ಕೆಟ್ಟಿರುವುದು ಯಾವುದು: ಆಧುನಿಕ ವೈದ್ಯ ವಿಜ್ಞಾನವೇ? ವೃತ್ತಿಯೇ?

(ಪ್ರೊ. ಬಿ.ಎಂ. ಹೆಗ್ಡೆಯವರು ಜುಲೈ 1, 2009ರಂದು ಬರೆದ ಲೇಖನಕ್ಕೆ ನನ್ನ ಪ್ರತಿಕ್ರಿಯೆ; ಪ್ರಕಟಣೆ: ಜುಲೈ 4, 2009, ವಾರ್ತಾಭಾರತಿ)

ಹಿರಿಯ ವೈದ್ಯರೂ, ನಮ್ಮ ದೇಶದಲ್ಲಿ ಮೊದಲ ಬಾರಿಗೆ ಒಂದಷ್ಟು ಕಾಸಿಗೆ ವೈದ್ಯಕೀಯ ಸೀಟುಗಳನ್ನು ಕೊಟ್ಟು ವೈದ್ಯಕೀಯ ಶಿಕ್ಷಣದ ಖಾಸಗೀಕರಣದಲ್ಲಿ ಮೊದಲ ಹೆಜ್ಜೆಗಳನ್ನಿರಿಸಿದ ಖ್ಯಾತಿಯಿರುವ ನಮ್ಮೂರಿನ ವೈದ್ಯಕೀಯ ಕಾಲೇಜೊಂ‍ದರಲ್ಲಿ ಬಹಳ ವರ್ಷಗಳ ಕಾಲ ವಿದ್ಯಾರ್ಥಿಗಳ ನೆಚ್ಚಿನ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಮತ್ತು ಕೊನೆಗೆ ಅದೇ ಸಂಸ್ಥೆಯ ಕುಲಪತಿಗಳಾಗಿ ವಿಶಿಷ್ಟ ಸೇವಾನುಭವವುಳ್ಳ ಪ್ರೊ. ಬಿ.ಎಂ. ಹೆಗ್ಡೆಯವರು ಜುಲೈ ೧ರಂದು ಬಹಳ ಸಮಯೋಚಿತವಾದ ಲೇಖನವನ್ನೇ ಬರೆದಿದ್ದಾರೆ. ಆಧುನಿಕ ವೈದ್ಯ ವಿಜ್ಞಾನವನ್ನು ಬೋಧಿಸುವ ಖಾಸಗಿ ವೈದ್ಯಕೀಯ ಕಾಲೇಜೊಂದರ ಜೊತೆ ಅವರ ನಿಕಟವಾದ ಪ್ರತ್ಯಕ್ಷ ಅನುಭವವು ಈ ಲೇಖನಕ್ಕೆ ಎಷ್ಟರ ಮಟ್ಟಿಗೆ ಪ್ರೇರಣೆಯೆನ್ನುವುದು ನಮ್ಮ ಅರಿವಿಗೆ ಬರುವಂತಿಲ್ಲವೆನ್ನುವುದು ಸುಸ್ಪಷ್ಟವಿದ್ದರೂ, ಆಧುನಿಕ ವೈದ್ಯ ಶಾಸ್ತ್ರದ ಬಳಕೆಯಲ್ಲಿ ದುಡ್ಡಿಗೆ ಮಹತ್ವವಿರುವುದನ್ನು ಪ್ರೊ. ಹೆಗ್ಡೆಯವರು ನೆನಪಿಸಿಕೊಂಡಿದ್ದಾರೆನ್ನುವುದು ಗೋಚರಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ಆಧುನಿಕ ವೈದ್ಯ ವೃತ್ತಿಯು ಹೇಸಿಗೆ ಹುಟ್ಟಿಸುವಷ್ಟು ವ್ಯಾಪಾರೀಕರಣಗೊಂಡಿದೆಯೆನ್ನುವುದರಲ್ಲಿ ಹಾಗೂ ಇದರಿಂದಾಗಿ ಜನಸಾಮಾನ್ಯರಿಗೆ ವರ್ಣಿಸಲಾಗದಷ್ಟು ಕಷ್ಟಗಳುಂಟಾಗುತ್ತಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಇದರಲ್ಲಿ ಆಧುನಿಕ ವೈದ್ಯ ವಿಜ್ಞಾನದ ತಪ್ಪೇನಿದೆ? ವಿದ್ಯುದಾಘಾತವಾದರೆ ವಿದ್ಯುತ್ ಶಕ್ತಿಯ ತಪ್ಪೇ ಅಥವಾ ಅದರ ಬಳಕೆಯಲ್ಲಾಗಿರಬಹುದಾದ ಲೋಪದೋಷಗಳ ತಪ್ಪೇ? ಆಧುನಿಕ ವೈದ್ಯ ವೃತ್ತಿಯ ಮೇಲೆ ಜನರ ನಂಬಿಕೆ ಕ್ಷೀಣಿಸುತ್ತಿದ್ದು, ಬಹುತೇಕ ಜನರು ಬದಲಿ ಚಿಕಿತ್ಸಾ ಪದ್ಧತಿಗಳ ಕಡೆಗೆ ಹೋಗುತ್ತಿದ್ದಾರೆನ್ನುವುದಕ್ಕೆ ನಂಬಲರ್ಹವಾದ ಆಧಾರಗಳು ಸಾಕಷ್ಟಿಲ್ಲದಿದ್ದರೂ, ವಿದ್ಯುದಾಘಾತಕ್ಕೆ ಹೆದರಿ ಚಿಮಿಣಿ ಬೆಳಕಿನಲ್ಲಿ ಯಾ ಕತ್ತಲೆಯಲ್ಲಿ ಕುಳಿತುಕೊಳ್ಳುವ ನಿರ್ಧಾರವು ಸರಿಯೆನಿಸುತ್ತದೆಯೇ?

ಪ್ರೊ. ಹೆಗ್ಡೆಯವರು ತಮ್ಮ ಲೇಖನದಲ್ಲಿ ಅಮೆರಿಕಾ ಹಾಗೂ ಬ್ರಿಟನ್ ದೇಶಗಳಲ್ಲಿರುವ ಆರೋಗ್ಯ ವ್ಯವಸ್ಥೆಯನ್ನು ಹೋಲಿಸಿದ್ದಾರೆ. ಅವರ ವ್ಯಾಕುಲತೆಗೆ ಉತ್ತರವೂ ಅಲ್ಲೇ ಇದೆ, ಅವರಿಗದು ಕಂಡಿದೆಯೋ ತಿಳಿಯಲಿಲ್ಲ. ದುಡ್ಡೇ ದೊಡ್ಡಪ್ಪನಾಗಿರುವ (ಪ್ರಸ್ತುತ ದುಡ್ಡಿಲ್ಲದೇ ಸಣಕಲಾಗಿರುವ) ಅಮೆರಿಕಾದಲ್ಲಿ ವೈದ್ಯ ಶಿಕ್ಷಣದಿಂದ ಹಿಡಿದು ವೈದ್ಯ ವೃತ್ತಿ, ಅದಕ್ಕೆ ಬೇಕಾದ ಔಷಧಗಳು ಹಾಗೂ ಇನ್ನಿತರ ಸಾಧನ ಸಲಕರಣೆಗಳನ್ನು ಒದಗಿಸುವ ವ್ಯವಸ್ಥೆ, ಆಸ್ಪತ್ರೆಗಳು, ಹಾಗೂ ಇವೆಲ್ಲವುಗಳ ಖರ್ಚನ್ನು ಭರಿಸುವುದಾಗಿ ಹೇಳಿಕೊಳ್ಳುವ ವಿಮಾ ಸಂಸ್ಥೆಗಳು ಎಲ್ಲವೂ ಖಾಸಗಿ ರಂಗದಲ್ಲೇ ಇವೆ. ಇವೆಲ್ಲವೂ ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡುತ್ತಿದ್ದು, ಯಾವ ರೋಗಿಗೆ, ಯಾವ ವೈದ್ಯ, ಯಾವ ಸೌಲಭ್ಯಗಳಿಂದ, ಯಾವ ಚಿಕಿತ್ಸೆಯನ್ನು ನೀಡಬೇಕೆನ್ನುವುದನ್ನು ಈ ಖಾಸಗಿ ಚಕ್ರವ್ಯೂಹವೇ ನಿರ್ಧರಿಸುತ್ತದೆ. ಚಕ್ರವ್ಯೂಹದೊಳಗೆ ಪ್ರವೇಶಿಸಿದ ರೋಗಿಗೆ ನಿರ್ಧಾರದ ಸ್ವಾತಂತ್ರ್ಯವಿಲ್ಲ, ಹೊರಗಿದ್ದವರಿಗೆ ಚಿಕಿತ್ಸೆಯೇ ಸಾಧ್ಯವಿಲ್ಲ ಎನ್ನುವಂತಹಾ ಅತ್ತ ದರಿ, ಇತ್ತ ಪುಲಿ ಎಂಬ ವ್ಯವಸ್ಥೆ ಅಲ್ಲಿದೆ. ಬ್ರಿಟನ್ನಿನಲ್ಲಿ ಸಂಪೂರ್ಣವಾಗಿ ಸರಕಾರೀ ಸ್ವಾಮ್ಯದ ಉಚಿತ ವೈದ್ಯಕೀಯ ಚಿಕಿತ್ಸಾ ವ್ಯವಸ್ಥೆಯಿದೆ. ಅಮೆರಿಕಾದಲ್ಲಿ ಅನಗತ್ಯವಾಗಿ ಪರೀಕ್ಷೆಗಳನ್ನು ನಡೆಸುವುದಕ್ಕೆ ಹಾಗೂ ಬ್ರಿಟನ್ ನಲ್ಲಿ ಮಾನವೀಯ ಕಾಳಜಿಯೊಂದಿಗೆ ಅಗತ್ಯವಿದ್ದಾಗಲಷ್ಟೇ ಪರೀಕ್ಷೆಗಳನ್ನು ನಡೆಸುವುದಕ್ಕೆ ಇದೇ ಕಾರಣವಿರಬಹುದಲ್ಲವೆ? ಹಾಗಿದ್ದರೆ, ಹೃದಯಹೀನತೆಯಿರುವುದು ಆಧುನಿಕ ವೈದ್ಯ ವೃತ್ತಿಗಲ್ಲ, ಅದನ್ನು ನಿಯಂತ್ರಿಸುವ ವ್ಯವಸ್ಥೆಗೆ ಎನ್ನಬೇಕಲ್ಲವೆ?

ನಮ್ಮ ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಖಾಸಗೀಕರಣದಲ್ಲಿ ಉಚ್ಛ ಸ್ಥಾನದಲ್ಲಿರುವ ಸಂಸ್ಥೆಯೊಂದರಲ್ಲಿ ಬಹಳ ವರ್ಷಗಳ ಕಾಲ ಆಸ್ಥೆಯಿಂದ ದುಡಿದು ಉನ್ನತ ಸ್ಥಾನಗಳನ್ನಲಂಕರಿಸಿದ ಪ್ರೊ. ಹೆಗ್ಡೆಯವರಿಗೆ ಈ ವಿಷಯ ತಿಳಿಯದೇ? ನಮ್ಮ ವೈದ್ಯಕೀಯ ಶಿಕ್ಷಣವೂ, ವೈದ್ಯಕೀಯ ವೃತ್ತಿಯೂ ಹೆಚ್ಚು ಹೆಚ್ಚಾಗಿ ಖಾಸಗೀಕರಣಗೊಂಡಂತೆ, ವೈದ್ಯರ ವ್ಯಾಪಾರೀ ಮನೋವೃತ್ತಿಯು ಹೆಚ್ಚುವುದರಲ್ಲಿ, ಇನ್ನಷ್ಟು ಹೃದಯಹೀನಗೊಳ್ಳುವುದರಲ್ಲಿ ಸಂದೇಹವಿಲ್ಲ. ಸರಕಾರೀ ವೈದ್ಯಕೀಯ ಕಾಲೇಜುಗಳೆಲ್ಲಾ ಕೀಳು ದರ್ಜೆಯವುಗಳೆಂದು ಹೀಯಾಳಿಸುತ್ತಾ, ತಮ್ಮ ಕಾಲೇಜು ವಿಶ್ವ ದರ್ಜೆಯದೆಂದು ದಿನನಿತ್ಯ ಬುರುಡೆ ಬಿಡುವ ಚಾಳಿಯನ್ನು ಮೈಗೂಡಿಸಿಕೊಂಡಿರುವ ಖಾಸಗಿ ಕಾಲೇಜುಗಳ ಮುಖ್ಯಸ್ಥರು ಸಾಕಷ್ಟಿದ್ದಾರೆ. ತಮ್ಮಲ್ಲಿರುವ ವಿದ್ಯಾರ್ಥಿಗಳಿಗೆ ಪುಸ್ತಕದ ಅಬಕಡವನ್ನಷ್ಟೇ ಕಲಿಸಿ, ಹಣ ಕೊಟ್ಟು ಕಾಲೇಜಿಗೆ ಸೇರಿದ ವಿದ್ಯಾರ್ಥಿಗಳಿಗೆ ನಿರಾಯಾಸವಾಗಿ ವೈದ್ಯಕೀಯ ಪದವಿ ದೊರೆಯುವಂತಾಗಲು ಪ್ರಶ್ನೆ ಭಂಡಾರಗಳನ್ನೂ, ಉತ್ತರ ಭಂಡಾರಗಳನ್ನೂ ಒದಗಿಸಿ ವೈದ್ಯ ಶಿಕ್ಷಣದ ಆಶಯಗಳನ್ನೇ ಈ ಕಾಲೇಜುಗಳು ಮಣ್ಣುಪಾಲು ಮಾಡಿರುವಾಗ, ಮಾನವೀಯ ಮೌಲ್ಯಗಳಲ್ಲದಿದ್ದರೂ ಕನಿಷ್ಠ ಪಕ್ಷ ಸರಿಯಾದ ವೈದ್ಯ ಶಿಕ್ಷಣವನ್ನಾದರೂ ನೀಡಬೇಕೆಂಬ ಬದ್ಧತೆಯನ್ನಾದರೂ ಹೊಂದಿರುವಂತೆ ಅವುಗಳ ಮೇಲೆ ಒತ್ತಡ ಹೇರಲು ಪ್ರೊ. ಹೆಗ್ಡೆಯವರಿಗಿಂತ ಹೆಚ್ಚು ನುರಿತವರೂ, ಗೌರವಾನ್ವಿತರೂ ಬೇರಾರಿರಬಹುದು? ಇಂದು ಖಾಸಗೀ ವೈದ್ಯಕೀಯ ಕಾಲೇಜುಗಳು ಅಣಬೆಗಳಂತೆ ಹುಟ್ಟುತ್ತಿರುವಾಗ ಅಂತಹಾ ವ್ಯವಸ್ಥೆಯನ್ನು ಬೆಳೆಸಿ ಪೋಷಿಸಿ ಅದಕ್ಕೆ ನಾಯಕತ್ವ ನೀಡಿದ್ದವರು ಈ ಅವನತಿಗೆ ಕಿಂಚಿತ್ತಾದರೂ ಜವಾಬ್ದಾರಿಯನ್ನು ಒಪ್ಪಿಕೊಳ್ಳುವುದು ಒಳ್ಳೆಯದಲ್ಲವೇ?

ಆಧುನಿಕ ವೈದ್ಯ ವಿಜ್ಞಾನದಲ್ಲಿ ವ್ಯಾಪಾರೀಕರಣದ ಹುಳುಕುಗಳಿವೆಯೆಂದ ಮಾತ್ರಕ್ಕೆ ಬದಲಿ ಚಿಕಿತ್ಸಾ ಪದ್ಧತಿಗಳನ್ನು ಉತ್ತೇಜಿಸುವುದು ಅಸಮಂಜಸವೂ, ಅನ್ಯಾಯವೂ ಆಗುತ್ತದೆ. ಅತ್ಯಾಧುನಿಕ ತಂತ್ರಜ್ಞಾನವನ್ನೂ, ವೈಜ್ಞಾನಿಕ ವಿಧಾನಗಳನ್ನೂ ಅಳವಡಿಸಿಕೊಂಡಿರುವ ಆಧುನಿಕ ವೈದ್ಯ ವಿಜ್ಞಾನವು ಸಹಜವಾಗಿಯೇ ಸ್ವಲ್ಪ ವೆಚ್ಚದಾಯಕವಾಗಿರುತ್ತದೆ; ಅನಗತ್ಯವಾದ ಪರೀಕ್ಷೆಗಳನ್ನು ಹಾಗೂ ಔಷಧೋಪಚಾರಗಳನ್ನೂ ಹೊರತು ಪಡಿಸಿದರೆ ಆಧುನಿಕ ವೈದ್ಯ ವಿಜ್ಞಾನದಲ್ಲಿ ಖರ್ಚಿಗಿಂತ ಪ್ರಯೋಜನವೇ ಹೆಚ್ಚಿರುತ್ತದೆ ಎನ್ನುವುದರಲ್ಲಿ ಸಂದೇಹವಿಲ್ಲ. ವೈಜ್ಞಾನಿಕ ವಿಧಾನಗಳ ಪರಿವೆಯಿಲ್ಲದ, ಪರಿಣಾಮಗಳ ಖಾತರಿಯಿಲ್ಲದ, ಅಡ್ಡ ಪರಿಣಾಮಗಳ ಅರಿವಿಲ್ಲದ ಬದಲಿ ಚಿಕಿತ್ಸಾ ಪದ್ಧತಿಗಳು ಆಧುನಿಕ ವೈದ್ಯ ವಿಜ್ಞಾನಕ್ಕೆ ಬದಲಿಯೂ ಅಲ್ಲ, ಪೂರಕವೂ ಅಲ್ಲ. ಗುಳಿಗೆಯಲ್ಲಿ ಔಷಧದಂಶವೇ ಇಲ್ಲದ ಹೋಮಿಯೋಪತಿ, ನಿಂತ ನೀರಾಗಿ ಬಿಟ್ಟಿರುವ ಆಯುರ್ವೇದ, ಚಿಕಿತ್ಸಾ ಪದ್ಧತಿಯೇ ಅಲ್ಲದ ಯೋಗ, ಪುರಾವೆಯಿಲ್ಲದ ಆಕುಪಂಕ್ಚರ್, ಪ್ರಭಾವ ಬೀರದ ಅಯಸ್ಕಾಂತ ಇತ್ಯಾದಿಗಳ ಮೊರೆ ಹೋಗುವುದರಿಂದ ಯಾವುದೇ ಕಾಹಿಲೆಯು ಗುಣ ಹೊಂದುವ ಖಾತರಿಯಿಲ್ಲ; ಬದಲಿಗೆ, ಕೆಲವು ಕಾಹಿಲೆಗಳು ಉಲ್ಬಣಗೊಂಡು ಮಾರಣಾಂತಿಕವಾಗಬಹುದು, ಈ ಔಷಧಗಳಿಂದ ಅಡ್ಡ ಪರಿಣಾಮಗಳೂ ಉಂಟಾಗಬಹುದು. ಒಟ್ಟಾರೆಯಾಗಿ, ರೋಗ ನಿದಾನದಲ್ಲಾಗಲೀ, ಚಿಕಿತ್ಸೆಯಲ್ಲಾಗಲೀ ವಿಶೇಷವಾದ ಪ್ರಯತ್ನಗಳೇನೂ ಇಲ್ಲದ ಹಾಗೂ ರೋಗವು ಗುಣ ಹೊಂದುವ ಬಗ್ಗೆ ಯಾವುದೇ ಖಾತರಿಗಳಿಲ್ಲದ ಇಂತಹಾ ಬದಲಿ ಚಿಕಿತ್ಸೆಗಳಿಂದ ರೋಗಿಯು ವೆಚ್ಚ ಮಾಡಿದ ಹಣಕ್ಕೆ ಸೂಕ್ತವಾದ ಪ್ರತಿಫಲ ದೊರೆಯುವುದೆನ್ನುವ ಖಾತರಿಯಿಲ್ಲದಿರುವುದರಿಂದ ಈ ಬದಲಿ ಚಿಕಿತ್ಸೆಗಳು ಆಧುನಿಕ ವೈದ್ಯ ವಿಜ್ಞಾನಕ್ಕಿಂತ ಅಗ್ಗವೆಂದು ಹೇಳುವುದು ಸರಿಯಾಗದು.

ಆಧುನಿಕ ವೈದ್ಯ ವೃತ್ತಿಯನ್ನು ನಡೆಸಿಕೊಂಡು, ಆಧುನಿಕ ವೈದ್ಯ ವಿಜ್ಞಾನವನ್ನು ಕಲಿಸುತ್ತಾ, ಅಂತಹಾ ವಿದ್ಯಾಲಯದ ಮುಖ್ಯಸ್ಥರಾಗಿದ್ದುಕೊಂಡು ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲದ ಹೋಮಿಯೋಪತಿ, ಆಯುರ್ವೇದ, ಅಯಸ್ಕಾಂತಗಳಂತಹಾ ಬದಲಿ ಚಿಕಿತ್ಸಾ ಪದ್ಧತಿಗಳನ್ನು ಬೆಂಬಲಿಸುವುದು ವಿಪರ್ಯಾಸವಷ್ಟೇ ಅಲ್ಲ, ಆಧುನಿಕ ಹಾಗೂ ಬದಲಿ ವ್ಯವಸ್ಥೆಗಳೆರಡಕ್ಕೂ ಅಪಚಾರ ಮಾಡಿದಂತಾಗುತ್ತದೆ. ಬದಲಿ ಚಿಕಿತ್ಸಕರು ಹೊಂದಿರಬಹುದಾದ ಅನುಭೂತಿಯಿಂದಾಗಿಯೇ ರೋಗಿಗಳು ಅವರತ್ತ ಆಕರ್ಷಿತರಾಗುತ್ತಾರೆನ್ನುವುದಾದರೆ, ಅದೇ ಅನುಭೂತಿಯನ್ನು ಹಾಗೂ ಮಾನವೀಯ ಮೌಲ್ಯಗಳನ್ನು ಆಧುನಿಕ ವೈದ್ಯ ವಿಜ್ಞಾನದ ವಿದ್ಯಾರ್ಥಿಗಳಲ್ಲಿ ಮೂಡಿಸುವ ಪ್ರಯತ್ನಗಳನ್ನು ಅವರ ಶಿಕ್ಷಕರುಗಳೂ, ಅಂತಹಾ ವಿದ್ಯಾಲಯಗಳ ಮುಖ್ಯಸ್ಥರುಗಳೂ ಅದೇಕೆ ಮಾಡಿಲ್ಲ, ಮಾಡಬಾರದು? ಶಿಕ್ಷಣ ವ್ಯವಸ್ಥೆಯ ವೈಫಲಕ್ಕೆ ವಿಜ್ಞಾನವನ್ನು ದೂರಿ ಪ್ರಯೋಜನವೇನು? ನಿಜ ಹೇಳಬೇಕೆಂದರೆ, ಬದಲಿ ಪದ್ಧತಿಗಳ ಅಪ್ರಯೋಜಕತೆಯ ಬಗ್ಗೆ, ಅದರಿಂದಾಗಬಹುದಾದ ಹಾನಿಗಳ ಬಗ್ಗೆ, ಬದಲಿ ಚಿಕಿತ್ಸಕರ ಸೋಗಿನಲ್ಲಿ ವೈದ್ಯ ವೃತ್ತಿಯನ್ನು ನಡೆಸುತ್ತಿರುವ ಹಾಗೂ ಅಧುನಿಕ ವೈದ್ಯ ವಿಜ್ಞಾನದ ಔಷಧಗಳನ್ನು ಎಗ್ಗಿಲ್ಲದೆ ಬಳಸುತ್ತಿರುವವರ ಮೋಸದ ಬಗ್ಗೆ ಜನಸಾಮಾನ್ಯರಲ್ಲಿ ಅರಿವನ್ನು ಮೂಡಿಸುವುದು ಆಧುನಿಕ ವೈದ್ಯರೆಲ್ಲರ ಆದ್ಯ ಕರ್ತವ್ಯವಾಗಿದೆ.

ಅನಗತ್ಯವಾಗಿ ಆಂಜಿಯೋಗ್ರಾಂಗಳನ್ನು ಮಾಡಿಸುವವರ ಬಗ್ಗೆಯೂ, ತಮ್ಮ ಸಂದರ್ಶನ ಕೊಠಡಿಗಳಿಗೆ ಎರಡೆರಡು ಬಾಗಿಲುಗಳನ್ನಿಟ್ಟುಕೊಂಡು ರೋಗಿಗಳೆಲ್ಲರೂ ಕಡ್ಡಾಯವಾಗಿ ಹಿಂಬಾಗಿಲಿನಿಂದಲೇ ಪ್ರವೇಶಿಸಿ ಇಸಿಜಿ ಇತ್ಯಾದಿ ಮಾಡಿಸಿಕೊಂಡೇ ವೈದ್ಯರ ಕೊಠಡಿಯೊಳಕ್ಕೆ ಬರಬೇಕಾದಂತಹಾ ವ್ಯವಸ್ಥೆಯನ್ನು ಮಾಡಿಕೊಂಡಿರುವ ಆಧುನಿಕ ವೈದ್ಯರ ಬಗ್ಗೆಯೂ ಪ್ರೊ. ಹೆಗ್ಡೆಯವರು ಜನರನ್ನು ಎಚ್ಚರಿಸಿರುವುದು ಒಳ್ಳೆಯದೇ. ಮೇಲೆ ನೋಡಿ ಉಗುಳುವ ಬದಲು ಆಳವಾದ ಹಾಗೂ ಪ್ರಾಮಾಣಿಕವಾದ ಅಭಿಪ್ರಾಯ ಮಂಡನೆಯಾದರೆ ಎಲ್ಲರಿಗೂ ಸಹಾಯವಾದೀತೇನೋ?