ವೈದ್ಯಕೀಯ ಶಿಕ್ಷಣಕ್ಕೆ ಖಾಸಗೀಕರಣವೇ ಮಾರಕ ರೋಗ

ವೈದ್ಯಕೀಯ ಶಿಕ್ಷಣಕ್ಕೆ ಖಾಸಗೀಕರಣವೇ ಮಾರಕ ರೋಗ

ಹೊಸತು, ಏಪ್ರಿಲ್ 2022

ಯುಕ್ರೇನ್‍ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ಹಾವೇರಿಯ ನವೀನ್ ರಷ್ಯಾದ ದಾಳಿಯಲ್ಲಿ ಮೃತಪಟ್ಟುದಕ್ಕೆ, ಅಲ್ಲಿದ್ದ ಸುಮಾರು 18000 ಭಾರತೀಯ ವಿದ್ಯಾರ್ಥಿಗಳಿಗೆ ತೊಂದರೆಯಾದುದಕ್ಕೆ ಈಗ ಇಲ್ಲಿ ವೈದ್ಯಕೀಯ ಶಿಕ್ಷಣದ ಬಗ್ಗೆ ಬಗೆಬಗೆಯ ಚರ್ಚೆಗಳಾಗುತ್ತಿವೆ, ಬಗೆಬಗೆಯ ಪರಿಹಾರಗಳನ್ನು ಸೂಚಿಸಲಾಗುತ್ತಿದೆ. ಕಳೆದ ಮೂರು ದಶಕಗಳಲ್ಲಿ ವೈದ್ಯಕೀಯ ಶಿಕ್ಷಣದ ಖಾಸಗೀಕರಣವು ಎಗ್ಗಿಲ್ಲದೆ ನಡೆದಾಗ, ಮತ್ತೆ ಈಗ ಐದು ವರ್ಷಗಳಲ್ಲಿ ಕೇಂದ್ರ ಸರಕಾರವು ಖಾಸಗಿ ಕಾಲೇಜುಗಳ ತಾಳಕ್ಕೆ ತಕ್ಕಂತೆ ನೀಟ್ ಪ್ರವೇಶ ಪರೀಕ್ಷೆಯ ಮಾನದಂಡಗಳನ್ನೇ ಬದಲಿಸಿ ಮಾನಗೆಡಿಸಿದಾಗ ತೆಪ್ಪಗೆ ನೋಡುತ್ತಾ ಇದ್ದು, ಈಗ ಯುಕ್ರೇನ್‍ನಲ್ಲಿ ನಮ್ಮ ವಿದ್ಯಾರ್ಥಿಗಳು ಕಷ್ಟಕ್ಕೀಡಾದರೆಂದು ಬೊಬ್ಬಿರಿಯುತ್ತಿರುವುದು ವಿಪರ್ಯಾಸ, ನಿರರ್ಥಕ, ತಾತ್ಕಾಲಿಕ ಅಷ್ಟೇ.

ಹಾವೇರಿಯ ವಿದ್ಯಾರ್ಥಿಯು ಪ್ರತಿಭಾವಂತನಾಗಿದ್ದ, ಪಿಯುಸಿಯಲ್ಲಿ 97% ಅಂಕಗಳನ್ನು ಪಡೆದಿದ್ದ, ಆದರೂ ಇಲ್ಲಿ ವೈದ್ಯಕೀಯ ಸೀಟು ಸಿಗಲಿಲ್ಲ, ಮೀಸಲಾತಿಯಿಂದ ತೊಂದರೆಯಾಯಿತು, ಜಾತಿಯಲ್ಲಿ ಹುಟ್ಟಿದ್ದೇ ತಪ್ಪಾಯಿತು ಎಂಬ ಆತನ ಮನೆಯವರ ಹೇಳಿಕೆಯ ಬಳಿಕ ಭಾರತದಲ್ಲಿ ವೈದ್ಯರಾಗುವುದು ಬಹಳ ಕಷ್ಟ, ಕೋಟಿಗಟ್ಟಲೆ ಬೇಕು, ಬಡವರ ಮಕ್ಕಳಿಗೆ ಯುಕ್ರೇನ್‍ನಂಥ ದೇಶಗಳೇ ಗತಿ ಎಂಬಂತೆ ಬಿಂಬಿಸಲಾಯಿತು.

ಮಾನ್ಯ ಪ್ರಧಾನಮಂತ್ರಿಗಳು ನಮ್ಮ ವಿದ್ಯಾರ್ಥಿಗಳು ವೈದ್ಯ ಶಿಕ್ಷಣಕ್ಕಾಗಿ ಸಣ್ಣಪುಟ್ಟ ದೇಶಗಳಿಗೆಲ್ಲ ಹೋಗಿ ದೇಶದ ಹಣವು ನಷ್ಟವಾಗುವುದನ್ನು ತಪ್ಪಿಸಲು ಇಲ್ಲಿನ ಬಂಡವಾಳಗಾರರು ಅಗಾಧ ಸಂಖ್ಯೆಯಲ್ಲಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಬಾರದೇ, ಅದಕ್ಕೆ ಬೇಕಾದ ಭೂಮಿಯನ್ನು ರಾಜ್ಯ ಸರಕಾರಗಳು ನೀಡಬಾರದೇ ಎಂದು ಕೇಳಿದರು, ಈ ಮಾತುಗಳಿಂದ ‘ಪ್ರಭಾವಿತರಾಗಿ’ ಬಹು ದೊಡ್ಡ ಬಂಡವಾಳಗಾರರಾದ ಆನಂದ್ ಮಹೀಂದ್ರ ತಾನೂ ವೈದ್ಯಕೀಯ ಕಾಲೇಜನ್ನು ಸ್ಥಾಪಿಸುತ್ತೇನೆ ಎಂದರು.

ಆದರೆ ಇದಕ್ಕೆ ವ್ಯತಿರಿಕ್ತವಾಗಿ, ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‍ಎಂಸಿ)ದ ಸ್ನಾತಕೋತ್ತರ ಶಿಕ್ಷಣ ಮಂಡಳಿಯ ಅಧ್ಯಕ್ಷರೂ, ನಮ್ಮ ಆರೋಗ್ಯ ವಿಶ್ವವಿದ್ಯಾಲಯದ ಕುಲಪತಿಯೂ ಆಗಿರುವ ಡಾ. ಎಂ. ಕೆ. ರಮೇಶ್ ಅವರು, ಈಗ ಅರ್ಧಕ್ಕರ್ಧ ವೈದ್ಯರ ಮಟ್ಟವು ಸರಿಯಿಲ್ಲ, ಇನ್ನಷ್ಟು ಹೊಸ ಕಾಲೇಜು ಸ್ಥಾಪಿಸುವುದಕ್ಕೆ ರಾಜಕಾರಣಿಗಳಿಗೆ ಆಸಕ್ತಿಯಿದ್ದರೂ ಅದು ಪರಿಹಾರವೇ ಅಲ್ಲ, ವೈದ್ಯಕೀಯ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವುದೇ ಅತಿ ಮುಖ್ಯ ಎಂದರು.

ಇತ್ತ ಅನೇಕ ಸಂಘಟನೆಗಳು ನೀಟ್ ಪರೀಕ್ಷೆಯೇ ಎಲ್ಲಾ ಸಮಸ್ಯೆಗಳಿಗೂ ಕಾರಣ, ಅದರಿಂದಲೇ ಬಡವರಿಗೂ, ದಕ್ಷಿಣದ ರಾಜ್ಯಗಳಿಗೂ ಅನ್ಯಾಯವಾಗುತ್ತಿದೆ, ಆದ್ದರಿಂದ ನೀಟ್ ಪರೀಕ್ಷೆಗಳನ್ನೇ ರದ್ದು ಮಾಡಬೇಕು ಎಂದು ಅಭಿಯಾನವನ್ನೇ ಆರಂಭಿಸಿದವು.

ಇದೆಲ್ಲ ನಡೆಯುತ್ತಿದ್ದಂತೆ ದೇಶದಲ್ಲಿ ಆಧುನಿಕ ವೈದ್ಯವೃತ್ತಿಯನ್ನು ನಿಯಂತ್ರಿಸುವ ಎನ್‍ಎಂಸಿ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಶೇ. 50 ರಷ್ಟು ಸೀಟುಗಳಿಗೆ ಸರಕಾರಿ ಕಾಲೇಜುಗಳ ಶುಲ್ಕವಷ್ಟೇ ಇರಬೇಕು ಎಂದು ಆದೇಶಿಸಿತು. ಇದನ್ನು ಪ್ರಧಾನಿ ಸ್ವಾಗತಿಸಿದ್ದೂ ಆಯಿತು, ಅವರ ಜೊತೆಯವರು ಮೇಜು ಕುಟ್ಟಿದ್ದೂ ಆಯಿತು. ಆದರೆ, ಹಾಗೆಲ್ಲಾ ಮಾಡಿದರೆ ಖಾಸಗಿ ಕಾಲೇಜುಗಳು ಉಳಿಯಲಾರವು, ಅವನ್ನು ಮುಚ್ಚಬೇಕಾದೀತು ಎಂದು ಆ ಕಾಲೇಜುಗಳ ಸಂಘಟನೆಗಳು ಹೇಳಿದವು. ಇದರ ಬೆನ್ನಿಗೆ, ಎನ್‍ಎಂಸಿಯು ನೀಟ್ ಪರೀಕ್ಷೆಗೆ ವಯಸ್ಸಿನ ನಿರ್ಬಂಧವನ್ನು ತೆಗೆದು ಹಾಕಿ, ಯಾವುದೇ ವಯಸ್ಸಿನವರಾದರೂ ನೀಟ್ ಬರೆಯಬಹುದು ಎಂದಿತು. ಆ ಮೂಲಕ, ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಸೇರುವ ಅವಕಾಶಗಳನ್ನು ದೇಶದ ಎಲ್ಲಾ ವಯಸ್ಸಿನವರಿಗೂ ನೀಡಿ, ಅವುಗಳ ಗ್ರಾಹಕರ ಸಂಖ್ಯೆಯನ್ನು ಒಮ್ಮೆಗೇ ಹೆಚ್ಚಿಸಿತು.

ಹೇಗಿದೆ ನೋಡಿ! ಇತ್ತ ಖಾಸಗಿ ಕಾಲೇಜುಗಳ ಶುಲ್ಕವನ್ನು ನಿಯಂತ್ರಿಸಿದ್ದೇವೆ ಎನ್ನುವ ಪ್ರಧಾನಿಗಳೇ ಅತ್ತ ಬಂಡವಾಳಗಾರರು ಇನ್ನೂ ಹೆಚ್ಚು ಖಾಸಗಿ ಕಾಲೇಜುಗಳನ್ನು ತೆರೆಯಬೇಕು ಎನ್ನುತ್ತಾರೆ, ಅವರ ಹಿಂಬಾಲಕರು ಎರಡಕ್ಕೂ ಮೇಜು ಕುಟ್ಟುತ್ತಾರೆ! ಶುಲ್ಕವನ್ನು ಕತ್ತರಿಸಿದರೆ ಕಾಲೇಜು ಮುಚ್ಚುತ್ತೇವೆ ಎಂದು ಬೆದರಿಸುವ ಖಾಸಗಿ ಬಂಡವಾಳಗಾರರು ಇನ್ನಷ್ಟು ಕಾಲೇಜುಗಳನ್ನು ತೆರೆಯಲು ಸಿದ್ಧರಿದ್ದೇವೆ ಎಂದೂ ಹೇಳುತ್ತಾರೆ! ಪ್ರವೇಶ ಪರೀಕ್ಷೆಗಳು ಬೇಕೆಂದು ಯಶಸ್ವಿಯಾಗಿ ಹೋರಾಡಿದ್ದ ಅಂದಿನ ವಿದ್ಯಾರ್ಥಿ ಸಂಘಟನೆಗಳ ಇಂದಿನ ನಾಯಕರು ಅವೇ ಪ್ರವೇಶ ಪರೀಕ್ಷೆಗಳನ್ನು ರದ್ದು ಮಾಡಬೇಕೆಂದು ಸಹಿ ಸಂಗ್ರಹಿಸಲು ಹೊರಡುತ್ತಾರೆ! ಇರುವ ಸೀಟುಗಳೇ ಸಾಕಾಗುತ್ತಿಲ್ಲ ಎನ್ನುವವರು ಎಲ್ಲ ವಯಸ್ಸಿನವರಿಗೂ ಅವಕಾಶ ನೀಡುವ ನಿರ್ಧಾರವನ್ನು ಪ್ರಶ್ನಿಸುವುದಿಲ್ಲ, ಲಭ್ಯವಿರುವ ಲಕ್ಷದಷ್ಟು ಸೀಟುಗಳು ಯಾರ ಪಾಲಾಗುತ್ತಿವೆ, ಆ ಸೀಟುಗಳಲ್ಲಿ ಶಿಕ್ಷಣದ ಗುಣಮಟ್ಟ ಹೇಗಿರಬೇಕು, ಶುಲ್ಕ ಎಷ್ಟಿರಬೇಕು ಎಂಬುದನ್ನು ನೋಡುವ, ಪ್ರಶ್ನಿಸುವ ಗೊಡವೆಗೂ ಹೋಗುವುದಿಲ್ಲ.

ಭಾರತದಲ್ಲಿ ವೈದ್ಯಕೀಯ ಶಿಕ್ಷಣವು ಕನ್ನಡಿಯ ಗಂಟಾಗಿರುವುದಕ್ಕೆ ಪ್ರವೇಶ ಪರೀಕ್ಷೆ, ಸಾಂವಿಧಾನಿಕ ಮೀಸಲಾತಿ, ಹುಟ್ಟಿದ ಜಾತಿ, ವೈದ್ಯಕೀಯ ಸೀಟುಗಳ ಕೊರತೆ ಮುಂತಾದವು ಕಾರಣಗಳೇ ಅಲ್ಲ. ನಾವು ವಿದ್ಯಾರ್ಥಿಗಳಾಗಿದ್ದ 80ರ ದಶಕದಿಂದಲೂ ಇಂಥ ತರ್ಕಗಳನ್ನು ಕೇಳುತ್ತಲೇ ಬಂದಿದ್ದೇವೆ. ವೈದ್ಯರಾಗುವ ಅದಮ್ಯ ಬಯಕೆಯಿರುವ ಮಕ್ಕಳಿಗೆ ನಿರಾಶೆಯಾಗುವುದಕ್ಕೆ ಒಂದೇ ಒಂದು ಕಾರಣವಿದ್ದರೆ ಅದು ವೈದ್ಯಕೀಯ ಶಿಕ್ಷಣದ ಖಾಸಗೀಕರಣವೇ ಹೊರತು ಬೇರೇನಲ್ಲ. ಮಾತ್ರವಲ್ಲ, ಪ್ರವೇಶ ಪರೀಕ್ಷೆಗಳು ಮಾನಗೆಟ್ಟಿರುವುದಕ್ಕೆ, ವೈದ್ಯಕೀಯ ಶಿಕ್ಷಣವು ಪ್ರತಿಭಾವಂತರಿಗೆ ಎಟುಕದೆ, ಅದರ ಗುಣಮಟ್ಟವು ಮಣ್ಣುಪಾಲಾಗಿ ಅರ್ಧಕ್ಕೂ ಹೆಚ್ಚು ವೈದ್ಯರು ಕಳಪೆಯಾಗಿರುವುದಕ್ಕೂ ಖಾಸಗೀಕರಣವೇ ಕಾರಣ.

ದಾರಿ ತಪ್ಪಿದ ವೈದ್ಯಕೀಯ ಶಿಕ್ಷಣ

ನಮ್ಮ ದೇಶದ ಮೊದಲ ಆಧುನಿಕ ವೈದ್ಯಕೀಯ ಕಾಲೇಜುಗಳು ಬ್ರಿಟಿಷರ ಆಳ್ವಿಕೆಯಲ್ಲೇ ಆರಂಭಗೊಂಡಿದ್ದವು. ಸ್ವಾತಂತ್ರ್ಯವು ಸನಿಹಕ್ಕೆ ಬರುತ್ತಿದ್ದಾಗ ಆರೋಗ್ಯ ಸೇವೆಗಳ ಸ್ವರೂಪದ ಬಗ್ಗೆ ಸಲಹೆ ನೀಡಲು 1942-43ರಲ್ಲಿ ರಚಿಸಲಾಗಿದ್ದ ಸೋಖಿ ಸಮಿತಿ ಹಾಗೂ ಭೋರ್ ಸಮಿತಿಗಳು ಆಧುನಿಕ ವೈದ್ಯವಿಜ್ಞಾನಕ್ಕಷ್ಟೇ ಮಹತ್ವವನ್ನು ನೀಡಿ, ಸಾವಿರ ಜನರಿಗೆ ಒಬ್ಬ ಆಧುನಿಕ ವೈದ್ಯನಿರಬೇಕೆಂಬ ಸಲಹೆಯನ್ನು ನೀಡಿದವು. ಅದರನುಸಾರ, ನೆಹರೂ ಸರಕಾರವು ಹೆಚ್ಚಿನ ರಾಜ್ಯಗಳಲ್ಲಿ ಆಧುನಿಕ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಿತು, ಎಐಐಎಂಎಸ್‍ನಂತಹ ಅತ್ಯುನ್ನತ ಸಂಸ್ಥೆಗಳನ್ನೂ ಸ್ಥಾಪಿಸಿತು, ಜೊತೆಗೆ ಆಧುನಿಕ ಔಷಧಗಳು ಹಾಗೂ ಲಸಿಕೆಗಳ ಉತ್ಪಾದನೆಗೆ ಸರಕಾರಿ ಸ್ವಾಮ್ಯದ ಬೃಹತ್ ಸಂಸ್ಥೆಗಳನ್ನೂ ಸ್ಥಾಪಿಸಿತು. ಇವುಗಳಲ್ಲಿ ಜಾಗತಿಕ ಗುಣಮಟ್ಟದ ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನೆಗಳಿಗೆ ಉತ್ತೇಜನ ನೀಡಲಾಯಿತು. ಅಂಥ ವೈದ್ಯಕೀಯ ಕಾಲೇಜುಗಳಲ್ಲಿ ಅತ್ಯುತ್ತಮ ತರಬೇತಿ ಪಡೆದ ಭಾರತೀಯರು ಇಂದು ವಿಶ್ವದಾದ್ಯಂತ ವೈದ್ಯಕೀಯ ಸೇವೆಗಳಲ್ಲಿ ಗೌರವಾನ್ವಿತರಾಗಿ ದುಡಿಯುತ್ತಿದ್ದಾರೆ. ನೆಹರೂ ನಂತರ ಈ ದಾರಿ ಬದಲಾಯಿತು, ಈಗ ಸರ್ವನಾಶದ ದಾರಿಯನ್ನು ಹಿಡಿಯಲಾಗಿದೆ.

ವೃತ್ತಿಪರ ಶಿಕ್ಷಣಕ್ಕೆ ಬಹಳಷ್ಟು ಒತ್ತು ನೀಡಿದ್ದ ನೆಹರೂ ಆಡಳಿತವು, ಖಾಸಗಿ ದತ್ತಿ ಸಂಸ್ಥೆಗಳಿಗೆ ವೃತ್ತಿ ಶಿಕ್ಷಣದ ಕಾಲೇಜುಗಳನ್ನು ತೆರೆಯಲು ಅವಕಾಶ ನೀಡಿದ್ದರಿಂದ ಕೆಲವು ವೃತ್ತಿಶಿಕ್ಷಣದ ಖಾಸಗಿ ಕಾಲೇಜುಗಳು ಐವತ್ತರ ದಶಕದಲ್ಲೇ ಆರಂಭಗೊಂಡಿದ್ದವು. ನೆಹರೂ ಕಾಲಾನಂತರ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಕ್ಯಾಪಿಟೇಶನ್ ಶುಲ್ಕದ ಹೆಸರಲ್ಲಿ ಹಣಕ್ಕೆ ಸೀಟು ಕೊಡುವುದು ಹೆಚ್ಚತೊಡಗಿತು. ನಿಧಾನವಾಗಿ ಖಾಸಗಿ ಕಾಲೇಜುಗಳ ಸಂಖ್ಯೆಯೂ ಹೆಚ್ಚಿತು. ಕ್ಯಾಪಿಟೇಶನ್ ಶುಲ್ಕಕ್ಕೆ ಸೀಟು ಪಡೆಯುವುದು ವೆಚ್ಚದಾಯಕವಾಗುತ್ತಾ ಸಾಗಿದಂತೆ ಲಂಚ ಕೊಟ್ಟು, ಪಿಯುಸಿ ಅಂಕಗಳನ್ನೇ ತಿದ್ದಿ, ಪ್ರಭಾವ ಬೀರಿ, ಸರಕಾರಿ ಕಾಲೇಜುಗಳ ಸೀಟುಗಳನ್ನು ವಶಪಡಿಸಿಕೊಳ್ಳುವ ಇನ್ನೊಂದು ಮಾರ್ಗವೂ ಅಗಲಗೊಳ್ಳುತ್ತಾ ಸಾಗಿತು.

ವಂಚನೆ ತಡೆಯಲು ಪ್ರವೇಶ ಪರೀಕ್ಷೆ

ಎಂಬತ್ತರ ದಶಕದ ಆರಂಭದವರೆಗೂ ವೃತ್ತಿ ಶಿಕ್ಷಣಕ್ಕೆ ಪ್ರವೇಶ ಪರೀಕ್ಷೆಗಳಿರಲಿಲ್ಲ. ರಾಜ್ಯದಲ್ಲಿದ್ದ ನಾಲ್ಕು ಸರಕಾರಿ ಹಾಗೂ ಆರೇಳು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ವೈದ್ಯಕೀಯ ಶಿಕ್ಷಣ ಇಲಾಖೆಯ ನಿಯಂತ್ರಣದಲ್ಲಿ, ಪಿಯುಸಿ ಅಂಕಗಳ ಆಧಾರದಲ್ಲಿ, ಪ್ರವೇಶ ನೀಡಲಾಗುತ್ತಿತ್ತು. ಪಿಯುಸಿ ಪರೀಕ್ಷೆಗಳಲ್ಲಿ ಸಾಮೂಹಿಕ ನಕಲು, ಮೌಲ್ಯಮಾಪನದಲ್ಲಿ ವಶೀಲಿ, ಅಂಕಪಟ್ಟಿಯಲ್ಲಿ ತಿದ್ದುಪಡಿ, ವೈದ್ಯಕೀಯ ಶಿಕ್ಷಣ ಇಲಾಖೆಯೊಳಗೂ ಪಿತೂರಿ ಇತ್ಯಾದಿಗಳಿಂದಾಗಿ ಪ್ರತಿಭಾವಂತರಾಗಿದ್ದ, ಪ್ರಾಮಾಣಿಕರಾಗಿದ್ದ ವಿದ್ಯಾರ್ಥಿಗಳಿಗೆ ದಿಕ್ಕಿಲ್ಲದಂತಾಗಿತ್ತು. ಇವುಗಳಿಂದ ಕೆರಳಿದ ವಿದ್ಯಾರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷೆಗಳನ್ನು ಆಗ್ರಹಿಸಿ, ವೈದ್ಯಶಿಕ್ಷಣದ ಖಾಸಗೀಕರಣವನ್ನು ವಿರೋಧಿಸಿ, ಖಾಸಗಿ ಹಾಗೂ ಸರಕಾರಿ ಕಾಲೇಜುಗಳಲ್ಲಿ ಏಕರೂಪದ ಶುಲ್ಕವಿರಬೇಕೆಂದು ಒತ್ತಾಯಿಸಿ ಬೀದಿಗಿಳಿದು ಹೋರಾಡಿದ ಫಲವಾಗಿ ರಾಜ್ಯದಲ್ಲಿ 1984ರಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆಯು ಆರಂಭಗೊಂಡಿತು, ಖಾಸಗೀಕರಣದ ವೇಗಕ್ಕೆ ತಡೆಯಾಯಿತು, ಖಾಸಗಿ ಕಾಲೇಜುಗಳ ಶುಲ್ಕಗಳಿಗೂ ಕಡಿವಾಣ ಬಿತ್ತು.

ಆಗ ಸ್ನಾತಕೋತ್ತರ ಪ್ರವೇಶವು ಕೂಡ ಅಂತಿಮ ಎಂಬಿಬಿಎಸ್‍ನಲ್ಲಿ ಗಳಿಸಿದ ಅಂಕಗಳ ಆಧಾರದಲ್ಲೇ ನಡೆಯುತ್ತಿತ್ತು. ಪಿಯುಸಿಯಲ್ಲಿ ಕಡಿಮೆ ಅಂಕ ಪಡೆದು ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಹಣಕ್ಕೆ ಸೀಟು ಪಡೆದ ವಿದ್ಯಾರ್ಥಿಗಳು ಅಂತಿಮ ಎಂಬಿಬಿಎಸ್‍ನಲ್ಲಿ ಸುಲಭವಾಗಿ ಹೆಚ್ಚು ಅಂಕ ಪಡೆದು ಸ್ನಾತಕೋತ್ತರ ಸೀಟುಗಳನ್ನು ಬಾಚಿಕೊಳ್ಳುತ್ತಿದ್ದರೆ, ಹೆಚ್ಚು ಅಂಕದೊಂದಿಗೆ ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಗಳಿಸಿದ್ದವರು ಕಠಿಣವಾಗಿ ಶ್ರಮಪಟ್ಟರೂ ಅಂತಿಮ ಎಂಬಿಬಿಎಸ್‍ನಲ್ಲಿ ಕಡಿಮೆ ಅಂಕ ಪಡೆದು ಸ್ನಾತಕೋತ್ತರ ಪ್ರವೇಶದಿಂದ ವಂಚಿತರಾಗುತ್ತಿದ್ದರು! ಅಂಥ ವಿದ್ಯಾರ್ಥಿಗಳ ಹೋರಾಟದಿಂದಲೇ ಸ್ನಾತಕೋತ್ತರ ಪ್ರವೇಶ ಪರೀಕ್ಷೆಯು ಆರಂಭವಾಯಿತು. ಬಳಿಕ ರಾಷ್ಟ್ರ ಮಟ್ಟದ ಎಐಪಿಎಂಟಿ, ಪಿಜಿಸಿಇಟಿ ಇತ್ಯಾದಿ ಪ್ರವೇಶ ಪರೀಕ್ಷೆಗಳೂ ಹೀಗೆಯೇ ಆರಂಭಗೊಂಡವು.

ಹಣದ ಬಲದಿಂದಲೋ, ವಶೀಲಿಯಿಂದಲೋ ಅಂಕಪಟ್ಟಿಗಳನ್ನು ಬದಲಿಸುತ್ತಿದ್ದವರು ಈ ಪ್ರವೇಶ ಪರೀಕ್ಷೆಗಳನ್ನು ಭೇದಿಸುವ ದಾರಿಗಳನ್ನೂ ಕಂಡುಕೊಂಡರು. ಮೌಲ್ಯಮಾಪನವನ್ನು ಗಣಕೀಕರಿಸುವವರು, ಮೇಲಧಿಕಾರಿಗಳು ಹಾಗೂ ರಾಜಕಾರಣಿಗಳ ಭಾಗೀದಾರಿಕೆಯಿಂದ ಪ್ರವೇಶ ಪರೀಕ್ಷೆಗಳ ಅಂಕಗಳ ತಿದ್ದುವಿಕೆಯಾಯಿತು. ಪ್ರಶ್ನೆಪತ್ರಿಕೆಗಳೂ, ಜೊತೆಗೆ, ಅತ್ಯಂತ ಗೌಪ್ಯವಾದ ಉತ್ತರಪಟ್ಟಿಗಳೂ ಸೋರತೊಡಗಿದವು. ಇಂಥ ಅಡ್ಡದಾರಿಯವರೇ ಸೀಟುಗಳನ್ನೆಲ್ಲ ಬಾಚಿಕೊಳ್ಳತೊಡಗಿದಾಗ ಪ್ರತಿಭಾವಂತ ಪ್ರಾಮಾಣಿಕರು ಮತ್ತೆ ಬೀದಿಗಿಳಿದರು. ಪ್ರವೇಶ ಪರೀಕ್ಷೆಗಳನ್ನು ಸಂಪೂರ್ಣವಾಗಿ ಪಾರದರ್ಶಕಗೊಳಿಸುವುದಕ್ಕಾಗಿ ಉತ್ತರಪತ್ರಿಕೆಗಳನ್ನು ಯಾಂತ್ರೀಕೃತಗೊಳಿಸಬೇಕು, ಉತ್ತರ ಪತ್ರಿಕೆಗಳನ್ನು ಪರೀಕ್ಷಿಸಗೊಡಬೇಕು, ಸರಿಯುತ್ತರಗಳ ಪಟ್ಟಿಯನ್ನು ಬಹಿರಂಗಗೊಳಿಸಬೇಕು, ಎಲ್ಲಾ ಶ್ರೇಣಿಗಳವರ ಅಂಕಗಳನ್ನು ಹೊರಗೆಡಹಬೇಕು ಮುಂತಾದ ಬೇಡಿಕೆಗಳನ್ನಿಟ್ಟು ಸತತವಾಗಿ ಹೋರಾಡಿದ್ದರಿಂದ ಪ್ರವೇಶ ಪರೀಕ್ಷೆಗಳ ಮೋಸದಾಟಗಳಿಗೆ ಸಾಕಷ್ಟು ತಡೆಯಾಯಿತು.

ಯುಕ್ರೇನ್‍ನಲ್ಲಿ ಯುದ್ಧವಾಯಿತೆಂದು ಇಲ್ಲಿ ನೀಟ್ ಪರೀಕ್ಷೆ ರದ್ದಾಗಬೇಕು ಎನ್ನುವವರು ಈ ಪ್ರವೇಶ ಪರೀಕ್ಷೆಗಳು ವಿದ್ಯಾರ್ಥಿಗಳ ಹೋರಾಟಗಳಿಂದಲೇ ಹುಟ್ಟಿವೆ, ಸುಮಾರು 40 ವರ್ಷಗಳಿಂದ ನಡೆಯುತ್ತಿವೆ ಎನ್ನುವ ಈ ಮೇಲಿನ ಸತ್ಯಗಳನ್ನು ಮರೆತಿದ್ದಾರೆ ಅಥವಾ ಅರಿತೇ ಇಲ್ಲ.

ಖಾಸಗೀಕರಣದಿಂದ ಮಾರಾಟವಾದ ವೈದ್ಯ ಶಿಕ್ಷಣ

ಹೀಗೆ ಸುಮಾರು 15 ವರ್ಷಗಳ ನಿರಂತರ ಹೋರಾಟಗಳಿಂದ ಪ್ರವೇಶ ಪರೀಕ್ಷೆಗಳು ಸಾಕಷ್ಟು ಶುದ್ಧಗೊಂಡರೂ ಖಾಸಗಿ ಕಾಲೇಜುಗಳಿಗೆ ಬೇರೆ ದಾರಿಗಳು ತೆರೆದವು. ತೊಂಬತ್ತರ ದಶಕದಲ್ಲಿ ವಿದ್ಯಾರ್ಥಿ ಹೋರಾಟಗಳ ಬಲವು ಕ್ಷೀಣಿಸತೊಡಗಿತು, ಅತ್ತ, ಹೊಸ ಆರ್ಥಿಕ ನೀತಿ ಜಾರಿಗೊಂಡಿತು, 1996ರ ಬಳಿಕ ಎಲ್ಲೆಂದರಲ್ಲಿ ಖಾಸಗಿ ಕಾಲೇಜುಗಳು ತೆರೆಯತೊಡಗಿದವು; ಸಾರಾಯಿ, ಕಬ್ಬಿಣ, ನೆಲ, ಮರ ಎಲ್ಲವುಗಳ ಮಾರಾಟಗಾರರು, ಮಠಾಧಿಪತಿಗಳು ಮುಂತಾದವರು ಅವರಿವರ ಹೆಸರುಗಳಲ್ಲಿ ಖಾಸಗಿ ಸೇವಾ ಸಂಸ್ಥೆಗಳನ್ನು ರಚಿಸಿಕೊಂಡು ಅವುಗಳಡಿಯಲ್ಲಿ ವೈದ್ಯಕೀಯ ಕಾಲೇಜುಗಳನ್ನು ತೆರೆಯತೊಡಗಿದರು. ಭಾಷೆ-ಮತಗಳ ಅಲ್ಪಸಂಖ್ಯಾತರೆಂದು ಇನ್ನೊಂದಷ್ಟು ಕಾಲೇಜುಗಳಾದವು.

ಈ ಖಾಸಗಿ ಕಾಲೇಜುಗಳ ಸೀಟುಗಳನ್ನು ತುಂಬಿಸುವುದಕ್ಕೆ ವಿದ್ಯಾರ್ಥಿಯ ಆಸಕ್ತಿ-ಪ್ರತಿಭೆಗಳಿಗಿಂತ ಹೆತ್ತವರ ಶ್ರೀಮಂತಿಕೆಯೊಂದೇ ಅರ್ಹತೆಯಾಯಿತು. ಖಾಸಗಿ ಕಾಲೇಜುಗಳಲ್ಲಿ ಹೆಚ್ಚಿನ ಸೀಟುಗಳನ್ನು ಸರಕಾರಿ ಕೋಟಾಕ್ಕೆ ಒದಗಿಸಬೇಕು, ಸಾಂವಿಧಾನಿಕ ಮೀಸಲಾತಿಯು ಅವೆಲ್ಲಕ್ಕೂ ಅನ್ವಯಿಸಬೇಕು ಎಂಬ ನಿಯಮಗಳಿದ್ದುದನ್ನು ಮುರಿದು ಹಣ ತೆತ್ತ ವಿದ್ಯಾರ್ಥಿಗಳಿಗೆ ಹೇಗಾದರೂ ಸೀಟು ಕಲ್ಪಿಸುವ ವ್ಯವಸ್ಥೆಗಳನ್ನು ಖಾಸಗಿ ಕಾಲೇಜುಗಳು ಮಾಡುತ್ತಲೇ ಬಂದವು. ಒಂದಿಲ್ಲೊಂದು ಕಾರಣ ಹೇಳಿ ಪ್ರವೇಶ ಪರೀಕ್ಷೆಗಳಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರವೇಶವನ್ನು ನಿರಾಕರಿಸುವಲ್ಲಿಂದ ತೊಡಗಿ, ಪ್ರತೀ ವರ್ಷ ಸರ್ವೋಚ್ಚ ನ್ಯಾಯಾಲಯದಲ್ಲಿ ದಾವೆಗಳನ್ನು ಹೂಡಿ, ಮತ, ಭಾಷೆ ಇತ್ಯಾದಿ ಅಲ್ಪಸಂಖ್ಯಾತರೆಂಬ ನೆಲೆಯಲ್ಲಿ, ಖಾಸಗಿ ಕಾಲೇಜು ನಿರ್ವಹಣೆಯ ಕಷ್ಟಗಳೆಂಬ ನೆಲೆಯಲ್ಲಿ ಹೆಚ್ಚು ಹೆಚ್ಚು ಸೀಟುಗಳನ್ನು ತಮ್ಮ ನಿಯಂತ್ರಣಕ್ಕೆ ವಶಪಡಿಸಿಕೊಳ್ಳುವಲ್ಲಿ ಅವು ಯಶಸ್ವಿಯಾಗುತ್ತಲೇ ಹೋದವು. ಸರಕಾರಿ ಲೆಕ್ಕದ ಸೀಟುಗಳನ್ನು ಕೊನೆ ಘಳಿಗೆಯವರೆಗೆ ಹಿಡಿದಿಟ್ಟು ನಂತರ ಹಣವಿದ್ದವರಿಗೆ ವರ್ಗಾಯಿಸುವ ಮೋಸದ ತಂತ್ರಗಳೂ ಆರಂಭವಾದವು. ಸ್ನಾತಕೋತ್ತರ ವ್ಯಾಸಂಗದಲ್ಲಂತೂ ಕೋಟಿಗಟ್ಟಲೆ ಮೌಲ್ಯದ ಸೀಟುಗಳನ್ನು ತಾವೇ ಉಳಿಸಿಕೊಂಡು ಹೆಚ್ಚು ಬೇಡಿಕೆಯಿಲ್ಲದ ಸೀಟುಗಳನ್ನು ಸರಕಾರಕ್ಕೆ ಬಿಟ್ಟುಕೊಟ್ಟು ಲೆಕ್ಕ ತುಂಬಿಸುವ ತಂತ್ರವು ಸುಸ್ಥಾಪಿತವಾಯಿತು. ಇಪ್ಪತ್ತೈದು ವರ್ಷ ವಯಸ್ಸಾದ ಖಾಸಗಿ ಕಾಲೇಜುಗಳು ಸ್ವಾಯತ್ತ ಪರಿಗಣಿತ ವಿಶ್ವವಿದ್ಯಾಲಯಗಳ ಅರ್ಹತೆಯನ್ನು ದಕ್ಕಿಸಿಕೊಂಡವು; ಆ ಮೂಲಕ, ತಮ್ಮ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರವೇಶದ ಹಕ್ಕನ್ನು ಇನ್ನಷ್ಟು ಭದ್ರಗೊಳಿಸಿಕೊಂಡದ್ದು ಮಾತ್ರವಲ್ಲ, ಸರಕಾರಿ ನಿಯಂತ್ರಣದ ಆರೋಗ್ಯ ವಿಶ್ವವಿದ್ಯಾಲಯಗಳ ನಿಯಂತ್ರಣದಿಂದ ಬಿಡಿಸಿಕೊಂಡವು, ತಾವೇ ಪರೀಕ್ಷಕರನ್ನು ನೇಮಿಸಿಕೊಂಡು, ತಮ್ಮತಮ್ಮೊಳಗೆ ಕಳಿಸಿಕೊಂಡು, ವಿದ್ಯಾರ್ಥಿಗಳ ಪರೀಕ್ಷೆಗಳನ್ನೂ ತಮ್ಮ ನಿಯಂತ್ರಣಕ್ಕೆ ತಂದುಕೊಂಡವು; ಹೀಗೆ, ಖಾಸಗಿ ವೈದ್ಯಕೀಯ ಕಾಲೇಜುಗಳು ಬೇಕಾದಷ್ಟು ಹಣ ಪಡೆದು ಯಾರನ್ನು ಬೇಕಾದರೂ ಸೇರಿಸಿಕೊಳ್ಳಲು, ವೈದ್ಯರಾಗಿ ತೇರ್ಗಡೆಗೊಳಿಸಲು ಶಕ್ತವಾದವು. ಎಂಬಿಬಿಎಸ್ ಪ್ರವೇಶಾತಿಯಿಂದ ಸ್ನಾತಕೋತ್ತರ ಯಾ ಸುಪರ್ ಸ್ಪೆಷಾಲಿಟಿವರೆಗೆ ಪ್ಯಾಕೇಜ್ ನೀಡುವ ವ್ಯವಹಾರವೂ ಆರಂಭವಾಯಿತು; ಅಂಥವರು ತಡೆರಹಿತವಾಗಿ ತೇರ್ಗಡೆಯಾಗುತ್ತಲೇ ಹೋದರೆ, ಕಲಿತು ಸೀಟು ಪಡೆದು ಬಂದವರು ಬೆರಗಾಗಿ ನೋಡುತ್ತಲೇ ಉಳಿದರು.

ಹಣಕ್ಕಾಗಿ ಕೆಟ್ಟ ಪ್ರವೇಶ ಪರೀಕ್ಷೆಗಳು

ಲಕ್ಷಗಟ್ಟಲೆ ಹಣಕ್ಕೆ ಹೀಗೆ ಪ್ಯಾಕೇಜಿನಲ್ಲಿ ಸೀಟುಗಳನ್ನು ಕೊಳ್ಳಬಲ್ಲವರು ಪ್ರವೇಶ ಪರೀಕ್ಷೆಗಳಲ್ಲಿ ಅರ್ಹತೆಯನ್ನೂ ಪಡೆಯುವುದಿಲ್ಲ ಎಂಬುದು ಸ್ಪಷ್ಟವಾಗುತ್ತಿದ್ದಂತೆ ಖಾಸಗಿ ಕಾಲೇಜುಗಳು ಪ್ರವೇಶ ಪರೀಕ್ಷೆಗಳನ್ನೇ ನಿಯಂತ್ರಿಸಹೊರಟವು, ತಮ್ಮದೇ ಆದ ಪ್ರವೇಶ ಪರೀಕ್ಷೆಗಳನ್ನು ಆರಂಭಿಸಿಬಿಟ್ಟವು. ವಿವಿಧ ಮೈತ್ರಿ ಕೂಟಗಳು, ಜಾತಿ-ಧರ್ಮ-ಭಾಷೆಗಳ ಕೂಟಗಳು, ಪರಿಗಣಿತ ವಿಶ್ವವಿದ್ಯಾಲಯಗಳು ಇವೇ ಮುಂತಾದ ಹೆಸರುಗಳಲ್ಲಿ ಹಲವಾರು ಪ್ರವೇಶ ಪರೀಕ್ಷೆಗಳು ನಡೆಯತೊಡಗಿ, ವಿದ್ಯಾರ್ಥಿಗಳು ಹಲವು ಪರೀಕ್ಷೆಗಳನ್ನು ಬರೆಯುವುದಾಯಿತು, ಪಾರದರ್ಶಕತೆ ಇಲ್ಲದೆ ದುಡ್ಡಿದ್ದವರ ಪಾಲಿಗೆ ಇವು ವರದಾನವಾದವು.

ವೈದ್ಯಕೀಯ ಪ್ರವೇಶ ಪರೀಕ್ಷೆಗಳು ಹೀಗೆ ವಿರೂಪಗೊಂಡು ಅವುಗಳ ಉದ್ದೇಶವೇ ಬುಡಮೇಲಾದಾಗ ಭಾರತೀಯ ವೈದ್ಯಕೀಯ ಪರಿಷತ್ತು (ಎಂಸಿಐ) ಮತ್ತು ಸರ್ವೋಚ್ಚ ನ್ಯಾಯಾಲಯಗಳ ಮಧ್ಯ ಪ್ರವೇಶದಿಂದ ಇಡೀ ದೇಶಕ್ಕೆ ಅನ್ವಯಿಸುವಂತೆ ಒಂದೇ ಪರೀಕ್ಷೆಯಿರಬೇಕು, ವೈದ್ಯಕೀಯ ಶಿಕ್ಷಣದ ಎಲ್ಲಾ ಸೀಟುಗಳಿಗೂ ಅಂಥ ಪರೀಕ್ಷೆಯಲ್ಲಿ ಪಡೆದ ಅರ್ಹತೆಯೊಂದೇ ಮಾನದಂಡವಾಗಿರಬೇಕು ಎಂದು ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ – ನೀಟ್ – ಅನ್ನು 2013ರಲ್ಲಿ ಆರಂಭಿಸಲಾಯಿತು, ಸ್ನಾತಕೋತ್ತರ ಹಾಗೂ ಸುಪರ್ ಸ್ಪೆಷಾಲಿಟಿ ಪ್ರವೇಶಾತಿಗೂ ನೀಟ್ ಪರೀಕ್ಷೆಗಳಿರಬೇಕೆಂದು ನಿರ್ಧರಿಸಲಾಯಿತು.

ಹಣಬಲವಿದ್ದವರಿಗೆ ಬೇಕುಬೇಕಾದಂತೆ ಸೀಟು ನೀಡುವುದಕ್ಕೆ ಖಾಸಗಿ ಕಾಲೇಜುಗಳು ಮಾಡಿಕೊಂಡಿದ್ದ ವ್ಯವಸ್ಥೆಗೆ ಈ ನೀಟ್ ಪರೀಕ್ಷೆಯಿಂದ ಅಡ್ಡಿಯಾಗಿ ಅವು ಸರ್ವೋಚ್ಚ ನ್ಯಾಯಾಲಯಕ್ಕೆ ಹೋದವು. ಮುಖ್ಯ ನ್ಯಾಯಾಧೀಶರೂ ಇದ್ದ ಮೂರು ನ್ಯಾಯಾಧೀಶರ ಪೀಠವು 2013ರ ಜುಲೈನಲ್ಲಿ, ಆ ಮುಖ್ಯ ನ್ಯಾಯಾಧೀಶರು ನಿವೃತ್ತರಾಗುವುದಕ್ಕೆ ಕೆಲವು ಘಳಿಗೆಗಳ ಮೊದಲು, 2:1 ಬಹುಮತದಿಂದ ತೀರ್ಪಿತ್ತು ನೀಟ್ ಅನ್ನು ರದ್ದುಗೊಳಿಸಿತು. ಆದರೆ ಅದೇ ಪೀಠದಲ್ಲಿದ್ದು ಭಿನ್ನಮತ ವ್ಯಕ್ತಪಡಿಸಿದ್ದ ನ್ಯಾಯಾಧೀಶರ ಮುತುವರ್ಜಿಯಿಂದ ಈ ವಿಚಾರವು ಐವರು ನ್ಯಾಯಾಧೀಶರಿದ್ದ ವಿಸ್ತøತ ಪೀಠಕ್ಕೆ ಹೋಗುವಂತಾಯಿತು, ಅಲ್ಲಿ ಈ ತೀರ್ಪು ಮರುವಿಮರ್ಶಿಸಲ್ಪಟ್ಟು ರದ್ದಾಯಿತು. ಇದರಿಂದಾಗಿ 2016ರಿಂದ ಮತ್ತೆ ನೀಟ್ ಜಾರಿಗೆ ಬರುವಂತಾಯಿತು. ದೇಶದೆಲ್ಲೆಡೆ ಎಲ್ಲಾ ವೈದ್ಯಕೀಯ ಪ್ರವೇಶಾತಿಗೂ ನೀಟ್ ಮಾತ್ರವೇ ಏಕೈಕ ಮಾನದಂಡವಾಗಿರಬೇಕು, ಪ್ರವೇಶಕ್ಕೆ ಅರ್ಹತೆಗಾಗಿ ನೀಟ್ ಪರೀಕ್ಷೆಯಲ್ಲಿ ಕನಿಷ್ಠ ಶೇ. 50ರಷ್ಟು (720 ಅಂಕಗಳಲ್ಲಿ 360) ಅಂಕಗಳಿರಬೇಕು ಎಂಬ ನಿಯಮಗಳನ್ನು ಮಾಡಲಾಯಿತು.

ಆದರೆ ಖಾಸಗಿ ಕಾಲೇಜುಗಳು ಅದರಲ್ಲೂ ಹೊಸ ದಾರಿಗಳನ್ನು ಹುಡುಕಿದವು; ಶುಲ್ಕವನ್ನು ಒಮ್ಮಿಂದೊಮ್ಮೆಗೇ ಆರು ಪಟ್ಟು ಹೆಚ್ಚಿಸಿ ತಮ್ಮ ಸೀಟುಗಳನ್ನೆಲ್ಲ ಧನಿಕರಿಗೆ ಮೀಸಲಿಟ್ಟವು. ಸರಕಾರಿ ಕೋಟಾದ ಸೀಟುಗಳ ಶುಲ್ಕವು ಅಲ್ಲಿಗಿಂತ ಮೂರು ಪಟ್ಟಾದರೆ, ಮ್ಯಾನೇಜ್‍ಮೆಂಟ್ ಮತ್ತು ಎನ್‍ಆರ್‍ಐ ಹೆಸರಿನ ಕೋಟಾದ ಸೀಟುಗಳಿಗೆ 10-20 ಪಟ್ಟು ಹೆಚ್ಚು ಶುಲ್ಕವಾಯಿತು. ಪ್ರತಿಭಾವಂತರಿಗೆ ಅರ್ಹತಾ ಅಂಕಗಳಿದ್ದರೂ ಎಟುಕದಂತಾದ ಈ ಸೀಟುಗಳು ಹಣವಿದ್ದವರಿಗೆ ಅಂಕಗಳಿಲ್ಲದಿದ್ದರೂ ಮೀಸಲಾದವು. ಅಲ್ಲಿಗೆ, ವೈದ್ಯಕೀಯ ಪ್ರವೇಶಕ್ಕೆ ನೀಟ್ ಅಂಕಗಳೊಂದೇ ಅರ್ಹತೆಯಾಗಬೇಕೆಂಬ ಆಶಯವು ಮಣ್ಣುಪಾಲಾಯಿತು; ಸರಕಾರಗಳು ತೆಪ್ಪಗೆ ಕೂತವು, ಶುಲ್ಕವನ್ನು ನಿಯಂತ್ರಿಸುವುದಕ್ಕೆಂದು ರೂಪಿಸಲಾಗಿದ್ದ ನಿವೃತ್ತ ನ್ಯಾಯಾಧೀಶರಿದ್ದ ಸಮಿತಿಗಳಿಗೆ ಬೆಲೆಯಿಲ್ಲವಾಯಿತು.

ನೀಟ್‍ನಲ್ಲಿ ಕನಿಷ್ಠ ಶೇ. 50ರಷ್ಟು ಅಂಕಗಳಿರಬೇಕೆಂಬ ನಿಯಮವು ಹಣಕ್ಕೆ ಸೀಟು ಮೀಸಲಿಡುವುದಕ್ಕೆ ದೊಡ್ಡ ಅಡ್ಡಿಯಾಯಿತು. ಶೇ. 50ರ ಅರ್ಹತೆಯಿದ್ದವರು ಹಣವಿಲ್ಲದೆ ಹೊರಗುಳಿದರೆ, ಹಣವಿದ್ದವರು ಆ ಶೇ. 50 ಅಂಕಗಳಿಲ್ಲದೇ ಹೊರಗುಳಿಯಬೇಕಾಯಿತು. ದುಡ್ಡಿದ್ದವರಿಗಾಗಿ ಮೀಸಲಿಟ್ಟಿದ್ದ ಸೀಟುಗಳು ಹೀಗೆ ಭರ್ತಿಯಾಗದೇ ಉಳಿದವು. ನಿಯಮಾನುಸಾರ ಅವನ್ನು ಸರಕಾರದ ಕೋಟಾಕ್ಕೆ ಮರಳಿಸಿ ಅರ್ಹತೆಯಿದ್ದವರಿಗೆ ಹಂಚಬೇಕಿತ್ತು, ಆದರೆ ಹಾಗಾಗಲಿಲ್ಲ. ಖಾಸಗಿ ಕಾಲೇಜುಗಳ ಈ ‘ನೋವನ್ನು’ ಪರಿಗಣಿಸಿದ ಕೇಂದ್ರ ಸರಕಾರವು ನೀಟ್ ಆರಂಭಗೊಂಡ ಮರುವರ್ಷವೇ, ಅಂದರೆ 2017ರಲ್ಲಿ, ನೀಟ್ ಅರ್ಹತೆಗೆ ವಿದ್ಯಾರ್ಥಿಯು ಕನಿಷ್ಠ ಶೇ. 50 (ಪರ್ಸೆಂಟ್) ಅಂಕಗಳನ್ನು ಪಡೆದಿರಬೇಕೆಂಬ ನಿಯಮವಿದ್ದುದನ್ನು ಬದಲಿಸಿ, ಅತಿ ಹೆಚ್ಚು ಅಂಕ ಗಳಿಸಿದವರಿಗಿಂತ ಕೆಳಗಿರುವ ಶೇ. 50 (ಪರ್ಸೆಂಟೈಲ್) ಆಕಾಂಕ್ಷಿಗಳೆಲ್ಲರೂ ಅರ್ಹರು ಎಂದು ಮಾಡಿತು. ಈ ಒಂದು ಬದಲಾವಣೆಯಿಂದಾಗಿ ಅತಿ ಕಡಿಮೆ ಅಂಕ ಪಡೆದವರಿಗೂ, ಮೂರರಲ್ಲಿ ಎರಡು ವಿಷಯಗಳಲ್ಲಿ ಸೊನ್ನೆ ಪಡೆದವರಿಗೂ, ಖಾಸಗಿ ಕಾಲೇಜಿನಲ್ಲಿ ವೈದ್ಯಕೀಯ ಸೀಟು ಪಡೆಯುವುದಕ್ಕೆ ಸಾಧ್ಯವಾಯಿತು. ಇದು ಮುಂದುವರಿದು, ಈ ವರ್ಷ ಸ್ನಾತಕೋತ್ತರ ಪ್ರವೇಶಕ್ಕೆ 6000 ಸೀಟುಗಳು ಉಳಿದಿವೆ ಎಂಬ ಸಬೂಬು ನೀಡಿ ಅರ್ಹತೆಯನ್ನು ಕೇವಲ 35 ಪರ್ಸೆಂಟೈಲಿಗೆ ಇಳಿಸಲಾಗಿದೆ, ಇಂಥವರೇ ಇನ್ನು ಮೂರು ವರ್ಷಗಳಲ್ಲಿ ತಜ್ಞ ವೈದ್ಯರಾಗಿ ಬರಲಿದ್ದಾರೆ! ಒಬಿಸಿ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡುವ ಹೊಸ ನಿಯಮದಿಂದ ಪಿಜಿ ನೀಟ್ ಸೀಟು ಹಂಚಿಕೆಯು ವಿಳಂಬವಾಗುತ್ತಿದೆ ಎಂದು ಕೆಲವೇ ವಾರಗಳ ಮೊದಲು `ಉಗ್ರ’ ಪ್ರತಿಭಟನೆ ಮಾಡಿದ್ದ ವೈದ್ಯರ ಸಂಘಟನೆಗಳು ಈಗ ಅರ್ಹತೆಯನ್ನೇ ಕೆಳಗಿಳಿಸಿ ಪಿಜಿ ನೀಟ್ ಮಾತ್ರವಲ್ಲ, ವೈದ್ಯ ಶಿಕ್ಷಣದ ಗುಣಮಟ್ಟಕ್ಕೇ ಕೊಡಲಿಯೇಟು ಹಾಕಿರುವ ನಿರ್ಧಾರದ ಬಗ್ಗೆ ಏನನ್ನೂ ಹೇಳದೆ ತೆಪ್ಪಗೆ ಕುಳಿತಿವೆ!

ಸೀಟು ಹೆಚ್ಚಿಸುವುದು ಪರಿಹಾರವಲ್ಲ

ಈ ವಾಸ್ತವಗಳನ್ನೆಲ್ಲ ಮುಚ್ಚಿಟ್ಟು, ವರ್ಷದಲ್ಲಿ ನೀಟ್ ಬರೆಯುವ 15 ಲಕ್ಷ ವಿದ್ಯಾರ್ಥಿಗಳಲ್ಲಿ 8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೀಟು ಪಡೆಯಲು ಅರ್ಹರಾಗುತ್ತಾರೆ, ಆದರೆ ಕೇವಲ 90 ಸಾವಿರ ಮಾತ್ರ ಸೀಟು ಪಡೆಯುತ್ತಾರೆ, ಹಾಗಾಗಿ ಇನ್ನಷ್ಟು ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲೇಬೇಕು ಎಂಬ ವಾದವನ್ನು ಪ್ರಧಾನಿಯಾದಿಯಾಗಿ ಎಲ್ಲರೂ ಹೇಳುತ್ತಿದ್ದಾರೆ.

ಭಾರತದಲ್ಲಿ ವೈದ್ಯರ ಕೊರತೆಯಿದೆ ಎನ್ನುವುದೇ ಸರಿಯಲ್ಲ. ಹಿಂದೆ 1942-43ರಲ್ಲಿ ರಚಿಸಲಾಗಿದ್ದ ಸೋಖಿ ಸಮಿತಿ ಹಾಗೂ ಭೋರ್ ಸಮಿತಿಗಳು ಮತ್ತು ವಿಶ್ವ ಆರೋಗ್ಯ ಸಂಸ್ಥೆಗಳ ಸಲಹೆಯಂತೆ ಒಂದು ಸಾವಿರ ಜನರಿಗೆ ಒಬ್ಬ ವೈದ್ಯನಿರಬೇಕು (ಇಲ್ಲಿ ವೈದ್ಯ ಎಂದರೆ ಆಧುನಿಕ ವೈದ್ಯಕೀಯ ವಿಜ್ಞಾನದಲ್ಲಿ ತರಬೇತಾದವನು ಎಂದರ್ಥ). ಅಂದರೆ, ಈಗ 142 ಕೋಟಿ ಜನರಿರುವ ಭಾರತಕ್ಕೆ ಸುಮಾರು 14 ಲಕ್ಷ ಆಧುನಿಕ ವೈದ್ಯರು ಬೇಕು. ಕೇಂದ್ರದ ಆರೋಗ್ಯ ಸಚಿವೆ ಡಾ. ಭಾರತಿ ಪವಾರ್ ಅವರು ಡಿಸೆಂಬರ್ 14, 2021ರಂದು ರಾಜ್ಯಸಭೆಯಲ್ಲಿ ನೀಡಿದ ಉತ್ತರವೊಂದರಲ್ಲಿ, ನವೆಂಬರ್ 2021ರ ವೇಳೆಗೆ ದೇಶದಲ್ಲಿ 13 ಲಕ್ಷ ಆಧುನಿಕ ವೈದ್ಯರೂ, ಐದೂವರೆ ಲಕ್ಷ ಆಯುಷ್ ಚಿಕಿತ್ಸಕರೂ ಇದ್ದಾರೆ, ಇವರಲ್ಲಿ ಶೇ. 80ರಷ್ಟು ಸಕ್ರಿಯರಾಗಿದ್ದಾರೆಂದರೂ 834 ಜನರಿಗೊಬ್ಬ ವೈದ್ಯನಿರುವಂತಾಗಿದೆ, ವಿಶ್ವ ಆರೋಗ್ಯ ಸಂಸ್ಥೆಯ ಆಶಯವನ್ನು ಮೀರಿದಂತಾಗಿದೆ ಎಂದು ಹೇಳಿದ್ದಾರೆ. ಇವರಲ್ಲಿ ಆಯುಷ್ ಚಿಕಿತ್ಸಕರನ್ನು ಬಿಟ್ಟು ಕೇವಲ ಆಧುನಿಕ ವೈದ್ಯರನ್ನಷ್ಟೇ ಪರಿಗಣಿಸಿದರೂ 1070 ಜನರಿಗೊಬ್ಬ ಆಧುನಿಕ ವೈದ್ಯನಿದ್ದಾನೆಂದಾಯಿತು, ಅವರಲ್ಲಿ ಶೇ. 80ರಷ್ಟು ಮಾತ್ರ ವೃತ್ತಿನಿರತರೆಂದಾದರೆ 1300 ಜನರಿಗೊಬ್ಬ ಆಧುನಿಕ ವೈದ್ಯನಿದ್ದಾನೆಂದಾಯಿತು. ಅಂದರೆ, ಸಾವಿರ ಜನರಿಗೊಬ್ಬ ವೈದ್ಯನಿರಬೇಕೆಂಬ ಗುರಿಯ ಹತ್ತಿರಕ್ಕೆ ತಲುಪಿದಂತಾಯಿತು. ಕರ್ನಾಟಕದಲ್ಲಿ 75-80 ಸಾವಿರದಷ್ಟು ಆಧುನಿಕ ವೈದ್ಯರಿರುವುದರಿಂದ ಸಾವಿರ ಜನರಿಗೊಬ್ಬ ಆಧುನಿಕ ವೈದ್ಯನಿರಬೇಕೆಂಬ ಗುರಿಯನ್ನು ಮೀರಿದಂತೆಯೇ ಆಯಿತು. ಈಗ 313 ಸರಕಾರಿ ಹಾಗೂ 283 ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ವರ್ಷಕ್ಕೆ 90824 ಎಂಬಿಬಿಎಸ್ ಸೀಟುಗಳಿವೆ, ರಾಜ್ಯದಲ್ಲಿ 19 ಸರಕಾರಿ ಕಾಲೇಜುಗಳಲ್ಲಿ 2900 ಹಾಗೂ 44 ಖಾಸಗಿ ಕಾಲೇಜುಗಳಲ್ಲಿ ಒಟ್ಟು 6945 ಸೀಟುಗಳಿವೆ; ಅಂದರೆ, ಇನ್ನು ಮುಂದೆಯೂ ಪ್ರತೀ ವರ್ಷ 90000 ಎಂಬಿಬಿಎಸ್ ವೈದ್ಯರು ಆರೋಗ್ಯ ಸೇವೆಗಳಿಗೆ ಸೇರುತ್ತಲೇ ಇರುತ್ತಾರೆ ಎಂದಾಯಿತು. ಹಾಗಿರುವಾಗ, ಇನ್ನಷ್ಟು ವೈದ್ಯಕೀಯ ಕಾಲೇಜುಗಳನ್ನು, ಅವನ್ನೂ ಖಾಸಗಿ ರಂಗದಲ್ಲಿ, ಸ್ಥಾಪಿಸುವ ಅಗತ್ಯವೇನಿದೆ? ಇನ್ನೊಂದೆಡೆ, ಇಷ್ಟೊಂದು ಆಧುನಿಕ ವೈದ್ಯರಿದ್ದರೂ ಹಳ್ಳಿಗಳಲ್ಲೂ, ಹಿಂದುಳಿದ ಭಾಗಗಳಲ್ಲೂ ಅವರು ಲಭ್ಯರಿಲ್ಲ ಎಂದರೆ, ಅವರ ನಿಯೋಜನೆಯು ಸರಿಯಾಗಿ ಆಗುತ್ತಿಲ್ಲ ಎಂದೂ ಆಗುತ್ತದೆ.

ವರ್ಷಕ್ಕೆ 15 ಲಕ್ಷ ವಿದ್ಯಾರ್ಥಿಗಳು ನೀಟ್ ಬರೆಯುವುದರಿಂದ ಅವರಿಗೆ ಸೀಟುಗಳು ಸಾಕಾಗುತ್ತಿಲ್ಲ ಎನ್ನುವ ವಾದವಂತೂ ತೀರಾ ಅಸಂಬದ್ಧವಾಗಿದೆ. ವೈದ್ಯ ಶಿಕ್ಷಣದ ಸೀಟುಗಳ ಸಂಖ್ಯೆಯು ದೇಶಕ್ಕೆ ಎಷ್ಟು ವೈದ್ಯರು ಬೇಕು ಎಂಬುದರ ಮೇಲೆ ನಿರ್ಧರಿಸಲ್ಪಡಬೇಕೇ ಹೊರತು ಎಷ್ಟು ವಿದ್ಯಾರ್ಥಿಗಳು ವೈದ್ಯರಾಗಬಯಸಿದ್ದಾರೆ ಎಂಬುದರ ಮೇಲಲ್ಲ. ವೈದ್ಯ ವೃತ್ತಿಯು ಅತ್ಯಂತ ಕಷ್ಟದ, ಅತಿ ಹೆಚ್ಚು ಬದ್ಧತೆಯ ವೃತ್ತಿಯಾಗಿರುವುದರಿಂದ ಜಗತ್ತಿನೆಲ್ಲೆಡೆ ವೈದ್ಯಕೀಯ ಕಲಿಕೆಗೆ ಪ್ರವೇಶ ಪಡೆಯುವುದು ಅತಿ ಹೆಚ್ಚು ಶ್ರಮದ, ಸವಾಲಿನ, ಕಷ್ಟದ ಕೆಲಸವೇ ಆಗಿರುತ್ತದೆ. ನಮ್ಮಲ್ಲೀಗ 15 ಆಕಾಂಕ್ಷಿಗಳಲ್ಲೊಬ್ಬರಿಗೆ ಸೀಟು ದೊರೆಯುತ್ತಿದೆ ಎಂದರೆ ಅದು ಕಡಿಮೆಯೇನಲ್ಲ.

ಅತ್ತ, 8 ಲಕ್ಷ ವಿದ್ಯಾರ್ಥಿಗಳು ಸೀಟು ಪಡೆಯಲು ನೀಟ್ ಅರ್ಹತೆಯನ್ನು ಗಳಿಸುತ್ತಾರೆ, ಆದರೂ ಸೀಟಿಲ್ಲ ಎನ್ನುವುದು ಸರಿಯೇ ಅಲ್ಲ; ಮೇಲೆ ವಿವರಿಸಿದಂತೆ ನೀಟ್ ಪರೀಕ್ಷೆಗಳಲ್ಲಿ ಅರ್ಹತೆಗಾಗಿ ಶೇ. 50 ಅಂಕಗಳಿರಲೇಬೇಕೆಂಬ ಮೂಲ ಮಾನದಂಡವನ್ನಷ್ಟೇ ಬಳಸಿದರೆ ವೈದ್ಯಕೀಯ ಪ್ರವೇಶಕ್ಕೆ ಅರ್ಹತೆಯುಳ್ಳವರ ಸಂಖ್ಯೆಯು ಬಹಳಷ್ಟು ಕಡಿಮೆಯಾಗುತ್ತದೆ, 90000 ಸೀಟುಗಳಿರುವಾಗ ನಿಜಕ್ಕೂ ಅರ್ಹರಾದ ಹಲವರಿಗೆ ಸೀಟು ಸಿಕ್ಕೇ ಸಿಗುತ್ತದೆ. ಆದ್ದರಿಂದ, ನೀಟ್ ಮಾನದಂಡಗಳಂತೆ ಶೇ. 50 ಅಂಕ ಪಡೆದವರಿಗಷ್ಟೇ ಸೀಟುಗಳನ್ನು ನೀಡಿದರೆ ಪ್ರತಿಭೆಗೆ ಮನ್ನಣೆಯೂ, ವೈದ್ಯಕೀಯ ಕಲಿಕೆಯ ಗುಣಮಟ್ಟವೂ ರಕ್ಷಿಸಲ್ಪಡುತ್ತವೆ, ದುಡ್ಡಿದ್ದವರಿಗಾಗಿ ಇವನ್ನೆಲ್ಲ ಗೌಣವಾಗಿಸುತ್ತಿರುವ ದುರಂತವೂ ತಪ್ಪುತ್ತದೆ.

ಸಾಂವಿಧಾನಿಕ ಮೀಸಲಾತಿ ಸಮಸ್ಯೆಯಲ್ಲ

ವೈದ್ಯಕೀಯ ಕಾಲೇಜುಗಳಲ್ಲಿ ಹಿಂದುಳಿದ ವರ್ಗಗಳವರಿಗೆ ಮೀಸಲಾತಿ ಇರುವುದರಿಂದ ಪ್ರತಿಭಾವಂತರಿಗೆ ಅನ್ಯಾಯವಾಗುತ್ತಿದೆ, ವೈದ್ಯಕೀಯ ಶಿಕ್ಷಣದ ಗುಣಮಟ್ಟವು ಇಳಿಯುತ್ತಿದೆ ಎನ್ನುವುದು ಬಹಳ ಹಳಸಾಗಿರುವ ವಾದವಾಗಿದೆ. ಯುಕ್ರೇನ್‍ನಲ್ಲಿ ಕಷ್ಟಕ್ಕೀಡಾದವರ ವಾದವೂ ಇದುವೇ, ಮಾಧ್ಯಮಗಳಲ್ಲಿ ಕಿರಿಚಾಡಿ ಹೇಳುವುದೂ ಇದನ್ನೇ.

ಆದರೆ ವಾಸ್ತವದಲ್ಲಿ ವೈದ್ಯಕೀಯ ಶಿಕ್ಷಣದ ಅರ್ಧಕ್ಕರ್ಧ ಸೀಟುಗಳು ಇಂದು ಖಾಸಗಿ ಕಾಲೇಜುಗಳಲ್ಲೇ ಇರುವುದರಿಂದ, ಅಲ್ಲಿನ ಬಹುತೇಕ ಸೀಟುಗಳಿಗೆ ಸಾಂವಿಧಾನಿಕ ಮೀಸಲಾತಿಯು ಅನ್ವಯಿಸುವುದೇ ಇಲ್ಲ.

ಅಲ್ಲದೆ, ಸಾಮಾಜಿಕ-ಆರ್ಥಿಕ ಕಷ್ಟಗಳಿಂದಾಗಿ ಸಮಾನ ಶಿಕ್ಷಣದಿಂದ ವಂಚಿತರಾಗುವ ಮಕ್ಕಳಿಗೆ ಕಲಿಕೆಯೇ ದುಸ್ಸಾಧ್ಯವಾಗಿದ್ದು, ಪ್ರವೇಶ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವುದು ಅಥವಾ ಅತಿ ದುಬಾರಿಯಾದ ಕೋಚಿಂಗ್ ಪಡೆಯುವುದು ಕನಸಲ್ಲೂ ನಿಲುಕುವುದಿಲ್ಲ. ಅಂಥ ಮಕ್ಕಳಿಗೆ ವೃತ್ತಿ ವ್ಯಾಸಂಗದಲ್ಲಿ ಮೀಸಲಾತಿ ನೀಡುತ್ತಿರುವುದು ಸಂವಿಧಾನಬದ್ಧವಷ್ಟೇ ಅಲ್ಲ, ನೀತಿಬದ್ಧವೂ, ಮಾನವೀಯವೂ ಆಗಿದೆ. ಅಂಥ ಸಾಂವಿಧಾನಿಕ ಮೀಸಲಾತಿಯನ್ನು ದೂರುವುದು ಸಂವಿಧಾನ ವಿರೋಧಿಯಷ್ಟೇ ಅಲ್ಲ, ಆ ವರ್ಗದ ಮಕ್ಕಳನ್ನು ಮತ್ತೆ ಅವಮಾನಿಸಿ ದೌರ್ಜನ್ಯವೆಸಗಿದಂತೆಯೇ ಆಗುತ್ತದೆ.

ಇದಕ್ಕಿದಿರಾಗಿ, ಖಾಸಗಿ ಕಾಲೇಜುಗಳು ಬೇರೆ ಬೇರೆ ಕೋಟಾಗಳ ಹೆಸರಲ್ಲಿ ವಿಪರೀತ ಶುಲ್ಕಕ್ಕೆ ಸೀಟುಗಳನ್ನು ಮೀಸಲಿರಿಸುವ ಬಗ್ಗೆ, ಆ ಸೀಟುಗಳನ್ನು ತುಂಬುವುದಕ್ಕಾಗಿ ನೀಟ್ ಅರ್ಹತೆಯನ್ನೇ ಕೆಳಗಿಳಿಸುವಲ್ಲಿ ಸಫಲರಾಗಿರುವ ಬಗ್ಗೆ, ಖಾಸಗಿ ಕಾಲೇಜುಗಳ ಆಣತಿಯಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಎಲ್ಲಾ ನಿಯಮಗಳನ್ನೂ ಬೇಕುಬೇಕಾದಂತೆ ಬದಲಿಸುತ್ತಿರುವ ಬಗ್ಗೆ ಯಾರೊಬ್ಬರೂ ದನಿಯೆತ್ತುತ್ತಿಲ್ಲ. ಸಾಮಾಜಿಕವಾಗಿ ಅವಕಾಶ ವಂಚಿತರಾದವರಿಗೆ ನೀಡುವ ಮೀಸಲಾತಿಯ ಬಗ್ಗೆ ಹಗಲು-ರಾತ್ರಿ ಬೊಬ್ಬಿರಿಯುವವರು, ಕೋಟಿಗಟ್ಟಲೆಯ ಐಶ್ವರ್ಯವಿದ್ದರೂ, ಕಲಿಯಲು ಎಲ್ಲಾ ಸೌಲಭ್ಯಗಳಿದ್ದರೂ ಅಂಕ ಗಳಿಸದ ವಿದ್ಯಾರ್ಥಿಗಳಿಗೆ ಹಣಕ್ಕೆ ಸೀಟು ನೀಡುವ ಮೀಸಲಾತಿಯ ಬಗ್ಗೆ ಒಂದಕ್ಷರವನ್ನೂ ಹೇಳುವುದಿಲ್ಲ. ಈ ಅನ್ಯಾಯಗಳೂ, ಅವನ್ನು ವಿರೋಧಿಸದ ಮೌನವೂ ಇಂದಿನ ಸಮಸ್ಯೆಗಳೆಲ್ಲಕ್ಕೂ ಕಾರಣಗಳಾಗಿವೆ.

ಮೇಲೇರಿದ ಶುಲ್ಕ, ಕೆಳಗಿಳಿದ ಅರ್ಹತೆಯೇ ಸಮಸ್ಯೆ

ಈಗ ಯುಕ್ರೇನ್ ಮುಂತಾದೆಡೆ ಕಲಿಯುತ್ತಿರುವವರೆಲ್ಲರೂ 2017ರ ನಂತರದಲ್ಲೇ ಅಲ್ಲಿಗೆ ಹೋಗಿರುವವರು ಎನ್ನುವುದು ಗಮನಾರ್ಹವಾಗಿದೆ. ಹಣಕ್ಕಾಗಿ ಸೀಟು ಮೀಸಲಿಟ್ಟು, ಅದನ್ನು ತುಂಬಿಸಲು ನೀಟ್ ಅಂಕಗಳ ಮಾನದಂಡಗಳನ್ನು 50 ಪರ್ಸೆಂಟೇಜ್ ಬದಲಿಗೆ 50 ಪರ್ಸೆಂಟೈಲ್ (ಈಗ ಪಿಜಿ ನೀಟ್‍ಗೆ 35!) ಎಂದು ನಿಗದಿಪಡಿಸಿರುವ 2017ರ ನಿರ್ಧಾರವೇ ದೇಶದ ಪ್ರತಿಭಾವಂತರಿಗೆ ವೈದ್ಯಕೀಯ ಸೀಟುಗಳು ದೊರೆಯದಾಗಲು ಕಾರಣವಾಗಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಟೈಮ್ಸ್ ಆಫ್ ಇಂಡಿಯಾದ ರೆಮಾ ನಾಗರಾಜನ್ ಅವರು 2017ರಲ್ಲಿ ಪ್ರಕಟಿಸಿದ ವರದಿಗಳು ಇವನ್ನು ಅತಿ ಸ್ಪಷ್ಟವಾಗಿ ತೋರಿಸುತ್ತವೆ. ನೀಟ್ ಪರೀಕ್ಷೆಯಲ್ಲಿ ವೈದ್ಯಕೀಯ ಪ್ರವೇಶಾತಿಗೆ ಅರ್ಹತೆಗಾಗಿ 720 ಅಂಕಗಳಲ್ಲಿ ಕನಿಷ್ಠ 360 ಅಂಕಗಳಿರಬೇಕೆಂಬ (ಶೇ. 50 ಪರ್ಸೆಂಟೇಜ್) ಮೂಲ ಮಾನದಂಡವನ್ನು ಬದಲಿಸಿ 50 ಪರ್ಸೆಂಟೈಲ್ ಎಂದು ನಿಗದಿಪಡಿಸಿದ ಕಾರಣಕ್ಕೆ, 2017ರಲ್ಲಿ ಸರಕಾರಿ ಕಾಲೇಜುಗಳಲ್ಲಿ ಸಾಮಾನ್ಯ, ಒಬಿಸಿ, ಎಸ್‍ಸಿ, ಎಸ್‍ಟಿ ಕೋಟಾಗಳಲ್ಲಿ ಕ್ರಮವಾಗಿ 524, 465, 398, 332 (ಸರಾಸರಿ 470) ಅಂಕಗಳಿದ್ದವರಿಗೆ ಸೀಟು ದೊರೆತರೆ, ಖಾಸಗಿ ಕಾಲೇಜುಗಳಲ್ಲಿ ಸರಕಾರಿ ಕೋಟಾದಲ್ಲಿ 399, ಮ್ಯಾನೇಜ್‍ಮೆಂಟ್ ಕೋಟಾದಲ್ಲಿ 315, ಎನ್‍ಆರ್‍ಐ ಕೋಟಾದಲ್ಲಿ 221 (ಸರಾಸರಿ 345) ಅಂಕಗಳಿದ್ದವರಿಗೆ ದೊರೆತಿತ್ತು. ಅಂದರೆ, ಖಾಸಗಿ ಕಾಲೇಜುಗಳಲ್ಲಿ ಮ್ಯಾನೇಜ್‍ಮೆಂಟ್ ಕೋಟಾ ಹಾಗೂ ಎನ್‍ಆರ್‍ಐ ಕೋಟಾಗಳಲ್ಲಿ ಸೀಟು ಪಡೆದವರ ಸರಾಸರಿ ಅಂಕಗಳು ಮೂಲ ಮಾನದಂಡವಾದ 50 ಪರ್ಸೆಂಟೇಜ್‍ಗಿಂತ ಕಡಿಮೆಯೇ ಇತ್ತು. ಅದೇ ವರ್ಷ ಖಾಸಗಿ ಕಾಲೇಜುಗಳಲ್ಲಿ ಪ್ರವೇಶ ಪಡೆದಿದ್ದ ಕನಿಷ್ಠ 400 ವಿದ್ಯಾರ್ಥಿಗಳು ಕೇವಲ ಒಂದಂಕೆಯ ಅಂಕಗಳನ್ನು ಪಡೆದಿದ್ದರು ಮತ್ತು 110 ವಿದ್ಯಾರ್ಥಿಗಳು ಭೌತ ಹಾಗೂ ರಸಾಯನ ವಿಜ್ಞಾನಗಳಲ್ಲಿ ಸೊನ್ನೆ ಯಾ ನೆಗೆಟಿವ್ ಅಂಕಗಳನ್ನು ಪಡೆದಿದ್ದರು! ಕಳೆದ ವರ್ಷ (2021) ಕೇವಲ 138 (19%) ಅಂಕಗಳಿದ್ದವರು ಖಾಸಗಿ ಕಾಲೇಜಿಗೆ ಸೇರಲು ಅರ್ಹರಾಗಿದ್ದರು, 7.5 ಲಕ್ಷ ರ‍್ಯಾಂಕ್‌ಗೂ ಖಾಸಗಿ ಸೀಟು ದಕ್ಕಿತ್ತು! ಖಾಸಗಿ ಕಾಲೇಜುಗಳಲ್ಲಿ ಹಣಕ್ಕೆ ಕೊಟ್ಟ ಈ ಸೀಟುಗಳಿಗೆ ಹೋಲಿಸಿದರೆ, ಅದೇ 2017ರಲ್ಲಿ ಸರಕಾರಿ ಕಾಲೇಜುಗಳಲ್ಲಿ ಎಸ್‍ಸಿ ಕೋಟಾದ ವಿದ್ಯಾರ್ಥಿಗಳ ಅಂಕಗಳು 398 ಆಗಿದ್ದರೆ, ಎಲ್ಲಾ ಸೀಟುಗಳನ್ನೂ ಪರಿಗಣಿಸಿದರೆ 367 ಆಗಿತ್ತು, ಅಂದರೆ, ಖಾಸಗಿ ಕಾಲೇಜುಗಳ ಮ್ಯಾನೇಜ್‍ಮೆಂಟ್ ಮತ್ತು ಎನ್‍ಆರ್‍ಐ ಕೋಟಾದಲ್ಲಿ ಪ್ರವೇಶ ಪಡೆದವರಿಗಿಂತಲೂ ಎಸ್‍ಸಿ ವಿದ್ಯಾರ್ಥಿಗಳಿಗೆ 52 ಅಂಕಗಳು ಹೆಚ್ಚೇ ಇದ್ದವು, ಒಟ್ಟಾರೆ ಶೇ. 50ಕ್ಕಿಂತ ಮೇಲೆಯೇ ಇದ್ದವು.

ಆದ್ದರಿಂದ, ಭಾರತದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟುಗಳು ದೊರೆಯದಾಗಲು ವೈದ್ಯ ಶಿಕ್ಷಣದ ಅನಿಯಂತ್ರಿತ ಖಾಸಗೀಕರಣ, ಖಾಸಗಿ ಕಾಲೇಜುಗಳಲ್ಲಿ ವಿಪರೀತ ಶಿಕ್ಷಣ ಶುಲ್ಕ, ಆ ಶುಲ್ಕಕ್ಕಾಗಿ ಮ್ಯಾನೇಜ್‍ಮೆಂಟ್ ಕೋಟಾ ಮತ್ತು ಎನ್‍ಆರ್‍ಐ ಕೋಟಾ ಹೆಸರಲ್ಲಿ ಸೀಟುಗಳ ಮೀಸಲಾತಿ, ಆ ಸೀಟುಗಳನ್ನು ಯಾರಿಗೆ ಬೇಕಾದರೂ ಮಾರುವುದಕ್ಕೆ ಅನುಕೂಲವಾಗಲು ನೀಟ್ ಮಾನದಂಡಗಳನ್ನೇ ದುರ್ಬಲಗೊಳಿಸಿರುವುದು ಕಾರಣಗಳೇ ಹೊರತು ನೀಟ್ ಪರೀಕ್ಷೆಯಲ್ಲ, ಸಾಮಾಜಿಕ ನ್ಯಾಯಕ್ಕಾಗಿ ನೀಡಲಾಗಿರುವ ಸಾಂವಿಧಾನಿಕ ಮೀಸಲಾತಿಯೂ ಅಲ್ಲ ಎನ್ನುವುದು ಸುಸ್ಪಷ್ಟ.

ಮುಂದಿನ ಯೋಜನೆ ವಿನಾಶಕಾರಿ

ವೈದ್ಯ ಶಿಕ್ಷಣವನ್ನು ಹಣಕ್ಕೆ ಅಡಿಯಾಳಾಗಿಸುವ ಈ ಯೋಜನೆಯ ಜೊತೆಗೆ, ಆಧುನಿಕ ವೈದ್ಯ ಶಿಕ್ಷಣವನ್ನು, ಅದರೊಂದಿಗೆ ಸಮಸ್ತ ಆರೋಗ್ಯ ಸೇವೆಗಳನ್ನು, ಆಯುಷ್ ಜೊತೆ ಬೆರಕೆ ಮಾಡಿ ಛಿದ್ರಗೊಳಿಸುವ ಯೋಜನೆಯೂ ಜೋರಾಗಿ ನಡೆಯುತ್ತಿದೆ. ಇದು ಕಾರ್ಯಗತಗೊಂಡಾಗ, ಈಗ ಜಾಗತಿಕವಾಗಿ ಸೆಡ್ಡು ಹೊಡೆಯಬಲ್ಲದಾಗಿರುವ ಭಾರತದ ಆರೋಗ್ಯ ಸೇವೆಗಳು ನಾಶವಾಗಿ, ಆಧುನಿಕ ವೈದ್ಯವಿಜ್ಞಾನವನ್ನು ಕಲಿಯಬಯಸುವ ವಿದ್ಯಾರ್ಥಿಗಳೆಲ್ಲರೂ ಅನ್ಯ ದೇಶಗಳಿಗೇ ಹೋಗಬೇಕಾದ ಸ್ಥಿತಿಯುಂಟಾಗಲಿದೆ. ಭಾರತದ ಮಕ್ಕಳು ವೈದ್ಯ ಶಿಕ್ಷಣಕ್ಕಾಗಿ ಹೊರಹೋಗುವುದೇಕೆ ಎಂದು ಕೇಳುವ ಪ್ರಧಾನಿಯಡಿಯಲ್ಲಿ ನಡೆಯುತ್ತಿರುವ ಈ ವಿಚ್ಛಿದ್ರಕಾರಿ ಯೋಜನೆಗಳೇ ಮಕ್ಕಳನ್ನು ಹೊರಕಳಿಸುವಂತಾಗಲಿವೆ!

ವೈದ್ಯಶಿಕ್ಷಣವನ್ನು ನಿಯಂತ್ರಿಸುತ್ತಿದ್ದ ಎಂಸಿಐ ಭ್ರಷ್ಟವಾಗಿದೆಯೆಂಬ ನೆಪದಲ್ಲಿ ಈಗಿರುವ ಒಕ್ಕೂಟ ಸರಕಾರವು 2016ರ ಆಗಸ್ಟ್‌ನಲ್ಲಿ ಎಂಸಿಐಯನ್ನು ತೆಗೆದು ಅದರ ಬದಲಿಗೆ ಎನ್‍ಎಂಸಿಯನ್ನು ತರುವ ಮಸೂದೆಯ ಕರಡನ್ನು ಪ್ರಕಟಿಸಿತು. ಇದರಿಂದ ದೊಡ್ಡ ಕ್ರಾಂತಿಯೇ ಆಗಲಿದೆ ಎಂದು ಹಲವು ಎಡ ಕ್ರಾಂತಿಕಾರಿಗಳೂ, ಕಾಂಗ್ರೆಸಿನ ಕೆಲವು ನಾಯಕರೂ ಗಟ್ಟಿಯಾಗಿ ಬೆಂಬಲಿಸಿದರು. ಭಾರತೀಯ ವೈದ್ಯಕೀಯ ಸಂಘವು (ಐಎಂಎ) ಮೊದಲಲ್ಲಿ ಪ್ರತಿಭಟಿಸಿದರೂ, ಬಳಿಕ ತಣ್ಣಗಾಯಿತು. ಇದರಿಂದಾಗಿ ಎನ್‍ಎಂಸಿ ಬರುವಂತಾಯಿತು, ವೈದ್ಯಕೀಯ ವೃತ್ತಿಯ ನಿಯಂತ್ರಣವು ಸ್ವಾಯತ್ತ ಸಂಸ್ಥೆಯ ಬದಲು ಒಕ್ಕೂಟ ಸರಕಾರದ ಅಧೀನವಾಯಿತು, ಖಾಸಗೀಕರಣಕ್ಕೂ, ವೈದ್ಯ ಶಿಕ್ಷಣವನ್ನು ಛಿದ್ರಗೊಳಿಸುವ ಯೋಜನೆಗೂ ಬಲ ಬಂತು.

ಅದರ ಬೆನ್ನಿಗೆ ಪ್ರಕಟಗೊಂಡ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಆಧುನಿಕ ವೈದ್ಯಕೀಯ ಶಿಕ್ಷಣದಲ್ಲಿ ಆಯುಷ್ (ಆಯುರ್ವೇದ, ಯೋಗ, ಸಿದ್ಧ, ಪ್ರಕೃತಿ ಚಿಕಿತ್ಸೆ ಇತ್ಯಾದಿ) ಬೆರೆಸುವ ಪ್ರಸ್ತಾಪವನ್ನು ಮಾಡಲಾಯಿತು. ಐಎಂಎ ಸುಮ್ಮನಿದ್ದರೆ, ಇನ್ನುಳಿದವರ ವಿರೋಧವು ಫೇಸ್‍ಬುಕ್, ಯು ಟ್ಯೂಬ್‍ಗಳಿಗೆ ಸೀಮಿತವಾಯಿತು. ಈಗ ತಿಂಗಳೊಂದರ ಹಿಂದೆ ಎನ್‍ಎಂಸಿಯ ಸ್ನಾತಕ ಶಿಕ್ಷಣ ಮಂಡಳಿಯ ಸಭೆಯಲ್ಲಿ ಆಧುನಿಕ ವೈದ್ಯಕೀಯ ಶಿಕ್ಷಣದಲ್ಲಿ ಚರಕ ಶಪಥ, ಯೋಗ, ಗಿಡಮೂಲಿಕೆ ನೆಡುವಿಕೆ, ಆಯುಷ್ ಗುರುಗಳು ಇರಬೇಕು ಎಂದು ನಿರ್ಧರಿಸಲಾಗಿದೆ. ಇದರಿಂದ ಕೇವಲ ಶಪಥವಷ್ಟೇ ಅಲ್ಲ, ನಮ್ಮ ದೇಶದ ಆಧುನಿಕ ವೈದ್ಯಕೀಯ ಶಿಕ್ಷಣದ ಪಥವೇ ಬದಲಾಗಲಿದೆ. ಆದರೆ ವೈದ್ಯಕೀಯ ಸಂಘಟನೆಗಳೂ, ತಥಾಕಥಿತ ವಿರೋಧ ಪಕ್ಷಗಳೂ, ವಿದ್ಯಾರ್ಥಿಗಳೂ ತೆಪ್ಪಗಿದ್ದಾರೆ.

ಪರಿಹಾರವೇನು?

ಹಾಗಿರುವಾಗ, ದೇಶದ ಅಧುನಿಕ ವೈದ್ಯ ಶಿಕ್ಷಣವು ಅರ್ಹರಿಗಷ್ಟೇ ದೊರೆಯಬೇಕಾದರೆ ಮಾಡಬೇಕಾಗಿರುವುದೇನು?

ಮೊದಲನೆಯದಾಗಿ, ಒಕ್ಕೂಟ ಸರಕಾರವೂ, ರಾಜ್ಯ ಸರಕಾರಗಳೂ ಎಲ್ಲಾ ಹಂತಗಳ ಶಿಕ್ಷಣದ ಅನುದಾನವನ್ನು ಉತ್ಪನ್ನದ ಕನಿಷ್ಠ ಶೇ. 12-15ಕ್ಕೆ ಏರಿಸಬೇಕು, ಉನ್ನತ ಶಿಕ್ಷಣದಲ್ಲಿ ಹೂಡಿಕೆಯನ್ನು ಹೆಚ್ಚಿಸಬೇಕು, ಆರೋಗ್ಯ ಸೇವೆಗಳ ಅನುದಾನವನ್ನು ಈಗಿರುವ ಶೇ.1ರಿಂದ ಕನಿಷ್ಠ ಶೇ. 6ಕ್ಕೆ ಹೆಚ್ಚಿಸಬೇಕು. ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ, ಉಪಕೇಂದ್ರಗಳಲ್ಲೂ ಅತ್ಯುತ್ತಮ ವೇತನಕ್ಕೆ ಆಧುನಿಕ ವೈದ್ಯರನ್ನೇ ನೇಮಿಸಬೇಕು.

ಎರಡನೆಯದಾಗಿ, ವೈದ್ಯ ಶಿಕ್ಷಣದಲ್ಲಿ ಖಾಸಗಿ ಕಾಲೇಜುಗಳ ಹಿಡಿತವನ್ನು ಕೊನೆಗಾಣಿಸಬೇಕು ಮತ್ತು ಆದಷ್ಟು ಬೇಗನೆ ಈಗಿರುವ ಖಾಸಗಿ ಕಾಲೇಜುಗಳನ್ನು ರಾಷ್ಟ್ರೀಕರಿಸಬೇಕು. ಅಲ್ಲಿಯವರೆಗೆ, ಹೊಸ ಖಾಸಗಿ ಕಾಲೇಜುಗಳಿಗೆ ಅನುಮತಿ ನೀಡಬಾರದು, ಖಾಸಗಿ ಕಾಲೇಜುಗಳಲ್ಲಿ ಶುಲ್ಕವನ್ನು ಸರಕಾರಿ ಕಾಲೇಜುಗಳ ಮಟ್ಟಕ್ಕೆ ಇಳಿಸಬೇಕು, ಮ್ಯಾನೇಜ್‍ಮೆಂಟ್ ಕೋಟಾ ರದ್ದಾಗಬೇಕು ಮತ್ತು ಎನ್‍ಆರ್‍ಐ ಕೋಟಾ ಶುದ್ಧ ಎನ್‍ಆರ್‍ಐಗಳಿಗೆ ಮಾತ್ರವೇ ನೀಡಬೇಕು, ಈ ಕೋಟಾದಲ್ಲಿ ತುಂಬದೇ ಉಳಿಯುವ ಎಲ್ಲಾ ಖಾಸಗಿ ಸೀಟುಗಳು ಸರಕಾರಿ ಕೋಟಾಕ್ಕೆ ಮರಳಿ, ಸರಕಾರಿ ಕೋಟಾದಡಿಯಲ್ಲಿ, ಎಲ್ಲಾ ಸಾಂವಿಧಾನಿಕ ಮೀಸಲಾತಿಗಳನ್ನೂ ಅನ್ವಯಿಸಿ, ಹಂಚಿಕೆಯಾಗಬೇಕು.

ಮೂರನೆಯದಾಗಿ, ದಶಕಗಳ ಸಂಘರ್ಷದಿಂದ ಪಡೆದ ಪ್ರವೇಶ ಪರೀಕ್ಷೆಗಳನ್ನು ಸದೃಢವಾಗಿ ಉಳಿಸಿ, ಅವುಗಳ ಪಾವಿತ್ರ್ಯತೆಯನ್ನೂ, ಪಾರದರ್ಶಕತೆಯನ್ನೂ ರಕ್ಷಿಸಬೇಕು. ನೀಟ್ ಪರೀಕ್ಷೆಗಳ ಅರ್ಹತಾ ಮಾನದಂಡಗಳು ಮೂಲ ಆಶಯದಲ್ಲಿದ್ದಂತೆಯೇ ಇರಬೇಕು, 2017ರ ಬಳಿಕ ಮಾಡಲಾಗಿರುವ ಎಲ್ಲಾ ಕೆಳಮುಖ ಪರಿಷ್ಕರಣೆಗಳನ್ನು ಅಲ್ಲಿಗೇ ಕೊನೆಗೊಳಿಸಬೇಕು. ಐವತ್ತು ಪರ್ಸೆಂಟೇಜ್ ಅಂಕಗಳ ಮಾನದಂಡವನ್ನು ಬದಲಿಸಿ 50 ಪರ್ಸೆಂಟೈಲ್ ಆಕಾಂಕ್ಷಿಗಳು ಎಂದು ಬದಲಿಸಿರುವುದನ್ನು ಈ ಕೂಡಲೇ ರದ್ದು ಮಾಡಿ, ಶೇ. 50 ಅಂಕಗಳಿರಬೇಕೆಂಬ ಮಾನದಂಡವನ್ನೇ ಮತ್ತೆ ಊರ್ಜಿತಗೊಳಿಸಬೇಕು. ಮಾತ್ರವಲ್ಲ, ಭೌತ ಮತ್ತು ರಸಾಯನ ಶಾಸ್ತ್ರಗಳಲ್ಲೂ ಕನಿಷ್ಠ ಅಂಕಗಳ ಮಾನದಂಡವಿರಬೇಕು, ಅವೆರಡರಲ್ಲಿ ಸೊನ್ನೆ ಪಡೆದವರು ಯಾ ನೆಗೆಟಿವ್ ಅಂಕಗಳನ್ನು ಪಡೆದವರು ಕೇವಲ ಜೀವವಿಜ್ಞಾನವೊಂದರ ಆಧಾರದಲ್ಲಿ ಅರ್ಹತೆಯನ್ನು ಪಡೆಯುವಂತಿರಬಾರದು.

ನಾಲ್ಕನೆಯದಾಗಿ, ನೀಟ್ ಪರೀಕ್ಷೆಗಳನ್ನು ರಾಜ್ಯಗಳ ಭಾಷೆಗಳಲ್ಲಿ ನಡೆಸುವುದರ ಜೊತೆಗೆ ಆಯಾ ಭಾಷೆಗಳಲ್ಲಿ ಅದಕ್ಕೆ ತಕ್ಕುದಾದ ಪಠ್ಯಗಳನ್ನು ಒದಗಿಸಬೇಕು. ನೀಟ್ ಪರೀಕ್ಷೆಯಲ್ಲಿ (ಹಾಗೂ ಇತರೆಲ್ಲಾ ಪ್ರವೇಶ ಪರೀಕ್ಷೆಗಳಲ್ಲಿ) ಒಳಗೊಳ್ಳುವ ಪಠ್ಯಗಳು, ಪ್ರಶ್ನೆಗಳ ಮಾದರಿಗಳು ಇತ್ಯಾದಿಗಳ ಬಗ್ಗೆ ಎಂಟನೇ ತರಗತಿಯಿಂದಲೇ ಎಲ್ಲಾ ಮಕ್ಕಳಿಗೆ ಸೂಕ್ತ ಮಾಹಿತಿಯನ್ನೂ, ತರಬೇತಿಯನ್ನೂ ನೀಡುವ ವ್ಯವಸ್ಥೆಯನ್ನು ಸರಕಾರವೇ ಮಾಡಬೇಕು. ಹಿಂದುಳಿದ ಮಕ್ಕಳಿಗೆ ಎಲ್ಲಾ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳನ್ನು ಎದುರಿಸುವುದಕ್ಕೆ ಅತ್ಯುತ್ತಮವಾದ ಸಿದ್ಧತೆಗಾಗಿ ಸಕಲ ನೆರವನ್ನೂ ಒದಗಿಸಬೇಕು.

ಐದನೆಯದಾಗಿ, ಆರೋಗ್ಯ ಸೇವೆಗಳಲ್ಲೂ, ಆಧುನಿಕ ವೈದ್ಯಶಿಕ್ಷಣದಲ್ಲೂ ಆಯುಷ್ ಕಲಬೆರಕೆ ಮಾಡಿ ಛಿದ್ರಗೊಳಿಸುವ ಎಲ್ಲಾ ಯೋಚನೆ-ಯೋಜನೆಗಳನ್ನು ಸ್ಥಗಿತಗೊಳಿಸಬೇಕು. ನಮ್ಮ ಆಧುನಿಕ ವೈದ್ಯ ಶಿಕ್ಷಣವನ್ನು 3000 ವರ್ಷ ಹಿಂದಕ್ಕೊಯ್ಯುವ ಬದಲು ಅತ್ಯಾಧುನಿಕ ಮಟ್ಟಕ್ಕೇರಿಸಬೇಕು.

ಆರನೆಯದಾಗಿ,  ಆಧುನಿಕ ವೈದ್ಯ ವೃತ್ತಿಯನ್ನು ನಿಯಂತ್ರಿಸುವ ಸಾಂವಿಧಾನಿಕ ಸ್ವಾಯತ್ತ ಸಂಸ್ಥೆಯನ್ನು ಕಿತ್ತೆಸೆದು, ಅದರ ಬದಲಿಗೆ ವೈದ್ಯರೆಲ್ಲರನ್ನೂ ಒಕ್ಕೂಟ ಸರಕಾರದ ಕಪಿಮುಷ್ಟಿಯಲ್ಲಿರಿಸುವುದಕ್ಕೆ, ವೈದ್ಯಕೀಯ ಶಿಕ್ಷಣವನ್ನು ಕಾರ್ಪರೇಟ್ ಶಕ್ತಿಗಳಿಗೆ ವಹಿಸುವುದಕ್ಕೆ, ಹಾಗೂ ವೈದ್ಯಕೀಯ ಶಿಕ್ಷಣದ ಪ್ರವೇಶಾತಿ, ತೇರ್ಗಡೆ, ಸ್ನಾತಕೋತ್ತರ ಪ್ರವೇಶಾತಿ, ಶುಲ್ಕ ವಿಧಿಸುವಿಕೆ, ಎಲ್ಲವನ್ನೂ ಖಾಸಗಿ ಹಿತಾಸಕ್ತಿಗಳಿಗೆ ಬೇಕಿರುವಂತೆ ಮಾಡಿಕೊಳ್ಳಲು ಅವಕಾಶ ನೀಡುವುದಕ್ಕೆ ತರಲಾಗಿರುವ ಎನ್‍ಎಂಸಿಯನ್ನು ವಿಸರ್ಜಿಸಿ, ಅದರ ಬದಲಿಗೆ ವೈದ್ಯರಿಂದಲೇ ಚುನಾಯಿಸಲ್ಪಡುವ ಸ್ವಾಯತ್ತ ನಿಯಂತ್ರಣ ಸಂಸ್ಥೆಯನ್ನು ಮತ್ತೆ ರಚಿಸಬೇಕು, ಅದರ ಚುನಾವಣೆಗಳನ್ನು ಪಾರದರ್ಶಕವಾಗಿ ನಡೆಸುವ ಮೂಲಕ ಆಧುನಿಕ ವೈದ್ಯ ಶಿಕ್ಷಣದ ರೂಪುರೇಷೆಗಳನ್ನು ಚುನಾಯಿತ ವೈದ್ಯರೇ ನಿರ್ಧರಿಸುವಂತಾಗಬೇಕು. ಆರೋಗ್ಯ ಸೇವೆಗಳಲ್ಲಿ, ಭೋರ್ ಸಮಿತಿ ಹಾಗೂ ಸೋಖಿ ಸಮಿತಿಯ ಆಶಯಗಳಂತೆ, ಆಧುನಿಕ ವೈದ್ಯ ವಿಜ್ಞಾನಕ್ಕಷ್ಟೇ ಅವಕಾಶವಿರಬೇಕು, ಉಪಕೇಂದ್ರಗಳಿಂದ ಉನ್ನತ ಆಸ್ಪತ್ರೆಗಳವರೆಗೆ ಆಧುನಿಕ ವೈದ್ಯರನ್ನು ಅತ್ಯುತ್ತಮ ವೇತನ ಹಾಗೂ ಸೌಲಭ್ಯಗಳೊಂದಿಗೆ ನಿಯೋಜಿಸಬೇಕು, ಅಲ್ಲೆಲ್ಲೂ ಆಯುಷ್ ಉತ್ತೇಜಿಸುವ ಹೆಸರಿನಲ್ಲಿ ಬದಲಿ ಚಿಕಿತ್ಸಕರನ್ನು ನೇಮಿಸಬಾರದು.

ಕೊನೆಯದಾಗಿ, ವೈದ್ಯಕೀಯ ಶಿಕ್ಷಣದ ಖಾಸಗೀಕರಣ, ಶುಲ್ಕ ಏರಿಕೆ ಹಾಗೂ ತಾರತಮ್ಯ, ಪ್ರವೇಶಾತಿಯಲ್ಲಾಗುವ ಮೋಸಗಳನ್ನೆಲ್ಲ ವಿರೋಧಿಸಿ, ಪಾರದರ್ಶಕವಾದ ಪ್ರವೇಶ ಪರೀಕ್ಷೆಗಳು ಹಾಗೂ ಪ್ರವೇಶ ಪ್ರಕ್ರಿಯೆಗಳನ್ನು ಒತ್ತಾಯಿಸಿ ವಿದ್ಯಾರ್ಥಿಗಳು ಮತ್ತು ಅವರ ಸಂಘಟನೆಗಳು ನಡೆಸಿದ ಎರಡು ದಶಕಗಳ ಹೋರಾಟಗಳನ್ನು ನೆನಪಿಸಿಕೊಳ್ಳಬೇಕು. ಅವೇ ವಿದ್ಯಾರ್ಥಿ ಸಂಘಟನೆಗಳು ಹಿಂದಿನ ಹೋರಾಟಗಳನ್ನು ಅರಿತಿಲ್ಲದೆ, ಈಗಿನ ಅನಿಯಂತ್ರಿತ ಖಾಸಗೀಕರಣ, ಅನಿಯಂತ್ರಿತ ಶುಲ್ಕ ಹೆಚ್ಚಳ ಮತ್ತು ನೀಟ್ ಮಾನದಂಡಗಳ ಬದಲಾವಣೆಗಳ ಬಗ್ಗೆ ಸೊಲ್ಲೆತ್ತದೆ, ತಮ್ಮ ಹೋರಾಟಗಳಿಂದಲೇ ಪಡೆದಿದ್ದ ಪ್ರವೇಶ ಪರೀಕ್ಷೆಯನ್ನೇ ರದ್ದು ಮಾಡಬೇಕೆಂದು ಸಹಿ ಸಂಗ್ರಹ ನಡೆಸುವುದು ತಮ್ಮ ತಲೆಗೆ ತಾವೇ ಚಪ್ಪಡಿ ಕಲ್ಲು ಹಾಕಿಕೊಂಡಂತೆಯೇ ಸರಿ.

ಡಾ|| ಶ್ರೀನಿವಾಸ ಕಕ್ಕಿಲ್ಲಾಯ

Be the first to comment

Leave a Reply

Your email address will not be published.


*