ನನ್ನ ಸೋದರ ಮಾವ ಡಾ. ಬಂಟ್ವಾಳ ನರಸಿಂಹ ಸೋಮಯಾಜಿ

ನನ್ನ ಸೋದರ ಮಾವ ಡಾ. ಬಂಟ್ವಾಳ ನರಸಿಂಹ ಸೋಮಯಾಜಿ

ನನ್ನ ಸೋದರ ಮಾವ ಡಾ. ಬಂಟ್ವಾಳ ನರಸಿಂಹ ಸೋಮಯಾಜಿ ಅವರು ಮಂಗಳವಾರ, ಫೆಬ್ರವರಿ 13, 2024ರಂದು ಮಂಗಳೂರಿನಲ್ಲಿ ಕೊನೆಯುಸಿರೆಳೆದರು. ಅವರ ತಂಗಿ ಅಹಲ್ಯಾ ಅವರ ಮಕ್ಕಳಾದ ನಾವು ನಾಲ್ವರು ವೈದ್ಯರಾಗಿ ವೃತ್ತಿನಿರತರಾಗಿದ್ದರೆ ಅದಕ್ಕೆ ಮೂಲ ಪ್ರೇರಣೆ ನಮ್ಮ ಈ ನರಸಿಂಹ ಮಾವನೇ. ಅವರಿಂದು ನಮ್ಮೊಡನೆ ಇಲ್ಲದಿದ್ದರೂ ಅವರ ಪ್ರೇರಣೆ, ಅವರಿತ್ತ ಉತ್ತೇಜನ, ಬೆಂಬಲ, ನೆರವು ಎಲ್ಲವೂ ನಮ್ಮೊಂದಿಗೆ ಎಂದಿಗೂ ಇರುತ್ತವೆ.

ಮಂಗಳೂರಿನ ಕೇಂದ್ರ ಮಾರುಕಟ್ಟೆಯ ಬಳಿ ಕಂಬಳಿ ಮತ್ತು ಖಾದಿ ಬಟ್ಟೆಗಳ ಅಂಗಡಿಯನ್ನು ನಡೆಸುತ್ತಿದ್ದ ಗಾಂಧಿವಾದಿ ಶ್ರೀ ಬಂಟ್ವಾಳ ನಾರಾಯಣ ಸೋಮಯಾಜಿ ಮತ್ತು ಗೋಪಿ ಅಮ್ಮ ಅವರ ಎರಡನೇ ಮಗನಾಗಿ 1935ರಲ್ಲಿ ಮಂಗಳೂರಿನಲ್ಲಿ ಜನಿಸಿದ್ದ ನರಸಿಂಹ ಸೋಮಯಾಜಿಯವರು ಮಂಗಳೂರಿನ ಗಣಪತಿ ಪ್ರೌಢ ಶಾಲೆಯಲ್ಲಿ ಆರಂಭಿಕ ಶಿಕ್ಷಣವನ್ನು ಪಡೆದರು, ಬಳಿಕ ಮದ್ರಾಸ್ ಮೆಡಿಕಲ್ ಕಾಲೇಜಿನಲ್ಲಿ 1958ರಲ್ಲಿ ಎಂಬಿಬಿಎಸ್ ಪದವಿಯನ್ನು ಪಡೆದರು. ಎಂಬಿಬಿಎಸ್ ವ್ಯಾಸಂಗದ ವೇಳೆ ಮಂಗಳೂರಿನ ಡಾ. ಕೆ ಆರ್ ಶೆಟ್ಟಿ, ಡಾ ಎ ವಿ ಶೆಟ್ಟಿ, ಡಾ. ಸಿ ಆರ್ ಕಾಮತ್ ಅವರು ನರಸಿಂಹ ಸೋಮಯಾಜಿಯವರ ಸಹಪಾಠಿಗಳಾಗಿದ್ದರು (ಇತ್ತೀಚೆಗೆ ಡಾ ಕೆ ಆರ್ ಶೆಟ್ಟಿಯವರು ನಿಧನರಾದಾಗ, ಅವರ ಬಗ್ಗೆ ವಾರ್ತಾಭಾರತಿಯಲ್ಲಿ ಬರೆದಿದ್ದ ಲೇಖನದಲ್ಲಿ ನರಸಿಂಹ ಮಾವನ ಬಗ್ಗೆಯೂ ಪ್ರಸ್ತಾಪಿಸಿದ್ದೆ).

ಎಂಬಿಬಿಎಸ್ ಬಳಿಕ ಇಂಗ್ಲೆಂಡಿಗೆ ತೆರಳಿ ಬರ್ಮಿಂಗ್ ಹಾಂನಲ್ಲಿ ಎಂಆರ್ ಸಿಪಿ ಪದವಿಯನ್ನು ಪಡೆದರು, ಅಲ್ಲಿಂದ ಉನ್ನತ ವ್ಯಾಸಂಗಕ್ಕೆ ಅಮೆರಿಕಾದ ಹ್ಯೂಸ್ಟನ್ ಗೆ ತೆರಳಿ ಪಚನಾಂಗ ವಿಜ್ಞಾನದಲ್ಲಿ ತರಬೇತಿ ಪಡೆದರು. ಅಮೆರಿಕಾದ ಟೆನಿಸಿ ರಾಜ್ಯದ ನಾಶ್‌ವಿಲ್‌ನ ವಾಂಡರ್ ಬಿಲ್ಟ್ ವೈದ್ಯಕೀಯ ಕಾಲೇಜು ಮತ್ತು ಮೆಹಾರಿ ಮೆಡಿಕಲ್ ಕಾಲೇಜುಗಳಿಂದ ಪಚನಾಂಗ ವಿಜ್ಞಾನದ ವಿಭಾಗವನ್ನು ಆರಂಭಿಸಲು ಡಾ. ನರಸಿಂಹ ಸೋಮಯಾಜಿಯವರಿಗೆ ಆಹ್ವಾನ ದೊರೆತಾಗ, ಅವರು ಆಫ್ರಿಕಾ ಮೂಲದ ಅಮೆರಿಕನ್ನರೇ ಹೆಚ್ಚಾಗಿದ್ದ ಮೆಹಾರಿ ಮೆಡಿಕಲ್ ಕಾಲೇಜನ್ನು ಆಯ್ದುಕೊಂಡರು; ವಾಂಡರ್ ಬಿಲ್ಟ್ ನಲ್ಲಿ ಸಂಬಳ ಹೆಚ್ಚು ದೊರೆಯಬಹುದಿತ್ತು, ಆದರೆ ಮೆಹಾರಿಗೆ ತನ್ನಂಥ ತಜ್ಞರ ಅಗತ್ಯ ಹೆಚ್ಚಿದ್ದುದರಿಂದ ಅದನ್ನೇ ಆಯ್ದುಕೊಂಡೆ ಎಂದು ಅವರು ಹೇಳುತ್ತಿದ್ದರು. ಹೀಗೆ ಡಾ. ನರಸಿಂಹ ಸೋಮಯಾಜಿಯವರು ಸುಮಾರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಮೆಹಾರಿ ಮೆಡಿಕಲ್ ಕಾಲೇಜಿನಲ್ಲಿ ಪಚನಾಂಗ ವಿಜ್ಞಾನದ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿದರು, ನಾಶ್‌ವಿಲ್‌ನ ನಗರದಲ್ಲಿ ಪಚನಾಂಗ ತಜ್ಞರಾಗಿಯೂ ಕೆಲಸ ಮಾಡಿದರು.

ನಾವು ಮಕ್ಕಳಾಗಿದ್ದಾಗ ನರಸಿಂಹ ಮಾವ ತನ್ನ ಕುಟುಂಬದೊಂದಿಗೆ ಎರಡು-ಮೂರು ವರ್ಷಗಳಿಗೊಮ್ಮೆ ಮಂಗಳೂರಿಗೆ ಬರುತ್ತಿದ್ದರು. ಮಾವ ಬರುವುದೆಂದರೆ ನಾವು ಮಕ್ಕಳಿಗೆಲ್ಲ ಸಂಭ್ರಮವೇ ಆಗಿರುತ್ತಿತ್ತು. ಪ್ರತೀ ಸಲವೂ ಅಮೆರಿಕಾದಿಂದ ನಮಗಾಗಿ ತರುತ್ತಿದ್ದ ಲೆಗೋ ಮುಂತಾದ ಆಟಿಕೆಗಳು, ವಿಶೇಷ ಪುಸ್ತಕಗಳು, ಆಗಿನ್ನೂ ಹೊಸದಾಗಿದ್ದ ಪೋಲರಾಯ್ಡ್ ಕ್ಯಾಮರಾದಲ್ಲಿ ಕ್ಲಿಕ್ಕಿಸಿ ನಮ್ಮೆದುರೇ ಹೊರಬರುತ್ತಿದ್ದ ಚಿತ್ರಗಳು, ಎಲ್ಲಕ್ಕಿಂತ ಹೆಚ್ಚಾಗಿ ಅಮೆರಿಕನ್ ಇಂಗ್ಲಿಷ್‌ನಲ್ಲಿ ನಮ್ಮೊಡನೆ ಹರಟುತ್ತಿದ್ದ, ನಮ್ಮದೇ ವಯಸ್ಸಿನವರಾಗಿದ್ದ ಅವರಿಬ್ಬರು ಮಕ್ಕಳು ಅನಿಲ್ ಮತ್ತು ಶಾಲಿನಿ – ಇವೆಲ್ಲವಕ್ಕೆ ನಾವು ಎದುರು ನೋಡುತ್ತಿದ್ದೆವು. ಪ್ರತೀ ಸಲ ನರಸಿಂಹ ಮಾವ ಬಂದಾಗ ಅವರ ಅಕ್ಕ-ತಂಗಿಯರ ಮಕ್ಕಳು ನಾವೆಲ್ಲರೂ ಅವರ ಕುಟುಂಬದೊಂದಿಗೆ ಕುಂದಾಪುರ ಬಳಿಯ ಆನೆಗುಡ್ಡೆಯ ವಿನಾಯಕ ದೇವಸ್ಥಾನಕ್ಕೆ ಹೋಗುವುದಿತ್ತು, ನಮಗೆ ಮಕ್ಕಳಿಗೆ ಅದು ಸಂಭ್ರಮದ ಪ್ರವಾಸವೇ ಆಗಿರುತ್ತಿತ್ತು. ನರಸಿಂಹ ಮಾವ ಊರಿಗೆ ಬಂದಾಗ ತನ್ನಿಬ್ಬರು ಅಕ್ಕಂದಿರಿಗೆ ಮತ್ತು ತಂಗಿಗೆ ಏನಾದರೊಂದು ಉಪಕರಣವನ್ನು ಕೊಡುವುದಿತ್ತು. ಆಗ ಬಹಳಷ್ಟು ಪ್ರಸಿದ್ಧವಾಗಿದ್ದ ವಿದ್ಯುತ್ ಚಾಲಿತ ಫೀಲ್ಡ್ ಸ್ಟಾರ್ ಕಡೆಯುವ ಕಲ್ಲು ಹೀಗೆಯೇ ನಮ್ಮ ಮನೆಗೂ ಬಂದಿತ್ತು, ಹಲವಾರು ವರ್ಷ ಅಮ್ಮನಿಗೆ ನೆರವಾಗಿತ್ತು.

ನನ್ನಮ್ಮ ಅಹಲ್ಯಾ ಬಿಎಸ್ಸಿ ಎರಡನೇ ವರ್ಷದಲ್ಲಿ ಓದುತ್ತಿದ್ದಾಗ ತಾಯಿ ಗೋಪಿ ಅಮ್ಮನವರು ಶಸ್ತ್ರಕ್ರಿಯೆ ಮಾಡಿಸಿಕೊಂಡು ಮೃತರಾದರು, ಅದಾಗಿ ಕೆಲವೇ ತಿಂಗಳಲ್ಲಿ ತಂದೆ ನಾರಾಯಣ ಸೋಮಯಾಜಿಯವರೂ ಇನ್ನಿಲ್ಲವಾದರು. ಅಕ್ಕಂದಿರಿಬ್ಬರು ವಿವಾಹಿತರಾಗಿದ್ದು, ಅಣ್ಣಂದಿರಿಬ್ಬರು ಉನ್ನತ ವ್ಯಾಸಂಗ ಮಾಡುತ್ತಿದ್ದುದರಿಂದ ತನ್ನಿಬ್ಬರು ಚಿಕ್ಕ ತಮ್ಮಂದಿರನ್ನು ನೋಡಿಕೊಳ್ಳುವ ಜವಾಬ್ದಾರಿಯು ನನ್ನಮ್ಮನದಾಯಿತು, ಅವರು ತನ್ನ ಕಾಲೇಜನ್ನು ಅಲ್ಲಿಗೇ ತೊರೆಯಬೇಕಾಯಿತು. ಹೀಗೆ ಎಳೆಯ ವಯಸ್ಸಿನಲ್ಲೇ ತಮ್ಮ ಹೆತ್ತವರನ್ನು ಕಳೆದುಕೊಂಡಿದ್ದ ಈ ಕುಟುಂಬಕ್ಕೆ ಸ್ವಂತದ್ದಾದ ಮನೆಯಿರಲಿಲ್ಲ. ನರಸಿಂಹ ಮಾವ ಮೊದಲ ಹಲವು ವರ್ಷಗಳಲ್ಲಿ ಊರಿಗೆ ಬಂದಾಗಲೆಲ್ಲ ಮಂಗಳೂರಿನ ಹೋಟೇಲುಗಳಲ್ಲೇ ವಾಸ್ತವ್ಯ ಹೂಡಬೇಕಾಗುತ್ತಿತ್ತು. ಕುಟುಂಬದ ಕಾರ್ಯಕ್ರಮಗಳು ನಮ್ಮ ಮನೆಯಲ್ಲಿ ಅಥವಾ ನನ್ನ ದೊಡ್ಡಮ್ಮಂದಿರ ಮನೆಗಳಲ್ಲೇ ನಡೆಯುತ್ತಿದ್ದವು. ತಮ್ಮದೊಂದು ಮನೆಯಿರಬೇಕೆಂದು ಯಾವತ್ತೂ ಹಂಬಲಿಸುತ್ತಿದ್ದ ನರಸಿಂಹ ಮಾವ 1985ರಲ್ಲಿ ಮಂಗಳೂರಿನ ಹೊರವಲಯದಲ್ಲಿ ಒಂದು ಭವ್ಯವಾದ ಮನೆಯನ್ನು ಕಟ್ಟಿಸಿದರು, ಅದಕ್ಕೆ ಗೋಪಿ ನಿಲಯ ಎಂದೇ ಹೆಸರಿಟ್ಟರು. ತನ್ನ ಚಿಕ್ಕಪ್ಪನ ಮಗ, ನಾಡಿನ ಖ್ಯಾತ ಕಲಾವಿದ ಶ್ರೀ ಗಣೇಶ ಸೋಮಯಾಜಿಯವರಿಂದ ತನ್ನ ಹೆತ್ತವರ ಭಾವಚಿತ್ರಗಳನ್ನು ಮಾಡಿಸಿ ಮನೆಯಲ್ಲಿಟ್ಟರು, ನಮಗೆಲ್ಲ ಮೊಮ್ಮಕ್ಕಳಿಗೆ ಅಜ್ಜ-ಅಜ್ಜಿಯನ್ನು ನೋಡುವಂತಾದ್ದು ಆಗಲೇ. ಅಂದಿನಿಂದ ಗೋಪಿ ನಿಲಯ ಮಾವನ ಮನೆಗಿಂತಲೂ ಹೆಚ್ಚಾಗಿ ನಮ್ಮಮ್ಮನ ತವರು ಮನೆ ಎಂದಾಯಿತು.

ಭಾರತವನ್ನು ಬಿಟ್ಟು ಅಮೆರಿಕಾದಲ್ಲಿ ನೆಲೆಸಿದ್ದರೂ ಊರಿನ ತುಡಿತ ಅವರನ್ನು ಬಿಟ್ಟಿರಲಿಲ್ಲವೇನೋ? ತಾನಿದ್ದ ಟೆನಿಸಿ ಮತ್ತು ಸುತ್ತಲಿನ ರಾಜ್ಯಗಳ  ಭಾರತೀಯ ಮೂಲದವರನ್ನು ಒಗ್ಗೂಡಿಸಿ 1980ರಲ್ಲಿ ಟೆನಿಸಿಯ ಹಿಂದೂ ಸಾಂಸ್ಕೃತಿಕ ಕೇಂದ್ರವನ್ನು ಸ್ಥಾಪಿಸುವಲ್ಲಿ ಅವರು ಪ್ರಮುಖ ಪಾತ್ರವನ್ನು ವಹಿಸಿದರು. ಹದಿನೈದು ವರ್ಷಗಳ ಕಾಲ ಅದರ ಅಧ್ಯಕ್ಷರಾಗಿದ್ದುಕೊಂಡು ತಮಿಳುನಾಡಿನಿಂದ ಶಿಲ್ಪಿಗಳ ಮಾರ್ಗದರ್ಶನದಲ್ಲಿ ನಾಶ್‌ವಿಲ್‌ನಲ್ಲಿ ಭವ್ಯವಾದ ಶ್ರೀ ಗಣೇಶ ದೇವಾಲಯದ ನಿರ್ಮಾಣದ ನೇತೃತ್ವ ವಹಿಸಿದರು. ಈ ದೇವಾಲಯವು ಉತ್ತರ ಅಮೆರಿಕಾದಲ್ಲೇ ಅತಿ ದೊಡ್ಡ ಭಾರತೀಯ ದೇವಾಲಯಗಳೊಂದಾಗಿದ್ದು, ಟೆನಿಸಿ ಮಾತ್ರವಲ್ಲ, ಸುತ್ತಲಿನ ಅನೇಕ ರಾಜ್ಯಗಳವರನ್ನು ಆಕರ್ಷಿಸುತ್ತಿದೆ, ಅಲ್ಲಿರುವ ಭಾರತೀಯ ಮೂಲದವರ ವಿವಿಧ ಆಚರಣೆಗಳಿಗೂ, ಸಮಾರಂಭಗಳಿಗೂ ಕೇಂದ್ರವಾಗಿದೆ, ವಾರಾಂತ್ಯದಲ್ಲಿ ಹಾಗೂ ವಿಶೇಷ ದಿನಗಳಲ್ಲಿ ಅನ್ನದಾನಕ್ಕೂ ಹೆಸರಾಗಿದೆ. 

ನರಸಿಂಹ ಮಾವ ಮಂಗಳೂರಿನಲ್ಲಿದ್ದ ತನ್ನ ತಮ್ಮ ರಾಮ ಸೋಮಯಾಜಿಯ ಸಹಯೋಗದಲ್ಲಿ ಮಂಗಳೂರಿನ ಕಾವೂರಿನಲ್ಲಿ 1985ರಲ್ಲಿ ಸಪ್ತಗಿರಿ ಹೋಟೆಲ್ಸ್ ಸಂಸ್ಥೆಯನ್ನು ಸ್ಥಾಪಿಸಿ, ಅದರ ಅಧ್ಯಕ್ಷರಾಗಿದ್ದರು. ಆಗ ಹೊಸದಾಗಿದ್ದ ಕಂಪ್ಯೂಟರ್ ಶಿಕ್ಷಣ ಕೇಂದ್ರವನ್ನು ಅಲ್ಲಿ ಆರಂಭಿಸಿದರು, ಜೊತೆಗೆ ಹೋಟೆಲ್ ಮತ್ತು ಆತಿಥ್ಯ ನಿರ್ವಹಣೆಯ ಕಾಲೇಜನ್ನೂ ಆರಂಭಿಸಿದರು, ಇವು ಅನೇಕ ವರ್ಷಗಳ ಕಾಲ ಯಶಸ್ವಿಯಾಗಿ ನಡೆದು ಅನೇಕ ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿಯನ್ನು ನೀಡಿದವು. ಇದರ ಜೊತೆಗೆ, ಸ್ಥಳೀಯ ಸಾಮಾಜಿಕ ಕಾರ್ಯಗಳಿಗೆ, ಸರಕಾರಿ ಶಾಲೆಗಳ ಅಭಿವೃದ್ಧಿಗೆ, ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡುವುದಕ್ಕಾಗಿ ಸಪ್ತಗಿರಿ ಫೌಂಡೇಶನ್ ಅನ್ನು ಅವರು 1989ರಲ್ಲಿ ಸ್ಥಾಪಿಸಿದ್ದರು. ತಾನು ಶಿಕ್ಷಣ ಪಡೆದಿದ್ದ ಮಂಗಳೂರಿನ ಗಣಪತಿ ಪ್ರೌಢ ಶಾಲೆಯ ಬಗ್ಗೆ ಅಪಾರ ಪ್ರೀತಿ ಹಾಗೂ ಅಭಿಮಾನವನ್ನು ಹೊಂದಿದ್ದ ನರಸಿಂಹ ಮಾವ, ಅದಕ್ಕೆ ತನ್ನಿಂದಾದ ನೆರವನ್ನು ಯಾವತ್ತೂ ನೀಡುತ್ತಿದ್ದರು.

ನನ್ನ ಅಮ್ಮ ಅಹಲ್ಯಾ ಅಣ್ಣ ನರಸಿಂಹನ ಬಗ್ಗೆ ಬಹಳ ಅಭಿಮಾನವನ್ನು ಹೊಂದಿದ್ದರು, ತನ್ನ ಮಕ್ಕಳು ಈ ಅಣ್ಣನಂತೆಯೇ ವೈದ್ಯರಾಗಬೇಕೆಂಬ ಹಂಬಲ ಅಮ್ಮನದಾಗಿತ್ತು. ನರಸಿಂಹ ಮಾವನ ಪ್ರೇರಣೆ ಮತ್ತು ಅಮ್ಮನ ಒತ್ತಾಸೆಯಿಂದ ನಾವು ನಾಲ್ವರು ಕೂಡ ವೈದ್ಯರಾದೆವು. ನಾನು 1982ರಲ್ಲಿ ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಸೇರಿದಾಗ ನರಸಿಂಹ ಮಾವ ಬಹಳ ಹೆಮ್ಮೆ ಪಟ್ಟಿದ್ದರು. ಬಳಿಕ 1989ರಲ್ಲಿ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಕಾಲೇಜಿನಲ್ಲಿ ನಾನು ಎಂಡಿ ವ್ಯಾಸಂಗಕ್ಕೆ ಸೇರಿದಾಗ ಸಕ್ಕರೆ ಕಾಯಿಲೆಯಲ್ಲಿ ಮೂತ್ರಪಿಂಡಗಳ ಮೇಲಾಗುವ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸುವ ಯೋಚನೆಯನ್ನು ಮಾಡಿದ್ದೆ. ಆಗ ಹೊಸದಾಗಿದ್ದ ಮೈಕ್ರೋಆಲ್ಬುಮಿನೂರಿಯಾ (ಮೂತ್ರದಲ್ಲಿ ಸೂಕ್ಷ್ಮ ಪ್ರಮಾಣದಲ್ಲಿ ಆಲ್ಬುಮಿನ್ ಸೋರಿಕೆ) ಪರೀಕ್ಷೆಯ ಕಿಟ್ ಅನ್ನು ಅಮೆರಿಕಾದಿಂದ ಕಳುಹಿಸಲು ಸಾಧ್ಯವಾದರೆ ನನ್ನ ಕೆಲಸಕ್ಕೆ ಬಹಳಷ್ಟು ಸಹಾಯವಾದೀತು ಎಂದು ನರಸಿಂಹ ಮಾವನಲ್ಲಿ ಹೇಳಿದ್ದೆ. ಒಂದೇ ತಿಂಗಳಲ್ಲಿ ಅಂಥ ಕಿಟ್ ಅನ್ನು ನನಗೆ ಕಳಿಸಿಕೊಟ್ಟದ್ದಲ್ಲದೆ, ಜೊತೆಗೆ, ಕಣ್ಣಿನೊಳಗೆ ಅಕ್ಷಿಪಟಲವನ್ನು ಪರೀಕ್ಷಿಸುವುದಕ್ಕೆ ಅತ್ಯುತ್ತಮವಾದ, ದುಬಾರಿಯಾದ ಆಫ್ತಾಲ್ಮೋಸ್ಕೋಪ್ ಅನ್ನೂ ಅವರು ಕಳುಹಿಸಿದ್ದರು. ಅದನ್ನು ಬಳಸಿಕೊಂಡು ಸಕ್ಕರೆ ಕಾಯಿಲೆಯುಳ್ಳವರಲ್ಲಿ ಮೂತ್ರಪಿಂಡಗಳ ಸಮಸ್ಯೆಗೂ, ಅಕ್ಷಿಪಟಲದ ಸಮಸ್ಯೆಗೂ ಇರುವ ಸಂಬಂಧಗಳ ಬಗ್ಗೆಯೂ ನನ್ನ ಅಧ್ಯಯನದ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದೆ. ನಾನು ಹುಬ್ಬಳಿಯಲ್ಲಿ ಎಂಡಿ ವ್ಯಾಸಂಗ ಮುಗಿಸಿ 1992ರಲ್ಲಿ ಮಂಗಳೂರಿಗೆ ಮರಳಿದಾಗ, ನನ್ನದೇ ಆದ ಕ್ಲಿನಿಕ್ ಆರಂಭಿಸಲು ನರಸಿಂಹ ಮಾವನೇ ಹಣವೊದಗಿಸಿದ್ದರು. 

ಯಾರ ಮೇಲೂ ಸಿಟ್ಟಾಗದೆ, ಯಾರೆದುರಿಗೂ ದೊಡ್ಡಸ್ತಿಕೆ ತೋರದೆ, ಯಾರಿಗೂ ಅನಪೇಕ್ಷಿತವಾದ, ಅನಗತ್ಯವಾದ ಸಲಹೆಗಳನ್ನು ನೀಡದೆ, ಮಿತ-ಮೃದು ಭಾಷಿಯಾಗಿದ್ದು ಎಲ್ಲರ ಹಿತಚಿಂತಕರಾಗಿದ್ದ ಡಾ. ನರಸಿಂಹ ಸೋಮಯಾಜಿಯವರ ನೆನಪು ನಮ್ಮೆಲ್ಲರೊಂದಿಗೆ ಸದಾ ಇರುತ್ತದೆ. 

My Maternal Uncle Dr. Bantwala Narasimha Somayaji

My maternal uncle Dr. Bantwala Narasimha Somayaji breathed his last on Tuesday, February 13, 2024 in Mangalore. It was Narasimha Mava (uncle) who was the motivation for us, four sons of his sister Ahalya, to be doctors. He may not be physically with us today, but his inspiration, encouragement, support and help will always be cherished by all of us.

Born in Mangalore in 1935 as the second son of Gandhian Shri Bantwala Narayana Somayaji and Gopi Amma, who ran a carpet and khadi cloth shop near Mangalore’s Central Market, Narasimha Somayaji received his early education at Ganapathi High School, Mangalore, and later completed his MBBS degree from Madras Medical College in 1958. While studying MBBS, Dr. KR Shetty, Dr. AV Shetty and Dr. CR Kamath from Mangalore were his classmates.

After MBBS, Dr. Narasimha Somayaji went to England and obtained MRCP degree from Birmingham, from where he went to Houston, USA for higher education and got trained in Gastroenterology. He was invited by Vanderbilt Medical College and Meharry Medical College at Nashville, Tennessee, USA, to start the Department of Gastroenterology. He chose Meharry Medical College, which was predominantly African-American; He often used to state that Vanderbilt could have offered him more money, but he chose Meharry because it needed experts like him more. Thus Dr. Narasimha Somayaji pioneered the establishment of the department of gastroenterology at Meharry Medical College, and served as a professor of gastroenterology there, and for more than four decades he also worked as a consultant gastroenterologist in the city of Nashville.

When we were kids, Narasimha uncle used to come to Mangalore with his family once in two-three years. Their arrival used to be celebration time for all of us children. Toys like Legos and special books that were brought from America every time, pictures clicked and instantly printed on the then new Polaroid camera, and most of all their two children, Anil and Shalini, who were our own age, who chatted with us in American English – we looked forward to all this. Every time when Narasimha uncle came, all of us, his sisters and all their children, along with his family would go to the Vinayaka temple at Anegudde near Kundapur, and these were joyous for us children. Whenever Narasimha uncle came to Mangalore, he used to give some or the other equipment to his two elder sisters and younger sister. This is how the electric powered Field Star grinding stone, which was very popular at that time, came to our house and helped my mother for many years.

When my mother Ahalya was studying in her second year of B.Sc., her mother Gopi Amma passed away after undergoing a surgery, and within a few months her father Narayan Somayaji also passed away. As both the sisters were married and the two brothers were pursuing higher studies, it became her responsibility to take care of her two younger brothers and she had to drop out of college. Thus, this family who lost their parents at a young age did not have a house of their own. In the first few years, Narasimha uncle and his family had to stay in hotels in Mangalore whenever they came to town. Family functions were held at our home or at my aunts’ homes. Ever yearning to have a house of his own, Narasimha uncle built a magnificent house on the outskirts of Mangalore in 1985, naming it Gopi Nilaya. He got his parents’ portraits made by his paternal uncle’s son, Shri Ganesha Somayaji, a renowned artist of the country, and that was the first time that we grandchildren had a glimpse of our maternal grandparents. Since then, Gopi Nilaya became our maternal ancestral home and not merely our uncle’s.

Even though Dr Narasimha Somayaji left India and settled in America, his love for his Indian roots never abated. He was instrumental in establishing the Hindu Cultural Center of Tennessee in 1980, bringing together people of Indian origin from his home state of Tennessee and surrounding states. As its president for fifteen years, he led the construction of the magnificent Sri Ganesha Temple in Nashville under the guidance of sculptors from Tamil Nadu. This temple is one of the largest Indian temples in North America and attracts people not only from Tennessee but from many surrounding states. Today, it is the center of various rituals and ceremonies for the people of Indian origin there, and it is also known for offering food on weekends and special days to all the devotees.

Narasimha uncle, as Chairman, founded the Saptagiri Hotels in 1985 in Kavur, Mangalore in association with his brother Rama Somayaji who was in Mangalore. He also started a computer education center there, which was a new course in the mid eighties, as well as a college of hotel and hospitality management, which ran successfully for many years and imparted good training to many students. In addition, he founded the Saptagiri Foundation in 1989 to support local social work, development of government schools, and children’s education. Narasimha uncle had great love and admiration for Ganapathi High School in Mangalore, where he was educated, and always gave his help to it.

My mother Ahalya had great admiration for her elder brother Narasimha, and it was her wish that her children should become doctors like this brother. All four of us became doctors with the encouragement of and insistence of our mother. Narasimha uncle was very proud when I joined MBBS in Kasturba Medical College, Mangalore in 1982. Later, in 1989, when I joined the MD course at the Karnataka Medical College, Hubli, I wished to study the effects of diabetes on the kidneys. I told Narasimha uncle that if he could send the new microalbuminuria test kit from America, it would be of great help to my work. Not only did he send me such a kit within a month, but he also sent me an excellent, expensive ophthalmoscope for examining the retina of the eye. Using it, I expanded the scope of my study to include the relationship between kidney and retinal involvement in diabetics. When I completed my MD in Hubli and returned to Mangalore in 1992, it was Narasimha uncle who provided me with the necessary money to start my own clinic.

Never angry with anyone, never showing off, never offering any unsolicited or unnecessary advice to anyone, the soft-spoken Narasimha uncle  was a well-wisher of all. The memory of Narasimha Somayaji will always be with us all.

Be the first to comment

Leave a Reply

Your email address will not be published.


*