ಅತಾತೂರ್ಕ್ ಮತ್ತು ಮಹಾತ್ಮ ಗಾಂಧಿ

(ಕೃಪೆ: ಹೊಸತು ಮಾಸಪತ್ರಿಕೆ, ಆಗಸ್ಟ್ 2013)

ಏಷ್ಯಾ ಮತ್ತು ಯೂರೋಪುಗಳ ನಡುವೆ ಸೇತುವಾಗಿರುವ ತೂರ್ಕಿಗೆ ಹೋಗುವ ಬಗ್ಗೆ ಯೋಚನೆ ಹೊಳೆದಾಗಲೇ ಅಲ್ಲಿನ ಇತಿಹಾಸದ ಮೇಲೊಮ್ಮೆ ಕಣ್ಣಾಡಿಸಿದ್ದೆ. ಹಲಬಗೆಯ ರಾಜಕೀಯ-ಧಾರ್ಮಿಕ ವ್ಯವಸ್ಥೆಗಳ ಮೂಲಕ ಹಾದು ಬಂದಿರುವ ಪುಟ್ಟ ದೇಶವೊಂದು ಇಪ್ಪತ್ತೊಂದನೇ ಶತಮಾನದ ಅಭಿವೃದ್ಧಿಯನ್ನು ಮೈಗೂಡಿಸಿಕೊಳ್ಳುತ್ತಿರುವುದು ಆಕರ್ಷಕವೆನಿಸಿತ್ತು. ಭರತಖಂಡಕ್ಕೆ ದಾಳಿಯಿಟ್ಟವರಿಗೂ, ವಲಸೆ ಬಂದವರಿಗೂ ದಾರಿಯೊದಗಿಸಿದ್ದ ಆ ನೆಲದಲ್ಲಿ ಎರಡು ವಾರಗಳ ಕಾಲ ತಿರುಗಾಡಿದಾಗ ನಿರೀಕ್ಷೆಗೂ ಮೀರಿ ಕಲಿಯುವುದಾಯಿತು.

ಇಸ್ತಾಂಬುಲಿನ ಅತಾತೂರ್ಕ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಳಿದು ನಾಡೆಲ್ಲ ಸುತ್ತಿ ಮತ್ತೆ ವಿಮಾನವೇರುವವರೆಗೆ ಎಲ್ಲೆಡೆ, ಪ್ರತಿಕ್ಷಣ ಅತಾತೂರ್ಕ್ ಇರುವಿಕೆ ಅನುಭವಕ್ಕೆ ಬರುತ್ತದೆ. ತುರ್ಕರ ಕಣಕಣದಲ್ಲೂ ನೆಲೆಸಿರುವ ಅತಾತೂರ್ಕ್ ಆ ದೇಶದ ಜೀವಾಳ, ಅಲ್ಲಿನ ಆತ್ಮ, ಎಲ್ಲ ತುರ್ಕರಿಗೂ ಮಹಾತ್ಮ. ಅತಾತೂರ್ಕ್ ಅಂದರೆ ತುರ್ಕರ ತಂದೆ ಅಥವಾ ತುರ್ಕರ ರಾಷ್ಟ್ರಪಿತ ಎಂದರ್ಥ. ಆಧುನಿಕ ತುರ್ಕಿಯ ನಿರ್ಮಾತೃ ಮುಸ್ತಾಫಾ ಕೆಮಾಲ್ ಅವರಿಗೆ ತುರ್ಕಿಯ ಮಹಾ ಸಂಸತ್ತು ನೀಡಿರುವ ಬಿರುದು ಅದು. ತುರ್ಕಿಯ ಇಂದಿನ ರಾಜಕೀಯ, ಆರ್ಥಿಕ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಔದ್ಯಮಿಕ ಚಟುವಟಿಕೆಗಳಲ್ಲೆಲ್ಲ ಅತಾತೂರ್ಕ್ ಛಾಪು ಅಮರವಾಗಿದೆ.

ಅದಕ್ಕೆ ಕಾರಣಗಳೂ ಇಲ್ಲದಿಲ್ಲ. ಅನ್ಯ ದೇಶಗಳ ದಾಳಿಗಳಿಂದ ಹರಿದು ಹಂಚಾಗಿದ್ದ ದೇಶವನ್ನು ವಿಮೋಚನೆಗೊಳಿಸಿ, ಒಗ್ಗೂಡಿಸಿ, ಅದರ ಭವಿಷ್ಯದ ನಿರ್ಮಾಣಕ್ಕೆ ಭದ್ರ ಬುನಾದಿಯನ್ನು ಹಾಕಿದ ಶ್ರೇಯವೆಲ್ಲವೂ ಈ ಒಬ್ಬ ವ್ಯಕ್ತಿಗೇ ಸಲ್ಲುತ್ತದೆ. ಸುಮಾರು 13000 ವರ್ಷಗಳಷ್ಟು ಹಿಂದಿನ ಹಳೆ-ನವ ಶಿಲಾಯುಗದ ಕಾಲಘಟ್ಟಕ್ಕೆ ಸೇರಿದ್ದೆನ್ನಲಾದ ಗೊಬೆಕ್ಲಿ ತೆಪೆಯಂತಹ ಪ್ರಾಚೀನ ವಸತಿಗಳಿಂದ ಹಿಡಿದು ಮೆಸೊಪೊಟೇಮಿಯಾ ನಾಗರಿಕತೆಯ ಭಾಗವಾಗಿದ್ದುಕೊಂಡು, ರೋಮನ್ ಹಾಗೂ ಗ್ರೀಕ್ ಸಾಮ್ರಾಜ್ಯಗಳ ಪ್ರಮುಖ ಕೇಂದ್ರವಾಗಿದ್ದ ತುರ್ಕಿಯು ಇಪ್ಪತ್ತನೇ ಶತಮಾನದ ಆರಂಭದ ವೇಳೆಗೆ ಸಾಕಷ್ಟು ಜರ್ಜರಿತವಾಗಿತ್ತು. ತುರ್ಕ ಸಾಮ್ರಾಜ್ಯದ ಅಧಿಪತಿಯಾಗಿದ್ದ ಒಟೋಮಾನ್ ಸುಲ್ತಾನ ಅದಾಗಲೇ ದುರ್ಬಲನಾಗಿ, ಹಿಡಿತವನ್ನು ಸಾಕಷ್ಟು ಕಳೆದುಕೊಂಡಿದ್ದ. ಮೊದಲ ಮಹಾಯುದ್ಧದಲ್ಲಿ (1914-1918) ಬ್ರಿಟನ್-ಫ್ರಾನ್ಸ್ ಕೂಟಕ್ಕಿದಿರಾಗಿ ಜರ್ಮನಿ-ಆಸ್ಟ್ರಿಯಾಗಳ ಜೊತೆ ಸೇರಿದ್ದರಿಂದ ತುರ್ಕಿಯ ಬವಣೆ ಇನ್ನಷ್ಟು ಹೆಚ್ಚಿತು. ಬ್ರಿಟನ್ ಹಾಗೂ ನೆರೆಯ ಇಟಲಿ, ಗ್ರೀಸ್ ದೇಶಗಳು ಸೋತ ತುರ್ಕಿಯ ಭಾಗಗಳನ್ನು ಕಸಿದುಕೊಳ್ಳಲು ಮುಂದಾದವು. ಅದುವರೆಗೂ ಸುಲ್ತಾನನ ಸೇನೆಯಲ್ಲಿ ದಳಪತಿಯಾಗಿದ್ದು ಹಲವು ಅಭಿಯಾನಗಳಲ್ಲಿ ಯಶಸ್ವಿಯಾಗಿದ್ದ ಮುಸ್ತಾಫಾ ಕೆಮಾಲ್ ಗೆ  ಇದನ್ನು ಸಹಿಸಲಾಗಲಿಲ್ಲ. ಸುಲ್ತಾನನ್ನು ಧಿಕ್ಕರಿಸಿ ಹೊರ ನಡೆದ ಕೆಮಾಲ್ ತನ್ನದೇ ಸೇನೆಯನ್ನು ಕಟ್ಟಿಕೊಂಡು, ತುರ್ಕಿಯನ್ನು ಸ್ವತಂತ್ರಗೊಳಿಸುವ ಹೋರಾಟದ ನೇತೃತ್ವ ವಹಿಸಿದ. ಅದೇ ಕಾಲದಲ್ಲಿ ರಷ್ಯಾದಲ್ಲಿ ಸ್ಥಾಪನೆಯಾಗಿದ್ದ ಲೆನಿನ್ ನೇತೃತ್ವದ ಬೋಲ್ಷೆವಿಕ್ ಸರಕಾರವು ಕೆಮಾಲ್ ಸೇನೆಗೆ ಅಗತ್ಯವಿದ್ದ ಶಸ್ತಾಸ್ತ್ರಗಳನ್ನೊದಗಿಸಿ ನೆರವಾಯಿತು. ಕೆಮಾಲ್ ನ ಸೇನೆ ಎಲ್ಲೆಡೆ ಜಯಗಳಿಸಿ ಮುನ್ನುಗ್ಗುತ್ತಿದ್ದಂತೆ, ಸುಲ್ತಾನನ ಆಡಳಿತದ ಸಂಸತ್ತಿನ ಚುನಾವಣೆಗಳಲ್ಲೂ ಮುಸ್ತಾಫಾ ಕೆಮಾಲ್ ಬೆಂಬಲಿಗರೇ ಜಯಭೇರಿ ಬಾರಿಸಿದರು. ಅದಾದ ಬೆನ್ನಿಗೇ, ಎಪ್ರಿಲ್ 1920 ರಲ್ಲಿ, ಮುಸ್ತಫಾ ಕೆಮಾಲ್ ನೇತೃತ್ವದ ಸ್ವತಂತ್ರ ಸರಕಾರವು ಅಂಕಾರಾದಲ್ಲಿ ಸ್ಥಾಪಿಸಲ್ಪಟ್ಟಿತು. ತುರ್ಕಿಯ ಜನತೆ ಕೆಮಾಲ್ ಹಿಂದೆ ಅಣಿ ನೆರೆದಾಗ ತುರ್ಕಿಯನ್ನು ಹೋಳು ಮಾಡಿದ್ದ ದೇಶಗಳು ಬೇರೆ ಉಪಾಯವಿಲ್ಲದೆ ಹಿಂದೆಗೆಯಬೇಕಾಯಿತು.ಒಕ್ಟೊಬರ್ 1923ರಲ್ಲಿ ಇಸ್ತಾಂಬುಲ್ ನಲ್ಲಿ ಆಡಳಿತ ನಡೆಸುತ್ತಿದ್ದ ಸುಲ್ತಾನನ್ನು ಕೆಳಗಿಳಿಸಿ ಅರಮನೆಯಿಂದ ಹೊರದಬ್ಬಲಾಯಿತು. ಅಲ್ಲಿಗೆ ಇಡೀ ತುರ್ಕಿಯಲ್ಲಿ ಮುಸ್ತಾಫಾ ಕೆಮಾಲ್ ನೇತೃತ್ವದ ಆಡಳಿತವು ಸ್ಥಾಪನೆಯಾಯಿತು.

ಕೆಮಾಲ್ ಅಲ್ಲಿಗೇ ವಿರಮಿಸಲಿಲ್ಲ. ವಿದ್ಯಾರ್ಥಿದೆಸೆಯಲ್ಲಿ ಮದರಸಾವನ್ನು ತೊರೆದು ಆಧುನಿಕ ಶಿಕ್ಷಣವನ್ನು ಪಡೆದಿದ್ದ ಕೆಮಾಲ್ ತುರ್ಕಿಯನ್ನೊಂದು ಧರ್ಮಾತೀತವಾದ, ಸುಶಿಕ್ಷಿತವಾದ ದೇಶವನ್ನಾಗಿ ಕಟ್ಟುವುದಕ್ಕೆ ಪ್ರೇರಿತನಾಗಿದ್ದ. ಕೆಮಾಲ್ ನೇತೃತ್ವದ ಹೊಸ ಸರಕಾರವು ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ವಲಯಗಳಲ್ಲಿ ಹಲವಾರು ಕ್ರಾಂತಿಕಾರಿ ಸುಧಾರಣೆಗಳನ್ನು ಜಾರಿಗೊಳಿಸಿದ್ದಲ್ಲದೆ, ಅವನ್ನು ಚಿರಸ್ಥಾಯಿಯಾಗಿರುವುದಕ್ಕಾಗಿ ಭದ್ರವಾದ ಸಾಂವಿಧಾನಿಕ ನೆಲೆಗಟ್ಟನ್ನೂ ಒದಗಿಸಿತು. ಸುಲ್ತಾನನ ಆಡಳಿತ ಕಾಲದಲ್ಲಿ ಮುಖ್ಯ ಧರ್ಮಾಧಿಕಾರಿಯಾಗಿದ್ದ ಖಲೀಫರಿಗೆ ಸಮಾಂತರವಾದ ಅಧಿಕಾರವಿತ್ತು; ಅವರದೇ ಆದ ಕಾನೂನುಗಳನ್ನು ವಿಧಿಸುವ ಅವಕಾಶವಿತ್ತು, ಸ್ವಂತ ಸೇನಾ ಪಡೆಯನ್ನೂ ಹೊಂದಬಹುದಾಗಿತ್ತು. ಕೆಮಾಲ್ ಸರಕಾರವು ಖಲೀಫರ ಅಧಿಕಾರವನ್ನು ತೆಗೆದು ಹಾಕಿ ದೇಶದೆಲ್ಲೆಡೆ ಪ್ರಜಾಸತ್ತಾತ್ಮಕ ಆಡಳಿತವೊಂದೇ ಇರುವಂತೆ ಸುನಿಶ್ಚಿತಗೊಳಿಸಿತು. ಇದು ಭಾರತವೂ ಸೇರಿದಂತೆ ವಿಶ್ವದ ಹಲವು ಭಾಗಗಳಲ್ಲಿ ಸಂಪ್ರದಾಯವಾದಿಗಳ ಕೋಪಕ್ಕೆ ಕಾರಣವಾದರೂ ತುರ್ಕಿಯ ಜನತೆ ಕೆಮಾಲ್ ಬೆಂಬಲಕ್ಕಿತ್ತು. ತುರ್ಕಿಯ ಶೇ. 97ರಷ್ಟು ಜನರು ಇಸ್ಲಾಂ ಧರ್ಮಾನುಯಾಯಿಗಳಾಗಿದ್ದರೂ ಕೂಡ ಆಡಳಿತದಿಂದಲೂ, ಸಾರ್ವಜನಿಕ ಜೀವನದಿಂದಲೂ ಅದನ್ನು ದೂರವಿಡುವುದಕ್ಕೆ ಇದು ಬುನಾದಿಯಾಯಿತು. ಮಧ್ಯಪ್ರಾಚ್ಯದ ಇತರ ಇಸ್ಲಾಂ ಮತಾನುಯಾಯಿ ದೇಶಗಳ ಪ್ರಭಾವದಿಂದ ತುರ್ಕಿಯನ್ನು ಪ್ರತ್ಯೇಕಿಸುವ ಉದ್ದೇಶದಿಂದ ತುರ್ಕಿ ಭಾಷೆಗೆ ಅರೇಬಿಕ್ ಲಿಪಿಯ ಬದಲಿಗೆ ಪರಿಷ್ಕೃತ ಲಾಟಿನ್ ಲಿಪಿಯನ್ನು ಬಳಸಲಾರಂಭಿಸಲಾಯಿತು. ಆಧುನಿಕ ಶಾಲೆಗಳನ್ನೂ, ಉನ್ನತ ಶಿಕ್ಷಣ ಸಂಸ್ಥೆಗಳನ್ನೂ ಎಲ್ಲೆಡೆ ತೆರೆದಿದ್ದಲ್ಲದೆ ಮದರಸಾಗಳನ್ನು ಆಧುನೀಕರಣಗೊಳಿಸಲಾಯಿತು. ಎಲ್ಲಾ ಧಾರ್ಮಿಕ ಸ್ಥಳಗಳನ್ನು ಸರಕಾರದ ನಿಯಂತ್ರಣಕ್ಕೊಳಪಡಿಸಲಾಯಿತು. ಶಾಲೆಗಳಲ್ಲೂ, ಸರಕಾರಿ ಇಲಾಖೆಗಳಲ್ಲೂ ಧಾರ್ಮಿಕ ಕಟ್ಟಳೆಗಳಿಗನುಗುಣವಾದ ಉಡುಗೆಗಳನ್ನು ನಿಷೇಧಿಸಲಾಯಿತು.

ಇಂತಹ ಪುರೋಗಾಮಿ ಸಂವಿಧಾನಕ್ಕೂ, ಅದರ ನಿರ್ಮಾತೃವಾದ ಅತಾತೂರ್ಕ್ ನ ನೆನಪಿಗೂ ಯಾವುದೇ ಕೊಂಕು ತಗಲದಂತೆ ತುರ್ಕಿಯ ಜನ ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಾರೆ. ಸಂಪ್ರದಾಯವಾದಿ ಎರ್ದೊಆನ್ ನೇತೃತ್ವದ ಈಗಿನ ಸರಕಾರವು ಜೂನ್ 2012ರಲ್ಲಿ ಅತಾತೂರ್ಕ್ ಬಿಂಬವಿಲ್ಲದ ನಾಣ್ಯವನ್ನು ಚಲಾವಣೆಗೆ ತಂದಾಗ ದೇಶದಾದ್ಯಂತ ಪ್ರತಿಭಟನೆಗಳಾಗಿ, ಅದನ್ನು ಹಿಂಪಡೆಯಬೇಕಾಯಿತು. ತುರ್ಕಿಯ ಸೇನೆಯು ಕೂಡಾ ಸಂವಿಧಾನದ ಧರ್ಮಾತೀತ ಆಶಯಗಳ ಕಾವಲುಗಾರನಂತೆ ವರ್ತಿಸುತ್ತದೆ. ಚುನಾಯಿತ ಸರಕಾರಗಳಿಂದ 1960, 1971 ಹಾಗೂ 1980ರಲ್ಲಿ ಇಸ್ಲಾಮೀಕರಣದ ಪ್ರಯತ್ನಗಳಾದಾಗ ಸೇನೆಯು ಅವನ್ನು ತೊಲಗಿಸಿ ಮತ್ತೆ ಚುನಾವಣೆಗೆ ಅನುವು ಮಾಡಿಕೊಟ್ಟದ್ದಿದೆ. ಈ ಭಯದಿಂದಾಗಿ ಆಡಳಿತ ಪಕ್ಷವು ಧರ್ಮವನ್ನು ಸಾಕಷ್ಟು ದೂರವೇ ಇಡಬೇಕಾದ ಒತ್ತಡಕ್ಕೆ ಸಿಲುಕಿಕೊಳ್ಳುತ್ತದೆ.

ಆದರೆ ಎರ್ದೊಆನ್ ಸರಕಾರವು ಅತಾತೂರ್ಕ್ ನ ಆಶಯಗಳನ್ನು ಮಣ್ಣುಪಾಲಾಗಿಸುವ ಕೆಲಸವನ್ನು ನಿಧಾನವಾಗಿ ನಡೆಸುತ್ತಲೇ ಇದೆ. ಕಳೆದ ಹತ್ತು ವರ್ಷಗಳಿಂದ ತುರ್ಕಿಯ ಪ್ರಧಾನಿಯಾಗಿರುವ ಎರ್ದೊಆನ್ ವರ್ತನೆಯು ನಮ್ಮಲ್ಲಿನ ಕೋಮುವಾದಿ ಪಕ್ಷದ ನಾಯಕರ ವರ್ತನೆಯನ್ನು ಅಕ್ಷರಷಃ ಹೋಲುತ್ತದೆ. ಇಸ್ಲಾಮೀಕರಣದ ಪರವಾಗಿರುವ ಇಪ್ಪತ್ತರಷ್ಟು ಸಣ್ಣಪುಟ್ಟ ಗುಂಪುಗಳನ್ನು ಸೇರಿಸಿ ಎರ್ದೊಆನ್ ನೇತೃತ್ವದ ಜಸ್ಟಿಸ್ ಅಂಡ್ ಡೆಮಾಕ್ರಾಟಿಕ್ ಪಾರ್ಟಿಯನ್ನು ಸ್ಥಾಪಿಸಲಾಗಿತ್ತು. ಇದು ಆರಂಭದಿಂದಲೂ ದೇಶದಲ್ಲಿ ಇಸ್ಲಾಮೀಕರಣವನ್ನು ಹೇರುವ ಉದ್ದೇಶವನ್ನು ಹೊಂದಿತ್ತಾದರೂ, ಸಾಂವಿಧಾನಿಕ ವಿಧಿಗಳ ಒತ್ತಡದಿಂದಾಗಿ ಸುಮ್ಮನಿರಬೇಕಾಯಿತು. ಇತ್ತೀಚಿನ ವರ್ಷಗಳಲ್ಲಿ ಇಸ್ಲಾಮೀಕರಣದ ಯೋಜನೆಯನ್ನು ಒಂದೊಂದಾಗಿ ಜಾರಿಗೊಳಿಸಲು ಪ್ರಯತ್ನಿಸುತ್ತಿರುವುದು ತುರ್ಕಿಯ ಜನತೆಯ, ವಿಶೇಷವಾಗಿ ಅಲ್ಲಿನ ವಿದ್ಯಾವಂತರು ಹಾಗೂ ಪ್ರಗತಿಪರರ ಸಿಟ್ಟಿಗೆ ಕಾರಣವಾಗಿದೆ. ಈಗ ಇಸ್ತಾಂಬುಲ್ ನಗರದ ಚಾರಿತ್ರಿಕ ತಕ್ಸಿಮ್ ಚೌಕವನ್ನೇ ಕೆಡವಿ ಅದರ ಜಾಗದಲ್ಲಿ ಮಹಾಮಳಿಗೆಗಳನ್ನೂ, ಪ್ರಾರ್ಥನಾ ಮಂದಿರವನ್ನೂ ನಿರ್ಮಿಸಲು ಹೊರಟಿರುವುದು ಈ ಸಿಟ್ಟನ್ನು ತಾರಕಕ್ಕೇರಿಸಿದೆ,ದೇಶದಾದ್ಯಂತ ಪ್ರತಿಭಟನೆಗಳ ಅಲೆಯೆದ್ದಿದೆ. ಪ್ರತಿಭಟನೆಯ ತುಂಬ ಅತಾತೂರ್ಕ್ ನ ಚಿತ್ರಗಳೂ, ಬ್ಯಾನರ್ ಗಳೂ ರಾರಾಜಿಸುತ್ತಿರುವುದು ಅತಾತೂರ್ಕ್ ಕೊಟ್ಟ ಸಂವಿಧಾನದ ರಕ್ಷಣೆಗಾಗಿ ತುರ್ಕಿಯ ಜನರು ಪಣ ತೊಟ್ಟಿರುವುದನ್ನು ಸೂಚಿಸುತ್ತದೆ. ಪ್ರತಿಭಟನೆಯ ಬಿಸಿಯಲ್ಲಿ ಸಿಕ್ಕಿರುವ ಎರ್ದೊಆನ್ ಮತ್ತವರ ಬೆಂಬಲಿಗರೂ ಅತಾತೂರ್ಕ್ ಚಿತ್ರವನ್ನು ಮುಂದಿಟ್ಟು ತಮ್ಮ ದೇಶಪ್ರೇಮವನ್ನು ಸಾರಿ ಹೇಳಬೇಕಾದ ಪ್ರಮೇಯಕ್ಕೆ ಸಿಲುಕಿದ್ದಾರೆ.

ದೇಶಪ್ರೇಮವನ್ನು ಸಾಬೀತುಪಡಿಸುವುದಕ್ಕಾಗಿ ಗಾಂಧಿ, ಪಟೇಲ್ ಮಂತಾದ ಮಹಾನ್ ನಾಯಕರ ಹೆಸರನ್ನೂ, ಚಿತ್ರಗಳನ್ನೂ, ಪ್ರತಿಮೆಗಳನ್ನೂ ಬಳಸಬೇಕಾದ ಸ್ಥಿತಿ ನಮ್ಮ ಕೋಮುವಾದಿ ರಾಜಕೀಯ ಪಕ್ಷಗಳಿಗೂ ಬಂದೊದಗಿದೆ. ಅಲ್ಲಿನಂತೆ ಇಲ್ಲಿಯೂ ಸಂವಿಧಾನ ವಿರೋಧಿ ಸಮಯಸಾಧಕ ರಾಜಕಾರಣಿಗಳು ರಾಷ್ಟ್ರಪಿತರ ಚಿತ್ರದ ಹಿಂದೆ ಅವಿತುಕೊಳ್ಳಲು ಯತ್ನಿಸುತ್ತಿರುತ್ತಾರೆ. ಆದರೆ ತುರ್ಕಿಯಲ್ಲಿ ಅತಾತೂರ್ಕ್ ಗೆ ದೊರೆಯುವ ಗೌರವಾದರಗಳು ನಮ್ಮ ರಾಷ್ಟ್ರಪಿತ ಗಾಂಧೀಜಿಗೆ ದೊರೆಯುತ್ತಿವೆಯೇ? ಗಾಂಧೀಜಿಯೂ ಅತಾತುರ್ಕನ ಸಮಕಾಲೀನರೇ ಆಗಿದ್ದರು, ಪಾಶ್ಚಿಮಾತ್ಯ ಶಿಕ್ಷಣವನ್ನು ಪಡೆದು ಕಾನೂನು ಪದವೀಧರರಾಗಿದ್ದರು. ಮೊದಲ ಮಹಾಯುದ್ಧದ ನಂತರ ತುರ್ಕಿಯಲ್ಲಿ ಮುಸ್ತಫಾ ಕೆಮಾಲ್ ತನ್ನ ದೇಶದ ವಿಮೋಚನೆಗಾಗಿ ಸೇನೆಯನ್ನು ಕಟ್ಟುತಿದ್ದಾಗ ಇತ್ತ ಗಾಂಧೀಜಿ 1915ರಲ್ಲಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿದ್ದರು, ಗೋಪಾಲಕೃಷ್ಣ ಗೋಖಲೆಯಂಥವರ ಪ್ರಭಾವಕ್ಕೊಳಗಾಗಿ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದ್ದರು.

ಇಲ್ಲಿ ಗಾಂಧೀಜಿಯ ನಾಯಕತ್ವವು ಬಲಗೊಳ್ಳುವಲ್ಲಿ ತುರ್ಕಿಯ ವಿದ್ಯಮಾನಗಳಿಗೂ ಮಹತ್ವದ ಪಾತ್ರವಿತ್ತು. ತುರ್ಕಿಯ ಸುಲ್ತಾನನು ಮಹಾಯುದ್ಧದಲ್ಲಿ ಸೋತು ಸುಣ್ಣವಾಗಿದ್ದರಿಂದ ಜೊತೆಗಿದ್ದ ಖಲೀಫರ ಅಧಿಕಾರಕ್ಕೂ ಕುತ್ತುಂಟಾಗಿತ್ತು. ಯುದ್ಧದಲ್ಲಿ ಗೆದ್ದಿದ್ದ ಬ್ರಿಟಿಷರು ಖಲೀಫರ ತಂಟೆಗೆ ಹೋಗಬಾರದೆಂದು ಒತ್ತಾಯಿಸುವುದಕ್ಕಾಗಿ ವಿಶ್ವದ ಹಲವೆಡೆ ಮುಸ್ಲಿಮರು ಬ್ರಿಟಿಷರ ವಿರುದ್ಧ ಹೋರಾಟಗಳನ್ನು ಸಂಘಟಿಸಿದ್ದರು. ಬ್ರಿಟಿಷರಾಳ್ವಿಕೆಯಿದ್ದ ಭಾರತದಲ್ಲಿ ಇದು ಖಿಲಾಫತ್ ಚಳುವಳಿಯೆಂಬ ಹೆಸರಲ್ಲಿ ಬೆಳೆಯತೊಡಗಿತ್ತು. ಗಾಂಧೀಜಿಯವರ ಸಕ್ರಿಯ ಬೆಂಬಲದಿಂದಾಗಿ ಇದು ಸ್ವಾತಂತ್ರ್ಯ ಚಳುವಳಿಯೊಳಗೆ ಅಡಕವಾಗಿಬಿಟ್ಟಿತು. ಜೊತೆಗೆ ಅಸ್ಪೃಶ್ಯರಾಗಿ ತೊಳಲಾಡುತ್ತಿದ್ದ ಬಹುಪಾಲು ಭಾರತೀಯರನ್ನು ಸ್ವಾತಂತ್ರ್ಯ ಚಳುವಳಿಯತ್ತ ಸೆಳೆಯುವುದಕ್ಕಾಗಿ ಗಾಂಧೀಜಿಯವರು ಹಲವಾರು ಸುಧಾರಣಾ ಕ್ರಮಗಳನ್ನೂ ಆರಂಭಿಸಿದರು.

ಅತ್ತ ಮುಸ್ತಫಾ ಕೆಮಾಲ್ ತನ್ನ ದೇಶದ ಬಹುಸಂಖ್ಯಾತರು ಅನುಸರಿಸುತ್ತಿದ್ದ ಮತಧರ್ಮವನ್ನು ಸಂಪೂರ್ಣವಾಗಿ ದೂರವಿಟ್ಟಿದ್ದರೆ ಇತ್ತ ಹಲವು ಮತಧರ್ಮಗಳು ಹಾಗೂ ವಿಭಜನಕಾರಿ ಪ್ರವೃತ್ತಿಗಳಿದ್ದ ನಮ್ಮಲ್ಲಿ ಗಾಂಧೀಜಿಯವರು ಅವನ್ನೇ ಸುಧಾರಿಸಿ ಬಳಸಿಕೊಳ್ಳುವ ಪ್ರಯೋಗವನ್ನು ನಡೆಸಿದ್ದರು, ಆರಂಭದಲ್ಲಿ ಅದರಲ್ಲಿ ಒಂದಷ್ಟು ಸಫಲರೂ ಆಗಿದ್ದರು. ಆದರೆ ತುರ್ಕಿಯಲ್ಲಿ ಹೊರಗಿನ ಬ್ರಿಟಿಷರಿಗೆ ಬದಲಾಗಿ ಅಲ್ಲಿನ ಜನರೇ ಕೆಮಾಲ್ ನೇತೃತ್ವದಲ್ಲಿ ಖಲೀಫರನ್ನು ಕೆಳಗಿಳಿಸುವುದರೊಂದಿಗೆ ಇಲ್ಲಿನ ಖಿಲಾಫತ್ ಚಳುವಳಿಯು ಅಸ್ತವ್ಯಸ್ತವಾಯಿತು. ಎರಡೂ ಕಡೆಯ ಧರ್ಮಾಂಧರು ಗಾಂಧೀಜಿಯವರನ್ನೂ, ಸ್ವಾತಂತ್ರ್ಯ ಚಳುವಳಿಯನ್ನೂ ತೊರೆದು ತಮತಮಗೆ ಪ್ರತ್ಯೇಕ ರಾಷ್ಟ್ರಕ್ಕಾಗಿ ಕೂಗೆಬ್ಬಿಸಿದರು. ದೇಶದೆಲ್ಲೆಡೆ ಕೋಮುಗಲಭೆಗಳಾಗುತ್ತಿದ್ದಂತೆ ಗಾಂಧೀಜಿ ವಿಚಲಿತರಾದರು. ಬ್ರಿಟಿಷರು ದೇಶವನ್ನು ಬಿಟ್ಟರೂ ಕೋಮುವಾದದ ಹೊಗೆಯು ಆರಲೇ ಇಲ್ಲ, ದೇಶವನ್ನು ಒಂದಾಗಿಡುವುದಕ್ಕೂ ಸಾಧ್ಯವಾಗಲಿಲ್ಲ. ಕೊನೆಗೆ ನಮ್ಮ ರಾಷ್ಟ್ರಪಿತ ಗಾಂಧೀಜಿ ಧರ್ಮಾಂಧನೊಬ್ಬನ ಗುಂಡಿಗೇ ಬಲಿಯಾಗಬೇಕಾಯಿತು.