ಕನ್ನಡಪ್ರಭದಲ್ಲಿ ಆರೋಗ್ಯಪ್ರಭ

ಆರೋಗ್ಯ ಪ್ರಭ 19: ಯೋಗದಿಂದ ಯಾವುದೇ ರೋಗ ಗುಣವಾಗದು [ಕನ್ನಡ ಪ್ರಭ, ಜನವರಿ 21, 2016, ಗುರುವಾರ]

 ಪತಂಜಲಿಯ ಅಷ್ಟಾಂಗ ಯೋಗದ ಮೊದಲನೆಯ ಅಂಗವೇ ಯಮ. ಅದರಲ್ಲಿರುವ ಐದು ಸಾರ್ವಭೌಮ ವ್ರತಗಳಲ್ಲಿ ಸತ್ಯವೂ ಒಂದು. ಅಂದರೆ ಯೋಗಸಾಧನೆಗೆ ಸತ್ಯವೇ ಮೊದಲ ಮೆಟ್ಟಿಲು. ಆದರೆ ಯೋಗದ ಬಗೆಗೆ ಈಗ ಚಾಲ್ತಿಯಲ್ಲಿರುವ ಅತಿ ರಂಜಿತ ಪ್ರಚಾರದಲ್ಲಿ, ಸಾರುತ್ತಿರುವ ಸಂಗತಿಗಳಲ್ಲಿ, ಸತ್ಯವಿದೆಯೇ ಎಂದು ಪರಿಶೀಲಿಸುವುದು ಒಳಿತು

 ‘ಯೋಗ’ಕ್ಕೆ ಈಗ ಸುಯೋಗ. ಮೊನ್ನೆ ಬೆಂಗಳೂರಲ್ಲಿ ಮಾನ್ಯ ಪ್ರಧಾನಿಗಳು ‘ಯೋಗವು ಎಲ್ಲ ಚಿಕಿತ್ಸಾಕ್ರಮಗಳಲ್ಲಿ ಅಡಕವಾಗಬೇಕು’ ಎಂದು ಬಯಸಿದರೆ, ಅದೇ ವೇದಿಕೆಯಲ್ಲಿದ್ದ ಮಾನ್ಯ ಮುಖ್ಯಮಂತ್ರಿಗಳು ‘ಯೋಗವಿಲ್ಲದೆ ಜೀವನವಿಲ್ಲ, ಯೋಗದ ಅರಿವೇ ಜೀವನದ ಅರಿವು’ ಎಂದು ಹೊಗಳಿದರು. ದೇಶದೆಲ್ಲೆಡೆ ಕೆಜಿಯಿಂದ ಪಿಜಿಯವರೆಗೆ ಯೋಗಾಭ್ಯಾಸವನ್ನು ಕಡ್ಡಾಯಗೊಳಿಸುವ ಬಗ್ಗೆ ಅದೇ ದಿನ, ಅದೇ ಸಂಸ್ಥೆಯಲ್ಲಿ ಚರ್ಚೆಯೂ ಆಯಿತು. ಜ್ಞಾನಿ ಭಯೋತ್ಪಾದಕರ ನಿಗ್ರಹಕ್ಕೆ ಯೋಗವೇ ಉಪಾಯವೆಂದು ಕೇಂದ್ರ ಗೃಹ ಸಚಿವರಿಗೂ ತೋಚಿತು. ‘ಈ ಪ್ರಾಚೀನ ಅಭ್ಯಾಸದಿಂದ ಸರ್ವ ವಿಧದ ಲಾಭಗಳಿವೆ’ ಎಂದು ವಿಶ್ವ ಸಂಸ್ಥೆಯೂ ಹೇಳಿತು. ಒಟ್ಟಿನಲ್ಲಿ, ಅನಾರೋಗ್ಯ, ಭಯೋತ್ಪಾದನೆ, ಸಲಿಂಗ ಕಾಮ, ತಾಪಮಾನ ಏರಿಕೆ ಇತ್ಯಾದಿ ಬ್ರಹ್ಮಾಂಡದ ಸಕಲ ಸಮಸ್ಯೆಗಳು ಯೋಗದಿಂದಲೇ ಶಮನಗೊಳ್ಳಲು ಕಾಯುತ್ತಿವೆ ಎಂದಾಯಿತು.

ಪತಂಜಲಿಯ ಅಷ್ಟಾಂಗ ಯೋಗದ ಮೊದಲನೆಯ ಅಂಗವೇ ಯಮ. ಅದರಲ್ಲಿರುವ ಐದು ಸಾರ್ವಭೌಮ ವ್ರತಗಳಲ್ಲಿ ಸತ್ಯವೂ ಒಂದು. ಅಂದರೆ ಯೋಗಸಾಧನೆಗೆ ಸತ್ಯವೇ ಮೊದಲ ಮೆಟ್ಟಿಲು. ಆದರೆ ಯೋಗದ ಬಗೆಗಿನ ಈ ಮೇಲಿನ ಹೇಳಿಕೆಗಳಲ್ಲಿ ಸತ್ಯವಿದೆಯೇ?

ಯೋಗಾಭ್ಯಾಸದ ಪ್ರಯೋಜನಗಳ ಬಗ್ಗೆ ಕಳೆದ ನೂರು ವರ್ಷಗಳಲ್ಲಿ ಮೂರು ಸಾವಿರಕ್ಕೂ ಹೆಚ್ಚು ಅಧ್ಯಯನಗಳು ಪ್ರಕಟವಾಗಿವೆ. ಈ ವರದಿಗಳನ್ನು ಒಟ್ಟು ಸೇರಿಸಿ ವಿಮರ್ಶಿಸಿದ ಹಲವು ಲೇಖನಗಳೂ ಪ್ರಕಟವಾಗಿವೆ. ಅವುಗಳ ಸಾರವು ಇಂತಿದೆ:

ಯೋಗಾಭ್ಯಾಸದ ಬಗೆಗಿನ ಬಹುತೇಕ ಅಧ್ಯಯನಗಳು ಸಣ್ಣವು, ಅಲ್ಪಕಾಲಿಕ ಹಾಗೂ ನಿಯಂತ್ರಣವಿಲ್ಲದವು, ಅವುಗಳಲ್ಲಿ ಹಲಬಗೆಯ ಯೋಗ ವಿಧಾನಗಳನ್ನು ಬಳಸಲಾಗಿದೆ, ಅವುಗಳ ಕಾಲಾವಧಿಗಳೂ ಬಗೆಬಗೆಯಾಗಿವೆ, ಆಗಿರಬಹುದಾದ ಹಾನಿಗಳ ಬಗ್ಗೆಯೂ ಹೆಚ್ಚಿನವುಗಳಲ್ಲಿ ಮಾಹಿತಿಯಿಲ್ಲ, ಆದ್ದರಿಂದ ಅವುಗಳ ಫಲಿತಾಂಶಗಳು ವಿಶ್ವಾಸಾರ್ಹವಲ್ಲ.[J Fam Pract 2014;63(9):E1] 1975-2014ರ ನಡುವೆ ಪ್ರಕಟವಾದ 366 ಪ್ರಮುಖ ಅಧ್ಯಯನಗಳ ಪೈಕಿ 119ರಲ್ಲಿ ಯೋಗ ವಿಧಾನದ ಬಗ್ಗೆ ಮಾಹಿತಿಯೇ ಇಲ್ಲ, ಇನ್ನುಳಿದವುಗಳಲ್ಲಿ 46ಕ್ಕೂ ಹೆಚ್ಚು ಬಗೆಯ ಯೋಗಾಭ್ಯಾಸಗಳನ್ನು ಬಳಸಲಾಗಿದೆ; ಇವುಗಳಿಂದ ಯಾವುದೇ ಸ್ಪಷ್ಟ ನಿಲುವನ್ನು ತಳೆಯುವುದಕ್ಕೆ ಸಾಧ್ಯವಿಲ್ಲ.[BMC CAM 2014;14:328] ಐದು ಬಗೆಯ ಪ್ರಾಣಾಯಾಮ/ಧ್ಯಾನಗಳನ್ನು ಬಳಸಿದ್ದ ಒಟ್ಟು 813 ಅಧ್ಯಯನಗಳಲ್ಲಿ ರಕ್ತದ ಏರೊತ್ತಡ, ಹೃದ್ರೋಗಗಳು ಹಾಗೂ ಮಾದಕ ದ್ರವ್ಯ ವ್ಯಸನದಂತಹಾ ಸಮಸ್ಯೆಗಳಿಗೆ ಯಾವುದೇ ಪ್ರಯೋಜನವು ಕಂಡು ಬರಲಿಲ್ಲ.[2007;AHRQ Pub 07-E010] ಹಲತರದ ಅಲ್ಪಕಾಲಿಕ ಹಾಗೂ ದೀರ್ಘಕಾಲಿಕ ರೋಗಗಳ ಪರಿಹಾರಕ್ಕೆ ಯೋಗಾಭ್ಯಾಸವನ್ನು ಬಳಸಿದ್ದ 2202 ಅಧ್ಯಯನಗಳನ್ನು ವಿಮರ್ಶಿಸಿದಾಗ, ಆತಂಕ, ಖಿನ್ನತೆ ಹಾಗೂ ನೋವಿನ ಶಮನಕ್ಕೆ ಅತ್ಯಲ್ಪ ಪ್ರಯೋಜನ ಕಂಡರೂ, ರೋಗಿಗಳ ಗುಣಗಳಲ್ಲೂ, ಯೋಗ ವಿಧಾನಗಳಲ್ಲೂ ಇದ್ದ ಅಪಾರ ವ್ಯತ್ಯಾಸಗಳಿಂದಾಗಿ ಯಾವುದೇ ಸ್ಪಷ್ಟ ತೀರ್ಮಾನವು ಸಾಧ್ಯವಾಗುವುದಿಲ್ಲ.[Evid-Based CAM 2013;945895]

ಯೋಗಾಭ್ಯಾಸದಿಂದ ಹೃದಯ ಹಾಗೂ ರಕ್ತನಾಳಗಳ ಕಾಯಿಲೆಯನ್ನು ತಡೆಯುವ ಬಗ್ಗೆ ನಡೆಸಲಾಗಿರುವ ಅಧ್ಯಯನಗಳು ಕಳಪೆಯಾಗಿದ್ದು, ಯಾವುದೇ ಸ್ಪಷ್ಟ ನಿರ್ಣಯಕ್ಕೆ ಬರಲಾಗುವುದಿಲ್ಲ. [Cochrane Data Syst Rev, 2014;5:CD010072 ಹಾಗೂ 2015;6:CD009506, Int J Cardiol 2014;173(2):170, Euro J Prev Cardiol 2014;2047487314562741] ರಕ್ತದ ಏರೊತ್ತಡಕ್ಕೆ ಯೋಗಾಭ್ಯಾಸದ ಪ್ರಯೋಜನಗಳ ಬಗ್ಗೆ ನಡೆಸಲಾದ 17 ಅಧ್ಯಯನಗಳಲ್ಲಿ ರಕ್ತದೊತ್ತಡವು ಕೇವಲ 3-4ಮಿಮೀ ಇಳಿಕೆಯಾಯಿತೆಂಬ ವರದಿಗಳಿದ್ದರೂ, ಅವುಗಳಲ್ಲಿ ಪಕ್ಷಪಾತದ ಸಾಧ್ಯತೆಗಳು ಗಾಢವಾಗಿರುವುದರಿಂದ ಇನ್ನಷ್ಟು ಕಠಿಣವಾದ, ನಿಯಂತ್ರಿತವಾದ ಅಧ್ಯಯನಗಳು ಬೇಕಾಗುತ್ತವೆ.[Evid-Based CAM 2013;649836] ಯೋಗಾಭ್ಯಾಸದಿಂದ ಹಾನಿಯಾಗುವ ಸಾಧ್ಯತೆಗಳು ಹೆಚ್ಚಿದ್ದು, ರಕ್ತದ ಏರೊತ್ತಡಕ್ಕೆ ಯೋಗಾಭ್ಯಾಸವನ್ನು ಬಳಸುವ ಮೊದಲು ಇನ್ನಷ್ಟು ಅಧ್ಯಯನಗಳ ಅಗತ್ಯವಿದೆ.[Am J Hypertens 2014;27(9):1146] ಹೃದಯದ ವೈಫಲ್ಯ ಹಾಗೂ ಹೃದ್ಗತಿಯ ಸಮಸ್ಯೆಗಳಿಗೂ ಯೋಗಾಭ್ಯಾಸದಿಂದ ಯಾವುದೇ ಪ್ರಯೋಜನವಿಲ್ಲ.[Arq Bras Cardiol 2014;103(5):433, App Psychophys Biofeed 2015;10.1007/s10484-015-9291-z]

ಪಾರ್ಶ್ವವಾಯು, ಮಲ್ಟಿಪಲ್ ಸ್ಕ್ಲಿರೋಸಿಸ್, ಅಪಸ್ಮಾರ ಮುಂತಾದ ನರರೋಗಗಳಲ್ಲೂ ಯೋಗಾಭ್ಯಾಸವು ನೆರವಾಗುವುದಿಲ್ಲ.[Evid-Based CAM 2013;357108, J Neuropsy Clin Neurosc 2012;24(2):152, Ann Ind Acad Neurol 2012;15(4):247, PLoS ONE 2014;9(11):e112414, Cochrane Data Syst Rev 2015;5:CD001524] ಮಧುಮೇಹವುಳ್ಳವರಲ್ಲೂ ಯೋಗಾಭ್ಯಾಸದ ಅಧ್ಯಯನಗಳು ಕಳಪೆಯಾಗಿದ್ದು, ಪ್ರಯೋಜನಗಳ ಬಗ್ಗೆ ಖಚಿತ ಅಭಿಪ್ರಾಯವನ್ನು ಒದಗಿಸುವುದಿಲ್ಲ.[Evid-Based CAM 2010;7(4):399, Clin Diab 2010;28(4):147] ಬೊಜ್ಜನ್ನಿಳಿಸುವಲ್ಲಿ ಯೋಗಾಭ್ಯಾಸದ ಪ್ರಯೋಜನಗಳ ಬಗ್ಗೆ ಎಲ್ಲರೂ ಬಹಳಷ್ಟು ಹೇಳುತ್ತಾರಾದರೂ, ಆ ಬಗ್ಗೆ ಸರಿಯಾದ ಅಧ್ಯಯನಗಳೇ ನಡೆದಿಲ್ಲ.[BMC CAM 2014;14:328] ಕ್ಯಾನ್ಸರ್ ಪೀಡಿತರಿಗೆ ಯೋಗಾಭ್ಯಾಸದಿಂದ ಪ್ರಯೋಜನವಾಗುತ್ತದೆ ಎನ್ನುವುದಕ್ಕೂ ಆಧಾರಗಳಿಲ್ಲ. [BMC Cancer 2012;2:412 Cochrane Data Syst Rev 2014;6:CD010146, Evid-Based CAM 2011;659876]

ಆತಂಕ, ಖಿನ್ನತೆ, ಇಚ್ಛಿತ್ತ ವಿಕಲತೆ, ನಿದ್ರಾಹೀನತೆ, ಮಕ್ಕಳಲ್ಲಿ ಚಿತ್ತಚಾಂಚಲ್ಯ ಮುಂತಾದ ಮಾನಸಿಕ ಸಮಸ್ಯೆಗಳಿಗೆ ಯೋಗಾಭ್ಯಾಸದಿಂದ ಪ್ರಯೋಜನವಾಗುತ್ತದೆ ಎನ್ನುವುದಕ್ಕೂ ಗಟ್ಟಿಯಾದ ಆಧಾರಗಳಿಲ್ಲ ಹಾಗೂ ಇವುಗಳಿಗೆ ಯೋಗಾಭ್ಯಾಸವನ್ನು ಚಿಕಿತ್ಸೆಯಾಗಿ ಸೂಚಿಸುವುದಕ್ಕೆ ಸಾಧ್ಯವಿಲ್ಲ. ಒತ್ತಡ ನಿಭಾವಣೆ, ನೆನಪು, ಏಕಾಗ್ರತೆ, ಮಕ್ಕಳ ಬೆಳವಣಿಗೆಗಳಿಗೂ ಯೋಗಾಭ್ಯಾಸವು ನೆರವಾಗುವುದಿಲ್ಲ.[J Yoga Phys Ther 2014;5:e119, Front Psychiatry 2013;3:117, Dep Anx 2013;30(11):1068, BMC Psych 2013;13:32, Cochrane Data Syst Rev 2006;1:CD004998 ಹಾಗೂ 2010;6:CD006507, Front Psychiatry 2014;5:35]

ಬೆನ್ನು ನೋವಿಗೆ ಯೋಗಾಭ್ಯಾಸದಿಂದ ಒಂದಿಷ್ಟು ಪ್ರಯೋಜನವಾಗಬಹುದೆನ್ನುವುದನ್ನು ಬಿಟ್ಟರೆ (‘ಯೋಗ’ವಲ್ಲದ ಇತರ ವ್ಯಾಯಾಮಗಳೂ ಹಾಗೆಯೇ ನೆರವಾಗುತ್ತವೆ) ಬೇರಾವ ವಿಧದ ಗಂಟು ಬೇನೆಗೂ ಅದರಿಂದ ಪ್ರಯೋಜನವಾಗದು, ಮಾತ್ರವಲ್ಲ, ಅದು ಸುರಕ್ಷಿತವೆನ್ನುವುದಕ್ಕೂ ಆಧಾರಗಳಿಲ್ಲ.[Clin J Pain 2013;29:450, Rheumat (Ox) 2013;52(11):2025] ಅಸ್ತಮಾ ಹಾಗೂ ಶ್ವಾಸಾಂಗದ ಇತರ ದೀರ್ಘಕಾಲೀನ ರೋಗಗಳಿಗೂ ಯೋಗಾಭ್ಯಾಸದಿಂದ ಯಾವುದೇ ಪ್ರಯೋಜನವಿಲ್ಲ.[Ann Aller Asth Immu 2014;112(6):503, J Asthma 2011;48(6):632, Cochrane Data Syst Rev 2012;10:CD008250]

ಯೋಗಾಭ್ಯಾಸವು ಸುರಕ್ಷಿತವೂ ಅಲ್ಲ. ಯೋಗಾಸನಗಳಿಂದ ಸ್ನಾಯುಗಳಿಗೆ, ಮೂಳೆಗಳಿಗೆ, ಗಂಟುಗಳಿಗೆ, ಬೆನ್ನು ಹಾಗೂ ಕುತ್ತಿಗೆಗಳಿಗೆ ಹಾನಿಯಾಗಬಹುದು; ಕಣ್ಣೊಳಗಿನ ಒತ್ತಡ ಹೆಚ್ಚಿ ಸಮಸ್ಯೆಗಳಾಗಬಹುದು; ರಕ್ತದೊತ್ತಡದಲ್ಲಿ ಒಮ್ಮಿಂದೊಮ್ಮೆಗೇ ಏರುಪೇರಾಗಿ ಯಾ ಕತ್ತಿನ ಮೇಲೆ ಒತ್ತಡವುಂಟಾಗಿ ಪಾರ್ಶ್ವವಾಯು, ಹೃದಯಾಘಾತವೂ ಆಗಬಹುದು; ಯೋಗಾಭ್ಯಾಸದ ಬಗೆಗಿನ ಬಹುತೇಕ ಅಧ್ಯಯನಗಳ ವರದಿಗಳಲ್ಲಿ ಹಾನಿಗಳ ಬಗ್ಗೆ ಮಾಹಿತಿಯನ್ನು ಮುಚ್ಚಿಡಲಾಗಿದೆ.[J Yoga Phys Ther 2014;5:e119, Bio Psycho Social Medicine 2015;9:9]

ಇದುವೇ ಯೋಗಚಿಕಿತ್ಸೆಯ ಸತ್ಯ. ಆದರೆ ಮಾಧ್ಯಮಗಳಲ್ಲಿ ಯೋಗದ ನಗಣ್ಯ ಪ್ರಯೋಜನಗಳು ಅತಿರಂಜಿತ ತಲೆಬರಹಗಳಾಗುತ್ತವೆ, ನಿಜಾಂಶಗಳು ಮುಚ್ಚಿ ಹೋಗುತ್ತವೆ. ಉದಾಹರಣೆಗೆ, 2014ರಲ್ಲಿ ಪ್ರಕಟವಾದ ವಿಮರ್ಶೆಯೊಂದರಲ್ಲಿ [Euro J Prev Cardiol 2014;2047487314562741], ‘ಯೋಗಾಭ್ಯಾಸ ಹಾಗೂ ವ್ಯಾಯಾಮಗಳೆರಡರಿಂದಲೂ ತೂಕದಲ್ಲಿ 610 ಗ್ರಾಂ, ರಕ್ತದೊತ್ತಡದಲ್ಲಿ 0.14-0.64ಮಿಮಿ, ಹಾಗೂ ಹೃದ್ಗತಿಯಲ್ಲಿ 1.42 ಬಡಿತಗಳ ಇಳಿಕೆಯಾಗುತ್ತದೆ’ (ಹೌದು, ಅಷ್ಟು ಅತ್ಯಲ್ಪ!), ‘ಆದರೆ ಆ ಅಧ್ಯಯನಗಳಲ್ಲಿ ಹಲವು ಸಮಸ್ಯೆಗಳಿರುವುದರಿಂದ ಯಾವುದೇ ದೃಢ ನಿರ್ಧಾರವನ್ನು ತಳೆಯಲಾಗದು’ ಎಂದು ಸ್ಪಷ್ಟವಾಗಿ ಹೇಳಲಾಗಿತ್ತು. ಆದರೆ ಬ್ರಿಟಿಷ್ ಮೆಡಿಕಲ್ ಜರ್ನಲ್‌, ಗಾರ್ಡಿಯನ್, ಡೈಲಿ ಮೇಲ್ ನಂತಹಾ ಪತ್ರಿಕೆಗಳು ಈ ವಿಮರ್ಶೆಯನ್ನು ವರದಿ ಮಾಡುವಾಗ ‘ಹೃದ್ರೋಗವನ್ನು ತಡೆಯುವಲ್ಲಿ ಯೋಗಾಭ್ಯಾಸವು ವ್ಯಾಯಾಮದಷ್ಟೇ ಪ್ರಯೋಜನಕರ’, ಯೋಗದಿಂದ ತೂಕ, ರಕ್ತದೊತ್ತಡ ಇಳಿಕೆ’ ಎಂಬ ತಲೆಬರಹಗಳನ್ನಿತ್ತವು, ಮೂಲ ವಿಮರ್ಶೆಯು ಎತ್ತಿದ್ದ ತಕರಾರುಗಳನ್ನು ಮರೆಮಾಚಿದವು!

ಇಂತಹ ಅತಿರಂಜಿತ ವರದಿಗಳನ್ನು ಮುಂದಿಟ್ಟುಕೊಂಡೇ ವಿಶ್ವದ ಹಲವೆಡೆ ಯೋಗ ಚಿಕಿತ್ಸಾ ಕೇಂದ್ರಗಳಿಂದು ಕಾರ್ಯಾಚರಿಸುತ್ತಿವೆ. ಹೊಟ್ಟೆ ನೋವು, ಸಂಧಿ ನೋವು, ತಲೆ ನೋವು, ಬೊಜ್ಜು, ರಕ್ತದೊತ್ತಡ, ಮಧುಮೇಹ, ಅಸ್ತಮಾ, ಮೂಲವ್ಯಾಧಿ ಇತ್ಯಾದಿಗಳ ‘ಚಿಕಿತ್ಸೆ’ಯನ್ನು ಕಲಿಸುವ ‘ಯೋಗವಿಜ್ಞಾನ’ದ ಸ್ನಾತಕೋತ್ತರ ವ್ಯಾಸಂಗವನ್ನೂ ಕೆಲವು ವಿಶ್ವವಿದ್ಯಾಲಯಗಳಲ್ಲಿ ಆರಂಭಿಸಲಾಗಿದ್ದು, ವಿಜ್ಞಾನೇತರ ಪದವೀಧರರೂ ‘ಯೋಗ ಚಿಕಿತ್ಸಕ’ರಾಗಲು ಅವಕಾಶ ಕಲ್ಪಿಸಲಾಗಿದೆ. ಎರಡು ವಾರ ಯೋಗಾಭ್ಯಾಸ ಕಲಿತವರು ತಮ್ಮಷ್ಟಕ್ಕೆ ಯೋಗ ಚಿಕಿತ್ಸಕರಾಗುವುದೂ ಇದೆ.

ಪ್ರಾಚೀನ ಭಾರತದಲ್ಲಿ ಯೋಗಾಭ್ಯಾಸವು ವ್ರಾತ್ಯ-ವಿರಾಗಿಗಳ ಹಠ ಸಾಧನೆಯಾಗಿತ್ತು, ಸತ್ಯ, ಅಪರಿಗ್ರಹಗಳೇ ಅದರ ಸಾರ್ವಭೌಮ ವ್ರತಗಳಾಗಿದ್ದವು. ಈಗಿನ ಯೋಗಾಭ್ಯಾಸವು ಸುಳ್ಳು, ಅತಿ ಬಯಕೆಗಳೇ ಜೀವಾಳವಾಗಿರುವ, ಸಾವಿರಾರು ಕೋಟಿಗಳ, ದಂಧೆಯಾಗಿದೆ. ಯೋಗಾಭ್ಯಾಸವು ಯಾವುದೇ ರೋಗವನ್ನು ಗುಣ ಪಡಿಸದಿದ್ದರೂ ಚಿಕಿತ್ಸಾ ಪದ್ಧತಿಯಾಗಿಬಿಟ್ಟಿದೆ, ಆಟೋಟಗಳಷ್ಟು ವ್ಯಾಯಾಮವನ್ನೊದಗಿಸದಿದ್ದರೂ ಶಾಲಾ ಮಕ್ಕಳ ಆಟವಾಗಿಬಿಟ್ಟಿದೆ, ಪ್ರಾಚೀನ ಭಾರತದ ವಿರಾಗಿಗಳ ಸಾಧನೆಯು ಮಾನಗೆಟ್ಟು, ಬೀದಿ ಬೀದಿಗಳಲ್ಲಿ ಮಾರಾಟದ ಸರಕಾಗಿಬಿಟ್ಟಿದೆ.

21_01_2016_006_004

ಆರೋಗ್ಯ ಪ್ರಭ 18: ಹೊಸ ಎಣ್ಣೆಗಳಿಂದ ಹೆಚ್ಚುತ್ತಿವೆ ಹೊಸ ರೋಗಗಳು [ಕನ್ನಡ ಪ್ರಭ, ಜನವರಿ 7, 2016, ಗುರುವಾರ]

ಸಹಸ್ರಾರು ವರ್ಷಗಳಿಂದ ಬಳಸುತ್ತಿದ್ದ ಮಾಂಸ, ತೆಂಗಿನೆಣ್ಣೆಗಳನ್ನು ಆಧಾರರಹಿತವಾಗಿ ದೂಷಿಸಿ, ಎಂದೂ ತಿನ್ನದಿದ್ದ ಬೀಜ, ಸಿಪ್ಪೆ, ಹೊಟ್ಟುಗಳ ಎಣ್ಣೆಗಳನ್ನು ಸಂಸ್ಕರಿಸಿ ಮಾರಲಾಗುತ್ತಿದೆ. ಈ ಹೊಸ ಎಣ್ಣೆಗಳನ್ನು ಸೇವಿಸತೊಡಗಿದ ಮೂವತ್ತು ವರ್ಷಗಳಲ್ಲಿ ಹೃದ್ರೋಗ, ಮಧುಮೇಹ, ಬೊಜ್ಜು, ಕ್ಯಾನ್ಸರ್, ಮನೋರೋಗಗಳು ಮೂರು ಪಟ್ಟು ಹೆಚ್ಚಿವೆ.

ಇಪ್ಪತ್ತನೆಯ ಶತಮಾನದುದ್ದಕ್ಕೂ ಡಂಗುರ ಸಾರಿಸಿದ್ದ ಹಲವು ಸುಳ್ಳುಗಳಿಗೆ ಇಪ್ಪತ್ತೊಂದನೇ ಶತಮಾನದ ಆರಂಭದಲ್ಲೇ ಕೊನೆಗಾಲ ಕಾಣತೊಡಗಿದೆ. ಮೇದಸ್ಸು-ಮಾಂಸಗಳಿಂದಲೇ ರೋಗಗಳುಂಟಾಗುತ್ತವೆ ಎನ್ನುತ್ತಿದ್ದುದಕ್ಕೆ ಆಧಾರಗಳು ದೊರೆಯದೆ, ಸಕ್ಕರೆಯೆಂಬ ಸಸ್ಯಾಹಾರವೇ ನಿಜವಾದ ವೈರಿಯೆನ್ನುವುದು ಈಗ ಮನದಟ್ಟಾಗತೊಡಗಿದೆ. ತೆಂಗಿನೆಣ್ಣೆಯಿಂದ ಹೃದಯಾಘಾತ ಹೆಚ್ಚುತ್ತದೆ, ಹಾಗಾಗಿ ಜೋಳ, ಸೋಯಾ ಇತ್ಯಾದಿ ಎಣ್ಣೆಗಳನ್ನೇ ಬಳಸಬೇಕು ಎಂಬ ಸಲಹೆಯೂ ತಪ್ಪೆಂದು ಸಾಬೀತಾಗತೊಡಗಿದೆ. ಆದರೆ ಈ ಸುಳ್ಳುಗಳು ನಮ್ಮ ತಲೆಗಳೊಳಗೆ ಭದ್ರವಾಗಿ ನೆಲೆಸಿರುವುದರಿಂದ ಅವನ್ನು ಕಿತ್ತು ಹಾಕಿ ಸತ್ಯವನ್ನು ಒಪ್ಪಿಕೊಳ್ಳುವುದು ಸುಲಭವಲ್ಲ.

ಎರಡು ಲಕ್ಷ ವರ್ಷಗಳ ಹಿಂದೆ ಮನುಷ್ಯರ ವಿಕಾಸದಲ್ಲಿ ಮೀನು-ಮಾಂಸಗಳ ಮೇದಸ್ಸಿಗೆ ಪ್ರಮುಖ ಪಾತ್ರವಿತ್ತು, ಮಿದುಳಿನ ಬೆಳವಣಿಗೆಗೆ ಅದು ನೆರವಾಗಿತ್ತು. ಹತ್ತು-ಹನ್ನೆರಡು ಸಾವಿರ ವರ್ಷಗಳ ಹಿಂದೆ ಕೃಷಿ ಹಾಗೂ ಪಶುಪಾಲನೆ ತೊಡಗಿದ ಬಳಿಕವೂ ಹಂದಿ, ಆಕಳು ಮತ್ತಿತರ ಸಾಕು ಪ್ರಾಣಿಗಳ ಮಾಂಸವೇ ಮುಖ್ಯ ಆಹಾರವಾಗಿತ್ತು. ಅಂತಹ ಮಾಂಸದಿಂದ ಪಡೆದ ಕೊಬ್ಬು ಅಡುಗೆ ಎಣ್ಣೆಯಾಗಿಯೂ ಬಳಕೆಯಾಗುತ್ತಿತ್ತು. ಸುಮಾರು 6000 ವರ್ಷಗಳ ಹಿಂದೆ ಮೆಡಿಟರೇನಿಯನ್ ಪ್ರದೇಶದಲ್ಲಿ ಎಣ್ಣೆಗಾಗಿ ಆಲಿವ್ ಕೃಷಿ ತೊಡಗಿತು, ದಕ್ಷಿಣ ಅಮೆರಿಕಾದಲ್ಲಿ ನೆಲಕಡಲೆಯ ಬಳಕೆಯೂ ಆರಂಭವಾಯಿತು, ನಾಲ್ಕು ಸಾವಿರ ವರ್ಷಗಳ ಹಿಂದೆ ತೆಂಗಿನಕಾಯಿ ಹಾಗೂ ಅದರ ಎಣ್ಣೆಗಳು ಬಂದವು, 3000 ವರ್ಷಗಳ ಹಿಂದೆ ಮೆಡಿಟರೇನಿಯನ್ ಹಾಗೂ ಭಾರತದಲ್ಲಿ ಎಳ್ಳೆಣ್ಣೆಯ ಬಳಕೆಯು ಆರಂಭವಾಯಿತು, ಸುಮಾರು 500 ವರ್ಷಗಳ ಹಿಂದೆ ಆಫ್ರಿಕಾದಲ್ಲಿ ತಾಳೆ ಎಣ್ಣೆಯೂ ಬಂತು.

ಈ ಆಲಿವ್, ಎಳ್ಳು, ತೆಂಗಿನಕಾಯಿಗಳನ್ನು ಒಂದಷ್ಟು ಹಿಂಡಿದರೆ ಖಾದ್ಯ ಎಣ್ಣೆಯನ್ನು ಪಡೆಯಬಹುದು, ಅವುಗಳ ಎಣ್ಣೆಯನ್ನು ಹಾಗೇ ನೇರವಾಗಿ ಸೇವಿಸಲೂ ಬಹುದು. ಮಾಂಸಜನ್ಯ ಕೊಬ್ಬಿನಲ್ಲಿ ಹಾಗೂ ಈ ಹಳೆಯ ಎಣ್ಣೆಗಳಲ್ಲಿ ಪರ್ಯಾಪ್ತ ಮೇದೋ ಆಮ್ಲಗಳು, ಏಕ ಅಪರ್ಯಾಪ್ತ ಮೇದೋ ಆಮ್ಲಗಳು ಮತ್ತು ಒಮೆಗಾ 3 ವಿಧದ ಬಹು ಅಪರ್ಯಾಪ್ತ ಮೇದೋ ಆಮ್ಲಗಳು ತುಂಬಿದ್ದು, ನಮ್ಮ ದೇಹದ ಅಗತ್ಯಗಳಿಗೆ ಅನುಗುಣವಾಗಿವೆ.

ಇಪ್ಪತ್ತನೆಯ ಶತಮಾನದ ಆರಂಭದವರೆಗೆ ಇವಿಷ್ಟೇ ಎಣ್ಣೆಗಳು ಲಭ್ಯವಿದ್ದವು. ಅಲ್ಲಿಂದೀಚೆಗೆ ಆಹಾರೋತ್ಪಾದನೆಯೂ, ಆಹಾರ ಸಂಸ್ಕರಣೆಯೂ ಬೃಹತ್ ಉದ್ಯಮವಾದಂತೆ, ಅದಕ್ಕಾಗಿ ತಂತ್ರಜ್ಞಾನದ ಬಳಕೆಯೂ ಹೆಚ್ಚಿದಂತೆ, ನಮ್ಮ ಆಹಾರವೂ ಬದಲಾಗತೊಡಗಿತು. ಆ ಕಾಲದಲ್ಲಿ ಅಮೆರಿಕಾದ ಸಿನ್ಸಿನಾಟಿ ನಗರವು ಹಂದಿ ಸಾಕಣೆ ಹಾಗೂ ಅದರ ಉತ್ಪನ್ನಗಳ ತಯಾರಿಗೆ ಪ್ರಸಿದ್ಧವಾಗಿ, ಪೋರ್ಕೋಪೊಲಿಸ್ ಎಂದೇ ಕರೆಯಲ್ಪಡುತ್ತಿತ್ತು. ಅಲ್ಲಿ ಹಂದಿಯ ಕೊಬ್ಬಿನಿಂದ ಮೋಂಬತ್ತಿಗಳನ್ನು ತಯಾರಿಸುತ್ತಿದ್ದ ಕಂಪೆನಿಯೊಂದರ ಮಾಲಕ ಹಾಗೂ ಅದರಿಂದಲೇ ಸೋಪುಗಳನ್ನು ತಯಾರಿಸುತ್ತಿದ್ದ ಇನ್ನೊಂದು ಕಂಪೆನಿಯ ಮಾಲಕ ಅಲ್ಲಿನ ಸೋದರಿಯರಿಬ್ಬರನ್ನು ವರಿಸಿದ್ದು ಇಡೀ ವಿಶ್ವದಲ್ಲಿ ಅಡುಗೆ ಎಣ್ಣೆ ಬದಲಾಗುವುದಕ್ಕೆ ನಾಂದಿಯಾಯಿತು! ಈ ಭಾವನೆಂಟರು ಆರಂಭಿಸಿದ ಕಂಪೆನಿಯು ಹಂದಿಯ ಕೊಬ್ಬಿನ ಬದಲಿಗೆ ತಾಳೆ, ತೆಂಗಿನ ಎಣ್ಣೆಗಳಿಂದ ಸೋಪು ತಯಾರಿಸತೊಡಗಿತು. ನಂತರ ಹತ್ತಿ ಬೀಜದ ಎಣ್ಣೆಯನ್ನು ಸಂಸ್ಕರಿಸಿ ಹಂದಿಯ ಕೊಬ್ಬಿನಂತೆಯೇ ಗಟ್ಟಿಯಾದ ಅಡುಗೆ ಎಣ್ಣೆಯನ್ನೂ ತಯಾರಿಸಲಾರಂಭಿಸಿತು. ಸಸ್ಯಜನ್ಯ ಅಡುಗೆ ಎಣ್ಣೆ, ಸಸ್ಯಜನ್ಯ ಎಣ್ಣೆಯ ಸೋಪು ಎಂಬ ಭರ್ಜರಿ ಪ್ರಚಾರದಿಂದ ಕಂಪೆನಿಯು ಬಲು ಯಶಸ್ವಿಯಾಯಿತು. ಹೀಗೆ 1860ರಲ್ಲಿ ತ್ಯಾಜ್ಯವಾಗಿದ್ದ ಹತ್ತಿ ಬೀಜವು 1870ಕ್ಕೆ ಗೊಬ್ಬರವಾಯಿತು, 1880ಕ್ಕೆ ಪಶು ಆಹಾರವಾಯಿತು, 1910ಕ್ಕೆ ಮನುಷ್ಯರ ಖಾದ್ಯ ತೈಲವಾಯಿತು! ಮೋಂಬತ್ತಿಯಿಂದ ಅಡುಗೆ ಎಣ್ಣೆಯವರೆಗೆ ಬಗೆಬಗೆಯ ಉತ್ಪನ್ನಗಳನ್ನು ತಯಾರಿಸತೊಡಗಿದ ಭಾವನೆಂಟರ ಕಂಪೆನಿಯು ಜಗತ್ತಿನ ಅತಿ ದೊಡ್ಡ ಬಹುರಾಷ್ಟ್ರೀಯ ಕಂಪೆನಿಗಳಲ್ಲೊಂದಾಗಿ ಬೆಳೆಯಿತು!

ಇದೇ ಕಂಪೆನಿಯ ನೇತೃತ್ವದಲ್ಲಿ ಖಾದ್ಯ ತೈಲ ಸಂಸ್ಕರಣೆಯ ತಂತ್ರಜ್ಞಾನವು ಇನ್ನಷ್ಟು ಬೆಳೆಯಿತು; ಸೂರ್ಯಕಾಂತಿ, ಕುಸುಬೆ, ಸೋಯಾ, ಜೋಳ, ಅಕ್ಕಿ ಹೊಟ್ಟು ಮುಂತಾದವುಗಳಿಂದಲೂ ಎಣ್ಣೆ ಹಿಂಡಿ ಸಂಸ್ಕರಿಸುವುದಕ್ಕೆ ಸಾಧ್ಯವಾಯಿತು. ಇಂತಹ ಬೀಜ, ಕಾಯಿ, ಸಿಪ್ಪೆ, ಹೊಟ್ಟುಗಳಿಂದ ಎಣ್ಣೆಯನ್ನು ಹೊರತೆಗೆಯುವುದು ಸುಲಭವಲ್ಲ, ಅವುಗಳ ಎಣ್ಣೆಯನ್ನು ಹಾಗೇ ಸೇವಿಸುವುದಕ್ಕಂತೂ ಸಾಧ್ಯವೇ ಇಲ್ಲ. ಮೊದಲು ಇವುಗಳನ್ನು ಅತಿ ಒತ್ತಡದಲ್ಲಿ ಜಜ್ಜಿ, ಹೆಚ್ಚು ಉಷ್ಣತೆಯಲ್ಲಿ ಬೇಯಿಸಿ, ಬಳಿಕ ಹೆಕ್ಸೇನ್ ನಂತಹ ಪೆಟ್ರೋ ಸಂಯುಕ್ತಗಳ ಮೂಲಕ ಹಾಯಿಸಿ, ಅವುಗಳಲ್ಲಿರುವ ಎಣ್ಣೆಯನ್ನು ಪ್ರತ್ಯೇಕಿಸಲಾಗುತ್ತದೆ. ನಂತರ ಈ ಕಚ್ಛಾ ಎಣ್ಣೆಯ ಅಂಟುಗಳನ್ನು ತೆಗೆಯಲಾಗುತ್ತದೆ, ಕ್ಷಾರದೊಂದಿಗೆ ಬೆರೆಸಿ ಆಮ್ಲೀಯ ಕಶ್ಮಲಗಳನ್ನು ಪ್ರತ್ಯೇಕಿಸಲಾಗುತ್ತದೆ ಹಾಗೂ ಬಣ್ಣವನ್ನು ತಿಳಿಗೊಳಿಸಲಾಗುತ್ತದೆ. ಕೊನೆಗೆ ಅತಿ ಹೆಚ್ಚು ಉಷ್ಣತೆಯನ್ನು ಬಳಸಿ ಅದರಲ್ಲಿರುವ ದುರ್ಗಂಧಕಾರಿ ಅಂಶಗಳನ್ನು ಆವಿಗೊಳಿಸಲಾಗುತ್ತದೆ. ಹೀಗೆ, ಸಿಕ್ಕಸಿಕ್ಕವುಗಳಿಂದ ಎಣ್ಣೆಯನ್ನು ಹಿಂಡಿ, ಪೆಟ್ರೋ ತೈಲದ ಮೇಲೆ ಹಾಯಿಸಿ, ಅಂಟು ತೆಗೆದು, ವಾಸನೆ ನಿವಾರಿಸಿ, ತೆಳುವಾಗಿಸಿ, ಬಿಳುಪಾಗಿಸಿ, ತಿನ್ನಬಹುದೆಂದು ನಂಬಿಸಿ, ಅತಿ ಚಂದದ ಬಾಟಲುಗಳಲ್ಲಿ ತುಂಬಿ, ಆಕರ್ಷಕ ಜಾಹಿರಾತುಗಳ ಮೂಲಕ ಮಾರಲಾಗುತ್ತದೆ.

ಈ ಹೊಸ ಎಣ್ಣೆಗಳಲ್ಲಿ ಒಮೆಗಾ 6 ವಿಧದ ಬಹು ಅಪರ್ಯಾಪ್ತ ಮೇದೋ ಆಮ್ಲಗಳೇ ಹೆಚ್ಚಿರುತ್ತವೆ. ಜೊತೆಗೆ, ಹೆಚ್ಚಿನ ಉಷ್ಣತೆಯಲ್ಲಿ ಸಂಸ್ಕರಿಸಲ್ಪಟ್ಟಿರುವುದರಿಂದ, ಅವು ಅತಿ ಸುಲಭದಲ್ಲಿ ಉತ್ಕರ್ಷಕಗಳನ್ನೂ, ಟ್ರಾನ್ಸ್ ಮೇದೋ ಆಮ್ಲಗಳನ್ನೂ ಬಿಡುಗಡೆ ಮಾಡುತ್ತವೆ. ಇವೆಲ್ಲವೂ ದೇಹಕ್ಕೆ ಹಾನಿಯುಂಟು ಮಾಡಬಲ್ಲವು. ಆದರೆ, ಈ ಹೊಸ ಎಣ್ಣೆಗಳೇ ಆರೋಗ್ಯಕ್ಕೆ ಉತ್ತಮವೆಂದು ಈ ದೈತ್ಯ ಕಂಪೆನಿಗಳು ಪ್ರತಿಪಾದಿಸತೊಡಗಿದವು; ಯಾವುದೇ ಸಾಕ್ಷ್ಯಾಧಾರಗಳಿಲ್ಲದೆಯೇ ಪ್ರಾಣಿಜನ್ಯ ಕೊಬ್ಬು ಹಾಗೂ ತೆಂಗಿನೆಣ್ಣೆಗಳನ್ನು ದೂಷಿಸತೊಡಗಿದವು. ಅಮೆರಿಕದ ಹೃದ್ರೋಗ ಸಂಘ, ಅಲ್ಲಿನ ಸರಕಾರ, ವೈದ್ಯ ವೃಂದ, ಮಾಧ್ಯಮಗಳು, ಜನಸಾಮಾನ್ಯರು ಎಲ್ಲರೂ ಇದನ್ನು ಒಪ್ಪಿಕೊಂಡರು. ಎಂಬತ್ತರ ಆರಂಭದಲ್ಲಿ ಅಮೆರಿಕ ಸರಕಾರದ ಆಹಾರ ಮಾರ್ಗದರ್ಶಿಯು ಈ ವಾದವನ್ನು ಬೆಂಬಲಿಸುವುದರೊಂದಿಗೆ ಈ ಹೊಸ ಎಣ್ಣೆಗಳಿಗೆ ವಿಶ್ವಮನ್ನಣೆ ದೊರೆಯಿತು, ಎಲ್ಲರ ತಟ್ಟೆ-ಹೊಟ್ಟೆಗಳಲ್ಲಿ ಜಾಗ ಸಿಕ್ಕಿತು.

ಮೇದಸ್ಸು ಹಾಗೂ ಎಣ್ಣೆಗಳು ಕೇವಲ ಆಹಾರವಸ್ತುಗಳಲ್ಲ, ಅವು ನಮ್ಮ ಕಣಕಣವನ್ನೂ ತಟ್ಟುವಂಥವು. ನಮ್ಮ ದೇಹದಲ್ಲಿರುವ ಪ್ರತಿಯೊಂದು ಜೀವಕೋಶದ ಪೊರೆಯೂ ಮೇದಸ್ಸಿನಿಂದಲೇ ಮಾಡಲ್ಪಟ್ಟಿದ್ದು, ನಮ್ಮ ಬೆಳವಣಿಗೆ, ಶಕ್ತಿಯ ಬಳಕೆ, ಮಿದುಳಿನ ಸಂವಹನ, ಹಾರ್ಮೋನುಗಳ ಕಾರ್ಯಾಚರಣೆ, ಉರಿಯೂತದ ನಿರ್ವಹಣೆ, ರೋಗರಕ್ಷಣೆ, ಸಂತಾನಶಕ್ತಿ ಮುಂತಾದೆಲ್ಲಕ್ಕೂ ಮೇದೋ ಆಮ್ಲಗಳು ಅತ್ಯಗತ್ಯವಾಗಿವೆ. ಮಾಂಸ, ಮೊಟ್ಟೆ, ತೆಂಗಿನೆಣ್ಣೆಗಳ ಪರ್ಯಾಪ್ತ ಮೇದಸ್ಸು ಹಾಗೂ ಒಮೆಗಾ 3 ಮೇದೋ ಆಮ್ಲಗಳು ಇವಕ್ಕೆ ಪೂರಕವಾಗಿದ್ದರೆ, ಹೊಸ ಎಣ್ಣೆಗಳ ಒಮೆಗಾ 6 ಆಮ್ಲಗಳು ವ್ಯತಿರಿಕ್ತವಾಗಿ ವರ್ತಿಸುತ್ತವೆ.

ಈ  ಹೊಸ ಎಣ್ಣೆಗಳು ಬಂದ ಬಳಿಕ ನಮ್ಮ ಆಹಾರದಲ್ಲಿ ಒಮೆಗಾ 6 ಮೇದೋ ಆಮ್ಲಗಳ ಪ್ರಮಾಣವು ಹತ್ತಿಪ್ಪತ್ತು ಪಟ್ಟು ಹೆಚ್ಚಿದೆ, ದೇಹದೊಳಗೆ ಅದರ ಪ್ರಮಾಣವು ಮೂರು ಪಟ್ಟು ಹೆಚ್ಚಿದೆ. ಇದೇ ಮೂರು ದಶಕಗಳಲ್ಲಿ ಬೊಜ್ಜು, ಮಧುಮೇಹದಂಥ ರೋಗಗಳು ತ್ರಿಪಟ್ಟಾಗಿವೆ, ರಕ್ತದ ಏರೊತ್ತಡ, ಹೃದ್ರೋಗ, ಕ್ಯಾನ್ಸರ್ ಇತ್ಯಾದಿಗಳೂ ಹೆಚ್ಚಿವೆ, ಮನೋರೋಗಗಳೂ ಹೆಚ್ಚುತ್ತಿವೆ. ಹೊಸ ಎಣ್ಣೆಗಳಲ್ಲಿರುವ ಒಮೆಗಾ 6 ಆಮ್ಲಗಳು ಹಾಗೂ ಟ್ರಾನ್ಸ್ ಆಮ್ಲಗಳು ದೇಹದಲ್ಲಿ ಉರಿಯೂತವನ್ನು ಹೆಚ್ಚಿಸುವುದರಿಂದ ರಕ್ತನಾಳಗಳ ಕಾಯಿಲೆ, ಹೃದಯಾಘಾತ, ಬೊಜ್ಜು, ಮಧುಮೇಹ, ಸಂಧಿವಾತ, ಕ್ಯಾನ್ಸರ್ ಇತ್ಯಾದಿಗಳಿಗೆ ದಾರಿ ಮಾಡುತ್ತವೆ ಎನ್ನಲಾಗಿದೆ. ಅಂದರೆ ಹೃದ್ರೋಗವನ್ನು ತಡೆಯುತ್ತವೆಂದು ಅಬ್ಬರದ ಪ್ರಚಾರದಿಂದ ಮಾರಲ್ಪಡುತ್ತಿರುವ ಎಣ್ಣೆಗಳೇ ಹೃದ್ರೋಗವನ್ನು ಹೆಚ್ಚಿಸುತ್ತವೆ ಎಂದಾಯಿತು! ಒಮೆಗಾ 6 ಆಮ್ಲಗಳ ಅತಿ ಸೇವನೆಯು ಅಸ್ತಮಾ, ಚರ್ಮದ ಎಕ್ಸಿಮಾ, ಗರ್ಭಕೋಶದ ಎಂಡೋಮೆಟ್ರಿಯೋಸಿಸ್‌, ಖಿನ್ನತೆ, ಆತ್ಮಹತ್ಯೆಯ ಅಪಾಯ ಇತ್ಯಾದಿಗಳನ್ನು ಕೂಡ ಹೆಚ್ಚಿಸುತ್ತವೆಂದು ಹೇಳಲಾಗಿದೆ. ಜೋಳ, ಸೂರ್ಯಕಾಂತಿ, ಸೋಯಾ ಬೀಜಗಳ ಎಣ್ಣೆಗಳನ್ನು ಕಾಯಿಸಿದಾಗ ಹೃದ್ರೋಗ, ಕ್ಯಾನ್ಸರ್, ಮಿದುಳಿನ ಕಾಯಿಲೆಗಳು ಇತ್ಯಾದಿಗಳಿಗೆ ಕಾರಣವಾಗಬಲ್ಲ ಆಲ್ಡಿಹೈಡ್ ಸಂಯುಕ್ತಗಳು ವಿಪರೀತ ಪ್ರಮಾಣದಲ್ಲಿ ಬಿಡುಗಡೆಯಾಗುತ್ತವೆ ಎಂದೂ, ಬೆಣ್ಣೆ, ಹಂದಿಜನ್ಯ ಕೊಬ್ಬು, ಆಲಿವ್ ಎಣ್ಣೆಗಳಲ್ಲಿ ಕರಿದಾಗ ಆಲ್ಡಿಹೈಡ್ ಪ್ರಮಾಣವು ಬಹಳಷ್ಟು ಕಡಿಮೆಯಿರುತ್ತದೆ, ತೆಂಗಿನೆಣ್ಣೆಯಲ್ಲಿ ಕರಿದಾಗ ಅದು ಅತ್ಯಲ್ಪವಿರುತ್ತದೆ ಎಂದೂ ಇತ್ತೀಚೆಗೆ ವರದಿಯಾಗಿದೆ.

ಒಟ್ಟಿನಲ್ಲಿ ಕಳೆದ ಮೂರ್ನಾಲ್ಕು ದಶಕಗಳಿಂದ ಸಕ್ಕರೆಭರಿತ ಆಹಾರವನ್ನೂ, ಒಮೆಗಾ 6 ಹೆಚ್ಚಿರುವ ಹೊಸ ಎಣ್ಣೆಗಳನ್ನೂ ವಿಪರೀತವಾಗಿ ಸೇವಿಸುತ್ತಿರುವುದೇ ಆಧುನಿಕ ರೋಗಗಳು ಹೆಚ್ಚುತ್ತಿರುವುದಕ್ಕೆ ಕಾರಣವೆನ್ನುವುದು ಸುಸ್ಪಷ್ಟವಾಗುತ್ತಿದೆ. ಆದ್ದರಿಂದಲೇ ಅಮೆರಿಕ ಸರಕಾರದ 2015ರ ಆಹಾರ ಮಾರ್ಗದರ್ಶಿಕೆ, ಭಾರತ ಸರಕಾರವು ಅಕ್ಟೋಬರ್‌ನಲ್ಲಿ ಪ್ರಕಟಿಸಿದ ಶಾಲಾ ಮಕ್ಕಳ ಆಹಾರ ಮಾರ್ಗದರ್ಶಿಕೆ, ಆಹಾರ ಹಾಗೂ ಕೃಷಿ ಸಂಸ್ಥೆ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ವರದಿಗಳು ಎಲ್ಲದರಲ್ಲೂ ಇವುಗಳ ಬಳಕೆಯನ್ನು ಕಡಿತಗೊಳಿಸುವಂತೆ ಸಲಹೆ ನೀಡಲಾಗಿದೆ.

ಅತ್ತ ಪರ್ಯಾಪ್ತ ಮೇದೋ ಆಮ್ಲಗಳಿಂದ ರೋಗಗಳುಂಟಾಗುತ್ತದೆ ಎನ್ನುವುದಕ್ಕೆ ಹಿಂದೆಯೂ ದೃಢವಾದ ಆಧಾರಗಳಿರಲಿಲ್ಲ, ಈಗಲೂ ಇಲ್ಲ. ಆದ್ದರಿಂದ ಮಾಂಸ, ಮೊಟ್ಟೆ, ಮೀನುಗಳ ಮೇದಸ್ಸನ್ನೂ, ಆಲಿವ್, ತೆಂಗಿನೆಣ್ಣೆಗಳನ್ನೂ ಬಳಸುವುದೇ ಒಳ್ಳೆಯದು; ಆಳವಾಗಿ ಕರಿಯುವುದನ್ನು ಅಪರೂಪಗೊಳಿಸಿ, ಅದಕ್ಕೂ ತೆಂಗಿನೆಣ್ಣೆಯನ್ನೇ ಬಳಸುವುದೊಳ್ಳೆಯದು.

07_01_2016_008_005

ಆರೋಗ್ಯ ಪ್ರಭ 17: ದೇಸಿಗರಿಗೆ ಕೋಲು, ಪ್ರವಾಸಿಗರಿಗೆ ಶಾಲು [ಕನ್ನಡ ಪ್ರಭ, ಡಿಸೆಂಬರ್ 24, 2015, ಗುರುವಾರ]

ವರ್ಷಾಂತ್ಯದ ಘಟನೆಗಳೂ, ವರದಿಗಳೂ ನಮ್ಮ ಆರೋಗ್ಯ, ಶಿಕ್ಷಣ ಹಾಗೂ ಅಭಿವೃದ್ಧಿಯ ಟೊಳ್ಳುತನವನ್ನು ಬಯಲು ಮಾಡಿವೆ. ಆದರೆ ಸರಕಾರವು ದೇಶವಾಸಿಗಳನ್ನು ಕಡೆಗಣಿಸಿ, ವಿದೇಶೀಯರಿಗೂ, ಖಾಸಗಿ ಹಿತಾಸಕ್ತಿಗಳಿಗೂ ಮಣೆ ಹಾಕುತ್ತಿರುವಂತಿದೆ.

ಈ 2015 ಮುಗಿಯಲಿಕ್ಕಾಗಿದೆ; ಯಾರದೋ ಕಿಂಚಿತ್ ಹಗರಣ, ಇನ್ಯಾರದೋ ಪ್ರೇಮ ಪ್ರಕರಣ, ಮತ್ಯಾವುದೋ ಪಶುವಿನ ಹರಣ-ಮರಣ ಎಂಬ ಕಾರಣಗಳಿಗೆ ವರ್ಷವಿಡೀ ಕಾಲಹರಣವಾಗಿದೆ. ಪತ್ರಿಕೆಗಳ ಮುಖಪುಟಗಳಲ್ಲೂ, ಟಿವಿ ವಾಹಿನಿಗಳ ಎರಗು ಸುದ್ದಿಗಳಲ್ಲೂ ಇವನ್ನೇ ತುಂಬಿಸಿ, ಗುಟ್ಟಾಗಿ ನಮ್ಮ ನೆಲ-ಜಲಗಳನ್ನು ಒತ್ತೆಯಿಟ್ಟಾಗಿದೆ, ಆರೋಗ್ಯ ರಕ್ಷಣೆಯನ್ನು ಮಾರಿಯಾಗಿದೆ. ಮುಂದಿನ ಎಲ್ಲ ಪೀಳಿಗೆಗಳ ಬದುಕನ್ನು ಕಿತ್ತು, ಒಂದೆರಡು ಬಲಾಢ್ಯರ ಜೋಳಿಗೆಗಳನ್ನು ಇನ್ನಷ್ಟು ತುಂಬುವುದಕ್ಕೆ ನಮ್ಮ ಸರಕಾರವು ಮುದ್ರೆಯೊತ್ತಿಯಾಗಿದೆ.

ವರ್ಷಾಂತ್ಯದ ಕೆಲವು ಘಟನೆಗಳೂ, ವರದಿಗಳೂ ನಮ್ಮ ಅದ್ಭುತ ಅಭಿವೃದ್ಧಿಯ ಗುಳ್ಳೆಯನ್ನು ಚುಚ್ಚಿ ಠುಸ್ಸಾಗಿಸಿವೆ. ದೇಶದ ಹಲವು ಹಿರಿಯ ವೈದ್ಯಕೀಯ ತಜ್ಞರು ಲಾನ್ಸೆಟ್‌ ವಿದ್ವತ್ಪತ್ರಿಕೆಯಲ್ಲಿ ಡಿಸೆಂಬರ್ 11ರಂದು ಬರೆದ ಲೇಖನ, ಡಿ. 10ರಂದು ಬಿಡುಗಡೆಯಾದ 2015ರ ಜಾಗತಿಕ ಪೌಷ್ಠಿಕತೆಯ ವರದಿ ಹಾಗೂ ಡಿ. 14ರಂದು ಹೊರಬಂದ 2015ರ ಮಾನವ ಅಭಿವೃದ್ಧಿಯ ವರದಿ – ಇವೆಲ್ಲವೂ ಆರೋಗ್ಯ, ಶಿಕ್ಷಣ ಹಾಗೂ ಅಭಿವೃದ್ಧಿಗಳಲ್ಲಿ ನಾವಿನ್ನೂ ಹಿಂದಿದ್ದೇವೆಂದು ಎತ್ತಿ ತೋರಿಸಿವೆ, ಈಗಾಗಲೇ ಮುಕ್ಕಾಲು ಮುಳುಗಿದ್ದೇವೆಂದು ನೆನಪಿಸಿವೆ.

ಆದರೆ ಮತ್ತಷ್ಟು ಮುಳುಗುವುದಕ್ಕೆ ನಾವೀಗ ಹೊರಟಂತಿದೆ. ಭೂ ಪರಿಸರವನ್ನು ಹಾಳುಗೈದು, ಹವಾಮಾನ ವಿಪರೀತಗೊಂಡು ಡಿಸೆಂಬರ್ ಮೊದಲಿಗೆ ಚೆನ್ನೈಯಲ್ಲಿ ಭಾರೀ ಮಳೆ ಬಂತು, ಆಡಳಿತದ ವೈಫಲ್ಯದಿಂದ ಇಡೀ ನಗರವು ನೀರಲ್ಲಿ ಮುಳುಗಿತು, ಅದನ್ನೆದುರಿಸುವ ಸನ್ನದ್ಧತೆಯಿಲ್ಲದೆ 400ರಷ್ಟು ಜನ ಸತ್ತರು, ಸಾವಿರಗಟ್ಟಲೆ ಕೋಟಿ ಆಸ್ತಿ-ಪಾಸ್ತಿ ಕೊಚ್ಚಿ ಹೋಯಿತು. ವಾಹನಗಳು ಹಾಗೂ ಕೈಗಾರಿಕೆಗಳು ಹೊರಬಿಟ್ಟ ಹೊಗೆಯಲ್ಲಿ ದಿಲ್ಲಿಯಿಡೀ ಮುಳುಗಿತು, ಅಲ್ಲಿ ವರ್ಷಕ್ಕೆ 30000 ಜನರು ಮಲಿನ ಗಾಳಿಗೆ ಬಲಿಯಾಗುತ್ತಾರೆಂದು ವಿಜ್ಞಾನ ಹಾಗೂ ಪರಿಸರ ಸಂಸ್ಥೆಯ ಡಿ. 16ರ ವರದಿ ಹೇಳಿತು. ಆದರೆ ನಮ್ಮ ಸರಕಾರವನ್ನು ಇವು ಯಾವುವೂ ತಟ್ಟಲಿಲ್ಲ. ಪಾರಿಸ್ ಶೃಂಗಸಭೆಯ ಡಿ. 12ರ ಒಪ್ಪಂದದಲ್ಲಿ ಪರಿಸರ ಮಾಲಿನ್ಯಕ್ಕೆ ಕಾರಣರಾದ ಶ್ರೀಮಂತರನ್ನು ಆರೋಪ ಮುಕ್ತಗೊಳಿಸಲಾಯಿತು; ನಮ್ಮ ಕಂಪೆನಿಗಳಿಗೂ ಕಲ್ಲಿದ್ದಲು ಉರಿಸಿ ಪರಿಸರವನ್ನು ಇನ್ನಷ್ಟು ಕೆಡಿಸುವುದಕ್ಕೆ ಪರವಾನಿಗೆ ಪಡೆಯಲಾಯಿತು; ಪ್ರಕೃತಿಯ ಆರಾಧಕರೆಂದು ಹೇಳಿಕೊಳ್ಳುತ್ತಲೇ ಪ್ರಕೃತಿ ವಿನಾಶಕ್ಕೆ ಕೈ ಎತ್ತಲಾಯಿತು. ಈಗ ದೇಶದ ಶಿಕ್ಷಣ ಕ್ಷೇತ್ರವನ್ನು ವಿದೇಶಿ ಹಿತಾಸಕ್ತಿಗಳಿಗೆ ಮಾರುವುದಕ್ಕೆ ಸಿದ್ಧತೆಗಳಾಗಿವೆ, ವಿಶ್ವ ವ್ಯಾಪಾರ ಒಡಂಬಡಿಕೆಯಲ್ಲೂ ಹಿನ್ನಡೆಯಾಗಿದೆ. ಮೊದಲೇ ಮುಕ್ಕಾಲು ಮುಳುಗಿದ್ದವರು 2015ರಲ್ಲಿ ದೇಶಪ್ರೇಮದ ಭಜನೆ ಮಾಡುತ್ತಲೇ ಮೂಗಿನವರೆಗೆ ಮುಳುಗಲು ಹೊರಟಿದ್ದೇವೆ.

ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮವು ಪ್ರಕಟಿಸಿರುವ 2015ರ ಮಾನವ ಅಭಿವೃದ್ಧಿಯ ವರದಿಯಲ್ಲಿ ಭಾರತವು 188 ದೇಶಗಳಲ್ಲಿ 130ನೇ ಸ್ಥಾನದಲ್ಲಿದೆ. ಕಳೆದ 6 ವರ್ಷಗಳಲ್ಲಿ ನಾವು ಆರು ಸ್ಥಾನಗಳಷ್ಟು ಮೇಲೇರಿದ್ದರೂ, ಬ್ರೆಜಿಲ್, ಚೀನಾ, ರಷ್ಯಾ, ದಕ್ಷಿಣ ಆಫ್ರಿಕಾ (ಬ್ರಿಕ್) ದೇಶಗಳಲ್ಲಿ ಕೊನೆಯಲ್ಲಿದ್ದೇವೆ; ಇರಾಕ್, ಈಜಿಪ್ಟ್, ಪೇಲೆಸ್ತೈನ್, ನಮೀಬಿಯಾಗಳು ನಮ್ಮಂತೆ ಮಧ್ಯಮ ಅಭಿವೃದ್ಧಿಯ ಪಟ್ಟಿಯಲ್ಲಿದ್ದರೂ ನಮಗಿಂತ ಮೇಲಿವೆ, ನೆರೆಯ ಶ್ರೀಲಂಕಾ 73ನೇ ಸ್ಥಾನದಲ್ಲಿದ್ದು, ಉನ್ನತ ಅಭಿವೃದ್ಧಿಯ ದೇಶವಾಗಿಬಿಟ್ಟಿದೆ. ಈ ಪಟ್ಟಿಯಲ್ಲಿ ಅತ್ಯುನ್ನತ ಅಭಿವೃದ್ಧಿ ಹೊಂದಿ, ಒಂದನೇ ಸ್ಥಾನದಲ್ಲಿರುವ ನಾರ್ವೇಗೆ 0.944 ಅಂಕಗಳಿದ್ದರೆ, ಭಾರತಕ್ಕೆ 0.609 ಅಂಕಗಳಿವೆ; ನಾರ್ವೇಯ ಜನರ ನಿರೀಕ್ಷಿತ ಆಯುಸ್ಸು 82 ವರ್ಷಗಳಾದರೆ, ಭಾರತದಲ್ಲಿ 68 ವರ್ಷಗಳಿವೆ, ಅಲ್ಲಿ ವಿದ್ಯಾರ್ಜನೆಯ ನಿರೀಕ್ಷಿತ ಅವಧಿಯು 17.5 ವರ್ಷ ಹಾಗೂ ಸರಾಸರಿ ಅವಧಿಯು 12.6 ವರ್ಷಗಳಾದರೆ, ನಮ್ಮಲ್ಲಿವು ಕ್ರಮವಾಗಿ 11.7 ಹಾಗೂ 5.4 ವರ್ಷಗಳಾಗಿವೆ. ಅಂದರೆ ಭಾರತದ ಮಕ್ಕಳು ವಯಸ್ಕರಾಗುವ ವೇಳೆಗೆ ಸರಾಸರಿ ಕೇವಲ 5.4 ವರ್ಷಗಳಷ್ಟೇ ಶಾಲಾಭ್ಯಾಸ ಮಾಡಿರುತ್ತಾರೆ. ದೇಶದೊಳಗಿನ ಸಾಮಾಜಿಕ ಅಸಮಾನತೆಯನ್ನು ಪರಿಗಣಿಸಿದರೆ ನಮ್ಮ ದೇಶದ ಅಂಕಗಳು 0.435ಕ್ಕೆ (177ನೇ ಸ್ಥಾನದ ಮಟ್ಟಕ್ಕೆ) ಇಳಿಯುತ್ತವೆ. ನಮ್ಮ ದೇಶದಲ್ಲಿ ಲಿಂಗ ತಾರತಮ್ಯವೂ ಗಣನೀಯವಾಗಿದ್ದು, ಪುರುಷರ ಸರಾಸರಿ ಶಿಕ್ಷಣವು 7.2 ವರ್ಷಗಳಿರುವಲ್ಲಿ ಸ್ತ್ರೀಯರದು 3.6 ವರ್ಷಗಳಷ್ಟಿದೆ, ಪುರುಷರ ವಾರ್ಷಿಕ ತಲಾ ಆದಾಯವು ರೂ. 8656 ಇರುವಲ್ಲಿ, ಸ್ತ್ರೀಯರದು ಕೇವಲ ರೂ. 2116 ಆಗಿದೆ. ಸ್ತ್ರೀಯರ ಆರೋಗ್ಯ, ಶಿಕ್ಷಣ ಹಾಗೂ ವೃತ್ತಿ ಭಾಗೀದಾರಿಕೆಯಲ್ಲಿ ನಾವು ಬಂಗ್ಲಾದೇಶಕ್ಕಿಂತಲೂ ಹಿಂದಿದ್ದೇವೆ.

ಜಾಗತಿಕ ಹಾಗೂ ರಾಷ್ಟ್ರೀಯ ಪೌಷ್ಠಿಕತೆಯ ವರದಿಗಳನುಸಾರ, 2030ರ ವೇಳೆಗೆ ಕುಪೋಷಣೆಯನ್ನು ನೀಗಿಸುವುದಕ್ಕೆ ಹೊಂದಲಾಗಿರುವ ಎಂಟು ಗುರಿಗಳಲ್ಲಿ ಕೇವಲ ಎರಡನ್ನಷ್ಟೇ ಸಾಧಿಸಲು ನಮಗೆ ಸಾಧ್ಯವಾಗಿದೆ. ನಮ್ಮ ದೇಶದಲ್ಲಿ 21 ಕೋಟಿ ಜನರು (ಜನಸಂಖ್ಯೆಯ ಶೇ. 17ರಷ್ಟು) ನ್ಯೂನಪೋಷಿತರಾಗಿದ್ದು, ಇದು ವಿಶ್ವದಲ್ಲೇ ಅತ್ಯಧಿಕವಾಗಿದೆ. ವಿಶ್ವದ ಕುಪೋಷಿತ ಮಕ್ಕಳಲ್ಲಿ ಮೂರರಲ್ಲೊಂದು, ಅಂದರೆ ಸುಮಾರು 6 ಕೋಟಿಯಷ್ಟು, ನಮ್ಮಲ್ಲಿದೆ. ವಿಶ್ವದಲ್ಲಿ ಸರಾಸರಿ 24% ಮಕ್ಕಳ ಬೆಳವಣಿಗೆಯು ಕುಂಠಿತವಾಗಿದ್ದರೆ, ನಮ್ಮಲ್ಲಿ ಅಂಥ ಮಕ್ಕಳ ಪ್ರಮಾಣವು 39% ಇದೆ. ಹಿಂದುಳಿದ ರಾಜ್ಯಗಳು ಹಾಗೂ ಹಳ್ಳಿಗಳವರು, ದಲಿತರು, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದವರು ಇನ್ನಷ್ಟು ಹೆಚ್ಚು ಕುಪೋಷಿತರಾಗಿದ್ದಾರೆ. ನಮ್ಮಲ್ಲಿ ಮೂರರಲ್ಲೊಬ್ಬ ಮಹಿಳೆಯೂ ಕೃಶಕಾಯದವಳಿದ್ದು, ಶೇ. 55ರಷ್ಟು ಮಹಿಳೆಯರು ರಕ್ತಕೊರೆಯುಳ್ಳವರಾಗಿದ್ದಾರೆ. ಕಳೆದೆರಡು ದಶಕಗಳಲ್ಲಿ ಈ ಕುಪೋಷಣೆಯ ಸ್ಥಿತಿಯಲ್ಲಿ ಗಣನೀಯವಾದ ಸುಧಾರಣೆಯಾಗಿಲ್ಲ ಎನ್ನುವುದು ನಮ್ಮ ಆರ್ಥಿಕ ಹಾಗೂ ಕೃಷಿ ಕ್ಷೇತ್ರಗಳಲ್ಲಾಗಿರುವ ತಥಾಕಥಿತ ಅಭಿವೃದ್ಧಿಯು ಇವರನ್ನು ತಲುಪಿಲ್ಲವೆನ್ನುವುದನ್ನು ತೋರಿಸುತ್ತದೆ.

ಲಾನ್ಸೆಟ್ ವರದಿಯಂತೆ, ಐದು ವರ್ಷದೊಳಗಿನ ಮಕ್ಕಳಲ್ಲಿ 68% ಸಾವುಗಳಿಗೆ ಭೇದಿ, ಶ್ವಾಸಾಂಗ ಸೋಂಕು, ಜನನ ಕಾಲದ ಸಮಸ್ಯೆಗಳು ಹಾಗೂ ನವಜಾತ ಶಿಶುವಿನ ಸೋಂಕುಗಳು ಕಾರಣವಾಗಿದ್ದು, ಸೂಕ್ತ ವೈದ್ಯಕೀಯ ಆರೈಕೆಯ ಅಲಭ್ಯತೆಯನ್ನು ಸೂಚಿಸುತ್ತವೆ. ವಯಸ್ಕರಲ್ಲಿ 60% ಸಾವುಗಳು ಹೃದಯಾಘಾತದಂತಹ ಆಧುನಿಕ ರೋಗಗಳಿಂದಾಗುತ್ತಿವೆ. ಧೂಮಪಾನ ಸಂಬಂಧಿತ ಕಾಯಿಲೆಗಳು ವರ್ಷಕ್ಕೆ ಸುಮಾರು 10 ಲಕ್ಷ ಸಾವುಗಳನ್ನುಂಟು ಮಾಡುತ್ತಿವೆ. ನಮ್ಮಲ್ಲಿ ಹೃದಯಾಘಾತಕ್ಕೀಡಾಗುವವರು ಸರಾಸರಿ 50ನೇ ವಯಸ್ಸಿನವರಾಗಿದ್ದು, ಶ್ರೀಮಂತ ದೇಶಗಳ ಜನರಿಗಿಂತ 10 ವರ್ಷ ಕಿರಿಯರಾಗಿರುತ್ತಾರೆ. ಸುಮಾರು ಏಳು ಕೋಟಿ ಜನರು ಮಧುಮೇಹ ಪೀಡಿತರಾಗಿದ್ದಾರೆ. ಕ್ಷಯ, ಶ್ವಾಸಾಂಗ ಸೋಂಕು, ಭೇದಿ, ಮಲೇರಿಯಾ, ಟೈಫಾಯ್ಡ್ ಮುಂತಾದವೂ ಸಾಕಷ್ಟು ಸಾವುಗಳಿಗೆ ಕಾರಣವಾಗುತ್ತಿವೆ. ಯುವಜನರಲ್ಲಿ ಆತ್ಮಹತ್ಯೆಯೂ ಹೆಚ್ಚುತ್ತಿದ್ದು, ವರ್ಷಕ್ಕೆ ಎರಡೂವರೆ ಲಕ್ಷ ಸಾವುಗಳಿಗೆ ಕಾರಣವಾಗುತ್ತಿದೆ.

ಇವುಗಳಲ್ಲಿ ಹಲವನ್ನು ತಡೆಯುವುದಕ್ಕೂ, ಸೂಕ್ತ ಚಿಕಿತ್ಸೆ ನೀಡುವುದಕ್ಕೂ ಸಾಧ್ಯವಿದೆ. ಆದರೆ ಅದಕ್ಕೆ ನಮ್ಮ ಸಾರ್ವಜನಿಕ ಆರೋಗ್ಯ ಸೇವೆಗಳು ಬಲಿಷ್ಠವಾಗಿರಬೇಕು, ಎಲ್ಲರಿಗೂ ದಕ್ಕುವಂತಿರಬೇಕು. ಆದರೆ ಹಸಿವು ಹಾಗೂ ಕುಪೋಷಣೆಗಳನ್ನು ಇಳಿಸುವುದಕ್ಕೆ ಬೇಕಿರುವ ಬದ್ಧತೆಯಲ್ಲಿ ನಾವು ಅತಿ ಕೆಳ ಮಟ್ಟದಲ್ಲಿದ್ದೇವೆ; ನೇಪಾಲ, ಬಂಗ್ಲಾದೇಶ, ಪಾಕಿಸ್ತಾನಗಳು ಕೂಡ ನಮಗಿಂತ ಹೆಚ್ಚಿನ ಬದ್ಧತೆಯನ್ನು ಹೊಂದಿವೆ, ಶ್ರೀಲಂಕಾವಂತೂ ಬಹಳ ಮುಂದಿದೆ. ಇತ್ತೀಚಿನ ವರ್ಷಗಳಲ್ಲಿ ನಮ್ಮ ಬದ್ಧತೆಯು ಹೆಚ್ಚುವ ಬದಲು ಇನ್ನಷ್ಟು ಇಳಿಯುತ್ತಿದೆ; ಆರೋಗ್ಯ ಸೇವೆಗಳ ಅನುದಾನವೂ ಕಡಿಮೆಯಾಗುತ್ತಿದೆ. ಕಳೆದ ದಶಕದಲ್ಲಿ ಒಟ್ಟು ಸಾರ್ವಜನಿಕ ತಲಾ ವ್ಯಯವು 40% ಏರಿದರೂ, ಆರೋಗ್ಯ ಸೇವೆಗಳ ತಲಾ ವ್ಯಯವು 4.5% ದಿಂದ 4%ಕ್ಕೆ ಇಳಿದಿದೆ ಹಾಗೂ 70% ವೆಚ್ಚವನ್ನು ಜನರೇ ತಮ್ಮ ಕಿಸೆಯಿಂದ ಭರಿಸಬೇಕಾಗಿದೆ, ಇದು ಇನ್ನಷ್ಟು ಬಡತನಕ್ಕೆ ಕಾರಣವಾಗುತ್ತಿದೆ. ಆರೋಗ್ಯ ರಕ್ಷಣೆಗಾಗಿ ಸರಕಾರವು ನಡೆಸುತ್ತದೆನ್ನಲಾದ ಅದೆಷ್ಟೋ ಕಾರ್ಯಕ್ರಮಗಳು ಕಾಗದದಲ್ಲೇ ಉಳಿದಿವೆ; 2012ರ ವೇಳೆಗೆ 600 ಮೂಲ ಔಷಧ ಮಳಿಗೆಗಳನ್ನು ತೆರೆಯುವ ಯೋಜನೆಯಿದ್ದಲ್ಲಿ, ಕೇವಲ 170 ಮಾತ್ರ ತೆರೆದಿವೆ, ಅವುಗಳಲ್ಲಿ 99 ಮಾತ್ರವೇ ಕಾರ್ಯನಿರತವಾಗಿವೆ. ರಸ್ತೆಗೆ ಡಾಂಬರಿನಂತಹ ಬೇರಾವುದೇ ಯೋಜನೆಗಳಿಗೆ ಹಣ ಬೇಕಿದ್ದರೆ ಆರೋಗ್ಯ ಸೇವೆಗಳ ಹಣಕ್ಕೇ ಕತ್ತರಿ ಹಾಕಲಾಗುತ್ತಿದೆ.

ವೈದ್ಯಕೀಯ ಶಿಕ್ಷಣ ಹಾಗೂ ವೈದ್ಯಕೀಯ ಸೇವೆಗಳಲ್ಲಿ ಖಾಸಗಿ ಹಿಡಿತವು ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದ್ದು, 80% ವೈದ್ಯರು, 78% ಹೊರರೋಗಿ ಸೇವೆಗಳು, 60% ಒಳರೋಗಿ ಸೇವೆಗಳು, 78% ರುಗ್ಣವಾಹಕಗಳು ಖಾಸಗಿ ಕ್ಷೇತ್ರದಲ್ಲಿವೆ. ಸರಕಾರಿ ಆಸ್ಪತ್ರೆಗಳು ವೈದ್ಯರಿಲ್ಲದೆ, ಸೌಲಭ್ಯಗಳಿಲ್ಲದೆ ಸೊರಗುತ್ತಿವೆ; ಕಷ್ಟ-ನಷ್ಟಗಳೂ, ಕಲ್ಲೇಟುಗಳೂ ಸರಕಾರಿ ಆಸ್ಪತ್ರೆಗಳಿಗೆ, ಲಾಭಗಳೂ, ಹೂಗುಚ್ಛಗಳೂ ಖಾಸಗಿಯವರಿಗೆ ಎಂಬಂತಾಗಿದೆ.

ಈ ಮಧ್ಯೆ, ನಮ್ಮಲ್ಲಿಗೆ ಚಿಕಿತ್ಸೆಗಾಗಿ ಬರುತ್ತಿರುವ ವಿದೇಶೀಯರ ಅನುಕೂಲಕ್ಕಾಗಿ, ಅಂಥ ಇನ್ನಷ್ಟು ಪ್ರವಾಸಿ ರೋಗಿಗಳನ್ನು ಆಕರ್ಷಿಸುವುದಕ್ಕಾಗಿ ಸರಕಾರವು ತುದಿಗಾಲಲ್ಲಿದೆ. ಇಬ್ಬರು ಸ್ವಘೋಷಿತ ಯೋಗಗುರುಗಳೂ, ಮೂರು ಅತಿ ದೊಡ್ಡ ಖಾಸಗಿ ಆಸ್ಪತ್ರೆಗಳ ಮಾಲಕರೂ ಇರುವ ಹೊಸ ಸಮಿತಿಯೊಂದನ್ನು ಅದಕ್ಕಾಗಿ ರಚಿಸಲಾಗುತ್ತಿದೆ. ಪ್ರವಾಸಿಗರಿಗೆ ಆರೈಕೆ ನೀಡುವ ಆಸ್ಪತ್ರೆಗಳ ಪಟ್ಟಿಯನ್ನೂ ಕೇಂದ್ರ ಸರಕಾರವು ಪ್ರಕಟಿಸಿದೆ; ಅದರಲ್ಲಿ ನೂರಾರು ಸಣ್ಣಪುಟ್ಟ ಖಾಸಗಿ ಆಸ್ಪತ್ರೆಗಳ ಹೆಸರಿವೆ, ಆದರೆ ಒಂದೇ ಒಂದು ಅತಿ ದೊಡ್ಡ ಸರಕಾರಿ ಆಸ್ಪತ್ರೆಯ ಹೆಸರೂ ಇಲ್ಲ. ಸರಕಾರಕ್ಕೆ ತನ್ನ ಆಸ್ಪತ್ರೆಗಳೂ, ತನ್ನ ಪ್ರಜೆಗಳೂ ಬೇಡವಾಗಿದ್ದಾರೆ; ಪ್ರವಾಸಿಗರೂ, ಒಂದೆರಡು ಖಾಸಗಿ ಕಂಪೆನಿಗಳೂ, ಒಂದಿಬ್ಬರು ವ್ಯಾಪಾರಿ ಗುರುಗಳೂ ಬೇಕಾಗಿದ್ದಾರೆ.

24_12_2015_006_005

ಆರೋಗ್ಯ ಪ್ರಭ 16: ಭಾರತದಲ್ಲಿ ಆರೋಗ್ಯದ ಹಕ್ಕು ಮಂಗಮಾಯ [ಕನ್ನಡ ಪ್ರಭ, ಡಿಸೆಂಬರ್ 10, 2015, ಗುರುವಾರ]

ಇಂದು ಮಾನವ ಹಕ್ಕುಗಳ ದಿನ. ಆರೋಗ್ಯದ ಹಕ್ಕು ಅತಿ ಮುಖ್ಯವಾದುದೆಂದು ವಿಶ್ವ ಸಂಸ್ಥೆಯ ಸನದಿನಲ್ಲಿ ಹೇಳಲಾಗಿದ್ದರೂ, ಭಾರತದಲ್ಲಿ ಅದಿನ್ನೂ ಜಾರಿಯಾಗಿಲ್ಲ. ನಾಲ್ಕು ದಿನಗಳ ಹಿಂದೆ ಆರೋಗ್ಯ ಕೇಂದ್ರದ ಜಗಲಿಯಲ್ಲೇ ಹೆರುವಂತಾದುದು ನಮ್ಮ ದುರವಸ್ಥೆಗೆ ನಿದರ್ಶನ.

ಮೊನ್ನೆ ಡಿಸೆಂಬರ್ 6ರಂದು, ದೇಶವಾಸಿಗಳೆಲ್ಲರಿಗೆ ಸಮಾನತೆಯ ಹಕ್ಕನ್ನೊದಗಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದಂದು, ನಮ್ಮ ಭವ್ಯ ಕರ್ನಾಟಕದ ಯಾದಗಿರಿ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರವೊಂದಕ್ಕೆ ಬೀಗ ಜಡಿದಿದ್ದರಿಂದ ಅದರ ಜಗಲಿಯಲ್ಲೇ ಇಬ್ಬರು ಗರ್ಭಿಣಿಯರು ತಮ್ಮ ಸಂಬಂಧಿಕರ ನೆರವಿನಿಂದ ಪ್ರಸವಿಸಬೇಕಾಯಿತು. ಅದಕ್ಕೆ ಮೂರು ದಿನಗಳ ಮೊದಲು ಇದೇ ರಾಜ್ಯದ ಆರೋಗ್ಯ ಸಚಿವರು ದಿಲ್ಲಿಯಲ್ಲಿ ಪ್ರಶಸ್ತಿ ಪಡೆದಿದ್ದರು. ನಾಲ್ಕು ದಿನಗಳ ಬಳಿಕ, ಇಂದು ಡಿಸೆಂಬರ್ 10ಕ್ಕೆ, ಅಂತರರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ ಬಂದಿದೆ. ಸ್ವಾತಂತ್ರ್ಯ ದೊರೆತು 68 ವರ್ಷಗಳ ಬಳಿಕ, ಸಂವಿಧಾನ ರಚನೆಯಾಗಿ 66 ವರ್ಷಗಳ ಬಳಿಕ, ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸನದು ಪ್ರಕಟಗೊಂಡ 50ನೇ ವರ್ಷದಲ್ಲಿ, ಮುಂದುವರಿದ ರಾಜ್ಯವೆನಿಸಿಕೊಂಡ ಕರ್ನಾಟಕದಲ್ಲಿ ತಾಯಿ-ಮಕ್ಕಳ ಆರೈಕೆಗೆ ಹೇಳ-ಕೇಳುವವರಿಲ್ಲವೆಂದರೆ ಈ ದೇಶಕ್ಕೊದಗಿರುವ ದುರ್ಗತಿಗೆ ಬೇರೆ ನಿದರ್ಶನ ಬೇಕೆ?

ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು 1948ರಲ್ಲಿ ಮಾನವ ಹಕ್ಕುಗಳ ವಿಶ್ವ ಘೋಷಣೆಯನ್ನು ಅಂಗೀಕರಿಸಿದ ದಿನವನ್ನು ಮಾನವ ಹಕ್ಕುಗಳ ದಿನವಾಗಿ ಆಚರಿಸಲಾಗುತ್ತಿದೆ. ಈ ವರ್ಷ, “ನಮ್ಮ ಹಕ್ಕುಗಳು, ನಮ್ಮ ಸ್ವಾತಂತ್ರ್ಯಗಳು, ಚಿರಕಾಲ” ಎನ್ನುವ ಧ್ಯೇಯ ವಾಕ್ಯದೊಂದಿಗೆ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಹಕ್ಕುಗಳ ಸನದು ಮತ್ತು ಪೌರ ಹಾಗೂ ರಾಜಕೀಯ ಹಕ್ಕುಗಳ ಸನದುಗಳನ್ನು 1966ರಲ್ಲಿ ವಿಶ್ವ ಸಂಸ್ಥೆಯು ಅಂಗೀಕರಿಸಿದ್ದರ ಸುವರ್ಣ ವರ್ಷಾಚರಣೆಯನ್ನು ಆರಂಭಿಸಲಾಗುತ್ತಿದೆ. ಮಾನವ ಹಕ್ಕುಗಳ ಈ ಅಂತರರಾಷ್ಟ್ರೀಯ ಮಸೂದೆಗಳಲ್ಲಿ ಒತ್ತಿ ಹೇಳಲಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯ, ಆರಾಧನಾ ಸ್ವಾತಂತ್ರ್ಯ, ಕೊರತೆಮುಕ್ತ ಸ್ವಾತಂತ್ರ್ಯ, ಭಯಮುಕ್ತ ಸ್ವಾತಂತ್ರ್ಯಗಳ ಬಗ್ಗೆ ಇನ್ನಷ್ಟು ಅರಿವು ಮೂಡಿಸಿ, ಅವನ್ನು ಗಟ್ಟಿಗೊಳಿಸುವುದು ಈ ವರ್ಷಾಚರಣೆಯ ಉದ್ದೇಶವಾಗಿದೆ. ಆದರೆ, ಕಂದನನ್ನು ಹೆರುವುದಕ್ಕೇ ಕೊರತೆಯಿರುವಲ್ಲಿ, ರೋಗಕ್ಕೀಡಾದರೆ ಏನು ಗತಿ ಎಂಬ ಭಯ ತುಂಬಿರುವಲ್ಲಿ, ಜನಕ್ಷೇಮವನ್ನು ನಿರ್ಲಕ್ಷಿಸುವ ಸರಕಾರವನ್ನು ಟೀಕಿಸಿದರೆ ದೇಶದ್ರೋಹವೆನಿಸುವಲ್ಲಿ ಈ ಹಕ್ಕುಗಳ ದಿನಾಚರಣೆಗೆ ಏನರ್ಥ?

ಮನುಷ್ಯರಿಗೆ ಆರೋಗ್ಯವಿಲ್ಲದಿದ್ದರೆ ಬೇರಾವ ಹಕ್ಕುಗಳಿದ್ದರೂ ಉಪಯೋಗವಿಲ್ಲ. ಅದಕ್ಕೆಂದೇ ವಿಶ್ವ ಸಂಸ್ಥೆಯು ಆರೋಗ್ಯದ ಹಕ್ಕನ್ನು ಮೂಲಭೂತ ಹಕ್ಕುಗಳಲ್ಲೊಂದೆಂದು ಪರಿಗಣಿಸಿದೆ. ಜನಾಂಗ, ಮತ, ರಾಜಕೀಯ ಸಿದ್ಧಾಂತ, ಸಾಮಾಜಿಕ-ಆರ್ಥಿಕ ಸ್ಥಿತಿಗಳ ಭೇದವಿಲ್ಲದೆ ಎಲ್ಲರಿಗೂ ಅತ್ಯುನ್ನತವಾದ ದೈಹಿಕ ಹಾಗೂ ಹಾಗೂ ಮಾನಸಿಕ ಆರೋಗ್ಯವನ್ನು ಅನುಭವಿಸುವ ಹಕ್ಕಿರಬೇಕೆಂದು 1946ರಲ್ಲೇ ವಿಶ್ವ ಆರೋಗ್ಯ ಸಂಸ್ಥೆಯ ಸಂವಿಧಾನದಲ್ಲಿ ಹೇಳಲಾಗಿತ್ತು. 1948ರ ಮಾನವ ಹಕ್ಕುಗಳ ವಿಶ್ವ ಘೋಷಣೆಯಲ್ಲೂ, 1966ರ ಸನದುಗಳಲ್ಲೂ ಅದನ್ನು ಪುನರುಚ್ಚರಿಸಲಾಗಿತ್ತು. ಭಾರತವೂ ಸೇರಿದಂತೆ ವಿಶ್ವದ ಎಲ್ಲಾ ರಾಷ್ಟ್ರಗಳು ವಿಶ್ವ ಸಂಸ್ಥೆಯ ಈ ಸನದುಗಳನ್ನು ಒಪ್ಪಿಕೊಂಡಿವೆ. ಆದರೆ ಹೆಚ್ಚಿನ ರಾಷ್ಟ್ರಗಳು ಆರೋಗ್ಯದ ಹಕ್ಕನ್ನು ತಮ್ಮ ನಾಗರಿಕರಿಗಿನ್ನೂ ಖಾತರಿಗೊಳಿಸಿಲ್ಲ.

ಆರೋಗ್ಯ ಹಕ್ಕಿನ ಖಾತರಿಯೆಂದರೆ ಆಸ್ಪತ್ರೆಗಳನ್ನು ಕಟ್ಟಿ, ಅವು ಲಭ್ಯವಾಗುವಂತೆ ಮಾಡುವುದಷ್ಟೇ ಅಲ್ಲ. ಮನುಷ್ಯರು ಆರೋಗ್ಯವಂತರಾಗಿ ಬಾಳುವುದಕ್ಕೆ ಅಗತ್ಯವಿರುವ ಸ್ವಚ್ಛ ನೀರು ಹಾಗೂ ನೈರ್ಮಲ್ಯ, ಸುರಕ್ಷಿತ ಹಾಗೂ ಪೌಷ್ಠಿಕ ಆಹಾರ, ವಸತಿ, ಆರೋಗ್ಯಕರವಾದ ದುಡಿಮೆ ಹಾಗೂ ಪರಿಸರ, ಶಿಕ್ಷಣ, ಲಿಂಗ ಸಮಾನತೆ ಮುಂತಾದೆಲ್ಲವೂ ಆರೋಗ್ಯದ ಹಕ್ಕಿನೊಳಗೆ ಅಡಕವಾಗಿವೆ. ಯಾವುದೇ ಭೇದಗಳಿಲ್ಲದೆ ಎಲ್ಲರಿಗೂ ಅತ್ಯುನ್ನತ ಆರೋಗ್ಯ ಸೇವೆಗಳನ್ನು ಪಡೆಯುವ ಹಕ್ಕು, ಎಲ್ಲಾ ರೋಗಗಳ ನಿಯಂತ್ರಣ ಹಾಗೂ ಚಿಕಿತ್ಸೆಯ ಹಕ್ಕು, ಎಲ್ಲಾ ಅಗತ್ಯ ಔಷಧಗಳನ್ನು ಮಿತದರದಲ್ಲಿ ಅಥವಾ ಉಚಿತವಾಗಿ ಪಡೆಯುವ ಹಕ್ಕು ದೊರೆಯಬೇಕೆನ್ನುವುದು ಅದರ ಆಶಯವಾಗಿದೆ. ಮಹಿಳೆಯರಿಗೆ ಮತ್ತು ಮಕ್ಕಳಿಗೆ, ವೃದ್ಧರು, ದಮನಿತರು, ಬಡವರು, ವಿಕಲ ಚೇತನರು ಮುಂತಾದ ಅಲಕ್ಷಿತ ವರ್ಗಗಳ ಜನರಿಗೆ ಎಲ್ಲಾ ಮೂಲಭೂತ ಆರೋಗ್ಯ ಸೇವೆಗಳನ್ನು ಖಾತರಿಗೊಳಿಸಬೇಕೆಂದೂ, ಆರೋಗ್ಯ ಸೇವೆಗಳು ವೈಜ್ಞಾನಿಕವಾಗಿ, ವೃತ್ತಿಸಂಹಿತೆಗೆ ಅನುಗುಣವಾಗಿ, ಸ್ಥಳೀಯ ಸಂಸ್ಕೃತಿಗೆ ಸ್ವೀಕಾರಾರ್ಹವಾಗಿ ಇರಬೇಕೆಂದೂ ಈ ಸನದುಗಳಲ್ಲಿ ಆಶಿಸಲಾಗಿದೆ.

ವಿಶ್ವದ ಎಲ್ಲಾ ರಾಷ್ಟ್ರಗಳಿಗೂ ಒಂದೇ ಸಲಕ್ಕೆ ಆರೋಗ್ಯದ ಹಕ್ಕನ್ನು ಖಾತರಿಗೊಳಿಸುವುದು ಅಸಾಧ್ಯವಾದರೂ, ಅದನ್ನು ಆದಷ್ಟು ಬೇಗನೇ ಸಾಧಿಸುವುದಕ್ಕೆ ಪೂರಕವಾದ ಧೋರಣೆಗಳನ್ನೂ, ಕಾರ್ಯಕ್ರಮಗಳನ್ನೂ ಎಲ್ಲಾ ಸರಕಾರಗಳು ಹೊಂದಿರಬೇಕೆಂದು ವಿಶ್ವ ಸಂಸ್ಥೆಯು ಆಶಿಸಿದೆ. ಆದ್ದರಿಂದ ಬಡ ರಾಷ್ಟ್ರಗಳು ಕೂಡ ಆರೋಗ್ಯ ರಕ್ಷಣೆಗೆ ಮೂಲಭೂತ ಸೌಲಭ್ಯಗಳನ್ನು ಖಾತರಿ ಪಡಿಸುವ ಜವಾಬ್ದಾರಿಯನ್ನು ಹೊಂದಿರುತ್ತವೆ. ಆದರೆ ಅಮೆರಿಕಾ, ಭಾರತಗಳೂ ಸೇರಿದಂತೆ ಜಗತ್ತಿನ 86 ದೇಶಗಳು ಇನ್ನೂ ತಮ್ಮ ಜನರಿಗೆ ಆರೋಗ್ಯದ ಹಕ್ಕನ್ನು ಸಾಂವಿಧಾನಿಕಗೊಳಿಸಿಲ್ಲ. ವಿಶ್ವ ಸಂಸ್ಥೆಯ ಸದಸ್ಯ ದೇಶಗಳಲ್ಲಿ ಕೇವಲ 73 (ಶೇ. 38) ಮಾತ್ರವೇ ಆರೋಗ್ಯ ಸೇವೆಗಳ ಹಕ್ಕನ್ನು ನೀಡಿದ್ದರೆ, 27 ದೇಶಗಳು ಅದನ್ನು ನೀಡುವ ಆಶಯವನ್ನು ವ್ಯಕ್ತಪಡಿಸಿವೆ. ಸಾರ್ವಜನಿಕ ಆರೋಗ್ಯದ ಖಾತರಿಯು ಕೇವಲ 27 (ಶೇ. 14) ದೇಶಗಳಲ್ಲಷ್ಟೇ ಇದ್ದು, ಇನ್ನೂ 21 ದೇಶಗಳು ಅಂತಹ ಆಶಯವನ್ನು ಹೊಂದಿವೆ. ಅಂದರೆ, ಎಲ್ಲಾ ದೇಶಗಳು ಮಾನವ ಹಕ್ಕುಗಳಿಗೆ ಮಾನ್ಯತೆ ನೀಡಿದ್ದರೂ, ಅವುಗಳಲ್ಲಿ ಅತ್ಯಂತ ಮುಖ್ಯವಾದ ಆರೋಗ್ಯದ ಹಕ್ಕನ್ನು ಕೆಲವು ದೇಶಗಳಷ್ಟೇ ಖಾತರಿ ಪಡಿಸಿವೆ; ಹಾಗೆ ಮಾಡಿರುವ ದೇಶಗಳ ಪಟ್ಟಿಯಲ್ಲಿ ಭಾರತದ ಹೆಸರು ಇನ್ನೂ ಸೇರಿಲ್ಲ.

ನಮ್ಮ ದೇಶದಲ್ಲಿ ಆರೋಗ್ಯದ ಹಕ್ಕು ಲಭ್ಯವಾಗುವ ಸಾಧ್ಯತೆಗಳು ಸದ್ಯಕ್ಕಂತೂ ಮರೆಯಾಗಿ ಹೋಗಿವೆ. ಈಗ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹೊಸ ಆರೋಗ್ಯ ನೀತಿ, ಹೊಸ ರಾಷ್ಟ್ರೀಯ ಆರೋಗ್ಯ ಖಾತರಿ ಅಭಿಯಾನ, ಸರಕಾರಿ ಆಸ್ಪತ್ರೆಗಳ ಆಧುನೀಕರಣ ಮುಂತಾದ ಭರವಸೆಗಳನ್ನು ನೀಡಿತ್ತು, ಹಾಗೂ ರಾಜ್ಯಗಳ ಸಹಕಾರದೊಂದಿಗೆ ಇವನ್ನು ಈಡೇರಿಸಲಾಗುವುದೆಂದು ಹೇಳಿತ್ತು. ಮತದಾರರು ಆ ಪ್ರಣಾಳಿಕೆಯ ಅಕ್ಷರಗಳನ್ನೊಡೆದು ಓದಲಿಲ್ಲ, ಆ ಪಕ್ಷವೂ ಬಹುಷಃ ತನ್ನ ಲೆಕ್ಕಗಳನ್ನು ಸರಿಯಾಗಿ ಮಾಡಿಕೊಳ್ಳಲಿಲ್ಲ. ಕಳೆದ ಡಿಸೆಂಬರ್ ಅಂತ್ಯಕ್ಕೆ ಹೊಸ ಆರೋಗ್ಯ ನೀತಿಯೇನೋ ಬಂತು, ಆದರೆ ಆರೋಗ್ಯ ಖಾತರಿ ಎನ್ನುವುದು ಆರೋಗ್ಯ ವಿಮೆಯ ಖಾತರಿ ಎಂದಾಯಿತು. ರಾಜ್ಯಗಳ ಭಾಗೀದಾರಿಕೆ ಎಂಬುದು ರಾಜ್ಯಗಳ ಜವಾಬ್ದಾರಿಯೆಂದಾಯಿತು, ಆರೋಗ್ಯ ಸೇವೆಗಳಿಗೆ ಕೇಂದ್ರದ ಅನುದಾನವು ಕಡಿತಗೊಂಡಿತು.

ಈ ಹೊಸ ಆರೋಗ್ಯ ನೀತಿಯನ್ನು ಜಾರಿಗೊಳಿಸಲು ನಾಲ್ಕು ವರ್ಷಗಳಲ್ಲಿ 160000 ಕೋಟಿ ರೂಪಾಯಿಗಳ ವೆಚ್ಚವಾಗಬಹುದೆಂದು ಆರಂಭದಲ್ಲಿ ಅಂದಾಜಿಸಲಾಗಿತ್ತು; ನಂತರ ಅದನ್ನು ಐದು ವರ್ಷಗಳಿಗೆ 116000 ಕೋಟಿ ರೂಪಾಯಿಗಳಿಗೆ ಇಳಿಸಲಾಯಿತು. ಅದನ್ನು ಹೊಂದಿಸುವುದಕ್ಕಾಗಿ ಆರೋಗ್ಯ ಸುಂಕವನ್ನು ವಿಧಿಸುವ ಪ್ರಸ್ತಾವನೆಯನ್ನೂ ಮಾಡಲಾಯಿತು. ಈ ಲೆಕ್ಕಾಚಾರಗಳ ಬಳಿಕ, ಕಳೆದ ಎಪ್ರಿಲ್‌ನಲ್ಲಿ ಆರೋಗ್ಯ ಖಾತರಿ ಅಭಿಯಾನವನ್ನು ಆರಂಭಿಸಬಹುದೆಂಬ ನಿರೀಕ್ಷೆಯಿತ್ತು, ಅದಾಗದೆ ಅಕ್ಟೋಬರ್‌ಗೆ ಹೋಯಿತು, ಕೊನೆಗೀಗ ಕರಡು ಆರೋಗ್ಯ ನೀತಿಯು ಹೊರಬಂದು ವರ್ಷವಾಗುತ್ತಾ ಬಂದರೂ ಆ ಬಗ್ಗೆ ಮೌನವಲ್ಲದೆ ಬೇರೇನಿಲ್ಲ.

ಈ ಹೊಸ ನೀತಿ, ಹೊಸ ಅಭಿಯಾನಗಳು ಅಂತಿರಲಿ, ಈ ಮೊದಲು ನಡೆಯುತ್ತಿದ್ದ ಆರೋಗ್ಯ ಕಾರ್ಯಕ್ರಮಗಳಿಗೂ ಈಗ ಹಣವಿಲ್ಲವಾಗಿದೆ. ಹತ್ತು ಕೋಟಿ ಮಕ್ಕಳಿಗೂ, ಗರ್ಭಿಣಿಯರಿಗೂ ಸೇವೆಗಳನ್ನೊದಗಿಸುವ ಸಮಗ್ರ ಶಿಶು ಕಲ್ಯಾಣ ಕಾರ್ಯಕ್ರಮಕ್ಕೆ ನೀಡಲಾಗುತ್ತಿದ್ದ ಕೇಂದ್ರದ ಅನುದಾನವನ್ನು ರೂ. 18691 ಕೋಟಿಯಿಂದ ಶೇ. 60ರಷ್ಟು ಕಡಿತಗೊಳಿಸಿ ರೂ. 8000 ಕೋಟಿಗೆ ಇಳಿಸಲಾಗಿದೆ. ಹನ್ನೊಂದು ಲಕ್ಷ ಶಾಲೆಗಳಲ್ಲಿ ಹತ್ತು ಕೋಟಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವುದಕ್ಕೆ ಒದಗಿಸಲಾಗುತ್ತಿದ್ದ ರೂ. 13150 ಕೋಟಿಗಳನ್ನು ರೂ. 9236 ಕೋಟಿಗಳಿಗಿಳಿಸಲಾಗಿದೆ. ಆಹಾರ ಸುರಕ್ಷಾ ಅಭಿಯಾನಕ್ಕೆ ಶೇ. 30ರ ಕಡಿತ, ಗ್ರಾಮೀಣ ಕುಡಿಯುವ ನೀರಿನ ಯೋಜನೆಗೆ ಶೇ. 80ರ ಕಡಿತ, ಎಚ್‌ಐವಿ/ಏಡ್ಸ್‌ ನಿಯಂತ್ರಣಕ್ಕೂ ಸಾಕಷ್ಟು ಹಣವೊದಗಿಸಲಾಗಿಲ್ಲ. ಐದು ವರ್ಷದೊಳಗಿನ 6 ಲಕ್ಷ ಮಕ್ಕಳು ಪ್ರತೀ ವರ್ಷ ಸಾವನ್ನಪ್ಪುತ್ತಿರುವ ನಮ್ಮ ದೇಶದಲ್ಲಿ ಇಂತಹ ಆರೋಗ್ಯ ಯೋಜನೆಗಳಿಗೆ ಹಣವೊದಗಿಸದಿದ್ದರೆ ಗತಿಯೇನಾಗಬಹುದು? ತಮ್ಮ ಇಲಾಖೆಯಡಿ ದುಡಿಯುತ್ತಿರುವವರಿಗೆ ಸಂಬಳ ನೀಡುವುದಕ್ಕೂ ತತ್ವಾರವಾಗಿದೆಯೆಂದು ಕೇಂದ್ರದ ಮಹಿಳಾ ಮತ್ತು ಶಿಶು ಕಲ್ಯಾಣ ಸಚಿವೆ ಮನೇಕಾ ಗಾಂಧಿಯೇ ಹೇಳಿದ ಮೇಲೆ ಪರಿಹಾರವೆಲ್ಲಿದೆ?

ಭಾರತದ ಆರೋಗ್ಯ ಸೇವೆಗಳ ಅಧೋಗತಿಯಾಗುತ್ತಿರುವ ಬಗ್ಗೆ ವಿಶ್ವದ ಹಲವು ತಜ್ಞರು ಬರೆದಿರುವ ಲೇಖನವು ನಾಳೆ, ಡಿಸೆಂಬರ್ 11ರಂದು, ಪ್ರತಿಷ್ಠಿತ ವೈದ್ಯಕೀಯ ಪತ್ರಿಕೆಯಾದ ಲಾನ್ಸೆಟ್‌ನಲ್ಲಿ ಪ್ರಕಟವಾಗುತ್ತಿದೆ. ಪತ್ರಿಕೆಯ ಸಂಪಾದಕರಾದ ರಿಚಾರ್ಡ್ ಹೋರ್ಟನ್ ಅವರು ಕಳೆದ ಅಕ್ಟೋಬರ್‌ನಲ್ಲೇ ಈ ಲೇಖನದ ಮುನ್ಸೂಚನೆ ನೀಡುತ್ತಾ, ಯಾವುದೇ ಹೊಸ ಯೋಜನೆಗಳಾಗಲೀ, ಹೊಸ ಯೋಚನೆಗಳಾಗಲೀ, ಸಾರ್ವಜನಿಕ ಬದ್ಧತೆಯಾಗಲೀ, ಆರ್ಥಿಕ ಬದ್ಧತೆಯಾಗಲೀ ಇಲ್ಲದೆ ಆರೋಗ್ಯ ಕ್ಷೇತ್ರವನ್ನು ಹೀಗೇ ಕಡೆಗಣಿಸಿದಲ್ಲಿ ದೇಶವು ಅನಾರೋಗ್ಯ ಪೀಡಿತವಾಗಿ ಕುಸಿದು ಬೀಳಲಿದೆ ಎಂದು ಎಚ್ಚರಿಸಿದ್ದಾರೆ. ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೆನ್ ಅವರೂ ಆರೋಗ್ಯ ಮತ್ತು ಶಿಕ್ಷಣಗಳಿಲ್ಲದ ದೇಶವು ಅಭಿವೃದ್ಧಿಯಾಗದೆಂದು ಹೇಳಿದ್ದಾರೆ.

ಹೀಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳೆಲ್ಲವೂ ಆರೋಗ್ಯ ಸೇವೆಗಳನ್ನು ಕಡೆಗಣಿಸಿ, ಮುಚ್ಚಿದ ಆಸ್ಪತ್ರೆಗಳೆದುರು ಮಕ್ಕಳನ್ನು ಹೆರುವಂತಹ ಭೀಕರ ಸನ್ನಿವೇಶವನ್ನು ನಿರ್ಮಿಸುತ್ತಿರುವಾಗ ಮಾನವ ಹಕ್ಕುಗಳ ದಿನಾಚರಣೆ ಬೇಕೇ?

10_12_2015_006_005

ಆರೋಗ್ಯ ಪ್ರಭ 15: ಎಚ್‌ಐವಿ ನಿಯಂತ್ರಣವೆಂಬ ಮಾನವೀಯ ಜಯ [ಕನ್ನಡ ಪ್ರಭ, ನವೆಂಬರ್ 26, 2015, ಗುರುವಾರ]

ಮೂವತ್ಮೂರು ವರ್ಷಗಳ ಹಿಂದೆ ಏಡ್ಸ್ ಗುರುತಿಸಲ್ಪಟ್ಟಾಗ ಅದು ಕೋಟಿಗಟ್ಟಲೆ ಜನರನ್ನು ಕೊಲ್ಲಬಹುದೆಂಬ ಭೀತಿಯಿತ್ತು. ವೈದ್ಯ ವಿಜ್ಞಾನಿಗಳ ಅವಿರತ ಶ್ರಮ, ರಾಜಕಾರಣಿಗಳ ಬದ್ಧತೆ, ಸೇವಾ ಸಂಸ್ಥೆಗಳ ಮಾನವೀಯ ತುಡಿತ, ಪೀಡಿತರ ಸ್ಥೈರ್ಯ ಎಲ್ಲವೂ ಜೊತೆಗೂಡಿದ್ದರಿಂದ ಈ ಹೆಮ್ಮಾರಿಯನ್ನು ಕಟ್ಟಿ ಹಾಕುವುದಕ್ಕೆ ಸಾಧ್ಯವಾಗಿದೆ.

ಮೂವತ್ಮೂರು ವರ್ಷಗಳ ಹಿಂದೆ ಗುರುತಿಸಲ್ಪಟ್ಟ ಸೋಂಕೊಂದು ಮನುಷ್ಯ ಸಂಬಂಧಗಳನ್ನು ಬದಲಿಸಿತು, ಮಾನವ ದೇಹದ ರಹಸ್ಯಗಳನ್ನು ತೆರೆಯಿತು, ವೈದ್ಯಕೀಯ ಸಂಶೋಧನೆಗಳಿಗೆ ಹೊಸ ಆಯಾಮಗಳನ್ನು ನೀಡಿತು, ರಕ್ತಪೂರಣ ಹಾಗೂ ಶಸ್ತ್ರಕ್ರಿಯೆಗಳನ್ನು ಇನ್ನಷ್ಟು ಸುರಕ್ಷಿತಗೊಳಿಸಿತು, ವೈರಾಣುಗಳ ಪತ್ತೆಯಲ್ಲೂ, ಚಿಕಿತ್ಸೆಯಲ್ಲೂ ಕ್ರಾಂತಿಯನ್ನುಂಟು ಮಾಡಿತು, ದೈತ್ಯ ಔಷಧ ಕಂಪೆನಿಗಳ ಸದ್ದಡಗಿಸಿತು. ಎಚ್‌ಐವಿ/ಏಡ್ಸ್ ಮೇಲೆ ಆಧುನಿಕ ವಿಜ್ಞಾನ ಹಾಗೂ ಮಾನವೀಯ ಮೌಲ್ಯಗಳು ಸಾಧಿಸಿದ ಈ ಗೆಲುವು ಸುಲಭದ್ದಾಗಿರಲಿಲ್ಲ.

ದೇಹವು ಕ್ಷೀಣಿಸಿ, ವಿವಿಧ ಸೋಂಕುಗಳು ಹಾಗೂ ಅಪರೂಪದ ಕ್ಯಾನ್ಸರ್‌ಗಳಿಂದ ಸಾವುಂಟಾದ ಕೆಲವು ಪ್ರಕರಣಗಳನ್ನು ಆಫ್ರಿಕಾ ಹಾಗೂ ಯುರೋಪಿನ ಕೆಲವೆಡೆ ಅರುವತ್ತರ ದಶಕದ ಆರಂಭದಿಂದಲೂ ಗುರುತಿಸಲಾಗಿತ್ತು, 1981ರಲ್ಲಿ ಅಮೆರಿಕಾದ ಮಹಾನಗರಗಳ ಹಲವು ಸಲಿಂಗಾಸಕ್ತರಲ್ಲೂ ಇಂತಹ ಲಕ್ಷಣಗಳು ಕಂಡು ಬಂದವು. ಅಮೆರಿಕದ ರೋಗ ನಿಯಂತ್ರಣ ಸಂಸ್ಥೆಯ (ಸಿ.ಡಿ.ಸಿ) ವೈದ್ಯವಿಜ್ಞಾನಿಗಳು ಇವರೆಲ್ಲರನ್ನೂ ಸೂಕ್ಷ್ಮವಾಗಿ ಗಮನಿಸಿ, ರೋಗನಿರೋಧಕ ಶಕ್ತಿಯು ಕುಗ್ಗಿದ್ದರಿಂದಲೇ ಆ ಸಮಸ್ಯೆಗಳಾಗಿರಬಹುದೆಂದು ತರ್ಕಿಸಿದರು; 1982ರ ಜೂನ್ 27ರಂದು ಅದಕ್ಕೆ ಅಕ್ವೈರ್ಡ್ ಇಮ್ಯುನೋಡೆಫಿಷಿಯೆನ್ಸಿ ಸಿಂಡ್ರೋಮ್ (ಏಡ್ಸ್; ರೋಗರಕ್ಷಣೆಯಲ್ಲಿ ಆರ್ಜಿತ ಕೊರತೆಯಿಂದಾಗುವ ಸಮಸ್ಯೆಗಳು) ಎಂದು ಹೆಸರಿಟ್ಟರು.

ಮೊದಲ ವರ್ಷಗಳಲ್ಲಿ ಏಡ್ಸ್ ಸಂಶೋಧನೆಯು ಅನೇಕ ಸಮಸ್ಯೆಗಳನ್ನೂ, ವಿವಾದಗಳನ್ನೂ ಸೃಷ್ಟಿಸಿತು. ಪಾರಿಸ್‌ನ ಪಾಸ್ಚರ್ ಸಂಶೋಧನಾ ಸಂಸ್ಥೆಯ ಲೂಕ್ ಮಾಂಟಾನ್ಯೇ ಮತ್ತು ಫ್ರಾನ್ಸ್‌ವಾಸ್ ಬಾರಿಸಿನೋಸಿ ಅವರ ತಂಡವು ಏಡ್ಸ್‌ಗೆ ಕಾರಣವಾಗಿರಬಹುದಾದ ವೈರಸ್ ಅನ್ನು ಪತ್ತೆ ಹಚ್ಚಿದ ಬಗ್ಗೆ 1983ರ ಜನವರಿಯಲ್ಲಿ ವರದಿ ಮಾಡಿತು. ಮರುವರ್ಷ ಅಮೆರಿಕದ ಇನ್ನೋರ್ವ ವಿಜ್ಞಾನಿ ರಾಬರ್ಟ್ ಗಾಲೋ ಅವರ ತಂಡವೂ ಅಂಥದ್ದೇ ವರದಿಯನ್ನು ಪ್ರಕಟಿಸಿದಾಗ, ಪತ್ತೆಯ ಶ್ರೇಯಸ್ಸು ಯಾರದೆಂದು ಕಲಹವಾಯಿತು. 2008ರಲ್ಲಿ ಎಚ್‌ಐವಿ ಪತ್ತೆಗಾಗಿ ನೋಬೆಲ್ ಪ್ರಶಸ್ತಿಯನ್ನು ಮಾಂಟಾನ್ಯೇ ಮತ್ತು ಬಾರಿಸಿನೋಸಿ ಅವರಿಗಷ್ಟೇ ನೀಡಿ, ಗಾಲೋ ಅವರನ್ನು ಕಡೆಗಣಿಸಲಾಯಿತು.

ಮಾಂಟಾನ್ಯೇ ಮತ್ತು ಬಾರಿಸಿನೋಸಿ ಅವರ ತಂಡವು ಎಚ್‌ಐವಿ ಪತ್ತೆಯ ಪರೀಕ್ಷಾ ವಿಧಾನವನ್ನೂ 1983ರಲ್ಲೇ ಅಭಿವೃದ್ಧಿ ಪಡಿಸಿತು. ಗಾಲೋ ಅವರ ತಂಡವು ಕೂಡ ಅಂಥದ್ದೇ ಪರೀಕ್ಷೆಯನ್ನು ಸಿದ್ಧಪಡಿಸಿ, 1985ರಲ್ಲಿ ಹಕ್ಕುಸ್ವಾಮ್ಯತೆ ಸಾಧಿಸಹೊರಟಾಗ ಮತ್ತೆ ಗದ್ದಲವಾಯಿತು. ಕೊನೆಗೆ 1987ರಲ್ಲಿ ಫ್ರಾನ್ಸ್ ಮತ್ತು ಅಮೆರಿಕಾಗಳ ಅಧ್ಯಕ್ಷರ ಸಂಧಾನದ ಬಳಿಕ ಇಬ್ಬರಿಗೂ ಅರ್ಧರ್ಧ ಪಾಲು ನೀಡುವ ನಿರ್ಣಯಕ್ಕೆ ಬರಲಾಯಿತು.

ಎಚ್‌ಐವಿಯು ರಕ್ತದಿಂದ ರಕ್ತಕ್ಕಷ್ಟೇ ಹರಡುತ್ತದೆಂದೂ, ಸ್ಪರ್ಶ, ಆಹಾರ, ನೀರು, ಗಾಳಿ ಮುಂತಾದವುಗಳಿಂದ ಹರಡುವುದಿಲ್ಲವೆಂದೂ 1983ರ ಸೆಪ್ಟೆಂಬರ್‌ನಲ್ಲೇ ಸಿ.ಡಿ.ಸಿಯು ಸ್ಪಷ್ಟ ಪಡಿಸಿತು. ಆದರೆ ಸಲಿಂಗಾಸಕ್ತರು, ಬಹುಸಂಗಾತಿಗಳುಳ್ಳವರು ಅಥವಾ ಚುಚ್ಚುದ್ರವ್ಯ ವ್ಯಸನಿಗಳು ಹೆಚ್ಚಾಗಿ ಬಾಧಿತರಾಗುತ್ತಿದ್ದುದರಿಂದ ಆರ್ಥಿಕ, ಸಾಮಾಜಿಕ ಹಾಗೂ ನ್ಯಾಯಿಕ ಅಡಚಣೆಗಳು ಮುಂದುವರಿದವು. ಸಂಪ್ರದಾಯವಾದಿಗಳು ಪೀಡಿತರ ನೈತಿಕತೆಯನ್ನು ಜರೆದರೆ, ಧರ್ಮಗುರುಗಳು ಲೈಂಗಿಕ ಸ್ವೇಚ್ಛಾಚಾರಕ್ಕೆ ದೇವರ ಶಿಕ್ಷೆಯೆಂದು ಹುಯಿಲಿಟ್ಟರು. ಆರೋಗ್ಯಕರ್ಮಿಗಳಲ್ಲೂ ಆತಂಕವಿದ್ದುದರಿಂದ ಕೆಲವೆಡೆ ಚಿಕಿತ್ಸೆಗೂ ತೊಡಕಾಯಿತು. ಆದರೆ ಹೆಚ್ಚಿನ ವೈದ್ಯರು ಹಾಗೂ ಆರೋಗ್ಯಕರ್ಮಿಗಳು ತಮ್ಮ ಜೀವದ ಹಂಗು ತೊರೆದು ಏಡ್ಸ್ ಪೀಡಿತರಿಗೆ ಶುಶ್ರೂಷೆ ನೀಡಿ ಮಾನವೀಯತೆ ಮೆರೆದರು. ಸಲಿಂಗಾಸಕ್ತರು ಮತ್ತು ಲೈಂಗಿಕಕರ್ಮಿಗಳ ಸಂಘಟನೆಗಳೂ ಪೀಡಿತರಿಗೆ ನೆರವಾದವು.

ಎಚ್‌ಐವಿ ಪತ್ತೆಯ ಪರೀಕ್ಷೆಗಳನ್ನು ಕಡ್ಡಾಯಗೊಳಿಸುವುದಕ್ಕೆ ರಕ್ತನಿಧಿಗಳಿಂದಲೇ ವಿರೋಧ ವ್ಯಕ್ತವಾಯಿತು; ಕಾಯಿಲೆಯು ಬಹಿರಂಗಗೊಂಡು, ಕಳಂಕಿತರಾಗುವ ಭಯದಿಂದ ಕೆಲವು ಪೀಡಿತರೂ ಹಿಂಜರಿಯತೊಡಗಿದರು. ಹಾಗಾಗಿ ಎಚ್‌ಐವಿ ಪರೀಕ್ಷೆಗಳ ಗೌಪ್ಯತೆಯನ್ನು ಕಾಯ್ದು, ಪೀಡಿತರು ಅವನ್ನು ಐಚ್ಛಿಕವಾಗಿ ನಡೆಸುವಂತೆ ಮನವೊಲಿಸುವುದಕ್ಕೆ ಸ್ಪಷ್ಟ ಸೂತ್ರಗಳನ್ನು ರೂಪಿಸಬೇಕಾಯಿತು. ರಕ್ತನಿಧಿಗಳಲ್ಲಿ ಅವನ್ನು ಕಡ್ಡಾಯಗೊಳಿಸುವುದಕ್ಕೆ ಸರಕಾರಗಳೂ, ನ್ಯಾಯಾಲಯಗಳೂ ಮಧ್ಯ ಪ್ರವೇಶಿಸಬೇಕಾಯಿತು. ಇವಕ್ಕೆಲ್ಲ ಒಂದು ದಶಕವೇ ಹಿಡಿಯಿತು; ಅಷ್ಟರಲ್ಲಿ ಇನ್ನೊಂದಷ್ಟು ಜನರಿಗೆ ಎಚ್‌ಐವಿ ಹರಡಿತು.

ಅಮೆರಿಕದಲ್ಲಿ ಏಡ್ಸ್‌ ಗುರುತಿಸಲ್ಪಟ್ಟಾಗ ಸಂಪ್ರದಾಯವಾದಿ ರಿಪಬ್ಲಿಕನ್ ಪಕ್ಷದ ರೊನಾಲ್ಡ್ ರೀಗನ್ ಆಗ ತಾನೇ ಅಧ್ಯಕ್ಷ ಗಾದಿಗೇರಿದ್ದರು; ಆರೋಗ್ಯ ಸೇವೆಗಳಿಗೆ ದೊಡ್ಡ ಕತ್ತರಿ ಹಾಕುವ ಯೋಜನೆಯನ್ನೂ ಹಾಕಿಕೊಂಡಿದ್ದರು. ಅದೇ ಪಕ್ಷದ ಡಾನೆಮೇಯರ್ ಎಂಬವರು ಏಡ್ಸ್ ಪೀಡಿತರನ್ನು ದೇಶದಿಂದಲೇ ಹೊರತಳ್ಳಬೇಕು ಎಂದು ಒತ್ತಾಯಿಸಿದರೆ, ಮತ್ತೋರ್ವ ಸದಸ್ಯ ಡಾನ್ ಬರ್ಟನ್ ಸಂಸತ್ತಿನ ಕ್ಷೌರದಂಗಡಿಗೆ ತನ್ನದೇ ಕತ್ತರಿಯನ್ನು ತಂದಿದ್ದರು. ಅಂತಹ ಸನ್ನಿವೇಶದಲ್ಲಿ ಅದೇ ರಿಪಬ್ಲಿಕನ್ ಪಕ್ಷದ ಹೆನ್ರಿ ವಾಕ್ಸ್‌ಮನ್ ಮಾತ್ರ ತನ್ನೆಲ್ಲಾ ಕೌಶಲಗಳನ್ನೂ ಬಳಸಿ ಏಡ್ಸ್ ಸಂಶೋಧನೆಗೆ ಸರಕಾರೀ ನೆರವನ್ನೊದಗಿಸುವುದಕ್ಕೆ ಶ್ರಮಿಸಿದರು, ಹೊಸ ರೋಗವೆನಿಸಿದ್ದ ಏಡ್ಸ್ ಅನ್ನು ತುರ್ತು ನೆರವಿಗೆ ಅರ್ಹವಾದ ಕಾಯಿಲೆಗಳ ಪಟ್ಟಿಯಲ್ಲಿ ಸೇರಿಸಿಬಿಟ್ಟರು.

ಅನುವಂಶೀಯವಾದ ಹಿಮೋಫಿಲಿಯಾದಿಂದ ಬಳಲುತ್ತಿದ್ದ ರಯನ್ ವೈಟ್ ಎಂಬ ಬಾಲಕನಿಗೆ ರಕ್ತಪೂರಣದ ಮೂಲಕ ಎಚ್‌ಐವಿ/ಏಡ್ಸ್ ತಗಲಿ, 1984ರಲ್ಲಿ ಗುರುತಿಸಲ್ಪಟ್ಟಾಗ ಆತನನ್ನು ಶಾಲೆಯಿಂದ ಹೊರಗಿಡಲಾಯಿತು. ವೈಟ್ ಹಾಗೂ ಹೆತ್ತವರ ಹೋರಾಟದಿಂದ ಆತ ಮತ್ತೆ ಶಾಲೆಗೆ ಸೇರುವಂತಾಯಿತು; ಏಡ್ಸ್ ಬಗ್ಗೆ ಅರಿವು ಹೆಚ್ಚುವುದಕ್ಕೂ, ಇತರ ಪೀಡಿತರಿಗೆ ಬಹಿರಂಗವಾಗಿ ಬದುಕು ಕಟ್ಟಿಕೊಳ್ಳುವುದಕ್ಕೂ ಅದು ಪ್ರೇರಣೆಯಾಯಿತು. 1990ರಲ್ಲಿ ಅಮೆರಿಕದ ಸರಕಾರವು ಎಚ್‌ಐವಿ/ಏಡ್ಸ್ ಗೆ ಸರ್ವ ಸಂಪನ್ಮೂಲಗಳನ್ನು ಒದಗಿಸುವ ನಿಯಮವನ್ನು ಜಾರಿಗೊಳಿಸಿದಾಗ, ಅದಕ್ಕೆ ಮೃತ ವೈಟ್ ನ ಹೆಸರನ್ನೇ ನೀಡಲಾಯಿತು.

ರಕ್ತ ಕ್ಯಾನ್ಸರಿಗೆ ಕಾರಣವಾಗುವ ವೈರಸ್‌ಗಳ ನಿಗ್ರಹಕ್ಕೆಂದು 1964ರಲ್ಲಿ ಅಭಿವೃದ್ಧಿಪಡಿಸಲಾಗಿದ್ದ ಜಿಡೋವುಡಿನ್ ಎಂಬ ಔಷಧವು ಅಡ್ಡ ಪರಿಣಾಮಗಳಿಂದಾಗಿ ಮೂಲೆ ಸೇರಿತ್ತು. ಸಾವಿನಂಚಿನಲ್ಲಿದ್ದ ಕೆಲವು ಏಡ್ಸ್ ಪೀಡಿತರಲ್ಲಿ ಅದು ಪರಿಣಾಮ ಬೀರಿದ್ದರಿಂದ 1987ರಲ್ಲಿ ಅದನ್ನು ಬಳಕೆಗೆ ತರಲಾಯಿತು. ಆರಂಭದಲ್ಲಿ ಅಪಸ್ವರವಿದ್ದರೂ, ಅದರ ಬಳಕೆ ಹೆಚ್ಚಿದಂತೆ ಹೊಸ ಆಶಾಕಿರಣ ಮೂಡಿತು; 1996ರ ವೇಳೆಗೆ ಇನ್ನಷ್ಟು ಔಷಧಗಳು ಬಂದು ಹೆಚ್ಚು ಕ್ರಿಯಾಶೀಲವಾದ ಚಿಕಿತ್ಸೆ ರೂಪುಗೊಂಡಿತು. ಆರಂಭದ ಔಷಧಗಳಿಗೆ ಅಡ್ಡ ಪರಿಣಾಮಗಳು ಹೆಚ್ಚಿದ್ದುದರಿಂದ ಅವನ್ನು ಸಾವಿನಂಚಿನಲ್ಲಿದ್ದ ಏಡ್ಸ್ ರೋಗಿಗಳಿಗಷ್ಟೇ ನೀಡಲಾಗುತ್ತಿತ್ತು; ಹೆಚ್ಚು ಸುರಕ್ಷಿತವಾದ ಔಷಧಗಳು ಲಭ್ಯವಾದಂತೆ ಸೋಂಕು ಗಂಭೀರಗೊಳ್ಳುವ ಮೊದಲೇ ಚಿಕಿತ್ಸೆಯನ್ನು ಆರಂಭಿಸುವಂತಾಯಿತು. ಎಚ್‌ಐವಿ ಸೋಂಕಿತ ಗರ್ಭಿಣಿಯರಿಗೂ ಚಿಕಿತ್ಸೆ ನೀಡಿ, ಹುಟ್ಟುವ ಮಗುವನ್ನು ಎಚ್‌ಐವಿ ಸೋಂಕಿನಿಂದ ರಕ್ಷಿಸುವುದಕ್ಕೂ ಸಾಧ್ಯವಾಯಿತು. ಇಂತಹ ಔಷಧಗಳಿಂದಾಗಿ ಎಚ್‌ಐವಿ ಪೀಡಿತರು ದಶಕಕ್ಕೂ ಹೆಚ್ಚು ಬಾಳುವುದಕ್ಕೆ ಸಾಧ್ಯವಾಗಿದೆ, ಸೋಂಕಿನ ಹರಡುವಿಕೆಯೂ ಇಳಿದಿದೆ, 2030ರ ವೇಳೆಗೆ ಎಚ್‌ಐವಿಯನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕೆಂಬ ಆಶಯ ಮೂಡಿದೆ.

ಎಚ್‌ಐವಿ ನಿರೋಧಕ ಔಷಧಗಳ ಮೇಲೆ ಕೆಲವೇ ದೈತ್ಯ ಕಂಪೆನಿಗಳು ಹಕ್ಕು ಸ್ವಾಮ್ಯತೆ ಹೊಂದಿದ್ದು, ಒಂದು ದಿನದ ಚಿಕಿತ್ಸೆಗೆ 33 ಡಾಲರ್ ವಿಧಿಸುತ್ತಿದ್ದವು. ಭಾರತದ ಸಿಪ್ಲಾ ಕಂಪೆನಿಯು ಇಲ್ಲಿನ ಹಕ್ಕು ಸ್ವಾಮ್ಯ ನಿಯಮಗಳನ್ನು ಬಳಸಿ, ಈ ದೈತ್ಯ ಕಂಪೆನಿಗಳ ವಿರೋಧವನ್ನು ಹಿಮ್ಮೆಟ್ಟಿಸಿ, ದಿನಕ್ಕೆ ಕೇವಲ ಒಂದು ಡಾಲರ್ ವೆಚ್ಚದಲ್ಲಿ ಅದೇ ಔಷಧಗಳನ್ನು ನೀಡಲಾರಂಭಿಸಿದ್ದು ಆಫ್ರಿಕಾದ ಅಸಂಖ್ಯಾತ ಏಡ್ಸ್ ರೋಗಿಗಳಿಗೆ ವರದಾನವಾಯಿತು. ಭಾರತದಲ್ಲೂ 2004ರಿಂದ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಈ ಔಷಧಗಳನ್ನು ಉಚಿತವಾಗಿ ನೀಡಲಾಯಿತು.

ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಪ್ರತಿಷ್ಠಾನ, ದೇಶ-ವಿದೇಶಗಳ ಸ್ವಯಂಸೇವಾ ಸಂಸ್ಥೆಗಳು, ಸಲಿಂಗಾಸಕ್ತರ ಸಂಘಗಳು, ಪೀಡಿತರ ಸ್ವಸಹಾಯ ಸಂಘಟನೆಗಳು ಎಚ್‌ಐವಿ ನಿಯಂತ್ರಣಕ್ಕೆ ನೀಡಿರುವ ಕೊಡುಗೆ ಅತ್ಯಮೂಲ್ಯವಾದುದು. ಈ ಸಂಸ್ಥೆಗಳು ಸೋಂಕಿನ ಬಗ್ಗೆ ಜನಜಾಗೃತಿ ಮೂಡಿಸಿ, ರೋಗಪತ್ತೆಯಲ್ಲೂ, ಚಿಕಿತ್ಸೆಯಲ್ಲೂ ನೆರವಾಗಿವೆ, ಪೀಡಿತರಿಗೆ ಧೈರ್ಯ ತುಂಬಿ ಬದುಕುವ ಹುಮ್ಮಸ್ಸನ್ನು ತುಂಬಿವೆ, ಅವರ ಹಕ್ಕುಗಳಿಗಾಗಿ ಹೋರಾಡಿವೆ, ಅವರ ಮಕ್ಕಳ ರಕ್ಷಣೆಗೂ, ಶಿಕ್ಷಣಕ್ಕೂ ನೆರವಾಗಿವೆ.

ಆದರೆ ಈ ಯಶಸ್ಸನ್ನು ಕಳೆದುಕೊಳ್ಳುವ ಭೀತಿಯೀಗ ಎದುರಾಗಿದೆ. ಈಗಿರುವ 37 ದಶಲಕ್ಷ ಎಚ್‌ಐವಿ ಪೀಡಿತರಲ್ಲಿ ಶೇ. 40ರಷ್ಟು ಮಾತ್ರವೇ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಎಲ್ಲರಿಗೂ ಚಿಕಿತ್ಸೆಯನ್ನು ನೀಡಬೇಕೆಂದು ಇತ್ತೀಚೆಗೆ ವಿಶ್ವ ಸಂಸ್ಥೆಯು ಹೇಳಿದ್ದರೂ, ಅದಕ್ಕಾಗಿ ಹಣವೊದಗಿಸುವುದು ಸಮಸ್ಯೆಯಾಗುತ್ತಿದೆ. ನಮ್ಮ ದೇಶದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಎಚ್‌ಐವಿ ಅನುದಾನವು ಕಡಿತಗೊಳ್ಳುತ್ತಿದ್ದು, ಈ ವರ್ಷ ಶೇ. 22ರಷ್ಟು ಇಳಿಕೆಯಾಗಿದೆ; ಎಚ್‌ಐವಿ ನಿಯಂತ್ರಣಕ್ಕಾಗಿ ದುಡಿಯುತ್ತಿರುವವರಿಗೆ ಸಂಬಳವಿಲ್ಲದಾಗಿದೆ, ಔಷಧಗಳ ಕೊರತೆಯೂ ತಲೆದೋರಿದೆ. ನಮ್ಮ ಪ್ರಧಾನಿಯವರು ಕಳೆದ ವರ್ಷ ಅಮೆರಿಕಾಕ್ಕೆ ಭೇಟಿಯಿತ್ತಾಗ ಇಲ್ಲಿನ ಹಕ್ಕು ಸ್ವಾಮ್ಯತಾ ನಿಯಮಗಳನ್ನು ಮರುಪರಿಶೀಲಿಸಲು ಒಪ್ಪಿರುವುದರಿಂದ, ಎಚ್‌ಐವಿ ಔಷಧಗಳು ಮತ್ತೆ ದೈತ್ಯ ಕಂಪನಿಗಳ ಸೊತ್ತಾಗಿ 30-40 ಪಟ್ಟು ದುಬಾರಿಯಾಗುವ ಅಪಾಯವಿದೆ.

ವೈಜ್ಞಾನಿಕ, ಮಾನವೀಯ, ರಾಜಕೀಯ ಬದ್ಧತೆಗಳು ಏಡ್ಸ್‌ನಂತಹ ಭೀಕರ ಕಾಯಿಲೆಗಳನ್ನು ನಿಯಂತ್ರಿಸಿ ಅದೆಷ್ಟೋ ಜೀವಗಳನ್ನು ಉಳಿಸಿವೆ; ಆದರೆ ಮತಧರ್ಮಗಳ ಹೆಸರಲ್ಲಿ, ಯುದ್ಧದ ಹುಚ್ಚಲ್ಲಿ ನರಬಲಿ ಇನ್ನೂ ಮುಂದುವರಿದಿದೆ. ಕಳೆದ ವರ್ಷ ಜುಲೈಯಲ್ಲಿ ಯುಕ್ರೇನ್ ಯುದ್ಧಭೂಮಿಯಿಂದ ಹಾರಿಸಿದ ಕ್ಷಿಪಣಿಗೆ ಮಲೇಷ್ಯಾ ವಿಮಾನದಲ್ಲಿದ್ದ ಹಲವಾರು ಎಚ್‌ಐವಿ ಸಂಶೋಧಕರು ಬಲಿಯಾದುದು ವರ್ತಮಾನದ ಕ್ರೌರ್ಯಕ್ಕೆ ಸಾಕ್ಷಿಯಾಗಿದೆ.

26_11_2015_006_027

ಆರೋಗ್ಯ ಪ್ರಭ 14: ಭಾರತೀಯ ವೈದ್ಯಕೀಯ ಸಂಘಕ್ಕೆ ಬಹಿರಂಗ ಪತ್ರ [ಕನ್ನಡ ಪ್ರಭ, ನವೆಂಬರ್ 12, 2015, ಗುರುವಾರ]

ಎರಡೂವರೆ ಲಕ್ಷಕ್ಕೂ ಹೆಚ್ಚು ವೈದ್ಯರನ್ನು ಪ್ರತಿನಿಧಿಸುವ ಭಾರತೀಯ ವೈದ್ಯಕೀಯ ಸಂಘವು ಕೆಲವು ಬೇಡಿಕೆಗಳನ್ನಿಟ್ಟು ಸತ್ಯಾಗ್ರಹಕ್ಕೆ ಕರೆ ನೀಡಿದೆ. ಈ ಸಮಸ್ಯೆಗಳಲ್ಲಿ ಕೆಲವಕ್ಕೆ ವೈದ್ಯರುಗಳೇ ಕಾರಣರಾಗಿದ್ದರೆ, ಇನ್ನು ಕೆಲವಕ್ಕೆ ಹೊಸ ಆರ್ಥಿಕ ನೀತಿಗಳು ಕಾರಣವಾಗಿವೆ. ಇವನ್ನು ಪರಿಹರಿಸಲು ದಿಟ್ಟ ನಿರ್ಧಾರಗಳ ಅಗತ್ಯವಿದೆ.

ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರೇ, ಸರ್ವ ಸದಸ್ಯರೇ,

ದೇಶದ ಎರಡೂವರೆ ಲಕ್ಷ ವೈದ್ಯರ ಸಹನೆ ಕೆಟ್ಟಿದೆ ಎಂಬ ಕಾರಣಕ್ಕೆ ನವೆಂಬರ್ 16ರ ಅಂತರರಾಷ್ಟ್ರೀಯ ಸಹಿಷ್ಣುತಾ ದಿನದಂದು ಆರೋಗ್ಯವಂತ ಭಾರತಕ್ಕಾಗಿ ಸತ್ಯಾಗ್ರಹವನ್ನು ನಡೆಸುವ ಉದ್ದೇಶದಿಂದ ನೀವು ಮುಂದಿಟ್ಟಿರುವ ಕೆಲವೊಂದು ಬೇಡಿಕೆಗಳ ಬಗ್ಗೆ ಈ ಪತ್ರವನ್ನು ಬರೆಯುತ್ತಿದ್ದೇನೆ.

ಗರ್ಭ ಪೂರ್ವ, ಪ್ರಸವ ಪೂರ್ವ ಪರೀಕ್ಷಾ ವಿಧಾನಗಳ ಅಧಿನಿಯಮವನ್ನು ಪರಿಷ್ಕರಿಸಬೇಕೆನ್ನುವ ಬೇಡಿಕೆಯನ್ನು ಮೊದಲಿಗೆ ಎತ್ತಿಕೊಳ್ಳುತ್ತೇನೆ. ಈ ಕಾನೂನು ಕಳೆದೆರಡು ದಶಕಗಳಿಂದ ಜಾರಿಯಲ್ಲಿದ್ದರೂ ಹೆಣ್ಣು ಭ್ರೂಣಗಳ ಹತ್ಯೆಯನ್ನು ತಡೆಯಲು ಸಾಧ್ಯವಾಗಿಲ್ಲ, ಬದಲಿಗೆ ಅದರಿಂದಾಗಿ ನೂತನ ತಂತ್ರಜ್ಞಾನದ ಬಳಕೆಗೆ ಅಡ್ಡಿಯಾಗುತ್ತಿದೆ, ವೈದ್ಯರಿಗೆ ಕಿರುಕುಳಗಳಾಗುತ್ತಿವೆ, ಸಣ್ಣ ತಪ್ಪುಗಳಿಗೂ ದೊಡ್ಡ ಶಿಕ್ಷೆಯಾಗುವಂತಹ ಸನ್ನಿವೇಶಗಳುಂಟಾಗುತ್ತಿವೆ ಎಂದು ನೀವು ದೂರುತ್ತಿದ್ದೀರಿ.

ವಾಸ್ತವದಲ್ಲಿ, ಈ ದೇಶದ ವೈದ್ಯರೆಲ್ಲರೂ ತಮ್ಮ ವೃತ್ತಿಸಂಹಿತೆಯನ್ನು ಪಾಲಿಸಿದ್ದರೆ ಇಂತಹದೊಂದು ಕಾನೂನಿನ ಅಗತ್ಯವೇ ಇರಲಿಲ್ಲ, ಅಲ್ಲವೇ? ಎಪ್ಪತ್ತರ ದಶಕದಿಂದ ಲಭ್ಯವಾದ ಅಲ್ಟ್ರಾ ಸೌಂಡ್ ಇತ್ಯಾದಿ ಆಧುನಿಕ ಪರೀಕ್ಷಾ ವಿಧಾನಗಳನ್ನು ದುರ್ಬಳಕೆ ಮಾಡಿ ಕೆಲವು ವೈದ್ಯರು ಹೆಣ್ಣು ಭ್ರೂಣಗಳನ್ನು ಗರ್ಭಪಾತ ಮಾಡತೊಡಗಿದ್ದರಿಂದಲೇ ಈ ಕಾನೂನು ರೂಪುಗೊಂಡಿತು; ಅದಕ್ಕಾಗಿ ಹಲವು ಸ್ವಯಂಸೇವಾ ಸಂಸ್ಥೆಗಳು ಒತ್ತಡ ಹೇರುವಂತಾಯಿತು, ಸರ್ವೋಚ್ಛ ನ್ಯಾಯಾಲಯವೂ ಮಧ್ಯ ಪ್ರವೇಶಿಸುವಂತಾಯಿತು. ಆದರೂ ಈ ಅನೈತಿಕ, ಅಮಾನವೀಯ ಪ್ರವೃತ್ತಿಯು ಮುಂದುವರಿದಿದೆ, ಕಳೆದ ಮೂರು ದಶಕಗಳಲ್ಲಿ ಮೂರ್ನಾಲ್ಕು ಕೋಟಿ, ಅಂದರೆ ಶೇ. ಹತ್ತರಷ್ಟು, ಹೆಣ್ಮಕ್ಕಳು ಗರ್ಭದಲ್ಲೇ ನಾಶವಾಗಿದ್ದಾರೆ; 1951ರಲ್ಲಿ ದೇಶದಲ್ಲಿ ಸಾವಿರ ಗಂಡು ಮಕ್ಕಳಿಗೆ 983 ಹೆಣ್ಣು ಮಕ್ಕಳ ಅನುಪಾತವಿದ್ದರೆ, 2001ರಲ್ಲಿ ಅದು 927ಕ್ಕೂ, 2011ರಲ್ಲಿ 914ಕ್ಕೂ ಇಳಿಯುತ್ತಲೇ ಸಾಗಿದೆ. ಹೆಣ್ಣು ಭ್ರೂಣಗಳನ್ನು ಗುರುತಿಸಿ ಗರ್ಭಪಾತ ನಡೆಸುವ ವೈದ್ಯರು, ಅಂತಹ ವೈದ್ಯರ ಮೇಲೆ ಯಾವುದೇ ಕ್ರಮ ಕೈಗೊಳ್ಳದ ವೈದ್ಯಾಧಿಕಾರಿಗಳು, ಇವೆಲ್ಲಕ್ಕೂ ತೆಪ್ಪಗಿರುವ ನಿಮ್ಮ ಸಂಘ ಹಾಗೂ ವೈದ್ಯಕೀಯ ಪರಿಷತ್ತು ಈ ದುಸ್ಥಿತಿಗೆ ಹೊಣೆಯಾಗುವುದಿಲ್ಲವೇ?

ಡಿಸೆಂಬರ್ 2006ರಲ್ಲಿ ಪಟ್ನಾದಲ್ಲಿ ನಡೆದ ಭಾರತೀಯ ವೈದ್ಯಕೀಯ ಸಂಘದ ಸಭೆಯಲ್ಲಿ ಸ್ತ್ರೀ ಭ್ರೂಣ ಹತ್ಯೆಯನ್ನು ಖಂಡಿಸಿ ಕೆಲವು ನಿರ್ಣಯಗಳನ್ನು ಕೈಗೊಳ್ಳಲಾಗಿತ್ತು. ಈ ಅನೈತಿಕ ಪ್ರವೃತ್ತಿಯ ಮೇಲೆ ನಿಗಾ ವಹಿಸಲು ಸಂಘದ ಎಲ್ಲಾ ಜಿಲ್ಲಾ ಶಾಖೆಗಳಲ್ಲಿ ವಿಶೇಷ ಘಟಕಗಳನ್ನು ಸ್ಥಾಪಿಸಲಾಗುವುದೆಂದೂ, ಅಲ್ಟ್ರಾ ಸೌಂಡ್ ತಂತ್ರಜ್ಞಾನವನ್ನು ನ್ಯಾಯಬದ್ಧ ಸದ್ಬಳಕೆಗಷ್ಟೇ ಸೀಮಿತಗೊಳಿಸಲು ಸ್ವಯಂ ಪ್ರೇರಿತ ನಿಗಾವಣೆಯನ್ನು ಆರಂಭಿಸಲಾಗುವುದೆಂದೂ, ಇತರ ಜನಪರ ಸಂಸ್ಥೆಗಳ ಜೊತೆ ಸೇರಿ ಲಿಂಗ ಆಯ್ಕೆಯ ವಿರುದ್ಧ ವೈದ್ಯರ ವೇದಿಕೆಗಳನ್ನು ಅಲ್ಲಲ್ಲಿ ಸಂಘಟಿಸಲಾಗುವುದೆಂದೂ, ಪ್ರಸವ ಪೂರ್ವ ಪರೀಕ್ಷಾ ವಿಧಾನಗಳ ಅಧಿನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಲ್ಲಿ ಆಡಳಿತಕ್ಕೆ ಸರ್ವ ಸಹಕಾರವನ್ನು ನೀಡಲಾಗುವುದೆಂದೂ ಹೇಳಲಾಗಿತ್ತು. ಅದಾಗಿ ಒಂಭತ್ತು ವರ್ಷಗಳು ಕಳೆದರೂ ಅಂತಹ ಘಟಕಗಳಾಗಲೀ, ವೇದಿಕೆಗಳಾಗಲೀ ಎಲ್ಲಿವೆ? ಸರ್ವ ಸಹಕಾರದ ಆಶ್ವಾಸನೆಯಿತ್ತವರೇ ಈಗ ವಿರೋಧಿಸುತ್ತಿರುವುದೇಕೆ?

ಕಾನೂನನ್ನು ದೂಷಿಸಿ ಪರಿಷ್ಕರಣೆಗೆ ಒತ್ತಾಯಿಸುವ ಬದಲು ನಿಮ್ಮವೇ ನಿರ್ಣಯಗಳನ್ನು ಜಾರಿಗೊಳಿಸಬಾರದೇ? ದೇಶದಲ್ಲೇ ಅತಿ ಹೆಚ್ಚು ಸ್ತ್ರೀ ಭ್ರೂಣ ಹತ್ಯೆಯಾಗಿರುವ ದಿಲ್ಲಿ, ಚಂಡೀಗಢ, ದಿಯು, ಬೆಂಗಳೂರು ಮುಂತಾದೆಡೆಗಳಲ್ಲಿ ನಿಮ್ಮ ಸಂಘವೇ ನಿಗಾ ವಹಿಸಿ ಮುಂದಿನೆರಡು ವರ್ಷಗಳಲ್ಲಿ ಹುಟ್ಟುವ ಮಕ್ಕಳಲ್ಲಿ ಗಂಡು-ಹೆಣ್ಣುಗಳ ಅನುಪಾತವನ್ನು ಸರಿದೂಗಿಸಲು ಪ್ರಯತ್ನಿಸಬಹುದು. ನಂತರ ದೇಶದಾದ್ಯಂತ ಅದನ್ನು ಸಾಧಿಸುವಂತಾದರೆ, ತಂತ್ರಜ್ಞಾನವನ್ನು ನಿರ್ಬಂಧಿಸುವ ಕಾನೂನೇ ಅಗತ್ಯವಿಲ್ಲವೆಂದು ಸರಕಾರಕ್ಕೆ ಮನವರಿಕೆ ಮಾಡಬಹುದು. ವೈದ್ಯರೆಲ್ಲರೂ ತಮ್ಮ ವೃತ್ತಿ ಸಂಹಿತೆಗನುಗುಣವಾಗಿ ತಮ್ಮನ್ನು ನಿಯಂತ್ರಿಸಿಕೊಂಡರೆ ಸರಕಾರಕ್ಕೇನು ಕೆಲಸವಿದೆ?

ಆಯುರ್ವೇದ, ಹೋಮಿಯೋಪತಿ, ಯುನಾನಿ ಮುಂತಾದ ಬದಲಿ ಚಿಕಿತ್ಸಕರು ಆಧುನಿಕ ಔಷಧಗಳನ್ನು ಬಳಸದಂತೆ ನಿರ್ಬಂಧಿಸಬೇಕೆಂಬ ನಿಮ್ಮ ಬೇಡಿಕೆಯೂ ಟೊಳ್ಳೇ. ಕೇಂದ್ರ ಸರಕಾರವು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿಯಲ್ಲಿ ಆಯುಷ್ ವೈದ್ಯರನ್ನು ನೇಮಿಸತೊಡಗಿದಾಗ ನಿಮ್ಮ ಸಂಘವು ಅನ್ಯಮನಸ್ಕವಾಗಿತ್ತು, ಬದಲಿ ಚಿಕಿತ್ಸಕರಿಗೆ ಗರ್ಭಪಾತ ನಡೆಸುವ ಅವಕಾಶವೊದಗಿಸಲು ಮುಂದಾದಾಗಲೂ ನಿಮ್ಮ ವಿರೋಧವು ಕ್ಷೀಣವಾಗಿತ್ತು.

ಹಲವು ಆಧುನಿಕ ಆಸ್ಪತ್ರೆಗಳಲ್ಲಿ ಬದಲಿ ವೈದ್ಯರನ್ನು ಕಡಿಮೆ ಸಂಬಳಕ್ಕೆ ನೇಮಿಸಿಕೊಳ್ಳುವುದು ಇತ್ತೀಚಿಗೆ ಸಾಮಾನ್ಯವಾಗುತ್ತಿದೆ, ತುರ್ತು ಚಿಕಿತ್ಸೆಯಲ್ಲಿ ಯಾವುದೇ ತರಬೇತಿಯನ್ನು ಪಡೆದಿಲ್ಲದ ಬದಲಿ ವೈದ್ಯರು ಈ ಆಸ್ಪತ್ರೆಗಳಲ್ಲಿ ಅಪಘಾತ ಮತ್ತು ತುರ್ತು ಚಿಕಿತ್ಸಾ ವಿಭಾಗ, ತೀವ್ರ ನಿಗಾ ವಿಭಾಗ, ಶಸ್ತ್ರಚಿಕಿತ್ಸೋತ್ತರ ವಿಭಾಗ ಇತ್ಯಾದಿಗಳನ್ನು ನಿಭಾಯಿಸುತ್ತಿರುವುದು ನ್ಯಾಯಬಾಹಿರವಷ್ಟೇ ಅಲ್ಲ, ರೋಗಿಗಳ ಪಾಲಿಗೆ ಅಪಾಯಕಾರಿಯೂ ಆಗಿದೆ. ನಿಮ್ಮ ಸಂಘವು ತೀರಾ ತಡವಾಗಿ, ಕಳೆದ ಜನವರಿಯಲ್ಲಿ, ಇದನ್ನು ನಿಲ್ಲಿಸಬೇಕೆಂಬ ಸುತ್ತೋಲೆಯನ್ನು ಹೊರಡಿಸಿತಾದರೂ, ಅದನ್ನು ಪುರಸ್ಕರಿಸಿದ ಆಸ್ಪತ್ರೆಗಳೆಷ್ಟು? ನಿಮ್ಮ ಸದಸ್ಯರೇ ನಿಮ್ಮ ಮಾತನ್ನು ಕೇಳುವುದಿಲ್ಲ ಎಂದ ಮೇಲೆ ಸರಕಾರವೇಕೆ ಕೇಳೀತು?

ಹಲವು ಆಧುನಿಕ ಆಸ್ಪತ್ರೆಗಳಲ್ಲಿ ಸಮಗ್ರ ಚಿಕಿತ್ಸೆಯ ಹೆಸರಲ್ಲಿ ಆಯುರ್ವೇದ, ಯುನಾನಿ, ಹೋಮಿಯೋಪತಿ, ಪ್ರಕೃತಿ ಚಿಕಿತ್ಸೆ, ಯೋಗ ಇತ್ಯಾದಿಗಳನ್ನು ಒದಗಿಸಲಾಗುತ್ತಿಲ್ಲವೇ? ನಿಮ್ಹಾನ್ಸ್ ನಂತಹ ಉನ್ನತ ಆಸ್ಪತ್ರೆಗಳಲ್ಲೂ ಯೋಗ ಚಿಕಿತ್ಸೆಯ ಘಟಕಗಳಿಲ್ಲವೇ? ಯೋಗಾಭ್ಯಾಸದ ಪ್ರಯೋಜನಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲದಿದ್ದರೂ, ಅನೇಕ ಆಧುನಿಕ ವೈದ್ಯರು ಕಣ್ಣು ಮುಚ್ಚಿ ಅದಕ್ಕೆ ಬೆಂಬಲ ನೀಡುತ್ತಿಲ್ಲವೇ? ಭಾವೈ ಸಂಘವೂ ಸೇರಿದಂತೆ ಹಲವು ವೈದ್ಯಕೀಯ ಸಂಘಟನೆಗಳು ಅದೆಷ್ಟೋ ಯೋಗಗುರುಗಳೆಂಬವರಿಗೆ ಪ್ರಶಸ್ತಿ ಪತ್ರಗಳನ್ನು ನೀಡಿ ಅವರ ವಹಿವಾಟನ್ನು ಬೆಳೆಸಲು ನೆರವಾಗಿಲ್ಲವೇ? ಆಯುರ್ವೇದ, ಯೋಗಾಭ್ಯಾಸಗಳು ಕೇವಲ ಭಾರತೀಯವೆನ್ನುವ ಕಾರಣಕ್ಕೆ ಅವನ್ನು ವೈದ್ಯವಿಜ್ಞಾನಕ್ಕಿಂತಲೂ ಶ್ರೇಷ್ಠವೆಂದು ಪೂಜಿಸುವ ಆಧುನಿಕ ವೈದ್ಯರೂ ಇಲ್ಲವೇ? ಬದಲಿ ಚಿಕಿತ್ಸಾಲಯಗಳಲ್ಲಿ ಗುಟ್ಟಾಗಿ ಶಸ್ತ್ರಕ್ರಿಯೆಗಳನ್ನು ನಡೆಸುವ ಆಧುನಿಕ ಶಸ್ತ್ರಚಿಕಿತ್ಸಕರಿಲ್ಲವೇ? ಹೀಗೆ ಬದಲಿ ಚಿಕಿತ್ಸೆಗಳ ವರ್ಚಸ್ಸನ್ನು ಬೆಳೆಸುವಲ್ಲಿ ನಿಮ್ಮ ಸಂಘವೂ, ಅದರ ಸದಸ್ಯರೂ ಗಣನೀಯವಾದ ಕೊಡುಗೆಗಳನ್ನು ನೀಡುತ್ತಿರುವಾಗ, ಆಧುನಿಕ ಆಸ್ಪತ್ರೆಗಳಲ್ಲಿ ಬದಲಿ ವೈದ್ಯರನ್ನು ನಿಮ್ಮ ಸದಸ್ಯರೇ ನೇಮಿಸಿಕೊಳ್ಳುತ್ತಿರುವಾಗ, ಸರಕಾರದ ಮುಂದೆ ಇಂತಹ ಬೇಡಿಕೆಯಿಡುವುದರಲ್ಲಿ ಅರ್ಥವೇನಿದೆ?

ಎಲ್ಲಾ ಚಿಕಿತ್ಸಾಲಯಗಳನ್ನು ನೋಂದಾಯಿಸಬೇಕೆಂಬ ನಿಯಮದಿಂದ ವೈದ್ಯರಿಗೆ ತೊಂದರೆಯಾಗಲಿದೆ, ಚಿಕಿತ್ಸೆಯ ವೆಚ್ಚವೂ ಹೆಚ್ಚಲಿದೆ ಎಂದು ವಿರೋಧಿಸುತ್ತಿದ್ದೀರಿ. ಆದರೆ ಸರಕಾರಿ ನೋಂದಾವಣೆಯನ್ನು ವಿರೋಧಿಸುತ್ತಲೇ, ಅದಕ್ಕಿಂತಲೂ ಬಹುಪಾಲು ವೆಚ್ಚದಲ್ಲಿ ಎನ್ ಎ ಬಿಎಚ್ ನೋಂದಾವಣೆಯನ್ನು ನಿಮ್ಮ ಸಂಘದ ಮೂಲಕವೇ ಮಾಡುವ ಬಗ್ಗೆ ಪ್ರಸ್ತಾಪವನ್ನೂ ಮಾಡಿದ್ದೀರಿ. ಇದರಿಂದ ಚಿಕಿತ್ಸೆಯ ವೆಚ್ಚವು ಅದೆಂತು ಕಡಿಮೆಯಾಗಲಿದೆ ಎನ್ನುವುದು ಅರ್ಥವಾಗುವುದಿಲ್ಲ. ನಕಲಿ ವೈದ್ಯರನ್ನು ತಡೆಯುವ ಉದ್ದೇಶವೂ ನಿಮ್ಮೀ ಯೋಜನೆಯಿಂದ ಸಾಧ್ಯವಾಗುವುದಿಲ್ಲ.

ವೈದ್ಯರ ಮೇಲೂ, ಆಸ್ಪತ್ರೆಗಳ ಮೇಲೂ ದಾಳಿಗಳು ಹೆಚ್ಚುತ್ತಿರುವುದರಿಂದ ಅವರ ರಕ್ಷಣೆಗಾಗಿ ಕೇಂದ್ರೀಯ ಕಾನೂನನ್ನು ತರಬೇಕು, ವೈದ್ಯರು ತಪ್ಪಿದಲ್ಲಿ ನೀಡಬೇಕಾದ ಪರಿಹಾರದ ಮೊತ್ತಕ್ಕೆ ಮಿತಿಯಿರಬೇಕು, ಆರೋಗ್ಯ ಸೇವೆಗಳ ಅನುದಾನ ಹೆಚ್ಚಬೇಕು, ಪ್ರಾಥಮಿಕ ಹಾಗೂ ಗ್ರಾಮೀಣ ಆರೋಗ್ಯ ಸೇವೆಗಳನ್ನು ಬಲಪಡಿಸಬೇಕು, ಔಷಧಗಳು ಕೈಗೆಟಕುವಂತಾಗಬೇಕು ಎಂಬ ಇನ್ನಿತರ ಬೇಡಿಕೆಗಳು ಕೂಡ ಕೇವಲ ತೋರಿಕೆಯೆಂದೆನಿಸುತ್ತವೆ.

ಇಂದು ದೇಶದ ಆರೋಗ್ಯ ಸೇವೆಗಳು ಹದಗೆಟ್ಟು ಜನಸಾಮಾನ್ಯರ ಕೈಗೆಟುಕದಿರುವುದಕ್ಕೆ, ವೈದ್ಯರ ಮೇಲಿನ ನಂಬಿಕೆಯು ಕಳಚಿ ಹೋಗುತ್ತಿರುವುದಕ್ಕೆ ಆರ್ಥಿಕ ಉದಾರೀಕರಣ ಹಾಗೂ ಖಾಸಗೀಕರಣದ ನೀತಿಗಳೇ ಮೂಲ ಕಾರಣವೆನ್ನುವುದನ್ನು ಭಾವೈಸಂಘವು ಒಪ್ಪಿಕೊಂಡಂತಿಲ್ಲ. ವೈದ್ಯಕೀಯ ಶಿಕ್ಷಣವು ಖಾಸಗಿ ಹಿತಾಸಕ್ತಿಗಳ ಕೈಯೊಳಗಾಗಿರುವುದರಿಂದಲೇ ಅತಿ ದುಬಾರಿಯೂ, ಗುಣಹೀನವೂ ಆಗತೊಡಗಿದೆ; ಖಾಸಗಿ ಆಸ್ಪತ್ರೆಗಳಲ್ಲಿ ದುಡಿಯುತ್ತಿರುವ ವೈದ್ಯರು ಆಡಳಿತಾಧಿಕಾರಿಗಳ ಕೈಗೊಂಬೆಗಳಾಗಿ ನಲುಗುವಂತಾಗಿರುವುದರಿಂದ ಚಿಕಿತ್ಸೆಯ ವೆಚ್ಚವು ವಿಪರೀತವಾಗತೊಡಗಿದೆ; ಸರಕಾರಿ ಆಸ್ಪತ್ರೆಗಳು ಸೊರಗಿ ಖಾಲಿಯಾಗುತ್ತಿರುವಲ್ಲಿ, ಖಾಸಗಿ ಆಸ್ಪತ್ರೆಗಳ ದರಗಳು ಏರಿ, ವಿಶ್ವಾಸಾರ್ಹತೆ ಕುಸಿಯುತ್ತಿದೆ. ಅಂತಲ್ಲಿ, ಮೂಲಭೂತ ಸಮಸ್ಯೆಗಳನ್ನು ಕಡೆಗಣಿಸಿ ಕೇವಲ ತೋರಿಕೆಯ ಹೋರಾಟಗಳನ್ನು ನಡೆಸಿದರೆ ಪ್ರಯೋಜನವಾದೀತೇ?

ದೇಶದ ಆರೋಗ್ಯ ಸೇವೆಗಳು ಉತ್ತಮಗೊಳ್ಳಬೇಕೆಂಬ ನಿಜವಾದ ಇರಾದೆಯಿದ್ದರೆ ಅವನ್ನು ಖಾಸಗಿ ಹಿತಾಸಕ್ತಿಗಳ ಕಪಿಮುಷ್ಠಿಯಿಂದ ಮುಕ್ತಗೊಳಿಸುವ ಕೆಲಸವಾಗಬೇಕು; ವೈದ್ಯಕೀಯ ಶಿಕ್ಷಣದಲ್ಲಿ ಹೊಕ್ಕುವಿಕೆಯಿಂದ ಹೊರಬರುವವರೆಗೆ ಎಲ್ಲ ಹಂತಗಳಲ್ಲಿ ನಡೆಯುತ್ತಿರುವ ಹಣದಾಟವು ಕೊನೆಗೊಳ್ಳಬೇಕು; ಸರಕಾರಿ ಆಸ್ಪತ್ರೆಗಳೂ, ಆರೋಗ್ಯ ಕೇಂದ್ರಗಳೂ ಸುಸಜ್ಜಿತಗೊಂಡು, ಅತ್ಯುನ್ನತವಾದ, ಅತ್ಯುತ್ತಮವಾದ ಸೇವೆಗಳನ್ನು ಒದಗಿಸುವಂತಾಗಬೇಕು; ಆರೋಗ್ಯವಿಮೆಯ ಹೆಸರಲ್ಲಿ ಖಜಾನೆಯ ಹಣದಿಂದ ಖಾಸಗಿ ಆಸ್ಪತ್ರೆಗಳ ಪೋಷಣೆಯು ನಿಲ್ಲಬೇಕು; ವೃತ್ತಿಸಂಹಿತೆಗೆ ಅಪಚಾರವೆಸಗಿ ಹಣದಾಸೆಗಾಗಿ ಸ್ತ್ರೀಭ್ರೂಣ ಹತ್ಯೆಯನ್ನೂ, ಇನ್ನಿತರ ಅನೈತಿಕ ಚಿಕಿತ್ಸೆಗಳನ್ನೂ ನಡೆಸುವ ವೈದ್ಯರನ್ನು ಭಾವೈಸಂಘವೇ ಗುರುತಿಸಬೇಕು, ವೈದ್ಯಕೀಯ ಪರಿಷತ್ತಿನ ಶಿಸ್ತುಕ್ರಮಕ್ಕೆ ಒಳಪಡಿಸಬೇಕು; ಎಲ್ಲಾ ವಿಧದ ಬದಲಿ ಪದ್ಧತಿಗಳನ್ನೂ, ಚಿಕಿತ್ಸೆಯೇ ಅಲ್ಲದ ಯೋಗಾಭ್ಯಾಸವನ್ನೂ ಆಧುನಿಕ ಚಿಕಿತ್ಸೆಯ ಪರಿಧಿಯಿಂದ ಸಂಪೂರ್ಣವಾಗಿ ಹೊರಗಿಟ್ಟು, ಜನಸಾಮಾನ್ಯರಿಗೂ, ಸರಕಾರಕ್ಕೂ ಸತ್ಯದರ್ಶನ ಮಾಡಿಸಬೇಕು.

ಅಂತಹ ದಿಟ್ಟತನ ತೋರಿದರೆ ಮಾತ್ರ ಭಾರತೀಯ ವೈದ್ಯಕೀಯ ಸಂಘದ ಘನತೆಯು ಹೆಚ್ಚೀತು, ವೈದ್ಯವೃಂದ, ಜನತೆ ಹಾಗೂ ಸರಕಾರಗಳೆಲ್ಲವೂ ಆದನ್ನು ಗಂಭೀರವಾಗಿ ಪರಿಗಣಿಸುವಂತಾದೀತು. ಹಾಗಾಗಲೆಂಬ ಆಶಯ ನನ್ನದು, ನಿಮ್ಮದೂ ಅದೇ ಆಗಿರಲಿ.

12_11_2015_006_009

ಆರೋಗ್ಯ ಪ್ರಭ 13: ಸಸ್ಯಾಹಾರ ಶ್ರೇಷ್ಠ ಎಂಬುವರಿಗೆ ಕೇಂದ್ರದ ಗುದ್ದು [ಕನ್ನಡ ಪ್ರಭ, ಅಕ್ಟೋಬರ್ 29, 2015, ಗುರುವಾರ]

ಶಾಲೆಗಳಲ್ಲಿ ಸಕ್ಕರೆ ಹಾಗೂ ಸಂಸ್ಕರಿತ ಸಸ್ಯಾಹಾರವನ್ನು ವರ್ಜಿಸಿ, ತರಕಾರಿಗಳು, ಇಡೀ ಧಾನ್ಯಗಳು ಹಾಗೂ ಮಾಂಸಾಹಾರವನ್ನು ಹೆಚ್ಚಾಗಿ ಸೇವಿಸಬೇಕು ಎಂದಿದೆ ರಾಷ್ಟ್ರೀಯ ಆಹಾರ ಸುರಕ್ಷಾ ಪ್ರಾಧಿಕಾರದ ಹೊಸ ಮಾರ್ಗದರ್ಶಿಕೆ. ಜೊತೆಗೆ ಇದರಲ್ಲಿ ಯೋಗಾಭ್ಯಾಸವನ್ನು ಕೈಬಿಡಲಾಗಿದೆ. ಇಲ್ಲಿನ ಸಲಹೆಗಳನ್ನು ಶಾಲೆಗಳಲ್ಲದೆ, ಮನೆಯಲ್ಲೂ ಅಳವಡಿಸಿಕೊಳ್ಳುವುದು ಸೂಕ್ತ.

ಸಸ್ಯಾಹಾರ ಮೇಲೋ, ಮಾಂಸಾಹಾರ ಮೇಲೋ ಎಂಬ ಚರ್ಚೆ ನಡೆಯುತ್ತಿರುವಾಗಲೇ, ಶಾಲಾ ಮಕ್ಕಳಿಗೆ ಮಾಂಸಾಹಾರವನ್ನು ಉತ್ತೇಜಿಸುವ ಆಹಾರ ಮಾರ್ಗದರ್ಶಿಕೆಯನ್ನು ಇದೇ ಅಕ್ಟೋಬರ್ 12ರಂದು ಕೇಂದ್ರ ಸರಕಾರವು ಪ್ರಕಟಿಸಿದೆ. ಶಾಲೆಗಳಲ್ಲಿ ಹಾಗೂ ಅವುಗಳಿಂದ 500 ಗಜ ವ್ಯಾಪ್ತಿಯಲ್ಲಿ ತ್ಯಾಜ್ಯ ತಿನಿಸುಗಳನ್ನೂ, ಲಘು ಪೇಯಗಳನ್ನೂ ನಿಷೇಧಿಸಬೇಕು ಎಂದು ಪ್ರಾರ್ಥಿಸಿ ಉದಯ ಪ್ರತಿಷ್ಠಾನವು ಡಿಸೆಂಬರ್ 2010ರಲ್ಲಿ ಸಲ್ಲಿಸಿದ್ದ ಅರ್ಜಿಯ ಮೇಲೆ ದಿಲ್ಲಿ ಉಚ್ಛ ನ್ಯಾಯಾಲಯವು ನೀಡಿದ ಆದೇಶದಂತೆ ರಾಷ್ಟ್ರೀಯ ಆಹಾರ ಸುರಕ್ಷೆ ಹಾಗೂ ಮಾನಕಗಳ ಪ್ರಾಧಿಕಾರವು ಈ ಕರಡನ್ನು ಸಿದ್ಧಪಡಿಸಿದೆ (ಇಲ್ಲಿದೆ: http://www.fssai.gov.in/Portals/0/pdf/Order_Draft_Guidelines_School_Children.pdf). ಇದು ಸದ್ಯದಲ್ಲೇ ಅಧಿಕೃತ ನೀತಿಯಾಗಿ ದೇಶದಾದ್ಯಂತ ಜಾರಿಗೊಳ್ಳಲಿದೆ.

ಅಕ್ಟೋಬರ್ 1 ರಂದು ಇಲ್ಲೇ ಪ್ರಕಟವಾಗಿದ್ದ ‘ಸಸ್ಯಾಹಾರ ದಿನದಂದು ಸತ್ಯಶೋಧನೆ’ ಎಂಬ ಅಂಕಣಕ್ಕೂ, ಈ ಕರಡು ಮಾರ್ಗದರ್ಶಿಕೆಗೂ ಬಹಳಷ್ಟು ಸಾಮ್ಯತೆಗಳಿವೆ. ಸಕ್ಕರೆ, ಸಂಸ್ಕರಿತ ಧಾನ್ಯಗಳು (ಮೈದಾ ಇತ್ಯಾದಿ), ಸಂಸ್ಕರಿತ ಖಾದ್ಯತೈಲಗಳು ಮುಂತಾದ ಆಧುನಿಕ ಸಸ್ಯಾಹಾರವೇ ಇಂದಿನ ರೋಗಗಳಿಗೆ ಕಾರಣವಾಗಿದ್ದು, ಅವನ್ನು ವರ್ಜಿಸಬೇಕು ಯಾ ಮಿತಿಗೊಳಿಸಬೇಕು; ಬದಲಿಗೆ, ತರಕಾರಿಗಳು, ಕಾಳುಗಳು, ಇಡೀ ಧಾನ್ಯಗಳು, ಮೀನು, ಮಾಂಸ, ಮೊಟ್ಟೆಗಳನ್ನು ಹೆಚ್ಚಾಗಿ ಸೇವಿಸಬೇಕು ಎಂದು ಈ ಕರಡಿನಲ್ಲಿಯೂ ಹೇಳಲಾಗಿದೆ. ಸಸ್ಯಾಹಾರವೇ ಶ್ರೇಷ್ಠವೆಂದು ರಚ್ಚೆ ಹಿಡಿಯುತ್ತಿರುವವರಿಗೆ ಭಾರತ ಸರಕಾರವೇ ಸತ್ಯದರ್ಶನ ಮಾಡಿಸಿದೆ.

ನಮ್ಮ ದೇಶದ ಮಕ್ಕಳಲ್ಲಿ ಆಧುನಿಕ ರೋಗಗಳು ಹೆಚ್ಚುತ್ತಿರುವುದಕ್ಕೆ ಕೊಬ್ಬು, ಉಪ್ಪು ಹಾಗೂ ಸಕ್ಕರೆಗಳ ಅತಿಸೇವನೆಯೇ ಕಾರಣವೆನ್ನುವುದನ್ನು ಅತ್ಯಂತ ಸರಳವಾಗಿ, ಸುಸ್ಪಷ್ಟವಾಗಿ ಈ ಕರಡಿನಲ್ಲಿ ವಿವರಿಸಲಾಗಿದೆ. ಸಕ್ಕರೆಯಿಂದ ದೇಹಕ್ಕೆ ಯಾವುದೇ ಪ್ರಯೋಜನವಿಲ್ಲ, ಅದರ ಸೇವನೆಗೆ ಸುರಕ್ಷಿತ ಪ್ರಮಾಣವೆಂಬುದೂ ಇಲ್ಲ, ಬೊಜ್ಜು, ಮಧುಮೇಹ ಮುಂತಾದ ರೋಗಗಳಿಗೆ ಸಕ್ಕರೆಯ ಸೇವನೆಯೇ ಕಾರಣ; ಉಪ್ಪಿನ ಅತಿಸೇವನೆಯು ರಕ್ತನಾಳಗಳ ಕಾಯಿಲೆ ಹಾಗೂ ಹೃದ್ರೋಗಗಳನ್ನುಂಟು ಮಾಡಬಹುದು; ಕುಕೀ, ಕ್ರಾಕರ್, ಚಿಪ್ಸ್ ಹಾಗೂ ಕರಿದ ತಿನಿಸುಗಳಲ್ಲಿರುವ ಪರ್ಯಾಪ್ತ ಮೇದೋ ಆಮ್ಲಗಳು ಮತ್ತು ಟ್ರಾನ್ಸ್ ಮೇದೋ ಆಮ್ಲಗಳು ಬೊಜ್ಜು, ಹೃದಯಾಘಾತಗಳಿಗೆ ಕಾರಣವಾಗಬಹುದು; ಕೇಫೀನ್ ಉಳ್ಳ ಶಕ್ತಿದಾಯಕ ಪೇಯಗಳಿಂದ ಸ್ನಾಯು ಹಾಗೂ ನರಗಳ ಸಮಸ್ಯೆಗಳೂ, ನಿರ್ಜಲೀಕರಣವೂ ಉಂಟಾಗಬಹುದು ಎಂದು ಕರಡಿನಲ್ಲಿ ಹೇಳಲಾಗಿದೆ. ಒಟ್ಟಿನಲ್ಲಿ ಈ ಮಾರ್ಗದರ್ಶಿಕೆಯು ಸಂಸ್ಕರಿತ ಸಸ್ಯಾಹಾರವನ್ನಷ್ಟೇ ರೋಗಕಾರಕವೆಂದು ದೂಷಿಸಿ, ಮೀನು, ಮಾಂಸ, ಮೊಟ್ಟೆಗಳನ್ನು ಆರೋಪಮುಕ್ತಗೊಳಿಸಿದೆ. ಸಸ್ಯಾಹಾರವೇ ಶ್ರೇಷ್ಠವೆಂಬ ವ್ಯಸನಕ್ಕೆ ಭಾರತ ಸರಕಾರವೇ ದಿವ್ಯೌಷಧ ನೀಡಿದೆ!

ಮಕ್ಕಳು ರೋಗಕಾರಕ ತಿನಿಸುಗಳನ್ನು ತ್ಯಜಿಸಿ ಪೌಷ್ಠಿಕವಾದ ಆಹಾರವನ್ನು ಸೇವಿಸುವಂತಾಗಲು ಈ ಕರಡಿನಲ್ಲಿ ಹಲವು ಅತ್ಯುತ್ತಮ ಸಲಹೆಗಳನ್ನು ನೀಡಲಾಗಿದೆ. ಸಮತೋಲಿತ ಆಹಾರದ ಬಗ್ಗೆಯೂ, ಆಹಾರದಿಂದ ಉಂಟಾಗಬಲ್ಲ ರೋಗಗಳ ಬಗ್ಗೆಯೂ ಮಕ್ಕಳಿಗೆ ಅರಿವಿಲ್ಲದಿರುವುದರಿಂದ ಆಹಾರದ ಆಯ್ಕೆಯನ್ನು ಅವರಿಗೆ ಬಿಡಬಾರದು; ಸದ್ಗುಣಗಳನ್ನೂ, ರಚನಾತ್ಮಕ ಜೀವನಮೌಲ್ಯಗಳನ್ನೂ ಕಲಿಸಬೇಕಾದ ಶಾಲೆಗಳಲ್ಲಿ ಅನಾರೋಗ್ಯಕರ ಆಹಾರಗಳನ್ನು ಉತ್ತೇಜಿಸಬಾರದು; ಶಾಲಾ ಕ್ಯಾಂಟೀನುಗಳು ವ್ಯಾಪಾರದ ಅಂಗಡಿಗಳಾಗದೆ, ಪರಿಪೂರ್ಣ, ಪೌಷ್ಠಿಕ, ಸುರಕ್ಷಿತ ಹಾಗೂ ಸ್ವಚ್ಛ ಆಹಾರವನ್ನು ಒದಗಿಸುವಂತಾಗಬೇಕು ಎಂದು ಕರಡಿನಲ್ಲಿ ಹೇಳಲಾಗಿದೆ.

ಶಾಲಾ ಕ್ಯಾಂಟೀನುಗಳಲ್ಲಿ ವಿವಿಧ ತಿನಿಸುಗಳನ್ನು ಕೆಂಪು, ಹಳದಿ ಹಾಗೂ ಹಸಿರು ಬಣ್ಣದ ಗುಂಪುಗಳಾಗಿ ವಿಂಗಡಿಸಬೇಕೆಂಬ ವಿನೂತನ ಸಲಹೆಯು ಈ ಕರಡಿನಲ್ಲಿದೆ. ಆರೋಗ್ಯಕ್ಕೆ ಹಾನಿಕರವಾದ ಚಿಪ್ಸ್, ಸಮೋಸ, ಪೂರಿ, ಬತೂರಗಳಂತಹ ಕರಿದ ತಿನಿಸುಗಳು, ಸಕ್ಕರೆಭರಿತ ಪೇಯಗಳು ಮತ್ತು ಸಿಹಿ ತಿನಿಸುಗಳು, ನೂಡಲ್ಸ್, ಪಿಝಾ, ಬರ್ಗರ್ ಗಳಂತಹ ಸಿದ್ಧ ತಿನಿಸುಗಳು ಕೆಂಪು ಗುಂಪಿನಲ್ಲಿರಬೇಕು, ಶಾಲೆಯ 50 ಮೀಟರ್ ವ್ಯಾಪ್ತಿಯಲ್ಲಿ ಅವುಗಳ ಲಭ್ಯತೆಯನ್ನು ನಿಯಂತ್ರಿಸಬೇಕು ಹಾಗೂ ಮಕ್ಕಳು ಅವನ್ನು ತಿನ್ನದಂತೆ ತಡೆಯಬೇಕು; ಹಾಲಿನಿಂದ ತಯಾರಿಸಿದ ಐಸ್ ಕ್ರೀಂ ಇತ್ಯಾದಿ ಸಿಹಿ ತಿನಿಸುಗಳನ್ನು ಹಳದಿ ಗುಂಪಿನಲ್ಲಿಟ್ಟು, ತೀರಾ ಅಪರೂಪಕ್ಕೊಮ್ಮೆ, ಅತ್ಯಲ್ಪವಾಗಿ ತಿನ್ನಗೊಡಬೇಕು; ತರಕಾರಿಗಳು, ಕಾಳುಗಳು, ಇಡೀ ಧಾನ್ಯಗಳು, ತೆಳ್ಳಗಿನ ಮಾಂಸ, ಮೀನು, ಮೊಟ್ಟೆ, ಕಡಿಮೆ ಕೊಬ್ಬಿನ ಹಾಲು ಹಾಗೂ ಹಣ್ಣುಗಳು ಹಸಿರು ಗುಂಪಿನಲ್ಲಿದ್ದು, ಯಾವಾಗಲೂ ಲಭ್ಯವಿರಬೇಕು, ಕನಿಷ್ಠ ಶೇ.80ರಷ್ಟು ಆಹಾರಾಂಶವನ್ನು ಒದಗಿಸಬೇಕು ಎಂದು ಸೂಚಿಸಲಾಗಿದೆ. ಈ ವಿಂಗಡಣೆಯನ್ನು ಶಾಲೆಯ ಕ್ಯಾಂಟೀನುಗಳ ತಿನಿಸುಗಳಿಗಷ್ಟೇ ಅಲ್ಲದೆ, ಮನೆಯಿಂದ ತರುವ ತಿನಿಸುಗಳಿಗೂ ಅನ್ವಯಿಸಬಹುದೆಂದೂ, ಪ್ರಾಥಮಿಕ ಹಂತದಿಂದ ಮೇಲಿನ ಹಂತದವರೆಗೆ, ಹಗಲು ಶಾಲೆಗಳಿಂದ ವಸತಿ ಶಾಲೆಗಳವರೆಗೆ ಎಲ್ಲೆಡೆಯೂ ಇದೇ ನೀತಿಯನ್ನು ಅಳವಡಿಸಿಕೊಳ್ಳಬಹುದೆಂದೂ ಕರಡಿನಲ್ಲಿ ಹೇಳಲಾಗಿದೆ.

ಈ ಸೂತ್ರಗಳ ಪಾಲನೆಯನ್ನು ಖಾತರಿಗೊಳಿಸುವುದಕ್ಕಾಗಿ ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನೊಳಗೊಂಡ ಆರೋಗ್ಯ ತಂಡವನ್ನು ಪ್ರತೀ ಶಾಲೆಯಲ್ಲೂ ರಚಿಸಬೇಕೆಂದೂ, ಶಾಲಾ ಪಠ್ಯದಲ್ಲೂ, ಪಠ್ಯೇತರ ಚಟುವಟಿಕೆಗಳಲ್ಲೂ ಈ ಸೂತ್ರಗಳ ಬಗ್ಗೆ ಮಾಹಿತಿಯೊದಗಿಸಬೇಕೆಂದೂ ಕರಡಿನಲ್ಲಿ ಸೂಚಿಸಲಾಗಿದೆ. ರೋಗಕಾರಕ ತಿನಿಸುಗಳ ಜಾಹೀರಾತುಗಳು ಮಕ್ಕಳನ್ನು ಗುರಿಯಾಗಿಸದಂತೆ ನಿರ್ಬಂಧಿಸಬೇಕು, ಅವಕ್ಕೆ ಖ್ಯಾತನಾಮರ ಬೆಂಬಲವನ್ನು ತಡೆಯಬೇಕು ಎಂಬಿತ್ಯಾದಿ ಸಲಹೆಗಳೂ ಕರಡಿನಲ್ಲಿವೆ.

ಜೊತೆಗೆ, ಐದರಿಂದ ಹದಿನೇಳು ವಯಸ್ಸಿನ ಮಕ್ಕಳಿಗೆ, ಪ್ರತಿನಿತ್ಯ ಒಟ್ಟು ಒಂದು ಗಂಟೆಯಷ್ಟಾದರೂ, ಹುರುಪಾದ ದೈಹಿಕ ಚಟುವಟಿಕೆಗಳನ್ನು ಕಡ್ಡಾಯಗೊಳಿಸಬೇಕೆಂದು ಕರಡಿನಲ್ಲಿ ಹೇಳಲಾಗಿದೆ. ಅದಕ್ಕಾಗಿ ಕ್ರಿಕೆಟ್, ಕಾಲ್ಚೆಂಡು, ಬ್ಯಾಡ್ಮಿಂಟನ್, ಟೆನಿಸ್, ಸ್ಕೇಟಿಂಗ್, ಈಜು ಇತ್ಯಾದಿ ಆಟೋಟಗಳನ್ನು ಸೂಚಿಸಲಾಗಿದೆ; ಯೋಗಾಭ್ಯಾಸವನ್ನು ಎಲ್ಲೂ ಪ್ರಸ್ತಾಪಿಸದೆ ಸಂಪೂರ್ಣವಾಗಿ ಕಡೆಗಣಿಸಲಾಗಿದೆ.

ಹೀಗೆ, ರೋಗಕಾರಕವಾದ ಸಂಸ್ಕರಿತ ಸಸ್ಯಾಹಾರವನ್ನು ಕೆಂಪು ಪಟ್ಟಿಗೆ ತಳ್ಳಿ, ಪೌಷ್ಠಿಕವಾದ ಮಾಂಸಾಹಾರಕ್ಕೆ ಹಸಿರು ನಿಶಾನೆ ತೋರಿ, ಉಪಯೋಗವಿಲ್ಲದ ಯೋಗಾಭ್ಯಾಸವನ್ನೂ ಹೊರಗುಳಿಸಿ, ಅತ್ಯಂತ ವೈಜ್ಞಾನಿಕವೂ, ಕ್ರಾಂತಿಕಾರಿಯೂ ಆದ ಮಾರ್ಗದರ್ಶಿಕೆಯನ್ನು ಪ್ರಕಟಿಸಿರುವ ಆಹಾರ ಪ್ರಾಧಿಕಾರವನ್ನು ಅಭಿನಂದಿಸಲೇಬೇಕು. ಆಗಸ್ಟ್ 2012ರಲ್ಲಿ ಸಿದ್ಧಗೊಂಡ ಈ ಮಾರ್ಗದರ್ಶಿಕೆಯನ್ನು ಮಾರ್ಚ್ 2015ರಲ್ಲಿ ದಿಲ್ಲಿ ಉಚ್ಛ ನ್ಯಾಯಾಲಯವು ದೃಢೀಕರಿಸಿ, ಆದಷ್ಟು ಬೇಗನೇ ಅಧಿಕೃತ ನೀತಿಯಾಗಿ ದೇಶದಾದ್ಯಂತ ಜಾರಿಗೊಳಿಸಬೇಕೆಂದು ಆದೇಶಿಸಿತ್ತು. ಅದನ್ನೀಗ ಎಲ್ಲರೂ ಒತ್ತಾಯಿಸಬೇಕಾಗಿದೆ. ಸ್ವತಃ ಪ್ರಧಾನಮಂತ್ರಿಗಳೇ ಮುತುವರ್ಜಿಯಿಂದ ಅದನ್ನು ಅಧಿಕೃತ ನೀತಿಯೆಂದು ಘೋಷಿಸಿ ತಮ್ಮ ಮುತ್ಸದ್ಧಿತನವನ್ನು ಮೆರೆಯಬೇಕಾಗಿದೆ, ದೇಶದ ಎಲ್ಲ ಮಕ್ಕಳೂ, ವಯಸ್ಕರೂ ಪೌಷ್ಠಿಕ ಆಹಾರವನ್ನು ಸೇವಿಸುವಂತೆ ಪ್ರೇರೇಪಿಸಬೇಕಾಗಿದೆ. ಹಾಗೆಯೇ, ಮೀನು, ಮಾಂಸ, ಮೊಟ್ಟೆಗಳ ಸೇವನೆಗೆ ವ್ಯಕ್ತವಾಗುತ್ತಿರುವ ಅಡ್ಡಿ-ಆತಂಕಗಳನ್ನು ನಿವಾರಿಸಲು ಅವರೇ ಕ್ರಮ ಕೈಗೊಳ್ಳಬೇಕಾಗಿದೆ.

ಜಾತಿ, ಮತ ಭೇದವಿಲ್ಲದೆ ದೇಶದ ಎಲ್ಲಾ ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳು, ಕಛೇರಿಗಳು, ಉದ್ಯಮಗಳು ಮುಂತಾದೆಡೆ ಕ್ಯಾಂಟೀನುಗಳಲ್ಲೂ, ಭೋಜನಾಲಯಗಳಲ್ಲೂ ತರಕಾರಿ ಹಾಗೂ ಧಾನ್ಯಗಳ ಜೊತೆಗೆ ಮೀನು, ಮಾಂಸ, ಮೊಟ್ಟೆಗಳು ಕಡ್ಡಾಯವಾಗಿ ಲಭ್ಯವಾಗಬೇಕು. ನಮ್ಮ ರಾಜ್ಯವೂ ಸೇರಿದಂತೆ ಎಲ್ಲೆಡೆ ಶಾಲಾ ಬಿಸಿಯೂಟದಲ್ಲಿ ಪ್ರತಿನಿತ್ಯ ಮೊಟ್ಟೆಯನ್ನು ನೀಡಬೇಕು; ಮಾನ್ಯ ಪ್ರಧಾನಮಂತ್ರಿಗಳೇ ಅದನ್ನು ಉದ್ಘಾಟಿಸಿದರೆ ಇನ್ನೂ ಒಳ್ಳೆಯದು. ಸಮಾರಂಭಗಳಲ್ಲಿ ಭೋಜನ ವ್ಯವಸ್ಥೆ ಮಾಡುವಾಗಲೂ ತಿನಿಸುಗಳನ್ನು ಇದೇ ಸೂತ್ರದಂತೆ ವಿಂಗಡಿಸಿಟ್ಟರೆ ಆರೋಗ್ಯಕರ ಆಹಾರವನ್ನು ಇನ್ನಷ್ಟು ಉತ್ತೇಜಿಸಿದಂತಾಗುತ್ತದೆ.

ಈ ಕರಡಿನಲ್ಲಿ ಒಂದೆರಡು ಸಣ್ಣ ಪರಿಷ್ಕರಣೆಗಳನ್ನು ಮಾಡಿದರೆ ಒಳ್ಳೆಯದು. ಈ ಕರಡನ್ನು ಸಿದ್ಧಪಡಿಸಿ ಈಗಾಗಲೇ ಮೂರು ವರ್ಷಗಳಾಗಿರುವುದರಿಂದ, ಆ ನಂತರದ ಅಧ್ಯಯನಗಳನ್ನು ಪರಿಗಣಿಸುವ ಅಗತ್ಯವಿದೆ. ಈ ಕರಡಿನಲ್ಲಿ ಹಣ್ಣುಗಳು, ಹಾಲಿನ ಉತ್ಪನ್ನಗಳು, ಬ್ರೆಡ್, ನಿಂಬೆ ಸೋಡಾಗಳನ್ನು ಆರೋಗ್ಯಕರ ಆಹಾರಗಳ ಪಟ್ಟಿಯಲ್ಲಿ ಸೇರಿಸಲಾಗಿದೆ; ಆದರೆ ಇವು ಮಕ್ಕಳಿಗೆ ಅಗತ್ಯವಿಲ್ಲ. ಚಮಚದ ಸಕ್ಕರೆಯಲ್ಲೂ, ಹಣ್ಣುಗಳಲ್ಲೂ ಇರುವ ಫ್ರಕ್ಟೋಸ್ ಎಂಬ ಶರ್ಕರದ ಅತಿಸೇವನೆಯೇ ಆಧುನಿಕ ರೋಗಗಳಿಗೆ ಕಾರಣವಾಗಿರಬಹುದೆಂದು ಇತ್ತೀಚಿನ ಹಲವು ಅಧ್ಯಯನಗಳು ಶ್ರುತಪಡಿಸಿವೆ. ಮಕ್ಕಳಲ್ಲಿ ಹಣ್ಣಿನ ರಸದ ಅತಿಸೇವನೆಯು ಬೊಜ್ಜಿಗೆ ಕಾರಣವಾಗುತ್ತದೆಂದೂ, ಅದನ್ನು ಕಡಿತಗೊಳಿಸಿದರೆ ಬೊಜ್ಜನ್ನು ತಡೆಯಬಹುದೆಂದೂ ಅಧ್ಯಯನಗಳು ತೋರಿಸಿವೆ. ಪಶು ಹಾಲಿನ ಸೇವನೆಯಿಂದ ಅಸಹಿಷ್ಣುತೆ, ಅಸ್ತಮಾ, ಮಧುಮೇಹ, ಕರುಳಿನ ಸಮಸ್ಯೆಗಳಾಗಬಹುದೆಂಬ ವರದಿಗಳಿವೆ. ಸಂಸ್ಕರಿತ ಮಾಂಸದಿಂದ ಕೆಲ ರೋಗಗಳುಂಟಾಗಬಹುದೆಂಬ ವರದಿಗಳೂ ಇವೆ.

ಆದ್ದರಿಂದ, ಹಣ್ಣುಗಳು ಹಾಗೂ ಹಾಲಿನ ಉತ್ಪನ್ನಗಳನ್ನು ಹಸಿರಿನ ಬದಲು ಹಳದಿ ಗುಂಪಿನಲ್ಲಿ ಸೇರಿಸಿ, ಅಪರೂಪಕ್ಕೆ ನೀಡುವಂತಾಗಬೇಕು. ತಾಜಾ ತೆಳು ಮಾಂಸವನ್ನು ಹಸಿರು ಗುಂಪಿನಲ್ಲೇ ಇಟ್ಟು, ಸಂಸ್ಕರಿತ ಮಾಂಸವನ್ನು (ಬೇಕನ್, ಸಲಾಮಿ, ಸಾಸೇಜ್) ಹಳದಿ ಗುಂಪಿಗೆ ಸೇರಿಸಬೇಕು. ಐಸ್ ಕ್ರೀಂ ನಂತಹ ಸಿಹಿತಿನಿಸುಗಳು ಹಳದಿಯ ಬದಲು ಕೆಂಪು ಗುಂಪಿಗೆ ಸೇರಿ ವರ್ಜ್ಯವಾಗಬೇಕು. ಗೇರು, ಪಿಸ್ತ, ಬಾದಾಮಿ, ಎಳ್ಳು, ಕುಂಬಳ, ಸೌತೆ ಮುಂತಾದ ಬೀಜಗಳು ಹಸಿರು ಗುಂಪಿಗೆ ಸೇರ್ಪಡೆಯಾಗಬೇಕು. ಮಾಂಸಾಹಾರದ ಜೊತೆ ನಾರುಭರಿತ ತರಕಾರಿಗಳ ಸೇವನೆಯೂ ಅತ್ಯಗತ್ಯವೆಂದು ಒತ್ತಿ ಹೇಳಬೇಕು. ಮಕ್ಕಳು ರೋಗಕಾರಕ ತಿನಿಸುಗಳನ್ನು ಶಾಲೆಗಳಲ್ಲಷ್ಟೇ ಅಲ್ಲ, ಇತರೆಡೆಗಳಲ್ಲೂ ಖರೀದಿಸದಂತೆ ನಿಯಂತ್ರಿಸಬೇಕು.

ಆಹಾರ ಪ್ರಾಧಿಕಾರದ ಈ ಸೂತ್ರಗಳು ಎಲ್ಲ ದೇಶವಾಸಿಗಳಿಗೆ, ಅದರಲ್ಲೂ ಮಕ್ಕಳಿಗೆ, ಹೊಸ ಆಶಾಕಿರಣವಾಗಿವೆ. ಕೇಂದ್ರ ಸರಕಾರದ ಈ ದಿಟ್ಟ ಉಪಕ್ರಮವು ಶ್ರೇಷ್ಠ ಸಸ್ಯಾಹಾರಿಗಳ ಮನದ ಕಣ್ಣು ತೆರೆಸಬೇಕಾಗಿದೆ.

29_10_2015_006_005

ಆರೋಗ್ಯ ಪ್ರಭ 12: ಕರುಳಿನ ಸೂಕ್ಷ್ಮಾಣುಗಳಲ್ಲಿದೆ ಎರಡನೇ ಮಿದುಳು [ಕನ್ನಡ ಪ್ರಭ, ಅಕ್ಟೋಬರ್ 15, 2015, ಗುರುವಾರ]

ನಮ್ಮ ಕರುಳಿನೊಳಗೆ ವಾಸಿಸುವ ಶತಲಕ್ಷ ಕೋಟಿ ಸೂಕ್ಷ್ಮಾಣುಗಳು ನಾವು ಜೀರ್ಣಿಸಲಾಗದ ಶರ್ಕರಗಳನ್ನು ಬಳಸಿಕೊಂಡು ಹಲಬಗೆಯ ವಿಶೇಷ ಸಂಯುಕ್ತಗಳನ್ನು ಸ್ರವಿಸುತ್ತವೆ. ಇವು ನಮ್ಮ ಮನಸ್ಥಿತಿಯ ಮೇಲೂ, ವರ್ತನೆಯ ಮೇಲೂ ಪ್ರಭಾವ ಬೀರುತ್ತವೆ. ಹಾಗಾಗಿ ಈ ಸೂಕ್ಷ್ಮಾಣುಗಳನ್ನು ಸುಸ್ಥಿತಿಯಲ್ಲಿಡಬೇಕಾದುದು ಅತಿ ಮುಖ್ಯ.

ಭಯ, ಆತಂಕ, ಪ್ರೀತಿ ಎಂಬಿತ್ಯಾದಿ ಭಾವನೆಗಳನ್ನು ಹೃದಯಕ್ಕೆ ಬದಲಾಗಿ ಕರುಳಿನೊಂದಿಗೆ ತಳುಕು ಹಾಕುವ ಕಾಲ ಬಂದಿದೆ. ಕರುಳು ಹಾಗೂ ಅದರೊಳಗಿನ ಶತಲಕ್ಷ ಕೋಟಿ ಸೂಕ್ಷ್ಮಾಣುಗಳು ಮಿದುಳಿನ ಮೇಲೆ ಪ್ರಭಾವ ಬೀರಿ ನಮ್ಮ ಭಾವನೆಗಳನ್ನೂ, ವರ್ತನೆಯನ್ನೂ ನಿರ್ಧರಿಸುತ್ತವಂತೆ!

ನಮ್ಮ ಪಚನಾಂಗಕ್ಕೆ ಅದರದ್ದೇ ಆದ ನರಮಂಡಲವಿದೆ. ಅದು ನಾವು ತಿಂದ ಆಹಾರದ ಗುಣಾವಗುಣಗಳನ್ನೂ, ಪಚನಾಂಗದ ಸಂವೇದನೆಗಳನ್ನೂ ಗ್ರಹಿಸುತ್ತದೆ, ಹಾಗೂ ಅದಕ್ಕನುಗುಣವಾಗಿ ಕರುಳಿನ ಚಲನೆಯನ್ನೂ, ಸ್ರಾವಗಳನ್ನೂ ನಿಯಂತ್ರಿಸುತ್ತದೆ. ಮುಂಗರುಳಿನುದ್ದಕ್ಕೂ ಹುದುಗಿರುವ ವಿಶೇಷ ಗ್ರಾಹಿಗಳಿಂದ ಸ್ರವಿಸಲ್ಪಡುವ ವಿವಿಧ ಪೆಪ್ಟೈಡ್ ಹಾರ್ಮೋನುಗಳು ಇದಕ್ಕೆ ಪೂರಕವಾಗಿ ಕೆಲಸ ಮಾಡುತ್ತವೆ. ಪಚನಾಂಗದ ಈ ಆಗುಹೋಗುಗಳೆಲ್ಲವೂ ಕರುಳಿನ ನರಗಳು ಹಾಗೂ ಪೆಪ್ಟೈಡುಗಳ ಮೂಲಕ ಸುಪ್ತವಾಗಿ ಮಿದುಳಿಗೆ ತಿಳಿಯುತ್ತಿರುತ್ತವೆ; ಇವುಗಳ ಆಧಾರದಲ್ಲಿ ಮಿದುಳು ನಮ್ಮ ಹಸಿವು-ಸಂತೃಪ್ತಿಗಳನ್ನೂ, ಪಚನಾಂಗದ ಕಾರ್ಯಗಳನ್ನೂ ನಿಯಂತ್ರಿಸುತ್ತದೆ.

ಪ್ರತಿಯೋರ್ವ ಮನುಷ್ಯನ ಕರುಳಿನೊಳಗೆ, ಅದರಲ್ಲೂ ದೊಡ್ಡ ಕರುಳಿನೊಳಗೆ, 700-1000 ವಿಧಗಳಿಗೆ ಸೇರಿದ ಶತಲಕ್ಷ ಕೋಟಿ ಸೂಕ್ಷ್ಮಾಣುಗಳು ವಾಸಿಸುತ್ತವೆ. ನಮ್ಮ ಕರುಳು ಜೀರ್ಣಿಸಲಾಗದ, ಸೊಪ್ಪು-ತರಕಾರಿಗಳಲ್ಲೂ, ಮೂಳೆ-ಮಾಂಸಗಳಲ್ಲೂ ಇರುವ, ಕೆಲವು ಸಂಕೀರ್ಣ ಶರ್ಕರಗಳು ಈ ಸೂಕ್ಷ್ಮಾಣುಗಳಿಗೆ ಆಹಾರವಾಗುತ್ತವೆ; ಅವನ್ನು ಮೇದೋ ಆಮ್ಲಗಳಾಗಿ, ಅನ್ನಾಂಗಗಳಾಗಿ ಪರಿವರ್ತಿಸಿ, ತಾವೂ ಬದುಕಿಕೊಂಡು, ತಾವಿರುವ ಮನುಷ್ಯದೇಹಕ್ಕೂ ನೆರವಾಗುತ್ತವೆ.

ಸೂಕ್ಷ್ಮಾಣುಗಳೊಂದಿಗೆ ನಮ್ಮ ಸಹಬಾಳ್ವೆಯು ಹುಟ್ಟಿದಾಕ್ಷಣದಿಂದ ಆರಂಭಗೊಳ್ಳುತ್ತದೆ. ಮಗು ಹುಟ್ಟುತ್ತಲೇ ತಾಯಿಯ ದೇಹದಲ್ಲಿರುವ ಸೂಕ್ಷ್ಮಾಣುಗಳು ಮೈಯನ್ನು ಮೆತ್ತಿಕೊಳ್ಳುತ್ತವೆ, ಸ್ತನಪಾನದೊಂದಿಗೆ ಕರುಳಿನೊಳಕ್ಕೂ ಪ್ರವೇಶಿಸುತ್ತವೆ. ಮಗು ಬೆಳೆದಂತೆ ಇನ್ನೂ ಹಲವು ವಿಧಗಳ ಸೂಕ್ಷ್ಮಾಣುಗಳು ಕರುಳನ್ನು ಸೇರಿಕೊಳ್ಳುತ್ತವೆ. ಮಗುವಿನ ಪಚನಾಂಗ, ರೋಗರಕ್ಷಣಾ ವ್ಯವಸ್ಥೆ ಹಾಗೂ ಮಿದುಳಿನ ಬೆಳವಣಿಗೆಯಲ್ಲಿ ಈ ಸೂಕ್ಷ್ಮಾಣುಗಳಿಗೆ ಮಹತ್ವದ ಪಾತ್ರವಿದೆಯೆಂದು ಈಗ ಗುರುತಿಸಲಾಗಿದೆ.

ಸೂಕ್ಷ್ಮಾಣುಗಳು ಮನುಷ್ಯರಲ್ಲಿ ಮಾತ್ರವಲ್ಲ, ಇನ್ನಿತರ ಪ್ರಾಣಿಗಳಲ್ಲೂ ಸಹಬಾಳ್ವೆ ನಡೆಸುತ್ತವೆ. ಕೆಲವು ಸೂಕ್ಷ್ಮಾಣುಗಳು ಪ್ರಾಣಿಗಳ ನರಮಂಡಲದ ಮೇಲೆ ಪ್ರಭಾವ ಬೀರಿ, ಅವುಗಳ ವರ್ತನೆಯನ್ನೇ ಬದಲಾಯಿಸಿ, ತಮ್ಮ ಬೆಳವಣಿಗೆಯನ್ನು ಮುಂದುವರಿಸಲು ಅನುಕೂಲ ಮಾಡಿಕೊಳ್ಳುತ್ತವೆ! ಉದಾಹರಣೆಗೆ, ಶಿಲೀಂಧ್ರವೊಂದು ಮರದಲ್ಲಿ ಗೂಡು ಕಟ್ಟುವ ಬಡಗಿ ಇರುವೆಗಳನ್ನು ಹೊಕ್ಕಿ, ಅವುಗಳು ಆಯ ತಪ್ಪಿ ಗೂಡಿನಿಂದ ಹೊರಬೀಳುವಂತೆ ಮಾಡಿ, ಅವುಗಳ ತಲೆಯೊಳಗೆ ಬೆಳೆಯುತ್ತದೆ. ಕೆಲವು ಸೂಕ್ಷ್ಮಹುಳುಗಳು ಮಿಡತೆ ಹಾಗೂ ಇರುವೆಗಳೊಳಕ್ಕೆ ಹೊಕ್ಕಿ, ಅವನ್ನು ನೀರಲ್ಲಿ ಮುಳುಗುವಂತೆ ಮಾಡಿ, ತಾವೇ ನೀರಲ್ಲಿ ಬೆಳೆಯುತ್ತವೆ. ಟೋಕ್ಸೋಪ್ಲಾಸ್ಮಾ ಎಂಬ ಪರೋಪಜೀವಿಯು ಇಲಿಯ ಮಿದುಳೊಳಗೆ ಸೇರಿ, ಬೆಕ್ಕಿನ ಭಯವನ್ನು ನಿವಾರಿಸಿ, ಬೆಕ್ಕಿಗೆ ಸುಲಭವಾಗಿ ಸಿಗುವಂತೆ ಮಾಡಿ, ಆ ಮೂಲಕ ಬೆಕ್ಕಿನ ದೇಹವನ್ನು ಪ್ರವೇಶಿಸಿ ಅಲ್ಲಿ ಬೆಳೆಯುತ್ತದೆ!

ನಮ್ಮ ಕರುಳೊಳಗಿರುವ ಸೂಕ್ಷ್ಮಾಣುಗಳು ನಮ್ಮ ಮಿದುಳಿನ ಮೇಲೆ ಅದೆಂತಹ ಪರಿಣಾಮಗಳನ್ನುಂಟು ಮಾಡುತ್ತವೆ ಎನ್ನುವ ಬಗ್ಗೆ ಬಹು ಆಸಕ್ತಿದಾಯಕವಾದ ಅಧ್ಯಯನಗಳೀಗ ನಡೆಯುತ್ತಿವೆ. ಕರುಳೊಳಗಿನ ನೂರು ಲಕ್ಷ ಕೋಟಿ ಸೂಕ್ಷ್ಮಾಣುಗಳ ಒಟ್ಟು ತೂಕವು ಒಂದೂವರೆ ಕಿಲೋಗ್ರಾಂನಷ್ಟಿದ್ದು, ನಮ್ಮ ಮಿದುಳಿಗೆ ಸರಿದೂಗುತ್ತದೆ. ಈ ಸೂಕ್ಷ್ಮಾಣುಗಳು ಸ್ರವಿಸುವ ಹಲತರದ ಸಂಯುಕ್ತಗಳು ಕರುಳಿನ ಮೇಲೂ, ಅಲ್ಲಿರುವ ನರಗಳ ಮೇಲೂ, ಆ ಮೂಲಕ ಮಿದುಳಿನ ಮೇಲೂ ಪ್ರಭಾವ ಬೀರುತ್ತವೆ ಎನ್ನುವುದನ್ನು ಹಲವು ಅಧ್ಯಯನಗಳು ತೋರಿಸಿವೆ. ಅಂದರೆ ನಮ್ಮ ಕರುಳೊಳಗಿನ ಸೂಕ್ಷ್ಮಾಣುಗಳು ನಮ್ಮ ಭಾವನೆಗಳ ಮೇಲೂ, ವರ್ತನೆಯ ಮೇಲೂ ಪ್ರಭಾವ ಬೀರುವ ಎರಡನೇ ಮಿದುಳಿನಂತೆ ಕಾರ್ಯಾಚರಿಸುತ್ತವೆ!

ಮಗು ಜನಿಸಿದಾಗ ಮಿದುಳು ಇನ್ನೂ ಅಪಕ್ವವಾಗಿರುತ್ತದೆ. ತಾಯಿಯ ಎದೆಹಾಲಿನಲ್ಲಿ ತುಂಬಿರುವ ಹಲವು ವಿಶಿಷ್ಠ ಸಂಯುಕ್ತಗಳು ಮಗುವಿನ ಮಿದುಳನ್ನು ಪೋಷಿಸಿ ಬೆಳೆಸುತ್ತವೆ. ಸ್ತನಪಾನದ ಮೂಲಕ ಕರುಳನ್ನು ಸೇರುವ ಸೂಕ್ಷ್ಮಾಣುಗಳು ಕೂಡ ಮಗುವಿನ ಮಿದುಳಿನ ಬೆಳವಣಿಗೆಗೆ ನೆರವಾಗುತ್ತವೆ. ನವಮಾಸ ತುಂಬಿದ, ಸಹಜವಾಗಿ ಹೆರಿಗೆಯಾದ, ಎದೆಹಾಲನ್ನಷ್ಟೇ ಕುಡಿದ, ಪ್ರತಿಜೈವಿಕಗಳನ್ನು ಸೇವಿಸದ ಶಿಶುಗಳಲ್ಲಿ ಸೂಕ್ಷ್ಮಾಣುಗಳ ಬೆಳವಣಿಗೆಯು ಅತ್ಯುತ್ತಮವಾಗಿರುತ್ತದೆ, ಇದೇ ಕಾರಣಕ್ಕೆ ಮಿದುಳಿನ ಪೋಷಣೆಯೂ ಚೆನ್ನಾಗಿ ನಡೆಯುತ್ತದೆ. ಡಬ್ಬದ ಪುಡಿ ಹಾಗೂ ಪಶುವಿನ ಹಾಲುಗಳು ಮಾನವ ಶಿಶುವಿನ ಮಿದುಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವುದಿಲ್ಲ, ಮಾತ್ರವಲ್ಲ, ಸ್ತನಪಾನದಿಂದ ದೊರೆಯುವ ಸೂಕ್ಷ್ಮಾಣುಗಳನ್ನೂ ಒದಗಿಸುವುದಿಲ್ಲ. ಪಶುವಿನ ಹಾಲು ಅದರ ಕರುಗಳಿಗಷ್ಟೇ ಸೂಕ್ತ, ನಮ್ಮ ಶಿಶುಗಳಿಗಲ್ಲ.

ನರಮಂಡಲದಲ್ಲಿ ವಾಹಕಗಳಾಗಿ ವರ್ತಿಸುವ ಸೆರೊಟೊನಿನ್, ಗಾಬಾ, ಡೋಪಮಿನ್, ನಾರ್ ಎಪಿನೆಫ್ರಿನ್ ಮುಂತಾದ ಸಂಯುಕ್ತಗಳನ್ನು ಕರುಳೊಳಗಿನ ಸೂಕ್ಷ್ಮಾಣುಗಳು ಕೂಡ ಸ್ರವಿಸುತ್ತವೆ; ನಮ್ಮ ದೇಹದಲ್ಲಿರುವ ಶೇ. 90ರಷ್ಟು ಸೆರೊಟೊನಿನ್ ಹಾಗೂ ಶೇ. 50ರಷ್ಟು ಡೋಪಮಿನ್ ಕರುಳಿನಲ್ಲೇ ಉತ್ಪತ್ತಿಯಾಗುತ್ತದೆ. ಈ ಸೂಕ್ಷ್ಮಾಣುಗಳು ಆಹಾರದ ಶರ್ಕರಗಳನ್ನು ಒಡೆದು ಬಿಡುಗಡೆಗೊಳಿಸುವ ಬ್ಯುಟಿರೇಟ್, ಪ್ರೊಪಿಯೋನೇಟ್, ಅಸಿಟೇಟ್ ಮುಂತಾದ ಕಿರು ಮೇದೋ ಆಮ್ಲಗಳು ಕೂಡ ಮಿದುಳಿನ ಮೇಲೆ ಪ್ರಭಾವ ಬೀರುತ್ತವೆ. ಈ ಸಂಯುಕ್ತಗಳು ಮಿದುಳಿನ ನರವರ್ಧಕ ಪ್ರೊಟೀನ್ (ಬಿಡಿಎನ್ಎಫ್) ಅನ್ನು ಪ್ರಚೋದಿಸುವ ಮೂಲಕ ನರಕೋಶಗಳನ್ನು ಸುಸ್ಥಿತಿಯಲ್ಲಿರಿಸುವುದಕ್ಕೆ ಹಾಗೂ ಹೊಸ ನರಕೋಶಗಳನ್ನು ಬೆಳೆಸುವುದಕ್ಕೆ ನೆರವಾಗುತ್ತವೆ. ನವಜಾತ ಶಿಶುವಿನ ಮಿದುಳಿನಲ್ಲಿ ಅರಿಯುವಿಕೆ, ನೆನಪು, ಸಾಮಾಜಿಕ ಚಟುವಟಿಕೆ ಮುಂತಾದ ಮೂಲಭೂತ ಕಾರ್ಯಗಳಿಗೆ ಸಂಬಂಧಿಸಿದ ಭಾಗಗಳ ಬೆಳವಣಿಗೆಯಲ್ಲಿ ಬಿಡಿಎನ್ಎಫ್ ಹಾಗೂ ಇತರ ಸೂಕ್ಷ್ಮಾಣುಜನ್ಯ ಸಂಯುಕ್ತಗಳು ಮಹತ್ವದ ಪಾತ್ರ ವಹಿಸುತ್ತವೆ ಎನ್ನಲಾಗಿದೆ.

ಒತ್ತಡ, ಭಯ, ಆತಂಕಗಳ ನಿಭಾವಣೆ, ಸಾಮಾಜಿಕ ಪ್ರತಿಸ್ಪಂದನ, ನಿರ್ಧರಿಸುವ ಜಾಣ್ಮೆ, ಹಸಿವು-ಸಂತೃಪ್ತಿಗಳ ನಿಯಂತ್ರಣ ಇತ್ಯಾದಿ ಸಾಮರ್ಥ್ಯಗಳ ಬೆಳವಣಿಗೆಯೂ ತಾಯಿಯ ಆರೈಕೆ, ಎದೆಹಾಲಿನ ಪ್ರಮಾಣ ಹಾಗೂ ಕರುಳಿನ ಸೂಕ್ಷ್ಮಾಣುಗಳ ಸ್ಥಿತಿಗತಿಗಳನ್ನು ಅವಲಂಬಿಸಿರುತ್ತದೆ. ಕರುಳೊಳಗೆ ಪರಸ್ಪರ ಸಹಜೀವನ ನಡೆಸುವ ನೂರಾರು ಜಾತಿಯ ಸೂಕ್ಷ್ಮಾಣುಗಳು ಮನುಷ್ಯರಲ್ಲೂ ಸಾಮಾಜಿಕ ಸಹಬಾಳ್ವೆ ಹಾಗೂ ಪ್ರತಿಸ್ಪಂದನಗಳ ಸ್ವಭಾವವನ್ನು ಬೆಳೆಸುತ್ತವೆ ಎನ್ನಲಾಗಿದೆ. ಮನುಷ್ಯರೊಳಗಿನ ಇಂತಹ ಸಹಬಾಳ್ವೆಯು ಈ ಸೂಕ್ಷ್ಮಾಣುಗಳ ಹರಡುವಿಕೆಗೆ (ತಾಯಿಂದ ಮಗುವಿಗೆ, ಆಹಾರದ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ) ನೆರವಾಗುವುದರಿಂದ ಸೂಕ್ಷ್ಮಾಣುಗಳಿಗೂ ಅದರಿಂದ ಲಾಭವಾಗುತ್ತದೆ! ಎಳವೆಯಲ್ಲಿ ಇಂತಹ ಬೆಳವಣಿಗೆಯಲ್ಲಿ ಲೋಪಗಳಾದರೆ ಜೀವನವಿಡೀ ಸಮಸ್ಯೆಗಳಾಗುವ ಸಾಧ್ಯತೆಗಳಿವೆ.

ಸಾಮಾಜಿಕ ಪ್ರತಿಸ್ಪಂದನೆಗೆ ತೊಡಕುಂಟಾಗುವ ಸ್ವಲೀನತೆಯಂತಹ (ಆಟಿಸಂ) ಸಮಸ್ಯೆಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವುದಕ್ಕೆ ಕರುಳಿನ ಸೂಕ್ಷ್ಮಾಣುಗಳಲ್ಲಾಗುವ ವ್ಯತ್ಯಯಗಳೇ ಕಾರಣವಾಗಿರಬಹುದೆಂದು ಈಗ ತರ್ಕಿಸಲಾಗುತ್ತಿದೆ. ಆಧುನಿಕ ಸಸ್ಯಾಹಾರದ (ಸಕ್ಕರೆ, ಸಂಸ್ಕರಿತ ಧಾನ್ಯಗಳು) ಅತಿಸೇವನೆ, ಗರ್ಭಿಣಿಯರಲ್ಲೂ, ಶಿಶುಗಳಲ್ಲೂ ಪ್ರತಿಜೈವಿಕಗಳ ಅತಿಬಳಕೆ ಇತ್ಯಾದಿಗಳಿಂದ ಶಿಶುಗಳಲ್ಲಿ ಸೂಕ್ಷ್ಮಾಣುಗಳ ಬೆಳವಣಿಗೆಗೆ ತೊಂದರೆಯಾಗಿ, ಮಿದುಳಿನ ಬೆಳವಣಿಗೆಯಲ್ಲಿ ನ್ಯೂನತೆಗಳಾಗಬಹುದೆಂದು ಹೇಳಲಾಗುತ್ತಿದೆ. ಸ್ವಲೀನತೆಯ ಸಮಸ್ಯೆಯುಳ್ಳ ಹೆಚ್ಚಿನ ಮಕ್ಕಳಲ್ಲಿ ಪಚನಾಂಗದ ಸಮಸ್ಯೆಗಳೂ ಸಾಮಾನ್ಯವಾಗಿರುವುದು ಈ ವಾದವನ್ನು ಪುಷ್ಠೀಕರಿಸುವಂತಿದೆ.

ಕರುಳಿನಲ್ಲಿರುವ ಸೂಕ್ಷ್ಮಾಣುಗಳಿಗೆ ಇಷ್ಟವಾದ ಆಹಾರವನ್ನೇ ಮನುಷ್ಯರು ತಿನ್ನುವಂತೆ ಅವು ಪ್ರಭಾವ ಬೀರುವ ಸಾಧ್ಯತೆಗಳೂ ಇವೆ. ಒಂದೇ ಥರದ ಆಹಾರವನ್ನು ಹೆಚ್ಚಾಗಿ ಸೇವಿಸುವವರಲ್ಲಿ ಆ ಆಹಾರಕ್ಕೆ ಸರಿಹೊಂದುವ ಸೂಕ್ಷ್ಮಾಣುಗಳು ಹೆಚ್ಚಿನ ಸಂಖ್ಯೆಯಲ್ಲಿ ವೃದ್ಧಿಯಾಗುತ್ತವೆ. ಅಂಥವರು ತಮ್ಮ ಆಹಾರವನ್ನು ಬದಲಿಸಿದರೆ ಆ ಸೂಕ್ಷ್ಮಾಣುಗಳು ಕಷ್ಟಕ್ಕೀಡಾಗುತ್ತವೆ, ವಿಷಕಾರಿ ಸಂಯುಕ್ತಗಳನ್ನು ಸ್ರವಿಸತೊಡಗುತ್ತವೆ. ಇದರಿಂದ ರುಚಿ ಕೆಡುತ್ತದೆ, ಅನಾರೋಗ್ಯದ ಅನುಭವವೂ, ಬೇಸರಿಕೆಯೂ ಉಂಟಾಗುತ್ತದೆ; ತ್ಯಜಿಸಿದ್ದ ಆಹಾರವನ್ನು ಮತ್ತೆ ತಿನ್ನಬೇಕಾದ ಒತ್ತಡವುಂಟಾಗುತ್ತದೆ. ವಿಪರೀತವಾಗಿ ಸಕ್ಕರೆ-ಸಿಹಿಗಳನ್ನು ತಿನ್ನುವವರು ಅವನ್ನು ತ್ಯಜಿಸಿದಾಗ ಕಷ್ಟಕ್ಕೀಡಾಗಿ ಮತ್ತೆ ಸಕ್ಕರೆ-ಸಿಹಿಯ ದಾಸ್ಯಕ್ಕೆ ಬೀಳುವುದು ಹೀಗೆಯೇ.

ವಯಸ್ಕರಲ್ಲಿಯೂ ಕರುಳೊಳಗಿನ ಸೂಕ್ಷ್ಮಾಣುಗಳು ಏರುಪೇರಾದರೆ ಮನಸ್ಥಿತಿ ಹಾಗೂ ವರ್ತನೆಯ ಮೇಲೆ ಪರಿಣಾಮಗಳಾಗಬಹುದು. ಸಕ್ಕರೆ ಹಾಗೂ ಸಂಸ್ಕರಿತ ಧಾನ್ಯಗಳ ಸೇವನೆಯಿಂದ ಕರುಳಿನ ಸೂಕ್ಷ್ಮಾಣುಗಳಲ್ಲಾಗುವ ಬದಲಾವಣೆಗಳು ಖಿನ್ನತೆ, ಆತಂಕ ಮುಂತಾದ ಮಾನಸಿಕ ಸಮಸ್ಯೆಗಳಿಗೂ, ಬೊಜ್ಜು, ಮಧುಮೇಹ, ಹೃದ್ರೋಗ ಮುಂತಾದ ದೈಹಿಕ ಸಮಸ್ಯೆಗಳಿಗೂ ದಾರಿ ಮಾಡುತ್ತವೆ ಎನ್ನಲಾಗಿದೆ. ಟೋಕ್ಸೋಪ್ಲಾಸ್ಮ ಪರೋಪಜೀವಿಯಿಂದ ಸೂಕ್ಷ್ಮಾಣುಗಳಿಗೆ ತೊಂದರೆಯಾಗಿ, ಡೋಪಮಿನ್ ಸ್ರಾವದಲ್ಲಿ ಬದಲಾವಣೆಗಳಾಗಿ ಇಚ್ಛಿತ್ತ ವಿಕಲತೆಗೆ ಕಾರಣವಾಗಬಹುದೆಂಬ ಸಂದೇಹಗಳೂ ವ್ಯಕ್ತವಾಗಿವೆ. ಹಿರಿವಯಸ್ಕರಲ್ಲಿ ಕಂಡುಬರುವ ಅಲ್ಜೀಮರ್ಸ್ ಕಾಯಿಲೆ, ಪಾರ್ಕಿನ್ಸನ್ಸ್ ಕಾಯಿಲೆ ಮುಂತಾದ ಮಿದುಳಿನ ಸಮಸ್ಯೆಗಳಿಗೆ ಸೂಕ್ಷ್ಮಾಣುಮೂಲದ ಡೋಪಮಿನ್ ಇತ್ಯಾದಿ ಸಂಯುಕ್ತಗಳ ಕೊರತೆಯು ಕಾರಣವಿರಬಹುದೇ ಎಂಬ ಬಗ್ಗೆ ಅಧ್ಯಯನಗಳಾಗಬೇಕಿದೆ.

ನಮ್ಮ ಮಿದುಳಿನ ಮೇಲೂ, ಆ ಮೂಲಕ ನಮ್ಮ ಮನಸ್ಥಿತಿ ಹಾಗೂ ವರ್ತನೆಯ ಮೇಲೂ ಪ್ರಭಾವ ಬೀರಬಲ್ಲ ನಮ್ಮೊಳಗಿನ ಸೂಕ್ಷ್ಮಾಣುಗಳನ್ನು ಸುಸ್ಥಿತಿಯಲ್ಲಿಡಬೇಕಾದುದು ಅತಿ ಮುಖ್ಯ. ಸೊಪ್ಪು, ತರಕಾರಿಗಳನ್ನು ಹೆಚ್ಚು ಸೇವಿಸಿ ಒಳ್ಳೆಯ ಸೂಕ್ಷ್ಮಾಣುಗಳನ್ನು ವೃದ್ಧಿಸಬೇಕು, ಸಕ್ಕರೆ ಹಾಗೂ ಸಂಸ್ಕರಿತ ಧಾನ್ಯಗಳನ್ನು ವರ್ಜಿಸಿ ಕೆಟ್ಟ ಸೂಕ್ಷ್ಮಾಣುಗಳನ್ನು ತಡೆಯಬೇಕು. ಪ್ರತಿಜೈವಿಕಗಳು, ನೋವು ನಿವಾರಕಗಳು ಹಾಗೂ ಆಮ್ಲ ನಿರೋಧಕಗಳನ್ನು ಅತಿ ಕಡಿಮೆ ಬಳಸಬೇಕು. ಹೆಚ್ಚೆಚ್ಚು ಊರುಗಳಿಗೆ ಭೇಟಿಯಿತ್ತು, ಅಲ್ಲಿನ ನೀರು-ಆಹಾರಗಳ ಮೂಲಕ ಹೆಚ್ಚೆಚ್ಚು ಬಗೆಯ ಸೂಕ್ಷ್ಮಾಣುಗಳನ್ನು ಪಡೆಯಬೇಕು.

15_10_2015_006_004

ಆರೋಗ್ಯ ಪ್ರಭ 11: ಸಸ್ಯಾಹಾರ ದಿನದಂದು ಆಗಲಿ ಸತ್ಯಶೋಧನೆ [ಕನ್ನಡ ಪ್ರಭ, ಅಕ್ಟೋಬರ್ 1, 2015, ಗುರುವಾರ]

ಮೀನು, ಮಾಂಸ, ಮೊಟ್ಟೆಗಳನ್ನು ತಿಂದು ಮನುಷ್ಯರಾದವರು ಮತ್ತೆ ಸಸ್ಯಾಹಾರಿಗಳಾಗುವುದೆಂದರೆ ಜೀವವಿಕಾಸವನ್ನು 30-40 ಲಕ್ಷ ವರ್ಷ ಹಿನ್ನಡೆಸಿದಂತೆ, ಗಳಿಸಿದ ಮನೋದೈಹಿಕ ಸಾಮರ್ಥ್ಯಗಳನ್ನು ನಿರಾಕರಿಸಿದಂತೆ. ಹಾಗಾಗಿ, ಮನುಷ್ಯರನ್ನು ಸಂಪೂರ್ಣ ಸಸ್ಯಾಹಾರಿಗಳಾಗುವಂತೆ ಪ್ರೇರೇಪಿಸುವುದರಿಂದ ಲಾಭಕ್ಕಿಂತ ಹೆಚ್ಚು ನಷ್ಟವೇ ಆಗಬಹುದು.

ಇಂದು, ಅಕ್ಟೋಬರ್ 1, ವಿಶ್ವ ಸಸ್ಯಾಹಾರ ದಿನ. ರಾಷ್ಟ್ರೀಯ ಆರೋಗ್ಯ ಜಾಲಕಿಂಡಿಯನುಸಾರ, ಸಸ್ಯಾಹಾರದ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಿ, ಜನರನ್ನು ಸಸ್ಯಾಹಾರಿಗಳಾಗುವಂತೆ ಪ್ರೇರೇಪಿಸುವುದು ಈ ದಿನಾಚರಣೆಯ ಉದ್ದೇಶ. ಆದರೆ ಮನುಷ್ಯರ ವಿಕಾಸ, ದೇಹದ ರಚನೆ ಮತ್ತು ಕ್ರಿಯೆಗಳು, ಆಹಾರದ ಒಳಿತು-ಕೆಡುಕುಗಳು ಎಲ್ಲವೂ ಶತಸಿದ್ಧಗೊಳ್ಳುತ್ತಿರುವಾಗ, ಶೇ. 95ರಷ್ಟಿರುವ ಮಿಶ್ರಾಹಾರಿ ಮನುಷ್ಯರನ್ನು ಸಸ್ಯಾಹಾರಿಗಳಾಗುವಂತೆ ಉತ್ತೇಜಿಸುವುದು ಫಲದಾಯಕವೇ?

ಭೂಮಿಯ ಮೇಲೆ ಈಗಿರುವ ಎಲ್ಲಾ ಮನುಷ್ಯರೂ ಹೋಮೋ ಸಾಪಿಯನ್ಸ್ ಸಾಪಿಯೆನ್ಸ್ ಎಂಬ ಪ್ರಾಣಿಗಳು; ಎರಡು ಲಕ್ಷ ವರ್ಷಗಳ ಹಿಂದೆ ಆಫ್ರಿಕಾದ ಸೀಳು ಕಣಿವೆಗಳಲ್ಲಿ ವಿಕಾಸ ಹೊಂದಿದವರ ಸಂತಾನದವರು. ಎಲ್ಲಾ ಮನುಜರ ನಡುವೆ ಶೇ. 99.9ರಷ್ಟು ಸಾಮ್ಯತೆ (ಹೊರಚಹರೆಯಷ್ಟೇ ಬೇರೆ) [Science 2002;298(5602):2381]; ನಾವೆಲ್ಲರೂ ಒಂದೇ ಜಾತಿ, ಒಂದೇ ಮತ, ಒಂದೇ ಕುಲ.

ಸಸ್ಯಾಹಾರಿ ವಾನರರು ಮಿಶ್ರಾಹಾರಿ ಮಾನವರಾಗುವುದಕ್ಕೆ 30-40 ಲಕ್ಷ ವರ್ಷಗಳೇ ಬೇಕಾದವು.[Science 2014;345(6192):1236828] ಪರಿಸರದ ವೈಪರೀತ್ಯಗಳಿಂದ, ಅದರಲ್ಲೂ 26 ಲಕ್ಷ ವರ್ಷಗಳ ಹಿಂದೆ ತೊಡಗಿದ ಹಿಮಯುಗದಿಂದ, ಸಸ್ಯರಾಶಿಯು ಬಾಧಿತವಾದಾಗ ನಮ್ಮ ಪೂರ್ವಜರಿಗೆ ಆಹಾರವು ದುರ್ಲಭವಾಯಿತು. ಆಗ ಸೀಳು ಕಣಿವೆಯ ಕೊಳ್ಳಗಳಿದ್ದ ಮೀನು, ಆಮೆ, ಮೊಸಳೆ ಮುಂತಾದ ಜಲಚರಗಳನ್ನು ತಿನ್ನಬೇಕಾಯಿತು, ಅದರಿಂದಾಗಿ ಮಿದುಳು ಬಲಿಯಿತು.[PNAS 2010;107(2):10002, Quat Sci Rev, 2014;101:1] ಮಿದುಳು ಬೆಳೆದಂತೆ ಬೇಟೆಯಾಡುವ ಕೌಶಲವೂ ಬೆಳೆಯಿತು, ಪ್ರಾಣಿ-ಪಕ್ಷಿಗಳ ಮಾಂಸವೂ ದಕ್ಕಿತು. ಆಹಾರವಸ್ತುಗಳನ್ನು ಜಜ್ಜಿ ಮೆದುಗೊಳಿಸಿ, ಬೆಂಕಿಯಲ್ಲಿ ಬೇಯಿಸಿ, ತಿನ್ನತೊಡಗಿದ್ದರಿಂದ ಅವು ಸುಲಭವಾಗಿ ಜೀರ್ಣಗೊಂಡು ಇನ್ನಷ್ಟು ಪೌಷ್ಠಿಕಾಂಶಗಳು ದೊರೆಯುವಂತಾಯಿತು. ಇವೆಲ್ಲವುಗಳಿಂದ ಪಚನಾಂಗ ಕಿರಿದಾಯಿತು, ಮಿದುಳು ಹಿಗ್ಗಿ ಅತಿ ಸಂಕೀರ್ಣವಾಯಿತು, ದೇಹ ದೊಡ್ಡದಿದ್ದರೂ ಹೆಚ್ಚು ಸಕ್ರಿಯವಾಯಿತು, ಉನ್ನತ ಸಾಮಾಜಿಕ ಕೌಶಲಗಳನ್ನು ಬೆಳೆಸಿಕೊಳ್ಳುವುದಕ್ಕೂ ಸಾಧ್ಯವಾಯಿತು.[Evol Anthro: Iss, News, Rev 1999;8(1):11, Comp Biochem Phys 2003;136(1):35, Science 2007;316:1558, Annu Rev Nutr 2010;30:291] ಮಾಂಸಾಹಾರವು ಆದಿಮಾನವರ ಸಂತಾನಶಕ್ತಿಯನ್ನೂ ಹೆಚ್ಚಿಸಿತು; ಚಿಂಪಾಂಜಿಗಳ ಆಯುಸ್ಸು 60 ವರ್ಷ, ಮಕ್ಕಳಿಗೆ ಮೊಲೆಯೂಡಿಸುವ ಅವಧಿ 4-5 ವರ್ಷಗಳಿರುವಲ್ಲಿ, ಮನುಷ್ಯರ ಆಯುಸ್ಸು 120 ವರ್ಷ, ಮೊಲೆಯೂಡಿಸುವ ಅವಧಿ ಕೇವಲ 2 ವರ್ಷ 4 ತಿಂಗಳು ಆಗುವಂತಾಯಿತು.[PLoS ONE 2012;7(4):e32452]

ಮೀನು, ಮಾಂಸ, ಮೊಟ್ಟೆಗಳನ್ನು ತಿಂದು ಮನುಷ್ಯರಾದವರು ಮತ್ತೆ ಸಸ್ಯಾಹಾರಿಗಳಾಗುವುದೆಂದರೆ ಜೀವವಿಕಾಸವನ್ನು 30-40 ಲಕ್ಷ ವರ್ಷ ಹಿನ್ನಡೆಸಿದಂತೆ, ಗಳಿಸಿದ ಮನೋದೈಹಿಕ ಸಾಮರ್ಥ್ಯಗಳನ್ನು ನಿರಾಕರಿಸಿದಂತೆ. ಶಿಶುಗಳು ಹಾಗೂ ಮಕ್ಕಳ ಮನೋದೈಹಿಕ ಬೆಳವೆಣಿಗೆಗೆ ಪ್ರೊಟೀನು, ಮೇದಸ್ಸುಗಳು ಇಂದಿಗೂ ಬೇಕು; ದಿನವಿಡೀ ತಿನ್ನಬಲ್ಲ ಶ್ರೀಮಂತರ ಮಕ್ಕಳಿಗೆ ಇವು ಸಸ್ಯಾಹಾರದಿಂದ ಸಿಕ್ಕರೂ, ಬಡತನದಲ್ಲಿರುವವರಿಗೆ ಮೊಟ್ಟೆ-ಮಾಂಸಗಳಿಂದಲೇ ಸಿಗಬೇಕು.[J Nutr 2003;133(11):3886S] ರಾಜಸಿಕ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ಮಾಂಸಾಹಾರವೊಂದೇ ದಾರಿಯಾಗಿದೆ, ಹಗಲಿರುಳು ದುಡಿಯುವ ಜನರನ್ನು ಸಸ್ಯಾಹಾರಿಗಳಾಗುವಂತೆ ಬಲಾತ್ಕರಿಸಿದರೆ ದೇಶದ ಸ್ವಾತಂತ್ರ್ಯವೇ ನಾಶವಾಗುತ್ತದೆ ಎಂದು ಸ್ವಾಮಿ ವಿವೇಕಾನಂದರೂ ಹೇಳಿದ್ದರು.[ಸಂಪೂರ್ಣ ಕೃತಿಗಳು, 4;486]

ಎರಡು ಲಕ್ಷ ವರ್ಷಗಳ ಹಿಂದೆ ಮಿಶ್ರಾಹಾರಿಗಳಾಗಿ ವಿಕಾಸಗೊಂಡ ಮನುಷ್ಯರು, ಹತ್ತು ಸಾವಿರ ವರ್ಷಗಳಿಂದೀಚೆಗೆ ಧಾನ್ಯಗಳನ್ನು ಬೆಳೆಸತೊಡಗಿದ ಬಳಿಕ ಸಸ್ಯಾಹಾರವನ್ನೇ ಹೆಚ್ಚು ಸೇವಿಸುವಂತಾಯಿತು; ಮಾಂಸಪ್ರಧಾನ ಆಹಾರವು ಧಾನ್ಯಪ್ರಧಾನ ಆಹಾರವಾಗಿ ಬದಲಾಯಿತು. ಹಳೆ ಶಿಲಾಯುಗದ ಆಹಾರದಲ್ಲಿ ಶೇ. 70ರಷ್ಟು ಮೀನು, ಮಾಂಸ, ಮೊಟ್ಟೆಗಳೂ, ಇನ್ನುಳಿದಂತೆ ತರಕಾರಿಗಳು, ಬೀಜಗಳು, ಗೆಡ್ಡೆಗಳು ಹಾಗೂ ಅಪರೂಪಕ್ಕೊಮ್ಮೆ ಕಾಡಿನ ಹಣ್ಣುಗಳೂ ಇರುತ್ತಿದ್ದವು. ಧಾನ್ಯಗಳು ಹಾಗೂ ಅವುಗಳನ್ನು ಅರೆದು ತಯಾರಿಸಿದ ಬ್ರೆಡ್ಡು ಇತ್ಯಾದಿಗಳ ಬಳಕೆ ಹೆಚ್ಚಿದಂತೆ ತರಕಾರಿಗಳೂ, ಮೀನು-ಮಾಂಸಗಳೂ ಬದಿಗೆ ಸರಿದವು. ಮೂರು ಸಾವಿರ ವರ್ಷಗಳಿಂದೀಚೆಗೆ ಸಕ್ಕರೆಯ ಬಳಕೆಯೂ ತೊಡಗಿ, ಕಳೆದ ಮುನ್ನೂರು ವರ್ಷಗಳಲ್ಲಿ 60-100 ಪಟ್ಟು ಹೆಚ್ಚಿತು. ಮಾಂಸಜನ್ಯ ಕೊಲೆಸ್ಟರಾಲ್ ಹಾಗೂ ಪರ್ಯಾಪ್ತ ಮೇದಸ್ಸು ಹೃದ್ರೋಗಕ್ಕೆ ಕಾರಣವೆಂದು 1955ರಿಂದ ಹೇಳತೊಡಗಿದ ಬಳಿಕ, ಅದರಲ್ಲೂ 1980ರಲ್ಲಿ ಅಮೆರಿಕದ ಸರಕಾರವು ಪ್ರಕಟಿಸಿದ ಆಹಾರಸೂಚಿಯಲ್ಲಿ ಇವನ್ನು ಮಿತಿಗೊಳಿಸಬೇಕೆಂದು ಹೇಳಿದ ಬಳಿಕ, ಮೊಟ್ಟೆ-ಮಾಂಸಗಳ ಸೇವನೆಯು ಅಲ್ಪಪ್ರಮಾಣಕ್ಕಿಳಿಯತೊಡಗಿತು, ಧಾನ್ಯಗಳು, ಹಣ್ಣುಗಳು, ಸಕ್ಕರೆ ಹಾಗೂ ಹಾಲಿನ ಉತ್ಪನ್ನಗಳೆಂಬ ಸಸ್ಯಾಹಾರದ ಪ್ರಮಾಣವು ಶೇ. 70-80ಕ್ಕೇರಿತು.[Am J Clin Nutr 2000;71(3):682] ಈಗೀಗ ಪೌಷ್ಠಿಕತೆಗಿಂತ ರುಚಿಯೇ ಪ್ರಧಾನವಾಗಿ, ಸಂಸ್ಕರಿತ ಸಸ್ಯಾಹಾರಗಳೇ ಹೊಟ್ಟೆ ತುಂಬತೊಡಗಿವೆ.

ಸಸ್ಯಾಹಾರವು ಮನೋದೈಹಿಕ ಆರೋಗ್ಯಕ್ಕೆ ಪೂರಕವೆಂದು ಹೇಳಲಾಗುತ್ತಿದ್ದರೂ, ವಾಸ್ತವವು ಬೇರೆಯೇ ಆಗಿದೆ. ಬ್ರೆಡ್ ಮುಂತಾದ ಧಾನ್ಯಾಹಾರದ ಸೇವನೆಯು ಹೆಚ್ಚಿದಂತೆ, ದಂತಕ್ಷಯ, ರಕ್ತನಾಳಗಳ ಕಾಯಿಲೆ ಮುಂತಾದ ರೋಗಗಳೂ ಕಾಣಿಸತೊಡಗಿದವು ಎನ್ನುವುದಕ್ಕೆ ಈಜಿಪ್ಟಿನ ಮಮ್ಮಿಗಳಲ್ಲೇ ಪುರಾವೆಗಳಿವೆ.[JAMA. 2009;302(19):2091] ಅಮೆರಿಕ ಸರಕಾರದ ಸಲಹೆಯಂತೆ ಮಾಂಸಾಹಾರವನ್ನು ಕಡಿತಗೊಳಿಸಿ, ಸಸ್ಯಾಹಾರವನ್ನು ಹೆಚ್ಚಿಸಿದ ಬಳಿಕ ಬೊಜ್ಜು, ಮಧುಮೇಹಗಳು ಮೂರು ಪಟ್ಟು ಹೆಚ್ಚಾಗಿವೆ, ಮಕ್ಕಳನ್ನೂ ಕಾಡತೊಡಗಿವೆ.

ಮಾಂಸ ಹಾಗೂ ಸೊಪ್ಪು-ತರಕಾರಿಗಳಿದ್ದ ಹಳೆ ಶಿಲಾಯುಗದ ಆಹಾರವು ಕರುಳಲ್ಲಿ ಮೆಲ್ಲಗೆ ಸಾಗಿ, ಅಲ್ಪಸ್ವಲ್ಪ ಜೀರ್ಣವಾಗಿ, ಶರ್ಕರಗಳನ್ನು ಅತಿ ನಿಧಾನವಾಗಿ ಬಿಡುಗಡೆಗೊಳಿಸುವಂತಿದ್ದರೆ, ಸಕ್ಕರೆ, ಹಣ್ಣಿನ ರಸ, ಸಂಸ್ಕರಿತ ಧಾನ್ಯಗಳೇ ತುಂಬಿರುವ ಆಧುನಿಕ ಆಹಾರವು ಕರುಳಲ್ಲಿ ಅತಿ ಬೇಗನೆ ಸಾಗಿ, ಅತಿ ಬೇಗನೆ ಜೀರ್ಣವಾಗಿ ರಕ್ತಕ್ಕೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಶರ್ಕರಾಂಶಗಳನ್ನು ಸೇರಿಸುತ್ತದೆ. ಹೀಗೆ ಸಸ್ಯಾಹಾರದಿಂದ ವಿಪರೀತ ಪ್ರಮಾಣದಲ್ಲಿ ರಕ್ತವನ್ನು ಸೇರುವ ಗ್ಲೂಕೋಸ್ ಹಾಗೂ ಫ್ರಕ್ಟೋಸ್ ಶರ್ಕರಾಂಶಗಳು ನಮ್ಮ ಉಪಾಪಚಯವನ್ನು ತೊಂದರೆಗೀಡು ಮಾಡಿ, ಆಧುನಿಕ ರೋಗಗಳಿಗೆ ಕಾರಣವಾಗುತ್ತವೆ ಎನ್ನುವುದೀಗ ದೃಢಗೊಳ್ಳುತ್ತಿದೆ.

ಮಾಂಸಾಹಾರದಲ್ಲಿರುವ ಮೇದಸ್ಸು ಹಾಗೂ ಪ್ರೊಟೀನುಗಳು ಘ್ರೆಲಿನ್ ಎಂಬ ಹಾರ್ಮೋನನ್ನು ತಗ್ಗಿಸಿ ಹಸಿವನ್ನು ಇಂಗಿಸುತ್ತವೆ, ಲೆಪ್ಟಿನ್ ಎಂಬ ಹಾರ್ಮೋನನ್ನು ಹೆಚ್ಚಿಸಿ ಸಂತೃಪ್ತಿಯನ್ನುಂಟು ಮಾಡುತ್ತವೆ. ಹಾಗೆಯೇ, ಪಚನಾಂಗದಿಂದ ಸ್ರವಿಸಲ್ಪಡುವ ಕೋಲೆಸಿಸ್ಟೋಕೈನಿನ್, ಜಿಎಲ್ ಪಿ – 1, ಪಿವೈವೈ ಗಳಂತಹ ಇನ್ನಿತರ ಸಂತೃಪ್ತಿಜನಕ ಹಾರ್ಮೋನುಗಳನ್ನೂ ಮಾಂಸಾಹಾರವೇ ಹೆಚ್ಚು ಪ್ರಚೋದಿಸುತ್ತದೆ. ಶರ್ಕರಗಳು ಇದಕ್ಕೆ ತದ್ವಿರುದ್ಧವಾಗಿ ವರ್ತಿಸುವುದರಿಂದ ಸಂತೃಪ್ತಿಯು ಕಡಿಮೆಯಾಗಿ, ಹಸಿವು ಹೆಚ್ಚಿ, ಪದೇ ಪದೇ ತಿನ್ನುವಂತಾಗುತ್ತದೆ.[J Clin Endo Metab 2004;89:2963, Br J Nutr 2015;113(4):574]

ಸಸ್ಯಾಹಾರವಾದ ಶರ್ಕರಗಳೇ ಶರಾಬಿನ ಮೂಲವಾಗಿದ್ದು, ಶರಾಬಿನಂತೆಯೇ ವರ್ತಿಸುತ್ತವೆ; ಅವು ಚಟವನ್ನುಂಟು ಮಾಡುವುದಷ್ಟೇ ಅಲ್ಲದೆ, ಯಕೃತ್ತಿಗೂ ಹಾನಿಯುಂಟು ಮಾಡುತ್ತವೆ.[Adv Nutr 2013;4:226] ಸಕ್ಕರೆ, ಹಣ್ಣಿನ ರಸ ಹಾಗೂ ಸಂಸ್ಕರಿತ ಧಾನ್ಯಗಳ ಅತಿ ಸೇವನೆಯಿಂದ ರಕ್ತದಲ್ಲಿ ಟ್ರೈಗ್ಲಿಸರೈಡ್, ಕೊಲೆಸ್ಟರಾಲ್ ಹಾಗೂ ಯೂರಿಕಾಮ್ಲಗಳು ಏರುತ್ತವೆ; ಬೊಜ್ಜು, ಮಧುಮೇಹ, ರಕ್ತದ ಏರೊತ್ತಡ, ಹೃದ್ರೋಗ, ಯಕೃತ್ತು, ಮಿದುಳು ಹಾಗೂ ಮೂತ್ರಪಿಂಡಗಳ ಕಾಯಿಲೆಗಳಿಗೂ, ಕ್ಯಾನ್ಸರ್ ಇತ್ಯಾದಿಗಳಿಗೂ ದಾರಿಯಾಗುತ್ತದೆ.[Am J Clin Nutr 2007;86:899, Physiol Rev 2010;90(1):23, Nature Rev Gastro Hepatol 2010;7:251, Nature 2012;482(7383):27, Am J Pub Health 2012;102(9):1630, Pediatric Obesity 2015;10.1111/ijpo.12048]

ಸಸ್ಯಾಹಾರವನ್ನು ಜೀರ್ಣಿಸಲು ಜೊಲ್ಲುರಸದಿಂದ ಹಿಡಿದು ದೊಡ್ಡ ಕರುಳೊಳಗಿನ ಶತಲಕ್ಷ ಕೋಟಿ ಸೂಕ್ಷ್ಮಾಣುಗಳು ಬೇಕಾಗುತ್ತವೆ. ಸಕ್ಕರೆಯ ಅತಿ ಸೇವನೆಯಿಂದ ಬಾಯಿ ಹಾಗೂ ಕರುಳೊಳಗಿನ ಸೂಕ್ಷ್ಮಾಣುಗಳಿಗೆ ತೊಂದರೆಯಾಗಿ ಹಲ್ಲು ಹಾಗೂ ಒಸಡಿನ ರೋಗಗಳಿಗೂ, ಹಲತರದ ಮನೋದೈಹಿಕ ಸಮಸ್ಯೆಗಳಿಗೂ ದಾರಿಯಾಗುತ್ತದೆ.[Diab Meta Syn Ob: Tar Ther. 2012;5:175, J Psych Res 2015;63:1]

ಶರ್ಕರಗಳು ಹಾಗೂ ಖಾದ್ಯತೈಲಗಳು ಆತಂಕ, ಖಿನ್ನತೆ, ಇಚ್ಛಿತ್ತ ವಿಕಲತೆ, ಗಮನ ಹೀನತೆ ಹಾಗೂ ಚಡಪಡಿಕೆ, ಕೋಪ ಹಾಗೂ ದಾಳಿಕೋರತನ ಮುಂತಾದ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗಬಹುದೆಂದೂ, ಇದಕ್ಕಿದಿರಾಗಿ, ಮೀನಿನಂತಹ ಮಾಂಸಾಹಾರವು ಇವನ್ನು ತಡೆಯಬಲ್ಲದೆಂದೂ ಹಲವು ಅಧ್ಯಯನಗಳು ತೋರಿಸಿವೆ.[Biol Psych 1984;19(3):385, Dep Anx 2002;16:118, Eur J Clin Nutr 2004;58(1):24, Brit J Psych 2009;195(4):366, Inj Prev 2012;18(4):259, Am J Clin Nutr 2015;ajcn103846, PLoS One 2015;10(3):e0120220, J Health Psychol 2015;20(6):785]

ಸಸ್ಯಾಹಾರದ ಶರ್ಕರಗಳ ಅತಿ ಸೇವನೆಯೇ ಮನೋದೈಹಿಕ ರೋಗಗಳಿಗೆ ಕಾರಣವಾಗುತ್ತಿದೆಯೆನ್ನುವುದು ದೃಢಗೊಳ್ಳುತ್ತಿರುವಲ್ಲಿ, ಹಳೆ ಶಿಲಾಯುಗದ ಆಹಾರಕ್ರಮವನ್ನು ಈಗಲೂ ಅನುಸರಿಸುತ್ತಿರುವ ಬುಡಕಟ್ಟುಗಳಲ್ಲಿ ಅಂತಹಾ ರೋಗಗಳಿಲ್ಲವೆನ್ನುವುದೂ ಸ್ಪಷ್ಟವಾಗುತ್ತಿದೆ.[Scand J Nutr 2005;49 (2):75] ಅಲ್ಲದೆ, ಆಹಾರದಲ್ಲಿ ಶರ್ಕರಗಳನ್ನು ಗಣನೀಯವಾಗಿ ಕಡಿತಗೊಳಿಸಿದರೆ ಅಂತಹಾ ರೋಗಗಳನ್ನು ನಿಯಂತ್ರಿಸಲು ಸಾಧ್ಯವೆನ್ನುವುದನ್ನೂ ಹಲವು ಅಧ್ಯಯನಗಳು ತೋರಿಸಿವೆ.[Nutrition 2015;31(1):1] ಹಾಗಿರುವಾಗ, ಮನುಷ್ಯರನ್ನು ಸಸ್ಯಾಹಾರಿಗಳಾಗುವಂತೆ ಪ್ರೇರೇಪಿಸುವುದರಿಂದ ಲಾಭಕ್ಕಿಂತ ಹೆಚ್ಚು ನಷ್ಟವೇ ಆಗಬಹುದು.

01_10_2015_006_031

ಆರೋಗ್ಯ ಪ್ರಭ 10: ನಮ್ಮನ್ನಾಳುತ್ತಿರುವ ಮದ್ದು, ಮದ್ದುಗುಂಡು [ಕನ್ನಡ ಪ್ರಭ, ಸೆಪ್ಟೆಂಬರ್ 17, 2015, ಗುರುವಾರ]

ಆಹಾರ, ಆರೋಗ್ಯ, ಇಂಧನ ಹಾಗೂ ರಕ್ಷಣೆ ಮನುಶಃಯ ವಿಕಾಸದ ಮೊದಲ ಹೆಜ್ಜೆಯಿಂದಲೂ ಮೂಲಭೂತ ಅಗತ್ಯಗಳಾಗಿ ಉಳಿದು ಬಂದಿವೆ. ಆದರೆ ಸಾಮಾಜಿಕ, ಆರ್ಥಿಕ ವ್ಯವಸ್ಥೆ ಬದಲಾದಂತೆ ಇವೆಲ್ಲವೂ ಖಾಸಗಿ ಉದ್ಯಮಗಳಾದವು. ಇಂದು ಈ ದೈತ್ಯ ಕಂಪೆನಿಗಳೇ ಜಗತ್ತನ್ನು ಆಳುತ್ತಿವೆ ಎಂಬುದು ವಾಸ್ತವ ಮತ್ತು ದುರಂತ.

ನಮ್ಮ ವಿಕಾಸದಾದಿಯಿಂದಲೂ ನಮ್ಮ ಮೂಲಭೂತ ಅಗತ್ಯಗಳಾಗಿರುವವು ಆಹಾರ, ಆರೋಗ್ಯ, ಇಂಧನ ಹಾಗೂ ರಕ್ಷಣೆ. ಇವು ಒಂದಕ್ಕೊಂದು ಪೂರಕವಾಗಿ, ಪರಸ್ಪರ ಬೆಸೆದುಕೊಂಡಿರುವಂಥವು. ಆಧುನಿಕ ಮಾನವನ ಜೀವನಕ್ರಮವು ಬದಲಾದಂತೆ ಈ ನಾಲ್ಕರ ಸ್ವರೂಪವೂ ಬದಲಾಗುತ್ತಲೇ ಸಾಗಿದೆ, ಪ್ರಕೃತಿದತ್ತವಾಗಿದ್ದವು ಈಗ ಖಾಸಗಿ ಉದ್ದಿಮೆಗಳಾಗಿವೆ.

ಆಫ್ರಿಕಾದ ಸೀಳು ಕಣಿವೆಗಳ ಜಲಚರಗಳನ್ನು ತಿಂದು ಎರಡು ಲಕ್ಷ ವರ್ಷಗಳ ಹಿಂದೆ ವಿಕಾಸಗೊಂಡ ಮಾನವರು, ಅಲೆಮಾರಿ ಬೇಟೆಗಾರರಾಗಿ ನಿಸರ್ಗದತ್ತ ಆಹಾರವನ್ನೇ ನೆಚ್ಚಿಕೊಂಡಿದ್ದರು. ನೆಲಕ್ಕೆ ಬಿದ್ದ ಧಾನ್ಯಗಳು ಹುದುಗೆದ್ದು ಸಾರಾಯಿಯಾಗುವುದನ್ನು ಕಂಡು 10-13 ಸಾವಿರ ವರ್ಷಗಳ ಹಿಂದೆ ಅದರಾಸೆಗೆ ಧಾನ್ಯಗಳನ್ನು ಬೆಳೆಯಲಾರಂಭಿಸಿದರು, ಎಂಟತ್ತು ಸಾವಿರ ವರ್ಷಗಳಿಂದ ಆ ಧಾನ್ಯಗಳನ್ನು ಆಹಾರವಾಗಿ ಪಳಗಿಸಿಕೊಂಡರು. ಆರೇಳು ಸಾವಿರ ವರ್ಷಗಳಿಂದ ಪಶು-ಪಕ್ಷಿಗಳನ್ನೂ ಆಹಾರಕ್ಕಾಗಿ ಪಳಗಿಸಲಾಯಿತು, ನಾಲ್ಕೈದು ಸಾವಿರ ವರ್ಷಗಳ ಹಿಂದೆ ಪಶು ಹಾಲಿನ ಬಳಕೆಯೂ ತೊಡಗಿತು. ಎರಡು-ಮೂರು ಸಾವಿರ ವರ್ಷಗಳ ಹಿಂದೆ ಕಬ್ಬು ಬೇಸಾಯ ತೊಡಗಿ ನಂತರ ಸಕ್ಕರೆಯೂ ಬಂತು. ಅಲೆದಾಡುವುದು ತಪ್ಪಿತು, ನಾವು ಬೆಳೆದದ್ದು, ನಮಗೆ ಇಷ್ಟವಾದದ್ದು ನಮ್ಮ ಆಹಾರವಾಯಿತು. ಧಾನ್ಯ ಹಾಗೂ ಹಾಲಿನ ಬಳಕೆ ಹೆಚ್ಚಿದಂತೆ ದಂತಕ್ಷಯ, ಬೊಜ್ಜು, ಮಧುಮೇಹ, ಹೃದ್ರೋಗ, ಮೂಳೆಸವೆತ ಮುಂತಾದವು ಮೂರ್ನಾಲ್ಕು ಸಾವಿರ ವರ್ಷಗಳ ಹಿಂದೆಯೇ ಆರಂಭಗೊಂಡವು.

ಕೃಷಿಯೂ, ಪಶು-ಪಕ್ಷಿ ಸಾಕಣೆಯೂ ತೊಡಗಿದಂದಿನಿಂದ ಕಾಡು ಕಡಿದು ನಾಡು ಕಟ್ಟುವುದಾಯಿತು. ಕಾಡಿನೊಳಗೆ, ಪ್ರಾಣಿ-ಪಕ್ಷಿಗಳೊಳಗೆ ಅವಿತಿದ್ದ ಸೂಕ್ಷ್ಮಾಣುಗಳು ಮನುಷ್ಯರನ್ನು ಹೊಕ್ಕು ಕಾಡತೊಡಗಿದವು. ಗದ್ದೆ, ಹಳ್ಳ-ಕೊಳ್ಳಗಳಲ್ಲಿದ್ದ ನೀರಲ್ಲಿ ಸೊಳ್ಳೆಗಳು ಬೆಳೆದು ಮಲೇರಿಯಾ, ಹಳದಿ ಜ್ವರ ಮುಂತಾದವು ಎಲ್ಲೆಂದರಲ್ಲಿ ಹರಡಿದವು. ಇಲಿ, ಬೆಕ್ಕು, ನಾಯಿ, ಹಂದಿ ಮುಂತಾದ ಪ್ರಾಣಿಗಳ ಮೂಲಕ ಪ್ಲೇಗ್, ಟೈಫಸ್, ರೇಬೀಸ್ ಮುಂತಾದ ಇನ್ನಷ್ಟು ರೋಗಗಳು ಹರಡಿದವು, ಇನ್ನಷ್ಟು ಜನರನ್ನು ಕೊಂದವು.

ಆದಿ ಮಾನವರು ಗುಹಾವಾಸಿಗಳಾಗಿದ್ದಾಗ ಪ್ರಕೃತಿವಿಕೋಪಗಳೂ, ಕಾಡುಪ್ರಾಣಿಗಳೂ ಅವರ ಶತ್ರುಗಳಾಗಿದ್ದವು. ನಾಗರಿಕತೆ ಬೆಳೆದಂತೆ ಆಸ್ತಿ-ರಾಜ್ಯ-ದೇಶಗಳ ಗಡಿಗಳು ಹುಟ್ಟಿಕೊಂಡವು, ಆ ವರೆಗೆ ಭೂಮಿಗೆ ಅಧೀನರಾಗಿದ್ದ ಮನುಷ್ಯರು ಅಲ್ಲಿಂದೀಚೆಗೆ ತಾವೇ ಭೂಮಿಯ ಒಡೆಯರೆಂಬಂತಾದರು. ಬೇಲಿ ಹಾಕಿಕೊಂಡಿದ್ದ ಆಸ್ತಿಗಳ ಜೊತೆಗೆ ಸಾಕಿದ್ದ ಪ್ರಾಣಿ-ಪಕ್ಷಿಗಳನ್ನೂ ರಕ್ಷಿಸಬೇಕಾಯಿತು. ಪ್ರಾಕೃತಿಕ ವೈರಿಗಳ ಜೊತೆಗೆ ಅನ್ಯ ಮನುಷ್ಯರೂ ಶತ್ರುಗಳಾಗಿ ಕಲ್ಲು, ಕತ್ತಿ, ಗುರಾಣಿ, ಗದೆಗಳನ್ನು ಎದುರಿಸಬೇಕಾಯಿತು. ಯುದ್ಧ ತಯಾರಿಯೂ ಒಂದು ಉದ್ಯಮವಾಯಿತು.

ಮೊದಲಲ್ಲಿ ಬಿಸಿಲು, ಬೆಂಕಿ, ಗಾಳಿ, ನೀರುಗಳೇ ಶಕ್ತಿಮೂಲಗಳಾಗಿದ್ದರೆ, ಮೂರ್ನಾಲ್ಕು ಸಾವಿರ ವರ್ಷಗಳ ಹಿಂದೆ ನೈಸರ್ಗಿಕ ತೈಲ ಹಾಗೂ ಡಾಂಬರಿನ ಬಳಕೆ ತೊಡಗಿ, ಯುದ್ಧಗಳಲ್ಲಿ ಬೆಂಕಿಯುಂಡೆಗಳು ಹುಟ್ಟಿಕೊಂಡವು. ಹದಿನೆಂಟನೇ ಶತಮಾನದ ಕೈಗಾರಿಕಾ ಕ್ರಾಂತಿಯೊಂದಿಗೆ ಕಲ್ಲಿದ್ದಲಿನ ಬಳಕೆ ಹೆಚ್ಚಿತು, 19 ನೇ ಶತಮಾನದಲ್ಲಿ ನೈಸರ್ಗಿಕ ತೈಲದ ಸಂಸ್ಕರಣೆಯಿಂದ ಹಲಬಗೆಯ ಸಂಯುಕ್ತಗಳು ಹೊರಬಂದವು. ವಿದ್ಯುತ್ ಶಕ್ತಿಯೂ ಬಂತು. ಉಗಿಬಂಡಿ, ಕಾರು, ವಿಮಾನಗಳು ಬಂದವು, ಯುದ್ಧಗಳಿಗೂ ಹೊರಟವು.

ಹಿಂದೆ ಸಸ್ಯಜನ್ಯ-ಪ್ರಾಣಿಜನ್ಯ ಪದಾರ್ಥಗಳನ್ನು ಬಳಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಕೈಗಾರಿಕಾ ಕ್ರಾಂತಿಯ ಬಳಿಕ ಇಂತಹ ಚಿಕಿತ್ಸೆಗಳ ರೂಪವೂ, ಒಡೆತನವೂ ಬದಲಾಗಿಬಿಟ್ಟವು. ವಿಲೋ ತೊಗಟೆಯಿಂದ ಹೊರತೆಗೆದ ಸಾಲಿಸಿಲಿಕ್ ಆಮ್ಲವು ಅತಿ ಪ್ರಬಲ ನೋವು ನಿವಾರಕವಾಯಿತು, ಸಿಂಕೋನಾ ತೊಗಟೆಯಿಂದ ಪಡೆದ ಕ್ವಿನಿನ್ ಹಾಗೂ ಚಿಂಗೌ ಹುಲ್ಲಿನಿಂದ ತೆಗೆದ ಆರ್ಟೆಮಿಸಿನಿನ್ ಗಳು ಮಲೇರಿಯಾ ಪೀಡಿತರಿಗೆ ಜೀವದಾಯಿಯಾದವು, ಗಂಟೆ ಹೂವಿನೊಳಗಿದ್ದ ಡಿಗಾಕ್ಸಿನ್ ಹೃದಯ ವೈಫಲ್ಯವುಳ್ಳವರಿಗೆ ವರದಾನವಾಯಿತು. ಆದರೆ ನಿಸರ್ಗದತ್ತ ಸಸ್ಯಗಳಿಂದ ಪ್ರತ್ಯೇಕಿಸಲ್ಪಟ್ಟ ಈ ಸಂಯುಕ್ತಗಳ ಮೇಲೆ ವಿಜ್ಞಾನಿಗಳೂ, ಖಾಸಗಿ ಕಂಪೆನಿಗಳೂ ಹಕ್ಕುಸ್ವಾಮ್ಯ ಸಾಧಿಸಿದ್ದರಿಂದ ಸರ್ವರಿಗೂ ಸೇರಿದ್ದ ಔಷಧಗಳು ಕಂಪೆನಿಗಳ ಸೊತ್ತಾದವು, ವೈದ್ಯರು ಈ ಕಂಪೆನಿಗಳಿಗೆ ಅಧೀನರಾದರು.

ಕೈಗಾರಿಕಾ ಕ್ರಾಂತಿಯ ತಂತ್ರಜ್ಞಾನದೊಂದಿಗೆ ತೈಲ ಸಂಯುಕ್ತಗಳಲ್ಲದೆ, ಇನ್ನೂ ಹಲವು ರಾಸಾಯನಿಕ ಸಂಯುಕ್ತಗಳ ತಯಾರಿಕೆಯೂ ತೊಡಗಿತು. ಇವುಗಳಲ್ಲಿ ಕೆಲವು ಸ್ಫೋಟಕಗಳಾಗಿ ಯುದ್ಧರಂಗಕ್ಕಿಳಿದವು, ಕೆಲವು ರಸಗೊಬ್ಬರಗಳಾಗಿಯೂ, ಕೀಟನಾಶಕಗಳಾಗಿಯೂ ಕೃಷಿಯಲ್ಲಿ ಬಳಕೆಗೆ ಬಂದವು, ಇನ್ನು ಕೆಲವು ಔಷಧಗಳಾಗಿ ಮನುಷ್ಯರಲ್ಲೂ, ಸಾಕುಪ್ರಾಣಿಗಳಲ್ಲೂ ಬಳಸಲ್ಪಟ್ಟವು. ಇವೆಲ್ಲವೂ ಖಾಸಗಿ ರಾಸಾಯನಿಕ ಕಂಪೆನಿಗಳ ಕೈಯೊಳಗಾಗಿ ಅವುಗಳ ಬಲವು ಬಹುಪಟ್ಟು ಹೆಚ್ಚಿತು. ಉದಾಹರಣೆಗೆ, ಸ್ಫೋಟಕವಾಗಿ 1847ರಲ್ಲಿ ಬಳಕೆಗೆ ಬಂದ ನೈಟ್ರೋಗ್ಲಿಸರಿನ್ 1878ರಲ್ಲಿ ಹೃದಯಾಘಾತಕ್ಕೆ ಚಿಕಿತ್ಸೆಯಾಯಿತು. ನೈಸರ್ಗಿಕ ತೈಲದ ಸಂಸ್ಕರಣೆಯಿಂದ ಪಡೆದ ಫಿನಾಲ್ ಅಥವಾ ಕಾರ್ಬಾಲಿಕ್ ಆಮ್ಲವು ಸಾಲಿಸಿಲಿಕ್ ಆಮ್ಲದ ಕೃತಕ ತಯಾರಿಗೆ ನೆರವಾಯಿತು, ಮದ್ದುಗುಂಡುಗಳಿಗೂ ಕಚ್ಛಾವಸ್ತುವಾಯಿತು. ನೋವುಂಟು ಮಾಡುವ ಮದ್ದುಗುಂಡಿಗೂ ಫಿನಾಲ್, ನೋವು ನಿವಾರಿಸುವ ಆಸ್ಪಿರಿನ್ ಗೂ ಅದೇ ಫಿನಾಲ್! ಮೊದಲ ಮಹಾಯುದ್ಧದ ವೇಳೆಗೆ ಶತ್ರು ರಾಷ್ಟ್ರಗಳಿಗೆ ಫಿನಾಲ್ ಸಿಗದಂತೆ ಮಾಡಲು ಹಲವು ಕುತಂತ್ರ, ಕಲಹಗಳಾದವು.

ಯುದ್ಧಗಳಿಂದ ಚಿಕಿತ್ಸೆಗಳು ಬೆಳೆದವು, ಚಿಕಿತ್ಸೆಗಳು ಯುದ್ಧಗಳಿಗೆ ನೆರವಾದವು. ಶಸ್ತ್ರಚಿಕಿತ್ಸೆಗಳೂ, ಮೂಳೆಮುರಿತಗಳ ಚಿಕಿತ್ಸಾಕ್ರಮಗಳೂ ಯುದ್ಧರಂಗದಲ್ಲೇ ಬೆಳೆದವು. ರಕ್ತ ಮರುಪೂರಣ, ನೋವು ನಿವಾರಕಗಳು, ಪ್ರತಿಜೈವಿಕಗಳು ಯುದ್ಧಕಾಲದಲ್ಲೇ ಅಭಿವೃದ್ಧಿಯಾದವು. ಯುದ್ಧಕಾಲದಲ್ಲಿ ಮಲೇರಿಯಾವು ಹಲವು ಸೈನಿಕರನ್ನು ಕೊಲ್ಲುತ್ತಿತ್ತು, ಮಲಗಿಸುತ್ತಿತ್ತು. ಸಿಂಕೋನಾದಿಂದ ಕ್ವಿನಿನ್ ದೊರೆತ ಬಳಿಕ ಯೂರೋಪಿನ ದೇಶಗಳು ಭೂಮಿಯ ಉದ್ದಗಲಕ್ಕೂ ದಂಡೆತ್ತಿ ಹೋಗಿ, ವಸಾಹತುಗಳನ್ನು ಕಬಳಿಸುವುದಕ್ಕೆ ಸಾಧ್ಯವಾಯಿತು. ಎರಡನೇ ಮಹಾಯುದ್ಧದ ವೇಳೆಗೆ ಜರ್ಮನಿ ಹಾಗೂ ಅಮೆರಿಕಗಳ ಪೈಪೋಟಿಯಲ್ಲಿ ಕ್ಲೋರೋಕ್ವಿನ್ ಬಂತು, ಎಪ್ಪತ್ತರ ದಶಕದಲ್ಲಿ ಚೀನಾವು ಚಿಂಗೌ ಹುಲ್ಲಿನಿಂದ ಆರ್ಟೆಮಿಸಿನಿನ್ ಅನ್ನು ತಯಾರಿಸಿ ವಿಯೆಟ್ನಾಂ ಸೇನೆಗೆ ನೆರವಾಯಿತು.

ತೈಲ ಹಾಗೂ ರಾಸಾಯನಿಕ, ಆಹಾರ, ಆರೋಗ್ಯ ಮತ್ತು ಯುದ್ಧಗಳಲ್ಲಿ ಪಾಲಿದ್ದ ಕಂಪೆನಿಗಳು ದೈತ್ಯಗಾತ್ರಕ್ಕೆ ಬೆಳೆದವು. ಮದ್ದನ್ನೂ, ಮದ್ದುಗುಂಡನ್ನೂ ಜೊತೆಜೊತೆಗೆ ಉತ್ಪಾದಿಸುತ್ತಿದ್ದ ಕಂಪೆನಿಗಳಂತೂ ಯುದ್ಧಗಳಿಂದ ಕೊಬ್ಬಿದವು, ಸರಕಾರಗಳನ್ನೇ ತಮ್ಮ ಅಡಿಯಾಳಾಗಿಸಿದವು. ಆಹಾರ ಹಾಗೂ ತೈಲ ನಿಕ್ಷೇಪಗಳಿಗಾಗಿ ದಾಳಿಗಳೂ, ಯುದ್ಧಗಳೂ ನಿತ್ಯಕ್ರಮವಾದವು, ಅಂತಹ ಅಸ್ಥಿರತೆಯಲ್ಲಿ ಆಹಾರ, ಔಷಧಗಳು, ಇಂಧನಗಳು ಇನ್ನಷ್ಟು ತುಟ್ಟಿಯಾದವು.

ಇಂತಹ ದೈತ್ಯ ಕಂಪೆನಿಗಳ ತಂತ್ರಗಳೇ ಎರಡನೇ ಮಹಾಯುದ್ಧಕ್ಕೆ ಹೇತುವಾದವು ಎನ್ನಲಾಗುತ್ತದೆ. ಮೊದಲ ಮಹಾಯುದ್ಧದ ಬಳಿಕ ಜರ್ಮನಿಯ ಅತಿ ದೊಡ್ಡ ತೈಲ, ರಾಸಾಯನಿಕ, ಬಣ್ಣ (ಡೈ), ಸ್ಫೋಟಕ, ಔಷಧ ಕಂಪೆನಿಗಳು 1926ರಲ್ಲಿ ಐಜಿ ಫಾಬೆನ್ – ಬಣ್ಣದ ಹಿತಾಸಕ್ತಿಗಳ ಒಕ್ಕೂಟ – ಎಂಬ ಹೆಸರಲ್ಲಿ ಒಂದಾದವು. ಜುಲೈ 1932ರ ಚುನಾವಣೆಗಳಲ್ಲಿ ಹಿಟ್ಲರನ ನಾಜಿ ಪಕ್ಷವು ಇಮ್ಮಡಿ ಮತಗಳನ್ನು ಗಳಿಸಿದೊಡನೆ ಐಜಿ ಫಾಬೆನ್ ಆ ಪಕ್ಷಕ್ಕೆ ನಾಲ್ಕು ಲಕ್ಷ ಮಾರ್ಕ್ ನಷ್ಟು ಬೃಹತ್ ದೇಣಿಗೆಯನ್ನು ಕೊಟ್ಟಿತು. ಮುಂದಿನ ವರ್ಷವೇ ಹಿಟ್ಲರ್ ಅಧಿಕಾರಕ್ಕೇರಿದಾಗ, ಐಜಿ ಫಾಬೆನ್ ನ ತೈಲ ಸಂಸ್ಕರಣಾ ಘಟಕವನ್ನು ವಿಸ್ತರಿಸುವುದಕ್ಕೆ ಅನುಮತಿ ದೊರೆಯಿತು, ಮಾತ್ರವಲ್ಲ, ಹತ್ತು ವರ್ಷಗಳ ಕಾಲ ಅದರ ಉತ್ಪನ್ನಗಳ ಖರೀದಿಗೆ ಸರಕಾರಿ ಖಾತರಿಯೂ ದೊರೆಯಿತು.

ಹಿಟ್ಲರನ ವಿಶೇಷ ಸುರಕ್ಷಣಾ ವಿಭಾಗವಾಗಿದ್ದ ಎಸ್ಸೆಸ್ ನಲ್ಲಿ ಐಜಿ ಫಾಬೆನ್ ಅಧಿಕಾರಿಗಳು ಸ್ಥಾನ ಪಡೆದು ತಮ್ಮ ಕಾರ್ಯಸೂಚಿಯನ್ನು ಮುಂದೊತ್ತಿದರು. ಮುಂದೆ 1938ರಲ್ಲಿ ಜರ್ಮನಿಯು ನೆರೆರಾಷ್ಟ್ರಗಳನ್ನು ಕಬಳಿಸತೊಡಗಿದಾಗ ಐಜಿ ಫಾಬೆನ್ ಅಲ್ಲೆಲ್ಲ ತನ್ನ ತೈಲ-ರಾಸಾಯನಿಕ ಘಟಕಗಳನ್ನು ಸ್ಥಾಪಿಸತೊಡಗಿತು. ಪೋಲಂಡಿನ ಆಶ್ವಿಟ್ಸ್ ನಲ್ಲಿ ಲಕ್ಷಗಟ್ಟಲೆ ಜನರನ್ನು ಕೂಡಿಹಾಕಿದ್ದ ಅತಿ ಭೀಕರ ಯೋಜನೆಯಲ್ಲೂ ಐಜಿ ಫಾಬೆನ್ ಭಾಗಿಯಾಗಿತ್ತು. ಅಲ್ಲಿದ್ದ ಬಂಧಿತರಲ್ಲಿ ಹಲವರು ಐಜಿ ಫಾಬೆನ್ ನ ಲಸಿಕೆಗಳು ಹಾಗೂ ಔಷಧಗಳ ಪರೀಕ್ಷೆಗಳಿಗೆ ಪ್ರಯೋಗಪಶುಗಳಾದರು, ಸಾವನ್ನಪ್ಪಿದರು. ಅಲ್ಲಿನ ಲಕ್ಷಗಟ್ಟಲೆ ಬಂಧಿತರನ್ನು ಸಾಮೂಹಿಕವಾಗಿ ಹತ್ಯೆಗೈಯುವುದಕ್ಕೂ ಐಜಿ ಫಾಬೆನ್ ಒದಗಿಸಿದ್ದ ವಿಷಾನಿಲವೇ ಬಳಕೆಯಾಯಿತು.

ಮಹಾಯುದ್ಧ ಮುಗಿದ ಬಳಿಕ, 1945-46ರಲ್ಲಿ, ನ್ಯೂರೆಂಬರ್ಗ್ ತನಿಖಾ ಮಂಡಳಿಯು ಐಜಿ ಫಾಬೆನ್ ಅನ್ನು ಮೂರು ಕಂಪೆನಿಗಳಾಗಿ ಒಡೆಯಿತು ಹಾಗೂ ಅದರ  24 ಅಧಿಕಾರಿಗಳನ್ನು ಸಮೂಹ ಹತ್ಯೆಯ ದೋಷಿಗಳೆಂದು ಘೋಷಿಸಿತು. ಆದರೆ 1951ರ ಹೊತ್ತಿಗೆ ಆ ಅಧಿಕಾರಿಗಳೆಲ್ಲರೂ ಬಿಡುಗಡೆಗೊಂಡರು, ಮಾತ್ರವಲ್ಲ, ಅವೇ ಕಂಪೆನಿಗಳ ಅತ್ಯುನ್ನತ ಹುದ್ದೆಗಳಿಗೇರಿದರು! ಇಂದು ಆ ಮೂರು ಕಂಪೆನಿಗಳೂ ಐಜಿ ಫಾಬೆನ್ ಗಿಂತ 20 ಪಟ್ಟು ದೊಡ್ಡದಾಗಿ ಬೆಳೆದಿವೆ, ವಿಶ್ವದ ಉದ್ದಗಲಕ್ಕೂ ಹರಡಿವೆ! ಯುದ್ಧದಲ್ಲಿ ಲಕ್ಷಗಟ್ಟಲೆ ಜನರು ಸತ್ತರು, ಸೋತ ಹಿಟ್ಲರ್ ಆತ್ಮಹತ್ಯೆ ಮಾಡಿಕೊಳ್ಳಬೇಕಾಯಿತು; ಆದರೆ ಯುದ್ಧವನ್ನು ಪ್ರೇರೇಪಿಸಿದ ಐಜಿ ಫಾಬೆನ್ ಘಟಕಗಳು ಮತ್ತೆ ಮೆರೆದವು. ವಿಯೆಟ್ನಾಂನಲ್ಲಿ ಕಾಡುಗಳನ್ನು ಬೆತ್ತಲಾಗಿಸಲು, ಜನರ ಚರ್ಮಗಳನ್ನು ಸುಲಿಯಲು ಅಮೆರಿಕದ ಸೇನೆಗೆ ನಪಾಮ್ ಹಾಗೂ ಏಜಂಟ್ ಆರೆಂಜ್ ಕಳೆನಾಶಕಗಳನ್ನು ಪೂರೈಸಿದ್ದ ಕಂಪೆನಿಗಳೂ ಮೆರೆಯುತ್ತಿವೆ.

ಆಹಾರ, ಇಂಧನ, ಆರೋಗ್ಯ ಹಾಗೂ ರಕ್ಷಣಾ ಕ್ಷೇತ್ರಗಳಲ್ಲಿರುವ ದೈತ್ಯ ಕಂಪೆನಿಗಳು ಇಂದು ಎಲ್ಲ ಚುನಾವಣೆಗಳಿಗೂ ಹಣ ಚೆಲ್ಲಿ, ಹೆಚ್ಚಿನ ಸರಕಾರಗಳನ್ನು ನಿಯಂತ್ರಿಸುತ್ತಿವೆ. ಯುದ್ಧಗಳು, ಸಾಮಾಜಿಕ ಅಸ್ಥಿರತೆಗಳು, ಕಾಯಿಲೆಗಳು ಈ ಕಂಪೆನಿಗಳಿಗೆ ಇನ್ನಷ್ಟು ಲಾಭವನ್ನು ತರುವುದರಿಂದ ಅವನ್ನು ತಡೆಯುವುದಕ್ಕೆ ಈ ಸರಕಾರಗಳು ಯತ್ನಿಸುವುದಾದರೂ ಹೇಗೆ?

17_09_2015_006_005

ಆರೋಗ್ಯ ಪ್ರಭ 9: ಕೆಡುತ್ತಲೇ ಇದೆ ಕಾರಾಗೃಹಗಳ ಆರೋಗ್ಯ [ಕನ್ನಡ ಪ್ರಭ, ಸೆಪ್ಟೆಂಬರ್ 3, 2015, ಗುರುವಾರ]

ಮಾನಸಿಕ ಸಮಸ್ಯೆಗಳುಳ್ಳವರು ಅಪರಾಧವೆಸಗುವುದು ಹೆಚ್ಚು, ಜೈಲುವಾಸಿಗಳಿಗೆ ಮಾನಸಿಕ ಸಮಸ್ಯೆಗಳಾಗುವುದೂ ಹೆಚ್ಚು. ಕೈದಿಗಳ ಮನಸ್ಥಿತಿಯನ್ನು ಸುಧಾರಿಸಿ ಸತ್ಪ್ರಜೆಗಳನ್ನಾಗಿಸುವುದಕ್ಕೆ ಈಗ ಎಲ್ಲೆಡೆ ಪ್ರಾಶಸ್ತ್ಯ. ಆದರೆ ನಮ್ಮ ಜೈಲುಗಳ ಪರಿಸ್ಥಿತಿಯು ಇದಕ್ಕೆ ವ್ಯತಿರಿಕ್ತವಾಗಿರುವುದು ವಿಪರ್ಯಾಸ.

ಕಳೆದ ಆಗಸ್ಟ್ 16ರಂದು ಬೆಂಗಳೂರಿನ ಪ್ರತಿಷ್ಠಿತ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಯಲ್ಲಿ ವಿಶ್ವನಾಥ ಎಂಬ 22ರ ಹರೆಯದ ಮಾನಸಿಕ ಸ್ತಿಮಿತವಿಲ್ಲದ ಕೈದಿಯನ್ನು ಗರುಡ ಪಡೆಯ ಜವಾನರು ಗುಂಡಿಕ್ಕಿ ಸಾಯಿಸಿದರು. ಕೈದಿಗಳಲ್ಲಿ ಮಾನಸಿಕ ಸಮಸ್ಯೆಗಳು ಅಪರೂಪವಲ್ಲ, ಮನೋರೋಗವುಳ್ಳವರು ವ್ಯಗ್ರರಾಗುವುದೂ ಹೊಸತಲ್ಲ, ವಿಶ್ವನು ನಿಮ್ಹಾನ್ಸ್ ಆಸ್ಪತ್ರೆಗೆ ಹೋಗಿದ್ದುದೂ ಅದೇ ಮೊದಲಲ್ಲ. ಹಾಗಿರುವಾಗ, ವಿಶ್ವನಂಥವರ ದುರ್ವರ್ತನೆಯನ್ನು ಮಣಿಸುವುದಕ್ಕೆ ನಿಮ್ಹಾನ್ಸ್ ಸನ್ನದ್ಧವಾಗಿರಲಿಲ್ಲವೇ ಎಂಬ ಸಂದೇಹವೇಳುತ್ತದೆ. ಹಾಗೆಯೇ, ಮನೋರೋಗಿಗಳತ್ತ ನಮ್ಮ ಸಂವೇದನೆಗಳ ಬಗ್ಗೆ, ಕೈದಿಗಳತ್ತ ನಮ್ಮ ನಡವಳಿಕೆಗಳ ಬಗ್ಗೆ ಹಲವು ಪ್ರಶ್ನೆಗಳು ಹುಟ್ಟುತ್ತವೆ.

ಒಂದು ಸಮಾಜವನ್ನು ಅಳೆಯಬೇಕಾದರೆ ಅಲ್ಲಿನ ಕಾರಾಗೃಹಗಳೊಳಕ್ಕೆ ಹೊಕ್ಕಬೇಕು ಎಂದು ಖ್ಯಾತ ರಷ್ಯನ್ ಲೇಖಕ ದಸ್ತಯಫ್ ಸ್ಕೀ ಹೇಳಿದ್ದು ಸತ್ಯವೇ. ಬಹು ಹಿಂದೆ ಅಪರಾಧಿಗಳನ್ನೂ, ಆಳುವವರ ವಿರೋಧಿಗಳನ್ನೂ ಎಲ್ಲರೆದುರು ಶಿಕ್ಷಿಸಲಾಗುತ್ತಿತ್ತು. ನಂತರ, 18ನೇ ಶತಮಾನದಿಂದೀಚೆಗೆ, ಶಿಕ್ಷೆಯನ್ನು ಗೌಪ್ಯವಾಗಿರಿಸುವ ಉದ್ದೇಶದಿಂದ ಕಾರಾಗೃಹಗಳನ್ನು ಕಟ್ಟಲಾಯಿತು. ಅದಕ್ಕೆ ತಕ್ಕ ಕಾನೂನುಗಳೂ, ನ್ಯಾಯಾಲಯಗಳೂ ಬಂದವು. ಇಂದು ಯಾವುದೇ ಸಿದ್ಧ ಅಪರಾಧಿಯು ನ್ಯಾಯಾಲಯದಿಂದ ದೊರೆತ ಶಿಕ್ಷೆಗಿಂತ ಹೆಚ್ಚಿನದನ್ನು ಅನುಭವಿಸುವಂತಿಲ್ಲ, ವಿಚಾರಣಾಧೀನ ಕೈದಿಯು ಬಂಧನಕ್ಕಿಂತ ದೊಡ್ಡ ಶಿಕ್ಷೆಯನ್ನು ಪಡೆಯುವಂತಿಲ್ಲ. ಬಂಧನಕ್ಕೊಳಗಾಗಿ, ವಿಧಿಸಲ್ಪಟ್ಟ ಶಿಕ್ಷೆಯನ್ನು ಅನುಭವಿಸುವುದನ್ನು ಬಿಟ್ಟರೆ ಕೈದಿಯ ಉಳಿದೆಲ್ಲ ಹಕ್ಕುಗಳೂ ಊರ್ಜಿತದಲಿರುತ್ತವೆ. ನಮ್ಮ ಸರ್ವೋಚ್ಛ ನ್ಯಾಯಲಯವು ಕೂಡ ಕೈದಿಗಳು ಮನುಷ್ಯರೆನ್ನುವುದನ್ನು ಮರೆತರೆ ದೇಶವೂ, ಸಂವಿಧಾನವೂ ಅಪರಾಧಿಗಳಾಗುತ್ತವೆ, ಅಂತರರಾಷ್ಟ್ರೀಯ ಸನದಿನ ಉಲ್ಲಂಘನೆಯಾಗುತ್ತದೆ ಎಂದು ಸ್ಪಷ್ಟವಾಗಿ ಹೇಳಿದೆ.

ಅಪರಾಧವು ಸಮಸ್ಯಾತ್ಮಕ ಮನಸ್ಸಿನ ಪರಿಣಾಮವಾಗಿದೆ, ಅದಕ್ಕೆ ಚಿಕಿತ್ಸೆ ನೀಡಿ ಸರಿಪಡಿಸುವ ವಾತಾವರಣವು ಜೈಲುಗಳಲ್ಲಿರಬೇಕು ಎನ್ನುವುದು ಬಾಪೂಜಿಯ ನಿಲುವಾಗಿತ್ತು. ಅಪರಾಧಿಗಳ ಮನಪರಿವರ್ತಿಸಿ, ವೃತ್ತಿಕೌಶಲ್ಯಗಳನ್ನೊದಗಿಸಿ ಸುಧಾರಿಸುವುದಕ್ಕೆ ಈಗ ಪ್ರಾಶಸ್ತ್ಯವನ್ನು ನೀಡಲಾಗುತ್ತಿದೆ. ಅಪರಾಧಿಗಳನ್ನು ಸತ್ಪ್ರಜೆಗಳನ್ನಾಗಿಸಿದರೆ ಅವರಿಗಷ್ಟೇ ಅಲ್ಲ, ಅವರ ಕುಟುಂಬದವರಿಗೂ, ಇಡೀ ಸಮಾಜಕ್ಕೂ ಒಳಿತಾಗುತ್ತದೆ. ಇದೇ ಉದ್ದೇಶದಿಂದ ಎಲ್ಲ ಕಾರಾಗೃಹಗಳಲ್ಲಿ ಮನಃಶಾಸ್ತ್ರಜ್ಞರನ್ನೂ, ಸುಧಾರಣಾ ತಜ್ಞರನ್ನೂ ನಿಯೋಜಿಸಬೇಕೆಂದು ವಿಶ್ವ ಸಂಸ್ಥೆಯು ಸೂಚಿಸಿದೆ. ಜೊತೆಗೆ, ನಿರ್ಮಲ ಪರಿಸರ, ಗಾಳಿ-ಬೆಳಕಿನ ವ್ಯವಸ್ಥೆ, ಒಳ್ಳೆಯ ಆಹಾರ, ಉಡುಪುಗಳು, ಶುದ್ಧ ನೀರು, ಶೌಚ ವ್ಯವಸ್ಥೆ ಮತ್ತು ಸಕಲ ವೈದ್ಯಕೀಯ ಸೌಲಭ್ಯಗಳು ಎಲ್ಲ ಕೈದಿಗಳಿಗೂ ದೊರೆಯಬೇಕೆನ್ನುವುದನ್ನು ಹೆಚ್ಚಿನ ದೇಶಗಳು ಒಪ್ಪಿವೆ. ಹಾಗೆಯೇ, ಮಹಿಳೆಯರು ಮತ್ತು ಮಕ್ಕಳನ್ನು, ಬಾಲಾಪರಾಧಿಗಳನ್ನು, ವಿಚಾರಣಾಧೀನ ಕೈದಿಗಳನ್ನು ಪ್ರತ್ಯೇಕವಾಗಿರಿಸಬೇಕೆನ್ನುವ ಸ್ಪಷ್ಟ ನಿಯಮಗಳೂ ಇವೆ.

ಇವು ನಮ್ಮ ದೇಶದ ಜೈಲು ಸಂಹಿತೆಗಳಲ್ಲೂ ಇವೆಯಾದರೂ ಕಾರ್ಯಗತವಾಗಿಲ್ಲ. ಅತಿ ನಾದುರಸ್ತಿಯಲ್ಲಿರುವ ಜೈಲು ಕಟ್ಟಡಗಳು, ತುಂಬಿ ತುಳುಕುತ್ತಿರುವ ಕೈದಿಗಳು, ಹೆಚ್ಚುತ್ತಿರುವ ವಿಚಾರಣಾಧೀನ ಕೈದಿಗಳು, ನೈರ್ಮಲ್ಯದ ಕೊರತೆ, ಜೈಲು ಸಿಬ್ಬಂದಿಯ ಕೊರತೆ, ಕೈದಿಗಳ ಆರೈಕೆ ಮತ್ತು ಚಿಕಿತ್ಸೆಯಲ್ಲಿ ಲೋಪಗಳು, ಜೈಲೊಳಗಿನ ಹಿಂಸಾಚಾರ ಮತ್ತು ಭ್ರಷ್ಟಾಚಾರ ಮುಂತಾದ ಹಲವು ಸಮಸ್ಯೆಗಳಿಂದಾಗಿ ನಮ್ಮಲ್ಲಿ ಜೈಲು ಸೇರಿದ ವ್ಯಕ್ತಿಯು ಸುಧಾರಿಸುವ ಬದಲು ಇನ್ನಷ್ಟು ಕೆಡುವ ಸಾಧ್ಯತೆಗಳೇ ಹೆಚ್ಚುತ್ತಿವೆ. ಸರ್ವೋಚ್ಛ ನ್ಯಾಯಾಲಯದ ಹಲವು ತೀರ್ಪುಗಳು ಹಾಗೂ ಹಲವು ಸಮಿತಿಗಳ ಹೊರತಾಗಿಯೂ ಈ ದುಸ್ಥಿತಿಯು ಬದಲಾಗಿಲ್ಲ.

ರಾಷ್ಟ್ರೀಯ ಅಪರಾಧ ದಾಖಲಾತಿ ಸಂಸ್ಥೆಯು 2013ರಲ್ಲಿ ಪ್ರಕಟಿಸಿರುವ ಕಾರಾಗೃಹಗಳ ಅಂಕಿ-ಅಂಶಗಳನುಸಾರ, ನಮ್ಮ ದೇಶದ 1391 ಕಾರಾಗೃಹಗಳಲ್ಲಿ 3,47,859 ಕೈದಿಗಳಿರಬೇಕಾದಲ್ಲಿ 4,11,992 ಕೈದಿಗಳು, ಅಂದರೆ ಶೇ. 118.4ರಷ್ಟು, ತುಂಬಿದ್ದಾರೆ. ಕರ್ನಾಟಕದಲ್ಲಿ 13100 ಕೈದಿಗಳಿರುವ ಜಾಗದಲ್ಲಿ 14118 ಕೈದಿಗಳಿದ್ದಾರೆ. ಈ ಜಂಗುಳಿಯಿಂದಾಗಿ ಕೋಣೆಯಲ್ಲಿ ಒಬ್ಬರಿಗಿಂತ ಹೆಚ್ಚು ಕೈದಿಗಳಿರುವುದು, ಶೌಚಾಲಯಗಳ ಕೊರತೆ (ಕೆಲವೆಡೆ 60-70 ಕೈದಿಗಳಿಗೆ ಒಂದು), ಸೋಂಕುಗಳ ಹರಡುವಿಕೆ, ವೈದ್ಯಕೀಯ ಸೌಲಭ್ಯಗಳು ದೊರೆಯದಿರುವುದು ಇವೇ ಮುಂತಾದ ಸಮಸ್ಯೆಗಳ ಜೊತೆಗೆ, ಕೈದಿಯ ಮಾನಸಿಕ ಸ್ಥಿತಿಯ ಮೇಲೂ ಪ್ರತಿಕೂಲ ಪರಿಣಾಮಗಳಾಗುತ್ತವೆ.

ನಮ್ಮಲ್ಲಿ ವಿಚಾರಣಾಧೀನ ಕೈದಿಗಳ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಮೇಲಿನ ವರದಿಯನುಸಾರ, ದೇಶದ ಒಟ್ಟು ಕೈದಿಗಳಲ್ಲಿ 129608 ಶಿಕ್ಷೆಗೊಳಗಾದವರು, 278503 (ಶೇ.67) ವಿಚಾರಣಾಧೀನರು; ಕರ್ನಾಟಕದಲ್ಲಿ 4418 ಶಿಕ್ಷೆಗೊಳಗಾದವರು, 9506 (ಶೇ. 67) ವಿಚಾರಣಾಧೀನರು. ಅವರಲ್ಲಿ ಶೇ.58ರಷ್ಟು ದಲಿತರು ಮತ್ತು ಅಲ್ಪಸಂಖ್ಯಾತರು, ಶೇ. 28ರಷ್ಟು ಅನಕ್ಷರಸ್ಥರು, ಶೇ. 42ರಷ್ಟು ಪ್ರೌಢ ಶಿಕ್ಷಣವನ್ನು ಮುಗಿಸದವರು. ಹೀಗೆ ಮೂವರಲ್ಲಿಬ್ಬರು ಕೈದಿಗಳು ಬಡತನ, ಅನಕ್ಷರತೆ, ಕಾನೂನು ತಜ್ಞರ ನೆರವು ದೊರೆಯದಿರುವುದು, ಆಡಳಿತದ ನಿರ್ಲಕ್ಷ್ಯ ಇತ್ಯಾದಿ ಕಾರಣಗಳಿಂದ ವಿಚಾರಣೆಯನ್ನೇ ಕಾಯುತ್ತಾ ಜೈಲಲ್ಲೇ ಉಳಿಯುತ್ತಿದ್ದಾರೆ.

ದೇಶದ ಜೈಲುಗಳಲ್ಲಿ ಸಿಬ್ಬಂದಿಯ ಕೊರತೆಯೂ ಗಂಭೀರವಾಗಿದೆ; ಮಂಜೂರಾದ ಒಟ್ಟು 76684 ಹುದ್ದೆಗಳಲ್ಲಿ 51818 ಮಂದಿಯಷ್ಟೇ ಕೆಲಸದಲ್ಲಿದ್ದಾರೆ. ನಮ್ಮ ರಾಜ್ಯದಲ್ಲೂ ಮಂಜೂರಾಗಿರುವ 2225 ಹುದ್ದೆಗಳಲ್ಲಿ 1718 (ಶೇ.77) ಮಾತ್ರವಿದ್ದಾರೆ. ದೇಶದಲ್ಲಿ ಒಟ್ಟು 1107 ಜೈಲು ವೈದ್ಯಾಧಿಕಾರಿಗಳ ಹುದ್ದೆಗಳಲ್ಲಿ ಕೇವಲ 593 ಮಾತ್ರ ಭರ್ತಿಯಾಗಿವೆ, 1652 ಅರೆವೈದ್ಯಕೀಯ ಹುದ್ದೆಗಳಲ್ಲಿ 1103 ಮಾತ್ರ ಭರ್ತಿಯಾಗಿವೆ. ನಮ್ಮ ರಾಜ್ಯದಲ್ಲಿ 18 ಜೈಲು ವೈದ್ಯಾಧಿಕಾರಿಗಳ ಹುದ್ದೆಗಳಲ್ಲಿ ಕೇವಲ ಐವರಷ್ಟೇ ಇದ್ದಾರೆ, 39 ಅರೆವೈದ್ಯಕೀಯ ಸಿಬ್ಬಂದಿಯಲ್ಲಿ 17 ಮಾತ್ರವಿದ್ದಾರೆ.

ಕೈದಿಗಳ ಸುಧಾರಣೆಗೆ ನೆರವಾಗುವ ಸುಧಾರಣಾ ಅಧಿಕಾರಿ, ಮನಃಶಾಸ್ತ್ರಜ್ಞರು, ಮನೋವೈದ್ಯರು ಹಾಗೂ ಸಾಮಾಜಿಕ ಕಾರ್ಯಕರ್ತರ ಒಟ್ಟು 951 ಹುದ್ದೆಗಳಲ್ಲಿ ಕೇವಲ 565 ಮಾತ್ರ ಭರ್ತಿಯಾಗಿವೆ. ಕೈದಿಗಳ ಸುಧಾರಣೆಗೆಂದು ನಮ್ಮ ಇಡೀ ರಾಜ್ಯಕ್ಕೆ ಕೇವಲ ಇಬ್ಬರು ಮನಃಶಾಸ್ತ್ರಜ್ಞರು/ಮನೋವೈದ್ಯರ ಹುದ್ದೆಗಳಿದ್ದು, ಅವುಗಳೂ ಖಾಲಿಯಿವೆ. ಜೈಲುವಾಸಿಗಳ ಮನೋದೈಹಿಕ ಸಮಸ್ಯೆಗಳನ್ನು ಗುರುತಿಸಿ, ಚಿಕಿತ್ಸೆಗೆ ನೆರವಾಗಬಲ್ಲವರೇ ಇಲ್ಲದಿರುವಾಗ, ಕೈದಿಗಳು ಸುಧಾರಣೆಯಾಗುವುದು ಹೇಗೆ ಸಾಧ್ಯ?

ದೇಶದ 4820 ಕೈದಿಗಳು (ಶೇ. 1.2) ಹಾಗೂ ನಮ್ಮ ರಾಜ್ಯದ 283 (ಶೇ.2) ಕೈದಿಗಳು ಮನೋರೋಗಗಳಿಂದ ಬಳಲುತ್ತಿದ್ದಾರೆಂದು ಅದೇ ವರದಿಯಲ್ಲಿ ಹೇಳಲಾಗಿದ್ದರೂ, ವಾಸ್ತವದಲ್ಲಿ ಇನ್ನೂ ಅಧಿಕವಿದೆ. ರಾಜ್ಯದಲ್ಲೂ, ಇತರೆಡೆಗಳಲ್ಲೂ ನಡೆಸಲಾಗಿರುವ ಸ್ವತಂತ್ರ ಅಧ್ಯಯನಗಳನುಸಾರ, ಹೊರಜಗತ್ತಿಗೆ ಹೋಲಿಸಿದರೆ ಜೈಲುವಾಸಿಗಳಲ್ಲಿ ಮಾನಸಿಕ ಸಮಸ್ಯೆಗಳು ಮೂರರಿಂದ ಐದು ಪಟ್ಟು ಹೆಚ್ಚಿರುತ್ತವೆ; ಶೇ. 4ರಷ್ಟು ಕೈದಿಗಳಲ್ಲಿ ಇಚ್ಛಿತ್ತ ವಿಕಲತೆಯಂತಹ ಗಂಭೀರ ಮನೋರೋಗಗಳು, ಶೇ. 10ರಲ್ಲಿ ತೀವ್ರ ಖಿನ್ನತೆ, ಶೇ. 65ರಲ್ಲಿ ಸಮಾಜಘಾತುಕತನದಂತಹ ವ್ಯಕ್ತಿತ್ವದ ವಿವಿಧ ಸಮಸ್ಯೆಗಳು ಇರುತ್ತವೆ, ತಂಬಾಕು, ಮದ್ಯ ಹಾಗೂ ಅಮಲು ಪದಾರ್ಥಗಳ ಚಟವೂ ಅವರಲ್ಲಿ ಹೆಚ್ಚು ಸಾಮಾನ್ಯವಾಗಿರುತ್ತದೆ. ಮಾನಸಿಕ ಸಮಸ್ಯೆಗಳುಳ್ಳವರು ಅನ್ಯರಿಗೆ ಹಾನಿ ಮಾಡುವುದಷ್ಟೇ ಅಲ್ಲದೆ, ತಮಗೂ ಹಾನಿ ಮಾಡಿಕೊಳ್ಳುವ, ಆತ್ಮಹತ್ಯೆಗೆಳಸುವ ಸಾಧ್ಯತೆಗಳು ಹೆಚ್ಚಿರುವುದರಿಂದ ಜೈಲುಗಳಲ್ಲಿ ಅಂತಹಾ ಅಪಾಯಗಳು ಇದ್ದೇ ಇರುತ್ತವೆ.

ಬೆಂಗಳೂರಿನ ಕೇಂದ್ರ ಕಾರಾಗೃಹದ 5024 ಕೈದಿಗಳಲ್ಲಿ ನಿಮ್ಹಾನ್ಸ್ ನ ಹಿರಿಯ ತಜ್ಞರ ನೇತೃತ್ವದಲ್ಲಿ 2008-9ರಲ್ಲಿ ನಡೆಸಲಾದ ಅಧ್ಯಯನದ ವರದಿಯೊಂದು 2011ರಲ್ಲಿ ಪ್ರಕಟವಾಗಿದೆ. ಅದರನುಸಾರ, 4002 (79.6%) ಕೈದಿಗಳು ವಿವಿಧ ಚಟಗಳನ್ನು ಹಾಗೂ ಮಾನಸಿಕ ಸಮಸ್ಯೆಗಳನ್ನು ಹೊಂದಿದ್ದರು; ಆ ಪೈಕಿ 1389 (27.6%) ಕೈದಿಗಳು ಮಾನಸಿಕ ಸಮಸ್ಯೆಯನ್ನಷ್ಟೇ ಹೊಂದಿದ್ದರು. ಗಾಂಜಾ, ಅಫೀಮು, ನಿದ್ರೆ ಗುಳಿಗೆಗಳ ಸೇವನೆಯು ಜೈಲು ಸೇರಿದ ಬಳಿಕ ಒಂದೂವರೆಯಿಂದ ಆರು ಪಟ್ಟು ಹೆಚ್ಚುತ್ತದೆ ಎಂಬ ಆತಂಕಕಾರಿ ವಿಷಯವನ್ನು ಈ ಅಧ್ಯಯನದಲ್ಲೇ ಗುರುತಿಸಲಾಗಿತ್ತು.

ಹೀಗೆ ನಮ್ಮ ಜೈಲುಗಳಲ್ಲಿ ಕೈದಿಗಳ ಮಾನಸಿಕ ಸಮಸ್ಯೆಗಳೂ, ಅಮಲಿನ ಚಟವೂ ಇನ್ನಷ್ಟು ಹೆಚ್ಚುತ್ತವೆ ಅಥವಾ ಹೊಸದಾಗಿ ಹುಟ್ಟಿಕೊಳ್ಳುತ್ತವೆ ಎಂದೂ, ಅದನ್ನು ತಡೆಯಬೇಕಾದರೆ ಎಲ್ಲಾ ಕೈದಿಗಳ ಮನಸ್ಥಿತಿಯನ್ನು ಸವಿವರವಾಗಿ ಪರೀಕ್ಷಿಸಿ ಸೂಕ್ತ ಚಿಕಿತ್ಸೆ ನೀಡುವ ವ್ಯವಸ್ಥೆಯಾಗಬೇಕು ಮತ್ತು ಮಾನಸಿಕ ಸಮಸ್ಯೆಯುಳ್ಳ ಕೈದಿಗಳನ್ನು ಸೂಕ್ಷ್ಮವಾಗಿ ನಿಭಾಯಿಸುವ ಬಗ್ಗೆ ಜೈಲಿನ ಸಿಬ್ಬಂದಿಗೆ ಸೂಕ್ತ ತರಬೇತಿಯನ್ನು ನೀಡಬೇಕು ಎಂದೂ ನಿಮ್ಹಾನ್ಸ್ ನ ಈ ವರದಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿತ್ತು. ಮಾನಸಿಕ ಸ್ತಿಮಿತವಿಲ್ಲದ ಕೈದಿಗಳು ಅಪಾಯಕಾರಿಯಾಗಿ ವರ್ತಿಸತೊಡಗಿದರೆ ಅಥವಾ ಆತ್ಮಹತ್ಯೆಗೈಯಲು ಯತ್ನಿಸಿದರೆ ಅವರನ್ನು ತಡೆಯುವುದಕ್ಕೆ ಜೈಲು ಸಿಬ್ಬಂದಿಯು ಸನ್ನದ್ಧವಾಗಿರಬೇಕೆಂದೂ ಅದರಲ್ಲಿ ಹೇಳಲಾಗಿತ್ತು.

ಜೈಲಲ್ಲಿರುವ ಎಲ್ಲ ಕೈದಿಗಳಿಗೆ ಅಲ್ಲಿನ ಒತ್ತಡವನ್ನು ನಿಭಾಯಿಸುವುದಕ್ಕೆ ನೆರವಾಗುವುದು, ಮಾದಕ ದ್ರವ್ಯಗಳ ಬಳಕೆಯನ್ನು ತಡೆಯುವುದು, ಇತರ ದೈಹಿಕ ರೋಗಗಳಿಗೂ ಚಿಕಿತ್ಸಾ ಸೌಲಭ್ಯಗಳನ್ನೊದಗಿಸುವುದು, ಅಗತ್ಯವುಳ್ಳ ಕಾನೂನಿನ ನೆರವನ್ನೊದಗಿಸುವುದು, ಜೈಲುಗಳಿಗೆ ಅಗತ್ಯವಿರುವ ಸಂಪನ್ಮೂಲಗಳನ್ನೂ, ಸಿಬ್ಬಂದಿಯನ್ನೂ ಒದಗಿಸುವುದು, ಕೈದಿಗಳ ಸಂದಣಿಯನ್ನು ನಿಯಂತ್ರಿಸುವುದು ಇತ್ಯಾದಿ ಕ್ರಮಗಳ ಬಗ್ಗೆಯೂ ಆ ವರದಿಯಲ್ಲಿ ವಿಷದವಾಗಿ ಹೇಳಲಾಗಿತ್ತು.

ಈ ಸ್ಥಳೀಯ ಪಾಠಗಳನ್ನು ರಾಷ್ಟ್ರ ಮಟ್ಟದಲ್ಲೂ ಕ್ರಿಯಾನ್ವಯಗೊಳಿಸಬೇಕೆಂದು ಆ ನಿಮ್ಹಾನ್ಸ್ ವರದಿಯ ಮುಖಪುಟದಲ್ಲೇ ಅಚ್ಚೊತ್ತಲಾಗಿತ್ತು. ಆದರೆ ಬೆಂಗಳೂರಿನ ಈ ಪಾಠಗಳು ವಿಶ್ವನ ಪ್ರಕರಣವನ್ನು ನಿಭಾಯಿಸುವಲ್ಲಿ ನಿಮ್ಹಾನ್ಸ್ ಗೇ ಅನ್ವಯಿಸಲಿಲ್ಲವೇಕೆ?

ಆರೋಗ್ಯ ಪ್ರಭ 8: ನಾವಿನ್ನು ಕೊಲೆಸ್ಟರಾಲನ್ನು ತಿನ್ನಬಹುದಂತೆ! [ಕನ್ನಡ ಪ್ರಭ, ಆಗಸ್ಟ್ 20, 2015, ಗುರುವಾರ]

ಕೊಬ್ಬಿನ ಅತಿಸೇವನೆಯಿಂದ ಕೊಲೆಸ್ಟರಾಲ್ ಹೆಚ್ಚಿ ಹೃದಯಾಘಾತಕ್ಕೆ ಕಾರಣವಾಗುತ್ತದೆ ಎಂದು ಕಳೆದ ಅರುವತ್ತು ವರ್ಷಗಳಿಂದ ಹೆದರಿಸಲಾಗುತ್ತಿತ್ತು. ಕೊಬ್ಬು ನಿಗ್ರಹವು ಲಕ್ಷಗಟ್ಟಲೆ ಕೋಟಿಯ ಉದ್ಯಮವಾಗಿ ಬೆಳೆದಿತ್ತು. ಈ ಕೊಬ್ಬಿನ ಭೂತದ ವಿಮೋಚನೆಗೆ ಕೊನೆಗೂ ಕಾಲ ಕೂಡಿಬಂದಿದೆ.

ಹೊಟ್ಟೆ ತುಂಬ ತಿನ್ನಬಲ್ಲ ಮನುಷ್ಯರ ಬಾಯಿಗೆ ಕಳೆದ ಅರುವತ್ತು ವರ್ಷಗಳಿಂದ ಅಡ್ಡಿಯಾಗುತ್ತಿರುವ ಪೆಡಂಭೂತ ಕೊಲೆಸ್ಟರಾಲ್. ‘ನೀವಿನ್ನು ಮಾಂಸ-ಮೊಟ್ಟೆ ತಿನ್ನಲೇಬಾರದು, ಬೆಣ್ಣೆ, ತೆಂಗಿನೆಣ್ಣೆ ಬಿಟ್ಟು ಬಿಡಿ’ ಎಂಬುದು ಎಲ್ಲ ಹೃದ್ರೋಗಿಗಳಿಗೆ ದೊರೆಯುವ ಕಟ್ಟಪ್ಪಣೆ. ಕೊಲೆಸ್ಟರಾಲ್ ಭಯದಿಂದ ಇವನ್ನೆಲ್ಲ ತಿನ್ನದವರಿಗೂ ಹೃದಯಾಘಾತವಾಗುತ್ತಿರುವುದೇಕೆ? ಚಿಕಿತ್ಸಾರ್ಥಿಗಳು ಇದನ್ನು ಕೇಳುವುದಿಲ್ಲ, ಕೇಳಿದರೂ ವೈದ್ಯರು ಹೇಳುವುದಿಲ್ಲ.

ವೈದ್ಯರಾದರೂ ಹೇಗೆ ಹೇಳಿಯಾರು? ಮಾಂಸ, ಮೊಟ್ಟೆ, ಎಣ್ಣೆ, ಬೆಣ್ಣೆಗಳಲ್ಲಿರುವ ಕೊಬ್ಬುಗಳೇ ಮನುಷ್ಯರ ಅತಿ ದೊಡ್ಡ ಶತ್ರುಗಳೆಂದು ಐವತ್ತರ ದಶಕದಿಂದಲೇ ಕೂಗಲಾಗುತ್ತಿದೆ. ಕೊಬ್ಬು ದೇಹದ ಕಣಕಣದಲ್ಲೂ, ಮಿದುಳಿನಲ್ಲೂ ತುಂಬಿಕೊಂಡಿದೆ, ದೇಹದ ಎಲ್ಲ ಪ್ರಕ್ರಿಯೆಗಳಿಗೂ ಅತ್ಯಗತ್ಯವಾಗಿದೆ, ಆದ್ದರಿಂದ ಅದು ಶತ್ರುವಾಗಲು ಸಾಧ್ಯವಿಲ್ಲ ಎಂದ ವೈದ್ಯವಿಜ್ಞಾನಿಗಳ ಪ್ರತಿರೋಧವನ್ನೆಲ್ಲ ಅತಿ ವ್ಯವಸ್ಥಿತವಾಗಿ ಮಟ್ಟ ಹಾಕಲಾಗಿದೆ. ಈ ಗದ್ದಲ-ಗೊಂದಲದಲ್ಲಿ ಹೃದ್ರೋಗಕ್ಕೆ ನಿಜವಾದ ಕಾರಣವೇನೆನ್ನುವುದು ಅಡಗಿ ಹೋಗಿದೆ.

ಕಳೆದ ಮೂವತ್ತು ವರ್ಷಗಳಲ್ಲಿ ಕೊಬ್ಬು ದೂಷಣೆಯು ಬೃಹತ್ ಉದ್ಯಮವಾಗಿ ಬೆಳೆದಿದೆ. ಸೊನ್ನೆ ಕೊಬ್ಬು, ಕಡಿಮೆ ಕೊಬ್ಬು, ಒಳ್ಳೆ ಕೊಬ್ಬು ಎಂಬ ಹೆಸರಲ್ಲಿ 15000ಕ್ಕೂ ಹೆಚ್ಚು ತಿನಿಸುಗಳು ವರ್ಷಕ್ಕೆ ಮೂರು ಲಕ್ಷ ಕೋಟಿ ಡಾಲರು (200 ಲಕ್ಷ ಕೋಟಿ ರೂ.) ಗಳಿಗೂ ಹೆಚ್ಚು ವಹಿವಾಟು ಮಾಡುತ್ತಿವೆ, ಇವುಗಳ ಪ್ರಚಾರಕ್ಕೆಂದೇ ಸಾವಿರಗಟ್ಟಲೆ ಕೋಟಿ ಖರ್ಚಾಗುತ್ತಿದೆ. ಕೊಬ್ಬಿಳಿಸುವ ಶಸ್ತ್ರಚಿಕಿತ್ಸೆಗಳು, ವ್ಯಾಯಾಮ ಶಾಲೆಗಳು, ಯೋಗ ಶಾಲೆಗಳು ಇನ್ನೊಂದಷ್ಟು ಸಾವಿರ ಕೋಟಿ ಸೆಳೆಯುತ್ತಿವೆ. ಕೊಲೆಸ್ಟರಾಲ್ ಇಳಿಸುವ ಸ್ಟಾಟಿನ್ ಗಳಿಂದ ವರ್ಷಕ್ಕೆ ಒಂದೂವರೆ ಲಕ್ಷ ಕೋಟಿ ರೂಪಾಯಿಗೂ ಮಿಕ್ಕಿದ ಆದಾಯವಿದೆ. ಕೊಬ್ಬಿನ ಭೂತಕ್ಕೆ ಕಾಣಿಕೆಯೆಷ್ಟು!

ಆದರೆ ಕೊಬ್ಬಿನ ಭೂತದ ಅಂತ್ಯಕಾಲ ಸನ್ನಿಹಿತವಾದಂತಿದೆ, ಲಕ್ಷಗಟ್ಟಲೆ ಕೋಟಿಯ ಕೊಬ್ಬು ನಿಗ್ರಹ ವಹಿವಾಟಿನ ಅಡಿಪಾಯವೇ ಅಲುಗಾಡತೊಡಗಿದೆ.

ಅಮೆರಿಕದ ಹೃದ್ರೋಗ ತಜ್ಞರು ನವಂಬರ್ 2013ರಲ್ಲಿ ಪ್ರಕಟಿಸಿದ ಹೊಸ ವರದಿಯಲ್ಲಿ, ರಕ್ತದ ಕೊಲೆಸ್ಟರಾಲ್ ಪ್ರಮಾಣವನ್ನಿಳಿಸಲು ಔಷಧಗಳನ್ನು ಸೇವಿಸುವ ಅಗತ್ಯವಿಲ್ಲವೆಂದೂ, ಹಾಗೆ ಇಳಿಸುವುದರಿಂದ ಹೃದಯಾಘಾತವೂ ಸೇರಿದಂತೆ ರಕ್ತನಾಳಗಳ ಕಾಯಿಲೆಯನ್ನು ತಡೆಯಬಹುದೆನ್ನುವುದಕ್ಕೆ ಸಾಕಷ್ಟು ಆಧಾರಗಳಿಲ್ಲವೆಂದೂ ಸ್ಪಷ್ಟವಾಗಿ ಹೇಳಲಾಗಿದೆ. ಕೊಲೆಸ್ಟರಾಲ್ ಗುಮ್ಮನನ್ನು ತೋರಿದ್ದವರೇ ಅದಕ್ಕಿನ್ನು ಮದ್ದಿನ ಅಗತ್ಯವಿಲ್ಲ ಎಂದಿದ್ದಾರೆ.

ಮತ್ತೀಗ ಫೆಬ್ರವರಿಯಲ್ಲಿ ಅಮೆರಿಕದ ಸರಕಾರವು ಪ್ರತೀ ಐದು ವರ್ಷಗಳಿಗೊಮ್ಮೆ ಪ್ರಕಟಿಸುವ ಆಹಾರ ಮಾರ್ಗದರ್ಶಿಯ ಕರಡು ಹೊರಬಿದ್ದಿದೆ; ಸೇವಿಸುವ ಆಹಾರದಲ್ಲಿ ಕೊಲೆಸ್ಟರಾಲ್ ಪ್ರಮಾಣವು ದಿನಕ್ಕೆ 300ಮಿಗ್ರಾಂ ಮೀರಬಾರದೆಂದು ಈ ಹಿಂದೆ ನೀಡಲಾಗಿದ್ದ ಸಲಹೆಯನ್ನು ಕೈಬಿಡಲಾಗುತ್ತಿದೆಯೆಂದೂ, ಆಹಾರದ ಕೊಲೆಸ್ಟರಾಲ್ ಪ್ರಮಾಣಕ್ಕೂ, ರಕ್ತದ ಕೊಲೆಸ್ಟರಾಲ್ ಪ್ರಮಾಣಕ್ಕೂ ಸಂಬಂಧಗಳಿಲ್ಲವೆನ್ನುವುದು ಸ್ಪಷ್ಟವಾಗಿದೆಯೆಂದೂ, ಕೊಲೆಸ್ಟರಾಲ್ ಅತಿ ಸೇವನೆಯ ಬಗ್ಗೆ ಕಾಳಜಿಯ ಅಗತ್ಯವಿಲ್ಲವೆಂದೂ ಈ ಕರಡಿನಲ್ಲಿ ಹೇಳಲಾಗಿದೆ. ನಲುವತ್ತು ವರ್ಷಗಳಿಂದ ಕೊಲೆಸ್ಟರಾಲ್ ಭೂತವನ್ನು ಕುಣಿಸುತ್ತಿದ್ದ ಅಮೆರಿಕದ ಸರಕಾರವೇ ಈಗ ಭೂತ ವಿಮೋಚನೆಗೆ ಮುಂದಾಗಿದೆ.

ಈ ಹಿಂಪಡೆತಕ್ಕೆ ಕಾರಣಗಳೇನೆನ್ನುವುದೂ ಆ ಕರಡಿನಲ್ಲಿದೆ. ಅಮೆರಿಕದಲ್ಲಿ ಹನ್ನೆರಡು ಕೋಟಿ ಜನರು, ಜನಸಂಖ್ಯೆಯ ಅರ್ಧದಷ್ಟು, ರಕ್ತದೊತ್ತಡ, ಮಧುಮೇಹ, ಹೃದ್ರೋಗ, ಕ್ಯಾನ್ಸರ್ ಮುಂತಾದ ಆಧುನಿಕ ರೋಗಗಳಿಂದ ನರಳುತ್ತಿದ್ದಾರೆ; ಮೂವರಲ್ಲಿ ಇಬ್ಬರಿಗಿಂತಲೂ ಹೆಚ್ಚು ವಯಸ್ಕರು, ಹಾಗೂ ಮೂವರಲ್ಲಿ ಒಬ್ಬರಿಗಿಂತಲೂ ಹೆಚ್ಚು ಮಕ್ಕಳು ಮತ್ತು ಯುವಜನರು ಅತಿ ತೂಕ ಯಾ ಬೊಜ್ಜು ಪೀಡಿತರಾಗಿದ್ದಾರೆ. ಆಹಾರಕ್ಕೆ ಸಂಬಂಧಿಸಿದ ಈ ಸಮಸ್ಯೆಗಳನ್ನು ತಡೆಯುವುದಕ್ಕೆ ದೃಢವಾದ, ನೂತನವಾದ ಕಾರ್ಯಯೋಜನೆಯನ್ನು ಧೈರ್ಯದಿಂದ ಕೈಗೊಳ್ಳಬೇಕಾಗಿದೆ ಎಂದು ಕರಡಿನಲ್ಲಿ ಹೇಳಲಾಗಿದೆ. ಅಮೆರಿಕದ ಸರಕಾರಕ್ಕೆ ತನ್ನ ಹಳೆಯ ಸುಳ್ಳನ್ನು ತಿದ್ದುವುದಕ್ಕೆ ಹೊಸ ಧೈರ್ಯ ಬೇಕಾಗಿದೆ!

ಕೊಬ್ಬು ಮನುಷ್ಯನ ಮೊದಲ ವೈರಿ ಎಂಬ ವಾದವು ಹುಟ್ಟಿದ್ದು 1950ರ ಮೊದಲಲ್ಲಿ. ಅಮೆರಿಕದ ಮಿನೆಸೋಟ ವಿಶ್ವವಿದ್ಯಾಲಯದಲ್ಲಿ ಶರೀರ ವಿಜ್ಞಾನಿಯಾಗಿದ್ದ ಆನ್ಸೆಲ್ ಕೀಸ್ ಅವರನ್ನು ಈ ಸಿದ್ಧಾಂತದ ಜನಕನೆಂದು ಪರಿಗಣಿಸಲಾಗುತ್ತದೆ. ಎರಡನೇ ಮಹಾಯುದ್ಧದ ನಂತರದಲ್ಲಿ ಅಮೆರಿಕದ ಶ್ರೀಮಂತರಲ್ಲಿ ಹೃದಯಾಘಾತವು ಹೆಚ್ಚುತ್ತಿದ್ದರೆ, ಯುದ್ಧದಿಂದ ಕಂಗೆಟ್ಟಿದ್ದ ಯೂರೋಪಿನಲ್ಲಿ ಅದು ಕಡಿಮೆಯಾಗುತ್ತಿದ್ದುದನ್ನು ಕೀಸ್ ಗಮನಿಸಿದ್ದರು. ಅಮೆರಿಕದ ಶ್ರೀಮಂತರು ಬಹಳಷ್ಟು ಕೊಬ್ಬಿನಂಶವಿರುವ ಆಹಾರವನ್ನು ಸೇವಿಸುತ್ತಿರುವುದರಿಂದ, ಅದೇ ಕೊಬ್ಬು ಕೊಲೆಸ್ಟರಾಲನ್ನು ಹೆಚ್ಚಿಸಿ, ಅದುವೇ ರಕ್ತನಾಳಗಳೊಳಕ್ಕೆ ಸೇರಿ ಉಬ್ಬುಗಳನ್ನುಂಟು ಮಾಡಿ ಹೃದಯಾಘಾತವನ್ನುಂಟು ಮಾಡುತ್ತದೆ ಎನ್ನುವ ತರ್ಕವನ್ನು ಕೀಸ್ ಮುಂದಿಟ್ಟರು. ಶ್ರೀಮಂತರು ತಿನ್ನುವುದೂ ಹೆಚ್ಚು, ಅವರಲ್ಲಿ ಹೃದಯಾಘಾತವೂ ಹೆಚ್ಚು ಎನ್ನುವುದು ನಿಜವಿದ್ದರೂ, ಕೊಬ್ಬು ತಿಂದು ರಕ್ತನಾಳ ಕೆಡುತ್ತದೆ ಎನ್ನುವುದಕ್ಕೆ ಯಾವ ಆಧಾರವೂ ಇರಲಿಲ್ಲ. ಹಾಗಿದ್ದರೂ ಕೀಸ್ ಸಿದ್ಧಾಂತವನ್ನು ಹಲವರು ಅಪ್ಪಿಕೊಂಡರು.

ಅಮೆರಿಕದ ಹೃದ್ರೋಗ ಸಂಘವು ಕೀಸ್ ಅವರ ವಾದವನ್ನು ಹಾಗೆಯೇ ಒಪ್ಪಿಕೊಂಡಿತು; ಬೆಣ್ಣೆ, ಮೊಟ್ಟೆ, ಪಶು ಮಾಂಸಗಳ ಸೇವನೆಯು ಹೃದಯದ ರಕ್ತನಾಳಗಳ ಕಾಯಿಲೆಗೆ ಕಾರಣವಾಗುತ್ತದೆಂದು 1956ರಲ್ಲಿ ಘೋಷಿಸಿಯೇ ಬಿಟ್ಟಿತು. ಅದೇ ಸಂಘವು 1961ರಲ್ಲಿ ಇನ್ನೊಂದು ವರದಿಯನ್ನು ಹೊರಡಿಸಿ, ಮೊಟ್ಟೆ, ಇಡೀ ಹಾಲು, ಕೆನೆ, ಗಿಣ್ಣು, ಬೆಣ್ಣೆ, ತೆಂಗಿನೆಣ್ಣೆ, ಮಾಂಸಗಳು ಪರ್ಯಾಪ್ತ ಮೇದಸ್ಸನ್ನು ಹೊಂದಿರುವುದರಿಂದ ಕೊಲೆಸ್ಟರಾಲ್ ಹೆಚ್ಚಳಕ್ಕೆ ಕಾರಣವಾಗಬಲ್ಲವೆಂದೂ, ಜೋಳದ ಎಣ್ಣೆ, ಹತ್ತಿ ಎಣ್ಣೆ, ಸೋಯಾ ಎಣ್ಣೆಗಳು ಅದನ್ನು ಇಳಿಸಬಲ್ಲವೆಂದೂ ಹೇಳಿತು.

ಅಲ್ಲಿಗೆ ಕೊಬ್ಬಿನ ಭೂತ ದೊಡ್ಡದಾಗಿ ಎದ್ದು ನಿಂತಿತು; ಶತಶತಮಾನಗಳಿಂದ ಬಳಸಲಾಗುತ್ತಿದ್ದ ತೆಂಗಿನೆಣ್ಣೆ, ಮಾಂಸ, ಮೊಟ್ಟೆ ಇತ್ಯಾದಿಗಳು ಶತ್ರುಗಳಾಗಿ, ಆಗಿನ್ನೂ ಹೊಸದಾಗಿದ್ದ ಸಂಸ್ಕರಿತ ಖಾದ್ಯತೈಲಗಳು, ಕೆನೆ ತೆಗೆದ ಹಾಲು ಮಿತ್ರರಾದವು, ಬೃಹತ್ ಉದ್ಯಮಗಳಾದವು. ಇವಕ್ಕೆಲ್ಲ ಆಧಾರಗಳೇನೆಂದು ಹೆಚ್ಚಿನವರು ಕೇಳಲಿಲ್ಲ, ಕೇಳಿದವರನ್ನು ಯಾರೂ ಗಮನಿಸಲಿಲ್ಲ. ಸಂಪೂರ್ಣವಾಗಿ ಮಾಂಸಾಹಾರವನ್ನೇ ನೆಚ್ಚಿಕೊಂಡ ಕೆನ್ಯಾದ ಮಸಾಯಿ ಬುಡಕಟ್ಟಿನವರಲ್ಲಿ ಹೃದ್ರೋಗವೆಂಬುದೇ ಇಲ್ಲವೆಂದು ಪ್ರತಿಷ್ಠಿತ ವಾಂಡರ್ ಬಿಲ್ ವಿಶ್ವವಿದ್ಯಾಲಯದ ಜಾರ್ಜ್ ಮಾನ್ ಆಗಲೇ ಶ್ರುತ ಪಡಿಸಿದರಾದರೂ ಯಾರಿಗೂ ಅದು ಬೇಡವಾಯಿತು. ಸಕ್ಕರೆಯ ಸೇವನೆಯೇ ಆಧುನಿಕ ರೋಗಗಳಿಗೆ ಕಾರಣವೆಂದು ಅದಕ್ಕೂ ಮೊದಲು ಹಲವರು ಹೇಳಿದ್ದುದು ಮೂಲೆ ಸೇರಿತು.

ಹೆಚ್ಚಿನ ಆಧಾರಗಳಿಲ್ಲದೆಯೂ ಕೊಬ್ಬು ವಿರೋಧಿ ಸಿದ್ಧಾಂತವು ಹೀಗೆ ಬೆಳೆಯುತ್ತಲೇ ಹೋಯಿತು; 1977ರಲ್ಲಿ ಕೆಲ ವಿಜ್ಞಾನಿಗಳು ಮತ್ತು ರಾಜಕಾರಣಿಗಳ ಒತ್ತಾಸೆಯಿಂದ ಅಮೆರಿಕಾದ ಸರಕಾರವು ಆಹಾರ ಮಾರ್ಗದರ್ಶಿಯನ್ನು ಪ್ರಕಟಿಸಿ, ಕೊಬ್ಬಿನ ಬಳಕೆಗೆ ಗಟ್ಟಿಯಾದ ಕಡಿವಾಣ ಹಾಕಿತು, 1983ರಲ್ಲಿ ಬ್ರಿಟಿಷ್ ಸರಕಾರವೂ ಅದನ್ನು ಹಿಂಬಾಲಿಸಿತು. ವಿಜ್ಞಾನಿ ಡೇವಿಡ್ ಕ್ರಿಚೆವ್ ಸ್ಕಿ ಹೇಳಿದಂತೆ,  ಅಮೆರಿಕನರಿಗೆ ದೇವರು ಮತ್ತು ಕಮ್ಯೂನಿಸ್ಟರಿಗಿಂತ ಕೊಬ್ಬಿನ ಭಯವೇ ಹೆಚ್ಚಾಯಿತು!

ಹೀಗೆ ಕೊಬ್ಬಿನ ಸೇವನೆಯನ್ನು ಕಡಿತಗೊಳಿಸಿದ ಬಳಿಕ ಆಧುನಿಕ ರೋಗಗಳು ಕಡಿಮೆಯಾದವೇ? ಇಲ್ಲ, ಹೆಚ್ಚಾದವು! ಕೊಬ್ಬನ್ನು ಬಿಟ್ಟು ಸಕ್ಕರೆ-ಸಂಸ್ಕರಿತ ತಿನಿಸುಗಳ ಸೇವನೆ ಹೆಚ್ಚಿದಂತೆ ಬೊಜ್ಜು ಹೆಚ್ಚುತ್ತಲೇ ಹೋಯಿತು, ಹೃದ್ರೋಗ, ಮಧುಮೇಹಗಳೂ ಹೆಚ್ಚಿದವು, ಕಿರಿಯರನ್ನೂ ಕಾಡತೊಡಗಿದವು. ಹಾಗಿದ್ದರೂ ಕೊಬ್ಬೇ ಪರಮ ವೈರಿಯೆಂದು ಸಾಧಿಸಲು 1988ರಲ್ಲಿ ಅಮೆರಿಕದ ಸರಕಾರವು ಸಮಿತಿಯೊಂದನ್ನು ರಚಿಸಿತು; ಹತ್ತು ವರ್ಷ ಹುಡುಕಿದರೂ ಕೊಬ್ಬನ್ನು ಹಳಿಯುವುದಕ್ಕೆ ಆಧಾರಗಳು ದೊರೆಯದೆ ಸಮಿತಿಯು ಸುಮ್ಮನಾಗಬೇಕಾಯಿತು. ಈ ಸಮಿತಿಯ ಕೆಲ ಸದಸ್ಯರ ಹೇಳಿಕೆಗಳನ್ನಾಧರಿಸಿ ಅಮೆರಿಕದ ಹಿರಿಯ ಪತ್ರಕರ್ತ ಗಾರಿ ಟಾಬ್ಸ್ ಪ್ರತಿಷ್ಠಿತ ಸಯನ್ಸ್ ಪತ್ರಿಕೆಯಲ್ಲಿ ‘ಆಹಾರದಲ್ಲಿ ಕೊಬ್ಬಿನಂಶದ ಹಸಿ ವಿಜ್ಞಾನ’ ಎಂಬ ಲೇಖನವನ್ನೇ ಬರೆದರು.(ಸಯನ್ಸ್, 2001;292:2536-45)

ಪರ್ಯಾಪ್ತ ಕೊಬ್ಬು ಅಥವಾ ಕೊಲೆಸ್ಟರಾಲ್ ಭರಿತ ಆಹಾರದ ಸೇವನೆಯಿಂದ ಆಧುನಿಕ ರೋಗಗಳು ಹೆಚ್ಚುವುದಿಲ್ಲ, ಬದಲಿಗೆ ಸಕ್ಕರೆಭರಿತವಾದ ಆಹಾರದಿಂದ ಹೆಚ್ಚುತ್ತವೆ ಎನ್ನುವುದಕ್ಕೆ ಗಟ್ಟಿಯಾದ ಆಧಾರಗಳು ಈಗ ಲಭ್ಯವಿವೆ. ಹಾವರ್ಡ್ ವಿದ್ಯಾಲಯವು ಮೂರು ಲಕ್ಷ ಅಮೆರಿಕನರಲ್ಲಿ ನಡೆಸಿದ ಅಧ್ಯಯನಗಳು, ನಾರ್ವೇ ವಿಶ್ವವಿದ್ಯಾಲಯದಲ್ಲಿ 52000 ವಯಸ್ಕರಲ್ಲಿ ನಡೆಸಲಾದ ಅಧ್ಯಯನ, ಆರು ಲಕ್ಷಕ್ಕೂ ಹೆಚ್ಚು ಜನರನ್ನೊಳಗೊಂಡಿದ್ದ 76 ಅಧ್ಯಯನಗಳ ಮಹಾವಿಮರ್ಶೆ, ಮೂರೂವರೆ ಲಕ್ಷ ಜನರನ್ನು 5-23 ವರ್ಷಗಳ ಕಾಲ ಗಮನಿಸಿದ್ದ 21 ಅಧ್ಯಯನಗಳ ಇನ್ನೊಂದು ವಿಮರ್ಶೆ ಕೆಲವು ಉದಾಹರಣೆಗಳಷ್ಟೇ.

ಇದೇ ಕಾರಣಕ್ಕೆ ಅಮೆರಿಕದ ಸರಕಾರವು ಕೊಬ್ಬಿನ ಮೇಲೆ ಹೊರಿಸಿದ್ದ ಮಿಥ್ಯಾಪವಾದವನ್ನು ಈಗ ಹಿಂಪಡೆಯಹೊರಟಿದೆ. ಆಹಾರದ ಕೊಲೆಸ್ಟರಾಲ್ ಪ್ರಮಾಣವನ್ನು ಪರಿಗಣಿಸಬೇಕಾಗಿಲ್ಲ ಎಂದು ಸ್ಪಷ್ಟವಾಗಿ ಹೇಳಿರುವುದರ ಜೊತೆಗೆ, ತರಕಾರಿಗಳು, ಜಲಚರಗಳು, ದ್ವಿದಳ ಧಾನ್ಯಗಳು, ಬೀಜಗಳು ಆರೋಗ್ಯಕ್ಕೆ ಒಳ್ಳೆಯವೆಂದೂ, ಕೆಂಪು ಮಾಂಸವನ್ನು ಹಿತಮಿತವಾಗಿ ಸೇವಿಸಬಹುದೆಂದೂ ಹೊಸ ಆಹಾರ ಮಾರ್ಗದರ್ಶಿಯ ಕರಡಿನಲ್ಲಿ ಹೇಳಲಾಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ, ಸಕ್ಕರೆ, ಸಿಹಿತಿನಿಸುಗಳು, ಪೇಯಗಳು ಹಾಗೂ ಸಂಸ್ಕರಿತ ಧಾನ್ಯಗಳ ಸಿದ್ಧತಿನಿಸುಗಳು ಎಲ್ಲಾ ಆಧುನಿಕ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತವೆ ಎಂದು ಅದರಲ್ಲಿ ಹೇಳಲಾಗಿದೆ. ಆ ಮೂಲಕ, ಕೊಬ್ಬಿಗಿಂತ ಸಕ್ಕರೆಯೇ ಮನುಷ್ಯನ ಆದ್ಯ ವೈರಿ ಎನ್ನುವುದನ್ನು ಕೊನೆಗೂ ಒಪ್ಪಿಕೊಂಡಂತಾಗಿದೆ. ನೀವಿನ್ನು ಸಕ್ಕರೆಯನ್ನು ವರ್ಜಿಸಿದರಾಯಿತು, ತೆಂಗಿನೆಣ್ಣೆ, ಬೆಣ್ಣೆ, ಮೊಟ್ಟೆ, ಮೀನು ತಿನ್ನಬಹುದು!

ಆರೋಗ್ಯ ಪ್ರಭ 7: ಆಯುಷ್ ಗೆ ಬೇಕು ಆಧುನಿಕ ಚಿಕಿತ್ಸೆ [ಕನ್ನಡ ಪ್ರಭ, ಆಗಸ್ಟ್ 6, 2015, ಗುರುವಾರ]

ಹಳೆಯ ವೈದ್ಯ ಪದ್ಧತಿಗಳು ನಿಜಕ್ಕೂ ಬೆಳೆಯಬೇಕಾದರೆ ಅವುಗಳ ಹೆಸರಲ್ಲಿ ಹೇಳಲಾಗುತ್ತಿರುವ ಸುಳ್ಳುಗಳನ್ನು ಕೊನೆಗಾಣಿಸಬೇಕಿದೆ

ಆರೋಗ್ಯ ರಕ್ಷಣೆಗೆ ನಮ್ಮ ಜನಸಾಮಾನ್ಯರು ಬಯಸುತ್ತಿರುವುದೊಂದು, ಸರಕಾರಗಳು ಮಾಡುತ್ತಿರುವುದೇ ಮತ್ತೊಂದು ಎನ್ನುವುದೀಗ ಮತ್ತೊಮ್ಮೆ ಸಾಬೀತಾಗಿದೆ. ರಾಷ್ಟ್ರ ಮಟ್ಟದ ಸಮೀಕ್ಷೆಯೊಂದರನುಸಾರ ಶೇ. 93ಕ್ಕೂ ಹೆಚ್ಚು ಭಾರತೀಯರು ಬದಲಿ ಚಿಕಿತ್ಸಾ ಪದ್ಧತಿಗಳನ್ನು ಬಳಸುವುದಿಲ್ಲ. ಆದರೆ ನಮ್ಮ ಮಂತ್ರಿಮಾಗಧರನುಸಾರ, ಈ ಬದಲಿ ಪದ್ಧತಿಗಳು ಸದ್ಯದಲ್ಲೇ ಒಂದನೇ ಸ್ಥಾನಕ್ಕೇರಲಿವೆ, ಎಲ್ಲ ರೋಗಗಳನ್ನೂ ಗುಣ ಪಡಿಸಲಿವೆ, ಅದಕ್ಕಾಗಿ 5000 ಕೋಟಿ ರೂಪಾಯಿಗಳನ್ನು ನೀಡಲಿಕ್ಕಿದೆ. ನಮ್ಮ ಜನಸಾಮಾನ್ಯರಿಗಿರುವ ವೈಚಾರಿಕತೆ ಮಂತ್ರಿಗಳಿಗಿಲ್ಲ ಎನ್ನೋಣವೇ? ಅಥವಾ ಜನರಿಗೆ ತಮ್ಮ ಒಳಿತಿನ ಲೆಕ್ಕ, ಮಂತ್ರಿಗಳಿಗೆ ತಮ್ಮ ಲಾಭದ ಲೆಕ್ಕ ಎನ್ನೋಣವೇ?

ರಾಷ್ಟ್ರೀಯ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು 2014ರ ಜನವರಿಯಿಂದ ಜೂನ್ ವರೆಗೆ 71ನೇ ಸುತ್ತಿನ ರಾಷ್ಟ್ರೀಯ ಮಾದರಿ ಸಮೀಕ್ಷೆಯನ್ನು ನಡೆಸಿತ್ತು. ದೇಶದ 4577 ಹಳ್ಳಿಗಳ 36480 ಕುಟುಂಬಗಳು ಹಾಗೂ 3720 ನಗರ ಘಟಕಗಳ 29452 ಕುಟುಂಬಗಳು ಹಿಂದಿನ ಒಂದು ವರ್ಷದಲ್ಲಿ ಆರೋಗ್ಯ ಸೇವೆಗಳನ್ನು ಬಳಸಿಕೊಂಡ ಬಗೆಯನ್ನು ಅದರಲ್ಲಿ ಅಧ್ಯಯನ ಮಾಡಲಾಗಿತ್ತು.

ಆ ಸಮೀಕ್ಷೆಯನುಸಾರ, ಹಳ್ಳಿಗಳಲ್ಲಿ ಶೇ. 90ರಷ್ಟು ಹೊರರೋಗಿಗಳು ಆಧುನಿಕ ಚಿಕಿತ್ಸೆಯನ್ನು ಪಡೆದರೆ, ಶೇ. 4ರಷ್ಟು ಹೊರರೋಗಿಗಳು ಯಾವ ಚಿಕಿತ್ಸೆಯನ್ನೂ ಪಡೆಯಲಿಲ್ಲ; ಆಯುರ್ವೇದ, ಹೋಮಿಯೋಪತಿ, ಯುನಾನಿ, ಸಿದ್ಧ ಹಾಗೂ ಯೋಗ-ಪ್ರಕೃತಿ ಚಿಕಿತ್ಸೆ ಎಲ್ಲ ಸೇರಿ ಬದಲಿ ಚಿಕಿತ್ಸೆಯನ್ನು ಪಡೆದವರು ಶೇ. 6ರಷ್ಟು ಮಾತ್ರ. ನಗರಗಳ ಹೊರರೋಗಿಗಳಲ್ಲೂ ಬದಲಿ ಚಿಕಿತ್ಸೆಯನ್ನು ಪಡೆದವರು ಶೇ. 7 ಮಾತ್ರ. ಕರ್ನಾಟಕದಲ್ಲಿ ಇದು ಇನ್ನೂ ಕಡಿಮೆ; ಹಳ್ಳಿಗಳಲ್ಲಿ ಕೇವಲ ಶೇ.2 ಹಾಗೂ ನಗರಗಳಲ್ಲಿ ಶೇ.6. ಎಲ್ಲೆಡೆ ಆಸ್ಪತ್ರೆಗಳಲ್ಲಿ ದಾಖಲಾದ ಒಳರೋಗಿಗಳಲ್ಲಿ ಆಧುನಿಕ ಚಿಕಿತ್ಸೆಯನ್ನು ಪಡೆದವರು ಶೇ. 99ಕ್ಕೂ ಹೆಚ್ಚು, ಬದಲಿ ಚಿಕಿತ್ಸೆಯನ್ನು ಪಡೆದವರು ಕೇವಲ ಶೇ.0.7 ಮಾತ್ರ.

ಆರೋಗ್ಯ ಸೇವೆಗಳ ನೀತಿ ನಿರೂಪಕರು, ಯೋಜನಾ ತಜ್ಞರು, ಸರಕಾರಿ ಇಲಾಖೆಗಳು, ಸಂಶೋಧಕರು ಈ ಅಂಕಿ-ಅಂಶಗಳನ್ನು ಬಳಸಿಕೊಳ್ಳುತ್ತಾರೆಂದು ಆ ವರದಿಯ ಮುನ್ನುಡಿಯಲ್ಲಿ ಹೇಳಲಾಗಿದೆ. ಹಾಗಿದ್ದರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ, ಜಿಲ್ಲಾಸ್ಪತ್ರೆಗಳಲ್ಲೂ ಬದಲಿ ಚಿಕಿತ್ಸಕರನ್ನು ನಿಯೋಜಿಸುವ ಪ್ರಸಕ್ತ ನೀತಿಯು ಬದಲಾದೀತೇ? ಜನರ ಅಗತ್ಯಗಳಿಗೆ ವಿರುದ್ಧವಾಗಿ ಬದಲಿ ವೈದ್ಯಕೀಯ ಪದ್ಧತಿಗಳನ್ನು ಪೋಷಿಸುವುದರಿಂದ ಜನರಿಗಷ್ಟೇ ಅನ್ಯಾಯವಾಗುವುದಲ್ಲ, ಆರೋಗ್ಯ ಸೇವೆಗಳಲ್ಲೂ ಗೊಂದಲವುಂಟಾಗುತ್ತದೆ, ಬದಲಿ ಪದ್ಧತಿಗಳಿಗೂ ಅಪಚಾರವಾಗುತ್ತದೆ ಎನ್ನುವುದು ಅರ್ಥವಾದೀತೇ?

ದೇಶದ ಆರೋಗ್ಯ ಸೇವೆಗಳಲ್ಲಿ ಗೊಂದಲ ಹುಟ್ಟಿಸುವ ಪ್ರಯತ್ನಗಳು ಬಹು ಹಿಂದಿನಿಂದಲೇ ನಡೆಯುತ್ತಿವೆ. ಸ್ವಾತಂತ್ರ್ಯಕ್ಕೆ ತುಸು ಮೊದಲು ರಚಿತವಾಗಿದ್ದ ನೆಹರೂ ಅಧ್ಯಕ್ಷತೆಯ ರಾಷ್ಟ್ರೀಯ ಯೋಜನಾ ಸಮಿತಿಯಾಗಲೀ, 1943ರಲ್ಲಿ ಬ್ರಿಟಿಷ್ ಸರಕಾರವು ರಚಿಸಿದ್ದ ಸರ್ ಜೋಸೆಫ್ ಭೋರ್ ಸಮಿತಿಯಾಗಲೀ ಆಯುರ್ವೇದ, ಸಿದ್ಧ, ನಾಟಿ ಮುಂತಾದ ಪ್ರಾಚೀನ ದೇಸಿ ಪದ್ಧತಿಗಳಿಗೆ ಯಾವ ಪಾತ್ರವನ್ನೂ ಕಲ್ಪಿಸಿರಲಿಲ್ಲ. ನೆಹರೂ ಆಡಳಿತದಲ್ಲಿ ಆಧುನಿಕ ವೈದ್ಯವಿಜ್ಞಾನಕ್ಕಷ್ಟೇ ಮಹತ್ವವನ್ನು ನೀಡಲಾಗಿತ್ತು. ದೇಸಿ ಪದ್ಧತಿಗಳನ್ನು ಬೆಳೆಸಬೇಕೆಂದು ಸಂಪ್ರದಾಯವಾದಿ ರಾಜಕಾರಣಿಗಳು ಆಗಲೇ ಬೇಡಿಕೆಯನ್ನಿಟ್ಟಿದ್ದರೂ, ಹೆಚ್ಚಿನ ಬೆಂಬಲ ದೊರೆತಿರಲಿಲ್ಲ.

ಆದರೆ ಕಳೆದೆರಡು ದಶಕಗಳಿಂದ ಈ ಹಳೆಯ ಪದ್ಧತಿಗಳಿಗೆ ಸರಕಾರಿ ಬೆಂಬಲವು ಹೆಚ್ಚುತ್ತಲೇ ಇದೆ. ಭಾರತೀಯ ಚಿಕಿತ್ಸಾ ಪದ್ಧತಿಗಳು ಹಾಗೂ ಹೋಮಿಯೋಪತಿಗಾಗಿ 1995ರಲ್ಲಿ ಪ್ರತ್ಯೇಕ ವಿಭಾಗವನ್ನೇ ಆರಂಭಿಸಲಾಯಿತು, 2003 ರಲ್ಲಿ ಅದಕ್ಕೆ ಯೋಗಾಭ್ಯಾಸವನ್ನೂ ಸೇರಿಸಿ ಆಯುಷ್ ಎಂದು ಹೆಸರಿಟ್ಟದ್ದಾಯಿತು. ಎಂಟನೇ ಹಾಗೂ ಒಂಭತ್ತನೇ ಪಂಚವಾರ್ಷಿಕ ಯೋಜನೆಗಳಲ್ಲಿ ಈ ಪದ್ಧತಿಗಳಿಗೆ 108 ಹಾಗೂ 266 ಕೋಟಿ ಒದಗಿಸಿದ್ದರೆ, ಹತ್ತನೇ ಯೋಜನೆಯಲ್ಲಿ 775 ಕೋಟಿ, 11ನೇ ಯೋಜನೆಯಲ್ಲಿ 3988 ಕೋಟಿ, ಹಾಗೂ 12ನೇ ಯೋಜನೆಯಲ್ಲಿ 10044 ಕೋಟಿಗಳನ್ನು ಒದಗಿಸಲಾಯಿತು. ಆಯುಷ್ ಇಲಾಖೆಗೆ ಇನ್ನೀಗ 5000 ಕೋಟಿ ವ್ಯಯಿಸಲಾಗುವುದೆಂದು ಹೊಸ ಸಚಿವರೂ ಹೇಳಿದ್ದಾರೆ.

ಆದರೆ ಆಯುಷ್ ಇಲಾಖೆಯು ಈ ಹಿಂದೆ ನೀಡಿದ್ದ ಹಣದಲ್ಲಿ ಬಳಸಿದ್ದು ಶೇ. 15ರಿಂದ 40ರಷ್ಟು ಮಾತ್ರ. ಸಾರ್ವಜನಿಕ ಆರೋಗ್ಯ ಸೇವೆಗಳಿಗೆ ಸಾಕಷ್ಟು ಹಣವೊದಗಿಸಲು ಪರದಾಡುತ್ತಿರುವ ಸರಕಾರವು ಕೇವಲ ಶೇ. 7ರಷ್ಟು ಜನರು ಬಳಸುವ ಆಯುಷ್ ಇಲಾಖೆಗೆ ಅಗತ್ಯಕ್ಕಿಂತ ಹೆಚ್ಚು ಹಣವನ್ನು ಒದಗಿಸುವುದರ ಹಿಂದೆ ಯಾರ ಲಾಭದ ಲೆಕ್ಕಾಚಾರ ಅಡಗಿದೆಯೋ?

ಹಳೆಯ ಚಿಕಿತ್ಸಾ ಪದ್ಧತಿಗಳ ಕಾಲೇಜುಗಳು ಕೂಡ ಎಲ್ಲೆಂದರಲ್ಲಿ ತೆರೆದುಕೊಳ್ಳುತ್ತಿವೆ, ಅವುಗಳಲ್ಲಿ ಶೇ. 80ರಷ್ಟು ಖಾಸಗಿ ಹಿಡಿತದಲ್ಲಿವೆ. ಈಗಾಗಲೇ ಆಯುರ್ವೇದದ 246, ಹೋಮಿಯೋಪತಿಯ 189 ಹಾಗೂ ಯುನಾನಿಯ 42 ಕಾಲೇಜುಗಳಿಂದ ಪ್ರತೀ ವರ್ಷ 35000ಕ್ಕೂ ಹೆಚ್ಚು ಚಿಕಿತ್ಸಕರು ಹೊರಬರುತ್ತಿದ್ದಾರೆ. ಅವರಲ್ಲಿ ಹಲವರು ಸ್ನಾತಕೋತ್ತರ ಶಿಕ್ಷಣವನ್ನು ಪಡೆಯಲಾಗದೆ, ಪಡೆದರೂ ಪ್ರಯೋಜನವಿಲ್ಲದೆ, ತಮ್ಮದೇ ವೃತ್ತಿಯಲ್ಲಿ ತೊಡಗಲಾಗದೆ ಸಂಕಷ್ಟಕ್ಕೊಳಗಾಗುತ್ತಿದ್ದಾರೆ. ಕೆಲವರು ಅಲ್ಪ ಸಂಬಳಕ್ಕೆ ಸರಕಾರಿ ಆರೋಗ್ಯ ಕೇಂದ್ರಗಳಲ್ಲೋ, ಖಾಸಗಿ ಆಸ್ಪತ್ರೆಗಳಲ್ಲಿ ಕಿರಿಯ ವೈದ್ಯರಾಗಿಯೋ ಸೇರಿಕೊಳ್ಳುತ್ತಾರೆ. ಅರುವತ್ತು ಸಾವಿರಕ್ಕೂ ಹೆಚ್ಚು ಬದಲಿ ಚಿಕಿತ್ಸಕರು ಉದ್ಯೋಗವಂಚಿತರಾಗಿದ್ದಾರೆ ಎಂದು ಸಂಸದೀಯ ಸಮಿತಿಯೊಂದು ಅಂದಾಜಿಸಿದೆ.

ಹೊಸ ಮತ್ತು ಹಳೆಯ ಪದ್ಧತಿಗಳ ಪರಿಕಲ್ಪನೆಗಳನ್ನು ಪರಸ್ಪರ ಬೆರೆಸಿ, ಎಲ್ಲ ಚಿಕಿತ್ಸಾ ಪದ್ಧತಿಗಳನ್ನು ಏಕೀಕರಣಗೊಳಿಸಬೇಕೆಂಬ ವಾದವನ್ನೂ ಹುಟ್ಟಿಸಲಾಗಿದೆ. ಸರಕಾರಗಳೂ ಇದಕ್ಕೆ ಕುಮ್ಮಕ್ಕು ನೀಡುತ್ತಿವೆ. ಆಧುನಿಕ ವೈದ್ಯ ವಿಜ್ಞಾನವು ಪ್ರಾಚೀನ ಪದ್ಧತಿಗಳ ಒಳಿತೆಲ್ಲವನ್ನೂ ಹೀರಿಕೊಂಡೇ ಬೆಳೆದಿರುವುದರಿಂದ ಮತ್ತೆ ಸೇರಿಸುವುದಕ್ಕೇನೂ ಉಳಿದಿಲ್ಲವೆಂದು ಆಧುನಿಕ ವೈದ್ಯಕೀಯ ಪರಿಷತ್ತು ಈ ವಾದಕ್ಕೆ ಸೊಪ್ಪು ಹಾಕಿಲ್ಲ. ಆದರೆ ದೇಸಿ ಪದ್ಧತಿಗಳು ಮತ್ತು ಹೋಮಿಯೋಪತಿಯ ಮಂಡಳಿಗಳು ಅದನ್ನು ಅಪ್ಪಿಕೊಂಡು, ತಮ್ಮ ಪಠ್ಯದಲ್ಲಿ ಆಧುನಿಕ ವೈದ್ಯವಿಜ್ಞಾನದ ಹಲವು ವಿಷಯಗಳನ್ನು ಕಲಬೆರಕೆ ಮಾಡಿವೆ. ಇದರಿಂದಾಗಿ ಅನ್ಯ ಪದ್ಧತಿಗಳಲ್ಲಿ ತರಬೇತಾಗುವವರು ಎಡೆಬಿಡಂಗಿಗಳಾಗುತ್ತಿದ್ದಾರೆ, ಹತಾಶರಾಗುತ್ತಿದ್ದಾರೆ.

ಅತ್ಯಂತ ಆಸಕ್ತಿಯಿಂದಲೇ ಆಯುರ್ವೇದ ವೈದ್ಯರಾದವರೊಬ್ಬರು ಹೀಗೆನ್ನುತ್ತಾರೆ: “ಏಕೀಕೃತ ಜ್ಞಾನದ ಹೆಸರಲ್ಲಿ ಭಾರತೀಯ ವೈದ್ಯ ಪದ್ಧತಿಗಳ ಮಂಡಳಿಯು ರೂಪಿಸಿರುವ ಪಠ್ಯಕ್ರಮವು ತೀರಾ ಭಿನ್ನವಾದ ಪರಿಕಲ್ಪನೆಗಳ ಕಲಸುಮೇಲೋಗರವಾಗಿದೆ. ಅವುಗಳಲ್ಲಿ ಯಾವುದನ್ನೂ ಸ್ಪಷ್ಟವಾಗಿ ಕಲಿಯಲು ಸಾಧ್ಯವಾಗುವುದಿಲ್ಲ. ರೋಗ ಯಾವುದು, ಚಿಕಿತ್ಸೆ ಯಾವುದು, ಯಾರನ್ನು, ಯಾವಾಗ ಉನ್ನತ  ಚಿಕಿತ್ಸೆಗೆ ಕಳುಹಿಸಬೇಕು ಎಂಬುದೊಂದೂ ಅರ್ಥವಾಗುವುದಿಲ್ಲ… ನಾವು ವಾದಗಳನ್ನು ಗೆಲ್ಲುವುದಕ್ಕಾಗಿ ಆಯುರ್ವೇದವನ್ನು ಹಾಗೂ ಹೀಗೂ ತಿರುಚುತ್ತೇವೆ, ಪ್ರಶ್ನೆಗಳಿದ್ದರೆ ಸಹಿಸುವುದಿಲ್ಲ, ಟೀಕೆಗಳಿದ್ದರೆ ಪ್ರತಿದಾಳಿಗಿಳಿಯುತ್ತೇವೆ.” [Int J Ayu Res, 2010;1(2):124-27]

ಅನ್ಯ ಪದ್ಧತಿಯ ಕಾಲೇಜುಗಳಲ್ಲಿ ಸರಿಯಾದ ಸೌಲಭ್ಯಗಳಿಲ್ಲದೆ, ಸಾಕಷ್ಟು ರೋಗಿಗಳೂ ಇಲ್ಲದೆ, ಶಿಕ್ಷಣದ ಗುಣಮಟ್ಟವು ಕಳಪೆಯಾಗುತ್ತಿದೆ. ಸಂಧಿವಾತ, ಮೂಲವ್ಯಾಧಿ, ಪಾರ್ಶ್ವವಾಯುಗಳಂತಹ ರೋಗಗಳುಳ್ಳ ಕೆಲವರಷ್ಟೇ ಆಯುರ್ವೇದ ಆಸ್ಪತ್ರೆಗಳಿಗೆ ಹೋಗುವುದರಿಂದ, ಇನ್ನುಳಿದ ಸಮಸ್ಯೆಗಳ ಬಗ್ಗೆ ಅರಿಯಲು ಅಲ್ಲಿನ ವಿದ್ಯಾರ್ಥಿಗಳಿಗೆ ಅವಕಾಶಗಳೇ ದೊರೆಯುವುದಿಲ್ಲವೆಂದೂ, ಹಾಗಾಗಿ ಆಯುರ್ವೇದ ಪದವೀಧರರ ವೈದ್ಯಕೀಯ ಕೌಶಲ್ಯಗಳು ಅತ್ಯಂತ ಸೀಮಿತವಾಗಿರುತ್ತವೆ ಎಂದೂ ಅಧ್ಯಯನವೊಂದು ವಿವರಿಸಿದೆ. ಹೃದಯಾಘಾತ, ವಿಷಪ್ರಾಶನ ಇತ್ಯಾದಿಗಳ ತುರ್ತು ಚಿಕಿತ್ಸೆ, ಮಲೇರಿಯಾ, ಕ್ಷಯ ಮುಂತಾದ ಸೋಂಕುಗಳ ಪತ್ತೆ ಹಾಗೂ ಚಿಕಿತ್ಸೆ, ಅತಿ ಸರಳ ಶಸ್ತ್ರಕ್ರಿಯೆಗಳು, ಹೆರಿಗೆ ಮತ್ತು ಬಾಣಂತನ, ವೃದ್ಧರು ಮತ್ತು ಮಕ್ಕಳ ಆರೈಕೆ, ರಕ್ತ-ಮೂತ್ರ ಪರೀಕ್ಷೆಗಳ ಸೂಕ್ತ ಬಳಕೆ ಇತ್ಯಾದಿಗಳ ಬಗ್ಗೆ ಈ ಅನ್ಯ ಪದ್ಧತಿಗಳ ಚಿಕಿತ್ಸಕರಿಗೆ ತರಬೇತಿಯಾಗಲೀ, ಅನುಭವವಾಗಲೀ ಸಾಕಷ್ಟಿರುವುದಿಲ್ಲ.[Evid Based Alt Comp Med, 2011;197391]

ಇವೇ ಕಾರಣಗಳಿಂದಾಗಿ ಹೆಚ್ಚಿನ ರೋಗಗಳಿಗೆ ಚಿಕಿತ್ಸೆ ನೀಡಲು ಅನ್ಯ ಪದ್ಧತಿಗಳ ವೈದ್ಯರು ಅಸಹಾಯಕರಾಗುತ್ತಾರೆ. ತುರ್ತು ಚಿಕಿತ್ಸೆಯಲ್ಲೂ, ಇನ್ನಿತರ ಸಂದರ್ಭಗಳಲ್ಲೂ ತಮಗೆ ಆಧುನಿಕ ಔಷಧಗಳನ್ನು ಬಳಸಗೊಡಬೇಕೆಂದು ಅವರು ಮುಷ್ಕರಗಳನ್ನೂ ಹೂಡಿದ್ದಾಗಿದೆ. ಅಂತಹ ಅವಕಾಶಗಳನ್ನು ನೀಡುವುದಾಗಿ ಸರಕಾರಗಳೂ ಪೊಳ್ಳು ಭರವಸೆಗಳನ್ನು ನೀಡುತ್ತಿವೆ. ಆದರೆ ಅನ್ಯ ಪದ್ಧತಿಗಳ ವೈದ್ಯರು ತಮ್ಮ ಪರಿಕಲ್ಪನೆಗಳಿಗೆ ಹೊರತಾದ, ತಾವು ಅಭ್ಯಸಿಸದ ಆಧುನಿಕ ಚಿಕಿತ್ಸಾ ಕ್ರಮಗಳನ್ನು ಬಳಸುವುದೆಂದರೆ ಬದಲಿ ಚಿಕಿತ್ಸೆಗಾಗಿ ಬರುವ ರೋಗಿಗಳಿಗಷ್ಟೇ ಅಲ್ಲ, ಆ ಪದ್ಧತಿಗಳಿಗೂ ಅಪಚಾರವೆಸಗಿದಂತಾಗುತ್ತದೆ.

ಹಳೆಯ ಪದ್ಧತಿಗಳು ನಿಜಕ್ಕೂ ಏಳಿಗೆಯಾಗಬೇಕಾದರೆ ಅವುಗಳ ಹೆಸರಲ್ಲಿ ಹೇಳಲಾಗುತ್ತಿರುವ ಸುಳ್ಳುಗಳನ್ನು ಕೊನೆಗಾಣಿಸಬೇಕು. ಅನ್ಯ ಪದ್ಧತಿಗಳ ವೈದ್ಯರು ಆಧುನಿಕ ವೈದ್ಯ ವಿಜ್ಞಾನದೊಂದಿಗೆ ಸ್ಪರ್ಧೆಗಿಳಿದರೆ, ಆಧುನಿಕ ವೈದ್ಯವಿಜ್ಞಾನದ ಪರಿಕಲ್ಪನೆಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಹೊರಟರೆ, ಅಥವಾ ಆಧುನಿಕ ಔಷಧಗಳನ್ನು ಬಳಸಹೊರಟರೆ ಎಲ್ಲರಿಗೂ ನಷ್ಟವೇ. ಅದರ ಬದಲು, ಜನರು ಯಾವ ಕಾಯಿಲೆಗಳಿಗೆ ಬದಲಿ ಚಿಕಿತ್ಸೆಯನ್ನು ಬಯಸುತ್ತಾರೆನ್ನುವುದನ್ನು ಕಂಡುಕೊಂಡು, ಅದನ್ನೇ ಬೆಳೆಸಲೆತ್ನಿಸಬೇಕು. ಅವುಗಳ ಮೂಲ ಚಿಕಿತ್ಸಾ ಕ್ರಮಗಳನ್ನು ಸುಧಾರಿಸುವತ್ತ ಹೆಚ್ಚಿನ ಅಧ್ಯಯನಗಳನ್ನು ನಡೆಸಬೇಕು, ಸರಕಾರವೂ ಅದಕ್ಕೆ ನೆರವನ್ನೊದಗಿಸಬೇಕು. ಹಾಗೆಯೇ, ಅನ್ಯ ಪದ್ಧತಿಗಳ ವಿದ್ಯಾರ್ಥಿಗಳಿಗೆ ಆಧುನಿಕ ವೈದ್ಯವಿಜ್ಞಾನದ ವಿಷಯಗಳನ್ನು ಅರೆಬರೆಯಾಗಿ ಕಲಿಸುವ ಬದಲಿಗೆ, ಮೂಲ ಪದ್ಧತಿಗಳನ್ನೇ ವಿಷದವಾಗಿ ಕಲಿಸಬೇಕು, ಅವುಗಳಲ್ಲೇ ಹೊಸ ವಿಧಾನಗಳನ್ನು ಬೆಳೆಸಬೇಕು.

ಆಧುನಿಕ ಆಸ್ಪತ್ರೆಗಳಲ್ಲಿ ಹಳೆಯ ಪದ್ಧತಿಗಳ ವೈದ್ಯರನ್ನು ತೀರಾ ಕಡಿಮೆ ಸಂಬಳಕ್ಕೆ ನಿಯೋಜಿಸುವ ಬದಲು, ಪೂರ್ಣ ಪ್ರಮಾಣದ ಆಯುಷ್ ಚಿಕಿತ್ಸಾಲಯಗಳನ್ನು ತೆರೆಯಬಹುದು. ಈಗಾಗಲೇ ಹೊರಬರುತ್ತಿರುವ ಬದಲಿ ವೈದ್ಯರಿಗೆ ಸೂಕ್ತ ಉದ್ಯೋಗಾವಕಾಶಗಳು ಖಾತರಿಯಾದ ಮೇಲಷ್ಟೇ ಹೊಸ ಕಾಲೇಜುಗಳಿಗೆ ಅನುಮತಿ ನೀಡಬಹುದು.

ಅನ್ಯ ಪದ್ಧತಿಗಳು ಪರಿಶುದ್ಧವಾಗಿದ್ದರಷ್ಟೇ ಉಳಿಯಬಹುದು, ಬೆಳೆಯಬಹುದು.

 

ಆರೋಗ್ಯ ಪ್ರಭ 6: ಡೆಂಗಿ ಜ್ವರಕ್ಕೆ ಜಾಗರೂಕತೆಯೇ ದಿವ್ಯೌಷಧ [ಕನ್ನಡ ಪ್ರಭ, ಜುಲೈ 23, 2015, ಗುರುವಾರ]

ಹೆಚ್ಚಿನ ಡೆಂಗಿ ಪೀಡಿತರಲ್ಲಿ ದುಬಾರಿ ಪರೀಕ್ಷೆಗಳು ಹಾಗೂ ಪ್ಲೇಟ್ಲೆಟ್ ಮರುಪೂರಣ ಅಗತ್ಯವಿಲ್ಲ

ರಾಜ್ಯದ ವಿವಿಧೆಡೆಗಳಲ್ಲಿ ಡೆಂಗಿ ಸೋಂಕು ಮತ್ತೆ ಹೆಚ್ಚತೊಡಗಿದೆ. ವಿಧಾನಮಂಡಲದಲ್ಲೂ ಪ್ರಶ್ನೆಗಳೆದ್ದಿವೆ. ಡೆಂಗಿ ಪತ್ತೆ ಹಾಗೂ ಪ್ಲೇಟ್ಲೆಟ್ ಪರೀಕ್ಷೆಗೆ ಆರೋಗ್ಯ ಸಚಿವರು ದರ ನಿಗದಿ ಮಾಡಿದ್ದಾರೆ, ಉಚಿತ ಪ್ಲೇಟ್ಲೆಟ್ ಒದಗಿಸುವುದಾಗಿ ಹೇಳಿದ್ದಾರೆ. ಆದರೆ ಡೆಂಗಿ ನಿಭಾವಣೆಗೆ ಇವೆಲ್ಲ ಬೇಕಾಗಿಲ್ಲ, ಯಾವುದನ್ನು ಮಾಡಬೇಕೋ ಅವನ್ನು ಮಾಡಲಾಗುತ್ತಿಲ್ಲ.

ಡೆಂಗಿ ಸೋಂಕು ಹೊಸದೂ ಅಲ್ಲ, ಅಪರೂಪವೂ ಅಲ್ಲ. ಡೆಂಗಿಯ ವೈರಾಣುಗಳು ಸಾವಿರ ವರ್ಷಗಳಿಗೂ ಹಿಂದೆ ಆಗ್ನೇಯ ಏಷ್ಯಾ ಯಾ ಆಫ್ರಿಕಾದ ವಾನರರಿಂದ ಮನುಷ್ಯರೊಳಗೆ ಹೊಕ್ಕಿರಬೇಕೆಂದು ಹೇಳಲಾಗುತ್ತದೆ. ಇಪ್ಪತ್ತನೇ ಶತಮಾನದ ಮಧ್ಯದವರೆಗೆ ಕೆಲವು ದೇಶಗಳಿಗಷ್ಟೇ ಸೀಮಿತವಾಗಿದ್ದ ಡೆಂಗಿ, ಕಳೆದ ಐದಾರು ದಶಕಗಳಲ್ಲಿ 30 ಪಟ್ಟು ಹೆಚ್ಚಿ, ಉಷ್ಣವಲಯದ ಹೆಚ್ಚಿನ ರಾಷ್ಟ್ರಗಳಿಗೆ ಹರಡಿದೆ; 90ರ ದಶಕಕ್ಕೆ ಹೋಲಿಸಿದರೆ ಈ ದಶಕದಲ್ಲಿ ದುಪ್ಪಟ್ಟಾಗಿದೆ. ಈಗ ಪ್ರತೀ ವರ್ಷ ಸುಮಾರು ನೂರು ದೇಶಗಳಲ್ಲಿ 5-10 ಕೋಟಿ ಜನರಿಗೆ ಡೆಂಗಿ ಸೋಂಕು ತಗಲುತ್ತಿದೆ. ಐದು ಲಕ್ಷ ಸೋಂಕಿತರಲ್ಲಿ (ಶೇ. 0.6) ಗಂಭೀರ ಸಮಸ್ಯೆಗಳಾಗಿ, 22 ಸಾವಿರದಷ್ಟು ಸಾವನ್ನಪ್ಪುತ್ತಿದ್ದಾರೆ. ಅಂದರೆ ಒಟ್ಟು ಸೋಂಕಿತರಲ್ಲಿ ಲಕ್ಷಕ್ಕೆ 30ರಷ್ಟು, ಗಂಭೀರ ಸಮಸ್ಯೆಗಳಾದವರಲ್ಲಿ ಶೇ.1-4ರಷ್ಟು ಸಾವನ್ನಪ್ಪುತ್ತಾರೆ, ಉಳಿದೆಲ್ಲರೂ ಗುಣಮುಖರಾಗುತ್ತಾರೆ.

ಅಧಿಕೃತ ಮಾಹಿತಿಯಂತೆ ನಮ್ಮ ದೇಶದಲ್ಲಿ ಕಳೆದ ವರ್ಷ 40571 ಜನರಿಗೆ ಡೆಂಗಿ ಸೋಂಕು ತಗಲಿ, 137 ಜನ ಮೃತ ಪಟ್ಟಿದ್ದರು. ಆದರೆ ವಾಸ್ತವದಲ್ಲಿ ಪ್ರತೀ ವರ್ಷ 60 ಲಕ್ಷದಷ್ಟು ಜನ ಡೆಂಗಿಯಿಂದ ಸೋಂಕಿತರಾಗುತ್ತಾರೆಂದೂ, ಅದಕ್ಕಾಗಿ ವರ್ಷಕ್ಕೆ 7000 ಕೋಟಿಗೂ ಹೆಚ್ಚು ವ್ಯಯವಾಗುತ್ತದೆಂದೂ ಕಳೆದ ಅಕ್ಟೋಬರ್ ನಲ್ಲಿ ಪ್ರಕಟವಾದ ಅಧ್ಯಯನವೊಂದರಲ್ಲಿ ಅಂದಾಜಿಸಲಾಗಿತ್ತು. ಚೆನ್ನೈಯಲ್ಲಿ ಪ್ರತೀ ವರ್ಷ 2 ಲಕ್ಷಕ್ಕೂ ಹೆಚ್ಚು ಜನರು ಡೆಂಗಿಯಿಂದ ಸೋಂಕಿತರಾಗುತ್ತಿದ್ದಾರೆಂದೂ, ಶೇ. 99ರಷ್ಟು ಸೋಂಕಿತರಿಗೆ ಅದರ ಅರಿವೇ ಇರುವುದಿಲ್ಲವೆಂದೂ ಇದೇ ಜುಲೈ 16ರಂದು ಪ್ರಕಟವಾದ ವರದಿಯಲ್ಲಿ ಹೇಳಲಾಗಿದೆ. ನಮ್ಮ ರಾಜ್ಯದಲ್ಲಿ ಕಳೆದ ವರ್ಷ 3358 ಡೆಂಗಿ ಸೋಂಕುಗಳೂ, ಅದರಿಂದ 2 ಸಾವುಗಳೂ ಸಂಭವಿಸಿದ್ದವೆಂದು ಅಧಿಕೃತವಾಗಿ ಹೇಳಲಾಗಿದ್ದರೂ, ವಾಸ್ತವದಲ್ಲಿ ಸೋಂಕಿತರ ಸಂಖ್ಯೆಯು ನಾಲ್ಕೈದು ಲಕ್ಷವಾದರೂ ಇರಬಹುದು.

ಹೀಗೆ ಲಕ್ಷಗಟ್ಟಲೆ ಜನರನ್ನು ಕಾಡುವ ಡೆಂಗಿಯನ್ನು ತಡೆಯುವುದು ಸುಲಭವಲ್ಲ. ನಾಲ್ಕು ವಿಧದ ಡೆಂಗಿ ವೈರಾಣುಗಳಿದ್ದು, ಈಡಿಸ್ ಜಾತಿಯ ಹೆಣ್ಣು ಸೊಳ್ಳೆಗಳ ಮೂಲಕ ಒಬ್ಬರಿಂದೊಬ್ಬರಿಗೆ ಹರಡುತ್ತವೆ. ಈ ಸೊಳ್ಳೆಗಳು ಪಾತ್ರೆ, ಬಾಟಲಿ, ತೊಟ್ಟಿ, ಹೂಕುಂಡ, ಚಕ್ರಗಳು ಇತ್ಯಾದಿಗಳಲ್ಲಿ ನಿಂತ ನೀರಿನಲ್ಲಿ ಮೊಟ್ಟೆಯಿಟ್ಟು ವೃದ್ಧಿಯಾಗುತ್ತವೆ. ಹೆಚ್ಚುತ್ತಿರುವ ಜನಸಂಖ್ಯೆ, ನಗರೀಕರಣ, ಮೂಲಸೌಕರ್ಯಗಳ ಕೊರತೆ, ನೀರಿನ ಅಭಾವ, ಹೆಚ್ಚುತ್ತಿರುವ ಪ್ಲಾಸ್ಟಿಕ್ ಬಾಟಲಿ-ತಟ್ಟೆ-ತೊಟ್ಟಿಗಳ ಬಳಕೆ, ಎಲ್ಲೆಂದರಲ್ಲಿ ಎಸೆಯುವ ಘನ ತ್ಯಾಜ್ಯಗಳು ಸೊಳ್ಳೆಗಳ ಸಂತಾನವೃದ್ಧಿಗೆ ನೆರವಾಗುತ್ತಿವೆ. ಇವನ್ನು ತಡೆಯಲು ಜನರು ಸಿದ್ಧರಿಲ್ಲ, ಸರಕಾರಕ್ಕೂ ಸಾಧ್ಯವಿಲ್ಲ; ಹಾಗಿರುವಾಗ ಡೆಂಗಿಯನ್ನು ನಿಯಂತ್ರಿಸುವುದೂ ಸುಲಭವಿಲ್ಲ.

ಹೆಚ್ಚಿನವರಲ್ಲಿ ಡೆಂಗಿ ಸೋಂಕು ಸಾಮಾನ್ಯ ಜ್ವರದಂತೆ ಕಾಡಿ, ವಾರದೊಳಗೆ ಹೋಗುತ್ತದೆ. ಸೊಳ್ಳೆಗಳಿಂದ ಚುಚ್ಚಿಸಿಕೊಂಡ 3-5 ದಿನಗಳಲ್ಲಿ ಒಮ್ಮೆಗೇ ತೊಡಗುವ ಏರು ಜ್ವರ, ವಿಪರೀತ ಮೈಕೈ ನೋವು, ತಲೆ ನೋವು, ಕಣ್ಣಾಲಿಗಳಲ್ಲಿ ನೋವು, ಗಂಟುಗಳಲ್ಲಿ ನೋವು ಇತ್ಯಾದಿ ಕಾಣಿಸಿಕೊಳ್ಳುತ್ತವೆ. ಅದಾಗಿ 3-5 ದಿನಗಳಲ್ಲಿ ಹೆಚ್ಚಿನವರ ಮೈ ಮೇಲೆ ನವಿರಾದ, ನಸುಗೆಂಪಿನ ದಡಿಕೆಗಳು ಮೂಡಿ, ನಂತರ ಕೈಕಾಲುಗಳಿಗೂ ವ್ಯಾಪಿಸುತ್ತವೆ, ಕೆಲವರಲ್ಲಿ ತುರಿಕೆಯೂ ಇರುತ್ತದೆ. ಹೆಚ್ಚಿನವರಲ್ಲಿ ದೇಹದ ರೋಗರಕ್ಷಣಾ ವ್ಯವಸ್ಥೆಯೇ ಡೆಂಗಿ ವೈರಾಣುಗಳನ್ನು ಯಶಸ್ವಿಯಾಗಿ ಸದೆಬಡಿಯುತ್ತದೆ, 3-5 ದಿನಗಳಲ್ಲಿ ಯಾವುದೇ ಚಿಕಿತ್ಸೆಯಿಲ್ಲದೆಯೇ ರೋಗಶಮನವಾಗುತ್ತದೆ.

ಸೋಂಕು ನಿಯಂತ್ರಣಕ್ಕೆ ಬಂದಾಗ ರೋಗರಕ್ಷಣಾ ವ್ಯವಸ್ಥೆಯ ದಾಳಿಯು ಇಳಿಮುಖವಾಗಬೇಕು. ಆದರೆ ಕೆಲವರಲ್ಲಿ ಹಾಗಾಗುವುದಿಲ್ಲ; ಜ್ವರ ಬಿಟ್ಟ ಬಳಿಕವೂ ದಾಳಿಯು ಮುಂದುವರಿಯುತ್ತದೆ, ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ದಾಳಿಯಲ್ಲಿ ಬಿಡುಗಡೆಯಾಗುವ ಸಂಯುಕ್ತಗಳು ನಮ್ಮ ರಕ್ತನಾಳಗಳಲ್ಲಿ ಸೋರಿಕೆಯನ್ನುಂಟು ಮಾಡುತ್ತವೆ. ಅದರಿಂದಾಗಿ ರಕ್ತದ್ರವವು ಎದೆ, ಉದರ ಮುಂತಾದ ಅಂಗಾಂಶಗಳೊಳಕ್ಕೆ ಸೋರತೊಡಗುತ್ತದೆ. ಈ ಸೋರಿಕೆಯು ವಿಪರೀತವಾದರೆ ರಕ್ತದೊತ್ತಡವು ಇಳಿಯುತ್ತದೆ, ಅಂಗಗಳಿಗೆ ಹಾನಿಯುಂಟಾಗಿ ಸಾವಿಗೂ ಕಾರಣವಾಗುತ್ತದೆ. ಈ ಸಂಯುಕ್ತಗಳು ರಕ್ತ ಹೆಪ್ಪುಗಟ್ಟುವ ವ್ಯವಸ್ಥೆಯನ್ನೂ ಹಾನಿಗೊಳಿಸುವುದರಿಂದ ರಕ್ತಸ್ರಾವದ ಅಪಾಯವು ಹೆಚ್ಚುತ್ತದೆ, ಪ್ಲೇಟ್ಲೆಟ್ ಕಣಗಳಲ್ಲೂ ಇಳಿಕೆಯಾಗುತ್ತದೆ. ಜ್ವರ ಬಿಟ್ಟ ಬಳಿಕ 48 ಗಂಟೆಗಳಲ್ಲಿ ಈ ಸಮಸ್ಯೆಗಳೆಲ್ಲವೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ.

ಮಕ್ಕಳು ಹಾಗೂ ವೃದ್ಧರು, ಮಧುಮೇಹ, ಅಸ್ತಮಾ, ಹೃದ್ರೋಗವುಳ್ಳವರು, ಹೊಟ್ಟೆ ಹುಣ್ಣುಳ್ಳವರು ತೊಂದರೆಗೀಡಾಗುವ ಸಾಧ್ಯತೆಗಳು ಹೆಚ್ಚು. ತೀವ್ರವಾದ ಹೊಟ್ಟೆ ನೋವು, ಎಡೆಬಿಡದ ವಾಂತಿ, ಒಸಡಿನಿಂದ, ಚರ್ಮದಡಿಯಲ್ಲಿ ಯಾ ಮಲಮೂತ್ರಗಳಲ್ಲಿ ರಕ್ತಸ್ರಾವ, ರಕ್ತವಾಂತಿ, ಏರುಸಿರು, ತಲೆ ಸುತ್ತುವಿಕೆ, ತೀವ್ರ ಬಳಲಿಕೆ ಹಾಗೂ ತೊಳಲಾಟಗಳು ತೀವ್ರ ಡೆಂಗಿಯ ಲಕ್ಷಣಗಳಾಗಿದ್ದು, ಅವಿದ್ದರೆ ಉನ್ನತ ಸೌಲಭ್ಯಗಳಿರುವ ಆಸ್ಪತ್ರೆಗೆ ಕೂಡಲೇ ತೆರಳಬೇಕು, ತಜ್ಞವೈದ್ಯರ ಸಲಹೆಯನ್ನು ಪಡೆಯಬೇಕು.

ಡೆಂಗಿ ಜ್ವರವು ಹೆಚ್ಚಿನವರಲ್ಲಿ ತಾನಾಗಿ ಗುಣ ಹೊಂದುವುದರಿಂದ ಪ್ರತಿಯೋರ್ವ ಜ್ವರಪೀಡಿತರಲ್ಲೂ ಡೆಂಗಿ ಪತ್ತೆಗಾಗಿ ರಕ್ತಪರೀಕ್ಷೆ ಮಾಡುವ ಅಗತ್ಯವಿಲ್ಲ; ರೋಗಲಕ್ಷಣಗಳ ಆಧಾರದಲ್ಲೇ ಡೆಂಗಿ ಸೋಂಕೆಂದು ಗುರುತಿಸಿದರೆ ಸಾಕಾಗುತ್ತದೆ. ಎಲ್ಲಾದರೂ ಹೊಸದಾಗಿ ಡೆಂಗಿ ಹರಡುತ್ತಿರುವ ಸಂಶಯಗಳೆದ್ದರೆ, ಅದನ್ನು ದೃಢಪಡಿಸಲು ಆರೋಗ್ಯ ಇಲಾಖೆಯೇ ಕೆಲವರಲ್ಲಿ ರಕ್ತಪರೀಕ್ಷೆಗಳನ್ನು ನಡೆಸುತ್ತದೆ. ಖಾಸಗಿಯಾಗಿ ನಡೆಸುವ ಡೆಂಗಿ ಕಾರ್ಡ್ ಪರೀಕ್ಷೆಯು ದುಬಾರಿಯಾಗಿದೆ, ಮಾತ್ರವಲ್ಲ, ಅದರಿಂದ ತಪ್ಪುಗಳಾಗುವ ಸಾಧ್ಯತೆಗಳೂ ಸಾಕಷ್ಟಿವೆ; ಅದರ ಆಧಾರದಲ್ಲಿ ಚಿಕಿತ್ಸೆ ನೀಡಹೊರಟರೆ ಗಂಭೀರ ಸಮಸ್ಯೆಗಳಿಗೂ, ಪ್ರಾಣಹಾನಿಗೂ ಕಾರಣವಾಗಬಹುದು.

ವಿಶ್ವ ಆರೋಗ್ಯ ಸಂಸ್ಥೆಯು ರಕ್ತಸ್ರಾವ ಹಾಗೂ ರಕ್ತದೊತ್ತಡದ ಇಳಿಕೆಗಳನ್ನಷ್ಟೇ ಡೆಂಗಿಯ ಗಂಭೀರ ಸಮಸ್ಯೆಗಳೆಂದು ಹೆಸರಿಸಿದೆ. ಅಂಗಾಂಶಗಳಿಗೆ ರಕ್ತದ್ರವದ ಸೋರಿಕೆಯನ್ನು ಗುರುತಿಸುವುದಕ್ಕೆ ರಕ್ತದಲ್ಲಿ ಕೆಂಪು ಕಣಗಳ ಪ್ರಮಾಣ (ಪಿಸಿವಿ) ಹಾಗೂ ಹಿಮೋಗ್ಲೋಬಿನ್ ಪ್ರಮಾಣಗಳನ್ನು ಪರೀಕ್ಷಿಸಬೇಕಾಗುತ್ತದೆ. ಇವು ಶೇ. 20ರಷ್ಟು ಏರಿಕೆಯಾದರೆ ರಕ್ತದ್ರವದ ತೀವ್ರ ಸೋರಿಕೆಯನ್ನು ಸೂಚಿಸುತ್ತವೆ. ಇದರ ಜೊತೆಗೆ ರಕ್ತಸ್ರಾವದ ಲಕ್ಷಣಗಳಿದ್ದರೆ ಹಾಗೂ ಪ್ಲೇಟ್ಲೆಟ್ ಸಂಖ್ಯೆಯು ಒಂದು ಲಕ್ಷಕ್ಕಿಂತ ಕಡಿಮೆಯಿದ್ದರೆ ಗಂಭೀರ ಡೆಂಗಿಯೆಂದು ಪರಿಗಣಿಸಲಾಗುತ್ತದೆ. ರಕ್ತದೊತ್ತಡದಲ್ಲಿ ಇಳಿಕೆಯಾಗುವುದು ಹಾಗೂ ನಾಡಿಬಡಿತವು ದುರ್ಬಲವಾಗಿ, ಅದರ ಗತಿಯು ಹೆಚ್ಚುವುದು ಕೂಡ ಗಂಭೀರ ಡೆಂಗಿಯ ಲಕ್ಷಣಗಳಾಗಿವೆ.

ಪ್ಲೇಟ್ಲೆಟ್ ಇಳಿಕೆಯಾಗುವುದನ್ನೇ ಗಂಭೀರ ಸಮಸ್ಯೆಯೆಂದು ಹೇಳಲಾಗದು. ಹೆಚ್ಚಿನ ಡೆಂಗಿ ಸೋಂಕಿತರಲ್ಲಿ ಜ್ವರ ತೊಡಗಿದ 3-4 ದಿನಗಳಲ್ಲಿ ಪ್ಲೇಟ್ಲೆಟ್ ಕಣಗಳ ಸಂಖ್ಯೆಯು ಕಡಿಮೆಯಾಗುತ್ತದೆ, ಜ್ವರ ಬಿಟ್ಟ ಒಂದೆರಡು ದಿನಗಳಲ್ಲಿ ಅದು ಮತ್ತೆ ಮೇಲೇರುತ್ತದೆ. ಡೆಂಗಿ ಪೀಡಿತರಲ್ಲಿ ರಕ್ತದ ಪ್ಲೇಟ್ಲೆಟ್ ಪ್ರಮಾಣಕ್ಕೂ, ರಕ್ತಸ್ರಾವವಾಗುವ ಸಾಧ್ಯತೆಗಳಿಗೂ ನೇರ ಸಂಬಂಧವಿಲ್ಲ ಎನ್ನುವುದನ್ನು ಹಲವು ಅಧ್ಯಯನಗಳು ತೋರಿಸಿವೆ. (Transfus Med Hemother. 2013;40(5):362.,  PLoS Negl Trop Dis 2012;6(6): e1716., Clin Infect Dis. 2009;48(9):1262.)

ಹೆಚ್ಚಿನ ಡೆಂಗಿ ಸೋಂಕಿತರು ಯಾವುದೇ ಚಿಕಿತ್ಸೆಯಿಲ್ಲದೆ ಗುಣಮುಖರಾಗುತ್ತಾರೆ. ಒಂದಷ್ಟು ವಿಶ್ರಾಂತಿ, ಸಾಕಷ್ಟು ನೀರು ಹಾಗೂ ಆಹಾರವನ್ನು ಸೇವಿಸಿದರೆ ಸಾಕು. ಏರುಜ್ವರ, ಮೈಕೈ ನೋವು ಇತ್ಯಾದಿಗಳು ರೋಗರಕ್ಷಣಾ ವ್ಯವಸ್ಥೆಯ ಪ್ರತಿದಾಳಿಯ ಲಕ್ಷಣಗಳಾಗಿರುವುದರಿಂದ ಜ್ವರ ನಿವಾರಕ, ನೋವು ನಿವಾರಕ ಔಷಧಗಳನ್ನು ಸೇವಿಸದಿರುವುದೇ ಒಳ್ಳೆಯದು. ಕೆಲವೊಮ್ಮೆ, ವಿಶೇಷವಾಗಿ ಮಕ್ಕಳಲ್ಲಿ, ಈ ಔಷಧಗಳಿಂದಲೇ ತೊಂದರೆಗಳಾಗಬಹುದು.

ಗಂಭೀರ ಸೋಂಕಿನ ಲಕ್ಷಣಗಳಿದ್ದವರು ವೈದ್ಯರ ನಿಗಾವಣೆಯಲ್ಲಿರಬೇಕು. ರಕ್ತದ್ರವದ ಸೋರಿಕೆಯನ್ನು ತಡೆಯಲು ನಿರ್ದಿಷ್ಟ ಔಷಧಗಳಿಲ್ಲ; ಸ್ಟೀರಾಯ್ಡ್ ಗಳ ಬಳಕೆಯಿಂದ ಹಾನಿಯೇ ಆಗಬಹುದು. ರಕ್ತದೊತ್ತಡವು ಇಳಿಯುತ್ತಿದ್ದರೆ ಬಹು ಜಾಗ್ರತೆಯಿಂದ ದ್ರವ ಪೂರಣವನ್ನು ಮಾಡಬೇಕು, ಅದು ಅತಿಯಾದರೆ ಸಮಸ್ಯೆಗಳಾಗಬಹುದು. ತೀವ್ರ ರಕ್ತಸ್ರಾವವಿದ್ದರೆ ರಕ್ತವನ್ನು ಮರುಪೂರಣ ಮಾಡಬೇಕಾಗುತ್ತದೆ. ಪ್ಲೇಟ್ಲೆಟ್ ಕಡಿಮೆಯಿದ್ದವರಿಗೆ ಅದನ್ನು ಮರುಪೂರಣ ಮಾಡುವುದರಿಂದ ರಕ್ತಸ್ರಾವವನ್ನು ತಡೆಯುವುದಕ್ಕೆ ಸಾಧ್ಯವಿಲ್ಲ; ಬದಲಿಗೆ, ಗಂಭೀರ ಸಮಸ್ಯೆಗಳೇ ಆಗಬಹುದು. ವಿಶ್ವ ಆರೋಗ್ಯ ಸಂಸ್ಥೆಯಾಗಲೀ, ನಮ್ಮ ರಾಷ್ಟ್ರೀಯ ಕೀಟಜನ್ಯ ರೋಗ ನಿಯಂತ್ರಣ ಕಾರ್ಯಾಲಯವಾಗಲೀ ಯಾವುದೇ ಡೆಂಗಿ ಸೋಂಕಿತರಿಗೆ ಪ್ಲೇಟ್ಲೆಟ್ ಮರುಪೂರಣ ಮಾಡಬೇಕೆಂದು ಸೂಚಿಸಿಲ್ಲ.(WHO: http://goo.gl/DW4ai; NVBDCP: http://goo.gl/yp8DO1)

ಡೆಂಗಿಯ ಚಿಕಿತ್ಸೆ ಯಾ ತಡೆಗಟ್ಟುವಿಕೆಯಲ್ಲಿ ಯಾವುದೇ ಬದಲಿ ಚಿಕಿತ್ಸೆಗೆ ಸ್ಥಾನವಿಲ್ಲ. ಪಪ್ಪಾಯಿ ಹಣ್ಣು ಅಥವಾ ಅದರ ಎಲೆಗಳ ಅಗತ್ಯವೂ ಇಲ್ಲ.

ಡೆಂಗಿಯನ್ನು ಹರಡುವ ಈಡಿಸ್ ಸೊಳ್ಳೆಗಳು ಮನೆಯೊಳಗೂ, ಹೊರಗೂ, ಹಗಲಲ್ಲಿ (ಅದರಲ್ಲೂ ಮುಂಜಾನೆ ಹಾಗೂ ಮುಸ್ಸಂಜೆ) ಕೈಕಾಲುಗಳನ್ನು ಚುಚ್ಚುತ್ತವೆ. ನಮ್ಮ ದೇಹದ ವಾಸನೆಯೇ ಈ ಸೊಳ್ಳೆಗಳನ್ನು ಆಕರ್ಷಿಸುವುದರಿಂದ ಅದನ್ನು ಮರೆಸಬಲ್ಲ ಬೇವು, ನೀಲಗಿರಿ, ಮಜ್ಜಿಗೆ ಹುಲ್ಲು, ನಿಂಬೆ ಹುಲ್ಲು ಇತ್ಯಾದಿಗಳ ಎಣ್ಣೆಗಳನ್ನು ಲೇಪಿಸಿಕೊಂಡರೆ ಸೊಳ್ಳೆಗಳನ್ನು ದೂರವಿಡಲು ಸಾಧ್ಯವಿದೆ.

ಡೆಂಗಿ ಜ್ವರವು ಅತ್ಯಂತ ಸಾಮಾನ್ಯವಾದ ಸೋಂಕಾಗಿದ್ದು, ಹೆಚ್ಚಿನವರಲ್ಲಿ ಯಾವುದೇ ಚಿಕಿತ್ಸೆಯಿಲ್ಲದೆಯೇ ಗುಣಹೊಂದುವುದರಿಂದ ದುಬಾರಿ ಪರೀಕ್ಷೆಗಳೂ, ಪ್ಲೇಟ್ಲೆಟ್ ಮರುಪೂರಣದಂತಹ ಚಿಕಿತ್ಸೆಗಳೂ ಅಪಾಯಕಾರಿ ಪರಾಕ್ರಮಗಳೆನಿಸಬಹುದು. ಡೆಂಗಿಯಿಂದಾಗುವ ಸಾವುಗಳನ್ನು ತಪ್ಪಿಸಬೇಕಾದರೆ ತಾಳ್ಮೆಯಿಂದ, ಜಾಣ್ಮೆಯಿಂದ, ಜಾಗರೂಕತೆಯಿಂದ ವರ್ತಿಸಬೇಕು. ಸರಕಾರವೂ ವಸ್ತುನಿಷ್ಠ ಮಾಹಿತಿಯಾಧಾರದಲ್ಲಿ ಕಾರ್ಯ ನಿರ್ವಹಿಸಬೇಕು.

ಆರೋಗ್ಯ ಪ್ರಭ 5: ಗೊಂದಲ ಸೃಷ್ಟಿಸಿದ ಅಸ್ಪಷ್ಟ ಅಧಿನಿಯಮ [ಕನ್ನಡ ಪ್ರಭ, ಜುಲೈ 9, 2015, ಗುರುವಾರ]

ಹಳ್ಳಿಗಳಲ್ಲಿ ಆರೋಗ್ಯ ಸೇವೆಗಳು ಸೊರಗಿರುವುದಕ್ಕೆ ಕಿರಿಯ ವೈದ್ಯರು ಕಾರಣರೂ ಅಲ್ಲ, ಪರಿಹಾರವೂ ಅಲ್ಲ

ಕರ್ನಾಟಕದಲ್ಲಿ ಆಧುನಿಕ ವೈದ್ಯಶಿಕ್ಷಣವನ್ನು ಪಡೆಯುವ ಎಲ್ಲರಿಗೂ ಒಂದು ವರ್ಷದ ಸೇವಾ ತರಬೇತಿಯನ್ನು ಕಡ್ಡಾಯಗೊಳಿಸುವ ಅಧಿನಿಯಮವನ್ನು ಇದೇ ಜೂನ್ 3 ರಂದು ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ. ಗ್ರಾಮೀಣ ಆರೋಗ್ಯ ಸೇವೆಗಳಿಗೆ ಕಿರಿಯ ವೈದ್ಯರನ್ನು ಹೊಣೆಯಾಗಿಸುವ ಈ ಹಿಂದಿನ ಹಲವು ಪ್ರಯತ್ನಗಳು ವಿಫಲವಾಗಿರುವಾಗ, ಈ ಹೊಸ ಪ್ರಯತ್ನವೇನೂ ಭಿನ್ನವಾಗಿರದು.

ಈ ಅಧಿನಿಯಮದಂತೆ ರಾಜ್ಯದ ಎಲ್ಲ ವಿಶ್ವವಿದ್ಯಾನಿಲಯಗಳಿಂದ, ಅಂದರೆ ರಾಜೀವ ಗಾಂಧಿ ಆರೋಗ್ಯ ವಿವಿ ಹಾಗೂ ಎಲ್ಲ ಭಾವಿತ ವಿವಿಗಳಿಂದ, ಎಂಬಿಬಿಎಸ್ ಶಿಕ್ಷಣ ಪಡೆದವರನ್ನು ಗ್ರಾಮೀಣ ಪ್ರದೇಶಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಯಾ ಸರಕಾರಿ ಆಸ್ಪತ್ರೆಗಳಲ್ಲಿ, ಸ್ನಾತಕೋತ್ತರ ವೈದ್ಯರನ್ನು ನಗರಗಳ ಆಸ್ಪತ್ರೆಗಳಲ್ಲಿ ಮತ್ತು ಉನ್ನತ ತಜ್ಞರನ್ನು ಜಿಲ್ಲಾಸ್ಪತ್ರೆಗಳಲ್ಲಿ ಅರ್ಹತೆಯ ಆಧಾರದಲ್ಲಿ ನಿಯೋಜಿಸಲಾಗುತ್ತದೆ. ಇವರೆಲ್ಲರಿಗೂ ಆಯಾ ಶ್ರೇಣಿಯ ಸರಕಾರಿ ವೈದ್ಯರಿಗಿಂತ ನೂರು ರೂಪಾಯಿ ಕಡಿಮೆ ವೇತನವನ್ನು ನೀಡಲಾಗುತ್ತದೆ. ಎಂಬಿಬಿಎಸ್ ಮುಗಿದ ಕೂಡಲೇ ಉನ್ನತ ವ್ಯಾಸಂಗವನ್ನು ಮುಂದುವರಿಸುವವರು ಆ ಬಳಿಕ ನಗರಗಳಲ್ಲಿ ಕಡ್ಡಾಯ ಸೇವೆಗೆ ಸೇರಬೇಕು. ವಿವಿಯಿಂದ ಪದವಿಪತ್ರವೂ, ರಾಜ್ಯ ವೈದ್ಯಕೀಯ ಪರಿಷತ್ತಿನಿಂದ ಶಾಶ್ವತ ನೋಂದಣಿಯೂ ದೊರೆಯಬೇಕಿದ್ದರೆ ಈ ಕಡ್ಡಾಯ ಸೇವೆಯನ್ನು ಮಾಡಲೇಬೇಕು.

ಈ ಹೊಸ ನೀತಿಯನುಸಾರ, ಎಂಬಿಬಿಎಸ್ ವೈದ್ಯರೆಲ್ಲರೂ ಗ್ರಾಮೀಣ ಪ್ರದೇಶಗಳಿಗೆ ಹೋಗಬೇಕು, ತಜ್ಞ ವೈದ್ಯರು ನಗರಾಸ್ಪತ್ರೆಗಳಿಗೂ, ಜಿಲ್ಲಾಸ್ಪತ್ರೆಗಳಿಗೂ ಹೋದರೆ ಸಾಕು. ಆದರೆ ರಾಜ್ಯದ ಆರೋಗ್ಯ ಕೇಂದ್ರಗಳಿಗೂ, ಆಸ್ಪತ್ರೆಗಳಿಗೂ ಬೇಕಿರುವ ಎಂಬಿಬಿಎಸ್ ವೈದ್ಯರ ಸಂಖ್ಯೆ ಕೇವಲ 400, ಸ್ನಾತಕೋತ್ತರ ವೈದ್ಯರ ಸಂಖ್ಯೆ 1500! ರಾಜ್ಯದ 45 ವೈದ್ಯಕೀಯ ಕಾಲೇಜುಗಳು ಹಾಗೂ ಏಳು ಉನ್ನತ ವೈದ್ಯಕೀಯ ಸಂಸ್ಥೆಗಳಿಂದ ಪ್ರತಿ ವರ್ಷ ಹೊರಬರುತ್ತಿರುವ ಎಂಬಿಬಿಎಸ್ ವೈದ್ಯರು 6500, ಸ್ನಾತಕೋತ್ತರ ವೈದ್ಯರು 3100 ಹಾಗೂ ಉನ್ನತ ತಜ್ಞರು 170; ಇವರನ್ನೆಲ್ಲ ವರ್ಷವಿಡೀ ಎಲ್ಲಿ, ಹೇಗೆ ನಿಯೋಜಿಸಬೇಕೆನ್ನುವುದು ಸರಕಾರಕ್ಕೇ ಸ್ಪಷ್ಟವಿಲ್ಲ! ಒಟ್ಟು 5000 ಎಂಬಿಬಿಎಸ್ ವೈದ್ಯರನ್ನು ಸಮೀಕ್ಷೆಗಳಂತಹ ಅನ್ಯ ಕೆಲಸಗಳಿಗೆ ಬಳಸಿಕೊಳ್ಳಲಾಗುವುದೆಂದೂ, ಮಿಕ್ಕುಳಿದವರನ್ನು ಅನ್ಯ ರಾಜ್ಯಗಳಿಗೆ ಕಳುಹಿಸಲಾಗುವುದೆಂದೂ ಆರೋಗ್ಯ ಸಚಿವರು ಹೇಳಿದ್ದಾರೆ; ಆದರೆ ಇವರೆಲ್ಲರಿಗೆ ತಿಂಗಳಿಗೆ 54 ಸಾವಿರದಂತೆ ಒಂದು ವರ್ಷ ಯಾರು, ಯಾಕಾಗಿ ಸಂಬಳವನ್ನು ಕೊಡುತ್ತಾರೆ?

ಈ ಕಡ್ಡಾಯ ಸೇವೆಗಳಿಗೆ ಕಿರಿಯ ವೈದ್ಯರು ತಮ್ಮ ಅರ್ಹತೆಯ ಆಧಾರದಲ್ಲಿ ಆಸ್ಪತ್ರೆಗಳನ್ನು ಆಯ್ದುಕೊಳ್ಳಬಹುದು ಎಂದು ಅಧಿನಿಯಮದಲ್ಲಿ ಹೇಳಲಾಗಿದೆ. ಆದರೆ ಅಂತಹ ಅರ್ಹತೆ ಯಾವುದೆನ್ನುವುದು ಸ್ಪಷ್ಟವಿಲ್ಲ; ಎಂಬಿಬಿಎಸ್ ಯಾ ತದನಂತರದ ಪದವಿ ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳನ್ನು ಪರಿಗಣಿಸಲಾಗುತ್ತದೆಯೇ ಅಥವಾ ಅದಕ್ಕೆಂದೇ ಪ್ರತ್ಯೇಕ ಪರೀಕ್ಷೆಗಳನ್ನು ನಡೆಸಲಾಗುತ್ತದೆಯೇ? ಸರಕಾರಿ ಹಾಗೂ ಖಾಸಗಿ ಕಾಲೇಜುಗಳ ನಡುವೆ, ಸರಕಾರಿ ಹಾಗೂ ಭಾವಿತ ವಿವಿಗಳ ನಡುವೆ ಪರೀಕ್ಷೆಗಳ ಗುಣಮಟ್ಟದಲ್ಲೂ, ಅಂಕ ನೀಡುವಿಕೆಯಲ್ಲೂ ಸಾಕಷ್ಟು ವ್ಯತ್ಯಾಸಗಳಿರುವಾಗ ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಕಲಿತ ಪ್ರತಿಭಾವಂತ ವೈದ್ಯರ ಹಿತರಕ್ಷಣೆ ಹೇಗಾಗುತ್ತದೆ?

ಅತಿ ಪ್ರತಿಭಾವಂತರಾದ ಹಾಗೂ ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಕಲಿತ ಕಿರಿಯ ವೈದ್ಯರಿಗೆ ಈ ಅಧಿನಿಯಮದಿಂದ ಇನ್ನಷ್ಟು ಸಮಸ್ಯೆಗಳಾಗಬಹುದು. ಉದಾಹರಣೆಗೆ, ಎಂಬಿಬಿಎಸ್ ಮುಗಿದೊಡನೆ ರಾಷ್ಟ್ರ ಮಟ್ಟದ ಸ್ನಾತಕೋತ್ತರ ಪ್ರವೇಶ ಪರೀಕ್ಷೆಗಳ ಮೂಲಕ ಹೊರರಾಜ್ಯಗಳಲ್ಲಿ ಅಥವಾ ಬೆಂಗಳೂರಿನ ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಯಂತಹ ಸ್ವಾಯತ್ತ ವಿವಿಗಳಲ್ಲಿ ಸ್ಥಾನ ಪಡೆದವರಿಗೆ, ಇಲ್ಲಿ ಕೊಟ್ಟ ತಾತ್ಕಾಲಿಕ ಪದವಿಪತ್ರ ಹಾಗೂ ನೋಂದಣಿಗಳು ಅಡ್ಡಿಯಾಗಬಹುದು. ಸ್ನಾತಕೋತ್ತರ ವ್ಯಾಸಂಗದ ಬಳಿಕ ಈ ಅನ್ಯ ಸಂಸ್ಥೆಗಳು ಅವರಿಗೆ ಪದವಿಪತ್ರ ಯಾ ಶಾಶ್ವತ ನೋಂದಣಿ ನೀಡದಂತೆ ತಡೆಯಹೊರಟರೂ ಸಮಸ್ಯೆಗಳಾಗಬಹುದು.

ಈ ಅಧಿನಿಯಮವನ್ನು ಉಲ್ಲಂಘಿಸಿದವರು 15-30 ಲಕ್ಷ ದಂಡವನ್ನು ಪಾವತಿಸಬೇಕಾಗುತ್ತದೆ. ಆದರೆ ಕಡ್ಡಾಯ ಸೇವೆಯಿಲ್ಲದೆ ಪದವಿಪತ್ರವನ್ನೂ, ಶಾಶ್ವತ ನೋಂದಣಿಯನ್ನೂ ನೀಡುವುದೇ ಇಲ್ಲ ಎಂದ ಮೇಲೆ ದಂಡ ಪಾವತಿಸುವ ಅವಕಾಶವೇಕೆ? ಹಣವುಳ್ಳವರಿಗೆ ತಪ್ಪಿಸಿಕೊಳ್ಳಲು ಬಿಟ್ಟು, ಹಣವಿಲ್ಲದವರನ್ನೂ, ಪ್ರತಿಭಾವಂತರನ್ನೂ ಕಷ್ಟಕ್ಕೆ ತಳ್ಳುವುದು ಸರಕಾರದ ಉದ್ದೇಶವೇ?

ಒಟ್ಟಿನಲ್ಲಿ ಯಾರನ್ನು, ಯಾವಾಗ, ಯಾಕೆ, ಎಲ್ಲಿ, ಹೇಗೆ ನಿಯೋಜಿಸಬೇಕೆನ್ನುವುದನ್ನು ಸ್ಪಷ್ಟಪಡಿಸದ ಈ ಅಧಿನಿಯಮವು ಹಲವು ಸಂಶಯಗಳನ್ನು ಹುಟ್ಟಿಸುತ್ತದೆ. ಮಾತ್ರವಲ್ಲ, ಇನ್ನಷ್ಟು ಭ್ರಷ್ಟಾಚಾರಕ್ಕೆ ಬಾಗಿಲು ತೆರೆದು, ಪ್ರತಿಭಾವಂತರಿಗೂ, ಹಣವಿಲ್ಲದವರಿಗೂ ಕಷ್ಟಗಳನ್ನೊಡ್ಡುವ ಆತಂಕವನ್ನುಂಟು ಮಾಡುತ್ತದೆ. ಹಳ್ಳಿಗಳಲ್ಲಿ ಆರೋಗ್ಯ ಸೇವೆಯು ಸುಧಾರಿಸುವ ನಿರೀಕ್ಷೆಯಂತೂ ದೂರವೇ ಉಳಿಯುತ್ತದೆ.

ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆಗಳನ್ನೊದಗಿಸಲು ಕಿರಿಯ ವೈದ್ಯರನ್ನೇ ಅತ್ತ ದೂಡುವ ಪ್ರಯತ್ನಗಳು ಅರುವತ್ತರ ದಶಕದಿಂದಲೂ ನಡೆಯುತ್ತಿವೆ. ವೈದ್ಯವಿದ್ಯಾರ್ಥಿಗಳಿಗೆ ಸಾಮುದಾಯಿಕ ಆರೋಗ್ಯದಲ್ಲಿ ವಿಶೇಷ ತರಬೇತಿ ನೀಡಿ, ಕೆಲವು  ವಾರಗಳ ಕಾಲ ಗ್ರಾಮೀಣ ಪ್ರದೇಶಗಳಲ್ಲಿ ನಿಯೋಜಿಸುವ (ರೋಮ್) ಕಾರ್ಯಕ್ರಮವು 1977ರಿಂದಲೇ ಜಾರಿಯಲ್ಲಿದೆ. ಕಿರಿಯ ವೈದ್ಯರಿಗೆ ಒಂದರಿಂದ ಮೂರು ವರ್ಷಗಳವರೆಗಿನ ಕಡ್ಡಾಯ ಗ್ರಾಮೀಣ ಸೇವೆ, ತಪ್ಪಿಸಿಕೊಂಡವರಿಗೆ ದಂಡ, ದುಡಿದವರಿಗೆ ಶ್ರೇಯಾಂಕ ಯಾ ಸ್ನಾತಕೋತ್ತರ ಪ್ರವೇಶದಲ್ಲಿ ಮೀಸಲಾತಿ ಮುಂತಾದ ಹಲಬಗೆಯ ದಾನ-ದಂಡಗಳ ಯೋಜನೆಗಳನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಲವು ವರ್ಷಗಳಿಂದ ಬಳಸಿವೆ. ಆದರೆ ಇವುಗಳಿಂದ ನಿರೀಕ್ಷಿತ ಫಲವು ದೊರೆತೇ ಇಲ್ಲ. ಮೂರು ವರ್ಷಗಳ ಗ್ರಾಮೀಣ ವೈದ್ಯಕೀಯ ತರಬೇತಿಯ ಯೋಜನೆಯೂ ಅಲ್ಲಿಗೇ ನಿಂತಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಹಳ್ಳಿಗಳಲ್ಲಿ ಆಯುಷ್ ವೈದ್ಯರನ್ನು ನೇಮಿಸಿಯೂ ಪ್ರಯೋಜನವಾಗಿಲ್ಲ.

ಯಾವುದೋ ಸಮಸ್ಯೆಗೆ ಇನ್ಯಾವುದೋ ಪರಿಹಾರ, ಯಾರದೋ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಎನ್ನುವ ಸರಕಾರಿ ಧೋರಣೆಗಳು ಫಲ ನೀಡುವುದಕ್ಕೆ ಸಾಧ್ಯವೇ? ಹಳ್ಳಿಗಳಲ್ಲಿ ಶೇ. 80ರಷ್ಟು ವೈದ್ಯರ ಕೊರತೆ, ಶೇ. 53ರಷ್ಟು ದಾದಿಯರ ಕೊರತೆ, ಶೇ. 85ರಷ್ಟು ಪರೀಕ್ಷಾಲಯ ತಂತ್ರಜ್ಞರ ಕೊರತೆ ಇರುವುದಕ್ಕೆ, ಆರೋಗ್ಯ ಸೇವೆಗಳು ಒಟ್ಟಾರೆಯಾಗಿ ದುರ್ಲಭವಾಗಿರುವುದಕ್ಕೆ ಕಿರಿಯ ವೈದ್ಯರು ಯಾವ ರೀತಿಯಲ್ಲೂ ಕಾರಣರಲ್ಲ, ಅವರನ್ನು ಅಲ್ಲಿಗೆ ದೂಡಿ ಶಿಕ್ಷಿಸುವುದು ಅದಕ್ಕಿರುವ ಪರಿಹಾರವೂ ಅಲ್ಲ. ಹೆಚ್ಚಿನ ಸರಕಾರಗಳೇ ಹಳ್ಳಿಗಳತ್ತ ಬೆನ್ನು ತಿರುಗಿಸಿರುವಾಗ ಕಿರಿಯ ವೈದ್ಯರೆಲ್ಲರೂ ಅತ್ತ ಮುಖ ಮಾಡಬೇಕೆನ್ನುವುದು ಯಾವ ನ್ಯಾಯ?

ವರ್ಷದಿಂದ ವರ್ಷಕ್ಕೆ ಇಳಿಯುತ್ತಿರುವ ಸಾರ್ವಜನಿಕ ಆರೋಗ್ಯ ಅನುದಾನ, ರಾಷ್ಟ್ರೀಯ ಆರೋಗ್ಯ ಅಭಿಯಾನ ಮತ್ತಿತರ ಆರೋಗ್ಯ ಕಾರ್ಯಕ್ರಮಗಳಲ್ಲಿ ತುಂಬಿರುವ ಭ್ರಷ್ಟಾಚಾರ, ಆರೋಗ್ಯ ಸೇವೆ ಹಾಗೂ ವೈದ್ಯಕೀಯ ಶಿಕ್ಷಣಗಳ ಖಾಸಗೀಕರಣ, ಸರಕಾರಿ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಸೌಲಭ್ಯಗಳನ್ನೂ, ಅರೆ ವೈದ್ಯಕೀಯ ಸಿಬಂದಿಯನ್ನೂ ಒದಗಿಸುವಲ್ಲಿ ಅತೀವ ನಿರ್ಲಕ್ಷ್ಯ ಇತ್ಯಾದಿಗಳಿಂದಾಗಿ ದೇಶದ ಸಾರ್ವಜನಿಕ ಆರೋಗ್ಯ ಸೇವೆಗಳು ನೆಲಕಚ್ಚಿವೆ. ಹೊಸ ಅರ್ಥಿಕ ನೀತಿ, ನಗರೀಕರಣದ ಹುಚ್ಚು, ಕೃಷಿ ಹಾಗೂ ಗ್ರಾಮೀಣ ಕೈಗಾರಿಕೆಗಳತ್ತ ಅಸಡ್ಡೆ, ಗ್ರಾಮೀಣ ಪ್ರದೇಶಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿಯತ್ತ ನಿರ್ಲಕ್ಷ್ಯಗಳಿಂದಾಗಿ ಹಳ್ಳಿಗಳಲ್ಲಿ ಬದುಕುವುದೇ ದುಸ್ತರವಾಗುತ್ತಿದೆ, ಗ್ರಾಮೀಣವಾಸಿಗಳು ನಗರಗಳತ್ತ ವಲಸೆ ಹೋಗುತ್ತಿದ್ದಾರೆ. ಹಳ್ಳಿಗಳಲ್ಲಿ ಆರೋಗ್ಯ ಸೇವೆಗಳು ಬಾಧಿತವಾಗಿರುವುದಕ್ಕೆ ಇವೆಲ್ಲವೂ ಕಾರಣಗಳಾಗಿರುವಾಗ, ಕಿರಿಯ ವೈದ್ಯರನ್ನಷ್ಟೇ ಅದಕ್ಕೆ ಹೊಣೆಯಾಗಿಸಿ ಹರಕೆಯ ಕುರಿಗಳನ್ನಾಗಿಸುವುದು ಸರಿಯೇ?

ಗ್ರಾಮೀಣ ಸೇವೆಯು ಕಿರಿಯ ವೈದ್ಯರಿಗೆ ಕಟ್ಟಿಟ್ಟ ಬುತ್ತಿಯೇನೋ ಎಂಬಂತೆ ಎಲ್ಲರೂ ಅವರಿಗೆ ಉಪದೇಶ ಮಾಡುವವರೇ. ಮೂವತ್ತು ವರ್ಷಗಳ ಹಿಂದೆ ನಾವು ಎಂಬಿಬಿಎಸ್ ಓದುತ್ತಿದ್ದಾಗ ನಮ್ಮ ಪ್ರಾಂಶುಪಾಲರೂ ಇದನ್ನೇ ಬೋಧಿಸುತ್ತಿದ್ದರು; ಆದರೆ ತಮ್ಮ ಮಗನಿಗೆ ಗ್ರಾಮೀಣ ವಾಸ ಇಲ್ಲದಂತೆ ಅವರು ರಕ್ಷಿಸಿದ್ದರು! ಆ ಪ್ರಾಂಶಪಾಲರಿಗೆ ಹಿರಿಯ ವೈದ್ಯರೊಬ್ಬರು ನೀಡಿದ್ದ ಸಲಹೆ ಹೀಗಿತ್ತು: “ನಿಮ್ಮ ಮಗನಾಗಲೀ, ಅವನ ಸಹಪಾಠಿ ಕಿರಿಯ ವೈದ್ಯರಾಗಲೀ ಹಳ್ಳಿಗೆ ಹೋಗಬೇಕಾದದ್ದಲ್ಲ, ನೀವೂ, ನಾನೂ ಹೋಗಬೇಕು. ಆ ಕಿರಿಯರಿಗೆ ವೈದ್ಯವೃತ್ತಿಯ ಅನುಭವ ಇನ್ನಷ್ಟೇ ಆಗಬೇಕಿದೆ, ಜೀವನದಲ್ಲೂ ಸಾಧಿಸುವುದು ಬಹಳಷ್ಟಿದೆ. ನಿವೃತ್ತಿಯ ಹೊಸ್ತಿಲಲ್ಲಿರುವ ನಾವು ಹಳ್ಳಿಗಳಿಗೆ ಹೋಗೋಣ, ನಮ್ಮ ಅನುಭವದಿಂದಲೇ, ಎಕ್ಸ್ ರೇ ಇತ್ಯಾದಿ ಪರೀಕ್ಷೆಗಳ ಅಗತ್ಯವಿಲ್ಲದೆಯೇ, ಚಿಕಿತ್ಸೆ ನೀಡೋಣ”. ಆ ಸಲಹೆಯು ಇಂದಿಗೂ ಅತಿ ಪ್ರಶಸ್ತವಾಗಿದೆ.

ಹಳ್ಳಿಗಳಲ್ಲಿ ಆರೋಗ್ಯ ಸೇವೆಯು ಸುಧಾರಿಸಬೇಕಾದರೆ ಅಲ್ಲಿನ ಮೂಲ ಸೌಕರ್ಯಗಳ ಜೊತೆಗೆ ಆರೋಗ್ಯ ಕೇಂದ್ರಗಳ ಸೌಲಭ್ಯಗಳು ವೃದ್ಧಿಸಬೇಕು, ವೈದ್ಯರು ಮತ್ತಿತರ ಸಿಬಂದಿಗೆ ಎಲ್ಲ ಜೀವನಾವಶ್ಯಕ ಸೌಲಭ್ಯಗಳೂ, ಸುರಕ್ಷತೆಯೂ ದೊರೆಯಬೇಕು, ಆರೋಗ್ಯ ಅನುದಾನದಲ್ಲಾಗುತ್ತಿರುವ ಮಹಾ ಸೋರಿಕೆಗಳು ನಿಲ್ಲಬೇಕು. ಕಿರಿಯ ವೈದ್ಯರನ್ನು ತಾತ್ಕಾಲಿಕವಾಗಿ ಹಳ್ಳಿಗೆ ಹೋಗುವಂತೆ ಪೀಡಿಸುವ ಬದಲು ಅಥವಾ ಕಡಿಮೆ ಸಂಬಳಕ್ಕೆ ಆಯುಷ್ ಚಿಕಿತ್ಸಕರನ್ನು ನೇಮಿಸುವ ಬದಲು ಆಸಕ್ತ ಅಧುನಿಕ ವೈದ್ಯರನ್ನು ಅತ್ಯುತ್ತಮ ವೇತನವನ್ನಿತ್ತು ಶಾಶ್ವತವಾಗಿ ನಿಯೋಜಿಸಬೇಕು. ಸಾರ್ವಜನಿಕ ಆರೋಗ್ಯ ಸೇವೆಗಳಲ್ಲಿ ವಿಶ್ವಕ್ಕೇ ಮಾದರಿಯಾಗಿರುವ ಕೇರಳದಲ್ಲಿ ಇದು ಸಾಧ್ಯವಾಗಿರುವಾಗ ಕರ್ನಾಟಕದಲ್ಲೇಕೆ ಸಾಧ್ಯವಿಲ್ಲ?

ಆರೋಗ್ಯ ಪ್ರಭ 4: ವೈದ್ಯ ವಿಜ್ಞಾನ ಮೇಲೋ, ಪಶು ವಿಜ್ಞಾನ ಮೇಲೋ? [ಕನ್ನಡ ಪ್ರಭ, ಜೂನ್ 25, 2015, ಗುರುವಾರ]

ಪಶು ವಿಜ್ಞಾನದಲ್ಲಿ ಆಸಕ್ತಿಯುಳ್ಳವರಿಗೆ ಅಪರಿಮಿತ ಅವಕಾಶಗಳಿವೆ, ಇನ್ನೊಂದೆಡೆ ಖಾಸಗೀಕರಣದಿಂದಾಗಿ ವೈದ್ಯ ವಿಜ್ಞಾನವು ಕಳೆಗೆಡತೊಡಗಿದೆ.

“ಡಾಕ್ಟ್ರೇ, ನನ್ನ ಮಗಳಿಗೆ ಸ್ವಲ್ಪ ಬುದ್ಧಿ ಹೇಳಿ, ಗೋ ಡಾಕ್ಟ್ರಾಗ್ಬೇಕಂತೆ ಇವ್ಳಿಗೆ, ಎಂಬಿಬಿಎಸ್ ಆದ್ರೆ ಮಾಡು, ಅದಾಗದಿದ್ರೆ ಆಯುರ್ವೇದ ಆದ್ರೂ ಪರ್ವಾಗಿಲ್ಲ ಅಂದರೆ ಕೇಳೋದೇ ಇಲ್ಲ, ನೀವಾದ್ರೂ ಸ್ವಲ್ಪ ಹೇಳಿ” ಅಂತ ಅಮ್ಮನ ಗೋಗರೆತ ಸಾಗಿತ್ತು.

“ಗೋ ಡಾಕ್ಟ್ರೇ ಆಗ್ಲಿ ಬಿಡಿ, ಏನೀಗ?” ಅಂದೆ.

ಮಗಳ ಮುಖ ಅಷ್ಟಗಲ ಅರಳಿತು, ಅಮ್ಮನ ಭಯ ಹೆಚ್ಚಿತು.

“ಛೇ, ಏನು ಹೇಳ್ತಾ ಇದೀರಿ ಡಾಕ್ಟ್ರೇ ನೀವು, ಒಳ್ಳೆ ಡಾಕ್ಟ್ರಾಗಿ ಮನುಷ್ಯರ ಸೇವೆ ಮಾಡ್ಲಿ ಅಂದ್ರೆ ನೀವೂ ಅವ್ಳ ಪರವಾಗಿಯೇ ನಿಂತು ಬಿಟ್ರಲ್ಲ, ನಿಮ್ಮತ್ರ ಕೇಳಿದ್ದೇ ತಪ್ಪಾಯ್ತು” ಎಂದರವರು.

ಮೊದಲನೆಯದಾಗಿ, ವಿದ್ಯಾರ್ಥಿಗೆ ಯಾವುದರಲ್ಲಿ ಆಸಕ್ತಿ ಇದೆಯೋ ಅದನ್ನೇ ಕಲಿಯುವಂತೆ ಪ್ರೋತ್ಸಾಹಿಸುವುದು ಒಳ್ಳೆಯದು. ಹೆತ್ತವರೂ, ಶಿಕ್ಷಕರೂ ಮಗುವಿನ ಆಸಕ್ತಿಯನ್ನು ಗುರುತಿಸಿ, ಪೋಷಿಸಬೇಕು. ಹೆತ್ತವರ ಆಸೆಗಳನ್ನು ಪೂರೈಸುವುದಕ್ಕೆ, ನೆರೆಹೊರೆಯವರ ಯಾ ಬಂಧುಮಿತ್ರರ ಬಾಯಿ ಮುಚ್ಚಿಸುವುದಕ್ಕೆ, ಅಥವಾ ಪ್ರತಿಷ್ಠೆ ಮೆರೆಸುವುದಕ್ಕೆ ಯಾವುದೇ ಶಿಕ್ಷಣವನ್ನು ಮಕ್ಕಳ ಮೇಲೆ ಹೇರಬಾರದು. ತಮ್ಮ ಸಂಪತ್ತು-ಅಂತಸ್ತುಗಳಿಗೆ ತಕ್ಕಂತೆ ಸೀಟು ಖರೀದಿಸಿ ಮಕ್ಕಳನ್ನು ಅದಕ್ಕೆ ದೂಡುವುದೂ ಸರಿಯಲ್ಲ. ಈ ಹುಡುಗಿಗೆ ಪಶು ವೈದ್ಯ ವಿಜ್ಞಾನದಲ್ಲೇ ಅತ್ಯಾಸಕ್ತಿ ಎಂದಾದರೆ ಅವಳು ಅದನ್ನೇ ಕಲಿಯಬೇಕು.

ಎರಡನೆಯದಾಗಿ, ಆಯ್ದುಕೊಳ್ಳುವ ವೃತ್ತಿ ಶಿಕ್ಷಣವು ಹೇಗಿರಬೇಕೆಂದರೆ ಜೀವನ ಪರ್ಯಂತ ಕಲಿಕೆಗೆ, ವಿಶೇಷ ಅಧ್ಯಯನಕ್ಕೆ, ಹೊಸ ಅನ್ವೇಷಣೆಗೆ, ವಿಶ್ವದ ಯಾವುದೇ ಮೂಲೆಯಲ್ಲಿ ಉದ್ಯೋಗಕ್ಕೆ ಅದರಲ್ಲಿ ಅವಕಾಶಗಳಿರಬೇಕು. ಹಿಂದೆಂದೋ ಸ್ಥಗಿತವಾದುದನ್ನು ಕಲಿಯುವುದಕ್ಕಿಂತ ಸದಾ ಚಲನಶೀಲವಾಗಿರುವುದನ್ನು, ಮುಂದೆಯೂ ಬಹಳಷ್ಟು ಬೆಳೆಯುವ ಸಾಧ್ಯತೆಗಳಿರುವುದನ್ನು ಕಲಿಯುವುದೊಳ್ಳೆಯದು. ಈ ದೃಷ್ಟಿಯಿಂದ, ಆಧುನಿಕ ವೈದ್ಯ ವಿಜ್ಞಾನವೂ, ಪಶು ವೈದ್ಯ ವಿಜ್ಞಾನವೂ ಸರಿಸಾಟಿಯೆನಿಸುತ್ತವೆ, ಅಥವಾ ಪಶು ವಿಜ್ಞಾನವೇ ತುಸು ಮಿಗಿಲೆಂದರೂ ತಪ್ಪಾಗದು; ಬದಲಿ ವೈದ್ಯಪದ್ಧತಿಗಳು ಇಲ್ಲಿ ಸೋಲುತ್ತವೆ.

ಮೂರನೆಯದಾಗಿ, ಸಹಪಾಠಿಗಳು ಚತುರರಿದ್ದರೆ, ಶಿಕ್ಷಕರು ಸಮರ್ಥರೂ, ಆಸಕ್ತರೂ ಆಗಿದ್ದರೆ ಕಲಿಕೆಯು ಹೆಚ್ಚು ಆಸಕ್ತಿದಾಯಕವಾಗಿರುತ್ತದೆ, ಸ್ಪರ್ಧಾತ್ಮಕವಾಗಿರುತ್ತದೆ, ಇನ್ನಷ್ಟು ಕಲಿಕೆಗೆ ಪ್ರೇರಣೆಯಾಗುತ್ತದೆ. ಖಾಸಗಿ ಸಂಸ್ಥೆಗಳಿಗೆ ಹೋಲಿಸಿದರೆ ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಈ ಸಾಧ್ಯತೆಗಳು ಹೆಚ್ಚಿರುತ್ತವೆ; ಪಶು ವಿಜ್ಞಾನ ಸಂಸ್ಥೆಗಳಿಗೂ ಇದು ಅನ್ವಯಿಸುತ್ತದೆ.

ಪಶು ವಿಜ್ಞಾನವು ಹೊಸತೇನಲ್ಲ. ಮನುಷ್ಯರು ಪ್ರಾಣಿ-ಪಕ್ಷಿಗಳನ್ನು ಪಳಗಿಸಿ, ಜೊತೆಗಿಟ್ಟು ಸಾಕತೊಡಗಿದಲ್ಲಿಂದ ಅವರುಗಳ ರೋಗಗಳೂ, ಚಿಕಿತ್ಸೆಗಳೂ ಜೊತೆ ಜೊತೆಗೆ ಸಾಗಿವೆ. ಬೇಟೆಗೆ ಜೊತೆಯಾಗಲೆಂದು ಮೊದಲು ಸಾಕತೊಡಗಿದ್ದು ನಾಯಿಗಳನ್ನು, ಸುಮಾರು 15 ಸಾವಿರ ವರ್ಷಗಳ ಹಿಂದೆ. ನಂತರ, 8-10 ಸಾವಿರ ವರ್ಷಗಳ ಹಿಂದೆ, ಕುರಿ, ಮೇಕೆ, ಆಕಳು ಹಾಗೂ ಹಂದಿಗಳನ್ನು ಆಹಾರಕ್ಕಾಗಿ ಸಾಕುವುದಾಯಿತು. ಆರೇಳು ಸಾವಿರ ವರ್ಷಗಳ ಹಿಂದೆ ಕುದುರೆ-ಕತ್ತೆಗಳ ಸಾಕಣೆಯೂ ತೊಡಗಿತು. ನಾಲ್ಕೈದು ಸಾವಿರ ವರ್ಷಗಳಿಂದ ಬೆಕ್ಕುಗಳು ಜೊತೆಯಾದವು, ಪಕ್ಷಿ ಸಾಕಣೆಯೂ ಸೇರಿಕೊಂಡಿತು. ನಂತರ ಆನೆ, ಒಂಟೆಗಳ ಸಾಕುವಿಕೆಯೂ ಬಂತು. ಈ ಸಹಬಾಳ್ವೆಯಿಂದ ಪ್ರಾಣಿ-ಪಕ್ಷಿಗಳ ಸೋಂಕುಗಳು ಮನುಷ್ಯರೊಳಕ್ಕೆ ಹೊಕ್ಕತೊಡಗಿದವು, ಈಗಲೂ ಹೊಕ್ಕುವುದಿದೆ.

ಹತ್ತು-ಹನ್ನೆರಡು ಸಾವಿರ ವರ್ಷಗಳ ಹಿಂದೆ ಹುಲ್ಲುಗಳನ್ನು ಬೆಳೆಸಿ, ಅವುಗಳ ಧಾನ್ಯಗಳನ್ನು ತಿನ್ನತೊಡಗಿದ ಬಳಿಕ ಮಧುಮೇಹ, ಮೂಳೆ ಸವೆತ, ರಕ್ತನಾಳಗಳ ಕಾಯಿಲೆ ಇತ್ಯಾದಿ ಆಧುನಿಕ ರೋಗಗಳೆಲ್ಲ ಹುಟ್ಟಿಕೊಂಡವು; ಸಾಕು ಪ್ರಾಣಿಗಳಿಗೂ ಈ ಧಾನ್ಯಗಳನ್ನೇ ತಿನ್ನಿಸತೊಡಗಿದಾಗ, ಅವಕ್ಕೂ ಈ ರೋಗಗಳು ತಗಲತೊಡಗಿದವು. ಕೃಷಿಗಾಗಿ ಕಾಡುಗಳನ್ನು ಒತ್ತರಿಸಿದ್ದರಿಂದ ಕಾಡು ಪ್ರಾಣಿಗಳಲ್ಲಿದ್ದ ಸೋಂಕುಗಳು ಮನುಷ್ಯರನ್ನೂ, ಸಾಕು ಪ್ರಾಣಿಗಳನ್ನೂ ಹೊಕ್ಕಿದವು, ಇಂದಿಗೂ ಹೊಕ್ಕುತ್ತಿವೆ. ಇನ್ನು ಆಸ್ತಿಪಾಸ್ತಿಗಳು ಹುಟ್ಟಿ, ರಾಜ್ಯ-ದೇಶಗಳು ಬೆಳೆದು, ಹೊಡೆದಾಟ-ಯುದ್ಧಗಳು ಹೆಚ್ಚಿದಂತೆ  ಮನುಷ್ಯರಲ್ಲೂ, ಪ್ರಾಣಿಗಳಲ್ಲೂ ಗಾಯಗಳಾಗುವುದೂ ಹೆಚ್ಚಿತು.

ಹೀಗೆ ಮನುಷ್ಯರು ಹಾಗೂ ಪ್ರಾಣಿ-ಪಕ್ಷಿಗಳು ರೋಗಗಳನ್ನು ಪರಸ್ಪರ ಹಂಚಿಕೊಂಡಂತೆ, ಚಿಕಿತ್ಸಾಕ್ರಮಗಳನ್ನೂ ಹಂಚಿಕೊಳ್ಳುವುದಾಯಿತು. ಆ ಕಾಲದಲ್ಲಿ ಮನುಷ್ಯರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರೇ ಪಶುಗಳಿಗೂ ಚಿಕಿತ್ಸೆ ನೀಡುತ್ತಿದ್ದರು; ಕುದುರೆ, ಆನೆ ಹಾಗೂ ಆಕಳ ಚಿಕಿತ್ಸೆಗಳಲ್ಲಿ ವಿಶೇಷ ಪರಿಣತರೂ ಕೆಲವರಿದ್ದರು. ಚಂದ್ರ ಗುಪ್ತ ಹಾಗೂ ಅಶೋಕ ಚಕ್ರವರ್ತಿಯ ಆಡಳಿತಗಳಲ್ಲಿ ಪಶು ಆಸ್ಪತ್ರೆಗಳೂ ಇದ್ದವಂತೆ. ಪೋರ್ಚುಗೀಸರು ಮತ್ತು ಬ್ರಿಟಿಷರು ಭಾರತದಲ್ಲಿ ತಮ್ಮ ಸೈನಿಕರಿಗಾಗಿಯೂ, ನಂತರ ಸ್ಥಳೀಯರಿಗಾಗಿಯೂ ಆಧುನಿಕ ಆಸ್ಪತ್ರೆಗಳನ್ನು ತೆರೆದಾಗ, ತಮ್ಮ ಸೇನೆಯಲ್ಲಿದ್ದ ಕುದುರೆಗಳಿಗಾಗಿ ಹಾಗೂ ಇತರ ಪಶುಗಳ ಆರೈಕೆಗಾಗಿ ಪಶು ಚಿಕಿತ್ಸಾಲಯಗಳನ್ನೂ ತೆರೆದರು. ಉದಾಹರಣೆಗೆ, 1772ರಲ್ಲಿ ಮದ್ರಾಸಿನ ಆಸ್ಪತ್ರೆ ಆರಂಭಗೊಂಡರೆ, 1780 ರಲ್ಲಿ ಪಶು ಚಿಕಿತ್ಸಾಲಯವು ಆರಂಭಗೊಂಡಿತು; 1835ರಲ್ಲಿ ಕೊಲ್ಕತಾದ ವೈದ್ಯಕೀಯ ಕಾಲೇಜು ತೆರೆದರೆ, 1862ರಲ್ಲಿ ಪುಣೆಯ ಪಶು ವೈದ್ಯ ಶಿಕ್ಷಣ ಸಂಸ್ಥೆ ಆರಂಭಗೊಂಡಿತು. ಇಪ್ಪತ್ತನೇ ಶತಮಾನದ ಮೊದಲವರೆಗೆ ವೈದ್ಯ ವಿಜ್ಞಾನದ ಸಂಸ್ಥೆಗಳಲ್ಲೂ, ಸಮಾವೇಶಗಳಲ್ಲೂ ಪಶು ಚಿಕಿತ್ಸಕರು ಭಾಗವಹಿಸುವುದು ಅತ್ಯಂತ ಸಾಮಾನ್ಯವಾಗಿತ್ತು.

ಇಂದು ವೈದ್ಯ ವಿಜ್ಞಾನ ಹಾಗೂ ಪಶು ವಿಜ್ಞಾನಗಳು ಪ್ರತ್ಯೇಕ ಶಾಖೆಗಳಾಗಿ ಬೃಹತ್ತಾಗಿ ಬೆಳೆದಿವೆಯಾದರೂ, ಅವುಗಳೊಳಗಿನ ನಂಟು ಹಾಗೆಯೇ ಮುಂದುವರಿದಿದೆ. ವೈದ್ಯ ವಿಜ್ಞಾನದ ಎಲ್ಲಾ ಸಂಶೋಧನೆಗಳಲ್ಲಿ ಪಶು ವಿಜ್ಞಾನಕ್ಕೆ ಮಹತ್ವದ ಪಾತ್ರವಿದೆ. ಮನುಷ್ಯರನ್ನು ಕಾಡುವ ವಿವಿಧ ರೋಗಗಳ ಅಧ್ಯಯನಗಳಲ್ಲಿ, ಹೊಸ ಔಷಧಗಳು ಹಾಗೂ ಚಿಕಿತ್ಸಾಕ್ರಮಗಳ ಸಂಶೋಧನೆಗಳಲ್ಲಿ ಇವೆರಡೂ ಜೊತೆಯಾಗಿ ದುಡಿಯುತ್ತಿವೆ. ವೈದ್ಯ ವಿಜ್ಞಾನದಲ್ಲಿ ಬಳಕೆಯಾಗುವ ಅತ್ಯಾಧುನಿಕ ತಂತ್ರಜ್ಞಾನಗಳು ಮತ್ತು ಔಷಧಗಳು ಪಶುಗಳ ಚಿಕಿತ್ಸೆಯಲ್ಲೂ ಬಳಕೆಯಾಗುತ್ತಿವೆ. ಆದ್ದರಿಂದ ಇವೆಲ್ಲವನ್ನೂ ಕಲಿಯುವ, ಬಳಸುವ, ಬೆಳೆಸುವ ಅವಕಾಶಗಳು ಪಶು ವಿಜ್ಞಾನದ ವಿದ್ಯಾರ್ಥಿಗಳಿಗೂ ಯಥೇಷ್ಟವಾಗಿ ದೊರೆಯುತ್ತವೆ.

ನಮ್ಮಲ್ಲಿ ಪಶು ವಿಜ್ಞಾನ ಶಿಕ್ಷಣದ ಗುಣಮಟ್ಟವು ವೈದ್ಯಕೀಯ ಶಿಕ್ಷಣಕ್ಕಿಂತ ಮಿಗಿಲಾಗಿದೆ. ವೈದ್ಯಕೀಯ ಶಿಕ್ಷಣದ ಖಾಸಗೀಕರಣದಿಂದಾಗಿ ಕಲಿಸುವವರು ಮತ್ತು ಕಲಿಯುವವರ ಅನಾಸಕ್ತಿ ಹೆಚ್ಚುತ್ತಿದೆ, ಎಲ್ಲರನ್ನೂ ಸುಲಭದಲ್ಲಿ ತೇರ್ಗಡೆಗೊಳಿಸಲು ವೈದ್ಯ ಶಿಕ್ಷಣವನ್ನೇ ಅತಿ ಸರಳ-ಸುಲಭಗೊಳಿಸಲಾಗುತ್ತಿದೆ, ಕಲಿಯಬೇಕಾದದ್ದು ಹೆಚ್ಚುತ್ತಿರುವಾಗ ಕಲಿಯುವ ಅಗತ್ಯವಿಲ್ಲ ಎನ್ನುವ ವಾತಾವರಣವು ಅಲ್ಲಿ ಬೆಳೆಯುತ್ತಿದೆ. ಪಶು ವೈದ್ಯಕೀಯ ಕಾಲೇಜುಗಳ ಸ್ಥಿತಿಯು ಇದಕ್ಕೆ ವ್ಯತಿರಿಕ್ತವಾಗಿದೆ. ದೇಶದಲ್ಲೀಗ 44 ಪಶು ವೈದ್ಯಕೀಯ ಕಾಲೇಜುಗಳಿವೆ. ನಮ್ಮ ರಾಜ್ಯದಲ್ಲಿ ನಾಲ್ಕು ಕಾಲೇಜುಗಳಿದ್ದು, 50 ವರ್ಷಗಳಿಗೂ ಹಳೆಯದಾದ ಬೆಂಗಳೂರಿನ ಪಶು ವಿಜ್ಞಾನ ಸಂಸ್ಥೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದಿದೆ. ಈ ಸಂಸ್ಥೆಗಳಲ್ಲಿ ಹಣ ಕೊಟ್ಟು ಸೇರುವವರಿಲ್ಲ; ಎಲ್ಲರೂ ಪಶು ವಿಜ್ಞಾನದಲ್ಲಿ ಅತ್ಯಾಸಕ್ತರಾಗಿದ್ದು, ಸ್ವಂತ ಪ್ರತಿಭೆಯಿಂದ, ಶ್ರಮದಿಂದ ಸೀಟು ಪಡೆದ ವಿದ್ಯಾರ್ಥಿಗಳೇ ಆಗಿರುತ್ತಾರೆ. ಆದ್ದರಿಂದ ಎಲ್ಲರ ಕಲಿಕೆಯೂ ಆಸಕ್ತಿದಾಯಕವಾಗಿರುತ್ತದೆ, ಸ್ಪರ್ಧಾತ್ಮಕವಾಗಿರುತ್ತದೆ. ಬೆಂಗಳೂರಿನ ಪಶು ವಿಜ್ಞಾನ ಸಂಸ್ಥೆಯ ಹಿರಿಯ ಪ್ರಾಧ್ಯಾಪಕರೊಬ್ಬರು ಹೇಳುವಂತೆ, ಪಶು ವಿಜ್ಞಾನದ ಪಠ್ಯಗಳಲ್ಲಿ ಅತ್ಯಾಧುನಿಕ ವಿಷಯಗಳನ್ನೂ, ತಂತ್ರಜ್ಞಾನಗಳನ್ನೂ ಸತತವಾಗಿ ಸೇರಿಸಿ, ವಿದ್ಯಾರ್ಥಿಗಳಿಗೆ ಅತ್ಯುತ್ತಮ ತರಬೇತಿಯನ್ನು ನೀಡಲಾಗುತ್ತಿದೆ. ಆ ಸಂಸ್ಥೆಗಳಲ್ಲಿ ಶಿಕ್ಷಕರಾಗಿರುವವರಲ್ಲಿ ಹೆಚ್ಚಿನವರು  ಪಶು ವಿಜ್ಞಾನದಲ್ಲಿ ಅತೀವ ಆಸಕ್ತಿಯನ್ನೂ, ಪರಿಣತಿಯನ್ನೂ ಹೊಂದಿರುವವರೇ ಆಗಿರುವುದರಿಂದ ಶಿಕ್ಷಣದ ಗುಣಮಟ್ಟವೂ ಅತ್ಯುತ್ತಮವಾಗಿ ಉಳಿದಿದೆ.

ಪಶು ವಿಜ್ಞಾನದಲ್ಲಿ ತರಬೇತಾದವರಿಗೆ ಅವಕಾಶಗಳೂ ಹೆಚ್ಚು. ವೈದ್ಯ ವಿಜ್ಞಾನದ ವಿದ್ಯಾರ್ಥಿಗಳು ವೈದ್ಯರಾಗಿ ವಿವಿಧ ಶಾಖೆಗಳಲ್ಲಿ ಉನ್ನತ ಪರಿಣತಿಯನ್ನು ಪಡೆಯಬಹುದು ಅಥವಾ ಜೀವ ವಿಜ್ಞಾನ, ವೈದ್ಯಕೀಯ ತಂತ್ರಜ್ಞಾನ ಅಥವಾ ಔಷಧ ವಿಜ್ಞಾನಗಳಲ್ಲಿ ಅತ್ಯಾಧುನಿಕ ಸಂಶೋಧನೆಗಳಲ್ಲಿ ಪಾಲ್ಗೊಳ್ಳಬಹುದು. ಪಶು ವಿಜ್ಞಾನದ ವಿದ್ಯಾರ್ಥಿಗಳಿಗೆ ಪಶು ರೋಗ ಪತ್ತೆ ಹಾಗೂ ಚಿಕಿತ್ಸೆಗಳಲ್ಲದೆ ಪಶು ಸಂಗೋಪನೆ, ಹೈನುಗಾರಿಕೆ, ಕೋಳಿ ಇತ್ಯಾದಿ ಪಕ್ಷಿಗಳ ಸಾಕಣೆ, ಮೊಟ್ಟೆ ಹಾಗೂ ಮಾಂಸೋತ್ಪಾದನೆ, ಮತ್ಸ್ಯೋದ್ಯಮ, ಕ್ಷೀರೋದ್ಯಮ, ಆಹಾರೋದ್ಯಮ, ಆಹಾರ ಸುರಕ್ಷತೆ, ವನ್ಯಜೀವಿ ಸಂರಕ್ಷಣೆ ಮತ್ತು ಚಿಕಿತ್ಸೆ, ಮೃಗಾಲಯಗಳ ಉಸ್ತುವಾರಿ, ಔಷಧ ಸಂಶೋಧನೆ, ರೋಗ ಪತ್ತೆಯ ವಿಧಾನಗಳ ಅಭಿವೃದ್ಧಿ ಮುಂತಾದ ಅಸಂಖ್ಯಾತ ಅವಕಾಶಗಳು ಲಭ್ಯವಿವೆ. ರಾಷ್ಟ್ರೀಯ ಉತ್ಪನ್ನದ ಶೇ. 4 ರಷ್ಟಿರುವ ಪಶು ಸಂಗೋಪನೆಯು ವರ್ಷಕ್ಕೆ 3 ಲಕ್ಷ ಕೋಟಿ ಮೌಲ್ಯದ ವಹಿವಾಟನ್ನು ಹೊಂದಿದೆ. ದೇಶದಲ್ಲಿಂದು 1.2 ಲಕ್ಷ ಪಶು ವೈದ್ಯ ವೈದ್ಯರ  ಆಗತ್ಯವಿರುವಲ್ಲಿ ಅದರ ಅರ್ಧದಷ್ಟು, ಅಂದರೆ 63 ಸಾವಿರದಷ್ಟು, ಮಾತ್ರವೇ ಲಭ್ಯರಿದ್ದಾರೆ. ಆದ್ದರಿಂದಲೇ, ಪಶು ವಿಜ್ಞಾನದಲ್ಲಿ ತರಬೇತಾಗುತ್ತಿರುವವರಲ್ಲಿ ಶೇ. 95ಕ್ಕೂ ಹೆಚ್ಚಿನವರು ಕೂಡಲೇ ಉದ್ಯೋಗವನ್ನು ಪಡೆಯುತ್ತಿದ್ದಾರೆ. ಅಲ್ಲದೆ, ಮುದ್ದು ಪ್ರಾಣಿಗಳ ಆರೈಕೆ ಮಾಡುವ ಖಾಸಗಿ ವೃತ್ತಿಯನ್ನೂ ಅವರು ನಡೆಸಬಹುದಾಗಿದೆ, ಮುದ್ದು ಪ್ರಾಣಿಗಳ ದಂತ ಚಿಕಿತ್ಸೆ, ಶಸ್ತ್ರ ಚಿಕಿತ್ಸೆ ಮುಂತಾದ ಹೊಸ, ಅತ್ಯಾಸಕ್ತಿಯ ಸಾಧ್ಯತೆಗಳೂ ತೆರೆದುಕೊಳ್ಳುತ್ತಿವೆ.

ಅಂತೂ ನಮ್ಮ ದೇಶದಲ್ಲಿ ಪಶು ವಿಜ್ಞಾನದಲ್ಲಿ ಆಸಕ್ತಿಯುಳ್ಳವರಿಗೆ ಸರಕಾರಿ ಸಂಸ್ಥೆಗಳಲ್ಲಿ ಒಳ್ಳೆಯ ತರಬೇತಿಯೂ, ಅತ್ಯುತ್ತಮ ಅವಕಾಶಗಳೂ ಲಭ್ಯವಿದ್ದರೆ, ಖಾಸಗೀಕರಣಕ್ಕೆ ಸಿಲುಕಿರುವ ವೈದ್ಯ ವಿಜ್ಞಾನವು ಕಳೆಗೆಡತೊಡಗಿದೆ.

ಆರೋಗ್ಯ ಪ್ರಭ 3: ಶ್ಯಾವಿಗೆಯ ಎಳೆಗಳಲ್ಲಿ ಉದ್ದುದ್ದ ಪ್ರಶ್ನೆಗಳು [ಕನ್ನಡ ಪ್ರಭ, ಜೂನ್ 11, 2015, ಗುರುವಾರ]

ಆಹಾರವು ಸುರಕ್ಷಿತವಾಗಬೇಕಾದರೆ ಹೊಲದಿಂದ ಹೊಟ್ಟೆಯವರೆಗೆ ಅದರ ಸ್ವಚ್ಛತೆಯನ್ನು ಕಾಯಬೇಕಾಗುತ್ತದೆ

ಮೂವತ್ಮೂರು ವರ್ಷಗಳಿಂದ ಭಾರತದ ಮೂಲೆಮೂಲೆಗಳಲ್ಲಿ ಎರಡೇ ನಿಮಿಷಗಳಲ್ಲಿ ಬೇಯುತ್ತಿದ್ದ ಮ್ಯಾಗಿ ಎಂಬ ಶ್ಯಾವಿಗೆಯು ಈಗ ನಿಷೇಧಕ್ಕೊಳಗಾಗಿದೆ. ಇದು ಆಹಾರ ಸುರಕ್ಷತೆಯ ವಿವಿಧ ಸಮಸ್ಯೆಗಳ ಬಗ್ಗೆ ದೊಡ್ಡ ರಣಗಂಟೆಯನ್ನೇ ಬಾರಿಸಿದೆ. ಆ ಶ್ಯಾವಿಗೆಯ ಸುರುಳಿ ಸುತ್ತಿದ ಉದ್ದುದ್ದ ಎಳೆಗಳಂತೆಯೇ, ಎಲ್ಲಿಂದೆಲ್ಲಿಗೋ ಎಳೆಯುವ ಉದ್ದುದ್ದ ಪ್ರಶ್ನೆಗಳೂ ಏಳತೊಡಗಿವೆ. ‘ತೋಟದಿಂದ ತಟ್ಟೆಯವರೆಗೆ ಆಹಾರವು ಸುರಕ್ಷಿತವಾಗಿರಲಿ’ ಎಂಬ 2015ರ ವಿಶ್ವ ಆರೋಗ್ಯ ದಿನದ ಧ್ಯೇಯಘೋಷದ ಮಹತ್ವವು ಎರಡೇ ತಿಂಗಳಲ್ಲಿ ಅರಿವಾಗುವಂತಾಗಿದೆ.

ಉತ್ತರ ಪ್ರದೇಶದಲ್ಲಿ ಮಾರಲಾಗುತ್ತಿದ್ದ ಮ್ಯಾಗಿಯಲ್ಲಿ ಸಮಸ್ಯೆಯನ್ನು ಗುರುತಿಸಿದ್ದು 15 ತಿಂಗಳ ಹಿಂದೆ! ಬಾರಾಬಂಕಿಯ ಅಂಗಡಿಗಳಿಂದ ಮಾರ್ಚ್ 10, 2014ರಂದು ಸಂಗ್ರಹಿಸಲಾಗಿದ್ದ ಮ್ಯಾಗಿ ಪೊಟ್ಟಣಗಳಲ್ಲಿ ಮೋನೋ ಸೋಡಿಯಂ ಗ್ಲುಟಮೇಟ್ ಎಂಬ ಸಂಯುಕ್ತವು ಇದೆಯೆಂದು ಗೋರಖಪುರದ ಸರಕಾರಿ ಪರೀಕ್ಷಾಲಯವು ವರದಿ ನೀಡಿದ್ದು ಮಾರ್ಚ್ 17, 2014 ರಂದು. ಆ ಪೊಟ್ಟಣಗಳನ್ನು ಕೊಲ್ಕಾತಾದ ಕೇಂದ್ರೀಯ ಆಹಾರ ಪರೀಕ್ಷಾಲಯಕ್ಕೆ ಕಳುಹಿಸಿದ್ದು ಜುಲೈ 22, 2014ರಂದು. ಆ ಮ್ಯಾಗಿಯೊಳಗೆ ಎಂಎಸ್ ಜಿ ಮಾತ್ರವಲ್ಲ, ಏಳು ಪಟ್ಟು ಹೆಚ್ಚು ಸೀಸದ ಅಂಶವೂ ಇದೆಯೆಂದು ಕೊಲ್ಕಾತಾದ ಪರೀಕ್ಷಾಲಯವು ವರದಿ ನೀಡಿದ್ದು ಇದೇ ಎಪ್ರಿಲ್ 7, 2015 ರಂದು.

ಪ್ರಸಿದ್ಧ ಆಹಾರೋತ್ಪನ್ನವೊಂದರ ಪರೀಕ್ಷೆಗೆ 15 ತಿಂಗಳು ಹಿಡಿಯುತ್ತದೆ ಎಂದಾದರೆ ನಮ್ಮ ದೇಶದಲ್ಲಿ ಆಹಾರ ಸುರಕ್ಷತೆಯ ಪಾಡೇನು ಎನ್ನುವುದು ಸ್ಪಷ್ಟವಾಗುತ್ತದೆ. ನಂತರ ನಡೆದಿರುವ ಗದ್ದಲ-ಗೊಂದಲಗಳು ಕೂಡ ನಮ್ಮ ಆಡಳಿತ ವ್ಯವಸ್ಥೆಯ ಗೆದ್ದಲನ್ನು ಎತ್ತಿ ತೋರಿಸುತ್ತವೆ. ಮ್ಯಾಗಿಯಲ್ಲಿ ಎಂಎಸ್ ಜಿ ಹಾಗೂ ಸೀಸವನ್ನು ಮೊದಲು ಪತ್ತೆ ಮಾಡಿದ ಉತ್ತರ ಪ್ರದೇಶದ ಆಡಳಿತವು ನೆಸ್ಲೆ ಕಂಪೆನಿಯ ಮೇಲೆ ದಾವೆಯನ್ನಷ್ಟೇ ದಾಖಲಿಸಿದ್ದು, ಇದುವರೆಗೂ ಮ್ಯಾಗಿಯನ್ನು ನಿಷೇಧಿಸಿಲ್ಲ. ಕರ್ನಾಟಕದಲ್ಲಿ ನಡೆಸಿದ ಪರೀಕ್ಷೆಗಳಲ್ಲಿ ಸೀಸದಂಶವು ಕಾಣದಿದ್ದರೂ ಆದನ್ನು ನಿಷೇಧಿಸಲಾಗಿದೆ! ಅದರ ಮಾರಾಟವನ್ನು ನಿಷೇಧಿಸಿರುವ ಇನ್ನುಳಿದ 13 ರಾಜ್ಯಗಳಲ್ಲಿ ಹೆಚ್ಚಿನವು ಪ್ರತ್ಯೇಕ ಪರೀಕ್ಷೆಗಳನ್ನು ನಡೆಸಿಲ್ಲ, ನಡೆಸಿದಲ್ಲಿ ಒಮ್ಮತದ ವರದಿಗಳೂ ಇಲ್ಲ.

ಈ ಮಧ್ಯೆ, ಕೇಂದ್ರದ ಆಹಾರ ಸುರಕ್ಷತೆ ಮತ್ತು ಗುಣಮಟ್ಟಗಳ ಪ್ರಾಧಿಕಾರವು ಮ್ಯಾಗಿಯ ಎಲ್ಲಾ ಒಂಭತ್ತು ವಿಧಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಬೇಕೆಂದೂ, ಅವುಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಬೇಕೆಂದೂ ಜೂನ್ 5ರಂದು ಆದೇಶಿಸಿದೆ. ಅದೇ ಆದೇಶದಲ್ಲಿ ಇತರ ಕಂಪೆನಿಗಳ ಶ್ಯಾವಿಗೆಗಳಲ್ಲೂ ಹೆಚ್ಚಿನ ಸೀಸವಿರುವುದು ಪತ್ತೆಯಾಗಿದೆ ಮತ್ತು ಶ್ಯಾವಿಗೆಗೆ ಬೆರೆಸುವ ನೀರಿನಿಂದಲೂ ಸೀಸವು ಸೇರಿಕೊಳ್ಳಬಹುದು (ಪು 3, ವಿ- ಎ 1, 2) ಎಂದೂ ಹೇಳಲಾಗಿದೆ. ಆ ಶ್ಯಾವಿಗೆ ಕಂಪೆನಿಗಳು ಯಾವುವು, ಮತ್ತು ಅವುಗಳ ಮೇಲೆ ಕ್ರಮವೇಕಿಲ್ಲ ಎನ್ನುವ ಪ್ರಶ್ನೆಗಳಿಗೆ ಅಲ್ಲಿ ಉತ್ತರವಿಲ್ಲ; ನೀರಿನಿಂದ ಸೀಸ ಸೇರಿರಬಹುದೆಂದು ಸೂಚಿಸಿ ನೆಸ್ಲೆಗೆ ತಪ್ಪಿಸಿಕೊಳ್ಳಲು ದಾರಿ ತೋರಿರುವ ಸಾಧ್ಯತೆಯೂ ಇಲ್ಲದಿಲ್ಲ.

ಆಹಾರದ ಸುರಕ್ಷತೆಯನ್ನು ಕಾಯುವಲ್ಲಿ ಕೇಂದ್ರ ಸರಕಾರದ ವಿವಿಧ ಇಲಾಖೆಗಳ ನಡುವೆ ಸಹಮತವಿಲ್ಲ, ಸಹಕಾರವೂ ಇಲ್ಲ. ಆಹಾರ ಸುರಕ್ಷತಾ ಪ್ರಾಧಿಕಾರವಿರುವುದು ಆರೋಗ್ಯ ಇಲಾಖೆಯಡಿಯಲ್ಲಿ, ಈಗ ದಾವೆ ಹೂಡುತ್ತಿರುವುದು ಆಹಾರ ಹಾಗೂ ಗ್ರಾಹಕ ಸೇವೆಗಳ ಇಲಾಖೆ. ಆಹಾರ ಸಂಸ್ಕರಣಾ ಇಲಾಖೆಯೋ ಕಂಪೆನಿಗಳ ಪರವಾಗಿಯೇ ಇದೆ, ಅತ್ತ ಪ್ರಧಾನಿಗಳ ಕಾರ್ಯಾಲಯವು ಆಹಾರ ಮಾರಾಟಗಾರರ ಮೇಲೆ ಇಪ್ಪತ್ತು ವರ್ಷಗಳಿಂದ ನಡೆಯುತ್ತಿದ್ದ ಮೊಕದ್ದಮೆಗಳನ್ನು ಹಿಂಪಡೆಯುವಂತೆ ಇದೇ ಜನವರಿಯಲ್ಲಿ ಪ್ರಾಧಿಕಾರಕ್ಕೆ ನಿರ್ದೇಶಿಸಿದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟಗಳ ಕಾಯಿದೆಯು 2006ರಲ್ಲಿ ಮಂಜೂರಾಗಿ, ಅದರ ಪ್ರಾಧಿಕಾರವು 2008ರಲ್ಲಿ ಸ್ಥಾಪನೆಯಾಗಿದ್ದರೂ, ಅದಿನ್ನೂ ನಿಶ್ಶಕ್ತವಾಗಿಯೇ ಉಳಿದಿದೆ. ಅದರಡಿಯಲ್ಲಿ ಜಿಲ್ಲೆಗೊಂದು ಅಂಕಿತಾಧಿಕಾರಿ, ತಾಲೂಕಿಗೊಂದು ಆರೋಗ್ಯ ಸುರಕ್ಷತಾ ಅಧಿಕಾರಿ, ಆಹಾರ ಪರೀಕ್ಷಕರು ಇತ್ಯಾದಿ ಇನ್ನೂ ನಿಯುಕ್ತರಾಗಿಲ್ಲ; ನಮ್ಮ ರಾಜ್ಯದಲ್ಲೇ ಶೇ. 70ರಷ್ಟು ಹುದ್ದೆಗಳು ಭರ್ತಿಯಾಗಿಲ್ಲ. ಆಹಾರದ ತಪಾಸಣೆಗೆ ಅಗತ್ಯವಿರುವ ಪರೀಕ್ಷಾಲಯಗಳೂ ಬೇಕಾದಷ್ಟಿಲ್ಲ, ಇದ್ದವುಗಳಲ್ಲಿ ಉಪಕರಣಗಳೂ ಇಲ್ಲ, ತಂತ್ರಜ್ಞರೂ ಇಲ್ಲ. ಈಗಾಗಲೇ ನಿಯುಕ್ತರಾಗಿರುವವರಲ್ಲಿ ಭ್ರಷ್ಟರಿಲ್ಲ ಎನ್ನುವಂತೆಯೂ ಇಲ್ಲ. ಒಟ್ಟಿನಲ್ಲಿ ಆಹಾರದ ಪರೀಕ್ಷೆಯ ವರದಿಗಳು ತಿಂಗಳುಗಟ್ಟಲೆ ಹೊರಬರುವುದಿಲ್ಲ, ಮೊಕದ್ದಮೆಗಳು ದಶಕಗಟ್ಟಲೆ ತೀರ್ಮಾನವಾಗುವುದಿಲ್ಲ, ಕೊನೆಗೆ ಸರಕಾರವೇ ಅವನ್ನು ಮುಂದೊತ್ತುವುದಿಲ್ಲ. ಅಂತಲ್ಲಿ ಮ್ಯಾಗಿಯೊಂದೇ ಏಕೆ, ನಾವು ತಿನ್ನುವ ಯಾವುದೇ ಆಹಾರವು ಸುರಕ್ಷಿತವೆನ್ನುವ ಖಾತರಿಯಿರುವುದು ಸಾಧ್ಯವೇ ಇಲ್ಲ.

ಸೀಸವು ಮ್ಯಾಗಿಯ ಪೊಟ್ಟಣದೊಳಗಿತ್ತೇ ಅಥವಾ ಅದಕ್ಕೆ ಬೆರೆಸಿದ ನೀರಿನಲ್ಲಿತ್ತೇ ಎನ್ನುವುದು ಮುಂದೆಂದಾದರೂ ಸ್ಪಷ್ಟವಾಗಬಹುದು. ಆದರೆ ತೋಟದಿಂದ ತಟ್ಟೆಯವರೆಗಿನ ಹಾದಿಯುದ್ದಕ್ಕೂ ಮಾಲಿನ್ಯವೇ ತುಂಬಿದ್ದರೆ ನಮ್ಮ ಆಹಾರ ಮತ್ತು ನೀರು ಶುದ್ಧವಾಗಿರಲು ಸಾಧ್ಯವೇ? ಕೈಗಾರಿಕಾ ತ್ಯಾಜ್ಯಗಳು ಹಾಗೂ ಇತರ ಪರಿಸರ ಮಾಲಿನ್ಯ, ಕೃಷಿಯಲ್ಲಿ ಬಳಸುವ ರಸಗೊಬ್ಬರಗಳು ಮತ್ತಿತರ ರಾಸಾಯನಿಕಗಳು, ಬಯಲು ವಿಸರ್ಜನೆ ಮುಂತಾದೆಲ್ಲವೂ ಮೇಲ್ಮೈಯ ನೀರನ್ನೂ, ಅಂತರ್ಜಲವನ್ನೂ ಕಲುಷಿತಗೊಳಿಸುತ್ತಿವೆ, ಆ ಮೂಲಕ ನಮ್ಮ ಆಹಾರದೊಳಕ್ಕೂ,ದೇಹದೊಳಕ್ಕೂ ಹೊಕ್ಕುತ್ತಿವೆ. ದೇಶದ ರಾಜಧಾನಿ ದಿಲ್ಲಿಗೆ ನೀರುಣಿಸುವ ಯಮುನಾ ನದಿಗೆ ಟನ್ನುಗಟ್ಟಲೆ ಕೈಗಾರಿಕಾ ತ್ಯಾಜ್ಯವು ಹರಿಯುತ್ತಿದ್ದು, ಕ್ರೋಮಿಯಂ, ಸೀಸ, ಕಬ್ಬಿಣ ಮುಂತಾದ ಲೋಹಗಳು ದಿಲ್ಲಿವಾಸಿಗಳ ಆಹಾರವನ್ನು ಹೊಕ್ಕುತ್ತಿವೆ. ಭಾರತದ ನದಿಗಳಲ್ಲಿ ಹಾನಿಕಾರಕ ಲೋಹಾಂಶಗಳ ಬಗ್ಗೆ ಕೇಂದ್ರೀಯ ಜಲ ಆಯೋಗವು ಮೇ 2014ರಲ್ಲಿ ಪ್ರಕಟಿಸಿದ ವರದಿಯನುಸಾರ, ಕಾವೇರಿ ಹಾಗೂ ಯಮುನಾ ಸೇರಿದಂತೆ ನಾಲ್ಕು ಮುಖ್ಯ ನದಿಗಳಲ್ಲಿ ಕ್ಯಾಡ್ಮಿಯಂ; ಗಂಗೆ, ಗೋಮತಿಯಂತಹ 11 ನದಿಗಳಲ್ಲಿ ಕ್ರೋಮಿಯಂ; ಗಂಗೆ, ಗೋಮತಿ, ಯಮುನಾ ಇತ್ಯಾದಿ 30 ನದಿಗಳಲ್ಲಿ ಸೀಸ; ಗಂಗೆ, ಗೋಮತಿ, ನರ್ಮದಾ ಮುಂತಾದ 11 ನದಿಗಳಲ್ಲಿ ನಿಕೆಲ್ ಅಂಶಗಳು ಅಂಗೀಕೃತ ಮಟ್ಟಕ್ಕಿಂತ ಹೆಚ್ಚಿವೆ. ಕಬಿನಿ ನದಿ, ಮಡಿವಾಳ ಹಾಗೂ ಲಾಲಬಾಗಿನ ಕೆರೆಗಳ ನೀರಿನಲ್ಲೂ ಸೀಸದ ಮಟ್ಟವು ಹೆಚ್ಚಿರುವುದನ್ನು ಕೆಲವು ಅಧ್ಯಯನಗಳು ಗುರುತಿಸಿವೆ.

ಆಹಾರೋತ್ಪಾದನೆಯಲ್ಲಿ ವಿಶ್ವದಲ್ಲೇ 2-3ನೇ ಸ್ಥಾನದಲ್ಲಿರುವ ಭಾರತವು, ಸುರಕ್ಷಿತ ಆಹಾರದ ಮಾನದಂಡಗಳನ್ನು ಅತಿ ಹೆಚ್ಚು ಉಲ್ಲಂಘಿಸುವ ರಾಷ್ಟ್ರಗಳಲ್ಲೂ 2-3ನೇ ಸ್ಥಾನದಲ್ಲಿದೆ. ಅಧ್ಯಯನಗಳನುಸಾರ, ನಾವು ತಿನ್ನುತ್ತಿರುವ ಎಲ್ಲಾ ಹಣ್ಣು, ತರಕಾರಿ, ಕಾಳು, ಮಾಂಸ, ಮೀನು ಮುಂತಾದ ಆಹಾರಗಳಲ್ಲಿ, ಕುಡಿಯುತ್ತಿರುವ ನೀರು, ಪೇಯಗಳಲ್ಲಿ, ಆಯುರ್ವೇದ, ನಾಟಿ ಔಷಧಗಳಲ್ಲಿ ಬಗೆಬಗೆಯ ಕೀಟನಾಶಕ, ಕಳೆನಾಶಕ ಇತ್ಯಾದಿ ವಿಷಾಂಶಗಳೂ, ಸೀಸ, ಪಾದರಸಗಳಂತಹ ಭಾರ ಲೋಹಗಳೂ, ಆಹಾರವನ್ನು ರಕ್ಷಿಸಿಡಲು ಅಥವಾ ಹಣ್ಣಾಗಿಸಲು ಬಳಸುವ ಹಲಬಗೆಯ ರಾಸಾಯನಿಕಗಳೂ ಸಾಕಷ್ಟು ಪ್ರಮಾಣದಲ್ಲಿ ಬೆರೆತಿರುತ್ತವೆ. ಧಾನ್ಯಗಳೊಂದಿಗೆ ಕಲ್ಲು, ಮರಳು; ಮೆಣಸಿನ ಪುಡಿಯೊಂದಿಗೆ ಮರದ ಪುಡಿ; ಕರಿಮೆಣಸಿನೊಂದಿಗೆ ಪಪ್ಪಾಯಿ ಬೀಜ; ಖಾದ್ಯ ತೈಲ ಹಾಗೂ ಹಾಲಿನೊಂದಿಗೆ ಇತರ ತೈಲಾಂಶಗಳು ಕಲಬೆರಕೆಯಾಗುವುದೂ ಸಾಮಾನ್ಯವಾಗಿದೆ. ಹೀಗೆ ಕಲುಷಿತಗೊಂಡ ಆಹಾರಗಳನ್ನು ದೀರ್ಘಕಾಲ ಸೇವಿಸುವುದರಿಂದ ನರಮಂಡಲ, ಯಕೃತ್ತು, ಮೂತ್ರಪಿಂಡಗಳು, ರಕ್ತಕಣಗಳು, ಪಚನಾಂಗ, ನಿರ್ನಾಳ ವ್ಯವಸ್ಥೆ ಮುಂತಾದವುಗಳ ಕಾಯಿಲೆಗಳಿಗೂ, ವಿವಿಧ ಕ್ಯಾನ್ಸರ್ ಗಳಿಗೂ ಕಾರಣವಾಗಬಹುದು. ತ್ವರಿತವಾಗಿ ಬೆಳೆಯುತ್ತಿರುವ ಜನಸಂಖ್ಯೆ, ನಗರೀಕರಣ, ಸ್ವಚ್ಛತೆಯ ಕಡೆಗಣನೆ, ಆಹಾರದ ಶೇಖರಣೆಯಲ್ಲಿ ನ್ಯೂನತೆಗಳು, ಆಹಾರದ ತಯಾರಿಯಲ್ಲಿ ಅಜಾಗ್ರತೆ ಇತ್ಯಾದಿ ಇನ್ನೂ ಹಲವಾರು ಸಮಸ್ಯೆಗಳು ಕೂಡ ನಮ್ಮ ಆಹಾರ ಹಾಗೂ ಆರೋಗ್ಯವನ್ನು ಕೆಡಿಸುತ್ತಿವೆ.

ಆದ್ದರಿಂದ ನಮ್ಮ ದೇಶದಲ್ಲಿ ಆಹಾರದ ಗುಣಮಟ್ಟವನ್ನು ಖಾತರಿಪಡಿಸಬೇಕಾದರೆ ಹೊಲದಿಂದ ಹೊಟ್ಟೆಯವರೆಗೆ ಆಹಾರದ ಸ್ವಚ್ಛತೆಯನ್ನು ಕಾಯಬೇಕಾಗುತ್ತದೆ. ಅದಾಗಬೇಕಿದ್ದರೆ ಪರಿಸರ ಮಾಲಿನ್ಯ, ನದಿಗಳ ಮಾಲಿನ್ಯ, ರಸಗೊಬ್ಬರ ಹಾಗೂ ಕೀಟನಾಶಕಗಳ ಬಳಕೆ, ಆಹಾರದೊಳಗೆ ಕಲಬೆರಕೆ ಇವೆಲ್ಲವನ್ನೂ ಕಟ್ಟುನಿಟ್ಟಾಗಿ ನಿಯಂತ್ರಿಸಬೇಕಾಗುತ್ತದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟಗಳ ಪ್ರಾಧಿಕಾರವನ್ನು ಸಶಕ್ತಗೊಳಿಸಲು ಅಗತ್ಯವಿರುವ ಎಲ್ಲಾ ಸಿಬ್ಬಂದಿಯನ್ನೂ, ಸಲಕರಣೆಗಳನ್ನೂ ಒದಗಿಸುವ ಜೊತೆಗೆ, ಅದು ಭ್ರಷ್ಟಾಚಾರರಹಿತವಾಗಿಯೂ, ಪಾರದರ್ಶಕವಾಗಿಯೂ ಇರುವಂತೆ ಮಾಡಬೇಕಾಗುತ್ತದೆ. ಆಹಾರದ ಗುಣಮಟ್ಟದ ಬಗೆಗಿನ ವ್ಯಾಜ್ಯಗಳನ್ನು ತ್ವರಿತವಾಗಿ ಬಗೆಹರಿಸುವ ನ್ಯಾಯವ್ಯವಸ್ಥೆಯೂ ಅಗತ್ಯವಿದೆ. ಕೇವಲ ಒಂದು ಕಂಪೆನಿಯ ಒಂದು ಉತ್ಪನ್ನವನ್ನು ಗುರಿಯಾಗಿಸಿ ಇನ್ನೆಲ್ಲವನ್ನೂ ಕಡೆಗಣಿಸಿದರೆ ಸರಕಾರದ ಉದ್ದೇಶವೇ ವಿಫಲವಾಗುತ್ತದೆ.

ಆಹಾರವನ್ನು ಸುರಕ್ಷಿತಗೊಳಿಸುವುದು ಪ್ರತಿಯೋರ್ವ ನಾಗರಿಕನ ಹೊಣೆಯೂ ಆಗಿದೆ. ಮ್ಯಾಗಿಯಂತಹ ಜನಪ್ರಿಯ ಉತ್ಪನ್ನವೇ ಸಂಶಯಕ್ಕೀಡಾಗಿರುವಾಗ, ಇನ್ನುಳಿದ ಸಿದ್ಧ ತಿನಿಸುಗಳ ಬಗೆಗೂ, ಬೀದಿಬದಿಯ ಆಹಾರಗಳ ಬಗೆಗೂ ಎಚ್ಚರಿಕೆಯನ್ನು ವಹಿಸುವ ಅಗತ್ಯವಿದೆ. ಎಲ್ಲ ಬಗೆಯ ಸಂಸ್ಕರಿತ, ಸಿದ್ಧ ಆಹಾರಗಳು ಬೊಜ್ಜು, ಮಧುಮೇಹ ಇತ್ಯಾದಿ ಆಧುನಿಕ ರೋಗಗಳಿಗೂ ಕಾರಣವಾಗುತ್ತವೆ ಎನ್ನುವುದನ್ನೂ ಮರೆಯಬಾರದು. ಆದ್ದರಿಂದ ಸಾಧ್ಯವಿರುವಲ್ಲೆಲ್ಲ ನಮ್ಮ ಆಹಾರವನ್ನು ನಾವೇ ಸಾಕಿ ಬೆಳೆಸುವುದೊಳ್ಳೆಯದು. ಶುದ್ಧ ಕಚ್ಛಾ ವಸ್ತುಗಳನ್ನೂ, ನೀರನ್ನೂ ಬಳಸುವುದು, ಶುಚಿಯಾಗಿ ಅಡುಗೆ ಮಾಡುವುದು, ಚೆನ್ನಾಗಿ ಬೇಯಿಸುವುದು, ಹಸಿಯಾದ ಮತ್ತು ಬೇಯಿಸಿದ ಆಹಾರಗಳನ್ನು ಪ್ರತ್ಯೇಕವಾಗಿಡುವುದು, ಕೆಡದಂತೆ ಸೂಕ್ತ ಉಷ್ಣತೆಯಲ್ಲಿ ರಕ್ಷಿಸಿಡುವುದು ಎಂಬ ಪಂಚ ಸೂತ್ರಗಳನ್ನು ಪಾಲಿಸಿ ನಮ್ಮ ಆಹಾರವನ್ನು ಸುರಕ್ಷಿತವಾಗಿಸಬಹುದು.

ಆರೋಗ್ಯ ಪ್ರಭ 2: ಅಲ್ಲೊಂದು, ಇಲ್ಲೆರಡು, ಜನಾರೋಗ್ಯಕ್ಕೆ ಬರೀ ಸೊನ್ನೆ [ಕನ್ನಡ ಪ್ರಭ, ಮೇ 28, 2015, ಗುರುವಾರ] 

ಹೆದ್ದಾರಿ, ಬಂದರು, ವಿದ್ಯುತ್ ಕಂಬಗಳಿಗೆ ಬಂಡವಾಳ ಖಾತರಿ; ಉದ್ಯೋಗ, ಆಹಾರ, ಆರೋಗ್ಯಕ್ಕೆ ಕತ್ತರಿ

ಒಳ್ಳೆಯ ದಿನಗಳ ಭರವಸೆಯಿತ್ತವರು ಪ್ರಧಾನಿಗಳಾಗಿ ವರ್ಷ ಒಂದಾಗಿದೆ, ಬಡವರ ಧ್ವನಿ ತಾನೆಂದವರು ಮುಖ್ಯಮಂತ್ರಿಗಳಾಗಿ ವರ್ಷಗಳೆರಡು ಸಂದಿವೆ; ಜನರ ಆರೋಗ್ಯ ರಕ್ಷಣೆಗೆ ಅದೇನು ದಕ್ಕಿದೆಯೆಂದು ನೋಡಲು ಸಂದರ್ಭವೊದಗಿದೆ.

ಪ್ರಧಾನಿಗಳ ಪಕ್ಷದ ಚುನಾವಣಾ ಪ್ರಣಾಳಿಕೆಯ ತಲೆಬರಹದಲ್ಲಿ ಶ್ರೇಷ್ಠ ಭಾರತದ ಉದ್ಘೋಷವಿತ್ತು, ಎಲ್ಲರ ವಿಕಾಸವೆಂಬ ಆಶ್ವಾಸನೆಯೂ ಇತ್ತು. ದೇಶದ ಆರ್ಥಿಕತೆಯನ್ನು ಸದೃಢಗೊಳಿಸುವಲ್ಲಿ ಆರೋಗ್ಯ ಕ್ಷೇತ್ರವು ಅತ್ಯಂತ ನಿರ್ಣಾಯಕವಾಗಿರುವುದರಿಂದ ಅದಕ್ಕೆ ಉನ್ನತ ಪ್ರಾಶಸ್ತ್ಯವನ್ನು ನೀಡಲಾಗುವುದೆಂದು ಪ್ರಣಾಳಿಕೆಯಲ್ಲಿ ಹೇಳಲಾಗಿತ್ತು; ಆರೋಗ್ಯ ಸೇವೆಗಳ ಲಭ್ಯತೆಯನ್ನೂ, ಗುಣಮಟ್ಟವನ್ನೂ ಹೆಚ್ಚಿಸಿ, ವೆಚ್ಚವನ್ನು ಇಳಿಸುವ ಭರವಸೆಯನ್ನು ನೀಡಲಾಗಿತ್ತು (ಪುಟ 25). ಹೊಸ ಆರೋಗ್ಯ ನೀತಿಯನ್ನು ತರುವುದು; ರಾಷ್ಟ್ರೀಯ ಆರೋಗ್ಯ ಖಾತರಿ ಅಭಿಯಾನವನ್ನು ಆರಂಭಿಸಿ, ಸಾರ್ವತ್ರಿಕ ಆರೋಗ್ಯ ಸೇವೆಗಳು ಎಲ್ಲರ ಕೈಗೆಟುಕುವಂತೆಯೂ, ಪರಿಣಾಮಕಾರಿಯಾಗುವಂತೆಯೂ ಮಾಡುವುದು; ಸರಕಾರಿ ಆಸ್ಪತ್ರೆಗಳನ್ನು ಆಧುನೀಕರಿಸುವುದು; ವೈದ್ಯಕೀಯ ಶಿಕ್ಷಣವನ್ನು ಬಲಪಡಿಸಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯ ಸಂಖ್ಯೆಯನ್ನು ಹೆಚ್ಚಿಸುವುದು ಇವೇ ಮುಂತಾದ ಉಪಕ್ರಮಗಳ ಬಗ್ಗೆ ಅದರಲ್ಲಿ ಆಶ್ವಾಸನೆಗಳಿದ್ದವು.

ಪ್ರಣಾಳಿಕೆಯಲ್ಲಿ ಆಶ್ವಾಸನೆಯಿತ್ತಿದ್ದ ಹೊಸ ಆರೋಗ್ಯ ನೀತಿಯ ಕರಡನ್ನು ಡಿಸೆಂಬರ್ 30ರಂದು ಬಿಡುಗಡೆ ಮಾಡಲಾಯಿತು. ಆದರೆ ಪ್ರಣಾಳಿಕೆಯಲ್ಲಿದ್ದ ಆಶಯಗಳು ಅದರಲ್ಲಿ ತಿರುಚಿಕೊಂಡಿದ್ದವು. ಆರೋಗ್ಯ ಖಾತರಿಯೆನ್ನುವುದು ಆರೋಗ್ಯ ವಿಮೆಯಾಗಿ ಬದಲಾಗಿತ್ತು, ಸೀಮಿತ ಸೇವೆಗಳನ್ನೊದಗಿಸುವ ಚೀಟಿಯ ರೂಪ ಧರಿಸಿತ್ತು. ಇಂತಹ ಆರೋಗ್ಯ ವಿಮೆಗೆ ಹಣವೊದಗಿಸಲು ಆರೋಗ್ಯ ಸುಂಕವನ್ನು ವಿಧಿಸುವ ಪ್ರಸ್ತಾಪವೂ ಇತ್ತು. ಸರಕಾರಿ ಆಸ್ಪತ್ರೆಗಳ ಆಧುನೀಕರಣದ ಬಗ್ಗೆ ಚಕಾರವಿಲ್ಲದೆ, ಉನ್ನತ ಆರೋಗ್ಯ ಸೇವೆಗಳಿಗೂ, ವೈದ್ಯಕೀಯ ಶಿಕ್ಷಣಕ್ಕೂ ಖಾಸಗಿ ಸಂಸ್ಥೆಗಳ ಮೊರೆ ಹೋಗುವ ಯೋಜನೆಯಿತ್ತು. ಹೆಚ್ಚು ಹಣ ತೆತ್ತವರಿಗಷ್ಟೇ ಇವೆಲ್ಲ ಲಭ್ಯವೆನ್ನುವ ಸೂಚನೆಯೂ ಅದರಲ್ಲಿತ್ತು.

ಫೆಬ್ರವರಿ 28ರಂದು ಮಂಡಿಸಲಾದ ಕೇಂದ್ರದ ಮುಂಗಡ ಪತ್ರದಲ್ಲಿ ಈ ಹೊಸ ನೀತಿಯ ಅನುಷ್ಠಾನದ ಸೊಲ್ಲೇ ಇಲ್ಲ. ಇದೇ ಸರಕಾರವು ಕಳೆದ 2014-15ರಲ್ಲಿ ಆರೋಗ್ಯ ಸೇವೆಗಳಿಗೆ 35163 ಕೋಟಿಗಳನ್ನು ಒದಗಿಸಿದ್ದರೆ, ಈ 2015-16ರಲ್ಲಿ 29653 ಕೋಟಿಗಳನ್ನಷ್ಟೇ (ಶೇ. 16ರಷ್ಟು ಕಡಿಮೆ) ಒದಗಿಸಿದೆ. ಹೀಗೆ, ರಾಷ್ಟ್ರೀಯ ಉತ್ಪನ್ನದ ಶೇ. 2.5ರಷ್ಟನ್ನು ಆರೋಗ್ಯ ಸೇವೆಗಳಿಗೆ ಒದಗಿಸುವ ಹೊಸ ಆರೋಗ್ಯ ನೀತಿಯ ಭರವಸೆಯು ಅಲ್ಲೇ ಉಳಿದು, ಮುಂಗಡ ಪತ್ರದಲ್ಲಿ ಶೇ. 1ಕ್ಕಿಂತಲೂ ಕೆಳಗಿಳಿದಿದೆ. ಹೊಸ ಆರೋಗ್ಯ ನೀತಿಯ ಕೂಸು ಗರ್ಭದಲ್ಲೇ ಸತ್ತಂತಾಗಿದೆ.

ಹೊಸ ಯೋಜನೆಗಳು ಅಂತಿರಲಿ, ಈ ಹಿಂದಿನಿಂದಲೂ ನಡೆಯುತ್ತಾ ಬಂದಿರುವ ರಾಷ್ಟ್ರೀಯ ಆರೋಗ್ಯ ಅಭಿಯಾನಕ್ಕೂ ಈ ಮುಂಗಡ ಪತ್ರದ ಅನುದಾನವು ಸಾಕಾಗದು. ತಾಯಂದಿರು ಹಾಗೂ ಮಕ್ಕಳ ಆರೋಗ್ಯ ಸೇವೆಗಳು; ತುರ್ತು ಚಿಕಿತ್ಸೆ, ಮನೋಚಿಕಿತ್ಸೆ, ವೃದ್ಧರ ಆರೈಕೆ; ಕ್ಷಯ, ಮಲೇರಿಯಾ, ಎಚ್ಐವಿ ಮುಂತಾದ ಸೋಂಕುಗಳ ನಿಯಂತ್ರಣ ಇವೇ ಮುಂತಾದ ಅತಿ ಮುಖ್ಯವಾದ ಕಾರ್ಯಕ್ರಮಗಳೆಲ್ಲವೂ ಇದರಿಂದ ಬಾಧಿತವಾಗಲಿವೆ. ಕಳೆದೆರಡು ವರ್ಷಗಳಲ್ಲಿ ದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಸಂಖ್ಯೆಯು ಶೇ.7ರಷ್ಟು ಇಳಿದಿದೆ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಶೇ. 30ರಷ್ಟು ಇಳಿದಿದೆ; ಇವು ಇನ್ನಷ್ಟು ಕೆಡುವ ಅಪಾಯವಿದೆ. ಜೊತೆಗೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್)ಗೆ ಕಳೆದ ವರ್ಷ 18195 ಕೋಟಿಗಳನ್ನು ನೀಡಲಾಗಿದ್ದಲ್ಲಿ, ಈ ವರ್ಷ ಕೇವಲ 8336 ಕೋಟಿಗಳನ್ನಷ್ಟೇ ನೀಡಲಾಗಿರುವುದರಿಂದ ಮಕ್ಕಳ ಆರೋಗ್ಯ ರಕ್ಷಣೆ, ಲಸಿಕೆ ಹಾಕುವಿಕೆ, ಪೌಷ್ಠಿಕ ಆಹಾರ ಪೂರೈಕೆ, ಅಂಗನವಾಡಿ ಸೇವೆಗಳು ಎಲ್ಲವೂ ತೀವ್ರವಾಗಿ ಬಾಧಿತವಾಗಲಿವೆ. ಇವಕ್ಕೆಲ್ಲ ಹಣವೊದಗಿಸಲು ರಾಜ್ಯ ಸರಕಾರಗಳಿಗೂ ಸಾಧ್ಯವಾಗದು.

ಇವಷ್ಟೇ ಅಲ್ಲ, ಉದ್ಯೋಗ ಖಾತರಿ, ಆಹಾರ ಪೂರೈಕೆ, ಇಂಧನ ಬೆಂಬಲ ಇತ್ಯಾದಿಗಳಿಗೂ ಅನುದಾನವನ್ನು ಕಡಿತಗೊಳಿಸಲಾಗಿದೆ. ಹಿಂದಿನ ಸರಕಾರದ ಕೆಲಸಗಳನ್ನು ಸ್ವಚ್ಛಗೊಳಿಸುತ್ತಿದ್ದೇವೆನ್ನುವುದು ಇದಕ್ಕೇ ಇರಬಹುದು! ಮಾಧ್ಯಮಗಳ ವರದಿಯಂತೆ, ಮುಂಗಡ ಪತ್ರದಲ್ಲಿ ಘೋಷಿಸಲಾಗಿರುವ ಹೆದ್ದಾರಿ ಯೋಜನೆಗೆ 70 ಸಾವಿರ ಕೋಟಿಗಳನ್ನು ಕ್ರೋಢೀಕರಿಸುವುದಕ್ಕೆಂದೇ ಎಲ್ಲ ಜನಪರ ಯೋಜನೆಗಳ ವೆಚ್ಚಗಳನ್ನು ಕತ್ತರಿಸಲಾಗುತ್ತಿದೆ. ಅಂದರೆ ಉದ್ಯೋಗ-ಆಹಾರ-ಆರೋಗ್ಯ ಖಾತರಿಗಳಿಗೆ ಕತ್ತರಿ ಹಾಕಿ, ಆ ಹಣವನ್ನು ಡಾಂಬರು-ಕಾಂಕ್ರೀಟುಗಳಿಗೆ ಸುರಿಯಲಾಗುತ್ತಿದೆ. ಜನಸಾಮಾನ್ಯರು ಉದ್ಯೋಗವಿಲ್ಲದೆ, ಪಡಿತರ ಆಹಾರವೂ ದಕ್ಕದೆ, ರೋಗಪೀಡಿತರಾದಾಗ ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯೂ ದೊರೆಯದೆ ನರಳಿದರೂ, ರಸ್ತೆಗಳು ನುಣುಪಾಗಿ ಹೊಳೆಯುತ್ತಿದ್ದರೆ ಸಾಕು.

ಪ್ರಣಾಳಿಕೆಯ ಭರವಸೆಗಳು ನೀತಿಯಲ್ಲಿ ವಿರೂಪಗೊಂಡು, ಮುಂಗಡ ಪತ್ರದಲ್ಲಿ ಮಾಯವಾದುದರ ಮರ್ಮವನ್ನು ತಿಳಿಯಬೇಕಾದರೆ ಅಮೆರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರಜ್ಞರಾಗಿದ್ದ ಅರವಿಂದ ಪಾನಗಡಿಯ ಅವರ ತಲೆಯೊಳಕ್ಕೆ ಇಣುಕಬೇಕಾಗುತ್ತದೆ. ಪಾನಗಡಿಯ ಅವರ ವಾದದಂತೆ, ಭಾರತೀಯ ಮಕ್ಕಳು ಇರುವುದೇ ಕುಳ್ಳಗೆ-ತೆಳ್ಳಗೆ, ಆದ್ದರಿಂದ ಅವರನ್ನು ಅವರನ್ನು ಕುಪೋಷಿತರೆನ್ನುವುದೇ ತಪ್ಪಾಗುತ್ತದೆ; ಅದೇ ಕಾರಣಕ್ಕೆ, ದೇಶದ ಶೇ. 40ಕ್ಕೂ ಹೆಚ್ಚು ಮಕ್ಕಳು ಕುಪೋಷಣೆಯಿಂದ ನರಳುತ್ತಿದ್ದಾರೆ ಎಂಬ ವಿಶ್ವ ಆರೋಗ್ಯ ಸಂಸ್ಥೆ, ಮನಮೋಹನ್ ಸಿಂಗ್, ಅಮರ್ತ್ಯ ಸೆನ್ ಮುಂತಾದವರೆಲ್ಲರ ಹೇಳಿಕೆಗಳೂ ತೀರಾ ಅಸಂಬದ್ಧವೆನಿಸುತ್ತವೆ (ಇಕಾ ಪೊಲಿ ವೀಕ್ಲಿ; ಮೇ 4, 2013). ಪಾನಗಡಿಯ ಅವರು ಹೊಸ ಪ್ರಧಾನಿಯವರಿಗೆ ನೀಡಿದ ದೇಶೋದ್ಧಾರಕ ಸಲಹೆಗಳನ್ನೂ ನೋಡಿ: ಸರಕಾರವು ಹೆದ್ದಾರಿಗಳು, ರಸ್ತೆಗಳು, ಬಂದರುಗಳು ಹಾಗೂ ವಿದ್ಯುತ್ ಪೂರೈಕೆಯ ಅಭಿವೃದ್ಧಿಗಷ್ಟೇ ಹಣವೊದಗಿಸಬೇಕು; ಉದ್ಯೋಗ ಹಾಗೂ ಆಹಾರ ಖಾತರಿ ಯೋಜನೆಗಳು ವಿಪರೀತವಾಗಿ ವ್ಯರ್ಥ ವೆಚ್ಚಕ್ಕೂ, ಭ್ರಷ್ಟಾಚಾರಕ್ಕೂ ಕಾರಣವಾಗುತ್ತಿವೆ, ಅವುಗಳ ಬದಲು ಕೆಳಸ್ತರದ ಅರ್ಧ ಪಾಲು ಕುಟುಂಬಗಳಿಗೆ ವರ್ಷಕ್ಕೆ ಹತ್ತು ಸಾವಿರದಂತೆ ನಗದನ್ನಷ್ಟೇ ನೀಡಬೇಕು; ಶೇ. 80ರಷ್ಟು ಹೊರರೋಗಿಗಳು ಹಾಗೂ ಶೇ. 55ರಷ್ಟು ಒಳರೋಗಿಗಳು ಈಗಲೂ ಖಾಸಗಿ ಆಸ್ಪತ್ರೆಗಳಿಗೇ ಹೋಗುತ್ತಿರುವುದರಿಂದ ವಿಮಾಧಾರಿತ ಯೋಜನೆಗಳ ಮೂಲಕ ಅಲ್ಲೇ ಸೀಮಿತ ಸೇವೆಗಳನ್ನು ಒದಗಿಸಬೇಕು ಇತ್ಯಾದಿ (ಫಾರಿನ್ ಅಫೇರ್ಸ್, ಜೂನ್ 10, 2014)

ನಮ್ಮ ಮಕ್ಕಳು ಊಟಕ್ಕಿಲ್ಲದ್ದಕ್ಕೇ ಕುಳ್ಳ-ತೆಳ್ಳಗಿದ್ದಾರೆ, ಸರಕಾರಿ ಆಸ್ಪತ್ರೆಗಳಿಲ್ಲದ್ದಕ್ಕೇ ಜನರು ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಿದ್ದಾರೆ ಎನ್ನುವ ವಾಸ್ತವಗಳನ್ನು ತಲೆಕೆಳಗಾಗಿಸುವ ಅರವಿಂದ ಪಾನಗಡಿಯ, ಭಾರತವನ್ನು ಬದಲಿಸಲಿರುವ ಹೊಸ ನಿತಿ ಆಯೋಗದ ಉಪಾಧ್ಯಕ್ಷರಾಗಿ ನಿಯುಕ್ತರಾಗಿದ್ದಾರೆ. ಅಂಥವರ ಮಾರ್ಗದರ್ಶನದಲ್ಲಿ ಉದ್ಯೋಗ, ಆಹಾರ, ಆರೋಗ್ಯ, ಶಿಕ್ಷಣಗಳ ಹಣವನ್ನು ಡಾಂಬರು-ಕಾಂಕ್ರೀಟುಗಳತ್ತ ತಿರುಗಿಸಿ, ದೇಶದ ಗತಿಯನ್ನೇ  ಬದಲಿಸುವ ಕೆಲಸವು ಆರಂಭಗೊಂಡಿದೆ. ಮುಂದೆ, ವರ್ಷಕ್ಕೆ ಹತ್ತು ಸಾವಿರದಲ್ಲಿ ಇಡೀ ಕುಟುಂಬವು ಉದ್ಯೋಗ, ಆಹಾರ, ಆರೋಗ್ಯ, ಶಿಕ್ಷಣ ಎಲ್ಲವನ್ನೂ ಪಡೆಯಬೇಕಾಗುತ್ತದೆ!

ರಾಜ್ಯದ ಸ್ಥಿತಿಯೇನು? ಆಡಳಿತ ಪಕ್ಷದ ಪ್ರಣಾಳಿಕೆಯಲ್ಲಿ ಆರೋಗ್ಯ ಕೇಂದ್ರಗಳು ಮತ್ತು ತಾಲೂಕು ಆಸ್ಪತ್ರೆಗಳ ಸುಧಾರಣೆ, ಜಿಲ್ಲೆಗೊಂದು ವೈದ್ಯಕೀಯ ಕಾಲೇಜು, ಪ್ರತೀ ಕಂದಾಯ ವಿಭಾಗಕ್ಕೊಂದು ಉನ್ನತ ದರ್ಜೆಯ ಆಸ್ಪತ್ರೆ, ನೂರು ಕಿಮೀಗೊಂದರಂತೆ ಅಪಘಾತ ಚಿಕಿತ್ಸಾ ಘಟಕ, ವೈದ್ಯರಿಗೆ ಗ್ರಾಮೀಣ ಸೇವೆಗೆ ಅನುಕೂಲತೆ, ವೃದ್ಧರ ಆರೋಗ್ಯ ಸೇವೆಗಳು, ವಿಮಾಧಾರಿತ ಆರೋಗ್ಯ ಸೇವೆಗಳ ವಿಸ್ತರಣೆ ಇವೇ ಮುಂತಾದ ಆಶ್ವಾಸನೆಗಳಿದ್ದವು (ಪು 9). ಆದರೆ ಈ ಎರಡು ವರ್ಷಗಳಲ್ಲಿ ಹೊಸದನ್ನು ಮಾಡುವುದಿರಲಿ, ಹಳೆಯ ಕೊರತೆಗಳನ್ನು ನೀಗಿಸುವಲ್ಲೂ ರಾಜ್ಯ ಸರಕಾರವು ವಿಫಲವಾಗಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶೇ. 13, ಸಮುದಾಯ ಕೇಂದ್ರಗಳಲ್ಲಿ ಶೇ. 57, ತಾಲೂಕು ಆಸ್ಪತ್ರೆಗಳಲ್ಲಿ ಶೇ. 47 ಹಾಗೂ ಹತ್ತು ವೈದ್ಯಕೀಯ ಕಾಲೇಜುಗಳಲ್ಲಿ ಶೇ. 40ರಷ್ಟು ವೈದ್ಯರ ಹುದ್ದೆಗಳು ಖಾಲಿಯಿವೆ, ಹತ್ತು ಸಾವಿರದಷ್ಟು ಅನ್ಯ ಸಿಬ್ಬಂದಿಯ ಅಗತ್ಯವಿದೆ. ಇವನ್ನು ತುಂಬಿಸಲು ತಕ್ಷಣವೇ ಕ್ರಮ ಕೈಗೊಳ್ಳಲಾಗುವುದೆಂದು ಆರೋಗ್ಯ ಸಚಿವರು ಮೊದಲ ದಿನದಿಂದಲೂ ಹೇಳಿಕೆಗಳನ್ನಷ್ಟೇ ನೀಡುತ್ತಿದ್ದಾರೆ. ರಾಜ್ಯದ ಸರಕಾರಿ ವೈದ್ಯರ ಸಂಬಳವನ್ನು ಹೆಚ್ಚಿಸುವ ಆಶ್ವಾಸನೆಯೂ ಈಡೇರಿಲ್ಲ. ವಿಮಾಧಾರಿತ ಯೋಜನೆಗಳ ಹೆಸರಲ್ಲಿ ಇಲ್ಲೂ ಖಾಸಗಿ ಆಸ್ಪತ್ರೆಗಳನ್ನು ಸಾಕಲಾಗುತ್ತಿದೆ; ಸರಕಾರಿ ಆಸ್ಪತ್ರೆಗಳಲ್ಲೂ ವಿವಿಧ ಪರೀಕ್ಷೆಗಳನ್ನೂ, ಚಿಕಿತ್ಸೆಗಳನ್ನೂ ಹೊರಗುತ್ತಿಗೆ ನೀಡಲಾಗುತ್ತಿದೆ. ಹೀಗೆ, ರಾಜ್ಯದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮರಣ ಗಂಟೆ ಜೋರಾಗುತ್ತಿರುವಲ್ಲಿ, ಖಾಸಗಿ ವೈದ್ಯ ಸೇವೆಗಳ ವಹಿವಾಟು ಇನ್ನೈದು ವರ್ಷಗಳಲ್ಲಿ ಆರು ಪಟ್ಟು ಹೆಚ್ಚಿ ವರ್ಷಕ್ಕೆ 186000 ಕೋಟಿಗೇರಲಿದೆ.

ಇಲ್ಲೂ ಕಾರ್ಯವಲ್ಲದಿದ್ದರೂ ಮಾತು ಜೋರಾಗಿದೆ. ವೈದ್ಯರಿಲ್ಲದ, ಸಿಬ್ಬಂದಿಯಿಲ್ಲದ, ಸೌಲಭ್ಯಗಳಿಲ್ಲದ ಆಸ್ಪತ್ರೆಗಳಿಗೆ ಸುತ್ತು ಹೊಡೆದು, ಚಿಕಿತ್ಸೆಯಲ್ಲಿ ಸೌಜನ್ಯತೆ, ಸೇವಾಪರತೆ, ಮಾನವೀಯತೆಗಳನ್ನು ಮೆರೆಯಬೇಕೆಂದು ಸಚಿವರು ಉಪದೇಶ ನೀಡುತ್ತಿದ್ದಾರೆ! ಸೆಪ್ಟೆಂಬರ್ 2014ರಲ್ಲಿ ಗುಲ್ಬರ್ಗದಲ್ಲೊಂದು ಆರೋಗ್ಯ ಅದಾಲತ್ ತೆರೆದು ಭರ್ಜರಿ ಪ್ರಚಾರ ಗಿಟ್ಟಿಸಿದ ಬಳಿಕ ಅದರ ಸದ್ದಡಗಿದೆ. ಕೆಲವೆಡೆ ಬೈಕ್ ಆಂಬುಲೆನ್ಸ್ ಬಂದಿವೆ, ಆದರೆ ಚಾಲಕರಿಲ್ಲ, ಇದ್ದ ಚಾಲಕರಿಗೆ ತರಬೇತಿಯಿಲ್ಲ, ತರಬೇತಾದವರಿಗೆ ಪರವಾನಿಗೆಯಿಲ್ಲ! ಬಿಳಿ ಬಣ್ಣದ ರುಗ್ಣವಾಹಕಗಳು ಸಾಕಷ್ಟಿಲ್ಲ, ಆಸ್ಪತ್ರೆಗಳಲ್ಲಿ ಸೌಲಭ್ಯಗಳಿಲ್ಲ, ಅಂತಲ್ಲೀಗ  ಕಪ್ಪು ಬಣ್ಣದ ಶವವಾಹಕಗಳು ಬರಲಿವೆಯಂತೆ!

ಅಂತೂ ಒಳ್ಳೆಯ ದಿನಗಳಿಗೂ, ಆರೋಗ್ಯ ಭಾಗ್ಯಕ್ಕೂ ಜನಸಾಮಾನ್ಯರ ಕಾಯುವಿಕೆಯು ಹಾಗೆಯೇ ಮುಂದುವರಿದಿದೆ.

ಆರೋಗ್ಯ ಪ್ರಭ 1: ವೈದ್ಯರ ಜೀವವುಳಿಯಲಿ, ವೈದ್ಯವೃತ್ತಿಯ ಆತ್ಮವುಳಿಯಲಿ [ಕನ್ನಡ ಪ್ರಭ, ಮೇ 14, 2015, ಗುರುವಾರ]

ಚಿಕಿತ್ಸೆಯು ಫಲ ನೀಡದಿದ್ದಾಗ ವೈದ್ಯರನ್ನಷ್ಟೇ ಹೊಣೆಯಾಗಿಸಿ ಶಿಕ್ಷಿಸಿದರೆ ಚಿಕಿತ್ಸೆಯೇ ಅಸಾಧ್ಯವಾದೀತು

ದೇಶದ ಮೂಲೆಮೂಲೆಗಳಲ್ಲಿ ಪ್ರತಿನಿತ್ಯವೆಂಬಂತೆ ವೈದ್ಯರು ದಾಳಿಗೀಡಾಗುತ್ತಿದ್ದಾರೆ, ಆಸ್ಪತ್ರೆಗಳ ತೀವ್ರ ನಿಗಾ ಘಟಕಗಳೂ, ಶಸ್ತ್ರಚಿಕಿತ್ಸಾಲಯಗಳೂ ಪುಡಿಯಾಗುತ್ತಿವೆ. ಪೋಲೀಸರು ಮೂಕಪ್ರೇಕ್ಷಕರಾಗಿ ನಿಲ್ಲುತ್ತಿದ್ದಾರೆ, ವೈದ್ಯರನ್ನೇ ಅಪರಾಧಿಗಳಾಗಿ ಕಾಣುತ್ತಿದ್ದಾರೆ. ರಾಜಕಾರಣಿಗಳು ಈ ದಾಳಿಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ, ಆರೋಗ್ಯ ಸಚಿವರು ದೊಂಬಿಕೋರರಿಗೆ ಶರಣಾಗಿ ತಮ್ಮದೇ ಸರಕಾರದ ವೈದ್ಯಾಧಿಕಾರಿಗಳನ್ನು ಎತ್ತಂಗಡಿ ಮಾಡುತ್ತಿದ್ದಾರೆ. ಎಲ್ಲವನ್ನೂ ಬಲ್ಲವರೆಂದುಕೊಳ್ಳುವ ಕೆಲವು ಮಾಧ್ಯಮಕರ್ಮಿಗಳು ವೈದ್ಯರದೇ ತಪ್ಪೆಂದು ಥಟ್ಟನೆಯ ತೀರ್ಪುಗಳನ್ನು ನೀಡುತ್ತಿದ್ದಾರೆ. ಹೀಗೆ ಎಲ್ಲರಿಂದಲೂ ಜಜ್ಜಲ್ಪಡುತ್ತಿರುವ ವೈದ್ಯರು ತೀವ್ರ ನಿಗಾ ಘಟಕಗಳಲ್ಲಿ ದಾಖಲಾಗುತ್ತಿದ್ದಾರೆ, ಕೆಲವರಂತೂ ತಮ್ಮ ವೃತ್ತಿಯನ್ನೇ ತೊರೆಯಬಯಸಿದ್ದಾರೆ.

ಕಳೆದೊಂದು ತಿಂಗಳಲ್ಲಾದ ಘಟನೆಗಳನ್ನೇ ನೋಡಿ. ಯಕೃತ್ತಿನ ವೈಫಲ್ಯದಿಂದ ಬಹು ದಿನಗಳಿಂದ ನರಳುತ್ತಿದ್ದ ಎಂಭತ್ತು ವರ್ಷದವರೊಬ್ಬರು ಅಲಹಾಬಾದಿನ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿದ್ದರು. ಅಂದೇ ರಾತ್ರಿ ಹತ್ತಕ್ಕೆ ಅವರಿಗೆ ಹೃದಯ ಸ್ತಂಭನವಾದಾಗ, ವೈದ್ಯರು ಅದನ್ನು ಪುನಶ್ಚೇತನಗೊಳಿಸಿದ್ದರು. ಹೀಗೆ ಅತಿ ಗಂಭೀರ ಸ್ಥಿತಿಯಲ್ಲಿದ್ದವರು ನಸುಕಿನ ನಾಲ್ಕು ಗಂಟೆಗೆ ಮೃತಪಟ್ಟರು. ಒಡನೆಯೇ ಅವರನ್ನು ನೋಡಲು ಬಂದಿದ್ದ ಹಿರಿಯ ಪಚನಾಂಗ ತಜ್ಞರನ್ನು ಮೃತರ ಸಂಬಂಧಿಗಳು ಮನ ಬಂದಂತೆ ಚಚ್ಚಿದರು, ಅವರ ಕತ್ತಿನ ಸರವನ್ನೂ, ಮೊಬೈಲನ್ನೂ ಕಸಿದೊಯ್ದರು; ತೀವ್ರ ನಿಗಾ ಘಟಕವನ್ನೂ, ಶಸ್ತ್ರಚಿಕಿತ್ಸಾಲಯವನ್ನೂ ಪುಡಿಗುಟ್ಟಿದರು. ಆ ಹಿರಿಯ ವೈದ್ಯರ ಮುಖದ ಮೂಳೆ ಮುರಿದು, ದೇಹವಿಡೀ ಗಾಯಗಳಾಗಿ ತೀವ್ರ ನಿಗಾ ಘಟಕಕ್ಕೆ ದಾಖಲಾಗಬೇಕಾಯಿತು.

ಮುಂಬಯಿಯಲ್ಲೂ ಇಂಥದ್ದೇ ಘಟನೆಯಾಯಿತು. ಮಧುಮೇಹ, ಪಾರ್ಶ್ವವಾಯು, ಸೋಂಕು ಇತ್ಯಾದಿ ಹಲವು ಸಮಸ್ಯೆಗಳಿದ್ದ ಎಪ್ಪತ್ತೈದು ವರ್ಷದ ಮಹಿಳೆಯೊಬ್ಬರು ಆಯುರ್ವೇದ ಚಿಕಿತ್ಸೆಯಿಂದ ರೋಗ ಉಲ್ಬಣಗೊಂಡಾಗ ಆಧುನಿಕ ಆಸ್ಪತ್ರೆಗೆ ದಾಖಲಾಗಿದ್ದರು. ಹನ್ನೆರಡು ದಿನಗಳ ಚಿಕಿತ್ಸೆಯು ಫಲಕಾರಿಯಾಗದೆ ಆಕೆ ಮೃತಪಟ್ಟಾಗ ಸಂಬಂಧಿಕರು ತಮ್ಮೆದುರು ಕಾಣಸಿಕ್ಕಿದ ಇಬ್ಬರು ಕಿರಿಯ ವೈದ್ಯರನ್ನು ಥಳಿಸಿದರು, ಆಸ್ಪತ್ರೆಯನ್ನೂ ಪುಡಿಗುಟ್ಟಿದರು. ಒಬ್ಬ ವೈದ್ಯರ ಮೂಗು ಹಾಗೂ ಕಾಲ್ಬೆರಳಿನ ಮೂಳೆಗಳು ಮುರಿದು ತೀವ್ರ ನಿಗಾ ಘಟಕವನ್ನು ಸೇರಬೇಕಾಯಿತು.

ಈ ಎರಡು ಪ್ರಕರಣಗಳಲ್ಲೂ ವೈದ್ಯಕೀಯ ಲೋಪವೇನಿರಲಿಲ್ಲ; ಏಟು ತಿಂದ ಕಿರಿಯ ವೈದ್ಯರು ಮೃತರ ಚಿಕಿತ್ಸೆಯಲ್ಲಿ ಭಾಗಿಗಳಾಗಿರಲೂ ಇಲ್ಲ. ಆದರೂ ರೋಗಿಯು ಮೃತಪಟ್ಟೊಡನೆ ಎದುರಿಗೆ ಸಿಕ್ಕವರನ್ನು ಜಜ್ಜುವ, ಗದ್ದಲವೆಬ್ಬಿಸುವ ಇಂಥ ಪ್ರಕರಣಗಳು ಎಲ್ಲೆಡೆಯಿಂದಲೂ ವರದಿಯಾಗುತ್ತಿವೆ. ಭಾರತೀಯ ವೈದ್ಯಕೀಯ ಸಂಘವು ನಡೆಸಿರುವ ಸಮೀಕ್ಷೆಯನುಸಾರ ಶೇ. 75ಕ್ಕೂ ಹೆಚ್ಚಿನ ವೈದ್ಯರು ಒಂದಿಲ್ಲೊಂದು ವಿಧದ ದಾಳಿಗಳಿಗೆ ಗುರಿಯಾಗಿದ್ದಾರೆ. ಶೇ. 49ರಷ್ಟು ಸಂದರ್ಭಗಳಲ್ಲಿ ಈ ದಾಳಿಗಳು ತೀವ್ರ ನಿಗಾ ಘಟಕಗಳಲ್ಲಿ ಆಥವಾ ಶಸ್ತ್ರಕ್ರಿಯೆಗಳಿಗೆ ದಾಖಲಾದ ರೋಗಿಗಳ ನೆಪದಲ್ಲಿ ನಡೆದಿವೆ. ಶೇ. 68ರಷ್ಟು ಪ್ರಕರಣಗಳಲ್ಲಿ ರೋಗಿಗಳ ಸಂಬಂಧಿಕರು ಯಾ ಸ್ನೇಹಿತರು ಈ ದಾಳಿಗಳನ್ನು ನಡೆಸಿದ್ದಾರೆ, ಮತ್ತು ಹೆಚ್ಚಿನ ದಾಳಿಗಳು ಆಸ್ಪತ್ರೆಯಲ್ಲಿ ರೋಗಿಯ ಭೇಟಿಗೆ ಅವಕಾಶವಿರುವ ಅವಧಿಯಲ್ಲಿ ಅಥವಾ ಆಸ್ಪತ್ರೆಗಳು ಅತಿ ಹೆಚ್ಚು ವ್ಯಸ್ತವಾಗಿರುವ ಅವಧಿಯಲ್ಲಿ ನಡೆದಿವೆ. ಇನ್ನೊಂದು ವರದಿಯಂತೆ ಶೇ. 90ರಷ್ಟು ಪ್ರಕರಣಗಳಲ್ಲಿ ಆಸ್ಪತ್ರೆಗಳಲ್ಲಿ ದಿನವಿಡೀ ಕಾರ್ಯನಿರ್ವಹಿಸುವ ಕಿರಿಯ ವೈದ್ಯರೇ ಇಂತಹಾ ದಾಳಿಗಳಿಗೆ ತುತ್ತಾಗಿದ್ದಾರೆ.

ವೈದ್ಯರು ಮತ್ತು ಆಸ್ಪತ್ರೆ ಸಿಬಂದಿಗಳು ಸುಲಭದಲ್ಲಿ ದೊರೆಯುವ ಜಜ್ಜುಬೊಂಬೆಗಳಾಗುತ್ತಿದ್ದಾರೆ. ಮೇಲಿನೆರಡು ಪ್ರಕರಣಗಳಲ್ಲಿ ಕಾಣುವಂತೆ, ರೋಗ ಉಲ್ಬಣಗೊಂಡ ಬಳಿಕ ತಡವಾಗಿ ಚಿಕಿತ್ಸೆಗೆ ಬಂದವರು, ಬದಲಿ ಚಿಕಿತ್ಸೆಗಳನ್ನೆಲ್ಲ ಪ್ರಯತ್ನಿಸಿ ಕೊನೆಯ ಘಳಿಗೆಯಲ್ಲಿ ಬಂದವರು ತಮ್ಮ ನಿರ್ಲಕ್ಷ್ಯವನ್ನು ಮರೆಮಾಚುವುದಕ್ಕೆ ವೈದ್ಯರ ಮೇಲೆ ಹರಿಹಾಯುತ್ತಾರೆ. ಇನ್ನು ಕೆಲವರು, ವಿಶೇಷವಾಗಿ ರಾಜಕಾರಣಿಗಳು, ತಮ್ಮ ಶೌರ್ಯವನ್ನು ಮೆರೆಯುವುದಕ್ಕಾಗಿ ವೈದ್ಯರನ್ನು ಬೆದರಿಸುತ್ತಾರೆ, ಬಡಿಯುತ್ತಾರೆ. ಚಿಕಿತ್ಸೆಯ ವೆಚ್ಚವನ್ನು ಕೊಡದಿರುವುದಕ್ಕಾಗಿ ಅಥವಾ ಕಡಿತಗೊಳಿಸುವುದಕ್ಕಾಗಿಯೂ ದಾಳಿಗಳಾಗುತ್ತವೆ; ಕೆಲವು ಸ್ವಘೋಷಿತ ರಕ್ಷಣಾ ಸಂಸ್ಥೆಗಳಿಗೆ ಅದರಲ್ಲಿ ಪರಿಣತಿಯಿರುತ್ತದೆ. ಮಾಧ್ಯಮಗಳು ಕೂಡ ವೈದ್ಯರ ವಿರುದ್ಧ ಏಕಪಕ್ಷೀಯವಾದ ವರದಿಗಳನ್ನು ಪ್ರಕಟಿಸುವ ಒತ್ತಡಕ್ಕೆ ಸಿಲುಕುತ್ತಿವೆ; ಇಂತಹಾ ತಪ್ಪು ವರದಿಗಳಿಂದಾಗಿ ಅದೆಷ್ಟೋ ಸಜ್ಜನ, ಪ್ರಾಮಾಣಿಕ ವೈದ್ಯರು ಆಘಾತಕ್ಕೊಳಗಾಗಿದ್ದಾರೆ, ಕಷ್ಟಕ್ಕೊಳಗಾಗಿದ್ದಾರೆ.

ಹೆಚ್ಚಿನ ಪ್ರಕರಣಗಳಲ್ಲಿ ವೈದ್ಯರು ಅಥವಾ ಆಸ್ಪತ್ರೆಗಳು ರೋಗಿ ಅಥವಾ ಅವರ ಬಂಧುಮಿತ್ರರ ನಿರೀಕ್ಷೆಗಳನ್ನು ಪೂರೈಸದಿರುವುದೇ ದಾಳಿಗಳಿಗೆ ಪ್ರೇರಣೆಯಾಗಿರುತ್ತವೆ, ಚಿಕಿತ್ಸೆಯ ಲೋಪಗಳಲ್ಲ. ವ್ಯಾಪಾರೀಕರಣದಿಂದಾಗಿ ವೈದ್ಯವೃತ್ತಿಯ ವಿಶ್ವಾಸಾರ್ಹತೆಗೆ ಧಕ್ಕೆಯಾಗಿದೆ ಎನ್ನುವುದು ನಿಜವಿದ್ದರೂ, ಈ ದಾಳಿಗಳಿಗೆ ಅದುವೇ ಮೂಲ ಕಾರಣವೆನ್ನಲಾಗದು. ವಿಶ್ವ ಪ್ರಸಿದ್ಧಿಯ ಜಯದೇವ ಹೃದ್ರೋಗ ಆಸ್ಪತ್ರೆಯಿಂದ ಹಿಡಿದು ಬೆಂಗಳೂರು, ಮೈಸೂರು, ಮಂಗಳೂರು ಮುಂತಾದೆಡೆಗಳಲ್ಲಿ ಪ್ರತಿನಿತ್ಯವೂ ಸಹಸ್ರಾರು ರೋಗಿಗಳಿಗೆ ಉಚಿತವಾಗಿ ಅತ್ಯುತ್ತಮ ಚಿಕಿತ್ಸೆಯನ್ನು ಒದಗಿಸುತ್ತಿರುವ ಸರಕಾರಿ ಆಸ್ಪತ್ರೆಗಳಲ್ಲೂ ಇಂತಹ ದಾಳಿಗಳು ನಿರಂತರವಾಗಿ ನಡೆಯುತ್ತಿರುವುದು ಇದನ್ನು ಪುಷ್ಟೀಕರಿಸುತ್ತದೆ. ಒಟ್ಟಾರೆಯಾಗಿ ಸಮಾಜದಲ್ಲಿ ಅಸಂತುಷ್ಟಿ, ಅಸಹನೆ ಹಾಗೂ ಹಿಂಸೆಗಳು ಹೆಚ್ಚುತ್ತಿರುವುದು, ಎಲ್ಲರಲ್ಲೂ ತಾವೇ ಸರಿ, ತಮಗನಿಸಿದ್ದೇ ನಡೆಯಬೇಕು ಎಂಬ ಮನೋಭಾವ ಬೆಳೆಯುತ್ತಿರುವುದು ಈ ದಾಳಿಗಳಿಗೆ ಮುಖ್ಯ ಕಾರಣಗಳೆನ್ನುವುದನ್ನು ಎಲ್ಲರೂ ಮನಗಾಣಬೇಕಾಗಿದೆ.

ಮೇಲಿನೆರಡು ಘಟನೆಗಳಂತೆ ಹೆಚ್ಚಿನವುಗಳಲ್ಲಿ ದೂರುಗಳೇ ದಾಖಲಾಗುವುದಿಲ್ಲ, ದಾಳಿ ಮಾಡಿದವರನ್ನು ಪೋಲೀಸರು ಕೂಡಲೇ ಬಂಧಿಸುವುದೂ ಇಲ್ಲ. ಕರ್ನಾಟಕವೂ ಸೇರಿದಂತೆ 14 ರಾಜ್ಯಗಳಲ್ಲಿ ವೈದ್ಯರ ಮೇಲಿನ ದಾಳಿಗಳನ್ನು ಜಾಮೀನಿಲ್ಲದ ಗಂಭೀರ ಅಪರಾಧವೆಂದು ಪರಿಗಣಿಸುವ ಕಾನೂನುಗಳಿವೆಯಾದರೂ, ಈ ದಾಳಿಗಳನ್ನು ತಡೆಯಲು ಸಾಧ್ಯವಾಗಿಲ್ಲ. ದಾಳಿಗೀಡಾದ ವೈದ್ಯರು ಕೂಡಾ ವರ್ಷಗಟ್ಟಲೆಯ ವ್ಯಾಜ್ಯಗಳನ್ನು ತಪ್ಪಿಸುವುದಕ್ಕಾಗಿ, ಅಥವಾ ಇನ್ನಷ್ಟು ಅಪಪ್ರಚಾರಕ್ಕೆ ಹೆದರಿ ದೂರು ದಾಖಲಿಸುವುದಕ್ಕೆ ಹಿಂಜರಿಯುತ್ತಿದ್ದಾರೆ. ಅತ್ತ ಚಿಕಿತ್ಸೆಯಲ್ಲಿ ಲೋಪಗಳಿದ್ದರೆ ಸೂಕ್ತ ಪರಿಹಾರವನ್ನು ನೀಡುವ ಕಾನೂನುಗಳೂ ಜಾರಿಯಲ್ಲಿವೆ; ಆದರೆ ನ್ಯಾಯ ಪ್ರಕ್ರಿಯೆಯು ವಿಳಂಬವಾಗುತ್ತಿರುವುದರಿಂದ ಜನರಿಗೂ ಅವುಗಳಲ್ಲಿ ವಿಶ್ವಾಸವಿಲ್ಲದಂತಾಗಿದೆ. ಇಂತಹಾ ಸನ್ನಿವೇಶದಲ್ಲಿ, ವೈದ್ಯರ ಮೇಲೆ ದಾಳಿಗಳಾದಾಗ ಪೋಲೀಸರೇ ಸ್ವಯಂಪ್ರೇರಿತ ದೂರುಗಳನ್ನು ದಾಖಲಿಸಿಕೊಳ್ಳಬೇಕಾಗಿದೆ; ವೈದ್ಯರಿಗೂ, ಆಸ್ಪತ್ರೆಗಳಿಗೂ ಸೂಕ್ತ ರಕ್ಷಣೆಯನ್ನು ಒದಗಿಸಿ, ಅವರ ದಿನನಿತ್ಯದ ಕೆಲಸಗಳಿಗೆ ಅಡ್ಡಿಯಾಗದಂತೆ ಸಹಕರಿಸಬೇಕಾಗಿದೆ. ಅದಾಗದಿದ್ದರೆ ಇಡೀ ಸಮಾಜದ ಸ್ವಾಸ್ಥ್ಯವಷ್ಟೇ ಅಲ್ಲ, ಸಾಮರಸ್ಯವೂ ಕೆಡುವ ಅಪಾಯವಿದೆ.

ಇದನ್ನು ಬರೆಯುತ್ತಿದ್ದಂತೆ ಮಂಗಳೂರಿನ ಜಿಲ್ಲಾಸ್ಪತ್ರೆಯಲ್ಲಿ ಮಹಿಳೆಯೊಬ್ಬರ ಸಾವಿಗೆ ಪ್ರತಿಭಟನೆಗಳಾಗಿವೆ, ಅದಕ್ಕೆ ಮಣಿದು ಆರೋಗ್ಯ ಸಚಿವರು ಆಸ್ಪತ್ರೆಯ ಅಧೀಕ್ಷಕಿಯಾಗಿದ್ದ ಹಿರಿಯ ವೈದ್ಯರನ್ನು ವರ್ಗಾಯಿಸಿದ್ದಾರೆ, ‘ಯಾವುದೇ ಕರ್ತವ್ಯ ಲೋಪವನ್ನೂ ಸಹಿಸಲಾಗದು, ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು,’ ಎಂದು ಅಬ್ಬರಿಸಿದ್ದಾರೆ, ತನಿಖಾ ಸಮಿತಿಯನ್ನೂ ರಚಿಸಿದ್ದಾರೆ. ಆದರೆ ತನಿಖೆಗೆ ಮೊದಲೇ ಹಿರಿಯ ವೈದ್ಯಾಧಿಕಾರಿಯನ್ನು ದಂಡಿಸಿದರೆ ತನಿಖೆಯೇ ಅರ್ಥಹೀನವಾಗುತ್ತದೆ, ಸಚಿವರು ಕೂಡ ಗಲಾಟೆಕೋರರಲ್ಲಿ ಶಾಮೀಲಾದಂತಾಗುತ್ತದೆ, ಇನ್ನಷ್ಟು ಗಲಾಟೆಗಳಿಗೆ ಕುಮ್ಮಕ್ಕು ನೀಡಿದಂತಾಗುತ್ತದೆ, ಸರಕಾರಿ ಆಸ್ಪತ್ರೆಗಳಲ್ಲಿ ಲಭ್ಯ ಸೌಲಭ್ಯಗಳಲ್ಲೇ ಹೆಣಗಾಡಿ ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಪ್ರಾಮಾಣಿಕ ವೈದ್ಯರೆಲ್ಲರ ಸ್ಥೈರ್ಯವನ್ನೂ, ಬದ್ಧತೆಯನ್ನೂ ಅವಮಾನಿಸಿದಂತಾಗುತ್ತದೆ.

ಕರ್ತವ್ಯ ಲೋಪವು ಸಾಬೀತಾಗದಿದ್ದರೂ ವೈದ್ಯಾಧಿಕಾರಿಯನ್ನು ವರ್ಗಾಯಿಸಬಹುದು ಎಂದಾದರೆ, ಮೂರು ವರ್ಷಗಳ ಹಿಂದೆ ಕೆಡವಲಾಗಿರುವ ಅದೇ ಜಿಲ್ಲಾಸ್ಪತ್ರೆಯ ಕಟ್ಟಡವನ್ನು ಪುನರ್ನಿಮಾಣ ಮಾಡಲಾಗದೆ, ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ಅತ್ಯಗತ್ಯವಾದ ಸೌಲಭ್ಯಗಳನ್ನು ಒದಗಿಸಲಾಗದೆ, ಆರೋಗ್ಯ ಇಲಾಖೆಯುದ್ದಕ್ಕೂ ತೀವ್ರವಾಗಿರುವ ಸಿಬಂದಿ ಕೊರತೆಯನ್ನು ನೀಗಿಸಲಾಗದೆ ಕಣ್ಣಿಗೆ ರಾಚುವಂತಹ ಕರ್ತವ್ಯ ಲೋಪಗಳನ್ನೆಸಗಿದ್ದಕ್ಕಾಗಿ ಸಚಿವರೇ ರಾಜೀನಾಮೆ ನೀಡಬೇಡವೇ? ಅಥವಾ ಮುಖ್ಯಮಂತ್ರಿಗಳೇ ಆರೋಗ್ಯ ಸಚಿವರನ್ನು ಎತ್ತಂಗಡಿ ಮಾಡಬೇಡವೇ?

ಆರ್ಥಿಕ ಉದಾರೀಕರಣ, ಖಾಸಗೀಕರಣ, ವ್ಯಾಪಾರಿ ಮನೋವೃತ್ತಿ, ಹಾಗೂ ಅವುಗಳಿಂದಾಗಿ ಹೆಚ್ಚುತ್ತಿರುವ ಸಾಮಾಜಿಕ-ಆರ್ಥಿಕ ಅಸ್ಥಿರತೆಗಳು ವೈದ್ಯರನ್ನು ಉಳಿದೆಲ್ಲರ ಪಾಲಿನ ಜಜ್ಜುಬೊಂಬೆಗಳನ್ನಾಗಿಸಿವೆ. ಇದನ್ನು ತಡೆಯಬೇಕಿದ್ದರೆ, ಈ ವ್ಯವಸ್ಥೆಯಲ್ಲಿ ಭಾಗಿಗಳಾಗಿರುವ ರಾಜಕಾರಣಿಗಳು, ಪೋಲೀಸರು, ಖಾಸಗಿ ಹಿತಾಸಕ್ತಿಗಳು, ಮಾಧ್ಯಮಗಳು, ಮುಂತಾದವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದನ್ನು ವೈದ್ಯರು ಮೊದಲಾಗಿ ನಿಲ್ಲಿಸಬೇಕಿದೆ, ಸಾಮಾಜಿಕ-ಆರ್ಥಿಕ ಅನಿಷ್ಟಗಳ ವಿರುದ್ಧ ದನಿಗೂಡಿಸಬೇಕಿದೆ. ಖಾಸಗಿ ವೈದ್ಯಕೀಯ ಕಾಲೇಜುಗಳ ಕಳಪೆ ಶಿಕ್ಷಣವನ್ನು ತಡೆಯುವುದು, ಖಾಸಗಿ ಆಸ್ಪತ್ರೆಗಳ ವ್ಯಾಪಾರೀಕರಣದ ಒತ್ತಡಗಳನ್ನೂ, ವೈದ್ಯವೃತ್ತಿಯಲ್ಲಿ ಬೆಳೆಯುತ್ತಿರುವ ಭ್ರಷ್ಟಾಚಾರವನ್ನು ನಿಗ್ರಹಿಸುವುದೂ ಅಷ್ಟೇ ಮುಖ್ಯ. ರೋಗಿಗಳೊಂದಿಗೂ, ಅವರ ಬಂಧುಮಿತ್ರರೊಂದಿಗೂ ಉತ್ತಮ ಸಂವಹನವನ್ನಿಟ್ಟುಕೊಂಡು, ರೋಗನಿದಾನ ಹಾಗೂ ಚಿಕಿತ್ಸೆಗಳ ನಿರ್ಣಯಗಳಲ್ಲಿ ಪಾರದರ್ಶತೆಯನ್ನು ಪಾಲಿಸುವುದರಿಂದ ವೈದ್ಯವೃತ್ತಿಯ ವಿಶ್ವಸಾರ್ಹತೆಯನ್ನು ಹೆಚ್ಚಿಸಬಹುದು. ಈ ಉದಾತ್ತವಾದ, ಜೀವರಕ್ಷಕ ವೃತ್ತಿಯ ಆತ್ಮವನ್ನು ಉಳಿಸಬೇಕಿದ್ದರೆ ವೃತ್ತಿಸಂಹಿತೆಯ ಆದರ್ಶಗಳನ್ನೂ, ಘನತೆಯನ್ನೂ ವೈದ್ಯರೇ ಕಾಯಬೇಕಾಗುತ್ತದೆ.