ಕೊರೋನ ನಿಭಾವಣೆಯ ವಿಧಾನವು ವೈಜ್ಞಾನಿಕವೂ, ಜನಸ್ನೇಹಿಯೂ ಆಗಿರಲಿ

ಯೂರೋಪ್, ಅಮೆರಿಕಾಗಳನ್ನು ಅನುಸರಿಸಿ, ತಜ್ಞರು ನಿರೀಕ್ಷಿಸಿದ್ದಂತೆಯೇ, ಕೊರೋನಾ ಸೋಂಕು ನಮ್ಮೆಲ್ಲರ ಮನೆ ಬಾಗಿಲಿಗೆ ಬಂದಿದೆ. ರಾಜ್ಯದೊಳಗೂ ಹಲವೆಡೆ ಸಮುದಾಯದೊಳಗೆ ಸೋಂಕಿನ ಹರಡುವಿಕೆಯು ಆರಂಭಗೊಂಡಿದ್ದು, ಇನ್ನು ಐದಾರು ತಿಂಗಳುಗಳಲ್ಲಿ 30-50% ಜನತೆಗೆ ಅದು ಹರಡುವ ಸಾಧ್ಯತೆಗಳಿವೆ.

ಕೊರೋನಾ ಸೋಂಕಿತರನ್ನು ನಿಭಾಯಿಸುವುದಕ್ಕೆ ಸರಳವಾದ ಕಾರ್ಯವಿಧಾನವೊಂದನ್ನು ನಾವು ಏಪ್ರಿಲ್ ಮೂರನೇ ವಾರದಲ್ಲಿಯೇ ಸರಕಾರಕ್ಕೆ ಸಲ್ಲಿಸಿದ್ದೆವು. ಕೊರೋನಾ ಸೋಂಕು ಸುಮಾರು 99% ಜನರಲ್ಲಿ ರೋಗಲಕ್ಷಣಗಳೇ ಇಲ್ಲದೆ ಅಥವಾ ಅತಿ ಸೌಮ್ಯ ರೂಪದ ಲಕ್ಷಣಗಳನ್ನು ಹೊಂದಿ ತಾನಾಗಿ ವಾಸಿಯಾಗುವುದರಿಂದ ಸೋಂಕಿನ ಲಕ್ಷಣಗಳಿರುವ ಎಲ್ಲರನ್ನೂ ಆರಂಭದಲ್ಲಿ ಮನೆಯಲ್ಲೇ ಉಳಿಯಲು ಹೇಳುವುದು; ಅವರನ್ನು ಪರೀಕ್ಷಿಸಿ, ಗಂಭೀರ ಸಮಸ್ಯೆಗಳಾಗಬಲ್ಲವರನ್ನು ಗುರುತಿಸುವುದಕ್ಕೆ ಸಂಚಾರಿ ಘಟಕಗಳನ್ನು ರಚಿಸುವುದು; ಸೋಂಕು ಉಲ್ಬಣಗೊಂಡರೆ,  ಹೆಚ್ಚಿನವರಿಗೆ ಆಮ್ಲಜನಕವನ್ನಷ್ಟೇ ನೀಡಿದರೆ ಚೇತರಿಸಿಕೊಳ್ಳಲು ಸಾಧ್ಯವಾಗುವುದರಿಂದ ಅಂಥವರಿಗೆ ಸ್ಥಳೀಯ ಆರೋಗ್ಯ ಕೇಂದ್ರಗಳಲ್ಲಿ ಆಮ್ಲಜನಕದ ವ್ಯವಸ್ಥೆ ಮಾಡುವುದು; ತೀವ್ರ ರೂಪದ ಸಮಸ್ಯೆಯುಳ್ಳವರನ್ನಷ್ಟೇ ಉನ್ನತ ಸೌಲಭ್ಯಗಳಿರುವ ಆಸ್ಪತ್ರೆಗಳಲ್ಲಿ ದಾಖಲಿಸುವುದು ಎಂಬ ಕಾರ್ಯವಿಧಾನವನ್ನು ಆಗಲೇ ಸೂಚಿಸಿದ್ದೆವು.

ನಮ್ಮ ರಾಜ್ಯ ಸರಕಾರವು ಇದೇ ಮಾದರಿಯ  ಕಾರ್ಯವಿಧಾನವನ್ನು ನಿನ್ನೆ ಪ್ರಕಟಿಸಿರುವುದು ಸ್ವಾಗತಾರ್ಹವಾಗಿದೆ. ರೋಗಲಕ್ಷಣಗಳಿಲ್ಲದವರು ಮತ್ತು ಸೌಮ್ಯ ರೂಪದ ಸೋಂಕುಳ್ಳವರು ದೊಡ್ಡ ಮನೆಗಳನ್ನು ಹೊಂದಿದ್ದರೆ ಅವರವರ ಮನೆಗಳಲ್ಲೇ ಉಳಿಯಲು ಬಿಡುವುದು, ಸಣ್ಣ ಮನೆಗಳಿದ್ದರೆ ಕೊರೋನಾ ಆರೈಕೆ ಕೇಂದ್ರಗಳಿಗೆ (ಸಭಾಂಗಣ, ಕ್ರೀಡಾಂಗಣ ಇತ್ಯಾದಿಗಳಲ್ಲಿ) ವರ್ಗಾಯಿಸುವುದು, ಸಣ್ಣ ಸಮಸ್ಯೆಯುಳ್ಳವರನ್ನು ಆಮ್ಲಜನಕದ ಸೌಲಭ್ಯವುಳ್ಳ ಕೊರೋನಾ ಚಿಕಿತ್ಸಾ ಕೇಂದ್ರಗಳಿಗೂ, ಗಂಭೀರ ಸಮಸ್ಯೆಯುಳ್ಳವರನ್ನು ತೀವ್ರ ನಿಗಾ ಸೌಲಭ್ಯಗಳುಳ್ಳ ಕೊರೋನಾ ಆಸ್ಪತ್ರೆಗಳಿಗೂ ದಾಖಲಿಸುವುದು ಎಂಬ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದು ಅದರಲ್ಲಿ ಹೇಳಲಾಗಿದೆ. ಗರ್ಭಿಣಿಯರನ್ನೂ, 10 ವರ್ಷಕ್ಕೆ ಕೆಳಗಿನ ಮಕ್ಕಳನ್ನೂ ಕೊರೋನಾ ಚಿಕಿತ್ಸಾ ಕೇಂದ್ರಗಳಿಗೆ ದಾಖಲಿಸಲಾಗುವುದು ಎಂದೂ ಹೇಳಲಾಗಿದೆ. ಈ ಕಾರ್ಯವಿಧಾನವನ್ನು ಹೀಗೆಯೇ ಜಾರಿಗೊಳಿಸುವುದರಿಂದ ಅನೇಕ ಸಮಸ್ಯೆಗಳಾಗುವ ಸಾಧ್ಯತೆಗಳಿರುವುದನ್ನು ಈ ಮೂಲಕ ಸರಕಾರದ ಗಮನಕ್ಕೆ ತರುತ್ತಿದ್ದೇವೆ.

ಕೊರೋನಾ ಸೋಂಕು ತಗಲಿದ ಶೇ.90-95ರಷ್ಟು ಜನರಲ್ಲಿ ರೋಗಲಕ್ಷಣಗಳೇ ಇರುವುದಿಲ್ಲ ಎನ್ನುವುದೀಗ ಸ್ಪಷ್ಟವಾಗಿದೆ, ನಮ್ಮ ರಾಜ್ಯದ ಕೊರೋನಾ ಸೋಂಕಿತರಲ್ಲೂ ಇದು ದೃಢಪಟ್ಟಿದೆ. ನಮ್ಮ ನಿಮ್ಮಲ್ಲಿ 90-95% ಮಂದಿಯೂ ಇದೇ ವರ್ಗದೊಳಗೆ ಸೇರುತ್ತೇವೆ! ಮಕ್ಕಳು, 30ಕ್ಕೆ ಕೆಳಗಿನ ಯುವಜನರು, ಯಾವುದೇ ಸಮಸ್ಯೆಗಳಿಲ್ಲದ ಆರೋಗ್ಯವಂತರು ಇದೇ ವರ್ಗದಲ್ಲಿರುತ್ತಾರೆ. ಇವರೆಲ್ಲರೂ ಸೋಂಕು ತಗಲಿರುವುದೂ ಅರಿವಾಗದೆ ತಾವಾಗಿ ಗುಣ ಹೊಂದುವುದರಿಂದ ಯಾರೂ ಆತಂಕಕ್ಕೊಳಗಾಗುವ ಅಗತ್ಯವೇ ಇಲ್ಲ. ಅಂಥವರಿಂದ ಇತರರಿಗೆ ಸೋಂಕು ಹರಡುವ ಸಾಧ್ಯತೆಗಳು ಕೂಡ ಕಡಿಮೆಯೇ ಇರುವುದರಿಂದ ಇತರರು ಕೂಡ ಅವರ ಆತಂಕಿತರಾಗಬೇಕಾಗಿಲ್ಲ. ಅಂಥವರನ್ನು ಗುರುತಿಸುವುದಕ್ಕೂ ಸಾಧ್ಯವಾಗದೆಂದ ಮೇಲೆ ಅವರನ್ನು ಮನೆಯಲ್ಲೇ ಉಳಿಸುವುದು, ಅವರಲ್ಲಿ ಕೆಲವರನ್ನು ಕೊರೋನಾ ಆರೈಕೆ ಕೇಂದ್ರಕ್ಕೆ ಒಯ್ಯುವುದು ಎಂಬ ಸಾಧ್ಯತೆಗಳೇ ಉದ್ಭವಿಸುವುದಿಲ್ಲ.

ಸೋಂಕಿನ ಲಕ್ಷಣಗಳುಂಟಾಗುವವರಲ್ಲೂ ಹೆಚ್ಚಿನವರು ಯಾವುದೇ ಚಿಕಿತ್ಸೆಯ ಅಗತ್ಯವಿಲ್ಲದೆಯೇ 3-4 ದಿನಗಳಲ್ಲಿ ಗುಣಮುಖರಾಗುತ್ತಾರೆ. ಇಂಥವರನ್ನು ಕೇವಲ ರೋಗಲಕ್ಷಣಗಳಿಂದಲೇ ಗುರುತಿಸಬಹುದಾಗಿದ್ದು, ಅವರೆಲ್ಲರಲ್ಲಿ ಕೊರೋನಾ ಪತ್ತೆಯ ಪರೀಕ್ಷೆಗಳನ್ನು ಮಾಡಿಸುವ  ಅಗತ್ಯವಿಲ್ಲ, ಸದ್ಯದಲ್ಲೇ ಅದನ್ನು ಸರಕಾರವೇ ಹೇಳುವ ಸಾಧ್ಯತೆಗಳಿವೆ. ಹಿರಿಯ ವೈರಾಣು ತಜ್ಞರಾದ ಡಾ| ಜೇಕಬ್ ಜಾನ್ ಅವರು ಈಗಾಗಲೇ ಇದನ್ನು ಹೇಳಿದ್ದಾರೆ. ಕೊರೋನಾ ಪತ್ತೆಯ ಪರೀಕ್ಷೆಗಳಾಗಿಲ್ಲವೆಂಬ ಬಗ್ಗೆಯೂ ಯಾರೂ ಚಿಂತಿತರಾಗಬೇಕಾಗಿಲ್ಲ. ಒಂದು ವೇಳೆ ಕೊರೋನಾ ಪತ್ತೆಯ ಪರೀಕ್ಷೆಯನ್ನು ನಡೆಸಿ, ಅದರಲ್ಲಿ ಸೋಂಕು ಪತ್ತೆಯಾದರೂ ಕೂಡ, ನಿರ್ದಿಷ್ಟ ಚಿಕಿತ್ಸೆಯ ಅಗತ್ಯವೇ ಇಲ್ಲದಿರುವುದರಿಂದ, ಈ ಪರೀಕ್ಷೆಯನ್ನು ಮಾಡಿದರೂ, ಮಾಡದಿದ್ದರೂ ಹೆಚ್ಚಿನ ವ್ಯತ್ಯಾಸವೇನೂ ಆಗುವುದಿಲ್ಲ. ಇದುವರೆಗೆ ಸೋಂಕು ಹರಡಿಲ್ಲದ ಪ್ರದೇಶಗಳಲ್ಲಿ ಸೋಂಕು ಪ್ರವೇಶಿಸಿದೆಯೇ ಎಂದು ಗುರುತಿಸುವುದಕ್ಕೆ ಈ ಪರೀಕ್ಷೆಗಳ ಅಗತ್ಯವಿದೆಯೇ ಹೊರತು, ಸೋಂಕಿತ ವ್ಯಕ್ತಿಯ ಆರೈಕೆಗೆ ಅವುಗಳ ಅಗತ್ಯವಿಲ್ಲ. ಆದ್ದರಿಂದ ಕೊರೋನಾ ಸೋಂಕಿನ ಲಕ್ಷಣಗಳಿರುವವರು ಕೊರೋನಾ ಪತ್ತೆಯ ಪರೀಕ್ಷೆಗಾಗಿ ಆತಂಕದಿಂದ ಕಾಯುವುದು, ಅದನ್ನು ಹುಡುಕಿಕೊಂಡು ತಿರುಗುವುದು, ಅದಕ್ಕಾಗಿ ಸಾವಿರಗಟ್ಟಲೆ ವ್ಯಯಿಸುವುದು ಅಗತ್ಯವಿಲ್ಲ; ಆಡಳಿತ ವ್ಯವಸ್ಥೆಯು ತಾನಾಗಿ ಪರೀಕ್ಷೆಗಳನ್ನು ನಡೆಸಲು ಬಂದರೆ ಮಾತ್ರ ಮಾಡಿಸಿಕೊಂಡರೆ ಸಾಕು.

ಕೊರೋನಾ ಸೋಂಕಿನ ಲಕ್ಷಣಗಳಿರುವ ಹೆಚ್ಚಿನವರಲ್ಲಿ ಅದು ತಾನಾಗಿ ವಾಸಿಯಾಗುವುದರಿಂದ, ಸೋಂಕಿನ ಲಕ್ಷಣಗಳು ತೊಡಗಿದವರೆಲ್ಲರೂ ಮೊದಲಲ್ಲಿ ಮನೆಯಲ್ಲೇ ಉಳಿದರೆ ಸಾಕಾಗುತ್ತದೆ. ಸರಕಾರವು ತಾನಾಗಿ ನಡೆಸಿದ ಪರೀಕ್ಷೆಗಳಲ್ಲಿ ಯಾರಲ್ಲಾದರೂ ಸೋಂಕು ಪತ್ತೆಯಾಗಿ, ಅವರಲ್ಲಿ ರೋಗಲಕ್ಷಣಗಳೇ ಇಲ್ಲ ಅಥವಾ ಸೌಮ್ಯವಾದ ಲಕ್ಷಣಗಳಷ್ಟೇ ಇವೆ ಎಂದಾದರೆ, ಅಂಥವರು ಕೂಡ ತಮ್ಮ ಮನೆಗಳಲ್ಲೇ ಉಳಿಯಬಹುದು. ಹೆಚ್ಚಿನ ದೇಶಗಳಲ್ಲಿ ಸೋಂಕಿತರೆಲ್ಲರಿಗೂ ಮನೆಗಳಲ್ಲೇ ಉಳಿದು ಆರೈಕೆ ಮಾಡಿಕೊಳ್ಳುವ, ಮತ್ತು, ಸೋಂಕಿನ ಲಕ್ಷಣಗಳು ಉಲ್ಬಣಗೊಂಡರಷ್ಟೇ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.

ಸರಕಾರವು ಪ್ರಕಟಿಸಿರುವ ಕಾರ್ಯವಿಧಾನದಲ್ಲಿ ಸೌಮ್ಯವಾದ ಲಕ್ಷಣಗಳಿರುವವರು ಮನೆಯಲ್ಲಿರಬೇಕಾದರೆ ಅದು ಪ್ರತ್ಯೇಕ ಕೊಠಡಿಗಳಿರುವಂಥದ್ದಾಗಿರಬೇಕು, ಆರೈಕೆಗೆ ಜನರಿರಬೇಕು, ನೆರೆಹೊರೆಯವರಿಗೆ ಮಾಹಿತಿ ನೀಡಬೇಕು, ಮನೆ ಮುಂದೆ ನೋಟೀಸು ಹಚ್ಚಬೇಕು ಇತ್ಯಾದಿ ಹಲವು ಷರತ್ತುಗಳನ್ನು ವಿಧಿಸಲಾಗಿದೆ. ಇದರಂತೆ, ದೊಡ್ಡ ಮನೆಗಳಿರುವವರಿಗಷ್ಟೇ ಮನೆಯಲ್ಲಿರಲು ಅವಕಾಶ ನೀಡಿ, ಅದಿಲ್ಲದವರನ್ನು ಕೊರೋನಾ ಆರೈಕೆ ಕೇಂದ್ರಗಳಿಗೆ ವರ್ಗಾಯಿಸುವುದು ಸರಿಯಲ್ಲ. ಸಣ್ಣ ಮನೆಗಳಲ್ಲಿ ಹಿರಿಯ ವಯಸ್ಕರು ಅಥವಾ ಕೊರೋನಾ ಸೋಂಕಿನಿಂದ ತೀವ್ರ ಸಮಸ್ಯೆಗೀಡಾಗಬಲ್ಲವರು ಇದ್ದರೆ, ಅಂಥವರಿಗೆ ಪ್ರತ್ಯೇಕವಾಗಿರಲು ನೆರವಾಗಬೇಕು, ಅಗತ್ಯವಾದ ವ್ಯವಸ್ಥೆಗಳನ್ನು ಮಾಡಬೇಕು. ನಮ್ಮಲ್ಲಿ ಶೇ.70ರಷ್ಟು ಮನೆಗಳಲ್ಲಿ ಹಿರಿವಯಸ್ಕರು ಇರುವುದಿಲ್ಲವಾದ್ದರಿಂದ ಇದನ್ನು ವ್ಯವಸ್ಥೆ ಮಾಡುವುದು ಕಷ್ಟವೇನಾಗದು.

ಹಾಗೆಯೇ, ನೆರೆಹೊರೆಯವರಿಗೆ ಮಾಹಿತಿ, ಮನೆ ಮುಂದೆ ನೋಟೀಸು ಇತ್ಯಾದಿಗಳು ವ್ಯಕ್ತಿಯ ಗೋಪ್ಯತೆಯ ಉಲ್ಲಂಘನೆಯಾಗುತ್ತವೆ, ಮಾತ್ರವಲ್ಲ, ಅದರಿಂದ ವೈದ್ಯಕೀಯ ನೀತಿಸಂಹಿತೆಯ ಉಲ್ಲಂಘನೆಯೂ ಆಗುತ್ತದೆ. ಸೋಂಕಿತರನ್ನೂ, ಮನೆಯವರನ್ನೂ ಕಳಂಕಿತರನ್ನಾಗಿಸಿ ಇನ್ನಷ್ಟು ಮಾನಸಿಕ ಹಿಂಸೆಗೆ ಕಾರಣವೂ ಆಗುತ್ತದೆ. ಅಷ್ಟಕ್ಕೂ ಕೊರೋನಾ ಸೋಂಕು 99% ಮಂದಿಯಲ್ಲಿ ಯಾವ ಸಮಸ್ಯೆಯನ್ನೂ ಉಂಟು ಮಾಡದ ಸೋಂಕಾಗಿರುವುದರಿಂದ, ಎಲ್ಲರೂ ಇಂದಲ್ಲ ನಾಳೆ ಅದನ್ನು ಎದುರಿಸಲೇ ಬೇಕಾಗಿರುವುದರಿಂದ, ಹೀಗೆಲ್ಲ ಮಾಡುವುದಕ್ಕೆ ಯಾವ ಅರ್ಥವೂ, ಅಗತ್ಯವೂ ಇರುವುದಿಲ್ಲ.

ಗರ್ಭಿಣಿಯರು ಮತ್ತು ಮಕ್ಕಳಲ್ಲಿ ಕೊರೋನಾ ಸೋಂಕು ಯಾವುದೇ ವಿಶೇಷ ಸಮಸ್ಯೆಯನ್ನು ಉಂಟು ಮಾಡುವುದಿಲ್ಲ; ವಿಶ್ವದೆಲ್ಲೆಡೆಗಳಿಂದ ವರದಿಯಾಗಿರುವ ಅಧ್ಯಯನಗಳಲ್ಲಿ ಇದು ಅತ್ಯಂತ ಸ್ಪಷ್ಟವಾಗಿದೆ. ಹಾಗಿರುವಾಗ ಇವರನ್ನು ಮನೆಯಲ್ಲಿರಲು ಬಿಡದೆ, ಕುಟುಂಬದಿಂದ ಪ್ರತ್ಯೇಕಿಸಿ ಕೊರೋನಾ ಚಿಕಿತ್ಸಾ ಕೇಂದ್ರಗಳಲ್ಲಿ ದಾಖಲಿಸುವುದು ಸರಿಯಲ್ಲ, ಅದರ ಅಗತ್ಯವೂ ಇಲ್ಲ, ಅದರಿಂದ ಇವರಿಗೆ ಸಮಸ್ಯೆಗಳೇ ಆಗಬಹುದಲ್ಲದೆ ಯಾವುದೇ ಪ್ರಯೋಜನಗಳಾಗವು.

ಹಾಗೆಯೇ, 50 ವರ್ಷಕ್ಕಿಂತ ಮೇಲ್ಪಟ್ಟವರನ್ನು, ಇತರ ಗಂಭೀರ ಸಮಸ್ಯೆಗಳುಳ್ಳವರನ್ನು ಕೊರೋನಾ ಸೋಂಕಿನ ಲಕ್ಷಣಗಳು ಆರಂಭವಾದೊಡನೆ ಕೊರೋನಾ ಚಿಕಿತ್ಸಾ ಕೇಂದ್ರಗಳಿಗೆ ಸಾಗಿಸುವ ಅಗತ್ಯವಿಲ್ಲ. ಅವರನ್ನು ಮನೆಗಳಲ್ಲೇ ಇರಿಸಿ ನಿಗಾವಹಿಸಬಹುದು.

ಒಟ್ಟಿನಲ್ಲಿ, ಕ್ರೀಡಾಂಗಣ, ಸಭಾಂಗಣ ಮುಂತಾದೆಡೆ ಕೊರೋನಾ ಆರೈಕೆ ಕೇಂದ್ರಗಳನ್ನು ಸ್ಥಾಪಿಸುವ ಯೋಜನೆಯನ್ನು ಕೈಬಿಡಬೇಕು. ಸೋಂಕಿತರನ್ನು ಅವರ ಕುಟುಂಬದವರಿಂದ ಬೇರ್ಪಡಿಸುವುದರಿಂದ, ಎಲ್ಲೆಲ್ಲಿಯದೋ ಏನೇನೋ ಊಟೋಪಚಾರಗಳನ್ನು ನೀಡುವುದರಿಂದ ಎಲ್ಲರಿಗೂ ಎಲ್ಲಾ ರೀತಿಯ ಸಮಸ್ಯೆಗಳೇ ಆಗಲಿವೆ, ಸರಕಾರಕ್ಕೂ ಅನಗತ್ಯವಾದ ವೆಚ್ಚವಾಗಲಿದೆ. ಜಗತ್ತಿನ ಯಾವ ದೇಶದಲ್ಲೂ ಈ ರೀತಿಯ ವ್ಯವಸ್ಥೆಯನ್ನು ಮಾಡಿದಂತಿಲ್ಲ.

ಆದ್ದರಿಂದ ಗಂಟಲು ನೋವು, ನೆಗಡಿ, ಜ್ವರ, ಕೆಮ್ಮು, ವಾಸನೆ ಅಥವಾ ರುಚಿ ತಿಳಿಯದಾಗುವುದು, ಭೇದಿಯಂತಹಾ ಲಕ್ಷಣಗಳಿದ್ದವರೆಲ್ಲರೂ ತಮ್ಮ ತಮ್ಮ ಮನೆಗಳಲ್ಲೇ ಉಳಿಯಬೇಕೆನ್ನುವ ವ್ಯವಸ್ಥೆಯನ್ನು ಸರಳವಾಗಿ ರೂಪಿಸಿ, ಅದನ್ನು ಈ ಕೂಡಲೇ ಸ್ಪಷ್ಟವಾಗಿ ಜನರಿಗೆ ತಿಳಿಸಬೇಕು. ಅಂಥವರು ಜ್ವರವು ವಿಪರೀತವಾಗಿದ್ದರಷ್ಟೇ ಜ್ವರ ನಿವಾರಕ ಪಾರಸಿಟಮಾಲ್ ಬಳಸಬಹುದು; ಯಾವ ಸಮಸ್ಯೆಯೂ ಇಲ್ಲವಾದರೆ ಯಾವುದೇ ಔಷಧದ ಅಗತ್ಯವಿಲ್ಲದೆಯೇ ಕೊರೋನಾ ಸೋಂಕು ತಾನಾಗಿ ವಾಸಿಯಾಗುತ್ತದೆ. ಯಾವುದೇ ಬದಲಿ ಚಿಕಿತ್ಸೆಯ ಅಗತ್ಯವೂ ಇಲ್ಲ. ಸೌಮ್ಯ ರೂಪದ ಸೋಂಕುಳ್ಳವರು ಸ್ಟೀರಾಯ್ಡ್ ಔಷಧಗಳನ್ನು ಬಳಸಿದರೆ ಸಮಸ್ಯೆಯೇ ಆಗಬಹುದು. ಕೊರೋನಾ ಸೋಂಕಿತರು ನಿತ್ಯದ ಆಹಾರವನ್ನೇ ಸೇವಿಸಬಹುದು, ಜ್ವರವಿದ್ದಾಗ ನೀರಿನ ಸೇವನೆಯನ್ನು ತುಸು ಹೆಚ್ಚಿಸುವುದೊಳ್ಳೆಯದು. ಸಕ್ಕರೆ, ಸಿಹಿ ತಿನಿಸುಗಳ ಸೇವನೆ, ಹಣ್ಣು ಮತ್ತು ಹಣ್ಣಿನ ರಸಗಳ ಅತಿಯಾದ ಸೇವನೆ, ಸಂಸ್ಕರಿತ ಆಹಾರ (ಬ್ರೆಡ್ಡು, ಬಿಸ್ಕತ್ತು, ನೂಡಲ್ಸ್ ಇತ್ಯಾದಿ), ಕರಿದ ತಿನಿಸುಗಳು, ಮದ್ಯಪಾನ, ಧೂಮಪಾನ ಇವೆಲ್ಲವನ್ನು ದೂರವಿರಿಸುವುದರಿಂದ ರೋಗರಕ್ಷಣಾ ವ್ಯವಸ್ಥೆಯು ಸುಯೋಜಿತವಾಗಿ ಕಾರ್ಯನಿರ್ವಹಿಸುವುದಕ್ಕೆ, ಕೊರೋನಾ ಸೋಂಕನ್ನು ಜಯಿಸುವುದಕ್ಕೆ ಸಹಾಯವಾಗುತ್ತದೆ.

ಮನೆಯಲ್ಲೇ ಉಳಿದು ಆರೈಕೆ ಮಾಡಿಕೊಳ್ಳುವಾಗ ಗಂಭೀರ ಸಮಸ್ಯೆಗಳಾಗುವ ಬಗ್ಗೆ ಎಚ್ಚರಿಕೆಯಿಂದಿದ್ದು ರೋಗವು ಉಲ್ಬಣಿಸುವುದನ್ನು ಕೂಡಲೇ ಗುರುತಿಸಬೇಕಾಗುತ್ತದೆ. ಸರಕಾರವು ಈಗ ಪ್ರಕಟಿಸಿರುವ ಕಾರ್ಯವಿಧಾನದಲ್ಲಿ ಮನೆಯಲ್ಲಿ ಉಳಿಯಬೇಕಾದರೆ ರಕ್ತದಲ್ಲಿ ಆಮ್ಲಜನಕವನ್ನು ಅಳೆಯಬಲ್ಲ ಪಲ್ಸ್ ಆಕ್ಸಿಮೀಟರ್ ಹೊಂದಿರಬೇಕೆನ್ನುವ ಷರತ್ತು ವಿಧಿಸಲಾಗಿದೆ. ಬಡವರಿಗೂ, ಮಧ್ಯಮ ವರ್ಗದವರಿಗೂ 2000 ರೂಪಾಯಿಯಷ್ಟು ಬೆಲೆಯಿರುವ ಇದನ್ನು ಖರೀದಿಸಲು ಸಾಧ್ಯವಾಗದು. ಆದ್ದರಿಂದ, ಸೋಂಕಿತರನ್ನು ಮನೆಗಳಲ್ಲೇ ಪರೀಕ್ಷಿಸುವುದಕ್ಕೆ ಸಂಚಾರಿ ಘಟಕಗಳನ್ನು ರಚಿಸುವುದಕ್ಕೆ ಸರಕಾರವು ಈ ಕೂಡಲೇ ನಿರ್ಧರಿಸಬೇಕು. ಪ್ರಾಥಮಿಕ ಅಥವಾ ನಗರ ಆರೋಗ್ಯ ಕೇಂದ್ರಗಳ ವ್ಯಾಪ್ತಿಗಳಲ್ಲಿ ಅಗತ್ಯಕ್ಕೆ ತಕ್ಕಷ್ಟು ಘಟಕಗಳನ್ನು ರಚಿಸಿ, ಸೋಂಕಿತರ ರಕ್ತದೊತ್ತಡ ಅಳೆಯುವುದಕ್ಕೆ, ರಕ್ತದ ಆಮ್ಲಜನಕದ ಪ್ರಮಾಣಗಳನ್ನು ಅಳೆಯುವುದಕ್ಕೆ ಅಗತ್ಯವಾದ ಉಪಕರಣಗಳನ್ನು ಒದಗಿಸಿ, ಆರೋಗ್ಯ ಕಾರ್ಯಕರ್ತರನ್ನು ಅವುಗಳಲ್ಲಿ ನಿಯೋಜಿಸಬೇಕು. ಸ್ಥಳೀಯ ಮಟ್ಟದಲ್ಲಿ ಈ ಘಟಕಗಳಿಗೆ ನೇರವಾಗಿ ಕರೆ ಮಾಡಿ ಸಂಪರ್ಕಿಸುವ  ವ್ಯವಸ್ಥೆಯಿರಬೇಕು. ಇಂಥ ವ್ಯವಸ್ಥೆಯಿಂದ ಮನೆಯಲ್ಲೇ ಉಳಿಯುವ ಸೋಂಕಿತರನ್ನು ಪರೀಕ್ಷಿಸಿ ಧೈರ್ಯ ತುಂಬಿದಂತೆಯೂ ಆಗುತ್ತದೆ, ಸಮಸ್ಯೆಗೀಡಾಗಬಲ್ಲವರನ್ನು. ಅಥವಾ ಆಗಲೇ ಗಂಭೀರ ರೋಗವುಂಟಾಗಿರುವವರನ್ನು ಗುರುತಿಸಲು ಸುಲಭವಾಗುತ್ತದೆ, ಅಂಥವರಿಗೆ ಆಸ್ಪತ್ರೆಗಳಲ್ಲಿ ವ್ಯವಸ್ಥೆಯನ್ನು ಕಲ್ಪಿಸುವುದಕ್ಕೂ ಆಗುತ್ತದೆ, ಅನಗತ್ಯ ಪರೀಕ್ಷೆ ಮತ್ತು ಚಿಕಿತ್ಸೆಗಳನ್ನು ತಡೆದಂತಾಗುತ್ತದೆ, ಆಸ್ಪತ್ರೆಗಳ ಮೇಲೆ ಒತ್ತಡವೂ ಕಡಿಮೆಯಾಗುತ್ತದೆ, ಎಲ್ಲರ ಖರ್ಚು ಕೂಡ ಕಡಿಮೆಯಾಗುತ್ತದೆ, ಎಲ್ಲರ ಆತಂಕವೂ ಕಡಿಮೆಯಾಗುತ್ತದೆ.

ಈ ಉಪಕರಣಗಳ ನೆರವಿನಿಂದ ಪರೀಕ್ಷಿಸಿದಾಗ, ಸಾಮಾನ್ಯರಲ್ಲಿ ರಕ್ತದಲ್ಲಿ ಆಮ್ಲಜನಕದ ಮಟ್ಟವು 97-100% ಇರುತ್ತದೆ; ಇದು 95%ಕ್ಕಿಂತ ಕಡಿಮೆಯಾದರೆ, ನಾಡಿಯ ಗತಿಯು ನಿಮಿಷಕ್ಕೆ 100ನ್ನು ಮೀರಿದರೆ ರೋಗವು ಉಲ್ಬಣಿಸುತ್ತಿರುವ ಲಕ್ಷಣವೆಂದು ಪರಿಗಣಿಸಬೇಕು; ಆರು ನಿಮಿಷಗಳ ಕಾಲ ಮನೆಯೊಳಗೇ ಅತ್ತಿಂದಿತ್ತ ನಡೆದಾಡಿದಾಗ ರಕ್ತದ ಆಮ್ಲಜನಕದ ಮಟ್ಟವು ಮೊದಲಿದ್ದುದಕ್ಕಿಂತ 4% ಇಳಿಕೆಯಾಗುವುದು ಕೂಡ ರೋಗವು ಉಲ್ಬಣಿಸುವುದರ ಸಂಕೇತವಾಗುತ್ತದೆ. ಇಂಥವರನ್ನು ಕೊರೋನಾ ಚಿಕಿತ್ಸಾ ಕೇಂದ್ರದಲ್ಲಿ ಅಥವಾ ತೀವ್ರ ರೂಪದ ಸಮಸ್ಯೆಯುಳ್ಳವರನ್ನು ಉನ್ನತ ಆಸ್ಪತ್ರೆಗಳಲ್ಲಿ ದಾಖಲಿಸಬೇಕಾಗುತ್ತದೆ. ಸೋಂಕಿನ ಲಕ್ಷಣಗಳು ಆರಂಭಗೊಂಡು 6-10 ದಿನಗಳಲ್ಲಿ ಈ ಸಮಸ್ಯೆಗಳು ಉಂಟಾಗುತ್ತವೆ, ಆದ್ದರಿಂದ ಸೋಂಕಿನ ಲಕ್ಷಣಗಳು ಆರಂಭವಾದೊಡನೆ ಯಾರೂ ಆತಂಕಕ್ಕೀಡಾಗುವ ಅಗತ್ಯವಿಲ್ಲ.

ಕೊರೋನಾ ಸೋಂಕು ಬಿಗಡಾಯಿಸುವವರಲ್ಲೂ ಹೆಚ್ಚಿನವರಿಗೆ ಮೂಗಿನ ಮೂಲಕ ಹೆಚ್ಚುವರಿಯಾಗಿ ಆಮ್ಲಜನಕವನ್ನು ನೀಡುವುದರಿಂದಲೇ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ. ಅಂಥವರಿಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ಅಥವಾ ಆರೋಗ್ಯ ಕೇಂದ್ರಗಳಲ್ಲಿ ಆಮ್ಲಜನಕ ಒದಗಿಸುವ ವ್ಯವಸ್ಥೆಯನ್ನು ಮಾಡಬೇಕು; ಇದನ್ನು ಈಗ ಸರಕಾರವು ಪ್ರಕಟಿಸಿರುವ ಯೋಜನೆಯಲ್ಲಿ ಹೇಳಲಾಗಿದೆ, ಆದರೆ ಈ ಕೇಂದ್ರಗಳಲ್ಲಿ ಮಕ್ಕಳನ್ನೂ, ಗರ್ಭಿಣಿಯರನ್ನೂ, ಯಾವುದೇ ಸಮಸ್ಯೆಗಳಾಗದವರನ್ನೂ ಅನಗತ್ಯವಾಗಿ ದಾಖಲಿಸಿದರೆ ಅಗತ್ಯವುಳ್ಳವರಿಗೆ ಅವು ಲಭ್ಯವಾಗದಂತಾಗಬಹುದು. ಆದ್ದರಿಂದ ಈ ಕೇಂದ್ರಗಳನ್ನು ಕೂಡ ಆಮ್ಲಜನಕದ ಕೊರತೆಯು ಗುರುತಿಸಲ್ಪಟ್ಟವರಿಗಷ್ಟೇ ಒದಗಿಸಬೇಕು.

ಉನ್ನತ ಆಸ್ಪತ್ರೆಗಳಲ್ಲಿ ಕೃತಕ ಉಸಿರಾಟದಂತಹ ಚಿಕಿತ್ಸೆಗಳು ಅಗತ್ಯವಾಗುವವರ ಸಂಖ್ಯೆಯು ಒಟ್ಟು ಸೋಂಕಿತರ 0.3-0.4% (ಸಾವಿರ ಸೋಂಕಿತರಲ್ಲಿ 3-4) ಅಷ್ಟೇ ಇರುತ್ತದೆ; ನಮ್ಮ ರಾಜ್ಯದಲ್ಲೂ ಕೊರೋನಾ ಸೋಂಕಿತರ ಅಂಕಿಅಂಶಗಳು ಇದನ್ನೇ ತೋರಿಸಿವೆ. ಮನೆಗಳಲ್ಲಿದ್ದವರಲ್ಲಿ ಅಥವಾ ಕೊರೋನಾ ಚಿಕಿತ್ಸಾ ಕೇಂದ್ರಗಳಲ್ಲಿ ಆಮ್ಲಜನಕಕ್ಕಾಗಿ ದಾಖಲಾದವರಲ್ಲಿ ರೋಗವು ತೀವ್ರಗೊಂಡರೆ ಅಂಥವರನ್ನಷ್ಟೇ ಇಂಥ ಉನ್ನತ ಆಸ್ಪತ್ರೆಗಳಿಗೆ ದಾಖಲಿಸಬೇಕು. ಅವರಲ್ಲೂ ಹೆಚ್ಚಿನವರು ಚೇತರಿಸಿಕೊಂಡು, ಒಟ್ಟಾರೆಯಾಗಿ 0.04-0.08% (10 ಸಾವಿರ ಸೋಂಕಿತರಲ್ಲಿ 4-8) ಮೃತರಾಗುತ್ತಾರೆ; ಅವರಲ್ಲಿ 99%ಕ್ಕೂ ಹೆಚ್ಚು ಮಂದಿ ಹಿರಿಯ ವಯಸ್ಕರು, ಅದಾಗಲೇ ರಕ್ತದ ಏರೊತ್ತಡ, ಸಕ್ಕರೆ ಕಾಯಿಲೆ, ಬೊಜ್ಜು, ಹೃದ್ರೋಗ, ಪಾರ್ಶ್ವವಾಯು, ಕ್ಯಾನ್ಸರ್, ಶ್ವಾಸಕೋಶಗಳು, ಮೂತ್ರಪಿಂಡಗಳು ಅಥವಾ ಯಕೃತ್ತಿನ ತೀವ್ರ ಸಮಸ್ಯೆಗಳು ಮುಂತಾದ ಗಂಭೀರ ಸಮಸ್ಯೆಗಳಿರುವವರಾಗಿರುತ್ತಾರೆ. ಇಂಥ ಸಮಸ್ಯೆಗಳಿರುವವರನ್ನು ಪ್ರತ್ಯೇಕಿಸಿಟ್ಟು ರಕ್ಷಿಸಲು ಈಗಲಾದರೂ ಸಾಧ್ಯವಾದರೆ ಈ ತೀವ್ರ ಸಮಸ್ಯೆಗಳನ್ನೂ ಕಡಿಮೆ ಮಾಡಬಹುದು.

ಎಲ್ಲಾ ಆರೋಗ್ಯ ಕೇಂದ್ರಗಳು ಮತ್ತು ಆಸ್ಪತ್ರೆಗಳಲ್ಲಿ ಯಾವ ಸಮಸ್ಯೆಯೂ ಇಲ್ಲದ ಕೊರೋನಾ ಲಕ್ಷಣಗಳುಳ್ಳವರನ್ನು ದಾಖಲಿಸಿದರೆ ಅನ್ಯ ರೋಗಗಳಿಂದ ಬಳಲುವವರಿಗೂ, ಗರ್ಭಿಣಿಯರ ಹೆರಿಗೆಗೂ ಆಸ್ಪತ್ರೆಗಳು ಲಭ್ಯವಾಗದೇ ಹೋಗಬಹುದು. ಆದ್ದರಿಂದ ಇಂತಹ ಕಷ್ಟಗಳಾಗದಂತೆ ಎಚ್ಚರಿಕೆ ವಹಿಸುವುದು ಅತ್ಯಗತ್ಯ.

ಯೂರೋಪ್ ಮತ್ತು ಅಮೆರಿಕದ ಅನುಭವಗಳ ಆಧಾರದಲ್ಲಿ, ನಮ್ಮ ರಾಜ್ಯದ ಸ್ಥಿತಿಗತಿಗಳಿಗೆ ಅನುಗುಣವಾಗಿ, ವೈಜ್ಞಾನಿಕವಾದ ಕ್ರಮಗಳನ್ನು ಕೈಗೊಂಡರೆ ಕೊರೋನಾ ಸೋಂಕನ್ನು ನಿಭಾಯಿಸುವುದು ಕಷ್ಟವಾಗದು.

ಡಾ| ಶ್ರೀನಿವಾಸ ಕಕ್ಕಿಲ್ಲಾಯ
ಡಾ| ಬಾಲಸರಸ್ವತಿ
ಮಂಗಳೂರು

Be the first to comment

Leave a Reply

Your email address will not be published.


*