ಕೊರೋನ ತಡೆಗೆ ಸಜ್ಜಾಗಿ: ಸೋಂಕಿತರು ಸುತ್ತಾಡಬೇಡಿ

ಮಧ್ಯ ಚೀನಾದ ಹೂಬೆ ಪ್ರಾಂತ್ಯದಿಂದ ಡಿಸೆಂಬರ್ 2019ರಲ್ಲಿ ಹೊರಟ ಹೊಸ ಕೊರೊನಾ ವೈರಸ್ 160ಕ್ಕೂ ಹೆಚ್ಚು ದೇಶಗಳಲ್ಲಿ 2 ಲಕ್ಷ 20 ಸಾವಿರದಷ್ಟು ಜನರಿಗೆ ಸೋಂಕಿ, 9000 ದಷ್ಟು ಸಾವುಗಳಿಗೆ ಕಾರಣವಾಗಿದೆ. ಭಾರತದೊಳಕ್ಕೂ ಅದು ಹೊಕ್ಕಿದ್ದು, ಇದುವರೆಗೆ 181 ಸೋಂಕಿತರನ್ನು ಗುರುತಿಸಲಾಗಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಸೋಂಕಿತರನ್ನೂ, ಅವರ ಸಂಪರ್ಕಕ್ಕೆ ಬಂದವರನ್ನೂ ಗುರುತಿಸಿ, ಪ್ರತ್ಯೇಕಿಸಿಟ್ಟು ಇತರರಿಗೆ ಹರಡದಂತೆ ತಡೆಯಲು ಆರೋಗ್ಯ ಇಲಾಖೆಯು ಶತಪ್ರಯತ್ನಗಳನ್ನು ಮಾಡುತ್ತಿದ್ದರೂ, ಈಗ ದಿನಕ್ಕೆ 10-20 ಪ್ರಕರಣಗಳು ಹೊಸದಾಗಿ ಸೇರ್ಪಡೆಯಾಗುತ್ತಿದ್ದು, ಇನ್ನು ಮೂರು-ನಾಲ್ಕು ವಾರಗಳಲ್ಲಿ, ಅಂದರೆ ಎಪ್ರಿಲ್-ಮೇ ತಿಂಗಳ ವೇಳೆಗೆ, ಕೊರೊನಾ ಹರಡುವಿಕೆಯು ಮೂರನೇ ಹಂತಕ್ಕೆ ತಲುಪಿ, ಸ್ಥಳೀಯ ಸಮುದಾಯದಲ್ಲಿ ಹರಡುವ ಸಾಧ್ಯತೆಗಳಿವೆ ಎನ್ನಲಾಗಿದೆ. ಆ ಹಂತವನ್ನು ನಿಭಾಯಿಸುವುದಕ್ಕೆ ಸಿದ್ಧತೆಗಳನ್ನು ಈಗಲೇ ಮಾಡಬೇಕಾದ ಅಗತ್ಯವಿದೆ. ಈಗಾಗಲೇ ಕೊರೊನಾ ಸೋಂಕನ್ನು ಕಂಡಿರುವ ಚೀನಾ, ದಕ್ಷಿಣ ಕೊರಿಯಾ, ಇಟೆಲಿ, ಇಂಗ್ಲೆಂಡ್, ಅಮೆರಿಕಾ ಮುಂತಾದ ದೇಶಗಳ ಅನುಭವಗಳನ್ನು ನಾವು ಬಳಸಿಕೊಳ್ಳಬೇಕಾಗಿದೆ.

ಕೊರೊನಾ ಸೋಂಕಿತರಲ್ಲಿ ಶೇ. 70-80ರಷ್ಟು 59 ವರ್ಷಕ್ಕಿಂತ ಕೆಳಗಿನವರಾಗಿದ್ದು, ಅವರಲ್ಲಿ ಸಾವನ್ನಪ್ಪುವ ಸಾಧ್ಯತೆಗಳು ತೀರಾ ಕಡಿಮೆ, ಶೇ.0-1.3ರಷ್ಟಿರುತ್ತದೆ; ಅಂದರೆ ಅವರಲ್ಲಿ ಬಹುತೇಕ ಎಲ್ಲರೂ ಯಾವುದೇ ಚಿಕಿತ್ಸೆಯಿಲ್ಲದೆಯೇ ತಾವಾಗಿ ಗುಣಮುಖರಾಗುತ್ತಾರೆ. ಅರುವತ್ತನ್ನು ಮೇಲ್ಪಟ್ಟ ವಯಸ್ಸಿನವರಲ್ಲಿ, ಮೊದಲೇ ಶ್ವಾಸಕೋಶಗಳ ಸಮಸ್ಯೆಯಿದ್ದವರಲ್ಲಿ, ಅಥವಾ ಇತರ ರೋಗಗಳಿದ್ದವರಲ್ಲಿ ಶೇ. 4-15ರಷ್ಟು ಸೋಂಕಿತರು ಸಾವನ್ನಪ್ಪುತ್ತಾರೆ. ಇಟೆಲಿಯಲ್ಲಿ ಸಾವನ್ನಪ್ಪಿರುವ 2500ಕ್ಕೂ ಹೆಚ್ಚು ಸೋಂಕಿತರಲ್ಲಿ ಸರಾಸರಿ ವಯಸ್ಸು 80ರಷ್ಟಿತ್ತು, ಶೇ. 99ರಷ್ಟು ಮಂದಿ ಒಂದು ಅಥವಾ ಹೆಚ್ಚು ಅನ್ಯ ಕಾಯಿಲೆಗಳನ್ನು ಹೊಂದಿದ್ದರು.

ಕೊರೊನಾ ಪೀಡಿತರಲ್ಲಿ 2-6 ದಿನಗಳಲ್ಲಿ ರೋಗಲಕ್ಷಣಗಳು ಆರಂಭಗೊಂಡು ವಾರದೊಳಗೆ ಕಡಿಮೆಯಾಗಿ ಗುಣ ಹೊಂದುತ್ತವೆ; ಗಂಭೀರಗೊಳ್ಳುವವರಲ್ಲಿ 7ರಿಂದ 8 ದಿನಗಳ ಬಳಿಕವೂ ಕೆಮ್ಮು ಉಲ್ಬಣಗೊಂಡು, ಉಸಿರಾಡಲು ಕಷ್ಟವೆನಿಸುವ ಸಮಸ್ಯೆಗಳಾಗುತ್ತವೆ. ಆದ್ದರಿಂದ ಕೊರೊನಾ ತಗಲಿದವರಲ್ಲಿ ಸೋಂಕಿನ ಸಮಸ್ಯೆಗಳು ತಲೆದೋರಲು ಒಂದು ವಾರದಷ್ಟು ಕಾಲ ಬೇಕಾಗುತ್ತದೆ.

ಮುಂದಿನ ವಾರಗಳಲ್ಲಿ ಕೊರೊನಾ ವ್ಯಾಪಕವಾದರೆ ಈ ಕೆಳಗಿನ ಸಿದ್ಧತೆಗಳು ಅಗತ್ಯವಾಗುತ್ತವೆ. ಇವು ಯಶಸ್ವಿಯಾಗಿ ಕೊರೊನಾ ಸೋಂಕಿನಿಂದಾಗಬಲ್ಲ ಹಾನಿಯನ್ನು ತಡೆಯಬೇಕಾದರೆ ಜನಸಾಮಾನ್ಯರು ನೂರಕ್ಕೆ ನೂರರಷ್ಟು ಸಹಕರಿಸಬೇಕಾಗುತ್ತದೆ. ಅದಿಲ್ಲದಿದ್ದರೆ ಅಪಾರ ಕಷ್ಟಗಳಾಗುವುದು ಖಂಡಿತ.

  • ಕೊರೊನಾ ಸೋಂಕು ಸಮುದಾಯ ಮಟ್ಟದಲ್ಲಿ ಹರಡಲಾರಂಭಿಸಿದಾಗ ಜ್ವರ, ಕೆಮ್ಮು, ಗಂಟಲು ನೋವುಗಳಂಥ ರೋಗಲಕ್ಷಣಗಳಿಂದಲೇ ಗುರುತಿಸಿದರೆ ಸಾಕಾಗುತ್ತದೆ; ಪರೀಕ್ಷೆಗಾಗಿ ಒತ್ತಾಯಿಸುವುದಾಗಲೀ, ಹುಡುಕುವುದಾಗಲೀ ಮಾಡಲೇ ಬಾರದು.
  • ಬಹುತೇಕ (85%ಕ್ಕೂ ಹೆಚ್ಚು) ಸೋಂಕಿತರು ಯಾವುದೇ ಸಮಸ್ಯೆಗಳಾಗದೆ, ಯಾವ ಚಿಕಿತ್ಸೆಯ ಅಗತ್ಯವೂ ಇಲ್ಲದೆ ಗುಣಮುಖರಾಗುವುದರಿಂದ ಎಲ್ಲರೂ ಮನೆಯೊಳಗೇ ಉಳಿದುಕೊಳ್ಳಬೇಕು. ಆತಂಕಕ್ಕೊಳಗಾಗುವ ಅಗತ್ಯವಿಲ್ಲ, ಯಾವ ವೈದ್ಯರನ್ನು ಕಾಣುವುದಕ್ಕೂ ಹೋಗಬಾರದು.
  • ಸಮಸ್ಯೆಗಳಾಗುವ ಸಾಧ್ಯತೆಗಳುಳ್ಳವರು (ಹಿರಿಯರು, ಮೊದಲೇ ಇತರ ರೋಗಗಳುಳ್ಳವರು) ಅಥವಾ ಜ್ವರ, ಕೆಮ್ಮು ವಿಪರೀತವಾಗಿದ್ದರೆ, ಉಸಿರಾಟಕ್ಕೆ ಸಮಸ್ಯೆಯಾದರೆ ಕೂಡಲೇ ಆರೋಗ್ಯ ಸಹಾಯವಾಣಿಗೆ ಅಥವಾ ತಮ್ಮ ಆಧುನಿಕ ತಜ್ಞ ವೈದ್ಯರಿಗೆ ಕರೆ ಮಾಡುವಂತಾಗಬೇಕು. ನಿಜಕ್ಕೂ ಗಂಭೀರ ಸಮಸ್ಯೆಗಳಿದ್ದವರೆಂದು ಗುರುತಿಸಲ್ಪಟ್ಟವರನ್ನಷ್ಟೇ ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ. ಸೋಂಕಿತರು ವೈದ್ಯರನ್ನು ಸಂಪರ್ಕಿಸಲು ಕೇಂದ್ರೀಕೃತ ವ್ಯವಸ್ಥೆಯನ್ನು ಮಾಡಬಹುದು, ಅದಕ್ಕೆ ವೈದ್ಯಕೀಯ ಸಂಘಟನೆಗಳು ನೆರವಾಗಬಹುದು. ತಮ್ಮ ವೈದ್ಯರನ್ನು ಸಂಪರ್ಕಿಸಲು ವಾಟ್ಸಾಪ್, ಗೂಗಲ್ ಡುವೋ ಇತ್ಯಾದಿಗಳ ಮೂಲಕ ವಿಡಿಯೋ ಕರೆಗಳನ್ನು ಬಳಸಬಹುದು.
  • ಸಮಸ್ಯೆಗೊಳಗಾದ ಕೊರೊನಾ ಪೀಡಿತರು ದಾಖಲಾಗುವುದಕ್ಕೆ ಪ್ರತ್ಯೇಕ ಆಸ್ಪತ್ರೆಗಳನ್ನೇ ಸಿದ್ಧಪಡಿಸುವುದು ಅಪೇಕ್ಷಣೀಯ. ಈಗಿರುವ ಎಲ್ಲಾ ಆಸ್ಪತ್ರೆಗಳನ್ನು ಭಾಗಶಃ ಕಾಯ್ದಿರಿಸುವುದರಿಂದ ಅಲ್ಲಿರುವ ವೈದ್ಯಕೀಯ ಸಿಬಂದಿಗೂ, ಇತರರಿಗೂ ಸೋಂಕು ಹರಡುವ ಸಾಧ್ಯತೆಗಳಿರುವುದರಿಂದ, ಬಳಿಕ ಅವರೆಲ್ಲರೂ ಮನೆಗಳಲ್ಲೇ ಕುಳಿತುಕೊಳ್ಳಬೇಕಾಗುವುದರಿಂದ ಗಂಭೀರವಾದ ಕೊರೊನಾ ಪೀಡಿತರಿಗಾಗಿ ಪ್ರತ್ಯೇಕವಾದ, ತಾತ್ಕಾಲಿಕ ಆಸ್ಪತ್ರೆಗಳನ್ನೇ ಸಿದ್ಧಪಡಿಸುವುದೊಳ್ಳೆಯದು. ಅವಕ್ಕೆ ಅಗತ್ಯವಿರುವ ಉಪಕರಣಗಳನ್ನು ಒದಗಿಸುವುದು ಹಾಗೂ ವೈದ್ಯರಿಗೂ, ವೈದ್ಯಕೀಯ ಸಿಬ್ಬಂದಿಗೂ ತರಬೇತಿ ನೀಡುವುದು ಅತ್ಯಗತ್ಯ.
  • ಈ ಆಸ್ಪತ್ರೆಗಳಿಗೆ ಸೋಂಕಿತರನ್ನು ಸಾಗಿಸುವುದಕ್ಕೆ ಪ್ರತ್ಯೇಕವಾದ ವಾಹನ/ಆಂಬ್ಯುಲೆನ್ಸ್ ವ್ಯವಸ್ಥೆ ಇರುವುದು ಒಳ್ಳೆಯದು. ಸೋಂಕಿತರು ಸಾರ್ವಜನಿಕ ಸಾರಿಗೆಯನ್ನು ಬಳಸಿದರೆ, ಅಥವಾ ಎಲ್ಲರಿಗೂ ಬಳಕೆಯಾಗುವ ಆಂಬ್ಯುಲೆನ್ಸ್ ಬಳಸಿದರೆ ಸೋಂಕು ಹರಡುವುದಕ್ಕೆ ಅವಕಾಶವಾಗಬಹುದು.
  • ಹಿರಿವಯಸ್ಕರನ್ನೂ, ಅನ್ಯ ರೋಗಗಳಿರುವವರನ್ನೂ ಸೋಂಕಿನಿಂದ ರಕ್ಷಿಸಿಡುವುದಕ್ಕಾಗಿ ವೃದ್ಧಾಲಯಗಳಲ್ಲಿ, ಅಥವಾ ತಾತ್ಕಾಲಿಕ ಆಶ್ರಯಗಳಲ್ಲಿ ನೆಲೆಗೊಳಿಸುವುದೊಳ್ಳೆಯದು.

ಈ ಕ್ರಮಗಳಿಂದ ಸೋಂಕು ಹರಡುವುದನ್ನು ತಡೆಯಬಹುದು, ನಿಧಾನಗೊಳಿಸಬಹುದು; ವೈದ್ಯಕೀಯ ಸಿಬಂದಿಯನ್ನು ರಕ್ಷಿಸಿಟ್ಟು ಆರೋಗ್ಯ ಸೇವೆಗಳು ಅಬಾಧಿತವಾಗಿರುವಂತೆ ಸುನಿಶ್ಚಿತಗೊಳಿಸಬಹುದು; ಸಮಸ್ಯೆಗೊಳಗಾಗುವ ಸಾಧ್ಯತೆಗಳುಳ್ಳವರನ್ನು ರಕ್ಷಿಸಬಹುದು, ಸಮಸ್ಯೆಗಳಾದವರಿಗೆ ಸೂಕ್ತ ಚಿಕಿತ್ಸೆಯನ್ನೂ ನೀಡಿ ಜೀವವುಳಿಸಬಹುದು. ಇದಾಗಬೇಕಿದ್ದರೆ ಸೋಂಕಿನ ಲಕ್ಷಣವುಳ್ಳವರು ಧೈರ್ಯದಿಂದ ಮನೆಯೊಳಗೇ ಇದ್ದು, ಹೊರಗೆ ಕಾಲಿಡದೆ, ತಮ್ಮಿಂದ ಸೋಂಕು ಹರಡದಿರಲು ಎಲ್ಲಾ ಎಚ್ಚರಿಕೆಗಳನ್ನೂ ವಹಿಸಿ ಸಹಕರಿಸಲೇಬೇಕು; ಆ ಮೂಲಕ ತಮ್ಮನ್ನೂ, ಮನೆಯವರನ್ನೂ, ಹಿರಿಯರನ್ನೂ, ವೈದ್ಯರನ್ನೂ, ಇಡೀ ದೇಶವನ್ನೂ ರಕ್ಷಿಸಬಹುದು.

Be the first to comment

Leave a Reply

Your email address will not be published.


*