ವಿಜಯ ಕರ್ನಾಟಕದಲ್ಲಿ ‘ಆರೋಗ್ಯ ಆಶಯ – 1’

ಹತ್ತೊಂಭತ್ತನೇ ಬರಹ : ವಿಶ್ವಾಸದೆಡೆಯಲ್ಲಿ ಹಗೆತನವೇಕೆ? [ಮಾರ್ಚ್ 6, 2013, ಬುಧವಾರ] [ನೋಡಿ | ನೋಡಿ]

ಸ್ಟೆಥೊಸ್ಕೋಪ್ ಜೊತೆಗೆ ಬಂದೂಕನ್ನೂ ಹಿಡಿದೊಯ್ಯುವ ಸ್ಥಿತಿ ಬಾರದಿರಲಿ 

“ವೈದ್ಯನು ಎಷ್ಟೇ ಪ್ರಾಮಾಣಿಕನಾಗಿದ್ದರೂ, ಜಾಗರೂಕನಾಗಿದ್ದರೂ ಯಾವ ದಿನ, ಯಾವ ಘಳಿಗೆಯಲ್ಲಿ ಅನರ್ಹವಾದ ದಾಳಿಗಳನ್ನೂ, ದುರುದ್ದೇಶಪೂರಿತವಾದ ಆರೋಪಗಳನ್ನೂ, ವಸೂಲಿಯ ಬೆದರಿಕೆಗಳನ್ನೂ, ಪರಿಹಾರದ ದಾವೆಗಳನ್ನೂ ಎದುರಿಸಲಾರನೆಂದು ಹೇಳಲಾಗದು” – ಅಮೆರಿಕನ್ ಮೆಡಿಕಲ್ ಅಸೋಸಿಯೇಶನ್ ಪತ್ರಿಕೆಯ 1892ರ ಸಂಚಿಕೆಯೊಂದರ ಬರಹವಿದು. ಈ ನೂರಿಪ್ಪತ್ತು ವರ್ಷಗಳಲ್ಲಿ ವೈದ್ಯ ವಿಜ್ಞಾನದ ಅದ್ಭುತ ಪ್ರಗತಿಯಿಂದಾಗಿ ರೋಗಿಯ ಪಾಲಿಗೆ ಅನೂಹ್ಯವಾದ ಪ್ರಯೋಜನಗಳಾಗಿದ್ದರೂ, ವೈದ್ಯನೆದುರಿನ ಅಪಾಯವು ಇಳಿದಂತಿಲ್ಲ. ರೋಗಿಗಳ ನಿರೀಕ್ಷೆಗಳು ಹೆಚ್ಚುತ್ತಿರುವುದು, ವೈಫಲ್ಯಗಳನ್ನು ಒಪ್ಪುವ ವ್ಯವಧಾನವಿಲ್ಲದಿರುವುದು ಹಾಗೂ ಎಲ್ಲೆಡೆ ಹಿಂಸಾಪ್ರವೃತ್ತಿ ಬೆಳೆಯುತ್ತಿರುವುದು ಇದಕ್ಕೆ ಮೂಲ ಕಾರಣಗಳಾಗಿವೆ.

ವೈದ್ಯರು, ದಾದಿಯರು ಮತ್ತಿತರ ಆರೋಗ್ಯಕರ್ಮಿಗಳ ಮೇಲೆ ಮಾರಣಾಂತಿಕ ಹಲ್ಲೆಗಳಿಂದ ಹಿಡಿದು ಬೈಗುಳ, ಕಿರುಕುಳಗಳವರೆಗೆ ಬಗೆಬಗೆಯ ದೈಹಿಕ ಹಾಗೂ ಮಾನಸಿಕ ದಾಳಿಗಳು ಜಗತ್ತಿನಾದ್ಯಂತ ಹೆಚ್ಚುತ್ತಿವೆ. ಜಗತ್ತಿನ ವಿವಿಧೆಡೆಗಳಲ್ಲಿ ಶೇ. 70-85ರಷ್ಟು ವೈದ್ಯಕೀಯ ವೃತ್ತಿನಿರತರು ಒಂದಿಲ್ಲೊಂದು ಬಗೆಯ ದಾಳಿಗಳಿಗೆ ತುತ್ತಾಗಿದ್ದಾರೆ: ಶೇ. 40ಕ್ಕೂ ಹೆಚ್ಚಿನವರು ದೈಹಿಕವಾಗಿ ದಾಳಿಗೀಡಾಗಿದ್ದರೆ, ಶೇ. 80ರಷ್ಟು ಬೈಗುಳಗಳನ್ನೂ, ಶೇ. 55ರಷ್ಟು ಬೆದರಿಕೆಗಳನ್ನೂ, ಶೇ. 15ರಷ್ಟು ಲೈಂಗಿಕ ಕಿರುಕುಳಗಳನ್ನೂ ಅನುಭವಿಸಿದ್ದಾರೆ. ನವ ಆರ್ಥಿಕತೆಯನ್ನಪ್ಪಿರುವ ಭಾರತ ಮತ್ತು ಚೀನಾಗಳಲ್ಲಿ ಪ್ರತೀ ವರ್ಷ ಇಂತಹ 15-20 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಕೆಲ ಆಸ್ಪತ್ರೆಗಳಲ್ಲಿ ಒಳ ಬರುವವರಿಂದ ಬಂದೂಕು, ಚಾಕು ಮುಂತಾದ ಮಾರಕಾಯುಧಗಳನ್ನು ವಶಪಡಿಸಿಕೊಂಡದ್ದೂ ಇದೆ. ಇದರಿಂದಾಗಿ ಆರೋಗ್ಯಕರ್ಮಿಗಳು ದೈಹಿಕವಾಗಿಯೂ, ಮಾನಸಿಕವಾಗಿಯೂ ಘಾಸಿಗೊಳ್ಳುವುದಷ್ಟೇ ಅಲ್ಲದೆ, ಅವರ ವೃತ್ತಿಸ್ಥೈರ್ಯದ ಮೇಲೂ, ಚಿಕಿತ್ಸೆಯ ಗುಣಮಟ್ಟ ಹಾಗೂ ವೆಚ್ಚದ ಮೇಲೂ ಪರಿಣಾಮಗಳಾಗುತ್ತವೆ ಮತ್ತು ರೋಗಿಗಳ ಮೇಲಿನ ಹೊರೆಯೂ, ಅನಾನುಕೂಲತೆಗಳೂ ಇನ್ನಷ್ಟು ಹೆಚ್ಚುತ್ತವೆ. ಇದು ಇನ್ನಷ್ಟು ಅಸಮಾಧಾನಕ್ಕೂ,ತಿಕ್ಕಾಟಗಳಿಗೂ ಕಾರಣವಾಗಿ, ವಿಷವರ್ತುಲವಾಗುತ್ತದೆ.

ಹೆಚ್ಚಿನ ದಾಳಿಗಳು ತುರ್ತು ಚಿಕಿತ್ಸೆ, ಹೆರಿಗೆ ಮತ್ತು ಮನೋರೋಗ ವಿಭಾಗಗಳಲ್ಲೇ ಆಗುತ್ತವೆ. ಅಲ್ಲೆಲ್ಲ ವೈದ್ಯರು ಮತ್ತವರ ಸಿಬ್ಬಂದಿಯ ಕಾರ್ಯತತ್ಪರತೆಯೂ, ಕೆಲಸದ ಒತ್ತಡವೂ ಅತಿ ಹೆಚ್ಚಿರುತ್ತವೆ. ಒಂದೇ ಸಲಕ್ಕೆ ಹಲವು ರೋಗಿಗಳನ್ನು ನಿಭಾಯಿಸಬೇಕಾಗಿ ಬಂದರೆ ಇನ್ನೂ ಹೆಚ್ಚು; ಯಾರಿಗೆ ಏನಾಗುತ್ತಿದೆ, ಏನು ಮಾಡಬೇಕು ಎನ್ನುವುದನ್ನು ನಿಷ್ಕರ್ಷಿಸುವುದಕ್ಕೂ ಸಮಯವಿರುವುದಿಲ್ಲ. ಇವೇ ಸನ್ನಿವೇಶಗಳಲ್ಲಿ ರೋಗಿಗಳು ಮತ್ತವರ ಜೊತೆಗಿರುವವರ ನಿರೀಕ್ಷೆಗಳೂ, ಆತಂಕಗಳೂ ಅತ್ಯುನ್ನತವಾಗಿರುತ್ತವೆ; ಪ್ರತಿಯೋರ್ವರಿಗೂ ತಮ್ಮ ಸಮಸ್ಯೆಯೇ ಮುಖ್ಯವಾಗಿ, ತಮ್ಮ ಮರ್ಜಿಯನುಸಾರ ಚಿಕಿತ್ಸೆಯಾಗಬೇಕೆಂಬ ಹಂಬಲದಲ್ಲಿ ವಿವೇಚನೆಗೆ ಮಂಕು ಬಡಿಯುತ್ತದೆ. ಅಂಥಲ್ಲಿ ಒಂದಷ್ಟು ಕಾವೇರಿದರೆ ಕಿಡಿ ಹೊತ್ತುತ್ತದೆ.

ಜೀವವುಳಿಸುವ ವೃತ್ತಿಯವರಿಗೆ ಇದು ಅನಿವಾರ್ಯ ಅಸಹಾಯಕತೆ, ಅಡಕತ್ತರಿಯಲ್ಲಿ ಸಿಕ್ಕ ಅಡಿಕೆಯಂತೆ ಅವರ ಪಾಡು: ಒಂದೆಡೆ ಗಂಭೀರವಾಗಿರುವ ರೋಗಿ,ಇನ್ನೊಂದೆಡೆ ಆತಂಕದಿಂದ ಚಡಪಡಿಸುವ ಒಡನಾಡಿಗಳು. ರೋಗಿಯ ಜೊತೆಗಿದ್ದವರನ್ನು ಒಳಬಿಟ್ಟರೂ ಕಷ್ಟ, ಬಿಡದಿದ್ದರೂ ಕಷ್ಟ. ಒಳಬಿಟ್ಟರೆ ಅವರೆದುರೇ ತುರ್ತುಕ್ರಿಯೆಗಳನ್ನು ನಡೆಸಬೇಕು, ಅವರ ಪ್ರಶ್ನೆಗಳಿಗೆಲ್ಲಾ ಉತ್ತರಿಸಿ ಸಂಭಾಳಿಸಬೇಕು; ಜೊತೆಗೆ, ಅಪಾರ್ಥಕ್ಕೀಡಾಗುವ ಅಪಾಯ. ಹೃತ್ಕ್ರಿಯೆ-ಉಸಿರಾಟಗಳಿಲ್ಲದೆ ಬಂದ ಯುವತಿಯ ಎದೆಯೊತ್ತಿ ಹೃದಯ ಪ್ರಚೋದನೆಗೂ, ಬಾಯೊಳಕ್ಕೆ ಕೃತಕ ಉಸಿರಾಟಕ್ಕೂ ಪ್ರಯತ್ನಿಸಿದ್ದನ್ನು ಲೈಂಗಿಕ ದೌರ್ಜನ್ಯವೆಂದು ಬಗೆದ ಸಂಬಂಧಿಕರು ವೈದ್ಯರನ್ನು ಥಳಿಸಿದ್ದಿದೆ; ಕೊನೆಯುಸಿರೆಳೆಯುತ್ತಿದ್ದ ರೋಗಿಗೆ ಚುಚ್ಚುಮದ್ದು ನೀಡುತ್ತಿದ್ದಂತೆ ಸಾವುಂಟಾದಾಗ ಅದರಿಂದಲೇ ಸತ್ತದ್ದೆಂದು ವೈದ್ಯರನ್ನು ಚಚ್ಚಿದ್ದೂ ಇದೆ. ಹಾಗೆಂದು ಒಳಬಿಡದಿದ್ದರೆ ಅಸಮಾಧಾನ, ಸಂಶಯಗಳು ಹಾಗೂ ಊಹಾಪೋಹಗಳಿಂದಾಗುವ ದುಗುಡಗಳ ಕಷ್ಟ; ಹೊರಗುಳಿದ ಸಂಬಂಧಿಕರ ಕಾಲ್ಪನಿಕ ಆರೋಪಗಳಿಗೆ ವೈದ್ಯರನ್ನೂ, ಆಸ್ಪತ್ರೆಗಳನ್ನೂ ಪುಡಿಗಟ್ಟಿದ್ದಾಗಿದೆ. ತೀವ್ರ ಅಸೌಖ್ಯವಿದ್ದ ರೋಗಿಗೆ ತುರ್ತುಚಿಕಿತ್ಸೆಯನ್ನಾದರೂ ನೀಡೋಣವೆಂದಾಗ ಆತ ಸತ್ತರೆ ಏಟು; ಸೌಲಭ್ಯವಿಲ್ಲವೆಂದು ಬೇರೆ ಆಸ್ಪತ್ರೆಗೆ ಕಳಿಸಿದಾಗ ದಾರಿಯಲ್ಲೇ ಸತ್ತರೆ ಅದಕ್ಕೂ ಏಟು. ಎಲ್ಲವನ್ನೂ ವಿವರಿಸಿದರೆ ಸುಮ್ಮನೆ ಹೆದರಿಸುತ್ತಾರೆಂದು ಸಿಟ್ಟು; ಹೆಚ್ಚೇನೂ ಹೇಳದಿದ್ದಾಗ ಅನಿರೀಕ್ಷಿತ ತೊಂದರೆಯಾದರೆ ಮುಖಕ್ಕೇ ಪೆಟ್ಟು. ಸರಕಾರಿ ಆಸ್ಪತ್ರೆಗಳಲ್ಲಿ ಬಿಟ್ಟಿ ಸಿಕ್ಕಿದ್ದಕ್ಕೆ ಬಡಿತ; ಖಾಸಗಿ ಆಸ್ಪತ್ರೆಗಳಲ್ಲಿ ದುಡ್ಡು ಕೊಟ್ಟದ್ದಕ್ಕೆ ಹೊಡೆತ ಅಥವಾ ದುಡ್ಡು ಕೊಡದೆ ತಪ್ಪಿಸಲು ಗದ್ದಲ. ಕುಡುಕರು, ಸಮಾಜ ವಿರೋಧಿಗಳು, ರಾಜಕಾರಣಿಗಳ ದಂಡು ಸೇರಿಕೊಂಡರೆ ಇದು ಮತ್ತಷ್ಟು ಜಟಿಲ.

ರೋಗನಿದಾನದ ಪರೀಕ್ಷೆಗಳು, ಔಷಧಗಳು ಹಾಗೂ ಚಿಕಿತ್ಸೆಗಳಲ್ಲಿ ವ್ಯಾಪಾರಿ ಹಿತಾಸಕ್ತಿಗಳು ನುಸುಳಿ ಆರೋಗ್ಯಸೇವೆಯು ದುಬಾರಿಯಾಗುತ್ತಿವೆ; ಖರ್ಚು ಹೆಚ್ಚಿದಂತೆ ಜನಸಾಮಾನ್ಯರ ನಿರೀಕ್ಷೆಗಳೂ, ಸಂಶಯಗಳೂ ಹೆಚ್ಚುತ್ತಿವೆ. ಆಸ್ಪತ್ರೆಯ ಖರ್ಚನ್ನು ಉಳಿಸುವುದಕ್ಕಾಗಿ ವೈದ್ಯಕೀಯ ಸಿಬ್ಬಂದಿಯ ವಿದ್ಯಾರ್ಹತೆಯಲ್ಲೂ, ಚಿಕಿತ್ಸಾ ಸೌಲಭ್ಯಗಳ ಗುಣಮಟ್ಟದಲ್ಲೂ ರಾಜಿಯಾಗುವಲ್ಲಿ ಸಮಸ್ಯೆಗಳಿಗೆ ದಾರಿಯಾಗುತ್ತಿದೆ. ವ್ಯಾಪಾರೀಕರಣದಿಂದಾಗಿ ಅತ್ತ ವೈದ್ಯಕೀಯ ಶಿಕ್ಷಣದ ಅಧೋಗತಿಯಾಗಿದ್ದರೆ, ಇತ್ತ ಮಾಹಿತಿಯ ಪ್ರಳಯದಿಂದಾಗಿ, ಅಲ್ಲಿಲ್ಲಿಂದ ಅರೆಬರೆ ತಿಳಿದ ರೋಗಿಗಳು ವೈದ್ಯರನ್ನು ಹೆಚ್ಚೆಚ್ಚು ಪ್ರಶ್ನಿಸುವುದರ ಜೊತೆಗೆ ಚಿಕಿತ್ಸೆಯಲ್ಲಿ ಮೂಗು ತೂರಿಸಿ ಅನಗತ್ಯ ಗೊಂದಲಗಳನ್ನುಂಟು ಮಾಡುವುದು ಸಾಮಾನ್ಯವಾಗುತ್ತಿವೆ. ಥಟ್ಟನೆ ತೀರ್ಪು ನೀಡುವ ಟಿವಿ ಹಾಗೂ ಪತ್ರಿಕಾ ಮಾಧ್ಯಮಗಳಲ್ಲಿ ಎಲ್ಲಾ ಸಾವುಗಳಿಗೂ, ವಿಫಲವಾದ ಚಿಕಿತ್ಸೆಗಳಿಗೂ ವೈದ್ಯರನ್ನೇ ಹೊಣೆಯಾಗಿಸಿ ಏಕಪಕ್ಷೀಯ ವರದಿಗಳನ್ನು ಅತಿ ರಂಜಿತವಾಗಿ ಬಿತ್ತರಿಸುತ್ತಿರುವುದೂ ಕುಮ್ಮಕ್ಕಾಗುತ್ತಿದೆ.

ದಾಳಿಗಳನ್ನು ತಡೆಯುವಲ್ಲಿ ಹಾಗೂ ದಾಳಿಕೋರರನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಲ್ಲಿ ಪೋಲೀಸರು ವಿಫಲರಾಗುತ್ತಿರುವುದು ದಾಳಿಗಳಿಗೆ ಪ್ರೇರಣೆಯಾಗುತ್ತಿವೆ. ಆಸ್ತಿ-ಪಾಸ್ತಿಗಳಿಗಾಗಿರುವ ನಷ್ಟವನ್ನು ಸಹಿಸಿಕೊಳ್ಳುವ ಜೊತೆಗೆ ಚಿಕಿತ್ಸೆಯ ಖರ್ಚನ್ನೂ ಮನ್ನಾ ಮಾಡಿ, ದಾಳಿ ಮಾಡಿದವರಿಗೇ ಪರಿಹಾರವನ್ನು ನೀಡಬೇಕೆಂಬ ಮಧ್ಯಸ್ಥಿಕೆಗಳಿಂದಾಗಿ  ದಾಳಿಗೀಡಾದವರ ಸ್ಥೈರ್ಯ ಮತ್ತಷ್ಟು ಉಡುಗುತ್ತಿದೆ.

ಎಲ್ಲರಿಗೆ ಅತ್ಯಗತ್ಯವಾದ ಆರೋಗ್ಯ ಸೇವೆಯ ಕುಂದುಕೊರತೆಗಳನ್ನು ಹಿಂಸಾಚಾರದಿಂದ ಸರಿಪಡಿಸಲಾಗದು. ಆರೋಗ್ಯಸೇವೆಯನ್ನು ಒದಗಿಸುವವರು ಮತ್ತು ಪಡೆಯುವವರು ಪರಸ್ಪರ ಎದುರು-ಬದುರಾಗಿ ಕಾದಾಡುವ ಬದಲು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಸಹಕರಿಸಬೇಕಾಗಿದೆ. ವೈದ್ಯವೃತ್ತಿಯ ಬಗ್ಗೆ ನಶಿಸುತ್ತಿರುವ ವಿಶ್ವಾಸವನ್ನು ಮತ್ತೆ ಗಳಿಸುವುದು ಹಾಗೂ ಧರಾಶಾಯಿಯಾಗಿರುವ ವೈದ್ಯಕೀಯ ಶಿಕ್ಷಣವನ್ನು ಮೊದಲಿನ ಔನ್ನತ್ಯಕ್ಕೊಯ್ಯುವುದು ವೈದ್ಯರೆಲ್ಲರ ತುರ್ತು ಆದ್ಯತೆಯಾಗಬೇಕು. ತುರ್ತುಚಿಕಿತ್ಸೆಯ ವಿಭಾಗಗಳಲ್ಲಿ ಪರಿಣತ ವೈದ್ಯರು ಹಾಗೂ ಸಿಬ್ಬಂದಿಯನ್ನೇ ನಿಯೋಜಿಸಿ, ಚಿಕಿತ್ಸೆಯಲ್ಲಿ ಲೋಪಗಳಾಗದಂತೆ ಜಾಗರೂಕರಾಗಬೇಕು. ಅದೇ ವೇಳೆಗೆ, ತುರ್ತುಚಿಕಿತ್ಸಾ ಸ್ಥಾನಗಳಿಗೆ ರೋಗಿಯ ಜೊತೆಗಾರರ ಪ್ರವೇಶವನ್ನು ಕಡ್ಡಾಯವಾಗಿ ನಿರ್ಬಂಧಿಸಬೇಕು ಹಾಗೂ ಯಾವುದೇ ಅಹಿತಕರ ಘಟನೆಗಳನ್ನೆದುರಿಸುವುದಕ್ಕೆ ಸೂಕ್ತ ಮುನ್ನೆಚ್ಚರಿಕೆಗಳನ್ನು ವೈದ್ಯರೆಲ್ಲರೂ ವಹಿಸಿಕೊಳ್ಳಬೇಕು. ತೀವ್ರವಾದ ತೊಂದರೆಯಿಂದ ರೋಗಿಯು ಕೊನೆಯುಸಿರೆಳೆಯುತ್ತಿದ್ದರೆ ಅಥವಾ ಚಿಕಿತ್ಸೆಯ ವೇಳೆ ಅನಿರೀಕ್ಷಿತವಾದ ಸಮಸ್ಯೆಗಳಾದರೆ ಒಂದಿಬ್ಬರು ನಿಕಟ ಸಂಬಂಧಿಗಳನ್ನು ಒಳಕರೆದು ಪರಿಸ್ಥಿತಿಯನ್ನು ಯಥಾವತ್ತಾಗಿ ವಿವರಿಸುವುದು ಅತಿ ಮುಖ್ಯ. ಅಗತ್ಯವಿದ್ದಾಗಲೆಲ್ಲ ಹಿರಿಯ ಅಥವಾ ನುರಿತ ಸಹೋದ್ಯೋಗಿಗಳ ನೆರವನ್ನು ಪಡೆಯಲು ಹಿಂಜರಿಯಬಾರದು.

ರೋಗಿಗಳು ಮತ್ತವರ ಸಂಬಂಧಿಗಳು ವೈದ್ಯರಿಗೆ ಸರ್ವ ಸಹಕಾರವನ್ನೂ ನೀಡಬೇಕಾದ್ದು ಅತ್ಯಗತ್ಯ. ತುರ್ತುಚಿಕಿತ್ಸಾ ವಿಭಾಗದಲ್ಲಿ ಜಮಾಯಿಸುವುದು, ಬಂದವರೆಲ್ಲಾ ರೋಗಿಯ ಸ್ಥಿತಿಗತಿಯ ಬಗ್ಗೆ ವಿಚಾರಿಸುವುದು, ಸಂಬಂಧಿಕರು ಯಾ ಪ್ರಭಾವಿ ವ್ಯಕ್ತಿಗಳೊಂದಿಗೆ ಫೋನಿನಲ್ಲಿ ಸಂಭಾಷಿಸುವಂತೆ ಒತ್ತಾಯಿಸುವುದು ತುರ್ತುಚಿಕಿತ್ಸೆಗೆ ಅಗತ್ಯವಾದ ತನ್ಮಯತೆಗೆ ಭಂಗವುಂಟು ಮಾಡುತ್ತವೆ. ವೈದ್ಯರ ಕೌಶಲ್ಯದ ಬಗ್ಗೆ ವಿಶ್ವಾಸವಿಲ್ಲದಿದ್ದರೆ ಬೇರೊಬ್ಬ ವೈದ್ಯರ ನೆರವನ್ನು ಯಾಚಿಸುವುದೇ ಒಳ್ಳೆಯದು; ವೈದ್ಯರೂ ಕೂಡಾ ತಮ್ಮಲ್ಲಿ ವಿಶ್ವಾಸವಿಲ್ಲದ ರೋಗಿಗಳನ್ನು ಇತರರಿಗೆ ವಹಿಸುವುದೇ ಹಿತಕರ. ರೋಗಗಳು ಒಬ್ಬೊಬ್ಬರಲ್ಲಿ ಒಂದೊಂದು ತೆರನಾಗಿ, ಹೊತ್ತು ಹೊತ್ತಿಗೂ ಬದಲಾಗುತ್ತಿರುವುದರಿಂದ ಹಲಬಗೆಯ ಅನಿಶ್ಚಿತತೆಗಳೂ, ಅನಿರೀಕ್ಷಿತವಾದ ಸಮಸ್ಯೆಗಳೂ ಸಹಜವೆನ್ನುವುದನ್ನು ಮರೆಯಬಾರದು. ಯಾವುದೇ ವೈದ್ಯನು ಉದ್ದೇಶಪೂರ್ವಕವಾಗಿ ರೋಗಿಗೆ ಹಾನಿ ಮಾಡುವುದಿಲ್ಲವಾದ್ದರಿಂದ ಚಿಕಿತ್ಸೆಯಲ್ಲಿ ಲೋಪವಾಯಿತೆಂದು ಅನಿಸಿದರೆ ಹಿಂಸಾಚಾರಕ್ಕೆಳಸುವ ಬದಲು ಸೂಕ್ತವಾದ ಕಾನೂನು ಕ್ರಮಗಳನ್ನು ಜರುಗಿಸಬಹುದು.

ವೈದ್ಯರ ಮೇಲಿನ ದಾಳಿಗಳು ಹೀಗೆಯೇ ಮುಂದುವರಿದರೆ ವೈದ್ಯಕೀಯ ಶಿಕ್ಷಣದ ಜೊತೆಗೆ ಕರಾಟೆ, ಟೇಕ್ವಂಡೋಗಳನ್ನೂ ಕಲಿಸಬೇಕಾಗಬಹುದು, ವೈದ್ಯರು ಒಂದು ಕೈಯಲ್ಲಿ ಸ್ಟೆಥೊಸ್ಕೋಪ್, ಇನ್ನೊಂದರಲ್ಲಿ ಬಂದೂಕು ಹಿಡಿಯಬೇಕಾಗಬಹುದು, ಅಂತಹಾ ದುರ್ದಿನಗಳು ಬಾರದಿರಲಿ.

ಹದಿನೆಂಟನೇ ಬರಹ : ಅಮಲಿನ ಗೀಳಿಗೀಡಾದವರಿಗೆ ದಂಡನೆ ಹಿತವಲ್ಲ [ಫೆಬ್ರವರಿ 20, 2013, ಬುಧವಾರ] [ನೋಡಿ | ನೋಡಿ]

ಮಾದಕ ದ್ರವ್ಯಗಳ ವ್ಯಸನವೆಂಬ ಮರುಕಳಿಕೆಯ ಕಾಯಿಲೆಗೆ ಎಡೆಬಿಡದ ಚಿಕಿತ್ಸೆ ಅತ್ಯಗತ್ಯ

ಮೊನ್ನೆ ನಮ್ಮೂರಿನ ಸಂಪ್ರದಾಯಸ್ಥ ಕುಟುಂಬದ ಬುದ್ಧಿವಂತ ವಿದ್ಯಾರ್ಥಿನಿಯೊಬ್ಬಳು ಅಮಲು ಪದಾರ್ಥದ ವ್ಯಸನವನ್ನು ತಾಳಲಾಗದೆ ಆತ್ಮಹತ್ಯೆ ಮಾಡಿಕೊಂಡಳು. ಬೆನ್ನಿಗೇ ಒಂದಷ್ಟು ಪ್ರದರ್ಶನಗಳೂ, ಸಭೆಗಳೂ ನಡೆದವು. ಒಂದಷ್ಟು ಕಡೆ ದಾಳಿಗಳಾದವು, ಒಂದಿಬ್ಬರನ್ನು ಬಂಧಿಸಿದ್ದೂ ಆಯಿತು. ಇದನ್ನು ತಡೆಯಲಿಕ್ಕೆಂದೇ ತಾವು ಪಬ್ ಗಳಲ್ಲಿ, ಹುಟ್ಟುಹಬ್ಬಗಳಲ್ಲಿ, ಬಸ್ಸು-ಹೋಟೇಲುಗಳಲ್ಲಿ ಹೆಣ್ಮಕ್ಕಳ ಮೇಲೆ ಕೈ ಹಾಕಿ, ಕೂದಲೆಳೆದು ಹೊಡೆದಿದ್ದೆವೆಂದು ನಮ್ಮೂರಿನ ಗೋವುಗಳು ಹಾಗೂ ವನಿತೆಯರ ಸ್ವಯಂಘೋಷಿತ ರಕ್ಷಕರು ಕೊಚ್ಚಿಕೊಂಡದ್ದೂ ಆಯಿತು.

ಅಮಲಿನ ಗೀಳು ಮಾನಸಿಕ, ವೈದ್ಯಕೀಯ, ಕೌಟುಂಬಿಕ ಹಾಗೂ ಸಾಮಾಜಿಕ-ರಾಜಕೀಯ ಸಮಸ್ಯೆಯೇ ಹೊರತು ನೈತಿಕ, ಸಾಂಸ್ಕತಿಕ ಯಾ ಧಾರ್ಮಿಕ ಸಮಸ್ಯೆಯಲ್ಲ. ವಿಶ್ವ ಸಂಸ್ಥೆಯ ವರದಿಯಂತೆ 2010ರಲ್ಲಿ ಸುಮಾರು 23 ಕೋಟಿ ಜನ (ವಿಶ್ವ ಜನಸಂಖ್ಯೆಯ ಶೇ. 5ರಷ್ಟು) ಕನಿಷ್ಠ ಒಮ್ಮೆಯಾದರೂ ಮಾದಕ ವಸ್ತುಗಳನ್ನು ಸೇವಿಸಿದ್ದು, ವರ್ಷಕ್ಕೆ ಸುಮಾರು ಎರಡು ಲಕ್ಷ ಜನ ಆ ಗೀಳಿನಿಂದ ಸಾವನ್ನಪ್ಪುತ್ತಿದ್ದಾರೆ. ಮಾದಕ ದ್ರವ್ಯಗಳ ವಾರ್ಷಿಕ ವಹಿವಾಟು 500 ಶತಕೋಟಿ ಡಾಲರುಗಳಿಗೂ ಮಿಕ್ಕಿದ್ದರೆ, ಗೀಳುಳ್ಳವರೆಲ್ಲರಿಗೂ ಚಿಕಿತ್ಸೆಯನ್ನು ನೀಡುವುದಕ್ಕೆ ವರ್ಷಕ್ಕೆ 250 ಶತಕೋಟಿ ಡಾಲರುಗಳಷ್ಟು ಅಗತ್ಯವಿದ್ದು, ಐವರಲ್ಲೊಬ್ಬರಷ್ಟೇ ಸೂಕ್ತ ಚಿಕಿತ್ಸೆಯನ್ನು ಪಡೆಯಲು ಸಾಧ್ಯವಾಗುತ್ತಿದೆ. ಹಲಬಗೆಯ ಮಾದಕ ವಸ್ತುಗಳ ಉತ್ಪಾದನೆ ಹಾಗೂ ಮಾರಾಟಗಳು ಹೆಚ್ಚುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಶಾಲಾ ಮಕ್ಕಳನ್ನೂ ತಟ್ಟುತ್ತಿದೆ.

ಅಮಲಿನ ಗೀಳು ಹತ್ತಿಕೊಳ್ಳುವುದಕ್ಕೆ ಒಂದಲ್ಲ, ಹಲವು ಕಾರಣಗಳಿರುತ್ತವೆ. ನ್ಯೂಜಿಲೆಂಡಿನ ಮನಃಶಾಸ್ತ್ರಜ್ಞ ಡಗ್ಲಸ್ ಸೆಲ್ಮನ್ ಹೇಳುವಂತೆ, ಅಮಲಿನ ಗೀಳು ಪದೇ ಪದೇ ಮರುಕಳಿಸುವ ದೀರ್ಘಾವಧಿಯ ಕಾಯಿಲೆ (ಅಡಿಕ್ಷನ್, 2009;105:6-13). ವ್ಯಕ್ತಿಯ ಮನಸ್ಥಿತಿ, ಅಮಲು ಪದಾರ್ಥಗಳ ಸುಲಭ ಲಭ್ಯತೆ ಮತ್ತು ಕೌಟುಂಬಿಕ ಹಾಗೂ ಸಾಮಾಜಿಕ ಪರಿಸರಗಳೆಲ್ಲವೂ ಅದಕ್ಕೆ ಕಾರಣವಾಗುತ್ತವೆ. ಸುತ್ತುಮುತ್ತಲಿನ ಪ್ರಚೋದನೆಗಳಿಂದಾಗಿ ಪ್ರತಿಕ್ಷಣವೂ ಹಲಬಗೆಯ ಬಯಕೆಗಳು ನಮ್ಮ ಮೆದುಳಿನೊಳಗಡೆ ಸುಪ್ತವಾಗಿ ಹುಟ್ಟುತ್ತಿರುತ್ತವೆ. ಇವುಗಳಲ್ಲಿ ಅನಗತ್ಯವಾದುದನ್ನೂ, ಅಸಂಗತವಾದುದನ್ನೂ ನಮ್ಮ ಮುಮ್ಮೆದುಳು ಪ್ರಜ್ಞಾಪೂರ್ವಕವಾಗಿ ಅದುಮುತ್ತದೆ; ಆದರೆ ಈ ಅದುಮುವಿಕೆ ತಡವಾದರೆ ಬಯಕೆಗೆ ಸೋಲುವಂತಾಗುತ್ತದೆ. ಅಮಲು ಪದಾರ್ಥಗಳು ಮಾತ್ರವಲ್ಲ, ಶರಾಬು, ತಂಬಾಕು ಇತ್ಯಾದಿ ಚಟಗಳಿಗೆ ತುತ್ತಾಗಿರುವವರಲ್ಲಿ ಮುಮ್ಮೆದುಳಿನ ಈ ಅದುಮುವಿಕೆಯು ನಿಧಾನವಾಗಿರುವುದನ್ನು ಗುರುತಿಸಲಾಗಿದ್ದು, ಇದು ವಂಶಪಾರಂಪರ್ಯವಾಗಿ ಬರಬಹುದೆಂದು ಹೇಳಲಾಗಿದೆ. ಹಾಗೆಯೇ, ಮೂರನೇ ಎರಡರಷ್ಟು ಅಮಲು ವ್ಯಸನಿಗಳ ಕುಟುಂಬದ ಇತರ ಸದಸ್ಯರು ಶರಾಬು, ತಂಬಾಕು ಯಾ ಮಾದಕ ದ್ರವ್ಯಗಳಂತಹ ಒಂದಿಲ್ಲೊಂದು ಚಟವನ್ನು ಹೊಂದಿರುತ್ತಾರೆನ್ನುವುದು ಹಲವು ಅಧ್ಯಯನಗಳಲ್ಲಿ ವ್ಯಕ್ತವಾಗಿದೆ. ಹೆಚ್ಚಿನ ವ್ಯಸನಿಗಳಲ್ಲಿ ತೀವ್ರ ಖಿನ್ನತೆ ಮತ್ತಿತರ ಮಾನಸಿಕ ತೊಂದರೆಗಳು, ಜೀವನವನ್ನು ಎದುರಿಸುವಲ್ಲಿ ಭಯ ಮತ್ತು ಆತಂಕಗಳು, ವೈಫಲ್ಯಗಳಿಂದಾದ ಹತಾಶೆಗಳು ಇತ್ಯಾದಿ ಜೊತೆಗೂಡಿರುತ್ತವೆ. ಮಿತ್ರರ ಒತ್ತಡಗಳು, ಏನೆಂದು ನೋಡಿ ಬಿಡಬೇಕೆನ್ನುವ ಕುತೂಹಲ, ಲೈಂಗಿಕ ಶಕ್ತಿಯನ್ನು ಪ್ರಚೋದಿಸಬಹುದೆನ್ನುವ ತಪ್ಪು ಕಲ್ಪನೆಗಳು ಕೂಡಾ ಅಮಲು ದ್ರವ್ಯದ ಮೊದಲ ಬಳಕೆಗೆ ಕಾರಣವಾಗಬಹುದು. ಹೀಗೆ ಪ್ರಕೃತಿ ಮತ್ತು ಪರಿಸರಗಳೆಲ್ಲಕ್ಕೂ ಸಂಬಂಧಿಸಿದ ಹಲವು ಕಾರಣಗಳಿಂದಾಗಿ ವ್ಯಕ್ತಿಯು ಮಾದಕ ವಸ್ತುಗಳ ಬಳಕೆಯನ್ನು ಆರಂಭಿಸುವಂತಾಗುತ್ತದೆ.

ಒಮ್ಮೆ ಇಂತಹ ಚಟಜನಕ ವಸ್ತುಗಳನ್ನು ಸೇವಿಸಲಾರಂಭಿಸಿದರೆ, ಮೆದುಳಿನ ಮೇಲೆ ಅವು ಬೀರುವ ಪರಿಣಾಮದಿಂದಾಗಿ ಅವನ್ನು ಮತ್ತೆ ಮತ್ತೆ ಸೇವಿಸುವ ಬಯಕೆಯುಂಟಾಗುತ್ತದೆ, ಅದು ಗೀಳಾಗಿ ಬೆಳೆದು ವಿಷವರ್ತುಲವಾಗುತ್ತದೆ. ಈ ವಸ್ತುಗಳು ದೇಹದ ಮೇಲೂ ಪರಿಣಾಮ ಬೀರಿ, ಅವನ್ನು ಸೇವಿಸದಿದ್ದಾಗ ವಿಪರೀತ ತೊಂದರೆಗಳಿಗೆ ಕಾರಣವಾಗಿ ಚಟವುಳ್ಳವನನ್ನು ವಸ್ತುಶಃ ದಾಸ್ಯಕ್ಕೆ ತಳ್ಳುತ್ತವೆ. ಅವನ್ನು ಹೇಗಾದರೂ ಪಡೆದು ಸೇವಿಸುವ ಬಲವಂತಕ್ಕೆ ಸಿಕ್ಕಾಗ ಕಳ್ಳತನದಿಂದ ಹಿಡಿದು ಕೊಲೆಗಳಂತಹ ಅಪರಾಧಗಳಿಗೂ ಇದು ಕಾರಣವಾಗಬಹುದು.

ಹೀಗೆ ಒಂದು ಕ್ಷಣಿಕ ಬಯಕೆಗೆ ಸೋತು ಸೇವಿಸಲಾರಂಭಿಸಿದರೆ ಅಮಲಿನ ದಾಸನಾಗಿ ಒದ್ದಾಡಬೇಕಾಗುತ್ತದೆ. ಅಮಲು ಪದಾರ್ಥಗಳೂ, ತಕ್ಕ ಹಣವೂ ಸುಲಭದಲ್ಲಿ ದೊರೆಯುವಂತಿದ್ದರೆ ಗೀಳು ಇನ್ನಷ್ಟು ಗಟ್ಟಿಯಾಗುತ್ತದೆ. ಇಂದು ಪಂಜಾಬ್ ರಾಜ್ಯದಲ್ಲಿ ಅಮಲಿನ ಗೀಳು ಅತಿ ಗಂಭೀರವಾದ ಮಟ್ಟವನ್ನು ತಲುಪಿದ್ದು, ಅಲ್ಲಿನ ಶೇ.67ರಷ್ಟು ಕುಟುಂಬಗಳಲ್ಲಿ ಒಬ್ಬರಾದರೂ ಈ ಪಿಡುಗಿಗೆ ತುತ್ತಾಗಿದ್ದರೆನ್ನಲಾಗಿದೆ. ತೆಹೆಲ್ಕಾ ಪತ್ರಿಕೆಯಲ್ಲಿ ಸಾಯಿ ಮನೀಶ್ (2012, ಎಪ್ರಿಲ್ 14) ಹಾಗೂ ವಾಷಿಂಗ್ಟನ್ ಪೋಸ್ಟ್ ನಲ್ಲಿ ಸೈಮನ್ ಡೆನ್ಯರ್ (2013, ಜನವರಿ 1) ತೆರೆದಿಟ್ಟಿರುವ ಸತ್ಯಗಳು ಪಂಜಾಬಲ್ಲಷ್ಟೇ ಅಲ್ಲ, ಇತರೆಡೆಗಳಲ್ಲೂ ಈ ಪಿಡುಗು ಹೆಚ್ಚುತ್ತಿರುವುದರತ್ತ ಬೆಳಕು ಚೆಲ್ಲುತ್ತವೆ. ಪಂಜಾಬಿನ ಹೊಸ ತಲೆಮಾರಿಗೆ ಅಲ್ಲಿನ ಅತಿ ಶ್ರೀಮಂತಿಕೆಯೇ ಮುಳುವಾಗುತ್ತಲಿದೆ. ಒಂದೆಡೆ, ಉನ್ನತ ಶಿಕ್ಷಣಕ್ಕಲ್ಲಿ ಹೆಚ್ಚಿನ ಮಹತ್ವವಿಲ್ಲದೆ, ಯುವಕರು ಹೊಸ ಅವಕಾಶಗಳಲ್ಲಿ ಸ್ಪರ್ಧಿಸಲಾಗದೆ ಹತಾಶರಾಗುವಂತಾಗಿದೆ. ಇನ್ನೊಂದೆಡೆ, ಅಲ್ಲಿ ಮದ್ಯ ವ್ಯಸನವು ಬಹುಕಾಲದಿಂದಲೂ ವ್ಯಾಪಕವಾಗಿದ್ದು, ಆ ಕುಟುಂಬಗಳ ಮಕ್ಕಳೀಗ ಮಾದಕ ವಸ್ತುಗಳ ಚಟಕ್ಕೆ ತುತ್ತಾಗುತ್ತಿದ್ದಾರೆ. ಪಂಜಾಬಿನ ಮೂಲೆ ಮೂಲೆಗಳಲ್ಲಿಂದು ಮಾದಕ ವಸ್ತುಗಳು ಎಗ್ಗಿಲ್ಲದೆ ಮಾರಲ್ಪಡುತ್ತಿರುವುದಷ್ಟೇ ಅಲ್ಲ, ಅಮಲುಂಟು ಮಾಡುವ ವಿವಿಧ ಔಷಧಗಳನ್ನು ವೈದ್ಯರ ಚೀಟಿಗಳಿಲ್ಲದೆಯೇ ಮಾರುವ ಔಷಧದಂಗಡಿಗಳು ಪ್ರತೀ ಹಳ್ಳಿಯಲ್ಲೂ ಹತ್ತಿಪ್ಪತ್ತರಂತೆ ಕಾರ್ಯಾಚರಿಸುತ್ತಿವೆ. ಹಾಗಿದ್ದರೂ, ಇವನ್ನು ನಿಯಂತ್ರಿಸಬೇಕಾದ ಇಲಾಖೆಗಳೆಲ್ಲ ಕಣ್ಮುಚ್ಚಿಕೊಂಡಂತಿವೆ. ನೆರೆಯ ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಇರಾನ್ ಗಳಿಂದ ಪಂಜಾಬ್-ಮುಂಬೈ ಮಾರ್ಗವಾಗಿ ಜಗತ್ತಿನ ಇತರೆಡೆಗಳಿಗೆ ಕಳ್ಳ ಸಾಗಾಣಿಕೆಯಾಗುವ ಅಫೀಮು ಇತ್ತೀಚಿನ ವರ್ಷಗಳಲ್ಲಿ ಪಂಜಾಬಿನಲ್ಲೇ ಸೋರಿಕೆಯಾಗುತ್ತಿದ್ದು, ಕಾನೂನು ಪಾಲಕರೇ ಇದರಲ್ಲಿ ಶಾಮೀಲಾಗಿ, ಸಿಕ್ಕಿ ಬಿದ್ದ ಅಫೀಮಿನಲ್ಲಿ ಸಾಕಷ್ಟನ್ನು ಸ್ಥಳೀಯ ಮಾರುಕಟ್ಟೆಗೆ ದಾಟಿಸುತ್ತಿದ್ದಾರೆಂಬ ಬಲವಾದ ಆರೋಪಗಳಿವೆ. ಪಂಜಾಬಿನ ರಾಜಕೀಯ ಪಕ್ಷಗಳೂ ಇದರಲ್ಲಿ ಸೇರಿಕೊಳ್ಳುತ್ತಿದ್ದು, ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ಮತದಾರರನ್ನು ಓಲೈಸುವುದಕ್ಕಾಗಿ ಮಾದಕ ವಸ್ತುಗಳನ್ನೂ ವಿತರಿಸಲಾಗಿತ್ತೆನ್ನುವ ಆಘಾತಕಾರಿ ಸಂಗತಿಗಳು ಬಯಲಾಗಿವೆ. ಇವರೆಲ್ಲರ ಸ್ವಾರ್ಥಗಳಲ್ಲಿ ಪಂಜಾಬಿನ ಯುವ ಜನಾಂಗವೇ ನಾಶವಾಗುವ ಭೀತಿ ಎದುರಾಗಿದ್ದು, ಮಕ್ಬೂಲ್ ಪುರದಂತೆಡೆ ವಿಧವೆಯರ ಹಳ್ಳಿಗಳೆಂಬ ಶೋಚನೀಯ ಸ್ಥಿತಿಯುಂಟಾಗಿದೆ.

ಅಮಲಿನ ಗೀಳು ದೀರ್ಘಕಾಲ ತಜ್ಞ ಚಿಕಿತ್ಸೆಯ ಅಗತ್ಯವುಳ್ಳ ಕಾಯಿಲೆಯಾಗಿದ್ದು, ಶಾಶ್ವತವಾಗಿ ಮುಕ್ತರಾಗುವುದಕ್ಕೆ ಸತತ ಪ್ರಯತ್ನಗಳು ಬೇಕಾಗುತ್ತವೆ. ಸೆಲ್ಮನ್ ಹೇಳುವಂತೆ, ಮಧುಮೇಹ, ರಕ್ತದ ಏರೊತ್ತಡ, ಅಸ್ತಮಾ ಮುಂತಾದ ದೀರ್ಘಕಾಲೀನ ಕಾಯಿಲೆಗಳು ನಿರಂತರವಾದ ಚಿಕಿತ್ಸೆಯಿಲ್ಲದಿದ್ದರೆ ಆಗಾಗ ಮರುಕಳಿಸುವಂತೆಯೇ ಅಮಲಿನ ಗೀಳು ಕೂಡಾ ಶಿಸ್ತುಬದ್ಧವಾದ ಚಿಕಿತ್ಸೆಯಿಲ್ಲದಿದ್ದರೆ ಮರುಕಳಿಸುತ್ತಿರುತ್ತದೆ. ಆದರೆ ಮಧುಮೇಹದಂತಹ ರೋಗಗಳ ಚಿಕಿತ್ಸೆಗೆ ಸೌಲಭ್ಯಗಳೂ, ಸಾಮಾಜಿಕ ಮತ್ತು ಕೌಟುಂಬಿಕ ಸಹಾನುಭೂತಿ ಹಾಗೂ ಪ್ರೋತ್ಸಾಹಗಳೂ ವಿಪುಲವಾಗಿದ್ದರೆ, ಅಮಲು ರೋಗದ ಪಾಲಿಗೆ ತದ್ವಿರುದ್ಧವಾದ ಪರಿಸ್ಥಿತಿಯಿದೆ. ಅಮಲುಳ್ಳವರ ಮನೋದೈಹಿಕ ಸ್ಥಿತಿಯನ್ನು ಆಳವಾಗಿ ವಿಶ್ಲೇಷಿಸಿ, ಅವರಲ್ಲಿರಬಹುದಾದ ಮನೋರೋಗಗಳೂ ಸೇರಿದಂತೆ ಎಲ್ಲಕ್ಕೂ ಸೂಕ್ತವಾದ, ಸಂಕೀರ್ಣವಾದ ಚಿಕಿತ್ಸೆಯನ್ನು ನೀಡುವುದಕ್ಕೆ ನುರಿತ ಮನಃಶಾಸ್ತ್ರಜ್ಞರಿಗಷ್ಟೇ ಸಾಧ್ಯವಿದೆ. ಹೆಚ್ಚಿನವರಿಗೆ ಈ ಅರಿವಿಲ್ಲದಿರುವುದು ಒಂದು ಸಮಸ್ಯೆಯಾದರೆ, ಅಂತಹಾ ತಜ್ಞರ ಕೊರತೆಯು ತೀವ್ರವಾಗಿರುವುದು ಇನ್ನೊಂದು ಸಮಸ್ಯೆಯಾಗಿದೆ. ಇದರ ದುರ್ಲಾಭ ಪಡೆದು ಅನೇಕ ನಕಲಿ-ಬದಲಿ ಗೀಳು ನಿರ್ಮೂಲನಾ ಕೇಂದ್ರಗಳು ಎಲ್ಲೆಂದರಲ್ಲಿ ತಲೆಯೆತ್ತುತ್ತಿದ್ದು, ಅವುಗಳಿಂದ ತೊಂದರೆಯಾಗುವುದಷ್ಟೇ ಅಲ್ಲದೆ, ಕೆಲವೆಡೆ ಅಮಲು ಪದಾರ್ಥಗಳ ಸರಬರಾಜು ಕೂಡಾ ನಡೆಯುತ್ತವೆ. ಅಮಲಿನ ಗೀಳುಳ್ಳವರನ್ನು ತುಚ್ಛವಾಗಿ ಕಾಣುವುದು, ನೈತಿಕತೆಯ ಹೆಸರಲ್ಲಿ ಅವರ ಮೇಲೆ ದಾಳಿ ಮಾಡುವುದು, ಕುಟುಂಬದಿಂದಲೂ, ಸಮಾಜದಿಂದಲೂ ಅವರನ್ನು ದೂರವಿರಿಸುವುದು ಇತ್ಯಾದಿಗಳಿಂದ ಇನ್ನಷ್ಟು ಕೀಳರಿಮೆಗೂ, ಖಿನ್ನತೆಗೂ ಕಾರಣವಾಗಿ ಗೀಳಿನ ಸಮಸ್ಯೆಯನ್ನು ಮತ್ತಷ್ಟು ತೀವ್ರಗೊಳಿಸಬಹುದು. ಪಂಜಾಬಿನಲ್ಲಿ ಅಮಲಿನ ಗೀಳಿರುವವರನ್ನು ಅಡ್ಡ ಹೆಸರಿಂದ ಹೀಗಳೆಯುವುದಲ್ಲದೆ, ಎಲ್ಲೇ ಯಾವುದೇ ಅಪರಾಧವಾದರೂ ಅವರನ್ನೇ ಠಾಣೆಗೊಯ್ಯುವಂತಹ ಬರ್ಬರ ಸನ್ನಿವೇಶದಿಂದಾಗಿ ವ್ಯಸನಿಗಳ ಪಾಡು ಮತ್ತಷ್ಟು ದುರ್ಬರಗೊಂಡಿದೆ.

ಆದ್ದರಿಂದ ಅಮಲಿನ ಗೀಳು ಹತ್ತದಂತೆ ತಡೆಯುವುದು ಮತ್ತು ಅದಕ್ಕೆ ಮನಃಶಾಸ್ತ್ರಜ್ಞರಿಂದ ಎಡೆಬಿಡದೆ ಚಿಕಿತ್ಸೆಯನ್ನು ನೀಡುವುದು ಕುಟುಂಬದ ಜವಾಬ್ದಾರಿಯಾಗಿದೆ. ಅಮಲು ಪದಾರ್ಥಗಳ ವ್ಯಾಪಾರವನ್ನು ಮಟ್ಟ ಹಾಕುವುದು ಪೋಲೀಸರು ಹಾಗೂ ಇತರ ನಿಯಂತ್ರಕರ ಕೆಲಸವಾಗಿದ್ದು, ಅದಕ್ಕೆ ರಾಜಕೀಯ ಪಕ್ಷಗಳು ಹಾಗೂ ಆಡಳಿತದ ಬೆಂಬಲ ಹಾಗೂ ಕಣ್ಗಾವಲು ಬೇಕಾಗಿದೆ. ಅಮಲಿನಿಂದ ಮುಕ್ತರಾಗಲು ವ್ಯಸನಿಗಳಿಗೆ ಬೆಂಬಲವೂ, ಚಿಕಿತ್ಸೆಯೂ ಬೇಕಲ್ಲದೆ ಬೈಗುಳಗಳು, ಹೀಗಳಿಕೆಗಳು ಯಾ ದಂಡನೆಗಳಲ್ಲ; ಸಂಸ್ಕತಿ ರಕ್ಷಕರೆಂಬ ಸೋಗಲಾಡಿ ದಾಳಿಕೋರರಿಗೆ ಇಲ್ಲೇನೂ ಕೆಲಸವಿಲ್ಲ.

ಹದಿನೇಳನೇ ಬರಹ : ಶಮನ ಖಂಡಿತವೆಂಬ ಬೊಗಳೆಗೆ ಬಲಿಯಾಗದಿರಿ [ಫೆಬ್ರವರಿ 6, 2013, ಬುಧವಾರ] [ನೋಡಿ | ನೋಡಿ]

ಕಾಯಿಲೆಗಳನ್ನು ಖಂಡಿತವಾಗಿ ಗುಣಪಡಿಸುತ್ತೇವೆನ್ನುವ ಬೊಗಳೆಯೇ ಬದಲಿ ಪದ್ಧತಿಗಳ ಜೀವಾಳ

ರಕ್ತದ ಏರೊತ್ತಡಕ್ಕೆಂದು ಚಿಕಿತ್ಸೆ ಪಡೆಯುತ್ತಿದ್ದ ನಲುವತ್ಮೂರರ ಯುವಕನೊಬ್ಬನಿಗೆ ಕಾವಿಯುಟ್ಟ, ಗಡ್ಡ ಬಿಟ್ಟ ಯೋಗ ಗುರುವಿನ ಆಕರ್ಷಣೆ. ಮಾರಕ ಆಕರ್ಷಣೆ. ‘ಒಂದೆರಡು ಆಸನಗಳು, ಒಂದಷ್ಟು ಉಸಿರಾಟದಿಂದ ಏರೊತ್ತಡ ಇಳಿಯುತ್ತದೆ, ಆಧುನಿಕ ಔಷಧಗಳೆಲ್ಲ ಅಪಾಯಕರ’ ಎಂಬ ಗುರುವಿನ ಉವಾಚವನ್ನು ನಂಬಿದ; ಮಾತ್ರೆಗಳನ್ನು ಬಿಟ್ಟು ನಸುಕಲ್ಲಿ ಆಸನಾಭ್ಯಾಸಕ್ಕೆ ತೊಡಗಿದ. ವಾರದಲ್ಲಿ ರಕ್ತದೊತ್ತಡ ದಿಢೀರನೆ ಏರಿ ಮಿದುಳಲ್ಲಿ ರಕ್ತಸ್ರಾವವಾಗಿ ಅಸುನೀಗಿದ. ಹಾಗೆಯೇ, ಸೋರಿಯಾಸಿಸ್ ಎಂಬ ಚರ್ಮರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದೆಂದ ಹೋಮಿಯೋಪತಿಯವರಿಗೆ ಸಾವಿರಗಟ್ಟಲೆ ಚೆಲ್ಲಿ, ಖಾಯಿಲೆ ಉಲ್ಬಣಿಸಿದರೂ ಅದು ಗುಣವಾಗುವ ಲಕ್ಷಣ ಎನ್ನುವ ಬೊಗಳೆಯನ್ನು ನಂಬಿ, ಕೊನೆಗೆ ಚರ್ಮವೆಲ್ಲ ಕೆಂಪಾಗಿ ಕಿತ್ತೇಳಲಾರಂಭಿಸಿದಾಗ ಆಧುನಿಕ ವೈದ್ಯರಲ್ಲಿ ಬಂದು ‘ಈ ಕೂಡಲೇ ಗುಣ ಪಡಿಸಿ’ ಎಂದು ಕಿರುಚಾಡುವವರೂ, ಮೂಲಿಕೆಗಳ ಲೇಪದಿಂದ ಕ್ಯಾನ್ಸರ್ ಗುಣವಾಗುತ್ತದೆಂದು ನಂಬಿ ಗೆಡ್ಡೆಯನ್ನು ಕೊಳೆಯಿಸಿ ನರಳುವವರೂ ಸಾಕಷ್ಟಿದ್ದಾರೆ. ಕಾಂತದ ಬಳೆ, ಮಂತ್ರದ ನೂಲು, ಬೇರಿನ ನೀರು, ದನದ ಮೂತ್ರ ಮುಂತಾದವುಗಳಿಂದ ಚಿಕಿತ್ಸೆ ಸಾಧ್ಯವೆಂದು ನಂಬುವವರೂ ಇದ್ದಾರೆ.

ರಕ್ತದೊತ್ತಡ, ಮಧುಮೇಹ, ಉಬ್ಬಸ, ಸೊರಿಯಾಸಿಸ್, ಸಂಧಿವಾತಗಳು, ಕ್ಯಾನ್ಸರ್ ಇವೇ ಮುಂತಾದ ರೋಗಗಳನ್ನು ನಿಯಂತ್ರಿಸುವುದಕ್ಕೆ ಹಾಗೂ ಅವುಗಳ ಗಂಭೀರ ಪರಿಣಾಮಗಳನ್ನು ತಡೆಯುವುದಕ್ಕೆ ವೈಜ್ಞಾನಿಕವಾಗಿ ಶ್ರುತಪಟ್ಟ ಅತ್ಯಾಧುನಿಕ ಚಿಕಿತ್ಸೆಗಳಿದ್ದರೂ ಕೆಲವರು ಪೊಳ್ಳು ಭರವಸೆಗಳನ್ನೇ ಹೆಚ್ಚು ನಂಬುವುದೇಕೆ? ಆಧುನಿಕ ತಂತ್ರಜ್ಞಾನದ ಮಾಂತ್ರಿಕರಲ್ಲೊಬ್ಬನಾದ ಸ್ಟೀವ್ ಜಾಬ್ಸ್ ನಂತಹವರು ಅತಿ ನೂತನ ವಿಧಾನದಿಂದ ಅತಿ ಬೇಗನೇ ಗುರುತಿಸಲಾದ ಕ್ಯಾನ್ಸರ್ ಗೆಡ್ಡೆಗೆ ಮೂಲಿಕೆಗಳ ಮೊರೆ ಹೋಗಿ ಪ್ರಾಣ ಕಳೆದುಕೊಳ್ಳುವುದೇಕೆ? ಬೊಗಳೆಗೆ ಇಷ್ಟೊಂದು ಬೆಲೆಯೇಕೆ?

ಕಾರಣಗಳು ಹಲವು. ಬಹಳಷ್ಟು ಜನರಿಗೆ ಆಧುನಿಕ ವೈದ್ಯ ವಿಜ್ಞಾನ ಹಾಗೂ ಬದಲಿ ಪದ್ಧತಿಗಳ ನಡುವಿನ ವ್ಯತ್ಯಾಸಗಳ ಅರಿವಿರುವುದಿಲ್ಲ. ಆಧುನಿಕ ವೈದ್ಯವಿಜ್ಞಾನವು ಸಾಕ್ಷ್ಯಾಧಾರಿತವಾಗಿದ್ದು, ರೋಗಗಳುಂಟಾಗುವ ಕಾರಣ ಮತ್ತು ಅವು ಬೆಳೆಯುವ ರೀತಿ, ರೋಗಗ್ರಸ್ತ ದೇಹದೊಳಗಾಗುವ ಬದಲಾವಣೆಗಳು ಮತ್ತು ರೋಗ ಲಕ್ಷಣಗಳು, ಅತಿ ಸೂಕ್ಷ್ಮವಾದ ಮಟ್ಟದಲ್ಲೂ ಅವನ್ನು ಗುರುತಿಸಬಲ್ಲ ಅತ್ಯಾಧುನಿಕ ವಿಧಾನಗಳು, ಅವಕ್ಕೆ ಸೂಕ್ತವಾದ ಔಷಧಗಳು ಮತ್ತವುಗಳ ಅಡ್ಡ ಪರಿಣಾಮಗಳು ಇತ್ಯಾದಿಗಳೆಲ್ಲವನ್ನೂ ಅಲ್ಲಿ ನಿರಂತರವಾಗಿ ಒರೆ ಹಚ್ಚಲಾಗುತ್ತದೆ. ಬದಲಿ ಚಿಕಿತ್ಸಾ ವಿಧಾನಗಳಾವುವೂ ಇಂತಹಾ ಕಠಿಣ ಪರೀಕ್ಷೆಗಳಲ್ಲಿ ಗೆದ್ದುದಿಲ್ಲ. ಇವನ್ನರಿಯದವರಿಗೆ ಯಾ ಈ ಬಗ್ಗೆ ತಲೆಕೆಡಿಸಿಕೊಳ್ಳದವರಿಗೆ ಎಲ್ಲಾ ವೈದ್ಯ ಪದ್ಧತಿಗಳೂ ಒಂದೇ ಎಂದನಿಸುತ್ತವೆ.

ವಿಪರ್ಯಾಸವೆಂದರೆ, ಆಧುನಿಕ ವೈದ್ಯವಿಜ್ಞಾನದ ಈ ಪಾರದರ್ಶಕ ನಡವಳಿಕೆಯೇ ತಿರುಗುಬಾಣವಾಗುತ್ತದೆ. ಆಧುನಿಕ ಚಿಕಿತ್ಸೆಯಲ್ಲಿ ಮುಕ್ತವಾಗಿ ದಾಖಲಿಸಲಾಗುವ ಅಡ್ಡ ಪರಿಣಾಮಗಳ ಬಗ್ಗೆ ಭಯಗೊಳ್ಳುವವರು ಬದಲಿ ಚಿಕಿತ್ಸೆಗೆ ಅಡ್ಡ ಪರಿಣಾಮಗಳೇ ಇಲ್ಲವೆಂಬ ಬೊಗಳೆಗಳತ್ತ ಸೆಳೆಯಲ್ಪಡುತ್ತಾರೆ. ಲಾಭದ ಹುಚ್ಚಿನಲ್ಲಿ ವೈದ್ಯ ವೃತ್ತಿಯ ಆದರ್ಶಗಳನ್ನು ಧೂಳೀಪಟ ಮಾಡುವ ವೈದ್ಯರು ಹಾಗೂ ದೈತ್ಯ ಕಂಪೆನಿಗಳೆಂಬ ಒಳವೈರಿಗಳಿಂದಾಗಿ ಆಧುನಿಕ ಚಿಕಿತ್ಸೆಯ ಬಗ್ಗೆ ಹೆಚ್ಚುತ್ತಿರುವ ಸಂಶಯಗಳು ಹಾಗೂ ಹೆದರಿಕೆಗಳು ಕೂಡಾ ಜನರನ್ನು ಬೊಗಳೆ ಚಿಕಿತ್ಸೆಯತ್ತ ದೂಡುತ್ತವೆ. ಆಧುನಿಕ ಚಿಕಿತ್ಸೆಯು ದುಬಾರಿಯೆನ್ನುವ ಭಾವನೆಯೂ, ಮಾರಣಾಂತಿಕವಾದ ಕಾಯಿಲೆ ಯಾ ಕಷ್ಟಕರ ಚಿಕಿತ್ಸೆಯೆಂಬ ಹತಾಶೆಗಳೂ ಬೊಗಳೆ ಚಿಕಿತ್ಸೆಗೆ ಕಾರಣಗಳಾಗಬಹುದು.

ಆದರೆ ಸ್ಟೀವ್ ಜಾಬ್ಸ್ ಗೆ ಬದಲಿ ಚಿಕಿತ್ಸೆಯ ಮೊರೆ ಹೋಗುವ ಅನಿವಾರ್ಯತೆ ಏನಿತ್ತು? ಐ ಫೋನ್ ಮೂಲಕ ತಂತ್ರಜ್ಞಾನವನ್ನು ಹೊಸ ಎತ್ತರಕ್ಕೇರಿಸಿದವನನ್ನು ಅಜ್ಞಾನಿಯೆನ್ನಲಾದೀತೇ? ಆಪಲ್ ಸ್ಥಾಪಕ ಕೋಟ್ಯಾಧಿಪತಿಗೆ ಹಣದ ಬರವಿತ್ತೇ? ಆಧುನಿಕ ಚಿಕಿತ್ಸೆಯ ಬಗ್ಗೆ ಅವನಿಗೆ ವಿಶ್ವಾಸವಿರಲಿಲ್ಲವೇ? ಜಾಬ್ಸ್ ಅಕ್ಟೋಬರ್ 2003ರಲ್ಲಿ ಮೂತ್ರಪಿಂಡಗಳ ಪರೀಕ್ಷೆಗಾಗಿ ಸ್ಕಾನ್ ಮಾಡಿಸಿದಾಗ ಆಕಸ್ಮಿಕವಾಗಿ ಮೇದೋಜೀರಕಾಂಗದಲ್ಲಿ ಕ್ಯಾನ್ಸರಿನ ಅತಿ ಸಣ್ಣ ಗೆಡ್ಡೆಯೊಂದು ಪತ್ತೆಯಾಗಿತ್ತು. ಸಣ್ಣ ಶಸ್ತ್ರಕ್ರಿಯೆಯಿಂದ ಅದನ್ನು ತೆಗೆಸಿ ಔಷಧೋಪಚಾರವನ್ನು ಮಾಡಿದರೆ ಸಂಪೂರ್ಣವಾಗಿ ಗುಣಪಡಿಸಬಹುದೆಂದು ವೈದ್ಯರು ಸಲಹೆಯಿತ್ತರು. ಜಾಬ್ಸ್ ಅದನ್ನು ನಿರ್ಲಕ್ಷಿಸಿದ್ದಲ್ಲದೆ, ಕುಟುಂಬದ ಸದಸ್ಯರು ಹಾಗೂ ಆಪ್ತ ಮಿತ್ರರು ಎಷ್ಟೇ ಗೋಗರೆದರೂ ಲೆಕ್ಕಿಸಲಿಲ್ಲ. ತಾನೇ ಅಂತರ್ಜಾಲದಲ್ಲಿ ಚಿಕಿತ್ಸೆಯನ್ನು ಹುಡುಕಿ ಅಕುಪಂಕ್ಚರ್, ಮೂಲಿಕೆಗಳು, ಹಣ್ಣಿನ ಪಥ್ಯ, ಕರುಳ ಶುದ್ಧಿ, ಅಧ್ಯಾತ್ಮ, ಅತೀಂದ್ರಿಯ ಚಿಕಿತ್ಸೆಗಳನ್ನೆಲ್ಲ ಪ್ರಯತ್ನಿಸಿ ಒಂಭತ್ತು ತಿಂಗಳು ಕಳೆದಾಗ ಕ್ಯಾನ್ಸರ್ ಉಲ್ಬಣಿಸಿ ಯಕತ್ತಿಗೂ ಹರಡಿ ಬಿಟ್ಟಿತು, ಆಧುನಿಕ ವೈದ್ಯರಲ್ಲಿಗೆ ಮರಳಿದ ಜಾಬ್ಸ್ ಗೆ ದೊಡ್ಡ ಶಸ್ತ್ರಕ್ರಿಯೆ ಮಾಡಬೇಕಾಯಿತು, ನಂತರ ಯಕೃತ್ತಿನ ಕಸಿಯೂ ಬೇಕಾಯಿತು. ಕೊನೆಗೆ ಅತ್ಯಾಧುನಿಕ ಚಿಕಿತ್ಸೆಗಳೆಲ್ಲವನ್ನೂ ಪ್ರಯತ್ನಿಸಲಾಯಿತಾದರೂ, ಆತ ಏಳು ವರ್ಷಗಳಿಗಿಂತ ಹೆಚ್ಚು ಉಳಿಯಲಿಲ್ಲ. ಜಾಬ್ಸ್ ಗೆ ತನ್ನ ತಪ್ಪಿನ ಅರಿವಾದಾಗ ಬಹಳ ತಡವಾಗಿತ್ತು. ತನ್ನ ಆತ್ಮಕಥೆಯಲ್ಲಿ ಆ ಬಗ್ಗೆ ಪರಿತಪಿಸಿರುವ ಜಾಬ್ಸ್, ಶಸ್ತ್ರಕ್ರಿಯೆಯಲ್ಲಿ ತನ್ನ ಹೊಟ್ಟೆಯನ್ನು ತೆರೆಯುವ ಬಗ್ಗೆ ಭಯಗೊಂಡು, ಅದನ್ನು ತಪ್ಪಿಸಲಿಕ್ಕಾಗಿ ಬದಲಿ ಚಿಕಿತ್ಸೆಗಳನ್ನು ಪ್ರಯತ್ನಿಸಿದೆನೆಂದು ಹೇಳಿಕೊಂಡಿದ್ದಾನೆ. ತನ್ನ ಕಂಪೆನಿಯಲ್ಲಿ ಎಲ್ಲವನ್ನೂ ತನಗನಿಸಿದಂತೆ ನಿಯಂತ್ರಿಸುತ್ತಿದ್ದ ಜಾಬ್ಸ್ ಗೆ ಕಾಯಿಲೆಯು ತನ್ನ ಹಿಡಿತದಲ್ಲಿಲ್ಲವೆನ್ನುವುದನ್ನು ಬಹುಷಃ ಒಪ್ಪಲಾಗಲಿಲ್ಲ; ತನ್ನ ಮನ ಬಂದಂತೆ ಅದನ್ನು ನಿಯಂತ್ರಿಸಬಹುದೆಂದುಕೊಂಡು ಅದರಲ್ಲಿ ವಿಫಲನಾದ. ಆಧುನಿಕ ಚಿಕಿತ್ಸಾ ವಿಧಾನಗಳನ್ನು ಸಂಶಯಿಸುವ ಮೇಧಾವಿಗಳಲ್ಲಿ ಜಾಬ್ಸ್ ಒಬ್ಬಂಟಿಯಲ್ಲ, ಅಂಥವರು ಬಹಳಷ್ಟಿದ್ದಾರೆ.

ಆಧುನಿಕ ಚಿಕಿತ್ಸೆಯ ಬಗ್ಗೆ ಸಂಶಯಗಳನ್ನೂ, ಹೆದರಿಕೆಗಳನ್ನೂ ಹರಡುವಲ್ಲಿ ಮತ್ತು ಪ್ರಭಾವಿತ ರೋಗಿಗಳನ್ನು ಆಕರ್ಷಿಸುವಲ್ಲಿ ಬೊಗಳೆ ವೈದ್ಯರ ಚಾಣಾಕ್ಷತೆ ಪಾರವಿಲ್ಲದ್ದು. ಆಧುನಿಕ ವೈದ್ಯ ವಿಜ್ಞಾನದ ಸಂಶೋಧನೆಗಳಿಂದ ಹೊರ ಹೊಮ್ಮುವ ಮಾಹಿತಿಯನ್ನೂ, ತಂತ್ರಜ್ಞಾನಗಳನ್ನೂ ತಮಗೆ ಬೇಕಾದಂತೆ ತಿರುಚಿ ಬಳಸಿಕೊಳ್ಳುವ ನೈಪುಣ್ಯ ಅವರಲ್ಲಿರುತ್ತದೆ. ವೈರಸ್, ಕೊಲೆಸ್ಟರಾಲ್, ಎಂಆರ್ ಐ, ಅಲ್ಟ್ರಾಸೌಂಡ್ ಮುಂತಾದ ಪದಗಳು ಅವರ ನಾಲಗೆ ತುದಿಯಲ್ಲಿ ಹೊರಳುತ್ತಿರುತ್ತವೆ. ಯೋಗ ಕಲಿಸುವ ಕಾವಿಧಾರಿ ಅತ್ತ ಬಾಗಿಸಿ ಲಿವರ್. ಇತ್ತ ಬಾಗಿಸಿ ಸ್ಪ್ಲೀನ್, ಹಿಂದಕ್ಕೆ ಕಿಡ್ನಿ, ಮುಂದಕ್ಕೆ ಪಾಂಕ್ರಿಯಾಸ್, ಕತ್ತೆತ್ತಿ ಥೈರಾಯ್ಡ್, ಉಸಿರೆಳೆದು ಹಾರ್ಟು-ಲಂಗು ಅಂತೆಲ್ಲ ತೋರಿಸಿದೊಡನೆ ಎಂಥವರೂ ನಂಬುತ್ತಾರೆ; ಆರು ಆಸನಗಳಿಗೆ ಐನೂರು, ಹತ್ತು ಆಸನಗಳಿಗೆ ಏಳ್ನೂರೈವತ್ತು ಕೊಡುವುದಕ್ಕೂ ಸಿದ್ಧರಾಗುತ್ತಾರೆ! ಆದರೆ ಯೋಗಾಭ್ಯಾಸದಿಂದ ಯಾವುದೇ ರೋಗವನ್ನು ಗುಣ ಪಡಿಸಬಹುದೆಂಬುದಕ್ಕೆ ಸಾವಿರಾರು ಅಧ್ಯಯನಗಳಲ್ಲಿ ಒಂದಾದರೂ ಸಾಕ್ಷ್ಯ ದೊರೆತಿಲ್ಲವೆನ್ನುವುದನ್ನು ನೋಡುವುದಿಲ್ಲ. ಎಲ್ಲ ರೋಗಗಳಿಗೂ, ಬಂಜೆತನಕ್ಕೂ ಹೋಮಿಯೋಪತಿಯೇ ಶಾಶ್ವತ ಪರಿಹಾರವೆಂದು ದೊಡ್ಡ ಫಲಕಗಳಲ್ಲೂ, ರಿಕ್ಷಾ-ಬಸ್ಸುಗಳ ಹಿಂದು-ಮುಂದಲ್ಲೂ ಜಾಹೀರಾತುಗಳನ್ನಂಟಿಸಿದಾಗ ಸಾವಿರಗಟ್ಟಲೆ ಸುರಿಯುವವರು ದೊರೆಯುತ್ತಾರೆ. ಆದರೆ ಹೋಮಿಯೋಪತಿಯ ಗುಳಿಗೆಗಳಲ್ಲಿ ಔಷಧಾಂಶವಿದೆಯೆಂದು ಅಥವಾ ಅವುಗಳಿಂದ ಯಾವುದೇ ಕಾಯಿಲೆಗಳನ್ನು ಗುಣ ಪಡಿಸಬಹುದೆಂದು ಶ್ರುತಪಡಿಸಿದವರಿಗೆ ಅಮೆರಿಕಾದ ಜೇಮ್ಸ್ ರಾಂಡಿ ಮತ್ತು ಇಂಗ್ಲೆಂಡಿನ ಎನ್‌ಸ್ಟ್ ಹಾಗೂ ಸೈಮನ್ ಸಿಂಗ್ ಘೋಷಿಸಿರುವ ಹತ್ತು ಲಕ್ಷ ಡಾಲರ್ ಹಾಗೂ ಹತ್ತು ಸಾವಿರ ಪೌಂಡ್ ಬಹುಮಾನಗಳನ್ನು ಪಡೆಯಲು ಈ ಐದು ವರ್ಷಗಳಲ್ಲಿ ಯಾರೂ ಮುಂಬಂದಿಲ್ಲವೆನ್ನುವುದನ್ನು ಗಮನಿಸುವುದಿಲ್ಲ. ಗೋಮೂತ್ರದಿಂದ ಕ್ಯಾನ್ಸರ್ ಚಿಕಿತ್ಸೆ ಸಾಧ್ಯ ಎನ್ನುವ ಬೊಗಳೆ ಮುಖಪುಟಕ್ಕೇ ಹತ್ತುವಲ್ಲಿ ಆಧುನಿಕ ಚಿಕಿತ್ಸೆಯಿಂದ ಸಾವಿರಾರು ಕ್ಯಾನ್ಸರ್ ರೋಗಿಗಳು ಗುಣ ಹೊಂದುತ್ತಾರೆನ್ನುವ ಸತ್ಯವು ಸುದ್ದಿಯಾಗುವುದೇ ಇಲ್ಲ.

ಆಧುನಿಕ ಚಿಕಿತ್ಸೆಯ ಆಳ-ಅಗಲಗಳನ್ನು ಅಳೆಯುವ ಸಂಶಯದ ದೃಷ್ಟಿ ಬೊಗಳೆ ಚಿಕಿತ್ಸೆಗಳತ್ತ ತಿರುಗಬೇಕಾಗಿದೆ. ಆಧುನಿಕ ಚಿಕಿತ್ಸೆಯು ಪ್ರಶ್ನಾತೀತವಲ್ಲ; ಆದರೆ ಸಂಶಯಗಳನ್ನು ಪರಿಹರಿಸಿಕೊಳ್ಳಲು ಇನ್ನಷ್ಟು ಪರಿಣತರಾದ ಆಧುನಿಕ ವೈದ್ಯರನ್ನು ಕಾಣಬೇಕಲ್ಲದೆ, ಬದಲಿ ಬೊಗಳೆಗಳತ್ತ ಮುಖ ಮಾಡುವುದಲ್ಲ. ಆಧುನಿಕ ಚಿಕಿತ್ಸೆಯು ಸಾಕಷ್ಟು ಸಂಶೋಧನೆಗಳನ್ನೂ, ಅತ್ಯಾಧುನಿಕ ತಂತ್ರಜ್ಞಾನವನ್ನೂ ಒಳಗೊಳ್ಳುವುದರಿಂದ ವೆಚ್ಚದಾಯಕವಾಗಿರುವುದು ಸಹಜವಾದರೂ ಹೆಚ್ಚಿನ ಸಂದರ್ಭಗಳಲ್ಲಿ ಅದಕ್ಕೆ ಪರ್ಯಾಪ್ತವಾದ ವೈದ್ಯಕೀಯ ನೆರವು ಲಭ್ಯವಾಗುತ್ತದೆನ್ನುವುದನ್ನು ಮರೆಯಬಾರದು. ಆಧುನಿಕ ಚಿಕಿತ್ಸೆಯು ದುಬಾರಿಯೆನಿಸಿದರೆ, ಉಚಿತವಾಗಿ ಯಾ ರಿಯಾಯಿತಿಯಲ್ಲಿ ಚಿಕಿತ್ಸೆ ದೊರೆಯುವೆಡೆಗೆ ಹೋಗಬೇಕೇ ಹೊರತು ಔಷಧಾಂಶವೇ ಇಲ್ಲದ ಬದಲಿಗಳ ಬಳಿಗಲ್ಲ. ಆಧುನಿಕ ಔಷಧಗಳಲ್ಲಿ ಸತ್ಪರಿಣಾಮಗಳೇ ಹೆಚ್ಚಾಗಿದ್ದು, ದುಷ್ಪರಿಣಾಮಗಳು ಅತ್ಯಲ್ಪವೂ, ತಾತ್ಕಾಲಿಕವೂ ಆಗಿರುವುದರಿಂದ ಪರಿಣಾಮವನ್ನೇ ಬೀರದ, ದುಷ್ಪರಿಣಾಮಗಳ ಬಗ್ಗೆ ಮಾಹಿತಿಯೇ ಇಲ್ಲದ, ಬದಲಿಗಳನ್ನು ಅವಕ್ಕೆ ಹೋಲಿಸಲಾಗದು. ಯಾವುದೇ ಕಾಯಿಲೆಯನ್ನು ನಿಶ್ಶರ್ತವಾಗಿ, ಸಂಪೂರ್ಣವಾಗಿ ಗುಣಪಡಿಸುತ್ತೇನೆಂದು ಹೇಳುವವರಿಗೆ ಚಿಕ್ಕಾಸು ಕೊಡುವ ಮೊದಲು ಆ ಖಾತರಿಯನ್ನು ಬರೆಸಿಕೊಳ್ಳಲು ಮರೆಯಬೇಡಿ.

ಹದಿನಾರನೇ ಬರಹ : ರೋಗಗಳಿಗೆ ಗಂಟು ಬಿದ್ದ ಯೋಗ ಸೂತ್ರಗಳು [ಜನವರಿ 23, 2013, ಬುಧವಾರ] [ನೋಡಿ | ನೋಡಿ]

ಯೋಗಾಭ್ಯಾಸದ ಆಧುನಿಕ ಅವತಾರದಲ್ಲಿ ವಿವೇಕಾನಂದ ಹಾಗೂ ಕೃಷ್ಣರಾಜ ಒಡೆಯರ ಕೊಡುಗೆಗಳೂ ಇವೆ

ಯೋಗಾಭ್ಯಾಸದ ಮಹಿಮೆಯನ್ನಿಂದು ಕೇಳದವರಾರು? ಇಡೀ ಜಗತ್ತಿಗೆ ಹಿಂದೂ ಧರ್ಮದ ಅತ್ಯುತ್ತಮ ಕೊಡುಗೆಯಂತೆ ಅದು. ಗಡ್ಡ ಬಿಟ್ಟು ಕಾವಿ ತೊಟ್ಟು ಹೊಟ್ಟೆ ಹೊರಳಿಸುವ ಬಾಬಾಗಳಿಂದ ಹಿಡಿದು ತುಂಡುಡುಗೆಯಲ್ಲಿ ಮಾಟವಾದ ಮೈಯನ್ನು ನಿಧಾನಕ್ಕೆ ಬಳುಕಿಸುವ ನಟಿಗಳವರೆಗೆ ಎಲ್ಲರೂ ಯೋಗಿಗಳೇ ಅಂತೆ. ಸಲಿಂಗರತಿ, ಕ್ಯಾನ್ಸರ್, ಏಡ್ಸ್, ಮಧುಮೇಹಗಳಿಂದ ಹಿಡಿದು ಅತ್ಯಾಚಾರ, ಮನೋರೋಗ, ಭ್ರಷ್ಟಾಚಾರದವರೆಗೆ ಎಲ್ಲಾ ಸಮಸ್ಯೆಗಳನ್ನೂ ಪರಿಹರಿಸಬಲ್ಲ ಮಾಂತ್ರಿಕ ವಿದ್ಯೆಯೂ ಅದಂತೆ. ಯೋಗದಿಂದ ಅಧ್ಯಾತ್ಮ, ಆರೋಗ್ಯ, ಆತ್ಮವಿಶ್ವಾಸಗಳೆಲ್ಲವೂ ಒಟ್ಟಿಗೇ ದೊರೆಯುವ ಭರವಸೆಗೆ ಮರುಳಾದವರು ಕೋಟಿಗಟ್ಟಲೆ, ಆ ದಂಧೆಯ ಮೌಲ್ಯ ಸಹಸ್ರಾರು ಕೋಟಿಗಟ್ಟಲೆ.

ಯೋಗಾಭ್ಯಾಸಕ್ಕೆ ಈ ಸುಯೋಗ ಒದಗಿದ್ದೆಂತು? ಪ್ರಾಚೀನ ಕಾಲದ ಯೋಗ ಸಾಧನೆಗೂ ಇಂದು ಮಾರಲಾಗುತ್ತಿರುವ ಯೋಗಾಸನಗಳಿಗೂ ಸಾಮ್ಯತೆಗಳಿವೆಯೇ?

ಪ್ರಾಚೀನ ಯೋಗಾಭ್ಯಾಸವನ್ನು ಪತಂಜಲಿ ಆರಂಭಿಸಿದ್ದಲ್ಲ. ಸುಮಾರು 4000 ವರ್ಷಗಳ ಹಿಂದೆ ಪೂರ್ವೋತ್ತರ ಭಾರತದ ಮಗಧ, ಅಂಗ ಮುಂತಾದ ಸಾಮ್ರಾಜ್ಯಗಳಲ್ಲಿ ಅಲೆಮಾರಿ ವಿರಾಗಿಗಳಾಗಿದ್ದ ವ್ರಾತ್ಯರ ನಡುವೆ ಯೋಗಾಭ್ಯಾಸವು ಹುಟ್ಟಿ ಬೆಳೆಯಿತು ಎನ್ನಲಾಗಿದೆ. ವ್ರಾತ್ಯರು ವೈದಿಕ ವ್ಯವಸ್ಥೆಯನ್ನೂ, ಆಚರಣೆಗಳನ್ನೂ ಧಿಕ್ಕರಿಸಿ, ಲೌಕಿಕ ಸುಖದಿಂದ ದೂರ ನಡೆದು, ಮನುಷ್ಯನಿಗೂ, ಪ್ರಕತಿಗೂ ಇರುವ ಸಂಬಂಧಗಳನ್ನು ವೈಚಾರಿಕ ನೆಲೆಯಲ್ಲಿ ವಿಮರ್ಶಿಸುವವರಾಗಿದ್ದರು. ಈ ವೈಚಾರಿಕತೆಯೇ ಬೆಳೆದು ಭಾರತೀಯ ಷಡ್ದರ್ಷನಗಳಲ್ಲೊಂದಾದ ನಿರೀಶ್ವರವಾದಿ ಸಾಂಖ್ಯ ದರ್ಶನಕ್ಕೆ ಹೇತುವಾಯಿತು ಎನ್ನಲಾಗಿದೆ. ಸುಮಾರು 2700 ವರ್ಷಗಳ ಹಿಂದಿನವನೆನ್ನಲಾದ ಅಸುರ ಮುನಿ ಕಪಿಲನನ್ನು ಸಾಂಖ್ಯದರ್ಶನದ ಪ್ರವರ್ತಕನೆಂದು ಪರಿಗಣಿಸಲಾಗಿದ್ದು, ಆತನೇ ಯೋಗಕ್ಕೂ ತಾರ್ಕಿಕ ನೆಲೆಗಟ್ಟನ್ನು ಒದಗಿಸಿದನೆಂದು ಹೇಳಲಾಗಿದೆ. ಮಹಾಭಾರತದಲ್ಲಿ ಕಪಿಲನನ್ನು ಸಾಂಖ್ಯಯೋಗ ಪ್ರವರ್ತಕ ಪರಮರ್ಷಿ ಎಂದೇ ಬಣ್ಣಿಸಲಾಗಿದೆ.

ಹೀಗೆ ವೇದ ವಿರೋಧಿ, ನಿರೀಶ್ವರವಾದಿ ವ್ರಾತ್ಯರಿಂದ ತೊಡಗಿದ ಯೋಗಾಭ್ಯಾಸದಲ್ಲಿ ಪ್ರಾಣಾಯಾಮ ಹಾಗೂ ಧ್ಯಾನಗಳೇ ಪ್ರಮುಖವಾಗಿದ್ದವು. ಅವರ ಬ್ರಹ್ಮಚರ್ಯವೂ, ಲೈಂಗಿಕತೆಯ ಪ್ರಯೋಗಗಳೂ ಯೋಗಾಭ್ಯಾಸದೊಂದಿಗೆ ಸಮ್ಮಿಳಿತಗೊಂಡವು, ಕಾಲಾಂತರದಲ್ಲಿ ತಾಂತ್ರಿಕ-ಮಾಂತ್ರಿಕ ಆಚರಣೆಗಳೂ ಸೇರಿಕೊಂಡು ‘ಯೋಗಿ’ಗಳಾಗಿದ್ದ ವ್ರಾತ್ಯರ ನಿಗೂಢತೆಯನ್ನು ಇನ್ನಷ್ಟು ಹೆಚ್ಚಿಸಿದವು. ವೈದಿಕ ವ್ಯವಸ್ಥೆಗಿದಿರಾಗಿ ಬೆಳೆದ ಇನ್ನಿತರ ಶ್ರಮಣ ಪರಂಪರೆಗಳಲ್ಲೂ, ಸುಮಾರು 2500-3000 ವರ್ಷಗಳ ಹಿಂದೆ ಕವಲೊಡೆದ ಬೌದ್ಧ ಹಾಗೂ ಜೈನ ಪರಂಪರೆಗಳಲ್ಲೂ ಯೋಗಾಭ್ಯಾಸವು ಹಾಸು ಹೊಕ್ಕಾಗಿ ಗಟ್ಟಿಗೊಂಡಿತು. ಆದ್ದರಿಂದ, ಪ್ರಾಚೀನ ಕಾಲದಲ್ಲಿ ಯೋಗಾಭ್ಯಾಸವು ವೈದಿಕ-ಬ್ರಾಹ್ಮಣ ವ್ಯವಸ್ಥೆಯ ಭಾಗವಾಗಿರದೆ ಅದರಿಂದ ಸೆಟೆದಿದ್ದ ಬೌದ್ಧ-ಜೈನ-ವ್ರಾತ್ಯ-ಶ್ರಮಣ ಪರಂಪರೆಗೆ ಸೇರಿದ್ದಾಗಿತ್ತು.

ನಿರೀಶ್ವರವಾದಿ ಸಾಂಖ್ಯಯೋಗ ದರ್ಶನದೊಳಕ್ಕೆ ಸುಮಾರು 2000 ವರ್ಷಗಳ ಹಿಂದೆ ಮತ್ತೆ ಈಶ್ವರನ ಪ್ರವೇಶವಾಯಿತು. ವೈದಿಕ-ಬ್ರಾಹ್ಮಣ ಪತಂಜಲಿ ರಚಿಸಿದನೆನ್ನಲಾದ 195 ಸೂಕ್ತಿಗಳ ಯೋಗಸೂತ್ರಗಳು ಪ್ರಾಣಾಯಾಮ-ಧ್ಯಾನಗಳ ಯೋಗಾಭ್ಯಾಸಕ್ಕೆ ಈಶ್ವರ ಕೇಂದ್ರಿತವಾದ ನಿಯಮಾವಳಿಯನ್ನೊದಗಿಸಿದವು. ಪತಂಜಲಿಯ ಅಷ್ಟಾಂಗ ಯೋಗದಲ್ಲಿ ಯಮ (ಸ್ವಯಂನಿಗ್ರಹ), ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ (ಇಂದ್ರಿಯ ನಿಯಂತ್ರಣ), ಧ್ಯಾನ, ಧಾರಣ ಹಾಗೂ ಸಮಾಧಿಗಳೆಂಬ ಎಂಟು ಹಂತಗಳನ್ನು ಹೇಳಲಾಗಿದ್ದು, ಅಹಿಂಸೆ, ಸತ್ಯ, ಕದಿಯದಿರುವುದು, ಬ್ರಹ್ಮಚರ್ಯ, ಪರವಸ್ತುಗಳನ್ನು ಬಯಸದಿರುವುದು, ಶುಚಿತ್ವ, ತಪಸ್ಸು, ಅಧ್ಯಯನ ಹಾಗೂ ಈಶ್ವರನ ಧ್ಯಾನಗಳೆಲ್ಲವನ್ನೂ ಯೋಗಿಯು ಪಾಲಿಸಬೇಕೆಂದು ವಿಧಿಸಲಾಗಿದೆ. ಈ ಯಮ-ನಿಯಮಗಳೆಲ್ಲವೂ ಯೋಗಾಭ್ಯಾಸದ ಅವಿಭಾಜ್ಯ ಆಚರಣೆಗಳಾಗಿದ್ದು, ಅವಿಲ್ಲದೆ ಕೇವಲ ಉಸಿರು ಹೊರಳಿಸುವುದನ್ನು ಯಾ ಮೈ ಬಾಗಿಸುವುದನ್ನು ಯೋಗಾಭ್ಯಾಸವೆನ್ನಲಾಗದು.

ಪತಂಜಲಿಯ ಯೋಗಸೂತ್ರಗಳಲ್ಲಿ ಆಸನಗಳ ಬಗ್ಗೆ ಹೆಚ್ಚೇನೂ ಹೇಳಲಾಗಿಲ್ಲ. ಆದ್ದರಿಂದ ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿದ್ದ ಪದ್ಮಾಸನ ಹಾಗೂ ಸಿದ್ಧಾಸನಗಳನ್ನುಳಿದು ಇತರ ಹಲವಾರು ಆಸನಗಳು ನಂತರದಲ್ಲಷ್ಟೇ ಯೋಗಾಭ್ಯಾಸದೊಂದಿಗೆ ತಳುಕು ಹಾಕಿದವೆನ್ನಬಹುದು. ಸುಮಾರು 800 ವರ್ಷಗಳ ಹಿಂದೆ (ಈ ಶಕೆಯ 12ನೇ ಶತಮಾನ) ಮತ್ಸ್ಯೇಂದ್ರನಾಥ-ಗೋರಕ್ಷನಾಥರಿಂದ ಸ್ಥಾಪಿಸಲ್ಪಟ್ಟ ಶೈವ ನಾಥ ಸಂಪ್ರದಾಯದ ಸಾಧುಗಳ ಯೋಗಾಭ್ಯಾಸದೊಳಕ್ಕೆ ಇನ್ನಷ್ಟು ಆಸನಗಳ ಪ್ರವೇಶವಾಯಿತು. ಗೋರಕ್ಷನಾಥರ ಗೋರಕ್ಷ ಶತಕ, ಸ್ವಾತ್ಮರಾಮರ ಹಠಯೋಗ ಪ್ರದೀಪಿಕೆ (15 ನೇ ಶ.), ನಂತರದ ಘೇರಂಡ ಸಂಹಿತೆ (17ನೇ ಶ.) ಹಾಗೂ ಶಿವ ಸಂಹಿತೆ (17-18ನೇ ಶ.) ಗಳಲ್ಲಿ ಪ್ರಾಣಾಯಾಮ ಹಾಗೂ ಮುದ್ರೆಗಳ ಜೊತೆಗೆ 15-84 ಬಗೆಯ ಯೋಗಾಸನಗಳ ಬಗ್ಗೆಯೂ, ಕೆಲಬಗೆಯ ಮೈಥುನಗಳು ಮತ್ತು ಲೈಂಗಿಕ ಬಂಧಗಳ ಬಗ್ಗೆಯೂ ಹೇಳಲಾಗಿದೆ. ಯೋಗಾಸನಕ್ಕೆ ಮೊದಲು ದೇಹದ ವಿವಿಧ ರಂಧ್ರಗಳನ್ನು ಶುಚಿ ಗೊಳಿಸುವ ಧೌತಿ, ಬಸ್ತಿ, ನೇತಿ, ತ್ರಾಟಕ, ನೌಲಿ ಹಾಗೂ ಕಪಾಲಭಾತಿಯೆಂಬ ಷಟ್ಕರ್ಮಗಳನ್ನು ಮಾಡಬೇಕೆಂದೂ ಹಠಯೋಗದಲ್ಲಿ ವಿಧಿಸಲಾಗಿದೆ. ದೇಹದಲ್ಲಿ ಸಾವಿರಗಟ್ಟಲೆ ನಾಡಿಗಳೂ, ಆರೇಳು ಚಕ್ರಗಳೂ ಇದ್ದು, ಆಸನಗಳು ಹಾಗೂ ಮುದ್ರೆಗಳ ಮೂಲಕ ಅವುಗಳನ್ನು ಸುಸ್ಥಿತಿಯಲ್ಲಿಟ್ಟು ಆರೋಗ್ಯವನ್ನು ಕಾಯ್ದುಕೊಳ್ಳಬಹುದೆಂದು ಹಠಯೋಗದ ಕತಿಗಳಲ್ಲಿ ಹೇಳಲಾಗಿದ್ದರೂ, ಆ ಕಾಲದ ಜನಸಾಮಾನ್ಯರ ಆರೋಗ್ಯ ರಕ್ಷಣೆಯಲ್ಲಿ ಯೋಗಾಭ್ಯಾಸದ ಪಾತ್ರವಿತ್ತೆನ್ನುವುದಕ್ಕೆ ಯಾವುದೇ ಉಲ್ಲೇಖಗಳು ದೊರೆಯುವುದಿಲ್ಲ. ಆಯುರ್ವೇದದ ಗ್ರಂಥಗಳಲ್ಲೂ ಯೋಗಾಭ್ಯಾಸದಿಂದ ರೋಗನಿವಾರಣೆ ಸಾಧ್ಯವೆನ್ನುವ ಉಲ್ಲೇಖಗಳಿಲ್ಲ.

ಹೀಗೆ, ಹದಿನೆಂಟನೇ ಶತಮಾನದ ವೇಳೆಗೆ ಯೋಗಾಭ್ಯಾಸವು ನಾಥ ಸಿದ್ಧ ಸಾಧುಗಳಂತಹ ಅಲೆಮಾರಿ ವಿರಾಗಿಗಳಲ್ಲಷ್ಟೇ ಪ್ರಚಲಿತವಿದ್ದು, ಅವರ ವಿಚಿತ್ರ ಶೈಲಿಗಳಿಂದಾಗಿ ಸಾಕಷ್ಟು ಅಪಖ್ಯಾತಿಗೆ ಒಳಗಾಗಿತ್ತು. ಬ್ರಿಟಿಷರಾಳ್ವಿಕೆಯ 19-20ನೇ ಶತಮಾನದ ಸಂಧಿಕಾಲದಲ್ಲಿ ಒಂದೆಡೆ ನಮ್ಮ ಜನಜೀವನ ಹಾಗೂ ಪ್ರಾಚೀನ ಪರಂಪರೆಗಳಲ್ಲಿ ಆಸಕ್ತರಾಗಿದ್ದ ಪಾಶ್ಚಿಮಾತ್ಯ ವಿದ್ವಾಂಸರು ಹಾಗೂ ಇನ್ನೊಂದೆಡೆ ಪಶ್ಚಿಮದ ಜೀವನಕ್ರಮದ ಬಗ್ಗೆ, ಅದರಲ್ಲೂ ವಿಶೇಷವಾಗಿ ಅಲ್ಲಿನ ಶಿಕ್ಷಣ, ಶಿಸ್ತು ಹಾಗೂ ಆರೋಗ್ಯಕ್ರಮಗಳತ್ತ ಆಕರ್ಷಿತರಾಗಿದ್ದ ನಮ್ಮವರ ನಡುವಿನ ವಿಚಾರಮಂಥನಗಳಲ್ಲಿ ಯೋಗಾಭ್ಯಾಸವನ್ನು ಶುದ್ಧೀಕರಿಸಿ ಆಧುನಿಕಗೊಳಿಸುವ ಪ್ರಯತ್ನಗಳು ಆರಂಭಗೊಂಡವು. ಯೋಗಾಭ್ಯಾಸದ ತಿರುಳೆಲ್ಲ ಕಿತ್ತೆಸೆಯಲ್ಪಟ್ಟು ಹೊಸ ವೇಷ ಧರಿಸುವುದಕ್ಕೆ ಇವೇ ಕಾರಣವಾದವು.

ಹಠಯೋಗದ ಆಸನಗಳಿಂದ ಪ್ರಾಣಾಯಾಮ-ಧ್ಯಾನಗಳನ್ನು ಪ್ರತ್ಯೇಕಿಸಿ ಪುನರುತ್ಥಾನಗೊಳಿಸುವಲ್ಲಿ ವಿವೇಕಾನಂದರ ಪಾತ್ರವು ಗಮನಾರ್ಹವಾದುದು. ವಿವೇಕಾನಂದರು 1896ರಲ್ಲಿ ಬರೆದ ರಾಜ ಯೋಗ ಹಾಗೂ ಥಿಯಾಸಾಫಿಕಲ್ ಸೊಸೈಟಿಯ ಸ್ಥಾಪಕಿ ಹೆಲೆನಾ ಬ್ಲಾವಟ್ಸ್ಕಿ 1880-81ರಲ್ಲಿ ಬರೆದ ಯೋಗ ತತ್ವ ಎಂಬ ಲೇಖನಗಳಲ್ಲಿ ಪ್ರಾಣಾಯಾಮ-ಧ್ಯಾನ ಯೋಗಕ್ಕಷ್ಟೇ ಮನ್ನಣೆ ನೀಡಿ, ಹಠಯೋಗಿಗಳನ್ನು ನಿಜವಾದ ಯೋಗಿಗಳೆಂದು ಪರಿಗಣಿಸುವಂತೆಯೇ ಇಲ್ಲವೆಂದು ಕಡೆಗಣಿಸಲಾಯಿತು. ಶ್ರೀಶಚಂದ್ರ ಬಸು ಅವರು 1884ರಲ್ಲಿ ಪ್ರಕಟಿಸಿದ ಶಿವ ಸಂಹಿತೆಯ ಅನುವಾದದಲ್ಲೂ ಹಠಯೋಗಿಗಳನ್ನು ಕೀಳಾಗಿ ಚಿತ್ರಿಸಿ, ಹಲವು ಹಠಯೋಗಾಸನಗಳನ್ನು ಖಂಡಿಸಲಾಯಿತು.

ಇನ್ನೊಂದೆಡೆ, ನವೀನ್ ಚಂದ್ರ ಪಾಲ್ 1850ರಲ್ಲಿ ಹಾಗೂ ಮೇಜರ್ ಬಿ.ಡಿ. ಬಸು 1888ರಲ್ಲಿ ಬರೆದ ಲೇಖನಗಳಲ್ಲಿ ಹಠಯೋಗದ ನಾಡಿ-ಚಕ್ರಗಳ ಪರಿಕಲ್ಪನೆಯು ಅತ್ಯಂತ ವೈಜ್ಞಾನಿಕವೆಂದು ಸಾಧಿಸಿ ಯೋಗಾಭ್ಯಾಸಕ್ಕೂ ಆರೋಗ್ಯ ರಕ್ಷಣೆಗೂ ತಳುಕು ಹಾಕುವ ಪ್ರಯತ್ನಗಳಾದವು. ಗುಜರಾತಿನ ಮಲ್ಸಾರಿನ ಆಶ್ರಮದಲ್ಲಿದ್ದ ಪರಮಹಂಸ ಮಾಧವದಾಸರ ಶಿಷ್ಯರಿಬ್ಬರು ಇದನ್ನು ಇನ್ನಷ್ಟು ಬೆಳೆಸಿದರು. ಶ್ರೀ ಯೋಗೇಂದ್ರರೆನಿಸಿಕೊಂಡ ಮಣಿಭಾಯಿ ಹರಿಭಾಯಿ ದೇಸಾಯಿಯವರು 1918ರಲ್ಲಿ ಮುಂಬೈಯಲ್ಲಿ ಸ್ಥಾಪಿಸಿದ ಯೋಗ ಸಂಸ್ಥೆಯಲ್ಲೂ, ಸ್ವಾಮಿ ಕುವಲಯಾನಂದರಾದ ಜಗನ್ನಾಥ ಗಣೇಶ ಗುಣೆಯವರು 1921ರಲ್ಲಿ ಲೋನಾವಲಾದಲ್ಲಿ ಸ್ಥಾಪಿಸಿದ ಕೈವಲ್ಯಧಾಮದಲ್ಲೂ ಯೋಗಚಿಕಿತ್ಸೆಯೆಂಬುದು ಆರಂಭಗೊಂಡಿತು. ಕಳೆದ ನೂರು ವರ್ಷಗಳಲ್ಲಿ ಯೋಗದಿಂದ ಚಿಕಿತ್ಸೆ ಸಾಧ್ಯವೆಂದು ಸಾಧಿಸುವ ಸಾವಿರಾರು ಅಧ್ಯಯನಗಳಾಗಿದ್ದರೂ ದೃಢವಾದ ಆಧಾರವೊಂದು ಇದುವರೆಗೂ ದೊರೆತಿಲ್ಲ.

ಯೋಗಾಸನಗಳ ವ್ಯಾಪ್ತಿಯನ್ನು ವಿಸ್ತರಿಸುವ ಪ್ರಯತ್ನಗಳು ಇತ್ತ ಮೈಸೂರಿನಲ್ಲಾದವು. ಮುಮ್ಮಡಿ ಕಷ್ಣರಾಜ ಒಡೆಯರು 19ನೇ ಶತಮಾನದ ಮಧ್ಯದಲ್ಲಿ ಪ್ರಕಟಿಸಿದ ಶ್ರೀತತ್ವನಿಧಿಯಲ್ಲಿ ಆ ಕಾಲದ ಗರಡಿಮನೆಗಳಲ್ಲಿ ಪ್ರಚಲಿತವಿದ್ದ ವ್ಯಾಯಾಮಗಳನ್ನೆಲ್ಲ ಸೇರಿಸಿ 122 ಬಗೆಯ ಯೋಗಾಸನಗಳೆಂದು ಸಚಿತ್ರವಾಗಿ ವಿವರಿಸಲಾಯಿತು. ಮುಂದೆ ನಾಲ್ವಡಿ ಕಷ್ಣರಾಜ ಒಡೆಯರ ಆಶಯದಂತೆ ಅರಮನೆಯಲ್ಲಿ ಯೋಗಾಭ್ಯಾಸವನ್ನು ಕಲಿಸತೊಡಗಿದ ಟಿ. ಕಷ್ಣಮಾಚಾರ್ಯರು ದೇಶ-ವಿದೇಶಗಳ ಇನ್ನಷ್ಟು ವ್ಯಾಯಾಮಗಳನ್ನು ಆ ಪಟ್ಟಿಗೆ ಸೇರಿಸಿದರು. ಈಗಿನ ಸೂರ್ಯ ನಮಸ್ಕಾರವನ್ನು ಯೋಗಾಭ್ಯಾಸಕ್ಕೆ ಸೇರಿಸಿದ ಶ್ರೇಯವೂ ಅವರದೇ. ಕಷ್ಣಮಾಚಾರ್ಯರ ಶಿಷ್ಯರಾಗಿದ್ದ ಪಟ್ಠಾಭಿ ಜೋಯಿಸ್, ಬಿ.ಕೆ.ಎಸ್. ಅಯ್ಯಂಗಾರ್ ಮತ್ತಿತರರ ಮುತುವರ್ಜಿಯಲ್ಲಿ ಯೋಗಾಸನಗಳ ಸಂಖ್ಯೆ ಬೆಳೆಯುತ್ತಾ ಹೋಯಿತು, ಇನ್ನೂ ಬೆಳೆಯುತ್ತಿದೆ; ಕುರ್ಚಿ ಯೋಗ, ಚಾಪೆ ಯೋಗ, ಹೆಂಗಳ-ಮಕ್ಕಳ ಯೋಗ, ಕಾವಿಯುಡುಗೆ, ಗಡ್ಡ, ಸಸ್ಯಾಹಾರ ಮುಂತಾದವೂ ಜತೆ ಸೇರಿವೆ.

ಹೀಗೆ ಅಲೆಮಾರಿ ವಿರಾಗಿಗಳ ಸಾಧನೆಯು ಕೋಟಿಗಟ್ಟಲೆಯ ದಂಧೆಯಾಯಿತು, ವೇದ ವಿರೋಧಿಗಳ ವಿದ್ಯೆಯು ವೇದವಿದ್ಯೆಯಾಯಿತು, ಹದಿನೈದು ದಿನ ಕೆಲ ವ್ಯಾಯಾಮಗಳನ್ನು ಕಲಿತವನು ಮರುದಿನವೇ ಯೋಗ ಚಿಕಿತ್ಸಕನಾಗುವಂತಾಯಿತು. ಮೂಲ ಯೋಗ ಸತ್ತು, ವ್ಯಾಯಾಮವೇ ಯೋಗವಾಯಿತು.

ಹದಿನೈದನೇ ಬರಹ : ಮುದಿಮೂಳೆಗಳ ಕಾಯಕಲ್ಪಕ್ಕೆ 50000 ಕೋಟಿ [ಜನವರಿ 9, 2013, ಬುಧವಾರ] [ನೋಡಿ | ನೋಡಿ]

ಗಟ್ಟಿ ಮೂಳೆಗಳ ಗುಟ್ಟು ಕಂಪೆನಿಗಳಲ್ಲಿಲ್ಲ, ಕಾಡೊಳಗಿದೆ.

ದೇಹಕ್ಕೆ ವಯಸ್ಸಾದಂತೆ ಅದರ ತೊಗಲಿನ ಹೊದಿಕೆಯೂ, ಅದರೊಳಗಿನ ಮೂಳೆ-ಮಾಂಸದ ತಡಿಕೆಯೂ ಬದಲಾಗುತ್ತವೆ; ಚರ್ಮವು ಸಡಿಲಗೊಂಡು ಸುಕ್ಕುಗಟ್ಟುತ್ತದೆ, ಮೂಳೆಗಳೂ ಕ್ಷಯಿಸಿ, ಹಗುರಾಗುತ್ತವೆ. ಹುಟ್ಟಿನಿಂದ ಯೌವನಾವಸ್ಥೆಯವರೆಗೆ ಬೆಳೆದು ಗಟ್ಟಿಗೊಳ್ಳುವ ಮೂಳೆಗಳು ಮೂವತ್ತರ ನಂತರ ಕ್ಷಯಿಸತೊಡಗಿ, 60-70ರ ವಯಸ್ಸಿಗೆ ಸಾಕಷ್ಟು ಮುರುಕಾಗುತ್ತವೆ. ಇದೇ ಕಾರಣಕ್ಕೆ ಹಿರಿವಯಸ್ಕರಲ್ಲಿ ಬೆನ್ನೆಲುಬು, ಮಣಿಗಂಟು, ತೊಡೆ, ತೋಳು, ಮುಂಗಾಲುಗಳ ಮೂಳೆಗಳು ಸುಲಭದಲ್ಲಿ ಮುರಿಯುತ್ತವೆ, ಅದರಿಂದಾಗುವ ಸಮಸ್ಯೆಗಳು ಕೆಲವೊಮ್ಮೆ ಪ್ರಾಣಾಪಾಯವನ್ನೂ ತಂದೊಡ್ಡುತ್ತವೆ. ವಯೋವೃದ್ಧರ ಸಂಖ್ಯೆಯು ಹೆಚ್ಚಿದಂತೆ ಇವುಗಳೂ ಕೋಟಿಗಟ್ಟಲೆಯಾಗಿ, ವೈದ್ಯವಿಜ್ಞಾನಿಗಳನ್ನೂ, ಉದ್ಯಮಪತಿಗಳನ್ನೂ ಆಕರ್ಷಿಸಿವೆ. ಮೂಳೆಗಳ ಸಾಂದ್ರತೆಯ ಪರೀಕ್ಷೆಗಳೂ ಹುಟ್ಟಿ, ಅಲ್ಲಲ್ಲಿ ಅವುಗಳ ಶಿಬಿರಗಳಾಗುತ್ತಿವೆ. ಮೂಳೆಗಳ ಆರೋಗ್ಯವರ್ಧನೆಗೆಂದು ತಿನ್ನಿಸಲಾಗುತ್ತಿರುವ ಕ್ಯಾಲ್ಸಿಯಂ, ಡಿ ಅನ್ನಾಂಗ, ಹಾರ್ಮೋನುಗಳು, ಬಿಸ್ ಫಾಸ್ಫನೇಟ್ ಮತ್ತಿತರ ಔಷಧಗಳ ವಾರ್ಷಿಕ ವಹಿವಾಟು 50000 ಕೋಟಿ ರೂಪಾಯಿಗಳಾದರೆ, ಎಲ್ಲರಿಗೂ ಕುಡಿಸಲಾಗುತ್ತಿರುವ ಪಶುಹಾಲಿನ ವಹಿವಾಟು 10 ಲಕ್ಷ ಕೋಟಿಗಳಷ್ಟಿದೆ.

ನಮ್ಮ ಮೂಳೆಗಳು ವಿವಿಧ ಪ್ರೋಟೀನುಗಳ ಭದ್ರವಾದ ಹಂದರದಿಂದ ರಚಿತವಾಗಿದ್ದು, ಕ್ಯಾಲ್ಸಿಯಂನಂತಹ ಖನಿಜಗಳು ತುಂಬಿ ಅವು ಗಟ್ಟಿಗೊಳ್ಳುತ್ತವೆ. ಮೂಳೆಗಳಲ್ಲಿ ಹಳೆಯ ಕಣಗಳು ಅಳಿದು ಹೊಸದು ಬೆಳೆಯುವ ಪ್ರಕ್ರಿಯೆಯು ನಿರಂತರವಾಗಿ ಸಾಗುತ್ತಿರುತ್ತದೆ; ಯೌವನದವರೆಗೆ ಅಳಿಯುವುದಕ್ಕಿಂತ ಬೆಳೆಯುವುದೇ ಹೆಚ್ಚಿದ್ದರೆ, ನಂತರ ಅವು ಸಮತೋಲನಕ್ಕೆ ಬಂದು, ವಯಸ್ಸಾದಂತೆ ಅಳಿಯುವುದು ಹೆಚ್ಚಿ ಮೂಳೆಸವೆತಕ್ಕೆ ಕಾರಣವಾಗುತ್ತದೆ. ಈ ಪ್ರಕ್ರಿಯೆಯು ಸಾಂಗವಾಗಿ ನಡೆಯಬೇಕಾದರೆ ಕ್ಯಾಲ್ಸಿಯಂ, ಮೆಗ್ನೇಸಿಯಂ, ಪೊಟಾಸಿಯಂ ಮುಂತಾದ ಖನಿಜಗಳೂ, ಎ, ಡಿ, ಕೆ ಮುಂತಾದ ಅನ್ನಾಂಗಗಳೂ, ಪ್ರೋಟೀನುಗಳ ತಯಾರಿಗೆ ಅಗತ್ಯವಾದ ಪೌಷ್ಠಿಕ ಆಹಾರಗಳೂ ಅತ್ಯಗತ್ಯ. ಈ ಪೋಷಕಾಂಶಗಳೂ, ಮೂಳೆಸವೆತವನ್ನು ತಡೆಯುವ ಔಷಧಗಳೂ ಮಾರುಕಟ್ಟೆಯಲ್ಲಿಂದು ಹೇರಳವಾಗಿ ಲಭ್ಯವಿವೆ.

ಮೂಳೆಗಳಿಗಾಗಿ ಕ್ಯಾಲ್ಸಿಯಂ ಸೇವಿಸಬೇಕೆನ್ನುವ ಒತ್ತಾಸೆಯು ಭ್ರೂಣಾವಸ್ಥೆಯಿಂದ ತೊಡಗಿ ಸಾಯುವವರೆಗೂ ಬೆನ್ನತ್ತುತ್ತದೆ. ಕ್ಯಾಲ್ಸಿಯಂ ಹಾಗೂ ವಿಟಮಿನ್ ಡಿ ಗಳಿಗಾಗಿ ಗರ್ಭಿಣಿಯರಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಹಾಲು ಮತ್ತದರ ಉತ್ಪನ್ನಗಳನ್ನೂ, ಈ ಪೋಷಕಾಂಶಗಳುಳ್ಳ ಪುಡಿಗಳು, ಪೇಯಗಳು, ಮಾತ್ರೆಗಳು ಹಾಗೂ ಟಾನಿಕ್ಕುಗಳನ್ನೂ ಸೇವಿಸಬೇಕೆಂದು ಹೇಳಲಾಗುತ್ತಿದೆ. ಆದರೆ ಇವುಗಳಿಂದೇನಾದರೂ ಲಾಭವಿದೆಯೇ?

ಹಾಲಿನ ಸೇವನೆಯಿಂದ ಮೂಳೆಸವೆತವನ್ನು ತಡೆಯಲು ಸಾಧ್ಯವಿಲ್ಲವೆನ್ನುವುದು ಹಲವು ಅಧ್ಯಯನಗಳಲ್ಲಿ ಸಾಬೀತಾಗಿದ್ದು, ಕ್ಯಾಲ್ಸಿಯಂಗಾಗಿ ಮಕ್ಕಳಿಗೆ ಪಶುಹಾಲನ್ನು ನೀಡಬೇಕೆನ್ನುವುದಕ್ಕೆ ಆಧಾರಗಳಿಲ್ಲವೆಂದು ಅಮೆರಿಕದ ಶಿಶುವಿಜ್ಞಾನ ಸಂಘಟನೆಯ ಪ್ರಕಟಣೆಗಳಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಪಶುಹಾಲಿನಲ್ಲಿ ಕ್ಯಾಲ್ಸಿಯಂ ಅಧಿಕವಾಗಿದ್ದರೂ, ತರಕಾರಿಗಳಲ್ಲಿ ಲಭ್ಯವಿರುವ ಕ್ಯಾಲ್ಸಿಯಂನಷ್ಟು ಸುಲಭವಾಗಿ ಅದು ಹೀರಲ್ಪಡುವುದಿಲ್ಲ; ಮಾತ್ರವಲ್ಲ, ಹಾಲಿನಲ್ಲಿರುವ ಇತರ ಸಂಯುಕ್ತಗಳು ಮೂತ್ರದಲ್ಲಿ ಕ್ಯಾಲ್ಸಿಯಂ ವಿಸರ್ಜನೆಯನ್ನು ಉತ್ತೇಜಿಸುವುದರಿಂದ ರಕ್ತದಲ್ಲಿರುವ ಕ್ಯಾಲ್ಸಿಯಂ ಕೂಡಾ ನಷ್ಟಗೊಳ್ಳುವಂತಾಗಿ ಪಶುಹಾಲಿನ ಸೇವನೆಯಿಂದ ಹೆಚ್ಚೇನೂ ಲಾಭವಿಲ್ಲದಂತಾಗುತ್ತದೆ.

ದೀರ್ಘಕಾಲ ಕ್ಯಾಲ್ಸಿಯಂ ಮಾತ್ರೆಗಳನ್ನು ಸೇವಿಸುವುದರಿಂದ ಮೂಳೆಸವೆತವನ್ನಾಗಲೀ, ಮೂಳೆಮುರಿತವನ್ನಾಗಲೀ ತಡೆಯಲು ಸಾಧ್ಯವಿಲ್ಲವೆಂದೂ, ಅನಗತ್ಯವಾಗಿ ಕ್ಯಾಲ್ಸಿಯಂ ಮಾತ್ರೆಗಳನ್ನು ಸೇವಿಸುವವರಲ್ಲಿ ಹೃದಯಾಘಾತ ಹಾಗೂ ಪಾರ್ಶ್ವವಾಯುಗಳಂತಹಾ ಸಮಸ್ಯೆಗಳು ದುಪ್ಪಟ್ಟಾಗುವ ಸಾಧ್ಯತೆಗಳಿವೆಯೆಂದೂ ದೊಡ್ಡ ಗಾತ್ರದ ಅಧ್ಯಯನಗಳು ಸ್ಪಷ್ಟವಾಗಿ ತೋರಿಸಿವೆ. ವಿಟಮಿನ್ ಡಿ ಹಾಗೂ ಕ್ಯಾಲ್ಸಿಯಂ ಮಾತ್ರೆಗಳ ಸೇವನೆಯಿಂದ ಮೂಳೆಸವೆತವನ್ನು ತಡೆಯಲಾಗದು ಎನ್ನುವುದಕ್ಕೆ ಬೇಕಾದಷ್ಟು ಆಧಾರಗಳಿವೆ ಎಂದು ಅಮೆರಿಕಾದ ರೋಗ ನಿರೋಧಕ ಕಾರ್ಯಪಡೆಯು ಹೇಳಿದ್ದು, ಮುಟ್ಟು ನಿಂತ ಬಳಿಕ ಮಹಿಳೆಯರು ಅಂತಹಾ ಮಾತ್ರೆಗಳನ್ನು ಸೇವಿಸುವ ಅಗತ್ಯವಿಲ್ಲವೆಂದು ಸ್ಪಷ್ಟಪಡಿಸಿದೆ.

ಮೂಳೆಸವೆತವನ್ನು ತಡೆಯುತ್ತವೆನ್ನಲಾದ ಅಲೆಂಡ್ರೊನೇಟ್, ಎಟಿಡ್ರೊನೇಟ್ ಮುಂತಾದ ದುಬಾರಿ ಬಿಸ್ ಫಾಸ್ಫನೇಟ್ ಔಷಧಗಳಿಂದಲೂ ಹೇಳಿಕೊಳ್ಳುವ ಪ್ರಯೋಜನಗಳೇನಿಲ್ಲ. ಅವುಗಳನ್ನು ದೀರ್ಘಕಾಲ ಬಳಸಿದವರಲ್ಲಿ ದವಡೆಯ ಮೂಳೆಕೊಳೆತ, ತೊಡೆಯ ಮೂಳೆಮುರಿತಗಳಂತಹ ವಿಶೇಷವಾದ ಸಮಸ್ಯೆಗಳಾಗಿರುವ ಹಲವಾರು ವರದಿಗಳೂ ಇವೆ.

ಸ್ತ್ರೀಯರಲ್ಲಿ ವಯೋಸಹಜವಾಗಿ ಉಂಟಾಗುವ ಸಮಸ್ಯೆಗಳಿಗೂ ಇಸ್ಟ್ರೋಜನ್ ಹಾರ್ಮೋನಿಗೂ ತಳುಕು ಹಾಕಿ, ಮುಟ್ಟು ಕೊನೆಗೊಳ್ಳುವುದನ್ನೇ ಒಂದು ಭೀಕರ ಸಮಸ್ಯೆಯೆಂದು ಬಿಂಬಿಸಿ, ಅವರೆಲ್ಲರೂ ಹಾರ್ಮೋನಿನ ಮಾತ್ರೆಗಳನ್ನು ಸೇವಿಸುವಂತೆ ಉತ್ತೇಜಿಸಿದ ಕ್ರಮವು ವೈದ್ಯಕೀಯ ಇತಿಹಾಸದಲ್ಲೇ ಅತ್ಯಂತ ನಿಂದನೀಯವಾದ ಅಧ್ಯಾಯಗಳಲ್ಲೊಂದು. ಅಮೆರಿಕಾದ ವೈತ್ ಎಂಬ ದೈತ್ಯ ಔಷಧ ಕಂಪೆನಿಯು 1942ರಲ್ಲಿ ಇಸ್ಟ್ರೋಜನ್ ಹಾರ್ಮೋನನ್ನು ಪ್ರೆಮಾರಿನ್ ಎಂಬ ಹೆಸರಲ್ಲಿ ಮಾರಲಾರಂಭಿಸಿತು. ಮೊದಲಲ್ಲಿ ಋತುಬಂಧದ ಸಮಸ್ಯೆಗಳಿಗಷ್ಟೇ ಅದನ್ನು ಕೊಡಲಾಗುತ್ತಿದ್ದರೆ, 1985ರ ವೇಳೆಗೆ ಮೂಳೆಸವೆತವನ್ನು ತಡೆಯುವುದಕ್ಕಾಗಿ ಮುಟ್ಟು ನಿಂತ ಮಹಿಳೆಯರೆಲ್ಲರೂ ಅದನ್ನು ಸೇವಿಸಬೇಕೆಂದು ಹೇಳಲಾಯಿತು. ಮುಂದೆ, ಆ ಮಹಿಳೆಯರಲ್ಲಿ ಹೃದಯಾಘಾತ, ಪಾರ್ಶ್ವವಾಯು, ಅಲ್ಜೀಮರ್ಸ್ ಕಾಹಿಲೆ, ದಂತ ಕ್ಷಯ ಇತ್ಯಾದಿಗಳೆಲ್ಲವನ್ನೂ ತಡೆಯುವಲ್ಲಿ ಪ್ರೆಮಾರಿನ್ ನೆರವಾಗುತ್ತದೆಂದು ಡಂಗುರ ಹೊಡೆದು, 1990ರ ದಶಕದಲ್ಲಿ ಅದನ್ನು ವಿಶ್ವದಾದ್ಯಂತ ಭರ್ಜರಿಯಾಗಿ ಮಾರಲಾಯಿತು. ಈ ನಡುವೆ, 1975ರಲ್ಲೇ, ಪ್ರೆಮಾರಿನ್ ಸೇವಿಸಿದ ಮಹಿಳೆಯರಲ್ಲಿ ಗರ್ಭಕೋಶದ ಕ್ಯಾನ್ಸರ್ ಹೆಚ್ಚುವುದನ್ನು ಗುರುತಿಸಲಾದರೂ, ಪ್ರೆಮಾರಿನ್ ಜೊತೆ ಪ್ರೊಜೆಸ್ಟರಾನ್ ಹಾರ್ಮೋನನ್ನೂ ಸೇರಿಸಿದರೆ ಅದನ್ನು ತಡೆಯಬಹುದೆಂದು ಹೇಳಿ, ಅವೆರಡೂ ಸೇರಿರುವ ಪ್ರೆಮ್ ಪ್ರೊ ಎಂಬ ಎರಡು ಹಾರ್ಮೋನುಗಳ ಮಾತ್ರೆಗಳನ್ನು 1995ರಿಂದ ನೀಡಲಾರಂಭಿಸಲಾಯಿತು! ಇವೆರಡರ ವಹಿವಾಟು 1995ರಲ್ಲಿ 2 ಕೋಟಿ ಡಾಲರ್ ಗಳಷ್ಟಿದ್ದರೆ. 2001ರ ವೇಳೆಗೆ 200 ಕೋಟಿ ಡಾಲರ್ ದಾಟಿತು! ಇದೇ ವೇಳೆಗೆ ಅಮೆರಿಕಾದ ರಾಷ್ಟ್ರೀಯ ಆರೋಗ್ಯ ಸಂಸ್ಥೆಯು ಹೃದಯಾಘಾತ, ಸ್ತನ ಹಾಗೂ ಕರುಳಿನ ಕ್ಯಾನ್ಸರ್ ಮತ್ತು ಮೂಳೆಸವೆತಗಳನ್ನು ತಡೆಯುವ ಬಗ್ಗೆ ಮಹಿಳೆಯರ ಆರೋಗ್ಯ ಉಪಕ್ರಮ ಎಂಬ 15 ವರ್ಷಾವಧಿಯ ದೊಡ್ಡ ಅಧ್ಯಯನವೊಂದನ್ನು 1991ರಲ್ಲಿ ಆರಂಭಿಸಿತು. ಪ್ರೆಮ್ ಪ್ರೊ ಸೇವಿಸುತ್ತಿದ್ದ ಮಹಿಳೆಯರಲ್ಲಿ ಸ್ತನದ ಕ್ಯಾನ್ಸರ್, ಹೃದಯಾಘಾತ, ಪಾರ್ಶ್ವವಾಯು ಹಾಗೂ ರಕ್ತ ಹೆಪ್ಪುಗಟ್ಟುವ ಸಮಸ್ಯೆಗಳು ಶೇ. 26-41ರಷ್ಟು ಹೆಚ್ಚಳವಾದುದು ಅದರಲ್ಲಿ ಕಂಡು ಬಂದು, 2002ರಲ್ಲಿ ಅದನ್ನು ಅರ್ಧಕ್ಕೇ ನಿಲ್ಲಿಸಲಾಯಿತು. ಅದರೊಂದಿಗೆ ಆ ಹಾರ್ಮೋನುಗಳ ವಹಿವಾಟು ಕೂಡಾ ಅರ್ಧಕ್ಕರ್ಧ ಇಳಿಯಿತು. ಆ ಹಾರ್ಮೋನುಗಳಿಂದ ಹಲಬಗೆಯ ಪ್ರಯೋಜನಗಳಿವೆಯೆಂದು ಸಾಧಿಸಿದ್ದ ಹಲವು ಲೇಖನಗಳು ಡಿಸೈನ್ ರೈಟ್ ಎಂಬ ಕಂಪೆನಿಯ ಪ್ರೇತಬರಹಗಳಾಗಿದ್ದವೆನ್ನುವ ಮಾಹಿತಿಯೂ ಬಯಲಾಯಿತು. ಇವೆಲ್ಲವುಗಳಿಂದ ತತ್ತರಿಸಿದ ವೈತ್ ಅನ್ನು ಅಮೆರಿಕದ ಇನ್ನೊಂದು ದೈತ್ಯ ಫೈಜರ್ ನುಂಗಿ ಹಾಕಿತು; ಆದರೆ, ಹಾರ್ಮೋನುಗಳಿಂದಾದ ತೊಂದರೆಗಳ ಬಗ್ಗೆ ಸಲ್ಲಿಸಲಾದ 10000ಕ್ಕೂ ಹೆಚ್ಚು ದಾವೆಗಳಿಗಾಗಿ 80 ಕೋಟಿ ಡಾಲರ್ ಬದಿಗಿರಿಸಬೇಕಾಯಿತು.

ಹೀಗೆ, ಆಧುನಿಕ ನಾಗರಿಕರಲ್ಲಿ ಮೂಳೆಗಳ ಆರೋಗ್ಯಕ್ಕೆಂದು ಕಂಪೆನಿಗಳು ಕಟ್ಟಿಕೊಟ್ಟ ಪೋಷಕಾಂಶಗಳಾಗಲೀ, ಔಷಧಗಳಾಗಲೀ ಪ್ರಯೋಜನಕ್ಕಿಂತ ಹೆಚ್ಚು ಸಮಸ್ಯೆಗಳಿಗೇ ಕಾರಣವಾಗಿರುವುದಲ್ಲದೆ, ಮೂಳೆಸವೆತವುಳ್ಳವರ ಸಂಖ್ಯೆಯೂ ಸತತವಾಗಿ ಹೆಚ್ಚುತ್ತಿದೆ, ಈಗೀಗ 20-30 ವಯಸ್ಸಿನವರಲ್ಲೂ ಕಾಣಲಾರಂಭಿಸಿದೆ. ಇದಕ್ಕಿದಿರಾಗಿ, ಪ್ರಾಚೀನ ಜನಾಂಗಗಳ ಪಳೆಯುಳಿಕೆಗಳಲ್ಲೂ, ಇಂದಿಗೂ ಅರಣ್ಯವಾಸಿಗಳಾಗಿರುವ ಬುಡಕಟ್ಟುಗಳವರಲ್ಲೂ ಮೂಳೆಸವೆತವು ತೀರಾ ಅಪರೂಪವೆಂದು ಹಲವಾರು ಅಧ್ಯಯನಗಳು ತೋರಿಸಿವೆ. ಆಧುನಿಕ ನಾಗರಿಕರ ಮೂಳೆಗಳು ಬೇಗನೇ ಕ್ಷಯಿಸುತ್ತಿರುವಲ್ಲಿ ಆದಿವಾಸಿಗಳ ಮೂಳೆಗಳು ಗಟ್ಟಿಯಾಗುಳಿಯುತ್ತಿವೆಯೆಂದರೆ ಮೂಳೆಗಳ ಆರೋಗ್ಯದ ಗುಟ್ಟು ಯಾವುದೇ ಕಂಪೆನಿಗಳಲ್ಲಿಲ್ಲದೆ ಕಾಡೊಳಗಿನ ಜೀವನಕ್ರಮದಲ್ಲಿದೆಯೆನ್ನುವುದು ಸ್ಪಷ್ಟವಾಗುತ್ತದೆ.

ಮೂಳೆಗಳ ಆರೋಗ್ಯ ರಕ್ಷಣೆಗೆ ಅಗತ್ಯವಾದ ಪೋಷಕಾಂಶಗಳನ್ನು ಬಿಡಿಬಿಡಿಯಾಗಿ ಅಂಗಡಿಗಳಲ್ಲಿ ಖರೀದಿಸುವ ಬದಲಿಗೆ ಅವೆಲ್ಲವೂ ಜೊತೆಯಾಗಿಯೇ ದೊರೆಯುವ ನೈಸರ್ಗಿಕ ಮೂಲಗಳಿಂದಲೇ ಪಡೆಯುವುದರಿಂದ ಮೂಳೆಗಳಿಗೂ ಒಳಿತು, ಹಣವೂ ಉಳಿದೀತು, ಅಡ್ಡ ಪರಿಣಾಮಗಳೂ ಆಗವು. ಹಸಿರು ಸೊಪ್ಪು-ತರಕಾರಿಗಳು, ಮೀನು, ಮೊಟ್ಟೆ ಹಾಗೂ ಮಾಂಸಗಳಲ್ಲಿ ಕ್ಯಾಲ್ಸಿಯಂ, ಪೊಟಾಸಿಯಂ, ಮೆಗ್ನೇಸಿಯಂ, ವಿಟಮಿನ್ ಡಿ, ಕೆ ಮತ್ತು ಎ ಎಲ್ಲವೂ ಯಥೇಷ್ಟವಾಗಿ ದೊರೆತರೆ, ವಾರಕ್ಕೆ 2-3 ಬಾರಿ ಬೆಳಗ್ಗೆ 10ರಿಂದ ಸಂಜೆ 4ರ ನಡುವೆ 5-30 ನಿಮಿಷ ಬಿಸಿಲಿಗೆ ಮೈಯೊಡ್ಡಿದರೆ ವಿಟಮಿನ್ ಡಿ ಚರ್ಮದಡಿಯಲ್ಲೇ ಹೇರಳವಾಗಿ ಸಿದ್ಧಗೊಳ್ಳುತ್ತದೆ. ಸಂಸ್ಕರಿತ ಧಾನ್ಯಗಳು ಹಾಗೂ ಸಕ್ಕರೆಭರಿತವಾದ ಆಹಾರಗಳಲ್ಲಿ ಈ ಪೋಷಕಾಂಶಗಳೆಲ್ಲ ನಷ್ಟವಾಗುವುದಲ್ಲದೆ, ಅವುಗಳಿಂದ ಕರುಳಿನ ಬ್ಯಾಕ್ಟೀರಿಯಾಗಳಿಗೂ ಗರ ಬಡಿದು ಜೀರ್ಣಿಸುವ ಕಾರ್ಯಕ್ಕೂ ಅಡಚಣೆಯಾಗುತ್ತದೆ ಹಾಗೂ ಉರಿಯೂತವೂ ಹೆಚ್ಚಿ ಮೂಳೆಸವೆತವನ್ನು ಇನ್ನಷ್ಟು ತ್ವರಿತಗೊಳಿಸುತ್ತದೆ.

ಆದ್ದರಿಂದ ಕಂಪೆನಿಗಳ ಸಿದ್ಧ ತಿನಿಸುಗಳನ್ನೂ, ಔಷಧಗಳನ್ನೂ ಸೇವಿಸಿ ದೇಹವನ್ನಿಡೀ ಮುರುಕಾಗಿಸುವುದಕ್ಕಿಂತ ಪ್ರಕೃತಿಯಲ್ಲಿ ಮಿಂದು ತಿಂದು ಗಟ್ಟಿಯಾಗುಳಿಯೋಣ.

ಹದಿನಾಲ್ಕನೇ ಬರಹ : ಆಮೂಲಾಗ್ರ ಪರೀಕ್ಷೆಯೆಂಬುದು ಲೊಳಲೊಟ್ಟೆ [ಡಿಸೆಂಬರ್ 26, 2012, ಬುಧವಾರ] [ನೋಡಿ | ನೋಡಿ]

ಅಡಗಿರಬಹುದಾದ ರೋಗಗಳನ್ನು ವಿಶೇಷ ಪರೀಕ್ಷೆಗಳಿಂದಲೇ ಭೇದಿಸಲಾಗದು

ಐವತ್ತರ ಹರೆಯದ ಗಂಡಸೊಬ್ಬರು ಏದುಸಿರು ಬಿಡುತ್ತ ನನ್ನೆದುರು ಕುಳಿತರು. ‘ಡಾಕ್ಟ್ರೇ, ಈಗ ಎರಡು ವಾರಗಳಿಂದ ಹತ್ತು ಹೆಜ್ಜೆ ನಡೆದರೆ ದಮ್ಮೇ ಬಂದು ಬಿಡ್ತದೆ, ಊಟ ಮಾಡಿದಾಗ್ಲೂ ಹಾಗೇ ಆಗ್ತದೆ’ ಅಂದರು. ‘ನಿತ್ಯದ ಕೆಲಸಗಳಲ್ಲೇ ಕಷ್ಟವೆನಿಸುತ್ತಿದೆಯೆಂದರೆ ಹದಯದ ತೊಂದರೆ ಇರಬಹುದು, ಸೂಕ್ತ ಪರೀಕ್ಷೆಗಳನ್ನು ಮಾಡುವುದೊಳ್ಳೆಯದು’ ಎಂದೆ. ‘ನಿನ್ನೆಯಷ್ಟೇ ದೊಡ್ಡ ಲ್ಯಾಬಿನಲ್ಲಿ ಫುಲ್ ಬಾಡಿ ಟೆಸ್ಟ್ ಮಾಡಿ ಬಂದಿದ್ದೇನೆ, ಈ ರಿಪೋರ್ಟು ನೋಡಿ, ಏನೂ ತೊಂದರೆಯಿಲ್ಲ ಅಂದಿದ್ದಾರೆ’ ಎನ್ನುತ್ತಾ ದೊಡ್ಡ ಚೀಲವೊಂದನ್ನು ನನ್ನ ಮುಖಕ್ಕೆ ಹಿಡಿದರವರು. ಹಲಬಗೆಯ ರಕ್ತ-ಮೂತ್ರ ಪರೀಕ್ಷೆಗಳ ವರದಿಗಳು, ಎದೆಯ ಕ್ಷಕಿರಣದ ಚಿತ್ರ, ಹದಯ ಪರೀಕ್ಷೆಯ ಇಸಿಜಿ ಮತ್ತು ಇಕೋ, ಹೊಟ್ಟೆಯ ಅಲ್ಟ್ರಾಸೌಂಡ್ ಸ್ಕಾನ್ ಎಲ್ಲವೂ ಅದರೊಳಗಿದ್ದವು. ಎಲ್ಲವನ್ನೂ ನೋಡಿ, ‘ನೀವೇ ಹೋಗಿ ಮಾಡಿಸಿದ್ದೇ, ಎಷ್ಟು ಖರ್ಚಾಯಿತು?’ ಅಂತ ಕೇಳಿದೆ. ‘ನಾನೇ ಮಾಡಿಸಿಕೊಂಡೆ, ಖ್ಯಾತ ಹದಯ ತಜ್ಞರೂ ನೋಡಿದ್ದಾರೆ, ಮೂರೂವರೆ ಸಾವಿರ ಕೊಟ್ಟೆ’ ಅಂದರು. ಅದರೊಳಗಿದ್ದ ಇಸಿಜಿಯನ್ನೇ ಅವರಿಗೆ ತೋರಿಸಿ ‘ನೋಡಿ, ನಿಮಗಾಗುತ್ತಿರುವ ತೊಂದರೆಗೆ ಪುರಾವೆ ಇಲ್ಲೇ ಇದೆ’ ಅಂದೆ. ‘ಛೆ, ಇಲ್ಲ ಡಾಕ್ಟ್ರೇ, ಹಾರ್ಟಿನ ಡಾಕ್ಟ್ರು ಸ್ಕಾನ್ ಮಾಡಿ ಏನೂ ತೊಂದರೆಯಿಲ್ಲ ಅಂದಿದ್ದಾರೆ’ ಎನ್ನುತ್ತಾ ನನ್ನ ಮಾತನ್ನು ತಿರಸ್ಕರಿಸಿಯೇ ಬಿಟ್ಟರು. ‘ಅವರು ನಿಮ್ಮಲ್ಲಿ ಮಾತಾಡಿದ್ದರೇ, ನಿಮ್ಮ ಇಸಿಜಿಯನ್ನು ನೋಡಿದ್ದರೇ?’ ಕೇಳಿದೆ ನಾನು. ‘ಮಾತಾಡುವಷ್ಟು ಅವರಿಗೆ ಪುರೊಸುತ್ತಿರಲಿಲ್ಲ, ಇಸಿಜಿ ನೋಡಿದ್ದರೇ ಎನ್ನುವುದು ಗೊತ್ತಿಲ್ಲ’ ಅಂದರು. ಅಂತೂ ಅವರಲ್ಲಿದ್ದ ಲಕ್ಷಣಗಳು ಹದ್ರೋಗದ ಖಚಿತ ಸೂಚನೆಗಳಾಗಿದ್ದರಿಂದ ಅವರಿಗೆ ಎಲ್ಲವನ್ನೂ ವಿವರಿಸಿ ಅದಕ್ಕಾಗಿ ಟ್ರೆಡ್ ಮಿಲ್ ಪರೀಕ್ಷೆಯನ್ನು ಮಾಡಿಸಿಕೊಳ್ಳುವಂತೆ ಮನವೊಲಿಸಿದೆ. ಅದರಲ್ಲಿ ಅವರಿಗೆ ಗಂಭೀರವಾದ ಹೃದ್ರೋಗವಿರುವುದು ಕಂಡು ಬಂದು, ಮರುದಿನವೇ ಆಂಜಿಯೋಗ್ರಾಂ ಮಾಡಲಾಗಿ, ಹದಯದ ಮುಖ್ಯ ಅಪಧಮನಿಯು ಶೇ. 98ರಷ್ಟು ಮುಚ್ಚಿ ಹೋಗಿದ್ದುದು ಖಚಿತವಾಗಿ, ಅದನ್ನು ನೇರ್ಪಡಿಸಲು ಸ್ಟೆಂಟ್ ಹಾಕಬೇಕಾಯಿತು. ಅದೆಲ್ಲಾ ಆದ ಮೇಲೆ ಅವರು ಕೇಳಿದ್ದಿದು: ‘ಹಾಗಾದರೆ ಎರಡು ದಿನಗಳ ಹಿಂದಷ್ಟೇ ಮಾಡಿದ ಫುಲ್ ಬಾಡಿ ಟೆಸ್ಟಿನಲ್ಲಿ ಏನೂ ತೊಂದರೆಯಿಲ್ಲ ಅಂತ ಹೇಳಿದ್ದೇಕೆ?’

ಯಾಕಿರಬಹುದು? ಅವರು ಅಲ್ಲೋರ್ವ ರೋಗಿಯಾಗಿರಲಿಲ್ಲ, ಗಿರಾಕಿಯಾಗಿದ್ದರು. ಅಲ್ಲಿನ ಸ್ವಾಗತಕಾರಿಣಿ ಗಿರಾಕಿಗೆ ಏನು ಬೇಕೆಂದು ಕೇಳಿದಾಗ ಫುಲ್ ಬಾಡಿ ಟೆಸ್ಟೇ ಮಾಡಿ ಅಂತ ಹೇಳಿದ್ದಕ್ಕೆ ಆಕೆ ಮೊದಲಿಗೆ ಹಣ ಪಡೆದು, ಮತ್ತೊಬ್ಬಳು ರಕ್ತ ಮೂತ್ರಗಳನ್ನು ಸಂಗ್ರಹಿಸಿ, ಇನ್ನೊಬ್ಬ ಮಲಗಿಸಿ ಇಸಿಜಿ ತೆಗೆದು, ಮಗದೊಬ್ಬ ನಿಲ್ಲಿಸಿ ಎದೆಗೆ ಕ್ಷಕಿರಣ ಹೊಡೆದು, ಮತ್ತೊಮ್ಮೆ ಮಲಗಿಸಿ ಉದರದ ಸ್ಕಾನಿಂಗ್ ಮಾಡಿ, ಅಲ್ಲೇ ಹದ್ರೋಗ ತಜ್ಞನೊಬ್ಬ ಹದಯದ ಸ್ಕಾನ್ ಕೂಡಾ ಮಾಡಿ ಕೊನೆಗೆ ಆ ವರದಿಗಳೆಲ್ಲವನ್ನೂ ಅಚ್ಚುಕಟ್ಟಾಗಿ ವರ್ಣರಂಜಿತ ಕಡತದೊಳಗಿಟ್ಟು ಅದೇ ಸ್ವಾಗತಕಾರಿಣಿ ಕೈಗಿಟ್ಟಾಗ ‘ಏನಿದೆ ತೊಂದರೆ’ ಎಂದು ಆಕೆಯಲ್ಲೇ ಕೇಳಬೇಕಾಗಿ, ಆಕೆ ‘ಏನೂ ಇಲ್ಲ’ ಅಂದಿದ್ದಳು. ಈ ಗಿರಾಕಿಯನ್ನು ಆಕೆಯಲ್ಲದೆ ಬೇರಾರೂ ಮಾತಾಡಿಸಲಿಲ್ಲ, ತೊಂದರೆಯೇನೆಂದು ಕೇಳಲಿಲ್ಲ, ಒಂದು ಪರೀಕ್ಷೆಯ ವರದಿಯನ್ನು ಇನ್ನೊಬ್ಬ ನೋಡಲೂ ಇಲ್ಲ. ಅದಕ್ಕೇ ಇಸಿಜಿಯಲ್ಲಿ ವ್ಯತ್ಯಾಸಗಳಿದ್ದರೂ ಯಾರ ಕಣ್ಣಿಗೂ ಕಾಣಲಿಲ್ಲ, ಕಂಡರೂ ಅರ್ಥವಾಗಲಿಲ್ಲ. ಹೋಟೆಲಿನಲ್ಲಿ ಗಿರಾಕಿಗೆ ದೋಸೆ ಕಟ್ಟಿ ಕೊಟ್ಟಂತೆ, ವರದಿಗಳ ಗಂಟನ್ನು ಕಟ್ಟಿ ಕೊಡಲಾಯಿತು, ಅಷ್ಟೇ. ದೋಸೆಯನ್ನಾದರೂ ತಿನ್ನಬಹುದು, ಈ ಗಂಟನ್ನೇನು ಮಾಡುವುದು?

ಇಂತಹಾ ಆಮೂಲಾಗ್ರ ಪರೀಕ್ಷೆಗಳಿಗೆ ನಿರ್ದಿಷ್ಟವಾದ ಮಾನದಂಡಗಳೂ ಇಲ್ಲ. ಒಂದೊಂದು ಆಸ್ಪತ್ರೆಯೂ, ಒಂದೊಂದು ಪರೀಕ್ಷಾಲಯವೂ ತನ್ನದೇ ಆದ ಪರೀಕ್ಷೆಗಳ ಗುಚ್ಛವನ್ನು ತನಗಿಷ್ಟ ಬಂದ ದರದಲ್ಲಿ ಒದಗಿಸುತ್ತವೆ. ಅವುಗಳ ವಿಶ್ವಾಸಾರ್ಹತೆಗೂ, ಅವುಗಳನ್ನು ನಡೆಸುವ ತಂತ್ರಜ್ಞರು ಮತ್ತು ವೈದ್ಯರ ಬದ್ಧತೆಗೂ ಖಾತರಿಯಿಲ್ಲ. ಇವು ಹಲಬಗೆಯ ತಪ್ಪುಗಳಿಗೂ, ಗೊಂದಲಗಳಿಗೂ, ಅನಾಹುತಗಳಿಗೂ ಕಾರಣವಾಗುತ್ತಿವೆ. ಇರುವ ಖಾಯಿಲೆಯನ್ನು ಗುರುತಿಸಲಾಗದಿರುವುದು ಒಂದೆಡೆಯಾದರೆ, ಯಾವುದೇ ತೊಂದರೆಗಳಿಲ್ಲದವರ ಪರೀಕ್ಷೆಗಳಲ್ಲಿ ಕಂಡ ಸಣ್ಣ ವ್ಯತ್ಯಾಸಗಳನ್ನೇ ದಪ್ಪಕ್ಷರಗಳಲ್ಲಿ ಮುದ್ರಿಸಿ ಅನಗತ್ಯವಾದ ಆತಂಕಕ್ಕೂ, ಇನ್ನಷ್ಟು ಪರೀಕ್ಷೆ-ಚಿಕಿತ್ಸೆ-ರಜೆ-ಖರ್ಚುಗಳಿಗೂ ಕಾರಣವಾಗುತ್ತಿರುವುದು ಇನ್ನೊಂದೆಡೆ.

ಆದ್ದರಿಂದ ವ್ಯಕ್ತಿಯ ಸಮಸ್ಯೆಗಳಿಗೆ ಅನುಗುಣವಾಗಿ ನಿಖರವಾದ, ಸೀಮಿತವಾದ ಪರೀಕ್ಷೆಗಳನ್ನು ನಡೆಸುವುದೇ ಹೆಚ್ಚು ಸಮಂಜಸವಾಗಿದೆ. ಶೇ. 90ರಷ್ಟು ಸಂದರ್ಭಗಳಲ್ಲಿ ಕೇವಲ ರೋಗಲಕ್ಷಣಗಳಿಂದಲೇ ರೋಗವನ್ನು ನಿಖರವಾಗಿ ಗುರುತಿಸಲು ಸಾಧ್ಯವಿದ್ದು, ಶೇ. 8ರಷ್ಟು ರೋಗಿಗಳಲ್ಲಿ ದೈಹಿಕ ಪರೀಕ್ಷೆಯಿಂದಲೇ ರೋಗವೇನೆನ್ನುವುದು ತಿಳಿಯುತ್ತದೆ. ಅಂದರೆ, ಶೇ. 98ರಷ್ಟು ರೋಗಿಗಳಲ್ಲಿ ರಕ್ತ-ಮೂತ್ರಾದಿ ವಿಶೇಷ ಪರೀಕ್ಷೆಗಳು ರೋಗವನ್ನು ಖಚಿತಪಡಿಸುವ ಸೀಮಿತ ಪಾತ್ರವನ್ನಷ್ಟೇ ಹೊಂದಿರುತ್ತವೆ. ಕಾಯಿಲೆಯೇನೆಂದು ಸುಲಭದಲ್ಲಿ ತಿಳಿಯಲಾಗದ ಶೇ. ಎರಡರಷ್ಟು ರೋಗಿಗಳಲ್ಲಿ ಮಾತ್ರವೇ ಹೆಚ್ಚಿನ ವಿಶೇಷ ಪರೀಕ್ಷೆಗಳ ಅಗತ್ಯವಿದ್ದು, ಅಂತಹವರಲ್ಲೂ ರೋಗಲಕ್ಷಣಗಳ ಆಧಾರದಲ್ಲಿ ಕೆಲವೊಂದು ಸಂಭಾವ್ಯ ರೋಗಗಳಿಗೆ ಸಂಬಂಧಿಸಿದ ಪರೀಕ್ಷೆಗಳನ್ನಷ್ಟೇ ಮಾಡಬೇಕಲ್ಲದೆ ಇಡೀ ದೇಹಕ್ಕೆ ಸಂಬಂಧಿಸಿದ ಎಲ್ಲಾ ಪರೀಕ್ಷೆಗಳನ್ನು ಮಾಡಿದರೆ ಪ್ರಯೋಜನವಾಗದು. ಹಾಗೆಯೇ ರೋಗಕ್ಕೆ ಕಾರಣವೇನೆಂಬ ಅಂದಾಜಿಲ್ಲದೆ ಸುಮ್ಮನೇ ಇಡೀ ದೇಹದ ಸಿ ಟಿ ಅಥವಾ ಎಂಆರ್ ಐ ಸ್ಕಾನಿಂಗ್ ಇತ್ಯಾದಿ ಮಾಡುವುದರಿಂದಲೂ ಪ್ರಯೋಜನವಾಗದು. ಇನ್ನೊಂದೆಡೆ, ಸ್ಥಿತಿವಂತರು ಆರೋಗ್ಯದಿಂದಿದ್ದೂ ಇಂತಹಾ ಪರೀಕ್ಷೆಗಳಿಗೆ ವೃಥಾ ಖರ್ಚು ಮಾಡುತ್ತಿರುವಲ್ಲಿ, ಹಲವು ರೋಗಪೀಡಿತರು ಆರ್ಥಿಕ ಅಡಚಣೆಗಳಿಂದಾಗಿ ಅಗತ್ಯವಿದ್ದರೂ ಅವನ್ನು ಮಾಡಿಸಲಾಗದಿರುವುದು ನಿಜಕ್ಕೂ ದೊಡ್ಡ ವಿಪರ್ಯಾಸವಾಗಿದೆ. ಇತ್ತೀಚಿನ ದಿನಗಳಲ್ಲಿ ವೈದ್ಯರುಗಳೇ ಇಂತಹಾ ಪರೀಕ್ಷೆಗಳನ್ನು ಅನಗತ್ಯವಾಗಿ ನಡೆಸುತ್ತಿರುವುದು ಜನಸಾಮಾನ್ಯರ ಮೇಲೆ ದೊಡ್ಡ ಹೊರೆಯಾಗಿ, ಕೊನೆಗೆ ಚಿಕಿತ್ಸೆಗೇ ಹಣವಿರದಂತಹ ದುಸ್ಥಿತಿಗೆ ಕಾರಣವಾಗುತ್ತಿದೆ.

ಇಂತಹ ಆಮೂಲಾಗ್ರ ಪರೀಕ್ಷೆಗಳ ಯುಕ್ತಾಯುಕ್ತತೆಯ ಬಗ್ಗೆ 1,82,880 ಜನರಲ್ಲಿ ನಡೆಸಲಾದ 14 ದೀರ್ಘಕಾಲೀನ ಅಧ್ಯಯನಗಳ ವಿಶ್ಲೇಷಣೆಯನ್ನು ಕೊಕ್ರೇನ್ ಸಹಯೋಗವು 2012ರ ಅಕ್ಟೋಬರ್ ನಲ್ಲಿ ಪ್ರಕಟಿಸಿದೆ. ಆರೋಗ್ಯವಂತರಲ್ಲಿ ಇಂತಹಾ ಪರೀಕ್ಷೆಗಳಿಂದ ಪ್ರಯೋಜನಕ್ಕಿಂತ ತೊಂದರೆಗಳೇ ಹೆಚ್ಚೆಂದೂ, ಪರೀಕ್ಷೆಗಳನ್ನು ಮಾಡಿಸಿಕೊಂಡವರಲ್ಲಿ ಹೃದ್ರೋಗ ಮತ್ತು ಕ್ಯಾನ್ಸರ್ ಗಳಿಂದ ಸಾವುಂಟಾಗುವುದಾಗಲೀ, ಆಸ್ಪತ್ರೆಗಳಿಗೆ ದಾಖಲಾತಿ, ತಜ್ಞ ವೈದ್ಯರ ಭೇಟಿ, ಚಿಂತೆ, ದುಡಿಯಲಾಗದಿರುವಿಕೆ ಇತ್ಯಾದಿಗಳಾಗಲೀ ಕಡಿಮೆಯೇನೂ ಆಗಿರಲಿಲ್ಲವೆಂದೂ ಅದರಲ್ಲಿ ಹೇಳಲಾಗಿದೆ. ಅಂತಹವರಲ್ಲಿ ರಕ್ತದ ಏರೊತ್ತಡ, ಹೆಚ್ಚಿದ ಕೊಲೆಸ್ಟೆರಾಲ್ ಇವೇ ಮುಂತಾದವುಗಳಿಗೆ ಔಷಧಗಳನ್ನು ಸೇವಿಸಲಾರಂಭಿಸುವ ಸಾಧ್ಯತೆಗಳು ಹೆಚ್ಚಾದರೂ, ಆರೋಗ್ಯ ಸ್ಥಿತಿಯು ಉತ್ತಮವಾಯಿತೆಂಬುದೇನೂ ಕಂಡುಬರಲಿಲ್ಲ. ಅದೇ ರೀತಿ, ಗಂಡಸರಲ್ಲಿ ಶುಕ್ಲಗ್ರಂಥಿಯ ಕ್ಯಾನ್ಸರ್ ರೋಗವನ್ನು ಬೇಗನೆ ಗುರುತಿಸಬಲ್ಲದೆನ್ನುವ ಪಿಎಸ್‌ಎ ಪರೀಕ್ಷೆ, ಮಹಿಳೆಯರಲ್ಲಿ ಸ್ತನದ ಕ್ಯಾನ್ಸರನ್ನು ಗುರುತಿಸಬಲ್ಲದೆನ್ನುವ ಮಾಮೊಗ್ರಾಂ ಪರೀಕ್ಷೆಗಳಿಂದ ಅತ್ಯಲ್ಪ ಮಂದಿಗೆ ಪ್ರಯೋಜನವಾದರೆ, ಬಹಳಷ್ಟು ಜನರು ಅವುಗಳಿಂದಾಗಿ ಅನಗತ್ಯವಾದ ಇನ್ನಷ್ಟು ಪರೀಕ್ಷೆಗಳಿಗೂ, ಚಿಕಿತ್ಸೆಗಳಿಗೂ ಒಳಗಾಗಬೇಕಾಗುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಆದ್ದರಿಂದಲೇ ಗಂಡಸರು ಪಿಎಸ್‌ಎ ಪರೀಕ್ಷೆಯನ್ನು ಮಾಡಿಸಿಕೊಳ್ಳುವ ಅಗತ್ಯವಿಲ್ಲವೆಂದೂ, ಮಹಿಳೆಯರು ನಲುವತ್ತರ ಬದಲು ಐವತ್ತರ ವಯಸ್ಸಿನ ನಂತರವೇ ಮಾಮೋಗ್ರಾಂ ಮಾಡಿಸಿಕೊಳ್ಳುವುದು ಸೂಕ್ತವೆಂದೂ ಅಮೆರಿಕಾದ ರೋಗ ನಿರೋಧಕ ಕಾರ್ಯಪಡೆಯು ಸೂಚಿಸಿದೆ.

ಯಾರೋ ಒಬ್ಬರಿಗೆ ಬಂದ ರೋಗವು ತಮಗೆ ಬರದಿರಲಿ ಎನ್ನುವ ಆತಂಕಕ್ಕಾಗಿ ಅಥವಾ ಯಾರೋ ಒಬ್ಬರಿಗೆ ಪ್ರಯೋಜನವಾಯಿತೆನ್ನುವ ಆಸೆಗಾಗಿ ಹಲವರು ಇಂತಹಾ ಪರೀಕ್ಷೆಗಳನ್ನು ಮಾಡಿಸಿಕೊಳ್ಳುತ್ತಾರೆ. ಆದರೆ ಸಾವಿರಾರು ಜನರಿಗೆ ಲಾಭಕ್ಕಿಂತ ಹೆಚ್ಚು ಹಾನಿಯಾಗಿರುತ್ತದೆಯೆನ್ನುವ ವಾಸ್ತವವು ಅವರಿಗೆ ತಿಳಿದಿರುವುದಿಲ್ಲ. ವೈದ್ಯರ ಸಲಹೆಯಿಲ್ಲದೆ ಔಷಧಗಳನ್ನು ನೇರವಾಗಿ ಮಾರುವ ಔಷಧದ ಅಂಗಡಿಗಳಂತೆಯೇ ಆಸ್ಪತ್ರೆಗಳೂ, ಪರೀಕ್ಷಾ ಕೇಂದ್ರಗಳೂ ಅನಗತ್ಯವಾದ ಈ ಪರೀಕ್ಷೆಗಳಿಗಾಗಿ ಜನಸಾಮಾನ್ಯರನ್ನು ನೇರವಾಗಿ ತಮ್ಮತ್ತ ಸೆಳೆಯುತ್ತಿವೆ. ಕಂಪೆನಿ-ಬ್ಯಾಂಕು ಇತ್ಯಾದಿಗಳಲ್ಲಿ ಹಗಲು-ರಾತ್ರಿ ಬಂಧಿಗಳಾಗಿರುವವರು ತಮ್ಮ ಸಮಸ್ಯೆಗಳೊಂದಿಗೆ ತಮಗೆ ಬೇಕಾದ ವೈದ್ಯರನ್ನು ಕಾಣುವ ಬದಲಿಗೆ ತಮ್ಮ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿರುವ ಮಹಾ ಆಸ್ಪತ್ರೆಗಳು ಅಥವಾ ಮಹಾ ಪರೀಕ್ಷಾಲಯಗಳಿಗೇ ಹೋಗಿ ವರ್ಷಕ್ಕೊಮ್ಮೆ ಈ ಪರೀಕ್ಷೆಗಳನ್ನು ಮಾಡಿಸಿಕೊಂಡು ಅಲ್ಲಿ ಕೈಗಿತ್ತ ವರದಿಗಳನ್ನು ಹಿಡಿದು ಇನ್ನಷ್ಟು ಆತಂಕಿತರಾಗಿ ಮತ್ತಷ್ಟು ಪರೀಕ್ಷೆಗಳಿಗೂ, ಚಿಕಿತ್ಸೆಗಳಿಗೂ ಬಲಿಯಾಗುವಂತಹ ಸ್ಥಿತಿಯು ನಿರ್ಮಾಣವಾಗಿದೆ.

ಆದ್ದರಿಂದ ಆರೋಗ್ಯಸೇವೆಗಳು ದುಬಾರಿಯಾಗುತ್ತಿರುವ ಈ ದಿನಗಳಲ್ಲಿ ಇಂತಹಾ ಆಮೂಲಾಗ್ರ ಪರೀಕ್ಷೆಗಳಿಗೆ ಹಣ ಸುರಿದು ಮತ್ತಷ್ಟು ಆತಂಕಕ್ಕೊಳಗಾಗಿ ಇನ್ನಷ್ಟು ವ್ಯರ್ಥವೆಚ್ಚಕ್ಕೆ ಬಲಿಯಾಗುವ ಬದಲಿಗೆ, ದೇಹದಲ್ಲಾಗುವ ಯಾವುದೇ ಸೂಕ್ಷ್ಮವಾದ ಬದಲಾವಣೆಗಳನ್ನು ಕೂಡಲೇ ಗುರುತಿಸಿ, ತಜ್ಞವೈದ್ಯರ ಸಲಹೆಯಂತೆ ಮುಂದುವರಿಯುವುದೇ ಒಳ್ಳೆಯದು. ವೈದ್ಯರು ಕೂಡಾ ರೋಗಿಯ ಸಮಸ್ಯೆಯನ್ನು ತಾಳ್ಮೆಯಿಂದ ಆಲಿಸಿ, ಸವಿವರವಾಗಿ ಪರೀಕ್ಷಿಸಿ, ಸಂಭಾವ್ಯ ರೋಗಗಳನ್ನು ಗುರುತಿಸಿ, ಅತ್ಯಗತ್ಯವಾದ ವಿಶೇಷ ಪರೀಕ್ಷೆಗಳನ್ನಷ್ಟೇ ಮಾಡುವುದರಿಂದ ರೋಗಿಗೆ ಹೆಚ್ಚಿನ ಪ್ರಯೋಜನವಾಗಬಲ್ಲದು.

ಹದಿಮೂರನೇ ಬರಹ : ಯಾರು ಹಿತವರು ನಮಗೆ ಈ ಗುರುಗಳೊಳಗೆ [ಡಿಸೆಂಬರ್ 12, 2012, ಬುಧವಾರ] [ನೋಡಿ | ನೋಡಿ]

ಒಬ್ಬರಲ್ಲಿ ತುಂಬ ಜ್ಞಾನ, ಸ್ವಲ್ಪ ಹಣ; ಇನ್ನೊಬ್ಬರಲ್ಲಿ ತುಂಬ ಹಣ, ಅಲ್ಪ ಜ್ಞಾನ.

ಕಬ್ಬಿಣ, ನೆಲ, ಮರ, ಮರಳುಗಳ ವ್ಯಾಪಾರಿಯೊಬ್ಬರ ಒಡೆತನದ ವೈದ್ಯಕೀಯ ವಿದ್ಯಾಲಯದಲ್ಲಿದ್ದ ಒಬ್ಬ ಹಿರಿಯ, ಮತ್ತೊಬ್ಬ ಕಿರಿಯ ಪ್ರಾಧ್ಯಾಪಕರ ತುಲನೆಯಿದು. ಇವರಿಬ್ಬರನ್ನು ಎಲ್ಲೂ ಹುಡುಕದಿರಿ, ಯಾರಿಗೂ ಹೋಲಿಸದಿರಿ; ಹಾಗೊಮ್ಮೆ ಕಂಡರೂ, ಗುಸುಗುಸು ಮಾಡದೆ, ಕಾಕತಾಳೀಯವೆಂದು ಸುಮ್ಮನಿರಿ.

ಈ ಹಿರಿಯ ಪ್ರೊಫೆಸರು ತಮ್ಮ ಕಲಿಕೆಯುದ್ದಕ್ಕೂ ಮುಂಚೂಣಿಯಲ್ಲಿದ್ದವರು. ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ಪೂರ್ಣಕಾಲದ ಅಧ್ಯಾಪಕರಾಗಿ, ಕೊನೆಗೆ ವಿಭಾಗ ಮುಖ್ಯಸ್ಥರಾಗಿ ನಿವತ್ತರಾದವರು; ನಡೆದಾಡುವ ಜ್ಞಾನಕೋಶವೆಂದೇ ಹೆಸರುಳ್ಳವರಾಗಿ ಸರಳತೆ, ಪ್ರಾಮಾಣಿಕತೆಗಳಿಗೆ ಮಾದರಿಯಾಗಿದ್ದವರು. ಖಾಸಗಿ ವೈದ್ಯವತ್ತಿಯತ್ತ ಹೊರಳಿಯೂ ನೋಡಿರದ ಅವರು ಸರಕಾರಿ ಸೇವೆಯಿಂದ ನಿವತ್ತರಾದ ಬಳಿಕ ತನ್ನ ಸಹಪಾಠಿ ಪ್ರಾಂಶುಪಾಲನ ಒತ್ತಾಯಕ್ಕೆ ಮಣಿದು ಈ ಖಾಸಗಿ ಕಾಲೇಜನ್ನು ಸೇರಿದ್ದರು. ಇಲ್ಲೂ ಒಂಭತ್ತು ಗಂಟೆಗೆ ತೆರೆಯುವ ಆಸ್ಪತ್ರೆಗೆ ಎಂಟೂ ಮುಕ್ಕಾಲಕ್ಕೇ ತಲುಪಿ, ಹಾಜರಿ ಪುಸ್ತಕವಿಟ್ಟಲ್ಲಿಗೆ ತೆರಳಿ ಮೊದಲಿಗರಾಗಿ ಸಹಿ ಮಾಡುತ್ತಿದ್ದರು.

ಇತ್ತೀಚೆಗಷ್ಟೇ ಭಡ್ತಿ ಪಡೆದಿದ್ದ ಕಿರಿಯ ಪ್ರೊಫೆಸರು ತಮ್ಮ ಎಂಬಿಬಿಎಸ್ ವ್ಯಾಸಂಗವನ್ನು ಸ್ವಲ್ಪ ಪುರುಸೊತ್ತಲ್ಲೇ ಮುಗಿಸಿ ಸ್ನಾತಕೋತ್ತರ ಪರೀಕ್ಷೆಯಲ್ಲೂ ಸಾವಕಾಶವಾಗಿ ಉತ್ತೀರ್ಣರಾಗಿದ್ದವರು. ಖಾಸಗಿ ವೈದ್ಯ ವತ್ತಿಯೇ ಜೀವಾಳವಾಗಿದ್ದ ಅವರಿಗೆ ಈ ಕಾಲೇಜಿನ ಹುದ್ದೆ ಒಂದು ಅಡ್ಡ ಕಸುಬಿನಂತೆ, ಅವರ ಮಾತಿನಲ್ಲೇ ಹೇಳುವುದಾದರೆ ಲೆಟರ್ ಹೆಡ್ಡಿನಲ್ಲಿ ಹಾಕ್ಕೊಳ್ಳೋದಕ್ಕೆ’, ಅಷ್ಟೆ. ಅವರ ಪಾಲಿಗೆ ಕಾಲೇಜು ಹನ್ನೊಂದು-ಹನ್ನೆರಡಕ್ಕೆ ತೊಡಗುತ್ತಿದ್ದುದರಿಂದ ಹಾಜರಿ ಪುಸ್ತಕವೇ ಅವರನ್ನು ಹುಡುಕಿಕೊಂಡು ಬರುವ ವ್ಯವಸ್ಥೆಯನ್ನು ಮಾಡಿಕೊಂಡಿದ್ದು, ಕೊನೆಯ ಸಹಿ ಹಾಕುತ್ತಿದ್ದರು.

ಹಿರಿಯ ಪ್ರೊಫೆಸರು ಸರಕಾರಿ ಕಾಲೇಜಿನಲ್ಲಿದ್ದಾಗ ಭಡ್ತಿ ಪಡೆಯುವುದಕ್ಕೆ ಸಾಕಷ್ಟು ಕಷ್ಟ ಪಟ್ಟಿದ್ದರು. ಪ್ರೊಫೆಸರ್ ಆಗಬೇಕಿದ್ದರೆ ಎಂಟಾದರೂ ಪ್ರಕಟಿತ ಪ್ರಬಂಧಗಳಿರುವುದು ಅಪೇಕ್ಷಣೀಯವೆಂಬ ಭಾರತೀಯ ವೈದ್ಯಕೀಯ ಪರಿಷತ್ತಿನ (ಎಂಸಿಐ) ನಿಯಮಗಳ ಪಾಲನೆಗಾಗಿ ವರ್ಷಕ್ಕೆ ಎರಡಾದರೂ ಪ್ರಬಂಧಗಳನ್ನು ಅವರು ಪ್ರಕಟಿಸುತ್ತಿದ್ದರು. ಅಷ್ಟಾದರೂ, ಸರಕಾರಿ ಅಡೆತಡೆಗಳಿಂದಾಗಿ, ಮೇಲಿದ್ದವರು ನಿವತ್ತರಾದ ಐದಾರು ವರ್ಷಗಳ ನಂತರವೇ ಅವರು ಭಡ್ತಿ ಹೊಂದಿದ್ದರು. ಕಿರಿಯವರಿಗೆ ಈ ಕಷ್ಟಗಳಿರಲಿಲ್ಲ. ಎಂಸಿಐ ನಿಯಮಗಳೂ, ಖಾಸಗಿ ಕಾಲೇಜಿನ ಅಗತ್ಯಗಳೂ ಅವರಿಗೆ ಚೆನ್ನಾಗಿ ತಿಳಿದಿದ್ದವು. ಪ್ರಬಂಧಗಳೆಲ್ಲ ಅಪೇಕ್ಷಣೀಯವಷ್ಟೇ, ಅವಿಲ್ಲದಿದ್ದರೂ ಒಂಭತ್ತು ವರ್ಷ ಹಾಜರಿ ಹಾಕಿದರೆ ಭಡ್ತಿ ಸಿಕ್ಕೇ ಸಿಗುತ್ತದೆ; ಆಗ ತನ್ನ ಹೆಸರಲ್ಲಿ ವರ್ಷಕ್ಕೊಬ್ಬನನ್ನು ಎಂಡಿ ವ್ಯಾಸಂಗಕ್ಕೆ ಸೇರಿಸಿಕೊಳ್ಳಲು ಸಾಧ್ಯವಾಗಿ ಕಾಲೇಜಿಗೆ ವರ್ಷಕ್ಕೆ ಒಂದು ಕೋಟಿಯಷ್ಟು ಆದಾಯವಾಗುತ್ತದೆ; ಭಡ್ತಿ ನೀಡದಿದ್ದರೆ ಈ ಚಿನ್ನದ ಕೋಳಿ ಇನ್ನೊಂದೆಡೆಗೆ ಹಾರುವುದನ್ನು ತಡೆಯಲು ಸಾಧ್ಯವಿಲ್ಲ. ಇತ್ಯಾದಿ ಲೆಕ್ಕಗಳನ್ನೆಲ್ಲ ಅವರು ಮಾಡಿಯಾಗಿತ್ತು. ಪ್ರಬಂಧ ಬರೆದು ದಿಲ್ಲಿಯ ಎಂಸಿಐಯನ್ನು ಪಾಲಿಸುವುದಕ್ಕಿಂತ ಇಲ್ಲಿಯ ಪ್ರಾಂಶುಪಾಲರನ್ನು ಓಲೈಸಿದರೆ ಭಡ್ತಿಯೂ ಸಿಗುತ್ತದೆ, ಎಂಸಿಐ ಚಿಂತೆಯೂ ದೂರಾಗುತ್ತದೆ ಎನ್ನುವ ಅವರ ಯೋಜನೆಗೆ ಗೆಲುವಾಗಿತ್ತು. ಒಟ್ಟಿನಲ್ಲಿ, ಹಿರಿಯವರು ಪ್ರಬಂಧಗಳನ್ನು ಬರೆದರೂ ಸರಕಾರದ ಖರ್ಚಿನ ಲೆಕ್ಕಾಚಾರದಿಂದ ತಡವಾಗಿ ಭಡ್ತಿಯಾದರೆ, ಕಿರಿಯವರು ಪ್ರಬಂಧವಿಲ್ಲದೆಯೂ ಖಾಸಗಿ ಆದಾಯಕ್ಕಾಗಿ ಬೇಗನೇ ಭಡ್ತಿಯಾದರು.

ದಿನಗಳುರುಳಿದಂತೆ ಕಿರಿಯ ಪ್ರೊಫೆಸರು ಪ್ರಾಂಶುಪಾಲರಿಗೆ ಹತ್ತಿರವಾದರು, ಹಿರಿಯವರು ದೂರವಾದರು. ಕಾಲೇಜಿನ ಸಂದುಗೊಂದುಗಳ ಸಮಾಚಾರಗಳನ್ನು ಪ್ರಾಂಶುಪಾಲರಿಗೆ ತಲುಪಿಸುತ್ತಾ ಕಿರಿಯವರು ಹತ್ತಿರವಾದರೆ, ರೋಗಿಗಳ ಆರೈಕೆಯಲ್ಲೂ, ವಿದ್ಯಾರ್ಥಿಗಳ ಪಾಠಗಳಲ್ಲೂ ತಲ್ಲೀನರಾಗಿದ್ದ ಹಿರಿಯವರು ದೂರವೇ ಉಳಿದಿದ್ದರು. ಸಹಪಾಠಿಯಾಗಿದ್ದು ತನ್ನೆಲ್ಲಾ ಗುಟ್ಟುಗಳನ್ನು ಬಲ್ಲವನೆಂದು ಪ್ರಾಂಶುಪಾಲರೂ ಅವರನ್ನು ದೂರವಿಟ್ಟಿದ್ದರು; ಹೊಸ ಕಾಲೇಜಿಗೆ ಬೇರಾರೂ ಸಿಗಲಿಲ್ಲವೆಂದು ಕರೆಸಿದ್ದರೂ, ಇನ್ನವರು ಬೇಡವಾಗಿದ್ದರು.

ಹಿರಿಯವರು ಒಂದಿಷ್ಟು ವಿದ್ಯಾರ್ಥಿಗಳಿಗೂ ಬೇಡವಾಗಿದ್ದರು. ಅವರ ಒಂದೆರಡು ಗಂಟೆಗಳ ಸವಿವರವಾದ ಪಾಠಗಳಿಂದ ಕೆಲವರಲ್ಲಿ ಕಾಲು ನೋವು, ಆಕಳಿಕೆ ಇತ್ಯಾದಿ ತೊಂದರೆಗಳಾಗುತ್ತಿದ್ದವು. ಓದಿಕೊಳ್ಳದೆ ತಪ್ಪೆಸಗಿದ ವಿದ್ಯಾರ್ಥಿಗಳನ್ನು ಅವರು ಮೆತ್ತಗೆ ಗದರಿ, ಅಂಕಗಳನ್ನು ಕಡಿತ ಮಾಡುತ್ತಿದ್ದುದು ಕಿರಿಕಿರಿಗೆ ಕಾರಣವಾಗುತ್ತಿತ್ತು. ಆದರೆ ಕಿರಿಯವರು ಯಾವಾಗಲೂ ತಂಪಾಗಿರುತ್ತಿದ್ದು, ಹದಿನೈದು ನಿಮಿಷಗಳಲ್ಲೇ ಪಾಠವನ್ನು ಮುಗಿಸುತ್ತಿದ್ದರು. ಅದರಲ್ಲೂ ವೈದ್ಯಕೀಯ ಜ್ಞಾನಕ್ಕಿಂತ ಸಾಮಾನ್ಯ ಜ್ಞಾನಕ್ಕೇ ಒತ್ತು ನೀಡಿ ವಿದ್ಯಾರ್ಥಿಗಳ ಹೆತ್ತವರ ಬಗ್ಗೆ, ಉಡುಗೆ-ತೊಡುಗೆಗಳ ಬಗ್ಗೆ ಅಥವಾ ಸಿನಿಮಾಗಳ ಬಗ್ಗೆ ವಿಚಾರ ವಿನಿಮಯ ಮಾಡುತ್ತಿದ್ದರು. ಪರೀಕ್ಷೆಯಲ್ಲಿ ಒಂದೈದು ಪ್ರಶ್ನೆಗಳನ್ನು ಕೇಳುತ್ತಿದ್ದರಾದರೂ, ಸ್ವತಃ ಅವರಿಗೇ ಉತ್ತರಗಳು ಸ್ಪಷ್ಟವಿಲ್ಲದೆ ವಿದ್ಯಾರ್ಥಿಗಳು ಏನು ಹೇಳಿದರೂ ಪೂರ್ಣ ಅಂಕಗಳನ್ನೇ ನೀಡುತ್ತಿದ್ದರು.

ಕಿರಿಯ ಪ್ರಾಧ್ಯಾಪಕರ ಈ ಅಸಾಧಾರಣ ಚಾತುರ್ಯವು ಪ್ರಾಂಶುಪಾಲರಿಗೂ, ಆಡಳಿತದವರಿಗೂ ಮೆಚ್ಚುಗೆಯಾಗಿ, ಅಂತಿಮ ಪರೀಕ್ಷೆಗೆ ಅವರನ್ನೇ ಆಂತರಿಕ ಪರೀಕ್ಷಕರಾಗಿಯೂ, ಅವರ ಪರಮ ಮಿತ್ರರನ್ನೇ ಬಾಹ್ಯ ಪರೀಕ್ಷಕರಾಗಿಯೂ ನಿಯುಕ್ತಿಗೊಳಿಸಲಾಗುತ್ತಿತ್ತು. ಪರೀಕ್ಷಾರ್ಥಿಗಳಿಗೆ ಮುನ್ನಾದಿನವೇ ರೋಗಿಗಳನ್ನೆಲ್ಲ ತೋರಿಸಿ, ಪ್ರಶ್ನೆಗಳನ್ನೆಲ್ಲ ಕೇಳಿಸಿ ಹೆಚ್ಚಿನವರನ್ನು ಆತಂಕರಹಿತವಾಗಿ ವೈದ್ಯರನ್ನಾಗಿಸಲು ಸಾಧ್ಯವಾಗುತ್ತಿತ್ತು. ಹೀಗೆ, ದುಡ್ಡು ಕೊಟ್ಟ ಹೆತ್ತವರಿಗೂ, ಸೀಟು ಕೊಟ್ಟ ಕಾಲೇಜಿನ ಆಡಳಿತಕ್ಕೂ, ಕಲಿಕೆಯನ್ನು ಬಿಟ್ಟ ವಿದ್ಯಾರ್ಥಿಗಳಿಗೂ ನಿರಾಳತೆಯನ್ನೊದಗಿಸುತ್ತಿದ್ದ ಕಿರಿಯ ಪ್ರಾಧ್ಯಾಪಕರ ಖ್ಯಾತಿಯು ದಶದಿಕ್ಕುಗಳಲ್ಲೂ ಹರಡಿತ್ತು.

ಹಿರಿಯವರ ಬಗ್ಗೆ ಕೆಲ ರೋಗಿಗಳಿಗೂ ಅಸಮಾಧಾನವಿತ್ತು. ರೋಗಿಯನ್ನು ವಿವರವಾಗಿ ಪರೀಕ್ಷಿಸಲು ಅವರು ಇಪ್ಪತ್ತಕ್ಕೂ ಹೆಚ್ಚು ನಿಮಿಷಗಳನ್ನು ತೆಗೆದುಕೊಳ್ಳುತ್ತಿದ್ದರು; ಅನಗತ್ಯವಾದ ರಕ್ತ-ಮೂತ್ರಾದಿ ಪರೀಕ್ಷೆಗಳನ್ನು ನಡೆಸುತ್ತಿರಲಿಲ್ಲ, ಹೆಚ್ಚು ಮಾತ್ರೆಗಳನ್ನೂ, ಚುಚ್ಚುಮದ್ದುಗಳನ್ನೂ ನೀಡುತ್ತಿರಲಿಲ್ಲ. ಇದಕ್ಕಾಗಿಯೇ ಅವರೆಂತಹ ಡಾಕ್ಟ್ರು, ಸುಮ್ನೆ ನಿಧಾನ, ಟೆಸ್ಟೂ ಮಾಡ್ಸಲ್ಲ, ಮದ್ದೂ ಕೊಡಲ್ಲ’ ಎಂಬೆಲ್ಲ ದೂರುಗಳು ಹರಿದಾಡುತ್ತಿದ್ದವು. ಕಿರಿಯ ಪ್ರೊಫೆಸರೋ ಒಂದೇ ನಿಮಿಷದಲ್ಲಿ ರೋಗಿಯನ್ನು ನೋಡಿ, ಸ್ಕಾನು-ಗೀನು ಎಂದೆಲ್ಲಾ ಪರೀಕ್ಷೆಗಳನ್ನು ಮಾಡಿಸಿ ರೋಗಿಯ ಬೇಡಿಕೆಗೆ ಅನುಗುಣವಾಗಿ ಟಾನಿಕ್, ಇಂಜಕ್ಷನ್ ಇತ್ಯಾದಿ ಹಲ ಬಗೆಯ ಔಷಧಗಳನ್ನು ರಪರಪನೆ ಬರೆಯುತ್ತಿದ್ದುದರಿಂದ ಅವರೆದುರು ಅಂತಹಾ ಅಪೇಕ್ಷಿಗಳ ಸಾಲೇ ಕಾದು ನಿಲ್ಲುತ್ತಿತ್ತು. ಅಂತಹಾ ಹಲವರಲ್ಲಿ ಸಣ್ಣಪುಟ್ಟ ಖಾಯಿಲೆಗಳಿದ್ದು ತನ್ನಿಂತಾನಾಗಿ ಗುಣ ಹೊಂದುತ್ತಿದ್ದರೂ ಅದರ ಶ್ರೇಯವು ಕಿರಿಯವರ ಲೆಕ್ಕಕ್ಕೆ ಸೇರುತ್ತಿತ್ತು; ಕೆಲವರು ಅವರ ತಪ್ಪಿನಿಂದ ಬಿಗಡಾಯಿಸಿದರೆ ಯಾ ಜೀವ ಕಳೆದುಕೊಂಡರೆ ಆ ಕಳಂಕವೆಲ್ಲವೂ ಆಸ್ಪತ್ರೆಯ ವೈಫಲ್ಯದ ಲೆಕ್ಕಕ್ಕೆ ಜಮೆಯಾಗುತ್ತಿತ್ತು.

ಹೆಚ್ಚು ಪರೀಕ್ಷೆಗಳನ್ನಾಗಲೀ, ಔಷಧಗಳನ್ನಾಗಲೀ ಬಳಸದೆ ತಮ್ಮ ಜ್ಞಾನ ಹಾಗೂ ಕೌಶಲ್ಯಗಳಿಂದಲೇ ರೋಗಗಳನ್ನು ಗುರುತಿಸಿ ಚಿಕಿತ್ಸೆ ನೀಡುತ್ತಿದ್ದ ಹಿರಿಯವರು ಔಷಧ ಕಂಪೆನಿಗಳಿಗಾಗಲೀ ಆಸ್ಪತ್ರೆಯ ಆಡಳಿತಕ್ಕಾಗಲೀ ಇಷ್ಟವಾಗಿರಲಿಲ್ಲ. ಬರುತ್ತಿದ್ದ ಸಂಬಳದಲ್ಲೇ ತಪ್ತರಾಗಿ, ಯಾರಿಂದಲೂ ಏನನ್ನೂ ಅಪೇಕ್ಷಿಸದೆ, ಕಾಲೇಜು ಒದಗಿಸಿದ ಸಣ್ಣ ವಸತಿಯಲ್ಲೇ ಜೀವಿಸುತ್ತಿದ್ದ ಅವರು ಕಾಲೇಜಿನ ಬಸ್ಸಿನಲ್ಲೇ ಬರುತ್ತಿದ್ದರು. ಅವರಲ್ಲಿದ್ದ ಹವಾನಿಯಂತ್ರಣವಿಲ್ಲದ ಸಣ್ಣ ಕಾರು ಅಪರೂಪಕ್ಕೊಮ್ಮೆ ರಸ್ತೆಗಿಳಿಯುತ್ತಿದ್ದುದರಿಂದ ಕಾಲೇಜಿನಲ್ಲಿ ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಹೀಗೆ, ಅವರಲ್ಲಿ ಅಪಾರ ವಿದ್ವತ್ತಿದ್ದರೂ ಅಷ್ಟೇನೂ ಸಂಪತ್ತಿರಲಿಲ್ಲ.

ಔಷಧ ಕಂಪೆನಿಗಳಿಂದ ಹಿಡಿದು ಆಡಳಿತದವರೆಗೆ ಎಲ್ಲರ ಮೆಚ್ಚಿನವರಾಗಿದ್ದ ಕಿರಿಯವರಲ್ಲಿ ಹವಾನಿಯಂತ್ರಿತವಾದ, ದಾರಿ ಎತ್ತಲೆಂದು ಉಲಿಯುತ್ತಿದ್ದ ದೊಡ್ಡ ಠೀವಿಯ ಕಾರಿತ್ತು, ಅವರ ನಾಲ್ಕು ಕೋಟಿಯ ಬಂಗಲೆಯೊಳಗೆ ಪ್ರತೀ ಮೂಲೆಯಲ್ಲೂ ದೊಡ್ಡ ಪರದೆಯ ಟಿವಿಗಳಿದ್ದವು, ಇವನ್ನೆಲ್ಲ ಕಾಯುವುದಕ್ಕೆ ಆಳೆತ್ತರದ ನಾಯಿಗಳೂ ಇದ್ದವು. ಕಂಪೆನಿಗಳ ಕೃಪೆಯಿಂದ ವಾರಕ್ಕೊಂದು ಭೂರಿ ಭೋಜನವೂ, ವರ್ಷಕ್ಕೆಂಟು ವಿದೇಶ ಪರ್ಯಟನವೂ ಆಗುತ್ತಿದ್ದವು. ಇವರ ವಿದ್ವತ್ತು ಅಷ್ಟಕ್ಕಷ್ಟಿದ್ದರೂ, ಸಂಪತ್ತು ಹೇರಳವಾಗಿತ್ತು.

ಇಂತಿರಲಾಗಿ ಒಂದು ದಿನ ಹಿರಿಯ ಪ್ರೊಫೆಸರು ಆಸ್ಪತ್ರೆಗೆ ಬಂದೊಡನೆ ತೀವ್ರ ನಿಗಾ ಘಟಕಕ್ಕೆ ಹೋಗಬೇಕಾಗಿ ಹೊರರೋಗಿ ವಿಭಾಗವನ್ನು ತಲುಪುವಾಗ ಹದಿನೈದು ನಿಮಿಷ ತಡವಾಯಿತು. ಈ ಅವಕಾಶವನ್ನೇ ಕಾಯುತ್ತಿದ್ದ ಪ್ರಾಂಶುಪಾಲರು ಅವರಿಗೆ ನೋಟೀಸು ಕೊಟ್ಟೇ ಬಿಟ್ಟರು. ಪ್ರೊಫೆಸರು ಕೂಡಲೇ ರಾಜೀನಾಮೆ ಕೊಟ್ಟು ಹಳ್ಳಿಯಲ್ಲಿದ್ದ ಪಿತ್ರಾರ್ಜಿತ ಮನೆಯನ್ನು ಸೇರಿಬಿಟ್ಟರು. ಅದಾದ ಕೆಲ ತಿಂಗಳಲ್ಲಿ ಪ್ರಾಂಶುಪಾಲರೊಡನೆ ಬೇಕೆಂದೇ ಜಗಳವಾಡಿ ಕಿರಿಯ ಪ್ರಾಧ್ಯಾಪಕರೂ ರಾಜೀನಾಮೆಯಿತ್ತರು; ಮರುದಿನವೇ ಪಕ್ಕದ ಕಾಲೇಜಿನಲ್ಲಿ ಇನ್ನೂ ಹೆಚ್ಚಿನ ಸಂಬಳಕ್ಕೆ ವಿಭಾಗ ಮುಖ್ಯಸ್ಥರಾಗಿ ಸೇರಿದರು. ಕ್ಲಪ್ತವಾಗಿ ಕಲಿಸುತ್ತಿದ್ದವರು ಯಾರಿಗೂ ಬೇಡವಾಗಿ ವಿರಮಿಸಿದರೆ, ನಿತ್ಯವೂ ತಡವಾಗಿ ಬಂದು ಕಲಿಸದೇ ಇದ್ದವರು ಎಲ್ಲರಿಗೂ ಬೇಕಾದವರಾಗಿ ವಿಜೃಂಭಿಸಿದರು.

ಇತ್ತ ಹಿರಿಯವರನ್ನು ಮೆಚ್ಚಿಕೊಂಡಿದ್ದ ಒಂದಿಷ್ಟು ಶಿಷ್ಯಂದಿರು ಅವರ ಜ್ಞಾನರಾಶಿಯ ಅರ್ಧದಷ್ಟಾದರೂ ಅರಿಯುವ ಹಂಬಲದಲ್ಲಿದ್ದರೆ, ಕಿರಿಯವರನ್ನು ಹಚ್ಚಿಕೊಂಡಿದ್ದ ಒಂದಷ್ಟು ಶಿಷ್ಯಂದಿರು ಅವರ ಧನರಾಶಿಯ ದುಪ್ಪಟ್ಟಾದರೂ ಗಳಿಸುವ ತವಕದಲ್ಲಿದ್ದಾರೆ.

ಹನ್ನೆರಡನೇ ಬರಹ : ಮೂರ್ತ ಜೀವಗಳನ್ನು ಕೊಲ್ಲುವ ಅಮೂರ್ತ ಭ್ರಾಂತಿಗಳು [ನವಂಬರ್ 28, 2012, ಬುಧವಾರ] [ನೋಡಿ | ನೋಡಿ]

ಎಲ್ಲರಿಗಾಗಿರುವ ಕಾನೂನುಗಳಲ್ಲಿ ಧಾರ್ಮಿಕ ಕಟ್ಟುಪಾಡುಗಳ ನುಸುಳುವಿಕೆ ಸಲ್ಲದು

ಐರ್ಲೆಂಡಿನ ಆಸ್ಪತ್ರೆಯೊಂದರ ವೈದ್ಯರು ತಮ್ಮ ವೃತ್ತಿಧರ್ಮಕ್ಕಿಂತಲೂ ಮತಧರ್ಮವೊಂದರ ತಾಕೀತುಗಳಿಗೇ ಮನ್ನಣೆಯಿತ್ತು, ಅದಾಗಲೇ ಸಾಯಹೊರಟಿದ್ದ ಭ್ರೂಣವನ್ನು ಕೊಲ್ಲಲಾಗದೆಂದು ತುಂಬು ಚೈತನ್ಯದ ಹೆಣ್ಣಿನ ಸಾವಿಗೆ ಕಾರಣರಾದದ್ದು ಗರ್ಭಪಾತದ ನಿಯಮಗಳ ಬಗ್ಗೆ ವಿಶ್ವವ್ಯಾಪಿ ಚರ್ಚೆಯನ್ನು ಪ್ರಚೋದಿಸಿರುವುದರ ಜೊತೆಗೆ, ಸಾರ್ವಜನಿಕ ಜೀವನದಲ್ಲಿ ಧರ್ಮದ ಪಾಲ್ಗೊಳ್ಳುವಿಕೆಯ ಬಗ್ಗೆ ಇನ್ನೂ ದೊಡ್ಡದಾದ ಪ್ರಶ್ನೆಗಳನ್ನೆತ್ತಿದೆ. ಶಾಂತಿ-ಸೌಹಾರ್ದತೆಯನ್ನೇ ಬೋಧಿಸುವ ಧರ್ಮಗಳು ಯುದ್ಧ-ದೊಂಬಿ-ಭಯೋತ್ಪಾದನೆಗಳಿಗೆ ಪ್ರೇರಣೆಯಾಗುತ್ತಿರುವಂತೆಯೇ, ಕೈಕಾಲು ಮೂಡದಿರುವ ಭ್ರೂಣಗಳಲ್ಲೂ ದೇವರನ್ನು ಕಾಣುವ ಧರ್ಮನಿಯಮಗಳು ಪೂರ್ಣ ದೇಹದ, ಅರಿತ-ನುರಿತ ಮನುಷ್ಯರಲ್ಲಿ ಜೀವವಿರೋಧಿ ಸೈತಾನರನ್ನು ಕಂಡು ಅವರ ಸಾವುಗಳಿಗೆ ಕಾರಣವಾಗುತ್ತಿರುವುದರಿಂದ ಈ ಪ್ರಶ್ನೆಗಳು ಅತಿ ಪ್ರಸ್ತುತವೂ, ಮಹತ್ವಪೂರ್ಣವೂ ಆಗಿವೆ.

ಗರ್ಭಪಾತವು ಪ್ರಾಚೀನ ಕಾಲದಿಂದಲೂ, ಮತಧರ್ಮಗಳ ಹುಟ್ಟಿಗೂ ಮೊದಲು, ವಾಡಿಕೆಯಲ್ಲಿತ್ತು; ಅನಿವಾರ್ಯವಿದ್ದಾಗ ಎಲ್ಲಾ ಕಾಲಗಳಲ್ಲಿಯೂ, ಎಲ್ಲಾ ಸಮಾಜಗಳಲ್ಲಿಯೂ ನಡೆಯುತ್ತಲೇ ಇತ್ತು. ಇಂದಿಗೂ ಶೇ. 40ರಷ್ಟು ಮಹಿಳೆಯರು ಒಮ್ಮೆಯಾದರೂ ಗರ್ಭಪಾತ ಮಾಡಿಸಿಕೊಳ್ಳುತ್ತಾರೆ ಎನ್ನಲಾಗಿದೆ. ಬಯಸಿ ಪಡೆದ ಬಸುರು ಹೆಣ್ಣಿಗೆ ಅಪರಿಮಿತ ಆನಂದವನ್ನು ಕೊಡುವುದು ನಿಜವಾದರೂ, ಅದನ್ನು ಹೊತ್ತು, ಹೆತ್ತು, ಸಲಹುವ ಜವಾಬ್ದಾರಿಯೂ ಜೊತೆಗಿರುವುದರಿಂದ ಬಸುರಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯ, ಕುಟುಂಬದ ಸಾಮರ್ಥ್ಯ, ಇತರ ಮಕ್ಕಳ ಜವಾಬ್ದಾರಿ ಇವೇ ಮುಂತಾದ ಸಾಮಾಜಿಕ ಹಾಗೂ ಆರ್ಥಿಕ ವಿಚಾರಗಳೆಲ್ಲವೂ ಬಸುರನ್ನು ಮುಂದುವರಿಸುವಲ್ಲಿ ನಿರ್ಣಾಯಕವಾಗುತ್ತವೆ. ವಿವಾಹೇತರ ಸಂಬಂಧಗಳಿಂದ, ರಕ್ತಸಂಬಂಧಿಗಳಿಂದ ಅಥವಾ ಬಲಾತ್ಕಾರದಿಂದಾಗಿ ಬಸುರುಂಟಾದರೆ, ಅದರಲ್ಲೂ ಅಪ್ರಾಪ್ತ ವಯಸ್ಸಿನ ಹುಡುಗಿಯರಲ್ಲಾದರೆ, ಹಲಬಗೆಯ ಸಂಕಟಗಳಿಗೂ, ಮುಜುಗರಗಳಿಗೂ ಕಾರಣವಾಗಿ ಗರ್ಭಪಾತವು ಅನಿವಾರ್ಯವಾಗುತ್ತದೆ. ಶೇ. 25-50ರಷ್ಟು ಗರ್ಭಗಳು ತಾವಾಗಿ ಕಳಚಿಕೊಳ್ಳುವುದಿದ್ದು, ಅದರಿಂದ ಸಮಸ್ಯೆಗಳಾದರೂ ವೈದ್ಯಕೀಯ ಗರ್ಭಪಾತದ ನೆರವು ಬೇಕಾಗುತ್ತದೆ. ಹೀಗೆ, ತನ್ನೊಳಗಿನ ಗರ್ಭದ ಗತಿಯನ್ನು ನಿರ್ಧರಿಸುವುದಕ್ಕೆ ಹಾಗೂ ಅದರಿಂದುಂಟಾಗಬಲ್ಲ ಸಮಸ್ಯೆಗಳನ್ನು ನಿಭಾಯಿಸುವುದಕ್ಕೆ ಸಂಪೂರ್ಣ ಸ್ವಾತಂತ್ರ್ಯವನ್ನೂ, ಅದಕ್ಕೆ ಪೂರಕವಾದ ಸಾಮಾಜಿಕ ಸಹಾನುಭೂತಿಯನ್ನೂ, ವೈದ್ಯಕೀಯ ಸವಲತ್ತುಗಳನ್ನೂ, ಕಾನೂನಿನ ಬೆಂಬಲವನ್ನೂ ಹೆಣ್ಣಿಗೆ ಒದಗಿಸಬೇಕಾದದ್ದು ಎಲ್ಲಾ ಪ್ರಬುದ್ಧ ಸಮಾಜಗಳ ಹೊಣೆಯಾಗಿರುತ್ತದೆ.

ಸೋವಿಯತ್ ರಷ್ಯಾದಲ್ಲಿ ಲೆನಿನ್ ನೇತೃತ್ವದ ಆಡಳಿತವು 1920ರಲ್ಲಿ ಮೊತ್ತಮೊದಲು ಮಹಿಳೆಯರಿಗೆ ಅಂತಹಾ ಸ್ವಾತಂತ್ರ್ಯವನ್ನು ಒದಗಿಸಿತು. ಇಂದು ಭಾರತ, ಅಮೆರಿಕಾ, ಯೂರೋಪು ಹಾಗೂ ಮಧ್ಯಪ್ರಾಚ್ಯದ 130ಕ್ಕೂ ಹೆಚ್ಚು ದೇಶಗಳ ಕಾನೂನುಗಳನುಸಾರ 18-24 ವಾರಗಳೊಳಗಿನ ಗರ್ಭಿಣಿಯರು ತಾವು ಬಯಸಿದಾಗ ಸುರಕ್ಷಿತವಾಗಿ ವೈದ್ಯಕೀಯ ಗರ್ಭಪಾತವನ್ನು ಮಾಡಿಸಿಕೊಳ್ಳಬಹುದು. ನಮ್ಮಲ್ಲಿ 1971ರ ವೈದ್ಯಕೀಯ ಗರ್ಭಪಾತದ ಕಾನೂನಿನಂತೆ 18ರ ವಯಸ್ಸನ್ನು ಮೀರಿದ ಮಹಿಳೆಯು ಬಯಸಿದಲ್ಲಿ ತಜ್ಞವೈದ್ಯರ ನೆರವಿನಿಂದ 20 ವಾರಗಳೊಳಗೆ ಲಿಂಗಾಧಾರಿತವಲ್ಲದ ಗರ್ಭಪಾತವನ್ನು ಮಾಡಿಸಿಕೊಳ್ಳಬಹುದು. ಆದರೆ ಐರ್ಲೆಂಡ್, ಇರಾನ್, ಇರಾಕ್, ಹಾಗೂ ದಕ್ಷಿಣ ಅಮೆರಿಕಾ, ಆಫ್ರಿಕಾ ಮತ್ತು ಆಗ್ನೇಯ ಏಷ್ಯಾದ ಸುಮಾರು 60 ದೇಶಗಳಲ್ಲಿ ವಿವಿಧ ಧರ್ಮಗಳಿಂದ ಪ್ರೇರಿತವಾದ ತೀರಾ ಕಠಿಣವಾದ ಕಾನೂನುಗಳಿದ್ದು, ಬಸುರಿಯ ಪ್ರಾಣಾಪಾಯವನ್ನುಳಿದು ಬೇರೆ ಕಾರಣಗಳಿಗಾಗಿ ಗರ್ಭಪಾತವನ್ನು ಮಾಡಿಸುವಂತಿಲ್ಲ.

ಆದರೆ ಬಸುರನ್ನಿಳಿಸಬಯಸುವ ಹೆಣ್ಣನ್ನು ಯಾವುದೇ ಧರ್ಮದಿಂದ ಅಥವಾ ಕಾನೂನುಗಳಿಂದ ತಡೆಯಲು ಸಾಧ್ಯವಾಗದು. ನಮ್ಮಲ್ಲಿ 1971ಕ್ಕೆ ಮೊದಲು ಬ್ರಿಟಿಷರ ಕಾಲದ (1860) ದಂಡ ಸಂಹಿತೆಯಡಿ ಗರ್ಭಪಾತ ಮಾಡುವುದೂ, ಮಾಡಿಸಿಕೊಳ್ಳುವುದೂ 3-7 ವರ್ಷಗಳ ಶಿಕ್ಷಾರ್ಹ ಅಪರಾಧವಾಗಿದ್ದುದರಿಂದ ಗುಟ್ಟಾಗಿ ಬಸುರಿಳಿಸಲೆತ್ನಿಸಿ ಅಸಂಖ್ಯಾತ ಮಹಿಳೆಯರು ಸಾವಿಗೀಡಾಗುತ್ತಿದ್ದರು. ಇಂದು ಲ್ಯಾಟಿನ್ ಅಮೆರಿಕಾ ಹಾಗೂ ಆಫ್ರಿಕಾದ ದೇಶಗಳಲ್ಲಿ ಕಠಿಣವಾದ ನಿರ್ಬಂಧಗಳಿದ್ದರೂ, ಗರ್ಭಧಾರಣೆಯ ಪ್ರಮಾಣವು ಹೆಚ್ಚಿರುವುದರಿಂದ ಗರ್ಭಪಾತಗಳೂ ಅತಿ ಹೆಚ್ಚಿನ (ಸಾವಿರಕ್ಕೆ 30) ಸಂಖ್ಯೆಯಲ್ಲಾಗುತ್ತವೆ. ಆದರೆ, ಯೂರೋಪಿನ ಹಲವು ದೇಶಗಳಲ್ಲಿ ಗರ್ಭಪಾತಕ್ಕೆ ಪೂರ್ಣ ಸ್ವಾತಂತ್ರ್ಯವಿದ್ದರೂ ಗರ್ಭಧಾರಣೆಯು ಯೋಜಿತವಾಗಿ, ಕಡಿಮೆಯಾಗಿರುವುದರಿಂದ ಅತಿ ಕಡಿಮೆ (ಸಾವಿರಕ್ಕೆ 12) ಗರ್ಭಪಾತಗಳಾಗುತ್ತವೆ. ಗರ್ಭಪಾತಕ್ಕೆ ತೊಡಕಿರುವೆಡೆಗಳಲ್ಲಿ ಅನುಕೂಲಸ್ಥ ಮಹಿಳೆಯರು ಹೊರದೇಶಗಳಿಗಾದರೂ ಹೋಗಿ ಸುರಕ್ಷಿತವಾಗಿ ಬಸುರಿಳಿಸಿಕೊಂಡರೆ, ಹಾಗೆ ಮಾಡಲಾಗದವರು, ಅಥವಾ ಸವಿತಾಳಂತೆ ತುರ್ತುಸ್ಥಿತಿಗಳಲ್ಲಿ ಸಿಕ್ಕಿಕೊಂಡವರು, ಒಂದೋ ಆಸ್ಪತ್ರೆಗಳಲ್ಲೇ ಸಾವನ್ನಪ್ಪುತ್ತಾರೆ ಅಥವಾ ಅಸುರಕ್ಷಿತ ವಿಧಾನಗಳನ್ನೋ ಯಾ ಸ್ವಂತ ವಿಧಾನಗಳನ್ನೋ ಪ್ರಯತ್ನಿಸಿ ತೊಂದರೆಗೀಡಾಗುತ್ತಾರೆ. ಸರಕಾರ ಕೊಟ್ಟರೂ ಸಮಾಜ ಬಿಡದು ಎಂಬಂತಿರುವ ನಮ್ಮಲ್ಲಿ ಸುರಕ್ಷಿತ ಗರ್ಭಪಾತಕ್ಕೆ ಕಾನೂನಿನ ಮನ್ನಣೆಯಿದ್ದರೂ ಅಜ್ಞಾನ, ಬಡತನ ಹಾಗೂ ಸಾಮಾಜಿಕ ಮತ್ತು ಧಾರ್ಮಿಕ ಕಾರಣಗಳಿಂದ ಅಡ್ಡಿಯುಂಟಾಗಿ ಅಸುರಕ್ಷಿತ ವಿಧಾನಗಳ ಮೊರೆ ಹೋಗುವಂತಾಗುತ್ತದೆ. ಪ್ರತೀ ವರ್ಷ ವಿಶ್ವದಲ್ಲಾಗುವ 5 ಕೋಟಿ ಗರ್ಭಪಾತಗಳಲ್ಲಿ 2 ಕೋಟಿಯಷ್ಟು ಅಸುರಕ್ಷಿತವಾಗಿದ್ದು (ಈ ಪೈಕಿ ಶೇ. 98ರಷ್ಟು ಬೆಳೆಯುತ್ತಿರುವ ದೇಶಗಳಲ್ಲಾಗುತ್ತವೆ), ಇದರಿಂದ ವರ್ಷಕ್ಕೆ 50000 ಮಹಿಳೆಯರು ಸಾವನ್ನಪ್ಪುತ್ತಾರೆ ಹಾಗೂ ಲಕ್ಷಗಟ್ಟಲೆ ಹಾನಿಗೊಳಗಾಗುತ್ತಾರೆ. ಪ್ರತೀ ವರ್ಷ ನಮ್ಮ ದೇಶದಲ್ಲಾಗುವ ಒಂದು ಕೋಟಿಗೂ ಹೆಚ್ಚು ಗರ್ಭಪಾತಗಳಲ್ಲಿ ಅರ್ಧದಷ್ಟು ಅಸುರಕ್ಷಿತವಾಗಿದ್ದು, 20000ಕ್ಕೂ ಹೆಚ್ಚು ಸಾವುಗಳಿಗೆ ಕಾರಣವಾಗುತ್ತಿವೆ. ಆದ್ದರಿಂದ ಬಸುರಿಳಿಸಬಯಸುವ ಮಹಿಳೆಯರಿಗೆ ಧಾರ್ಮಿಕ ಯಾ ನೈತಿಕ ಬೋಧನೆಗಳ ಬದಲಿಗೆ ಉತ್ತಮ ವೈದ್ಯಕೀಯ ಸೌಲಭ್ಯಗಳನ್ನೂ, ವೈಧಾನಿಕ ಹಾಗೂ ಆರ್ಥಿಕ ಬೆಂಬಲವನ್ನೂ ಒದಗಿಸಿದರೆ ಈ ಸಾವು-ನೋವುಗಳನ್ನೆಲ್ಲ ತಡೆಯಬಹುದು.

ಸುರಕ್ಷಿತ ಗರ್ಭಪಾತಕ್ಕೆ ಧರ್ಮಪ್ರೇರಿತ ಕಾನೂನುಗಳೇ ಅತಿ ದೊಡ್ಡ ತೊಡಕಾಗಿದ್ದರೂ, ಯಾವುದೇ ಪ್ರಮುಖ ಧರ್ಮಗ್ರಂಥಗಳಲ್ಲಿ ಗರ್ಭಪಾತಕ್ಕೆ ನಿಷೇಧವಿಲ್ಲ, ಬಸುರಿ ಸಾಯುವಂತಿದ್ದರೂ ಗರ್ಭಪಾತ ಮಾಡಬಾರದೆಂದೂ ಹೇಳಿಲ್ಲ, ಗರ್ಭಪಾತದ ಅನಿವಾರ್ಯತೆಯನ್ನು ನಿರಾಕರಿಸುವ ಅವಿವೇಕತನವೂ ಅವುಗಳಲ್ಲಿಲ್ಲ. ಬದಲಿಗೆ, ಧರ್ಮಕಾರ್ಯಗಳ ಗುತ್ತಿಗೆದಾರರಂತೆ ವರ್ತಿಸುವವರು ಇವನ್ನು ತಮ್ಮಿಷ್ಟದಂತೆ ವಿಶ್ಲೇಷಿಸಿ, ಸಮಾಜದ ಮೇಲೆ ತಮ್ಮ ಆಣತಿಯನ್ನು ಹೇರಲೆತ್ನಿಸುವಾಗ ಸರಕಾರಗಳು ಸರ್ವರ ಹಿತ ಕಾಯುವುದನ್ನು ಬಿಟ್ಟು ಅವರ ಮುಂದೆ ಮಂಡಿಯೂರುವುದರಿಂದಲೇ ಇಂತಹಾ ತೊಡಕುಗಳು ಸೃಷ್ಟಿಯಾಗುತ್ತಿವೆ. ಈ ಧರ್ಮಪ್ರಚಾರಕರ ವರಸೆಗಳಲ್ಲಿ ಎದ್ದು ತೋರುವ ಎಡೆಬಿಡಂಗಿತನವೇ ಇದಕ್ಕೆ ಪುರಾವೆಯಾಗಿದೆ. ಗರ್ಭಪಾತ ಮಾಡಿಸಿಕೊಳ್ಳಬಲ್ಲ ಹೆಣ್ಣು ಬೇರೆಯವರನ್ನೂ ಕೊಲ್ಲಬಲ್ಲಳು ಎಂಬ ವಾದದಲ್ಲಿ ಹೆಣ್ಣಿನ ಪ್ರಬುದ್ಧತೆಯ ಕೀಳಂದಾಜು ಮಾತ್ರವಲ್ಲ, ನಿಜಜೀವನದ ಕಷ್ಟಗಳ ಬಗ್ಗೆ ಧರ್ಮಪ್ರಚಾರಕರ ವಿಚಾರಶೂನ್ಯತೆಯೂ ಕಾಣುತ್ತದೆ. ಗರ್ಭಾಂಕುರವಾಗಿ ಮಗುವಿನ ಜನನವಾಗುವವರೆಗೆ ಯಾವ ಹಂತದಲ್ಲಿ ಅದು ಮನುಷ್ಯನಾಗುತ್ತದೆ ಎನ್ನುವ ಬಗ್ಗೆಯೂ ವಿವಿಧ ಧರ್ಮಗಳಲ್ಲಿ ಒಮ್ಮತಾಭಿಪ್ರಾಯವಿಲ್ಲ. ಕೆಲವು ಮೊದಲ ದಿನ ಎಂದರೆ, ಇನ್ನು ಕೆಲವು ಮಧ್ಯದಲ್ಲಿ ಎಂದೂ, ಮತ್ತೆ ಕೆಲವು ಹುಟ್ಟಿನಲ್ಲಿ ಎಂದೂ ವ್ಯಾಖ್ಯಾನಿಸುತ್ತವೆ. ಗರ್ಭಾಂಕುರದ ಘಳಿಗೆಯಿಂದ ವಂಶವಾಹಿಗಳಲ್ಲೇ ಮನುಷ್ಯನನ್ನು ಕಾಣುವ ಧರ್ಮವು ಅವೇ ವಂಶವಾಹಿಗಳಲ್ಲಿರುವ ಜೀವವಿಕಾಸದ ಸಾಕ್ಷ್ಯವನ್ನು ನಿರಾಕರಿಸುತ್ತದೆ! ಇಂತಹಾ ವಿರೋಧಾಭಾಸಗಳ ನಡುವೆ, ಒಂದು ಧರ್ಮದ ಆಧಾರದಲ್ಲಿ ರಚಿತವಾದ ಕಾನೂನನ್ನು ಉಳಿದೆಲ್ಲರೂ ಪಾಲಿಸಬೇಕೆನ್ನುವುದು ಹುಚ್ಚಾಟವೇ ಸರಿ.

ಗರ್ಭದಲ್ಲಿರುವ ಜೀವವನ್ನುಳಿಸಬೇಕೆಂದು ಬೊಬ್ಬಿರಿಯುವ ಧರ್ಮನಿಷ್ಠರ ಬೂಟಾಟಿಕೆಯನ್ನು ಧರ್ಮಗಳ ಹೆಸರಲ್ಲಿ ಬಿದ್ದಿರುವ, ಬೀಳುತ್ತಿರುವ ಹೆಣಗಳಲ್ಲಿ ಎಣಿಕೆ ಮಾಡಬಹುದು. ಸುರಕ್ಷಿತ ಗರ್ಭಪಾತದಿಂದ ವಂಚಿತರಾಗಿ ಸತ್ತ ಬಸುರಿಯರು, ಬಸುರಿಳಿಸಿದ್ದಕ್ಕಾಗಿ ಧರ್ಮಾಂಧರಿಂದ ಕೊಲೆಯಾದ ತಜ್ಞವೈದ್ಯರು, ಕೆಲವು ಧರ್ಮಪ್ರಚಾರಕರ ಹಾಗೂ ಸ್ವಯಂಘೋಷಿತ ದೇವಮಾನವರ ಕಾಮತೃಷೆಯಿಂದ ಬಸುರಾದ ಅಸಂಖ್ಯಾತ ಪ್ರಕರಣಗಳಲ್ಲಿ ಆಮಿಷಕ್ಕೋ, ಬೆದರಿಕೆಗೋ ಮಣಿದು ಕೀಳಿಸಲ್ಪಟ್ಟ ಭ್ರೂಣಗಳು ಅಥವಾ ನೇಣಿಗೇರಿದ ಯಾ ಕೊಲೆಗೀಡಾದ ಅಮಾಯಕ ಹೆಣ್ಮಕ್ಕಳು, ಕುಲಧರ್ಮಕ್ಕಾಗಿ ನಮ್ಮಲ್ಲಿ ಪ್ರತೀ ವರ್ಷ ಬಲಿಯಾಗುತ್ತಿರುವ 5 ಲಕ್ಷಕ್ಕೂ ಹೆಚ್ಚು ಹೆಣ್ಣು ಭ್ರೂಣಗಳು, ಕಳೆದ ಎರಡು ಸಾವಿರ ವರ್ಷಗಳಲ್ಲಿ ಮತ-ಧರ್ಮ-ಪಂಗಡಗಳ ಹೆಸರಲ್ಲಿ ನಡೆದಿರುವ, ನಡೆಯುತ್ತಿರುವ ಯುದ್ಧ-ನರಮೇಧ-ದೊಂಬಿಗಳಲ್ಲಿ ಸಾವನ್ನಪ್ಪಿರುವ 70 ಕೋಟಿಗೂ ಹೆಚ್ಚು ನಿರಪರಾಧಿಗಳು ಈ ಧರ್ಮಗಳ ಜೀವಪ್ರೇಮವನ್ನೂ, ನೈತಿಕ ಬಂಡವಾಳವನ್ನೂ ಪ್ರಶ್ನಿಸುತ್ತಿದ್ದಾರೆ.

ಇಂದು ಬಹುತೇಕ ಎಲ್ಲ ದೇಶಗಳೂ ಬಹುಧರ್ಮೀಯ, ಬಹುವರ್ಣೀಯ, ಬಹುಸಾಂಸ್ಕೃತಿಕ ಸಮಾಜಗಳಾಗಿರುವುದರಿಂದ ಯಾವುದೇ ಒಂದು ಧರ್ಮದ ಕಲ್ಪನೆಗಳನ್ನು ಸಾಂವಿಧಾನಿಕ ನೀತಿನಿರೂಪಣೆಯಲ್ಲಿ ಸೇರಿಸುವುದು ಅಸಂಗತವೂ, ಅನ್ಯಾಯವೂ, ಅಪಾಯಕಾರಿಯೂ, ಅಮಾನವೀಯವೂ ಆಗುತ್ತದೆ. ಮನದೊಳಗಿನ ಧರ್ಮವು ಮನೆಯಲ್ಲಷ್ಟೇ ಇದ್ದು, ಗರ್ಭಪಾತ, ಚಿಕಿತ್ಸೆಯ ಆಯ್ಕೆಗಳೂ ಸೇರಿದಂತೆ ಅದರ ಕಟ್ಟುಪಾಡುಗಳೆಲ್ಲವೂ ಪಾಲಿಸಲಿಚ್ಛಿಸುವವರಿಗಷ್ಟೇ ಸೀಮಿತವಾಗಿರಬೇಕಲ್ಲದೆ, ಸಾರ್ವಜನಿಕ ಜೀವನಕ್ಕೆ, ವೈದ್ಯವೃತ್ತಿಗೆ ಮತ್ತು ಸರಕಾರಗಳಿಗೆ ತಟ್ಟಬಾರದು. ‘ನಾನು ನಿಮ್ಮ ದೇಶದವಳೂ ಅಲ್ಲ, ನಿಮ್ಮ ಧರ್ಮದವಳೂ ಅಲ್ಲ, ನಂಜೇರುತ್ತಿರುವ ಗರ್ಭವನ್ನು ಕಿತ್ತು ನನ್ನನ್ನುಳಿಸಿ’ ಎಂದ ಸವಿತಾಳ ಆಕ್ರಂದನವು ಧರ್ಮ, ವರ್ಣ, ದೇಶ, ಭಾಷೆಗಳೆಂಬ ಭ್ರಾಂತಿಗಳ ನಂಜಿನಲ್ಲಿ ನರಳುತ್ತಿರುವ ಮನುಕುಲದ ಕೂಗೂ ಆಗಿದೆ.

ಹನ್ನೊಂದನೇ ಬರಹ : ಮಕ್ಕಳ ದಿನದಂದೇ ಮಧುಮೇಹ ದಿನದ ವಿಪರ್ಯಾಸ [ನವಂಬರ್ 14, 2012, ಬುಧವಾರ] [ನೋಡಿ | ನೋಡಿ]

ಇಂದಿನಿಂದ ಮಕ್ಕಳಿಗೆ ಸಿಹಿಯುಣಿಸುವುದನ್ನು ನಿಲ್ಲಿಸಿ, ಮಧುಮೇಹದಿಂದ ರಕ್ಷಿಸಿ

ಇಂದು ವಿಶ್ವ ಮಧುಮೇಹ ದಿನ, ನಮ್ಮಲ್ಲಿ ಮಕ್ಕಳ ದಿನವೂ ಹೌದು. ಮೇದೋಜೀರಕಾಂಗದಿಂದ ಇನ್ಸುಲಿನ್ ಹಾರ್ಮೋನನ್ನು ಪ್ರತ್ಯೇಕಿಸಿ, ಮಧುಮೇಹವುಳ್ಳವರಿಗೆ ಜೀವದಾಯಿಯಾದ ಫ್ರೆಡರಿಕ್ ಬಾಂಟಿಂಗ್ (1891) ಹಾಗೂ ನಮ್ಮ ಮಕ್ಕಳ ಭವಿಷ್ಯವು ಉಜ್ವಲವಾಗಿರಬೇಕೆಂದು ಬಯಸಿದ್ದ ಚಾಚಾ ನೆಹರೂ (1889) ಹುಟ್ಟಿದ ದಿನವಿದು. ಔಷಧ ಕಂಪೆನಿಗಳು ಕೊಟ್ಟ ಬಿಳಿ ಅಂಗಿ ಮತ್ತು ಪುಗ್ಗೆಗಳೊಂದಿಗೆ ಮುಖ್ಯ ರಸ್ತೆಗಳಲ್ಲಿ ಓಡಿ, ಕೊನೆಗೆ ಬಿಸ್ಕತ್ತು ತಿಂದು ಹಣ್ಣಿನ ರಸ ಕುಡಿದು ಮಧುಮೇಹ ನಿಯಂತ್ರಿಸುವ ಪಣ ತೊಡುವುದು ಒಂದೆಡೆ; ಸಿದ್ಧತಿನಿಸುಗಳ ಕಂಪೆನಿ ಕೊಟ್ಟ ಸಿಹಿ ಹಂಚಿ ಮಕ್ಕಳ ಭವಿಷ್ಯ ಬೆಳಗಲಿ ಎಂದು ಹಾರೈಸುವುದು ಇನ್ನೊಂದೆಡೆ. ವಿಪರ್ಯಾಸವೆಂದರೆ, ಭವಿಷ್ಯವನ್ನು ಸಂರಕ್ಷಿಸಿ ಎಂಬ ಧ್ಯೇಯವಾಕ್ಯವುಳ್ಳ ಮಧುಮೇಹ ಓಟದಲ್ಲಿ ಈ ವರ್ಷ ಮಕ್ಕಳೂ ಓಡುತ್ತಿದ್ದಾರೆ.

ಮಧುಮೇಹ ಉಂಟಾಗುವುದೇಕೆ? ನಾವು ತಿನ್ನುವ ವಿವಿಧ ಧಾನ್ಯಗಳು, ಚಮಚದ ಸಕ್ಕರೆ, ಹಣ್ಣುಗಳು ಮತ್ತಿತರ ಶರ್ಕರಗಳೆಲ್ಲವೂ ನಮ್ಮ ಕರುಳಲ್ಲಿ ಗ್ಲೂಕೋಸ್ ಯಾ ಫ್ರಕ್ಟೋಸ್ ಆಗಿ ಒಡೆದು ರಕ್ತವನ್ನು ಸೇರುತ್ತವೆ. ಮೇದೋಜೀರಕಾಂಗದ ಬಾಲದಲ್ಲಿರುವ ಬೀಟಾ ಕಣಗಳು ಸ್ರವಿಸುವ ಇನ್ಸುಲಿನ್ ಎಂಬ ಹಾರ್ಮೋನಿನ ನೆರವಿನಿಂದ ನಮ್ಮ ದೇಹವು ಗ್ಲೂಕೋಸನ್ನು ಬಳಸಿಕೊಳ್ಳುತ್ತದೆ; ಈ ವ್ಯವಸ್ಥೆಯು ಕೆಟ್ಟರೆ ರಕ್ತದ ಗ್ಲೂಕೋಸ್ ಪ್ರಮಾಣವು ಏರಿ, ಹಲವು ತೊಂದರೆಗಳಿಗೆ ಕಾರಣವಾಗುತ್ತದೆ. ಬೀಟಾಕಣಗಳು ಸಂಪೂರ್ಣವಾಗಿ ನಾಶಗೊಂಡು ಇನ್ಸುಲಿನ್ ಇಲ್ಲದೇ ಬದುಕಲಾಗದಂತಹ ಸ್ಥಿತಿಯನ್ನು ಒಂದನೇ ವಿಧದ ಮಧುಮೇಹ ಎನ್ನುತ್ತೇವೆ. ಬೀಟಾ ಕಣಗಳ ಸಾಮರ್ಥ್ಯವು ಕಡಿಮೆಯಾಗಿ ಅಥವಾ ಇನ್ಸುಲಿನ್ ಕೆಲಸಕ್ಕೆ ಅಡ್ಡಿಯಾಗಿ ಗ್ಲೂಕೋಸ್ ಬಳಕೆಗೆ ತೊಂದರೆಯಾಗುವುದನ್ನು ಎರಡನೇ ವಿಧದ ಮಧುಮೇಹ ಎನ್ನಲಾಗುತ್ತದೆ.

ಇಂದು ವಿಶ್ವದಾದ್ಯಂತ 34 ಕೋಟಿಯಷ್ಟು (ಭಾರತದಲ್ಲಿ ಆರು ಕೋಟಿಗೂ ಹೆಚ್ಚು) ಮಧುಮೇಹ ಪೀಡಿತರಿದ್ದು, ಅವರಲ್ಲಿ ಶೇ. 90-95ರಷ್ಟು ಎರಡನೇ ವಿಧದ ಮಧುಮೇಹವನ್ನೇ ಹೊಂದಿದ್ದಾರೆ. ಈ ಸಂಖ್ಯೆಯು ಒಂದೇ ಸವನೆ ಏರುತ್ತಿದ್ದು, ಮುಂದಿನ 10-15 ವರ್ಷಗಳಲ್ಲಿ ದುಪ್ಪಟ್ಟಾಗಬಹುದೆಂದು ಅಂದಾಜಿಸಲಾಗಿದೆ. ಮೂರ್ನಾಲ್ಕು ದಶಕಗಳ ಹಿಂದೆ 50-60ರ ವಯಸ್ಸಿನಲ್ಲಿ ಹೆಚ್ಚಾಗಿ ಕಾಣಿಸುತ್ತಿದ್ದ ಎರಡನೇ ವಿಧದ ಮಧುಮೇಹವು ನಂತರದಲ್ಲಿ 20-40ರಲ್ಲೇ ಗೋಚರಿಸಲಾರಂಭಿಸಿ, ಕಳೆದೊಂದು ದಶಕದಿಂದ 8-10 ವರ್ಷದ ಮಕ್ಕಳಲ್ಲೂ ಉಂಟಾಗುತ್ತಿದೆ; ಕಳೆದ ದಶಕದಲ್ಲಿ ಅಂತಹಾ ಮಕ್ಕಳ ಸಂಖ್ಯೆಯು 10-30 ಪಟ್ಟು ಹೆಚ್ಚಾಗಿದೆ. ಮೊದಲೆಲ್ಲ ಸ್ಥಿತಿವಂತರಲ್ಲೇ ಹೆಚ್ಚಾಗಿದ್ದ ಈ ಕಾಹಿಲೆ ಇಂದು ಕೆಳ ಮಧ್ಯಮ ವರ್ಗದವರನ್ನೂ ಕಾಡತೊಡಗಿದೆ. ಎಪ್ಪತ್ತರ ದಶಕದಲ್ಲಿ ಶೇ. 3ರಷ್ಟು ನಗರವಾಸಿಗಳಲ್ಲಿ ಮಧುಮೇಹವಿದ್ದರೆ, ಇಂದು ಶೇ. 10-20ರಷ್ಟು ನಗರವಾಸಿಗಳಲ್ಲೂ, ಶೇ. 2-8ರಷ್ಟು ಗ್ರಾಮೀಣ ವಾಸಿಗಳಲ್ಲೂ ಕಂಡುಬರುತ್ತಿದೆ. ಹೀಗಾಗುವುದಕ್ಕೆ ವಂಶವಾಹಿಗಳಿಂದ ಹಿಡಿದು, ಕೆಲಸದ ಒತ್ತಡ ಹಾಗೂ ಸಂಚಾರ ಮಾಲಿನ್ಯಗಳವರೆಗೆ ಹಲವಾರು ಕಾರಣಗಳನ್ನು ನೀಡಲಾಗುತ್ತಿದ್ದು, ಅವುಗಳಿಗೆ ಹೆಚ್ಚೇನೂ ಮಾಡಲಾಗದೆಂದು ಚಿಕಿತ್ಸೆಗೇ ಒತ್ತು ಕೊಡಲಾಗುತ್ತಿದೆ.

ಮಧುಮೇಹ, ಬೊಜ್ಜು, ಹೃದ್ರೋಗ ಇವೇ ಮುಂತಾದ ಆಧುನಿಕ ರೋಗಗಳು ಇಷ್ಟೊಂದು ಹೆಚ್ಚುತ್ತಿರುವುದಕ್ಕೆ ನಿಜವಾದ ಕಾರಣಗಳೇನೆನ್ನುವುದು ತಿಳಿದರೆ ಇವನ್ನೆಲ್ಲ ತಡೆಯುವುದು ಸುಲಭವಾದೀತು. ನಾವಿಂದು ಪ್ರಕೃತಿಯ ಮಡಿಲನ್ನು ಬಿಟ್ಟು ಕಾಂಕ್ರೀಟು ಕಾಡುಗಳನ್ನು ಕಟ್ಟಿಕೊಂಡು, ನಿಸರ್ಗದತ್ತವಾದ ಜೀವಭರಿತ ಆಹಾರಗಳ ಬದಲಿಗೆ ಕಾರ್ಖಾನೆದತ್ತವಾದ ಜೀವರಹಿತ, ಸಂಸ್ಕರಿತ ವಸ್ತುಗಳನ್ನು ಸೇವಿಸುತ್ತಿರುವುದೇ ಈ ಎಲ್ಲಾ ರೋಗಗಳಿಗೆ ಕಾರಣವೆನ್ನುವುದಕ್ಕೆ ಬಲವಾದ ಪುರಾವೆಗಳು ಇದೀಗ ಲಭ್ಯವಾಗುತ್ತಲಿವೆ, ನಮ್ಮ ದೇಹ ಪ್ರಕೃತಿ ಬದಲಾಗದೆ ಪ್ರವೃತ್ತಿಯಷ್ಟೇ ಬದಲಾಗಿರುವುದರ ಗಂಭೀರತೆಯು ಅರ್ಥವಾಗತೊಡಗಿದೆ. ನಮ್ಮ ದೇಹವು ನಿಸರ್ಗದತ್ತವಾದ ಆಹಾರವನ್ನು ಬಳಸಿಕೊಳ್ಳುವುದಕ್ಕೆಂದೇ ರೂಪುಗೊಂಡಿದ್ದು, ನಮ್ಮ ಅಸ್ತಿತ್ವದ ಎರಡು ಲಕ್ಷ ವರ್ಷಗಳ ಅವಧಿಯುದ್ದಕ್ಕೂ ಬೇಟೆಗೆ ಸಿಕ್ಕ ಪ್ರಾಣಿ-ಪಕ್ಷಿಗಳು, ಅಲೆದು ಹುಡುಕಿದ ಹಲಬಗೆಯ ಸಸ್ಯಗಳು ಹಾಗೂ ಬೀಜಗಳು, ಅಪರೂಪಕ್ಕೊಮ್ಮೆ ದೊರೆಯುತ್ತಿದ್ದ ಕಾಡಿನ ಹಣ್ಣುಗಳು ಹಾಗೂ ಬೇರೇನೂ ದೊರೆಯದಾಗ ಅಗೆದು ತೆಗೆಯುತ್ತಿದ್ದ ಗೆಡ್ಡೆಗಳೇ ನಮ್ಮ ಆಹಾರಗಳಾಗಿದ್ದವು. ಆದರೆ ಸುಮಾರು ಹತ್ತು ಸಾವಿರ ವರ್ಷಗಳಿಂದೀಚೆಗೆ ನಾವು ಧಾನ್ಯಗಳನ್ನು ಬೆಳೆಯತೊಡಗಿದ ಬಳಿಕ ಅವೇ ನಮ್ಮ ಮುಖ್ಯ ಆಹಾರಗಳಾಗಿಬಿಟ್ಟವು. ಕಾಲಕ್ರಮೇಣ ಈ ಧಾನ್ಯಗಳನ್ನು ಪುಡಿಗಟ್ಟಿ ತಯಾರಿಸಿದ ಬ್ರೆಡ್ಡು ಇತ್ಯಾದಿಗಳನ್ನು ತಿನ್ನತೊಡಗಿ, ಈಗ ಅವುಗಳೇ ನಮ್ಮ ನಿತ್ಯಾಹಾರಗಳಾಗಿಬಿಟ್ಟಿವೆ. ಧಾನ್ಯಗಳು, ಸಕ್ಕರೆ, ಹಣ್ಣಿನ ರಸಗಳು ಹಾಗೂ ಆಕಳ ಹಾಲಿನಿಂದಲೇ ಸಿದ್ಧಗೊಳ್ಳುವ ಇಂದಿನ ಆಧುನಿಕ ತಿನಿಸುಗಳು ನಮ್ಮ ಪ್ರಾಚೀನ ಶರೀರಕ್ಕೆ ಒಗ್ಗದೆ, ನಮ್ಮ ಪಚನಾಂಗದ ಸೂಕ್ಷ್ಮ ಪ್ರಕ್ರಿಯೆಗಳನ್ನು, ಪಚನಾಂಗ ಮತ್ತು ಮೆದುಳಿನ ನಡುವಿನ ಸಂವಹನವನ್ನು, ಹಸಿವು-ಸಂತೃಪ್ತಿಗಳ ನಿಯಂತ್ರಣವನ್ನು ಹಾಗೂ ಸಂಕೀರ್ಣವಾದ ಉಪಾಪಚಯವನ್ನು ಕೆಡಿಸಿ ರೋಗಗಳಿಗೆ ಕಾರಣವಾಗುತ್ತಿವೆ. ಅಗತ್ಯಕ್ಕಿಂತ ಹೆಚ್ಚು ತಿಂದ ಸಕ್ಕರೆಯು ಮೇದಸ್ಸಾಗಿ ಪರಿವರ್ತನೆಗೊಂಡು ಉದರ, ಯಕೃತ್ತು, ಸ್ನಾಯುಗಳು, ಹೃದಯ, ರಕ್ತನಾಳಗಳು, ಮೇದೋಜೀರಕಾಂಗ ಮುಂತಾದೆಡೆ ಶೇಖರಗೊಳ್ಳುವುದರಿಂದ ಬೊಜ್ಜು, ರಕ್ತನಾಳಗಳ ಖಾಯಿಲೆ ಇತ್ಯಾದಿ ಉಂಟಾಗುವುದಲ್ಲದೆ, ಇನ್ಸುಲಿನ್ ಹಾರ್ಮೋನಿನ ಕೆಲಸಕ್ಕೂ ಅಡ್ಡಿಯುಂಟಾಗಿ, ಕೊನೆಗೆ ಅದರ ವೈಫಲ್ಯಕ್ಕೂ, ಎರಡನೇ ವಿಧದ ಮಧುಮೇಹಕ್ಕೂ ಕಾರಣವಾಗುತ್ತಿದೆ.

ಇಂತಹ ಆಧುನಿಕ ತಿನಿಸುಗಳು ನಮ್ಮ ಪಚನಾಂಗದೊಳಗಿರುವ ಬ್ಯಾಕ್ಟೀರಿಯಾಗಳ ಸಮತೋಲನವನ್ನೂ ಏರುಪೇರು ಮಾಡುತ್ತವೆ. ನಮ್ಮ ಬಾಯಿಯಲ್ಲೂ, ದೊಡ್ಡ ಕರುಳಿನಲ್ಲೂ 500ಕ್ಕೂ ಹೆಚ್ಚು ವಿಧದ ಬ್ಯಾಕ್ಟೀರಿಯಾಗಳು ಲಕ್ಷ ಕೋಟಿಗಟ್ಟಲೆ ಸಂಖ್ಯೆಯಲ್ಲಿದ್ದು, ಅಲ್ಲಿನ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸುವುದರ ಜೊತೆಗೆ ಶರ್ಕರಪಿಷ್ಠಗಳನ್ನು ಜೀರ್ಣಿಸುವಲ್ಲಿಯೂ ನೆರವಾಗುತ್ತವೆ. ಈ ಬ್ಯಾಕ್ಟೀರಿಯಾಗಳು ಸರಿಯಾಗಿರಬೇಕಾದರೆ ಸೊಪ್ಪು-ತರಕಾರಿಗಳಂತಹ ಜೀವಂತ ಶರ್ಕರಗಳನ್ನೇ ನಾವು ಸೇವಿಸಬೇಕು; ಜೀವವಿಲ್ಲದ ಸಂಸ್ಕರಿತ ತಿನಿಸುಗಳನ್ನೂ, ಸಕ್ಕರೆಭರಿತವಾದ ತಿನಿಸುಗಳನ್ನೂ ಸೇವಿಸುವುದರಿಂದ ರೋಗಕಾರಕ ಬ್ಯಾಕ್ಟೀರಿಯಾಗಳು ಬೆಳೆದು, ದೇಹದಲ್ಲಿ ಉರಿಯೂತವನ್ನು ಹೆಚ್ಚಿಸಿ ಬೊಜ್ಜು, ಮಧುಮೇಹ ಮುಂತಾದ ಕಾಯಿಲೆಗಳಿಗೆ ಕಾರಣವಾಗುತ್ತವೆ. ಇತ್ತೀಚಿನ ವರ್ಷಗಳಲ್ಲಿ ಮಕ್ಕಳಲ್ಲಿ ಒಂದನೇ ವಿಧದ ಮಧುಮೇಹವೂ ಹೆಚ್ಚುತ್ತಿದ್ದು, ವೈರಾಣುಗಳ ಸೋಂಕಷ್ಟೇ ಅಲ್ಲದೆ ಶಿಶುವಿಗೆ ಆರು ತಿಂಗಳಾಗುವ ಮೊದಲೇ ದನದ ಹಾಲನ್ನು ನೀಡುವುದು ಹಾಗೂ ಗೋಧಿಯನ್ನು ಬೇಗನೇ ಕೊಡಲಾರಂಭಿಸುವುದು ಬೀಟಾ ಕಣಗಳ ನಾಶಕ್ಕೆ ಕಾರಣಗಳಾಗಿರಬಹುದೆಂದು ಹೇಳಲಾಗಿದೆ.

ಜನಸಮುದಾಯಗಳ ಆಹಾರ ಪದ್ಧತಿಯನ್ನೂ, ಆಧುನಿಕ ರೋಗಗಳ ಇರುವಿಕೆಯನ್ನೂ ಹೋಲಿಸಿದರೆ ಇದು ಇನ್ನಷ್ಟು ಸ್ಪಷ್ಟವಾಗುತ್ತದೆ. ಮೂರ್ನಾಲ್ಕು ಸಾವಿರ ವರ್ಷಗಳ ಹಿಂದೆಯೇ ಬ್ರೆಡ್ಡು ಮುಂತಾದ ಸಂಸ್ಕರಿತ ಆಹಾರಗಳನ್ನು ತಿನ್ನಲಾರಂಭಿಸಿದ್ದ ಈಜಿಪ್ಷಿಯನರ ಮಮ್ಮಿಗಳಲ್ಲಿ ಆಧುನಿಕ ರೋಗಗಳ ಕುರುಹುಗಳನ್ನು ಗುರುತಿಸಲಾಗಿದ್ದರೆ, ಇಂದಿಗೂ ಜಗತ್ತಿನ ವಿವಿಧೆಡೆಗಳಲ್ಲಿ ಆಧುನಿಕತೆಯ ಸೋಂಕಿಲ್ಲದೆ, ನಿಸರ್ಗದತ್ತವಾದ ಸೊಪ್ಪು, ಮೀನು, ಮಾಂಸಗಳನ್ನಷ್ಟೇ ತಿಂದು ಬದುಕುತ್ತಿರುವ ಇನ್ನೂರಕ್ಕೂ ಹೆಚ್ಚು ಮೂಲನಿವಾಸಿ ಸಮುದಾಯಗಳಲ್ಲಿ ಇಂತಹಾ ರೋಗಗಳ ಕುರುಹೇ ಇಲ್ಲವೆಂದು ಅಧ್ಯಯನಗಳು ತೋರಿಸಿವೆ. ನಾವಂತೂ ಸಕ್ಕರೆ, ಧಾನ್ಯಗಳು, ಹಾಲು ಮತ್ತು ಹಣ್ಣುಗಳಿಂದ ಸಿದ್ಧಪಡಿಸಿದ ವಸ್ತುಗಳನ್ನೇ ತಿನ್ನಬೇಕಾದಂತಹ ಪ್ರಮೇಯಕ್ಕೆ ಸಿಲುಕಿದ್ದು, ಪ್ರತೀ ಮನೆಯಲ್ಲೂ ಒಂದಿಲ್ಲೊಂದು ರೋಗವುಳ್ಳವರನ್ನು ಹೊಂದಿರುವಂತಾಗಿದೆ. ದೊಡ್ಡವರು ತಿನ್ನುವಷ್ಟೇ ಗಾತ್ರದ ಐಸ್ ಕ್ರೀಂ, ಚಾಕಲೇಟು, ಪೇಯಗಳು, ಹಣ್ಣಿನ ರಸಗಳನ್ನೆಲ್ಲ ಮಕ್ಕಳಿಗೂ ತಿನ್ನಿಸುತ್ತಿರುವುದರಿಂದ. ಹಿಂದೆ 50-60 ವರ್ಷಗಳಲ್ಲಿ ಒಬ್ಬಾತ ತಿನ್ನುತ್ತಿದ್ದ ಶರ್ಕರಗಳ ಒಟ್ಟು ಪ್ರಮಾಣವನ್ನು ಇಂದಿನ ಮಕ್ಕಳು 8-10 ವರ್ಷಗಳಲ್ಲೇ ತಿನ್ನುವಂತಾಗಿ, ಮಕ್ಕಳೂ ಆಧುನಿಕ ರೋಗಗಳಿಗೆ ತುತ್ತಾಗುವಂತಾಗಿದೆ. ಹೀಗೆ, ಕಳೆದ ಶತಮಾನದ ಆರಂಭದಲ್ಲಿ ತಲಾವಾರು ಸಕ್ಕರೆಯ ಬಳಕೆಯು ವರ್ಷಕ್ಕೆ 20 ಕಿಲೋಗಳಿಷ್ಟಿದ್ದಾಗ ಲಕ್ಷಕ್ಕೆ ಮೂವರಲ್ಲಿ ಮಧುಮೇಹವಿದ್ದರೆ, ಈ ಶತಮಾನದ ಆರಂಭಕ್ಕೆ ಅದು 50 ಕಿಲೋಗಳಷ್ಟಾಗಿ, ಲಕ್ಷಕ್ಕೆ 8000 ಜನರಲ್ಲಿ ಮಧುಮೇಹವಿರುವಂತಾಗಿದೆ.

ಹುಟ್ಟಿದಂದಿನಿಂದಲೇ ಅನೈಸರ್ಗಿಕವಾದ ತಿನಿಸುಗಳನ್ನು ಅನಿಯಂತ್ರಿತವಾಗಿ ತಿನ್ನುತ್ತಿರುವುದೇ ಆಧುನಿಕ ರೋಗಗಳಿಗೆ ಅತಿ ಮುಖ್ಯವಾದ ಕಾರಣವಾಗಿರುವುದರಿಂದ ಅವುಗಳಿಗೆ ಕಡಿವಾಣ ಹಾಕಬೇಕೆಂದು ಹತ್ತು ವರ್ಷಗಳ ಹಿಂದೆಯೇ ವಿಶ್ವ ಆರೋಗ್ಯ ಸಂಸ್ಥೆಯ ವರದಿಯಲ್ಲಿ (ಸಂ. 916) ಎಚ್ಚರಿಸಲಾಗಿದ್ದರೂ, ಸಕ್ಕರೆ ಉದ್ಯಮ, ಲಘು ಪೇಯಗಳ ತಯಾರಕರು ಹಾಗೂ ಅಮೆರಿಕಾದ ಆಡಳಿತದ ಬೆದರಿಕೆಯಿಂದಾಗಿ ಅದು ಮೂಲೆ ಸೇರಿದೆ. ಸಕ್ಕರೆ ತಿಂದರೆ ಸಕ್ಕರೆ ಕಾಹಿಲೆ ಬರದೆಂದು ಸುಳ್ಳು ಹೇಳುತ್ತಾ, ಸಕ್ಕರೆಯನ್ನು ಭರ್ಜರಿಯಾಗಿ ಮಾರುವುದೂ, ಅದರಿಂದ ಬರುವ ರೋಗಗಳಿಗಾಗಿ ಮಹಾ ಆಸ್ಪತ್ರೆಗಳನ್ನು ಕಟ್ಟುವುದೂ ಮುಂದುವರಿದಿವೆ. ಆದ್ದರಿಂದ ನಮ್ಮ ಹಾಗೂ ಮಕ್ಕಳ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಆಧುನಿಕತೆಯಿಂದ ಪ್ರಾಚೀನತೆಗೆ ನಾವಾಗಿ ಪಥ್ಯಾಂತರ ಮಾಡಬೇಕಾಗಿದೆ. ಇಂದಿನಿಂದ ಮಕ್ಕಳಿಗೆ ಎಲ್ಲಾ ಸಿಹಿಯುಳ್ಳ, ಸಂಸ್ಕರಿತ ತಿನಿಸುಗಳನ್ನು ನಿರ್ಬಂಧಿಸಿ, ತರಕಾರಿಗಳು, ಮೊಳೆತ ಕಾಳುಗಳು, ಬೀಜಗಳು, ಮೀನು, ಮಾಂಸ, ಮೊಟ್ಟೆಗಳಂತಹ ಮನುಷ್ಯ ಸಹಜ ಆಹಾರವನ್ನು ನೀಡುವ ಮೂಲಕ ಅವರು ಮಧುಮೇಹ ದಿನದಲ್ಲಿ ಭಾಗಿಗಳಾಗುವ ದುರಂತವನ್ನು ತಪ್ಪಿಸೋಣ.

ಹತ್ತನೇ ಬರಹ : ಪ್ರಾರ್ಥನೆಯಿಂದ ರೋಗ ನಿವಾರಣೆ ಸಾಧ್ಯವೇ? [ಅಕ್ಟೋಬರ್ 31, 2012, ಬುಧವಾರ (ನೋಡಿ | ನೋಡಿ)]

ಅಗೋಚರ ಶಕ್ತಿಗಳನ್ನಷ್ಟೇ ನಂಬಿ ಮನುಷ್ಯ ಪ್ರಯತ್ನವನ್ನು ಕೈಬಿಡಬಾರದು

ಇಪ್ಪತ್ತೊಂದರ ಸ್ಫುರದ್ರೂಪಿ ತರುಣನೊಬ್ಬ ಮೊನ್ನೆ ಆಸ್ಪತ್ರೆಗೆ ತಲುಪುವಾಗಲೇ ಹೆಣವಾಗಿದ್ದ. ವಾರದ ಮೊದಲು ಆತ ತಲೆನೋವು, ಜ್ವರ, ವಾಂತಿಯೆಂದು ಇನ್ನೊಂದು ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗ ಮೆದುಳುಪರೆಯ ಕ್ಷಯರೋಗವೆಂದು ಚಿಕಿತ್ಸೆಯನ್ನು ಆರಂಭಿಸಲಾಗಿತ್ತು. ಆದರೆ ಎರಡು ದಿನಗಳಲ್ಲಿ ಅಷ್ಟೊಂದು ಚೇತರಿಕೆ ಕಾಣಿಸದಿದ್ದಾಗ ಅದು ಚಾಮುಂಡಿಯ ಕಾಟವಿರಬೇಕು ಎಂದ ನೆರೆಮನೆಯಾತನ ಮಾತನ್ನು ನಂಬಿ ಆತನನ್ನು ಆಸ್ಪತ್ರೆಯಿಂದ ಬಿಡಿಸಿಕೊಂಡು ಊರಿನ ಮಂತ್ರವಾದಿಯ ಬಳಿಗೊಯ್ಯಲಾಗಿತ್ತು. ತಂತ್ರ-ತಾಯಿತಗಳ ಪ್ರಯೋಗದ ನಾಲ್ಕನೇ ದಿನ ಬೆಳಗ್ಗೆ ಆತ ಅಪಸ್ಮಾರ ಬಂದು ಬಿದ್ದವನು ಮತ್ತೆ ಏಳಲಿಲ್ಲ.

ಇಪ್ಪತ್ತೊಂದನೇ ಶತಮಾನದಲ್ಲಿ, ‘ಬುದ್ಧಿವಂತರ’ ಜಿಲ್ಲೆಯಲ್ಲಿ, ಸಾಕಷ್ಟು ವಿದ್ಯಾವಂತರೇ ಇರುವ ಕುಟುಂಬವೊಂದರಲ್ಲಿ ನಡೆದ ಘಟನೆ ಇದು. ದೊಡ್ಡ ವೈದ್ಯಕೀಯ ವಿದ್ಯಾಲಯವೊಂದರ ನರರೋಗ ತಜ್ಞರು ಎಂಆರ್ ಐ ಮತ್ತಿತರ ಅತ್ಯುನ್ನತ ಪರೀಕ್ಷೆಗಳಿಂದ ರೋಗವನ್ನು ನಿಖರವಾಗಿ ಗುರುತಿಸಿ, ಅದನ್ನು ಸಂಪೂರ್ಣವಾಗಿ ಗುಣಪಡಿಸಲು ಸೂಚಿಸಿದ ಚಿಕಿತ್ಸೆಗಿಂತಲೂ ಯಾರೋ ನೆರೆಯವನು ಸೂಚಿಸಿದ ಚಾಮುಂಡಿ ಕಾಟ ಹಾಗೂ ತಂತ್ರ-ತಾಯಿತಗಳನ್ನೇ ಮನೆಯವರು ಹೆಚ್ಚು ನಂಬಿದರು, ಅದರಿಂದ ಕೆಟ್ಟರು. ಹಾಗೆ ಕೆಟ್ಟವರು ಹಲವರಿದ್ದರೂ ಇಂತಹಾ ಘಟನೆಗಳು ಆಗಾಗ ಮರುಕಳಿಸುತ್ತಲೇ ಇರುತ್ತವೆ. ವಿವಿಧ ಖಾಯಿಲೆ-ಕಷ್ಟಗಳ ಪರಿಹಾರಕ್ಕಾಗಿ ಪ್ರಾರ್ಥನೆಗಳು, ಪೂಜೆಗಳು, ಹರಕೆಗಳು, ಮಾಟ-ಮಂತ್ರಗಳು, ತೀರ್ಥಯಾತ್ರೆಗಳು, ಬರಿಗಾಲ ನಡಿಗೆಗಳು, ಮಡೆ ಮಡಸ್ತಾನಗಳು ಅಥವಾ ಎಂಜಲ ಮೇಲೆ ಉರುಳು ಸೇವೆಗಳು, ಕ್ರೂರ ವಿಧಾನಗಳಾದ ಸಿಡಿ ಏರುವುದು, ಬಿಸಿ ಎಣ್ಣೆಯಲ್ಲಿ ಅದ್ದುವುದು, ಮಕ್ಕಳನ್ನು ಎಸೆಯುವುದು ಇವೇ ಮುಂತಾದ ಆಚರಣೆಗಳು ಜಗತ್ತಿನೆಲ್ಲೆಡೆ ನಡೆಯುತ್ತಿರುತ್ತವೆ. ರೋಗನಿಗ್ರಹಕ್ಕಾಗಿ ಅಗೋಚರ ಶಕ್ತಿಗೆ ಮೊರೆಯಿಡುವ ಈ ವಿವಿಧ ಕ್ರಮಗಳು ಅತಿ ದೊಡ್ಡ ಬದಲಿ ಚಿಕಿತ್ಸಾ ವ್ಯವಸ್ಥೆಯಾಗಿ ಅಸ್ತಿತ್ವದಲ್ಲಿವೆ ಎಂದರೂ ತಪ್ಪಾಗದು.

ರೋಗಗಳನ್ನು ದೆವ್ವ-ದೇವರುಗಳಿಗೆ ಆರೋಪಿಸುವುದು ಅತಿ ಪ್ರಾಚೀನವಾದ ಅಭ್ಯಾಸಗಳಲ್ಲೊಂದು. ಅನಾರೋಗ್ಯವೂ ಸೇರಿದಂತೆ ತನಗರಿವಿಲ್ಲದೆ ಬಂದೊದಗಿದ ಕಷ್ಟ-ಕಾರ್ಪಣ್ಯಗಳಿಗೆಲ್ಲ ಅಲೌಕಿಕ ಶಕ್ತಿಗಳ ಆಟ, ಕಾಟಗಳನ್ನೇ ಹೊಣೆಯಾಗಿಸಿ, ಅವುಗಳನ್ನು ಮಣಿಸಲು ಮಾಟ-ಮಂತ್ರ-ತಂತ್ರಗಳನ್ನಷ್ಟೇ ನಡೆಸುತ್ತಿದ್ದ ಕಾಲವಿತ್ತು. ಮನುಷ್ಯನ ಅರಿವು ವಿಸ್ತಾರಗೊಂಡಂತೆ ರೋಗಗಳಿಗೆ ಲೌಕಿಕ ಕಾರಣಗಳನ್ನು ಹುಡುಕುವುದಾಯಿತು, ಕೈಗೆಟಕುತ್ತಿದ್ದ ಹಿತ್ತಲ ಗಿಡಗಳನ್ನೂ, ಇನ್ನಿತರ ವಸ್ತುಗಳನ್ನೂ ಔಷಧಗಳಾಗಿ ಬಳಸಲಾರಂಭವಾಯಿತು. ಪ್ರಾಚೀನ ವೈದ್ಯ ಪದ್ಧತಿಯಾದ ಆಯುರ್ವೇದದಲ್ಲಿ ಔಷಧಗಳ ಜೊತೆಗೆ ಮಂತ್ರ-ತಂತ್ರ-ತೀರ್ಥಯಾತ್ರೆಗಳ ದೈವವ್ಯಪಾಶ್ರಯ ಚಿಕಿತ್ಸೆಯನ್ನೂ ಬಳಸಲಾಗುತ್ತಿತ್ತು (ಸೂತ್ರ ಸ್ಥಾನ,11:54). ದೇವರು-ದೆವ್ವಗಳ ಹಂಗನ್ನು ಕಳಚಿಕೊಂಡ ಆಧುನಿಕ ವೈದ್ಯ ವಿಜ್ಞಾನವು ಕಳೆದ ಎರಡೂವರೆ ಸಾವಿರ ವರ್ಷಗಳಲ್ಲಿ, ಅದರಲ್ಲೂ ಹದಿನೈದನೇ ಶತಮಾನದಿಂದೀಚೆಗಿನ ಕಾಲದಲ್ಲಿ, ರೋಗಗಳ ಕಾರಣ ಹಾಗೂ ಚಿಕಿತ್ಸೆಗಳ ಹುಡುಕಾಟದಲ್ಲಿ ಅದ್ಭುತವಾದ ಪ್ರಗತಿಯನ್ನೇ ಸಾಧಿಸಿತು, ಇಂದಿಗೂ ಹೊಸ ಹೊಸ ತಂತ್ರಜ್ಞಾನಗಳ ಮೂಲಕ ಅದು ಇನ್ನೂ ಆಳಕ್ಕಿಳಿದು ಬೆಳೆಯುತ್ತಿದೆ. ಹಾಗೆಂದು ದೆವ್ವ-ದೇವರುಗಳ ಹೆಸರಲ್ಲಿ ಕಾರ್ಯ ಪ್ರವತ್ತರಾದವರೇನೂ ಹಿಂಜರಿದಿಲ್ಲ. ರೋಗ ನಿವಾರಣೆಗೆ ವಿವಿಧ ಪ್ರಾರ್ಥನೆಗಳನ್ನೂ, ದಾರಿಗಳನ್ನೂ ಸೂಚಿಸುತ್ತಾ, ಮೇಲಿನ ಶಕ್ತಿಗಳನ್ನು ಮೆಚ್ಚಿಸಿದರೆ ಎಲ್ಲಾ ಕಷ್ಟಗಳನ್ನೂ ಪರಿಹರಿಸಬಹುದೆನ್ನುವ ಭರವಸೆಯನ್ನು ನೀಡುತ್ತಾ ತಾವೂ ಚಿಕಿತ್ಸಕರಾಗುಳಿಯಲು ಹವಣಿಸುತ್ತಿರುತ್ತಾರೆ.

ಆಧುನಿಕ ವೈದ್ಯ ವಿಜ್ಞಾನವು ಅಲೌಕಿಕ-ಅಗೋಚರ ಶಕ್ತಿಗಳ ಸಂಬಂಧವನ್ನು ಕಳಚಿಕೊಂಡಿದ್ದರೂ, ಬಹುತೇಕ ಜನರಲ್ಲಿ ಅಂತಹಾ ನಂಬಿಕೆಗಳು ಇನ್ನೂ ಗಟ್ಟಿಯಾಗಿರುವುದು ರೋಗಚಿಕಿತ್ಸೆಯಲ್ಲಿ ಹಲಬಗೆಯ ಗೊಂದಲಗಳಿಗೆ ಕಾರಣವಾಗುತ್ತಿದೆ. ರೋಗಿಗಳು ಮತ್ತು ಧಾರ್ಮಿಕ-ಆಧ್ಯಾತ್ಮಿಕ ವತ್ತಿಯವರಲ್ಲಷ್ಟೇ ಅಲ್ಲ, ವೈದ್ಯರಲ್ಲೂ ಸಾಕಷ್ಟು ಆಸ್ತಿಕರಿರುವುದರಿಂದ ಅಲೌಕಿಕ ಶಕ್ತಿಗಳ ನೆರವನ್ನು ಬೇಡುವ ಪರಿಪಾಠವು ಅವರೆಲ್ಲರಲ್ಲೂ ಕಂಡುಬರುತ್ತದೆ. ನಂಬಿಕೆಗಳ ಶಕ್ತ್ಯಾನುಸಾರ ಇವು ಬೇರೆ ಬೇರೆ ಮಟ್ಟಗಳಲ್ಲಿರುತ್ತವೆ. ರೋಗವನ್ನು ಕರುಣಿಸಿದ ದೈವೇಚ್ಛೆಯನ್ನು ಮೀರಬಾರದೆನ್ನುವ ಕಾರಣಕ್ಕೆ ಎಲ್ಲಾ ಚಿಕಿತ್ಸೆಯನ್ನೂ ನಿರಾಕರಿಸುವ ಧರ್ಮನಿಷ್ಠರೂ, ಚಿಕಿತ್ಸೆಯ ಜೊತೆಯಲ್ಲೇ ದೈವಬಲಕ್ಕಾಗಿ ಪ್ರಾರ್ಥಿಸುವ ಭಕ್ತರೂ, ಕೇವಲ ಆಧುನಿಕ ವೈದ್ಯವಿಜ್ಞಾನವನ್ನೇ ನೆಚ್ಚಿಕೊಂಡಿರುವ ಸಂಪೂರ್ಣ ನಾಸ್ತಿಕರೂ ನಮ್ಮಲ್ಲಿದ್ದಾರೆ. ಅತ್ಯಾಧುನಿಕ ಆಸ್ಪತ್ರೆಗಳನ್ನು ನಡೆಸುವ ಧಾರ್ಮಿಕ ಸಂಸ್ಥೆಗಳೂ ಇವೆ, ಎಲ್ಲಾ ಆಸ್ಪತ್ರೆಗಳನ್ನು ಮುಚ್ಚಿ ತಾನು ಕಲಿಸುವ ಧ್ಯಾನವನ್ನಷ್ಟೇ ಮಾಡಿದರೆ ಸಾಕೆನ್ನುವ ಬಾಬಾಗಳೂ ಇದ್ದಾರೆ. ವೈದ್ಯರಲ್ಲೂ ವತ್ತಿಜ್ಞಾನಕ್ಕೆ ಸಂಪೂರ್ಣವಾಗಿ ಬದ್ಧರಾದವರಿದ್ದಾರೆ, ಧ್ಯಾನ-ಪ್ರಾರ್ಥನೆಗಳನ್ನು ಸೂಚಿಸುವವರೂ ಇದ್ದಾರೆ. ಹೀಗಿರುವಾಗ, ರೋಗನಿಗ್ರಹಕ್ಕೆ ಮೇಲಿನ ಶಕ್ತಿಗಳನ್ನು ಪ್ರಾರ್ಥಿಸುವುದು ಅಪರೂಪವೂ ಅಲ್ಲ, ಅಸಹಜವೂ ಅಲ್ಲ. ಆದರೆ ಅದರಿಂದ ಪ್ರಯೋಜನವಿದೆಯೇ ಮತ್ತು ಹಾನಿಯೇನಿಲ್ಲವೇ ಎನ್ನುವುದು ಮುಖ್ಯವಾಗುತ್ತದೆ.

ದೈವಿಕ ಶಕ್ತಿಯನ್ನು ವೈಜ್ಞಾನಿಕ ಪರೀಕ್ಷೆಗಳಿಗೆ ಒಳಪಡಿಸಲಾಗದು ಎನ್ನುವ ವಾದಗಳಿದ್ದರೂ, ವಿವಿಧ ಚಿಕಿತ್ಸೆಗಳ ಮೇಲೆ ವಿವಿಧ ಧರ್ಮಗಳ ವಿಭಿನ್ನ ಪ್ರಾರ್ಥನೆಗಳು ಹಾಗೂ ಧ್ಯಾನ ವಿಧಾನಗಳ ಪ್ರಭಾವಗಳ ಬಗ್ಗೆ ಸಾವಿರಾರು ಅಧ್ಯಯನಗಳನ್ನು ನಡೆಸಲಾಗಿದೆ. ಅಮೆರಿಕಾದ ಸರಕಾರವು ಅವುಗಳಿಗಾಗಿ ಇಪ್ಪತ್ತೈದು ಲಕ್ಷ ಡಾಲರುಗಳನ್ನು ವ್ಯಯಿಸಿದ್ದೂ ಆಗಿದೆ. ಕೆಲವು ಅಧ್ಯಯನಗಳಲ್ಲಿ ರೋಗಿಗಳ ಸ್ವಂತ ಪ್ರಾರ್ಥನೆ ಯಾ ಧ್ಯಾನಗಳನ್ನು ಪರೀಕ್ಷಿಸಲಾಗಿದ್ದರೆ, ಇನ್ನು ಕೆಲವದರಲ್ಲಿ ರೋಗಿಯ ಪರವಾಗಿ ಅನ್ಯರು ನಡೆಸಿದ ಪ್ರಾರ್ಥನೆಗಳನ್ನು ಪರಿಶೀಲಿಸಲಾಗಿದೆ. ಕೆಲವು ಅಧ್ಯಯನಗಳಲ್ಲಿ ಧ್ಯಾನ-ಪ್ರಾರ್ಥನೆಗಳಿಂದ ರೋಗದ ಚೇತರಿಕೆಗೆ ಪ್ರಯೋಜನವಾಗುತ್ತದೆಯೆಂದು ಕಂಡುಬಂದರೆ, ಇನ್ನು ಕೆಲವದರಲ್ಲಿ ಯಾವುದೇ ಪ್ರಯೋಜನಗಳಿಲ್ಲವೆಂದೂ, ಮತ್ತೆ ಕೆಲವದರಲ್ಲಿ ಪ್ರಯೋಜನಕ್ಕಿಂತ ಹಾನಿಯೇ ಹೆಚ್ಚೆಂದೂ ಕಂಡುಬಂದಿದೆ. ಹಲವು ಅಧ್ಯಯನಗಳಲ್ಲಿ ವೈಧಾನಿಕ ಲೋಪಗಳಿರುವುದನ್ನು ಗುರುತಿಸಲಾಗಿದ್ದರೆ, ಪ್ರಾರ್ಥನೆಗಳಿಂದ ಪ್ರಣಾಳ ಗರ್ಭಧಾರಣೆಗೆ ಬಹಳ ನೆರವಾಗುತ್ತದೆ ಎಂದು ಸಾಧಿಸಿದ್ದ ಅಧ್ಯಯನವೊಂದನ್ನು ಮೋಸವೆಂದು ವಾಪಾಸು ಪಡೆದದ್ದೂ ಆಗಿದೆ. ಒಟ್ಟಿನಲ್ಲಿ, ಧ್ಯಾನ ಯಾ ಪ್ರಾರ್ಥನೆಗಳಿಂದ ಆಧುನಿಕ ಚಿಕಿತ್ಸೆಗೆ ಬಲ ನೀಡಬಹುದೆನ್ನುವುದಕ್ಕೆ ಯಾವುದೇ ಸ್ಪಷ್ಟ ಆಧಾರಗಳು ಇದುವರೆಗೆ ಲಭಿಸಿಲ್ಲವೆಂದೇ ಹೇಳಬಹುದು. ಇನ್ನು ಆಧುನಿಕ ಚಿಕಿತ್ಸೆಯ ನೆರವಿಲ್ಲದೆ ಕೇವಲ ಪ್ರಾರ್ಥನೆ ಯಾ ಧ್ಯಾನಗಳಿಂದಲೇ ಯಾವುದೇ ರೋಗವನ್ನು ಗುಣಪಡಿಸಬಹುದೆನ್ನುವುದಕ್ಕೆ ಯಾವ ಆಧಾರಗಳೂ ಇಲ್ಲವೇ ಇಲ್ಲ.

ಆಧುನಿಕ ಚಿಕಿತ್ಸೆಯನ್ನು ನಿರಾಕರಿಸಿ ಅಥವಾ ಅರ್ಧಕ್ಕೇ ಬಿಟ್ಟು ಪ್ರಾರ್ಥನೆ-ಪೂಜೆ-ಪ್ರಾಣಾಯಾಮಗಳ ಮೊರೆ ಹೋದರೆ ರೋಗವು ಉಲ್ಬಣಿಸುವ ಸಾಧ್ಯತೆಗಳು ಇದ್ದೇ ಇರುತ್ತವೆ, ಮೇಲೆ ಉದಾಹರಿಸಿದಂತೆ ಚಿಕಿತ್ಸೆಯನ್ನು ಅರ್ಧಕ್ಕೇ ನಿಲ್ಲಿಸಿ ಕಷ್ಟಕ್ಕೊಳಗಾದ ಹಾಗೂ ಸಾವನ್ನಪ್ಪಿದ ಹಲವಾರು ಪ್ರಕರಣಗಳೂ, ಧರ್ಮನಿಷ್ಠ ಹೆತ್ತವರ ಹಠಕ್ಕೆ ಚಿಕಿತ್ಸೆಯಿಂದ ವಂಚಿತರಾಗಿ ನೂರಾರು ಮಕ್ಕಳು ಸಾವನ್ನಪ್ಪಿರುವುದೂ ವರದಿಯಾಗಿವೆ. ಪೂಜೆ-ಪ್ರಾರ್ಥನೆಗಳ ಮುಹೂರ್ತಕ್ಕೆ ಅನುಕೂಲವಾಗುವಂತೆ ಚಿಕಿತ್ಸೆಯನ್ನು ಮುಂದೂಡುವುದರಿಂದ ಅಥವಾ ಚಿಕಿತ್ಸೆಯ ನಡುವೆ ವ್ರತ ಇತ್ಯಾದಿಗಳನ್ನು ನಡೆಸುವುದರಿಂದ ತೊಂದರೆಗಳಾಗಬಹುದು. ಪೂಜೆ-ಪ್ರಾರ್ಥನೆಗಳಿಗಾಗುವ ವೆಚ್ಚವೂ ಕುಟುಂಬದ ಮೇಲಿನ ಹೊರೆಯನ್ನು ಹೆಚ್ಚಿಸಬಹುದು. ಮಧ್ಯವಯಸ್ಕರಾಗಿದ್ದ ಅಧಿಕಾರಿಯೊಬ್ಬರಿಗೆ ಮಿದುಳಿನ ಗಡ್ಡೆಯೊಂದು ಬೆಳೆದಾಗ ಅತ್ಯಾಧುನಿಕ ಸೌಲಭ್ಯಗಳಿದ್ದ ಆಸ್ಪತ್ರೆಯಲ್ಲಿ ಶಸ್ತ್ರಕ್ರಿಯೆ ನಡೆದು, ಅದನ್ನು ಗುಣಪಡಿಸಲು ಸಾಧ್ಯವಿಲ್ಲವೆಂದೂ, ಹೆಚ್ಚೆಂದರೆ ಏಳೆಂಟು ತಿಂಗಳು ಅವರು ಬದುಕುಳಿಯಬಹುದೆಂದೂ ತಿಳಿಸಲಾಗಿತ್ತು. ಬಂಧುಮಿತ್ರರ ಒತ್ತಾಯಗಳಿಗೆ ಮಣಿದು ಒಂದರ ಹಿಂದೊಂದರಂತೆ ಸುದರ್ಶನ ಹೋಮ, ಗೃಹ ಶಾಂತಿ ಹೋಮ, ಮೃತ್ಯುಂಜಯ ಹೋಮಗಳನ್ನೆಲ್ಲ ನಡೆಸಲಾಯಿತು; ವಾಸ್ತು ದೋಷ ನಿವಾರಣೆಗೆ ಮನೆಯ ಕೋಣೆ-ಬಾಗಿಲುಗಳನ್ನು ಅತ್ತಿತ್ತ ಬದಲಿಸಿದ್ದಾಯಿತು; ದರ್ಗಾ-ಇಗರ್ಜಿಗಳಿಗೆ ಹರಕೆ ಹೊತ್ತದ್ದೂ ಆಯಿತು. ಕೇಡುಗಾಲ ಕಳೆದು ಸಾವನ್ನು ಜಯಿಸುತ್ತಾರೆನ್ನುವ ಆಶ್ವಾಸನೆಯು ಎಲ್ಲೆಡೆಯಿಂದ ದೊರಕಿತಾದರೂ ಆರು ತಿಂಗಳಲ್ಲೇ ಅವರು ತೀರಿಕೊಂಡರು. ವೈದ್ಯಕೀಯ ಚಿಕಿತ್ಸೆಯ ವೆಚ್ಚವನ್ನು ಅವರ ಕಂಪೆನಿಯೇ ಸಂಪೂರ್ಣವಾಗಿ ಭರಿಸಿತು, ಈ ಹೋಮ-ಗೀಮಗಳಿಗಾಗಿ ಖರ್ಚು ಮಾಡದಿರುತ್ತಿದ್ದರೆ ಮೂರು ಲಕ್ಷವಾದರೂ ಉಳಿಯುತ್ತಿತ್ತು, ಮಕ್ಕಳ ವಿದ್ಯಾಭ್ಯಾಸಕ್ಕಾದರೂ ಆಗುತ್ತಿತ್ತು, ಇನ್ನು ಅವರೂ ಇಲ್ಲ, ದುಡ್ಡೂ ಹೋಯಿತು’ ಎಂದು ಅವರ ಪತ್ನಿ ಮರುಗಿದ್ದನ್ನು ಮರೆಯಲಾಗದು.

ನಮ್ಮೆಲ್ಲ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮನುಷ್ಯ ಪ್ರಯತ್ನವೇ ಅತಿ ಮುಖ್ಯ. ಆದ್ದರಿಂದ ಕಾಣದಿರುವ ಶಕ್ತಿಗಳನ್ನು ಬೇಡುವುದಕ್ಕಿಂತ ಎದುರಿಗಿರುವ ನೆರವನ್ನು ಪಡೆಯುವುದೇ ಆದ್ಯತೆಯಾಗಬೇಕು. ವೈದ್ಯರು ಪೊಳ್ಳು ಭರವಸೆಗಳನ್ನು ನೀಡಲು ಸಾಧ್ಯವಿಲ್ಲದಿದ್ದರೂ, ಆಧುನಿಕ ಚಿಕಿತ್ಸೆಯ ಸತ್ಪ್ರಯೋಜನಗಳ ಬಗ್ಗೆ ರೋಗಿ ಹಾಗೂ ಸಂಬಂಧಿಗಳ ಮನವೊಲಿಸಬೇಕು. ಧರ್ಮಗುರುಗಳು, ಪುರೋಹಿತರು ಹಾಗೂ ಜ್ಯೋತಿಷಿಗಳು ಕೂಡ ರೋಗಿಯನ್ನು ಗೊಂದಲಕ್ಕೀಡುಮಾಡದೆ ಚಿಕಿತ್ಸೆಯನ್ನು ಮುಂದುವರಿಸುವಂತೆ ಉತ್ತೇಜಿಸಬೇಕು.

ಒಂಭತ್ತನೇ ಬರಹ: ಸುಧಾರಣೆ ಬೇಕಿರುವ ‘ತುರ್ತುಚಿಕಿತ್ಸೆ’  [ಅಕ್ಟೋಬರ್ 17, 2012, ಬುಧವಾರ] [ನೋಡಿ | ನೋಡಿ]

ಗಾಯಗೊಂಡವರನ್ನು ಆದ್ಯತೆಯಿಂದ ಆಸ್ಪತ್ರೆಗೆ ಸೇರಿಸುವ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸುವುದು ಇಂದಿನ ಅಗತ್ಯ 

ಇಂದು ವಿಶ್ವ ಅಪಘಾತ ದಿನ. ಯಾವುದೇ ಮುನ್ಸೂಚನೆಗಳಿಲ್ಲದೆ ಕ್ಷಣಮಾತ್ರದಲ್ಲಿ ಬಂದೆರಗಿ ಒಬ್ಬ ವ್ಯಕ್ತಿಯನ್ನಷ್ಟೇ ಅಲ್ಲದೆ ಆತನ ಸಮಸ್ತ ಕುಟುಂಬವನ್ನೇ ಬುಡಮೇಲಾಗಿಸುವ ವಿವಿಧ ಅಪಘಾತಗಳನ್ನು ನಿಭಾಯಿಸುವಲ್ಲಿ ನಮ್ಮ ಸಾಂಘಿಕ ವೈಫಲ್ಯಗಳನ್ನು ಮಥಿಸುವ ದಿನ.

ಅನಿರೀಕ್ಷಿತವಾದ ಅಪಘಾತಗಳಿಂದ ಉಂಟಾಗುವ ಸಾವು-ನೋವುಗಳು ನಮ್ಮ ಸಾಮಾಜಿಕ-ಆರ್ಥಿಕ-ವೈದ್ಯಕೀಯ ಸಾಮರ್ಥ್ಯಗಳಿಗೆ ಬಹು ದೊಡ್ಡ ಸವಾಲುಗಳಾಗಿ ಉಳಿದಿವೆ. ವಿಶ್ವದಾದ್ಯಂತ ಪ್ರತೀ ವರ್ಷ ಸುಮಾರು ಅರುವತ್ತು ಲಕ್ಷದಷ್ಟು ಜನ ವಿವಿಧ ಘಟನೆಗಳಲ್ಲಿ ಗಾಯಗೊಂಡು ಸಾವನ್ನಪ್ಪುತ್ತಾರೆ; ಸುಮಾರು 15 ಲಕ್ಷದಷ್ಟು ರಸ್ತೆ ಅಪಘಾತಗಳಲ್ಲಿ ಮಡಿದರೆ, ಅಷ್ಟೇ ಜನ ಆತ್ಮಹತ್ಯೆ ಹಾಗೂ ಕೊಲೆಗಳಿಗೀಡಾಗುತ್ತಾರೆ. ಉದ್ದಿಮೆಗಳಲ್ಲಿನ ಅವಘಡಗಳು, ಬೆಂಕಿ ಅಪಘಾತಗಳು, ರೈಲು ಯಾ ದೋಣಿ ದುರಂತಗಳು, ಭಯೋತ್ಪಾದನಾ ಕತ್ಯಗಳು, ಪ್ರಕತಿ ವಿಕೋಪಗಳು ಇತ್ಯಾದಿಗಳಲ್ಲೂ ಸಾಕಷ್ಟು ಜನ ಸಾವನ್ನಪ್ಪುತ್ತಾರೆ. ಎಷ್ಟೋ ಪಟ್ಟು ಹೆಚ್ಚು ಜನರು ಗಾಯಾಳುಗಳಾಗುತ್ತಾರೆ, ಹಲವರು ಶಾಶ್ವತವಾಗಿ ಅಂಗವಿಹೀನರಾಗುತ್ತಾರೆ. ಯುವಜನರ ಸಾವಿಗೆ ಅತಿಮುಖ್ಯ ಕಾರಣವಾಗಿರುವ ರಸ್ತೆ ಅಪಘಾತಗಳಿಂದಾಗಿ ನಮ್ಮ ದೇಶದಲ್ಲಿ 2011ರಲ್ಲಿ 142000 (ಗಂಟೆಗೆ 17) ಜನ ಸಾವನ್ನಪ್ಪಿದ್ದು, 2020ರ ವೇಳೆಗೆ ಇದು 546000ಕ್ಕೆ ಏರಬಹುದೆಂದು ಅಂದಾಜಿಸಲಾಗಿದೆ.

ಎಲ್ಲಾದರೂ ಏನಾದರೂ ಆಗಬಹುದೆನ್ನುವ ಅನಿಶ್ಚಿತತೆಯಲ್ಲೇ ನಾವಿಂದು ಬದುಕುವಂತಾಗಿದೆ. ರಸ್ತೆಗಳಲ್ಲಿ ಚಲಿಸುವಾಗ ಅಥವಾ ಸುಮ್ಮನೆ ಬದಿಯಲ್ಲಿ ನಿಂತಿದ್ದಾಗ ವಾಹನಗಳು ಮೇಲೆರಗುವುದು, ಸಮಯ ಕಳೆಯಲೆಂದು ಸಿನಿಮಾಗಳಿಗೋ ಮಳಿಗೆಗಳಿಗೋ ಹೋಗಿದ್ದಾಗ ಬಾಂಬುಗಳು ಸಿಡಿಯುವುದು, ಕಛೇರಿಗಳಲ್ಲೋ, ಆಸ್ಪತ್ರೆಗಳಲ್ಲೋ ಬೆಂಕಿ ಹೊತ್ತಿಕೊಳ್ಳುವುದು, ಎಲ್ಲ ಮುಗಿದು ರಾತ್ರಿ ಮಲಗಿದ್ದಾಗ ವಸತಿ ಸಂಕೀರ್ಣಗಳು ಮಗುಚಿ ಬೀಳುವುದು ಸಾಮಾನ್ಯವಾಗುತ್ತಿವೆ. ಹೆಚ್ಚುತ್ತಿರುವ ಜನಸಂದಣಿಯ ನಡುವೆ ಸ್ಪರ್ಧೆಯಲ್ಲಿ ಮುನ್ನುಗ್ಗುವ ಹುಚ್ಚು ಧಾವಂತ ಒಂದೆಡೆ; ಸುರಕ್ಷತಾ ಕ್ರಮಗಳಲ್ಲಿ ಚೌಕಾಸಿ ಮಾಡಿ ಹಣವುಳಿಸಲೆಳಸುವ ಮಾಲಕ ವರ್ಗವೂ, ಅದಕ್ಕೆ ಅವಕಾಶವಿತ್ತು ಹಣಗಳಿಸಲೆಳಸುವ ಸುರಕ್ಷತಾ ಪಾಲನೆಯ ಅಧಿಕಾರಿ ವರ್ಗ ಇನ್ನೊಂದೆಡೆ. ಆರ್ಥಿಕ ಅಭಿವದ್ಧಿ ಹಾಗೂ ಖಾಸಗೀಕರಣಗಳಲ್ಲಿ ಪಾಶ್ಚಾತ್ಯ ದೇಶಗಳ ಅಂಧಾನುಕರಣೆಯೂ ನಮ್ಮಲ್ಲಿ ವಿಶೇಷವಾದ ಸಮಸ್ಯೆಗಳಿಗೆ ಕಾರಣವಾಗುತ್ತಿದ್ದು, ಅಲ್ಲಿನ ವೇಗ ಸಂಚಾರದ ಚತುಷ್ಪಥ-ಷಟ್ಪಥ ಹೆದ್ದಾರಿಗಳು, ಅಬ್ಬರಿಸಿ ಓಡುವ ದೊಡ್ಡ ವಾಹನಗಳು, ಭೂಲೋಕಕ್ಕಿಂತ ಇ-ಲೋಕದೊಂದಿಗೆ ಹೆಚ್ಚು ಸಂಪರ್ಕವಿರಿಸುವ ಚರವಾಣಿ ಸಲಕರಣೆಗಳೆಲ್ಲವೂ ಇಲ್ಲಿಗೆ ಬಂದಿದ್ದರೆ, ಅಲ್ಲಿರುವ ಸುರಕ್ಷತೆ, ರಸ್ತೆ ನಿಯಮಗಳ ಪಾಲನೆಯಲ್ಲಿರುವ ಶಿಸ್ತು, ಕಾನೂನು ಹಾಗೂ ಸುರಕ್ಷತೆಯನ್ನು ಕಾಯುವ ಸಂಸ್ಥೆಗಳ ಪ್ರಾಮಾಣಿಕತೆ, ಮತ್ತು ಅಪಘಾತಗಳಾದ ಸಂದರ್ಭಗಳಲ್ಲಿ ತುರ್ತುಚಿಕಿತ್ಸೆಯ ಅತ್ಯುತ್ತಮ ವ್ಯವಸ್ಥೆಗಳು ಇನ್ನೂ ಬರಬೇಕಷ್ಟೆ. ಹೀಗೆ, ಪ್ರಾಣ ತೆಗೆಯುವ ಮಾರ್ಗಗಳು ಬಂದಿದ್ದರೂ, ಪ್ರಾಣವುಳಿಸುವ ದಾರಿಗಳು ತೋರದಾಗಿವೆ. ಅಂತಹದರಲ್ಲಿ ನಮ್ಮ ಜೀವದ ಜಾಗ್ರತೆಯನ್ನು ನಾವೇ ಮಾಡಬೇಕಾಗುತ್ತದೆ.

ಈ ಸಾವು-ನೋವುಗಳನ್ನು ತಡೆಯಬೇಕಿದ್ದರೆ ಅಪಘಾತಗಳನ್ನು ತಡೆಯುವುದರಿಂದ ಹಿಡಿದು ಗಾಯಾಳುವಿಗೆ ಸೂಕ್ತವಾದ ಚಿಕಿತ್ಸೆಯನ್ನೂ, ಪುನಶ್ಚೇತನಗೊಳಿಸುವ ಆರೈಕೆಗಳನ್ನೂ ಒದಗಿಸುವವರೆಗೆ ಹಲವು ಹಂತಗಳಲ್ಲಿ ಸುಧಾರಣೆಯಾಗಬೇಕಿದೆ. ಮಾನವಜನ್ಯ ಅಪಘಾತಗಳನ್ನು ತಡೆಯಬೇಕಿದ್ದರೆ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾದದ್ದು ಅತಿಮುಖ್ಯ. ಅತಿ ವೇಗದಲ್ಲಿ ವಾಹನ ಚಾಲನೆ, ಚಾಲಕರಿಂದ ಮದ್ಯಪಾನ, ಚರವಾಣಿಯ ಬಳಕೆ, ಹೆದ್ದಾರಿಗಳ ಬಲಭಾಗದಲ್ಲಿ ನಿಧಾನವಾಗಿ ಸಾಗುವುದು, ಏಕಮುಖ ರಸ್ತೆಗಳಲ್ಲಿ ವಿರುದ್ಧ ದಿಕ್ಕಿನಲ್ಲಿ ನುಗ್ಗುವುದು, ದುಸ್ಥಿತಿಯ ವಾಹನಗಳನ್ನು ಬಳಸುವುದು ಇವೇ ಮುಂತಾದವುಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಎಲ್ಲಾ ಉದ್ದಿಮೆಗಳು ಹಾಗೂ ಬೃಹತ್ ಮಳಿಗೆಗಳಲ್ಲಿ ಸುರಕ್ಷತಾ ಕ್ರಮಗಳನ್ನು ನಿರ್ದಾಕ್ಷಿಣ್ಯವಾಗಿ ಖಚಿತ ಪಡಿಸಿ, ಮಾಲಕ-ಪಾಲಕರ ಅಪವಿತ್ರ ಮೈತ್ರಿಯನ್ನು ಕೊನೆಗಾಣಿಸಬೇಕಾಗಿದೆ. ತಪ್ಪಿತಸ್ಥರಿಗೆ ಕಠಿಣವಾದ ಹಾಗೂ ತ್ವರಿತವಾದ ಶಿಕ್ಷೆಯಾಗಬಲ್ಲ ವ್ಯವಸ್ಥೆಯನ್ನೂ ಸುನಿಶ್ಚಿತಗೊಳಿಸಬೇಕಿದೆ.

ಅಪಘಾತಕ್ಕೀಡಾದವರಿಗೆ ನಂತರದ ಪ್ರತಿಕ್ಷಣವೂ ಸಾವು-ಬದುಕಿನ ತೂಗುಯ್ಯಾಲೆಯಾಗಿರುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯನುಸಾರ, ಗಾಯಾಳುಗಳಿಗೆ ಅತಿ ಶೀಘ್ರದಲ್ಲಿ ಸೂಕ್ತ ಚಿಕಿತ್ಸೆಯು ದೊರೆಯುವಂತಾದರೆ ಶೇ. ಐವತ್ತಕ್ಕೂ ಹೆಚ್ಚು ಸಾವುಗಳನ್ನು ತಡೆಯುವುದಕ್ಕೆ ಸಾಧ್ಯವಿದೆ. ಆದರೆ ಭಾರತವೂ ಸೇರಿದಂತೆ ಹೆಚ್ಚಿನ ದೇಶಗಳಲ್ಲಿ ತುರ್ತುಚಿಕಿತ್ಸೆಯ ಸೌಲಭ್ಯಗಳು ತೀರಾ ಕಳಪೆಯಾಗಿದ್ದು, ಅವನ್ನು ಸುಧಾರಿಸುವ ಪ್ರಯತ್ನಗಳೂ ಅಪೇಕ್ಷೆಗೆ ತಕ್ಕಂತಿಲ್ಲ. ಅಪಘಾತದ ಸ್ಥಳದಲ್ಲೇ ಸರಿಯಾದ ಪ್ರಥಮ ಚಿಕಿತ್ಸೆ, ಕೆಲವೇ ನಿಮಿಷಗಳಲ್ಲಿ ಆಸ್ಪತ್ರೆಗೆ ರವಾನಿಸಬಲ್ಲ ಸುಸಜ್ಜಿತವಾದ ತುರ್ತು ರುಗ್ಣವಾಹಕಗಳು, ಗಾಯಾಳುಗಳಿಗೆ ಎಲ್ಲ ಚಿಕಿತ್ಸೆಯನ್ನೂ ಒದಗಿಸಬಲ್ಲ ಪರಿಣತ ವೈದ್ಯರನ್ನು ಹೊಂದಿರುವ ಆಸ್ಪತ್ರೆಗಳು ಸುಲಭದಲ್ಲಿ ಲಭ್ಯವಿರುವಂತಾದರೆ ಅಪಘಾತಕ್ಕೀಡಾದವರನ್ನು ರಕ್ಷಿಸುವುದು ಕಷ್ಟವೇನಲ್ಲ.

ನಮ್ಮಲ್ಲಿ ತುರ್ತು ಚಿಕಿತ್ಸಾ ಸೌಲಭ್ಯಗಳಿರುವ ಹಾಗೂ ಪರಿಣತರಾದ ಸಿಬ್ಬಂದಿಯುಳ್ಳ ರುಗ್ಣವಾಹಕಗಳ ಸಂಖ್ಯೆಯು ಸಾಕಷ್ಟಿಲ್ಲವೆಂದೇ ಹೇಳಬಹುದು. ಹೆಚ್ಚಿನ ರುಗ್ಣವಾಹಕಗಳು ಶವವಾಹಕಗಳಾಗಿಯೂ, ಆಸ್ಪತ್ರೆ ಮಾಲಕನ ಮನೆಗೆ ತರಕಾರಿ ತರುವುದರಿಂದ ಹಿಡಿದು ಸಿಬ್ಬಂದಿಯ ಸಾಗಾಣಿಕೆಯಂತಹ ಅನ್ಯ ಕೆಲಸಗಳಿಗಾಗಿಯೂ ಬಳಕೆಯಾಗುವುದಲ್ಲದೆ ಗಾಯಾಳುಗಳ ನೆರವಿಗೆ ದೊರೆಯುವುದಿಲ್ಲ. ಹೆಚ್ಚಿನವುಗಳಲ್ಲಿ ಹಾಸಿಗೆ ಮತ್ತು ಆಮ್ಲಜನಕದ ಸಿಲಿಂಡರಲ್ಲದೆ ಬೇರೆ ಸೌಲಭ್ಯಗಳು ಇರುವುದೂ ಇಲ್ಲ. ಕರ್ನಾಟಕವೂ ಸೇರಿದಂತೆ 12 ರಾಜ್ಯಗಳಲ್ಲಿ ಲಭ್ಯವಿರುವ ಖಾಸಗಿ ಸಹಭಾಗಿತ್ವದ 108 ಸೇವೆಯು 2010ರ ವೇಳೆಗೆ 10000 ರುಗ್ಣವಾಹಕಗಳನ್ನು ಹೊಂದುವ ಗುರಿಯನ್ನು ಹೊಂದಿದ್ದರೂ, ಕೇವಲ 3400 ನ್ನಷ್ಟೇ ತಲುಪಿದೆ. ಹೀಗಾಗಿ, ಶೇ. 98ರಷ್ಟು ಸಂದರ್ಭಗಳಲ್ಲಿ ನಮ್ಮ ಗಾಯಾಳುಗಳನ್ನು ಟಾಕ್ಸಿ, ರಿಕ್ಷಾ, ಎತ್ತಿನ ಗಾಡಿ, ಟ್ರಾಕ್ಟರ್ ಇತ್ಯಾದಿ ತಕ್ಷಣಕ್ಕೆ ಸಿಗುವ ವಾಹನಗಳಲ್ಲೇ ತುಂಬಿ ಹತ್ತಿರದ ಆಸ್ಪತ್ರೆಗಳಿಗೆ ಒಯ್ಯಲಾಗುತ್ತಿದೆ.

ಹೀಗೆ ಸ್ಥಳೀಯರೇ ಎತ್ತಿ-ತುಂಬಿ-ಒಯ್ಯುವ ಸೇವೆಯು ಸದುದ್ದೇಶದಿಂದ ಕೂಡಿದ್ದಾದರೂ, ಕೆಲವೊಮ್ಮೆ ತೊಂದರೆಯನ್ನೂ ಉಂಟುಮಾಡಬಹುದು. ತಲೆ, ಶ್ವಾಸಾಂಗ ಅಥವಾ ಉದರದೊಳಕ್ಕೆ ರಕ್ತಸ್ರಾವವಾದರೆ ಕೆಲವೇ ಘಂಟೆಗಳಲ್ಲಿ ಸಾವುಂಟಾಗಬಹುದಾಗಿದ್ದು, ಅಂತಹಾ ಗಾಯಾಳುಗಳನ್ನು ಆದ್ಯತೆಯಿಂದ ಕೂಡಲೇ ಸುಸಜ್ಜಿತವಾದ ಆಸ್ಪತ್ರೆಗೆ ಸೇರಿಸಬೇಕಾಗುತ್ತದೆ. ಮೇಲ್ಮೈಯ ಗಾಯಗಳಿಂದ ರಕ್ತ ಸೋರುತ್ತಿರುವವರತ್ತ ಮೊದಲ ಗಮನವು ಹರಿಯುವುದು ಸಹಜವಾದರೂ, ಹೊರಗೇನೂ ಗಾಯಗಳಿಲ್ಲದೆ ದೇಹದೊಳಗಿನ ಅಂಗಗಳಿಗೆ ಹಾನಿಯಾಗಿ ಸುಪ್ತವಾಗಿ ರಕ್ತಸ್ರಾವವಾಗುತ್ತಿರುವವರನ್ನು ಗುರುತಿಸುವುದು ಅದಕ್ಕಿಂತಲೂ ಮುಖ್ಯವಾಗುತ್ತದೆ. ಅಂತಹವರಲ್ಲಿರಬಹುದಾದ ತಲೆ ಸುತ್ತುವಿಕೆ, ವಾಂತಿ, ಕಣ್ಣು ಕತ್ತಲಾಗುವಿಕೆ, ಬೆವರುವಿಕೆ, ಮೈಕೈಗಳು ತಣ್ಣಗಾಗುವುದು ಇವೇ ಮುಂತಾದ ಲಕ್ಷಣಗಳನ್ನು ಕಡೆಗಣಿಸದೆ ಕೂಡಲೇ ಆಸ್ಪತ್ರೆಗಳಿಗೆ ತಲುಪಿಸಬೇಕು. ಅದೇ ರೀತಿ, ಕುತ್ತಿಗೆ ಯಾ ಬೆನ್ನಿನ ಎಲುಬುಗಳಿಗೆ ಹಾನಿಯಾದವರು, ತಲೆ ಯಾ ಎದೆ ಜಜ್ಜಲ್ಪಟ್ಟವರು, ತೊಡೆ ಮೂಳೆ ಮುರಿತಕ್ಕೊಳಗಾದವರು ಮುಂತಾದವರನ್ನು ಆದ್ಯತೆಯ ಮೇರೆಗೆ, ಜಾಗರೂಕತೆಯಿಂದ ಆಸ್ಪತ್ರೆಗಳಿಗೆ ಸಾಗಿಸಬೇಕು. ಆದ್ಯತೆಯ ರೋಗಿಗಳ ಪಟ್ಟಿಯನ್ನು ಸಿದ್ಧಪಡಿಸಿ, ಗಾಯಾಳುಗಳ ಮೇಲೂ ಆದ್ಯತೆಯ ಗುರುತನ್ನು ಹಚ್ಚಿ ಆಸ್ಪತ್ರೆಗಳಲ್ಲಿ ಅವರನ್ನು ಸುಲಭದಲ್ಲಿ ಗುರುತಿಸುವುದಕ್ಕೆ ನೆರವಾಗಬೇಕು. ಹೀಗೆ, ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆಯನ್ನು ನೀಡಿ, ಗಂಭೀರವಾಗುಳ್ಳವರನ್ನು ಆದ್ಯತೆಯಿಂದ ಆಸ್ಪತ್ರೆಗೆ ತಲುಪಿಸುವ ಬಗ್ಗೆ ಜನಸಾಮಾನ್ಯರಲ್ಲಿ, ಅದರಲ್ಲೂ ಟಾಕ್ಸಿ ಮತ್ತಿತರ ವಾಹನ ಚಾಲಕರಲ್ಲಿ ಮತ್ತು ಸ್ಥಳೀಯ ಯುವಜನರಲ್ಲಿ, ತಿಳಿವಳಿಕೆ ಮೂಡಿಸುವ ಕೆಲಸವು ವ್ಯಾಪಕವಾಗಿ ಆಗಬೇಕಿದೆ.

ಆದರೆ ಗಾಯಾಳುಗಳನ್ನು ಆಸ್ಪತ್ರೆಗೆ ತಲುಪಿಸಿದೊಡನೆ ಸೂಕ್ತವಾದ ಚಿಕಿತ್ಸೆಯು ದೊರೆಯುವ ಭರವಸೆಯು ನಮ್ಮಲ್ಲಿಲ್ಲ. ಆಸ್ಪತ್ರೆಗಳನ್ನು ತೆರೆಯುವುದಕ್ಕೆ ನಮ್ಮಲ್ಲಿ ನಿರ್ದಿಷ್ಟವಾದ ಮಾನದಂಡಗಳಿಲ್ಲದೆ ಅಸಲಿ, ಬದಲಿ, ನಕಲಿ ಚಿಕಿತ್ಸಕರೆಲ್ಲರೂ ಆಸ್ಪತ್ರೆಗಳನ್ನು ನಡೆಸುತ್ತಿರುವುದು ಗೊಂದಲಗಳಿಗೆ ಕಾರಣವಾಗುತ್ತದೆ. ಹೆಚ್ಚಿನ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆಯ ವ್ಯವಸ್ಥೆಗಳಾಗಲೀ, ತೀವ್ರ ನಿಗಾ ಘಟಕಗಳಾಗಲೀ ಇರುವುದೇ ಇಲ್ಲ. ದೇಹದ ಹಲವು ಅಂಗಗಳಿಗೆ ಒಟ್ಟಿಗೇ ಹಾನಿಯಾಗಿದ್ದಾಗ ಅದನ್ನು ಸಮರ್ಥವಾಗಿ ನಿಭಾಯಿಸಬಲ್ಲ ವಿಶೇಷಜ್ಞರ ತಂಡವನ್ನು ಹೊಂದಿರುವ ಆಸ್ಪತ್ರೆಗಳು ನಮ್ಮಲ್ಲಿ ಅತಿ ವಿರಳ. ಹಲವು ಆಸ್ಪತ್ರೆಗಳ ತುರ್ತುಚಿಕಿತ್ಸಾ ವಿಭಾಗಗಳಲ್ಲಿ ಕಿರಿಯ ವೈದ್ಯರೇ ಕರ್ತವ್ಯನಿರತರಾಗಿದ್ದು, ತುರ್ತು ಆರೈಕೆಯಲ್ಲಿ ಅವರಿಗಿರುವ ಸೀಮಿತವಾದ ಪರಿಣತಿಯಿಂದಾಗಿ ಗಾಯಗಳ ಗಂಭೀರತೆಯನ್ನು ವಿಶ್ಲೇಷಿಸುವಲ್ಲಿ ಲೋಪಗಳಾಗುವ ಸಾಧ್ಯತೆಗಳು ಇದ್ದೇ ಇರುತ್ತವೆ. ಕೆಲವು ಆಸ್ಪತ್ರೆಗಳಲ್ಲಂತೂ ಕಡಿಮೆ ಸಂಬಳಕ್ಕೆ ದೊರೆಯುವ ಬದಲಿ ವೈದ್ಯರೇ ಕರ್ತವ್ಯದಲ್ಲಿರುತ್ತಾರೆ. ಹೀಗೆ ಅತ್ಯಂತ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳು ಅತ್ಯಂತ ಕಿರಿಯ ಹಾಗೂ ಅನನುಭವಿ ವೈದ್ಯರ ಕಪೆಯಲ್ಲಿರುವಂತಾಗಿದೆ. ಆರ್ಥಿಕವಾಗಿ ಸಬಲರಾಗಿಲ್ಲದವರು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿರುವವರು ಸರಕಾರಿ ಆಸ್ಪತ್ರೆಗಳನ್ನೇ ನೆಚ್ಚಿಕೊಂಡಿದ್ದು, ಹಲವು ಜಿಲ್ಲಾಸ್ಪತ್ರೆಗಳಲ್ಲೂ ತುರ್ತು ಚಿಕಿತ್ಸೆಯನ್ನು ನಿಭಾಯಿಸಬಲ್ಲ ತಜ್ಞ ವೈದ್ಯರ ತಂಡವಾಗಲೀ, ಸಾಕಷ್ಟು ಸಂಖ್ಯೆಯ ಸಿಬ್ಬಂದಿಯಾಗಲೀ ಇರುವುದಿಲ್ಲ. ಹೊಸ ಆರ್ಥಿಕ ನೀತಿಯಡಿಯಲ್ಲಿ ಉನ್ನತ ಚಿಕಿತ್ಸಾ ಸೌಲಭ್ಯಗಳನ್ನೆಲ್ಲ ಖಾಸಗಿಯವರಿಗೆ ಹೊರಗುತ್ತಿಗೆ ವಹಿಸಿದ್ದರಿಂದಾಗಿ ಅತ್ತ ಸರ್ಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯಗಳಿಲ್ಲ, ಇತ್ತ ಖಾಸಗಿ ಸೌಲಭ್ಯಗಳು ಕೈಗೆಟಕುವಂತಿಲ್ಲ ಎಂಬಂತಾಗಿದೆ. ಒಟ್ಟಿನಲ್ಲಿ ಅನಿರೀಕ್ಷಿತವಾದ ಅಪಘಾತಗಳಿಗೆ ಸಿಲುಕಿದ ಜನಸಾಮಾನ್ಯರು ಎತ್ತ ಹೋಗುವುದೆಂದರಿಯದೆ ಕಂಗಾಲಾಗಬೇಕಾಗಿದೆ. ಇತ್ತ ವೈದ್ಯರುಗಳು ಇಷ್ಟೆಲ್ಲ ನ್ಯೂನತೆಗಳ ನಡುವೆಯೂ ತಮ್ಮಿಂದಾದಷ್ಟು ಶ್ರಮವಹಿಸಿ ಚಿಕಿತ್ಸೆಯನ್ನು ನೀಡುತ್ತಿದ್ದರೂ, ಈ ವ್ಯವಸ್ಥೆಯನ್ನು ಸದಢಗೊಳಿಸಬೇಕೆನ್ನುವ ಅವರ ಬೇಡಿಕೆಗಳು ಅರಣ್ಯರೋದನವಾಗಿವೆ.

ಆದ್ದರಿಂದ ಸರಿಯಾದ ಗಾಯಾಳುವು ಸರಿಯಾದ ಆಸ್ಪತ್ರೆಗೆ ಸರಿಯಾದ ಸಮಯದಲ್ಲಿ ತಲುಪುವಂತಾಗಲು ತುರ್ತುಚಿಕಿತ್ಸೆಯ ವ್ಯವಸ್ಥೆಯಲ್ಲಿ ಆಮೂಲಾಗ್ರವಾದ ಸುಧಾರಣೆಗಳು ಅತ್ಯಗತ್ಯವಾಗಿವೆ. ಐವತ್ತು ಕಿಮೀ ದೂರದೊಳಗೆ ಲಭ್ಯವಾಗುವಂತೆ ತುರ್ತು ಚಿಕಿತ್ಸಾಲಯಗಳನ್ನು ಸರಕಾರವೇ ಗುರುತಿಸಿ, ಅಲ್ಲಿನ ಸೌಲಭ್ಯಗಳನ್ನು ಬಲಪಡಿಸುವುದಕ್ಕೂ, ವೈದ್ಯರು ಹಾಗೂ ಸಿಬ್ಬಂದಿಗೆ ಅಗತ್ಯ ತರಬೇತಿಯನ್ನು ನೀಡುವುದಕ್ಕೂ ನೆರವಾಗಬೇಕು ಮತ್ತು ಅಂತಹಾ ಆಸ್ಪತ್ರೆಗಳ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ಆಯಾ ಪ್ರದೇಶಗಳಲ್ಲಿ ಪ್ರಚುರ ಪಡಿಸಬೇಕು. ಹಾಗಾದಾಗ ಗಾಯಾಳುವನ್ನು ಹೊತ್ತು ಒಂದೆಡೆಯಿಂದ ಇನ್ನೊಂದೆಡೆಗೆ ಅಲೆದಾಡಿ ಅಮೂಲ್ಯವಾದ ಸಮಯವು ವ್ಯರ್ಥವಾಗುವುದನ್ನು ತಡೆಯಬಹುದು, ಹಲವಾರು ಜೀವಗಳನ್ನುಳಿಸಬಹುದು.

ಎಂಟನೇ ಬರಹ: ಅಡ್ಡ ತೊಂದರೆಗಳ ಅರ್ಧ ಸತ್ಯ, ದೊಡ್ಡ ಸುಳ್ಳುಗಳು  [ಅಕ್ಟೋಬರ್ 3, 2012, ಬುಧವಾರ] [ನೋಡಿ | ನೋಡಿ]

ಆಧುನಿಕ ಔಷಧಗಳೆಲ್ಲವೂ ಅಪಾಯಕರವಲ್ಲ, ಬದಲಿ ಔಷಧಗಳೆಲ್ಲವೂ ಸುರಕ್ಷಿತವಲ್ಲ

ಕಳೆದೊಂದು ಶತಮಾನದಲ್ಲಿ ಮನುಷ್ಯರ ನಿರೀಕ್ಷಿತ ಜೀವಿತಾವಧಿಯು 32 ರಿಂದ 65 ವರ್ಷಗಳಿಗೆ ಇಮ್ಮಡಿಗೊಂಡಿರುವುದರಲ್ಲಿ ಆಧುನಿಕ ಔಷಧಗಳ ಪಾತ್ರವನ್ನು ಅಲ್ಲಗಳೆಯುವಂತಿಲ್ಲ. ತುರ್ತು ಚಿಕಿತ್ಸೆ, ಶಸ್ತ್ರಕ್ರಿಯೆಗಳು, ಸೋಂಕುಗಳು, ಸುರಕ್ಷಿತ ಹೆರಿಗೆ ಇವೇ ಮುಂತಾದ ಸಂದರ್ಭಗಳಲ್ಲಿ ಆಧುನಿಕ ಔಷಧಗಳೇ ಜೀವವುಳಿಸುವ ಸಂಜೀವಿನಿಗಳು. ಆದರೆ, ಅಪರೂಪಕ್ಕೊಮ್ಮೆ ಈ ಔಷಧಗಳಿಂದಾಗುವ ಅಡ್ಡ ತೊಂದರೆಗಳನ್ನು ಮುಂದಿಟ್ಟು ಆಧುನಿಕ ವೈದ್ಯ ವಿಜ್ಞಾನದ ಸಾಧನೆಗಳಿಗೆಲ್ಲ ಮಸಿ ಬಳಿಯುವ ಪ್ರಯತ್ನಗಳು ಆಗುತ್ತಲೇ ಇರುತ್ತವೆ. ‘ಬದಲಿ’ ವೈದ್ಯರಂತೂ ಅದನ್ನೇ ಬಂಡವಾಳವಾಗಿಸಿಕೊಂಡು ಆಧುನಿಕ ವೈದ್ಯ ವಿಜ್ಞಾನವನ್ನು ಸಾರಾಸಗಟಾಗಿ ಹಳಿಯುತ್ತಿರುತ್ತಾರೆ.

ಔಷಧಗಳ ಬಳಕೆಯಲ್ಲಿ ಅಡ್ಡ ತೊಂದರೆಗಳು ಅನಿವಾರ್ಯ ಕೆಡುಕುಗಳಾಗಿವೆ. ಅಧ್ಯಯನಗಳನುಸಾರ, ಆಧುನಿಕ ಔಷಧಗಳ ಬಳಕೆಯಲ್ಲಿ ಶೇ. 5-15ರಷ್ಟು ಸಂದರ್ಭಗಳಲ್ಲಿ ಅಡ್ಡತೊಂದರೆಗಳಾಗುತ್ತವೆ ಹಾಗೂ ಶೇ. 3-6ರಷ್ಟು ಒಳರೋಗಿ ದಾಖಲಾತಿಗಳಿಗೂ, ಶೇ. 1 ರಷ್ಟು ತುರ್ತು ದಾಖಲಾತಿಗಳಿಗೂ ಕಾರಣವಾಗುತ್ತವೆ. ಅಮೆರಿಕಾದಲ್ಲಿ 2000ದಿಂದ 2010ರ ದಶಕದಲ್ಲಿ ಔಷಧಗಳ ಅಡ್ಡ ತೊಂದರೆಗಳಿಂದಾಗಿ 450000ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು ಹಾಗೂ ಅವು ಒಟ್ಟು ಸಾವುಗಳಿಗೆ ನಾಲ್ಕನೇ ಮುಖ್ಯ ಕಾರಣವಾಗಿದ್ದವು. ಆದರೆ, ಇದು ಕೇವಲ ಅರ್ಧ ಸತ್ಯವಷ್ಟೇ. ಈ ಅಂಕಿ-ಅಂಶಗಳನ್ನೆಲ್ಲ ಪ್ರಾಮಾಣಿಕವಾಗಿ ದಾಖಲಿಸಿ, ಪಾರದರ್ಶಕವಾಗಿ ತೆರೆದಿಟ್ಟಿರುವುದು ಆಧುನಿಕ ವೈದ್ಯ ವಿಜ್ಞಾನದ ಗಟ್ಟಿತನವೆನ್ನುವುದು ಉಳಿದರ್ಧ ಸತ್ಯವಾಗಿದೆ. ಪ್ರತಿಯೊಂದು ಆಧುನಿಕ ಔಷಧವೂ ಬಳಕೆಗೆ ಬರುವ ಮೊದಲು 4-5 ಹಂತಗಳ ಪರೀಕ್ಷೆಗಳನ್ನು ನಡೆಸಿ ನಾಲ್ಕೈದು ಸಾವಿರ ಜನರಲ್ಲಿ ಅದರ ಸಾಧಕ-ಬಾಧಕಗಳನ್ನು ಗುರುತಿಸಲಾಗಿರುತ್ತದೆ. ಇನ್ನಷ್ಟು ಜನರಲ್ಲಿ ಅದರ ಬಳಕೆಯು ಮುಂದುವರಿದಂತೆ ಹೊಸ ಅಡ್ಡ ತೊಂದರೆಗಳೇನಾದರೂ ಕಂಡುಬಂದರೆ ಅವನ್ನೂ ದಾಖಲಿಸಿ ತಕ್ಕ ಮುನ್ನೆಚ್ಚರಿಕೆಗಳನ್ನು ನೀಡಲಾಗುತ್ತದೆ. ಆಧುನಿಕ ಔಷಧಗಳ ಎಲ್ಲಾ ಸಂಭಾವ್ಯ ಅಡ್ಡ ತೊಂದರೆಗಳ ಮಾಹಿತಿಯು ಎಲ್ಲೆಡೆ ಲಭ್ಯವಿರುವುದರಿಂದ ಜಗತ್ತಿನ ಯಾವುದೇ ಮೂಲೆಯಲ್ಲಿ ಅವನ್ನು ಕೂಡಲೇ ನಿಖರವಾಗಿ ಗುರುತಿಸಿ, ತಕ್ಕ ಚಿಕಿತ್ಸೆಯನ್ನು ನೀಡುವುದಕ್ಕೂ ಸಾಧ್ಯವಾಗುತ್ತದೆ. ಗಂಭೀರವಾದ ಅಡ್ಡತೊಂದರೆಗಳು ಕಂಡು ಬಂದ ಸಂದರ್ಭಗಳಲ್ಲಿ ಔಷಧವನ್ನೇ ಹಿಂಪಡೆದ ನಿದರ್ಶನಗಳೂ ಸಾಕಷ್ಟಿವೆ.

ಔಷಧಗಳ ಅಡ್ಡ ತೊಂದರೆಗಳು ಸಾಕಷ್ಟು ಜನರನ್ನು ಬಾಧಿಸುವುದು ನಿಜವಾದರೂ, ಆಧುನಿಕ ವೈದ್ಯಕೀಯ ಸೇವೆಯ ವ್ಯಾಪ್ತಿಯು ಅತಿ ಅಗಾಧವಾಗಿದೆಯೆನ್ನುವುದೂ, ಶೇ. 60ರಷ್ಟು ಸಂದರ್ಭಗಳಲ್ಲಿ ಇವುಗಳನ್ನು ತಡೆಯಬಹುದೆನ್ನುವುದೂ ಅಷ್ಟೇ ನಿಜವಾಗಿವೆ. ರೋಗ ನಿದಾನ, ಔಷಧದ ಆಯ್ಕೆ ಹಾಗೂ ಪ್ರಮಾಣಗಳಲ್ಲಿ ಆಗುವ ತಪ್ಪುಗಳು; ರೋಗಿಯಲ್ಲಿರಬಹುದಾದ ಅಪರೂಪದ ಸಮಸ್ಯೆಗಳು; ರೋಗಿಯೇ ಸ್ವಯಂಚಿಕಿತ್ಸೆ ಮಾಡಿಕೊಳ್ಳುವುದು ಹಾಗೂ ಅಗತ್ಯಕ್ಕಿಂತ ಹೆಚ್ಚು ಔಷಧಗಳನ್ನು ಸೇವಿಸುವುದು; ಔಷಧ ಸೇವನೆಯಲ್ಲಿ ಪಾಲಿಸಬೇಕಾದ ಎಚ್ಚರಿಕೆಗಳ ಬಗ್ಗೆ ವೈದ್ಯರು ಸೂಕ್ತ ಮಾಹಿತಿಯನ್ನು ನೀಡದಿರುವುದು ಯಾ ರೋಗಿಗಳು ಅವನ್ನು ಪಾಲಿಸದಿರುವುದು; ಮತ್ತು ಕಳಪೆ ಯಾ ಕಲಬೆರಕೆಯ ಔಷಧಗಳ ಸೇವನೆಗಳು ಹೆಚ್ಚಿನ ಅಡ್ಡತೊಂದರೆಗಳಿಗೆ ಕಾರಣವಾಗುತ್ತವೆ. ನೋವು ನಿವಾರಕಗಳು, ಮೂತ್ರೋತ್ತೇಜಕಗಳು ಹಾಗೂ ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ಔಷಧಗಳು ಅತಿ ಹೆಚ್ಚಿನ ಅಡ್ಡ ತೊಂದರೆಗಳಿಗೆ ಕಾರಣವಾಗುವುದರಿಂದ ವಿಶೇಷವಾದ ಎಚ್ಚರಿಕೆಯ ಅಗತ್ಯವಿರುತ್ತದೆ. ವಯಸ್ಸಾದವರು, ಅಸ್ತಮಾದಂತಹ ತೊಂದರೆಗಳುಳ್ಳವರು, ಹೆಚ್ಐವಿ ಪೀಡಿತರು, ಮೊದಲೇ ಯಕೃತ್ತು, ಮೂತ್ರಪಿಂಡಗಳು, ಪಚನಾಂಗ ಯಾ ಹೃದಯದ ಕಾಯಿಲೆಗಳಿಂದ ನರಳುತ್ತಿರುವವರು ಮುಂತಾದವರಲ್ಲಿ ಅಡ್ಡತೊಂದರೆಗಳು ಹೆಚ್ಚು ಸಾಮಾನ್ಯವಾಗಿದ್ದು, ಅಂತಹವರೂ ಹೆಚ್ಚು ಜಾಗರೂಕರಾಗಿರಬೇಕಾಗುತ್ತದೆ. ವೈದ್ಯರಾದವರು ತಾವು ಬಳಸುವ ಎಲ್ಲಾ ಔಷಧಗಳ ಸಾಧಕ-ಬಾಧಕಗಳ ಬಗ್ಗೆ ತಮ್ಮ ಅರಿವನ್ನು ನಿರಂತರವಾಗಿ ಹರಿತಗೊಳಿಸುತ್ತಿರಬೇಕಾದುದೂ ಅತಿ ಮುಖ್ಯ. ಔಷಧ ಕಂಪೆನಿಗಳು ಅಡ್ಡ ತೊಂದರೆಗಳ ಪೂರ್ಣ ಮಾಹಿತಿಯನ್ನು ಒದಗಿಸದೇ ಇರುವ ಸಾಧ್ಯತೆಗಳಿರುವುದರಿಂದ, ವೈದ್ಯರು ತಾವೇ ಸ್ವತಂತ್ರವಾಗಿ ಅಧ್ಯಯನ ಮಾಡಬೇಕಾಗಬಹುದು. ಇದಕ್ಕಾಗಿ, ಯಾವುದೇ ಹಂಗಿಲ್ಲದೆ ಎಲ್ಲಾ ಔಷಧಗಳ ಬಗ್ಗೆ ಸವಿವರವಾದ ಮಾಹಿತಿಯನ್ನು ಒದಗಿಸುವ ಬ್ರಿಟಿಷ್ ರಾಷ್ಟ್ರೀಯ ಔಷಧ ಕೋಶ ಅಥವಾ ಮೂವತ್ತೊಂದು ವರ್ಷಗಳ ಬಳಿಕ ಪ್ರಕಟವಾಗಿರುವ ಭಾರತದ ರಾಷ್ಟ್ರೀಯ ಔಷಧ ಕೋಶಗಳಂತಹ (ನಾಲ್ಕನೇ ಆವೃತ್ತಿ ಇಲ್ಲಿದೆ: http://www.cdsco.nic.in/NFI_2011.pdf) ಆಕರಗಳನ್ನು ಬಳಸಬಹುದು. ಎಲ್ಲಾ ಚಿಕಿತ್ಸೆಗಳನ್ನೂ ಸ್ವತಂತ್ರವಾಗಿ, ಕಠಿಣವಾದ ವಿಮರ್ಶೆಗೆ ಒಳಪಡಿಸುವ ಕೊಕ್ರೇನ್ ಸಹಯೋಗದಂತಹ ಸಂಸ್ಥೆಗಳ ವರದಿಗಳೂ ಅತ್ಯಂತ ಉಪಯುಕ್ತವಾಗಿವೆ.

ರೋಗಿಗಳ ಹಿತರಕ್ಷಣೆಗಾಗಿ ಆಧುನಿಕ ವೈದ್ಯ ವಿಜ್ಞಾನದಲ್ಲಿ ಇಂತಹ ವಿಶ್ವಾಸಾರ್ಹವಾದ ಪ್ರಯತ್ನಗಳಾಗುತ್ತಿದ್ದರೆ, ‘ಬದಲಿ’ ಪದ್ಧತಿಗಳಲ್ಲಿ ಔಷಧಗಳಿಗೆ ಅಡ್ಡಪರಿಣಾಮಗಳೇ ಇಲ್ಲವೆನ್ನುವ ದೊಡ್ಡ ಸುಳ್ಳನ್ನೇ ಪ್ರಚಾರ ಮಾಡಿ ಜನಸಾಮಾನ್ಯರನ್ನು ತಪ್ಪು ದಾರಿಯಲ್ಲಿ ಅಪಾಯದಂಚಿಗೆ ತಳ್ಳಲಾಗುತ್ತಿದೆ. ತಿನ್ನುವ ಆಹಾರಕ್ಕೂ ಅಡ್ಡ ತೊಂದರೆಗಳಿರುತ್ತವೆ ಎಂದ ಮೇಲೆ ’ಬದಲಿ’ ಔಷಧಗಳಿಗೂ ಅಡ್ಡ ತೊಂದರೆಗಳು ಇದ್ದೇ ಇರುತ್ತವೆ. ಆಯುರ್ವೇದ ಚಿಕಿತ್ಸೆಯಲ್ಲಿ ಬಳಸಲಾಗುವ ಪ್ರತಿಯೊಂದು ವಸ್ತುವಿನ ಒಳಿತು-ಕೆಡುಕುಗಳ ಬಗ್ಗೆ ಚರಕ ಸಂಹಿತೆಯಲ್ಲಿ ಸವಿವರವಾಗಿ ಹೇಳಲಾಗಿದ್ದು, ಸರಿಯಾಗಿ ಬಳಸದಿದ್ದರೆ ಒಳ್ಳೆಯ ಔಷಧವೂ ವಿಷವಾಗುತ್ತದೆಂದು ಎಚ್ಚರಿಸಲಾಗಿದೆ (ಸೂತ್ರಸ್ಥಾನ, 1:124-126). ಕೆಲವು ಔಷಧಗಳು ದೋಷಗಳನ್ನು ಪರಿಹರಿಸಿದರೆ, ಇನ್ನು ಕೆಲವು ಅವನ್ನು ಉಲ್ಬಣಿಸುತ್ತವೆ ಎಂದೂ, (ಸೂತ್ರಸ್ಥಾನ, 1:67) ಕೆಲವು ಕೂಡಲೇ ತೊಂದರೆಯನ್ನುಂಟು ಮಾಡಿದರೆ ಇನ್ನು ಕೆಲವು ಕಾಲಾನಂತರ ಮಾಡುತ್ತವೆ ಎಂದೂ (ಚಿಕಿತ್ಸಾಸ್ಥಾನ, 1:5) ಅದರಲ್ಲಿ ಹೇಳಲಾಗಿದೆ. ಗಿಡಮೂಲಿಕೆಗಳು, ಭಸ್ಮಗಳು, ಲೇಪಗಳು ಹಾಗೂ ಆರೋಗ್ಯವರ್ಧಕ ಪುಡಿಗಳು ಇತ್ಯಾದಿಗಳಿಂದ ಚರ್ಮ, ಹೃದಯ, ಯಕೃತ್ತು, ಮೂತ್ರಪಿಂಡಗಳು, ನರಮಂಡಲ ಇತ್ಯಾದಿಗಳಲ್ಲಿ ಅಡ್ಡ ತೊಂದರೆಗಳಾಗುವ ಬಗ್ಗೆ ಹಲವಾರು ವರದಿಗಳೂ ಪ್ರಕಟಗೊಂಡಿವೆ. ಹೃದ್ರೋಗ, ಅಪಸ್ಮಾರಗಳ ಚಿಕಿತ್ಸೆಯಲ್ಲೂ, ಶಸ್ತ್ರಚಿಕಿತ್ಸೆಗೆ ಅರಿವಳಿಕೆಗಾಗಿಯೂ ಬಳಸುವ ಹಲವು ಆಧುನಿಕ ಔಷಧಗಳು ‘ಬದಲಿ’ ಔಷಧಗಳೊಂದಿಗೆ ವ್ಯತಿರಿಕ್ತವಾಗಿ ವರ್ತಿಸುವುದನ್ನು ಗುರುತಿಸಲಾಗಿದೆ. ಹೀಗಾಗಿ, ಅಮೆರಿಕ, ಆಸ್ಟ್ರೇಲಿಯಾ, ಐರೋಪ್ಯ ಒಕ್ಕೂಟ ಮುಂತಾದೆಡೆ ಗಿಡಮೂಲಿಕೆಗಳು ಹಾಗೂ ಬದಲಿ ಔಷಧಗಳ ಮೇಲೆ ಕಠಿಣವಾದ ನಿರ್ಬಂಧಗಳನ್ನು ಹೇರಲಾಗಿದೆ. ನಮ್ಮ ಕೇಂದ್ರೀಯ ಔಷಧ ಮಾನಕ ನಿಯಂತ್ರಣ ಸಂಸ್ಥೆಯು 2003ರಿಂದಲೇ ಬದಲಿ ಔಷಧಗಳ ಅಡ್ಡಪರಿಣಾಮಗಳ ಮೇಲೆ ನಿಗಾ ವಹಿಸುವ ಯೋಜನೆಯನ್ನು ಜಾರಿಗೊಳಿದೆ. ಆದರೆ ಹೆಚ್ಚಿನ ಬದಲಿ ವೈದ್ಯರು ತಮ್ಮ ಔಷಧಗಳಿಗೆ ಅಡ್ಡಪರಿಣಾಮಗಳೇ ಇಲ್ಲ ಎನ್ನುವ ಭಾವನೆಯನ್ನು ಹೊಂದಿರುವುದು ಹಾಗೂ ತೊಂದರೆಗಳು ಕಂಡು ಬಂದರೂ ಅವನ್ನು ವರದಿ ಮಾಡದಿರುವುದು ಈ ಯೋಜನೆಯ ಯಶಸ್ಸಿಗೆ ತೊಡಕಾಗಿವೆ.

ಇಂದು ಆಯುರ್ವೇದ ಚಿಕಿತ್ಸೆಯ ಸ್ವರೂಪವು ಸಾಕಷ್ಟು ಬದಲಾಗಿರುವುದೂ ಚಿಂತೆಗೆ ಕಾರಣವಾಗಿದೆ. ಒಂದು ಕಾಲಕ್ಕೆ ಆಯುರ್ವೇದ ವೈದ್ಯರು ತಾವೇ ಔಷಧಗಳನ್ನು ತಯಾರಿಸುತ್ತಿದ್ದರೆ ಇಂದು ಅದೊಂದು ದೊಡ್ಡ ಉದ್ಯಮವಾಗಿ ಬೆಳೆದಿದೆ; 8000ಕ್ಕೂ ಹೆಚ್ಚು ಸಂಸ್ಥೆಗಳು ವಾರ್ಷಿಕ 4000 ಕೋಟಿ ರೂಪಾಯಿಗಳಿಗೂ ಹೆಚ್ಚಿನ ವ್ಯವಹಾರವನ್ನು ನಡೆಸುತ್ತಿವೆ. ನಿಸರ್ಗದತ್ತವಾದ ಗಿಡಮೂಲಿಕೆಗಳ ಬದಲಿಗೆ ಮನುಷ್ಯ ನಿರ್ಮಿತ ತೋಟಗಳಲ್ಲಿ ಬೆಳೆದ ಕೆಲವೊಂದು ಸಸ್ಯಗಳನ್ನಷ್ಟೇ ಬಳಸಿಕೊಳ್ಳಲಾಗುತ್ತಿದೆ. ಶಾಸ್ತ್ರೀಯವಾಗಿ ಸಿದ್ಧಪಡಿಸಿದ ಔಷಧಗಳಿಗಿಂತ ಗಿಡಮೂಲಿಕೆಗಳ ಸಾರವನ್ನಷ್ಟೇ ಬಳಸಿ ತಯಾರಿಸಿದ ಮಾತ್ರೆಗಳೇ ಹೆಚ್ಚು ಬಳಕೆಯಲ್ಲಿವೆ. ಎಲ್ಲಕ್ಕಿಂತ ಹೆಚ್ಚಾಗಿ ಬಹಳಷ್ಟು ಬದಲಿ ಚಿಕಿತ್ಸಕರು ತಾವು ಅಧ್ಯಯನವನ್ನೇ ಮಾಡದಿರುವ ಹಾಗೂ ಪ್ರತಿನಿತ್ಯವೂ ದೂಷಿಸುತ್ತಿರುವ ಆಧುನಿಕ ಔಷಧಗಳನ್ನು ಬೇಕಾಬಿಟ್ಟಿಯಾಗಿ ಬಳಸುತ್ತಿದ್ದಾರೆ ಮಾತ್ರವಲ್ಲ, ಅದು ತಮ್ಮ ಅಧಿಕಾರವೆಂದು ಮುಷ್ಕರಕ್ಕೂ ಇಳಿಯುತ್ತಿದ್ದಾರೆ. ಇತ್ತ ತಾವು ಕಲಿತಿರುವ ಔಷಧಗಳ ಅಡ್ಡ ಪರಿಣಾಮಗಳತ್ತ ಕುರುಡಾಗಿ, ಅತ್ತ ತಮಗರಿವಿಲ್ಲದ ಔಷಧಗಳನ್ನು ಬಳಸಿ ರೋಗಿಗಳನ್ನು ಅಪಾಯಕ್ಕೆ ತಳ್ಳುತ್ತಿದ್ದಾರೆ. ಬದಲಿ ಔಷಧಗಳ ಕಲಬೆರಕೆ ಹಾಗೂ ಕಳಪೆ ಗುಣಮಟ್ಟಗಳ ಬಗ್ಗೆ ನಿಯಂತ್ರಣವಿಲ್ಲದಿರುವುದು ಹಾಗೂ ಅಡ್ಡ ತೊಂದರೆಗಳಿಲ್ಲವೆಂಬ ಭಂಡ ಧೈರ್ಯದಲ್ಲಿ ಸೇವಿಸುತ್ತಿದ್ದು ತೊಂದರೆಗಳಾದರೂ ಗುರುತಿಸಲಾಗದಿರುವುದು ಬದಲಿ ಔಷಧಗಳ ಬಳಕೆಯಲ್ಲಿರುವ ಇತರ ಗಂಭೀರ ಸಮಸ್ಯೆಗಳಾಗಿವೆ.

ಒಟ್ಟಿನಲ್ಲಿ, ಆಧುನಿಕ ಔಷಧಗಳಿರಲಿ, ಬದಲಿ ಔಷಧಗಳಿರಲಿ, ಎಲ್ಲಕ್ಕೂ ಅಡ್ಡ ಪರಿಣಾಮಗಳು ಇದ್ದೇ ಇರುತ್ತವೆ. ಆಧುನಿಕ ಔಷಧಗಳಿಂದಾಗಬಹುದಾದ ತೊಂದರೆಗಳ ಬಗ್ಗೆ ಆಳವಾದ ಮಾಹಿತಿಯು ವಿಶ್ವದಾದ್ಯಂತ ಲಭ್ಯವಿದ್ದು, ಎಲ್ಲೇ ಆಗಲಿ, ಯಾರೇ ಆಗಲಿ, ಅವನ್ನು ಸುಲಭದಲ್ಲಿ ಗುರುತಿಸುವುದಕ್ಕೂ, ಸೂಕ್ತವಾಗಿ ನಿಭಾಯಿಸುವುದಕ್ಕೂ ಸಾಧ್ಯವಾಗುತ್ತದೆ. ಬದಲಿ ಔಷಧಗಳ ಬಗ್ಗೆ ಮಾಹಿತಿಯ ಕೊರತೆಯಿಂದಾಗಿ ಅಡ್ಡಪರಿಣಾಮಗಳಾದರೂ ಗುರುತಿಸಲು ಕಷ್ಟವಾಗುತ್ತದೆ. ಆದ್ದರಿಂದ ಬದಲಿ ಔಷಧಗಳು ಅತಿ ಸುರಕ್ಷಿತವೆನ್ನುವ ಪೊಳ್ಳು ಧೈರ್ಯದಿಂದ ಅವನ್ನು ಸೇವಿಸುವುದು ಸರಿಯಲ್ಲ. ಯಾವುದೇ ಔಷಧವನ್ನು ಸೇವಿಸಿದ ಬಳಿಕ ಏನೇ ತೊಂದರೆಗಳು ಕಾಣಿಸಿಕೊಂಡರೂ ಆ ಕೂಡಲೇ ಅದನ್ನು ನುರಿತ ವೈದ್ಯರ ಗಮನಕ್ಕೆ ತರಬೇಕು. ಬದಲಿ ಚಿಕಿತ್ಸಕರು ತಮ್ಮ ಔಷಧಗಳಿಗೆ ಅಡ್ಡಪರಿಣಾಮಗಳಿಲ್ಲ ಎನ್ನುವ ಹಠವನ್ನು ಬಿಟ್ಟು ತೆರೆದ ಮನಸ್ಸಿನಿಂದ ಸತ್ಯವನ್ನೇ ಹೇಳಿ ರೋಗಿಗಳ ಹಿತ ರಕ್ಷಿಸಬೇಕು.

ಏಳನೇ ಬರಹ: ಮಾಂಸಾಹಾರ ಸೇವನೆಯು ಅಮಾನವೀಯ ದುರ್ಗುಣವೇ? [ಸೆಪ್ಟೆಂಬರ್ 19, 2012, ಬುಧವಾರ] [ನೋಡಿ]

ನಮ್ಮ ಆಹಾರವು ಶರೀರಕ್ಕೆ ಅನುಗುಣವಾಗಿರಬೇಕು, ಭಾವನೆಗಳಿಗಲ್ಲ

‘ಅಯ್ಯೋ, ನಾನು ಹುಟ್ಟಿನಿಂದಲೇ ಸಸ್ಯಾಹಾರಿ, ಸಾಯೋವರೆಗೂ ಮೀನು-ಮೊಟ್ಟೆ ಮುಟ್ಟಲಾರೆ’ ಎನ್ನುವ ಹಠವಾದಿಗಳೂ, ‘ನಮ್ಮ ಧರ್ಮದವರೆಲ್ಲಾ ಒಂದು, ಆದರೆ ಮಾಂಸಾಹಾರಿಗಳೊಡನೆ ಕೂರಲಾರೆ’ ಎನ್ನುವ ಮಠಾಧೀಶರೂ, ‘ಬಿಸಿಯೂಟದಲ್ಲಿ ಮೊಟ್ಟೆ ಕೊಟ್ರೆ ಮಕ್ಕಳು ಕೆಟ್ಟು ಕ್ರೂರಿಗಳಾಗ್ತಾರೆ’ ಎನ್ನುವ ಮಂತ್ರಿಗಳೂ, ‘ಮೀನು-ಮಾಂಸದ ವಾಸನೆ ಆಗೋದಿಲ್ಲ’ ಅಂತ ಮೂಗು ಮುರಿಯುವ ಪ್ರಗತಿಪರರೂ ನಮ್ಮಲ್ಲಿದ್ದಾರೆ. ಇಂತಹ ವೈಯಕ್ತಿಕ ಅಭಿಪ್ರಾಯಗಳು ಇತರರ ಊಟದ ಮೇಲೆ ಪ್ರಭಾವ ಬೀರಬಹುದೆನ್ನುವ ಕಾರಣಕ್ಕೆ ಅವನ್ನು ಒರೆಗೆ ಹಚ್ಚುವುದೊಳ್ಳೆಯದು.

ಮನುಷ್ಯರು ಹುಟ್ಟಿನಿಂದಲೇ ಸಸ್ಯಾಹಾರಿಗಳೇ? ಆಧುನಿಕ ಮಾನವ ವಿಕಾಸಗೊಂಡದ್ದು ಪೂರ್ವ ಆಫ್ರಿಕಾದ ಸೀಳು ಕಣಿವೆಗಳಲ್ಲಿ, ಸುಮಾರು 2 ಲಕ್ಷ ವರ್ಷಗಳ ಹಿಂದೆ. ಇಂದು ವಿಶ್ವದಾದ್ಯಂತವಿರುವ 700 ಕೋಟಿ ಮನುಷ್ಯರೆಲ್ಲರೂ ಆಫ್ರಿಕಾದ ಈ ಮೂಲ ಸಂತತಿಯಿಂದ ಕಾಲಾಂತರದಲ್ಲಿ ಹುಟ್ಟಿದ ಹತ್ತು ಗಂಡಸರು ಹಾಗೂ ಹದಿನೆಂಟು ಹೆಂಗಸರ ಪೀಳಿಗೆಗಳಿಗೆ ಸೇರಿದವರು. ನಮ್ಮೆಲ್ಲರೊಳಗಿರುವ 20687 ವಂಶವಾಹಿಗಳಲ್ಲಿ ಶೇ.99.99ರಷ್ಟು ಸಾಮ್ಯತೆ; ಎಲ್ಲರೊಂದೇ – ಮನುಜರು! ಮಾಂಸಾಹಾರವೇ ನಮ್ಮ ವಿಕಾಸಕ್ಕೆ ಮೂಲ ಕಾರಣ – ನಮ್ಮೆಲ್ಲರ ಪೂರ್ವಜರು ಆ ಕಣಿವೆಗಳ ಹಳ್ಳಕೊಳ್ಳಗಳಲ್ಲಿದ್ದ ಮೀನು, ಆಮೆ, ಮೊಸಳೆ ಇತ್ಯಾದಿ ಜಲಚರಗಳನ್ನು ಕಲ್ಲುಗಳಿಂದ ಹೊಡೆದು ಭಕ್ಷಿಸಿದ್ದರಿಂದಲೇ ನಮ್ಮ ಮೆದುಳು ಇಷ್ಟೊಂದು ದೊಡ್ಡದಾಗಿ, ಚುರುಕಾಗಿ ಬೆಳೆಯಿತು; ನಮ್ಮ ಮೆದುಳಿನ ರಚನೆಯಲ್ಲಿ ಮೀನಿನೆಣ್ಣೆಗಳ ಪಾಲು ಶೇ. 60ರಷ್ಟು! ಮಾಂಸವನ್ನು ಸಿಗಿಯಲು ನಾವು ಬಳಸಿದ್ದು, ಬಳಸುತ್ತಿರುವುದು ಕೋರೆ ಹಲ್ಲುಗಳನ್ನಲ್ಲ, ಬದಲಿಗೆ ಚೂಪು ಕಲ್ಲುಗಳನ್ನು, ಈಟಿ-ಭರ್ಜಿಗಳನ್ನು, ಚೂರಿ-ಮುಳ್ಳು ಚಮಚಗಳನ್ನು. ನಮ್ಮ ಪಚನಾಂಗದ ರಚನೆಯೂ ಮಿಶ್ರಾಹಾರಕ್ಕೆ ಪೂರಕ – ಮಾಂಸಾಹಾರಿ ಪ್ರಾಣಿಗಳಿಗಿಂತ ಉದ್ದ, ಸಸ್ಯಾಹಾರಿಗಳಿಗಿಂತ ಗಿಡ್ಡ. ಹೀಗೆ ನಾವು ಮನುಜರೆಲ್ಲರೂ ಮೀನು-ಮಾಂಸ-ಮೊಟ್ಟೆಗಳನ್ನು ಸುಲಭದಲ್ಲಿ ಅರಗಿಸಿಕೊಳ್ಳಬಲ್ಲ ಮಾಂಸಾಹಾರಿಗಳು.

ಆಫ್ರಿಕಾದಿಂದ ಹೊರಟ ಮಾನವರ ದಂಡು ಸುಮಾರು 60000 ವರ್ಷಗಳ ಹಿಂದೆ ಭರತ ಖಂಡವನ್ನು ತಲುಪಿತು. ಸುಮಾರು 10000 ವರ್ಷಗಳ ಹಿಂದಿನವರೆಗೂ ವಿವಿಧ ಜಲಚರಗಳು, ಕಾಡುಪ್ರಾಣಿಗಳು ಹಾಗೂ ಸೊಪ್ಪು-ತರಕಾರಿಗಳೇ ನಮ್ಮ ಪೂರ್ವಜರ ಆಹಾರಗಳಾಗಿದ್ದವು. ಸುಮಾರು 9000 ವರ್ಷಗಳ ಹಿಂದೆ ಮೆಹರ್ ಘರ್ ಪ್ರದೇಶದಲ್ಲಿ (ಇಂದಿನ ಬಲೂಚಿಸ್ತಾನ) ಗೋಧಿ, ಬಾರ್ಲಿಗಳಂತಹ ಧಾನ್ಯಗಳನ್ನು ಬೆಳೆಯಲಾರಂಭಿಸಲಾಯಿತು, ಜೊತೆಗೆ ಕುರಿ, ಆಡು ಹಾಗೂ ಆಕಳುಗಳನ್ನು ಕೃಷಿಗಾಗಿಯೂ, ಮಾಂಸಕ್ಕಾಗಿಯೂ ಪಳಗಿಸಲಾಯಿತು. ಆಹಾರವನ್ನು ಹುಡುಕಿ ಅಂಡಲೆಯುವ ಬದಲು ಒಂದೆಡೆ ನೆಲೆ ನಿಂತು ಉತ್ಪಾದಿಸತೊಡಗಿದಾಗ ನಾಗರಿಕತೆ ಹುಟ್ಟಿತು, ತಂತ್ರಜ್ಞಾನ ಬೆಳೆಯಿತು. ಸುಮಾರು 3500 ವರ್ಷಗಳ ಹಿಂದೆ ಯುರೇಷಿಯಾದಲ್ಲಿ ಅದಾಗಲೇ ನೆಲೆಸಿದ್ದ ಇನ್ನೊಂದಷ್ಟು ಜನ ಭಾರತಕ್ಕೆ ವಲಸೆ ಬಂದರು; ಅವರ ಜೀವನಕ್ರಮಗಳೂ, ವೇದಗಳೂ ಬಂದವು, ಜೊತೆಗೆ ಮೇಲು-ಕೀಳುಗಳೂ, ಅಸ್ಪೃಶ್ಯತೆಗಳೂ ಬೆಳೆದವು.

ಆ ಕಾಲದಲ್ಲಿ ಎಲ್ಲರ ತಟ್ಟೆಗಳಲ್ಲೂ ಮಾಂಸವಿತ್ತು, ಅದು ಅತ್ಯುತ್ತಮವೆನ್ನುವ ಅರಿವೂ ಇತ್ತು.(ಶತಪಥ ಬ್ರಾಹ್ಮಣ, 11.7.1.3) ತಿನ್ನುವ ಮಾಂಸಗಳು, ಸಸ್ಯಗಳು, ಧಾನ್ಯಗಳು ಎಲ್ಲಕ್ಕೂ ಹಿಂಸೆಯಾಗುತ್ತವೆ ಎಂಬ ಪರಿವೆಯೂ ಇತ್ತು; ಅದಕ್ಕಾಗಿ ಪರಮ ಶಕ್ತಿಗೆ ಸಮರ್ಪಿಸಿ ತಿನ್ನಬೇಕೆನ್ನುವ ನಿವಾರಣೋಪಾಯವನ್ನೂ ಮಾಡಲಾಗಿತ್ತು; ತಪ್ಪಿದಲ್ಲಿ ಇನ್ನೊಂದು ಲೋಕದಲ್ಲಿ ಅವುಗಳಿಂದಲೇ ತಿನ್ನಲ್ಪಡಬೇಕಾದೀತು ಎಂದು ಆಹಾರಗಳಿಗೆಲ್ಲ ಗೌರವವನ್ನೂ ಒದಗಿಸಲಾಗಿತ್ತು. (ಜೈಮಿನೀಯ ಬ್ರಾಹ್ಮಣ, 1.42-44; ಶತಪಥ ಬ್ರಾಹ್ಮಣ, 12.9.1.1) ಮುಂದೆ ದೇವತೆಗಳ ಹೆಸರಲ್ಲಿ ನೂರುಗಟ್ಟಲೆ ಪ್ರಾಣಿ-ಪಕ್ಷಿಗಳ ಮಾರಣಹೋಮ ನಡೆಸುವ ಆಚರಣೆಗಳು ಅತಿರೇಕಕ್ಕೇರಿದಾಗ ಪ್ರತಿರೋಧವೂ ಹೆಚ್ಚಿತು. ಸುಮಾರು 2600 ವರ್ಷಗಳ ಹಿಂದೆ, ಕರುಣೆ, ಅಹಿಂಸೆ, ಪರಿಶುದ್ಧತೆ ಹಾಗೂ ವಿರಕ್ತಿಗಳನ್ನು ಬೋಧಿಸಿದ ಜೈನ ಧರ್ಮದಿಂದ ಪ್ರೇರಿತರಾದವರು ಮಾಂಸವನ್ನೂ, ಕೆಲ ಸಸ್ಯಗಳನ್ನೂ ವರ್ಜಿಸಿದರು. ಅದೇ ಕಾಲದಲ್ಲಿ ಗೌತಮ ಬುದ್ಧರು ಅನಗತ್ಯವಾದ ಪ್ರಾಣಿಹಿಂಸೆಯನ್ನು ಬಲವಾಗಿ ವಿರೋಧಿಸಿದರು, ಆದರೆ ಮಾಂಸಾಹಾರಕ್ಕೆ ಅಡ್ಡಿ ಪಡಿಸಲಿಲ್ಲ. ಜೈನ, ಬೌದ್ಧ ಧರ್ಮಗಳ ಜನಪ್ರಿಯತೆ ಹೆಚ್ಚಿದಂತೆ ವೈದಿಕ ವ್ಯವಸ್ಥೆಯಲ್ಲೂ ಸುಧಾರಣೆಗಳಾಗಿ,ಆಹಾರವನ್ನು ಕ್ರಮಬದ್ಧವಾಗಿ ತಿನ್ನಬೇಕೆನ್ನುವ ಕಟ್ಟಳೆಗಳನ್ನು ಮತ್ತೆ ಬಲಪಡಿಸಲಾಯಿತು. ಹೀಗೆ, ತಿನ್ನಲಿಕ್ಕಾಗಿಯೇ ಸೃಷ್ಟಿಸಲ್ಪಟ್ಟಿರುವ ಪ್ರಾಣಿಗಳನ್ನು ಬ್ರಾಹ್ಮಣರು ಪ್ರತಿನಿತ್ಯವೂ ತಿನ್ನಬಹುದು, ಆದರೆ, ವಿಧಿಬಾಹಿರವಾಗಿ ತಿಂದರೆ ಮರಣಾನಂತರ ಈ ವಧಿತ ಪ್ರಾಣಿಗಳಿಗೆ ಆಹಾರವಾಗಬೇಕಾಗುತ್ತದೆ ಎಂದು ಮನುಸ್ಮೃತಿಯಲ್ಲಿ (5:28-33) ಹೇಳಲಾಗಿದೆ. ಕುರಾನ್ (2:172) ಹಾಗೂ ಬೈಬಲ್ (ಆದಿ ಕಾಂಡ, 9:3; ಧರ್ಮೋಪದೇಶ ಕಾಂಡ, 12:15) ಗಳಲ್ಲೂ ಮಾಂಸಾಹಾರಕ್ಕೆ ಅನುಮೋದನೆಯಿದ್ದು, ದೇವರು ಒದಗಿಸಿರುವ ಎಲ್ಲಾ ಒಳ್ಳೆಯ ಸಸ್ಯ-ಮಾಂಸಗಳನ್ನು ಕೃತಜ್ಞತೆಯಿಂದ ಇಚ್ಛಾನುಸಾರ ತಿನ್ನಬಹುದೆಂದು ಹೇಳಲಾಗಿದೆ. ಹೀಗೆ ಹೆಚ್ಚಿನ ಧರ್ಮಗಳಲ್ಲಿ ಪ್ರಾಣಿಹಿಂಸೆಯನ್ನು ಕನಿಷ್ಠಗೊಳಿಸಿ ಮಾಂಸಾಹಾರವನ್ನು ಅನುಮೋದಿಸಲಾಗಿದೆ. ಇಂದು ಜಗತ್ತಿನ ಶೇ. 95ಕ್ಕೂ ಹೆಚ್ಚು ಜನ ಮಾಂಸಾಹಾರಿಗಳೇ ಆಗಿದ್ದಾರೆ; ನಮ್ಮ ದೇಶದಲ್ಲೂ ಶೇ. 45ರಷ್ಟು ಬ್ರಾಹ್ಮಣರೂ ಸೇರಿದಂತೆ ಶೇ. 88ರಷ್ಟು ಮಾಂಸಾಹಾರಿಗಳಿದ್ದಾರೆ.

ಮಾಂಸಾಹಾರದಿಂದ ತಾಮಸ ಗುಣವುಂಟಾಗಿ ಕ್ರೌರ್ಯವು ಹೆಚ್ಚುತ್ತದೆಯೇ? ಮಠಾಧೀಶರು, ಮಂತ್ರಿಗಳಷ್ಟೇ ಅಲ್ಲ, ಆಯುರ್ವೇದ ಮತ್ತು ಯೋಗ ಪಂಡಿತರೆನಿಸಿಕೊಂಡ ಹಲವರೂ ಹಾಗನ್ನುತ್ತಾರೆ. ಅದು ನಿಜವಿದ್ದರೆ ಶೇ.95ರಷ್ಟು ಜನರು ಕ್ರೂರಿಗಳಾಗಬೇಕಿತ್ತು! ಅಪ್ಪಟ ಸಸ್ಯಾಹಾರಿಯೂ, ಪ್ರಾಣಿದಯಾಪರನೂ ಆಗಿದ್ದ ಹಿಟ್ಲರನಿಂದ ಆರು ಕೋಟಿ ಜನ ಸಾಯಬಾರದಿತ್ತು! ಹಾಗಾದರೆ, ಮಾಂಸಾಹಾರವು ತಾಮಸಿಕವೆನ್ನುವುದಕ್ಕೆ ಆಧಾರಗಳೆಲ್ಲಿ? ಆಯುರ್ವೇದದ ಮೇರುಕೃತಿಗಳಾದ ಚರಕ ಸಂಹಿತೆ (ಸೂತ್ರಸ್ಥಾನ, 27) ಹಾಗೂ ಅಷ್ಟಾಂಗ ಹೃದಯ (ಸೂತ್ರಸ್ಥಾನ, 6) ಗಳಲ್ಲಿ 350ರಷ್ಟು ಆಹಾರವಸ್ತುಗಳ ವಿವರಗಳಿದ್ದರೂ, ಸಾತ್ವಿಕ, ರಾಜಸಿಕ ಯಾ ತಾಮಸಿಕ ಆಹಾರಗಳೆಂಬ ವಿಚಾರವೇ ಅಲ್ಲಿಲ್ಲ. ಬದಲಿಗೆ, ಹುಲಿ, ಸಿಂಹ, ಜಾನುವಾರುಗಳು ಸೇರಿದಂತೆ 160ಕ್ಕೂ ಹೆಚ್ಚು ಪ್ರಾಣಿ-ಪಕ್ಷಿಗಳ ಮಾಂಸ-ಮೊಟ್ಟೆಗಳ ಗುಣಾವಗುಣಗಳನ್ನು ವಿಶ್ಲೇಷಿಸಿ, ಮಾಂಸಾಹಾರದಷ್ಟು ಅತ್ಯುತ್ತಮವಾದ ಪೋಷಣೆ ಬೇರೊಂದಿಲ್ಲ ಎಂದು ಅವುಗಳಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ (ಸೂತ್ರಸ್ಥಾನ, 27:87). ಚರಕ ಸಂಹಿತೆಯಲ್ಲಿ ತಾಮಸ ಗುಣವುಳ್ಳವನನ್ನು ಮೂಢ, ಪುಕ್ಕಲು, ಸೋಮಾರಿ, ಹೇಡಿ, ಹೊಟ್ಟೆಬಾಕ ಎಂದೆಲ್ಲಾ ವಿವರಿಸಲಾಗಿದ್ದು, ಕ್ರೂರಿಯೆಂದು ಹೇಳಿಯೇ ಇಲ್ಲ (ಶರೀರಸ್ಥಾನ, 4:36-40); ಮಾತ್ರವಲ್ಲ, ಈ ಮೂರು ಮನೋಗುಣಗಳೂ ಹುಟ್ಟಿನಿಂದಲೇ ಬರುತ್ತವೆಯೆಂದು ಹೇಳಲಾಗಿದ್ದು, ಯಾವುದೇ ಆಹಾರಗಳಿಂದ ಉಂಟಾಗಬಹುದೆಂದಿಲ್ಲ.(ಶರೀರಸ್ಥಾನ, 8:16) ಭಗವದ್ಗೀತೆಯಲ್ಲಿ (17:8-10) ಈ ಮನೋಗುಣಗಳುಳ್ಳವರು ಬಯಸುವ ಆಹಾರಗಳ ಬಗ್ಗೆ ಹೇಳಲಾಗಿದ್ದರೂ, ಆಹಾರದಿಂದ ಅಂತಹಾ ಗುಣಗಳು ಉಂಟಾಗುತ್ತವೆಯೆಂದಾಗಲೀ, ಸಾತ್ವಿಕ ಗುಣವುಳ್ಳವರು ಮಾಂಸವನ್ನು ತಿನ್ನುವುದಿಲ್ಲವೆಂದಾಗಲೀ ಹೇಳಿಲ್ಲ. ನಿಜವೆಂದರೆ, ಆಹಾರದಲ್ಲಿ ಮೀನಿನೆಣ್ಣೆಯ ಕೊರತೆಯಿಂದ ಮಾನಸಿಕ ಖಿನ್ನತೆ, ಆತಂಕ, ಏಕಾಗ್ರತೆಯ ಕೊರತೆ, ಕಲಿಕೆಯ ತೊಂದರೆಗಳು, ಮರೆಗುಳಿತನ ಇತ್ಯಾದಿಗಳು ಉಂಟಾಗುತ್ತವೆಯೆಂದೂ, ಗರ್ಭಾವಸ್ಥೆಯ ಕೊನೆಯ ಮೂರು ತಿಂಗಳುಗಳಲ್ಲಿ ಹಾಗೂ ಮಗುವಿನ ಸ್ತನಪಾನದ ವೇಳೆ ಮೀನಿನ ಸೇವನೆ ಅತ್ಯಗತ್ಯವೆಂದೂ ಇತ್ತೀಚಿನ ಹಲವು ಅಧ್ಯಯನಗಳು ಶ್ರುತಪಡಿಸಿವೆ. ಇದಕ್ಕಿದಿರಾಗಿ, ಸಕ್ಕರೆಯ ಅತಿಸೇವನೆಯಿಂದ ಚಿತ್ತಚಾಂಚಲ್ಯ, ಮಂಕುತನ ಹಾಗೂ ಹಲವಿಧದ ಭಾವನಾತ್ಮಕ ಸಮಸ್ಯೆಗಳು ಉಂಟಾಗಬಹುದೆನ್ನುವುದೂ ಈಗ ಸಿದ್ಧಗೊಂಡಿದೆ. ಹಾಗಿರುವಾಗ ಸಾತ್ವಿಕ ಯಾವುದು, ತಾಮಸಿಕ ಯಾವುದು?

ಮಾಂಸಾಹಾರ ನಮಗೆ ಅತ್ಯಗತ್ಯವೇ? ನಮಗೆ ದಿನವೊಂದಕ್ಕೆ ಕನಿಷ್ಠ 45-60ಗ್ರಾಂ ಪ್ರೊಟೀನು ಅಗತ್ಯವಿದ್ದು, ಸಸ್ಯಾಹಾರವನ್ನೇ ನೆಚ್ಚಿಕೊಂಡಿದ್ದರೆ ಇದನ್ನು ಪೂರೈಸುವುದು ಕಷ್ಟವೇ. ಮೀನು, ಮೊಟ್ಟೆ, ಮಾಂಸಗಳಂತಹ ಪ್ರಾಣಿಜನ್ಯ ಪ್ರೊಟೀನುಗಳು ಸುಲಭದಲ್ಲಿ ಜೀರ್ಣಗೊಂಡು ಸಂಪೂರ್ಣವಾಗಿ ಹೀರಲ್ಪಡುತ್ತವೆ. ಮಾಂಸಾಹಾರವು ನಮಗೆ ಅತ್ಯಗತ್ಯವಾದ ಎಲ್ಲಾ ಅಮೈನೋ ಆಮ್ಲಗಳನ್ನು ಒದಗಿಸುವುದರ ಜೊತೆಗೆ, ಕಬ್ಬಿಣ, ಸತು, ಬಿ-12 ಅನ್ನಾಂಗ ಇತ್ಯಾದಿ ಪೋಷಕಾಂಶಗಳನ್ನೂ ಒದಗಿಸುತ್ತದೆ. ಪ್ರಾಣಿಜನ್ಯ ಪ್ರೊಟೀನುಗಳು ನಮ್ಮ ದೇಹಕ್ಕೆ ಸುಲಭವಾಗಿ ಒಗ್ಗಿಕೊಂಡರೆ, ಸಸ್ಯಜನ್ಯ ಪ್ರೊಟೀನುಗಳಿಗೆ ಅಸಹಿಷ್ಣುತೆ (ಅಲರ್ಜಿ) ಉಂಟಾಗುವ ಸಾಧ್ಯತೆಗಳು ಹೆಚ್ಚು. ನಮ್ಮ ಮೆದುಳಿನ ಕೆಲಸಗಳು ಸಾಂಗವಾಗಿ ನಡೆಯುವುದಕ್ಕೂ, ರಕ್ತನಾಳಗಳ ಆರೋಗ್ಯವನ್ನು ಕಾಪಾಡುವುದಕ್ಕೂ ಮೀನಿನೆಣ್ಣೆಯ ಮೇದೋ ಆಮ್ಲಗಳು ಅತ್ಯಗತ್ಯವಾಗಿದ್ದು, ಅವು ಯಾವುದೇ ಸಸ್ಯಾಹಾರದಲ್ಲೂ ದೊರೆಯುವುದಿಲ್ಲ. ಇಷ್ಟೇ ಅಲ್ಲದೆ, ಪ್ರಾಣಿಜನ್ಯ ಮೇದಸ್ಸು ಹಾಗೂ ಪ್ರೊಟೀನುಗಳು ನಮಗೆ ಬೇಗನೇ ಸಂತೃಪ್ತಿಯನ್ನುಂಟು ಮಾಡಿ ಹಸಿವೆಯನ್ನು ನಿಯಂತ್ರಿಸುವಲ್ಲಿಯೂ ನೆರವಾಗುತ್ತವೆ.

ಮಾಂಸಾಹಾರದಿಂದ ರೋಗಗಳು ಹೆಚ್ಚುತ್ತವೆಯೇ? ಅದಕ್ಕೂ ಆಧಾರಗಳಿಲ್ಲ. ಮಧುಮೇಹ, ರಕ್ತದ ಏರೊತ್ತಡ, ಹೃದಯಾಘಾತ ಮುಂತಾದ ಕಾಹಿಲೆಗಳು ಸಸ್ಯಾಹಾರಿಗಳನ್ನೂ, ಮಾಂಸಾಹಾರಿಗಳನ್ನೂ ಸಮಾನವಾಗಿ ಬಾಧಿಸುತ್ತವೆ. ಎಲ್ಲರೂ ತಿನ್ನುವ ಸಕ್ಕರೆ, ಧಾನ್ಯಗಳು ಹಾಗೂ ಸಂಸ್ಕರಿತ ಆಹಾರಗಳೇ ಇದಕ್ಕೆ ಮುಖ್ಯ ಕಾರಣವೆನ್ನುವುದಕ್ಕೆ ಈಗ ಬಲವಾದ ಪುರಾವೆಗಳಿವೆ. ಆದ್ದರಿಂದ ಅಂತಹ ‘ಸಸ್ಯಾಹಾರದ’ ಬದಲಿಗೆ ಸಾಕಷ್ಟು ತರಕಾರಿಗಳನ್ನೂ, ಹಿತಮಿತವಾಗಿ ಮಾಂಸಾಹಾರವನ್ನೂ ಸೇವಿಸಿದರೆ ಆರೋಗ್ಯವಂತರಾಗಿರಲು ಸಾಧ್ಯವಿದೆ. ಈಗಲೂ ಕಾಡಿನೊಳಗೆ ಪ್ರಾಣಿಗಳು ಹಾಗೂ ಸೊಪ್ಪು-ಕಾಯಿಗಳನ್ನಷ್ಟೇ ತಿಂದು ಬದುಕುತ್ತಿರುವ ಆದಿವಾಸಿಗಳಲ್ಲಿ ಈ ಆಧುನಿಕ ರೋಗಗಳ ಸುಳಿವೇ ಇಲ್ಲವೆನ್ನುವುದು ಇದನ್ನು ಪುಷ್ಠೀಕರಿಸುತ್ತದೆ.

ಆದ್ದರಿಂದ ನಮ್ಮ ಶರೀರಧರ್ಮಕ್ಕೆ ಅನುಗುಣವಾದ, ಆರೋಗ್ಯಕ್ಕೆ ಪೂರಕವಾದ ಮಾಂಸಾಹಾರ ಸೇವನೆಗೆ ಜಾತಿ-ಧರ್ಮಗಳ ಹಂಗು ಅಡ್ಡಿಯಾಗದಿರಲಿ, ಈಗಾಗಲೇ ಪೌಷ್ಠಿಕತೆಯ ತೊಂದರೆಗಳಿಂದ ಬಳಲುತ್ತಿರುವ ನಮ್ಮ ಮಕ್ಕಳಿಗೆ ಚಾಕ್ಲೇಟು-ಬಿಸ್ಕತ್ತುಗಳ ಬದಲಿಗೆ ಮೀನು-ಮೊಟ್ಟೆಗಳು ಸಿಗುವಂತಾಗಲಿ. ’ಕೊಲ್ಲೆನಯ್ಯಾ ಪ್ರಾಣಿಗಳ, ಮೆಲ್ಲೆನಯ್ಯಾ ಬಾಯಿಚ್ಛೆಗೆ’ ಎಂದು ಸ್ವತಃ ಮಾಂಸಾಹಾರವನ್ನು ಇಚ್ಛಿಸದಿದ್ದರೂ, ನಾಯಿಮಾಂಸ ಸೇವಿಸುತ್ತಿದ್ದ ಶ್ವಪಚರನ್ನೂ, ‘ಎಡದ ಕೈಯಲಿ ಕತ್ತಿ, ಬಲದ ಕೈಯಲಿ ಮಾಂಸ, ಬಾಯಲಿ ಸುರೆಯ ಗಡಿಗೆ’ ಹೊತ್ತಿದ್ದವರನ್ನೂ ತಿರಸ್ಕರಿಸದೆ, ‘ಕೊರಳಲಿ ದೇವರಿರಲು’ ಅವರಲ್ಲೂ ಶಿವಸ್ವರೂಪವನ್ನು ಕಂಡಿದ್ದ ನಮ್ಮ ನಾಡಿನ ಅತಿ ಶ್ರೇಷ್ಠ ದಾರ್ಶನಿಕ ಬಸವಣ್ಣನವರ ಉದಾರತೆ ಹಾಗೂ ಮಾನವೀಯ ಕಳಕಳಿಗಳು ಎಲ್ಲರಿಗೆ ದಾರಿ ತೋರಲಿ, ಸದ್ಬುದ್ಧಿಯನ್ನು ಕೊಡಲಿ.

ಆರನೇ ಬರಹ: ಎಂಡಿ, ಎಮ್ಮೆಸ್ಸುಗಳಿಗೆ ಎಂಬಿಎ, ಎಮ್ಮೆಚ್ಯೆಗಳ ಮೂಗುದಾರ [ಸೆಪ್ಟೆಂಬರ್ 5, 2012, ಬುಧವಾರ] [ನೋಡಿ]

ಮಹಾ ಆಸ್ಪತ್ರೆಗಳ ವ್ಯವಹಾರತಜ್ಞ್ರರ ಪಾರುಪತ್ಯದಲ್ಲಿ ರೋಗಿಗಳಿಗೆ ನಷ್ಟ, ವೈದ್ಯರಿಗೆ ಸಂಕಟ

ಅನ್ನ, ನೀರುಗಳಂತೆ ಆರೋಗ್ಯಸೇವೆಯೂ ಮನುಷ್ಯನ ಅನಿವಾರ್ಯ ಅವಶ್ಯಕತೆಗಳಲ್ಲೊಂದು. ಆದರೆ ಜಗದ್ವ್ಯಾಪಿಯಾಗುತ್ತಿರುವ ಹೊಸ ಆರ್ಥಿಕ ನೀತಿಯಡಿಯಲ್ಲಿ ಸರಕಾರವೂ ಲಾಭಕೋರನಾಗಿ, ಆರ್ಥಿಕ ಲಾಭವಿಲ್ಲದ ಸಾರ್ವಜನಿಕ ಸೇವೆಗಳನ್ನು ಒಂದೊಂದಾಗಿ ಕೈ ಬಿಡುತ್ತಿದೆ. ಆರೋಗ್ಯ ಸೇವೆಗಳು ಖಾಸಗೀಕರಣಗೊಂಡಂತೆ ವ್ಯವಹಾರದ ರೂಪವನ್ನು ಧರಿಸುತ್ತಿದೆ; ಅದರ ನಿರ್ವಹಣೆಯ ಜವಾಬ್ದಾರಿಯೂ ಪಲ್ಲಟಗೊಳ್ಳುತ್ತಾ ಮೇಜಿನ ಹಿಂದೆ ಎಂಬಿಎ, ಮುಂದೆ ಎಂಡಿ ಎಂಬಂತಾಗಿದೆ.

ನಮ್ಮ ದೇಶದಲ್ಲಿ ಈಗಾಗಲೇ ಶೇ. 75 ರಷ್ಟು ಆರೋಗ್ಯ ಸೇವೆಯು ಖಾಸಗಿ ವಲಯದಲ್ಲಿದೆ. ಹೊಸ ಆರ್ಥಿಕ ನೀತಿಯ ಖಾಸಗೀಕರಣದ ಭರಾಟೆಯಲ್ಲಿ ಕಳೆದ ನಾಲ್ಕೈದು ವರ್ಷಗಳಲ್ಲಿ ನಮ್ಮ ಆರೋಗ್ಯ ಸೇವೆಗಳಲ್ಲಿ ಒಟ್ಟು ಹೂಡಿಕೆಯು ದುಪ್ಪಟ್ಟಾಗಿ ಸುಮಾರು 60 ಲಕ್ಷ ಕೋಟಿ ರೂಪಾಯಿಗಳಷ್ಟಾಗಿದ್ದರೆ, ಖಾಸಗಿ ಆಸ್ಪತ್ರೆಗಳ ವಾರ್ಷಿಕ ವ್ಯವಹಾರವೂ ದುಪ್ಪಟ್ಟಾಗಿ ಸುಮಾರು ಒಂದೂವರೆ ಲಕ್ಷ ಕೋಟಿ ರೂಪಾಯಿಗಳಿಗೆ ತಲುಪಿದೆ. ಒಂದು ಕಾಲಕ್ಕೆ ಸರಕಾರ, ಸೇವಾ ಸಂಸ್ಥೆಗಳು ಹಾಗೂ ಸ್ವಂತವಾಗಿ ಕೆಲವು ವೈದ್ಯರು ಆಸ್ಪತ್ರೆಗಳನ್ನು ನಡೆಸುತ್ತಿದ್ದರೆ, ಈಗ ದೊಡ್ಡ ವಹಿವಾಟಿನ ಕಂಪೆನಿಗಳು ಆರೋಗ್ಯಕ್ಷೇತ್ರಕ್ಕೆ ಲಗ್ಗೆಯಿಡುತ್ತಿವೆ. ಬಿಲ್ ಗೇಟ್ಸ್ ನಂತಹ ಅತಿ ಶ್ರೀಮಂತ ಹೂಡಿಕೆದಾರರೂ ಇತ್ತ ಆಕರ್ಷಿತರಾಗಿದ್ದಾರೆ. ಪೈಪೋಟಿಯಿದ್ದರಷ್ಟೇ ಬೆಳವಣಿಗೆ ಸಾಧ್ಯವೆಂಬ ಹೊಸ ಆರ್ಥಿಕ ನೀತಿಯ ಬೀಜಮಂತ್ರಕ್ಕೆ ಅನುಗುಣವಾಗಿ ಆರೋಗ್ಯ ಸೇವೆಯು ಆರೋಗ್ಯ ಉದ್ದಿಮೆಯಾಗಿದೆ, ಪೈಪೋಟಿಯಿಂದ ಬೆಳೆಯುತ್ತಿದೆ.

ಆಸ್ಪತ್ರೆಗಳು ದೊಡ್ಡ ಉದ್ದಿಮೆಗಳಾದ ಮೇಲೆ ಅವುಗಳ ನಿರ್ವಹಣೆಯೂ ಅದಕ್ಕೆ ತಕ್ಕುದಾಗಿರಬೇಕು, ಇಲ್ಲದೇ ಹೋದರೆ ಹಾಕಿದ ದುಡ್ಡಿನ ಗತಿಯೇನಾದೀತು? ಆರೋಗ್ಯ ರಕ್ಷಣೆಯಲ್ಲಷ್ಟೇ ತರಬೇತಾದ ವೈದ್ಯರಿಗೆ ಕೋಟಿ ಲೆಕ್ಕದ ಈ ವ್ಯವಹಾರವನ್ನು ನಿಭಾಯಿಸುವುದಕ್ಕೆ ಸಾಧ್ಯವೇ? ತಮ್ಮ ಪ್ರತಿಭೆಯ ಬಲದಿಂದಲೇ ವೈದ್ಯವತ್ತಿಯನ್ನು ಆರಿಸಿಕೊಳ್ಳುವ ಬಹುತೇಕರು ವೈದ್ಯವಿಜ್ಞಾನದ ಮೇಲಿನ ಆಸಕ್ತಿ, ವೈದ್ಯವತ್ತಿಯ ಸವಾಲುಗಳು, ಉನ್ನತ ಮೌಲ್ಯಗಳು ಹಾಗೂ ಗೌರವಗಳನ್ನಷ್ಟೇ ಪರಿಗಣಿಸಿರುತ್ತಾರಲ್ಲದೆ, ಅದರ ವ್ಯಾವಹಾರಿಕ ಲಾಭಗಳನ್ನಲ್ಲ. ವೈದ್ಯಕೀಯ ಶಿಕ್ಷಣದ ವೇಳೆಯೂ ಯಾವುದೇ ವ್ಯಾವಹಾರಿಕ ತರಬೇತಿಯು ದೊರೆಯುವುದಿಲ್ಲ. ಹಾಗಾಗಿ ಅನೇಕ ವೈದ್ಯರಿಗೆ ವ್ಯಾಪಾರ-ವ್ಯವಹಾರಗಳಲ್ಲಿ ಆಸಕ್ತಿಯಾಗಲೀ, ಕೌಶಲ್ಯಗಳಾಗಲೀ ಇರುವುದಿಲ್ಲ. ಇನ್ನೊಂದೆಡೆ, ವೈದ್ಯವತ್ತಿಯ ಸಂವೇದನಾಶೀಲತೆಯೂ, ವಿವಿಧ ನಿರ್ಬಂಧಗಳೂ ಆಸ್ಪತ್ರೆಗಳ ಲಾಭದಾಯಕ ನಿರ್ವಹಣೆಗೆ ತೊಡಕಾಗಬಹುದು. ವೈದ್ಯರಾದವರು ತಮ್ಮ ಜ್ಞಾನ ಹಾಗೂ ಅನುಭವಗಳ ಆಧಾರದಲ್ಲಿ ಎಲ್ಲವನ್ನೂ ಒರೆಗೆ ಹಚ್ಚುವುದು, ವಿಷಯ ಸ್ಪಷ್ಟತೆಯನ್ನು ಬಯಸುವುದು, ಯಾವುದೇ ವಿಷಯದಲ್ಲಿ ರಾಜಿ ಮಾಡಿಕೊಳ್ಳಲು ಸಿದ್ಧರಾಗದಿರುವುದು, ಅನುಕಂಪ, ನೇರ ನಡೆನುಡಿ ಹಾಗೂ ಪ್ರಾಮಾಣಿಕತೆ ಇತ್ಯಾದಿ ಗುಣವಿಶೇಷಗಳನ್ನು ಹೊಂದಿರುವುದು ವ್ಯವಹಾರ ನಡೆಸುವುದಕ್ಕೆ ಪ್ರತಿಕೂಲವಾಗಬಹುದು. ಆಸ್ಪತ್ರೆಗಳಲ್ಲಿ ವಿವಿಧ ಪರೀಕ್ಷೆಗಳು, ಔಷಧಗಳು ಹಾಗೂ ಶಸ್ತ್ರಕ್ರಿಯೆಗಳಂತಹಾ ವಿಶೇಷ ಚಿಕಿತ್ಸೆಗಳಲ್ಲೇ ಹೆಚ್ಚಿನ ಲಾಭವಿರುತ್ತವೆ. ಆದರೆ ರೋಗಿಯ ಆರ್ಥಿಕ ಸ್ಥಿತಿಗತಿಯನ್ನೂ, ಒಳಿತು-ಕೆಡುಕುಗಳನ್ನೂ ತುಲನೆ ಮಾಡಿ, ರೋಗಿಯ ಹಿತದಷ್ಠಿಯಿಂದ ಇವನ್ನೆಲ್ಲ ಸೀಮಿತವಾಗಿ ಬಳಸುವ ವೈಚಾರಿಕತೆ ಹಾಗೂ ನೈತಿಕತೆಗಳನ್ನು ಹೊಂದಿರುವ ವೈದ್ಯರು ಆಸ್ಪತ್ರೆಯ ಲಾಭಕ್ಕೆ ಎರವಾಗುವ ಸಾಧ್ಯತೆಗಳು ಸಾಕಷ್ಟಿರುತ್ತವೆ. ಆದ್ದರಿಂದ ವೈದ್ಯವತ್ತಿಯ ಆದರ್ಶಗಳನ್ನು ನೆಚ್ಚಿಕೊಂಡರೆ ಮಾರುಕಟ್ಟೆಯ ಪೈಪೋಟಿಯಲ್ಲಿ ಜಯಿಸಿ ಹೇರಳವಾಗಿ ಲಾಭ ಗಳಿಸುವುದು ಅಷ್ಟೇನೂ ಸುಲಭವಾಗುವುದಿಲ್ಲ.

ವೈದ್ಯರಿಲ್ಲದೆ ಆಸ್ಪತ್ರೆಗಳಿಗೆ ಅರ್ಥವಿಲ್ಲ, ಆದರೆ ವೈದ್ಯವತ್ತಿಯ ಆದರ್ಶಗಳನ್ನಿಟ್ಟುಕೊಂಡರೆ ಆಸ್ಪತ್ರೆಗಳಿಗೆ ಮಹಾಲಾಭವಿಲ್ಲ. ಈ ಸಂದಿಗ್ಧತೆಯಿಂದ ಪಾರಾಗುವ ಸುಲಭೋಪಾಯವೆಂದರೆ ವೈದ್ಯರನ್ನೂ, ಅವರ ಆದರ್ಶಗಳನ್ನೂ ಆಸ್ಪತ್ರೆಯ ವ್ಯವಹಾರದಿಂದ ದೂರವಿಟ್ಟು, ದಿನನಿತ್ಯದ ಆಡಳಿತವನ್ನೂ, ಹಣಕಾಸಿನ ವಹಿವಾಟನ್ನೂ ವ್ಯವಹಾರ ತಜ್ಞರೆನಿಸಿಕೊಂಡವರಿಗೆ ಒಪ್ಪಿಸುವುದು. ಆದ್ದರಿಂದಲೇ, ಇಂದು ಮುಖ್ಯ ವೈದ್ಯಾಧಿಕಾರಿಗಳ ಜೊತೆಗೆ ಅಥವಾ ಅವರ ಜಾಗದಲ್ಲಿ ಮುಖ್ಯ ಆಡಳಿತಾಧಿಕಾರಿ, ಮುಖ್ಯ ವಿತ್ತಾಧಿಕಾರಿ ಇತ್ಯಾದಿಗಳೆಲ್ಲ ಆಸ್ಪತ್ರೆಗಳಲ್ಲಿ ಕಾಣಸಿಗುತ್ತಾರೆ. ಆಸ್ಪತ್ರೆಯಲ್ಲಿ ಬಂಡವಾಳ ಹೂಡಿರುವವರ ಪ್ರತಿನಿಧಿಗಳಾಗಿ ನಿಯುಕ್ತರಾಗುವ ಈ ವ್ಯವಹಾರಾಧಿಕಾರಿಗಳು ವೈದ್ಯರೂ ಸೇರಿದಂತೆ ಆಸ್ಪತ್ರೆಯ ಎಲ್ಲಾ ಸಿಬ್ಬಂದಿಯ ನೇಮಕಾತಿಗಳಲ್ಲಿ, ಉಪಕರಣಗಳು ಹಾಗೂ ಔಷಧಗಳ ಖರೀದಿಯಲ್ಲಿ, ವಿವಿಧ ಪರೀಕ್ಷೆಗಳು ಹಾಗೂ ಚಿಕಿತ್ಸೆಗಳ ವೆಚ್ಚವನ್ನು ನಿರ್ಧರಿಸುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತಾರೆ. ಹೀಗೆ ಇಂದು ಮಹಾಸ್ಪತ್ರೆಗಳಲ್ಲಿ ಆರೋಗ್ಯಸೇವೆಗೆ ವೈದ್ಯಾಧಿಕಾರಿಗಳು, ಆರೋಗ್ಯ ಉದ್ದಿಮೆಯ ನಿರ್ವಹಣೆಗೆ ವ್ಯವಹಾರಾಧಿಕಾರಿಗಳು ಎನ್ನುವ ಸ್ಪಷ್ಟವಾದ ಶ್ರಮ ವಿಭಜನೆಯಾಗಿದ್ದು, ಆಸ್ಪತ್ರೆಯು ದೊಡ್ಡದಾದಷ್ಟು ವೈದ್ಯರ ಪಾತ್ರವು ಕಿರಿದಾಗುವ ಸ್ಥಿತಿಯುಂಟಾಗಿದೆ.

ಈ ವ್ಯವಹಾರಾಧಿಕಾರಿಗಳು ಹೆಚ್ಚಿನ ಸಂದರ್ಭಗಳಲ್ಲಿ ವೈದ್ಯರಾಗಿರದೆ, ವ್ಯವಹಾರ ನಿರ್ವಹಣೆಯಲ್ಲಷ್ಟೇ ತರಬೇತಾದವರಾಗಿರುವುದರಿಂದ ವೈದ್ಯವತ್ತಿಯ ಸೂಕ್ಷ್ಮ ಸಂವೇದನೆಗಳಾಗಲೀ, ಆದರ್ಶಗಳಾಗಲೀ ಅವರನ್ನು ತಡೆಯುವುದಿಲ್ಲ. ಹಾಗಾಗಿ ವ್ಯಾಪಾರ ಜಗತ್ತಿನ ತಂತ್ರಗಳನ್ನೆಲ್ಲ ಆಸ್ಪತ್ರೆಗಳ ವ್ಯವಹಾರದಲ್ಲೂ ಬಳಸಿಕೊಳ್ಳುವುದು ಅವರಿಗೆ ಸುಲಭಸಾಧ್ಯವಾಗುತ್ತದೆ. ಆದ್ದರಿಂದಲೇ ಜನರನ್ನು ತಮ್ಮತ್ತ ಸೆಳೆಯುವುದಕ್ಕಾಗಿ ಎಲ್ಲಾ ಮಹಾಸ್ಪತ್ರೆಗಳು ಹೊಸ ಹೊಸ ಮಾರುಕಟ್ಟೆ ತಂತ್ರಗಳನ್ನು ಹೆಣೆಯುತ್ತಿರುವುದನ್ನು ನಾವಿಂದು ಕಾಣಬಹುದು. ಒಂದೊಂದು ರೋಗದ ಪರೀಕ್ಷೆಗೂ, ಚಿಕಿತ್ಸೆಗೂ ವಿಶೇಷ ಯೋಜನೆಗಳು, ಜಾಹೀರಾತುಗಳು, ಬೀದಿ ಬದಿಯ ಮಹಾಫಲಕಗಳು, ಮಾಧ್ಯಮ ವರದಿಗಳು ಇತ್ಯಾದಿಗಳೆಲ್ಲ ಈಗ ತೀರಾ ಸಾಮಾನ್ಯವಾಗಿ ಬಿಟ್ಟಿವೆ. ಇವುಗಳಿಂದಾಗಿ ಜನಸಾಮಾನ್ಯರೇ ನೇರವಾಗಿ ತಮ್ಮ ಪರೀಕ್ಷೆಗಳನ್ನೂ, ಚಿಕಿತ್ಸೆಗಳನ್ನೂ ಆಯ್ದು ಮಾಡಿಸಿಕೊಳ್ಳುವ ಪ್ರವತ್ತಿಯೂ ಹೆಚ್ಚುತ್ತಿದೆ. ಇಂದು ಆರೋಗ್ಯವಿಮೆಯೂ ಬಹು ದೊಡ್ಡ ಉದ್ಯಮವಾಗಿ ಬೆಳೆದಿರುವುದರಿಂದ, ವಿಮಾದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವ ಎಲ್ಲಾ ವ್ಯವಸ್ಥೆಗಳೂ ಈ ಮಹಾಸ್ಪತ್ರೆಗಳಲ್ಲಿರುತ್ತವೆ. ವಿಮಾ ಮೊತ್ತಕ್ಕೆ ಅನುಗುಣವಾಗಿ ಪರೀಕ್ಷೆಗಳನ್ನೂ, ಚಿಕಿತ್ಸೆಯನ್ನೂ ಏರ್ಪಡಿಸುವುದರಲ್ಲೂ, ವಿಮಾ ಕಂಪೆನಿಗಳೊಂದಿಗೆ ಸಂಧಾನ ನಡೆಸುವುದರಲ್ಲೂ ನಿಷ್ಣಾತರಾದ ವಿಶೇಷಾಧಿಕಾರಿಗಳು ಈ ಆಸ್ಪತ್ರೆಗಳಲ್ಲಿರುತ್ತಾರೆ. ಇದಲ್ಲದೆ ಸರಕಾರವು ಕೈಬಿಟ್ಟ ರಾಜ್ಯ ವಿಮಾ ಸೌಲಭ್ಯವುಳ್ಳ ಕಾರ್ಮಿಕರು, ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳ ಉದ್ಯೋಗಿಗಳು ಹಾಗೂ ನಿವೃತ್ತರು, ಯಶಸ್ವಿನಿ ಮುಂತಾದ ಯೋಜನೆಗಳ ಫಲಾನುಭವಿಗಳು ಇವೇ ಮುಂತಾದವರನ್ನು ತಮ್ಮ ಆಸ್ಪತ್ರೆಗಳತ್ತ ಸೆಳೆಯುವ ಕೆಲಸವನ್ನೂ ಈ ಅಧಿಕಾರಿಗಳು ಮಾಡುತ್ತಾರೆ. ಹೀಗೆ ಆಸ್ಪತ್ರೆಯ ಒಳಹರಿವನ್ನು ಹೆಚ್ಚಿಸುವುದು ಒಂದೆಡೆಯಾದರೆ, ಎಲ್ಲಾ ಪರೀಕ್ಷೆಗಳಿಗೂ, ಚಿಕಿತ್ಸೆಗಳಿಗೂ ಚೌಕಾಸಿಗೆ ಎಡೆಯಿಲ್ಲದಂತೆ ದರಗಳನ್ನು ವಿಧಿಸುವ ಮೂಲಕವೂ, ಯಾವ ಯಾವ ವೈದ್ಯರಿಂದ, ಯಾವ ಯಾವ ವಿಭಾಗಗಳಿಂದ ಎಷ್ಟೆಷ್ಟು ಆದಾಯವು ಬರುತ್ತಿದೆ ಎನ್ನುವುದನ್ನೆಲ್ಲ ನಿಖರವಾಗಿ ನಿಗಾ ವಹಿಸುವ ಮೂಲಕವೂ ಆಸ್ಪತ್ರೆಯ ಆದಾಯವನ್ನು ಹೆಚ್ಚಿಸುವ ಎಲ್ಲ ಪ್ರಯತ್ನಗಳನ್ನೂ ಈ ಅಧಿಕಾರಿಗಳು ಮಾಡುತ್ತಾರೆ. ಅದರ ಜೊತೆಗೆ, ಖರ್ಚನ್ನು ಉಳಿಸುವುದಕ್ಕಾಗಿ ಉಪಕರಣಗಳು ಹಾಗೂ ಔಷಧಗಳ ಖರೀದಿಯಲ್ಲಿ ಚೌಕಾಸಿ ಮಾಡುವುದು, ಆಸ್ಪತ್ರೆ ಸಿಬ್ಬಂದಿಯ ಸಂಖ್ಯೆಯನ್ನು ಕಡಿತಗೊಳಿಸುವುದು ಯಾ ಕೆಲವನ್ನು ಕಡಿಮೆ ವೆಚ್ಚದಲ್ಲಿ ಹೊರಗುತ್ತಿಗೆಗೆ ವಹಿಸುವುದು ಇವೇ ಮುಂತಾದ ಕ್ರಮಗಳನ್ನೂ ಅವರು ಕೈಗೊಳ್ಳುತ್ತಾರೆ. ಒಟ್ಟಿನಲ್ಲಿ, ಇಂದಿನ ಮಹಾಸ್ಪತ್ರೆಗಳು ತಮ್ಮ ಮಹಾಲಾಭಗಳಿಗಾಗಿ ಈ ಮಹಾ ವ್ಯವಹಾರ ತಜ್ಞರನ್ನೇ ಅವಲಂಬಿಸಿರುವಂತಾಗಿದೆ, ಆಸ್ಪತ್ರೆಗಳಿಗೆ ರೋಗಿಗಳು ಬರುವುದು ವೈದ್ಯರ ಪ್ರಯತ್ನಗಳಿಂದಲ್ಲ, ವ್ಯವಹಾರ ತಜ್ಞರ ಚಾತುರ್ಯದಿಂದ ಎಂಬಂತಾಗಿದೆ.

ಈ ವ್ಯವಸ್ಥೆಯಿಂದ ಆಸ್ಪತ್ರೆಯ ಲಾಭವು ಹೆಚ್ಚಬಹುದಾದರೂ, ಚಿಕಿತ್ಸೆಯನ್ನು ಪಡೆಯುವ ರೋಗಿಗಳಿಗಾಗಲೀ, ನೀಡುವ ವೈದ್ಯರಿಗಾಗಲೀ ಏನಾದರೂ ಲಾಭವಿದೆಯೇ? ಆಸ್ಪತ್ರೆಯ ಸುಗಮವಾದ ಆಡಳಿತದ ದೃಷ್ಠಿಯಿಂದ ಆಡಳಿತ ಮತ್ತು ಆಯವ್ಯಯಗಳಿಗೆ ಸಂಬಂಧಿಸಿ ಆಡಳಿತಾಧಿಕಾರಿಗಳು ಕೈಗೊಳ್ಳುವ ನಿರ್ಣಯಗಳಿಗೆಲ್ಲ ವೈದ್ಯರು ಸಹಜವಾಗಿಯೇ ಸಹಕರಿಸಬೇಕಾಗುತ್ತದೆ. ಆದರೆ ವೈದ್ಯಕೀಯ ನಿರ್ಣಯಗಳಲ್ಲೂ ಆಡಳಿತಾಧಿಕಾರಿಗಳು ಪ್ರಭಾವ ಬೀರತೊಡಗಿದರೆ ವೈದ್ಯರಿಗೂ, ರೋಗಿಗಳಿಗೂ ಸಮಸ್ಯೆಗಳಾಗುತ್ತವೆ. ವೈದ್ಯಕೀಯ ನಿರ್ಣಯಗಳಲ್ಲಿ ಆಡಳಿತದವರು ನೇರವಾಗಿ ಹಸ್ತಕ್ಷೇಪ ಮಾಡದಿದ್ದರೂ, ಅವರ ನಿರ್ಣಯಗಳೂ, ವರ್ತನೆಗಳೂ ಪರೋಕ್ಷವಾಗಿ ಪ್ರಭಾವವನ್ನು ಬೀರಬಹುದು. ಉದಾಹರಣೆಗೆ, ಇಂದು ದೊಡ್ಡ ಆಸ್ಪತ್ರೆಗಳಲ್ಲಿ ಎಲ್ಲಾ ಆಗುಹೋಗುಗಳನ್ನೂ ಗಣಕೀಕರಿಸಲಾಗಿದ್ದು, ಅಲ್ಲಿನ ಪ್ರತೀ ವೈದ್ಯರು ಮಾಡಿಸಿರುವ ಪರೀಕ್ಷೆಗಳು, ಬರೆದಿರುವ ಔಷಧಗಳು, ಒಳರೋಗಿ ಚಿಕಿತ್ಸೆ, ಶಸ್ತ್ರಕ್ರಿಯೆ ಇತ್ಯಾದಿಗಳಿಂದ ಬಂದಿರುವ ಆದಾಯವನ್ನು ಅತಿ ಸುಲಭದಲ್ಲಿ ಲೆಕ್ಕ ಹಾಕುವುದಕ್ಕೆ ಸಾಧ್ಯವಾಗುತ್ತದೆ. ತಿಂಗಳಾಂತ್ಯಕ್ಕೆ ಆಡಳಿತಾಧಿಕಾರಿಯು ವೈದ್ಯನನ್ನು ಕರೆದು, ತನ್ನೆದುರಿನ ಗಣಕಯಂತ್ರದ ಕೀಲಿಯೊಂದನ್ನೊತ್ತಿ, ಡಾಕ್ಟರ್, ನಾವು ಕೊಡುತ್ತಿರುವ ಸಂಬಳಕ್ಕೆ ಸರಿಯಾದ ಆದಾಯ ನಿಮ್ಮಿಂದ ಹುಟ್ಟುತ್ತಿಲ್ಲ’ ಎಂದರಷ್ಟೇ ಸಾಕಾಗುತ್ತದೆ. ಸ್ವಂತ ಪ್ರತಿಭೆಯ ಸ್ಥೈರ್ಯವುಳ್ಳವರು, ಆದರ್ಶಗಳಲ್ಲಿ ರಾಜಿ ಮಾಡಿಕೊಳ್ಳಲಾಗದವರು, ವತ್ತಿಸಂಹಿತೆಗೆ ನಿಷ್ಠರಾಗುಳ್ಳವರು ಅಂತಹಾ ಸನ್ನಿವೇಶದಲ್ಲಿ ಹೊರನಡೆಯಬೇಕಾಗುತ್ತದೆ. ಆದರೆ, ಬಹಳಷ್ಟು ವೈದ್ಯರು ಈ ವ್ಯವಸ್ಥೆಗೆ ತಗ್ಗಿಕೊಂಡು, ನಿಧಾನವಾಗಿ ಅದಕ್ಕೆ ಒಗ್ಗಿಕೊಂಡು, ನಂತರ ಅದನ್ನೂ ತಮ್ಮ ಲಾಭಕ್ಕೆ ಬಳಸಿಕೊಳ್ಳುವುದನ್ನು ಕಲಿತು ಬಿಡುತ್ತಾರೆ. ಅಗತ್ಯವಿಲ್ಲದ ಪರೀಕ್ಷೆಗಳನ್ನು ನಡೆಸುವುದು, ಹೊಸ ಹೊಸ ಔಷಧಗಳ ಉದ್ದುದ್ದ ಚೀಟಿಗಳನ್ನು ಬರೆಯುವುದು, ರೋಗಿಗಳನ್ನು ಅನಗತ್ಯವಾಗಿ ದಿನಗಟ್ಟಲೆ ಆಸ್ಪತ್ರೆಯೊಳಗೆ ದಾಖಲಿಸುವುದು, ಅನಗತ್ಯವಾಗಿ ಶಸ್ತ್ರಕ್ರಿಯೆಗಳನ್ನು ನಡೆಸುವುದು ಇತ್ಯಾದಿಗಳ ಮೂಲಕ ಆಸ್ಪತ್ರೆಯ ತಿಜೋರಿಯನ್ನೂ, ತಮ್ಮ ಚೀಲವನ್ನೂ ತುಂಬಿಸುವುದು ಅವರ ದೈನಂದಿನ ಅಭ್ಯಾಸವಾಗುತ್ತದೆ. ವಿಮೆಯುಳ್ಳವರಿಗೆ ವಿಶೇಷ’ ಚಿಕಿತ್ಸೆಯನ್ನು ನೀಡುವ ಇಂತಹಾ ಅಭ್ಯಾಸಕ್ಕೆ ವಿಮೆಯಿಲ್ಲದವರೂ ಸಿಕ್ಕಿಕೊಂಡರೆ ಅವರ ಕಿಸೆಯೇ ಖಾಲಿಯಾಗುತ್ತದೆ. ಹೀಗೆ, ಎರಡು ದಿನಗಳ ಸಾಮಾನ್ಯ ಜ್ವರಕ್ಕೆ ಮೂವತ್ತು ಸಾವಿರ ರೂಪಾಯಿ ಚೆಲ್ಲುವ ಪಾಡು ರೋಗಿಯದ್ದಾಗುತ್ತದೆ. ಈ ವ್ಯವಸ್ಥೆಯಲ್ಲಿ ರೋಗಿಗೆ ತಾವೇನು ಮಾಡಿದ್ದೇವೆ ಎನ್ನುವುದಕ್ಕಿಂತ ರೋಗಿಯಿಂದ ತಮಗೇನು ಸಿಗುತ್ತದೆ ಎನ್ನುವುದೇ ಮುಖ್ಯವಾಗುವುದರಿಂದ, ವೈದ್ಯರಿಗೆ ಹಗಲಲ್ಲಿ ಮರ್ಸಿಡಿಸ್ ಕಾರಲ್ಲಿ ತಿರುಗುವ ಭಾಗ್ಯವೊಲಿದರೂ, ರಾತ್ರಿಯಲ್ಲಿ ಆತ್ಮಸಾಕ್ಷಿ ಕುಟುಕಿದಾಗ ನಿದ್ದೆ ಹತ್ತದೆ ಸಂಕಟವಾಗುತ್ತದೆ.

ಸರಕಾರವು ತನ್ನ ಪ್ರಜೆಗಳ ಆರೋಗ್ಯ ರಕ್ಷಣೆಯ ಜವಾಬ್ದಾರಿಯಿಂದ ಜಾರಿಕೊಂಡು, ಅದನ್ನು ಖಾಸಗಿ ಮಾರುಕಟ್ಟೆಯ ಪೈಪೋಟಿಗೆ ಒಪ್ಪಿಸಿದಾಗ ವೈದ್ಯರು ನೌಕರರಾಗುತ್ತಾರೆ, ರೋಗಿಗಳು ಗ್ರಾಹಕರಾಗುತ್ತಾರೆ, ನಾಣ್ಯಗಳ ಸದ್ದಲ್ಲಿ ಅವರ ನಡುವಿನ ಮಾನವೀಯ ಸ್ಪಂದನದ ಸದ್ದಡಗುತ್ತದೆ. ಅದು ಮತ್ತೆ ಮೊಳಗಬೇಕಾದರೆ ಜನಸಾಮಾನ್ಯರಲ್ಲಿ ಜಾಗೃತಿಯು ಹೆಚ್ಚಬೇಕು, ವೈದ್ಯರ ಆತ್ಮಸಾಕ್ಷಿಯು ಎದ್ದೇಳಬೇಕು.

ಐದನೇ ಬರಹ: ಸೊಳ್ಳೆಗಳಿಂದಲೂ ಹತರಾಗುವ ಪಾಡು ನಮ್ಮದು [ಆಗಸ್ಟ್ 22, 2012, ಬುಧವಾರ] [ನೋಡಿ

ಮಲೇರಿಯಾ ಪೀಡಿತರು ಚಿಕಿತ್ಸೆಯಿಲ್ಲದೆ ಸತ್ತರೆ, ಡೆಂಗೀ ಪೀಡಿತರು ಅನಗತ್ಯ ಚಿಕಿತ್ಸೆಯಿಂದ ಸಾಯುತ್ತಿದ್ದಾರೆಯೇ?

ಮನುಷ್ಯನನ್ನು ಕಾಡುವ ಕೆಲವು ರೋಗಗಳಿಗೆ ಸೂಕ್ಷ್ಮಾಣುಗಳೇ ಕಾರಣ ಎನ್ನುವುದು ದೃಢಗೊಂಡು ಸುಮಾರು ನೂರೈವತ್ತು ವರ್ಷಗಳಾದವು. ಮಲೇರಿಯಾವು ಹೆಣ್ಣು ಸೊಳ್ಳೆಗಳಿಂದ ಹರಡುತ್ತದೆ ಎನ್ನುವುದನ್ನು ರೊನಾಲ್ಡ್ ರಾಸ್ ನಮ್ಮ ದೇಶದಲ್ಲೇ ತೋರಿಸಿಕೊಟ್ಟು ಆಗಸ್ಟ್ 20ಕ್ಕೆ 115 ವರ್ಷಗಳಾದವು. ಪರಿಣಾಮಕಾರಿಯಾದ ಸೂಕ್ಷ್ಮಾಣು ನಿರೋಧಕ ಔಷಧಗಳು ಬಂದು ಎಪ್ಪತ್ತೈದು ವರ್ಷಗಳಾದವು. ಈಗ ಹಲವು ಸೋಂಕುಗಳನ್ನೂ, ಸೋಂಕುವಾಹಕ ಕೀಟಗಳನ್ನೂ ನಿಯಂತ್ರಿಸುವ ಉಪಾಯಗಳು ನಮ್ಮಲ್ಲಿದ್ದರೂ, ಪ್ರತೀ ವರ್ಷ ಕೋಟಿಗಟ್ಟಲೆ ಜನರು ವಿಧವಿಧದ ಸೋಂಕುಗಳಿಗೆ ತುತ್ತಾಗುತ್ತಿದ್ದಾರೆ, ಲಕ್ಷಗಟ್ಟಲೆ ಜನ ಅವುಗಳಿಂದಾಗಿ ಸಾಯುತ್ತಿದ್ದಾರೆ. ತನ್ನ ಬುದ್ಧಿಮತ್ತೆಯಿಂದ ಇಡೀ ಜಗತ್ತನ್ನೇ ಜಯಿಸಬಲ್ಲೆನೆಂದು ಬೀಗುತ್ತಿರುವ ಮನುಷ್ಯನ ಸಾಮರ್ಥ್ಯವನ್ನೆಲ್ಲ ಈ ಸೂಕ್ಷ್ಮಾಣುಗಳು ಅಣಕಿಸುತ್ತಿವೆ.

ಈಗ ಮಲೇರಿಯಾ ಹಾಗೂ ಡೆಂಗೀ ಸೋಂಕುಗಳು ನಮ್ಮ ರಾಜ್ಯವೂ ಸೇರಿದಂತೆ ದೇಶದ ಹಲವೆಡೆಗಳಲ್ಲಿ ವ್ಯಾಪಕವಾಗಿ ಹರಡುತ್ತಿವೆ, ಹಲವು ಸಾವು-ನೋವುಗಳಿಗೆ ಕಾರಣವಾಗಿವೆ. ಪ್ರತೀ ವರ್ಷ ಉಷ್ಣವಲಯದ ನೂರಕ್ಕೂ ಹೆಚ್ಚು ದೇಶಗಳಲ್ಲಿ ಸುಮಾರು 15-25 ಕೋಟಿ ಜನ ಮಲೇರಿಯಾದಿಂದಲೂ, 5-10 ಕೋಟಿ ಜನ ಡೆಂಗೀಯಿಂದಲೂ ಬಳಲುತ್ತಾರೆ ಮತ್ತು ಸುಮಾರು 10 ಲಕ್ಷದಷ್ಟು ಜನ ಮಲೇರಿಯಾದಿಂದಲೂ, 25000ದಷ್ಟು ಜನ ಡೆಂಗೀಯಿಂದಲೂ ಸಾವನ್ನಪ್ಪುತ್ತಾರೆ. ಈ ಪೈಕಿ ಶೇ. 80ರಷ್ಟು ಮಲೇರಿಯಾ ಪ್ರಕರಣಗಳು ಆಫ್ರಿಕಾ ಖಂಡದಲ್ಲಾದರೆ, ಹೆಚ್ಚಿನ ಡೆಂಗೀ ಪ್ರಕರಣಗಳು ಭಾರತವೂ ಸೇರಿದಂತೆ ಏಷ್ಯಾ ಖಂಡದ ರಾಷ್ಟ್ರಗಳಲ್ಲಿ ಉಂಟಾಗುತ್ತವೆ. ನಮ್ಮ ದೇಶದಲ್ಲಿ ಅಧಿಕೃತ ಮಾಹಿತಿಯಂತೆ 2011ರಲ್ಲಿ 13 ಲಕ್ಷ ಜನರು ಮಲೇರಿಯಾ ಪೀಡಿತರಾಗಿ, ಆ ಪೈಕಿ 753 ಜನ ಅದರಿಂದ ಸಾವನ್ನಪ್ಪಿದರು ಎನ್ನಲಾಗಿದ್ದರೂ, ವಾಸ್ತವದಲ್ಲಿ ಇದು 20-30 ಪಟ್ಟು ಹೆಚ್ಚಿರಬಹುದೆಂದು ಅಂದಾಜಿಸಲಾಗಿದೆ. ಮಂಗಳೂರು ನಗರವು ದೇಶದಲ್ಲೇ ಅತೀ ಹೆಚ್ಚು ಮಲೇರಿಯಾ ಪ್ರಕರಣಗಳುಳ್ಳ ನಗರಗಳಲ್ಲಿ ಒಂದಾಗಿದೆ. ಮಂಗಳೂರು, ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆಗಳಲ್ಲಿ ಡೆಂಗೀ ಸೋಂಕು ಹರಡುತ್ತಿದ್ದು, ಕೆಲವರು ಈಗಾಗಲೇ ಅದರಿಂದಾಗಿ ಸಾವನ್ನಪ್ಪಿರುವ ಬಗ್ಗೆ ವರದಿಗಳಾಗಿವೆ.

ಇವೆರಡು ಸೋಂಕುಗಳ ಮಧ್ಯೆ ಹಲವು ಸಾಮ್ಯತೆಗಳಿವೆ, ಕೆಲವು ಭಿನ್ನತೆಗಳೂ ಇವೆ. ಮಲೇರಿಯಾ ರೋಗವು ಪ್ಲಾಸ್ಮೋಡಿಯಾ ಎಂಬ ಪರೋಪಜೀವಿಗಳಿಂದ ಉಂಟಾದರೆ, ಡೆಂಗೀ ಜ್ವರವು ವೈರಸ್ ನಿಂದ ಉಂಟಾಗುತ್ತದೆ. ಮನುಷ್ಯನನ್ನು ಕಾಡುವ ಐದು ಬಗೆಯ ಪ್ಲಾಸ್ಮೋಡಿಯಾಗಳ ಪೈಕಿ ವೈವಾಕ್ಸ್ ಹಾಗೂ ಫಾಲ್ಸಿಪಾರಂ ಎಂಬೆರಡು ವಿಧಗಳು ನಮ್ಮ ದೇಶದಲ್ಲಿ ಮಲೇರಿಯಾವನ್ನುಂಟು ಮಾಡುತ್ತವೆ. ಡೆಂಗೀ ವೈರಸ್ ನಲ್ಲಿ ನಾಲ್ಕು ವಿಧಗಳಿದ್ದು, ನಮ್ಮ ದೇಶದಲ್ಲಿ ಎರಡನೇ ಹಾಗೂ ಮೂರನೇ ವಿಧದ ವೈರಸ್ ಗಳು ಹೆಚ್ಚಿನ ಸೋಂಕುಗಳನ್ನುಂಟು ಮಾಡುತ್ತವೆ. ಮಲೇರಿಯಾ ಸೋಂಕನ್ನು ಹೆಣ್ಣು ಅನಾಫಿಲಸ್ ಸೊಳ್ಳೆಗಳು ಹರಡಿದರೆ, ಡೆಂಗೀಯನ್ನು ಈಡಿಸ್ ಜಾತಿಯ ಹೆಣ್ಣುಸೊಳ್ಳೆಗಳು ಹರಡುತ್ತವೆ. ಅನಾಫಿಲಸ್ ಸೊಳ್ಳೆಯು ನಡುರಾತ್ರಿ ಹೊತ್ತಲ್ಲಿ ಮನೆಯೊಳಗೆ ಮಲಗಿದ್ದಾಗ ಚುಚ್ಚಿದರೆ, ಈಡಿಸ್ ಸೊಳ್ಳೆಯು ಹೆಚ್ಚಾಗಿ ನಸುಕಿನಲ್ಲಿ ಯಾ ಸಂಜೆ ಹೊತ್ತಲ್ಲಿ ಮನೆಯೊಳಗಿದ್ದಾಗ ಚುಚ್ಚುತ್ತದೆ; ರಾತ್ರಿ ಮಲೇರಿಯಾದ ಭಯ, ಹಗಲಲ್ಲಿ ಡೆಂಗೀಯ ಅಪಾಯ!

ಸೋಂಕುಳ್ಳ ಸೊಳ್ಳೆಯು ಕಚ್ಚಿದ 8-10 ದಿನಗಳ ಬಳಿಕ ಮಲೇರಿಯಾ ಲಕ್ಷಣಗಳು ತೊಡಗಿದರೆ, ಡೆಂಗೀ ಲಕ್ಷಣಗಳು ತೊಡಗಲು 4-7 ದಿನಗಳು ಬೇಕಾಗುತ್ತವೆ. ಮಲೇರಿಯಾದಲ್ಲಿ ಸಾಮಾನ್ಯವಾಗಿ ಚಳಿ ಹಾಗೂ ನಡುಕಗಳೊಂದಿಗೆ ಬಿಟ್ಟು-ಬಿಟ್ಟು ಬರುವ ಜ್ವರವಿದ್ದರೆ, ಡೆಂಗೀಯಲ್ಲಿ 2-7 ದಿನಗಳವರೆಗೆ ನಿರಂತರವಾದ ಜ್ವರವಿರುತ್ತದೆ. ಮಲೇರಿಯಾದಲ್ಲಿ ತಲೆನೋವು, ವಾಂತಿ, ಒಣ ಕೆಮ್ಮು ಮುಂತಾದ ಲಕ್ಷಣಗಳೂ ಇರಬಹುದು. ಡೆಂಗೀ ಜ್ವರದಲ್ಲಿ ವಿಪರೀತವಾದ ಬೆನ್ನುನೋವು, ತಲೆನೋವು ಹಾಗೂ ಸ್ನಾಯುಗಳ ನೋವು ಸಾಮಾನ್ಯವಾಗಿರುತ್ತದೆ, ಕಣ್ಣಾಲಿಗಳನ್ನು ಅತ್ತಿತ್ತ ಹೊರಳಿಸುವಾಗಲೂ ನೋವಾಗುತ್ತದೆ; ವಾಕರಿಕೆ ಯಾ ವಾಂತಿಯೂ ಇರಬಹುದು. ಡೆಂಗೀ ಜ್ವರದಲ್ಲಿ ಮುಖ ಹಾಗೂ ಇಡೀ ದೇಹದ ಚರ್ಮವು ನಸುಗೆಂಪಾಗಿ ಕಾಣಿಸುತ್ತದೆ; ಚರ್ಮದ ಮೇಲೆ ಕೈಯನ್ನು ಒತ್ತಿ ಬಿಟ್ಟಾಗ ಅಷ್ಟು ಭಾಗದಲ್ಲಿ ನಸುಗೆಂಪು ಚರ್ಮವು ಬಿಳಿಚಿಕೊಂಡು ಕೈಯ ಅಚ್ಚು ಮೂಡುತ್ತದೆ. ಕಣ್ಣುಗಳು ಹಾಗೂ ಗಂಟಲಿನೊಳಗೂ ಕೆಂಪಾಗಿ ಕಾಣಿಸಬಹುದು. ವಾರದೊಳಗೆ ಡೆಂಗೀ ಜ್ವರವು ಕಡಿಮೆಯಾಗುತ್ತಿದ್ದಂತೆ ಕಾಲುಗಳ ಚರ್ಮದಡಿಯಲ್ಲಿ ರಕ್ತ ಸೋರಿಕೆಯಾಗಿ ಕೆಂಪಾದ ಕಲೆಗಳೂ, ದೇಹದ ಇತರ ಭಾಗಗಳಲ್ಲಿ ನವಿರಾದ ದಡಿಕೆಯೂ ಕಾಣಿಸಿಕೊಳ್ಳಬಹುದು.

ನಮ್ಮ ದೇಹದೊಳಕ್ಕೆ ಯಾವುದೇ ಸೂಕ್ಷ್ಮಾಣುವು ಹೊಕ್ಕಿದಾಗ ಅದನ್ನು ನಾಶಪಡಿಸಿ ಸೋಂಕನ್ನು ಗುಣ ಪಡಿಸುವುದಕ್ಕೆ ನಮ್ಮ ರೋಗರಕ್ಷಣಾ ವ್ಯವಸ್ಥೆಯು ಪ್ರಯತ್ನಿಸುತ್ತದೆ. ಹೀಗೆ ವೈರಸ್ ಜನ್ಯ ಡೆಂಗೀ ಜ್ವರವು ಹೆಚ್ಚಿನವರಲ್ಲಿ ಯಾವುದೇ ಔಷಧಗಳಿಲ್ಲದೆಯೇ ಗುಣಹೊಂದುತ್ತದೆ. ಆದರೆ, ಮಲೇರಿಯಾದ ಪರೋಪಜೀವಿಗಳನ್ನು ಸಂಪೂರ್ಣವಾಗಿ ಹೊಡೆದೋಡಿಸುವುದಕ್ಕೆ ನಮ್ಮ ರೋಗರಕ್ಷಣಾ ವ್ಯವಸ್ಥೆಗೆ ಸಾಧ್ಯವಾಗುವುದಿಲ್ಲ, ಹಾಗಾಗಿ ಮಲೇರಿಯಾ ರೋಗವು ಗುಣಹೊಂದಬೇಕಾದರೆ ಆ ಪರೋಪಜೀವಿಯನ್ನು ನಾಶ ಪಡಿಸುವ ಔಷಧಗಳನ್ನು ಸೇವಿಸಲೇಬೇಕಾಗುತ್ತದೆ. ಆದ್ದರಿಂದ ಜ್ವರವಿದ್ದವರಲ್ಲಿ ಆದಷ್ಟು ಬೇಗನೇ ರಕ್ತ ಪರೀಕ್ಷೆಯನ್ನು ಮಾಡಿಸಿ ಮಲೇರಿಯಾ ಸೋಂಕನ್ನು ಪತ್ತೆ ಮಾಡುವುದು ಅತ್ಯಗತ್ಯವಾಗುತ್ತದೆ. ಡೆಂಗೀ ಜ್ವರವು ಯಾವುದೇ ಚಿಕಿತ್ಸೆಯಿಲ್ಲದೆಯೇ ಗುಣ ಹೊಂದುವುದರಿಂದ ಹೆಚ್ಚಿನವರಲ್ಲಿ ಅದನ್ನು ದೃಢ ಪಡಿಸುವುದಕ್ಕೂ ಸಾಧ್ಯವಾಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಸುಲಭದ ಪರೀಕ್ಷೆಗಳು ಲಭ್ಯವಾಗಿವೆಯಾದರೂ, ಅವು ಸಾಕಷ್ಟು ದುಬಾರಿಯಾಗಿದ್ದು, ಅವುಗಳ ವಿಶ್ವಾಸಾರ್ಹತೆಯೂ ಖಾತರಿಯಿಲ್ಲ.

ರಕ್ತಪರೀಕ್ಷೆಯಲ್ಲಿ ಮಲೇರಿಯಾ ಸೋಂಕಿರುವುದು ದೃಢಗೊಂಡ ಕೂಡಲೇ ಪರಿಣಾಮಕಾರಿಯಾದ ಮಲೇರಿಯಾ ನಿರೋಧಕ ಔಷಧಗಳನ್ನು ನೀಡಬೇಕು. ಆದರೆ ಮಲೇರಿಯಾ ಇಲ್ಲದಿದ್ದರೆ ಈ ಔಷಧಗಳನ್ನು ಬಳಸಬಾರದು. ಮಲೇರಿಯಾದ ಪತ್ತೆ ಹಾಗೂ ಚಿಕಿತ್ಸೆಯಲ್ಲಿ ವಿಳಂಬವಾದರೆ ರೋಗವು ಬಿಗಡಾಯಿಸಿ ಸಾವಿಗೂ ಕಾರಣವಾಗಬಹುದು. ಶೇ. 3-6 ರಷ್ಟು ಮಲೇರಿಯಾ (ಅದರಲ್ಲೂ ಫಾಲ್ಸಿಪಾರಂ) ರೋಗಿಗಳಲ್ಲಿ ಮೆದುಳು, ಶ್ವಾಸಾಂಗ, ಯಕೃತ್ತು, ಮೂತ್ರಪಿಂಡಗಳು ಮುಂತಾದ ಅಂಗಗಳಿಗೆ ಹಾನಿಯಾಗಿ ಕುಂಠಿತ ಪ್ರಜ್ಞೆ, ಉಸಿರಾಟದ ತೊಂದರೆ, ತೀವ್ರವಾದ ಕಾಮಾಲೆ ಯಾ ರಕ್ತಕೊರೆ, ಮೂತ್ರದ ಪ್ರಮಾಣದಲ್ಲಿ ಇಳಿಕೆ ಇತ್ಯಾದಿ ತೊಂದರೆಗಳು ಕಾಣಿಸಿಕೊಳ್ಳಬಹುದು. ಅಂತಹಾ ರೋಗಿಗಳನ್ನು ಕೂಡಲೇ ಸುಸಜ್ಜಿತವಾದ ಆಸ್ಪತ್ರೆಗೆ ದಾಖಲಿಸಿ ಸೂಕ್ತವಾದ ಚಿಕಿತ್ಸೆಯನ್ನು ನೀಡಬೇಕಾಗುತ್ತದೆ. ಆದರೆ ನಮ್ಮ ದೇಶದಲ್ಲಿ ದುರ್ಗಮವಾದ ಹಾಗೂ ಹಿಂದುಳಿದ ಪ್ರದೇಶಗಳಲ್ಲೇ ಅತಿ ಹೆಚ್ಚು ಮಲೇರಿಯಾ ಉಂಟಾಗುತ್ತಿದ್ದು, ದುರ್ಲಭವಾಗಿರುವ ವೈದ್ಯಕೀಯ ಸೌಲಭ್ಯ, ಬಡತನ ಹಾಗೂ ಅಜ್ಞಾನಗಳೇ ಶೇ. ತೊಂಭತ್ತಕ್ಕೂ ಹೆಚ್ಚಿನ ಸಾವುಗಳಿಗೆ ಕಾರಣವಾಗಿವೆ.

ಡೆಂಗೀ ಜ್ವರವು ತನ್ನಿಂತಾನಾಗಿ ಕಡಿಮೆಯಾಗುವುದರಿಂದ ಹೆಚ್ಚಿನವರಲ್ಲಿ ಯಾವುದೇ ಚಿಕಿತ್ಸೆಯ ಅಗತ್ಯವಿಲ್ಲ. ಜ್ವರ ನಿವಾರಕ ಔಷಧಗಳನ್ನು ಸೇವಿಸಿದರೆ ವೈರಾಣುಗಳನ್ನು ಕೊಲ್ಲುವ ಜ್ವರದ ಏಟನ್ನೇ ದುರ್ಬಲಗೊಳಿಸಿದಂತಾಗುತ್ತದೆ. ಆದರೆ ಜ್ವರ, ಮೈಕೈನೋವು ಎಂದಾಕ್ಷಣ ನೋವು ನಿವಾರಕ ಔಷಧಗಳನ್ನು ಬಳಸುವುದು ಅತಿ ಸಾಮಾನ್ಯವಾಗಿದ್ದು, ಡೆಂಗೀಯಲ್ಲಿ ಯಕೃತ್ತಿನ ತೊಂದರೆಗಳು, ರಕ್ತಕಣಗಳಲ್ಲಿ ಇಳಿಕೆ, ರಕ್ತಸ್ರಾವ ಇವೇ ಮುಂತಾದ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ಡೆಂಗೀ ಲಕ್ಷಣಗಳಿರುವವರು ಜ್ವರ ಹಾಗೂ ನೋವು ನಿವಾರಕ ಔಷಧಗಳಿಂದ ಆದಷ್ಟು ದೂರವಿರುವುದೇ ಒಳ್ಳೆಯದು.

ಡೆಂಗೀ ಜ್ವರದಲ್ಲೂ ಶೇ. 5ರಷ್ಟು ರೋಗಿಗಳಲ್ಲಿ ಸೂಕ್ಷ್ಮವಾದ ರಕ್ತನಾಳಗಳಿಗೆ ಹಾನಿಯಾಗಿ ಗಂಭೀರವಾದ ಸಮಸ್ಯೆಗಳುಂಟಾಗಬಹುದು. ವಾರದೊಳಗೆ ಡೆಂಗೀ ಜ್ವರವು ಇಳಿದರೂ, ನಂತರದ 24-48 ಗಂಟೆಗಳ ಅವಧಿಯಲ್ಲಿ ಹೊಟ್ಟೆ ನೋವು, ವಾಂತಿ, ಬಾಯಿ ಹಾಗೂ ಒಸಡುಗಳಲ್ಲಿ ರಕ್ತಸ್ರಾವ, ವಿಪರೀತವಾದ ನಿಶ್ಶಕ್ತಿ ಹಾಗೂ ತಳಮಳ, ಎದೆ ಹಾಗೂ ಉದರಗಳಲ್ಲಿ ದ್ರವ ಸಂಗ್ರಹ, ಯಕೃತ್ತಿನ ಹಿರಿದಾಗುವಿಕೆ, ಪ್ಲೇಟ್ಲೆಟ್ ಕಣಗಳ ಸಂಖ್ಯೆಯಲ್ಲಿ ಇಳಿಕೆ ಹಾಗೂ ರಕ್ತಸಾಂದ್ರತೆಯ ಹೆಚ್ಚಳ ಮುಂತಾದ ತೊಂದರೆಗಳಿರುವ ರೋಗಿಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ಆ ನಂತರದ 48-72 ಗಂಟೆಗಳ ಅವಧಿಯಲ್ಲಿ ರಕ್ತನಾಳಗಳ ಸೋರಿಕೆಯು ಮುಂದುವರಿದರೆ ರಕ್ತದೊತ್ತಡವು ಇನ್ನಷ್ಟು ಇಳಿದು ಆಘಾತದ ಸ್ಥಿತಿಯುಂಟಾಗಬಹುದು ಹಾಗೂ ರಕ್ತಸ್ರಾವವೂ ಹೆಚ್ಚಾಗಬಹುದು. ಅಂತಹಾ ರೋಗಿಗಳಿಗೆ ಅತಿ ಜಾಗರೂಕತೆಯಿಂದ ಲವಣ ದ್ರಾವಣಗಳ ಪೂರಣವನ್ನು ಕೈಗೊಳ್ಳಬೇಕಾಗುತ್ತದೆ ಮತ್ತು ರಕ್ತಸ್ರಾವವು ತೀವ್ರವಾಗಿದ್ದರೆ ರಕ್ತದ ಮರುಪೂರಣವನ್ನೂ ಮಾಡಬೇಕಾಗಬಹುದು. ಆದರೆ ಯಾವುದೇ ಡೆಂಗೀ ರೋಗಿಗಳಿಗೆ ಯಾವುದೇ ಸಂದರ್ಭದಲ್ಲೂ ಪ್ಲೇಟ್ಲೆಟ್ ಮರುಪೂರಣ ಮಾಡುವ ಅಗತ್ಯವಿಲ್ಲ, ಅದರಿಂದ ಯಾವುದೇ ಪ್ರಯೋಜನವೂ ಇಲ್ಲ. ಅನಗತ್ಯವಾಗಿ ಲವಣ ದ್ರಾವಣ, ರಕ್ತ ಯಾ ಪ್ಲೇಟ್ಲೆಟ್ ಗಳನ್ನು ಪೂರಣ ಮಾಡುವುದರಿಂದ ಒಳಿತಿಗಿಂತಲೂ ಹಾನಿಯೇ ಆಗುವ ಸಾಧ್ಯತೆಗಳು ಹೆಚ್ಚು. (ನೋಡಿ: http://whqlibdoc.who.int/publications/2009/9789241547871_eng.pdf)

ಮಲೇರಿಯಾ ಹಾಗೂ ಡೆಂಗೀಗಳೆರಡನ್ನೂ ನಿಯಂತ್ರಿಸಬೇಕಾದರೆ ಅವುಗಳನ್ನು ಹರಡುವ ಸೊಳ್ಳೆಗಳನ್ನು ನಿಯಂತ್ರಿಸುವುದು ಅತಿ ಮುಖ್ಯ. ಹಾರುವ ಬಲಿತ ಸೊಳ್ಳೆಗಳ ನಿಯಂತ್ರಣಕ್ಕಿಂತ ನೀರಲ್ಲಿ ಸ್ಥಿರವಾಗಿರುವ ಸೊಳ್ಳೆಮರಿಗಳನ್ನು ನಾಶ ಪಡಿಸುವುದು ಸುಲಭದ ಕೆಲಸ. ಅನಾಫಿಲಸ್ ಹಾಗೂ ಈಡಿಸ್ ಸೊಳ್ಳೆಗಳೆರಡೂ ನಿಂತಿರುವ ಶುದ್ಧವಾದ ನೀರಲ್ಲೇ ಮೊಟ್ಟೆಯಿಡುವುದರಿಂದ ಅಲ್ಲಿಲ್ಲಿ ಎಸೆದಿರುವ ಬಾಟಲುಗಳು, ಡಬ್ಬಗಳು, ಎಳನೀರಿನ ಚಿಪ್ಪುಗಳು, ನೀರಿನ ತೊಟ್ಟಿಗಳು ಇತ್ಯಾದಿಗಳಲ್ಲಿ ನೀರು ನಿಲ್ಲದಂತೆ ಜಾಗ್ರತೆ ವಹಿಸಬೇಕಾಗುತ್ತದೆ; ಪ್ರತಿಯೋರ್ವ ನಾಗರಿಕನೂ ತನ್ನ ಜವಾಬ್ದಾರಿಯೆಂದರಿತು ಈ ಕೆಲಸವನ್ನು ಮಾಡಬೇಕಾಗುತ್ತದೆ. ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡಗಳಲ್ಲಿ ಅತಿ ಹೆಚ್ಚು ನೀರು ನಿಲ್ಲುವ ಅವಕಾಶಗಳಿದ್ದು, ಅದನ್ನು ತಡೆಯುವಲ್ಲಿ ಆರೋಗ್ಯ ಇಲಾಖೆಯ ಕಟ್ಟುನಿಟ್ಟಿನ ಕ್ರಮಗಳಷ್ಟೇ ನೆರವಾಗಬಲ್ಲವು. ಐವತ್ತು-ಅರುವತ್ತರ ದಶಕಗಳಲ್ಲಿ ಮಲೇರಿಯಾ ನಿಯಂತ್ರಣದಲ್ಲಿ ತೋರಿದ್ದ ಹುರುಪು ಈಗ ಅದೆಲ್ಲೋ ಮಾಯವಾಗಿದ್ದು, ಆಡಳಿತದ ಆಲಸ್ಯವು ಜನಸಾಮಾನ್ಯರನ್ನು ಸೊಳ್ಳೆಗಳಿಗೆ ಆಹಾರವಾಗಿಸಿವೆ. ಜನರೂ, ಆಡಳಿತ ವ್ಯವಸ್ಥೆಯೂ ಜೊತೆಗೂಡಿ ದುಡಿಯದಿದ್ದರೆ ಸೊಳ್ಳೆಗಳಿಂದ ಹತರಾಗುವ ಪಾಡನ್ನು ತಪ್ಪಿಸಲಾಗದು.

ನಾಲ್ಕನೇ ಬರಹ: ಭಯದ ಉರುಳಲ್ಲಿ ಸಾಯುತ್ತಿರುವ ಸ್ವಾತಂತ್ರ್ಯ [ಆಗಸ್ಟ್ 8, 2012, ಬುಧವಾರ] [ನೋಡಿ]

ಸಂಪ್ರದಾಯವಾದಿಗಳ ಆತಂಕಿತ ಮನಸ್ಥಿತಿಗೆ ನಮ್ಮೆಲ್ಲರ ಸ್ವಾತಂತ್ರ್ಯಗಳು ಬಲಿಯಾಗಬೇಕೆ?

ಆರೋಗ್ಯ ಅಂದರೆ ಸಂಪೂರ್ಣವಾದ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಸುಸ್ಥಿತಿ ಎನ್ನುವುದು 1946ರಷ್ಟು ಹಿಂದೆಯೇ ವಿಶ್ವ ಆರೋಗ್ಯ ಸಂಸ್ಥೆಯು ನೀಡಿರುವ ವ್ಯಾಖ್ಯಾನ. ಜುಲೈ 28ರಂದು ಮಂಗಳೂರಿನಲ್ಲಿ ತಮ್ಮಷ್ಟಕ್ಕೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಯುವಜನರ ಮೇಲೆ ದಾಳಿ ನಡೆಸಿದ ಪುಂಡರು ಈ ವ್ಯಾಖ್ಯಾನದ ಕೆನ್ನೆಗೆ ಹೊಡೆದಿದ್ದಾರೆ. ಏಟು ತಿಂದವರು ದೈಹಿಕವಾಗಿಯೂ, ಮಾನಸಿಕವಾಗಿಯೂ ಹಾನಿಗೊಂಡಿದ್ದರೆ, ಇಡೀ ಸಮಾಜದ ಪ್ರಜ್ಞೆಯೇ ಘಾಸಿಗೊಂಡು ನಲುಗಿದೆ. ಕಳೆದ ನಾಲ್ಕೈದು ವರ್ಷಗಳಿಂದ ಶಾಲಾ ಕಾಲೇಜುಗಳಲ್ಲಿ, ಮಹಾ ಮಳಿಗೆಗಳಲ್ಲಿ, ಹೊಟೇಲುಗಳಲ್ಲಿ, ಮಾತ್ರವಲ್ಲ, ಬಸ್ಸು-ರಿಕ್ಷಾಗಳಲ್ಲೂ ಪುಂಡುಪಡೆಗಳು ಠಳಾಯಿಸುತ್ತಾ ಹುಡುಗ-ಹುಡುಗಿಯರು ಪರಸ್ಪರ ಬೆರೆಯದಂತೆ, ಒಬ್ಬರಲ್ಲೊಬ್ಬರು ಮಾತನಾಡದಂತೆ ಬೆದರಿಕೆಯೊಡ್ಡುತ್ತಿರುವುದು ತೀರಾ ಸಾಮಾನ್ಯವಾಗಿದ್ದು, ಎಲ್ಲರೂ ಭಯದ ನೆರಳಲ್ಲೇ ಬದುಕುವಂತಾಗಿದೆ.

ಇಂತಹ ದಾಳಿಗಳನ್ನು ಪ್ರಚೋದಿಸಿ, ಬಹಿರಂಗವಾಗಿ ಬೆಂಬಲಿಸುವ ಶಕ್ತಿಗಳ ಜೊತೆಗೆ, ಅವನ್ನು ಪರೋಕ್ಷವಾಗಿ ಸಮರ್ಥಿಸುವ ಆಷಾಢಭೂತಿಗಳೂ ಸಾಕಷ್ಟಿದ್ದಾರೆ. ಒಂದು ವಾಕ್ಯದಲ್ಲಿ ದಾಳಿಯನ್ನು ಖಂಡಿಸಿ ಹತ್ತು ವಾಕ್ಯಗಳಲ್ಲಿ ದಾಳಿಗೊಳಗಾದವರಿಗೇ ಬುದ್ಧಿ ಹೇಳುವ ಸ್ವಾಮಿಗಳೂ, ಹುಟ್ಟುಹಬ್ಬಕ್ಕಿದಿರಾಗಿ ಸತ್ಯಾಗ್ರಹಕ್ಕೆ ಆಗ್ರಹಿಸುವ ಋಷಿ-ಮುನಿಗಳೂ, ದಾಳಿಗೊಳಗಾದ ಮಹಿಳೆಯರನ್ನೇ ದೂಷಿಸುವ ಮಹಿಳಾ ಆಯೋಗದವರೂ, ತಮ್ಮ ಮಕ್ಕಳಿಗೆ ಈ ಗುಮ್ಮನನ್ನು ತೋರಿಸುವ ಹೆತ್ತವರೂ, ದಾಳಿಗೊಳಗಾದವರ ಚಾರಿತ್ರ್ಯಹನನ ಮಾಡುವ ಮಾಧ್ಯಮಗಳೂ ಕಾಣಸಿಗುತ್ತಾರೆ. ದಾಳಿಕೋರರ ಕಾರ್ಯತಂತ್ರವು ಸಫಲವಾಗುತ್ತಿರುವುದಕ್ಕೆ ಇವೆಲ್ಲವೂ ಸ್ಪಷ್ಟವಾದ ನಿದರ್ಶನಗಳಾಗಿದ್ದು, ಸತ್ಯ ಸತ್ತು, ಅಪರಾಧಿಗಳು ತಪ್ಪಿಸಿಕೊಳ್ಳುವುದಕ್ಕೆ ನೆರವಾಗುತ್ತವೆ.

ಇಂತಹಾ ದಾಳಿಗಳು ಯಾಕಾಗುತ್ತವೆ? ಅವನ್ನು ನಡೆಸುವವರ ಮನೋಗತವೇನು? ಅಮೆರಿಕಾದ ಸ್ಟಾನ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಸಾಂಘಿಕ ವರ್ತನೆಯ ತಜ್ಞರಾದ ಜಾನ್ ಜಾಸ್ಟ್ ಮತ್ತವರ ಸಹೋದ್ಯೋಗಿಗಳು ಮೇ 2003ರಲ್ಲಿ ಸೈಕಾಲಾಜಿಕಲ್ ಬುಲೆಟಿನ್ ಪತ್ರಿಕೆಯಲ್ಲಿ ಬರೆದ ಸಾಮಾಜಿಕ ಗ್ರಹಿಕೆಯ ಪ್ರಚೋದನೆಯಾಗಿ ರಾಜಕೀಯ ಸಾಂಪ್ರದಾಯಿಕತೆ’ ಎನ್ನುವ ಲೇಖನವು ಬಲಪಂಥೀಯ ಮೂಲಭೂತವಾದಿಗಳ ಮನದೊಳಕ್ಕೆ ಒಳ್ಳೆಯ ಇಣುಕು ನೋಟವನ್ನು ನೀಡುತ್ತದೆ. ಅವರೆನ್ನುವಂತೆ, ಬಲಪಂಥೀಯ ಸಂಪ್ರದಾಯವಾದಿಗಳಲ್ಲಿ ಸಾವಿನ ಭಯ, ಆಕ್ರಮಣಶೀಲತೆ, ವಿಚಾರಹೀನ ನಂಬಿಕೆಗಳು, ಸಂದಿಗ್ಧತೆ ಹಾಗೂ ಅನಿಶ್ಚಿತತೆಯನ್ನು ಎದುರಿಸಲಾಗದ ಅಸಹನೆ ಇವೇ ಮುಂತಾದ ವಿಶಿಷ್ಟವಾದ ಲಕ್ಷಣಗಳಿರುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ, ಅವರು ಬದಲಾವಣೆಯ ವಿರೋಧಿಗಳೂ, ಸಾಮಾಜಿಕ ಅಸಮಾನತೆಯ ಸಮರ್ಥಕರೂ ಆಗಿದ್ದು, ಅನಿಶ್ಚಿತತೆಯನ್ನು ಎದುರಿಸುವ ಆತಂಕದಿಂದ ಸದಾ ಪ್ರಚೋದಿತರಾಗಿರುತ್ತಾರೆ.

ಸಂಪ್ರದಾಯವಾದಿಗಳಿಗೆ ತಮ್ಮ ಮನಸ್ಸೊಂದೇ ಜಗತ್ತಾಗಿರುತ್ತದೆ. ಮೂಗಿನ ನೇರಕ್ಕಷ್ಟೇ ಆಲೋಚಿಸುವ ಅವರಿಗೆ ತಾವು ಹೇಳಿದ್ದೇ ಧರ್ಮ, ಅದೇ ನೈತಿಕತೆ, ಅದೇ ಕಾನೂನು, ತಮಗನಿಸಿದ್ದಷ್ಟೇ ಸಮಸ್ಯೆ, ಉಳಿದದ್ದೇನೂ ಇಲ್ಲ. ಅವರ ಜಡವಾದ ಚಿಂತನೆಗಳಿಗೂ ಸಮಾಜದ ಗತಿಶೀಲ ಚಿಂತನೆಗಳಿಗೂ ನಡುವಿನ ನಿರಂತರವಾದ ಸಂಘರ್ಷಗಳು ಹಲವು ವಿರೋಧಾಭಾಸಗಳಿಗೆ ಕಾರಣವಾದರೂ, ತಮ್ಮ ನಂಬಿಕೆಗಳಿಗೆ ಸುಸಂಗತವಾದ ಸಮರ್ಥನೆಗಳಿರಬೇಕೆನ್ನುವ ಅಗತ್ಯವು ಅವರಿಗೆ ಕಾಣುವುದಿಲ್ಲ. ಅವರ ಸಂಕುಚಿತ ಮನೋಭಾವಕ್ಕೆ ಹೊಂದದಿರುವುದೆಲ್ಲವೂ ಆತಂಕಕಾರಿಯಾಗಿ, ಭಯಾನಕ’, ಮಾರಣಾಂತಿಕ’. ದುಷ್ಟ’, ಭಯೋತ್ಪಾದಕ’, ರಾಕ್ಷಸೀಯ’ವಾಗಿ, ಕಾಣಿಸುತ್ತವೆ, ಇಲಿಯಿಲ್ಲದಲ್ಲೂ ಹುಲಿ ಕಾಣುತ್ತದೆ. ಅವರು ತಮ್ಮ ಆತಂಕವನ್ನು ಹೊರಹಾಕುವಾಗ ಬೇರೆಯವರನ್ನು ಮಾತನಾಡಗೊಡುವುದಿಲ್ಲ, ವೈಚಾರಿಕ ವಿವರಣೆಗಳು ಅವರಿಗೆ ಕೇಳಿಸುವುದೂ ಇಲ್ಲ. ಸೋಗಲಾಡಿತನ ಹಾಗೂ ಜಾಣ ಮರೆವುಗಳೇ ರಕ್ತಗತವಾಗಿರುವ ಸಂಪ್ರದಾಯವಾದಿಗಳು ತಮ್ಮ ಅಸಂಗತ ವಾದಗಳನ್ನು ಪುಷ್ಟೀಕರಿಸಲು ಯಾವುದನ್ನಾದರೂ ಎಗ್ಗಿಲ್ಲದೆ ಬಳಸಿಕೊಳ್ಳುತ್ತಾರೆ. ಹೀಗೆ ರಾಮ, ಗಾಂಧಿ, ವಿವೇಕಾನಂದ, ವೇದ, ಧರ್ಮಗ್ರಂಥಗಳು ಇತ್ಯಾದಿಗಳನ್ನೆಲ್ಲ ಬೇಕಾದಂತೆ ಬಳಸಿ, ಅಲ್ಲಿಲ್ಲಿಂದ ಉದ್ದುದ್ದನೆಯ ವಾಕ್ಯಗಳನ್ನೆತ್ತಿ ಬೊಬ್ಬಿರಿಯುವುದು ಹಾಗೂ ತಮ್ಮ ಕಾಲ್ಪನಿಕ ವೈರಿಗಳ ವಿರುದ್ಧ ಯುದ್ಧ’ ವನ್ನೂ, ಹೊಡಿ, ಬಡಿ, ಕಡಿ’ ಗಲಾಟೆಯನ್ನೂ ಪ್ರಚೋದಿಸುವುದು ಅವರ ನಿತ್ಯಕರ್ಮವಾಗಿರುತ್ತದೆ.

ಉಡುಗೆ-ತೊಡುಗೆಗಳು, ಆಚಾರ-ವಿಚಾರಗಳು ತೀರಾ ವೈಯಕ್ತಿಕವಾಗಿದ್ದು, ಅವುಗಳಿಂದ ನೈತಿಕತೆಯ ಸಮಸ್ಯೆಗಳಾಗಲೀ, ಅನ್ಯರಿಗೆ ತೊಂದರೆಗಳಾಗಲೀ ಇಲ್ಲವೆನ್ನುವುದು ಸಂಪ್ರದಾಯವಾದಿಗಳಿಗೆ ಹೊಳೆಯುವುದಿಲ್ಲ; ಒಂದಿಬ್ಬರ ವೈಯಕ್ತಿಕ ಆಯ್ಕೆಗಳ ಮೇಲೆ ಹರಿಹಾಯ್ದು ಇಡೀ ಸಮಾಜಕ್ಕೇ ಅವರು ತೊಂದರೆಯುಂಟು ಮಾಡುತ್ತಾರೆ. ಸಾಮಾಜಿಕ ಸಮಸ್ಯೆಗಳಿಗಿಂತ ಸ್ವಂತ ಹಿತಾಸಕ್ತಿಗಳೇ ಅವರಿಗೆ ಹೆಚ್ಚು ಮುಖ್ಯವಾಗಿರುವುದರಿಂದ ಹೊಟ್ಟೆ-ಬಟ್ಟೆಗಿಲ್ಲದವರ ಬವಣೆಗಿಂತ ಯಾರೋ ಒಬ್ಬರ ಬಟ್ಟೆಯ ಉದ್ದವೇ ಮುಖ್ಯವಾಗುತ್ತದೆ, ಕೋಟಿಗಟ್ಟಲೆಯನ್ನು ಕಾಡುವ ಬರಗಾಲಕ್ಕಿಂತ ಹತ್ತು ಜನರ ಹುಟ್ಟುಹಬ್ಬವೇ ದೊಡ್ಡ ಸಮಸ್ಯೆಯೆನಿಸುತ್ತದೆ, ಮುಕ್ಕಾಲಂಶ ಭಾರತೀಯರ ತೀವ್ರ ಬಡತನಕ್ಕಿಂತ ಅಲ್ಲೋ ಇಲ್ಲೋ ಆಗುವ ಮತಾಂತರಗಳೇ ದೇಶಕ್ಕೆ ಗಂಡಾಂತರವೆನಿಸುತ್ತವೆ. ಮಾತುಮಾತಿಗೆ ದೇಶಪ್ರೇಮವನ್ನು ಬೋಧಿಸುತ್ತಿದ್ದರೂ, ದೇಶದ ಅದಿರು, ಮರಳು, ಮರ ಇತ್ಯಾದಿಗಳನ್ನೆಲ್ಲ ಸೂರೆಗೈದು, ತೆರಿಗೆಯನ್ನೂ ವಂಚಿಸಿ, ಕಾನೂನನ್ನೂ ಭಂಜಿಸುವಾಗ ದೇಶದ ಹಂಗು ಇವರನ್ನು ಕಾಡುವುದಿಲ್ಲ. ಮಾತೆ, ಭಗಿನಿ, ಗೋಮಾತೆ ಎಂದೆಲ್ಲಾ ಊರಿಡೀ ದೀಪ ಹೊತ್ತಿಸುತ್ತಿದ್ದರೂ ತಮ್ಮಷ್ಟಕ್ಕೆ ತಾವಿರುವ ಹೆಣ್ಮಕ್ಕಳ ಮೇಲೆ ಹರಿಹಾಯುವಾಗ ಮಾತೄಭಕ್ತಿ, ಭಗಿನಿಪ್ರೀತಿಗಳು ನೆನಪಾಗುವುದಿಲ್ಲ.

ಸಂಪ್ರದಾಯವಾದಿಗಳ ಈ ಎಡೆಬಿಡಂಗಿತನಕ್ಕೆ ಜನ ಮರುಳಾಗಿ, ಅವರ ಅಸಂಬದ್ಧವಾದ ಸಮರ್ಥನೆಗಳನ್ನು ಒಪ್ಪಿಕೊಳ್ಳುವುದೇಕೆ? ಸಂಪ್ರದಾಯವಾದಿಗಳು ಜನರ ಅಜ್ಞಾನವನ್ನೂ, ಭವಿಷ್ಯದ ಬಗೆಗಿನ ಆತಂಕಗಳನ್ನೂ, ಚಂಚಲತೆಯನ್ನೂ ಬಳಸಿಕೊಂಡು, ಅವರ ಭಾವನೆಗಳಿಗೆ ಸುಲಭದಲ್ಲಿ ತಟ್ಟುವಂತೆ ತಮ್ಮ ವಾದಸರಣಿಗಳನ್ನು ಬೆಳೆಸುತ್ತಾ ಹೋಗುತ್ತಾರೆ. ಈ ವಾದಗಳು ಮೇಲ್ನೋಟಕ್ಕೆ ಸರಿಯೆಂದೂ, ಆ ಕ್ಷಣಕ್ಕೆ ಅತಿಶಕ್ಯವೆಂದೂ ಅನಿಸುವುದರಿಂದ ಜನರು ಸುಲಭದಲ್ಲಿ ಅವನ್ನು ನಂಬುತ್ತಾರೆ. ಇವೇ ಕಾರಣಗಳಿಗಾಗಿ ಸಂಪ್ರದಾಯವಾದಿಗಳು ತಮ್ಮ ಕಾಲ್ಪನಿಕ ಶತ್ರುಗಳ ವಿರುದ್ಧ ಹೂಡಲೆಳಸುವ ಯುದ್ಧಕ್ಕೆ ಮುಂಚೂಣಿಯ ಪದಾತಿಗಳೂ ದೊರೆಯುತ್ತಾರೆ. ಹೆಚ್ಚಾಗಿ ಸಮಾಜದ ಕೆಳವರ್ಗಗಳಿಗೆ ಸೇರಿರುವ, ವಿದ್ಯಾಭ್ಯಾಸ ಹಾಗೂ ಒಳ್ಳೆಯ ಉದ್ಯೋಗವಿಲ್ಲದೆ ಹತಾಶರಾಗಿರುವ ಯುವಕರು ಇಂತಹಾ ಪಡೆಗಳನ್ನು ಸೇರಿಕೊಂಡು, ಮೇಲ್ವರ್ಗದ ನಾಯಕತ್ವದ ಮೇಲಿನ ನಂಬಿಕೆ, ಪ್ರಚಾರ ಹಾಗೂ ಖ್ಯಾತಿಯ ಗೀಳು, ಬೆದರಿಸಿ ಹಣಗಿಟ್ಟಿಸುವ ಅವಕಾಶ, ಶರಾಬಿನ ಅಮಲು ಇತ್ಯಾದಿಗಳಿಂದ ಈ ದಾಳಿಗಳಿಗೆ ಪ್ರೇರಿತರಾಗುತ್ತಾರೆ.

ಯಾವ ಪ್ರಾಣಿಗಳಲ್ಲೂ ಕಂಡು ಬಾರದ ಸ್ತ್ರೀದೌರ್ಜನ್ಯದ ಪಿಡುಗು ಮನುಷ್ಯರಲ್ಲಿರುವುದಕ್ಕೆ ಸಾಮಾಜಿಕ ಸ್ಪಂದನದ ಕೊರತೆ, ಲೈಂಗಿಕ ಅಸೂಯೆ, ಸೂಕ್ತ ಸಂಗಾತಿ ದೊರೆಯದಿರುವ ಹತಾಶೆ, ಪುರುಷತ್ವದ ಅಹಮಿಕೆ, ಧರ್ಮಾಂಧತೆ, ಮಹಿಳೆಯನ್ನು ನಿಗ್ರಹಿಸುವ ಹಠ, ಅಶ್ಲೀಲ ಚಿತ್ರಗಳು ಹಾಗೂ ಮಾಧ್ಯಮಗಳ ಪ್ರಭಾವ, ಮದ್ಯವ್ಯಸನ ಇತ್ಯಾದಿ ಹಲವು ಕಾರಣಗಳಿವೆ. ವಿದ್ಯಾಭ್ಯಾಸ, ಉದ್ಯೋಗ ಹಾಗೂ ಬದಲಾಗುತ್ತಿರುವ ಸಾಮಾಜಿಕ ಮೌಲ್ಯಗಳಿಂದಾಗಿ ಮಹಿಳೆಯರ ಸ್ಥಾನಮಾನಗಳು ಬಲಗೊಳ್ಳುತ್ತಿರುವುದರಿಂದ ಸಂಪ್ರದಾಯವಾದಿಗಳು ಆತಂಕಕ್ಕೀಡಾಗಿರುವುದು ಈ ದಾಳಿಗಳಿಗೆ ಮುಖ್ಯ ಕಾರಣಗಳಲ್ಲೊಂದು.

ಜೊತೆಗೆ, ಜನರ ವಿದ್ಯಾಭ್ಯಾಸದ ಮಟ್ಟವು ಹೆಚ್ಚುತ್ತಿರುವುದು, ದೇವರು-ಧರ್ಮಗಳ ಮೇಲಿನ ಶ್ರದ್ಧೆಯು ಇಳಿಯುತ್ತಿರುವುದು, ವಿಚಾರವಾದಿ ಚಳವಳಿಗಳು ಬಲಗೊಳ್ಳುತ್ತಿರುವುದು ಸಂಪ್ರದಾಯವಾದಿಗಳ ಚಿಂತೆಗೆ ಕಾರಣವಾಗಿವೆ. ಒಂದು ಕಾಲಕ್ಕೆ ಊರ ಹೊರಗೆ ದಬ್ಬಲ್ಪಟ್ಟಿದ್ದ ಅಸ್ಪಶ್ಯರು ನಮ್ಮ ಸಂವಿಧಾನದ ಬಲದಿಂದ ಓದುವಂತಾಗಿ ಸಮಾಜದಲ್ಲಿ ಸಹಭಾಗಿಗಳಾಗುತ್ತಿರುವುದೂ ಇವರ ನಿದ್ದೆಗೆಡಿಸುತ್ತಿದೆ. ಅಂತರ್ಜಾತೀಯ, ಅಂತರ್ಧರ್ಮೀಯ ವಿವಾಹಗಳು ಹಾಗೂ ಕೂಡುಬಾಳ್ವೆಗಳು ಅತ್ಯಂತ ಸಾಮಾನ್ಯವಾಗಿರುವುದಷ್ಟೇ ಅಲ್ಲದೆ, ಸರಕಾರಗಳಿಂದಲೂ, ನ್ಯಾಯಾಲಯಗಳಿಂದಲೂ ಪ್ರೋತ್ಸಾಹಿಸಲ್ಪಡುತ್ತಿರುವುದು ಈ ಶಕ್ತಿಗಳಿಗೆ ನುಂಗಲಾಗದ ಸತ್ಯವಾಗಿದೆ.

ಸಂಪ್ರದಾಯವಾದಿಗಳ ಕಾಲ್ಪನಿಕ ಆತಂಕಗಳಿಗೂ, ನೈತಿಕತೆಯ ಹೆಸರಲ್ಲಿ ಅವರು ನಡೆಸುವ ಭಯೋತ್ಪಾದನೆಗೂ ನಮ್ಮ ಸಂವಿಧಾನದತ್ತವಾದ ಸ್ವಾತಂತ್ರ್ಯಗಳು ಬಲಿಯಾಗಬೇಕೆ? ವಿಶ್ವದ ಎಲ್ಲ ಮುಕ್ತ ರಾಷ್ಟ್ರಗಳಂತೆ ನಮ್ಮ ಸಂವಿಧಾನದಲ್ಲೂ ಜಾತಿ, ವರ್ಣ, ಧರ್ಮ, ಪಂಗಡ, ಲಿಂಗ, ಪ್ರದೇಶಗಳ ಬೇಧವಿಲ್ಲದೆ ಪ್ರತಿಯೋರ್ವ ಭಾರತೀಯನಿಗೂ ಎಲ್ಲಾ ಮೂಲಭೂತ ಹಕ್ಕುಗಳನ್ನು ಒದಗಿಸಲಾಗಿದೆ. ಸ್ವತಂತ್ರವಾಗಿ ಜೀವಿಸುವ ಹಕ್ಕು, ಸಮಾನತೆಯ ಹಕ್ಕು, ಅಭಿವ್ಯಕ್ತಿಯ ಹಕ್ಕು, ಶಾಂತಿಯುತವಾಗಿ ಸಭೆ ಸೇರುವ ಹಕ್ಕು, ಆತ್ಮಸಾಕ್ಷಿಗನುಗುಣವಾಗಿ ಯಾವುದೇ ಧರ್ಮವನ್ನು ಆಚರಿಸುವ ಯಾ ಆಚರಿಸದಿರುವ ಹಕ್ಕು, ದೇಶದೆಲ್ಲೆಡೆಗೆ ಹೋಗುವ ಹಕ್ಕುಗಳು ನಮಗಿವೆ. ನಮ್ಮಲ್ಲಿ ಹದಿನೆಂಟು ವಯಸ್ಸಿನ ಎಲ್ಲರೂ ವಯಸ್ಕರೆಂದು ಪರಿಗಣಿಸಲ್ಪಟ್ಟು ಮತದಾನದ ಹಕ್ಕನ್ನೂ ಪಡೆಯುತ್ತಾರೆ, ಪರಸ್ಪರ ಸಮ್ಮತಿಯಿಂದ ಲೈಂಗಿಕಕ್ರಿಯೆಗಳಲ್ಲಿ ತೊಡಗುವ ಸ್ವಾತಂತ್ರ್ಯವನ್ನೂ ಪಡೆಯುತ್ತಾರೆ. ಆ ವಯಸ್ಸಿನ ಹುಡುಗಿಯರು ವಿವಾಹವನ್ನೂ ಆಗಬಹುದು, ವಿವಾಹವಾಗದೆಯೂ ಕೂಡಿ ಬಾಳಬಹುದು.

ಈ ಎಲ್ಲಾ ಹಕ್ಕುಗಳನ್ನು ನಮ್ಮಷ್ಟಕ್ಕೆ ಅನುಭವಿಸುವ ನಮ್ಮ ಸ್ವಾತಂತ್ರ್ಯವನ್ನು ಯಾರೂ ಪ್ರಶ್ನಿಸುವಂತಿಲ್ಲ; ಸರಕಾರಗಳೂ, ಪೋಲೀಸರೂ ನಮ್ಮೀ ಸ್ವಾತಂತ್ರ್ಯವನ್ನು ರಕ್ಷಿಸಲೇಬೇಕು. ಕಾಲಕಾಲಕ್ಕೆ, ಸ್ಥಳದಿಂದ ಸ್ಥಳಕ್ಕೆ ಬದಲಾಗುವ ಸಾರ್ವಜನಿಕ ನೈತಿಕತೆ ಹಾಗೂ ಸಭ್ಯತೆಗಳಿಗಿಂತ ಸಾಂವಿಧಾನಿಕ ನೈತಿಕತೆಗೇ ಹೆಚ್ಚಿನ ಪ್ರಾಶಸ್ತ್ಯವೆನ್ನುವುದನ್ನು ನಮ್ಮ ನ್ಯಾಯಾಲಯಗಳೂ ಸ್ಪಷ್ಟವಾಗಿ ಹೇಳಿವೆ. ಆದ್ದರಿಂದ ಭಾವನೆಗಳಿಗೆ ಧಕ್ಕೆಯಾಗುವ ನೆಪದಲ್ಲಿ, ಸಂಸ್ಕತಿ ರಕ್ಷಣೆಯ ಹೆಸರಲ್ಲಿ ಅನ್ಯರ ಭಾವನೆಗಳು ಹಾಗೂ ಸಂಸ್ಕತಿಯ ಮೇಲೆ ಯಾರೂ ದಾಳಿ ನಡೆಸುವಂತಿಲ್ಲ ? ಅವರವರ ಭಾವನೆಗಳೂ, ಸಂಸ್ಕತಿಗಳೂ ಅವರವರಿಗೆ. ಸ್ವಾಮಿಗಳೂ, ಋಷಿಮುನಿಗಳೂ ತಮ್ಮ ಮಠಮಂದಿರಗಳ ಸಂಸ್ಕತಿಯನ್ನು ಕಾಪಾಡಿಕೊಂಡರಷ್ಟೇ ಸಾಕು. ಸಾವಿರಾರು ಜಾತಿ-ಪಂಗಡಗಳಿರುವ ಭಾರತದಲ್ಲಿ ಪ್ರತಿ ಮನೆಗೂ ಅದರದ್ದೇ ಆದ ಸಂಸ್ಕತಿಯಿರುವಾಗ ಸಂಸ್ಕತಿ ರಕ್ಷಣೆಯೆನ್ನುವುದು ಸಮಾಜ ವಿರೋಧಿ, ಸಂವಿಧಾನ ವಿರೋಧಿ ನಡವಳಿಕೆಯಾಗುತ್ತದೆ. ಕಾನೂನು ಇಲ್ಲದ್ದರಿಂದ ಅಥವಾ ಪೋಲೀಸರು ಕ್ರಮ ಕೈಗೊಳ್ಳದ್ದರಿಂದ ತಾವೇ ದಾಳಿ ನಡೆಸಬೇಕಾಯಿತೆನ್ನುವುದು ಬಲಪಂಥೀಯ ಎಡೆಬಿಡಂಗಿತನದ ಪರಾಕಾಷ್ಠೆಯಷ್ಟೇ ಅಲ್ಲ, ಶಿಕ್ಷಾರ್ಹ ಅಪರಾಧವೂ ಆಗುತ್ತದೆ. ನಮ್ಮ ಸಂವಿಧಾನ ಹಾಗೂ ಕಾನೂನುಗಳ ಬಗ್ಗೆ ತಕರಾರೆತ್ತುವವರಿಗೆ ಇರುವ ಒಂದೇ ದಾರಿಯೆಂದರೆ ಸಂಸತ್ತಿನಲ್ಲಿ ಅದನ್ನು ಬದಲಾಯಿಸಲು ಅಗತ್ಯವಾದ ಬಹುಮತವನ್ನು ಪಡೆಯುವುದು; ಅದಾಗದಿದ್ದರೆ ತೆಪ್ಪಗಿರಲೇಬೇಕಾಗುತ್ತದೆ.

ದೇವರ ಹೆಸರಲ್ಲಿ ಅಧಿಕಾರವನ್ನೂ, ವೈಭೋಗವನ್ನೂ ಅನುಭವಿಸುತ್ತಿದ್ದು, ಈಗದನ್ನು ಕಳೆದುಕೊಳ್ಳುವ ಭೀತಿಯಲ್ಲಿರುವ ಸಂಪ್ರದಾಯವಾದಿಗಳು ಮತ್ತು ಧರ್ಮ-ದೇವರ ಸೊಲ್ಲಿಲ್ಲದ, ಸರ್ವರಿಗೂ ಸಮಬಾಳನ್ನಿತ್ತಿರುವ ನಮ್ಮ ಸಂವಿಧಾನಗಳ ನಡುವಿನ ಈ ಸಂಘರ್ಷದಲ್ಲಿ ನಮ್ಮ ಸಂವಿಧಾನವೂ, ನಮ್ಮ ಸ್ವಾತಂತ್ರ್ಯವೂ ಜಯಿಸಲೇಬೇಕೆಂಬ ಪಣ ನಮ್ಮೆಲ್ಲರದಾಗಬೇಕು.

ಮೂರನೇ ಬರಹ: ನೂರಿಪ್ಪತ್ತೆರೆಡು ಕೋಟಿ ಪ್ರಯೋಗ ಪಶುಗಳು [ಜುಲೈ 25, 2012, ಬುಧವಾರ] [ನೋಡಿ] [ನೋಡಿ]

ಒಂದಿಷ್ಟು ಜ್ಞಾನವೂ ಒಂದಷ್ಟು ಅಜ್ಞಾನವೂ ಮೇಳೈಸಿರುವ ಭಾರತದಲ್ಲೀಗ ಔಷಧ ಪರೀಕ್ಷೆಗಳ ಸುವರ್ಣಯುಗ

ನೂರಿಪ್ಪತ್ತೆರಡು ಕೋಟಿ ನಮ್ಮ ದೇಶದ ಜನಸಂಖ್ಯೆ. ಬೃಹತ್ ಮಾರಾಟಗಾರರಿಗೆ ಇದು ಗ್ರಾಹಕರ ಸಂಖ್ಯೆಯಾದರೆ, ಹೊಸ ಔಷಧಗಳನ್ನು ಸಿದ್ಧ ಪಡಿಸುವ ದೈತ್ಯ ಕಂಪೆನಿಗಳ ಕಣ್ಣಿಗೆ ಇದು ಸುಲಭದಲ್ಲಿ ದಕ್ಕುವ, ಆಟಕ್ಕಿದ್ದು, ಲೆಕ್ಕ ಕೇಳದ ಪ್ರಯೋಗಪಶುಗಳ ಸಂಖ್ಯೆ. ವಿದೇಶಿ ಕಂಪೆನಿಗಳು ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ದೋಚಿ, ಅಲ್ಪಸಂಬಳಕ್ಕೆ ದೊರೆಯುವ ಮಾನವ ಸಂಪನ್ಮೂಲಗಳನ್ನು ಸೂರೆಗೊಂಡಾದ ಬಳಿಕ ಇದೀಗ ನಮ್ಮವರ ದೇಹಗಳನ್ನೇ ಪ್ರಯೋಗಗಳಿಗೆ ಬಳಸಿಕೊಳ್ಳುವ ಸರದಿ. ವಿಶ್ವದ ಅತಿ ದೊಡ್ಡ ಸಂಶೋಧನಾ ಗುತ್ತಿಗೆ ಸಂಸ್ಥೆಯನುಸಾರ ಅಂತಹಾ ಪ್ರಯೋಗಗಳಿಗೆ ಭಾರತವು ಸ್ವರ್ಗಸದೃಶ.

ಈ ಸ್ವರ್ಗದಲ್ಲಿರುವ ನೀವು ಈಗಾಗಲೇ ಅಂತಹದೊಂದು ಪ್ರಯೋಗಪಶುವಾಗಿರುವ ಸಾಧ್ಯತೆಗಳು ಇಲ್ಲದಿಲ್ಲ. ನಿಮ್ಮ ವೈದ್ಯರು ಹೊಸ ಔಷಧವನ್ನು ಚಂದದ ಬಾಟಲಲ್ಲಿಟ್ಟು ಉಚಿತವಾಗಿ ಕೊಟ್ಟಿದ್ದರೆ, ಅದಕ್ಕಾಗಿ ನಿಗದಿತ ದಿನಗಳಂದು ನೀವು ಅವರನ್ನು ಕಾಣಬೇಕಾಗಿದ್ದರೆ, ನಿಮ್ಮನ್ನು ಕೆಲ ಹೊತ್ತು ಕುಳ್ಳಿರಿಸಿ ಉಚಿತವಾಗಿ ರಕ್ತ, ಮೂತ್ರ, ಇಸಿಜಿ ಇತ್ಯಾದಿ ಪರೀಕ್ಷೆಗಳನ್ನು ಮಾಡಲಾಗುತ್ತಿದ್ದರೆ, ನಿಗದಿತ ದಿನದಂದು ಹೋಗಲಾಗದಿದ್ದರೆ ಅತ್ತಲಿಂದ ನಿಮಗೆ ಅತ್ಯಂತ ಪ್ರೀತಿಪೂರ್ವಕವಾದ ಕರೆಗಳು ಬರುತ್ತಿದ್ದರೆ, ಅಥವಾ ಕೆಲವೊಮ್ಮೆ ಅವರೇ ನಿಮ್ಮನ್ನು ಹುಡುಕಿಕೊಂಡು ಬರುತ್ತಿದ್ದರೆ, ನೀವು ವೈದ್ಯರಿಗೆ ಹಣವನ್ನು ನೀಡುವುದಕ್ಕೆ ಬದಲಾಗಿ ಅವರೇ ನಿಮಗೊಂದಿಷ್ಟು ನೀಡಿ ಕಳುಹಿಸುತ್ತಿದ್ದರೆ ಯಾವುದೋ ಔಷಧದ ಪರೀಕ್ಷೆಗೆ, ತಿಳಿದೋ ತಿಳಿಯದೆಯೋ, ನೀವೂ ಒಂದು ಪ್ರಯೋಗಪಶುವಾಗಿದ್ದೀರೆಂದು ತಿಳಿಯಬಹುದು.

ಇಂದು ಸುಮಾರು ಇಪ್ಪತ್ತು ಲಕ್ಷಕ್ಕೂ ಹೆಚ್ಚು ಭಾರತೀಯರ ಮೇಲೆ ಇಂತಹಾ ಪ್ರಯೋಗಗಳು ನಡೆಯುತ್ತಿವೆಯೆಂದು ಅಂದಾಜಿಸಲಾಗಿದೆ. ಇಂದು ವಿಶ್ವದಲ್ಲಿ ನಡೆಯುತ್ತಿರುವ ಸುಮಾರು 3000ದಷ್ಟು ಹೊಸ ಔಷಧಗಳ ಪರೀಕ್ಷೆಗಳಲ್ಲಿ ಶೇ. 20ರಷ್ಟು ಭಾರತದಲ್ಲಿಯೇ ನಡೆಯುತ್ತಿವೆಯೆಂದೂ, ಈ ವ್ಯವಹಾರದ ಮೌಲ್ಯವು ಸುಮಾರು 2200 ಕೋಟಿ ರೂಪಾಯಿಗಳಾಗಿದ್ದು, ಪ್ರತಿವರ್ಷ ಅದು ಶೇ. 30ರಷ್ಟು ವೄದ್ಧಿಯಾಗುತ್ತಿದೆಯೆಂದೂ ಅಂದಾಜಿಸಲಾಗಿದೆ. ಒಂದು ಹೊಸ ಔಷಧವನ್ನು ಅಭಿವೃದ್ಧಿಪಡಿಸಿ, ಪ್ರಾಣಿಗಳಲ್ಲೂ, ಮನುಷ್ಯರಲ್ಲೂ ಅದರ ಪರಿಣಾಮಗಳನ್ನೂ, ವಿವಿಧ ಅಡ್ಡ ಪರಿಣಾಮಗಳನ್ನೂ ಪರೀಕ್ಷಿಸಿ ಮಾರುಕಟ್ಟೆಗೆ ತರಬೇಕಾದರೆ ಒಂದರಿಂದ ಹನ್ನೊಂದು ಶತಕೋಟಿ ಡಾಲರ್ ವೆಚ್ಚವಾಗುತ್ತದೆ. ಭಾರತದಲ್ಲಿ ಈ ಪರೀಕ್ಷೆಗಳನ್ನು ನಡೆಸಿದರೆ ಅರ್ಧಕ್ಕರ್ಧ ಉಳಿತಾಯವಾಗುವುದರಿಂದ ಇದೊಂದು ಸ್ವರ್ಗದಂತೆಯೇ ಕಾಣುತ್ತದೆ. ವಿದೇಶಗಳಲ್ಲೇ ಹೆಚ್ಚು ಬಳಕೆಯಾಗುವ ಔಷಧಗಳನ್ನೂ ಇಲ್ಲಿ ಪ್ರಯೋಗಿಸಲಾಗುತ್ತಿದ್ದು, ಅಲ್ಲಿನ ಜನರನ್ನೂ, ದುಬಾರಿ ವೆಚ್ಚವನ್ನೂ ಉಳಿಸುವ ‘ರಕ್ಷಕರಾಗಿ’ ಭಾರತೀಯರನ್ನು ಬಳಸಿಕೊಳ್ಳಲಾಗುತ್ತಿದೆ.

ಕೋಟಿಗಟ್ಟಲೆ ಪ್ರಜೆಗಳ ಕಲ್ಯಾಣಕ್ಕಿಂತಲೂ ಬೆರಣಿಕೆಯ ಬಹುರಾಷ್ಟ್ರೀಯ ಕಂಪೆನಿಗಳ ಲಾಭವೇ ಹೆಚ್ಚು ಮುಖ್ಯವೆಂದು ಪರಿಗಣಿಸಿರುವ ನಮ್ಮ ಸರಕಾರದಿಂದ ಇದಕ್ಕೆ ಎಲ್ಲ ರೀತಿಯ ಸಹಕಾರವೂ ದೊರೆಯುತ್ತಿರುವುದು ಈ ಸ್ವರ್ಗಸುಖವನ್ನು ಇನ್ನಷ್ಟು ಹೆಚ್ಚಿಸಿದೆ. ಭಾರತೀಯ ಔಷಧ ಹಾಗೂ ಪ್ರಸಾಧನ ಕಾಯಿದೆ (1945)ಯಲ್ಲಿ ಇತರೆಡೆಗಳಲ್ಲಿ ಪರೀಕ್ಷಿಸಲ್ಪಟ್ಟ ಔಷಧಗಳನ್ನಷ್ಟೇ ಭಾರತೀಯರ ಮೇಲೆ ಪ್ರಯೋಗಿಸಬಹುದೆನ್ನುವ ನಿರ್ಬಂಧವಿತ್ತು. ಆದರೆ 2005ರ ಜನವರಿಯಲ್ಲಿ ಇದನ್ನು ತೆಗೆದು ಹಾಕಿ ಯಾವುದೇ ಔಷಧವನ್ನು ಯಾವುದೇ ಹಂತದಲ್ಲಿ ಭಾರತೀಯರ ಮೇಲೆ ಪ್ರಯೋಗಿಸುವ ಅವಕಾಶವನ್ನು ಕಲ್ಪಿಸಲಾಯಿತು. ಈ ಪರೀಕ್ಷೆಗಳನ್ನು ನಿಯಂತ್ರಿಸಬೇಕಾದ ಭಾರತೀಯ ಔಷಧ ನಿಯಂತ್ರಣಾ ಮಹಾನಿರ್ದೇಶಕರು ಹಾಗೂ ಕೇಂದ್ರ ಔಷಧ ಮಾನಕ ನಿಯಂತ್ರಣ ಸಂಸ್ಥೆಗಳ ಮೃದು ಧೋರಣೆಗಳು ಈ ಸ್ವರ್ಗದ ಸಿಹಿಯನ್ನು ಇನ್ನಷ್ಟು ಹೆಚ್ಚಿಸಿವೆ.

ಈ ಸ್ವರ್ಗದಲ್ಲಿ ಇನ್ನಷ್ಟು ಪ್ರಯೋಜನಗಳಿವೆ. ಇಲ್ಲಿ ಜ್ಞಾನವೂ ಇದೆ, ಅಜ್ಞಾನವೂ ಬೇಕಾದಷ್ಟಿದೆ; ಈ ಪರೀಕ್ಷೆಗಳನ್ನು ನಡೆಸಬಹುದಾದ ಆಸ್ಪತ್ರೆಗಳೂ, ಪ್ರಯೋಗಾಲಯಗಳೂ ಇವೆ, ಆ ಸೌಲಭ್ಯಗಳು ಕೈಗೆಟಕದಿರುವ ಜನಕೋಟಿಯೂ ಇದೆ. ಇಂಗ್ಲಿಷ್ ಬಲ್ಲ ವೈದ್ಯರು, ದಾದಿಯರು, ಪ್ರಯೋಗಾಲಯಗಳ ಸಿಬ್ಬಂದಿಗಳೂ, ಇವರನ್ನೆಲ್ಲ ಸಂಘಟಿಸಬಲ್ಲ ಆಡಳಿತ ನಿಪುಣರೂ ನಮ್ಮಲ್ಲಿ ಸಾಕಷ್ಟಿರುವುದು ಇಂಗ್ಲಿಷ್ ಕಂಪೆನಿಗಳಿಗೆ ವರದಾನವಾಗಿದೆ. ಮೊದಲೆಲ್ಲ ಇಂತಹಾ ಪರೀಕ್ಷೆಗಳು ವೈದ್ಯಕೀಯ ಮಹಾ ವಿದ್ಯಾಲಯಗಳಿಗೆ ಹಾಗೂ ದೊಡ್ಡ ಸಂಶೋಧನಾ ಸಂಸ್ಥೆಗಳಿಗೆ ಸೀಮಿತವಾಗಿದ್ದರೆ, ಈಗ ಸಣ್ಣ ಆಸ್ಪತ್ರೆಗಳಲ್ಲೂ, ಖಾಸಗಿ ವೈದ್ಯರ ಕೊಠಡಿಗಳಲ್ಲೂ ನಡೆಯತೊಡಗಿವೆ. ಕೆಲವು ಸರಕಾರಿ ಆಸ್ಪತ್ರೆಗಳೂ ಈಗ ಖಾಸಗಿ ಔಷಧ ಕಂಪೆನಿಗಳ ಪ್ರಯೋಗಶಾಲೆಗಳಾಗಿವೆ. ಅನಕ್ಷರತೆ, ಬಡತನ, ಹಾಗೂ ಆರೋಗ್ಯ ಸೇವೆಗಳ ಕೊರತೆಗಳಿಂದಾಗಿ ನಮ್ಮವರು ಈ ಪರೀಕ್ಷೆಗಳಿಗೆ ಸುಲಭದಲ್ಲಿ ತುತ್ತಾಗುತ್ತಾರೆ. ಹೆಚ್ಚಿನವರು ವೈದ್ಯರ ಮೇಲಿನ ವಿಶ್ವಾಸದಿಂದ, ಅವರ ಸಿಹಿಮಾತುಗಳಿಗೆ ಮರುಳಾಗಿ ಒಪ್ಪಿಕೊಂಡರೆ, ಇನ್ನು ಕೆಲವರು ಉಚಿತವಾಗಿ ದೊರೆಯುವ ಸೌಲಭ್ಯಗಳಿಗೆ ಮರುಳಾಗುತ್ತಾರೆ. ಹೆಚ್ಚಿನವರು ಈ ಪರೀಕ್ಷೆಗಳಿಗೆ ಒಪ್ಪಿಗೆ ನೀಡುವ ಕರಾರು ಪತ್ರಗಳನ್ನು ಓದುವ ಯಾ ಅರ್ಥೈಸಿಕೊಳ್ಳುವ ಸಾಮರ್ಥ್ಯವಿಲ್ಲದೆ ಸುಮ್ಮನೆ ಸಹಿಯನ್ನೋ, ಹೆಬ್ಬೆಟ್ಟನ್ನೋ ಒತ್ತಿ ಅತಿ ಸುಲಭದಲ್ಲಿ ವಂಚಿತರಾಗುತ್ತಾರೆ. ನವಜಾತ ಶಿಶುಗಳಿಂದ ವೃದ್ಧರವರೆಗೆ, ನಗರವಾಸಿಗಳಿಂದ ಹಿಡಿದು ಜೀವನದುದ್ದಕ್ಕೂ ಯಾವುದೇ ಔಷಧಗಳನ್ನು ತಿನ್ನದಿದ್ದ ಆದಿವಾಸಿಗಳವರೆಗೆ, ನರಮಾನಸಿಕ ರೋಗಿಗಳಿಂದ ಕ್ಯಾನ್ಸರ್ ರೋಗಿಗಳವೆರೆಗೆ, ಅಷ್ಟೇಕೆ, ಭೋಪಾಲ ಅನಿಲ ದುರಂತದ ಸಂತೃಸ್ತರನ್ನೂ ಈ ಪರೀಕ್ಷೆಗಳಿಗಾಗಿ ಬಳಸಿಕೊಳ್ಳಲಾಗಿದೆ. ಅಸ್ತಮಾ, ಮಧುಮೇಹ, ರಕ್ತದ ಏರೊತ್ತಡ, ಕ್ಯಾನ್ಸರ್, ಮನೋರೋಗಗಳು ಇತ್ಯಾದಿಗಳುಳ್ಳವರು ನಮ್ಮಲ್ಲಿ ಕೋಟಿಗಟ್ಟಲೆಯಲ್ಲಿರುವುದು ಈ ಕಂಪೆನಿಗಳ ಪಾಲಿಗೆ ದೊಡ್ಡ ಆಕರ್ಷಣೆಯಾಗಿದೆ.

ವೈದ್ಯರಿಗೂ, ರೋಗಿಗಳಿಗೂ ಈ ಪರೀಕ್ಷೆಗಳಲ್ಲಿರುವ ಅತಿ ದೊಡ್ಡ ಆಕರ್ಷಣೆಯೆಂದರೆ ಅದರಲ್ಲಿರುವ ದುಡ್ಡು ಹಾಗೂ ಸವಲತ್ತುಗಳು. ಅವನ್ನು ನಡೆಸುವ ವೈದ್ಯರಿಗೆ ಪರೀಕ್ಷೆಗೊಳಪಡಿಸಿದ ಪ್ರತೀ ವ್ಯಕ್ತಿಯ ಲೆಕ್ಕದಲ್ಲಿ ರೂ. 60000ದಿಂದ ರೂ. 120000ದಷ್ಟು ಸಂಭಾವನೆಯ ಜೊತೆಗೆ, ವಿಶ್ವದೆಲ್ಲೆಡೆ ಆಗಾಗ ಆಯೋಜಿಸಲಾಗುವ ಸಭೆ-ಸಮ್ಮೇಳನಗಳಿಗೆ ಉಚಿತ ಸವಾರಿಗಳ ಭಾಗ್ಯವೂ ದೊರೆಯುತ್ತದೆ. ಪರೀಕ್ಷೆಗಳಲ್ಲಿ ಭಾಗಿಗಳಾಗುವವರಿಗೆ ಉಚಿತ ವೈದ್ಯಕೀಯ ಸೌಲಭ್ಯಗಳ ಜೊತೆಗೆ ಪ್ರಯಾಣ ಭತ್ತೆ ಹಾಗೂ ಇನ್ನಿತರ ರೂಪದಲ್ಲಿ ರೂ. 500ರಿಂದ 20000ದವರೆಗೆ ಹಣವೂ ದೊರೆಯಬಹುದು (ಅಥವಾ ಹಲವೆಡೆ ದೊರೆಯದಿರಲೂಬಹುದು).

ಇನ್ನು ಔಷಧ ಕಂಪೆನಿಗಳ ಪರವಾಗಿ ಈ ಪರೀಕ್ಷೆಗಳನ್ನು ವಹಿಸಿಕೊಂಡ ಸಂಶೋಧನಾ ಗುತ್ತಿಗೆ ಸಂಸ್ಥೆಗಳು ಪರೀಕ್ಷೆಗಳ ನಿಯಮಗಳನ್ನು ರೂಪಿಸುವುದು, ಅಗತ್ಯವಿರುವ ವೈದ್ಯರನ್ನೂ, ಆಸ್ಪತ್ರೆಗಳನ್ನೂ ನಿಯೋಜಿಸುವುದು, ನೀತಿ ಸಮಿತಿಗಳನ್ನು ರಚಿಸುವುದು, ಫಲಿತಾಂಶಗಳ ವರದಿಗಳನ್ನು ತಯಾರಿಸುವುದು, ಅವನ್ನು ವೈದ್ಯಕೀಯ ಪತ್ರಿಕೆಗಳಲ್ಲಿ ಪ್ರಕಟಿಸುವುದಕ್ಕಾಗಿ ಮರೆಯಲ್ಲಿದ್ದು ಬರೆಯುವುದು ಇತ್ಯಾದಿ ಎಲ್ಲ ಕೆಲಸಗಳನ್ನೂ ನಿರ್ವಹಿಸುತ್ತವೆ. ಹೀಗೆ ಎಲ್ಲವನ್ನೂ ಒಬ್ಬನೇ ಮಾಡುವುದರಲ್ಲಿ ಎಲ್ಲ ರೀತಿಯ ತಾಕಲಾಟಗಳಿಗೂ, ಉದ್ದೇಶಪೂರ್ವಕ ಸುಳ್ಳುಗಳಿಗೂ ಬೇಕಾದಷ್ಟು ಅವಕಾಶಗಳಿರುತ್ತವೆ.

ಇಂತಹಾ ಪರೀಕ್ಷೆಗಳಿಂದ ನಮ್ಮವರಿಗಾಗಿರುವ ಹಾನಿಯ ವಿವರಗಳು ಈಗ ಒಂದೊಂದಾಗಿ ಹೊರಬರುತ್ತಿವೆ. ಅಧಿಕೃತ ಮಾಹಿತಿಯಂತೆ ಈ ಪರೀಕ್ಷೆಗಳ ಗಂಭೀರ ಅಡ್ಡ ಪರಿಣಾಮಗಳಿಂದಾಗಿ 2007ರಿಂದ 2011ರವರೆಗಿನ ಅವಧಿಯಲ್ಲಿ ಒಟ್ಟು 2193 ಭಾರತೀಯರು ಸಾವನ್ನಪ್ಪಿದ್ದಾರೆ, ಈ ಸಂಖ್ಯೆಯು ಇನ್ನೂ ಹೆಚ್ಚಿರುವ ಸಾಧ್ಯತೆಗಳಿವೆ. ಪ್ರತಿಷ್ಠಿತ ಅಖಿಲ ಭಾರತ ವೈದ್ಯವಿಜ್ಞಾನ ಸಂಸ್ಥೆಯಲ್ಲಿ ಹಸುಗೂಸುಗಳೂ ಸೇರಿದಂತೆ 4000ಕ್ಕೂ ಹೆಚ್ಚು ಮಕ್ಕಳಲ್ಲಿ ನಡೆಸಲಾಗಿದ್ದ ಪರೀಕ್ಷೆಗಳಲ್ಲಿ 49 ಮಕ್ಕಳು ಸಾವನ್ನಪ್ಪಿದ್ದರು. ಆಂಧ್ರ ಪ್ರದೇಶ ಹಾಗೂ ಗುಜರಾತುಗಳಲ್ಲಿ 21000ಕ್ಕೂ ಹೆಚ್ಚು ಆದಿವಾಸಿ ಹುಡುಗಿಯರಿಗೆ ಪಾಪಿಲೋಮಾ ಲಸಿಕೆಯನ್ನು ಚುಚ್ಚಿದ ಬಳಿಕ ಆರು ಹುಡುಗಿಯರು ಸಾವಿಗೀಡಾಗಿದ್ದರು. ಇನ್ನಿತರ ಅಡ್ಡಪರಿಣಾಮಗಳನ್ನು ವರದಿ ಮಾಡುವ ವ್ಯವಸ್ಥೆಯೇ ಇಲ್ಲದಿರುವುದರಿಂದ ಅವುಗಳ ಗಂಭೀರತೆಯನ್ನು ಅಳೆಯುವುದೇಸಾಧ್ಯವಿಲ್ಲ. ಹೀಗೆ ಸತ್ತವರಿಗಾಗಲೀ, ತೊಂದರೆಗೀಡಾದವರಿಗಾಗಲೀ ಸೂಕ್ತ ಪರಿಹಾರವು ದೊರೆಯುವ ಖಾತರಿಯೂ ಇಲ್ಲ: 2010ರಲ್ಲಿ ಸಾವನ್ನಪ್ಪಿದ 438 ಜನರಲ್ಲಿ ಕೇವಲ 22 ಜನರಿಗೆ ಒಟ್ಟು ರೂ. 5233000ದಷ್ಟು ಪರಿಹಾರವನ್ನಷ್ಟೇ ಒದಗಿಸಲಾಗಿತ್ತು.

ಹೊಸ ಔಷಧಗಳನ್ನು ಹುಡುಕುವುದು ಅತ್ಯಗತ್ಯವೆನ್ನುವುದು ನಿಸ್ಸಂದೇಹವಾಗಿದ್ದರೂ, ಮನುಷ್ಯರ ಮೇಲೆ ಹೊಸ ಔಷಧಗಳನ್ನು ಪ್ರಯೋಗಿಸುವ ಪ್ರಕ್ರಿಯೆಯು ಕಟ್ಟುನಿಟ್ಟಾದ ನಿಯಂತ್ರಣಗಳಿಗೆ ಒಳಪಟ್ಟು, ಕಠಿಣವಾದ ನೀತಿಸಂಹಿತೆಗಳಿಗೆ ಬದ್ಧವಾಗಿರಬೇಕಾಗುತ್ತದೆ. ಔಷಧ ಪರೀಕ್ಷೆಗಳನ್ನು ನಡೆಸುವ ಕಂಪೆನಿಗಳು ಹಾಗೂ ವೈದ್ಯರುಗಳ ಹಿತಾಸಕ್ತಿಗಳಿಗಿಂತ ಪರೀಕ್ಷೆಗಳಿಗೆ ಒಳಪಡುವ ಜನಸಾಮಾನ್ಯರ ಹಿತಾಸಕ್ತಿಗಳೇ ಪರಮೋಚ್ಛವಾಗಿರಬೇಕಾಗುತ್ತದೆ. ಅಂತಹಾ ಪರೀಕ್ಷೆಗಳ ಅಡ್ಡ ಪರಿಣಾಮಗಳೂ ಸೇರಿದಂತೆ ಸಂಬಂಧಿತ ಎಲ್ಲಾ ವಿವರಗಳನ್ನು ಪಾರದರ್ಶಕವಾಗಿ, ಕಡ್ಡಾಯವಾಗಿ ದಾಖಲಿಸುವುದು, ನೀತಿಸಮಿತಿಗಳ ಕಾರ್ಯ ಹಾಗೂ ಜವಾಬ್ದಾರಿಗಳನ್ನು ನಿಯಂತ್ರಿಸುವುದು ಹಾಗೂ ಈ ಪರೀಕ್ಷೆಗಳನ್ನು ಸಂಘಟಿಸುವ ಸಂಶೋಧನಾ ಗುತ್ತಿಗೆ ಸಂಸ್ಥೆಗಳನ್ನು ಕಠಿಣವಾದ ನಿಯಂತ್ರಣಗಳಿಗೆ ಒಳಪಡಿಸುವುದು ತುರ್ತಾಗಿ ಆಗಬೇಕಿದೆ.

ಔಷಧ ಪರೀಕ್ಷೆಗಳನ್ನು ನಡೆಸುವವರು ಮತ್ತು ಅವಕ್ಕೆ ಒಳಪಡುವವರ ಹಿತಾಸಕ್ತಿಗಳು ಬೇರೆಯೇ ಆಗಿರುವುದರಿಂದ ಪರೀಕ್ಷೆಗಳಿಗೆ ಒಡ್ಡಿಕೊಳ್ಳುವವರು ತಮ್ಮ ಹಿತಾಸಕ್ತಿಗಳನ್ನು ತಾವೇ ರಕ್ಷಿಸಿಕೊಳ್ಳಬೇಕಾಗುತ್ತದೆ. ಔಷಧ ಪರೀಕ್ಷೆಗಳಿಗೆ ಒಳಪಡುವವರು ಸಂಭಾವ್ಯ ಸನ್ನಿವೇಶಗಳ ಬಗ್ಗೆ ಮೊದಲೇ ಜಾಗೃತರಾಗಿದ್ದು ಲಿಖಿತ ದಾಖಲೆಗಳನ್ನು ಪಡೆದುಕೊಳ್ಳುವ ಜಾಣತನವನ್ನು ಮೆರೆಯಬೇಕಾಗುತ್ತದೆ. ಔಷಧ ಪರೀಕ್ಷೆಗಳಲ್ಲಿ ಪಾಲ್ಗೊಳ್ಳುವ ಮೊದಲು ಅವುಗಳ ಸಾಧಕ-ಬಾಧಕಗಳನ್ನೆಲ್ಲ ಪರಿಗಣಿಸಿ, ಕರಾರು ಪತ್ರವನ್ನು ಕೂಲಂಕಷವಾಗಿ ಓದಿ ಅರ್ಥೈಸಿಕೊಳ್ಳಬೇಕು. ಸಂಭಾವ್ಯ ಅಡ್ಡ ಪರಿಣಾಮಗಳ ಬಗ್ಗೆಯೂ, ಅವು ಉಂಟಾದಲ್ಲಿ ದೊರೆಯಬಹುದಾದ ಪರಿಹಾರ ಹಾಗೂ ವಿಮಾ ಸೌಲಭ್ಯಗಳ ಬಗ್ಗೆಯೂ ಸವಿವವರವಾಗಿ ತಿಳಿದುಕೊಂಡು, ಲಿಖಿತ ಆಶ್ವಾಸನೆಗಳನ್ನು ಪಡೆಯಬೇಕು. ಪರೀಕ್ಷೆಯ ಸಮಯದಲ್ಲಿ ದೇಹದಲ್ಲಿ ಯಾವುದೇ ಅನಪೇಕ್ಷಿತ ಬದಲಾವಣೆಗಳು ಕಂಡು ಬಂದರೆ ಆ ಕೂಡಲೇ ಸೂಕ್ತವಾದ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಿತ ವೈದ್ಯರಲ್ಲಿ ಹೇಳಬೇಕು. ಹೊಸ ಔಷಧಗಳ ಪರೀಕ್ಷೆಗಾಗಿ ಈಗಾಗಲೇ ಬಳಸುತ್ತಿರುವ ಔಷಧಗಳನ್ನು ನಿಲ್ಲಿಸಬೇಕಾದರೆ ಅದರ ಪರಿಣಾಮಗಳ ಬಗ್ಗೆ ವೈದ್ಯರಿಂದ ಸ್ಪಷ್ಟೀಕರಣವನ್ನು ಪಡೆಯಬೇಕು. ಗಂಭೀರವಾದ ಹಾಗೂ ನಿರಂತರವಾದ ಚಿಕಿತ್ಸೆಯ ಅಗತ್ಯವುಳ್ಳ ಕಾಹಿಲೆಗಳಿಂದ ಬಳಲುತ್ತಿರುವವರು, ಮನೋರೋಗವುಳ್ಳವರು ಈ ಬಗ್ಗೆ ವಿಶೇಷವಾದ ಗಮನವನ್ನು ಹರಿಸಬೇಕಾಗುತ್ತದೆ. ಹೊಸ ಔಷಧಕ್ಕಿಂತ ಸ್ವಂತ ಆರೋಗ್ಯವು ಹೆಚ್ಚು ಮುಖ್ಯವೆನ್ನುವುದನ್ನು ಮರೆಯಬಾರದು.

ಎರಡನೇ ಬರಹ: ಷೋಕಿ ನೋವುಗಳ ನಡುವೆ ನರಳದಿರಲಿ ಮಕ್ಕಳು [ಜುಲೈ 11, 2012, ಬುಧವಾರ] [ನೋಡಿ][ನೋಡಿ

ಮಕ್ಕಳು ಅಮೂಲ್ಯವಾದ ಆಸ್ತಿ, ದೇಶದ ಭವಿಷ್ಯ ಎಂದೆಲ್ಲ ಹೇಳುತ್ತಿರುತ್ತೇವೆ, ಅವರ ಹೆಸರಿನಲ್ಲಿ ಹಲವಾರು ಯೋಜನೆಗಳೂ, ಕಾರ್ಯಕ್ರಮಗಳೂ ನಡೆಯುತ್ತಿರುತ್ತವೆ. ಆದರೆ ನಮ್ಮ ಮಕ್ಕಳಿಂದು ಆರೋಗ್ಯವಂತರಾಗಿ ಬೆಳೆಯುತ್ತಿದ್ದಾರೆಯೇ? ಅಭಿವದ್ಧಿಯ ಭರಾಟೆಯಲ್ಲಿ ದಕ್ಕಿಸಿಕೊಂಡ ಒಂದಷ್ಟು ಸ್ಥಿತಿವಂತರು ತಮ್ಮ ಅಂತಸ್ತನ್ನು ಮೆರೆಸುವ ಹುರುಪಿನಲ್ಲಿ ಮಕ್ಕಳಿಗೆ ಒಳ್ಳೊಳ್ಳೆಯ ಪೋಷಾಕುಗಳನ್ನು ತೊಡಿಸಿ ಮಾರುಕಟ್ಟೆಯಲ್ಲಿ ಸಿಗುವ ಬಗೆಬಗೆಯ ತಿನಿಸುಗಳನ್ನು ಕೊಡಿಸಿ ರಮಿಸುತ್ತಿದ್ದರೆ, ಇದ್ದದ್ದನ್ನೂ ಕಳೆದುಕೊಂಡ ಬಹುಪಾಲು ಜನರು ತಮ್ಮ ಕರುಳಕುಡಿಗಳಿಗೆ ಗೇಣು ಬಟ್ಟೆಗೂ, ತುಂಡು ರೊಟ್ಟಿಗೂ ಪರದಾಡುತ್ತಿದ್ದಾರೆ. ಮಕ್ಕಳ ಪಾಲಿಗೆ ಈ ಅತಿಪೋಷಣೆ-ನ್ಯೂನಪೋಷಣೆಗಳೆರಡೂ ದುರಂತಗಳಾಗಿ, ಅವರಲ್ಲಿ ಹಲವಿಧದ ದೈಹಿಕ ಹಾಗೂ ಬೌದ್ಧಿಕ ಸಮಸ್ಯೆಗಳಿಗೆ ಕಾರಣವಾಗುತ್ತಿವೆ.

ಮಕ್ಕಳ ಪೋಷಣೆಗೂ, ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳಿಗೂ ಅದೆಂತಹ ನಂಟು ನೋಡಿ. ಅಮೆರಿಕಾದಂತಹ ದೇಶಗಳಲ್ಲಿ ಶೇ. 30ರಷ್ಟು ಮಕ್ಕಳಲ್ಲಿ ಅತಿತೂಕವಿದ್ದರೆ, ಆಫ್ರಿಕಾದ ಬಡ ರಾಷ್ಟ್ರಗಳಲ್ಲಿ ಅಂತಹ ಮಕ್ಕಳ ಪ್ರಮಾಣವು ಶೇ. 2ಕ್ಕಿಂತಲೂ ಕಡಿಮೆಯಿದೆ. ನಮ್ಮ ದೇಶದ ಮಕ್ಕಳಲ್ಲಿ ಅತಿತೂಕ ಹಾಗೂ ಬೊಜ್ಜಿನ ಸಮಸ್ಯೆಯು ಕಳೆದೊಂದು ದಶಕದಲ್ಲಿ ದುಪ್ಪಟ್ಟಿಗಿಂತಲೂ ಹೆಚ್ಚಾಗಿದ್ದು, ದಿಲ್ಲಿಯಂತಹ ಮಹಾನಗರಗಳಲ್ಲಿ ಶೇ. 29ರಷ್ಟು ಮಕ್ಕಳಲ್ಲೂ, ಇತರ ಕೆಲ ನಗರಗಳಲ್ಲಿ ಶೇ. 3-7ರಷ್ಟು ಮಕ್ಕಳಲ್ಲೂ ಅತಿತೂಕವಿರುವುದನ್ನು ಗುರುತಿಸಲಾಗಿದೆ. ಖಾಸಗಿ ಶಾಲಾ ವಿದ್ಯಾರ್ಥಿಗಳಲ್ಲಿ, ಸಾಮಾಜಿಕವಾಗಿಯೂ, ಆರ್ಥಿಕವಾಗಿಯೂ ಮೇಲ್ಸ್ತರದಲ್ಲಿರುವ ಮಕ್ಕಳಲ್ಲಿ, ನಗರವಾಸಿ ಮಕ್ಕಳಲ್ಲಿ, ಸೇವಾಕ್ಷೇತ್ರದಲ್ಲಿ ಯಾ ವ್ಯವಹಾರಗಳಲ್ಲಿ ತೊಡಗಿರುವವರ ಮಕ್ಕಳಲ್ಲಿ, ಆಂಗ್ಲ ಮಾಧ್ಯಮಗಳಲ್ಲಿ ಕಲಿಯುತ್ತಿರುವ ಮಕ್ಕಳಲ್ಲಿ ಹಾಗೂ ಹೊರಗಡೆ ಅರ್ಧಗಂಟೆಗೂ ಹೆಚ್ಚು ಆಡದಿರುವ ಮಕ್ಕಳಲ್ಲಿ ಅತಿತೂಕದ ಸಮಸ್ಯೆಯು 3-10 ಪಟ್ಟು ಹೆಚ್ಚಿರುವುದು ಕಂಡುಬಂದಿದೆ.

ಹೀಗೆ ಮಕ್ಕಳ ಅತಿತೂಕದ ವಿಚಾರದಲ್ಲಿ ನಮ್ಮ ಮಹಾನಗರಗಳು ಅಮೆರಿಕಕ್ಕೆ ಸರಿಸಾಟಿಯಾಗಿದ್ದರೆ, ಹಸಿವೆಯಿಂದ ನರಳುತ್ತಿರುವ ಮಕ್ಕಳ ವಿಚಾರದಲ್ಲಿ ನಾವು ಆಫ್ರಿಕಾದ ದೇಶಗಳನ್ನೂ ಹಿಂದಿಕ್ಕಿದ್ದೇವೆ, ಮೂರನೇ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ (2007)ಯನುಸಾರ, ಐದು ವರ್ಷಕ್ಕಿಂತ ಕೆಳಗಿನ ಶೇ. 48ರಷ್ಟು ಮಕ್ಕಳ ಬೆಳವಣಿಗೆಯು ಕುಂಠಿತಗೊಂಡಿದ್ದು, ಶೇ.20ರಷ್ಟು ಮಕ್ಕಳು ಅತಿ ತೀವ್ರವಾದ ನ್ಯೂನಪೋಷಣೆಯಿಂದ ಬಳಲುತ್ತಿದ್ದಾರೆ. ವಿಶ್ವದಲ್ಲಿರುವ ಸುಮಾರು 15 ಕೋಟಿ ನ್ಯೂನಪೋಷಿತ ಮಕ್ಕಳಲ್ಲಿ ಆರು ಕೋಟಿ ಮಕ್ಕಳು ನಮ್ಮಲ್ಲೇ ಇದ್ದು, ಬಿಹಾರ (54%), ಒರಿಸ್ಸಾ (54%) ಹಾಗೂ ಮಧ್ಯ ಪ್ರದೇಶ (55%) ರಾಜ್ಯಗಳು ಆಫ್ರಿಕಾದಲ್ಲಿ ಅತಿ ಹೆಚ್ಚು ನ್ಯೂನಪೋಷಿತ ಮಕ್ಕಳಿರುವ ಅಂಗೋಲ (51%) ವನ್ನೂ ಮೀರಿಸುತ್ತವೆ. ಶ್ರೀಮಂತ ರಾಜ್ಯವೆನಿಸಿರುವ ಗುಜರಾತಿನಲ್ಲಿ ಶೇ. 45ರಷ್ಟು ಮಕ್ಕಳು ನ್ಯೂನಪೋಷಣೆಯಿಂದ ಬಳಲುತ್ತಿದ್ದರೆ, ಕರ್ನಾಟಕ ಹಾಗೂ ಪಂಜಾಬುಗಳಲ್ಲಿ ಶೇ. 38ರಷ್ಟು ಮಕ್ಕಳು ಊಟಕ್ಕಿಲ್ಲದೆ ಸೊರಗುತ್ತಿದ್ದಾರೆ. ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಅತಿ ಹೆಚ್ಚು ಹಸಿವಿನ ಹದಿನೈದನೇ ರಾಷ್ಟ್ರವೆಂಬ ಕುಗ್ಗಳಿಕೆಯುಳ್ಳ ನಮ್ಮಲ್ಲಿ ಪ್ರತಿ ನಿತ್ಯ 3000 ಮಕ್ಕಳು ಹಸಿವಿನಿಂದಲೂ, ನ್ಯೂನ ಪೋಷಣೆಯಿಂದಲೂ ಸಾಯುತ್ತಿದ್ದಾರೆ.

ನಗರವಾಸಿ ಮಕ್ಕಳಲ್ಲಿ ಶೇ. 30ರಷ್ಟು ಅತಿ ತೂಕದವರು, ಒಟ್ಟು ಮಕ್ಕಳಲ್ಲಿ ಅರ್ಧದಷ್ಟು ನ್ಯೂನ ಪೋಷಣೆಯವರು ಎಂದಾದರೆ, ಆರೋಗ್ಯವಂತರಾಗಿರುವ ಮಕ್ಕಳೆಷ್ಟಿರಬಹುದು? ಊಹಿಸುವುದು ಕಷ್ಟವೇ. ಅತಿಪೋಷಣೆಯಿಂದ ತೂಕವು ಹೆಚ್ಚುವುದಷ್ಟೇ ಅಲ್ಲ, ಮಧುಮೇಹ, ರಕ್ತದ ಏರೊತ್ತಡ, ಮೂಳೆ ಸವೆತ, ರಕ್ತನಾಳಗಳ ಪೆಡಸಾಗುವಿಕೆ ಮುಂತಾದ ಸಮಸ್ಯೆಗಳ ಅಪಾಯವೂ ಹೆಚ್ಚುತ್ತದೆ. ಈ ಹಿಂದೆ 40-50ರ ವಯಸ್ಸಿಗೆ ಮೇಲ್ಪಟ್ಟವರಲ್ಲಿ ಕಂಡುಬರುತ್ತಿದ್ದ ಈ ವ್ಯಾಧಿಗಳು ಇಂದು 10-12ರ ವಯಸ್ಸಿಗೇ ಗೋಚರಿಸುತ್ತಿವೆ. ನ್ಯೂನ ಪೋಷಣೆಯಿಂದ ದೈಹಿಕ ಬೆಳವಣಿಗೆಯು ಕುಂಠಿತಗೊಳ್ಳುವುದಲ್ಲದೆ ರೋಗ ರಕ್ಷಣಾ ವ್ಯವಸ್ಥೆಯೂ ಸೊರಗಿ ವಾಂತಿ-ಬೇಧಿ, ಶ್ವಾಸಾಂಗಗಳ ಸೋಂಕು ಇತ್ಯಾದಿ ಮಾರಣಾಂತಿಕ ರೋಗಗಳಿಗೆ ಕಾರಣವಾಗುತ್ತದೆ. ಅತಿ ಹಾಗೂ ನ್ಯೂನ ಪೋಷಣೆಗಳಿಂದ ಮಕ್ಕಳ ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆಗಳ ಮೇಲೂ ಪರಿಣಾಮವುಂಟಾಗಿ ಏಕಾಗ್ರತೆಯ ಕೊರತೆ, ಗ್ರಹಿಕೆ ಹಾಗೂ ಕಲಿಕೆಯ ತೊಂದರೆಗಳು ಮತ್ತು ಆತಂಕ ಹಾಗೂ ಖಿನ್ನತೆಗಳಂತಹ ಸಮಸ್ಯೆಗಳು ಉಂಟಾಗಬಹುದು. ಹೀಗೆ, ನಮ್ಮ ಮುಂದಿನ ಜನಾಂಗವನ್ನು ದೈಹಿಕವಾಗಿಯೂ, ಬೌದ್ಧಿಕವಾಗಿಯೂ ಅಸಮರ್ಥರನ್ನಾಗಿ ಹಾಗೂ ರೋಗಿಗಳನ್ನಾಗಿ ನಾವಿಂದು ಬೆಳೆಸುತ್ತಿದ್ದೇವೆ. ಆದರೆ ಸ್ಥಿತಿವಂತರಿಗೆ ಇವೆಲ್ಲ ಸಮಸ್ಯೆಯೆಂದೇ ಅನಿಸುವುದಿಲ್ಲ, ನಿರ್ಗತಿಕರಿಗೆ ಇವಕ್ಕೆ ಪರಿಹಾರವೇ ತೋಚುವುದಿಲ್ಲ.

ಸ್ಥಿತಿವಂತ ಹೆತ್ತವರ ಜೊತೆ ಹೆಜ್ಜೆ ಹಾಕುತ್ತಿರುವ ಪುಟ್ಟ ಮಕ್ಕಳನ್ನೊಮ್ಮೆ ನೋಡಿ: ಒಂದು ಕೈಯಲ್ಲಿ ತಿಂಡಿಯ ಕಟ್ಟನ್ನೂ, ಇನ್ನೊಂದರಲ್ಲಿ ಯಾವುದೋ ಪೇಯದ ಪೊಟ್ಟಣವನ್ನೂ ಹಿಡಿದು ಸದಾ ತಿನ್ನುತ್ತಲೇ ಇರುತ್ತಾರೆ. ಮಕ್ಕಳ ಹಠಕ್ಕೆ ಶರಣಾಗತಿ, ಮಕ್ಕಳ ಕಿರಿಕಿರಿ’ ಯನ್ನು ತಡೆಯುವ ಯುಕ್ತಿ, ಮಕ್ಕಳಾದರೂ ತಿಂದು ಸುಖಿಸಲಿ ಎನ್ನುವ ಉದಾರತೆ, ಅವನ್ನೆಲ್ಲ ಖರೀದಿಸುವ ಸಾಮರ್ಥ್ಯವಿದೆಯೆಂಬ ಅಹಮಿಕೆ ? ಹೀಗೆ ಮಕ್ಕಳ ಅತಿ ಪೋಷಣೆಗೆ ಹೆತ್ತವರೇ ಕಾರಣರಾಗುತ್ತಾರೆ. ಒಂದೆರಡು ದಶಕಗಳ ಹಿಂದೆ ಸಿದ್ಧ ತಿನಿಸುಗಳು ದೊರೆಯದೆ ಎಲ್ಲರೂ ಮನೆಯಡುಗೆಯನ್ನೇ ಉಣ್ಣಬೇಕಾದ ಪ್ರಮೇಯವಿತ್ತು. ಇಂದು ಮಹಾಮಳಿಗೆಗಳ ಖರೀದಿಗಾಡಿಗಳಲ್ಲಿ ಬ್ರೆಡ್ಡು, ಬಿಸ್ಕತ್ತು, ನೂಡಲ್ ಗಳು, ಜ್ಯಾಂ, ಸಿಹಿತಿಂಡಿಗಳು, ಲಘು ಪೇಯಗಳ ಬಾಟಲುಗಳು, ಐಸ್ ಕ್ರೀಂ ಡಬ್ಬಗಳು, ಕರಿದ ತಿನಿಸುಗಳು ಇತ್ಯಾದಿಗಳೇ ತುಂಬಿ ತುಳುಕುತ್ತಿರುತ್ತವೆ. ವಿಶ್ವದಲ್ಲೇ ಅತ್ಯಧಿಕ, ವರ್ಷಕ್ಕೆ 2 ಕೋಟಿ ಟನ್, ಸಕ್ಕರೆಯನ್ನು ಸೇವಿಸುವ ನಮಗೆ ಸಕ್ಕರೆಯಿಲ್ಲದೆ ಜೀವನವೇ ಇಲ್ಲ ಎಂಬಂತಾಗಿದೆ!

ಸಕ್ಕರೆ ಹಾಗೂ ಶರಾಬುಗಳ ಮೂಲವೊಂದೇ: ಶರ್ಕರಗಳು. ನಮ್ಮ ಮಿದುಳಿನಲ್ಲಿ ಶರಾಬು ಹಾಗೂ ಸಕ್ಕರೆಗಳು ವರ್ತಿಸುವ ರೀತಿಯೂ ಒಂದೇ: ಮತ್ತೆ ಮತ್ತೆ ಬೇಕೆನ್ನುವ ಚಟವನ್ನುಂಟು ಮಾಡುವುದು. ಚಟಕ್ಕೆ ಬಿದ್ದ ಮಕ್ಕಳು ಇನ್ನಷ್ಟು ಸಕ್ಕರೆಗಾಗಿ ಹಠ ಮಾಡುತ್ತಾರೆ, ಹಠಕ್ಕೆ ಬಾಗಿ ತಿನ್ನಿಸಿದಾಗ ಚಟವು ಇನ್ನಷ್ಟು ಬಲಿಯುತ್ತದೆ ? ಹೀಗೆ ಚಟ-ಹಠದ ವಿಷ ವರ್ತುಲ ಬೆಳೆಯುತ್ತದೆ. ಮಾಧ್ಯಮಗಳ ತುಂಬೆಲ್ಲ ಕಾಣಸಿಗುವ ಸಿದ್ಧ ಆಹಾರಗಳ ಜಾಹೀರಾತುಗಳು ಈ ಚಟದ ಹಠವನ್ನು ಮತ್ತಷ್ಟು ಪ್ರಚೋದಿಸುತ್ತವೆ. ಇನ್ನೊಂದೆಡೆ, ಆಟದ ಬಯಲುಗಳನ್ನೆಲ್ಲ ಕಾಂಕ್ರೀಟಿನ ಬಹುಮಹಡಿ ಕಟ್ಟಡಗಳು ನುಂಗಿ ಹಾಕುತ್ತಿರುವುದರಿಂದ ನಮ್ಮ ಮಕ್ಕಳಿಗೆ ಆಡುವುದಕ್ಕೆ ಜಾಗವಿಲ್ಲದೆ ಟಿವಿ ವೀಕ್ಷಣೆಯಲ್ಲೋ, ವಿಡಿಯೋ ಆಟಗಳಲ್ಲೋ ಕಾಲ ಕಳೆಯುವಂತಾಗಿರುವುದು ಇದಕ್ಕೆ ಇನ್ನಷ್ಟು ಇಂಬು ನೀಡುತ್ತಿದೆ. ಇದೇ ಕಾರಣಕ್ಕೆ, ಪ್ರತಿಷ್ಠಿತ ಪತ್ರಿಕೆಯಾದ ನೇಚರ್ ನ ಫೆಬ್ರವರಿ 2, 2012ರ ಸಂಚಿಕೆಯಲ್ಲಿ ಲಸ್ಟಿಗ್ ಮತ್ತಿತರರು ಬರೆದಿರುವ ಸಕ್ಕರೆಯ ವಿಷಯುಕ್ತ ಸತ್ಯ’ ಎಂಬ ಟಿಪ್ಪಣಿಯಲ್ಲಿ, ಶರಾಬಿನ ಮಾರಾಟವನ್ನು ನಿಯಂತ್ರಿಸಿದಂತೆಯೇ ಸಕ್ಕರೆಯ ಮಾರಾಟವನ್ನೂ ನಿಯಂತ್ರಿಸುವುದು ಅತ್ಯಗತ್ಯ ಎನ್ನುವುದನ್ನು ಒತ್ತಿ ಹೇಳಲಾಗಿದೆ. ಸಕ್ಕರೆಯ ಮೇಲೆ ವಿಪರೀತವಾದ ತೆರಿಗೆಯನ್ನು ವಿಧಿಸುವುದು, ಮಕ್ಕಳು ಸಕ್ಕರೆಯುಕ್ತ ತಿನಿಸುಗಳನ್ನು ಖರೀದಿಸದಂತೆ ನಿರ್ಬಂಧಗಳನ್ನು ಹೇರುವುದು, ಶಾಲೆಗಳ ಬಳಿ ಅವುಗಳ ಮಾರಾಟವನ್ನು ನಿಷೇಧಿಸುವುದು ಇವೇ ಮುಂತಾದ ಕ್ರಮಗಳನ್ನು ಅದರಲ್ಲಿ ಶಿಫಾರಸು ಮಾಡಲಾಗಿದೆ.

ಆದರೆ ಹಿತಾಸಕ್ತಿಯ ತಾಕಲಾಟಗಳೇ ತುಂಬಿರುವ ಮಂತ್ರಿಮಂಡಲಗಳಿಂದ ಇಂತಹಾ ದಿಟ್ಟ ಕ್ರಮಗಳನ್ನು ನಿರೀಕ್ಷಿಸುವುದು ವ್ಯರ್ಥ ಕಾಲಹರಣವಾದೀತು. ಆದ್ದರಿಂದ ಮಕ್ಕಳಲ್ಲಿ ಬೆಳೆಸಿದ ಚಟವನ್ನು ಹೆತ್ತವರೇ ನಿವಾರಿಸುವುದೊಳ್ಳೆಯದು. ಸಕ್ಕರೆ, ಜೇನು, ಬೆಲ್ಲ, ಹಣ್ಣುಗಳಾದಿಯಾಗಿ ಎಲ್ಲಾ ಸಿಹಿತಿನಿಸುಗಳು ಹಾಗೂ ಪೇಯಗಳು, ಕತಕ ಸಿಹಿಕಾರಕಗಳು ಹಾಗೂ ಎಲ್ಲಾ ಸಿದ್ಧ ತಿನಿಸುಗಳನ್ನು ಮಕ್ಕಳಿಂದ ದೂರವಿಡಬೇಕು. ಮನೆಯಲ್ಲಿ ಪರಂಪರಾಗತವಾದ ಅಡುಗೆಯನ್ನೇ ಉಂಡು ಶಾಲೆಯ ಬುತ್ತಿಯಲ್ಲೂ ಅದನ್ನೇ ಕಟ್ಟಿಕೊಳ್ಳಬೇಕು. ತರಕಾರಿಗಳು, ಕಾಳುಗಳು, ಮೀನು, ಮೊಟ್ಟೆ, ಮಾಂಸ, ಬಾದಾಮಿ ಹಾಗೂ ಆಕ್ರೋಡಿನಂತಹ ಬೀಜಗಳು ಮಕ್ಕಳ ಸಮತೂಕದ ಆಹಾರದಲ್ಲಿರಬೇಕು. ಸಿಹಿತಿನಿಸುಗಳ ಬದಲಿಗೆ ಪುಸ್ತಕಗಳನ್ನು ಉಡುಗೊರೆಯಾಗಿ ಕೊಟ್ಟರೆ ಮಕ್ಕಳ ದೈಹಿಕ ಆರೋಗ್ಯವನ್ನು ರಕ್ಷಿಸಿ ಬೌದ್ಧಿಕ ಬೆಳವಣಿಗೆಯನ್ನು ಪೋಷಿಸಿದಂತಾಗುತ್ತದೆ.

ಅತಿಪೋಷಣೆಗೆ ಹೆತ್ತವರೇ ಕಾರಣರಾಗಿದ್ದರೆ, ನ್ಯೂನಪೋಷಣೆಗೆ ಸರಕಾರದ ಆರ್ಥಿಕ ಧೋರಣೆಗಳು, ಹೆಚ್ಚುತ್ತಿರುವ ನಿರುದ್ಯೋಗ ಹಾಗೂ ಬಡತನ, ಅನಕ್ಷರತೆ ಹಾಗೂ ಅಜ್ಞಾನ, ಕುಡಿಯುವ ನೀರು ಹಾಗೂ ನೈರ್ಮಲ್ಯಗಳ ಕೊರತೆಗಳೆಲ್ಲವೂ ಕಾರಣಗಳಾಗಿವೆ. ಲಿಂಗ ತಾರತಮ್ಯದಿಂದಾಗಿ ತಾಯಂದಿರಿಗೆ ಸೂಕ್ತವಾದ ಪೌಷ್ಟಿಕ ಆಹಾರವಾಗಲೀ, ಆರೋಗ್ಯ ರಕ್ಷಣೆಯಾಗಲೀ ದೊರೆಯದೆ ಗರ್ಭದೊಳಗೂ, ಜನನಾನಂತರವೂ ಮಕ್ಕಳ ಬೆಳವಣಿಗೆಯ ಮೇಲೆ ವ್ಯತಿರಿಕ್ತವಾದ ಪರಿಣಾಮಗಳಾಗುತ್ತವೆ. ಸರಕಾರದ ಅಸಡ್ಡೆ ಹಾಗೂ ವ್ಯಾಪಕವಾದ ಭ್ರಷ್ಟಾಚಾರಗಳಿಂದಾಗಿ ಸಾರ್ವಜನಿಕ ಆಹಾರ ಪೂರೈಕೆಯೂ, ಸಮಗ್ರ ಶಿಶುಕಲ್ಯಾಣ ಯೋಜನೆಗಳಂತಹ ಕಾರ್ಯಕ್ರಮಗಳೂ, ಮಧ್ಯಾಹ್ನದ ಬಿಸಿಯೂಟದಂತಹಾ ಯೋಜನೆಗಳೂ ಹಸಿದವರ ಪಾಲಿಗೆ ಮರೀಚಿಕೆಗಳಾಗಿವೆ. ಆಹಾರ ಧಾನ್ಯಗಳ ಬದಲಿಗೆ ನಗದು ಬೆಳೆಗಳನ್ನು ಬೆಳೆಯತೊಡಗಿ ಅತ್ತ ಬೆಲೆಯೂ, ಇತ್ತ ಅನ್ನವೂ ಇಲ್ಲದಂತಾಗಿದೆ. ಹೀಗೆ ಮಕ್ಕಳ ಬದುಕೇ ದುಸ್ತರವಾಗಿರವಾಗ ಕಲಿಕೆಯು ಅಸಾಧ್ಯವಾಗಿ ಅತುಲ್ಯ ಭಾರತವು ಹಸಿವಿನಲ್ಲೇ ಕಮರಿ ಹೋಗುತ್ತಿದೆ.

ಇವನ್ನೆಲ್ಲ ಸರಿಪಡಿಸಬೇಕಾದರೆ ಸರಕಾರಗಳಿಗೆ ಇಚ್ಛಾಶಕ್ತಿಯೂ, ಜನಸ್ನೇಹಿ ಧೋರಣೆಗಳೂ ಇರಬೇಕಾಗುತ್ತವೆ, ಅದಕ್ಕಾಗಿ ನಮ್ಮೆಲ್ಲರ ನಿರಂತರವಾದ ಒತ್ತಡಗಳೂ ಅಗತ್ಯವಾಗುತ್ತವೆ. ನಮ್ಮ ಊರು-ಕೇರಿಗಳಲ್ಲಿ ನರಳುತ್ತಿರುವ ಮಕ್ಕಳಿಗೆ ಪೌಷ್ಟಿಕ ಆಹಾರವೂ, ಇತರೆಲ್ಲಾ ಸೌಲಭ್ಯಗಳೂ ದೊರೆಯುವಂತೆ ಸ್ಥಳೀಯಾಡಳಿತಗಳಿಗೆ ಚುರುಕು ಮುಟ್ಟಿಸುವ ಕೆಲಸವಾಗಲೇಬೇಕು. ಉಳ್ಳವರು ದುಬಾರಿಯಾದ ಊಟೋಪಚಾರಗಳಿಗೆ ಹಣವನ್ನು ಪೋಲು ಮಾಡುವ ಮೊದಲು ಹೊಟ್ಟೆಗಿಲ್ಲದ ಮಕ್ಕಳತ್ತ ಗಮನ ಹರಿಸಬಹುದು; ಮಠ-ದೇವಾಲಯಗಳ ಹುಂಡಿಗಳಿಗೆ ಸುರಿಯುವ ಬದಲು ಹಸಿದ ಹೊಟ್ಟೆಗಳಿಗೆ ಊಟವಿಕ್ಕಬಹುದು.

ಉಳ್ಳವರ ಷೋಕಿಯಾಗಲೀ, ಇಲ್ಲದವರ ಕಷ್ಟಗಳಾಗಲೀ ನಮ್ಮ ಮುಂದಿನ ಜನಾಂಗದ ಆಹಾರವನ್ನೂ, ಆರೋಗ್ಯವನ್ನೂ ಕಾಡಗೊಡದೆ, ನಮ್ಮ ಮಕ್ಕಳ ಆಹಾರವೇ ನಮ್ಮೆಲ್ಲರ ಆದ್ಯತೆಯಾಗಬೇಕು. ಮಕ್ಕಳಿಗೆ ಸರಿಯಾದ ಊಟವನ್ನೂ ನೀಡದಿರುವಂತಹ ದೌರ್ಜನ್ಯವು ಈ ಕೂಡಲೇ ಕೊನೆಗೊಳ್ಳಬೇಕು.

ಮೊದಲ ಬರಹ: ವಾಣಿಜ್ಯೀಕರಣದ ಭರಾಟೆಯಲ್ಲಿ ವೈದ್ಯ ಶಿಕ್ಷಣ [ಜೂನ್ 29, 2012, ಶುಕ್ರವಾರ] [ನೋಡಿ][ನೋಡಿ

ವೈದ್ಯ ಅಂದರೆ ವಿಜ್ಞಾನಗಳ ಅರಿವಿದ್ದವನು, ಕಾಹಿಲೆಗಳನ್ನು ಗುಣ ಪಡಿಸಬಲ್ಲವನು ಎಂಬ ಅರ್ಥಗಳಿವೆ. ವೈದ್ಯ ಅಂದೊಡನೆ ಸುಶಿಕ್ಷಿತನಾದವನು, ಸಾಕಷ್ಟು ತಿಳಿವಳಿಕೆಯಿದ್ದವನು, ಮಾನವೀಯತೆಯುಳ್ಳವನು, ಸಜ್ಜನಿಕೆಯುಳ್ಳವನು, ಉಪಕಾರಿಯಾದವನು, ನಾಯಕತ್ವದ ಗುಣಗಳಿಂದ ಸಮಾಜಕ್ಕೆ ಮಾರ್ಗದರ್ಶಕನಾಗಬಲ್ಲವನು ಇತ್ಯಾದಿ ಅಭಿಪ್ರಾಯಗಳೂ ಮೂಡುತ್ತವೆ.

ವೈದ್ಯರೆಂದರೆ ಬೇಕಾದಷ್ಟು ಹಣವನ್ನು ಸಂಪಾದಿಸಿಕೊಂಡಿರುವ ಶ್ರೀಮಂತರು ಎನ್ನುವ ಭಾವನೆಯೂ ಹಲವರಲ್ಲಿದೆ. ಒಬ್ಬ ವೈದ್ಯನಲ್ಲಿ ಇವೆಲ್ಲವೂ ಇರಬೇಕಾದುದು ಅಪೇಕ್ಷಣೀಯವಾದರೂ ಎಲ್ಲಾ ವೈದ್ಯರಲ್ಲೂ ಇವೆಲ್ಲವೂ ಇರುವುದಕ್ಕೆ ಸಾಧ್ಯವೇ? ಎಲ್ಲಾ ವೈದ್ಯರಲ್ಲೂ ಈ ಎಲ್ಲ ಗುಣಗಳೂ ಜನ್ಮತಃ ಅಂತರ್ಗತವಾಗಿರುತ್ತವೆಯೇ ಅಥವಾ ವೈದ್ಯ ಶಿಕ್ಷಣದ ಜೊತೆಜೊತೆಗೇ ಇವೆಲ್ಲವನ್ನೂ ಕಲಿಸಿ ಎಲ್ಲಾ ವೈದ್ಯರನ್ನೂ ಒಂದೇ ಎರಕದಲ್ಲಿ ಸಿದ್ಧಪಡಿಸಲು ಸಾಧ್ಯವೇ? ಇವುಗಳಿಗೆ ಸುಲಭಸಿದ್ಧವಾದ ಉತ್ತರಗಳು ಇಲ್ಲದಿದ್ದರೂ, ಎಲ್ಲಾ ವೈದ್ಯರಿಗೂ, ರೋಗಿಗಳಿಗೂ, ವೈದ್ಯರಾಗಲು ಬಯಸುವ ವಿದ್ಯಾರ್ಥಿಗಳಿಗೂ, ತಮ್ಮ ಮಕ್ಕಳನ್ನು ವೈದ್ಯರನ್ನಾಗಿಸಬೇಕೆಂದು ಹಂಬಲಿಸುವ ಹೆತ್ತವರಿಗೂ ಇವು ಅತಿ ಪ್ರಸ್ತುತವಾಗುತ್ತವೆ.

ವೈದ್ಯಕೀಯ ವತ್ತಿನಿರತನಾಗಿ ಇಪ್ಪತ್ತು ವರ್ಷಗಳ ನನ್ನ ಅನುಭವದಿಂದ ಹೇಳಬೇಕೆಂದರೆ ಈ ವತ್ತಿಯಲ್ಲಿ, ಎಲ್ಲಕ್ಕಿಂತ ಹೆಚ್ಚಾಗಿ, ಅತಿ ತುರ್ತಾದ ಹಾಗೂ ಅತಿ ಕ್ಲಿಷ್ಟಕರವಾದ ನಿರ್ಣಯಗಳನ್ನು ಕೈಗೊಳ್ಳುವುದಕ್ಕೆ ಪ್ರತಿಕ್ಷಣವೂ ಸಿದ್ಧನಿರಬೇಕಾದ ಅನಿವಾರ್ಯತೆಯಿರುತ್ತದೆ. ಅಂತಹಾ ನಿರ್ಣಯಗಳನ್ನು ಕೈಗೊಳ್ಳಲು ಅಗತ್ಯವಾದ ಜ್ಞಾನವೂ, ಪರಿಣತೆಯೂ, ಮನೋದಾರ್ಢ್ಯವೂ ವೈದ್ಯನಾದವನಲ್ಲಿ ಇರಲೇಬೇಕಾಗುತ್ತದೆ. ವೈದ್ಯನಾದವನು ನಿಜಕಾಲದಲ್ಲಿ ಕೆಲಸ ಮಾಡುತ್ತಿರುತ್ತಾನೆ. ಅವನು ತನ್ನ ಕೆಲಸವನ್ನು ಮುಂದೂಡುವಂತಿಲ್ಲ, ಕಾಲ ಮಿಂಚಿತೆಂದು ಮರುಗುವಂತೆಯೂ ಇಲ್ಲ. ರೋಗಿಯನ್ನು ಕಂಡಾಕ್ಷಣದಿಂದ ತೊಡಗಿ ಅವನು ಸಂಪೂರ್ಣವಾಗಿ ಗುಣ ಹೊಂದುವವರೆಗೂ ವೈದ್ಯನ ಕೆಲಸವು ನಡೆಯುತ್ತಿರುತ್ತದೆ.

ರೋಗಿಗೆ ಆಗುತ್ತಿರುವ ಎಲ್ಲಾ ತೊಂದರೆಗಳನ್ನೂ, ರೋಗಲಕ್ಷಣಗಳನ್ನೂ ವಿಶ್ಲೇಷಿಸಿ ರೋಗದ ಕಾರಣವನ್ನು ಗುರುತಿಸುವುದು, ಅತ್ಯಗತ್ಯವೆನಿಸುವ ವಿಶೇಷ ಪರೀಕ್ಷೆಗಳ ಮೂಲಕ ಅದನ್ನು ದಢೀಕರಿಸುವುದು, ತಕ್ಕ ಚಿಕಿತ್ಸೆಯನ್ನು ನೀಡಿ ರೋಗಿಯ ಚೇತರಿಕೆಯನ್ನೂ, ಚಿಕಿತ್ಸೆಯ ಅಡ್ಡ ಪರಿಣಾಮಗಳನ್ನೂ ಗಮನಿಸುತ್ತಾ, ಯಾವುದೇ ಹೊಸ ಬೆಳವಣಿಗೆಗಳಾದರೆ ಅದಕ್ಕೆ ಸೂಕ್ತವಾದ ಪರಿಹಾರವನ್ನೂ ಒದಗಿಸುವುದು – ಹೀಗೆ ಹಲವು ನಿರ್ಣಯಗಳನ್ನು ಅವನು ಕೈಗೊಳ್ಳಬೇಕಾಗುತ್ತದೆ. ತುರ್ತು ಸ್ಥಿತಿಗಳಲ್ಲಿ ಅತಿ ತ್ವರಿತವಾಗಿ ಸಮಸ್ಯೆಯನ್ನು ಅರಿತುಕೊಂಡು, ಕೈಗೆಟಕುವ ಸೌಲಭ್ಯಗಳನ್ನೇ ಯಥೋಚಿತವಾಗಿ ಬಳಸಿಕೊಂಡು, ರೋಗಿಯ ಜೀವವನ್ನುಳಿಸಲು ಸರ್ವಪ್ರಯತ್ನಗಳನ್ನೂ ಮಾಡುವುದರ ಜೊತೆಗೆ ಆತಂಕದಲ್ಲಿರುವ ರೋಗಿಯ ಬಂಧು-ಮಿತ್ರರನ್ನೂ ನಿಭಾಯಿಸಬೇಕಾದರೆ ವೈದ್ಯನ ಪರಿಣತೆ, ವಾಕ್ಚಾತುರ್ಯ ಹಾಗೂ ಸಂಘಟನಾ ಕೌಶಲ್ಯಗಳೆಲ್ಲವೂ ಒಮ್ಮೆಗೇ ಒರೆಗೆ ಹಚ್ಚಲ್ಪಡುತ್ತವೆ. ಸುಸಜ್ಜಿತವಾದ ಆಸ್ಪತ್ರೆಗಳೇ ವಿರಳವಾಗಿರುವ ನಮ್ಮ ದೇಶದಲ್ಲಿ ವೈದ್ಯನ ಜವಾಬ್ದಾರಿಯು ಇನ್ನೂ ಹೆಚ್ಚಿದ್ದು, ವಿಶೇಷವಾದ ಪರೀಕ್ಷೆಗಳನ್ನೂ, ದುಬಾರಿಯಾದ ಚಿಕಿತ್ಸೆಯನ್ನೂ ಮಾಡುವುದಕ್ಕೆ ಶಕ್ತರಲ್ಲದವರಿಗೂ ಸೂಕ್ತವಾದ ಚಿಕಿತ್ಸೆಯನ್ನು ನೀಡಿ ಜೀವವುಳಿಸುವ ಜಾಣ್ಮೆಯನ್ನೂ, ವಿವೇಚನೆಯನ್ನೂ ನಮ್ಮ ವೈದ್ಯರು ಹೊಂದಿರಬೇಕಾಗುತ್ತದೆ.

ವಿಶ್ವಾಸಾರ್ಹತೆ, ಬೌದ್ಧಿಕ ಪ್ರಾಮಾಣಿಕತೆ, ಜೀವಭಯವಿಲ್ಲದೆ ಶುಶ್ರೂಷೆಗೆ ಅಣಿಯಾಗುವ ಸ್ಥೈರ್ಯ, ವ್ಯಾಪಾರೀಕರಣದ ನಡುವೆಯೂ ರೋಗಿಗಳ ಹಿತ ಕಾಯುವ ಛಾತಿಗಳೂ ವೈದ್ಯನಿಗಿರಬೇಕು. ಇವೆಲ್ಲದರ ಜೊತೆಗೆ, ರೋಗಿಯ ಜೀವವಷ್ಟೇ ಅಲ್ಲ, ಆತನ ಸಮಸ್ತ ಕುಟುಂಬದ ಅಸ್ತಿತ್ವವೇ ತನ್ನ ನಿರ್ಣಯಗಳನ್ನು ಅವಲಂಬಿಸಿದೆ ಎನ್ನುವ ವಾಸ್ತವಪ್ರಜ್ಞೆಯು ವೈದ್ಯನಲ್ಲಿ ಸದಾ ಇರಬೇಕಾಗುತ್ತದೆ. ಇಂತಹ ಸಾಮರ್ಥ್ಯಗಳಿಂದಲೇ ವೈದ್ಯ ವತ್ತಿಯ ಘನತೆ, ಗಾಂಭೀರ್ಯಗಳು ಸಾಕಾರಗೊಳ್ಳುತ್ತವೆ.

ಬಾಳುವೆ ಅಲ್ಪಕಾಲಿಕ, (ವೈದ್ಯಕೀಯ) ಕಲೆ ಬಹಳ ದೀರ್ಘವಾದುದು; ಒದಗಿರುವ ಅವಕಾಶವು ಅತಿ ಕ್ಷಣಿಕವಾದುದು; ಸ್ವಾನುಭವವು ಅಪಾಯಕರವಾದರೆ, ನಿರ್ಣಯವೋ ಅತಿ ಕಠಿಣವಾದುದು  – ಆಧುನಿಕ ವೈದ್ಯವಿಜ್ಞಾನದ ಪಿತಾಮಹನಾದ ಹಿಪಾಕ್ರಟಿಸ್ ಎರಡೂವರೆ ಸಾವಿರ ವರ್ಷಗಳ ಹಿಂದೆ ಹೇಳಿದ ಮೊದಲನೇ ಸೂಕ್ತಿ ಇದು. ಸಹಸ್ರಾರು ವರ್ಷಗಳಿಂದ ಬೆಳೆಯುತ್ತಿರುವ ವೈದ್ಯ ವಿಜ್ಞಾನದ ಆಳ-ವ್ಯಾಪ್ತಿಗಳನ್ನು ಓರ್ವನ ಅಲ್ಪ ಜೀವಿತಾವಧಿಯಲ್ಲಿ ಅರಗಿಸಿಕೊಳ್ಳುವುದು ಸುಲಭವೇನಲ್ಲ; ಆದರೂ ವೈದ್ಯನು ತನಗೆ ದೊರೆಯುವ ಕ್ಷಣಿಕವಾದ ಅವಕಾಶದಲ್ಲೇ ರೋಗಿಯ ಸಮಸ್ಯೆಗೆ ಸೂಕ್ತವಾದ ಪರಿಹಾರವನ್ನು ಒದಗಿಸಬೇಕಾಗುತ್ತದೆ; ಅದು ಸಾಕಷ್ಟು ಕಷ್ಟಕರವಾಗಿರುವುದರಿಂದ ಕೇವಲ ತನ್ನ ಅನುಭವವಷ್ಟನ್ನೇ ನೆಚ್ಚಿಕೊಳ್ಳುವುದು ಅಪಾಯಕರವಾಗಬಹುದು ಎಂದು ಹಿಪಾಕ್ರಟಿಸ್ ಎಚ್ಚರಿಸಿದ್ದಾನೆ. ಅದರ ಜೊತೆಗೆ, ರೋಗಿಯೂ, ಆತನ ಜೊತೆಗಿದ್ದವರೂ ತನ್ನೊಂದಿಗೆ ಸಹಕರಿಸುವಂತೆ ನೋಡಿಕೊಳ್ಳುವುದೂ ವೈದ್ಯನ ಜವಾಬ್ದಾರಿಯಾಗಿದೆ ಎಂದೂ, ಹಿಂದೇನಾಗಿತ್ತು, ಈಗೇನಾಗುತ್ತಿದೆ ಹಾಗೂ ಮುಂದೇನಾಗಬಹುದು ಎನ್ನುವುದನ್ನು ಹೇಳುವುದಕ್ಕೂ ವೈದ್ಯನಾದವನಿಗೆ ಸಾಧ್ಯವಾಗಬೇಕು ಮತ್ತು ರೋಗಿಗೆ ಏನಾದರೂ ಒಳಿತನ್ನು ಮಾಡುವುದು ಅಥವಾ ಕನಿಷ್ಠ ಪಕ್ಷ ಯಾವುದೇ ಹಾನಿಯನ್ನು ಮಾಡದಿರುವುದು ವೈದ್ಯನ ಉದ್ದೇಶವಾಗಿರಬೇಕು ಎಂದೂ ಆತ ಉಪದೇಶಿಸಿದ್ದಾನೆ. ಹಿಪಾಕ್ರಟಿಸನ ಈ ಮಾತುಗಳು ಅಂದಿನಂತೆ ಇಂದಿಗೂ ಅತಿ ಪ್ರಸ್ತುತವಾಗಿವೆ.

ವೈದ್ಯನಾದವನು ತನ್ನ ವತ್ತಿಯನ್ನು ನಿಭಾಯಿಸಲು ಸರ್ವಸಮರ್ಥನಾಗಿರಬೇಕೆನ್ನುವುದು ಸರ್ವಕಾಲಿಕ ಸತ್ಯವಾದರೂ ಅದನ್ನು ತರಗತಿಯೊಳಗಷ್ಟೇ ಕಲಿಯಲಾಗದು. ಅದನ್ನು ಪಡೆಯುವುದಕ್ಕೆ ಸಾಕಷ್ಟು ಬೆವರು ಹರಿಸಬೇಕಾಗುತ್ತದೆ, ಇನ್ನಷ್ಟು ಹರಿತಗೊಳಿಸುವುದಕ್ಕೆ ಮೇರು ಮಟ್ಟದ ಆಸಕ್ತಿಯೂ, ಬದ್ಧತೆಯೂ, ಬತ್ತಲೊಲ್ಲದ ಜ್ಞಾನದಾಹವೂ ಇರಬೇಕಾಗುತ್ತದೆ. ವೈದ್ಯನಾದವನು ಹಗಲಿರುಳೆನ್ನದೆ ದುಡಿಯುವುದರ ಜೊತೆಗೆ ವೈದ್ಯ ವಿಜ್ಞಾನದಲ್ಲಾಗುತ್ತಿರುವ ಹೊಸ ಬೆಳವಣಿಗೆಗಳನ್ನೆಲ್ಲ ಅರಿತು ಬಳಸಿಕೊಳ್ಳಲು ನಿರಂತರವಾಗಿ ಕಲಿಯುತ್ತಿರಬೇಕಾಗುತ್ತದೆ. ವಿಜ್ಞಾನ ಹಾಗೂ ತಂತ್ರಜ್ಞಾನಗಳ ಅದ್ಭುತ ಪ್ರಗತಿಯಿಂದಾಗಿ ನಮ್ಮ ಜ್ಞಾನವ್ಯಾಪ್ತಿಯು ಪ್ರತೀ ಎರಡು ವರ್ಷಗಳಲ್ಲಿ ದುಪ್ಪಟ್ಟಾಗಿ ವಿಸ್ತರಿಸುತ್ತಿದ್ದು, ರೋಗನಿದಾನದಲ್ಲೂ, ಚಿಕಿತ್ಸೆಯಲ್ಲೂ ಹೊಸ ಮಜಲುಗಳೇ ತೆರೆದುಕೊಳ್ಳುತ್ತಿವೆ. ಇವೆಲ್ಲವುಗಳ ಪ್ರಯೋಜನವನ್ನು ಜನಸಾಮಾನ್ಯರಿಗೆ ತಲುಪಿಸಬೇಕಾದರೆ ವೈದ್ಯರ ಸಾಮರ್ಥ್ಯವು ಕೂಡಾ ಈ ಹೊಸ ನೆಲೆಯಲ್ಲಿ ಗಟ್ಟಿಯಾಗಬೇಕಿದೆ.

ವಿಪರ್ಯಾಸವೆಂದರೆ, ವಾಣಿಜ್ಯೀಕರಣದ ಭರಾಟೆಯಲ್ಲಿ ವೈದ್ಯಕೀಯ ಶಿಕ್ಷಣದ ಗುಣಮಟ್ಟವು ವರ್ಷದಿಂದ ವರ್ಷಕ್ಕೆ ಸೊರಗುತ್ತಾ ಸಾಗಿದ್ದು, ವೈದ್ಯಕೀಯ ಕಲೆಗಾರಿಕೆಯ ಕತ್ತು ಹಿಸುಕಿ, ವೈದ್ಯರ ಸಾಮರ್ಥ್ಯವನ್ನು ಕ್ಷುದ್ರಗೊಳಿಸುವ ಕೆಲಸವು ಎಲ್ಲೆಡೆಯಲ್ಲೂ ನಡೆಯುತ್ತಿದೆ. ಇದನ್ನು ಸರಿಪಡಿಸಬೇಕಾಗಿರುವ ಸರಕಾರ, ವೈದ್ಯಕೀಯ ಪರಿಷತ್ತು, ವೈದ್ಯರ ಸಂಘಟನೆಗಳೆಲ್ಲವೂ ಕರ್ತವ್ಯವಿಮುಖವಾಗಿ ತೆಪ್ಪಗೆ ಕುಳಿತಿವೆ. ಈಗಾಗಲೇ ವೈದ್ಯರಾಗಿರುವವರು ತಮ್ಮ ಸಾಮರ್ಥ್ಯವನ್ನು ಗಟ್ಟಿಗೊಳಿಸುವುದಕ್ಕೂ, ವೈದ್ಯವಿದ್ಯಾರ್ಥಿಗಳು ಉನ್ನತ ಕೌಶಲ್ಯಗಳನ್ನು ಕಟ್ಟಿಕೊಳ್ಳುವುದಕ್ಕೂ ಪ್ರೇರಣೆಯೆಲ್ಲಿದೆ?

ರೋಗನಿದಾನ ಹಾಗೂ ಚಿಕಿತ್ಸೆಗಳು ಸಾವು-ಬದುಕಿನ ನಿರ್ಣಯಗಳಾಗಿರುವುದರಿಂದ ಸಮರ್ಥನಾದ ವೈದ್ಯನನ್ನು ಗುರುತಿಸುವುದು ರೋಗಿಯ ಪಾಲಿಗಂತೂ ಅತ್ಯಂತ ಮುಖ್ಯವಾಗಿರುತ್ತದೆ. ಎಷ್ಟೋ ಸಲ ರೋಗಿಗಳಿಗೆ ತಾವು ಚಿಕಿತ್ಸೆಗಾಗಿ ಕಂಡಿದ್ದ ವ್ಯಕ್ತಿಯು ನಿಜಕ್ಕೂ ವೈದ್ಯನೇ ಎನ್ನುವುದು ಕೂಡಾ ತಿಳಿದಿರುವುದಿಲ್ಲ. ಡಾಕ್ಟರ್ ಎಂಬ ಪೂರ್ವಪದ ಸಿಕ್ಕಿಸಿಕೊಂಡವರೆಲ್ಲರೂ ವೈದ್ಯರೇ ಆಗಿರಬೇಕಿಲ್ಲ. ಆಧುನಿಕ ವೈದ್ಯವಿಜ್ಞಾನದಲ್ಲಿ ತರಬೇತಾದ ವೈದ್ಯರಿಗಿಂತಲೂ ಬದಲಿ’ ತರಬೇತಿಯನ್ನು ಪಡೆದಿರುವ ವೈದ್ಯರು ಹಾಗೂ ಯಾವುದೇ ತರಬೇತಿಯನ್ನು ಪಡೆಯದ ನಕಲಿ ವೈದ್ಯರುಗಳ ಸಂಖ್ಯೆಯು ಬಲು ದೊಡ್ಡದಿದೆ. ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ, 2007ರ ಅನುಸಾರ ರಾಜ್ಯದ ಎಲ್ಲ ಖಾಸಗಿ ವೈದ್ಯರು ತಮ್ಮ ವತ್ತಿಯನ್ನು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕಾಗಿದ್ದು, ಹೆಚ್ಚಿನ ಕಡೆಗಳಲ್ಲಿ ಈ ಪ್ರಕ್ರಿಯೆಯು ಈಗಾಗಲೇ ಪೂರ್ಣಗೊಂಡಿದೆ. ಅದರಂತೆ, ಪ್ರತಿಯೋರ್ವ ವೈದ್ಯನೂ ತನ್ನ ಪದವಿ ಪತ್ರವನ್ನೂ, ವೈದ್ಯಕೀಯ ಪರಿಷತ್ತಿನಲ್ಲಿ ಹಾಗೂ ನೋಂದಣಿ ಪ್ರಾಧಿಕಾರಗಳಲ್ಲಿ ನೋಂದಾಯಿಸಿಕೊಂಡ ದಾಖಲೆಗಳನ್ನೂ ತನ್ನ ಚಿಕಿತ್ಸಾಲಯದಲ್ಲಿ ಇಟ್ಟಿರಬೇಕಾಗುತ್ತದೆ. ಈ ದಾಖಲೆಗಳಿಂದ ವೈದ್ಯನ ವಿದ್ಯಾರ್ಹತೆಯೇನು, ಅವನು ಆಧುನಿಕ ವೈದ್ಯವಿಜ್ಞಾನದಲ್ಲಿ ಅಥವಾ ಬದಲಿ ವೈದ್ಯಕೀಯ ವ್ಯವಸ್ಥೆಗಳಲ್ಲಿ ತರಬೇತಾದವನೇ ಯಾ ಯಾವುದೂ ಇಲ್ಲದ ನಕಲಿ ವೈದ್ಯನೇ ಎನ್ನುವುದು ಸ್ಪಷ್ಟವಾಗುತ್ತದೆ. ಇವು ವೈದ್ಯನ ಒಟ್ಟು ಸಾಮರ್ಥ್ಯದ ಪ್ರಮಾಣವಲ್ಲದಿದ್ದರೂ, ಕನಿಷ್ಠ ಆತನ ವಿದ್ಯಾರ್ಹತೆಯನ್ನಾದರೂ ಅರಿಯಲು ನೆರವಾಗುತ್ತವೆ. ಓರ್ವ ವೈದ್ಯನು ತಾನು ತರಬೇತಿಯನ್ನು ಪಡೆದ ವೈದ್ಯಶಾಸ್ತ್ರದ ಚಿಕಿತ್ಸೆಯನ್ನಷ್ಟೇ ನೀಡಲು ಶಕ್ತನಾಗಿರುವುದರಿಂದ ಒಂದರಲ್ಲಿ ತರಬೇತಾದವರಿಂದ ಇನ್ನೊಂದು ವಿಧದ ಚಿಕಿತ್ಸೆಯನ್ನು ಯಾವ ಕಾರಣಕ್ಕೂ ಪಡೆಯಬಾರದು.

ರೋಗವುಳ್ಳವರು ಯಾವುದೇ ಕಾರಣಕ್ಕೂ ನಕಲಿ ವೈದ್ಯರಿಂದ ಚಿಕಿತ್ಸೆಯನ್ನು ಪಡೆಯಲೇಬಾರದು. ಹಿಪಾಕ್ರಟಿಸನ ಕಾಲಕ್ಕಿಂತಲೂ ಸಾವಿರ ವರ್ಷಗಳಷ್ಟು ಹಿಂದೆ ರಚಿಸಲಾದ ಆಯುರ್ವೇದದ ಮೇರುಗ್ರಂಥವಾದ ಚರಕ ಸಂಹಿತೆಯಲ್ಲಿ ವೈದ್ಯನಿಗಿರಬೇಕಾದ ಪರಿಣತೆಯ ಬಗ್ಗೆಯೂ, ನಕಲಿ ವೈದ್ಯರನ್ನು ದೂರವಿಡುವ ಬಗ್ಗೆಯೂ ಸವಿವರವಾಗಿ ಹೇಳಲಾಗಿದೆ: ಆರೋಗ್ಯವನ್ನೂ, ದೀರ್ಘಾಯುಷ್ಯವನ್ನೂ ಬಯಸುವ ವಿವೇಕಿ ರೋಗಿಯು ಔಷಧಗಳ ಸರಿಯಾದ ಬಳಕೆಯನ್ನು ಅರಿಯದವನಿಂದ ಚಿಕಿತ್ಸೆಯನ್ನು ಪಡೆದರೆ ಬದುಕುಳಿಯಲು ಸಾಧ್ಯವಿಲ್ಲ, ಅಂತಹವರೊಂದಿಗೆ ಮಾತನಾಡುವುದೂ ನರಕಕ್ಕೆ ದಾರಿಯಾಗಬಹುದು [ಚರಕ ಸಂಹಿತೆ, ಸೂತ್ರಸ್ಥಾನ 1:126-132]. ಒಳ್ಳೆಯ ವೈದ್ಯರು ಚೆನ್ನಾಗಿ ಓದಿದವರೂ, ಕಾರ್ಯಕುಶಲರೂ, ಸಂಯಮವುಳ್ಳವರೂ, ಸಮಯ ಪ್ರಜ್ಞೆಯುಳ್ಳವರೂ ಆಗಿದ್ದು, ಕಾಹಿಲೆಗಳನ್ನು ಮೂಲೋತ್ಪಾಟನ ಮಾಡಿ ಜೀವವುಳಿಸುತ್ತಾರೆ. ಆದರೆ ನಕಲಿ ವೈದ್ಯರು ಕಾಹಿಲೆಗಳನ್ನು ನಿರ್ಮೂಲನೆ ಮಾಡುವ ಬದಲಿಗೆ ಜೀವವನ್ನೇ ತೆಗೆದುಬಿಡುತ್ತಾರೆ.

ಆಳುವವರು ಸರಿಯಾಗಿ ನಿಗಾ ವಹಿಸಲು ವಿಫಲರಾಗಿರುವುದರಿಂದಲೇ ವೈದ್ಯರ ವೇಷದಲ್ಲಿರುವ ಈ ದ್ರೋಹಿಗಳು ಜಗತ್ತಿನಾದ್ಯಂತ ಸುತ್ತಾಡುವುದಕ್ಕೆ ಸಾಧ್ಯವಾಗಿದೆ. ಇವರು ಒಂದೆಡೆಯಿಂದ ಇನ್ನೊಂದೆಡೆಗೆ ಸುತ್ತುತ್ತಲೇ ಇರುತ್ತಾರೆ, ಯಾರಾದರೂ ರೋಗವುಳ್ಳವನು ಸಿಕ್ಕೊಡನೆ ತಮ್ಮ ಸಾಮರ್ಥ್ಯದ ಬಗ್ಗೆ ತಾವೇ ಕೊಚ್ಚಿಕೊಳ್ಳಲು ಆರಂಭಿಸುತ್ತಾರೆ, ನುರಿತ ವೈದ್ಯನು ಚಿಕಿತ್ಸೆಯನ್ನು ನೀಡುತ್ತಿದ್ದರೆ ಅದರಲ್ಲಿ ತಪ್ಪುಗಳಿವೆಯೆಂದು ಪದೇ ಪದೇ ಟೀಕಿಸುತ್ತಾರೆ, ತಮ್ಮ ಸಿಹಿಯಾದ ಮಾತುಗಳಿಂದಲೂ, ಹೊಗಳಿಕೆಗಳಿಂದಲೂ ರೋಗಿಯ ಬಂಧುಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳುತ್ತಾರೆ. ತಮ್ಮ ಚಿಕಿತ್ಸೆಗೆ ಹೆಚ್ಚೇನೂ ಹಣ ನೀಡಬೇಕಾಗಿಲ್ಲವೆಂದು ಪ್ರಚಾರವನ್ನೂ ಮಾಡುತ್ತಾರೆ. ತಮ್ಮ ಚಿಕಿತ್ಸೆಯು ಫಲ ನೀಡದಿದ್ದಾಗ ಅದಕ್ಕೆ ರೋಗಿಯನ್ನೇ ದೂಷಿಸಿ ತಾವು ಜಾರಿಕೊಳ್ಳುತ್ತಾರೆ, ರೋಗಿಯೇನಾದರೂ ಸಾವಿಗೀಡಾದರೆ ತೆಪ್ಪಗೆ ಜಾಗ ಖಾಲಿ ಮಾಡಿ ಇನ್ನೊಂದೂರಿಗೆ ಹೋಗಿ ಬಿಡುತ್ತಾರೆ [ಸೂತ್ರಸ್ಥಾನ: 29:6-9′]. ಚರಕ ಸಂಹಿತೆಯ ಈ ವಿವರಣೆಗಳು ಇಂದಿಗೂ ಎಷ್ಟೊಂದು ಪ್ರಸ್ತುತವೆಂದರೆ, ಈ ಮೂರು ಸಾವಿರ ವರ್ಷಗಳಲ್ಲಿ ನಾವು ಬೆಳೆದೇ ಇಲ್ಲವೇನೋ ಅನಿಸುತ್ತದೆ!