ಕೊರೋನ ಲಸಿಕೆಗಳ ಅಡ್ಡ ಪರಿಣಾಮಗಳು

ಕೊರೋನ ಲಸಿಕೆಗಳ ಅಡ್ಡ ಪರಿಣಾಮಗಳ ಬಗ್ಗೆ ವಾರ್ತಾಭಾರತಿ ಸರಣಿ ಬರೆಹ – ಮೇ 27-29, 2024

ಭಾಗ 1:  ಲಸಿಕೆಗಳನ್ನು ಕೊಟ್ಟದ್ದು ಸಾಕ್ಷ್ಯಾಧಾರಿತವಾಗಿತ್ತೇ?

ವಾರ್ತಾಭಾರತಿ ಮೇ 27, 2024

https://www.varthabharati.in/nimma-ankana/were-the-corona-vaccines-given-evidence-based-2012133

ಭಾರತದಲ್ಲಿ 175 ಕೋಟಿ ಡೋಸ್ ಚುಚ್ಚಿದ ಕೋವಿಶೀಲ್ಡ್ ಲಸಿಕೆಯಿಂದ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಅದರಿಂದಾಗಿ ಹೃದಯಾಘಾತ, ಪಾರ್ಶ್ವವಾಯು ಮುಂತಾದ ಸಮಸ್ಯೆಗಳಾಗಬಹುದು ಎಂದು ಈ ಲಸಿಕೆಯನ್ನು ತಯಾರಿಸಿದ್ದ ಅಸ್ತ್ರ ಜೆನೆಕ ಕಂಪೆನಿಯು ಲಂಡನ್ ನ್ಯಾಯಾಲಯದಲ್ಲಿ ಕೆಲವು ವಾರಗಳ ಹಿಂದೆ ಒಪ್ಪಿಕೊಂಡಿದೆ, ಬಳಿಕ, ಮೇ 5, 2024ರಂದು, ಈ ಲಸಿಕೆಯನ್ನು ಹಿಂಪಡೆಯುತ್ತಿರುವುದಾಗಿ ಹೇಳಿದೆ. ಅಡ್ಡ ಪರಿಣಾಮಗಳಿಂದ ತಮ್ಮವರನ್ನು ಕಳೆದುಕೊಂಡವರು, ಗಂಭೀರವಾದ, ಶಾಶ್ವತವಾದ ವೈಕಲ್ಯಕ್ಕೀಡಾದವರು ಪರಿಹಾರ ಕೇಳಿ ವಿಶ್ವದ ಅನೇಕ ಕಡೆ ಲಸಿಕೆ ಕಂಪೆನಿಗಳ ವಿರುದ್ಧ ನ್ಯಾಯಾಲಯಗಳಲ್ಲಿ ದಾವೆಗಳನ್ನು ಹೂಡುತ್ತಿದ್ದಾರೆ. ಭಾರತದಲ್ಲಿ ಈ ಹಿಂದೆಯೇ ಅಂತಹ ದಾವೆಗಳು ದಾಖಲಾಗಿದ್ದವು, ಈಗ ಅವಕ್ಕೆ ಇನ್ನಷ್ಟು ಬಲ ಬಂದಂತಾಗಿದೆ. 

ಲಸಿಕೆಯ ಗಂಭೀರ ಪರಿಣಾಮಗಳನ್ನು ಕಂಪೆನಿಯು ಒಪ್ಪಿಕೊಂಡದ್ದರಿಂದ ಲಸಿಕೆ ಪಡೆದಿದ್ದವರ ಆತಂಕ, ಸಂಶಯ, ಸಿಟ್ಟು ಏರಿವೆ. ಇದಕ್ಕಿದಿರಾಗಿ, ಲಸಿಕೆ ಕೊಡಿಸಿದ ಸರಕಾರವೂ, ಉತ್ಪಾದಿಸಿ ಮಾರಿದ ಕಂಪೆನಿಯೂ ಮೌನ ವಹಿಸಿವೆ, ಲಸಿಕೆ ಹಾಕುವುದನ್ನು ಅಂದು ಬೆಂಬಲಿಸಿ ಉತ್ತೇಜಿಸಿದ್ದ ವೈದ್ಯರು ಈಗ ಅದನ್ನು ಸಮರ್ಥಿಸಲು ಹೆಣಗಾಡುತ್ತಿದ್ದಾರೆ.

ಕೊರೋನ ಸೋಂಕು ಅತಿ ಭೀಕರವಾದ, ಅತಿ ಮಾರಣಾಂತಿಕವಾದ ಸೋಂಕಾಗಿತ್ತೇ? ಅತಿ ಸುಲಭವಾಗಿ ಹರಡಬಲ್ಲ ಕೊರೋನ ಸೋಂಕನ್ನು ಲಸಿಕೆಯಿಂದ ತಡೆಯಲು ಸಾಧ್ಯವಿತ್ತೇ? ಕೊರೋನ ಸಾಂಕ್ರಾಮಿಕವಾಗಿ ಹರಡುತ್ತಿದ್ದಾಗಲೇ ಲಸಿಕೆ ನೀಡುವುದು ಸೂಕ್ತವಾಗಿತ್ತೇ? ಕೊರೋನ ಸೋಂಕು ತಗಲಿ ವಾಸಿಯಾಗಿದ್ದವರಿಗೂ ಲಸಿಕೆ ನೀಡುವ ಅಗತ್ಯವಿತ್ತೇ? ಕಿರಿಯ ವಯಸ್ಕರಿಗೆ ಮತ್ತು ಆರೋಗ್ಯವಂತರಿಗೆ ಲಸಿಕೆ ಕೊಡುವ ಅಗತ್ಯವಿತ್ತೇ? ಹೊಸ ಕೊರೋನ ಲಸಿಕೆಗಳು ಸುರಕ್ಷಿತವೆನ್ನಲು ಸ್ಪಷ್ಟ ಆಧಾರಗಳಿದ್ದವೇ?

ಈ ಎಲ್ಲಾ ಪ್ರಶ್ನೆಗಳಿಗೆ ಹೌದು ಎನ್ನುವ ಉತ್ತರವಿದ್ದರೆ ಲಸಿಕೆ ಕೊಟ್ಟದ್ದು ಸರಿಯೆನಿಸುತ್ತಿತ್ತು, ಇಲ್ಲ ಎನ್ನುವುದೇ ಉತ್ತರವಾಗಿದ್ದರೆ ಲಸಿಕೆಯನ್ನು ಕೊಡಬಾರದಿತ್ತು.

ಕೊರೋನ ಸೋಂಕು ಅತಿ ಭೀಕರವಾದ, ಅತಿ ಮಾರಣಾಂತಿಕವಾದ ಸೋಂಕಾಗಿತ್ತೇ? ಇಲ್ಲ ಎನ್ನುವುದು ಕೊರೋನಾ ಹರಡತೊಡಗಿ ಎರಡೇ ತಿಂಗಳಲ್ಲಿ, ಜನವರಿ 2020ರಲ್ಲೇ, ಗೊತ್ತಾಗಿಹೋಗಿತ್ತು. ಹೊಸ ಕೊರೋನ ಸೋಂಕಿನಿಂದ ಸಾವುಗಳಾಗುವ ಸಾಧ್ಯತೆಯು 50 ವರ್ಷಕ್ಕಿಂತ ಕೆಳಗಿನವರಲ್ಲಿ 10 ಲಕ್ಷ ಸೋಂಕಿತರಿಗೆ 3ರಿಂದ 20ರಷ್ಟಿರಬಹುದು, 50ಕ್ಕಿಂತ ಮೇಲ್ಪಟ್ಟವರಲ್ಲಿ 60ಕ್ಕಿಂತ ಹೆಚ್ಚಿರಬಹುದು ಎಂದು ಆಗಲೇ ಅಂದಾಜಿಸಲಾಗಿತ್ತು (ಈ ಅಂದಾಜು ಎಷ್ಟು ನಿಖರವಾಗಿತ್ತೆಂದರೆ, ಲಸಿಕೆಗಳು ಬರುವ ಮೊದಲೇ 38 ದೇಶಗಳಲ್ಲಿ ಕೋವಿಡ್‌ನಿಂದ ಆದ ಸಾವುಗಳು ಈ ಆರಂಭಿಕ ಅಂದಾಜಿಗಿಂತಲೂ ಮೂರರಲ್ಲೊಂದರಷ್ಟು ಕಡಿಮೆಯೇ ಇದ್ದವು!). ಕೊರೋನ ಸೋಂಕಿನಿಂದ ಕಿರಿಯ ವಯಸ್ಕರಿಗೆ ಗಂಭೀರ ಸಮಸ್ಯೆಗಳಾಗುವ ಸಾಧ್ಯತೆಗಳು ಅತಿ ವಿರಳವಾಗಿರುವುದರಿಂದ ಅವರಿಗೆ ಯಾವುದೇ ಲಸಿಕೆಯ ಅಗತ್ಯವೇ ಇಲ್ಲ ಎಂದು ಇದರ ಆಧಾರದಲ್ಲೇ ನಾವು ಕೆಲವರು ಹೇಳಿದ್ದೆವು. ಆದರೆ ಇವನ್ನೆಲ್ಲ ಕಡೆಗಣಿಸಿ ಮಕ್ಕಳಿಂದ ಹಿಡಿದು ವಯೋವೃದ್ಧವರೆಗೆ ಎಲ್ಲರಿಗೂ ಲಸಿಕೆಯನ್ನು ನೀಡಲಾಯಿತು. ಹದಿಹರೆಯಕ್ಕಿಂತ ಮೇಲಿನವರಿಗೆ ಕೋವಿಶೀಲ್ಡ್ ಹಾಗೂ ಕೊವಾಕ್ಸಿನ್ ಕೊಟ್ಟರೆ, ಅದಕ್ಕಿಂತ ಕಿರಿಯರಿಗೆ ಬೇರೆಲ್ಲೂ ಬಳಸದಿದ್ದ ಕೋರ್ಬೆವಾಕ್ಸ್ ಲಸಿಕೆಯನ್ನು ನೀಡಲು ತುರ್ತು ಅನುಮೋದನೆ ನೀಡಲಾಯಿತು.

ಉಸಿರಿನ ಮೂಲಕ ಸುಲಭವಾಗಿ ಒಬ್ಬರಿಂದ ಆರೇಳು ಜನರಿಗೆ ಹರಡುವ ಕೊರೋನ ಸೋಂಕನ್ನು ಲಸಿಕೆಯಿಂದ ತಡೆಯಲು ಸಾಧ್ಯವೇ ಎಂಬುದನ್ನು ಉತ್ತರಿಸುವ ಬದಲು ಬಗೆಬಗೆಯ ವರಸೆಗಳನ್ನು ಹೆಣೆಯಲಾಯಿತು. ಕೊರೋನ ಲಸಿಕೆಗಳು ಸೋಂಕಿನ ಲಕ್ಷಣಗಳ ವಿರುದ್ಧ ಸುಮಾರು ಶೇ. 78ರಷ್ಟು, ಆಸ್ಪತ್ರೆ, ಐಸಿಯು ದಾಖಲಾತಿ ವಿರುದ್ಧ ಶೇ.86ರಷ್ಟು, ಮತ್ತು ಸಾವಿನ ವಿರುದ್ಧ ಶೇ. 87-100ರಷ್ಟು ರಕ್ಷಣೆಯೊದಗಿಸುತ್ತವೆ ಎಂದು ಆರಂಭಿಕ ಅಧ್ಯಯನಗಳಲ್ಲಿ ಹೇಳಿದರೆ, ದಿನಗಳುರುಳಿದಂತೆ, ಸೋಂಕನ್ನು ತಡೆಯುವ ಖಾತರಿಯಿಲ್ಲ, ಹೊಸ ರೂಪಾಂತರಗಳಾದಂತೆ ಇನ್ನಷ್ಟು ಹೊಸ ಲಸಿಕೆಗಳು ಬೇಕಾಗಬಹುದು ಎಂದೆಲ್ಲ ಹೇಳಲಾಯಿತು. ಅದರ ಬೆನ್ನಿಗೆ, ಲಸಿಕೆ ಬಂದಿರುವುದರಿಂದ ಕೊರೋನ ಹರಡುವುದನ್ನು ತಡೆಯಲು ಸಾಧ್ಯವಾಗಲಿದೆ, ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು ಎಂದೂ ಹೇಳಲಾಯಿತು, ಮತ್ತೂ ಮುಂದೆ ಹೋಗಿ ಲಸಿಕೆ ಹಾಕಿಸಿಕೊಳ್ಳದವರು ಇಡೀ ಸಮುದಾಯಕ್ಕೆ ಅಪಾಯ ತರುತ್ತಾರೆ, ಲಸಿಕೆ ಹಾಕಲು ಸಾಧ್ಯವಿಲ್ಲದ ಮಕ್ಕಳಿಂದಾಗಿ ಶಿಕ್ಷಕರಿಗೆ ಅಪಾಯವಾಗಲಿದೆ, ಹಾಗಾಗಿ ಶಾಲೆಗಳನ್ನು ಮುಚ್ಚಿಯೇ ಇಡಬೇಕು, ಲಸಿಕೆ ಹಾಕದವರು ಎಲ್ಲಿಯೂ ಪ್ರಯಾಣಿಸಬಾರದು, ಪ್ರವೇಶಿಸಬಾರದು, ಆಟದ ಬಯಲಿಗೂ ಇಳಿಯಬಾರದು, ಶಾಲೆಗೆ ಬರಬಾರದು, ಆಸ್ಪತ್ರೆಯೊಳಕ್ಕೆ ಬರಬಾರದು, ದಾದಿಯರಾಗಿಯೂ ಕೆಲಸ ಮಾಡಬಾರದು, ಒಟ್ಟಿನಲ್ಲಿ ಲಸಿಕೆ ಹಾಕಿಸಿಕೊಳ್ಳದವರನ್ನು ಸಮಾಜಘಾತುಕರು, ಜೀವಿಸುವ ಹಕ್ಕೇ ಇಲ್ಲದವರು ಎಂಬಂತೆ ಬಿಂಬಿಸಲಾಯಿತು, ಬಹಿಷ್ಕರಿಸಲಾಯಿತು, ಕೆಲಸದಿಂದ ತೆಗೆಯಲಾಯಿತು, ಬಂಧಿಸಿದ್ದೂ ಆಯಿತು. ಭಾರತದಲ್ಲಂತೂ ಎಪ್ರಿಲ್ 2021ರಿಂದ ಸಾರ್ವಜನಿಕರಿಗೆ ಲಸಿಕೆ ನೀಡಲಾರಂಭಿಸಿದ ಕೆಲವೇ ದಿನಗಳಲ್ಲಿ ಕೊರೋನ ಹರಡುವಿಕೆಯು ಕಡಿಮೆಯಾಗುವ ಬದಲು ಮತ್ತೆ ಏರತೊಡಗಿತು, ಎರಡನೇ ಅಲೆಯಾಗಿ ಅಪ್ಪಳಿಸಿತು.

ಕೊರೋನ ಸಾಂಕ್ರಾಮಿಕವಾಗಿ ಹರಡುತ್ತಿದ್ದಾಗಲೇ ಲಸಿಕೆ ನೀಡುವುದು ಸೂಕ್ತವಾಗಿತ್ತೇ? ಅತಿ ಸುಲಭವಾಗಿ ಹರಡುವ, ಅತಿ ಕಡಿಮೆ ಹಾನಿಯುಂಟು ಮಾಡುವ ಕೊರೋನ ಸೋಂಕಿಗೆ ತರಾತುರಿಯಲ್ಲಿ ಲಸಿಕೆ ತಯಾರಿಸಿ, ಅದು ಸೋಂಕನ್ನು ತಡೆಯುತ್ತದೆನ್ನುವ ಖಾತರಿಯಿಲ್ಲದಿದ್ದರೂ, ಸೋಂಕು ಹರಡುತ್ತಿದ್ದಾಗಲೇ ಎಲ್ಲರಿಗೆ ಕೊಟ್ಟದ್ದು ಮನುಕುಲದ ಇತಿಹಾಸದಲ್ಲೇ ಇದೇ ಮೊದಲು. ಒಬ್ಬರಿಂದ ಆರೇಳು ಜನರಿಗೆ ಸುಲಭದಲ್ಲಿ ಹರಡುವ ಸೋಂಕನ್ನು ತಡೆಯುವುದಕ್ಕೆ ಕೋಟಿಗಟ್ಟಲೆ ಜನರಿಗೆ ಎರಡೆರಡು ಡೋಸ್ ಲಸಿಕೆ ಕೊಡುವುದೊಂದೇ ಉಪಾಯ ಎಂದುದರ ಹಿಂದೆ ಯಾವ ತರ್ಕವಿತ್ತೆಂದು ಸುಲಭದಲ್ಲಿ ಅರ್ಥವಾಗದು! ಅಂತೂ ಲಸಿಕೆಗಿಂತ ವೇಗವಾಗಿ ಸೋಂಕೇ ಎಲ್ಲರಿಗೂ ತಗಲಿತು, ಅದರ ಮೇಲೆ ಲಸಿಕೆಯನ್ನೂ ಚುಚ್ಚಲಾಯಿತು.

ಕೊರೋನ ಸೇರಿದಂತೆ ಯಾವುದೇ ವೈರಸ್ ಸೋಂಕು ಒಮ್ಮೆ ತಗಲಿದರೆ ಜೀವನಪರ್ಯಂತ ರೋಗರಕ್ಷಣೆ ಉಂಟಾಗುತ್ತದೆ ಎನ್ನುವುದು ಸಾಮಾನ್ಯ ತಿಳಿವಳಿಕೆಯಾಗಿದೆ. ಭಾರತದಲ್ಲಿ ಡಿಸೆಂಬರ್ 2020ರ ವೇಳೆಗೆ ಶೇ. 40ರಷ್ಟು ಜನರಿಗೆ ಕೊರೋನ ಸೋಂಕು ತಗಲಿತ್ತೆಂದು ಕೇಂದ್ರ ಸರಕಾರವೇ ಹೇಳಿತ್ತು, ಭಾರತವು ಕೊರೋನ ಯುದ್ಧವನ್ನು ಯಶಸ್ವಿಯಾಗಿ ಗೆದ್ದಾಗಿದೆ ಎಂದು ಜನವರಿ 18, 2021ರಂದು ಮಾನ್ಯ ಪ್ರಧಾನಿಗಳೇ ಘೋಷಿಸಿದ್ದರು. ಹಾಗಿದ್ದಲ್ಲಿ, ಸೋಂಕು ತಗಲಿ ರೋಗರಕ್ಷಣೆ ಬೆಳೆಸಿಕೊಂಡಿದ್ದ 40-60% ಭಾರತೀಯರಿಗೆ ಲಸಿಕೆಯನ್ನು ನೀಡುವ ಅಗತ್ಯವೇನಿದೆ ಎಂದು ನಾವು ಪ್ರಶ್ನಿಸಿದ್ದೆವು. ಸಹಜ ಸೋಂಕಿನಲ್ಲಿ ವೈರಾಣುವಿನ ಎಲ್ಲ 29 ಪ್ರೊಟೀನುಗಳನ್ನು ಅಗಣಿತ ಪ್ರಮಾಣದಲ್ಲಿ ಎದುರಿಸಿ ಬಲಿಷ್ಠ ರೋಗರಕ್ಷಣೆ ದೊರೆಯುತ್ತದೆ, ಅದರ ಮುಳ್ಳಿನ ಪ್ರೋಟೀನ್ ಮಾತ್ರವಲ್ಲ, ಇತರ ಪ್ರೋಟೀನುಗಳ ವಿರುದ್ಧವೂ ಪ್ರತಿಕಾಯಗಳುಂಟಾಗುತ್ತವೆ. ಲಸಿಕೆಯಲ್ಲಿ ಸೀಮಿತ ಪ್ರಮಾಣದಲ್ಲಿ ಮುಳ್ಳಿನ ಪ್ರೊಟೀನ್ ಒಂದಕ್ಕಷ್ಟೇ ಪ್ರತಿರೋಧ ಬೆಳೆಯುತ್ತದೆ, ಆದರೆ ಹಾಗೆನ್ನುವುದಕ್ಕೂ ಸಾಕಷ್ಟು ಸಾಕ್ಷ್ಯಾಧಾರಗಳು ದೊರೆತಿಲ್ಲ ಎಂಬ ವೈಜ್ಞಾನಿಕ ಸತ್ಯಗಳನ್ನು ಬದಿಗೊತ್ತಿ, ಕೊರೋನ ಲಸಿಕೆಯು ಸಹಜ ಸೋಂಕಿಗಿಂತಲೂ ಪ್ರಬಲವಾದ ರೋಗರಕ್ಷಣೆ ಒದಗಿಸುತ್ತದೆ ಎಂಬ ಹೊಸದೊಂದು ವಾದವನ್ನು ಹೆಣೆಯಲಾಯಿತು! ಲಸಿಕೆಯು ಸೋಂಕನ್ನೂ ತಡೆಯುವುದಿಲ್ಲ, ರೂಪಾಂತರಿಗಳನ್ನೂ ತಡೆಯುವುದಿಲ್ಲ, ಮರುಸೋಂಕನ್ನೂ ತಡೆಯುವುದಿಲ್ಲ ಎನ್ನುವುದೂ, ಅತ್ತ, ಆಗಲೇ ಸೋಂಕಿತರಾದವರಲ್ಲಿ ಉತ್ತಮವಾದ, ದೀರ್ಘ ಕಾಲಿಕ ರೋಗರಕ್ಷಣೆಯಿದ್ದು ಮರುಸೋಂಕಿನ ಸಾಧ್ಯತೆಯು ತೀರಾ ಅತ್ಯಲ್ಪ ಎನ್ನುವುದೂ ಸ್ಪಷ್ಟವಾಗಿ ದೃಢಪಟ್ಟಿದ್ದರೂ ಕೂಡ ಸೋಂಕಿನಿಂದ ಗುಣಮುಖರಾದವರನ್ನೂ ಲಸಿಕೆಯ ಸಾಲಿಗೆ ತಳ್ಳಲಾಯಿತು.

ಕೊರೋನ ಲಸಿಕೆ ಲಭ್ಯವಾಗುವ ವೇಳೆಗೆ ಕೊರೋನ ಸೋಂಕಿನ ಬಗ್ಗೆ ಒಂದು ವರ್ಷದ ಅನುಭವವು ಜಾಗತಿಕ ಮಟ್ಟದಲ್ಲಿ ಲಭ್ಯವಿತ್ತು, ಭಾರತದಲ್ಲೂ ಇತ್ತು; ಕಿರಿಯ ವಯಸ್ಕರಲ್ಲಿ ಮತ್ತು ಆರೋಗ್ಯವಂತರಲ್ಲಿ ಯಾವುದೇ ತೊಂದರೆಗಳಾಗುವುದಿಲ್ಲ ಎನ್ನುವುದು ಅಷ್ಟರಲ್ಲಿ ಸುಸ್ಪಷ್ಟವಾಗಿತ್ತು. ಆದ್ದರಿಂದ ಅಂಥವರಿಗೆಲ್ಲ ಲಸಿಕೆ ಕೊಡುವ ಅಗತ್ಯವೇ ಇಲ್ಲ ಎಂದು ನಾವು ಹಲವರು ವಿರೋಧಿಸಿದ್ದೆವು. ನಮ್ಮ ದೇಶದಲ್ಲಿ 50 ವರ್ಷಕ್ಕಿಂತ ಕೆಳಗಿನವರು ಶೇ. 85ರಷ್ಟಿರುವುದರಿಂದ ಸುಮಾರು 115 ಕೋಟಿ ಜನರಿಗೆ ಲಸಿಕೆಯ ಅಗತ್ಯವೇನು ಎಂದೂ ಕೇಳಿದ್ದೆವು. ಅದಕ್ಕಿಂತ ಮೇಲಿನ ವಯಸ್ಸಿನ 20 ಕೋಟಿ ಜನರಲ್ಲೂ ಶೇ. 40 ಮಂದಿಗೆ ಕೊರೋನಾ ತಗಲಿ ವಾಸಿಯಾಗಿದ್ದರೆ ಅವರಿಗೂ ಲಸಿಕೆಯ ಅಗತ್ಯವೇನು, ಇನ್ನುಳಿದ ಒಟ್ಟು ಸುಮಾರು 12 ಕೋಟಿ ಜನರಿಗೆ, ಮತ್ತು 35 ವರ್ಷಕ್ಕೆ ಮೇಲ್ಪಟ್ಟವರಲ್ಲಿ ಅತಿ ತೂಕ, ಸಕ್ಕರೆ ಕಾಯಿಲೆ, ಹೃದ್ರೋಗ ಇತ್ಯಾದಿ ಸಮಸ್ಯೆಗಳಿದ್ದವರಿಗಷ್ಟೇ ಲಸಿಕೆಯನ್ನು ಕೊಟ್ಟರೆ ಸಾಕಾಗದೇ ಎಂದೂ ಕೇಳಿದ್ದೆವು. ಲಸಿಕೆ ಹಾಕಿಸಿಕೊಳ್ಳದ ವಿದ್ಯಾರ್ಥಿಗಳು 2021ರ ಜೂನ್ ತಿಂಗಳಿಂದ ಕಾಲೇಜಿಗೆ ಬರುವಂತಿಲ್ಲ ಎಂದು ಆಗಿನ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಹೇಳಿದ್ದನ್ನು ಪ್ರಶ್ನಿಸಿ ವಕೀಲರಿಂದ ನೋಟೀಸ್ ನೀಡಿದ್ದಲ್ಲದೆ ಬಳಿಕ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನೂ ಸಲ್ಲಿಸಿದ್ದೆವು. ಆದರೆ ಇವನ್ನೆಲ್ಲ  ಸರಕಾರವು ಕೇಳಲಿಲ್ಲ, ಹೆಚ್ಚಿನ ವೈದ್ಯರು ಕೂಡ ಗೇಲಿ ಮಾಡಿದರು, ವಿರೋಧಿಸಿದರು.

ಹೊಸ ಕೊರೋನ ಲಸಿಕೆಗಳು ಸುರಕ್ಷಿತವೆನ್ನಲು ಸ್ಪಷ್ಟ ಆಧಾರಗಳೂ ಇರಲಿಲ್ಲ. ಡಿಸೆಂಬರ್ 2019ರಲ್ಲಿ ಹೊಸ ಕೊರೋನ ವೈರಸ್ ಗುರುತಿಸಲ್ಪಟ್ಟ ಬಳಿಕ ಅದರ ಜೀವತಳಿಯನ್ನು ನಿಖರವಾಗಿ ಗುರುತಿಸಿ ಜನವರಿ 12, 2020ರಂದು ಚೀನಾದ ವಿಜ್ಞಾನಿಗಳು ಪ್ರಕಟಿಸಿದಲ್ಲಿಂದಲೇ ಅದಕ್ಕಿದಿರಾಗಿ ಲಸಿಕೆಯನ್ನು ತಯಾರಿಸುವ ಸ್ಪರ್ಧೆಯೂ ಆರಂಭಗೊಂಡಿತು, ಅದುವರೆಗೆ ಬಳಸಿರದೇ ಇದ್ದ ತಂತ್ರಜ್ಞಾನದಿಂದ ಹಲಬಗೆಯ ಲಸಿಕೆಗಳು ಸಿದ್ಧಗೊಂಡವು. ಅಮೆರಿಕಾದ ಸಿಡಿಸಿಯ ಅನುಸಾರ ಒಂದು ಲಸಿಕೆಯನ್ನು ಅಭಿವೃದ್ಧಿಪಡಿಸಿ, ಮೂರು ಹಂತಗಳಲ್ಲಿ ಪರೀಕ್ಷಿಸಿ, ಅನುಮೋದನೆ ದೊರೆತು, ಬಳಕೆಗೆ ತರಲು 10-15 ವರ್ಷಗಳಾದರೂ ಬೇಕಾಗುತ್ತವೆ. ಅಂತಲ್ಲಿ ಕೊರೋನಾ ಸೋಂಕಿಗಿದಿರಾದ ಹೊಸ ಲಸಿಕೆಗಳನ್ನು ಕೇವಲ ಆರೇಳು ತಿಂಗಳಲ್ಲೇ ತಯಾರಿಸಿ, ಒಂದೆರಡು ತಿಂಗಳಷ್ಟೇ ಅಧ್ಯಯನಗಳನ್ನು ನಡೆಸಿ, ಸುರಕ್ಷತೆಯ ಬಗ್ಗೆ ಹಾಗೂ ದೀರ್ಘ ಕಾಲಿಕ ಅಡ್ಡ ಪರಿಣಾಮಗಳ ಬಗ್ಗೆ ಸರಿಯಾದ ಯಾವುದೇ ಅಧ್ಯಯನಗಳಾಗದೆ, ಮಾಹಿತಿಯೂ ಇಲ್ಲದೆ, ತುರ್ತು ಅನುಮೋದನೆ ನೀಡಿ ಒಂದೇ ವರ್ಷದೊಳಗೆ ಬಳಕೆಗೆ ತರಲಾಯಿತು. 

ಜುಲೈ-ಆಗಸ್ಟ್ 2020ರಲ್ಲಿ ಚೀನಾ ಹಾಗೂ ರಷ್ಯಾದ ಮೊದಲ ಲಸಿಕೆಗಳು ಬಂದವು. ಡಿಸೆಂಬರ್ 2020ರ ಕೊನೆಯ ವೇಳೆಗೆ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಹಾಗೂ ಅಸ್ತ್ರ ಜೆನೆಕ ತಯಾರಿಸಿದ ಲಸಿಕೆಗೆ ಯೂರೋಪಿನ ದೇಶಗಳು ಅನುಮೋದನೆ ನೀಡಿದವು, ಇಂಗ್ಲೆಂಡ್, ಡೆನ್ಮಾರ್ಕ್ ಮುಂತಾದ ದೇಶಗಳಲ್ಲಿ ಅದನ್ನು ಕೊಡಲಾರಂಭಿಸಲಾಯಿತು. ಅದೇ ಲಸಿಕೆಯನ್ನು ಉತ್ಪಾದಿಸಲು ಭಾರತದ ಸೀರಂ ಸೀರಂ ಇನ್‌ಸ್ಟಿಟ್ಯೂಟ್ ಸಂಸ್ಥೆ ಒಪ್ಪಂದ ಮಾಡಿಕೊಂಡು ಭಾರತದಲ್ಲಿ ಕೋವಿಶೀಲ್ಡ್ ಹೆಸರಲ್ಲಿ ನೀಡಲು ಮುಂದಾಯಿತು. ಭಾರತದ್ದೇ ಆದ ಭಾರತ್ ಬಯೋಟೆಕ್ ಕಂಪೆನಿಯು ಐಸಿಎಂಆರ್ ಸಹಯೋಗದಲ್ಲಿ ತನ್ನದೇ ಆದ ಲಸಿಕೆಯನ್ನು (ಕೊವಾಕ್ಸಿನ್) ತಯಾರಿಸಿ ಅನುಮೋದನೆ ಪಡೆಯಲು ಹೋಯಿತು. ಲಸಿಕೆಯ ಸ್ಪರ್ಧೆಗೆ ಬಿದ್ದಿದ್ದ ನಮ್ಮ ಸರಕಾರವು ನಮ್ಮ ದೇಶದಲ್ಲಿ ಈ ಎರಡೂ ಲಸಿಕೆಗಳ ಪರೀಕ್ಷೆಗಳ ವರದಿಗಳು ದೊರೆಯುವ ಮೊದಲೇ ಜನವರಿ 2021ರ ಆರಂಭದಲ್ಲಿ ತರಾತುರಿಯಲ್ಲಿ ಸಭೆಗಳನ್ನು ನಡೆಸಿ ಇವೆರಡಕ್ಕೂ ತುರ್ತು ಬಳಕೆಯ ಅನುಮೋದನೆ ನೀಡಿತು.

ಕೋವಿಶೀಲ್ಡ್ ಹೆಸರಲ್ಲಿ ಹೀಗೆ ತುರ್ತು ಅನುಮೋದನೆ ನೀಡಿದಾಗ ಭಾರತದಲ್ಲಿ ನಡೆದಿದ್ದ ಪರೀಕ್ಷೆಗಳ ವರದಿಗಳಿನ್ನೂ ಪ್ರಕಟವಾಗಿರಲಿಲ್ಲ; ಬ್ರಿಟನ್, ಬ್ರೆಜಿಲ್ ಮತ್ತು ಆಫ್ರಿಕಾಗಳಲ್ಲಿ ನಡೆದಿದ್ದ ಪರೀಕ್ಷೆಗಳ ವರದಿಗಳಷ್ಟೇ ಲಭ್ಯವಿದ್ದವು. ಕೊವಾಕ್ಸಿನ್ ಲಸಿಕೆಯದಂತೂ ಎರಡನೇ ಹಂತದ ಪರೀಕ್ಷೆಗಳಷ್ಟೇ ಆಗಿದ್ದವು, ಆದರೂ ಅದಕ್ಕೆ ಬ್ರಿಟನ್‌ನಿಂದ ಬಂದಿರುವ ರೂಪಾಂತರಿತ ತಳಿಯ ನಿಯಂತ್ರಣಕ್ಕೆನ್ನುವ ನೆಪದಲ್ಲಿ ತುರ್ತು ಅನುಮೋದನೆ ನೀಡಲಾಯಿತು, ಲಸಿಕೆ ಪಡೆದವರನ್ನೇ ಮೂರನೇ ಹಂತದ ಪರೀಕ್ಷೆಗಳಿಗೆ ಒಡ್ಡಲಾಯಿತು! 

ಈ ಎರಡು ಲಸಿಕೆಗಳಿಗೆ ತುರ್ತು ಅನುಮೋದನೆ ಕೊಟ್ಟದ್ದನ್ನು ಅನೇಕ ತಜ್ಞರು ಪ್ರಶ್ನಿಸಿದ್ದರು, ವಿರೋಧಿಸಿದ್ದರು, ಆ ಲಸಿಕೆಗಳ ಕಂಪೆನಿಗಳ ಮಾಲಕರೂ ಬಹಿರಂಗವಾಗಿ ಕಚ್ಚಾಡಿಕೊಂಡಿದ್ದರು. ಕೊವಾಕ್ಸಿನ್ ಲಸಿಕೆಯು ನೀರಿನಂತಿದೆ ಎಂದು ಕೋವಿಶೀಲ್ಡ್‌ನ ಆದಾರ್ ಪೂನಾವಾಲ ಹೀಗಳೆದರೆ, ಕೊವಾಕ್ಸಿನ್‌ನ ಕೃಷ್ಣ ಎಲ್ಲ ಅವರು ಕೋವಿಶೀಲ್ಡ್ ಲಸಿಕೆಯ ಪರೀಕ್ಷೆಗಳೇ ಕಳಪೆಯಾಗಿವೆ, 60-70% ಜನರಲ್ಲಿ ಅಡ್ಡ ಪರಿಣಾಮಗಳಾಗಿವೆ ಎಂದಿದ್ದರು! ಹಿರಿಯ ಲಸಿಕೆ ವಿಜ್ಞಾನಿ ಡಾ. ಗಗನ್‌ದೀಪ್ ಕಾಂಗ್ ಅವರು ಕೋವಿಶೀಲ್ಡ್ ಲಸಿಕೆಯ ಬಗ್ಗೆ ಭಾರತದಲ್ಲಿ ನಡೆಸಲಾಗಿರುವ ಪರೀಕ್ಷೆಗಳ ವರದಿಗಳು ಪ್ರಕಟವಾಗಿಲ್ಲ, ಅತ್ತ ಕೊವಾಕ್ಸಿನ್ ಬಗ್ಗೆ ಯಾವುದೇ ಮಾಹಿತಿಯೂ ಇಲ್ಲ, ಆದ್ದರಿಂದ ಇವೆರಡನ್ನೂ ತಾನು ಪಡೆಯುವುದಿಲ್ಲ ಎಂದು ಹೇಳಿದ್ದರು. ಹಿರಿಯ ವೈರಾಣು ತಜ್ಞ ಡಾ. ಜೇಕಬ್ ಜಾನ್ ಅವರು ಕೋವಿಶೀಲ್ಡ್ ಲಸಿಕೆಗೆ ಅಡ್ಡ ಪರಿಣಾಮಗಳು ವರದಿಯಾಗಿರುವುದರಿಂದ ತಾನದನ್ನು ಹಾಕಿಸಿಕೊಳ್ಳುವುದಿಲ್ಲ ಎಂದರೆ, ಹಿರಿಯ ರೋಗರಕ್ಷಣಾ ವಿಜ್ಞಾನಿ ಡಾ. ವಿನೀತಾ ಬಾಲ್ ಅವರು ಸೋಂಕನ್ನು ತಡೆಗಟ್ಟುವ ಸಾಮರ್ಥ್ಯದ ಬಗ್ಗೆ ಆಧಾರಗಳಿಲ್ಲದೆಯೇ ಲಸಿಕೆಗಳನ್ನು ಬಳಸತೊಡಗುವುದು ಅನೈತಿಕವೆಂದೂ, ಹಿಟ್ಲರ್‌ಶಾಹಿ ವರ್ತನೆಯಾಗುತ್ತದೆಂದೂ ಹೇಳಿದ್ದರು. ಹಿರಿಯ ವೈರಾಣು ತಜ್ಞ ಡಾ. ಶಾಹಿದ್ ಜಮೀಲ್ ಅವರು ಈ ಲಸಿಕೆಗಳಿಗೆ ಅನುಮತಿ ಕೊಟ್ಟ ಬಗೆಯನ್ನು ಪ್ರಶ್ನಿಸಿದ್ದರು. ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿಯಾಗಿದ್ದ ಡಾ. ಸೌಮ್ಯ ಸ್ವಾಮಿನಾಥನ್ ಲಸಿಕೆಗಳ ಉಪಯುಕ್ತತೆ ಮತ್ತು ಸುರಕ್ಷತೆಗಳ ಕನಿಷ್ಠ ಮಾನದಂಡಗಳು ಖಾತರಿಯಾಗುವವರೆಗೆ ಅವುಗಳನ್ನು ಸಾರ್ವತ್ರಿಕವಾಗಿ ಬಳಸುವುದಕ್ಕೆ ಅನುಮತಿ ನೀಡುವಂತಿಲ್ಲ ಎಂದಿದ್ದರು (ಇವನ್ನು ಜನವರಿ 15, 2021ರಂದು ವಾರ್ತಾಭಾರತಿಯಲ್ಲಿ ಪ್ರಕಟವಾದ  ‘ತುರ್ತು ಸ್ಥಿತಿಯಲ್ಲಿಲ್ಲದ ಕೊರೋನಾ ಸೋಂಕಿಗೆ ತುರ್ತಾಗಿ ಲಸಿಕೆ ಬೇಕೇ?’ ಎಂಬ ಲೇಖನದಲ್ಲಿ ಬರೆದಿದ್ದೆ).  ಕೆಲವು ತಿಂಗಳ ಬಳಿಕ ಇವರಲ್ಲಿ ಹೆಚ್ಚಿನವರು ಸುಮ್ಮನಾದರು ಅಥವಾ ತಮ್ಮ ನಿಲುವನ್ನು ಬದಲಿಸಿದರು, ಲಸಿಕೆ ಕಂಪೆನಿಗಳ ಜಗಳವೂ ತಣ್ಣಗಾಯಿತು!

ಭಾಗ 2: ಲಸಿಕೆಗಳು ನಿರಪಾಯಕರವೆನ್ನಲು ಆಧಾರಗಳಿದ್ದವೇ?

ವಾರ್ತಾಭಾರತಿ ಮೇ 28, 2024

https://www.varthabharati.in/nimma-ankana/is-there-evidence-that-corona-vaccines-are-safe-2012263

ಕೊರೋನ ಲಸಿಕೆಗಳ ಅಡ್ಡ ಪರಿಣಾಮಗಳನ್ನು ಕಂಪೆನಿಯೇ ನ್ಯಾಯಾಲಯದಲ್ಲಿ ಒಪ್ಪಿಕೊಂಡದ್ದು ಸುದ್ದಿಯಾಗಿ ಈ ವಿಚಾರವು ಈಗ ಮುನ್ನೆಲೆಗೆ ಬಂದಿದೆ. ಆಗ ಲಸಿಕೆ ಹಾಕುವುದು ಅತ್ಯಗತ್ಯವಾಗಿತ್ತು, ಅಡ್ಡ ಪರಿಣಾಮಗಳೆಲ್ಲ ಗೌಣವಾಗಿದ್ದವು ಎಂದು ಲಸಿಕೆ ಹಾಕಿಸಿಕೊಳ್ಳಲು ಉತ್ತೇಜಿಸಿದ್ದ ವೈದ್ಯರು ಈಗ ಸಮರ್ಥನೆಗಿಳಿದಿದ್ದಾರೆ. ಈ ಹೊಸ ಲಸಿಕೆಗಳ ಅಡ್ಡ ಪರಿಣಾಮಗಳು ನಿಜಕ್ಕೂ ಗೌಣವಾಗಿದ್ದವೇ?

ಕೋವಿಶೀಲ್ಡ್ ಲಸಿಕೆಗೆ ಇಲ್ಲಿ ತುರ್ತು ಅನುಮೋದನೆ ಕೊಡುವಾಗಲೇ ಅದರಿಂದಾಗಬಹುದಾದ ಅಡ್ಡ ಪರಿಣಾಮಗಳ ಬಗ್ಗೆ ಆರಂಭಿಕ ವರದಿಗಳಿದ್ದವು. ಜನವರಿ 16, 2021ರಿಂದ ವೈದ್ಯರಿಗೆ ಮತ್ತು ಆರೋಗ್ಯಕರ್ಮಿಗಳಿಗೆ ಲಸಿಕೆಯನ್ನು ಕೊಡಲಾರಂಭಿಸಿದ ಬಳಿಕ ಮೊದಲ ವಾರದಲ್ಲೇ ಲಸಿಕೆ ಪಡೆದಿದ್ದ ಸುಮಾರು 10 ಮಂದಿ ಮೃತರಾದ ವರದಿಗಳಾದವು, ಆಗಲೂ ಈ ಲಸಿಕೆಯ ಸುರಕ್ಷತೆಯ ಬಗ್ಗೆ, ಮತ್ತು ಸಾಕಷ್ಟು ಅಧ್ಯಯನಗಳಾಗುವ ಮೊದಲೇ ಅದನ್ನು ಬಳಸುತ್ತಿರುವುದರ ಔಚಿತ್ಯದ ಬಗ್ಗೆ ನಾವು ಕೆಲವರು ಪ್ರಶ್ನೆಗಳನ್ನೆತ್ತಿದ್ದೆವು. ಜನವರಿ 2021ರಲ್ಲಿ ಮಂಗಳೂರು ಟುಡೇ ಪತ್ರಿಕೆಯು ನಡೆಸಿದ್ದ ಸಂದರ್ಶನದಲ್ಲಿ, ಜನವರಿ 16ರಿಂದ ಲಸಿಕೆ ನೀಡಲಾರಂಭಿಸಿದ ಬಳಿಕ ಲಸಿಕೆ ಪಡೆದಿದ್ದವರಲ್ಲಿ ಕನಿಷ್ಠ ಹತ್ತು ಮಂದಿ ಹೃದಯಾಘಾತ ಹಾಗೂ ಪಾರ್ಶ್ವವಾಯುಗಳಾಗಿ ಮೃತಪಟ್ಟದ್ದನ್ನು ಉಲ್ಲೇಖಿಸಿ, ಈ ಸಾವುಗಳಿಗೂ ಲಸಿಕೆಗೂ ಸಂಬಂಧವಿದೆಯೇ ಎನ್ನುವುದನ್ನು ಅಧ್ಯಯನ ಮಾಡಬೇಕಿದೆ, ಲಸಿಕೆಗಳ ಸುರಕ್ಷತೆಯ ಬಗ್ಗೆ ಸಾಕಷ್ಟು ಮಾಹಿತಿಯಿಲ್ಲದೆ ಅದನ್ನು ಎಲ್ಲರಿಗೂ ನೀಡುವುದು ಸರಿಯಾಗದು ಎಂದು ಹೇಳಿದ್ದೆ. ಫೆಬ್ರವರಿ-ಮಾರ್ಚ್ 2021ರ ವೇಳೆಗೆ ಇದೇ ಲಸಿಕೆಯನ್ನು ಆಗಲೇ ಸುಮಾರು 1,30,000 ಜನರಿಗೆ ನೀಡಿದ್ದ ಡೆನ್ಮಾರ್ಕ್‌ನಲ್ಲಿ 5 ಮಂದಿ (26000ಕ್ಕೆ ಒಬ್ಬರು) ರಕ್ತ ಹೆಪ್ಪುಗಟ್ಟುವುದರ ಜೊತೆಗೆ ಪ್ಲೇಟ್ಲೆಟ್ ಕಣಗಳಲ್ಲಿ ಇಳಿಕೆಯಾಗುವ ಸಮಸ್ಯೆಯಿಂದಾಗಿ ಮೃತಪಟ್ಟರು; ಇದನ್ನು ಪರಿಗಣಿಸಿ ಮಾರ್ಚ್ 11, 2021ರಂದು ಡೆನ್ಮಾರ್ಕ್ ಮತ್ತು ನಾರ್ವೇ ದೇಶಗಳು ಈ ಆಕ್ಸ್‌ಫರ್ಡ್ (ಕೋವಿಶೀಲ್ಡ್) ಲಸಿಕೆಯನ್ನು ಅಲ್ಲಿಗೇ ತಡೆಹಿಡಿದವು, ಆ ಬಳಿಕ ಅಸ್ತ್ರ-ಜೆನೆಕ, ಆಕ್ಸ್‌ಫರ್ಡ್‌ಗಳ ಮೂಲ ದೇಶಗಳಾದ ಸ್ವೀಡನ್ ಮತ್ತು ಇಂಗ್ಲೆಂಡ್‌ಗಳೂ ಸೇರಿದಂತೆ ಯೂರೋಪಿನ ಇನ್ನಿತರ ದೇಶಗಳೂ, ಆಸ್ಟ್ರೇಲಿಯಾದಂತಹ ದೇಶಗಳೂ ಅದರ ಬಳಕೆಯನ್ನು ನಿಲ್ಲಿಸಿದವು ಅಥವಾ ಹಿರಿವಯಸ್ಕರಿಗಷ್ಟೇ ಸೀಮಿತಗೊಳಿಸಿದವು. ಭಾರತದಲ್ಲಿ ಎಪ್ರಿಲ್ 2021ರಲ್ಲಿ ಜನಸಾಮಾನ್ಯರಿಗೆ ಕೋವಿಶೀಲ್ಡ್ ಲಸಿಕೆಯನ್ನು ನೀಡಲಾರಂಭಿಸುವ ವೇಳೆಗೆ ಈ ವರದಿಗಳೆಲ್ಲವೂ ಲಭ್ಯವಿದ್ದವು, ನಾವು ಇವನ್ನು ಸರಕಾರದ ಗಮನಕ್ಕೂ ತಂದಿದ್ದೆವು. ಮೇ-ಜೂನ್ 2021ರಲ್ಲಿ ಕರ್ನಾಟಕದಲ್ಲಿ ಕಾಲೇಜು ಪ್ರವೇಶಿಸಲು ಲಸಿಕೆ ಕಡ್ಡಾಯ ಎಂದು ಉನ್ನತ ಶಿಕ್ಷಣ ಸಚಿವರು ಹೇಳಿದಾಗ, ಅವರಿಗೆ ವಕೀಲರ ಮೂಲಕ ಕಳುಹಿಸಿದ್ದ ನೋಟೀಸಿನಲ್ಲೂ ಅನ್ಯ ದೇಶಗಳಲ್ಲಿ ಈ ಲಸಿಕೆಯನ್ನು ವಿದ್ಯಾರ್ಥಿ-ಯುವಜನರಿಗೆ ಕೊಡದಂತೆ ತಡೆಯಲಾಗಿದೆ ಎಂಬುದನ್ನು ತಿಳಿಸಲಾಗಿತ್ತು, ಬಳಿಕ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲೂ ಇದನ್ನು ಹೇಳಲಾಗಿತ್ತು. ಆದರೆ ಇವನ್ನೆಲ್ಲ ಕಡೆಗಣಿಸಿ ಮಕ್ಕಳಾದಿಯಾಗಿ ಎಲ್ಲರಿಗೂ ಲಸಿಕೆ ಹಾಕುವುದನ್ನು ಮುಂದುವರಿಸಲಾಯಿತು, ಯಾವುದೇ ಅಗತ್ಯ ಮತ್ತು ಆಧಾರಗಳಿಲ್ಲದೆಯೂ ಮೂರು ಡೋಸುಗಳನ್ನು ಪಡೆಯುವಂತೆ ಉತ್ತೇಜಿಸಲಾಯಿತು, ಇಲ್ಲಿಯೂ ಅಡ್ಡ ಪರಿಣಾಮಗಳಾದ ವರದಿಗಳನ್ನು ನಿರಾಕರಿಸಲಾಯಿತು, ಆ ಬಗ್ಗೆ ಎಚ್ಚರಿಸಿದವರನ್ನು ಹೀಗಳೆಯಲಾಯಿತು, ಅಧಿಕೃತವಾಗಿ ಅದು ಐಚ್ಛಿಕವೆಂದು ಹೇಳಿದ್ದರೂ ಎಲ್ಲರೂ ಹಾಕಿಸಿಕೊಳ್ಳುವಂತೆ ತೆರತೆರನಾಗಿ ಒತ್ತಡ ಹೇರಿ, ರಾಷ್ಟ್ರವಾದ, ಮತೀಯವಾದ, ಪ್ರಧಾನಿ ಹಾಗೂ ಸರಕಾರದ ಆಜ್ಞಾಪಾಲನೆ ಇತ್ಯಾದಿಗಳನ್ನೂ ಹೇಳಿ, ಒಟ್ಟು 95 ಕೋಟಿಗೂ ಹೆಚ್ಚು ಭಾರತೀಯರು ಲಸಿಕೆ ಹಾಕಿಸಿಕೊಳ್ಳುವಂತೆ ಮಾಡಲಾಯಿತು. 

ಕೊರೋನ ಲಸಿಕೆಗಳನ್ನು ಕೊಡಲಾರಂಭಿಸಿದಾಗಿನಿಂದಲೇ ಅವುಗಳಿಂದಾದ ಅಡ್ಡ ಪರಿಣಾಮಗಳ ಬಗ್ಗೆ ಅನೇಕ ವರದಿಗಳು ಪ್ರಕಟವಾಗುತ್ತಲೇ ಇವೆ. ಕೋವಿಡ್ ಲಸಿಕೆಗಳ ವಿಶೇಷ ಅಡ್ಡ ಪರಿಣಾಮಗಳ ಬಗ್ಗೆ ಬಹುರಾಷ್ಟ್ರೀಯ ಅಧ್ಯಯನವೊಂದರ ವರದಿಯು ಇದೇ ಎಪ್ರಿಲ್ 2ರಂದು ಪ್ರಕಟವಾಗಿದೆ. [Vaccine, 2 April 2024;42(9):2200] ಯೂರೋಪ್ (ಡೆನ್ಮಾರ್ಕ್, ಫಿನ್ಲೆಂಡ್, ಫ್ರಾನ್ಸ್, ಸ್ಕಾಟ್ಲೆಂಡ್), ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಅರ್ಜೆಂಟೀನಾಗಳಲ್ಲಿ 21,97,37904 ಡೋಸ್ ಎಂಆರ್‌ಎನ್‌ಎ ಲಸಿಕೆ ಹಾಗೂ 2,30,93399 ಡೋಸ್ ಆಕ್ಸ್‌ಫರ್ಡ್ (ಕೋವಿಶೀಲ್ಡ್) ಲಸಿಕೆಗಳನ್ನು ನೀಡಿದ 42 ದಿನಗಳೊಳಗೆ ಕಂಡುಬಂದ ಅಡ್ಡ ಪರಿಣಾಮಗಳನ್ನು ಈ ವರದಿಯಲ್ಲಿ ವಿಶ್ಲೇಷಿಸಲಾಗಿದೆ. ನಿರೀಕ್ಷಿತ ಅಡ್ಡಪರಿಣಾಮಗಳ ಪ್ರಮಾಣಕ್ಕೆ ಹೋಲಿಸಿದರೆ ಆಕ್ಸ್‌ಫರ್ಡ್ ಲಸಿಕೆಯ ಬಳಿಕ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟುವ ಸಮಸ್ಯೆಯು 3.23 ಪಟ್ಟು, ನರಗಳ ದೌರ್ಬಲ್ಯವುಂಟಾಗುವ ಗೀಲನ್ ಬಾ ಸಮಸ್ಯೆಯು 2.49 ಪಟ್ಟು ಹೆಚ್ಚಿದ್ದವು, ಹೃದಯದ ಸ್ನಾಯುಗಳ ಉರಿಯೂತವು ಆಕ್ಸ್‌ಫರ್ಡ್ ಹಾಗೂ ಎಂಆರ್‌ಎನ್‌ಎ ಲಸಿಕೆಗಳೆರಡರಲ್ಲೂ ಉಂಟಾದರೆ, ಮಿದುಳಿನ ಉರಿಯೂತವು ಎಂಆರ್‌ಎನ್‌ಎ ಲಸಿಕೆಯಲ್ಲಿ ಉಂಟಾಗಿತ್ತು ಎಂದು ಈ ವರದಿಯಲ್ಲಿ ಹೇಳಲಾಗಿದೆ. ಗಮನಾರ್ಹ ಸಂಗತಿಯೆಂದರೆ, ಆಕ್ಸ್‌ಫರ್ಡ್ ಲಸಿಕೆಯ 175 ಕೋಟಿ ಡೋಸ್‌ಗಳನ್ನು ಬಳಸಿದ ಭಾರತದ ಅಂಕಿಅಂಶಗಳನ್ನು ಈ ಅಧ್ಯಯನವು ಒಳಗೊಂಡಿಲ್ಲ, ಮಾತ್ರವಲ್ಲ, ದೀರ್ಘಕಾಲಿಕ ಅಡ್ಡ ಪರಿಣಾಮಗಳ ಬಗ್ಗೆಯೂ ಅದರಲ್ಲಿ ಮಾಹಿತಿಯಿಲ್ಲ.

ಕೊರೋನ ಲಸಿಕೆಯಿಂದಾಗಿ ರಕ್ತ ಹೆಪ್ಪುಗಟ್ಟುವ ವಿಶೇಷ ಸಮಸ್ಯೆಯು ಆಕ್ಸ್‌ಫರ್ಡ್ (ಕೋವಿಶೀಲ್ಡ್) ಮತ್ತು ಅದೇ ತರದ ಜಾನ್ಸನ್ ಲಸಿಕೆಯಲ್ಲಿ ಮಾತ್ರವೇ ವರದಿಯಾಗಿದೆ. ಈ ಲಸಿಕೆಗಳನ್ನು ಪಡೆದವರಲ್ಲಿ ಹತ್ತು ಲಕ್ಷಕ್ಕೆ 2-16 ಮಂದಿ ಈ ಸಮಸ್ಯೆಗೀಡಾಗಿದ್ದರು, ಇದು ಆಕ್ಸ್‌ಫರ್ಡ್ ಲಸಿಕೆ ಪಡೆದವರಲ್ಲೇ ಹೆಚ್ಚಿತ್ತು ಎಂದು ಅನ್ಯ ದೇಶಗಳ ಅಧ್ಯಯನಗಳು ವರದಿ ಮಾಡಿವೆ (npj Vaccines. 2022;7:141). ಇದರಲ್ಲೂ ವಿಶೇಷವೆಂದರೆ, ಲಸಿಕೆ ಪಡೆದವರಲ್ಲಿ ರಕ್ತ ಹೆಪ್ಪುಗಟ್ಟುವ ಮಾರಣಾಂತಿಕ ಸಮಸ್ಯೆಯು 65 ವರ್ಷಕ್ಕೆ ಮೇಲ್ಪಟ್ಟವರಲ್ಲಿ ಹತ್ತು ಲಕ್ಷಕ್ಕೆ ಒಬ್ಬರಲ್ಲಷ್ಟೇ ಉಂಟಾದರೆ, 55-64 ವರ್ಷವರಲ್ಲಿ 10 ಲಕ್ಷಕ್ಕೆ ಮೂವರಿಗೆ,  55 ವರ್ಷಕ್ಕಿಂತ ಕಿರಿಯರಲ್ಲಿ 20000ಕ್ಕೆ ಒಬ್ಬರಿಂದ 60000ಕ್ಕೆ  ಒಬ್ಬರಿಗೆ, ಅಂದರೆ ಹತ್ತು ಲಕ್ಷಕ್ಕೆ 17ರಿಂದ 50 ಮಂದಿಗೆ, ಉಂಟಾಗಿರುವ ವರದಿಗಳಾಗಿವೆ ಎಂದು ಈ ಅಧ್ಯಯನಗಳು ಹೇಳಿವೆ. ಅಂದರೆ 55 ವರ್ಷಕ್ಕೆ ಕೆಳಗಿನವರಲ್ಲಿ ಕೊರೋನ ಸೋಂಕಿನಿಂದ ಮಾರಣಾಂತಿಕ ಸಮಸ್ಯೆಯಾಗುವುದು 10 ಲಕ್ಷ ಸೋಂಕಿತರಿಗೆ 3ರಿಂದ 20ರಷ್ಟಾದರೆ, ಕೋವಿಶೀಲ್ಡ್ ಲಸಿಕೆಯಿಂದ ಮಾರಣಾಂತಿಕ ಸಮಸ್ಯೆಯಾಗುವುದು ಹತ್ತು ಲಕ್ಷಕ್ಕೆ 17ರಿಂದ 50 ಮಂದಿಗೆ ಎಂದಾಯಿತು; ಅಂದರೆ 55 ವರ್ಷಕ್ಕೆ ಕೆಳಗಿನವರಲ್ಲಿ ಸೋಂಕಿಗಿಂತ ಲಸಿಕೆಯೇ ಹೆಚ್ಚು ಮಾರಣಾಂತಿಕವೆಂದಾಗುತ್ತದೆ, ಲಸಿಕೆಗಿಂತ ಸೋಂಕೇ ಹೆಚ್ಚು ಸುರಕ್ಷಿತವೆನಿಸುತ್ತದೆ. ಅತ್ತ 60 ವರ್ಷಕ್ಕೆ ಮೇಲ್ಪಟ್ಟವರಲ್ಲಿ ಕೊರೋನಾದಿಂದ ಸಾವುಂಟಾಗುವ ಸಾಧ್ಯತೆಯು ಹತ್ತು ಲಕ್ಷಕ್ಕೆ 60ಕ್ಕಿಂತ ಹೆಚ್ಚಿದ್ದರೆ, ಲಸಿಕೆಯಿಂದ ಅಂತ ಸಮಸ್ಯೆಯಾಗುವ ಸಾಧ್ಯತೆಯು ಕೇವಲ ಒಂದರಷ್ಟೇ ಇರುತ್ತದೆ, ಆ ವಯೋಮಾನದಲ್ಲಿ ಸೋಂಕಿಗಿಂತ ಲಸಿಕೆಯೇ ಹೆಚ್ಚು ಸುರಕ್ಷಿತವಾಗುತ್ತದೆ. ಆಕ್ಸ್‌ಫರ್ಡ್ ಲಸಿಕೆಯಿಂದ 26000ಕ್ಕೊಬ್ಬರು ಮೃತರಾದರೆನ್ನುವುದು ಡೆನ್ಮಾರ್ಕಿನಲ್ಲಿ ಮಾರ್ಚ್ 2021ರಲ್ಲೇ ತಿಳಿದಿತ್ತು, ಅಲ್ಲಿ ಆ ಕೂಡಲೇ ಲಸಿಕೆಯನ್ನು ಹಿಂಪಡೆಯಲಾಗಿತ್ತು ಎಂದ ಮೇಲೆ ನಮ್ಮ ದೇಶದಲ್ಲಿ ಆ ಲಸಿಕೆಯನ್ನು ಎಲ್ಲರಿಗೆ ಹಾಕಿಸುವ ಅಗತ್ಯವೇನಿತ್ತು?

ನಮ್ಮ ದೇಶದಲ್ಲಿ ಕೊರೋನ ಲಸಿಕೆಗಳಿಂದ ಆಗಿರಬಹುದಾದ ಸಮಸ್ಯೆಗಳ ಬಗ್ಗೆ ನಿಖರವಾದ ಮಾಹಿತಿಯೇ ಲಭ್ಯವಿಲ್ಲ, ಅಡ್ಡ ಪರಿಣಾಮಗಳನ್ನು ಪ್ರಾಮಾಣಿಕವಾಗಿ ದಾಖಲಿಸಿರುವ ಬಗ್ಗೆ ಖಾತರಿಯೂ ಇಲ್ಲ. ಯೂರೋಪಿನಲ್ಲಿ ಆಕ್ಸ್‌ಫರ್ಡ್ ಲಸಿಕೆಯಿಂದ ಸಮಸ್ಯೆಗಳಾದ ಪ್ರಮಾಣದಲ್ಲೇ ಭಾರತದಲ್ಲೂ ಆಗಿದ್ದರೆ, ಕೋವಿಶೀಲ್ಡ್ ಲಸಿಕೆಯಿಂದ ಸುಮಾರು 22000 ಜನರಲ್ಲಿ ರಕ್ತ ಹೆಪ್ಪುಗಟ್ಟಿ ಮಾರಣಾಂತಿಕ ಸಮಸ್ಯೆಯಾಗಿರಬಹುದು ಎಂದು ಅಂದಾಜಿಸಬೇಕಾಗುತ್ತದೆ. ಕೊರೋನ ನಿಯಂತ್ರಣ ಕ್ರಮಗಳ ಬಗ್ಗೆ ದನಿಯೆತ್ತುತ್ತಲೇ ಬಂದಿರುವ ಅವೇಕನ್ ಇಂಡಿಯಾ ಮೂವ್‌ಮೆಂಟ್ ಸಂಗ್ರಹಿಸಿ ಪ್ರಕಟಿಸಿರುವ ಮಾಹಿತಿಯಲ್ಲಿ ಲಸಿಕೆಗೆ ಸಂಬಂಧಿಸಿದಂತೆ ದಾಖಲಿಸಿರುವ ಸಾವುಗಳ ಸಂಖ್ಯೆಯು 19273ರಷ್ಟಿದೆ ಎನ್ನುವುದು ಇದಕ್ಕೆ ತಾಳೆಯಾಗುತ್ತದಾದರೂ ಅದರ ಸತ್ಯಾಸತ್ಯತೆಯನ್ನು ಪ್ರಮಾಣೀಕರಿಸಲು ಸಾಧ್ಯವಾಗದು. ಸರಕಾರವು ಸಂಸತ್ತಿನಲ್ಲಿ, ಸರ್ವೋಚ್ಚ ನ್ಯಾಯಾಲಯದಲ್ಲಿ ಮತ್ತು ಮಾಹಿತಿ ಕಾಯಿದೆಯಡಿಯಲ್ಲಿ ನೀಡಿರುವ ಅಧಿಕೃತ ಮಾಹಿತಿಯನುಸಾರ ನಮ್ಮ ದೇಶದಲ್ಲಿ ಒಟ್ಟು 219.6 ಕೋಟಿ ಡೋಸ್ ಲಸಿಕೆಗಳನ್ನು ನೀಡಿರುವಲ್ಲಿ, 92114 (0.0042%) ಅಡ್ಡ ಪರಿಣಾಮಗಳ ಪ್ರಕರಣಗಳು ದಾಖಲಾಗಿವೆ, ಅವುಗಳಲ್ಲಿ 2782 ಗಂಭೀರ ಸ್ವರೂಪದವುಗಳಾಗಿದ್ದು, 1148 ಸಾವುಗಳು ಸಂಭವಿಸಿವೆ, ಶೇ. 90ರಷ್ಟು ಡೋಸ್‌ಗಳೂ, ಶೇ.92ರಷ್ಟು ಸಾವುಗಳೂ ಕೋವಿಶೀಲ್ಡ್‌ನದ್ದೇ ಆಗಿವೆ. ಕೆನಡಾ, ಬ್ರೆಜಿಲ್ ಹಾಗೂ ಅರ್ಜೆಂಟೀನಾಗಳಲ್ಲಿ ಲಸಿಕೆಯನ್ನು ಪಡೆದವರಲ್ಲಿ ಶೇ. 0.06 ಮಂದಿಗೆ ಅಡ್ಡ ಪರಿಣಾಮಗಳು ವರದಿಯಾಗಿರುವಾಗ, ಭಾರತದಲ್ಲಿ ಅದಕ್ಕಿಂತ ಹತ್ತು-ಹದಿನೈದು ಪಟ್ಟು ಕಡಿಮೆ ವರದಿಯಾಗಿರುವುದು ಇಲ್ಲಿ ಅಡ್ಡ ಪರಿಣಾಮಗಳನ್ನು ಸರಿಯಾಗಿ ದಾಖಲಿಸದಿರುವುದನ್ನೇ ಸೂಚಿಸುತ್ತದೆ.

ಕೋವಿಶೀಲ್ಡ್ ಲಸಿಕೆ ಪಡೆದವರಲ್ಲಿ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಮಾರಣಾಂತಿಕ ಸಮಸ್ಯೆಯಾಗಿರುವುದಷ್ಟೇ ಅಲ್ಲ, ಕರುಳು, ಅಕ್ಷಿಪಟಲ, ಕೈಕಾಲುಗಳು ಮುಂತಾದೆಡೆಗಳ ಅಭಿಧಮನಿಗಳಲ್ಲೂ, ಅಪಧಮನಿಗಳಲ್ಲೂ ರಕ್ತ ಹೆಪ್ಪುಗಟ್ಟಿ ತೀವ್ರ ಸಮಸ್ಯೆಗಳಾಗಿರುವ ವರದಿಗಳಾಗಿವೆ, ಮಾತ್ರವಲ್ಲ, ನರಗಳಿಗೆ, ಹೃದಯದ ಸ್ನಾಯುಗಳಿಗೆ ತೀವ್ರತರದ ಸಮಸ್ಯೆಗಳಾಗಿರುವ ವರದಿಗಳೂ ಆಗಿವೆ. ಆದರೆ ಈ ಎಲ್ಲ ಲಸಿಕೆಗಳನ್ನೂ ದೀರ್ಘಕಾಲಿಕ ಅಧ್ಯಯನಗಳಾಗುವ ಮೊದಲೇ, ಕೇವಲ ಎರಡು-ಮೂರು ತಿಂಗಳುಗಳ ಕಾಲ ಅವಸರವಸರದ ಪರೀಕ್ಷೆಗಳನ್ನಷ್ಟೇ ನಡೆಸಿ, ತುರ್ತು ಅನುಮೋದನೆ ನೀಡಿ ಚುಚ್ಚತೊಡಗಿದ್ದರಿಂದ ವೈದ್ಯರಿಗಾಗಲೀ, ಜನಸಾಮಾನ್ಯರಿಗಾಗಲೀ ಈ ಅಡ್ಡ ಪರಿಣಾಮಗಳ ಬಗ್ಗೆ ಸಾಕಷ್ಟು ಮಾಹಿತಿ ಲಭ್ಯವಿರಲಿಲ್ಲ. ಆದ್ದರಿಂದಲೇ ಲಸಿಕೆಗಳ ಬಳಿಕ ಇಂಥ ಸಮಸ್ಯೆಗಳು ಉಂಟಾದಾಗಲೂ, ಅವನ್ನು ಲಸಿಕೆಗಳಿಗೆ ತಳುಕು ಹಾಕದೆ, ಅಥವಾ ಲಸಿಕೆಗಳಿಗೆ ಸಂಬಂಧವಿಲ್ಲವೆಂದು ಉದ್ದೇಶಪೂರ್ವಕವಾಗಿಯೇ ತಿರಸ್ಕರಿಸಿ, ದಾಖಲಿಸಲು ಸಾಧ್ಯವಾಗಲಿಲ್ಲ ಅಥವಾ ದಾಖಲಿಸಲಿಲ್ಲ. ಇದೇ ಕಾರಣಕ್ಕೆ ಕೋವಿಶೀಲ್ಡ್ ಲಸಿಕೆಯಿಂದ ಸಮಸ್ಯೆಗಳಾಗಿರುವವರ ಸಂಖ್ಯೆಯು ಹಲವು ಪಟ್ಟು ಹೆಚ್ಚಿರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. 

ಆಕ್ಸ್‌ಫರ್ಡ್ (ಕೋವಿಶೀಲ್ಡ್) ಲಸಿಕೆಯಲ್ಲಿ ರಕ್ತ ಹೆಪ್ಪುಗಟ್ಟುವ ಸಮಸ್ಯೆಯುಂಟಾಗುವುದಕ್ಕೆ ಅದರಿಂದ ಹುಟ್ಟುವ ವಿಶೇಷ ಪ್ರತಿಕಾಯವೇ ಕಾರಣವಿರಬಹುದೆಂದು ಮಾರ್ಚ್ 2021ರಲ್ಲೇ ಡೆನ್ಮಾರ್ಕಿನ ವಿಜ್ಞಾನಿಗಳು ಗುರುತಿಸಿದ್ದರು. ಆಕ್ಸ್‌ಫರ್ಡ್ (ಕೋವಿಶೀಲ್ಡ್) ಮತ್ತು ಜಾನ್ಸನ್ ಲಸಿಕೆಗಳಲ್ಲಿ ಕೊರೋನ ವೈರಸಿನ ಮುಳ್ಳಿನ ಪ್ರೋಟೀನಿನ ಜೀನಿಗೆ ಚಿಂಪಾಂಜಿ ಮತ್ತು ಮನುಷ್ಯರಲ್ಲಿ ಸೋಂಕನ್ನುಂಟು ಮಾಡುವ ಅಡಿನೋ ವೈರಸ್ ಕಣಗಳನ್ನು ವಾಹಕಗಳಾಗಿ ಬಳಸಲಾಗಿದ್ದು, ಈ ಎರಡು ಲಸಿಕೆಗಳಲ್ಲಷ್ಟೇ ಪ್ಲೇಟ್ಲೆಟ್ ಕಣಗಳ ವಿರುದ್ಧವಾಗಿರುವ ಪ್ರತಿಕಾಯಗಳು ಹುಟ್ಟುತ್ತವೆ (ಆಂಟಿ ಪ್ಲೇಟ್ಲೆಟ್ ಫ್ಯಾಕ್ಟರ್ 4 ಪ್ರತಿಕಾಯ) ಮತ್ತು ರಕ್ತ ಹೆಪ್ಪುಗಟ್ಟುವುದನ್ನು ಪ್ರಚೋದಿಸುತ್ತವೆ ಎನ್ನುವುದನ್ನು ಅನೇಕ ಅಧ್ಯಯನಗಳೀಗ ದೃಢಪಡಿಸಿವೆ. ಇತ್ತೀಚೆಗೆ ಆಸ್ಟ್ರೇಲಿಯಾದ ಫ್ಲಿಂಡರ್ಸ್ ವಿಶ್ವವಿದ್ಯಾನಿಲಯದಲ್ಲಿ ನಡೆಸಿದ ಅದ್ಯಯನವು ಕೂಡ ಅದನ್ನು ಪುಷ್ಟೀಕರಿಸಿದೆ. ಲಸಿಕೆಯ ಬಳಿಕ ಹುಟ್ಟುವ ಈ ಪ್ರತಿಕಾಯಗಳು ಹೆಚ್ಚಿನವರಲ್ಲಿ (ಸುಮಾರು 85%) 40-50 ದಿನಗಳಲ್ಲಿ ಇಳಿಕೆಯಾಗಿ ಮರೆಯಾಗುವುದಿದ್ದರೂ, ಕೆಲವರಲ್ಲಿ ಆರು ತಿಂಗಳ ನಂತರವೂ ಉಳಿದುಕೊಳ್ಳಬಹುದು, 3-9% ಮಂದಿಯಲ್ಲಿ ರಕ್ತ ಹೆಪ್ಪುಗಟ್ಟಿಸುವ ಸಾಧ್ಯತೆಯೂ ದೀರ್ಘ ಕಾಲ ಉಳಿಯಬಹುದು ಎಂದು ಕೆಲವು ಅಧ್ಯಯನಗಳು ತೋರಿಸಿವೆ (Journal of Clinical Medicine. 2024;13(4):1012) ಈಗ ಅಲ್ಲಲ್ಲಿ ವರದಿಯಾಗುತ್ತಿರುವ ಹಠಾತ್ ಹೃದಯ ಸ್ಥಂಭನ, ಹೃದಯಾಘಾತ ಹಾಗೂ ಮಿದುಳಿನ ಆಘಾತಗಳ ಪ್ರಕರಣಗಳಿಗೂ, ಈ ಲಸಿಕೆ ಹಾಗೂ ಪ್ರತಿಕಾಯಗಳಿಗೂ ಸಂಬಂಧವಿದೆಯೇ ಇಲ್ಲವೇ ಎನ್ನುವ ಬಗ್ಗೆ ಅಧ್ಯಯನಗಳಾಗದೆ ಏನನ್ನೂ ಹೇಳಲಾಗದು.

ಮೂರನೇ ಹಂತದ ಪರೀಕ್ಷೆಗಳಾಗದೆಯೇ, ಅದನ್ನು ನಡೆಸುವುದಕ್ಕೆಂದೇ ತುರ್ತು ಅನುಮೋದನೆ ನೀಡಲಾಗಿದ್ದ ಕೊವಾಕ್ಸಿನ್ ಲಸಿಕೆಯ ಆ ಮೂರನೇ ಹಂತದ ಅಂತಿಮ ವರದಿಯಾಗಲೀ, ಅಡ್ಡ ಪರಿಣಾಮಗಳ ವರದಿಗಳಾಗಲೀ ಪ್ರಕಟವಾಗಿಲ್ಲ. ಕೆಲದಿನಗಳ ಹಿಂದೆ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ತಜ್ಞರು ಕೊವಾಕ್ಸಿನ್ ಪಡೆದವರಲ್ಲಿ ಶೇ.70ರಷ್ಟು ಮಂದಿ ಅಡ್ಡ ಪರಿಣಾಮಗಳನ್ನು ಅನುಭವಿಸಿದ್ದರು ಎಂಬ ವರದಿಯನ್ನು ಪ್ರಕಟಿಸಿದ್ದರು. ಈ ಅಧ್ಯಯನವೇ ದೋಷಪೂರಿತವಾಗಿದೆ, ಅದರಲ್ಲಿ ತಮ್ಮ ಹೆಸರನ್ನು ಸೇರಿಸುವಂತಿಲ್ಲ ಎಂದು ಐಸಿಎಂಆರ್ ಬನಾರಸ್ ವಿಶ್ವವಿದ್ಯಾನಿಲಯಕ್ಕೆ ಎಚ್ಚರಿಕೆ ನೀಡಿತು. ಆ ಅಧ್ಯಯನ ದೋಷಪೂರಿತವಾಗಿದ್ದರೆ, ಅದಕ್ಕಿಂತ ಒಳ್ಳೆಯದಾದ, ಐಸಿಎಂಆರ್ ಹಾಗೂ ಭಾರತ್ ಬಯೋಟೆಕ್ ನಡೆಸಿದ ಅಧ್ಯಯನ ಇದ್ದರೆ ತೋರಿಸಿ ಎಂದು ಕೇಳಿದ್ದಕ್ಕೆ ಇದುವರೆಗೂ ಉತ್ತರ ಬಂದಿಲ್ಲ!

ಒಟ್ಟಿನಲ್ಲಿ, ನಮ್ಮ 95 ಕೋಟಿ ಜನರಿಗೆ ಸರಿಯಾದ ಮಾಹಿತಿ ನೀಡದೆ, ಬಗೆಬಗೆಯ ಒತ್ತಡ ಹಾಕಿ ಅನಗತ್ಯವಾಗಿದ್ದರೂ ಲಸಿಕೆ ಹಾಕಿಸಿದ ನಮ್ಮ ಸರಕಾರ, ವೈದ್ಯರು ಮತ್ತು ವೈದ್ಯಕೀಯ ಸಂಘಟನೆಗಳು ಮತ್ತು ಲಸಿಕೆ ತಯಾರಕ ಕಂಪೆನಿಗಳು ಈಗ ಜನರಿಗೆ ಪ್ರಾಮಾಣಿಕವಾದ, ಸಾಕ್ಷ್ಯಾಧಾರಿತವಾದ ಉತ್ತರಗಳನ್ನು ಹೇಳುವ ಕಾಲ ಬಂದಿದೆ. ಅಸ್ತ್ರ ಜೆನೆಕ ಕಂಪೆನಿಯು ನ್ಯಾಯಾಲಯದಲ್ಲಿ ಅಡ್ಡ ಪರಿಣಾಮಗಳನ್ನು ಒಪ್ಪಿಕೊಂಡ ಮೇಲೆ, ಮಾಧ್ಯಮವೊಂದಕ್ಕೆ ಮಾತಾಡುತ್ತಾ ರಾಜ್ಯದ ವೈದ್ಯರೊಬ್ಬರು ಕೊರೋನ ಲಸಿಕೆ ಹಾಕಿದ್ದನ್ನು ಬಸ್ಸು-ರೈಲುಗಳ ಪ್ರಯಾಣಕ್ಕೆ ಹೋಲಿಸಿದ್ದರು. ಬಸ್ಸು-ರೈಲು-ವಿಮಾನಗಳಲ್ಲಿ ಹೋಗುವವರು ಅವು ಅಪಘಾತಕ್ಕೀಡಾಗಬಹುದೆಂಬ ಅರಿವಿದ್ದೂ ಅವುಗಳಲ್ಲಿ ಹತ್ತಿ ಹೋಗುವಂತೆಯೇ ಲಸಿಕೆ ಪಡೆಯುವಾಗಲೂ ಕೆಲವೊಮ್ಮೆ ಅಪಘಾತವಾಗಬಹುದು, ಅದೇನೂ ದೊಡ್ಡದಲ್ಲ ಎಂದಿದ್ದರು. ಬಸ್ಸು-ರೈಲುಗಳಲ್ಲಿ ಹೋಗುವವರು ಅಪಘಾತದ ಸಾಧ್ಯತೆಗಳ ಬಗ್ಗೆ ಸರಿಯಾದ ಅರಿವಿದ್ದೇ ತಾವೇ ಸ್ವತಃ ಟಿಕೆಟ್ ಪಡೆದು ತಮ್ಮಿಷ್ಟದಲ್ಲೇ ಅವುಗಳಲ್ಲಿ ಹೋಗುತ್ತಾರೆ. ಆದರೆ ಕೋವಿಡ್ ಲಸಿಕೆ ಎಂಬ ಬಸ್ಸಿನಲ್ಲಿ ಅಪಘಾತವಾಗುವ ಬಗ್ಗೆ ಹೇಳದೆಯೇ, ಅದರಲ್ಲಿ ಹೋಗದಿದ್ದರೆ ಅಪಘಾತವಾಗುತ್ತದೆ ಎಂದು ಹೆದರಿಸಿ, ಉಚಿತವಾಗಿ ಸರಕಾರವೇ ಬಸ್ಸಿನೊಳಕ್ಕೆ ನೂಕಿ, ಅದು ಒಂದಷ್ಟು ದೂರ ಹೋಗುತ್ತಿದ್ದಾಗ ಅಪಘಾತವಾಗಬಹುದೆಂದು ಹೆದರಿಸಿದಂತಾಗಿದೆ. ಆಗ ಲಸಿಕೆ ಹಾಕಿಸಿಕೊಳ್ಳುವಂತೆ ಒತ್ತಾಯಿಸಿ, ಈಗ ಏನೇನೋ ಹೇಳಿ ಅದನ್ನು ಸಮರ್ಥಿಸಬೇಕಾದ ಕಷ್ಟಕ್ಕೀಡಾಗಿರುವ ವೈದ್ಯರು ಈ ಎರಡು ಬಸ್ಸುಗಳ ವ್ಯತ್ಯಾಸವನ್ನು ಅರಿಯಬೇಕಾದ ಅಗತ್ಯವಿದೆ.

ಭಾಗ 3: ಲಸಿಕೆ ಹಾಕಿಸಿದವರು, ಹಾಕಿದವರು ಈಗೇನು ಮಾಡಬೇಕು?

ವಾರ್ತಾಭಾರತಿ ಮೇ 29, 2024

https://www.varthabharati.in/nimma-ankana/those-who-have-been-vaccinated=what-should-they-do-now-2012410

ಅಗತ್ಯವಿಲ್ಲದೆ, ಅಡ್ಡ ಪರಿಣಾಮಗಳ ಬಗ್ಗೆ ಮಾಹಿತಿ ನೀಡದೆ 95 ಕೋಟಿ ಜನರಿಗೆ ಲಸಿಕೆ ಚುಚ್ಚಿಸಿ ಈಗ ಅವುಗಳ ಗಂಭೀರ ಅಡ್ಡ ಪರಿಣಾಮಗಳ ಬಗ್ಗೆ ಕಂಪೆನಿಗಳಿಂದಲೂ, ಇತರ ಅಧ್ಯಯನಗಳಿಂದಲೂ ಪ್ರತಿನಿತ್ಯವೆಂಬಂತೆ ವರದಿಗಳು ಹೊರಬರುತ್ತಿರುವಾಗ, ಜೊತೆಗೆ ಪ್ರತಿನಿತ್ಯವೆಂಬಂತೆ ಎಲ್ಲೆಡೆಗಳಿಂದ ಹಠಾತ್ ಹೃದಯ ಸ್ಥಂಭನ, ಹೃದಯಾಘಾತ ಹಾಗೂ ಮಿದುಳಿನ ಆಘಾತಗಳ ಪ್ರಕರಣಗಳು ವರದಿಯಾಗುತ್ತಿರುವಾಗ ಸಹಜವಾಗಿಯೇ ಲಸಿಕೆ ಹಾಕಿಸಿಕೊಂಡವರಲ್ಲಿ ಆತಂಕ, ಭಯಗಳು ಹೆಚ್ಚುತ್ತಿವೆ, ಆದರೆ ಅದಕ್ಕೆ ಸಮಾಧಾನಕರವಾದ ಉತ್ತರಗಳು ಎಲ್ಲೂ ದೊರೆಯುತ್ತಿಲ್ಲ ಎಂಬಂತಾಗಿದೆ.

ಅವಸರದಲ್ಲಿ ಲಸಿಕೆ ಕೊಡಿಸಿದ, ಅದನ್ನು ಉತ್ತೇಜಿಸಿದ ಸರಕಾರ, ವೈದ್ಯರುಗಳು ಹಾಗೂ ಲಸಿಕೆ ಕಂಪೆನಿಗಳು ಈಗಾಗಲೇ ಆಗಿರುವ ಆ ಹಾನಿಗಳನ್ನು ಸಾಧ್ಯವಾದಷ್ಟು ಸರಿಪಡಿಸಲು, ಜನರ ಆತಂಕಗಳನ್ನು ನಿವಾರಿಸಲು ಅಗತ್ಯ ಕ್ರಮಗಳನ್ನು ಮಾಡಲೇಬೇಕಾಗಿದೆ.

ಮೊದಲನೆಯದಾಗಿ, ಕೊರೋನ ಲಸಿಕೆಗಳನ್ನು ನೀಡಿದ್ದರಿಂದ ಆಗಿರುವ ಪ್ರಯೋಜನಗಳು ಮತ್ತು ಸಮಸ್ಯೆಗಳ ಬಗ್ಗೆ ಎಲ್ಲಾ ವಿವರಗಳನ್ನು ಜನರ ಮುಂದಿರಿಸಬೇಕು. ನಮ್ಮ ದೇಶದಲ್ಲಿ ಲಸಿಕೆ ಹಾಕಿಸಿಕೊಂಡವರು, ಕೊರೋನ ಪರೀಕ್ಷೆ ಮಾಡಿಸಿಕೊಂಡವರು, ಕೊರೋನದಿಂದ ಗಂಭೀರ ಸಮಸ್ಯೆಗೀಡಾದವರು, ಮೃತ ಪಟ್ಟವರು, ಎಲ್ಲರ ಮಾಹಿತಿಯನ್ನೂ ಅವರವರ ಆಧಾರ್ ಸಂಖ್ಯೆಯೊಂದಿಗೆ  ಜೋಡಿಸಲಾಗಿರುವುದರಿಂದ (ಅದು ಸರಿಯೋ, ತಪ್ಪೋ ಎನ್ನುವ ಚರ್ಚೆ ಬೇರೆಯೇ ಇದೆ) ಇವೆಲ್ಲವುಗಳ ನಡುವಿನ ಅಂತರ ಸಂಬಂಧಗಳನ್ನು ತಾಳೆ ಹಾಕುವುದು ಸುಲಭವಿದೆ, ಆದ್ದರಿಂದ ಅಂತಹ ವಿಶ್ಲೇಷಣೆಗಳನ್ನು ನಡೆಸಿ, ಅವುಗಳ ವರದಿಗಳನ್ನು ಕೂಡಲೇ ಜನರೆದುರು ಇರಿಸಬೇಕು. ಮೊದಲೇ ಸೋಂಕಿತರಾಗಿದ್ದ ಎಷ್ಟು ಮಂದಿಗೆ ಲಸಿಕೆ ನೀಡಲಾಯಿತು, ಲಸಿಕೆ ಪಡೆದ ಬಳಿಕ ಎಷ್ಟು ಜನರು ಸೋಂಕಿತರಾದರು, ಲಸಿಕೆ ಪಡೆದವರಲ್ಲಿ ಎಷ್ಟು ಜನರು ಸೋಂಕಿನಿಂದ ಸಮಸ್ಯೆಗೀಡಾದರು, ಅದರಿಂದ ಮೃತರಾದರು, ಲಸಿಕೆಯ ಕಾರಣಕ್ಕೆ ಎಷ್ಟು ಜನರು ಯಾವ ಸಮಸ್ಯೆಗೀಡಾದರು, ಅವರಲ್ಲಿ ಎಷ್ಟು ಜನರು ಗುಣಮುಖರಾದರು, ಎಷ್ಟು ಜನರು ಶಾಶ್ವತ ಸಮಸ್ಯೆಗೀಡಾದರು, ಎಷ್ಟು ಜನರು ಮೃತರಾದರು ಎಂಬೆಲ್ಲಾ ವಿವರಗಳನ್ನು ಪಾರದರ್ಶಕವಾಗಿ ಪ್ರಕಟಿಸಬೇಕು. ಭಾರತದಲ್ಲಿ ಕೋವಿಶೀಲ್ಡ್ ಹಾಗೂ ಕೊವಾಕ್ಸಿನ್ ಲಸಿಕೆಗಳ ಬಗ್ಗೆ ನಡೆಸಲಾಗಿರುವ ಮೂರನೇ ಹಾಗೂ ನಾಲ್ಕನೇ ಹಂತದ ಪರೀಕ್ಷೆಗಳ ಅಂತಿಮ ವರದಿಗಳನ್ನೂ ಕೂಡಲೇ ಪ್ರಕಟಿಸಬೇಕು. 

ಎರಡನೆಯದಾಗಿ, ಕೊರೋನ ಸೋಂಕು ಹಾಗೂ ಕೊರೋನ ಲಸಿಕೆಗಳ ನಂತರದಲ್ಲಿ ಉಂಟಾಗಿರುವ ರಕ್ತ ಹೆಪ್ಪುಗಟ್ಟುವ ಪ್ರಕರಣಗಳೆಷ್ಟು; ಅಂಥ ಪ್ರಕರಣಗಳಲ್ಲಿ ಕೋವಿಶೀಲ್ಡ್ ಲಸಿಕೆ ಪಡೆದವರೆಷ್ಟು, ಪಡೆಯದವರೆಷ್ಟು; ಕೋವಿಶೀಲ್ಡ್ ನೀಡಲಾರಂಭಿಸಿದ ನಂತರದಲ್ಲಿ ಮಿದುಳಿನ ಅಭಿಧಮನಿಗಳಲ್ಲಿ (ಸಿವಿಟಿ), ಸ್ನಾಯುಗಳೊಳಗಿನ ಅಭಿಧಮನಿಗಳಲ್ಲಿ (ಡಿವಿಟಿ), ಶ್ವಾಸಕೋಶಗಳ ಅಭಿಧಮನಿಗಳಲ್ಲಿ, ಕರುಳಿನ ರಕ್ತನಾಳಗಳಲ್ಲಿ, ಅಕ್ಷಿಪಟಲದ ರಕ್ತನಾಳಗಳಲ್ಲಿ, ರಕ್ತ ಹೆಪ್ಪುಗಟ್ಟಿ ಸಮಸ್ಯೆಗಳಾದ ಪ್ರಕರಣಗಳೆಷ್ಟು; ಗೀಲನ್ ಬಾ ಮತ್ತು ಇತರ ನರದೌರ್ಬಲ್ಯದ ಪ್ರಕರಣಗಳೆಷ್ಟು; ಮತ್ತು ಈ ಎಲ್ಲಾ ಪ್ರಕರಣಗಳಿಗೂ ಅವರವರು ಹಾಕಿಸಿಕೊಂಡ ಕೊರೋನ ಲಸಿಕೆಗಳಿಗೂ ಸಾಮಯಿಕ ಸಂಬಂಧಗಳೇನು ಎಂಬ ಎಲ್ಲಾ ಮಾಹಿತಿಯನ್ನು ದೇಶದಾದ್ಯಂತ ಸಂಗ್ರಹಿಸಿ ಪ್ರಕಟಿಸಬೇಕು.

ಮೂರನೆಯದಾಗಿ, ಕನಿಷ್ಠ ಸುಮಾರು ಮೂರು-ನಾಲ್ಕು ಸಾವಿರ ಜನರನ್ನು ಆಯ್ದು, ಕೋವಿಶೀಲ್ಡ್ ಲಸಿಕೆ ಪಡೆದವರು, ಕೊವಾಕ್ಸಿನ್ ಲಸಿಕೆ ಪಡೆದವರು, ಯಾವುದೇ ಲಸಿಕೆ ಪಡೆಯದವರು ಮತ್ತು ಈ ಮೂರು ಗುಂಪುಗಳಲ್ಲಿ ಕೊರೋನ ಸೋಂಕಿತರು ಮತ್ತು ಇದುವರೆಗೆ ಸೋಂಕು ತಗಲದೇ ಇರುವವರು ಎಂದು ವಿಂಗಡಿಸಿ, ಅವರಲ್ಲಿ ಆಂಟಿ ಪ್ಲೇಟ್ಲೆಟ್ ಫ್ಯಾಕ್ಟರ್ 4 ಪ್ರತಿಕಾಯಗಳನ್ನು ಪರೀಕ್ಷಿಸುವ ಅಧ್ಯಯನಗಳನ್ನು ನಡೆಸಬೇಕು. ಹಾಗೆಯೇ, ಇನ್ನು ಮುಂದಕ್ಕೆ ರಕ್ತನಾಳಗಳಲ್ಲಿ ಹೆಪ್ಪುಗಟ್ಟುವಿಕೆ, ಹೃದಯಾಘಾತ, ಹಠಾತ್ ಹೃದಯ ಸ್ಥಂಭನ, ಮಿದುಳಿನ ಆಘಾತಗಳಾಗುವ ಪ್ರಕರಣಗಳಲ್ಲಿ ಆಂಟಿ ಪ್ಲೇಟ್ಲೆಟ್ ಫ್ಯಾಕ್ಟರ್ 4 ಪ್ರತಿಕಾಯಗಳನ್ನು ಪರೀಕ್ಷಿಸುವ ಅಧ್ಯಯನಗಳನ್ನು ನಡೆಸಬೇಕು. ಈ ಅಧ್ಯಯನಗಳು ಕ್ಲಿಷ್ಟಕರವೂ, ಸಂಕೀರ್ಣವೂ, ವೆಚ್ಚದಾಯಕವೂ ಆಗಿರುವುದರಿಂದ ಎಐಐಎಂಎಸ್, ಜಯದೇವ ಹೃದ್ರೋಗ ಸಂಸ್ಥೆ ಮುಂತಾದ ಅತ್ಯುನ್ನತ ಸಂಸ್ಥೆಗಳಲ್ಲಿ ಐಸಿಎಂಆರ್ ಸಹಯೋಗದಲ್ಲಿ ಅವನ್ನು ನಡೆಸಬಹುದು. ಇಂತಹ ಅಧ್ಯಯನಗಳು ಪ್ರಾಮಾಣಿಕವಾಗಿ ನಡೆಯದ ಹೊರತು ಕೊರೋನ ಲಸಿಕೆಗಳು ನಿರಪಾಯಕರವೆನ್ನುವುದಕ್ಕಾಗಲೀ, ಮೇಲೆ ಹೇಳಿರುವ ಗಂಭೀರ ಸಮಸ್ಯೆಗಳೆಲ್ಲಕ್ಕೂ ಲಸಿಕೆಗಳೇ ಕಾರಣ ಎನ್ನುವುದಕ್ಕಾಗಲೀ ಆಧಾರಗಳು ದೊರೆಯಲಾರವು.

ನಾಲ್ಕನೆಯದಾಗಿ, ಈಗಾಗಲೇ ದೃಢಪಟ್ಟಿರುವ ಲಸಿಕೆ ಸಂಬಂಧಿತ ಅಡ್ಡ ಪರಿಣಾಮಗಳಿಂದ ಗಂಭೀರ ಸಮಸ್ಯೆಗೀಡಾದವರಿಗೆ ಹಾಗೂ ಮೃತ ಪಟ್ಟವರಿಗೆ ಸರಕಾರವು ಸಹಾನುಭೂತಿಯೊಂದಿಗೆ ಸೂಕ್ತ ಪರಿಹಾರವನ್ನು ನೀಡಬೇಕು.

ಐದನೆಯದಾಗಿ, ಭಾರತದಲ್ಲಿ ಲಸಿಕೆಗಳಿಂದ ಯಾವುದೇ ಸಮಸ್ಯೆಯಾಗಿಲ್ಲವೆಂದು ಸಾರಾಸಗಟಾಗಿ ನಿರಾಕರಿಸುವುದು, ಲಸಿಕೆಗಳು ಭಾರೀ ಪ್ರಯೋಜನಕಾರಿಯಾಗಿದ್ದುದರಿಂದ ಅವನ್ನು ನೀಡುವುದು ಅನಿವಾರ್ಯವಾಗಿತ್ತು, ಹಾಗಾಗಿ ಕೆಲವರಿಗೆ ಅಡ್ಡ ಪರಿಣಾಮಗಳಾಗಿದ್ದರೆ ಅದೇನೂ ದೊಡ್ಡದಲ್ಲ ಎಂದು ವಾದಿಸುವುದು ಅಪ್ರಾಮಾಣಿಕವೂ, ಆಧಾರರಹಿತವೂ ಆಗುವುದರಿಂದ, ಅಂಥ ಸಮರ್ಥನೆಗಳನ್ನು ಮಾಡದೆ, ಕಷ್ಟಕ್ಕೀಡಾಗಿರುವವರಿಗೆ ಸತ್ಯವನ್ನು ಹೇಳಿ ಧೈರ್ಯ ತುಂಬುವ, ಸಂತೈಸುವ ಕೆಲಸವಾಗಬೇಕು.

ಲಸಿಕೆ ಪಡೆದಿರುವವರು ಏನು ಮಾಡಬಹುದು?

ಅನಗತ್ಯವಾಗಿ ದೇಹದೊಳಕ್ಕೆ ಚುಚ್ಚಿರುವ ಲಸಿಕೆಯನ್ನು ಹೊರತೆಗೆಯುವುದಂತೂ ಸಾಧ್ಯವಿಲ್ಲ. ಈಗ ಕಂಪೆನಿಯೇ ಒಪ್ಪಿಕೊಂಡಿರುವ ಅಡ್ಡ ಪರಿಣಾಮಗಳ ಬಗ್ಗೆಯಾಗಲೀ, ಎಲ್ಲೆಡೆ ವರದಿಯಾಗುತ್ತಿರುವ ಹಠಾತ್ ಹೃದಯ ಸ್ಥಂಭನಗಳಂತಹ ಪ್ರಕರಣಗಳ ಬಗ್ಗೆಯಾಗಲೀ ಸದಾ ಚಿಂತೆಗೀಡಾಗುವುದು ಕೂಡಾ ಒಳ್ಳೆಯದಲ್ಲ. ಸರಕಾರ, ಲಸಿಕೆ ಕಂಪೆನಿಗಳು ಹಾಗೂ ವೈದ್ಯ ಸಮೂಹ ಪ್ರಾಮಾಣಿಕವಾಗಿ ಆತಂಕ ನಿವಾರಣೆಗೆ ಯತ್ನಿಸುತ್ತಿಲ್ಲ ಎಂದು ಹತಾಶರಾಗಿಯೂ ಫಲವಿಲ್ಲ. ಆದ್ದರಿಂದ ಲಸಿಕೆ ಪಡೆದಿರುವ ಜನಸಾಮಾನ್ಯರು ತಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯಗಳನ್ನು ರಕ್ಷಿಸಿಕೊಳ್ಳುವತ್ತ ಗಮನ ಹರಿಸುವುದೊಳ್ಳೆಯದು.

ಕೊರೋನ ವೈರಸ್ ಮತ್ತು ಕೋವಿಡ್ ನಮ್ಮ ದೇಹದಲ್ಲಿ ಉರಿಯೂತವನ್ನು ಹೆಚ್ಚಿಸುವುದಲ್ಲದೆ ರಕ್ತದಲ್ಲಿ ಸಕ್ಕರೆಯ ಮಟ್ಟ, ರಕ್ತದೊತ್ತಡ, ರಕ್ತನಾಳಗಳ ಸುಸ್ಥಿತಿಗಳ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುವ ಎಸಿಇ2 ಗ್ರಾಹಿಗಳ ಮೇಲೆ ವರ್ತಿಸುತ್ತದೆ ಎನ್ನುವುದು ಸೋಂಕಿನ ಆರಂಭದಲ್ಲೇ ತಿಳಿದಿತ್ತು. ಇದೇ ಕಾರಣಕ್ಕೆ ಸಕ್ಕರೆ ಕಾಯಿಲೆ, ರಕ್ತದ ಏರೊತ್ತಡ, ಬೊಜ್ಜು, ಹೃದ್ರೋಗ ಇತ್ಯಾದಿ ಆಧುನಿಕ ರೋಗಗಳಿದ್ದವರಲ್ಲಿ ಕೋವಿಡ್ ಹೆಚ್ಚು ಸಮಸ್ಯೆಗಳನ್ನುಂಟು ಮಾಡುತ್ತದೆ ಎನ್ನುವುದೂ, ಕೋವಿಡ್‌ನಿಂದಾಗಿ ಈ ಕಾಯಿಲೆಗಳು ಕೂಡ ಇನ್ನಷ್ಟು ಬಿಗಡಾಯಿಸುತ್ತವೆ ಎನ್ನುವುದೂ ಸ್ಪಷ್ಟವಾಗಿತ್ತು. ಕೋವಿಡ್ ಲಸಿಕೆಗಳಲ್ಲೂ ಎಸಿಇ2 ಗ್ರಾಹಿಗಳ ಮೇಲೆ ವರ್ತಿಸುವ ಕೊರೋನ ವೈರಸಿನ ಮುಳ್ಳಿನ ಪ್ರೋಟೀನುಗಳೇ ಇರುವುದರಿಂದ, ಮತ್ತು ಅದಾಗಲೇ ಸೋಂಕು ತಗಲಿದವರಿಗೂ ಈ ಲಸಿಕೆಗಳನ್ನು ನೀಡಿರುವುದರಿಂದ ಈ ಎಲ್ಲಾ ಕಾಯಿಲೆಗಳ ಮೇಲೆ ಪರಿಣಾಮಗಳಾಗಿರುವ ಸಾಧ್ಯತೆಗಳನ್ನು ಪರಿಗಣಿಸಬೇಕಾಗುತ್ತದೆ. ಜೊತೆಗೆ, ಈ ಆಧುನಿಕ ರೋಗಗಳಿಗೂ, ಆಧುನಿಕ ಆಹಾರ, ಜೀವನಶೈಲಿ, ನಿತ್ಯಜೀವನದ ಒತ್ತಡಗಳಿಗೂ ನಿಕಟ ಸಂಬಂಧಗಳಿರುವುದು ಕೂಡ ಸುಸ್ಪಷ್ಟವಾಗಿದ್ದು, ಇವುಗಳೆಲ್ಲವೂ ಪರಸ್ಪರ ಒಂದನ್ನೊಂದು ಬಿಗಡಾಯಿಸಿಕೊಳ್ಳುವುದನ್ನೂ ಪರಿಗಣಿಸಬೇಕಾಗುತ್ತದೆ. ಕೊರೋನ ಕಾಲದಲ್ಲಿ ಲಾಕ್ ಡೌನ್ ಮಾಡಿದ್ದು, ಶಾಲೆ-ಕಾಲೇಜುಗಳನ್ನು ಮುಚ್ಚಿದ್ದು, ಯಾರೂ ಹೊರಬಾರದಂತೆ ಮಾಡಿ ಆಟೋಟ, ನಿತ್ಯ ವ್ಯಾಯಾಮಗಳನ್ನು ತಡೆದದ್ದು, ಮನೆಯಿಂದಲೇ ಕೆಲಸ ಮಾಡುವ ವ್ಯವಸ್ಥೆ ಮಾಡಿದ್ದು, ಇವೆಲ್ಲವುಗಳಿಂದ ಆಹಾರಕ್ರಮ ಬದಲಾದದ್ದು, ದೈಹಿಕ ಶ್ರಮ ಕಡಿಮೆಯಾದದ್ದು, ಮಾನಸಿಕ ಒತ್ತಡ ಹೆಚ್ಚಿದ್ದು, ಅವುಗಳ ಜೊತೆಗೆ ಕೊರೋನಾ ಸೋಂಕು ಮತ್ತದರ ಲಸಿಕೆ ಕೂಡ ಸೇರಿಕೊಂಡದ್ದು ಈ ಆಧುನಿಕ ಕಾಯಿಲೆಗಳನ್ನು ಇನ್ನಷ್ಟು ಉಲ್ಬಣಿಸಿರುವ ಎಲ್ಲಾ ಸಾಧ್ಯತೆಗಳೂ ನಿಚ್ಚಳವಾಗಿವೆ.

ಲಾಕ್ ಡೌನ್, ಮಾಸ್ಕ್ ಇತ್ಯಾದಿ ಮಾಡಿದರೂ ಅವೆಲ್ಲ ವಿಫಲವಾಗಿ ದೇಶದ ಬಹುತೇಕ ಎಲ್ಲರಿಗೂ ಈಗಾಗಲೇ ಕೊರೋನಾ ಸೋಂಕು ತಗಲಿರುವುದರಿಂದ ಮತ್ತು ಸಣ್ಣ ಮಕ್ಕಳನ್ನು ಬಿಟ್ಟು ಉಳಿದವರಲ್ಲಿ ಶೇ. 90ಕ್ಕೂ ಹೆಚ್ಚು ಜನರಿಗೆ ಕೊರೋನ ಲಸಿಕೆಗಳನ್ನು ಚುಚ್ಚಿ ಆಗಿರುವುದರಿಂದ ಇವುಗಳಿಂದ ಆಗಿರುವ, ಆಗಬಹುದಾದ ಪರಿಣಾಮಗಳನ್ನು ಹೋಗಲಾಡಿಸುವುದಕ್ಕೆ ಸಾಧ್ಯವಾಗದು. ಆದರೆ ರಕ್ತ ಹೆಪ್ಪುಗಟ್ಟುವಿಕೆ, ಹೃದಯಾಘಾತ, ಮಿದುಳಿನ ಆಘಾತದಂತಹ ಸಮಸ್ಯೆಗಳನ್ನು ಉಲ್ಬಣಿಸುವ ಇತರ ಕಾಯಿಲೆಗಳನ್ನು ಮತ್ತು ಕಾರಣಗಳನ್ನು ನಿಯಂತ್ರಿಸುವುದಕ್ಕೆ ಸಾಧ್ಯವಿದೆ, ಆ ಪ್ರಯತ್ನವನ್ನು ಎಲ್ಲರೂ ಮಾಡಬೇಕು. ಸಕ್ಕರೆ ಕಾಯಿಲೆ ಹಾಗೂ ಅಧಿಕ ರಕ್ತದೊತ್ತಡಗಳನ್ನು ಉತ್ತಮವಾಗಿ ನಿಯಂತ್ರಣದಲ್ಲಿಟ್ಟುಕೊಳ್ಳುವುದು, ಈ ಕಾಯಿಲೆಗಳಿಗೂ, ಬೊಜ್ಜು, ಉರಿಯೂತದ ಹೆಚ್ಚಳಗಳಿಗೂ ಕಾರಣವಾಗುವ ಆಹಾರ ಹಾಗೂ ಜೀವನಶೈಲಿಗಳನ್ನು ತ್ಯಜಿಸುವುದು, ನಿಯತವಾಗಿ ದಿನಕ್ಕೆ 30-60 ನಿಮಿಷಗಳ ಕಾಲ ವೇಗವಾಗಿ ನಡೆಯುವುದು ಅಥವಾ ಈಜುವುದು, ಸಾಕಷ್ಟು ವಿಶ್ರಾಂತಿ, ಮನೋಲ್ಲಾಸ ಹಾಗೂ ರಾತ್ರಿಯಲ್ಲಿ ಕನಿಷ್ಠ 7-8 ಗಂಟೆ ನಿದ್ದೆಯನ್ನು ಪಡೆಯುವುದು ಅಗತ್ಯವಾಗಿದೆ. ಪಶುವಿನ ಹಾಲು ಮತ್ತದರ ಉತ್ಪನ್ನಗಳು, ಸಕ್ಕರೆ ಮತ್ತು ಸಕ್ಕರೆ/ಸಿಹಿಭರಿತ ತಿನಿಸುಗಳು ಹಾಗೂ ಪೇಯಗಳು, ಹಣ್ಣುಗಳು ಮತ್ತು ಹಣ್ಣುಗಳ ರಸಗಳು, ಸಂಸ್ಕರಿತ ಸಿದ್ಧ ತಿನಿಸುಗಳು, ಮದ್ಯಪಾನ, ಧೂಮಪಾನಗಳನ್ನು ವರ್ಜಿಸುವುದು ಹೃದಯ ಹಾಗೂ ರಕ್ತನಾಳಗಳ ಆರೋಗ್ಯವನ್ನು ರಕ್ಷಿಸಲು ನೆರವಾಗುತ್ತದೆ.

ಹೃದಯದ ರಕ್ತನಾಳಗಳಿಗೆ ಸಮಸ್ಯೆಯಾಗಿರುವ ಸಂದರ್ಭಗಳಲ್ಲಿ ಹೃದಯಾಘಾತಕ್ಕೆ ಮೊದಲೇ ಕೆಲವೊಂದು ಮುನ್ಸೂಚನೆಗಳು ಸಾಮಾನ್ಯವಾಗಿ ಕಂಡುಬರುತ್ತವೆ, ಅವನ್ನು ನಿರ್ಲಕ್ಷಿಸದೆ ತಕ್ಕ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು. ಕೆಲವೊಮ್ಮೆ ವೈದ್ಯರು ಕೂಡ ಅವನ್ನು ಗಂಭೀರವಾಗಿ ತೆಗೆದುಕೊಳ್ಳದಿರಬಹುದು, ಹಾಗಿದ್ದಲ್ಲಿ ಸಮಸ್ಯೆಯಿದ್ದವರೇ ವೈದ್ಯರನ್ನು ಒತ್ತಾಯಿಸಬೇಕಾಗಬಹುದು. ಹೃದಯದ ರಕ್ತನಾಳಗಳಲ್ಲಿ ಅಡಚಣೆಯು ಬೆಳೆಯುತ್ತಿದ್ದರೆ, ಯಾವುದೇ ಕೆಲಸವನ್ನು ಮಾಡುವಾಗ ಹೃದಯದ ಸ್ನಾಯುಗಳಿಗೆ ಕಷ್ಟವೆನಿಸಿ ಅದರ ಲಕ್ಷಣಗಳು ಕಂಡುಬರುತ್ತವೆ – ನಡೆಯುವಾಗ, ಮೆಟ್ಟಲುಗಳನ್ನು ಅಥವಾ ಎತ್ತರವನ್ನು ಏರುವಾಗ, ಆಡುವಾಗ, ಹೀಗೆ ದೈಹಿಕ ಶ್ರಮದ ಸಂದರ್ಭದಲ್ಲಿ ಕತ್ತು ಹಿಸುಕಿದಂತಾಗುವುದು, ಎದೆ ಹಿಂಡಿದಂತೆ, ಒತ್ತಿದಂತೆ, ಭಾರವಾದಂತೆ ಅನಿಸುವುದು, ಹೊಟ್ಟೆಯ ಮೇಲ್ಭಾಗದಲ್ಲಿ ಉರಿ ಅಥವಾ ಉಬ್ಬಿದಂತಾಗುವುದು, ಕತ್ತು, ಭುಜಗಳು, ಕೆಳ ದವಡೆಗಳು, ಬೆನ್ನಿನ ಮೇಲ್ಭಾಗಗಳಲ್ಲಿ ಸೆಳೆತ ಅಥವಾ ನೋವುಂಟಾಗುವುದು, ಉಸಿರಾಡಲು ಕಷ್ಟವೆನಿಸುವುದು, ಎದೆ ಬಡಿತ ಹೆಚ್ಚುವುದು, ತಲೆ ಸುತ್ತುವುದು – ಹೀಗೆ ಯಾವುದೇ ಕೆಲಸಗಳನ್ನು ಮಾಡುವಾಗ ಇಂತಹ ಯಾವುದೇ ಲಕ್ಷಣಗಳಿದ್ದಲ್ಲಿ, ಮತ್ತು ಪ್ರತೀ ಬಾರಿಯೂ ಅಂಥ ಕೆಲಸಗಳನ್ನು ಮಾಡುವಾಗ ಇವು ಮರುಕಳಿಸುವುದಾದಲ್ಲಿ, ಹೃದ್ರೋಗಕ್ಕೆ ಸಂಬಂಧಿಸಿದ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಒಳ್ಳೆಯದು. ಕೆಲವೊಮ್ಮೆ ಈ ಲಕ್ಷಣಗಳಿರುವವರಲ್ಲಿ ಇಸಿಜಿಯನ್ನಷ್ಟೇ ಮಾಡಿದರೆ ಸಮಸ್ಯೆಯು ಗುರುತಿಸಲ್ಪಡದೇ ಹೋಗಬಹುದು, ಆದ್ದರಿಂದ ಸ್ಪಷ್ಟವಾದ ಲಕ್ಷಣಗಳಿದ್ದು, ಇಸಿಜಿಯಲ್ಲಿ ವ್ಯತ್ಯಾಸಗಳಿಲ್ಲ ಎಂದಾದರೆ, ಟ್ರೆಡ್‌ಮಿಲ್ ಪರೀಕ್ಷೆ ಅಥವಾ ಆಂಜಿಯೋಗ್ರಾಂ ಪರೀಕ್ಷೆ ಬೇಕಾಗಬಹುದು.   

ಲಸಿಕೆ ಪಡೆದವರ ದೇಹ ಶುದ್ಧಿ ಮಾಡುವುದೆನ್ನುವ ಚಿಕಿತ್ಸೆಗಳು, ಅಪಾಯವನ್ನು ಅಂದಾಜಿಸಬಹುದೆನ್ನುವ ಪರೀಕ್ಷೆಗಳು ಇತ್ಯಾದಿಗಳ ಹಿಂದೆ ಹೋಗುವ ಅಗತ್ಯವಿಲ್ಲ, ಅಂತಹ ಪರೀಕ್ಷೆಗಳಾಗಲೀ, ಚಿಕಿತ್ಸೆಗಳಾಗಲೀ ಲಭ್ಯವಿಲ್ಲ.

ಒಟ್ಟಿನಲ್ಲಿ, ಕೊರೋನ ಸೋಂಕಿನ ನಿರ್ವಹಣೆ ಹಾಗೂ ಕೊರೋನ ಲಸಿಕೆಗಳ ವಿಚಾರದಲ್ಲಿ ಮಾಡಿರುವ ಅಮಾನವೀಯವಾದ, ಅವೈಜ್ಞಾನಿಕವಾದ ಕಾರ್ಯಗಳಿಂದಾಗಿ ಇಂದು ಜನಸಾಮಾನ್ಯರು ವೈದ್ಯವಿಜ್ಞಾನದ ಮೇಲೆ, ವೈದ್ಯವೃತ್ತಿಯ ಬಗ್ಗೆ ವಿಶ್ವಾಸವನ್ನೇ ಕಳೆದುಕೊಳ್ಳುವಂತಾಗಿದೆ, ಇವುಗಳಲ್ಲಿ ಭಾಗಿಯಾಗಿದ್ದ ಸರಕಾರ ಹಾಗೂ ಲಸಿಕೆ ಕಂಪೆನಿಗಳಿಗಿಂತಲೂ ವೈದ್ಯಕೀಯ ಸಮೂಹವೇ ಹೆಚ್ಚು ಆಪಾದನೆಗೀಡಾಗುವಂತಾಗಿದೆ. ವೈದ್ಯವಿಜ್ಞಾನವೂ, ವೈದ್ಯ ವೃತ್ತಿಯೂ ಜನರ ವಿಶ್ವಾಸವನ್ನು ಮರಳಿ ಗಳಿಸಿ ಉಳಿಸಿಕೊಳ್ಳಬೇಕಿದ್ದರೆ ಕೊರೋನ ಕಾಲದ ತಪ್ಪುಗಳನ್ನು ಒಪ್ಪಿಕೊಂಡು, ಲಸಿಕೆಯ ಬಗ್ಗೆ ವೈಜ್ಞಾನಿಕವಾದ, ಸಾಕ್ಷ್ಯಾಧಾರಿತವಾದ ಮಾಹಿತಿಯನ್ನು ಪ್ರಾಮಾಣಿಕವಾಗಿ ಜನರ ಮುಂದಿಡಬೇಕಾಗಿದೆ. ವೈದ್ಯರ ಬದ್ಧತೆಯು ವೈದ್ಯಕೀಯ ವಿಜ್ಞಾನಕ್ಕೆ, ಜನರ ಹಿತಕ್ಕೆ, ಮತ್ತು ಸತ್ಯಕ್ಕೆ ಇರಬೇಕೇ ಹೊರತು ಯಾವುದೇ ಸರಕಾರಕ್ಕೆ, ರಾಜಕೀಯ ಪಕ್ಷ   ಅಥವಾ ನಾಯಕನಿಗೆ, ಔಷಧ ಯಾ ಲಸಿಕೆ ಕಂಪೆನಿಗೆ ಅಲ್ಲ ಎನ್ನುವುದನ್ನು ಎಲ್ಲ ವೈದ್ಯರೂ ತಿಳಿಯಬೇಕಾಗಿದೆ. ಕೊರೋನ ಸೋಂಕು ಹಾಗೂ ಕೊರೋನ ಲಸಿಕೆ ಕಲಿಸಬೇಕಾದ ಪಾಠ ಅದುವೇ ಆಗಿದೆ.

Be the first to comment

Leave a Reply

Your email address will not be published.


*