ಕೊರೋನ: ವೈಜ್ಞಾನಿಕ ಸುರಕ್ಷತೆ

ಹೊಸತು ಪತ್ರಿಕೆ, ಎಪ್ರಿಲ್ 2020, ಪುಟ 31

ಈಗ ಎಲ್ಲೆಡೆ ಕೊರೊನಾದ್ದೇ ಸುದ್ದಿ. ಈ ಎರಡು ತಿಂಗಳಲ್ಲಿ ಹೊಸ ಕೊರೊನಾ ವೈರಸ್ ವಿಶ್ವವ್ಯಾಪಿಯಾಗುತ್ತಿದ್ದಂತೆ ಎಲ್ಲಾ ಮಾಧ್ಯಮಗಳನ್ನೂ ಅದು ವ್ಯಾಪಿಸಿಬಿಟ್ಟಿದೆ, ಪತ್ರಿಕೆಗಳ ಎಲ್ಲಾ ಪುಟಗಳನ್ನೂ ತುಂಬುತ್ತಿದೆ. ಕೆಲವು ಮಾಹಿತಿಗಳು ವೈಜ್ಞಾನಿಕವೂ, ನಿಜವೂ ಆಗಿದ್ದರೆ, ಬಹಳಷ್ಟು ಮಾಹಿತಿಗಳು ಕಟ್ಟುಕಥೆಗಳೂ, ಸುಳ್ಳುಗಳೂ ಆಗಿವೆ. ಕೊರೊನಾ ಸೋಂಕು  ಎಗ್ಗಿಲ್ಲದೆ ಹರಡುತ್ತಿರುವಾಗ ಅದರ ಬಗ್ಗೆ ವೈಜ್ಞಾನಿಕ ಸತ್ಯವನ್ನು ಅರಿಯುವುದು ಮತ್ತು ಅದರ ಆಧಾರದಲ್ಲಿ ವೈಜ್ಞಾನಿಕವಾದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯವಾಗಿದೆ.

ಮಧ್ಯ ಚೀನಾದ ಹೂಬೆ ಪ್ರಾಂತ್ಯದಲ್ಲಿ ಡಿಸೆಂಬರ್ 2019ರ ಕೊನೆಯಲ್ಲಿ ಮನುಷ್ಯರಿಗೆ ಸೋಂಕನ್ನುಂಟು ಮಾಡಿ ಗುರುತಿಸಲ್ಪಟ್ಟ ಈ ಹೊಸ ಕೊರೊನಾ ವೈರಸ್ (ಎಸ್‌ಎಆರ್‌ಎಸ್-ಕೊವೈ-2) ಅಲ್ಲಿಂದ ಹೊರಗೆ ಹರಡಿ, ಇದನ್ನು ಬರೆಯುವ ಹೊತ್ತಿಗೆ 180ಕ್ಕೂ ಹೆಚ್ಚು ದೇಶಗಳಲ್ಲಿ 2 ಲಕ್ಷ 45 ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕಿ, 10 ಸಾವಿರಕ್ಕೂ ಹೆಚ್ಚು ಸಾವುಗಳಿಗೆ ಕಾರಣವಾಗಿದೆ. ಭಾರತದೊಳಕ್ಕೂ ಅದು ಹೊಕ್ಕಿದ್ದು, ಈಗಾಗಲೇ ಸೋಂಕನ್ನು ವಿದೇಶದಿಂದ ಇಲ್ಲಿಗೆ ತಂದವರ ಸಂಪರ್ಕಕ್ಕೆ ಬಂದವರಿಗೂ ಹರಡಿದೆ. ಇದುವರೆಗೆ ಇಲ್ಲಿ ಗುರುತಿಸಲಾಗಿರುವ 197 ಪ್ರಕರಣಗಳಲ್ಲಿ 171 ಮಂದಿ ಆಸ್ಪತ್ರೆಗಳಲ್ಲಿದ್ದಾರೆ, ನಾಲ್ವರು ಮೃತರಾಗಿದ್ದಾರೆ ಹಾಗೂ 20 ಮಂದಿ ಗುಣಮುಖರಾಗಿದ್ದಾರೆ. ಮೊದಲಿನ ಈ ಎರಡು ಹಂತಗಳಲ್ಲಿ ಸೋಂಕಿತರನ್ನೂ, ಅವರ ಸಂಪರ್ಕಕ್ಕೆ ಬಂದವರನ್ನೂ ಗುರುತಿಸಿ, ಪ್ರತ್ಯೇಕಿಸಿ ಇಡುವ ಮೂಲಕ ಅದು ಇನ್ನಷ್ಟು ಜನರಿಗೆ ಹರಡದಂತೆ ತಡೆಯಲು, ಹರಡುವಿಕೆಯನ್ನು ನಿಧಾನಗೊಳಿಸಲು ಆರೋಗ್ಯ ಇಲಾಖೆಯ ಶತಪ್ರಯತ್ನಗಳನ್ನು ಮಾಡುತ್ತಿದ್ದರೂ, ಈಗ ದಿನಕ್ಕೆ 10-20 ಪ್ರಕರಣಗಳು ಹೊಸದಾಗಿ ಸೇರ್ಪಡೆಯಾಗುತ್ತಿದ್ದು, ಅದು ಇನ್ನಷ್ಟು ಜನರಿಗೆ ಹರಡುವ ಸಾಧ್ಯತೆಗಳಿದ್ದೇ ಇವೆ. ಇನ್ನು ಮೂರು-ನಾಲ್ಕು ವಾರಗಳಲ್ಲಿ, ಅಂದರೆ ಎಪ್ರಿಲ್-ಮೇ ತಿಂಗಳ ವೇಳೆಗೆ, ಕೊರೊನಾ ಹರಡುವಿಕೆಯು ಮೂರನೇ ಹಂತಕ್ಕೆ ತಲುಪಿ, ಸ್ಥಳೀಯ ಸಮುದಾಯದಲ್ಲಿ ಹರಡುವ ಸಾಧ್ಯತೆಗಳಿವೆ; ಆ ಬಳಿಕ ಹರಡುವಿಕೆಯು ಅನಿಯಂತ್ರಿತವಾಗಿ ದೇಶವ್ಯಾಪಿಯಾಗುವ ಹಂತವು ಬರಬಹುದು.

ಏನಿದು ಕೊರೊನಾ ವೈರಸ್?

ಸಾಮಾನ್ಯ ನೆಗಡಿ-ಕೆಮ್ಮು-ಜ್ವರಗಳನ್ನುಂಟು ಮಾಡುವ ಹಲವು ವೈರಸ್‌ಗಳಲ್ಲಿ ಈ ಕೊರೊನಾ ವೈರಸ್ ಕೂಡ ಸೇರಿದೆ. ಅವುಗಳಲ್ಲಿ ನಾಲ್ಕು ವಿಧದ ಕೊರೊನಾ ವೈರಸ್‌ಗಳು ಸೌಮ್ಯ ವಿಧದ ನೆಗಡಿ-ಜ್ವರವನ್ನುಂಟು ಮಾಡಿದರೆ, 2002ರಲ್ಲಿ ಚೀನಾದಲ್ಲೇ ಗುರುತಿಸಲ್ಪಟ್ಟ ಎಸ್ಎಆರ್‌ಎಸ್ (ಶ್ವಾಸಾಂಗದ ತೀವ್ರ ರೋಗವನ್ನುಂಟು ಮಾಡುವ)  ವೈರಸ್ ಮತ್ತು 2012ರಲ್ಲಿ ಸೌದಿ ಅರೇಬಿಯಾದಲ್ಲಿ ಗುರುತಿಸಲ್ಪಟ್ಟ ಎಂಇಆರ್‌ಎಸ್ (ಮಧ್ಯ ಪ್ರಾಚ್ಯದಲ್ಲಿ ಶ್ವಾಸಾಂಗದ ತೀವ್ರ ರೋಗವನ್ನುಂಟು ಮಾಡುವ) ವೈರಸ್‌ಗಳು ಶ್ವಾಸಕೋಶಗಳಿಗೂ ತೊಂದರೆಯುಂಟು ಮಾಡಿ, ಶೇ.10ರಿಂದ 30 ಸೋಂಕಿತರಲ್ಲಿ ಪ್ರಾಣಾಪಾಯವುಂಟು ಮಾಡುತ್ತವೆ. ಈಗ ಗುರುತಿಸಲಾಗಿರುವ ಹೊಸ ಕೊರೊನಾ ವೈರಸ್ (ಎಸ್‌ಎಆರ್‌ಎಸ್-ಕೊವೈ-2) ಕ್ಷಿಪ್ರವಾಗಿ ಹರಡಿ, ಶೇ.15ರಷ್ಟು ಸೋಂಕಿತರಲ್ಲಿ ಶ್ವಾಸಕೋಶಗಳಿಗೂ ತೊಂದರೆಯುಂಟು ಮಾಡಿ, ಶೇ. 1-3ರಷ್ಟು ಸೋಂಕಿತರಲ್ಲಿ ಸಾವನ್ನುಂಟು ಮಾಡುವುದನ್ನು ಗುರುತಿಸಲಾಗಿದೆ.

ಈ ಹೊಸ ಕೊರೊನಾ ಸೋಂಕಿನಿಂದ ಅತಿ ಹೆಚ್ಚು ಪ್ರಕರಣಗಳಾಗಿರುವ ಚೀನಾ, ದಕ್ಷಿಣ ಕೊರಿಯಾ, ಇಟೆಲಿ ಮುಂತಾದ ದೇಶಗಳಲ್ಲಿ ದೊರಕಿರುವ ವಿವರಗಳೆಲ್ಲವೂ ಆಧುನಿಕ ವೈದ್ಯ ವಿಜ್ಞಾನದ ವಿದ್ವತ್ ಪತ್ರಿಕೆಗಳಲ್ಲಿ ಈಗಾಗಲೇ ಪ್ರಕಟಗೊಂಡಿದ್ದು, ಈ ಹೊಸ ಸೋಂಕಿನ ಬಗ್ಗೆ ಸಾಕಷ್ಟು ಆಳವಾದ ಅರಿವು ಈಗಾಗಲೇ ಲಭ್ಯವಿದೆ. ಸೋಂಕು ಹರಡುವ ಬಗೆ, ಅದನ್ನು ತಡೆಯುವ ವಿಧಾನಗಳು, ವಯೋಮಾನಕ್ಕನುಗುಣವಾಗಿ ಉಂಟಾಗುವ ರೋಗಲಕ್ಷಣಗಳು ಮತ್ತು ಸಮಸ್ಯೆಗಳು, ಗಂಭೀರ ಸಮಸ್ಯೆಗಳಿಗೆ ಚಿಕಿತ್ಸೆ ಮತ್ತು ಅದಕ್ಕೆ ಸ್ಪಂದನೆ, ಪರಿಣಾಮಕಾರಿಯೆನಿಸಿರುವ ಕೆಲವು ಔಷಧಗಳು ಇತ್ಯಾದಿ ಹಲವಾರು ಮಾಹಿತಿಗಳೀಗ ಸ್ಪಷ್ಟವಾಗಿ ಲಭ್ಯವಿವೆ. ಈಗಾಗಲೇ ಸೋಂಕು ಹರಡಿರುವ ಎಲ್ಲಾ ದೇಶಗಳಲ್ಲೂ ರೋಗದ ಲಕ್ಷಣಗಳು ಸುಮಾರು ಒಂದೇ ತೆರನಾಗಿರುವುದನ್ನು ಗುರುತಿಸಲಾಗಿದ್ದು, ನಮ್ಮ ದೇಶದಲ್ಲೂ ಅದು ಹಾಗೆಯೇ ವರ್ತಿಸಬಹುದೆನ್ನಬಹುದು.

ಹೊಸ ಕೊರೊನಾ ಸೋಂಕು ಹರಡುವುದು ಹೇಗೆ?

ಸೋಂಕಿನಿಂದ ಬಳಲುತ್ತಿರುವವರ ಶ್ವಾಸಾಂಗದ ದ್ರವದ ಮೂಲಕ ಕೊರೊನಾ ವೈರಸ್ ಇತರರಿಗೆ ಹರಡುತ್ತದೆ. ಸೋಂಕಿತರು ಕೆಮ್ಮಿದಾಗ ಅವರ ಹತ್ತಿರವಿದ್ದವರ ಮುಖಕ್ಕೆ ಸಿಂಪಡಣೆಯಾಗಿ; ಸೋಂಕಿತರು ತಮ್ಮ ಕೈಯೊಳಕ್ಕೆ ಕೆಮ್ಮಿ, ಅದೇ ಕೈಯಿಂದ ಬಾಗಿಲು, ಮೇಜು, ಕುರ್ಚಿ ಇತ್ಯಾದಿಗಳನ್ನು ಮುಟ್ಟಿದಾಗ ವೈರಸ್ ಇರುವ ಸ್ರಾವವು ಅವುಗಳಿಗೆ ಮೆತ್ತಿಕೊಂಡು, ಸೋಂಕಿತರ ಬಟ್ಟೆಗಳಿಗೂ ಅಂಟಿಕೊಂಡು, ಹಲವು ಗಂಟೆಗಳ ಕಾಲ ಅವುಗಳಲ್ಲೇ ಉಳಿದುಕೊಂಡು, ಅವುಗಳ ಸಂಪರ್ಕಕ್ಕೆ ಬಂದವರ ಮೂಗು-ಬಾಯಿಗಳ ಮೂಲಕ ಅವರಿಗೂ ಸೋಂಕನ್ನುಂಟು ಮಾಡುತ್ತವೆ. ಆದ್ದರಿಂದ ಸೋಂಕು ಬೇರೆ ಯಾರಿಗೂ ಹರಡಬಾರದು ಎಂದಾದರೆ ಸೋಂಕಿತರೇ ಸಂಪೂರ್ಣ ಜವಾಬ್ದಾರಿಯಿಂದ ವರ್ತಿಸಬೇಕಾಗುತ್ತದೆ.

ಕೊರೊನಾ ಸೋಂಕಿನ ರೋಗಲಕ್ಷಣಗಳೇನು?

ರೋಗಲಕ್ಷಣಗಳು ಸೋಂಕು ತಗಲಿದ 2ರಿಂದ 14 ದಿನಗಳಲ್ಲಿ (ಹೆಚ್ಚಿನವರಲ್ಲಿ ನಾಲ್ಕೈದು ದಿನಗಳಲ್ಲಿ) ಕಂಡುಬರುತ್ತವೆ. ಆದರೆ ರೋಗಲಕ್ಷಣಗಳು ಕಂಡುಬರುವುದಕ್ಕೆ 12-24 ಗಂಟೆಗಳ ಮೊದಲೇ ಸೋಂಕು ಹರಡಲಾರಂಭಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಕೆಲವರಲ್ಲಿ ಜ್ವರ ಆರಂಭಗೊಳ್ಳುವುದಕ್ಕೆ ಒಂದೆರಡು ದಿನಕ್ಕೆ ಮೊದಲೇ ವಾಂತಿ-ಭೇದಿಯ ಲಕ್ಷಣಗಳಿರಬಹುದೆನ್ನುವುದನ್ನೂ ಕೂಡ ಗುರುತಿಸಲಾಗಿದೆ. ಆದ್ದರಿಂದ, ಸೋಂಕಿತರ ಸಂಪರ್ಕಕ್ಕೆ ಬಂದವರು, ಮತ್ತು ಕೊರೊನಾ ಸಂಬಂಧಿತ ಲಕ್ಷಣಗಳಿರುವವರು ಆ ದಿನದಿಂದಲೇ ಇತರರಿಗೆ ಸೋಂಕು ಹರಡದಂತೆ ಜಾಗ್ರತೆ ವಹಿಸಬೇಕಾಗುತ್ತದೆ.

ಕೊರೊನಾ ಸೋಂಕಿನ ರೋಗಲಕ್ಷಣಗಳು ಸಾಮಾನ್ಯ ನೆಗಡಿ-ಕೆಮ್ಮು-ಜ್ವರದಂತೆಯೇ ಇರುತ್ತವೆ. ಜ್ವರ (77-98%), ಒಣ ಕೆಮ್ಮು (46-82%), ಬಳಲಿಕೆ (38%), ಕಫ (33%), ಗಂಟಲು ನೋವು (14%), ತಲೆ ನೋವು (14%), ಮೈಕೈ ನೋವು (15%), ನೆಗಡಿ (5%), ವಾಂತಿ (5%), ಭೇದಿ (4%)ಗಳು ಹಾಗೂ ರೋಗವು ಉಲ್ಬಣಗೊಂಡವರಲ್ಲಿ ಉಸಿರಾಟಕ್ಕೆ ಕಷ್ಟವೆನಿಸುವುದು (19%) ಹೊಸ ಕೊರೊನಾ ಸೋಂಕಿನ ರೋಗ ಲಕ್ಷಣಗಳಾಗಿವೆ.

ಸೋಂಕಿತರಲ್ಲಿ ಶೇ. 70-80ರಷ್ಟು 59 ವರ್ಷಕ್ಕಿಂತ ಕೆಳಗಿನವರಾಗಿರುತ್ತಾರೆ; 49 ವರ್ಷದೊಳಗಿನವರಲ್ಲಿ ಶೇ.0-0.4ರಷ್ಟು ಸೋಂಕಿತರು ಸಾವನ್ನಪ್ಪುವ ಸಾಧ್ಯತೆಗಳಿದ್ದರೆ, 50-59 ವರ್ಷದೊಳಗಿನವರಲ್ಲಿ ಶೇ.1.3ರಷ್ಟಿರುತ್ತದೆ. ಅಂದರೆ 59 ವರ್ಷದೊಳಗಿನವರಲ್ಲಿ ಬಹುತೇಕ ಎಲ್ಲರೂ ಈ ಹೊಸ ಸೋಂಕಿನಿಂದ ಯಾವುದೇ ಚಿಕಿತ್ಸೆಯಿಲ್ಲದೆಯೇ ತಾವಾಗಿ ಗುಣಮುಖರಾಗುತ್ತಾರೆ. ಶೇ. 20-30ರಷ್ಟು ಸೋಂಕುಗಳು 60ನ್ನು ಮೇಲ್ಪಟ್ಟ ವಯಸ್ಸಿನವರಲ್ಲಿ ಉಂಟಾಗುತ್ತವೆ; ಅವರಲ್ಲಿ ಶೇ. 4-15ರಷ್ಟು ಸೋಂಕಿತರು ಸಾವನ್ನಪ್ಪುತ್ತಾರೆ. ಅಂದರೆ ಹಿರಿಯ ವಯಸ್ಕರಲ್ಲಿ, ಮೊದಲೇ ಶ್ವಾಸಕೋಶಗಳ ಸಮಸ್ಯೆಯಿದ್ದವರಲ್ಲಿ, ಅಥವಾ ಇತರ ರೋಗಗಳಿದ್ದವರಲ್ಲಿ ಕೊರೊನಾ ಸೋಂಕಿನಿಂದ ರೋಗದ ಗಂಭೀರ ಸಮಸ್ಯೆಗಳಾಗುವ ಸಾಧ್ಯತೆಗಳು ಹೆಚ್ಚಿದ್ದು, ಇಟೆಲಿಯಲ್ಲಿ ಸಾವನ್ನಪ್ಪಿರುವ 2500ಕ್ಕೂ ಹೆಚ್ಚು ಸೋಂಕಿತರಲ್ಲಿ ಸರಾಸರಿ ವಯಸ್ಸು 80ರಷ್ಟಿತ್ತು, ಶೇ. 99ರಷ್ಟು ಮಂದಿ ಒಂದು ಅಥವಾ ಹೆಚ್ಚು ಅನ್ಯ ಕಾಯಿಲೆಗಳನ್ನು ಹೊಂದಿದ್ದರು. ಒಟ್ಟಿನಲ್ಲಿ, ಎಲ್ಲಾ ವಯೋಮಾನದವರನ್ನು ಪರಿಗಣಿಸಿದರೆ, ಶೇ. 85ರಷ್ಟು ಸೋಂಕಿತರು ಯಾವ ಸಮಸ್ಯೆಗಳೂ ಇಲ್ಲದೆ, ಯಾವ ಚಿಕಿತ್ಸೆಯೂ ಅಗತ್ಯವಿಲ್ಲದೆ, ತಾವಾಗಿ ಗುಣಮುಖರಾಗುತ್ತಾರೆ. ಶೇ 10ರಷ್ಟು ಪ್ರಕರಣಗಳಲ್ಲಿ ಶ್ವಾಸಕೋಶಗಳಿಗೆ ಸಮಸ್ಯೆಯಾಗಿ ಆಮ್ಲಜನಕ ನೀಡಬೇಕಾಗಬಹುದು, ಶೇ 5ರಷ್ಟು ಪ್ರಕರಣಗಳಲ್ಲಿ ಕೃತಕ ಉಸಿರಾಟದ ಅಗತ್ಯ ಉಂಟಾಗಬಹುದು; ಹೀಗೆ ಸಮಸ್ಯೆಗಳಾಗುವ ಸಾಧ್ಯತೆಗಳುಳ್ಳವರಲ್ಲೂ ಶೇ. 85-96ರಷ್ಟು ಸೋಂಕಿತರು ಗೂಣಮುಖರಾಗುತ್ತಾರೆ. ಒಟ್ಟಾರೆಯಾಗಿ ಶೇ. 1-3ರಷ್ಟು ಸೋಂಕಿತರು ಸಾವನ್ನಪ್ಪಿದರೆ, ಉಳಿದವರೆಲ್ಲರೂ ಗುಣಮುಖರಾಗುತ್ತಾರೆ.

ರೋಗಲಕ್ಷಣಗಳು ಸೋಂಕು ತಗಲಿದ 2-6 ದಿನಗಳಲ್ಲಿ (ಕೆಲವರಲ್ಲಿ 14 ದಿನಗಳವರೆಗೂ ಆಗಬಹುದು) ಆರಂಭಗೊಂಡು ವಾರದೊಳಗೆ ಕಡಿಮೆಯಾಗಿ ಗುಣ ಹೊಂದುತ್ತವೆ. ರೋಗವು ಗಂಭೀರಗೊಳ್ಳುವವರಲ್ಲಿ ರೋಗಲಕ್ಷಣಗಳು ಆರಂಭಗೊಂಡ ಬಳಿಕ 7ರಿಂದ 8 ದಿನಗಳಲ್ಲಿ ಕೆಮ್ಮು ಮುಂದುವರಿಯುವುದು ಅಥವಾ ಉಲ್ಬಣಗೊಳ್ಳುವುದು, ಉಸಿರಾಡಲು ಕಷ್ಟವಾಗುವುದು ಇತ್ಯಾದಿ ಸಮಸ್ಯೆಗಳಾಗುತ್ತವೆ. ಆದ್ದರಿಂದ, ಕೊರೊನಾ ಸೋಂಕಿನ ಗಂಭೀರ ಸಮಸ್ಯೆಗಳು ರೋಗವು ಆರಂಭಗೊಂಡು ಎರಡನೇ ವಾರದಲ್ಲಿ ಕಾಣಿಸಿಕೊಳ್ಳುವುದರಿಂದ, ಕೊರೊನಾ ಸೋಂಕಿನ ಲಕ್ಷಣಗಳು ಅರಂಭಗೊಂಡೊಡನೆ ಯಾರೂ ಗಾಬರಿ, ಹೆದರಿಕೆಗಳಿಗೆ ಒಳಗಾಗಬೇಕಿಲ್ಲ.

ಕೊರೊನಾ ನಿಯಂತ್ರಣಕ್ಕೆ ಏನು ಮಾಡಬೇಕು?

ಕೊರೊನಾ ಸೋಂಕನ್ನು ದೇಶದೊಳಕ್ಕೆ ತಂದವರನ್ನು ಗುರುತಿಸಿ, ಅವರ ಸಂಪರ್ಕಕ್ಕೆ ಬಂದವರನ್ನೂ ಗುರುತಿಸಿ ಪ್ರತ್ಯೇಕಿಸಿಟ್ಟು ಸೋಂಕು ಹರಡದಂತೆ ತಡೆಯಲು ಆರೋಗ್ಯ ಇಲಾಖೆಯ ಸಿಬಂದಿ ತಮ್ಮಿಂದಾದ ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ. ಆದರೂ ಕೆಲವು ಸೋಂಕಿತರೂ, ಶಂಕಿತರೂ ತಮಗರಿವಿಲ್ಲದೆಯೋ, ಬೇಜವಾಬ್ದಾರಿಯಿಂದ ತಪ್ಪಿಸಿಕೊಂಡೋ, ಸೋಂಕನ್ನು ಹರಡಿರಬಹುದಾದ್ದರಿಂದ ಇನ್ನು ಮೂರು-ನಾಲ್ಕು ವಾರಗಳಲ್ಲಿ ಸಮುದಾಯ ಮಟ್ಟದ ಹರಡುವಿಕೆಯು ಸ್ಪಷ್ಟವಾಗಿ ಕಾಣಿಸಿಕೊಳ್ಳಬಹುದು. ಮೊದಲೆರಡು ಹಂತಗಳಲ್ಲಿ ಸೋಂಕನ್ನು ನಿಯಂತ್ರಿಸುವ ಪ್ರಯತ್ನಗಳನ್ನು ಸರಕಾರಿ ವ್ಯವಸ್ಥೆಯು ಶಕ್ತಿ  ಮೀರಿ ಮಾಡಿದೆ. ಆದರೆ, ಮುಂದಿನ ಹಂತಗಳಲ್ಲಿ ಹರಡುವಿಕೆಯನ್ನು ಕಡಿಮೆ ಮಾಡುವ, ನಿಧಾನಗೊಳಿಸುವ ಎಲ್ಲಾ ಜವಾಬ್ದಾರಿಯೂ ಸೋಂಕಿತರದ್ದೇ ಆಗಿರುತ್ತದೆ. ಅವರು ತಮ್ಮ ಸೋಂಕನ್ನು ಇತರರಿಗೆ ಹರಡದಂತೆ ಸ್ವತಃ ಎಚ್ಚರಿಕೆ ವಹಿಸದಿದ್ದರೆ ಅವರ ಮನೆಯವರು, ಇಷ್ಟಮಿತ್ರರು, ನೆರೆಹೊರೆಯವರು, ವೈದ್ಯರು, ವೈದ್ಯಕೀಯ ಸಿಬಂದಿ ಹಾಗೂ ಇಡೀ ದೇಶದ ಜನರೇ ಸೋಂಕನ್ನು ಪಡೆದು ಕಷ್ಟಕ್ಕೊಳಗಾಗಲಿದ್ದಾರೆ. ಆದ್ದರಿಂದ ಕೊರೊನಾ ಹರಡುವುದನ್ನು ತಡೆಯುವುದಕ್ಕೆ ಯಾವ ಹಂತದಲ್ಲಿ ಏನನ್ನು ಮಾಡಬೇಕೋ ಅದನ್ನು ಮಾಡಬೇಕಾಗುತ್ತದೆ; ಅನಗತ್ಯವಾದ ಕ್ರಮಗಳಿಂದ ಪ್ರಯೋಜನವಾಗದು, ಅಗತ್ಯವಿದ್ದುದನ್ನು ಮಾಡದಿದ್ದರೆ ಅಪಾಯವಾಗುವುದು ನಿಶ್ಚಿತ. ಈ ಬಗ್ಗೆ ಸ್ಪಷ್ಟತೆಯಿರಬೇಕಾದದ್ದು ಅತಿ ಮುಖ್ಯ. ಎಲ್ಲಾ ಹಂತಗಳಲ್ಲೂ ಸೋಂಕುಳ್ಳವರು ತಮ್ಮನ್ನು ತಾವು ಪ್ರತ್ಯೇಕಿಸಿಟ್ಟು, ಯಾರಿಗೂ ಸೋಂಕು ಹರಡದಂತೆ ಎಚ್ಚರಿಕೆ ವಹಿಸುವುದು ಅತಿ ಮುಖ್ಯ. ಸೋಂಕಿತರಿಗೆ ಅದನ್ನು ಅತ್ಯಂತ ಸ್ಪಷ್ಟವಾಗಿ, ಕಟ್ಟುನಿಟ್ಟಾಗಿ ಹೇಳದೇ, ಸೋಂಕಿಲ್ಲದವರನ್ನೆಲ್ಲಾ ಮನೆಯೊಳಕ್ಕೇ ಬಂಧಿಸಿಟ್ಟರಾದೀತೇ?

ಮೇಲೆ ಹೇಳಿದಂತೆ, ಶೇ. 85ಕ್ಕೂ ಹೆಚ್ಚು ಸೋಂಕಿತರು ಯಾವುದೇ ಚಿಕಿತ್ಸೆಯಿಲ್ಲದೆ, ಸಮಸ್ಯೆಗಳಾಗದೆ ಮನೆಯಲ್ಲೇ ಉಳಿದು ವಾರದೊಳಗೆ ಚೇತರಿಸಿಕೊಳ್ಳಬಹುದು. ಆದರೆ, ಗಂಭೀರ ಸಮಸ್ಯೆಗಳಾದವರಿಗೆ, (ಅಂಥವರಲ್ಲಿ ಹೆಚ್ಚಿನವರು 60 ವರ್ಷಕ್ಕೆ ಮೇಲ್ಪಟ್ಟವರಾಗಿರುತ್ತಾರೆ) ಅಗತ್ಯವಾದ ಉನ್ನತ ಚಿಕಿತ್ಸೆಯನ್ನು ನೀಡಲು ಈಗಲೇ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಚೀನಾದಲ್ಲಿ ಮೊದಲ ವಾರಗಳಲ್ಲಿ ಸಮಸ್ಯೆಯ ತೀವ್ರತೆಯ ಅರಿವಿಲ್ಲದೆ ಅಲ್ಲಿನ ಆಡಳಿತವು ಕಷ್ಟಕ್ಕೊಳಗಾಯಿತು; ಆ ಬಳಿಕ ತರಾತುರಿಯಿಂದ ಅತಿ ದೊಡ್ಡ ಅಸ್ಪತ್ರೆಗಳನ್ನೇ ತಾತ್ಕಾಲಿಕವಾಗಿ ಕಟ್ಟಿ ಹೆಚ್ಚಿನವರಿಗೆ ಚಿಕಿತ್ಸೆ ನೀಡಲು ಸಾಧ್ಯವಾದ್ದರಿಂದ ಸಾವುಗಳನ್ನು ಕಡಿಮೆ ಮಾಡಲು ಸಾಧ್ಯವಾಯಿತು. ಇಟಲಿಯಲ್ಲಿ ಇಂತಹಾ ಸನ್ನದ್ಧತೆಯಿಲ್ಲದ ಕಾರಣಕ್ಕೆ ಆಸ್ಪತ್ರೆಗಳೇ ಲಭ್ಯವಾಗದೆ ಯಾರಿಗೆ ಚಿಕಿತ್ಸೆ ನೀಡುವುದು, ಯಾರನ್ನು ಬಿಡುವುದು ಎಂಬ ಅತ್ಯಂತ ಕಷ್ಟಕರವಾದ ಪರಿಸ್ಥಿತಿಯುಂಟಾಗಿದೆ. ಮೂರನೇ ಹಂತದಲ್ಲಿ ಈ ಎಲ್ಲಾ ದೇಶಗಳಲ್ಲೂ ಕಟ್ಟುನಿಟ್ಟಿನ ಪ್ರತಿಬಂಧಗಳನ್ನು ಹೇರಿದ್ದರೂ ಸೋಂಕಿನ ಹರಡುವಿಕೆಯನ್ನು ಸಂಪೂರ್ಣವಾಗಿ ತಡೆಯಲಾಗಲಿಲ್ಲ; ಆದರೆ ಸೂಕ್ತ ಚಿಕಿತ್ಸಾ ಸೌಲಭ್ಯಗಳನ್ನು ಏರ್ಪಡಿಸಿದ್ದ ದೇಶಗಳಲ್ಲಿ ಸಾವುಗಳನ್ನು ತಡೆಯಲು ಸಾಧ್ಯವಾಗಿದೆ ಎಂಬುದು ಗಮನಾರ್ಹವಾಗಿದೆ.

ನಮ್ಮ ದೇಶದಲ್ಲಿ ವಿಶೇಷವಾದ ಸಮಸ್ಯೆಗಳು ಬೇರೆಯೇ ಇವೆ. ನಮ್ಮಲ್ಲಿ ಶೇ.80ರಷ್ಟು ಮನೆಗಳಲ್ಲಿ ಎರಡು ಅಥವಾ ಕಡಿಮೆ ಕೋಣೆಗಳಿರುವುದರಿಂದ ಮನೆಮಂದಿ ಒತ್ತೊತ್ತಾಗಿ ಜೀವಿಸುವಂಥ ಪರಿಸ್ಥಿತಿಯಿದೆ. ಹಾಗೆಯೇ ಸಾರ್ವಜನಿಕ ಸ್ಥಳಗಳಲ್ಲಿಯೂ ಜನದಟ್ಟಣೆ ಇದೆ. ಎಷ್ಟೇ ಸಾರ್ವಜನಿಕ ಸ್ಥಳಗಳನ್ನು ಮುಚ್ಚಿದರೂ ಸೋಂಕಿತರು ತಮ್ಮ ಮನೆಯೊಳಗೆ ಎಚ್ಚರಿಕೆ ವಹಿಸದಿದ್ದರೆ ಸೋಂಕಿನ ಹರಡುವಿಕೆಯನ್ನು ತಡೆಯುವುದು ಕಷ್ಟವೇ. ಆದರೆ ಸಣ್ಣ ಮನೆಗಳಲ್ಲಿ ಅಂಥ ಎಚ್ಚರಿಕೆಯನ್ನು ಪಾಲಿಸುವುದೂ ಸುಲಭವಲ್ಲ. ತಾವು ಸೋಂಕಿತರಾಗಿ ಮನೆಯಲ್ಲಿರಬೇಕಾದಾಗ ಮನೆಯಲ್ಲಿರುವ ಇತರರಿಗೆ, ಅದರಲ್ಲೂ ಹಿರಿಯರಿಗೆ, ಸೋಂಕು ತಗಲದಂತೆ ಅವರವರೇ ಉಪಾಯಗಳನ್ನು ಮಾಡಬೇಕಾಗುತ್ತದೆ.

ಸೋಂಕಿನಿಂದ ಅತಿ ಹೆಚ್ಚು ಸಮಸ್ಯೆಗೀಡಾದ ಪ್ರದೇಶಗಳೆಲ್ಲವೂ ಚೀನಾ ಮತ್ತು ಯೂರೋಪಿನ ಸಮಶೀತೋಷ್ಣ ವಲಯದಲ್ಲೇ ಇವೆ. ಶೀತವಲಯದ ರಷ್ಯಾದಂತಹ ದೇಶಗಳಲ್ಲಾಗಲೀ, ಉಷ್ಣವಲಯದ ದೇಶಗಳಲ್ಲಾಗಲೀ ಸೋಂಕು ಇದುವರೆಗೆ ಅಷ್ಟೊಂದು ಹರಡಿಲ್ಲ; ಮುಂದೇನಾಗಬಹುದೆನ್ನುವುದನ್ನು ಈಗಲೇ ಹೇಳಲಾಗದು. ಸೋಂಕು ಹೀಗೆ ಮಿತಿಗೊಂಡಿರುವುದಕ್ಕೆ ಉಷ್ಣತೆಯಷ್ಟೇ ಕಾರಣ ಎನ್ನಲಾಗದಿದ್ದರೂ ಅದನ್ನೂ ಅಲ್ಲಗಳೆಯುವಂತಿಲ್ಲ, ಉಷ್ಣತೆಯ ಕಾರಣಕ್ಕೆ ಅದು ಹರಡದು ಎಂದು ನಾವು ನಿರಾಳವಾಗಿರುವುದೂ ಸರಿಯಲ್ಲ. ಆದ್ದರಿಂದ ನಮ್ಮ ದೇಶದಲ್ಲಿ ತಾಪಮಾನದ ಕಾರಣಕ್ಕೆ ಸೋಂಕು ವ್ಯಾಪಕವಾಗದು ಎಂದು ನಾವೆಲ್ಲರೂ ಹಾರೈಸಬಹುದಷ್ಟೇ ಅಲ್ಲದೆ, ಹಾಗೆಂದು ಸುಮ್ಮನೆ ಕುಳಿತರಾಗದು.

ಮಕ್ಕಳು ಮತ್ತು ಕಿರಿವಯಸ್ಕರಲ್ಲಿ ಕೊರೊನಾ ಸೋಂಕು ಹೆಚ್ಚು ರೋಗಲಕ್ಷಣಗಳನ್ನಾಗಲೀ, ಸಮಸ್ಯೆಗಳನ್ನಾಗಲೀ ಉಂಟು ಮಾಡದೆಯೇ ಹೋಗಿಬಿಡುವುದಕ್ಕೆ ಅವರ ದೇಹದ ರೋಗರಕ್ಷಣಾ ವ್ಯವಸ್ಥೆಯು ಸುಯೋಜಿತವಾಗಿಯೂ, ಸದಾ ಸನ್ನದ್ಧವಾಗಿಯೂ ಇರುವುದೇ ಕಾರಣವೆನ್ನಲಾಗಿದೆ. ಹಿರಿವಯಸ್ಕರಲ್ಲಿ ರೋಗರಕ್ಷಣಾ ವ್ಯವಸ್ಥೆಯು ಸುವ್ಯವಸ್ಥಿತವಾಗಿಲ್ಲದಿರುವುದರಿಂದಲೂ, ಅವರಲ್ಲಿ ಶ್ವಾಸಾಂಗ ಮತ್ತಿತರ ಅಂಗಗಳಲ್ಲಿ ಮೊದಲೇ ಇತರ ಸಮಸ್ಯೆಗಳು ಇರುವುದರಿಂದಲೂ ಕೊರೊನಾ ತೀವ್ರಗೊಂಡು ಕೆಲವರಲ್ಲಿ ಸಾವಿಗೂ ಕಾರಣವಾಗುತ್ತದೆ. ಹಾಗಿದ್ದರೆ, ಬಗೆಬಗೆಯ ಸೋಂಕುಗಳನ್ನು ಸದಾ ಎದುರಿಸುತ್ತಿರುವ ನಮ್ಮ ದೇಶವಾಸಿಗಳ ರೋಗರಕ್ಷಣಾ ವ್ಯವಸ್ಥೆಯು ಕೊರೊನಾವನ್ನು ಎದುರಿಸುವಲ್ಲಿ ಅದೆಷ್ಟು ಯಶಸ್ವಿಯಾದೀತು ಎನ್ನುವುದನ್ನು ಕಾದುನೋಡಬೇಕಷ್ಟೇ. ಆದರೆ ನಮ್ಮಲ್ಲಿ ಶೇ.40ರಷ್ಟು ಜನರಲ್ಲಿ ಕುಪೋಷಣೆಯಿರುವುದರಿಂದ ಕೊರೊನಾ ವಿರುದ್ಧದ ಹೋರಾಟದ ಮೇಲೆ ಹೇಗೆ ಪರಿಣಾಮವುಂಟಾಗಬಹುದೆನ್ನುವ ಪ್ರಶ್ನೆಯೂ ಏಳುತ್ತದೆ.

ಕೊರೊನಾ ಸೋಂಕು ವ್ಯಾಪಕವಾಗುತ್ತಿದ್ದಂತೆ ವೈದ್ಯರಿಗೂ, ವೈದ್ಯಕೀಯ ಸಿಬಂದಿಗೂ ಅದು ಹರಡುವ ಎಲ್ಲಾ ಸಾಧ್ಯತೆಗಳೂ ಇದ್ದು, ಆರೋಗ್ಯ ಸೇವೆಗಳನ್ನೇ ಸ್ತಬ್ಧಗೊಳಿಸುವ ಅಪಾಯವಿದೆ. ನಮ್ಮ ದೇಶದಲ್ಲಿ ಶೇ. 70ಕ್ಕೂ ಹೆಚ್ಚು ಹೊರ ರೋಗಿ ಹಾಗೂ ಒಳರೋಗಿ ಆರೋಗ್ಯ ಸೇವೆಗಳು ಖಾಸಗಿ ವಲಯದಲ್ಲೇ ಇವೆಯಲ್ಲದೆ, ನಗರ ಪ್ರದೇಶಗಳಲ್ಲೇ ಕೇಂದ್ರೀಕೃತವಾಗಿವೆ. ಹಾಗಿರುವಾಗ ಕೊರೊನಾ ಸೋಂಕಿನ ಚಿಕಿತ್ಸೆಯ ಬಗ್ಗೆ ಜನರಿಗೆ ಈಗಿಂದೀಗಲೇ ಸ್ಪಷ್ಟವಾದ ಮಾಹಿತಿಯನ್ನು ನೀಡದಿದ್ದರೆ, ವೈದ್ಯಕೀಯ ವಲಯವೂ ಈ ಬಗ್ಗೆ ಸ್ಪಷ್ಟತೆಯನ್ನು ಹೊಂದಿಲ್ಲದಿದ್ದರೆ, ಇಡೀ ಆರೋಗ್ಯ ವ್ಯವಸ್ಥೆಯೇ ಸಂಪೂರ್ಣವಾಗಿ ಕುಸಿದು ಬೀಳುವ ಅಪಾಯವಿದೆ. ಕೊರೊನಾ ಸೋಂಕಿತರು ಆತಂಕದಿಂದ ಚಿಕಿತ್ಸೆಗೆಂದು ಎಲ್ಲೆಡೆಯೂ ಹೋಗತೊಡಗಿದರೆ ಚಿಕಿತ್ಸೆ ನೀಡುವ ವೈದ್ಯರಿಗೂ, ಇತರ ವೈದ್ಯಕೀಯ ಸಿಬಂದಿಗೂ ಕೊರೊನಾ ಸೋಂಕುವಂತಾಗಿ, ತಮ್ಮಿಂದ ಇತರರಿಗೆ ಸೋಂಕು ಹರಡದಂತಿರಲು ಅವರೆಲ್ಲರೂ ಮನೆಯಲ್ಲೇ ಉಳಿಯಬೇಕಾಗುತ್ತದೆ, ಇದರಿಂದಾಗಿ ಚಿಕಿತ್ಸಾಲಯಗಳನ್ನೂ, ಆಸ್ಪತ್ರೆಗಳನ್ನೂ ಮುಚ್ಚಬೇಕಾದ ಸ್ಥಿತಿಯುಂಟಾಗಬಹುದು. ಈಗಾಗಲೇ ತಿರುವನಂತಪುರದ ಅತಿ ಪ್ರತಿಷ್ಠಿತ ಹೃದ್ರೋಗ ಹಾಗೂ ನರರೋಗ ಆಸ್ಪತ್ರೆಯಲ್ಲಿ 43 ವೈದ್ಯರು ಸೋಂಕಿತರೊಬ್ಬರ ಸಂಪರ್ಕಕ್ಕೆ ಬಂದ ಕಾರಣಕ್ಕೆ ಆಸ್ಪತ್ರೆಯ ಕಾರ್ಯವು ಸ್ತಬ್ಧಗೊಳ್ಳುವಂತಾಗಿದೆ; ಮೂತ್ರಪಿಂಡಗಳ ಕಾಯಿಲೆಗಳಿಗೆ ಸಂಬಂಧಿಸಿದ  ಬೆಂಗಳೂರಿನ ಆಸ್ಪತ್ರೆಯಲ್ಲೂ ಮೂವರು ವೈದ್ಯರು ಇದೇ ಕಾರಣಕ್ಕೆ ಮನೆಯಲ್ಲೇ ಇರುವಂತಾಗಿದೆ. ಆದ್ದರಿಂದ ಸೋಂಕು ವ್ಯಾಪಕವಾಗಿ ಹರಡತೊಡಗಿದಾಗ ಹೆಚ್ಚಿನ ವೈದ್ಯರನ್ನೂ, ಸಿಬಂದಿಯನ್ನೂ ಸೋಂಕಿನಿಂದ ದೂರವಿಟ್ಟು ಉಳಿದೆಲ್ಲಾ ಆರೋಗ್ಯ ಸೇವೆಗಳು ಅಬಾಧಿತವಾಗಿರುವಂತೆ ನೋಡಿಕೊಳ್ಳುವುದು ಅತ್ಯಗತ್ಯವಾಗಿದ್ದು, ಅದರ ಜವಾಬ್ದಾರಿಯೆಲ್ಲವೂ ಜನರ ಮೇಲೆಯೇ ಇದೆ.

ಆದ್ದರಿಂದ ಈ ಕೆಳಗಿನ ಅಂಶಗಳು ಸ್ಪಷ್ಟವಾಗುತ್ತವೆ:

1. ಹೊಸ ಕೊರೊನಾ ಸೋಂಕು ಭಾರತಕ್ಕೆ ಬಂದಾಗಿದೆ, ಹರಡುತ್ತಿದೆ, ತಡೆಯುವುದಕ್ಕೆ ಎಷ್ಟೇ ಪ್ರಯತ್ನಿಸಿದರೂ ಮುಂದಿನ ವಾರಗಳಲ್ಲಿ ಇನ್ನಷ್ಟು ಹರಡಲಿದೆ.
2. ಸೋಂಕಿತರಲ್ಲಿ ಬಹುತೇಕರು ಯಾವ ಚಿಕಿತ್ಸೆಯೂ ಇಲ್ಲದೆ, ಯಾವ ಸಮಸ್ಯೆಗಳೂ ಆಗದೆ ವಾರದೊಳಗೆ ಗುಣಮುಖರಾಗುತ್ತಾರೆ. ಅಂಥವರು ತಮ್ಮ ಮನೆಯೊಳಗೇ ಇರಬೇಕು, ಯಾವ ವೈದ್ಯರನ್ನೂ ನೋಡಕೂಡದು.
3. 60 ವರ್ಷಗಳಿಗೆ ಮೇಲ್ಪಟ್ಟ ಹಿರಿವಯಸ್ಕರಲ್ಲಿ ಕೊರೊನಾ ಸೋಂಕಿನಿಂದ ಸಮಸ್ಯೆಗಳೂ, ಸಾವುಗಳೂ ಆಗುವ ಸಾಧ್ಯತೆಗಳು ಹೆಚ್ಚು. ಅವರಲ್ಲೂ ಬಹಳಷ್ಟು ಜನರು ಗುಣಮುಖರಾಗುತ್ತಾರಾದರೂ, ಶೇ. 15ರಷ್ಟು ವೃದ್ಧರು ಸಾವನ್ನಪ್ಪಬಹುದು.
4. ಸೋಂಕು ಹರಡದಂತೆ ತಡೆಯುವಲ್ಲಿ ಸೋಂಕಿತರ ಪಾತ್ರವೇ ಅತ್ಯಂತ ನಿರ್ಣಾಯಕವಾಗಿದ್ದು, ಪ್ರತಿಯೋರ್ವ ಸೋಂಕಿತರೂ ಇದನ್ನು ತಿಳಿದು ಜವಾಬ್ದಾರಿಯಿಂದ ವರ್ತಿಸಲೇಬೇಕಾಗಿದೆ.
5. ತೀವ್ರ ಸಮಸ್ಯೆಗೀಡಾಗಲಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಬರತೊಡಗಿದರೆ ಅವರಿಗೆ ಸೂಕ್ತ ಚಿಕಿತ್ಸೆ ನೀಡಲು ತಾತ್ಕಾಲಿಕವಾದ ವ್ಯವಸ್ಥೆಗಳನ್ನು ಮಾಡುವುದು ಅಪೇಕ್ಷಣೀಯ. ಹಾಗೆಯೇ, ಇತರ ವೈದ್ಯಕೀಯ ಸೇವೆಗಳು ಅಬಾಧಿತವಾಗಿರುವಂತೆ ರಕ್ಷಿಸುವುದೂ ಬಹು ಮುಖ್ಯ.

ಇವುಗಳ ಆಧಾರದಲ್ಲಿ, ಮುಂದಿನ ಹಂತದಲ್ಲಿ ಕೊರೊನಾ ಬಹಳಷ್ಟು ಹರಡತೊಡಗಿದರೆ ಎದುರಾಗಬಹುದಾದ ಸವಾಲುಗಳನ್ನು ನಿಭಾಯಿಸಲು ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಲು ಈಗಲೇ ಕಾರ್ಯಪ್ರವೃತ್ತರಾದರೆ ಒಳ್ಳೆಯದು. ಹಾಗೆ ಮಾಡುವಲ್ಲಿ ಚೀನಾ, ಇಟಲಿ, ಇರಾನ್, ದಕ್ಷಿಣ ಕೊರಿಯಾ, ಯೂರೋಪಿನ ಅನ್ಯ ದೇಶಗಳಲ್ಲಿ ಕೈಗೊಂಡ ಕ್ರಮಗಳ ಸಾಫಲ್ಯ-ವೈಫಲ್ಯಗಳು ನಮಗೆ ಪಾಠವಾಗಬೇಕು. ಕೊರೊನಾ ಸೋಂಕು ಸಾಂಕ್ರಾಮಿಕವಾಗಿ, ವ್ಯಾಪಕವಾಗಿ ಹರಡಿ, ಸಾವಿರಗಟ್ಟಲೆ ಜನರನ್ನು ತಗಲಿದಾಗ, ಸಮಸ್ಯೆಗೊಳಗಾಗಲಿರುವ ಹಿರಿಯರನ್ನು ಬದುಕುಳಿಸುವುದೇ ಈ ಪ್ರಯತ್ನಗಳ ಆದ್ಯತೆಯಾಗಿರಬೇಕು. ಅಮೆರಿಕಾ, ಇಂಗ್ಲೆಂಡ್, ಮತ್ತು ನಮ್ಮ ಕೇರಳ ರಾಜ್ಯಗಳಲ್ಲಿ ಈಗಾಗಲೇ ರೂಪಿಸಲಾಗಿರುವ ಸ್ಪಷ್ಟ ಮಾರ್ಗದರ್ಶಿಗಳು ಈ ನಿಟ್ಟಿನಲ್ಲಿ ಶ್ಲಾಘನೀಯವಾಗಿವೆ.

ಕೊರೊನಾ ಸೋಂಕಿತರು ಮನೆಯೊಳಗೇ ಇರಬೇಕು, ಹೊರಗೆಲ್ಲೂ ಹೋಗಕೂಡದು

ಕೊರೊನಾ ಸೋಂಕು ಸಮುದಾಯ ಮಟ್ಟದಲ್ಲಿ ಹರಡಲಾರಂಭಿಸಿದಾಗ ರೋಗಲಕ್ಷಣಗಳಿಂದಲೇ ಅದನ್ನು ಗುರುತಿಸಿದರೆ ಸಾಕಾಗುತ್ತದೆ. ಮಾತ್ರವಲ್ಲ, ದೇಶದ 30% ಜನರಿಗೆ ಸೋಂಕು ತಗಲಿದರೆ ಒಂದೊಂದು ಪರೀಕ್ಷೆಗೆ 5000 ರೂಪಾಯಿಗಳಂತೆ ಎಲ್ಲರಿಗೂ ಪರೀಕ್ಷೆ ಮಾಡಿದರೆ ಕನಿಷ್ಠ 2 ಲಕ್ಷ ಕೋಟಿ ಬೇಕು! ಆದ್ದರಿಂದ ಎಲ್ಲಾ ಸೋಂಕಿತರಿಗೆ ಕೊರೊನಾ ಪರೀಕ್ಷೆ ಮಾಡುವ ಅಗತ್ಯವಿಲ್ಲ; ಪರೀಕ್ಷೆ ಮಾಡುವಂತೆ ಒತ್ತಾಯಿಸುವುದಾಗಲೀ, ಪರೀಕ್ಷೆಗಳನ್ನು ಹುಡುಕಿಕೊಂಡು ಹೋಗುವುದಾಗಲೀ ಮಾಡಲೇ ಬಾರದು.

ಬಹುತೇಕ (85%ಕ್ಕೂ ಹೆಚ್ಚು) ಸೋಂಕಿತರು ಯಾವುದೇ ಸಮಸ್ಯೆಗಳಾಗದೆ, ಯಾವ ಚಿಕಿತ್ಸೆಯ ಅಗತ್ಯವೂ ಇಲ್ಲದೆ ಗುಣಮುಖರಾಗುವುದರಿಂದ ಅಂಥ ಸೋಂಕಿತರು ಮನೆಯೊಳಗೇ ಉಳಿದುಕೊಳ್ಳಬೇಕು, ತಮ್ಮ ವೈದ್ಯರನ್ನು ಅಥವಾ ಆರೋಗ್ಯ ಇಲಾಖೆಯ ಸಹಾಯ ವಿಭಾಗವನ್ನು ದೂರವಾಣಿಯಲ್ಲಷ್ಟೇ ಸಂಪರ್ಕಿಸಬೇಕು, ಇತರರಿಗೆ ಸೋಂಕು ಹರಡದಂತೆ ನೆರವಾಗಬೇಕು.

ಚಿಕಿತ್ಸೆಯ ಅಗತ್ಯವಿಲ್ಲ ಎಂದಾಗ ಜನರು ಆತಂಕಗೊಂಡು ಆಧುನಿಕ ವೈದ್ಯರಿಂದ ಹಿಡಿದು ಆಯುರ್ವೇದ, ಹೋಮಿಯೋಪತಿ ಇತ್ಯಾದಿ ಚಿಕಿತ್ಸಕರೆಲ್ಲರ ಬಳಿಗೆ ಚಿಕಿತ್ಸೆಗಾಗಿ ಹೋಗುವ ಸಾಧ್ಯತೆಗಳಿರುತ್ತವೆ. ಕೊರೊನಾ ಸೋಂಕು ಒಂದು ವಾರದ ಕಾಲ ರೋಗಲಕ್ಷಣಗಳನ್ನುಂಟು ಮಾಡುವುದರಿಂದ ಅಷ್ಟು ದಿನ ಕಾಯುವ ತಾಳ್ಮೆಯಿಲ್ಲದೆ ಅಲ್ಲಿಲ್ಲಿ ಚಿಕಿತ್ಸೆಗೆ ಹೊರಹೋಗುವುದು, ಒಬ್ಬರು ಚಿಕಿತ್ಸಕರಿಂದ ಇನ್ನೊಬ್ಬರ ಬಳಿಗೆ ಹೋಗುವುದು, ಆಸ್ಪತ್ರೆಗಳಲ್ಲಿ ಸಾಲುಗಟ್ಟುವುದು ಇತ್ಯಾದಿಗಳಾಗುವ ಸಾಧ್ಯತೆಗಳಿದ್ದೇ ಇವೆ. ಜನರು ಆತಂಕಕ್ಕೊಳಗಾಗದೆ, ಧೈರ್ಯದಿಂದ ಮನೆಯೊಳಗೇ ಇರಬೇಕು, ಯಾವ ಚಿಕಿತ್ಸೆಗೂ ಯಾರ ಬಳಿಯೂ ಹೋಗುವ ಅಗತ್ಯವಿಲ್ಲ, ಹೋಗಕೂಡದು. ಕೊರೊನಾಕ್ಕೆ ಮದ್ದು ಎಂದೆಲ್ಲ ಸುಳ್ಳು ಹೇಳಿ ಈ ಸಂದರ್ಭದಲ್ಲೂ ಹಣ ದೋಚಲು ಯತ್ನಿಸುತ್ತಿರುವವರ ಬಳಿ ಹೋಗುವ ಅಗತ್ಯವೇ ಇಲ್ಲ. ಈ ವಿಷಯಗಳನ್ನು ಎಲ್ಲಾ ಮಾಧ್ಯಮಗಳು ಸ್ಪಷ್ಟವಾಗಿ ಜನರಿಗೆ ತಿಳಿಸಬೇಕು, ಧೈರ್ಯ ತುಂಬಬೇಕು.

ಮನೆಯೊಳಗೇ ಉಳಿದ ಕೊರೊನಾ ಸೋಂಕಿತರಿಗೆ ಸಮಸ್ಯೆಗಳಾದರೆ ಸಹಾಯವಾಣೀಯನ್ನು ಸಂಪರ್ಕಿಸಬೇಕು

ಕೊರೊನಾ ಪೀಡಿತರಲ್ಲಿ ಸಮಸ್ಯೆಗಳಾಗುವುದಿದ್ದರೆ ಸೋಂಕಿನ ಲಕ್ಷಣಗಳು ಆರಂಭಗೊಂಡ ಆರೇಳು ದಿನಗಳಲ್ಲಿ ಆಗುವುದರಿಂದ, ಸೋಂಕಿನಿಂದ ಮನೆಯಲ್ಲೇ ಉಳಿದಿರುವ ಯಾರಿಗೇ ಆಗಲಿ, ಜ್ವರ, ಕೆಮ್ಮು ವಿಪರೀತವಾಗಿದ್ದರೆ, ಉಸಿರಾಟಕ್ಕೆ ಸಮಸ್ಯೆಯಾದರೆ ಕೂಡಲೇ ಆರೋಗ್ಯ ಸಹಾಯವಾಣಿಗೆ ಅಥವಾ ತಮ್ಮ ವೈದ್ಯರಿಗೆ ಕರೆ ಮಾಡುವಂತಾಗಬೇಕು. ಹಾಗೆ ಕರೆ ಮಾಡಿದವರಲ್ಲಿ ಗಂಭೀರ ಸಮಸ್ಯೆಗಳಿದ್ದವರು ಗುರುತಿಸಲ್ಪಟ್ಟರೆ ಅಂಥವರನ್ನಷ್ಟೇ ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ. ಹೀಗೆ ಗಂಭೀರ ಸಮಸ್ಯೆಗಳಾಗಿರುವವರನ್ನು ದೂರವಾಣಿ ಅಥವಾ ವಿಡಿಯೋ ಕರೆಗಳಲ್ಲೇ ಗುರುತಿಸುವುದಕ್ಕೆ ಆಧುನಿಕ ವೈದ್ಯ ವಿಜ್ಞಾನದಲ್ಲಿ ತರಬೇತಾದ ವೈದ್ಯರಷ್ಟೇ ಸಮರ್ಥರಿರುತ್ತಾರೆ; ಆಯುರ್ವೇದ, ಹೋಮಿಯೋಪತಿ ಮುಂತಾದ ಬದಲಿ ಚಿಕಿತ್ಸಕರಿಗಾಗಲೀ, ನಕಲಿ ಚಿಕಿತ್ಸಕರಿಗಾಗಲೀ ತುರ್ತು ಚಿಕಿತ್ಸೆ, ಗಂಭೀರ ಸಮಸ್ಯೆಗಳ ಬಗ್ಗೆ ಯಾವುದೇ ತರಬೇತಿಯಾಗಲೀ, ಅನುಭವವಾಗಲೀ ಇಲ್ಲದೆ ಇರುವುದರಿಂದ ಅಂಥವರನ್ನು ನೆಚ್ಚಿಕೊಂಡರೆ ಸಮಸ್ಯೆಯಾಗಬಹುದು.

ಮನೆಯಲ್ಲೇ ಉಳಿಯಲೇಬೇಕಾದ ಕೊರೊನಾ ಸೋಂಕಿತರು ಸಮಸ್ಯೆಗಳಾದರೆ ಆರೋಗ್ಯ ಸೇವೆಗಳನ್ನು ಹೀಗೆ ವಿಡಿಯೋ ಮೂಲಕ ಸಂಪರ್ಕಿಸುವಂಥ ವ್ಯವಸ್ಥೆಗಳನ್ನು ಅಮೆರಿಕಾ, ಇಂಗ್ಲೆಂಡ್ ಗಳಲ್ಲಿ ಮಾಡಲಾಗಿದೆ. ನಮ್ಮಲ್ಲಿಯೂ ಇಂಥ ಕೇಂದ್ರೀಕೃತ ವ್ಯವಸ್ಥೆಯನ್ನು ಮಾಡಿ, ಅದನ್ನು ನಿಭಾಯಿಸಲು ವೈದ್ಯರ ತಂಡವನ್ನು ಸಿದ್ಧಗೊಳಿಸುವುದು ಅಪೇಕ್ಷಣೀಯ. ಭಾರತೀಯ ವೈದ್ಯಕೀಯ ಸಂಘ ಮತ್ತಿತರ ವೈದ್ಯಕೀಯ ಸಂಘಟನೆಗಳು ಈ ಕೂಡಲೇ ಸ್ಥಳೀಯ ಮಟ್ಟದಲ್ಲಿ ಇಂಥ ವ್ಯವಸ್ಥೆಯನ್ನು ಸ್ಥಾಪಿಸಲು ಶ್ರಮಿಸಬಹುದು. ಖಾಸಗಿ ವೃತ್ತಿಯಲ್ಲಿರುವ ಆಧುನಿಕ ವೈದ್ಯ ವಿಜ್ಞಾನದ ತಜ್ಞರು ಕೂಡ ತಮ್ಮ ಚಿಕಿತ್ಸಾರ್ಥಿಗಳಿಗೂ ಹೀಗೆ ವಿಡಿಯೋ ಕರೆಗಳ (ವಾಟ್ಸಾಪ್, ಗೂಗಲ್ ಡುವೋ) ಮೂಲಕ ಸಂಪರ್ಕಿಸಲು ವ್ಯವಸ್ಥೆ ಮಾಡಿಕೊಳ್ಳುವುದೊಳ್ಳೆಯದು. ಜನರೂ ಕೂಡ, ಈ ವಾಟ್ಸಪ್, ಗೂಗಲ್ ಡುವೋಗಳಲ್ಲಿ ವಿಡಿಯೋ ಕರೆಗಳನ್ನು ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳುವುದೊಳ್ಳೆಯದು.

ಸೋಂಕಿತರು ಮನೆಯಲ್ಲೇ ಉಳಿಯುವಾಗ ತಮ್ಮ ಬಟ್ಟೆ, ತಟ್ಟೆಗಳನ್ನು ಪ್ರತ್ಯೇಕವಾಗಿಟ್ಟು, ಮನೆಮಂದಿಯ ಸಂಪರ್ಕದಿಂದ ಆದಷ್ಟು ದೂರವನ್ನು ಕಾಯ್ದುಕೊಳ್ಳಬೇಕು, ಮತ್ತು ಕೋಣೆಯನ್ನೂ, ಬಟ್ಟೆ-ತಟ್ಟೆಗಳನ್ನೂ ಮಾರ್ಜಕದಿಂದ, ಬಿಸಿನೀರಿನಿಂದ ತೊಳೆಯಬೇಕು. ಮನೆಯು ಸಣ್ಣದಾಗಿದ್ದು, ಹಲವರು ಉಳಿಯುವಂತಿದ್ದರೆ ಮನೆಮಂದಿಯನ್ನು ನೆಂಟರಿಷ್ಟರ ಮನೆಗೆ ಕಳುಹಿಸುವಂಥ ಉಪಾಯಗಳನ್ನು ಮಾಡಬಹುದು.

ಸಮಸ್ಯೆಗಳಿಗೀಡಾದ ಕೊರೊನಾ ಸೋಂಕಿತರಿಗೆ ಪ್ರತ್ಯೇಕ ಆಸ್ಪತ್ರೆಗಳು ಬೇಕು

ಸಮಸ್ಯೆಗೊಳಗಾದ ಕೊರೊನಾ ಪೀಡಿತರು ದಾಖಲಾಗುವುದಕ್ಕೆ ಪ್ರತ್ಯೇಕ ಆಸ್ಪತ್ರೆಗಳನ್ನೇ ಸಿದ್ಧಪಡಿಸುವುದು ಅಪೇಕ್ಷಣೀಯ. ಈಗಿರುವ ಎಲ್ಲಾ ಆಸ್ಪತ್ರೆಗಳಲ್ಲಿ ಕೆಲವು ಕೊಠಡಿಗಳನ್ನು, ಅಥವಾ ಒಂದು ಮಹಡಿಯನ್ನು ಅಥವಾ ಒಂದು ವಿಭಾಗವನ್ನು ಕಾಯ್ದಿರಿಸುವುದರಿಂದ ಅಲ್ಲಿರುವ ವೈದ್ಯಕೀಯ ಸಿಬಂದಿಗೂ, ಇತರರಿಗೂ ಸೋಂಕು ಹರಡುವ ಸಾಧ್ಯತೆಗಳಿರುವುದರಿಂದಲೂ, ಹಾಗೆ ಸೋಂಕು ತಗಲಿದವರೆಲ್ಲರೂ ಇತರರಿಗೆ ಹರಡದಂತೆ ಮನೆಗಳಲ್ಲೇ ಕುಳಿತುಕೊಳ್ಳಬೇಕಾಗುವುದರಿಂದಲೂ, ಇತರೆಲ್ಲಾ ರೋಗಿಗಳ ಚಿಕಿತ್ಸೆಗಳನ್ನೂ, ಹೆರಿಗೆಗಳು ಹಾಗೂ ತುರ್ತು ಚಿಕಿತ್ಸೆಗಳನ್ನೂ ನಿರಾತಂಕವಾಗಿ ನಡೆಸಬೇಕಾಗಿರುವುದರಿಂದಲೂ ಕೊರೊನಾ ಪೀಡಿತರ ಸಮಸ್ಯೆಗಳಿಗೆ ಒಳರೋಗಿ ಚಿಕಿತ್ಸೆಗಾಗಿ ಪ್ರತ್ಯೇಕವಾದ, ತಾತ್ಕಾಲಿಕ ಆಸ್ಪತ್ರೆಗಳನ್ನೇ ಸಿದ್ಧಪಡಿಸುವುದು ಅಪೇಕ್ಷಣೀಯ. ಅದಕ್ಕಾಗಿ ಈಗಿರುವ ಆಸ್ಪತ್ರೆಗಳಲ್ಲಿ ಕೆಲವನ್ನು ಸಂಪೂರ್ಣವಾಗಿ ಕೊರೊನಾ ಪೀಡಿತರಿಗೆಂದೇ ಮೀಸಲಿರಿಸಬಹುದು, ಅಥವಾ ತಾತ್ಕಾಲಿಕವಾಗಿ ಶಾಲೆ, ಕಾಲೇಜು, ಬಳಕೆಯಲ್ಲಿಲ್ಲದ ಕಟ್ಟಡಗಳಲ್ಲಿ ಅವನ್ನು ತೆರೆಯಬಹುದು; ಮೂರ್ನಾಲ್ಕು ತಿಂಗಳಲ್ಲಿ ಕೊರೊನಾ ಬಾಧೆಯು ಮರೆಯಾದಾಗ ಅವನ್ನು ಮುಚ್ಚಬಹುದು.(ಚೀನಾದಲ್ಲಿ ಮಾಡಿದಂತೆ)

ಅಂಥ ಆಸ್ಪತ್ರೆಗಳಿಗೆ ಅಗತ್ಯವಿರುವ ಎಲ್ಲಾ ಆಧುನಿಕ ಉಪಕರಣಗಳನ್ನು ಸಿದ್ಧಪಡಿಸುವುದು ಹಾಗೂ ಕೃತಕ ಉಸಿರಾಟದಂತಹ ಉನ್ನತ ಚಿಕಿತ್ಸೆ ನೀಡುವುದಕ್ಕೆ ವೈದ್ಯರನ್ನೂ, ವೈದ್ಯಕೀಯ ಸಿಬ್ಬಂದಿಯನ್ನೂ ಸಿದ್ಧಪಡಿಸುವುದು ಅತ್ಯಗತ್ಯ. ಈಗಲೇ ಆ ಬಗ್ಗೆ ಗಮನ ಹರಿಸಿ ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿ ತರಬೇತಿ ನೀಡುವುದೊಳ್ಳೆಯದು.

ಹೀಗೆ ತಾತ್ಕಾಲಿಕ ಆಸ್ಪತ್ರೆಗಳನ್ನು ನಿರ್ಮಿಸುವುದಕ್ಕೆ ಕಟ್ಟಡಗಳನ್ನೂ, ಉಪಕರಣಗಳನ್ನೂ ನೀಡುವುದಕ್ಕೆ ಖಾಸಗಿ ಸಂಸ್ಥೆಗಳು, ದಾನಿಗಳು, ಧಾರ್ಮಿಕ ಸಂಸ್ಥೆಗಳು ಮುಕ್ತವಾಗಿ ನೆರವಾಗಬೇಕು.

ಕೊರೊನಾ ಸೋಂಕಿತರನ್ನು ಸಾಗಿಸುವುದಕ್ಕೆ ಪ್ರತ್ಯೇಕವಾದ ವಾಹನ ವ್ಯವಸ್ಥೆ ಇರಬೇಕು

ಈ ಆಸ್ಪತ್ರೆಗಳಿಗೆ ಸೋಂಕಿತರನ್ನು ಸಾಗಿಸುವುದಕ್ಕೆ ಪ್ರತ್ಯೇಕವಾದ ವಾಹನ/ಆಂಬ್ಯುಲೆನ್ಸ್ ವ್ಯವಸ್ಥೆ ಇರುವುದು ಒಳ್ಳೆಯದು. ಸೋಂಕಿತರು ಸಾರ್ವಜನಿಕ ಸಾರಿಗೆಯನ್ನು ಬಳಸಿದರೆ, ಅಥವಾ ಎಲ್ಲರಿಗೂ ಬಳಕೆಯಾಗುವ ಆಂಬ್ಯುಲೆನ್ಸ್  ಬಳಸಿದರೆ ಸೋಂಕು ಹರಡುವುದಕ್ಕೆ ಅವಕಾಶವಾಗಬಹುದು. (ಯಾವುದೇ ಸಮಸ್ಯೆಯಿಲ್ಲದ ಸೋಂಕಿತರು ಮನೆಯಲ್ಲೇ ಇದ್ದು ಹೊರಹೋಗಬಾರದು ಎಂದು ಹೇಳುವುದು ಕೂಡ ಇದೇ ಕಾರಣಕ್ಕೆ) ಇಂಥ ಪ್ರತ್ಯೇಕ ಆಂಬ್ಯುಲೆನ್ಸ್ ಸೇವೆಗಳನ್ನು ಸಿದ್ಧಪಡಿಸುವಲ್ಲಿಯೂ ಖಾಸಗಿ ಸಂಸ್ಥೆಗಳು/ದಾನಿಗಳು ನೆರವಾಗಬಹುದು.

ಹಿರಿಯ ಜೀವಗಳನ್ನು ಕೊರೊನಾ ಸೋಂಕಿನಿಂದ ರಕ್ಷಿಸಬೇಕು

ಅರುವತ್ತಕ್ಕೆ ಮೇಲ್ಪಟ್ಟ ಹಿರಿಯರು, ಸಕ್ಕರೆ ಕಾಯಿಲೆ, ಶ್ವಾಸಾಂಗ, ಹೃದಯ, ಮೂತ್ರಪಿಂಡಗಳು, ನರಮಂಡಲಗಳ ಕಾಯಿಲೆಯುಳ್ಳವರು, ಕ್ಯಾನ್ಸರ್ ಪೀಡಿತರು ಕೊರೊನಾ ಸೋಂಕಿನಿಂದ ತೀವ್ರ ಸಮಸ್ಯೆಗಳಿಗೆ ಒಳಗಾಗುವ ಸಾಧ್ಯತೆಗಳು ಹೆಚ್ಚಿರುವುದರಿಂದ ಅಂಥವರನ್ನು ಸೋಂಕಿನಿಂದ ರಕ್ಷಿಸಲು ಕ್ರಮ ಕೈಗೊಂಡರೆ ಒಳ್ಳೆಯದು. ಕೊರೊನಾ ಸೋಂಕಿತರನ್ನು ಮನೆಯಲ್ಲೇ ಉಳಿಯಲು ಹೇಳುವಾಗ, ನಮ್ಮಲ್ಲಿ ಮನೆಗಳು ಸಣ್ಣದಿರುವಾಗ, ಅಲ್ಲಿರುವ ಹಿರಿಯರು ಮತ್ತು ಅದಾಗಲೇ ರೊಗವುಳ್ಳವರು ಸುಲಭದಲ್ಲಿ ಸೋಂಕಿಗೆ ಸಿಲುಕಿ ಇನ್ನಷ್ಟು ಕಷ್ಟಕ್ಕೀಡಾಗುವ ಸಾಧ್ಯತೆಗಳಿವೆ. ಆದ್ದರಿಂದ ಇಂಥವರನ್ನು  ಮೊದಲೇ ಪ್ರತ್ಯೇಕವಾದ ಸುರಕ್ಷಿತವಾದ ವೃದ್ಧಾಲಯಗಳಲ್ಲಿ, ಅಥವಾ ತಾತ್ಕಾಲಿಕ ಆಶ್ರಯಗಳಲ್ಲಿ ನೆಲೆಗೊಳಿಸುವುದೊಳ್ಳೆಯದು. ಹಾಗೆ ಮಾಡುವುದರಿಂದ ಒಂದೇ ಸಲಕ್ಕೆ ಹಲವು ಹಿರಿಯರು ಕೊರೊನಾ ಸಮಸ್ಯೆಗೀಡಾಗಿ ಆಸ್ಪತ್ರೆಗಳಿಗೆ ದಾಖಲಾಗಲು ದೊಡ್ಡ ಸಂಖ್ಯೆಯಲ್ಲಿ ಬರಬೇಕಾಗುವುದನ್ನು ತಪ್ಪಿಸಬಹುದು.

ಒಟ್ಟಿನಲ್ಲಿ, ಈ ಹೊಸ ಕೊರೊನಾ ಸೋಂಕು ಹೆಚ್ಚಿನವರಲ್ಲಿ ಅತಿ ಸೌಮ್ಯವಾದ ಕಾಯಿಲೆಯಾಗಿ ವಾರದೊಳಗೆ ಹೋಗಿಬಿಡುತ್ತದೆ, ಯಾವ ಚಿಕಿತ್ಸೆಯೂ ಅಗತ್ಯವಿಲ್ಲದೆ, ಯಾವ ಪರೀಕ್ಷೆಯೂ ಬೇಕಿಲ್ಲದೆ, ಯಾವ ವೈದ್ಯರನ್ನೂ ಕಾಣಬೇಕಿಲ್ಲದೆ ತನ್ನಿಂತಾನಾಗಿ ವಾಸಿಯಾಗುತ್ತದೆ. ಆದ್ದರಿಂದ ಕೊರೊನಾ ರೋಗ ಲಕ್ಷಣಗಳಿರುವವರು ಎಲ್ಲರೂ ಮನೆಯಿಂದಲೇ ತಮ್ಮ ವೈದ್ಯರನ್ನು ಸಂಪರ್ಕಿಸಿ, ಮನೆಯಿಂದ ಹೊರಗೆ ಕಾಲಿಡದೆ ರೋಗವು ಯಾರಿಗೂ ಹರಡದಂತೆ ಎಚ್ಚರಿಕೆ ವಹಿಸಿದರೆ ಕೊರೊನಾ ಹರಡುವುದನ್ನು ತಡೆಯುವುದು ಕಷ್ಟವಾಗದು. ಜೊತೆಗೆ, ಕೊರೊನಾ ಸೋಂಕಿನಿಂದ ಸಮಸ್ಯೆಗೀಡಬಹುದಾದ ಹಿರಿವಯಸ್ಕರನ್ನು ಪ್ರತ್ಯೇಕವಾಗಿ ರಕ್ಷಿಸಿಡುವ ಮೂಲಕ, ಹಾಗೂ ಒಂದು ವೇಳೆ ಸೋಂಕಿತರಾಗಿ ಸಮಸ್ಯೆಗೀಡಾದರೆ ಅಂಥವರಿಗೆ ಚಿಕಿತ್ಸೆ ನೀಡಲು ಅಗತ್ಯವಾದ ವಿಶೇಷ ಆಸ್ಪತ್ರೆಗಳನ್ನು ಈ ಕೂಡಲೇ ಸ್ಥಾಪಿಸಿ ಸನ್ನದ್ಧವಾಗಿರಿಸುವುದರ ಮೂಲಕ ಕೊರೊನಾದಿಂದಾಗಬಹುದಾದ ಸಾವುಗಳನ್ನೂ ತಡೆಯಬಹುದು. ಇವೆಲ್ಲ ಸಾಧ್ಯವಾಗಬೇಕಿದ್ದರೆ ಜನರಿಗೂ, ಮಾಧ್ಯಮಗಳಿಗೂ, ವೈದ್ಯರಿಗೂ, ರಾಜಕಾರಣಿಗಳಿಗೂ, ಆಡಳಿತದಲ್ಲಿರುವವರಿಗೂ ತಾಳ್ಮೆ, ವೈಜ್ಞಾನಿಕ ಮನೋವೃತ್ತಿ, ವೈಜ್ಞಾನಿಕ ಮಾಹಿತಿ, ವಿಷಯ ಸ್ಪಷ್ಟತೆ, ಧೈರ್ಯ ಎಲ್ಲವೂ ಇರಬೇಕಾಗುತ್ತದೆ.

Be the first to comment

Leave a Reply

Your email address will not be published.


*