ವಿಜಯ ಕರ್ನಾಟಕದಲ್ಲಿ ‘ಆರೋಗ್ಯ ಆಶಯ’ – 3

ಐವತ್ತೊಂಭತ್ತನೇ ಬರಹ : ವೈದ್ಯಕೀಯ ಮಹಾಮೇಳಗಳ ಒಳಸುಳಿಗಳು [ಸೆಪ್ಟೆಂಬರ್ 17, 2014, ಬುಧವಾರ] [ನೋಡಿ | ನೋಡಿ]

ಆಹಾರ-ವಿಹಾರಗಳೇ ಪ್ರಧಾನವಾಗಿರುವ, ಕೋಟಿ ಖರ್ಚಿನ, ಕಂಪೆನಿ ಹಂಗಿನ ಮೇಳಗಳು ಬೇಕೇ?

ಮಳೆಗಾಲ ಮುಗಿಯುತ್ತಿದ್ದಂತೆ ವೈದ್ಯಕೀಯ ಮಹಾಮೇಳಗಳಿಗೆ ವಸಂತಕಾಲ. ಇನ್ನು ಆರೇಳು ತಿಂಗಳು ಪ್ರತೀ ವಾರಾಂತ್ಯದಲ್ಲಿ, ಎಲ್ಲಾ ದೊಡ್ಡೂರುಗಳಲ್ಲಿ, ಪಂಚತಾರಾ ಹೋಟೆಲುಗಳಲ್ಲಿ, ವಿಹಾರಧಾಮಗಳಲ್ಲಿ, ವಿಲಾಸಿ ಹಡಗು-ದೋಣಿಗಳಲ್ಲಿ, ವೈದ್ಯಕೀಯ ವಿದ್ಯಾಲಯಗಳಲ್ಲಿ, ಮಹಾ ಆಸ್ಪತ್ರೆಗಳಲ್ಲಿ, ಎಲ್ಲೆಲ್ಲಿ ಕೂತು ಕೇಳಲು-ನಿಂತು ತಿನ್ನಲು ಸ್ಥಳವಿದೆಯೋ ಅಲ್ಲೆಲ್ಲ ವೈದ್ಯಕೀಯ ಮೇಳಗಳು ನಡೆಯಲಿಕ್ಕಿವೆ, ವೈದ್ಯರನೇಕರ ಸಕುಟುಂಬ ಸವಾರಿಗಳು ಹೊರಡಲಿಕ್ಕಿವೆ.

ವೈದ್ಯಕೀಯ ಜ್ಞಾನವು ವರ್ಷದೊಳಗೆ ದುಪ್ಪಟ್ಟಾಗುತ್ತಿದೆ, ವೈದ್ಯರ ಸಂಖ್ಯೆಯೂ ಹೆಚ್ಚುತ್ತಿದೆ. ಆದಷ್ಟು ಹೆಚ್ಚು ವೈದ್ಯರಿಗೆ ಆದಷ್ಟು ಹೆಚ್ಚು ಕಲಿಸುವುದಕ್ಕೆಂದು ಆದಷ್ಟು ಹೆಚ್ಚು ಮೇಳಗಳಾಗುತ್ತಿವೆ. ಅವುಗಳಿಗಾಗಿ ದೇಶ-ವಿದೇಶ ಸುತ್ತಿದಾಗ ವೈದ್ಯರ ಲೋಕಜ್ಞಾನವೂ ಹೆಚ್ಚುತ್ತದೆ. ಹಗಲು-ರಾತ್ರಿಯೆನ್ನದೆ ದುಡಿದು ಬಸವಳಿದ ವೈದ್ಯರಿಗೂ, ಅವರನ್ನು ಸಹಿಸಿಕೊಂಡಿದ್ದ ಮನೆಮಂದಿಗೂ ಒಂದಷ್ಟು ವಿಹಾರ-ವಿರಾಮಗಳಿಂದ ಮುದವಾಗುತ್ತದೆ. ಜ್ಞಾನ, ಖಾನ, ಪಾನ, ಗಾನ, ನರ್ತನ, ಯಾನ ಎಲ್ಲವೂ ಇರುವ ಈ ಸಮ್ಮೇಳನಗಳಿಗೆ ಮಾನ ಕಳೆಯದಂತೆ ಜಾಣತನದಿಂದ ನೀಡಿದ ದಾನಗಳೇ ಪ್ರಾಣವಾಗುತ್ತವೆ.

ಕಾಲುಗುರಿಂದ ತಲೆಕೂದಲವರೆಗೆ ಅರಿವಿನ ಬಾಹುಳ್ಯದಿಂದಾಗಿ ಈಗ ಅಂಗ-ರೋಗ-ವಿಭಾಗ-ತಂತ್ರಕ್ಕೊಂದರಂತೆ ಸಂಘಟನೆಗಳಿವೆ. ಉಗುರಿಗೆ, ಕೂದಲಿಗೆ, ರೋಮಕ್ಕೆ, ಚರ್ಮಕ್ಕೆ, ಮುಖಕ್ಕೆ, ಕಣ್ಣಿನ ಭಾಗಗಳಿಗೆ, ಮೂಗಿಗೆ, ಒಳಕಿವಿ-ನಡುಕಿವಿ-ಹೊರಕಿವಿಗಳಿಗೆ, ಮುಂದಿನ-ಹಿಂದಿನ ಹಲ್ಲುಗಳಿಗೆ, ಒಂದೊಂದು ಎಲುಬಿಗೆ, ಪಚನಾಂಗದ ಭಾಗಗಳಿಗೆ, ಹೃದಯದ ಮೂಲೆಗಳಿಗೆ, ಶ್ವಾಸಾಂಗಕ್ಕೆ, ಮೆದುಳಿನ ಎಲ್ಲಾ ಪದರಗಳಿಗೆ, ನರನರಗಳಿಗೆ ಮೀಸಲಾದ ಸಂಘಗಳಿವೆ. ಪ್ರತಿಯೊಂದು ವೈದ್ಯಕೀಯ ಪರಿಣತಿಗೂ ಸಂಘ-ಪರಿಷತ್ತು-ಒಕ್ಕೂಟವಿದೆ. ಮಲೇರಿಯಾ, ಕ್ಷಯ, ಕುಷ್ಠ, ಮಧುಮೇಹ, ಚರ್ಮ ರೋಗ, ಹೃದ್ರೋಗ, ನರರೋಗ, ಸ್ತ್ರೀರೋಗ, ಶಿಶುರೋಗ, ವಯೋರೋಗ ಹೀಗೆ ಪ್ರತಿಯೊಂದು ರೋಗಕ್ಕೂ ಇದೆ. ಕ್ಷಕಿರಣ, ಸಿಟಿ, ಎಂಆರ್ ಐ, ಅಲ್ಟ್ರಾಸೌಂಡ್, ಇಸಿಜಿ ಇತ್ಯಾದಿ ಪರೀಕ್ಷೆಗಳ ಹೆಸರಲ್ಲೂ ಇವೆ! ಇವೆಲ್ಲವುಗಳಿಗೂ ಜಿಲ್ಲೆ-ರಾಜ್ಯ-ದೇಶ-ಜಾಗತಿಕ ಮಟ್ಟಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಜೊತೆಕಾರ್ಯದರ್ಶಿ, ಕೋಶಾಧಿಕಾರಿ, ಸಮಿತಿ ಸದಸ್ಯರಿರುವುದರಿಂದ ಹೆಚ್ಚಿನ ವೈದ್ಯರಿಗೆ ಒಂದಿಲ್ಲೊಂದು ಪೀಠಭಾಗ್ಯವಿದ್ದೇ ಇರುತ್ತದೆ; ಅತಿಸಮರ್ಥರಂತೂ ಏಕಕಾಲಕ್ಕೆ ಹಲವು ಸ್ಥಾನಗಳನ್ನು ‘ಅಲಂಕರಿಸಿರುತ್ತಾರೆ’. ಇವರೆಲ್ಲರ ಭಯಂಕರ ಮುತುವರ್ಜಿಯಿಂದ ಈ ಎಲ್ಲಾ ಸಂಘ-ಸಂಸ್ಥೆಗಳ ಅಂತರರಾಷ್ಟ್ರೀಯ, ರಾಷ್ಟ್ರೀಯ, ಪ್ರಾದೇಶಿಕ, ರಾಜ್ಯ, ಜಿಲ್ಲಾ ಮಟ್ಟದ ಮೇಳಗಳು ವರ್ಷಕ್ಕೊಮ್ಮೆ, ಕೆಲವು ಅರ್ಧ ವರ್ಷಕ್ಕೊಮ್ಮೆ, ನಡೆಯುತ್ತಿರುತ್ತವೆ, ವರ್ಷದ 365 ದಿನಗಳನ್ನೂ ಮೀರುತ್ತವೆ!

ಇಂತಹಾ ಪಂಚತಾರಾ ಮೇಳಗಳನ್ನು ನಡೆಸುವುದಕ್ಕೆ ದೊಡ್ಡ ಕಂಪೆನಿಗಳು ವಜ್ರ, ಸ್ವರ್ಣ, ರಜತ ಪ್ರಾಯೋಜಕರೆಂಬ ಕಿರೀಟ ತೊಟ್ಟು ಕಿಲೋ ವಜ್ರ, ಬಂಗಾರ, ಬೆಳ್ಳಿಗೆ ಸರಿದೂಗುವ ಹಣವನ್ನು ಪ್ರೀತಿಯಿಂದ ಒದಗಿಸುತ್ತವೆ, ಸಣ್ಣ ಕಂಪೆನಿಗಳು ಭೀತಿಯಿಂದ ತಮ್ಮಿಂದಾದಷ್ಟು ಕೊಡುತ್ತವೆ. ಪ್ರತೀ ಮಹಾಮೇಳಕ್ಕೂ ಕನಿಷ್ಠ 20-30 ಕೋಟಿಯಂತೆ ವರ್ಷಕ್ಕೆ 30-50000 ಕೋಟಿ ರೂಪಾಯಿ ಖರ್ಚಾಗುತ್ತವೆ, ಚಿಕಿತ್ಸಾರ್ಥಿಗಳ ಕಿಸೆಗಳನ್ನೇ ಕತ್ತರಿಸುತ್ತವೆ.

ವೈದ್ಯರ ಕಲಿಕೆಗೆ ಇಷ್ಟೆಲ್ಲ ವೈಭವ ಬೇಕೆ? ಮದರಾಸಿನಲ್ಲಿ 1995ರಲ್ಲಿ ನಡೆದಿದ್ದ ಸಮಾವೇಶವೊಂದರಲ್ಲಿ ಹಿರಿಯ ಮಧುಮೇಹ ವಿಜ್ಞಾನಿ, ಪದ್ಮ ಪ್ರಶಸ್ತಿ ಪುರಸ್ಕೃತ ಡಾ. ಜೆ. ಎಸ್. ಬಜಾಜ್ “ಇವೆಲ್ಲಾ ಯಾಕೆ ಬೇಕು,ನಾವೇ ಹಣ ಕೊಟ್ಟು ಊಟ ಮಾಡಿದರಾಗದೇ?” ಎಂದು ಪ್ರತಿಭಟಿಸಿದ್ದನ್ನು ಕಂಡಿದ್ದೆ. ಆಗ ವೇದಿಕೆಯಲ್ಲಿದ್ದ ಪದಾಧಿಕಾರಿಗಳು ಸುಮ್ಮನಿದ್ದರು, ಕೆಳಗಿದ್ದ ಪ್ರತಿನಿಧಿಗಳು ಗೊಳ್ಳೆಂದು ನಕ್ಕಿದ್ದರು. “ಇಲ್ಲಿ ನಿಮಗೆ ಕುಡಿಸಲಾಗುತ್ತಿರುವ ಪೇಯಗಳೇ ಮಧುಮೇಹಕ್ಕೆ ಕಾರಣ” ಎಂದು ಡಾ. ಬಜಾಜ್ ಹೇಳಿದಾಗ ಹೆಚ್ಚಿನವರು ಕಿವುಡಾಗಿದ್ದರು.

ಆ ಕಾಲದಲ್ಲಿ ಕೆಲವು ವೈದ್ಯರಾದರೂ ಪ್ರಯಾಣ, ನೋಂದಾವಣೆ ಹಾಗೂ ವಸತಿಯ ಖರ್ಚನ್ನು ಸ್ವಂತ ಹಣದಿಂದ ನಿಭಾಯಿಸಬಹುದಿತ್ತು. ಈಗ ವೈದ್ಯಕೀಯ ಮೇಳಗಳನ್ನು ಖಾಸಗಿ ವ್ಯವಸ್ಥಾಪಕರಿಗೆ ವಹಿಸಲಾಗುತ್ತಿದೆ. ಮೊದಲು 2-3 ಸಾವಿರದಷ್ಟಿದ್ದ ನೋಂದಾವಣಾ ಶುಲ್ಕವು ಈಗ 8-10 ಸಾವಿರಕ್ಕೇರಿದೆ. ಮೊದಲು ಒಂದೆರಡು ಸಾವಿರಕ್ಕೆ ಹೋಟೇಲು ಕೊಠಡಿಗಳು ದೊರೆಯುತ್ತಿದ್ದವು; ಈಗ ಎಲ್ಲಾ ಹೋಟೇಲುಗಳ ಎಲ್ಲಾ ಕೊಠಡಿಗಳನ್ನು ವ್ಯವಸ್ಥಾಪಕರೇ ಕಾದಿರಿಸಿಡುವುದರಿಂದ 2-3 ಪಟ್ಟು ತೆತ್ತು ಅವರಿಂದಲೇ ಪಡೆಯಬೇಕಾಗಿದೆ. ಇವುಗಳಲ್ಲಿ ಹೆಚ್ಚಿನವನ್ನು ಮದ್ದಿನ ಕಂಪೆನಿಗಳು ಪಡೆದು ತಮಗಿಷ್ಟದ ವೈದ್ಯರಿಗೆ ನೀಡುತ್ತವೆ. ಇಷ್ಟವಿಲ್ಲದ ವೈದ್ಯರು 50ಸಾವಿರದಿಂದ ಒಂದು ಲಕ್ಷದಷ್ಟು ವ್ಯಯಿಸಬೇಕಾಗುತ್ತದೆ, ಕೆಲವೊಮ್ಮೆ ಎಷ್ಟಕ್ಕೂ ಸಿಗದೆ ಕಂಪೆನಿಯ ಮೊರೆ ಹೋಗಬೇಕಾಗುತ್ತದೆ ಯಾ ಸುಮ್ಮನಿರಬೇಕಾಗುತ್ತದೆ. ವೈದ್ಯರ ಹಿತ ಕಾಯಬೇಕಾದ ವೈದ್ಯರ ಸಂಘಟನೆಗಳು ಮೇಳಗಳನ್ನೇ ಮಾರಾಟ ಮಾಡಿ ತಮ್ಮವರ ಪ್ರಾಮಾಣಿಕತೆಯನ್ನೇ ಮಣ್ಣುಪಾಲು ಮಾಡುತ್ತಿವೆ.

ಈ ಮೇಳಗಳಲ್ಲಿ ಹಲತರದ ಉಪನ್ಯಾಸಕರಿರುತ್ತಾರೆ; ಕೆಲವರು ನಿಜ ಪರಿಣತರಿದ್ದರೆ, ಇನ್ನು ಕೆಲವರು ಕಂಪೆನಿಗಳ ಆಪ್ತರಿರುತ್ತಾರೆ, ಸಂಘಟಕರ ಮಿತ್ರರೂ, ಅಂಗಲಾಚಿ ಬಂದವರೂ ಇರುತ್ತಾರೆ. ಹೊಸದನ್ನು ಪ್ರಾಮಾಣಿಕತೆಯಿಂದ ಕಲಿಸುವವರು ಕೆಲವರು, ಹಳೆಯದನ್ನೇ ಜಪಿಸುವವರು ಹಲವರು. ಅಂತೂ ಉಪನ್ಯಾಸಕರೆಲ್ಲರೂ ವಿಶೇಷ ಪರಿಣತರಿರುವುದಿಲ್ಲ, ಪರಿಣತರೆಲ್ಲರೂ ಉಪನ್ಯಾಸಕರಾಗುವುದಿಲ್ಲ. ಕೇಳಬಂದವರೆಲ್ಲರೂ ಕೇಳಿಸಿಕೊಳ್ಳುವುದಿಲ್ಲ, ಕೇಳಬಯಸುವವರೆಲ್ಲರೂ ಬರಲಾಗುವುದಿಲ್ಲ.

ಹೆಚ್ಚಿನ ಉಪನ್ಯಾಸ-ಗೋಷ್ಠಿಗಳಲ್ಲಿ ಕೋಟಿ ಕೊಟ್ಟ ಕಂಪೆನಿಗಳ ಚಿಕಿತ್ಸಾ ವಿಧಾನಗಳ ಬಗ್ಗೆ, ಸಾಧನ-ಸಲಕರಣೆಗಳ ಬಗ್ಗೆ ಚರ್ಚಿಸಲಾಗುತ್ತದೆ. ಹೊಸಹೊಸ ಕಾರಣಗಳಿಗೆ, ಹೆಚ್ಚಿನ ಆಧಾರಗಳಿಲ್ಲದೆಯೂ, ಅವನ್ನು ಬಳಸುವಂತೆ ಪ್ರೇರೇಪಿಸಲಾಗುತ್ತದೆ. ಮೇಳದ ಮೂಲೆಮೂಲೆಗಳಲ್ಲೂ ಇವುಗಳ ಜಾಹೀರಾತುಗಳೂ ರಾಚುತ್ತಿರುತ್ತವೆ. ಕಂಪೆನಿಗಳ ಖರ್ಚಲ್ಲಿ ಹೊಟ್ಟೆ, ಕಣ್ಣು, ಕಿವಿ ಎಲ್ಲವನ್ನೂ ತುಂಬಿಸಿಕೊಂಡವರು ಋಣಸಂದಾಯಕ್ಕಿಳಿಯುತ್ತಾರೆ. ಮರೆತರೆ ಕಂಪೆನಿಯವರು ಬಂದು ನೆನಪಿಸುತ್ತಾರೆ. ಕಂಪೆನಿಗಳು ಕಿರಿಯ ವೈದ್ಯರನ್ನೇ ದತ್ತು ಪಡೆದು ವೃದ್ಧಾಪ್ಯದವರೆಗೂ ಸಲಹುವುದರಿಂದ ಆಜ್ಞಾಪಾಲನೆ ನಿರಂತರವಾಗಿರುತ್ತದೆ.

ದೊಡ್ಡ ಕಂಪೆನಿಗಳು ವೈದ್ಯರ ಸಂಘಗಳನ್ನು ಹಂಗಿನಲ್ಲಿರಿಸುವುದಷ್ಟೇ ಅಲ್ಲದೆ, ಈಗೀಗ ತಮ್ಮವೇ ಆದ ಸಂಘಗಳನ್ನು ಸ್ಥಾಪಿಸುತ್ತಿವೆ, ಅವುಗಳ ಹೆಸರಲ್ಲಿ ವಿದ್ವತ್ ಪತ್ರಿಕೆಗಳನ್ನೂ, ಮೇಳಗಳನ್ನೂ ನಡೆಸುತ್ತಿವೆ. ಅಮೆರಿಕದಲ್ಲಿ ಮಧುಮೇಹದ ಹೆಸರಲ್ಲಿ ಇಂಥದ್ದೊಂದು ಸಂಘವಿದೆ. ಇನ್ಸುಲಿನ್ ಮತ್ತಿತರ ಮಧುಮೇಹದ ಔಷಧಗಳನ್ನು ತಯಾರಿಸುವ ಎಲ್ಲಾ ದೊಡ್ಡ ಕಂಪೆನಿಗಳು, ಮಧುಮೇಹವುಳ್ಳವರಲ್ಲಿ ಬಗೆಬಗೆಯ ಪರೀಕ್ಷೆಗಳಿಗೆ ಯಂತ್ರ-ತಂತ್ರಗಳನ್ನು ತಯಾರಿಸುವ ಕಂಪೆನಿಗಳು ಹಾಗೂ ಸಂಸ್ಕರಿತ ಆಹಾರವನ್ನು ತಯಾರಿಸುವ ಕಂಪೆನಿಗಳು ಇದರ ಪ್ರಾಯೋಜಕರು. ಮಧುಮೇಹದ ವ್ಯಾಖ್ಯೆಯಿಂದ ಹಿಡಿದು ಯಾರಿಗೆ, ಯಾವಾಗ, ಯಾವ ಚಿಕಿತ್ಸೆ-ಪರೀಕ್ಷೆ ನಡೆಸಬೇಕು ಎಂಬೆಲ್ಲವನ್ನೂ ಆ ಸಂಘವೇ ಹೇಳಿಕೊಡುತ್ತದೆ. ಪ್ರತಿ ವರ್ಷ ಅಮೆರಿಕದಲ್ಲಿ ಸಂಘದ ಮೇಳವಿರುತ್ತದೆ, ಭೂಲೋಕದ ಎಲ್ಲಾ ಮೂಲೆಗಳಿಂದ ತಂದ ವೈದ್ಯರಿಗೆ ಮತಿಮಜ್ಜನವಾಗುತ್ತದೆ, ಅಂತಿಮಸತ್ಯದ ಬೋಧನೆಯಾಗುತ್ತದೆ. ರೋಗ ಬರಿಸುವವರು, ಅದನ್ನು ಪರೀಕ್ಷಿಸುವವರು, ಅದಕ್ಕೆ ಮದ್ದರೆಯುವವರು ಒಟ್ಟಾಗಿ, ವೈದ್ಯರಿಗೆ ಊಟ ಕೊಟ್ಟು, ಪಾಠ ಹೇಳಿ, ಬಳಸಿಕೊಳ್ಳುತ್ತಾರೆ.

ಭಾರತೀಯ ವೈದ್ಯಕೀಯ ಪರಿಷತ್ತಿನ ವೃತ್ತಿ ಸಂಹಿತೆಯನುಸಾರ (ವಿ. 6.8), ವೈದ್ಯನಾಗಲೀ, ವೈದ್ಯಕೀಯ ಸಂಘಟನೆಗಳಾಗಲೀ ಯಾವುದೇ ಮೂಲದಿಂದ ಪ್ರಯಾಣ ಅಥವಾ ವಸತಿ ಸೌಲಭ್ಯವನ್ನಾಗಲೀ,ಉಡುಗೊರೆಗಳನ್ನಾಗಲೀ ಪಡೆದುಕೊಳ್ಳುವಂತಿಲ್ಲ. ಆದರೆ ಪರಿಷತ್ತಿಗೇ ಇದು ಬೇಡವಾದಂತಿದೆ. ವೈದ್ಯಕೀಯ ಸಂಘಟನೆಗಳಿಗೆ ವಿನಾಯಿತಿ ನೀಡುವ ನಿರ್ಣಯ ಆಗಿಬಿಟ್ಟಿದೆ. ಮೇಳಗಳ ಭ್ರಷ್ಟಕೂಪಕ್ಕೆ ಬೀಳದೆ ತಾವಾಗಿ ಕಲಿಯಬಯಸುವ ವೈದ್ಯರನ್ನು ರಾಜ್ಯದ ವೈದ್ಯಕೀಯ ಪರಿಷತ್ತು ತಿರಸ್ಕರಿಸಹೊರಟಿದೆ; ವರ್ಷಕ್ಕೆ ಇಪ್ಪತ್ನಾಲ್ಕು ಗಂಟೆ ಇಂತಹಾ ಮೇಳಗಳಲ್ಲಿ ಪಾಲ್ಗೊಳ್ಳದಿದ್ದರೆ ನೋಂದಣಿಯನ್ನೇ ರದ್ದು ಮಾಡುವ ಬೆದರಿಕೆಯೊಡ್ಡುತ್ತಿದೆ! ಪ್ರಾಮಾಣಿಕ ಜ್ಞಾನದಾಹಿ ವೈದ್ಯರಿಗೆ ಅತ್ತ ಮೇಳಗಳ ಸುಳಿ, ಇತ್ತ ಪರಿಷತ್ತಿನ ಪುಲಿ! ವೈದ್ಯಕೀಯ ಕಲಿಕೆಗೆ ಹಣ ಒದಗಿಸಬೇಕಾದ ಪರಿಷತ್ತು, ಖಾಸಗಿ ಮೇಳಗಳನ್ನು ಉತ್ತೇಜಿಸುತ್ತದೆ, ಪ್ರತೀ ಮೇಳದಿಂದ ತಾನೂ ಕಾಸು ಪೀಕಿಸುತ್ತದೆ, ವೀಕ್ಷಕರೆಂಬ ಹೆಸರಲ್ಲಿ ತನ್ನವರಿಗೂ ಆದರಾತಿಥ್ಯಗಳನ್ನು ಮಾಡಿಸಿಕೊಳ್ಳುತ್ತದೆ! ಹಲವು ವೈದ್ಯರೂ ಅಂತಲ್ಲಿ ಸಾಲುಗಟ್ಟಿ, ಊಟಗೀಟ ಮಾಡಿ, ಸರ್ಟಿಫಿಕೇಟಿಗೆ ಹಾತೊರೆಯುತ್ತಾರೆ.

ಮೊನ್ನೆ ರಾಜ್ಯದ ಮಧುಮೇಹ ತಜ್ಞರ ಮೇಳವು ನಮ್ಮೂರಲ್ಲಿತ್ತು. ಅದರಲ್ಲಿ ಹೊಟ್ಟೆ-ಕಿವಿ ತುಂಬಿಸಿಕೊಂಡಿದ್ದ ಮಿತ್ರನೊಬ್ಬನಲ್ಲಿ “ಮೇಳ ಹೇಗಿತ್ತು?” ಅಂತ ಕೇಳಿದೆ. “ ಓ, ಭಾರೀ ಒಳ್ಳೇದಿತ್ತು ಮಾರಾಯರೇ, ಆದರೆ ರೋಗವನ್ನು ತಡೆಯುವ ಬಗ್ಗೆ ಯಾರೂ ಮಾತಾಡ್ಲೇ ಇಲ್ಲ” ಅಂದ. ಮದ್ದಿನ ಕಂಪೆನಿಯವರು ಪ್ರಾಯೋಜಿಸಿದ ಮೇಳದಲ್ಲಿ, ಮಧುಮೇಹವನ್ನು ಉಂಟುಮಾಡುವ ಐಸ್ ಕ್ರೀಂ, ಸಿಹಿಗಳು, ಪೇಯಗಳನ್ನು ತಿನ್ನಿಸಿ-ಕುಡಿಸಿದಲ್ಲಿ, ಮಧುಮೇಹವನ್ನು ತಡೆಯುವ ಬಗ್ಗೆ ಚರ್ಚೆ ನಡೆಯಲು ಸಾಧ್ಯವೇ? ರೋಗ ತಡೆಯುವ ಬಗ್ಗೆ ಚರ್ಚಿಸುವುದಾದರೆ ಈ ಮೇಳಗಳೇ ಇರುವುದಿಲ್ಲ!

ಯಾವುದೇ ಕಂಪೆನಿಯ ಹಂಗಿಲ್ಲದೆ, ವೈದ್ಯರೇ ಹಣ ಕೊಟ್ಟು, ಸಣ್ಣ ಊಟ ಮಾಡಿ, ಮುಕ್ತವಾಗಿ ಚರ್ಚಿಸಿ ಬೇಕಾದಷ್ಟು ಕಲಿಯಲು ಸಾಧ್ಯವಿದೆ. ಮೇಳಗಳಿಗೆ ಹೋಗದೆಯೂ ಕಲಿಯಲು ಸಾಧ್ಯವಿದೆ. ಮನಸ್ಸಿರಬೇಕು, ಅಷ್ಟೆ.

ಐವತ್ತೆಂಟನೇ ಬರಹ : ಹೆಚ್ಚೆಚ್ಚು ಮದ್ದು, ದುಡ್ಡು ಅಂದರೆ ಹೆಚ್ಚು ಆರೋಗ್ಯವೇ? [ಸೆಪ್ಟೆಂಬರ್ 3, 2014, ಬುಧವಾರ] [ನೋಡಿ | ನೋಡಿ]

ವಿಶ್ವದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಔಷಧಗಳು ದುರ್ಬಳಕೆಯಾಗುವುದೇ ಹೆಚ್ಚು

“ಡಾಕ್ಟ್ರೇ, ಗ್ಲೂಕೋಸ್ ಹಚ್ಚಿ”; “ಡಾಕ್ಟ್ರೇ, ಇಂಜಕ್ಷನ್ ಚುಚ್ಚಿ”; “ಡಾಕ್ಟ್ರೇ, ಟಾನಿಕ್, ಪುಡಿ ಬರೀರಿ”; ಒಬ್ಬರಿಗೆ ದಪ್ಪಗಾಗಲಿಕ್ಕೆ ಔಷಧ ಬೇಕು, ಇನ್ನೊಬ್ಬರಿಗೆ ತೆಳ್ಳಗಾಗಲಿಕ್ಕೆ ಬೇಕು; ಒಬ್ಬರಿಗೆ ಭೇದಿ ನಿಲ್ಲೋದಕ್ಕೆ, ಇನ್ನೊಬ್ಬರಿಗೆ ಭೇದಿ ಆಗೋದಕ್ಕೆ. ಚಿಕಿತ್ಸಾರ್ಥಿಗಳ ಇಷ್ಟಾರ್ಥ ಈಡೇರಿಸುವುದೇ ಕೆಲವು ವೈದ್ಯರಿಗೆ ವೃತ್ತಿಧರ್ಮ. ಅಂತೂ ಬರೆದವರಿಗೂ ಖುಷಿ, ಬರೆಸಿಕೊಂಡವರಿಗೂ ಖುಷಿ, ಬರೆದದ್ದನ್ನು ಕಟ್ಟಿ ಕೊಟ್ಟ ಅಂಗಡಿಯವರಿಗೂ ಖುಷಿ, ಔಷಧ ಕಂಪೆನಿಗಳಿಗೂ ಖುಷಿ, ಎಲ್ಲರಿಂದ ತೆರಿಗೆ ಸಂಗ್ರಹಿಸುವ ಸರಕಾರಕ್ಕೂ ಖುಷಿ!

ಜಾಗತಿಕ ಔಷಧ ವಹಿವಾಟು ವರ್ಷಕ್ಕೆ 18 ಲಕ್ಷ ಕೋಟಿ ರೂಪಾಯಿಗಳಷ್ಟು, ಅದರಲ್ಲಿ ಲಾಭಾಂಶ 6 ಲಕ್ಷ ಕೋಟಿ, ವಹಿವಾಟು ವರ್ಧನೆಗೆ 6 ಲಕ್ಷ ಕೋಟಿ, ಹೊಸ ಸಂಶೋಧನೆಗೆ 3 ಲಕ್ಷ ಕೋಟಿ. ಅಂದರೆ ಔಷಧಗಳನ್ನು ಹುಡುಕುವುದಕ್ಕಿಂತ ದುಪ್ಪಟ್ಟು ಖರ್ಚು ಅವನ್ನು ‘ಬರೆಸುವುದಕ್ಕೆ’! ನಮ್ಮ ಔಷಧ ಉದ್ಯಮ ವಿಶ್ವದಲ್ಲಿ ಮೂರನೆಯದು, ಸಾವಿರದಷ್ಟು ಕಂಪೆನಿಗಳು, 80000ದಷ್ಟು ಉತ್ಪನ್ನಗಳು, ವಾರ್ಷಿಕ ವಹಿವಾಟು 2 ಲಕ್ಷ ಕೋಟಿ ರೂಪಾಯಿ, ವೈದ್ಯರ ಸಲಹೆಯಿಲ್ಲದೆ ಜನರೇ ಖರೀದಿಸುವ ಔಷಧಗಳ ಮೌಲ್ಯ 65000 ಕೋಟಿ ರೂಪಾಯಿ!

ನೋವು ನಿವಾರಕಗಳು, ಪ್ರತಿಜೈವಿಕಗಳು, ಮಧುಮೇಹ, ರಕ್ತದ ಏರೊತ್ತಡ ಹಾಗೂ ಕೊಲೆಸ್ಟರಾಲ್ ಇಳಿಸುವ ಔಷಧಗಳು, ಜಠರದ ಆಮ್ಲ ನಿರೋಧಕಗಳು ಇಂದು ಅತಿ ಹೆಚ್ಚು ಬಳಕೆಯಾಗುತ್ತಿರುವ ಔಷಧಗಳು. ವೈದ್ಯರು, ಔಷಧ ವ್ಯಾಪಾರಿಗಳು, ಜನಸಾಮಾನ್ಯರೆಲ್ಲರಿಂದ ಅತಿ ಹೆಚ್ಚು ದುರ್ಬಳಕೆಯಾಗುತ್ತಿರುವುದು ಇವೇ.

ನಾವು ಉರಿಯೂತ-ನೋವು ನಿವಾರಕಗಳನ್ನು ಕಣ್ಣು ಮುಚ್ಚಿ ನುಂಗುತ್ತೇವೆ. ಅತಿ ಹೆಚ್ಚು ಬಳಸಲ್ಪಡುವ ಆಸ್ಪಿರಿನ್ ಗೆ 160 ವರ್ಷಗಳಾದರೂ, ಅದರ ಕೆಲಸದ ಬಗೆ ಅರ್ಥವಾಗತೊಡಗಿ ಮೂವತ್ತು ವರ್ಷಗಳಾದವಷ್ಟೇ. ಇತ್ತೀಚಿನ ವರ್ಷಗಳಲ್ಲಿ ಈ ಔಷಧಗಳಿಂದಾಗುವ ಗಂಭೀರ ಸಮಸ್ಯೆಗಳ ಬಗ್ಗೆ ಹಲವು ವರದಿಗಳಾಗಿವೆ. ಡೈಕ್ಲೋಫೆನಾಕ್, ಇಬುಪ್ರೊಫೆನ್, ಎಟೊರೊಕಾಕ್ಸಿಬ್ ಮುಂತಾದ ಹಳೆಯ ಹಾಗೂ ಹೊಸ ಉರಿಯೂತ ನಿವಾರಕಗಳನ್ನು ಬಳಸುವವರಲ್ಲಿ ಹೃದಯಾಘಾತ ಅಥವಾ ಪಾರ್ಶ್ವವಾಯು ಉಂಟಾಗುವ ಸಾಧ್ಯತೆಗಳು ಶೇ. 30-40ರಷ್ಟು ಹೆಚ್ಚುತ್ತವೆ. ಮೊದಲೇ ಹೃದಯಾಘಾತಕ್ಕೊಳಗಾದವರು ಇಂತಹಾ ಔಷಧಗಳನ್ನು ಸ್ವಲ್ಪ ದಿನ ಬಳಸಿದರೂ ಮತ್ತೆ ಹೃದಯಾಘಾತಕ್ಕೊಳಗಾಗುವ ಅಪಾಯವು ಹೆಚ್ಚುತ್ತದೆ. ಇವುಗಳ ಬಳಕೆಯಿಂದ ಪುರುಷರಲ್ಲಿ ನಿಮಿರುವಿಕೆಯ ಸಮಸ್ಯೆಯುಂಟಾಗಬಹುದು, ಗರ್ಭಿಣಿಯರಲ್ಲಿ ಗರ್ಭಪಾತಕ್ಕೂ ಕಾರಣವಾಗಬಹುದು. ಈ ಔಷಧಗಳಿಂದ ಜಠರದ ಉರಿಯೂತ, ಪಚನಾಂಗದ ಹುಣ್ಣುಗಳು, ರಕ್ತಸ್ರಾವ ಇತ್ಯಾದಿಗಳಾಗುವುದು ಸಾಮಾನ್ಯ. ಹೃದ್ರೋಗಿಗಳು, ಮಧುಮೇಹವುಳ್ಳವರು, ಹಿರಿವಯಸ್ಕರು, ರಕ್ತದ ಏರೊತ್ತಡಕ್ಕೆ ಚಿಕಿತ್ಸೆ ಪಡೆಯುತ್ತಿರುವವರು, ಯಕೃತ್ತು ಹಾಗೂ ಮೂತ್ರಪಿಂಡಗಳ ಕಾಯಿಲೆಯುಳ್ಳವರು, ಧೂಮಪಾನಿಗಳು, ಗರ್ಭಿಣಿಯರು ಮತ್ತು ಹಾಲೂಡಿಸುವವರು ಇಂತಹಾ ಔಷಧಗಳನ್ನು ಸೇವಿಸುವಾಗ ಅತಿ ಜಾಗರೂಕರಾಗಿರಬೇಕು. ಒಟ್ಟಿನಲ್ಲಿ ಉರಿಯೂತ-ನೋವು ನಿವಾರಕಗಳನ್ನು ಅತಿ ಜಾಗ್ರತೆಯಿಂದ, ಸಾಧ್ಯವಾದಷ್ಟು ಅಲ್ಪ ಪ್ರಮಾಣದಲ್ಲಿ, ಅತ್ಯಲ್ಪ ದಿನಗಳಿಗೆ ಬಳಸುವುದೊಳ್ಳೆಯದು.

ಬ್ಯಾಕ್ಟೀರಿಯಾಗಳ ಸೋಂಕನ್ನು ನಿವಾರಿಸಬಲ್ಲ ಪ್ರತಿಜೈವಿಕಗಳು ದುರುಪಯೋಗವಾಗುವುದೇ ಹೆಚ್ಚು. ಕಳೆದ 75 ವರ್ಷಗಳಲ್ಲಿ ಪ್ರತಿಜೈವಿಕಗಳ ಬಳಕೆಯಿಂದ ಪ್ಲೇಗ್, ಕ್ಷಯ, ಕುಷ್ಠ,ಗುಹ್ಯ ರೋಗಗಳು ಮುಂತಾದವನ್ನೆಲ್ಲ ಬಹಳಷ್ಟು ನಿಯಂತ್ರಿಸುವುದಕ್ಕೂ,  ಶಸ್ತ್ರಚಿಕಿತ್ಸೆ-ಹೆರಿಗೆಗಳನ್ನೆಲ್ಲ ಸುರಕ್ಷಿತಗೊಳಿಸುವುದಕ್ಕೂ, ಆ ಮೂಲಕ ಕೋಟಿಗಟ್ಟಲೆ ಜನರ ಜೀವವುಳಿಸುವುದಕ್ಕೂ ಸಾಧ್ಯವಾಗಿತ್ತು. ಆದರೆ ಅವುಗಳ ಅನಿಯಂತ್ರಿತ ದುರ್ಬಳಕೆಯಿಂದಾಗಿ ಬ್ಯಾಕ್ಟೀರಿಯಾಗಳಲ್ಲಿ ರೋಧಶಕ್ತಿ ಬೆಳೆಯಲು ಕಾರಣವಾಗಿದೆ, ಈ ಜೀವರಕ್ಷಕ ಔಷಧಗಳು ನಿಷ್ಪ್ರಯೋಜಕವಾಗುವ ಅಪಾಯವುಂಟಾಗಿದೆ. ಜೊತೆಗೆ, ಈ ಔಷಧಗಳು ನಮ್ಮ ಪಚನಾಂಗದಲ್ಲಿರುವ ಸಾವಿರಾರು ಬಗೆಯ ಉಪಯುಕ್ತ ಬ್ಯಾಕ್ಟೀರಿಯಾಗಳನ್ನೂ ನಾಶಪಡಿಸಿ ಹಲವು ಸಮಸ್ಯೆಗಳಿಗೆ ಕಾರಣವಾಗಬಹುದೆನ್ನುವುದನ್ನು ಇತ್ತೀಚಿನ ಅಧ್ಯಯನಗಳು ತೋರಿಸಿವೆ. ಆದ್ದರಿಂದ ವೈದ್ಯರಾಗಲೀ, ರೋಗಿಗಳಾಗಲೀ, ಮನಬಂದಂತೆ ಈ ಔಷಧಗಳನ್ನು ಬಳಸಬಾರದು. ಬ್ಯಾಕ್ಟೀರಿಯಾ ಸೋಂಕಿರುವ ಖಚಿತ ಸಾಧ್ಯತೆಗಳಿದ್ದಾಗಲಷ್ಟೇ ಸೂಕ್ತವಾದ ಪ್ರತಿಜೈವಿಕವನ್ನು ಬಳಸಬೇಕು. ಅತಿ ಸಾಮಾನ್ಯವಾದ ನೆಗಡಿ ಯಾ ಗಂಟಲಿನ ಸೋಂಕುಗಳಿಗೆ ಪ್ರತಿಜೈವಿಕಗಳ ಅಗತ್ಯವಿಲ್ಲ. ವಿಪರೀತ ದುಬಾರಿಯಾಗಿರುವ ಕೆಲವು ಹೊಸ ಪ್ರತಿಜೈವಿಕಗಳು ಅಷ್ಟೇ ಹೆಚ್ಚು ಪರಿಣಾಮಕಾರಿಯೆನ್ನಲಾಗದು; ಹಾಗಾಗಿ ಅವನ್ನು ಬಳಸುವಾಗ ಹೆಚ್ಚಿನ ವಿವೇಚನೆಯಿರಬೇಕು.

ಒಮೆಪ್ರಝಾಲ್, ಪಾಂಟೊಪ್ರಝಾಲ್, ರಬೆಪ್ರಝಾಲ್ ನಂತಹ ಆಮ್ಲನಿರೋಧಕ ಔಷಧಗಳನ್ನು ಒಂದರ ಹಸುಳೆಗಳಿಂದ ತೊಂಭತ್ತರ ವೃದ್ಧರವರೆಗೆ ಎಲ್ಲರಲ್ಲೂ ವಿಪರೀತವಾಗಿ ಬಳಸಲಾಗುತ್ತಿದೆ. ಜಠರದಲ್ಲಿ ಆಮ್ಲವಿರುವುದೇ ಅಪರಾಧವೆನ್ನುವಂತೆ ಇವನ್ನು ತಿಂಗಳುಗಟ್ಟಲೆ, ವರ್ಷಗಟ್ಟಲೆ ನೀಡಲಾಗುತ್ತಿದೆ. ಒಂದು ವರ್ಷಕ್ಕಿಂತ ಹೆಚ್ಚು ಕಾಲ ಈ ಔಷಧಗಳನ್ನು ಬಳಸಿದರೆ ಮೂಳೆಮುರಿತದ ಸಾಧ್ಯತೆಗಳು ಹೆಚ್ಚುತ್ತವೆ. ಜಠರದ ಆಮ್ಲವನ್ನು ಇಲ್ಲವಾಗಿಸುವುದರಿಂದ ಪಚನಕ್ರಿಯೆಗೆ ಅಡ್ಡಿಯಾಗುತ್ತದೆ, ಆಹಾರದ ದುಷ್ಪರಿಣಾಮಗಳು ಹೆಚ್ಚುತ್ತವೆ, ಶ್ವಾಸಾಂಗ ಹಾಗೂ ಪಚನಾಂಗಗಳ ಸೋಂಕುಗಳೂ ಹೆಚ್ಚಬಹುದು.

ಮಧುಮೇಹ, ರಕ್ತದ ಏರೊತ್ತಡ, ಹೃದ್ರೋಗಗಳ ಚಿಕಿತ್ಸೆಗಾಗಿ ಅನೇಕ ಹೊಸ, ದುಬಾರಿ ಔಷಧಗಳು ಬಂದಿವೆಯಾದರೂ, ಅವು ಹಳೆಯ ಔಷಧಗಳಿಗಿಂತ ಹೆಚ್ಚು ಪರಿಣಾಮಕಾರಿ ಯಾ ಸುರಕ್ಷಿತವೆನ್ನುವುದಕ್ಕೆ ಆಧಾರಗಳಿಲ್ಲ. ಆದ್ದರಿಂದ ಔಷಧಗಳು ಹೊಸದು ಅಥವಾ ದುಬಾರಿಯಾದೊಡನೆ ಒಳ್ಳೆಯವು ಎನಿಸಿಕೊಳ್ಳುವುದಿಲ್ಲ. ಕೊಲೆಸ್ಟರಾಲ್ ಇಳಿಸುವ ಔಷಧಗಳು ರಕ್ತನಾಳಗಳ ಕಾಯಿಲೆಯುಳ್ಳವರಿಗಷ್ಟೇ ಅಗತ್ಯವಿದ್ದು, ರಕ್ತದಲ್ಲಿ ಕೊಲೆಸ್ಟರಾಲ್ ಪ್ರಮಾಣವನ್ನು ಇಳಿಸುವುದಕ್ಕೆಂದು ಇವನ್ನು ಸೇವಿಸಬೇಕಾಗಿಲ್ಲ.

ವಿಟಮಿನ್ ಮಾತ್ರೆಗಳು, ಬಗೆಬಗೆಯ ಟಾನಿಕ್ಕುಗಳು ಮುಂತಾದ ‘ಆರೋಗ್ಯವರ್ಧಕ’ಗಳನ್ನು ಮೂರರಲ್ಲಿಬ್ಬರು ಸೇವಿಸುತ್ತಾರೆ, ಅವುಗಳ ಜಾಗತಿಕ ವಹಿವಾಟು ವರ್ಷಕ್ಕೆ ಎರಡೂವರೆ ಲಕ್ಷ ಕೋಟಿ ರೂಪಾಯಿಗಳಷ್ಟು! ಆದರೆ ಇವುಗಳಿಂದ ಯಾರಿಗಾದರೂ ಏನಾದರೂ ಪ್ರಯೋಜನವಿದೆಯೇ? ಡಿಸೆಂಬರ್ 17, 2013ರ ಆನಲ್ಸ್ ಆಫ್ ಇಂಟರ್ನಲ್ ಮೆಡಿಸಿನ್ ವಿದ್ವತ್ಪತ್ರಿಕೆಯಲ್ಲಿ ಪ್ರಕಟವಾಗಿರುವ ಮೂರು ಅಧ್ಯಯನಗಳನುಸಾರ, ವಿಟಮಿನ್ ಹಾಗೂ ಖನಿಜಾಂಶಗಳ ಮಾತ್ರೆಗಳನ್ನು ಸೇವಿಸುವುದರಿಂದ ಹೃದ್ರೋಗ, ಮರೆಗುಳಿತನ, ಕ್ಯಾನ್ಸರ್ ಮುಂತಾದ ರೋಗಗಳನ್ನು ತಡೆಯುವಲ್ಲಿ, ಅಥವಾ ಆಯುಷ್ಯವರ್ಧನೆಯಲ್ಲಿ ಹೆಚ್ಚಿನ ಲಾಭವಾಗುವುದಿಲ್ಲ. ಅದೇ ಪತ್ರಿಕೆಯಲ್ಲಿ ಬರೆದ ಸಂಪಾದಕೀಯದ ಶೀರ್ಷಿಕೆ ಹೀಗಿದೆ: ”ಸಾಕಪ್ಪಾ ಸಾಕು, ವಿಟಮಿನ್ ಹಾಗೂ ಖನಿಜಾಂಶಗಳಿಗೆ ಹಣ ಚೆಲ್ಲುವುದನ್ನು ನಿಲ್ಲಿಸಿ”. [ಆನಲ್ಸ್ ಇಂಟರ್ನಲ್ ಮೆಡಿಸಿನ್, 2013;159(12):850]

ಇನ್ನು ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ‘ಗ್ಲೂಕೋಸು ಬಾಟಲು’ ಹಚ್ಚುವುದು ವಾಡಿಕೆಯೇ ಆಗಿಬಿಟ್ಟಿದೆ. ಐಷಾರಾಮಿ ವಸತಿಗೃಹದೊಳಕ್ಕೆ ಹೊಕ್ಕುವಾಗ ತಟ್ಟೆಯಲ್ಲಿ ಹೂವಿಟ್ಟು, ಹಣೆಗೆ ಕುಂಕುಮ ಹಚ್ಚಿ ಒಳಸೇರಿಸುವಂತೆಯೇ ಆಸ್ಪತ್ರೆಯೊಳಕ್ಕೆ ಹೊಕ್ಕಿದೊಡನೆ ಕೈಗೊಂದು ಸೂಜಿ ಚುಚ್ಚಿ, ಅದಕ್ಕೊಂದು ನಳಿಕೆ ತೂರಿಸಿ, ಬಣ್ಣದ ಮದ್ದು ಬೆರೆಸಿದ ದ್ರಾವಣದ ಬಾಟಲನ್ನು ಸಿಕ್ಕಿಸಿ ಹರಿಬಿಡಲಾಗುತ್ತದೆ. ಹಲವು ಚಿಕಿತ್ಸಾರ್ಥಿಗಳು ಅದರಿಂದ ಪುಳಕಿತರಾಗುತ್ತಾರೆ, ವೈದ್ಯರು ಕೃತಾರ್ಥರಾಗುತ್ತಾರೆ. ಹೀಗೆ ದ್ರಾವಣ ಹರಿಸದಿದ್ದರೆ ಆರೋಗ್ಯವಿಮೆಯೂ ಮಂಜೂರಾಗುವುದಿಲ್ಲ! ಆದರೆ ದ್ರಾವಣ ಮರುಪೂರಣವನ್ನು ವಿವೇಚನೆಯಿಂದ ಬಳಸಿದರಷ್ಟೇ ಜೀವರಕ್ಷಕವಾಗುತ್ತದೆ, ಬೇಕಾಬಿಟ್ಟಿ ಬಳಸಿದರೆ ಅದು ಮಾರಕವೂ ಆಗಬಹುದು. ವಿಪರೀತ ವಾಂತಿ-ಭೇದಿ, ರಕ್ತಸ್ರಾವ, ತೀವ್ರ ಸೋಂಕು ಇತ್ಯಾದಿಗಳಿಂದ ರಕ್ತದೊತ್ತಡದಲ್ಲಿ ಇಳಿಕೆಯಾದಾಗ, ಆಹಾರ ಸೇವನೆಯು ಅಸಾಧ್ಯವಾದಾಗ ಮಾತ್ರವೇ ದ್ರಾವಣದ ಮರುಪೂರಣ ಮಾಡಬೇಕಾಗುತ್ತದೆ. ಹೃದಯ, ಯಕೃತ್ತು ಹಾಗೂ ಮೂತ್ರಪಿಂಡಗಳ ಕಾಯಿಲೆಯುಳ್ಳವರಲ್ಲಿ, ಮಲೇರಿಯಾ, ಡೆಂಗಿ ಮುಂತಾದ ಸೋಂಕುಳ್ಳವರಲ್ಲಿ ಅಜಾಗ್ರತೆಯಿಂದ, ಅನಗತ್ಯವಾಗಿ ಮರುಪೂರಣಮಾಡಿದರೆ ಗಂಭೀರ ಸಮಸ್ಯೆಗಳಾಗಬಹುದು.

ಹಲವರಿಗೆ ಚುಚ್ಚುಮದ್ದಿನ ವ್ಯಾಮೋಹವಿದೆ, ಮದ್ದನ್ನು ಚುಚ್ಚಿದರಷ್ಟೇ ಅದು ಚಿಕಿತ್ಸೆಯೆನಿಸಿಕೊಳ್ಳುತ್ತದೆ ಎಂಬ ಭ್ರಮೆ ವಿಮಾ ಕಂಪೆನಿಗಳಿಗಿದೆ, ಚುಚ್ಚುವುದಕ್ಕೆ ತಯಾರಿರುವ ವೈದ್ಯರಂತೂ ಸಾಕಷ್ಟಿದ್ದಾರೆ. ಆದರೆ ಕೆಲವು ತುರ್ತು ಸನ್ನಿವೇಶಗಳನ್ನು ಹಾಗೂ ಚುಚ್ಚುವುದಕ್ಕಷ್ಟೇ ಲಭ್ಯವಿರುವ ಕೆಲವೊಂದು ಔಷಧಗಳನ್ನು ಹೊರತುಪಡಿಸಿ ಬೇರಾವ ಸಂದರ್ಭಗಳಲ್ಲೂ ಮದ್ದನ್ನು ಚುಚ್ಚುವ ಅಗತ್ಯವಿಲ್ಲ. ಮದ್ದು ಚುಚ್ಚುವುದರಿಂದ ಸ್ನಾಯುಗಳಿಗೆ, ನರಗಳಿಗೆ ಹಾನಿಯಾಗಬಹುದು, ಕೀವುಂಟಾಗಬಹುದು, ಕೆಲವು ಸೋಂಕುಗಳು ಹರಡುವುದಕ್ಕೂ ದಾರಿಯಾಗಬಹುದು ಎನ್ನುವುದನ್ನು ಚುಚ್ಚುಮದ್ದು ಪ್ರಿಯರು ಅರಿತಿದ್ದರೆ ಒಳ್ಳೆಯದು.

ಬದಲಿ ಚಿಕಿತ್ಸಾ ಪದ್ಧತಿಗಳಲ್ಲೂ ಔಷಧಗಳ ಅತಿಬಳಕೆ ಸಾಮಾನ್ಯವಾಗಿದ್ದು, ವ್ಯರ್ಥವೆಚ್ಚಕ್ಕೆ ಕಾರಣವಾಗುತ್ತಿದೆ. ಔಷಧಗಳಿಲ್ಲದೆ ರೋಗ ನಿಯಂತ್ರಿಸಬಹುದೆಂದು ಪ್ರವಚನ ನೀಡುವ ಸ್ವಘೋಷಿತ ಸಂತರುಗಳೆಲ್ಲ ಕೇರಿಕೇರಿಗಳಲ್ಲಿ ದವಾಖಾನೆಗಳನ್ನು ತೆರೆದು ಸಾವಿರಗಟ್ಟಲೆ ಕೋಟಿ ವಹಿವಾಟು ನಡೆಸುತ್ತಿದ್ದಾರೆ.

ಒಳ್ಳೆಯ ವೈದ್ಯನು ರೋಗವನ್ನು ನಿಖರವಾಗಿ ಗುರುತಿಸಿ, ಅಗತ್ಯವಿದ್ದರೆ ಔಷಧಗಳನ್ನು ನೀಡಿ, ಇಲ್ಲದಿದ್ದರೆ ಏನನ್ನೂ ಕೊಡದೆ, ರೋಗನಿವಾರಣೆಗೆ ನೆರವಾಗುತ್ತಾನೆ. ಔಷಧಗಳ ಪಟ್ಟಿ ದೊಡ್ಡದಾದೊಡನೆ ರೋಗಶಮನವು ಕ್ಷಿಪ್ರಗೊಳ್ಳುವುದಿಲ್ಲ, ವೆಚ್ಚ ಹೆಚ್ಚಾದಷ್ಟು ಚಿಕಿತ್ಸೆ ಉತ್ತಮವಾಗಬೇಕಿಲ್ಲ.

ಐವತ್ತೇಳನೇ ಬರಹ : ಇಬೋಲ ಬಗ್ಗೆ ಕಟ್ಟೆಚ್ಚರವಿರಲಿ, ಆತಂಕ ಬೇಡ [ಆಗಸ್ಟ್ 20, 2014, ಬುಧವಾರ] [ನೋಡಿ | ನೋಡಿ]

ಅಸ್ಥಿರತೆ ಹಾಗೂ ಬಡತನಗಳಿಂದಾಗಿ ಹರಡುವ ಮಾರಕ ಸೋಂಕುಗಳು ಇಡೀ ಭೂಮಂಡಲಕ್ಕೆ ಕಂಟಕವಾಗುತ್ತವೆ

ಈಗ ಎಲ್ಲೆಡೆ ಇಬೋಲ ಜ್ವರದ್ದೇ ಸುದ್ದಿ. ಇಬೋಲ ಬಂದರೆ ಸಾಯುವುದು ಖಂಡಿತವಂತೆ; ಇಬೋಲ ಪೀಡಿತರೊಬ್ಬರು ಆಫ್ರಿಕಾದಿಂದ ಮುಂಬೈಗೆ ಬಂದರಂತೆ, ಇನ್ನಿಬ್ಬರು ಚೆನ್ನೈಯಲ್ಲಿ ಇಳಿದರಂತೆ; ಅದಿನ್ನು ಇಲ್ಲೂ ಹರಡಲಿದೆಯಂತೆ; ಎಲ್ಲರೂ ಮುಖ ಮುಚ್ಚಿ, ಕೈಗವಸು ಹಾಕಿ ಓಡಾಡಬೇಕಂತೆ ಇತ್ಯಾದಿ ಇತ್ಯಾದಿ.

ಸೋಂಕಿನ ಭೀತಿ ಹೊಸದೇನಲ್ಲ: 2002-3ರಲ್ಲಿ ಚೀನಾದಲ್ಲಿ ಕಂಡುಬಂದ ಸಾರ್ಸ್ ಸೋಂಕು, 2006-8ರಲ್ಲಿ ಆಫ್ರಿಕಾ-ಏಷ್ಯಾಗಳಲ್ಲಿ ಹರಡಿದ ಚಿಕಂಗುನ್ಯಾ, 2009ರಲ್ಲಿ ಗುರುತಿಸಲ್ಪಟ್ಟ ಹೊಸ ಫ್ಲೂ ಅಥವಾ ಹಂದಿ ಫ್ಲೂ, ಕಳೆದೆರಡು ವರ್ಷಗಳಿಂದ ಮಧ್ಯಪ್ರಾಚ್ಯದಲ್ಲಿ ಸೋಂಕುತ್ತಿರುವ ಕೊರೊನಾ ವೈರಸ್ – ಎಲ್ಲವೂ ತಲೆಬರಹಗಳಾಗಿ, ವಿಶ್ವವ್ಯಾಪಿ ಆತಂಕಕ್ಕೆ ಕಾರಣವಾದವು. ಹೊಸ ಫ್ಲೂ ವಿಚಾರವಂತೂ ಅತಿರೇಕಕ್ಕೆ ಹೋಗಿತ್ತು; ಅದು ಜಗದ್ವ್ಯಾಪಿಯಾಗಿ ಕೋಟಿಗಟ್ಟಲೆ ಜನರು ಸಾಯಬಹುದೆಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದ ಬೆನ್ನಿಗೆ ವಿಮಾನ-ರೈಲು ನಿಲ್ದಾಣಗಳಲ್ಲಿ ಅದನ್ನು ಹುಡುಕಲಾಯಿತು, ಶಾಲೆಗಳನ್ನು ಮುಚ್ಚಲಾಯಿತು, ಬೆಂಗಳೂರಿನಲ್ಲಿ ಹೊಸ ಫ್ಲೂ ಬಂತೆಂದು ಮಂಗಳೂರಿನವರು ಮುಖಮುಚ್ಚಿಕೊಂಡದ್ದಾಯಿತು, ಸಾವಿರಗಟ್ಟಲೆ ಜ್ವರ ಹುಡುಕುವ ಯಂತ್ರಗಳನ್ನೂ, ಲಕ್ಷಗಟ್ಟಲೆ ಮುಖಕವಚಗಳನ್ನೂ, ಟನ್ನುಗಟ್ಟಲೆ ಟಾಮಿಫ್ಲು ಮಾತ್ರೆಗಳನ್ನೂ ಖರೀದಿಸಿದ್ದಾಯಿತು. ಆದರೆ ಭೀತಿ ಸುಳ್ಳಾಯಿತು, ಟಾಮಿಫ್ಲು ನಿಷ್ಪ್ರಯೋಜಕವೆಂದಾಯಿತು, ನೂರಾರು ಕೋಟಿ ವ್ಯರ್ಥವಾಯಿತು.

ಈಗ ಆಫ್ರಿಕಾದ ನಾಲ್ಕು ದೇಶಗಳಲ್ಲಿ ಇಬೋಲ ಜ್ವರದ ಹರಡುವಿಕೆಯು ಅತ್ಯಂತ ಗಂಭೀರವಾದ ತುರ್ತು ಸ್ಥಿತಿಯೆಂದು ವಿಶ್ವ ಆರೋಗ್ಯ ಸಂಸ್ಥೆಯು ಘೋಷಿಸಿದೆ. ಇತ್ತ ಇಬೋಲದ ಬಗ್ಗೆ ಭಯಾನಕವಾದ ವರದಿಗಳಿಂದ, ಊಹಾಪೋಹಗಳಿಂದ ಭೀತಿ-ಗೊಂದಲಗಳ ಸಮೂಹಸನ್ನಿಯೂ ಹರಡುತ್ತಿದೆ.

ಮಲೇರಿಯಾ, ಡೆಂಗಿ, ಚಿಕಂಗುನ್ಯ, ಎಚ್ಐವಿ ಮುಂತಾದವು ವನವಾಸಿ ವಾನರರಿಂದ ಮನುಷ್ಯರಿಗೆ ಹರಡಿ, ನಂತರ ಮನುಷ್ಯರ ನಡುವೆಯೇ ಹರಡುತ್ತಿರುವ ಸೋಂಕುಗಳು. ಇಬೋಲ ಜ್ವರದ ವೈರಸ್ ಫಲಾಹಾರಿ ಬಾವಲಿಗಳೊಳಗೆ ಅಡಗಿದ್ದು, ಅವುಗಳಿಂದ ಮಂಗಗಳು, ಚಿಂಪಾಂಜಿ, ಗೊರಿಲ್ಲಾಗಳು, ಜಿಂಕೆಗಳು, ಮುಳ್ಳುಹಂದಿಗಳು ಮುಂತಾದ ಪ್ರಾಣಿಗಳಿಗೆ ಹರಡಿ ರೋಗವನ್ನುಂಟು ಮಾಡುತ್ತದೆ. ಈ ರೋಗಗ್ರಸ್ತ ಪ್ರಾಣಿಗಳ ರಕ್ತ, ಮಾಂಸ ಅಥವಾ ದೈಹಿಕ ಸ್ರಾವಗಳ ಸಂಪರ್ಕಕ್ಕೆ ಬಂದ ಮನುಷ್ಯರಿಗೆ ಸೋಂಕು ತಗಲುತ್ತದೆ, ಅವರಿಂದ ಇನ್ನಿತರರಿಗೆ ಹರಡುತ್ತದೆ.

ಫ್ಲೂ, ನೆಗಡಿಗಳಂತೆ ಅತಿ ಸುಲಭವಾಗಿ, ಅಯಾಚಿತವಾಗಿ ಇಬೋಲ ಹರಡುವುದಿಲ್ಲ. ಮಲೇರಿಯಾ, ಡೆಂಗಿ, ಚಿಕಂಗುನ್ಯಾಗಳಂತೆ ಸೊಳ್ಳೆಗಳ ಮೂಲಕವೂ ಹರಡುವುದಿಲ್ಲ. ಎಚ್ಐವಿಯಂತೆ ವರ್ಷಗಟ್ಟಲೆ ಮನುಷ್ಯರೊಳಗಿದ್ದು ಹರಡುವುದೂ ಇಲ್ಲ. ಪ್ರತೀ ಸಲವೂ ಯಾರೋ ಒಬ್ಬರು ಪ್ರಾಣಿಯಿಂದ ಅದನ್ನು ಪಡೆದ ಬಳಿಕ ಇನ್ನಿತರರಿಗೆ ಹರಡತೊಡಗುತ್ತದೆ. ಸೋಂಕಿತರನ್ನೆಲ್ಲ ಪ್ರತ್ಯೇಕಿಸಿ ಆರೋಗ್ಯವಂತರ ನಿಕಟ ಸಂಪರ್ಕಕ್ಕೆ ಬಾರದಂತೆ ತಡೆದರೆ ಸೋಂಕು ನಿಯಂತ್ರಿಸಲ್ಪಡುತ್ತದೆ.

ರೋಗಿಯ ರಕ್ತ, ಎದೆಹಾಲು, ಕಣ್ಣೀರು ಹಾಗೂ ಲೈಂಗಿಕ ಸ್ರಾವಗಳ ಮೂಲಕ ರೋಗ ಹರಡುವ ಸಾಧ್ಯತೆಗಳು ಹೆಚ್ಚು. ಮುನ್ನೆಚ್ಚರಿಕೆಯಿಲ್ಲದೆ ಆರೈಕೆ ಮಾಡುವವರಿಗೆ, ಚಿಕಿತ್ಸೆ ನೀಡುವ ವೈದ್ಯರಿಗೆ ಹಾಗೂ ಆರೋಗ್ಯಕರ್ಮಿಗಳಿಗೆ, ಮರುಬಳಸುವ ಸೂಜಿಗಳಿಂದ ಚುಚ್ಚಿಸಿಕೊಳ್ಳುವವರಿಗೆ, ಮೃತದೇಹಗಳನ್ನು ಅಪ್ಪಿ, ಚುಂಬಿಸುವ ಹಾಗೂ ಶುಚೀಕರಿಸುವ ಬಂಧುಮಿತ್ರರಿಗೆ ಇಬೋಲ ಹೆಚ್ಚಾಗಿ ಹರಡುತ್ತದೆ. ಜೊಲ್ಲು, ಬೆವರು, ಮೂತ್ರಗಳಲ್ಲಿ ವೈರಾಣುಗಳು ಅತ್ಯಲ್ಪವಿರುವುದರಿಂದ ರೋಗಿಯನ್ನು ಮುಟ್ಟುವುದರಿಂದ ಯಾ ಕೈಕುಲುಕುವುದರಿಂದ, ವಿಮಾನದಲ್ಲಿ ಜೊತೆಗೆ ಪ್ರಯಾಣಿಸುವುದರಿಂದ ರೋಗ ಹರಡುವ ಸಾಧ್ಯತೆಗಳು ಕಡಿಮೆ.

ಮನುಷ್ಯರಲ್ಲಿ ಮೊದಲ ಬಾರಿಗೆ ಇಬೋಲ ಜ್ವರವನ್ನು ಗುರುತಿಸಿದ್ದು 1976ರಲ್ಲಿ. ಮಧ್ಯ ಆಫ್ರಿಕಾದ ಕಾಂಗೋ ಗಣರಾಜ್ಯದ ಹಳ್ಳಿಯೊಂದರಲ್ಲಿ ಶಿಕ್ಷಕರಾಗಿದ್ದ ಮಬಲೊ ಲೊಕೆಲ ಎಂಬವರು ಇಬೋಲ ನದಿಪ್ರದೇಶದಲ್ಲಿ ಸುತ್ತಾಡಿ ಮರಳಿದ ಬಳಿಕ ಆಗಸ್ಟ್ 26, 1976ರಂದು ಜ್ವರಪೀಡಿತರಾದರು. ಮಲೇರಿಯಾವೆಂದು ನೀಡಿದ ಚಿಕಿತ್ಸೆ ವಿಫಲವಾಗಿ, ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದರು. ಅವರ ಶವಸಂಸ್ಕಾರದಲ್ಲಿ ನೆರವಾಗಿದ್ದ ತಾಯಿ, ಅತ್ತೆ ಹಾಗೂ ಕೆಲ ಬಂಧುಗಳು ಅದೇ ಕಾಯಿಲೆ ತಗಲಿ ಮೃತಪಟ್ಟರು. ಅವರು ದಾಖಲಾಗಿದ್ದ ಆಸ್ಪತ್ರೆಯಲ್ಲಿ ಚುಚ್ಚುಮದ್ದನ್ನು ಪಡೆದಿದ್ದವರಿಗೂ ರೋಗ ಹರಡಿತು. ಆಸ್ಪತ್ರೆಯ 17 ಸಿಬ್ಬಂದಿಗಳಲ್ಲಿ 11 ಮಂದಿ ಅದೇ ಜ್ವರದಿಂದ ಸಾವನ್ನಪ್ಪಿ ಆಸ್ಪತ್ರೆಯನ್ನೇ ಮುಚ್ಚಲಾಯಿತು. ಕಾಂಗೋದಲ್ಲಿ ಸೇವಾನಿರತರಾಗಿದ್ದ ಬೆಲ್ಜಿಯಂನ ಸನ್ಯಾಸಿನಿಯರಿಬ್ಬರೂ ಮೃತಪಟ್ಟರು. ನೆರೆಯ ಸುಡಾನ್ ದೇಶಕ್ಕೂ ಸೋಂಕು ಹರಡಿ, ಒಟ್ಟು 602 ಮಂದಿ ರೋಗಪೀಡಿತರಾದರು, 431 ಮಂದಿ ಮೃತರಾದರು.

ಇದು ಹಿಂದೆ ಕಂಡರಿಯದ ಸೋಂಕೆಂದು ವಿಶ್ವ ಆರೋಗ್ಯ ಸಂಸ್ಥೆ ನೆರವಿಗೆ ಬಂತು; ರೋಗಿಗಳನ್ನೂ, ಸಂಸ್ಪರ್ಶಿತರನ್ನೂ ಪ್ರತ್ಯೇಕಿಸಿ, ಆಸ್ಪತ್ರೆಗಳಲ್ಲಿ ಹಾಗೂ ಶವಸಂಸ್ಕಾರಗಳಲ್ಲಿ ಸೂಕ್ತ ನಿಯಂತ್ರೋಣಾಪಾಯಗಳನ್ನು ಕೈಗೊಂಡಾಗ ಅದರ ಹರಡುವಿಕೆ ನಿಂತಿತು. ಮೂರೇ ತಿಂಗಳೊಳಗೆ, ಅಕ್ಟೋಬರ್ 13, 1976ರಂದು, ಅಮೆರಿಕಾದ ರೋಗ ನಿಯಂತ್ರಣ ಕೇಂದ್ರದ ತಜ್ಞರು ಬೆಲ್ಜಿಯಂನ ಸನ್ಯಾಸಿನಿಯ ರಕ್ತದಲ್ಲಿ ಈ ಹೊಸ ರೋಗದ ವೈರಾಣುವನ್ನು ಪತ್ತೆ ಮಾಡಿ ಇಬೋಲ ವೈರಸ್ ಎಂದು ಹೆಸರಿಟ್ಟರು. ಅದು ರಕ್ತನಾಳಗಳಿಗೆ ಹಾನಿಯುಂಟು ಮಾಡಿ ರಕ್ತಸ್ರಾವಕ್ಕೂ, ಅಂಗವೈಫಲ್ಯಕ್ಕೂ ಕಾರಣವಾಗುತ್ತದೆ ಎನ್ನುವುದೂ ತಿಳಿಯಿತು.

ಆ ಬಳಿಕ ಸುಮಾರು 20 ಸಲ ಇಬೋಲ ಹರಡತೊಡಗಿದಾಗ ದೇಶ-ವಿದೇಶಗಳ ತಂಡಗಳು ಜೊತೆಗೂಡಿ ನಿಯಂತ್ರಿಸಿದ್ದವು. ಹಾಗಾಗಿ ಇಬೋಲ ಜ್ವರವು ಮಧ್ಯ ಆಫ್ರಿಕಾದ ಐದಾರು ದೇಶಗಳಿಗಷ್ಟೇ ಸೀಮಿತವಾಗಿತ್ತು; 2012ರವರೆಗೆ ಒಟ್ಟು 2350 ಮಂದಿ ಸೋಂಕಿತರಾಗಿ, 1570 ಮಂದಿ ಸಾವನ್ನಪ್ಪಿದ್ದರು.

ಆದರೆ ಈ ಬಾರಿ ಇಬೋಲ ಜ್ವರವು ಪಶ್ಚಿಮ ಆಫ್ರಿಕಾಕ್ಕೆ ಲಗ್ಗೆಯಿಟ್ಟಿದೆ. ಮಧ್ಯ ಆಫ್ರಿಕಾದಿಂದ ಹಾರಿ ಬಂದ ಬಾವಲಿಗಳು ಅದನ್ನಿಲ್ಲಿಗೆ ತಂದಿರಬೇಕು. ಡಿಸೆಂಬರ್ ಮೊದಲಲ್ಲಿ ಗಿನಿಯ ಹಳ್ಳಿಯೊಂದರಲ್ಲಿ ಎರಡು ವರ್ಷದ ಮಗು ಸಾವನ್ನಪ್ಪಿತು, ಕೆಲವೇ ದಿನಗಳಲ್ಲಿ ಮಗುವಿನ ತಾಯಿ, 3 ವರ್ಷದ ಅಕ್ಕ ಮತ್ತು ಅಜ್ಜಿಯೂ ಮೃತರಾದರು. ಇವರ ಅಂತಿಮಸಂಸ್ಕಾರದಲ್ಲಿ ಭಾಗವಹಿಸಿದ ಬಂಧುಮಿತ್ರರಿಗೂ ರೋಗ ಹರಡಿ, ಅವರಿದ್ದ ಆಸ್ಪತ್ರೆಗಳ ಸಿಬ್ಬಂದಿಗೂ, ಇನ್ನಿತರರಿಗೂ ಹರಡಿತು. ಮೊದಮೊದಲು ಇಬೋಲ ಸೋಂಕು ಗುರುತಿಸಲ್ಪಡದೆ ನಿಯಂತ್ರಣದಲ್ಲಿ ತಡವಾಯಿತು. ಅಶಾಂತಿ, ಅಸ್ಥಿರತೆ, ಬಡತನ ಹಾಗೂ ದುರ್ಲಭ ಆರೋಗ್ಯ ಸೇವೆಗಳಿಂದಾಗಿ ಇನ್ನಷ್ಟು ಕಷ್ಟವಾಯಿತು. ಕಳೆದ ಎಂಟು ತಿಂಗಳಲ್ಲಿ ಗಿನಿ ಹಾಗೂ ಅದರ ಗಡಿಯಲ್ಲಿರುವ ಸಿಯೆರಾ ಲಿಯೋನ್ ಮತ್ತು ಲೈಬೀರಿಯಾಗಳಲ್ಲಿ 2150ಕ್ಕೂ ಹೆಚ್ಚು ಮಂದಿ ಸೋಂಕಿತರಾಗಿ, 1150ರಷ್ಟು ಮೃತರಾಗಿದ್ದಾರೆ. ಲೈಬೀರಿಯದಿಂದ ನೈಜೀರಿಯಾಕ್ಕೆ ಪ್ರಯಾಣಿಸಿದ ಸೋಂಕಿತರೊಬ್ಬರಿಂದ ಅಲ್ಲಿನ ಹದಿನೈದು ಜನರಿಗೆ ಸೋಂಕು ತಗಲಿ, ನಾಲ್ವರು ಮೃತಪಟ್ಟಿದ್ದಾರೆ.

ಸದ್ಯಕ್ಕೆ ಇಬೋಲಾ ಸೋಂಕು ಪಶ್ಚಿಮ ಆಫ್ರಿಕಾದ ಮೂರು ದೇಶಗಳ ಗಡಿಭಾಗಗಳಿಗಷ್ಟೇ ಸೀಮಿತವಾಗಿದ್ದು, ಆಫ್ರಿಕಾದ ಬೇರಾವ ದೇಶಕ್ಕಾಗಲೀ, ಇತರ ಖಂಡಗಳಿಗಾಗಲೀ ಹರಡಿಲ್ಲ. ಆದರೆ ಈ ಮೂರು ದೇಶಗಳ ಆಡಳಿತಗಳೂ, ಆರೋಗ್ಯ ಸೇವೆಗಳೂ ಈಗಾಗಲೇ ಹೈರಾಣಾಗಿವೆ. ವಿದೇಶಿ ತಂಡಗಳು ತಡವಾಗಿ ಬಂದಿರುವುದರಿಂದ ತೊಂದರೆಗಳು ಹೆಚ್ಚಿವೆ. ಕೆಲವು ಸ್ಥಳೀಯರಂತೂ ಇಬೋಲಾ ಇರುವಿಕೆಯನ್ನೇ ಒಪ್ಪದೆ ರೋಗಶಿಬಿರಗಳ ಮೇಲೆ ದಾಳಿ ಮಾಡತೊಡಗಿದ್ದಾರೆ. ಇಂತಹಾ ಸವಾಲುಗಳ ನಡುವೆ ಹತ್ತು ಲಕ್ಷ ಜನರಿರುವ ಈ ಪ್ರದೇಶಗಳಿಂದ ಯಾರೂ ಒಳಹೊರಗೆ ಸಾಗದಂತೆ ಕಠಿಣ ನಿರ್ಬಂಧಗಳನ್ನು ವಿಧಿಸಿ, ರೋಗವನ್ನು ತಡೆಯಲು ಸರ್ವರೀತಿಯ ಪ್ರಯತ್ನಗಳಾಗುತ್ತಿವೆ. ಇಬೋಲಾದ ಮಾರಣಹೋಮದಿಂದ ರಕ್ಷಿಸಿಕೊಳ್ಳಲು ವಿಶ್ವವಿಡೀ ನೆರವಾಗಲೇಬೇಕಾಗಿದೆ.

ಪಶ್ಚಿಮ ಆಫ್ರಿಕಾದ ಈ ಮೂರು ದೇಶಗಳಲ್ಲಿ ದುಡಿಯುತ್ತಿರುವ ಭಾರತೀಯರು ಇಲ್ಲಿಗೆ ಸೋಂಕನ್ನು ತರುವ ಸಾಧ್ಯತೆಗಳು ಅತ್ಯಲ್ಪ. ಹಾಗಿದ್ದರೂ ಯಾವುದೇ ದಾರಿಯಿಂದ ಅಲ್ಲಿಂದ ಮರಳಿದವರನ್ನು ಗುರುತಿಸಿ, ಅಮೂಲಾಗ್ರವಾಗಿ ಪರೀಕ್ಷಿಸಿ, ಇಬೋಲಾದ ಸಂಶಯಗಳಿದ್ದರೆ ಪ್ರತ್ಯೇಕವಾಗಿಟ್ಟು ಗಮನಿಸುವುದು ಅತ್ಯಗತ್ಯ. ಅಂಥವರೆಲ್ಲರೂ ಸ್ವಯಂಪ್ರೇರಣೆಯಿಂದ ಸಹಕರಿಸುವುದು ಹಾಗೂ ವೈದ್ಯರಿಗೆ ಸರಿಯಾದ ಮಾಹಿತಿಯೊದಗಿಸುವುದು ಅಷ್ಟೇ ಮುಖ್ಯ. ಇಲ್ಲೇ ಇರುವ ನಾವ್ಯಾರೂ ಈಗ ಆತಂಕಿತರಾಗಬೇಕಿಲ್ಲ, ಕೈಗವಸು, ಮುಖಕವಚ ಇತ್ಯಾದಿಗಳನ್ನು ಧರಿಸಬೇಕಾಗಿಲ್ಲ.

ಇಬೋಲಾ ಸೋಂಕಿಗೆ ಪರಿಣಾಮಕಾರಿ ಔಷಧಗಳಾಗಲೀ, ಲಸಿಕೆಯಾಗಲೀ ಇದುವರೆಗೆ ಲಭ್ಯವಿಲ್ಲ. ಕಳೆದ ಮೂರು ದಶಕಗಳಲ್ಲಿ ಮಧ್ಯ ಆಫ್ರಿಕಾದ ಐದಾರು ದೇಶಗಳಲ್ಲಿ 2000 ಜನರಷ್ಟೇ ಸೋಂಕಿತರಾಗಿದ್ದುದರಿಂದ ಕಷ್ಟ-ಖರ್ಚುಗಳ ಈ ಸಂಶೋಧನೆಗಳು ಹಿಂದೆ ಬಿದ್ದಿರಬಹುದು. ಇಬೋಲಾದಿಂದ ಬದುಕುಳಿದವರ ರಕ್ತದ್ರವವನ್ನು ಸೋಂಕಿತರಿಗೆ ಕೊಟ್ಟು ಅದರಲ್ಲಿರುವ ವೈರಸ್ ನಾಶಕ ಪ್ರತಿಕಾಯಗಳಿಂದ ರೋಗನಿವಾರಿಸುವ ಪ್ರಯತ್ನಗಳು ಈ ಹಿಂದೆ ಯಶಸ್ವಿಯಾಗಿದ್ದವು. ಈಗ ಮತ್ತೆ ಅದನ್ನು ಪ್ರಯತ್ನಿಸಲಾಗುತ್ತಿದೆ. ಕೃತಕವಾಗಿ ತಯಾರಿಸಿದ ಇಬೋಲನಾಶಕ ಪ್ರತಿಕಾಯಗಳನ್ನು ಬಳಸುವುದಕ್ಕೂ ವಿಶ್ವ ಆರೋಗ್ಯ ಸಂಸ್ಥೆ ಸಮ್ಮತಿಸಿದೆ. ಇಬೋಲನಾಶಕ ಔಷಧಗಳನ್ನೂ ಅಭಿವೃದ್ಧಿಪಡಿಸಲಾಗುತ್ತಿದೆ. ಇಬೋಲಾದ ಲಸಿಕೆಯೂ ಮುಂದಿನ ವರ್ಷದಿಂದ ಲಭ್ಯವಾಗಬಹುದು.

ಯಾವುದೇ ಮೂಲೆಯಲ್ಲಿರುವ ರಾಜಕೀಯ ಅಸ್ಥಿರತೆ ಹಾಗೂ ಬಡತನಗಳು ಸಾಂಕ್ರಾಮಿಕ ರೋಗಗಳಿಗೆ ಭೂಮಿಕೆಯಾಗುತ್ತವೆ, ಈ ಜೆಟ್ ಯುಗದಲ್ಲಿ ಇಡೀ ಭೂಮಂಡಲಕ್ಕೆ ಅಪಾಯವೊಡ್ಡುತ್ತವೆ, ಸಿರಿವಂತ ದೇಶಗಳಿಗೂ ಕಂಟಕವಾಗುತ್ತವೆ. ಇಬೋಲಾ ಜ್ವರದಿಂದ ನಾವು ಕಲಿಯಬೇಕಾದ ಪಾಠ ಇದುವೇ.

ಐವತ್ತಾರನೇ ಬರಹ : ಲೈಂಗಿಕ ಹಿಂಸೆ ಸಾಮಾಜಿಕ ಹಿಂಸೆಯ ಪ್ರತಿರೂಪ [ಆಗಸ್ಟ್ 6, 2014, ಬುಧವಾರ] [ನೋಡಿ | ನೋಡಿ]

ಹಿಂಸೆಯೇ ಜೀವಾಳವಾಗಿರುವ ಪುರುಷ ಪ್ರಧಾನ ವ್ಯವಸ್ಥೆಗೆ ಮಹಿಳೆಯರು ಮತ್ತು ಮಕ್ಕಳು ಬಲಿಪಶುಗಳು

ನಮ್ಮ ರಾಜ್ಯವೂ ಸೇರಿ, ದೇಶದ ಹಲವೆಡೆ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯಗಳಿಗೆ ಹಸುಳೆ-ವೃದ್ಧೆಯರೆನ್ನದೆ ಹಲವರು ಬಲಿಯಾಗುತ್ತಿದ್ದಾರೆ. ಪೋಲೀಸರ ಪರದಾಟ, ಜನರ ಆಕ್ರೋಶಗಳ ನಡುವೆ ಹತಾಶ ಮಂತ್ರಿಗಳು ತೋಚಿದ್ದನ್ನು ಒದರುತ್ತಿದ್ದಾರೆ, ಮರ್ಮಾಂಗದಿಂದ ಶಿರದವರೆಗಿನ ವಿವಿಧ ಅಂಗಚ್ಛೇದನಗಳೇ ಅದಕ್ಕೆ ತಕ್ಕ ಶಿಕ್ಷೆಯೆಂದು ಕೆಲವರು ಕೂಗುತ್ತಿದ್ದಾರೆ.

ವಾಸ್ತವವೆಂದರೆ ಲೈಂಗಿಕ ದೌರ್ಜನ್ಯವು ನಮ್ಮ ದೇಶದಲ್ಲಷ್ಟೇ ಇರುವುದಲ್ಲ, ವಿಶ್ವದ ಹಲವೆಡೆ, ಜಾತಿ-ಮತ-ಸಂಪ್ರದಾಯಗಳ ಬೇಧವಿಲ್ಲದೆ, ಅನಾದಿ ಕಾಲದಿಂದಲೂ ನಡೆಯುತ್ತಲೇ ಇದೆ. ಮನುಷ್ಯರಲ್ಲಷ್ಟೇ ಅಲ್ಲ, ಕೆಲವು ಕೀಟಗಳಲ್ಲೂ, ಪ್ರಾಣಿಗಳಲ್ಲೂ ಪ್ರಚಲಿತವಿದೆ. ಲೈಂಗಿಕ ಹಿಂಸೆಯು ಕೇವಲ ಮಹಿಳೆಯರು ಹಾಗೂ ಹೆಣ್ಮಕ್ಕಳ ಮೇಲಷ್ಟೇ ಆಗುವುದಲ್ಲ; ಎಲ್ಲಾ ವಯಸ್ಸಿನ ಗಂಡುಗಳ ಮೇಲೂ ನಡೆಯುತ್ತಿದೆ. ಹಾಗಿರುವಾಗ ಕಠಿಣ ಕಾನೂನುಗಳಿಂದಷ್ಟೇ ಅವನ್ನು ತಡೆಯುವುದಕ್ಕಾಗದು; ಕೌಟುಂಬಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ನ್ಯಾಯಿಕ ಬದ್ಧತೆಗಳೆಲ್ಲವೂ ಬೇಕಾಗುತ್ತವೆ. ಧರ್ಮಗುರುಗಳು, ಸ್ವಘೋಷಿತ ಸಂತರು, ಸಂಯಮ ಕಲಿಸುತ್ತೇವೆನ್ನುವ ಯೋಗಗುರುಗಳು ಕೂಡಾ ಲೈಂಗಿಕ ಪೀಡನೆಯ ಆರೋಪಕ್ಕೊಳಗಾಗಿರುವಾಗ ಧರ್ಮಬೋಧೆ, ಸಂಸ್ಕೃತಿಪಾಠ, ಯೋಗಶಿಕ್ಷಣಗಳಿಂದಲೂ ಅದನ್ನು ತಡೆಯಲಾಗದು.

ಲೈಂಗಿಕ ಹಿಂಸಾಚಾರದ ಪ್ರವೃತ್ತಿಯು ಅತಿ ಸಂಕೀರ್ಣವಾದುದು. ಫ್ಲಾರಿಡಾ ವಿಶ್ವವಿದ್ಯಾಲಯದ ಮನಃಶಾಸ್ತ್ರ ವಿಭಾಗದ ವಿಲಿಯಂ ಮೆಕ್ ಕಿಬಿನ್ ಮತ್ತಿತರರು ಹೇಳುವಂತೆ [ರಿವ್ಯೂ ಆಫ್ ಜನರಲ್ ಸೈಕಾಲಜಿ,2008;12(1):86-97] ಹೆಚ್ಚು ಆಕ್ರಾಮಕವಾದ, ಲೈಂಗಿಕ ಕ್ರಿಯಾತುರವಾದ ಗಂಡುಗಳಿರುವ ಕೆಲವು ಕೀಟಗಳು, ಮೀನುಗಳು, ಉಭಯಜೀವಿಗಳು, ಸರೀಸೃಪಗಳು ಹಾಗೂ ವಾನರ ವಿಧಗಳಲ್ಲಿ ಲೈಂಗಿಕ ಬಲಾತ್ಕಾರವೂ ಹೆಚ್ಚಾಗಿರುತ್ತದೆ. ಈ ಮನಃಶಾಸ್ತ್ರಜ್ಞರು ಲೈಂಗಿಕ ಪೀಡಕರನ್ನು ಐದು ವಿಧವಾಗಿ ವಿಂಗಡಿಸುತ್ತಾರೆ. 1) ಸೂಕ್ತ ಬಾಳಸಂಗಾತಿಯನ್ನು ಪಡೆಯಲಾಗದ ಹತಾಶೆಯಿಂದ ಅತ್ಯಾಚಾರಕ್ಕೆ ಯತ್ನಿಸುವವರು; ಭ್ರೂಣಹತ್ಯೆಯಿಂದಾಗಿ ಹೆಣ್ಮಕ್ಕಳ ಸಂಖ್ಯೆಯಲ್ಲಿ ಇಳಿಕೆಯಾಗಿರುವುದು ಇಂತಹ ಪೀಡಕರ ಹೆಚ್ಚಳಕ್ಕೆ ಕಾರಣವಾಗಿರಬಹುದು. 2) ಲೈಂಗಿಕ ಹಿಂಸೆಯ ಸನ್ನಿವೇಶಗಳಿಂದ ಪ್ರೇರಿತರಾಗಿ ಅತ್ಯಾಚಾರಕ್ಕೆಳಸುವವರು. 3) ಸಂದರ್ಭಸಾಧಕ ಪೀಡಕರು; ಇಂಥವರು, ಬಯಸಿದ ಒಪ್ಪಿಗೆ ದೊರೆಯದಿದ್ದಾಗ, ಪ್ರತಿದಾಳಿಗೊಳಗಾಗುವ ಸಾಧ್ಯತೆಗಳು ಕಡಿಮೆಯಿದ್ದಾಗ ಬಲಾತ್ಕಾರಕ್ಕೆ ಮುಂದಾಗುತ್ತಾರೆ, ಯುದ್ಧ, ಅಶಾಂತಿ, ಗಲಭೆ-ದಂಗೆಗಳ ಸನ್ನಿವೇಶಗಳು, ಮದ್ಯಪಾನದ ಮೋಜಿನ ಕೂಟಗಳು ಇಂಥವರಿಗೆ ಅವಕಾಶವೊದಗಿಸುತ್ತವೆ. 4) ತಮ್ಮ ಅಂತಸ್ತು, ಅತಿ ವಿಶ್ವಾಸಗಳಿಂದ ಹಲವು ಸಲ, ಹಲವರಲ್ಲಿ ಲೈಂಗಿಕಪೀಡನೆ ನಡೆಸಿ, ಅದರಿಂದ ಉತ್ತೇಜಿತರಾಗಿ ಇನ್ನಷ್ಟು ನಡೆಸುವವರು. 5) ತಮ್ಮ ಪುರುಷತ್ವವನ್ನು ಸಾಧಿಸಿಕೊಳ್ಳುವ ಸ್ಪರ್ಧಾತ್ಮಕ ಹಠಕ್ಕೆ ಬಿದ್ದು ಬಲಾತ್ಕಾರಕ್ಕೆ ಮುಂದಾಗುವವರು; ತಮ್ಮ ಸಂಗಾತಿ ಅಥವಾ ಪತ್ನಿಯ ನಡವಳಿಕೆಯ ಬಗ್ಗೆ ಸಂಶಯದಿಂದ ಅಥವಾ ಅವರತ್ತ ಇತರ ಪುರುಷರು ಆಕರ್ಷಿತರಾಗಿದ್ದಾರೆಂಬ ಭಯದಿಂದ ಇಂತಹಾ ಪೀಡನೆ ನಡೆಯುತ್ತದೆ. ಒಟ್ಟಿನಲ್ಲಿ ಲೈಂಗಿಕ ದೌರ್ಜನ್ಯಗಳ ಹಿಂದೆ ಪೀಡಕನ ಹಿಂಸಾಪ್ರವೃತ್ತಿ ಹಾಗೂ ಸ್ವ-ದೌರ್ಬಲ್ಯವನ್ನು ಹೊಸಕುವ ಹತಾಶೆಗಳಿರುತ್ತವೆಯೇ ಹೊರತು ಪೀಡಿತರ ಪಾತ್ರವೇನೂ ಇರುವುದಿಲ್ಲ.

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಮನಃಶಾಸ್ತ್ರಜ್ಞೆ ಐಲೀನ್ ಝುರ್ ಬ್ರಿಗೆನ್ ಹೇಳುವಂತೆ ಯುದ್ಧ ಸನ್ನದ್ಧವಾದ ಸಾಮಾಜಿಕ ವ್ಯವಸ್ಥೆಯು ಪುರುಷ ಪ್ರಾಧಾನ್ಯತೆಯನ್ನೂ, ಹಿಂಸೆಯನ್ನೂ ಬೆಂಬಲಿಸಿ,ಲೈಂಗಿಕ ದೌರ್ಜನ್ಯಗಳನ್ನು ಪ್ರೇರೇಪಿಸುತ್ತದೆ. (ಸೈಕಾಲಜಿ ಆಫ್ ವಿಮೆನ್ ಕ್ವಾರ್ಟರ್ಲಿ. 2010;34:538) ಅಂತಸ್ತು, ಸಾಧನೆ, ಗಡಸುತನ, ನಿಯಂತ್ರಣ ಮುಂತಾದೆಲ್ಲವನ್ನೂ ಪುರುಷತ್ವದೊಂದಿಗೆ ಸಮೀಕರಿಸುವ ವ್ಯವಸ್ಥೆಯು ಗಂಡಸರನ್ನು ಕ್ಷಮಾರ್ಹರನ್ನಾಗಿಸುತ್ತದೆ, ಲೈಂಗಿಕ ಹಿಂಸೆಗೆ ಅಡಿಪಾಯವನ್ನೊದಗಿಸುತ್ತದೆ. ಪದೇ ಪದೇ ಯುದ್ಧಕ್ಕಿಳಿಯುವ ಸಮುದಾಯಗಳಲ್ಲಿ ಲೈಂಗಿಕ ದೌರ್ಜನ್ಯವು ಹೆಚ್ಚು ಸಾಮಾನ್ಯವಾಗಿರುವುದು ಮತ್ತು ಯುದ್ಧಕಾಲದಲ್ಲಿ ಅತ್ಯಾಚಾರದ ಪ್ರಕರಣಗಳು ಎಗ್ಗಿಲ್ಲದೆ ನಡೆಯುವುದು ಇದನ್ನು ಪುಷ್ಠೀಕರಿಸುತ್ತವೆ. ಯುದ್ಧೋತ್ಸಾಹಿಗಳು ಹಾಗೂ ಸಾಮಾಜಿಕ ಹಿಂಸೆಯ ಬೆಂಬಲಿಗರು ಲೈಂಗಿಕ ದೌರ್ಜನ್ಯವೆಸಗಿದವರನ್ನು ಪ್ರತ್ಯಕ್ಷವಾಗಿ ಯಾ ಪರೋಕ್ಷವಾಗಿ ಬೆಂಬಲಿಸುವುದು ಇದೇ ಕಾರಣಕ್ಕೆ. ಶ್ರೇಣೀಕೃತ ವ್ಯವಸ್ಥೆಯ ಹಿಂಸಾತ್ಮಕ ಕಟ್ಟುಪಾಡುಗಳನ್ನು ಸಮರ್ಥಿಸುವವರು ಧರ್ಮರಕ್ಷಣೆಗಾಗಿ ಅತ್ಯಾಚಾರದ ಬೆದರಿಕೆಯೊಡ್ಡುವುದು ಇದೇ ಕಾರಣಕ್ಕೆ. ಅಂಥವರು ಪೀಡಕರನ್ನು ಕ್ಷಮಿಸುತ್ತಾರೆ; ಪೀಡಿತರ ರೀತಿನೀತಿಗಳು, ಹಾವಭಾವಗಳು, ಉಡುಗೆ, ಶಿಕ್ಷಣ, ಸಂಸ್ಕೃತಿಗಳೇ ಅತ್ಯಾಚಾರವನ್ನು ಆಹ್ವಾನಿಸುತ್ತವೆ ಎಂದು ದೂಷಿಸುತ್ತಾರೆ.

ನಮ್ಮ ರಾಷ್ಟ್ರೀಯ ಅಪರಾಧ ದಾಖಲೆಯನುಸಾರ 2013ರಲ್ಲಿ ಮಹಿಳೆಯರ ಮೇಲೆ ಅತ್ಯಾಚಾರದ 33707 ಪ್ರಕರಣಗಳೂ, ಇತರ ಲೈಂಗಿಕ ದೌರ್ಜನ್ಯದ 83328 ಪ್ರಕರಣಗಳೂ ದಾಖಲಾಗಿದ್ದವು. ಶೇ. 94.4 ಪ್ರಕರಣಗಳಲ್ಲಿ ಪೀಡಿತರ ಪರಿಚಯಸ್ಥರೇ ಅತ್ಯಾಚಾರವೆಸಗಿದ್ದರು, ಆ ಪೈಕಿ ಶೇ. 34ರಷ್ಟು ನೆರೆಹೊರೆಯವರೂ, ಶೇ. 7ರಷ್ಟು ಹತ್ತಿರದ ಸಂಬಂಧಿಗಳೂ ಆಗಿದ್ದರು. ಶೇ. 89ರಷ್ಟು ಪ್ರಕರಣಗಳಲ್ಲಿ ಪೀಡಿತರು ದೇಹವಿಡೀ ಮುಚ್ಚುವ ಉಡುಪುಗಳನ್ನೇ ತೊಟ್ಟಿದ್ದರು, ಶೇ. 10ರಷ್ಟು ಅತ್ಯಾಚಾರಗಳು 10 ವರ್ಷದೊಳಗಿನ ಮಕ್ಕಳ ಮೇಲಾಗಿದ್ದವು. ಬಹುತೇಕ ಎಲ್ಲಾ ಲೈಂಗಿಕ ದೌರ್ಜನ್ಯದ ಪ್ರಕರಣಗಳಲ್ಲಿ ಪೀಡಿತರ ಪಾತ್ರವು ಶೂನ್ಯವೆನ್ನುವುದು ಇದರಿಂದಲೇ ಸ್ಪಷ್ಟವಾಗುತ್ತದೆ.

ಲೈಂಗಿಕ ದೌರ್ಜನ್ಯಗಳನ್ನು ತಡೆಯಬೇಕಾದರೆ ಪುರುಷರಲ್ಲಿ ಸ್ವನಿಯಂತ್ರಣವನ್ನೂ, ಸ್ತ್ರೀಪರ ಸಂವೇದನೆಗಳನ್ನೂ ಬೆಳೆಸಬೇಕು, ಮಹಿಳೆಯರಲ್ಲಿ ಸ್ವರಕ್ಷಣೆಯ ತಂತ್ರ-ಸಾಮರ್ಥ್ಯಗಳನ್ನು ರೂಢಿಸಬೇಕು, ಇವಕ್ಕೆ ಪೂರಕವಾಗಿ ಆಡಳಿತ ಹಾಗೂ ಕಾನೂನು ವ್ಯವಸ್ಥೆಯನ್ನು ಬಲಪಡಿಸಬೇಕು ಮತ್ತು ಸಮಾಜದ ಯುದ್ಧೋತ್ಸಾಹವನ್ನೂ, ಹಿಂಸಾಪ್ರವೃತ್ತಿಯನ್ನೂ ನಿಯಂತ್ರಿಸಬೇಕು.

ಲೈಂಗಿಕ ದೌರ್ಜನ್ಯವು ಎಲ್ಲೆಡೆಯಲ್ಲೂ ಸಂಭವಿಸಬಹುದಾದ್ದರಿಂದ ಅದಕ್ಕೆ ಹೆದರಿ ಮುದುಡಿಕೊಂಡಿರಲು ಸಾಧ್ಯವಿಲ್ಲ, ಇರಲೂ ಬಾರದು. ಪೀಡಕರು ಅತ್ಯಂತ ಸುಯೋಜಿತವಾಗಿ, ಹೊಂಚು ಹಾಕಿ ತಮ್ಮ ದುಷ್ಕೃತ್ಯಗಳನ್ನು ನಡೆಸುವುದರಿಂದ, ಸಂಭಾವ್ಯ ಪೀಡಿತರು ಅವನ್ನು ವಿಫಲಗೊಳಿಸಲು ಸರ್ವಸನ್ನದ್ಧರಾಗಿರಬೇಕು. ಮನೆಯೊಳಗೆ ಹಾಗೂ ನೆರೆಹೊರೆಯಲ್ಲಿ, ಶಾಲೆ-ಕಾಲೇಜುಗಳಲ್ಲಿ, ಕೆಲಸದ ಸ್ಥಳದಲ್ಲಿ ಹಾಗೂ ಸಾಮಾಜಿಕ ಆಗುಹೋಗುಗಳಲ್ಲಿ ಲೈಂಗಿಕ ಪೀಡಕರನ್ನು ಗುರುತಿಸಿ ನಿಷ್ಕ್ರಿಯಗೊಳಿಸುವ ತಂತ್ರಗಳನ್ನು ಪ್ರತಿಯೋರ್ವರೂ ಹೊಂದಿರಬೇಕು.

ಶೇ. 94ಕ್ಕೂ ಹೆಚ್ಚಿನ ಪ್ರಕರಣಗಳು ಪರಿಚಿತರಿಂದಲೇ ಆಗುವುದರಿಂದ ಮನೆಯೊಳಗೂ ಹೊರಗೂ ಎಲ್ಲೆಲ್ಲೂ ನಿಗಾ ವಹಿಸಬೇಕು. ಪ್ರತಿನಿತ್ಯವೂ ಮಕ್ಕಳ ಕಷ್ಟ-ಸುಖಗಳನ್ನು ಹಂಚಿಕೊಳ್ಳುವುದು, ಮಕ್ಕಳ ದೈಹಿಕ ಹಾಗೂ ಮಾನಸಿಕ ಸ್ಥಿತಿಗಳನ್ನು ಗಮನಿಸುವುದು, ಅವರ ದೇಹದ ಮೇಲಿರಬಹುದಾದ ಗಾಯಗಳನ್ನು ಗುರುತಿಸುವುದು ಅತ್ಯಂತ ಮುಖ್ಯ. ಸಂಶಯಾಸ್ಪದವಾದ ಬದಲಾವಣೆಗಳಿದ್ದರೆ ಕೂಡಲೇ ನುರಿತ ವೈದ್ಯರನ್ನು ಕಾಣುವುದೊಳ್ಳೆಯದು.

ಪರಿಚಯಸ್ಥರು ಪೀಡನೆಗೆ ಮೊದಲು ನಿಧಾನವಾಗಿ ಪುಸಲಾಯಿಸಿ, ಸಣ್ಣದಾಗಿ ಆರಂಭಿಸಿ, ನಂತರ ಗುಟ್ಟಾಗಿಡುವಂತೆ ಒತ್ತಡ ಹೇರುವ ತಂತ್ರಗಳನ್ನು ಸಾಮಾನ್ಯವಾಗಿ ಅನುಸರಿಸುತ್ತಾರೆ. ಮಕ್ಕಳ ಜೊತೆ ವಿನಾ ಕಾರಣ ಹೆಚ್ಚು ಕಾಲ ಕಳೆಯುವುದು, ಮಿತಿಮೀರಿ ಪ್ರೀತಿ ತೋರುವುದು, ಅತಿಯಾಗಿ ಉಡುಗೊರೆಗಳನ್ನು ನೀಡುವುದು ಮುಂತಾದವಿದ್ದರೆ ಜಾಗೃತರಾಗಬೇಕು. ಮಕ್ಕಳು ಅದೇನನ್ನೋ ಹೇಳಲು ಹಿಂಜರಿಯುತ್ತಿದ್ದಾರೆಂದೆನಿಸಿದರೆ ಎಚ್ಚೆತ್ತುಕೊಳ್ಳಬೇಕು. ಬಂಧುಗಳು, ಕೆಲಸದವರು, ನೆರೆಯವರು, ಶಿಕ್ಷಕರು ಮುಂತಾದವರ ಬಗ್ಗೆ ಮಕ್ಕಳ ದೂರುಗಳನ್ನು ಪರಿಶೀಲಿಸಬೇಕು.

ಸ್ನೇಹಿತರು, ಸಹೋದ್ಯೋಗಿಗಳು ಇತರ ಯಾರೇ ಆದರೂ ದಿಟ್ಟಿಸಿ ನೋಡಿ, ತೀರಾ ಖಾಸಗಿ ವಿಷಯಗಳನ್ನು ಕೇಳಿ, ಅಥವಾ ದೇಹ ಸ್ಪರ್ಷಿಸಿ ಅತಿಕ್ರಮಣಕ್ಕೆ ಮುಂದಾದರೆ, ಅಥವಾ ಏಕಾಂತಕ್ಕೆಳೆಯಲು ಯತ್ನಿಸಿದರೆ ಎಚ್ಚರಿಕೆಯೊಂದಿಗೆ ನಿರಾಕರಿಸಬೇಕು. ಮದ್ಯಪಾನವು ಮಂಕು ಬಡಿಸುವ ಸಾಧ್ಯತೆಗಳಿರುವುದರಿಂದ ಆ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕಾಗುತ್ತದೆ. ಯಾರದೇ ವರ್ತನೆ ಇಷ್ಟವಾಗದಿದ್ದರೆ ಗಟ್ಟಿಯಾಗಿ ಪ್ರತಿಭಟಿಸಬೇಕು; ಲೈಂಗಿಕ ಹಿಂಸಕರು ಕರುಣೆಗೆ ಅರ್ಹರಲ್ಲ. ಮುಜುಗರವುಂಟು ಮಾಡುವ, ಅಪಾಯಕಾರಿಯೆನಿಸುವ ಸನ್ನಿವೇಶಗಳಿಂದ ಉಪಾಯವಾಗಿ ಹಿಂತಿರುಗುವುದೊಳ್ಳೆಯದು. ಸ್ವರಕ್ಷಣೆಯ ತಂತ್ರಗಳನ್ನು ಹಾಗೂ ಆಯುಧಗಳನ್ನು ಬಳಸಿಕೊಳ್ಳಬಹುದಾದರೂ, ಶಕ್ತಿಗಿಂತ ಯುಕ್ತಿಯೇ ಸುಲಭಸಾಧನವಾಗುತ್ತದೆ.

ಶಾಲೆಗಳಲ್ಲಿ ವಾಹನಗಳ ಚಾಲನೆ-ನಿರ್ವಹಣೆಗಳಿಗೆ ಮಹಿಳೆಯರನ್ನು ನೇಮಿಸುವುದು, ದೈಹಿಕ ಶಿಕ್ಷಣಕ್ಕೂ ಮಹಿಳೆಯರನ್ನೇ ನೇಮಿಸುವುದು, ಮೈ ಮುಟ್ಟಿ ಕಲಿಸಬೇಕಾದ ವ್ಯಾಯಾಮಗಳನ್ನೂ, ಯೋಗಾಸನಗಳನ್ನೂ ಪ್ರತಿಬಂಧಿಸುವುದು ಯಾ ಐಚ್ಛಿಕಗೊಳಿಸುವುದು, ಸ್ಪರ್ಷರಹಿತ ಶಿಕ್ಷಣ ಕ್ರಮಗಳನ್ನು ಕಡ್ಡಾಯಗೊಳಿಸುವುದು ಮುಂತಾದ ಕ್ರಮಗಳನ್ನು ಕೈಗೊಳ್ಳಬಹುದು. ಎಲ್ಲ ಮಕ್ಕಳಿಗೆ ಒಳ್ಳೆಯ ಹಾಗೂ ಕೆಟ್ಟ ಸ್ಪರ್ಶಗಳ ಬಗ್ಗೆ ಮಾಹಿತಿಯನ್ನೂ, ಸಂಶಯಾಸ್ಪದ ನಡವಳಿಕೆಗಳನ್ನು ವರದಿ ಮಾಡುವ ವ್ಯವಸ್ಥೆಯನ್ನೂ ಒದಗಿಸಬೇಕು. ನೀತಿ ಬೋಧೆ, ಧರ್ಮ ಬೋಧೆಗಳಿಗಿಂತ ವೈಜ್ಞಾನಿಕವಾದ ಲೈಂಗಿಕ ಶಿಕ್ಷಣಕ್ಕೆ ಒತ್ತು ನೀಡಬೇಕು, ಲೈಂಗಿಕ ಅಪರಾಧಗಳ ಬಗ್ಗೆ ಕಾನೂನಿನ ಅರಿವು ಮೂಡಿಸಬೇಕು.

ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯವನ್ನು ಕೊನೆಗೊಳಿಸಬೇಕಾದರೆ ಎಲ್ಲಾ ಹಿಂಸಾತ್ಮಕ ಪ್ರವೃತ್ತಿಗಳನ್ನೂ ಕೊನೆಗೊಳಿಸುವುದೊಂದೇ ದಾರಿ. ಹಿಂಸಕರನ್ನು ತಡೆಯಬೇಕು, ಮಹಿಳೆಯರು ಮತ್ತು ಮಕ್ಕಳ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವುದಲ್ಲ.

ಐವತ್ತೈದನೇ ಬರಹ : ಇಷ್ಟೊಂದು ಪರೀಕ್ಷೆಗಳನ್ನು ಮಾಡಬೇಕೇ ಡಾಕ್ಟ್ರೇ?[ಜುಲೈ 23, 2014, ಬುಧವಾರ] [ನೋಡಿ | ನೋಡಿ]

ದುಬಾರಿಯಾದ ಪರೀಕ್ಷೆಗಳನ್ನು ನಡೆಸುವ ಮೊದಲು ವೈದ್ಯರು ಚಿಕಿತ್ಸಾರ್ಥಿಗಳೊಡನೆ ಚರ್ಚಿಸುವುದೊಳ್ಳೆಯದು

ನಮ್ಮೂರಿಗೆ ಬೆಳಗ್ಗೆ ಹತ್ತು ಗಂಟೆಗೊಂದು ಹಳಿಬಂಡಿ ಬರುತ್ತದೆ. ಅದರಿಂದಿಳಿಯುವ ಹೆಚ್ಚಿನವರು ನಮ್ಮೂರಿನ ಅರೇಳು ದೊಡ್ಡ ಆಸ್ಪತ್ರೆಗಳಿಗೆ ಹೋಗುವವರಾದ್ದರಿಂದ ಅದರ ಅಡ್ಡ ಹೆಸರು ಆಸ್ಪತ್ರೆ ಎಕ್ಸ್ ಪ್ರೆಸ್. ಅವರೆಲ್ಲರ ಕೈಗಳಲ್ಲೂ ಈ ಆಸ್ಪತ್ರೆಗಳಲ್ಲಿ ಕೊಟ್ಟ ದೊಡ್ಡ ದೊಡ್ಡ ಚೀಲಗಳು. ಅದೇ ಬಂಡಿ ಸಂಜೆ ಆರು ಗಂಟೆಗೆ ಇವರನ್ನೆಲ್ಲ ತುಂಬಿಕೊಂಡು ಮರಳಿ ಹೊರಡುತ್ತದೆ, ಅಷ್ಟೊತ್ತಿಗೆ ಆ ಚೀಲಗಳೆಲ್ಲ ಇನ್ನಷ್ಟು ದಪ್ಪವಾಗಿ, ಭಾರವಾಗಿರುತ್ತವೆ. ಜನರಿಗೆ ಇಂತಹಾ ಖಾಸಗಿ ಆಸ್ಪತ್ರೆಗಳ ಮೋಹ, ಆಸ್ಪತ್ರೆಗಳಿಗೆ ಇನ್ನಷ್ಟು ಪರೀಕ್ಷೆಗಳ ದಾಹ,

ಬಗೆಬಗೆಯ ಪರೀಕ್ಷೆಗಳಿಂದ, ಹೊಸ ಹೊಸ ಚಿಕಿತ್ಸೆಗಳಿಂದ ಆಸ್ಪತ್ರೆಗಳಿಗೆ ಆದಾಯವೂ ಹೆಚ್ಚು, ಲಾಭವೂ ಹೆಚ್ಚು. ಆಸ್ಪತ್ರೆಗಳಲ್ಲಿ ಸಂಬಳಕ್ಕಿರುವ ವೈದ್ಯರು ಇವುಗಳ ಉದ್ದುದ್ದ ಪಟ್ಟಿ ಬರೆಯುವ ಬಲವಂತಕ್ಕೊಳಗಾಗುವುದು ಇದೇ ಕಾರಣಕ್ಕೆ. ಆರೋಗ್ಯ ವಿಮೆಯುಳ್ಳವರಿಗೆ, ಹೆಚ್ಚು ಹಣವಂತರಿಗೆ ಇವು ಇನ್ನಷ್ಟು ಹೆಚ್ಚಿರುತ್ತವೆ, ವಿಶೇಷವಾಗಿರುತ್ತವೆ.

ರೋಗಿಗಳನ್ನು ಸವಿವರವಾಗಿ ನೋಡುವಷ್ಟು ಬಿಡುವಿಲ್ಲದ ಕೆಲವು ವೈದ್ಯರು ನಖಶಿಖಾಂತ ಪರೀಕ್ಷೆಗಳನ್ನು ಮಾಡಿಸುವುದಿದೆ. ಎಲ್ಲಾದರೂ ತಪ್ಪಿದರೆ ದಾವೆಗಳೆದ್ದಾವು ಎನ್ನುವ ಭಯದಿಂದ ಹಲಬಗೆಯ ಪರೀಕ್ಷೆ-ಚಿಕಿತ್ಸೆಗಳನ್ನು ಮಾಡುವ ವೈದ್ಯರೂ ಇದ್ದಾರೆ. ರೋಗಿಯ ಆಣತಿಯಂತೆ ಇವನ್ನೆಲ್ಲ ಮಾಡುವ ವೈದ್ಯರೂ ಹಲವರಿದ್ದಾರೆ.

ಇಡೀ ದೇಹಕ್ಕೆ ಉದ್ದುದ್ದ ಪರೀಕ್ಷೆಗಳನ್ನು ಮಾಡಿಸುವುದು ಜನಸಾಮಾನ್ಯರಿಗೂ ಅಭ್ಯಾಸವಾದಂತಿದೆ. ಎದೆನೋವಿದ್ದರೆ ಇಸಿಜಿ, ತಲೆನೋವಿದ್ದರೆ ಸಿಟಿ ಸ್ಕಾನ್, ಕೆಮ್ಮಿದ್ದರೆ ಎಕ್ಸ್ ರೇ, ಏನೂ ಇಲ್ಲದಿದ್ದರೆ ವರ್ಷಕ್ಕೆರಡು ಬಾರಿ ಫುಲ್ ಬಾಡಿ ಚೆಕ್ ಅಪ್ – ಎಲ್ಲವನ್ನೂ ಅವರವರೇ ಮಾಡಿಸಿಕೊಂಡು ವೈದ್ಯರ ಮುಖಕ್ಕೆ ಹಿಡಿಯುವುದು ಸಾಮಾನ್ಯವಾಗುತ್ತಿದೆ. ’ನಿಮಗಿರುವ ತೊಂದರೆಯೇನೆಂದು ಮೊದಲು ಹೇಳಿ’ ಅಂತ ವೈದ್ಯರೇನಾದರೂ ಕೇಳಿದರೆ, ‘ಎಂಥಾ ಡಾಕ್ಟರು ನೀವು, ಆ ರಿಪೋರ್ಟಲ್ಲೇ ಎಲ್ಲಾ ಇದೆಯಲ್ಲಾ?’ ಅಂತ ಗದರುವವರೂ ಹೆಚ್ಚುತ್ತಿದ್ದಾರೆ.

ಖಾಸಗಿ ಆರೋಗ್ಯ ಸೇವೆಯೇ ಪ್ರಮುಖವಾಗಿರುವ ದೇಶಗಳಲ್ಲಿ ಆರೋಗ್ಯರಕ್ಷಣಾ ವೆಚ್ಚದ ಮೂರರಲ್ಲೊಂದು ಭಾಗವು ಅನಗತ್ಯ ಪರೀಕ್ಷೆಗಳಿಗಾಗಿಯೇ ವ್ಯರ್ಥವಾಗುತ್ತಿದೆ. ಆರೋಗ್ಯರಕ್ಷಣೆಗಾಗಿ ವರ್ಷವೊಂದಕ್ಕೆ ಅಮೆರಿಕಾದಲ್ಲಿ ವ್ಯಯಿಸಲಾಗುವ ನಾಲ್ಕು ಲಕ್ಷ ಡಾಲರುಗಳಲ್ಲಿ 1.33 ಲಕ್ಷ ಡಾಲರುಗಳು, ನಮ್ಮ ದೇಶದಲ್ಲಿ ಮೂರು ಲಕ್ಷ ಕೋಟಿಗಳಲ್ಲಿ ಒಂದು ಲಕ್ಷ ಕೋಟಿ ಹೀಗೆ ಹಾಳಾಗುತ್ತಿದೆ.

ರೋಗಲಕ್ಷಣಗಳ ಆಧಾರದಲ್ಲಿ ರೋಗವೇನೆಂದು ಅಂದಾಜಿಸಿ ಅದಕ್ಕೆ ತಕ್ಕ ಪರೀಕ್ಷೆಗಳನ್ನು ಮಾಡಿದರೆ ನಿಖರವಾದ ರೋಗಪತ್ತೆಗೆ ಸಹಾಯವಾಗುತ್ತದೆ. ಅದು ಬಿಟ್ಟು ಒಟ್ಟಾರೆಯಾಗಿ ಪರೀಕ್ಷೆಗಳನ್ನು ಮಾಡಿಸುವುದೆಂದರೆ ಕಣ್ಣು ಮುಚ್ಚಿ ಬೇಟೆಯಾಡಿದಂತೆ. ಯಾವುದೇ ರೋಗಲಕ್ಷಣಗಳಿಲ್ಲದವರು ಸುಮ್ಮನೆ ಪರೀಕ್ಷೆಗಳನ್ನು ಮಾಡಿಸಿಕೊಂಡಾಗ ಒಂದೆರಡು ಸಣ್ಣ ವ್ಯತ್ಯಾಸಗಳೇನಾದರೂ ಕಂಡುಬಂದರೆ ಇನ್ನಷ್ಟು ಪರೀಕ್ಷೆಗಳಿಗೆ, ಅನಗತ್ಯ ಚಿಕಿತ್ಸೆಗಳಿಗೆ ದಾರಿಯಾಗುತ್ತದೆ, ಖರ್ಚಿಗೂ, ಆತಂಕಕ್ಕೂ ಕಾರಣವಾಗುತ್ತದೆ. ಕೊಲೆಸ್ಟರಾಲ್ ಏರಿದೆ, ವಿಟಮಿನ್ ಡಿ ಇಳಿದಿದೆ, ಮೂಳೆ ಸವೆದಿದೆ ಎಂಬುದೆಲ್ಲ ಹುಟ್ಟಿಕೊಂಡದ್ದು ಹೀಗೆಯೇ. ನಿಜಕ್ಕೂ ರೋಗವಿದ್ದವರಲ್ಲಿ ಯಾವ್ಯಾವುದೋ ಪರೀಕ್ಷೆಗಳನ್ನು ಮಾಡಿಸಿದರೆ ರೋಗಪತ್ತೆಯೇ ದಿಕ್ಕೆಡಬಹುದು.

ಅಮೆರಿಕಾದ ತಜ್ಞ ವೈದ್ಯರ ಪ್ರತಿಷ್ಠಾನವು ಸುಮಾರು 130 ರಷ್ಟು ಪರೀಕ್ಷೆಗಳು ಹಾಗೂ ಚಿಕಿತ್ಸಾಕ್ರಮಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು (ಇಲ್ಲಿದೆ: http://www.choosingwisely.org/wp-content/uploads/2013/02/Choosing-Wisely-Master-List.pdf), ಇವನ್ನು ಬಳಸುವ ಮೊದಲು ವೈದ್ಯರು ಚಿಕಿತ್ಸಾರ್ಥಿಗಳ ಜೊತೆ ಸಾಧಕ-ಬಾಧಕಗಳನ್ನು ಚರ್ಚಿಸುವುದು ಒಳಿತೆಂದು ಸೂಚಿಸಿದೆ.

ರಕ್ತದಲ್ಲಿ ವಿಟಮಿನ್ ಡಿ ಪರೀಕ್ಷೆ ಈಗ ಸಾಮಾನ್ಯವಾಗಿಬಿಟ್ಟಿದೆ. ಮೈಕೈ ನೋವು, ಬೆನ್ನು ನೋವು ಇರುವವರಿಗೂ, ಕೆಲವೊಮ್ಮೆ ಯಾವುದೇ ಸಮಸ್ಯೆಗಳಿಲ್ಲದವರಿಗೂ ಇದನ್ನು ಮಾಡಿಸಲಾಗುತ್ತಿದೆ. ಆಗಾಗ ಇದನ್ನು ಮಾಡಿಸುವವರೂ ಇದ್ದಾರೆ. ರೂ.700ರಿಂದ 3000 ಬೆಲೆಯಿರುವ ಈ ಪರೀಕ್ಷೆಯಿಂದ ಹೆಚ್ಚಿನ ಉಪಯೋಗವೇನಿಲ್ಲ. ಈ ಪರೀಕ್ಷೆಗಳು ಸರಿಯಾಗಿ ಪ್ರಮಾಣಿತಗೊಂಡಿಲ್ಲ ಮಾತ್ರವಲ್ಲ, ನಮ್ಮಲ್ಲಿರಬೇಕಾದ ವಿಟಮಿನ್ ಡಿ ಪ್ರಮಾಣದ ಬಗ್ಗೆಯೂ ಒಮ್ಮತಾಭಿಪ್ರಾಯವಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಬಿಸಿಲಿಗೆ ಮೈಯೊಡ್ಡುವುದರಿಂದಲೇ ಬೇಕಾದಷ್ಟು ವಿಟಮಿನ್ ಡಿ ದೊರೆಯುವುದರಿಂದ ಈ ಪರೀಕ್ಷೆಯಾಗಲೀ, ವಿಟಮಿನ್ ಡಿ ಮಾತ್ರೆಗಳಾಗಲೀ ಹೆಚ್ಚಿನವರಲ್ಲಿ ಅಗತ್ಯವಿಲ್ಲ.

ಅಂಗಾಂಗಗಳ ಬಿಂಬಗ್ರಹಣ ಮಾಡುವ ಎಕ್ಸ್ ರೇ, ಅಲ್ಟ್ರಾ ಸೌಂಡ್, ಸಿ ಟಿ ಸ್ಕಾನ್, ಎಂ ಆರ್ ಐ, ಪಿ ಇ ಟಿ ಯಂತಹ ದುಬಾರಿಯಾದ ಪರೀಕ್ಷೆಗಳೂ ದುರುಪಯೋಗವಾಗುತ್ತಿವೆ. ಈ ಯಂತ್ರಗಳು ತಾವಾಗಿ ರೋಗವೇನೆಂದು ಹುಡುಕಿ ತೋರಿಸುವುದಿಲ್ಲ; ವೈದ್ಯನು ರೋಗಿಯನ್ನು ಪರೀಕ್ಷಿಸಿದ ಆಧಾರದಲ್ಲಿ, ರೋಗಗ್ರಸ್ತ ಅಂಗದ ಬಿಂಬವನ್ನು ಪರಾಮರ್ಶಿಸಿ ರೋಗವನ್ನು ದೃಢಪಡಿಸಬೇಕಾಗುತ್ತದೆ. ಇದರಲ್ಲಿ ತಪ್ಪುಗಳಾದರೆ ಅನಗತ್ಯ ಚಿಕಿತ್ಸೆಗೆ ದಾರಿಯಾಗಬಹುದು. ಪದೇ ಪದೇ ಎಕ್ಸ್ ರೇ ಹಾಗೂ ಸಿ ಟಿ ಸ್ಕಾನ್ ಮಾಡುವುದರಿಂದ ಕ್ಷಕಿರಣಗಳಿಗೆ ಮಿತಿ ಮೀರಿ ಮೈಯೊಡ್ಡಿದಂತೆಯೂ ಅಗುತ್ತದೆ.

ಶ್ವಾಸಾಂಗದ ರೋಗಲಕ್ಷಣಗಳಿಲ್ಲದವರು ಶಸ್ತ್ರಚಿಕಿತ್ಸೆ ಅಥವಾ ಅನ್ಯ ಕಾರಣಗಳಿಗಾಗಿ ದಾಖಲಾದಾಗ, ಅಥವಾ ಹಾಗೇ ಸುಮ್ಮನೆ ‘ಫುಲ್ ಬಾಡಿ’ ಪರೀಕ್ಷೆ ಮಾಡಿಸಿಕೊಳ್ಳುವಾಗ ಎದೆಯ ಎಕ್ಸ್ ರೇ ಮಾಡುವ ಅಗತ್ಯವಿಲ್ಲ. ಅಸ್ತಮಾ ಅಥವಾ ಶ್ವಾಸನಾಳಗಳ ಕಾಯಿಲೆಯುಳ್ಳವರಲ್ಲಿ, ಅದರಲ್ಲೂ ಮಕ್ಕಳಲ್ಲಿ, ವಿಶೇಷ ಸಮಸ್ಯೆಗಳಿಲ್ಲದಿದ್ದರೆ ಎದೆಯ ಎಕ್ಸ್ ರೇ ಅಗತ್ಯವಿಲ್ಲ. ಕಾಲಿನ ಹಿಮ್ಮಡಿಯ ಊತದಿಂದ (ಪ್ಲಾಂಟಾರ್ ಫೇಸಿಯೈಟಿಸ್) ನೋವಿರುವವರಿಗೂ ಎಕ್ಸ್ ರೇ ಅಗತ್ಯವಿಲ್ಲ. ಅರುವತ್ತೈದಕ್ಕೆ ಕೆಳಗಿನ ಹೆಂಗಸರು ಹಾಗೂ 70ಕ್ಕಿಂತ ಕೆಳಗಿನ ಗಂಡಸರಲ್ಲಿ ಮೂಳೆ ಸಾಂದ್ರತೆಯ ಡೆಕ್ಸಾ ಪರೀಕ್ಷೆ ಬೇಕಿಲ್ಲ, ಒಮ್ಮೆ ಮಾಡಿಸಿದವರು ಎರಡು ವರ್ಷದೊಳಗೆ ಮತ್ತೆ ಮಾಡಿಸಬೇಕಿಲ್ಲ.

ಅಲ್ಪಾವಧಿಯ ಬೆನ್ನು ನೋವಿರುವವರು ವಿಶೇಷ ತೊಂದರೆಗಳಿಲ್ಲದಿದ್ದರೆ ಎಕ್ಸ್ ರೇ, ಸಿ ಟಿ/ಎಂ ಆರ್ ಸ್ಕಾನ್ ಮಾಡಿಸಬೇಕಾಗಿಲ್ಲ. ವರ್ಷಗಟ್ಟಲೆ ಸ್ಥಿರರೂಪದ ತಲೆನೋವುಳ್ಳವರಿಗೆ, ಮೈಗ್ರೇನ್ ಇರುವವರಿಗೆ, ತಲೆಯ ಸಿ ಟಿ ಅಥವಾ ಎಂ ಆರ್ ಸ್ಕಾನ್ ಅಗತ್ಯವಿಲ್ಲ. ಕೆಲವೇ ದಿನಗಳಿಂದ ಸೈನಸೈಟಿಸ್ ನಿಂದ ಬಳಲುತ್ತಿರುವವರಿಗೂ ಸಿ ಟಿ ಸ್ಕಾನ್ ಅಗತ್ಯವಿರದು. ಅವಘಡಕ್ಕೀಡಾಗಿ ತಲೆಬಡಿತಕ್ಕೊಳಗಾದವರು, ಅದರಲ್ಲೂ  ಮಕ್ಕಳು, ತಲೆಯೊಳಗೆ ರಕ್ತಸ್ರಾವವಾಗಿರುವ ಯಾ ಗಂಭೀರ ಏಟಾಗಿರುವ ಲಕ್ಷಣಗಳಿಲ್ಲದೆ (ಪ್ರಜ್ಞಾಹೀನತೆ, ವಾಂತಿ, ವಿಪರೀತ ತಲೆನೋವು, ತಲೆಬುರುಡೆಯ ಮುರಿತ, ಅಂಗ ದೌರ್ಬಲ್ಯ ಇತ್ಯಾದಿ) ಸ್ಥಿರವಾಗಿದ್ದರೆ ಸಿ ಟಿ ಸ್ಕಾನ್ ಅಗತ್ಯವಿರಲಾರದು. ಹೊಟ್ಟೆನೋವಿನಿಂದ ಬಳಲುತ್ತಿರುವವರಲ್ಲಿ ನೇರವಾಗಿ ಸಿ ಟಿ ಸ್ಕಾನ್ ಮಾಡುವ ಅಗತ್ಯವಿಲ್ಲ. ಹಾಗೆಯೇ, ಬಹುಕಾಲದಿಂದ ತಲೆನೋವು, ಬೆನ್ನು ನೋವು ಅಥವಾ ಹೊಟ್ಟೆನೋವು ಇರುವವರಲ್ಲಿ ಪದೇ ಪದೇ ಸಿ ಟಿ ಸ್ಕಾನ್ ಮಾಡಿಸುವ ಅಗತ್ಯವಿಲ್ಲ. ರುಮಟಾಯ್ಡ್ ಆರ್ಥರೈಟಿಸ್ ನಂತಹ ಸಂಧಿವಾತವುಳ್ಳವರಲ್ಲಿ ರೋಗದ ತೀವ್ರತೆಯನ್ನು ಅಂದಾಜಿಸಲು ಎಂ ಆರ್ ಸ್ಕಾನ್ ಅತ್ಯಗತ್ಯವೇನಲ್ಲ. ಆರೋಗ್ಯವಂತರಲ್ಲಿ ಕ್ಯಾನ್ಸರ್ ಹುಡುಕಲು ಪಿಇಟಿ ಅಥವಾ ಸಿ ಟಿ ಸ್ಕಾನ್ ಮಾಡುವುದರಿಂದ ಪ್ರಯೋಜನವಾಗದು; ಬದಲಿಗೆ, ಸಣ್ಣದ್ದೇನಾದರೂ ಕಂಡುಬಂದು ಇನ್ನಷ್ಟು ಅನಗತ್ಯ ಪರೀಕ್ಷೆಗಳಿಗೆ ಹೇತುವಾಗಬಹುದು. ಮಕ್ಕಳು ಕ್ಷಕಿರಣಗಳಿಗೆ ಗುರಿಯಾಗುವುದನ್ನು ಕಡಿಮೆ ಮಾಡುವುದಕ್ಕಾಗಿ ಅತ್ಯಗತ್ಯವಿದ್ದಾಗಲಷ್ಟೇ ಸಿ ಟಿ ಸ್ಕಾನ್ ಮಾಡಿಸಬೇಕು, ಅವರಲ್ಲಿ ಅಪೆಂಡಿಸೈಟಿಸ್ ನಂತಹ ಸಮಸ್ಯೆಗಳಿದ್ದಾಗ ಅಲ್ಟ್ರಾ ಸೌಂಡ್ ನಂತಹಾ ಪರೀಕ್ಷೆಗಳನ್ನೇ ಬಳಸಿಕೊಳ್ಳುವುದು ಒಳಿತು.

ಹೃದಯಕ್ಕೆ ಸಂಬಂಧಿಸಿದ ಪರೀಕ್ಷೆಗಳೂ ಅಗತ್ಯಕ್ಕಿಂತ ಹೆಚ್ಚು ನಡೆಸಲ್ಪಡುತ್ತವೆ. ಹೃದ್ರೋಗದ ಯಾವುದೇ ಲಕ್ಷಣಗಳಿಲ್ಲದವರಲ್ಲಿ ಹಾಗೂ ಹೃದ್ರೋಗದ ಸಾಧ್ಯತೆಗಳು ತೀರಾ ಕಡಿಮೆಯಿರುವವರಲ್ಲಿ ಇಸಿಜಿ, ಇಕೋ, ಸಿ ಟಿ ಸ್ಕಾನ್ ಮುಂತಾದ ಪರೀಕ್ಷೆಗಳಿಂದ ಹೆಚ್ಚಿನ ಪ್ರಯೋಜನವಾಗದು. ರಕ್ತದ ಏರೊತ್ತಡ ಹಾಗೂ ಇತರ ಹೃದ್ರೋಗಗಳಿರುವವರು ಯಾವುದೇ ಸಮಸ್ಯೆಗಳಿಲ್ಲದೆ ಸ್ಥಿರವಾಗಿದ್ದರೆ ಇಂಥಾ ಪರೀಕ್ಷೆಗಳನ್ನು ಪದೇ ಪದೇ ನಡೆಸಬೇಕಿಲ್ಲ.

ಹಾಗೆಯೇ, ಸ್ಥಿರವಾಗಿರುವ ರೋಗಿಗಳಲ್ಲಿ ಪದೇ ಪದೇ, ದಿನಕ್ಕೆ ಹಲವು ಸಲ, ರಕ್ತಕಣಗಳ ಸಂಖ್ಯೆಯನ್ನು ಪರೀಕ್ಷಿಸುವ ಅಗತ್ಯವಿಲ್ಲ. ಅಸ್ತಮಾ/ಅಲರ್ಜಿಯುಳ್ಳವರಲ್ಲಿ ಒಟ್ಟು ಐಜಿಇ ಪ್ರಮಾಣವನ್ನು ಅಳೆಯುವುದರಿಂದ ಪ್ರಯೋಜನ ಅಷ್ಟಕ್ಕಷ್ಟೇ. ಥೈರಾಯ್ಡ್ ಕೊರತೆಗಾಗಿ ಥೈರಾಕ್ಸಿನ್ ಮಾತ್ರೆಗಳನ್ನು ಸೇವಿಸುತ್ತಿರುವವರು ಟಿಎಸ್ ಎಚ್ ಮಟ್ಟವನ್ನು ಪರೀಕ್ಷಿಸಿಕೊಂಡರೆ ಸಾಕಾಗುತ್ತದೆ; ಪ್ರತೀ ಸಲ ಟಿ3, ಟಿ4 ಪರೀಕ್ಷೆಯ ಅಗತ್ಯವಿಲ್ಲ. ಗ್ಲೈಕೋಸಿಲೇಟೆಡ್ ಹಿಮೋಗ್ಲೋಬಿನ್, ಸಿ ಆರ್ ಪಿ ಯಂತಹ ದುಬಾರಿ ಪರೀಕ್ಷೆಗಳನ್ನು ಆಗಾಗ ಮಾಡಿಸಬೇಕಿಲ್ಲ. ಯಾವುದೇ ತೊಂದರೆಗಳಿಲ್ಲದವರಲ್ಲಿ ಸ್ತನ, ದೊಡ್ಡ ಕರುಳು ಹಾಗೂ ಶುಕ್ಲ ಗ್ರಂಥಿಗಳ ಕ್ಯಾನ್ಸರ್ ಪತ್ತೆಗೆ ಹೊರಡುವ ಮೊದಲು ಒಳಿತು-ಕೆಡುಕುಗಳನ್ನು ಸರಿಯಾಗಿ ವಿವೇಚಿಸುವುದೊಳ್ಳೆಯದು.

ಇಡೀ ದೇಹದ ಪರೀಕ್ಷೆ, ಹೃದಯಕ್ಕೆ, ಮಧುಮೇಹಕ್ಕೆ, ಹಿರಿವಯಸ್ಕರಿಗೆ, ಮಕ್ಕಳಿಗೆ…ಹೀಗೆ ವಿಶೇಷ ಪ್ಯಾಕೇಜುಗಳು, ಅವುಗಳಿಗೆ ದರಕಡಿತದ ಆಮಿಷ, ಹಬ್ಬದ ಉಡುಗೊರೆ ಇತ್ಯಾದಿಗಳಿಂದ ಪ್ರಯೋಗಾಲಯಗಳಿಗೆ ಲಾಭವೇ ಹೊರತು ಜನರಿಗೇನಿಲ್ಲ. ಅಸೌಖ್ಯವಿದ್ದಾಗ ಅಗತ್ಯವಿದ್ದಷ್ಟು ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು; ಸುಮ್ಮನೆ ಪರೀಕ್ಷೆಗಳನ್ನು ಮಾಡಿಸಿಕೊಂಡು ಇಲ್ಲದ ರೋಗವನ್ನು ಹುಡುಕುವುದು ಜಾಣತನವಲ್ಲ.

ಐವತ್ನಾಲ್ಕನೇ ಬರಹ : ಉದಾತ್ತ ವೃತ್ತಿಯ ಪ್ರಾಮಾಣಿಕತೆ ಬೆಳಗಲಿ [ಜುಲೈ 9, 2014, ಬುಧವಾರ] [ನೋಡಿ | ನೋಡಿ]

ವಿದೇಶೀಯರಿಂದ ಛೀಮಾರಿಗೊಳಗಾಗಿರುವ ನಮ್ಮ ವೈದ್ಯಕೀಯ ರಂಗದ ಹೊಲಸನ್ನು ನಾವೇ ಶುಚಿಗೊಳಿಸಬೇಕು

ಮೊನ್ನೆ ಜುಲೈ 1, ವೈದ್ಯರ ದಿನದಂದು ಬೆಳ್ಳಂಬೆಳಗ್ಗೆ ಬಂದ ಸಂದೇಶವೊಂದು ಹೀಗಿತ್ತು: “ಉದಾತ್ತ ವೃತ್ತಿಯನ್ನು ಅನ್ವರ್ಥಗೊಳಿಸಿರುವ ವೈದ್ಯರಿಗಷ್ಟೇ ಸೀಮಿತವಾದ ಕೃತಜ್ಞತೆಗಳು-ಶುಭಾಶಯಗಳು; ಕೆಲವರಷ್ಟೇ ವೈದ್ಯರು, ಇನ್ನುಳಿದವರೆಲ್ಲ ವ್ಯಾಪಾರಿಗಳು.” ವೈದ್ಯ ವೃತ್ತಿಯ ವ್ಯಾಪಾರೀಕರಣದ ಅಸಹನೀಯ ನೋವು ಅದರಲ್ಲಿತ್ತು. ಕಳೆದ ವಾರಗಳಲ್ಲಿ ದೇಶ-ವಿದೇಶಗಳ ಪತ್ರಿಕೆಗಳಲ್ಲಿ ಬೆನ್ನುಬೆನ್ನಿಗೆ ಬಂದ ವರದಿಗಳನ್ನೋದಿದರೆ ವೈದ್ಯಲೋಕಕ್ಕೂ ಇದು ಅಸಹನೀಯವಾಗತೊಡಗಿದೆ ಎನ್ನುವುದು ವ್ಯಕ್ತವಾಗುತ್ತದೆ.

ಮುಂಬಯಿಯ ಕೋಕಿಲಾಬೆನ್ ಆಸ್ಪತ್ರೆಯು ವೈದ್ಯರಿಗೆ ಆಮಿಷವೊಡ್ಡಿದ ಪ್ರಕರಣವು ಮುಖಪುಟಗಳಲ್ಲಿತ್ತು. ಆಸ್ಪತ್ರೆಗೆ ದಾಖಲಾಗಲು ವರ್ಷಕ್ಕೆ 40 ರೋಗಿಗಳನ್ನು ಕಳುಹಿಸಿದರೆ ಒಂದು ಲಕ್ಷ, 50ಕ್ಕೆ ಒಂದೂವರೆ ಲಕ್ಷ, 75ಕ್ಕೆ ಎರಡೂವರೆ ಲಕ್ಷ ನೀಡಲಾಗುವುದೆಂಬ ಆಸ್ಪತ್ರೆಯ ಲಿಖಿತ ಆಮಿಷವನ್ನು ಸಹಿಸದ ಕೆಲವು ವೈದ್ಯರು ಮಹಾರಾಷ್ಟ್ರದ ವೈದ್ಯಕೀಯ ಪರಿಷತ್ತಿಗೆ ದೂರಿತ್ತದ್ದರಿಂದ ಆಸ್ಪತ್ರೆಯು ಬೇಷರತ್ತಾಗಿ ಕ್ಷಮೆ ಯಾಚಿಸಬೇಕಾಯಿತು.

ಆಸ್ಟ್ರೇಲಿಯಾದ ವೈದ್ಯ ಡೇವಿಡ್ ಬರ್ಜರ್ ಅವರು ಪ್ರತಿಷ್ಠಿತ ಬ್ರಿಟಿಷ್ ಮೆಡಿಕಲ್ ಜರ್ನಲ್ ನ ಮೇ 8ರ ಸಂಚಿಕೆಯಲ್ಲಿ ಬರೆದ ಲೇಖನದಲ್ಲಿ (ಬಿಎಂಜೆ, 2014;348:ಜಿ3169) ಭಾರತದ ವೈದ್ಯಕೀಯ ಕ್ಷೇತ್ರದ ಹೊಲಸನ್ನೆಲ್ಲ ಹೊರಹಾಕಿದರು. ದೇಶದ ವೈದ್ಯಕೀಯ ವ್ಯವಸ್ಥೆಯನ್ನು ಆಕ್ರಮಿಸಿರುವ ಲಂಚ-ರುಸುಮುಗಳಿಂದಾಗಿ ವೈದ್ಯ-ರೋಗಿಯ ಸಂಬಂಧಗಳು ಕೆಡುವಂತಾಗಿದೆ ಎಂದು ಬರೆದಿರುವ ಬರ್ಜರ್, ಪರೀಕ್ಷಾಲಯಗಳಿಂದ ದೊರೆಯುವ ತುಂಡುಪಾವತಿಗಾಗಿ ಹಲವು ವೈದ್ಯರು ರಕ್ತಪರೀಕ್ಷೆ, ಇಸಿಜಿ, ಅಲ್ಟ್ರಾಸೌಂಡ್, ಸಿಟಿ-ಎಂಆರ್ ಐ  ಇತ್ಯಾದಿಗಳನ್ನು ಅನಗತ್ಯವಾಗಿ ಮಾಡಿಸುತ್ತಾರೆ, ಔಷಧ ಕಂಪೆನಿಗಳಿಂದ ಕಾರುಗಳು, ಐಷಾರಾಮಿ ವಸ್ತುಗಳನ್ನೆಲ್ಲ ಪಡೆದು ಅನಗತ್ಯ ವೆಚ್ಚದ ಚಿಕಿತ್ಸೆಗಳನ್ನು ನೀಡುತ್ತಾರೆ, ಕೆಲವು ವೈದ್ಯರು ವಿದೇಶ ಯಾತ್ರೆಗಳ ಜೊತೆಯಲ್ಲಿ ವೇಶ್ಯೆಯರನ್ನೂ ಔಷಧ ಕಂಪೆನಿಗಳಿಂದ ಕೇಳಿ ಪಡೆಯುತ್ತಾರೆ ಎನ್ನುವುದನ್ನು ಹೊರಹಾಕಿದ್ದಾರೆ. ಇವನ್ನೆಲ್ಲ ನಿಯಂತ್ರಿಸಬೇಕಾದ ವೈದ್ಯಕೀಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಕೇತನ್ ದೇಸಾಯಿ 2010ರಲ್ಲಿ ಭ್ರಷ್ಟಾಚಾರದ ಆರೋಪಕ್ಕೊಳಗಾಗಿ ಬಂಧಿಸಲ್ಪಟ್ಟದ್ದು, ಈಗ ಮತ್ತೆ ಪರಿಷತ್ತಿನೊಳಕ್ಕೆ ಬರಲೆತ್ನಿಸುತ್ತಿರುವುದು, ಅದನ್ನು ತಡೆಯಲೆತ್ನಿಸಿದ್ದ  ಹಿರಿಯ ಅಧಿಕಾರಿ ಕೇಶವ ದೇಸಿರಾಜು ಅವರನ್ನು ಕೇಂದ್ರ ಸರಕಾರವು ಎತ್ತಂಗಡಿ ಮಾಡಿದ್ದು ವ್ಯವಸ್ಥೆಯು ತೀರಾ ಹದಗೆಟ್ಟಿರುವುದಕ್ಕೆ ಸಾಕ್ಷಿಯೆಂದೂ, ಇದನ್ನು ಸರಿಪಡಿಸುವಲ್ಲಿ ದೇಶದ ಆಡಳಿತವು ವಿಫಲವಾದರೆ ಅಂತರರಾಷ್ಟ್ರೀಯ ಸಂಸ್ಥೆಗಳು ಮಧ್ಯ ಪ್ರವೇಶಿಸಬೇಕೆಂದೂ ಬರ್ಜರ್ ಬರೆದಿದ್ದಾರೆ.

ಹೀಗೆ ವಿದೇಶಿ ವೈದ್ಯರೊಬ್ಬರು, ಬಿಎಂಜೆಯಂತಹ ಪತ್ರಿಕೆಯಲ್ಲಿ, ನಮ್ಮ ವೈದ್ಯರನ್ನು ನಿಕೃಷ್ಟವಾಗಿಸಿ, ವಿದೇಶಿ ಹಸ್ತಕ್ಷೇಪಕ್ಕೆ ಒತ್ತಾಯಿಸಿದ್ದರೂ ಭಾರತೀಯ ವೈದ್ಯಕೀಯ ಸಂಘದಂತಹ ಯಾವ ವೈದ್ಯಕೀಯ ಸಂಘಟನೆಯೂ ಪ್ರತಿಕ್ರಿಯಿಸದಿರುವುದೇಕೆ? ಬರ್ಜರ್ ಬರೆದದ್ದು ಸತ್ಯವೆಂದು ಇವೆಲ್ಲವೂ ಒಪ್ಪಿಕೊಂಡವೇ? ಅಥವಾ ಅದು ಸುಳ್ಳೆನ್ನಲು ನೈತಿಕ ಸ್ಥೈರ್ಯವಿಲ್ಲದಾಯಿತೇ? ಯಾ ಈ ಹೊಲಸಿಗೆ ತಾವೂ ಕಾರಣರೆಂಬ ಅಪರಾಧ ಪ್ರಜ್ಞೆಯೇ? ನಮ್ಮ ವೈದ್ಯಕೀಯ ಸಂಘಟನೆಗಳಿಗೆ ಇಂತಹ ದುಸ್ಥಿತಿ ಬಂದದ್ದೇಕೆನ್ನುವುದೇ ಹೆಚ್ಚು ಕಳವಳಕಾರಿಯಲ್ಲವೇ?

ಬಿಎಂಜೆ ಇನ್ನೂ ಮುಂದಕ್ಕೆ ಹೋಯಿತು. ಜೂನ್ 25ರ ಸಂಚಿಕೆಯಲ್ಲಿ ದಿಲ್ಲಿಯ ಗಂಗಾರಾಂ ಆಸ್ಪತ್ರೆಯ ಡೀನ್ ಸಮಿರನ್ ನಂದಿ ಹಾಗೂ ಪತ್ರಿಕೆಯ ಸಂಪಾದಕ ಮಂಡಳಿಯ ಅನಿತಾ ಜೈನ್ ಮತ್ತು ಕಮ್ರಾನ್ ಅಬ್ಬಾಸಿ ಬರೆದ ಸಂಪಾದಕೀಯವೊಂದನ್ನು ಬಿಎಂಜೆ ಪ್ರಕಟಿಸಿತು (ಬಿಎಂಜೆ, 2014;348:ಜಿ4184). ವೈದ್ಯಕೀಯ ಭ್ರಷ್ಟಾಚಾರವನ್ನು ನಿಗ್ರಹಿಸಲು ಪತ್ರಿಕೆಯ ನೇತೃತ್ವದಲ್ಲಿ ಭಾರತದಿಂದಲೇ ಆಂದೋಲನವನ್ನು ಆರಂಭಿಸಲಾಗುವುದೆಂದು ಅದರಲ್ಲಿ ಘೋಷಿಸಲಾಯಿತು, ಭಾರತದಲ್ಲಿ ಈ ಪಿಡುಗನ್ನು ನಿವಾರಿಸಲು ಸಾಧ್ಯವಾದರೆ ವಿಶ್ವದ ಉಳಿದೆಡೆಯಲ್ಲೂ ಸಾಧ್ಯವಾಗಬಹುದೆಂದೂ,  ಲಂಚ-ರುಸುಮುಗಳೆದುರು ಅಂತರರಾಷ್ಟ್ರೀಯ ಹೋರಾಟದಲ್ಲಿ ಎಲ್ಲರೂ ಭಾಗಿಯಾಗಬೇಕೆಂದೂ ಆಗ್ರಹಿಸಲಾಯಿತು.

ಸರ್ವವ್ಯಾಪಿಯಾಗಿರುವ ಭ್ರಷ್ಟಾಚಾರವು ವೈದ್ಯಕೀಯ ರಂಗಕ್ಕಷ್ಟೇ ಸೀಮಿತವಲ್ಲ. ನಮ್ಮ ದೇಶದಲ್ಲಷ್ಟೇ ಇರುವುದೂ ಅಲ್ಲ. ಸಂಪಾದಕೀಯದಲ್ಲೇ ಹೇಳಿರುವಂತೆ, ವರ್ಷಕ್ಕೆ 7 ಲಕ್ಷ ಕೋಟಿ ಡಾಲರುಗಳಷ್ಟಿರುವ ಜಾಗತಿಕ ಆರೋಗ್ಯ ಸೇವೆಗಳ ವಹಿವಾಟಿನಲ್ಲಿ ಶೇ.10ರಿಂದ 25ರಷ್ಟು ಲಂಚ-ರುಸುಮುಗಳಲ್ಲೇ ಕಳೆದು ಹೋಗುತ್ತಿದೆ. ಅಮೆರಿಕವೊಂದರಲ್ಲೇ ಸುಮಾರು 80-300 ಶತಕೋಟಿ ಡಾಲರುಗಳು ಹೀಗೆ ನುಂಗಲ್ಪಡುತ್ತವೆ. ಅಮೆರಿಕಾದಲ್ಲಿ ಅರ್ಧದಷ್ಟು ಹೃದಯದ ರಕ್ತನಾಳಗಳ ಚಿಕಿತ್ಸೆಗಳೂ, ಮೂರರಲ್ಲೊಂದು ಮಂಡಿ ಬದಲಿಸುವ ಶಸ್ತ್ರಚಿಕಿತ್ಸೆಗಳೂ, ಆಧುನಿಕ ಮಾಮೊಗ್ರಫಿ ಪರೀಕ್ಷೆಗಳೂ ಅನಗತ್ಯವಾಗಿ ನಡೆಸಲ್ಪಡುತ್ತವೆ ಎಂದು ಈ ತಿಂಗಳಲ್ಲೇ ಪ್ರಕಟವಾಗಿರುವ ಅಧ್ಯಯನಗಳಲ್ಲಿ ಹೇಳಲಾಗಿದೆ.

ನಮ್ಮಲ್ಲಿಂದು ತ್ಯಾಜ್ಯ ವಿಲೇವಾರಿ, ಸಾಂಕ್ರಾಮಿಕ ರೋಗಗಳ ನಿಯಂತ್ರಣ, ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಯೋಜನೆಗಳು, ಆರೋಗ್ಯ ವಿಮಾ ಯೋಜನೆಗಳು ಇವೇ ಮುಂತಾದ ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳಲ್ಲಿ ಸಾವಿರಾರು ಕೋಟಿ ಸೋರಿ ಹೋಗುತ್ತಿದೆ. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಲ್ಲಿನ ಭ್ರಷ್ಟಾಚಾರದಿಂದಾಗಿ ವೈದ್ಯಾಧಿಕಾರಿಗಳು ಹೆಣಗಳಾಗಿರುವುದೂ ವರದಿಯಾಗಿದೆ. ತೊಂಭತ್ತರ ದಶಕದಿಂದೀಚಿನ ಹೊಸ ಆರ್ಥಿಕ ನೀತಿಗಳಿಂದಾಗಿ ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸೇವೆಗಳಲ್ಲಿ ಖಾಸಗಿ ಹೂಡಿಕೆಯು ವಿಪರೀತವಾಗಿ ಹೆಚ್ಚಿ, ವೈದ್ಯಕೀಯ ರಂಗವನ್ನು ಲಾಭದ ಲೆಕ್ಕಕ್ಕೆ ದೂಡಿದೆ.

ಮೂರ್ನಾಲ್ಕು ದಶಕಗಳ ಹಿಂದೆ ಪ್ರತಿಭಾವಂತರಿಗಷ್ಟೇ ವೈದ್ಯಕೀಯ ಸೀಟುಗಳು ದೊರೆಯುತ್ತಿದ್ದವು, ಜ್ಞಾನ-ಕೌಶಲ್ಯ-ಸೇವೆಗಳೇ ವೈದ್ಯರ ವರ್ಚಸ್ಸಾಗಿದ್ದವು. ಈಗ ಒಂದೆರಡು ಕೋಟಿ ಕೊಟ್ಟರೆ ನಾಡಿಬಡಿತವೆಷ್ಟೆಂದು ಅರಿಯದೆಯೂ ವೈದ್ಯರಾಗಬಹುದು. ಅಂತಹವರು ಆಸ್ಪತ್ರೆಯ ಆಡಳಿತವು ಬಯಸಿದಂತೆ ಬಗೆಬಗೆಯ ಪರೀಕ್ಷೆಗಳನ್ನು ಮಾಡಿಸುವ, ಔಷಧ ಕಂಪೆನಿಗಳ ಆಣತಿಯಂತೆ ಅನಗತ್ಯವಾದ ಔಷಧಗಳನ್ನು ಬರೆಯುವ ಕೈಗೊಂಬೆಗಳಾಗುತ್ತಾರೆ. ಭಾರತೀಯ ವೈದ್ಯಕೀಯ ಪರಿಷತ್ತು ತಿಂಗಳಿಗೆ 30-40 ವೈದ್ಯಕೀಯ ಕಾಲೇಜುಗಳನ್ನು ಪರಿಶೀಲಿಸುತ್ತದೆಯಾದರೂ, ಅವುಗಳಿಂದ ಹೊರಬರುವ ವೈದ್ಯರ ಗುಣಮಟ್ಟವೇನೆಂದು ನೋಡುವುದಿಲ್ಲ. ವೈದ್ಯಕೀಯ ರಂಗದಲ್ಲಾಗುತ್ತಿರುವ ಭ್ರಷ್ಟಾಚಾರದ ಬಗ್ಗೆ ಅನೇಕ ವೈದ್ಯರು ಪರಿಷತ್ತಿಗೆ ದೂರಿತ್ತಿದ್ದರೂ ಪ್ರಯೋಜನವಾಗಿಲ್ಲ. ಹಾಗಿರುವಾಗ, ವೈದ್ಯಕೀಯ ರಂಗದಲ್ಲಿ ಹೆಚ್ಚುತ್ತಿರುವ ವಂಚನೆಗಳ ಬಗ್ಗೆ ವೈದ್ಯವೃಂದವೇ ಆತ್ಮಾವಲೋಕನಕ್ಕಿಳಿಯಬೇಕಾಗಿದೆ, ರೋಗಿಗಳು ಮತ್ತು ಜನಸಾಮಾನ್ಯರು ಕೂಡಾ ಹೆಚ್ಚು ಪ್ರಜ್ಞಾವಂತರಾಗಬೇಕಿದೆ.

ಪ್ರಾಮಾಣಿಕರಾದ, ಯಾವುದೇ ಆಮಿಷಗಳಿಗೆ ಬಲಿಯಾಗದ, ಸಜ್ಜನ ವೈದ್ಯರು ಈಗಲೂ ನಮ್ಮಲ್ಲಿ ಹಲವರಿದ್ದಾರೆ. ಬಿಎಂಜೆಯಲ್ಲಿ ಪ್ರಕಟವಾಗಿರುವ ಲೇಖನಗಳು ಅಂಥವರ ಧ್ವನಿಯಾಗಿದ್ದು, ನಮ್ಮ ವೈದ್ಯಕೀಯ ಸಂಘಟನೆಗಳೆಲ್ಲವೂ ಈ  ಕರೆಗಂಟೆಗೆ ಎಚ್ಚೆತ್ತುಕೊಳ್ಳಬೇಕಾಗಿದೆ. ವೈದ್ಯಕೀಯ ಸಂಘಟನೆಗಳು ಔಷಧ ಕಂಪೆನಿಗಳಿಂದ ಕೋಟಿಗಟ್ಟಲೆ ಪಡೆದು ಪಂಚತಾರಾ ಸಮಾವೇಶಗಳನ್ನು ಆಯೋಜಿಸುವ ಬದಲು ಸ್ವಂತ ಖರ್ಚಿನಿಂದ ಸರಳವಾದ, ಜ್ಞಾನಸಮೃದ್ಧವಾದ ಕಾರ್ಯಕ್ರಮಗಳನ್ನು ನಡೆಸಬಹುದು. ತುಂಡು ಪಾವತಿಯ ಆಮಿಷವೊಡ್ಡುವ ಆಸ್ಪತ್ರೆಗಳು ಹಾಗೂ ಪ್ರಯೋಗಾಲಯಗಳನ್ನು ಗುರುತಿಸಿ ಅವನ್ನು ಬಹಿಷ್ಕರಿಸುವುದಕ್ಕೂ, ಅವುಗಳ ಮೇಲೆ ಕಾನೂನು ಕ್ರಮಗಳನ್ನು ಜರುಗಿಸುವುದಕ್ಕೂ ಈ ಸಂಘಟನೆಗಳು ಮುಂದಾಗಬೇಕು. ದಿಲ್ಲಿಯ ಅಖಿಲ ಭಾರತ ವೈದ್ಯವಿಜ್ಞಾನ ಸಂಸ್ಥೆಯ ಹೃದ್ರೋಗ ತಜ್ಞರು ಮಿತವಾದ ಪರೀಕ್ಷೆಗಳ ವೈದ್ಯವಿಜ್ಞಾನ ಎಂಬ ಸಂಘಟನೆಯನ್ನು ಸ್ಥಾಪಿಸಿರುವುದು ಸ್ವಾಗತಾರ್ಹವಾಗಿದೆ.

ವೃತ್ತಿಯ ಘನತೆ-ಗೌರವಗಳನ್ನು ಎತ್ತಿ ಹಿಡಿಯುವುದು ಪ್ರತಿಯೊಬ್ಬ ವೈದ್ಯನ ಆದ್ಯತೆಯಾಗಬೇಕು: ರೋಗಿಯ ಪರೀಕ್ಷೆ ಹಾಗೂ ಚಿಕಿತ್ಸೆಯಲ್ಲಿ ಆಸ್ಪತ್ರೆಯ ಆಡಳಿತದ ಪ್ರಭಾವವನ್ನು ದೂರವಿಡಬೇಕು, ಕೋಟಿ ಕೊಟ್ಟ ವಿದ್ಯಾರ್ಥಿಗಳನ್ನು ಅರ್ಹತೆಯಿಲ್ಲದಿದ್ದರೂ ಉತ್ತೀರ್ಣಗೊಳಿಸಬೇಕೆಂಬ ವೈದ್ಯಕೀಯ ಕಾಲೇಜಿನ ಆಡಳಿತದ ಅಪ್ಪಣೆಯನ್ನು ಕಡೆಗಣಿಸಬೇಕು, ಔಷಧ ಕಂಪೆನಿಗಳಿಂದ ಯಾವುದೇ ಬಗೆಯ ಉಡುಗೊರೆಗಳನ್ನು ಪಡೆಯದಿರಬೇಕು, ಯಾವುದೇ ಆಸ್ಪತ್ರೆ-ಪ್ರಯೋಗಾಲಯಗಳಿಂದ ತುಂಡುಪಾವತಿಯನ್ನೂ, ಇತರ ಕೊಡುಗೆಗಳನ್ನೂ ನಿರಾಕರಿಸಿ ಪ್ರತಿಭಟಿಸಬೇಕು. ಇವೆಲ್ಲವೂ ವೈದ್ಯಕೀಯ ಪರಿಷತ್ತಿನ ವೃತ್ತಿಸಂಹಿತೆಯಲ್ಲಿವೆಯಾದರೂ ಅವುಗಳ ಪಾಲನೆಯನ್ನು ದೃಢಪಡಿಸುವ ಗೋಜಿಗೆ ಪರಿಷತ್ತು ಹೋಗುವುದಿಲ್ಲ; ಬದಲಿಗೆ, ಕಡ್ಡಾಯ ಸಿಎಂಇಯೊಂದಿಗೆ ಮರುನೋಂದಣಿಯಂಥ ನಿಯಮಬಾಹಿರ ಕ್ರಮಗಳನ್ನು ಹೇರಿ ಕಾಸು ಪೀಕಿಸುವುದಕ್ಕೆ ಮುಂದಾಗುತ್ತದೆ.

ಜನಸಾಮಾನ್ಯರು ಕೂಡಾ ತಮ್ಮನ್ನು ತಾಳ್ಮೆಯಿಂದ ಕೇಳಿ, ನೋಡಿ, ಪರೀಕ್ಷಿಸುವ ವೈದ್ಯರನ್ನು ನೆಚ್ಚಿಕೊಳ್ಳಬೇಕು. ಅತಿವೆಚ್ಚದ ಪರೀಕ್ಷೆಗಳನ್ನು ಪದೇಪದೇ ಮಾಡಿಸಲಾಗುತ್ತಿದ್ದರೆ, ಅತಿಖರ್ಚಿನ ಚಿಕಿತ್ಸೆಗಳನ್ನು ಹೇರಲೆತ್ನಿಸುತ್ತಿದ್ದರೆ ಪ್ರಶ್ನಿಸಬೇಕು. ಇಡೀ ದೇಹದ ಪರೀಕ್ಷೆ, ವಿನಾಕಾರಣ ಬಗೆಬಗೆಯ ಸ್ಕಾನ್ ಗಳು, ವಿಟಮಿನ್ ಡಿ ಹಾಗೂ ಮೂಳೆಸಾಂದ್ರತೆಯ ಪರೀಕ್ಷೆಗಳು, ದರಕಡಿತದ ಪರೀಕ್ಷೆಗಳು ಯಾ ಚಿಕಿತ್ಸೆಗಳು, ಖಾಸಗಿ ಆಸ್ಪತ್ರೆಗಳು ಕೊಡಮಾಡುವ ವಿಮಾಯೋಜನೆಗಳು ಮುಂತಾದವುಗಳಿಂದ ದೂರವಿರುವುದೇ ಒಳ್ಳೆಯದು. ಒಳ್ಳೆಯ ವೈದ್ಯರನ್ನು ಆಯ್ದುಕೊಳ್ಳಬೇಕು, ಆಡಂಬರದ ಆಸ್ಪತ್ರೆಗಳನ್ನಲ್ಲ.

ಯಾವೊಬ್ಬ ವೈದ್ಯನೂ ಮೋಸ ಮಾಡದಿದ್ದರೆ, ಯಾವೊಬ್ಬ ರೋಗಿಯೂ ಮೋಸಕ್ಕೊಳಗಾಗಲು ಸಿದ್ಧನಿಲ್ಲದಿದ್ದರೆ ವೈದ್ಯಲೋಕವನ್ನು ಪರಿಶುದ್ಧವಾಗಿಡುವುದು ಕಷ್ಟವೇ ಅಲ್ಲ.

ಐವತ್ಮೂರನೇ ಬರಹ : ವಿಪರೀತವಾದರೆ ತಿನ್ನುವುದರಿಂದ ಸಂತಾನಶಕ್ತಿ ಹರಣ [ಜೂನ್ 25, 2014, ಬುಧವಾರ] [ನೋಡಿ | ನೋಡಿ]

ಸಂತಾನಹೀನತೆಗೆ ಲೆಪ್ಟಿನ್, ಇನ್ಸುಲಿನ್ ನಂತಹ ಹಾರ್ಮೋನುಗಳ ಸಮಸ್ಯೆಯೇ ಕಾರಣ, ದೋಷ-ಪಾಪ-ಶಾಪಗಳಲ್ಲ

ಸಂತಾನಭಾಗ್ಯವಿಲ್ಲದವರಿಗೆ ಗರ್ಭಧಾರಣೆಗೆ ನೆರವಾಗುವ ಸೌಲಭ್ಯಗಳ ಬಗ್ಗೆ ಬೃಹತ್ ಗಾತ್ರದ ಜಾಹೀರಾತುಗಳು ಎಲ್ಲೆಂದರಲ್ಲಿ ಸಾಮಾನ್ಯವಾಗಿಬಿಟ್ಟಿವೆ. ಸಂತಾನೋತ್ಪತ್ತಿಯ ವಯೋಮಾನದವರಲ್ಲಿ ಫಲಹೀನತೆ ಹೆಚ್ಚುತ್ತಿರುವುದರಿಂದ ಪ್ರನಾಳೀಯ ಫಲೀಕರಣದಂತಹ ತಂತ್ರಜ್ಞಾನಕ್ಕೆ ಬೇಡಿಕೆ ಹೆಚ್ಚುತ್ತಿದೆ. ವಿಪರ್ಯಾಸವೆಂದರೆ, ವಯಸ್ಕರು ಫಲಹೀನರಾಗುತ್ತಿರುವಲ್ಲಿ ಇಂದಿನ ಮಕ್ಕಳು ಬೇಗನೇ ಪ್ರೌಢರಾಗುತ್ತಿದ್ದಾರೆ. ಒಟ್ಟಿನಲ್ಲಿ ಈ ಪೀಳಿಗೆಯ ಸಂತಾನಶಕ್ತಿಯಲ್ಲಿ ವಿಶೇಷವಾದ ಬದಲಾವಣೆಗಳಾಗುತ್ತಿವೆ.

ಕಳೆದೆರಡು ದಶಕಗಳಲ್ಲಿ ಸಂತಾನಹೀನತೆಯ ಪ್ರಮಾಣವು ದುಪ್ಪಟ್ಟಾಗಿದೆ: 1990ರಲ್ಲಿ ಶೇ. 8ರಷ್ಟು ದಂಪತಿಗಳಲ್ಲಿ ಸಂತಾನವನ್ನು ಪಡೆಯುವ ಸಮಸ್ಯೆಯಿದ್ದರೆ ಈಗ ಶೇ.12-18ರಷ್ಟು, ಅಂದರೆ ಆರರಲ್ಲೊಬ್ಬರು, ಅಂತಹಾ ಸಮಸ್ಯೆಯನ್ನು ಹೊಂದಿದ್ದಾರೆ. ಕಳೆದೈದು ವರ್ಷಗಳಲ್ಲಿ ನಮ್ಮ ದೇಶದಲ್ಲಿ ಸಂತಾನಹೀನತೆಯುಳ್ಳವರ ಸಂಖ್ಯೆಯಲ್ಲಿ ಶೇ.20-30ರಷ್ಟು ಏರಿಕೆಯಾಗಿದೆ. ದೊಡ್ಡ ನಗರಗಳಷ್ಟೇ ಅಲ್ಲದೆ ಸಣ್ಣ ಪಟ್ಟಣಗಳಲ್ಲೂ, ಹಳ್ಳಿಗಳಲ್ಲೂ ಈ ಸಮಸ್ಯೆಯು ಹೆಚ್ಚುತ್ತಲಿದೆ. ಹೆಂಗಸರಲ್ಲೂ, ಅವರಿಗಿಂತ ಹೆಚ್ಚಾಗಿ ಗಂಡಸರಲ್ಲೂ, ಫಲಹೀನತೆಯು ಹೆಚ್ಚುತ್ತಿದೆ.

ಇದೇ ಕಾಲಾವಧಿಯಲ್ಲಿ ಮಕ್ಕಳು ಪ್ರೌಢಾವಸ್ಥೆಗೆ ಕಾಲಿಡುವ ವಯಸ್ಸಿನಲ್ಲಿ ಗಣನೀಯವಾದ ಇಳಿಕೆಯಾಗಿದೆ. ನಾಲ್ಕೈದು ದಶಕಗಳ ಹಿಂದೆ ಹುಡುಗಿಯರು 14-16ರ ವಯಸ್ಸಿಗೆ ಮೈನೆರೆಯುತ್ತಿದ್ದರೆ, ಈಗ 11-12ಕ್ಕೇ ಮೈನೆರೆಯುತ್ತಿದ್ದಾರೆ. ಅಮೆರಿಕಾದಂತಹ ದೇಶಗಳಲ್ಲಿ ಶೇ. 16ರಷ್ಟು ಹುಡುಗಿಯರು 7ನೇ ವಯಸ್ಸಿನಲ್ಲಿ, ಶೇ. 30ರಷ್ಟು ಹುಡುಗಿಯರು 8ನೇ ವಯಸ್ಸಿನಲ್ಲಿ ಪ್ರೌಢರಾಗುತ್ತಿದ್ದಾರೆ. ನಗರವಾಸಿ ಮಕ್ಕಳು ಹಳ್ಳಿಗಳಲ್ಲಿರುವ ಮಕ್ಕಳಿಗಿಂತ 2-3 ವರ್ಷ ಮೊದಲೇ ಪ್ರೌಢರಾಗುತ್ತಾರೆ.

ಇಂದಿನ ಪೀಳಿಗೆಯವರು ಬೇಗನೇ ಪ್ರೌಢರಾಗುವುದಕ್ಕೂ, ನಂತರ ಸಂತಾನಸಾಮರ್ಥ್ಯದ ಕೊರತೆಯಿಂದ ಬಳಲುವುದಕ್ಕೂ ಕಾರಣಗಳೇನು? ಕಳೆದೆರಡು ದಶಕಗಳಲ್ಲಿ ನಮ್ಮ ಜೀವನ ಶೈಲಿ, ಒತ್ತಡಗಳು, ಆಹಾರಕ್ರಮಗಳು, ಪರಿಸರ ಮಾಲಿನ್ಯ ಇತ್ಯಾದಿಗಳಲ್ಲಾಗಿರುವ ಬದಲಾವಣೆಗಳು ಉತ್ತರ ನೀಡಬಹುದು.

ಮನುಷ್ಯರ ಸಂತಾನೋತ್ಪತ್ತಿಯ ವ್ಯವಸ್ಥೆಯು ಅತ್ಯಂತ ಸಂಕೀರ್ಣವೂ, ಸೂಕ್ಷ್ಮಸಂವೇದಿಯೂ ಆಗಿದೆ. ನರಮಂಡಲ, ಹೆಚ್ಚಿನೆಲ್ಲಾ ನಿರ್ನಾಳ ಗ್ರಂಥಿಗಳು ಮತ್ತವುಗಳ ಸ್ರಾವಗಳು ಹಾಗೂ ದೇಹದ ಎಲ್ಲಾ ಪ್ರಮುಖ ಅಂಗಗಳು ಈ ವ್ಯವಸ್ಥೆಯಲ್ಲಿ ಭಾಗವಹಿಸುತ್ತವೆ. ನರಮಂಡಲ ಹಾಗೂ ನಿರ್ನಾಳ ಸ್ರಾವಗಳ (ಹಾರ್ಮೋನುಗಳ) ಸಂವಹನವು ದೇಹದೊಳಗಿನ ಹಾಗೂ ಹೊರಪರಿಸರದ ಸ್ಥಿತಿಗತಿಗಳಿಗನುಗುಣವಾಗಿ ಈ ವ್ಯವಸ್ಥೆಯನ್ನು ನಿಯಂತ್ರಿಸುತ್ತದೆ. ನಮ್ಮ ಜೀವನ ಶೈಲಿ ಹಾಗೂ ಆಹಾರಗಳಿಂದಾಗಿ ಈ ಸೂಕ್ಷ್ಮ ತಾಳಮೇಳವು ಕೆಡಬಹುದೆನ್ನಲು ಪುರಾವೆಗಳೀಗ ದೊರೆಯತೊಡಗಿವೆ.

ಗಂಡು-ಹೆಣ್ಣಿನ ಜನನಾಂಗಗಳಲ್ಲಿ ವೀರ್ಯಾಣುಗಳು/ಅಂಡಾಣುಗಳು ಬೆಳೆಯುತ್ತವೆ ಹಾಗೂ ಇಸ್ಟ್ರೋಜನ್, ಪ್ರೊಜೆಸ್ಟರಾನ್ ಮತ್ತು ಟೆಸ್ಟೊಸ್ಟಿರಾನ್ ಎಂಬ ಸ್ತ್ರೀ-ಪುರುಷ ಸಂಬಂಧಿ ಹಾರ್ಮೋನುಗಳು ಸ್ರವಿಸಲ್ಪಡುತ್ತವೆ. ಇವು ಮೆದುಳೊಳಗೆ ಹುದುಗಿರುವ ಪಿಟ್ಯುಟರಿ ಗ್ರಂಥಿಯಿಂದ ಸ್ರವಿಸಲ್ಪಡುವ ಎರಡು ಜನನಾಂಗ ಪ್ರಚೋದಕ ಹಾರ್ಮೋನುಗಳಿಂದ ನಿಯಂತ್ರಿಸಲ್ಪಡುತ್ತವೆ, ಈ ಪಿಟ್ಯುಟರಿ ಸ್ರಾವಗಳು ಹೈಪೊಥಲಮಸಿನ ಪ್ರಚೋದನೆಯಿಂದ ಪ್ರಭಾವಿತವಾಗುತ್ತವೆ. ಈ ಹೈಪೊಥಲಮಸ್ ದೇಹದ ಒಳ-ಹೊರಗಿನ ಬದಲಾವಣೆಗಳಿಂದ ಪ್ರಭಾವಿತಗೊಂಡು ಅದಕ್ಕನುಗುಣವಾಗಿ ಸಂತಾನೋತ್ಪತ್ತಿಯ ವ್ಯವಸ್ಥೆಯನ್ನು ನಿಯಂತ್ರಿಸುತ್ತದೆ. ಇಂದಿನ ಆಹಾರ ಹಾಗೂ ಪರಿಸರಗಳು ಈ ಹೈಪೊಥಲಮಸ್-ಪಿಟ್ಯುಟರಿ-ಜನಾಂಗಗಳ ಅಕ್ಷದ ಮೇಲೆ ದುಷ್ಪರಿಣಾಮ ಬೀರುತ್ತವೆ.

ನಮ್ಮ ದೇಹದಲ್ಲಿ ಮೇದಸ್ಸನ್ನು ತುಂಬಿಕೊಳ್ಳುವ ಜೀವಕೋಶಗಳು ಲೆಪ್ಟಿನ್ ಎಂಬ ಹಾರ್ಮೋನನ್ನು ಸ್ರವಿಸುತ್ತವೆ. ಈ ಲೆಪ್ಟಿನ್ ದೇಹದಲ್ಲಿ ಅದೆಷ್ಟು ಆಹಾರವು (ಮೇದಸ್ಸು) ಸಂಚಯವಾಗಿದೆಯೆನ್ನುವ ಮಾಹಿತಿಯನ್ನು ಹೈಪೊಥಲಮಸಿಗೆ ನೀಡುತ್ತದೆ. ಅದಕ್ಕನುಗುಣವಾಗಿ ಜನನಾಂಗಗಳ ಕಾರ್ಯವನ್ನು ಹೈಪೊಥಲಮಸ್ ಪ್ರಚೋದಿಸುತ್ತದೆ. ಅಂದರೆ ನಾವು ತಿನ್ನುವ ಆಹಾರದ ಪ್ರಮಾಣ ಹಾಗೂ ಅದರಿಂದ ದೇಹದೊಳಗೆ ಸಂಚಯವಾಗುವ ಮೇದಸ್ಸಿನ ಪ್ರಮಾಣಗಳು ನಾವು ಪ್ರೌಢಾವಸ್ಥೆಗೆ ತಲುಪುವುದನ್ನೂ, ನಮ್ಮ ಸಂತಾನಶಕ್ತಿಯನ್ನೂ ನಿರ್ಧರಿಸುತ್ತವೆ. ಎಷ್ಟು ಅಗತ್ಯವೋ ಅಷ್ಟೇ ತಿಂದರೆ ಇವು ಸುಸೂತ್ರವಾಗಿರುತ್ತದೆ, ಅಗತ್ಯಕ್ಕಿಂತ ಹೆಚ್ಚು ತಿಂದು ಬೊಜ್ಜು ಹೆಚ್ಚಿದರೆ ಲೆಪ್ಟಿನ್ ಏರಿ ಪ್ರೌಢಾವಸ್ಥೆ ಬೇಗನೇ ಬರುತ್ತದೆ, ನಂತರ ಜನನಾಂಗಗಳ ಪ್ರಚೋದನೆ ವಿಪರೀತವಾಗಿ ಸಂತಾನೋತ್ಪತ್ತಿಗೆ ತೊಂದರೆಯಾಗುತ್ತದೆ.

ಮೇದೋಜೀರಕಾಂಗದ ಬೀಟಾ ಕಣಗಳು ಸ್ರವಿಸುವ ಇನ್ಸುಲಿನ್ ಹಾರ್ಮೋನು ಕೂಡಾ ನಮ್ಮ ಸಂತಾನಶಕ್ತಿಯ ಮೇಲೆ ಸಾಕಷ್ಟು ಪ್ರಭಾವ ಬೀರುತ್ತದೆ. ನಾವು ತಿನ್ನುವ ಶರ್ಕರಗಳೆಲ್ಲವೂ ಇನ್ಸುಲಿನ್ ಸ್ರಾವವನ್ನು ಪ್ರಚೋದಿಸುತ್ತವೆ, ಇನ್ಸುಲಿನ್ ಈ ಶರ್ಕರಗಳನ್ನು ಮೇದಸ್ಸಾಗಿ ಪರಿವರ್ತಿಸಲು ಕಾರಣವಾಗಿ, ಬೊಜ್ಜು ಹೆಚ್ಚುತ್ತದೆ, ಅದರಿಂದ ಲೆಪ್ಟಿನ್ ಏರುತ್ತದೆ. ಹೀಗೆ ನಾವು ಶರ್ಕರಗಳನ್ನು ಹೆಚ್ಚು-ಹೆಚ್ಚು ತಿಂದಷ್ಟು ಇನ್ಸುಲಿನ್ ಹಾಗೂ ಲೆಪ್ಟಿನ್ ಎರಡೂ ಏರುತ್ತವೆ. ಇನ್ಸುಲಿನ್ ಏರಿದಂತೆ ಟೆಸ್ಟೊಸ್ಟಿರಾನ್ ಪ್ರಮಾಣವೂ ಏರುತ್ತದೆ, ಅದರಿಂದಾಗಿ ಪಿಟ್ಯುಟರಿಯಿಂದ ಸ್ರವಿಸಲ್ಪಡುವ ಪ್ರಚೋದಕ ಹಾರ್ಮೋನುಗಳು ಏರುಪೇರಾಗುತ್ತವೆ, ಜನನಾಂಗಗಳ ಕೆಲಸವೆಲ್ಲವೂ ಕೆಡುತ್ತದೆ. ಮಹಿಳೆಯರಲ್ಲಿ ಹಲವು ಅಂಡಾಣುಗಳು ಅರ್ಧಂಬರ್ಧ ಬೆಳೆಯುವುದರಿಂದ (ಪಾಲಿ ಸಿಸ್ಟಿಕ್ ಓವರಿ ಅಥವಾ ಪಿಸಿಒ) ಋತುಚಕ್ರವು ಅವ್ಯವಸ್ಥಿತವಾಗುತ್ತದೆ. ಇಂದು ಶೇ.50ರಷ್ಟು ಮಹಿಳೆಯರಲ್ಲಿ ಸಂತಾನಹೀನತೆಗೆ ಪಿಸಿಓ ಕಾರಣವಾಗಿದೆ. ಪುರುಷರಲ್ಲಿ ಇಂತಹ ಬದಲಾವಣೆಗಳಿಂದ ವೀರ್ಯಾಣುಗಳ ಬೆಳವಣಿಗೆಗೆ ತೊಂದರೆಯಾಗುತ್ತದೆ.

ಹೆಣ್ಮಕ್ಕಳಲ್ಲಿ ಇನ್ಸುಲಿನ್ ಹೆಚ್ಚಿ ಟೆಸ್ಟೊಸ್ಟಿರಾನ್ ಪ್ರಮಾಣವು ಏರಿದಾಗ ಗಂಡಸರಂತೆ ಕೂದಲುಗಳು ಬೆಳೆಯುತ್ತವೆ. ಗಂಡು ಮಕ್ಕಳಲ್ಲಿ ಬೊಜ್ಜಿನಿಂದಾಗಿ ಸ್ತ್ರೀಸಹಜ ಹಾರ್ಮೋನಾದ ಇಸ್ಟ್ರೋಜನ್ ಏರತೊಡಗುತ್ತದೆ, ಅದರಿಂದಾಗಿ ಅವರ ಲೈಂಗಿಕ ಬೆಳವಣಿಗೆಗೆ ತೊಂದರೆಯಾಗುತ್ತದೆ, ಕೆಲವರಲ್ಲಿ ಸ್ತನಗಳ ಗಾತ್ರವು ಬೆಳೆಯುತ್ತದೆ. ಒಟ್ಟಿನಲ್ಲಿ ಮಕ್ಕಳು ವಿಪರೀತ ಪ್ರಮಾಣದಲ್ಲಿ ಶರ್ಕರಗಳನ್ನು ಸೇವಿಸುವುದರಿಂದ ಅವರ ಲೈಂಗಿಕ ಬೆಳವಣಿಗೆಯ ಮೇಲೆ ಗಂಭೀರವಾದ ಪರಿಣಾಮಗಳಾಗುವ ಸಾಧ್ಯತೆಗಳಿವೆ.

ಶರ್ಕರಗಳ ಅತಿಸೇವನೆ ಮಾತ್ರವಲ್ಲ, ಇನ್ನು ಕೆಲವು ಅಂಶಗಳಿಂದಲೂ ಸಂತಾನಶಕ್ತಿಯಲ್ಲಿ ಕುಂದುಂಟಾಗಬಹುದೆಂದು ಶಂಕಿಸಲಾಗಿದೆ. ಪಶು ಹಾಲಿನ ಸೇವನೆಯು ಇನ್ಸುಲಿನ್ ಹಾಗೂ ಇನ್ಸುಲಿನ್ ನಂತಹ ಬೆಳೆತಕಾರಕಗಳ ಪ್ರಮಾಣವನ್ನು ಹೆಚ್ಚಿಸುತ್ತದೆಯಲ್ಲದೆ, ಇಸ್ಟ್ರೋಜನ್ ಹಾಗೂ ಪ್ರೊಜೆಸ್ಟರಾನ್ ಗಳ ಹೆಚ್ಚಳಕ್ಕೂ ಕಾರಣವಾಗುತ್ತದೆ. ಪಶು ಹಾಲು ಮತ್ತದರ ಉತ್ಪನ್ನಗಳನ್ನು ಹೆಚ್ಚಾಗಿ ಸೇವಿಸುವ ಹೆಣ್ಮಕ್ಕಳಲ್ಲಿ ಪಿಸಿಒ ಹಾಗೂ ಅತಿಕೂದಲಿನಂತಹ ಸಮಸ್ಯೆಗಳು ಮತ್ತು ಗಂಡು ಮಕ್ಕಳಲ್ಲಿ ಲೈಂಗಿಕ ಬೆಳವಣಿಗೆಯ ಸಮಸ್ಯೆಗಳು ಹೆಚ್ಚಿರುವ ಸಾಧ್ಯತೆಗಳಿವೆಯೆಂದು ಅಧ್ಯಯನಗಳು ತೋರಿಸಿವೆ. ಸೋಯಾ ಮತ್ತದರ ಉತ್ಪನ್ನಗಳಲ್ಲಿ ಸಸ್ಯಜನ್ಯ ಇಸ್ಟ್ರೋಜನ್ ಹೆಚ್ಚಿರುವುದರಿಂದ ಜನನಾಂಗಗಳ ಮೇಲೆ ಪ್ರಭಾವ ಬೀರಬಹುದೆಂದು ಹೇಳಲಾಗಿದೆ. ಪಾಲಿಕಾರ್ಬನೇಟ್ ಪ್ಲಾಸ್ಟಿಕ್ (ಬಾಟಲು ಇತ್ಯಾದಿ) ಹಾಗೂ ಪಿವಿಸಿ ಪ್ಲಾಸ್ಟಿಕ್ (ಆಟಿಕೆ, ನಳ್ಳಿ, ಪರದೆಗಳು ಇತ್ಯಾದಿ) ಗಳಲ್ಲಿರುವ ಬಿಸ್ಫಿನಾಲ್ ಎ ಮತ್ತು ಥಾಲೇಟ್ ನಂತಹ ಸಂಯುಕ್ತಗಳು ಸೂಕ್ಷ್ಮಸಂವೇದಿಯಾದ ನಿರ್ನಾಳ ವ್ಯವಸ್ಥೆಯ ಮೇಳೆ ದುಷ್ಪರಿಣಾಮ ಬೀರಬಲ್ಲವೆಂದು ಗುರುತಿಸಲಾಗಿದೆ. ಅದೇ ರೀತಿ ಡಿಡಿಟಿ, ಎಂಡೋಸಲ್ಫಾನ್ ನಂತಹ ಕೀಟನಾಶಕಗಳು, ವಾಹನದ ಇಂಧನಗಳು, ಇತರ ಔದ್ಯಮಿಕ ರಾಸಾಯನಿಕಗಳು ಕೂಡಾ ಈ ವ್ಯವಸ್ಥೆಯ ಮೇಲೆ ಪ್ರಭಾವ ಬೀರಬಹುದಾಗಿದೆ. ಜೊತೆಗೆ, ವ್ಯಾಯಾಮದ ಕೊರತೆ, ಮದ್ಯಪಾನ ಹಾಗೂ ಧೂಮಪಾನ, ವಿಪರೀತ ಒತ್ತಡಗಳು, ಅನಗತ್ಯ ಔಷಧ ಸೇವನೆ ಇತ್ಯಾದಿಗಳೂ ಸಂತಾನಶಕ್ತಿಯನ್ನು ಕುಂಠಿತಗೊಳಿಸಬಲ್ಲವು.

ಆದ್ದರಿಂದ ನಮ್ಮ ಸಂತಾನಶಕ್ತಿಯು ಆರೋಗ್ಯಕರವಾಗಿ ಉಳಿಯಬೇಕಾದರೆ ಎಳೆಯ ವಯಸ್ಸಿನಿಂದಲೇ ಅದನ್ನು ಕಾಪಾಡಬೇಕಾದದ್ದು ಅತ್ಯಗತ್ಯ. ಅದು ಸಾಧ್ಯವಾಗಬೇಕಿದ್ದರೆ ಪುಟ್ಟ ಮಕ್ಕಳಾದಿಯಾಗಿ ಎಲ್ಲರೂ ಆರೋಗ್ಯಕರ ಆಹಾರವನ್ನು ಹಿತಮಿತವಾಗಿ ಸೇವಿಸುವುದು ಅತಿ ಮುಖ್ಯ. ಸಕ್ಕರೆ, ಸಿಹಿಭರಿತವಾದ ಎಲ್ಲಾ ತಿನಿಸುಗಳು ಹಾಗೂ ಪೇಯಗಳು; ಹಣ್ಣುಗಳು ಹಾಗೂ ರಸಗಳು; ಪಶು ಹಾಲು ಮತ್ತದರ ಉತ್ಪನ್ನಗಳು; ಐಸ್ ಕ್ರೀಂ; ಬ್ರೆಡ್, ನೂಡಲ್ಸ್, ಬಿಸ್ಕತ್ತು ಮುಂತಾದ ಸಂಸ್ಕರಿತ ಶರ್ಕರಗಳು; ಸೋಯಾ ಮತ್ತದರ ಉತ್ಪನ್ನಗಳು ಇತ್ಯಾದಿಗಳನ್ನು ಸೇವಿಸದಿರುವುದೇ ಒಳ್ಳೆಯದು. ಇನ್ನುಳಿದ ಪ್ರಕೃತಿದತ್ತ ಆಹಾರವಸ್ತುಗಳನ್ನು ಹಿತಮಿತವಾಗಿ, ಹಸಿವಿಗನುಗುಣವಾಗಿ ತಿನ್ನುವುದೊಳ್ಳೆಯದು. ನಿರ್ನಾಳ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರಬಲ್ಲ ಸಂಯುಕ್ತಗಳನ್ನು ದೂರವಿಡುವುದೊಳ್ಳೆಯದು.

ಸಂತಾನಹೀನತೆಗೆ ನಾಗದೋಷ, ಪಾಪಕರ್ಮ, ಅನ್ಯರ ಶಾಪ ಇತ್ಯಾದಿಗಳಿಗಿಂತ ನಮ್ಮ ಆಹಾರ ಹಾಗೂ ಜೀವನಶೈಲಿಗಳಿಂದಾಗಿ ಲೆಪ್ಟಿನ್, ಇನ್ಸುಲಿನ್, ಟೆಸ್ಟೋಸ್ಟಿರಾನ್, ಇಸ್ಟ್ರೋಜನ್ ಮುಂತಾದ ಹಾರ್ಮೋನುಗಳಲ್ಲಾಗುವ ಏರುಪೇರುಗಳೇ ಕಾರಣವೆನ್ನಲು ಅಡ್ಡಿಯಿರಲಾರದು. ಆದ್ದರಿಂದ ಸಂತಾನರಹಿತರು ದೋಷ-ಪಾಪ-ಶಾಪ ಪರಿಹಾರಕ್ಕೆಳಸುವ ಬದಲು ತಮ್ಮ ಲೆಪ್ಟಿನ್-ಇನ್ಸುಲಿನ್ ಇತ್ಯಾದಿಗಳು ಸುಸೂತ್ರವಾಗಿದೆಯೇ ಎಂದು ನೋಡಿಕೊಂಡರೆ ಹೆಚ್ಚು ಪ್ರಯೋಜನವಾದೀತು. ಹಾಗೆಯೇ ಗರ್ಭಧಾರಣೆಗೆ ನೆರವಾಗುವ ಅತ್ಯಾಧುನಿಕ ಚಿಕಿತ್ಸೆಯ ಮೊರೆ ಹೋಗುವ ಮೊದಲು ಇಂದಿನ ಸಂಸ್ಕರಿತ ಆಹಾರ ಸೇವನೆಯನ್ನು ತೊರೆದು ಹಿಂದಿನ ಹಿತಮಿತವಾದ ಆಹಾರದತ್ತ ಹೊರಳಿ ನೋಡುವುದೊಳ್ಳೆಯದು.

ಐವತ್ತೆರಡನೇ ಬರಹ : ತ್ರಿದೋಷಗಳ ಪತ್ತೆಗೆ ಸ್ಟೆಥೋಸ್ಕೋಪ್ ಬೇಕಿಲ್ಲ [ಜೂನ್ 11, 2014, ಬುಧವಾರ] [ನೋಡಿ | ನೋಡಿ]

ಪ್ರಾಚೀನ ಪರಿಕಲ್ಪನೆಗಳ ಆಧಾರದಲ್ಲಿ ರೋಗನಿರ್ಣಯಕ್ಕೆ ಆಧುನಿಕ ಪರೀಕ್ಷೆಗಳು ನೆರವಾಗಲಾರವು

ರಕ್ತದಲ್ಲಿ ಕ್ರಿಯಾಟಿನಿನ್ ಪರೀಕ್ಷಿಸುವ ಆಯುರ್ವೇದ, ಹಾರ್ಮೋನುಗಳನ್ನು ಹುಡುಕುವ ಹೋಮಿಯೋಪತಿ, ಎಂಆರ್ ಐ ಸ್ಕಾನ್ ಮಾಡಬೇಕೆನ್ನುವ ಯೋಗಚಿಕಿತ್ಸಕ. ಆಧುನಿಕ ವೈದ್ಯವಿಜ್ಞಾನದ ವಿಧಾನಗಳನ್ನು ಹೀಗೆ ಇನ್ನಿತರರು ಬಳಸಿಕೊಳ್ಳಬಹುದೇ? ಅದರಿಂದ ರೋಗಿಗಳಿಗೇನಾದರೂ ಪ್ರಯೋಜನವಿದೆಯೇ?

ಮನುಷ್ಯನ ದೇಹ ಹಾಗೂ ಕಾಯಿಲೆಗಳ ಬಗ್ಗೆ ಆಯುರ್ವೇದ, ಹೋಮಿಯೋಪತಿ, ಯುನಾನಿ, ಸಿದ್ಧ ಮುಂತಾದ ಚಿಕಿತ್ಸಾ ಪದ್ಧತಿಗಳಲ್ಲಿರುವ  ಪರಿಕಲ್ಪನೆಗಳಿಗೂ, ಆಧುನಿಕ ವೈದ್ಯವಿಜ್ಞಾನದ ಸಿದ್ಧಾಂತಗಳಿಗೂ ಅಜಗಜಾಂತರವಿದೆ. ಹಾಗಿದ್ದರೂ ಸಮಗ್ರ ಚಿಕಿತ್ಸೆಯೆಂಬ ಹೆಸರಲ್ಲಿ ಇವನ್ನೆಲ್ಲ ಕಲಸಿ ಮುದ್ದೆ ಮಾಡುವ ಪ್ರಯತ್ನಗಳು ನಡೆಯುತ್ತಲೇ ಇವೆ. ಹಾಗೆ ಮಾಡುವುದರಿಂದ ಆರೋಗ್ಯರಕ್ಷಣೆಯನ್ನುಸುಧಾರಿಸಬಹುದು, ಆಧುನಿಕ ಚಿಕಿತ್ಸೆಯ ವೆಚ್ಚವನ್ನಿಳಿಸಬಹುದು, ವ್ಯಾಪಾರೀಕರಣವನ್ನು ತಡೆಯಬಹುದು ಎಂಬ ಭ್ರಮೆಗಳು ಜನಸಾಮಾನ್ಯರು ಮತ್ತು ವೈದ್ಯರಲ್ಲಷ್ಟೇ ಅಲ್ಲದೆ, ನಮ್ಮ ಸರಕಾರಗಳಿಗೂ ಇದೆ.

ಆಧುನಿಕ ವೈದ್ಯವಿಧಾನಗಳಿಂದ ಗುರುತಿಸಲ್ಪಡುವ ಕಾಯಿಲೆಗಳಿಗೆ ಪ್ರಾಚೀನ ಚಿಕಿತ್ಸೆಗಳೇ ಅತ್ಯುತ್ತಮವೆಂದು ಕೊಡಮಾಡುವುದು ಸಮಗ್ರ ಚಿಕಿತ್ಸೆಯಾಗುತ್ತದೆಯೇ? ರಕ್ತದಲ್ಲಿ ಕೊಲೆಸ್ಟರಾಲ್ ಪ್ರಮಾಣ ಹೆಚ್ಚಿದರೆ ಅದಕ್ಕೆ ಆಯುರ್ವೇದದ ಔಷಧಗಳಂತೆ! ಥೈರಾಯ್ಡ್ ಸ್ರಾವ ಕ್ಷೀಣಿಸಿದರೆ ಹೋಮಿಯೋಪತಿಯಿಂದ ಗುಣಪಡಿಸಬಹುದಂತೆ! ಸೊಂಟದಲ್ಲಿ ನೋವೆದ್ದರೆ ಹದಿನೈದು ದಿನಗಳ ಯೋಗ ತರಬೇತಿ  ಪಡೆದವನು ಎಂಆರ್ ಐ ಸ್ಕಾನ್ ಮಾಡಿಸಿ ಚಿಕಿತ್ಸೆ ನೀಡುತ್ತಾನಂತೆ! ಇನ್ ಫ್ಲುಯೆಂಜಾ ಅಥವಾ ಇನ್ನಿತರ ವೈರಾಣುಗಳಲ್ಲಿ ತಳಿಪರಿವರ್ತನೆಯಾಗಿರುವುದನ್ನು ಅತ್ಯಾಧುನಿಕ ತಂತ್ರಜ್ಞಾನವು ಕಂಡುಹಿಡಿದರೆ ಮರುದಿನವೇ ಅವಕ್ಕೆ ಬದಲಿಪದ್ಧತಿಗಳಲ್ಲಿ ಪರಿಹಾರ ಸಿದ್ಧವಾಗುವುದೂ ಇದೆ!

ನಿಜವೆಂದರೆ ಆಯುರ್ವೇದದಲ್ಲಿ ಕೊಲೆಸ್ಟರಾಲ್ ಎಂಬುದಿಲ್ಲ, ಹೋಮಿಯೋಪತಿಯಲ್ಲಿ ಥೈರಾಯ್ಡ್ ಕ್ಷೀಣತೆ ಎಂಬುದಿಲ್ಲ, ಯೋಗಸಾಧನೆಯು ಚಿಕಿತ್ಸೆಯ ಕ್ರಮವೇ ಅಲ್ಲ. ಆಧುನಿಕ ವೈದ್ಯವಿಜ್ಞಾನ ಹಾಗೂ ಬದಲಿ ಪದ್ಧತಿಗಳಲ್ಲಿ ದೇಹ ಹಾಗೂ ರೋಗಗಳ ಪರಿಕಲ್ಪನೆಗಳು, ಪರಿಭಾಷೆಗಳು, ರೋಗಿಯನ್ನು ಪರೀಕ್ಷಿಸುವ ವಿಧಾನಗಳು, ಚಿಕಿತ್ಸಾಕ್ರಮಗಳು ಎಲ್ಲವೂ ಬೇರೆ ಬೇರೆಯಾಗಿದ್ದು, ಒಂದನ್ನು ಇನ್ನೊಂದಕ್ಕೆ ಗಂಟು ಹಾಕುವುದಕ್ಕೆ ಸಾಧ್ಯವಿಲ್ಲ, ಒಂದರ ಪರೀಕ್ಷಾ ವಿಧಾನಗಳನ್ನು, ಚಿಕಿತ್ಸಾಕ್ರಮಗಳನ್ನು ಇನ್ನೊಂದಕ್ಕೆ ಅನ್ವಯಿಸುವುದಕ್ಕೆ ಸಾಧ್ಯವಿಲ್ಲ. ಹಾಗೆ ಮಾಡುವುದೆಂದರೆ ಅಮಾಯಕ ರೋಗಿಗಳಿಗೆ ಅನ್ಯಾಯ, ಪ್ರಾಚೀನ ವೈದ್ಯಪದ್ಧತಿಗಳಿಗೆ ಅಪಚಾರ.

ಆಯುರ್ವೇದವು ಭರತಖಂಡದಲ್ಲಿ ಎರಡು-ಮೂರು ಸಾವಿರ ವರ್ಷಗಳ ಹಿಂದೆ ಉಚ್ಛ್ರಾಯದಲ್ಲಿತ್ತು. ರಕ್ತ ಪರೀಕ್ಷೆ, ಕ್ಷಕಿರಣ, ಸಿಟಿ-ಎಂ ಆರ್ ಐ, ಸೂಕ್ಷ್ಮದರ್ಶಕ ಇತ್ಯಾದಿಗಳೆಲ್ಲ ಇಲ್ಲದಿದ್ದ ಆ ಕಾಲದಲ್ಲಿ ದೇಹರಚನೆಯನ್ನು ಕಲಿಯುವುದಕ್ಕೆ ಸ್ಮಶಾನದಿಂದ ಶವಗಳನ್ನು ಹೊತ್ತೊಯ್ದು ಪರೀಕ್ಷಿಸಲಾಗುತ್ತಿತ್ತು. ಭೂಮಿ, ಆಕಾಶ, ಜಲ. ವಾಯು ಹಾಗೂ ಅಗ್ನಿಗಳೆಂಬ ಪಂಚಭೂತಗಳಿಂದಾದ ದೇಹ; ಅದರೊಳಗೆ ರಸ, ರಕ್ತ, ಮಾಂಸ, ಮೇದ, ಅಸ್ಥಿ, ಮಜ್ಜೆ ಹಾಗೂ ಶುಕ್ರ ಎಂಬ ಏಳು ಧಾತುಗಳು, ಓಜಸ್ಸು, ತೇಜಸ್ಸು, ಪ್ರಾಣಗಳಂತಹ ಶಕ್ತಿಗಳು; ಪಂಚಭೂತಗಳ ತಾಳಮೇಳದಿಂದಾಗುವ ವಾತ, ಪಿತ್ತ ಮತ್ತು ಕಫಗಳೆಂಬ ಮೂರು ದೋಷಗಳು – ಇವೆಲ್ಲವೂ ವ್ಯಕ್ತಿಯ ಪ್ರಕೃತಿಯನ್ನೂ, ವಿಕೃತಿಯನ್ನೂ ನಿರ್ಧರಿಸುತ್ತವೆ ಎನ್ನುವುದು ಆ ಕಾಲದ ಆಯುರ್ವೇದದ ಪರಿಕಲ್ಪನೆಯಾಗಿತ್ತು. ಆ ಕಾಲದ ವೈದ್ಯನು ತನ್ನ ಪಂಚೇಂದ್ರಿಯಗಳನ್ನು ಬಳಸಿ ಪ್ರಶ್ನೆ-ಸ್ಪರ್ಶ-ದರ್ಶನಗಳಿಂದ ರೋಗಿಯ ದೇಹ ಹಾಗೂ ರೋಗಲಕ್ಷಣಗಳನ್ನು ಪರೀಕ್ಷಿಸಿ, ರೋಗವನ್ನೂ, ಅದರ ಚಿಕಿತ್ಸೆಯನ್ನೂ ನಿಷ್ಕರ್ಷಿಸಬೇಕಾಗಿತ್ತು. ಇಂದಿಗೂ ಆಯುರ್ವೇದ ಪರಿಣತರು ಈ ಸಿದ್ಧಾಂತಗಳನ್ನೇ ಅನುಸರಿಸುವುದರಿಂದ ಈ ವಿಧಾನಗಳಿಂದಲೇ ಅವರು ರೋಗನಿದಾನ ಮಾಡಬೇಕು; ರಕ್ತ-ಮೂತ್ರಾದಿ ಪರೀಕ್ಷೆಗಳು, ಕ್ಷಕಿರಣ, ಸ್ಕಾನ್ ಇತ್ಯಾದಿಗಳು, ಅವೇಕೆ, ಸ್ಟೆಥೋಸ್ಕೋಪ್ ನಂತಹ ನೂತನ ಸಾಧನಗಳು ಅವರಿಗೆ ಬೇಕಾಗಲಾರವು.

ಹೋಮಿಯೋಪತಿ ಚಿಕಿತ್ಸೆಯನ್ನು ಪ್ರತಿಪಾದಿಸಿದ ಜರ್ಮನಿಯ ವೈದ್ಯ ಸಮುವೆಲ್ ಹನೆಮನ್ (1755-1843) ಅನುಸಾರ, ಮನುಷ್ಯನೊಳಗಿರುವ ಪ್ರಾಣಶಕ್ತಿಯಲ್ಲಿ ಏರುಪೇರುಗಳಾದಾಗ ಬಗೆಬಗೆಯ ಲಕ್ಷಣಗಳು ಹೊರಹೊಮ್ಮುತ್ತವೆ; ಸುದೀರ್ಘ ಕಾಯಿಲೆಗಳೆಲ್ಲ ಸೋರಾ (ಒಳತುರಿಕೆ), ಸೈಕೋಸಿಸ್ (ಶುಕ್ಲಮೇಹ, ಗೊನೊರಿಯಾ ಮೂಲ) ಹಾಗೂ ಸಿಫಿಲಿಸ್ (ಪರಂಗಿ ರೋಗ, ಸಿಫಿಲಿಸ್ ಮೂಲ) ಎಂಬ ಮೂರು ಕೊಳೆಗಳು (ಮಿಯಸ್ಮ್) ಪ್ರಾಣಶಕ್ತಿಯನ್ನು ಹಾಳುಗೆಡುವುದರಿಂದ ಉಂಟಾಗುತ್ತವೆ. ಆದ್ದರಿಂದಲೇ ಹೋಮಿಯೋಪತಿ ಚಿಕಿತ್ಸಕರು ರೋಗಿಯಲ್ಲಿರುವ ಬಗೆಬಗೆಯ ಲಕ್ಷಣಗಳನ್ನೂ, ಅವನ ಕುಟುಂಬ, ಪರಿಸರ ಇತ್ಯಾದಿ ವಿವರಗಳನ್ನೂ ಅತಿ ಕೂಲಂಕಷವಾಗಿ ಪರಿಶೀಲಿಸಿ ಕೇವಲ ಅವುಗಳ ಆಧಾರದಲ್ಲಿಯೇ ಚಿಕಿತ್ಸೆಯನ್ನು ನಿರ್ಧರಿಸಬೇಕಾಗುತ್ತದೆ. ರಕ್ತ-ಮೂತ್ರಾದಿ ಪರೀಕ್ಷೆಗಳು, ಕ್ಷಕಿರಣ, ಸ್ಕಾನ್, ಸ್ಟೆಥೋಸ್ಕೋಪ್ ಇತ್ಯಾದಿಗಳು ಅವರಿಗೂ ಅಗತ್ಯವಿಲ್ಲ.

ಪಂಚಭೂತಗಳು, ತ್ರಿದೋಷಗಳು, ತ್ರಿಕಶ್ಮಲಗಳು, ಪ್ರಾಣಶಕ್ತಿ ಇತ್ಯಾದಿ ಪರಿಕಲ್ಪನೆಗಳು ಆ ಕಾಲದ ಹೆಚ್ಚಿನ ಚಿಕಿತ್ಸಾ ಪದ್ಧತಿಗಳಲ್ಲಿ ಪ್ರಚಲಿತವಿದ್ದವು. ಗ್ರೀಕರ ಚಿಕಿತ್ಸಾ ಪದ್ಧತಿಯಲ್ಲೂ ಅಗ್ನಿ, ಭೂಮಿ, ವಾಯು ಮತ್ತು ಜಲಗಳೆಂಬ ಮೂಲಧಾತುಗಳು ಹಾಗೂ ರಕ್ತ, ಕಫ, ಪೀತಪಿತ್ತ ಮತ್ತು ಕರಿಪಿತ್ತಗಳೆಂಬ ದೋಷಗಳು ವ್ಯಕ್ತಿಯ ದೇಹಸ್ಥಿತಿಯನ್ನು ನಿರ್ಧರಿಸುತ್ತವೆ ಎಂದು ತಿಳಿಯಲಾಗಿತ್ತು. ನಮ್ಮಲ್ಲಿನ ಸಿದ್ಧ ಪದ್ಧತಿ, ಚೀನಿ ಚಿಕಿತ್ಸಾ ಪದ್ಧತಿ, ಗ್ರೀಸಿನಿಂದ ಪರ್ಷಿಯಾದ ಹಾದಿಯಾಗಿ ಭಾರತಕ್ಕೆ ಬಂದ ಯುನಾನಿ ಪದ್ಧತಿಗಳೆಲ್ಲವೂ ಇವೇ ಪರಿಕಲ್ಪನೆಗಳನ್ನು ಆಧರಿಸಿದ್ದವು. ಎರಡು ಸಾವಿರ ವರ್ಷಗಳಿಗೂ ಹೆಚ್ಚು ಕಾಲ, ಅಂದರೆ 19ನೇ ಶತಮಾನದ ಮಧ್ಯದವರೆಗೂ, ಇಂತಹಾ ಸಿದ್ಧಾಂತಗಳ ಆಧಾರದಲ್ಲೇ ಎಲ್ಲೆಡೆ ಚಿಕಿತ್ಸೆಗಳಾಗುತ್ತಿದ್ದವು. ಗಿಡಮೂಲಿಕೆಗಳನ್ನೂ, ಕಲ್ಲು-ಮಣ್ಣು-ಹುಳು-ಹಾವು ಇತ್ಯಾದಿಗಳನ್ನೂ ಔಷಧಗಳಾಗಿ  ಬಳಸಲಾಗುತ್ತಿತ್ತು. ದೇಹದೊಳಗಿನ ದೋಷಗಳನ್ನು ಹೊರತೆಗೆಯುವುದಕ್ಕೆಂದು ಬಗೆಬಗೆಯ ಶುದ್ಧೀಕರಣ ಕ್ರಿಯೆಗಳನ್ನೂ ನಡೆಸಲಾಗುತ್ತಿತ್ತು. ಗಂಭೀರ ರೋಗಗಳಿದ್ದವರ ಕೈಕಾಲುಗಳನ್ನು ಗಾಯಗೊಳಿಸಿ ರಕ್ತ ಹರಿಸುವುದು ದೊಡ್ಡ ತಜ್ಞರ ವಿಶೇಷ ಚಿಕಿತ್ಸೆಯೆಂದು  ಪರಿಗಣಿತವಾಗಿತ್ತು.  ಅಮೆರಿಕದ ಮೊದಲ ಅಧ್ಯಕ್ಷ ಜಾರ್ಜ್ ವಾಷಿಂಗ್ಟನ್ 1799ರ ಡಿಸೆಂಬರ್ ನಲ್ಲಿ ಗಂಭೀರ ಸ್ವರೂಪದ ಗಂಟಲು ನೋವಿಗೆ ತುತ್ತಾದಾಗ ಒಂದೇ ದಿನದಲ್ಲಿ ಹಲವು ಸಲ ರಕ್ತಸ್ರಾವದ ಚಿಕಿತ್ಸೆ ನೀಡಲಾಗಿ ಸಾವನ್ನಪ್ಪಬೇಕಾಯಿತು.

ಹದಿನೆಂಟು-ಹತ್ತೊಂಭತ್ತನೇ ಶತಮಾನದಲ್ಲಿ ಇವೆಲ್ಲವೂ ಪ್ರಶ್ನಿಸಲ್ಪಡತೊಡಗಿದವು. ರೋಗಗಳಿಗೆ ತ್ರಿದೋಷಗಳಿಗಿಂತ ಹೊರತಾದ ಅನ್ಯಕಾರಣಗಳನ್ನು ಹುಡುಕಹೊರಟವರಿಂದ ಆಧುನಿಕ ಸಾಕ್ಷ್ಯಾಧಾರಿತ ವೈದ್ಯವಿಜ್ಞಾನವು ಬೆಳೆಯಿತು. ದೂರಪಯಣದ ನಾವಿಕರು ಕಿತ್ತಳೆ-ಲಿಂಬೆಗಳನ್ನು ಸೇವಿಸದಿರುವುದರಿಂದ ಚರ್ಮ ಹಾಗೂ ಒಸಡುಗಳಲ್ಲಿ ರಕ್ತಸ್ರಾವಕ್ಕೆ ಕಾರಣವಾಗುವ ಸ್ಕರ್ವಿ ರೋಗಕ್ಕೆ ತುತ್ತಾಗುತ್ತಾರೆ ಎನ್ನುವುದನ್ನು 1747ರಲ್ಲೇ ತೋರಿಸಿದ ಜೇಮ್ಸ್ ಲಿಂಡ್, ದೇಹವನ್ನು ಶುದ್ಧಗೊಳಿಸಲು ರಕ್ತಸ್ರಾವದ ಚಿಕಿತ್ಸೆ ನಡೆಸುವುದರಿಂದ ಹೆಚ್ಚಿನ ರೋಗಿಗಳು ಸಾಯುತ್ತಾರೆನ್ನುವುದನ್ನು 1809ರಲ್ಲಿ ತೋರಿಸಿಕೊಟ್ಟ ಅಲೆಗ್ಸಾಂಡರ್ ಹಾಮಿಲ್ಟನ್, ಸೂಕ್ಷ್ಮಾಣುಗಳು ಕಾಯಿಲೆಗಳನ್ನುಂಟು ಮಾಡಬಹುದೆಂದು 1860ರಲ್ಲಿ ಪ್ರತಿಪಾದಿಸಿದ ಲೂಯಿ ಪಾಸ್ಚರ್, ಆಂಥ್ರಾಕ್ಸ್, ಕಾಲೆರಾ ಹಾಗೂ ಕ್ಷಯ ರೋಗಗಳು ಬ್ಯಾಕ್ಟೀರಿಯಾಗಳಿಂದುಂಟಾಗುತ್ತವೆ ಎಂದು 1880ರ ವೇಳೆಗೆ ದೃಢಪಡಿಸಿದ ರಾಬರ್ಟ್ ಕುಕ್, ಮಲೇರಿಯಾ ಪರೋಪಜೀವಿಯು ಸೊಳ್ಳೆಗಳ ಮೂಲಕ ಹರಡುತ್ತದೆ ಎಂದು ತೋರಿಸಿಕೊಟ್ಟ ರೊನಾಲ್ಡ್ ರಾಸ್ – ಇಂತಹ ಹಲವಾರು ವಿಜ್ಞಾನಿಗಳ ಅವಿರತ ಶ್ರಮದ ಫಲವಾಗಿ ಮನುಷ್ಯನ ಕಾಯಿಲೆಗಳಿಗೆ ನಿಜವಾದ ಕಾರಣಗಳನ್ನು ಗುರುತಿಸುವುದಕ್ಕೆ ಸಾಧ್ಯವಾಯಿತು, ಅವುಗಳನ್ನು ನಿಖರವಾಗಿ ಗುಣಪಡಿಸಬಲ್ಲ ಪರಿಣಾಮಕಾರಿ ಚಿಕಿತ್ಸೆಗಳೂ, ತಡೆಯುವ ಉಪಾಯಗಳೂ ಬಂದವು. ಇಪ್ಪತ್ತನೇ ಶತಮಾನದ ಮೊದಲ ಮೂರು ದಶಕಗಳಲ್ಲಿ ರಕ್ತದಲ್ಲಿ ಗ್ಲೂಕೋಸ್ ಇತ್ಯಾದಿಗಳನ್ನು ಅಳೆಯುವ ಪರೀಕ್ಷೆಗಳು ಬಂದವು, ಇನ್ಸುಲಿನ್, ಥೈರಾಕ್ಸಿನ್ ಮುಂತಾದ ಹಾರ್ಮೋನುಗಳು ಗುರುತಿಸಲ್ಪಟ್ಟವು. ಹೊಸ ವೈಜ್ಞಾನಿಕ ವಿಧಾನಗಳೂ, ತಂತ್ರಜ್ಞಾನಗಳೂ ಅಭಿವೃದ್ಧಿಯಾದಂತೆ ಮಾನವ ದೇಹದ ಗುಟ್ಟುಗಳು ಬಯಲಾಗತೊಡಗಿದವು, ಇನ್ನಷ್ಟು ರೋಗಗಳ ಕಾರಣಗಳು ಪತ್ತೆಯಾದವು. ಹೀಗೆ ಆಧುನಿಕ ವೈದ್ಯವಿಜ್ಞಾನದ ಸಾಕ್ಷ್ಯಾಧಾರಿತ ಸಾಧನೆಗಳು ಎಲ್ಲೆಡೆ ಎತ್ತರೆತ್ತರಕ್ಕೆ ಬೆಳೆಯುತ್ತಿರುವಲ್ಲಿ ತ್ರಿದೋಷ-ತ್ರಿಕಶ್ಮಲ-ಪ್ರಾಣಶಕ್ತಿ ಸಿದ್ಧಾಂತಗಳು ಆಧಾರವಿಲ್ಲದೇ ಉಳಿದಿವೆ.

ಇಂದಿಗೂ ಆಯುರ್ವೇದ ಹಾಗೂ ಹೋಮಿಯೋಪತಿಗಳ ಪರಿಣತರು ವಾತ-ಪಿತ್ತ-ಕಫ-ಪ್ರಾಣಶಕ್ತಿ-ಸೋರಾಗಳೇ ಪರಮಸತ್ಯಗಳೆಂದು ಘೋಷಿಸುತ್ತಾರಲ್ಲದೆ, ಸೂಕ್ಷ್ಮಾಣುಗಳಿಂದ ಮಲೇರಿಯಾ, ಕ್ಷಯ, ಟೈಫಾಯ್ಡ್ ಇತ್ಯಾದಿ ಸೋಂಕುಗಳುಂಟಾಗುತ್ತವೆ ಎನ್ನುವುದನ್ನು ಒಪ್ಪಿಕೊಳ್ಳುವುದಿಲ್ಲ, ಥೈರಾಯ್ಡ್ ಗ್ರಂಥಿಯ ಥೈರಾಕ್ಸಿನ್ ಸ್ರಾವದ ಏರಿಳಿತದಿಂದ ಹಲಬಗೆಯ ಸಮಸ್ಯೆಗಳುಂಟಾಗಬಹುದೆಂದು ಹೇಳುವುದಿಲ್ಲ, ಹೃದಯದ ಅಪಧಮನಿಗಳು ಮುಚ್ಚಿ ಹೋಗಿ ಹೃದಯಾಘಾತವಾಗುವುದು ನಿಜವೆನ್ನುವುದಿಲ್ಲ. ತ್ರಿದೋಷ-ತ್ರಿಕಶ್ಮಲಗಳ ಆಧಾರದಲ್ಲಿ ಈ ರೋಗಗಳನ್ನು ಗುರುತಿಸುವುದಕ್ಕಾಗಲೀ, ಚಿಕಿತ್ಸೆ ನೀಡುವುದಕ್ಕಾಗಲೀ ಸಾಧ್ಯವಿಲ್ಲವೆಂದು ಅವರು ಒಪ್ಪಿಕೊಳ್ಳುವುದೂ ಇಲ್ಲ! ಬದಲಿಗೆ ಆಧುನಿಕ ವೈದ್ಯವಿಧಾನಗಳಿಂದ ಗುರುತಿಸಲಾಗುವ ರೋಗಗಳನ್ನು ತ್ರಿದೋಷಗಳ ಹೆಸರಲ್ಲಿ ವಿವರಿಸುವುದಕ್ಕೂ, ಅದೇ ಆಧಾರದಲ್ಲಿ ಚಿಕಿತ್ಸೆ ನೀಡುವುದಕ್ಕೂ ಮುಂದಾಗುತ್ತಾರೆ.

ಆಧುನಿಕ ವೈದ್ಯವಿಧಾನಗಳಿಂದ ಗುರುತಿಸಲಾಗುವ ಕಾಯಿಲೆಗಳಿಗೆ ವಾತ-ಪಿತ್ತ-ಕಫಾದಿ ಪದ್ಧತಿಗಳಲ್ಲಿ ಪರಿಹಾರವಿಲ್ಲತ್ರಿದೋಷ-ತ್ರಿಕಶ್ಮಲಗಳ ಆಧಾರದಲ್ಲಿ ರೋಗನಿದಾನ ಮಾಡುವ ಪರಿಣತರಿಗೆ ಆಧುನಿಕ ರಕ್ತ ಪರೀಕ್ಷೆಗಳುಹಾರ್ಮೋನು ಅಳತೆಗಳುಕ್ಷಕಿರಣ-ಸ್ಕಾನ್ ಗಳು ಅಗತ್ಯವಿಲ್ಲಈ ಪರೀಕ್ಷೆಗಳಲ್ಲಿ ತ್ರಿದೋಷಗಳು ಪತ್ತೆಯಾಗುವುದೂ ಇಲ್ಲ.

ಐವತ್ತೊಂದನೇ ಬರಹ : ಹಿರಿಯ ಜೀವಿಗಳ ಬಾಳ್ವೆ ಸುರಕ್ಷಿತವಾಗಿರಲಿ [ಮೇ 28, 2014, ಬುಧವಾರ] [ನೋಡಿ | ]

ಜೀವನದ ಸಂಧ್ಯಾಕಾಲ ಹೇಗಿರಬೇಕೆನ್ನುವುದನ್ನು ಹಿರಿಯರೇ ನಿರ್ಧರಿಸಬೇಕು

ಸಮಕಾಲೀನ ಬೆಳವಣಿಗೆಗಳ ಕಷ್ಟ-ಸುಖಗಳೆರಡನ್ನೂ ಅನುಭವಿಸುವವರು ನಮ್ಮ ಹಿರಿವಯಸ್ಕರು. ಕಳೆದ ನಾಲ್ಕೈದು ದಶಕಗಳ ವೈದ್ಯಕೀಯ, ತಾಂತ್ರಿಕ, ಸಾಮಾಜಿಕ, ಆರ್ಥಿಕ ಪ್ರಗತಿಗಳಿಂದಾಗಿರುವ ಆಯುರಾರೋಗ್ಯವರ್ಧನೆಯ ಸುಖ ಒಂದೆಡೆಗೆ, ಜಾಗತೀಕರಣದ ಅಲೆಯಲ್ಲಿ ಸಾಮಾಜಿಕ-ಕೌಟುಂಬಿಕ ಸಂಬಂಧಗಳ ಕ್ಷಿಪ್ರ ಶೈಥಿಲ್ಯದಿಂದಾಗುವ ಕಷ್ಟಗಳು ಇನ್ನೊಂದೆಡೆಗೆ.

ಕಳೆದ ವರ್ಷದ ಜಾಗತಿಕ ವಯಸ್ಕರ ವರದಿಯನುಸಾರ, 2012ರಲ್ಲಿ ವಿಶ್ವದಲ್ಲಿ 60 ವರ್ಷ ಮೀರಿದವರ ಸಂಖ್ಯೆಯು ಶೇ. 11ರಷ್ಟು, ಅಂದರೆ ಸುಮಾರು 80 ಕೋಟಿಯಷ್ಟಿತ್ತು. ಇದು 2030ರ ವೇಳೆಗೆ ಶೇ. 16ರಷ್ಟು, ಅಂದರೆ 137 ಕೋಟಿಯಾಗಲಿದೆ. ನಮ್ಮ ದೇಶದಲ್ಲೀಗ 60ಕ್ಕೆ ಮೇಲ್ಪಟ್ಟವರು ಸುಮಾರು 10 ಕೋಟಿಯಷ್ಟಿದ್ದು, 2030ರ ವೇಳೆಗೆ 19 ಕೋಟಿಯಷ್ಟಾಗಲಿದ್ದಾರೆ. ಕೇಂದ್ರ ಆರೋಗ್ಯ ಇಲಾಖೆಯನುಸಾರ, ಕಳೆದೊಂದು ದಶಕದಲ್ಲಿ ಭಾರತೀಯರ ನಿರೀಕ್ಷಿತ ಆಯುಷ್ಯವು 5 ವರ್ಷಗಳಷ್ಟು ಹೆಚ್ಚಿದೆ: 2001-05ರಲ್ಲಿ 63 ವರ್ಷಗಳಿದ್ದುದು 2011-15ರಲ್ಲಿ 68ಕ್ಕೆ ಜಿಗಿದಿದೆ, 1947ಕ್ಕೆ ಹೋಲಿಸಿದರೆ ದುಪ್ಪಟ್ಟಿಗಿಂತಲೂ ಹೆಚ್ಚಾಗಿದೆ.

ಜಾಗತಿಕ ವಯಸ್ಕರ ವರದಿಯಂತೆ, ಹಿರಿವಯಸ್ಕರ ಆರ್ಥಿಕ ಸ್ಥಿತಿಗತಿ, ಆರೋಗ್ಯ ರಕ್ಷಣೆ, ಶಿಕ್ಷಣ, ವೃತ್ತಿ ಮತ್ತು ಅನುಕೂಲಕರ ಪರಿಸರ ಆಧಾರಿತ ಕ್ಷೇಮ ಸೂಚ್ಯಂಕದಲ್ಲಿ 91 ರಾಷ್ಟ್ರಗಳ ಪೈಕಿ ಸ್ವೀಡನ್ ಒಂದನೇ ಸ್ಥಾನದಲ್ಲಿದ್ದರೆ, ಭಾರತವು 73ನೇ ಸ್ಥಾನದಲ್ಲಿದೆ; ಇವುಗಳ ಪರಿಪೂರ್ಣ ಅಂಕಗಳು 100 ಆಗಿರುವಲ್ಲಿ ನಮ್ಮಲ್ಲಿ ಕೇವಲ 35 ಆಗಿದೆ. ಅಂದರೆ, ಹಿರಿಯ ನಾಗರಿಕರನ್ನು ಸುಖವಾಗಿರಿಸುವಲ್ಲಿ ನಾವು ಹಿಂದಿದ್ದೇವೆ.

ವಯಸ್ಸಾದಂತೆ ದೇಹದ ಅಂಗಗಳು ಕ್ಷಯಿಸುತ್ತವೆ, ಅವುಗಳ ಕಾರ್ಯಕ್ಷಮತೆಯೂ ದುರ್ಬಲಗೊಳ್ಳುತ್ತದೆ. ಅಧಿಕ ರಕ್ತದೊತ್ತಡ, ಹೃದ್ರೋಗ, ಮಧುಮೇಹ, ಮರೆಗುಳಿತನ, ಶ್ವಾಸಾಂಗದ ಸಮಸ್ಯೆಗಳು, ಮೂಳೆಸವೆತ, ದೈಹಿಕ ಸಮತೋಲನದ ಸಮಸ್ಯೆ, ದೃಷ್ಟಿ ಹಾಗೂ ಶ್ರವಣ ಮಾಂದ್ಯತೆಗಳು, ಹಲ್ಲುಗಳು ಹಾಗೂ ಒಸಡಿನ ತೊಂದರೆಗಳು, ಬಗೆಬಗೆಯ ಸೋಂಕುಗಳು ಹಿರಿಯರಲ್ಲಿ ಸಾಮಾನ್ಯವಾಗಿರುತ್ತವೆ. ವಿವಿಧ  ಸಂಕಷ್ಟಗಳಿಂದಾಗಿ ಅಥವಾ ವಯೋಸಹಜವಾಗಿ ಮಾನಸಿಕ ಸಮಸ್ಯೆಗಳೂ ಅವರಲ್ಲುಂಟಾಗಬಹುದು. ಇವೆಲ್ಲವುಗಳ ಚಿಕಿತ್ಸೆಯು ವೆಚ್ಚದಾಯಕವಾಗಿದ್ದು, ಹೆಚ್ಚಿನ ಹಿರಿಯರಿಗೆ ಸ್ವಂತ ಆದಾಯವಿಲ್ಲದೆ, ಆರೋಗ್ಯ ವಿಮೆಗಳು ದೊರೆಯದೆ, ಸರಕಾರಿ ಆಸ್ಪತ್ರೆಗಳಲ್ಲಿ ವಿಶೇಷ ಸೌಲಭ್ಯಗಳಿಲ್ಲದೆ ಇನ್ನಷ್ಟು ಕಷ್ಟಗಳಿಗೆ ಕಾರಣವಾಗುತ್ತದೆ.

ಹಿರಿಯ ಮಹಿಳೆಯರ ಸಂಕಷ್ಟಗಳು ಇನ್ನಷ್ಟು. ಆ ತಲೆಮಾರಿನ ಗಂಡ-ಹೆಂಡಿರ ನಡುವೆ ವಯಸ್ಸಿನ ಅಂತರವೂ ಹೆಚ್ಚು, ಮಹಿಳೆಯರ ಬಾಳುವೆಯೂ ಹೆಚ್ಚು; ಹೀಗಾಗಿ, ಶೇ. 60ರಷ್ಟು ಹಿರಿಯ ಮಹಿಳೆಯರು ವಿಧವೆಯರಾಗಿರುತ್ತಾರೆ. ಹಿರಿಯ ಗಂಡಸರಲ್ಲಿ ಶೇ. 50ರಷ್ಟು ಅಕ್ಷರಸ್ಥರಾದರೆ, ಮಹಿಳೆಯರಲ್ಲಿ ಕೇವಲ ಶೇ. 20ರಷ್ಟು ಅಕ್ಷರಸ್ಥರಾಗಿದ್ದಾರೆ; ಶೇ. 40ರಷ್ಟು ಹಿರಿಯ ಗಂಡಸರು ದುಡಿದು ಸಂಪಾದಿಸುತ್ತಿದ್ದರೆ, ಕೇವಲ ಶೇ. 19ರಷ್ಟು (ನಗರಗಳಲ್ಲಿ ಶೇ. 7ರಷ್ಟು) ಮಹಿಳೆಯರು ಸಂಪಾದಿಸಬಲ್ಲವರಾಗಿರುತ್ತಾರೆ. ಹಿರಿಯ ಮಹಿಳೆಯರು ಆಸ್ತಿ, ಸಂಪತ್ತು, ಗೌರವಗಳಿಂದ ವಂಚಿತರಾಗಿರುವುದೇ ಹೆಚ್ಚು. ಹೀಗೆ ಹಿರಿಯ ಮಹಿಳೆಯರಲ್ಲಿ ಅರ್ಧಕ್ಕೂ ಹೆಚ್ಚಿನವರು ಮಕ್ಕಳನ್ನೇ ಅವಲಂಬಿಸಿರುತ್ತಾರೆ.

ಇಂದಿನ ಹೊಸ ಆರ್ಥಿಕತೆ, ಹೊಸ ತಲೆಮಾರು, ಹೊಸ ಜೀವನ ಮೌಲ್ಯಗಳು ಹಿರಿಯರ ಪಾಲಿಗೆ ಸವಾಲೊಡ್ಡುತ್ತವೆ. ಸುಶಿಕ್ಷಿತ ಮಕ್ಕಳ ಅಶಿಕ್ಷಿತ ಹೆತ್ತವರು; ಮಹಾನಗರಗಳಿಗೂ, ವಿದೇಶಗಳಿಗೂ ವಲಸೆ ಹೋದ ಕಿರಿಯರು, ಹಳ್ಳಿಗಳಲ್ಲೇ ಉಳಿದ ಹಿರಿಯರು; ಬಡತನದಲ್ಲೇ ಜೀವಸವೆಸಿದ ಪೋಷಕರು, ಸಿರಿತನಕ್ಕೆ ಕಾಲಿಟ್ಟ ಮಕ್ಕಳು; ಹಳೆಯ ಆಚಾರಗಳನ್ನು ಬಿಡಲಾಗದ ಹಳಬರು, ಹೊಸ ಶೈಲಿಗೆ ಹೊಂದಿಕೊಳ್ಳಬೇಕಾದ ಹೊಸಬರು. ಅಂದಿನ ದೊಡ್ಡ ಅವಿಭಕ್ತ ಕುಟುಂಬಗಳಿಗೆ ಹಿರಿತಲೆಗಳು ಗೌರವಾನ್ವಿತ ಹೊಣೆಗಾರಿಕೆಯಾಗಿದ್ದರೆ, ಇಂದಿನ ಸಣ್ಣ ಕುಟುಂಬಗಳಿಗೆ ಅವರು ಹೊರೆಯಾಗುವುದಿದೆ. ಅದಲ್ಲದಿದ್ದರೂ, ಸುಶಿಕ್ಷಿತ ಮಕ್ಕಳು ದೂರ ಸಾಗಿದಾಗ ಹೆತ್ತವರು ಹಿಂದುಳಿಯುವುದು ಅನಿವಾರ್ಯವಾಗುತ್ತಿದೆ. ಬಂಧು-ಬಳಗದ, ಸಮಾಜದ ಟೀಕೆ-ಟಿಪ್ಪಣಿಗಳಿಂದಾಗುವ ಒದ್ದಾಟ ಬೇರೆ.

ದೊಡ್ಡ ಉದ್ಯಮಿಯೊಬ್ಬ ಹಳ್ಳಿಯಲ್ಲಿ ಒಂಟಿಯಾಗಿದ್ದ ತನ್ನ ತಾಯಿಯನ್ನು ನಗರದ ತನ್ನ ಬಂಗಲೆಯಲ್ಲಿರುವಂತೆ ಒತ್ತಾಯಿಸುತ್ತಿದ್ದ. ಅದಕ್ಕೊಪ್ಪದ ತಾಯಿ, “ನಾನೇಕೆ ನಿನ್ನಲ್ಲಿಗೆ ಬರಬೇಕು? ನೀನೂ, ನಿನ್ನ ಹೆಂಡತಿಯೂ ಬೆಳಗ್ಗೆ ಬೇಗನೇ ಮನೆ ಬಿಟ್ಟರೆ ತಡರಾತ್ರಿ ಮರಳುತ್ತೀರಿ. ನಿನ್ನ ಮಕ್ಕಳು ಕಾಲೇಜು-ಪಾಠ ಅಂತ ಅವರಷ್ಟಕ್ಕಿರುತ್ತಾರೆ. ನನ್ನ ಹಳ್ಳಿಮನೆಯಲ್ಲಿ ಕೆಲಸದವರಿದ್ದಾರೆ, ನೆರೆಯವರಿದ್ದಾರೆ, ದನಕರುಗಳೂ, ಕೋಳಿಗಳೂ ಇವೆ, ಹೂಗಿಡಗಳಿವೆ, ತೋಟವಿದೆ. ಎಲ್ಲರನ್ನು ನೋಡುತ್ತಾ, ಅವರೊಂದಿಗೆ ಮಾತಾಡುತ್ತಾ ಇರುತ್ತೇನೆ, ನನಗೆ ಅದೇ ಒಳ್ಳೆಯದು. ತುರ್ತುಸ್ಥಿತಿಯೇನಾದರೂ ಬಂದರೆ ಅದಕ್ಕೊಂದು ಏರ್ಪಾಡು ಮಾಡು, ಅಷ್ಟೇ ಸಾಕು” ಅನ್ನುತ್ತಿದ್ದರು; ತೊಂಭತ್ತರ ತುಂಬು ಜೀವನದ ಕೊನೆಯವರೆಗೂ ತನ್ನ ಹಳ್ಳಿಮನೆಯಲ್ಲೇ ಉಳಿದಿದ್ದರು.

ವಿದೇಶದಲ್ಲಿದ್ದವನೊಬ್ಬ ಹೈಸ್ಕೂಲು ಹತ್ತಿದ ಮಕ್ಕಳನ್ನು ಸ್ವದೇಶಕ್ಕೆ ಕಳುಹಿಸಿದ, ನಗರದಲ್ಲೊಂದು ಫ್ಲಾಟು ಖರೀದಿಸಿ ಅದರೆದುರಿನ ಶಾಲೆಗೆ ಸೇರಿಸಿದ. ಅವರ ಜೊತೆಗಿದ್ದು ಊಟ ಬಡಿಸಲೆಂದು ಹಳ್ಳಿಯಲ್ಲಿದ್ದ ತನ್ನ ಹೆತ್ತವರನ್ನು ಪುಸಲಾಯಿಸಿದ. ಏಕೈಕ ಪುತ್ರನನ್ನು ಮೀರಲಾಗದೆ ಫ್ಲಾಟು ಸೇರಿದ ಹಿರಿಯ ಜೀವಗಳು ಕೆಲತಿಂಗಳಲ್ಲೇ ಖಿನ್ನತೆಗೊಳಗಾದರು. ಮಗನ ಒತ್ತಾಯಕ್ಕೆ ಹೊಲದ ಮನೆಯನ್ನೂ ಮಾರಿ ಫ್ಲಾಟಿನೊಳಗೆ ಶಾಶ್ವತ ಬಂಧಿಗಳಾದರು. ಎರಡೇ ವರ್ಷಗಳಲ್ಲಿ ರಕ್ತದೊತ್ತಡ ಹೆಚ್ಚಿ ಮಿದುಳಿನ ರಕ್ತಸ್ರಾವದಿಂದ ತಾಯಿ ತೀರಿಕೊಂಡರು, ಅದಾಗಿ 8 ತಿಂಗಳಲ್ಲಿ ಮರೆಗುಳಿತನ ಹೆಚ್ಚಿ ಹಾಸಿಗೆ ಹಿಡಿದ ತಂದೆಯೂ ಇನ್ನಿಲ್ಲವಾದರು.

ಈ ನಿದರ್ಶನಗಳನ್ನು ಸರ್ವಾನ್ವಯಿಸಲಾಗದಿದ್ದರೂ, ಅವುಗಳಿಂದ ಒಂದಷ್ಟಾದರೂ ಕಲಿಯಬಹುದು. ತಮ್ಮ ಜೀವನವನ್ನು ಹೇಗೆ ನಿಭಾಯಿಸಬೇಕೆನ್ನುವುದನ್ನು ಹಿರಿಯರಿಗೇ ಬಿಡುವುದೊಳಿತು. ಕುಟುಂಬದ ಇತರೆಲ್ಲರೊಂದಿಗೆ ಜೀವಿಸುವುದಾಗದಿದ್ದರೆ, ಅವರಿಷ್ಟದ ಮನೆಯಲ್ಲೋ, ಹಿರಿಯರ ಆಶ್ರಯಧಾಮಗಳಲ್ಲೋ ಅವರಿರುವುದಕ್ಕೆ ಅನುವಾಗಬೇಕು. ಹಿರಿವಯಸ್ಕರು ಈ ಮೂರರೊಳಗೆ ಎಲ್ಲಿ ಹೆಚ್ಚು ಸುಖವಾಗಿರುತ್ತಾರೆ ಎನ್ನುವ ಬಗ್ಗೆ ಹಲವು ಅಧ್ಯಯನಗಳಾಗಿದ್ದರೂ, ಸ್ಪಷ್ಟವಾದ ಉತ್ತರವಿನ್ನೂ ದೊರೆತಿಲ್ಲ. ಸ್ವ-ಇಚ್ಛೆಯಿಂದ ತಮ್ಮ ಮನೆಯಲ್ಲೇ ಒಂಟಿಯಾಗಿರುವವರು ಯಾ ಆಶ್ರಯಧಾಮಗಳಲ್ಲಿರುವವರು ಸಂತಸದಲ್ಲಿರಬಹುದು, ಅನಿವಾರ್ಯವಾಗಿ ಮಕ್ಕಳೊಂದಿಗಿರುವವರೂ ಖುಷಿಯಲ್ಲಿರಬಹುದು, ಅಥವಾ ಈ ಮೂರೂ ಸನ್ನಿವೇಶಗಳಲ್ಲಿರುವವರು ಅಸಮಾಧಾನದಿಂದಲೂ ಇರಬಹುದು.

ಹಿರಿಯರು ತಮ್ಮೂರಿನಲ್ಲಿ, ತಮ್ಮದೇ ಮನೆಯಲ್ಲಿ ಇರಬಯಸಿದರೆ ಸೂಕ್ತವಾದ ವ್ಯವಸ್ಥೆಗಳೆಲ್ಲವನ್ನೂ ಮಾಡುವುದೊಳ್ಳೆಯದು. ಕೆಳ ಅಂತಸ್ತಿನಲ್ಲೇ ಎಲ್ಲಾ ಅನುಕೂಲಗಳನ್ನು ಒದಗಿಸುವುದು, ನೆಲವನ್ನು ಮಟ್ಟಸಗೊಳಿಸಿ ಜಾರದಂತೆ ಮಾಡುವುದು, ಆಧಾರಕ್ಕಾಗಿ ಗೋಡೆಗಳಲ್ಲಿ ಕಂಬಿಗಳನ್ನೋ, ಹಿಡಿಗಳನ್ನೋ ಅಳವಡಿಸುವುದು, ಶೌಚಾಲಯವನ್ನು ಹತ್ತಿರದಲ್ಲೇ ಏರ್ಪಡಿಸುವುದು, ಮನೆಯೊಳಗೆ ಸಾಕಷ್ಟು ಬೆಳಕಿರುವಂತೆ ಮಾಡುವುದು, ವಿದ್ಯುತ್ ಗುಂಡಿಗಳನ್ನೂ, ದೂರವಾಣಿಯನ್ನೂ ಕೈಗೆಟಕುವಂತಿಡುವುದು ಇತ್ಯಾದಿಗಳಿಂದ ಅವರ ಜೀವನವನ್ನು ಸುಲಭಗೊಳಿಸಬಹುದು. ಅವರ ಆತಂಕವನ್ನು ಹಗುರಗೊಳಿಸುವುದಕ್ಕಾಗಿ ಯಾವುದೇ ಘಳಿಗೆಯಲ್ಲಿ ಅವರ ಸಂಪರ್ಕಕ್ಕೆ ಲಭ್ಯವಿರಬೇಕಾದದ್ದು ಅತಿ ಮುಖ್ಯ. ದೂರದಲ್ಲಿದ್ದು, ಆಗಾಗ ಅವರನ್ನು ಭೇಟಿ ಮಾಡಲಾಗದವರು ನಿಯತವಾಗಿ ಅವರನ್ನು ಸಂಪರ್ಕಿಸುತ್ತಿರಬೇಕು, ಅದಕ್ಕಾಗಿ ಆಧುನಿಕ ತಂತ್ರಜ್ಞಾನವನ್ನೆಲ್ಲ ಬಳಸಿಕೊಳ್ಳಬಹುದು. ವೈದ್ಯರು, ಅತ್ತಿತ್ತ ಒಯ್ಯಬಲ್ಲ ವಾಹನ ಚಾಲಕರು, ದಿನಕೆಲಸಗಳಲ್ಲಿ ನೆರವಾಗಬಲ್ಲವರು ಸದಾ ಅವರಿಗೆ ಲಭ್ಯರಿರುವುದನ್ನು ಖಾತರಿಗೊಳಿಸಬೇಕು. ಮರೆಗುಳಿತನದಂತಹ ಮಿದುಳಿನ ವೈಫಲ್ಯವಿರುವವರಿಗೆ, ಇನ್ನಿತರ ಕಾಯಿಲೆಗಳುಳ್ಳವರಿಗೆ ಸೂಕ್ತ ಆರೈಕೆಯ ವ್ಯವಸ್ಥೆಯನ್ನೂ ಮಾಡಬೇಕು. ಹಿರಿಯರ ಆಶ್ರಯಧಾಮಗಳಲ್ಲಿರಬಯಸುವವರು ಅಧಿಕೃತವಾಗಿ ನೋಂದಾಯಿಸಲ್ಪಟ್ಟಿರುವ, ಸುರಕ್ಷಿತ ಸಂಸ್ಥೆಗಳನ್ನು ಸೇರಬೇಕು.

ಕುಟುಂಬದವರಿಂದ ನಿರ್ಲಕ್ಷಿತರಾಗುವ ಅಥವಾ ಪೀಡೆಗೊಳಗಾಗುವ ಹಿರಿಯರ ರಕ್ಷಣೆಗಾಗಿ ಹೆತ್ತವರು ಹಾಗೂ ಹಿರಿಯ ನಾಗರಿಕರ ನಿರ್ವಹಣೆ ಹಾಗೂ ಕಲ್ಯಾಣ ಕಾಯಿದೆಯು 2007ರಿಂದ ಜಾರಿಯಲ್ಲಿದೆ. ಸ್ವಂತ ಆದಾಯವಿಲ್ಲದ ಹಿರಿಯರು ತಮ್ಮ ಮಕ್ಕಳು ಯಾ ಮೊಮ್ಮಕ್ಕಳಿಂದ ಅಥವಾ ತಮ್ಮ ಆಸ್ತಿಯ ವಾರೀಸುದಾರ ಸಂಬಂಧಿಗಳಿಂದ ತಿಂಗಳಿಗೆ ರೂ. 10000 ದಷ್ಟು ನಿರ್ವಹಣಾ ಮೊತ್ತವನ್ನು ಪಡೆಯುವುದಕ್ಕೆ ಈ ಕಾಯಿದೆಯಲ್ಲಿ ಅವಕಾಶವಿದೆ. ನಿ.24ರಂತೆ, ಹೊಣೆಗಾರರು ಹಿರಿಯರನ್ನು ತೊಲಗಿಸಲೆತ್ನಿಸಿದರೆ ಮೂರು ತಿಂಗಳ ಕಾರಾಗೃಹ ವಾಸ ಹಾಗೂ ರೂ.5000 ದಂಡ ವಿಧಿಸಬಹುದಾಗಿದೆ. ನಿ.23ರಂತೆ, ನೋಡಿಕೊಳ್ಳುವ ಆಶ್ವಾಸನೆಯಿತ್ತು ಆಸ್ತಿಯನ್ನು ಪಡಕೊಂಡವರು ಅದರಿಂದ ವಿಮುಖರಾದರೆ, ಆಸ್ತಿಯನ್ನು ಮರಳಿ ಪಡೆಯುವುದಕ್ಕೂ ಅವಕಾಶವಿದೆ. ಈ ಕಾಯಿದೆಯಡಿಯಲ್ಲಿ ಹಿರಿಯರ ಮನವಿಗಳನ್ನು ಪರಿಗಣಿಸುವುದಕ್ಕಾಗಿ ಪ್ರತಿಯೊಂದು ಉಪವಿಭಾಗದಲ್ಲೂ ಸಹಾಯಕ ಆಯುಕ್ತರ ನೇತೃತ್ವದಲ್ಲಿ ನ್ಯಾಯಮಂಡಳಿಗಳನ್ನು ಈಗಾಗಲೇ ರಚಿಸಲಾಗಿದೆ.

ಸ್ವಾತಂತ್ರ್ಯ ದೊರೆತಾಗಿನ ದುಸ್ಥಿತಿಯಲ್ಲಿ ಮಕ್ಕಳಾಗಿದ್ದವರು, ಅವಕಾಶ ವಂಚಿತರಾಗಿದ್ದವರು, ಈಗ ಹಿರಿತನಕ್ಕೆ ಕಾಲಿಟ್ಟಿರುವಾಗ ಅವರ ಇನ್ನುಳಿದ ವರ್ಷಗಳು ಸುಖಮಯವೂ, ಸುರಕ್ಷಿತವೂ ಆಗಿರುವಂತೆ ಖಾತರಿಪಡಿಸಬೇಕಾಗಿರುವುದು ಆಧುನಿಕ ಭಾರತದ ಜವಾಬ್ದಾರಿಯಾಗಿದೆ. ಹಳೆ-ಹೊಸ ತಲೆಮಾರುಗಳ ಹೊಯ್ದಾಟದಲ್ಲಿ ಸಿಲುಕಿ ಸಂತೃಸ್ತರಾಗುವ ಹಿರಿಯರಿಗೆ ಸರಕಾರವೇ ಸಕಲ ಸೌಲಭ್ಯಗಳನ್ನೊದಗಿಸಬೇಕಾಗಿದೆ.

ಐವತ್ತನೇ ಬರಹ : ಎರಡು ದಿನಗಳ ಜ್ವರಕ್ಕೆ ಮೂರು ಸಾವಿರ ಖರ್ಚು [ಮೇ 14, 2014, ಬುಧವಾರ] [ನೋಡಿ | ನೋಡಿ]

ಸಾಮಾನ್ಯ ಸೋಂಕುಗಳನ್ನು ರೋಗಲಕ್ಷಣಗಳಿಂದಲೇ ಗುರುತಿಸಲು ಸಾಧ್ಯವಿದೆ

ಸೆಖೆ ವಿಪರೀತವಾಗಿದೆ, ಇನ್ನು ಕೆಲವೇ ದಿಗಳಲ್ಲಿ ಮಳೆಯೂ ಸುರಿಯಲಿದೆ. ಸೋಂಕುಗಳೆಲ್ಲ ಹರಡತೊಡಗಿ ಜ್ವರ, ಕೆಮ್ಮು, ವಾಂತಿ, ಭೇದಿ ಹೆಚ್ಚಲಿವೆ. ಜ್ವರದ ಕಾರಣವನ್ನು ಹುಡುಕಿ ಸೂಕ್ತ ಚಿಕಿತ್ಸೆ ನೀಡುವ ಸವಾಲು ವೈದ್ಯನಿಗೆ, ಖರ್ಚು-ಕಷ್ಟಗಳೆಲ್ಲ ರೋಗಿ ಹಾಗೂ ಮನೆಯವರಿಗೆ.

ಒಂದೊಂದು ಸೋಂಕು ಒಂದೊಂದು ರೀತಿ ವರ್ತಿಸುತ್ತದೆ. ಕೆಲವು ಒಂದೆರಡು ದಿನಗಳಿದ್ದು ಹೋದರೆ ಇನ್ನು ಕೆಲವು ದಿನಗಟ್ಟಲೆ ಕಾಡುತ್ತವೆ, ಮತ್ತೆ ಕೆಲವು ವಾರಗಟ್ಟಲೆ, ತಿಂಗಳುಗಟ್ಟಲೆ ನಿಧಾನವಾಗಿ ಉಲ್ಬಣಿಸುತ್ತವೆ. ಕೆಲವು ತಮ್ಮಷ್ಟಕ್ಕೇ ಶಮನಗೊಂಡರೆ, ಇನ್ನು ಕೆಲವು ಒಂದೇ ವಾರದಲ್ಲಿ ಅತಿ ಗಂಭೀರಗೊಂಡು ಪ್ರಾಣಕ್ಕೇ ಎರವಾಗುತ್ತವೆ. ಹಾಗಿರುವಾಗ ಸೋಂಕಿನ ಲಕ್ಷಣಗಳನ್ನು ಗುರುತಿಸುವ ತಾಳ್ಮೆಯೂ, ಜಾಣ್ಮೆಯೂ  ವೈದ್ಯನಿಗಿದ್ದರೆ, ರೋಗಿಯ ಸಹಕಾರವೂ ಇದ್ದರೆ, ಜ್ವರದ ಕಾರಣವನ್ನು ಬೇಗನೇ ಪತ್ತೆ ಹಚ್ಚುವುದು ಕಷ್ಟವೇನಲ್ಲ.

ಆದರೆ ಈ ಅವಸರಯುಗದಲ್ಲಿ ರೋಗವೇನೆನ್ನುವುದು ಥಟ್ಟನೇ ಗೊತ್ತಾಗಬೇಕು, ಮರುಘಳಿಗೆಯಲ್ಲಿ ಗುಣವಾಗಬೇಕು. ಒಂದೆರಡು ದಿನಗಳ ಜ್ವರವಿದ್ದೊಡನೆ ಮೂರ್ನಾಲ್ಕು ಸಾವಿರ ವೆಚ್ಚದಲ್ಲಿ ಬಿಳಿ ರಕ್ತಕಣಗಳ ಹಾಗೂ ಪ್ಲೇಟ್ಲೆಟ್ ಕಣಗಳ ಪರೀಕ್ಷೆ, ಮೂತ್ರದ ಪರೀಕ್ಷೆ, ಮಲೇರಿಯಾ, ಡೆಂಗಿ ಹಾಗೂ ಟೈಫಾಯ್ಡ್ ಪತ್ತೆಗೆ ಪ್ರತ್ಯೇಕ ಪರೀಕ್ಷೆಗಳು, ಯಕೃತ್ತು ಹಾಗೂ ಮೂತ್ರಪಿಂಡಗಳ ಸ್ಥಿತಿಗತಿಯ ಪರೀಕ್ಷೆ, ಎದೆಗೆ ಕ್ಷಕಿರಣ, ಉದರಕ್ಕೆ ಅಲ್ಟ್ರಾಸೌಂಡ್ ಎಲ್ಲವನ್ನೂ ಈಗ ಮಾಡಿಸಲಾಗುತ್ತದೆ. ಇವುಗಳಲ್ಲೇನೂ ಕಾಣಸಿಗದಿದ್ದರೆ ಮಲೇರಿಯಾ ನಿರೋಧಕಗಳು, ಬ್ಯಾಕ್ಟೀರಿಯಾ ನಿರೋಧಕಗಳು, ಜ್ವರಶಮನಕಾರಿ ಮಾತ್ರೆಗಳು ಎಲ್ಲವನ್ನೂ ಕೊಟ್ಟು, ರೋಗಿ ಬಯಸಿದರೆ ಒಂದೆರಡು ಚುಚ್ಚುಮದ್ದನ್ನೂ ಚುಚ್ಚಿ ಜ್ವರವಿಳಿಸಲು ಪ್ರಯತ್ನಿಸಲಾಗುತ್ತದೆ. ಹೆದರಿದ (ಅಥವಾ ಹೆದರಿಸಲ್ಪಟ್ಟ) ರೋಗಿಗಳನ್ನು ಆಸ್ಪತ್ರೆಗಳಲ್ಲಿ ದಾಖಲಿಸಿ ಗ್ಲೂಕೋಸು-ಸೆಲೈನು ದ್ರಾವಣ ಪೂರಣವಾಗುವುದೂ ಅಪರೂಪವಲ್ಲ.

ಒಂದೆರಡು ದಿನಗಳ ಜ್ವರಕ್ಕೆ ಇಷ್ಟೆಲ್ಲ ಬೇಕೆ? ಐದಾರು ವರ್ಷಗಳ ಹಿಂದೆ ಇಂತಹಾ ಪರೀಕ್ಷೆಗಳು ಲಭ್ಯವಿರದಿದ್ದಾಗ ವೈದ್ಯರೇ ತಮ್ಮ ಜ್ಞಾನ-ಅನುಭವಗಳಿಂದ ಜ್ವರಕ್ಕೆ ಕಾರಣವೇನೆಂದು ಸರಿಯಾಗಿ ಗುರುತಿಸಿ ಚಿಕಿತ್ಸೆ ನೀಡುತ್ತಿರಲಿಲ್ಲವೇ? ಈಗಲೂ ಮಾಡಬಹುದು. ರೋಗಿಯ ವಯಸ್ಸು, ಲಿಂಗ, ವಾಸಸ್ಥಳ, ಜ್ವರದ ಜೊತೆಗಿರುವ ಇನ್ನಿತರ ಲಕ್ಷಣಗಳನ್ನೆಲ್ಲ ಪರಿಗಣಿಸಿ ಸೋಂಕನ್ನು ಅಂದಾಜಿಸಲು ಸಾಧ್ಯವಿದೆ. ಒಂದೆರಡು ದಿನಗಳ ಜ್ವರವಿರುವ ರೋಗಿಯಲ್ಲಿ ತ್ವರಿತವಾಗಿ ಉಲ್ಬಣಿಸಬಲ್ಲ ಸೋಂಕುಗಳನ್ನೂ, ನಿರ್ದಿಷ್ಟ ಚಿಕಿತ್ಸೆಯ ಅಗತ್ಯವುಳ್ಳ ಸೋಂಕುಗಳನ್ನೂ ಪತ್ತೆ ಹಚ್ಚುವುದಕ್ಕೆ ವೈದ್ಯನು ಆದ್ಯತೆ ನೀಡಬೇಕು. ಇನ್ನುಳಿದ ಸೋಂಕುಗಳಿಗಾಗಿ ಮೊದಲೆರಡು ದಿನಗಳಲ್ಲಿ ಬಗೆಬಗೆಯ ಪರೀಕ್ಷೆಗಳನ್ನು ನಡೆಸುವುದರಿಂದ ಹೆಚ್ಚಿನ ಲಾಭವಾಗದು.

ಶ್ವಾಸಾಂಗದ ಸೋಂಕು ರಾಜ್ಯದೆಲ್ಲೆಡೆ, ಎಲ್ಲಾ ವಯಸ್ಸಿನವರಲ್ಲಿ, ಅದರಲ್ಲೂ ಸಣ್ಣ ಮಕ್ಕಳಲ್ಲಿ ಹಾಗೂ ಹದಿಹರೆಯದವರಲ್ಲಿ, ಅತಿ ಸಾಮಾನ್ಯವಾಗಿ ಕಂಡುಬರುತ್ತದೆ. ಮೂಗು ಹಾಗೂ ಗಂಟಲಿನ ಸೋಂಕುಗಳು ಹೆಚ್ಚಾಗಿ ವೈರಾಣುಗಳಿಂದಲೂ, ಕೆಲವೊಮ್ಮೆ ಬ್ಯಾಕ್ಟೀರಿಯಾಗಳಿಂದಲೂ ಉಂಟಾಗುತ್ತವೆ. ವೈರಸ್ ಸೋಂಕುಳ್ಳವರಲ್ಲಿ ಸಣ್ಣ ಮಟ್ಟಿನ ಜ್ವರ, ತಲೆ ನೋವು, ಸೀನು, ಮೂಗು ಸುರಿಯುವುದು, ಗಂಟಲ ಕೆರೆತ ಹಾಗೂ ಒಣ ಕೆಮ್ಮು ಕಂಡುಬರುತ್ತವೆ. ಶೇ. 80ಕ್ಕೂ ಹೆಚ್ಚಿನವರಲ್ಲಿ ಇವು ಒಂದೆರಡು ದಿನಗಳಲ್ಲಿ ತನ್ನಿಂತಾನಾಗಿ ವಾಸಿಯಾಗುವುದರಿಂದ ವೈದ್ಯರನ್ನು ಕಾಣುವ ಅಗತ್ಯವೇ ಬರುವುದಿಲ್ಲ. ಹಾಗೊಮ್ಮೆ ಕಂಡರೂ, ಶ್ವಾಸಾಂಗದ ವೈರಸ್ ಸೋಂಕಿನ ಲಕ್ಷಣಗಳಿದ್ದವರಿಗೆ ರಕ್ತ-ಮೂತ್ರಾದಿ ಪರೀಕ್ಷೆಗಳಾಗಲೀ, ಬ್ಯಾಕ್ಟೀರಿಯಾ ನಿರೋಧಕ ಔಷಧಗಳಾಗಲೀ ಅಗತ್ಯವಿಲ್ಲ. ವಿಪರೀತ ಜ್ವರ, ಗಂಟಲೊಳಗೆ ಊತ, ನುಂಗುವಾಗ ನೋವಷ್ಟೇ ಇದ್ದು ಕೆಮ್ಮು ಇಲ್ಲದಿರುವುದು, ಗಂಟಲ ಬದಿಯ ಗಳಲೆಗಳು ಊದಿರುವುದು ಬ್ಯಾಕ್ಟೀರಿಯಾ ಸೋಂಕನ್ನು ಸೂಚಿಸುತ್ತವೆ.

ಜ್ವರ ಮತ್ತು ಕಫ ಸಹಿತವಾದ ಕೆಮ್ಮು ಶ್ವಾಸನಾಳಗಳ ಯಾ ಶ್ವಾಸಕೋಶಗಳ ಸೋಂಕನ್ನು ಸೂಚಿಸುತ್ತದೆ. ಉಸಿರಾಟವು ವೇಗವಾಗಿದ್ದರೆ, ಕಷ್ಟಕರವೆನಿಸಿದರೆ ಅಥವಾ ಎದೆಪಾರ್ಶ್ವದಲ್ಲಿ ನೋವನ್ನುಂಟು ಮಾಡಿದರೆ ಸೋಂಕು ಗಂಭೀರವಾಗಿರಬಹುದು. ಅಂಥವರನ್ನು ರಕ್ತ ಪರೀಕ್ಷೆ ಹಾಗೂ ಎದೆಯ ಕ್ಷಕಿರಣ ಪರೀಕ್ಷೆಗಳಿಗೆ ಒಳಪಡಿಸಿ, ಆಸ್ಪತ್ರೆಗೆ ದಾಖಲಿಸಬೇಕಾಗಬಹುದು. ಉಬ್ಬಸವುಳ್ಳವರು, ಧೂಮಪಾನಿಗಳು, ಮದ್ಯವ್ಯಸನಿಗಳು, ಹಿರಿ ವಯಸ್ಕರು ಮುಂತಾದವರಲ್ಲಿ ಶ್ವಾಸಾಂಗದ ಸೋಂಕುಗಳು ಉಲ್ಬಣಿಸುವ ಸಾಧ್ಯತೆಗಳು ಹೆಚ್ಚು.

ವಿವಾಹಿತ ಮಹಿಳೆಯರಲ್ಲೂ, ಹಿರಿವಯಸ್ಸಿನ ಗಂಡಸರಲ್ಲೂ ಮೂತ್ರನಾಳಗಳ ಸೋಂಕು ಜ್ವರಕ್ಕೆ ಕಾರಣವಾಗಬಹುದು. ಕೆಳಹೊಟ್ಟೆಯ ನೋವು, ಮೂತ್ರಶಂಕೆಯಲ್ಲಿ ಉರಿ, ಪದೇ ಪದೇ ಮೂತ್ರ ಬಂದಂತಾಗುವುದು, ಬೆನ್ನುನೋವು ಇತ್ಯಾದಿಗಳು ಅದರ ಲಕ್ಷಣಗಳು. ಅಂಥವರು ಮೂತ್ರದ ಪರೀಕ್ಷೆಯ ಬಳಿಕ ಸೂಕ್ತ ಬ್ಯಾಕ್ಟೀರಿಯಾ ನಿರೋಧಕಗಳನ್ನು ಬಳಸಬೇಕಾಗುತ್ತದೆ.

ಇತ್ತೀಚಿನ ವರ್ಷಗಳಲ್ಲಿ ರಾಜ್ಯದ ಬಹುಭಾಗಗಳಲ್ಲಿ ಡೆಂಗಿ ಸೋಂಕು ಹರಡುತ್ತಿದೆ. ಮಂಗಳೂರಿನಲ್ಲಿ ಅದರ ಜೊತೆಗೆ ಮಲೇರಿಯಾವೂ ವ್ಯಾಪಕವಾಗಿದೆ. ಮಳೆಗಾಲದಲ್ಲಿ ಕರಾವಳಿ ಹಾಗೂ ಮಲೆನಾಡಿನ ಗ್ರಾಮೀಣ ಪ್ರದೇಶಗಳಲ್ಲಿ ಇಲಿಜ್ವರವು ಕಂಡುಬರುತ್ತದೆ. ಈ ಮೂರು ಸೋಂಕುಗಳಲ್ಲೂ ಗಂಭೀರ ಸಮಸ್ಯೆಗಳುಂಟಾಗುವ ಹಾಗೂ ಅಪರೂಪಕ್ಕೊಮ್ಮೆ ಸಾವುಂಟಾಗುವ ಸಾಧ್ಯತೆಗಳಿವೆ. ಇವುಗಳ ಬಗ್ಗೆ ಜನರಲ್ಲೂ, ವೈದ್ಯರಲ್ಲೂ, ಆಡಳಿತದಲ್ಲೂ ಸಾಕಷ್ಟು ಆತಂಕ ಹಾಗೂ ಗೊಂದಲಗಳಿವೆ.

ವಿಪರೀತ ಜ್ವರ, ಮೈಕೈ ನೋವು, ಬೆನ್ನುನೋವು ಹಾಗೂ ತಲೆನೋವು ಈ ಮೂರರಲ್ಲೂ ಇರುತ್ತವೆ; ಆದರೆ ಡೆಂಗಿ ಹಾಗೂ ಇಲಿಜ್ವರಗಳಲ್ಲಿ ಸ್ನಾಯುಗಳ ನೋವು ಹಾಗೂ ಕಣ್ಣಾಲಿಗಳ ನೋವು ಬಹಳವಾಗಿರುತ್ತವೆ. ಹೊಟ್ಟೆ ನೋವು, ವಾಕರಿಕೆ, ವಾಂತಿ ಹಾಗೂ ಕೆಲವೊಮ್ಮೆ ಭೇದಿ ಈ ಮೂರರಲ್ಲೂ ಉಂಟಾಗಬಹುದು. ಮಲೇರಿಯಾದಲ್ಲಿ ಒಣ ಕೆಮ್ಮು ಸಾಮಾನ್ಯವಾಗಿದ್ದರೆ, ಇಲಿಜ್ವರದಲ್ಲೂ ಕೆಲವೊಮ್ಮೆ ಕಂಡುಬರಬಹುದು. ಡೆಂಗಿ ಜ್ವರವು 3 ದಿನಗಳಲ್ಲಿ ಇಳಿದು ಒಂದೆರಡು ದಿನಗಳಲ್ಲಿ ಮರುಕಳಿಸಿ ಮತ್ತೆ ಒಂದೆರಡು ದಿನಗಳಲ್ಲಿ ಕಡಿಮೆಯಾಗುತ್ತದೆ; ಇಲಿಜ್ವರವು 4-7 ದಿನಗಳಲ್ಲಿ ಕಡಿಮೆಯಾಗುತ್ತದೆ, ಕೆಲವರಲ್ಲಿ 2-3 ದಿನಗಳಲ್ಲಿ ಮರುಕಳಿಸುತ್ತದೆ; ಮಲೇರಿಯಾದಲ್ಲಿ ದಿನ ಬಿಟ್ಟು ದಿನ ಮಧ್ಯಾಹ್ನದ ವೇಳೆಗೆ ಜ್ವರವಿರುತ್ತದೆ. ಡೆಂಗಿಯಲ್ಲಿ ದೇಹವು ನಸುಕೆಂಪು ಬಣ್ಣಕ್ಕೆ ತಿರುಗಿ, ಮೂರ್ನಾಲ್ಕು ದಿನಗಳ ಬಳಿಕ ಇನ್ನಷ್ಟು ಗಾಢವಾದ ದಡಿಕೆಗಳು ಗೋಚರಿಸುತ್ತವೆ; ಇಲಿ ಜ್ವರದಲ್ಲೂ ನವಿರಾದ ದಡಿಕೆಗಳೇಳಬಹುದು. ಶೇ. 2ರಷ್ಟು ಡೆಂಗಿ ಪೀಡಿತರಲ್ಲಿ ರಕ್ತಸ್ರಾವ ಹಾಗೂ ರಕ್ತದೊತ್ತಡದ ಇಳಿಕೆಯಂತಹಾ ಸಮಸ್ಯೆಗಳಾಗಬಹುದು. ಕೆಲವು ಮಲೇರಿಯಾ ಪೀಡಿತರಲ್ಲಿ ಕಾಮಾಲೆ ಗೋಚರಿಸಬಹುದು, ಮೊದಲ ಬಾರಿ ಮಲೇರಿಯಾ ತಗಲಿದ ಕೆಲವರಲ್ಲಿ ನಾಲ್ಕೈದು ದಿನಗಳ ಬಳಿಕ ಮಿದುಳು, ಶ್ವಾಸಾಂಗ, ಮೂತ್ರಪಿಂಡಗಳ ಗಂಭೀರ ಸಮಸ್ಯೆಗಳುಂಟಾಗಬಹುದು. ಇಲಿಜ್ವರವು ಶೇ. 90ಕ್ಕೂ ಹೆಚ್ಚು ರೋಗಿಗಳಲ್ಲಿ ತನ್ನಿಂತಾನಾಗಿ ವಾಸಿಯಾಗುತ್ತದೆ; ಆದರೆ ಕೆಲವರಲ್ಲಿ ಎರಡನೇ ವಾರದಲ್ಲಿ ಜ್ವರವು ಮರುಕಳಿಸಿ ಕಾಮಾಲೆ, ಮೂತ್ರಪಿಂಡಗಳ ವೈಫಲ್ಯ ಮುಂತಾದ ಸಮಸ್ಯೆಗಳು ಕಂಡುಬರಬಹುದು.

ಈ ಮೂರು ಸೋಂಕುಗಳನ್ನು ಮೊದಲೆರಡು ದಿನಗಳಲ್ಲೇ ಗುರುತಿಸುವುದಕ್ಕೆ ಕಷ್ಟವಿಲ್ಲ. ಮಲೇರಿಯಾ ಇರುವೆಡೆಗಳಲ್ಲಿ, ಅಥವಾ ಅಂತೆಡೆಯಿಂದ ಮರಳಿ ಜ್ವರಕ್ಕೀಡಾದವರಲ್ಲಿ ಮಲೇರಿಯಾ ಪತ್ತೆಗೆ ರಕ್ತ ಪರೀಕ್ಷೆಯನ್ನು ಮಾಡಬೇಕು. ಡೆಂಗಿಯನ್ನು ರೋಗಲಕ್ಷಣಗಳಿಂದಲೇ ಗುರುತಿಸಬಹುದಾಗಿದ್ದು, ರೂ. 800-1000 ವೆಚ್ಚದ ಡೆಂಗಿ ವೈರಸ್ ಪರೀಕ್ಷೆಯ ಅಗತ್ಯವಿಲ್ಲ. ಡೆಂಗಿ ಹಾಗೂ ಇಲಿಜ್ವರದ ಲಕ್ಷಣಗಳಲ್ಲಿ ಹಲವು ಸಾಮ್ಯತೆಗಳಿದ್ದರೂ, ಸರಳವಾದ ರಕ್ತ ಹಾಗೂ ಮೂತ್ರ ಪರೀಕ್ಷೆಗಳಿಂದ ಇವನ್ನು ಪ್ರತ್ಯೇಕಿಸಬಹುದು. ಡೆಂಗಿಯಲ್ಲಿ ಬಿಳಿ ರಕ್ತಕಣಗಳ ಸಂಖ್ಯೆಯು ಕಡಿಮೆಯಿದ್ದರೆ, ಇಲಿಜ್ವರದಲ್ಲಿ ಅದು ಹೆಚ್ಚಿರುತ್ತದೆ, ಇಎಸ್ಆರ್ ಮಟ್ಟವೂ ಏರಿರುತ್ತದೆ. ಇಲಿಜ್ವರವು ಮೂಲತಃ ಮೂತ್ರಪಿಂಡಗಳ ಸೋಂಕಾಗಿರುವುದರಿಂದ ಮೂತ್ರದಲ್ಲಿ ಪ್ರೋಟೀನ್ ಹಾಗೂ ರಕ್ತಕಣಗಳ ವಿಸರ್ಜನೆಯು ಕಂಡುಬರುತ್ತದೆ. ಮಲೇರಿಯಾ ಹಾಗೂ ಇಲಿಜ್ವರಗಳಂತೆ ಯಕೃತ್ತಿನ ಉರಿಯೂತದಲ್ಲೂ (ಹೆಪಟೈಟಿಸ್) ಜ್ವರ, ವಾಕರಿಕೆ ಹಾಗೂ ನಂತರ ಕಾಮಾಲೆ ಉಂಟಾಗುತ್ತದೆ; ಅಂತಹ ರೋಗಿಗಳಲ್ಲಿ ಯಕೃತ್ತಿನ ಕಿಣ್ವದ (ಎಎಲ್ ಟಿ) ಮಟ್ಟವು 350ನ್ನು ಮೀರಿರುತ್ತದೆ.

ಈಗ ಎಲ್ಲೆಡೆ ಪ್ಲೇಟ್ಲೆಟ್ ಕಣಗಳ ಪರೀಕ್ಷೆಗೆ ಅತಿ ಮಹತ್ವ ನೀಡಲಾಗುತ್ತಿದೆ. ನಿಜವೆಂದರೆ, ಈ ಮೂರು ಸೋಂಕುಗಳಲ್ಲಷ್ಟೇ ಅಲ್ಲ, ಇನ್ನಿತರ ಹಲವು ಸೋಂಕುಗಳಲ್ಲೂ ಪ್ಲೇಟ್ಲೆಟ್ ಕಣಗಳ ಇಳಿಕೆಯಾಗುತ್ತದೆ. ಆದ್ದರಿಂದ ಪ್ಲೇಟ್ಲೆಟ್ ಪ್ರಮಾಣವನ್ನಾಧರಿಸಿ ರೋಗಪತ್ತೆ ಸಾಧ್ಯವಿಲ್ಲ, ಒಂದೆರಡು ದಿನಗಳ ಜ್ವರವಿರುವ ಎಲ್ಲರಲ್ಲಿ ಅದನ್ನು ಪರೀಕ್ಷಿಸುವ ಅಗತ್ಯವೂ ಇಲ್ಲ. ಡೆಂಗಿ ಲಕ್ಷಣಗಳಿದ್ದು, ವಿಪರೀತ ಜ್ವರ-ದಡಿಕೆಗಳಿರುವವರಲ್ಲಿ ಪ್ಲೇಟ್ಲೆಟ್ ಪ್ರಮಾಣವನ್ನೂ, ಕೆಂಪು ರಕ್ತಕಣಗಳ (ಹಿಮಟೊಕ್ರಿಟ್) ಪ್ರಮಾಣವನ್ನೂ ಆಗಾಗ ಪರೀಕ್ಷಿಸಬೇಕಾಗಬಹುದು; ಪ್ಲೇಟ್ಲೆಟ್ ಪ್ರಮಾಣವು ಒಂದು ಲಕ್ಷಕ್ಕಿಂತ ಕೆಳಗೆ ಇಳಿಯುವುದು ಹಾಗೂ ಹಿಮಟೊಕ್ರಿಟ್ ಶೇ. 20ಕ್ಕಿಂತ ಹೆಚ್ಚು ಏರಿಕೆಯಾಗುವುದು ಡೆಂಗಿ ಜ್ವರವು ಗಂಭೀರಗೊಳ್ಳುತ್ತಿರುವುದನ್ನು ಸೂಚಿಸುತ್ತವೆ. ಅಂತಹ ರೋಗಿಗಳನ್ನು ದಾಖಲಿಸಿ ದ್ರಾವಣ ಪೂರಣ ಮಾಡಬೇಕು; ತೀವ್ರ ರಕ್ತಸ್ರಾವವಿದ್ದರೆ ರಕ್ತದ ಮರುಪೂರಣ ಮಾಡಬೇಕಾಗಬಹುದು. ಪ್ಲೇಟ್ಲೆಟ್ ಸಂಖ್ಯೆಯಷ್ಟೇ ಕಡಿಮೆಯಿದ್ದರೆ ಆತಂಕಿತರಾಗಿ ಪ್ಲೇಟ್ಲೆಟ್ ಮರುಪೂರಣ ಮಾಡುವ ಅಗತ್ಯವಿಲ್ಲ.

ಒಟ್ಟಿನಲ್ಲಿ ಜ್ವರದ ಜೊತೆಗಿರುವ ಲಕ್ಷಣಗಳನ್ನು ಗುರುತಿಸಿ, ಅದಕ್ಕನುಗುಣವಾದ ಸರಳ ಪರೀಕ್ಷೆಗಳ ಮೂಲಕ ಹೆಚ್ಚಿನ ಸೋಂಕುಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಲು ಸಾಧ್ಯವಿದೆ. ಅದರಿಂದ ಖರ್ಚಷ್ಟೇ ಅಲ್ಲ, ಆತಂಕ-ಗೊಂದಲಗಳೂ ಕಡಿಮೆಯಾಗುತ್ತವೆ.

ನಲವತ್ತೊಂಭತ್ತನೇ ಬರಹ : ಎಗ್ಗಿಲ್ಲದೆ ಬೆಳೆಯುತ್ತಿರುವ ಕ್ಯಾನ್ಸರ್ [ಎಪ್ರಿಲ್ 30, 2014, ಬುಧವಾರ] [ನೋಡಿ | ನೋಡಿ]

ಹಸಿವು ಕ್ಯಾನ್ಸರನ್ನು ಕೊಲ್ಲುತ್ತದೆ, ಭೂರಿ ಭೋಜನ ಕ್ಯಾನ್ಸರನ್ನು ಸಲಹುತ್ತದೆ

ಆಧುನಿಕ ಆಹಾರ ಹಾಗೂ ಸುಲಭ-ಸುಖಮಯ ಜೀವನಶೈಲಿಯೊಂದಿಗೆ ನಿಕಟ ಸಂಬಂಧವನ್ನು ಹೊಂದಿರುವ ಹೃದ್ರೋಗ, ಮಧುಮೇಹ, ಪಾರ್ಶ್ವವಾಯು ಇತ್ಯಾದಿಗಳನ್ನು ನಿಯಂತ್ರಿಸಲು ನಾವು ಹೆಣಗಾಡುತ್ತಿರುವಾಗ ಕ್ಯಾನ್ಸರ್ ಇನ್ನೊಂದು ಪೆಡಂಭೂತವಾಗಿ ಬೆಳೆಯುತ್ತಿದೆ. ಹೊಸ ತಂತ್ರಜ್ಞಾನ ಹಾಗೂ ಚಿಕಿತ್ಸೆಗಳಿಂದ ಕ್ಯಾನ್ಸರನ್ನು ಶೀಘ್ರವಾಗಿ ಪತ್ತೆ ಹಚ್ಚುವುದಕ್ಕೂ,  ಕೆಲವನ್ನು ಗುಣಪಡಿಸುವುದಕ್ಕೂ ಸಾಧ್ಯವಾಗಿದೆ. ಆದರೂ ಕ್ಯಾನ್ಸರ್ ಅಂದರೆ ಭಯವೂ ಹೆಚ್ಚು, ವೆಚ್ಚವೂ ಹೆಚ್ಚು.

ಪ್ರತಿಷ್ಠಿತ ಲಾನ್ಸೆಟ್ ವಿದ್ವತ್ಪತ್ರಿಕೆಯ ಎಪ್ರಿಲ್ 11 ರ ಸಂಚಿಕೆಯಲ್ಲಿ ಭಾರತ, ಚೀನಾ ಹಾಗೂ ರಷ್ಯಾಗಳಲ್ಲಿ ಕ್ಯಾನ್ಸರ್ ನಿಯಂತ್ರಣದ ಬಗ್ಗೆ 50 ಪುಟಗಳ ವರದಿಯಿದೆ. ಈ ದೇಶಗಳಲ್ಲಿ ಬೆಳೆಯುತ್ತಿರುವ ಆರ್ಥಿಕತೆ, ಆಧುನಿಕ ಜೀವನಶೈಲಿಯ ಹುಚ್ಚು, ಪರಿಸರ ಮಾಲಿನ್ಯ ಇತ್ಯಾದಿಗಳು ಕ್ಯಾನ್ಸರ್ ಹೆಚ್ಚಳಕ್ಕೆ ಕಾರಣವಾಗುತ್ತಿವೆಯೆಂದೂ, ಅಲ್ಲಿನ ಜನರಲ್ಲಿರುವ ವಿರಕ್ತಿ, ಜುಗುಪ್ಸೆ, ಆಧುನಿಕ ಚಿಕಿತ್ಸೆಯ ಬಗ್ಗೆ ಅವಿಶ್ವಾಸ, ಸಾಮಾಜಿಕ ಕಟ್ಟುಪಾಡುಗಳು, ಜಾತಿ, ಮತ, ಲಿಂಗಾಧಾರಿತ ಅಸಮಾನತೆಗಳು, ಬಡತನ, ಅಜ್ಞಾನ, ಮೂಢನಂಬಿಕೆ, ಸೌಲಭ್ಯಗಳ ಕೊರತೆ ಇತ್ಯಾದಿಗಳು ಕ್ಯಾನ್ಸರ್ ಪತ್ತೆ ಹಾಗೂ ಚಿಕಿತ್ಸೆಗಳಲ್ಲಿ ನಿರ್ಲಕ್ಷ್ಯಕ್ಕೂ, ಲೋಪಗಳಿಗೂ ಕಾರಣವಾಗುತ್ತಿವೆಯೆಂದೂ ಆ ವರದಿಯಲ್ಲಿ ಹೇಳಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಗ್ಲೋಬೋಕಾನ್ ವರದಿಯನುಸಾರ, 2012ರಲ್ಲಿ ವಿಶ್ವದಲ್ಲಿದ್ದ ಒಟ್ಟು ಕ್ಯಾನ್ಸರ್ ಪೀಡಿತರ ಸಂಖ್ಯೆ 3.26 ಕೋಟಿ, ಅದೇ ವರ್ಷ ಹೊಸದಾಗಿ ಕ್ಯಾನ್ಸರ್ ಪತ್ತೆಯಾದವರ ಸಂಖ್ಯೆ 1.41 ಕೋಟಿ, ಅದರಿಂದಾಗಿ ಸಾವನ್ನಪ್ಪಿದವರು 82 ಲಕ್ಷ. ಹೊಸದಾಗಿ ಕ್ಯಾನ್ಸರಿಗೆ ತುತ್ತಾಗುವವರ ಸಂಖ್ಯೆಯು 2025ರಲ್ಲಿ 1.9 ಕೋಟಿಗೆ, 2035ರಲ್ಲಿ 2.4 ಕೋಟಿಗೆ ಏರಲಿವೆ ಎನ್ನುವುದು ಗ್ಲೋಬೋಕಾನ್ ಅಂದಾಜು.

ಭಾರತದಲ್ಲೀಗ ಕ್ಯಾನ್ಸರ್ ಪೀಡಿತರ ಸಂಖ್ಯೆ ಸುಮಾರು 25 ಲಕ್ಷ, ಹೊಸದಾಗಿ ಕ್ಯಾನ್ಸರ್ ಪತ್ತೆಯಾಗುತ್ತಿರುವವರು ವರ್ಷಕ್ಕೆ 10 ಲಕ್ಷ, ಹಾಗೂ ಸಾವನ್ನಪ್ಪುವವರು ವರ್ಷಕ್ಕೆ ಮೂರೂವರೆ ಲಕ್ಷ. ಬೆಂಗಳೂರಿನ ಕಿದ್ವಾಯಿ ಗಂತಿ ಸಂಸ್ಥೆಯನುಸಾರ, ಕರ್ನಾಟಕದಲ್ಲಿ ಕ್ಯಾನ್ಸರ್ ಪೀಡಿತರು ಸುಮಾರು ಒಂದೂವರೆ ಲಕ್ಷ, ಪ್ರತೀ ವರ್ಷ ಹೊಸದಾಗಿ ಸೇರ್ಪಡೆಯಾಗುತ್ತಿರುವವರು 35 ಸಾವಿರದಷ್ಟು. ಅಮೆರಿಕಾ-ಬ್ರಿಟನ್ ಗಳಲ್ಲಿ ಮೂವರಿಂದ ನಾಲ್ವರಲ್ಲೊಬ್ಬರಿಗೆ ಕ್ಯಾನ್ಸರ್ ತಗಲುವ ಸಾಧ್ಯತೆಗಳಿದ್ದರೆ, ನಮ್ಮ ದೇಶದಲ್ಲಿ ಹತ್ತರಲ್ಲೊಬ್ಬರಿಗಿದೆ, ಬೆಂಗಳೂರಿನಲ್ಲಿ ಆರರಲ್ಲೊಬ್ಬರಿಗಿದೆ. ಅಮೆರಿಕಾ-ಬ್ರಿಟನ್ ಗಳಲ್ಲಿ ಶೇ.33-40ರಷ್ಟು ಕ್ಯಾನ್ಸರ್ ಪೀಡಿತರು ಸಾವನ್ನಪ್ಪಿದರೆ, ನಮ್ಮಲ್ಲಿ ಶೇ. 70ರಷ್ಟು ಸಾಯುತ್ತಾರೆ. ಅಂದರೆ, ನಮ್ಮಲ್ಲಿ ಕ್ಯಾನ್ಸರ್ ಉಂಟಾಗುವ ಅಪಾಯವು ಅಮೆರಿಕಾಕ್ಕಿಂತ ಕಡಿಮೆಯಿದ್ದರೂ, ಅದರಿಂದ ಸಾವನ್ನಪ್ಪುವ ಸಾಧ್ಯತೆಗಳು ಹೆಚ್ಚಿರುತ್ತವೆ. ನಮ್ಮಲ್ಲಿ  ಕ್ಯಾನ್ಸರ್ ಪ್ರಕರಣಗಳು ನಗರವಾಸಿಗಳಲ್ಲಿ ಹೆಚ್ಚು ಪತ್ತೆಯಾಗುತ್ತಿದ್ದರೂ, ಅದರಿಂದಾಗುವ ಸಾವುಗಳ ಪ್ರಮಾಣವು ಹಳ್ಳಿಗಳಲ್ಲೇ ಹೆಚ್ಚು.

ನಮ್ಮ ಗಂಡಸರಲ್ಲಿ ಗಂಟಲು, ಬಾಯಿ, ಅನ್ನನಾಳ, ಜಠರ, ಶ್ವಾಸಕೋಶ ಹಾಗೂ ರಕ್ತದ ಕ್ಯಾನ್ಸರ್ ಗಳು ಹೆಚ್ಚು ಸಾಮಾನ್ಯವಾಗಿದ್ದರೆ, ಹೆಂಗಸರಲ್ಲಿ ಗರ್ಭನಾಳ, ಸ್ತನ, ಬಾಯಿ, ಅನ್ನನಾಳ ಹಾಗೂ ಅಂಡಾಶಯ ಕ್ಯಾನ್ಸರ್ ಗಳು ಹೆಚ್ಚಾಗಿ ಕಂಡುಬರುತ್ತವೆ. ಕ್ಯಾನ್ಸರ್ ಪೀಡಿತ ಗಂಡಸರಲ್ಲಿ ಅರ್ಧಕ್ಕೂ ಹೆಚ್ಚು ಸಾವುಗಳು ಬಾಯಿ ಹಾಗೂ ಶ್ವಾಸಕೋಶಗಳ ಕ್ಯಾನ್ಸರಿಗೆ ಸಂಬಂಧಿಸಿದ್ದರೆ, ಹೆಂಗಸರಲ್ಲಿ ಸ್ತನ ಹಾಗೂ ಗರ್ಭನಾಳದ ಕ್ಯಾನ್ಸರಿನಿಂದಾಗುತ್ತವೆ.

ಕ್ಯಾನ್ಸರ್ ಹೇಗುಂಟಾಗುತ್ತದೆ ಎನ್ನುವುದಕ್ಕೆ ಇನ್ನೂ ಖಚಿತವಾದ ಉತ್ತರವಿಲ್ಲ. ನಮ್ಮ ದೇಹದಲ್ಲಿ ಹತ್ತು ಲಕ್ಷ ಕೋಟಿ ಜೀವಕೋಶಗಳು ಸುನಿಯಂತ್ರಿತವಾಗಿ ಬಾಳುತ್ತಿರುತ್ತವೆ. ಕೆಲವು ಜೀವಕಣಗಳು ಸಹಜವಾಗಿ ಸವೆದು ಸಾಯುವುದು, ಅವುಗಳಿದ್ದಲ್ಲಿ ಹೊಸ ಕಣಗಳು ಹುಟ್ಟುವುದು, ಹಾನಿಯಾದ ಜೀವಕಣಗಳನ್ನು ಸರಿಪಡಿಸುವುದು ಅಥವಾ ಕೆಟ್ಟ ಕಣಗಳನ್ನು ನಾಶಪಡಿಸುವುದು ಎಲ್ಲವೂ ಸುಸಂಯೋಜಿತವಾಗಿ ನಡೆಯುತ್ತಿರುತ್ತವೆ. ನಾವು ಸೇವಿಸುವ ನೀರು ಮತ್ತು ಆಹಾರ, ಉಸಿರಾಡುವ ಗಾಳಿ, ನಮ್ಮ ದಿನನಿತ್ಯದ ಚಟುವಟಿಕೆಗಳು, ನಮ್ಮ ಪರಿಸರ ಮುಂತಾದ ಭೌತಿಕ-ರಾಸಾಯನಿಕ-ಜೈವಿಕ ಕಾರಣಗಳಿಂದ ಈ ಅತಿ ಸಂಕೀರ್ಣವಾದ ವ್ಯವಸ್ಥೆಯಲ್ಲಿ ಏರುಪೇರುಗಳಾದರೆ ಕ್ಯಾನ್ಸರ್ ಕಣಗಳು ಹುಟ್ಟಬಹುದು.

ಹಾಗೆ ಹುಟ್ಟಿದ ಕ್ಯಾನ್ಸರ್ ಕಣಗಳು ಅನಿಯಂತ್ರಿತವಾಗಿ ವೃದ್ಧಿಸುತ್ತವೆ. ಸಾಮಾನ್ಯ ಜೀವಕಣಗಳ ಬೆಳವಣಿಗೆಯನ್ನು ನಿಯಂತ್ರಿಸುವ, ಕೆಟ್ಟಕಣಗಳನ್ನು ನಾಶಗೊಳಿಸುವ ವ್ಯವಸ್ಥೆಗಳು ಕ್ಯಾನ್ಸರ್ ಕಣಗಳನ್ನು ತಟ್ಟುವುದಿಲ್ಲ. ರೋಗರಕ್ಷಣಾ ವ್ಯವಸ್ಥೆಯೂ ಅವಕ್ಕೆ ಶರಣಾಗುತ್ತದೆ. ರಕ್ತನಾಳಗಳನ್ನೂ ಸೃಷ್ಟಿಸಿಕೊಂಡು ಬೆಳೆಯುತ್ತಲೇ ಸಾಗುವ ಕ್ಯಾನ್ಸರ್ ಕಣಗಳು, ತಾವಿದ್ದಲ್ಲಿಂದ ಕಳಚಿಕೊಂಡು ಬೇರೆ ಅಂಗಗಳಿಗೂ ಹರಡಿ, ಅಲ್ಲೂ ತಳವೂರಿ ಬೆಳೆಯುತ್ತವೆ.

ನಮ್ಮ ದೇಶದಲ್ಲಿ ಶೇ. 40ಕ್ಕೂ ಹೆಚ್ಚು ಕ್ಯಾನ್ಸರ್ ಪ್ರಕರಣಗಳು ತಂಬಾಕು ಸೇವಿಸುವವರಲ್ಲೇ ಉಂಟಾಗುತ್ತವೆ. ಅದನ್ನು ಬಾಯೊಳಗಿಟ್ಟುಕೊಳ್ಳುವವರ ಬಾಯಿಗಳಲ್ಲಿ, ಜಗಿದು ನುಂಗುವವರ ಗಂಟಲು-ಅನ್ನನಾಳ-ಜಠರಗಳಲ್ಲಿ, ಬೀಡಿ-ಸಿಗರೇಟುಗಳ ಮೂಲಕ ಅದರ ಹೊಗೆಯನ್ನು ಸೇದುವವರ ಶ್ವಾಸನಾಳಗಳಲ್ಲಿ ಕ್ಯಾನ್ಸರುಗಳು ಹುಟ್ಟುತ್ತವೆ. ತಂಬಾಕಿನ ಹೂಕಾ, ಉಪ್ಪುಭರಿತ ಚಹಾ, ಒಣಹಣ್ಣುಗಳನ್ನು ಹೆಚ್ಚಾಗಿ ಸೇವಿಸುವ ಕಾಶ್ಮೀರದಲ್ಲಿ ಅನ್ನನಾಳದ ಕ್ಯಾನ್ಸರ್; ತಂಬಾಕಿನ ಹೊಗೆಮಿಶ್ರಿತ ನೀರನ್ನೂ, ಸಿಗರೇಟನ್ನೂ ಬಳಸುವ ಮಿಜೋರಾಂನಲ್ಲಿ ನಾಲಗೆ ಹಾಗೂ ಜಠರದ ಕ್ಯಾನ್ಸರ್; ತಂಬಾಕು ಮಿಶ್ರಿತ ಬೀಡಾ-ಬೀಡಿಗಳನ್ನು ಹೆಚ್ಚಾಗಿ ಬಳಸುವ ಕೇರಳದಲ್ಲಿ ಬಾಯಿಯ ಕ್ಯಾನ್ಸರ್; ಮೂಗಿನೊಳಕ್ಕೆ ನಾಟಿಮದ್ದನ್ನು ತೂರಿಸಿಡುವ ನಾಗಾಲ್ಯಾಂಡಿನಲ್ಲಿ ಮೂಗಿನೊಳಗಿನ ಕ್ಯಾನ್ಸರ್; ಆಧುನಿಕ ಜೀವನಶೈಲಿಯ ಜೊತೆಗೆ ಕರಿದ ಪದಾರ್ಥಗಳನ್ನೂ, ತಂಬಾಕನ್ನೂ ಅಧಿಕವಾಗಿ ಬಳಸುವ ದಿಲ್ಲಿಯಲ್ಲಿ ಪಿತ್ತಕೋಶದ ಕ್ಯಾನ್ಸರ್ – ಹೀಗೆ ವಿವಿಧೆಡೆ ವಿವಿಧ ಕಾರಣಗಳಿಂದ ಕ್ಯಾನ್ಸರ್ ಉಂಟಾಗಬಹುದು. ಪಂಜಾಬಿನ ಮಾಲ್ವಾ ಪ್ರದೇಶವು ದೇಶದಲ್ಲೇ ಅತಿ ಹೆಚ್ಚು ಕ್ಯಾನ್ಸರ್ ಪೀಡಿತರನ್ನು ಹೊಂದಿರುವ ಕುಖ್ಯಾತಿಗೊಳಗಾಗಿದೆ. ಅಲ್ಲಿನ ಬೃಹತ್ ಉದ್ದಿಮೆಗಳು, ಕಲ್ಲಿದ್ದಲು ಆಧಾರಿತ ವಿದ್ಯುತ್ ಘಟಕಗಳು ಹಾಗೂ ಆಧುನಿಕ ಕೃಷಿಪದ್ಧತಿಗಳಿಂದಾಗಿ ನೆಲ-ಜಲ-ಗಾಳಿಗಳೆಲ್ಲವೂ ವಿಕಿರಣಕಾರಿ ಯುರೇನಿಯಂ, ಆರ್ಸೆನಿಕ್,ಬಗೆಬಗೆಯ ಕೀಟನಾಶಕಗಳಿಂದ ತುಂಬಿರುವುದೇ ಇದಕ್ಕೆ ಕಾರಣವೆನ್ನಲಾಗಿದೆ.

ಇಂತಹಾ ಕ್ಯಾನ್ಸರ್ ಕಾರಕಗಳಿಂದ ಜೀವಕಣಗಳ ವಂಶವಾಹಿಗಳು ಹಾನಿಗೊಂಡು ಕ್ಯಾನ್ಸರ್ ಹುಟ್ಟುತ್ತದೆಯೆಂದು ಹೇಳಲಾಗುತ್ತಿತ್ತು. ಆದರೆ ಕಳೆದ ಹತ್ತು ವರ್ಷಗಳಿಂದ ಅಂತಹ ವಂಶವಾಹಿಗಳಿಗಾಗಿ ಭಾರೀ ಹುಡುಕಾಟವೇ ನಡೆದಿದ್ದರೂ ನಿರೀಕ್ಷಿತ ಫಲ ದೊರೆತಿಲ್ಲ; ಆದ್ದರಿಂದ ಈ ಸಿದ್ಧಾಂತವನ್ನೇ ಈಗ ಪ್ರಶ್ನಿಸುವಂತಾಗಿದೆ.

ಎಲ್ಲಾ ಕ್ಯಾನ್ಸರ್ ಕಣಗಳು ಗ್ಲೂಕೋಸನ್ನು ವಿಪರೀತ ಪ್ರಮಾಣದಲ್ಲಿ ವಿಶೇಷ ರೀತಿಯಿಂದ ಬಳಸಿಕೊಳ್ಳುತ್ತವೆ ಎನ್ನುವುದನ್ನು 1930ರಷ್ಟು ಹಿಂದೆಯೇ ಜರ್ಮನಿಯ ವಿಜ್ಞಾನಿ ಒಟೊ ವಾರ್ಬರ್ಗ್ ತೋರಿಸಿದ್ದರು, ಅದಕ್ಕಾಗಿ ನೊಬೆಲ್ ಪ್ರಶಸ್ತಿಯನ್ನೂ ಪಡೆದಿದ್ದರು. ಈಗ ವಾರ್ಬರ್ಗ್ ಸಿದ್ಧಾಂತದತ್ತ ಮತ್ತೆ ಆಸಕ್ತಿ ಹೊರಳಿದ್ದು, ಸಕ್ಕರೆ ಭರಿತ ಆಹಾರದ ವಿಪರೀತ ಸೇವನೆಯು ಗ್ಲೂಕೋಸ್ ಪ್ರಿಯ ಕ್ಯಾನ್ಸರನ್ನು ಹುಟ್ಟಿಸಿ, ಬೆಳೆಸುತ್ತದೆಯೇ ಎನ್ನುವ ಬಗ್ಗೆ ಅಧ್ಯಯನಗಳಾಗುತ್ತಿವೆ. ಸಕ್ಕರೆ ಹಾಗೂ ಸಂಸ್ಕರಿತ ಶರ್ಕರಗಳ ಸೇವನೆಯು ಜೀವಕಣಗಳಲ್ಲಿ ಉತ್ಕರ್ಷಕ ಒತ್ತಡವನ್ನು ಹೆಚ್ಚಿಸಿ, ಶಕ್ತ್ಯುತ್ಪಾದನೆಯ ಕೇಂದ್ರಗಳಾಗಿರುವ ಮೈಟೋಕಾಂಡ್ರಿಯಾಗಳನ್ನು ಹಾನಿಗೊಳಿಸಿ ಕ್ಯಾನ್ಸರ್ ಹುಟ್ಟಿಗೆ ಕಾರಣವಾಗಬಹುದೆಂದು ಹೇಳಲಾಗುತ್ತಿದೆ. ಮೇಲೆ ಹೇಳಲಾಗಿರುವ ಕ್ಯಾನ್ಸರ್ ಕಾರಕಗಳು ಕೂಡಾ ಮೈಟೋಕಾಂಡ್ರಿಯಾಗಳನ್ನು ಹಾನಿಗೊಳಿಸುತ್ತವೆಯೆಂದೂ, ಆ ಮೂಲಕ ವಂಶವಾಹಿಗಳಲ್ಲಿ ಬದಲಾವಣೆಗಳಿಗೆ ಕಾರಣವಾಗುತ್ತವೆ ಎಂದೂ ಹೇಳಲಾಗುತ್ತಿದೆ. ಊಟವಿಲ್ಲದೆ ಹಸಿದಿರುವಾಗ ಕೆಟ್ಟಕಣಗಳೆಲ್ಲ ಭಕ್ಷಿಸಲ್ಪಟ್ಟು, ಕ್ಯಾನ್ಸರ್ ಕಣಗಳು ಕೂಡ ನಾಶವಾಗುತ್ತವೆ; ಆದರೆ ನಿತ್ಯದ ಭೂರಿ ಭೋಜನವು ಕ್ಯಾನ್ಸರ್ ಕಣಗಳಿಗೆ ಪೋಷಣೆಯೊದಗಿಸುತ್ತದೆ ಎನ್ನಲಾಗುತ್ತಿದೆ. ಅದಾಗಲೇ ಕ್ಯಾನ್ಸರ್ ಪೀಡಿತರಾದವರಿಗೆ ತಜ್ಞ ಚಿಕಿತ್ಸೆಯ ಜೊತೆಗೆ ಸಕ್ಕರೆರಹಿತವಾದ ಆಹಾರಸೇವನೆಯು ಕ್ಯಾನ್ಸರ್ ಗುಣಪಡಿಸುವಲ್ಲಿ ನೆರವಾಗುತ್ತದೆನ್ನುವ ವರದಿಗಳೂ ಹಲವಿವೆ.

ಆದ್ದರಿಂದ ಕ್ಯಾನ್ಸರ್ ಮಾರಿಯನ್ನು ದೂರವಿಡಬೇಕಾದರೆ ಸಕ್ಕರೆ ಹಾಗೂ ಸಂಸ್ಕರಿತ ಆಹಾರಗಳನ್ನು, ಪಶು ಹಾಲಿನ ಉತ್ಪನ್ನಗಳನ್ನು, ಕರಿದ ತಿನಿಸುಗಳನ್ನು, ಅತಿಯಾಗಿ ಸುಟ್ಟ ಮಾಂಸವನ್ನು, ತಂಬಾಕು ಹಾಗೂ ಶರಾಬುಗಳನ್ನು ವರ್ಜಿಸಬೇಕು, ಪರಿಸರ ಮಾಲಿನ್ಯವನ್ನು ತಡೆಯಬೇಕು. ಪ್ರಕೃತಿದತ್ತ ಆಹಾರದ ಹಿತಮಿತವಾದ ಸೇವನೆ ಹಾಗೂ ನಿಯತ ವ್ಯಾಯಾಮಗಳು ಎಲ್ಲಾ ಆಧುನಿಕ ರೋಗಗಳನ್ನು ತಡೆಯಲು ಸಹಕಾರಿ.

ಅಷ್ಟೇ ಮುಖ್ಯವಾಗಿ, ಕ್ಯಾನ್ಸರ್ ಉಂಟಾಗುವ ಅಪಾಯವುಳ್ಳವರು ಆ ಕುರಿತು ನಿಗಾ ವಹಿಸುತ್ತಿರುವುದೊಳ್ಳೆಯದು. ಕ್ಯಾನ್ಸರ್ ಗುರುತಿಸಲ್ಪಟ್ಟರೆ ಹತಾಶರಾಗಿ ಧೃತಿಗೆಡುವ ಬದಲು ಕೂಡಲೇ ತಜ್ಞರನ್ನು ಕಂಡು ಸೂಕ್ತ ಪರೀಕ್ಷೆ ಹಾಗೂ ಚಿಕಿತ್ಸೆಗಳನ್ನು ಮಾಡಿಸಿಕೊಳ್ಳಬೇಕು. ಬದಲಿ ಚಿಕಿತ್ಸೆ, ಪ್ರಾರ್ಥನೆ, ಮಂತ್ರ-ತಂತ್ರಗಳ ಪೊಳ್ಳು ಭರವಸೆಗಳನ್ನು ನಂಬಿದರೆ ಕ್ಯಾನ್ಸರ್ ಉಲ್ಬಣಿಸಿ ಚಿಕಿತ್ಸೆಯೇ ಅಸಾಧ್ಯವಾಗಬಹುದು.

ನಲವತ್ತೆಂಟನೇ ಬರಹ : ಹೆಣ್ಣು ಮಕ್ಕಳನ್ನುಳಿಸದಿದ್ದರೆ ದೇಶಕ್ಕೂ ಉಳಿವಿಲ್ಲ [ಎಪ್ರಿಲ್ 16, 2014, ಬುಧವಾರ] [ನೋಡಿ | ನೋಡಿ]

ಸ್ತ್ರೀಭ್ರೂಣಹಂತಕ ವೈದ್ಯರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕಾದ ತುರ್ತು ಅಗತ್ಯವಿದೆ

ಹದಿನಾರನೇ ಲೋಕಸಭೆಯ ಈ ಮಹಾಚುನಾವಣೆಯಲ್ಲಿ ಮಹಿಳಾ ಮತದಾರರ ಸಂಖ್ಯೆಯು ಪುರುಷರಿಗಿಂತ ಕಡಿಮೆಯೆಂದು ಚುನಾವಣಾ ಆಯೋಗ ಹೇಳಿದೆ. ಕೆಲವು ರಾಜ್ಯಗಳಲ್ಲಿ ಮಹಿಳೆಯರೇ ಕಡಿಮೆ ಸಂಖ್ಯೆಯಲ್ಲಿದ್ದರೆ, ಇನ್ನು ಕೆಲವೆಡೆ ಇರುವ ಮಹಿಳೆಯರೂ ಮತದಾರರ ಪಟ್ಟಿಯೊಳಗೆ ಸೇರ್ಪಡೆಯಾಗಿಲ್ಲ.

ನಮ್ಮ ದೇಶದ ಒಟ್ಟು ಜನಸಂಖ್ಯೆಯಲ್ಲಿ 1000 ಪುರುಷರಿಗೆ ಸ್ತ್ರೀಯರ ಸಂಖ್ಯೆ 943, ಒಟ್ಟು ಮತದಾರರ ಪಟ್ಟಿಯಲ್ಲಿ ಸ್ತ್ರೀಯರ ಈ ಸಂಖ್ಯೆಯು 908. ನಮ್ಮ ರಾಜ್ಯದ ಜನಸಂಖ್ಯೆಯಲ್ಲಿ 1000 ಪುರುಷರಿಗೆ ಸ್ತ್ರೀಯರ ಸಂಖ್ಯೆ 968, ಮತದಾರರ ಪಟ್ಟಿಯಲ್ಲಿ ಅದು 960. ಹೊಸ ತಲೆಮಾರಿನ 18-19 ವಯಸ್ಸಿನವರಲ್ಲಿ ಹೆಣ್ಮಕ್ಕಳ ಸಂಖ್ಯೆಯೇ ಕಡಿಮೆ; ಗಂಡು-ಹೆಣ್ಣಿನ ಅನುಪಾತವು ಸಾವಿರಕ್ಕೆ 886ರಷ್ಟು, ಹೊಸ ಮತದಾರರ ಪಟ್ಟಿಯಲ್ಲಿ ಅದು ಕೇವಲ 695. ಕರ್ನಾಟಕದಲ್ಲಿ 18-19ರ ವಯಸ್ಕರಲ್ಲಿ ಸಾವಿರ ಹುಡುಗರಿಗೆ 904 ಹುಡುಗಿಯರಿದ್ದರೆ, ಹೊಸ ಮತದಾರರಲ್ಲಿ ಸಾವಿರ ಹುಡುಗರಿಗೆ ಕೇವಲ 673 ಹುಡುಗಿಯರು. ಅಂದರೆ ಹೊಸದಾಗಿ ಮತದಾರರಾಗಬೇಕಿದ್ದ ಹುಡುಗಿಯರಲ್ಲಿ ಶೇ. 10ರಷ್ಟು ಇಹದಲ್ಲಿಲ್ಲ, ಇರುವವರಲ್ಲಿ ಶೇ. 22-25ರಷ್ಟು ಮತದಾರರ ಪಟ್ಟಿಯೊಳಗಿಲ್ಲ.

ಈ ಅಂಕಿ-ಅಂಶಗಳು ಇನ್ನೊಂದಷ್ಟು ಕರಾಳ ಸತ್ಯಗಳನ್ನು ತೆರೆದಿಡುತ್ತವೆ. ದೇಶದ 2011ರ ಜನಗಣತಿಯನುಸಾರ, ಮೂವತ್ತರ ವಯಸ್ಸಿನೊಳಗಿನವರಲ್ಲಿ ಗಂಡು-ಹೆಣ್ಣಿನ ಅನುಪಾತವು 1000ಕ್ಕೆ 897 ಆಗಿದ್ದರೆ, 31-50 ವಯಸ್ಸಿನವರಲ್ಲಿ 955 ಹಾಗೂ 50ಕ್ಕೆ ಮೇಲ್ಪಟ್ಟವರಲ್ಲಿ 996ರಷ್ಟಿದೆ. ಆರು ವರ್ಷದೊಳಗಿನ ಮಕ್ಕಳಲ್ಲಿ ಗಂಡು-ಹೆಣ್ಣಿನ ಅನುಪಾತವು 1951ರಲ್ಲಿ ಸಾವಿರಕ್ಕೆ 983 ಇದ್ದುದು, 1981ರಲ್ಲಿ 962 ಆಗಿ, 2001ರಲ್ಲಿ 927 ಕ್ಕೆ ಇಳಿದು, 2011ರಲ್ಲಿ 914 ಕ್ಕೆ ಕುಸಿದಿತ್ತು. ಕಳೆದ ಮೂರು ದಶಕಗಳಲ್ಲಿ ಶೇ.10ರಷ್ಟು ಹೆಣ್ಮಕ್ಕಳ ಬದುಕನ್ನೇ ಕಿತ್ತುಕೊಳ್ಳಲಾಗಿದೆ ಎನ್ನುವುದನ್ನು ಇವು ತೋರಿಸುತ್ತವೆ. ಅದೇ ಮೂವತ್ತು ವರ್ಷಗಳಲ್ಲಿ ನಾವು ಹೊಸ ಆರ್ಥಿಕತೆಯನ್ನು ಅನುಸರಿಸತೊಡಗಿದ್ದು ಹಾಗೂ ನಮ್ಮ ವೈದ್ಯರಿಗೆ ಹೊಸ ತಂತ್ರಜ್ಞಾನಗಳು ದೊರಕಿದ್ದು ಕಾಕತಾಳೀಯವಾಗಿರಲಾರವು.

ವಿಶ್ವದ ವಿವಿಧೆಡೆ ಹಲವು ದಶಕಗಳಿಂದ ಕಲೆ ಹಾಕಲಾಗಿರುವ ಜನನ ದಾಖಲೆಗಳನುಸಾರ, ಪ್ರತೀ 1000 ಹೆಣ್ಣು ಮಕ್ಕಳಿಗೆ 1050-1070 ಗಂಡು ಮಕ್ಕಳು ಜನಿಸುತ್ತಾರೆ. ಆದರೆ ಅನಾರೋಗ್ಯ, ಸಾಮಾಜಿಕ ಅಶಾಂತಿ, ಗಲಭೆಗಳು, ಯುದ್ಧಗಳು ಇವೇ ಮುಂತಾದವುಗಳಲ್ಲಿ ಗಂಡಸರು ಹೆಚ್ಚು ಸಂಖ್ಯೆಯಲ್ಲಿ ಸಾವನ್ನಪ್ಪುತ್ತಾರೆ. ಹೀಗೆ, ಒಂದಷ್ಟು ಹೆಚ್ಚು ಗಂಡು ಮಕ್ಕಳು ಜನಿಸಿದರೂ, ವಯಸ್ಸು ಕಳೆದಂತೆ ಗಂಡು-ಹೆಣ್ಣುಗಳ ಸಂಖ್ಯೆಯು ಸರಿಸಮನಾಗುತ್ತದೆ, 50-60 ವರ್ಷಕ್ಕೆ ಮೇಲ್ಪಟ್ಟವರಲ್ಲಿ ಹೆಂಗಸರ ಸಂಖ್ಯೆಯೇ ಹೆಚ್ಚಾಗಿರುತ್ತದೆ; ನಿಸರ್ಗ ನಿಯಮವನ್ನು ಬುಡಮೇಲು ಮಾಡದಿರುವಲ್ಲಿ 1000 ಗಂಡಸರಿಗೆ 1050 ಹೆಂಗಸರಿರುತ್ತಾರೆ.

ಆದರೆ ಭಾರತದಂತಹ ಕೆಲವು ದೇಶಗಳಲ್ಲಿ ಹೆಣ್ಮಕ್ಕಳನ್ನು ಬಲವಂತವಾಗಿ ಸಾಯಿಸಲಾಗುತ್ತಿರುವುದರಿಂದ ಹುಟ್ಟಿನಲ್ಲೂ, ಆ ನಂತರದಲ್ಲೂ ಗಂಡಸರ ಸಂಖ್ಯೆಯೇ ಹೆಚ್ಚಾಗುವಂತಾಗಿದೆ. ಹುಟ್ಟಿದ ಹೆಣ್ಮಕ್ಕಳನ್ನು ತಿಪ್ಪೆಗೆಸೆಯುವುದು, ಕೊಲೆಗೈಯುವುದು, ಆಹಾರ-ಔಷಧಗಳನ್ನು ನೀಡದೆ ಸತಾಯಿಸಿ ಸಾಯಿಸುವುದು ಇತ್ಯಾದಿ ಬಹು ಹಿಂದಿನಿಂದಲೂ ಪ್ರಚಲಿತವಿದ್ದವು. ಕಳೆದ ಮೂರು ದಶಕಗಳಿಂದೀಚೆಗೆ ಗರ್ಭಸ್ಥ ಶಿಶುವಿನ ಲಿಂಗಪರೀಕ್ಷೆಯ ತಂತ್ರಜ್ಞಾನವು ಎಲ್ಲೆಡೆ ಲಭ್ಯವಾಗುವುದರೊಂದಿಗೆ ಹೆಣ್ಣನ್ನು ಭ್ರೂಣಾವಸ್ಥೆಯಲ್ಲೇ ಕೊಲ್ಲುವುದು ಸುಲಭವಾಯಿತು. ವರ್ಷಕ್ಕೆ 5-10 ಲಕ್ಷದಂತೆ 3-4 ಕೋಟಿ ಹೆಣ್ಮಕ್ಕಳನ್ನು ಹೀಗೆ ಕೊಲ್ಲಲಾಗಿರಬಹುದೆಂದು ಅಂದಾಜಿಸಲಾಗಿದೆ. ಬಡ ಹೆಣ್ಮಕ್ಕಳು ಹುಟ್ಟಿದ ಬಳಿಕ ಅನಾದರ, ಅಪೌಷ್ಟಿಕತೆ, ಅನಾರೋಗ್ಯಗಳಿಂದ ಸಾಯಿಸಲ್ಪಟ್ಟರೆ ಸಿರಿವಂತರ ಹೆಣ್ಮಕ್ಕಳು ಭ್ರೂಣಾವಸ್ಥೆಯಲ್ಲೇ ಇಲ್ಲವಾಗುತ್ತಿದ್ದಾರೆ.

ನಮ್ಮ ಹೆಣ್ಮಕ್ಕಳನ್ನು ಹೀಗೆ ಕೊಲ್ಲುತ್ತಿರುವುದರಿಂದಾಗಿ ಸಾವಿರ ಗಂಡುಗಳಿಗೆ 1050 ಹೆಣ್ಣುಗಳಿರಬೇಕಾದಲ್ಲಿ 2011ರ ಜನಗಣತಿಯಂತೆ 943ರಷ್ಟೇ ಹೆಣ್ಣುಗಳಿದ್ದಾರೆ. ಅತಿ ಸಮೃದ್ಧವಾದ, ಅಭಿವೃದ್ಧಿಯಲ್ಲಿ ಮುಂದೆಂದು ಬೆನ್ನು ತಟ್ಟಿಕೊಳ್ಳುತ್ತಿರುವ ರಾಜ್ಯಗಳಲ್ಲೇ ಹೆಣ್ಮಕ್ಕಳ ಸಂಖ್ಯೆಯು ಅತ್ಯಂತ ಕಡಿಮೆಯಾಗಿದೆ. ಚಂಡೀಗಢದಲ್ಲಿ ಸ್ತ್ರೀಯರ ಸಂಖ್ಯೆಯು ಸಾವಿರ ಗಂಡುಗಳಿಗೆ 818 ಇದ್ದರೆ, ರಾಜಧಾನಿ ದಿಲ್ಲಿಯಲ್ಲಿ 866, ಹರ್ಯಾನಾದಲ್ಲಿ 877, ಪಂಜಾಬ್ ನಲ್ಲಿ 893, ಗುಜರಾತ್ ನಲ್ಲಿ 918 ಮತ್ತು ಮಹಾರಾಷ್ಟ್ರದಲ್ಲಿ 925 ಆಗಿದೆ. ಇದೇ ಪ್ರಮಾಣವು ಗ್ರಾಮೀಣ ಪ್ರದೇಶಗಳಲ್ಲಿ 949, ನಗರಗಳಲ್ಲಿ 929 ರಷ್ಟಿದೆ. ಕರ್ನಾಟಕದಲ್ಲಿ ಹೆಣ್ಮಕ್ಕಳ ಈ ಪ್ರಮಾಣವು 968 ರಷ್ಟಿದ್ದು, ದಕ್ಷಿಣ ಭಾರತದಲ್ಲೇ ಅತಿ ಕಡಿಮೆಯಾಗಿದೆ. ಹೆಣ್ಮಕ್ಕಳನ್ನು ಬದುಕಗೊಡುವಲ್ಲಿ ಕೇರಳವು ಅತಿ ಮುಂದಿದ್ದು ಅಲ್ಲಿ ಸಾವಿರ ಗಂಡಸರಿಗೆ 1084 ಹೆಂಗಸರಿದ್ದಾರೆ, ಇದು ಜಗತ್ತಿನ ಸರಾಸರಿಯನ್ನೂ, ಅಮೆರಿಕಾ, ಯೂರೋಪುಗಳ ಸರಾಸರಿಯನ್ನೂ ಮೀರಿಸುತ್ತದೆ. ಪುದುಚೇರಿ (1038), ತಮಿಳುನಾಡು (995), ಆಂಧ್ರ (992)ಗಳಲ್ಲೂ ಮಹಿಳೆಯರ ಪ್ರಮಾಣವು ಅತ್ಯುತ್ತಮವಾಗಿದೆ.ಬುಡಕಟ್ಟುಗಳವರೇ ಹೆಚ್ಚಾಗಿರುವ ಛತ್ತೀಸಗಢ, ಝಾರ್ಖಂಡ್ ಹಾಗೂ ಈಶಾನ್ಯದ ರಾಜ್ಯಗಳಲ್ಲೂ ಸ್ತ್ರೀಯರ ಪ್ರಮಾಣವು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿದೆ.

ಹೆಣ್ಣನ್ನು ಪುರುಷನೊಂದಿಗಿನ ಪ್ರಕೃತಿಯಾಗಿ, ವಿದ್ಯೆ, ಬುದ್ಧಿ, ಐಶ್ವರ್ಯ, ಶಕ್ತಿಗಳೆಲ್ಲದರ ದೇವತೆಯಾಗಿ ಪೂಜಿಸಲಾಗುವ ನಮ್ಮ ದೇಶದಲ್ಲಿ ಮನುಷ್ಯರೂಪದ ಹೆಣ್ಣುಗಳು ಬೇಡವಾಗಲು ಕಾರಣಗಳೇನು? ಪಿತೃಪ್ರಧಾನ ವ್ಯವಸ್ಥೆಯು ಬಲಿಷ್ಠವಾಗಿರುವ, ವೈಯಕ್ತಿಕ ಆಸ್ತಿಪಾಸ್ತಿಗಳು ಹೆಚ್ಚಿರುವ, ವರದಕ್ಷಿಣೆಯು ಹೆಚ್ಚು ಭಾರವಾಗಿರುವ ಉತ್ತರ ಭಾರತದ ರಾಜ್ಯಗಳಲ್ಲೇ ಸ್ತ್ರೀಭ್ರೂಣ ಹತ್ಯೆಯು ಹೆಚ್ಚು ವ್ಯಾಪಕವಾಗಿದೆ. ಮಾತೃಪ್ರಧಾನ ಜನಸಮುದಾಯಗಳಿರುವ, ಹೆಣ್ಮಕ್ಕಳಿಗೂ ಆಸ್ತಿಯಲ್ಲಿ ಸಮಪಾಲು ನೀಡುತ್ತಿರುವ, ವರದಕ್ಷಿಣೆಯ ಪಿಡುಗು ಅಷ್ಟೊಂದಿಲ್ಲದ ದಕ್ಷಿಣ ಹಾಗೂ ಈಶಾನ್ಯ ಭಾರತದ ರಾಜ್ಯಗಳಲ್ಲಿ, ಬುಡಕಟ್ಟುಗಳವರಲ್ಲಿ ಮತ್ತು ಹಿಂದುಳಿದ ಜನಸಮುದಾಯಗಳಲ್ಲಿ ಹೆಣ್ಮಕ್ಕಳು ಹೆಚ್ಚು ಸುರಕ್ಷಿತರಾಗಿದ್ದಾರೆ. ಮರಣೋತ್ತರ ಸದ್ಗತಿಗಾಗಿ ಗಂಡು ಸಂತಾನವೇ ಚಿತೆಗೆ ಅಗ್ನಿಸ್ಪರ್ಶ ಮಾಡಿ, ಪಿಂಡಪ್ರದಾನ ಮಾಡಬೇಕೆನ್ನುವ ನಂಬಿಕೆಯೂ ಗಂಡು ಮಗುವಿನ ಹಂಬಲಕ್ಕೆ ಕಾರಣವಾಗುತ್ತದೆ. ಜೀವಿತರಿರುವಾಗ ಆಸ್ತಿ-ಗೌರವಗಳನ್ನು ಉಳಿಸಿಕೊಂಡು, ಸತ್ತ ಮೇಲೆ ಸ್ವರ್ಗಕ್ಕೇರುವ ಆಸೆಗಾಗಿ ಕೆಲವರು ತಮ್ಮ ಹೆಣ್ಣು ಮಕ್ಕಳನ್ನು ಗರ್ಭದಲ್ಲೇ ಕೊಲ್ಲುತ್ತಾರೆ. ಕೀರುತಿಯನ್ನು ಮಗನಿಗೆ ಬಿಟ್ಟು ಆರತಿಯನ್ನು ಮಗಳಿಗೆ ಕಟ್ಟುವ ಮೂಲಕ ಘನ ಸರಕಾರವೂ ಇಂತಹ ಮೌಢ್ಯಗಳನ್ನು ಪೋಷಿಸಿತ್ತಲ್ಲವೇ?

ಇಂತಹ ಪಾಳೇಗಾರಿ ಯೋಜನೆಗಳನ್ನು ಸಾಕಾರಗೊಳಿಸುವುದಕ್ಕೆ ಅತ್ಯಾಧುನಿಕ ತಂತ್ರಜ್ಞಾನದ ಬಳಕೆಯಾಗುತ್ತಿರುವುದು ದೊಡ್ಡ ವಿಪರ್ಯಾಸವೇ. ಗರ್ಭಸ್ಥ ಭ್ರೂಣವನ್ನು ಪರೀಕ್ಷಿಸಬಲ್ಲ ವಿವಿಧ ತಂತ್ರಜ್ಞಾನಗಳು 70-80ರ ದಶಕಗಳಲ್ಲಿ ಲಭ್ಯವಾದಂದಿನಿಂದಲೇ ಅವನ್ನು ಸ್ತ್ರೀಭ್ರೂಣ ಹತ್ಯೆಗಾಗಿ ಬಳಸಲಾರಂಭಿಸಲಾಯಿತು. ದಿಲ್ಲಿಯಿಂದ ತೊಡಗಿ ಉತ್ತರ ಭಾರತದ ನಗರಗಳಿಗೆ, ಬಳಿಕ ದೇಶದ ಇತರೆಡೆಗಳಿಗೆ, ಈ ತಂತ್ರಜ್ಞಾನ ಹರಡಿದಂತೆ ಸ್ತ್ರೀ ಭ್ರೂಣ ಹತ್ಯೆಯೂ ವ್ಯಾಪಕವಾಯಿತು, ಅದರ ವಹಿವಾಟು ವರ್ಷಕ್ಕೆ ಸಾವಿರ ಕೋಟಿಯನ್ನು ದಾಟಿತು. ಹೊಸ ಆರ್ಥಿಕತೆ ಹುಟ್ಟಿಸಿದ ಧನದಾಹವೂ, ಅದರೊಂದಿಗೆ ಲಭ್ಯವಾದ ತಂತ್ರಜ್ಞಾನವೂ ನಮ್ಮ ವೈದ್ಯರನ್ನು ಸ್ತ್ರೀಭ್ರೂಣಹಂತಕರಾಗುವಂತೆ ಪ್ರೇರೇಪಿಸಿರುವುದು ದುರಂತವೇ ಸರಿ.

ಭ್ರೂಣ ಲಿಂಗ ಪರೀಕ್ಷೆ ಹಾಗೂ ಸ್ತ್ರೀ ಭ್ರೂಣ ಹತ್ಯೆಗಳನ್ನು ಶಿಕ್ಷಾರ್ಹಗೊಳಿಸಿರುವ ಕಾನೂನುಗಳು ಕಳೆದ 20 ವರ್ಷಗಳಿಂದ ನಮ್ಮಲ್ಲಿದ್ದರೂ ಸಾವಿರ ಕೋಟಿಯ ಈ ವಹಿವಾಟನ್ನು ನಿಲ್ಲಿಸಲು ಸಾಧ್ಯವಾಗಿಲ್ಲ. ಇವುಗಳಡಿಯಲ್ಲಿ 1800ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದರೂ ಕೇವಲ 143 ವ್ಯಕ್ತಿಗಳಷ್ಟೇ ಶಿಕ್ಷೆಗೀಡಾಗಿದ್ದಾರೆ. ವೈದ್ಯರನ್ನು ನಿಯಂತ್ರಿಸುವ ವೈದ್ಯಕೀಯ ಪರಿಷತ್ತುಗಳು ಕೂಡ ತಪ್ಪಿತಸ್ಥ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿವೆ.

ಕಳೆದ ಮೂವತ್ತು ವರ್ಷಗಳಿಂದ ಅವ್ಯಾಹತವಾಗಿ ನಮ್ಮ ಹೆಣ್ಮಕ್ಕಳನ್ನು ಸಂಹರಿಸುತ್ತಿರುವುದರ ದುಷ್ಪರಿಣಾಮಗಳು ಒಂದೊಂದಾಗಿ ಗೋಚರಿಸತೊಡಗಿವೆ. ಈ ಅವಧಿಯಲ್ಲಿ ಹುಟ್ಟಿರುವ ಮಕ್ಕಳೀಗ ವಿವಾಹಯೋಗ್ಯರಾಗಿದ್ದು, ಹರ್ಯಾನ, ಪಂಜಾಬ್ ಗಳಂತಹ ರಾಜ್ಯಗಳಲ್ಲಿ ಶೇ. 12-15ರಷ್ಟು ಗಂಡುಗಳು ಬಾಳಸಂಗಾತಿಯಿಲ್ಲದೆ ಅವಿವಾಹಿತರಾಗಿಯೇ ಜೀವನ ಸವೆಸುವಂತಾಗಿದೆ. ಮರಣೋತ್ತರ ಸದ್ಗತಿಪ್ರಾಪ್ತಿಗಾಗಿ ಗಂಡು ಸಂತಾನವೇ ಬೇಕೆಂದು ಪ್ರೋತ್ಸಾಹಿಸಿದವರು, ಜಾತಿ-ಕುಲ-ಗೋತ್ರಗಳ ಉಳಿವಿಗಾಗಿ ಹೆಣ್ಣು ಸಂತಾನವನ್ನು ಮುಗಿಸಹೊರಟವರು ಇಂದು ಯಾವುದೋ ಜಾತಿಯ, ಯಾವುದೋ ಊರಿನ ಹೆಣ್ಮಕ್ಕಳನ್ನು ಹುಡುಕಿಕೊಂಡು ಅಂಡಲೆಯುವಂತಾಗಿದೆ. ಕಡಿಮೆ ವಿದ್ಯಾರ್ಹತೆಯುಳ್ಳ, ಆರ್ಥಿಕವಾಗಿ ಸಬಲರಾಗಿಲ್ಲದ, ಕೆಳವರ್ಗಗಳಿಗೆ ಸೇರಿದ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ವಿವಾಹವಂಚಿತರಾಗುತ್ತಿರುವುದರಿಂದ. ಹಿಂಸಾಕೃತ್ಯಗಳಲ್ಲೂ, ಸಮಾಜ ವಿರೋಧಿ ಕೃತ್ಯಗಳಲ್ಲೂ ಅವರು ಭಾಗಿಗಳಾಗುವ ಅಪಾಯವು ಹೆಚ್ಚುತ್ತಿದೆ.

ಹೆಣ್ಣಿಲ್ಲದೆ ಗಂಡಿಗೆ ಅರ್ಥವಿಲ್ಲ, ಕುಟುಂಬ ಹಾಗೂ ಸಮಾಜಗಳಿಗೆ ಉಳಿವಿಲ್ಲ ಎನ್ನುವುದನ್ನು ಸ್ತ್ರೀಭ್ರೂಣಹತ್ಯೆಗೆಳಸುವವರು ಅರಿಯಬೇಕಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸ್ತ್ರೀಭ್ರೂಣಹಂತಕ ವೈದ್ಯರನ್ನು ತಕ್ಷಣವೇ ಕಠಿಣ ಶಿಕ್ಷೆಗೆ ಗುರಿಪಡಿಸಬೇಕಾಗಿದೆ. ಅಂತಹಾ ಕ್ರಮಗಳನ್ನು ಕೈಗೊಂಡ ದಕ್ಷಿಣ ಕೊರಿಯಾದಲ್ಲಿ ಮರುವರ್ಷದಿಂದಲೇ ಹೆಚ್ಚು ಹೆಣ್ಮಕ್ಕಳು ಹುಟ್ಟತೊಡಗಿದರೆನ್ನುವುದು ಎಲ್ಲರ ಕಣ್ತೆರೆಸಬೇಕಾಗಿದೆ.

ನಲವತ್ತೇಳನೇ ಬರಹ : ಕರ್ನಾಟಕದ ವೈದ್ಯರಿಗೆ ಮರುನೋಂದಣಿಯ ಸಂಕಟ [ಎಪ್ರಿಲ್ 2, 2014, ಬುಧವಾರ] [ನೋಡಿ | ನೋಡಿ]

ಭಾರತೀಯ ವೈದ್ಯಕೀಯ ಪರಿಷತ್ತಿನ ನಿಯಮಗಳಲ್ಲಿ ಇಲ್ಲದ ಪ್ರಕ್ರಿಯೆಗಳಿಗೆ ನಮ್ಮ ವೈದ್ಯರು ಸಿಲುಕಿದ್ದಾರೆಂಬುದು ಸೋಜಿಗ

ಕೆಲ ದಿನಗಳ ಹಿಂದೆ ನನ್ನ ವೈದ್ಯಕೀಯ ಸಹಪಾಠಿಯೊಬ್ಬ ‘ಸಿಎಂಇ, ಸಿಎಂಇ’ ಅಂತ ಭಯಂಕರ ಗಡಿಬಿಡಿಯಲ್ಲಿದ್ದ. (ಸಿಎಂಇ ಅಂದರೆ ನಿರಂತರ ವೈದ್ಯಕೀಯ ಕಲಿಕೆ) ಸಭಾಂಗಣದ ಮೂಲೆಯಲ್ಲಿ ಕೂತಿದ್ದ ನನ್ನ ಬಳಿ ಬಂದ. ‘ನೀನು ಬಂದದ್ದು ಒಳ್ಳೇದಾಯ್ತು, ಅಲ್ನೋಡು, ಅವನನ್ನೊಮ್ಮೆ ಮಾತಾಡಿಸಿ ಬಾ’ ಅಂತ ಮುಂದಿನ ಸಾಲಲ್ಲಿದ್ದವನನ್ನು ತೋರಿಸಿದ. ‘ಓ, ಕಾಲೇಜಲ್ಲಿ ನಮ್ಮ ಜೂನಿಯರ್ ಥರ ಕಾಣ್ತಾನಲ್ಲಾ, ಅವನ ಲೆಕ್ಚರೂ ಉಂಟಾ?’ ಕೇಳಿದೆ ನಾನು. ‘ಹಾಗೆಲ್ಲಾ ಹೇಳ್ಬೇಡಪ್ಪಾ, ನಮ್ಮ ಜೂನಿಯರ್ ಏನೋ ಹೌದು, ಆದ್ರೆ ಅವನೇ ಇವತ್ತಿನ ಸಿಎಂಇ ಇನ್ ಸ್ಪೆಕ್ಟರ್, ಸ್ವಲ್ಪ ಮಾತಾಡಿಸು, ಇಲ್ಲಾಂದ್ರೆ ನಿಂಗೆ ಸರ್ಟಿಫಿಕೇಟ್ ಕೊಡ್ತಾನೋ ಇಲ್ವೋ’ ಅಂದ ನನ್ನ ಮಿತ್ರ. ಏನಪ್ಪಾ ಗ್ರಹಚಾರ ಅಂತ ಯೋಚಿಸುತ್ತಿದ್ದಂತೆ ಅವನೇ ಮುಂದುವರಿಸಿದ: ‘ನೋಡು, ಇನ್ನೆರಡು ವರ್ಷದೊಳಗೆ ನಿನ್ನ ಮೆಡಿಕಲ್ ಕೌನ್ಸಿಲ್ ರಿಜಿಸ್ಟ್ರೇಶನ್ ರಿನ್ಯೂ ಮಾಡ್ಲೇಬೇಕು, ಅದಕ್ಕೆ ಒಟ್ಟು 30 ಸಿಎಂಇ ಗಂಟೆಗಳ ಲೆಕ್ಕ ಬೇಕು, ಇವತ್ತಿನ ಲೆಕ್ಕ ಬೇಕಂದ್ರೆ ಅವನ ಸರ್ಟಿಫಿಕೇಟ್ ಬೇಕೇ ಬೇಕು. ಸುಮ್ನೆ ಹೋಗಿ ಒಂದು ನಮಸ್ಕಾರ ಹಾಕಿ ಬಾ’ ಅಂತ ಗದರಿಸಿದ. ರಿನೀವಲ್, ಸಿಎಂಇ, ಸರ್ಟಿಫಿಕೇಟ್, ಇನ್ ಸ್ಪೆಕ್ಟರ್, ನಮಸ್ಕಾರ ಎಲ್ಲ ಸೇರಿ ಗುಂಯ್ಯೆನ್ನತೊಡಗಿದವು.

ನಾವು ವೈದ್ಯ ವೃತ್ತಿಯಲ್ಲಿರಬೇಕಾದರೆ ರಾಜ್ಯದ ಮೆಡಿಕಲ್ ಕೌನ್ಸಿಲ್ (ವೈದ್ಯಕೀಯ ಪರಿಷತ್ತು) ನಲ್ಲಿ ನೋಂದಾಯಿಸಲ್ಪಟ್ಟಿರಬೇಕು. ರಾಜ್ಯ ಪರಿಷತ್ತುಗಳಲ್ಲಿ ನೋಂದಾಯಿಸಲ್ಪಟ್ಟ ವೈದ್ಯರ ಹೆಸರುಗಳೆಲ್ಲ ಭಾರತೀಯ ವೈದ್ಯಕೀಯ ಪರಿಷತ್ತಿನ (ಎಂಸಿಐ) ದಾಖಲೆಗೆ ಸೇರ್ಪಡೆಯಾಗುತ್ತವೆ. ಎಂಸಿಐ ಶಾಸನಬದ್ಧ ಸಂಸ್ಥೆಯಾಗಿದ್ದು, ಸಂಸತ್ತು ರೂಪಿಸುವ ಎಂಸಿಐ ಕಾಯಿದೆಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ. ರಾಜ್ಯ ಪರಿಷತ್ತುಗಳು ಆಯಾ ವಿಧಾನಸಭೆಗಳಲ್ಲಿ  ಅನುಮೋದಿಸಲ್ಪಟ್ಟ ರಾಜ್ಯ ವೈದ್ಯಕೀಯ ನೋಂದಣಿ ಕಾಯಿದೆಗಳಿಗೆ ಬದ್ಧವಾಗಿರುತ್ತವೆ ಹಾಗೂ ಇವು ಎಂಸಿಐ ನಿಯಮಗಳಿಗೆ ಅನುಸಾರವಾಗಿರುತ್ತವೆ. 

ಈ ರಿನೀವಲ್, ಸಿಎಂಇ, ಸರ್ಟಿಫಿಕೇಟ್, ಇನ್ ಸ್ಪೆಕ್ಟರ್ ಎಲ್ಲಿ, ಯಾವಾಗ, ಯಾಕಾಗಿ ಶುರುವಾದವು ಎನ್ನುವುದು ತಿಳಿಯಲಿಲ್ಲ. ಇಪ್ಪತ್ತೈದು ವರ್ಷಗಳ ಹಿಂದಿನ ನನ್ನ ನೋಂದಣಿ ಪತ್ರದ ಮೇಲೆ ಕಣ್ಣು ಹಾಯಿಸಿದೆ. ಘನ ಸರಕಾರದ ಮುದ್ರಾಂಕಿತದಡಿಯಲ್ಲಿ ‘ಈ ಮೇಲಿನ ನೋಂದಣಿಯು ಶಾಶ್ವತವಾಗಿದೆ’ ಎಂಬ ಒಕ್ಕಣೆಯಿತ್ತು. ಎಂಸಿಐ ಜಾಲತಾಣದಲ್ಲಿ ಮರುನೋಂದಣಿಯ ಬಗ್ಗೆ ಏನೂ ಕಾಣಿಸಲಿಲ್ಲ, ಕುಟ್ಟಿ ಹುಡುಕಿದರೂ ಉತ್ತರ ಬರಲಿಲ್ಲ. ರಾಜ್ಯ ವೈದ್ಯಕೀಯ ಪರಿಷತ್ತಿನ ತಾಣವನ್ನು ನೋಡಿದರೆ ಅಲ್ಲಿ ಮರುನೋಂದಣಿಯ ವಿವರಗಳೇ ತುಂಬಿದ್ದವು! ಕುತೂಹಲ ಹೆಚ್ಚಿ, ಮಾಹಿತಿ ಹಕ್ಕು ಕಾಯಿದೆಯನುಸಾರ ಕೆಲ ಪ್ರಶ್ನೆಗಳನ್ನು ರಾಜ್ಯ ಪರಿಷತ್ತಿಗೆ ಕಳಿಸಿದೆ.

ಯಾವ ಎಂಸಿಐ ನಿಯಮದಡಿಯಲ್ಲಿ ಮರುನೋಂದಣಿಯನ್ನು ಕಡ್ಡಾಯಗೊಳಿಸಲಾಗಿದೆ ಎಂಬುದು ಮೊದಲ ಪ್ರಶ್ನೆ. ಎಂಸಿಐ ಅಂತಹ ಯಾವುದೇ ನಿಯಮವನ್ನು ರೂಪಿಸಿಲ್ಲ, ಆದರೆ ರಾಜ್ಯದಲ್ಲಿ ರೂಪಿಸಲಾಗಿರುವ ನಿಯಮದಂತೆ ಪ್ರತೀ ಐದು ವರ್ಷಗಳಿಗೊಮ್ಮೆ ಮರುನೋಂದಣಿಯಾಗಬೇಕು ಎಂಬುದು ರಾಜ್ಯ ಪರಿಷತ್ತಿನ ಉತ್ತರ. ಅಂದರೆ ಭಾರತಕ್ಕಿಲ್ಲದ ನಿಯಮ ಕರ್ನಾಟಕದಲ್ಲಿದೆ ಎಂದಾಯಿತು.

ಮರುನೋಂದಣಿಗೆ ಸಿಎಂಇ ಅಂಕಗಳು ಅಗತ್ಯವೇ, ಅದು ಯಾವ ಎಂಸಿಐ ನಿಯಮದಲ್ಲಿದೆ ಎಂಬ ಪ್ರಶ್ನೆಗೆ, ಪ್ರತೀ ಐದು ವರ್ಷಗಳಿಗೆ 30 ಗಂಟೆಗಳ ಕಲಿಕೆಯು ಕಡ್ಡಾಯವೆಂದೂ, ಎಂಸಿಐ – ಅಕಡೆಮಿಕ್ಸ್/2013/30661 (ಆಗಸ್ಟ್ 29, 2013) ಎಂಬ ಪತ್ರದಲ್ಲಿ ಸಿಎಂಇ ಬಗ್ಗೆ ಮಾರ್ಗದರ್ಶಿ ವಿವರಗಳಿವೆಯೆಂದೂ ಉತ್ತರ ಬಂತು. ಈ ಪತ್ರವನ್ನು ಅಂತರಜಾಲದಲ್ಲಿ ಹುಡುಕಿ ತೆಗೆದೆ. ‘ದಿನಕ್ಕೆ ಕನಿಷ್ಠ ಎಂಟು ಗಂಟೆ ಅವಧಿಯ ಸಮ್ಮೇಳನ/ ಸಿಎಂಇ/ ಕಾರ್ಯಾಗಾರದಲ್ಲಿ ಹಾಜರಿರುವ ವೈದ್ಯಕೀಯ ಕಾಲೇಜಿನ ಶಿಕ್ಷಕನಿಗೆ, ಭಾಷಣಗಾರನಾದರೆ ದಿನಕ್ಕೆ 3 ಹಾಗೂ ಭಾಗಿಯಾದರೆ ದಿನಕ್ಕೆ 2 ಅಂಕಗಳನ್ನು ನೀಡಬಹುದು’ ಎಂದಷ್ಟೇ ಆ ಪತ್ರದಲ್ಲಿತ್ತು. ಸಾಮಾನ್ಯ ವೈದ್ಯರ ಬಗ್ಗೆ, ಮರುನೋಂದಣಿಯ ಬಗ್ಗೆ, ಕಡ್ಡಾಯ ಸಿಎಂಇ ಅಂಕಗಳ ಬಗ್ಗೆ ಒಂದಕ್ಷರವೂ ಇಲ್ಲ. ಯಾವುದೋ ಪತ್ರ, ಇನ್ಯಾವುದಕ್ಕೋ ಗಂಟು.

ಸಿಎಂಇ ಕಾರ್ಯಕ್ರಮಗಳನ್ನು ವಿಧ್ಯುಕ್ತಗೊಳಿಸುವುದಕ್ಕೆ, ಅವುಗಳಿಗೆ ಪರೀಕ್ಷಕರನ್ನು ನಿಯೋಜಿಸುವುದಕ್ಕೆ, ಆ ಪರೀಕ್ಷಕರಿಗೆ ಪ್ರಯಾಣ ಭತ್ತೆ, ದಿನ ಭತ್ತೆ ಮತ್ತಿತರ ಆದರಾತಿಥ್ಯಗಳನ್ನು ಒದಗಿಸುವುದಕ್ಕೆ ಯಾವ ಎಂಸಿಐ ನಿಯಮಗಳಲ್ಲಿ ಅವಕಾಶವಿದೆ ಎಂಬ ಪ್ರಶ್ನೆಗೆ ಎಂಸಿಐ ನಿಯಮಗಳೇನೂ ಇಲ್ಲ, ರಾಜ್ಯ ಪರಿಷತ್ತಿನ ನಿರ್ಣಯಗಳು ಹಾಗಿವೆ ಎನ್ನಲಾಯಿತು.

ಮರುನೋಂದಣಿ, ಅದಕ್ಕೆ ಸಿಎಂಇ, ಆ ಸಿಎಂಇಗಳ ಪರೀಕ್ಷೆ, ಆ ಪರೀಕ್ಷಕರ ಆತಿಥ್ಯ ಇವು ಯಾವುವೂ ಎಂಸಿಐ ನಿಯಮಗಳಲ್ಲಿಲ್ಲ ಎನ್ನುವುದು ಅಲ್ಲಿಗೆ ಸುಸ್ಪಷ್ಟವಾಯಿತು.

ಎಂಸಿಐ ಕಾಯಿದೆಯಲ್ಲಿಲ್ಲದ ವ್ಯವಸ್ಥೆ ನಮ್ಮಲ್ಲೇಕೆ ಬಂತು? ಸಿಎಂಇ ಅಂಕಗಳ ಆಧಾರದಲ್ಲಿ ವೈದ್ಯರ ಮರುನೋಂದಣಿ ಮಾಡುವ ಯೋಜನೆಯನ್ನು 1997ರಲ್ಲಿ ಎಂಸಿಐ ಆರಂಭಿಸಿತ್ತು, ಕೇಂದ್ರ ಸರಕಾರವನ್ನೂ ವಿನಂತಿಸಿತ್ತು. ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಎಲ್ಲಾ ರಾಜ್ಯಗಳಿಗೂ ಎಂಸಿಐ ಬರೆದಿತ್ತು (10-4-97 ರ 311(4)97-ಸಿಎಂಇ/1042). ಹಲವು ನೆನಪೋಲೆಗಳ ಬಳಿಕವೂ ಯಾವೊಂದು ರಾಜ್ಯ ಸರಕಾರವೂ ಅದಕ್ಕೆ ಸ್ಪಂದಿಸಲಿಲ್ಲ. ಇನ್ನೊಂದು ಪತ್ರ ಬರೆದ ಎಂಸಿಐ (311(14)/97/ಸಿಎಂಇ/30196, ದಿ. 2-1-98), ದುರದೃಷ್ಟದಿಂದ ಯಾವ ರಾಜ್ಯ ಸರಕಾರವೂ ಏನೂ ಮಾಡಿಲ್ಲವೆಂದೂ, ಕೇಂದ್ರ ಸರಕಾರಕ್ಕೆ ಉತ್ತರ ನೀಡಬೇಕಾದ ಜರೂರಿಗಾಗಿ ಕೂಡಲೇ ಕ್ರಮ ಕೈಗೊಳ್ಳಬೇಕೆಂದೂ ವಿನಂತಿಸಿತು.

ನಮ್ಮ ವಿಧಾನಮಂಡಲವು 2003ರಲ್ಲಿ ಕರ್ನಾಟಕ ವೈದ್ಯಕೀಯ ನೋಂದಣಿ ಕಾಯಿದೆ 1961ನ್ನು ತಿದ್ದುಪಡಿ ಮಾಡಿ ಎಂಸಿಐ ವಿನಂತಿಯನ್ನು ಪುರಸ್ಕರಿಸಿತು. ಇನ್ನೂ ನಾಲ್ಕು ರಾಜ್ಯಗಳು ಹಾಗೆ ಮಾಡಿದವು. ಇನ್ನುಳಿದ ರಾಜ್ಯಗಳಲ್ಲಿ ಇಂತಹಾ ತಿದ್ದುಪಡಿಗಳು ಇದುವರೆಗೆ ಆದಂತಿಲ್ಲ. ಕೇಂದ್ರ ಸರಕಾರವೂ ಎಂಸಿಐಯ ಮರುನೋಂದಣಿ ಯೋಜನೆಯನ್ನು ಇದುವರೆಗೆ ಅನುಮೋದಿಸಿಲ್ಲ, ಸಂಸತ್ತು ಕೂಡ ಎಂಸಿಐ ಕಾಯಿದೆಯಲ್ಲಿ ಅಂತಹ ಯಾವುದೇ ತಿದ್ದುಪಡಿಯನ್ನು ಮಾಡಿಲ್ಲ. ಆರೇಳು ರಾಜ್ಯಗಳಲ್ಲಿ ವೈದ್ಯರ ವಿಳಾಸ ಮತ್ತಿತರ ವಿವರಗಳನ್ನು ಮರುದಾಖಲಿಸುವ ಉದ್ದೇಶದಿಂದ ಮರುನೋಂದಣಿ ಮಾಡಲಾಗುತ್ತಿದೆ, ಎಂಸಿಐ ವೃತ್ತಿಸಂಹಿತೆ 2002ರ ವಿ.1.2.3 ಅನುಸಾರ ನಿರಂತರ ಕಲಿಕೆಯನ್ನು ಉತ್ತೇಜಿಸಲಾಗುತ್ತಿದೆ, ಆದರೆ ಇವನ್ನು ತಳಕು ಹಾಕಿ ಕಡ್ಡಾಯಗೊಳಿಸಿಲ್ಲ.

ಕರ್ನಾಟಕದ ಈ ಕ್ರಮದಿಂದಾಗಿ ಇಲ್ಲಿನ ವೈದ್ಯರು 2016ರ ಏಪ್ರಿಲ್ 30ರೊಳಗೆ ಮರುನೋಂದಣಿ ಮಾಡದಿದ್ದರೆ ಕರ್ನಾಟಕದಲ್ಲಾಗಲೀ, ಬೇರಾವುದೇ ರಾಜ್ಯದಲ್ಲಾಗಲೀ ತಮ್ಮ ವೃತ್ತಿಯನ್ನು ಮುಂದುವರಿಸುವಂತಿಲ್ಲ. ಆದರೆ, ಮರುನೋಂದಣಿಯ ಹಂಗಿಲ್ಲದ ಇತರ ರಾಜ್ಯಗಳ ವೈದ್ಯರು ದೇಶದ ಯಾವುದೇ ಮೂಲೆಯಲ್ಲಿ, ಕರ್ನಾಟಕದಲ್ಲೂ, ತಮ್ಮ ವೃತ್ತಿಯನ್ನು ಮುಂದುವರಿಸಬಹುದು!

ಸಿಎಂಇ ಅಂಕಗಳನ್ನು ಗಳಿಸುವಲ್ಲೂ ನಮ್ಮವರು ಹೆಚ್ಚು ಒದ್ದಾಡಬೇಕು. ಉದಾಹರಣೆಗೆ, ಕರ್ನಾಟಕದ ವೈದ್ಯನೊಬ್ಬ ಇಡೀ ದಿನ 8 ಗಂಟೆಗಳ ಸಿಎಂಇಯಲ್ಲಿ ಭಾಗಿಯಾದರೆ 2 ಅಂಕ ಪಡೆಯುತ್ತಾನೆ, 4ಗಂಟೆಗಿಂತ ಕಡಿಮೆಯಿದ್ದರೆ ಒಂದೂ ಇಲ್ಲ. ಉತ್ತರಪ್ರದೇಶದಲ್ಲಿ 3 ಗಂಟೆಗೆ 1 ಅಂಕ, 6 ಗಂಟೆಗೆ 3, ಅರ್ಧ ದಿನಕ್ಕೆ 2; ಗುಜರಾತಿನಲ್ಲಿ 2 ಗಂಟೆಗೆ 1 ಅಂಕ! ಮಧ್ಯಪ್ರದೇಶದ ವೈದ್ಯರು ಅಂತರಜಾಲದಲ್ಲೂ ಕಲಿತು ಗಂಟೆಗೆ ಒಂದಂಕ ಸಂಪಾದಿಸಬಹುದು. ನಮ್ಮವರು ಒಂದು ಪುಸ್ತಕ ಬರೆದರೆ ಸಿಗುವುದು 2-4 ಅಂಕಗಳು; ಮಧ್ಯಪ್ರದೇಶದಲ್ಲಿ ಅದೇ ಕೆಲಸಕ್ಕೆ 12, ಗುಜರಾತಿನಲ್ಲಿ 16! ನಮ್ಮವರ ಲೇಖನಗಳು ರಾಷ್ಟ್ರೀಯ/ಅಂತರರಾಷ್ಟ್ರೀಯ ವಿದ್ವತ್ ಪತ್ರಿಕೆಗಳಲ್ಲಿ ಪ್ರಕಟಗೊಂಡರೆ 1-2 ಅಂಕಗಳು; ಅದೇ ತಮಿಳುನಾಡಿನವರಿಗೆ 3, ಮಹಾರಾಷ್ಟ್ರದವರಿಗೆ 5, ಮಧ್ಯಪ್ರದೇಶದವರಿಗೆ 10-12, ಗುಜರಾತಿನವರಿಗೆ 12! ಜೀವಮಾನದ ಜ್ಞಾನ-ಅನುಭವಗಳನ್ನು ಬಳಸಿ, ತಿಂಗಳುಗಟ್ಟಲೆ ಶ್ರಮವಹಿಸಿ ಪುಸ್ತಕ ಬರೆಯುವುದು ಅಥವಾ ಲೇಖನಗಳನ್ನು ಪ್ರಕಟಿಸುವುದು ಕರ್ನಾಟಕದಲ್ಲಿ ಒಂದು ದಿನ ಸಿಎಂಇ ಕೇಳುವುದಕ್ಕೆ ಸರಿಸಮಾನ!

ಈ ಅಂಕಪಟ್ಟಿಯಲ್ಲಿ ಪೂರ್ವಗ್ರಹಗಳೂ ಹಲವಿವೆ; ಇದರನುಸಾರ, ವೈದ್ಯಕೀಯ ಕಾಲೇಜಿನ ಶಿಕ್ಷಕನಿಗೆ ವರ್ಷಕ್ಕೆ 4 ಅಂಕಗಳು ದೊರೆಯುತ್ತವೆ. ಶಿಕ್ಷಕರಿಗೆ ತನ್ನಿಂತಾನಾಗಿ ಹೊಸ ಜ್ಞಾನ ಲಭಿಸುತ್ತದೆಂದು ಇದರರ್ಥವೇ? ಪೂರ್ಣಕಾಲಿಕ-ಅರೆಕಾಲಿಕ-ಕ್ಷಣಕಾಲಿಕ ಹಾಗೂ ಕೇವಲ ಕಾಗದಸ್ಥಿತರಾದ ಶಿಕ್ಷಕರೆಲ್ಲರಿಗೂ ಸಮಾನವಾಗಿ 4 ಅಂಕಗಳೇ? ವೈದ್ಯಕೀಯ ಶಿಕ್ಷಕರಾಗಿಲ್ಲದೆಯೂ ಅತ್ಯುತ್ತಮ ಮಟ್ಟವನ್ನು ಕಾಯ್ದುಕೊಂಡಿರುವ ಅದೆಷ್ಟೋ ವೈದ್ಯರು ಅಜ್ಞಾನಿಗಳೇ? ಯಾವುದೇ ಸಿಎಂಇ/ಸಮ್ಮೇಳನಗಳಿಗೆ ಹೋಗದೆಯೂ ಹೊಸ ಅರಿವನ್ನು ಪಡೆಯುತ್ತಿರುವವರು ಪೆದ್ದರೇ? ಸಾಕ್ಷ್ಯಾಧಾರಿತ ವೈದ್ಯವೃತ್ತಿಯನ್ನು ನಿಯಂತ್ರಿಸುವ ಪರಿಷತ್ತಿನಲ್ಲಿ ಇವಕ್ಕೆಲ್ಲ ಸಾಕ್ಷ್ಯಾಧಾರಗಳಿವೆಯೇ?

ಒಟ್ಟಿನಲ್ಲಿ ಸಿಎಂಇ ಆಧಾರಿತ ಮರುನೋಂದಣಿಯ ಈ ವ್ಯವಸ್ಥೆಯು ಎಂಸಿಐ ನಿಯಮಗಳಿಗೆ ಹೊರತಾಗಿದೆ, ಸರಿಯಾಗಿ ವಿವೇಚಿಸದೆ ತರಾತುರಿಯಿಂದ ರೂಪಿಸಿದಂತಿದೆ ಹಾಗೂ ವಿನಾ ಕಾರಣ ರಾಜ್ಯದ ವೈದ್ಯರನ್ನು ಹಲಬಗೆಯ ಕಷ್ಟಗಳಿಗೆ ದೂಡುವಂತಿದೆ. ಮಾತ್ರವಲ್ಲ, ಇದು ಹಲವು ಸಂಶಯಗಳಿಗೂ ಎಡೆಮಾಡುತ್ತಿದೆ. ಆದ್ದರಿಂದ ರಾಜ್ಯದ ಎಲ್ಲಾ ವೈದ್ಯರು ಹಾಗೂ ವೈದ್ಯಕೀಯ ಸಂಘಟನೆಗಳು ಒಗ್ಗೂಡಿ ಈ ಸಮಸ್ಯೆಗಳನ್ನು ಸರಕಾರ ಹಾಗೂ ವೈದ್ಯಕೀಯ ಪರಿಷತ್ತಿನ ಮುಂದಿಡಬೇಕು. ಕೇಂದ್ರವು ಎಂಸಿಐ ಕಾಯಿದೆಯಲ್ಲಿ ಈ ಕುರಿತಾದ ತಿದ್ದುಪಡಿಗಳನ್ನು ಮಾಡುವವರೆಗೆ ರಾಜ್ಯದ 2003ರ ಕಾಯಿದೆಯನ್ನು ಅಮಾನತಿನಲ್ಲಿಡುವಂತೆ ಕೋರಬಹುದು. ಸಿಎಂಇಗಳಿಗೆ ಪರೀಕ್ಷಕರೇಕೆಂದು ಪ್ರಶ್ನಿಸಬಹುದು. 2003ರಲ್ಲಿ ತಿದ್ದುಪಡಿಯಾದ ನಿಯಮಗಳನ್ನು ಜಾರಿಗೊಳಿಸಲು ಇಷ್ಟು ತಡಮಾಡಿರುವಾಗ ಇನ್ನೊಂದಷ್ಟು ಕಾದರೇನು?

ನಲವತ್ತಾರನೇ ಬರಹ : ತಾಯಿ-ಮಗುವಿನ ಜೀವವುಳಿಸದ ಅಭಿವೃದ್ಧಿ ಬೇಕೇ? [ಮಾರ್ಚ್ 19, 2014, ಬುಧವಾರ] [ನೋಡಿ | ನೋಡಿ]

ತಾಯಿ-ಮಕ್ಕಳ ಹಿತ ರಕ್ಷಣೆಯು ಎಲ್ಲಾ ರಾಜಕೀಯ ಪಕ್ಷಗಳ ಮೊದಲ ಆದ್ಯತೆಯಾಗಬೇಕು

ಮಹಾ ಚುನಾವಣೆ ಮತ್ತೆ ಬಂದಿದೆ, ಇನ್ನೆರಡು ತಿಂಗಳಲ್ಲಿ ಹೊಸ ಸರಕಾರವೂ ಬರಲಿದೆ. ಇನ್ನೆರಡು ತಿಂಗಳಲ್ಲಿ ತನ್ನ ಮೊದಲ ಕಂದನ ಬರುವಿಕೆಯನ್ನು ಕಾಯುತ್ತಿರುವ ಗರ್ಭಿಣಿಯೊಬ್ಬರು ಆತಂಕಿತರಾಗಿ ಬರೆದಿರುವುದು ಇಲ್ಲಿದೆ:

ದೇಶದ ಎಲ್ಲ ಮಹಾನ್ ರಾಜಕಾರಣಿಗಳೇ, ಎಲ್ಲೆಂದರಲ್ಲಿ ನಿಮ್ಮನ್ನೇ ಕಾಣಬೇಕಾದ-ಕೇಳಬೇಕಾದ ಗೌಜಿಯ ಕಾಲ ಇದು. ಹಾಗೆ ಮಾಡಿದ್ದೇವೆ, ಹೀಗೆ ಮಾಡಿದ್ದೇವೆ, ರಾಮರಾಜ್ಯವನ್ನೇ ಸೃಷ್ಟಿಸಿದ್ದೇವೆ, ಮುಂದೆ ಅದನ್ನೂ ಮೀರಿಸಲಿದ್ದೇವೆ ಎಂದು ನೀವುಗಳೆಲ್ಲಾ ಹೇಳುತ್ತಿರುವುದು ರಸ್ತೆ ಬದಿಯ ಫಲಕಗಳಲ್ಲಿ, ಎಲ್ಲಾ ಪತ್ರಿಕೆಗಳ ಎಲ್ಲಾ ಪುಟಗಳಲ್ಲಿ, ನನ್ನ ಮನೆಯೊಳಗಿರುವ ಪುಟ್ಟ ಟಿವಿಯ ಪರದೆಯಲ್ಲಿ, ರೇಡಿಯೋವಾಹಿನಿಗಳಲ್ಲಿ, ಹೀಗೆ ಎಲ್ಲೆಂದೆರಲ್ಲಿ ತುಂಬಿಕೊಂಡಿವೆ. ಇವುಗಳನ್ನೆಲ್ಲ ನೋಡಿ ನಾನು ಬಹಳ ಸಂತಸದಲ್ಲಿದ್ದೆ, ಬರಲಿರುವ ನನ್ನ ಕಂದನ ಭವಿಷ್ಯವು ಅತ್ಯುಜ್ವಲವಾಗಲಿದೆ ಎಂದು ಬಹಳ ಧೈರ್ಯದಲ್ಲಿದ್ದೆ. ಆದರೆ ನಿಮ್ಮ ಭರವಸೆಗಳ ಮಹಾಪೂರಗಳ ಎಡೆಯಲ್ಲಿ ಸಣ್ಣದಾಗಿ ಪ್ರಕಟಗೊಂಡ ಕೆಲವು ವರದಿಗಳು ನನ್ನನ್ನು ಮತ್ತೆ ಚಿಂತೆಗೆ ತಳ್ಳಿವೆ.

ಭೂಲೋಕದಲ್ಲೀಗ ವರ್ಷಕ್ಕೆ 13 ಕೋಟಿ 40 ಲಕ್ಷ ಮಕ್ಕಳು ಹುಟ್ಟುತ್ತಿದ್ದಾರೆ, ಆ ಪೈಕಿ 2 ಕೋಟಿ 70 ಲಕ್ಷದಷ್ಟು ನಮ್ಮ ದೇಶದಲ್ಲಿ ಹುಟ್ಟುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯನುಸಾರ ಸುಮಾರು 50 ಲಕ್ಷ ಮಕ್ಕಳು, ಅಂದರೆ ಸಾವಿರ ಜನನಗಳಲ್ಲಿ 35ರಷ್ಟು, ಒಂದೇ ವರ್ಷದೊಳಗೆ ಸಾವನ್ನಪ್ಪುತ್ತಾರೆ. ಅವರಲ್ಲಿ ಹತ್ತು ಲಕ್ಷ ಮಕ್ಕಳು ಹುಟ್ಟಿದ ದಿನವೇ ಇನ್ನಿಲ್ಲವಾಗುತ್ತಾರೆ, 29 ಲಕ್ಷ ಮಕ್ಕಳು 28 ದಿನಗಳಿಗಿಂತ ಹೆಚ್ಚು ಬದುಕಿರುವುದಿಲ್ಲ. ಇಷ್ಟೇ ಅಲ್ಲದೆ, ಸೇವ್ ದ ಚಿಲ್ಡ್ರನ್ ಸಂಸ್ಥೆಯು ಇದೇ ಫೆಬ್ರವರಿ 24 ರಂದು ಪ್ರಕಟಿಸಿದ ವರದಿಯಂತೆ, 12 ಲಕ್ಷ ಹಸುಳೆಗಳು ಹೆರಿಗೆಯ ವೇಳೆ ಸಂಕಷ್ಟಕ್ಕೊಳಗಾಗಿ ಹುಟ್ಟುವಾಗಲೇ ನಿರ್ಜೀವವಾಗಿರುತ್ತಾರೆ. ಇನ್ನೂ 16 ಲಕ್ಷ ಮಕ್ಕಳು ಐದು ವರ್ಷ ತುಂಬುವುದರೊಳಗೆ ಸಾಯುತ್ತಾರೆ. ಅಂದರೆ ಪ್ರತಿನಿತ್ಯವೂ ಐದು ವರ್ಷದೊಳಗಿನ ಸುಮಾರು 21 ಸಾವಿರ ಮಕ್ಕಳನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಈ ಸಾವುಗಳಲ್ಲಿ ಶೇ. 99ರಷ್ಟು ಅಭಿವೃದ್ಧಿಶೀಲ ದೇಶಗಳಲ್ಲೇ ಸಂಭವಿಸುತ್ತವೆ.

ನಮ್ಮ ದೇಶದಲ್ಲಿ ವರ್ಷಕ್ಕೆ ಸುಮಾರು 12 ಲಕ್ಷ, ಅಂದರೆ ಪ್ರತಿ ಸಾವಿರ ಜನನಗಳಲ್ಲಿ 42 ಶಿಶುಗಳು, ಒಂದು ವರ್ಷದೊಳಗೆ ಸಾವನ್ನಪ್ಪುತ್ತಾರೆ, ಅವರಲ್ಲಿ 2,75,000 ಹಸುಳೆಗಳು ಹುಟ್ಟಿದಂದೇ ಸಾಯುತ್ತಾರೆ. ಅದಲ್ಲದೆ, 3,22,000 ಶಿಶುಗಳು ಹುಟ್ಟುವಾಗಲೇ ಸಾವನ್ನಪ್ಪಿರುತ್ತವೆ. ಅಂದರೆ ವಿಶ್ವದಲ್ಲಾಗುತ್ತಿರುವ ಶಿಶು ಮರಣಗಳಲ್ಲಿ ಅತಿ ಹೆಚ್ಚು, ಶೇ. 27ರಷ್ಟು, ನಮ್ಮ ದೇಶದಲ್ಲೇ ಸಂಭವಿಸುತ್ತವೆ.

ಪ್ರತೀ ವರ್ಷ ಸುಮಾರು 2,75,000 ಸ್ತ್ರೀಯರು ಗರ್ಭಿಣಿಯರಾಗಿದ್ದಾಗ ಯಾ ಹೆರಿಗೆಯಾಗಿ 42 ದಿನಗಳೊಳಗೆ ಸಾವನ್ನಪ್ಪುತ್ತಾರೆ. ಇವುಗಳಲ್ಲೂ ಶೇ. 90ಕ್ಕಿಂತ ಹೆಚ್ಚಿನವು ಅಭಿವೃದ್ಧಿಶೀಲ ದೇಶಗಳಲ್ಲಾಗುತ್ತವೆ. ನಮ್ಮ ದೇಶದಲ್ಲಿ ವರ್ಷಕ್ಕೆ 56 ಸಾವಿರ (ಲಕ್ಷ ಜನನಗಳಲ್ಲಿ 178) ತಾಯಂದಿರು ಸಾಯುತ್ತಾರೆ; ಅಂದರೆ ವಿಶ್ವದಲ್ಲಾಗುವ ತಾಯಂದಿರ ಮರಣಗಳಲ್ಲಿ ಅತಿ ಹೆಚ್ಚಿನವು (ಶೇ. 20) ನಮ್ಮಲ್ಲಾಗುತ್ತವೆ.

ಈ ಅಂಕಿ-ಅಂಶಗಳು ನನಗಂತೂ ಬೇಸರ ಹುಟ್ಟಿಸಿವೆ. ಅಭಿವೃದ್ಧಿಯ ಹೆಸರಲ್ಲಿ ಮತ ಯಾಚಿಸುತ್ತಿರುವವರು ನನ್ನನ್ನೂ, ನನ್ನೊಳಗೆ ಬೆಳೆಯುತ್ತಿರುವ ಕಂದನನ್ನೂ ಅಣಕಿಸುತ್ತಿದ್ದಾರೆ ಎಂದೆನಿಸತೊಡಗಿದೆ. ಗಂಟಲು ಹರಿದು ಹೇಳಿಕೊಳ್ಳುತ್ತಿರುವ ಅಭಿವೃದ್ಧಿಯು ನಮ್ಮಿಬ್ಬರ ಪಾಲಿಗೆ ಮರೀಚಿಕೆಯಾಗಿದೆಯೆಂದೆನಿಸುತ್ತಿದೆ.

ತಾಯಿ-ಮಕ್ಕಳ ಆರೋಗ್ಯವು ಸಾಮಾಜಿಕ-ಆರ್ಥಿಕ-ಶೈಕ್ಷಣಿಕ ಸ್ಥಿತಿಗತಿಗಳನ್ನು ಅವಲಂಬಿಸಿರುತ್ತದೆ. ತಲಾವಾರು ಆದಾಯ, ಬಡತನ, ಸಾಮಾಜಿಕ ಸಮತೋಲನ, ಹೆಣ್ಮಕ್ಕಳ ಶಿಕ್ಷಣದ ಮಟ್ಟ, ಆರೋಗ್ಯ ಸೇವೆಗಳಲ್ಲಿ ಸರಕಾರಿ ವೆಚ್ಚದ ಪ್ರಮಾಣ, ನೈರ್ಮಲ್ಯ ಹಾಗೂ ಶುದ್ಧ ಕುಡಿಯುವ ನೀರಿನ ಲಭ್ಯತೆ, ಭ್ರಷ್ಟಾಚಾರ, ಹಿಂಸೆ ಮುಂತಾದೆಲ್ಲವೂ ತಾಯಿ-ಮಕ್ಕಳ ಆರೋಗ್ಯದ ಮೇಲೆ ಗಾಢವಾದ ಪರಿಣಾಮಗಳನ್ನು ಬೀರುತ್ತವೆ. ಹಾಗಾಗಿ, ತಾಯಿ-ಮಕ್ಕಳ ಮರಣ ಪ್ರಮಾಣಗಳು ಯಾವುದೇ ದೇಶ-ಪ್ರದೇಶದ ನಿಜಸ್ವರೂಪವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತವೆ.

ಹೆರಿಗೆಯ ವೇಳೆ ಸೂಕ್ತವಾದ ವೈದ್ಯಕೀಯ ನೆರವಿಲ್ಲದಿರುವುದು ತಾಯಿ-ಶಿಶುಗಳ ಸಾವುಗಳಿಗೆ ಅತಿ ಮುಖ್ಯವಾದ ಕಾರಣಗಳಲ್ಲೊಂದಾಗಿದೆ. ವಿಶ್ವದಲ್ಲಿ ನಾಲ್ಕು ಕೋಟಿ ತಾಯಂದಿರಿಗೆ ವೈದ್ಯರಾಗಲೀ, ದಾಯಿಯರಾಗಲೀ ದೊರೆಯುವುದಿಲ್ಲ. ನಮ್ಮ ದೇಶದಲ್ಲೂ ಅರ್ಧದಷ್ಟು ಹೆರಿಗೆಗಳು ನುರಿತ ನೆರವಿಲ್ಲದೆಯೇ ಸಂಭವಿಸುತ್ತವೆ. ಸಣ್ಣ ವಯಸ್ಸಿನಲ್ಲಿ ಹಾಗೂ ಕಡಿಮೆ ಅಂತರದಲ್ಲಿ ಗರ್ಭಿಣಿಯಾಗುವುದು, ತಾಯಂದಿರ ನ್ಯೂನ ಪೋಷಣೆ, ಅನಾರೋಗ್ಯ ಹಾಗೂ ರಕ್ತಹೀನತೆಗಳು ತಾಯಿ-ಮಗುವಿನ ಸಾವಿಗೆ ಕಾರಣಗಳಾಗುತ್ತವೆ. ಅವಧಿಪೂರ್ವ ಪ್ರಸವ, ಕುಂಠಿತ ಬೆಳವಣಿಗೆ, ಗಂಭೀರ ಸೋಂಕುಗಳು, ಹುಟ್ಟಿದೊಡನೆ ಉಸಿರಾಡಲಾಗದಿರುವುದು ಶಿಶುವಿಗೆ ಮಾರಕವಾಗಬಹುದು. ಇವೆಲ್ಲವೂ ಕಡುಬಡವರು, ಗ್ರಾಮವಾಸಿಗಳು, ಕೊಳೆಗೇರಿವಾಸಿಗಳು, ಅವಿದ್ಯಾವಂತರು ಹಾಗೂ ಅಲ್ಪಸಂಖ್ಯಾಕ ಸಮುದಾಯಗಳವರನ್ನೇ ಅತ್ಯಂತ ಹೆಚ್ಚು ಕಾಡುತ್ತವೆ. ಸರಕಾರದ ನೆರವಿದ್ದರೆ, ಸೂಕ್ತ ಆರೋಗ್ಯ ಸೇವೆಯು ಉಚಿತವಾಗಿ ಲಭ್ಯವಿದ್ದರೆ ಇವೆಲ್ಲವನ್ನೂ ಸುಧಾರಿಸಬಹುದು, ಶೇ. 70ರಷ್ಟು ತಾಯಿ-ಮಕ್ಕಳ ಸಾವುಗಳನ್ನು ತಡೆಯಬಹುದು.

ಕಳೆದ ಇಪ್ಪತ್ತೈದು ವರ್ಷಗಳಲ್ಲಾಗಿರುವ ಪ್ರಗತಿಯಿಂದ ತಾಯಿ-ಮಕ್ಕಳ ಮರಣ ಪ್ರಮಾಣದಲ್ಲಿ ಅರ್ಧದಷ್ಟು ಇಳಿಕೆಯಾಗಿದ್ದರೂ, ನಿರೀಕ್ಷಿತ ಗುರಿಯನ್ನು ತಲುಪುವುದಕ್ಕೆ ಇನ್ನೂ ಸಾಧ್ಯವಾಗಿಲ್ಲ. ಉದಾಹರಣೆಗೆ, ಜಾಗತಿಕ ಶಿಶು ಮರಣ ಪ್ರಮಾಣವು 1990ರಲ್ಲಿ ಸಾವಿರಕ್ಕೆ 63 ಇದ್ದುದು 2012ರಲ್ಲಿ 35ಕ್ಕೆ ಇಳಿಯಿತು, ತಾಯಂದಿರ ಮರಣ ಪ್ರಮಾಣವು ಲಕ್ಷಕ್ಕೆ 400 ರಿಂದ 200ಕ್ಕೆ ಇಳಿಯಿತು. ಇದೇ ವೇಳೆಯಲ್ಲಿ, ನಮ್ಮ ದೇಶದಲ್ಲಿ ಶಿಶು ಮರಣ ಪ್ರಮಾಣವು 88ರಿಂದ 42ಕ್ಕೂ, ತಾಯಂದಿರ ಮರಣ ಪ್ರಮಾಣವು 437ರಿಂದ 178ಕ್ಕೂ ಇಳಿಯಿತು. ನಾವು 2015ರ ವೇಳೆಗೆ ಶಿಶು ಮರಣ ಪ್ರಮಾಣವನ್ನು 28ಕ್ಕೆ ಹಾಗೂ ತಾಯಂದಿರ ಮರಣ ಪ್ರಮಾಣವನ್ನು 109ಕ್ಕೆ ಇಳಿಸಬೇಕಾಗಿದೆಯಾದರೂ, ಈಗಿನಂತೆಯೇ ಮುಂದುವರಿದರೆ ಶಿಶು ಮರಣ ಪ್ರಮಾಣವು 40ಕ್ಕೂ, ತಾಯಂದಿರ ಮರಣ ಪ್ರಮಾಣವು 139ಕ್ಕೂ ತಲುಪಬಹುದಷ್ಟೇ.

ತಾಯಿ-ಮಕ್ಕಳನ್ನು ರಕ್ಷಿಸುವಲ್ಲಿ ನಮ್ಮ ಎಲ್ಲಾ ರಾಜ್ಯಗಳು ಒಂದೇ ತೆರನಾದ ಪ್ರಗತಿಯನ್ನು ಸಾಧಿಸಿಲ್ಲ; ರಾಜ್ಯಗಳೊಳಗೂ ನಗರ-ಗ್ರಾಮೀಣ, ಶ್ರೀಮಂತ-ಬಡವ ಹಾಗೂ ಜಾತಿ-ಮತಗಳ ನಡುವಿನ ಅಸಮಾನತೆಗಳು ಎದ್ದು ಕಾಣುತ್ತವೆ. ಆರ್ಥಿಕವಾಗಿ ಸಬಲರಾಗಿರುವವರು ಮತ್ತು ನಗರವಾಸಿಗಳಿಗೆ ಹೋಲಿಸಿದರೆ, ಮೊದಲ ತಿಂಗಳಲ್ಲೇ ಸಾವನ್ನಪ್ಪುವ ಮಕ್ಕಳ ಪ್ರಮಾಣವು ದುರ್ಬಲ ವರ್ಗಗಳು ಹಾಗೂ ಗ್ರಾಮವಾಸಿಗಳಲ್ಲಿ ದುಪ್ಪಟ್ಟಾಗಿದೆ. ಯೋಜನಾ ಆಯೋಗದ ವರದಿಯಂತೆ, ದೇಶದ ಸರಾಸರಿ ಶಿಶು ಮರಣ ಪ್ರಮಾಣವು ಸಾವಿರಕ್ಕೆ 42ರಷ್ಟಿದ್ದರೆ, ಮಧ್ಯಪ್ರದೇಶ ಹಾಗೂ ಅಸ್ಸಾಂಗಳಲ್ಲಿ ಅತಿ ಹೆಚ್ಚು (56, 55), ಗೋವಾ ಹಾಗೂ ಕೇರಳಗಳಲ್ಲಿ ಅತಿ ಕಡಿಮೆ (10, 12) ಮತ್ತು ತಮಿಳುನಾಡಿನಲ್ಲಿ 21, ಕರ್ನಾಟಕದಲ್ಲಿ 32, ಜಾರ್ಖಂಡದಲ್ಲಿ 38, ಗುಜರಾತಿನಲ್ಲಿ 38 ಹಾಗೂ ಬಿಹಾರದಲ್ಲಿ 43ರಷ್ಟಿವೆ. ಗ್ರಾಮೀಣ ಶಿಶು ಮರಣ ಪ್ರಮಾಣವು ಸರಾಸರಿ 46ರಷ್ಟಿದ್ದು, ಗುಜರಾತಿನಲ್ಲಿ 45, ಬಿಹಾರದಲ್ಲಿ 43, ಜಾರ್ಖಂಡದಲ್ಲಿ 39, ಕರ್ನಾಟಕದಲ್ಲಿ 36, ಮಹಾರಾಷ್ಟ್ರದಲ್ಲಿ 30, ತಮಿಳುನಾಡಿನಲ್ಲಿ 24 ಹಾಗೂ ಕೇರಳದಲ್ಲಿ 13 ರಷ್ಟಿದೆ. ನಗರ ಪ್ರದೇಶಗಳ ಶಿಶು ಮರಣ ಪ್ರಮಾಣವು ಗುಜರಾತಿನಲ್ಲಿ ಸಾವಿರಕ್ಕೆ 24, ಕರ್ನಾಟಕದಲ್ಲಿ 22, ಹಾಗೂ ಕೇರಳದಲ್ಲಿ 8 ರಷ್ಟಿದೆ. ನಮ್ಮ ರಾಜ್ಯದ ಕರಾವಳಿ ಹಾಗೂ ಮಲೆನಾಡುಗಳಲ್ಲಿ ಶಿಶು ಮರಣ ಪ್ರಮಾಣವು ಸಾವಿರಕ್ಕೆ 16ರಷ್ಟಿದ್ದರೆ, ಬೆಂಗಳೂರು, ಮೈಸೂರು, ಕೋಲಾರಗಳ ಗ್ರಾಮೀಣ ಭಾಗಗಳಲ್ಲಿ 36ರಷ್ಟಿದೆ ಹಾಗೂ ರಾಯಚೂರಿನಂತಹಾ ಹಿಂದುಳಿದ ಭಾಗಗಳಲ್ಲಿ 75ರಷ್ಟಿದೆ. ಅತಿ ಹೆಚ್ಚಿನ ಶಿಶು ಮರಣಗಳಾಗುವ ಜಿಲ್ಲೆಗಳಲ್ಲಿ ಗುಜರಾತಿನ ಆರು ಹಾಗೂ ಕರ್ನಾಟಕದ ಒಂದು ಜಿಲ್ಲೆಗಳು ಸೇರಿವೆ. ಅಧಿಕ ಉತ್ಪನ್ನದ ರಾಜ್ಯಗಳ ಪೈಕಿ ಗುಜರಾತ್ ಹಾಗೂ ಹರ್ಯಾನಾಗಳು ಅತಿ ಹೆಚ್ಚಿನ ಶಿಶು ಮರಣ ಪ್ರಮಾಣವನ್ನು (38,42) ಹೊಂದಿದ್ದರೆ, ಕಡಿಮೆ ಉತ್ಪನ್ನದ ಜಾರ್ಖಂಡ್ ಹಾಗೂ ಬಿಹಾರಗಳು ಶಿಶು ಮರಣ ಪ್ರಮಾಣವನ್ನು ಇಳಿಸುವಲ್ಲಿ (39, 43) ಉತ್ತಮ ಸಾಧನೆ ಮಾಡಿವೆ. ಅಂದರೆ ತಥಾಕಥಿತ ಅದ್ಭುತ ಅಭಿವೃದ್ಧಿಯು ಗುಜರಾತ್ ಹಾಗೂ ನಮ್ಮ ರಾಯಚೂರು-ಕೊಪ್ಪಳಗಳ ತಾಯಿ-ಮಕ್ಕಳನ್ನು ಇನ್ನೂ ತಲುಪಿಲ್ಲವೆನ್ನುವುದು ಸ್ಪಷ್ಟವಾಗುತ್ತದೆ. ಜನನಿ-ಶಿಶು ಸುರಕ್ಷಾ ಕಾರ್ಯಕ್ರಮ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ ಮುಂತಾದವು ಸರ್ವವ್ಯಾಪಿಯಾಗಿಲ್ಲವೆನ್ನುವುದೂ ತಿಳಿಯುತ್ತದೆ.

ಅಭಿವೃದ್ಧಿಯು ಕೇವಲ ಬೂಟಾಟಿಕೆಯಾಗಿರದೆ ಎಲ್ಲ ವರ್ಗಗಳ ಆರ್ಥಿಕ ಮಟ್ಟ, ಶಿಕ್ಷಣ ಹಾಗೂ ಆರೋಗ್ಯವನ್ನು ಸುಧಾರಿಸುವಂಥದ್ದಾಗಿರಬೇಕು. ಹೆತ್ತವರ ಸ್ಥಿತಿಗತಿಯಾಗಲೀ, ಹುಟ್ಟುವ ಊರಿನ ಆಡಳಿತ ವ್ಯವಸ್ಥೆಯಾಗಲೀ ಮಗುವಿನ ಉಳಿಯುವಿಕೆಯನ್ನು ನಿರ್ಧರಿಸುವಂತಾಗಬಾರದು. ಗರ್ಭಿಣಿಯರು ಹಾಗೂ ನವಜಾತ ಶಿಶುಗಳಿಗೆ ಉಚಿತವಾಗಿ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸುವುದು, ತಾಯಂದಿರಿಗೆ ಶಿಶುಪಾಲನೆಯಲ್ಲಿ ನೆರವಾಗುವುದು ಹಾಗೂ ತಕ್ಕ ಶಿಕ್ಷಣವನ್ನು ಒದಗಿಸುವುದು, ತಾಯಿ-ಮಕ್ಕಳಿಗೆ ಸೂಕ್ತ ಪೋಷಣೆಯೊದಗಿಸುವುದು, ನಿರ್ಮಲೀಕರಣ ಮತ್ತು ಶುದ್ಧ ನೀರಿನ ಪೂರೈಕೆ ಇವೇ ಮುಂತಾದವುಗಳು ಎಲ್ಲಾ ಪಕ್ಷಗಳ ಮೊದಲ ಆದ್ಯತೆಗಳಾಗಬೇಕು. ತಾಯಿ-ಮಕ್ಕಳ ಹಿತ ಕಾಯುವ ಇಚ್ಛಾಶಕ್ತಿಯಿಲ್ಲದವರು ಒಳ್ಳೆಯ ನಾಯಕರಾಗಲಾರರು.

ನಲವತ್ತೈದನೇ ಬರಹ : ಸೇವೆಯ ಹಂಗು ಕಳಚಿಕೊಂಡ ಆರೋಗ್ಯಕ್ಷೇತ್ರ [ಮಾರ್ಚ್ 5, 2014, ಬುಧವಾರ] [ನೋಡಿ | ನೋಡಿ]

ವೈದ್ಯಕೀಯ ಸೇವೆಗಳ ವ್ಯಾಪಾರೀಕರಣ ಕೇವಲ ಯಾವುದೋ ಜಾತಿ, ಮತ, ಭಾಷೆ, ಪಕ್ಷಗಳಿಗೆ ಸೇರಿದವರಿಗೆ ಮಾತ್ರ ಸೀಮಿತವಾಗಿಲ್ಲ

ವೈದ್ಯವೃತ್ತಿಯು ಧನ್ವಂತರಿಯಿಂದ ಧನವಂತರಿಗೆ ಹಸ್ತಾಂತರಗೊಂಡ ವೃತ್ತಾಂತವಿದು. ಈ ಘಟನಾವಳಿಗಳ ಪಾತ್ರಧಾರಿಗಳು -ಸೂತ್ರಧಾರಿಗಳೆಲ್ಲ ಸರ್ವಶಕ್ತರೂ, ಸರ್ವಗುಣಸಂಪನ್ನರೂ, ಸರ್ವಾಂತರ್ಯಾಮಿಗಳೂ, ಸರ್ವಪರಿಚಿತರೂ ಆಗಿರುವುದರಿಂದ ಯಾರ ಹೆಸರೂ ಬೇಕಿಲ್ಲ.

ಒಂದಾನೊಂದು ಕಾಲದಲ್ಲಿ, ಅಂದರೆ ಸುಮಾರು ಎರಡು ಲಕ್ಷ ವರ್ಷಗಳಿಂದ ತೊಡಗಿ ಮೂರ್ನಾಲ್ಕು ಸಾವಿರ ವರ್ಷಗಳ ಹಿಂದಿನವರೆಗೆ, ಮನುಷ್ಯರು ತಮ್ಮ ಕಾಯಿಲೆಗಳಿಗೆ ಅತ್ತಿತ್ತ ಸಿಕ್ಕ ಮೂಲಿಕೆಗಳಲ್ಲೋ, ಪ್ರಾಣಿಗಳಲ್ಲೋ ಪರಿಹಾರ ಹುಡುಕುತ್ತಿದ್ದರು. ಅದರಲ್ಲಿ ನಿಷ್ಣಾತರಾದವರು ವೈದ್ಯರೆನಿಸಿಕೊಂಡರು; ನಮ್ಮ ಧನ್ವಂತರಿ, ಅಶ್ವಿನಿ ಕುಮಾರರು, ಗ್ರೀಸಿನ ಎಸ್ಕಲೀಪಿಯಸ್ ಮುಂತಾದ ವೈದ್ಯೋತ್ತಮರು ಪೂಜ್ಯ ದೇವತೆಗಳಾದರು. ಇತ್ತೀಚಿನವರೆಗೂ ಅತ್ಯುನ್ನತವಾದ ಘನತೆ-ಗೌರವಗಳು ವೈದ್ಯವೃತ್ತಿಗೇ ಮೀಸಲಾಗಿದ್ದವು.

ಈಗಿನ ಹದಿನಾರನೇ ಶತಮಾನದವರೆಗೆ ರಾಜಾಶ್ರಯದ ಆಯುರ್ವೇದ ಹಾಗೂ ಯುನಾನಿ ಆಸ್ಪತ್ರೆಗಳು ನಮ್ಮಲ್ಲಿದ್ದವು. ನಂತರ 16-17ನೇ ಶತಮಾನಗಳಲ್ಲಿ ಪೋರ್ಚುಗೀಸರು ಹಾಗೂ ಬ್ರಿಟಿಷರು ಯೂರೋಪಿನ ವೈದ್ಯವಿಜ್ಞಾನವನ್ನು ಇಲ್ಲಿಗೆ ತಂದರು. ಅವರ ಸೈನಿಕರು ಹಾಗೂ ಅಧಿಕಾರಿಗಳ ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಗಳು ಆರಂಭಗೊಂಡವು, ಕ್ರಮೇಣ ಅವು ನಮ್ಮವರಿಗೂ ತೆರೆದುಕೊಂಡವು. ಮುಂದೆ 1835ರಲ್ಲಿ ಕೊಲ್ಕಾತಾ ಹಾಗೂ ಮದ್ರಾಸುಗಳಲ್ಲೂ, 1845ರಲ್ಲಿ ಬಾಂಬೆಯಲ್ಲೂ ಬ್ರಿಟಿಷ್ ಸರಕಾರದ ವೈದ್ಯಕೀಯ ಕಾಲೇಜುಗಳು ಆರಂಭಗೊಂಡವು. ನಮ್ಮೂರಿಗೆ ಮದ್ರಾಸ್ ಪ್ರಾಂತ್ಯದ ಗವರ್ನರನ ಹೆಸರಲ್ಲಿ 1848ರಲ್ಲೊಂದು ಆಸ್ಪತ್ರೆ ಬಂತು, ನಂತರ ಇನ್ನೊಬ್ಬ ಗವರ್ನರ್-ಪತ್ನಿಯ ಹೆಸರಲ್ಲಿ ಸ್ತ್ರೀಯರಿಗೊಂದು ಆಸ್ಪತ್ರೆಯೂ ಬಂತು. ಬ್ರಿಟಿಷರಾಳ್ವಿಕೆ ಮುಗಿದಾಗ ಇವು ನಮ್ಮ ಸರಕಾರದ ಸೊತ್ತಾದವು.

ಹೀಗೆ ಆ ಕಾಲದಲ್ಲಿ ಹೆಚ್ಚಿನ ದೊಡ್ಡ ಆಸ್ಪತ್ರೆಗಳನ್ನೂ, ವೈದ್ಯಕೀಯ ಕಾಲೇಜುಗಳನ್ನೂ ಸರಕಾರವೇ ನಡೆಸುತ್ತಿತ್ತು. ಕೆಲವು ಆಸ್ಪತ್ರೆಗಳನ್ನು ಧಾರ್ಮಿಕ ಸಂಸ್ಥೆಗಳು ನಡೆಸುತ್ತಿದ್ದವಾದರೂ, ಖಾಸಗಿ ಆಸ್ಪತ್ರೆಗಳು ಅತಿ ವಿರಳವಾಗಿದ್ದವು, ಖಾಸಗಿ ವೈದ್ಯಕೀಯ ಕಾಲೇಜುಗಳಂತೂ ಇರಲೇ ಇಲ್ಲ. ಆದರೆ ಆ ಕಾಲದಲ್ಲಿ ಖಾಸಗಿ ವಹಿವಾಟು ಇರಲಿಲ್ಲವೆಂದಲ್ಲ; ನಮ್ಮ ಜಿಲ್ಲೆಯೊಂದರಲ್ಲೇ 1920ರ ದಶಕದಲ್ಲಿ ಐದು ಖಾಸಗಿ ಬ್ಯಾಂಕುಗಳು ಸ್ಥಾಪಿಸಲ್ಪಟ್ಟಿದ್ದವು. ವ್ಯವಹಾರ ಕುಶಲರನ್ನು ಬ್ಯಾಂಕುಗಳು ಆಕರ್ಷಿಸಿದ್ದವು, ಆಸ್ಪತ್ರೆಗಳಲ್ಲ.

ಸ್ವಾತಂತ್ರ್ಯಾನಂತರದ  ವರ್ಷಗಳಲ್ಲಿ ಖಾಸಗಿ ವಹಿವಾಟು ಬೆಳೆದಂತೆ ಕೆಲವರು ವೈದ್ಯಕೀಯ ಕ್ಷೇತ್ರದತ್ತವೂ ಹೊರಳಿದರು. ಖಾಸಗಿ ವೈದ್ಯಕೀಯ ಕಾಲೇಜು ಒಳ್ಳೆಯ ಹೂಡಿಕೆಯೆಂದು ಬಗೆದವರೊಬ್ಬರು ಅದನ್ನು ಆರಂಭಿಸಿಯೇ ಬಿಟ್ಟರು. ಆದರೆ ಅವರ ಬಳಿ  ಆಸ್ಪತ್ರೆಯಿರಲಿಲ್ಲವಾಗಿ ರಾಜ್ಯ ಸರಕಾರವು ತನ್ನ ಅಧೀನದಲ್ಲಿದ್ದ ಆಸ್ಪತ್ರೆಗಳೆರಡನ್ನು ಅವರ ವಶಕ್ಕೊಪ್ಪಿಸಿತು. ಹೀಗೆ ಸರಕಾರಿ ಆಸ್ಪತ್ರೆಯಲ್ಲಿ ಖಾಸಗಿ ವೈದ್ಯಕೀಯ ಕಾಲೇಜಿನ ಯುಗಾರಂಭವಾಯಿತು.

ಖಾಸಗಿ ಕಾಲೇಜಿನ ತಜ್ಞ ವೈದ್ಯರು ಸರಕಾರಿ ಆಸ್ಪತ್ರೆಯೊಳಕ್ಕೆ ಬಂದರು. ಹುಟ್ಟಿನಲ್ಲೇ ವಿಶ್ವಶ್ರೇಷ್ಠವೆಂದು ಸ್ವಯಂಘೋಷಿಸಿಕೊಂಡ ಕಾಲೇಜಿನಲ್ಲಿ ಖ್ಯಾತ ಪ್ರೊಫೆಸರುಗಳಾದ ಭಾಗ್ಯಕ್ಕಾಗಿ ಅವರಿಗೆಲ್ಲ ಅಲ್ಪ ಸಂಬಳವಷ್ಟೇ ದಕ್ಕಿತು, ಹೊಟ್ಟೆಪಾಡಿಗಾಗಿ ಅವರೆಲ್ಲರೂ ಹೊರಗೆ ದುಡಿದುಕೊಳ್ಳಬೇಕಾಯಿತು. ಹೀಗೆ ಖಾಸಗಿ ವೈದ್ಯಶಿಕ್ಷಣವು ಅರೆಕಾಲಿಕವಾಯಿತು; ಶಿಕ್ಷಣ ಹಾಗೂ ಸಂಶೋಧನೆಯ ಗುಣಮಟ್ಟಗಳು ಗೌಣವಾದವು.

ಸರಕಾರಿ ಆಸ್ಪತ್ರೆಗಳನ್ನು ಬಳಸಿಕೊಂಡು ಕಾಸಿಗಾಗಿ ಸೀಟು ಕೊಟ್ಟ ಖಾಸಗಿ ಕಾಲೇಜು ಬೆಳೆಯುತ್ತಲೇ ಸಾಗಿತು. ತನ್ನದೇ ಆಸ್ಪತ್ರೆಯನ್ನು ಕಟ್ಟಿಕೊಂಡಿತಲ್ಲದೆ ಸರಕಾರಿ ಆಸ್ಪತ್ರೆಗಳನ್ನೂ ಉಳಿಸಿಕೊಂಡಿತು, ಒಂದಿದ್ದ ಕಾಲೇಜು ಎರಡಾಯಿತು! ಅತ್ತ ಸರಕಾರವೂ ತನ್ನ ಆಸ್ಪತ್ರೆಗಳನ್ನು ಮರೆಯಿತು; ಅನ್ಯರಿಗೊಪ್ಪಿಸಿದ ಆಸ್ಪತ್ರೆಗಳಲ್ಲಿ ತಾನೇನೂ ಮಾಡೆನೆಂದಿತು. ಖಾಸಗಿ ಕಾಲೇಜು ಮತ್ತದರ ಆಸ್ಪತ್ರೆಗಳು ಬೆಳೆಯುತ್ತಾ ಹೋದವು, ಅವಕ್ಕೆ ಮೂಲ ಸೌಲಭ್ಯವಾಗಿದ್ದ ಸರಕಾರಿ ಆಸ್ಪತ್ರೆಗಳು ಸೊರಗಿದವು.

ತೊಂಭತ್ತರ ದಶಕದಲ್ಲಿ ಖಾಸಗೀಕರಣದ ಗಾಳಿ ಜೋರಾಗುತ್ತಿದ್ದಂತೆ ಶಿಕ್ಷಣ, ಆರೋಗ್ಯ ಇತ್ಯಾದಿಗಳು ಸರಕಾರದ ಅಲಕ್ಷ್ಯಕ್ಕೀಡಾದವು. ರಾಜರು, ಬ್ರಿಟಿಷರ ನಂತರ ಚುನಾಯಿತ ಸರಕಾರಗಳು ನಿರ್ವಹಿಸುತ್ತಿದ್ದ ಸಾರ್ವಜನಿಕ ಆಸ್ಪತ್ರೆಗಳೀಗ ಬೇಡವೆನಿಸಿದವು. ಪೂರ್ಣಕಾಲಿಕ ಶಿಕ್ಷಕರುಳ್ಳ ಸರಕಾರಿ ವೈದ್ಯಕೀಯ ಕಾಲೇಜುಗಳೂ ಬೇಡವಾಗಿ ಅರೆಕಾಲಿಕ ಶಿಕ್ಷಕರ ಖಾಸಗಿ ಕಾಲೇಜುಗಳಿಗೆ ಮನ್ನಣೆ ಹೆಚ್ಚಿತು. ಕರಾವಳಿಯಲ್ಲಿ ಎದ್ದಿದ್ದ ಖಾಸಗಿ ವೈದ್ಯಶಿಕ್ಷಣದ ಗಾಳಿಯು ನಮ್ಮ ರಾಜ್ಯಕ್ಕಿಡೀ ಹರಡಿ, ದಕ್ಷಿಣ ಭಾರತವನ್ನು ಹಾದು ದೇಶದ ಇತರೆಡೆಗಳಲ್ಲೂ ಬೀಸತೊಡಗಿತು. ಬದಲಾದ ಕಾಲದಲ್ಲಿ ಇಪ್ಪತ್ತರ ದಶಕದ ಖಾಸಗಿ ಬ್ಯಾಂಕುಗಳು ಸರಕಾರಿಯಾದವು, ಸರಕಾರವು ನಡೆಸಬೇಕಿದ್ದ ಆಸ್ಪತ್ರೆಗಳೂ, ಕಾಲೇಜುಗಳೂ ಖಾಸಗಿಯಾದವು, ಈ ಖಾಸಗಿ ಸಂಸ್ಥೆಗಳಿಗೆ ಸರಕಾರಿ ಬ್ಯಾಂಕುಗಳೇ ಕೋಟಿಗಟ್ಟಲೆ ಸಾಲ ಕೊಟ್ಟವು!

ತೊಂಭತ್ತರ ಅಂತ್ಯಕ್ಕೆ ವೈದ್ಯ ಶಿಕ್ಷಣವನ್ನು ನಿಯಂತ್ರಿಸುವ ಪರಿಷತ್ತಿಗೆ ಹೊಸ ಅಧ್ಯಕ್ಷರು ಬಂದರು. ಹೊಸ ಕಾಲೇಜನ್ನು ತೆರೆಯುವುದಕ್ಕೆ ಹೊಸ ಸೂತ್ರಗಳು ಕೂಡಾ ಬಂದವು. ಕಬ್ಬಿಣ, ಉಕ್ಕು, ಮರ, ಮರಳು, ಶರಾಬು, ಹೋಟೇಲು ಇತ್ಯಾದಿ ಉದ್ಯಮಿಗಳಿಂದ ಅವರವರ ಜಾತಿ, ಮತ, ಭಾಷೆಗಳ ಉದ್ಧಾರಕ್ಕಾಗಿ, ಅಜ್ಜ, ಅಜ್ಜಿ, ಅಪ್ಪ, ಅಮ್ಮ, ಅಣ್ಣ, ತಮ್ಮ, ಭಾವ, ಅತ್ತಿಗೆಯರ ಹೆಸರಲ್ಲಿ ವೈದ್ಯಕೀಯ ಕಾಲೇಜುಗಳು ಸ್ಥಾಪನೆಗೊಂಡವು. ತೊಂಭತ್ತರ ವೇಳೆಗೆ 143ರಷ್ಟಿದ್ದ ಕಾಲೇಜುಗಳ ಸಂಖ್ಯೆ 384ಕ್ಕೆ ಜಿಗಿಯಿತು; ಅವುಗಳಲ್ಲಿ ಶೇ. 70ರಷ್ಟುಖಾಸಗಿ ರಂಗದಲ್ಲಿ, ಶೇ. 41ರಷ್ಟು ದಕ್ಷಿಣ ಭಾರತದಲ್ಲಿ ತೆರೆದವು. ಖಾಸಗಿ ವೈದ್ಯಶಿಕ್ಷಣಕ್ಕೆ ಇಷ್ಟೊಂದು ಚೇತನವನ್ನು ತುಂಬಿದ್ದ ಅಧ್ಯಕ್ಷರು ಐದು ವರ್ಷಗಳಲ್ಲಿ ದಿಲ್ಲಿ ಉಚ್ಛ ನ್ಯಾಯಾಲಯದ ಆಣತಿಯಂತೆ ಉಚ್ಚಾಟನೆಗೊಂಡರು. ಎಂಟು ವರ್ಷ ಹೊರಗಿದ್ದರೂ ಒಳಗಿದ್ದಂತಿದ್ದು ಮತ್ತೆ ಪರಿಷತ್ತಿನೊಳಗೆ ಬಂದರು, ಎರಡು ವರ್ಷಗಳ ಬಳಿಕ ಜೈಲು ಪಾಲಾದರು. ಅವರೀಗ ಮತ್ತೊಮ್ಮೆ ಗುಜರಾತಿನಿಂದ ದಿಲ್ಲಿ ತಲುಪಿದ್ದಾರೆ, ಪರಿಷತ್ತಿನ ಬಾಗಿಲಲ್ಲಿ ಅವರನ್ನು ತಡೆದ ಆರೋಗ್ಯ ಕಾರ್ಯದರ್ಶಿ ಎತ್ತಂಗಡಿಗೊಂಡಿದ್ದಾರೆ. ಎಲ್ಲ ಜಾತಿ, ಮತ, ಭಾಷೆ, ಪಕ್ಷಗಳನ್ನು ಬೆಸೆಯುವ ಖಾಸಗಿ ವೈದ್ಯ ಶಿಕ್ಷಣದ ಮಹಿಮೆ ಅತ್ಯಪಾರ!

ವೈದ್ಯಕೀಯ ಪರಿಷತ್ತಿನ ಅಧ್ಯಕ್ಷರಷ್ಟೇ ಅಲ್ಲ, ಪ್ರವೇಶ ಪರೀಕ್ಷೆಯ ಅಧಿಕಾರಿಗಳು, ಆರೋಗ್ಯ ವಿವಿಯ ಕುಲಸಚಿವರು, ಕೇಂದ್ರದ ಆರೋಗ್ಯ ಸಚಿವರು ಮತ್ತು ಸರ್ವೋಚ್ಛ ನ್ಯಾಯಾಧೀಶರು ಕೂಡಾ ಖಾಸಗಿ ವೈದ್ಯಶಿಕ್ಷಣದ ಹಣದಾಟದಲ್ಲಿ ಸಂಶಯಕ್ಕೀಡಾಗಿದ್ದಾರೆ. ಸರಕಾರ ಹಾಗೂ ಖಾಸಗಿ ಆಡಳಿತಗಳ ನಡುವೆ ಸರಣಿ ವ್ಯಾಜ್ಯಗಳಾಟದಲ್ಲಿ ಸರಕಾರವು ಸೋಲುತ್ತಲೇ ಸಾಗಿದೆ. ಎಂಬಿಬಿಎಸ್ ಗೆ 50 ಲಕ್ಷ, ಎಂಡಿ/ಎಂಎಸ್ ಗಳಿಗೆ 1-4 ಕೋಟಿ ದರವೆನ್ನುವ ಸುದ್ದಿಗಳ ನಡುವೆ ಪ್ರವೇಶ ಪರೀಕ್ಷೆಗಳೆಲ್ಲ ಖಾಸಗಿ ಕೈಯೊಳಗಾಗಿವೆ; ಪ್ರತಿಭೆ, ಸಾಮಾಜಿಕ ನ್ಯಾಯ, ವೈದ್ಯರ ಗುಣಮಟ್ಟಗಳೆಲ್ಲ ಗೌಣವಾಗಿ ಹೋಗಿವೆ. ಜಾತಿ, ಮತ, ಭಾಷೆಗಳ ಉದ್ಧಾರಕ್ಕೆ ಹೊರಟವರು ಮರೆತು ಹಾಯಾಗಿದ್ದಾರೆ, ನೆನಪಿಸಬೇಕಾದ ಸರಕಾರ ಕಣ್ಮುಚ್ಚಿ ಕುಳಿತಿದೆ.

ಬೆಳೆದು ನಿಂತ ಖಾಸಗಿ ಕಾಲೇಜುಗಳು ವಿಶ್ವವಿದ್ಯಾಲಯಗಳೆಂದು ಪರಿಗಣಿಸಲ್ಪಟ್ಟು ಶಿಕ್ಷಕರ ನೇಮಕ, ವಿದ್ಯಾರ್ಥಿಗಳ ಪ್ರವೇಶ, ಪಠ್ಯಕ್ರಮ, ಪರೀಕ್ಷೆಗಳೆಲ್ಲವನ್ನೂ ತಾವೇ ನಿಯಂತ್ರಿಸತೊಡಗಿವೆ. ಪೂರ್ಣಕಾಲಿಕ, ಅರೆಕಾಲಿಕ ಶಿಕ್ಷಕರಲ್ಲದೆ ವೈದ್ಯಕೀಯ ಪರಿಷತ್ತಿಗೆ ಮುಖ ತೋರಿಸಿ ಮಾಯವಾಗುವ ಕ್ಷಣಕಾಲಿಕ ಶಿಕ್ಷಕರೂ ಲೆಕ್ಕಕ್ಕಿರುವಂತಾಗಿದೆ. ವೈದ್ಯವಿಜ್ಞಾನವು ಬೆಳೆದು ಸಂಕೀರ್ಣಗೊಳ್ಳುತ್ತಿರುವಲ್ಲಿ ಖಾಸಗಿ ವೈದ್ಯ ಶಿಕ್ಷಣವು ಸರಳಗೊಂಡು ಸುಲಭವಾಗುತ್ತಿದೆ. ಸಾವಿರಾರು ಪುಟಗಳ ಪುಸ್ತಕಗಳಿದ್ದಲ್ಲಿ ಪುಟ್ಟ ಕೈಪಿಡಿಗಳೂ, ಪ್ರಶ್ನೋತ್ತರ ಮಾಲಿಕೆಗಳೂ ಉದ್ಗೃಂಥಗಳಂತಾಗಿವೆ. ಮೊದಲೆಲ್ಲ ರಾಜ್ಯದಾಚೆಯ ವಿವಿಗಳಿಂದ ಬಾಹ್ಯ ಪರೀಕ್ಷಕರು ಬರುತ್ತಿದ್ದರೆ, ಈಗ ಅಲ್ಲಲ್ಲಿ ವಿವಿಗಳಾಗಿ ರಸ್ತೆಯಾಚೆಯಿಂದಲೇ ಬರುವಂತಾಗಿದೆ. ಎಂಬಿಬಿಎಸ್-ಎಂಡಿ ಪರೀಕ್ಷೆಗಳ ಫಲಿತಾಂಶಗಳು ಎಸ್ಸೆಸ್ಸೆಲ್ಸಿ-ಪಿಯುಸಿ ಫಲಿತಾಂಶಗಳನ್ನು ಮೀರಿಸತೊಡಗಿವೆ. ಖಾಸಗಿ ಆಡಳಿತಗಳು ಹೆತ್ತವರಿಂದ ಪಡೆದ ಹಣವನ್ನು ಅಲ್ಲಿಲ್ಲಿ ಹಂಚಿ, ಲಾಭವನ್ನೂ ಉಳಿಸಿ, ವಿದ್ಯಾರ್ಥಿಯ ಕೈಗೊಂದು ಪದವಿಪತ್ರ ಕೊಡುವಂತಾಗಿದೆ.

ದೊಡ್ಡ ಖಾಸಗಿ ಆಸ್ಪತ್ರೆಗಳೂ ಅಲ್ಲಲ್ಲಿ ತಲೆಯೆತ್ತುತ್ತಿವೆ; ದೇಶ-ವಿದೇಶಗಳ ದೈತ್ಯ ಕಂಪೆನಿಗಳೆಲ್ಲ ಆಸ್ಪತ್ರೆಗಳನ್ನು ತೆರೆಯತೊಡಗಿವೆ, ಔಷಧಗಳು ಹಾಗೂ ಲಸಿಕೆಗಳಲ್ಲಿ ಹಣ ಹೂಡತೊಡಗಿವೆ. ಬೃಹತ್ ಜಾಹೀರಾತುಗಳು, ದರ ಕಡಿತದ ಆಮಿಷಗಳು, ಬಗೆಬಗೆಯ ವಿಮಾ ಯೋಜನೆಗಳು, ಮಾಧ್ಯಮ ಪ್ರಚಾರಗಳು ಇತ್ಯಾದಿಗಳಿಗೆಲ್ಲ ಮರುಳಾಗಿ ಒಳಹೊಕ್ಕಿದವರನ್ನು ನಖಶಿಖಾಂತ ಯಂತ್ರದೊಳಕ್ಕೆ ನೂಕಿ, ಪುಟಗಟ್ಟಲೆ ವರದಿಯೆಬ್ಬಿಸಿ, ಚೀಲಗಟ್ಟಲೆ ಮದ್ದು ತುಂಬಿಸಿ, ಕಿಸೆ ಹರಿದು ಕಳಿಸುವುದು ಸಾಮಾನ್ಯವಾಗುತ್ತಿದೆ. ಈ ಖಾಸಗಿ ಆಸ್ಪತ್ರೆಗಳು ಬಡವರಿಗೆ ಚಿಕಿತ್ಸೆ ನೀಡುವುದಕ್ಕೆಂದು ಸರಕಾರದಿಂದ ಭೂಮಿಯನ್ನೂ, ಬಗೆಬಗೆಯ ತೆರಿಗೆ ವಿನಾಯಿತಿಗಳನ್ನೂ ಪಡೆಯುತ್ತವೆ, ನಂತರ ಮಾತಿಗೆ ತಪ್ಪುತ್ತವೆ. ಸರಕಾರವು ಅವುಗಳ ಮೇಲೆ ಕ್ರಮ ಕೈಗೊಳ್ಳುವ ಬದಲು ತನ್ನ ಆಸ್ಪತ್ರೆಗಳನ್ನೂ ಪಾಳುಬಿಡುತ್ತದೆ, ಕೆಲವನ್ನು ಖಾಸಗಿಯವರಿಗೇ ಕೊಟ್ಟುಬಿಡುತ್ತದೆ; ತನ್ನ ಸಿಬಂದಿಯೂ ಸೇರಿದಂತೆ ಎಲ್ಲರನ್ನೂ ಇಂತಹಾ ಆಸ್ಪತ್ರೆಗಳಿಗೆ ಹೋಗುವಂತೆ ಪ್ರೇರೇಪಿಸುತ್ತದೆ, ಮಾತ್ರವಲ್ಲ, ವಿವಿಧ ಯೋಜನೆಗಳ ಹೆಸರಲ್ಲಿ ಬೊಕ್ಕಸದ ಹಣವನ್ನೂ ಅವುಗಳಿಗೆ ಸುರಿಯುತ್ತದೆ.

ಧನ್ವಂತರಿಯ ಉದಾತ್ತವಾದ ವಿದ್ಯೆಯೂ, ಜೀವಕ್ಕೆ ಅತ್ಯಮೂಲ್ಯವಾದ ಚಿಕಿತ್ಸೆಯೂ ಧನವಂತರಿಗಷ್ಟೇ ಲಭ್ಯವೆನ್ನುವ ದುಸ್ಥಿತಿಯನ್ನು ಈ ಕೂಡಲೇ ಸರಿಪಡಿಸಬೇಕಾಗಿದೆ. ಇದು ಸಾಧ್ಯವಾಗಬೇಕಾದರೆ ತಮ್ಮ ವೃತ್ತಿಗೌರವದ ಬಗ್ಗೆ ಕಾಳಜಿಯಿರುವ ವೈದ್ಯರೇ ಒಗ್ಗೂಡಿ ಮುಂದಡಿಯಿಡಬೇಕಾಗಿದೆ.

ನಲವತ್ನಾಲ್ಕನೇ ಬರಹ : ಆರೋಗ್ಯ ಭಾಗ್ಯಕ್ಕೆ ಖಾಸಗಿ ಆಸ್ಪತ್ರೆಯೇ ಬೇಕೆ? [ಫೆಬ್ರವರಿ 19, 2014, ಬುಧವಾರ] [ನೋಡಿ | ನೋಡಿ]

ಎಲ್ಲ ಜನರನ್ನು ಕಾಡುವ ಶೇ. 99ರಷ್ಟು ಸಾಮಾನ್ಯ ರೋಗಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಭಾಗ್ಯವೇ ಇಲ್ಲ

ಯಶಸ್ವಿನಿ, ನಗರ ಯಶಸ್ವಿನಿ, ವಾಜಪೇಯಿ ಆರೋಗ್ಯಶ್ರೀ, ತಾಯಿ ಭಾಗ್ಯ, ಬಾಲ ಸಂಜೀವಿನಿ, ರಾಜೀವ ಆರೋಗ್ಯ ಭಾಗ್ಯ….ಖಾಸಗಿ ಆಸ್ಪತ್ರೆಗಳಲ್ಲಿ ಸಹಕಾರಿ-ಸರಕಾರಿ ವೆಚ್ಚದಲ್ಲಿ ಚಿಕಿತ್ಸೆ ಒದಗಿಸುವ ಯೋಜನೆಗಳ ಪಟ್ಟಿ ಬೆಳೆಯುತ್ತಲೇ ಇದೆ. ಸರಕಾರವು ಇಂತಹಾ ಹೊಸ ಹೊಸ ಯೋಜನೆಗಳನ್ನು ಆರಂಭಿಸುವ ಹುರುಪಿನಲ್ಲಿದ್ದರೆ, ಖಾಸಗಿ ಆಸ್ಪತ್ರೆಗಳವರು ಇವು ನಷ್ಟದಾಯಕವೆಂದು ಪ್ರತಿಭಟನೆಗಿಳಿದಿದ್ದಾರೆ.

ಒಂದು ದಶಕದ ಹಿಂದೆ ಆರಂಭಗೊಂಡ ಯಶಸ್ವಿನಿ ಯೋಜನೆಯು ಈಗ ರಾಜ್ಯದ 476 ಆಸ್ಪತ್ರೆಗಳಲ್ಲಿ 805ರಷ್ಟು ಬಗೆಯ ಶಸ್ತ್ರಚಿಕಿತ್ಸೆಗಳನ್ನು ಒದಗಿಸುತ್ತಿದೆ; ಇದುವರೆಗೆ ರೂ. 512 ಕೋಟಿ ವೆಚ್ಚದಲ್ಲಿ 5,80,000ಕ್ಕೂ ಹೆಚ್ಚು ಶಸ್ತ್ರಕ್ರಿಯೆಗಳನ್ನು ನಡೆಸಲಾಗಿದೆ. ಅದು ಇಡೀ ವಿಶ್ವದಲ್ಲೇ ರೈತರ ಏಳಿಗೆಗಾಗಿ, ಆರೋಗ್ಯ ರಕ್ಷಣೆಗಾಗಿ ಸ್ಥಾಪಿಸಿದ ಏಕೈಕ ಯೋಜನೆಯೆಂದೂ, ದೇಶದಾದ್ಯಂತ ಒಂದು ಹೊಸ ಅಲೆಯನ್ನೇ ಸೃಷ್ಟಿಸಿದೆಯೆಂದೂ ಸರಕಾರವು ಹೇಳಿಕೊಳ್ಳುತ್ತಿದೆ.

ಯಶಸ್ವಿನಿ ಯೋಜನೆಯನ್ನು ಸ್ವ-ಬಂಡವಾಳದ ಖಾಸಗಿ ಯೋಜನೆಯಾಗಿ ರೂಪಿಸಲಾಗಿತ್ತು. ಖಾಸಗಿ ಆಸ್ಪತ್ರೆಗಳು ಸರಾಸರಿ 35% ಮಾತ್ರವೇ ತುಂಬಿರುತ್ತಿದ್ದುದು ಹಾಗೂ ಶಸ್ತ್ರಕ್ರಿಯೆಗಳು ಇನ್ನೂ ಕಡಿಮೆ ಪ್ರಮಾಣದಲ್ಲಿದ್ದುದು ಈ ಯೋಜನೆಗೆ ಮೂಲ ಪ್ರೇರಣೆಯಾಗಿದ್ದವು. ನೂರರಲ್ಲಿ ಒಬ್ಬಿಬ್ಬರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವುಂಟಾಗಬಹುದು ಹಾಗೂ ಶಸ್ತ್ರಕ್ರಿಯೆಯೊಂದಕ್ಕೆ ಸರಾಸರಿ ಹತ್ತು ಸಾವಿರ ರೂಪಾಯಿ ಪಡೆಯಬಹುದೆನ್ನುವ ಲೆಕ್ಕದಲ್ಲಿ ಈ ಸಾಮುದಾಯಿಕ ಯೋಜನೆಯನ್ನು ಆರಂಭಿಸಲಾಯಿತು. ಸಾಧ್ಯವಿರುವಷ್ಟು ಹೆಚ್ಚು ಜನರನ್ನು ನೋಂದಾಯಿಸಿಕೊಳ್ಳುವುದಕ್ಕಾಗಿ ಸಹಕಾರಿ ಸಂಘಗಳತ್ತ ತಿರುಗಲಾಯಿತು, ಅದಕ್ಕಾಗಿ ಸರಕಾರದ ನೆರವನ್ನೂ ಪಡೆಯಲಾಯಿತು. ಹೀಗೆ ಮೊದಲ ವರ್ಷದಲ್ಲಿ ರೈತರ ಸಹಕಾರಿ ಸಂಘಗಳ ಮೂಲಕ 16 ಲಕ್ಷ ಸದಸ್ಯರು ತಲಾ 60 ರೂಪಾಯಿ ನೀಡಿ ಯೋಜನೆಯನ್ನು ಸೇರಿಕೊಂಡರು, ಪ್ರತೀ ಸದಸ್ಯನಿಗೆ 30 ರೂಪಾಯಿ ಸೇರಿಸುವುದಕ್ಕೆ ಸರಕಾರವೂ ಒಪ್ಪಿಕೊಂಡಿತು. ಹೀಗೆ ಖಾಸಗಿ ಯೋಜನೆಗೆ ಸರಕಾರಿ ಖಾತರಿ ದೊರೆಯಿತು, ವಿನೂತನ ಯೋಜನೆಯೊಂದನ್ನು ಆರಂಭಿಸಿದ ಹೆಮ್ಮೆ ಸರಕಾರದ್ದಾಯಿತು.

ಮೊದಲ ವರ್ಷದಲ್ಲಿ 16 ಲಕ್ಷ ಸದಸ್ಯರಿಂದ ಸಂಗ್ರಹಿಸಲಾದ 9.7 ಕೋಟಿ ಹಾಗೂ ಸರಕಾರ ಒದಗಿಸಿದ 4.5 ಕೋಟಿ (ಒಟ್ಟು 14 ಕೋಟಿ 20 ಲಕ್ಷ) ಹಣದಲ್ಲಿ 10 ಕೋಟಿ 65 ಲಕ್ಷವನ್ನು ಬಳಸಿ 9047 ಶಸ್ತ್ರಕ್ರಿಯೆಗಳನ್ನು ನಡೆಸಲಾಯಿತು. ಈ ಯೋಜನೆಯನ್ನು ನಡೆಸುವುದಕ್ಕೆಂದು ನೇಮಿಸಲಾದ ಖಾಸಗಿ ಸಂಸ್ಥೆಯೊಂದಕ್ಕೆ 59 ಲಕ್ಷ ರೂಪಾಯಿಗಳನ್ನು (ಒಟ್ಟು ಹಣದ ಶೇ. 4ರಷ್ಟು) ನೀಡಲಾಯಿತು. ಅಷ್ಟಾಗಿಯೂ ಮೊದಲ ವರ್ಷದಲ್ಲೇ ಮೂರೂವರೆ ಕೋಟಿಗೂ ಹೆಚ್ಚು ಹಣ ಮಿಗತೆಯಾಯಿತು! ಕಳೆದ 2012-13ರಲ್ಲಿ 30 ಲಕ್ಷ ಸದಸ್ಯರಿತ್ತ 59 ಕೋಟಿ ಹಾಗೂ ಸರಕಾರದ 35 ಕೋಟಿ (ಒಟ್ಟು 94 ಕೋಟಿ) ಹಣದಲ್ಲಿ 74 ಕೋಟಿ ರೂಪಾಯಿಗಳನ್ನು ಬಳಸಿ 80401 ಶಸ್ತ್ರಕ್ರಿಯೆಗಳನ್ನು ನಡೆಸಲಾಗಿದೆ. ಇದುವರೆಗೆ ಯಶಸ್ವಿನಿ ಟ್ರಸ್ಟ್ ಸಂಗ್ರಹಿಸಿದ ಒಟ್ಟು ಮೊತ್ತ ರೂ. 361 ಕೋಟಿ ಹಾಗೂ ಸರಕಾರದ ಕೊಡುಗೆ ರೂ.251 ಕೋಟಿ (ಒಟ್ಟು 612 ಕೋಟಿ) ಯಾಗಿದ್ದು, ಅದರಲ್ಲಿ ರೂ. 512 ಕೋಟಿಯನ್ನು ಶಸ್ತ್ರಕ್ರಿಯೆ ನಡೆಸಿದ ಆಸ್ಪತ್ರೆಗಳಿಗೆ ನೀಡಲಾಗಿದೆ. ಯೋಜನೆಯನ್ನು ನಡೆಸುವ ಸಂಸ್ಥೆಗೆ ಶೇ. 4 ರಷ್ಟು ನೀಡಿದ್ದರೆ ಆ ಮೊತ್ತವು ರೂ. 24 ಕೋಟಿಗಳಷ್ಟಾಗಿ, ಇನ್ನೂ 76 ಕೋಟಿ ರೂಪಾಯಿ ಉಳಿಯುತ್ತದೆ! (ಇತರ ಖರ್ಚುಗಳು ಒಂದಷ್ಟಿರಬಹುದೆನ್ನಿ)

ಈ ಲಾಭದ ಯೋಜನೆಯ ಶುಲ್ಕವು ಏರುತ್ತಲೇ ಇದೆ. ಸದಸ್ಯರ ವಾರ್ಷಿಕ ನೋಂದಾವಣಾ ಶುಲ್ಕವು 2003ರಲ್ಲಿ 60 ರೂಪಾಯಿಗಳಿದ್ದುದು 2013-14ರಲ್ಲಿ 210 ರೂಪಾಯಿಗಳಾಗಿದೆ. ಸ್ವಾವಲಂಬಿ ಯಶಸ್ವಿನಿಗೆ ಮೊದಲ ವರ್ಷಕ್ಕಷ್ಟೇ ಕೋರಲಾಗಿದ್ದ ಸರಕಾರಿ ಅನುದಾನವು ಈಗಲೂ ಮುಂದುವರಿಯುತ್ತಿದೆ: ಮೊದಲೆರಡು ವರ್ಷಗಳಲ್ಲಿ ಮೂರನೇ ಒಂದರಷ್ಟಿದ್ದ ಅನುದಾನವು ಕ್ರಮೇಣ ಹೆಚ್ಚಿ ಒಟ್ಟಾರೆ ಶೇ. 40ನ್ನು ಮೀರಿದೆ. ಜೊತೆಗೆ, ವಾಜಪೇಯಿ ಆರೋಗ್ಯ ಶ್ರೀ, ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ, ಕಾರ್ಮಿಕರ ವಿಮೆ ಇತ್ಯಾದಿಗಳಡಿಯಲ್ಲೂ  ಖಾಸಗಿ ಆಸ್ಪತ್ರೆಗಳಿಗೆ ಸರಕಾರವು ಹಣವೊದಗಿಸುತ್ತಿದೆ. ಒಟ್ಟಿನಲ್ಲಿ ಕಳೆದ ಮೂರು ವರ್ಷಗಳಲ್ಲಿ ರೂ. 221 ಕೋಟಿಗೂ ಹೆಚ್ಚು ಹಣವು ರಾಜ್ಯ ಬೊಕ್ಕಸದಿಂದ ಖಾಸಗಿ ಆಸ್ಪತ್ರೆಗಳಿಗೆ ಸಂದಿದೆಯೆಂದು ವರದಿಯಾಗಿದೆ. ಖಾಲಿಯಿದ್ದ ಖಾಸಗಿ ಆಸ್ಪತ್ರೆಗಳ ನೆರವಿಗಾಗಿ ಆರಂಭಗೊಂಡ ಯೋಜನೆಗಳು ಈಗ ನಷ್ಟಕ್ಕೆ ಕಾರಣವಾಗುತ್ತಿವೆಯೆಂಬ ವಾದವು ವಿಪರ್ಯಾಸವಲ್ಲವೇ?

ಖಾಸಗಿ ಆಸ್ಪತ್ರೆಗಳಲ್ಲಿ ಕೆಲವು ಶಸ್ತ್ರಚಿಕಿತ್ಸೆಗಳಷ್ಟೇ ದೊರೆಯುವ ಈ ಯೋಜನೆಗಳಿಂದ ಜನಸಾಮಾನ್ಯರಿಗೆ ಆರೋಗ್ಯಭಾಗ್ಯವಿದೆಯೇ? ಶಸ್ತ್ರಚಿಕಿತ್ಸೆಯ ಅಗತ್ಯವುಂಟಾಗುವ ಒಬ್ಬಿಬ್ಬರನ್ನುಳಿದು ಅತಿ ಹೆಚ್ಚಿನ ಜನರನ್ನು ಕಾಡುವ ಅತಿ ಸಾಮಾನ್ಯ ಕಾಯಿಲೆಗಳಿಗೆ ಇವುಗಳಿಂದ ಯಾವುದೇ ಪ್ರಯೋಜನವಿಲ್ಲ. ಅಪಘಾತಕ್ಕೊಳಗಾದವರು, ಸುಟ್ಟಗಾಯಗಳಾದವರು ಮತ್ತು ದಾಳಿಗೊಳಗಾದವರು ಪಡೆಯಬೇಕಾಗುವ ತುರ್ತು ಶಸ್ತ್ರಚಿಕಿತ್ಸೆಗಳಿಗೂ ಈ ಯೋಜನೆಗಳಲ್ಲಿ ಅವಕಾಶವಿಲ್ಲ. ಶಸ್ತ್ರಚಿಕಿತ್ಸೆಗಳಲ್ಲಿ ಬಳಸುವ ಕೃತಕ ಭಾಗಗಳ (ಹೃದಯದ ಕವಾಟಗಳು, ಮೂಳೆಜೋಡಣೆಯ ಭಾಗಗಳು, ಕೃತಕ ಕಿರುನಳಿಕೆಗಳು ಇತ್ಯಾದಿ) ವೆಚ್ಚವನ್ನೂ ಇವು ಭರಿಸುವುದಿಲ್ಲ. ರೋಗನಿದಾನಕ್ಕೆ ಅಗತ್ಯವಿರುವ ಪರೀಕ್ಷೆಗಳಿಗೂ ಅವಕಾಶವಿಲ್ಲ. ಒಟ್ಟಿನಲ್ಲಿ ಆಸ್ಪತ್ರೆಗಳಿಗೆ ಹೊರೆಯಾಗದ ಕೆಲವೊಂದು ಶಸ್ತ್ರಚಿಕಿತ್ಸೆಗಳ ವೆಚ್ಚವನ್ನಷ್ಟೇ ಈ ಯೋಜನೆಗಳು ಭರಿಸುತ್ತವೆ; ಹೆಚ್ಚು ಭಾರದ ಖರ್ಚುಗಳ ಜೊತೆಗೆ ಆಸ್ಪತ್ರೆಗೆ ಹೋಗಿಬರುವ ಖರ್ಚು, ಆಹಾರದ ಖರ್ಚು ಇತ್ಯಾದಿಗಳೆಲ್ಲವನ್ನು ರೋಗಿಯೇ ನೀಡಬೇಕಾಗುತ್ತದೆ.

ಖಾಸಗಿ ಆಸ್ಪತ್ರೆಗಳ ಚಿಕಿತ್ಸೆಯ ವೈಭವೀಕರಣವು ಈ ಯೋಜನೆಗಳ ಆಶಯಗಳಲ್ಲೇ ಅಡಕವಾಗಿದೆ. ಕಳೆದೆರಡು ದಶಕಗಳಿಂದ ಸರಕಾರಿ ಆಸ್ಪತ್ರೆಗಳನ್ನು ಕಡೆಗಣಿಸಿ ದುಸ್ಥಿತಿಗೆ ತಳ್ಳಲೆಳಸಿದ ಸರಕಾರಗಳೇ ನೂರಾರು ಕೋಟಿ ಹಣವನ್ನು ಖಾಸಗಿ ಆಸ್ಪತ್ರೆಗಳ ಶುಲ್ಕಗಳಿಗಾಗಿ ಪಾವತಿಸುತ್ತಿವೆ. ಖಾಸಗಿ ಚಿಕಿತ್ಸೆಗಳು ಸರಕಾರಿ ಚಿಕಿತ್ಸೆಗಳಿಗಿಂತ ಉತ್ತಮವೆನ್ನುವುದಕ್ಕೆ ಆಧಾರಗಳಿಲ್ಲ; ಸರಕಾರಿ ಆಸ್ಪತ್ರೆಗಳ ವೈದ್ಯರು ಖಾಸಗಿ ವೈದ್ಯರಿಗಿಂತ ಕೀಳೆನ್ನುವುದಕ್ಕೂ ಆಧಾರಗಳಿಲ್ಲ. ಖಾಸಗಿ ವ್ಯವಸ್ಥೆಯಲ್ಲಿ ಲಾಭದಾಶೆಗಾಗಿ ಅನಗತ್ಯ ಶಸ್ತ್ರಕ್ರಿಯೆಗಳಾಗುವುದಿಲ್ಲ ಎನ್ನುವಂತೆಯೂ ಇಲ್ಲ.

ಇಂತಹಾ ಯೋಜನೆಗಳು ರಾಷ್ಟ್ರೀಯ ಆರೋಗ್ಯ ರಕ್ಷಣಾ ಕಾರ್ಯಕ್ರಮಗಳ ಆಶಯಗಳನ್ನೂ ಪೂರೈಸುವುದಿಲ್ಲ. ನಮ್ಮ ದೇಶದಲ್ಲಿ ಅರ್ಧಕ್ಕೂ ಹೆಚ್ಚು ಮಹಿಳೆಯರು ರಕ್ತಕೊರೆಯಿಂದಲೂ, ಶೇ.40ಕ್ಕೂ ಹೆಚ್ಚು ಮಕ್ಕಳು ನ್ಯೂನ ಪೋಷಣೆಯಿಂದಲೂ ನರಳುತ್ತಿದ್ದಾರೆ, ತಾಯಂದಿರು ಹಾಗೂ ಶಿಶುಗಳ ಮರಣದ ಪ್ರಮಾಣದಂತಹಾ ಆರೋಗ್ಯ ಸೂಚಕಗಳಲ್ಲಿ ನೆರೆಯ ಶ್ರೀಲಂಕಾ ಹಾಗೂ ಬಾಂಗ್ಲಾದೇಶಗಳಿಗಿಂತಲೂ ನಾವು ಹಿಂದಿದ್ದೇವೆ. ನಮ್ಮ ಸರಕಾರವು ಒಟ್ಟು ರಾಷ್ಟ್ರೀಯ ಉತ್ಪನ್ನದ ಕೇವಲ ಒಂದು ಶೇಕಡಾದಷ್ಟನ್ನು ಆರೋಗ್ಯ ರಕ್ಷಣೆಗಾಗಿ ವ್ಯಯಿಸುತ್ತಿದೆ, ಹಾಗೆ ಅತಿ ಕಡಿಮೆ ವ್ಯಯಿಸುವ ದೇಶಗಳಲ್ಲಿ ನಾವಿದ್ದೇವೆ. ಅದರಲ್ಲಿ ಹೆಚ್ಚಿನ ಭಾಗವು ಆರೋಗ್ಯಕರ್ಮಿಗಳ ಸಂಬಳ ಇತ್ಯಾದಿಗಳಿಗೇ ವೆಚ್ಚವಾಗುತ್ತಿದೆಯಲ್ಲದೆ, ಸರಕಾರಿ ಆಸ್ಪತ್ರೆಗಳ ಅಭಿವೃದ್ಧಿಯು ಕುಂಠಿತಗೊಂಡಿದೆ. ನಮ್ಮ ದೇಶದಲ್ಲಿ ಶೇ. 80ರಷ್ಟು ವೈದ್ಯರು, ಶೇ. 78ರಷ್ಟು ಹೊರರೋಗಿ ಸೌಲಭ್ಯಗಳು ಹಾಗೂ ಶೇ. 60ರಷ್ಟು ಒಳರೋಗಿ ಸೌಲಭ್ಯಗಳು ಖಾಸಗಿ ವಲಯದಲ್ಲಿರುವುದರಿಂದ ಸರಕಾರಿ ಖರ್ಚಿಗಿಂತ ಮೂರು ಪಟ್ಟು ಹೆಚ್ಚು ಹಣವನ್ನು ಜನರೇ ತಮ್ಮ ಕಿಸೆಯಿಂದ ವ್ಯಯಿಸಬೇಕಾಗಿದೆ, ಇದು ಇನ್ನಷ್ಟು ಬಡತನಕ್ಕೆ ಕಾರಣವಾಗುತ್ತಿದೆ. ಖಾಸಗಿ ಕ್ಷೇತ್ರವು ಲಾಭದಾಯಕವಾದ ಚಿಕಿತ್ಸೆಗಳಲ್ಲಿ ಹೆಚ್ಚು ಆಸಕ್ತವಾಗಿದ್ದು, ರೋಗಗಳನ್ನು ತಡೆಗಟ್ಟುವ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು ಸರಕಾರಿ ಜವಾಬ್ದಾರಿಗಳಾಗಿ ಉಳಿದಿವೆ. ಈ ಕಾರಣದಿಂದ ಸರಕಾರಿ ಆಸ್ಪತ್ರೆಗಳು ಚಿಕಿತ್ಸೆಗಳ ಜೊತೆಗೆ ಈ ಕಾರ್ಯಕ್ರಮಗಳ ಜವಾಬ್ದಾರಿಯನ್ನೂ ನಿಭಾಯಿಸಬೇಕಾಗಿದೆ.

ಹನ್ನೆರಡನೇ ಯೋಜನೆಯಲ್ಲಿ ಸಾರ್ವತ್ರಿಕ ಆರೋಗ್ಯ ರಕ್ಷಣೆಗೆ ಹೆಚ್ಚಿನ ಮಹತ್ವ ನೀಡಲಾಗಿದ್ದು, ತಾಯಂದಿರು ಹಾಗೂ ಶಿಶುಗಳ ಮರಣ ಪ್ರಮಾಣವನ್ನು ಇಳಿಸುವುದು, ರಕ್ತಕೊರೆಯನ್ನೂ, ಮಕ್ಕಳ ನ್ಯೂನಪೋಷಣೆಯನ್ನೂ ತಡೆಯುವುದು, ಲಿಂಗಾನುಪಾತವನ್ನು ಸುಧಾರಿಸುವುದು, ಸಾಂಕ್ರಾಮಿಕ ಹಾಗೂ ಆಧುನಿಕ ಕಾಯಿಲೆಗಳನ್ನು, ಮಾನಸಿಕ ಸಮಸ್ಯೆಗಳನ್ನು ಮತ್ತು ಅಪಘಾತಗಳನ್ನು ತಡೆಗಟ್ಟುವುದು,ಆರೋಗ್ಯಕ್ಕಾಗಿ ವೈಯಕ್ತಿಕ ವೆಚ್ಚವನ್ನು ಇಳಿಸುವುದು ರಾಷ್ಟ್ರೀಯ ಆದ್ಯತೆಗಳೆಂದು ಹೇಳಲಾಗಿದೆ. ಆರೋಗ್ಯ ರಕ್ಷಣೆಯ ಸರಕಾರಿ ವೆಚ್ಚವನ್ನು ರಾಷ್ಟ್ರೀಯ ಉತ್ಪನ್ನದ ಶೇ. 2.5ಕ್ಕೆ ಹೆಚ್ಚಿಸಿ, ಖಾಸಗಿ ಸೇವೆಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಉದ್ದೇಶವಿರಿಸಿಕೊಳ್ಳಲಾಗಿದೆ. ಆದ್ದರಿಂದ ರಾಜ್ಯ ಸರಕಾರವು ಖಾಸಗಿ ಆಸ್ಪತ್ರೆಗಳಿಗೆ ಹಣ ಸುರಿಯುವ ಬದಲು ಸರಕಾರಿ ಆಸ್ಪತ್ರೆಗಳನ್ನು ಅತ್ಯಾಧುನಿಕಗೊಳಿಸಬೇಕು, ಹೆಚ್ಚಲಿರುವ ಕೇಂದ್ರೀಯ ನೆರವನ್ನು ಅದಕ್ಕಾಗಿ ಬಳಸಬೇಕು. ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ನೀಡಲಾಗಿರುವ ಜಿಲ್ಲಾಸ್ಪತ್ರೆಗಳನ್ನೂ, ಸರಕಾರಿ ಖರ್ಚಿನಲ್ಲಿಯೇ ಕಟ್ಟಿ, ಸುಸಜ್ಜಿತಗೊಳಿಸಿ ಖಾಸಗಿಯವರಿಗೆ ವಹಿಸಿಕೊಟ್ಟಿರುವ ರಾಯಚೂರಿನ ರಾಜೀವ ಗಾಂಧಿ ಆಸ್ಪತ್ರೆಯಂತಹವುಗಳನ್ನೂ ಮತ್ತೆ ತನ್ನ ನಿಯಂತ್ರಣಕ್ಕೆ ಪಡೆದು ಅತ್ಯುತ್ತಮವಾಗಿ ನಡೆಸಬೇಕು. ಖಾಸಗಿ ವೃತ್ತಿಯಲ್ಲಿರುವ ತಜ್ಞವೈದ್ಯರಿಗೆ ಸೂಕ್ತವಾದ ಭತ್ತೆಯನ್ನು ನೀಡಿ, ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವಂತೆ ಪ್ರೋತ್ಸಾಹಿಸಬೇಕು. ಸರಕಾರಿ ಆಸ್ಪತ್ರೆಗಳು ಆರ್ಥಿಕವಾಗಿ ಸ್ವಾವಲಂಬಿಯೂ, ಸ್ಪರ್ಧಾತ್ಮಕವೂ ಆಗುವಂತೆ ಮಾಡಬೇಕು.

ನಲವತ್ಮೂರನೇ ಬರಹ : ಸಾಯಬಯಸುವವರನ್ನು ಜತನದಿಂದ ರಕ್ಷಿಸಿ [ಫೆಬ್ರವರಿ 5, 2014, ಬುಧವಾರ] [ನೋಡಿ | ನೋಡಿ]

ಮನಸ್ಸಿನ ಕ್ಲೇಶಗಳಿಂದ ತೊಳಲಾಡಿ, ಜಗಳವಾಡಿ, ಜೀವ ತೆರುವ ಬದಲು ತಜ್ಞ ಮನೋವೈದ್ಯರನ್ನು ಕಾಣಬೇಕು

ಪ್ರತಿಯೊಂದು ಸಾವಿನಿಂದ ಹಲತರದ ಪಲ್ಲಟಗಳಾಗುತ್ತವೆ, ತಲ್ಲಣಗಳಾಗುತ್ತವೆ, ಕಲಿಯಬೇಕಾದ ಪಾಠಗಳೂ ಬಹಳಷ್ಟಿರುತ್ತವೆ. ಸಾವು ಅಸಹಜವಾಗಿದ್ದರೆ, ಅದರಲ್ಲೂ ಆತ್ಮಹತ್ಯೆಯಾಗಿದ್ದರೆ, ಕುಟುಂಬಕ್ಕೂ, ಸಮಾಜಕ್ಕೂ ಹೆಚ್ಚಿನ ಆಘಾತವನ್ನುಂಟು ಮಾಡುತ್ತದೆ. ಸಂಶಯದ ಸೂಜಿಯು ನಿಕಟ ಬಂಧುಗಳತ್ತ ತಿರುಗಿದರೆ ಆಘಾತದ ಜೊತೆಗೆ ಅಪವಾದಗಳ ಹಿಂಸೆಯೂ ಅವರದ್ದಾಗುತ್ತದೆ.

ಕಳೆದೆರಡು ವಾರಗಳಲ್ಲಿ ಅಂತಹಾ ಮೂರು ಪ್ರಕರಣಗಳು ಸುದ್ದಿಯಾದವು. ಖ್ಯಾತ ರಾಜಕಾರಣಿಯ ಪತ್ನಿಯು ದಿಲ್ಲಿಯ ಹೋಟೇಲಲ್ಲಿ ವಿಪರೀತವಾಗಿ ಔಷಧಗಳನ್ನು ಸೇವಿಸಿ ಮೃತಾವಸ್ಥೆಯಲ್ಲಿ ಪತ್ತೆಯಾದರು, ಬಹು ದೊಡ್ಡ ಕಂಪೆನಿಯ ನಿರ್ದೇಶಕರೊಬ್ಬರು ಥೈಲೆಂಡಿನ ಹೋಟೇಲಿನ ಕಿಟಿಕಿಯಿಂದ ಜಿಗಿದು ಸಾವನ್ನಪ್ಪಿದರು, ಬೆಂಗಳೂರಿನ ತಂತ್ರಜ್ಞರೊಬ್ಬರು ಮನೆಯಲ್ಲೇ ನೇಣಿಗೇರಿದರು. ಈ ಮೂರು ಸಾವುಗಳಿಗೂ ದಾಂಪತ್ಯ ವಿರಸದ ಹಿನ್ನೆಲೆಯಿತ್ತೆಂದು ವರದಿಗಳಾದವು. ರಾಜಕಾರಣಿಯ ಪತ್ನಿ ತನ್ನ ಗಂಡನ ವಿವಾಹೇತರ ಸಂಬಂಧಗಳ ಬಗ್ಗೆ ವಿವಿಧ ಮಾಧ್ಯಮಗಳಲ್ಲಿ ಸಂಶಯವನ್ನು ಹೊರಹಾಕಿದ್ದು; ಆ ದಂಪತಿ ಎಲ್ಲರೆದುರು ಪರಸ್ಪರ ಎಗರಾಡಿದ್ದು; ಆಕೆ ತನಗಾಗುತ್ತಿದ್ದ ಬೇಸರ ಹಾಗೂ ಹತಾಶೆಗಳ ಬಗ್ಗೆ ತನ್ನ ಮಿತ್ರರಲ್ಲಿ ಗೋಗರೆದದ್ದು ಎಲ್ಲವೂ ದೊಡ್ಡ ಸುದ್ದಿಗಳೇ ಆಗಿಬಿಟ್ಟವು, ಪತಿಯನ್ನೇ ಅಪರಾಧಿ ಸ್ಥಾನಕ್ಕೆ ತಳ್ಳಿಬಿಟ್ಟವು.

ಇಂತಹಾ ಸಮಸ್ಯೆಗಳು ಯಾರ ಮನದಲ್ಲೂ, ಯಾರ ಮನೆಯಲ್ಲೂ ಘಟಿಸಬಹುದು. ವಿಶ್ವ ಆರೋಗ್ಯ ಸಂಸ್ಥೆಯನುಸಾರ ಪ್ರತೀ ವರ್ಷ ಸುಮಾರು ಹತ್ತು ಲಕ್ಷದಷ್ಟು ಜನ, ಅಂದರೆ 40 ಸೆಕೆಂಡಿಗೆ ಒಬ್ಬರು, ತಮ್ಮನ್ನೇ ಕೊಂದುಕೊಳ್ಳುತ್ತಾರೆ, ಹತ್ತಿಪ್ಪತ್ತು ಪಟ್ಟು ಹೆಚ್ಚು ಜನ ಹಾಗೆ ಪ್ರಯತ್ನಿಸಿ ವಿಫಲರಾಗುತ್ತಾರೆ. ಇವುಗಳಲ್ಲಿ ಐದರಲ್ಲೊಂದು ನಮ್ಮ ದೇಶದಲ್ಲೇ ಸಂಭವಿಸುತ್ತವೆ. ನಮ್ಮ ರಾಷ್ಟ್ರೀಯ ಅಪರಾಧ ದಾಖಲೆಯನುಸಾರ 2012ರಲ್ಲಿ 1,35,445 ಆತ್ಮಹತ್ಯೆಗಳಾಗಿವೆ, ಪ್ರತಿ ದಿನ 242 ಪುರುಷರು ಹಾಗೂ 129 ಮಹಿಳೆಯರು ತಾವಾಗಿ ಸಾವನ್ನಪ್ಪಿದ್ದಾರೆ. ಇವರಲ್ಲಿ ಶೇ. 70ರಷ್ಟು 44ರ ವಯಸ್ಸಿನೊಳಗಿನವರು (15-29ರೊಳಗಿನವರು ಶೇ. 36). ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣದಲ್ಲಿ ಆತ್ಮಹತ್ಯೆಗಳ ಸಂಖ್ಯೆ ಐದು ಪಟ್ಟು ಹೆಚ್ಚು. ಕಾನೂನು ಹಾಗೂ ಸಮಾಜಕ್ಕೆ ಹೆದರಿ ವರದಿ ಮಾಡದಿರುವ ಪ್ರಕರಣಗಳನ್ನು ಪರಿಗಣಿಸಿದರೆ ಈ ಸಂಖ್ಯೆಗಳೆಲ್ಲ ಇನ್ನೂ ದೊಡ್ಡದಾಗುತ್ತವೆ.

ಆತ್ಮಹತ್ಯೆಗೆಳಸುವವರಲ್ಲಿ ಶೇ. 90ರಷ್ಟು ಒಂದಲ್ಲೊಂದು ವಿಧದ ಮಾನಸಿಕ ತುಮುಲಗಳಿಗೆ ಒಳಗಾಗಿರುತ್ತಾರೆ, ತಮ್ಮ ಮನಸ್ಥಿತಿಯನ್ನೂ, ಕೌಟುಂಬಿಕ, ಸಾಮಾಜಿಕ, ಆರ್ಥಿಕ ಮತ್ತಿತರ ಒತ್ತಡಗಳನ್ನೂ ನಿಭಾಯಿಸಲಾಗದೆ ಕಷ್ಟಕ್ಕೊಳಗಾದವರಾಗಿರುತ್ತಾರೆ. ಶೇ. 25ರಿಂದ 45ರಷ್ಟು ಪ್ರಕರಣಗಳಲ್ಲಿ ಉನ್ಮಾದ (ಮೇನಿಯಾ) ಹಾಗೂ ಖಿನ್ನತೆ, ಇಚ್ಚಿತ್ತ ವಿಕಲತೆ (ಸ್ಕಿಝೋಫ್ರಿನಿಯಾ) ಮುಂತಾದ ಸಮಸ್ಯೆಗಳು ಆತ್ಮಹತ್ಯೆಗೆ ಕಾರಣಗಳಾಗುತ್ತವೆ. ಶೇ. 35ರಷ್ಟು ಪ್ರಕರಣಗಳಲ್ಲಿ ಗಂಡಸರು ಮದ್ಯವ್ಯಸನದಿಂದ ಆತ್ಮಹತ್ಯೆ ಮಾಡಿಕೊಂಡರೆ, ಅದೆಷ್ಟೋ ಮಹಿಳೆಯರು ಗಂಡನ ಚಟಕ್ಕೆ ಬೇಸತ್ತು ತಮ್ಮ ಜೀವನವನ್ನು ಕೊನೆಗಾಣಿಸುತ್ತಾರೆ. ಕುಟುಂಬ ಕಲಹಗಳು, ವಿಚ್ಛೇದನ, ಮುರಿದು ಬಿದ್ದ ಮದುವೆ ಯಾ ಪ್ರಣಯ, ಪರೀಕ್ಷೆ ಅಥವಾ ವ್ಯವಹಾರಗಳಲ್ಲಿ ವೈಫಲ್ಯ ಇತ್ಯಾದಿಗಳೂ ಸಾಯುವುದಕ್ಕೆ ಪ್ರಚೋದನೆಗಳಾಗಬಹುದು.

ಕಳೆದೆರಡು ದಶಕಗಳಲ್ಲಿ ಯುವಜನರ, ಅದರಲ್ಲೂ ಸುಶಿಕ್ಷಿತರ, ಆತ್ಮಹತ್ಯೆಗಳು ಹೆಚ್ಚುತ್ತಿವೆ. ಹೊಸ ಆರ್ಥಿಕತೆಯ ಗುಂಗಿನಲ್ಲಿ ನಿರೀಕ್ಷೆಗಳನ್ನು ತಲುಪಲಾಗದೆ, ಜೊತೆಗಿದ್ದು ಬಾಳಲಾಗದೆ, ಸುಖಿಸುವುದಕ್ಕೆ ಸಮಯವಿಲ್ಲದೆ ನಿರಾಶರಾಗುತ್ತಿರುವುದು ಇದಕ್ಕೆ ಕಾರಣವಾಗಿರಬಹುದು. ಫೇಸ್ ಬುಕ್, ಟ್ವಿಟರ್ ಗಳಂತಹ ಹೊಸ ಜಾಲಗಳ ಜಗತ್ತು ಹೊಸ ಒತ್ತಡಗಳಿಗೂ ಕಾರಣವಾಗುತ್ತಿದೆ: ಅಲ್ಲಿ ಬೆಳೆವ-ಮುರಿವ ಸ್ನೇಹ-ಸಂಬಂಧಗಳು, ಅಲ್ಲಿ ಹರಿದಾಡುವ ಟೀಕೆ-ಟಿಪ್ಪಣಿಗಳು, ಅಲ್ಲಿ ಬಿಚ್ಚಿಟ್ಟ ನೋವುಗಳಿಗೆ ಜಗದಗಲದಿಂದ ಬರುವ ಬೇಕಾಬಿಟ್ಟಿ ಪ್ರತಿಕ್ರಿಯೆಗಳು ಮನಃಶಾಂತಿಯನ್ನು ಕೆಡಿಸಬಹುದು, ಸಾವಿನತ್ತ ತಳ್ಳಬಹುದು.

ಯಾರೊಬ್ಬರೂ ತಾವಾಗಿಯೇ ಮಾನಸಿಕ ಸಮಸ್ಯೆಗಳನ್ನು ತಂದುಕೊಳ್ಳುವುದಿಲ್ಲ. ಗಟ್ಟಿ ಮನಸ್ಸು, ದುರ್ಬಲ ಮನಸ್ಸು ಎಂಬವೂ ಇಲ್ಲ. ನಮ್ಮ ಮೆದುಳಿನಲ್ಲಿರುವ ಕೋಟಿಗಟ್ಟಲೆ ನರಕೋಶಗಳ ನಡುವೆ ಹರಿದಾಡುವ ಸೆರೊಟೋನಿನ್, ಡೋಪಮಿನ್, ಎಪಿನೆಫ್ರಿನ್, ನಾರ್ ಎಪಿನೆಫ್ರಿನ್ ಮುಂತಾದ ಸಂಯುಕ್ತಗಳೇ ನಮ್ಮೆಲ್ಲ ಆಲೋಚನೆಗಳಿಗೂ, ಭಾವನೆಗಳಿಗೂ ಕಾರಣವಾಗುತ್ತವೆ; ಅವುಗಳೊಳಗಿನ ತಾಳಮೇಳವು ತಪ್ಪುವುದರಿಂದಲೇ ಆತಂಕ, ಖಿನ್ನತೆ, ಇಚ್ಚಿತ್ತ ವಿಕಲತೆ ಮುಂತಾದ ಮಾನಸಿಕ ಸಮಸ್ಯೆಗಳುಂಟಾಗುತ್ತವೆ. ಅನುವಂಶೀಯತೆ, ಬಾಲ್ಯದಲ್ಲಾದ ನೋವಿನ ಅನುಭವಗಳು, ದೀರ್ಘ ಕಾಲದಿಂದ ಅನುಭವಿಸಿದ ಒತ್ತಡಗಳು, ದೈಹಿಕ ಸಮಸ್ಯೆಗಳು, ಹಾಗೂ ಕೆಲಬಗೆಯ ಔಷಧಗಳು ಈ ಸಂಯುಕ್ತಗಳ ಮಟ್ಟವನ್ನು ಏರುಪೇರು ಮಾಡಬಹುದು.

ತಜ್ಞ ಮನೋವೈದ್ಯರ ನೆರವಿನಿಂದ ಈ ಸಮಸ್ಯೆಗಳನ್ನು ನಿಖರವಾಗಿ ಗುರುತಿಸಿ, ಸೂಕ್ತ ಚಿಕಿತ್ಸೆಯ ಮೂಲಕ ಸರಿಪಡಿಸಲು ಸಾಧ್ಯವಿದೆ. ವ್ಯಕ್ತಿಯ ಮನಸ್ಥಿತಿಯಲ್ಲೂ, ವರ್ತನೆಗಳಲ್ಲೂ ಗಣನೀಯವಾದ ಬದಲಾವಣೆಗಳಿದ್ದರೆ; ನಿತ್ಯಜೀವನದಲ್ಲಿ ಆಸಕ್ತಿಯಿಲ್ಲದಂತಿದ್ದರೆ; ನಿದ್ದೆಯ ಸಮಸ್ಯೆಗಳಿದ್ದರೆ; ಜೊತೆಗೂಡುವುದು, ತಿನ್ನುವುದು ಇತ್ಯಾದಿಗಳಲ್ಲಿ ಅನಾಸಕ್ತಿಯು ಹೆಚ್ಚುತ್ತಿದ್ದರೆ; ವಿನಾ ಕಾರಣ ಸಂಶಯಗಳೇಳುತ್ತಿದ್ದರೆ; ಪದೇ ಪದೇ ಜಗಳಗಳಾಗುತ್ತಿದ್ದರೆ; ಪರಸ್ಪರ ಹೊಂದಿಕೊಳ್ಳಲು ಕಷ್ಟಗಳಿದ್ದರೆ ನುರಿತ ಮನೋವೈದ್ಯರನ್ನು ಕಾಣುವುದೇ ಒಳ್ಳೆಯದು. ಆಪ್ತರ ಸಾಂತ್ವನ, ಬುದ್ಧಿವಾದ, ಬೈಗುಳಗಳಿಂದಲೋ, ಪೂಜೆ, ಮಾಟ-ಮಂತ್ರ-ತಂತ್ರಗಳಿಂದಲೋ ಸರಿಪಡಿಸಲೆತ್ನಿಸಿದರೆ ಅಥವಾ ಕಾಲವೇ ಸರಿಪಡಿಸುತ್ತದೆಂದು ಸುಮ್ಮನಿದ್ದರೆ ಸಮಸ್ಯೆಯು ಬಿಗಡಾಯಿಸಬಹುದು, ಆತ್ಮಹತ್ಯೆ ಯಾ ಕೊಲೆಗಳಂತಹ ವಿಪರೀತಕ್ಕೆ ಹೋಗಬಹುದು.

ಜೀವನದಲ್ಲಿ ಬೇಸತ್ತು ಸಾಯಹೊರಟಿರುವವರನ್ನು ತಡೆಯಲು ಸಾಧ್ಯವಿದೆ, ತಡೆಯಲೇ ಬೇಕು. ಯಾರಿಗಾದರೂ ಸಾಯಬೇಕೆನ್ನುವ ಯೋಚನೆಗಳು ಕಾಡತೊಡಗಿದರೆ ಕೂಡಲೇ ತಜ್ಞ ಮನೋವೈದ್ಯರ ನೆರವನ್ನು ಪಡೆಯಬೇಕು. ಆಪ್ತರು ಯಾರಾದರೂ ನೇರವಾಗಿ ಯಾ ಮಾತಿನ ನಡುವೆ ಅಂತಹಾ ಇಂಗಿತವನ್ನು ವ್ಯಕ್ತಪಡಿಸಿದರೆ ಅದನ್ನು ಕಡೆಗಣಿಸಬಾರದು. ಅಂಥವರನ್ನು ಛೇಡಿಸುವ, ಸಂತೈಸುವ ಅಥವಾ ದಬಾಯಿಸಿ ಸುಮ್ಮನಾಗಿಸುವ ಪ್ರಯತ್ನಗಳನ್ನು ಮಾಡಬಾರದು; ಬದಲಿಗೆ, ತಾಳ್ಮೆಯಿಂದ ಅವರ ಮಾತುಗಳನ್ನು ಆಲಿಸಿ, ಅವರ ಜೊತೆಗೇ ಇದ್ದು, ಆದಷ್ಟು ಬೇಗನೆ ತಜ್ಞರಲ್ಲಿಗೆ ಒಯ್ಯಬೇಕು. ಅವರನ್ನು ಏಕಾಂಗಿಯಾಗಿರಲು ಬಿಡಲೇಬಾರದು; ಆಸ್ಪತ್ರೆಯಲ್ಲಿ ದಾಖಲಿಸಿ ಅಥವಾ ಸದಾ ಜೊತೆಗಿದ್ದು ಕಣ್ಗಾವಲಿಡಬೇಕು ಹಾಗೂ ಜೀವಹಾನಿಗೆ ಕಾರಣವಾಗಬಲ್ಲ ಎಲ್ಲವನ್ನೂ ಅವರಿಂದ ದೂರವಿಡಬೇಕು. ಸಾಯಬೇಕೆನ್ನುವ ಉತ್ಕಟ ಬಯಕೆಯು ಇಂಗಿದ ಮೇಲೂ ಸರಿಯಾದ ಚಿಕಿತ್ಸೆಯನ್ನು ಪಡೆಯುವಂತೆ ಖಾತರಿಗೊಳಿಸಬೇಕು.

ಮನೋವಿಜ್ಞಾನದಲ್ಲಿ ಬಳಸುವ ಔಷಧಗಳು ವ್ಯಕ್ತಿಯ ಮನಸ್ಥಿತಿಯ ಮೇಲೆ ಗಣನೀಯವಾದ ಪ್ರಭಾವವನ್ನು ಬೀರುತ್ತವೆಯಾದ್ದರಿಂದ ತಜ್ಞ ಮನೋವೈದ್ಯರಿಂದಲೇ ಅಂತಹಾ ಚಿಕಿತ್ಸೆಯನ್ನು ಪಡೆಯಬೇಕು. ಮಾನಸಿಕ ಸಮಸ್ಯೆಗಳಿಗೆ ಇತರ ವೈದ್ಯರಿಂದ ಚಿಕಿತ್ಸೆ ಪಡೆಯುವುದು ಸೂಕ್ತವಲ್ಲ. ಬದಲಿ ಯಾ ನಕಲಿ ಚಿಕಿತ್ಸಕರ ಸಲಹೆಯನ್ನಂತೂ ಪಡೆಯಲೇಬಾರದು. ಸರಿಯಾದ ತರಬೇತಿಯಿಲ್ಲದ ಸಮಾಲೋಚಕರಿಂದಲೂ ಪ್ರಯೋಜನವಾಗದು. ನಮ್ಮ ದೇಶದಲ್ಲಿ ಮನೋವೈದ್ಯರ ಸಂಖ್ಯೆಯು ಸುಮಾರು 4000ವಿದ್ದು, ಇನ್ನೂ ಮೂರು ಪಟ್ಟು ಹೆಚ್ಚು ತಜ್ಞರ ಅಗತ್ಯವಿದೆ; ಈ ಕಾರಣದಿಂದ ಮಾನಸಿಕ ಸಮಸ್ಯೆಗಳನ್ನು ಸರಿಯಾಗಿ ಗುರುತಿಸಿ, ಚಿಕಿತ್ಸೆ ನೀಡುವುದು ಇನ್ನಷ್ಟು ಕಷ್ಟವಾಗಿದೆ.

ದಿಲ್ಲಿಯಲ್ಲಿ ಮೃತಪಟ್ಟ ಮಹಿಳೆಯ ವೃತ್ತಾಂತವನ್ನು ಈಗ ಮತ್ತೊಮ್ಮೆ ನೋಡೋಣ. ಲಭ್ಯ ವರದಿಗಳಂತೆ, ಸಾಯುವುದಕ್ಕೆ ಆರೇಳು ತಿಂಗಳ ಹಿಂದಿನಿಂದಲೇ ಆಕೆಯ ದೇಹಸ್ಥಿತಿಯು ಹದಗೆಟ್ಟಿತ್ತು, ವರ್ತನೆಯಲ್ಲೂ ಬದಲಾವಣೆಗಳಿದ್ದವು. ತನ್ನ ಪತಿಯ ಜೊತೆಯಲ್ಲಿ ದೇಶ-ವಿದೇಶಗಳ ಹೆಸರಾಂತ ವೈದ್ಯರನ್ನು ಆಕೆ ಕಂಡಿದ್ದರು, ಸಾವನ್ನಪ್ಪುವುದಕ್ಕೆ ನಾಲ್ಕೈದು ದಿನಗಳ ಹಿಂದೆಯೂ ದೊಡ್ಡ ಆಸ್ಪತ್ರೆಯೊಂದರಲ್ಲಿ ಹಲಬಗೆಯ ಪರೀಕ್ಷೆಗಳನ್ನು ನಡೆಸಲಾಗಿತ್ತು. ಆಕೆಯಲ್ಲಿ ಲುಪಸ್ ಹಾಗೂ ಕ್ಷಯರೋಗಗಳೆಂಬ ಎರಡೆರಡು ಗಂಭೀರ ಕಾಯಿಲೆಗಳನ್ನು ಗುರುತಿಸಲಾಗಿತ್ತೆಂದೂ, ಹಲವು ಔಷಧಗಳನ್ನು ಆಕೆಗೆ ನೀಡಲಾಗಿತ್ತೆಂದೂ ಕೆಲವು ವರದಿಗಳಲ್ಲಿ ಹೇಳಲಾಗಿತ್ತು.

ಹಾಗಾದರೆ ಆರೇಳು ತಿಂಗಳಾದರೂ ಆಕೆಗಿದ್ದ ರೋಗವನ್ನು ನಿಖರವಾಗಿ ಗುರುತಿಸಲಾಗಲಿಲ್ಲವೇ? ದೈಹಿಕ ಅಸ್ವಾಸ್ಥ್ಯದಿಂದಲೂ, ಔಷಧಗಳಿಂದಲೂ ಆಕೆಗೆ ಮಾನಸಿಕ ಸಮಸ್ಯೆಗಳುಂಟಾದವೇ? ಅದೇ ಕಾರಣದಿಂದ ಪತಿಯನ್ನು ಶಂಕಿಸುವಂತಾಯಿತೇ? ಆಕೆಯ ಮನಸ್ಥಿತಿಯನ್ನು ಗುರುತಿಸಿ ಸೂಕ್ತ ಚಿಕಿತ್ಸೆಯನ್ನು ನೀಡುವಲ್ಲಿ, ಆತ್ಮಹತ್ಯೆ ಮಾಡಿಕೊಳ್ಳಬಹುದಾದ ಅಪಾಯವನ್ನು ಮುಂಗಂಡು ಆ ಬಗ್ಗೆ ಮನೆಯವರನ್ನು ಎಚ್ಚರಿಸುವಲ್ಲಿ ವೈದ್ಯರು ವಿಫಲರಾದರೇ?

ತನಗೆ ಜೀವನದಲ್ಲಿ ಜಿಗುಪ್ಸೆಯುಂಟಾಗಿದೆಯೆಂದು ಸಾಯುವ ಕೆಲವೇ ಗಂಟೆಗಳ ಮೊದಲು ಆಕೆ ತನ್ನ ಆಪ್ತರಲ್ಲಿ ಹೇಳಿಕೊಂಡಿದ್ದರೂ, ಅದರ ಗಂಭೀರತೆಯನ್ನು ಅರಿಯುವಲ್ಲಿ ಎಲ್ಲರೂ ವಿಫಲರಾದರೇ? ಆಕೆಯ ವೈದ್ಯರಾಗಲೀ, ಆಪ್ತರಾಗಲೀ ಎಚ್ಚರಿಕೆ ವಹಿಸಿದ್ದರೆ, ಹೋಟೇಲಿನ ಕೋಣೆಯಲ್ಲಿ ಒಬ್ಬಂಟಿಯಾಗಿ ಬಿಡದಿರುತ್ತಿದ್ದರೆ, ಆಕೆ ಬದುಕುಳಿಯುತ್ತಿರಲಿಲ್ಲವೇ?

ನಲವತ್ತೆರಡನೇ ಬರಹ : ಹಳ್ಳಿ ಮಕ್ಕಳನ್ನು ಕೊಲ್ಲುತ್ತಿರುವ ಮಲೇರಿಯಾ [ಜನವರಿ 22, 2014, ಬುಧವಾರ] [ನೋಡಿ | ನೋಡಿ]

ಸರ್ ರೊನಾಲ್ಡ್ ರಾಸ್ 1902ರಲ್ಲಿ ಕೇವಲ ಶುಚೀಕರಣದಿಂದ ಮಲೇರಿಯಾವನ್ನು ನಿಯಂತ್ರಿಸಿದ್ದರೆ ನಮಗೇಕಾಗದು?

ದಕ್ಷಿಣ ಕನ್ನಡದ ಕುಗ್ರಾಮವೊಂದರಲ್ಲಿ ಕಡು ಬಡವರಾಗಿದ್ದ ಮಕ್ಕಳಿಬ್ಬರಿಗೆ 2014ರ ಆರಂಭವೇ ಕೊನೆಯದಾಗಿ ಹೋಯಿತು. ಅರುವತ್ತು ಮೈಲು ದೂರದ ಮಂಗಳೂರಿನಿಂದ ಬಂದ ಮಲೇರಿಯಾ ಸೋಂಕು ಇವರಿಬ್ಬರನ್ನೂ ಚುಚ್ಚಿ, ಚಚ್ಚಿತು. ಆದರೆ ಅದೇ ಮಂಗಳೂರಿನಿಂದ ಮಲೇರಿಯಾದ ಚಿಕಿತ್ಸೆ ಇವರಲ್ಲಿಗೆ ಬರಲಿಲ್ಲ; ಕೊನೆಗೆ ಇವರಾಗಿಯೇ ಮಂಗಳೂರಿಗೆ ಹೋದರೂ ಪ್ರಯೋಜನವಾಗಲಿಲ್ಲ. ಸರ್ವರಿಗೂ ನ್ಯಾಯ, ಸಮಾನತೆ, ಸ್ವಾತಂತ್ರ್ಯ ಹಾಗೂ ಭ್ರಾತೃತ್ವಗಳುಳ್ಳ ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ಗಣರಾಜ್ಯವೆಂದು ಹೇಳಿಕೊಂಡು ಅರುವತ್ತೈದು ವರ್ಷಗಳಾಗುತ್ತಿರುವಾಗ ನಗರದಿಂದ ಅರುವತ್ತು ಮೈಲು ದೂರದ ಹಳ್ಳಿಗಳ ದುಸ್ಥಿತಿ ಇದು.ಅರುವತ್ತುವರ್ಷಗಳ ಹಿಂದೆ ಆರಂಭಿಸಲಾದ ಮಲೇರಿಯಾ ನಿಯಂತ್ರಣ ಕಾರ್ಯಕ್ರಮವು ಇನ್ನೂ ಸಫಲವಾಗಿಲ್ಲವೆನ್ನುವುದಕ್ಕೆ ದೃಷ್ಟಾಂತವಿದು.

ಈ ಮಕ್ಕಳ ದಾರುಣ ಸಾವಿನಲ್ಲಿ, ಅವನ್ನು ಕ್ಷುಲ್ಲಕ ಪ್ರಕರಣಗಳೆಂದು ಆರೋಗ್ಯಾಧಿಕಾರಿಗಳು ಹೇಳಿರುವಲ್ಲಿ ಹಳ್ಳಿ-ಪಟ್ಟಣಗಳ ಅಸಮಾನತೆ, ಆಡಳಿತದ ಅಸಡ್ಡೆಗಳಷ್ಟೇ ಅಲ್ಲ, ಅಂದು-ಇಂದುಗಳ ನಡುವಿನ ಸ್ಪಷ್ಟ ವ್ಯತ್ಯಾಸಗಳೂ ಗೋಚರಿಸುತ್ತವೆ. ಅಂದು ಸರಕಾರದ ಬಳಿ ಧನಬಲವು ಅಷ್ಟೊಂದಿರದಿದ್ದರೂ ಜನಪರ ಕಾಳಜಿಯು ಹೆಚ್ಚಿತ್ತು, ಅದಕ್ಕೆ ಪೂರಕವಾದ ಶಿಸ್ತು-ಬದ್ಧತೆಗಳಿದ್ದವು. ಇಂದು ಜನಪರ ಕಾಳಜಿಯ ಬದಲಿಗೆ ಬದಲಿಗೆ ಧನಪರ ಮೋಹವೇ ಹೆಚ್ಚಾಗಿದೆ;ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ, ಕೀಟಜನ್ಯ ನಿಯಂತ್ರಣ ಕಾರ್ಯಕ್ರಮ ಮುಂತಾದ ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳಿಗಾಗಿ ಸರಕಾರಿ ಖಜಾನೆಯಿಂದ ಹೊರಬೀಳುತ್ತಿರುವ ಸಾವಿರಾರು ಕೋಟಿ ಹಣವು ಮಧ್ಯದಲ್ಲೇ ಸೋರಿಕೆಯಾಗುತ್ತಿದೆ.

ನಮ್ಮ ದೇಶವು ಸ್ವತಂತ್ರವಾದಾಗ ಜನಸಂಖ್ಯೆ 33 ಕೋಟಿಯಿತ್ತು,ವರ್ಷಕ್ಕೆ ಏಳೂವರೆ ಕೋಟಿಯಷ್ಟು ಮಲೇರಿಯಾ ಪ್ರಕರಣಗಳಿದ್ದವು,ಆ ಪೈಕಿ ಏಳೆಂಟು ಲಕ್ಷದಷ್ಟು ಸಾವುಗಳಾಗುತ್ತಿದ್ದವು. ಪ್ರಧಾನಿ ನೆಹರೂ ಮುತುವರ್ಜಿಯಿಂದ ರಾಷ್ಟ್ರೀಯ ಮಲೇರಿಯಾ ನಿಯಂತ್ರಣ ಕಾರ್ಯಕ್ರಮವು1953ರಲ್ಲಿ ಆರಂಭಗೊಂಡಿತು. ಪ್ರತಿ ತಂಡದಲ್ಲೂ 130-275 ಕಾರ್ಯಕರ್ತರಿದ್ದ ಸುಮಾರು 160 ತಂಡಗಳು ಮಲೇರಿಯಾ ವ್ಯಾಪಕವಾಗಿದ್ದ ಗ್ರಾಮೀಣ ಭಾಗಗಳಲ್ಲಿ ಮನೆ-ಮನೆಗೆ ತೆರಳಿ ಮಲೇರಿಯಾ ಪೀಡಿತರನ್ನು ಗುರುತಿಸಿ ಚಿಕಿತ್ಸೆ ನೀಡಿದವು, ಮನೆಗಳ ಗೋಡೆಗಳಿಗೆ ಡಿಡಿಟಿ ಸಿಂಪಡಿಸಿ ಸೊಳ್ಳೆಗಳನ್ನು ನಿಯಂತ್ರಿಸಿದವು. ಸಮರೋಪಾದಿಯಲ್ಲಿ ನಡೆದ ಈ ಕಾರ್ಯಾಚರಣೆಗಳಿಂದಾಗಿ 1961ರ ವೇಳೆಗೆ ವಾರ್ಷಿಕ ಮಲೇರಿಯಾ ಪ್ರಕರಣಗಳ ಸಂಖ್ಯೆಯು ಕೇವಲ 50000ಕ್ಕಿಳಿಯಿತು, ಸಾವುಗಳು ಇಲ್ಲವಾದವು. ಆ ಕಾಲದಲ್ಲಿ ದೇಶದಆರ್ಥಿಕತೆಗೆ ವಾರ್ಷಿಕ 750 ಕೋಟಿ ನಷ್ಟವುಂಟು ಮಾಡುತ್ತಿದ್ದ ಮಲೇರಿಯಾ ನಿಯಂತ್ರಣಗೊಂಡುದರಿಂದ ಮಾನವ ಸಂಪನ್ಮೂಲದ ಬಳಕೆ ಹೆಚ್ಚಿತು, ಹಸಿರು ಕ್ರಾಂತಿಯೂ, ಕೈಗಾರಿಕಾ ಪ್ರಗತಿಯೂ ಸಾಧ್ಯವಾದವು.

ಆದರೆ ಇದು ಹಾಗೆಯೇ ಉಳಿಯಲಿಲ್ಲ. ಯಶಸ್ಸಿನಿಂದ ಬೀಗಿ ಕಾರ್ಯಾಚರಣೆ ಸಡಿಲಗೊಂಡಿತು, ಅದಕ್ಕಿಟ್ಟಿದ್ದ ಹಣ ಬೇರೆ ಕಾರ್ಯಕ್ರಮಗಳತ್ತ ತಿರುಗಿತು. ಐವತ್ತರ ದಶಕದ ಅಂತ್ಯದಲ್ಲಿ ಸುಯೆಜ್ ಕಾಲುವೆಯ ಗದ್ದಲದಿಂದ ಡಿಡಿಟಿಯ ಆಮದಿಗೆ ತೊಡಕಾಯಿತು, ಅರುವತ್ತರ ಅಂತ್ಯಕ್ಕೆ ಪರಿಸರ ಹಾನಿಯ ಭಯ ಹೆಚ್ಚಿ ಡಿಡಿಟಿ ಬಳಕೆ ಇನ್ನಷ್ಟು ತಗ್ಗಿತು. ಹೀಗೆ ಅರುವತ್ತರ ಮಧ್ಯದಲ್ಲಿ ಮಲೇರಿಯಾ ಮತ್ತೆ ಮೇಲೆದ್ದಿತು,ಎಪ್ಪತ್ತರ ನಡುವಲ್ಲಿ 70 ಲಕ್ಷದಷ್ಟಾಯಿತು, ಸಾವುಗಳೂ ಮರಳಿದವು.

ಮಂಗಳೂರಲ್ಲಿ 1980ರ ಅಂತ್ಯದವರೆಗೆ ಮಲೇರಿಯಾ ಅತ್ಯಪರೂಪವಾಗಿತ್ತು. ತೊಂಭತ್ತರ ಮೊದಲಲ್ಲಿ ಬೃಹತ್ ಕಟ್ಟಡಗಳು ಏಳತೊಡಗಿದಾಗ ಅವುಗಳಲ್ಲಿ ವಾರಗಟ್ಟಲೆ ನೀರು ನಿಂತು ಮಲೇರಿಯಾವಾಹಕ ಅನಾಫಿಲಸ್ ಸೊಳ್ಳೆಗಳು ವಿಪುಲವಾಗಿ ಬೆಳೆಯುವುದಕ್ಕೆ ಅವಕಾಶವುಂಟಾಯಿತು. ಪರವೂರುಗಳಿಂದ ಬಂದ ಮಲೇರಿಯಾ ಪೀಡಿತ ಕಟ್ಟಡ ಕಾರ್ಮಿಕರು ಮಲೇರಿಯಾ ಪರೋಪಜೀವಿಗಳನ್ನು ಇಲ್ಲಿನ ಸೊಳ್ಳೆಗಳಿಗೆ ಹರಡಿದರು, ಆ ಮೂಲಕ ಸುತ್ತಲಿನ ಜನರಿಗೂ ಮಲೇರಿಯಾ ಹರಡಿತು. ಮಂಗಳೂರಿನಲ್ಲಿ ಮಲೇರಿಯಾ ಹೆಚ್ಚುತ್ತಿದ್ದುದನ್ನು ಕೆಲ ವೈದ್ಯರು 1993ರಲ್ಲೇ ಆಡಳಿತದ ಗಮನಕ್ಕೆ ತಂದಿದ್ದರು; ಅದನ್ನು ನಿಯಂತ್ರಿಸದಿದ್ದರೆ ಒಂದೆರಡು ವರ್ಷಗಳಲ್ಲೇ ಜನ ಸಾಯಲಿದ್ದಾರೆ ಎಂದು ಸಾಮುದಾಯಿಕ ಆರೋಗ್ಯ ತಜ್ಞರಾಗಿದ್ದ ನನ್ನ ಗುರು ಡಾ. ಮೋಥಾ ಕಟು ಎಚ್ಚರಿಕೆಯನ್ನೂ ನೀಡಿದ್ದರು. ಆರೋಗ್ಯಾಧಿಕಾರಿಗಳು ಇವನ್ನೆಲ್ಲ ಕಡೆಗಣಿಸಿ ನಿರುಮ್ಮಳವಾಗಿದ್ದಂತೆ 1995ರಲ್ಲಿ ಹಲವರು ಮಲೇರಿಯಾದಿಂದ ಸಾವನ್ನಪ್ಪಿದರು. ಜೀವರಕ್ಷಕ ಸೌಲಭ್ಯಗಳು, ಮಲೇರಿಯಾ ನಿರೋಧಕ ಚುಚ್ಚುಮದ್ದುಗಳು ವಿರಳವಾಗಿದ್ದ ಆ ದಿನಗಳಲ್ಲಿ ಗಂಭೀರ ಮಲೇರಿಯಾವನ್ನು ನಿಭಾಯಿಸುವುದು ನಗರದ ವೈದ್ಯರಿಗೆ ಬಲು ದೊಡ್ಡ ಸವಾಲಾಗಿಬಿಟ್ಟಿತು.

ಆರೋಗ್ಯಾಧಿಕಾರಿಗಳು ಕೊನೆಗೂ ಕಣ್ತೆರೆಯಬೇಕಾಯಿತು. ಡಾ. ಮೋಥಾರಂತಹ ಹಿರಿಯರ ಮಾರ್ಗದರ್ಶನದಲ್ಲಿ, ಆಡಳಿತದಲ್ಲಿದ್ದ ಕೆಲವು ದಕ್ಷ ಮೇಲಧಿಕಾರಿಗಳ ಬೆಂಬಲದೊಂದಿಗೆ, ಮಂಗಳೂರಲ್ಲೊಂದು ವಿನೂತನವಾದ ಮಲೇರಿಯಾ ನಿಯಂತ್ರಣ ಕಾರ್ಯಕ್ರಮವನ್ನು ಆರಂಭಿಸಲಾಯಿತು. ನಗರಪಾಲಿಕೆಯ ತಂಡಗಳು ಮಲೇರಿಯಾ ಪೀಡಿತರನ್ನು ಗುರುತಿಸುವ ಹಾಗೂ ಅವರಿದ್ದ ಪ್ರದೇಶಗಳಲ್ಲಿ ಸೊಳ್ಳೆ ನಿರೋಧಕಗಳನ್ನು ಸಿಂಪಡಿಸುವ ಕ್ರಮಗಳನ್ನು ಕೈಗೊಂಡವು. ಮಲೇರಿಯಾ ಪತ್ತೆ ಹಾಗೂ ಚಿಕಿತ್ಸೆಗಳ ಬಗ್ಗೆ ವೈದ್ಯರಿಗೂ, ಅರೆ ವೈದ್ಯಕೀಯ ಸಿಬ್ಬಂದಿಗಳಿಗೂ ವ್ಯಾಪಕ ಶಿಕ್ಷಣವನ್ನು ನೀಡಲಾಯಿತಲ್ಲದೆ, ಮಲೇರಿಯ ನಿಯಂತ್ರಣದ ಬಗ್ಗೆ ಜನಜಾಗೃತಿ ಮೂಡಿಸುವ ಕಾರ್ಯಗಳಾದವು. ಕಟ್ಟಡಗಳಲ್ಲಿ ಸೊಳ್ಳೆವೃದ್ಧಿಯನ್ನು ತಡೆಯುವಲ್ಲಿ ಕಟ್ಟಡ ನಿರ್ಮಾಪಕರನ್ನು ಜವಾಬ್ದಾರರನ್ನಾಗಿಸುವ ನಿಯಮಗಳನ್ನು ನಗರಪಾಲಿಕೆ ಜಾರಿಗೊಳಿಸಿತು. ಕಟ್ಟಡಗಳ ಮೇಲೂ, ಮಲೇರಿಯಾ ಹರಡುತ್ತಿರುವ ಇತರ ಪ್ರದೇಶಗಳ ಮೇಲೂ ನಿಗಾ ವಹಿಸಲು ಪ್ರತ್ಯೇಕ ಮಲೇರಿಯಾ ಘಟಕವೊಂದನ್ನು ಆರಂಭಿಸಲಾಯಿತು, ಅದರ ಸಿಬ್ಬಂದಿಯ ವೇತನ ಇತ್ಯಾದಿಗಳಿಗಾಗಿ ನಗರ ಮೂಲದ ದೊಡ್ಡ ಬ್ಯಾಂಕು ಹಾಗೂ ದೊಡ್ಡ ಉದ್ದಿಮೆಯೊಂದು ನೆರವಾದವು. ಈ ಪ್ರಯತ್ನಗಳಿಂದ ಒಂದೇ ವರ್ಷದಲ್ಲಿ ಮಲೇರಿಯಾದಿಂದ ಸಾವುಂಟಾಗುವುದು ಗಣನೀಯವಾಗಿ ಇಳಿಯಿತು, ನಾಲ್ಕೈದು ವರ್ಷಗಳಲ್ಲಿ ಮಲೇರಿಯಾ ಹರಡುವಿಕೆಯೂ ಬಹಳಷ್ಟು ಕಡಿಮೆಯಾಯಿತು.

ತಪ್ಪುಗಳ ಪುನರಾವರ್ತನೆಯಾದರೆ ಇತಿಹಾಸ ಮರುಕಳಿಸುತ್ತದೆ ಎನ್ನುತ್ತಾರೆ. ಮಲೇರಿಯಾ ಕಡಿಮೆಯಾದಂತೆ ಆರೋಗ್ಯಾಧಿಕಾರಿಗಳು ಮತ್ತೆ ಉದಾಸೀನರಾದರು. ಡಾ. ಮೋಥಾ ನಿವೃತ್ತರಾಗಿ ತಿರುವನಂತಪುರಕ್ಕೆ ತೆರಳಿದರು, ಇತ್ತ ಅಧಿಕಾರಿಗಳೂ ಬದಲಾದರು. ಆರೋಗ್ಯಾಧಿಕಾರಿಗಳು ಹೇಳಿದ್ದನ್ನು-ಮಾಡಿದ್ದನ್ನು ಮೇಲಧಿಕಾರಿಗಳು ಪ್ರಶ್ನಿಸುತ್ತಿದ್ದರೆ ಕೆಲಸವಾಗುವುದು, ಸುಮ್ಮನೆ ಗೋಣಾಡಿಸಿದರೆ ಅಲ್ಲಿಗೇ ನಿಲ್ಲುವುದು ಅಭ್ಯಾಸವಾಯಿತು. ಮಲೇರಿಯಾ ಘಟಕದ ಕೆಲಸವನ್ನು ಕಾವಲು ಕಾಯುವ ಖಾಸಗಿ ಸಂಸ್ಥೆಯೊಂದಕ್ಕೆ ಹೊರಗುತ್ತಿಗೆ ನೀಡಲಾಗಿ ಸೊಳ್ಳೆಗಳ ಸಂತಾನಾಭಿವೃದ್ಧಿಗೆ ಇಂಬು ದೊರೆಯಿತು. ಮಳೆಗಾಲ ಮುಗಿದು ಸೊಳ್ಳೆವೃದ್ಧಿ ಕಡಿಮೆಯಿರಬೇಕಾದ ಡಿಸೆಂಬರ್ ತಿಂಗಳಲ್ಲಿ ಕೇವಲ ಜಿಲ್ಲಾಸ್ಪತ್ರೆಯೊಂದರಲ್ಲೇ 431 ಮಲೇರಿಯಾ ಪ್ರಕರಣಗಳು ಗುರುತಿಸಲ್ಪಟ್ಟಿದೆ ಎಂದಾದರೆ, ಜಿಲ್ಲೆಯ ಎಲ್ಲಾ ದೊಡ್ಡ-ಸಣ್ಣ ಆಸ್ಪತ್ರೆಗಳಲ್ಲೂ, ಸಾವಿರಾರು ಖಾಸಗಿ ಚಿಕಿತ್ಸಾಲಯಗಳಲ್ಲೂ ವರ್ಷವಿಡೀ ಪತ್ತೆಯಾಗುವ ಪ್ರಕರಣಗಳು ಎಷ್ಟಿರಬಹುದು? ಹೀಗೆ ಜಿಲ್ಲೆಯಲ್ಲಿ ವ್ಯಾಪಕವಾಗಿರುವ ಮಲೇರಿಯಾ ಹಾಗೂ ಅದರಿಂದಾಗುತ್ತಿರುವ ಸಾವುಗಳತ್ತ ಆಧಿಕಾರಿಗಳು  ಜಾಣಕುರುಡರಾಗಿವುದರಿಂದಲೇ ಇಂದು ಮಂಗಳೂರು ಇಡೀ ದೇಶದಲ್ಲೇ ಅತ್ಯಂತ ಹೆಚ್ಚು ಮಲೇರಿಯಾ ಪ್ರಕರಣಗಳಿರುವ ನಗರವಾಗಿದೆ, ದಕ್ಷಿಣ ಕನ್ನಡದ ಹಳ್ಳಿಹಳ್ಳಿಗಳಿಗೂ, ಹತ್ತಿರದ ಉಡುಪಿ, ಕಾಸರಗೋಡು ಮುಂತಾದ ಜಿಲ್ಲೆಗಳಿಗೂ ಮಲೇರಿಯಾವನ್ನು ರಫ್ತು ಮಾಡುತ್ತಿದೆ.

ಬ್ರಿಟಿಷ್ ಸೇನೆಯ ಆಸ್ಪತ್ರೆಗಳಲ್ಲಿ ವೈದ್ಯರಾಗಿದ್ದ ರೊನಾಲ್ಡ್ ರಾಸ್ 1897ರಲ್ಲಿ ಸಿಕಂದರಾಬಾದಿನಲ್ಲಿದ್ದಾಗ ಅನಾಫಿಲಸ್ ಸೊಳ್ಳೆಗಳಿಂದ ಮಲೇರಿಯಾ ಹರಡುತ್ತದೆ ಎನ್ನುವುದನ್ನು ಮೊತ್ತಮೊದಲು ಗುರುತಿಸಿದ್ದರು. ಅದಕ್ಕೂ ಮೊದಲು, 1883ರಲ್ಲಿ, ಬೆಂಗಳೂರಿನ ಸೇನಾ ಆಸ್ಪತ್ರೆಯಲ್ಲಿ ಅವರು ದುಡಿಯುತ್ತಿದ್ದಾಗ ತನ್ನ ಬಂಗಲೆಯಲ್ಲಿದ್ದ ಉಪದ್ರವಿ ಸೊಳ್ಳೆಗಳ ಮೂಲವನ್ನು ಹುಡುಕಹೊರಟು, ಹೊರಗೆ ಬಿದ್ದಿದ್ದ ದೊಡ್ಡ ಪಿಪಾಯಿಗಳಲ್ಲೂ, ಮನೆಯೊಳಗಿನ ಹೂಕುಂಡಗಳಲ್ಲೂ ಅವು ಬೆಳೆಯುವುದನ್ನು ಕಂಡಿದ್ದರು, ಅವನ್ನೆಲ್ಲ ಕವುಚಿ ಹಾಕಿ ಸೊಳ್ಳೆಗಳಿಲ್ಲದಂತೆ ಮಾಡಬಹುದೆನ್ನುವುದನ್ನು ಗುರುತಿಸಿದ್ದರು. ಸುತ್ತಮುತ್ತಲು ನೀರು ನಿಲ್ಲದಂತೆ ಕಠಿಣ ಕ್ರಮಗಳನ್ನು ಕೈಗೊಂಡರೆ ಮಲೇರಿಯಾ ಹರಡುವಿಕೆಯನ್ನು ತಡೆಯಬಹುದೆಂದು ರಾಸ್ ಪ್ರತಿಪಾದಿಸಿದ್ದರು. ಮುಂದೆ 1902 ಸುಯೆಜ್ ಕಾಲುವೆಯ ನಿರ್ಮಾಣವಾಗುತ್ತಿದ್ದಾಗ ಅಲ್ಲಿನ ಕಾರ್ಮಿಕರು ಉಳಿದುಕೊಂಡಿದ್ದ ಇಸ್ಮಾಯಿಲಿಯಾದಲ್ಲಿ ಮಲೇರಿಯಾ ವಿಪರೀತವಾಗಿ, ಕಾಲುವೆಯ ಕೆಲಸವೇ ನಿಂತುಬಿಡುವ ಅಪಾಯ ಎದುರಾಗಿತ್ತು. ರಾಸ್ ನೇತೃತ್ವದಲ್ಲಿ ಸೊಳ್ಳೆ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಂಡದ್ದರಿಂದ ಕೆಲವೇ ತಿಂಗಳುಗಳಲ್ಲಿ ಮಲೇರಿಯಾ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದು ಕಾಲುವೆಯ ಕೆಲಸ ಮೂಂದುವರಿಸಲು ಸಾಧ್ಯವಾಗಿತ್ತು.

ಡಾ. ರಾಸ್ ಅವರಿಗಿದ್ದ ಆಸಕ್ತಿಯಾಗಲೀ, ಡಾ. ಮೋಥಾ ಅವರಿಗಿದ್ದ ಕಾಳಜಿಯಾಗಲೀ ಇಂದಿನ ಅಧಿಕಾರಿಗಳಿಗಿದ್ದರೆ ಮಲೇರಿಯಾವನ್ನು ನಿಯಂತ್ರಿಸುವುದು ಕಷ್ಟವೇನಲ್ಲ. ಡಿಡಿಟಿಯಂತಹ ಕೀಟನಾಶಕಗಳಿಲ್ಲದಿದ್ದ ಕಾಲದಲ್ಲಿ ನೀರು ನಿಲ್ಲದಂತೆ ಕಠಿಣ ನಿಗಾ ವಹಿಸುವ ಮೂಲಕವೇ ಮಲೇರಿಯಾವನ್ನು ನಿಯಂತ್ರಿಸಲು ರಾಸ್ ಅವರಿಗೆ ಸಾಧ್ಯವಾಗಿದ್ದರೆ ನಮಗೇಕೆ ಸಾಧ್ಯವಿಲ್ಲ? ಮಲೇರಿಯಾವನ್ನು ಮೂರೇ ದಿನಗಳಲ್ಲಿ ಗುಣಪಡಿಸುವ ಔಷಧಗಳು ಲಭ್ಯವಿರುವಾಗ ದೂರದ ಹಳ್ಳಿಯ ಮಕ್ಕಳಿಬ್ಬರು ಅದರಿಂದ ಸಾಯುತ್ತಾರೆಂದರೆ 65ನೇ ಗಣರಾಜ್ಯೋತ್ಸವದಂದು ಹೆಮ್ಮೆಯಾಗುತ್ತದೆಯೇ?

ನಲವತ್ತೊಂದನೇ ಬರಹ : ಅನ್ಯಾಭಿಮತದ ಒಳಿತು-ಕೆಡುಕುಗಳು [ಜನವರಿ 8, 2014, ಬುಧವಾರ] [ನೋಡಿ | ನೋಡಿ]

ರೋಗ ಪರಿಹಾರಕ್ಕೆ ಪರಿಣತ ವೈದ್ಯರ ನೆರವು ಸಕಾಲದಲ್ಲಿ ದೊರೆಯಬೇಕಾದರೆ ಎಲ್ಲರ ಸಹಕಾರವೂ ಅತ್ಯಗತ್ಯ

ಬಹುಷಃ ಅನಾರೋಗ್ಯವು ತಂದೊಡ್ಡುವ ಕಷ್ಟಗಳಿಗೂ, ಗೊಂದಲಗಳಿಗೂ ಸಾಟಿಯಿರಲಾರದು. ಯಾವ ಕಾಯಿಲೆಗೆ ಯಾವ ವೈದ್ಯರ ಬಳಿಗೆ ಹೋಗಬೇಕು, ಯಾವ ವೈದ್ಯರನ್ನು ನಂಬಬೇಕು, ಯಾವುದಕ್ಕೆ ಎಲ್ಲಿ ಎಷ್ಟು ಖರ್ಚು ಮಾಡಬೇಕು ಮುಂತಾದ ಸಂದಿಗ್ಧತೆಗಳು ರೋಗಿಯನ್ನೂ, ಆತನ ಮನೆಯವರನ್ನೂ ಕಾಡುವುದು ಸಾಮಾನ್ಯ. ಅತ್ತಿತ್ತಲಿಂದ ತೂರಿಬರುವ ಅಯಾಚಿತ ಸಲಹೆಗಳು ಬೇರೆ. ವೈದ್ಯರೆದುರಿನ ಸವಾಲುಗಳೂ ಕಡಿಮೆಯೇನಲ್ಲ: ಅಪರೂಪದ ಕಾಯಿಲೆಗಳು, ಅನಿರೀಕ್ಷಿತ ಸಮಸ್ಯೆಗಳು, ಹೊಸ ಚಿಕಿತ್ಸಾಕ್ರಮಗಳು, ಕ್ಷಿಪ್ರಗತಿಯಲ್ಲಿ ಬದಲಾಗುತ್ತಿರುವ ತಂತ್ರಜ್ಞಾನಗಳು, ಹೆಚ್ಚುತ್ತಿರುವ ನಿರೀಕ್ಷೆಗಳು, ವ್ಯಾಜ್ಯಗಳ ಭಯ ಇತ್ಯಾದಿಗಳನ್ನು ಅವರು ನಿಭಾಯಿಸಬೇಕಾಗುತ್ತದೆ. ಅಂತಹಾ ಸನ್ನಿವೇಶಗಳಲ್ಲಿ ಇನ್ನೊಬ್ಬ ಪರಿಣತ ವೈದ್ಯರ ನೆರವಿದ್ದರೆ ರೋಗಿಗಳಿಗೂ, ವೈದ್ಯರಿಗೂ ಸಹಾಯಕವಾಗಬಹುದು.

ವೈದ್ಯಕೀಯ ಜ್ಞಾನವು ಒಂದೂವರೆ ವರ್ಷಕ್ಕೊಮ್ಮೆ ದುಪ್ಪಟ್ಟಾಗುತ್ತಿರುವ ಈ ಕಾಲದಲ್ಲಿ ವೈದ್ಯವೃತ್ತಿಯ ಸ್ವರೂಪವು ಬಹಳಷ್ಟು ಬದಲಾಗಿದೆ. ನಾಲ್ಕೈದು ದಶಕಗಳ ಹಿಂದೆ ಸ್ನಾತಕ ವೈದ್ಯರೇ ಹೆಚ್ಚಿನ ಚಿಕಿತ್ಸೆಗಳನ್ನೆಲ್ಲ ಒದಗಿಸಬೇಕಾಗಿತ್ತು – ಮಕ್ಕಳಿಂದ ವಯೋವೃದ್ಧರವರೆಗಿನ ರೋಗಿಗಳಲ್ಲಿ  ಸಾಮಾನ್ಯ ರೋಗಗಳನ್ನು ಗುರುತಿಸಿ ಚಿಕಿತ್ಸೆ ನೀಡುವುದಲ್ಲದೆ, ಹೆರಿಗೆ, ಸಣ್ಣ ಶಸ್ತ್ರಕ್ರಿಯೆಗಳು, ಹಾಗೂ ಅತಿ ಗಂಭೀರವಲ್ಲದ ರೋಗಗಳಿಗೆ ಒಳರೋಗಿ ಚಿಕಿತ್ಸೆಯನ್ನು ಅವರೇ ನೀಡಬೇಕಾಗುತ್ತಿತ್ತು. ಇಪ್ಪತ್ತು ವರ್ಷಗಳ ಹಿಂದೆ ನಾನು ಸ್ನಾತಕೋತ್ತರ ಪದವೀಧರ ವೈದ್ಯನಾಗಿ ವೃತ್ತಿಯನ್ನಾರಂಭಿಸಿದ್ದಾಗ ಹೊಸ ತಂತ್ರಜ್ಞಾನಗಳು ಲಭ್ಯವಿದ್ದರೂ ಅವನ್ನು ಬಳಸಬಲ್ಲ ವಿಶೇಷ ತಜ್ಞರು ವಿರಳವಾಗಿದ್ದರು. ಅತ್ಯಂತ ತುರ್ತಿನ ಸನ್ನಿವೇಶಗಳಲ್ಲಿ ಕೃತಕ ಉಸಿರಾಟ, ಉದರಪೊರೆಯ ಡಯಾಲಿಸಿಸ್ ಮುಂತಾದ ವಿಶೇಷ ಚಿಕಿತ್ಸೆಗಳನ್ನು ನಾವೇ ನೀಡಬೇಕಾಗುತ್ತಿತ್ತು.

ಈಗ ದೇಹದ ಒಂದೊಂದು ಅಂಗಕ್ಕಷ್ಟೇ ಅಲ್ಲ, ಒಂದೊಂದು ರೋಗಕ್ಕೆ ಒಬ್ಬ ವಿಶೇಷಜ್ಞರಿದ್ದಾರೆ, ಹೆಚ್ಚಿನ ಜಿಲ್ಲಾಸ್ಪತ್ರೆಗಳಲ್ಲಿ ಅತ್ಯುನ್ನತ ತಂತ್ರಜ್ಞಾನ ಲಭ್ಯವಿದೆ, ಅತಿ ಕ್ಲಿಷ್ಟವೆಂದು ಪರಿಗಣಿಸಲಾಗುತ್ತಿದ್ದ  ಕಾಯಿಲೆಗಳನ್ನು ಯಶಸ್ವಿಯಾಗಿ ಗುಣಪಡಿಸಬಲ್ಲ ಪರಿಣತರ ತಂಡಗಳೂ ಇವೆ. ಈ ಯುಗದಲ್ಲಿ ಒಬ್ಬನಿಗೇ ಎಲ್ಲ ಜ್ಞಾನವನ್ನೂ ಅರಗಿಸಿಕೊಳ್ಳುವುದಕ್ಕಾಗಲೀ, ಎಲ್ಲಾ ತಂತ್ರಜ್ಞಾನಭರಿತ ಚಿಕಿತ್ಸೆಗಳನ್ನು ನೀಡುವುದಕ್ಕಾಗಲೀ ಸಾಧ್ಯವೇ ಇಲ್ಲ. ಮಾತ್ರವಲ್ಲ, ಕಾನೂನಿನ ದೃಷ್ಟಿಯಿಂದ ಲೋಪವೆಂದೂ ಅನಿಸಬಹುದು. ಇವೇ ಕಾರಣಗಳಿಂದಾಗಿ ಇಂದು ಅಗತ್ಯವಿದ್ದಾಗಲೆಲ್ಲ ಪ್ರಾಥಮಿಕ ವೈದ್ಯರೇ ಪರಿಣತರನ್ನು ಕರೆಸುತ್ತಾರೆ ಅಥವಾ ಉನ್ನತ ಸೌಲಭ್ಯಗಳಿರುವ ಆಸ್ಪತ್ರೆಗಳಿಗೆ ರೋಗಿಯನ್ನು ಕಳುಹಿಸಿಕೊಡುತ್ತಾರೆ. ವೈದ್ಯರುಗಳು ತಮ್ಮೊಳಗೆ ವಿಚಾರ ವಿನಿಮಯ ಮಾಡಿಕೊಳ್ಳುವುದಂತೂ ಅತ್ಯಂತ ಸಾಮಾನ್ಯವಾಗಿದ್ದು, ಅಂತರಜಾಲದಂತಹ ಆಧುನಿಕ ತಂತ್ರಜ್ಞಾನದ ನೆರವಿನಿಂದ ರೋಗಿಯ ವಿವರಗಳನ್ನು ಹಾಗೂ ದೇಹದ ಒಳಹೊರಗುಗಳ ಎಕ್ಸ್ ರೇ, ಸಿಟಿ, ಎಂಆರ್ ಐ ಮುಂತಾದ ಚಿತ್ರಗಳನ್ನು, ಇಸಿಜಿ, ಇಇಜಿ ಮತ್ತಿತರ ವರದಿಗಳನ್ನು ದೇಶ-ವಿದೇಶಗಳಲ್ಲಿರುವ ತಜ್ಞರೊಂದಿಗೆ ಹಂಚಿಕೊಂಡು ಅವರ ಅಭಿಪ್ರಾಯವನ್ನು ಪಡೆಯುವ ಕ್ರಮವೂ ಹೆಚ್ಚುತ್ತಿದೆ.

ಜ್ಞಾನ, ನಿಪುಣತೆ, ಕುಶಲತೆಗಳು ಎಲ್ಲ ವೈದ್ಯರಲ್ಲೂ ಒಂದೇ ಮಟ್ಟದ್ದಾಗಿರುವುದಿಲ್ಲ. ವೈದ್ಯಕೀಯ ತರಬೇತಿಯ ಮಟ್ಟ, ಹೊಸ ಜ್ಞಾನಾರ್ಜನೆಯಲ್ಲಿ ಆಸಕ್ತಿ, ಹೊಸ ತಂತ್ರಜ್ಞಾನ ಹಾಗೂ ಚಿಕಿತ್ಸಾ ವಿಧಾನಗಳಲ್ಲಿ ಪರಿಣತಿ, ನಿರ್ದಿಷ್ಟ ಕಾಯಿಲೆಗಳ ಚಿಕಿತ್ಸೆಯಲ್ಲಿರುವ ಅನುಭವ ಮುಂತಾದವು ಒಬ್ಬರಿಂದೊಬ್ಬ ವೈದ್ಯರಲ್ಲಿ ಭಿನ್ನವಾಗಿರುತ್ತದೆ. ರೋಗಗಳ ಸ್ವರೂಪವೂ ಒಬ್ಬೊಬ್ಬ ರೋಗಿಯಲ್ಲಿ ಒಂದೊಂದಾಗಿರುತ್ತದೆ, ಹೊತ್ತು ಕಳೆದಂತೆ ಬದಲಾಗುತ್ತಿರುತ್ತದೆ. ಆದ್ದರಿಂದಲೇ ವೈದ್ಯವಿಜ್ಞಾನದಲ್ಲಿ ಎಲ್ಲವೂ ಕಡ್ಡಿ ಮುರಿದಂತೆ ಸ್ಪಷ್ಟವಾಗಿರುವುದಿಲ್ಲ, ರೋಗನಿರ್ಣಯ ಹಾಗೂ ಚಿಕಿತ್ಸೆಗಳಲ್ಲಿ ಎಲ್ಲಾ ವೈದ್ಯರ ಅಭಿಪ್ರಾಯಗಳು ಒಂದೇ ಆಗಿರುವುದಿಲ್ಲ. ನುರಿತ, ಪ್ರಾಮಾಣಿಕ ವೈದ್ಯರಿಂದ ಮನುಷ್ಯ ಸಹಜ ಲೋಪಗಳಾಗುವ ಸಾಧ್ಯತೆಗಳೂ ಇರುತ್ತವೆ. ರೋಗಲಕ್ಷಣಗಳು ವೈದ್ಯರ ಗಮನಕ್ಕೆ ಬಾರದಿರುವುದು, ರಕ್ತ-ಮೂತ್ರ ಯಾ ಕ್ಷ-ಕಿರಣದಂತಹಾ ಪರೀಕ್ಷೆಗಳಲ್ಲಿ ಅಥವಾ ಅಂಗಾಂಶ ಪರೀಕ್ಷೆ (ಬಯಾಪ್ಸಿ)ಗಳಲ್ಲಿ ಸ್ಪಷ್ಟ ಮಾಹಿತಿ ದೊರೆಯದಿರುವುದು ಯಾ ತಪ್ಪುಗಳಾಗುವುದು ಅತ್ಯಪರೂಪವೇನಲ್ಲ. ಪುರುಸೊತ್ತಿಲ್ಲದ, ತಾಳ್ಮೆಯಿಲ್ಲದ ವೈದ್ಯರೂ ಇಲ್ಲವೆನ್ನಲಾಗದು. ಅಂತಲ್ಲಿ ಇನ್ನೊಬ್ಬ ವೈದ್ಯರ ಅಭಿಮತವನ್ನು ಪಡೆಯುವುದು ರೋಗಿಯ ಪಾಲಿಗೆ ಜೀವದಾಯಿಯೇ ಆಗಬಹುದು.

ರೋಗಿ ಹಾಗೂ ಸಂಬಂಧಿಕರು ಇನ್ನೋರ್ವ (ಯಾ ಹೆಚ್ಚು) ವೈದ್ಯರ ಅಭಿಮತವನ್ನು ಪಡೆಯಬೇಕಾದ ಹಲವು ಸನ್ನಿವೇಶಗಳನ್ನು ಪಟ್ಟಿ ಮಾಡಬಹುದು: ವೈದ್ಯರಿಗೆ ಕಾಯಿಲೆಯನ್ನು ನಿಖರವಾಗಿ ಗುರುತಿಸಲಾಗದಿರುವುದು ಅಥವಾ ನೀಡಲಾಗುತ್ತಿರುವ ಚಿಕಿತ್ಸೆಯಿಂದ ರೋಗವು ಗುಣಹೊಂದುವ ಸೂಚನೆಗಳಿಲ್ಲದಿರುವುದು ಅಥವಾ ಬಿಗಡಾಯಿಸುವುದು; ಗಂಭೀರವೆನಿಸುವ ರೋಗಲಕ್ಷಣಗಳಿಲ್ಲದಿದ್ದರೂ ದುಬಾರಿಯಾದ ಹಲಬಗೆಯ ಪರೀಕ್ಷೆಗಳನ್ನು ಅಥವಾ ದೇಹದೊಳಗೆ ಉಪಕರಣಗಳನ್ನು ಹಾಯಿಸಬೇಕಾಗುವ ಪರೀಕ್ಷೆಗಳನ್ನು ಸೂಚಿಸಿರುವುದು; ಅತ್ಯಪರೂಪದ ಅಥವಾ ಮಾರಣಾಂತಿಕವಾದ ಅಥವಾ ಗುಣಹೊಂದದ ಅಥವಾ ತೀರಾ ಅನಿರೀಕ್ಷಿತವಾದ ಕಾಯಿಲೆಗಳು ಗುರುತಿಸಲ್ಪಡುವುದು; ಗರ್ಭಕೋಶ, ಪಿತ್ತಕೋಶ, ಬೆನ್ನೆಲುಬು ಮತ್ತು ಥೈರಾಯ್ಡ್ ಸಮಸ್ಯೆಗಳಿಗೆ ಮತ್ತು ಚರ್ಮದಡಿಯಲ್ಲಿರುವ ನಿರುಪದ್ರವಿ ಗೆಡ್ಡೆಗಳಿಗೆ ಶಸ್ತ್ರಚಿಕಿತ್ಸೆಗಳು, ಶಾಶ್ವತವಾಗಿ ಅಂಗ ವೈಕಲ್ಯತೆಯನ್ನುಂಟು ಮಾಡಬಹುದಾದ ಶಸ್ತ್ರಚಿಕಿತ್ಸೆಗಳು ಹಾಗೂ ಇನ್ನಿತರ ದೊಡ್ಡ ಶಸ್ತ್ರಚಿಕಿತ್ಸೆಗಳು; ಹೆಚ್ಚು ಸಮಸ್ಯೆಗಳುಳ್ಳ ಅಥವಾ ಅಪಾಯಕಾರಿಯಾದ ಚಿಕಿತ್ಸೆಗಳು ಮತ್ತು ತೀರಾ ಹೊಸದಾದ ಯಾ ಪ್ರಾಯೋಗಿಕವಾದ ಪರೀಕ್ಷೆಗಳು ಅಥವಾ ಚಿಕಿತ್ಸೆಗಳು; ವೈದ್ಯರು ಕಾಯಿಲೆಯ ಸ್ವರೂಪದ ಬಗ್ಗೆ ನಿಖರವಾಗಿ ಹೇಳಲು ಅಸಮರ್ಥರಾಗುವುದು, ಪರೀಕ್ಷೆಯ ಅಥವಾ ಚಿಕಿತ್ಸೆಯ ಒಳಿತು-ಕೆಡುಕುಗಳ ಬಗ್ಗೆ ಸಂಶಯಾತೀತವಾಗಿ ವಿವರಿಸದಿರುವುದು ಹಾಗೂ ವೈದ್ಯರ ನಡವಳಿಕೆಯು ತೃಪ್ತಿದಾಯಕವಲ್ಲದಿರುವುದು ಇತ್ಯಾದಿ ಸನ್ನಿವೇಶಗಳಲ್ಲಿ ಇನ್ನೋರ್ವ ನುರಿತ ವೈದ್ಯರನ್ನು ಕಾಣುವುದೊಳ್ಳೆಯದು.

ರೋಗ ಪರಿಹಾರಕ್ಕಾಗಿ ಇನ್ನೋರ್ವ ವೈದ್ಯರನ್ನು ಕಾಣಬೇಕಲ್ಲದೆ ಮೊದಲ ವೈದ್ಯರ ತಪ್ಪುಗಳನ್ನು ಹುಡುಕುವುದಕ್ಕಲ್ಲ. ಮೊದಲ ವೈದ್ಯರಿಗೆ ನೋವಾಗಬಹುದೆಂಬ ಹಿಂಜರಿಕೆಯೂ ಬೇಕಿಲ್ಲ. ಮೊದಲ ವೈದ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರ ಸಹಕಾರದಿಂದಲೇ ಸೂಕ್ತ ಪರಿಣತಿಯುಳ್ಳ ಇನ್ನೋರ್ವರ ಅಭಿಮತವನ್ನು ಪಡೆಯುವುದು ಯಾವತ್ತೂ ಒಳ್ಳೆಯದು. ಖಾಸಗಿ ಸಂಸ್ಥೆಗಳ ಮೇಲೆ ವಿಶ್ವಾಸವಿಲ್ಲವೆಂದಾದರೆ ಶ್ರೇಷ್ಠ ದರ್ಜೆಯ ಸರಕಾರಿ ಆಸ್ಪತ್ರೆಗಳಲ್ಲಿ ಯಾ ವೈದ್ಯಕೀಯ ವಿದ್ಯಾಲಯಗಳಲ್ಲಿರುವ ವಿಶೇಷಜ್ಞರನ್ನು ಕಾಣಬಹುದು. ತುರ್ತುಸ್ಥಿತಿಗಳಲ್ಲಿ ಪ್ರತಿಕ್ಷಣವೂ ಅಮೂಲ್ಯವಾಗಿದ್ದು, ಇನ್ನೊಬ್ಬ ವೈದ್ಯರನ್ನು ಹುಡುಕುವುದಕ್ಕೆ ಸಮಯವನ್ನು ವ್ಯರ್ಥಮಾಡಬಾರದು; ಸಾಧ್ಯವಾದರೆ ಮೊದಲ ವೈದ್ಯರೇ ಇನ್ನೋರ್ವರಲ್ಲಿ ಚರ್ಚಿಸುವಂತೆ ಯಾ ರೋಗಿಯಿದ್ದಲ್ಲಿಗೇ ಕರೆಸುವಂತೆ ಕೇಳಬಹುದು. ದೊಡ್ಡ ಆಸ್ಪತ್ರೆಗಳಲ್ಲಿ ಒಬ್ಬ ವೈದ್ಯರು ಇನ್ನೊಬ್ಬರ ನಿರ್ಧಾರಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ಹಿಂಜರಿಯುವ ಸಾಧ್ಯತೆಗಳಿರುವುದರಿಂದ ಹೊರಗಿನ ವೈದ್ಯರನ್ನು ಕಾಣುವ ಅಗತ್ಯವುಂಟಾಗಬಹುದು. ದೊಡ್ಡ ಆಸ್ಪತ್ರೆಗಳು ಕೊಡಮಾಡುವ ಆರೋಗ್ಯ ವಿಮೆಯಲ್ಲಿ ಹೊರಗಿನ ವೈದ್ಯರಿಂದ ಚಿಕಿತ್ಸೆ ಪಡೆಯುವುದಕ್ಕೆ ತೊಡಕಿದ್ದರೆ ಎಲ್ಲೆಡೆ ಬಳಸಬಹುದಾದ ಸಾಮಾನ್ಯ ಆರೋಗ್ಯ ವಿಮೆಯೇ ಹೆಚ್ಚು ಉಪಯುಕ್ತವೆನಿಸಬಹುದು.

ಎರಡನೇ ವೈದ್ಯರನ್ನು ಕಾಣುವಾಗ ಹಿಂದಿನೆಲ್ಲಾ ವಿವರಗಳನ್ನೂ, ಪರೀಕ್ಷೆಯ ವರದಿಗಳನ್ನೂ ನೀಡಿ ಸಹಕರಿಸಬೇಕು. ವೈದ್ಯರ ಅಭಿಮತಗಳು ಒಂದೇ ಆಗಿದ್ದಾಗ ರೋಗಿ ಹಾಗೂ ಮನೆಯವರ ಧೈರ್ಯವು ಹೆಚ್ಚುತ್ತದೆ. ಎರಡನೇ ಅಭಿಮತವು ತೀರಾ ವ್ಯತಿರಿಕ್ತವಾಗಿದ್ದರೆ (ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸುವ ಶಸ್ತ್ರಚಿಕಿತ್ಸಕರು ಹಾಗೂ ಹೃದ್ರೋಗ ತಜ್ಞರಲ್ಲಿ ಆ ಸಾಧ್ಯತೆಗಳು ಹೆಚ್ಚು), ಮತ್ತೊಬ್ಬ ವೈದ್ಯರ ಅಭಿಪ್ರಾಯವನ್ನು ಪಡೆಯಬಹುದು ಅಥವಾ ಮೊದಲ ವೈದ್ಯರ ಬಳಿ ಮತ್ತೊಮ್ಮೆ ಚರ್ಚಿಸಬಹುದು. ಎರಡನೇ ಅಭಿಮತವು ಸರಿಯಿಲ್ಲದಿರುವ, ಪ್ರಾಮಾಣಿಕವಾಗಿಲ್ಲದಿರುವ ಅಥವಾ ಪೂರ್ವಾಗ್ರಹ ಪೀಡಿತವಾಗಿರುವ ಸಾಧ್ಯತೆಗಳೂ ಇವೆಯೆನ್ನುವುದನ್ನು ಗಮನದಲ್ಲಿರಿಸಬೇಕು. ವಸ್ತುನಿಷ್ಠವಾದ ಅಭಿಪ್ರಾಯಕ್ಕೆ ಬದಲಾಗಿ ರೋಗಿ ಬಯಸುವ ಹಾಲನ್ನೇ ಕೊಡುವ ವೈದ್ಯರಿಂದ ಹಾನಿಯಾಗುವ ಸಾಧ್ಯತೆಗಳಿವೆ ಎನ್ನುವುದನ್ನು ಮರೆಯಬಾರದು. ಒಟ್ಟಿನಲ್ಲಿ ರೋಗಿಯು ತನ್ನ ಚಿಕಿತ್ಸೆಯ ಎಲ್ಲಾ ಸಾಧಕ-ಬಾಧಕಗಳನ್ನು ಸ್ಪಷ್ಟವಾಗಿ ಅರಿತುಕೊಂಡೇ ಮುಂದಡಿಯಿಡಬೇಕು.

ಬದಲಿ ಚಿಕಿತ್ಸಕರು, ನಕಲಿಗಳು, ಯೋಗಪಟುಗಳು ಮುಂತಾದವರ ಅಭಿಪ್ರಾಯಗಳನ್ನು ನೆಚ್ಚಿಕೊಂಡು ಆಧುನಿಕ ಚಿಕಿತ್ಸೆಯಿಂದ ವಿಮುಖರಾದರೆ ಒಳಿತಿಗಿಂತ ಕೆಡುಕೇ ಹೆಚ್ಚಾಗಬಹುದು. ನೆರೆಹೊರೆಯವರು, ಬಂಧುಮಿತ್ರರು ಅಥವಾ ವೈದ್ಯಕೀಯ ಜ್ಞಾನವಿಲ್ಲದ ಇನ್ನಿತರರಿಂದ ರೋಗ ಯಾ ಚಿಕಿತ್ಸೆಯ ಬಗ್ಗೆ ನೇರವಾದ ಸಲಹೆಗಳನ್ನು ಪಡೆಯುವುದು ಉಚಿತವಲ್ಲ. ಅಂತರಜಾಲದಲ್ಲಿರುವ ಮಾಹಿತಿಯನ್ನು ಬಳಸುವಾಗ ಜಾಗರೂಕರಾಗಿದ್ದು, ಗೊಂದಲಕ್ಕೀಡಾಗಬಾರದು. ಅನಾರೋಗ್ಯ ಬಾಧಿಸಿದ ಬಳಿಕ ಒಳ್ಳೆಯ ಪರಿಣತ ವೈದ್ಯರನ್ನು ಹುಡುಕುವ ಬದಲು ಮೊದಲೇ ಅಂಥವರನ್ನು ಗುರುತಿಸಿ ಇಟ್ಟುಕೊಳ್ಳುವುದು ಒಳ್ಳೆಯದು. ರೋಗಿಯ ಹಿತದೃಷ್ಠಿಯಿಂದ ಪರಿಣತರ ನೆರವನ್ನು ಸಕಾಲದಲ್ಲಿ ಪಡೆಯುವುದಕ್ಕೆ ಬಂಧುಮಿತ್ರರೂ, ಚಿಕಿತ್ಸೆ ನೀಡುತ್ತಿರುವ ವೈದ್ಯರೂ ಸಂಪೂರ್ಣವಾಗಿ ಸಹಕರಿಸಬೇಕಾದದ್ದು ಅತ್ಯಗತ್ಯ.

ನಲವತ್ತನೇ ಬರಹ : ಲೈಂಗಿಕತೆಯ ಬಹುರೂಪ ನಿತ್ಯ ನಿರಂತರ ಸತ್ಯ [ಡಿಸೆಂಬರ್ 25, 2013, ಬುಧವಾರ] [ನೋಡಿ | ನೋಡಿ]

ಭಿನ್ನಲಿಂಗಿಗಳು, ಅಂತರಲಿಂಗಿಗಳು ಹಾಗೂ ಭಿನ್ನ ಲೈಂಗಿಕಾಸಕ್ತರಿಗೆ ಬಾಳಸುಖವನ್ನು ನಿರಾಕರಿಸಲಾಗದು

ಸಲಿಂಗಸಂಗದಂತಹಾ ಭಿನ್ನ ಲೈಂಗಿಕ ಆಸಕ್ತಿಯುಳ್ಳವರನ್ನು ಜೀವಾವಧಿ ಸೆರೆಗೆ ತಳ್ಳುವ 1861ರ ಬ್ರಿಟಿಷರ ಕಾನೂನನ್ನು ಸ್ವತಂತ್ರ ಭಾರತದ ಸರ್ವೋಚ್ಛ ನ್ಯಾಯಾಲಯವು ಮತ್ತೆ ಊರ್ಜಿತಗೊಳಿಸಿದೆ. ಸಂತ್ರಸ್ತರು, ಮಾನವಹಕ್ಕು ಹೋರಾಟಗಾರರು, ವೈದ್ಯಕೀಯ ತಜ್ಞರು ಒಕ್ಕೊರಲಿನಿಂದ ಇದನ್ನು ಖಂಡಿಸಿದ್ದಾರೆ; ವಿಶ್ವ ಸಂಸ್ಥೆಯೂ ಅದಕ್ಕೆ ದನಿಗೂಡಿಸಿದೆ. ಅತ್ತ ಸ್ವಘೋಷಿತ ಧರ್ಮ-ಸಂಸ್ಕೃತಿ ರಕ್ಷಕರು, ಎಲ್ಲ ಧರ್ಮಗಳ ಗುರುಗಳು, ಸರ್ವರೋಗ ನಿವಾರಕ ಬೊಗಳೆ ಯೋಗರ್ಷಿಗಳು ಇದನ್ನು ಸ್ವಾಗತಿಸಿದ್ದಾರೆ; ಸಲಿಂಗಸಂಗವು ಅಸಹಜವಾಗಿದೆ, ನಮ್ಮ ಸಂಸ್ಕೃತಿಗೆ ವಿರುದ್ಧವಾಗಿದೆ, ಚಿಕಿತ್ಸೆಯ ಅಗತ್ಯವುಳ್ಳ ಮನೋದೈಹಿಕ ರೋಗವಾಗಿದೆ ಎಂದೆಲ್ಲ ಈ ಸೋಗಿನ ಸರ್ವಜ್ಞಾನಿಗಳು ವಾದಿಸುತ್ತಿದ್ದಾರೆ.

ಸಲಿಂಗಾಸಕ್ತಿಯನ್ನು ಕೀಳಾಗಿಸಿ ತಿರಸ್ಕರಿಸುವ ಈ ಅನ್ಯಾಯದ ವಿರುದ್ಧ ಎಲ್ಲಾ ಪ್ರಜ್ಞಾವಂತರು ದನಿಯೆತ್ತಲೇ ಬೇಕಾಗಿದೆ. ಮನುಷ್ಯರಲ್ಲಿ ಗಂಡು ಹಾಗೂ ಹೆಣ್ಣು ಎಂಬೆರೆಡು ಲಿಂಗಗಳನ್ನಷ್ಟೇ ಗುರುತಿಸುವ ಮತ್ತು ಅವರೊಳಗೆ ಪರಲಿಂಗಸಂಗವಷ್ಟೇ ಸಹಜ ಹಾಗೂ ನೈತಿಕವೆನ್ನುವ ದುಷ್ಟತನವನ್ನು ಕೊನೆಗಾಣಿಸಬೇಕಾಗಿದೆ. ಮನುಷ್ಯರ ಲಿಂಗರಚನೆಗಳಲ್ಲಿ, ಲೈಂಗಿಕ ಮನೋಭಾವಗಳಲ್ಲಿ ಹಾಗೂ ಆಸಕ್ತಿಗಳಲ್ಲಿ ಹಲವು ವಿಧಗಳಿವೆ, ಮಾತ್ರವಲ್ಲ, ಒಂದೇ ವ್ಯಕ್ತಿಯಲ್ಲಿ ಇವು ಕಾಲಕಾಲಕ್ಕೆ ಬದಲಾಗುವ ಸಾಧ್ಯತೆಗಳೂ ಇವೆ ಎನ್ನುವ ವೈಜ್ಞಾನಿಕ ಸತ್ಯವನ್ನು ಎಲ್ಲರೂ ಅರಿಯಬೇಕಾಗಿದೆ.

ಮನುಷ್ಯನ ಲೈಂಗಿಕತೆಯು ಬಹು ಸಂಕೀರ್ಣವಾಗಿದ್ದು, ಕಣ್ಣಿಗೆ ಕಾಣುವ ಗಂಡು-ಹೆಣ್ಣೆಂಬುದಕ್ಕಷ್ಟೇ ಸೀಮಿತವಾದುದಲ್ಲ. ದೇಹದ ಹೊರಗೆ ಮತ್ತು ಒಳಗೆ ಇರುವ ಜನನಾಂಗಗಳು, ಮನಸ್ಸಿನಲ್ಲಿ ಮೂಡುವ ಗಂಡು-ಹೆಣ್ಣೆಂಬ ಭಾವನೆಗಳು, ಲೈಂಗಿಕ ಸುಖಕ್ಕಾಗಿ ಯಾರೊಡನೆ ಕೂಡಬೇಕೆಂಬ ಆಸಕ್ತಿಗಳು ಹಾಗೂ ಇವೆಲ್ಲವುಗಳ ನಡುವಿನ ಹೊಂದಾಣಿಕೆಗಳು ಒಬ್ಬ ವ್ಯಕ್ತಿಯ ಲೈಂಗಿಕತೆಯನ್ನು ನಿರ್ಧರಿಸುತ್ತವೆ. ಇವು ತಾಯಿ-ತಂದೆಯರಿಂದ ಪಡೆದ ಲಿಂಗನಿರ್ಧಾರಕ X ಮತ್ತು Y ವರ್ಣತಂತುಗಳನ್ನು, ದೇಹದಲ್ಲಿ ಸ್ರವಿಸಲ್ಪಡುವ ಸ್ತ್ರೀ-ಪುರುಷ ಲಿಂಗಚೋದಕ ಹಾರ್ಮೋನುಗಳನ್ನು, ಲೈಂಗಿಕತೆಗೆ ಸಂಬಂಧಿಸಿದ ಮೆದುಳಿನ ಭಾಗಗಳ ರಚನೆ ಮತ್ತು ಅವುಗಳ ಮೇಲೆ ದೇಹದೊಳಗಿನ ಹಾಗೂ ಹೊರಗಿನ ಪ್ರಚೋದನೆಗಳನ್ನು ಅವಲಂಬಿಸಿರುತ್ತವೆ. ಇಷ್ಟೊಂದು ಸಂಕೀರ್ಣವಾದ ವ್ಯವಸ್ಥೆಯು ಸಹಜವಾಗಿಯೇ ಹಲವು ವೈವಿಧ್ಯಗಳಿಗೆ ಕಾರಣವಾಗುತ್ತದೆ.

ಕೆಲವರಲ್ಲಿ ಜನನಾಂಗಗಳ ಬೆಳವಣಿಗೆಯಲ್ಲಿ ವ್ಯತ್ಯಾಸಗಳಿದ್ದರೆ, ಇನ್ನು ಕೆಲವರಲ್ಲಿ ಲಿಂಗರಚನೆ ಹಾಗೂ ಲೈಂಗಿಕ ಮನೋಭಾವಗಳ ನಡುವೆ ಹೊಂದಾಣಿಕೆಯಿಲ್ಲದಿರಬಹುದು. ಅಂಥವರಿಗೆ ಗಂಡು ಅಥವಾ ಹೆಣ್ಣೆಂದು ಸ್ಪಷ್ಟವಾಗಿ ಗುರುತಿಸಿಕೊಳ್ಳಲು ಕಷ್ಟವಾಗುತ್ತದೆ. ಜನನಾಂಗಗಳು ಅಪೂರ್ಣವಾಗಿರುವವರು, ಒಳ-ಹೊರಗಿನ ಜನನಾಂಗಗಳು ತಾಳೆಯಾಗದಂತಿರುವವರು, ಎರಡೂ ಲಿಂಗಗಳನ್ನು ಪಡೆದಿರುವವರು (ದ್ವಿಲಿಂಗಿಗಳು) ಅಥವಾ ಲಿಂಗ ಯಾವುದೆಂದು ನಿರ್ಧರಿಸಲು ಅಸಾಧ್ಯವಾಗುಳ್ಳವರು ನಮ್ಮಲ್ಲಿರುತ್ತಾರೆ. ಹುಟ್ಟಿನಲ್ಲಿ ಗಂಡು ಯಾ ಹೆಣ್ಣೆಂದು ಗುರುತಿಸಲ್ಪಟ್ಟಿದ್ದು, ದೊಡ್ಡವರಾಗುತ್ತಿದ್ದಂತೆ ಅದಕ್ಕೆ ಸರಿಹೊಂದದ ದೈಹಿಕ ಯಾ ಮಾನಸಿಕ ಬದಲಾವಣೆಗಳನ್ನು ಕಾಣುವ ಅಂತರಲಿಂಗಿಗಳೂ ಇರುತ್ತಾರೆ. ಉದಾಹರಣೆಗೆ, ಗಂಡಿನ ದೇಹರಚನೆಯಿದ್ದು ಹೆಣ್ಣಿನ ಭಾವನೆಗಳನ್ನು ಹೊಂದಿರುವವರು ಅಥವಾ ಸ್ತ್ರೀಸಹಜ ದೇಹವಿದ್ದು ಗಂಡಿನ ಮನಸ್ಥಿತಿಯುಳ್ಳವರು ಅಥವಾ ಇವೆರಡರ ನಡುವಿನವರು ಇತ್ಯಾದಿ. ಸೂಕ್ತ ಚಿಕಿತ್ಸೆಯ ಮೂಲಕ ತಮ್ಮ ಲೈಂಗಿಕ ಮನೋಭಾವಕ್ಕೆ ಹೊಂದುವಂತೆ ಲಿಂಗರಚನೆಯನ್ನು ಬದಲಿಸಿಕೊಳ್ಳುವ ಲಿಂಗಾಂತರಿಗಳೂ ಇರುತ್ತಾರೆ.

ಮನುಷ್ಯರ ಲೈಂಗಿಕ ಆಸಕ್ತಿಗಳೂ ಬಹುರೂಪಿಯಾಗಿರುತ್ತವೆ: ಗಂಡು ಹೆಣ್ಣಿನತ್ತ, ಹೆಣ್ಣು ಗಂಡಿನತ್ತ ಆಕರ್ಷಿತವಾಗುವ ಪರಲಿಂಗಸಂಗಾಸಕ್ತಿ, ಗಂಡು ಇನ್ನೊಂದು ಗಂಡನ್ನು ಯಾ ಹೆಣ್ಣು ಇನ್ನೊಂದು ಹೆಣ್ಣನ್ನು ಸೇರಬಯಸುವ ಸಲಿಂಗಸಂಗಾಸಕ್ತಿ, ಇವೆರಡನ್ನೂ ಹೊಂದಿರುವ ಉಭಯಲಿಂಗಾಸಕ್ತಿ ಹಾಗೂ ಇದಾವುದೂ ಇಲ್ಲದ ಅನಾಸಕ್ತಿ ಇತ್ಯಾದಿ. ಒಬ್ಬನ ಲೈಂಗಿಕ ಆಸಕ್ತಿಯು ಜೀವನಪರ್ಯಂತ ಒಂದೇ ಆಗಿರದೆ,ಕಾಲಕಾಲಕ್ಕೆ ಬದಲಾಗಲೂ ಬಹುದು. ಉದಾಹರಣೆಗೆ, ಮೊದಲಲ್ಲಿ ಪರಲಿಂಗಸಂಗಾಸಕ್ತರಾಗಿದ್ದವರು ನಂತರ ಸಲಿಂಗಸಂಗಾಸಕ್ತರೋ, ಉಭಯಲಿಂಗಾಸಕ್ತರೋ ಅಥವಾ ಅನಾಸಕ್ತರೋ ಆಗಬಹುದು;ಹಾಗೆಯೇ, ಸಲಿಂಗಸಂಗಿಗಳಾಗಿದ್ದವರಲ್ಲಿ ಪರಲಿಂಗಸಂಗಾಸಕ್ತಿ ಮೂಡಬಹುದು. ಇವೆಲ್ಲವೂ ಜೈವಿಕ ಪ್ರಕ್ರಿಯೆಗಳೇ ಹೊರತು ಐಚ್ಛಿಕವಾದ ಆಯ್ಕೆಗಳಾಗಿರುವುದಿಲ್ಲ. ಆದ್ದರಿಂದ ಇವುಗಳಲ್ಲಿ ಸರಿ-ತಪ್ಪು, ಒಳ್ಳೆಯದು-ಕೆಟ್ಟದು, ನೈತಿಕ-ಅನೈತಿಕ ಯಾವುದೆಂದು ಹೇಳುವಂತೆಯೇ ಇಲ್ಲ. ಪರಲಿಂಗಸಂಗಾಸಕ್ತಿಯು ಹೆಚ್ಚು ಸಾಮಾನ್ಯವೆನ್ನುವ ಕಾರಣಕ್ಕೆ ಎಲ್ಲರಲ್ಲೂ ಅದನ್ನೇ ನಿರೀಕ್ಷಿಸುವುದು ದುಷ್ಟತನವಾಗುತ್ತದೆ.

ವರ್ಣತಂತುಗಳು, ಹಾರ್ಮೋನುಗಳು ಹಾಗೂ ಮೆದುಳಿನ ಬದಲಾವಣೆಗಳಿಂದುಂಟಾಗುವ ಭಿನ್ನ ಲೈಂಗಿಕ ಆಸಕ್ತಿಗಳನ್ನು ಯಾವುದೇ ಚಿಕಿತ್ಸೆಯಿಂದ ಬದಲಿಸಲು ಸಾಧ್ಯವಿಲ್ಲ. ಹೊಟ್ಟೆ ಹೊರಳಿಸುವ ಉಸಿರಾಟ,ಬಗೆಬಗೆಯ ಪ್ರಾರ್ಥನೆಗಳು, ಒತ್ತಡ-ಬೆದರಿಕೆಗಳು ಎಲ್ಲವೂ ವ್ಯರ್ಥಪ್ರಯತ್ನಗಳಷ್ಟೇ ಆಗುತ್ತವೆ. ಇಂತಹಾ ಪ್ರಯತ್ನಗಳಿಂದ ವ್ಯಕ್ತಿಯ ಕಷ್ಟಗಳು ಇನ್ನಷ್ಟು ಹೆಚ್ಚಬಹುದೆಂದು ಹಲವು ಅಧ್ಯಯನಗಳು ಶ್ರುತಪಡಿಸಿವೆ.

ಇಂತಹಾ ಅಧ್ಯಯನಗಳಿಂದಾಗಿ ಭಿನ್ನ ಲೈಂಗಿಕತೆಯನ್ನು ವಿಕೃತಿಯೆಂದು ಪರಿಗಣಿಸುತ್ತಿದ್ದ ವೈದ್ಯಲೋಕದ ನಿಲುವಿನಲ್ಲೂ ಬದಲಾವಣೆಗಳಾಗಿವೆ. ಅಮೆರಿಕಾದ ಮನೋವಿಜ್ಞಾನ ಸಂಘವು 1973ರಲ್ಲೂ, ವಿಶ್ವ ಆರೋಗ್ಯ ಸಂಸ್ಥೆಯು 1992ರಲ್ಲೂ ಅವನ್ನು ರೋಗಗಳ ಪಟ್ಟಿಯಿಂದ ತೆಗೆದುಹಾಕಿದವು. ಭಾರತದ ಮನೋವಿಜ್ಞಾನ ಸಂಘವೂ ಇದನ್ನು ಬೆಂಬಲಿಸಿದೆ [ಮೈಸೂರಿನ ಡಾ. ಸತ್ಯನಾರಾಯಣ ರಾವ್ ಹಾಗೂ ವೆಲ್ಲೂರಿನ ಡಾ. ಜಾಕಬ್ ಬರೆದಿರುವ ಸಂಪಾದಕೀಯ, ಇಂಡಿಯನ್ ಜರ್ನಲ್ ಆಫ್ ಸೈಕಿಯಾಟ್ರಿ, 2012;54(1):1-3].

ಮನುಷ್ಯರು ಸಂತಾನೋತ್ಪತ್ತಿಗಿಂತಲೂ ಹೆಚ್ಚಾಗಿ ಮೈಮನಗಳ ಉದ್ರೇಕದಿಂದಾಗುವ ಸುಖಾನುಭವಕ್ಕಾಗಿ ಲೈಂಗಿಕ ಕ್ರಿಯೆಗೆಳಸುತ್ತಾರೆ. ಅದರಿಂದ ಪರಸ್ಪರ ಭಾವಬಂಧಗಳು ಬೆಸೆಯುತ್ತವೆ, ಸಂವಹನವು ಬಲಿಯುತ್ತದೆ, ಸುರಕ್ಷತೆಯು ಗಟ್ಟಿಗೊಳ್ಳುತ್ತದೆ, ಮನೋದೈಹಿಕ ವಿಕಾಸವಾಗುತ್ತದೆ. ಇದೇ ಕಾರಣಕ್ಕೆ ಫ್ರೌಢಾವಸ್ಥೆಯಲ್ಲಿರುವವರು ತಮ್ಮ ಆಸಕ್ತಿಗನುಗುಣವಾಗಿ ಹಲತರದ ಲೈಂಗಿಕ ಕ್ರಿಯೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಭಿನ್ನಲಿಂಗಿಗಳೂ, ಅಂತರಲಿಂಗಿಗಳೂ, ಭಿನ್ನ ಲೈಂಗಿಕಾಸಕ್ತರೂ ತಮಗೆ ಸಾಧ್ಯವಿರುವ ಲೈಂಗಿಕ ಸುಖವನ್ನು ಪಡೆಯಲೆಳಸುತ್ತಾರೆ. ಹಾಗಿರುವಾಗ, ಹದಿನೆಂಟಕ್ಕೆ ಮೇಲ್ಪಟ್ಟವರು,ಖಾಸಗಿಯಾಗಿ, ಪರಸ್ಪರ ಒಪ್ಪಿಗೆಯಿಂದ ಲೈಂಗಿಕ ಕ್ರಿಯೆಗಳನ್ನು ನಡೆಸುವುದಕ್ಕೆ ಯಾವುದೇ ಅಡ್ಡಿಗಳಿರಬಾರದು (ಯಾರೇ ಆಗಲಿ, ಒಪ್ಪಿಗೆಯಿಲ್ಲದೆ ಅಥವಾ ಅಪ್ರಾಪ್ತರೊಡನೆ ಲೈಂಗಿಕ ಕ್ರಿಯೆಗೆಳಸುವುದು ಶಿಕ್ಷಾರ್ಹ). ಕುಟುಂಬದ ಒತ್ತಡಗಳು, ಸಾಮಾಜಿಕ ಕಟ್ಟುಪಾಡುಗಳು ಹಾಗೂ ಕಾನೂನಿನ ತೊಡಕುಗಳು ಭಿನ್ನ ಲೈಂಗಿಕತೆಯುಳ್ಳವರ ಪಾಲಿಗೆ ಮಹಾಶಾಪಗಳಾಗುತ್ತವೆ; ವಿವಾಹಗಳು ಮುರಿದು ಬೀಳುವುದಕ್ಕೂ, ಕೆಲವರಿಗೆ ಬಾಳ್ವೆಯೇ ಬೇಡವೆನಿಸುವುದಕ್ಕೂ ಕಾರಣಗಳಾಗುತ್ತವೆ.

ಲೈಂಗಿಕ ವೈವಿಧ್ಯಗಳು ಅಪರೂಪವೂ ಅಲ್ಲ. ಎಲ್ಲಾ ದೇಶ-ಧರ್ಮಗಳ ಮನುಷ್ಯರಲ್ಲೂ, ಸಾವಿರಕ್ಕೂ ಹೆಚ್ಚು ಪ್ರಾಣಿ-ಪಕ್ಷಿಗಳಲ್ಲೂ ಅವನ್ನು ಗುರುತಿಸಲಾಗಿದೆ. ವೇದ-ಪುರಾಣಗಳಲ್ಲಿ, ರಾಮಾಯಣ-ಮಹಾಭಾರತದಂತಹ ಮೇರುಕೃತಿಗಳಲ್ಲಿ, ಭಾರತದ ಉದ್ದಗಲಕ್ಕೂ ಇರುವ ಕಲಾಕೃತಿಗಳಲ್ಲಿ ಬಹುರೂಪಿ ಲೈಂಗಿಕತೆಯ ಬಗ್ಗೆಯೂ, ಅಂತರಲಿಂಗಿಗಳ ತೃತೀಯ ಪ್ರಕೃತಿಯ ಬಗ್ಗೆಯೂ ಸಹಜ ಸುಂದರವಾದ ವರ್ಣನೆಗಳಿವೆ. ವಾತ್ಸ್ಯಾಯನನ ಕಾಮಸೂತ್ರದಲ್ಲೂ, ಹಲವು ದೇವಾಲಯಗಳ ಮಿಥುನ ಶಿಲ್ಪಗಳಲ್ಲೂ ಲೈಂಗಿಕ ಕ್ರಿಯೆಗಳ ವೈವಿಧ್ಯಗಳನ್ನು ಮನೋಜ್ಞವಾಗಿ ಬಿಂಬಿಸಲಾಗಿದೆ. ವಿಶ್ವದ ಹಲವೆಡೆ ನಡೆಸಲಾಗಿರುವ ಅಧ್ಯಯನಗಳನುಸಾರ, ಭಿನ್ನಲಿಂಗಿಗಳು ಹಾಗೂ ಅಂತರಲಿಂಗಿಗಳು ಶೇ. 0.5-4ರಷ್ಟಿದ್ದಾರೆ, ಒಂದಿಲ್ಲೊಂದು ಹಂತದಲ್ಲಿ ಭಿನ್ನ ಲೈಂಗಿಕ ಆಸಕ್ತಿಯನ್ನು ಹೊಂದಿದ್ದವರು ಶೇ. 20-30ರಷ್ಟಿದ್ದಾರೆ. ಇವರಲ್ಲಿ ಅರ್ಧದಷ್ಟು ಮಂದಿ ಭಿನ್ನ ಲೈಂಗಿಕ ಕ್ರಿಯೆಗೆಳಸುತ್ತಾರೆಂದು ಅಂದಾಜಿಸಿದರೂ ಭಾರತದಲ್ಲಿ ಅಂಥವರ ಸಂಖ್ಯೆಯು 20 ಕೋಟಿಯಷ್ಟಾಗುತ್ತದೆ.

ನಮ್ಮ ದಂಡಸಂಹಿತೆಯ 377ನೇ ವಿಧಿಯು ಇವರನ್ನೆಲ್ಲ ಜೈಲು ಪಾಲಾಗಿಸುತ್ತದೆ. ಭಿನ್ನ ಲೈಂಗಿಕ ಕ್ರಿಯೆಗಳಿಗೆ ಮರಣದಂಡನೆ ವಿಧಿಸುವ ಕಾನೂನುಗಳು 16ನೇ ಶತಮಾನದ ಯೂರೋಪಿನಲ್ಲಿ ಹುಟ್ಟಿಕೊಳ್ಳಲು ಮತಧರ್ಮಗಳ ಕಾಟವೇ ಕಾರಣವಾಗಿತ್ತು. ಅಲ್ಲಿಂದ ಆಮದಾಗಿರುವ 377ನೇ ವಿಧಿಯನ್ನು ಬೆಂಬಲಿಸುವುದಕ್ಕೆ ಇಲ್ಲಿನ ಧರ್ಮಾಂಧರೆಲ್ಲರೂ ಈಗ ಒಗ್ಗೂಡಿದ್ದಾರೆ!

ಭಿನ್ನ ಲೈಂಗಿಕತೆಯು ಅಪರಾಧವೆನ್ನುವ ಈ ಬರ್ಬರ ಮನಸ್ಥಿತಿ ದೂರವಾಗಲೇಬೇಕು. ಲೈಂಗಿಕ ವೈವಿಧ್ಯಕ್ಕೆ ಪ್ರಾಚೀನ ಭಾರತದಲ್ಲಿ ದೊರೆತಿದ್ದ ಮಾನ್ಯತೆಯು ಈಗಲೂ ದೊರೆಯಬೇಕು. ಯಾವುದೇ ಲೈಂಗಿಕ ಆಸಕ್ತಿಯುಳ್ಳವರು ಪೋಲೀಸು, ಧರ್ಮ, ನೀತಿ, ಸಂಸ್ಕೃತಿಗಳ ಹಂಗಿಲ್ಲದೆ, ತಮಗಿಷ್ಟ ಬಂದವರನ್ನು ವರಿಸಿ ಸುಖವಾಗಿ ಬದುಕುವಂತಾಗಬೇಕು. ಭಿನ್ನ ಲೈಂಗಿಕತೆಯುಳ್ಳವರು ಮುಕ್ತವಾಗಿ ಬದುಕಲು ಸಾಧ್ಯವಾದರೆ ಅವರ ಮನೋದೈಹಿಕ ಆರೋಗ್ಯಗಳಷ್ಟೇ ಅಲ್ಲದೆ ಒಟ್ಟು ಸಮಾಜದ ಆರೋಗ್ಯವೂ ಉತ್ತಮಗೊಳ್ಳುತ್ತದೆ.

ಭಿನ್ನ ಲೈಂಗಿಕತೆಯ ಅಲೆಗ್ಸಾಂಡರ್, ಲಿಯುನಾರ್ಡೊ ಡಾವಿಂಚಿ, ಮೈಕೆಲಾಂಜೆಲೋ, ಎಲ್ಟನ್ ಜಾನ್, ರಿಕಿ ಮಾರ್ಟಿನ್, ಮಾರ್ಟಿನಾ ನವ್ರಟಿಲೋವಾ, ಆಂಜೆಲಿನಾ ಜೋಲಿ, ಇಸ್ಮಾಯಿಲ್ ಮರ್ಚೆಂಟ್, ಅಶೋಕ್ ರವಕವಿ, ವಿಕ್ರಮ್ ಸೇಥ್ ಮುಂತಾದವರು ಮಹತ್ಸಾಧಕರಾಗಿಲ್ಲವೇ? ರಾಷ್ಟ್ರಪಿತ ಗಾಂಧೀಜಿಯೂ ತನ್ನ ಭಿನ್ನ ಲೈಂಗಿಕ ಆಸಕ್ತಿಗಳ ಬಗ್ಗೆ ಮುಕ್ತವಾಗಿ ಬರೆದಿಲ್ಲವೇ?