ಕೊರೋನ ಸೋಂಕು ಹರಡುವುದು ಹೆಚ್ಚಿದಂತೆ ಕ್ವಾರಂಟೈನ್ ಏಕೆ, ಹೇಗೆ?

ಕೊರೋನ ಸೋಂಕು ಹರಡುವುದು ಹೆಚ್ಚಿದಂತೆ ಕ್ವಾರಂಟೈನ್ ಏಕೆ, ಹೇಗೆ?
ನಮ್ಮ ದೇಶದಲ್ಲಿ ಕೊರೊನಾ ಸೋಂಕಿನ ಹರಡುವಿಕೆಯು ದಿನೇ ದಿನೇ ಹೆಚ್ಚುತ್ತಿದೆ.  ಭಾರತದಲ್ಲಿ ಒಟ್ಟಾರೆಯಾಗಿ ಕೇವಲ 564 ಪ್ರಕರಣಗಳು, 10 ಸಾವುಗಳು ಆಗಿದ್ದಾಗ ಇಡೀ ದೇಶವನ್ನೇ ಸ್ತಬ್ಧಗೊಳಿಸಿದ ದಿಗ್ಬಂಧನವನ್ನು ಮಾರ್ಚ್ 24, 2020ರಂದು ಹೇರಲಾಯಿತು. ಅದಾಗಿ 54 ದಿನಗಳಾಗುತ್ತಿರುವಾಗ ಪ್ರಕರಣಗಳು 90000 ದಾಟಿದೆ, ಸಾವುಗಳು 2800 ದಾಟಿವೆ. ಪ್ರಕರಣಗಳೂ, ಸಾವುಗಳೂ ಹೀಗೆ ವಿಪರೀತವಾಗಿ ಏರತೊಡಗಿರುವ ಈ ಹಂತದಲ್ಲಿ ದಿಗ್ಬಂಧನವನ್ನು ಹಿಂಪಡೆಯಲೇ ಬೇಕಾದ ಇಕ್ಕಟ್ಟಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಿಲುಕಿವೆ. ಜೊತೆಗೆ, ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವಂತೆ ಅವನ್ನು ನಿಭಾಯಿಸುವ ಮಾರ್ಗಸೂಚಿಗಳ ಬಗ್ಗೆಯೂ ಗೊಂದಲಗಳು ಹೆಚ್ಚುತ್ತಿವೆ.
ಡಿಸೆಂಬರ್ 2019ರ ಕೊನೆಗೆ ಹೊಸ ಕೊರೊನಾ ಸೋಂಕು ಗುರುತಿಸಲ್ಪಟ್ಟ ಚೀನಾದ ವುಹಾನ್ ನಗರವನ್ನು ಜನವರಿ 23, 2020ರಿಂದ 11 ವಾರಗಳ ಕಾಲ ದಿಗ್ಬಂಧಿಸಿಡಲಾಯಿತು. ಕೊರೊನಾ ಸೋಂಕನ್ನು ತಡೆಯುವುದಕ್ಕೆ ಅದೊಂದೇ ದಾರಿಯೆಂದುಕೊಂಡು ಯೂರೋಪಿನ ದೇಶಗಳೂ ಅದನ್ನು ನಕಲು ಮಾಡಿದವು, ಹಾಗೆ ಮಾಡುವಂತೆ ಮಾಧ್ಯಮಗಳೂ, ರಾಜಕೀಯ ವಲಯಗಳೂ ಒತ್ತಡ ಹೇರಿದವು. ಆದರೆ ಹೀಗೆಲ್ಲ ಪ್ರತ್ಯೇಕಿಸಿಟ್ಟು, ದಿಗ್ಬಂಧಿಸಿ ಏನೇ ಮಾಡಿದರೂ ಕೊರೊನಾ ವೈರಾಣುವಿನ ಹರಡುವಿಕೆಯನ್ನು ತಡೆಯುವುದಕ್ಕೆ ಹೆಚ್ಚಿನ ದೇಶಗಳಲ್ಲಿ ಸಾಧ್ಯವಾಗಿಲ್ಲ. ಹೊಸ ಕೊರೊನಾ ಸೋಂಕನ್ನು ನಿಭಾಯಿಸುವುದಕ್ಕೆ ಎಲ್ಲೆಡೆಗೂ ಅನ್ವಯಿಸುವಂತಹ ಸಿದ್ಧ ಮಾದರಿಯಾಗಲೀ, ಖಚಿತವಾದ ಉಪಾಯಗಳಾಗಲೀ ಇಲ್ಲವೆನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಒಂದೊಂದು ದೇಶವೂ ತನ್ನದೇ ಆದ ವೈಶಿಷ್ಟ್ಯಗಳನ್ನೂ, ಸಮಸ್ಯೆಗಳನ್ನೂ ಹೊಂದಿರುವುದರಿಂದ ಯಾವುದೋ ದೇಶವು ಬಳಸಿದ ಮಾದರಿಯನ್ನು ಯಥಾವತ್ತಾಗಿ ನಕಲು ಮಾಡುವುದರಿಂದ ಪ್ರಯೋಜನಕ್ಕಿಂತ ಹಾನಿಯೇ ಹೆಚ್ಚು ಎನ್ನುವುದು ಈಗಾಗಲೇ ಸಾಬೀತಾಗಿದೆ.
ಹೊಸ ಕೊರೊನಾ ಸೋಂಕಿನ ಶೇ.80-85 ಪ್ರಕರಣಗಳಲ್ಲಿ ಯಾವುದೇ ರೋಗಲಕ್ಷಣಗಳು ಇರುವುದಿಲ್ಲ ಎನ್ನುವುದನ್ನು ಈ ಮೂರು-ನಾಲ್ಕು ತಿಂಗಳಲ್ಲಿ ನಮ್ಮ ದೇಶವೂ ಸೇರಿದಂತೆ ಎಲ್ಲೆಡೆಗಳಿಂದ ಬಂದಿರುವ ವರದಿಗಳು ತೋರಿಸಿವೆ. ಎಷ್ಟೇ ಉತ್ತಮವಾದ ವೈಯಕ್ತಿಕ ಸುರಕ್ಷತಾ ಸಾಧನಗಳನ್ನು ಧರಿಸಿದರೂ ಸೋಂಕು ತಗಲುವುದನ್ನು 100% ತಡೆಯಲು ಸಾಧ್ಯವಿಲ್ಲ ಎನ್ನುವುದು ಕೂಡ ದೃಢಗೊಂಡಿದೆ. ಕೊರೊನಾ ಸೋಂಕು ಮಕ್ಕಳು ಮತ್ತು ಕಿರಿಯ ವಯಸ್ಸಿನವರಲ್ಲಿ ಯಾವುದೇ ಸಮಸ್ಯೆಗಳಿಲ್ಲದೆ, ಹಲವರಲ್ಲಿ ರೋಗ ಲಕ್ಷಣಗಳೇ ಇಲ್ಲದೆ, ಯಾವ ಪರೀಕ್ಷೆಯಾಗಲೀ, ಚಿಕಿತ್ಸೆಯಾಗಲೀ ಅಗತ್ಯವಿಲ್ಲದೆ, ನಾಲ್ಕೈದು ದಿನಗಳಲ್ಲಿ ತಾನಾಗಿ ವಾಸಿಯಾಗುತ್ತದೆ; ಅರುವತ್ತಕ್ಕೆ ಮೇಲ್ಪಟ್ಟ ಹಿರಿಯರು, ಮತ್ತು ಯಾವುದೇ ವಯಸ್ಸಿನವರಾಗಿದ್ದು ರಕ್ತದ ಏರೊತ್ತಡ, ಸಕ್ಕರೆ ಕಾಯಿಲೆ, ಹೃದ್ರೋಗ, ಶ್ವಾಸಕೋಶಗಳ ಕಾಯಿಲೆ, ಮೂತ್ರಪಿಂಡ ಅಥವಾ ಯಕೃತ್ತಿನ ಗಂಭೀರ ಸಮಸ್ಯೆಗಳು, ಕ್ಯಾನ್ಸರ್ ಇತ್ಯಾದಿ ರೋಗಗಳುಳ್ಳವರಲ್ಲಿ ಕೊರೊನಾ ಸೋಂಕಿನಿಂದ ತೀವ್ರ ಸಮಸ್ಯೆಗಳಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ ಎನ್ನುವುದು ಕೂಡ ಭಾರತವೂ ಸೇರಿದಂತೆ ಎಲ್ಲಾ ದೇಶಗಳಲ್ಲೂ ಖಾತರಿಯಾಗಿದೆ. ಒಮ್ಮಿಂದೊಮ್ಮೆಗೇ ಸಾವಿರಾರು ಜನರು ಇಂತಹ ಗಂಭೀರ ಸಮಸ್ಯೆಗಳಿಗೀಡಾಗಿ ಆಸ್ಪತ್ರೆಗಳನ್ನು ತುಂಬುವುದರಿಂದ ಅವರೆಲ್ಲರಿಗೂ ಒಮ್ಮೆಗೇ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲಾಗದಿರುವುದೇ ಹೆಚ್ಚಿನ ಸಾವುಗಳಿಗೆ ಕಾರಣವಾಗುತ್ತಿದೆ ಎನ್ನುವುದು ಕೂಡ ಸ್ಪಷ್ಟವಾಗಿದೆ.
ಆದ್ದರಿಂದ, ಕೊರೊನಾ ಸೋಂಕಿನಿಂದ ಗಂಭೀರ ಸಮಸ್ಯೆಗೀಡಾಗಬಲ್ಲವರನ್ನು ಪ್ರತ್ಯೇಕಿಸಿ, ಸುರಕ್ಷಿತವಾಗಿಡುವುದು, ಆ ಮೂಲಕ ಗಂಭೀರ ಸಮಸ್ಯೆಗಳಾಗಬಲ್ಲವರ ಸಂಖ್ಯೆಯನ್ನು ಕಡಿಮೆ ಮಾಡುವುದು; ಆಸ್ಪತ್ರೆಗಳ ಸೀಮಿತ ಸೌಲಭ್ಯಗಳನ್ನು ಗಂಭೀರ ಸಮಸ್ಯೆಗಳಾದವರ ಚಿಕಿತ್ಸೆಗೆ ಮುಡಿಪಾಗಿಡುವುದು; ಯಾವುದೇ ಸಮಸ್ಯೆಯಿಲ್ಲದೆ ಸೌಮ್ಯವಾದ ಲಕ್ಷಣಗಳನ್ನಷ್ಟೇ ಹೊಂದಿರುವವರನ್ನು ಮನೆಗಳಲ್ಲೇ ಉಳಿಯುವಂತೆ ಮಾಡಿ ಅವರಿಂದ ಇತರರಿಗೆ ಸೋಂಕು ಹರಡದಂತೆ ತಡೆಯುವುದು ಈ ಹೊಸ ಕೊರೊನಾ ಸೋಂಕನ್ನು ನಿಭಾಯಿಸಲು  ವೈಜ್ಞಾನಿಕ ಕ್ರಮಗಳೆಂದು ಹಲವು ತಜ್ಞರೀಗ ಹೇಳುತ್ತಿದ್ದಾರೆ.
ನಮ್ಮಲ್ಲೂ, ಇತರೆಲ್ಲ ದೇಶಗಳಲ್ಲೂ ಕೊರೊನಾ ಹರಡುವಿಕೆಯ ಆರಂಭದ ಹಂತಗಳಲ್ಲಿ ಹೊರದೇಶಗಳಿಂದ ಬಂದ ಸೋಂಕಿತರನ್ನು ಗುರುತಿಸಿ, ಪ್ರತ್ಯೇಕಿಸಿಡಲಾಗಿತ್ತು, ಮತ್ತು ಅವರ ಸಂಪರ್ಕಕ್ಕೆ ಬಂದವರನ್ನು ಹುಡುಕಿ ಪರೀಕ್ಷಿಸಿ ಪ್ರತ್ಯೇಕಿಸುವ ಕೆಲಸವೂ ನಡೆದಿತ್ತು. ದು ನಮ್ಮಲ್ಲೂ, ಇತರೆಲ್ಲ ದೇಶಗಳಲ್ಲೂ ನಡೆದಿವೆ. ಇವನ್ನು ಎಷ್ಟೇ ಕಠಿಣವಾಗಿ ನಡೆಸಿದ್ದರೂ ಕೂಡ ಸಮುದಾಯದೊಳಕ್ಕೆ ಸೋಂಕು ಹೊಕ್ಕದಂತೆ ಮಾಡುವುದಕ್ಕೆ ಹೆಚ್ಚಿನ ದೇಶಗಳಲ್ಲಿ ಸಾಧ್ಯವಾಗಿಲ್ಲ. ಭಾರತವೂ ಅದರಲ್ಲಿ ಯಶಸ್ವಿಯಾಗಿಲ್ಲ. ಹೀಗೆ ಪ್ರತ್ಯೇಕಿಸಿಡುವುದಕ್ಕೆ ಎಲ್ಲೆಡೆಯೂ ಒಂದೇ ರೀತಿಯ ಕ್ರಮಗಳನ್ನು ಕೈಗೊಂಡ ಉದಾಹರಣೆಗಳು ಕೂಡ ಸಿಗುವುದಿಲ್ಲ; ಒಂದೊಂದು ದೇಶದಲ್ಲೂ, ಒಂದೇ ದೇಶದ ಬೇರೆ ಬೇರೆ ಪ್ರಾಂತ್ಯಗಳಲ್ಲೂ ಬೇರೆ ಬೇರೆಯಾದ ನಿಯಮಗಳನ್ನು ಬಳಸಲಾಗಿದೆ. ನಮ್ಮಲ್ಲಂತೂ ಏಕರೂಪದ ಕ್ರಮಗಳೇ ಇಲ್ಲವಾಗಿದ್ದು, ಒಂದೊಂದು ಜಿಲ್ಲೆಯಲ್ಲಿ ಒಂದೊಂದು ವಾರಕ್ಕೆ ಒಂದೊಂದು ಕ್ರಮವೆಂಬಂತಾಗಿದೆ. ಮಾರ್ಚ್ ಮಧ್ಯದಿಂದ ಹೇರಲಾಗಿರುವ ಲಾಕ್ ಡೌನ್ ಹೇಗಿದೆಯೆಂದರೆ ಯಾವ ಘಳಿಗೆಯಲ್ಲಿ ಯಾವ ಹೊಸ ನಿಯಮ ಬರಲಿದೆಯೋ ಎಂಬುದು ಆಡಳಿತಕ್ಕೂ ಅರಿವಿಲ್ಲದಂತಿದೆ.
ಇದುವರೆಗೆ ಸೋಂಕಿತರನ್ನೂ, ಸಂಪರ್ಕಿತರನ್ನೂ ಆಸ್ಪತ್ರೆಗಳಲ್ಲೋ, ಇತರ ಸಂಸ್ಥೆಗಳಲ್ಲೋ ಇರಿಸಲಾಗುತ್ತಿತ್ತು. ಆದರೆ ಈಗ ಸಮುದಾಯದೊಳಗೆ ಸೋಂಕು ಹರಡಲಾರಂಭಿಸಿ ಸೋಂಕಿತರ ಸಂಖ್ಯೆಯು ದಿನೇ ದಿನೇ ಏರುತ್ತಿರುವಾಗ ಸೋಂಕಿತರನ್ನೂ, ಅವರ ಸಂಪರ್ಕಕ್ಕೆ ಬಂದವರನ್ನೂ ಹೀಗೆ ಸಾಂಸ್ಥಿಕ ನಿಗಾವಣೆಯಲ್ಲಿ ಪ್ರತ್ಯೇಕಿಸಿಡುವುದು ಇನ್ನು ಮುಂದಕ್ಕೆ ಸಾಧ್ಯವಾಗದು.
ಆದ್ದರಿಂದ, ನಮ್ಮ ದೇಶದ ಪ್ರಸಕ್ತ ಸ್ಥಿತಿಗತಿಗಳಿಗೆ ಅನುಗುಣವಾಗಿ ಸೋಂಕಿತರ ಕಡ್ಡಾಯ ಬೇರ್ಪಡಿಕೆ ಏಕೆ, ಹೇಗೆ ಎನ್ನುವುದನ್ನು ಪುನರ್ ವಿಮರ್ಶಿಸಬೇಕಾಗಿದೆ; ಸುಸ್ಪಷ್ಟವಾದ, ಸರಳವಾದ, ಜನರು ಪಾಲಿಸಬಹುದಾದ, ಆಡಳಿತಕ್ಕೂ ಹೊರೆಯಾಗದ ಕ್ರಮಗಳನ್ನು ರೂಪಿಸಬೇಕಾಗಿದೆ. ಜನರಿಗೆ ಧೈರ್ಯ ಹೇಳಿ, ಅವರ ವಿಶ್ವಾಸವನ್ನು ಗೆದ್ದು, ಯಾವುದೇ ಸಮಸ್ಯೆಗಳಿಲ್ಲದವರು ಮನೆಯಲ್ಲೇ ಉಳಿಯುವಂತೆ ಪ್ರೇರೇಪಿಸಿ, ಅವರು ಕೊರೊನಾ ನಿಯಂತ್ರಣದಲ್ಲಿ ಸಹಕರಿಸುವಂತೆ ಮಾಡಬೇಕಾಗಿದೆ. ಜೊತೆಗೆ, ಗಂಭೀರ ಸಮಸ್ಯೆಗಳಾಗಬಲ್ಲವರನ್ನು ಸೋಂಕಿತರ ಸಂಪರ್ಕಕ್ಕೆ ಬರದಂತೆ ರಕ್ಷಿಸಬೇಕಾಗಿದೆ. ಈ ಎಲ್ಲ ವ್ಯವಸ್ಥೆಗಳನ್ನೂ ಈ ಕೂಡಲೇ ಸ್ಪಷ್ಟವಾಗಿ ರೂಪಿಸಿ, ಪ್ರಚುರಪಡಿಸಿ, ಮುಂದಿನ ಮೂರು-ನಾಲ್ಕು ವಾರಗಳಲ್ಲಿ ಸೋಂಕು ಹರಡುವ ವೇಳೆಗೆ ಆಡಳಿತವನ್ನೂ, ಜನಸಾಮಾನ್ಯರನ್ನೂ ಸಜ್ಜಾಗಿಸಲು ಕ್ರಮ ಕೈಗೊಳ್ಳಬೇಕಾಗಿದೆ; ಕೊನೆಯ ಘಳಿಗೆಯಲ್ಲಿ ಸೂಚನೆಗಳನ್ನು ಹೊರಡಿಸಿ ಗೊಂದಲಗಳಿಗೆ ಅವಕಾಶ ನೀಡಬಾರದು.
ಸೋಂಕಿತರನ್ನು ಮನೆಯಲ್ಲೇ ಉಳಿಸುವುದೆಂದರೆ ನಮ್ಮ ಮನೆಗಳ ಸ್ಥಿತಿಗಳನ್ನು ನೋಡಬೇಕಾಗುತ್ತದೆ. ನಮ್ಮ ದೇಶದಲ್ಲಿ 25 ಕೋಟಿ ಕುಟುಂಬಗಳಿದ್ದು, ಮನೆಗಳಲ್ಲಿ ಸರಾಸರಿ 5 ಜನರಿರುತ್ತಾರೆ. ಶೇ. 80ರಷ್ಟು ಮನೆಗಳಲ್ಲಿ ಎರಡು ಅಥವಾ ಕಡಿಮೆ ಕೊಠಡಿಗಳಿವೆ. ನಮ್ಮಲ್ಲಿ 60  ವರ್ಷಕ್ಕೆ ಮೇಲ್ಪಟ್ಟವರ ಒಟ್ಟು ಸಂಖ್ಯೆಯು ಸುಮಾರು 10 ಕೋಟಿಯಷ್ಟು (ಜನಸಂಖ್ಯೆಯ ಶೇ.8ರಷ್ಟು) ಇದೆ; ಅವರಲ್ಲಿ ಒಂದೂವರೆ ಕೋಟಿಯಷ್ಟು ಹಿರಿಯರು ತಮ್ಮ ಮನೆಗಳಲ್ಲಿ ಒಂಟಿ ಜೀವನ ನಡೆಸುತ್ತಿದ್ದಾರೆ. ಶೇ.27ರಷ್ಟು (ಸುಮಾರು 7 ಕೋಟಿ) ಮನೆಗಳಲ್ಲಿ ಹಿರಿಯರು ತಮ್ಮ ಕುಟುಂಬದ ಕಿರಿಯರೊಂದಿಗೆ ಜೀವಿಸುತ್ತಿದ್ದಾರೆ. ಈ ಹಿರಿಯರನ್ನೂ, ಸಮಸ್ಯೆಗಳಾಗುವ ಅಪಾಯವುಳ್ಳ ಇತರರನ್ನೂ ಸುರಕ್ಷಿತವಾಗಿಡುವ ಕ್ರಮಗಳನ್ನು ಕೂಡಲೇ ಕೈಗೊಳ್ಳಬೇಕಿದೆ. ಇನ್ನುಳಿದ ಶೇ. 70ರಷ್ಟು ಮನೆಗಳಲ್ಲಿ ಕಿರಿಯರಷ್ಟೇ ಇರುತ್ತಾರೆ; ಅಂತಲ್ಲಿ ಗಂಭೀರ ಸಮಸ್ಯೆಗಳಾಗುವ ಸಾಧ್ಯತೆಗಳು ಬಹು ಕಡಿಮೆಯಿರುತ್ತವೆ.
ಇವನ್ನೆಲ್ಲ ಪರಿಗಣಿಸಿ ಈ ಕೆಳಗಿನ ಕ್ರಮಗಳನ್ನು ಜಾರಿಗೊಳಿಸುವುದೊಳ್ಳೆಯದು:
ಏಕಾಏಕಿಯಾಗಿ, ಯಾವುದೇ ಪೂರ್ವಸೂಚನೆಯಿಲ್ಲದೆ  ದೇಶವ್ಯಾಪಿ ಲಾಕ್ ಡೌನ್ ಘೋಷಿಸಿ, ಎಲ್ಲಾ ಸಂಚಾರಗಳನ್ನೂ ಸ್ತಬ್ಧಗೊಳಿಸಿದ್ದರಿಂದಾಗಿ ನಮ್ಮ ರಾಜ್ಯದ ಸಾವಿರಾರು ಜನರು ಅನ್ಯ ರಾಜ್ಯಗಳಲ್ಲಿ ಸಿಕ್ಕಿಕೊಂಡಿದ್ದಾರೆ; ಗಂಡ-ಹೆಂಡತಿಯರು, ಮಕ್ಕಳು-ಹೆತ್ತವರು ಬೇರೆಯಾಗಿದ್ದಾರೆ, ಚಿಕಿತ್ಸೆಗೆಂದು ಹೋದವರು ಅಲ್ಲಲ್ಲೇ ಉಳಿದಿದ್ದಾರೆ. ಕರ್ನಾಟಕದಲ್ಲಿ ಈಗಾಗಲೇ ಕೊರೊನಾ ಸೋಂಕು ಹರಡುತ್ತಿದೆ; ಹಾಗಿರುವಾಗ ಕೊರೊನಾ ಇರುವ ಇತರ ರಾಜ್ಯಗಳಲ್ಲಿ ಸಿಕ್ಕಿಬಿದ್ದಿರುವ ನಮ್ಮವರನ್ನು ಹೀಗೆ ರಾಜ್ಯದೊಳಕ್ಕೆ ಬಿಡದೇ ಇರುವುದರಿಂದ ಏನನ್ನು ಸಾಧಿಸಿದಂತಾಗುತ್ತದೆ? ಇನ್ನೂ ತಿಂಗಳುಗಟ್ಟಲೆ ಕಾಲ ಅವರನ್ನೆಲ್ಲ ಹೀಗೆ ದೂರವಿಡಲು ಸಾಧ್ಯವೇ? ಆದ್ದರಿಂದ ಏಕಾಏಕಿಯಾಗಿ ಲಾಕ್ ಡೌನ್ ಹೇರಿದ್ದರಿಂದ ಉಂಟಾಗಿರುವ ಈ ಗಂಭೀರ ಸಮಸ್ಯೆಯನ್ನು ಮಾನವೀಯ ನೆಲೆಯಲ್ಲಿ ಪರಿಗಣಿಸಿ, ಹಾಗೆ ಸಿಕ್ಕಿಕೊಂಡಿರುವ ಎಲ್ಲ ಕನ್ನಡಿಗರಿಗೂ ಈ ಕೂಡಲೇ ರಾಜ್ಯಕ್ಕೆ ಮರಳಲು, ತಮ್ಮವರನ್ನು ಸೇರಿಕೊಳ್ಳಲು, ಅವಕಾಶವೊದಗಿಸಲೇಬೇಕು.
ಹೀಗೆ ಪರವೂರುಗಳಿಂದ ಬಂದವರನ್ನು ತಮ್ಮ ಮನೆಗಳಲ್ಲೇ ಉಳಿಯಲು ಹೇಳಿದರೆ ಸಾಕಾಗುತ್ತದೆ; ನೂರು-ಸಾವಿರಗಟ್ಟಲೆಯಲ್ಲಿ ಮರಳಲಿರುವ ಎಲ್ಲರನ್ನೂ ಸಾಂಸ್ಥಿಕ ನಿಗಾವಣೆಯಲ್ಲಿರಿಸುವುದು ಸಾಧ್ಯವಾಗದು. ಸೋಂಕಿಲ್ಲದ ಪ್ರದೇಶಗಳಿಂದ ಬಂದವರು ಒಂದು ವಾರ, ಸೋಂಕು ವ್ಯಾಪಕವಾಗಿರುವ ಪ್ರದೇಶಗಳಿಂದ ಬಂದವರು ಎರಡು ವಾರ ಮನೆಯಲ್ಲೇ ಉಳಿಯುವಂತೆ ಮಾಡಬಹುದು. ಅವರಲ್ಲಿ ರೋಗಲಕ್ಷಣಗಳು ಕಂಡುಬಂದರೆ ಕೊರೊನಾ ಪರೀಕ್ಷೆಗೆ ವ್ಯವಸ್ಥೆ ಮಾಡಬಹುದು.
ಇವೇ ಕಾರಣಗಳಿಗಾಗಿ, ಪರದೇಶಗಳಿಂದ ಬಂದವರಿಗೂ ಇದೇ ರೀತಿಯಾಗಿ ಮನೆಯಲ್ಲೇ ಪ್ರತ್ಯೇಕವಾಗುಳಿಯುವ ವ್ಯವಸ್ಥೆಯನ್ನು ಮಾಡಬಹುದು. ಅವರೆಲ್ಲರಿಗೂ ಸದ್ಯಕ್ಕೆ ವೈರಾಣು ಪರೀಕ್ಷೆ ಕಡ್ಡಾಯವಾಗಿದ್ದು, ಅದರಲ್ಲಿ ಸೋಂಕಿರುವುದು ಪತ್ತೆಯಾದವರೂ ಕೂಡ ಮನೆಯಲ್ಲೇ ಉಳಿಯುವ ವ್ಯವಸ್ಥೆ ಮಾಡಬಹುದು; ಸಮಸ್ಯೆಯಾದರಷ್ಟೇ ಆಸ್ಪತ್ರೆಗಳಲ್ಲಿ ದಾಖಲಿಸಿದರೆ ಸಾಕು.
ಕೊರೊನಾ ಸೋಂಕು ಹೆಚ್ಚಿದಂತೆ ಸೋಂಕಿನ ಲಕ್ಷಣಗಳಿರುವವರು ಕೂಡ ಮನೆಯಲ್ಲೇ ಉಳಿಯಬೇಕಾಗುತ್ತದೆ. ಪ್ರಕರಣಗಳು ಹೆಚ್ಚಿದಂತೆ ಎಲ್ಲ ಸೋಂಕಿತರಲ್ಲಿ ಕೊರೊನಾ ವೈರಾಣು ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗುವುದಿಲ್ಲ, ಕೇವಲ ಗಂಭೀರ ಸಮಸ್ಯೆಗಳಿರುವವರಲ್ಲಷ್ಟೇ ನಡೆಸಲಾಗುತ್ತದೆ. ಅಲ್ಲದೆ, ಶೇ.90ಕ್ಕೂ ಹೆಚ್ಚು ಸೋಂಕಿತರಲ್ಲಿ ಯಾವ ನಿರ್ದಿಷ್ಟ ಚಿಕಿತ್ಸೆಯ ಅಗತ್ಯವೂ ಇರುವುದಿಲ್ಲ. ನೂರುಗಟ್ಟಲೆಯಲ್ಲಿ, ಸಾವಿರಗಟ್ಟಲೆಯಲ್ಲಿ ಸೋಂಕು ತಗಲಿದಾಗ (ಇನ್ನೊಂದು ತಿಂಗಳಲ್ಲಿ) ಅವರನ್ನೆಲ್ಲ ಆಸ್ಪತ್ರೆ, ಹೋಟೆಲು, ಶಾಲೆ, ಕ್ರೀಡಾಂಗಣ, ರೈಲು ಬೋಗಿಗಳಲ್ಲಿ ಬೇರ್ಪಡಿಸಿ ಇಡುವುದು, ಅವರೆಲ್ಲರಿಗೂ ಊಟೋಪಚಾರ, ಶೌಚ ಇತ್ಯಾದಿ ವ್ಯವಸ್ಥೆಗಳನ್ನು ಒದಗಿಸುವುದು ಅಸಾಧ್ಯ ಮಾತ್ರವಲ್ಲ, ಅನಗತ್ಯವೂ ಆಗಿದೆ. ಆದ್ದರಿಂದ ಸೋಂಕಿನ ಲಕ್ಷಣಗಳುಳ್ಳವರು ಮನೆಯಲ್ಲೇ ಉಳಿದು ಸಹಾಯವಾಣಿಯನ್ನು ಸಂಪರ್ಕಿಸಿದರೆ ಸಾಕೆನ್ನುವ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈಗಾಗಲೇ ಹೇಳಿಕೆಗಳನ್ನು ನೀಡಿವೆಯಾದರೂ, ಅವಕ್ಕೆ ವ್ಯಾಪಕವಾದ, ಬಲವಾದ ಪ್ರಚಾರವನ್ನು ಈಗಿಂದೀಗಲೇ ಮಾಡಬೇಕು.
ಕೊರೊನಾ ಸೋಂಕಿನ ಲಕ್ಷಣಗಳು ಆರಂಭವಾದೊಡನೆ ಅಂಥವರೆಲ್ಲರೂ ಮನೆಗಳಲ್ಲೇ ಉಳಿಯಬೇಕೆನ್ನುವಾಗ ಆ ಲಕ್ಷಣಗಳೇನು ಎನ್ನುವುದನ್ನು ಕೂಡ ಸ್ಪಷ್ಟವಾಗಿ ಜನರಿಗೆ ತಿಳಿಸಬೇಕಾಗುತ್ತದೆ. ಒಮ್ಮಿಂದೊಮ್ಮೆಗೇ ವಾಸನೆ ಗ್ರಹಿಸುವ ಶಕ್ತಿಯು ನಷ್ಟವಾಗುವುದು ಕೊರೊನಾದ ಮುಖ್ಯ ಲಕ್ಷಣಗಳಲ್ಲೊಂದಾಗಿದ್ದು, ಅದಿರುವವರು ತಕ್ಷಣದಿಂದ ಮನೆಯಲ್ಲೇ ಉಳಿಯಬೇಕು. ಜೊತೆಗೆ, ಹೊಸದಾಗಿ ಗಂಟಲು ನೋವು, ನೆಗಡಿ, ಕೆಮ್ಮು, ಜ್ವರ ತೊಡಗಿದವರು ಕೂಡ ಮನೆಯಲ್ಲೇ ಉಳಿಯಬೇಕು; ಅಂಥವರು ಚಿಕಿತ್ಸೆ ಯಾ ಪರೀಕ್ಷೆಗಾಗಿ ಹೊರಹೋಗುವ ಅಗತ್ಯವಿಲ್ಲ, ಹೋಗಬಾರದು. ಅವರೆಲ್ಲರೂ ಸಹಾಯವಾಣಿ 14410ಗೆ ಅಥವಾ ತಮ್ಮ ವೈದ್ಯರಿಗೆ ಕರೆ ಮಾಡಬೇಕು; ವೈದ್ಯರ ಸಲಹೆಯಂತೆ ಮನೆಯಲ್ಲೇ ಉಳಿದು ಅಗತ್ಯವಿದ್ದರೆ ಜ್ವರ ನಿವಾರಕ ಮಾತ್ರೆಗಳನ್ನು ಸೇವಿಸಬಹುದು. ಜ್ವರ ಏರತೊಡಗಿದರೆ, ಕೆಮ್ಮು ಅತಿಯಾಗತೊಡಗಿದರೆ ಅಥವಾ ಉಸಿರಾಟ ಕಷ್ಟವಾದರೆ ಮತ್ತೆ ಕರೆ ಮಾಡಿ, ಆಸ್ಪತ್ರೆಗೆ ದಾಖಲಿಸುವಂತೆ ಕೇಳಬಹುದು. ಈ ಎಲ್ಲ ವಿವರಗಳನ್ನು ವ್ಯಾಪಕವಾಗಿ ಪ್ರಚಾರ ಮಾಡಬೇಕು.
ಸೋಂಕಿನ ಲಕ್ಷಣಗಳುಳ್ಳವರು ಆಸ್ಪತ್ರೆ/ಚಿಕಿತ್ಸಾಲಯಗಳಿಗೆ, ಔಷಧದ ಅಂಗಡಿಗಳಿಗೆ ಹೋಗದೇ ಮನೆಯಲ್ಲೇ ಉಳಿಯುವುದರಿಂದ  ಆರೋಗ್ಯ ಸೇವೆಗಳಲ್ಲಿರುವವರಿಗೂ, ಇತರರಿಗೂ, ಸೋಂಕು ಹರಡುವುದು ಕಡಿಮೆಯಾಗುತ್ತದೆ. ಆದರೂ ಕೂಡ ವೈದ್ಯಕೀಯ ಸಂಸ್ಥೆಗಳಲ್ಲಿ ದುಡಿಯುವವರೆಲ್ಲರೂ ಸೋಂಕಿತರ ಸಂಪರ್ಕಕ್ಕೆ ಬರುವ ಸಾಧ್ಯತೆಗಳು ಇದ್ದೇ ಇರುತ್ತವೆ. ಮುಂದಿನ ದಿನಗಳಲ್ಲಿ ಪ್ರತಿನಿತ್ಯವೂ ಹೀಗೆ ಸಂಪರ್ಕಕ್ಕೆ ಬಂದವರೆಲ್ಲರನ್ನೂ ಆ ಕೂಡಲೇ ಪ್ರತ್ಯೇಕಿಸಿಡುವುದೆಂದರೆ ಎಲ್ಲಾ ಆರೋಗ್ಯ ಸೇವೆಗಳನ್ನೂ ಸ್ತಬ್ಧಗೊಳಿಸಿದಂತೆಯೇ ಆಗುತ್ತದೆ. ಆದ್ದರಿಂದ ವೈದ್ಯಕೀಯ ಸೇವೆಗಳಲ್ಲಿರುವವರು ಸೋಂಕಿತರ ಸಂಪರ್ಕಕ್ಕೆ ಬಂದೊಡನೆ ಪ್ರತ್ಯೇಕವಾಗಿ ಉಳಿಯುವ ಅಗತ್ಯವಿಲ್ಲ; ರೋಗಲಕ್ಷಣಗಳು ಆರಂಭಗೊಂಡರಷ್ಟೇ ತಾವಾಗಿ ಮನೆಗಳಲ್ಲಿ ಒಂದು ವಾರ, ಅಥವಾ ರೋಗಲಕ್ಷಣಗಳು ಮರೆಯಾಗುವವರೆಗೆ, ಪ್ರತ್ಯೇಕವಾಗಿ ಉಳಿದರೆ ಸಾಕು ಎಂಬ ವ್ಯವಸ್ಥೆಯನ್ನು ಮಾಡಬೇಕು. ರೋಗಲಕ್ಷಣಗಳಿಲ್ಲದ ಯಾವ ಆರೋಗ್ಯ ಕರ್ಮಿಯನ್ನೂ ಕೇವಲ ಸಂಪರ್ಕಕ್ಕೆ ಬಂದ ಕಾರಣಕ್ಕೆ ಕಡ್ಡಾಯವಾಗಿ ಪ್ರತ್ಯೇಕವಾಗಿ ಉಳಿಯುವಂತೆ ಹೇಳಬಾರದು. ಸೋಂಕಿತರನ್ನು ನೋಡಿದ ಮಾತ್ರಕ್ಕೆ ಆಸ್ಪತ್ರೆಗಳನ್ನು ಮುಚ್ಚುವುದನ್ನೂ ಮಾಡಬಾರದು. ಅಲ್ಲಿ ಸೂಕ್ತವಾದ ಶುದ್ಧೀಕರಣದ ಬಳಿಕ ಎಂದಿನಂತೆ ಕಾರ್ಯನಿರ್ವಹಿಸಲು ಅವಕಾಶವಿರಬೇಕು.
ಹೆತ್ತವರು ಗಂಭೀರವಾಗಿ ರೋಗಗ್ರಸ್ತರಾಗಿ ತೀವ್ರ ನಿಗಾದಲ್ಲಿರುವ ಸಂದರ್ಭಗಳನ್ನು ಬಿಟ್ಟು ಬೇರೆ ಯಾವುದೇ ಸನ್ನಿವೇಶಗಳಲ್ಲಿ ಮಕ್ಕಳನ್ನು ಅವರ ಹೆತ್ತವರಿಂದ ಬೇರ್ಪಡಿಸಲೇಬಾರದು. ಮಕ್ಕಳಲ್ಲಿ ಕೊರೊನಾ ಸೋಂಕು ಯಾವುದೇ ಸಮಸ್ಯೆಯನ್ನು ಉಂಟುಮಾಡುವುದಿಲ್ಲವಾದ್ದರಿಂದ ಮಕ್ಕಳು, ಸೋಂಕಿತರಿರಲಿ, ಇಲ್ಲದಿರಲಿ, ಹೆತ್ತವರ ಜೊತೆಗೇ ಇರಬೇಕು.
ಹೀಗೆ ಮನೆಗಳಲ್ಲೇ ಉಳಿಯುವ ಕೊರೊನಾ ಸೋಂಕಿತರಲ್ಲಿ ಅಥವಾ ಪರವೂರುಗಳಿಂದ ಮರಳಿದವರಲ್ಲಿ ಯಾರಿಗೇ ಆದರೂ ಕೊರೊನಾಕ್ಕೆ ಸಮಬಂಧಿಸಿರದ ಬೇರೆ ಯಾವುದೇ ಸಮಸ್ಯೆಯಿದ್ದರೆ ಅದಕ್ಕೆ ಸೂಕ್ತವಾದ ಪರಿಹಾರವನ್ನು ಪಡೆಯಲು ಅವಕಾಶವಿರಬೇಕು. ಇತರ ಕಾಯಿಲೆಗಳುಂಟಾದಲ್ಲಿ, ಅಥವಾ ಗರ್ಭಿಣಿಯರಿಗೆ ಮತ್ತು ಮಕ್ಕಳಿಗೆ ಪರೀಕ್ಷೆ/ಲಸಿಕೆಗಳ ಅಗತ್ಯವಿದ್ದಲ್ಲಿ ಯಾವುದೇ ಅಡ್ಡಿ-ಆತಂಕಗಳಿಲ್ಲದೆ ಅವನ್ನು ಪಡೆಯಲು ಸಾಧ್ಯವಾಗಬೇಕು. ಶೇ.99 ಸೋಂಕಿತರಿಗೆ ಯಾವುದೇ ಗಂಭೀರ ಸಮಸ್ಯೆಯನ್ನುಂಟು ಮಾಡದ ಕೊರೊನಾ ಸೋಂಕನ್ನು ನಿಯಂತ್ರಿಸುವ ಭರದಲ್ಲಿ ಮಾನವೀಯತೆಯನ್ನೂ, ಇತರ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕಾದ ಅಗತ್ಯಗಳನ್ನೂ ಮರೆಯಬಾರದು. ಕೆಲವರನ್ನು ಕೊರೊನಾದಿಂದ ಕಾಯಲು ಹೊರಟು ಎಲ್ಲರನ್ನೂ ತೊಂದರೆಗೀಡುಮಾಡುವುದು ಯಾವ ರೀತಿಯಿಂದಲೂ ನ್ಯಾಯೋಚಿತವಲ್ಲ.
ಯಾರನ್ನೇ ಆದರೂ ಮನೆಯಲ್ಲೇ ಪ್ರತ್ಯೇಕವಾಗಿರಲು ಹೇಳುವಾಗ, ಅವರ ಮನೆಗಳಲ್ಲಿರುವವರಿಗೆ ಸೋಂಕು ತಗಲದಂತೆ ಎಲ್ಲರೂ ಸೂಕ್ತ ಎಚ್ಚರಿಕೆಗಳನ್ನು ವಹಿಸಬೇಕು, ಹಾಗೆಯೇ ತಮ್ಮಿಂದ ಇತರರಿಗೆ ಹರಡದಂತೆ ಮನೆಯವರೆಲ್ಲರೂ ಎಚ್ಚರಿಕೆ ವಹಿಸಬೇಕು. ಅಂಥ ಮನೆಗಳಲ್ಲಿ ಹಿರಿಯರಿದ್ದರೆ ಅವರನ್ನು ಪ್ರತ್ಯೇಕಿಸಬೇಕು. ಈ ಮೊದಲೇ ಹೇಳಿರುವಂತೆ, ಹಿರಿವಯಸ್ಕರಿಗೆ ಮತ್ತು ಗಂಭೀರ ಸಮಸ್ಯೆಗಳಾಗುವ ಸಾಧ್ಯತೆಗಳುಳ್ಳವರಿಗೆ ತಮ್ಮದೇ ಮನೆಗಳಲ್ಲಿ, ಅದು ಸಾಧ್ಯವಾಗದಿದ್ದರೆ ಹೋಟೆಲುಗಳು/ಹಾಸ್ಟೆಲುಗಳು/ಛತ್ರಗಳು ಮುಂತಾದೆಡೆಗಳಲ್ಲಿ, ಪ್ರತ್ಯೇಕವಾಗಿ, ಸುರಕ್ಷಿತವಾಗಿ ಮುಂದಿನ ಮೂರು ತಿಂಗಳ ಕಾಲ ಉಳಿಯಲು ವ್ಯವಸ್ಥೆ ಮಾಡುವುದು ಅತ್ಯಂತ ಅಪೇಕ್ಷಣೀಯವಾಗಿದೆ.
ಒಟ್ಟಿನಲ್ಲಿ, ಶೇ.85ರಷ್ಟು ಸೋಂಕಿತರಲ್ಲಿ ರೋಗಲಕ್ಷಣಗಳನ್ನೇ ಉಂಟುಮಾಡದ ಕೊರೊನಾ ಎಂಬ ಸೋಂಕನ್ನು ತಡೆಯುವ ಹೆಸರಲ್ಲಿ ಉಳಿದೆಲ್ಲಾ ಕಾಯಿಲೆಗಳನ್ನೂ, ದೇಶದ ಆರ್ಥಿಕತೆಯನ್ನೂ, ಜನರ ನಿತ್ಯ ಜೀವನವನ್ನೂ, ಕೆಲಸ, ಊಟಗಳನ್ನೂ ಹಾಳು ಮಾಡುವುದು ಸರಿಯಲ್ಲ, ಹಾಗೆ ಮಾಡುವ ಅಗತ್ಯವೂ ಇಲ್ಲ.

Be the first to comment

Leave a Reply

Your email address will not be published.


*