ಕೊರೋನ ಸೋಂಕಿನಿಂದ ಮೃತರಾದವರ ಅಂತ್ಯ ಸಂಸ್ಕಾರ ಹೇಗೆ?

ಕೊರೋನ ಸೋಂಕಿನಿಂದ ಮೃತರಾದವರ ಅಂತ್ಯ ಸಂಸ್ಕಾರ ನಡೆಸಲು ಜನರು ಭಯಗೊಂಡು ಹಿಂಜರಿಯುತ್ತಿರುವ ಬಗ್ಗೆ ಹಲವೆಡೆಗಳಿಂದ ವರದಿಗಳಾಗಿವೆ. ಮೇಘಾಲಯದಲ್ಲೂ, ಚೆನ್ನೈಯಲ್ಲೂ ಕೊರೋನದಿಂದ ಮೃತರಾದ ಮೂವರು ಹಿರಿಯ ವೈದ್ಯರ ಅಂತ್ಯ ಸಂಸ್ಕಾರಕ್ಕೆ ಅಡ್ಡಿ ಪಡಿಸಿ ಕಲ್ಲು ತೂರಿದ ಘಟನೆಗಳೂ ನಡೆದಿವೆ. ಕುಟುಂಬದವರು ಅಂತ್ಯ ಸಂಸ್ಕಾರವನ್ನು ಮಾಡದಿದ್ದ ಸಂದರ್ಭಗಳಲ್ಲಿ ಅನ್ಯ ಮತೀಯರು, ಸ್ನೇಹಿತರು ಮುಂತಾದವರು ಅವನ್ನು ನಡೆಸಲು ನೆರವಾಗಿರುವ ಬಗ್ಗೆಯೂ ವರದಿಗಳಾಗಿವೆ.

ಕೊರೋನದಿಂದ ಮೃತರಾದವರ ಅಂತ್ಯ ಸಂಸ್ಕಾರದ ಬಗ್ಗೆ ಜನಸಾಮಾನ್ಯರಲ್ಲಿ ಮಾಹಿತಿಯ ಕೊರತೆಯಿರುವುದು ಮತ್ತು ಆ ಕಾರಣದಿಂದ ಹಲವು ತಪ್ಪು ಕಲ್ಪನೆಗಳಿರುವುದು ಇಂತಹಾ ಸನ್ನಿವೇಶಗಳಿಗೆ ಕಾರಣವಾಗುತ್ತಿವೆ. ಕೇಂದ್ರ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತುರ್ತು ವೈದ್ಯಕೀಯ ಪರಿಹಾರದ ವಿಭಾಗವು ಕೊರೋನ ಸೋಂಕಿತರ ಶವ ಸಂಸ್ಕಾರದ ವಿಧಾನಗಳ ಬಗ್ಗೆ ಸ್ಪಷ್ಟವಾದ ಮಾರ್ಗಸೂಚಿಗಳನ್ನು ಈಗಾಗಲೇ ಪ್ರಕಟಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯೂ ಕೂಡ ಕೊರೋನ ಸೋಂಕಿನ ಸನ್ನಿವೇಶದಲ್ಲಿ ಸುರಕ್ಷಿತವಾದ ಶವ ಸಂಸ್ಕಾರದ ಬಗ್ಗೆ ಮತ್ತು ಸೋಂಕು ನಿಯಂತ್ರಣದ ಬಗ್ಗೆ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಕೊರೋನ ಪೀಡಿತರಾಗಿದ್ದವರ ಮೃತ ದೇಹದಿಂದ ಕೊರೋನ ಸೋಂಕು ಹರಡುವುದಿಲ್ಲವೆಂದೂ, ಅಂಥವರ ಮತೀಯ, ಸಾಮಾಜಿಕ ಹಾಗೂ ಕೌಟುಂಬಿಕ ಸಂಪ್ರದಾಯಗಳಿಗೆ ಯಾವುದೇ ಚ್ಯುತಿಯಾಗದಂತೆ, ಕೆಲವೊಂದು ಎಚ್ಚರಿಕೆಗಳನ್ನು ವಹಿಸಿ, ಅಂತ್ಯ ಸಂಸ್ಕಾರಗಳನ್ನು ನಡೆಸಬಹುದೆಂದೂ, ಇವೆರಡು ಮಾರ್ಗಸೂಚಿಗಳಲ್ಲಿ ಅತಿ ಸ್ಪಷ್ಟವಾಗಿ ಹೇಳಲಾಗಿದೆ. ಈಗ ನಮ್ಮ ದೇಶದಲ್ಲಿ ಪ್ರತಿನಿತ್ಯ 30-50 ಕೊರೋನ ಸಂಬಂಧಿತ ಸಾವುಗಳಾಗುವ ಬಗ್ಗೆ ವರದಿಗಳಾಗುತ್ತಿದ್ದು, ಮೃತರಿಗೆ ಅವರವರ ಸಂಪ್ರದಾಯಗಳಿಗನುಗುಣವಾಗಿ ಅಂತ್ಯ ಕ್ರಿಯೆಗಳನ್ನು ನಡೆಸುವ ಬಗ್ಗೆ ಸಾರ್ವಜನಿಕರಿಗೆ ಸ್ಪಷ್ಟವಾದ ಮಾಹಿತಿಯಿದ್ದರೆ ಯಾವುದೇ ಗೊಂದಲಗಳಿಗಾಗಲೀ, ಆತಂಕಗಳಿಗಾಗಲೀ ಅವಕಾಶವಿಲ್ಲದಂತೆ ಮಾಡಬಹುದಾಗಿದೆ. ಅದಕ್ಕಾಗಿ ಈ ಎರಡು ಅಧಿಕೃತ ಮಾರ್ಗಸೂಚಿಗಳನ್ನಷ್ಟೇ ಪಾಲಿಸಿದರೆ ಸಾಕಾಗುತ್ತದೆ; ಅಲ್ಲಿಲ್ಲಿ ಒಬ್ಬೊಬ್ಬರು ಹೇಳುವುದನ್ನು ಅಲ್ಲಿಂದಲ್ಲಿಗೇ ಕಡೆಗಣಿಸಲಡ್ಡಿಯಿಲ್ಲ.

ಕೊರೋನ ಪೀಡಿತರಾಗಿದ್ದವರ ಮೃತ ದೇಹದಿಂದ ಕೊರೋನ ಸೋಂಕು ಹರಡುವುದಿಲ್ಲ.

ಇಬೋಲ, ಮಾರ್ಬರ್ಗ್ ಜ್ವರಗಳಂತಹ ರಕ್ತಸ್ರಾವವನ್ನುಂಟು ಮಾಡುವ ಸೋಂಕುಗಳು ಹಾಗೂ ಕೊಲೆರಾ ಹೊರತು ಪಡಿಸಿದರೆ ಬೇರೆ ಯಾವ ಸಂದರ್ಭಗಳಲ್ಲೂ ಮೃತ ದೇಹಗಳಿಂದ ಸೋಂಕು ತಗಲುವ ಸಾಧ್ಯತೆಗಳಿಲ್ಲ. ಫ್ಲೂ ಸೋಂಕಿನಲ್ಲಿ ಮರಣೋತ್ತರ ಪರೀಕ್ಷೆಯ ವೇಳೆ ಸೂಕ್ತ ಜಾಗರೂಕತೆಗಳನ್ನು ವಹಿಸದಿದ್ದರಷ್ಟೇ ಮೃತ ದೇಹದ ಶ್ವಾಸಕೋಶಗಳಿಂದ ಸೋಂಕುಂಟಾಗುವ ಸಾಧ್ಯತೆಗಳಿವೆ ಎಂದು ಗುರುತಿಸಲಾಗಿರುವುದನ್ನು ಬಿಟ್ಟರೆ, ಇತರ ಸಂದರ್ಭಗಳಲ್ಲಿ ಮೃತ ದೇಹಗಳಿಂದ ಸೋಂಕು ಹರಡುವುದಿಲ್ಲವೆಂದೇ ಹೇಳಬಹುದು. ಕೊರೋನ ಪೀಡಿತರ ಮೃತ ದೇಹದಿಂದ ಸೋಂಕು ಹರಡಿರುವ ಬಗ್ಗೆ ಇದುವರೆಗೆ ಎಲ್ಲಿಂದಲೂ ವರದಿಗಳಾಗಿಲ್ಲ. ಆದರೂ ಕೂಡ, ಕೊರೋನ ಸೋಂಕು ಹೊಸದಾಗಿರುವ ಕಾರಣಕ್ಕೆ, ಮತ್ತು ಅದರ ಬಗ್ಗೆ ಎಲ್ಲಾ ವಿವರಗಳು ಇನ್ನೂ ಲಭ್ಯವಿಲ್ಲದಿರುವ ಕಾರಣಕ್ಕೆ ಕೊರೋನದಿಂದ ಮೃತ ಪಟ್ಟವರ ದೇಹಗಳ ಅಂತ್ಯ ಸಂಸ್ಕಾರದ ವೇಳೆ ಕೆಲವೊಂದು ಸಾಮಾನ್ಯ ಎಚ್ಚರಿಕೆಗಳನ್ನು ವಹಿಸಬೇಕೆಂದು ಸೂಚಿಸಲಾಗುತ್ತಿದೆ.

ಕೊರೋನದಿಂದ ಮೃತಪಟ್ಟವರ ಅಂತ್ಯ ಸಂಸ್ಕಾರವನ್ನು ಅವರವರ ಸಂಪ್ರದಾಯಗಳಿಗೆ ಅನುಗುಣವಾಗಿ ನಡೆಸಬಹುದು.

ಸೋಂಕಿನಿಂದ ಮೃತರಾದವರ ದೇಹವನ್ನು ಸುಡಲೇಬೇಕು ಎಂಬ ನಿಯಮವೇನಿಲ್ಲ; ಮೃತ ದೇಹವನ್ನು ಸುಡಬಹುದು ಅಥವಾ ಹೂಳಬಹುದು. ಚಿತಾಗಾರದಲ್ಲಿ ಉಳಿಯುವ ಭಸ್ಮದಿಂದ ಸೋಂಕು ಹರಡುವ ಅಥವಾ ಅಪಾಯವಾಗುವ ಯಾವುದೇ ಸಾಧ್ಯತೆಗಳು ಇಲ್ಲದಿರುವುದರಿಂದ ಅದನ್ನು ಸಂಗ್ರಹಿಸಿ ಅಂತಿಮ ವಿಧಿಗಳನ್ನು ನಡೆಸುವುದಕ್ಕೆ ಯಾವ ರೀತಿಯ ಅಡಚಣೆಗಳೂ ಇಲ್ಲ.

ಕೊರೋನ ಸೋಂಕಿನಿಂದಾಗುವ ಸಾವುಗಳು ಆಸ್ಪತ್ರೆಗಳಲ್ಲಾಗಬಹುದು, ವೃದ್ಧಾಶ್ರಮಗಳಲ್ಲಾಗಬಹುದು ಅಥವಾ ಮನೆಗಳಲ್ಲೂ ಆಗಬಹುದು. ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳಲ್ಲಿ ಈ ಎಲ್ಲಾ ಸನ್ನಿವೇಶಗಳನ್ನೂ ಪರಿಗಣಿಸಲಾಗಿದ್ದರೆ, ಭಾರತ ಸರಕಾರದ ಮಾರ್ಗಸೂಚಿಗಳಲ್ಲಿ ಆಸ್ಪತ್ರೆಗಳಲ್ಲಿ ಸಾವುಗಳಾದಾಗ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯಷ್ಟೇ ಹೇಳಲಾಗಿದೆ. ತೀವ್ರ ರೂಪದ ಕೊರೋನ ಪೀಡಿತರೆಲ್ಲರೂ ಆಸ್ಪತ್ರೆಗಳಲ್ಲಿ ದಾಖಲಾಗಿಯೇ ಆಗುತ್ತಾರೆಂಬ ನಿರೀಕ್ಷೆಯಿಂದ ನಮ್ಮ ಸರಕಾರದ ಮಾರ್ಗಸೂಚಿಗಳನ್ನು ರೂಪಿಸಿರಬಹುದೇನೋ?

ತೀವ್ರ ರೂಪದ ಕೊರೋನ ಸೋಂಕಿತರು ಆಸ್ಪತ್ರೆಗಳ ತೀವ್ರ ಚಿಕಿತ್ಸಾ ಘಟಕಗಳಲ್ಲಿ ಮೃತರಾಗುವುದರಿಂದ, ಅವರ ಸಂಬಂಧಿಕರಿಗೆ ಆ ಘಟಕಗಳೊಳಕ್ಕೆ ಪ್ರವೇಶವಿರುವುದಿಲ್ಲ. ಹಾಗಾಗಿ, ಮೃತ ದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸುವ ಮೊದಲು ಆ ರೋಗಿಯ ಚಿಕಿತ್ಸೆಗಾಗಿ ಹಾಕಿರಬಹುದಾದ ಎಲ್ಲಾ ನಳಿಕೆಗಳು, ಚುಚ್ಚು ಸೂಜಿಗಳು ಇತ್ಯಾದಿಗಳನ್ನೆಲ್ಲ ತೆಗೆದು, ಮೂಗು, ಬಾಯಿ, ಕಣ್ಣು ಮುಂತಾದ ರಂಧ್ರಗಳಲ್ಲಿ ಒಸರುವ ಎಲ್ಲಾ ಸ್ರಾವಗಳನ್ನು ಶುಚಿಗೊಳಿಸಿ, ಅವನ್ನು ಮುಚ್ಚುವ ಕೆಲಸಗಳನ್ನು ಆಸ್ಪತ್ರೆಯ ಸಿಬಂದಿಯೇ ಮಾಡುತ್ತಾರೆ. ಇದಾದ ಬಳಿಕ ಮೃತರ ಸಂಬಂಧಿಕರು ಮೃತ ದೇಹವನ್ನು ನೋಡಬಯಸಿದರೆ ಅಗತ್ಯ ಎಚ್ಚರಿಕೆಯ ಕ್ರಮಗಳೊಂದಿಗೆ ಅವರಿಗೆ ನೋಡಲು ಅವಕಾಶವನ್ನು ನೀಡಲಾಗುತ್ತದೆ; ಆದರೆ ಮೃತ ದೇಹವನ್ನು ಮುಟ್ಟುವುದಕ್ಕೆ, ಅಥವಾ ಮುತ್ತಿಕ್ಕುವುದಕ್ಕೆ ಅವಕಾಶವಿರುವುದಿಲ್ಲ. ಆ ಬಳಿಕ ಮೃತ ದೇಹವನ್ನು ವಿಶೇಷವಾದ ಚೀಲದಲ್ಲಿರಿಸಲಾಗುತ್ತದೆ, ಮತ್ತು ಆ ಚೀಲದ ಹೊರಮೈಯನ್ನು 1% ಹೈಪೊಕ್ಲೋರೈಟ್ ದ್ರಾವಣದಿಂದ ಶುದ್ಧೀಕರಿಸಲಾಗುತ್ತದೆ, ನಂತರ ಮನೆಯವರು ನೀಡಿರಬಹುದಾದ ಬಟ್ಟೆಯನ್ನು ಅದರ ಹೊರಗೆ ಸುತ್ತಿ ಮೃತ ದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುತ್ತದೆ.

ವೃದ್ಧಾಶ್ರಮದಲ್ಲೋ, ಮನೆಯಲ್ಲೋ ಮೃತ್ಯುವುಂಟಾದರೆ ಮೃತ ದೇಹವನ್ನು ನಿಭಾಯಿಸುವ ಬಗ್ಗೆ ನಮ್ಮ ಆರೋಗ್ಯ ಇಲಾಖೆಯ ಮಾರ್ಗಸೂಚಿಯಲ್ಲಿ ಏನನ್ನೂ ಹೇಳಿಲ್ಲ. ಆದರೆ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯಲ್ಲಿ ಆ ಬಗ್ಗೆ ಸ್ಪಷ್ಟವಾದ ವಿವರಣೆಗಳಿವೆ. ಮೃತ ದೇಹವನ್ನು ಅಂತ್ಯ ಸಂಸ್ಕಾರಕ್ಕಾಗಿ ಸಿದ್ಧಗೊಳಿಸುವವರು (ದೇಹವನ್ನು ಶುಚಿಗೊಳಿಸುವುದು, ಕೂದಲನ್ನು ಸರಿ ಪಡಿಸುವುದು, ಬಟ್ಟೆಯನ್ನು ಉಡಿಸುವುದು ಇತ್ಯಾದಿಗಳನ್ನು ಮಾಡುವ ಕುಟುಂಬದ ಸದಸ್ಯರು ಅಥವಾ ಧರ್ಮಗುರುಗಳು) ಕೈಗವಸುಗಳನ್ನು ಬಳಸಬೇಕು; ಮೃತ ದೇಹದ ಸ್ರಾವಗಳು ಅದನ್ನು ಶುಚಿಗೊಳಿಸುವವರ ಮುಖಕ್ಕೆ ಸಿಂಪಡನೆಯಾಗುವ ಸಾಧ್ಯತೆಗಳಿದ್ದರೆ ಅಂಥವರು ತಮ್ಮ ಮುಖ ಮತ್ತು ಕಣ್ಣುಗಳಿಗೆ ರಕ್ಷಣೆ ನೀಡಬಲ್ಲ ಮುಖಕವಚವನ್ನೂ, ಕನ್ನಡಕವನ್ನೂ ಬಳಸಬೇಕು. ಮೃತ ದೇಹವನ್ನು ಶುಚಿಗೊಳಿಸಿದವರು ಆ ಸಂದರ್ಭದಲ್ಲಿ ತಾವು ಧರಿಸಿದ ಬಟ್ಟೆಗಳನ್ನು ಕೆಲಸವಾದ ಕೂಡಲೇ ತೆಗೆದು ಪ್ರತ್ಯೇಕವಾಗಿ ಒಗೆಯಬೇಕು, ಅಥವಾ ತಮ್ಮ ದಿರಿಸಿನ ಮೇಲೆ ಪ್ರತ್ಯೇಕವಾದ ಮೇಲಂಗಿಯನ್ನು ಧರಿಸಿ, ಬಳಿಕ ಅದನ್ನು ತೆಗೆದು ಒಗೆಯಬಹುದು. ಹೀಗೆ ಮೃತ ದೇಹವನ್ನು ಅಂತ್ಯಕ್ರಿಯೆಗಾಗಿ ಸಿದ್ಧಪಡಿಸಿದವರು ಮತ್ತು ಅವರಿಗೆ ನೆರವಾದವರು ಆ ಬಳಿಕ ತಮ್ಮ ಕೈಗಳನ್ನು ಸೋಪು ಮತ್ತು ನೀರಿನಿಂದ ತೊಳೆದುಕೊಳ್ಳಬೇಕು. ಇವರಲ್ಲಿ ಯಾರೇ ಆಗಲೀ ಮೃತ ದೇಹವನ್ನು ಮುತ್ತಿಕ್ಕಬಾರದು. ಮಕ್ಕಳು, ಅರುವತ್ತಕ್ಕೆ ಮೇಲ್ಪಟ್ಟ ಹಿರಿಯರು, ರಕ್ತದ ಏರೊತ್ತಡ, ಸಕ್ಕರೆ ಕಾಯಿಲೆ, ಶ್ವಾಸಕೋಶಗಳ ಕಾಯಿಲೆ, ಹೃದ್ರೋಗ, ಇತ್ಯಾದಿ ಸಮಸ್ಯೆಗಳಿರುವವರು ಮೃತ ದೇಹವನ್ನು ಶುಚಿಗೊಳಿಸುವ ಕೆಲಸವನ್ನು ಮಾಡಬಾರದು. ಆದಷ್ಟು ಕಡಿಮೆ ಜನರಷ್ಟೇ ಆ ಕೆಲಸಗಳನ್ನು ಮಾಡಿ, ಇನ್ನುಳಿದವರು ಮೃತದೇಹದಿಂದ ಒಂದು ಮೀಟರ್ ದೂರವುಳಿದು ಅವನ್ನು ನೋಡಬಹುದು.

ಕುಟುಂಬದ ಸಂಪ್ರದಾಯಗಳಿಗೆ ಅನುಗುಣವಾಗಿ ಮೃತದೇಹವನ್ನು ವೀಕ್ಷಿಸುವುದಕ್ಕೆ ಅವಕಾಶವನ್ನು ನೀಡಬಹುದು; ಆದರೆ ದೇಹವನ್ನು ಮುಟ್ಟುವುದಕ್ಕಾಗಲೀ, ಮುತ್ತಿಕ್ಕುವುದಕ್ಕಾಗಲೀ ಅವಕಾಶವಿರಬಾರದು; ದೇಹವನ್ನು ವೀಕ್ಷಿಸುವಾಗ ಪರಸ್ಪರ ಒಂದು ಮೀಟರ್ ಅಂತರವನ್ನು ಕಾಯ್ದುಕೊಳ್ಳಬೇಕು, ಶ್ವಾಸಕೋಶದ ಸಮಸ್ಯೆಯುಳ್ಳವರು ಮೃತದೇಹವನ್ನು ವೀಕ್ಷಿಸುವುದರಿಂದ ದೂರವುಳಿದರೆ ಒಳ್ಳೆಯದು; ಹಾಗೊಂದು ವೇಳೆ ಅವರು ವೀಕ್ಷಿಸುವುದಿದ್ದರೆ ಮುಖಕವಚವನ್ನು ಧರಿಸುವುದೊಳ್ಳೆಯದು. ಮೃತ ದೇಹವನ್ನು ವೀಕ್ಷಿಸಿದವರೆಲ್ಲರೂ ಆ ಬಳಿಕ ತಮ್ಮ ಕೈಗಳನ್ನು ಸೋಪು ಮತ್ತು ನೀರಿನಿಂದ ತೊಳೆದುಕೊಳ್ಳಬೇಕು.

ಮೃತ ದೇಹವನ್ನು ಅಂತ್ಯ ಸಂಸ್ಕಾರದ ಸ್ಥಳಕ್ಕೆ ಒಯ್ಯುವ ವಾಹನವನ್ನು 1% ಹೈಪೊಕ್ಲೋರೈಟ್ ದ್ರಾವಣದಿಂದ ಶುದ್ಧೀಕರಿಸಬಹುದು.

ಚಿತಾಗಾರದಲ್ಲಿ ಅಥವಾ ಹೂಳುವ ಸ್ಮಶಾನದಲ್ಲಿ ಕಾರ್ಯ ನಿರ್ವಹಿಸುವವರಿಗೆ ಕೊರೋನದಿಂದ ಮೃತ ಪಟ್ಟವರ ದೇಹಗಳಿಂದ ಯಾವುದೇ ವಿಶೇಷ ಅಪಾಯಗಳಿಲ್ಲ; ಅವರು ಕೈಗವಸುಗಳನ್ನು ಧರಿಸುವುದು, ಮುಖಕವಚಗಳನ್ನು ಧರಿಸುವುದು ಹಾಗೂ ಕೈಗಳನ್ನು ತೊಳೆದುಕೊಳ್ಳುವುದು ಮುಂತಾದ ಸಾಮಾನ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡರೆ ಸಾಕು. ಸ್ಮಶಾನದಲ್ಲಿ ಮೃತ ದೇಹದ ಮುಖವನ್ನು ವೀಕ್ಷಿಸುವುದಕ್ಕೆ ಅವಕಾಶ ನೀಡಬಹುದು; ಅದಕ್ಕಾಗಿ ಮೃತ ದೇಹದ ಮುಖದ ಬಟ್ಟೆಯನ್ನು ಸರಿಸುವವರು ಸಾಮಾನ್ಯ ಸುರಕ್ಷತಾ ಕ್ರಮಗಳನ್ನು ವಹಿಸಬೇಕು.

ಧರ್ಮಗ್ರಂಥಗಳನ್ನು ಪಠಿಸುವುದು, ಮೃತ ದೇಹದ ಮೇಲೆ ಪವಿತ್ರ ಜಲವನ್ನು ಪ್ರೋಕ್ಷಿಸುವುದು, ಅಥವಾ ಮೃತ ದೇಹವನ್ನು ಮುಟ್ಟುವ ಅಗತ್ಯವಿಲ್ಲದ ಇತರ ಯಾವುದೇ ಅಂತಿಮ ವಿಧಿಗಳನ್ನು ನಡೆಸುವುದಕ್ಕೆ ಯಾವುದೇ ಅಡ್ಡಿಗಳಿಲ್ಲ. ಆದರೆ ಮೃತದೇಹವನ್ನು ಆಲಂಗಿಸುವುದು ಅಥವಾ ಮುತ್ತಿಕ್ಕುವುದನ್ನು ಮಾಡಬಾರದು. ಮೃತರ ಕುಟುಂಬದ ಸದಸ್ಯರಿಗೆ ಆ ಮೊದಲೇ ಸೋಂಕು ತಗಲಿರುವ ಸಾಧ್ಯತೆಗಳಿರುವುದರಿಂದ ಸ್ಮಶಾನದಲ್ಲಿ ಆದಷ್ಟು ಕಡಿಮೆ ಜನರಿರಬೇಕು ಮತ್ತು ಪರಸ್ಪರ ಅಂತರವನ್ನು ಕಾಯಬೇಕು. ಅಂತಿಮ ಕ್ರಿಯೆಗಳಲ್ಲಿ ಭಾಗಿಗಳಾದವರೆಲ್ಲರೂ ತಮ್ಮ ಕೈಗಳನ್ನು ಸೋಪು ಮತ್ತು ನೀರಿನಿಂದ ತೊಳೆದುಕೊಳ್ಳಬೇಕು.

ಮೃತ ದೇಹವನ್ನು ಚಿತೆಯಲ್ಲಿರಿಸುವಾಗ ಸಾಮಾನ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಮೃತ ದೇಹವನ್ನು ಹೂಳುವ ಸಂದರ್ಭದಲ್ಲಿ ಅದಕ್ಕೆ ಸಾಮಾನ್ಯವಾಗಿ ಅನುಸರಿಸುವ ಕ್ರಮಗಳನ್ನೇ ಅನುಸರಿಸಬಹುದು, ಮತ್ತು ಸಾಮಾನ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು; ಹೆಚ್ಚು ಆಳಕ್ಕೆ ಹೂಳಬೇಕೆಂಬ ಅಥವಾ ಇತರ ಯಾವುದೇ ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕೆಂಬ ಯಾವುದೇ ಸಲಹೆಗಳನ್ನು ಎರಡು ಮಾರ್ಗಸೂಚಿಗಳಲ್ಲೂ ನೀಡಿಲ್ಲ.

ಚಿತಾಗಾರದಿಂದ ಚಿತಾ ಭಸ್ಮವನ್ನು ಸಂಗ್ರಹಿಸುವುದಕ್ಕೆ ಮತ್ತು ಅದರ ವಿಸರ್ಜನೆ ಇತ್ಯಾದಿ ಅಂತಿಮ ಕ್ರಿಯೆಗಳಿಗೆ ಯಾವ ವಿಶೇಷ ಸೂಚನೆಯೂ ಇಲ್ಲ.

ಮೃತರು ಬಳಸಿದ್ದ ಬಟ್ಟೆಗಳನ್ನು ಅಥವಾ ವಸ್ತುಗಳನ್ನು ಎಸೆಯುವ ಅಥವಾ ಸುಟ್ಟುಹಾಕುವ ಅಗತ್ಯವಿಲ್ಲ. ಅವನ್ನು ಬಿಸಿನೀರಿನಲ್ಲಿ ಸೋಪಿನೊಂದಿಗೆ ಶುಚಿಗೊಳಿಸಬಹುದು ಅಥವಾ 70% ಇಥನಾಲ್ ಯಾ 1% ಹೈಪೊಕ್ಲೋರೈಟ್ ದ್ರಾವಣದಿಂದ ಶುದ್ಧೀಕರಿಸಬಹುದು.

ಪರಸ್ಪರ ಅಂತರವನ್ನು ಕಾಯ್ದುಕೊಳ್ಳುವುದಕ್ಕಾಗಿ ಹೆಚ್ಚು ಜನರು ಸೇರದಂತೆ ನಿರ್ಬಂಧಗಳನ್ನು ಹೇರಲಾಗಿರುವುದರಿಂದ ಉತ್ತರ ಕ್ರಿಯೆಯ ಕಾರ್ಯಕ್ರಮಗಳನ್ನು ಅತಿ ಕಡಿಮೆ ಬಂಧುಮಿತ್ರರ ಉಪಸ್ಥಿತಿಯಲ್ಲಿ, ಅತಿ ಸರಳವಾಗಿ, ನಡೆಸಬೇಕಾಗುತ್ತದೆ.

ಒಟ್ಟಿನಲ್ಲಿ, ಕೊರೋನ ಸೋಂಕಿನಿಂದ ಮೃತರಾದವರ ಅಂತಿಮ ವಿಧಿಗಳನ್ನು ನೆರವೇರಿಸುವಾಗ ಯಾವುದೇ ಭಯ ಅಥವಾ ಆತಂಕಗಳಿಗೆ ಒಳಗಾಗಬೇಕಾದ ಅಗತ್ಯವಿಲ್ಲ; ಸಾಮಾನ್ಯವಾದ, ಸರಳವಾದ, ಸುರಕ್ಷತಾ ಕ್ರಮಗಳನ್ನು ಪಾಲಿಸಿದರೆ ಮೃತರ ಕುಟುಂಬಗಳ ಸಂಪ್ರದಾಯಗಳಿಗನುಗುಣವಾಗಿ ಗೌರವಯುತವಾದ ಅಂತ್ಯ ಸಂಸ್ಕಾರವನ್ನು ನಡೆಸುವುದಕ್ಕೆ ಯಾವುದೇ ಅಡ್ಡಿಗಳಾಗಬಾರದು.

ವಾರ್ತಾಭಾರತಿ, ಮಾರ್ಚ್ 23, 2020 : ಕೊರೋನ ಸೋಂಕಿನಿಂದ ಮೃತರಾದವರ ಅಂತ್ಯ ಸಂಸ್ಕಾರ ಹೇಗೆ?

Be the first to comment

Leave a Reply

Your email address will not be published.


*