿ ರೋಗ ಪತ್ತೆ ಮತ್ತು ಚಿಕಿತ್ಸೆಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಿವೆ. ಭಾರತದಲ್ಲೂ ಇವು ಲಭ್ಯವಿವೆ, ನಮ್ಮ ವೈದ್ಯರೂ ಇವುಗಳಲ್ಲಿ ಪರಿಣತಿಯನ್ನು ಸಾಧಿಸಿದ್ದಾರೆ.

ಆದರೆ ಕಳೆದ ಮೂರು ದಶಕಗಳಲ್ಲಾಗಿರುವ ಈ ಬೆಳವಣಿಗೆಗಳಲ್ಲಿ ಹೆಚ್ಚಿನವು ಬೃಹತ್ ಖಾಸಗಿ ಕಂಪೆನಿಗಳ ಹೂಡಿಕೆಯಿಂದಲೇ ಆಗಿವೆ ಎನ್ನುವುದು ಕಟು ವಾಸ್ತವವಾಗಿದೆ. ಎಷ್ಟು ಮಟ್ಟಿಗೆಂದರೆ, ಮನುಷ್ಯನ ವಂಶವಾಹಿಗಳನ್ನು ಆಧರಿಸಿದ ಅನೇಕ ಹೊಸ ಪರೀಕ್ಷೆಗಳು ಮತ್ತು ಚಿಕಿತ್ಸೆಗಳು ಕೂಡ ಈ ಖಾಸಗಿ ಕಂಪೆನಿಗಳ ಕೃಪೆಯಲ್ಲಿವೆ. ಈ ಹೊಸ ವಿಧಾನಗಳನ್ನು ಖರೀದಿಸಿ ಅಳವಡಿಸಿಕೊಳ್ಳಬೇಕಾದರೆ ಈ ಖಾಸಗಿ ಕಂಪೆನಿಗಳ ಏಕಸ್ವಾಮ್ಯಕ್ಕೆ ಬಗ್ಗಿ, ಅವು ವಿಧಿಸುವ ದರವನ್ನು ನೀಡಲೇ ಬೇಕಾಗುತ್ತದೆ. ಎಲ್ಲಿಯವರೆಗೆ ವೈದ್ಯಕೀಯ ತಂತ್ರಜ್ಞಾನದ ಒಡೆತನವನ್ನು ಸರಕಾರ ಹಾಗೂ ಸಮಾಜಗಳು ಹೊಂದಿರುವುದಿಲ್ಲವೋ, ಅಲ್ಲಿಯವರೆಗೆ ಅವನ್ನು ಬಳಸಬಯಸುವ ವೈದ್ಯರೂ, ಆಸ್ಪತ್ರೆಗಳೂ ಖಾಸಗಿ ಬಂಡವಾಳಗಾರರ ಹಿಡಿತದೊಳಗೇ ಇರಬೇಕಾದ ದುಸ್ಥಿತಿಯಿರುತ್ತದೆ.

ಇಲ್ಲಿ ಮಾತ್ರವಲ್ಲ, ಬ್ರಿಟನ್‌ನಂತೆಡೆಯೂ ಸರಕಾರಿ ಆರೋಗ್ಯ ಸೇವೆಗಳು ಈ ಹೊಸ ವಿಧಾನಗಳನ್ನು ಪಡೆಯಲಾಗದೆ ನರಳುತ್ತಿರುವುದು ಇದೇ ಕಾರಣಕ್ಕೆ. ಸಾರ್ವಜನಿಕ ಆರೋಗ್ಯ ಸೇವೆಗಳು ಹೀಗೆ ದುರ್ಬಲಗೊಂಡಲ್ಲಿ, ಅದೇ ಖಾಸಗಿ ಬಂಡವಾಳವು ಆಸ್ಪತ್ರೆಗಳನ್ನು ತೆರೆದು ಈ ತಂತ್ರಜ್ಞಾನಗಳನ್ನು ಒದಗಿಸುತ್ತದೆ. ಬಳಸಿದಷ್ಟು ಹೆಚ್ಚು ಲಾಭ ಬರುವ ಈ ವ್ಯವಸ್ಥೆಯಲ್ಲಿ, ರೋಗ ಪತ್ತೆ, ಚಿಕಿತ್ಸೆ ಮಾತ್ರವಲ್ಲದೆ, ಕೆಲವೊಮ್ಮೆ ಅನಗತ್ಯವಾದ ಪರಿಕರಗಳ ಬಳಕೆಯೆಲ್ಲವೂ ಹೆಚ್ಚುತ್ತವೆ; ಅವನ್ನೆಲ್ಲ ಉತ್ತೇಜಿಸುವ ಶಿಷ್ಟಾಚಾರ ಸಂಹಿತೆಗಳನ್ನು ತಾವೇ ಹೇರಿಕೊಂಡು, ಮನ್ನಣೆ ಪಡೆಯುವ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗುತ್ತದೆ.

ವರ್ಷಗಳ ಹಿಂದೆ ತಮ್ಮ ಊರುಗಳಲ್ಲಿ ನೆಲೆನಿಂತ ಹಲವಾರು ವೈದ್ಯರು ಸಣ್ಣ ಆಸ್ಪತ್ರೆಗಳನ್ನು ಸ್ಥಾಪಿಸಿ, ಮಿತದರದಲ್ಲಿ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಚಿಕಿತ್ಸೆಗಳನ್ನು ಒದಗಿಸುತ್ತಿದ್ದಾರೆ, ತಮಗೆ ಅಗತ್ಯವಿರುವ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡವರೂ ಇದ್ದಾರೆ. ಈ ಆಸ್ಪತ್ರೆಗಳು ಬೃಹತ್ ಆಸ್ಪತ್ರೆಗಳಿಗೆ ಸ್ಪರ್ಧೆಯೊಡ್ಡುವುದರಿಂದ ಅವನ್ನು ಬಗ್ಗಿಸಲು ಅಥವಾ ಮುಚ್ಚಿಸಲು ಬಗೆಬಗೆಯ ಉಪಾಯಗಳನ್ನು ಮಾಡಲಾಗುತ್ತದೆ. ಚಿಕಿತ್ಸೆಗೆ ಅಗತ್ಯವೇ ಇಲ್ಲದ ಶಿಷ್ಟಾಚಾರಗಳನ್ನು ಈ ಸಣ್ಣ ಆಸ್ಪತ್ರೆಗಳ ಮೇಲೆ ಹೇರುವುದು ಕೂಡ ಅಂಥದ್ದೇ ಪ್ರಯತ್ನವಾಗಿದೆ. ಅಂತಹ ಶಿಷ್ಟಾಚಾರಗಳನ್ನು ಸರಕಾರಿ ಆಸ್ಪತ್ರೆಗಳಿಗೆ ಅನ್ವಯಿಸಿದರೆ ಅವು ಮುಚ್ಚಬೇಕಾಗುತ್ತವೆ ಎಂದಾದರೆ, ಸಣ್ಣ ಆಸ್ಪತ್ರೆಗಳು ಅದೇ ಕಷ್ಟಕ್ಕೊಳಗಾಗಿ ಮುಚ್ಚುವಂತಾಗಿ, ಕಾರ್ಪರೇಟ್ ಆಸ್ಪತ್ರೆಗಳ ಜಾಲ ಇನ್ನಷ್ಟು ಬೆಳೆಯುವಂತಾಗುವುದಿಲ್ಲವೇ?

ಆದ್ದರಿಂದ, ಹೊಸ ವಿಧಾನಗಳೆಲ್ಲವನ್ನೂ ಅಳವಡಿಸಿಕೊಂಡು, ವೈದ್ಯರು ನಿರಾತಂಕವಾಗಿ ಸೇವೆಯೊದಗಿಸಬೇಕು ಎಂದಾದರೆ, ಅದರ ಜವಾಬ್ದಾರಿಯನ್ನು ಸಮಾಜವೇ ಹೊರಬೇಕಾಗುತ್ತದೆ. ಸರಕಾರವೇ ಇದನ್ನು ಮಾಡಬೇಕಾದುದು ಅತ್ಯಂತ ಅಪೇಕ್ಷಣೀಯವಾದರೂ, ಈಗಿನ ವ್ಯಯಕ್ಕಿಂತ ನಾಲ್ಕು ಪಟ್ಟು ಹೆಚ್ಚು ಬೇಕಾಗುತ್ತದೆ, ಬಗೆಬಗೆಯ ಸೋರಿಕೆಗಳನ್ನೂ ತಡೆಯಬೇಕಾಗುತ್ತದೆ.

ಸರಕಾರಕ್ಕೆ ತನ್ನ ಆಸ್ಪತ್ರೆಗಳನ್ನು ಸುಧಾರಿಸಲು ಸಾಧ್ಯವಿಲ್ಲದಿದ್ದರೆ, ಅವನ್ನು ವಿಕೇಂದ್ರೀಕರಿಸಬಹುದು; ವೈದ್ಯರ ಸಂಬಳದಿಂದ ಹಿಡಿದು, ಅಗತ್ಯ ತಂತ್ರಜ್ಞಾನಗಳ ಅಳವಡಿಕೆಯವರೆಗೆ ಎಲ್ಲ ಸುಧಾರಣೆಯಲ್ಲೂ ಸ್ಥಳೀಯಾಡಳಿತಗಳು ಮತ್ತು ಜನರ ನೇರ ಭಾಗೀದಾರಿಕೆಗೆ ಅವಕಾಶ ನೀಡಬಹುದು. ಅದಕ್ಕೂ ಮನಸ್ಸಿಲ್ಲದಿದ್ದರೆ, ಕೇರಳದಂತೆ, ಎಲ್ಲೆಡೆ ಸಹಕಾರಿ ಆಸ್ಪತ್ರೆಗಳ ಸ್ಥಾಪನೆಗೆ ಉತ್ತೇಜನ ನೀಡಬಹುದು.

ಜನರೇ ತಮ್ಮೂರುಗಳಲ್ಲಿ ಸಾಮುದಾಯಿಕ ಆಸ್ಪತ್ರೆಗಳನ್ನು ಸ್ಥಾಪಿಸಬಹುದು ಅಥವಾ ಈಗಾಗಲೇ ಇರುವ ವೈದ್ಯರ ಜೊತೆ ಸೇರಿ, ಆಸ್ಪತ್ರೆಗಳನ್ನು ಸುಧಾರಿಸುವುದಕ್ಕೆ ನೆರವಾಗಬಹುದು. ಕಳೆದ 15 ವರ್ಷಗಳಲ್ಲಿ ಹಳ್ಳಿಗಳಲ್ಲೂ, ಸಣ್ಣ ಪಟ್ಟಣಗಳಲ್ಲೂ ತೆರೆದಿರುವ ಹೊಸ ಆಸ್ಪತ್ರೆಗಳು ಬೆರಳೆಣಿಕೆಯಷ್ಟೂ ಇಲ್ಲವೆನ್ನುವುದು ಎಲ್ಲರ ಕಣ್ತೆರಸಬೇಕು.

ಸಮಗ್ರ ಆರೋಗ್ಯ ಸೇವೆಗಳನ್ನು ನಿಜಾರ್ಥದಲ್ಲಿ ಒದಗಿಸಬೇಕಾದರೆ ಸರಕಾರವು ತನ್ನ ಆಸ್ಪತ್ರೆಗಳನ್ನು ಸುಧಾರಿಸಬೇಕೇ ಹೊರತು, ಖಾಸಗಿ ಆಸ್ಪತ್ರೆಗಳಲ್ಲಿ ಆಯ್ದ ಚಿಕಿತ್ಸೆಗಳನ್ನು ಖರೀದಿಸುವುದಕ್ಕೆ ಬೊಕ್ಕಸದ ಹಣವನ್ನು ಸುರಿಯುವುದಲ್ಲ. ಕರ್ನಾಟಕದಲ್ಲಿ ಸಮಗ್ರ ಆರೋಗ್ಯ ಸೇವೆಗಳನ್ನು ಒದಗಿಸುವುದಕ್ಕೆ ವರ್ಷಕ್ಕೆ ಕನಿಷ್ಠ ರೂ. 7500 ಕೋಟಿ ಬೇಕಾಗುವಲ್ಲಿ ಈಗ ಇದರ ಶೇ. ಹತ್ತನ್ನಷ್ಟೇ ಒದಗಿಸಲಾಗಿದೆ. ಇದರಿಂದ ಜನರಿಗೇನು ದಕ್ಕಬಹುದೆಂದು ಅರಿಯುವುದು ಕಷ್ಟವಾಗದು. ಶಾಲೆಗಳಿಗೆ ಅನುದಾನ ನೀಡುವ ವ್ಯವಸ್ಥೆಗೂ, ಶಿಕ್ಷಣದ ಹಕ್ಕಿನ ಹೆಸರಲ್ಲಿ ಒಬ್ಬೊಬ್ಬ ವಿದ್ಯಾರ್ಥಿಯ ಶುಲ್ಕವನ್ನು ಸರಕಾರವು ಖಾಸಗಿ ಶಾಲೆಗಳಿಗೆ ತುಂಬಿಸುವ ವ್ಯವಸ್ಥೆಗೂ ವ್ಯತ್ಯಾಸವೇನೆಂಬುದರ ಅರಿವಿದ್ದರೆ, ಇದನ್ನೆಲ್ಲ ಅರ್ಥ ಮಾಡಿಕೊಳ್ಳುವುದು ಕಷ್ಟವಲ್ಲ.

ಒಟ್ಟಿನಲ್ಲಿ, ಒಳ್ಳೆಯ ಆರೋಗ್ಯ ಸೇವೆಗಳು ಮಿತದರದಲ್ಲಿ ಲಭ್ಯವಾಗಬೇಕಿದ್ದರೆ ಸಮಾಜ ಹಾಗೂ ಸರಕಾರವು ಒಳ್ಳೆಯ ವೈದ್ಯರನ್ನೂ, ಒಳ್ಳೆಯ ಆಸ್ಪತ್ರೆಗಳನ್ನೂ ಉತ್ತೇಜಿಸಬೇಕು, ಆರೋಗ್ಯ ಸೇವೆಗಳನ್ನು ಸುಧಾರಿಸುವುದಕ್ಕೆ ಜೊತೆಯಾಗಬೇಕು. ಎಲ್ಲಕ್ಕಿಂತ ಮುಖ್ಯವಾಗಿ ವೈದ್ಯರು ಹಾಗೂ ಜನರ ನಡುವಿನ ವಿಶ್ವಾಸ ಹಾಗೂ ಬಾಂಧವ್ಯಗಳು ಗಟ್ಟಿಗೊಳ್ಳಬೇಕು.

ಇಲಾಜು 1 – ನಿಂತ ನೆಲ ಕುಸಿಯುತ್ತಿದ್ದರೂ ದನಿಯೆತ್ತದ ವೈದ್ಯಗಡಣ: ಮುಂದೇನು ಕತೆ?

(ನವೆಂಬರ್ 8, 2017)

ಹಿಂದಿನ 60 ವರ್ಷಗಳಲ್ಲಿ ಸಾಧಿಸದೆ ಬಿಟ್ಟದ್ದನ್ನೆಲ್ಲ 60 ಗಂಟೆಗಳಲ್ಲಿ – ಅಲ್ಲಲ್ಲ, 60 ದಿನಗಳಲ್ಲಿ – ಅಲ್ಲ, 60 ವಾರಗಳಲ್ಲಿ ಮಾಡುತ್ತೇವೆಂದು ವಾಗ್ದಾನವಿತ್ತವರು ಗದ್ದುಗೆಯೇರಿ 180 ವಾರಗಳಾಗಿವೆ. ತನ್ನ ಸಾಧನೆಯ ವರದಿಯನ್ನು ಆಗಾಗ ನೀಡುತ್ತಿರುತ್ತೇನೆ ಎಂದಿದ್ದವರು ಬಾಯಿ ತೆರೆಯದಿರುವಾಗ, ಕಳೆದ ಲೋಕಸಭಾ ಚುನಾವಣೆಗೆ ಮೊದಲು ಪ್ರಕಟಿಸಿದ್ದ ಪ್ರಣಾಳಿಕೆಯನ್ನು ತೆರೆಯುವುದೊಳ್ಳೆಯದು.

ಪ್ರಣಾಳಿಕೆಯ 15ನೇ ಪುಟದಲ್ಲಿ ‘ನಮ್ಮದು ಬಡವರ, ಶೋಷಿತರ ಹಾಗೂ ಹಿಂದುಳಿದವರ ಸರಕಾರವಾಗಲಿದೆ; ಅವರ ಕನಸುಗಳೆಲ್ಲವನ್ನೂ ಸಾಕಾರಗೊಳಿಸುವ ಸರಕಾರವಾಗಲಿದೆ; ಅಂತ್ಯೋದಯದಲ್ಲಿ ಸಂಪೂರ್ಣವಾಗಿ ನಂಬಿಕೆಯುಳ್ಳ ನಾವು ಕಡು ಬಡತನ ಹಾಗೂ ಕುಪೋಷಣೆಯನ್ನು ರಾಷ್ಟ್ರೀಯ ಆದ್ಯತೆಗಳಾಗಿ ಮಾಡಲಿದ್ದೇವೆ, ಹಾಗೂ ಬಡತನ ನಿರ್ಮೂಲನಾ ಕಾರ್ಯಕ್ರಮಗಳನ್ನು ಬಲಪಡಿಸಿ, ಅತ್ಯಂತ ಹಿಂದುಳಿದ 100 ಜಿಲ್ಲೆಗಳನ್ನು ಇತರ ಜಿಲ್ಲೆಗಳ ಮಟ್ಟಕ್ಕೆ ತರಲಿದ್ದೇವೆ; ಸಾರ್ವತ್ರಿಕ ಆಹಾರ ಸುರಕ್ಷತೆಯು ರಾಷ್ಟ್ರೀಯ ಸುರಕ್ಷತೆಯ ಅವಿಭಾಜ್ಯ ಅಂಗವಾಗಿದ್ದು, ಆಹಾರದ ಹಕ್ಕು ಕೇವಲ ಕಾಗದದಲ್ಲಿ ಅಥವಾ ರಾಜಕೀಯ ಘೋಷಣೆಯಾಗಿ ಉಳಿಯದೆ ಎಲ್ಲರಿಗೂ ದೊರೆಯುವಂತೆ ಮಾಡುತ್ತೇವೆ’ ಎಂದು ಹೇಳಲಾಗಿದೆ.

ಕಡಿಮೆ ದರದಲ್ಲಿ, ಉತ್ತಮ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಸುಲಭದಲ್ಲಿ ಲಭ್ಯವಾಗುವಂತೆ ಮಾಡುವ ಆಶ್ವಾಸನೆಯು ಪ್ರಣಾಳಿಕೆಯ 25ನೇ ಪುಟದಲ್ಲಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನವನ್ನು ಆಮೂಲಾಗ್ರವಾಗಿ ಪರಿಷ್ಕರಿಸಿ, ರಾಷ್ಟ್ರೀಯ ಆರೋಗ್ಯ ಖಾತರಿ ಅಭಿಯಾನವನ್ನು ಆರಂಭಿಸುವುದು; ಹೊಸ ಸಮಗ್ರ ಆರೋಗ್ಯ ನೀತಿಯನ್ನು ತರುವುದು; ಸರಕಾರಿ ಆಸ್ಪತ್ರೆಗಳನ್ನು ಆಧುನಿಕ ತಂತ್ರಜ್ಞಾನ ಹಾಗೂ ಸೌಲಭ್ಯಗಳೊಂದಿಗೆ ಸುಸಜ್ಜಿತಗೊಳಿಸುವುದು; ಮಕ್ಕಳ ಆರೋಗ್ಯ ಹಾಗೂ ಪೋಷಣೆಗೆ ಒತ್ತು ನೀಡುವುದು; ತುರ್ತು ಚಿಕಿತ್ಸೆಯ 108 ಸೇವೆಯನ್ನು ಎಲ್ಲೆಡೆಗೂ ವಿಸ್ತರಿಸುವುದು; ವೈದ್ಯ ವೃತ್ತಿಯ ನಿಯಂತ್ರಣಕ್ಕೆ ಸಣ್ಣ ಗಾತ್ರದ ಸಂಸ್ಥೆಯನ್ನು ರಚಿಸುವುದು ಇತ್ಯಾದಿ ಹಲವಾರು ಭರವಸೆಗಳನ್ನು ಅದರಲ್ಲಿ ನೀಡಲಾಗಿದೆ.

ಕಳೆದ 180 ವಾರಗಳಲ್ಲಿ ಈ ಪ್ರಣಾಳಿಕೆಯಲ್ಲಿ ಹೇಳಿರದ ಹಲವು ಕೆಲಸಗಳನ್ನು ಮಾಡಲಾಗಿದೆ, ಹೇಳಿರುವ ಹಲವು ಆಗದೇ ಉಳಿದಿವೆ. ರಾತೋರಾತ್ರಿ ನೋಟುಗಳೆರಡು ರದ್ದಾದವು, 85% ಹಣವು ಜನರ ಕೈತಪ್ಪಿ, ವಾರಗಟ್ಟಲೆ ಸಿಗದೆ ಅರ್ಥ ವ್ಯವಸ್ಥೆಯೇ ನೆಲ ಕಚ್ಚಿತು. ಮೊದಲು ಬೇಡವಾಗಿದ್ದ ಸರಕು ಹಾಗೂ ಸೇವಾ ತೆರಿಗೆಯು ನಡು ರಾತ್ರಿಯಲ್ಲಿ ಹೇರಲ್ಪಟ್ಟಿತು; ಆಧಾರ್ ಚೀಟಿ ಎಲ್ಲದಕ್ಕೂ ಬೇಕೆಂದಾಯಿತು, ಅದಿಲ್ಲದೆ ಪಡಿತರವಿಲ್ಲ, ಶಾಲೆಯಿಲ್ಲ, ಆಸ್ಪತ್ರೆಯಿಲ್ಲ, ಹೆರಿಗೆಯಿಲ್ಲ, ವ್ಯಾಪಾರ-ವಹಿವಾಟಿಲ್ಲ, ಫೋನೂ ಇಲ್ಲ, ಏನೂ ಇಲ್ಲ ಎಂದಾಯಿತು. ಈ ಗದ್ದಲದಲ್ಲಿ ವಹಿವಾಟು ಶೇ. 45-80 ರಷ್ಟು ಕುಸಿಯಿತು, ಲಕ್ಷಗಟ್ಟಲೆ ಉತ್ಪಾದನಾ ಘಟಕಗಳು ಮುಚ್ಚಿ ಹೋದವು, ಶೇ. 60ರಷ್ಟು ಉದ್ಯೋಗಗಳು ನಶಿಸಿ, ಲಕ್ಷಗಟ್ಟಲೆ ಕಾರ್ಮಿಕರು ಬೀದಿಪಾಲಾದರು, ರಾಷ್ಟ್ರೀಯ ಉತ್ಪನ್ನವು 2.2% ಕುಸಿಯಿತು, ಬ್ಯಾಂಕುಗಳಲ್ಲಿ ಮರಳಿ ಬಾರದ ಸಾಲಗಳು ಬೆಟ್ಟದೆತ್ತರವಾದವು.

ವರ್ಷಕ್ಕೆ 45 ಲಕ್ಷ ಜನರು ಬಗೆಬಗೆಯಿಂದ ವಂಚಿತರಾಗಿ ಅನ್ಯಾಯವಾಗಿ ಸಾವನ್ನಪ್ಪುತ್ತಿರುವಲ್ಲಿ ಕೈಯಲ್ಲಿದ್ದ ಚೂರುಪಾರು ಹಣವೂ, ಜೀವನಾಧಾರವಾಗಿದ್ದ ಸಣ್ಣ ಕೆಲಸವೂ ಕಿತ್ತುಕೊಳ್ಳಲ್ಪಟ್ಟುದರಿಂದ ಎಲ್ಲರ ಹಸಿವನ್ನು ನಿವಾರಿಸುತ್ತೇವೆ ಎಂಬ ಭರವಸೆಗೆ 180 ವಾರಗಳಾದಾಗ ಹಸಿವು-ಬಡತನ-ನಿರುದ್ಯೋಗಗಳು ಮತ್ತಷ್ಟು ಹೆಚ್ಚಿದವು, ಆಧಾರ್ ಇಲ್ಲದೆ ಪಡಿತರ ತಪ್ಪಿ ಕೆಲವರು ಸತ್ತರೆಂಬ ವರದಿಗಳೂ ಬಂದವು. ಆದರೆ ದೇಶದ ಅತ್ಯಂತ ಶ್ರೀಮಂತನ ಆಸ್ತಿಯು ಕಳೆದ ಒಂದೇ ವರ್ಷದಲ್ಲಿ ಶೇ. 67ರಷ್ಟು, 2.5 ಲಕ್ಷ ಕೋಟಿ ರೂಪಾಯಿಗಳಷ್ಟು ಹೆಚ್ಚಿತು; ಅತಿ ಶ್ರೀಮಂತರ ಒಟ್ಟು ಆಸ್ತಿಯು ಶೇ. 26ರಷ್ಟು, 31 ಲಕ್ಷ ಕೋಟಿ ರೂಪಾಯಿಗಳಷ್ಟು, ಹೆಚ್ಚಿತು.

ಶೇ. 38ರಷ್ಟು ಮಕ್ಕಳು ಕುಂಠಿತರಾಗಿ, ಪ್ರತೀ ಗಂಟೆಗೆ ಐದು ವರ್ಷದೊಳಗಿನ 100 ಮಕ್ಕಳು ಸಾಯುತ್ತಿರುವಾಗ, ಈ ಸರಕಾರ ಅಧಿಕಾರಕ್ಕೇರಿದ ಬಳಿಕ ತನ್ನ ಮೊದಲ ಆಯವ್ಯಯ ಪತ್ರದಲ್ಲೇ ಮಕ್ಕಳ ಶಿಕ್ಷಣ, ಬೆಳವಣಿಗೆ ಹಾಗೂ ಆರೋಗ್ಯ ಕಾರ್ಯಕ್ರಮಗಳ ಅನುದಾನವನ್ನು 81000 ಕೋಟಿಯಿಂದ 58000 ಕೋಟಿಗೆ ಇಳಿಸಿತು. ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಗೆ ಅನುದಾನವನ್ನು ಹೆಚ್ಚಿಸಲು ಹಣವಿಲ್ಲದಿದ್ದರೂ, ಉಳ್ಳವರಿಗೆ ಆರು ಲಕ್ಷ ಕೋಟಿಯಷ್ಟು ತೆರಿಗೆ ವಿನಾಯಿತಿ ನೀಡಿತು. ಹಸಿವನ್ನು ನಿವಾರಿಸುವ ಭರವಸೆಯು ಹುಸಿಯಾಗಿ, 2017ರ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತದ ಸ್ಥಾನವು ಇನ್ನಷ್ಟು ಕೆಳಗಿಳಿದು 119ರಲ್ಲಿ 100ಕ್ಕಿಳಿಯಿತು; ಈ ಪಟ್ಟಿಯಲ್ಲಿ ಬಾಂಗ್ಲಾದೇಶ, ಶ್ರೀಲಂಕಾ, ನೇಪಾಲ, ಮ್ಯಾನ್ಮಾರ್‌ಗಳು ಭಾರತಕ್ಕಿಂತ ಮೇಲೆ, ಕ್ರಮವಾಗಿ 90, 85, 75 ಹಾಗೂ 72ನೇ ಸ್ಥಾನಗಳಲ್ಲಿದ್ದರೆ, ಬ್ರಿಕ್ಸ್ ಗುಂಪಿನ ದಕ್ಷಿಣ ಆಫ್ರಿಕಾ, ಚೀನಾ, ರಷ್ಯಾ, ಬ್ರೆಜಿಲ್ ಗಳು ಇನ್ನೂ ಮೇಲೆ, ಕ್ರಮವಾಗಿ 55, 29, 22 ಮತ್ತು 18ನೇ ಸ್ಥಾನಗಳಲ್ಲಿವೆ. ಚೀನಾವು 2007ರಲ್ಲಿ 47ನೇ ಸ್ಥಾನದಲ್ಲಿದ್ದು, ಈಗ 29ಕ್ಕೇರಿದರೆ, ಭಾರತವು ಅದೇ ಸಮಯದಲ್ಲಿ 94ರಿಂದ 100ಕ್ಕಿಳಿದಿದೆ.

ಆರೋಗ್ಯ ಸೇವೆಗಳಿಗೆ ಆದ್ಯತೆ ನೀಡಿ, ಸುಧಾರಿಸುವ ಭರವಸೆಯೂ ಅಲ್ಲಿಯೇ ಉಳಿದಿದೆ. ಅಧಿಕಾರಕ್ಕೆ ಬಂದ ಆರು ತಿಂಗಳಲ್ಲೇ ಆರೋಗ್ಯ ಸೇವೆಗಳ ಅನುದಾನದಲ್ಲಿ 6000 ಕೋಟಿ ಕತ್ತರಿಸಿದ ಸರಕಾರವು, ಮುಂದಿನ ವರ್ಷಗಳಲ್ಲಿ ಯಾವ ವಿಶೇಷ ಏರಿಕೆಯನ್ನೂ ಮಾಡದೆ, ಆರೋಗ್ಯ ಖಾತರಿ ಅಭಿಯಾನವನ್ನು ಕಾಗದದಲ್ಲಷ್ಟೇ ಉಳಿಸಿತು. ಪ್ರಣಾಳಿಕೆಯಲ್ಲಿ ಘೋಷಿಸಿದ್ದ ರಾಷ್ಟ್ರೀಯ ಆರೋಗ್ಯ ನೀತಿಯ ಕರಡನ್ನು ಅತ್ಯುತ್ಸಾಹದಿಂದ ಡಿಸೆಂಬರ್ 31, 2014ರಂದು ಪ್ರಕಟಿಸಲಾಯಿತಾದರೂ, ಅದು ಜಾರಿಗೊಳ್ಳಲು 2017ರ ಮಾರ್ಚ್‌ವರೆಗೆ ಕಾಯಬೇಕಾಯಿತು. ಅಷ್ಟು ಕಾದರೂ, ಪ್ರಣಾಳಿಕೆಯಲ್ಲಿ ಹೇಳಲಾಗಿದ್ದ ಸುಧಾರಣಾ ಕ್ರಮಗಳಾವುವೂ ಈ ನೀತಿಯೊಳಗೆ ಕಾಣುವುದಿಲ್ಲ. ನಾವೀಗ ಸಾರ್ವಜನಿಕ ಆರೋಗ್ಯ ಸೇವೆಗಳಿಗೆ ಅತ್ಯಂತ ಕಡಿಮೆ, ರಾಷ್ಟ್ರೀಯ ಉತ್ಪನ್ನದ ಶೇ. 1.2ನ್ನು, ವ್ಯಯಿಸುತ್ತಿದ್ದು, 2022ರ ವೇಳೆಗೆ ಅದನ್ನು ಕನಿಷ್ಠ ಶೇ. 3ಕ್ಕೆ ಹೆಚ್ಚಿಸಬೇಕೆಂದೂ, ಸಾರ್ವತ್ರಿಕ ಆರೋಗ್ಯ ಖಾತರಿ ಯೋಜನೆಯನ್ನು ತರುವುದಾದರೆ ಇನ್ನೂ ಶೇ. 2 ರಷ್ಟು ಹೆಚ್ಚಿನ ಅನುದಾನವು ಅಗತ್ಯವೆಂದೂ ತಜ್ಞರ ಸಮಿತಿಯು ಅಭಿಪ್ರಾಯ ಪಟ್ಟಿದೆ. ಆದರೆ ಈ ಹೊಸ ನೀತಿಯಲ್ಲಿ 2025ರ ವೇಳೆಗೆ ಕೇವಲ ಶೇ. 2.5ರಷ್ಟನ್ನು ಒದಗಿಸುವುದಾಗಿ ಹೇಳಲಾಗಿದೆ. ಸರಕಾರಿ ಆಸ್ಪತ್ರೆಗಳನ್ನು ಸುಧಾರಿಸುವ ಬಗ್ಗೆ ಯಾವುದೇ ಖಚಿತ ಭರವಸೆಗಳು ಈ ಆರೋಗ್ಯ ನೀತಿಯಲ್ಲಿ ಕಾಣಸಿಗುವುದಿಲ್ಲ, ಬದಲಿಗೆ, ಖಾಸಗಿ ಆಸ್ಪತ್ರೆಗಳಿಗೆ ಸರಕಾರದ ಹಣವನ್ನು ಕೊಟ್ಟು ಸೇವೆಗಳನ್ನು ಪಡೆಯಲಾಗುವುದೆಂದು ಹೇಳಲಾಗಿದೆ. ಬೆನ್ನಿಗೇ, ಜಿಲ್ಲಾಸ್ಪತ್ರೆಗಳನ್ನು 30 ವರ್ಷಗಳಿಗೆ ಖಾಸಗಿ ಗುತ್ತಿಗೆಗೆ ಒಪ್ಪಿಸುವ ಯೋಜನೆಯನ್ನು ನಿತಿ ಆಯೋಗವು ಪ್ರಕಟಿಸಿದೆ.

ಸರಕಾರಿ ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯಗಳಿಲ್ಲದೆ ಉತ್ತರ ಪ್ರದೇಶದಂಥ ರಾಜ್ಯಗಳಲ್ಲಿ ನೂರಾರು ಮಕ್ಕಳು ಸಾವನ್ನಪ್ಪುತ್ತಿದ್ದಾರೆ, ಕರ್ನಾಟಕದಲ್ಲೂ ಗರ್ಭಿಣಿಯರು ದಾರಿ ಬದಿಗಳಲ್ಲಿ ಹೆರಬೇಕಾದಂತಹ ದುಸ್ಥಿತಿಯೊದಗಿದೆ. ಸರಕಾರಿ ಆಸ್ಪತ್ರೆಗಳನ್ನು ಬದಲಿಗೆ, ವೈದ್ಯರನ್ನೇ ಈ ಲೋಪಗಳಿಗೆ ಹೊಣೆಯಾಗಿಸಿ ಹೀಯಾಳಿಸಲಾಗುತ್ತಿದೆ, ಸುಳ್ಳು ದೂರುಗಳಡಿ ಜೈಲಿಗೂ ತಳ್ಳಲಾಗುತ್ತಿದೆ,. ಜನಾರೋಗ್ಯಕ್ಕೆ ತನ್ನ ಜವಾಬ್ದಾರಿಯನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿರುವ ಸರಕಾರಗಳು ಜನರ ಆರೋಗ್ಯ ರಕ್ಷಣೆಗೆ ಹಗಲಿರುಳು ಶ್ರಮಿಸುತ್ತಿರುವ ವೈದ್ಯರ ಕತ್ತು ಹಿಸುಕುವ ಕಾನೂನುಗಳನ್ನೂ ತರುತ್ತಿವೆ. ವೈದ್ಯಕೀಯ ಪರಿಷತ್ತು ಭ್ರಷ್ಟವಾಗಿದೆಯೆಂದು ಆರೋಪಿಸಿ, ಅದನ್ನು ತನಿಖೆಗೊಳಪಡಿಸುವ ಬದಲು ಸರಕಾರಿ ಅಧಿಕಾರಿಗಳು ಹಾಗೂ ತನ್ನ ಕೈಗೊಂಬೆಗಳಿರುವ ವೈದ್ಯಕೀಯ ಮಂಡಳಿಯನ್ನು ರಚಿಸಲು ಕೇಂದ್ರವು ಮುಂದಾಗಿದೆ; ವ್ಚೈದ್ಯಶಿಕ್ಷಣದಲ್ಲಿ ಲಾಭಕೋರ ಸಂಸ್ಥೆಗಳಿಗೆ ಅವಕಾಶವೊದಗಿಸುವುದಕ್ಕೂ, ವೈದ್ಯರನ್ನು ತನ್ನ ಮುಷ್ಠಿಯೊಳಗಿರಿಸುವುದಕ್ಕೂ ಇದರಿಂದ ಸಾಧ್ಯವಾಗಲಿದೆ. ಕರ್ನಾಟಕದಲ್ಲೂ ತನ್ನ ಆಸ್ಪತ್ರೆಗಳನ್ನು ಪಾಳು ಬಿಟ್ಟಿರುವ ಸರಕಾರವು, ಖಾಸಗಿ ವೈದ್ಯರನ್ನು ಪೀಡಿಸಿ ಮಣಿಸಲೆಂದು ಕಾನೂನನ್ನು ತರಲು ಹೊರಟಿದೆ; ಕಾರ್ಪರೇಟ್ ಆಸ್ಪತ್ರೆಗಳ ಲಾಭಕೋರತನವನ್ನು ನಿಯಂತ್ರಿಸುವ ಹೆಸರಲ್ಲಿ, ಸಣ್ಣ ಹಾಗೂ ಮಧ್ಯಮ ಗಾತ್ರದ ಆಸ್ಪತ್ರೆಗಳನ್ನು ಮುಚ್ಚಿಸಿ ಅವೇ ಕಾರ್ಪರೇಟ್ ಆಸ್ಪತ್ರೆಗಳಿಗೆ ಇನ್ನಷ್ಟು ಅನುಕೂಲವೊದಗಿಸಲು ಮುಂದಾಗಿದೆ. ಸರಕಾರಗಳನ್ನು ವಿರೋಧಿಸುವ ಧೈರ್ಯವಿಲ್ಲದ ವೈದ್ಯಗಡಣವು ಪಿಳಿಪಿಳಿ ನೋಡುತ್ತಾ ಕುಳಿತಿದೆ.

Be the first to comment

Leave a Reply

Your email address will not be published.


*