ನಿಪ ಸೋಂಕು

ನಿಪ ಸೋಂಕು: ಆತಂಕ ಬೇಡ

(ದಿ ಸ್ಟೇಟ್.ನ್ಯೂಸ್ ನಲ್ಲಿ ಪ್ರಕಟಿತ)

ಚಿಕುಂಗುನ್ಯಾ, ಹಂದಿ ಜ್ವರ, ಹಕ್ಕಿ ಜ್ವರ, ಎಬೋಲ ಜ್ವರಗಳ ಸುದ್ದಿ ಅಡಗುತ್ತಿದ್ದಂತೆ, ನಿಪ ಎಂಬ ಹೆಸರಿನ ಇನ್ನೊಂದು ವೈರಸ್ ಸೋಂಕು ಉತ್ತರ ಕೇರಳದ ಕೋಯಿಕ್ಕೋಡ್ (ಕಲ್ಲಿಕೋಟೆ) ನಿಂದ ವರದಿಯಾಗಿದೆ. ಈ ಹೊಸ ನಿಪ ವೈರಸ್ ಸೋಂಕಿನಿಂದ ಈಗಾಗಲೇ 11 ಜನರು ಸಾವಿಗೀಡಾಗಿದ್ದು, ಇನ್ನೂ ಸುಮಾರು 9 ರೋಗಿಗಳು ಆಸ್ಪತ್ರೆಯಲ್ಲಿ ನಿಗಾವಣೆಯಲ್ಲಿದ್ದಾರೆ, ಇಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ, ಸೋಂಕು ತಗಲಿರುವ ಸಾಧ್ಯತೆಗಳಿರುವ 94 ಜನರಿಗೆ ಮನೆಯೊಳಗೇ ಇರುವಂತೆ ಸೂಚಿಸಲಾಗಿದೆ. ಸೋಂಕಿತರಾದವರೆಲ್ಲರೂ ಒಂದೇ ಕುಟುಂಬದವರು ಅಥವಾ ಅವರ ನಿಕಟ ಸಂಪರ್ಕಕ್ಕೆ ಬಂದವರಷ್ಟೇ ಆಗಿದ್ದು, ಬೇರೆ ಯಾರಿಗೂ ಸೋಂಕು ಹರಡಿಲ್ಲ, ಹಾಗೂ ಕಳೆದೆರಡು ದಿನಗಳಿಂದ ಯಾರಿಗೂ ಹೊಸದಾಗಿ ಸೋಂಕು ತಗಲಿರುವುದು ವರದಿಯಾಗಿಲ್ಲ. ಕೇರಳದ ಆ ಒಂದು ಹಳ್ಳಿಯ ಪ್ರಕರಣಗಳನ್ನು ಬಿಟ್ಟರೆ ಕರ್ನಾಟಕದಲ್ಲಾಗಲೀ, ದೇಶದ ಬೇರಾವ ಭಾಗದಲ್ಲೇ ಆಗಲಿ ನಿಪ ಸೋಂಕು ಹರಡಿಲ್ಲ. ದೇಶದೆಲ್ಲೆಡೆ ವೈದ್ಯರನ್ನೂ, ಆಸ್ಪತ್ರೆಗಳನ್ನೂ ನಿಪ ಸೋಂಕಿನ ಬಗ್ಗೆ ಎಚ್ಚರಿಸಿ, ಶಂಕಿತ ಪ್ರಕರಣಗಳಿದ್ದರೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಲಾಗಿದ್ದು, ಮಂಗಳೂರಿನ ಆಸ್ಪತ್ರೆಯೊಂದರಿಂದ ಇಬ್ಬರು ರೋಗಿಗಳ ಸ್ರಾವಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ, ಆದರೆ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರನುಸಾರ, ಆ ರೋಗಿಗಳಿಗೆ ನಿಪ ಸೋಂಕು ತಗಲಿರುವ ಸಾಧ್ಯತೆಗಳು ಕಡಿಮೆಯೇ. ಆದ್ದರಿಂದ ಯಾರೊಬ್ಬರೂ ನಿಪ ಸೋಂಕಿನ ಬಗ್ಗೆ ಆತಂಕಕ್ಕೀಡಾಗುವ ಅಗತ್ಯವೇ ಇಲ್ಲ.

ಕೇರಳದ ಕೋಯಿಕ್ಕೋಡಿಗೆ ಸುಮಾರು 40 ಕಿಮೀ ದೂರದಲ್ಲಿರುವ ಚಂಗರೋತ್ ಎಂಬ ಹಳ್ಳಿಯ ಕುಟುಂಬವೊಂದು ಆಕಸ್ಮಿಕವಾಗಿ ಈ ಸೋಂಕಿಗೆ ತುತ್ತಾಗಿದೆ. ಒಂದೇ ಕುಟುಂಬಕ್ಕೆ ಸೇರಿದ ಮೂವರು ಜ್ವರ, ತಲೆನೋವು ಇತ್ಯಾದಿ ಲಕ್ಷಣಗಳೊಂದಿಗೆ ಸಮೀಪದ ಪೆರಂಬ್ರ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದರು; ಬಳಿಕ ಅವರನ್ನು ಕೋಯಿಕ್ಕೋಡಿನ ಸುಸಜ್ಜಿತ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದಾಗ ಅವರಲ್ಲಿ ಮಿದುಳು ಜ್ವರದ ಲಕ್ಷಣಗಳಿದ್ದುದನ್ನು ಗಮನಿಸಿ, ನಿಪ ಸೋಂಕಿನ ಪರೀಕ್ಷೆಯನ್ನು ನಡೆಸಲಾಯಿತು, ಪುಣೆಯ ರಾಷ್ಟ್ರೀಯ ವೈರಾಣು ಸಂಶೋಧನಾ ಸಂಸ್ಥೆಯಲ್ಲಿ ನಿಪ ಸೋಂಕನ್ನು ದೃಢೀಕರಿಸಲಾಯಿತು. ಮೊದಲ ಸೋಂಕಿತರು ಮೇ 5ರಂದು ಸಾವನ್ನಪ್ಪಿದರೆ, ಆತನ ಸಹೋದರ ಮೇ 18ರಂದು, ಮತ್ತು ಸೋದರತ್ತೆ ಮೇ 19ರಂದು ಸಾವನ್ನಪ್ಪಿದರು. ಪೆರಂಬ್ರ ಆಸ್ಪತ್ರೆಯಲ್ಲಿ ಆರಂಭದ ಹಂತದಲ್ಲಿ ಅವರಿಗೆ ಶುಶ್ರೂಷೆ ನೀಡಿದ್ದ 31ರ ಹರೆಯದ ದಾದಿ ಲಿನಿ ಪುತ್ತುಸ್ಸೇರಿ  ಮೇ 21ರಂದು ಸಾವನ್ನಪ್ಪಿದರು. ಹೀಗೆ, ಮೊದಲ ರೋಗಿಗಳ ಕುಟುಂಬಸ್ಥರು ಮತ್ತು ಅವರನ್ನು ಕಾಣಲೆಂದು ಬಂದು ನಿಕಟ ಸಂಪರ್ಕಕ್ಕೆ ಒಳಗಾದವರಿಗಷ್ಟೇ ರೋಗ ತಗಲಿದ್ದು, ಆ ಊರಿನ ಇತರರಿಗಾಗಲೀ, ಕೇರಳದ ಇತರೆಡೆಗಳಲ್ಲಾಗಲೀ ನಿಪ ಸೋಂಕು ಹರಡಿಲ್ಲ. ಸೋಂಕು ದೃಢಪಟ್ಟೊಡನೆ ಸ್ಥಳೀಯ ಆರೋಗ್ಯಾಧಿಕಾರಿಗಳು ತನಿಖೆ ನಡೆಸಿ, ಆ ಕುಟುಂಬಕ್ಕೆ ಸೇರಿದ ಬಾವಿಯಲ್ಲಿ ಬಾವಲಿಯು ಸತ್ತು ಬಿದ್ದಿರುವುದನ್ನು ಕಂಡುಹಿಡಿದಿದ್ದರು ಹಾಗೂ ಆ ಬಾವಿಯ ನೀರಿನ ಸೇವನೆಯೇ ಸೋಂಕು ತಗಲುವುದಕ್ಕೆ ಕಾರಣವೆಂದು ಗುರುತಿಸಿದ್ದರು. ಈಗ ಆ ಬಾವಿಗೆ ಮುಚ್ಚಿಗೆಯನ್ನು ಹಾಕಲಾಗಿದ್ದು, ಸೋಂಕು ಹರಡದಂತೆ ಎಲ್ಲಾ ಅಗತ್ಯ ಕ್ರಮಗಳನ್ನೂ ಕೈಗೊಳ್ಳಲಾಗಿದೆ.

ನಿಪ ಸೋಂಕನ್ನು ಮೊತ್ತಮೊದಲ ಬಾರಿಗೆ 1999 ರಲ್ಲಿ ಮಲೇಷ್ಯಾದ ನಿಪ ಎಂಬ ಊರಿನ ರೋಗಿಯೊಬ್ಬರಲ್ಲಿ ಪತ್ತೆ ಹಚ್ಚಲಾಗಿತ್ತು. ನಿಪ ವೈರಾಣು ಪಾರಾಮಿಕ್ಸೋ ವೈರಸ್ ಜಾತಿಗೆ ಸೇರಿದ್ದು, ದಡಾರ ಮತ್ತು ಕೆನ್ನೆ ಬಾವನ್ನುಂಟು ಮಾಡುವ ವೈರಾಣುಗಳೂ ಇದೇ ಜಾತಿಯವು. ನಿಪ ವೈರಾಣು ಬಾವಲಿಗಳೊಳಗೆ ಸಹಜವಾಗಿ ಕಂಡು ಬರುತ್ತದೆ. ಅಂತಹಾ ಬಾವಲಿಗಳ ಜೊಲ್ಲು, ಮಲ, ಮೂತ್ರ, ಎಂಜಲು ಮತ್ತು ಪ್ರಜನನಾಂಗಗಳ ಸ್ರಾವಗಳಲ್ಲಿ ವೈರಾಣುಗಳು ವಿಸರ್ಜನೆಯಾಗುತ್ತವೆ. ಏಷ್ಯಾ ಮತ್ತು ಆಸ್ಟ್ರೇಲಿಯಾಗಳಲ್ಲಿ ನಾಯಿ, ಬೆಕ್ಕು, ಆಡು, ಕುದುರೆ ಮತ್ತು ಹಂದಿಗಳಿಗೆ ಬಾವಲಿಗಳಿಂದ ನಿಪ ಸೋಂಕು ಹರಡಿರುವ ಹಲವು ಪ್ರಕರಣಗಳು ಪತ್ತೆಯಾಗಿದ್ದು, ಹೆಚ್ಚಿನ ಸಂದರ್ಭಗಳಲ್ಲಿ ಬಾವಲಿಗಳ ಜೊಲ್ಲಿನ ಮೂಲಕ, ಅವು ತಿಂದು ಬಿಟ್ಟ ಹಣ್ಣುಗಳನ್ನು ಈ ಪ್ರಾಣಿಗಳು ಸೇವಿಸುವ ಮೂಲಕ, ಸೋಂಕು ಹರಡಿತ್ತೆನ್ನುವುದು ಕಂಡುಬಂದಿದೆ. ಈ ಎಲ್ಲ ಪ್ರಕರಣಗಳನ್ನು ಕೂಡಲೇ ಗುರುತಿಸಿ ನಿಯಂತ್ರಣಕ್ಕೂ ತರಲು ಸಾಧ್ಯವಾಗಿದೆ.

ಮನುಷ್ಯರಿಗೆ ನಿಪ ಸೋಂಕು ತಗಲಿದ 600ಕ್ಕೂ ಹೆಚ್ಚಿನ ಪ್ರಕರಣಗಳನ್ನು ಮಲೇಶ್ಯಾ, ಬಾಂಗ್ಲಾದೇಶ, ಹಾಗೂ ಪಶ್ಚಿಮ ಬಂಗಾಳಗಳಲ್ಲಿ ಗುರುತಿಸಲಾಗಿದೆ; ಅವುಗಳಲ್ಲಿ ಹೆಚ್ಚಿನವು ಬಾವಲಿಯ ಜೊಲ್ಲಿನಿಂದ ಕಲುಷಿತಗೊಂಡ ಕರ್ಜೂರದ ರಸದ ಮೂಲಕ ಅಥವಾ ಬಾವಲಿಗಳಿಂದ ಸೋಂಕಿಗೀಡಾದ ಸಾಕುಪ್ರಾಣಿಗಳು ಮತ್ತು ಹಂದಿಗಳ ನಿಕಟ ಸಂಪರ್ಕದ ಮೂಲಕ ಉಂಟಾಗಿವೆ. ಮನುಷ್ಯರಿಂದ ಮನುಷ್ಯರಿಗೆ ಸೋಂಕು ಹರಡಿರುವ ಕೆಲವೇ ಕೆಲವು ಪ್ರಕರಣಗಳು ವರದಿಯಾಗಿವೆ, ಸೋಂಕಿಗೀಡಾದವರನ್ನು ಹತ್ತಿರದಿಂದ ಆರೈಕೆ ಮಾಡಿ, ಅವರ ಜೊಲ್ಲು ಅಥವಾ ಶ್ವಾಸಾಂಗದ ಸ್ರಾವಗಳ ಸಂಪರ್ಕಕ್ಕೆ ಬಂದ ನಿಕಟವರ್ತಿಗಳಿಗೆ ಮಾತ್ರವೇ ಹೀಗೆ ಸೋಂಕು ಹರಡಿದೆ. ಬಾಂಗ್ಲಾದೇಶದಲ್ಲಿ ಸೋಂಕು ತಗಲಿದ ಮಕ್ಕಳಲ್ಲಿ ನಡೆಸಿದ ಅಧ್ಯಯನದಲ್ಲಿ, ಬಿದ್ದಿರುವ ಹಣ್ಣುಗಳನ್ನು ಸೇವಿಸುವುದರಿಂದ ಮನುಷ್ಯರಿಗೆ ಸೋಂಕುಂಟಾಗುವ ಸಾಧ್ಯತೆಗಳು ಕಂಡುಬಂದಿಲ್ಲ. ಇತರ ಆಹಾರದ ಮೂಲಕ, ಗಾಳಿಯಿಂದ, ದೂರಕ್ಕೆ, ವ್ಯಾಪಕವಾಗಿ ಈ ಸೋಂಕು ಹರಡುವುದಿಲ್ಲ. ಕೇರಳದಲ್ಲಿ ಈಗ ವರದಿಯಾಗಿರುವ ಪ್ರಕರಣಗಳಲ್ಲಿ, ಬಾವಲಿಯು ಬಿದ್ದು ಕಲುಷಿತಗೊಂಡ ಬಾವಿ ನೀರನ್ನು ಸೇವಿಸಿದವರಿಗೂ, ಅವರ ಅತಿ ನಿಕಟ ಸಂಪರ್ಕಕ್ಕೆ ಬಂದವರಿಗೂ ಸೋಂಕು ತಗಲಿದೆಯೇ ಹೊರತು, ಬೇರಾರಿಗೂ ಅದು ಹರಡಿಲ್ಲ. ಸೋಂಕು ಗುರುತಿಸಲ್ಪಟ್ಟ ಬಳಿಕ, ಅಂತಹಾ ರೋಗಿಗಳನ್ನು ಅನ್ಯರ ಸಂಪರ್ಕಕ್ಕೆ ಬಾರದಂತೆ ಸಂಪೂರ್ಣವಾಗಿ ಪ್ರತ್ಯೇಕಿಸಲಾಗುವುದರಿಂದ ಇತರರಿಗೆ ರೋಗ ಹರಡುವ ಸಾಧ್ಯತೆಗಳು ಇಲ್ಲವೆಂದೇ ಹೇಳಬಹುದು. ಆದ್ದರಿಂದ, ಇದೀಗ ಕೇರಳದಲ್ಲಿ ಸೋಂಕನ್ನು ತ್ವರಿತವಾಗಿ ಸಂಶಯಿಸಿ, ದೃಢಪಡಿಸಿ, ತಕ್ಷಣವೇ ಎಲ್ಲಾ ಕ್ರಮಗಳನ್ನೂ ಕೈಗೊಳ್ಳಲಾಗಿರುವುದರಿಂದ ಇತರರಿಗೆ ರೋಗ ಹರಡುವ ಸಾಧ್ಯತೆಗಳು ಅತಿ ವಿರಳ.

ಪ್ರಾಣಿಗಳಲ್ಲೂ, ಮನುಷ್ಯರಲ್ಲೂ  ನಿಪ ಸೋಂಕು ಶ್ವಾಸಾಂಗವನ್ನೂ, ಮಿದುಳನ್ನೂ ಕಾಡುತ್ತದೆ. ಸೋಂಕಿತರ ನೇರ ಸಂಪರ್ಕಕ್ಕೆ ಬಂದ 5 ರಿಂದ 14 ದಿನಗಳಲ್ಲಿ ಜ್ವರ, ಕೆಮ್ಮು, ಉಸಿರಾಟದ ಸಮಸ್ಯೆ, ತಲೆನೋವು, ಮನೋಸ್ಥಿತಿಯ ಬದಲಾವಣೆ ಅಥವಾ ಗೊಂದಲ ಕಂಡು ಬಂದು, ನಂತರದ 24 ರಿಂದ 48 ಗಂಟೆಗಳಲ್ಲಿ ರೋಗಸ್ಥಿತಿ ಹದಗೆಟ್ಟು ಪ್ರಜ್ಞಾಹೀನತೆಯಾಗುವ ಸಾಧ್ಯತೆಗಳಿವೆ. ಇಂತಹಾ ರೋಗಲಕ್ಷಣಗಳಿರುವವರಲ್ಲಿ ನಿಪ ಸೋಂಕನ್ನು ದೃಢ ಪಡಿಸುವುದಕ್ಕಾಗಿ ಶ್ವಾಸಾಂಗದ ಸ್ರಾವಗಳು, ಮಿದುಳು ದ್ರವ, ಮತ್ತು ರಕ್ತದಲ್ಲಿ ನಿಪ ಸೋಂಕನ್ನು ಗುರುತಿಸುವ ಪರೀಕ್ಷೆಗಳನ್ನು ಬಳಸಲಾಗುತ್ತದೆ.  ನಿಪ ಸೋಂಕಿಗೆ ನಿರ್ದಿಷ್ಟ ಚಿಕಿತ್ಸೆಯು ಇನ್ನೂ ಲಭ್ಯವಿಲ್ಲದ ಕಾರಣ, ಸೋಂಕಿತರಿಗೆ ಕೃತಕ ಉಸಿರಾಟದಂತಹ ಅಗತ್ಯ ನೆರವನ್ನು ನೀಡುವ ಮೂಲಕ ಬದುಕುಳಿಸಲು ಪ್ರಯತ್ನಿಸಲಾಗುತ್ತದೆ. ಈ ಚಿಕಿತ್ಸೆಯು ವಿಫಲವಾದರೆ, ಶೇ. 50-70ರಷ್ಟು ರೋಗಿಗಳು ಸಾವನ್ನಪ್ಪುತ್ತಾರೆ.

ಮೇಲೆ ಹೇಳಿದಂತೆ ನಿಪ ಸೋಂಕು ಅತ್ಯಂತ ಸೀಮಿತವಾಗಿ ಹರಡುವುದರಿಂದ ಆ ಬಗ್ಗೆ ಸಾರ್ವಜನಿಕರು ಭಯಗೊಳ್ಳುವ ಅಗತ್ಯವೇ ಇಲ್ಲ. ಪೇಟೆಯಲ್ಲಿ ದೊರೆಯುವ ಹಣ್ಣುಗಳು ಮತ್ತು ಮಾಂಸ ಸೇವಿಸುವುದಕ್ಕೆ, ಸೋಂಕು ವರದಿಯಾಗಿರುವ ರಾಜ್ಯಕ್ಕೆ ಪ್ರವಾಸ ಹೋಗುವುದಕ್ಕೆ, ಸೋಂಕಿಲ್ಲದ ಇತರರ ಜೊತೆ ಬೆರೆಯುವುದಕ್ಕೆ ಯಾವ ಅಡ್ಡಿಯೂ ಇಲ್ಲ.

ನಿಫಾ ವೈರಸ್ ಗಿಂತ ವೇಗವಾಗಿ ಹರಡುತ್ತಿದೆ ವೈರಸ್ ಬಗೆಗಿನ ವದಂತಿಗಳು

 ಡಾ। ಶ್ರೀನಿವಾಸ ಕಕ್ಕಿಲ್ಲಾಯ

(ವಾರ್ತಾ ಭಾರತಿ, ಮೇ 25, 2018)

ಕೇರಳದಲ್ಲಿ ಸದ್ಯ ನಿಯಂತ್ರಣದಲ್ಲಿದೆ ಎಂದು ಹೇಳಲಾಗುತ್ತಿರುವ ನಿಪಾಹ್ ವೈರಸ್ ರೋಗದ ಕುರಿತಂತೆ ಕರ್ನಾಟಕದಲ್ಲಿಯೂ ಹೈ ಅಲರ್ಟ್ ಘೋಷಿಸಲಾಗಿದೆ. ಆರೋಗ್ಯ ಇಲಾಖೆಯ ಮೂಲಕ ಮುಂಜಾಗೃತಾ ಕ್ರಮ, ಎಚ್ಚರಿಕೆ ವಹಿಸಲಾಗಿದೆ. ಈ ನಡುವೆಯೇ ಮಂಗಳೂರಿನಲ್ಲಿ ಎರಡು ಶಂಕಿತ ಪ್ರಕರಣಗಳಿಗೆ ಸಂಬಂಧಿಸಿ ರೋಗಿಗಳ ರಕ್ತ ಹಾಗೂ ಗಂಟಲಿನ ದ್ರವದ ಮಾದರಿಯನ್ನು ತಪಾಸಣೆಗೆ ಕಳುಹಿಸಲಾಗಿದೆ. ಇದು ಮಂಗಳೂರಿನಲ್ಲಿಯೂ ಈ ರೋಗ ಹರಡಿದೆ ಎಂಬರಷ್ಟರ ಮಟ್ಟಿಗೆ ಪ್ರಚಾರವಾಗುತ್ತಿದೆ. ಇದರ ಬೆನ್ನಲ್ಲೇ, ಸಾಮಾಜಿಕ ಜಾಲತಾಣಗಳ ಮೂಲಕ ಹಣ್ಣು ತಿನ್ನಬಾರದು, ನೀರು ಕುಡಿಯಬಾರದು, ಮಾಂಸ ತಿನ್ನಬಾರದು ಎಂಬಿತ್ಯಾದಿ ಊಹಾಪೋಹ ಪ್ರೇರಿತ ವಿಚಾರಗಳನ್ನು ಹರಿಯಬಿಡಲಾಗುತ್ತಿದೆ. ಇದು ಜನಸಾಮಾನ್ಯರಲ್ಲಿ ಭಾರೀ ಆತಂಕ ಹಾಗೂ ಭಯಕ್ಕೆ ಕಾರಣವಾಗಿದೆ.

ಅದೆಷ್ಟರ ಮಟ್ಟಿಗೆ ಅಪಪ್ರಚಾರ ಹಬ್ಬಲಾಗಿದೆ ಎಂದರೆ, ಹಣ್ಣುಗಳನ್ನು ತಿನ್ನುವ, ನೀರನ್ನು ಕುಡಿಯುವ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿರುವ ಜತೆಯಲ್ಲೇ, ಮಾರುಕಟ್ಟೆಗಳಲ್ಲಿ ಹಣ್ಣು ಹಂಪಲು ಮಾರಾಟಗಾರರು ವ್ಯಾಪಾರ ಇಲ್ಲದೆ ಕಂಗಾಲಾಗುವಂತೆ ಮಾಡಿದೆ. ಈ ಬಗ್ಗೆ ‘ವಾರ್ತಾಭಾರತಿ’ ಮಂಗಳೂರಿನ ಖ್ಯಾತ ವೈದ್ಯರಲ್ಲೊಬ್ಬರಾದ ಡಾ.ಬಿ.ಶ್ರೀನಿವಾಸ ಕಕ್ಕಿಲ್ಲಾಯ ಅವರನ್ನು ಮಾತನಾಡಿಸಿದಾಗ, ಅವರು ಹೇಳಿದ್ದು ಹೀಗೆ,

ಇದು ಸಂಪೂರ್ಣ ಅತ್ಯಂತ ಸಣ್ಣ ಮಟ್ಟಿನಲ್ಲಿ ಸ್ಥಳೀಯವಾಗಿ ಅತ್ಯಂತ ನಿಕಟ ಸಂಪರ್ಕಕ್ಕೆ ಬಂದವರಿಗಷ್ಟೆ ಹರಡುತ್ತದೆ ಹೊರತು, ಇದು ಸಾರ್ವಜನಿಕರಿಗೆ ವ್ಯಾಪಕವಾಗಿ ಹರಡುವ ಸೋಂಕು ಅಲ್ಲ. ಸುಲಭವಾಗಿ ಹರಡುವ ಸೋಂಕು ಅಲ್ಲವೇ ಅಲ್ಲ. ಯಾರೂ ಭಯ ಪಡುವ ಅಗತ್ಯವೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕೇರಳದ ಕಲ್ಲಿಕೋಟೆಯಲ್ಲಿ ಈ ರೋಗ ಪತ್ತೆಯಾದಾಕ್ಷಣ ಅಲ್ಲಿನ ವೈದ್ಯರು ತಕ್ಷಣ ಚಿಕಿತ್ಸೆ ಒದಗಿಸಿದ್ದಾರೆ. ತನಿಖೆ ಮಾಡಿ ಇದಕ್ಕೆ ಕಾರಣ ಬಾವಲಿ ಎಂಬುದನ್ನು ಕಂಡು ಹಿಡಿದಿದ್ದಾರೆ. ಸತ್ತ ಬಾವಲಿ ಪತ್ತೆಯಾದ ಬಾವಿಯನ್ನು ಮುಚ್ಚಿದ್ದಾರೆ. ಅದರ ಸಂಪರ್ಕಕ್ಕೆ ಬಂದಿರುವ ಎಲ್ಲರನ್ನೂ 14 ದಿನ ದೂರವಿರಿಸಿದ್ದಾರೆ. ಎಲ್ಲಾ ರೀತಿಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಮಂಗಳೂರಿನಲ್ಲಿ ಶಂಕಿತ ರೋಗಿಗಳ ಮಾದರಿ ಕಳುಹಿಸಿದ ಕೂಡಲೇ ಮಂಗಳೂರಿನಲ್ಲಿ ನಿಪಾಹ್ ಪತ್ತೆ ಎಂದು ಹೇಳುವುದರಲ್ಲಿ ಅರ್ಥವೇ ಇಲ್ಲ. ಒಂದು ರೋಗ ಕಂಡು ಬಂದಾಗ, ನಿಯಮ ಪ್ರಕಾರ ಕೇಂದ್ರ ಸರಕಾರ ಮತ್ತು ಆರೋಗ್ಯ ಇಲಾಖೆ ಎಲ್ಲಾ ವೈದ್ಯರಿಗೂ ಎಚ್ಚರಿಕೆ ನೀಡುತ್ತದೆ. ಅಂತಹ ಸಂದರ್ಭದಲ್ಲಿ ವೈದ್ಯರು ಅನುಮಾನ ಇರುವ ಪ್ರಕರಣಗಳ ರಕ್ತದ ಮಾದರಿ ಅಥವಾ ಇತರ ಮಾದರಿಗಳನ್ನು ತಪಾಸಣೆಗೆ ಕಳುಹಿಸುತ್ತಾರೆ. ಆಗಲೇ ನಿಪಾಹ್ ಪತ್ತೆ ಎಂದು ಹೇಳಲಾಗುವುದಿಲ್ಲ. ನಿಪಾಹ್ ವೈರಸ್ ಈ ಹಿಂದೆ ಭಾರತದಲ್ಲಿ ಕಂಡುಬಂದಾಗಲೂ ತಕ್ಷಣ ನಿಯಂತ್ರಣವಾಗಿದೆ. ೨೦೦೧ ಮತ್ತು ೨೦೦೭ರಲ್ಲಿ ಪಶ್ಚಿಮ ಬಂಗಾಲದಲ್ಲಿ ಬಂದಾಗಲೂ ಅದನ್ನು ಅಲ್ಲಿಯೇ ನಿಯಂತ್ರಣ ಮಾಡಲಾಗಿತ್ತು. ಸಾರ್ವಜನಿಕವಾಗಿ ಈ ಸೋಂಕು ಹರಡಿರುವ ದಾಖಲೆಯೇ ಇಲ್ಲ ಎಂದು ಡಾ. ಶ್ರೀನಿವಾಸ ಕಕ್ಕಿಲ್ಲಾಯ ಹೇಳುತ್ತಾರೆ.

ಆ ರೋಗಾಣುವನ್ನು ಹೊಂದಿರುವ ಪ್ರಾಣಿಗಳಿಗೆ ಅತ್ಯಂತ ನಿಕಟ ಸಂಪರ್ಕಕ್ಕೆ ಬರುವವರಿಗೆ ಮಾತ್ರವೇ ಅದು ಹರಡುತ್ತದೆ. ಸಾಧಾರಣವಾಗಿ ಬಾವಲಿ ತಿಂದು ಕಚ್ಚಿದ ಹಣ್ಣನ್ನು ತಿಂದ ಪ್ರಾಣಿಗಳಿಗೆ ಇದು ಬರುತ್ತದೆ. ಆದರೆ ಅಂತಹ ಹಣ್ಣನ್ನು ಮನುಷ್ಯರು ತಿಂದು ಬಂದ ಸಾಕ್ಷ್ಯಗಳು ಇಲ್ಲ. ಆದರೆ ಹಣ್ಣು ತಿಂದ ಮನುಷರು, ಮಕ್ಕಳಿಗೆ ಬಂದಿರುವುದಕ್ಕೆ ಯಾವುದೇ ರೀತಿಯ ಪುರಾವೆ, ದಾಖಲೆ ಇಲ್ಲ. ಬಾಂಗ್ಲ ದೇಶದಲ್ಲಿ ಈ ಬಗ್ಗೆ ಅಧ್ಯಯನ ಕೂಡ ನಡೆಸಲಾಗಿದೆ. ನೀರಿನಿಂದ ಬರುವುದಿಲ್ಲ. ಕಲ್ಲಿಕೋಟೆಯಲ್ಲಿ ಒಂದು ಮನೆಯ ಬಾವಿಯಲ್ಲಿ ಬಾವಲಿ ಬಿದ್ದು, ಆ ಮನೆಯವರಿಗೆ ಮಾತ್ರ ಬಂದಿದೆ. ಆ ಊರಿನ ಬೇರೆ ಯಾರಿಗೂ ಬಂದಿಲ್ಲ. ಹಾಗೆಂದು ದೇಶದ ಎಲ್ಲಾ ಬಾವಿಗಳಲ್ಲಿ ಬಾವಲಿ ಇರುತ್ತದೆ. ಅದು ನೀರಿಗ ಬಿದ್ದು ಸಾಯುತ್ತದೆ. ಆ ನೀರು ಕುಡಿದರೆ ಈ ಸೋಂಕು ಬರುತ್ತದೆ ಎಂಬುದು ತಲೆಬುಡವಿಲ್ಲದ ಮಾತುಗಳು ಎಂದು ಡಾ. ಶ್ರೀನಿವಾಸ ಕಕ್ಕಿಲ್ಲಾಯ ಸ್ಪಷ್ಟಪಡಿಸಿದ್ದಾರೆ.

ಬೆಳಗ್ಗೆ ತಾಲೂಕು ಆರೋಗ್ಯ ಅಧಿಕಾರಿಯೊಬ್ಬರು ಕರೆ ಮಾಡಿ ಹಣ್ಣು ಹಂಪಲು ಮಾರಾಟಗಾರರು ಇಲ್ಲಿ ಬಂದು ಕುಳಿತಿದ್ದಾರೆ. ಫ್ರೂಟ್ಸ್ ತಿಂದರೆ ಈ ಸೋಂಕು ಬರುವುದೇ ಎಂದು ಪ್ರಶ್ನಿಸುತ್ತಿದ್ದಾರೆ. ವ್ಯಾಪಾರವೇ ಇಲ್ಲ ಎನುತ್ತಿದ್ದಾರೆ ಎಂದು ನನ್ನಲ್ಲಿ ಕೇಳಿದ್ದಾರೆ. ಅವರಿಗೆ ನಾನು ಈ ಹಿಂದೆ ಈ ರೋಗ ಕಂಡು ಬಂದಾಗ ನಡೆದ ಅಧ್ಯಯನ ವರದಿಯನ್ನು ಕಳುಹಿಸಿದ್ದೇನೆ. ಬಾಂಗ್ಲಾದೇಶದಲ್ಲಿ ಅಧ್ಯಯನದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಅಲ್ಲಿ ಮಕ್ಕಳ ಆಹಾರವೇ ಹಣ್ಣುಗಳು. ಸಿಕ್ಕಿದ ಹಣ್ಣುಹಂಪಲುಗಳನ್ನು ತಿನ್ನುತ್ತಾರೆ. ಅಪೌಷ್ಟಿಕತೆಯ ಹಿನ್ನೆಲೆಯಲ್ಲಿ ಅಲ್ಲಿ ಅವರಿಗೆ ಬೇರೆ ಆಹಾರ ಸಿಗುವುದು ಅಪರೂಪ. ಅದಕ್ಕೆ ಸಿಕ್ಕಿದ ಹಣ್ಣು ಗಳನ್ನು ತಿನ್ನುತ್ತಾರೆ. ಆದರೆ ಆ ಹಣ್ಣು ತಿಂದ ಮಕ್ಕಳಿಗೆ ಯಾರಿಗೂ ನಿಪಾಹ್ ಬಂದಿಲ್ಲ ಮತ್ತು ನಿಪಾಹ್ ರೋಗಕ್ಕೆ ತುತ್ತಾಗಿರುವವರು ಹಣ್ಣು ತಿಂದೇ ಇಲ್ಲ. ಮನುಷ್ಯರು ಹಣ್ಣು ತಿಂದು ನಿಪಾಹ್ ಹರಡುತ್ತದೆ ಎಂಬುದಕ್ಕೆ ಯಾವುದೇ ಸಾಕ್ಷವಿಲ್ಲ.

ಇದುವರೆಗೆ ದಾಖಲೀಕರಣ ಮಾಡಲಾದ ೬೦೦ಕ್ಕೂ ಅಧಿಕ ಪ್ರಕರಣಗಳು ಹರಡಿರುವುದು ಹಂದಿಯ ಫಾರ್ಮ್‌ನಲ್ಲಿ ಕೆಲಸ ಮಾಡುವ ಕೆಲಸಗಾರಿಗೆ ಹರಡಿದ ಸೋಂಕುಗಳು. ಒಂದು ಪ್ರಕರಣ ಮನೆಯಲ್ಲಿ ಸಾಕಿದ ಆಡುಗಳಿಗೆ ನಿಪಾಹ್ ಸೋಂಕು ತಗುಲಿತ್ತು. ಆಡಿನ ಜತೆ ಆಟವಾಡುತ್ತಿದ್ದ ಮಗುವಿಗೆ ಬಂದಿರುವ ಮತ್ತೊಂದು ಪ್ರಕರಣ. ಬಾಂಗ್ಲಾದೇಶದಲ್ಲಿ ಖರ್ಜೂರದ ರಸವನ್ನು ಇಳಿಸಲು ಮರಕ್ಕೆ ಪಾತ್ರೆ ಕಟ್ಟುತ್ತಾರೆ. ಸೋಂಕು ಪೀಡಿತ ಬಾವಲಿ ಆ ಪಾತ್ರೆಯಿಂದ ಖರ್ಜೂರದ ರಸ ಕುಡಿದರೆ ರಸ ಸೋಂಕುಪೀಡಿತವಾಗುತ್ತದೆ. ಅಂತಹ ರಸ ಕುಡಿದವರಿಗೆ ಸೋಂಕು ತಗಲಿದ ಉದಾಹರಣೆ ಇದೆ. ಇವು ಸ್ಪಷ್ಟ ಮಾಹಿತಿಗಳು. ಈ ರೋಗಿಗಳ ಹತ್ತಿರ ಕುಳಿತು, ಅವರು ಊಟ ಮಾಡಿದ ಅನ್ನದಲ್ಲಿ ಅವರ ಜೊಲ್ಲು ಸೇರಿದ್ದಲ್ಲಿ ಅದನ್ನು ಸೇವಿಸಿದವರಿಗೆ ಅಥವಾ ಅವರ ಜೊಲ್ಲು ಇನ್ಯಾವುದೋ ರೀತಿಯಲ್ಲಿ ಬೇರೆಯವರ ದೇಹಕ್ಕೆ ಹೋಗಿ ಈ ರೋಗ ಬಂದಿದೆಯೇ ಹೊರತು ಅವರ ಹತ್ತಿರ ಇದ್ದವರಿಗೆ ರೋಗ ಹರಡಿದ ದಾಖಲೆ, ಪ್ರಕರಣ ವರದಿಯಾಗಿಲ್ಲ ಎಂದು ಅವರು ತಿಳಿಸಿದರು.

ಕೇರದಲ್ಲಿ ಚಿಕಿತ್ಸೆ ಒದಗಿಸುತ್ತಿದ್ದ ನರ್ಸ್ ದೇಹಕ್ಕೆ ಯಾವುದೋ ರೀತಿಯಲ್ಲಿ ಸೋಂಕಿತ ವ್ಯಕ್ತಿಯಿಂದ ರೋಗಾಣು ತಗಲಿರಬಹುದು. ಆದರೆ ಆಕೆ ಈಗಿಲ್ಲ. ಹಾಗಾಗಿ ಆಕೆಗೆ ಹೇಗೆ ತಗುಲಿದೆ ಎಂಬುದನ್ನು ಕಂಡುಹಿಡಿಯಲು ಅಸಾಧ್ಯ. ಆದರೆ ದಾಖಲೀಕರಣಗೊಂಡ ಪ್ರಕರಣಗಳಲ್ಲಿ ಅತ್ಯಂತ ಸುಲಭದಲ್ಲಿ ಈ ಸೋಂಕು ಹರಡಿರುವ ಪ್ರಕರಣವೇ ಇಲ್ಲ. ಪಶ್ಚಿಮ ಬಂಗಾಲದ ಒಂದು ಪ್ರಕರಣದಲ್ಲಿ ರೋಗಿಯನ್ನು ನೋಡಲು ಬಂದ ಮೌಲ್ವಿಯೊಬ್ಬರಿಗೆ ಈ ಸೋಂಕು ತಗಲಿತ್ತು. ಆ ಮೌಲ್ವಿಗೆ ಆರೈಕೆ ಮಾಡುವ ವೇಳೆ ಅವರ ಶಿಷ್ಯಂದಿರು ಒಟ್ಟಿಗೆ ಕೂತು ಊಟ ಮಾಡಿ ಅವರ ಸಮೀಪದಲ್ಲಿ ಅವರ ಆರೈಕೆ ಮಾಡಿದವರಿಗೆ ರೋಗ ಬಂದಿರುವ ಬಗ್ಗೆ ದಾಖಲೆ ಇದೆ. ಆದರೆ ಈ ರೋಗ ಬೇರೆ ಯಾರಿಗೂ ಅಲ್ಲಿಯೂ ಹರಡಿರಲಿಲ್ಲ.

ಎಚ್೧ ಎನ್೧ ಸೋಂಕು ಹರಡಿದ ಹಾಗೆ ನಿಪಾಹ್ ವೈರಸ್ ಹರಡಿರುವ ದಾಖಲೆಗಳಿಲ್ಲ. ಕೇರಳ ಕಲ್ಲಿಕೋಟೆಯ ಒಂದು ಕುಟುಂಬದ ಇಬ್ಬರು ಯುವಕರು, ಅವರ ತಂದೆ, ಸೋದರತ್ತೆ, ಅವರಿಗೆ ಚಿಕಿತ್ಸೆ ಕೊಟ್ಟ ನರ್ಸ್ ಮತ್ತೆ ಆ ಯುವಕರಲ್ಲೊಬ್ಬಾತನ ಜೊತೆ ವಿವಾಹ ನಿಶ್ಚಿತಾರ್ಥಗೊಂಡಿದ್ದ ಯುವತಿ ಮತ್ತು ಆಕೆಯ ಜತೆಗೆ ಬಂದಿದ್ದ ಆಕೆಯ ಸ್ನೇಹಿತೆ. ಇವರಿಗೆ ಮಾತ್ರ ಬಂದಿರುವುದು ಎಂದು ಡಾ.ಶ್ರೀನಿವಾಸ ಕಕ್ಕಿಲ್ಲಾಯ ಹೇಳಿದ್ದಾರೆ.

ಆದರೆ ನೀರು ಕುಡಿಯಬಾರದು, ಹಣ್ಣು ತಿನ್ನಲು ಬಾರದು ಎನ್ನುವುದು ಅರ್ಥವಿಲ್ಲದ ಮಾತುಗಳು. ನಾವು ವೈದ್ಯರೂ ಸೇರಿ ನಮ್ಮ ಮೆದುಳನ್ನು ಉಪಯೋಗಿಸುವುದನ್ನೇ ಬಿಟ್ಟಿದ್ದೇವೆ. ಅದರಿಂದ ಇಂತಹ ವ್ಯಾಪಕ ಆತಂಕ, ಭಯಕ್ಕೆ ಕಾರಣವಾಗುತ್ತಿದೆ. ಯಾರಾದರೂ ಒಬ್ಬ ಏನಾದರೂ ಹೇಳಿದಾಕ್ಷಣ, ಅದರ ಬಗ್ಗೆ ಹಿಂದುಮುಂದು ಆಲೋಚಿಸದೆ ಅದನ್ನು ಸಾಮಾಜಿಕ ಜಾಲತಾಣಗಳ ಮೂಲಕ ಫಾರ್ವರ್ಡ್ ಮಾಡಲಾಗುತ್ತದೆ. ಈ ಪ್ರಕ್ರಿಯೆಯನ್ನು ನಿಯಂತ್ರಿಸಲು ಅಸಾಧ್ಯ. ಜನರು ವೈಜ್ಞಾನಿಕ ಮನೋಭಾವ ಹೊಂದಿ, ಗೊತ್ತಿದ್ದವರಲ್ಲಿ ಕೇಳಬೇಕು. ಇಲ್ಲವಾದಲ್ಲಿ ಹೀಗೆ ಅಪಪ್ರಚಾರಗಳಿಗೆ ಕಾರಣವಾಗುತ್ತದೆ.

ಕಲ್ಲಿಕೋಟೆಯಲ್ಲಿ ರೋಗ ಲಕ್ಷಣ ಪತ್ತೆಯಾದಾಕ್ಷಣ ಅಲ್ಲಿನ ವೈದ್ಯ ಸಮೂಹ ಸೇರಿ ತಕ್ಷಣ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ. ಆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಬೇಕು. ಅದು ಬಿಟ್ಟು ವಿನಾ ಕಾರಣ ವೈಜ್ಞಾನಿಕವಾಗಿ ಅರಿವಿಲ್ಲದೆ ಸಾಮಾಜಿಕ ಜಾಲತಾಣಗಳ ಮೂಲಕ ಸಿಕ್ಕಿದ್ದನ್ನೆಲ್ಲ ಹರಡುವುದು ಸರಿಯಲ್ಲ ಎಂದು ಡಾ.ಕಕ್ಕಿಲ್ಲಾಯ ಸಾರ್ವಜನಿಕರಿಗೆ ಸಲಹೆಯ ಜತೆಗೆ ಮನವಿಯನ್ನೂ ಮಾಡಿದ್ದಾರೆ.

Be the first to comment

Leave a Reply

Your email address will not be published.


*