ನೂತನ ವೈದ್ಯಕೀಯ ಶಿಕ್ಷಣ ಸಚಿವರಲ್ಲಿ ಅರಿಕೆಗಳು

ನೂತನ ವೈದ್ಯಕೀಯ ಶಿಕ್ಷಣ ಸಚಿವರಲ್ಲಿ ಅರಿಕೆಗಳು

ಸನ್ಮಾನ್ಯ ಡಾ. ಶರಣ್ ಪ್ರಕಾಶ್ ಪಾಟೀಲ್ ಅವರೇ, ಹೊಸ ವೈದ್ಯಕೀಯ ಶಿಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ತಮ್ಮನ್ನು ಅಭಿನಂದಿಸುತ್ತಾ, ರಾಜ್ಯದಲ್ಲಿ ವೈದ್ಯವೃತ್ತಿ ಹಾಗೂ ವೈದ್ಯಕೀಯ ಶಿಕ್ಷಣಗಳಿಗೆ ಸಂಬಂಧಿಸಿದ ಕೆಲವು ಅತಿ ಮುಖ್ಯ ವಿಷಯಗಳನ್ನು ತಮ್ಮ ಮುಂದಿಡುತ್ತಿದ್ದೇನೆ. 

ಮೊದಲನೆಯದಾಗಿ, ವೈದ್ಯವೃತ್ತಿಯನ್ನು ನಿಯಂತ್ರಿಸುವ ಕರ್ನಾಟಕ ವೈದ್ಯಕೀಯ ಪರಿಷತ್ತಿ(ಕೆಎಂಸಿ) ಗೆ ಉಚ್ಚ ನ್ಯಾಯಾಲಯದ ಆದೇಶದಂತೆ ಚುನಾವಣೆಗಳಾಗಿ ಮೂರೂವರೆ ವರ್ಷಗಳಾದರೂ ಅದರಲ್ಲಿ ಆಯ್ಕೆಯಾದ ಸದಸ್ಯರು ಅಧಿಕಾರ ವಹಿಸಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ, ಆಗಸ್ಟ್ 2011ರಲ್ಲಿ ಆಯ್ಕೆಯಾದವರೇ ಈಗಲೂ ಅದನ್ನು ನಿರ್ವಹಿಸುತ್ತಿದ್ದಾರೆ. ಕೆಎಂಸಿಯಲ್ಲಿ ನ್ಯಾಯಯುತವಾದ ವ್ಯವಸ್ಥೆಯನ್ನು ಸ್ಥಾಪಿಸಲು ಹೊಸ ಸರಕಾರವು ಆದ್ಯತೆ ನೀಡಬೇಕಾಗಿದೆ.

ಕರ್ನಾಟಕ ವೈದ್ಯಕೀಯ ಪರಿಷತ್ತು ವೃತ್ತಿನಿರತ ವೈದ್ಯರಿಂದಾದ ಲೋಪದೋಷಗಳ ಬಗ್ಗೆ, ವೃತ್ತಿಸಂಹಿತೆಯ ಉಲ್ಲಂಘನೆಯ ಬಗ್ಗೆ ಜನರ ಅಹವಾಲುಗಳನ್ನು ಆಲಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾದ ಸಾಂವಿಧಾನಿಕ ಸಂಸ್ಥೆಯಾಗಿದೆ. ಅದಕ್ಕೆ ಆಗಸ್ಟ್ 2011ರಲ್ಲಿ ಚುನಾವಣೆಗಳಾದ ಬಳಿಕ ಕೆಎಂಆರ್ ಕಾಯಿದೆಯ ಅನುಸಾರ 5 ವರ್ಷಗಳಲ್ಲಿ ಮತ್ತೆ ಚುನಾವಣೆಗಳು ನಡೆಯಬೇಕಾಗಿತ್ತು. ಆದರೆ ಸಕಾಲಕ್ಕೆ ಚುನಾವಣೆ ನಡೆಸುವ ಸೂಚನೆಗಳಿರದ ಕಾರಣಕ್ಕೆ ನಾವು ಬೆಂಗಳೂರಿನ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ 48880/2016 ಸಲ್ಲಿಸಿದೆವು. ಡಿಸೆಂಬರ್ 2018ರಲ್ಲಿ ಈ ರಿಟ್ ಅರ್ಜಿಯನ್ನು ಎತ್ತಿ ಹಿಡಿದ ಮಾನ್ಯ ನ್ಯಾಯಾಲಯವು ಎರಡು ತಿಂಗಳಲ್ಲಿ ಚುನಾವಣೆ ನಡೆಸಬೇಕೆಂದು ಆದೇಶ ನೀಡಿತು. ಆ ಬಳಿಕವೂ ಚುನಾವಣೆ ನಡೆಸುವ ಗೋಜಿಗೆ ಹೋಗದಿದ್ದಾಗ ನಾವು ಉಚ್ಚ ನ್ಯಾಯಾಲಯದಲ್ಲಿ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸಲ್ಲಿಸಿ ಮಾನ್ಯ ನ್ಯಾಯಾಲಯದ ಆದೇಶದಂತೆ ಕೊನೆಗೂ ಜನವರಿ 23, 2020ರಂದು ಚುನಾವಣೆ ನಡೆಯುವಂತೆ ಮಾಡುವಲ್ಲಿ ಯಶಸ್ವಿಯಾದೆವು. ಆದರೆ ರಾಜ್ಯದ ಶೇ. 70ರಷ್ಟು ವೈದ್ಯರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದ ಕಾರಣಕ್ಕೆ ನಾವು ಮತ್ತೆ ಮಾನ್ಯ ನ್ಯಾಯಾಲಯದ ಮೊರೆ ಹೋಗಿ ಅವನ್ನು ಸೇರಿಸುವಂತೆ ಹೋರಾಡಬೇಕಾಯಿತು. ಅಂತೂ ಜನವರಿ 23, 2020ರಂದು ಚುನಾವಣೆಗಳು ನಡೆದು ಫಲಿತಾಂಶಗಳು ಘೋಷಣೆಯಾದರೂ, ಉಚ್ಚ ನ್ಯಾಯಾಲಯದ ಕಲಬುರ್ಗಿ ಪೀಠದೆದುರು ಚುನಾವಣೆಯ ಸಿಂಧುತ್ವವನ್ನು ಪ್ರಶ್ನಿಸಿ ಅರ್ಜಿಯನ್ನು ಸಲ್ಲಿಸಲಾಗಿದ್ದು, ಇದುವರೆಗೂ ಅದು ಇತ್ಯರ್ಥವಾಗದೇ ಉಳಿದಿದೆ, 2011ರಲ್ಲಿ ಆಯ್ಕೆಯಾಗಿದ್ದ ಸದಸ್ಯರೇ ಈಗಲೂ ಕೆಎಂಸಿಯ ಕಾರ್ಯಭಾರವನ್ನು ನಿರ್ವಹಿಸುತ್ತಿದ್ದಾರೆ. ಆದ್ದರಿಂದ ಈ ಬಗ್ಗೆ ಕೂಡಲೇ ಗಮನ ಹರಿಸಿ, ನ್ಯಾಯಾಲಯದ ಮುಂದೆ ಜನಪರವಾಗಿ, ನ್ಯಾಯಪರವಾಗಿ ವಾದಿಸಬೇಕಾದ ತುರ್ತು ಅಗತ್ಯಕ್ಕೆ ಹೊಸ ಸಚಿವರು ಸ್ಪಂದಿಸಬೇಕಾಗಿದೆ.

ಕೆಎಂಸಿಗೆ ಜನವರಿ 23, 2020ರಂದು ಚುನಾವಣೆಗಳು ನಡೆಯುವುದಕ್ಕೆ ಮೂರು ದಿನ ಮೊದಲು, ಅಂದರೆ ಜನವರಿ 20, 2020ರಂದು, ಹಿಂದಿನ ಸರಕಾರವು ಐವರು ಸದಸ್ಯರನ್ನು ನಾಮನಿರ್ದೇಶನ ಮಾಡಿತ್ತು, ಅವರೆಲ್ಲರೂ ಪುರುಷರೇ ಆಗಿದ್ದರು, ಅವರಲ್ಲಿ ನಾಲ್ವರು ಮೇಲ್ವರ್ಗಗಳವರೇ ಆಗಿದ್ದರು. ಈ ಪ್ರಕ್ರಿಯೆಯು ಸಂಪೂರ್ಣವಾಗಿ ನ್ಯಾಯಬಾಹಿರವಾಗಿದ್ದುದರಿಂದ ಇದನ್ನು ಪ್ರಶ್ನಿಸಿ ಫೆಬ್ರವರಿ 11, 2020ರಂದು ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ 3758/2020 ಅನ್ನು ಸಲ್ಲಿಸಲಾಯಿತು. ಆ ಅರ್ಜಿಯ ಮೇಲೆ ಮಾನ್ಯ ನ್ಯಾಯಾಲಯವು ಡಿಸೆಂಬರ್ 23, 2020ರಂದು ನೀಡಿದ ಆದೇಶದನುಸಾರ ನಾಮನಿರ್ದೇಶನದ ಆದೇಶವನ್ನು ಸರಕಾರವು ಹಿಂಪಡೆಯಬೇಕಾಯಿತು. ಬಳಿಕ ಕಲ್ಬುರ್ಗಿ ಪೀಠದೆದುರು ಸಲ್ಲಿಸಲಾಗಿದ್ದ ರಿಟ್ ಅರ್ಜಿ 201302/2021 (ಐಎ1)ರಲ್ಲಿ ಮಾನ್ಯ ನ್ಯಾಯಾಲಯವು ನವೆಂಬರ್ 10, 2021ರಂದು ಆದೇಶ ನೀಡಿ, ಇನ್ನು ಮುಂದಕ್ಕೆ ಕೆಎಂಸಿಗೆ ನಾಮನಿರ್ದೇಶನ ಮಾಡುವಾಗಲೆಲ್ಲ 2017ರ ಕೆಎಂಆರ್ ಕಾಯಿದೆಯ ವಿಧಿ 3(3) ಅನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದೂ, ನಾಮನಿರ್ದೇಶನವು ಚುನಾವಣೆಯ ಫಲಿತಾಂಶದ ಬಳಿಕವೇ ಆಗಬೇಕೆಂದೂ, ಚುನಾಯಿತರಲ್ಲಿ ಪ್ರಾತಿನಿಧ್ಯ ಪಡೆಯಲಾಗದ ಮಹಿಳೆಯರು ಮತ್ತು ಇತರ ವರ್ಗಗಳವರನ್ನು ಪರಿಗಣಿಸಬೇಕೆಂದೂ ಸ್ಪಷ್ಟವಾಗಿ ಹೇಳಿದೆ. ಆದ್ದರಿಂದ ಹೊಸ ಸರಕಾರವು ಈ ಆದೇಶವನ್ನು ಪರಿಗಣಿಸಿ, ಜನವರಿ 2020ರಲ್ಲಿ ನಡೆದ ಚುನಾವಣೆಯಲ್ಲಿ ಮಹಿಳೆಯರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ಯಾರೊಬ್ಬರೂ ಆಯ್ಕೆಯಾಗದೇ ಇರುವುದರಿಂದ ಈಗ ಕೆಎಂಸಿಯಲ್ಲಿ ಖಾಲಿ ಉಳಿದಿರುವ ನಾಲ್ಕು ನಾಮನಿರ್ದೇಶನದ ಸ್ಥಾನಗಳಿಗೆ ಈ ವರ್ಗಗಳಿಗೆ ಸೇರಿರುವ ಪ್ರಾಮಾಣಿಕರಾದ, ನೈತಿಕವಾಗಿ ಸಬಲರಾಗಿರುವ ವೈದ್ಯರನ್ನು ನೇಮಿಸುವುದಕ್ಕೆ ಕ್ರಮ ಕೈಗೊಳ್ಳಬೇಕು.

ಎರಡನೆಯದಾಗಿ, ಕರ್ನಾಟಕ ವೈದ್ಯಕೀಯ ಪರಿಷತ್ತು ರಾಜ್ಯದ ವೈದ್ಯರಿಗೆ ಸಿಎಂಇ ಆಧಾರಿತ ಮರುನೋಂದಣಿಯನ್ನು ಹೇರಿರುವುದನ್ನು ಈ ಕೂಡಲೇ ತಡೆಹಿಡಿಯಬೇಕು.

ಕರ್ನಾಟಕ ವೈದ್ಯಕೀಯ ಪರಿಷತ್ತು 2013ರ ಕೊನೆಗೆ ಕರ್ನಾಟಕದ ವೈದ್ಯರೆಲ್ಲರೂ ತಮ್ಮ ನೋಂದಣಿಯನ್ನು ಮತ್ತೆ ನವೀಕರಿಸಬೇಕು, ಅದಕ್ಕಾಗಿ ಸಿಎಂಇ ಕಾರ್ಯಕ್ರಮಗಳಿಗೆ ಹಾಜರಾಗಿ ವರ್ಷಕ್ಕೆ 6 ಅಂಕಗಳಂತೆ 5 ವರ್ಷಗಳಲ್ಲಿ 30 ಅಂಕಗಳನ್ನು ಪಡೆಯಬೇಕು, ಈ ಸಿಎಂಇ ಕಾರ್ಯಕ್ರಮಗಳಿಗೆ ನಿರೀಕ್ಷಕರಿರಬೇಕು ಎಂದು ಒತ್ತಡ ಹಾಕಲಾರಂಭಿಸಿತ್ತು. ಇವಕ್ಕೆ ಆಧಾರಗಳೇನೆಂದು ಫೆಬ್ರವರಿ 2014ರಲ್ಲಿ ಮಾಹಿತಿ ಕಾಯಿದೆಯಡಿಯಲ್ಲಿ ಪ್ರಶ್ನಿಸಿದಾಗ, ಆಧಾರಗಳೇನೂ ಇಲ್ಲ, ಆದರೂ ಇವನ್ನು ಮಾಡಲಾಗುತ್ತಿದೆ ಎಂಬ ಉತ್ತರವನ್ನು ಕೆಎಂಸಿ ನೀಡಿತು. ಬಳಿಕ, ಐದು ವರ್ಷಗಳಾಗುವ ಮೊದಲೇ, 2016ರ ಮೇ ತಿಂಗಳಲ್ಲಿ, ಮರುನೋಂದಣಿಯ ಪ್ರಕ್ರಿಯೆಯನ್ನು ಯಾವುದೇ ಅಧಿಕೃತ ಆದೇಶಗಳಿಲ್ಲದೆಯೇ ಆರಂಭಿಸಲು ಮುಂದಾಯಿತು. ರಾಜ್ಯದ ವೈದ್ಯರು ಒಗ್ಗಟ್ಟಾಗಿ ಇದನ್ನು ವಿರೋಧಿಸಿದರು, ಮಾನ್ಯ ಉಚ್ಚ ನ್ಯಾಯಾಲಯದ ಮೆಟ್ಟಲನ್ನೂ ಏರಿ, ಮರುನೋಂದಣಿಯಾಗದವರ ಹೆಸರನ್ನು ವೈದ್ಯರ ನೋಂದಾವಣೆಯ ದಾಖಲೆಯಿಂದ ಅಳಿಸದಂತೆ ತಡೆಯಾಜ್ಞೆಯನ್ನು ಪಡೆದುಕೊಂಡರು. ಮರುನೋಂದಣಿಗೆ ಅದುವರೆಗೆ ರಾಜ್ಯದ ಕಾನೂನಿನ ಮಾನ್ಯತೆಯಿಲ್ಲದಿದ್ದುದರಿಂದ 2017ರಲ್ಲಿ ಕರ್ನಾಟಕ ವೈದ್ಯಕೀಯ ನೋಂದಣಿ ಕಾಯಿದೆ (ಕೆಎಂಆರ್ ಕಾಯಿದೆ) ಗೆ ತಿದ್ದುಪಡಿಯನ್ನು ತರಲಾಯಿತು, ಇದನ್ನೂ ಕೂಡ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. (ರಿಟ್ ಅರ್ಜಿಗಳು 65832-34/2016, 65861-65862/2016, 407-421/2017, 820-832/2017, 954-983/2017, 1584-93/2017, 21234/2017, 40580/2017).

ನಂತರದಲ್ಲಿ ಕೇಂದ್ರದಲ್ಲಿದ್ದ ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಯನ್ನು ವಿಸರ್ಜಿಸಿ ಅದರ ಬದಲಿಗೆ 2019ರಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ರಚನೆಯಾಯಿತು. ಎನ್‌ಎಂಸಿ ರಚನೆಗೆ ಮೊದಲು ಪ್ರಕಟಿಸಿದ್ದ ವರದಿಯಲ್ಲಿ ವೈದ್ಯರ ಮರುನೋಂದಣಿಗೆ ಪರೀಕ್ಷೆಗಳನ್ನು ನಡೆಸುವುದಕ್ಕೆ ಕಾಲವಿನ್ನೂ ಪಕ್ವವಾಗಿಲ್ಲವೆಂದೂ, ಅವುಗಳ ಅಗತ್ಯವಿಲ್ಲವೆಂದೂ ಸ್ಪಷ್ಟವಾಗಿ ಹೇಳಲಾಗಿತ್ತು. ನಂತರ ಜಾರಿಗೆ ಬಂದ ಎನ್‌ಎಂಸಿ ಕಾಯಿದೆಯಲ್ಲೂ ಮರುನೋಂದಣಿಯ ಬಗ್ಗೆಯಾಗಲೀ, ಸಿಎಂಇ ಅಥವಾ ಇತರ ಪರೀಕ್ಷೆಗಳ ಬಗ್ಗೆಯಾಗಲೀ ಏನನ್ನೂ ಹೇಳಲಾಗಿಲ್ಲ. ಆದರೆ, ಕಳೆದ ಎಪ್ರಿಲ್-ಮೇ 2022ರಲ್ಲಿ ಎನ್‌ಎಂಸಿ ಕಾಯಿದೆಯಡಿಯಲ್ಲಿ ವೈದ್ಯರ ನೋಂದಣಿ ಮತ್ತು ಪರವಾನಿಗೆ ನಿಯಮ ಹಾಗೂ ವೈದ್ಯರ ವೃತ್ತಿ ಸಂಹಿತೆ ನಿಯಮಗಳ ಕರಡುಗಳನ್ನು ಪ್ರಕಟಿಸಿದಾಗ, ವೃತ್ತಿ ನೋಂದಣಿ ಮತ್ತು ಪರವಾನಿಗೆ ಎಂಬವನ್ನು ಪ್ರತ್ಯೇಕಿಸಿ, ಪರವಾನಿಗೆಯನ್ನು ಯಾವುದಾದರೂ ಒಂದು ರಾಜ್ಯದಲ್ಲಿ ಪಡೆಯಬೇಕೆಂದೂ, ಐದು ವರ್ಷಗಳಿಗೊಮ್ಮೆ ನವೀಕರಿಸಬೇಕೆಂದೂ, ಅದಕ್ಕೆ ಸಿಎಂಇ ಅಂಕಗಳನ್ನು ಪಡೆಯಬೇಕೆಂದೂ ಪ್ರಸ್ತಾವಗಳನ್ನು ಸೇರಿಸಲಾಯಿತು. ನಾವು ಕರ್ನಾಟಕದಲ್ಲಿ ಈ ಬಗ್ಗೆ ನಡೆಸಿದ್ದ ನ್ಯಾಯಿಕ ಹೋರಾಟಗಳನ್ನು ಉಲ್ಲೇಖಿಸಿ ಈ ಎಲ್ಲಾ ಪ್ರಸ್ತಾವಗಳಿಗೆ ಸಕಾಲದಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸಿದ್ದೆವು. 

ಈಗ ಮೇ 10, 2023ರಂದು ನೋಂದಣಿ ಮತ್ತು ಪರವಾನಿಗೆಗಳ ನಿಯಮಗಳ ಅಂತಿಮ ರೂಪವು ಪ್ರಕಟವಾಗಿದ್ದು, ಪರವಾನಿಗೆ ನವೀಕರಣಕ್ಕೆ ಸಿಎಂಇ ಅಂಕಗಳನ್ನು ಪಡೆಯಬೇಕೆಂಬ ಪ್ರಸ್ತಾವವನ್ನು ನಾವು ಆಗ್ರಹಿಸಿದ್ದಂತೆ ಸಂಪೂರ್ಣವಾಗಿ ಕೈಬಿಡಲಾಗಿದೆ. ಇದರೊಂದಿಗೆ ಕರ್ನಾಟಕ ವೈದ್ಯಕೀಯ ಪರಿಷತ್ತಿನ ಸಿಎಂಇ ಆಧಾರಿತ ಮರುನೋಂದಣಿಯ ವಿರುದ್ಧ ನಾವು ನಡೆಸಿದ್ದ ಹೋರಾಟಗಳು ನ್ಯಾಯಬದ್ಧವಾಗಿದ್ದವು ಎನ್ನುವುದಕ್ಕೆ ಸಮರ್ಥನೆಯು ದೊರೆತಂತಾಗಿದೆ. ಹಾಗಾಗಿ ಕೆಎಂಸಿಯು ಈಗ ಮಾಡುತ್ತಿರುವ ಮರುನೋಂದಣಿಗಳನ್ನು ನಿಲ್ಲಿಸುವುದಕ್ಕೆ ಮತ್ತು 2017ರಲ್ಲಿ ಕರ್ನಾಟಕ ವೈದ್ಯಕೀಯ ನೋಂದಣಿ ಕಾಯಿದೆಗೆ ಈ ಬಗ್ಗೆ ಮಾಡಲಾಗಿರುವ ಎಲ್ಲಾ ತಿದ್ದುಪಡಿಗಳನ್ನು ಕೂಡಲೇ ಹಿಂಪಡೆದು ಪರಿಷ್ಕರಿಸುವುದಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

ಎನ್‌ಎಂಸಿ ಪ್ರಕಟಿಸಿರುವ ಈ ಹೊಸ ನಿಯಮಗಳಲ್ಲಿ ವೈದ್ಯವೃತ್ತಿಯ ಸ್ವಾತಂತ್ರ್ಯಕ್ಕೆ ಧಕ್ಕೆಯುಂಟು ಮಾಡುವ ನಿಯಮಗಳನ್ನು ರಾಜ್ಯವು ವಿರೋಧಿಸುವುದು ಕೂಡಾ ಅತ್ಯಗತ್ಯವಾಗಿದೆ. 

ಎನ್‌ಎಂಸಿಯ ನೋಂದಣಿ ಮತ್ತು ಪರವಾನಿಗೆಗಳ ಹೊಸ ನಿಯಮಗಳಲ್ಲಿ ವೈದ್ಯವೃತ್ತಿಯ ಪರವಾನಿಗೆಯನ್ನು ಒಂದು ರಾಜ್ಯದಿಂದ ಪಡೆಯಬೇಕು, ಇನ್ನೊಂದು ರಾಜ್ಯಕ್ಕೆ ಹೋಗುವುದಿದ್ದರೆ ಅದನ್ನು ಅಲ್ಲಿಗೆ ವರ್ಗಾಯಿಸಬೇಕು ಎಂಬ ನಿಯಮಗಳನ್ನು ನಮ್ಮ ವಿರೋಧದ ಹೊರತಾಗಿಯೂ ಸೇರಿಸಲಾಗಿದೆ. ಈ ಹಿಂದೆ ಇದ್ದ ಭಾರತೀಯ ವೈದ್ಯಕೀಯ ಮಂಡಳಿಯ ಕಾಯಿದೆ 1956ರ ವಿಧಿ 27ರಲ್ಲಿ ಯಾವುದೇ ರಾಜ್ಯದಲ್ಲಿ ನೋಂದಾಯಿತನಾದ ವೈದ್ಯನಿಗೆ ದೇಶದ ಯಾವುದೇ ಭಾಗದಲ್ಲಾದರೂ ವೃತ್ತಿ ನಡೆಸುವ ಸ್ವಾತಂತ್ರ್ಯವನ್ನು ಕಲ್ಪಿಸಲಾಗಿತ್ತು. ಈಗ ಈ ಹೊಸ ನಿಯಮಗಳನುಸಾರ ಓರ್ವ ವೈದ್ಯನು ಒಂದೇ ರಾಜ್ಯದಲ್ಲಿ ವೃತ್ತಿನಿರತನಾಗಿರಬೇಕಾಗುತ್ತದೆ. ಇದರಿಂದಾಗಿ ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಸೇವೆ ಸಲ್ಲಿಸಬೇಕಾದ ವಿಶೇಷ ಪರಿಣತಿಯುಳ್ಳ ವೈದ್ಯರು, ಗಡಿಪ್ರದೇಶಗಳಲ್ಲಿ ವೃತ್ತಿನಿರತರಾಗಿರುವ ವೈದ್ಯರು ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ತಮ್ಮ ಸೇವೆಯನ್ನು ಒದಗಿಸಲು ಸಾಧ್ಯವಾಗುವುದಿಲ್ಲ, ಮಾತ್ರವಲ್ಲ, ಈ ಹಿಂದಿನ ಕಾಯಿದೆಯಲ್ಲಿ ಹೊಂದಿದ್ದ ಸ್ವಾತಂತ್ರ್ಯವನ್ನು ಕಳೆದುಕೊಂಡಂತೆಯೂ ಆಗುತ್ತದೆ. ಆದ್ದರಿಂದ ಈ ನಿಯಮವನ್ನು ಕೈಬಿಡುವಂತೆ ಕೇಂದ್ರ ಸರಕಾರ ಹಾಗೂ ಎನ್‌ಎಂಸಿ ಮುಂದೆ ಒತ್ತಾಯಿಸಿ ಈ ನಿಯಮವನ್ನು ರದ್ದು ಪಡಿಸುವಂತೆ ಮಾಡುವುದು ಅತ್ಯಗತ್ಯವಾಗಿದೆ.

ನಾಲ್ಕನೆಯದಾಗಿ, ಎನ್‌ಎಂಸಿ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿಗಳ ಮೂಲಕ ಆಧುನಿಕ ವೈದ್ಯಕೀಯ ಶಿಕ್ಷಣವನ್ನು ಕೆಡಿಸುವ ಮತ್ತು ರಾಜ್ಯದ ವಿದ್ಯಾರ್ಥಿಗಳ ಹಕ್ಕುಗಳನ್ನೂ, ಅವಕಾಶಗಳನ್ನೂ ಕಸಿದುಕೊಳ್ಳುವ ಪ್ರಯತ್ನಗಳಾಗುತ್ತಿರುವುದನ್ನು ರಾಜ್ಯವು ಕಟುವಾಗಿ ವಿರೋಧಿಸಲೇಬೇಕು. 

ಕೇಂದ್ರ ಸರಕಾರವು 2016ರಲ್ಲಿ ಎನ್‌ಎಂಸಿ ರಚಿಸುವ ಪ್ರಸ್ತಾವವನ್ನಿಟ್ಟಾಗಲೇ ಅದರಿಂದ ಅದರಿಂದಾಗಬಹುದಾದ ಸಮಸ್ಯೆಗಳ ಬಗ್ಗೆ ವಿವರವಾದ ಆಕ್ಷೇಪಣೆಗಳನ್ನು ರಾಜ್ಯ ಸರಕಾರಕ್ಕೂ, ಕೇಂದ್ರ ಸರಕಾರಕ್ಕೂ, ಭಾರತೀಯ ವೈದ್ಯಕೀಯ ಸಂಘದ ಎಲ್ಲಾ ರಾಜ್ಯ ಶಾಖೆಗಳಿಗೂ ಸಲ್ಲಿಸಲಾಗಿತ್ತು. ಎನ್‌ಎಂಸಿಯ ಸದಸ್ಯರು ಚುನಾಯಿತರಲ್ಲದವರಾಗುವುದು, ರಾಜ್ಯಗಳಿಗೆ ಸೂಕ್ತ  ಪ್ರಾತಿನಿಧ್ಯ ಇಲ್ಲವಾಗುವುದು, ಅದರ ಎಲ್ಲಾ ನಿರ್ಧಾರಗಳೂ ಕೇಂದ್ರ ಸರಕಾರದ ಅಧೀನವಾಗುವುದು ಇತ್ಯಾದಿ ಅಪಾಯಗಳನ್ನು ಆಗಲೇ ಎತ್ತಿ ತೋರಿಸಲಾಗಿತ್ತು. ಐಎಂಎ ಮತ್ತು ಕೆಲವು ರಾಜ್ಯ ಸರಕಾರಗಳು ಒಂದಿಷ್ಟು ಪ್ರತಿರೋಧ ತೋರಿದವಾದರೂ 2019ರ ಚುನಾವಣೆಗಳ ಬೆನ್ನಿಗೆ ಎನ್‌ಎಂಸಿ ಕಾಯಿದೆಯು ಅನುಮೋದನೆಗೊಂಡು ಜಾರಿಯಾಯಿತು.

ಈಗ ಈ ಎನ್‌ಎಂಸಿಯ ಗತಿ ಹೇಗಿದೆಯೆಂದರೆ ಅದರ ವೈದ್ಯಕೀಯ ಸಲಹಾ ಮಂಡಳಿಯ 83 ಸ್ಥಾನಗಳಲ್ಲಿ 49 ಸ್ಥಾನಗಳು ಸೆಪ್ಟೆಂಬರ್ 24, 2022ರ ಬಳಿಕ ಖಾಲಿಯಿವೆ, ಅದರ ನಾಲ್ಕು ಮಂಡಳಿಗಳಲ್ಲಿ ತಲಾ ಐವರಂತೆ 20 ಸದಸ್ಯರು ಇರಬೇಕಾದಲ್ಲಿ ಒಂಬತ್ತು ಸ್ಥಾನಗಳು ಖಾಲಿಯಿವೆ, ವೈದ್ಯರ ನೋಂದಣಿ ಮತ್ತು ನಿಯಂತ್ರಣ ಮಾಡುವ ಮಂಡಳಿಗೆ ಅಧ್ಯಕ್ಷರೇ ಇಲ್ಲ! ಹೀಗೆ ಅಧ್ಯಕ್ಷರು-ಸದಸ್ಯರು ಇಲ್ಲದ ಮಂಡಳಿಗಳ ಎನ್‌ಎಂಸಿಯು ದೇಶದ ಆಧುನಿಕ ವೈದ್ಯವಿಜ್ಞಾನದ ಶಿಕ್ಷಣ ಮತ್ತು ವೃತ್ತಿಯನ್ನು ನಿಯಂತ್ರಿಸುತ್ತಿದೆ, ಇಂಥ ಮಂಡಳಿಗಳೇ ವೈದ್ಯಕೀಯ ಶಿಕ್ಷಣದ ಪಠ್ಯಕ್ರಮಗಳನ್ನು ರೂಪಿಸುತ್ತಿವೆ, ವೈದ್ಯಕೀಯ ಶಿಕ್ಷಣದ ಪ್ರವೇಶಕ್ಕೆ, ವೃತ್ತಿ ನೋಂದಣಿಗೆ, ನೀತಿ ಸಂಹಿತೆಗೆ ನಿಯಮಗಳನ್ನು ಮಾಡುತ್ತಿವೆ!

ಎನ್‌ಎಂಸಿಯ ಸ್ನಾತಕ ಶಿಕ್ಷಣ ಮಂಡಳಿಯು ಎಂಬಿಬಿಎಸ್ ವ್ಯಾಸಂಗಕ್ಕೆ ರೂಪಿಸಿರುವ ಹೊಸ ಪಠ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನುಸಾರ ಆಯುರ್ವೇದ, ಯೋಗ ಇತ್ಯಾದಿಗಳನ್ನು ಕಲಬೆರಕೆ ಮಾಡಿದೆ; ಚರಕ ಶಪಥ ಬೋಧನೆ, ಯೋಗಾಭ್ಯಾಸ, ಯೋಗ ದಿನಾಚರಣೆ, ಗಿಡಮೂಲಿಕೆ ನೆಡುವುದು ಮುಂತಾದವನ್ನು ಈಗಾಗಲೇ ಸೇರಿಸಲಾಗಿದೆ. ಹೀಗೆ ಆಧುನಿಕ ವೈದ್ಯಕೀಯ ಶಿಕ್ಷಣವನ್ನು ಹಾಳುಗೆಡವುದರಿಂದ ನಮ್ಮ ಭವಿಷ್ಯದ ವೈದ್ಯರು ಇಲ್ಲಿ ಕೆಲಸ ಮಾಡಲಾಗದು, ವಿದೇಶಗಳಲ್ಲೂ ಈ ಕಲಿಕೆಗೆ ಮನ್ನಣೆಯಿರದು, ಅವರೊಂದಿಗೆ ಚಿಕಿತ್ಸೆ ಹಾಗೂ ಸಂಶೋಧನಾ ಕಾರ್ಯಗಳಲ್ಲಿ ಸಹಯೋಗವೂ ಸಾಧ್ಯವಾಗದು. ನೆಹರೂ ಅವರ ದೂರದೃಷ್ಟಿಯಿಂದ ಅಂತರರಾಷ್ಟ್ರೀಯ ಮಟ್ಟಕ್ಕೆ ಸರಿದೂಗುವ ವೈದ್ಯಕೀಯ ಶಿಕ್ಷಣವನ್ನು ಭಾರತದಲ್ಲೇ ನೀಡಿದ್ದರಿಂದ ಇಂದು ಭಾರತೀಯ ವೈದ್ಯರು ಇಲ್ಲಷ್ಟೇ ಅಲ್ಲ, ವಿಶ್ವದ ಉದ್ದಗಲಕ್ಕೂ ಎಲ್ಲ ಬಗೆಯ ಮನ್ನಣೆ-ಗೌರವಗಳಿಗೆ ಪಾತ್ರರಾಗಿದ್ದು, ಈ ಹೊಸ ಪಠ್ಯದಿಂದ ಅವೆಲ್ಲವೂ ಮಣ್ಣುಪಾಲಾಗಲಿದೆ. ಆದ್ದರಿಂದ ಈ ವಿನಾಶಕಾರಿ ಕಲಬೆರಕೆಯನ್ನು ಗಟ್ಟಿಯಾಗಿ ವಿರೋಧಿಸುವ ಕೆಲಸವನ್ನು ರಾಜ್ಯ ಸರಕಾರವು ಮಾಡಬೇಕಾಗಿದೆ.

ವೈದ್ಯಕೀಯ ಶಿಕ್ಷಣದ ಎಂಬಿಬಿಎಸ್ ಪ್ರವೇಶಾತಿಗೆ ನೀಟ್ ಆಧಾರದಲ್ಲಿ ಈಗ ರಾಜ್ಯದಲ್ಲಿ ಕೌನ್ಸೆಲಿಂಗ್ ನಡೆಸಲಾಗುತ್ತಿರುವ 85% ಸೀಟುಗಳಿಗೆ ಇನ್ನು ದಿಲ್ಲಿಯಿಂದಲೇ ಕೌನ್ಸೆಲಿಂಗ್ ನಡೆಸುವುದಕ್ಕೆ ಸಿದ್ಧತೆಗಳಾಗುತ್ತಿವೆ ಎಂದು ವರದಿಯಾಗಿದೆ. ಇದರಿಂದ ರಾಜ್ಯದ ಸರಕಾರಿ ಕಾಲೇಜುಗಳಲ್ಲಿ ಮತ್ತು ಖಾಸಗಿ ಕಾಲೇಜುಗಳಲ್ಲಿರುವ ಸರಕಾರಿ ಕೋಟಾದ ಸೀಟುಗಳ ಮೇಲೆ ರಾಜ್ಯಕ್ಕಿರುವ ಹಕ್ಕು ನಷ್ಟವಾಗುವುದು ಮಾತ್ರವಲ್ಲ, ಕೌನ್ಸೆಲಿಂಗ್ ಮೇಲೆ ನಿಯಂತ್ರಣವೂ ತಪ್ಪಿ, ಎಲ್ಲಾ ಸೀಟುಗಳೂ ಕೇಂದ್ರ ಸರಕಾರದ ಪಾಲಾಗಲಿವೆ, ಮತ್ತು ರಾಜ್ಯದ ಎಲ್ಲಾ ಪ್ರತಿಭಾವಂತ ವಿದ್ಯಾರ್ಥಿಗಳ, ಅದರಲ್ಲೂ ಬಡ ಹಾಗೂ ಹಿಂದುಳಿದ ವರ್ಗಗಳ ಮಕ್ಕಳ ವೈದ್ಯಕೀಯ ಶಿಕ್ಷಣಾವಕಾಶಗಳ ಮೇಲೆ ತೀವ್ರ ಪರಿಣಾಮಗಳನ್ನು ಬೀರಲಿವೆ. ಆದ್ದರಿಂದ ರಾಜ್ಯದ ಸರಕಾರಿ ಕಾಲೇಜುಗಳಲ್ಲಿರುವ ಎಂಬಿಬಿಎಸ್ ಸೀಟುಗಳ ಮೇಲೆ ನಿಯಂತ್ರಣ ಸಾಧಿಸಲೆಳಸುವ ಕೇಂದ್ರದ ಈ ಹುನ್ನಾರಗಳನ್ನು ರಾಜ್ಯ ಸರಕಾರವು ಕಟುವಾಗಿ ವಿರೋಧಿಸಬೇಕಾಗಿದೆ. 

ಹಾಗೆಯೇ, ಸ್ನಾತಕ ಹಾಗೂ ಸ್ನಾತಕೋತ್ತರ ವ್ಯಾಸಂಗದ ಸೀಟುಗಳಲ್ಲಿ ಅಪಾರ ಶುಲ್ಕದ ಸೀಟುಗಳನ್ನು ಪಡೆಯುವವರಿಲ್ಲದೆ ಈಗ ಒಂದೆರಡು ವರ್ಷಗಳಿಂದ ಖಾಲಿಯುಳಿಯುತ್ತಿದ್ದು, ಅಷ್ಟೊಂದು ಶುಲ್ಕ ಭರಿಸಲಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅದರಿಂದ ಅನ್ಯಾಯವಾಗುತ್ತಿದೆ. ಆದ್ದರಿಂದ ಅಂಥ ಎಲ್ಲಾ ಸೀಟುಗಳನ್ನು ಕೊನೆಯ ಸುತ್ತಿನಲ್ಲಿ ಸರಕಾರದ ನಿಯಂತ್ರಣದ ಸೀಟುಗಳಾಗಿ ಪರಿವರ್ತಿಸಿ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಾಮಾಜಿಕ ನ್ಯಾಯದ ಮಾನದಂಡಗಳನ್ನೂ ಅನ್ವಯಿಸಿ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಬೇಕು.

ವಾರ್ತಾಭಾರತಿ, ಜೂನ್ 2, 2023: ನೂತನ ವೈದ್ಯಕೀಯ ಶಿಕ್ಷಣ ಸಚಿವರಲ್ಲಿ ಅರಿಕೆಗಳು

Last Updated: Sep 17 , 2023

Be the first to comment

Leave a Reply

Your email address will not be published.


*