ಕರ್ನಾಟಕಕ್ಕೆ ಹೊಸ ಸರಕಾರ – ಹೊಸ ಆಶಯಗಳು

ಕೋವಿಡ್ ಕಾಲದ ತಪ್ಪುಗಳನ್ನು ತಡೆಯುವ ಆರೋಗ್ಯ ಸೇವೆ ಬೇಕು

ಕೋವಿಡ್ ಕಾಲದ ತಪ್ಪುಗಳನ್ನು ತಡೆಯುವ ಆರೋಗ್ಯ ಸೇವೆ ಬೇಕು: ವಾರ್ತಾಭಾರತಿ, ಮಾರ್ಚ್ 28, 2023

ಕರ್ನಾಟಕ ರಾಜ್ಯಕ್ಕೆ ಭಾವನಾತ್ಮಕ, ಭ್ರಮಾತ್ಮಕ ಗದ್ದಲಗಳು, ಜಾತಿ-ಮತ-ಭಾಷೆಗಳ ಹೆಸರಲ್ಲಿ ನಿಗಮ, ಭವನ, ಪ್ರತಿಮೆ, ಮೇಳಗಳು ಬೇಕೋ ಅಥವಾ ಜಾಗತಿಕ ಮಟ್ಟದ ವೈಜ್ಞಾನಿಕ-ವೈಚಾರಿಕ ಶಿಕ್ಷಣ, ಭವಿಷ್ಯದ ಭದ್ರತೆಗಾಗಿ ಕೃಷಿ ಹಾಗೂ ಕೈಗಾರಿಕಾ ಹೂಡಿಕೆ, ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿ ಹಾಗೂ ಸಕಲರಿಗೆ ಸುಲಭದಲ್ಲಿ ದೊರೆಯಬಲ್ಲ ಅತ್ಯುತ್ತಮ ಆರೋಗ್ಯ ಸೇವೆಗಳು ಬೇಕೋ ಎಂದು ನಿರ್ಧರಿಸುವ ಸಮಯವೀಗ ಬಂದಿದೆ.

ಸರಕಾರದಿಂದಲೇ ಎಲ್ಲರಿಗೂ ಉಚಿತ ಆರೋಗ್ಯ ಸೇವೆಗಳಿರುವ ಇಂಗ್ಲೆಂಡಿನಲ್ಲೂ, ವಿಮೆಯ ಮೇಲೆ ಖಾಸಗಿ ರಂಗದಲ್ಲಿ ಹೆಚ್ಚಿನ ಆರೋಗ್ಯ ಸೇವೆಗಳು ದೊರೆಯುವ ಅಮೆರಿಕಾದಲ್ಲೂ ಸಾರ್ವಜನಿಕ ಆರೋಗ್ಯ ಸೇವೆಗಳ ವಿಚಾರವೇ ಪ್ರತೀ ಚುನಾವಣೆಯ ಮುಂಚೂಣಿಯಲ್ಲಿರುತ್ತದೆ. ನಮ್ಮಲ್ಲೂ ಕೂಡ ಆರೋಗ್ಯ ಸೇವೆಗಳೇ ಚುನಾವಣೆಯ ಅತಿ ಮುಖ್ಯ ವಿಷಯವಾಗಬೇಕೇ ಹೊರತು, ಯಾರ ಎಷ್ಟೆತ್ತರದ ಪ್ರತಿಮೆಯನ್ನು ಎಲ್ಲಿ ಏರಿಸಲಾಗಿದೆ ಎಂಬುದಲ್ಲ. ಇನ್ನೂರ ಇಪ್ಪತ್ನಾಲ್ಕು ವರ್ಷಗಳ ಹಿಂದೆ ಸುಲ್ತಾನರನ್ನು ಯಾರು ಕೊಂದರೆಂಬುದು ಚರ್ಚೆಯಾಗುವ ಬದಲು, ಈಗ ಪ್ರತಿನಿತ್ಯವೂ ಗರ್ಭಿಣಿಯರು, ತಾಯಂದಿರು, ಮಕ್ಕಳು ಮತ್ತು ಅಪಘಾತದ ಗಾಯಾಳುಗಳು ಸರಿಯಾಗಿ ಚಿಕಿತ್ಸೆ ದೊರೆಯದೆ ಸಾಯುತ್ತಿರುವುದಕ್ಕೆ ಯಾರು ಹೇಗೆ ಕಾರಣರು ಎಂಬುದಷ್ಟೇ ಚರ್ಚೆಯಾಗಬೇಕು, ಅವಕ್ಕೆ ಕಾರಣರಾದವರನ್ನು ಅಧಿಕಾರದಿಂದ ಕೆಳಗಿಳಿಸಬೇಕು.

ಕೊರೋನ ಕಾಲದ ತಪ್ಪುಗಳು 

ಕಳೆದ ಮೂರು ವರ್ಷಗಳಲ್ಲಿ ಕೊರೋನ ಸೋಂಕನ್ನು ನಿಭಾಯಿಸಿದ ಬಗೆಯು ಆರೋಗ್ಯ ಸೇವೆಗಳು ಹೇಗೆ ಇರಬಾರದು ಎನ್ನುವುದಕ್ಕೆ ಮಾದರಿಯಾಯಿತೆಂದೇ ಹೇಳಬಹುದು. ಕೊರೋನ ನಿರ್ವಹಣೆಗೆ ಸರಕಾರಿ ಆರೋಗ್ಯ ಸೇವೆಗಳಲ್ಲಿರುವ ಅನುಭವಿ, ತಜ್ಞ ಅಧಿಕಾರಿಗಳ ಬದಲಿಗೆ ವಿಷಯ ತಜ್ಞರೇ ಅಲ್ಲದವರ (ಹೃದ್ರೋಗ, ಚರ್ಮ ರೋಗ, ಕ್ಯಾನ್ಸರ್, ಮೂಳೆ ತಜ್ಞರು, ಹೃದಯ ಶಸ್ತ್ರಚಿಕಿತ್ಸಕರು ಇತ್ಯಾದಿ) ಸಲಹೆಗಳಿಗೆ ಮನ್ನಣೆಯಿತ್ತು ಅಂಥವರನ್ನೇ ಕಾರ್ಯಪಡೆಗಳಲ್ಲಿ ತುಂಬಿಸಿದ್ದು; ಖಾಸಗಿ ಕಾರ್ಪರೇಟ್ ವೈದ್ಯರ ಆಣತಿಯಂತೆ ಅನಗತ್ಯವಾಗಿ ಲಾಕ್ ಡೌನ್, ಕಚೇರಿ ಬಂದ್, ಶಾಲೆ-ಕಾಲೇಜು ಬಂದ್, ಮನೆಯಿಂದಲೇ ಕೆಲಸ ಇತ್ಯಾದಿ ನಿಯಮಗಳನ್ನು ಮಾಡಿದ್ದು; ಆಧಾರರಹಿತವಾದ, ಅನಗತ್ಯವಾದ ಪರೀಕ್ಷೆಗಳನ್ನು ಮತ್ತು ಚಿಕಿತ್ಸೆಗಳನ್ನು ಬಳಸಲು ಆಧುನಿಕ ಹಾಗೂ ಬದಲಿ ವೈದ್ಯಕೀಯ ಪದ್ಧತಿಗಳವರಿಗೆ ಅವಕಾಶವಿತ್ತದ್ದು; ಸೋಂಕಿತರಾಗಿದ್ದವರಿಗೆ, ಮಕ್ಕಳಿಗೆ ಮತ್ತು ಯುವಜನರಿಗೆ ಅನಗತ್ಯವಾಗಿ ಲಸಿಕೆ ನೀಡಿದ್ದು, ಲಸಿಕೆ ಐಚ್ಛಿಕವೆಂದು ಹೇಳುತ್ತಲೇ ಪರೋಕ್ಷವಾಗಿ ಒತ್ತಡ ಹೇರಿ ಹಾಕಿಸಿದ್ದು; ಈ ತಪ್ಪುಗಳನ್ನು ಪ್ರಶ್ನಿಸಿದ್ದವರ ಮೇಲೆ, ಸಾಕ್ಷ್ಯಾಧಾರಿತ ಸಲಹೆಗಳನ್ನು ನೀಡಿದ್ದವರ ಮೇಲೆ ಪೊಲೀಸ್ ಪ್ರಕರಣಗಳನ್ನು ದಾಖಲಿಸಿ ಸುಮ್ಮನಾಗಿಸಲು ಪ್ರಯತ್ನಿಸಿದ್ದು – ಇವೆಲ್ಲವನ್ನೂ ನಾಡಿನ ಪ್ರಜ್ಞಾವಂತ ಜನರು ನೆನಪಿಟ್ಟುಕೊಂಡು, ಭವಿಷ್ಯದಲ್ಲಿ ಈ ತಪ್ಪುಗಳಾವುವೂ ಮರುಕಳಿಸದಂತೆ ನೋಡಿಕೊಳ್ಳಬೇಕಾಗಿದೆ, ಈ ವೈಫಲ್ಯಗಳನ್ನೇ ಮಹತ್ಸಾಧನೆಗಳೆಂದು ಬಿಂಬಿಸಿ ಮತ ಕೇಳಲು ಬಂದರೆ ಅದನ್ನು ಹಿಮ್ಮೆಟ್ಟಿಸಬೇಕಾಗಿದೆ. ಕೊರೋನ ಕಾಲದಲ್ಲಿ ಆರೋಗ್ಯ ಸೇವೆಗಳ ಸುಧಾರಣೆಗೆ ಕೋಟಿಗಟ್ಟಲೆ ಸುರಿಯಲಾಗಿದೆ ಎಂದು ಹೇಳಿಕೊಳ್ಳುತ್ತಿದ್ದರೂ ತಾಯಿ-ಮಕ್ಕಳ  ಆರೈಕೆಯಲ್ಲಿ, ತುರ್ತು ಚಿಕಿತ್ಸೆ ಮತ್ತು ಅಪಘಾತದ ಗಾಯಾಳುಗಳ ಚಿಕಿತ್ಸೆಯಲ್ಲಿ ಪ್ರತಿನಿತ್ಯವೂ ಲೋಪಗಳು ಕಾಣುತ್ತಿರುವುದಕ್ಕೆ, ಆರೋಗ್ಯ ಸೇವೆಗಳಲ್ಲಿ ನಿತ್ಯವೂ ವರದಿಯಾಗುತ್ತಿರುವ ಭ್ರಷ್ಟಾಚಾರಕ್ಕೆ ಚುನಾವಣೆಗಳಲ್ಲಿ ಉತ್ತರವನ್ನು ನೀಡಬೇಕಾಗಿದೆ.

ಸಾರ್ವಜನಿಕ ಆರೋಗ್ಯ ಸೇವೆಗಳ ಅನುದಾನ ದುಪ್ಪಟ್ಟಾಗಲಿ

ಕೊರೋನ ಕಾಲದ ವೈಫಲ್ಯಗಳು ಪುನರಾವರ್ತಿಸಬಾರದು ಎಂದಾದರೆ ಆರೋಗ್ಯ ಸೇವೆಗಳ ಮೇಲೆ ಖಾಸಗಿ ಹಾಗೂ ಕಾರ್ಪರೇಟ್ ವ್ಯವಸ್ಥೆಯ ಹಿಡಿತವನ್ನು ಕೊನೆಗೊಳಿಸಿ ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಬಲಪಡಿಸುವುದು ಸರಕಾರದ ಪ್ರಮುಖ ಆದ್ಯತೆಯಾಗಬೇಕು. 

ಮೂಲಭೂತ ಆರೋಗ್ಯ ಸೇವೆಗಳು ಹಾಗೂ ರೋಗ ನಿಯಂತ್ರಣ ಕಾರ್ಯಕ್ರಮಗಳಲ್ಲಿ ಖಾಸಗಿ ವಲಯಕ್ಕೆ ಆಸಕ್ತಿಯಿಲ್ಲ, ಸರಕಾರ ಹಣ ಹೂಡುತ್ತಿಲ್ಲ, ಆರೋಗ್ಯ ವಿಮೆಯು ಕೆಲವೇ ಜನರಿಗೆ ಕೆಲವೇ ಚಿಕಿತ್ಸೆಗಳಿಗೆ ಸೀಮಿತಗೊಂಡಿದೆ. ಅಂತಲ್ಲಿ ಮೂಲಭೂತ ಆರೋಗ್ಯ ಸೇವೆಗಳು ಮತ್ತು ಕೋವಿಡ್ ಸಾಂಕ್ರಾಮಿಕದಂತಹ ರೋಗ ನಿಯಂತ್ರಣ ಕಾರ್ಯಗಳು ಉತ್ತಮಗೊಳ್ಳಬೇಕಿದ್ದರೆ ಸಾರ್ವಜನಿಕ ಆರೋಗ್ಯ ಸೇವೆಗಳ ಅನುದಾನವನ್ನು ದುಪ್ಪಟ್ಟು ಹೆಚ್ಚಿಸಬೇಕು. ರಾಜ್ಯ ಸರಕಾರದ ಜೊತೆಗೆ ಸ್ಥಳೀಯಾಡಳಿತಗಳು, ಉದ್ದಿಮೆಗಳ ಸಿಎಸ್‌ಆರ್ ನಿಧಿ, ಸ್ಥಳೀಯ ಸೇವಾ ಸಂಸ್ಥೆಗಳು, ಸ್ವಸಹಾಯ ಸಂಘಗಳು, ಸ್ತ್ರೀ ಶಕ್ತಿ ಸಂಘಟನೆಗಳು, ದತ್ತಿ ಸಂಸ್ಥೆಗಳು ಹಾಗೂ ದಾನಿಗಳು, ಕಾರ್ಮಿಕ ಸಂಘಗಳು ಮುಂತಾದವು ಆಸ್ಪತ್ರೆ/ಆರೋಗ್ಯ ಕೇಂದ್ರಗಳಿಗೆ ನೆರವು ನೀಡುವುದನ್ನು ಉತ್ತೇಜಿಸಬೇಕು.

ಸಾರ್ವಜನಿಕ ಆರೋಗ್ಯ ಸೇವೆಗಳ ಆಡಳಿತ ವಿಕೇಂದ್ರೀಕರಣಗೊಳ್ಳಲಿ

ಸಾರ್ವಜನಿಕ ಆರೋಗ್ಯ ಸೇವೆಗಳ ವೆಚ್ಚಗಳಲ್ಲಿ ರಾಜಕಾರಣಿಗಳು ಮತ್ತವರ ಏಜೆಂಟರು ಶೇ. 40-60 ಹೊಡೆದುಕೊಳ್ಳುವುದನ್ನು ತಪ್ಪಿಸಲು ಸರಕಾರಿ ಆರೋಗ್ಯ ಸಂಸ್ಥೆಗಳ ಆಡಳಿತವನ್ನು ವಿಕೇಂದ್ರೀಕರಿಸಬೇಕು; ಸ್ಥಳೀಯರಿಗೆ ಮತ್ತು ಮೇಲೆ ಹೇಳಿದ ಸಂಸ್ಥೆ-ಸಂಘಟನೆಗಳವರಿಗೆ ಆರೋಗ್ಯ ಸಂಸ್ಥೆಗಳ ನಿರ್ವಹಣೆಯಲ್ಲಿ ಮತ್ತು ನಿಗಾವಣೆಯಲ್ಲಿ ಭಾಗೀದಾರಿಕೆ ನೀಡಬೇಕು. 

ಸರಕಾರಿ ಆರೋಗ್ಯ ಸಂಸ್ಥೆಗಳ ಖರ್ಚು ಪಾರದರ್ಶಕ, ಸಾಕ್ಷ್ಯಾಧಾರಿತವಾಗಿರಲಿ

ಸರಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಪರೀಕ್ಷೆ ಮತ್ತು ಚಿಕಿತ್ಸೆಯ ಉಪಕರಣಗಳು, ಸಾಮಾಗ್ರಿಗಳು ಹಾಗೂ ಔಷಧಗಳ ಖರೀದಿ, ಆಹಾರ ಪೂರೈಕೆ, ನಿರ್ಮಾಣ ಕಾರ್ಯಗಳು ಮುಂತಾದವು ಅಗತ್ಯಕ್ಕನುಗುಣವಾಗಿ, ಸಾಕ್ಷ್ಯಾಧಾರಿತವಾಗಿ ಇರಬೇಕು. ಹಣ ಹೊಡೆಯುವುದಕ್ಕಾಗಿಯೋ, ಷೋಕಿಗಾಗಿಯೋ ದುಬಾರಿ ಉಪಕರಣಗಳನ್ನು ಖರೀದಿಸುವಂತಿರಬಾರದು. ವಾರ್ಷಿಕ ಲೆಕ್ಕ ಪರಿಶೋಧನೆಯು ಕೂಡ ಪಾರದರ್ಶಕವಾಗಿರಬೇಕು.

ಜನರಿಗೆ ಪ್ರಯೋಜನವಿಲ್ಲದ ಪಿಪಿಪಿ ಬೇಡ

ಆರೋಗ್ಯ ಸೇವೆಗಳಲ್ಲಿ ಸರಕಾರಿ-ಖಾಸಗಿ ಸಹಭಾಗಿತ್ವದಿಂದ (ಪಿಪಿಪಿ) ಸರಕಾರಕ್ಕಾಗಲೀ, ಜನರಿಗಾಗಲೀ, ಆರೋಗ್ಯ ಸೇವೆಗಳಿಗಾಗಲೀ ಯಾವುದೇ ಪ್ರಯೋಜನಗಳಾಗಿವೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಿಲ್ಲ, ಬದಲಿಗೆ, ಅಂಥ ಪ್ರಯೋಜನಗಳೇನೂ ಆಗಿಲ್ಲ ಎನ್ನುವುದಕ್ಕೂ, ಖಾಸಗಿಯವರಿಗಷ್ಟೇ ಲಾಭಗಳಾಗಿವೆ ಎನ್ನುವುದಕ್ಕೂ ಸಾಕಷ್ಟು ಸಾಕ್ಷ್ಯಾಧಾರಗಳಿವೆ. ಆದ್ದರಿಂದ ಆರೋಗ್ಯ ಉಪಕೇಂದ್ರಗಳಿಂದ ಹಿಡಿದು ಅತ್ಯುನ್ನತ ಆಸ್ಪತ್ರೆಗಳವರೆಗೆ ಖಾಸಗಿಯವರ ಜೊತೆ ಪಿಪಿಪಿ ಮಾದರಿಯ ವ್ಯವಸ್ಥೆಯನ್ನು ಉತ್ತೇಜಿಸಬಾರದು, ಬದಲಿಗೆ, ಮೇಲೆ ಹೇಳಿದಂತೆ, ಆರೋಗ್ಯ ಸೇವೆಗಳು ಸಾರ್ವಜನಿಕ ಒಡೆತನದಲ್ಲೇ ಇದ್ದು, ಖಾಸಗಿ ಸೇವಾಸಂಸ್ಥೆಗಳಿಗೆ ಸಾಮಾಜಿಕ ಬದ್ಧತೆಯ ರೂಪದಲ್ಲಿ ನೆರವು ನೀಡುವುದನ್ನು ಉತ್ತೇಜಿಸಬೇಕು ಅಥವಾ ಕಡ್ಡಾಯಗೊಳಿಸಲೂಬಹುದು. ಯಶಸ್ವಿನಿಯಂತಹ ಯೋಜನೆಗಳಲ್ಲಿ ಕೆಲವೇ ಕೆಲವು ಚಿಕಿತ್ಸೆಗೆ ಕೆಲವೇ ಕೆಲವು ದೊಡ್ಡ ಖಾಸಗಿ ಆಸ್ಪತ್ರೆಗಳಿಗೆ ನೂರಾರು ಕೋಟಿ ಬಿಲ್ ಸಂದಾಯ ಮಾಡುವ ಬದಲು ಅದೇ ಹಣವನ್ನು ಸರಕಾರಿ ಆಸ್ಪತ್ರೆಗಳ ಸುಧಾರಣೆಗೆ ಒದಗಿಸಬೇಕು.

ಕೆಪಿಎಂಇ ಮಾನದಂಡಗಳು ಸರಕಾರಿ ಸಂಸ್ಥೆಗಳಿಗೂ ಇರಲಿ

ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ಕೆಪಿಎಂಇ) ಕಾಯಿದೆಯಲ್ಲಿ ಸೂಚಿಸಲಾಗಿರುವ ಮಾನದಂಡಗಳು ಸರಕಾರಿ ಆರೋಗ್ಯ ಸೇವೆಗಳಿಗೂ ಅನ್ವಯವಾಗಬೇಕು. ಹಿಂದೆ 2016-17ರಲ್ಲಿ ಶ್ರೀ ರಮೇಶ್ ಕುಮಾರ್ ಅವರು ಆರೋಗ್ಯ ಸಚಿವರಾಗಿದ್ದಾಗ ನ್ಯಾಯಮೂರ್ತಿ ವಿಕ್ರಮ್‌ಜಿತ್ ಸೇನ್ ನೇತೃತ್ವದ ಸಮಿತಿಯು ಅದೇ ಸಲಹೆಯನ್ನು ನೀಡಿತ್ತಾದರೂ, ಕೆಲವು ‘ಚಳುವಳಿಗಾರರ’ ಒತ್ತಡದಿಂದ ಅದನ್ನು ಕೈಬಿಡಲಾಗಿತ್ತು. ಆರೋಗ್ಯ ಸೇವೆಗಳನ್ನು ಖಾಸಗಿ ಹಿಡಿತದಿಂದ ಬಿಡಿಸಬೇಕಾದರೆ ಸಾರ್ವಜನಿಕ ಆರೋಗ್ಯ ಸೇವೆಗಳು ಖಾಸಗಿ ಸೇವೆಗಳಷ್ಟೇ ಅಥವಾ ಅವಕ್ಕಿಂತಲೂ ಉತ್ತಮವಾಗಿ ಸಜ್ಜುಗೊಳ್ಳಬೇಕಾಗುತ್ತದೆ.

ಸರಕಾರಿ ಆರೋಗ್ಯ ಸೇವೆಗಳು ಸುಸಜ್ಜಿತವಾಗಿರಲಿ

ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸುಸಜ್ಜಿತವಾದ ಹೆರಿಗೆ ಮತ್ತು ಮಕ್ಕಳ ಚಿಕಿತ್ಸಾ ಘಟಕಗಳಿರಬೇಕು. ಎಲ್ಲಾ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಗಾಯಾಳುಗಳ ತುರ್ತು ಚಿಕಿತ್ಸೆಗೆ ಸುಸಜ್ಜಿತ ಘಟಕಗಳು, ಸುಸಜ್ಜಿತವಾದ ತೀವ್ರ ನಿಗಾ ಘಟಕಗಳು ಮತ್ತು ಡಯಾಲಿಸಿಸ್ ಘಟಕಗಳಿರಬೇಕು. ತಾಲೂಕು ಆಸ್ಪತ್ರೆಗಳನ್ನು ತೃತೀಯ ಸ್ತರದ ಆಸ್ಪತ್ರೆಗಳನ್ನಾಗಿ ಮೇಲ್ದರ್ಜೆಗೇರಿಸುವುದಲ್ಲದೆ, ಎಲ್ಲಾ ಜಿಲ್ಲೆಗಳಲ್ಲಿ ಅತ್ಯುನ್ನತ ಸೌಲಭ್ಯಗಳಿರುವ ಆಸ್ಪತ್ರೆಗಳನ್ನು ಒದಗಿಸಬೇಕು. ಈ ಎಲ್ಲಾ ಸಂಸ್ಥೆಗಳಿಗೂ ಅಗತ್ಯವಾದ, ಎಲ್ಲಾ ಸ್ತರಗಳ, ವಿಶೇಷತೆಗಳ, ವೈದ್ಯಕೀಯ ಮತ್ತು ಶುಶ್ರೂಷಾ ಸಿಬ್ಬಂದಿಯನ್ನು ನೇಮಿಸಬೇಕು.  ತಜ್ಞ ವೈದ್ಯರ, ಅದರಲ್ಲೂ ತುರ್ತು ಚಿಕಿತ್ಸೆಗೆ ಅತ್ಯಗತ್ಯವಾಗಿರುವ ಅರಿವಳಿಕೆ ತಜ್ಞರ, ಕೊರತೆಯಿರುವಲ್ಲಿ ಸ್ಥಳೀಯವಾಗಿ ಲಭ್ಯರಿರುವ ಖಾಸಗಿ ವೈದ್ಯಕೀಯ ತಜ್ಞರ ಸೇವೆಯನ್ನು ಪಡೆಯಬೇಕು. 

ತುರ್ತು ಚಿಕಿತ್ಸೆ ಸುಲಭದಲ್ಲಿ ಸಿಗಲಿ

ಸರಕಾರಿ ಆರೋಗ್ಯ ಸೇವೆಗಳು ಸುಸಜ್ಜಿತಗೊಳ್ಳುವವರೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಅಪಘಾತ ಚಿಕಿತ್ಸೆಗೆ ರೂಪಿಸಲಾದ ಹರೀಶ್ ಸಾಂತ್ವನ ಯೋಜನೆಯನ್ನು ಬಲಪಡಿಸಬೇಕು, ಆಯ್ದ ಕೆಲವು ಖಾಸಗಿ ಆಸ್ಪತ್ರೆಗಳನ್ನು ಅದೇ ಯೋಜನೆಯಡಿಯಲ್ಲಿ ಸುಸಜ್ಜಿತಗೊಳಿಸಬಹುದು. ತುರ್ತು ಹೆರಿಗೆ, ಹೃದಯಾಘಾತದಂತಹ ತುರ್ತು ಅಗತ್ಯಗಳಿಗೂ ಇದೇ ರೀತಿಯ ಯೋಜನೆಗಳನ್ನು ರೂಪಿಸಬಹುದು.

ಸರಕಾರಿ ಆರೋಗ್ಯ ಸೇವೆಗಳ ಸಿಬ್ಬಂದಿ ಭರ್ತಿಯಿರಲಿ

ಈ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಮತ್ತು ಆಸ್ಪತ್ರೆಗಳಲ್ಲಿ ಎಲ್ಲ ಮಟ್ಟದ ವೈದ್ಯರು, ದಾದಿಯರು ಮತ್ತು ಇತರ ಸಿಬ್ಬಂದಿಯ ಎಲ್ಲಾ ಸ್ಥಾನಗಳು ಯಾವತ್ತೂ ಭರ್ತಿಯಾಗಿಯೇ ಇರಬೇಕು. ಅದಕ್ಕಾಗಿ ಪ್ರತೀ ವರ್ಷವೂ ಅವರನ್ನು ಶಾಶ್ವತ ನೆಲೆಯಲ್ಲಿ ನೇಮಿಸುವ ಪ್ರಕ್ರಿಯೆ ಇರಲೇಬೇಕು. ರಾಜ್ಯದಲ್ಲಿ ಅತ್ಯಧಿಕ ಸಂಖ್ಯೆಯ ವೈದ್ಯಕೀಯ ಕಾಲೇಜುಗಳಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ದುಡಿಯಲು ವೈದ್ಯರೇ ದೊರೆಯುತ್ತಿಲ್ಲ ಎಂದು ಹೇಳುತ್ತಾ, ಕಿರಿಯ ವೈದ್ಯರನ್ನು ಕಡ್ಡಾಯವಾಗಿ ಅಲ್ಲಿ ನಿಯೋಜಿಸಲಾಗುತ್ತಿದೆ. ರಾಜ್ಯದ ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಕಲಿತವರಿಗಷ್ಟೇ ಇರುವ ಈ ನಿಯಮದಿಂದ ರಾಜ್ಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಅದರ ಬದಲಿಗೆ 3 ಪಟ್ಟು ಹೆಚ್ಚಿನ ಭತ್ಯೆಯನ್ನು ನೀಡಿ ಪೂರ್ಣ ತರಬೇತಾದ ವೈದ್ಯರನ್ನೇ ನೇಮಿಸಲು ಕ್ರಮ ಕೈಗೊಳ್ಳಬೇಕು. ಜೊತೆಗೆ, ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳ ಆರೋಗ್ಯ ಕೇಂದ್ರಗಳಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳನ್ನೂ, ವೈದ್ಯರಿಗೂ, ವೈದ್ಯಕೀಯ ಸಿಬಂದಿಗೂ ಸೂಕ್ತವಾದ, ಸುರಕ್ಷಿತವಾದ ನಿವಾಸಗಳ ವ್ಯವಸ್ಥೆಯನ್ನೂ ಮಾಡಬೇಕು.

ಸಣ್ಣ ಆಸ್ಪತ್ರೆಗಳು ಬೇಕು, ಕಾರ್ಪರೇಟ್ ಸಾಕು

ಖಾಸಗಿ ಕಾರ್ಪೊರೇಟ್ ಆಸ್ಪತ್ರೆಗಳನ್ನು ಪೋಷಿಸುವ ಬದಲು ಸಣ್ಣ ಆಸ್ಪತ್ರೆಗಳನ್ನು ಉತ್ತೇಜಿಸಬೇಕು. ರಾಜ್ಯದ ಶೇ. 70ರಷ್ಟು ಖಾಸಗಿ ಆಸ್ಪತ್ರೆಗಳು 10-30 ಹಾಸಿಗೆಗಳ ಸಣ್ಣ ಆಸ್ಪತ್ರೆಗಳಾಗಿವೆ. ಈ ಆಸ್ಪತ್ರೆಗಳೂ, ಅಲ್ಲಿರುವ ವೈದ್ಯರೂ ಕೇವಲ ಚಿಕಿತ್ಸೆಯನ್ನಷ್ಟೇ ನೀಡುವುದಲ್ಲ, ಬದಲಿಗೆ ಸ್ಥಳೀಯವಾಗಿ ರೋಗ ನಿಯಂತ್ರಣ ಹಾಗೂ ಆರೋಗ್ಯ ಪಾಲನೆಯಲ್ಲೂ ಪಾತ್ರ ವಹಿಸುತ್ತಾರೆ. ಇಂತಹಾ ಆಸ್ಪತ್ರೆಗಳಿಗೆ ಸರಕಾರದಿಂದ ಯಾವ ರೀತಿಯ ಬೆಂಬಲವಾಗಲೀ, ಉತ್ತೇಜನವಾಗಲೀ ದೊರೆಯುವುದೇ ಇಲ್ಲ. ಆದರೆ, ವಿಪರೀತ ದರದಲ್ಲಿ ಸೀಮಿತ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ಕಾರ್ಪರೇಟ್ ಆಸ್ಪತ್ರೆಗಳಿಗೆ ಭೂಮಿ, ತೆರಿಗೆ ವಿನಾಯಿತಿ ಮುಂತಾದ ಹಲಬಗೆಯ ನೆರವನ್ನು ನೀಡಲಾಗುತ್ತಿದೆ, ಮಾತ್ರವಲ್ಲ, ವಿಮಾ ಯೋಜನೆಗಳ ನೆಪದಲ್ಲಿ ಜನರನ್ನು ಅವುಗಳತ್ತ ತಳ್ಳಿ ಬೊಕ್ಕಸದ ಹಣವನ್ನೂ ನೀಡಲಾಗುತ್ತಿದೆ. ಆದ್ದರಿಂದ, ನಮ್ಮ ರಾಜ್ಯದ ಆರೋಗ್ಯ ಸೇವೆಗಳು ಸುಧಾರಿಸಬೇಕಾದರೆ ಖಾಸಗಿ ಆಸ್ಪತ್ರೆಗಳತ್ತ ಸರಕಾರದ ದೃಷ್ಟಿಕೋನವು ತಿರುವುಮುರುವಾಗಬೇಕು: ವಿಪರೀತ ದರದಲ್ಲಿ ಸೀಮಿತ ರೋಗಗಳಿಗೆ ಚಿಕಿತ್ಸೆ ನೀಡುವ ನಗರ ಕೇಂದ್ರಿತ ಬೃಹತ್ ಆಸ್ಪತ್ರೆಗಳಿಗೆ ನೆರವನ್ನು ನೀಡುವ ಬದಲು ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳಲ್ಲಿ ಮಿತದರದಲ್ಲಿ ಸಮಗ್ರ ಚಿಕಿತ್ಸೆಯನ್ನು ಒದಗಿಸುತ್ತಿರುವ ಸಣ್ಣ ಆಸ್ಪತ್ರೆಗಳಿಗೆ ಎಲ್ಲಾ ನೆರವನ್ನೂ ನೀಡಬೇಕು.

ರೋಗ ನಿಯಂತ್ರಣ ಸಾಕ್ಷ್ಯಾಧಾರಿತವಾಗಿ, ಜನಸ್ನೇಹಿಯಾಗಿರಲಿ

ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಸಾರ್ವಜನಿಕ ಆರೋಗ್ಯ ಸೇವೆಗಳಲ್ಲಿರುವ ಅನುಭವಿ ತಜ್ಞ ವೈದ್ಯರ ಸಲಹೆಗೆ ಮಹತ್ವ ನೀಡಬೇಕೇ ಹೊರತು ವಿಷಯ ತಜ್ಞರಲ್ಲದ, ಕಾರ್ಪರೇಟ್ ಹಿತಾಸಕ್ತಿಗಳನ್ನು ಪ್ರತಿನಿಧಿಸುವವರಿಗಲ್ಲ. ಈ ನಿಯಂತ್ರಣ ಕ್ರಮಗಳು ವೈಜ್ಞಾನಿಕವೂ, ಸಾಕ್ಷ್ಯಾಧಾರಿತವೂ ಆಗಿರಬೇಕು ಮತ್ತು ಜನರ ಒಟ್ಟಾರೆ ಹಿತವನ್ನು ರಕ್ಷಿಸುವಂತಿರಬೇಕು. ಬದಲಿ ವೈದ್ಯಕೀಯ ಪದ್ಧತಿಗಳಲ್ಲಿ ಸೂಕ್ಷ್ಮಾಣು ಸೋಂಕುಗಳೆಂಬ ಪರಿಕಲ್ಪನೆಯೇ ಇಲ್ಲದಿರುವಾಗ ಸೋಂಕು ರೋಗಗಳಿಗೆ ಬದಲಿ ಚಿಕಿತ್ಸೆಯಿದೆಯೆಂದು ಸುಳ್ಳುಗಳನ್ನು ಪ್ರಚಾರ ಮಾಡುವುದಕ್ಕೆ ಅವಕಾಶ ನೀಡಬಾರದು, ಸರಕಾರಿ ಆರೋಗ್ಯ ಸೇವೆಗಳಲ್ಲಿ ಅಂಥ ಆಧಾರರಹಿತವಾದ, ಅಪಾಯಕಾರಿಯೂ ಆಗಬಹುದಾದ ಚಿಕಿತ್ಸೆಗಳಿಗೆ ಉತ್ತೇಜನ ನೀಡಬಾರದು.

ಆಧಾರವಿಲ್ಲದ ಪ್ರಾಚೀನ ಪದ್ಧತಿಗಳಿಗೆ ಮನ್ನಣೆ ಬೇಡ

ಇತರ ಕಾಯಿಲೆಗಳಿಗೂ ಕೂಡ ಆಯುರ್ವೇದ, ಹೋಮಿಯೋಪತಿ, ಯುನಾನಿ ಪದ್ಧತಿಗಳ ಸಾಕ್ಷ್ಯಾಧಾರವಿಲ್ಲದ ಚಿಕಿತ್ಸೆ ಹಾಗೂ ಔಷಧಗಳಿಗೆ ಹಣವೊದಗಿಸಬಾರದು. ಉಪಕೇಂದ್ರಗಳಿಂದ ತೊಡಗಿ ಜಿಲ್ಲಾಸ್ಪತ್ರೆಗಳವರೆಗೆ ಎಲ್ಲೆಡೆ ಯೋಗ ಮತ್ತು ಬದಲಿ ಚಿಕಿತ್ಸೆಯ ಸೌಲಭ್ಯಗಳನ್ನು ನಿರ್ಮಿಸುವುದಕ್ಕೆ ವ್ಯರ್ಥ ಮಾಡಲಾಗುತ್ತಿರುವ ಹಣವನ್ನು ಆಧುನಿಕ ಚಿಕಿತ್ಸೆಗಳನ್ನು ಬಲಪಡಿಸುವುದಕ್ಕೆ ವಿನಿಯೋಗಿಸಬೇಕು. ಆಧುನಿಕ ವೈದ್ಯ ವಿಜ್ಞಾನದೊಳಕ್ಕೆ ಈ ಬದಲಿ ಪದ್ಧತಿಗಳನ್ನು ತೂರಿಸಲು ಹೊಸ ಶಿಕ್ಷಣ ನೀತಿಯಡಿಯಲ್ಲಿ ಆರಂಭಿಸಿರುವ ಪ್ರಯತ್ನಗಳನ್ನು ರಾಜ್ಯವು ವಿರೋಧಿಸಬೇಕು. ಸಮಗ್ರ ಆರೋಗ್ಯ ಸೇವೆಗಳೆಂದರೆ ಅಧುನಿಕ ಆರೋಗ್ಯ ಸೇವೆಗಳು, ಪೌಷ್ಠಿಕ ಆಹಾರ, ವೈಚಾರಿಕ-ವೈಜ್ಞಾನಿಕ ಆಧುನಿಕ ಶಿಕ್ಷಣವನ್ನು ನೀಡುವುದೇ ಹೊರತು ಶತಮಾನಗಳಷ್ಟು ಹಿಂದಿನ ಆಧಾರರಹಿತ ಬದಲಿ ಪದ್ಧತಿಗಳನ್ನು ಕಲಬೆರಕೆ ಮಾಡುವುದಲ್ಲ. 

ಒಟ್ಟಿನಲ್ಲಿ, ನಮ್ಮ ಜನರಿಗೆ ಅತ್ಯಾಧುನಿಕ ಆರೋಗ್ಯ ಸೇವೆಗಳನ್ನು ಸಾರ್ವಜನಿಕವಾಗಿ ಒದಗಿಸಬೇಕೆಂಬ 1943ರ ಸರ್ ಜೋಸೆಫ್ ಭೋರ್ ಸಮಿತಿ ಮತ್ತು ಸ್ವಾತಂತ್ರ್ಯಾನಂತರ ನೆಹರೂ ಆಡಳಿತದ ಆಶಯಗಳನ್ನು ಸಾಕಾರಗೊಳಿಸಬಲ್ಲ ಸರಕಾರವನ್ನು ಆಯ್ಕೆ ಮಾಡಬೇಕಾದ ಜವಾಬ್ದಾರಿಯು ನಮ್ಮೆಲ್ಲರದಾಗಿದೆ.

ವೈಜ್ಞಾನಿಕವಾದ, ಅತ್ಯಾಧುನಿಕವಾದ, ಜನಸ್ನೇಹಿಯಾದ ಆರೋಗ್ಯ ಸೇವೆ ಬೇಕು

ಮೇ 21, 2023: ಸಿದ್ದುಗೆ ಸವಾಲ್‌ -1 | ವೈಜ್ಞಾನಿಕ, ಅತ್ಯಾಧುನಿಕ, ಜನಸ್ನೇಹಿ ಆರೋಗ್ಯಸೇವೆ ಬೇಕು: TheStateMedia.in

ಕೊರೋನ ಸೋಂಕಿನ ಅವೈಜ್ಞಾನಿಕ, ಅಮಾನವೀಯ ನಿಭಾವಣೆಯಿಂದ ರಾಜ್ಯದ ಜನತೆ ನರಳಿದ್ದಕ್ಕೆ, ಆರ್ಥಿಕತೆಯೂ ಹೊಡೆತಕ್ಕೀಡಾದುದಕ್ಕೆ ಈ ಚುನಾವಣೆಗಳಲ್ಲಿ ತಕ್ಕ ಉತ್ತರವನ್ನು ನೀಡಿರುವುದು ಸ್ಪಷ್ಟವಾಗಿದೆ. ಈ ಪಾಠವನ್ನು ಹೊಸ ಸರಕಾರವು ನೆನಪಿನಲ್ಲಿಟ್ಟುಕೊಂಡು, ಸಾಂಕ್ರಾಮಿಕ ರೋಗಗಳನ್ನು ನಿಭಾಯಿಸುವುದರಲ್ಲಷ್ಟೇ ಅಲ್ಲ, ಸಮಗ್ರ ಆರೋಗ್ಯ ಸೇವೆಗಳನ್ನು ಒದಗಿಸುವಲ್ಲೂ ವೈಜ್ಞಾನಿಕವಾಗಿ, ಜನಪರವಾಗಿ ವರ್ತಿಸುವ ಬದ್ಧತೆಯನ್ನು ತೋರಬೇಕು.

ದೇಶದ ಸಮಸ್ತ ಜನರಿಗೆ ಅತ್ಯಾಧುನಿಕವಾದ, ವೈಜ್ಞಾನಿಕವಾದ ಆರೋಗ್ಯ ಸೇವೆಗಳನ್ನು ಸಾರ್ವಜನಿಕ ರಂಗದಲ್ಲಿ ಒದಗಿಸುವುದು ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಅಗ್ರಗಣ್ಯ ನಾಯಕರಾಗಿದ್ದ ಸುಭಾಷ್ ಚಂದ್ರ ಬೋಸ್, ಜವಾಹರಲಾಲ್ ನೆಹರೂ ಮುಂತಾದವರ ಗುರಿಯಾಗಿತ್ತು, ಬೋಸ್ ನೇತೃತ್ವದ ಸೋಖಿ ಸಮಿತಿ ಹಾಗೂ ಸ್ವಾತಂತ್ರ್ಯ ಪೂರ್ವದ ಸರ್ ಭೋರ್ ಸಮಿತಿಗಳು ಪ್ರಾಥಮಿಕ ಹಂತದಿಂದ ಅತ್ಯುನ್ನತ ಹಂತದವರೆಗೆ ಆಧುನಿಕ ವೈದ್ಯಕೀಯ ಸೇವೆಗಳನ್ನು ಒದಗಿಸುವುದಕ್ಕೆ ಮತ್ತು ಆಧುನಿಕ ವೈದ್ಯವಿಜ್ಞಾನದ ಶಿಕ್ಷಣಕ್ಕೆ ಒತ್ತು ನೀಡಿದ್ದವು, ಆಯುರ್ವೇದ ಮುಂತಾದ ಪ್ರಾಚೀನ ಪದ್ಧತಿಗಳಿಗೆ ಯಾವುದೇ ಪ್ರಾಮುಖ್ಯತೆಯನ್ನು ನೀಡಿರಲಿಲ್ಲ. ಈ ಕೆಲವು ವರ್ಷಗಳಲ್ಲಿ ಆಧುನಿಕ ವೈದ್ಯಕೀಯ ಸೇವೆಗಳನ್ನು ಅವಹೇಳನ ಮಾಡಿ, ಕಡೆಗಣಿಸಿ, ಅವುಗಳ ಬದಲಿಗೆ, ಯಾವುದೇ ಕಾಯಿಲೆಗೂ ಪರಿಣಾಮಕಾರಿ ಚಿಕಿತ್ಸೆಯನ್ನು ನೀಡಲು ಸಾಧ್ಯವೇ ಇಲ್ಲದ, ಯಾವುದೇ ಸಾಕ್ಷ್ಯಾಧಾರಗಳೂ ಇಲ್ಲದ ಪ್ರಾಚೀನ ಪದ್ಧತಿಗಳನ್ನು ಮುಂದಕ್ಕೊತ್ತುವ ಪ್ರಯತ್ನಗಳು ನಿರಂತರವಾಗಿ ಸಾಗುತ್ತಿವೆ. ಕೊರೋನ ಕಾಲದಲ್ಲಿ ಪಶುವಿನ ಮೂತ್ರ-ಸೆಗಣಿಗಳಿಂದ ಹಿಡಿದು, ಅರಿಶಿನ, ಬಗೆಬಗೆಯ ಬಳ್ಳಿಗಳನ್ನೆಲ್ಲ ಜನರಿಗೆ ಕೊಟ್ಟದ್ದು, ಗರ್ಭಿಣಿಯರಿಗೆ ಮತ್ತು ಮಕ್ಕಳಿಗೆ ಇಂಥವುಗಳ ನಿರುಪಯುಕ್ತ ಪೊಟ್ಟಣಗಳನ್ನು, ಬಿಸ್ಕತ್ತುಗಳನ್ನು ಕೊಡುತ್ತಿರುವುದು, ಉಪಕೇಂದ್ರಗಳಿಂದ ಹಿಡಿದು ಉನ್ನತ ಆಸ್ಪತ್ರೆಗಳವರೆಗೆ ಎಲ್ಲೆಡೆ ಈ ಪ್ರಾಚೀನ ಚಿಕಿತ್ಸೆಗಳ ಕೇಂದ್ರಗಳನ್ನು ಬೆಳೆಸಲಾಗುತ್ತಿರುವುದು, ಶಾಲಾ ಮಕ್ಕಳಿಂದ ತೊಡಗಿ ಬೃಹತ್ ಆಸ್ಪತ್ರೆಗಳವರೆಗೆ ವೈದ್ಯಕೀಯ ಚಿಕಿತ್ಸಾ ಕ್ರಮವೇ ಅಲ್ಲದ ಯೋಗಾಭ್ಯಾಸವನ್ನು ಸರ್ವರೋಗ ನಿವಾರಕವೆಂಬಂತೆ ಉತ್ತೇಜಿಸುತ್ತಿರುವುದು ಅಥವಾ ಹೇರುತ್ತಿರುವುದು ಇದಕ್ಕೆ ಉದಾಹರಣೆಗಳಾಗಿವೆ. ಈ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆಯಲ್ಲೂ ಇವನ್ನು ಇನ್ನಷ್ಟು ಬೆಳೆಸುವ ಭರವಸೆಯನ್ನು ನೀಡಲಾಗಿದೆ! ಇವನ್ನು ಹೀಗೆಲ್ಲ ಉತ್ತೇಜಿಸುವ ಮೊದಲು, ಈಗಾಗಲೇ ಇವುಗಳನ್ನು ಬಳಸಿರುವುದರಿಂದ ಯಾರಿಗೆ ಎಲ್ಲಿ ಏನೇನು ಪ್ರಯೋಜನಗಳಾಗಿವೆ ಎನ್ನುವುದನ್ನು ಸಾಕ್ಷ್ಯಾಧಾರಿತವಾಗಿ, ವೈಜ್ಞಾನಿಕವಾಗಿ ಪರಿಶೀಲಿಸುವ ಕೆಲಸವನ್ನು ಕೂಡಲೇ ಆರಂಭಿಸಬೇಕು; ಆಧುನಿಕ ವೈದ್ಯಕೀಯ ಸೇವೆಗಳಿಗೆ ಹೋಲಿಸಿದರೆ ಇವುಗಳಿಂದ ಪ್ರಯೋಜನವಿಲ್ಲ, ಬದಲಿಗೆ ಹಾನಿಯೇ ಆಗುತ್ತಿದೆ ಎಂದಾದರೆ ಇವುಗಳಿಗೆ ನೀಡಲಾಗುವ ನೆರವನ್ನು ಸ್ಥಗಿತಗೊಳಿಸಬೇಕು, ಅದೇ ಹಣವನ್ನು ಆಧುನಿಕ ವೈದ್ಯಕೀಯ ವ್ಯವಸ್ಥೆಯನ್ನು ಉತ್ತಮಪಡಿಸಲು ವಿನಿಯೋಗಿಸಬೇಕು. ಹಾಗೆಯೇ, ಇಂಥ ಪೊಟ್ಟಣಗಳಿಗೆ ಮಾಡುವ ವೆಚ್ಚದಲ್ಲಿ ಗರ್ಬಿಣಿಯರಿಗೆ ಮತ್ತು ಮಕ್ಕಳಿಗೆ ಪೌಷ್ಠಿಕವಾದ ಮೊಟ್ಟೆ, ಮಾಂಸಗಳನ್ನು ಒದಗಿಸಬಹುದು.

ಈ ಚುನಾವಣೆಗೆ ಕಾಂಗ್ರೆಸ್ ನೀಡಿರುವ ಪ್ರಣಾಳಿಕೆಯ 36ನೇ ಪುಟದಲ್ಲಿ ಸಾರ್ವಜನಿಕ ಆರೋಗ್ಯ ಸೇವೆಗಳ ಬಲವರ್ಧನೆಯ ಬಗ್ಗೆ ಕೆಲವು ಆಶ್ವಾಸನೆಗಳನ್ನು ನೀಡಲಾಗಿದೆ. ಆರೋಗ್ಯ ವೆಚ್ಚವನ್ನು ರಾಜ್ಯ ಜಿಡಿಪಿಯ ಶೇ. 5ಕ್ಕೆ ಏರಿಸುವುದು, ವೈದ್ಯರು ಮತ್ತು ಇತರ ಸಿಬ್ಬಂದಿಯ ಕೊರತೆಯನ್ನು ತುಂಬುವುದು, ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು, ತಾಲೂಕು ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿ ಬಲಪಡಿಸುವುದು, ಎಲ್ಲಾ ಕಂದಾಯ ವಿಭಾಗಗಳಲ್ಲೂ ಅತ್ಯುನ್ನತ ಆರೋಗ್ಯ ಸಂಸ್ಥೆಗಳನ್ನು ಸ್ಥಾಪಿಸುವುದು, ಪ್ರತೀ ನೂರು ಕಿಮೀಯಲ್ಲಿ ಗಾಯಾಳುಗಳ ಚಿಕಿತ್ಸೆಗೆ ವ್ಯವಸ್ಥೆ ಮಾಡುವುದು ಎಂಬ ಭರವಸೆಗಳನ್ನು ನೀಡಲಾಗಿದ್ದು, ಇವೆಲ್ಲವೂ ನಾವು ಪ್ರಕಟಿಸಿದ್ದ ಜನಪ್ರಣಾಳಿಕೆಯಲ್ಲಿದ್ದ ಬೇಡಿಕೆಗಳಾಗಿರುವುದರಿಂದ ಸ್ವಾಗತಾರ್ಹವಾಗಿವೆ, ಇವನ್ನು ಜಾರಿಗೊಳಿಸುವ ಜವಾಬ್ದಾರಿಯು ಹೊಸ ಸರಕಾರದ್ದಾಗಿದೆ. ಹೀಗೆ ಆಧುನಿಕ ವೈದ್ಯವಿಜ್ಞಾನದ ಸೌಲಭ್ಯಗಳನ್ನು ಮತ್ತು ಅದಕ್ಕೆ ಅಗತ್ಯವಿರುವ ಆಧುನಿಕ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಲು ಸರಕಾರವು ವೆಚ್ಚ ಮಾಡಬೇಕೇ ಹೊರತು, ಇಂಥ ಸೇವೆಗಳನ್ನು ಒದಗಿಸಲಾಗದ ಪದ್ಧತಿಗಳನ್ನು ಉತ್ತೇಜಿಸುವುದಕ್ಕಲ್ಲ.

ಖಾಸಗಿ ಆಸ್ಪತ್ರೆಗಳಲ್ಲಿ ಸರಕಾರಿ ವೆಚ್ಚದಲ್ಲಿ ಚಿಕಿತ್ಸೆ ಪಡೆಯುವುದನ್ನು ಉತ್ತೇಜಿಸುವ ಯಶಸ್ವಿನಿಯಂತಹ ಯೋಜನೆಗಳನ್ನು ಇನ್ನಷ್ಟು ವಿಸ್ತರಿಸುವ ಬಗ್ಗೆ ಪ್ರಣಾಳಿಕೆಯಲ್ಲಿ ಹೇಳಲಾಗಿದ್ದು, ಈ ಬಗ್ಗೆ ಮರುಪರಿಶೀಲನೆ ಮಾಡಬೇಕು. ಇಂಥ ಯೋಜನೆಗಳನ್ನು ಖಾಸಗಿ ಯಾ ಸಹಕಾರಿ ಸಂಸ್ಥೆಗಳೇ ವಿಮೆಯ ಆಧಾರದಲ್ಲಿ ಮಾಡಬಹುದು; ಬೊಕ್ಕಸದ ಹಣವನ್ನು ಇಂಥ ಯೋಜನೆಗಳಿಗೆ ಒದಗಿಸುವ ಬದಲು ಸರಕಾರಿ ಆರೋಗ್ಯ ಸೇವೆಗಳ ಬಲವರ್ಧನೆಗೆ ನೀಡುವುದೇ ಒಳ್ಳೆಯದು. ಹಾಗೆಯೇ, ಸರಕಾರಿ ಆರೋಗ್ಯ ಸೇವೆಗಳನ್ನು ಪೂರ್ಣವಾಗಿ ಅಥವಾ ಭಾಗಶಃ ಖಾಸಗಿಯವರಿಗೆ ಒಪ್ಪಿಸುವುದನ್ನು ತಡೆಯಬೇಕು. ದೊಡ್ಡದಾಗಿ ಪ್ರಚಾರ ಮಾಡಿ ಆರಂಭಿಸಿದ್ದ ಪಿಪಿಪಿ ಯೋಜನೆಗಳಾಗಲೀ, ಟೆಲಿಮೆಡಿಸಿನ್ ಯೋಜನೆಗಳಾಗಲೀ ಯಾವುದೇ ವಿಶೇಷ ಪ್ರಯೋಜನವನ್ನು ನೀಡಿಲ್ಲವಾದ್ದರಿಂದ ಅಂಥವನ್ನು ಕೈಬಿಡುವುದೇ ಒಳ್ಳೆಯದು. ವೈದ್ಯಕೀಯ ಸೇವೆಗಳಲ್ಲಿ ಸರಕಾರಿ ಅಥವಾ ಖಾಸಗಿ ಅಥವಾ ಪಿಪಿಪಿ ವ್ಯವಸ್ಥೆಗಳಲ್ಲಿ ಸಂಗ್ರಹಿಸಲಾಗುತ್ತಿರುವ ಜನರ ಖಾಸಗಿ ಹಾಗೂ ವೈದ್ಯಕೀಯ ಮಾಹಿತಿಯೆಲ್ಲವನ್ನೂ ಸುರಕ್ಷಿತವಾಗಿ, ಗೌಪ್ಯವಾಗಿ ಇರಿಸುವುದಕ್ಕೆ ಕ್ರಮ ಕೈಗೊಳ್ಳುವುದು ಅತ್ಯಗತ್ಯವಾಗಿದೆ.

ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ ಎಂ ಸಿ) ಮತ್ತು ರಾಷ್ಟ್ರೀಯ ಶಿಕ್ಷಣ ನೀತಿಗಳ ಮೂಲಕ ಆಧುನಿಕ ವೈದ್ಯಕೀಯ ಶಿಕ್ಷಣದಲ್ಲಿ ಆಯುರ್ವೇದ, ಯೋಗ ಇತ್ಯಾದಿಗಳನ್ನು ಕಲಬೆರಕೆ ಮಾಡುವುದಕ್ಕೆ ಕೇಂದ್ರ ಸರಕಾರವು ಮುಂದಾಗಿದೆ. ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗೆ ಕೇವಲ ಕೇಂದ್ರೀಯ ಮಟ್ಟದಲ್ಲಷ್ಟೇ ಕೌನ್ಸೆಲಿಂಗ್ ನಡೆಸಿ, 85% ಸ್ನಾತಕ ಸೀಟುಗಳಿಗೆ ರಾಜ್ಯಗಳಲ್ಲಿ ನಡೆಯುವ ಕೌನ್ಸೆಲಿಂಗ್ ಅನ್ನು ದಿಲ್ಲಿಯಿಂದಲೇ ನಡೆಸುವುದಕ್ಕೂ ಸಿದ್ಧತೆಗಳಾಗುತ್ತಿವೆ. ಇವು ರಾಜ್ಯದ ಆರೋಗ್ಯ ಸೇವೆಗಳ ಮೇಲೆಯೂ, ರಾಜ್ಯದ ಬಡ ಹಾಗೂ ಹಿಂದುಳಿದ ವರ್ಗಗಳ ಮಕ್ಕಳ ವೈದ್ಯಕೀಯ ಶಿಕ್ಷಣಾವಕಾಶಗಳ ಮೇಲೆಯೂ ತೀವ್ರ ಪರಿಣಾಮಗಳನ್ನು ಬೀರಲಿರುವುದರಿಂದ ಈ ಹುನ್ನಾರಗಳನ್ನು ರಾಜ್ಯ ಸರಕಾರವು ಕಟುವಾಗಿ ವಿರೋಧಿಸಬೇಕು.

ಕೊನೆಯದಾಗಿ ಹಾಗೂ ಬಹು ಮುಖ್ಯವಾಗಿ, ಕರ್ನಾಟಕ ವೈದ್ಯಕೀಯ ಮಂಡಳಿ (ಕೆಎಂಸಿ)ಗೆ ಉಚ್ಚ ನ್ಯಾಯಾಲಯದ ಆದೇಶದಂತೆ ಚುನಾವಣೆಗಳಾಗಿ ಮೂರೂವರೆ ವರ್ಷಗಳಾದರೂ ಅದರಲ್ಲಿ ಆಯ್ಕೆಯಾದ ಸದಸ್ಯರು ಅಧಿಕಾರ ವಹಿಸಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ, 2011ರಲ್ಲಿ ಆಯ್ಕೆಯಾದವರೇ ಈಗಲೂ ಮಂಡಳಿಯನ್ನು ನಿರ್ವಹಿಸುತ್ತಿದ್ದಾರೆ. ಜನರ ಅಹವಾಲುಗಳನ್ನು ಆಲಿಸಬೇಕಾದ ಈ ಸಾಂವಿಧಾನಿಕ ಸಂಸ್ಥೆಯಲ್ಲಿ ನ್ಯಾಯಯುತ ವ್ಯವಸ್ಥೆಯನ್ನು ಸ್ಥಾಪಿಸಲು ಹೊಸ ಸರಕಾರವು ಈ ಬಗ್ಗೆ ಕೂಡಲೇ ಗಮನ ಹರಿಸಿ, ನ್ಯಾಯಾಲಯದ ಮುಂದೆ ಜನಪರವಾಗಿ, ನ್ಯಾಯಪರವಾಗಿ ವಾದಿಸಬೇಕಾದ ತುರ್ತು ಅಗತ್ಯವಿದೆ. ಇದೇ ಕೆಎಂಸಿಗೆ ಹಿಂದಿನ ಸರಕಾರವು ನ್ಯಾಯಬಾಹಿರವಾಗಿ ಐವರು ಸದಸ್ಯರನ್ನು ನಾಮನಿರ್ದೇಶನ ಮಾಡಿದ್ದನ್ನು ಮಾನ್ಯ ಉಚ್ಚ ನ್ಯಾಯಾಲಯದ ಆದೇಶದಂತೆ ರದ್ದು ಪಡಿಸಲಾಗಿದ್ದು, ಆ ಸ್ಥಾನಗಳಿಗೆ ಕಾನೂನಿನಂತೆ ಮಹಿಳೆಯರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ಪ್ರಾಮಾಣಿಕರಾದ, ನೈತಿಕವಾಗಿ ಸಬಲರಾಗಿರುವ ವೈದ್ಯರನ್ನು ನೇಮಿಸುವ ತುರ್ತು ಹೊಣೆಯೂ ಹೊಸ ಸರಕಾರದ ಮೇಲಿದೆ.

ಈಗಿರುವ ಕೆಎಂಸಿಯು ರಾಜ್ಯದ ವೈದ್ಯರಿಗೆ ಸಿಎಂಇ ಆಧಾರಿತ ಮರುನೋಂದಣಿಯನ್ನು ಒತ್ತಾಯಿಸಿತ್ತು, ಅದಕ್ಕೆ ಕಾನೂನಿನ ಮಾನ್ಯತೆಯಿಲ್ಲದಿದ್ದುದರಿಂದ ಅದನ್ನು ಸಮರ್ಥಿಸುವಂತೆ ಕರ್ನಾಟಕ ವೈದ್ಯಕೀಯ ನೋಂದಣಿ ಕಾಯಿದೆಯನ್ನು 2017ರಲ್ಲಿ ಪರಿಷ್ಕರಿಸಲಾಗಿತ್ತು. ರಾಜ್ಯದ ವೈದ್ಯರು ಇವಕ್ಕೆ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆಯನ್ನು ತಂದಿದ್ದರು. ತದನಂತರದಲ್ಲಿ ಕೇಂದ್ರದಲ್ಲಿ ಎನ್‌ಎಂಸಿ ರಚನೆಯಾಗಿ, ಈಗ ಅದರ ಹೊಸ ನಿಯಮಗಳೂ ಪ್ರಕಟವಾಗಿದ್ದು, ಅವುಗಳಲ್ಲಿ ಸಿಎಂಇ ಆಧಾರಿತ ಮರುನೋಂದಣಿಗೆ ಅವಕಾಶವಿಲ್ಲದಂತೆ ಮಾಡಲಾಗಿದೆ; ಆದ್ದರಿಂದ 2017ರ ಕೆಎಂಆರ್ ಕಾಯಿದೆಯ ಪರಿಷ್ಕರಣೆಯನ್ನು ಹಿಂಪಡೆದು ಎನ್‌ಎಂಸಿಯ ಹೊಸ ನಿಯಮಗಳಿಗೆ ಸರಿಹೊಂದುವಂತೆ ಮರುಪರಿಷ್ಕರಿಸುವ ಅಗತ್ಯವಿದೆ.

 

Be the first to comment

Leave a Reply

Your email address will not be published.


*