ದಿ ಸ್ಟೇಟ್‌ನಲ್ಲಿ ಇಲಾಜು – 2

ಇಲಾಜು 23 – ಆರೋಗ್ಯ ಸೇವೆ ಕೊರತೆಯಿಂದ 2016ರಲ್ಲಿ 25 ಲಕ್ಷ ಭಾರತೀಯರ ಪ್ರಾಣಹರಣ

(ಸೆಪ್ಟೆಂಬರ್ 18, 2018)

ವಿಶ್ವದಲ್ಲಿ ಎರಡನೇ ಅತಿ ದೊಡ್ಡದಾದ ಭಾರತದ ಜನತೆಯ ಆರೋಗ್ಯದ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಸಕ್ತಿಯೂ, ಆತಂಕವೂ ಹೆಚ್ಚುತ್ತಿದೆ. ಅತ್ಯಂತ ಹಳೆಯದಾದ (1823ರಿಂದ) ಮತ್ತು ಪ್ರತಿಷ್ಠೆಯ ವೈದ್ಯಕೀಯ ವಿದ್ವತ್ ಪತ್ರಿಕೆಯಾದ ದಿ ಲಾನ್ಸೆಟ್‌ ಇದೇ ತಿಂಗಳಲ್ಲಿ ಭಾರತೀಯರ ಆರೋಗ್ಯದ ಬಗ್ಗೆ ಐದು ಅಧ್ಯಯನಗಳ ವರದಿಗಳನ್ನು ಒಮ್ಮೆಗೇ ಪ್ರಕಟಿಸಿದೆ. ಮುಂಬರುವ ಲೋಕಸಭಾ ಚುನಾವಣೆಗಳಲ್ಲಿ ಆರೋಗ್ಯ ಸೇವೆಗಳ ವಿಷಯವು ನಿರ್ಣಾಯಕವೆನಿಸುವ ಸಾಧ್ಯತೆಗಳಿವೆಯೆಂದು ಲಾನ್ಸೆಟ್‌ನ ಪ್ರಧಾನ ಸಂಪಾದಕರಾದ ರಿಚರ್ಡ್ ಹೋರ್ಟನ್ ಬರೆದಿದ್ದಾರೆ.

ವಾಷಿಂಗ್ಟನ್ ವಿಶ್ವವಿದ್ಯಾನಿಲಯದ ನೇತೃತ್ವದಲ್ಲಿ ನಡೆಯುತ್ತಿರುವ 1990-2016ರ ನಡುವಿನ ಜಾಗತಿಕ ರೋಗ ಹೊರೆಯ ಅಧ್ಯಯನದ ಆಧಾರದಲ್ಲಿ ಈ ವರದಿಗಳನ್ನು ತಯಾರಿಸಲಾಗಿದೆ; ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು, ಕೇಂದ್ರ ಆರೋಗ್ಯ ಇಲಾಖೆ, ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾ ಮುಂತಾದ ಸಂಸ್ಥೆಗಳು ಈ ಅಧ್ಯಯನಗಳಲ್ಲಿ ಭಾಗಿಯಾಗಿವೆ. ಈ ಅವಧಿಯಲ್ಲಿ ನಮ್ಮ ತಲಾವಾರು ರೋಗ ಹೊರೆಯು ಇಳಿದಿದ್ದರೂ, ನೆರೆಹೊರೆಯವರಿಗೆ ಹೋಲಿಸಿದರೆ ಅತೀವ ಹೆಮ್ಮೆ ಪಟ್ಟುಕೊಳ್ಳುವ ಸಾಧನೆಯೇನೂ ನಮ್ಮದಲ್ಲ.

ಜಾಗತಿಕ ರೋಗ ಹೊರೆಯ ಅಧ್ಯಯನ – 2016ರ ಆಧಾರದಲ್ಲಿ 195 ದೇಶಗಳಲ್ಲಿ ಆರೋಗ್ಯ ಸೇವೆಗಳ ಲಭ್ಯತೆ ಹಾಗೂ ಗುಣಮಟ್ಟಗಳ ವಿಶ್ಲೇಷಣೆಯು ಈ ಮೊದಲೇ, ಮೇ 23, 2018ರ, ಲಾನ್ಸೆಟ್‌ನಲ್ಲಿ ಪ್ರಕಟವಾಗಿತ್ತು. ಭಾರತವು ಆರೋಗ್ಯ ಸೇವೆಗಳ ಮಟ್ಟದಲ್ಲಿ 195 ದೇಶಗಳ ಪೈಕಿ 145ನೇ ಸ್ಥಾನದಲ್ಲಿದ್ದರೆ, ನೆರೆಯ ಚೀನಾ, ಶ್ರೀಲಂಕಾ, ಮಾಲ್ದೀವ್ಸ್‌, ಬಾಂಗ್ಲಾದೇಶ ಹಾಗೂ ಬೂತಾನ್‌ಗಳು ಕ್ರಮವಾಗಿ 48, 71, 72, 133 ಹಾಗೂ 134ನೇ ಸ್ಥಾನಗಳಲ್ಲಿವೆ, ಇತರ ಬ್ರಿಕ್ಸ್ ದೇಶಗಳೂ, ಸುಡಾನ್, ನೈಜೀರಿಯಾ, ಯೆಮೆನ್‌ಗಳಂತಹ ಕೆಲವು ದೇಶಗಳೂ ಭಾರತಕ್ಕಿಂತ ಉತ್ತಮವಾಗಿವೆ. 1990ಕ್ಕೆ ಹೋಲಿಸಿದರೆ, 2016ರಲ್ಲಿ ಭಾರತದಲ್ಲಿ ಆರೋಗ್ಯ ಸೇವೆಗಳ ಲಭ್ಯತೆಯ ಸೂಚ್ಯಂಕವು 24.7ರಿಂದ 41.2ಕ್ಕೆ ಉತ್ತಮಗೊಂಡಿದ್ದರೂ, ದೇಶದೊಳಗಿನ ಪ್ರಾದೇಶಿಕ ಅಸಮಾನತೆಯು ಹೆಚ್ಚಾಗಿದೆ; 2016ರಲ್ಲಿ ಗೋವಾ ಮತ್ತು ಕೇರಳಗಳಲ್ಲಿ ಸೂಚ್ಯಂಕವು 64.8 ಹಾಗೂ 63.9ರಷ್ಟಿದ್ದರೆ, ಅಸ್ಸಾಂ ಮತ್ತು ಉತ್ತರ ಪ್ರದೇಶಗಳಲ್ಲಿ 34 ಹಾಗೂ 34.9ರಷ್ಟು ಕಡಿಮೆಯಿದೆ, ಕರ್ನಾಟಕ ಮತ್ತು ಗುಜರಾತಗಳು 46.6 ಹಾಗೂ 45 ಅಂಕಗಳೊಂದಿಗೆ 14 ಮತ್ತು 17ನೇ ಸ್ಥಾನಗಳಲ್ಲಿವೆ.

ಲಾನ್ಸೆಟ್‌ನಲ್ಲಿ ಇದೇ ಸೆಪ್ಟೆಂಬರ್ 5ರಂದು ಪ್ರಕಟವಾದ ಇನ್ನೊಂದು ವರದಿಯನುಸಾರ, ಬಡ ಹಾಗೂ ಮಧ್ಯಮ ಆದಾಯವುಳ್ಳ 137 ದೇಶಗಳಲ್ಲಿ ಆರೋಗ್ಯ ಸೇವೆಗಳ ಕೊರತೆಯಿಂದ 2016ರಲ್ಲಿ ಒಂದೂವರೆ ಕೋಟಿ ಹೆಚ್ಚುವರಿ ಸಾವುಗಳಾಗಿವೆ; ಅವುಗಳಲ್ಲಿ 50 ಲಕ್ಷ ಸಾವುಗಳು ಕಳಪೆ ಚಿಕಿತ್ಸೆಯ ಕಾರಣದಿಂದಲೂ, 36 ಲಕ್ಷ ಸಾವುಗಳು ಆರೋಗ್ಯ ಸೇವೆಗಳ ಅಲಭ್ಯತೆಯಿಂದಲೂ ಸಂಭವಿಸಿವೆ; ನಮ್ಮಲ್ಲಿ 2016ರಲ್ಲಿ ಇವೇ ಕಾರಣಗಳಿಂದಾದ ಸಾವುಗಳ ಸಂಖ್ಯೆಯು ಕ್ರಮವಾಗಿ 16 ಲಕ್ಷ ಹಾಗೂ 84 ಸಾವಿರದಷ್ಟಿವೆ. ಅಂದರೆ, ಆಸ್ಪತ್ರೆಗಳು ದೊರೆಯದಿದ್ದುದಕ್ಕಿಂತ ಎರಡು ಪಟ್ಟು ಹೆಚ್ಚು ಸಾವುಗಳು ಕಳಪೆ ಚಿಕಿತ್ಸೆಯ ಕಾರಣದಿಂದಾದವು. ಅದೇ ವರದಿಯನುಸಾರ, ಸುಸಜ್ಜಿತವಾದ, ಸುಲಭವಾಗಿ ಎಟಕುವ ಆರೋಗ್ಯ ಸೇವೆಗಳಿದ್ದರೆ ಈ 24 ಲಕ್ಷ ಸಾವುಗಳನ್ನು ತಡೆಯಬಹುದಿತ್ತು, ಹಾಗೂ ಸಾಮುದಾಯಿಕ ರೋಗ ನಿಯಂತ್ರಣಾ ಕಾರ್ಯಕ್ರಮಗಳಿಂದ 15 ಲಕ್ಷ ಸಾವುಗಳನ್ನು ತಡೆಯಬಹುದಿತ್ತು.

ಲಾನ್ಸೆಟ್‌ನಲ್ಲಿ ಪ್ರಕಟವಾದ ಇನ್ನುಳಿದ ವರದಿಗಳಲ್ಲಿ ಭಾರತೀಯರನ್ನು ಕಾಡುತ್ತಿರುವ ಕಾಯಿಲೆಗಳ ವಿವರಗಳಿವೆ. ಇಪ್ಪತ್ತನೇ ಶತಮಾನದಲ್ಲಿ ಸೋಂಕುಗಳು, ತಾಯಂದಿರು ಮತ್ತು ನವಜಾತ ಶಿಶುಗಳ ಸಮಸ್ಯೆಗಳು ಹಾಗೂ ಪೋಷಣೆಯ ಸಮಸ್ಯೆಗಳೇ ಹೆಚ್ಚಿನ ಪ್ರಮಾಣದಲ್ಲಿದ್ದರೆ, 2003ರ ಬಳಿಕ ಸೋಂಕು ರೋಗಗಳಲ್ಲದ ಬೊಜ್ಜು, ಹೃದ್ರೋಗ, ಪಾರ್ಶ್ವವಾಯು, ಕ್ಯಾನ್ಸರ್ ಇತ್ಯಾದಿಗಳು ಹೆಚ್ಚಾಗತೊಡಗಿವೆ. ಸೋಂಕು, ತಾಯಿ-ಶಿಶುಗಳ ಸಮಸ್ಯೆಗಳು ಹಾಗೂ ಪೋಷಣೆಯ ಸಮಸ್ಯೆಗಳು 1990ರಿಂದ 2016ರ ನಡುವೆ ದೇಶದೆಲ್ಲೆಡೆ ಇಳಿಮುಖವಾಗಿದ್ದರೂ, ಕೇರಳ, ಗೋವಾ, ತಮಿಳುನಾಡುಗಳಂತಹ ಸ್ಥಿತಿವಂತ ರಾಜ್ಯಗಳಿಗೆ ಹೋಲಿಸಿದರೆ, ಬಿಹಾರ್, ಜಾರ್ಖಂಡ್, ಉತ್ತರ ಪ್ರದೇಶಗಳಂತಹ ಹಿಂದುಳಿದ ರಾಜ್ಯಗಳಲ್ಲಿ ಇಳಿಕೆಯ ಗತಿಯು ನಿಧಾನವಾಗಿದೆ. ಇದೇ ಕಾಲಾವಧಿಯಲ್ಲಿ ಸೋಂಕಲ್ಲದ ಆಧುನಿಕ ರೋಗಗಳು ದೇಶದೆಲ್ಲೆಡೆ, ಎಲ್ಲ ವಯಸ್ಸಿನವರಲ್ಲಿ, ಹೆಚ್ಚುತ್ತಲೇ ಇದ್ದು, ಸ್ಥಿತಿವಂತ ರಾಜ್ಯಗಳಲ್ಲಿ ಇನ್ನೂ ಹೆಚ್ಚಿದೆ. ವಾಯು ಮಾಲಿನ್ಯ ಮತ್ತು ಆಕಸ್ಮಿಕ ಗಾಯಗಳ ಸಮಸ್ಯೆಗಳು ಕೂಡ ಎಲ್ಲೆಡೆ ಹೆಚ್ಚುತ್ತಿವೆ. 1990ರಿಂದ 2016ರ ವರೆಗಿನ 26 ವರ್ಷಗಳಲ್ಲಿ ಹೃದಯದ ರಕ್ತನಾಳಗಳ ಕಾಯಿಲೆ ಮತ್ತು ಅದರಿಂದಾಗುವ ಸಾವುಗಳು ದುಪ್ಪಟ್ಟಾಗಿವೆ; ಮಧುಮೇಹವುಳ್ಳವರ ಸಂಖ್ಯೆಯು ಎರಡೂವರೆ ಕೋಟಿಯಿಂದ ಆರೂವರೆ ಕೋಟಿಗಳಷ್ಟಾಗಿದೆ; ಕ್ಯಾನ್ಸರ್‌ಗಳು ಶೇ. 28ರಷ್ಟು ಹೆಚ್ಚಾಗಿ, ಹೊಸ ಕ್ಯಾನ್ಸರ್ ಪ್ರಕರಣಗಳು 11 ಲಕ್ಷದಷ್ಟಾಗಿವೆ; ಶ್ವಾಸಾಂಗದ ಕಾಯಿಲೆಯುಳ್ಳವರ ಸಂಖ್ಯೆಯು ದುಪ್ಪಟ್ಟಾಗಿ ಐದೂವರೆ ಕೋಟಿಗಳಾಗಿದೆ. ಹೀಗೆ, 2016ನೇ ವರ್ಷದಲ್ಲಿ ಹೃದ್ರೋಗ, ಶ್ವಾಸಾಂಗದ ಸಮಸ್ಯೆಗಳು, ಭೇದಿ, ಮತ್ತು ಪಾರ್ಶ್ವವಾಯುಗಳು ಭಾರತೀಯರನ್ನು ಕಾಡಿದ ಅತಿ ಮುಖ್ಯ ಕಾಯಿಲೆಗಳೆನಿಸಿವೆ. ನಮ್ಮಲ್ಲಿ ಮಾನಸಿಕ ಸಮಸ್ಯೆಗಳು ಕೂಡ ಹೆಚ್ಚುತ್ತಿವೆ; ವಿಶ್ವದ ಶೇ. 18ರಷ್ಟು ಜನಸಂಖ್ಯೆಯನ್ನು ನಾವು ಹೊಂದಿದ್ದರೂ, 2016ರಲ್ಲಾದ ಮಹಿಳೆಯರ ಆತ್ಮಹತ್ಯೆಗಳಲ್ಲಿ ಶೇ. 37ರಷ್ಟು ಹಾಗೂ ಪುರುಷರ ಆತ್ಮಹತ್ಯೆಗಳಲ್ಲಿ ಶೇ. 24ರಷ್ಟು ನಮ್ಮ ದೇಶದಲ್ಲಾದವು, ಮತ್ತು ವಿಶ್ವದ ಸರಾಸರಿಗೆ ಹೋಲಿಸಿದರೆ ಭಾರತದಲ್ಲಿ ಮಹಿಳೆಯರ ಆತ್ಮಹತ್ಯೆಯ ಪ್ರಮಾಣವು 2 ಪಟ್ಟು, ಪುರುಷರದು ಒಂದೂವರೆ ಪಟ್ಟು ಹೆಚ್ಚಿತ್ತೆನ್ನುವುದು ಆತಂಕಕಾರಿಯಾಗಿದೆ.

ಒಟ್ಟಿನಲ್ಲಿ, ಕಳೆದ 26 ವರ್ಷಗಳಲ್ಲಿ ಭಾರತದಲ್ಲಿ ಕಾಯಿಲೆಗಳ ತಲಾವಾರು ಹೊರೆಯು ಮೂರನೇ ಒಂದರಷ್ಟು ಇಳಿದಿದ್ದರೂ, ಹಿಂದುಳಿದ ರಾಜ್ಯಗಳಲ್ಲಿ ಸೋಂಕು ರೋಗಗಳು, ಕುಪೋಷಣೆ ಹಾಗೂ ತಾಯಿ-ಶಿಶುಗಳ ಕಾಯಿಲೆಗಳು ದೊಡ್ಡ ಸಮಸ್ಯೆಯಾಗಿವೇ ಉಳಿದಿವೆ, ಮತ್ತು ಆಧುನಿಕ ಕಾಯಿಲೆಗಳು ಹಾಗೂ ಮಾನಸಿಕ ಸಮಸ್ಯೆಗಳು ದೇಶದೆಲ್ಲೆಡೆ ಹೆಚ್ಚುತ್ತಲೇ ಇವೆ. ಭಾರತದಲ್ಲಷ್ಟೇ ಅಲ್ಲ, ಹೆಚ್ಚಿನ (137ರಲ್ಲಿ 115) ದೇಶಗಳಲ್ಲಿ ಆಸ್ಪತ್ರೆಗಳ ಅಲಭ್ಯತೆಗಿಂತ ಲಭ್ಯ ಚಿಕಿತ್ಸೆಯು ಕಳಪೆಯಾಗಿದ್ದುದೇ ಹೆಚ್ಚಿನ ಸಾವುಗಳಿಗೆ ಕಾರಣವಾದುದರಿಂದ, ಚಿಕಿತ್ಸಾ ಸೌಲಭ್ಯಗಳನ್ನು ದೊರಕಿಸಿದರಷ್ಟೇ ಸಾಲದು, ಅವು ಅತ್ಯುತ್ತಮ ಗುಣಮಟ್ಟವನ್ನೂ ಹೊಂದಿರಬೇಕು ಎಂದು ಈ ವರದಿಗಳಲ್ಲಿ ಒತ್ತಿ ಹೇಳಲಾಗಿದೆ.

ಜಾಗತಿಕ ರೋಗ ಹೊರೆಯ ಅಧ್ಯಯನಗಳು ಖಾಸಗಿ ಸಹಭಾಗಿತ್ವದಲ್ಲಿ ಸಮಗ್ರ ಆರೋಗ್ಯ ಸೇವೆಗಳನ್ನು ಒದಗಿಸುವ ಪರಿಕಲ್ಪನೆಯನ್ನು ಮುಂದೊತ್ತುವ ಪ್ರಯತ್ನದ ಭಾಗವೆಂದಾದರೂ ಕೂಡ, ಅವುಗಳಲ್ಲಿ ದಾಖಲಾಗಿರುವ ವಾಸ್ತವಾಂಶಗಳನ್ನು ಅಲ್ಲಗಳೆಯುವಂತಿಲ್ಲ. ಆರೋಗ್ಯ ಸುರಕ್ಷಾ ವಿಮೆಯಂತಹ ಯೋಜನೆಗಳನ್ನು ಒದಗಿಸಿದರಷ್ಟೇ ಸಾಲದು, ಆರೋಗ್ಯ ಸೇವೆಗಳ ಎಲ್ಲಾ ಸ್ತರಗಳಲ್ಲಿ ವಿಪುಲವಾಗಿ ಹೂಡಿಕೆ ಮಾಡಿ, ಗುಣಮಟ್ಟವನ್ನು ಹೆಚ್ಚಿಸುವುದಕ್ಕೆ ಆದ್ಯತೆಯಿತ್ತರೆ ಮಾತ್ರವೇ ಜನರ ಆರೋಗ್ಯದಲ್ಲಿ ಗಣನೀಯವಾದ ಸುಧಾರಣೆಗಳಾಗಬಹುದು ಎಂದು ಈ ವರದಿಗಳಲ್ಲಿ ಸ್ಪಷ್ಟವಾಗಿ ಹೇಳಲಾಗಿರುವುದನ್ನು ಕಡೆಗಣಿಸಲಾಗದು.

ಲಾನ್ಸೆಟ್ ಸಂಪಾದಕ ರಿಚರ್ಡ್ ಹೋರ್ಟನ್ ತನ್ನ ಸಂಪಾದಕೀಯದಲ್ಲಿ, ಪ್ರಧಾನಿ ಮೋದಿಯವರು ಸಮಗ್ರ ಆರೋಗ್ಯ ಸೇವೆಗಳ ಅಗತ್ಯವನ್ನು ಮನಗಂಡು ಆಯುಷ್ಮಾನ್ ಭಾರತ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ, ಆದರೆ ರಾಹುಲ್ ಗಾಂಧಿ ಇನ್ನೂ ಅಂಥ ಯೋಜನೆಯನ್ನು ಘೋಷಿಸಿಲ್ಲ ಎಂದಿದ್ದಾರೆ. ಆದರೆ ಪ್ರಧಾನಿ ಘೋಷಿಸಿರುವ ಆಯುಷ್ಮಾನ್ ಭಾರತ ಯೋಜನೆಯು ಸಮಗ್ರ ಆರೋಗ್ಯ ಸೇವೆಗಳನ್ನು ಒದಗಿಸುವುದಿಲ್ಲ, ಬದಲಿಗೆ ಸರಕಾರಿ ವೆಚ್ಚದಲ್ಲಿ ಸೀಮಿತ ಚಿಕಿತ್ಸೆಗಳನ್ನಷ್ಟೇ ಒದಗಿಸುತ್ತದೆ ಎನ್ನುವುದು ಹೋರ್ಟನ್ ಅರಿವಿಗೆ ಬಂದಂತಿಲ್ಲ. ಲಾನ್ಸೆಟ್ ವರದಿಗಳಲ್ಲಿ ಸೂಚಿಸಿರುವ ಗುಣಮಟ್ಟದ ಸಮಗ್ರ ಆರೋಗ್ಯ ಸೇವೆಗಳನ್ನು ಒದಗಿಸಬೇಕಾದರೆ ಕೇಂದ್ರ ಸರಕಾರವು ಇನ್ನೂ ಆರು ಪಟ್ಟು ಹೆಚ್ಚು ಹಣವನ್ನು ವ್ಯಯಿಸಬೇಕಾಗುತ್ತದೆ; ಉಪಕೇಂದ್ರಗಳ ಅಭಿವೃದ್ಧಿಗೆ ಈಗಿನಂತೆ 1200 ಕೋಟಿ ಒದಗಿಸಿದರೆ ಸಾಲದು, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕನಿಷ್ಠ 30 ಸಾವಿರ ಕೋಟಿ ಒದಗಿಸಬೇಕಾಗುತ್ತದೆ. ಇಲ್ಲದಿದ್ದರೆ ಆಯುಷ್ಮಾನ್ ಭಾರತದ ಸಮಗ್ರ ಆರೋಗ್ಯ ಸೇವೆಯು ಕೇವಲ ಚುನಾವಣಾ ಘೋಷಣೆಯಾಗಿ ಉಳಿಯುತ್ತದೆ.

ಇಲಾಜು 22 – ಗೋರಕ್ಷಣೆ ಹೆಸರಲ್ಲಿ ಗರ್ಭಿಣಿಯರ ಜೀವರಕ್ಷಕ ಔಷಧಿ ನಿಷೇಧಿಸಿ ಪೇಚಿಗೀಡಾದ ಕೇಂದ್ರ ಸರಕಾರ

(ಸೆಪ್ಟೆಂಬರ್ 3, 2018)

ಪ್ರಾಣಿದಯಾಮಯಿ ಮಂತ್ರಿ, ಜನಪರತೆಗಿಂತ ದನಪರತೆಯತ್ತ ಒಲವುಳ್ಳ ಸರಕಾರ ಮತ್ತು ಬಲ್ಲವರನ್ನು ಕೇಳದ ಕಾರ್ಯಾಂಗ – ಈ ಮಹಾ ಸಂಗಮದಿಂದ ಹೆರಿಗೆಯ ವೇಳೆ ಜೀವವುಳಿಸುವ ಆಕ್ಸಿಟೋಸಿನ್ ಎಂಬ ಚುಚ್ಚುಮದ್ದು ನಿಷೇಧಕ್ಕೊಳಗಾಯಿತು, ಕಳೆದ ನಾಲ್ಕು ತಿಂಗಳಲ್ಲಿ ಹಲಬಗೆಯ ಗೊಂದಲಗಳಿಗೆ ಕಾರಣವಾಯಿತು.

ಅತ್ಯಂತ ಸೀಮಿತವಾಗಿ ವರ್ತಿಸುವ, ಅತಿ ಕಡಿಮೆ ಬೆಲೆಯ, ನಿರುಪದ್ರವಿಯಾದ, ಜೀವರಕ್ಷಕ ಆಕ್ಸಿಟೋಸಿನ್ ಅನ್ನು ಮಹಾ ಕೇಡೆಂದು ಬಿಂಬಿಸಿ ನಿಷೇಧಿಸಿದ್ದರ ಹಿಂದೆ ಮಾಧ್ಯಮಗಳು, ನ್ಯಾಯಾಂಗ, ಹಾಗೂ ಸಂವೇದನಾರಹಿತ ರಾಜಕಾರಣಿಗಳೆಲ್ಲರ ಪಾತ್ರಗಳಿದ್ದವು. ಒಂದಿಬ್ಬರು ಪತ್ರಕರ್ತರು ಒಂದೆರಡು ಊರುಗಳಲ್ಲಿ ಯಾರೋ ಹೇಳಿದ್ದೇ ಸತ್ಯವೆಂದು ವರದಿ ಮಾಡಿದಲ್ಲಿಂದ ಆಕ್ಸಿಟೋಸಿನ್ ಮೇಲೆ ಸಂಶಯಗಳೆದ್ದವು; ಹಿಮಾಚಲ ಪ್ರದೇಶ ಉಚ್ಚ ನ್ಯಾಯಾಲಯವು ತಾನಾಗಿ ವಿಚಾರಣೆ ನಡೆಸಿ, ಅದರ ಮೇಲೆ ನಿರ್ಬಂಧಗಳನ್ನು ಹೇರುವಂತೆ ಸೂಚಿಸಿತು; ಸಂಸತ್ತಿನಲ್ಲೂ ಹಲವು ಬಾರಿ ಪ್ರಶ್ನೆಗಳಾಗಿ ಕೇಂದ್ರ ಸಚಿವೆ ಮನೇಕಾ ಗಾಂಧಿಯ ವಿಶೇಷ ಕಾಳಜಿಯಿಂದ ಕೊನೆಗೆ ಪ್ರಧಾನಿ ಕಾರ್ಯಾಲಯವೇ ಮುತುವರ್ಜಿ ವಹಿಸಿ ಅದನ್ನು ನಿಷೇಧಿಸುವ ಮಟ್ಟಕ್ಕೆ ಬೆಳೆಯಿತು. ಉದ್ದಕ್ಕೂ, ವೈಜ್ಞಾನಿಕ ಸಾಕ್ಷ್ಯಾಧಾರಗಳು ಮೂಲೆಯಲ್ಲೇ ಉಳಿದು ಬಿಟ್ಟವು.

ಆಕ್ಸಿಟೋಸಿನ್ ಮಿದುಳಿನೊಳಗಿರುವ ಹೈಪೋಥಲಮಸ್‌ನಲ್ಲಿ ಸಿದ್ಧಗೊಂಡು, ಪಿಟ್ಯುಟರಿ ಗ್ರಂಥಿಯಿಂದ ಸ್ರವಿಸಲ್ಪಡುವ ಒಂದು ವಿಶೇಷ ಹಾರ್ಮೋನ್ ಆಗಿದೆ. ಹೆರಿಗೆ ಮತ್ತು ಎದೆ ಹಾಲೂಡಿಸುವಿಕೆಗಳಲ್ಲಿ ಅದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹೆರಿಗೆಯ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದಂತೆ ಪಿಟ್ಯುಟರಿಯಿಂದ ಆಕ್ಸಿಟೋಸಿನ್ ಸ್ರವಿಸಲ್ಪಟ್ಟು, ಗರ್ಭಕೋಶದ ಸ್ನಾಯುಗಳನ್ನು ಸಂಕುಚಿಸಿ, ಹೆರಿಗೆಯನ್ನು ಸಾಧ್ಯವಾಗಿಸುತ್ತದೆ, ಹಾಗೂ ಆ ಬಳಿಕ, ಗರ್ಭಕೋಶವು ಇನ್ನಷ್ಟು ಸಂಕುಚಿಸಿ, ರಕ್ತಸ್ರಾವವು ನಿಲ್ಲುವುದಕ್ಕೂ, ಗರ್ಭಕೋಶವು ಸುಸ್ಥಿತಿಗೆ ಮರಳುವುದಕ್ಕೂ ನೆರವಾಗುತ್ತದೆ. ಮಗುವು ಸ್ತನವನ್ನು ಚೀಪಿದಾಗ ಮತ್ತಷ್ಟು ಆಕ್ಸಿಟೋಸಿನ್ ಬಿಡುಗಡೆಯಾಗಿ, ಹಾಲಿನ ಗ್ರಂಥಿಗಳನ್ನು ಸಂಕುಚಿಸಿ ಹಾಲು ಹೊರಬರುವುದಕ್ಕೆ ನೆರವಾಗುತ್ತದೆ. (ಹೀಗೆ ಆಕ್ಸಿಟೋಸಿನ್ ಎಂಬ ಒಂದೇ ಹಾರ್ಮೋನು ತಾಯಿ-ಮಕ್ಕಳಿಬ್ಬರನ್ನೂ ರಕ್ಷಿಸುತ್ತದೆ!) ಗಂಡಸರಲ್ಲೂ ಆಕ್ಸಿಟೋಸಿನ್ ಸ್ರಾವವಿದ್ದು, ಗಂಡು-ಹೆಣ್ಣಿನ ಲೈಂಗಿಕ ಮತ್ತು ಭಾವನಾತ್ಮಕ ಬೆಸುಗೆಗಳಲ್ಲಿ ಪಾತ್ರ ವಹಿಸುತ್ತದೆ.

ಈಗ 60 ವರ್ಷಗಳಿಂದ ಆಕ್ಸಿಟೋಸಿನನ್ನು ಕೃತಕವಾಗಿ ಉತ್ಪಾದಿಸಲಾಗುತ್ತಿದ್ದು, ಅಂಥ ಮೊದಲ ಹಾರ್ಮೋನ್ ಎಂಬ ಹೆಗ್ಗಳಿಕೆಯೂ ಅದಕ್ಕಿದೆ. ಹೆರಿಗೆಯನ್ನು ಸುಲಭಗೊಳಿಸುವುದಕ್ಕೂ, ಹೆರಿಗೆಯ ಬಳಿಕ ಗರ್ಭಕೋಶವನ್ನು ಸಂಕುಚಿಸಿ ರಕ್ತಸ್ರಾವವನ್ನು ನಿಯಂತ್ರಿಸುವುದಕ್ಕೂ ಹೆರಿಗೆ ತಜ್ಞರು ಆಕ್ಸಿಟೋಸಿನನ್ನು ಸಾಮಾನ್ಯವಾಗಿ ಬಳಸುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಂತೂ ಹೆರಿಗೆಯ ವೇಳೆ ಅತೀವ ರಕ್ತಸ್ರಾವದಿಂದ ಸಾವುಂಟಾಗದಂತೆ ತಡೆದು ತಾಯಿಯ ಜೀವವುಳಿಸಲು ಆಕ್ಸಿಟೋಸಿನ್ ಒಂದೇ ವೈದ್ಯರ ನೆರವಿಗಿರುತ್ತದೆ. ಇದೇ ಕಾರಣಕ್ಕೆ ಆಕ್ಸಿಟೋಸಿನನ್ನು ಭಾರತದಲ್ಲೂ, ವಿಶ್ವ ಆರೋಗ್ಯ ಸಂಸ್ಥೆಯಲ್ಲೂ ಅತ್ಯವಶ್ಯಕ ಔಷಧಗಳ ಪಟ್ಟಿಯಲ್ಲಿ ಹೆಸರಿಸಲಾಗಿದೆ. ಎದೆ ಹಾಲೂಡಿಸುವಿಕೆಯಲ್ಲಿ ದೇಹದೊಳಗೆ ಸ್ರವಿಸಲ್ಪಡುವ ಆಕ್ಸಿಟೋಸಿನ್‌ಗೆ ಪಾತ್ರವಿದ್ದರೂ, ಕೃತಕ ಆಕ್ಸಿಟೋಸಿನ್ ಬಳಸಿ ಹಾಲೂಡಿಸುವಿಕೆಯನ್ನು ಹೆಚ್ಚಿಸಬಹುದೆನ್ನುವುದಕ್ಕೆ ಸಾಕಷ್ಟು ಆಧಾರಗಳು ಲಭ್ಯವಿಲ್ಲದಿರುವುದರಿಂದ, ಹಾಲೂಡಿಸುವುದಕ್ಕೆಂದು ತಾಯಂದಿರಿಗೆ ಆಕ್ಸಿಟೋಸಿನ್ ನೀಡುವ ಕ್ರಮವಿಲ್ಲ. ಪಶು ವೈದ್ಯರು ಕೂಡ ಸಾಕುಪ್ರಾಣಿಗಳಲ್ಲಿ ಹೆರಿಗೆಗಾಗಿ ಆಕ್ಸಿಟೋಸಿನ್ ಬಳಸುತ್ತಾರೆ, ಅಪರೂಪಕ್ಕೊಮ್ಮೆ, ಹಾಲಿಳಿಯದ ಸಂದರ್ಭಗಳಲ್ಲೂ ಅದನ್ನು ಬಳಸುವುದಿದೆ.

ಕೇಂದ್ರ ಸರಕಾರವು ಇದೇ ಎಪ್ರಿಲ್ ತಿಂಗಳಲ್ಲಿ ಈ ಆಕ್ಸಿಟೋಸಿನನ್ನು ನಿರ್ಬಂಧಿಸುವ ಆಜ್ಞೆಗಳನ್ನು ಹೊರಡಿಸಿತು. ಎಪ್ರಿಲ್ 24ರಂದು ಆಕ್ಸಿಟೋಸಿನಿನ ಆಮದನ್ನು ನಿಷೇಧಿಸಲಾಯಿತು; ಎಪ್ರಿಲ್ 27ರಂದು ಇನ್ನೊಂದು ಆಜ್ಞೆಯನ್ನು ಹೊರಡಿಸಿ, ಜುಲೈ ಒಂದರ ಬಳಿಕ ದೇಶದೊಳಗಿನ ಬಳಕೆಗಾಗಿ ಆಕ್ಸಿಟೋಸಿನನ್ನು ಸರಕಾರಿ ಸಂಸ್ಥೆಗಳು ಮಾತ್ರವೇ ಉತ್ಪಾದಿಸಬೇಕು, ನೋಂದಾಯಿತ ಆಸ್ಪತ್ರೆಗಳಲ್ಲಿ ಮತ್ತು ಜನೌಷಧಿ ಕೇಂದ್ರಗಳಲ್ಲಿ ಮಾತ್ರವೇ ಮಾರಾಟ ಮಾಡಬೇಕು, ಹಾಗೂ, ಖಾಸಗಿ ಔಷಧ ಮಳಿಗೆಗಳಲ್ಲಿ ಮಾರಾಟ ಮಾಡುವಂತಿಲ್ಲ ಎಂದು ನಿರ್ಬಂಧಿಸಲಾಯಿತು. ಹಿಮಾಚಲ ಪ್ರದೇಶದ ಉಚ್ಚ ನ್ಯಾಯಾಲಯವು 2016ರ ಮಾರ್ಚ್ 15ರಂದು ನೀಡಿದ ತೀರ್ಪು ಹಾಗೂ ಔಷಧಗಳ ತಾಂತ್ರಿಕ ಸಲಹಾ ಸಮಿತಿಯು 2018ರ ಫೆಬ್ರವರಿ 12 ರಂದು ನೀಡಿದ ಸಲಹೆಗಳ ಆಧಾರದಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆಯೆಂದು ಹೇಳಲಾಯಿತು. ಆ ಬಳಿಕ, ಇಡೀ ದೇಶಕ್ಕೆ ಅಗತ್ಯವಿರುವ ಆಕ್ಸಿಟೋಸಿನ್ ಅನ್ನು ಉತ್ಪಾದಿಸಿ, ಮೂಲೆ ಮೂಲೆಗಳಿಗೆ ತಲುಪಿಸುವ ಜವಾಬ್ದಾರಿಯನ್ನು ಹಿಂದೆಂದೂ ಆಕ್ಸಿಟೋಸಿನ್ ಉತ್ಪಾದಿಸದೇ ಇದ್ದ ಕರ್ನಾಟಕ ಪ್ರತಿಜೈವಿಕ ಮತ್ತು ಔಷಧ ಸಂಸ್ಥೆಗೆ ವಹಿಸಲಾಯಿತು. ಅದಾಗಲೇ ಆಕ್ಸಿಟೋಸಿನ್ ಉತ್ಪಾದಿಸುತ್ತಿರುವ ದೊಡ್ಡ ಬಹುರಾಷ್ಟ್ರೀಯ ಕಂಪೆನಿಗಳು ಅದನ್ನು ದೇಶದೊಳಗೆ ಮಾರದಂತೆ ತಡೆಯಲಾಯಿತಾದರೂ, ವಿದೇಶಗಳಿಗೆ ರಫ್ತು ಮಾಡದಂತೆ ನಿರ್ಬಂಧಿಸಲಿಲ್ಲ! ವಿಚಿತ್ರವೆನಿಸಿದ ಈ ನಿರ್ಧಾರಗಳು ಹಲವು ಸಂಶಯಗಳನ್ನು ಹುಟ್ಟಿಸಿದವು.

ಆಜ್ಞೆಗೆ ಆಧಾರವೆನ್ನಲಾದ ಹಿಮಾಚಲ ನ್ಯಾಯಾಲಯದ ತೀರ್ಪಿನಲ್ಲಿ ಆಕ್ಸಿಟೋಸಿನ್ ಅನ್ನು ಭಾರೀ ಪ್ರಮಾಣದಲ್ಲಿ ರಹಸ್ಯವಾಗಿ ಉತ್ಪಾದಿಸಿ, ಗಂಭೀರ ಪ್ರಮಾಣದಲ್ಲಿ ದುರುಪಯೋಗಿಸಲಾಗುತ್ತಿದೆ; ಅದರಿಂದ ಪ್ರಾಣಿಗಳಿಗೂ, ಮನುಷ್ಯರಿಗೂ ಹಾನಿಯಾಗುತ್ತಿದೆ; ಆದ್ದರಿಂದ ಸರಕಾರವು ಅದರ ಬಳಕೆಯನ್ನು ನಿರ್ಬಂಧಿಸುವ ಬಗ್ಗೆ ಪರಿಶೀಲಿಸಬೇಕು ಎಂದು ಹೇಳಲಾಗಿತ್ತಾದರೂ, ಆ ವಿಚಾರಣೆಯ ಕ್ರಮವೇ ಪ್ರಶ್ನಾರ್ಹವೆನಿಸಿತ್ತು. ತರಕಾರಿ ಹಾಗೂ ಹಣ್ಣುಗಳ ಗಾತ್ರವನ್ನು ಹೆಚ್ಚಿಸುವುದಕ್ಕೆ ಆಕ್ಸಿಟೋಸಿನ್ ಚುಚ್ಚಲಾಗುತ್ತಿದೆ ಎಂಬ ವದಂತಿಗಳ ಬಗ್ಗೆ ಅಮರ್ ಉಜಾಲಾ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ವರದಿಯನ್ನು ಆಧರಿಸಿ ನ್ಯಾಯಾಲಯವು ತಾನಾಗಿ ಆ ವಿಚಾರಣೆಯನ್ನು ನಡೆಸಿತ್ತು ಮತ್ತು ತಾನೇ ನೇಮಿಸಿದ್ದ ಹಿರಿಯ ವಕೀಲರ ಅಭಿಮತವನ್ನಷ್ಟೇ ಪರಿಗಣಿಸಿ, ಆಕ್ಸಿಟೋಸಿನ್‌ನಿಂದ ದುಷ್ಪರಿಣಾಮಗಳಿಲ್ಲ ಎಂದಿದ್ದ ವೈಜ್ಞಾನಿಕ ಸಾಕ್ಷ್ಯಾಧಾರಗಳನ್ನು ಕಡೆಗಣಿಸಿ ತೀರ್ಪು ನೀಡಿತ್ತು.

ಆಕ್ಸಿಟೋಸಿನ್ ಅನ್ನು ಪಶುಗಳಲ್ಲಿ ಹಾಲಿಳಿಸುವುದಕ್ಕೂ, ಕದ್ದು ಸಾಗಿಸಿದ ಹೆಣ್ಣು ಮಕ್ಕಳನ್ನು ಲೈಂಗಿಕ ವೃತ್ತಿಗೆ ದೂಡಲು ಬೇಗನೇ ಪ್ರೌಢರಾಗಿಸುವುದಕ್ಕೂ ದುರ್ಬಳಕೆ ಮಾಡಲಾಗುತ್ತಿದೆ ಎಂಬ ವದಂತಿಗಳು ಕೂಡ ವರದಿಯಾಗಿದ್ದವು. ಈ ಕುರಿತು ಸಂಸತ್ತಿನಲ್ಲಿ 2000ನೇ ಇಸವಿಯಿಂದೀಚೆಗೆ 22 ಸಲ ಪ್ರಶ್ನೆಗಳನ್ನು ಕೇಳಲಾಗಿತ್ತು; ವೈದ್ಯಕೀಯ, ಕೃಷಿ ಹಾಗೂ ಹೈನು ಸಂಶೋಧನಾ ಸಂಸ್ಥೆಗಳು 2010-16ರ ನಡುವೆ ಅಧ್ಯಯನಗಳನ್ನು ನಡೆಸಿದ್ದಾಗಿಯೂ, ಅಂತಹ ವದಂತಿಗಳಿಗೆ ಆಧಾರಗಳಿಲ್ಲವೆಂದೂ, ಆಕ್ಸಿಟೋಸಿನ್‌ ಅತ್ಯವಶ್ಯಕ ಔಷಧಿಯಾಗಿದ್ದು, ಮನುಷ್ಯರ ಮೇಲಾಗಲೀ, ಪ್ರಾಣಿಗಳ ಮೇಲಾಗಲೀ ದುಷ್ಪರಿಣಾಮಗಳಿಲ್ಲವೆಂದೂ, ಅದರ ದುರ್ಬಳಕೆಯಾಗದಂತೆ ನಿಗಾ ವಹಿಸಲಾಗುತ್ತಿದೆಯೆಂದೂ ಸರಕಾರವು ಉತ್ತರಿಸಿತ್ತು.

ಅಂತಲ್ಲಿ, ಒಮ್ಮಿಂದೊಮ್ಮೆಗೇ ಆಕ್ಸಿಟೋಸಿನ್ ಮೇಲೆ ನಿಷೇಧ ಹೇರಿದ್ದೇಕೆ? ಮನೇಕಾ ಗಾಂಧಿಯವರು 2012ರಿಂದ ಹಲವು ಸಲ ಔಷಧಗಳ ತಾಂತ್ರಿಕ ಹಾಗೂ ಸಲಹಾ ಸಮಿತಿಗಳೆದುರು ಹಾಗೂ ಇತ್ತೀಚೆಗೆ ಪ್ರಧಾನಿ ಕಾರ್ಯಾಲಯದಲ್ಲಿ ಆಕ್ಸಿಟೋಸಿನ್ ನಿರ್ಬಂಧವನ್ನು ಒತ್ತಾಯಿಸಿದ್ದು ಮತ್ತು ಪ್ರಧಾನಿ ಕಾರ್ಯಾಲಯವು ವಿಶೇಷ ಆಸಕ್ತಿ ವಹಿಸಿದ್ದು ಈ ನಿರ್ಧಾರಕ್ಕೆ ಕಾರಣವೆಂದು ವರದಿಗಳಾದವು.

ಆದರೆ, ಅತ್ಯವಶ್ಯಕವಾದ ಆಕ್ಸಿಟೋಸಿನ್ ಹೀಗೆ ನಿರ್ಬಂಧಕ್ಕೊಳಗಾದರೂ ಹೆಚ್ಚಿನ ವೈದ್ಯಕೀಯ ಅಥವಾ ಮಹಿಳಾ ಸಂಘಟನೆಗಳು ಅದನ್ನು ಪ್ರಶ್ನಿಸುವ ಯಾ ಪ್ರತಿಭಟಿಸುವ ಗೋಜಿಗೆ ಹೋಗಲಿಲ್ಲ! ಕೇರಳದ ಪಯ್ಯನ್ನೂರಿನ ಕಣ್ಣು ತಜ್ಞ ಡಾ॥ ಕೆ.ವಿ. ಬಾಬು, ಸ್ತ್ರೀ ರೋಗ ತಜ್ಞರ ಸಂಘದ ಕೆಲವು ಪದಾಧಿಕಾರಿಗಳು ಮತ್ತು ಅಖಿಲ ಭಾರತ ಔಷಧ ಕ್ರಿಯಾ ಕೂಟದವರು ಮಾಧ್ಯಮಗಳನ್ನು ಎಚ್ಚರಿಸಿ, ಸರಕಾರದ ಮೇಲೆ ಒತ್ತಡ ಹೇರಿದ್ದಲ್ಲದೆ, ದಿಲ್ಲಿ ಉಚ್ಚ ನ್ಯಾಯಾಲಯಕ್ಕೂ ಮೊರೆ ಹೋದರು. ಪರಿಣಾಮವಾಗಿ ಜುಲೈ ಒಂದರ ಗಡುವನ್ನು ಸೆಪ್ಟೆಂಬರ್ ಒಂದಕ್ಕೆ ಮುಂದೂಡಲಾಯಿತು, ಕೆಲ ದಿನಗಳ ಬಳಿಕ ಮತ್ತೆ ಬದಲಿಸಿ, ಆಕ್ಸಿಟೋಸಿನ್ ಅನ್ನು ಖಾಸಗಿ ಔಷಧ ಮಳಿಗೆಗಳಲ್ಲಿ ನಿಯಂತ್ರಿತವಾಗಿ ಮಾರಾಟ ಮಾಡುವುದಕ್ಕೂ ಅವಕಾಶ ನೀಡಲಾಯಿತು. ಇದೀಗ ದಿಲ್ಲಿ ಉಚ್ಚ ನ್ಯಾಯಾಲಯವು ನಿರ್ಬಂಧವನ್ನು ತಡೆಹಿಡಿದಿದ್ದು, ಬಹಳಷ್ಟು ಹಾನಿಕಾರಕವಾಗಿರುವ ಇತರ ಔಷಧಗಳನ್ನೆಲ್ಲ ಬಿಟ್ಟು ಇದೊಂದನ್ನೇ ನಿರ್ಬಂಧಿಸಿದ್ದೇಕೆಂದೂ, ಜಿಎಸ್‌ಟಿ, ಔಷಧ ನಿಯಂತ್ರಕರು ಮತ್ತಿತರ ವ್ಯವಸ್ಥೆಗಳ ಮೂಲಕ ದುರ್ಬಳಕೆಯನ್ನು ತಡೆಯಲು ಸಾಧ್ಯವಿರುವಾಗ ಔಷಧವನ್ನೇ ನಿರ್ಬಂಧಿಸುವ ಅಗತ್ಯವೇನೆಂದೂ ಸರಕಾರವನ್ನು ಪ್ರಶ್ನಿಸಿದೆ.

ಮಹಿಳೆಯರ ಜೀವಕ್ಕಿಂತ ಪಶುಗಳ ಮೇಲಾಗುತ್ತದೆನ್ನುವ ಕಥಾಕಥಿತ ಸಮಸ್ಯೆಗಳನ್ನೇ ಮುಖ್ಯವೆಂದು ಪರಿಗಣಿಸಿ ಜೀವರಕ್ಷಕ ಆಕ್ಸಿಟೋಸಿನ್ ಅನ್ನು ನಿಷೇಧಿಸಹೊರಟು ಕೇಂದ್ರ ಸರಕಾರವು ಪೇಚಿಗೆ ಸಿಲುಕಿರುವುದಂತೂ ನಿಜ.

ಇಲಾಜು 21 – ಆಧಾರ್ ಅಯೋಮಯ ಆಗಿರುವಾಗಲೇ ಬರುತ್ತಿದೆ ಮತ್ತೊಂದು ಅನಾರೋಗ್ಯ ಯೋಜನೆ

(ಆಗಸ್ಟ್ 23, 2018)

ಆಧಾರ್ ಯೋಜನೆಗೆ ದೇಶದ ಸಂಸತ್ತು ಇನ್ನೂ ಪೂರ್ಣ ಅನುಮೋದನೆಯನ್ನು ಕೊಟ್ಟಿಲ್ಲ; ಅದರ ಸಾಂವಿಧಾನಿಕ, ನ್ಯಾಯಿಕ ಸಿಂಧುತ್ವದ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ಇನ್ನೂ ಅಂತಿಮ ತೀರ್ಪು ನೀಡಿಲ್ಲ. ಹಾಗಿದ್ದರೂ, ಕೇಂದ್ರ ಸರಕಾರವು ಒಂದರ ಹಿಂದೊಂದರಂತೆ ಆಧಾರ್ ಆಧಾರಿತ ಯೋಜನೆಗಳನ್ನು ಘೋಷಿಸುತ್ತಲೇ ಇದೆ; ಇದೀಗ ನಿತಿ ಆಯೋಗವು ರಾಷ್ಟ್ರೀಯ ಆರೋಗ್ಯ ಬಣವೆ ಎಂಬ ಹೊಸ ಯೋಜನೆಯ ಕರಡನ್ನು ಪ್ರಕಟಿಸಿದೆ. ಐವತ್ತು ಕೋಟಿ ಭಾರತೀಯರಿಗೆ ಆರೋಗ್ಯ ಸೇವೆಗಳನ್ನು ಒದಗಿಸಲಿದೆ ಎನ್ನಲಾಗುತ್ತಿರುವ ಆಯುಷ್ಮಾನ್ ಭಾರತ ಯೋಜನೆಗೆ ಇದು ಬೆನ್ನುಲುಬಾಗಲಿದೆ ಎಂದು ಹೇಳಲಾಗಿದೆ. ಆದರೆ ವಾಸ್ತವದಲ್ಲಿ ಇದು ಆಯುಷ್ಮಾನ್ ಭಾರತದ ಬೆನ್ನೇರಿ ಕೋಟಿಗಟ್ಟಲೆ ಭಾರತೀಯರ ಆರೋಗ್ಯ ಮಾಹಿತಿಯನ್ನು ಮತ್ತು ಎಲ್ಲ ವೈದ್ಯಕೀಯ ಸಂಸ್ಥೆಗಳ ವಿವರಗಳನ್ನು ಪಡೆದುಕೊಳ್ಳುವ ಯೋಜನೆಯಾಗಿದೆ, ಮತ್ತು ಆ ಮಾಹಿತಿಯೆಲ್ಲವನ್ನೂ ಖಾಸಗಿ ದೈತ್ಯ ಕಂಪೆನಿಗಳಿಗೆ, ವಿಮಾ ಕಂಪೆನಿಗಳಿಗೆ, ವೈದ್ಯಕೀಯ ಕ್ಷೇತ್ರದಲ್ಲಿ ಕೃತಕ ಬುದ್ದಿಮತ್ತೆಯ ಸಾಧನಗಳನ್ನು ಬೆಳೆಸಬಯಸಿರುವವರಿಗೆ ದಾಟಿಸುವ ಉಪಾಯವಾಗಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಗೆ ವಿಶೇಷ ಮಹತ್ವವಿದೆ, ವಿಪರೀತ ಬೇಡಿಕೆಯೂ ಇದೆ. ಯಾರಿಗೆ ಯಾವ ರೋಗ ಇದೆ ಎನ್ನುವುದು ಗೊತ್ತಾಗಿಬಿಟ್ಟರೆ ಅವರನ್ನು ಸತಾಯಿಸಬಹುದು, ವಿಮೆಯನ್ನು ನಿರಾಕರಿಸಬಹುದು ಅಥವಾ ಕಂತನ್ನು ಏರಿಸಬಹುದು, ಸಾಲವನ್ನು ತಡೆಹಿಡಿಯಬಹುದು ಅಥವಾ ಆಸ್ತಿಯನ್ನು ಲಪಟಾಯಿಸುವ ಯೋಜನೆಯನ್ನೂ ಹಾಕಿಕೊಳ್ಳಬಹುದು. ಆದ್ದರಿಂದಲೇ ಭಾರತದ ಪ್ರಜೆಗಳ ಆರೋಗ್ಯ ಮಾಹಿತಿಯನ್ನು ಪಡೆಯುವುದಕ್ಕೆ ಹಲವರು ಉತ್ಸುಕರಾಗಿದ್ದಾರೆ, ಆಧಾರ್ ಬೆರಳಚ್ಚಿಗೆ ಅದನ್ನು ಜೋಡಿಸಿ ಇನ್ನಷ್ಟು ನಿಖರಗೊಳಿಸಲು ಕಾತರರಾಗಿದ್ದಾರೆ.

ಆಧಾರ್ ಆರಂಭಗೊಂಡಾಗಲೇ ಆರೋಗ್ಯ ಮಾಹಿತಿಯನ್ನು ಸಂಗ್ರಹಿಸುವ ಮಹಾ ಯೋಜನೆಯೂ ರೂಪ ತಳೆದಿದೆ, ಆಧಾರ್ ಪ್ರಾಧಿಕಾರದ ಮೊದಲ ಅಧ್ಯಕ್ಷ ನಂದನ್ ನಿಲೇಕಣಿಯವರು ಅಂದಿನಿಂದಲೂ ಅದರ ಬೆನ್ನಿಗಿದ್ದಾರೆ. ಈ ಯೋಜನೆಗೆ ಪುಷ್ಠಿ ನೀಡಲೆಂದು ಫೆಬ್ರವರಿ 2016ರಲ್ಲಿ ಕೇಂದ್ರ ಸರಕಾರವು ಆರೋಗ್ಯದ ಮಿಂದಾಖಲೆಗಳ ಮಾನದಂಡಗಳನ್ನೂ, ಆಧಾರ್‌ ಜೋಡಣೆಯ ಪ್ರಸ್ತಾವವನ್ನೂ ಪ್ರಕಟಿಸಿದೆ. ಬಳಿಕ, ಮಾರ್ಚ್ 2017ರಲ್ಲಿ, ಪ್ರಕಟಿಸಿದ ರಾಷ್ಟ್ರೀಯ ಆರೋಗ್ಯ ನೀತಿಯಲ್ಲಿ ಅದಕ್ಕೆ ಇನ್ನಷ್ಟು ತುಂಬಲಾಗಿದೆ: ರಾಷ್ಟ್ರೀಯ ಗಣಕೀಕೃತ ಆರೋಗ್ಯ ಪ್ರಾಧಿಕಾರವನ್ನು ರಚಿಸುವುದು; ಆಸ್ಪತ್ರೆಗಳಿಂದ, ವೈದ್ಯರಿಂದ, ಧರಿಸುವ ಸಾಧನಗಳು ಮತ್ತು ಬಳಸುವ ಫೋನ್‌ಗಳಿಂದ, ಹೀಗೆ ಎಲ್ಲೆಡೆಗಳಿಂದ ದೇಶದ ಎಲ್ಲಾ ನಾಗರಿಕರ ಆರೋಗ್ಯ ಮಾಹಿತಿಯನ್ನು ಸಂಗ್ರಹಿಸುವುದು; ಇವುಗಳನ್ನು ಬಳಸಿ ಸಮಗ್ರ ಆರೋಗ್ಯ ಮಾಹಿತಿ ಜಾಲವನ್ನು ಸ್ಥಾಪಿಸುವುದು; ಮತ್ತು ಮಾಹಿತಿ ಸಂಗ್ರಹಣೆಯಲ್ಲೂ, ಅದರ ವಿಶ್ಲೇಷಣೆ ಹಾಗೂ ಹಂಚಿಕೆಗಳಲ್ಲೂ ಖಾಸಗಿ ವಲಯವನ್ನು ಒಳಗೊಳ್ಳುವುದು ಈ ಆರೋಗ್ಯ ನೀತಿಯೊಳಗೆ ಅಡಕವಾಗಿದೆ. ಇಂತಹ ಅಡಿಪಾಯದ ಮೇಲೆ ಈಗ ರಾಷ್ಟ್ರೀಯ ಆರೋಗ್ಯ ಬಣವೆಯ ಕರಡು ಮೇಲೆದ್ದಿದೆ.

ಈ ಕರಡು ಬಣವೆಯ ಹೊದಿಕೆಯನ್ನು ಸರಿಸಿದರೆ ನಡುಕವೇ ಹುಟ್ಟುತ್ತದೆ. ಮೊದಲ ಪುಟದಲ್ಲಿ ನಿತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ಡಾ॥ ವಿನೋದ್ ಪೌಲ್ ಅವರು ವಿಚ್ಛಿದ್ರತೆಯನ್ನು ಸಂಭ್ರಮಿಸಿರುವುದು ಕಾಣುತ್ತದೆ. ರಾಷ್ಟ್ರೀಯ ಆರೋಗ್ಯ ಬಣವೆಯು ದೂರದರ್ಶಿತ್ವದ, ಗಣಕೀಯ ಚೌಕಟ್ಟಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅದನ್ನು ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಬಳಸಬಹುದೆಂದೂ, ಕ್ಷಿಪ್ರವಾದ, ವಿಚ್ಛಿದ್ರಕಾರಿಯಾದ ಬದಲಾವಣೆಗಳನ್ನೂ, ಅನಿರೀಕ್ಷಿತವಾದ ತಿರುವುಗಳನ್ನೂ ಕಾಣಲಿರುವ (ಆರೋಗ್ಯ) ಕ್ಷೇತ್ರಕ್ಕೆ ಅದು ಭವಿಷ್ಯದ ಮಾಹಿತಿ ತಂತ್ರಜ್ಞಾನದ ಮಾರ್ಗೋಪಾಯಗಳನ್ನು ಒದಗಿಸಲಿದೆ ಎಂದೂ ಡಾ॥ ಪೌಲ್ ಬರೆದಿದ್ದಾರೆ. ಇದರರ್ಥವೇನೆಂದರೆ, ದೇಶದ ಎಲ್ಲಾ ಸಾರ್ವಜನಿಕ ಹಾಗೂ ಖಾಸಗಿ ವೈದ್ಯಕೀಯ ಸಂಸ್ಥೆಗಳ ಮಾಹಿತಿಯೂ, ಎಲ್ಲಾ ನಾಗರಿಕರ ಮಾಹಿತಿಯೂ ಬಣವೆಯೊಳಗೆ ಸೇರಲಿವೆ; ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅದನ್ನು ತಮಗೆ ಬೇಕಾದಂತೆ ಬಳಸಿಕೊಳ್ಳಬಹುದಾಗಿದೆ; ಭವಿಷ್ಯದ ಮಾಹಿತಿ ತಂತ್ರಜ್ಞಾನವನ್ನು ಕಟ್ಟುವವರಿಗೆ ಒಪ್ಪಿಸಬಹುದಾಗಿದೆ; ಮತ್ತು ಆ ಮೂಲಕ, ಆರೋಗ್ಯ ಕ್ಷೇತ್ರವನ್ನು ಛಿದ್ರಗೊಳಿಸಿ, ಖಾಸಗಿ ದೈತ್ಯರ ಕೈಗಳಿಗೊಪ್ಪಿಸಿ, ಅನಿರೀಕ್ಷಿತವಾದ ತಿರುವುಗಳನ್ನುಂಟು ಮಾಡಬಹುದಾಗಿದೆ.

ಕರಡಿನ ಎರಡನೇ ಪುಟದಲ್ಲಿ ನಿತಿ ಆಯೋಗದ ಮುಖ್ಯ ಆಡಳಿತಾಧಿಕಾರಿ ಅಮಿತಾಭ್ ಕಾಂತ್ ಅವರ ಯೋಚನೆಗಳಿವೆ. ಪ್ರಸ್ತಾವಿತ ಆರೋಗ್ಯ ಬಣವೆಯು ಶಕ್ತಿಶಾಲಿ ಸಾಧನ-ವಿಧಾನಗಳನ್ನು ಬಳಸಿ ಅಗಾಧ ಮಾಹಿತಿಯ ವಿಶ್ಲೇಷಣೆ, ಯಂತ್ರಕಲಿಕೆ, ಕೃತಕ ಬುದ್ದಿಮತ್ತೆ, ಮತ್ತು ಮುಂದಕ್ಕೆ, ನೀತಿ ನಿರೂಪಣೆ ಮಾಡಬಲ್ಲ ಅತ್ಯಾಧುನಿಕ ಗಣಕೀಯ ಭಾಷೆಗಳನ್ನು ಅಭಿವೃದ್ಧಿಪಡಿಸುವವರೆಗೆ ಬೆಳೆಯಲಿದೆ ಎಂದೂ, ಆ ಮೂಲಕ, ಜನತೆ, ಹಣ ಮತ್ತು ಮಾಹಿತಿಗಳ ಹರಿವನ್ನು ಮರುವಿನ್ಯಾಸಗೊಳಿಸಿ, ಎಲ್ಲಾ ರಾಜ್ಯಗಳಿಗೆ ಮತ್ತು ಯೋಜನೆಗಳಿಗೆ ಆರೋಗ್ಯದ ವಿಚಾರದಲ್ಲಿ ಸಮಗ್ರವಾದ ತಳಹದಿಯನ್ನು ಒದಗಿಸಿ, ಆರೋಗ್ಯ ರಕ್ಷಣೆಯ ವೆಚ್ಚವನ್ನು ಗಣನೀಯವಾಗಿ ಇಳಿಸಿ, ನಗದುರಹಿತವಾಗಿಸಿ ಆರೋಗ್ಯ ಸುಧಾರಣೆಗೆ ನೆರವಾಗಲಿದೆ ಎಂದು ಕಾಂತ್ ಬರೆದಿದ್ದಾರೆ. ಈ ಅತ್ಯಾಕರ್ಷಕ ಪದಸರಣಿಯ ಹಿಂದೆ ಭಯಾನಕವಾದ ಯೋಜನೆಯೇ ಅಡಗಿರುವಂತೆ ಕಾಣುತ್ತದೆ. ಎಲ್ಲೆಡೆಗಳಿಂದ ಎಳೆದು ಪಡೆಯುವ ಮಾಹಿತಿಯನ್ನು ಯಂತ್ರಕಲಿಕೆಯ ಕೃತಕ ಬುದ್ಧಿಮತ್ತೆಯಿಂದ ವಿಶ್ಲೇಷಿಸಿ, ಯಂತ್ರಗಳಿಂದಲೇ ನೀತಿ ನಿರೂಪಣೆ ಮಾಡಿಸಿ, ಸಂಸದೀಯ ಪ್ರಜಾಪ್ರಭುತ್ವವನ್ನು ಧ್ವಂಸಗೊಳಿಸುವ ತೀರಾ ಅಮಾನವೀಯವಾದ ಯೋಜನೆ ಇದಾಗಿರುವಂತೆ ಕಾಣುತ್ತದೆ.

ಆರೋಗ್ಯ ಬಣವೆಯು ಭಾರತ ಬಣವೆಯೆಂಬ ಯೋಜನೆಯ ಭಾಗವೆಂದು ಬಹಳ ಹೆಮ್ಮೆಯಿಂದ ಈ ಕರಡಿನಲ್ಲಿ ಹೇಳಲಾಗಿದೆ. ಈ ಭಾರತ ಬಣವೆಯೆಂಬುದು ಇದ್ದುದನ್ನೆಲ್ಲ ಛಿದ್ರಗೊಳಿಸಿ ಇಲ್ಲವಾಗಿಸುವ ಬಹು ದೊಡ್ಡ ಯೋಜನೆಯಂತಿದೆ. ಈ ಭಾರತ ಬಣವೆಯೊಳಗೆ ಒಪ್ಪಿಗೆ ಪದರ, ನಗದುರಹಿತ ಪದರ, ಕಾಗದರಹಿತ ಪದರ, ಉಪಸ್ಥಿತಿರಹಿತ ಪದರ ಎಂಬ ನಾಲ್ಕು ‘ಪದರ’ಗಳಿವೆಯೆಂದು ಹೇಳಲಾಗಿದೆ. ಎಲ್ಲದಕ್ಕೂ ಬೆರಳಚ್ಚು ಒತ್ತಿ ಒಪ್ಪಿಗೆ ನೀಡುವುದು, ಎಲ್ಲ ವಹಿವಾಟನ್ನೂ ನಗದಿಲ್ಲದೆ ನಡೆಸುವುದು, ಎಲ್ಲ ದಾಖಲೆಗಳನ್ನೂ ಕಾಗದವಿಲ್ಲದೆಯೇ ನಿರ್ವಹಿಸುವುದು ಮತ್ತು ಮಸಿಯಿಲ್ಲದೆಯೇ ಸಹಿಯೊತ್ತುವುದು, ವ್ಯಕ್ತಿಯ ಬದಲು ಬೆರಳೊತ್ತುವ ಫೋನ್ ಇತ್ಯಾದಿ ಉಪಕರಣಗಳ ಮೂಲಕವೇ ಎಲ್ಲ ಕೆಲಸಗಳನ್ನೂ ಮಾಡಿಸುವುದು ಈ ಭಾರತ ಬಣವೆಯಡಿ ಸಿದ್ಧಗೊಳ್ಳುತ್ತಿರುವ ತಂತ್ರಾಂಶಗಳ ಉದ್ದೇಶವಾಗಿದೆ.

ಇರುವುದನ್ನೆಲ್ಲ ಇಲ್ಲವಾಗಿಸುವ ಈ ಭಾರತ ಬಣವೆಯೊಳಗೆ ಆರೋಗ್ಯ ಬಣವೆಯೂ ಒಂದು ಪದರವಾಗಿ, ಅದರೊಳಗೂ ಒಂದಷ್ಟು ಪದರಗಳಿರಲಿವೆ. ಆರೋಗ್ಯ ಸೇವೆಗಳನ್ನು ಒದಗಿಸುವ ಮತ್ತು ಪಡೆಯುವವರೆಲ್ಲರ ಸಕಲ ವಿವರಗಳು, ಆರೋಗ್ಯ ಸೇವೆಗಳ ನೀಡಿಕೆ ಮತ್ತು ಅದಕ್ಕೆ ಶುಲ್ಕ ಪಾವತಿಯ ವಿವರಗಳು ಮತ್ತು ಅವುಗಳಲ್ಲಾಗುವ ಮೋಸಗಳ ಪತ್ತೆ, ವ್ಯಕ್ತಿ ಮತ್ತು ಸಂಶೋಧನಾ ಸಂಸ್ಥೆಗಳು ಪಡೆದುಕೊಳ್ಳಬಹುದಾದ ವೈಯಕ್ತಿಕ ಆರೋಗ್ಯ ದಾಖಲೆಗಳು, ಈ ಎಲ್ಲ ಮಾಹಿತಿಯನ್ನು ವಿಶ್ಲೇಷಿಸುವ ಮತ್ತು ನೀತಿ ನಿರೂಪಣೆಗೆ ಬಳಸಿಕೊಳ್ಳುವ ತಂತ್ರಗಳು, ಇವೆಲ್ಲಕ್ಕೂ ಅಗತ್ಯವಾದ ನೆರವನ್ನೊದಗಿಸುವ ವ್ಯವಸ್ಥೆಗಳು ಈ ಆರೋಗ್ಯ ಬಣವೆಯ ಪದರಗಳಾಗಿರಲಿವೆ. ಅಂದರೆ ದೇಶದ ಪ್ರತಿಯೊಬ್ಬನ ದೈಹಿಕ ವಿವರಗಳನ್ನು ಸಂಗ್ರಹಿಸಿ, ಎಲ್ಲಿ ಹೋದರೂ ಅಲ್ಲಿ ಬೆಂಬತ್ತಿ, ಮೋಸಗಾರನೆಂದು ಸಂಶಯಿಸಿ, ಆ ಮಾಹಿತಿಯನ್ನು ವಿಮಾ ಕಂಪೆನಿಗಳಿಗೂ ಸಂಶೋಧನಾ ಸಂಸ್ಥೆಗಳಿಗೂ ರವಾನಿಸಿ, ಆರೋಗ್ಯ ಸೇವೆಗಳನ್ನು ಒದಗಿಸುವ ಯಾ ನಿರಾಕರಿಸುವ ಸಂಪೂರ್ಣ ಅಧಿಕಾರವು ಈ ಯಂತ್ರಗಳ ಮೂಲಕ ಸರಕಾರ ಹಾಗೂ ವಿಮಾ ಕಂಪೆನಿಗಳದ್ದಾಗಲಿದೆ.

ಸರಕಾರವನ್ನು ನಾಗರಿಕರ ವೈಯಕ್ತಿಕ ಮಾಹಿತಿಯನ್ನು ಹಿಡಿದು ಹಿಂಸಿಸುವ ಶಕ್ತಿಯಾಗಿ, ಖಾಸಗಿ ಶಕ್ತಿಗಳಿಗೆ ಒದಗಿಸುವ ದಲ್ಲಾಳಿಯಾಗಿ ಬೆಳೆಸುವ ಭಾರತ ಬಣವೆಯ ಒಳಗೆ ಯಾರಿದ್ದಾರೆನ್ನುವುದು ನಿಗೂಢವಾಗಿಯೇ ಇದೆ. ಎಲ್ಲ ದೇಶವಾಸಿಗಳಿಂದ ಆಧಾರ್ ಆಧಾರಿತ ವೈಯಕ್ತಿಕ ಮಾಹಿತಿಯನ್ನು ಅಸಾಂವಿಧಾನಿಕವಾಗಿ ಪಡೆಯಲೆತ್ನಿಸುತ್ತಿರುವ ಸರಕಾರವು ಭಾರತ ಬಣವೆಯ ಹಿಂದಿರುವ ವ್ಯಕ್ತಿಗಳ ಗೋಫ್ಯತೆಯನ್ನು ರಕ್ಷಿಸುತ್ತಿರುವುದು ಇಡೀ ಯೋಜನೆಯ ನಿಜರೂಪವನ್ನು ತೋರಿಸುತ್ತದೆ. ಆಧಾರ್ ಯೋಜನೆಯ ಆರಂಭದ ವರ್ಷಗಳಲ್ಲಿ ಅದಕ್ಕೆ ನೇತೃತ್ವ ನೀಡಿದ್ದ ಮಹಾನ್ ತಂತ್ರಜ್ಞರೇ ಆಧಾರ್ ಆಧಾರಿತ ಮಾಹಿತಿಯ ಸಂಗ್ರಹಣೆ ಹಾಗೂ ವಿಶ್ಲೇಷಣೆಗೆ ಯಂತ್ರಕಲಿಕೆಯ ತಂತ್ರಗಳನ್ನು ಹೆಣೆಯುವ ಬಣವೆಗಳೊಳಗೆ ಅಡಗಿರುವ ಬಗ್ಗೆ ಮಾಧ್ಯಮಗಳಲ್ಲಿ ಊಹಾಪೋಹವಿರುವುದು ಇಡೀ ವ್ಯವಸ್ಥೆಯಲ್ಲಿರುವ ಅಪಾಯವನ್ನು ತೋರಿಸುತ್ತದೆ.

ಇಲಾಜು 20 – ವೈದ್ಯರಿಗೆ ಸ್ಪರ್ಧೆಯೊಡ್ಡಲಿವೆ ಕೃತಕ ಬುದ್ಧಿಮತ್ತೆಯ ಸಾಧನಗಳು

(ಆಗಸ್ಟ್ 9, 2018)

ಅತ್ಯಾಧುನಿಕ ತಂತ್ರಜ್ಞಾನಕ್ಕೆ ಹೆಬ್ಬಾಗಿಲನ್ನೇ ತೆರೆದಿಟ್ಟಿರುವ ವೈದ್ಯಕೀಯ ಕ್ಷೇತ್ರದೊಳಕ್ಕೆ ನುಗ್ಗುವುದಕ್ಕೆ ಕೃತಕ ಬುದ್ದಿಮತ್ತೆ ಮತ್ತು ಯಂತ್ರ ಕಲಿಕೆಯ ತಂತ್ರಗಳು ಸಜ್ಜಾಗುತ್ತಿವೆ. ಕ್ಯಾಮರಾದ ಮೂಲಕ ಮಾತ್ರೆಯ ಸೇವನೆಯ ಮೇಲೆ ನಿಗಾ ವಹಿಸಿ, ಸಂಬಂಧಿಕರಿಗೆ, ವೈದ್ಯರಿಗೆ, ಅಥವಾ ಔಷಧ ಕಂಪೆನಿಗಳವರಿಗೆ ತಿಳಿಸಬಲ್ಲ ಫೋನ್‌; ತನ್ನೊಡೆಯನ ಚಲನವಲನಗಳನ್ನೂ, ಮಾತುಕತೆಯನ್ನೂ ಗ್ರಹಿಸಿಕೊಳ್ಳುತ್ತಾ, ಅವು ಗಣನೀಯವಾಗಿ ಬದಲಾಗುತ್ತಿದ್ದಂತೆ ಮಾನಸಿಕ ಆರೋಗ್ಯ ತಜ್ಞರನ್ನು ಎಚ್ಚರಿಸುವ ಫೋನ್ ಮುಂತಾದವು ರೂಪುಗೊಳ್ಳುತ್ತಿವೆ!

ವೈದ್ಯಕೀಯ ಕ್ಷೇತ್ರಕ್ಕೆ ಅತ್ಯಾಧುನಿಕ ತಂತ್ರಜ್ಞಾನವು ಹೊಸದೇನಲ್ಲ. ಕ್ಷ-ಕಿರಣ, ಎಂಆರ್‌ಐ ಮುಂತಾದ ರೋಗ ಪತ್ತೆಯ ಸಾಧನಗಳಿಂದ ಹಿಡಿದು, ತಳಿ ತಂತ್ರಜ್ಞಾನ, ಹೊಚ್ಚ ಹೊಸ ಔಷಧಗಳ ಸಂಶೋಧನೆ, ಹೃದಯ, ಮಿದುಳು, ಮೂತ್ರಪಿಂಡ, ಯಕೃತ್ತು ಇತ್ಯಾದಿಗಳ ಕಾಯಿಲೆಗಳಿಗೆ ಅತ್ಯಾಧುನಿಕ ಶಸ್ತ್ರಚಿಕಿತ್ಸಾ ವಿಧಾನಗಳು ಮತ್ತು ಶಸ್ತ್ರಚಿಕಿತ್ಸೆಯಿಲ್ಲದೆಯೇ ತೂರುನಳಿಕೆಗಳ ಮೂಲಕ ನೀಡಲಾಗುವ ಚಿಕಿತ್ಸಾ ಕ್ರಮಗಳು ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿವೆ. ಗಣಕ ತಂತ್ರಜ್ಞಾನವು ಆರಂಭಗೊಂಡಂದಿನಿಂದ ವೈದ್ಯಕೀಯ ವಲಯದಲ್ಲೂ ಬಳಕೆಗೆ ಬಂದಿದೆ, ರೋಗ ಪತ್ತೆ, ಚಿಕಿತ್ಸೆ, ಸಂಶೋಧನೆ, ದತ್ತಾಂಶಗಳ ವಿಶ್ಲೇಷಣೆ, ವೈದ್ಯಕೀಯ ದಾಖಲೆಗಳ ನಿರ್ವಹಣೆ ಇತ್ಯಾದಿಗಳಲ್ಲಿ ಗಣಕೀಯ ಸಾಧನಗಳು ವ್ಯಾಪಕವಾಗಿ ಬಳಕೆಯಲ್ಲಿವೆ.

ಸಂಕೀರ್ಣ ಕೆಲಸಗಳನ್ನು ಸರಳಗೊಳಿಸುವುದಕ್ಕೆ ಗಣಕ ಯಂತ್ರಗಳ ಕ್ರಮಾವಳಿಗಳನ್ನು ಅಭಿವೃದ್ಧಿಪಡಿಸುವ ಕೆಲಸಗಳು 60-70ರ ದಶಕದಲ್ಲೇ ಆರಂಭಗೊಂಡು, ಗಣಕ ಯಂತ್ರಗಳ ಸಂಕೀರ್ಣತೆ ಮತ್ತು ವೇಗಗಳು ಹೆಚ್ಚಿದಂತೆ ಬಿರುಸಾಗುತ್ತಾ ಸಾಗಿದವು. ವೈದ್ಯರ ಕಛೇರಿಗಳಲ್ಲಿ ಮತ್ತು ಆಸ್ಪತ್ರೆಗಳಲ್ಲಿ ವೈದ್ಯಕೀಯ ದಾಖಲೆಗಳು, ಶುಲ್ಕ ಪಾವತಿಯ ಲೆಕ್ಕಾಚಾರ ಇತ್ಯಾದಿ ದೈನಂದಿನ ಕೆಲಸಗಳ ನಿರ್ವಹಣೆಯಲ್ಲಿ ಗಣಕ ವ್ಯವಸ್ಥೆಯ ಬಳಕೆಯು ಈಗ ಅನಿವಾರ್ಯವೆನಿಸುವಷ್ಟರ ಮಟ್ಟಿಗೆ ಸಾಮಾನ್ಯವಾಗಿದೆ. ಯಂತ್ರ ಕಲಿಕೆ ಹಾಗೂ ಕೃತಕ ಬುದ್ಧಿಮತ್ತೆಯಂತಹ ಸಂಕೀರ್ಣ ತಂತ್ರಜ್ಞಾನವು ಇತರ ಕ್ಷೇತ್ರಗಳಲ್ಲಿ ದೊಡ್ಡ ಮಟ್ಟಿಗೆ ದಾಳಿಯಿಡತೊಡಗಿದ್ದರೂ, ಅತ್ಯಂತ ಸಂಕೀರ್ಣವೂ, ಭಾವನಾತ್ಮಕವೂ ಆಗಿರುವ ರೋಗ ಪತ್ತೆ ಮತ್ತು ಚಿಕಿತ್ಸೆಗಳ ಕ್ಷೇತ್ರವನ್ನು ಹೊಕ್ಕುವುದಕ್ಕೆ ಅದು ಅತಿ ಜಾಗರೂಕತೆಯಿಂದಲೇ ಅಡಿಯಿಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಅದರ ವೇಗವು ಹೆಚ್ಚಿ ಹೊಸ ಭರವಸೆಗಳನ್ನು ಹುಟ್ಟಿಸಿದ್ದರೂ ಕೂಡ, ಸಾಕಷ್ಟು ಸಂಶಯಗಳಿಗೂ, ಆತಂಕಗಳಿಗೂ ಕಾರಣವಾಗಿದೆ.

ವಿಶ್ವದಾದ್ಯಂತ ಕೋಟಿಗಟ್ಟಲೆ ರೋಗಿಗಳ ವೈಯಕ್ತಿಕ ವಿಷಯಗಳು, ಕಾಯಿಲೆಗಳು ಮತ್ತು ಚಿಕಿತ್ಸೆಯ ವಿವರಗಳು ಈಗಾಗಲೇ ಗಣಕ ಯಂತ್ರಗಳೊಳಗೆ ದಾಖಲಾಗಿರುವುದರಿಂದ, ಈ ಗೋಫ್ಯ ಮಾಹಿತಿಯು ತಂತ್ರಜ್ಞರಿಗೆ ಲಭ್ಯವಾದರೆ ಕೃತಕ ಬುದ್ಧಿಮತ್ತೆಯ ಕ್ರಮಾವಳಿಗಳನ್ನು ಬೆಳೆಸುವುದಕ್ಕೆ ಅತ್ಯಂತ ಅನುಕೂಲವಾಗುತ್ತದೆ. ಆ ಮಾಹಿತಿಯನ್ನು ಪಡೆದು ವೈದ್ಯಕೀಯ ಕ್ಷೇತ್ರಕ್ಕೆ ಕೃತಕ ಬುದ್ದಿಮತ್ತೆಯನ್ನು ಬೆಳೆಸುವ ಕಾರ್ಯವು ಚುರುಕಾಗುತ್ತಿದ್ದು, ಗೂಗಲ್‌ನ ಡೀಪ್ ಮೈಂಡ್, ಐಬಿಎಂನ ವಾಟ್ಸನ್, ಮತ್ತು ಸ್ಟಾನ್‌ಫರ್ಡ್, ಆಕ್ಸ್‌ಫರ್ಡ್, ಹಾವರ್ಡ್, ವಾಂಡರ್‌ಬಿಲ್ಟ್ ಮುಂತಾದ ವಿಶ್ವವಿದ್ಯಾಲಯಗಳು ಸೇರಿದಂತೆ ಹಲವು ಪ್ರತಿಷ್ಠಿತ ಸಂಸ್ಥೆಗಳು ಕಣಕ್ಕಿಳಿದಿವೆ.

ಅಂತರಜಾಲವನ್ನು ತಡಕುವ ಯೋಜನೆಯಾಗಿ ಆರಂಭಗೊಂಡ ಗೂಗಲ್, ಜಾಲದೊಳಗಿರುವ ಮಾಹಿತಿಯ ಜೊತೆಗೆ ಕೋಟಿಗಟ್ಟಲೆ ಮನುಷ್ಯರ ವೈಯಕ್ತಿಕ ವಿವರಗಳು, ಪ್ರಾಣಿ-ಪಕ್ಷಿಗಳ ಚಿತ್ರಗಳು ಮತ್ತು ಭೂಗೋಲದ ಮೂಲೆ-ಮೂಲೆಗಳ ಪಟಗಳನ್ನು ತನ್ನ ಕಣಜದೊಳಕ್ಕೆ ತುಂಬಿಸಿಕೊಂಡು ಮಾಹಿತಿ ದೈತ್ಯನಾಗಿ ಬೆಳೆದಿದೆ. ಗೂಗಲ್ ತಂತ್ರಜ್ಞರು ರೂಪಿಸಿರುವ ವಿಶೇಷ ಕ್ರಮಾವಳಿಗಳು ಈ ಅಗಾಧ ಮಾಹಿತಿಯನ್ನು ಜಾಲಾಡಿ ವಿಶ್ಲೇಷಿಸುತ್ತವೆ, ಯಾರು ಏನು ಮಾಡುತ್ತಿದ್ದಾರೆ, ಎಲ್ಲಿಗೆ ಹೋಗುತ್ತಿದ್ದಾರೆ, ಯಾರ ಪಟ ಹೇಗಿದೆ, ಯಾವ ದಾರಿಯಲ್ಲಿ ಏನಿದೆ ಎಂಬುದನ್ನೆಲ್ಲ ಗೂಗಲ್‌ಗೆ ತಿಳಿಸುತ್ತವೆ. ಈ ಯಂತ್ರಕಲಿಕೆಯ ವಿಧಾನಗಳನ್ನು ಗೂಗಲ್‌ನ ಡೀಪ್ ಮೈಂಡ್ ಯೋಜನೆಯಡಿಯಲ್ಲಿ ವೈದ್ಯಕೀಯ ಕ್ಷೇತ್ರಕ್ಕೂ ವಿಸ್ತರಿಸಲಾಗುತ್ತಿದೆ. ಬ್ರಿಟನ್‌ನ ರಾಷ್ಟ್ರೀಯ ಆರೋಗ್ಯ ಸೇವಾ ಸಂಸ್ಥೆ, ಪ್ರತಿಷ್ಠಿತ ಮೂರ್‌ಫೀಲ್ಡ್ಸ್ ಕಣ್ಣು ಆಸ್ಪತ್ರೆ, ಕ್ಯಾನ್ಸರ್ ಸಂಶೋಧನಾ ಸಂಸ್ಥೆ ಮುಂತಾದವು ತಮ್ಮಲ್ಲಿರುವ ಲಕ್ಷಗಟ್ಟಲೆ ರೋಗಿಗಳ ಮಾಹಿತಿಯನ್ನು ಗೂಗಲ್‌ಗೆ ಒದಗಿಸಿ, ಯಂತ್ರಕಲಿಕೆಯ ತಂತ್ರಾಂಶಗಳನ್ನು ರೂಪಿಸುವಲ್ಲಿ ಜೊತೆಗೂಡಿವೆ. ರೋಗಿಗಳ ದಾಖಲೆಗಳ ತಡಕಾಟವನ್ನು ಸುಲಭಗೊಳಿಸುವುದು, ಅಕ್ಷಿಪಟಲದ ಚಿತ್ರಗಳಲ್ಲಿ ಕಾಯಿಲೆಗಳನ್ನು ಗುರುತಿಸುವುದು, ಸ್ತನದ ಚಿತ್ರ (ಮಾಮೊಗ್ರಾಂ) ಗಳಲ್ಲಿ ಕ್ಯಾನ್ಸರ್ ಗುರುತಿಸುವುದು, ಇತ್ಯಾದಿಗಳಿಗೆ ಕೃತಕ ಬುದ್ಧಿಮತ್ತೆಯನ್ನು ಬಳಸುವ ಪ್ರಯತ್ನಗಳು ನಡೆದಿವೆ. ಈ ನಡುವೆ, ಗೂಗಲ್ ಸೃಷ್ಟಿಸಿದ ಕೃತಕ ಬುದ್ಧಿಮತ್ತೆಯ ತಂತ್ರಾಂಶವೊಂದು ತೀವ್ರ ನಿಗಾ ಘಟಕದಲ್ಲಿ ದಾಖಲಾದವರು 24 ಗಂಟೆಗಳೊಳಗೆ ಸಾವನ್ನಪ್ಪುವ ಸಾಧ್ಯತೆಗಳನ್ನು ಶೇ. 95 ಪ್ರಕರಣಗಳಲ್ಲಿ ಸರಿಯಾಗಿ ಅಂದಾಜಿಸುವ ಮೂಲಕ ಸುದ್ದಿ ಮಾಡಿದೆ.

ಐಬಿಎಂ ವಾಟ್ಸನ್‌ನ ಕೃತಕ ಬುದ್ದಿಮತ್ತೆಯು ತನ್ನೊಳಗಿರುವ ಮಾಹಿತಿಯನ್ನು ತಡಕಾಡಿ, ವಿಶ್ಲೇಷಿಸಿ, ಪ್ರಶ್ನೆಗಳಿಗೆ ಸೂಕ್ತವಾದ ಉತ್ತರವನ್ನು ನೀಡುವಂಥದ್ದಾಗಿದೆ, ಟಿವಿ ವಾಹಿನಿಗಳಲ್ಲಿ ಬಿತ್ತರವಾಗುವ ಜನಪ್ರಿಯ ಪ್ರಶ್ನೋತ್ತರ ಕಾರ್ಯಕ್ರಮಗಳಲ್ಲಿ ಈ ವಾಟ್ಸನ್ ಗೆದ್ದಿರುವುದೂ ಇದೆ. ರೋಗಿಗಳ ವಿವರಗಳು, ವೈದ್ಯರ ಚಿಕಿತ್ಸಾ ನಿರ್ಣಯಗಳು, ಚಿಕಿತ್ಸಾ ಮಾನದಂಡಗಳು, ಸಂಶೋಧನಾ ವರದಿಗಳು ಇತ್ಯಾದಿಗಳನ್ನೆಲ್ಲ ತುಂಬಿಸಿ, ರೋಗಪತ್ತೆ ಹಾಗೂ ಚಿಕಿತ್ಸೆಗೆ ನೆರವಾಗಲೆಂದು ವೈದ್ಯಕೀಯ ವಾಟ್ಸನ್ ರೂಪುಗೊಂಡಿದೆ. ಅಮೆರಿಕಾದ ಪ್ರತಿಷ್ಠಿತ ಕ್ಯಾನ್ಸರ್ ಸಂಸ್ಥೆಗಳಾದ ಎಂಡಿ ಆಂಡರ್‌ಸನ್ ಕೇಂದ್ರ, ಮೆಮೋರಿಯಲ್ ಸ್ಲೋನ್ ಕೆಟರಿಂಗ್ ಕೇಂದ್ರ, ಹಾಗೂ ಕ್ಲೀವ್‌ಲೇಂಡ್ ಕ್ಲಿನಿಕ್‌ಗಳಲ್ಲಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ವಾಟ್ಸನ್‌ನ ನೆರವು ಪಡೆಯುವ ಪ್ರಯತ್ನಗಳು ನಡೆದಿವೆ. ಆದರೆ, ವಾಟ್ಸನ್ ನೀಡಿದ ಸಲಹೆಗಳು ಕೆಲವೊಮ್ಮೆ ತಪ್ಪಾಗಿದ್ದುದರಿಂದ ವೈದ್ಯರ ವಿಶ್ವಾಸವನ್ನು ಗಳಿಸುವಲ್ಲಿ ಇನ್ನೂ ಸಫಲವಾಗಿಲ್ಲ.

ರೋಗಿಗಳ ವೈದ್ಯಕೀಯ ದಾಖಲೆಗಳನ್ನು ವಿಶ್ಲೇಷಿಸುವುದು, ಅವುಗಳಲ್ಲಿ ನುಸುಳಿರಬಹುದಾದ ತಪ್ಪುಗಳನ್ನು ಗುರುತಿಸುವುದು, ಅಪರೂಪದ ರೋಗಗಳನ್ನು ಹುಡುಕುವುದು, ರೋಗಿಗೆ ಮುಂಬರಬಹುದಾದ ಅಪಾಯಗಳನ್ನೂ, ಪದೇ ಪದೇ ದಾಖಲಾಗಬೇಕಾಗುವ ಸಾಧ್ಯತೆಗಳನ್ನೂ ಲೆಕ್ಕ ಹಾಕುವುದು ಇತ್ಯಾದಿಗಳಿಗೆ ಕೃತಕ ಬುದ್ಧಿಮತ್ತೆಯ ತಂತ್ರಾಂಶಗಳು ಈಗಾಗಲೇ ಬಳಕೆಗೆ ಬಂದಿವೆ. ವಿಮಾ ಕಂಪೆನಿಗಳಿಗೆ ಸಾಕಷ್ಟು ಹಣ ಉಳಿಸಲು ಅವು ನೆರವಾಗುತ್ತಿವೆ ಎಂದೂ ಹೇಳಲಾಗಿದೆ. ಎದೆಯ ಕ್ಷಕಿರಣ ಚಿತ್ರಗಳಲ್ಲಿ ಕ್ಷಯ ರೋಗವನ್ನು ಗುರುತಿಸುವುದು, ಹೃದಯದ ಸ್ಕಾನ್‌ಗಳಲ್ಲಿ ವ್ಯತ್ಯಾಸಗಳನ್ನು ಗುರುತಿಸುವುದು, ಚರ್ಮದ ಚಿತ್ರಗಳಲ್ಲಿ ಕ್ಯಾನ್ಸರ್ ಗುರುತಿಸುವುದು, ರೋಗಗ್ರಸ್ತ ಅಂಗಾಂಶದ (ಬಯಾಪ್ಸಿ) ಸೂಕ್ಷ್ಮ ಪರೀಕ್ಷೆಯಲ್ಲಿ ಕ್ಯಾನ್ಸರ್‌ ಮುಂತಾದ ರೋಗಗಳನ್ನು ಗುರುತಿಸುವುದು ಇತ್ಯಾದಿಗಳಿಗೂ ಕೃತಕ ಬುದ್ಧಿಮತ್ತೆಯ ತಂತ್ರಗಳು ರೂಪುಗೊಳ್ಳುತ್ತಿವೆ. ರೋಗಪತ್ತೆಯನ್ನು ಸುಲಭವೂ, ನಿಖರವೂ ಆಗಿಸುವುದರ ಜೊತೆಗೆ, ತಜ್ಞರು ದೊರೆಯದ ಸನ್ನಿವೇಶಗಳಲ್ಲಿ ವಿಶೇಷವಾಗಿ ನೆರವಾಗಬಲ್ಲ ಭರವಸೆಯನ್ನು ಇವು ಮೂಡಿಸಿವೆ. ಸಂಕೀರ್ಣ ಶಸ್ತ್ರಕ್ರಿಯೆಗಳನ್ನು ನಡೆಸುವುದಕ್ಕೆ ಮತ್ತು ದೇಹದೊಳಗಿನ ಅಂಗಗಳನ್ನು ಪರೀಕ್ಷಿಸುವುದಕ್ಕೆ (ಎಂಡಾಸ್ಕಪಿ) ನೆರವಾಗಬಲ್ಲ ಕೃತಕ ಬುದ್ಧಿಮತ್ತೆಯ ಸಾಧನಗಳೂ ಸಜ್ಜಾಗುತ್ತಿವೆ.

ಆದರೆ ಸದ್ಯಕ್ಕೆ ಇವೆಲ್ಲವೂ ಪ್ರಾಯೋಗಿಕ ಹಂತದಲ್ಲಷ್ಟೇ ಇದ್ದು, ಅವುಗಳ ಪ್ರಯೋಜನ ಹಾಗೂ ಸುರಕ್ಷತೆಗಳ ಬಗ್ಗೆ ವಿಶ್ವಾಸಾರ್ಹವಾದ ಅಧ್ಯಯನಗಳು ಇನ್ನಷ್ಟೇ ಆಗಬೇಕಾಗಿದೆ. ಜೊತೆಗೆ, ವೈದ್ಯಕೀಯ ಕ್ಷೇತ್ರದಲ್ಲಿ ಕೃತಕ ಬುದ್ದಿಮತ್ತೆಯ ತಂತ್ರಜ್ಞಾನದ ಬಳಕೆಯ ಬಗ್ಗೆ ಹಲವು ಆತಂಕಗಳೂ, ಆಕ್ಷೇಪಗಳೂ ವ್ಯಕ್ತವಾಗಿವೆ. ರೋಗಿಗಳ ಒಪ್ಪಿಗೆಯಿಲ್ಲದೆ ಅವರ ಮಾಹಿತಿಯೆಲ್ಲವನ್ನೂ ಗೂಗಲ್‌ನಂತಹ ಕಂಪೆನಿಗಳಿಗೆ ಒಪ್ಪಿಸಿರುವುದನ್ನು ಪ್ರಶ್ನಿಸಲಾಗಿದೆ. ಹೃದಯ ಗತಿ, ರಕ್ತದೊತ್ತಡ, ತೂಕ, ನಿತ್ಯ ವ್ಯಾಯಾಮ, ರಕ್ತದ ಗ್ಲೂಕೋಸ್ ಪ್ರಮಾಣ ಇತ್ಯಾದಿ ವೈಯಕ್ತಿಕ ವಿವರಗಳು ಕೈಯೊಳಗಿನ ಫೋನ್‌ಗಳು ಹಾಗೂ ಧರಿಸುವ ಇತರ ಸಾಧನಗಳ ಮೂಲಕ ಕ್ಷಣಕ್ಷಣಕ್ಕೂ ವಿವಿಧ ಕಂಪೆನಿಗಳಿಗೆ ತಲುಪುತ್ತಿರುವುದರಿಂದ ಅವುಗಳ ಬಳಕೆಯ ಬಗ್ಗೆಯೂ ಸಂಶಯಗಳೆದ್ದಿವೆ.

ರೋಗಿಗೆ ಅಗತ್ಯವಿರುವ ಪರೀಕ್ಷೆಗಳು ಮತ್ತು ಚಿಕಿತ್ಸೆಯ ಬಗ್ಗೆ ನಿರ್ಣಯಿಸುವಾಗ ನುರಿತ ವೈದ್ಯರು ತಮ್ಮ ಜ್ಞಾನ, ಕೌಶಲ, ಅನುಭವಗಳ ಜೊತೆಗೆ, ರೋಗಿಯ ಆರ್ಥಿಕ-ಸಾಮಾಜಿಕ-ಕೌಟುಂಬಿಕ ಸ್ಥಿತಿಗತಿಗಳೆಲ್ಲವನ್ನೂ ಸಹಾನುಭೂತಿಯಿಂದ ಪರಿಗಣಿಸುತ್ತಾರೆ. ಆದ್ದರಿಂದ ಅತ್ಯುತ್ತಮವಾಗಿ ತರಬೇತಾಗಿರುವ, ಮನುಷ್ಯರ ಕಷ್ಟಗಳನ್ನೆಲ್ಲ ಅರಿತಿರುವ, ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡಿರುವ ವೈದ್ಯರನ್ನು ಮೀರಿಸುವುದಕ್ಕೆ ಯಂತ್ರಗಳ ಕೃತಕ ಬುದ್ಧಿಮತ್ತೆಗೆ ಎಂದಿಗೂ ಸಾಧ್ಯವಾಗದು. ಆದರೆ ಮಾನವೀಯ ಕಳಕಳಿಯಿಲ್ಲದ, ಜ್ಞಾನ-ಕೌಶಲಗಳೂ ಸರಿಯಿಲ್ಲದ, ರೋಗಿಯ ಅಗತ್ಯಕ್ಕಿಂತಲೂ ತನ್ನ ಸ್ವಂತ ಅಗತ್ಯಗಳಿಗಾಗಿ ಪರೀಕ್ಷೆ-ಚಿಕಿತ್ಸೆಗಳನ್ನು ಬರೆಯುವ ವೈದ್ಯರಿಗೆ, ಸಾಕ್ಷ್ಯಾಧಾರಿತವಾಗಿ ಚಿಕಿತ್ಸೆಯನ್ನು ಸೂಚಿಸಬಲ್ಲ ಕೃತಕ ಬುದ್ಧಿಮತ್ತೆಯ ಸಾಧನಗಳು ತೀವ್ರ ಸ್ಪರ್ಧೆಯೊಡ್ಡಲಿರುವುದು ನಿಶ್ಚಿತ.

ಇಲಾಜು 19 – ವೈಜ್ಞಾನಿಕ ಮಾರ್ಗದ ಬದಲು ಅನ್ಯಾಯದ ಹಾದಿ ಹಿಡಿದ ವೈದ್ಯಕೀಯ ಸಂಸ್ಥೆಗಳು

(ಜುಲೈ 25, 2018)

ಮಾನಸಿಕ ಸಮಸ್ಯೆಗೆ ಎಲ್ಲೂ ಪರಿಹಾರ ಕಾಣದೆ ದೇಶದ ಅತ್ಯುನ್ನತ ಸಂಸ್ಥೆಯಾದ ಬೆಂಗಳೂರಿನ ನಿಮ್ಹಾನ್ಸ್‌ಗೆ ಹೋದವರನ್ನು ಅಲ್ಲಿನ ಕೆಲ ವೈದ್ಯರು ಯೋಗಾಭ್ಯಾಸದತ್ತ ತಳ್ಳಬಹುದೇ? ತೀವ್ರ ಅಸ್ತಮಾದಿಂದ ನರಳುತ್ತಿರುವ ಮಗುವನ್ನು ಅತಿ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನ ಶಿಶು ರೋಗ ತಜ್ಞರು ಪ್ರಾಣಾಯಾಮಕ್ಕೆ ದೂಡಬಹುದೇ? ಅತ್ಯಾಧುನಿಕ ತರಬೇತಿಯನ್ನೂ, ಕಾನೂನು ಬದ್ಧವಾದ ನೋಂದಣಿಯನ್ನೂ ಪಡೆದಿರುವ ವೈದ್ಯರು ಇದಾವುದೂ ಇಲ್ಲದ ಸ್ವಘೋಷಿತ ಚಿಕಿತ್ಸಕರಿಗೆ ಮಣೆ ಹಾಕಬಹುದೇ? ಇವು ವೈದ್ಯ ವೃತ್ತಿಯ ಘನತೆಗೆ ಮಾತ್ರವಲ್ಲ, ಆಧುನಿಕ ಚಿಕಿತ್ಸೆಯನ್ನು ಬಯಸಿ ಬಂದ ಜನರಿಗೂ ಮಾಡುವ ದ್ರೋಹವಲ್ಲವೇ? ಪ್ರಜ್ಞಾವಂತರೆಲ್ಲರೂ ಕೇಳಲೇಬೇಕಾದ ಪ್ರಶ್ನೆಗಳಿವು.

ಯೋಗವಲ್ಲದ ಯೋಗವನ್ನು ಎಲ್ಲೆಡೆ ಹರಡಲಾಗುತ್ತಿದೆ. ಯೂರೋಪಿನ ದೈಹಿಕ ಕಸರತ್ತುಗಳು – ಜಿಮ್ನಾಸ್ಟಿಕ್ಸ್ – ಯೋಗಾಸನಗಳೆಂದು ನಾಮಾಂತರಗೊಂಡು ಶಾಲೆ-ಕಾಲೇಜು-ವ್ಯಾಯಾಮ ಶಾಲೆಗಳನ್ನು ಹೊಕ್ಕಿವೆ. ವ್ರಾತ್ಯ-ವಿರಕ್ತರ ಸಾಧನೆಯಾಗಿದ್ದ ಪ್ರಾಣಾಯಾಮವು ಉಸಿರಾಟವನ್ನು ಕಲಿಸುವವರ ಸರಕಾಗುತ್ತಿದೆ. ಈ ಧ್ಯಾನ-ವ್ಯಾಯಾಮಗಳ ಜಾಗತಿಕ ವಹಿವಾಟು ವರ್ಷಕ್ಕೆ 8000 ಕೋಟಿ ಡಾಲರ್ (ಐದೂವರೆ ಲಕ್ಷ ಕೋಟಿ ರೂಪಾಯಿ) ದಾಟಿದೆ. ಹಿಂದೆಂದೂ ಚಿಕಿತ್ಸಾ ಪದ್ಧತಿಯೇ ಆಗಿರದಿದ್ದ ಯೋಗಾಭ್ಯಾಸಕ್ಕೆ ಆಧುನಿಕ ಆಸ್ಪತ್ರೆಗಳಲ್ಲೂ ಪ್ರತ್ಯೇಕ ವಿಭಾಗವು ದೊರೆಯತೊಡಗಿದೆ. ಹಿರಿಯ ವೈದ್ಯರಿಂದ ಉದ್ಘಾಟನೆ, ಉಪನ್ಯಾಸ, ಹೊಸ ಚಿಕಿತ್ಸಾ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆಗಳಿರುತ್ತಿದ್ದ ವೈದ್ಯಕೀಯ ಸಮ್ಮೇಳನಗಳಲ್ಲಿ ಈಗೀಗ ಬಾಬಾ-ಶ್ರೀಶ್ರೀಗಳಿಂದ ಉದ್ಘಾಟನೆ, ಆಶೀರ್ವಚನ, ಪ್ರವಚನ, ಯೋಗ ಪ್ರಾತ್ಯಕ್ಷಿಕೆಗಳು ಸಾಮಾನ್ಯವಾಗುತ್ತಿವೆ. ವೈದ್ಯ ವಿಜ್ಞಾನವನ್ನು ಪಾಲಿಸಬೇಕಾದವರು ವೈಜ್ಞಾನಿಕ ಮನೋವೃತ್ತಿಯಿಂದ ವಿಮುಖರಾಗುತ್ತಿರುವ ಲಕ್ಷಣಗಳಿವು.

ಮಾನಸಿಕ ಆರೋಗ್ಯಕ್ಕೂ ಯೋಗಾಭ್ಯಾಸವನ್ನು ಮುಂದೊತ್ತುವ ಪ್ರಯತ್ನಗಳಾಗುತ್ತಲೇ ಇವೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಜೂನ್ 25ರಂದು ಚಿತ್ರವೊಂದನ್ನು ಪ್ರಕಟಿಸಿ, ಖಿನ್ನತೆಯನ್ನು ಎದುರಿಸಲು ಯೋಗ, ನಡೆದಾಟ, ಹಣ್ಣು ಸೇವನೆ, 8 ಗಂಟೆಗಳ ನಿದ್ದೆ, ಧನಾತ್ಮಕ ಯೋಚನೆಗಳನ್ನು ಮಾಡಬೇಕೆಂದು ಸಲಹೆ ನೀಡಿತು. ಭಾರತೀಯ ವೈದ್ಯಕೀಯ ಸಂಘ (ಐಎಂಎ) ವು ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ವೈದ್ಯರ ಮಾನಸಿಕ ಆರೋಗ್ಯಕ್ಕೆಂದು ಜುಲೈ 8ರಂದು ಮೂರು ಯೋಗ ಸಂಸ್ಥೆಗಳೊಂದಿಗೆ ಕಾರ್ಯಕ್ರಮವೊಂದನ್ನು ಆಯೋಜಿಸಿತು. ಇವೆರಡನ್ನೂ ಅನೇಕ ತಜ್ಞರು ಉಗ್ರವಾಗಿ ವಿರೋಧಿಸಿದರು. ಭಾರತೀಯ ಮನೋರೋಗ ತಜ್ಞರ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಸೇರಿದಂತೆ ಹಲವಾರು ತಜ್ಞರು ಹಾಗೂ ಖಿನ್ನತೆಯಿಂದ ನರಳುತ್ತಿದ್ದ ಹಲವರು ಸರಕಾರದ ಆ ಪ್ರಕಟಣೆಯನ್ನು ಖಂಡಿಸಿದರು, ಛೇಡಿಸಿದರು; ಖಿನ್ನತೆಯುಳ್ಳವರು ಯಾವುದನ್ನು ಮಾಡಲು ಕಷ್ಟ ಪಡುತ್ತಾರೋ, ಅಂಥವನ್ನೇ ಅವರಿಗೆ ಬೋಧಿಸುವುದು ಮೂರ್ಖತನವೆಂದೂ, ಖಿನ್ನತೆಯು ಇನ್ನಷ್ಟು ಬಿಗಡಾಯಿಸಲು ಕಾರಣವಾಗುತ್ತದೆಂದೂ, ಖಿನ್ನತೆಯ ನಿವಾರಣೆಗೆ ಸೂಕ್ತ ವೈದ್ಯಕೀಯ ಚಿಕಿತ್ಸೆಯು ಅತ್ಯಗತ್ಯವಾಗಿದ್ದು, ಇಂಥ ಬೋಧನೆಗಳಲ್ಲವೆಂದೂ ಸರಕಾರಕ್ಕೆ ಸ್ಪಷ್ಟಪಡಿಸಿದರು. ಐಎಂಎಯು ಯೋಗ ಸಂಸ್ಥೆಗಳೊಂದಿಗೆ ಕೈಜೋಡಿಸಿದ್ದನ್ನು ಹಲವು ವೈದ್ಯರು ಕಟುವಾಗಿ ವಿರೋಧಿಸಿದರು, ಮಾನಸಿಕ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಔಷಧಗಳೂ, ಮನೋತಜ್ಞರೂ ಬೇಕೇ ಹೊರತು, ಆಧಾರವಿಲ್ಲದ ಯೋಗಾಭ್ಯಾಸವಾಗಲೀ, ಸ್ವಘೋಷಿತ ಯೋಗ ಗುರುಗಳಾಗಲೀ ಅಲ್ಲವೆಂದು ನೆನಪಿಸಿದರು. ಐಎಂಎ ಅಲ್ಲಿಗೇ ತಟಸ್ಥವಾಯಿತು, ಕಾರ್ಯಕ್ರಮವೂ ಹೆಸರಿಗಷ್ಟೇ ನಡೆಯಿತು.

ಮಾನಸಿಕ ಆರೋಗ್ಯಕ್ಕಾಗಿ ದೇಶದ ಅತ್ಯುನ್ನತ ಸಂಸ್ಥೆಯಾದ ನಿಮ್ಹಾನ್ಸ್‌ನಲ್ಲಿ ನೂರಾರು ಕೋಟಿ ವೆಚ್ಚದಲ್ಲಿ ಯೋಗ ಚಿಕಿತ್ಸೆಗೆಂದೇ ಪ್ರತ್ಯೇಕ ಕೇಂದ್ರವನ್ನು ಸ್ಥಾಪಿಸಲಾಗಿರುವುದು ಯೋಗವನ್ನು ಎಲ್ಲೆಡೆ ಹರಡುವ ಯೋಜನೆಯ ಭಾಗವೆಂದೇ ಅನಿಸುತ್ತದೆ. ಎಲ್ಲವನ್ನೂ ಕೂಲಂಕಷವಾಗಿ ಪರೀಕ್ಷಿಸಿ, ಪ್ರಶ್ನಿಸುವ ಮನೋವೃತ್ತಿಯನ್ನು ವಿದ್ಯಾರ್ಥಿಗಳೊಳಕ್ಕೆ ತುಂಬುವ ನಿಮ್ಹಾನ್ಸ್‌ನಲ್ಲಿ ಸಾಕಷ್ಟು ಆಧಾರಗಳಿಲ್ಲದ ಯೋಗಚಿಕಿತ್ಸೆಯನ್ನು ಉತ್ತೇಜಿಸುತ್ತಿರುವುದು ವಿಪರ್ಯಾಸವೇ ಆಗಿದೆ. ನಿಮ್ಹಾನ್ಸ್‌ನ ಯೋಗ ಕೇಂದ್ರವನ್ನು ಬೆಳೆಸುತ್ತಿರುವ ಇಬ್ಬರು ಹಿರಿಯ ಮನೋರೋಗ ತಜ್ಞರು ಮಾನಸಿಕ ಸಮಸ್ಯೆಗಳ ಚಿಕಿತ್ಸೆಯಲ್ಲಿ ಯೋಗಾಭ್ಯಾಸದ ಪಾತ್ರದ ಬಗ್ಗೆ ಅಧ್ಯಾಯವೊಂದನ್ನು ಬರೆದಿದ್ದು, ಒಂದೇ ಒಂದು ಮಾನಸಿಕ ಸಮಸ್ಯೆಗೂ ಯೋಗಾಭ್ಯಾಸದಿಂದ ಸ್ಪಷ್ಟವಾದ ಪ್ರಯೋಜನವಿದೆಯೆಂಬ ಆಧಾರವು ಅದರಲ್ಲೆಲ್ಲೂ ಕಾಣಿಸುವುದಿಲ್ಲ. ಬದಲಿಗೆ, ಈ ಬಗ್ಗೆ ಉತ್ತಮ ಗುಣಮಟ್ಟದ ಅಧ್ಯಯನಗಳ ಅಗತ್ಯವಿದೆ ಮತ್ತು ಮಾನಸಿಕ ಕಾಯಿಲೆಗಳ ಚಿಕಿತ್ಸೆಯಲ್ಲಿ ಯೋಗವನ್ನು ಸಹ-ಚಿಕಿತ್ಸೆಯಾಗಿ ಬಳಸುವುದಕ್ಕೆ ಸಾಧ್ಯವೇ ಎಂದು ಪರೀಕ್ಷಿಸುವುದಕ್ಕೆ ಅವಕಾಶವಿದೆ ಎಂದಷ್ಟೇ ಅದರಲ್ಲಿ ಹೇಳಲಾಗಿದೆ. ಹಾಗಿರುವಾಗ, ದೃಢವಾದ ಆಧಾರಗಳಿಲ್ಲದ ಯೋಗಚಿಕಿತ್ಸೆಯನ್ನು ನಿಮ್ಹಾನ್ಸ್‌ನಂತಹ ಸಂಸ್ಥೆಯಲ್ಲಿ ನೀಡಹೊರಟಿರುವುದರ ಔಚಿತ್ಯವೇನು?

ಮಾನಸಿಕ ಆರೋಗ್ಯ ರಕ್ಷಣೆಯಲ್ಲಿ ಯೋಗಾಭ್ಯಾಸದ ಪಾತ್ರದ ಬಗ್ಗೆ ನಿಮ್ಹಾನ್ಸ್ ಸೇರಿದಂತೆ ದೇಶ-ವಿದೇಶಗಳಲ್ಲಾಗಿರುವ ಹಲವಾರು ಅಧ್ಯಯನಗಳ ಕ್ರಮಬದ್ಧತೆ ಮತ್ತು ವಿಶ್ವಾಸಾರ್ಹತೆಗಳನ್ನು ಪ್ರಶ್ನಿಸಲಾಗಿದೆ. ಯಾವ ಸಮಸ್ಯೆಗೆ ಯಾವ ಯೋಗಾಭ್ಯಾಸ, ಯಾವಾಗ, ಎಷ್ಟು, ಯಾರಿಂದ, ಹೇಗೆ ಎಂಬುದು ಸ್ಪಷ್ಟವಾಗಿಲ್ಲದಿರುವಾಗ ಯಾವುದೇ ಮಾನಸಿಕ ಯಾ ದೈಹಿಕ ಕಾಯಿಲೆಗೆ ಯೋಗಾಭ್ಯಾಸವನ್ನು ಸೂಚಿಸುವುದು ಸಾಧ್ಯವಲ್ಲ, ಸಾಧುವೂ ಅಲ್ಲ; ಚಿಕಿತ್ಸೆಯಲ್ಲಿ ಯೋಗಾಭ್ಯಾಸಕ್ಕೆ ಪಾತ್ರವಿರಬೇಕೆಂದು ಒತ್ತಾಯಿಸುವವರು, ಮತ್ತು ಆ ಬಗ್ಗೆ ಅಧ್ಯಯನಗಳನ್ನು ನಡೆಸುತ್ತಿರುವವರು ಯೋಗಾಭ್ಯಾಸದ ನಿಜವಾದ ಇತಿಹಾಸವನ್ನೂ, ತಿರುಳನ್ನೂ ಸರಿಯಾಗಿ ಅರ್ಥೈಸಿಕೊಳ್ಳಬೇಕಾಗುತ್ತದೆ, ಮತ್ತು ಯಾವುದೇ ಸಾಮಾಜಿಕ-ರಾಜಕೀಯ ಆಯಾಮಗಳನ್ನು ಯೋಗಾಭ್ಯಾಸದೊಂದಿಗೆ ತಳುಕು ಹಾಕದೇ, ಕೇವಲ ಜನಸಾಮಾನ್ಯರ ಹಿತಾಸಕ್ತಿಗಳನ್ನಷ್ಟೇ ಪರಿಗಣಿಸಿ ಕ್ರಮಬದ್ಧವಾದ ಅಧ್ಯಯನಗಳನ್ನು ನಡೆಸುವ ಅಗತ್ಯವಿದೆ ಎಂದು ತಜ್ಞರ ಅಭಿಮತವಾಗಿದೆ.[Indian J Psychiatry 2013;55:S409-14; Journal of Primary Care & Community Health 2017;8(1):31–36]

ಮಾನಸಿಕ ಆರೋಗ್ಯಕ್ಕಾಗಿ ವಿಶ್ವದೆಲ್ಲೆಡೆ ಕಾರ್ಯಕ್ರಮಗಳಿದ್ದು, ಭಾರತದಲ್ಲೂ ಮಾನಸಿಕ ಆರೋಗ್ಯದಲ್ಲಿ ಪರಿಣತರಾದ ವೈದ್ಯರು ಮತ್ತು ಮನೋಚಿಕಿತ್ಸಜ್ಞರು ಅವಿರತವಾಗಿ ದುಡಿಯುತ್ತಲೇ ಇದ್ದಾರೆ. ಭಾರತದಲ್ಲಿ ಸುಮಾರು 7 ಕೋಟಿ ಜನರಲ್ಲಿ ಮಾನಸಿಕ ಸಮಸ್ಯೆಗಳಿದ್ದು, ಸುಮಾರು 5 ಕೋಟಿ ಜನರಲ್ಲಿ ಖಿನ್ನತೆ ಹಾಗೂ ಆತಂಕಗಳಂತಹ ಸಮಸ್ಯೆಗಳೂ, ಇನ್ನುಳಿದ 2 ಕೋಟಿಯಲ್ಲಿ ಇಚ್ಚಿತ್ತ ವಿಕಲತೆ ಹಾಗೂ ಉನ್ಮಾದ-ಖಿನ್ನತೆಗಳೆರಡೂ ಇರುವ ತೀವ್ರ ಸಮಸ್ಯೆಗಳೂ ಕಂಡು ಬರುತ್ತವೆ. ಇನ್ನೆರಡು ವರ್ಷಗಳಾಗುವಾಗ ಶೇ. 20ರಷ್ಟು ಜನರಲ್ಲಿ ಒಂದಿಲ್ಲೊಂದು ಮಾನಸಿಕ ಸಮಸ್ಯೆಯಿರಬಹುದೆಂದು ಅಂದಾಜಿಸಲಾಗಿದೆ. ಈಗ ವರ್ಷಕ್ಕೆ ಸುಮಾರು 135000 ಆತ್ಮಹತ್ಯೆಗಳಾಗುತ್ತಿದ್ದು, ಗಂಟೆಗೊಬ್ಬ ವಿದ್ಯಾರ್ಥಿಯ ಜೀವವು ಕೊನೆಯಾಗುತ್ತಿದೆ. ಮುಂದುವರಿದ ದೇಶಗಳಲ್ಲಿ ಲಕ್ಷ ಜನರಿಗೆ 15-30 ಮನೋರೋಗ ಚಿಕಿತ್ಸಕರಿದ್ದರೆ, ನಮ್ಮಲ್ಲಿ ಮೂವರಷ್ಟೇ ಇದ್ದಾರೆ; ಅಲ್ಲಿ ಶೇ.70ರಿಂದ 80ಕ್ಕೂ ಹೆಚ್ಚು ಮನೋರೋಗಿಗಳಿಗೆ ತಜ್ಞರಿಂದ ಚಿಕಿತ್ಸೆ ದೊರೆಯುತ್ತಿದ್ದರೆ, ನಮ್ಮಲ್ಲಿ ಶೇ. 10ರಷ್ಟು ಮನೋರೋಗಿಗಳಿಗಷ್ಟೇ ದೊರೆಯುತ್ತಿದೆ. ಅಲ್ಲಿ ಮಾನಸಿಕ ಆರೋಗ್ಯ ರಕ್ಷಣೆಗೆ ಒಟ್ಟು ಆರೋಗ್ಯ ವೆಚ್ಚದ ಶೇ. 6ರಷ್ಟು ಮುಡಿಪಾಗಿದ್ದರೆ, ಇಲ್ಲಿ ಕೇವಲ ಶೇ. 0.06% ಇದೆ. ಜೊತೆಗೆ, ಮಾನಸಿಕ ಕಾಯಿಲೆಗಳ ಬಗ್ಗೆ ಅಜ್ಞಾನವೂ, ಮನೋರೋಗ ತಜ್ಞರಿಂದ ಚಿಕಿತ್ಸೆ ಪಡೆಯುವುದಕ್ಕೆ ಹಿಂಜರಿಕೆಯೂ ನಮ್ಮಲ್ಲಿ ಸಾಮಾನ್ಯವಾಗಿದೆ. ನಮ್ಮ ಜನರ ಮಾನಸಿಕ ಆರೋಗ್ಯದ ರಕ್ಷಣೆಯಾಗಬೇಕಿದ್ದರೆ ಈ ಎಲ್ಲಾ ಕೊರತೆಗಳನ್ನು ನೀಗಿಸಿ, ಗಂಭೀರ ಸ್ವರೂಪದ ಮನೋರೋಗಗಳುಳ್ಳವರಿಗೆ ಹಾಗೂ ಆತ್ಮಹತ್ಯೆಯ ಯೋಚನೆಗಳುಳ್ಳವರಿಗೆ ತಕ್ಷಣವೇ ಮಾನಸಿಕ ಆರೋಗ್ಯ ತಜ್ಞರ ನೆರವು ದೊರೆಯುವಂಥ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿದೆ. ಆಧುನಿಕ ಮನೋವಿಜ್ಞಾನದ ಆಧಾರದಲ್ಲೇ ರೂಪಿಸಲಾಗಿರುವ ವಿಶ್ವ ಆರೋಗ್ಯ ಸಂಸ್ಥೆಯ ಯೋಜನೆಗಳನ್ನು ಮತ್ತು ನಮ್ಮ ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮಗಳನ್ನು ಪ್ರಾಮಾಣಿಕತೆಯಿಂದ ಕಾರ್ಯಗತಗೊಳಿಸಬೇಕಾಗಿದೆ.

ಮನೋವೈದ್ಯರ ಚಿಕಿತ್ಸೆಯಿಂದ ತನ್ನ ಖಿನ್ನತೆಯನ್ನು ನಿವಾರಿಸಿಕೊಂಡ ಖ್ಯಾತ ನಟಿ ದೀಪಿಕಾ ಪಡುಕೋಣೆ, ಮನೋರೋಗಗಳ ಬಗ್ಗೆ ವೈಜ್ಞಾನಿಕ ಮಾಹಿತಿಯನ್ನು ಪ್ರಚುರಪಡಿಸುವುದಕ್ಕೆ The Live Love Laugh Foundation (ಟಿಎಲ್‌ಎಲ್‌ಎಲ್‌ಎಫ್) ಎಂಬ ಸಂಸ್ಥೆಯನ್ನೇ ಸ್ಥಾಪಿಸಿದ್ದಾರೆ. ಭಾರತೀಯ ಮಾನಸಿಕ ಆರೋಗ್ಯ ತಜ್ಞರ ಸಂಘವು (ಐಪಿಎಸ್) ದೀಪಿಕಾರನ್ನು ತನ್ನ ಗೌರವ ರಾಯಭಾರಿಯಾಗಿಯೂ ನೇಮಿಸಿದೆ. ಐಎಂಎಯು 2016ರಲ್ಲಿ ಟಿಎಲ್‌ಎಲ್‌ಎಲ್‌ಎಫ್ ಹಾಗೂ ಐಪಿಎಸ್ ಸಹಭಾಗಿತ್ವದಲ್ಲಿ ಖಿನ್ನತೆಯೆದುರು ಜೊತೆಗಾರಿಕೆ ಎಂಬ ಹೆಸರಲ್ಲಿ 5000 ವೈದ್ಯರಿಗೆ ಮನೋರೋಗಗಳ ಬಗ್ಗೆ ತರಬೇತಿ ನೀಡುವ ಯೋಜನೆಯನ್ನೂ ಹಾಕಿಕೊಂಡಿದೆ. ಐಎಂಎ, ಐಪಿಎಸ್, ನಿಮ್ಹಾನ್ಸ್‌ಗಳು ಅಂಥ ಯೋಜನೆಯನ್ನು ಕೈಬಿಟ್ಟು, ಯಾವುದೇ ಆಧಾರಗಳಿಲ್ಲದ, ಯಾವುದೇ ಮಾನಸಿಕ ಆರೋಗ್ಯ ಕಾರ್ಯಕ್ರಮಗಳಲ್ಲಿ ಒಂದಕ್ಷರದ ಉಲ್ಲೇಖವೂ ಇಲ್ಲದ, ಯಾವುದೇ ಕಾನೂನಿನ ಮಾನ್ಯತೆಯೂ ಇಲ್ಲದ ಯೋಗಾಭ್ಯಾಸವನ್ನು ಉತ್ತೇಜಿಸುವುದೆಂದರೆ ಎಲ್ಲರಿಗೂ ಅನ್ಯಾಯ ಮಾಡಿದಂತೆಯೇ ಆಗುತ್ತದೆ.

ಇಲಾಜು 18 – ಸುದ್ದಿ ಆಗುತ್ತಲೇ ಇರುವ ‘ಆಯುಷ್ಮಾನ್ ಭಾರತ’ದ ಅಸಲಿ ಕತೆ

(ಜುಲೈ 12, 2018)

ಮಾನ್ಯ ಪ್ರಧಾನ ಮಂತ್ರಿಗಳ ಬಹು ಮಹತ್ವಾಕಾಂಕ್ಷೆಯ ಯೋಜನೆಯೆನ್ನಲಾದ ಆಯುಷ್ಮಾನ್ ಭಾರತವನ್ನು ಆರಂಭ್ಹಿಸಲು ಸಿದ್ಧತೆಗಳಾಗುತ್ತಿವೆ. ವಿಶ್ವದಲ್ಲೇ ಅತಿ ದೊಡ್ಡ ಆರೋಗ್ಯ ಯೋಜನೆ ಎಂದೆಲ್ಲಾ ಹೇಳಿಕೊಳ್ಳಲಾಗಿರುವ ಈ ಯೋಜನೆಯಿಂದ ಯಾರಿಗೆ ಎಷ್ಟು ಆರೋಗ್ಯ ಲಭಿಸಲಿದೆ ಎನ್ನುವುದು ಸ್ಪಷ್ಟವಿಲ್ಲವಾದರೂ, ಮುಂದಿನ ಚುನಾವಣೆಯಲ್ಲಿ ಪ್ರಧಾನ ಮಂತ್ರಿಗಳ ಪ್ರಚಾರದ ಆರೋಗ್ಯಕ್ಕೆ ನೆರವಾಗುವ ಸಾಧ್ಯತೆಗಳಿವೆ.

ಆಧುನಿಕ ವೈದ್ಯರನ್ನು ಪ್ರತಿನಿಧಿಸುವ ಏಕೈಕ ಸಂಸ್ಥೆಯೆಂದು ಹೇಳಿಕೊಳ್ಳುವ ಭಾರತೀಯ ವೈದ್ಯಕೀಯ ಸಂಘವು (ಐಎಂಎ) ಈ ಯೋಜನೆಯನ್ನು ಆರಂಭದಲ್ಲಿ ಸ್ವಾಗತಿಸಿ, ನಂತರ ಸಂಪೂರ್ಣವಾಗಿ ವಿರೋಧಿಸಿ, ಮತ್ತೆ ಬೆಂಬಲಿಸಿ, ನಂತರ ಭಾಗಶಃ ವಿರೋಧಿಸುವ ಮೂಲಕ ಲಾಗ ಹೊಡೆಯುತ್ತಲೇ ಇದೆ. ಭಾರತದ ಆರೋಗ್ಯ ಸೇವಾ ಸಂಸ್ಥೆಗಳ ಸಂಘವು (ಎಎಚ್‌ಪಿಐ) ಕೂಡ ಈ ಯೋಜನೆಗೆ ನಿಗದಿ ಪಡಿಸಲಾಗಿರುವ ದರಗಳು ತೀರಾ ಕಡಿಮೆಯೆಂದು ಪ್ರತಿಭಟಿಸಿ, ಅಲ್ಲಿಗೇ ಬಿಟ್ಟಿದೆ. ಸರಕಾರದ ಯಾವ ಸಾಮ-ದಾನ-ಭೇದ-ದಂಡಾಸ್ತ್ರಗಳು ಬಳಕೆಯಾಗಿವೆಯೋ ಏನೋ?

ಆಯುಷ್ಮಾನ್ ಭಾರತವು ಹತ್ತು ವರ್ಷಗಳಿಂದ ನಡೆಯುತ್ತಿರುವ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯ (ಆರ್‌ಎಸ್‌ಬಿವೈ) ದೊಡ್ಡ ಅವತಾರ ಮಾತ್ರ. ಅದನ್ನು ಆರೋಗ್ಯ ಸುರಕ್ಷೆಯ ವಿಮಾ ಯೋಜನೆಯೆಂದು ಹೇಳಲಾಗುತ್ತಿದ್ದರೂ, ಕೆಲವು ನಿರ್ದಿಷ್ಟ ಚಿಕಿತ್ಸೆಗಳಷ್ಟೇ ದೊರೆಯುವುದರಿಂದ ಸಂಪೂರ್ಣ ಆರೋಗ್ಯ ಸುರಕ್ಷೆಯೂ ಇಲ್ಲ, ಆರೋಗ್ಯ ವಿಮೆಯೂ ಆಗುವುದಿಲ್ಲ. ಅತಿ ಕಡಿಮೆ ಖರ್ಚಿನಲ್ಲಿ ಅತ್ಯುತ್ತಮ ಆರೋಗ್ಯವನ್ನೊದಗಿಸುವ ಯೋಜನೆಯೆಂದು ಪ್ರಧಾನಿಗಳು ಹೇಳಿದ್ದಾರಾದರೂ, ಹಲವು ವರ್ಷಗಳಿಂದ ಹಲವು ರಾಜ್ಯಗಳಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ಜಾರಿಯಲ್ಲಿರುವ ಇಂತಹಾ ಯೋಜನೆಗಳಿಂದ ಆರೋಗ್ಯಕ್ಕಾಗಿ ಜನರ ಖರ್ಚು ಹೆಚ್ಚುತ್ತಿದೆಯೇ ಹೊರತು ಕಡಿಮೆಯಾಗಿಲ್ಲ.

ಆರ್‌ಎಸ್‌ಬಿವೈ ಯಾ ಆಯುಷ್ಮಾನ್ ಭಾರತ ಯೋಜನೆಗಳಂಥವು ಸಮಗ್ರ ಆರೋಗ್ಯ ಸುರಕ್ಷೆಯನ್ನು ಒದಗಿಸುವುದಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯನುಸಾರ, ಸಮಗ್ರ ಆರೋಗ್ಯ ಸೇವೆಗಳೆಂದರೆ, ಎಲ್ಲಾ ವರ್ಗಗಳ ಜನರಿಗೆ ಆರೋಗ್ಯ ವರ್ಧನೆ, ರೋಗ ನಿಯಂತ್ರಣ, ಚಿಕಿತ್ಸೆ, ಶಮನ, ಪುನಃಶ್ಚೇತನ ಸೇವೆಗಳನ್ನು ಉತ್ತಮ ಗುಣ ಮಟ್ಟದಲ್ಲಿ, ಯಥೋಚಿತವಾಗಿ, ಆರ್ಥಿಕವಾಗಿ ಹೊರೆಯಾಗದಂತೆ ಒದಗಿಸುವುದು. ಶೇ. 80ಕ್ಕೂ ಹೆಚ್ಚು ಜನರಿಗೆ ಅತ್ಯುತ್ತಮವಾದ ಸಮಗ್ರ ಆರೋಗ್ಯ ಸೇವೆಗಳನ್ನು ಒದಗಿಸಲಾಗುತ್ತಿರುವ ಸ್ವೀಡನ್, ಫ್ರಾನ್ಸ್, ಜರ್ಮನಿ, ಅಮೆರಿಕಾ ಮುಂತಾದ ದೇಶಗಳಲ್ಲಿ ಆರೋಗ್ಯ ಸೇವೆಗಳಿಗಾಗಿ ಸರಕಾರಿ ವ್ಯಯವು ರಾಷ್ಟ್ರೀಯ ಉತ್ಪನ್ನದ ಶೇ. 7-10ರಷ್ಟಿದೆ; ಆದರೆ, ಶೇ. 0.5-1ರಷ್ಟು ವ್ಯಯಿಸುತ್ತಿರುವ ಆಫ್ರಿಕಾದ ದೇಶಗಳು ಮತ್ತು ಭಾರತದಲ್ಲಿ ಶೇ. 30-60ರಷ್ಟು ಜನರಿಗಷ್ಟೇ ಸಾರ್ವಜನಿಕ ಆರೋಗ್ಯ ಸೇವೆಗಳು ದೊರೆಯುತ್ತಿವೆ. ಅಂದರೆ, ಸಮಗ್ರ ಆರೋಗ್ಯ ಸೇವೆಗಳನ್ನು ನಿಜಾರ್ಥದಲ್ಲಿ ಒದಗಿಸಬೇಕಾದರೆ ನಮ್ಮ ಸರಕಾರವು ಆರು ಪಟ್ಟು ಹೆಚ್ಚು ಹಣವನ್ನು ವ್ಯಯಿಸಿ, ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಬಲಪಡಿಸಬೇಕಾಗುತ್ತದೆ. ದೇಶದ ಸರಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಕನಿಷ್ಟ ಸೌಕರ್ಯಗಳನ್ನು ಖಾತರಿ ಪಡಿಸಬೇಕಾದರೆ, ಪ್ರಾಥಮಿಕ ಆರೋಗ್ಯ ಕೇಂದ್ರವೊಂದಕ್ಕೆ ಕನಿಷ್ಟ ರೂ. 20 ಲಕ್ಷದಂತೆ ವರ್ಷಕ್ಕೆ ಹೆಚ್ಚುವರಿಯಾಗಿ ರೂ. 30 ಸಾವಿರ ಕೋಟಿಯಷ್ಟು ಬೇಕಾಗುತ್ತದೆ. ಆದರೆ, ಆಯುಷ್ಮಾನ್ ಭಾರತದ ಭಾಗವಾಗಿ ಒಂದೂವರೆ ಲಕ್ಷ ಆರೋಗ್ಯ ಉಪಕೇಂದ್ರಗಳನ್ನು ಅಭಿವೃದ್ಧಿಪಡಿಸಲು ರೂ. 1200 ಕೋಟಿ (ಉಪಕೇಂದ್ರವೊಂದಕ್ಕೆ ರೂ. 80 ಸಾವಿರ ಮಾತ್ರ) ಒದಗಿಸಲಾಗಿರುವುದು ಸರಕಾರದ ಬದ್ಧತೆಯೆಷ್ಟಿದೆ ಎನ್ನುವುದನ್ನು ತಿಳಿಸುತ್ತದೆ.

ಖಾಸಗಿ ಆಸ್ಪತ್ರೆಗಳಿಂದ ಚಿಕಿತ್ಸೆಗಳನ್ನು ಖರೀದಿಸುವ ಆಯುಷ್ಮಾನ್ ಭಾರತ ಯೋಜನೆಗೆ ಸೇರಿಕೊಳ್ಳಲು ಹೆಚ್ಚಿನ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈಗಾಗಲೇ ಒಪ್ಪಿವೆ. ಆರ್‌ಎಸ್‌ಬಿವೈ ಅಡಿಯಲ್ಲಿ ಕುಟುಂಬವೊಂದರ ಚಿಕಿತ್ಸೆಗೆ ವರ್ಷಕ್ಕೆ ರೂ. 30 ಸಾವಿರ ಒದಗಿಸುತ್ತಿದ್ದಲ್ಲಿ, ಹೊಸ ಯೋಜನೆಯಲ್ಲಿ ವರ್ಷಕ್ಕೆ 5 ಲಕ್ಷದಷ್ಟು ಒದಗಿಸಬೇಕಾಗುತ್ತದೆ. ಆರ್‌ಎಸ್‌ಬಿವೈಯಲ್ಲಿ ಫಲಾನುಭವಿ ಕುಟುಂಬವೊಂದಕ್ಕೆ ವರ್ಷಕ್ಕೆ ರೂ. 400ರಂತೆ ಸರಕಾರಗಳು ವಿಮೆ ಕಟ್ಟಬೇಕಿತ್ತು. ಆಯುಷ್ಮಾನ್ ಯೋಜನೆಗೆ ನಿತಿ ಆಯೋಗವು ಅದನ್ನು ರೂ. 1082ರಂತೆ ನಿಗದಿ ಪಡಿಸಿದ್ದರೂ, ವಿಮಾ ಕಂಪೆನಿಗಳ ತಗಾದೆಯಿಂದಾಗಿ ಅದು ಹೆಚ್ಚುವ ಸಾಧ್ಯತೆಗಳಿವೆ. ಆರ್‌ಎಸ್‌ಬಿವೈಗೆ ವಿಮೆ ತುಂಬುವಲ್ಲಿ ಕೇಂದ್ರ ಹಾಗೂ ರಾಜ್ಯಗಳ ಪಾಲುಗಳು 75:25 ಇದ್ದರೆ, ಆಯುಷ್ಮಾನ್ ಭಾರತದಲ್ಲಿ ರಾಜ್ಯಗಳ ಪಾಲು ಶೇ. 40ಕ್ಕೆ ಏರಿದೆ. ಹೀಗೆ, ಆಯುಷ್ಮಾನ್ ಭಾರತವು ರಾಜ್ಯ ಸರಕಾರಗಳ ಮೇಲೆ 3-4 ಪಟ್ಟು ಹೆಚ್ಚಿನ ಹೊರೆಯಾಗಲಿರುವುದು ಖಂಡಿತ. ಯಾರದೋ ದುಡ್ಡು, ಇನ್ಯಾರದೋ ಜಾತ್ರೆ!

ಆಯುಷ್ಮಾನ್ ಭಾರತದಡಿಯಲ್ಲಿ ಲಭ್ಯವಾಗಲಿರುವ 1354 ಚಿಕಿತ್ಸೆಗಳಲ್ಲಿ ಹೆಚ್ಚಿನವು ಶಸ್ತ್ರಚಿಕಿತ್ಸೆಗಳೇ ಆಗಿದ್ದು, ನಮ್ಮ ದೇಶದಲ್ಲಿ ಆಸ್ಪತ್ರೆ ದಾಖಲಾತಿಗಳಿಗೆ ಕಾರಣವಾಗುತ್ತಿರುವ ಶೇ. 60ಕ್ಕೂ ಹೆಚ್ಚು ಸಮಸ್ಯೆಗಳು ಈ ಯೋಜನೆಯಡಿ ಲಭ್ಯವೇ ಇಲ್ಲ. ಅವುಗಳಲ್ಲೂ, 610 ಚಿಕಿತ್ಸೆಗಳನ್ನು ಪಡೆಯಬೇಕಾದರೆ ವಿಮಾ ಕಂಪೆನಿಯು ಪೂರ್ವಾನುಮತಿ ನೀಡಬೇಕಾಗುತ್ತದೆ. ಕರ್ನಾಟಕದಲ್ಲಿ ಆಯುಷ್ಮಾನ್ ಭಾರತ ಯೋಜನೆಯನ್ನು ಮೊದಲೇ ಘೋಷಿಸಲಾಗಿದ್ದ ಆರೋಗ್ಯ ಕರ್ನಾಟಕ ಯೋಜನೆಯೊಳಗೆ ಸೇರಿಸಲಾಗುವುದರಿಂದ, ಅದರ ನಿಯಮಗಳೂ ಅನ್ವಯವಾಗಲಿವೆ. ಅದರಂತೆ, ಎಲ್ಲಾ ಫಲಾನುಭವಿಗಳು ಮೊದಲು ಸರಕಾರಿ ಆಸ್ಪತ್ರೆಗಳಿಗೇ ಹೋಗಬೇಕು, ಅಲ್ಲಿ ಚಿಕಿತ್ಸೆಯು ಲಭ್ಯವಿರದಿದ್ದ ಸಂದರ್ಭಗಳಲ್ಲಿ, ಅಲ್ಲಿನ ಶಿಫಾರಸಿನ ಮೇಲಷ್ಟೇ ಖಾಸಗಿ ಆಸ್ಪತ್ರೆಗೆ ಹೋಗಬಹುದು. ಎಲ್ಲಾ ಪ್ರಾಥಮಿಕ ಆರೋಗ್ಯ ಸೇವೆಗಳು, ಪ್ರಸೂತಿ ಸೇವೆಗಳು, ಸಾಮಾನ್ಯವಾಗಿ ನಡೆಸುವ 481 ಬಗೆಯ ಶಸ್ತ್ರಚಿಕಿತ್ಸೆಗಳು, ಉನ್ನತ ಮಟ್ಟದ ಪರೀಕ್ಷೆಗಳು ಮತ್ತು ವೈದ್ಯಕೀಯ ಚಿಕಿತ್ಸೆಗಳನ್ನು ಸರಕಾರಿ ಆಸ್ಪತ್ರೆಗಳಲ್ಲೇ ಪಡೆಯಬೇಕಾಗಿದ್ದು, ಇನ್ನುಳಿದ 1042 ಬಗೆಯ ಚಿಕಿತ್ಸೆಗಳಿಗೆ ಶಿಫಾರಸಿನ ಮೇರೆಗೆ ಖಾಸಗಿ ಆಸ್ಪತ್ರೆಗಳಿಗೆ ಹೋಗಬಹುದು. ಈ ಶಿಫಾರಸುಗಳಿಗೆ ಎಂತೆಂತಹ ಪ್ರಭಾವಗಳು ಬೇಕಾಗಬಹುದೋ ಏನೋ?

ಆಯುಷ್ಮಾನ್ ಭಾರತದಡಿಯಲ್ಲಿ ಪಟ್ಟಿ ಮಾಡಲಾಗಿರುವ ಚಿಕಿತ್ಸೆಗಳಿಗೆ ರೂ. 1000ದಿಂದ ರೂ. 1.6 ಲಕ್ಷದವರೆಗೆ ದರವನ್ನು ನಿಗದಿ ಪಡಿಸಲಾಗಿದೆ. ಆರೋಗ್ಯ ಕರ್ನಾಟಕಕ್ಕಾಗಿ ಇವೇ ಚಿಕಿತ್ಸೆಗಳಿಗೆ ನಿಗದಿ ಪಡಿಸಲಾಗಿರುವ ದರಗಳಲ್ಲಿ ಕೆಲವು ಹೆಚ್ಚಿದ್ದರೆ, ಕೆಲವು ಕಡಿಮೆಯಿವೆ! ಈಗ ನಿಗದಿ ಪಡಿಸಿರುವ ದರಗಳು ನಾಲ್ಕೈದು ವರ್ಷಗಳ ಹಿಂದೆ ನಿಗದಿ ಪಡಿಸಿದ್ದ ದರಗಳಿಗಿಂತ 10-15% ಕಡಿಮೆಯಿವೆ! ಇದಕ್ಕೆ ವೈದ್ಯರ ಮತ್ತು ಆಸ್ಪತ್ರೆಗಳ ಸಂಘಟನೆಗಳ ವಿರೋಧವನ್ನು ಮೊದಲು ಕಡೆಗಣಿಸಿದ್ದ ಕೇಂದ್ರ ಸರಕಾರವು, ಇದೀಗ ದರಗಳನ್ನು ಪರಿಷ್ಕರಿಸುವ ಬಗ್ಗೆ ಸಮಿತಿಯೊಂದನ್ನು ರಚಿಸುವುದಕ್ಕೆ ಒಪ್ಪಿದೆ, ಆದರೆ ಯೋಜನೆಯನ್ನು ಅದಕ್ಕೂ ಮೊದಲೇ ಆರಂಭಿಸುವುದಾಗಿಯೂ ಹೇಳಿದೆ. ಯಾರು ಯಾರನ್ನು ಎಷ್ಟು ನಂಬಲಿದ್ದಾರೆನ್ನುವುದು ಗೊತ್ತಾಗುತ್ತಿಲ್ಲ!

ಈಗಿರುವ ದರ ಪಟ್ಟಿಯಂತೆ, ಸಣ್ಣ ಹಾಗೂ ಮಧ್ಯಮ ಗಾತ್ರದ ಆಸ್ಪತ್ರೆಗಳಲ್ಲಿ ನಡೆಸಲಾಗುವ ಚಿಕಿತ್ಸೆಗಳಿಗೆ ಅತ್ಯಲ್ಪ ದರಗಳನ್ನು ನಿಗದಿ ಪಡಿಸಲಾಗಿದ್ದು, ಚಿಕಿತ್ಸೆಯ ಖರ್ಚಿನ ಶೇ. 10-30ರಷ್ಟನ್ನು ಮಾತ್ರವೇ ಅವು ಭರಿಸಲಿರುವುದರಿಂದ ಆ ಆಸ್ಪತ್ರೆಗಳು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿ, ಈಗಾಗಲೇ ಹಲವೆಡೆ ಆಗಿರುವಂತೆ, ಬಾಗಿಲು ಹಾಕಿಕೊಳ್ಳುವ ಸ್ಥಿತಿಯುಂಟಾಗಲಿದೆ. ಆದರೆ ಕಾರ್ಪರೇಟ್ ಮತ್ತು ದೊಡ್ಡ ಆಸ್ಪತ್ರೆಗಳಲ್ಲಿ ನೀಡಲಾಗುವ ಉನ್ನತ ಚಿಕಿತ್ಸೆಗಳಿಗೆ ಸಾಕಷ್ಟು ಉತ್ತಮ ದರಗಳನ್ನೇ ನಿಗದಿ ಪಡಿಸಲಾಗಿರುವುದರಿಂದ ಅವು ತಮ್ಮ ಖರ್ಚಿನ ಶೇ. 60-100ರಷ್ಟನ್ನು ಗಳಿಸಿಕೊಳ್ಳಲಿವೆ, ಇನ್ನಷ್ಟು ಬೆಳೆದು, ಸಣ್ಣ ಆಸ್ಪತ್ರೆಗಳನ್ನು ಕಬಳಿಸಲಿವೆ. ಸಣ್ಣ ಚಿಕಿತ್ಸೆ ನೀಡಿ ದೊಡ್ಡ ಚಿಕಿತ್ಸೆಗಳ ಹಣ ಪಡೆಯುವುದು, ಹೆಚ್ಚುವರಿ ಸೌಕರ್ಯಗಳನ್ನು ಒದಗಿಸಿ ಹೆಚ್ಚು ಹಣ ಪಡೆಯುವುದು ಇತ್ಯಾದಿ ಮೋಸಗಳಿಗೆಲ್ಲ ಸರಕಾರವೇ ಅವಕಾಶ ಕೊಟ್ಟಂತೆಯೂ ಆಗಬಹುದು.

ಆಯುಷ್ಮಾನ್ ಯೋಜನೆಗೆ ಸೇರಿಕೊಳ್ಳುವುದಕ್ಕೆ ಯಾವುದೇ ಬಗೆಯ ಮಾನ್ಯತೆಯಿದ್ದರೆ ಸಾಕೆಂದು ಕೇಂದ್ರವು ಒಪ್ಪಿಕೊಂಡಿದೆ. ಆದರೆ, ಕರ್ನಾಟಕದಲ್ಲಿ ಈ ಯೋಜನೆಗೆ ಸೇರಬಯಸುವ ಎಲ್ಲಾ ಆಸ್ಪತ್ರೆಗಳಿಗೆ ಕಾರ್ಪರೇಟ್ ಪ್ರಾಯೋಜಿತ ಎನ್‌ಎಬಿಎಚ್ ಮಾನ್ಯತೆಯಿರಬೇಕೆಂದು ಕಡ್ಡಾಯಗೊಳಿಸಲಾಗಿದೆ. ಈಗ ರಾಜ್ಯದಲ್ಲಿ ಕೇವಲ 35 ಆಸ್ಪತ್ರೆಗಳಷ್ಟೇ ಈ ಮಾನ್ಯತೆಯನ್ನು ಪಡೆದಿದ್ದು, ಇನ್ನುಳಿದವು ಅದಕ್ಕಾಗಿ ಲಕ್ಷಗಟ್ಟಲೆ ವ್ಯಯಿಸಬೇಕಾಗುತ್ತದೆ. ಸಣ್ಣ ಆಸ್ಪತ್ರೆಗಳು ಅಷ್ಟು ವ್ಯಯಿಸಿದ ಬಳಿಕ ಖರ್ಚು ಕೂಡ ದಕ್ಕದ ಯೋಜನೆಗೆ ಸೇರಿಕೊಂಡರೆ ಗತಿಯೇನಾದೀತು?

ಹಣಕಾಸು, ಉದ್ದಿಮೆ, ಶಿಕ್ಷಣ, ಆಡಳಿತ, ನ್ಯಾಯಾಂಗ, ಸೌಹಾರ್ದತೆ ಎಲ್ಲವನ್ನೂ ಅಸ್ತವ್ಯಸ್ತಗೊಳಿಸಿ ಆನಂದ ಪಡುತ್ತಿರುವ ಕೇಂದ್ರ ಸರಕಾರಕ್ಕೆ ಆರೋಗ್ಯ ಸೇವೆಗಳನ್ನು ಛಿದ್ರಗೊಳಿಸಿದ ಆನಂದವು ಸದ್ಯದಲ್ಲೇ ಪ್ರಾಪ್ತಿಯಾದೀತು.

ಇಲಾಜು 17 – ಖಾಸಗಿ ವೈದ್ಯಕೀಯ ಕಾಲೇಜುಗಳ ಅಟಾಟೋಪಕ್ಕೆ ಚಿಕಿತ್ಸೆ ನೀಡುವಲ್ಲಿ ವಿಫಲವಾದ ನೀಟ್

(ಜೂನ್ 28, 2018)

ರಾಷ್ಟ್ರೀಯ ವೈದ್ಯಕೀಯ ಪ್ರವೇಶ ಪರೀಕ್ಷೆ – ನೀಟ್ – ಫಲಿತಾಂಶಗಳ ಘೋಷಣೆಯಾಗಿದೆ, ವೈದ್ಯರಾಗುವ ಕನಸು ಹೊತ್ತು ಕಷ್ಟಪಟ್ಟ ಅನೇಕರು ಅಂಕಗಳಿಲ್ಲದೆ ನಿರಾಶರಾಗಿದ್ದಾರೆ, ಅಷ್ಟೇನೂ ಕಷ್ಟ ಪಡದ ಹಲವರು ಅಂಕಗಳಿಲ್ಲದಿದ್ದರೂ ಸೀಟು ಸಿಗುವ ಹುರುಪಿನಲ್ಲಿದ್ದಾರೆ. ಕಳೆದ ವರ್ಷ ತಮಿಳುನಾಡಿನ ಹಳ್ಳಿಯೊಂದರ ಅನಿತಾ ಎಂಬ ದಲಿತ ಹುಡುಗಿಯು ಪಿಯುಸಿಯಲ್ಲಿ 1200ಕ್ಕೆ 1176 ಅಂಕಗಳನ್ನು ಪಡೆದರೂ, ನೀಟ್‌ನಲ್ಲಿ 720ಕ್ಕೆ 86 ಮಾತ್ರ ಗಳಿಸಿ, ಸರ್ವೋಚ್ಚ ನ್ಯಾಯಾಲಯವೂ ನೆರವಾಗದೆ, ಸಾವಿಗೆ ಕೊರಳೊಡ್ಡಿದ್ದಳು; ಈ ವರ್ಷ ತಮಿಳುನಾಡು, ಆಂಧ್ರ, ದಿಲ್ಲಿಗಳಲ್ಲಿ ಇನ್ನಷ್ಟು ಮಕ್ಕಳು ಜೀವ ತೊರೆದಿದ್ದಾರೆ. ಜೀವ ಉಳಿಸುವ ವೈದ್ಯರಾಗಬೇಕೆಂದು ಆಶಿಸಿದ್ದವರು ನಿರಾಶೆಯಿಂದ ತಮ್ಮದೇ ಜೀವಗಳನ್ನು ಕಳೆದುಕೊಳ್ಳುತ್ತಿದ್ದಾರೆ.

ಪ್ರತಿಭಾವಂತ ವಿದ್ಯಾರ್ಥಿಗಳಷ್ಟೇ ವೈದ್ಯರಾಗಬೇಕು ಎಂಬ ಸದುದ್ದೇಶದಿಂದ ಆರಂಭಗೊಂಡ ನೀಟ್‌ ಪರೀಕ್ಷೆಯು ಅದಕ್ಕೆ ತದ್ವಿರುದ್ದವಾದುದನ್ನೇ ಸಾಧಿಸುತ್ತಿದೆ. ಬಗೆಬಗೆಯ ಪ್ರವೇಶ ಪರೀಕ್ಷೆಗಳಿಗೆ ತರಬೇತಿ ನೀಡುವ ಉದ್ಯಮದ ವಾರ್ಷಿಕ ವಹಿವಾಟು ನಾಲ್ಕೂವರೆ ಲಕ್ಷ ಕೋಟಿಗೂ ಹೆಚ್ಚಿದ್ದು, ಸಾಮಾನ್ಯ ಶಿಕ್ಷಣವು ಗೌಣವಾಗುತ್ತಾ ಸಾಗಿದೆ. ಈ ಉದ್ಯಮದ ರಾಜಧಾನಿಯೆನಿಸಿರುವ ರಾಜಸ್ಥಾನದ ಕೋಟಾ ಎಂಬ ಊರೊಂದರಲ್ಲೇ 150ಕ್ಕೂ ಹೆಚ್ಚು ತರಬೇತಿ ಸಂಸ್ಥೆಗಳಲ್ಲಿ ವರ್ಷಕ್ಕೆ ಸುಮಾರು 120000 ವಿದ್ಯಾರ್ಥಿಗಳು 1500 ಕೋಟಿಯಷ್ಟು ವ್ಯಯಿಸುತ್ತಿದ್ದಾರೆ. ಈ ವರ್ಷದ ನೀಟ್‌ನ ಮೊದಲ ಹತ್ತು ಶ್ರೇಣಿಗಳಲ್ಲಿ 6, ಹಾಗೂ ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆಯ (ಎಐಐಎಂಎಸ್) ಪ್ರವೇಶ ಪರೀಕ್ಷೆಯ ಮೊದಲ ಹತ್ತು ಶ್ರೇಣಿಗಳಲ್ಲಿ 9 ಕೋಟಾದ ಕಾರ್ಖಾನೆಗಳಲ್ಲಿ ತರಬೇತಾದವರ ಪಾಲಾಗಿವೆ. ಬಡತನದಲ್ಲಿರುವ, ಗ್ರಾಮೀಣ ಭಾಗಗಳಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಗಳು ಎಷ್ಟೇ ಕಷ್ಟಪಟ್ಟು, ನಿದ್ದೆಗೆಟ್ಟು ಓದಿದರೂ ಇಂತಹಾ ತರಬೇತಿಯನ್ನು ಪಡೆಯಲಾಗದಿದ್ದರೆ ಒಳ್ಳೆಯ ಶ್ರೇಣಿಗಳಿಂದಲೂ, ವೈದ್ಯಕೀಯ ಪ್ರವೇಶದಿಂದಲೂ ವಂಚಿತರಾಗುತ್ತಾರೆ. ಆದರೆ ನಗರಗಳಲ್ಲಿರುವವರು, ದುಡ್ಡಿದ್ದವರು ಇಂತಹ ತರಬೇತಿಗೆಂದೇ ಲಕ್ಷಗಟ್ಟಲೆ ಸುರಿಯುತ್ತಾರೆ, ಅದರಿಂದಲೂ ಒಳ್ಳೆಯ ಶ್ರೇಣಿ ಪ್ರಾಪ್ತವಾಗದಿದ್ದರೆ ಇನ್ನಷ್ಟು ಲಕ್ಷಗಳನ್ನು ಚೆಲ್ಲಿ ಪ್ರವೇಶವನ್ನಂತೂ ಗಿಟ್ಟಿಸಿಕೊಳ್ಳುತ್ತಾರೆ.

ಎಂಬತ್ತರ ದಶಕದವರೆಗೆ ಪಿಯುಸಿ ಅಂಕಗಳ ಆಧಾರದಲ್ಲೇ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶಾತಿಯಿತ್ತು, ಲಂಚ ಕೊಟ್ಟು ಅಂಕ-ಸೀಟು ಪಡೆಯುವ ಹಾವಳಿಯು ವಿಪರೀತ ಮಟ್ಟಕ್ಕೆ ತಲುಪಿತ್ತು. ಅದರ ವಿರುದ್ಧ ಅಂದಿನ ವಿದ್ಯಾರ್ಥಿಗಳ ಹೋರಾಟದಿಂದಾಗಿ ಪ್ರವೇಶ ಪರೀಕ್ಷೆಗಳು ಆರಂಭಗೊಂಡಿದ್ದವು. ಅವುಗಳಿಂದ ತಮ್ಮಿಷ್ಟದವರಿಗೆ ಸೀಟು ಕೊಡಲಾಗದೆ ತೊಂದರೆಗೀಡಾದ ಖಾಸಗಿ ಕಾಲೇಜುಗಳು ತಮ್ಮದೇ ಆದ ಪರೀಕ್ಷೆಗಳನ್ನು ಆರಂಭಿಸಿದ್ದವು. ಅವನ್ನು ತಡೆಯುವುದಕ್ಕಾಗಿ ಇಡೀ ದೇಶಕ್ಕೆ ಒಂದೇ ಪರೀಕ್ಷೆಯಾಗಿ ನೀಟ್ ಆರಂಭಿಸಲಾಗಿತ್ತು. ಆದರೆ ಎರಡೇ ವರ್ಷಗಳಲ್ಲಿ ಅದನ್ನು ತಮಗೆ ಬೇಕಾದಂತೆ ಬಗ್ಗಿಸಿಕೊಳ್ಳುವಲ್ಲಿ ಖಾಸಗಿ ಕಾಲೇಜುಗಳು ಸಂಪೂರ್ಣವಾಗಿ ಯಶಸ್ವಿಯಾಗಿರುವುದು ಎದ್ದು ತೋರುತ್ತಿದೆ. ಜೊತೆಗೆ, ಪರೀಕ್ಷೆ ಬರೆಯುವುದಕ್ಕೆ ಮಾರು ವ್ಯಕ್ತಿಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆ, ಗಣಕ ವ್ಯವಸ್ಥೆಯಲ್ಲಿ ಅಕ್ರಮಗಳು, ಪ್ರಶ್ನೆ ಪತ್ರಿಕೆಗಳಲ್ಲಿ ಸಮಸ್ಯೆಗಳು, ದೇಶೀಯ ಭಾಷೆಗಳಲ್ಲಿ ಉತ್ತರಿಸುವ ಕಷ್ಟಗಳು ಎಲ್ಲವೂ ಕೂಡ ವರದಿಯಾಗಿವೆ. ಪ್ರವೇಶ ಪರೀಕ್ಷೆಯನ್ನೇ ರದ್ದು ಮಾಡಿ, ಮೊದಲಿನಂತೆ ಅಂಕಗಳ ಆಧಾರದಲ್ಲೇ ಪ್ರವೇಶ ನೀಡತೊಡಗಿದ್ದ ತಮಿಳುನಾಡಿನಲ್ಲಂತೂ ನೀಟ್ ಕಡ್ಡಾಯಗೊಂಡದ್ದರಿಂದ ವಿದ್ಯಾರ್ಥಿಗಳು ಬಹಳಷ್ಟು ತೊಂದರೆಗೊಳಗಾಗಿದ್ದಾರೆ.

ಈಗ ದೇಶದಲ್ಲಿ 492 ವೈದ್ಯಕೀಯ ಕಾಲೇಜುಗಳಿದ್ದು, ಅವುಗಳಲ್ಲಿ 253 ಕಾಲೇಜುಗಳು ಖಾಸಗಿ ರಂಗದಲ್ಲಿವೆ. ನೀಟ್ ನಿಯಮಗಳನುಸಾರ, ಸರಕಾರಿ ಹಾಗೂ ಖಾಸಗಿ ಕಾಲೇಜುಗಳಲ್ಲಿ ಲಭ್ಯವಿರುವ ಎಲ್ಲ 63000 ಸೀಟುಗಳನ್ನು ನೀಟ್ ಶ್ರೇಣಿಗಳಿಗೆ ಅನುಗುಣವಾಗಿ ಕೇಂದ್ರೀಕೃತ ವ್ಯವಸ್ಥೆಯ ಮೂಲಕ ಪ್ರತಿಭಾವಂತರಿಗಷ್ಟೇ ಹಂಚಬೇಕಾಗುತ್ತದೆ. ಖಾಸಗಿ ಸೀಟುಗಳಲ್ಲಿ ಅನಿವಾಸಿ ವಿದ್ಯಾರ್ಥಿಗಳಿಗೆ ಶೇ.15 ಸೀಟುಗಳನ್ನು ಕೊಟ್ಟು, ಮಿಕ್ಕುಳಿಯುವ 85% ಸೀಟುಗಳಲ್ಲಿ ಅರ್ಧಾಂಶವನ್ನು ಸರಕಾರಕ್ಕೆ ಒಪ್ಪಿಸಬೇಕೆಂದು ಸರ್ವೋಚ್ಚ ನ್ಯಾಯಾಲಯದ ಆಜ್ಞೆಗಳೂ ಬಂದಿವೆ, ಕೆಲವು ರಾಜ್ಯಗಳು ಅವನ್ನು ಪಾಲಿಸುತ್ತಲೂ ಇವೆ. ಆದರೆ ಹಲವು ಖಾಸಗಿ ಕಾಲೇಜುಗಳು ತಮ್ಮ ಸೀಟುಗಳನ್ನು ನೀಡುವುದಕ್ಕೆ ತಮ್ಮವೇ ನಿಯಮಗಳನ್ನು ಮಾಡಿಕೊಂಡಂತಿದೆ, ಕೆಲವು ಕಾಲೇಜುಗಳಂತೂ ಈ ವರ್ಷ ಒಂದೇ ಒಂದು ಸೀಟನ್ನೂ ಸರಕಾರಕ್ಕೆ ಬಿಟ್ಟುಕೊಡುವುದಿಲ್ಲ ಎಂದು ಈಗಾಗಲೇ ಹೇಳಿಯಾಗಿದೆ. ಹಾಗೆಯೇ, ವೈದ್ಯಕೀಯ ಕಾಲೇಜುಗಳ ಶುಲ್ಕವು ಅದಕ್ಕಾಗಿ ರಚಿಸಲಾದ ಸಮಿತಿಗಳ ನಿರ್ಧಾರಗಳಿಗೆ ಬದ್ಧವಾಗಿರಬೇಕೆಂಬ ನಿಯಮವಿದ್ದರೂ, ಕಾಲೇಜುಗಳು ತಮ್ಮಿಷ್ಟದಂತೆ ಶುಲ್ಕವನ್ನು ನಿಗದಿಪಡಿಸುವುದು ಸಾಮಾನ್ಯವಾಗಿಬಿಟ್ಟಿದೆ; ಈ ವರ್ಷ ಎಂಬಿಬಿಎಸ್ ವ್ಯಾಸಂಗಕ್ಕೆ ವಾರ್ಷಿಕ 6 ಲಕ್ಷದಿಂದ 30 ಲಕ್ಷದವರೆಗೂ (ಪೂರ್ಣ ವ್ಯಾಸಂಗಕ್ಕೆ 30ಲಕ್ಷದಿಂದ ಒಂದೂವರೆ ಕೋಟಿ) ಶುಲ್ಕವನ್ನು ನಿಗದಿಪಡಿಸಲಾಗಿದೆ! ಪರಿಗಣಿತ ವಿಶ್ವವಿದ್ಯಾಲಯಗಳೆಂದು ಕರೆದುಕೊಳ್ಳುವ ಖಾಸಗಿ ಕಾಲೇಜುಗಳಂತೂ ಯಾವ ನಿಯಂತ್ರಣಕ್ಕೊಳಪಟ್ಟಿವೆ ಎಂಬುದೇ ತಿಳಿಯದಷ್ಟು ಬೆಳೆದಿವೆ. ಹೀಗೆ ವಿಪರೀತವಾದ ಶುಲ್ಕ ಹಾಗೂ ಭಿನ್ನ ಮಾನದಂಡಗಳ ಮೂಲಕ, ನೀಟ್‌ನಲ್ಲಿ ಅತಿ ನಿಕೃಷ್ಟ ಶ್ರೇಣಿಯಿರುವ ವಿದ್ಯಾರ್ಥಿಗಳಿಗೆ ಅತಿ ಹೆಚ್ಚು ಶುಲ್ಕಕ್ಕೆ ಸೀಟು ಕೊಡುವ ವ್ಯವಸ್ಥೆಯಾಗಿದೆ.

ಕಳೆದ ವರ್ಷದ ನೀಟ್ ಆಧಾರಿತ ಸೀಟು ಹಂಚಿಕೆಯ ಬಗ್ಗೆ ಟೈಮ್ಸ್ ಆಫ್ ಇಂಡಿಯಾದ ರೆಮಾ ನಾಗರಾಜನ್ ಅವರು ವರದಿ ಮಾಡಿರುವಂತೆ, ಸರಕಾರಿ ಕಾಲೇಜುಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಸರಾಸರಿ ನೀಟ್‌ ಅಂಕವು 720ಕ್ಕೆ 448 ಇದ್ದರೆ, ಖಾಸಗಿ ಸೀಟುಗಳನ್ನು ಪಡೆದ ವಿದ್ಯಾರ್ಥಿಗಳ ಸರಾಸರಿ ಅಂಕವು 306 (ಶೇ. 20ರಷ್ಟು ಕಡಿಮೆ) ಇತ್ತು, ಅನಿವಾಸಿ ಕೋಟಾದಲ್ಲಿ ಸೇರಿದವರ ಅಂಕವು 221 ಮಾತ್ರವೇ ಇತ್ತು! ಖಾಸಗಿ ಪ್ರವೇಶವನ್ನು ಪಡೆದವರ 306 ಅಂಕಗಳಿಗೆ ಹೋಲಿಸಿದರೆ, ಸರಕಾರಿ ಕಾಲೇಜುಗಳಲ್ಲಿ ಮತ್ತು ಖಾಸಗಿ ಕಾಲೇಜುಗಳ ಸರಕಾರಿ ಸೀಟುಗಳಲ್ಲಿ ಪ್ರವೇಶ ಪಡೆದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಸರಾಸರಿ ಅಂಕವು 367 ಆಗಿತ್ತು. ಅಂದರೆ, ಸರಕಾರಿ ನಿಯಂತ್ರಣದ ಕಡಿಮೆ ಶುಲ್ಕದ ಸೀಟುಗಳಿಗೆ ಹೆಚ್ಚು ಅಂಕಗಳಿರುವ ಪ್ರತಿಭಾವಂತರೇ ಸೇರುತ್ತಿದ್ದು, ವಿಪರೀತ ಶುಲ್ಕದ ಖಾಸಗಿ ಸೀಟುಗಳಿಗೆ ಅತಿ ಕಡಿಮೆ ಅಂಕಗಳಿರುವವರೇ ಸೇರುತ್ತಿದ್ದಾರೆ, ಮತ್ತು ಹಾಗೆ ಸೇರುತ್ತಿರುವವರು ಸಾಮಾನ್ಯ ವರ್ಗದ ವಿದ್ಯಾರ್ಥಿಗಳಷ್ಟೇ ಅಲ್ಲ, ಮೀಸಲಾತಿಯ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗಿಂತಲೂ ಬಹಳಷ್ಟು ಕಡಿಮೆ ಅಂಕಗಳನ್ನು ಪಡೆದವರಾಗಿರುತ್ತಾರೆ. ಈಗ ನೀಟ್ ಆಧಾರಿತ ಪ್ರವೇಶಾತಿಗೆ ಅರ್ಹತೆಯನ್ನು ಶೇ. 50 ಅಂಕಗಳ ಬದಲಿಗೆ ಉನ್ನತ ಶ್ರೇಯಾಂಕಗಳಿರುವ ಶೇ 50 ವಿದ್ಯಾರ್ಥಿಗಳು ಎಂದು ಮಾಡಲಾಗಿದ್ದು, ಈ ವರ್ಷ ಮೀಸಲಾತಿಯಿಲ್ಲದ ವರ್ಗದಲ್ಲಿ ಕೇವಲ 119 ಅಂಕಗಳನ್ನು ಪಡೆದವರೂ ಪ್ರವೇಶ ಪಡೆಯುವಂತೆ ಮಾಡಲಾಗಿದೆ. ಇದರಿಂದ ಎಲ್ಲ ವರ್ಗಗಳ ಪ್ರತಿಭಾವಂತರಿಗೆ ಅನ್ಯಾಯವಾಗುವುದಷ್ಟೇ ಅಲ್ಲದೆ, ವೈದ್ಯಕೀಯ ಶಿಕ್ಷಣದ ಹಾಗೂ ಮುಂಬರುವ ವೈದ್ಯರ ಗುಣಮಟ್ಟಗಳೂ ಕಳಪೆಯಾಗುತ್ತವೆ.

ವೈದ್ಯಕೀಯ ಶಿಕ್ಷಣದ ಬಗೆಗಿನ ಸರಕಾರಿ ನೀತಿಗಳು ಅಪಾರದರ್ಶಕವಾಗಿವೆ. ವೈದ್ಯಕೀಯ ಶಿಕ್ಷಣವು ಅತಿ ದುಬಾರಿಯೆಂದು ಹೇಳಿಕೊಳ್ಳುವ ಸರಕಾರವು ಪ್ರತೀ ವರ್ಷ ಹೊಸ ವೈದ್ಯಕೀಯ ಕಾಲೇಜುಗಳನ್ನು ತೆರೆಯುತ್ತಲೇ ಇದೆ. ಅತಿಯಾದ ನಿಯಂತ್ರಣಗಳಿದ್ದರೆ, ಹೆಚ್ಚಿನ ಶುಲ್ಕವನ್ನು ಸಂಗ್ರಹಿಸಲು ಬಿಡದಿದ್ದರೆ ತಾವು ಮುಚ್ಚಿ ಹೋಗಬೇಕಾದೀತೆಂದು ವಾದಿಸುವ ಖಾಸಗಿ ಸಂಸ್ಥೆಗಳು ಇನ್ನಷ್ಟು ಹೊಸ ಕಾಲೇಜುಗಳನ್ನು ತೆರೆಯುತ್ತಲೇ ಇವೆ. ಮಾತ್ರವಲ್ಲ, ಕಳೆದೆರಡು ದಶಕಗಳಲ್ಲಿ ಪ್ರತಿ ವರ್ಷವೂ ದೇಶದ ವಿವಿಧ ನ್ಯಾಯಾಲಯಗಳಲ್ಲಿ ವೈದ್ಯಕೀಯ ಪ್ರವೇಶಾತಿಗೆ ಸಂಬಂಧಿಸಿದ ನೂರಾರು ಮೊಕದ್ದಮೆಗಳಲ್ಲಿ ಅತಿ ದುಬಾರಿ ನ್ಯಾಯವಾದಿಗಳಿಗೆ ಕೋಟಿಗಟ್ಟಲೆ ಸುರಿಯುತ್ತಲೂ ಇವೆ. ಇದೀಗ ಕೇಂದ್ರ ಸರಕಾರವು ರಾಷ್ಟ್ರೀಯ ವೈದ್ಯಕೀಯ ಆಯೋಗದ ಮಸೂದೆಯ ಮೂಲಕ ಲಾಭಕೋರ ಸಂಸ್ಥೆಗಳಿಗೂ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವ ಅವಕಾಶವನ್ನು ನೀಡಹೊರಟಿದೆ.

ದುಡಿಯುವ ಜನರ ಪ್ರತಿಭಾವಂತ ಮಕ್ಕಳನ್ನು ವೈದ್ಯರಾಗದಂತೆ ವಂಚಿಸಿ, ಕನಿಷ್ಠ ಅಂಕ ಗಳಿಸಿದವರಿಂದ ಗರಿಷ್ಠ ಹಣ ಪಡೆದು ವೈದ್ಯರನ್ನಾಗಿಸುವ ಈ ದುಷ್ಟ ವ್ಯವಸ್ಥೆಯನ್ನು ವಿದ್ಯಾರ್ಥಿಗಳಾಗಲೀ, ಹೆತ್ತವರಾಗಲೀ, ವೈದ್ಯರಾಗಲೀ, ಅವರ ಸಂಘಟನೆಗಳಾಗಲೀ ಪ್ರಶ್ನಿಸುತ್ತಿಲ್ಲ, ವಿರೋಧಿಸುತ್ತಲೂ ಇಲ್ಲ ಎಂದ ಮೇಲೆ ಮುಂದಿನ ದಿನಗಳಲ್ಲಿ ದೇಶದ ಆರೋಗ್ಯ ಸೇವೆಗಳು ಗಂಭೀರವಾಗಿ ಹದಗೆಡುವುದು ಖಂಡಿತ.

ಇಲಾಜು 16 – ಸರಕಾರ ಜಪಿಸುತ್ತಿರೋ ಜೆನೆರಿಕ್ ಔಷಧದ ಬಗ್ಗೆ ಬೆಳಕಿಗೆ ಬಾರದ ಅಂಶಗಳಿವು

(ಜೂನ್ 14, 2018)

ವೈದ್ಯಕೀಯ ವೆಚ್ಚಗಳಲ್ಲಿ ಶೇ. 70ಕ್ಕೆ ಔಷಧಗಳೇ ಕಾರಣವಾಗಿರುವುದರಿಂದ, ಅವನ್ನು ಅಗ್ಗವಾಗಿ ಒದಗಿಸುವುದು ಜನೌಷಧಿ ಯೋಜನೆಯ ಉದ್ದೇಶವೆಂದು ಹೇಳಲಾಗುತ್ತಿದೆ. ಅದಕ್ಕೀಗ ‘ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ’ (ಪಿಎಂಭಾಜಪ) ಎಂಬ ಹೊಸ ಹೆಸರಿಟ್ಟು, ಭಾಜಪವನ್ನು ಅದರೊಳಕ್ಕೆ ತುರುಕಿಸಲಾಗಿದೆ. ಮಾನ್ಯ ಪ್ರಧಾನಿಯವರು ಈ ಯೋಜನೆಗೆ ಪ್ರಚಾರ ನೀಡುವ ಭರದಲ್ಲಿ ದೇಶದ ವೈದ್ಯರ ವಿದೇಶ ಭೇಟಿಗಳನ್ನೂ, ಕೈಬರಹದ ಶೈಲಿಯನ್ನೂ ಹಳಿದಿದ್ದಾರೆ; ಅವನ್ನು ತಡೆಯುವುದಕ್ಕಾಗಿಯೇ ಜನೌಷಧಿ ಯೋಜನೆಯನ್ನು ಆರಂಭಿಸಿದ್ದಾಗಿಯೂ, ವೈದ್ಯರೆಲ್ಲರೂ ಔಷಧಗಳ ಮೂಲ (ಜೆನೆರಿಕ್) ಹೆಸರುಗಳನ್ನು ಬರೆಯುವುದನ್ನು ಕಡ್ಡಾಯಗೊಳಿಸುವುದಾಗಿಯೂ ಹೇಳಿಕೊಂಡಿದ್ದಾರೆ.

ಆದರೆ ಜನೌಷಧಿ ಯೋಜನೆಯನ್ನು ಮೋದಿ ಸರಕಾರವಾಗಲೀ, ಭಾಜಪವಾಗಲೀ ಆರಂಭಿಸಿದ್ದಲ್ಲ. ಜನೌಷಧಿ ಯೋಜನೆ ಮತ್ತು ಅದನ್ನು ನಿರ್ವಹಿಸುವ ಭಾರತೀಯ ಸಾರ್ವಜನಿಕ ಔಷಧ ಸಂಸ್ಥೆಗಳ ಬ್ಯೂರೋ (ಬಿಪಿಪಿಐ) 2008ರಲ್ಲೇ ಆರಂಭಗೊಂಡವು. ಅದರೊಂದಿಗೆ, ನೆಹರೂ ಆಡಳಿತದಲ್ಲಿ ಸ್ಥಾಪನೆಗೊಂಡು ನವರತ್ನ ಕಂಪೆನಿಗಳಾಗಿ ಬೆಳೆದಿದ್ದ ಸಾರ್ವಜನಿಕ ಔಷಧ ಸಂಸ್ಥೆಗಳು ಖಾಸಗಿ ಕಂಪೆನಿಗಳ ಔಷಧಗಳನ್ನು ಜನೌಷಧಿ ಕೇಂದ್ರಗಳ ಮೂಲಕ ಮಾರುವ ದಲ್ಲಾಳಿಗಳಾದವು.

ವೈದ್ಯರೆಲ್ಲರೂ ‘ಜೆನೆರಿಕ್’ ಔಷಧಗಳನ್ನು ಬರೆದೊಡನೆ ಔಷಧಗಳ ಮೇಲಿನ ಖರ್ಚು ಕಡಿಮೆಯಾಗಲಿದೆಯೇ? ವಾಸ್ತವದಲ್ಲಿ, ‘ಜೆನೆರಿಕ್’ ಔಷಧಗಳೆಂದರೇನು ಎನ್ನುವ ಬಗ್ಗೆ ಅವನ್ನು ಬರೆಯಲು ಹೇಳುವವರಿಗೂ (ಭಾರತೀಯ ವೈದ್ಯಕೀಯ ಪರಿಷತ್ತು ಕೂಡ ಸೇರಿ), ಬರೆಯುವವರಿಗೂ, ಮಾರುವವರಿಗೂ, ಸೇವಿಸುವವರಿಗೂ ಸ್ಪಷ್ಟವಾದ ಅರಿವಿಲ್ಲ. ಆಧುನಿಕ ಔಷಧಗಳ ರಾಸಾಯನಿಕ ಗುಣಗಳಿಗೆ ಅನುಗುಣವಾಗಿ, ಮೂಲದಲ್ಲೇ, ಕೊಡಲಾಗಿರುವ ಹೆಸರುಗಳನ್ನು ಜೆನೆರಿಕ್ ಹೆಸರುಗಳು ಎನ್ನಲಾಗುತ್ತದೆ. ಅಮೆರಿಕಾದ ರಾಷ್ಟ್ರೀಯ ಔಷಧ ನಿಯಂತ್ರಣ ಸಂಸ್ಥೆ (ಎಫ್‌ಡಿಎ)ಯ ವ್ಯಾಖ್ಯೆಯಂತೆ, ಯಾವುದೇ ಔಷಧವನ್ನು ಅಭಿವೃದ್ಧಿಪಡಿಸಿದ ಸಂಸ್ಥೆಯು ಅದರ ಮೇಲಿನ ಸ್ವಾಮ್ಯತೆಯನ್ನು ಕಳೆದುಕೊಂಡ ಬಳಿಕ ಅದೇ ಔಷಧವನ್ನು ಇನ್ನಿತರ ಸಂಸ್ಥೆಗಳು ಉತ್ಪಾದಿಸಿದರೆ, ಅವನ್ನು ಜೆನೆರಿಕ್ ಉತ್ಪನ್ನಗಳು ಎಂದು ಹೇಳಲಾಗುತ್ತದೆ.

ಉದಾಹರಣೆಗೆ, ಮಲೇರಿಯಾ ಚಿಕಿತ್ಸೆಗಾಗಿ ಜರ್ಮನಿಯ ಬಾಯರ್ ಕಂಪೆನಿ 30-40ರ ದಶಕದಲ್ಲಿ ಸಿದ್ಧಪಡಿಸಿದ ಸಂಯುಕ್ತಕ್ಕೆ ಕೊಟ್ಟ ಔಷಧೀಯ ಹೆಸರು ಕ್ಲೋರೋಕ್ವಿನ್, ಅದನ್ನು ಮಾರುವುದಕ್ಕೆ ಆ ಕಂಪೆನಿ ಕೊಟ್ಟ ಬ್ರಾಂಡ್ ಹೆಸರು ರೆಸೋಚಿನ್; ಇಂದು ಹಲವು ಕಂಪೆನಿಗಳು ಅದೇ ಕ್ಲೋರೋಕ್ವಿನ್ ಅನ್ನು ಉತ್ಪಾದಿಸಿ, ತಮ್ಮತಮ್ಮದೇ (ನಿವಾಕ್ವಿನ್, ನಿಯೋಕ್ವಿನ್, ಪಾರಾಕ್ವಿನ್, ಕ್ವಿನ್‌ರಾಸ್, ಮಲಿಯಾಗೋ, ಲಾರಿಯಾಗೋ ಇತ್ಯಾದಿ) ಬ್ರಾಂಡ್‌ ಹೆಸರುಗಳಲ್ಲಿ ಮಾರಾಟ ಮಾಡುತ್ತಿವೆ. ಇವುಗಳಲ್ಲಿ ನಿಜಾರ್ಥದಲ್ಲಿ ಜೆನೆರಿಕ್ ಹೆಸರೆಂದರೆ ಕ್ಲೋರೋಕ್ವಿನ್ ಮಾತ್ರ, ಆದರೆ ಎಫ್‌ಡಿಎ ಅನುಸಾರ ರೆಸೋಚಿನ್ ಒಂದನ್ನುಳಿದು ಇನ್ನೆಲ್ಲವೂ ಜೆನೆರಿಕ್ ಆಗುತ್ತವೆ. ನಮ್ಮಲ್ಲಿ 2005ರ ವರೆಗೆ ಇದ್ದ ಸ್ವಾಮ್ಯತೆಯ ಕಾನೂನಿನ ದೆಸೆಯಿಂದಾಗಿ ದೇಶೀಯ ಕಂಪೆನಿಗಳು ಅತಿ ನೂತನ ಔಷಧಗಳೆಲ್ಲವನ್ನೂ ಇಲ್ಲೇ ತಯಾರಿಸಿ, ತಮ್ಮದೇ ಬ್ರಾಂಡ್ ಹೆಸರುಗಳನ್ನಿಟ್ಟು, ಮೂಲ ಬ್ರಾಂಡ್‌ಗಳಿಗಿಂತ ಅತಿ ಕಡಿಮೆ ದರದಲ್ಲಿ ಮಾರುವುದಕ್ಕೆ ಸಾಧ್ಯವಾಗಿತ್ತು ಮತ್ತು ಅಂತಹಾ ‘ಜೆನೆರಿಕ್ ಬ್ರಾಂಡ್‌’ಗಳು ಈಗಲೂ ಇಲ್ಲಿ ಲಭ್ಯವಿವೆ. ಹಾಗಿರುವಾಗ, ಇಲ್ಲಿನ ವೈದ್ಯರು ‘ಜೆನೆರಿಕ್’ ಅಂದರೆ ಯಾವುದನ್ನು ಬರೆಯಬೇಕು? ಜನೌಷಧಿ ಕೇಂದ್ರಗಳು ಯಾವುದನ್ನು ಕೊಡಬೇಕು? ಮಲೇರಿಯಾ ಚಿಕಿತ್ಸೆಗೆ ರೆಸೋಚಿನ್ (ಅಥವಾ ಇತರ ‘ಜೆನೆರಿಕ್ ಬ್ರಾಂಡ್’) ಹೆಸರನ್ನು ಬರೆದು, ಜೊತೆಗೆ ಕ್ಲೋರೋಕ್ವಿನ್ ಎಂದು ಬರೆದರೆ, ಜನೌಷಧಿ ಕೇಂದ್ರಗಳ ನಿಯಮದಂತೆ ಯಾವ ಬ್ರಾಂಡ್ ಅನ್ನೂ ಕೊಡುವಂತಿಲ್ಲ, ಬೇರಾವುದೋ ಕ್ಲೋರೋಕ್ವಿನ್ ಕೊಡಬೇಕಾಗುತ್ತದೆ.

ಬಗೆಬಗೆಯ ಔಷಧಗಳನ್ನು ಬೆರಕೆ ಮಾಡಿರುವ ಸುಮಾರು 30000ಕ್ಕೂ ಹೆಚ್ಚು ‘ಬ್ರಾಂಡ್‌’ಗಳು ಕೂಡ ನಮ್ಮಲ್ಲಿ ಲಭ್ಯವಿವೆ, ಮತ್ತು ಈ ಬೆರಕೆಗಳಲ್ಲಿರುವ ಔಷಧಗಳು ಮತ್ತು ಅವುಗಳ ಪ್ರಮಾಣಗಳು ಬ್ರಾಂಡ್‌ನಿಂದ ಬ್ರಾಂಡ್‌ಗೆ ಬೇರೆ ಬೇರೆಯಾಗಿವೆ. ಇವುಗಳಲ್ಲಿ ಹೆಚ್ಚಿನವು ಅವೈಜ್ಞಾನಿಕವೂ, ಅಪಾಯಕಾರಿಯೂ ಆಗಿದ್ದು, ವೈದ್ಯರಲ್ಲೂ, ಮದ್ದಿನಂಗಡಿಗಳವರಲ್ಲೂ ಗೊಂದಲಗಳನ್ನುಂಟು ಮಾಡುತ್ತಿವೆ. ಒಂದೊಂದು ಬೆರಕೆ ಬ್ರಾಂಡ್‌ನಲ್ಲಿರುವ ಔಷಧಗಳು ಮತ್ತವುಗಳ ಪ್ರಮಾಣಗಳು ಬೇರೆ ಬೇರೆಯಾಗಿರುವಾಗ, ಜನೌಷಧಿ ಕೇಂದ್ರಗಳಲ್ಲಿ ಅವೆಲ್ಲಕ್ಕೂ ಹೊಂದುವ ಬದಲಿಗಳಿರುವುದು ಕಷ್ಟವೇ. ಹಾಗಿದ್ದರೂ, ಯಾವ ನಿಟ್ಟಿನಿಂದಲೂ ‘ಜೆನೆರಿಕ್’ ಅನಿಸಿಕೊಳ್ಳದ ಹಲವಾರು ಬೆರಕೆಗಳು ಜನೌಷಧಿ ಕೇಂದ್ರಗಳಲ್ಲಿ ಲಭ್ಯವಿವೆ!

ಇವೇನೇ ಇದ್ದರೂ, ಜನೌಷಧಿ ಕೇಂದ್ರಗಳಲ್ಲಿ ದೊರೆಯುವ ಔಷಧಗಳು ಬ್ರಾಂಡ್ ಔಷಧಗಳಿಗಿಂತ ಕನಿಷ್ಠ 50% ಆದರೂ ಅಗ್ಗವಾಗಿರುತ್ತವೆ ಹಾಗೂ ಗುಣಮಟ್ಟದಲ್ಲಿ ಬ್ರಾಂಡ್‌ಗಳಿಗೆ ಸರಿಸಾಟಿಯಾಗಿಯೇ ಇರುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಗುಣಮಟ್ಟವು ಒಂದೇ ಆಗಿದ್ದಾಗ ಬೆಲೆಗಳು ಬೇರೆಯಿರುವುದಕ್ಕೆ ಕಾರಣಗಳೇನು? ಹೊಸ ಔಷಧವನ್ನು ಅಭಿವೃದ್ಧಿಪಡಿಸಿ, ಪರೀಕ್ಷಿಸಿ, ಹೊಸ ‘ಬ್ರಾಂಡ್’ ಆಗಿ ಮಾರುಕಟ್ಟೆಗೆ ಪರಿಚಯಿಸಿ, ಪ್ರಚಾರ (ವೈದ್ಯರ ಸಮ್ಮೇಳನ, ಪ್ರತಿನಿಧಿಗಳ ಮೂಲಕ ಪ್ರಚಾರ, ಜಾಹೀರಾತುಗಳು ಇತ್ಯಾದಿ) ಮಾಡುವುದಕ್ಕೆ ತಗಲುವ ವೆಚ್ಚಗಳಿಂದಾಗಿ ಹೊಸದಾದ, ಮೂಲ ‘ಬ್ರಾಂಡ್‌’ಗಳು ದುಬಾರಿಯಾಗುತ್ತವೆ. ಸ್ವಾಮ್ಯತೆ ಕಳೆದು ಹೋದ ಔಷಧಗಳನ್ನು ಇತರ ಕಂಪೆನಿಗಳು ಉತ್ಪಾದಿಸಿ ಮಾರುವಾಗ ತಮ್ಮದೇ ‘ಬ್ರಾಂಡ್‌’ಗಳೆಂದು ಪ್ರಚಾರ ಮಾಡುವುದರಿಂದಲೂ ದರಗಳು ಹೆಚ್ಚುತ್ತವೆ. ಮೂಲ ಜೆನೆರಿಕ್ ಔಷಧಗಳನ್ನು ಯಾವುದೇ ಬ್ರಾಂಡ್ ಹೆಸರುಗಳನ್ನಿಡದೆ, ಪ್ರಚಾರವೂ ಇಲ್ಲದೆ, ಮಾರುವುದಿದ್ದರೆ ದರವೂ ಕಡಿಮೆಯಾಗುತ್ತದೆ, ಜನೌಷಧಿ ಕೇಂದ್ರಗಳಲ್ಲಿ ಇಂಥವನ್ನೇ ಮಾರಲಾಗುತ್ತದೆ.

ಜನೌಷಧಿ ಕೇಂದ್ರಗಳು ‘ಬ್ರಾಂಡ್‌’ ಔಷಧಗಳಿಗಿಂತ ಅಗ್ಗವಾಗಿ ಔಷಧಗಳನ್ನು ಮಾರುತ್ತಿದ್ದರೂ, ಅವುಗಳ ಲಾಭಾಂಶವೇನೂ ಕಡಿಮೆಯಿಲ್ಲ! ಒಂದು ಅಧ್ಯಯನದನುಸಾರ, ‘ಬ್ರಾಂಡ್‌’ ಔಷಧಗಳ ಮಾರಾಟದಿಂದ ಅಂಗಡಿಗಳವರಿಗೆ ಶೇ. 25-31ರಷ್ಟು ಲಾಭ ದೊರೆತರೆ, ಅವನ್ನೇ ‘ಜೆನೆರಿಕ್’ ರೂಪದಲ್ಲಿ ಮಾರಿದರೆ ಶೇ. 201-1016ರಷ್ಟು ಲಾಭವಾಗುತ್ತದೆ! ಜನೌಷಧಿ ಯೋಜನೆಯನ್ನು ನಡೆಸುತ್ತಿರುವ ಬಿಪಿಪಿಐಯ ದಾಖಲೆಗಳನ್ನು ನೋಡಿದರೆ, ಈ ಔಷಧಗಳ ಖರೀದಿ ಮತ್ತು ಮಾರಾಟಗಳ ನಡುವೆ ಶೇ. 100ರಷ್ಟಾದರೂ ವ್ಯತ್ಯಾಸವಿರುವುದು ಕಾಣುತ್ತದೆ. ಬಿಪಿಪಿಐ ಅಧಿಕಾರಿಗಳನುಸಾರ, ಈ ಜೆನೆರಿಕ್ ಔಷಧಗಳನ್ನು ಬ್ರಾಂಡ್‌ಗಳ ಶೇ. 10-15ರಷ್ಟು ಬೆಲೆಗೆ ಒದಗಿಸುವುದಕ್ಕೆ ಸಾಧ್ಯವಿದೆ, ಆದರೆ, ಜನೌಷಧಿ ಕೇಂದ್ರಗಳವರಿಗೆ ಶೇ. 20, ವಿತರಕರಿಗೆ ಶೇ. 10, ಪ್ರಧಾನ ಸಂಸ್ಥೆಗೆ ಶೇ. 6, ಪ್ರಚಾರಕ್ಕೆ ಶೇ. 4, ಹಾಗೂ ಇತರ ಆಡಳಿತಾತ್ಮಕ ವೆಚ್ಚಗಳಿಂದಾಗಿ ಅಷ್ಟು ಅಗ್ಗದಲ್ಲಿ ನೀಡಲು ಸಾಧ್ಯವಾಗುತ್ತಿಲ್ಲ.

ಔಷಧಗಳನ್ನು ಉತ್ಪಾದಿಸದೆ ನಷ್ಟದಲ್ಲಿರುವ ಸಾರ್ವಜನಿಕ ರಂಗದ ಉದ್ದಿಮೆಗಳು ಹೀಗೆ ಜನೌಷಧಿ ಕೇಂದ್ರಗಳ ದಲ್ಲಾಳಿಗಳಾಗಿ ಒಂದಷ್ಟು ಲಾಭ ಪಡೆಯಲು ಯತ್ನಿಸುತ್ತಿದ್ದರೂ ಯಶಸ್ವಿಯಾದಂತಿಲ್ಲ. ಪ್ರಧಾನಿಯಾದಿಯಾಗಿ ಎಲ್ಲರೂ ವೈದ್ಯರನ್ನು ತೆಗಳಿ ಪ್ರಚಾರ ಮಾಡಿದರೂ, 2014ರವರೆಗೆ 80ರಷ್ಟಿದ್ದ ಜನೌಷಧಿ ಕೇಂದ್ರಗಳು ಈಗ 3500 ದಾಟಿದ್ದರೂ, 2017-18ರಲ್ಲಿ ಕೇವಲ ರೂ. 74 ಕೋಟಿ ಮಾತ್ರವೇ ವಹಿವಾಟಾಗಿದೆ. ಇದೇ ಮಾರ್ಚ್‌ನಲ್ಲಿ ಪ್ರಕಟವಾಗಿರುವ ಸಣ್ಣ ಅಧ್ಯಯನವೊಂದರಂತೆ, ಜನೌಷಧಿ ಕೇಂದ್ರವೊಂದು ದಿನಕ್ಕೆ ಸರಾಸರಿ 47 ಜನರಿಗೆ ಸೇವೆಯೊದಗಿಸುತ್ತಿದ್ದು, ತಿಂಗಳಿಗೆ ಕೇವಲ 4230 ರೂಗಳಷ್ಟೇ ಲಾಭ ಪಡೆಯುತ್ತಿದೆ. ಇದಕ್ಕಿದಿರಾಗಿ, ಖಾಸಗಿ ಕಂಪೆನಿಗಳ ಬ್ರಾಂಡ್‌ ಔಷಧಗಳ ವಹಿವಾಟು 70 ಸಾವಿರ ಕೋಟಿಯಷ್ಟಿದೆ, ಮೂಲ ಜೆನೆರಿಕ್ ಔಷಧಗಳ ಪಾಲು 10 ಸಾವಿರ ಕೋಟಿಯಷ್ಟಿದೆ. ಜನೌಷಧಿ ಯೋಜನೆಯು ಸುದ್ದಿಯಾದಷ್ಟು ವಹಿವಾಟು ಮಾಡಲಾಗದಿರುವುದಕ್ಕೆ ಅದು ಜನರ ವಿಶ್ವಾಸವನ್ನು ಇನ್ನೂ ಗಳಿಸದಿರುವುದು, ಹೆಚ್ಚಾಗಿ ಬಳಕೆಯಲ್ಲಿರುವ ಔಷಧಗಳು ಅಲ್ಲಿ ಲಭ್ಯವಿಲ್ಲದಿರುವುದು, ಬೆರಕೆ ಔಷಧಗಳ ಬಗ್ಗೆ ಗೊಂದಲಗಳಿರುವುದು ಎಲ್ಲವೂ ಕಾರಣಗಳಾಗಿವೆ.

ಬ್ರಾಂಡ್ ಔಷಧಗಳ ಹತ್ತನೇ ಒಂದರಷ್ಟು ಬೆಲೆಗೆ ದೊರೆಯಬಲ್ಲ ಜೆನೆರಿಕ್ ಔಷಧಗಳನ್ನು ಬ್ರಾಂಡ್‌ಗಳ ಅರ್ಧದಷ್ಟು ಬೆಲೆಗೆ ಮಾರುವ ಮೂಲಕ ಜನೌಷಧಿ ಯೋಜನೆಯನ್ನು ನಡೆಸುವ ಎಲ್ಲ ಸಂಸ್ಥೆಗಳೂ ಲಾಭ ಮಾಡಿಕೊಳ್ಳಲು ಯತ್ನಿಸುತ್ತಿವೆ ಎಂದ ಮೇಲೆ, ವೈದ್ಯರನ್ನು ದೂಷಿಸುವ ಬದಲು ಸರಕಾರವೇ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ದೇಶದ ಜನರಿಗೆ ಅತಿ ಕಡಿಮೆ ದರದಲ್ಲಿ ಔಷಧಗಳನ್ನೊದಗಿಸುವ ನೈಜ ಕಾಳಜಿಯಿದ್ದರೆ ಸರಕಾರಿ ಸ್ವಾಮ್ಯದ ಔಷಧ ಕಂಪೆನಿಗಳನ್ನು ಪುನಶ್ಚೇತನಗೊಳಿಸಬೇಕು, ರಾಷ್ಟ್ರೀಯ ಅತ್ಯಾವಶ್ಯಕ ಔಷಧಗಳ ಪಟ್ಟಿಯಲ್ಲಿರುವ ಎಲ್ಲ ಔಷಧಗಳನ್ನು ಅಲ್ಲೇ ಉತ್ಪಾದಿಸಿ, ನೇರವಾಗಿ ಮಾರಾಟ ಮಾಡುವ ವ್ಯವಸ್ಥೆ ಮಾಡಬೇಕು.

ಇಲಾಜು 15 – ನೂತನ ಸಿಎಂ ಕುಮಾರಸ್ವಾಮಿ ಅವರಿಗೆ ವೈದ್ಯರೊಬ್ಬರ ಆರು ಅಹವಾಲು

(ಮೇ 31, 2018)

ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಎಚ್. ಡಿ. ಕುಮಾರಸ್ವಾಮಿ ಅವರಿಗೆ ಅಭಿನಂದನೆಗಳು. ಚುನಾವಣಾ ಪೂರ್ವ ನಿರೀಕ್ಷೆಗಳೆಲ್ಲವನ್ನೂ ಮೀರಿ, ಹನ್ನೆರಡು ವರ್ಷಗಳ ಬಳಿಕ, ಮತ್ತೊಮ್ಮೆ ಕರ್ನಾಟಕದ ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡಿದ್ದೀರಿ. ಮೂರು ಪಕ್ಷಗಳ ಸಮ್ಮಿಶ್ರ ಪ್ರಣಾಳಿಕೆಯನ್ನು ಈಡೇರಿಸುವ ನಿಮ್ಮ ಜವಾಬ್ದಾರಿಯ ಜೊತೆಗೆ, ಈ ಕೆಳಗಿನ ಆರು ಬೇಡಿಕೆಗಳನ್ನೂ ಸೇರಿಸಿಕೊಳ್ಳಬೇಕೆಂದು ಕೇಳಿಕೊಳ್ಳುತ್ತಿದ್ದೇನೆ.

ಮೊದಲನೆಯದಾಗಿ, ಶಾಲೆಗಳ ಬಿಸಿಯೂಟದಲ್ಲಿ ಮೊಟ್ಟೆಯನ್ನು ಕೊಡಬಾರದೆಂದು ಜನವರಿ 20, 2007 ರಂದು ನೀವು ಮುಖ್ಯಮಂತ್ರಿಯಾಗಿದ್ದಾಗ ಕೈಗೊಂಡಿದ್ದ ನಿರ್ಣಯವನ್ನು ಈಗ ಹಿಂಪಡೆಯಬೇಕೆಂದು ವಿನಂತಿಸುತ್ತೇನೆ. ಆ ನಿರ್ಣಯವನ್ನು ನಾವಾಗಲೇ ವಿರೋಧಿಸಿದ್ದೆವು, ರಾಜ್ಯದ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ನೀಡುವುದಕ್ಕಾಗಿ ಕೇರಳ ಹಾಗೂ ತಮಿಳುನಾಡಿನ ಶಾಲೆಗಳಂತೆ ಇಲ್ಲಿಯೂ ವಾರಕ್ಕೆ ಮೂರು-ನಾಲ್ಕು ದಿನವಾದರೂ ಮೊಟ್ಟೆಯನ್ನು ನೀಡಬೇಕೆಂದು ಆಗ್ರಹಿಸಿದ್ದೆವು, ಆದರೆ ಅದು ಫಲ ನೀಡಿರಲಿಲ್ಲ. ಬಳಿಕ ಭಾಜಪದ ಆಡಳಿತದಲ್ಲಿ ಅದನ್ನು ಬಯಸುವ ಸಾಧ್ಯತೆಗಳೇ ಇರಲಿಲ್ಲ. ಶ್ರೀ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದೊಡನೆ ಮತ್ತೆ ಅದೇ ಬೇಡಿಕೆಯನ್ನಿಟ್ಟಿದ್ದೆವು, ರಾಜ್ಯದ ಶೇ. 38ರಷ್ಟು ಮಕ್ಕಳು ಕುಪೋಷಿತರಾಗಿದ್ದಾರೆ ಎನ್ನುವುದನ್ನು ಅವರ ಗಮನಕ್ಕೆ ತಂದಿದ್ದೆವು. ಆದರೆ, ಹಿಂದುಳಿದ ಜಿಲ್ಲೆಗಳ ಅಂಗನವಾಡಿಗಳಲ್ಲಿ ಮೊಟ್ಟೆಯನ್ನು ಒದಗಿಸಲು ಆರಂಭಿಸಿದರಾದರೂ, ಶಾಲಾ ಮಕ್ಕಳಿಗೆ ಮೊಟ್ಟೆ ಭಾಗ್ಯ ದೊರೆಯಲೇ ಇಲ್ಲ, ಬದಲಿಗೆ, ಮಕ್ಕಳಿಗೆ ಅಷ್ಟೇನೂ ಇಷ್ಟವಿಲ್ಲದ, ಮೊಟ್ಟೆಗೆ ಸಾಟಿಯೂ ಅಲ್ಲದ, ಕ್ಷೀರಭಾಗ್ಯವಷ್ಟೇ ದಕ್ಕಿತು. ಈಗ ನೀವೇ ಮತ್ತೆ ಬಂದಿದ್ದೀರಿ, ಮೊಟ್ಟೆಗೆ ಅಡ್ಡಿಯಾಗಿದ್ದ ಭಾಜಪದ ಬದಲು ಅರೆಮನಸ್ಸಿನ ಕಾಂಗ್ರೆಸ್‌ನ ಕೈ ಹಿಡಿದಿದ್ದೀರಿ, ಹಾಗಾಗಿ ಮಕ್ಕಳಿಗೆ ಮೊಟ್ಟೆ ಭಾಗ್ಯ ದೊರೆಯಲೆಂದು ಆಶಿಸುತ್ತಿದ್ದೇವೆ.

ಹಾಗೆಯೇ, ನಮ್ಮ ಎಲ್ಲಾ ಮಹಾಗ್ರಂಥಗಳಲ್ಲಿ ಅತ್ಯಂತ ಶ್ರೇಷ್ಠ ಆಹಾರವೆಂದೇ ಬಿಂಬಿತವಾಗಿರುವ ಮಾಂಸಾಹಾರದ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ನಡೆಸಿ, ಕೀಳರಿಮೆ ಮೂಡಿಸಿ, ಮಾಂಸಾಹಾರಿಗಳಾಗಿರುವ ರಾಜ್ಯದ ಶೇ. 80ಕ್ಕೂ ಹೆಚ್ಚು ಜನರ ಹಕ್ಕನ್ನು ಕಸಿಯುವ ಪ್ರಯತ್ನಗಳು ನಿರಂತರವಾಗಿ ಸಾಗಿವೆ. ಶಾಲೆ, ಕಾಲೇಜು, ವಿಶ್ವವಿದ್ಯಾನಿಲಯಗಳು ಮತ್ತು ಸರಕಾರಿ ಕಚೇರಿಗಳಲ್ಲಿ ಮಾಂಸಾಹಾರ ಸೇವನೆಗೆ ಅಡ್ಡಿಯಿದೆ. ಆದ್ದರಿಂದ ಕನ್ನಡ ಜನತೆಯ ಹೆಸರಲ್ಲಿ ಪ್ರಮಾಣ ಮಾಡಿರುವ ತಾವು ಕನ್ನಡಿಗರ ಆಹಾರದ ಆಯ್ಕೆಗಳನ್ನು ರಕ್ಷಿಸಿ, ಮಾಂಸಾಹಾರ ಸೇವನೆಗೆ ಎಲ್ಲೆಡೆ ಮುಕ್ತ ಅವಕಾಶವನ್ನು ಕಲ್ಪಿಸಬೇಕೆಂದೂ, ಮಾಂಸಾಹಾರದ ಬಗ್ಗೆ ನಡೆಯುತ್ತಿರುವ ಅಪಪ್ರಚಾರವನ್ನು ಸಮರ್ಥವಾಗಿ ಎದುರಿಸಬೇಕೆಂದೂ ವಿನಂತಿಸುತ್ತೇನೆ.

ಸುಳ್ಳು ಸುದ್ದಿಗಳು ರಾಜ್ಯಕ್ಕೆ ಹಾನಿಕಾರಕವಾಗುತ್ತಿವೆ. ಮಕ್ಕಳನ್ನು ಕದಿಯಲಾಗುತ್ತಿದೆಯೆಂದು ಯಾರೋ ಹರಿಯಬಿಟ್ಟ ವಿಡಿಯೋದಿಂದಾಗಿ ರಾಜ್ಯದಲ್ಲಿ 80ಕ್ಕೂ ಹೆಚ್ಚು ಜನರ ಮೇಲೆ ದಾಳಿಗಳಾಗಿವೆ, ತಾವು ಅಧಿಕಾರ ವಹಿಸಿಕೊಳ್ಳುವುದಕ್ಕೆ ಸ್ವಲ್ಪವೇ ಮೊದಲು ಬೆಂಗಳೂರಿನ ನಟ್ಟನಡುವಿನಲ್ಲಿ ರಾಜಸ್ಥಾನ ಮೂಲದ ಯುವಕನನ್ನು ಅದೇ ಸಂಶಯದಿಂದ ಬಡಿದು ಸಾಯಿಸಲಾಯಿತು. ನಿಮ್ಮ ಪ್ರಮಾಣ ವಚನ ಸಮಾರಂಭದಲ್ಲಿ ಮಮತಾ ಬ್ಯಾನರ್ಜಿಯವರಿಗೆ ತೊಂದರೆಯಾಯಿತೆಂದು ಪೊಲೀಸ್ ವರಿಷ್ಠಾಧಿಕಾರಿಯವರನ್ನು ವರ್ಗಾವಣೆ ಮಾಡಿದ್ದೀರೆಂದು ಜಾಲ ತಾಣವೊಂದು ಸುಳ್ಳು ಸುದ್ದಿ ಬರೆಯಿತು, ಅದನ್ನು ಹರಡಿ ನಿಮ್ಮನ್ನು ಹಳಿದದ್ದೂ ಆಯಿತು. ಇದೇ ತಾಣವು ಜೈನ ಮುನಿಯೊಬ್ಬರು ರಸ್ತೆ ಅಪಘಾತದಲ್ಲಿ ಗಾಯಗೊಂಡದ್ದನ್ನು ತಿರುಚಿ, ಮುಸ್ಲಿಮರಿಂದ ದಾಳಿಗೊಳಗಾಗಿದ್ದರು ಎಂದು ಚುನಾವಣೆಯ ವೇಳೆ ದುರುದ್ದೇಶಪೂರಿತ ಸುಳ್ಳು ವರದಿಯನ್ನು ಪ್ರಕಟಿಸಿತ್ತು, ಅದರ ಸಂಪಾದಕನ ಬಂಧನವಾದಾಗ ಭಾಜಪದ ನಾಯಕರ ಪ್ರತಿಭಟನೆಯೂ ನಡೆದಿತ್ತು. ಚುನಾವಣಾ ಪ್ರಚಾರದ ವೇಳೆ ಪ್ರಧಾನಿಯಾದಿಯಾಗಿ ಹಲವರು ಕರ್ನಾಟಕದ ಬಗ್ಗೆ ಹೇಳಿದ ಸುಳ್ಳುಗಳು ಫಲಿತಾಂಶದ ಮೇಲೂ ಪ್ರಭಾವ ಬೀರಿರಬಹುದು. ಕಪ್ಪು ಹಣವೂ ಸೇರಿದಂತೆ ಕೋಟಿಗಟ್ಟಲೆ ಪಡೆದು ಸುಳ್ಳು ಸುದ್ದಿಗಳನ್ನು ಪ್ರಕಟಿಸಿ, ಹಿಂದುತ್ವವನ್ನು ಮೆರೆಸುವುದಕ್ಕೆ ದೊಡ್ಡ ಮಾಧ್ಯಮ ಸಂಸ್ಥೆಗಳೆಲ್ಲವೂ ಸಿದ್ಧವಿವೆ ಎಂಬುದನ್ನು ಕುಟುಕು ಕಾರ್ಯಾಚರಣೆಯೊಂದು ಬಯಲಿಗೆಳೆಯಿತು, ಮುಂಬರುವ ಮಹಾ ಚುನಾವಣೆಗಳಲ್ಲಿ ಸುಳ್ಳು ಸುದ್ದಿಗಳು, ಬದಲಿಸಿದ ಚಿತ್ರಗಳು, ತಿರುಚಿದ ವಿಡಿಯೋಗಳು ವ್ಯಾಪಕವಾಗಿ ದುರ್ಬಳಕೆಯಾಗುವ ಎಲ್ಲಾ ಸಾಧ್ಯತೆಗಳಿವೆ ಎನ್ನುವುದನ್ನು ತೋರಿಸಿತು. ಕೇರಳದ ಕೋಯಿಕ್ಕೋಡಿನಲ್ಲಿ ಗುರುತಿಸಲ್ಪಟ್ಟ ನಿಪ ಸೋಂಕಿನ ಬಗ್ಗೆ ಸುಳ್ಳು ಸುದ್ದಿಗಳು ಹರಡಿ ಜನರು ಭಯಭೀತರಾದುದನ್ನೂ ಕಂಡೆವು. ಆದ್ದರಿಂದ, ಸುಳ್ಳು ಸುದ್ದಿ-ಚಿತ್ರ-ವಿಡಿಯೋಗಳ ಮೇಲೆ ನಿಗಾ ವಹಿಸಿ ನಿಯಂತ್ರಿಸುವುದಕ್ಕೂ, ಸುಳ್ಳುಗಳನ್ನು ತಕ್ಷಣವೇ ಖಂಡಿಸಿ, ನಿಜವನ್ನು ಜನರಿಗೆ ತಿಳಿಸುವುದಕ್ಕೂ ಆಡಳಿತ, ಪೊಲೀಸ್ ಮತ್ತು ತಜ್ಞರೆಲ್ಲರನ್ನೂ ಹೊಂದಿರುವ ವ್ಯವಸ್ಥೆಯನ್ನು ರೂಪಿಸುವ ತುರ್ತು ಅಗತ್ಯವಿದೆ.

ಶ್ರೀ ಸಿದ್ದರಾಮಯ್ಯ ಅವರ ಆಡಳಿತವು ಮೂರ್ನಾಲ್ಕು ವರ್ಷಗಳ ಜಗ್ಗಾಟದ ಬಳಿಕ ಕೊನೆಗೂ ಮೌಢ್ಯ ನಿಷೇಧ ಕಾನೂನನ್ನು ಜಾರಿಗೊಳಿಸಿತು. ಚಾಮರಾಜನಗರಕ್ಕೆ ಹೋದರೆ ಅಧಿಕಾರ ನಷ್ಟವಾಗುತ್ತದೆನ್ನುವ ಮೂಢ ನಂಬಿಕೆಯನ್ನು ಧಿಕ್ಕರಿಸಿ ಸಿದ್ದರಾಮಯ್ಯನವರು ಹಲವು ಬಾರಿ ಅಲ್ಲಿಗೆ ಹೋದರು, ತನ್ನ ಅಧಿಕಾರಾವಧಿಯನ್ನೂ ಪೂರ್ಣಗೊಳಿಸಿದರು. ಆದರೆ, ಆಡಳಿತವೂ, ಸಾರ್ವಜನಿಕ ಜೀವನವೂ ಮತನಿರಪೇಕ್ಷವಾಗಿರಬೇಕು ಮತ್ತು ವೈಜ್ಞಾನಿಕ ಮನೋವೃತ್ತಿಯನ್ನು ಬೆಳೆಸಿಕೊಳ್ಳುವುದು ಎಲ್ಲರ ಕರ್ತವ್ಯವಾಗಿರಬೇಕು ಎಂಬ ಸಂವಿಧಾನದ ಮೂಲಭೂತ ಆಶಯಗಳು ಪ್ರಸಕ್ತ ರಾಜಕಾರಣದ ಒತ್ತಡದಲ್ಲಿ ಮೂಲೆಗುಂಪಾಗುತ್ತಿರುವುದನ್ನು ಚುನಾವಣಾ ಪ್ರಚಾರವೂ ಸೇರಿದಂತೆ ಇತ್ತೀಚಿನ ವಿದ್ಯಮಾನಗಳಲ್ಲಿ ಕಾಣುತ್ತಿದ್ದೇವೆ; ಮತೀಯವಾದವು ಕಳೆದ ಚುನಾವಣೆಯಲ್ಲಿ ಪ್ರಭಾವ ಬೀರಿದ್ದನ್ನು ಒಪ್ಪಿಕೊಂಡೇ ನೀವಿಂದು ಸಮ್ಮಿಶ್ರ ಸರಕಾರವನ್ನು ರಚಿಸಿಕೊಂಡಿದ್ದೀರಿ. ಪ್ರಮಾಣ ವಚನ ಹಾಗೂ ಕಲಾಪದ ಕಾಲವನ್ನು ನಿಗದಿಪಡಿಸುವುದರಲ್ಲಿ ಜ್ಯೋತಿಷಿಗಳ ಪಾತ್ರವಿತ್ತೆನ್ನುವುದು ವೈಜ್ಞಾನಿಕ ಮನೋವೃತ್ತಿಯನ್ನು ಬೆಳೆಸುವ ಆಶಯಕ್ಕೆ ವಿರುದ್ಧವಾಗಿಯೇ ಇದೆ. ನಮ್ಮ ಸಾಂವಿಧಾನಿಕ ಮೌಲ್ಯಗಳಿಗೆ ಇವೆಲ್ಲವುಗಳಿಂದಲೂ ಅಪಚಾರವಾಗುವುದರಿಂದ ಆಡಳಿತದಿಂದಲೂ, ರಾಜಕಾರಣದಿಂದಲೂ, ಸಾರ್ವಜನಿಕ ಜೀವನದಿಂದಲೂ ಇವನ್ನು ದೂರವಿರಿಸಬೇಕಾಗುತ್ತದೆ.

ಇನ್ನು ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ವಿಚಾರದಲ್ಲಿ ಕಳೆದ ಸರಕಾರವು ಮಾಡದೇ ಬಿಟ್ಟ ಕೆಲಸಗಳನ್ನು ನೀವಾದರೂ ಮಾಡುವಿರೇನೋ ಎಂಬ ನಿರೀಕ್ಷೆಯಲ್ಲಿದ್ದೇವೆ. ರಾಜ್ಯ ವೈದ್ಯಕೀಯ ಪರಿಷತ್ತಿಗೆ 2016ರ ಆಗಸ್ಟ್ 31ರೊಳಗೆ ನಡೆಯಬೇಕಾಗಿದ್ದ ಚುನಾವಣೆಗಳನ್ನು ಈ ಕೂಡಲೇ ನಡೆಸಬೇಕು, ಮತ್ತು ವೈದ್ಯಕೀಯ ಪರಿಷತ್ತನ್ನು ಹೆಚ್ಚು ಪಾರದರ್ಶಕವಾಗಿಸಲು ವೈದ್ಯರಲ್ಲದ ಇಬ್ಬರು ತಜ್ಞರನ್ನು ಅದರ ಸದಸ್ಯರಾಗಿ ನೇಮಿಸಲು ಸಾಧ್ಯವಾಗುವಂತೆ ನಿಯಮಗಳನ್ನು ಪರಿಷ್ಕರಿಸಬೇಕು. ದೇಶದ ಬಹುತೇಕ ರಾಜ್ಯಗಳಲ್ಲಾಗಲೀ, ಕೇಂದ್ರ ವೈದ್ಯಕೀಯ ಪರಿಷತ್ತಿನಲ್ಲಾಗಲೀ ವೈದ್ಯರ ಮರುನೋಂದಣಿಯ ನಿಯಮವು ಇಲ್ಲದೇ ಇರುವುದರಿಂದ, ಅಂಥದ್ದನ್ನು ರಾಜ್ಯದಲ್ಲಿ ಹೇರಿರುವುದು ರಾಜ್ಯದ ವೈದ್ಯರಿಗೆ ಮಾಡಿರುವ ಅನ್ಯಾಯವಾಗಿದೆ, ಉಚ್ಚ ನ್ಯಾಯಾಲಯವು ಕೂಡ ಮರುನೋಂದಣಿಗೆ ಒಪ್ಪದ ವೈದ್ಯರ ನೋಂದಣಿಯನ್ನು ರದ್ದು ಪಡಿಸದಂತೆ ತಡೆ ನೀಡಿದೆ; ಆದ್ದರಿಂದ ಸರಕಾರವು ಆ ನಿಯಮವನ್ನು ಕೂಡಲೇ ಹಿಂಪಡೆಯಬೇಕು. ರಾಜ್ಯದ ಎಂಬಿಬಿಎಸ್ ಮತ್ತು ಸ್ನಾತಕೋತ್ತರ ವ್ಯಾಸಂಗದ ಪ್ರವೇಶಾತಿಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪಾರದರ್ಶಕತೆಯಿಲ್ಲದೆ ವರ್ತಿಸುತ್ತಿರುವುದು, ಸ್ನಾತಕೋತ್ತರ ಪ್ರವೇಶಾತಿಯಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿಗಳು ವಂಚಿತರಾಗುತ್ತಿರುವುದು, ಮತ್ತು ಇದನ್ನು ಸರ್ವೋಚ್ಚ ನ್ಯಾಯಾಲಯದೆದುರು ಮಂಡಿಸುವಲ್ಲಿ ಲೋಪಗಳಾಗಿರುವುದು ಕೂಡ ಸೂಕ್ತ ಪರಿಹಾರವನ್ನು ಕಾಣಬೇಕಾಗಿದೆ. ಸರಕಾರಿ ರಂಗದಲ್ಲಿ ಆರೋಗ್ಯ ಸೇವೆಗಳನ್ನು ಸುಧಾರಿಸುವ ಬದಲು, ಖಾಸಗಿ ಸಹಭಾಗಿತ್ವದಲ್ಲಿ ಕೆಲವು ನಿರ್ದಿಷ್ಟ ಶಸ್ತ್ರಚಿಕಿತ್ಸೆಗಳನ್ನು ಒದಗಿಸುವುದಕ್ಕಷ್ಟೇ ರಾಜ್ಯದ ಪ್ರಮುಖ ಪಕ್ಷಗಳೆಲ್ಲವೂ ಆಸಕ್ತವಾಗಿರುವಂತಿದೆ; ಆರೋಗ್ಯ ರಕ್ಷಣೆಗೆ ಬಹು ಮುಖ್ಯವಾದ ವೈದ್ಯಕೀಯ ಚಿಕಿತ್ಸೆಗಳು, ಮಹಿಳಾ ಮತ್ತು ಶಿಶು ಆರೋಗ್ಯ ಸೇವೆಗಳು ಮತ್ತು ರೋಗ ನಿಯಂತ್ರಣ ಕಾರ್ಯಕ್ರಮಗಳನ್ನು ಸುಧಾರಿಸಿ, ಸರಕಾರಿ ಆರೋಗ್ಯ ಸೇವೆಗಳನ್ನು ಸಮಗ್ರವಾಗಿ ಬಲಪಡಿಸುವುದಕ್ಕೆ ಯಾವುದೇ ಸ್ಪಷ್ಟ ಯೋಜನೆಗಳು ಯಾರಲ್ಲೂ ಇದ್ದಂತಿಲ್ಲ. ಈ ಬಗ್ಗೆ ತಾವು ತುರ್ತಾಗಿ ಗಮನ ಹರಿಸಿ, ಕೆಪಿಎಂಇ ಕಾಯಿದೆಯೊಳಗೆ ಸರಕಾರಿ ಆಸ್ಪತ್ರೆಗಳನ್ನೂ ಸೇರಿಸಿ, ಅವುಗಳ ಸಮಗ್ರ ಸುಧಾರಣೆಗೆ ಬದ್ಧತೆಯನ್ನು ತೋರಿಸಬೇಕಾಗಿದೆ.

ಕೊನೆಯದಾಗಿ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ, ನಾಡಿನ ಹಿರಿಯ ಚಿಂತಕರೂ, ಸಾಕ್ಷಿಪ್ರಜ್ಞೆಗಳೂ ಆಗಿದ್ದ ಎಂ ಎಂ ಕಲ್ಬುರ್ಗಿ ಮತ್ತು ಗೌರಿ ಲಂಕೇಶ್ ಅವರ ಹಂತಕರನ್ನು ಹುಡುಕಿ ಬಂಧಿಸುವಲ್ಲಿ ಯಾವ ಒತ್ತಡಗಳಿಗೂ ಒಳಗಾಗದೆ ವಿಶೇಷ ಮುತುವರ್ಜಿ ವಹಿಸಬೇಕೆಂದು ಕೇಳಿಕೊಳ್ಳುತ್ತೇನೆ.

ಇಲಾಜು 14 – ಐವತ್ತು ವರ್ಷಗಳಾದರೂ ಕಾಡುತ್ತಲೇ ಇರುವ ರೋಟಿ, ಕಪಡಾ ಮತ್ತು ಮಕಾನ್

(ಮೇ 14, 2018)

ಚುನಾವಣೆಗಳಲ್ಲಿ ಭರವಸೆಗಳ ಮಹಾಪೂರವೇ ಹರಿಯುತ್ತದೆ. ಇಂದಿರಾ ಗಾಂಧಿಯ ರೋಟಿ, ಕಪಡಾ ಮತ್ತು ಮಕಾನ್ ಪ್ರಣಾಳಿಕೆ ಐವತ್ತು ವರ್ಷಗಳಾದರೂ ನೆನಪಿನಲ್ಲಿದೆ, ನಾಲ್ಕು ವರ್ಷಗಳ ಹಿಂದಿನ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಅಚ್ಚೇ ದಿನ್ ಕನ್ನಡಿಯೊಳಗಿನ ಗಂಟಾಗಿಯೇ ಉಳಿದಿವೆ. ಆ ನಡುವೆಯೇ ಕರ್ನಾಟಕದ ಚುನಾವಣೆ ಮುಗಿದಿದೆ, ಎಲ್ಲ ಪ್ರಮುಖ ಪಕ್ಷಗಳೂ ಹಲಬಗೆಯ ಆಶ್ವಾಸನೆಗಳನ್ನು ಮತದಾರರ ಮುಂದಿಟ್ಟಿವೆ. ಮತದಾರರು ಇವನ್ನೆಲ್ಲ ನೆನಪಿಟ್ಟುಕೊಂಡು, ಸದ್ಯದಲ್ಲೇ ಅಧಿಕಾರಕ್ಕೇರಲಿರುವವರು ಅವನ್ನು ಈಡೇರಿಸುವಂತೆ ಒತ್ತಾಯಿಸಬೇಕಾಗಿದೆ.

ರೋಟಿ, ಕಪಡಾ ಮತ್ತು ಮಕಾನ್ ಪ್ರಣಾಳಿಕೆಯ 50 ವರ್ಷಗಳಲ್ಲಿ ಊಟ, ಬಟ್ಟೆ, ಸೂರುಗಳ ಸ್ಥಿತಿ ಸುಧಾರಿಸಿದ್ದರೂ, ದೇಶದಲ್ಲಿ ಹಸಿವು, ಬಡತನ, ವಸತಿಹೀನರು ಇನ್ನೂ ಇಲ್ಲವಾಗಿಲ್ಲ, ರೋಟಿ, ಕಪಡಾ, ಮಕಾನ್ ಭರವಸೆಗಳನ್ನು ನೀಡುವ ಅಗತ್ಯವೂ ಮರೆಯಾಗಿಲ್ಲ. ರಾಜ್ಯದ ಈ ಚುನಾವಣೆಯಲ್ಲೂ ಎಲ್ಲಾ ಪಕ್ಷಗಳ ಪ್ರಣಾಳಿಕೆಗಳಲ್ಲೂ ರೋಟಿ, ಕಪಡಾ ಮತ್ತು ಮಕಾನ್ ಭರವಸೆ ಮುಂದುವರಿದಿರುವುದನ್ನು ಕಾಣಬಹುದು.

ಇಂದಿರಾ ಗಾಂಧಿ ರೋಟಿ, ಕಪಡಾ, ಮಕಾನ್ ಎಂದ ಅರುವತ್ತರ ಅಂತ್ಯದಲ್ಲಿ ದೇಶದ ಶೇ. 35-44% ಜನತೆ ಹಸಿವಿನಲ್ಲಿತ್ತು, ಕೇವಲ ಒಂದು ಕೋಟಿ ಟನ್ ಗೋಧಿಯನ್ನು ಬೆಳೆಯಲಾಗುತ್ತಿತ್ತು, ಇನ್ನೊಂದು ಕೋಟಿ ಟನ್ ಗೋಧಿಯನ್ನು ಅಮೆರಿಕದಿಂದ ಆಮದು ಮಾಡಲಾಗುತ್ತಿತ್ತು. ಈಗ ಧಾನ್ಯ ಮತ್ತಿತರ ಆಹಾರ ವಸ್ತುಗಳ ಉತ್ಪಾದನೆಯಲ್ಲಿ ದೇಶವು ಸ್ವಾವಲಂಬಿಯಾಗಿದೆ, ಗೋಧಿಯೊಂದರ ಉತ್ಪಾದನೆಯೇ 10 ಕೋಟಿ ಟನ್ ತಲುಪಿದೆ, ಧಾನ್ಯಗಳನ್ನೂ, ಮಾಂಸೋತ್ಪನ್ನಗಳನ್ನೂ ರಫ್ತು ಮಾಡಲಾಗುತ್ತಿದೆ. ಆದರೆ ಬಡತನ, ನಿರುದ್ಯೋಗ, ಆರ್ಥಿಕ, ಸಾಮಾಜಿಕ ಮತ್ತು ಆಹಾರ ವಿತರಣೆಯಲ್ಲಿ ಅಸಮಾನತೆಗಳಿಂದಾಗಿ ಹಸಿವು ಇನ್ನೂ ಸಂಪೂರ್ಣವಾಗಿ ತೊಡೆದು ಹೋಗಿಲ್ಲ; ಶೇ. 16ರಷ್ಟು, ಅಂದರೆ 20 ಕೋಟಿ ಜನರು, ಈಗಲೂ ಹಸಿವಿನಲ್ಲಿದ್ದಾರೆ, ಶೇ. 38ರಷ್ಟು ಮಕ್ಕಳು ಕುಪೋಷಿತರಾಗಿದ್ದಾರೆ, ಹಿಂದುಳಿದ ಭಾಗಗಳಲ್ಲಿ ಈ ಸಮಸ್ಯೆ ಹೆಚ್ಚು ಗಣನೀಯವಾಗಿದೆ. ಅಚ್ಚೇ ದಿನಗಳ ಈ ನಾಲ್ಕು ವರ್ಷಗಳಲ್ಲಿ, ಪಡಿತರಕ್ಕೂ ಆಧಾರ್ ಕಡ್ಡಾಯಗೊಳಿಸಿದ ಬಳಿಕ, ಹಸಿವಿನ ಸೂಚ್ಯಂಕದಲ್ಲಿ 119 ದೇಶಗಳ ಪಟ್ಟಿಯಲ್ಲಿ 100ನೇ ಸ್ಥಾನಕ್ಕೆ ಜಾರಿದ್ದೇವೆ, ಪಡಿತರ ದೊರೆಯದೆ ಕೆಲವರು ಸತ್ತರೆಂಬ ವರದಿಗಳೂ ಬಂದಿವೆ.

ಕರ್ನಾಟಕದ ಈ ಚುನಾವಣೆಗಳಲ್ಲೂ ರೋಟಿಯ ಭರವಸೆಯನ್ನು ಮತ್ತೆ ನೀಡಲಾಗಿದೆ. ಕಾಂಗ್ರೆಸ್ ಪ್ರಣಾಳೀಕೆಯಲ್ಲಿ ಅನ್ನ ಭಾಗ್ಯ, ಮಾತೃ ಪೂರ್ಣ, ಕ್ಷೀರ ಭಾಗ್ಯ, ಇಂದಿರಾ ಕ್ಯಾಂಟೀನ್‌ಗಳ ಬಗ್ಗೆ ಹೇಳಲಾಗಿದ್ದರೆ, ಭಾಜಪದ ಪ್ರಣಾಳಿಕೆಯಲ್ಲಿ ಅನ್ನಭಾಗ್ಯದ ಬದಲಿಗೆ ಅನ್ನ ದಾಸೋಹ, ಇಂದಿರಾ ಕ್ಯಾಂಟೀನ್ ಬದಲಿಗೆ ಮುಖ್ಯಮಂತ್ರಿ ಅನ್ನಪೂರ್ಣ ಕ್ಯಾಂಟೀನ್ ನಡೆಸುವ ಭರವಸೆ ನೀಡಲಾಗಿದೆ. ಅನ್ನ ಭಾಗ್ಯವನ್ನು ಕನ್ನ ಭಾಗ್ಯ ಎಂದು ಜರೆದು, ಇಂದಿರಾ ಕ್ಯಾಂಟೀನನ್ನು ಲೇವಡಿ ಮಾಡಿ, ಅಧಿಕಾರಕ್ಕೆ ಬಂದರೆ ಇವನ್ನು ಹಿಂಪಡೆಯುವುದಾಗಿ ಘೋಷಿಸಿದ್ದ ಭಾಜಪ ನಾಯಕತ್ವವು, ಹಸಿದ ಜನರಿಗೆ ರೋಟಿಯ ಅಗತ್ಯವನ್ನು ಕೊನೆಗೂ ಒಪ್ಪಿಕೊಂಡು, ಅವನ್ನು ಮುಂದುವರಿಸುವ ಭರವಸೆ ನೀಡಬೇಕಾಯಿತು. ಜನತಾ ದಳದ ಪ್ರಣಾಳಿಕೆಯಲ್ಲಿ ಅಂತಹ ಆಶ್ವಾಸನೆಗಳು ಕಾಣುವುದಿಲ್ಲ. ಶಾಲೆಯ ಬಿಸಿಯೂಟದಲ್ಲಿ ಮೊಟ್ಟೆಗಳನ್ನು ನೀಡುವ ಬಗ್ಗೆ, ಮಾಂಸಾಹಾರ ಸೇವಿಸುವ ಹಕ್ಕನ್ನು ಖಚಿತ ಪಡಿಸುವ ಬಗ್ಗೆ ಯಾವ ಪಕ್ಷದ ಪ್ರಣಾಳಿಕೆಯಲ್ಲೂ ಏನಿಲ್ಲ. ರೈತರ ಸಾಲ ಮನ್ನ, ಬೆಂಬಲ ಬೆಲೆ, ನೀರಾವರಿಗೆ ಆದ್ಯತೆ ಇತ್ಯಾದಿಗಳು ಎಲ್ಲ ಪಕ್ಷಗಳ ಪ್ರಣಾಳಿಕೆಗಳಲ್ಲೂ ಇವೆ, ಆದರೆ, ಕೃಷಿಗಾರಿಕೆಯಲ್ಲಿ ಆಧುನಿಕ ವಿಧಾನಗಳನ್ನು ಅಭಿವೃದ್ಧಿಪಡಿಸಿ, ಉತ್ಪಾದಕತೆಯನ್ನು ಹೆಚ್ಚಿಸುವ ಬಗ್ಗೆ ಯಾವ ಪ್ರಣಾಳಿಕೆಗಳಲ್ಲೂ ಹೆಚ್ಚೇನೂ ಹೇಳಲಾಗಿಲ್ಲ. ಭಾಜಪ ಮತ್ತು ಜನತಾ ದಳಗಳ ಪ್ರಣಾಳಿಕೆಗಳಲ್ಲಿ ಇಸ್ರೇಲ್ ಹಾಗೂ ಚೀನಾ ಮಾದರಿ ಕೃಷಿಯನ್ನು ಇಲ್ಲೂ ಉತ್ತೇಜಿಸುವ ಬಗ್ಗೆ ಹೇಳಲಾಗಿದೆ; ಆದರೆ, ನಮ್ಮದೇ ರಾಜ್ಯದಲ್ಲಿರುವ ಅತ್ಯುನ್ನತ ಕೃಷಿ ವಿಜ್ಞಾನ ಕೇಂದ್ರ, ಇತರ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಸಂಸ್ಥೆಗಳನ್ನು ಪ್ರೋತ್ಸಾಹಿಸಿ, ಸದುಪಯೋಗಪಡಿಸಿಕೊಳ್ಳುವ ಬಗ್ಗೆ ಯಾವ ಯೋಜನೆಯೂ ಅವುಗಳಲ್ಲಿಲ್ಲ. ಮೀನುಗಾರಿಕೆಗೆ ಪ್ರೋತ್ಸಾಹದ ಬಗ್ಗೆ ಕಾಂಗ್ರೆಸ್ ಮತ್ತು ಭಾಜಪ ಪ್ರಣಾಳಿಕೆಯಲ್ಲಿ ಒಂದೆರಡು ಸಾಲುಗಳಿದ್ದರೆ, ಕೋಳಿ ಮತ್ತು ಪಶು ಸಾಕಣೆ ಬಗ್ಗೆ ಜನತಾ ದಳದ ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಕುಲಾಂತರಿ ತಳಿಗಳ ಪ್ರಸ್ತಾಪವಿರುವುದು ನಮ್ಮನ್ನು ಎಚ್ಚರಿಸಬೇಕಾಗಿದೆ.

ಬಟ್ಟೆಯ ಬಗ್ಗೆ ಯಾವ ಪ್ರಣಾಳಿಕೆಗಳಲ್ಲೂ ಏನೂ ಕಾಣುವುದಿಲ್ಲ. ನಿರ್ದಿಷ್ಟ ಪಂಗಡಗಳವರಿಗೆ, ಮತ್ತು ನಗರ ಪ್ರದೇಶಗಳಲ್ಲಿ ವಸತಿ ಯೋಜನೆಗಳ ಬಗ್ಗೆ ಎಲ್ಲ ಪಕ್ಷಗಳ ಪ್ರಣಾಳಿಕೆಗಳಲ್ಲೂ ಭರವಸೆಗಳನ್ನು ನೀಡಲಾಗಿದೆ. ಹೀಗೆ, ರೋಟಿ ಮತ್ತು ಮಕಾನ್‌ ಭರವಸೆಗಳು ಇಂದಿಗೂ ಪ್ರಸ್ತುತವಾಗಿ ಉಳಿದಿವೆ. ಜೊತೆಗೆ, ಉತ್ತಮ ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ಒದಗಿಸುವ ಜವಾಬ್ದಾರಿಯೂ ಸರಕಾರದ್ದಾಗಿದ್ದರೂ ಕೂಡ, ಯಾವ ಪಕ್ಷದ ಪ್ರಣಾಳಿಕೆಯಲ್ಲೂ ಇವೆರಡರ ಬಗ್ಗೆ ಪ್ರಾಮಾಣಿಕ ಬದ್ಧತೆಯೇ ಕಾಣುವುದಿಲ್ಲ.

ಶಾಲಾ ಶಿಕ್ಷಣವನ್ನು ಮೌಲ್ಯಯುತಗೊಳಿಸಿ, ಕಲಿಕೆಯನ್ನು ಆಸಕ್ತಿದಾಯಕವಾಗಿ ಮಾಡಬಲ್ಲ ಕಾರ್ಯಯೋಜನೆಗಳು ಯಾವ ಪಕ್ಷಗಳ ಪ್ರಣಾಳಿಕೆಗಳಲ್ಲೂ ಇಲ್ಲ. ಕಾಂಗ್ರೆಸ್ ಮತ್ತು ಜನತಾ ದಳದ ಪ್ರಣಾಳಿಕೆಗಳಲ್ಲಿ ಸರಕಾರಿ ಶಾಲೆಗಳ ಸೌಲಭ್ಯಗಳನ್ನು ಉತ್ತಮ ಪಡಿಸುವ ಬಗ್ಗೆ ಹೇಳಲಾಗಿದ್ದರೂ, ಕಟ್ಟಡ ಮತ್ತು ಉಪಕರಣಗಳತ್ತ ಹೆಚ್ಚಿನ ಒತ್ತು ನೀಡಲಾಗಿದೆಯೇ ಹೊರತು, ಅವನ್ನು ಹೆಚ್ಚು ಆಕರ್ಷಕಗೊಳಿಸುವ ಬಗ್ಗೆ ನಿರ್ದಿಷ್ಟ ಯೋಜನೆಗಳಿಲ್ಲ. ಭಾಜಪ ಮತ್ತು ಜನತಾ ದಳಗಳ ಪ್ರಣಾಳಿಕೆಗಳಲ್ಲಿ ಖಾಸಗಿ ಶಾಲೆಗಳ ಶುಲ್ಕ ನಿಯಂತ್ರಣದ ಬಗ್ಗೆ ಹೇಳಲಾಗಿದ್ದರೂ, ಅದು ಕಾರ್ಯರೂಪಕ್ಕೆ ಬರುವಾಗ ಹೇಗಿದ್ದೀತೆಂದು ಹೇಳಲಾಗದು.

ಆರೋಗ್ಯ ಸೇವೆಗಳ ಸುಧಾರಣೆಗೆ ದೂರಗಾಮಿ ಯೋಜನೆಗಳು ಯಾವ ಪ್ರಣಾಳಿಕೆಗಳಲ್ಲೂ ಕಾಣುವುದಿಲ್ಲ. ಭಾಜಪದ ಪ್ರಣಾಳಿಕೆಯಲ್ಲಿ ಆರೋಗ್ಯ ಸೇವೆಗಳ ಮೊದಲ ಪುಟದಲ್ಲಿ ಯೋಗಭಂಗಿಯೇ ಇದ್ದು, ಒಳಗೆಯೂ ಹಲವೆಡೆ ಆಯುಷ್ ಪದ್ಧತಿಗೇ ಒತ್ತು ನೀಡಲಾಗಿದೆ. ಕೇಂದ್ರದ ಹೊಸ ಆಯವ್ಯಯದಲ್ಲಿ ಹೇಳಲಾಗಿರುವ ಆಯುಷ್ಮಾನ್ ಭಾರತ ಯೋಜನೆಯ ಪುನರುಚ್ಚರಿಸಲಾಗಿದ್ದು, ಅದಕ್ಕೆ ಎಷ್ಟು ಹಣವನ್ನು ಒದಗಿಸಲಾಗುವುದೆಂಬ ವಿವರಗಳಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳನ್ನು ಭಾರತೀಯ ಸಾರ್ವಜನಿಕ ಆರೋಗ್ಯ ಮಾನದಂಡಗಳಿಗೆ ಅನುಗುಣವಾಗಿ ಸುಧಾರಿಸಲಾಗುವುದೆಂದು ಹೇಳಲಾಗಿದೆ; ಆದರೆ, ಈಗ ರಾಜ್ಯದ ಶೇ. 84ರಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೇವಲ ಒಬ್ಬರೇ ವೈದ್ಯರಿದ್ದು, ಆ ಮಾನದಂಡಗಳನುಸಾರ ಅಲ್ಲೆಲ್ಲ ಇಬ್ಬರು ವೈದ್ಯರನ್ನು ನೇಮಿಸುವುದಕ್ಕೆ ಯಾವ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಭಾಜಪದ ಪ್ರಣಾಳಿಕೆಯಲ್ಲಿಲ್ಲ. ಎಲ್ಲಾ ರೋಗಿಗಳ ಕಾಯಿಲೆ ಮತ್ತು ಚಿಕಿತ್ಸೆಗಳ ಬಗ್ಗೆ ಮಾಹಿತಿಯನ್ನು ಕೂಡಿಡಲು ಗಣಕ ಪ್ರಾಧಿಕಾರವನ್ನು ಸ್ಥಾಪಿಸಲಾಗುವುದೆಂದು ಭಾಜಪ ಹೇಳಿರುವುದನ್ನು ಎಚ್ಚರಿಕೆಯಿಂದ ನೋಡಬೇಕಾಗುತ್ತದೆ. ಜನತಾ ದಳದ ಪ್ರಣಾಳಿಕೆಯಲ್ಲಿ ಸರಕಾರಿ ಆರೋಗ್ಯ ಸೇವೆಗಳ ಸುಧಾರಣೆಯ ಬಗ್ಗೆ ಹೆಚ್ಚೇನೂ ಹೇಳಲಾಗಿಲ್ಲ; ಬದಲಿಗೆ, ಅಲ್ಲಲ್ಲಿ ಸರಕಾರಿ ಮತ್ತು ಖಾಸಗಿ ವೈದ್ಯರ ಕೂಟವನ್ನು ರಚಿಸಿ, ಆ ಮೂಲಕ ನಿರ್ದಿಷ್ಟ ಆರೋಗ್ಯ ಸೇವೆಗಳನ್ನು ಒದಗಿಸುವ ಯೋಜನೆಯನ್ನು ರೂಪಿಸಲಾಗುವುದೆಂದೂ, ಅದಕ್ಕಾಗಿ 8000 ಕೋಟಿ ರೂಪಾಯಿಗಳನ್ನು ಒದಗಿಸಲಾಗುವುದೆಂದೂ ಹೇಳಲಾಗಿದೆ. ಇಂತಹಾ ಯೋಜನೆಯು ಸರಕಾರಿ ಆರೋಗ್ಯ ವ್ಯವಸ್ಥೆಯನ್ನು ಇನ್ನಷ್ಟು ದುರ್ಬಲಗೊಳಿಸುವ ಎಲ್ಲ ಸಾಧ್ಯತೆಗಳೂ ಇದ್ದು, ಸಮಗ್ರ ಆರೋಗ್ಯ ಸೇವೆಗಳು ಲಭ್ಯವಾಗುವ ಖಾತರಿಯೂ ಇಲ್ಲ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಎಲ್ಲ ಸ್ತರದ ಆರೋಗ್ಯ ಸೇವೆಗಳನ್ನು ಸುಧಾರಿಸುವ ಬಗ್ಗೆ ಹೇಳಲಾಗಿದ್ದು, ಅದಕ್ಕಾಗಿ ಉತ್ಪನ್ನದ ಶೇ. 0.9 ಬದಲಿಗೆ ಶೇ. 1.5ರಷ್ಟು ಹಣವನ್ನು ಒದಗಿಸಲಾಗುವುದೆಂದು ಹೇಳಲಾಗಿದೆ. ಈಗಾಗಲೇ ಘೋಷಿಸಿರುವ ಆರೋಗ್ಯ ಭಾಗ್ಯ ಯೋಜನೆಯ ಮಾದರಿಯನ್ನೇ ಮುಂದುವರಿಸುವ ಇರಾದೆಯು ಪ್ರಣಾಳಿಕೆಯಲ್ಲಿದೆ; ಆದರೆ, ಅಂತಹಾ ಯೋಜನೆಯಲ್ಲಿ ಖಾಸಗಿ ಆರೋಗ್ಯ ಸೇವೆಗಳ ಬಳಕೆಯನ್ನು ಉತ್ತೇಜಿಸಲಾಗುತ್ತದೆಯೇ ಹೊರತು, ಸರಕಾರಿ ವ್ಯವಸ್ಥೆಯ ಒಳಿತಾಗುವುದಿಲ್ಲ. ಒಟ್ಟಿನಲ್ಲಿ, ಯಾವ ಪಕ್ಷಕ್ಕೂ ಕೂಡ ಸರಕಾರಿ ಆರೋಗ್ಯ ಸೇವೆಗಳನ್ನೇ ಸುಧಾರಿಸುವ ಹುಮ್ಮಸ್ಸಿದ್ದಂತೆ ಕಾಣುವುದಿಲ್ಲ.

ಸರಕಾರ ಯಾವ ಪಕ್ಷದ್ದೇ ಬಂದರೂ, ರೋಟಿ, ಕಪಡಾ, ಮಕಾನ್, ಶಿಕ್ಷಣ ಮತ್ತು ಆರೋಗ್ಯ ಸೇವೆಗಳಿಗೆ ಅಷ್ಟಿಟ್ಟು ತೇಪೆ ಹಚ್ಚುವ ಕೆಲಸವನ್ನಷ್ಟೇ ನಿರೀಕ್ಷಿಸಬಹುದಲ್ಲದೆ, ದೂರದೃಷ್ಟಿಯುಳ್ಳ, ಕ್ರಾಂತಿಕಾರಿಯಾದ ಯೋಜನೆಗಳನ್ನಲ್ಲ.

ಇಲಾಜು 13 – ಅಪರಾಧಿಯನ್ನು ಗಲ್ಲಿಗೇರಿಸುವುದಕ್ಕಿಂತ ಕ್ರೌರ್ಯವನ್ನು ಕೊಲ್ಲುವುದು ಒಳ್ಳೆಯದು

(ಮೇ 1, 2018)

ಏನಾಗಿದೆ ನಮ್ಮ ದೇಶಕ್ಕೆ? ಏನಾಗಿದೆ ನಮ್ಮ ಜನರಿಗೆ? ಕುರಿಗಾಹಿಗಳನ್ನು ಊರಿಂದ ಹೊರದಬ್ಬುವ ದುರುದ್ದೇಶದಿಂದ ಎಂಟು ವರ್ಷದ ಬಾಲಕಿಯ ಮೇಲೆ ದೇವಾಲಯದೊಳಗೆ ಅತ್ಯಾಚಾರವೆಸಗಿ ಕೊಲೆಗೈದು, ಆರೋಪಿಗಳ ಬಿಡುಗಡೆಯನ್ನು ಆಗ್ರಹಿಸಿ ಸಚಿವರ ನೇತೃತ್ವದಲ್ಲಿ ತ್ರಿವರ್ಣ ಧ್ವಜ ಬೀಸಿ ಪ್ರತಿಭಟಿಸಿದ್ದು; ಕೆಲಸ ಕೇಳಲು ಬಂದ ಹದಿನೇಳರ ಬಾಲಕಿಯ ಮೇಲೆ ಅತ್ಯಾಚರವೆಸಗಿದ ಶಾಸಕನ ವಿರುದ್ಧ 8 ತಿಂಗಳಾದರೂ ಕ್ರಮ ಕೈಗೊಳ್ಳದೆ, ಆಕೆಯ ತಂದೆಯನ್ನೇ ಬಡಿದು, ವೈದ್ಯರೂ ಹಂಗಿಸಿ, ಸರಿಯಾದ ಚಿಕಿತ್ಸೆಯಿಲ್ಲದೆ ಆತ ಸಾವನ್ನಪ್ಪಿ, ಆ ಬಾಲಕಿ ಬೆಂಕಿ ಹಚ್ಚಿಕೊಳ್ಳುವುದಾಗಿ ಮುಖ್ಯಮಂತ್ರಿಯ ಮನೆಯೆದುರು ಪ್ರತಿಭಟಿಸಿದರೂ ಜಗ್ಗದೆ, ಕೊನೆಗೆ ಉಚ್ಚ ನ್ಯಾಯಾಲಯವೇ ಆ ಶಾಸಕನನ್ನು ಜೈಲಿಗೆ ತಳ್ಳುವಂತಾಗಿದ್ದು, ಅಲ್ಲೂ ಶಾಸಕನ ಪರವಾಗಿ ಮೆರವಣಿಗೆ ಮಾಡಿ, ಬಾಲಕಿಯನ್ನೂ, ಆಕೆಯ ಮೃತ ತಂದೆಯನ್ನೂ ಇಲ್ಲಸಲ್ಲದಂತೆ ದೂಷಿಸಿದ್ದು; ನಾಲ್ಕು ತಿಂಗಳ ಹಸುಳೆಯೂ ಸೇರಿದಂತೆ ಇನ್ನೂ ಹಲವರ ಮೇಲೆ ಮದುವೆ ಮನೆಯಿಂದ ಮದರಸಾಗಳವರೆಗೆ ಎಲ್ಲೆಡೆ ಅತ್ಯಾಚಾರಗಳಾದದ್ದು, ಹದಿನಾರರ ಹುಡುಗನೊಬ್ಬ ನೆರೆಮನೆಯ 13ರ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಕ್ಕೆ ಆತನ ಹೆತ್ತವರೇ ಒತ್ತಾಸೆಯಾಗಿ, ಅವರೇ ಆ ಬಾಲಕಿಯನ್ನು ಮತ್ತಷ್ಟು ಥಳಿಸಿ ಸಾವಿನಂಚಿಗೆ ತಳ್ಳಿದ್ದು; ಈ ಭೀಕರ ಕೃತ್ಯಗಳನ್ನು ದೇಶದಾದ್ಯಂತ ಪ್ರತಿಭಟಿಸಿದವರನ್ನೇ ಗೇಲಿ ಮಾಡಿದ್ದು ಎಲ್ಲವೂ ಆದವು.

‘ಬಹಳವಾಯಿತು ನಾರಿಯರ ಮೇಲಣ ದಾಳಿ, ತಡೆಯಲು ಬೇಕು ತನ್ನದೇ ಸರಕಾರ’ ಎಂದು ಘೋಷಿಸಿ ಅಧಿಕಾರಕ್ಕೇರಿದ್ದ ಪ್ರಧಾನಿ, ಇಷ್ಟೆಲ್ಲ ದೌರ್ಜನ್ಯಗಳಾದಾಗಲೂ ತಿಂಗಳುಗಟ್ಟಲೆ ತುಟಿ ಬಿಚ್ಚದೆ, ಜನ ರೊಚ್ಚಿಗೆದ್ದಾಗ ಖಂಡನೆಯ ಎರಡು ಸಾಲು ಹೇಳಿ, ಮತ್ತೆ ವಿದೇಶಕ್ಕೆ ಹಾರಿ, ‘ಅತ್ಯಾಚಾರ ಅಂದರೆ ಅತ್ಯಾಚಾರ ಅಷ್ಟೇ, ಅದರಲ್ಲಿ ರಾಜಕೀಯ ಬೇಡ’ ಅಂತ ಬೋಧಿಸಿ, ಮರಳಿ ಬಂದ ದಿನವೇ, ತಜ್ಞರನ್ನೆಲ್ಲ ಕಡೆಗಣಿಸಿ, ಮಕ್ಕಳ ಮೇಲಿನ ಅತ್ಯಾಚಾರಕ್ಕೆ ಮರಣದಂಡನೆ ಎಂದು ಅಧ್ಯಾದೇಶ ಹೊರಡಿಸಿ, ಕರ್ನಾಟಕದಲ್ಲಿ ಮತಯಾಚನೆಗೆ ಅದನ್ನು ಬಳಸಿದ್ದೂ ಆಯಿತು.

ಮಹಾಗುರುಗಳಾಗಿ ಮೆರೆದು, ಪ್ರಧಾನಿಯೂ ಸೇರಿದಂತೆ ಹಲವು ರಾಜಕೀಯ ಪಕ್ಷಗಳ ಹಲವು ದೊಡ್ಡ ನಾಯಕರುಗಳ ಸಾಮೀಪ್ಯ ಹೊಂದಿ, ಸಾವಿರಾರು ಕೋಟಿ ಆಸ್ತಿ ಗಳಿಸಿದ್ದ ರಾಂ ರಹೀಂ ಮತ್ತು ಆಸಾರಾಂ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ್ದಕ್ಕಾಗಿ ಜೀವಾವಧಿ ಶಿಕ್ಷೆಗೆ ಗುರಿಯಾದದ್ದೂ ಆಯಿತು. ಆದರೆ ರಾಂ ರಹೀಂನ ವಿಚಾರಣೆಗೆ 15 ವರ್ಷ, ಆಸಾರಾಂನದಕ್ಕೆ 5 ವರ್ಷ ಬೇಕಾಯಿತು, ಎರಡೂ ಪ್ರಕರಣಗಳಲ್ಲಿ ಹಲವು ಸಾಕ್ಷಿಗಳ ಮೇಲೆ ದಾಳಿಗಳಾದವು, ರಾಂ ರಹೀಂನ ಸಂತ್ರಸ್ತೆಯ ಸಹೋದರ, ಮತ್ತೋರ್ವ ಪತ್ರಕರ್ತ, ಆಸಾರಾಂನ ವೈದ್ಯ, ಬಾಣಸಿಗ, ಮತ್ತೋರ್ವ ಸಾಕ್ಷಿ ಕೊಲೆಯಾದರು, ನ್ಯಾಯಾಧೀಶರನ್ನೂ ತನಿಖಾಧಿಕಾರಿಗಳನ್ನೂ ಸಾವಿರಾರು ಸಲ ಬೆದರಿಸಲಾಯಿತು, ರಾಂ ರಹೀಂ ತೀರ್ಪಿನ ನಂತರದ ಗಲಭೆಗಳಲ್ಲಿ 32 ಜನ ಸತ್ತರು; ಆಸಾರಾಂನ ತೀರ್ಪಿನ ಬಳಿಕ ದೊಂಬಿಯಾಗದಂತೆ ನಾಲ್ಕು ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸಬೇಕಾಯಿತು.

ಇವನ್ನೆಲ್ಲ ನೋಡಿದಾಗ, ನಮ್ಮ ದೇಶದಲ್ಲಿ ಲೈಂಗಿಕ ದೌರ್ಜನ್ಯಗಳು ಹೆಚ್ಚುತ್ತಿರುವುದಕ್ಕೆ, ಆರೋಪಿಗಳನ್ನು ಶಿಕ್ಷಿಸುವಲ್ಲಿ ವೈಫಲ್ಯಗಳಾಗುತ್ತಿರುವುದಕ್ಕೆ ಸಾಮಾಜಿಕ-ಸಾಂಸ್ಥಿಕ-ನ್ಯಾಯಿಕ-ರಾಜಕೀಯ ಕಾರಣಗಳೇನು ಎನ್ನುವುದು ಸ್ಪಷ್ಟವಾಗುತ್ತದೆ. ರಾಂ ರಹೀಂ, ಆಸಾರಾಂರಂತಹ ಅತಿ ಪ್ರಭಾವಿ ಅತ್ಯಾಚಾರಿಗಳನ್ನು ಕೂಡ ಜೀವಾವಧಿ ಜೈಲಿಗೆ ತಳ್ಳಬಲ್ಲ ಕಾನೂನುಗಳೂ, ಪೋಲೀಸರೂ, ನ್ಯಾಯಾಂಗವೂ ನಮ್ಮಲ್ಲಿದೆ, ಅಂಥವರ ವಿರುದ್ಧ ಜೀವದ ಹಂಗು ತೊರೆದು ಹೋರಾಡುವವರೂ ಇದ್ದಾರೆ, ಜೊತೆಗೆ, ಅಂಥವರನ್ನು ಬೆಂಬಲಿಸುವ ಮಹಾನ್ ನೇತಾರರೂ, ಸಹಸ್ರಾರು ಅಂಧ ಭಕ್ತರೂ ಇದ್ದಾರೆ, ನಂಬಿ ಬಲಿಯಾಗುವ ಹೆಣ್ಮಕ್ಕಳೂ, ಹೆತ್ತವರೂ ಇದ್ದಾರೆ. ಲೈಂಗಿಕ ದೌರ್ಜನ್ಯಗಳನ್ನು ತಡೆಯಬೇಕಿದ್ದರೆ ಇವೆಲ್ಲವನ್ನೂ ಪರಿಗಣಿಸಿ, ಸರಿಪಡಿಸುವ ಸತತ ಪ್ರಯತ್ನಗಳಾಗಬೇಕಲ್ಲದೆ, ಅತ್ಯಾಚಾರಿಗೆ ಮರಣದಂಡನೆಯ ಅಧ್ಯಾದೇಶವೊಂದರಿಂದ ಸಾಧ್ಯವಾಗದು.

ತೊಂಬತ್ತರ ದಶಕದ ಆರಂಭದಲ್ಲಿ ರಾಜಸ್ಥಾನದ ಬನ್ವಾರಿ ದೇವಿಯವರ ಮೇಲಾಗಿದ್ದ ಅತ್ಯಾಚಾರದ ಪ್ರಕರಣವು ಇಡೀ ವ್ಯವಸ್ಥೆಯ ಕರಾಳತೆಯನ್ನು ಎತ್ತಿ ತೋರಿಸಿತಲ್ಲದೆ, ಲೈಂಗಿಕ ದೌರ್ಜನ್ಯಗಳ ವಿರುದ್ಧದ ಹೋರಾಟವನ್ನು ಬಿರುಸಾಗಿಸಿ, ಕಾನೂನುಗಳ ಪರಿಷ್ಕರಣೆಗಳಿಗೆ ಹೇತುವಾಯಿತು. ರಾಜಸ್ಥಾನ ಸರಕಾರದ ಬಾಲ್ಯ ವಿವಾಹ ವಿರೋಧಿ ಅಭಿಯಾನದಲ್ಲಿ ಕಾರ್ಯಕರ್ತೆಯಾಗಿದ್ದ ಬನ್ವಾರಿ ದೇವಿ, ಹಸುಳೆಯರ ವಿವಾಹವನ್ನು ತಡೆಯಲೆತ್ನಿಸಿದ್ದಕ್ಕಾಗಿ 1992ರ ಸೆಪ್ಟೆಂಬರ್‌ನಲ್ಲಿ ಐದು ಜನ ಮೇಲ್ಜಾತಿಯ ದುರುಳರಿಂದ ಅತ್ಯಾಚಾರಕ್ಕೀಡಾಗಿದ್ದರು. ಆಕೆ ದೂರಿತ್ತಾಗ, ಪೋಲೀಸರೂ, ವೈದ್ಯರೂ ನಿಷ್ಕರುಣೆಯಿಂದ ವರ್ತಿಸಿದ್ದರು ಮತ್ತು ಮೂರು ವರ್ಷಗಳ ಬಳಿಕ, ಐದು ಬಾರಿ ನ್ಯಾಯಾಧೀಶರು ಬದಲಿಸಲ್ಪಟ್ಟು, ಎಲ್ಲಾ ಆರೋಪಿಗಳೂ ಖುಲಾಸೆಯಾಗಿದ್ದರು; ಶಾಸಕನೊಬ್ಬನ ನೇತೃತ್ವದಲ್ಲಿ ಆರೋಪಿಗಳ ಪರವಾಗಿ ವಿಜಯೋತ್ಸವ ಮೆರವಣಿಗೆಯು ಆಗಲೂ ನಡೆದಿತ್ತು. ಮಾಧ್ಯಮಗಳು ಮತ್ತು ಹಲವು ಸ್ವಯಂಸೇವಾ ಸಂಸ್ಥೆಗಳ ನಿರಂತರ ಒತ್ತಡದಿಂದಾಗಿ ರಾಜ್ಯ ಸರಕಾರವು ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿತಾದರೂ, ಕೇವಲ ಒಂದೇ ಸಲ ಕೆಲ ನಿಮಿಷಗಳಷ್ಟು ಆಲಿಸಿದ್ದನ್ನು ಬಿಟ್ಟರೆ, ಇಂದಿನವರೆಗೂ ಆ ವಿಚಾರಣೆಯು ಮುಂದುವರಿದೇ ಇಲ್ಲ, ಇಬ್ಬರು ಆರೋಪಿಗಳು ವಯಸ್ಸಾಗಿ ಸತ್ತರಾದರೂ, ಯಾರಿಗೂ ಶಿಕ್ಷೆಯಾಗಿಯೇ ಇಲ್ಲ. ಆದರೆ ಇದೇ ಪ್ರಕರಣವನ್ನು ಮುಂದಿಟ್ಟು ರಾಜಸ್ಥಾನದ ವಿಶಾಖಾ ಸ್ವಯಂಸೇವಾ ಸಂಸ್ಥೆಯು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಿಂದಾಗಿ, ಕೆಲಸದ ವೇಳೆ ಮಹಿಳೆಯರ ಮೇಲಾಗುವ ದೌರ್ಜನ್ಯವನ್ನು ತಡೆಯುವ ಮಾರ್ಗದರ್ಶಿಯನ್ನು 1997ರಲ್ಲಿ ನ್ಯಾಯಾಲಯವು ರೂಪಿಸಿತು, 2013ರಲ್ಲಿ ಕೇಂದ್ರ ಸರಕಾರವು ಆ ಕಾಯಿದೆಯನ್ನು ತಂದಿತು. ನಂತರ 2012ರಲ್ಲಿ ಮಕ್ಕಳನ್ನು ಲೈಂಗಿಕ ದೌರ್ಜನ್ಯದಿಂದ ರಕ್ಷಿಸಿ, ಪೀಡಕರನ್ನು ಇನ್ನಷ್ಟು ಉಗ್ರವಾಗಿ ಶಿಕ್ಷಿಸುವ ಕಾಯಿದೆಯೂ ಬಂತು.

ದಿಲ್ಲಿಯಲ್ಲಿ 2012ರ ಡಿಸೆಂಬರ್ 16ರಂದು ನಿರ್ಭಯಾಳ ಮೇಲಾದ ಆಮಾನುಷ ದಾಳಿಯಿಂದ ಇಡೀ ದೇಶ ರೊಚ್ಚಿಗೆದ್ದ ಬೆನ್ನಿಗೆ, ಡಿಸೆಂಬರ್ 23ರಂದು ಕೇಂದ್ರ ಸರಕಾರವು ನ್ಯಾಯಮೂರ್ತಿಗಳಾದ ಜೆ ಎಸ್ ವರ್ಮಾ, ಲೀಲಾ ಸೇಥ್ ಮತ್ತು ಹಿರಿಯ ನ್ಯಾಯವಾದಿ ಗೋಪಾಲ ಸುಬ್ರಹ್ಮಣ್ಯಂ ಅವರಿದ್ದ ಸಮಿತಿಯನ್ನು ನೇಮಿಸಿತು, ಈ ಸಮಿತಿಯು ಕೇವಲ ಒಂದೇ ತಿಂಗಳಲ್ಲಿ, 2013ರ ಜನವರಿ 23ರಂದು, 644 ಪುಟಗಳ ಅತ್ಯುತ್ತಮ ವರದಿಯನ್ನೊಪ್ಪಿಸಿತು, ಅದರ ಆಧಾರದಲ್ಲಿ ಎಪ್ರಿಲ್ 2013ರಲ್ಲಿ ಅಪರಾಧ ಸಂಹಿತೆಯನ್ನು ಬದಲಿಸಿ, ಲೈಂಗಿಕ ದೌರ್ಜನ್ಯಗಳನ್ನು ಶಿಕ್ಷಿಸುವುದಕ್ಕೆ ಇನ್ನಷ್ಟು ಸ್ಪಷ್ಟತೆಯನ್ನು ಒದಗಿಸಿದ್ದೂ ಆಯಿತು.

ಆದರೆ ಕೇವಲ ಕಾನೂನುಗಳನ್ನು ಬದಲಿಸುವುದರಿಂದಷ್ಟೇ ಅಪರಾಧಗಳನ್ನು ತಡೆಯಲು ಸಾಧ್ಯವಿಲ್ಲ. ಲೈಂಗಿಕ ದೌರ್ಜನ್ಯಗಳು ಕಾಮವಷ್ಟೇ ಅಲ್ಲ, ಕ್ರೌರ್ಯ, ವೈಷಮ್ಯ, ಪ್ರಾಬಲ್ಯಗಳನ್ನು ಸಾಧಿಸುವ ಅಸ್ತ್ರಗಳಾಗಿರುವುದರಿಂದ ಯುದ್ದೋತ್ಸಾಹಿಗಳು, ಮರಣದಂಡನೆ ಮತ್ತಿತರ ಕ್ರೂರ ಶಿಕ್ಷೆಗಳ ಬೆಂಬಲಿಗರು, ಕೋಮು-ಜನಾಂಗ ದ್ವೇಷಿಗಳು, ಸಮಾನತೆಯ ವಿರೋಧಿಗಳು, ಭಿನ್ನ ಲೈಂಗಿಕತೆಯನ್ನು ಖಂಡಿಸುವವರು ಲೈಂಗಿಕ ದೌರ್ಜನ್ಯಗಳನ್ನೂ ಬೆಂಬಲಿಸುತ್ತಾರೆ ಅಥವಾ ಸ್ವತಃ ಭಾಗಿಯಾಗುತ್ತಾರೆ.

ಇದೇ ಕಾರಣಕ್ಕೆ ವರ್ಮಾ ಸಮಿತಿಯು ಅತ್ಯಾಚಾರಿಗಳಿಗೆ ಮರಣದಂಡನೆ ಸೂಕ್ತವಲ್ಲ, ಬದಲಿಗೆ, ಲೈಂಗಿಕ ದೌರ್ಜನ್ಯಗಳನ್ನು ತಡೆಯಬೇಕಾದರೆ ಲೈಂಗಿಕ ಅಪರಾಧಿಗಳನ್ನೂ, ಇತರ ಗಂಭೀರ ಅಪರಾಧಿಗಳನ್ನೂ ಹೊರಗಿಡಲು ಚುನಾವಣಾ ಸುಧಾರಣೆಗಳಾಗಬೇಕು, ಎಲ್ಲ ಹಂತಗಳಲ್ಲಿ ವೈಜ್ಞಾನಿಕವಾದ ಲೈಂಗಿಕ ಶಿಕ್ಷಣಕ್ಕೆ ಒತ್ತು ನೀಡಬೇಕು, ವೈವಾಹಿಕ ಅತ್ಯಾಚಾರವೂ ಶಿಕ್ಷಾರ್ಹವಾಗಬೇಕು, ಎಲ್ಲಾ ಸ್ತರಗಳಲ್ಲೂ ಮಹಿಳೆಯರಿಗೆ ಸೂಕ್ತ ಪ್ರಾಶಸ್ತ್ಯ ನೀಡುವಂತಾಗಬೇಕು, ಪೋಲೀಸ್ ಮತ್ತು ನ್ಯಾಯದಾನದ ವ್ಯವಸ್ಥೆಯನ್ನು ಬಲಪಡಿಸಿ, ಸಂವೇದನಾಶೀಲವಾಗಿಸಬೇಕು ಮುಂತಾದ ಅಮೂಲ್ಯವಾದ ಸಲಹೆಗಳನ್ನು ನೀಡಿತ್ತು.

ಆದರೆ ಅಂತಹಾ ಸಲಹೆಗಳನ್ನೆಲ್ಲ ಕಡೆಗಣಿಸಿರುವುದರಿಂದ ಲೈಂಗಿಕ ದೌರ್ಜನ್ಯಗಳು ಏರುತ್ತಲೇ ಸಾಗಿವೆ. ಎನ್‌ಸಿಆರ್‌ಬಿ ಅನುಸಾರ, 2012ರಲ್ಲಿ 24923ರಷ್ಟಿದ್ದ ಅತ್ಯಾಚಾರ ಪ್ರಕರಣಗಳು 2016ರ ವೇಳೆಗೆ 38947ಕ್ಕೆ ಏರಿವೆ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರಗಳು ಮೊದಲ ಮೂರು ಸ್ಥಾನಗಳಲ್ಲಿವೆ. ಆದರೆ ಶಿಕ್ಷೆಗೊಳಗಾದವರ ಪ್ರಮಾಣವು 2013ರಲ್ಲಿ 36% ಇದ್ದುದು, 2015ರಲ್ಲಿ 29%ಕ್ಕೆ ಇಳಿದಿದೆ. ಶೇ. 53ರಷ್ಟು ಮಕ್ಕಳು ಲೈಂಗಿಕ ದೌರ್ಜನ್ಯಕ್ಕೊಳಗಾಗುತ್ತಿದ್ದಾರೆಂದು ಅಂದಾಜಿಸಲಾಗಿದೆ; 2015ರಲ್ಲಿ ಅಂತಹ 10854 ಪ್ರಕರಣಗಳು ದಾಖಲಾಗಿದ್ದರೆ, 2016ಕ್ಕೆ ಅವು 19765ಕ್ಕೇರಿವೆ. ಅಂತಲ್ಲಿ, ಕೆಲ ಮಂದಿ ವೈದ್ಯರು, ವಕೀಲರು ಮತ್ತು ಮಹಿಳೆಯರು ಕೂಡ ಅತ್ಯಾಚಾರಿಗಳ ಪರವಾಗಿ ವಾದಿಸಹೊರಡುತ್ತಾರೆನ್ನುವುದು ಮುಂಬರಲಿರುವ ದುರಂತದ ಬಗ್ಗೆ ಎಚ್ಚರಿಕೆಯಾಗಿದೆ.

Be the first to comment

Leave a Reply

Your email address will not be published.


*