ಕೊರೋನ ಸೋಂಕಿನ ಚಿಕಿತ್ಸೆಯ ಬಗ್ಗೆ ರಾಜ್ಯ ಸರಕಾರವು ಹೊರಡಿಸಿರುವ ಸೂಚನೆಯನ್ನು ಕೂಡಲೇ ಹಿಂಪಡೆಯಬೇಕು

ಹೊಸ ಕೊರೋನ ಸೋಂಕಿಗೆ ಚಿಕಿತ್ಸೆ ನೀಡುವ ಬಗ್ಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಇದೇ ಮೇ 15, 2020ರಂದು ಸುತ್ತೋಲೆಯೊಂದನ್ನು ಹೊರಡಿಸಿ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ತಜ್ಞರ ಸಮಿತಿಯು ಹೇಳಿದ್ದೆನ್ನಲಾದ ಚಿಕಿತ್ಸಾ ಶಿಷ್ಠಾಚಾರವನ್ನು ಎಲ್ಲರೂ ತಪ್ಪದೇ ಪಾಲಿಸಬೇಕೆಂದು ಸೂಚಿಸಿದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಆಧ್ಯಯನಗಳು ಹಾಗೂ ಮಾರ್ಗಸೂಚಿಗಳ ಆಧಾರದಲ್ಲಿ ಈ ಶಿಷ್ಟಾಚಾರವನ್ನು ರೂಪಿಸಲಾಗಿದೆ ಎಂದು ಹೇಳಿಕೊಳ್ಳಲಾಗಿದ್ದರೂ, ಹೊಸ ಕೊರೋನ ಚಿಕಿತ್ಸೆಗೆ ಅಗತ್ಯವೇ ಇಲ್ಲದ ಪರೀಕ್ಷೆಗಳನ್ನೂ, ಚಿಕಿತ್ಸೆಗಳನ್ನೂ ಅದರಲ್ಲಿ ಸೂಚಿಸಿಲಾಗಿರುವುದು ಮೇಲ್ನೋಟಕ್ಕೇ ಕಾಣಿಸುತ್ತಿದ್ದು, ಅದನ್ನು ಸರಕಾರವು ಈ ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸುತ್ತೇವೆ.

ರಾಜ್ಯ ಸರಕಾರವು ಪ್ರಕಟಿಸಿರುವ ಈ ಶಿಷ್ಟಾಚಾರದಲ್ಲಿ ರೋಗಲಕ್ಷಣಗಳೇ ಇಲ್ಲದ ಅಥವಾ ಸೌಮ್ಯವಾದ ರೋಗಲಕ್ಷಣಗಳಿರುವ ಸೋಂಕಿತರು ಎ ವರ್ಗ, ಶ್ವಾಸಕೋಶಗಳಲ್ಲಿ ನ್ಯುಮೋನಿಯಾ ಆಗಿ, ಉಸಿರಾಟದ ಗತಿ 15-30, ರಕ್ತದಲ್ಲಿ ಆಮ್ಲಜನಕದ ಮಟ್ಟ 90-94% ಉಳ್ಳವರು ಬಿ ವರ್ಗ, ಶ್ವಾಸಕೋಶಗಳಲ್ಲಿ ತೀವ್ರ ನ್ಯುಮೋನಿಯಾ ಆಗಿ, ಉಸಿರಾಟಕ್ಕೆ ತೀವ್ರತರದ ಕಷ್ಟವಾಗಿ, ಉಸಿರಾಟದ ಗತಿ 30ಕ್ಕಿಂತ ಹೆಚ್ಚು, ರಕ್ತದಲ್ಲಿ ಆಮ್ಲಜನಕದ ಮಟ್ಟ 90%ಕ್ಕಿಂತ ಕಡಿಮೆ ಉಳ್ಳವರು ಸಿ ವರ್ಗ ಎಂದು ವರ್ಗೀಕರಿಸಲಾಗಿದೆ, ಈ ಮೂರು ವರ್ಗಗಳ ಸೋಂಕಿತರನ್ನೂ ಆಸ್ಪತ್ರೆಗಳಿಗೆ ದಾಖಲಿಸಬೇಕೆಂಬಂತೆ ಈ ಶಿಷ್ಟಾಚಾರವನ್ನು ರೂಪಿಸಲಾಗಿದೆ.

ಈ ಮೂರು ವರ್ಗಗಳ ಸೋಂಕಿತರಿಗೂ ಆಸ್ಪತ್ರೆಯಲ್ಲಿ ದಾಖಲಾದ ದಿನವೇ ರಕ್ತಕಣಗಳ ಪರೀಕ್ಷೆ, ರಕ್ತದ ಗ್ಲೂಕೋಸ್, ಯಕೃತ್ತು ಹಾಗೂ ಮೂತ್ರಪಿಂಡಗಳ ಕ್ಷಮತೆಯ ಪರೀಕ್ಷೆಗಳು, ಇಸಿಜಿ, ಎದೆಯ ಕ್ಷಕಿರಣ ಪರೀಕ್ಷೆ, ಎದೆಯ ಸಿ ಟಿ ಸ್ಕಾನ್, ಜೊತೆಗೆ ಇನ್ನೂ ಕೆಲವು ವಿಶೇಷ ಪರೀಕ್ಷೆಗಳನ್ನು ನಡೆಸಬೇಕೆಂದು ಈ ಶಿಷ್ಟಾಚಾರದಲ್ಲಿ ಹೇಳಲಾಗಿದ್ದು, ಅವಕ್ಕೆ ಕನಿಷ್ಠ 25000 ರೂಪಾಯಿ ವೆಚ್ಚವಾಗುತ್ತದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಲಕ್ಷಗಟ್ಟಲೆ ಜನರಿಗೆ ಕೊರೋನ ತಗಲಿದಾಗ, ಅವರಲ್ಲಿ ಶೇ. 85ರಷ್ಟು ಮಂದಿ ಯಾವುದೇ ಗಣನೀಯವಾದ ರೋಗಲಕ್ಷಣಗಳೇ ಇಲ್ಲದೆ ಗುಣಮುಖರಾಗುತ್ತಾರೆ ಎನ್ನುವಾಗ, ಇನ್ನುಳಿದವರಲ್ಲೂ ಹೆಚ್ಚಿನವರು, ಹಾಗೆ ಒಟ್ಟಾರೆಯಾಗಿ ಶೇ.99ರಷ್ಟು ಸೋಂಕಿತರು ಯಾವುದೇ ಸಮಸ್ಯೆಗಳಾಗದೆ, ಯಾವುದೇ ಚಿಕಿತ್ಸೆಯ ಅಗತ್ಯವೂ ಇಲ್ಲದೆ ಗುಣಮುಖರಾಗುತ್ತಾರೆ ಎನ್ನುವಾಗ ಸರಕಾರದ ಆಜ್ಞೆಯಂತೆ ಈ ಕಡ್ಡಾಯ ಶಿಷ್ಟಾಚಾರದನುಸಾರ ಅವರನ್ನೆಲ್ಲ ಆಸ್ಪತ್ರೆಗೆ ದಾಖಲಿಸಬೇಕೇ ಮತ್ತು ತಲಾ 25 ಸಾವಿರದ ಪರೀಕ್ಷೆಗಳಿಗೆ ಒಳಪಡಿಸಬೇಕೇ?

ಈ ಶಿಷ್ಟಾಚಾರದಲ್ಲಿ ಸೂಚಿಸಿರುವ ಚಿಕಿತ್ಸೆಗಳು ಕೂಡ ಅಚ್ಚರಿ ಹುಟ್ಟಿಸುತ್ತವೆ. ರೋಗಲಕ್ಷಣಗಳಿಲ್ಲದವರಿಂದ ಹಿಡಿದು ಅತಿ ಗಂಭೀರ ಸ್ವರೂಪದ ಸೋಂಕುಳ್ಳ, ಎ, ಬಿ, ಸಿ ವರ್ಗಗಳ ಎಲ್ಲರಿಗೂ ಕ್ಲೋರೋಕ್ವಿನ್, ಅಝಿತ್ರೋಮೈಸಿನ್, ಒಸೆಲ್ಟಾಮಿವಿರ್, ಜಿಂಕ್ (ಸತು), ವಿಟಮಿನ್ ಸಿ ಮಾತ್ರೆಗಳನ್ನು 5-7 ದಿನಗಳವರೆಗೆ ನೀಡಬೇಕೆಂದು ಸೂಚಿಸಲಾಗಿದೆ. ಇವಕ್ಕೆ ಕನಿಷ್ಠ ಒಂದು ಸಾವಿರ ರೂಪಾಯಿ ವೆಚ್ಚವಾಗುತ್ತದೆ. ರಕ್ತ ಹೆಪ್ಪುಗಟ್ಟದಂತೆ ತಡೆಯುವ ಎನೋಕ್ಸಪಾರಿನ್ ಚುಚ್ಚುಮದ್ದನ್ನು ಬಹುತೇಕ ಎಲ್ಲರಿಗೂ 7 ದಿನ ನೀಡಬೇಕೆಂದು ಸೂಚಿಸಲಾಗಿದ್ದು, ಅದಕ್ಕೆ ಮತ್ತೆ 3000 ರೂಪಾಯಿಗಳಷ್ಟು ಬೇಕಾಗುತ್ತದೆ. ಅಂದರೆ, ರಾಜೀವ ಗಾಂಧಿ ಆರೋಗ್ಯ ವಿವಿಯ ತಜ್ಞರ ಸಮಿತಿಯ ವರದಿಯನ್ನಾಧರಿಸಿ ಕರ್ನಾಟಕ ರಾಜ್ಯ ಸರಕಾರವು ನೀಡಿರುವ ಸೂಚನೆಯಂತೆ ಕೊರೋನ ಸೋಂಕಿತರಿಗೆ ಚಿಕಿತ್ಸೆ ನೀಡುವುದಾದರೆ ಪ್ರತೀ ರೋಗಿಗೂ ಕನಿಷ್ಠ 30000 ರೂಪಾಯಿ ಬೇಕಾಗುತ್ತದೆ; ಆಸ್ಪತ್ರೆಯ ಕೊಠಡಿ, ಆರೈಕೆ, ವೈದ್ಯರ ಶುಲ್ಕ ಇತ್ಯಾದಿ ವೆಚ್ಚಗಳು ಬೇರೆಯೇ ಆಗಿರುತ್ತವೆ.

ಶ್ವಾಸಕೋಶಗಳಲ್ಲಿ ಸಮಸ್ಯೆಯಾದವರಿಗೆ ಮತ್ತು ತೀವ್ರ ಸ್ವರೂಪದ ಸಮಸ್ಯೆಗಳಾದವರಿಗೆ ಕೂಡ ಇನ್ನೂ ಬಳಕೆಯಲ್ಲೇ ಇಲ್ಲದ, ಇನ್ನೂ ದೃಢಗೊಂಡಿಲ್ಲದ ಚಿಕಿತ್ಸೆಗಳನ್ನೆಲ್ಲ ಸೂಚಿಸಲಾಗಿದೆ. ಈಗ ಕೇವಲ ಪ್ರಯೋಗಾರ್ಥ ಪರೀಕ್ಷೆಗಳಲ್ಲಷ್ಟೇ ಬಳಸಲಾಗುತ್ತಿದೆ ಎನ್ನಲಾಗಿರುವ, ಎಲ್ಲೂ ಲಭ್ಯವಿರದಿರುವ, ಕೊರೋನ ಸೋಂಕಿನಲ್ಲಿ ಎಲ್ಲೂ ಪರೀಕ್ಷಿಸಲ್ಪಡದೇ ಇರುವ, ಸೆಪ್ಸಿವಾಕ್ ಎಂಬ ಚುಚ್ಚುಮದ್ದನ್ನು ಸಿ ವರ್ಗದ ರೋಗಿಗಳಲ್ಲಿ ಬಳಸಲು ಸೂಚಿರುವುದು ಹಲವು ಸಂಶಯಗಳನ್ನು ಹುಟ್ಟಿಸುತ್ತದೆ. ಕೆಲವೇ ಕೊರೋನ ರೋಗಿಗಳಲ್ಲಿ ಬಳಸಲ್ಪಟ್ಟು, ಪ್ರಯೋಜನದ ಬಗ್ಗೆ ನಿಖರವಾದ ಯಾವುದೇ ಮಾಹಿತಿಯೂ ಲಭ್ಯವಿಲ್ಲದ ರೆಂಡಿಸಿವಿರ್, ಲೊಪಿನಾವಿರ್/ರಿಟೊನಾವಿರ್, ಟೊಸಿಲಿಸುಮಾಬ್ ಮತ್ತು ರಕ್ತದ್ರವ (ಪ್ಲಾಸ್ಮಾ) ಬಳಕೆಯನ್ನು ಸೂಚಿಸಿರುವುದು ಕೂಡ ಪ್ರಶ್ನಾರ್ಹವಾಗಿದೆ. ಹಾಗೆಯೇ, ಬಿ ಮತ್ತು ಸಿ ವರ್ಗದ ರೋಗಿಗಳಲ್ಲಿ ಪ್ರತಿಜೈವಿಕ (ಆಂಟಿಬಯಾಟಿಕ್) ಗಳನ್ನು ಬಳಸುವಂತೆ ಸೂಚಿಸಿರುವುದು ಮತ್ತು ತೀವ್ರ ಸ್ವರೂಪದ ಸಮಸ್ಯೆಯುಳ್ಳವರಲ್ಲಿ ಸ್ಟೀರಾಯ್ಡ್ ಚುಚ್ಚುಮದ್ದನ್ನು ಸೂಚಿಸಿರುವುದು ಕೂಡ ಪ್ರಶ್ನಾರ್ಹವಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯು ಭಾರತವೂ ಸೇರಿದಂತೆ ಹಲವು ದೇಶಗಳಲ್ಲಿ ಆರಂಭಿಸಿರುವ ಸಾಲಿಡಾರಿಟಿ ಎಂಬ ಹೆಸರಿನ ಅಧ್ಯಯನದಲ್ಲಿ ಸ್ಥಾನ ಪಡೆಯುವುದಕ್ಕೂ ವಿಫಲವಾಗಿರುವ ಒಸೆಲ್ಟಾಮಿವಿರ್‌ನಂತಹ ಔಷಧಗಳನ್ನು, ಸತು, ವಿಟಮಿನ್ ಸಿ ಇತ್ಯಾದಿಗಳನ್ನು ಎಲ್ಲಾ ಕೊರೋನ ಸೋಂಕಿತರಿಗೆ ಕಡ್ಡಾಯಗೊಳಿಸಿರುವುದು ಏಕೆಂದು ಅರ್ಥವಾಗುವುದಿಲ್ಲ. ಕೊರೋನ ಸೋಂಕಿತರಲ್ಲಿ ಕ್ಲೋರೋಕ್ವಿನ್ ಮತ್ತು ಅಝಿತ್ರೋಮೈಸಿನ್ ಬಳಕೆಯ ಪ್ರಯೋಜನಗಳ ಬಗ್ಗೆ ಈ ಮೊದಲೂ ಆಧಾರಗಳಿರಲಿಲ್ಲ; ಈಗ 6 ಖಂಡಗಳ 671 ಆಸ್ಪತ್ರೆಗಳ 96000 ಕೊರೋನ ರೋಗಿಗಳಲ್ಲಿ ನಡೆಸಲಾಗಿದ್ದ ಬೃಹತ್ ಅಧ್ಯಯನದ ವರದಿಯು ಪ್ರತಿಷ್ಠಿತ ಲಾನ್ಸೆಟ್ ಪತ್ರಿಕೆಯಲ್ಲಿ ಮೇ 22, 2020ರಂದು ಪ್ರಕಟವಾಗಿದ್ದು, ಈ ಔಷಧಗಳ ಬಳಕೆಯಿಂದ ಪ್ರಯೋಜನಕ್ಕಿಂತ ತೊಂದರೆಗಳೇ ಹೆಚ್ಚೆಂದೂ, ಅವನ್ನು ಬಳಸಿದವರಲ್ಲಿ ಸಾವುಂಟಾಗುವ ಸಾಧ್ಯತೆಗಳು ಗಣನೀಯವಾಗಿ ಹೆಚ್ಚುತ್ತವೆ ಎಂದೂ ಹೇಳಲಾಗಿದೆ.

ರಾಜೀವ ಗಾಂಧಿ ಆರೋಗ್ಯ ವಿವಿಯ ವರದಿಯ ಕೊನೆಯಲ್ಲಿ ಉದ್ಧರಿಸಲಾಗಿರುವ 7 ಆಕರಗಳಲ್ಲಿ ಎಲ್ಲಾ ಕೊರೋನ ಸೋಂಕಿತರನ್ನು ಆಸ್ಪತ್ರೆಗಳಲ್ಲಿ ದಾಖಲಿಸಬೇಕೆಂದು ಎಲ್ಲೂ ಸೂಚಿಸಲಾಗಿಲ್ಲ! ಈ ವರದಿಯಲ್ಲಿ ಕೊಟ್ಟಿರುವ ಚಿಕಿತ್ಸಾಕ್ರಮವನ್ನು ಕೂಡ  ಯಾವೊಂದು ಆಕರದಲ್ಲೂ ಸೂಚಿಸಿಲ್ಲ. ಆದ್ದರಿಂದ ಆ ಆಕರಗಳನ್ನು ಉದ್ಧರಿಸಿರುವುದರ ಉದ್ದೇಶವೇನೆಂದು ತಿಳಿಯುತ್ತಿಲ್ಲ.  ಮೊತ್ತ ಮೊದಲ ಆಕರವು ಕೇಂದ್ರ ಸರಕಾರವು ಎರಡು ತಿಂಗಳ ಹಿಂದೆ ಪ್ರಕಟಿಸಿದ ಕೊರೋನ ಚಿಕಿತ್ಸೆಯ ಮಾರ್ಗಸೂಚಿಯಾಗಿದ್ದು, ಅದರಲ್ಲಿಯೂ ಕೂಡ ಸೋಂಕಿನ ಲಕ್ಷಣಗಳಿಲ್ಲದವರನ್ನು ಅಥವಾ ಸೌಮ್ಯರೂಪದ ಸೋಂಕುಳ್ಳವರನ್ನು ಆಸ್ಪತ್ರೆಗೆ ದಾಖಲಿಸಬೇಕೆಂದು ಹೇಳಿಲ್ಲ, ಆರೋಗ್ಯ ವಿವಿಯ ವರದಿಯಲ್ಲಿ ಸೂಚಿಸಿರುವ ಔಷಧಗಳನ್ನಾಗಲೀ, ಚಿಕಿತ್ಸಾಕ್ರಮವನ್ನಾಗಲೀ ಕೇಂದ್ರ ಸರಕಾರದ ಮಾರ್ಗಸೂಚಿಯಲ್ಲಿ ಸೂಚಿಸಿಯೇ ಇಲ್ಲ.

ಕೇರಳ ಸರಕಾರವು ಕೂಡ ಮಾರ್ಚ್ ನಲ್ಲಿ ಸವಿವರವಾದ ಸೂಚಿಯನ್ನು ಪ್ರಕಟಿಸಿದೆ. ಸೌಮ್ಯ ರೂಪದ ಸೋಂಕಿರುವವರು ಮನೆಯಲ್ಲೇ ಉಳಿದು ದಿಶಾ ಸಹಾಯವಾಣಿಗೆ ಕರೆಯನ್ನಷ್ಟೇ ಮಾಡಬೇಕೆಂದು ಅದರಲ್ಲಿ ಹೇಳಲಾಗಿದೆ. ಯಾವುದೇ ನಿರ್ದಿಷ್ಟ ಔಷಧಗಳನ್ನು ಅದರಲ್ಲಿ ಸೂಚಿಸಲಾಗಿಲ್ಲ. ಸಾಕ್ಷ್ಯಾಧಾರಿತವಾದ ಚಿಕಿತ್ಸಾಕ್ರಮಗಳನ್ನಷ್ಟೇ ಬಳಸುವ ಬ್ರಿಟನ್‌ನ ರಾಷ್ಟ್ರೀಯ ಆರೋಗ್ಯ ಸೇವೆಗಳಿಗಾಗಿ ರೂಪಿಸಲಾಗಿರುವ ಮಾರ್ಗಸೂಚಿಯಲ್ಲಿ ಕೂಡ ಸೌಮ್ಯ ರೂಪದ ಸೋಂಕಿರುವವರು ಮನೆಯಲ್ಲೇ ಉಳಿದು  ಸಹಾಯವಾಣಿಗೆ ಕರೆಯನ್ನಷ್ಟೇ ಮಾಡಬೇಕೆಂದು ಹೇಳಲಾಗಿದ್ದು, ಎಷ್ಟೇ ಗಂಭೀರವಾದ ಸೋಂಕಿದ್ದವರಿಗೂ ಕ್ಲೋರೊಕ್ವಿನ್ ಆಗಲೀ, ಇನ್ಯಾವುದೇ ಆಗಲೀ, ನಿರ್ದಿಷ್ಟ ಔಷಧಗಳನ್ನು ಸೂಚಿಸಲಾಗಿಲ್ಲ.

ಅಮೆರಿಕದ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದ ಅಂದಾಜಿನಂತೆ ನಮ್ಮ ರಾಜ್ಯದ ಆಸ್ಪತ್ರೆಗಳಲ್ಲಿ ಒಟ್ಟು 2 ಲಕ್ಷದ 60 ಸಾವಿರದಷ್ಟು ಹಾಸಿಗೆಗಳು, ತೀವ್ರ ನಿಗಾ ಘಟಕಗಳಲ್ಲಿ 13 ಸಾವಿರದಷ್ಟು ಹಾಸಿಗೆಗಳು ಮತ್ತು 6500ರಷ್ಟು ಕೃತಕ ಉಸಿರಾಟದ ಉಪಕರಣಗಳು (ವೆಂಟಿಲೇಟರ್) ಲಭ್ಯವಿವೆ. ಎಲ್ಲಾ ಕೊರೋನ ಸೋಂಕಿತರನ್ನು ದಾಖಲಿಸುವುದಿದ್ದರೆ ಈ ಸಾಮರ್ಥ್ಯವು ಸಾಕಾಗದು; ಮುಂಬಯಿ ನಗರದಲ್ಲಿ ಈಗಾಗಲೇ ಆಸ್ಪತ್ರೆಗಳು ತುಂಬಿತುಳುಕಿ, ಅನ್ಯ ರೋಗಿಗಗಳಿಗೆ ಚಿಕಿತ್ಸೆಯನ್ನೇ ನೀಡಲಾಗದೆ, ಗಂಭೀರ ಸಂಕಷ್ಟವುಂಟಾಗಿರುವುದನ್ನು ಗಮನಿಸಬೇಕಾಗಿದೆ. ಆದ್ದರಿಂದ ರೋಗಲಕ್ಷಣಗಳಿಲ್ಲದವರನ್ನು ಹಾಗೂ ಸೌಮ್ಯವಾದ ರೋಗಲಕ್ಷಣಗಳಿರುವವರನ್ನು ಆಸ್ಪತ್ರೆಗಳಿಗೆ ದಾಖಲಿಸದೆ ಮನೆಯಲ್ಲೇ ಉಳಿದು ಸಹಾಯವಾಣಿಗೆ ಕರೆ ಮಾಡುವಂತೆ ವ್ಯವಸ್ಥೆ ಮಾಡಬೇಕು ಮತ್ತು ಅಂಥವರನ್ನು ಪರೀಕ್ಷಿಸುವುದಕ್ಕೆ ಸಂಚಾರಿ ಘಟಕಗಳನ್ನು ಈಗಲೇ ಸಿದ್ಧಪಡಿಸಬೇಕು. ಯಾವುದೇ ಸಮಸ್ಯೆಗಳಿಲ್ಲದ ಸೋಂಕಿತರಿಗೆ ಅಗತ್ಯವೇ ಇಲ್ಲದ ಪರೀಕ್ಷೆಗಳನ್ನಾಗಲೀ, ಚಿಕಿತ್ಸೆಗಳನ್ನಾಗಲೀ ಸೂಚಿಸಬಾರದು. ಗಂಭೀರವಾದ ಸಮಸ್ಯೆಗಳಾದವರನ್ನು ಆಸ್ಪತ್ರೆಗಳಲ್ಲಿ ದಾಖಲಿಸಬೇಕು, ಆದರೆ ಅವರಿಗೂ ಕೂಡ ಸಾಕ್ಷ್ಯಾಧಾರಗಳಿಲ್ಲದ, ಪ್ರಯೋಜನದ ಖಾತರಿಯಿಲ್ಲದ, ಯಾವುದೇ ಚಿಕಿತ್ಸೆಗಳನ್ನೂ ಸೂಚಿಸಬಾರದು. ಆದ್ದರಿಂದ ಯಾವುದೇ ಸಾಕ್ಷ್ಯಾಧಾರಗಳಿಲ್ಲದ, ಪ್ರಯೋಜನಕ್ಕಿಂತ ಹಾನಿಯನ್ನೇ ಉಂಟು ಮಾಡಬಹುದಾದ, ಅನಗತ್ಯವಾಗಿ ಸಾವಿರಗಟ್ಟಲೆ ವೆಚ್ಚಕ್ಕೆ ಕಾರಣವಾಗಬಹುದಾದ, ಖಾಸಗಿ ಔಷಧ ಕಂಪೆನಿಗಳಿಗೆ ತಮ್ಮ ಪ್ರಯೋಗಗಳನ್ನು ನಡೆಸಲು ಅವಕಾಶ ನೀಡಬಹುದಾದ, ಖಾಸಗಿ ಹಿತಾಸಕ್ತಿಗಳಿಗೆ ದುರ್ಬಳಕೆ ಮಾಡಲು ಉತ್ತೇಜಿಸಬಹುದಾದ ಈ ಶಿಷ್ಟಾಚಾರವನ್ನು ಈ ಕೂಡಲೇ ಹಿಂಪಡೆದು, ಸಾಕ್ಷ್ಯಾಧಾರಿತವಾದ, ಸರಳವಾದ, ಅನಗತ್ಯವಾದ ವೆಚ್ಚಗಳಿಗೆ ಕಾರಣವಾಗದ ಶಿಷ್ಟಾಚಾರವನ್ನು ಈ ಕೂಡಲೇ ಸಿದ್ಧಪಡಿಸಬೇಕಾಗಿದೆ.

ವಾರ್ತಾಭಾರತಿ, ಮೇ 23/24, 2010

ಕೊರೋನ ಸೋಂಕಿನ ಚಿಕಿತ್ಸೆಯ ಬಗ್ಗೆ ರಾಜ್ಯ ಸರಕಾರವು ಹೊರಡಿಸಿರುವ ಸೂಚನೆಯನ್ನು ಕೂಡಲೇ ಹಿಂಪಡೆಯಲಿ

ಕೊರೊನಾ ಸೋಂಕಿನ ಚಿಕಿತ್ಸೆಯ ಬಗ್ಗೆ ರಾಜ್ಯ ಸರಕಾರವು ಹೊರಡಿಸಿರುವ ಸೂಚನೆಯನ್ನು ಕೂಡಲೇ ಹಿಂಪಡೆಯಬೇಕು

ಪತ್ರಿಕಾ ಪ್ರಕಟಣೆ – ಮೇ 23, 2010

ಹೊಸ ಕೊರೊನಾ ಸೋಂಕಿಗೆ ಚಿಕಿತ್ಸೆ ನೀಡುವ ಬಗ್ಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಇದೇ ಮೇ 15, 2020ರಂದು ಪ್ರಕಟಿಸಿರುವ ಚಿಕಿತ್ಸಾ ಶಿಷ್ಠಾಚಾರದಲ್ಲಿ ಹೊಸ ಕೊರೊನಾ ಚಿಕಿತ್ಸೆಗೆ ಅಗತ್ಯವೇ ಇಲ್ಲದ ಪರೀಕ್ಷೆಗಳನ್ನೂ, ಚಿಕಿತ್ಸೆಗಳನ್ನೂ ಸೂಚಿಸಲಾಗಿದ್ದು, ಅದನ್ನು ಸರಕಾರವು ಈ ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸುತ್ತೇವೆ.

ರಾಜ್ಯ ಸರಕಾರವು ಪ್ರಕಟಿಸಿರುವ ಈ ಶಿಷ್ಠಾಚಾರದಲ್ಲಿ ಕೊರೊನಾ ಸೋಂಕಿತರನ್ನು ಎ, ಬಿ, ಸಿ ವರ್ಗ ಎಂದು ವರ್ಗೀಕರಿಸಲಾಗಿದ್ದು, ಎಲ್ಲಾ ವರ್ಗಗಳ ಸೋಂಕಿತರನ್ನೂ ಆಸ್ಪತ್ರೆಗಳಿಗೆ ದಾಖಲಿಸಲು ಅವಕಾಶ ನೀಡಲಾಗಿದೆ.

ಈ ಮೂರು ವರ್ಗಗಳ ಸೋಂಕಿತರಿಗೂ ಆಸ್ಪತ್ರೆಯಲ್ಲಿ ದಾಖಲಾದ ದಿನವೇ ರಕ್ತಕಣಗಳ ಪರೀಕ್ಷೆ, ರಕ್ತದ ಗ್ಲೂಕೋಸ್, ಯಕೃತ್ತು ಹಾಗೂ ಮೂತ್ರಪಿಂಡಗಳ ಕ್ಷಮತೆಯ ಪರೀಕ್ಷೆಗಳು, ಇಸಿಜಿ, ಎದೆಯ ಕ್ಷಕಿರಣ ಪರೀಕ್ಷೆ, ಎದೆಯ ಸಿ ಟಿ ಸ್ಕಾನ್, ಜೊತೆಗೆ ಇನ್ನೂ ಕೆಲವು ವಿಶೇಷ ಪರೀಕ್ಷೆಗಳನ್ನು ನಡೆಸಬೇಕೆಂದು ಈ ಶಿಷ್ಟಾಚಾರದಲ್ಲಿ ಹೇಳಲಾಗಿದ್ದು, ಅವಕ್ಕೆ ಕನಿಷ್ಠ 25000 ರೂಪಾಯಿ ವೆಚ್ಚವಾಗುತ್ತದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಲಕ್ಷಗಟ್ಟಲೆ ಜನರಿಗೆ ಕೊರೊನಾ ತಗಲಿದಾಗ ಈ ಕಡ್ಡಾಯ ಶಿಷ್ಟಾಚಾರದನುಸಾರ ಅವರನ್ನೆಲ್ಲ ಆಸ್ಪತ್ರೆಗೆ ದಾಖಲಿಸಬೇಕೇ ಮತ್ತು ತಲಾ 25 ಸಾವಿರದ ಪರೀಕ್ಷೆಗಳಿಗೆ ಒಳಪಡಿಸಬೇಕೇ?

ಈ ಶಿಷ್ಟಾಚಾರದಲ್ಲಿ ಸೂಚಿಸಿರುವ ಚಿಕಿತ್ಸೆಗಳು ಕೂಡ ಅಚ್ಚರಿ ಹುಟ್ಟಿಸುತ್ತವೆ. ರೋಗಲಕ್ಷಣಗಳಿಲ್ಲದವರಿಂದ ಹಿಡಿದು ಅತಿ ಗಂಭೀರ ಸ್ವರೂಪದ ಸೋಂಕುಳ್ಳ ಎಲ್ಲರಿಗೂ ಕ್ಲೋರೋಕ್ವಿನ್, ಅಝಿತ್ರೋಮೈಸಿನ್, ಒಸೆಲ್ಟಾಮಿವಿರ್, ಜಿಂಕ್ (ಸತು), ವಿಟಮಿನ್ ಸಿ ಮಾತ್ರೆಗಳನ್ನು 5-7 ದಿನಗಳವರೆಗೆ ನೀಡಬೇಕೆಂದೂ, ರಕ್ತ ಹೆಪ್ಪುಗಟ್ಟದಂತೆ ತಡೆಯುವ ಎನೋಕ್ಸಪಾರಿನ್ ಚುಚ್ಚುಮದ್ದನ್ನು ಬಹುತೇಕ ಎಲ್ಲರಿಗೂ 7 ದಿನ ನೀಡಬೇಕೆಂದೂ ಅದರಲ್ಲಿ ಸೂಚಿಸಲಾಗಿದ್ದು, ಇವಕ್ಕೆ ಪ್ರತೀ ರೋಗಿಗೂ ಕನಿಷ್ಠ 5000 ರೂಪಾಯಿ ಬೇಕಾಗುತ್ತದೆ. ಇಷ್ಟಲ್ಲದೆ, ಆಸ್ಪತ್ರೆಯ ಕೊಠಡಿ, ಆರೈಕೆ, ವೈದ್ಯರ ಶುಲ್ಕ ಇತ್ಯಾದಿ ವೆಚ್ಚಗಳು ಬೇರೆಯೇ ಆಗಿರುತ್ತವೆ. ತೀವ್ರ ರೂಪದ ಸೋಂಕುಳ್ಳವರಿಗೆ ಇನ್ನೂ ಬಳಕೆಯಲ್ಲೇ ಇಲ್ಲದ, ಇನ್ನೂ ದೃಢಗೊಂಡಿಲ್ಲದ ಚಿಕಿತ್ಸೆಗಳನ್ನೆಲ್ಲ ಸೂಚಿಸಲಾಗಿದ್ದು, ಅವುಗಳ ವೆಚ್ಚಗಳು ಬಹಳಷ್ಟಾಗುತ್ತವೆ, ಮಾತ್ರವಲ್ಲ, ಹಲವು ಪ್ರಶ್ನೆಗಳಿಗೂ ಕಾರಣವಾಗುತ್ತವೆ.

ಆದ್ದರಿಂದ ಯಾವುದೇ ಸಾಕ್ಷ್ಯಾಧಾರಗಳಿಲ್ಲದ, ಪ್ರಯೋಜನಕ್ಕಿಂತ ಹಾನಿಯನ್ನೇ ಉಂಟು ಮಾಡಬಹುದಾದ, ಅನಗತ್ಯವಾಗಿ ಸಾವಿರಗಟ್ಟಲೆ ವೆಚ್ಚಕ್ಕೆ ಕಾರಣವಾಗಬಹುದಾದ, ಖಾಸಗಿ ಔಷಧ ಕಂಪೆನಿಗಳಿಗೆ ತಮ್ಮ ಪ್ರಯೋಗಗಳನ್ನು ನಡೆಸಲು ಅವಕಾಶ ನೀಡಬಹುದಾದ, ಖಾಸಗಿ ಹಿತಾಸಕ್ತಿಗಳಿಗೆ ದುರ್ಬಳಕೆ ಮಾಡಲು ಉತ್ತೇಜಿಸಬಹುದಾದ ಈ ಶಿಷ್ಟಾಚಾರವನ್ನು ಈ ಕೂಡಲೇ ಹಿಂಪಡೆದು, ಸಾಕ್ಷ್ಯಾಧಾರಿತವಾದ, ಸರಳವಾದ, ಅನಗತ್ಯವಾದ ವೆಚ್ಚಗಳಿಗೆ ಕಾರಣವಾಗದ ಶಿಷ್ಟಾಚಾರವನ್ನು ಸಿದ್ಧಪಡಿಸಬೇಕಾಗಿದೆ.

Withdraw the Treatment Protocol Immediately : Press Release, May 23, 2020

The health and Family Welfare Dept., of Govt of Karnataka has issued a circular on May 15, 2020 regarding the protocol for management of COVID 19, on the basis of what is stated as the report of the expert committee of Rajiv Gandhi University of Health Sciences. This protocol enlists unnecessary and unconfirmed tests and treatments for COVID 19, and therefore, it must be withdrawn immediately.

The protocol has classified COVID 19 cases into three categories and has provided for hospitalisation of all three categories of patients, from asymptomatic to the most severely ill.

The protocol suggests several investigations to be done right on the day of admission, including blood counts, liver and renal function tests, chest X Ray, ECG, CT scan of the chest, and other special investigations, all of which, if done, will cost Rs. 25000 per patient. In the coming days when lakhs of patients are likely to be infected with SARS CoV2, is it necessary and feasible to hospitalise and test all these patients at Rs 25000/person?

The treatment options suggested in the protocol are also surprising. The protocol recommends choloroquine, azithromycin, oseltamivir, zinc and vitamin C for all patients, from asymptomatic to the severely ill, and also anti coagulant injections for many patients. All these would cost at least Rs. 5000 per patient. For severe cases of COVID 19, many unproven and experimental treatments have been suggested, which are very expensive and highly questionable.

Therefore, this protocol, that’s not evidence based, likely to do more harm than good, unnecessarily expensive, and allowing private companies to conduct trials on COVID 19 patients, and likely to be misused by vested interests, must be immediately withdrawn, and instead, a protocol that is evidence based, simple and avoiding unnecessary expenses, must be developed.

https://timesofindia.indiatimes.com/city/mangaluru/have-cheaper-evidence-based-protocol-for-management-of-covid-19-mangaluru-doctor/articleshow/75922330.cms

Be the first to comment

Leave a Reply

Your email address will not be published.


*