ಕಾರ್ಪರೇಟ್-ಕೋಮುವಾದಗಳ ಜೋಡಾಟದಲ್ಲಿ ಅಪ್ಪಚ್ಚಿಯಾದ ಆಧುನಿಕ ಆರೋಗ್ಯ ಸೇವೆಗಳು

ಕಾರ್ಪರೇಟ್-ಕೋಮುವಾದಗಳ ಜೋಡಾಟದಲ್ಲಿ ಅಪ್ಪಚ್ಚಿಯಾದ ಆಧುನಿಕ ಆರೋಗ್ಯ ಸೇವೆಗಳು

ಹೊಸತು, ವಿಶೇಷಾಂಕ, ಜನವರಿ 2025

ಬಳ್ಳಾರಿಯ ಜಿಲ್ಲಾಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೊಳಗಾದ ಬಾಣಂತಿಯರ ಸಾವು. ಕರ್ನಾಟಕದಲ್ಲೂ, ಇತರೆಡೆಗಳಲ್ಲೂ ವೈದ್ಯಕೀಯ ನಿರ್ಲಕ್ಷ್ಯದ ಆಪಾದನೆಗಳ ಅನೇಕ ಪ್ರಕರಣಗಳು. ಗರ್ಭಸ್ಥ ಶಿಶುಗಳ ಸ್ಕಾನಿಂಗ್ ನಲ್ಲಿ ಲೋಪಗಳ ಬಗ್ಗೆ ಕರ್ನಾಟಕ, ಕೇರಳ ಸೇರಿದಂತೆ ಅನೇಕ ಕಡೆಗಳಲ್ಲಿ ದೂರುಗಳು, ನ್ಯಾಯಾಲಯಗಳಿಂದ ಕೋಟಿಯಷ್ಟು ಪರಿಹಾರದ ಆದೇಶಗಳು. ಕುಸಿದು ಬೀಳುತ್ತಿರುವ ಸಾರ್ವಜನಿಕ ಆರೋಗ್ಯ ಸೇವೆಗಳು, ಕೈಗೆಟುಕದಾಗಿರುವ ಖಾಸಗಿ ಆರೋಗ್ಯ ಸೇವೆಗಳು, ವಿಪರೀತವಾಗಿರುವ ಆರೋಗ್ಯ ವಿಮೆಯ ಚಂದಾ, ಅದಕ್ಕೂ ವಿಪರೀತ ತೆರಿಗೆ, ಇದ್ದೂ ಇಲ್ಲದಾಗಿರುವ ಆಯುಷ್ಮಾನ್ ಭಾರತ್, ಅದರಲ್ಲೂ ನಡೆಯುತ್ತಿರುವ ಮೋಸಗಳು. ವೈದ್ಯಕೀಯ ಶಿಕ್ಷಣ ಹಾಗೂ ವೃತ್ತಿಯನ್ನು ನಿಯಂತ್ರಿಸುವ ರಾಷ್ಟ್ರೀಯ ವೈದ್ಯಕೀಯ ಆಯೋಗ ಸದಸ್ಯರೇ ಇಲ್ಲದೆ ಖಾಲಿ, ಹೊರಡಿಸಿದ ಆದೇಶಗಳೆಲ್ಲ ವಾರದಲ್ಲೇ ಹಿಂದಕ್ಕೆ ಅಥವಾ ನಿರರ್ಥಕ. ಆಧುನಿಕ ವೈದ್ಯಕೀಯ ಶಿಕ್ಷಣದಲ್ಲಿ ಆಯುರ್ವೇದ, ಯೋಗ ಇತ್ಯಾದಿ ಬೆರೆಸಿ ಧ್ವಂಸ ಮಾಡುವ ಯೋಜನೆಗಳು, ಅನಿಯಂತ್ರಿತ ಖಾಸಗೀಕರಣದಿಂದ ವೈದ್ಯಕೀಯ ಶಿಕ್ಷಣದ ಗುಣಮಟ್ಟ ಮಣ್ಣುಪಾಲು.  ‘ಹಿಂದೂ’ ವೈದ್ಯ ತನ್ನ ನಾಲ್ಕು ದಶಕಗಳ ಮಿತ್ರರಾಗಿದ್ದ ‘ಮುಸ್ಲಿಂ’ ವೈದ್ಯ ದಂಪತಿಗೆ ಮನೆ ಮಾರಿದ್ದಕ್ಕೆ ಗಲಾಟೆ, ರಾಜ್ಯದಲ್ಲೇ ಒಬ್ಬ ‘ಹಿಂದೂ’ ವೈದ್ಯನಿಂದ ಮುಸ್ಲಿಮರನ್ನು ನಿರ್ಮೂಲನೆ ಮಾಡಬೇಕೆಂಬ ಹೇಳಿಕೆ. ಇಷ್ಟೆಲ್ಲ ಆಗುತ್ತಿದ್ದರೂ ತೆಪ್ಪಗಿದ್ದು, ಪ್ರಧಾನಿ – ಗೃಹ ಸಚಿವರ ಫೋಟೋ ಹಾಕಿ ಅಕಾರಣವಾಗಿ ಹೊಗಳಿಕೆಯ ಮಳೆಗೆರೆಯುತ್ತಲೇ ಇರುವ ಭಾರತೀಯ ವೈದ್ಯಕೀಯ ಸಂಘ ಮತ್ತು ಅನೇಕ ವೈದ್ಯರು. ಭಾರತದಲ್ಲಿ ಆಧುನಿಕ ವೈದ್ಯ ವಿಜ್ಞಾನದ ಇಂದಿನ ಸ್ಥಿತಿಯಿದು.

ಹಿಂದಿನ ಶಕೆಯಲ್ಲಿ (ಕ್ರಿ.ಪೂ) ಭಾರತವು ವೈದ್ಯಕೀಯ ಚಿಕಿತ್ಸೆಯ ಮುಂಚೂಣಿಯಲ್ಲಿತ್ತು, ಆಯುರ್ವೇದ ಚಿಕಿತ್ಸಕರು ಹಾಗೂ ಶಸ್ತ್ರಚಿಕಿತ್ಸಾ ತಜ್ಞರು ಎಲ್ಲೆಡೆ ಪ್ರಸಿದ್ಧರಾಗಿದ್ದರು. ಬೌದ್ಧ ಮತಾನುಯಾಯಿ ಆಡಳಿತಗಳ ಕಾಲದಲ್ಲಿ ಆಯುರ್ವೇದವು ಉತ್ತುಂಗದಲ್ಲಿತ್ತು. ನಂತರದಲ್ಲಿ ವೈಚಾರಿಕತೆಯ ಮೇಲೆ ದಾಳಿಗಳು ಹೆಚ್ಚಿ, ಚಾತುರ್ವಣ್ಯ ಪ್ರತಿಪಾದನೆಯು ಬಲಗೊಂಡಾಗ, ಎಲ್ಲಾ ಮನುಷ್ಯರೂ ಮೂಳೆ-ಮಜ್ಜೆ-ಮಾಂಸಗಳುಳ್ಳ ಸರಿಸಮಾನರು ಎಂದು ಕಾಣುತ್ತಿದ್ದ ಆಯುರ್ವೇದವೂ ದಾಳಿಗೀಡಾಯಿತು, ಏಳು-ಎಂಟನೇ ಶತಮಾನದ ಹೊತ್ತಿಗೆ ಅವನತಿಯ ಹಾದಿ ಹಿಡಿಯಿತು. ಹದಿನೇಳನೇ ಶತಮಾನದ ಯೂರೋಪಿನ ವೈಜ್ಞಾನಿಕ-ವೈಚಾರಿಕ-ಕೈಗಾರಿಕಾ ಕ್ರಾಂತಿಗಳಿಂದ ಆಧುನಿಕ ವೈದ್ಯವಿಜ್ಞಾನವೂ ಬೆಳೆಯಿತು, ಬ್ರಿಟಿಷರಾಳ್ವಿಕೆಯಲ್ಲಿ ಭಾರತಕ್ಕೂ ಬಂದು ಇಲ್ಲೂ ಬೆಳೆಯತೊಡಗಿತು. ಸ್ವಾತಂತ್ರ್ಯಾನಂತರದಲ್ಲಿ ನೆಹರೂ ನೇತೃತ್ವದ ಆಡಳಿತವು ವಿಶ್ವದರ್ಜೆಯ ಅತ್ಯಾಧುನಿಕ ವೈದ್ಯಕೀಯ ಶಿಕ್ಷಣವನ್ನು ಭಾರತದಲ್ಲೂ ಒದಗಿಸಿದ್ದರಿಂದ ಭಾರತೀಯ ವಿದ್ಯಾರ್ಥಿಗಳು ಕೂಡ ವಿಶ್ವದರ್ಜೆಯ ವೈದ್ಯರಾಗಲು ಸಾಧ್ಯವಾಯಿತು, ಅಮೆರಿಕಾ, ಯೂರೋಪುಗಳಲ್ಲೂ ಸೇವೆ ಸಲ್ಲಿಸಲು ಸಾಧ್ಯವಾಯಿತು, ಭಾರತದೊಳಗೂ ಆಧುನಿಕ ವೈದ್ಯವಿಜ್ಞಾನದ ಸೌಲಭ್ಯಗಳು ಬೆಳೆದು ವಿದೇಶೀಯರನ್ನೂ ಚಿಕಿತ್ಸೆಗೆ ಆಹ್ವಾನಿಸುವಷ್ಟು ಮನ್ನಣೆಯನ್ನು ಪಡೆದವು.

ಅಂದು ಆಯುರ್ವೇದದ ವೈಚಾರಿಕತೆಗೆ ಬೆದರಿ ಅದನ್ನು ಮಣಿಸಿ ಮುಗಿಸಿದ್ದ ಶಕ್ತಿಗಳ ಇಂದಿನ ಪೀಳಿಗೆಯವರು ಇಂದು ಭಾರತದಲ್ಲಿ ಆಧುನಿಕ ವೈದ್ಯವಿಜ್ಞಾನವನ್ನು ನಾಶ ಮಾಡುವ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದ್ದಾರೆ. ಅಂದು ತಮ್ಮವರೇ ನಾಶ ಮಾಡಿದ್ದ ಆಯುರ್ವೇದವನ್ನು ಈಗ ಹೊಗಳುತ್ತಾ, ಆಧುನಿಕ ವೈದ್ಯವಿಜ್ಞಾನವನ್ನು ನಾಶ ಮಾಡುವುದಕ್ಕೆ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ. ನೆಹರೂ ಕಾಲದಿಂದ ಕಟ್ಟಿದ್ದ ಆಧುನಿಕ ವೈದ್ಯಕೀಯ ಶಿಕ್ಷಣ ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ನಾಶಪಡಿಸಿ, ವೈಜ್ಞಾನಿಕ ಚಿಂತನೆಯನ್ನೇ ದಮನಿಸಿ ಹಾಳುಗೆಡಹುವ ಈ ಕುಟಿಲ ಕಾರ್ಯತಂತ್ರವನ್ನು ಜಾರಿಗೊಳಿಸಲು ಎಲ್ಲಾ ಸ್ತರಗಳಲ್ಲೂ ಸೂಕ್ತ ವ್ಯವಸ್ಥೆಗಳನ್ನು ಮಾಡಲಾಗಿದೆ, ಭಾರತದಲ್ಲಿ ಆಧುನಿಕ ವೈದ್ಯಕೀಯ ಸೇವೆಗಳನ್ನು ವಿಚ್ಛಿದ್ರಗೊಳಿಸುವುದೇ ತಮ್ಮ ಗುರಿಯಾಗಿದೆಯೆಂದು ನೀತಿ ಆಯೋಗವು ಅರೇಳು ವರ್ಷಗಳ ಹಿಂದೆಯೇ ಸ್ಪಷ್ಟವಾಗಿ ಹೇಳಿರುವುದು ಇದಕ್ಕೆ ಪುರಾವೆಯಾಗಿದೆ.

ಮೋದಿ ನೇತೃತ್ವದ ಸರಕಾರವು ಅಧಿಕಾರ ವಹಿಸಿಕೊಂಡು ಆರೇ ತಿಂಗಳಲ್ಲಿ ಹೊಸ ರಾಷ್ಟ್ರೀಯ ಆರೋಗ್ಯ ನೀತಿಯ ಕರಡನ್ನು ಪ್ರಕಟಿಸಿತ್ತು. ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸೇವೆಗಳನ್ನು ಇನ್ನಷ್ಟು ಖಾಸಗೀಕರಣಗೊಳಿಸುವುದು, ಜಿಲ್ಲಾಸ್ಪತ್ರೆಗಳನ್ನು ಖಾಸಗೀಕರಣಗೊಳಿಸುವುದು, ಅವನ್ನು ಬಳಸಿ ಇನ್ನಷ್ಟು ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವುದು, ಆಯುರ್ವೇದ, ಯೋಗ ಇತ್ಯಾದಿ ಅನ್ಯ ಪದ್ಧತಿಗಳನ್ನು ವಿಶೇಷವಾಗಿ ಪ್ರೋತ್ಸಾಹಿಸುವುದು, ಆಧುನಿಕ ವೈದ್ಯಕೀಯ ವೃತ್ತಿಯ ನಿಯಂತ್ರಣವನ್ನು ಬದಲಾಯಿಸುವುದು ಮುಂತಾದ ಯೋಜನೆಗಳೆಲ್ಲವೂ ಅದರಲ್ಲಿದ್ದವು. ಈ ನೀತಿಯಲ್ಲಿದ್ದ ಯೋಜನೆಗಳನ್ನು ಜಾರಿಗೊಳಿಸುವ ಪ್ರಕ್ರಿಯೆಯು ಬಹಳ ವ್ಯವಸ್ಥಿತವಾಗಿ ಮುಂದುವರಿಯುತ್ತಿದೆ. 

ವೈದ್ಯವಿಜ್ಞಾನಕ್ಕೆ ಕಂಟಕವಾಗುತ್ತಿರುವ ಎನ್‌ಎಂಸಿ, ಎನ್‌ಇಪಿ

ಆಧುನಿಕ ವೈದ್ಯವೃತ್ತಿಯನ್ನು ನಿಯಂತ್ರಿಸುತ್ತಿದ್ದ, ವೈದ್ಯರಿಂದಲೇ ಚುನಾಯಿತವಾಗುತ್ತಿದ್ದ ಸ್ವಾಯತ್ತ ಸಂಸ್ಥೆ ಭಾರತೀಯ ವೈದ್ಯಕೀಯ ಪರಿಷತ್ತನ್ನು (ಎಂಸಿಐ) ವಿಸರ್ಜಿಸಿ, ಅದರ ಬದಲಿಗೆ ಕೇಂದ್ರ ಸರಕಾರದ ಅಧೀನವಾಗುವ, ಚುನಾಯಿತ ಸದಸ್ಯರೇ ಇಲ್ಲದ, ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ರಚಿಸುವ ಕರಡು ಪ್ರಸ್ತಾವವನ್ನು 2016ರಲ್ಲಿ ಪ್ರಕಟಿಸಲಾಯಿತು. ಆಧುನಿಕ ವೈದ್ಯಕೀಯ ಶಿಕ್ಷಣವನ್ನು ಇನ್ನಷ್ಟು ಖಾಸಗೀಕರಣಗೊಳಿಸುವುದು, ಲಾಭಕೋರ ಸಂಸ್ಥೆಗಳಿಗೂ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ಅವಕಾಶ ನೀಡುವುದು, ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಮಾನದಂಡಗಳನ್ನು ಸುಲಭಗೊಳಿಸುವುದು, ಅವುಗಳ ನಿಯಂತ್ರಣ ಹಾಗೂ ನಿಗಾವಣೆಗಳನ್ನು ಸಡಿಲಿಸುವುದು, ವೈದ್ಯಕೀಯ ಶಿಕ್ಷಣದ ಪ್ರವೇಶಾತಿ, ಅಂತಿಮ ಪರೀಕ್ಷೆ, ಸ್ನಾತಕೋತ್ತರ ವ್ಯಾಸಂಗಕ್ಕೆ ಪ್ರವೇಶಾತಿ, ಅವುಗಳ ಮಾನದಂಡಗಳು, ಪಠ್ಯಕ್ರಮಗಳು ಎಲ್ಲವನ್ನೂ ಈ ಸರಕಾರದ ಅಧೀನ ಸಂಸ್ಥೆಯಡಿಯಲ್ಲೇ ತರುವುದು, ಆಧುನಿಕ ವೈದ್ಯವಿಜ್ಞಾನದಲ್ಲಿ ಆಯುಷ್ ಪದ್ಧತಿಗಳನ್ನು ಬೆರಕೆ ಮಾಡುವುದು, ಆಯುಷ್ ಪದ್ಧತಿಗಳವರಿಗೂ ಆಧುನಿಕ ವೈದ್ಯವಿಜ್ಞಾನದಲ್ಲಿ ಅಡ್ಡ ತರಬೇತಿಗೆ ಅವಕಾಶ ನೀಡುವುದು ಮುಂತಾದ ಅನೇಕ ವಿಚ್ಛಿದ್ರಕಾರಿ ಯೋಜನೆಗಳನ್ನು ಈ ಕರಡು ಒಳಗೊಂಡಿತ್ತು.

ಇಂಥ  ಎನ್‌ಎಂಸಿ ರಚನೆಯಾದರೆ ದೇಶದ ಆಧುನಿಕ ವೈದ್ಯಕೀಯ ವ್ಯವಸ್ಥೆಯೇ ನಾಶವಾಗಲಿದೆ ಎಂದು ನಾವು ಕೆಲವರು ಎಚ್ಚರಿಸಿದ್ದೆವು, ಈ ಕರಡಿನ ಪ್ರತಿಯೊಂದು ಅಂಶಗಳ ಬಗ್ಗೆಯೂ ಸವಿವರವಾದ ವಿಮರ್ಶೆಯನ್ನು ಬರೆದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ದ ಎಲ್ಲಾ ರಾಜ್ಯಗಳ ಘಟಕಗಳಿಗೂ ಕಳುಹಿಸಿದ್ದೆವು. ಅದರ ಆಧಾರದಲ್ಲಿ ಬಹುತೇಕ ಎಲ್ಲಾ ರಾಜ್ಯಗಳ ಐಎಂಎ ಘಟಕಗಳು ಈ ಕರಡನ್ನು ವಿರೋಧಿಸಬೇಕೆಂದು ರಾಷ್ಟ್ರೀಯ ಐಎಂಎ ಮೇಲೆ ಒತ್ತಡ ಹೇರಿದವು. ಆಗ ಐಎಂಎಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದವರು ಭಾಜಪದ ವೈದ್ಯಕೀಯ ಪ್ರಕೋಷ್ಠ ಎಂಬುದರ ಅಧ್ಯಕ್ಷರೂ ಆಗಿದ್ದರು, ಏನೇ ಮಾಡಿದರೂ ಈ ಕಾಯಿದೆಯು ಬಂದೇ ಬರುತ್ತದೆ ಎಂದಿದ್ದರು. ಆದರೂ ಎಲ್ಲಾ ರಾಜ್ಯ ಘಟಕಗಳ ಒತ್ತಡದಿಂದಾಗಿ ರಾಷ್ಟ್ರೀಯ ಐಎಂಎ ಈ ಎನ್‌ಎಂಸಿ ಮಸೂದೆಯ ವಿರುದ್ಧ ಪ್ರತಿಭಟನೆಯನ್ನು ಆರಂಭಿಸಲೇಬೇಕಾಯಿತು. ಎಂಬಿಬಿಎಸ್ ಉತ್ತೀರ್ಣರಾಗಲು ರಾಷ್ಟ್ರ ಮಟ್ಟದ ನೆಕ್ಸ್ಟ್ ಪರೀಕ್ಷೆಯನ್ನು ಎದುರಿಸಬೇಕೆಂಬ ಪ್ರಸ್ತಾವದ ವಿರುದ್ಧ ವೈದ್ಯಕೀಯ ವಿದ್ಯಾರ್ಥಿಗಳೂ ಪ್ರತಿಭಟಿಸಿದರು. ಆಡಳಿತ ಪಕ್ಷದ ಹಿಂಬಾಲಕರಾಗಿದ್ದ ವೈದ್ಯರು ಮತ್ತವರ ಸಂಘಟನೆಗಳು ಒಳಗಿಂದೊಳಗೇ ಮಸೂದೆಯನ್ನು ಬೆಂಬಲಿಸಿದರು. ಪ್ರಚಂಡ ಕ್ರಾಂತಿಕಾರಿಗಳೆಂದು ಹೇಳಿಕೊಳ್ಳುವವರೂ ಕೂಡ ಮಸೂದೆಯ ಪರವಾಗಿ ವಾದಿಸಿದರು, ಭ್ರಷ್ಟ ಎಂಸಿಐಯನ್ನು ತೆಗೆಯುವುದಕ್ಕೆ ಸರಕಾರದ ಮುಷ್ಠಿಯೊಳಗಿನ ಎನ್‌ಎಂಸಿ ಬರಬೇಕೆಂದರು! ಕೋಮುವಾದಿ, ಸರ್ವಾಧಿಕಾರಿ ಆಡಳಿತದ ಹುನ್ನಾರಗಳನ್ನು ಅರಿಯುವಲ್ಲಿ ಎಡವಿದರೆ ಏನಾಗುತ್ತದೆ ಎನ್ನುವುದಕ್ಕೆ ಇದೊಂದು ಒಳ್ಳೆಯ ನಿದರ್ಶನವೇ ಆಗುತ್ತದೆ. ಈ ಮಸೂದೆಯು ಸಂಸತ್ತಿನ ಜಂಟಿ ಸಮಿತಿಯ ಮುಂದೆ ಹೋಗಿ 2019ರಲ್ಲಿ ಸಂಸತ್ತಿನ ಅನುಮೋದನೆಗೆ ಮಂಡನೆಯಾದಾಗ ಐಎಂಎ ಸುಮ್ಮನಾಯಿತು, ಅಷ್ಟರೊಳಗೆ ಐಎಂಎಯ ಹಲವು ಆಯಕಟ್ಟಿನ ಸ್ಥಾನಗಳಲ್ಲಿ ಸರಕಾರದ ಬೆಂಬಲಿಗರೇ ಕುಳಿತಾಗಿತ್ತು, ಪ್ರತಿಭಟನೆ ತಣ್ಣಗಾಗಿತ್ತು!

ಈ ನಡುವೆ 2017ರಲ್ಲಿ ಕೇಂದ್ರ ಸರಕಾರವು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಯನ್ನು ಪ್ರಕಟಿಸಿತು. ವೈದ್ಯಕೀಯ ಶಿಕ್ಷಣವನ್ನು ಖಾಸಗೀಕರಣಗೊಳಿಸುವುದರ ಜೊತೆಗೆ, ಆಧುನಿಕ ವೈದ್ಯ ವಿಜ್ಞಾನದ ಪಠ್ಯದಲ್ಲಿ ಆಯುರ್ವೇದ, ಯೋಗ ಇತ್ಯಾದಿಗಳನ್ನು ಕಲಬೆರಕೆ ಮಾಡುವ ಬಗ್ಗೆ ಅದರಲ್ಲೂ ಸ್ಪಷ್ಟವಾಗಿಯೇ ಹೇಳಲಾಗಿತ್ತು. ಇದರ ಅಪಾಯಗಳನ್ನು ಮನಗಂಡು ಪ್ರಶ್ನಿಸಿದವರನ್ನು ದೇಶದ್ರೋಹಿಗಳೆಂದು ಜರೆಯಲಾಯಿತು. ಐಎಂಎ ತೋರಿಕೆಗೊಂದು ಹೇಳಿಕೆ ನೀಡಿ ಸುಮ್ಮನಾಯಿತು, ಸರಕಾರದ ಬಾಲಬಡುಕ ವೈದ್ಯರು ಅದನ್ನು ಬೆಂಬಲಿಸಿದರು, ಆಯುರ್ವೇದ-ಯೋಗಗಳನ್ನು ಹೊಗಳುತ್ತಲೇ ಹೋದರು.

ಎನ್‌ಎಂಸಿ ಕಾಯಿದೆ ಅನುಮೋದನೆಗೊಂಡರೂ ಎನ್‌ಎಂಸಿಯನ್ನು ರಚಿಸುವುದಕ್ಕೆ ಸುಮಾರು ಒಂದು ವರ್ಷವೇ ಹಿಡಿಯಿತು, ಅಲ್ಲಿಯವರೆಗೆ ಸರಕಾರದ ಮರ್ಜಿಯೇ ನಡೆಯಿತು. ಚುನಾವಣೆಯಿಲ್ಲದೆ ಸರಕಾರವೇ ನೇಮಿಸಿದ ಎನ್‌ಎಂಸಿ ಸಮಿತಿಗಳ ಅಧ್ಯಕ್ಷರುಗಳು ಮತ್ತು ಸದಸ್ಯರಲ್ಲಿ ಹೆಚ್ಚಿನವರು ಗುಜರಾತ್ ಜೊತೆ ಅಥವಾ ಆಡಳಿತ ಪಕ್ಷದ ಪರಿವಾರದ ಜೊತೆ ನಿಕಟ ಸಂಬಂಧವಿದ್ದವರೇ ಆಗಿದ್ದರು. ಭಾರತದಲ್ಲಿ ಆಧುನಿಕ ವೈದ್ಯವಿಜ್ಞಾನವನ್ನು ಛಿದ್ರಗೊಳಿಸುವ ಕಾರ್ಯಸೂಚಿಯನ್ನು ಜಾರಿಗೆ ತರುವ ಕೆಲಸಕ್ಕೆ ಇವರು ತಡ ಮಾಡಲಿಲ್ಲ. ಬದುಕುವ ದಾರಿಗಾಗಿ ವೈದ್ಯ ವೃತ್ತಿಯಲ್ಲಿದ್ದರೂ ವೈದ್ಯ ವೃತ್ತಿಯ ಆದರ್ಶಗಳನ್ನು ಮೈಗೂಡಿಸಿಕೊಳ್ಳದೆ ಮತೀಯವಾದಿಗಳಾಗಿ, ಸಂಪ್ರದಾಯವಾದಿಗಳಾಗಿ ಉಳಿದಿರುವ ಅನೇಕ ವೈದ್ಯರುಗಳು ಈ ವಿಧ್ವಂಸಕಾರಿ ಕೆಲಸಕ್ಕೆ ಬೆಂಬಲ ನೀಡುತ್ತಲೇ ಹೋದರು.

ಎನ್‌ಎಂಸಿ ರಚನೆಯಾದ ಕೆಲವೇ ತಿಂಗಳಲ್ಲಿ ಎಂಬಿಬಿಎಸ್ ಪಠ್ಯವನ್ನು ಪರಿಷ್ಕರಿಸಿ, ಆಯುರ್ವೇದ, ಯೋಗಗಳನ್ನು ಸೇರಿಸಬೇಕೆಂದೂ, ವೈದ್ಯಕೀಯ ವಿದ್ಯಾರ್ಥಿಗಳು ಗಿಡಮೂಲಿಕೆಗಳನ್ನು ನೆಡಬೇಕೆಂದೂ, ಎಲ್ಲಾ ವೈದ್ಯಕೀಯ ಕಾಲೇಜುಗಳಲ್ಲಿ ಯೋಗ ದಿನಾಚರಣೆ ಮಾಡಬೇಕೆಂದೂ ಸೂಚಿಸಲಾಯಿತು. ಆಧುನಿಕ ವೈದ್ಯ ವಿಜ್ಞಾನದ ವಿದ್ಯಾರ್ಥಿಗಳಿಗೆ ಹಿಪಾಕ್ರಿಟಸ್ ಹೆಸರಲ್ಲಿರುವ ಆಧುನಿಕ ಪ್ರತಿಜ್ಞೆಯನ್ನು ಬೋಧಿಸುವುದನ್ನು ನಿಲ್ಲಿಸಿ, ಚರಕ ಶಪಥವನ್ನು ಬೋಧಿಸಬೇಕೆಂದು ಆದೇಶಿಸಲಾಯಿತು. ಆದರೆ ಎನ್‌ಎಂಸಿ ಸೂಚಿಸಿದ ಚರಕ ಶಪಥವು ಮೂಲ ಚರಕ ಶಪಥವಾಗಿರದೆ ಎನ್‌ಎಂಒ ಎಂಬ ಪರಿವಾರ ನಿಷ್ಠ ವೈದ್ಯಕೀಯ ಸಂಘಟನೆಯು ತಿರುಚಿದ್ದ ಶಪಥವಾಗಿತ್ತು. ಇದನ್ನು ನಾವು ಬಯಲಿಗೆಳೆದ ಬಳಿಕ ಚರಕ ಶಪಥದ ಕಥೆಯು ಅಲ್ಲಿಗೇ ಕಮರಿ ಹೋಯಿತು. ಆಧುನಿಕ ವೈದ್ಯ ಶಿಕ್ಷಣದ ಪಠ್ಯಪುಸ್ತಕಗಳನ್ನು ಹಿಂದಿಯಲ್ಲಿ ಒದಗಿಸುವುದೆಂಬ ನಾಟಕವೂ ಆಯಿತು, ವಾರದೊಳಗೆ ಠುಸ್ಸಾಗಿ ಹೋಯಿತು.

ಈ ಎನ್‌ಎಂಸಿ ಕಳೆದ ನಾಲ್ಕು ವರ್ಷಗಳಲ್ಲಿ ಮಾಡಿರುವ ಇತರ ಕೆಲಸಗಳಲ್ಲೂ ಹೆಚ್ಚಿನವು ಟೀಕೆಗೀಡಾಗಿವೆ ಮತ್ತು ಹಿಂಪಡೆಯಲ್ಪಟ್ಟಿವೆ! ಎಂಬಿಬಿಎಸ್ ಪಠ್ಯಕ್ರಮವನ್ನು ಪ್ರಕಟಿಸಿ ಬದಲಿಸಬೇಕಾಯಿತು. ಎಂಬಿಬಿಎಸ್ ಕೊನೆಗೆ ನೆಕ್ಸ್ಟ್ ಪರೀಕ್ಷೆ ನಡೆಸುವುದಾಗಿ ಘೋಷಿಸಿ, ಬಳಿಕ ರದ್ದು ಪಡಿಸಿ, ಆ ಬಳಿಕ ಮತ್ತೆ ಎರಡೆರಡು ಪರೀಕ್ಷೆಗಳನ್ನು ನಡೆಸಲಾಗುವುದೆಂದು ಹೇಳಲಾಯಿತು. ವೈದ್ಯಕೀಯ ಆಯೋಗದಡಿಯಲ್ಲಿ ಎಲ್ಲಾ ವೈದ್ಯರ ನೋಂದಾವಣೆ ಮತ್ತು ಆಯಾ ರಾಜ್ಯಗಳಲ್ಲಿ ವೃತ್ತಿ ನಡೆಸುವ ಪರವಾನಿಗೆಯ ಬಗ್ಗೆ ನಿಯಮಗಳನ್ನು ಮಾಡಲಾಯಿತು, ಹೊಸ ವೃತ್ತಿ ಸಂಹಿತೆಯನ್ನೂ ಪ್ರಕಟಿಸಲಾಯಿತು, ನಾವು ಸಕಾರಣವಾಗಿ ವಿರೋಧಿಸಿದಾಗ ಅವನ್ನು ಹಿಂಪಡೆಯಲಾಯಿತು. 

ಈಗಾಗಲೇ ಇರುವ ಭಾರತೀಯ ವೈದ್ಯರ ದಾಖಲೆಯ (ಐಎಂಆರ್) ಬದಲಿಗೆ ರಾಷ್ಟ್ರೀಯ ವೈದ್ಯರ ದಾಖಲೆ (ಎನ್‌ಎಂಆರ್) ಮಾಡುವುದಾಗಿಯೂ, ದೇಶದ ಎಲ್ಲಾ ವೈದ್ಯರಿಗೆ ವಿಶಿಷ್ಟ ಗುರುತು ಸಂಖ್ಯೆ ನೀಡುವುದಾಗಿಯೂ ದೊಡ್ಡದಾಗಿ ಘೋಷಿಸಿ ಒಂದೂವರೆ ವರ್ಷದ ಬಳಿಕ ಅದಕ್ಕೊಂದು ಜಾಲತಾಣವನ್ನು ಇದೇ ಆಗಸ್ಟ್ ನಲ್ಲಿ ಎನ್‌ಎಂಸಿ ಪ್ರಕಟಿಸಿತು; ಅದರಲ್ಲಿ ನೋಂದಾಯಿಸಲು ವೈದ್ಯನ ಆಧಾರ್ ಸಂಖ್ಯೆಯನ್ನು ಜೋಡಿಸುವ ವ್ಯವಸ್ಥೆಯನ್ನು ಮಾಡಿತು. ಐದು ವರ್ಷಗಳ ಹಿಂದೆ ಸರಕಾರವು ಆರಂಭಿಸಿದ, ಜನರ ಆರೋಗ್ಯ ಮಾಹಿತಿಯನ್ನು ಸಂಗ್ರಹಿಸುವ ರಾಷ್ಟ್ರೀಯ ಆರೋಗ್ಯ ಗುರುತಿನ ಯೋಜನೆಗೆ ಹೆಚ್ಚಿನ ವೈದ್ಯರು ನೋಂದಾಯಿಸದೇ ಇದ್ದುದರಿಂದ ಈ ಎನ್‌ಎಂಆರ್ ಮೂಲಕ ವೈದ್ಯರ ಆಧಾರ್ ನೋಂದಾಯಿಸುವುದಕ್ಕೆ ಈ ಎನ್‌ಎಂಆರ್ ಉಪಾಯವನ್ನು ಮಾಡಿದ್ದಿರಬಹುದು. ವೈದ್ಯರ ನೋಂದಣಿಗೆ ಆಧಾರ್ ಜೋಡಣೆ ಮಾಡುವುದಕ್ಕೆ ಕಾನೂನಿನ ಮಾನ್ಯತೆ ಇಲ್ಲದಿರುವುದರಿಂದ ನಾವು ಇದನ್ನು ವಿರೋಧಿಸಿದೆವು, ನೋಂದಾಯಿಸದೆ ಉಳಿದೆವು. ಈ ಯೋಜನೆ ಆರಂಭಗೊಂಡು ನಾಲ್ಕು ತಿಂಗಳಲ್ಲಿ ದೇಶದ ಹನ್ನೆರಡು ಲಕ್ಷ ವೈದ್ಯರಲ್ಲಿ ಕೇವಲ 6500 ವೈದ್ಯರಷ್ಟೇ ನೋಂದಾಯಿಸಿದ್ದು, ಅವರಲ್ಲಿ ಕೇವಲ 280 ವೈದ್ಯರ ನೋಂದಣಿಯನ್ನು ಮಾತ್ರವೇ ಧೃಢೀಕರಿಸಲು ಸಾಧ್ಯವಾಗಿದೆ. ದಶಕಗಳ ಹಿಂದೆ ರಾಜ್ಯ ವೈದ್ಯಕೀಯ ಪರಿಷತ್ತುಗಳಲ್ಲಿ ಮಾಡಿದ್ದ ನೋಂದಣಿಗಳಲ್ಲಿರುವ ಹೆಸರುಗಳು ಇತ್ತೀಚೆಗೆ ಮಾಡಿರುವ ಆಧಾರ್ ಚೀಟಿಗಳಲ್ಲಿರುವ ಹೆಸರುಗಳೊಂದಿಗೆ ತಾಳೆಯಾಗದಿರುವುದು, ಆಗ ಪದವಿ ನೀಡಿದ್ದ ವಿಶ್ವವಿದ್ಯಾನಿಲಯಗಳು ಈಗ ಆರೋಗ್ಯ ಅಥವಾ ವೈದ್ಯಕೀಯ ಪದವಿಗಳನ್ನು ನೀಡದೇ ಇರುವುದರಿಂದ ಅವುಗಳ ಹೆಸರುಗಳೇ ಎನ್ಎಂಸಿಗೆ ಗೊತ್ತಿಲ್ಲದೆ ಆ ವಿವಿಗಳು ಕೊಟ್ಟ ಪದವಿಗಳನ್ನು ಎನ್ಎಂಸಿಗೆ ಗುರುತಿಸಲಾಗದಿರುವುದು, ಇವನ್ನು ‘ಸರಿಪಡಿಸಲು’ ಎನ್ಎಂಸಿಯು ವೈದ್ಯರಿಂದ ಅಫಿಡವಿಟ್ ಕೇಳುತ್ತಿರುವುದು, ಇಷ್ಟೆಲ್ಲ ಮಾಡಿಯೂ ನೋಂದಣಿ ದೃಢೀಕರಿಸಲು ಸಾಧ್ಯವಾಗದಿರುವುದು ಹೀಗೆ ಎಲ್ಲವೂ ಸೇರಿ ಈ ಎನ್ಎಂಆರ್ ಯೋಜನೆಯು ಹುಟ್ಟುತ್ತಲೇ ಸತ್ತಂತಾಗಿದೆ. ನೋಟು ರದ್ದತಿಯಿಂದ ತೊಡಗಿ ಎಲ್ಲವನ್ನೂ ಛಿದ್ರಗೊಳಿಸಲು ಹೊರಟು ಸಂಪೂರ್ಣವಾಗಿ ವಿಫಲಗೊಂಡ ಭಂಡ ಯೋಜನೆಗಳಲ್ಲಿ ಇದೂ ಸೇರಿಯಾಗಿದೆ. ಎನ್‌ಎಂಸಿ ಅಧ್ಯಕ್ಷರಂತೂ ಒಂದನೇ ಸಂಖ್ಯೆಯ ಎನ್‌ಎಂಆರ್ ನೋಂದಣಿಯನ್ನು ಮಾಡಿಕೊಂಡಿದ್ದು, 1978ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಪದವಿಯನ್ನು ಪಡೆದಿದ್ದುದನ್ನು ತೋರಿಸಲಾಗದೆ, ಆಗ ಅಸ್ತಿತ್ವದಲ್ಲೇ ಇಲ್ಲದಿದ್ದ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಿಂದ ಪಡೆದದ್ದೆಂದು ನೋಂದಾಯಿಸಿಕೊಂಡಿದ್ದಾರೆ!

ಹೀಗೆ, ಭಾರೀ ಪ್ರಚಾರದೊಂದಿಗೆ ತಂದ, ಪ್ರಚಂಡ ಕ್ರಾಂತಿಕಾರಿಗಳೂ ಬೆಂಬಲಿಸಿದ ಎನ್‌ಎಂಸಿ ಗೊಂದಲದ ಗೂಡಾಗಿದೆ, ಯಾವುದನ್ನೂ ಸರಿಯಾಗಿ ಮಾಡಲಾಗದೆ ರೋಗಪೀಡಿತವಾಗಿದೆ. ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸೇರಿದಂತೆ ಇಪ್ಪತ್ತು ಸದಸ್ಯರಿರಬೇಕಾದ ಎನ್ಎಂಸಿಯಲ್ಲಿ ಈಗ ಕೇವಲ ಮೂರೇ ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರೆ ಬಲ-ಎಡಗಳ ಉಗ್ರ ಪ್ರತಿಪಾದಕರು ಜೊತೆಯಾಗಿ ಸಮರ್ಥಿಸಿದ್ದ ಈ ಎನ್ಎಂಸಿಯ ಗತಿ ಏನಾಗಿದೆ ಎಂದು ಸ್ಪಷ್ಟವಾಗುತ್ತದೆ. ಮತೀಯವಾದಿ ಪಕ್ಷದ ಸರಕಾರದ ಕಾರ್ಯಸೂಚಿಯ ದೂರಗಾಮಿ ಪರಿಣಾಮಗಳನ್ನು ಮುಂಗಾಣದೆ ಬೆಂಬಲಿಸುವ ಪ್ರಚಂಡ ಕ್ರಾಂತಿಕಾರಿಗಳ ದಿವಾಳಿತನವೂ ಸ್ಪಷ್ಟವಾಗುತ್ತದೆ.

ದುಡ್ಡಿನ ಮರ್ಜಿಯಲ್ಲಿ ನಲುಗುತ್ತಿರುವ ವೈದ್ಯಕೀಯ ಶಿಕ್ಷಣ

ವೈದ್ಯಕೀಯ ವೃತ್ತಿಯನ್ನು ನಿಯಂತ್ರಿಸುವ ಸ್ವಾಯತ್ತ, ಚುನಾಯಿತ ಸಂಸ್ಥೆಯನ್ನು ಕೇಂದ್ರ ಸರಕಾರದ ಮುಷ್ಟಿಯೊಳಗಾಗಿಸಿ, ನಿತ್ರಾಣಗೊಳಿಸಿ, ಕಾರ್ಪರೇಟ್ ಹಾಗೂ ಲಾಭಕೋರರ ಅಡಿಯಾಳಾಗಿಸಿದ ಕಾರಣಕ್ಕೆ ಇಂದು ದೇಶದಲ್ಲಿ ವೈದ್ಯಕೀಯ ಶಿಕ್ಷಣವು ಅಧೋಗತಿಗಿಳಿದಿದೆ. ಮೋದಿ ಸರಕಾರವು ಅಧಿಕಾರಕ್ಕೆ ಬಂದ ಮರುವರ್ಷವೇ ನೀಟ್ ಪರೀಕ್ಷೆಗಳಲ್ಲಿ ಎಂಬಿಬಿಎಸ್ ಪ್ರವೇಶಕ್ಕೆ ಅರ್ಹತಾ ಮಾನದಂಡವನ್ನು ಆ ಮೊದಲಿದ್ದ ಶೇಕಡಾ 50 ಅಂಕಗಳ ಬದಲಿಗೆ ಅಭ್ಯರ್ಥಿಗಳ ಶೇಕಡಾವಾರು (ಪರ್ಸೆಂಟೈಲ್) ಎಂದು ಬದಲಿಸಲಾಯಿತು. ಇದರೊಂದಿಗೆ ಪರೀಕ್ಷೆ  ಬರೆದವರಲ್ಲಿ ಮೇಲಿನರ್ಧದ ಅಭ್ಯರ್ಥಿಗಳು ಎಷ್ಟೇ ಅಂಕಗಳಿದ್ದರೂ ಪ್ರವೇಶ ಪಡೆಯಲು ಅರ್ಹರಾಗುವಂತಾಯಿತು, ಹೀಗೆ ‘ಅರ್ಹಗೊಳಿಸಲಾದ’ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಿದಾಗ ಖಾಸಗಿ ಕಾಲೇಜುಗಳ ಶುಲ್ಕವೂ ದುಪ್ಪಟ್ಟಾಯಿತು. ಮರುವರ್ಷವೇ ಈ 50ರಲ್ಲೂ ಹಣಕೊಟ್ಟು ಸೀಟು ಪಡೆಯುವವರು ದಕ್ಕದಿದ್ದಾಗ ಮಾನದಂಡವನ್ನೇ 45ಕ್ಕಿಳಿಸಲಾಯಿತು. ನಂತರ, ಸುಪರ್ ಸ್ಪೆಷಾಲಿಟಿ ಪ್ರವೇಶಕ್ಕೆ ಕೋಟಿಗಟ್ಟಲೆ ಕೊಟ್ಟು ಸೇರುವ ವಿದ್ಯಾರ್ಥಿಗಳು ಇಲ್ಲದಾದಾಗ ಅದರ ಅರ್ಹತೆಯನ್ನು ಸೊನ್ನೆಗಿಳಿಸಲಾಯಿತು, ಪರೀಕ್ಷೆ  ಬರೆದರಷ್ಟೇ ಸಾಕು, ಪ್ರವೇಶ ಪಡೆಯಬಹುದು ಎಂದಾಯಿತು. ಕಳೆದೆರಡು ವರ್ಷಗಳಲ್ಲಿ ಎಂಡಿ/ಎಂಎಸ್ ಸ್ನಾತಕೋತ್ತರ ಪ್ರವೇಶಾತಿಗೆ ಕೋಟಿಗಟ್ಟಲೆ ಕೊಡುವವರು ಸಿಗದಾಗ ಪಿಜಿ ನೀಟ್ ಅರ್ಹತೆಯನ್ನೂ ಸೊನ್ನೆಗಿಳಿಸಲಾಯಿತು. ಇದನ್ನು ಹೀಗೆ ಸೊನ್ನೆಗಿಳಿಸಬೇಕೆಂದು ಭಾರತೀಯ ವೈದ್ಯಕೀಯ ಸಂಘವೇ (ಐಎಂಎ) ಸರಕಾರಕ್ಕೆ ಬರೆಯಿತು, ಹಾಗೆ ಇಳಿಸಿದಾಗ ಪ್ರಧಾನಿ, ಗೃಹ ಸಚಿವರ ಪಟ ಹಾಕಿ ಧನ್ಯವಾದ ಹೇಳಿತು. ಇದಿನ್ನು ಶಾಶ್ವತವಾದ ನಿಯಮವೇ ಆಗಬಹುದು. 

ಈ ವೈದ್ಯಕೀಯ ಸಂಘಟನೆಗಳು ಹೀಗೆ ಎಂಬಿಬಿಎಸ್‌ನಿಂದ ಹಿಡಿದು ಎಂಸಿಎಚ್/ಡಿಎಂವರೆಗೆ ಎಲ್ಲಾ ವೈದ್ಯಕೀಯ ವ್ಯಾಸಂಗಕ್ಕೂ ಸೊನ್ನೆ ಅಂಕ ಪಡೆದರೂ ಸಾಕು, ದುಡ್ಡು ಕೊಟ್ಟು ಸೇರಿಕೊಳ್ಳುವಂತಾಗಬೇಕು ಎಂದು ಒತ್ತಾಯಿಸುವುದರ ಹಿಂದೆ ಖಾಸಗಿ ಕಾಲೇಜುಗಳ ಹಿತರಕ್ಷಣೆಯಷ್ಟೇ ಅಲ್ಲ, ಸಾಮಾಜಿಕ ನ್ಯಾಯವನ್ನು ಸೋಲಿಸುವ ದುಷ್ಟತನವೂ ಅಡಕವಾಗಿದೆ. ವೈದ್ಯಕೀಯ ಆಯೋಗ/ಪರಿಷತ್ತಿನ ವೈದ್ಯಕೀಯ ಶಿಕ್ಷಣದ ನಿಯಮಗಳನುಸಾರ, ಕೇವಲ ನೀಟ್ ಅಂಕಗಳಷ್ಟೇ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗೆ ಅರ್ಹತೆಯಾಗಿರಬೇಕು, ಖಾಸಗಿ ಕಾಲೇಜುಗಳ ಶೇ. 50ರಷ್ಟು ಸೀಟುಗಳು ಸರಕಾರಿ ಕೋಟಾದಡಿಯಲ್ಲಿರಬೇಕು, ಖಾಸಗಿ ಹಾಗೂ ಸರಕಾರಿ ಕಾಲೇಜುಗಳ ಎಲ್ಲಾ ಸೀಟುಗಳ ಕೌನ್ಸೆಲಿಂಗ್ ಸರಕಾರಿ ಸಂಸ್ಥೆಗಳ ಮೂಲಕವೇ ಆಗಬೇಕು, ಅನಿವಾಸಿ ಭಾರತೀಯರ ಕೋಟದಡಿಯಲ್ಲಿ ನಿಜವಾಗಿ ಅನಿವಾಸಿಗಳಾದವರಷ್ಟೇ ಸೀಟು ಪಡೆಯಬೇಕು, ಅನಿವಾಸಿ ಕೋಟಾ ಸೆರಿದಂತೆ ಎಲ್ಲಾ ಕೋಟಾಗಳಡಿಯಲ್ಲಿ ಖಾಸಗಿ ಕಾಲೇಜುಗಳಲ್ಲಿ ಭರ್ತಿಯಾಗದೇ ಉಳಿಯುವ ಸೀಟುಗಳೆಲ್ಲವೂ ಕೊನೆಯ ಸುತ್ತಿನಲ್ಲಿ ಸರಕಾರಿ ಕೋಟಾದಡಿಯಲ್ಲಿ, ಸಾಮಾಜಿಕ ನ್ಯಾಯದ ಎಲ್ಲಾ ಶರತ್ತುಗಳಿಗೆ ಅನ್ವಯವಾಗಿಯೇ, ಕೌನ್ಸೆಲಿಂಗ್‌ಗೆ ಒಳಪಡಬೇಕು. ಇದನ್ನು ಕರ್ನಾಟಕ, ತಮಿಳುನಾಡು ಮತ್ತಿತರ ರಾಜ್ಯಗಳ ಉಚ್ಚ ನ್ಯಾಯಾಲಯಗಳು, ಮತ್ತೀಗ ಸರ್ವೋಚ್ಛ ನ್ಯಾಯಾಲಯವೂ ಕೂಡ, ಎತ್ತಿ ಹಿಡಿದು ಆದೇಶಿಸಿವೆ. ಅಂತಲ್ಲಿ, ಐಎಂಎ ಮತ್ತಿತರ ಸಂಘಟನೆಗಳು ಅರ್ಹತಾ ಮಾನದಂಡವನ್ನು ಸೊನ್ನೆಗೆ ಇಳಿಸಲು ಕೇಳುವುದು, ಸರಕಾರವು ಅದನ್ನು ಜಾರಿಗೊಳಿಸುವುದು ಎಂದರೆ ನಿಯಮಾನುಸಾರ ಅರ್ಹತೆಯನ್ನು ಪಡೆದವರು ಖಾಸಗಿ ಕಾಲೇಜುಗಳಲ್ಲಿ ಕೋಟಿಗಟ್ಟಲೆ ಕೊಡಲಾಗದೆ ಬಾಕಿ ಉಳಿಯುವ ಸೀಟುಗಳನ್ನು ಸರಕಾರಿ ಕೋಟಾಕ್ಕೆ ಮರಳಿಸಿ ಉತ್ತಮ ಅಂಕಗಳನ್ನು ಪಡೆದಿರುವವರಿಗೆ ಮೀಸಲಾತಿಗನ್ವಯ ಹಂಚುವುದಕ್ಕೆ ಅವಕಾಶ ನೀಡಬಾರದು, ಬದಲಿಗೆ ಕೋಟಿಗಟ್ಟಲೆ ಕೊಡಬಲ್ಲ ಸೊನ್ನೆ ಅಂಕದವರಿಗೆ ಕೊಡುವಂತಾಗಬೇಕು ಎನ್ನುವ ಹುನ್ನಾರವೆಂದೇ ತಿಳಿಯಬೇಕಾಗುತ್ತದೆ. ಕರ್ನಾಟಕದಲ್ಲಿ ಸ್ನಾತಕೋತ್ತರ ವೈದ್ಯಕೀಯ ವ್ಯಾಸಂಗಕ್ಕೆ ಪ್ರವೇಶಾತಿಗೆ ಈ ಎಲ್ಲಾ ಸಮಸ್ಯೆಗಳಿದ್ದುದರ ಜೊತೆಗೆ, ಕೇವಲ 5 ವರ್ಷ ಕರ್ನಾಟಕದಲ್ಲಿದ್ದವರನ್ನೂ ನಿವಾಸಿಗಳೆಂದು ಪರಿಗಣಿಸಬೇಕೆಂಬ ನಿಯಮ ಮಾಡಲಾಗಿದ್ದನ್ನು ಮನಗಂಡು 2017ರಲ್ಲಿ ಅದರ ವಿರುದ್ಧ ನ್ಯಾಯಾಲಯದಲ್ಲೂ, ಹೊರಗೂ ಹೋರಾಟವನ್ನು ಆರಂಭಿಸಿದ್ದಾಗ, ಕೇವಲ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳನ್ನು ಬಿಟ್ಟರೆ ಹೆಚ್ಚಿನವರು ದೂರವೇ ಉಳಿದಿದ್ದರು, ಕನ್ನಡಿಗ ವಿದ್ಯಾರ್ಥಿಗಳೂ ಸೇರಿದಂತೆ ಅನೇಕರು ಕನ್ನಡಿಗರಿಗೆ ನ್ಯಾಯಕ್ಕಾಗಿ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವುದನ್ನು ವಿರೋಧಿಸಿದ್ದರು; ಸಾಲ ಮಾಡಿ ಖಾಸಗಿ ಕಾಲೇಜುಗಳಿಗೆ ದುಡ್ಡು ಕೊಟ್ಟರೂ ಆಗಬಹುದು, ಆ ಸೀಟುಗಳನ್ನು ಸರಕಾರಿ ಕೋಟಾಕ್ಕೆ ತಂದು ಅರ್ಧಕ್ಕರ್ಧ ಮೀಸಲಾತಿಗೆ ಕೊಡುವುದು ಬೇಡವೇ ಬೇಡ ಎನ್ನುವುದು ಅವರ ವಾದವಾಗಿತ್ತು. ವಿಶೇಷವೆಂದರೆ, ಪ್ರಚಂಡ ಕ್ರಾಂತಿಕಾರಿಗಳು, ದಲಿತ ಸಂಘಟನೆಗಳು ನಡೆಸುವ ವಿದ್ಯಾರ್ಥಿ ಸಂಘಟನೆಗಳು ಕೂಡ ಈ ಹೋರಾಟದತ್ತ ನಿರಾಸಕ್ತವಾಗಿದ್ದವು.

ಈ ಹಿಂದೆ ಇದ್ದ ಎಂಸಿಐಯು ಖಾಸಗಿ ವೈದ್ಯಕೀಯ ಕಾಲೇಜುಗಳ ಸ್ಥಾಪನೆಯ ವಿಷಯದಲ್ಲಿ ವಿಪರೀತ ಭ್ರಷ್ಟಾಚಾರ ನಡೆಸುತ್ತಿದೆ ಎಂಬ ಆರೋಪವನ್ನು ಮುಂದಿಟ್ಟು ಎಂಸಿಐ ಬದಲಿಗೆ ಎನ್ಎಂಸಿಯನ್ನು ತರಲಾಗಿತ್ತು, ಇದೇ ನೆಪವೊಡ್ಡಿ ಪ್ರಚಂಡ ಕ್ರಾಂತಿಕಾರಿಗಳು ಅದನ್ನು ಬೆಂಬಲಿಸಿದ್ದರು. ಆದರೆ ಎನ್ಎಂಸಿ ಬಂದ ಮೇಲೆ ವಾರಕ್ಕೆರಡು ಖಾಸಗಿ ಕಾಲೇಜುಗಳು ಯಾವುದೇ ಸೌಲಭ್ಯಗಳಿಲ್ಲದೆಯೂ ತೆರೆಯಲ್ಪಡುವಂತಾಗಿದೆ. ಮೇಲೆ ಹೇಳಿದಂತೆ ಹೊಸ ಕಾಲೇಜುಗಳ ಮೌಲ್ಯಮಾಪನ ಮಾಡಬೇಕಾದ ಎನ್ಎಂಸಿಯ ಮಂಡಳಿಯಲ್ಲಿ ಐದು ಸದಸ್ಯರಿರಬೇಕಿರುವಲ್ಲಿ ಒಬ್ಬನೇ ಒಬ್ಬನಿಲ್ಲ. ಹಾಗಿರುವಾಗ ಈ ಹೊಸ ಕಾಲೇಜುಗಳಿಗೆ ಪರವಾನಿಗೆಯನ್ನು ಕೊಡುತ್ತಿರುವವರಾರು? ಎಂಸಿಐ ಮೇಲೆ ಹರಿಹಾಯ್ದಿದ್ದ ಪ್ರಚಂಡ ಕ್ರಾಂತಿಕಾರಿಗಳು, ರಾಜಕಾರಣಿಗಳು, ನ್ಯಾಯಾಲಯಗಳು ಈಗ ತೆಪ್ಪಗಿರುವುದೇಕೆ? ಭಾರತದಲ್ಲಿ ಈಗ ಸಾವಿರ ಜನಸಂಖ್ಯೆಗೆ ಒಬ್ಬ ವೈದ್ಯನಿರಬೇಕೆಂಬ ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡವನ್ನು ಭಾರತವು ಮೀರಿದ್ದು, ಈಗ ಇಲ್ಲಿ 700 ಜನರಿಗೊಬ್ಬ ವೈದ್ಯನಿದ್ದಾನೆ ಎಂದು ಸಂಸತ್ತಿನಲ್ಲೇ ಹೇಳಿಕೊಳ್ಳುತ್ತಿರುವ ಸರಕಾರವು ಇತ್ತ ಮೂಲೆಮೂಲೆಗೆ ಅನಿಯಂತ್ರಿತವಾಗಿ ವೈದ್ಯಕೀಯ ಕಾಲೇಜುಗಳನ್ನು ಮಂಜೂರು ಮಾಡುತ್ತಿರುವುದೇಕೆ?

ಕಲಬೆರಕೆಯಿಂದ ಮಾನಗೆಡುತ್ತಿರುವ ವೈದ್ಯವಿಜ್ಞಾನ

ಆಧುನಿಕ ವೈದ್ಯವಿಜ್ಞಾನವನ್ನು ಕೆಡಿಸಿ ಆಯುರ್ವೇದ, ಯೋಗಗಳನ್ನು ಮುಂದೊತ್ತುವ ಕಾರ್ಯತಂತ್ರವು ದೊಡ್ಡದಾಗಿಯೇ ಜಾರಿಯಾಗುತ್ತಿದೆ. ಎಂಬಿಬಿಎಸ್ ಪಠ್ಯಪುಸ್ತಕಗಳಲ್ಲಿ ಆಯುರ್ವೇದ, ಯೋಗಗಳನ್ನು ಈಗಾಗಲೇ ಸೇರಿಸಿ ಆಗಿದೆ, ಇಂಥ ಪುಸ್ತಕಗಳನ್ನು ರಚಿಸುವ ಭಾರತೀಯ ವೈದ್ಯರು ಎನ್‌ಎಂಸಿಯ ವಿಚ್ಛಿದ್ರಕಾರಿ ಕಲಬೆರಕೆ ನೀತಿಯನ್ನು ಒಪ್ಪಿರುವುದು ಅಥವಾ ಬೆಂಬಲಿಸುತ್ತಿರುವುದು ಇದರಿಂದ ಸ್ಪಷ್ಟವಾಗಿದೆ. ದೇಶದ ಅತ್ಯಂತ ಪ್ರತಿಷ್ಠಿತವಾದ, ವಿಶ್ವಮನ್ನಣೆಯ ವೈದ್ಯಕೀಯ ಸಂಸ್ಥೆಗಳಾದ ಬೆಂಗಳೂರಿನ ನಿಮ್ಹಾನ್ಸ್, ದೆಹಲಿಯ ಎಐಐಎಂಎಸ್ ಗಳಲ್ಲಿ ಆಧುನಿಕ ವೈದ್ಯವಿಜ್ಞಾನದ ಸಂಶೋಧನೆಗಳಿಗೆ ಉತ್ತೇಜನ ಕಡಿಮೆಯಾಗುತ್ತಿದ್ದು, ಅಲ್ಲಿನ ಅನೇಕ ಸಂಶೋಧಕರನ್ನು ಆಯುರ್ವೇದ-ಯೋಗಗಳಲ್ಲಿ ಅಧ್ಯಯನ ನಡೆಸುವುದಕ್ಕೆ ತರಬೇತಿ ಪಡೆಯುವಂತೆ ಒತ್ತಡ ಹೇರಲಾಗುತ್ತಿದೆ, ಸಂಶೋಧನಾ ಕಾರ್ಯಗಳಿಗೆ ಅನುದಾನ ಬೇಕಿದ್ದರೆ ಬೇರೆ ದಾರಿಯಿಲ್ಲದಂತೆ ಅವನ್ನು ಕಡ್ಡಾಯಗೊಳಿಸಲಾಗುತ್ತಿದೆ. ಈ ಸಂಸ್ಥೆಗಳಲ್ಲೂ, ಇತರ ಹಲವಾರು ಉನ್ನತ ಸಂಶೋಧನಾ ಸಂಸ್ಥೆಗಳಲ್ಲೂ ಆಯುರ್ವೇದ, ಯೋಗಗಳ ಅಧ್ಯಯನಗಳನ್ನೇ ಹೇರಲಾಗುತ್ತಿದೆ. 

ನಿಮ್ಹಾನ್ಸ್ ನಲ್ಲಂತೂ ಪರಿವಾರದವರೊಬ್ಬರು ನಿರ್ದೇಶಕರಾಗಿದ್ದಾಗ ಯೋಗ ಕೇಂದ್ರವನ್ನು ಸ್ಥಾಪಿಸಿ, ಮಾನಸಿಕ ಆರೋಗ್ಯಕ್ಕೆ ಯೋಗಾಭ್ಯಾಸ ಎಂಬುದನ್ನು ದೊಡ್ಡದಾಗಿ ಪ್ರಚಾರ ಮಾಡಲು ಆರಂಭಿಸಲಾಯಿತು. ಕಳೆದ ಐದಾರು ದಶಕಗಳಲ್ಲಿ ಮಾನಸಿಕ ಆರೋಗ್ಯದ ಮೇಲೆ ಯೋಗಾಭ್ಯಾಸದ ಪರಿಣಾಮಗಳ ಬಗ್ಗೆ ಸಾವಿರಾರು ಅಧ್ಯಯನಗಳಾಗಿದ್ದರೂ, ಯೋಗಾಭ್ಯಾಸದಿಂದ ಯಾವುದೇ ಮಾನಸಿಕ ಸಮಸ್ಯೆಗೆ ಖಚಿತವಾದ ಸಹಾಯವಾಗುತ್ತದೆ ಎನ್ನುವುದಕ್ಕೆ ಒಂದೇ ಒಂದು ಪುರಾವೆಯೂ ದೊರೆತಿಲ್ಲ. ಹಾಗಿದ್ದರೂ, ಮಾನಸಿಕ ಸಮಸ್ಯೆಗಳೀಗೆ ಯೋಗಾಭ್ಯಾಸವನ್ನು ನಡೆಸಬೇಕೆಂಬುದನ್ನು ನಿಮ್ಹಾನ್ಸ್ ಹೆಸರಲ್ಲಿ ಅಲ್ಲಲ್ಲಿ ಹೇಳಲಾಗುತ್ತಿರುವುದು ಆ ಸಂಸ್ಥೆಗಷ್ಟೇ ಅಲ್ಲ, ಮಾನಸಿಕ ಸಮಸ್ಯೆಗಳುಳ್ಳವರಿಗೂ ಮಾಡುತ್ತಿರುವ ಅಪಚಾರವಾಗಿದೆ. ನಮ್ಮ ರಾಜ್ಯ ಸರಕಾರವು ರಾಷ್ಟ್ರೀಯ ಪಠ್ಯಕ್ರಮ ನಿರೂಪಣೆಗಾಗಿ ರಚಿಸಿದ್ದ ಸಲಹಾ ಸಮಿತಿಗಳಲ್ಲಿ ಒಂದಕ್ಕೆ ನಿಮ್ಹಾನ್ಸ್ ನ ಮಕ್ಕಳ ಮಾನಸಿಕ ಆರೋಗ್ಯ ವಿಭಾಗದ ಮುಖ್ಯಸ್ಥರನ್ನು ಅಧ್ಯಕ್ಷರೆಂದು ನೇಮಿಸಲಾಗಿತ್ತು; ಈ ಸಮಿತಿಯು ಮಕ್ಕಳಿಗೆ ಯೋಗಾಭ್ಯಾಸ, ಧ್ಯಾನ, ಮಂತ್ರಪಠಣ ಇತ್ಯಾದಿಗಳಿಂದ ಪ್ರಯೋಜನಗಳಾಗುತ್ತದೆಯೆಂದೂ, ಮೊಟ್ಟೆ-ಮಾಂಸಗಳಿಂದ ಹಾನಿಯಾಗುತ್ತದೆಂದೂ ತೀರಾ ಆಧಾರರಹಿತವಾದ, ಅಸಂಬದ್ಧವಾದ ವರದಿಯನ್ನು ನೀಡಿತ್ತು. ನಾವು ಇದಕ್ಕೆ ತೀವ್ರವಾದ ಆಕ್ಷೇಪಗಳನ್ನು ಸಲ್ಲಿಸಿದ್ದೆವು, ಆ ವರದಿಯು ಅಲ್ಲಿಗೇ ಕಾಣೆಯಾಯಿತು. ಈಗ ನಿಮ್ಹಾನ್ಸ್ ನಲ್ಲಿ ಆಯುರ್ವೇದ, ನಾಚುರೋಪತಿ, ಯೋಗ ಪದವೀಧರರಿಗೂ ಪಿಎಚ್‌ಡಿ ವ್ಯಾಸಂಗಕ್ಕೆ ಅವಕಾಶ ನೀಡುವ ಪ್ರಕಟಣೆಯು ಹೊರಬಿದ್ದಿದೆ. ಹೀಗೆ ನಿಮ್ಹಾನ್ಸ್ ನ ಹೆಸರಲ್ಲಿ ಇಂತಹ ಅಸಂಬದ್ಧವಾದ ಕೆಲಸಗಳನ್ನು ಮಾಡುವುದರಿಂದ ಆ ಸಂಸ್ಥೆಯ ಪ್ರತಿಷ್ಠೆಯನ್ನೇ ಮಣ್ಣುಪಾಲು ಮಾಡಲಾಗುತ್ತಿದೆ, ಅಲ್ಲಿನ ಹಿರಿಯ ತಜ್ಞರೂ ಕೂಡ ಇವಕ್ಕೆಲ್ಲ ಸುಮ್ಮನಿರುವುದು ನಿಜಕ್ಕೂ ಆಘಾತಕಾರಿಯಾಗಿದೆ.

ವೈದ್ಯಕೀಯ ಶಿಕ್ಷಣ ಹಾಗೂ ವೃತ್ತಿಯನ್ನು ನಿಯಂತ್ರಿಸುವ ಸ್ವಾಯತ್ತ ಸಂಸ್ಥೆಯನ್ನು ಸರಕಾರದ ಮುಷ್ಟಿಯೊಳಗಾಗಿಸಿ, ಆಧುನಿಕ ವೈದ್ಯಕೀಯ ಶಿಕ್ಷಣದಲ್ಲಿ ಯೋಗ-ಆಯುರ್ವೇದಗಳನ್ನು ಕಲಬೆರಕೆ ಮಾಡಿ ಸಾವಿರಾರು ವರ್ಷ ಹಿಂದಕ್ಕೆ ತಳ್ಳಿ, ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಸೊನ್ನೆ ಅಂಕಗಳಿದ್ದವರಿಗೂ ಕೋಟಿಗಟ್ಟಲೆ ಕೊಟ್ಟು ಸೇರುವುದಕ್ಕೆ ಅವಕಾಶ ನೀಡಿ, ಅಂತಹ ಕಾಲೇಜುಗಳು ಅನಿಯಂತ್ರಿತವಾಗಿ ನೂರುಗಟ್ಟಲೆಯಾಗುವಂತೆ ಮಾಡಿ, ಒಂದೇ ಒಂದು ಶಸ್ತ್ರಕ್ರಿಯೆಯನ್ನೇ ನಡೆಸದೆಯೂ ಎಂಎಸ್ ಪದವಿ ಪಡೆಯುವಂತೆ ಮಾಡಿ,

ಈಗೊಂದು ದಶಕದ ಹಿಂದಿನವರೆಗೂ ವಿಶ್ವಮಾನ್ಯವಾಗಿದ್ದ ಭಾರತದ ಆಧುನಿಕ ವೈದ್ಯಕೀಯ ವ್ಯವಸ್ಥೆಯನ್ನು ಹಾಳುಗೆಡವಲಾಗಿದೆ. ಈಗ ಪ್ರತಿನಿತ್ಯವೂ ಪತ್ರಿಕೆಗಳ ಮುಖಪುಟಗಳಲ್ಲಿ ಅಲ್ಲಲ್ಲಿ ವೈದ್ಯಕೀಯ ಅವಘಡಗಳಿಂದ ಸಾವುಗಳಾಗುತ್ತಿರುವ ವರದಿಗಳು ಬರುತ್ತಿರುವುದಕ್ಕೆ ದೇಶದ ವೈದ್ಯಕೀಯ ಶಿಕ್ಷಣದ ಗುಣಮಟ್ಟವು ಕೆಟ್ಟಿರುವುದೂ ಕಾರಣವಾಗಿದೆ.

ನಿರ್ಲಕ್ಷ್ಯದಿಂದ  ನರಳುತ್ತಿರುವ ಸಾರ್ವಜನಿಕ ಆರೋಗ್ಯ ಸೇವೆ

ಆಧುನಿಕ ಆರೋಗ್ಯ ವ್ಯವಸ್ಥೆಯಲ್ಲಿ ಹಲವು ಅಂಗಗಳು ಒಟ್ಟಾಗಿ ತಾಳಮೇಳದಿಂದ ಕೆಲಸ ಮಾಡುವುದು ಅತ್ಯಗತ್ಯವಾಗುತ್ತದೆ. ಅತ್ಯಾಧುನಿಕ ಚಿಕಿತ್ಸಾ ಕ್ರಮಗಳಲ್ಲಿ ನಿಪುಣತೆಯಿರುವ ವೈದ್ಯರು, ಅವರಿಗೆ ಪೂರಕವಾಗಿ ಅಷ್ಟೇ ನಿಪುಣತೆಯಿಂದ ಸಹಕರಿಸಿ ದುಡಿಯಬಲ್ಲ ದಾದಿಯರು ಮತ್ತು ಇತರ ಅರೆ ವೈದ್ಯಕೀಯ ಸಿಬ್ಬಂದಿ, ಅತ್ಯುತ್ತಮವಾದ, ಅತ್ಯಾಧುನಿಕವಾದ, ಬಳಸಲು ಯೋಗ್ಯವಾದ ಸ್ಥಿತಿಯಲ್ಲಿರುವ ಉಪಕರಣಗಳು, ಪರೀಕ್ಷಾಲಯಗಳು, ಮತ್ತು ಔಷಧಗಳು ಎಲ್ಲವೂ ಒಂದೇ ಕಡೆಯಲ್ಲಿ ಲಭ್ಯವಿರಬೇಕಾಗುತ್ತದೆ. ಇವುಗಳಲ್ಲಿ ಯಾವುದಾದರೂ ಒಂದು ಲಭ್ಯವಿರದಿದ್ದರೆ ವೈದ್ಯಕೀಯ ಸೇವೆಯನ್ನು ಒದಗಿಸುವುದು ಕಷ್ಟವಾಗುತ್ತದೆ. ಆದರೆ ಇಂದು ದೇಶದ ಆರೋಗ್ಯ ಸೇವೆಗಳಲ್ಲಿ ಈ ಎಲ್ಲವೂ ಅವಗಣನೆಗೆ, ಭ್ರಷ್ಟಾಚಾರಕ್ಕೆ, ಬಗೆಬಗೆಯ ಹೊಂದಾಣಿಕೆಗಳಿಗೆ ಈಡಾಗಿವೆ.

ಸಾರ್ವಜನಿಕ ಆರೋಗ್ಯ ಸೇವೆಗಳಲ್ಲಿ ಕರ್ನಾಟಕವೂ ಸೇರಿದಂತೆ ಹೆಚ್ಚಿನ ರಾಜ್ಯಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಹಿಡಿದು ವೈದ್ಯಕೀಯ ಕಾಲೇಜುಗಳವರೆಗೆ ಎಲ್ಲಾ ಸ್ತರಗಳಲ್ಲೂ ಎಂಬಿಬಿಎಸ್ ವೈದ್ಯರಿಂದ ಹಿಡಿದು ಸುಪರ್ ಸ್ಪೆಷಾಲಿಟಿ ತಜ್ಞವೈದ್ಯರವರೆಗೆ, ದಾದಿಯರಿಂದ ಹಿಡಿದು ಎಲ್ಲಾ ವಿಭಾಗಗಳ ಅರೆವೈದ್ಯಕೀಯ ಹಾಗೂ ಸಹಾಯಕ ಸಿಬ್ಬಂದಿಯವರೆಗೆ ಎಲ್ಲಾ ಹಂತಗಳಲ್ಲೂ ಶೇ. 30ರಿಂದ 70ರಷ್ಟು ಹುದ್ದೆಗಳು ಖಾಲಿಯೇ ಇವೆ. ಆರೋಗ್ಯ ಸೇವೆಗಳಿಗೆ ನಿಯುಕ್ತರಾದವರಲ್ಲೂ ಹೆಚ್ಚಿನವರು ತಾತ್ಕಾಲಿಕವಾಗಿಯೋ, ಕಾಂಟ್ರಾಕ್ಟ್ ಮೇಲೋ, ಅಥವಾ ಯಾವುದೇ ವಿಶೇಷ ಸವಲತ್ತುಗಳಿಲ್ಲದೆ ಕಡಿಮೆ ವೇತನಕ್ಕೋ ನಿಯುಕ್ತರಾಗಿರುತ್ತಾರೆ. ವೈದ್ಯರಿಗೂ, ಸಿಬ್ಬಂದಿಗೂ ಸಂಬಳ ಕೊಡುವುದರಲ್ಲಿ ಕಾಸು ಮಾಡಿಕೊಳ್ಳಲು ಆಗದೆನ್ನುವ ಕಾರಣಕ್ಕೆ ಈ ಹುದ್ದೆಗಳನ್ನು ಹೀಗೆ ಖಾಲಿ ಬಿಡುತ್ತಿರುವುದೂ ಆಗಿರಬಹುದು! ಸಾರ್ವಜನಿಕ ಆರೋಗ್ಯ ಸೇವೆಗಳ ಹುದ್ದೆಗಳು ಅನಿಶ್ಚಿತವೂ, ಅನಾಕರ್ಷಕವೂ ಆಗಿರುವ ಕಾರಣಕ್ಕೆ ಪ್ರತಿಭಾವಂತರಾದವರು ನಿರಾಸಕ್ತರಾಗಿ ದೂರವುಳಿಯುವಂತಾಗಿದೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯು ಅತ್ಯುತ್ತಮ ಗುಣಮಟ್ಟದ ಸೇವೆಗಳನ್ನು ಒದಗಿಸಬೇಕೆಂದಾದರೆ ಪ್ರತಿಭಾವಂತ ವೈದ್ಯರಿಗೆ ಮತ್ತು ಸಿಬ್ಬಂದಿಗೆ ಅತ್ಯುತ್ತಮ ವೇತನ ಹಾಗೂ ಸವಲತ್ತುಗಳನ್ನಿತ್ತು ಶಾಶ್ವತ ನೌಕರಿಗೆ ನೇಮಿಸಬೇಕು. ಈಗ ಕರ್ನಾಟಕದ ಹೆಚ್ಚಿನ ಜಿಲ್ಲೆಗಳಲ್ಲಿ ಸರಕಾರಿ ವೈದ್ಯಕೀಯ ಕಾಲೇಜುಗಳಿರುವುದರಿಂದ ಅಲ್ಲಿ ತರಬೇತಾಗುವ ವೈದ್ಯರನ್ನು ಆದ್ಯತೆಯ ಮೇರೆಗೆ ನೇಮಿಸಿಕೊಳ್ಳುವ ನಿಯಮವನ್ನು ಮಾಡಬಹುದು.

ಅತ್ಯಾಧುನಿಕ ಸ್ಕಾನರ್‌ಗಳು, ಎಂಡೋಸ್ಕೋಪ್‌ಗಳು, ಐಸಿಯು ಸಾಧನಗಳು ಮುಂತಾದ ಆಧುನಿಕ ಉಪಕರಣಗಳ ಖರೀದಿಯಲ್ಲಿ ಭ್ರಷ್ಟಾಚಾರವು ಸಾಮಾನ್ಯವಾಗಿದ್ದು, ಕೊರೋನ ಕಾಲದಲ್ಲಾದ ಹಗರಣಗಳೆಲ್ಲವೂ ಈಗ ಜಾಹೀರಾಗಿವೆ. ಅಗತ್ಯವಿಲ್ಲದ ಉಪಕರಣಗಳನ್ನು ಹೆಚ್ಚು ಬೆಲೆ ತೆತ್ತು ಖರೀದಿಸುವುದು, ಹಾಗೆ ಖರೀದಿಸಿದ ಉಪಕರಣಗಳ ಬಳಕೆಗೆ ಸೂಕ್ತ ವ್ಯವಸ್ಥೆ ಮಾಡದಿರುವುದು, ಅವು ಹಾಗೆಯೇ ಮೂಲೆ ಸೇರಿ ತುಕ್ಕು ಹಿಡಿಯುವುದು, ಆಧುನಿಕ ಉಪಕರಣಗಳನ್ನು ಬಳಸಬಲ್ಲ ತಜ್ಞರನ್ನು ನಿಯುಕ್ತಿಗೊಳಿಸದಿರುವುದು, ತಜ್ಞರಿರುವಲ್ಲಿ ಉಪಕರಣಗಳಿಲ್ಲ, ಉಪಕರಣಗಳಿರುವಲ್ಲಿ ತಜ್ಞರಿಲ್ಲ ಎಂಬಂತಾಗುವುದು ಎಲ್ಲವೂ ಆರೋಗ್ಯ ಇಲಾಖೆಯಲ್ಲಿ ಸಾಮಾನ್ಯವಾಗಿ ಹೋಗಿವೆ. ಇವನ್ನು ತಡೆಯಬೇಕಾದರೆ ಉಪಕರಣಗಳ ಖರೀದಿ ಹಾಗೂ ಬಳಕೆಯ ಬಗ್ಗೆ ಸಮಗ್ರ ನೀತಿಯನ್ನು ಜಾರಿಗೊಳಿಸಬೇಕು ಹಾಗೂ ನಿಗಾವಣೆಗಾಗಿ ಸ್ಥಳೀಯ ಮಟ್ಟದಲ್ಲಿ ಜನಪರ ಪ್ರತಿನಿಧಿಗಳನ್ನೊಳಗೊಂಡ ಸಮಿತಿಗಳಿರಬೇಕು.

ಆಧುನಿಕ ಔಷಧಗಳ ಖರೀದಿ ಹಾಗೂ ಬಳಕೆಯಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಆರೋಗ್ಯ ಸೇವೆಗಳೆರಡರಲ್ಲೂ ಅನೇಕ ಸಮಸ್ಯೆಗಳಿವೆ. ಈ ಹತ್ತು ವರ್ಷಗಳಲ್ಲಿ ಸಾಮಾನ್ಯ ಬಳಕೆಯ ಔಷಧಗಳ ದರಗಳು ಮೂರರಿಂದ ಆರು ಪಟ್ಟು ಹೆಚ್ಚಿವೆ, ಅವೇ ಔಷಧಗಳು ಹಿಂದಿನ ದರಕ್ಕಿಂತ 2-3 ಪಟ್ಟು ಬೆಲೆಗೆ ಜನೌಷಧಿ ಕೇಂದ್ರಗಳಲ್ಲಿ ಮಾರಲ್ಪಡುತ್ತಿವೆ, ವಿಪರೀತ ದರ ಏರಿಕೆಯನ್ನು ಮರೆತೇ ಬಿಟ್ಟಿರುವ ಜನರಿಗೆ ಇದು ಪ್ರಧಾನಿಯ ಮಹಾನ್ ಕೊಡುಗೆಯೆಂದೇ ಕಾಣುತ್ತಿದೆ! ಜನೌಷಧಿ ಕೇಂದ್ರಗಳಲ್ಲಿ ಜೆನೆರಿಕ್ ಹೆಸರಲ್ಲಿ ಯಾವು ಯಾವುದೋ ಕಂಪೆನಿಗಳ ಔಷಧಗಳು ಮಾರಲ್ಪಡುತ್ತಿದ್ದರೆ, ಇದೇ ಮಾದರಿಯನ್ನು ನಕಲು ಮಾಡಿರುವ ಕೆಲವು ಕಾರ್ಪರೇಟ್ ಔಷಧ ವ್ಯಾಪಾರದ ಸಂಸ್ಥೆಗಳ ಶಾಖೆಗಳಲ್ಲಿ ಇನ್ಯಾವುದೋ ಕಂಪೆನಿಗಳ ಔಷಧಗಳು ಮಾರಲ್ಪಡುತ್ತಿವೆ. ಹೀಗೆ ಜನೌಷಧಿ ಮಳಿಗೆಗಳಲ್ಲೂ, ಕಾರ್ಪರೇಟ್ ಜಾಲಗಳ ಅಂಗಡಿಗಳಲ್ಲೂ ಕೊಡಲ್ಪಡುವ ಔಷಧಗಳ ವಿವರಗಳು ಅವನ್ನು ಬರೆದ ವೈದ್ಯನ ಗಮನಕ್ಕೆ ಬರುವುದೇ ಇಲ್ಲ, ನಿಯಂತ್ರಣದಲ್ಲೂ ಇಲ್ಲ, ಆ ಬಗ್ಗೆ ಏನನ್ನೂ ಹೇಳುವಂತೆಯೂ ಇಲ್ಲ ಎಂಬಂತಾಗಿದೆ.

ಹೊಸ ಔಷಧಗಳು ತೀರಾ ದುಬಾರಿಯಾಗಿ ಸಾಮಾನ್ಯರ ಕೈಗೆಟಕದಂತಾಗಿವೆ. ವೈದ್ಯರು ಸಾಮಾನ್ಯ ಸಮಸ್ಯೆಗಳ ಚಿಕಿತ್ಸೆಗೆ ಹಳೆಯ ಉತ್ತಮ ಔಷಧಗಳನ್ನು ಬಳಸುವುದನ್ನು ಮರೆತು ಈ ಹೊಸ ಔಷಧಗಳನ್ನೇ ಹೆಚ್ಚು ಹೆಚ್ಚು ಬಳಸತೊಡಗಿರುವುದರಿಂದ ಜನಸಾಮಾನ್ಯರು ಸಾಮಾನ್ಯ ಚಿಕಿತ್ಸೆಗಳಿಗೂ ತಿಂಗಳೊಂದಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡುವಂತಾಗಿದೆ.

ಸಾಮಾನ್ಯ ಔಷಧಗಳ ಗತಿ ಹೀಗಾದರೆ, ಜೀವರಕ್ಷಕ ಪ್ರತಿಜೈವಿಕಗಳ ಗತಿ ಇನ್ನೂ ಕೆಟ್ಟಿದೆ. ಆಧುನಿಕ ವೈದ್ಯರು ಮಾತ್ರವೇ ಬಹು ಸೀಮಿತವಾಗಿ ಪ್ರತಿಜೈವಿಕಗಳನ್ನು ಬಳಸಬೇಕು, ಅವರು ಬರೆದ ಚೀಟಿಗಳ ದಾಖಲೆಯನ್ನು ಔಷಧ ಮಾರುವವರು ಕಾಪಿಡಬೇಕು ಎಂದು 2013ರಲ್ಲಿ ಜಾರಿಗೆ ತಂದಿದ್ದ ಎಚ್1 ಅನುಬಂಧದ ಬಗ್ಗೆ ವೈದ್ಯರಿಗಾಗಲೀ, ಸರಕಾರಕ್ಕಾಗಲೀ, ಔಷಧದಂಗಡಿಗಳಿಗಾಗಲೀ, ಔಷಧ ನಿಯಂತ್ರಕರಿಗಾಗಲೀ ಗೊತ್ತೇ ಇಲ್ಲ ಎಂಬಂತಾಗಿದ್ದು, ಭಾರರದಲ್ಲಿಂದು ಎಲ್ಲಾ ಪ್ರತಿಜೈವಿಕಗಳ ವಿರುದ್ಧ ಸೂಕ್ಷ್ಮಾಣುಗಳು ಪ್ರತಿರೋಧವನ್ನು ಬೆಳೆಸಿಕೊಂಡು ಈ ಬಹುಮುಖ್ಯ ಔಷಧಗಳು ನಿಷ್ಪ್ರಯೋಜಕವೆನ್ನಿಸುವ ಸ್ಥಿತಿಯೊದಗಿದೆ.

ಸಾರ್ವಜನಿಕ ಆರೋಗ್ಯ ಸೇವೆಗಳಲ್ಲಿ ಔಷಧಗಳು ಹಾಗೂ ಮರುಪೂರಣದ ದ್ರಾವಣಗಳ ಖರೀದಿಯಲ್ಲಿ ಹಗರಣಗಳಾಗುತ್ತಿರುವ ಬಗ್ಗೆ ಆಗಾಗ ವರದಿಗಳಾಗುತ್ತಲೇ ಇವೆ. ಕೋವಿಡ್ ಚಿಕಿತ್ಸೆಗೆ ಔಷಧಗಳು ಹಾಗೂ ಇತರ ವಸ್ತುಗಳ ಖರೀದಿಯಲ್ಲಿ ಕೋಟಿಗಟ್ಟಲೆ ಅವ್ಯವಹಾರ ನಡೆದಿರುವ ಬಗ್ಗೆ ತನಿಖೆಗಳು ನಡೆಯುತ್ತಿರುವಾಗಲೇ, ಬಳ್ಳಾರಿ ಮತ್ತಿತರ ಜಿಲ್ಲೆಗಳಲ್ಲಿ ಬಾಣಂತಿಯರು ಮತ್ತಿತರ ರೋಗಿಗಳು ಕಳಪೆ ಗುಣಮಟ್ಟದ ದ್ರಾವಣಗಳ ಬಳಕೆಯಿಂದ ಸಾವನ್ನಪ್ಪಿರುವ ಬಗ್ಗೆ ವರದಿಗಳಾಗಿವೆ. ಹೀಗೆ ಜೀವವುಳಿಸಬೇಕಾದ ಸಾರ್ವಜನಿಕ ಆರೋಗ್ಯ ಸೇವೆಗಳು ಭ್ರಷ್ಟಾಚಾರದಲ್ಲಿ ಮುಳುಗಿ ಸಾವಿನ ಕೂಪಗಳಾಗುತ್ತಿವೆ.

ಕಾರ್ಪರೇಟ್ ಹಿಡಿತಕ್ಕೆ ಆರೋಗ್ಯ ಸೇವೆ

ತೊಂಬತ್ತರ ದಶಕದ ಆರಂಭದಿಂದ ಖಾಸಗೀಕರಣದ ಭರಾಟೆಯಲ್ಲಿ ಸಾರ್ವಜನಿಕ ಆರೋಗ್ಯ ಸೇವೆಗಳು ಹಾಗೂ ವೈದ್ಯಕೀಯ ಶಿಕ್ಷಣದಿಂದ ಸರಕಾರಗಳು ವಿಮುಖಗೊಂಡಿರುವುದರಿಂದ, ಜನರು ಖಾಸಗಿ ಆರೋಗ್ಯ ಸೇವೆಗಳನ್ನೇ ನೆಚ್ಚಿಕೊಳ್ಳಬೇಕಾಗಿ ಬಂದಿದೆ. ಸಾರ್ವಜನಿಕ ಆರೋಗ್ಯ ಸೇವೆಗಳಿಗೆ ಅನುದಾನವು ರಾಷ್ಟ್ರೀಯ ಉತ್ಪನ್ನದ ಕನಿಷ್ಠ ಶೇ. ಆರಾದರೂ ಇರಬೇಕಿರುವಲ್ಲಿ ಶೇ. ಒಂದರಷ್ಟೇ ಇದ್ದು, ಇದೇ ಸರಕಾರದ 2017ರ ಆರೋಗ್ಯ ನೀತಿಯಲ್ಲಿ 2025ಕ್ಕೆ ಶೇ. 2.5ರಷ್ಟನ್ನು ನೀಡಲಾಗುವುದೆಂಬ ಭರವಸೆಯು ಕೂಡ ಜುಮ್ಲಾ ಆಗಿ ಅಲ್ಲೇ ಉಳಿದಿದೆ.

ಆಯುಷ್ಮಾನ್ ಭಾರತ್, ಯಶಸ್ವಿನಿ, ಆರೋಗ್ಯ ಕರ್ನಾಟಕ ಮುಂತಾದ ಭಾರೀ ಪ್ರಚಾರದ ಯೋಜನೆಗಳು ಹಾಗೂ ಇಎಸ್ಐ, ಕೇಂದ್ರ ಹಾಗೂ ರಾಜ್ಯ ಸರಕಾರಗಳ ನೌಕರರು ಮತ್ತು ರಕ್ಷಣಾ ಪಡೆಗಳ ಸಿಬ್ಬಂದಿಗಳಿಗೆ ಆರೋಗ್ಯ ಸೇವೆಗಳನ್ನು ಒದಗಿಸುವ ಯೋಜನೆಗಳಡಿಯಲ್ಲಿ ಸಾರ್ವಜನಿಕ ಆಸ್ಪತ್ರೆಗಳ ಬದಲು ಖಾಸಗಿ ಆಸ್ಪತ್ರೆಗಳಲ್ಲಿ ವೈಯಕ್ತಿಕ ಚಿಕಿತ್ಸೆಗಳನ್ನು ಪಡೆಯಲು ಹಣವನ್ನು ಒದಗಿಸಲಾಗುತ್ತಿದೆ. ಕಳೆದ ವರ್ಷ ಆಯುಷ್ಮಾನ್ ಭಾರತ್ ಯೋಜನೆಗೆ ಸುಮಾರು 7000 ಕೋಟಿ ನೀಡಲಾಗಿದೆಯೆಂದು ಹೇಳಲಾಗಿದ್ದು, ಇದೇ ಹಣವನ್ನು ಸರಕಾರಿ ಆಸ್ಪತ್ರೆಗಳ ಸುಧಾರಣೆಗೆ ಬಳಸಿದ್ದರೆ ಬಹಳಷ್ಟು ಆರೋಗ್ಯ ಕೇಂದ್ರಗಳನ್ನೂ, ಆಸ್ಪತ್ರೆಗಳನ್ನೂ ಸುಸಜ್ಜಿತಗೊಳಿಸಬಹುದಿತ್ತು, ಎಲ್ಲರಿಗೂ ಚಿಕಿತ್ಸೆ ನೀಡಲು ಅನುಕೂಲವಾಗುತ್ತಿತ್ತು. ಇಂಥ ಯೋಜನೆಗಳಡಿಯಲ್ಲಿ ಎಲ್ಲರಿಗೂ ಎಲ್ಲಾ ಬಗೆಯ ರೋಗಗಳಿಗೂ ಚಿಕಿತ್ಸೆಯು ದೊರೆಯುವುದಿಲ್ಲ ಮಾತ್ರವಲ್ಲ, ಬಹುತೇಕ ಖಾಸಗಿ ಆಸ್ಪತ್ರೆಗಳು ಈ ಯೋಜನೆಗಳಡಿಯಲ್ಲಿ ಚಿಕಿತ್ಸೆ ನೀಡುವುದೂ ಇಲ್ಲ.

ಹೀಗೆ ಸಾರ್ವಜನಿಕ ಆಸ್ಪತ್ರೆಗಳೂ ಸರಿಯಿಲ್ಲದೆ, ಅಬ್ಬರದ ಯೋಜನೆಗಳಲ್ಲೂ ಚಿಕಿತ್ಸೆ ದೊರೆಯದೆ ಅನೇಕರು ಸ್ವಂತ ಖರ್ಚಿನಲ್ಲಿ ಖಾಸಗಿ ಆಸ್ಪತ್ರೆಗಳನ್ನೇ ಅವಲಂಬಿಸಬೇಕಾಗಿದೆ. ಕೋವಿಡ್ ನಂತರದಲ್ಲಿ ಖಾಸಗಿ ಆಸ್ಪತ್ರೆಗಳ ದರಗಳಲ್ಲಿ ವಿಪರೀತ ಏರಿಕೆಯಾಗಿದ್ದು, ಬೆಂಗಳೂರಿನಂತಹ ನಗರಗಳಲ್ಲಿ ಕೋವಿಡ್ ಕಾಲದಲ್ಲಿ ಖಾಲಿಯಾದ ಬಹುಮಹಡಿ ಸಂಕೀರ್ಣಗಳಲ್ಲಿ ಹಲವು ಈಗ ಆಸ್ಪತ್ರೆಗಳಾಗಿ ಬದಲಾಗಿವೆ. ಸಣ್ಣ ಆಸ್ಪತ್ರೆಗಳು ನಷ್ಟಕ್ಕೀಡಾಗಿ ಬಾಗಿಲು ಹಾಕಿಕೊಳ್ಳುತ್ತಿದ್ದು, ದೊಡ್ಡ ಕಾರ್ಪರೇಟ್ ಸಂಸ್ಥೆಗಳು ಆಸ್ಪತ್ರೆಗಳನ್ನು ನಡೆಸಲಾರಂಭಿಸಿವೆ, ವೈದ್ಯರು ಇಂಥ ಆಸ್ಪತ್ರೆಗಳಲ್ಲಿ ನೌಕರರಾಗುತ್ತಿದ್ದಾರೆ. ಈ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ವೆಚ್ಚವು ಏರುತ್ತಲೇ ಇರುವುದರಿಂದ ಆರೋಗ್ಯ ವಿಮೆಯ ದರವೂ ಏರುತ್ತಲೇ ಇದೆ, ಕಳೆದೆರಡು ವರ್ಷಗಳಲ್ಲಿ ದುಪ್ಪಟ್ಟೇ ಆಗಿದೆ. ಸರಕಾರಿ ಆರೋಗ್ಯ ಸೇವೆಗಳನ್ನು ದುಸ್ಥಿತಿಗೆ ಇಳಿಸಿರುವ ಸರಕಾರವು ಏರುತ್ತಲೇ ಇರುವ ವಿಮೆಯ ಪ್ರೀಮಿಯಂ ಮೇಲೆ 18% ಜಿಎಸ್ಟಿ ವಿಧಿಸಿ ಜನರ ಕಷ್ಟದಲ್ಲಿ ಲಾಭ ಮಾಡಿಕೊಳ್ಳುತ್ತಿದೆ.

ಒಳಗೆ ಹುದುಗಿರುವ ವಿಷಕ್ಕೆ ವೃತ್ತಿಗೌರವವೇ ಬಲಿ

ಕಳೆದ ಹತ್ತು ವರ್ಷಗಳಲ್ಲಿ ದೇಶದ ಆರೋಗ್ಯ ಸೇವೆಗಳು ಹಾಗೂ ಆಧುನಿಕ ವೈದ್ಯಕೀಯ ಶಿಕ್ಷಣವು ಹೀಗೆ ಹಾಳಾಗುತ್ತಾ, ಜನರ ವಿಶ್ವಾಸವನ್ನು ಕಳೆದುಕೊಳ್ಳುತ್ತಾ, ಮಾನಗೆಡುತ್ತಾ ಸಾಗಿದ್ದರೂ ಐಎಂಎಯಂತಹಾ ವೈದ್ಯಕೀಯ ಸಂಘಟನೆಗಳು ಮತ್ತು ಹೆಚ್ಚಿನ ವೈದ್ಯರು ತೆಪ್ಪಗಿದ್ದಾರೆ ಅಥವಾ ಈ ವಿನಾಶವನ್ನು ಬೆಂಬಲಿಸುತ್ತಿದ್ದಾರೆ. ರಾಷ್ಟ್ರೀಯ ಆರೋಗ್ಯ ನೀತಿ, ಎನ್‌ಎಂಸಿ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿಗಳಲ್ಲಿ ಆಧುನಿಕ ವೈದ್ಯಕೀಯ ವ್ಯವಸ್ಥೆಯನ್ನು ಹಾಳುಗೆಡಹುವ ಯೋಜನೆಗಳಿರುವುದನ್ನು ವಿರೋಧಿಸದಿರುವ ಐಎಂಎ, ಈ ಸರಕಾರವು ಗ್ರಾಹಕರ ರಕ್ಷಣಾ ಕಾಯಿದೆಯ ವ್ಯಾಪ್ತಿಯಿಂದ ಮತ್ತು ಹೊಸ ಭಾರತೀಯ ನ್ಯಾಯ ಸಂಹಿತೆಯ ವ್ಯಾಪ್ತಿಯಿಂದ ವೈದ್ಯಕೀಯ ಸೇವೆಗಳನ್ನು ಹೊರಗುಳಿಸಿ ಮಹದುಪಕಾರ ಮಾಡಿದೆ ಎಂಬ ಸುಳ್ಳನ್ನು ದೊಡ್ಡ ಜಾಹೀರಾತುಗಳಲ್ಲಿ ಪ್ರಧಾನಿ, ಗೃಹ ಸಚಿವರ ಪಟಗಳೊಂದಿಗೆ ಪ್ರಚಾರ ಮಾಡಿತ್ತು. ಇದನ್ನು ನಾವು ಪ್ರಶ್ನಿಸಿದಾಗ ಅನೇಕ ವೈದ್ಯರೇ ಕಟಕಿಯಾಡಿದ್ದರು. ಸುಳ್ಳು ಹೇಳಿ ಸರಕಾರವನ್ನು ಹೊಗಳುವ, ವಿಚ್ಛಿದ್ರಕಾರಿ ನೀತಿಗಳನ್ನು ಬೆಂಬಲಿಸುವ ಇಂಥ ಸಂಘಟನೆಗಳು ಮತ್ತು ವೈದ್ಯರಿಂದ ಆಧುನಿಕ ವೈದ್ಯವಿಜ್ಞಾನ ಹಾಗೂ ಆರೋಗ್ಯ ಸೇವೆಗಳ ಹಿತರಕ್ಷಣೆಯನ್ನು ನಿರೀಕ್ಷಿಸುವುದಕ್ಕೆ ಸಾಧ್ಯವಿಲ್ಲ.

ಯಾವುದೇ ಜಾತಿ, ಮತ, ಭಾಷೆ, ಲಿಂಗ, ಸಾಮಾಜಿಕ-ಆರ್ಥಿಕ ಸ್ಥಾನಮಾನಗಳನ್ನು ಲೆಕ್ಕಿಸದೆ ಎಲ್ಲರನ್ನೂ ಸಮಾನವಾಗಿ ಕಂಡು ಚಿಕಿತ್ಸೆ ನೀಡುವುದಾಗಿ ಪ್ರತಿಜ್ಞೆಗೈಯುವ ವೈದ್ಯರಲ್ಲಿ ಸಾಕಷ್ಟು ಮಂದಿ ಈಗ ತಮ್ಮೊಳಗೆ ಹುದುಗಿಟ್ಟ ಮತೀಯವಾದಿ ವಿಶಃಅವನ್ನು ಬಹಿರಂಗವಾಗಿಯೇ ಕಾರಿಕೊಳ್ಳುತ್ತಿದ್ದಾರೆ. ವಾಟ್ಸಪ್, ಟೆಲಿಗ್ರಾಂ, ಫೇಸ್‌ಬುಕ್, ಎಕ್ಸ್ ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲಿ ವಿಷ ಕಾರುವವರಲ್ಲಿ ವೈದ್ಯರು ಹಲವರಿದ್ದಾರೆ. ವೈದ್ಯರ ವಾಟ್ಸಪ್ ಬಳಗಗಳಲ್ಲಂತೂ ಮತೀಯವಾದಿ ವಿಷ ಕಾರುವಿಕೆಯು ನಿತ್ಯಸತ್ಯವಾಗಿದ್ದು, ಅವುಗಳಲ್ಲಿರುವ ಅಲ್ಪಸಂಖ್ಯಾತ ಕೋಮುಗಳವರೂ ಕೂಡ ಸುಮ್ಮನಿದ್ದು ಇವನ್ನು ಸಹಿಸಿಕೊಳ್ಳುತ್ತಿದ್ದಾರೆ ಅಥವಾ ಬೆಂಬಲಿಸುತ್ತಿದ್ದಾರೆ. ಇಂಥ ಮತೀಯ ದ್ವೇಶಹವನ್ನು ವಿರೋಧಿಸುವವರನ್ನು ಆ ಬಳಗಗಳಿಂದ ಹೊರಹಾಕುವುದು ಸಾಮಾನ್ಯವಾಗಿದೆ, ಅಲ್ಪಸಂಖ್ಯಾತ ಕೋಮುಗಳ ವೈದ್ಯರು ತಮ್ಮ ‘ಶಾಂತಿಗಾಗಿ’ ಹೀಗೆ ಹೊರಹಾಕುವುದನ್ನೇ ಬೆಂಬಲಿಸುತ್ತಿದ್ದಾರೆ! ಇಂಥ ವೈದ್ಯರಿಂದ ಆಧುನಿಕ ವೈದ್ಯವಿಜ್ಞಾನ, ವೈಚಾರಿಕತೆ ಹಾಗೂ ಸಾಮಾಜಿಕ ನ್ಯಾಯಗಳ ರಕ್ಷಣೆಯನ್ನು ಬಯಸುವುದು ಹೇಗೆ?

Be the first to comment

Leave a Reply

Your email address will not be published.


*