ಹಿರಿಯರನ್ನು ಮಲಗಿಸಿ, ಕಿರಿಯರನ್ನು ಕುಗ್ಗಿಸಿ, ಜನತೆಯನ್ನು ಕಂಗೆಡಿಸಿದ ಕೊರೋನ ನೀತಿಗಳು

ಹಿರಿಯರನ್ನು ಮಲಗಿಸಿ, ಕಿರಿಯರನ್ನು ಕುಗ್ಗಿಸಿ, ಜನತೆಯನ್ನು ಕಂಗೆಡಿಸಿದ ಕೊರೋನ ನೀತಿಗಳು

ಹೊಸತು, ಜನವರಿ 2022

ಹೊಸ ಕೊರೋನ ಸೋಂಕನ್ನು ಗುರುತಿಸಿ ಎರಡು ವರ್ಷಗಳಾಗುತ್ತಿರುವಾಗ, ಅದನ್ನು ನಿಯಂತ್ರಿಸುವುದಕ್ಕೆಂದು ಕೈಗೊಂಡ ಕ್ರಮಗಳು ಒಳಿತಿಗಿಂತ ಹೆಚ್ಚು ಹಾನಿಯನ್ನೇ ಮಾಡಿವೆ ಎನ್ನುವುದು ಅತಿ ಸ್ಪಷ್ಟವಾಗಿ ಕಾಣತೊಡಗಿದೆ. ಕೊರೋನ ನಿಯಂತ್ರಣಕ್ಕೆಂದು ವಿಶ್ವದ ಅನೇಕ ದೇಶಗಳಲ್ಲಿ ಲಾಕ್ ಡೌನ್ ನಿರ್ಬಂಧಗಳನ್ನು ಹೇರಿದ್ದು ಹಾಗೂ ಶಾಲೆ-ಕಾಲೇಜುಗಳನ್ನು ಮುಚ್ಚಿದ್ದು ಸಾರ್ವಜನಿಕ ಆರೋಗ್ಯದ ಬಗ್ಗೆ ಮನುಕುಲದ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಹಾಗೂ ವಿಫಲ ನಿರ್ಧಾರಗಳಾಗಿದ್ದವೆಂದು ಅನೇಕ ತಜ್ಞರೀಗ ಹೇಳುತ್ತಿದ್ದಾರೆ.

‘ಹೊಸತು’ ಪತ್ರಿಕೆಯಲ್ಲಿ ಕಳೆದ ಏಪ್ರಿಲ್ ನಲ್ಲಿ ಬರೆದಿದ್ದಂತೆ ಈ ಕೊರೋನಗಾಥೆಯು ವಿಜ್ಞಾನ-ತಂತ್ರಜ್ಞಾನ-ಮಾಹಿತಿ ಸಂವಹನಗಳ ಸಾಫಲ್ಯಗಳನ್ನೂ, ಅತ್ಯಾಧುನಿಕ ಸಾಧ್ಯತೆಗಳನ್ನೂ ತೋರಿಸಿದ್ದರೆ, ಅವನ್ನು ಅರಿತು, ಬಳಸಿಕೊಳ್ಳುವಲ್ಲಿ ವೈಜ್ಞಾನಿಕ-ವೈಚಾರಿಕ ಮನೋವೃತ್ತಿಗಳ ವೈಫಲ್ಯವನ್ನೂ ತೋರಿಸಿದೆ. ಈ ಕೊರೋನ ಕಾಲದಲ್ಲಿ ಬಗೆಬಗೆಯ ಸರಕಾರಗಳು ಕೈಗೊಂಡ ನಿರ್ಧಾರಗಳು ಮತ್ತು ಜಾರಿಗೊಳಿಸಿದ ನಿರ್ಬಂಧಗಳು, ವೈದ್ಯಕೀಯ ಹಾಗೂ ವೈಜ್ಞಾನಿಕ ವಲಯದ ವರ್ತನೆಗಳು ಹಾಗೂ ಪ್ರತಿಕ್ರಿಯೆಗಳು, ಮಾಧ್ಯಮಗಳ ವರ್ತನೆಗಳು, ಎಡಪಂಥೀಯರು ಹಾಗೂ ಉದಾರವಾದಿಗಳು ಎನಿಸಿಕೊಂಡವರ ವರ್ತನೆಗಳು ಎಲ್ಲವೂ ಬಹಳಷ್ಟು ಸತ್ಯಗಳನ್ನು ಹೊರಗೆತ್ತಿ ತೋರಿಸಿವೆ, ಭವಿಷ್ಯದ ಬಗ್ಗೆ ಹಲವು ಆತಂಕಕಾರಿ, ಆಘಾತಕಾರಿ, ಅಪಾಯಕಾರಿ ಸುಳಿವುಗಳನ್ನು ನೀಡಿವೆ.

ಡಿಸೆಂಬರ್ 2019ರ ಕೊನೆಯಲ್ಲಿ ಚೀನಾದ ವುಹಾನ್‌ನಲ್ಲಿ ಈ ಹೊಸ ಕೊರೋನ ವೈರಸ್ ಪತ್ತೆಯಾಗಿ, ಅದನ್ನು ನಿಯಂತ್ರಿಸಲೆಂದು ಚೀನಾ ಸರಕಾರವು ಆ ನಗರವನ್ನು ಸಂಪೂರ್ಣವಾಗಿ ದಿಗ್ಬಂಧಿಸಿಟ್ಟದ್ದು ವಿಶ್ವದೆಲ್ಲೆಡೆ ವರದಿಯಾಯಿತು. ಫೆಬ್ರವರಿ ಕೊನೆಯ ವೇಳೆಗೆ ಚೀನಾದಲ್ಲಿ ಅದುವರೆಗೆ ನೋಡಲಾಗಿದ್ದ 72000ಕ್ಕೂ ಹೆಚ್ಚು ಸೋಂಕಿತರ ಬೆಗೆಗಿನ ಎಲ್ಲಾ ವಿವರಗಳನ್ನು ಚೀನಾದ ರೋಗ ನಿಯಂತ್ರಣ ಕೇಂದ್ರವು ಪ್ರಕಟಿಸಿತು. ಹೊಸ ಸೋಂಕು ಯಾರಲ್ಲಿ, ಹೇಗೆ, ಏನು, ಎಷ್ಟು ಸಮಸ್ಯೆಗಳನ್ನುಂಟು ಮಾಡಬಹುದೆನ್ನುವ ಎಲ್ಲಾ ವಿವರಗಳೂ ಆ ವರದಿಯಲ್ಲಿದ್ದವು, ಆ ಸೋಂಕನ್ನು ಜಾಣ್ಮೆಯಿಂದ ನಿಭಾಯಿಸುವುದಕ್ಕೆ ಅಗತ್ಯವಿದ್ದ ಎಲ್ಲಾ ಸೂಚನೆಗಳೂ ಅದೇ ವರದಿಯಲ್ಲಿದ್ದವು. ಆದರೆ ವಿಶ್ವ ಆರೋಗ್ಯ ಸಂಸ್ಥೆಯೂ, ಹೆಚ್ಚಿನ ದೇಶಗಳ ಆಡಳಿತಗಳೂ ಚೀನಾ ವಿಧಿಸಿದ್ದ ದಿಗ್ಬಂಧನಕ್ಕೇ ಬಹಳ ಪ್ರಾಮುಖ್ಯತೆಯನ್ನು ನೀಡಿದವು, ಈ ಹೊಸ ಸೋಂಕು ಅತಿ ಭೀಕರವೆಂದೂ, ಅದನ್ನು ನಿಭಾಯಿಸುವುದಕ್ಕೆ ಅಂಥ ದಿಗ್ಬಂಧನಗಳಿಂದಷ್ಟೇ ಸಾಧ್ಯವೆಂದೂ ಎಲ್ಲೆಡೆ ಬಿಂಬಿಸಲಾಯಿತು. ಅಂದಿನಿಂದ ಇಂದಿನವರೆಗೆ ಅದೇನೋ ದಿವ್ಯ ಮಂತ್ರವೆಂಬಂತೆ ವಿಶ್ವದೆಲ್ಲೆಡೆ ಆಹೋರಾತ್ರಿ ಪಠಿಸಲಾಗುತ್ತಿದೆ, ಆ ಮಂತ್ರೋಚ್ಚಾರಣಾ ವಿಧಿಯು ಪ್ರಶ್ನಾತೀತ ಮತಧರ್ಮದಂತೆಯೇ ಆಗಿಬಿಟ್ಟಿದೆ, ಅದನ್ನು ಪ್ರಶ್ನಿಸುವವರನ್ನು ಧರ್ಮದ್ರೋಹಿಗಳಂತೆ, ದೇಶದ್ರೋಹಿಗಳಂತೆ ಬಹಿಷ್ಕರಿಸಲಾಗುತ್ತಿದೆ, ಕೀಳುಗಳೆಯಲಾಗುತ್ತಿದೆ, ಮತ್ತು ಇದನ್ನು ಅನೇಕ ದೇಶಗಳಲ್ಲಿ, ಎಡ-ಬಲ-ನಡು ಎಂಬ ಬೇಧವಿಲ್ಲದೆ ಎಲ್ಲ ಬಗೆಯ ಆಡಳಿತಗಳೂ, ಮಾಧ್ಯಮಗಳೂ, ಜನರೂ ಮಾಡುತ್ತಿದ್ದಾರೆ.

ಲಾಕ್ ಡೌನ್ ಕಾಟ

ಈ ಎರಡು ವರ್ಷಗಳಲ್ಲಿ ಕೋವಿಡ್ ನಿಯಂತ್ರಣದ ನೆಪದಲ್ಲಿ ಅನೇಕ ದೇಶ-ಪ್ರದೇಶಗಳಲ್ಲಿ ವಾರಗಟ್ಟಲೆ, ತಿಂಗಳುಗಟ್ಟಲೆ ಅನೇಕ ಬಾರಿ ಲಾಕ್ ಡೌನ್ ಗಳಾಗಿವೆ. ಭಾರತದಲ್ಲಂತೂ ವಿಶ್ವದ ಅತಿ ದೀರ್ಘಕಾಲದ, ಅತಿ ಕಠಿಣವಾದ, ಅತಿ ಬರ್ಬರವಾದ ಲಾಕ್ ಡೌನ್ ಗಳಾಗಿವೆ. ಚೀನಾದಲ್ಲಿ ಅದೇನೋ ಲಾಕ್ ಡೌನ್ ಮಾಡಲಾಯಿತೆಂಬ ಕಾರಣಕ್ಕೆ, ಅದನ್ನೇ ಮಾಧ್ಯಮಗಳು ಎತ್ತಿ ಹಿಡಿದು ಆರ್ಭಟಿಸಿದವೆಂಬ ಕಾರಣಕ್ಕೆ, ಒತ್ತಡಕ್ಕೆ ಸಿಲುಕಿ ಈ ಎಲ್ಲ ದೇಶಗಳಲ್ಲೂ ಮಾರ್ಚ್ 2020ರಲ್ಲಿ ಮೊದಲಿಗೆ ಲಾಕ್ ಡೌನ್ ಘೋಷಿಸಲಾಯಿತು. ಲಾಕ್ ಡೌನ್ ಅಂದರೆ ಏನು, ಅದರಿಂದ ಸೋಂಕಿನ ನಿಯಂತ್ರಣ ಸಾಧ್ಯವೇ, ಅದರಿಂದಾಗಬಹುದಾದ ಹಾನಿಗಳೇನು, ಚೀನಾದಲ್ಲಿ ನಿಜಕ್ಕೂ ಮಾಡಿದ್ದೇನು, ಎಷ್ಟು ಕಾಲ ಹೇಗೆ ಈ ಲಾಕ್ ಡೌನ್ ಮಾಡಬೇಕು ಎಂಬ ಯಾವುದೇ ವಿವರಗಳಾಗಲೀ, ಅಧ್ಯಯನಗಳಾಗಲೀ, ಸಾಕ್ಷ್ಯಾಧಾರಗಳಾಗಲೀ, ಪೂರ್ವಾನುಭವವಾಗಲೀ ಇಲ್ಲದೆಯೇ ಒಂದೆಡೆ ಮಾಡಲಾಯಿತೆಂದು ಇತರೆಡೆ ಮಾಡಲಾಯಿತು.

ಕರ್ನಾಟಕದಲ್ಲಿ ವಿದೇಶಗಳಿಂದ ಮರಳಿದ್ದ ಕೇವಲ 11 ಮಂದಿಯಲ್ಲಿ ಕೊರೋನ ಗುರುತಿಸಲ್ಪಟ್ಟು ಅವರೆಲ್ಲರೂ ಆಸ್ಪತ್ರೆಗಳಲ್ಲಿದ್ದಾಗ, ಮಾರ್ಚ್ 13, 2020ರಂದು ಮುಖ್ಯಮಂತ್ರಿಗಳೆದುರು ನಡೆದ ಸಭೆಯಲ್ಲಿ ಹೃದಯದ ಶಸ್ತ್ರಚಿಕಿತ್ಸಕರೊಬ್ಬರು ಇಟೆಲಿಯಲ್ಲಿ ಲಾಕ್ ಡೌನ್ ತಡವಾಗಿ ಸಾವಿರಾರು ಜನರು ಸತ್ತಿದ್ದಾರೆ, ಈ ಕೂಡಲೇ ಲಾಕ್ ಡೌನ್ ಮಾಡದಿದ್ದರೆ ಅನಾಹುತವಾದೀತು ಎಂದು ಬೆದರಿಸಿದ ಕಾರಣಕ್ಕೆ, ಇಡೀ ರಾಜ್ಯದ ಎಲ್ಲಾ ಶಾಲೆ, ಕಾಲೇಜು, ಮಾಲ್, ಚಿತ್ರಮಂದಿರ, ಮದುವೆ ಸಮಾರಂಭಗಳನ್ನು ಮುಚ್ಚಿಸಲಾಯಿತು.

ಅದಾಗಿ ಹತ್ತು ದಿನಗಳಲ್ಲಿ, ಮಾರ್ಚ್ 22ರಂದು, ಪ್ರಧಾನಿಗಳು ಒಂದು ದಿನದ ಜನತಾ ಕರ್ಫ್ಯೂ ಎಂಬ ಪ್ರಯೋಗವನ್ನು ನಡೆಸಿದರು, ಜೊತೆಗೆ ಚಪ್ಪಾಳೆ-ಜಾಗಟೆ ಬಾರಿಸುವ ಪರೀಕ್ಷೆಯನ್ನೂ ನಡೆಸಿದರು. ದೇಶವಾಸಿಗಳು ಹೆದರಿಕೊಂಡಿದ್ದಾರೆ, ಸರಕಾರವು ಏನು ಬೇಕಾದರೂ ಮಾಡಬಹುದೆನ್ನುವುದು ಆ ಪರೀಕ್ಷೆಯಲ್ಲಿ ಖಾತರಿಯಾದ ಬಳಿಕ, ಮಾರ್ಚ್ 24ರಂದು ರಾತ್ರಿ 8 ಗಂಟೆಗೆ ಬಂದು ಅದೇ ಮಧ್ಯರಾತ್ರಿಯಿಂದ 21 ದಿನಗಳ ಕಾಲ ಇಡೀ ದೇಶವನ್ನೇ ಲಾಕ್ ಡೌನ್ ಮಾಡುವುದಾಗಿ ಘೋಷಿಸಿದರು; ಹೀಗೆ ಮಾಡಿದರೆ ಮಾತ್ರವೇ ಕೊರೋನ ಕುರುಕ್ಷೇತ್ರವನ್ನು ಗೆಲ್ಲಬಹುದು, ಇಲ್ಲವಾದರೆ ದೇಶವು 20 ವರ್ಷ ಹಿಂದಕ್ಕೆ ಹೋಗಲಿದೆ ಎಂದರು. ಆದರೆ, ಲಾಕ್ ಡೌನ್ ಮಾಡುವುದರಿಂದ, ಪ್ರಯಾಣಗಳ ಮೇಲೆ ನಿರ್ಬಂಧಗಳನ್ನು ಹೇರುವುದರಿಂದ ಭಾರತದಂತಹ ದೇಶಗಳಲ್ಲಿ ಕೊರೋನ ನಿಯಂತ್ರಣಕ್ಕೆ ಸಹಾಯವಾಗದು, ತೊಂದರೆಗಳೇ ಆಗಬಹುದು ಎಂದು ದೇಶದ ಅತ್ಯುನ್ನತ ವೈದ್ಯಕೀಯ ಸಂಶೋಧನಾ ಸಂಸ್ಥೆಯಾದ ಐಸಿಎಂಆರ್ ಮಾರ್ಚ್-ಎಪ್ರಿಲ್ 2020ರಲ್ಲೇ ಹೇಳಿದ್ದುದರಿಂದ ಪ್ರಧಾನಿಯವರ ಈ ನಿರ್ಧಾರದ ಹಿಂದೆ ಐಸಿಎಂಆರ್‌ನಂತಹ ಉನ್ನತ ಸಂಸ್ಥೆಗಳ ಪಾತ್ರವಿರಲಿಲ್ಲ ಎಂದುಕೊಳ್ಳಬಹುದು. ಲಾಕ್ ಡೌನ್ ಘೋಷಿಸುವುದಕ್ಕೆ ಯಾವುದಾದರೂ ತಜ್ಞರ ಸಲಹೆಯಿತ್ತೇ ಎಂದು ಮಾಹಿತಿ ಕಾಯಿದೆಯಡಿ ಕೇಳಿದ ಪ್ರಶ್ನೆಗೆ ಉತ್ತರವಾಗಿ ಜನರು ಚಪ್ಪಾಳೆ ತಟ್ಟಿ, ಜನತಾ ಕರ್ಫ್ಯೂಗೆ ಅಭೂತಪೂರ್ವ ಬೆಂಬಲ ನೀಡಿದ್ದರಿಂದ ರಾಜ್ಯ ಸರಕಾರಗಳು ಲಾಕ್ ಡೌನ್ ಮಾಡಿದವು ಎಂದು ಕೇಂದ್ರ ಗೃಹ ಸಚಿವಾಲಯವು ಉತ್ತರಿಸಿತು! ಆದರೆ ಲಾಕ್ ಡೌನ್ ಆದೇಶವು ಇದೇ ಗೃಹ ಸಚಿವಾಲಯದಿಂದಲೇ ಪ್ರಕಟವಾಗಿತ್ತು! ಲಾಕ್ ಡೌನ್ ನಿರ್ಧಾರಕ್ಕೆ ಪ್ರಧಾನಿಯವರು ಯಾವುದೇ ತಜ್ಞರ ಸಲಹೆಯನ್ನು ಪಡೆದಿರಲೇ ಇರಲೇ ಇಲ್ಲ, ಯಾವ ರಾಜ್ಯಗಳನ್ನೂ ಕೇಳಿರಲೇ ಇಲ್ಲ ಎಂದು ಬಿಬಿಸಿಯ ಜುಗಲ್ ಪುರೋಹಿತ್ ಮತ್ತು ಅರ್ಜುನ್ ಪರ್ಮಾರ್ ಅವರ ಮಾರ್ಚ್ 29, 2021ರಂದು ಪ್ರಕಟಿಸಿದ ವರದಿಯು ಭಾರತದ ಲಾಕ್ ಡೌನ್‌ನ ಸತ್ಯವನ್ನು ಕೊನೆಗೂ ಹೇಳಿತು. ಆದರೆ ಅಷ್ಟರಲ್ಲಿ ಅದರ ವೈಫಲ್ಯಗಳೂ, ಹಾನಿಗಳೂ ದೇಶವಾಸಿಗಳನ್ನು ಕಂಗೆಡೆಸಿಯಾಗಿತ್ತು.

ಲಾಕ್ ಡೌನ್‌ನಿಂದ ವಲಸೆ ಕಾರ್ಮಿಕರು ಮತ್ತು ಜನಸಾಮಾನ್ಯರ ಬವಣೆಗಳು ಅಸಹನೀಯವಾಗುತ್ತಿದ್ದರೂ ಅದನ್ನು ಲೆಕ್ಕಿಸದೆ ಸುಮಾರು 2 ತಿಂಗಳವರೆಗೆ ಅದನ್ನು ಮುಂದುವರಿಸಲಾಯಿತು. ದಿನೇ ದಿನೇ ಪ್ರಕರಣಗಳು ಏರುತ್ತಿದ್ದರೂ, ಲಾಕ್ ಡೌನ್ ಮಾಡಿದ್ದು ಸರಿಯೆಂದು ಸಾಧಿಸಲು ಬಗೆಬಗೆಯ ಹೊಸ ತರ್ಕಗಳನ್ನು ಮಂಡಿಸಲಾಯಿತು. ನೀತಿ ಆಯೋಗದ ಸಲಹೆಗಾರ ಡಾ. ವಿ ಕೆ ಪೌಲ್ ಅವರು 2020ರ ಎಪ್ರಿಲ್ 26ರಂದು ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ, 54 ದಿನಗಳ ಅತಿ ಕಠಿಣ ಲಾಕ್ ಡೌನ್ ಬಳಿಕ ಮೇ 16, 2020ರಿಂದ ಒಂದೇ ಒಂದು ಹೊಸ ಕೊರೋನ ಪ್ರಕರಣಗಳು ಇರುವುದೇ ಇಲ್ಲ ಎಂದು ಘೋಷಿಸಿದರು. ಅದಕ್ಕೂ ಚಪ್ಪಾಳೆಗಳ ಸುರಿಮಳೆಯಾಯಿತು. ಮಾರ್ಚ್ 24ರಂದು ಲಾಕ್ ಡೌನ್ ಮಾಡಿದ ದಿನ ಒಟ್ಟು 562 ಪ್ರಕರಣಗಳಿದ್ದರೆ, 54 ದಿನಗಳ ಲಾಕ್ ಡೌನ್ ಬಳಿಕ ಹೊಸ ಪ್ರಕರಣಗಳು ಸೊನ್ನೆಯಾಗಬೇಕಿದ್ದುದು ಅದೇ ಮೇ 16ರಂದು 4864 ಹೊಸ ಪ್ರಕರಣಗಳಾದವು! ಹೀಗೆ ಲಾಕ್ ಡೌನ್ ಲೆಕ್ಕಾಚಾರಗಳು ವಿಫಲವಾಗುತ್ತಿದ್ದಂತೆ ಆ ನಿರ್ಧಾರವನ್ನು ಸಮರ್ಥಿಸುವ ಹೊಸ ವಾದಗಳನ್ನು ಹುಟ್ಟಿಸಲಾಯಿತು: ಮಾಸ್ಕ್, ಪಿಪಿಎ ಕೂಡ ಈ ದೇಶದಲ್ಲಿ ಇರಲಿಲ್ಲ, ಆಸ್ಪತ್ರೆಗಳೂ ಸಿದ್ಧವಿರಲಿಲ್ಲ, ಅವನ್ನು ತಯಾರಿಸಲು ಸಮಯಾವಕಾಶ ದೊರೆಯಿತು ಎಂಬ ಸುಳ್ಳುಗಳನ್ನು ಹೇಳಲಾಯಿತು. ಕೊನೆಕೊನೆಗೆ ಈ ಪ್ರಧಾನಿಯಿರದೇ ಇರುತ್ತಿದ್ದರೆ ಎಲ್ಲರೂ ಸಾಯಬೇಕಿತ್ತು, ಅವರಿದ್ದುದರಿಂದ ಈಗ ಜೀವಂತವಾಗಿದ್ದೀರಿ ಎಂಬಲ್ಲಿಯವರೆಗೆ ಈ ಸಮರ್ಥನೆಗಳು ಬೆಳೆದವು. ನೋಟು ರದ್ದತಿ ಮಾಡಿದ ರಾತ್ರಿ ಕಾಳಧನದ ನಿರ್ಮೂಲನೆಯನ್ನು ಕಾರಣವಾಗಿ ಕೊಟ್ಟಿದ್ದಲ್ಲಿಂದ ತೊಡಗಿ ಅದು ವಿಫಲವಾಗಿ ಜನರನ್ನು ಪ್ರಪಾತಕ್ಕೆ ತಳ್ಳಿದ್ದು ಗೋಚರವಾಗತೊಡಗಿದಂತೆ ಅದು ನಗದು ರಹಿತ ಕ್ರಾಂತಿಗೆ, ನಕ್ಸಲರ ನಿಗ್ರಹಕ್ಕೆ, ಕಾಶ್ಮೀರದಲ್ಲಿ ಕಲ್ಲು ಹೊಡೆಯುವವರ ನಿಯಂತ್ರಣಕ್ಕೆ, ಪಾಕಿಸ್ತಾನದ ವಿನಾಶಕ್ಕೆ, ಚಿಪ್ಪಿನ ನೋಟುಗಳ ಮುದ್ರಣಕ್ಕೆ ಎಂಬಿತ್ಯಾದಿಯಾಗಿ ಸುಳ್ಳುಗಳನ್ನು ಹೇಳಿದ್ದಂತೆಯೇ ಲಾಕ್ ಡೌನ್‌ನ ಬರ್ಬರತೆಯನ್ನು ಮುಚ್ಚಿ ಹಾಕುವುದಕ್ಕೂ ಒಂದರ ಮೇಲೊಂದು ಸುಳ್ಳುಗಳನ್ನು ಹೆಣೆಯಲಾಯಿತು, ಈಗಲೂ ಅದು ಮುಂದುವರಿದಿದೆ.

ಮೊದಲ ಸುತ್ತಿನ ಲಾಕ್ ಡೌನ್ ವಿಫಲವಾಗಿ 2020ರ ಅಕ್ಟೋಬರ್ ವರೆಗೆ ದೇಶದ ಸುಮಾರು 30-45% ಜನರು ಸೋಂಕಿತರಾದರು. ಕೇಂದ್ರ ಸರಕಾರದ ವಿಜ್ಞಾನ ಇಲಾಖೆಯ ತಜ್ಞರು 2020ರ ಅಕ್ಟೋಬರ್ ನಲ್ಲಿ ಒಂದು ಲೆಕ್ಕಾಚಾರವನ್ನು ಪ್ರಕಟಿಸಿ, 2021ರ ಫೆಬ್ರವರಿ ವೇಳೆಗೆ ದೇಶದ 90% ಜನರು ಸೋಂಕಿತರಾಗುತ್ತಾರೆಂದೂ, ಅಲ್ಲಿಗೆ ಸಾಮುದಾಯಿಕ ರೋಗರಕ್ಷಣೆ ಬೆಳೆದು ಕೊರೋನ ಹರಡುವಿಕೆ ಕೊನೆಯಾಗುತ್ತದೆಂದೂ ಹೇಳಲಾಯಿತು. ಅದರ ಬೆನ್ನಿಗೆ ಪ್ರಧಾನಿಯಾದಿಯಾಗಿ ಹಲವರು ಭಾರತವು ಕೊರೋನಾವನ್ನು ಮಣಿಸಿ ವಿಶ್ವಕ್ಕೇ ಮಾದರಿಯಾಯಿತು ಎಂದು ಹೊಗಳಿಕೊಂಡರು. ಆದರೆ ಈ ಲೆಕ್ಕಾಚಾರಗಳನ್ನೂ, ಠೇಂಕಾರಗಳನ್ನೂ ಅಲಕ್ಷಿಸಿ ಕೊರೋನ ವೈರಸ್ ತನ್ನಷ್ಟಕ್ಕೆ ಹರಡುತ್ತಲೇ ಹೋಯಿತು, ಅದುವರೆಗೆ ಸೋಂಕಿತರಾಗದೇ ಉಳಿದಿದ್ದವರನ್ನು ತಾಗಿತು. ಆ ನಡುವೆ 2020ರ ಡಿಸೆಂಬರ್‌ನಲ್ಲಿ ಭಾರತದಲ್ಲೊಂದು ಹೊಸ ರೂಪಾಂತರವು ಗುರುತಿಸಲ್ಪಟ್ಟಿತು, ಇಲ್ಲಿಯೂ, ವಿಶ್ವದೆಲ್ಲೆಡೆಗೂ ಹರಡಿತು. ಅದನ್ನು ಭಾರತದ ಕೊರೋನಾ ಎಂದು ಕರೆದದನ್ನು ವಿರೋಧಿಸಿದ್ದಕ್ಕೆ, ವಿಶ್ವ ಆರೋಗ್ಯ ಸಂಸ್ಥೆಯು ರೂಪಾಂತರಗಳಿಗೆ ಗ್ರೀಕ್ ವರ್ಣಮಾಲೆಯನುಸಾರ ನಾಮಕರಣ ಮಾಡಲು ನಿರ್ಧರಿಸಿತು, ಈ ಹೊಸ ಬಗೆಗೆ ಡೆಲ್ಟಾ ಎಂದು ಹೆಸರಿಟ್ಟಿತು. ಭಾರತವು ಈ ರೂಪಾಂತರವನ್ನು ಗುರುತಿಸುವಲ್ಲಿ ತಡವಾದುದರಿಂದ ಅದು ವಿಶ್ವದೆಲ್ಲೆಡೆ ಹರಡಿ ಹೆಚ್ಚು ಗಂಭೀರ ಸಮಸ್ಯೆಗಳಾದ ಎರಡನೇ ಅಲೆಯುಂಟಾಗುವುದಕ್ಕೆ ಕಾರಣವಾಯಿತು ಎಂಬ ಆರೋಪಗಳಾದವು; ಮೊನ್ನೆ ಡಿಸೆಂಬರ್ 29, 2021ರ ಬ್ಲೂಮ್‌ಬರ್ಗ್ ಪತ್ರಿಕೆಯಲ್ಲಿ ಕ್ರಿಸ್ ಕೇ ಮತ್ತು ಧ್ವನಿ ಪಾಂಡ್ಯ ಈ ಬಗ್ಗೆ ಬರೆದರು. ಆದರೆ ಕೊರೋನ ಬಂದುದಕ್ಕೆ ಚೀನಾವನ್ನು, ಹರಡಿದ್ದಕ್ಕೆ ಅಲ್ಪಸಂಖ್ಯಾತ ಸಮುದಾಯದವರನ್ನು, ಮತ್ತೀಗ ಒಮಿಕ್ರಾನ್‌ಗೆ ದಕ್ಷಿಣ ಆಫ್ರಿಕಾವನ್ನು ನಿಂದಿಸಿದವರು ಭಾರತದಲ್ಲಿ ಹುಟ್ಟಿದ ಡೆಲ್ಟಾವನ್ನು ಒಪ್ಪುವುದಕ್ಕಾಗಲೀ, ಆ ಬಗ್ಗೆ ಒಂದೆರಡು ಟೀಕೆಗಳನ್ನು ಕೇಳುವುದಕ್ಕಾಗಲೀ ಸಿದ್ದರಿಲ್ಲ!

ಮೊದಲ ವರ್ಷ ಸೋಂಕಿತರಾಗದೇ ಉಳಿದಿದ್ದವರಲ್ಲಿ 2021ರ ಮಾರ್ಚ್-ಏಪ್ರಿಲ್‌ನಿಂದ ಸೋಂಕು ಹರಡತೊಡಗಿತು, ಅಂಥವರಲ್ಲಿ ಮೂವರಲ್ಲೊಬ್ಬರಿಗೆ ಡೆಲ್ಟಾ ತಗಲಿತು. ಮೊದಲ ಅಲೆ ತಡೆದು ಯಶಸ್ವಿಯಾದೆವೆಂದು ಬೆನ್ನು ತಟ್ಟಿಕೊಂಡಿದ್ದ ಆಡಳಿತಗಳು ಮತ್ತೆ ಲಾಕ್ ಡೌನ್‌ ವಿಧಿಸಿದವು, ಆದರೆ ಮೊದಲಲ್ಲಿ ಅತಿ ನಾಟಕೀಯವಾಗಿ ಲಾಕ್ ಡೌನ್ ಘೋಷಿಸಿ, ಅದರ ಹೊಣೆಯನ್ನು ರಾಜ್ಯಗಳ ಮೇಲೆ ಹೊರಿಸಿದ್ದ ಕೇಂದ್ರ ಸರಕಾರವು ಎರಡನೇ ಸಲಕ್ಕೆ ಆ ಎಲ್ಲಾ ಭಾರವನ್ನು ರಾಜ್ಯ ಸರಕಾರಗಳ ಮೇಲೆಯೇ ಹೊರಿಸಿತು! ಈ ಎರಡನೇ ಸುತ್ತಿನ ಲಾಕ್ ಡೌನ್‌ಗಳೂ ವಿಫಲವಾದವು; 2021ರ ಏಪ್ರಿಲ್‌ನಿಂದ ಸೆಪ್ಟೆಂಬರ್ ನಡುವೆ ಮೊದಲ ವರ್ಷಕ್ಕಿಂತಲೂ ಹೆಚ್ಚು ಜನರು ಸೋಂಕಿತರಾದರು. ಮೊದಲ ಲಾಕ್ ಡೌನ್‌ನಿಂದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಸಮಯಾವಕಾಶವಾಯಿತು, ಎಲ್ಲವೂ ಸನ್ನದ್ಧವಾಗಿವೆ ಎಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೊಚ್ಚಿಕೊಂಡಿದ್ದರೂ ಕೂಡ ಎರಡನೇ ಅಲೆಯಲ್ಲಿ ಆಸ್ಪತ್ರೆಗಳಿಗೆ ಬಂದವರಿಗೆ ಸೌಲಭ್ಯಗಳೇ ಇಲ್ಲವಾದವು. ದೇಶದಲಿರುವ ಹಲವಾರು ಉಕ್ಕಿನ ಕಾರ್ಖಾನೆಗಳೂ, ರಸಗೊಬ್ಬರ ಕಾರ್ಖಾನೆಗಳು, ತೈಲ ಸಂಸ್ಕರಣಾಗಾರಗಳೂ ಮುಂತಾದ ಬೄಹತ್ ಉದ್ಯ್ಮಾಗ್ಳಲ್ಲಿ ವಿಪುಲವಾಗಿ ಆಮ್ಲಜನಕ ಪ್ರತ್ಯೇಕಿಸುವ ಸಾಮರ್ಥ್ಯವಿದ್ದರೂ, ಕೇಂದ್ರ ಸರಕಾರವು ಅದರ ವಿತರಣೆಯ ನಿಯಂತ್ರಣವನ್ನೂ ತನ್ನ ಮುಷ್ಟಿಯೊಳಗೇ ಇಟ್ಟುಕೊಂಡು, ವೈದ್ಯಕೀಯ ಬಳಕೆಗಾಗಿ ವಿತರಿಸುವುದಕ್ಕೆ ವ್ಯವಸ್ಥೆಯನ್ನೂ ಮಾಡದೆ ಇದ್ದುದರಿಂದ ಎಲ್ಲೆಡೆ ವೈದ್ಯಕೀಯ ಆಮ್ಲಜನಕದ ಕೊರತೆಯಾಯಿತು, ಅನೇಕರು ಸಾವನ್ನಪ್ಪಿದ ಬಗ್ಗೆ ವರದಿಗಳಾದವು. ಆದರೆ ಆಮ್ಲಜನಕ ಸಿಗದೆ ಎಷ್ಟು ಮಂದಿ ಸತ್ತರೆಂದು ಸಂಸತ್ತಿನಲ್ಲಿ ಕೇಳಿದ್ದಕ್ಕೆ ಅಂಥ ಮಾಹಿತಿಯೇ ಲಭ್ಯವಿಲ್ಲವೆಂದು ಹೇಳಲಾಯಿತು. ಇಂಥ ಅಮಾನವೀಯ, ಅವ್ಯವಸ್ಥಿತ ಆಡಳಿತಗಳ ಕಾರಣಕ್ಕೆ ಸಾವುಗಳು ಹೆಚ್ಚಿ, ಮೃತ ದೇಹಗಳ ಅಂತ್ಯಸಂಸ್ಕಾರಕ್ಕೂ ವ್ಯವಸ್ಥೆಯಿಲ್ಲವಾಯಿತು; ದಾರಿಬದಿಗಳಲ್ಲಿ, ನದಿ ತಟಗಳಲ್ಲಿ ಸಾಮೂಹಿಕ ಅಂತ್ಯಕ್ರಿಯೆಗಳಾದವು, ಮೃತದೇಹಗಳು ನದಿಗಳಲ್ಲಿ ತೇಲಿಬಂದ ಬಗ್ಗೆ ಉತ್ತರಪ್ರದೇಶ, ಬಿಹಾರಗಳಂತಹ ರಾಜ್ಯಗಳಿಂದ ವರದಿಗಳಾದವು. ಭಾರತದ ಸ್ಥಿತಿಗತಿಗಳಿಗೆ, ಜನರ ಆರೋಗ್ಯದ ಮಟ್ಟಗಳಿಗೆ ಅನುಗುಣವಾದ ನಿಯಂತ್ರಣೋಪಾಯಗಳನ್ನು ವೈಜ್ಞಾನಿಕವಾಗಿ ಮಾಡಿದ್ದರೆ ಇವನ್ನು ತಡೆಯಲು, ಕನಿಷ್ಠಗೊಳಿಸಲು ಸಾಧ್ಯವಿತ್ತು, ಆದರೆ ಹಾಗಾಗಲಿಲ್ಲ.

ಎರಡು ವರ್ಷಗಳಲ್ಲಿ, 2020-2021ರ ಮೊದಲೆರಡು ಅಲೆಗಳಲ್ಲಿ, ದೇಶದಲ್ಲಿ ಮೂರೂವರೆ ಕೋಟಿಯಷ್ಟು ಜನರಿಗೆ ಕೊರೋನ ಸೋಂಕು ತಗಲಿದೆ ಎಂದು ಅಧಿಕೃತವಾಗಿ ಗುರುತಿಸಲಾಗಿದ್ದರೂ, ನಿಜವಾದ ಸೋಂಕಿತರ ಸಂಖ್ಯೆಯು ಅದರ 25-30 ಪಟ್ಟು, ಅಂದರೆ 90-105 ಕೋಟಿಯಷ್ಟು, ಇರಬಹುದೆಂದು ಅಂದಾಜಿಸಲಾಗಿದೆ. ದೇಶದ ವಿವಿಧ ಭಾಗಗಳಲ್ಲಿ ಸೆಪ್ಟೆಂಬರ್ 2021ರ ವೇಳೆಗೆ ಐಸಿಎಂಆರ್ ನಡೆಸಿರುವ ಸಮೀಕ್ಷೆಗಳಲ್ಲಿ ಶೇ. 70-95ರಷ್ಟು ಜನರಲ್ಲಿ, ಸುಮಾರು 70% ಮಕ್ಕಳಲ್ಲೂ ಸಹ, ಕೊರೋನ ಸೋಂಕಿಗಿದಿರಾಗಿ ಪ್ರತಿಕಾಯಗಳಿರುವುದನ್ನು ಗುರುತಿಸಲಾಗಿದೆ. ಅಂದರೆ ಸುಮಾರು 100-110ಕೋಟಿಯಷ್ಟು ಜನರು ಈಗಾಗಲೇ ಸೋಂಕಿತರಾಗಿರಬಹುದು ಎನ್ನುವುದನ್ನು ಈ ಸಮೀಕ್ಷೆಗಳು ಕೂಡ ಸೂಚಿಸುತ್ತವೆ. ಕೊರೋನ ಕಾರಣಕ್ಕೆ 4,83,000 ಸಾವುಗಳಾಗಿವೆ ಎಂದು ಅಧಿಕೃತವಾಗಿ ಹೇಳ್ಲಾಗಿದ್ದರೂ, ಇದು 5-7 ಪಟ್ಟು ಹೆಚ್ಚಿರಬಹುದು ಎಂದು ಮೊದಲಿನಿಂದಲೂ ಅಂದಾಜಿಸಲಾಗಿತ್ತು. ಈಗ ಸಯನ್ಸ್ ವಿದ್ವತ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಯಲ್ಲಿ, ಒಟ್ಟು ಸುಮಾರು 32 ಲಕ್ಷ, ಅಂದರೆ ಅಧಿಕೃತ ವರದಿಗಳಿಗಿಂತ 6-7 ಪಟ್ಟು, ಸಾವುಗಳಾಗಿರಬಹುದೆಂದೂ, ಎಲ್ಲಾ ಕಾರಣಗಳಿಂದ ಆಗಿರುವ ಸಾವುಗಳು ಹಿಂದಿನ ವರ್ಷಗಳಿಗೆ ಹೋಲಿಸಿದರೆ 27% ಹೆಚ್ಚಿರಬಹುದೆಂದೂ ಹೇಳಲಾಗಿದೆ. ಈ ಅಂಖಿ-ಅಂಶಗಳನ್ನು ಪರಿಗಣಿಸಿದರೆ, ಭಾರತದಲ್ಲಿ ಕೋವಿಡ್ ಸೋಂಕಿತರಲ್ಲಿ 0.3%ರಷ್ಟು ಮೃತರಾಗಿರಬಹುದು ಎಂದಾಗುತ್ತದೆ; ಸೋಂಖಿನ ಆರಂಭದಲ್ಲೇ ಕೆಲವು ತಜ್ಞರು ಕೋವಿಡ್ ಭೀಕರ ಮಹಾಮಾರಿ ಅಲ್ಲವೆಂದೂ, ಸಾವಿನ ಪ್ರಮಾಣವು 0.07-0.5%ರಷ್ಟು ಇರಬಹುದೆಂದೂ ಹೇಳಿದ್ದರು, ಭಾರತದಲ್ಲಾಗಿರುವ ಸಾವುಗಳ ಪ್ರಮಾಣವು ಇದೇ ಮಟ್ಟದಲ್ಲಿದೆ. ಆದರೆ, ಸಿರಿವಂತ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಹಿರಿವಯಸ್ಕರ ಸಂಖ್ಯೆಯೂ, ಸಕ್ಕರೆ ಕಾಯಿಲೆ, ಬೊಜ್ಜು, ಹೃದ್ರೋಗ ಇತ್ಯಾದಿಗಳುಳ್ಳವರ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಿರುವುದರಿಂದ ಇಲ್ಲಿ ಸಾವಿನ ಪ್ರಮಾಣವು ಇನ್ನೂ ಕಡಿಮೆಯಿರಬೇಕಿತ್ತು, ಮೇಲೆ ಹೇಳಿದಂತೆ ವೈಜ್ಞಾನಿಕವಾಗಿ, ಜಾಣ್ಮೆಯಿಂದ ಕೊರೋನ ನಿಭಾಯಿಸಿದ್ದರೆ ಅದನ್ನು ಸಾಧಿಸುವುದಕ್ಕೂ ಸಾಧ್ಯವಿತ್ತು.

ಆರಂಭಿಕ ಅಂದಾಜೊಂದರಂತೆ, ವಿಶ್ವದಾದ್ಯಂತ ಕೊರೋನ ನೆಪದ ಲಾಕ್ ಡೌನ್ ಗಳಿಂದ ಸುಮಾರು 30 ಕೋಟಿಯಷ್ಟು ಜನರು ಊಟವಿಲ್ಲದೆ ಬಳಲಿದ್ದಾರೆ, ಆರು ಕೋಟಿಗೂ ಹೆಚ್ಚು ಜನರು ತೀವ್ರವಾದ, ಅಸಹನೀಯವಾದ ಬಡತನಕ್ಕೆ ತಳ್ಳಲ್ಪಟ್ಟಿದ್ದಾರೆ, 118 ಕೋಟಿ, ಅಂದರೆ 70%ದಷ್ಟು, ಮಕ್ಕಳು ಕಲಿಕೆಯಿಂದ ವಂಚಿತರಾಗಿದ್ದಾರೆ, ಮೂರು ಕೋಟಿಗೂ ಹೆಚ್ಚು ಲೈಂಗಿಕ ದೌರ್ಜನ್ಯದ ಪ್ರಕರಣಗಳಾಗಿವೆ, ಪ್ರವಾಸೋದ್ಯಮವೊಂದರಲ್ಲೇ 12 ಕೋಟಿಯಷ್ಟು ಮಂದಿ ಕೆಲಸವನ್ನು ಕಳೆದುಕೊಂಡಿದ್ದಾರೆ, 1200000 ಕೋಟಿ ಡಾಲರ್ ನಷ್ಟು ಆರ್ಥಿಕ ನಷ್ಟವಾಗಿದೆ, ಮಕ್ಕಳೂ ಸೇರಿದಂತೆ ಎಲ್ಲ ವಯೋವರ್ಗಗಳವರಲ್ಲಿ ಮಾನಸಿಕ ಸಮಸ್ಯೆಗಳಲ್ಲಿ ವಿಪರೀತವಾದ ಹೆಚ್ಚಳವಾಗಿದೆ, ಆತ್ಮಹತ್ಯೆಗಳು ಹೆಚ್ಚಿವೆ. ಅತಿ ಕಠಿಣ, ಅತಿ ಅಮಾನವೀಯ ಲಾಕ್ ಡೌನ್ ಮಾಡಿದ ಭಾರತದಲ್ಲಿ ಈ ಎಲ್ಲಾ ಸಮಸ್ಯೆಗಳೂ ಅತ್ಯಧಿಕವಾಗಿ ಉಂಟಾಗಿವೆ. ಲಾಕ್ ಡೌನ್ ಮಾಡಿದ ಹೆಚ್ಚಿನ ಪಾಶ್ಚಿಮಾತ್ಯ ದೇಶಗಳಲ್ಲಿ ಜನರಿಗೆ ಸಂಬಳ ಮತ್ತಿತರ ಆರ್ಥಿಕ ನೆರವನ್ನು ಅಲ್ಲಿನ ಸರಕಾರಗಳು ಒದಗಿಸಿದ್ದರೆ, ಭಾರತದಲ್ಲಿ ರಾತೋರಾತ್ರಿ ಲಾಕ್ ಡೌನ್ ಮಾಡಿ ಜನರನ್ನು ಅವರ ಪಾಡಿಗೆ ಬಿಡಲಾಯಿತು, ಲಕ್ಷಗಟ್ಟಲೆ ಕೋಟಿಯ ನೆರವೆಂಬ ಘೋಷಣೆ ಮಾಡಿ ಏನನ್ನೂ ಕೊಡದೇ ಅಣಕಿಸಲಾಯಿತು. ಕೊರೋನ ನೆಪದಲ್ಲಿ ಮಾಡಿದ ಲಾಕ್ ಡೌನ್, ಶಾಲೆ-ಕಾಲೇಜುಗಳ ಮುಚ್ಚುಗಡೆ, ದಿನಕ್ಕೊಂದು ನಿರ್ಧಾರಗಳ ಅನಿಶ್ಚಿತತೆಗಳಿಂದ ದೇಶದ ಆರ್ಥಿಕತೆಯು 40% ಕುಸಿಯಿತು, ಲಕ್ಷಗಟ್ಟಲೆ ಕೋಟಿ ನಷ್ಟವಾಯಿತು, ಹತ್ತು ಕೋಟಿಗೂ ಹೆಚ್ಚು ಜನರು ನಿರುದ್ಯೋಗಿಗಳಾದರು, 20-30 ಕೋಟಿ ಜನರು ಬಡತನಕ್ಕೆ ತಳ್ಳಲ್ಪಟ್ಟರು, ವಲಸೆ ಕಾರ್ಮಿಕರು ದಾರಿಗಳಲ್ಲೇ ಸತ್ತರು, ಅಂಥವರಿದ್ದರೆನ್ನುವುದೇ ತನಗೆ ತಿಳಿದಿಲ್ಲವೆಂದು ಕೇಂದ್ರ ಸರಕಾರವು ಹೇಳಿತು, ಮಕ್ಕಳ ಕಲಿಕೆಯೂ, ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗಳೂ ಶಾಶ್ವತವಾಗಿ ಕುಂಠಿತಗೊಂಡವು. ಕೊರೋನ ನಿಭಾವಣೆಯಲ್ಲಿ ಒಂದರ ಹಿಂದೊಂದರಂತೆ ಕೈಗೊಂಡ ತಪ್ಪಾದ ಹಾಗೂ ಅವೈಜ್ಞಾನಿಕವಾದ ನಿರ್ಧಾರಗಳಿಂದಾಗಿ ಭಾರತವು ಅಭಿವೃದ್ಧಿಶೀಲ ದೇಶಗಳಲ್ಲೇ ಅತಿ ಹೆಚ್ಚು ನಿರುದ್ಯೋಗವನ್ನು ಹೊಂದುವಂತಾಗಿದೆ; ಭಾರತದಲ್ಲಿ ಈ ಡಿಸೆಂಬರ್ 2021ರ ವೇಳೆಗೆ ನಿರುದ್ಯೋಗದ ಪ್ರಮಾಣವು 8%ಕ್ಕೇರಿದ್ದರೆ, ಬಾಂಗ್ಲಾ ದೇಶದಲ್ಲಿ 5.3%, ಮೆಕ್ಸಿಕೋದಲ್ಲಿ 4.7%, ವಿಯೆಟ್ನಾಂನಲ್ಲಿ 2.3% ಇತ್ತು. ಭಾರತದಲ್ಲೀಗ ನಿಯತ ಸಂಬಳದ ನೌಕರರಲ್ಲಿ 45% ನೌಕರರು ತಿಂಗಳಿಗೆ ರೂ. 9750ಕ್ಕಿಂತ ಕಡಿಮೆ, ಅಂದರೆ ಕನಿಷ್ಠ ದಿನಗೂಲಿಯಿರಬೇಕೆಂದು 2019ರಲ್ಲಿ ಪ್ರಸ್ತಾಪಿಸಿ ಅಲ್ಲಿಗೇ ಬಿಡಲಾಗಿದ್ದ ರೂ. 375ಕ್ಕಿಂತಲೂ ಕಡಿಮೆ, ಮೊತ್ತವನ್ನು ಪಡೆಯುತ್ತಿದ್ದಾರೆ. ಅಂದರೆ ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ದಿಮೆಗಳನ್ನೂ, ವ್ಯವಹಾರಗಳನ್ನೂ ನಾಶ ಮಾಡಿ, ಜನರನ್ನು ನಿರುದ್ಯೋಗಿಗಳನ್ನಾಗಿ ಮಾಡಿ, ಅವರ ಸಂಬಳವನ್ನು ಸ್ಥಗಿತಗೊಳಿಸಿ ಯಾ ಕಡಿತ ಮಾಡಿ, ಇನ್ನು ಹಲವು ವರ್ಷಗಳವರೆಗೆ ಅದು ಹೆಚ್ಚದಂತೆ ಮಾಡಿ, ದೇಶದ ಸಾರ್ವಜನಿಕ ಆಸ್ತಿಯೆಲ್ಲವನ್ನೂ ಅಪಮೌಲ್ಯ ಮಾಡಿ, ಇವೆಲ್ಲವನ್ನೂ ಒಬ್ಬಿಬ್ಬರು ಬಲಾಢ್ಯ ಕಾರ್ಪರೇಟ್ ಧನಿಕರಿಗೆ ಒಪ್ಪಿಸುವ ಮಹಾ ಯೋಜನೆಯ ಭಾಗವಾಗಿ ಕೊರೋನ ನೆಪದಲ್ಲಿ ಲಾಕ್ ಡೌನ್ ಮಾಡಲಾಯಿತು, ಜನರನ್ನು ನಿಯಂತ್ರಿಸಿ ತುಳಿಯುವುದಕ್ಕೆ ಎಲ್ಲಾ ವ್ಯವಸ್ಥೆಗಳನ್ನೂ ಗಟ್ಟಿಗೊಳಿಸಲಾಯಿತು ಎನ್ನುವುದು ವ್ಯಕ್ತವಾಗುತ್ತದೆ. ಲಾಕ್ ಡೌನ್ ಮಾಡದಿದ್ದರೆ ದೇಶವು 20 ವರ್ಷ ಹಿಂದಕ್ಕೆ ಹೋಗುತ್ತದೆ ಎಂದು ಪ್ರಧಾನ ಮಂತ್ರಿ ಹೇಳಿದ್ದಕ್ಕೆ ವ್ಯತಿರಿಕ್ತವಾಗಿ ಹಾಗೆ ಲಾಕ್ ಡೌನ್ ಮಾಡಿದ್ದರಿಂದಲೇ ದೇಶವು ಇಪ್ಪತ್ತಲ್ಲ, 40 ವರ್ಷ ಹಿಂದಕ್ಕೆ ಹೋಯಿತು, ಮಾತ್ರವಲ್ಲ, ಮಕ್ಕಳ, ವಿದ್ಯಾರ್ಥಿಗಳ ಕಲಿಕೆಯೆಲ್ಲವೂ ಮಣ್ಣುಪಾಲಾಗಿ, ಎಲ್ಲಾ ವಲಯಗಳ ಬೆಳವಣಿಗೆಗಳೂ ಸ್ತಬ್ಧವಾಗಿ ಮುಂದಿನ 40 ವರ್ಷಗಳೂ ನಾಶವಾದವು. ಇಂಥ ಸರ್ವನಾಶಕ್ಕೆ ಕಾರಣವಾದ ಅವೈಜ್ಞಾನಿಕವಾದ, ಅಮಾನವೀಯವಾದ ಲಾಕ್ ಡೌನ್‌ನಿಂದ ಕೊರೋನ ಸೋಂಕು ನಿಯಂತ್ರಣಕ್ಕೆ ಬಂತೇ? ಅದೂ ಇಲ್ಲ.

ಈ ಅವೈಜ್ಞಾನಿಕ ಲಾಕ್ ಡೌನ್‌ಗಳ ನಿಷ್ಪ್ರಯೋಜಕತೆಯನ್ನು, ಅವುಗಳಿಂದಾಗಬಹುದಾದ ಸರ್ವತ್ರವಾದ ಹಾನಿಗಳನ್ನು, ಈ ನಿರ್ಧಾರಗಳ ಹಿಂದಿದ್ದ ಶಕ್ತಿಗಳ ದುಷ್ಟ ಹಿತಾಸಕ್ತಿಗಳನ್ನು, ಅವುಗಳ ಹುನ್ನಾರಗಳನ್ನು ಮೊದಲೇ ಕಂಡುಕೊಂಡು, ಅವನ್ನು ವಿರೋಧಿಸುವ, ಆ ಬಗ್ಗೆ ಜನರಿಗೆ ಮನದಟ್ಟು ಮಾಡುವ ಕೆಲಸಗಳನ್ನು ಮಾಡಬೇಕಿದ್ದ ಪ್ರಜ್ಞಾವಂತರೆನಿಸಿಕೊಂಡವರು, ಎಡಪಂಥೀಯ ಹೋರಾಟಗಾರರೆಂದು ಹೇಳಿಕೊಳ್ಳುವವರು, ಬಹುತೇಕ ಎಲ್ಲಾ ವೈದ್ಯರು ಮತ್ತವರ ಸಂಘಟನೆಗಳು ಎಲ್ಲರೂ ಕೊರೋನ ಕಾಲದಲ್ಲಿ ಸಂಪೂರ್ಣವಾಗಿ ವಿಫಲರಾದರು, ತಾವೂ ಈ ಹುನ್ನಾರಗಳಿಗೆ ಬಲಿಯಾದರು; ಲಾಕ್ ಡೌನ್ ಅನ್ನು ಪ್ರಶ್ನಿಸಿ ವಿರೋಧಿಸುವ ಬದಲಿಗೆ ಅದನ್ನು ಬೆಂಬಲಿಸಿದರು, ಮಾತ್ರವಲ್ಲ, ಅದು ಇನ್ನಷ್ಟು ಉಗ್ರವಾಗಿರಬೇಕು, ಇನ್ನಷ್ಟು ದೀರ್ಘಾವಧಿಯದಾಗಿರಬೇಕು ಎಂದು ಬೇಡಿದರು, ಒತ್ತಾಯಿಸಿದರು. ಲಾಕ್ ಡೌನ್‌ನ ಕರಾಳತೆಯನ್ನು, ಶಾಲೆ-ಕಾಲೇಜುಗಳ ಮುಚ್ಚುಗಡೆಯನ್ನು ಪ್ರಶ್ನಿಸಿ ವಿರೋಧಿಸಿದ ಕೆಲವೇ ಕೆಲವರನ್ನು, ತಮ್ಮ ಸಂಗಾತಿಗಳೇ ಆಗಿದ್ದವರನ್ನು, ಸಂದೇಹಿಸಿದರು, ದೂರಿದರು, ದೂರವಿಟ್ಟರು. ಇದು ಭಾರತದಲ್ಲಷ್ಟೇ ಆದದ್ದಲ್ಲ, ಬಹುತೇಕ ಎಲ್ಲ ದೇಶಗಳಲ್ಲೂ ಆಯಿತು. ಇವೆಲ್ಲದರ ದುಶ್ಫಲಗಳನ್ನು ಈಗಾಗಲೇ ಜನಸಾಮಾನ್ಯರೂ, ಮಕ್ಕಳೂ ಅನುಭವಿಸುತ್ತಿದ್ದಾರೆ, ಇನ್ನೂ ಹಲವು ದಶಕಗಳವರೆಗೆ ಅನುಭವಿಸಲಿದ್ದಾರೆ.

ಲಸಿಕೆಗಳ ಮೋಸ

ಲಾಕ್ ಡೌನ್ ದುರವಸ್ಥೆ ಹೀಗಿದ್ದರೆ, ಲಸಿಕೆಗಳ ಅವಸ್ಥೆಯು ಇನ್ನೂ ಕೆಟ್ಟದಿದೆ. ಹೊಸ ಕೊರೋನ ವೈರಸ್ ಗುರುತಿಸಲ್ಪಟ್ಟ ದಿನದಿಂದಲೇ ಅದರಿದಿರಿಗೆ ಲಸಿಕೆ ತಯಾರಿಸಲು ಸ್ಪರ್ಧೆ ಏರ್ಪಟ್ಟು ಒಂದು ವರ್ಷದೊಳಗೆ ನಾಲ್ಕೈದು ಲಸಿಕೆಗಳೂ ಸಿದ್ಧವಾದವು, ಅರೆಬರೆ ಪರೀಕ್ಷೆಗಳಾಗಿದ್ದರೂ, ಅವುಗಳ ಸಾಧಕ-ಬಾಧಕಗಳ ಬಗ್ಗೆ ಸಾಕಷ್ಟು ಮಾಹಿತಿಗಳೇ ಇಲ್ಲದಿದ್ದರೂ ಅವೆಲ್ಲಕ್ಕೆ ತುರ್ತು ಬಳಕೆಯ ಅನುಮತಿ ನೀಡಲಾಯಿತು; ನಾವೇನು ಕಡಿಮೆಯೆಂದು ಭಾರತವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಪ್ರಯೋಗಾರ್ಥ ಬಳಕೆಗೇ ಅನುಮತಿ ನೀಡಿತು, ಆ ಪ್ರಯೋಗಗಳಿಗೆ ಕೋವಿಡ್ ಯೋಧರೆಂದು ಅದುವರೆಗೆ ಚಪ್ಪಾಳೆ-ಹೂಮಳೆಗೆರೆದಿದ್ದ ಆರೋಗ್ಯ ಕಾರ್ಯಕರ್ತರನ್ನೇ ಬಳಸಿಕೊಳ್ಳುವುದಕ್ಕೆ ಅವಕಾಶ ನೀಡಲಾಯಿತು. ಆಧುನಿಕ ತಂತ್ರಜ್ಞಾನದಲ್ಲಿ ಕೋಟಿಗಟ್ಟಲೆ ಲಸಿಕೆಗಳನ್ನು ದಿನದಲ್ಲೇ ಉತ್ಪಾದಿಸುವ ಸಾಮರ್ಥ್ಯವಿರುವುದರಿಂದ ಬೇಗ ಬೇಗನೇ ಆದಷ್ಟು ಜನರಿಗೆ ಚುಚ್ಚುವ ಯೋಜನೆಗಳಾದವು.

ಲಸಿಕೆ ಹಾಕಿಸಿಕೊಂಡವರಿಗೆ ಲಸಿಕೆ ಪಾಸ್‌ಪೋರ್ಟ್ ಕೊಟ್ಟು ಲಸಿಕೆ ಹಾಕದವರನ್ನು ಎಲ್ಲವುಗಳಿಂದ ಹೊರಗುಳಿಸುವ ಹುನ್ನಾರಕ್ಕೆ ಲಸಿಕೆ ಹಾಕುವಿಕೆಯನ್ನು ಆರಂಭಿಸಿದಾಗಲೇ ಚಾಲನೆ ನೀಡಲಾಗಿತ್ತು. ಆದರೆ ಅಂಥದೊಂದು ವ್ಯವಸ್ಥೆ ಬರಬಹುದು ಎಂದು ನಂಬುವುದಕ್ಕೇ ಸಾಧ್ಯವಿರಲಿಲ್ಲ, ಭಾರತವೂ ಸೇರಿದಂತೆ ಅನೇಕ ದೇಶಗಳು ಡಿಸೆಂಬರ್ 2020ರ ಹೊತ್ತಲ್ಲಿ ಅದನ್ನು ಬಹಿರಂಗವಾಗಿ ವಿರೋಧಿಸಿದ್ದವು. ಆದರೆ ಒಂದೇ ವರ್ಷದಲ್ಲಿ, 2021ರ ಡಿಸೆಂಬರ್ ಹೊತ್ತಿಗೆ, ಲಸಿಕೆ ಪಾಸ್‌ಪೋರ್ಟ್ ಬಂದದ್ದಷ್ಟೇ ಅಲ್ಲ, ಲಸಿಕೆ ಹಾಕಿಸಿಕೊಳ್ಳದವರನ್ನು ಒಳಸೇರಿಸದಿರುವುದು, ಹೊರಹಾಕುವುದು ಭಾರತವೂ ಸೇರಿದಂತೆ ಅನೇಕ ದೇಶಗಳಲ್ಲಿ ಸಾಮಾನ್ಯವಾಯಿತು; ಲಸಿಕೆ ಹಾಕಿಸಿಕೊಂಡವರು ಹೀರೋಗಳೆಂದೂ, ಹಾಕಿಸಿಕೊಳ್ಳದವರು ಘನಘೋರ ವಿಲನ್‌ಗಳೆಂದೂ ಬಿಂಬಿಸಲಾಯಿತು; ನಮ್ಮ ರಾಜ್ಯದಲ್ಲಂತೂ ಲಸಿಕೆ ಹಾಕಿಸದ ಮಕ್ಕಳು ಕಾಲೇಜಿಗೆ ಹೋಗುವಂತಿಲ್ಲ, ಲಸಿಕೆ ಹಾಕಿಸದವರ ಮಕ್ಕಳು ಶಾಲೆಗೆ ಹೋಗುವಂತಿಲ್ಲ ಎಂಬ ಅಸಾಂವಿಧಾನಿಕವಾದ, ಅಮಾನವೀಯವಾದ, ದುಷ್ಟ ನೀತಿಗಳನ್ನು ತರಲಾಯಿತು. ಪ್ರಗತಿಪರರು, ಮಾನವ ಹಕ್ಕುಗಳ ಹೋರಾಟಗಾರರು, ಮಕ್ಕಳ ಹಕ್ಕುಗಳ ರಕ್ಷಕರು ಎಂದೆಲ್ಲ ತಮ್ಮನ್ನು ತಾವು ಕರೆದುಕೊಳ್ಳುತ್ತಿದ್ದವರೆಲ್ಲರೂ ಎಲ್ಲೂ ಕಾಣದಂತೆ ಮಾಯವಾದರು.

ಈ ಲಸಿಕೆಗಳನ್ನು ಕೊಡಲಾರಂಭಿಸಿದಾಗ ಇವು ಎರಡನೇ ಅಲೆಯನ್ನು ತಡೆಯಲಿವೆ, ಯಾರಲ್ಲೂ ರೋಗವು ತೀವ್ರಗೊಳ್ಳದಂತೆ, ಯಾರೊಬ್ಬರೂ ಸಾಯದಂತೆ ಕಾಪಾಡಲಿವೆ, ಅವು ಅತಿ ಸುರಕ್ಷಿತವೂ ಆಗಿವೆ ಎಂದೆಲ್ಲ ಹೇಳಲಾಯಿತು. ಆದರೆ 2021ರಲ್ಲಿ ಕೊರೋನ ವೈರಸಿನ ಡೆಲ್ಟಾ ವಿಧವು ಹರಡತೊಡಗಿದಾಗ, ಅದು ಸೋಂಕದಂತೆ ತಡೆಯುವಲ್ಲಿ ಈ ಲಸಿಕೆಗಳು ಕೇವಲ 50-75% ಅಷ್ಟೇ ಸಮರ್ಥವಾಗಿವೆ ಎಂದು ಕಂಡುಬಂದಿತು; ಹಾಗಿದ್ದರೂ ಅವು ಸಾವನ್ನು ತಡೆದೇ ತಡೆಯುತ್ತವೆ ಎಂದು ಸಮರ್ಥಿಸಿಕೊಳ್ಳಲಾಯಿತು. ಆದರೆ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದ ಅನೇಕರು, ವೈದ್ಯರೂ ಸೇರಿ, ಕೊರೋನ ಬಿಗಡಾಯಿಸಿ ಮೃತಪಟ್ಟ ವರದಿಗಳು ಅಲ್ಲಲ್ಲಿಂದ ಬಂದರೂ, ಅಧಿಕೃತ ಮಾಹಿತಿಯನ್ನು ಮುಚ್ಚಿಡಲಾಯಿತು. ಮತ್ತೀಗ ಹೊಸ ಒಮಿಕ್ರಾನ್ ವಿಧವು ಕಂಡುಬಂದಾಗ ಅದರ ಸೋಂಕನ್ನು ತಡೆಯುವಲ್ಲಿ ಎಲ್ಲಾ ಲಸಿಕೆಗಳೂ ಸಂಪೂರ್ಣವಾಗಿ ವಿಫಲವಾಗಿವೆ; ಲಸಿಕೆಗಳ ವೈಫಲ್ಯವನ್ನು ಒಪ್ಪಿಕೊಳ್ಳುವ ಬದಲಿಗೆ ಲಸಿಕೆ ಪಡೆಯದವರ ಮೂಲಕ ಹೊಸ ವಿಧಗಳು ಹುಟ್ಟುತ್ತಿವೆ ಎಂದು ದೂಷಿಸಲಾಗುತ್ತಿದೆ. ಜೊತೆಗೆ, ಎರಡು ಡೋಸ್ ಸಾಕಾಗವು, ಮೂರನೆಯದನ್ನು ಹಾಕಿಸಿಕೊಳ್ಳಬೇಕು ಎಂದು ಒತ್ತಾಯಿಸಲಾಗುತ್ತಿದೆ, ಇಸ್ರೇಲ್ ನಲ್ಲಿ ಮೂರು ಡೋಸ್‌ಗಳೂ ವಿಫಲವಾದಾಗ ನಾಲ್ಕನೆಯ ಡೋಸ್ ಪಡೆಯಬೇಕು ಎಂಬ ಹೊಸ ನೀತಿಯನ್ನು ಮಾಡಲಾಗಿದೆ! ಅಲ್ಲಿಗೆ, ಲಸಿಕೆ ಪಡೆದು ಪಾಸ್‌ಪೋರ್ಟ್ ಹಿಡಿದುಕೊಂಡವರು ಲಸಿಕೆ ಪಡೆಯದೆ, ಪಾಸ್‌ಪೋರ್ಟ್ ಇಲ್ಲದವರ ಸಾಲಿಗೇ ಬಂದು ನಿಲ್ಲುವಂತಾಗಿದೆ!

ಈ ಲಸಿಕೆಯ ನಿಯಮಗಳೂ ಅದೆಷ್ಟು ಅಸಂಬದ್ಧವಾಗಿವೆ ಎನ್ನುವುದಕ್ಕೆ ಆಸ್ಟ್ರೇಲಿಯಾ ಓಪನ್ ಟೆನಿಸ್ ಪಂದ್ಯಗಳಿಗೆ ತೆರಳಿದ್ದ ಅಗ್ರ ಶ್ರೇಯಾಂಕದ ಆಟಗಾರ, ಕಳೆದ ವರ್ಷ ಅದೇ ಆಸ್ಟ್ರೇಲಿಯನ್ ಓಪನ್ ವಿಜೇತರಾಗಿದ್ದ ನೊವಾಕ್ ಜಾಕೋವಿಕ್ ಅವರನ್ನು ನಡೆಸಿಕೊಂಡ ರೀತಿಯೇ ಸಾಕ್ಷಿಯಾಗಿದೆ. ಲಸಿಕೆ ಪಡೆಯಲು ನಿರಾಕರಿಸಿ, ಕಳೆದ ಡಿಸೆಂಬರ್‌ನಲ್ಲಿ ಕೋವಿಡ್ ತಗಲಿ ಕೂಡಲೇ ಚೇತರಿಸಿಕೊಂಡಿದ್ದ ಜಾಕೋವಿಕ್ ಅವರಿಗೆ 2022ರ ಆಸ್ಟ್ರೇಲಿಯಾ ಓಪನ್‌ನಲ್ಲಿ ಆಡಲು ಪಂದ್ಯವು ನಡೆಯುವ ಮೆಲ್ಬೋರ್ನ್ ನಗರವಿರುವ ವಿಕ್ಟೋರಿಯಾ ಪ್ರಾಂತ್ಯದ ಆಡಳಿತವು ಅನುಮತಿ ನೀಡಿತ್ತು, ಆಸ್ಟ್ರೇಲಿಯಾ ಸರಕಾರವು ವೀಸಾವನ್ನೂ ನೀಡಿತ್ತು. ಆದರೆ ಮೆಲ್ಬೋರ್ನ್‌ಗೆ ಬಂದಿಳಿದ ಜಾಕೋವಿಕ್ ಅವರನ್ನು ಲಸಿಕೆ ಪಡೆದಿಲ್ಲದ ಕಾರಣಕ್ಕೆ ದೇಶದೊಳಕ್ಕೆ ಪ್ರವೇಶಿಸಲು ಅನುಮತಿಯಿಲ್ಲವೆಂದು ಅಧಿಕಾರಿಗಳು ವಿಮಾನತಾಣದಲ್ಲೇ ತಡೆದರು, ಹೋಟೆಲ್ ಒಂದರಲ್ಲಿ ಬಂಧಿಸಿಟ್ಟರು. ನಿಯಮಗಳು ಎಲ್ಲರಿಗೂ ಒಂದೇ, ಜಾಕೋವಿಕ್ ಮರಳಿ ಹೋಗಬೇಕು ಎಂದು ಆಸ್ಟ್ರೇಲಿಯಾ ಸರಕಾರವೂ, ಮಾಧ್ಯಮಗಳೂ ಘರ್ಜಿಸಿದವು. ಇದೆಲ್ಲ ನಡೆಯುತ್ತಿದ್ದಾಗ, ಅದೇ ಆಸ್ಟ್ರೇಲಿಯಾದಲ್ಲಿ ಲಸಿಕೆ ಪಡೆಯಲು ಅರ್ಹರಿದ್ದವರಲ್ಲಿ 8% ಜನರು ಇನ್ನೂ ಲಸಿಕೆಯನ್ನು ಪಡೆದಿರಲಿಲ್ಲ, ಅದೇ ವಿಕ್ಟೋರಿಯಾ ಪ್ರಾಂತ್ಯದಲ್ಲಿ ಲಸಿಕೆ ಪಡೆದಿದ್ದವರಲ್ಲೂ ಕೊರೋನ ಸೋಂಕು ವಿಪರೀತವಾಗಿ ಹರಡುತ್ತಾ ದಿನಕ್ಕೆ 50 ಸಾವಿರಕ್ಕೂ ಹೆಚ್ಚು ಪ್ರಕರಣಗಳಾಗುತ್ತಿದ್ದವು. ಅಂದರೆ ತನ್ನದೇ 8% ಜನರು ಲಸಿಕೆ ಪಡೆಯದೇ ಇದ್ದರೂ, ತನ್ನಲ್ಲೇ ದಿನಕ್ಕೆ 50 ಸಾವಿರಕ್ಕೂ ಹೆಚ್ಚು ಜನರು, ಲಸಿಕೆ ಪಡೆದಿದ್ದರೂ, ಕೊರೋನ ಸೋಂಕನ್ನು ಪಡೆಯುತ್ತಿದ್ದರೂ, ಒಬ್ಬ ಆರೋಗ್ಯವಂತನಾದ, ಕೊರೋನ ಸೋಂಕಿಲ್ಲದೇ ಇದ್ದ, ತಾನೇ ವೀಸಾ ನೀಡಿ ಕರೆದಿದ್ದ ಅಗ್ರಗಣ್ಯ ಆಟಗಾರನನ್ನು ಮಹಾಪರಾಧಿಯಂತೆ ಆಸ್ಟ್ರೇಲಿಯಾ ಸರಕಾರವು ಬಂಧಿಸಿಟ್ಟಿತು! ಜಾಕೋವಿಚ್ ಮಣಿಯಲಿಲ್ಲ; ನ್ಯಾಯಾಲಯದ ಕದ ತಟ್ಟಿದರು, ಜಾಕೋವಿಚ್ ಅವರು ವಿಶ್ವದ ಅತ್ಯುತ್ತಮ ವೈದ್ಯಕೀಯ ತಜ್ಞರ ಶಿಫಾರಸುಗಳನ್ನು ಹಿಡಿದುಕೊಂಡೇ ಬಂದಿರುವಾಗ ಅದಕ್ಕಿಂತ ಹೆಚ್ಚೇನು ಮಾಡಬೇಕು ಎಂದು ಸರಕಾರವನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಧೀಶರು ಜಾಕೋವಿಚ್ ಅವರನ್ನು ತಕ್ಷಣವೇ ಬಿಡುಗಡೆಗೊಳಿಸುವಂತೆ ಆದೇಶ ನೀಡಿದರು!

ಕೆಲವು ಮುಂದುವರಿದವೆನ್ನಲಾಗುವ ದೇಶಗಳಲ್ಲಿ ಮಾಡಿರುವ ಲಸಿಕೆಯ ನಿಯಮಗಳು ಕೂಡಾ ತೀರಾ ಅಸಂಬದ್ಧವಾಗಿವೆ. ಅಮೆರಿಕ, ಬ್ರಿಟನ್, ಫ್ರಾನ್ಸ್, ಕೆನಡಾಗಳಂತಹ ದೇಶಗಳಲ್ಲಿ ಎಲ್ಲಾ ಆರೋಗ್ಯಕರ್ಮಿಗಳು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕೆಂದೂ, ಇಲ್ಲವಾದರೆ ಕೆಲಸಕ್ಕೆ ಬರುವಂತಿಲ್ಲವೆಂದೂ ನಿಯಮಗಳನ್ನು ಮಾಡಲಾಗಿದೆ. ಅಮೆರಿಕಾದಲ್ಲಿ ಕೆಲವರು ಇದನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋದರೂ ಉಪಯೋಗವಾಗಲಿಲ್ಲ. ಈ ದೇಶಗಳ ಆಸ್ಪತ್ರೆಗಳಲ್ಲಿ ಕೊರೋನ ತೀವ್ರವಾಗಿದ್ದ ದಿನಗಳಿಂದಲೂ ತೀವ್ರ ನಿಗಾ ಘಟಕಗಳಲ್ಲಿ ದುಡಿಯುತ್ತಿರುವ ಅನೇಕ (ಕೆಲವೆಡೆ ಶೇ. 40ರವರೆಗೂ) ವೈದ್ಯರು, ದಾದಿಯರು, ಜೀವರಕ್ಷಕ ಉಪಕರಣಗಳ ತಂತ್ರಜ್ಞರು ಈ ಲಸಿಕೆಗಳನ್ನು ಪಡೆಯಲು ನಿರಾಕರಿಸಿದ್ದಾರೆ, ಅಂಥವರು ಇನ್ನು ಕೆಲಸಕ್ಕೆ ಬರಬಾರದೆಂದು ಈಗಾಗಲೇ ಹೇಳಿಯಾಗಿದೆ. ಈಗ ಒಮಿಕ್ರಾನ್ ಹರಡುತ್ತಿರುವಾಗ ಒಂದೆಡೆ ಲಸಿಕೆ ಪಡೆಯದವರನ್ನು ಮತ್ತೆ ಸೇರಿಸಲಾಗದ ಸ್ಥಿತಿ, ಇನ್ನೊಂದೆಡೆ ಲಸಿಕೆ ಪಡೆದ ಸಿಬ್ಬಂದಿಯಲ್ಲೂ ಬಹುತೇಕರು ಲಸಿಕೆಗಳ ವೈಫಲ್ಯದಿಂದ ಸೋಂಕಿಗೆ ತುತ್ತಾಗುತ್ತಿರುವ ಸ್ಥಿತಿಯುಂಟಾಗಿ ಆಸ್ಪತ್ರೆಗಳಲ್ಲಿ ಕೆಲಸಕ್ಕೆ ನುರಿತವರೇ ಇಲ್ಲದಂತಾಗಿದೆ, ಅದರಿಂದಾಗಿ ಈ ದೇಶಗಳ ಆರೋಗ್ಯ ಇಲಾಖೆಗಳು ಇಕ್ಕಟ್ಟಿಗೂ, ಗೊಂದಲಕ್ಕೂ ಬೀಳುವಂತಾಗಿದೆ. ಏನು ಮಾಡುವುದೆಂದು ತೋಚದೆ, ತಮ್ಮ ಹಿಂದಿನ ಆದೇಶಗಳು ಮೂರ್ಖವಾಗಿದ್ದವು ಎಂದು ಒಪ್ಪಿಕೊಳ್ಳಲೂ ಆಗದೆ, ಲಸಿಕೆ ಹಾಕಿಸಿಕೊಂಡವರು ಸೋಂಕಿನಿಂದ ಬಳಲುತ್ತಿದ್ದರೂ ಕೂಡ, ಅಥವಾ ಸೋಂಕಿನ ಲಕ್ಷಣಗಳು ತೊಡಗಿದ ಐದೇ ದಿನಗಳಲ್ಲಿ, ಆಸ್ಪತ್ರೆಗಳಲ್ಲಿ ಕರ್ತವ್ಯಕ್ಕೆ ಬರಬೇಕೆಂದು ಈ ಹೆಚ್ಚಿನ ದೇಶಗಳೀಗ ತಮ್ಮ ನೀತಿಗಳನ್ನು ಪರಿಷ್ಕರಿಸಿವೆ, ಇದು ತೀವ್ರ ಜಿಜ್ಞಾಸೆಗೂ, ಟೀಕೆಗಳಿಗೂ ಕಾರಣವಾಗಿದೆ. ಲಸಿಕೆಯಿಂದ ಸೋಂಕು ತಡೆಯಬಹುದು, ಲಸಿಕೆ ಪಡೆಯದವರು ಅಪಾಯಕಾರಿ ಎಂದೆಲ್ಲ ಲಸಿಕೆ ಕಂಪೆನಿಗಳು ಮುಂದಿಟ್ಟ ಆಧಾರರಹಿತ ಹೇಳಿಕೆಗಳನ್ನು ನಂಬಿ ತೀರಾ ಅಸಂಬದ್ಧವಾದ ನೀತಿಗಳನ್ನು ಮಾಡಿದ್ದು ಲಸಿಕೆಗಳು ವಿಫಲವಾಗುತ್ತಿದ್ದಂತೆ ಬೆತ್ತಲಾಗಿ ಹೋಗಿದೆ.

ಪ್ರಧಾನಿಗಳೇ ಲಾಕ್ ಡೌನ್ ಘೋಷಿಸಿದ್ದರೂ ಅದರ ಹೊಣೆಯನ್ನು ರಾಜ್ಯ ಸರಕಾರಗಳಿಗೆ ದಾಟಿಸಿದ್ದಂತೆಯೇ, ಲಸಿಕೆಗಳ ವಿಚಾರದಲ್ಲೂ ಕೇಂದ್ರ ಸರಕಾರವು ಅಧಿಕೃತವಾಗಿ ಹೇಳುವುದೊಂದು, ತಳಮಟ್ಟದಲ್ಲಿ ಜನರ ನಡುವೆ ಮಾಡುವುದೇ ಇನ್ನೊಂದು ಎಂದಾಗಿದೆ. ಲಸಿಕೆಗಳು ಕಡ್ಡಾಯವಲ್ಲ, ಐಚ್ಛಿಕವಾಗಿವೆ; ಯಾವುದೇ ಯೋಜನೆ ಅಥವಾ ಕಾರ್ಯಕ್ರಮಗಳ ಫಲಾನುಭವಿಗಳು ಲಸಿಕೆ ಪಡೆಯದ ಕಾರಣಕ್ಕೆ ಅವನ್ನು ನಿರಾಕರಿಸಬಾರದು; ಲಸಿಕೆ ಪಡೆಯದವರ ವಿರುದ್ಧ ಯಾವುದೇ ತಾರತಮ್ಯ ಮಾಡುವಂತಿಲ್ಲ ಎಂದು ಕೇಂದ್ರ ಸರಕಾರ ಮತ್ತು ಅನೇಕ ರಾಜ್ಯ ಸರಕಾರಗಳ ಉನ್ನತ ಮಟ್ಟಗಳಿಂದ ಲಿಖಿತ ಆದೇಶಗಳಲ್ಲಿ, ನ್ಯಾಯಾಲಯಗಳಿಗೆ ಸಲ್ಲಿಸಲಾಗಿರುವ ಅಫಿಡವಿಟ್‌ಗಳಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಆದರೆ ಕೆಲವು ಜಿಲ್ಲಾಡಳಿತಗಳು, ಪೌರಾಡಳಿತಗಳು, ತಳಮಟ್ಟದ ಅಧಿಕಾರಿಗಳು, ಶಿಕ್ಷಣ ಸಂಸ್ಥೆಗಳು, ಉದ್ದಿಮೆಗಳು ಲಸಿಕೆ ಹಾಕುವುದು ಕಡ್ಡಾಯವೆಂದೂ, ಹಾಕಿಸಿಕೊಳ್ಳದಿದ್ದರೆ ಮಳಿಗೆ, ಚಿತ್ರಮಂದಿರ, ಕಚೇರಿ, ಶಾಲೆ, ಕಾಲೇಜು, ಕಾರ್ಖಾನೆ, ಉದ್ದಿಮೆಗಳಿಗೆ ಹೋಗುವಂತಿಲ್ಲವೆಂದೂ ನಿಯಮಗಳನ್ನು ಪ್ರಕಟಿಸಿದ್ದಾರೆ. ಇವನ್ನು ಕೆಲವು ರಾಜ್ಯಗಳ ಉಚ್ಚ ನ್ಯಾಯಾಲಯಗಳು ರದ್ದು ಪಡಿಸಿದ್ದರೆ, ಇನ್ನು ಕೆಲವು ಉಚ್ಚ ನ್ಯಾಯಾಲಯಗಳು ವಿಚಾರಣೆಯನ್ನೇ ನಡೆಸಿಲ್ಲ, ಅಥವಾ ಮುಂದೂಡುತ್ತಿವೆ; ಸರ್ವೋಚ್ಚ ನ್ಯಾಯಾಲಯದಲ್ಲೂ ವಿಚಾರಣೆ ನಡೆಯುತ್ತಲೇ ಇದೆ. ಈ ನಡುವೆ ಕರ್ನಾಟಕದಲ್ಲಿ  ಹೆತ್ತವರು ಲಸಿಕೆ ಹಾಕಿಸಿಕೊಳ್ಳದಿದ್ದರೆ ಮಕ್ಕಳು ಶಾಲೆಗೆ ಬರುವಂತಿಲ್ಲ ಎಂಬ ನಿಯಮವನ್ನು ಪ್ರಕಟಿಸಲಾಯಿತು, ಇದು ಮಕ್ಕಳ ಶಿಕ್ಷಣದ ಹಕ್ಕಿನ ನೇರವಾದ ಉಲ್ಲಂಘನೆಯಾಗುತ್ತದೆ ಎಂದು ಹಲವರು ಎತ್ತಿ ತೋರಿಸಿದಾಗ, ಅದನ್ನು ಹಿಂಪಡೆಯಲಾಗಿದೆ ಎಂದು ಸಚಿವರು ಹೇಳಿಕೆ ನೀಡಿದರು.

ಈಗ 12-18 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡುವುದಕ್ಕೆ ಆರಂಭಿಸಲಾಗಿದೆ. ಲಸಿಕೆಗಳ ಬಗ್ಗೆ ನಿರ್ಧರಿಸುವ ರಾಷ್ಟ್ರೀಯ ಸಮಿತಿಯ ಹಿರಿಯ ತಜ್ಞರಾದ ಡಾ। ಜಯಪ್ರಕಾಶ್ ಮುಳಿಯಿಲ್ ಅವರು ಮಕ್ಕಳಲ್ಲಿ ಕೋವಿಡ್ ಯಾವುದೇ ಸಮಸ್ಯೆಗಳನ್ನುಂಟು ಮಾಡದಿರುವುದರಿಂದ ಅವರಿಗೆ ಲಸಿಕೆ ನೀಡುವ ಅಗತ್ಯವಿಲ್ಲವೆಂದು ಸಮಿತಿಯು ಶಿಫಾರಸು ಮಾಡಿದೆ ಎಂದು ಹೇಳಿಕೆ ನೀಡಿದ ಎರಡೇ ದಿನಗಳ ಬಳಿಕ 12-18 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡುವುದಾಗಿ ಪ್ರಧಾನಿ ಘೋಷಿಸಿದರು! ಈ ಬಗ್ಗೆ ಸರಕಾರವು ಹೊರಡಿಸಿದ ಸುತ್ತೋಲೆಯಲ್ಲಿ 2007ರಲ್ಲಿ ಅಥವಾ ಮೊದಲು ಜನಿಸಿದ ಮಕಕ್ಳು ಲಸಿಕೆ ಪಡೇಯಲು ಅರ್ಹರಿರುತ್ತಾರೆ ಎಂದಷ್ಟೇ ಬರೆಯಲಾಗಿದ್ದರೆ, ಅದರ ಬೆನ್ನಿಗೆ ಯಾರ್ಯಾರೋ ಅಧಿಕಾರಿಗಳು ವಾಟ್ಸಪ್ ಇತ್ಯಾದಿಗಳಲ್ಲಿ ಶಾಲೆಗಳ ಮುಖ್ಯ ಶಿಕ್ಷಕರಿಗೆ ಕಳಿಸಿದ ಸಂದೇಶಗಳಲ್ಲಿ 2007 ಅಥವಾ ಅದಕ್ಕೆ ಮೊದಲು ಜನಿಸಿದ ಎಲ್ಲಾ ಮಕ್ಕಳಿಗೂ ಲಸಿಕೆ ನೀಡಲೇಬೆಕು ಎಂದು ಬರೆದರು. ಅದು ಇನ್ನಷ್ಟು ಮುಂದೆ ಹೋಗಿ, ಲಸಿಕೆ ಪಡೆಯದ ಮಕ್ಕಳು ಶಾಲೆಗೆ ಬರುವಂತಿಲ್ಲ, ಪರೀಕ್ಷೆ ಬರೆಯುವಂತಿಲ್ಲ ಎಂದೆಲ್ಲ ಒತ್ತಡಗಳನ್ನು ಹಾಕಲಾಗುತ್ತಿದೆ. ಮಕ್ಕಳಿಗೆ ಲಸಿಕೆಯೇ ಬೇಡ ಎಂದು ತಜ್ಞರು ಹೇಳಿದ್ದ ಎರಡೇ ದಿನಗಳಲ್ಲಿ ಅದು ಕಡ್ಡಾಯವಾಗಿ ಹಾಕಲೇ ಬೇಕು, ಅದಿಲ್ಲದಿದ್ದರೆ ಶಾಲೆಯಿಲ್ಲ, ಪರೀಕ್ಷೆಯಿಲ್ಲ ಎಂಬಲ್ಲಿಗೆ ಹೋಗಿದೆ. ಲಸಿಕೆ ಹಾಕುವ ಯೋಜನೆಯಲ್ಲಿ ಸುಳ್ಳುಗಳು, ಮೋಸದ ತಂತ್ರಗಳು, ಅನ್ಯಾಯದ ಒತ್ತಡಗಳು ಹೇಗೆ ಬಳಕೆಯಾಗುತ್ತಿವೆ ಎನ್ನುವುದನ್ನು ಇವು ತೋರಿಸುತ್ತವೆ.

ಮಕ್ಕಳಿಗೆ ಲಸಿಕೆ ಹಾಕುವ ಘೋಷಣೆಗೆ ಕೆಲವೇ ವಾರಗಳ ಮೊದಲು ಬೆಂಗಳೂರಿನ ಖಾಸಗಿ ಆಸ್ಪತ್ರೆಗಳ ಸಂಘದ ಅಧ್ಯಕ್ಷರು ಹಾಗೂ ಇಂಥ ಸಂಘಗಳ ಪ್ರೇರಕ ಶಕ್ತಿಯಾಗಿರುವ ಹೃದಯ ಸರ್ಜನರೊಬ್ಬರು ತಮ್ಮ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆಯ ದಾಸ್ತಾನು ಉಳಿದಿದೆ ಎಂದೂ, ಅದರ ಅವಧಿ ಮೀರಿ ಹೋಗಿದೆಯೆಂದೂ ಹೇಳಿಕೆ ನೀಡಿದ್ದರು. ಅದಾಗಿ ಕೆಲವೇ ದಿನಗಳಲ್ಲಿ ಆ ಲಸಿಕೆಯ ಅಂತ್ಯಾವಧಿಯನ್ನು ಆರು ತಿಂಗಳಿಂದ ಒಂದು ವರ್ಷಕ್ಕೆ ವಿಸ್ತರಿಸಬಹುದೆಂದು ಕೇಂದ್ರೀಯ ಔಷಧ ನಿಯಂತ್ರಣ ಸಂಸ್ಥೆಯು ಆದೇಶ ಹೊರಡಿಸಿತು. ಲಸಿಕೆಯ ವಯಲ್ ಅನ್ನು ಒಮ್ಮೆ ತೆರೆದರೆ ನಾಲ್ಕು ಗಂಟೆಗಳೊಳಗೆ ಎಲ್ಲಾ ಡೋಸ್ ಕೊಟ್ಟು ಮುಗಿಸಬೇಕು, ಬಳಿಕ ಅದನ್ನು ಬಳಸುವಂತಿಲ್ಲ ಎಂದಿದ್ದುದನ್ನು ಕೂಡ ಬದಲಿಸಿ, ಅವನ್ನು 28 ದಿನ ಬಳಸಬಹುದು ಎಂದು ಹೇಳಲಾಯಿತು. ಇದನ್ನು ಈ ಖಾಸಗಿ ಆಸ್ಪತ್ರೆಗಳವರು ಹೇಳಿಕೊಂಡು ಅವುಗಳ ಬಳಕೆಗೆ ರಾಜ್ಯ ಸರಕಾರದ ಒಪ್ಪಿಗೆ ಕೇಳೀದರು, ರಾಜ್ಯವು ಕೇಂದ್ರ ಆರೋಗ್ಯ ಇಲಾಖೆಗೆ ಬರೆಯಿತು, ಅದಕ್ಕುತ್ತರವಾಗಿ ಆರೋಗ್ಯ ಸಚಿವಾಲಯವು ಲಸಿಕೆಯ ಅವಧಿಯನ್ನಾಗಲೀ, ವಯಲ್ ಬಳಕೆಯ ವಿಧಾನವನ್ನಾಗಲೀ ಬದಲಿಸಲು ಸಾಧ್ಯವಿಲ್ಲ, ಅದಕ್ಕೆ ಅವಕಾಶವೂ ಇಲ್ಲ, ಆಯಾ ವಯಲ್‌ಗಳ ಲೇಬಲ್‌ಗಳಲ್ಲಿ ಮುದ್ರಿಸಿರುವಂತೆಯೇ ಅವನ್ನು ಬಳಸಬೇಕು ಎಂದು ಹೇಳಿತು. ಎರಡೆ ದಿನಗಳಲ್ಲಿ ಇದು ಕೂಡ ಬದಲಾಯಿತು, ಲಸಿಕೆಗಳಿಗೆ ಮರು ಲೇಬಲ್ ಮಾಡಿ ಬಳಸಬಹುದು ಎಂದಾಯಿತು! ನಮ್ಮಲ್ಲಿದ್ದ ಅವಧಿ ಮೀರಿದ 6 ಲಕ್ಷ ಲಸಿಕೆ ಡೋಸ್‌ಗಳನ್ನು ಲೇಬಲ್ ಬದಲಿಸಲು ಕಂಪೆನಿಗೆ ಕಳಿಸಲಾಗಿದೆ, ಅದು ಬರುವುದಕ್ಕೆ 2 ವಾರಗಳಾಗುತ್ತವೆ, ಅದುವರೆಗೆ ಲಸಿಕೆ ಹಾಕಲು ಸಾಧ್ಯವಾಗದು, ಅವು ಮರಳಿ ಬಂದ ಬಳಿಕ ಮಕ್ಕಳಿಗೆ ಲಸಿಕೆ ನೀಡಲು ಬಳಸುತ್ತೇವೆ ಎಂದು ಸಂಘದ ಅಧ್ಯಕ್ಷರು ನೇರವಾಗಿ ಹೇಳಿದರು. ಇದನ್ನೂ, ಜೊತೆಗೆ, ಮಕ್ಕಳಲ್ಲಿ ಸಣ್ಣ ಮಟ್ಟಿನ ಪರೀಕ್ಷೆಗಳಷ್ಟೇ ಆಗಿವೆ ಎಂಬ ಆತಂಕವು ಪೋಷಕರಲ್ಲಿದೆ ಎಂಬುದನ್ನೂ ರಾಜ್ಯದ ಪ್ರಮುಖ ಪತ್ರಿಕೆಯು ವರದಿ ಮಾಡಿದ್ದಕ್ಕೆ ಉತ್ತರವಾಗಿ, ಕೊವ್ಯಾಕ್ಸಿನ್ ಉತ್ಪಾದಿಸುವ ಭಾರತ್ ಬಯೋಟೆಕ್ ಹೇಳಿಕೆಯನ್ನು ಬಿಡುಗಡೆ ಮಾಡಿ, ಈ ವರದಿಯು ಸುಳ್ಳೆಂದೂ, 6 ಲಕ್ಷವಲ್ಲ, ಒಂದು ಲಕ್ಷ ವಯಲ್‌ಗಳೆಂದೂ, ಸಣ್ಣ ಮಟ್ಟಿನದಲ್ಲ, 26000 ಮಂದಿಯಲ್ಲಿ ಪರೀಕ್ಷೆಗಳಾಗಿವೆಯೆಂದೂ ಹೇಳಿತು. ಪತ್ರಿಕೆಯು ಬರೆದಿದ್ದುದು ಮಕ್ಕಳಲ್ಲಿ ನಡೆಸಿದ ಅಧ್ಯಯನಗಳ ಬಗ್ಗೆಯಾಗಿದ್ದರೆ, ಕಂಪೆನಿಯು ಹೇಳಿದ್ದು ವಯಸ್ಕರಲ್ಲಿ ನಡೆಸಿದ ಅಧ್ಯಯನಗಳ ಬಗ್ಗೆಯಾಗಿತ್ತು ಎನ್ನುವುದು ಲಸಿಕೆಗಳ ಬಗ್ಗೆ ಅದೆಷ್ಟು ಅಪ್ರಾಮಾಣಿಕವಾಗಿ ವರ್ತಿಸಲಾಗುತ್ತಿದೆ ಎನ್ನುವುದನ್ನು ತೋರಿಸುತ್ತದೆ. ಇದೇ ಕಂಪೆನಿಯು ಮಕ್ಕಳಲ್ಲಿ ನಡೆಸಿದ ತನ್ನ ಲಸಿಕೆಗಳ ಪರೀಕ್ಷೆಗಳ ವರದಿಯನ್ನು ಮೆಡ್ಆರ್ಕೈವ್ಸ್‌ನಲ್ಲಿ ನವೆಂಬರ್ 2021ರಲ್ಲಿ ಪ್ರಕಟಿಸಿದ್ದು, ಅದರಲ್ಲಿ ಒಟ್ಟು 526 ಮಕ್ಕಳಲ್ಲಿ ಪರೀಕ್ಷೆಗಳನ್ನು ನಡೆಸಲಾಗಿದೆಯೆಂದೂ, ಅವರಲ್ಲಿ 12-18 ವಯೋಮಾನದ 176, 6-12 ವಯೋಮಾನದ 175, 2-6 ವಯೋಮಾನದ 175 ಮಕ್ಕಳಿದ್ದರು ಎಂದು ಹೇಳಿದೆ. ಈಗ ಲಸಿಕೆ ನೀಡುತ್ತಿರುವುದು 15-18 ವಯಸ್ಸಿನವರಿಗೆ ಎಂದಾಗ, ಈ ಲಸಿಕೆಯ ಅಧ್ಯಯನಗಳಲ್ಲಿ 12-18 ವಯಸ್ಸಿನ 176 ಮಕ್ಕಳಲ್ಲಿ 15-18 ವಯಸ್ಸಿನ ಮಕ್ಕಳು ಎಷ್ಟಿದ್ದರು ಎಂದು ಕಂಪೆನಿಯು ಹೇಳಬೇಕೇ ಹೊರತು, ವಯಸ್ಕರಾದ 26000 ಮಂದಿಯಲ್ಲಿ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಹೇಳುವುದೇಕೆ? ಒಂದು ಕಂಪೆನಿಯು ಹೀಗೆ ಹೇಳಿಕೆ ನೀಡುತ್ತಿದೆ ಎಂದಾಗ, ಅದನ್ನು ಪ್ರಶ್ನಿಸಬೇಕಾದ ವೈದ್ಯರು, ವಿಜ್ಞಾನಿಗಳು, ತಜ್ಞರು, ಮಾಧ್ಯಮದವರು, ಮಕ್ಕಳ ಹಕ್ಕುಗಳ ಹೋರಾಟಗಾರರು, ವಿರೋಧ ಪಕ್ಷಗಳವರು ಎಲ್ಲರೂ ಎಲ್ಲಿದ್ದಾರೆ, ಯಾಕೆ ಸುಮ್ಮನಿದ್ದಾರೆ, ಅವರಿಗೆಲ್ಲ ಏನಾಗಿದೆ ಎಂದು ಆಘಾತವಾಗುತ್ತಿದೆ. ದೇಶದ ಜನರ ಮೇಲೆ, ಮಕ್ಕಳ ಮೇಲೆ ಹೀಗೆಲ್ಲ ಇಷ್ಟೊಂದು ಸುಲಭವಾಗಿ ಸಾಧಕ-ಬಾಧಕಗಳ ಪುರಾವೆಯೇ ಇಲ್ಲದ ಲಸಿಕೆಗಳನ್ನು ಬಲಾತ್ಕಾರದಿಂದ, ಮೋಸದಿಂದ ಕೊಡುವುದು ಸಾಧ್ಯವಾಗುತ್ತಿದೆ ಎಂದರೆ ಅರ್ಥವೇನು?

ಔಷಧಗಳ ಆಟ

ಲಸಿಕೆಗಳದ್ದು ಹೀಗಾದರೆ ಕೊರೋನ ಚಿಕಿತ್ಸೆಗೆ ಔಷಧಗಳ ಮೋಸವು ಬೇರೆಯೇ ಇದೆ. ಕೊರೊನ ಸೋಂಕು ಹರಡತೊಡಗಿದಾಗ, ಮೇ 15, 2020ರಂದು, ರಾಜ್ಯ ಸರಕಾರದ ತಥಾತಹಿತ ತಜ್ಞರ ಸಮಿತಿಯೊಂದು ಕೊರೋನ ಚಿಕಿಸ್ತೆಯ ಕಾರ್ಯಸೂಚಿಯನ್ನು ಪ್ರಕಟಿಸಿತ್ತು. ಎಲ್ಲರನ್ನೂ ಆಸ್ಪತ್ರೆಯಲ್ಲಿ ದಾಖಲಿಸಿ, ಹೈಡ್ರಾಕ್ಸಿ ಕ್ಲೋರೊಕ್ವಿನ್, ಅಜಿತ್ರೋ ಮೈಸಿನ್, ವಿಟಮಿನ್ ಸಿ, ಜಿಂಕ್, ಒಸೆಲ್ಟಾಮಿವಿರ್, ರೆಂಡಿಸಿವಿರ್, ತೊಸುಲಿಜುಮಾಬ್, ಸ್ಟೀರಾಯ್ಡ್, ರಕ್ತ ಹೆಪ್ಪುಗಟ್ಟದಂತೆ ತಡೆಯುವ ಹೆಪಾರಿನ್, ಜೊತೆಗೆ ಇನ್ನೂ ಹಲಬಗೆಯ ಔಷಧಗಳನ್ನೂ, ಆಸ್ಪತ್ರೆಯಲ್ಲಿ ಮಾಡಬಹುದಾದ ಎಲ್ಲಾ ಬಗೆಯ ರಕ್ತ ಪರೀಕ್ಷೆಗಳು, ಇಸಿಜಿ, ಎದೆಯ ಎಕ್ಸ್ ರೇ, ಇಕೋ ಕಾರ್ಡಿಯೋಗ್ರಫಿ, ಸಿಟಿ ಸ್ಕಾನ್ ಇತ್ಯಾದಿ ಮಾಡಬೇಕೆಂದು ಅದರಲ್ಲಿ ಸೂಚಿಸಲಾಗಿತ್ತು. ಇದು ಸಂಪೂರ್ಣವಾಗಿ ಅವೈಜ್ಞಾನಿಕವೂ, ಅನಗತ್ಯವೂ, ವೆಚ್ಚದಾಯಕವೂ, ಅಪಾಯಕಾರಿಯೂ ಆಗಬಹುದಾದ್ದರಿಂದ ಅದನ್ನು ಕೂಡಲೇ ಹಿಂಪಡೆಯಬೇಕೆಂದು ಈ ಲೇಖಕನು ಆಗ್ರಹಿಸಿದ್ದೂ ಆಗಿತ್ತು. ಅದೇನೂ ಆಗಲಿಲ್ಲ, ಬದಲಿಗೆ ಈ ತಪ್ಪಾದ ಕಾರ್ಯಸೂಚಿಯೇ ಚಿಕಿತ್ಸೆಯ ಮಾನದಂಡವಾಗಿಬಿಟ್ಟಿತು. ಬಳಿಕ ಅದರಲ್ಲಿ ಡಾಕ್ಸಿಸೈಕ್ಲಿನ್, ಫಾವಿಪಿರಾವಿರ್, ಐವರ್‌ಮೆಕ್ಟಿನ್, ಪ್ಲಾಸ್ಮಾ ಚಿಕಿತ್ಸೆ ಇತ್ಯಾದಿಗಳು ಸೇರಿಕೊಂಡವು. ಎರಡನೇ ಅಲೆಯ ವೇಳೆಗೆ ಮನೆಯಲ್ಲೇ ಉಳಿಯುವವರಿಗೂ ಸ್ಟೀರಾಯ್ಡ್ ಕೊದಬೇಕೆಂಬ ಸಲಹೆಯನ್ನು ನೀಡಲಾಯಿತು. ಇವು ನಡೆಯುತ್ತಿದ್ದಾಗಲೇ, ಈ ಯಾವುದೇ ಔಷಧಗಳಿಂದ (ಅತಿ ಗಂಭೀರವಾಗಿದ್ದವರಿಗೆ ಸ್ಟೀರಾಯ್ಡ್ ಮತ್ತು ಹೆಪಾರಿನ್ ಬಿಟ್ಟು) ಕೊರೋನ ಚಿಕಿತ್ಸೆಯಲ್ಲಿ ಯಾವ ಪ್ರಯೋಜನವೂ ಇಲ್ಲವೆಂದೂ, ಅವುಗಳಿಂದ ಅಪಾಯವೇ ಹೆಚ್ಚೆಂದೂ, ಸಾವುಗಳೂ ಆಗಬಹುದೆಂದೂ ಎಲ್ಲೆಡೆಗಳಿಂದಲೂ ವರದಿಗಳಾದವು. ಆದರೂ ರಾಜ್ಯದ ಚಿಕಿತ್ಸಾ ಕಾರ್ಯಸೂಚಿಯು ಬದಲಾಗಲಿಲ್ಲ. ಕೇಂದ್ರ ಸರಕಾರವು ಮೊದಲಲ್ಲಿ ಐಸಿಎಂಆರ್ ಮತ್ತು ಎಐಐಎಂಎಸ್ ಮೂಲಕ ಚಿಕಿತ್ಸಾ ಕಾರ್ಯಸೂಚಿಯನ್ನು ಹೊರಡಿಸಿತ್ತು, ಅವುಗಳಲ್ಲೂ ಹೈಡ್ರಾಕ್ಸಿ ಕ್ಲೋರೊಕ್ವಿನ್, ರೆಂಡಿಸಿವಿರ್, ತೊಸುಲಿಜುಮಾಬ್, ಸ್ಟೀರಾಯ್ಡ್, ರಕ್ತ ಹೆಪ್ಪುಗಟ್ಟದಂತೆ ತಡೆಯುವ ಹೆಪಾರಿನ್ ಗಳಿದ್ದವು. ಬಳಿಕ ಮೇ 27, 2021ರಂದು ಕೇಂದ್ರ ಆರೋಗ್ಯ ಸೇವೆಗಳ ನಿರ್ದೇಶನಾಲಯದ ಹೆಸರಲ್ಲಿ ಇನ್ನೊಂದು ಕಾರ್ಯಸೂಚಿಯನ್ನು ಪ್ರಕಟಿಸಿ, ಸೌಮ್ಯ ಸೋಂಕಿಗೆ ಯಾವ ಚಿಕಿತ್ಸೆಯೂ ಬೇಡವೆಂದೂ, ಗಂಭೀರ ಸಮಸ್ಯೆಗಳಾದವರಿಗೆ ಸ್ಟೀರಾಯ್ಡ್ ಮತ್ತು ಹೆಪಾರಿನ್ ನೀಡಬಹುದೆಂದೂ ಹೇಳಲಾಯಿತು.

ಈಗ ಮರ್ಕ್ ಕಂಪೆನಿಯ ಮೋಲ್ನುಪಿರಾವಿರ್ ಎಂಬ ಔಷಧವನ್ನು ಹೇರುವ ಪ್ರಯತ್ನಗಳಾಗುತ್ತಿವೆ. ನವೆಂಬರ್ 26, 2021ರಲ್ಲಿ ಅದೇ ಮರ್ಕ್ ಕಂಪೆನಿಯು ಅದೇ ಮೋಲ್ನುಪಿರಾವಿರ್ ಔಷಧವು ನಿರೀಕ್ಷಿತ ಪ್ರಯೋಜನವನ್ನು ತೋರಿಸಿಲ್ಲವೆಂದು ಹೇಳಿತು, ಮಾತ್ರವಲ್ಲ, ಅದರ ಸುರಕ್ಷತೆಯ ಬಗ್ಗೆ ಸಾಕಷ್ಟು ಅಧ್ಯಯನಗಳಾಗಿಲ್ಲವೆಂಬ ವರದಿಗಳೂ ಬಂದವು. ಇದನ್ನು ಪರಿಗಣಿಸಿ ಫ್ರಾನ್ಸ್ ದೇಶವು ತಾನು ಮೋಲ್ನುಪಿರಾವಿರ್ ಖರೀದಿಗೆ ನೀಡಿದ್ದ ಆದೇಶವನ್ನು ಡಿಸೆಂಬರ್ 23, 2021ರಂದು ಹಿಂಪಡೆಯಿತು. ಅದಾಗಿ ಕೇವಲ 5 ದಿನಗಳಲ್ಲಿ, ಡಿಸೆಂಬರ್ 28ರಂದು, ಅದೇ ಮೋಲ್ನುಪಿರಾವಿರ್ ಅನ್ನು ಉತ್ಪಾದಿಸಲು 13 ಕಂಪೆನಿಗಳಿಗೆ ಔಷಧ ನಿಯಂತ್ರಣ ಮಹಾನಿರ್ದೇಶಕರು ಅನುಮತಿ ನೀಡಿದರು. ಅದರ ಬೆನ್ನಿಗೆ, ಜನವರಿ 5, 2022ರಂದು, ರಾಜ್ಯದ ಮಹಾ ತಜ್ಞರ ಸಮಿತಿಯು ಕೊರೋನ ಚಿಕಿತ್ಸೆಗೆ ಹೊಸ ಕಾರ್ಯಸೂಚಿಯನ್ನು ಪ್ರಕಟಿಸಿ, ಅನ್ಯ ಕಾಯಿಲೆಗಳುಳ್ಳವರಿಗೆ ಸೌಮ್ಯ ಸೋಂಕಿದ್ದರೂ ರೆಂಡಿಸಿವಿರ್ ಅಥವಾ ಮೋಲ್ನುಪಿರಾವಿರ್ ಅನ್ನು ನೀಡಬೇಕೆಂದು ಸೂಚಿಸಿತು. ಮರುದಿನವೇ ಐಸಿಎಂಆರ್ ನಿರ್ದೇಶಕರು ಹೇಳಿಕೆ ನೀಡಿ, ಕೋವಿಡ್ ಚಿಕಿತ್ಸೆಯಲ್ಲಿ ಮೋಲ್ನುಪಿರಾವಿರ್ ಬಳಕೆಗೆ ರಾಷ್ಟ್ರೀಯ ಕಾರ್ಯಪಡೆಯು ಇನ್ನೂ ಅನುಮೋದನೆ ನೀಡಿಲ್ಲ, ಅದರ ಪ್ರಯೋಜನ ಹಾಗೂ ಸುರಕ್ಷತೆಗಳ ಬಗ್ಗೆ ಇನ್ನೂ ಹಲವು ಸಂಶಯಗಳಿವೆ ಎಂದರು. ಔಷಧ ನಿರ್ದೇಶಕರು ಅನುಮತಿ ನೀಡುವುದು, ಕಂಪೆನಿಗಳು ಉತ್ತೇಜಿಸುವುದು, ವೈದ್ಯರು ವೆಬಿನಾರ್ ನಡೆಸಿ ಹೊಗಳುವುದು, ರಾಜ್ಯ ತಜ್ಞರ ಸಮಿತಿ ತರಾತುರಿಯಿಂದ ಕಾರ್ಯಸೂಚಿಯನ್ನು ಬದಲಿಸಿ ಅದನ್ನು ಪಟ್ಟಿಯಲ್ಲಿ ಸೇರಿಸಿಬಿಡುವುದು, ಐಸಿಎಂಆರ್ ಮತ್ತು ರಾಷ್ಟ್ರೀಯ ಕಾರ್ಯಪಡೆ ಅದಕ್ಕೆ ತಮ್ಮ ಅನುಮೋದನೆ ಇಲ್ಲವೆನ್ನುವುದು – ಭಾರತ ಹಾಗೂ ಕರ್ನಾಟಕದ ಕೊರೋನ ಚಿಕಿತ್ಸೆಯ ವಿಶ್ವಕ್ಕೇ ಮಾದರಿಯಾಗಬಲ್ಲ ಕೆಲಸಗಳು ಇವು!

ಆದರೆ ಇಷ್ಟೆಲ್ಲ ಆದರೂ ನಮ್ಮ ಬುದ್ಧಿವಂತರು, ಬುದ್ಧಿಜೀವಿಗಳು, ವಿಚಾರವಂತರು, ಪ್ರಜ್ಞಾವಂತರು, ವೈದ್ಯರು ಮತ್ತು ಅವರ ಸಂಘಟನೆಗಳು, ವಿರೋಧ ಪಕ್ಷಗಳು, ಮಾನವ ಹಕ್ಕುಗಳ ಹೋರಾಟಗಾರರು, ಮಕ್ಕಳ ಹಿತಾಸಕ್ತಿಗಳ ಮಹಾರಕ್ಷಕರು, ಶಾಲಾಭಿವೃದ್ಧಿ ಸಮಿತಿಗಳವರು, ತಲೆಗೆ ಟೊಪ್ಪಿ ಹಾಕಿದ್ದೇಕೆ ಎನ್ನುವ ಬಗ್ಗೆ ವಾರಗಟ್ಟಲೆ ಪ್ರಶ್ನೆಗಳನ್ನೆತ್ತುತ್ತಾ ಬಾಯಿ-ಗಂಟಲು ಹರಿದು ಬೊಬ್ಬೆ ಹಾಕುವ ಮಾಧ್ಯಮಗಳು, ಮಹಾನ್ ದೇಶಭಕ್ತರು, ಸಂಸ್ಕೃತಿ ರಕ್ಷಕರು ಎಲ್ಲರೂ ಕಠೋರವಾಗಿ ಸುಮ್ಮನಿದ್ದಾರೆ. ಈ ಎರಡು ವರ್ಷಗಳಲ್ಲಿ ಎಲ್ಲಾ ಸುಳ್ಳುಗಳನ್ನು ಪ್ರಸಾದವೆಂದೇ ನಂಬಿ, ಚಪ್ಪಾಳೆ ತಟ್ಟಿ, ಶಂಖ ಊದಿ, ಹೂ ಹಾಕಿ, ಮನೆಯಲ್ಲೇ ಕುಳಿತು, ಮಕ್ಕಳನ್ನೂ ಕುಳ್ಳಿರಿಸಿ, ತಾವೂ ಹೆದರಿ, ಇತರರನ್ನೂ ಹೆದರಿಸಿ, ಲಸಿಕೆ ಹಾಕಿಸಿಕೊಂಡು, ಇತರರಿಗೂ ಹಾಕಿಸಿ, ಅದಕ್ಕೆ ಕಾಳಸಂತೆಯಲ್ಲೂ ಹುಡುಕಾಟ-ವಶೀಲಿ ಮಾಡಿ ಎಲ್ಲಾ ಆದ ಬಳಿಕ ಇವೆಲ್ಲವೂ ತಪ್ಪುಗಳೇ ಆಗಿದ್ದವು ಎಂದು ಇವರೆಲ್ಲರೂ ಹೇಗೆ ತಾನೇ ಒಪ್ಪಿಕೊಂಡಾರು?

Be the first to comment

Leave a Reply

Your email address will not be published.


*