ಶಾಲೆಗೆ ಬನ್ನಿ ಶನಿವಾರ, ಕಲಿಯಲು ನೀಡಿ ಸಹಕಾರ

ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ಕಳೆದ ಜೂನ್‌ 18 ರಿಂದ ಆರಂಭಿಸಿರುವ ವಿನೂತನ ಯೋಜನೆ ‘ಶಾಲೆಗೆ ಬನ್ನಿ ಶನಿವಾರ, ಕಲಿಯಲು ನೀಡಿ ಸಹಕಾರ’. ಶನಿವಾರಗಳಂದು ಸರಕಾರಿ ಶಾಲೆಗಳಿಗೆ ಹೋಗಿ ಪಾಠ ಹೇಳಲು ಆಸಕ್ತರಾಗಿರುವವರು www.dsert.kar.nic.in ತಾಣಕ್ಕೆ ಹೋಗಿ, https://docs.google.com/forms/d/ ಕೊಂಡಿಯ ಮೂಲಕ ನೋಂದಾಯಿಸಿಕೊಳ್ಳಬಹುದು. ತಮ್ಮ ಹೆಸರು, ವಿಳಾಸ, ಇ–ಮೇಲ್ ಹಾಗೂ ಮೊಬೈಲ್ ಸಂಖ್ಯೆ ನಮೂದಿಸಿ, ಪಾಠ ಹೇಳಬಯಸುವ ಶಾಲೆ/ಶಾಲೆಗಳು ಹಾಗೂ ವಿಷಯಗಳನ್ನು ಆಯ್ದುಕೊಳ್ಳಬಹುದು.

ನಾನು ಕಳೆದ ಸೆಪ್ಟೆಂಬರ್‌ನಲ್ಲಿ ಹೆಸರನ್ನು ನೋಂದಾಯಿಸಿಕೊಂಡು, ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಸರಕಾರಿ ಶಾಲೆಯಲ್ಲಿ ವಿಜ್ಞಾನದ ಪಾಠಗಳನ್ನು ಮಾಡುವುದಾಗಿ ಸೂಚಿಸಿದ್ದೆ. ನೋಂದಾಯಿಸಿಕೊಂಡ ಮೂರ್ನಾಲ್ಕು ದಿನಗಳಲ್ಲೇ ಡಿಎಸ್‌ಇಆರ್‌ಟಿಯಿಂದ ಮಿಂಚಂಚೆ ಬಂದಿತ್ತು. ಸೆಪ್ಟೆಂಬರ್ ಕೊನೆಗೆ ಶಾಲೆಗೆ ಹೋಗಿ, ಮುಖ್ಯೋಪಾಧ್ಯಾಯಿನಿಯವರನ್ನು ಕಂಡು, ಡಿಎಸ್‌ಇಆರ್‌ಟಿಯಿಂದ ಬಂದ ಮಿಂಚಂಚೆಯನ್ನು ನೀಡಿದ್ದೆ. ಅವರಿಗೆ ಆ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯಿರಲಿಲ್ಲ. ಆದರೂ ನಗುಮುಖದಿಂದಲೇ ಸ್ವಾಗತಿಸಿ, ‘ಈಗ ಪರೀಕ್ಷೆಗಳು ನಡೆಯುತ್ತಿವೆ, ದಸರಾ ರಜೆ ಮುಗಿದ ಬಳಿಕ ತಿಳಿಸುತ್ತೇವೆ’ ಅಂದಿದ್ದರು. ತಿಳಿಸುತ್ತಾರೋ ಇಲ್ಲವೋ ಅಂತ ನಾನು ಕಾಯುತ್ತಿದ್ದಾಗ, ನವಂಬರ್ ಮೊದಲ ವಾರದಲ್ಲೇ ಕರೆ ಮಾಡಿ, ‘ಈ ಶನಿವಾರದಿಂದ ಬರ್ತೀರಾ ಸರ್’ ಅಂತ ಕೇಳಿದ್ದರು. ಯಾವ ಪಾಠ ಮಾಡಲಿ ಅಂತ ಕೇಳಿದ್ದಕ್ಕೆ, ‘ನಿಮಗಿಷ್ಟ ಬಂದದ್ದನ್ನು ಮಾತಾಡಿ ಸರ್, ಆಹಾರ, ಆರೋಗ್ಯ, ನೈರ್ಮಲ್ಯ ಹೀಗೆ ಯಾವುದೂ ಆಗಬಹುದು’ ಅಂದಿದ್ದರು. ‘ಈ ವಾರ ಹಾಗೇ ಮಾತಾಡ್ತೇನೆ, ಆದರೆ ಮುಂದಕ್ಕೆ ಪಠ್ಯಪುಸ್ತಕದ ಪಾಠಗಳನ್ನೇ ಮಾಡುತ್ತೇನೆ, ಯಾವ ಪಾಠಗಳು ಅಂತ ನೀವೇ ಸೂಚಿಸಬೇಕು’ ಅಂತ ಉತ್ತರಿಸಿದ್ದೆ.

ಆ ಶನಿವಾರ ಶಾಲೆಗೆ ಹೋಗಿದ್ದಾಗ, ಎಂಟು ಮತ್ತು ಒಂಬತ್ತನೇ ತರಗತಿಯ ಸುಮಾರು 35 ಮಕ್ಕಳನ್ನು ಒಟ್ಟಿಗೆ ಕೂರಿಸಿದ್ದರು. ಅವರಲ್ಲಿ ಇಬ್ಬರೋ ಮೂವರೋ ನಮ್ಮೂರಿನವರ ಮಕ್ಕಳು, ಇನ್ನುಳಿದವರೆಲ್ಲ ಉತ್ತರ ಕರ್ನಾಟಕದಿಂದ ಕೆಲಸ ಹುಡುಕಿಕೊಂಡು ಮಂಗಳೂರಿಗೆ ಬಂದು ನೆಲೆಸಿರುವವರ ಮಕ್ಕಳು. ಎಲ್ಲರ ಕಣ್ಣುಗಳಲ್ಲೂ ಅದೆಂತಹಾ ಕಾಂತಿ, ಅದೆಂತಹಾ ಆಸಕ್ತಿ! ಆವತ್ತು ಮಕ್ಕಳಿಗೆ ಹೆತ್ತವರ ಕಷ್ಟಗಳು, ಅವರು ವಲಸೆ ಬರುವುದಕ್ಕೆ ಕಾರಣಗಳು, ಶಿಕ್ಷಣದ ಮಹತ್ವ, ಬಡತನ ನಿರ್ಮೂಲನೆಯಲ್ಲಿ ಶಿಕ್ಷಣದ ಪಾತ್ರ ಇತ್ಯಾದಿಗಳ ಬಗ್ಗೆ ಹೇಳುತ್ತಿದ್ದಾಗ ಮಕ್ಕಳೆಲ್ಲರೂ ಮೈಯಿಡೀ ಕಿವಿಯಾಗಿ ಕೇಳುತ್ತಿದ್ದರು. ಕೊನೆಗೆ ಯಾರು ಏನೇನಾಗಬಯಸುತ್ತೀರಿ ಅಂತ ಕೇಳಿದಾಗ, ಪೋಲೀಸು, ಸೇನೆಯ ಸೇವೆ, ಐಎಎಸ್‌, ಇಂಜಿನಿಯರ್‌, ಡಾಕ್ಟರ್, ಟೀಚರ್ ಎಂಬೆಲ್ಲಾ ಉತ್ತರಗಳು ಬಂದವು!

ಮುಂದೆ, ಮನುಷ್ಯನ ಪರಿಚಲನಾ ವ್ಯವಸ್ಥೆಯ ಬಗ್ಗೆ ಒಂಬತ್ತನೇ ತರಗತಿಯ ಪಾಠವನ್ನು ಮಾಡಿ ಎಂದು ಆ ಪಠ್ಯ ಪುಸ್ತಕವನ್ನು ನನಗಿತ್ತರು. ಲಾಪ್‌ಟಾಪ್, ಪ್ರೊಜೆಕ್ಟರ್ ಶಾಲೆಯಲ್ಲೇ ಇದ್ದುದರಿಂದ, ಹೃದಯದ ರಚನೆ, ಅದರ ಕೆಲಸ ಇತ್ಯಾದಿಗಳ ಬಗ್ಗೆ ಒಂದಷ್ಟು ಚಿತ್ರಗಳನ್ನೂ, ವಿಡಿಯೋಗಳನ್ನೂ ಸೇರಿಸಿ ಪ್ರಾತ್ಯಕ್ಷಿಕೆಯನ್ನು ಸಿದ್ಧಪಡಿಸಿಕೊಂಡು ಹೋದೆ, ನನ್ನ ಸ್ಟೆಥೋಸ್ಕೋಪನ್ನೂ ಹಿಡಿದುಕೊಂಡೆ.

IMG_20151212_095912ನಮ್ಮೂರಿನ ಸಮುದ್ರ ತೀರದ ಚಿತ್ರವನ್ನೇ ಮೊದಲಿಗೆ ಹಾಕಿದ್ದೆ. ಚಿತ್ರದಲ್ಲಿ ಏನೇನಿವೆ, ಅವುಗಳೊಳಗೆ ಇರುವ ಸಂಬಂಧವೇನು ಅಂತ ಕೇಳಿದ್ದೆ. ‘ನೀರು ಕುಡೀತೇವೆ ಸರ್’, ‘ತೆಂಗಿನಕಾಯಿ ತಿಂತೇವೆ’, ‘ಅಲ್ಲಿ ಆಟವಾಡ್ತೇವೆ’, ನೀರಲ್ಲಿರೋ ಮೀನು ತಿಂತೇವೆ’ ಎಂಬೆಲ್ಲಾ ಉತ್ತರಗಳು ಸಿಕ್ಕವು. ಅಲ್ಲಿ ಕಾಣುವ ಮಣ್ಣು, ಆ ನೀರು, ಆ ಗಾಳಿ ಸೇರಿಯೇ ನಮ್ಮ ಶರೀರ ಆಗಿರುವುದು, ನಮ್ಮೊಳಗೆ ಅರ್ಧಕ್ಕೂ ಹೆಚ್ಚು ನೀರು, ಜಲಜನಕ, ಆಮ್ಲಜನಕ, ಇನ್ನುಳಿದದ್ದು ಗಾಳಿ-ಮಣ್ಣುಗಳಲ್ಲಿರುವ ಸಾರಜನಕ, ಕಬ್ಬಿಣ, ಕ್ಯಾಲ್ಸಿಯಂ ಇತ್ಯಾದಿ, ಎಲ್ಲ ಮನುಷ್ಯರೊಳಗೂ ಇವೇ ಖನಿಜಗಳು, ಲವಣಗಳು, ಎಂದು ವಿವರಿಸಿದೆ. ನಂತರ ರಕ್ತ ಪರಿಚಲನೆ, ಹೃದಯ, ಅದರ ನಾಲ್ಕು ಕೋಣೆಗಳು, ಹೃದಯದಲ್ಲಿರುವ ವಿದ್ಯುತ್ ಪ್ರವಾಹ, ಇತ್ಯಾದಿ ವಿವರಿಸಿದೆ. ಕೊನೆಗೆ ಎಲ್ಲರ ಕಿವಿಗಳಿಗೆ ಸ್ಟೆಥೋಸ್ಕೋಪ್ ಇಟ್ಟು ಅವರವರ ಹೃದಯ ಬಡಿತ ಆಲಿಸುವಂತೆ ಮಾಡಿದೆ. ನಾಡಿ ಬಡಿತ ಹುಡುಕಿ ಹಿಡಿದು ಲೆಕ್ಕ ಮಾಡುವುದನ್ನೂ ಕಲಿಸಿಕೊಟ್ಟೆ. ಅದಾದ ಬಳಿಕ ಪ್ರಶ್ನೋತ್ತರ; ಎಂಥಾ ಅದ್ಭುತ ಪ್ರಶ್ನೆಗಳವು?!

‘ಸರ್, ಅದು ಎದೆ ಮೇಲೆ ಇಸ್ತ್ರಿ ಪೆಟ್ಟಿಗೆ ಥರ ಇಡ್ತಾರಲ್ಲ, ಅದೇನು ಸರ್?
‘ನೀನು ಅದನ್ನೆಲ್ಲಿ ನೋಡಿದೆ?’
‘ಇಲ್ಲೇ ಆಸ್ಪತ್ರೆ ಐಸಿಯುನಲ್ಲಿ ಸರ್’
‘ನಿನ್ನನ್ನು ಅದರೊಳಕ್ಕೆ ಬಿಟ್ಟಿದ್ರಾ’
‘ಹ್ಞೂ ಸರ್, ನಮ್ಮಪ್ಪ ಎಡ್ಮಿಟ್ ಆಗಿದ್ರು ಸರ್’
‘ಅವರು ಈಗ ಹೇಗಿದ್ದಾರೆ?’
‘ಆರಾಮಿದ್ದಾರೆ ಸರ್’
’ಏನ್ ಕೆಲ್ಸ ಮಾಡ್ತಾರೆ’
‘ಗಾರೆ ಕೆಲ್ಸ ಸರ್’
ಗಾರೆ ಕೆಲಸ ಮಾಡುವವರಲ್ಲೂ ಇತ್ತೀಚೆಗೆ ಹೃದಯಾಘಾತ ಹೆಚ್ಚುತ್ತಿರುವುದಕ್ಕೆ ಆಹಾರವೇ ಮುಖ್ಯ ಕಾರಣ ಅಂತ ವಿವರಿಸಿ, ನಂತರ ಹೃದ್ರೋಗದ ಲಕ್ಷಣಗಳನ್ನೂ ವಿವರಿಸಿ, ಬಳಿಕ ಆ ಇಸ್ತ್ರಿ ಪೆಟ್ಟಿಗೆಯ ಬಗ್ಗೆ ಹೇಳಿದೆ. ಹೃದಯಾಘಾತದಿಂದ ಹೃದಯದ ವಿದ್ಯುತ್ ಪ್ರವಾಹದಲ್ಲಿ ಒಮ್ಮಿಂದೊಮ್ಮೆಗೇ ಏರುಪೇರಾಗಿ ಹೃತ್ಕ್ರಿಯೆ ನಿಂತಾಗ, ಹೃದಯದ ವಿದ್ಯುತ್ತನ್ನು ಸರಿದಾರಿಗೆ ತರಲು ಸಣ್ಣ ಶಾಕ್ ಕೊಡುವುದಕ್ಕೆ ಇಸ್ತ್ರಿ ಪೆಟ್ಟಿಗೆಯ ಆಕಾರದ ಡಿಫಿಬ್ರಿಲೇಟರ್ ಬಳಸಲಾಗುತ್ತದೆ ಎಂದು ವಿವರಿಸಿದೆ.

ಮರು ಕ್ಷಣದಲ್ಲಿ ಇನ್ನೊಬ್ಬನಿಂದ ಇನ್ನೊಂದು ಪ್ರಶ್ನೆ:
‘ಸರ್, ತಲೆಯ ಬದಿಗಳಿಗೂ ಹಾಗೇ ಮಾಡ್ತಾರಲ್ಲ ಸರ್?’
‘ಅದೆಲ್ಲಿ ನೋಡಿದೆ?’
ಅವನಿಗೆ ಕೂಡಲೇ ಉತ್ತರಿಸಲಾಗಲಿಲ್ಲ, ‘ಸರ್, ಸಿನಿಮಾದಲ್ಲಿ ನೋಡಿರ್ಬೇಕು’ ಎಂದ ಪಕ್ಕದ ವಿದ್ಯಾರ್ಥಿ.

ಅದು ಇಸಿಟಿ, ಎಲೆಕ್ಟ್ರೋ ಕನ್ವಲ್ಸಿವ್ ಥೆರಪಿ, ಮಿದುಳಿನ ಮೂಲಕ ಸೂಕ್ಷ್ಮ ವಿದ್ಯುತ್ ಪ್ರವಾಹವನ್ನು ಉಂಟು ಮಾಡಿ, ತುಂಬಾ ಗಂಭೀರವಾದ ಮನೋರೋಗಗಳಿಗೆ ಚಿಕಿತ್ಸೆ ನೀಡುವುದು, ಈಗ ಬಹಳ ಒಳ್ಳೆಯ ಔಷಧಗಳಿರುವುದರಿಂದ ಇಸಿಟಿ ಬಳಕೆ ತೀರಾ ಅಪರೂಪವಾಗಿದೆ ಎಂದು ವಿವರಿಸಿದೆ.

‘ಸರ್, ಎದೆ ಮೇಲೆ ಕೈಯಿಟ್ಟು ಒತ್ತುವುದು ಯಾಕೆ ಸರ್’
‘ಅದು ನಳಿಕೆ ತೂರಿಸಿ ಏನೋ ಟ್ರೀಟ್‍ಮೆಂಟ್ ಮಾಡ್ತಾರಲ್ಲ, ಅದೇನು ಸರ್’
‘ಮುಂದಿನ ತರಗತಿಯಲ್ಲಿ ಅದರ ವಿಡಿಯೋ ತೋರಿಸ್ತೇನೆ’ ಅಂತ ಆಶ್ವಾಸನೆ ಕೊಟ್ಟು ಅಂದಿನ ಪಾಠ ಮುಗಿಸಿದೆ.

ಮುಂದಿನ ಪಾಠಕ್ಕೆ ರಕ್ತ ಮತ್ತದರ ಪರೀಕ್ಷೆಗಳನ್ನು ಆಯ್ದುಕೊಂಡಿದ್ದೆ. ಪರೀಕ್ಷಾಲಯದ ತಂತ್ರಜ್ಞರನ್ನೂ ಜೊತೆಗೇ ಕರೆದುಕೊಂಡು ಹೋಗಿದ್ದೆ, ಸೂಕ್ಶ್ಮದರ್ಶಕ ಇತ್ಯಾದಿ ಸಲಕರಣೆಗಳನ್ನೂ ಒಯ್ದಿದ್ದೆ.

IMG_20160102_104618ಹಿಂದಿನ ವಾರದ ಪ್ರಶ್ನೆಗಳಿಗೆ ಮೊದಲು ಉತ್ತರಿಸಬೇಕಲ್ಲ? ಹೃದಯದ ಪರಿಧಮನಿಗಳೊಳಕ್ಕೆ ನಳಿಕೆ ತೂರಿಸಿ ಪರೀಕ್ಷೆ ಮಾಡುವ ಕೊರೊನರಿ ಆಂಜಿಯೋಗ್ರಫಿ, ಮುಚ್ಚಿ ಹೋಗಿರುವ ರಕ್ತನಾಳದೊಳಕ್ಕೆ ಅತಿ ಸಣ್ಣ ಬಲೂನು ತೂರಿಸಿ ಸರಿಪಡಿಸುವ ಕೊರೊನರಿ ಆಂಜಿಯೋಪ್ಲಾಸ್ಟಿ ವಿಡಿಯೋಗಳನ್ನು ತೋರಿಸಿ ವಿವರಿಸಿದೆ. ಆ ಬಳಿಕ ರಕ್ತ, ಅದರ ಕಣಗಳು, ಅವುಗಳ ಕೆಲಸಗಳು, ರಕ್ತದ ಗುಂಪುಗಳು ಇತ್ಯಾದಿ ವಿವರಿಸಿದ್ದಾಯಿತು. ಸ್ಕಾನಿಂಗ್ ಇಲೆಕ್ಟ್ರಾನ್ ಮೈಕ್ರೊಸ್ಕೋಪ್‌ಗಳಲ್ಲಿ ಸೆರೆಹಿಡಿದ ರಕ್ತಕಣಗಳ 3ಡಿ ಚಿತ್ರಗಳು, ಬಿಳಿ ಕಣಗಳು ಸೂಕ್ಷ್ಮಾಣುಗಳನ್ನು ಭಕ್ಷಿಸುವ ಚಿತ್ರಗಳು, ರಕ್ತ ಹೆಪ್ಪುಗಟ್ಟುವ ಚಿತ್ರಗಳು ಇತ್ಯಾದಿ ತೋರಿಸಿದ್ದಾಯಿತು. ಬಳಿಕ, ಒಬ್ಬ ವಿದ್ಯಾರ್ಥಿಯ ಬೆರಳ ತುದಿಯಿಂದ ಒಂದು ಬಿಂದು ರಕ್ತ ತೆಗೆದು, ಅದನ್ನು ಗಾಜಿನ ಸ್ಲೈಡ್‌ ಮೇಲೆ ಲೇಪಿಸಿ ಸೂಕ್ಷ್ಮದರ್ಶಕದಡಿ ಇಟ್ಟು ಎಲ್ಲ ವಿದ್ಯಾರ್ಥಿಗಳಿಗೆ ತೋರಿಸಿದೆವು, ಬಣ್ಣ (ಸ್ಟೇನ್) ಹಚ್ಚಿದ ರಕ್ತ ಲೇಪನದಲ್ಲಿ ಕೆಂಪು, ಬಿಳಿ, ಪ್ಲೇಟ್ಲೆಟ್ ಕಣಗಳನ್ನು ಗುರುತಿಸುವುದನ್ನೂ ತೋರಿಸಿಕೊಟ್ಟೆವು. ರಕ್ತದ ಗುಂಪನ್ನು ಗುರುತಿಸುವ ಪರೀಕ್ಷೆಯನ್ನೂ ತೋರಿಸಿದೆವು.

ಮತ್ತೆ ಪ್ರಶ್ನೋತ್ತರ. ರಕ್ತದ ಗುಂಪುಗಳಲ್ಲಿ ಯಾವುದು ಒಳ್ಳೆಯದು, +ve, -ve ಗೆ ve ಯಾಕೆ ಸೇರಿಸಬೇಕು, ರಕ್ತದಾನ ಮಾಡುವಾಗ ಒಮ್ಮೆಗೆ ಎಷ್ಟು ರಕ್ತ ತೆಗೀತಾರೆ ಇತ್ಯಾದಿಗಳ ಬಳಿಕ, ಹಾವು ಕಡಿತ, ಅದಕ್ಕೆ ಚಿಕಿತ್ಸೆ, ಹೆಬ್ಬಾವಿಗೆ ಹಲ್ಲಿದೆಯೇ, ಅಪಸ್ಮಾರ ಯಾಕೆ ಬರುತ್ತದೆ, ಅದಕ್ಕೆ ಕೀಲಿಕೈ ಕೊಡಬೇಕೇ, ಅಪಸ್ಮಾರದ ಚಿಕಿತ್ಸೆ ಹೇಗೆ ಎಂಬ ಪ್ರಶ್ನೆಗಳು!
ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿ ನಾನು ಅನುವಾದಿಸಿದ್ದ ವಿಜ್ಞಾನದಲ್ಲಿ ವಿನೋದ ಪುಸ್ತಕದ ಪ್ರತಿಗಳನ್ನು ಎಲ್ಲರಿಗೂ ಕೊಟ್ಟೆ.

ಪ್ರಾಣಿಗಳಲ್ಲಿ ಸಂತಾನೋತ್ಪತ್ತಿ ಎಂಬ ಪಾಠವನ್ನು ಹೇಳುವಂತೆ ಕಳೆದ ವಾರ ಶಿಕ್ಷಕಿ ಸೂಚಿಸಿದರು. ಜಿರಳೆಯ ಪ್ರಜನನಾಂಗಗಳ ಬಗ್ಗೆ, ಆ ಬಳಿಕ ಮನುಷ್ಯರಲ್ಲಿ ಸಂತಾನೋತ್ಪತ್ತಿಯ ಬಗ್ಗೆ ಆ ಪಾಠದಲ್ಲಿ ವಿವರಗಳಿವೆ. ಮೊನ್ನೆ ಶನಿವಾರ ಏಕಕೋಶ ಜೀವಿಯ ಕೋಶ ವಿಭಜನೆ, ಶಿಲೀಂಧ್ರಗಳಲ್ಲಿ ನಿರ್ಲಿಂಗ-ಲೈಂಗಿಕ ಸಂತಾನೋತ್ಪತ್ತಿ, ಬಹುಕೋಶವುಳ್ಳ ಪ್ರಾಣಿಗಳಲ್ಲಿ ಬಗೆಬಗೆಯ ನಿರ್ಲಿಂಗ-ಲೈಂಗಿಕ ಸಂತಾನೋತ್ಪತ್ತಿ, ಮೀನು- ಉಭಯಜೀವಿಗಳಲ್ಲಿ ಬಾಹ್ಯ ಫಲೀಕರಣದ ಲೈಂಗಿಕ ಸಂತಾನೋತ್ಪತ್ತಿ, ಸರೀಸೃಪ, ಹಕ್ಕಿ ಹಾಗೂ ಸಸ್ತನಿಗಳಲ್ಲಿ ಆಂತರಿಕ ಫಲೀಕರಣದ ಲೈಂಗಿಕ ಸಂತಾನೋತ್ಪತ್ತಿ, ಸಸ್ಯಗಳಲ್ಲಿ ನಿರ್ಲಿಂಗ-ಲೈಂಗಿಕ ಸಂತಾನೋತ್ಪತ್ತಿಯ ಬಗ್ಗೆ ಸಚಿತ್ರವಾಗಿ ಹೇಳಿ, ಸಂತಾನೋತ್ಪತ್ತಿಯು ವಿಕಾಸಗೊಂಡ ಪ್ರಕ್ರಿಯೆಯನ್ನು ವಿವರಿಸಿದೆ.

IMG_20160102_111647ಮರಿ ಹಾಕುವ ಸರೀಸೃಪ ಇದೆಯೇ, ಮರಿ ಹಾಕುವ ಪಕ್ಷಿ ಇದೆಯೇ ಎಂಬ ಪ್ರಶ್ನೆಗಳನ್ನು ನಾನೇ ಕೇಳಿ, ಉತ್ತರ ಹುಡುಕಿಕೊಂಡು ಬರಲು ಹೇಳಿದೆ. ಅಷ್ಟರಲ್ಲಿ ವಿದ್ಯಾರ್ಥಿನಿಯೊಬ್ಬಳು, ‘ಸರ್, ಮೊಟ್ಟೆ ಇಟ್ಟು ಮರಿ ಮಾಡಿ ಅದಕ್ಕೆ ಹಾಲೂಡಿಸುವ ಸಸ್ತನಿ ಇದೆಯೇ’ ಅಂತ ಕೇಳಿದಳು! ‘ಹಾಗಿರಲು ಸಾಧ್ಯವೇ?’ ಅಂತ ಕೇಳಿದರೆ, ‘ಯಾಕಿಲ್ಲ ಸರ್? ಅದೂ ಇರಬಹುದು’ ಅಂದಳು!

ನನ್ನಿಂದ ಆ ಮಕ್ಕಳು ಕಲಿಯುತ್ತಿರುವುದಕ್ಕಿಂತ ಹೆಚ್ಚಿನದನ್ನು ನಾನು ಅವರಿಂದ ಕಲಿಯತೊಡಗಿದ್ದೇನೆ ಅನ್ನಿಸತೊಡಗಿತು.

ಜನವರಿ 23ರ ಶನಿವಾರ ಶಾಲೆಯಲ್ಲಿ ನಡೆದದ್ದಿದು:

ನನ್ನ ಪ್ರಶ್ನೆಗಳಿಗೆ ಉತ್ತರ ಸಿಕ್ಕಿವೆಯೇ?
ಹೌದು ಸಾರ್, ಮರಿ ಹಾಕುವ ಸರೀಸೃಪ ಕೊಳಕು ಮಂಡಲ ಸರ್
ಎಲ್ಲಿ ಸಿಕ್ಕಿತು ಈ ಉತ್ತರ?
ಟೀಚರ್ ಹೇಳಿದ್ರು ಸರ್
ಬೇರೆ ಯಾವುವು?
ಕನ್ನಡಿ ಹಾವು ಸರ್
ಇದೆಲ್ಲಿ ಸಿಕ್ತು?
ನಮ್ಮಪ್ಪ ಹೇಳಿದ್ರು ಸರ್
ಏನ್ಮಾಡ್ತಾರೆ ಅವರು?
ಮರ ಹತ್ತುತ್ತಾರೆ ಸರ್
ಅವರಿಗೆ ನಮ್ಮೆಲ್ಲರ ಪರವಾಗಿ ಅಭಿನಂದನೆ ಹೇಳು, ಅವರ ಉತ್ತರ ಸರಿಯಾಗಿದೆ. ಮರಿ ಹಾಕುವ ಹಕ್ಕಿ ಯಾವುದು?
ಗೊತ್ತಾಗಿಲ್ಲ ಸರ್
ಇಲ್ಲ, ಮರಿ ಹಾಕುವ ಹಕ್ಕಿ ಇಲ್ಲ. ಮತ್ತೆ ಮೊಟ್ಟೆ ಇಡುವ ಸಸ್ತನಿ ಯಾವುದು?
ಪ್ಲಾಟಿಪಸ್ ಸರ್, ಪ್ಲಾಟಿಪಸ್
ಎಲ್ಲಿ ಸಿಕ್ಕಿತು ಈ ಉತ್ತರ?
ಟೀಚರ್ ಹೇಳಿದ್ರು ಸರ್

IMG_20160123_102533ಸರೀಸೃಪಗಳ ಪೈಕಿ ಮೊಸಳೆ ಹಾಗೂ ಆಮೆ ಜಾತಿಯವು ಮೊಟ್ಟೆಯಿಡುತ್ತವೆ, ಹಾವು ಮತ್ತು ಹಲ್ಲಿಗಳಲ್ಲಿ ಕೆಲವು ಮೊಟ್ಟೆಯಿಡುತ್ತವೆ (oviparous), ಕೆಲವು ಮೊಟ್ಟೆಯನ್ನು ಗರ್ಭದೊಳಗೇ ಸಲಹಿ, ಮರಿ ಹೊರಬರಲು ಸಿದ್ಧವಾದಾಗ ಅದರ ಪೊರೆಯ ಜೊತೆ ಹೆರುತ್ತವೆ (ovoviviparous), ಇನ್ನು ಕೆಲವು ನೇರವಾಗಿ ಮರಿಗಳಿಗೇ ಜನ್ಮ ನೀಡುತ್ತವೆ (viviparous). ಕನ್ನಡಿ ಹಾವು ಅಥವಾ ಕೊಳಕು ಮಂಡಲ ಹಾವು, ಅರಣೆ, ಇರ್ತಲೆ ಅಥವಾ ಬೋವಾ ಹಾವು, ಉಗುಳುವ ನಾಗರ, ಯೂರೋಪಿನ ಹಲ್ಲಿಗಳು ಹಾಗು ಕೇಲವು ಓತಿಗಳು ಮರಿ ಹಾಕುತ್ತವೆ. ಬ್ರಿಟನ್‌ನಲ್ಲಿ ಕಾಣಸಿಗುವ ಮಂದ ಹುಳು (Slow worms), ಯೂರೋಪಿನ ಆಡರ್ ಹಾವು (Adder snake), ಅರ್ಜೆಂಟೀನಾದ ಅನಕೊಂಡ ಹಾವು ಮೊಟ್ಟೆಯನ್ನು ಸಾಕಿ, ಮರಿಗಳನ್ನು ಹೆರುತ್ತವೆ. ಪ್ಲಾಟಿಪಸ್ ಮತ್ತು ನಾಲ್ಕು ಬಗೆಯ ಎಕಿಡ್ನಾ ಅಥವಾ ಇರುವೆಬಾಕಗಳು ಮೊಟ್ಟೆಯಿಟ್ಟು, ಹುಟ್ಟಿದ ಮರಿಗಳಿಗೆ ತಮ್ಮ ಚರ್ಮದಡಿ ಇರುವ ಸ್ತನದ ತೊಟ್ಟಿನಿಂದ ಹಾಲೂಡಿಸುತ್ತವೆ. ಕಾಂಗರೂ ನಂತಹ ಸಸ್ತನಿಗಳು ಅತಿ ಚಿಕ್ಕ ಮರಿಗಳನ್ನು ಹೆರುತ್ತವೆ, ಬಳಿಕ ಆ ಮರಿಗಳು ತಾಯಿಯ ಕೋಷ್ಠದೊಳಕ್ಕೆ ಸೇರಿಕೊಂಡು, ಅಲ್ಲಿ ಸಿಗುವ ಹಾಲನ್ನು ಹೀರಿ ಮತ್ತಷ್ಟು ಬೆಳೆಯುತ್ತವೆ. ಈಗೊಂದು ಪ್ರಶ್ನೆ: ಈ ಪ್ಲಾಟಿಪಸ್, ಎಕಿಡ್ನಾ ಯಾವ ದೇಶದಲ್ಲಿ ಕಾಣಸಿಗುತ್ತವೆ?

ಅಮೆರಿಕ ಸರ್, ಆಫ್ರಿಕಾ ಸರ್, ಬಳಿಕ, ಆಸ್ಟ್ರೇಲಿಯಾ ಸರ್ ಎಂಬ ಉತ್ತರಗಳು ಬಂದವು.
ಆಸ್ಟ್ರೇಲಿಯಾ ಸರಿ, ಮತ್ತೆ ಕಾಂಗರೂ ಎಲ್ಲಿ?
ಅದೂ ಆಸ್ಟ್ರೇಲಿಯಾ ಸರ್, ಅದು ಅಲ್ಲಿನ ರಾಷ್ಟ್ರೀಯ ಪ್ರಾಣಿ ಸರ್
ಈಗ ಇನ್ನೊಂದು ಪ್ರಶ್ನೆ: ಈ ಪ್ಲಾಟಿಪಸ್, ಎಕಿಡ್ನಾ, ಕಾಂಗರೂ ಎಲ್ಲವೂ ಆಸ್ಟ್ರೇಲಿಯಾದಲ್ಲೇ ಏಕಿವೆ, ಬೇರೆಡೆ ಏಕಿಲ್ಲ?
ಗೊತ್ತಿಲ್ಲ ಸರ್

ಸರಿ, ಜೀವ ವಿಕಾಸದ ಪಾಠ ಮಾಡುವಾಗ ಅವನ್ನೆಲ್ಲ ನೋಡೋಣ ಅಂತ ಹೇಳಿ, ಜಿರಳೆಯ ಪ್ರಜನನಾಂಗಗಳ ಬಗ್ಗೆ, ಸಂತಾನೋತ್ಪತ್ತಿಯ ಬಗ್ಗೆ, ಚಿಟ್ಟೆಯ ರೂಪ ಪರಿವರ್ತನೆಯ ಬಗ್ಗೆ ಸಚಿತ್ರವಾಗಿ ವಿವರಿಸಿದೆ. ಕೊನೆಗೆ ಇನ್ನೊಂದು ಪ್ರಶ್ನೆ ಕೇಳಿದೆ:

ದುಂಡು ಹುಳುವಿಗಿಂತ ಮೇಲಿನ ಪ್ರಾಣಿಗಳಲ್ಲಿ ಗಂಡು ಮತ್ತು ಹೆಣ್ಣನ್ನು ಪ್ರತ್ಯೇಕವಾಗಿ ಗುರುತಿಸಬಹುದು, ಹಾಗೆಯೇ ಗಂಡು ಮತ್ತು ಹೆಣ್ಣು ಪ್ರತ್ಯೇಕವಾಗಿರುವ ಸಸ್ಯಗಳೂ ಇವೆಯೇ?
ಇವೆ ಸರ್, ಇವೆ ಸರ್, ಪಪ್ಪಾಯ ಸರ್
ಅರೆ, ಗಂಡು ಪಪ್ಪಾಯ ಮರ ಹೇಗಿರುತ್ತದೆ, ಹೆಣ್ಣು ಹೇಗಿರುತ್ತದೆ?
ಸರ್, ಇಲ್ಲೇ ಶಾಲೆಯಲ್ಲಿ ಇದೆ, ಗಂಡು ಮರಕ್ಕೆ ಕೊಂಬೆಗಳಿವೆ ಸರ್, ಹೆಣ್ಣು ಮರಕ್ಕೆ ಇಲ್ಲ ಸರ್
ಓಹೋ, ಈ ಬಗ್ಗೆ ಕೇಳ್ಕೊಂಡು, ಓದ್ಕೊಂಡು ಬನ್ನಿ ಅಂದೆ. ಅವರಿಗಿಂತ ಹೆಚ್ಚು ಅದನ್ನೀಗ ನಾನೇ ಮಾಡಬೇಕಾಗಿದೆ!

ಆ ಮಕ್ಕಳಿಗೆ ಹಾವುಗಳ ಬಗ್ಗೆ ಬಹಳಷ್ಟು ಕುತೂಹಲವಿರುವುದರಿಂದ, ಆ ಬಗ್ಗೆ ವಿಶೇಷ ಪ್ರಾತ್ಯಕ್ಷಿಕೆ ನೀಡುವಂತೆ ನನ್ನಣ್ಣ, ವನ್ಯಜೀವಿ ತಜ್ಞ, ಹಾವು, ಕಪ್ಪೆಗಳ ಬಗ್ಗೆ ವಿಶೇಷ ಪರಿಣತಿಯುಳ್ಳ ಸೂರ್ಯನಾರಾಯಣ ರಾವ್ ಅವರನ್ನು ಕೋರಿದ್ದೇನೆ. ಮುಂದಿನ ಶನಿವಾರ ಆ ಕಾರ್ಯಕ್ರಮ.

ಶನಿವಾರ, ಫೆಬ್ರವರಿ 6, 2016:

ಮನುಷ್ಯರಲ್ಲಿ ಸಂತಾನೋತ್ಪತ್ತಿಯ ಬಗೆಗಿನ ಮೂರನೇ  ಪಾಠ.

ಆರಂಭಕ್ಕೆ, ಹಿಂದೆ ಕೇಳಿದ್ದ  ಪ್ರಶ್ನೆಗಳಿಗೆ ಉತ್ತರ ಹೇಳುವ ಸಮಯ.

‘ಹ್ಞೂಂ, ಈಗ ಹೇಳಿ, ಸಸ್ಯಗಳಲ್ಲಿ ಗಂಡು-ಹೆಣ್ಣು ಅಂತ ಇದೆಯೇ?’

‘ಇದೆ ಸರ್, ಹೂಗಳಲ್ಲಿ ಗಂಡು ಹೆಣ್ಣು ಭಾಗ ಇವೆ ಸರ್, ಪಪ್ಪಾಯಿ ಮರದಲ್ಲಿ ಗಂಡು ಹೆಣ್ಣು ಬೇರೆ ಬೇರೆ ಇವೆ ಸರ್’

plantsex‘ಶೇ. 94ರಷ್ಟು ಸಸ್ಯಗಳಲ್ಲಿ ಗಂಡು-ಹೆಣ್ಣು ಭಾಗಗಳು ಜೊತೆಗೇ ಇರುತ್ತವೆ. ಕೆಲವು ಜಾತಿಯ ಸಸ್ಯಗಳಲ್ಲಿ ಮಾತ್ರ ಇವು ಬೇರೆ ಬೆರೆಯಾಗಿರುತ್ತವೆ. ಕೆಲವು ಸಸ್ಯಗಳಲ್ಲಿ ಪ್ರತ್ಯೇಕವಾದ ಗಂಡು ಮತ್ತು ಹೆಣ್ಣು ಹೂವುಗಳು ಇರುತ್ತವೆ, ಇನ್ನು ಕೆಲವು ಸಸ್ಯ ಜಾತಿಗಳಲ್ಲಿ ಪ್ರತ್ಯೇಕವಾದ ಗಂಡು ಮತ್ತು ಹೆಣ್ಣು ಸಸ್ಯಗಳೇ ಇರುತ್ತವೆ. ಗಂಡು ಮತ್ತು ಹೆಣ್ಣು ಹೂವುಗಳು ಬೇರೆಯಾಗಿದ್ದಾಗ ಅವೆರಡರ ಬಣ್ಣ, ಗಾತ್ರ, ಸಂಖ್ಯೆ, ಪರಿಮಳ ಬೇರೆ ಬೇರೆಯಾಗಿರುತ್ತವೆ. ಗಂಡು ಹೂಗಳು ಹೆಚ್ಚಿನ ಸಂಖ್ಯೆಯಲ್ಲಿರುತ್ತವೆ, ದೊಡ್ಡ ಪ್ರಮಾಣದಲ್ಲಿ ಪರಾಗವನ್ನು ಬಿಡುಗಡೆ ಮಾಡುತ್ತವೆ; ಹೆಣ್ಣು ಹೂಗಳಲ್ಲಿರುವ ಅಂಡಾಣುಗಳ ಜೊತೆ ಸೇರಿದಾಗ ಕಾಯಿ-ಹಣ್ಣು ಉಂಟಾಗುತ್ತವೆ. ನಮ್ಮ ದೇಶದಲ್ಲಿ ಸಾಮಾನ್ಯವಾಗಿರುವ ಸೌತೆ, ಸಿಹಿ ಕುಂಬಳ ಜಾತಿಯ ಬಳ್ಳಿಗಳಲ್ಲಿ ಗಂಡು ಮತ್ತು ಹೆಣ್ಣು ಹೂವುಗಳು ಬೇರೆಯಾಗಿರುವುದನ್ನು ನೋಡಬಹುದು. ತಾಳೆ ಮರದಲ್ಲಿ ಗಂಡು ಹಾಗೂ ಹೆಣ್ಣು ಮರಗಳು ಬೇರೆ ಬೇರೆಯಾಗಿರುತ್ತವೆ, ದೂರದಿಂದ ಇವು ಒಂದೇ ಥರ ಕಾಣಿಸಿದರೂ, ಗಂಡು ಮರಗಳು ಹೆಚ್ಚು ಎತ್ತರವಾಗಿರುತ್ತವೆ, ಉದ್ದನೆಯ ಗಂಡು ಹೂಗಳನ್ನು ಹೊಂದಿರುತ್ತವೆ, ಅವುಗಳಲ್ಲಿ ತಾಳೆ ಹಣ್ಣು ಆಗುವುದಿಲ್ಲ. ಪಪ್ಪಾಯಿ ಮರದಲ್ಲಿ ಗಂಡು ಮತ್ತು ಹೆಣ್ಣು ಹೂವುಗಳು ಜೊತೆಗೂ ಇರುತ್ತವೆ, ಗಂಡು ಮತ್ತು ಹೆಣ್ಣು ಮರಗಳು ಬೇರೆ ಬೇರೆಯಾಗಿರುವುದೂ ಇದೆ. ಪಪ್ಪಾಯಿ ಮರಗಳಲ್ಲೂ ತಾಳೆ ಮರಗಳಂತೆಯೇ ಗಂಡು ಮತ್ತು ಹೆಣ್ಣು ಮರಗಳಲ್ಲಿ ಹೂವು-ಕಾಯಿಗಳ ವ್ಯತ್ಯಾಸಗಳು ಕಾಣಸಿಗುತ್ತವೆ. ನಮ್ಮಲ್ಲಿ ಸಾಮಾನ್ಯವಾಗಿ ಕಾಣಸಿಗುವ ಚಬುಕಿನ (ಕಾಶುರಿನಾ) ಮರದಲ್ಲೂ ಗಂಡು ಮತ್ತು ಹೆಣ್ಣು ಮರಗಳು ಬೇರೆ ಬೇರೆಯಾಗಿರುತ್ತವೆ. ಹೀಗೆ ಲೈಂಗಿಕ ದ್ವಿರೂಪತ್ವವಿರುವ ಸಸ್ಯಗಳ ಪಟ್ಟಿ ವಿಕಿಪಿಡಿಯಾದಲ್ಲೂ ಇದೆ. ನಿಮ್ಮ ಟೀಚರ್  ಸಹಾಯದಿಂದ ಅದನ್ನು ನೋಡಿ, ಅವುಗಳಲ್ಲಿ ನಮ್ಮ ದೇಶದಲ್ಲಿರುವ ಲೈಂಗಿಕ ದ್ವಿರೂಪತ್ವದ ಸಸ್ಯಗಳಾವುವು ಎನ್ನುವುದನ್ನು ಪಟ್ಟಿ ಮಾಡಿ. ಈಗೊಂದು ಪ್ರಶ್ನೆ: ಪ್ರಾಣಿಗಳಲ್ಲಿ ಗಂಡು-ಹೆಣ್ಣು ಎಂಬ ವಿಂಗಡನೆ ಅತಿ ಸಾಮಾನ್ಯ, ಆದರೆ ಸಸ್ಯಗಳಲ್ಲಿ ಅದು ವಿರಳ. ಇದಕ್ಕೆ ಕಾರಣವೇನು?”

‘ಸರ್, ಸಸ್ಯಗಳಿಗೆ ಚಲನೆಯಿಲ್ಲ ಸರ್, ಅದಕ್ಕೇ’

‘ಚಲನೆಗೂ, ಗಂಡು-ಹೆಣ್ಣು ಒಂದೇ ಸಸ್ಯದೊಳಗೆ ಇರುವುದಕ್ಕೂ ಏನು ಸಂಬಂಧ?’

‘ಪರಾಗ ಸ್ಪರ್ಶ ಆಗಲ್ಲ ಸರ್’

‘ಸಸ್ಯಗಳಲ್ಲಿ ಪರಾಗ ಸ್ಪರ್ಶ ಆಗೋದು ಹೇಗೆ?’

‘ಗಾಳಿಯಿಂದ’, ‘ಕೀಟಗಳಿಂದ’, ‘ಮನುಷ್ಯರಿಂದ’

‘ಗಂಡು ಮತ್ತು ಹೆಣ್ಣು ಸಸ್ಯಗಳು ಬೇರೆ ಬೇರೆಯಾಗಿದ್ದು, ದೂರ ದೂರ ಇದ್ದರೆ ಈ ರೀತಿ ಪರಾಗ ಸ್ಪರ್ಶ ಆಗುವುದು ಕಷ್ಟ, ಇದೇ ಕಾರಣಕ್ಕೆ ಹೆಚ್ಚಿನ ಸಸ್ಯಗಳಲ್ಲಿ ಗಂಡು-ಹೆಣ್ಣು ಕೋಶಗಳು ಒಂದೇ ಹೂವಿನೊಳಗೆ, ಅಥವಾ ಒಂದೇ ಸಸ್ಯದಲ್ಲಿ ಇರುತ್ತವೆ, ಅವುಗಳ ನಡುವೆ ಸುಲಭದಲ್ಲಿ ಫಲೀಕರಣವಾಗಲು ಸಾಧ್ಯವಾಗುತ್ತದೆ. ಅವು ಬೇರೆ ಬೇರೆಯಾಗಿದ್ದಾಗಲೂ ಗಂಡು ಹೂಗಳು ಬಹಳಷ್ಟು ಸಂಖ್ಯೆಯಲ್ಲಿದ್ದು, ಹೆಚ್ಚು ಪ್ರಮಾಣದಲ್ಲಿ ಪರಾಗವನ್ನು ಬಿಡುಗಡೆ ಮಾಡುತ್ತವೆ; ಗಂಡು-ಹೆಣ್ಣು ಹೂಗಳ ಬಣ್ಣ ಹಾಗೂ ಪರಿಮಳಗಳು ಬೇರೆಯಿದ್ದು ಕೀಟಗಳನ್ನು ಪ್ರತ್ಯೇಕವಾಗಿ ಆಕರ್ಷಿಸಿ ಪರಾಗ ಸ್ಪರ್ಶ ಮಾಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಸಸ್ಯಗಳಲ್ಲಿ ಅಪರೂಪವಾಗಿರುವ ಈ ಲೈಂಗಿಕ ದ್ವಿರೂಪತ್ವ ಪ್ರಾಣಿಗಳಲ್ಲಿ ಹೆಚ್ಚು ಸಾಮಾನ್ಯ. ಕೆಲವು ಪ್ರಾಣಿ-ಪಕ್ಷಿ-ಕೀಟಗಳಲ್ಲಿ ಗಂಡು-ಹೆಣ್ಣನ್ನು ಗುರುತಿಸಬೇಕಾದರೆ ಅವುಗಳ ಜನನಾಂಗಗಳನ್ನೇ ಪರೀಕ್ಷಿಸಬೇಕಾಗುತ್ತದೆ, ಅವನ್ನು ಬಿಟ್ಟರೆ ಗಂಡು-ಹೆಣ್ಣುಗಳಲ್ಲಿ ಹೆಚ್ಚು ವ್ಯತ್ಯಾಸಗಳಿರುವುದಿಲ್ಲ. ಆದರೆ ಇನ್ನು ಕೆಲವು ಪ್ರಾಣಿ-ಪಕ್ಷಿ-ಕೀಟಗಳಲ್ಲಿ ಗಂಡು-ಹೆಣ್ಣುಗಳನ್ನು ಬಹು ದೂರದಿಂದಲೇ ಗುರುತಿಸಬಹುದು, ಅವುಗಳಲ್ಲಿ ಹಲತರದ ಭಿನ್ನತೆಗಳಿರುತ್ತವೆ. ಪ್ರಾಣಿಗಳ ಜನನಾಂಗಗಳಲ್ಲಿರುವ ಭಿನ್ನತೆಯನ್ನು ಪ್ರಾಥಮಿಕ ಲೈಂಗಿಕ ಲಕ್ಷಣಗಳು ಎಂದೂ, ದೇಹದಲ್ಲಿರುವ ಇತರ ವ್ಯತ್ಯಾಸಗಳನ್ನು ಆನುಷಂಗಿಕ ಲೈಂಗಿಕ ಲಕ್ಷಣಗಳೆಂದೂ ಹೇಳಲಾಗುತ್ತದೆ. ಈಗ ಕೆಲವು ಪ್ರಾಣಿ-ಪಕ್ಷಿ-ಕೀಟಗಳ ಚಿತ್ರಗಳನ್ನು ತೋರಿಸುತ್ತೇನೆ, ಇವುಗಳಲ್ಲಿ ಗಂಡು ಯಾವುದು, ಹೆಣ್ಣು ಯಾವುದು ಅಂತ ಹೇಳಿ.’

ಇದು ಆಂಗ್ಲರ್ ಮೀನು, ಗಂಡು ಯಾವುದು, ಹೆಣ್ಣು ಯಾವುದು?

animalsex‘ಸರ್, ಒಂದೇ ಮೀನಿದೆ, ಎರಡಿಲ್ಲ!’

‘ಸರಿಯಾಗಿ ನೋಡಿ, ಈ ಸಣ್ಣದಾಗಿ ಕಾಣ್ತಾ ಇರೋದು ಇನ್ನೊಂದು ಮೀನು, ಒಂದು ಬಹಳ ದೊಡ್ಡದು, ಇನ್ನೊಂದು ಅದಕ್ಕೆ ಅಂಟಿಕೊಂಡಂತೆ ಇರುವ ಸಣ್ಣ ಮೀನು. ಇದರಲ್ಲಿ ಗಂಡು ಯಾವುದು, ಹೆಣ್ಣು ಯಾವುದು?

‘ದೊಡ್ಡದು ಗಂಡು ಸರ್’, ಅಂತ ಹುಡುಗರು, ‘ಇಲ್ಲ, ದೊಡ್ಡದು ಹೆಣ್ಣು ಸರ್’ ಅಂತ ಹುಡುಗಿಯರು. ಯಾಕೆ ಅಂತ ಕೇಳಿದರೆ, ‘ಸರ್, ಹೆಣ್ಣು ಮೀನು ಮೊಟ್ಟೆ ಇಡಬೇಕಲ್ಲ, ಅದಕ್ಕೇ ದೊಡ್ಡದು ಹೆಣ್ಣೇ ಸರ್’ ಎಂಬ ಉತ್ತರ ಹುಡುಗಿಯರಿಂದ!

‘ಅದೇ ಸರಿ, ದೊಡ್ಡದು ಹೆಣ್ಣು, ಅತಿ ಸಣ್ಣದು ಗಂಡು. ಆ ಗಂಡು ಹೆಣ್ಣು ಮೀನಿನ ಮೇಲೆ ಪರಾವಲಂಬಿಯಾಗಿ ಬದುಕುತ್ತದೆ, ಸಂತಾನೋತ್ಪತ್ತಿಗೆ ವೀರ್ಯಾಣುಗಳನ್ನು ಒದಗಿಸುವುದಷ್ಟೇ ಅದರ ಕೆಲಸ. ಈ ಚಿತ್ರದಲ್ಲಿ ಎರಡು ಕಪ್ಪೆಗಳಿವೆ, ಒಂದು ಕೆಂಪಗಿನ ದೊಡ್ಡ ಕಪ್ಪೆ, ಇನ್ನೊಂದು ಕಂದು ಬಣ್ಣದ ಸಣ್ಣ ಕಪ್ಪೆ. ಗಂಡು ಯಾವುದು, ಹೆಣ್ಣು ಯಾವುದು?’

‘’ಸರ್, ಕೆಂಪಗಿನ ದೊಡ್ಡ ಕಪ್ಪೆ ಹೆಣ್ಣು ಸರ್’

‘ಸರಿ, ಇದರಲ್ಲಿ ಒಂದು ದೊಡ್ಡ ಜೇಡ, ಇನ್ನೊಂದು ಸಣ್ಣ ಜೇಡ’

‘ದೊಡ್ಡದು ಹೆಣ್ಣು ಸರ್,’ ‘ಇಲ್ಲ, ಸಣ್ಣದು ಹೆಣ್ಣು ಸರ್’

‘ದೊಡ್ಡದೇ ಹೆಣ್ಣು, ಕಲ ಜಾತಿಯ ಜೇಡಗಳಲ್ಲಿ ಹೆಣ್ಣು ಜೇಡವು ಲೈಂಗಿಕ ಕ್ರಿಯೆಯ ನಂತರ ಗಂಡು ಜೇಡವನ್ನು ತಿಂದು ಹಾಕುವುದೂ ಇದೆ. ಈ ಚಿಟ್ಟೆಗಳಲ್ಲಿ ಗಂಡು-ಹೆಣ್ಣು ಯಾವುವು?’

‘ಬಣ್ಣ ಬಣ್ಣದ್ದು ಹೆಣ್ಣು ಸರ್, ಕಪ್ಪಗಿರೋದು ಗಂಡು ಸರ್’ ಅಂದರು ಹುಡುಗರು, ‘ಇಲ್ಲ, ಬಣ್ಣ ಬಣ್ಣದ್ದು ಗಂಡು’ ಅಂದರು ಹುಡುಗಿಯರು.

ಹುಡುಗಿಯರು ಹೇಳಿದ್ದೇ ಸರಿ, ಬಣ್ಣ ಬಣ್ಣದ್ದು ಗಂಡು ಚಿಟ್ಟೆ, ಈಗ ಈ ಕೋಳಿ, ಕೋಳಿ, ಬಾತು, ನವಿಲುಗಳಲ್ಲಿ ಗಂಡು-ಹೆಣ್ಣು ಯಾವುವು?

ಬಣ್ಣ ಬಣ್ಣ ಇರೋದು, ದೊಡ್ಡದಾಗಿರೋದು ಗಂಡು ಸರ್

ಗಂಡು ಸಿಂಹದ ಕೇಸರ, ಗಂಡು ನೀರಾನೆಯ ಬಲು ದೊಡ್ಡ ದೇಹ, ಕೆಲವು ಗಂಡು ವಾನರರ ಬಣ್ಣದ ಮೂತಿ, ಗಂಡು ಗೊರಿಲ್ಲಾದ ದೊಡ್ಡ ಶರೀರ ಎಲ್ಲವನ್ನೂ ಗುರುತಿಸಿದ್ದಾಯಿತು. ಕೊನೆಗೆ ಎರಡು ನಾಯಿಗಳ ಚಿತ್ರ ತೋರಿಸಿ, ಮನೆ ನಾಯಿ ಹಾಗೂ ಬೆಕ್ಕುಗಳಲ್ಲಿ ಗಂಡು-ಹೆಣ್ಣು ಎಂದು ದೂರದಿಂದ ಗುರುತಿಸಲು ಸಾಧ್ಯವೇ ಅಂತ ಕೇಳಿದೆ. ಹೌದು ಸರ್, ಇಲ್ಲ ಸರ್ ಆದ ಬಳಿಕ ಮುಂದಿನ ವಾರಕ್ಕೆ ಉತ್ತರವನ್ನು ಮುಂದೂಡಿದ್ದೇನೆ. ಹೆಚ್ಚಿನ ಪ್ರಾಣಿ-ಪಕ್ಷಿಗಳಲ್ಲಿ ಗಂಡುಗಳೇ ಸುಂದರವಾಗಿ, ಬಣ್ಣ ಹಚ್ಚಿಕೊಂಡಿರುತ್ತವೆ, ಹೆಣ್ಣನ್ನು ಆಕರ್ಷಿಸಿ ಸಂತೋಷ ಪಡಿಸಲು ನರ್ತಿಸುತ್ತವೆ, ಹಾಡುತ್ತವೆ; ಮನುಷ್ಯರಲ್ಲಿ ಹೇಗೆ, ಯಾರು ಚಂದ, ಯಾರು ನರ್ತಿಸುತ್ತಾರೆ? ಉತ್ತರಕ್ಕೆ ಕಾಯಬೇಕಾಗಿದೆ!

IMG_20160206_102358ಮನುಷ್ಯರಲ್ಲಿ ಗಂಡು-ಹೆಣ್ಣುಗಳಲ್ಲಿ ಜನನಾಂಗಗಳಲ್ಲಿ ವ್ಯತ್ಯಾಸಗಳಿರುತ್ತವೆ, ದೇಹದ ರಚನೆಯಲ್ಲಿ ಇತರ ಆನುಷಂಗಿಕ ವ್ಯತ್ಯಾಸಗಳೂ ಇರುತ್ತವೆ. ಮನುಷ್ಯರ ದೇಹದಲ್ಲಿ ಗಂಡು-ಹೆಣ್ಣು ಎಂಬ ವಿಂಗಡನೆಯು ಮಗುವು ಗರ್ಭದೊಳಗಿದ್ದಾಗ, ಆರರಿಂದ ಏಳು ವಾರಗಳ ಅವಧಿಯಲ್ಲಿ, ಕಾಣಿಸತೊಡಗುತ್ತದೆ. ಮನುಷ್ಯರ ಜೀವಕೋಶಗಳಲ್ಲಿ ಒಟ್ಟು 46, ಅಥವಾ 23 ಜೊತೆ, ವರ್ಣತಂತುಗಳು ಅಥವಾ ಕ್ರೋಮೋಸೋಮ್‌ಗಳು ಇರುತ್ತವೆ. ಇವುಗಳಲ್ಲಿ 44 ಕ್ರೋಮೋಸೋಮ್‌ಗಳು ದೇಹಕ್ಕೆ ಸಂಬಂಧಿಸಿದವುಗಳಾದರೆ 2 ಕ್ರೋಮೋಸೋಮ್‌ಗಳು ಲೈಂಗಿಕ ಕ್ರೋಮೋಸೋಮ್‌ಗಳು. ಇವುಗಳಲ್ಲಿ ಎಕ್ಸ್ ಮತ್ತು ವೈ ಎಂಬ ಎರಡು ವಿಧಗಳಿವೆ. ಹೆಣ್ಣಿನಲ್ಲಿ 44 ದೈಹಿಕ ಕ್ರೋಮೋಸೋಮ್‌ಗಳು ಹಾಗೂ 2 ಎಕ್ಸ್ ಕ್ರೋಮೋಸೋಮ್‌ಗಳು ಇರುತ್ತವೆ, ಆದ್ದರಿಂದ ಹೆಣ್ಣನ್ನು 44+ಎಕ್ಸ್ ಎಕ್ಸ್ ಎಂದು ಗುರುತಿಸಲಾಗುತ್ತದೆ. ಗಂಡಿನಲ್ಲಿ 44 ದೈಹಿಕ ಕ್ರೋಮೋಸೋಮ್‌ಗಳ ಜೊತೆಗೆ ಒಂದು ಎಕ್ಸ್ ಕ್ರೋಮೋಸೋಮ್‌ ಹಾಗೂ ಇನ್ನೊಂದು ವೈ ಕ್ರೋಮೋಸೋಮ್ ಇರುತ್ತವೆ, ಆದ್ದರಿಂದ ಗಂಡನ್ನು 44+ಎಕ್ಸ್ ವೈ ಎಂದು ಗುರುತಿಸಲಾಗುತ್ತದೆ. ಹೆಣ್ಣು 44+ಎಕ್ಸ್ ಎಕ್ಸ್ ಆಗಿರುವುದರಿಂದ ತಾಯಿಯ ಅಂಡಾಣುಗಳಲ್ಲಿ ಮಿಯಾಸಿಸ್ ಬಳಿಕ ಎಲ್ಲವೂ 22+ಎಕ್ಸ್ ಕ್ರೋಮೋಸೋಮ್‌ಗಳನ್ನೇ ಹೊಂದಿರುತ್ತವೆ. ಗಂಡು 44+ಎಕ್ಸ್ ವೈ ಆಗಿರುವುದರಿಂದ ತಂದೆಯ ವೀರ್ಯಾಣುಗಳಲ್ಲಿ ಅರ್ಧದಷ್ಟು ವೀರ್ಯಾಣುಗಳು 22+   ಎಕ್ಸ್ ಕ್ರೋಮೋಸೋಮ್‌ಗಳನ್ನೂ, ಇನ್ನರ್ಧ 22+ವೈ ಕ್ರೋಮೋಸೋಮ್‌ಗಳನ್ನೂ ಹೊಂದಿರುತ್ತವೆ. 22+ಎಕ್ಸ್ ಉಳ್ಳ ವೀರ್ಯಾಣುವು 22+ಎಕ್ಸ್ ಉಳ್ಳ ಅಂಡಾಣುವನ್ನು ಫಲೀಕರಿಸಿದರೆ ಉಂಟಾಗುವ ಭ್ರೂಣವು 44+ಎಕ್ಸ್ ಎಕ್ಸ್ ಆಗಿ ಹೆಣ್ಣಾಗಿ ಬೆಳೆಯುತ್ತದೆ, ಹಾಗೆಯೇ, 22+ವೈ ಉಳ್ಳ ವೀರ್ಯಾಣುವು 22+ಎಕ್ಸ್ ಉಳ್ಳ ಅಂಡಾಣುವನ್ನು ಫಲೀಕರಿಸಿದರೆ ಉಂಟಾಗುವ ಭ್ರೂಣವು 44+ಎಕ್ಸ್ ವೈ ಆಗಿ ಗಂಡಾಗಿ ಬೆಳೆಯುತ್ತದೆ. ಅಂದರೆ ಮಗುವು ಹೆಣ್ಣೋ ಗಂಡೋ ಎನ್ನುವುದು ತಂದೆಯಿಂದ ದೊರೆತ ಎಕ್ಸ್ ಅಥವಾ ವೈ ಕ್ರೋಮೋಸೋಮ್ ಮೇಲೆ ಅವಲಂಬಿತವಾಗಿರುತ್ತದೆ. ಇವೆರಡರಲ್ಲಿ ಯಾವುದು ಅಂಡಾಣುವನ್ನು ಸೇರುತ್ತದೆ ಎನ್ನುವುದು ತನ್ನಿಂತಾನಾಗಿ ನಡೆಯುತ್ತದೆ, ಆದ್ದರಿಂದ ಮಗು ಗಂಡು ಯಾ ಹೆಣ್ಣು ಆಗುವುದಕ್ಕೆ ತಾಯಿಯನ್ನು ದೂಷಿಸುವುದಕ್ಕೆ ಸಾಧ್ಯವೇ ಇಲ್ಲ.

ಲೈಂಗಿಕ ಸಂತಾನೋತ್ಪತ್ತಿಗೆ ಗಂಡು ಹಾಗೂ ಹೆಣ್ಣು ಲಿಂಗ ಕೋಶಗಳು ಬೇಕಾಗುತ್ತವೆ. ಗಂಡು ವೀರ್ಯಾಣುಗಳು ವೃಷಣಗಳಲ್ಲೂ, ಹೆಣ್ಣು ಅಂಡಾಣುಗಳು ಅಂಡಾಶಯಗಳಲ್ಲೂ ಬೆಳೆಯುತ್ತವೆ. ಹಾಗೆ ಹುಟ್ಟುವ ವೀರ್ಯಾಣುಗಳು ವೀರ್ಯ ಕೋಶಗಳಲ್ಲಿ ಶೇಖರಗೊಳ್ಳುತ್ತವೆ. ಈ ವೀರ್ಯಾಣುಗಳನ್ನು ಅಂಡಾಣುವಿನೆಡೆಗೆ ಸೇರಿಸಲು ಪುರುಷ ಹಾಗೂ ಸ್ತ್ರೀ ಜನನಾಂಗಗಳು ನೆರವಾಗುತ್ತವೆ. ಎಲ್ಲಾ ಉನ್ನತ ಪ್ರಾಣಿಗಳಲ್ಲಿ ಈ ಅಂಗಗಳಿರುತ್ತವೆ.

YChromShowingSRY2ಮನುಷ್ಯರಲ್ಲಿ ಎಕ್ಸ್ ವೈ ಕ್ರೋಮೋಸೋಮ್‌ಗಳು ಗಂಡು-ಹೆಣ್ಣಿನ ಜನನಾಂಗಗಳನ್ನು ಉಂಟು ಮಾಡುವುದು ಹೇಗೆ? ಕ್ರೋಮೋಸೋಮ್‌ಗಳನ್ನು ಸಂಗೀತದ ಸಿಡಿ ಅಥವಾ ಕ್ಯಾಸೆಟ್‌ಗೆ ಹೋಲಿಸಿದರೆ, ಕ್ರೋಮೋಸೋಮ್‌ಗಳಲ್ಲಿರುವ ಜೀನ್‌ಗಳನ್ನು ಕ್ಯಾಸೆಟ್‌ನಲ್ಲಿರುವ ಹಾಡುಗಳಿಗೆ ಹೋಲಿಸಬಹುದು. ಕ್ಯಾಸೆಟ್ ಓಡುತ್ತಿದ್ದಾಗ ಒಂದರ ನಂತರ ಇನ್ನೊಂದು ಹಾಡು ನುಡಿದಂತೆ, ಭ್ರೂಣವು ಬೆಳೆಯುವಾಗ ಈ ಕ್ರೋಮೋಸೋಮ್‌ಗಳಲ್ಲಿರುವ ಜೀನ್‌ಗಳಲ್ಲಿ ಅಡಗಿರುವ ಲಕ್ಷಣಗಳೂ ಒಂದೊಂದಾಗಿ ಪ್ರಕಟಗೊಳ್ಳುತ್ತಾ ಹೋಗುತ್ತವೆ. ವೀರ್ಯಾಣು ಹಾಗೂ ಅಂಡಾಣು ಸೇರಿ ಉಂಟಾಗುವ ಯುಗ್ಮವು ಒಡೆದು  ಒಂದು ಕೋಶವು ಎರಡಾಗಿ, ಎರಡು ನಾಲ್ಕಾಗಿ, ನಾಲ್ಕು ಎಂಟಾಗಿ, ಹದಿನಾರಾಗಿ ಬೆಳೆಯುತ್ತಾ ಹೋದಂತೆ ಭ್ರೂಣದಲ್ಲಿ ಒಂದೊಂದೇ ಅಂಗಾಶಗಳು ಮೂಡತೊಡಗುತ್ತವೆ. ಏಳನೇ ವಾರದ ಹೊತ್ತಿಗೆ ಜನನಾಂಗಗಳ ಬೆಳವಣಿಗೆ ಆರಂಭವಾಗುತ್ತದೆ. ವೈ ಕ್ರೋಮೋಸೋಮ್‌ನಲ್ಲಿರುವ ಎಸ್ಆರ್‌ವೈ ಅಥವಾ ಲಿಂಗ ನಿರ್ಧಾರಕ ಭಾಗವು ಭ್ರೂಣದಲ್ಲಿ ಟೆಸ್ಟೋಸ್ಟಿರೋನ್ ಎಂಬ ಹಾರ್ಮೋನಿನ ಸ್ರಾವವನ್ನು ಪ್ರಚೋದಿಸುತ್ತದೆ. ಈ ಟೆಸ್ಟೋಸ್ಟಿರೋನ್, ಭ್ರೂಣದಲ್ಲಿರುವ ಅಂಗಾಂಶಗಳು ವೃಷಣಗಳಾಗಿ ಹಾಗೂ ಪುರುಷ ಜನನಾಂಗಗಳಾಗಿ ಬೆಳೆಯುವಂತೆ ಪ್ರಚೋದಿಸುತ್ತದೆ. ಎಕ್ಸ್ ಎಕ್ಸ್ ಕ್ರೋಮೋಸೋಮ್‌ ಉಳ್ಳ ಭ್ರೂಣಗಳಲ್ಲಿ ಟೆಸ್ಟೋಸ್ಟಿರೋನ್ ಸ್ರವಿಸಲ್ಪಡದಿರುವುದರಿಂದ, ಪುರುಷ ಜನನಾಂಗಗಳ ಬದಲು ಅಂಡಾಶಯಗಳು ಹಾಗೂ ಸ್ತ್ರೀ ಜನನಾಂಗಗಳು ಬೆಳೆಯುತ್ತವೆ. ಹೀಗೆ ಎಕ್ಸ್ ವೈ ಕ್ರೋಮೋಸೋಮ್‌ ಉಳ್ಳ ಭ್ರೂಣವು ಗಂಡಾಗಿ, ಎಕ್ಸ್ ಎಕ್ಸ್ ಕ್ರೋಮೋಸೋಮ್‌ ಉಳ್ಳ ಭ್ರೂಣವು ಹೆಣ್ಣಾಗಿ ಬೆಳೆಯುತ್ತದೆ. ಆರಂಭದಲ್ಲಿ ವೃಷಣಗಳು ಕೂಡ ಅಂಡಾಶಯಗಳಂತೆ ಉದರದೊಳಗೇ ಬೆಳೆಯುತ್ತವೆ. ಆದರೆ ಉದರದೊಳಗಿರುವ ಹೆಚ್ಚಿನ ಉಷ್ಣತೆಯು ವೀರ್ಯಾಣುಗಳ ಬೆಳವಣಿಗೆಗೆ ಪೂರಕವಾಗಿಲ್ಲದಿರುವುದರಿಂದ ವೃಷಣಗಳು ನಿಧಾನವಾಗಿ ಕೆಳಗಿಳಿದು, ಮಗುವಿನ ಜನನದ ವೇಳೆಗೆ ತೊಡೆಗಳ ಭಾಗದಲ್ಲಿರುವ ವೃಷಣ ಚೀಲದೊಳಕ್ಕೆ ಸೇರುತ್ತವೆ.

ಮಕ್ಕಳು ಹುಟ್ಟುವಾಗಲೇ ಗಂಡು ಯಾ ಹೆಣ್ಣಿನ ಪ್ರಜನನಾಂಗಗಳನ್ನು ಹೊಂದಿರುತ್ತಾರಾದರೂ, ಸಂತಾನೋತ್ಪತ್ತಿಯ ಸಾಮರ್ಥ್ಯವು ಬಲಿಯಬೇಕಾದರೆ ಇನ್ನಷ್ಟು ಬೆಳವಣಿಗೆಯ ಅಗತ್ಯವಿರುತ್ತದೆ. ಈ ಬೆಳವಣಿಗೆಗಳು ಹದಿಹರೆಯದಲ್ಲಾಗುತ್ತವೆ. ಭ್ರೂಣದಲ್ಲಿ ಪ್ರಜನನಾಂಗಗಳ ಬೆಳವಣಿಗೆಯನ್ನು ವೈ ಕ್ರೋಮೋಸೋಮ್‌ನ ಎಸ್ಆರ್‌ವೈ ಪ್ರಚೋದಿಸಿದರೆ, ಈ ಎರಡನೇ ಹಂತದ ಬೆಳವಣಿಗೆಗೆ ಕಾರಣವೇನು?

‘ಗೊತ್ತಿಲ್ಲ ಸರ್’, ‘ಮಗುವಿನ ವಯಸ್ಸು ಸರ್’, ‘ದೇವರು ಸರ್’

‘ದೇವರಾ?’

ಗೊತ್ತಿಲ್ಲ ಸರ್’

‘ಮಗು ಬೆಳೆಯುತ್ತಿದ್ದಂತೆ ಅದೆಷ್ಟು ದಿನ-ವಾರ-ವರ್ಷಗಳಾಗಿವೆ, ಎಷ್ಟು ತಿಂದಾಗಿದೆ, ತೂಕ ಎಷ್ಟಾಗಿದೆ ಇತ್ಯಾದಿ ಮಾಹಿತಿಯೆಲ್ಲವನ್ನೂ ನಮ್ಮ ಮಿದುಳು ಗ್ರಹಿಸುತ್ತಿರುತ್ತದೆ. ಉದಾಹರಣೆಗೆ, ಆಹಾರವನ್ನು ತಿನ್ನುವಾಗ, ತಿಂದ ಆಹಾರವು ಕೊಬ್ಬಿನ ರೂಪದಲ್ಲಿ ಶೇಖರಗೊಳ್ಳುವಾಗ ಲೆಪ್ಟಿನ್ ಎಂಬ ಹಾರ್ಮೋನು ಬಿಡುಗಡೆಯಾಗುತ್ತದೆ. ಇದು ನಾವು ಎಷ್ಟು ತಿಂದಿದ್ದೇವೆ, ದೇಹದಲ್ಲಿ ಕೊಬ್ಬಿನ ಪ್ರಮಾಣ ಎಷ್ಟಿದೆ, ದೇಹದ ತೂಕ ಎಷ್ಟಿದೆ ಇತ್ಯಾದಿ ಮಾಹಿತಿಯನ್ನು ಮಿದುಳಿನಲ್ಲಿರುವ ಹೈಪೋಥಲಮಸ್ ಎಂಬ ಭಾಗಕ್ಕೆ ರವಾನಿಸುತ್ತಿರುತ್ತದೆ. ಇಂತಹಾ ಮಾಹಿತಿಯ ಆಧಾರದಲ್ಲಿ ಹೈಪೋಥಲಮಸ್ ಲೈಂಗಿಕ ಬೆಳವಣಿಗೆಯನ್ನು ಪ್ರಚೋದಿಸತೊಡಗುತ್ತದೆ. ಈ ಹೈಪೊಥಲಮಸ್ ಜಿಎನ್‌ಆರ್‌ಎಚ್ – ಗೊನಾಡೊಟ್ರೋಫಿನ್ ರಿಲೀಸಿಂಗ್ ಹಾರ್ಮೋನ್ – ಅಥವಾ ಪ್ರಜನನಾಂಗ ಚೋದಕಗಳನ್ನು ಪ್ರಚೋದಿಸುವ ಹಾರ್ಮೋನ್ – ಅನ್ನು ಸ್ರವಿಸತೊಡಗುತ್ತದೆ. ಜಿಎನ್‌ಆರ್‌ಎಚ್ ಪಿಟ್ಯುಟರಿ ಗ್ರಂಥಿಯ ಮೇಲೆ ವರ್ತಿಸಿ, ಅಲ್ಲಿಂದ ಲ್ಯುಟಿನೈಸಿಂಗ್ ಹಾರ್ಮೋನ್ ಎಂಬ ಚೋದಕವನ್ನು ಪ್ರಚೋದಿಸುತ್ತದೆ. ಈ ಲ್ಯುಟಿನೈಸಿಂಗ್ ಹಾರ್ಮೋನ್ ಗಂಡು ಮಕ್ಕಳ ವೃಷಣಗಳಲ್ಲಿ ಟೆಸ್ಟೋಸ್ಟಿರೋನ್ ಸ್ರಾವವನ್ನು ಪ್ರಚೋದಿಸುತ್ತದೆ, ಹೆಣ್ಣು ಮಕ್ಕಳ ಅಂಡಾಶಯದಲ್ಲಿ ಇಸ್ಟ್ರೋಜನ್ ಎಂಬ ಹಾರ್ಮೋನನ್ನು ಪ್ರಚೋದಿಸುತ್ತದೆ,

ಟೆಸ್ಟೋಸ್ಟಿರೋನ್ ಪ್ರಭಾವದಿಂದ ಗಂಡು ಮಕ್ಕಳ ಧ್ವನಿ ಪೆಟ್ಟಿಗೆ ಹಿರಿದಾಗಿ ಸ್ವರ ಗಡುಸಾಗುತ್ತದೆ, ಜನನಾಂಗದ ಸುತ್ತ, ಕಂಕುಳಲ್ಲಿ, ಮುಖ, ಎದೆ, ಉದರ, ಕೈಕಾಲುಗಳಲ್ಲಿ ಕೂದಲು ಬೆಳೆಯತೊಡಗುತ್ತದೆ, ಸ್ನಾಯುಗಳು ಗಟ್ಟಿಯಾಗುತ್ತವೆ, ದೇಹದ ಎತ್ತರವೂ ಹೆಚ್ಚುತ್ತದೆ; ವೃಷಣಗಳ ಗಾತ್ರ ಇನ್ನಷ್ಟು ವೃದ್ಧಿಸಿ, ವೀರ್ಯಾಣುಗಳ ಉತ್ಪಾದನೆ ತೊಡಗುತ್ತದೆ, ಜೊತೆಗೆ, ವೀರ್ಯ ಕೋಶಗಳಲ್ಲಿ ವೀರ್ಯವೂ ಉತ್ಪಾದನೆಯಾಗತೊಡಗುತ್ತದೆ. ಇವೆಲ್ಲವೂ 12ರಿಂದ 13ರ ವಯಸ್ಸಿನಲ್ಲಿ ತೊಡಗಿ 18-19 ರ ವೇಳೆಗೆ ಪೂರ್ಣಗೊಳ್ಳುತ್ತವೆ. ವೀರ್ಯೋತ್ಪಾದನೆ ಹೆಚ್ಚಿದಂತೆ ಆಗಾಗ ವೀರ್ಯ ಸ್ಖಲನವೂ ಆಗುತ್ತದೆ. ನಿಧಾನವಾಗಿ ಲೈಂಗಿಕ ಆಸಕ್ತಿಯೂ ಹೆಚ್ಚತೊಡಗುತ್ತದೆ.

ಹುಡುಗಿಯರಲ್ಲಿ ಇಸ್ಟ್ರೋಜನ್ ಹೆಚ್ಚಿದಂತೆ ಸ್ತನಗಳ ಬೆಳವಣಿಗೆಯಾಗುತ್ತದೆ, ಜನನಾಂಗ ಹಾಗೂ ಕಂಕುಳಲ್ಲಿ ಕೂದಲು ಬೆಳೆಯುತ್ತವೆ, ಎತ್ತರವೂ ಹೆಚ್ಚುತ್ತದೆ, ಆದರೆ ಗಂಡು ಮಕ್ಕಳಲ್ಲಾಗುವ ಇತರ ಬದಲಾವಣೆಗಳು ಹುಡುಗಿಯರಲ್ಲಿ ಉಂಟಾಗುವುದಿಲ್ಲ, ಧ್ವನಿಯು ಗಡುಸಾಗದೇ ಉಳಿಯುತ್ತದೆ, ಸ್ನಾಯುಗಳೂ ಗಂಡಸರಂತಾಗುವುದಿಲ್ಲ. ಹುಡುಗರಲ್ಲೂ, ಹುಡುಗಿಯರಲ್ಲೂ ಹದಿಹರೆಯದಲ್ಲಾಗುವ ಈ ದೈಹಿಕ ಬದಲಾವಣೆಗಳನ್ನು ಆನುಷಂಗಿಕ ಲೈಂಗಿಕ ಲಕ್ಷಣಗಳು ಎನ್ನಲಾಗುತ್ತದೆ.

‘ಹುಡುಗಿಯು ಬೆಳೆದಂತೆ ಆಕೆಯ ಸೊಂಟದ ಎಲುಬು ಅಗಲಗೊಳ್ಳುತ್ತದೆ. ಇದು ಯಾಕಾಗುತ್ತದೆ ಅಂತ ಹುಡುಗರು ಹೇಳಿ’.

ಒಂದಿಬ್ಬರು ಹುಡುಗರು ನಾಚಿ ತಲೆ ತಗ್ಗಿಸಿದರು. ಇನ್ನುಳಿದವರು ಯೋಚಿಸತೊಡಗಿದರು.

‘ಸರ್, ಗರ್ಭಿಣಿಯಾಗಿದ್ದಾಗ ಮಗುವಿಗೆ ಜಾಗ ಬೇಕಲ್ಲಾ ಸರ್, ಅದಕ್ಕೆ’ ಎಂದ ಒಬ್ಬ.

IMG_20160206_111303ಅವನ ಬೆನ್ನು ತಟ್ಟಿದೆ; ತಾಯ್ತನಕ್ಕೆ ಸಿದ್ಧಗೊಳ್ಳಲು ಹೆಣ್ಣಿನ ದೇಹದಲ್ಲಿ ಏನೆಲ್ಲಾ ಬದಲಾವಣೆಗಳು ಆಗುತ್ತವೆ ಎನ್ನುವುದನ್ನು ವಿವರಿಸಿದೆ. ಹೆಣ್ಣು ಮಗು ಹುಟ್ಟುವಾಗ ಎಡ-ಬಲಗಳ ಎರಡು ಅಂಡಾಶಯಗಳಲ್ಲಿ ಒಂದರಿಂದ ಮೂರು ಲಕ್ಷದಷ್ಟು ಅಂಡಾಣುಗಳಿರುತ್ತವೆ; ಹದಿಹರೆಯದ ವೇಳೆಗೆ ಅವು ಸುಮಾರು 30-40 ಸಾವಿರದಷ್ಟಾಗುತ್ತವೆ. ಪ್ರತೀ ತಿಂಗಳು ಒಂದು ಅಂಡಾಣು ಸರಿಯಾಗಿ ಬೆಳೆದು ಬಿಡುಗಡೆಯಾಗುತ್ತದೆ, ಹಾಗಾಗಿ ಸುಮಾರು 14ನೇ ವಯಸ್ಸಿನಿಂದ 52-55ನೇ ವಯಸ್ಸಿನವರೆಗೆ 40 ವರ್ಷಗಳಲ್ಲಿ ತಿಂಗಳಿಗೊಂದರಂತೆ ಸುಮಾರು 500ರಷ್ಟು ಅಂಡಾಣುಗಳು ಬಲಿತು ಬಿಡುಗಡೆಗೊಳ್ಳುತ್ತವೆ. ಪಿಟ್ಯುಟರಿ ಗ್ರಂಥಿಯು ಸ್ರವಿಸುವ ಕುಹರ ಚೋದಕ ಹಾರ್ಮೋನ್ (ಫಾಲಿಕಲ್ ಸ್ಟಿಮುಲೇಟಿಂಗ್ ಹಾರ್ಮೋನ್, ಎಫ್‌ಎಸ್‌ಎಚ್) ಹಾಗೂ ಲ್ಯುಟಿನೈಸಿಂಗ್ ಹಾರ್ಮೋನ್‌ಗಳು ಅಂಡಾಶಯದಲ್ಲಿ ಅಂಡಾಣುಗಳ ಬೆಳವಣಿಗೆ ಹಾಗೂ ಬಿಡುಗಡೆಯನ್ನು ಪ್ರಚೋದಿಸುತ್ತವೆ; ಎಫ್‌ಎಸ್‌ಎಚ್ ಹಾಗೂ ಎಲ್‌ಎಚ್ ಹಾರ್ಮೋನುಗಳ ಪ್ರಭಾವದಿಂದ ಅಂಡಾಶಯಗಳಿಂದ ಬಿಡುಗಡೆಯಾಗುವ ಇಸ್ಟ್ರೋಜನ್ ಹಾಗೂ ಪ್ರೊಜೆಸ್ಟರಾನ್ ಎಂಬ ಹಾರ್ಮೋನುಗಳು ಗರ್ಭಕೋಶದ ಒಳಪದರದ ಬೆಳವಣಿಗೆಗೆ ಕಾರಣವಾಗುತ್ತವೆ. ಸಾಮಾನ್ಯವಾಗಿ 28 ದಿನಗಳ ಕಾಲ ನಡೆಯುವ ಈ ಬೆಳವಣಿಗೆಗಳಲ್ಲಿ, 12-14ನೇ ದಿನ ಅಂಡಾಶಯದಿಂದ ಅಂಡಾಣುವು ಬಿಡುಗಡೆಯಾಗುತ್ತದೆ, ಆ ದಿನ ಕಿಬ್ಬೊಟ್ಟೆಯಲ್ಲಿ ಸಣ್ಣದಾಗಿ ನೋವುಂಟಾಗಬಹುದು; ಅಂಡಾಣುವು ಫಲೀಕರಣಗೊಳದಿದ್ದಲ್ಲಿ ಅಲ್ಲಿಗೇ ಕಮರಿ ಹೋಗುತ್ತದೆ, ಮತ್ತೆರಡು ವಾರಗಳ ಬಳಿಕ, ಅಂದರೆ 28 ದಿನಗಳ ಬಳಿಕ, ಗರ್ಭಕೋಶದ ಒಳಪದರವು ಕಳಚಿ, ಋತುಸ್ರಾವವುಂಟಾಗುತ್ತದೆ, ಈ ಸ್ರಾವವು 3-5 ದಿನಗಳ ಕಾಲ ಇರುತ್ತದೆ.

ಹಿಂದೆ 14-16 ವಯಸ್ಸಿನಲ್ಲಿ ಹುಡುಗಿಯರಲ್ಲಿ ಋತುಸ್ರಾವ ಆರಂಭವಾಗುತ್ತಿದ್ದರೆ ಈಗ 10-12ರ ವಯಸ್ಸಿಗೇ ಆರಂಭವಾಗುತ್ತಿದೆ. ಹುಡುಗರಲ್ಲೂ 10-12ರ ವಯಸ್ಸಿಗೇ ಕೂದಲ ಬೆಳವಣಿಗೆ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಹೀಗೆ ಆನುಷಂಗಿಕ ಲೈಂಗಿಕ ಬೆಳವಣಿಗೆಯು ಬೇಗನೇ ಆಗುತ್ತಿರುವುದಕ್ಕೆ ಇಂದಿನ ಮಕ್ಕಳು ವಿಪರೀತವಾಗಿ ತಿನ್ನುತ್ತಿರುವುದೇ ಮುಖ್ಯ ಕಾರಣ. ನೀವು ಒಂದು ದಿನಕ್ಕೆ ಇಷ್ಟನ್ನೇ ತಿನ್ನಬೇಕು ಎಂಬ ಲೆಕ್ಕ ಮಿದುಳಲ್ಲಿರುತ್ತದೆ. ನೀವು ಎರಡು ದಿನದ ಆಹಾರವನ್ನು ಒಂದೇ ದಿನ ತಿಂದರೆ ಮಿದುಳಿನ ಲೆಕ್ಕ ಹೆಚ್ಚುತ್ತದೆ. ಹದಿನೈದು ಹದಿನಾರು ವರ್ಷಗಳಲ್ಲಿ ತಿನ್ನಬೇಕಾಗಿದ್ದುದನ್ನು 10-12 ವರ್ಷಗಳಲ್ಲೇ ತಿಂದು ಬಿಟ್ಟರೆ, 15-16ರ ವಯಸ್ಸಿನಲ್ಲಿ ಇರಬೇಕಾಗಿದ್ದ ದೇಹ ತೂಕವು 10-12ಕ್ಕೇ ತುಂಬಿಕೊಂಡರೆ, 15-16 ವಯಸ್ಸಿನಲ್ಲಿ ಆರಂಭವಾಗಬೇಕಾಗಿದ್ದ ಋತುಸ್ರಾವವು 10-12 ವಯಸ್ಸಿಗೇ ತೊಡಗುತ್ತದೆ. ಹತ್ತರ ವಯಸ್ಸಿಗೆ 15ರಷ್ಟು ಬೆಳೆದ ಮಕ್ಕಳು ಮುಂದೆ ಮೂವತ್ತರ ವಯಸ್ಸಿಗೆ 50 ರಂತೆ ಆಗುತ್ತಾರೆ, ಮಧುಮೇಹ, ಹೃದ್ರೋಗ, ಕ್ಯಾನ್ಸರ್ ಇತ್ಯಾದಿಗಳೂ ಬೇಗನೇ ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಎಷ್ಟು ಬೇಕೋ ಅಷ್ಟೇ ತಿನ್ನಿ, ಸಕ್ಕರೆ, ಐಸ್‌ಕ್ರೀಂ, ಬ್ರೆಡ್ಡು, ಬಿಸ್ಕತ್ತು, ನೂಡಲ್ಸ್ ಇತ್ಯಾದಿ ತಿನ್ನಬೇಡಿ, ಹಾಲು ಕೂಡ ಒಳ್ಳೆಯದಲ್ಲ.

ಇನ್ನು ಪ್ರಶ್ನೆಗಳಿದ್ದರೆ ಕೇಳಿ

ಒಂದೆರಡು ನಿಮಿಷ ಮೌನ. ಯಾಕೆ ಮೌನ, ಕೇಳಿ ಅಂದಾಗ ಬಂತದೋ ಮೊದಲ ಪ್ರಶ್ನೆ:

‘ಸರ್, ಚಕ್ಕ ಅಂತ ಇರ್ತಾರಲ್ಲಾ ಸರ್…’ ಮೆಲುದನಿಯಲ್ಲೇ ಕೇಳಿದ ಹುಡುಗ.

ನನಗದು ಕೇಳಿಸಲಿಲ್ಲ, ‘ಏನದು, ಗೊತ್ತಾಗಲಿಲ್ಲ’ ಅಂದೆ. ಅವನ ಬಳಿಯಿದ್ದ ಇನ್ನಿಬ್ಬರು ಹುಡುಗರು ಕಿಸಕ್ಕೆಂದರು.

‘ಸರ್, ಚಕ್ಕ ಅಂತಾರಲ್ಲ ಸರ್, ಮಂಗಳ ಮುಖಿಯರು, ಅವರು ಯಾಕೆ ಸರ್ ಹಾಗಿರ್ತಾರೆ?” ಧೈರ್ಯ ತುಂಬಿಕೊಂಡು ಮತ್ತೆ ಕೇಳಿದ ಆ ಹುಡುಗ.

‘ಬಹಳ ಒಳ್ಳೆಯ ಪ್ರಶ್ನೆ ಇದು’ ಅಂತ ಹುರಿದುಂಬಿಸಿದೆ. ವೈ ಕ್ರೋಮೋಸೋಮ್‌ನಿಂದ ಟೆಸ್ಟೊಸ್ಟಿರಾನ್, ಅದರಿಂದ ವೃಷಣಗಳ ಬೆಳವಣಿಗೆ, ಹದಿಹರೆಯದಲ್ಲಿ ಹೈಪೋಥಲಮಸ್‌ನಿಂದ ಜಿಎನ್‌ಆರ್‌ಎಚ್, ಪಿಟ್ಯುಟರಿಯಿಂದ ಎಫ್‌ಎಸ್‌ಎಚ್, ಎಲ್‌ಎಚ್, ಅವುಗಳ ಪ್ರಚೋದನೆಯಿಂದ ಟೆಸ್ಟೊಸ್ಟಿರಾನ್, ಇಸ್ಟ್ರೋಜನ್, ಪ್ರೊಜೆಸ್ಟರಾನ್ ಹಾಗೂ ವೀರ್ಯ/ಅಂಡಾಣು ವೃದ್ಧಿ, ಆನುಷಂಗಿಕ ಲೈಂಗಿಕ ಲಕ್ಷಣಗಳ ಬೆಳವಣಿಗೆ, ಜೊತೆಜೊತೆಗೆ ಲೈಂಗಿಕ ಆಸಕ್ತಿಯ ಬೆಳವಣಿಗೆ ಇವೆಲ್ಲವೂ ಬಹಳ ಸಂಕೀರ್ಣವಾದ ಪ್ರಕ್ರಿಯೆಗಳಾಗಿದ್ದು, ಈ ಹಂತಗಳಲ್ಲಿ ಯಾವುದೇ ವ್ಯತ್ಯಾಸಗಳಾದರೂ ಜನನಾಂಗಗಳ ಬೆಳವಣಿಗೆಯಲ್ಲಿ, ಆನುಷಂಗಿಕ ಲೈಂಗಿಕ ಲಕ್ಷಣಗಳ ಬೆಳವಣಿಗೆಯಲ್ಲಿ, ಲೈಂಗಿಕ ಆಸಕ್ತಿಯಲ್ಲಿ ವ್ಯತ್ಯಾಸಗಳಾಗಬಹುದು. ಇದರಿಂದಾಗಿ ಹಲವು ತರದ ಭಿನ್ನ ಲೈಂಗಿಕತೆ ಉಂಟಾಗಬಹುದು. ಏನೇ ಆದರೂ ಅವರೆಲ್ಲರೂ ನಮ್ಮ-ನಿಮ್ಮೆಲ್ಲರಂತೆಯೇ ಸಹಜವಾಗಿ ಬದುಕಬಹುದು, ಎಲ್ಲಾ ಕೆಲಸಗಳನ್ನೂ ಮಾಡಬಹುದು’

‘ಸರ್, ಹಾಗಾದರೆ ಅವರು ಭಿಕ್ಷೆ ಬೇಡುವುದು, ಮಂಗಳ ಮುಖಿಯರಂತೆ ಸಮಾರಂಭಗಳಲ್ಲಿ ಭಾಗವಹಿಸುವುದು ಯಾಕೆ?’

‘ಅವರನ್ನು ಕುಟುಂಬದವರು, ಸುತ್ತಲಿನವರು ದೂರ ಮಾಡುತ್ತಾರೆ, ಅವರಿಗೆ ಶಿಕ್ಷಣ, ಸವಲತ್ತುಗಳನ್ನು ಸರಿಯಾಗಿ ಒದಗಿಸುವುದಿಲ್ಲ’

‘ಮನೆಯವರು ಹಾಗೆ ಮಾಡಬಾರದಲ್ಲ ಸರ್, ಅವರೂ ಮಕ್ಕಳೇ ಅಲ್ಲವಾ?’ ಅಂದಳು ಒಬ್ಬ ಹುಡುಗಿ.

‘ಮಾಡಬಾರದು, ಆದರೆ ಮಾಡುತ್ತಾರೆ. ಸಮಾಜದಲ್ಲೂ ಭಿನ್ನ ಲೈಂಗಿಕತೆಯವರ ಬಗ್ಗೆ ತಾತ್ಸಾರ ಇದೆ’

‘ಅದು ಯಾಕೆ ಸರ್, ಸರಕಾರ ಅವರಿಗೆ ಸಹಾಯ ಮಾಡಬೇಕಲ್ಲ?’

‘ನಮ್ಮ ದೇಶದಲ್ಲಿ ಈಗಿರುವ ಕಾನೂನಿನಂತೆ ಭಿನ್ನ ಲೈಂಗಿಕತೆ ಒಂದು ಅಪರಾಧ, ಅವರನ್ನು ಜೈಲಿಗೂ ತಳ್ಳಬಹುದು. ಭಾರತೀಯ ದಂಡ ಸಂಹಿತೆಯ 377ನೇ ಈ ವಿಧಿ ಬ್ರಿಟಿಷರ ಕಾಲದಲ್ಲಿ 1860ರಲ್ಲಿ ಜಾರಿಗೆ ಬಂದದ್ದು. ಈಗ ಅದನ್ನು ನಮ್ಮ ಸರ್ವೋಚ್ಛ ನ್ಯಾಯಾಲಯದಲ್ಲಿ ಐದು ನ್ಯಾಯಾಧೀಶರ ಪೀಠ ಪರಿಗಣನೆಗೆ ತೆಗೆದುಕೊಂಡಿದೆ, ತೀರ್ಪು ಬಂದಾಗ ಅದು ರದ್ದಾಗಲೂ ಬಹುದು’

‘ಸರ್, ಸರಕಾರ ಅದನ್ನು ಬೇಗನೇ ಮಾಡಬಹುದಲ್ಲ?’

‘ಭಿನ್ನ ಲೈಂಗಿಕತೆ, ಸಲಿಂಗ ಪ್ರೀತಿ ಮುಂತಾದವುಗಳನ್ನು ಧರ್ಮದ ಹೆಸರಿನಲ್ಲಿ, ಸಂಸ್ಕೃತಿಯ ಹೆಸರಿನಲ್ಲಿ ವಿರೋಧಿಸುವವರು ಇದ್ದಾರೆ. ಸರಕಾರ ಮತ್ತು ನ್ಯಾಯಾಲಯಗಳು ಅವರ ವಾದವನ್ನೂ ಆಲಿಸಬೇಕಾಗುತ್ತದೆ. ಈಗ ಭಿನ್ನ ಲೈಂಗಿಕತೆ, ಸಲಿಂಗ ಪ್ರೀತಿ ಮುಂತಾದವು ಮನುಷ್ಯ ಸಹಜವಾಗಿರುವಂಥವು ಎನ್ನುವುದನ್ನು ಮನೋರೋಗ ತಜ್ಞರಾದಿಯಾಗಿ ಎಲ್ಲರೂ ಒಪ್ಪಿಕೊಂಡಿದ್ದಾರೆ. ಯೂರೋಪಿನ ಹಲವೆಡೆ ತಮ್ಮದೇ ಲಿಂಗದವರೊಡನೆ ಬದುಕುವುದಕ್ಕೆ ಯಾರಾದರೂ ಇಚ್ಛಿಸಿದರೆ ಅದಕ್ಕೆ ಕಾನೂನಿನಲ್ಲಿ ಅವಕಾಶ ನೀಡಲಾಗಿದೆ, ಇತ್ತೀಚೆಗೆ ಅಮೆರಿಕಾದ ನ್ಯಾಯಾಲಯವೂ ಅದನ್ನೇ ಹೇಳಿದೆ. ಮುಂದೊಂದು ದಿನ ನಮ್ಮ ದೇಶದಲ್ಲೂ ಇದು ಸಾಧ್ಯವಾಗಬಹುದು’

‘ಸರ್, ಸಲಿಂಗ ಪ್ರೀತಿ ಯಾಕಾಗುತ್ತದೆ ಸರ್?’

‘ಹರೆಯದಲ್ಲಾಗುವ ಲೈಂಗಿಕ ಬೆಳವಣಿಗೆಯ ಜೊತೆ ಲೈಂಗಿಕ ಆಸಕ್ತಿಯೂ ಬೆಳೆಯುತ್ತದೆ ಅಂತ ಹೇಳಿದೆನಲ್ಲ? ಹೆಚ್ಚಿನ ಮನುಷ್ಯರಲ್ಲಿ ಗಂಡಿಗೆ ಹೆಣ್ಣಿನತ್ತ, ಹೆಣ್ಣಿಗೆ ಗಂಡಿನತ್ತ ಆಸಕ್ತಿ ಮೂಡುತ್ತದೆ. ಕೆಲವರಲ್ಲಿ ಗಂಡು-ಗಂಡಿನತ್ತ, ಹೆಣ್ಣು ಹೆಣ್ಣಿನತ್ತವೂ ಆಸಕ್ತಿ ಮೂಡಬಹುದು. ಈ ಆಸಕ್ತಿಗಳು ಬದಲಾಗಲೂ ಬಹುದು. ಹಾರ್ಮೋನುಗಳು ಹಾಗೂ ಮಿದುಳಿನಲ್ಲಾಗುವ ಬದಲಾವಣೆಗಳೇ ಇದಕ್ಕೆ ಕಾರಣ. ಯಾರೊಬ್ಬರೂ ತಾವಾಗಿ ಇಂತಹ ಆಸಕ್ತಿಗಳನ್ನು ಬೆಳೆಸಿಕೊಳ್ಳುವುದಕ್ಕೆ ಅಥವಾ ಬದಲಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ.

‘ಸರ್, ಗಂಡು-ಗಂಡು ಅಥವಾ ಹೆಣ್ಣು-ಹೆಣ್ಣು ಮದುವೆಯಾದರೆ ಮಕ್ಕಳಾಗುವುದು ಹೇಗೆ? ಇದು ಟೀಚರ್ ಕೇಳಿದ ಪ್ರಶ್ನೆ.

‘ಸಂತಾನೋತ್ಪತ್ತಿಯೊಂದೇ ಮದುವೆಯ ಉದ್ದೇಶವಲ್ಲ. ಮದುವೆಯಾಗಿಯೂ ಮಕ್ಕಳಾಗದ ಅದೆಷ್ಟೋ ದಂಪತಿಗಳು ಸಂತೋಷವಾಗಿ ಕೂಡಿ ಜೀವಿಸುತ್ತಾರೆ. ಸಲಿಂಗ ವಿವಾಹವು ಅವರೊಳಗೆ ಪ್ರೀತಿಗೆ, ಸಹಬಾಳ್ವೆಗೆ ಅವಕಾಶ ಮಾಡಿಕೊಡುತ್ತದೆ, ಅಂತಹಾ ಬಾಳ್ವೆಯಿಂದ ಬೇರೆಯವರಿಗೆ ಯಾವ ತೊಂದರೆಯೂ ಇಲ್ಲ. ಸಲಿಂಗ ಸಂಗಾತಿಗಳು ಮಕ್ಕಳನ್ನು ಪಡೆಯುವುದಕ್ಕೆ ಹಲವು ವಿಧಾನಗಳಿವೆ: ಅವರ ಅಂಡಾಣು ಯಾ ವೀರ್ಯಾಣುವನ್ನು ಬಳಸಿ ಬೇರೊಬ್ಬರು ದಾನ ಮಾಡಿದ ವೀರ್ಯಾಣು ಯಾ ಅಂಡಾಣುವಿನೊಂದಿಗೆ ಪ್ರಣಾಳ ಫಲೀಕರಣ ಮಾಡಬಹುದು, ಸಂಗಾತಿಗಳು ಸ್ತ್ರೀಯರಾಗಿದ್ದರೆ ಅಂತಹ ಭ್ರೂಣವನ್ನು ಅವರಲ್ಲೊಬ್ಬರು ತನ್ನ ಗರ್ಭಕೋಶದೊಳಗೆ ಧರಿಸಿ ಮಗುವನ್ನು ಪಡೆಯಬಹುದು. ಇನ್ನೋರ್ವ ಮಹಿಳೆಯ ಗರ್ಭಕೋಶವನ್ನು ಆಕೆಯ ಸಮ್ಮತಿಯಿಂದ ಬಳಸಿಕೊಂಡು ಮಗುವನ್ನು ಪಡೆಯುದಕ್ಕೂ ಸಾಧ್ಯವಿದೆ. ಬೇರೊಂದು ಮಗುವನ್ನು ದತ್ತು ಪಡೆದು ಸಾಕಲೂ ಬಹುದು.’

‘ಸರ್, ಭಿನ್ನ ಲೈಂಗಿಕತೆಯವರನ್ನು ಗುರುತಿಸುವುದು ಹೇಗೆ?’

‘ಅವರ ಪ್ರಾಥಮಿಕ ಹಾಗೂ ಆನುಷಂಗಿಕ ಲೈಂಗಿಕ ಲಕ್ಷಣಗಳನ್ನು ನೋಡಿ, ಅಂದರೆ ಅವರ ಪ್ರಜನನಾಂಗಗಳು, ದೇಹದ ರಚನೆ, ಇತ್ಯಾದಿಗಳನ್ನು ಪರೀಕ್ಶಃಇಸಿ ಅದನ್ನು ನಿರ್ಧರಿಸಬಹುದು. ಭಿನ ಲೈಂಗಿಕ ಆಸಕ್ತಿಯುಳ್ಳವರನ್ನು ದೇಹದ ರಚನೆಯಿಂದ ಗುರುತಿಸುವುದು ಕಷ್ಟ. ಕೆಲವೊಮ್ಮೆ ಲೈಂಗಿಕ ಲಕ್ಷಣಗಳು ಬದಲಾಗುವುದೂ ಇದೆ. ಮಹಿಳೆಯರ ವಿಭಾಗದಲ್ಲಿ ಸ್ಪರ್ಧಿಸಿ ಜಯ ಗಳಿಸಿದ ಕೆಲವು ಕ್ರೀಡಾಪಟುಗಳು ಕೆಲಕಾಲದ ಬಳಿಕ ಪುರುಶಃಅರ ಲಕ್ಷಣಗಳನ್ನು ಬೆಳೆಸಿಕೊಂಡಿರುವ ಉದಾಹರಣೆಗಳೂ ಇವೆ. ಅಂತಹಾ ಸಂದರ್ಭಗಳಲ್ಲಿ ಬಹಳ ಕೂಲಂಕಷವಾದ ಪರೀಕ್ಷೆಗಳನ್ನು ನಡೆಸಬೇಕಾಗಬಹುದು, ಕ್ರೋಮೋಸೋಮ್‌ಗಳು, ವೈ ಕ್ರೋಮೋಸೋಮ್‌ನ ಎಸ್‌ಆರ್‌ವೈ ಭಾಗ, ಲೈಂಗಿಕತೆಗೆ ಸಂಬಂಧಿಸಿದ ಹಾರ್ಮೋನುಗಳು ಇತ್ಯಾದಿಗಳನ್ನೆಲ್ಲ ಪರೀಕ್ಷಿಸಬೇಕಾಗುತ್ತದೆ. ಕೆಲವೊಮ್ಮೆ ಎಷ್ಟೇ ಪರೀಕ್ಷೆಗಳನ್ನು ನಡೆಸಿದರೂ ನಿಖರವಾದ ಉತ್ತರ ದೊರೆಯದಿರಲೂಬಹುದು.`

‘ಲೈಂಗಿಕ ಆಸಕ್ತಿಯು ಹರೆಯದಲ್ಲೇ ಮೂಡತೊಡಗುತ್ತದೆ. ನಮ್ಮ ದೇಶದ ಕಾನೂನಿನಂತೆ ಹದಿನೆಂಟು ವಯಸ್ಸಿನವರೆಗೆ ಲೈಂಗಿಕ ಕ್ರಿಯೆ ನಡೆಸಿದರೆ ಅದು ಅಪರಾಧವೆಂದು ಪರಿಗಣಿಸಲ್ಪಡಬಹುದು. ನಮ್ಮ ದೇಶದಲ್ಲಿ ವಿವಾಹವಾಗಬೇಕಾದರೆ ಹೆಣ್ಣಿಗೆ 18 ವರ್ಷಗಳಾಗಬೇಕು, ಗಂಡಿಗೆ 21 ವರ್ಷಗಳಾಗಬೇಕು. ಆದರೆ ಈ ವಯಸ್ಸು ಕೂಡ ಸಾಕಷ್ಟು ಚಿಕ್ಕದೆಂದೇ ಹೇಳಬೇಕಾಗುತ್ತದೆ. ನೀವೆಲ್ಲರೂ ಚೆನ್ನಾಗಿ ಓದಿ, ಉದ್ಯೋಗಸ್ಥರಾಗುವುದು ಬಹಳ ಮುಖ್ಯ’

‘ಸರ್, ನಮ್ಮನ್ನೆಲ್ಲ ಬೇಗನೇ ಮದುವೆ ಮಾಡಿ ಬಿಡ್ತಾರೆ ಸರ್’ ಎಂದಳು ಒಬ್ಬ ಹುಡುಗಿ.

‘ಹೌದು ಸರ್, ನಮ್ಮ ಕಡೆ ಹಾಗೇ ಸರ್, ಬಾಲ್ಯ ವಿವಾಹ ಸರ್’ ಎಂದು ದನಿಗೂಡಿಸಿದರು ಕೆಲವು ಹುಡುಗರು.

‘ಅದನ್ನು ನೀವೆಲ್ಲರೂ ವಿರೋಧಿಸಬೇಕು, ಹಾಗೆ ಮದುವೆಯಾಗಲು ಒಪ್ಪಿಕೊಳ್ಳಬಾರದು, ನಿಮ್ಮ ಹೆತ್ತವರನ್ನು ಹಾಗೆ ಮಾಡದಂತೆ ಒಪ್ಪಿಸಬೇಕು. ನೀವೇ ಹುಡುಗಿಯರು ಆವತ್ತು ಹೇಳಿದ್ರಲ್ಲ, ಡಾಕ್ಟರಾಗಬೇಕು, ಪೋಲಿಸ್ ಅಧಿಕಾರಿ ಆಗಬೇಕು, ಟೀಚರ್ ಆಗಬೇಕು, ಅಂತ, ಅದನ್ನು ಸಾಧಿಸಿ, ಆ ಮೇಲೆ ಮದುವೆ ಆಗಬಹುದು. ನಿಮ್ಮ ಹೆತ್ತವರಿಗೆ ಅದನ್ನು ಹೇಳಿ.’

ಶನಿವಾರ, ಫೆಬ್ರವರಿ 13, 2016:

ಮನುಷ್ಯರಲ್ಲಿ ಸಂತಾನೋತ್ಪತ್ತಿ, ಪಾಠ 4:

IMG_20160213_100746ಮೊದಲಿಗೆ ಪಿಂಕಿ ಪ್ರಾಮಾಣಿಕ್ ವೃತ್ತಾಂತ. ಈಕೆ ಕಾಮನ್ವೆಲ್ತ್, ಏಷ್ಯಾ ಕ್ರೀಡಾಕೂಟಗಳಲ್ಲಿ, ಮಹಿಳೆಯರ ವಿಭಾಗದಲ್ಲಿ 400 ಹಾಗೂ 800 ಮೀ ಓಟಗಳಲ್ಲಿ ಭಾಗವಹಿಸಿ, ದೇಶಕ್ಕೆ ಚಿನ್ನ ಹಾಗೂ ರಜತ ಪದಕಗಳನ್ನು ಗೆದ್ದು ಕೊಟ್ಟ ಕ್ರೀಡಾಪಟು. ಪಿಂಕಿ ಹೆಣ್ಣಲ್ಲ, ಗಂಡು ಎಂದು ನೆರೆಹೊರೆಯ ಮಹಿಳೆಯೊಬ್ಬಳು ದೂರಿತ್ತದ್ದರಿಂದ ಆಕೆ ಜೈಲು ಸೇರಬೇಕಾಯಿತು, ಹಲತರದ ದೌರ್ಜನ್ಯಗಳಿಗೆ, ಅಪಪ್ರಚಾರಗಳಿಗೆ ಒಳಗಾಗಬೇಕಾಯಿತು. ವಿವಿಧ ವಿಶೇಷ ಪರೀಕ್ಷೆಗಳ ಬಳಿಕ ಆಕೆ ಗಂಡಲ್ಲವೆಂದೂ, ಹೆಣ್ಣಿನ ಲಕ್ಷಣಗಳೇ ಹೆಚ್ಚಾಗಿರುವ ಭಿನ್ನ ಲೈಂಗಿಕತೆಯುಳ್ಳವಳೆಂದೂ ಸಾಬೀತಾಯಿತು. ಎಲ್ಲ ಆರೋಪಗಳಿಂದಲೂ ಮುಕ್ತಳಾದ ಬಳಿಕ ಆಕೆ ಮತ್ತೆ ತನ್ನ ಕೆಲಸಕ್ಕೆ ಮರಳಿದ್ದಾಳೆ, ಓಟದ ಮೈದಾನಕ್ಕೂ ಹಿಂತಿರುಗಿದ್ದಾಳೆ. ತಾನು ಹುಟ್ಟುವಾಗ ಹೆಣ್ಣಿನಂತೆಯೇ ಇದ್ದರೂ, ಓಟದ ತರಬೇತಿಯ ವೇಳೆ ಟೆಸ್ಟೋಸ್ಟಿರಾನ್ ಅನ್ನು ಚುಚ್ಚುತ್ತಿದ್ದುದರಿಂದ ಗಂಡಿನ ಕೆಲವು ಲಕ್ಷಣಗಳು ಮೂಡಲು ಕಾರಣವಾಗಿರಬಹುದೆಂದು ಆಕೆ ಹೇಳಿಕೊಂಡಿದ್ದಾಳೆ. ಇಂತಹಾ ಸಮಸ್ಯೆಗಳು ಕೆಲವೊಮ್ಮೆ ಉಂಟಾಗುತ್ತವೆ. ಎಷ್ಟೇ ಪರೀಕ್ಷೆಗಳನ್ನು ನಡೆಸಿದರೂ ಗಂಡೇ ಹೆಣ್ಣೇ ಎನ್ನುವುದನ್ನು ನಿಖರವಾಗಿ ಹೇಳಳು ಸಾಧ್ಯವಾಗದಂತಹ ಕೆಲವು ಪ್ರಕರಣಗಳೂ ಕಾಣಸಿಗುತ್ತವೆ.

ಈಗೊಂದು ಪ್ರಶ್ನೆ: ಹೀಗೆ ಗಂಡು-ಹೆಣ್ಣಿನ ಲಕ್ಷಣಗಳನ್ನು ಹೊಂದಿರುವವರನ್ನು ಒಂದೋ ಗಂಡಾಗಿ ಅಥವಾ ಹೆಣ್ಣಾಗಿ ಪರಿವರ್ತಿಸುವುದಕ್ಕೆ ಸಾಧ್ಯವಿದೆಯೇ? ಅಂತಹಾ ಚಿಕಿತ್ಸೆಯೇನಾದರೂ ಇದೆಯೇ?

‘ಆಗಲ್ಲ ಸರ್’, ‘ಇದೆ ಸರ್, ಆಗುತ್ತೆ ಸರ್’, ‘ಗೊತ್ತಿಲ್ಲ ಸರ್’

‘ಮುಂದಿನ ವಾರ ಓದಿಕೊಂಡು ಬನ್ನಿ. ಇನ್ನೊಂದು ಪ್ರಶ್ನೆ ಇತ್ತಲ್ವಾ, ನಾಯಿಗಳಲ್ಲಿ ಗಂಡು-ಹೆಣ್ಣು ಹೇಗೆ ಗುರುತಿಸೋದು ಅಂತ?’

‘ಗೊತ್ತಾಗಲ್ಲ ಸರ್’, ‘ಗಂಡು ನಾಯಿಗೆ ಕೂದಲು ಜಾಸ್ತಿ ಸರ್’

‘ಕೆಲವು ನಾಯಿ ತಳಿಗಳಲ್ಲಿ ಗಂಡು ತುಸು ಹೆಚ್ಚು ಬಲಿಷ್ಠವಾಗಿರುತ್ತದೆ, ಆದರೆ ಹೆಚ್ಚಿನವುಗಳಲ್ಲಿ ಗಂಡು-ಹೆಣ್ಣಿನ ನಡುವೆ ಆನುಷಂಗಿಕ ಲೈಂಗಿಕ ಲಕ್ಷಣಗಳಲ್ಲಿ ಹೆಚ್ಚೇನೂ ವ್ಯತ್ಯಾಸವಿರುವುದಿಲ್ಲ, ದೂರದಿಂದ ನೋಡಿದಾಗ ಅವು ಒಂದೇ ತರಹ ಕಾಣಿಸುತ್ತವೆ’

‘ಇನ್ನೊಂದು ಪ್ರಶ್ನೆ ಇತ್ತಲ್ವಾ, ಮನುಷ್ಯರ ಗಂಡು-ಹೆಣ್ಣುಗಳಲ್ಲಿ ಯಾರು ಹೆಚ್ಚು ಸುಂದರ ಅಂತ?’

‘ಹುಡುಗಿಯರು ಸರ್’ ಎಂದರು ಎಲ್ಲ ಹುಡುಗಿಯರು!

‘ಹುಡುಗಿಯರೇ ಸರ್’ ಅಂತ ಕೆಲವು ಹುಡುಗರೆಂದರೆ, ‘ಹುಡುಗರು ಚಂದ ಸರ್’ ಎಂದರು ಕೆಲ ಹುಡುಗರು. ‘ಇಬ್ಬರೂ ಚಂದ ಸರ್’ ಅಂದರು ಒಂದಿಬ್ಬರು ಹುಡುಗರು.

ಇಬ್ಬರೂ ಚಂದವೇ’ ಅಂತ ನಾನೂ ಒಪ್ಪಿಕೊಂಡೆ. ಹುಡೂಗರಿಗೆ ಹುಡೂಗಿಯರು ಚಂದ ಕಾಣುತ್ತಾರೆ, ಹುಡುಗಿಯರಿಗೆ ಹುಡುಗರು ಚಂದ ಕಾಣುತ್ತಾರೆ, ಇಬ್ಬರೂ ಒಬ್ಬರನ್ನೊಬ್ಬರು ಆಕರ್ಷಿಸಲು ಪ್ರಯತ್ನಿಸುತ್ತಾರೆ. ಆದರೆ ಹೊರಗಿನ ಚಂದಕ್ಕಿಂತಲೂ ಒಳ್ಳೆಯ ವ್ಯಕ್ತಿತ್ವ ಹೆಚ್ಚು ಆಕರ್ಷಣೀಯವಾಗಿರಬೇಕು, ಆಗಿರುತ್ತದೆ. ಒಳ್ಳೆಯ ನಡತೆ, ಇತರರ ಬಗ್ಗೆ ಸಹಾನುಭೂತಿ, ಒಳ್ಳೆಯ ಕಲಿಕೆ, ಜ್ಞಾನ, ದುಡಿಮೆ ಇವೆಲ್ಲವೂ ನಮ್ಮನ್ನು ಚಂದಗೊಳಿಸುತ್ತವೆ.

ಕಳೆದ ಪಾಠಗಳಲ್ಲಿ ವೀರ್ಯಾಣು-ಅಂಡಾಣು ಎಂಬ ಗಂಡು-ಹೆಣ್ಣು ಲಿಂಗಕೋಶಗಳ ಬಗ್ಗೆ, ಅವು ಸಿದ್ಧವಾಗುವ ವೃಷಣ-ಅಂಡಾಶಯಗಳ ಬಗ್ಗೆ, ಹದಿಹರೆಯದಲ್ಲಾಗುವ ಬದಲಾವಣೆಗಳು ಮತ್ತು ವೀರ್ಯೋತ್ಪಾದನೆ ಹಾಗೂ ಋತುಸ್ರಾವಗಳ ಬಗ್ಗೆ ಕಲಿತಿದ್ದೇವೆ. ಋತುಚಕ್ರದ ಮಧ್ಯಕಾಲದಲ್ಲಿ ಅಂಡಾಶಯದಲ್ಲಿ ಅಂಡಾಣು ಬಿಡುಗಡೆಯಾಗುತ್ತದೆ, ಅಂಡನಾಳವನ್ನು ಪ್ರವೇಶಿಸಿ ಕಾಯುತ್ತಿರುತ್ತದೆ. ಪುರುಷ ಜನನಾಂಗವು ಸ್ತ್ರೀ ಜನನಾಂಗವನ್ನು ಸೇರಿದಾಗ ವೀರ್ಯಾಣುಗಳು ಯೋನಿಯನ್ನು ಪ್ರವೇಶಿಸಿ, ಗರ್ಭನಾಳದ ಮೂಲಕ ಸಾಗಿ, ಗರ್ಭಕೋಶವನ್ನು ದಾಟಿ, ಅಂಡನಾಳಗಳನ್ನು ಸೇರುತ್ತವೆ, ಒಂದೇ ಒಂದು ವೀರ್ಯಾಣು ಅಲ್ಲಿರುವ ಅಂಡಾಣುವನ್ನು ಫಲೀಕರಿಸುತ್ತದೆ. ಸುಮಾರು ಏಳೆಂಟು ಕೋಟಿ ವೀರ್ಯಾಣುಗಳು ಯೋನಿಯನ್ನು ಸೇರಿದ್ದರೂ, ಅವು ಅಲ್ಲಿಂದ ಅಂಡನಾಳವನ್ನು ತಲುಪುವ ದಾರಿಯಲ್ಲಿ ಹಲವು ನಾಶವಾಗುತ್ತವೆ, ಇನ್ನೂ ಕೆಲವು ದುರ್ಬಲವಾಗಿರುತ್ತವೆ. ಒಂದಷ್ಟು ವೀರ್ಯಾಣುಗಳು ಅಂಡಾಣುವನ್ನು ತಲುಪಿದರೂ, ಅದರ ಪೊರೆಯನ್ನು ಭೇದಿಸುವುದಕ್ಕೆ ಶ್ರಮ ಪಡಬೇಕಾಗುತ್ತದೆ. ಈ ಎಲ್ಲಾ ಹಂತಗಳಲ್ಲಿ ಯಶಸ್ವಿಯಾಗುವ ಒಂದೇ ಒಂದು ವೀರ್ಯಾಣು ಅಂಡಾಣುವಿನೊಳಕ್ಕೆ ತನ್ನ ವರ್ಣತಂತುಗಳನ್ನು ಸೇರಿಸಿ ಅದನ್ನು ಫಲೀಕರಿಸುತ್ತದೆ. ಮನುಷ್ಯರಲ್ಲಿ ಫಲೀಕರಣವು ದೇಹದೊಳಗೇ ಆಗುವುದರಿಂದ ಅದನ್ನು ಆಂತರಿಕ ಫಲೀಕರಣ ಅಥವಾ ಆಂತರಿಕ ನಿಷೇಚನ ಎನ್ನಲಾಗುತ್ತದೆ.

ಹೀಗೆ ಅಂಡಾಣುವಿನಲ್ಲಿರುವ 23 ವರ್ಣತಂತುಗಳು ವೀರ್ಯಾಣುವಿನ 23 ವರ್ಣತಂತುಗಳೊಂದಿಗೆ ಸೇರಿ, 46 ವರ್ಣತಂತುಗಳ ಹೊಸ ಯುಗ್ಮವು ಉಂಟಾಗುತ್ತದೆ. ಮೊದಲ ದಿನವೇ ಯುಗ್ಮದ ಜೀವಕೋಶವು ಎರಡು ಕೋಶಗಳಾಗಿ ಒಡೆಯುತ್ತದೆ, ಮತ್ತೆರಡು ದಿನಗಳಲ್ಲಿ ನಾಲ್ಕು ಕೋಶಗಳಾಗುತ್ತವೆ, ಭ್ರೂಣವು ಹೀಗೆ ಒಡೆಯುತ್ತಾ ಹೋಗಿ ವಾರದೊಳಗೆ ಅದರ ಸುತ್ತಲೂ ಕೋಶಿಕೆಯೊಂದು ರೂಪುಗೊಳ್ಳುತ್ತದೆ. ಹೀಗೆ ಒಡೆಯುತ್ತಿದ್ದಂತೆಯೇ, ಭ್ರೂಣವು ಅಂಡನಾಳದಿಂದ ಚಲಿಸಿ, ಎಂಟು-ಒಂಬತ್ತು ದಿನಗಳಾಗುವಾಗ ಗರ್ಭಕೋಶವನ್ನು ತಲುಪಿ ಅಲ್ಲಿ ತಳವೂರುತ್ತದೆ, ಮಾಸು ಬೆಳೆದು ಭ್ರೂಣವು ಇನ್ನಷ್ಟು ಬೆಳೆಯುತ್ತಾ ಹೋಗುತ್ತದೆ. ಏಳೆಂಟು ವಾರಗಳಲ್ಲಿ ಪ್ರಜನನಾಂಗಗಳು, ಕೈಕಾಲುಗಳ ಮೊಗ್ಗುಗಳು, ಇನ್ನುಳಿದ ಅಂಗಗಳು ಒಂದೊಂದಾಗಿ ಮೊಳೆತು ಬೆಳೆಯತೊಡಗುತ್ತವೆ.

ತಾಯಿಯ ಗರ್ಭದಲ್ಲಿ ಒಂಬತ್ತು ತಿಂಗಳ ಕಾಲ ಬೆಳೆದಾಗ ಶಿಶುವು ಪೂರ್ಣ ಪ್ರಮಾಣದಲ್ಲಿ ಮಾನವನ ರಚನೆಯನ್ನು ಪಡೆಯುತ್ತದೆ ಹಾಗೂ ಪ್ರಸವವಾಗುತ್ತದೆ. ಮನುಷ್ಯರಲ್ಲಿ ಗರ್ಭಾವಸ್ಥೆಯ ಅವಧಿಯು 266-280 ದಿನಗಳಾಗಿದ್ದರೆ, ಬೆಕ್ಕಿನಲ್ಲಿ 58-67 ದಿನಗಳು, ನಾಯಿಯಲ್ಲಿ 58-65 ದಿನಗಳು, ಸಿಂಹದಲ್ಲಿ 108 ದಿನಗಳು, ಕೋತಿಯಲ್ಲಿ 164 ದಿನಗಳಿದ್ದರೆ, ಹಸುವಿನಲ್ಲಿ 279-292, ಕುದುರೆಯಲ್ಲಿ 330-342, ಕತ್ತೆಯಲ್ಲಿ 365, ತಿಮಿಂಗಿಲದಲ್ಲಿ 590 ಹಾಗೂ ಆನೆಯಲ್ಲಿ 617 ದಿನಗಳಷ್ಟಿರುತ್ತದೆ.

ಭ್ರೂಣವು ಸುಮಾರು 12 ವಾರಗಳಷ್ಟು ಬೆಳೆದಾಗ ಅಲ್ಟ್ರಾ ಸೌಂಡ್‌ ಸ್ಕಾನ್‌ನಂತಹ ಪರೀಕ್ಷೆಗಳಿಂದ ಅದರ ಜನನಾಂಗಗಳನ್ನು ಗುರುತಿಸಿ, ಬೆಳೆಯುತ್ತಿರುವ ಮಗು ಗಂಡೋ ಹೆಣ್ಣೋ ಎಂದು ಪತ್ತೆ ಹಚ್ಚುವುದಕ್ಕೆ ಸಾಧ್ಯವಿದೆ. ಸುಮಾರು 30 ವರ್ಷಗಳ ಹಿಂದೆ ಈ ತಂತ್ರಜ್ಞಾನ ಲಭ್ಯವಾದಾಗಿನಿಂದ ಅದನ್ನು ದುರುಪಯೋಗಿಸಿ, ಹೆಣ್ಣು ಭ್ರೂಣಗಳನ್ನು ಗುರುತಿಸಿ, ಗರ್ಭಪಾತ ನಡೆಸುವ ಕೆಟ್ಟ ಅಭ್ಯಾಸವು ಬೆಳೆದಿದೆ. ಇದರಿಂದಾಗಿ ನಮ್ಮ ದೇಶದಲ್ಲಿ ಹೆಣ್ಮಕ್ಕಳ ಸಂಖ್ಯೆಯು ಕಡಿಮೆಯಾಗುತ್ತಲೇ ಸಾಗಿದೆ. ಒಂದು ಸ್ವಸ್ಥ ಸಮಾಜದಲ್ಲಿ ಸಾವಿರ ಗಂಡುಗಳಿಗೆ ಸಾವಿರ ಅಥವಾ ಅದಕ್ಕೂ ಹೆಚ್ಚು ಹೆಣ್ಣುಗಳಿರುತ್ತಾರೆ. ಮಹಿಳೆಯರು ಗಂಡಸರಿಗಿಂತ ಹೆಚ್ಚು ಕಾಲ ಬದುಕುವುದೇ ಇದಕ್ಕೆ ಮುಖ್ಯ ಕಾರಣ. ಆದರೆ ನಮ್ಮ ದೇಶದಲ್ಲೀಗ ಸಾವಿರ ಗಂಡುಗಳಿಗೆ 940ರಷ್ಟು ಹೆಂಗಸರಿದ್ದಾರೆ, ಮಕ್ಕಳಲ್ಲಿ ಇದು ಇನ್ನೂ ಕಡಿಮೆಯಿದೆ. ಹೆಣ್ಣು ಕುಟುಂಬಕ್ಕೆ ಹೊರೆ, ವರದಕ್ಷಿಣೆ ಕೊಡಬೇಕಾಗುತ್ತದೆ, ಹೆತ್ತವರ ಅಂತಿಮ ಸಂಸ್ಕಾರವನ್ನು ಗಂಡು ಮಕ್ಕಳೇ ಮಾಡಬೇಕು, ಕುಟುಂಬದ ಆಸ್ತಿಯನ್ನು ಬೆಳೆಸಲು ಗಂಡು ಮಕ್ಕಳೇ ಬೇಕು ಎಂಬೆಲ್ಲಾ ತಪ್ಪು ಕಲ್ಪನೆಗಳಿಂದಾಗಿ ಹೆಣ್ಣು ಮಕ್ಕಳನ್ನು ಗರ್ಭದಲ್ಲೇ ಕೊಲ್ಲಲಾಗುತ್ತಿದೆ. ಕಳೆದ ಎರಡು ದಶಕಗಳಲ್ಲಿ ಸುಮಾರು ಒಂದು ಕೋಟಿಯಷ್ಟು,  ದಿನಕ್ಕೆ ಸುಮಾರು 2000ದಷ್ಟು, ಹೆಣ್ಣು ಭ್ರೂಣಗಳನ್ನು ಹೀಗೆ ಕೊಲ್ಲಲಾಗಿದೆ ಎಂದು ಅಂದಾಜಿಸಲಾಗಿದೆ. ಆದರೆ ಇದರಿಂದಾಗಿ ಇಂದು ಉತ್ತರ ಭಾರತದ ಹಲವು ಊರುಗಳಲ್ಲಿ ಹೆಣ್ಣು ಮಕ್ಕಳೇ ಇಲ್ಲದೆ, ಅಲ್ಲಿನ ಗಂಡುಗಳಿಗೆ ಮದುವೆಯೇ ಸಾಧ್ಯವಾಗದಂತಹ ಪರಿಸ್ಥಿತಿ ಉಂಟಾಗಿದೆ, ದೂರದ ಜಾರ್ಖಂಡ್, ಕೇರಳ ಮುಂತಾದ ರಾಜ್ಯಗಳ ಹುಡುಗಿಯರನ್ನು ಹುಡುಕಿ ಮದುವೆಯಾಗಬೇಕಾಗಿದೆ.  ಹೆಣ್ಮಕ್ಕಳ ಸಂಖ್ಯೆಯಲ್ಲಿ ಇಳಿಕೆಯಾಗಿರುವುದು ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚುವುದಕ್ಕೂ ಕಾರಣವಾಗಿದೆ. ಇವೆಲ್ಲವನ್ನೂ ನಾವು ವಿರೋಧಿಸಬೇಕಾಗಿರುವುದು ಅತಿ ಮುಖ್ಯ.

ಹೌದು ಸರ್ ಎಂದರು ಮಕ್ಕಳು.

ಇನ್ನು ಅವಳಿ ಮಕ್ಕಳು ಹುಟ್ಟುವುದು ಹೇಗೆ ಅಂತ ನೋಡೋಣ. ಸಾಮಾನ್ಯವಾಗಿ ಹೆಣ್ಣಿನ ಅಂಡಾಶಯದಲ್ಲಿ ಪ್ರತೀ ತಿಂಗಳು ಒಂದೇ ಅಂಡಾಣು ಬೆಳೆದು ಬಿಡುಗಡೆಯಾಗುವುದರಿಂದ, ಅದೊಂದೇ ಫಲೀಕರಣಗೊಂಡು ತಾಯಿಯ ಗರ್ಭದಲ್ಲಿ ಒಂದೇ ಮಗು ಬೆಳೆಯುತ್ತದೆ. ಆದರೆ ಅಪರೂಪಕ್ಕೆ ಎರಡು ಅಂಡಾಣುಗಳು ಒಟ್ಟಿಗೇ ಬಿಡುಗಡೆಯಾದರೆ, ಮತ್ತು ಅವೆರಡೂ ವೀರ್ಯಾಣುಗಳಿಂದ ಫಲೀಕರಣಗೊಂಡರೆ ಎರಡು ಪ್ರತ್ಯೇಕ ಯುಗ್ಮಗಳಾಗಿ, ಎರಡು ಭ್ರೂಣಗಳು ಬೆಳೆಯುತ್ತವೆ. ಹೀಗೆ ಎರಡು ಪ್ರತ್ಯೇಕ ಅಂಡಾಣುಗಳು ಎರಡು ಪ್ರತ್ಯೇಕ ವೀರ್ಯಾಣುಗಳಿಂದ ಫಲೀಕರಣಗೊಂಡಾಗ ಆ ಎರಡು ಯುಗ್ಮಗಳೂ ಒಂದರಿಂದೊಂದು ಭಿನ್ನವಾಗಿರುತ್ತವೆ. ಅವುಗಳಲ್ಲಿ ಒಂದು ಗಂಡು, ಇನ್ನೊಂದು ಹೆಣ್ಣಾಗಿರಬಹುದು, ಅಥವಾ ಎರಡೂ ಒಂದೇ ಲಿಂಗದವಾಗಿರಬಹುದು. ಅವುಗಳ ದೈಹಿಕ ಲಕ್ಷಣಗಳೂ ಬೇರೆ ಬೇರೆಯಾಗಿರುತ್ತವೆ. ಎರಡು ಪ್ರತ್ಯೇಕ ಅಂಡಾಣುಗಳ ಫಲೀಕರಣದಿಂದ ಉಂಟಾಗುವ ಇಂತಹ ಅವಳಿಗಳನ್ನು ದ್ವಿಯುಗ್ಮ ಅವಳಿಗಳು ಅಥವಾ ಅನುರೂಪವಲ್ಲದ ಅವಳಿಗಳು ಅಥವಾ ಭ್ರಾತೃ ಅವಳಿಗಳು ಎನ್ನುತ್ತೇವೆ. ಇನ್ನು ಕೆಲವೊಮ್ಮೆ ಒಂದು ಅಂಡಾಣು ಹಾಗೂ ಒಂದು ವೀರ್ಯಾಣು ಸೇರಿ ಉಂಟಾಗುವ ಯುಗ್ಮವು ಎರಡು ಕೋಶಗಳಾಗಿ, ನಂತರ ನಾಲ್ಕು, ಎಂಟು ಹೀಗೆ ವಿಭಜನೆಗೊಳ್ಳುವಾಗ, ಒಂದು ಹಂತದಲ್ಲಿ ಆ ಭ್ರೂಣವೇ ಸೀಳಿಕೊಂಡು ಎರಡಾಗಿ ಒಡೆದರೆ ಎರಡು ಪ್ರತ್ಯೇಕ ಭ್ರೂಣಗಳು ಬೆಳೆಯತೊಡಗುತ್ತವೆ. ಇವು ಒಂದೇ ಯುಗ್ಮದಿಂದ ಉಂಟಾದ ಅವಳಿಗಳಾಗಿರುವುದರಿಂದ ಅವುಗಳ ವರ್ಣತಂತುಗಳು ಒಂದೇ ಆಗಿರುತ್ತವೆ, ಆದ್ದರಿಂದ ಅವು ಒಂದೇ ಲಿಂಗದವರಾಗಿರುತ್ತವೆ ಹಾಗೂ ಅವುಗಳ ದೈಹಿಕ ಲಕ್ಷಣಗಳು ಹೆಚ್ಚಾಗಿ ಒಂದೇ ತೆರನಾಗಿರುತ್ತವೆ. ಇಂತಹಾ ಅವಳಿಗಳನ್ನು ಏಕ ಯುಗ್ಮ ಅವಳಿಗಳು ಅಥವಾ ಅನುರೂಪಿ ಅವಳಿಗಳು ಅಥವಾ ಮಾತೃ ಅವಳಿಗಳು ಎನ್ನಲಾಗುತ್ತದೆ.

IMG_20160213_103305ಈ ಚಿತ್ರದಲ್ಲಿರುವ ಅವಳಿಗಳನ್ನು ನೋಡಿ. ಇವರಿಬ್ಬರೂ ಹುಡುಗಿಯರೇ, ಆದರೆ ಅವರ ಮುಖಚರ್ಯೆ ಬೇರೆಯಿದೆ, ಮಾತ್ರವಲ್ಲ, ಒಬ್ಬಳು ಕಪ್ಪಗಿದ್ದಾಳೆ, ಮತ್ತೊಬ್ಬಳು ಬೆಳ್ಳಗಿದ್ದಾಳೆ. ಇವರು ಯಾವ ವಿಧದ ಅವಳಿಗಳು?

ದ್ವಿಯುಗ್ಮ ಸರ್, ಭ್ರಾತೃ ಅವಳಿಗಳು ಸರ್

ಅದು ಸರಿ, ಆದರೆ ಒಬ್ಬಳು ಕಪ್ಪು, ಇನ್ನೊಬ್ಬಳು ಬಿಳಿ ಯಾಕೆ?

ತಂದೆ-ತಾಯಿ ಕಪ್ಪು ಬಿಳಿ ಇರಬಹುದು ಸರ್

‘ಸರಿ, ತಂದೆ ಬಿಳಿ, ತಾಯಿ ಕಪ್ಪು. ಇಬ್ಬರು ಮಕ್ಕಳಿಗೂ ತಂದೆಯಿಂದ 22+ಎಕ್ಸ್, ತಾಯಿಯಿಂದ 22+ಎಕ್ಸ್ ಕ್ರೋಮೋಸೋಮ್ ದೊರೆತಿವೆ. ಆದರೆ ಮೈಬಣ್ಣ ಬೇರೆ ಬೇರೆ ಯಾಕೆ?’

‘ಗೊತ್ತಿಲ್ಲ ಸರ್’

‘’ನಮ್ಮ ಚರ್ಮದ ಬಣ್ಣ ಹಲವು ವಂಶವಾಹಿಗಳಿಂದ ನಿರ್ಧರಿತವಾಗುತ್ತದೆ. ಅಂಡಾಣು ಹಾಗೂ ವೀರ್ಯಾಣುಗಳಿಗಾಗಿ ಮಿಯಾಸಿಸ್ ವಿಭಜನೆಯಾಗುವಾಗ, ಬಳಿಕ ಫಲೀಕರಣಗೊಂಡು ಯುಗ್ಮವು ಉಂಟಾಗುವಾಗ, ಬಣ್ಣವನ್ನು ನಿರ್ಣಯಿಸುವ ವಂಶವಾಹಿಗಳು ಹಲವಿಧದಲ್ಲಿ ಮಿಶ್ರಗೊಳ್ಳಬಹುದು. ಈ ಅವಳಿಗಳಲ್ಲಿ ಒಬ್ಬಳು ಬಿಳಿ ಬಣ್ಣವನ್ನು ನೀಡುವ ವಂಶವಾಹಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿದ್ದಾಳೆ, ಇನ್ನೊಬ್ಬಳು ಕಪ್ಪು ಬಣ್ಣವನ್ನು ನೀಡುವ ವಂಶವಾಹಿಗಳನ್ನು ಹೊಂದಿದ್ದಾಳೆ.’

‘ಅಂಗಾಂಗಗಳು ಮೂಡಿದ ಬಳಿಕ ಭ್ರೂಣವು ವಿಭಜನೆಯಾದರೆ, ದೇಹದ ಭಾಗಗಳು ಒಂದಕ್ಕೊಂದು ಅಂಟಿಕೊಂಡಂತಿರುವ ಕೂಡು ಅವಳಿಗಳು ಹುಟ್ಟುತ್ತಾರೆ. ಇವರೂ ಏಕಯುಗ್ಮ ಅವಳಿಗಳೇ. ಇವರನ್ನು ಸಯಾಮಿ ಅವಳಿಗಳು ಎಂದೂ ಕರೆಯಲಾಗುತ್ತದೆ. ಥೈಲೆಂಡಿನ ಸಯಾಮ್ ನಗರದಲ್ಲಿ ಸರ್ಕಸ್ ಒಂದರಲ್ಲಿ ಇಂತಹ ಅವಳಿಗಳು ಪ್ರದರ್ಶನ ನೀಡುತ್ತಿದ್ದುದರಿಂದ ಈ ಹೆಸರು ಬಂದಿದೆ. ಇಂತಹಾ ಅವಳಿಗಳು ತೀರಾ ಅಪರೂಪಕ್ಕೆ, ಅಂದರೆ ಒಂದು ಲಕ್ಷಕ್ಕೆ ಒಂದರಂತೆ ಹುಟ್ಟುತ್ತವೆ. ಅವುಗಳಲ್ಲಿ ಹೆಚ್ಚಿನವು ಹುಟ್ಟುವ ಮೊದಲೇ ಅಥವಾ ಹುಟ್ಟಿದ ಕೆಲ ಸಮಯದಲ್ಲೇ ಸಾವನ್ನಪ್ಪುತ್ತವೆ. ಇಂತಹಾ ಅವಳಿಗಳಲ್ಲಿ ಕೆಲವು ತಲೆಯಲ್ಲಿ ಕೂಡಿಕೊಂಡಿದ್ದರೆ, ಕೆಲವು ಎರಡು ತಲೆ, ಒಂದೇ ದೇಹವನ್ನು ಹೊಂದಿರುತ್ತವೆ, ಇನ್ನು ಕೆಲವು ಸೊಂಟದಿಂದ ಕೆಳಗೆ ಜೊತೆಯಾಗಿರುತ್ತವೆ. ಒಳಗಿನ ಎಲ್ಲಾ ಅಂಗಗಳು ಪ್ರತ್ಯೇಕವಾಗಿದ್ದು, ಸ್ವಲ್ಪ ಪ್ರಮಾಣದ ಜೋಡಣೆಯಿದ್ದರೆ ಅವನ್ನು ಪ್ರತ್ಯೇಕಿಸಬಹುದು. ಕೆಲವೊಮ್ಮೆ ಸಂಕೀರ್ಣವಾದ ಶಸ್ತ್ರಚಿಕಿತ್ಸೆಯಿಂದ ಅವನ್ನು ಪ್ರತ್ಯೇಕಿಸುವ ಪ್ರಯತ್ನಗಳನ್ನು ಮಾಡಲಾಗುತ್ತದೆಯಾದರೂ, ಅವು ವಿಫಲವಾಗುವ ಸಾಧ್ಯತೆಗಳಿರುತ್ತವೆ. ಅವಳಿಗಳಲ್ಲಿ ಒಂದು ಮಗುವನ್ನು ಸರಿಯಾಗಿ ಪ್ರತ್ಯೇಕಿಸಿ, ಅದನ್ನು ಉಳಿಸುವ ಪ್ರಯತ್ನಗಳನ್ನೂ ನಡೆಸಿದ್ದಿದೆ.

‘ಸರ್, ಕೆಲವು ಮಕ್ಕಳಿಗೆ ಆರು ಬೆರಳುಗಳು ಇರುತ್ತವಲ್ಲಾ ಸರ್, ಅದು ಹೇಗೆ?’

‘ನಮ್ಮ ಕೈಕಾಲುಗಳು ಮೊಗ್ಗುಗಳಾಗಿ ಹುಟ್ಟಿ, ಮೆಲ್ಲಗೆ ಬೆಳೆಯುತ್ತವೆ ಅಂತ ಹೇಳಿದೆನಲ್ಲ? ಮೊದಲು ಈ ಮೊಗ್ಗುಗಳಲ್ಲಿ ಬೆರಳುಗಳಿರುವುದಿಲ್ಲ. ಮೊಗ್ಗು ಉದ್ದವಾಗುತ್ತಾ ಅದರ ತುದಿ ಐದು ಬೆರಳುಗಳಾಗಿ ಪ್ರತ್ಯೇಕವಾಗುತ್ತದೆ. ಕೆಲವೊಮ್ಮೆ ಐದರ ಬದಲಿಗೆ ಆರು ಬೆರಳುಗಳು ಉಂಟಾಗಬಹುದು, ಕೆಲವೊಮ್ಮೆ ಬೆರಳುಗಳು ಕೂಡಿಕೊಂಡಿರುವುದೂ ಇದೆ, ಇನ್ನು ಕೆಲವರಲ್ಲಿ ಬೆರಳುಗಳೇ ಇಲ್ಲದಿರಬಹುದು, ಅಪರೂಪಕ್ಕೆ ಮುಂಗೈ ಅಥವಾ ಇಡೀ ಕೈ ಅಥವಾ ಕಾಲೇ ಬೆಳೆಯದಿರಬಹುದು’

‘ಹೌದು ಸರ್, ನೋಡಿದ್ದೇವೆ ಸರ್’

‘ಇವು ವಂಶವಾಹಿಗಳ ಮೂಲಕ ಅನುವಂಶೀಯವಾಗಿ ಉಂಟಾಗಬಹುದು, ಗರ್ಭಿಣಿಯು ಕೆಲವು ಔಷಧಗಳನ್ನು ಸೇವಿಸುವುದರಿಂದಲೂ ಇಂತಹಾ ಸಮಸ್ಯೆಗಳಾಗಿವೆ. ಉದಾಹರಣೆಗೆ ಐವತ್ತರ ದಶಕದಲ್ಲಿ ಬಳಸುತ್ತಿದ್ದ ಥಲಿಡೋಮೈಡ್ ಎಂಬ ಔಷಧವನ್ನು ಸೇವಿಸಿದ ಗರ್ಭಿಣಿಯರಿಗೆ ಕೈ-ಕಾಲುಗಳು ಬೆಳೆಯದಿದ್ದ ಮಕ್ಕಳು ಜನಿಸಿದರು, ಹಾಗಾಗಿ ಆ ಔಷಧವನ್ನೇ ನಿಷೇಧಿಸಲಾಯಿತು.’

‘ಸರ್, ಕೆಲವರು ಕುಳ್ಳಗೆ ಇರುವುದು ಏಕೆ?’

‘ಕೆಲವು ಸಮಸ್ಯೆಗಳು ಅನುವಂಶೀಯವಾಗಿರುತ್ತವೆ, ಉದಾಹರಣೆಗೆ, ಕೈ-ಕಾಲುಗಳಷ್ಟೇ ಗಿಡ್ಡವಿದ್ದು, ಎದೆ ಹಾಗೂ ಉದರಗಳು ಸಹಜವಾಗಿರುವ ಕುಳ್ಳುತನವು ವಂಶವಾಹಿಗಳಿಂದ ಉಂಟಾಗುತ್ತದೆ. ಪಿಟ್ಯುಟರಿ ಗ್ರಂಥಿ, ಥೈರಾಯ್ಡ್ ಗ್ರಂಥಿ ಇತ್ಯಾದಿಗಳ ಸ್ರಾವಗಳಲ್ಲಿ ಕೊರತೆಯಿದ್ದರೂ ಮಗುವಿನ ಬೆಳವಣಿಗೆ ಕುಠಿತವಾಗುತ್ತದೆ. ಹಾಗೆಯೇ, ಅನುವಂಶೀಯ ಕಾರಣಗಳಿಂದ, ನಿರ್ನಾಳ ಸ್ರಾವಗಳ ಹೆಚ್ಚಳದಿಂದ ವ್ಯಕ್ತಿಯು ಹೆಚ್ಚು ಉದ್ದವಾಗಿ ಬೆಳೆಯುವ ಸಾಧ್ಯತೆಗಳೂ ಇವೆ.’

ಸರ್, ಮಗು ಗರ್ಭದೊಳಗೆ ಬೆಳೆಯುವುದನ್ನು ವಿವರಿಸಿ ಸರ್’

‘ಅದನ್ನು ಮುಂದಿನ ಪಾಠದಲ್ಲಿ ನೋಡೋಣ. ಕೆಲವು ದಂಪತಿಗಳಿಗೆ ಮಕ್ಕಳಾಗುವುದಿಲ್ಲ. ಹೀಗೆ ಗರ್ಭಾಂಕುರವು ವಿಫಲಗೊಳ್ಳುವುದಕ್ಕೆ, ಅಥವಾ ಬಂಜೆತನಕ್ಕೆ, ಶೇ. 30ರಷ್ಟು ಸಂದರ್ಭಗಳಲ್ಲಿ ಗಂಡಿನ ಸಮಸ್ಯೆ ಕಾರಣವಾದರೆ, ಶೇ. 30 ರಲ್ಲಿ ಹೆಣ್ಣಿನ ಸಮಸ್ಯೆ ಕಾರಣವಾಗುತ್ತದೆ, ಇನ್ನುಳಿದ ಪ್ರಕರಣಗಳಲ್ಲಿ ಗಂಡ-ಹೆಂಡಿರಿಬ್ಬರಲ್ಲೂ ಸಮಸ್ಯೆಗಳಿರುತ್ತವೆ ಆದ್ದರಿಂದ ಮಕ್ಕಳಾಗದಿರುವುದಕ್ಕೆ ಹೆಣ್ಣನ್ನೇ ದೂಷಿಸುವುದು, ಆಥವಾ ಮಕ್ಕಳಾಗಲಿಲ್ಲವೆಂದು ಎರಡನೇ ಮದುವೆಯಾಗುವುದು ಸರಿಯಲ್ಲ.

‘ನಮ್ಮ ಕಡೆ ಹಾಗೆ ಮಾಡ್ತಾರೆ ಸರ್’ ಎಂದಳು ಒಬ್ಬ ಹುಡುಗಿ.

ಬಂಜೆತನವಿದ್ದರೆ ಅದಕ್ಕೆ ಕಾರಣವೇನೆನ್ನುವುದನ್ನು ಕೂಲಂಕಷವಾಗಿ ಪರೀಕ್ಷಿಸಿಕೊಳ್ಳಬೇಕು. ಲೈಂಗಿಕ ಕ್ರಿಯೆ ನಡೆಸಲಾಗದಿರುವುದು, ವೀರ್ಯಾಣುಗಳ ಸಂಖ್ಯೆ, ರೂಪ, ಸಾಮರ್ಥ್ಯ, ಚಲನೆಗಳಲ್ಲಿ ಕೊರತೆಯಿರುವುದು, ಅಂಡೋತ್ಪಾದನೆಯ ಸಮಸ್ಯೆಗಳು, ಫಾಲೋಪಿಯನ್ ನಾಳ ಮುಚ್ಚಿರುವುದು, ಗರ್ಭಕೋಶದ ಸಮಸ್ಯೆಗಳು ಅಥವಾ ಭ್ರೂಣದ ಸಮಸ್ಯೆಗಳು ಮಕ್ಕಳಾಗದಿರುವುದಕ್ಕೆ ಕಾರಣಗಳಾಗಿರಬಹುದು. ಈ ಸಮಸ್ಯೆಗಳಿಗೆ ಸೂಕ್ತವಾದ ಚಿಕಿತ್ಸೆಯನ್ನು ಪಡೆದರೆ ಹಲವರಲ್ಲಿ ಬಂಜೆತನವನ್ನು ನಿವಾರಿಸಬಹುದು. ಇಂದು ಹಲತರದ ಸಹಾಯಕ ಪ್ರಜನನ ತಂತ್ರಗಳು ಲಭ್ಯವಿವೆ. ಲೈಂಗಿಕ ಕ್ರಿಯೆ ನಡೆಸುವಲ್ಲಿ ಸಮಸ್ಯೆಗಳಿದ್ದರೆ, ಅಥವಾ ವೀರ್ಯಾಣುಗಳ ಕೊರತೆಯಿದ್ದರೆ ಗಂಡನ ವೀರ್ಯವನ್ನು ಅಥವಾ ದಾನ ಪಡೆದ ವೀರ್ಯವನ್ನು ಗರ್ಭಕೋಶದೊಳಕ್ಕೆ ಸೇರಿಸುವ ವೀರ್ಯಸೇಚನ ತಂತ್ರವನ್ನು ಬಳಸಬಹುದು. ವೀರ್ಯಾಣುವು ಅಂಡಾಣುವನ್ನು ಪ್ರವೇಶಿಸಲು ನಿಶಕ್ತವಾಗಿರುವಂತಹ ಸಮಸ್ಯೆಯಿದ್ದರೆ ವೀರ್ಯಾಣುವನ್ನು ಸೂಕ್ಷ್ಮ ಸೂಜಿಯ ಮೂಲಕ ಅಂಡಾಣುವಿನೊಳಕ್ಕೆ ಚುಚ್ಚಬಹುದು (ಇಂಟ್ರಾ ಸೈಟೋಪ್ಲಾಸ್ಮಿಕ್ ಸ್ಪರ್ಮ್ ಇಂಜೆಕ್ಷನ್). ವೀರ್ಯನಾಳಗಳು ಮುಚ್ಚಿಕೊಂಡಿದ್ದರೆ ಅಥವಾ ವೀರ್ಯವನ್ನು ಪಡೆಯುವುದು ಅಸಾಧ್ಯವಾದರೆ ಗಂಡಿನ ವೀರ್ಯನಾಳದಿಂದ ಯಾ ವೃಷಣದಿಂದ ವೀರ್ಯವನ್ನು ನೇರವಾಗಿ ಹೀರುವ ತಂತ್ರಗಳೂ ಇವೆ (ಪಿಇಎಸ್‌ಎ, ಟಿಇಎಸ್‌ಇ). ಅಂಡಾಶಯದಿಂದ ಅಂಡಾಣುವನ್ನು ಹೊರತೆಗೆದು, ಹೊರಗೆ ಗಾಜಿನ ತಟ್ಟೆಯಲ್ಲಿ ವೀರ್ಯಾಣುವಿನೊಂದಿಗೆ ಬೆರೆಸಿ ನೇರವಾಗಿ ಅಂಡನಾಳದೊಳಕ್ಕೆ ವರ್ಗಾಯಿಸುವುದು (ಗೇಮೀಟ್ ಇಂಟ್ರಾ ಫಾಲೋಪಿಯನ್ ಟ್ರಾನ್ಸ್‌ಫರ್), ಹೊರಗೆ ಫಲೀಕರಿಸಿ, ಉಂಟಾದ ಯುಗ್ಮವನ್ನು ಅಂಡನಾಳಕ್ಕೆ ವರ್ಗಾಯಿಸುವುದು (ಜೈಗೋಟ್ ಇಂಟ್ರಾ ಫಾಲೋಪಿಯನ್ ಟ್ರಾನ್ಸ್‌ಫರ್) ಹಾಗೂ ಬಾಹ್ಯ ನಿಷೇಚನದ ಬಳಿಕ ಭ್ರೂಣವನ್ನು ಬೆಳೆಸಿ, ಗರ್ಭಕೋಶದೊಳಕ್ಕೆ ವರ್ಗಾಯಿಸುವುದು (ಇನ್ ವಿಟ್ರೋ ಫರ್ಟಿಲೈಜೇಶನ್) ಮುಂತಾದ ತಂತ್ರಗಳನ್ನೂ ಬಳಸಲಾಗುತ್ತದೆ. ಗರ್ಭಕೋಶದ ಸಮಸ್ಯೆಗಳಿದ್ದರೆ ಬೇರೊಬ್ಬ ಮಹಿಳೆಯ ಗರ್ಭಕೋಶವನ್ನು ಪಡೆದು, ಅಲ್ಲಿ ಭ್ರೂಣವನ್ನು ಸ್ಥಾಪಿಸುವ ತಂತ್ರವೂ ಇದೆ.

ಹೀಗೆ ದೇಹದ ಹೊರಗೆ, ಗಾಜಿನ ತಟ್ಟೆಯಲ್ಲಿ ಅಂಡಾಣುವನ್ನೂ, ವೀರ್ಯಾಣುವನ್ನೂ ಸೇರಿಸಿ, ನಂತರ ಭ್ರೂಣವನ್ನು ಗರ್ಭಕೋಶದೊಳಕ್ಕೆ ವರ್ಗಾಯಿಸಿ ಸ್ಥಾಪಿಸುವ ತಂತ್ರವನ್ನು 1977-78ರಲ್ಲಿ ಆರಂಭಿಸಲಾಯಿತು. ಹೀಗೆ ಜುಲೈ 25, 1978ರಂದು ಹುಟ್ಟಿದ ಮೊದಲ ಪ್ರನಾಳ ಶಿಶು ಇಂಗ್ಲೆಂಡಿನ ಲೂಯಿ ಜಾಯ್ ಬ್ರೌನ್. ಈಕೆ ಜನಿಸಿದಾಗ ಹಲವರು ಪತ್ರಗಳನ್ನು ಬರೆದು ಅಭಿನಂದಿಸಿದರಂತೆ. ಒಂದಿಬ್ಬರು ತಮ್ಮ ರಕ್ತದಲ್ಲೇ ಪತ್ರ ಬರೆದು ಹೀಗೆಲ್ಲಾ ಪ್ರನಾಳದ ಮೂಲಕ ಶಿಶುವನ್ನು ಪಡೆಯುವುದು ಧರ್ಮಕ್ಕೆ ವಿರೋಧವಾದುದು ಎಂದು ಬೆದರಿಸಿದರಂತೆ. ಆದರೆ ಇಂತಹಾ ಬೆದರಿಕೆಗಳಿಗೆ ವಿಜ್ಞಾನ ಬಗ್ಗಲಿಲ್ಲ. ಈಗ ಮಂಗಳೂರು ಸೇರಿದಂತೆ ಜಗತ್ತಿನ ಎಲ್ಲಾ ನಗರಗಳಲ್ಲಿ ಸಹಾಯಕ ಪ್ರಜನನ ತಂತ್ರಜ್ಞಾನವು ಲಭ್ಯವಾಗಿದೆ, ಅದೆಷ್ಟೋ ದಂಪತಿಗಳಿಗೆ ಮಕ್ಕಳನ್ನು ಪಡೆಯುವುದಕ್ಕೆ ಸಾಧ್ಯವಾಗಿದೆ.

ಈ ತಂತ್ರವನ್ನು ಅಭಿವೃದ್ಧಿ ಪಡಿಸಿದ್ದಕ್ಕಾಗಿ ಡಾ, ರಾಬರ್ಟ್ ಎಡ್ವರ್ಡ್ಸ್ ಮತ್ತು ಡಾ. ಪ್ಯಾಟ್ರಿಕ್ ಸ್ಟೆಪ್‌ಟೋ ಅವರಿಗೆ 2010ರ ನೋಬೆಲ್ ಪ್ರಶಸ್ತಿಯನ್ನು ನೀಡಲಾಯಿತು. ಆದರೆ 1978ರಲ್ಲಿ ನಡೆಸಿದ್ದ ಸಾಧನೆಗೆ 2010ರಷ್ಟು ತಡವಾಗಿ ನೋಬೆಲ್ ಪ್ರಶಸ್ತಿಯನ್ನು ಕೊಟ್ಟದ್ದೇಕೆ ಅಂತ ಹೇಳಿ

‘ಸರ್, ಇನ್ನಷ್ಟು ಮಕ್ಕಳು ಅದರಿಂದ ಹುಟ್ಟುತ್ತಾರಾ ಅಂತ ನೋಡಿರಬೇಕು ಸರ್’

ಸರಿ! ಆದರೆ ಈ ನೊಬೆಲ್ ಪ್ರಶಸ್ತಿಗೆ ಹಕ್ಕುದಾರರಾಗಿದ್ದವರು ನಮ್ಮ ದೇಶದಲ್ಲೂ ಇದ್ದರು. ಇಂಗ್ಲೆಂಡಿನ ಉನ್ನತ ಆಸ್ಪತ್ರೆಗಳಲ್ಲಿ ಆ ಸಾಧನೆಯು ನಡೆದ ಸಮಯದಲ್ಲೇ ಕಲ್ಕತ್ತಾದ ಡಾ. ಸುಭಾಷ್ ಮುಖ್ಯೋಪಾಧ್ಯಾಯ ಅವರ ತಂಡವೂ ಸಹ ಪ್ರನಾಳ ಶಿಶು ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುವಲ್ಲಿ ಯಶಸ್ವಿಯಾಗಿತ್ತು. ಅವರ ತಂಡವು ತಮ್ಮಲಿದ್ದ ಕನಿಷ್ಠ ಸೌಲಭ್ಯಗಳನ್ನು ಬಳಸಿ ಫಲೀಕರಿಸಿದ ಶಿಶು ದುರ್ಗಾ, ಅಥವಾ ಕಾನುಪ್ರಿಯ ಅಗರ್‌ವಾಲ್, ಲೂಯಿ ಬ್ರೌನ್ ಹುಟ್ಟಿದ ಎರಡೇ ತಿಂಗಳಲ್ಲಿ, ಅಕ್ಟೋಬರ್ 3, 1978ರಂದು, ಜನಿಸಿದಳು. ಆದರೆ ಡಾ. ಸುಭಾಷ್ ಅವರಿಗೆ ನೊಬೆಲ್ ಪ್ರಶಸ್ತಿ ಸಿಗಲಿಲ್ಲ.

‘ಸರ್, ಅವರು ಇಂಗ್ಲೆಂಡಿನವರಿಂದ ಕಲಿತಿರಬೇಕು ಸರ್’

‘ಅವರಿಬ್ಬರೂ ಒಂದೇ ಸಮಯದಲ್ಲಿ ಈ ಸಾಧನೆಯನ್ನು ಮಾಡಿರುವುದರಿಂದ ಅಂತಹಾ ಸಾಧ್ಯತೆಗಳಿಲ್ಲ; ಡಾ. ಸುಭಾಷ್ ಅವರ ತಂಡವು ಸ್ವತಂತ್ರವಾಗಿಯೇ ಈ ಸಾಧನೆಯನ್ನು ಮಾಡಿತ್ತು. ಆದರೆ ಇಂಗ್ಲೆಂಡಿನ ವೈದ್ಯರ ಸಾಧನೆಗೆ ಮನ್ನಣೆ ಸಿಕ್ಕಿತು, ಡಾ. ಸುಭಾಷ್ ಅವರಿಗೆ ತೊಂದರೆಯಾಯಿತು. ಅವರ ಸಾಧನೆಯನ್ನು ಕಲ್ಕತ್ತಾದ ಇತರ ಸಹೋದ್ಯೋಗಿಗಳು ಸಂಶಯದಿಂದ ನೋಡಿದರು, ತಿರಸ್ಕರಿಸಿದರು. ಕೊನೆಗೆ ಅದನ್ನು ತನಿಖೆ ಮಾಡಲು ಒಂದು ಸಮಿತಿಯನ್ನು ರಚಿಸಲಾಯಿತು. ಆ ಸಮಿತಿಯಲ್ಲಿದ್ದವರಿಗೆ ಇಂತಹಾ ಹೊಸ ತಂತ್ರಜ್ಞಾನದ ಸುಳಿವೇ ಇಲ್ಲದ್ದರಿಂದ ಅವರು ಕೂಡ ಡಾ. ಸುಭಾಷ್ ಅವರ ಸಾಧನೆಯನ್ನು ಸುಳ್ಳೆಂದು ಜರೆದರು. ಮೂರು ವರ್ಷಗಳ ಬಳಿಕ ಡಾ, ಸುಭಾಷ್ ಶೋಚನೀಯವಾಗಿ ಸಾವನ್ನಪ್ಪಿದರು. ನಂತರ 2005ರಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ಡಾ. ಸುಭಾಷ್ ಅವರ ಸಾಧನೆಯನ್ನು ಒಪ್ಪಿಕೊಂಡಿತು. ಆದರೆ ಅದಾಗಲೇ ಬಹಳ ತಡವಾಗಿತ್ತು.

ಇನ್ನು ಪ್ರಶ್ನೆಗಳ ಸಮಯ.

‘ಸರ್, ನಾಯಿಗಳು ನಾಲ್ಕೈದು ಮರಿ ಯಾಕೆ ಹಾಕ್ತಾವೆ ಸರ್’

‘ಮನುಷ್ಯರಲ್ಲಿ ಅಂಡಾಶಯದಲ್ಲಿ ತಿಂಗಳಿಗೆ ಒಂದೇ ಅಂಡಾಣು ಬಿಡುಗಡೆಯಾಗುತ್ತದೆ, ಅದು ಫಲೀಕರಣಗೊಂಡರೆ ಒಂದೇ ಮಗು ಜನಿಸುತ್ತದೆ. ನಾಯಿಗಳಲ್ಲಿ ಅಂಡಾಶಯಗಳಿಂದ 5-6 ಅಥವಾ ಅದಕ್ಕೂ ಹೆಚ್ಚು ಅಂಡಾಣುಗಳು ಬಿಡುಗಡೆಯಾಗುತ್ತವೆ, ಆದ್ದರಿಂದ ಒಮ್ಮೆಗೇ ಐದಾರು ಮರಿಗಳು ಜನಿಸುತ್ತವೆ. ಈಗ ಹೇಳಿ, ಜಿರಳೆಗಳಲ್ಲಿ ಎಷ್ಟು ಮೊಟ್ಟೆಗಳಿರುತ್ತವೆ?’

‘ಸರ್, ಹದಿನಾರು ಸರ್, ಒಂದೊಂದು ಅಂಡಾಶಯದಿಂದ ಎಂಟೆಂಟು ಸರ್’

‘ಸರ್. ಬಾಲ್ಯ ವಿವಾಹವಾದರೆ ಏಡ್ಸ್ ಕಾಯಿಲೆ ಬರುತ್ತಾ?” – ಹುಡುಗನೊಬ್ಬನ ಪ್ರಶ್ನೆ

‘ಬಾಲ್ಯ ವಿವಾಹಕ್ಕೂ ಏಡ್ಸ್ ರೋಗಕ್ಕೂ ಸಂಬಂಧವಿಲ್ಲ. ಅಷ್ಟಕ್ಕೂ ಬಾಲ್ಯ ವಿವಾಹ ಕಾನೂನು ಬಾಹಿರ. ನೀವೆಲ್ಲರೂ ಕೂಡ ಅದನ್ನು ವಿರೋಧಿಸಬೇಕು. ಏಡ್ಸ್ ಸೋಂಕು ಹೊಂದಿರುವ ವ್ಯಕ್ತಿಯೊಂದಿಗೆ ಅಸುರಕ್ಷಿತವಾಗಿ ಲೈಂಗಿಕ ಸಂಪರ್ಕವನ್ನು ಹೊಂದಿದರೆ ಏಡ್ಸ್ ಸೋಂಕು ತಗಲುವ ಸಾಧ್ಯತೆಗಳಿವೆ. ಆದ್ದರಿಂದ ಅಪರಿಚಿತರೊಂದಿಗೆ ಲೈಂಗಿಕ ಸಂಪರ್ಕಕ್ಕೆಳಸಬಾರದು, ಹಾಗೊಮ್ಮೆ ಲೈಂಗಿಕ ಸಂಪರ್ಕಕ್ಕೆಳಸಿದರೂ ಗಂಡಸರು ಕಾಂಡೋಂ ಬಳಸಬೇಕು, ಅದರಿಂದ ಏಡ್ಸ್ ಮತ್ತಿತರ ಗುಹ್ಯ ರೋಗಗಳನ್ನು ತಡೆಯಬಹುದು.’

‘ಸರ್. ಬಾಲ್ಯ ವಿವಾಹವಾದರೆ ಗರ್ಭಿಣಿಯಾಗಬಹುದಾ?” – ಹುಡುಗಿಯೊಬ್ಬಳ ಪ್ರಶ್ನೆ

‘ಹುಡುಗಿಗೆ ಋತುಸ್ರಾವವು ಆರಂಭಗೊಂಡಿತೆಂದರೆ ಆಕೆಯ ಅಂಡಾಶಯಗಳು ಅಂಡಾಣುಗಳನ್ನು ಬಿಡುಗಡೆ ಮಾಡುತ್ತವೆ ಎಂದರ್ಥ. ಹದಿಹರೆಯದ ವೇಳೆಗೆ ಹುಡುಗರಲ್ಲೂ ವೀರ್ಯಾಣುಗಳು ಉತ್ಪಾದನೆಯಾಗುತ್ತಿರುತ್ತವೆ. ಆದ್ದರಿಂದ ಆ ವಯಸ್ಸಿನಲ್ಲಿ ಲೈಂಗಿಕ ಕ್ರಿಯೆ ನಡೆಸಿದರೆ ಹುಡುಗಿ ಗರ್ಭಿಣಿಯಾಗಬಹುದು. ಅಪರೂಪಕ್ಕೆ ಅಂತಹ ವರದಿಗಳನ್ನು ನೀವು ಪತ್ರಿಕೆಗಳಲ್ಲಿ ಓದಿರಲೂಬಹುದು. ಆದರೆ ಅಷ್ಟು ಕಿರಿಯ ವಯಸ್ಸಿನಲ್ಲಿ ಗರ್ಭಿಣಿಯಾದರೆ ಹುಡುಗಿಗೆ ತೀವ್ರ ಸಮಸ್ಯೆಗಳಾಗುವ ಸಾಧ್ಯತೆಗಳಿರುತ್ತವೆ, ಮಗುವಿಗೂ ತೊಂದರೆಯಾಗುತ್ತದೆ. ಗರ್ಭಾವಸ್ಥೆಯ ಒತ್ತಡಗಳನ್ನು ಸಹಿಸಿಕೊಳ್ಳಬೇಕಾದರೆ ಹೆಣ್ಣಿನ ದೇಹವು ಇನ್ನಷ್ಟು ಬೆಳೆದು ಪಕ್ವಗೊಳ್ಳಬೇಕಾಗುತ್ತದೆ. ಇದೇ  ಕಾರಣಕ್ಕೆ ಹದಿನೆಂಟು ವಯಸ್ಸಿನವರೆಗೆ ಲೈಂಗಿಕ ಕ್ರಿಯೆ ನಡೆಸುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ, ಅದನ್ನು ಅಪರಾಧವೆಂದು ಪರಿಗಣಿಸಲಾಗುತ್ತದೆ. ಆ ಬಳಿಕವೂ ಪರಸ್ಪರ ಸಂಪೂರ್ಣ ಒಪ್ಪಿಗೆಯಿಲ್ಲದೆ ಲೈಂಗಿಕ ಸಂಪರ್ಕಕ್ಕೆಳಸಬಾರದು. ಸಮ್ಮತಿಯಿಲ್ಲದ ಲೈಂಗಿಕ ಕ್ರಿಯೆಯು ಅಪರಾಧವಾಗುತ್ತದೆ, ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಆದ್ದರಿಂದ ಯಾರಾದರೂ ಬಲವಂತದಿಂದ ಲೈಂಗಿಕ ಕ್ರಿಯೆಗೆ ಯತ್ನಿಸಿದರೆ, ಅಥವಾ ಅನಗತ್ಯವಾಗಿ ದೇಹದ ಸೂಕ್ಷ್ಮ ಭಾಗಗಳನ್ನು ಮುಟ್ಟಿದರೆ ಅಥವಾ ನಿಮಗೆ ಮುಜುಗರವಾಗುವಂತೆ ವರ್ತಿಸಿದರೆ ಅದನ್ನು ನಿಮ್ಮ ಹೆತ್ತವರು ಅಥವಾ ಶಿಕ್ಷಕರ ಗಮನಕ್ಕೆ ಕೂಡಲೇ ತರಬೇಕು ಹಾಗೂ ಅಂಥವರಿಂದ ನಿಮ್ಮನ್ನು ರಕ್ಷಿಸಿಕೊಳ್ಳಬೇಕು. ಬಹಳಷ್ಟು ಸಂದರ್ಭಗಳಲ್ಲಿ ಪರಿಚಯಸ್ಥರು, ಸಂಬಂಧಿಕರು, ನೆರೆಹೊರೆಯವರು ಇಂತಹಾ ದೌರ್ಜನ್ಯಗಳಿಗೆ ಕಾರಣರಾಗಿರುವುದರಿಂದ ಯಾವುದೇ ಅಹಿತಕರವಾದ ನಡವಳಿಕೆಗಳನ್ನು ಕೂಡಲೇ ಹಿರಿಯರ ಗಮನಕ್ಕೆ ತರಬೇಕು. ಹುಡುಗಿಯರು ಮಾತ್ರವಲ್ಲ, ಹುಡುಗರ ಮೇಲೂ ಇಂತಹ ಲೈಂಗಿಕ ದೌರ್ಜನ್ಯಗಳಾಗುವ ಸಾಧ್ಯತೆಗಳಿರುವುದರಿಂದ ಅವರೂ ಜಾಗರೂಕರಾಗಿರಬೇಕು.

ಶನಿವಾರ, ಫೆಬ್ರವರಿ 20

ಜೀವ ವಿಕಾಸ

ಮೊದಲಿಗೆ ಕಳೆದ ವಾರದ ಪ್ರಶ್ನೆ: ವ್ಯಕ್ತಿಯ ಲಿಂಗ ಪರಿವರ್ತನೆ ಮಾಡಲು ಸಾಧ್ಯವೇ?

‘ಹೌದು ಸರ್’, ಇಲ್ಲ ಸರ್’, ‘ಗೊತ್ತಿಲ್ಲ ಸರ್’

‘ಹೌದು ಸರ್ ಎಂದವರು ಕೈ ಎತ್ತಿ”

ಒಂದಿಬ್ಬರು

‘ಹೌದು ಎಂದರೆ ಹೇಗೆ ಅಂತ ಹೇಳಿ’

‘ಗೊತ್ತಿಲ್ಲ ಸರ್’

IMG_20160220_105110‘’ಗಂಡು ಯಾ ಹೆಣ್ಣಿನ ಜನನಾಂಗಗಳ ಬೆಳವಣಿಗೆಯಲ್ಲಿ ಸಮಸ್ಯೆಗಳಿದ್ದರೆ ಅವನ್ನು ಸಂಕೀರ್ಣವಾದ, ಕ್ಲಿಷ್ಟವಾದ ಶಸ್ತ್ರಚಿಕಿತ್ಸೆಗಳ ಮೂಲಕ ಸರಿಪಡಿಸಲು ಸಾಧ್ಯವಿದೆ. ಸೂಕ್ತ ಹಾರ್ಮೋನುಗಳನ್ನು ಬಳಸಿ ಆನುಷಂಗಿಕ ಲೈಂಗಿಕ ಬೆಳವಣಿಗೆಗಳನ್ನು ಬದಲಾಯಿಸಲು ಸಾಧ್ಯವಿದೆ. ಹೀಗೆ ಭಿನ್ನ ಲೈಂಗಿಕ ಬೆಳವಣಿಗೆಯುಳ್ಳವರಿಗೆ ವಿವಿಧ ರೀತಿಗಳಿಂದ ನೆರವಾಗುವ ಚಿಕಿತ್ಸೆಗಳು ಇಂದು ಲಭ್ಯವಿವೆ. ಆದರೆ ಸಲಿಂಗ ಲಿಂಗಾಸಕ್ತಿ ಎನ್ನುವುದು ಒಂದು ಕಾಯಿಲೆಯಲ್ಲ, ಅದನ್ನು ಯಾವುದೇ ಚಿಕಿತ್ಸೆಯಿಂದ ಸರಿಪಡಿಸುವುದಕ್ಕೆ ಸಾಧ್ಯವಿಲ್ಲ”

‘ನಾವು ವಾಸಿಸುವ ಮೇಲೆ ಜೀವಿಗಳು ಹುಟ್ಟಿ ವಿಕಾಸ ಹೊಂದಿದ ಬಗೆಯನ್ನೀಗ ನೋಡೋಣ. ಮೊದಲ ತರಗತಿಯಲ್ಲಿ ನಾವು ಜೀವಿಗಳೆಲ್ಲರೂ ಜಲಜನಕ, ಆಮ್ಲಜನಕ, ಸಾರಜನಕ, ಇಂಗಾಲ, ಕಬ್ಬಿಣ ಮತ್ತಿತರ ಮೂಲಧಾತುಗಳ ಅಣು-ಪರಮಾಣುಗಳಿಂದಲೇ ಮಾಡಲ್ಪಟ್ಟಿದ್ದೇವೆ ಎನ್ನುವುದನ್ನು ನೋಡಿದ್ದೆವು. ನಾವಿರುವ ಈ ಬ್ರಹ್ಮಾಂಡ – ಅಥವಾ ಜಗತ್ತು  ಅಥವಾ ಯುನಿವರ್ಸ್ – ಕೂಡಾ ಇಂತಹಾ ಅಣು-ಪರಮಾಣು – ಅಥವಾ ಅವುಗಳೊಳಗಿರುವ ಇನ್ನೂ ಸಣ್ಣದಾದ ಕಣಗಳಿಂದಲೇ ಮಾಡಲ್ಪಟ್ಟಿದೆ. ಈ ಜಗತ್ತಿನಲ್ಲಿ ಕೋಟಿ-ಕೋಟಿಗಟ್ಟಲೆ ನಕ್ಷತ್ರಗಳಿವೆ, ಅವುಗಳ ಗ್ರಹಗಳಿವೆ, ಉಪಗ್ರಹಗಳಿವೆ. ಜೀವಿಗಳಂತೆಯೇ ಈ ನಕ್ಷತ್ರಗಳು ಕೂಡಾ ಹುಟ್ಟುತ್ತವೆ, ಸಾಯುತ್ತವೆ, ಇದೊಂದು ನಿರಂತರವಾಗಿ ನಡೆಯುತ್ತಲೇ ಇರುವ ಪ್ರಕ್ರಿಯೆ.

ನಾವಿರುವುದು ಎಲ್ಲಿ?

ಭೂಮಿಯಲ್ಲಿ ಸರ್

ಭೂಮಿಯಿರುವುದು ಎಲ್ಲಿ?

ಸೌರವ್ಯೂಹದಲ್ಲಿ ಸರ್

ಸೂರ್ಯ ಇರುವುದು ಎಲ್ಲಿ?

ಉತ್ತರ ಇಲ್ಲ.

‘ಸೂರ್ಯ ಒಂದು ನಕ್ಷತ್ರ. ಅಂತಹಾ ಕೋಟಿ-ಕೋಟಿಗಟ್ಟಲೆ ನಕ್ಷತ್ರಗಳ ಗುಂಪನ್ನು ನಕ್ಷತ್ರ ಪುಂಜ ಎನ್ನುತ್ತೇವೆ. ಈ ಜಗತ್ತಿನಲ್ಲಿ 20000 ಕೋಟಿಗೂ ಹೆಚ್ಚು ನಕ್ಷತ್ರ ಪುಂಜ (Galaxy) ಗಳಿವೆ, ಪ್ರತಿಯೊಂದು ನಕ್ಷತ್ರ ಪುಂಜದಲ್ಲಿ 20000 ಕೋಟಿಗೂ ಹೆಚ್ಚು ನಕ್ಷತ್ರಗಳಿವೆ. ಅಂತಹಾ ಒಂದು ಸಣ್ಣ ನಕ್ಷತ್ರ ಪುಂಜ ಆಕಾಶ ಗಂಗೆ ಅಥವಾ ಮಿಲ್ಕಿ ವೇ ಗೆಲಾಕ್ಸಿ. ಆಕಾಶ ಗಂಗೆಯಲ್ಲಿರುವ ಕೋಟಿ-ಕೋಟಿಗಟ್ಟಲೆ ನಕ್ಷತ್ರಗಳಲ್ಲಿ ಮೂಲೆಯ ಒಂದು ಸಣ್ಣ ನಕ್ಷತ್ರ ನಮ್ಮ ಸೂರ್ಯ. ಆ ಸೂರ್ಯನ ಸುತ್ತ ಸುತ್ತುವ ಎಂಟು ಗ್ರಹಗಳು (ಇತ್ತೀಚೆಗೆ ಮತ್ತೊಂದು ಎಕ್ಸ್ ಗ್ರಹ ಇದೆ ಎನ್ನಲಾಗಿದೆ), ಪ್ಲುಟೊದಂತಹ ಕುಬ್ಜ ಗ್ರಹಗಳು, ಹಲವಾರು ಕ್ಷುದ್ರ ಗ್ರಹಗಳು ಇತ್ಯಾದಿಗಳ ನಡುವೆ ಒಂದು ಸಣ್ಣ ಗ್ರಹ ನಾವಿರುವ ಭೂಮಿ. ಆ ಭೂಮಿಯ ಮೇಲೆ 87 ಲಕ್ಷಕ್ಕೂ ಹೆಚ್ಚು ಜೀವಜಾತಿಗಳಿವೆ, ಅದಕ್ಕಿಂತ ಹತ್ತು ಪಟ್ಟು ಜೀವಿಗಳು ಇದ್ದು ಮರೆಯಾಗಿ ಹೋಗಿವೆ; ಅವುಗಳಲ್ಲಿ ಒಂದು ಮನುಷ್ಯ. ಅಂತಹಾ 700 ಕೋಟಿಗೂ ಹೆಚ್ಚು ಮನುಷ್ಯರಿದ್ದಾರೆ, ಅವರಲ್ಲಿ ನಾನೊಬ್ಬ, ನೀವೂ ಒಬ್ಬೊಬ್ಬರು. ಅಂತಲ್ಲಿ ನಾನೇ ದೊಡ್ಡವನು, ನಾನೇ ಎಲ್ಲ ಬಲ್ಲವನು ಎಂಬ ಅಹಮಿಕೆ ನಮಗೆ!

ಈ ಬ್ರಹ್ಮಾಂಡದಲ್ಲಿ ನಕ್ಷತ್ರಗಳು ಹುಟ್ಟುತ್ತವೆ, ಸಾಯುತ್ತವೆ, ಮತ್ತೆ ಕೆಲವು ಹುಟ್ಟುತ್ತವೆ, ಸಾಯುತ್ತವೆ. ಖಗೋಲದ ಅನಿಲಗಳು ಮತ್ತಿತರ ಧಾತುಗಳು ಒಟ್ಟು ಸೇರುತ್ತಾ ಹೋದಂತೆ ನಕ್ಷತ್ರ ಹುಟ್ಟುತ್ತದೆ, ಅದರಲ್ಲಿ ಹೇರಳವಾಗಿರುವ ಜಲಜನಕದ ಪರಮಾಣುಗಳು ಒಂದರೊಡನೊಂದು ಸೇರಿಕೊಂಡು, ಬೈಜಿಕ ಸಮ್ಮಿಲನ ಕ್ರಿಯೆ ಮುಂದುವರಿದಂತೆ ಹೀಲಿಯಂನಂತಹ ಭಾರದ ಧಾತುಗಳು ಉಂಟಾಗುತ್ತವೆ, ಬೆಳಕು ಸೇರಿದಂತೆ ಹಲಬಗೆಯ ಕಿರಣಗಳು ಹಾಗೂ ಅಲೆಗಳ ರೂಪದಲ್ಲಿ ಶಕ್ತಿಯು ಬಿಡುಗಡೆಯಾಗುತ್ತದೆ. ಹೀಗೆ ನಕ್ಷತ್ರದೊಳಗಿನ ಇಂಧನವು ಉರಿದು ಬರಿದಾಗುತ್ತಾ ಬಂದಂತೆ ನಕ್ಷತ್ರವು ನಶಿಸುತ್ತದೆ. ಸೂರ್ಯನಂತಹ ಸಣ್ಣ ನಕ್ಷತ್ರಗಳು ಬಿಳಿಯ ಕುಬ್ಜ ನಕ್ಷತ್ರಗಳಾದರೆ, ಸ್ವಲ್ಪ ದೊಡ್ಡದಾದ ನಕ್ಷತ್ರಗಳು ಸುಪರ್ ನೋವಾಗಳಾಗಿ ಸಿಡಿದು ನ್ಯೂಟ್ರಾನ್ ನಕ್ಷತ್ರಗಳಾಗುತ್ತವೆ, ಇನ್ನೂ ದೊಡ್ಡದಾದ ನಕ್ಷತ್ರಗಳು ಕುಸಿದಾಗ ಅವುಗಳ ಸಾಂದ್ರತೆ ಹೆಚ್ಚಿ, ಗುರುತ್ವ ಶಕ್ತಿಯು ಹೆಚ್ಚುತ್ತಾ ಹೋಗುತ್ತದೆ, ಅವು ಎಲ್ಲವನ್ನೂ ಸೆಳೆದುಕೊಂಡು ಬೆಳಕನ್ನೂ ಹೊರಬಿಡದ ಕಪ್ಪು ರಂಧ್ರಗಳಾಗುತ್ತವೆ. ನಕ್ಷತ್ರಗಳು ನಶಿಸಿದಾಗ ಬಿಡುಗಡೆಯಾಗುವ ಅನಿಲಗಳೂ, ಧಾತುಗಳೂ ಮತ್ತೆ ಒಟ್ಟಾಗತೊಡಗಿ ಹೊಸದೊಂದು ನಕ್ಷತ್ರ ಜನಿಸುತ್ತದೆ.

ಈ ಪ್ರಕ್ರಿಯೆಯಲ್ಲಿ ಸೂರ್ಯ ಹುಟ್ಟಿದ್ದು ಸುಮಾರು 460 ಕೋಟಿ ವರ್ಷಗಳ ಹಿಂದೆ. ಅದರ ಬೆನ್ನಿಗೇ ಹಲವಾರು ಗ್ರಹಗಳು ಸೂರ್ಯನ ಸುತ್ತ ಸುತ್ತತೊಡಗಿದವು. ಅವುಗಳಲ್ಲಿ ಹಲವು ಒಂದಕ್ಕೊಂದು ಬಡಿದು, ಸಿಡಿದು, ಕೊನೆಗೆ ಈಗಿನ ಸರುವ್ಯೂಹ ಉಂಟಾಯಿತು. ಸುಮಾರು 3-5 ಕೋಟಿ ವರ್ಷಗಳ ಬಳಿಕ ಥೀಯಾ ಎಂಬ ಕ್ಷುದ್ರ ಗ್ರಹವೊಂದು ಭೂಮಿಗೆ ಅಪ್ಪಳಿಸಿದಾಗ ಭೂಮಿಯಿಂದ ಸಿಡಿದು ಸುತ್ತ ತೊಡಗಿದ ಉಪಗ್ರಹವೇ ಚಂದ್ರ.

ಭೂಮಿ ಹುಟ್ಟಿ ನೂರು ಕೋಟಿ ವರ್ಷಗಳ ಬಳಿಕ ಇಲ್ಲಿ ಜೀವಿಗಳೂ ಹುಟ್ಟಿದವು. ಭೂಮಿಯ ಮೇಲೆ ಆಗ ಇದ್ದ ಸ್ಥಿತಿಗತಿಗಳಲ್ಲಿ ಜಲಜನಕ, ಆಮ್ಲಜನಕ, ಸಾರಜನಕ, ಇಂಗಾಲಗಳಂತಹ ವಿವಿಧ ಪರಮಾಣುಗಳು ಜೊತೆಗೂಡಿ ಪ್ರೊಟೀನುಗಳು, ರಿಬೋನ್ಯೂಕ್ಲಿಯಿಕ್ ಆಮ್ಲ, ಡಿಆಕ್ಸಿ ರಿಬೋನ್ಯೂಕ್ಲಿಯಿಕ್ ಆಮ್ಲ ಮುಂತಾದ ಸಂಯುಕ್ತಗಳು ಹುಟ್ಟಿಕೊಂಡವು. ಇವು ಜೊತೆಗೂಡಿ, ಸುತ್ತ ಮೇದಸ್ಸಿನ ಪೊರೆಯೂ ಬಂದು, ಏಕಕೋಶ ಜೀವಿಗಳಾದವು. ಇಂತಹಾ ಮೊದಲ ಜೀವಕೋಶಗಳು ಒಂದರೊಳಗೊಂದು ಸೇರಿಕೊಂಡವು, ಮೈಟೊಕಾಂಡ್ರಿಯಾದಂತಹ ರಚನೆಗಳಾದವು. ಈ ಜೀವಕೋಶಗಳಲ್ಲಿದ್ದ ಡಿಎನ್‌ಎಯಂತಹ ಸಂಯುಕ್ತಗಳು ಸೀಳಿ ಪ್ರತಿರೂಪಗಳನ್ನುಂಟು ಮಾಡುವುದರೊಂದಿಗೆ ಕೋಶ ವಿಭಜನೆ, ಜೀವಿಗಳ ಬೆಳವಣಿಗೆ ಆರಂಭವಾಯಿತು.

‘ಸರ್, ಬೇರೆ ಗ್ರಹಗಳಲ್ಲಿ ಜೀವಿಗಳಿರಬಹುದಲ್ವಾ ಸರ್’

‘ಖಂಡಿತವಾಗಿಯೂ ಇರಬಹುದು. ಕೋಟಿಗಟ್ಟಲೆ ನಕ್ಷತ್ರಪುಂಜಗಳ ಕೋಟಿಗಟ್ಟಲೆ ನಕ್ಷತ್ರಗಳನ್ನು ಸುತ್ತುತ್ತಿರುವ ಕೋಟ್ಯಾನುಕೋಟಿ ಗ್ರಹಗಳಲ್ಲಿ, ಉಪಗ್ರಹಗಳಲ್ಲಿ ಕೆಲವಲ್ಲಾದರೂ ಜೀವಿಗಳು ಇರಬಹುದು’

‘ಮತ್ತೆ ಅವು ಇಲ್ಲಿಗೆ ಯಾಕೆ ಬರುವುದಿಲ್ಲ ಸರ್’

‘ದೂರ ಇದೆಯಪ್ಪಾ’ ಅಂದಳೊಬ್ಬಳು

‘ಸರಿಯಾಗಿ ಹೇಳಿದೆ, ದೂರ ಬಹಳಷ್ಟಿದೆ, ಕೋಟಿಗಟ್ಟಲೆ ಮೈಲುಗಳಷ್ಟಿದೆ. ಬೆಳಕಿನ ವೇಗದಲ್ಲಿ ಸಂಚರಿಸಿದರೂ ಕೂಡ ಅವನ್ನು ತಲುಪುವುದಕ್ಕೆ ವರ್ಷಗಳೇ ಬೇಕಾಗುತ್ತವೆ. ಆದರೆ ಅಷ್ಟು ವೇಗವಾಗಿ ಹೋಗುವುದಕ್ಕೆ ಸಾಧ್ಯವಿಲ್ಲ. ಉದಾಹರಣೆಗೆ ಅಮೆರಿಕಾದ ನಾಸಾ ಸಂಸ್ಥೆಯು ವಾಯೇಜರ್ ಎಂಬ ಗಗನನೌಕೆಯನ್ನು ಕಳುಹಿಸಿ 38 ವರ್ಷಗಳಾದವು. ಅದು ಒಂದು ಸೆಕೆಂಡಿಗೆ 17 ಕಿಮೀ ವೇಗದಲ್ಲಿ ಸಾಗುತ್ತಿದೆ, ಅಷ್ಟು ವೇಗದಲ್ಲಿ ಸಾಗಿ ಗುರು, ಶನಿ, ಉರೇನಸ್, ನೆಪ್ಚೂನ್ ದಾಟಿ ಇತ್ತೀಚೆಗಷ್ಟೇ ಸೌರ ವ್ಯೂಹವನ್ನು ದಾಟುವುದಕ್ಕೆ ಸಾಧ್ಯವಾಗಿದೆ. ಮುಂದೆ ಇದನ್ನೂ ಮೀರಿಸುವ ವೇಗವುಳ್ಳ ನೌಕೆಗಳು ಬರಬಹುದೋ ಏನೋ? ಅನ್ಯಗ್ರಹದವರ ಬಳಿ ಅಂತಹ ನೌಕೆಗಳು ಇದ್ದಿದ್ದರೆ ಅವರು ಇಲ್ಲಿಗೆ ಬರುತ್ತಿದ್ದರೋ ಏನೋ? ಇದುವರೆಗೆ ಹಾಗೆ ಯಾರೂ ಬಂದಂತಿಲ್ಲ’

‘ಸರ್, ಅವರು ಇಲ್ಲಿಗೆ ಬಂದ್ರೆ ಬದುಕ್ತಾರಾ ಸರ್’

‘ಆ ಜೀವಿಗಳೂ ನಮ್ಮ ಥರಾನೇ ಇದ್ದರೆ ಬದುಕುಳಿಯಬಹುದು’

‘ಸರ್, ವಾಯೇಜರ್ ಅನ್ನು ಒಂದು ಗ್ರಹದಿಂದ ಇನ್ನೊಂದಕ್ಕೆ ಹೇಗೆ ಕಳಿಸ್ತಾರೆ ಸರ್’

‘ಗ್ರಹಗಳ ಗುರುತ್ವ ಶಕ್ತಿಯನ್ನೂ, ನೌಕೆಯಲ್ಲಿರುವ ಮೋಟಾರುಗಳನ್ನೂ ಬಳಸಿ ಅದನ್ನು ಗ್ರಹದಿಂದ ಗ್ರಹಕ್ಕೆ, ಬಳಿಕ ಇತರ ಕಕ್ಷೆಗಳಿಗೆ ದಾಟಿಸಲಾಗುತ್ತದೆ, ಅದಕ್ಕೆ ಸಂಜ್ಞೆಗಳನ್ನು ಕಳುಹಿಸುವುದಕ್ಕೆ ಮೈಕ್ರೊವೇವ್‌ – ಸೂಕ್ಷ್ಮ ತರಂಗಗಳನ್ನು ಬಳಸಲಾಗುತ್ತದೆ.’

ಮುಂದಕ್ಕೆ ಹೋಗೋಣ. ಏಕಕೋಶ ಜೀವಿಗಳು ಸೇರಿ ಬಹುಕೋಶ ಜೀವಿಗಳಾದವು, ಕೆಲವು ತಮ್ಮ ಆಹಾರವನ್ನು ತಯಾರಿಸತೊಡಗಿ ಸಸ್ಯಗಳಾದವು, ಅವು ಹೊರಬಿಟ್ಟ ಆಮ್ಲಜನಕ ಭೂಮಿಯ ವಾತಾವರಣದಲ್ಲಿ ತುಂಬತೊಡಗಿತು. ಕೆಲವು ಜೀವಿಗಳು ಈ ಸಸ್ಯಗಳನ್ನು ತಿಂದು ಬೆಳೆದವು, ಪ್ರಾಣಿಗಳೆನಿಸಿಕೊಂಡವು.

ಕಳೆದ 350 ಕೋಟಿ ವರ್ಷಗಳಲ್ಲಿ ಭೂಮಿಯ ಮೇಲಿನ ಈ ಜೀವರಾಶಿಯು ಬದಲಾಗುತ್ತಾ ಸಾಗಿದೆ, ಆರಂಭದಲ್ಲಿದ್ದ ಸೂಕ್ಷ್ಮಜೀವಿಗಳಿಂದ ಹಿಡಿದು, ಆಧುನಿಕ ಮಾನವನವರೆಗೆ ಹಲವು ರೂಪಗಳನ್ನು ಧರಿಸಿದೆ, ಈ ಪ್ರಕ್ರಿಯೆಯು ಮುಂದುವರಿಯುತ್ತಲೇ ಇದೆ. ಆಯಾ ಪ್ರದೇಶಗಳಲ್ಲಿ, ಆಯಾ ಕಾಲಘಟ್ಟಗಳಲ್ಲಿ ಆಹಾರ, ಹವಾಮಾನ ಇತ್ಯಾದಿ ಸ್ಥಿತಿಗತಿಗಳು ಬದಲಾದಾಗ, ಅವಕ್ಕೆ ಹೊಂದಿಕೊಳ್ಳುತ್ತಾ ಜೀವಿಗಳಲ್ಲೂ ಮಾರ್ಪಾಟುಗಳಾದವು, ಅಂತಹ ಪರಿಸ್ಥಿತಿಗಳನ್ನು ಅತ್ಯುತ್ತಮವಾಗಿ ನಿಭಾಯಿಸಬಲ್ಲ ದೇಹರಚನೆಯನ್ನು ಹೊಂದಿದ ಜೀವಿಗಳು ಉಳಿದು ಬೆಳೆದವು, ಉಳಿದವು ಮರೆಯಾದವು. ಹೀಗೆ ಕಳೆದ 350 ಕೋಟಿ ವರ್ಷಗಳಲ್ಲಿ ಭೂಮಿಯ ಮೇಲೆ ರೂಪುಗೊಂಡ ಜೀವಿಗಳಲ್ಲಿ ಕೆಲವಷ್ಟೇ ಈಗ ಉಳಿದಿವೆ, ಶೇ. 90ರಷ್ಟು ಜೀವಿಗಳು ಮರೆಯಾಗಿ ಹೋಗಿವೆ. ಒಂದು ವಿಧದ ಜೀವಿಯಿಂದ ಇನ್ನೊಂದು ವಿಧದ ಜೀವಿಯ ನಡುವೆ ಕೊಂಡಿಗಳಂತಿದ್ದ ಹಲವು ಜೀವಿಗಳು ಇಂದು ಕಾಣಸಿಗುತ್ತಿಲ್ಲ. ಹೀಗೆ, ಮನುಷ್ಯರ ಗುಂಪಿಗೆ ಸೇರಿರುವ ಕೆಲವು ವಾನರ ವಿಧಗಳು ಇಂದಿಗೂ ಕಾಣಸಿಗುತ್ತವೆಯಾದರೂ, ಅವುಗಳ ನಡುವಿನ ಕೊಂಡಿಗಳಾಗಿದ್ದ ವಾನರ ಪ್ರಭೇದಗಳೂ, ಆದಿ ಮಾನವರೂ ಇಂದು ಉಳಿದಿಲ್ಲ. ಹಾಗೆಯೇ, ಒಂದು ಕಾಲದಲ್ಲಿ ಭೂಮಿಯುದ್ದಕ್ಕೂ ವಿಜೃಂಭಿಸಿದ್ದ ದೈತ್ಯ ಡೈನೋಸಾರ್‌ಗಳೂ ಈಗಿಲ್ಲ. ನಮ್ಮ ದೇಶದಲ್ಲೇ ಸಾಕಷ್ಟಿದ್ದ ಚೀತಾ ಕೂಡ ಇಲ್ಲ. ಇನ್ನು ಕೆಲವು ವರ್ಷಗಳಲ್ಲಿ ನಮ್ಮ ಹುಲಿ ಸಂತತಿಯೂ ನಾಶವಾಗಬಹುದು; ಈಗ ನಮ್ಮ ದೇಶದಲ್ಲಿ 2200ರಷ್ಟು ಹುಲಿಗಳು ಮಾತ್ರ ಇವೆ.’

‘ಯಾಕೆ ಸರ್?’

‘ಹುಲಿಗಳು ಮಾಂಸಾಹಾರವನ್ನಷ್ಟೇ ತಿನ್ನುತ್ತವೆ, ಜಿಂಕೆ, ಕಡವೆ, ಕಾಡುಕೋಣ, ಹಂದಿ ಮುಂತಾದ ಕಾಡು ಪ್ರಾಣಿಗಳೇ ಅವುಗಳ ಆಹಾರ. ಮನುಷ್ಯರು ಕಾಡು ಕಡಿದು ಬರಿದು ಮಾಡಿದಾಗ ಈ ಕಾಡು ಪ್ರಾಣಿಗಳ ಸಂಖ್ಯೆಯೂ ಕಡಿಮೆಯಾಗಿ, ಹುಲಿಗಳಿಗೆ ಆಹಾರವಿಲ್ಲದಾಗುತ್ತದೆ, ಅವು ನಾಶವಾಗುತ್ತವೆ. ಭೂಮಿಯ ಮೇಲೆ ಇರುವ ಜೀವಿಗಳೆಲ್ಲಕ್ಕೂ ಪರಸ್ಪರ ಸಂಬಂಧವಿದೆ, ಒಂದನ್ನೊಂದು ಅವಲಂಬಿಸಿಕೊಂಡಿವೆ. ನಾವು ಮನ ಬಂದಂತೆ ಪರಿಸರವನ್ನು ನಾಶ ಮಾಡುತ್ತಾ ಹೋದರೆ ಮುಂದೊಂದು ದಿನ ನಮಗೂ ಇಲ್ಲಿ ಬದುಕುವುದಕ್ಕೆ ಕಷ್ಟವಾಗುವ ಪರಿಸ್ಥಿತಿ ಉಂಟಾಗಬಹುದು.’

ev1‘ಜೀವಿಗಳು ಮಾತ್ರ ಬದಲಾದುದಲ್ಲ, ಭೂಮಿಯ ಮೇಲಿನ ಖಂಡಗಳೂ ಬದಲಾಗಿವೆ. ಭೂಗ್ರಹವು ಹುಟ್ಟಿದಾಗ ರೂಪುಗೊಂಡ ನೆಲಭಾಗಗಳು ಮುಂದಿನ 400 ಕೋಟಿ ವರ್ಷಗಳಲ್ಲಿ ಹಲವು ಬಾರಿ ಆರ್ಕ್ಟಿಕ್, ಕೊಲಂಬಿಯಾ, ರೊಡಿನಿಯಾ ಮುಂತಾದ ಮಹಾಖಂಡಗಳಾಗಿ ಒಟ್ಟುಗೂಡಿದವು, ಒಡೆದವು, ಮತ್ತೆ ಒಂದಾದವು, ಮತ್ತೆ ಒಡೆದವು. ಇದೇ ಪ್ರಕ್ರಿಯೆಯಲ್ಲಿ 30-25 ಕೋಟಿ ವರ್ಷಗಳ ಹಿಂದೆ ಎಲ್ಲ ಭೂಖಂಡಗಳೂ ಒಂದಕ್ಕೊಂದು ಢಿಕ್ಕಿಯಾಗಿ ಪಾನ್ ಜಿಯಾ ಎಂಬ ಒಂದೇ ಮಹಾಖಂಡವಾಗಿ ಕೂಡಿಕೊಂಡವು, ಅದರ ಸುತ್ತಲೂ ಪಾನ್ ಥಲಾಸ ಎಂಬ ಒಂದೇ ಮಹಾಸಾಗರವಾಯಿತು. ಸುಮಾರು 20-15 ಕೋಟಿ ವರ್ಷಗಳ ಹಿಂದೆ ಈ ಮಹಾಖಂಡವು ಒಡೆದು ಉತ್ತರ ಭಾಗದ ಲಾರೇಷಿಯಾ ಹಾಗೂ ದಕ್ಷಿಣದ ಗೊಂಡ್ವಾನ ಎಂಬ ಎರಡು ಖಂಡಗಳಾದವು, ಸುಮಾರು 10 ಕೋಟಿ ವರ್ಷಗಳ ಹಿಂದೆ ಈ ಖಂಡಗಳು ಮತ್ತೆ ಒಡೆದು ಉತ್ತರ ಅಮೇರಿಕಾ, ಯುರೇಷಿಯಾ, ದಕ್ಷಿಣ ಅಮೆರಿಕಾ, ಆಫ್ರಿಕಾ, ಆಸ್ಟ್ರೇಲಿಯಾ, ಅಂಟಾರ್ಕ್ಟಿಕಾಗಳಾದವು, ಮಹಾಸಾಗರವೂ ಹಂಚಿ ಹೋಗಿ ಶಾಂತ, ಅಟ್ಲಾಂಟಿಕ್, ಹಿಂದೂ, ಆರ್ಕಟಿಕ್ ಮಹಾಸಾಗರಗಳಾದವು.

ಸುಮಾರು 3-5 ಕೋಟಿ ವರ್ಷಗಳ ಹಿಂದೆ ಗೊಂಡ್ವಾನದಿಂದ ಸಿಡಿದ ಒಂದು ಭೂಭಾಗವು ಉತ್ತರಾಭಿಮುಖವಾಗಿ ಚಲಿಸಿ ಯುರೇಷಿಯಾವನ್ನು ಸೇರಿಕೊಂಡು ಭಾರತದ ಉಪಖಂಡವಾಯಿತು. ಅಂದರೆ 450 ಕೋಟಿ ವರ್ಷಗಳ ಹಿಂದೆ ಉದಿಸಿದ ಭೂಗ್ರಹದಲ್ಲಿ ಭರತಖಂಡವು ರೂಪುಗೊಂಡದ್ದು ಕೇವಲ 5 ಕೋಟಿ ವರ್ಷಗಳ ಹಿಂದೆ. ಹೀಗೆ ಭರತ ಖಂಡವು ಏಷ್ಯಾ ಖಂಡವನ್ನು ಸೇರಿದಲ್ಲಿ ಹಿಮಾಲಯದ ಪರ್ವತ ಶ್ರೇಣಿಯು ಎದ್ದಿತು. ಭೂಖಂಡಗಳು ಹಾಗೂ ಭೂಪದರಗಳು ಈಗಲೂ ವರ್ಷಕ್ಕೆ 2-11 ಸೆಮೀ ನಷ್ಟು ಚಲಿಸುತ್ತಿವೆ, ಭರತಖಂಡವು ಕೂಡ ಸುಮಾರು 5 ಸೆಮೀ ಉತ್ತರಾಭಿಮುಖವಾಗಿ ಚಲಿಸುತ್ತಿದೆ. ಈ ಚಲನೆಯಿಂದ ಯಾವ ಸಮಸ್ಯೆಗಳಾಗುತ್ತವೆ ಅಂತ ಹೇಳ್ತೀರಾ?’

‘ಸರ್, ಜ್ವಾಲಾಮುಖಿ ಸರ್’ ‘ಸರ್, ಭೂಕಂಪ ಸರ್”

ಭೂಪದರಗಳ ಚಲನೆಯಿಂದ ಶಿಲೆಗಳಲ್ಲಿ ಬಿರುಕುಂಟಾಗುವುದರಿಂದ ಭೂಕಂಪವುಂಟಾಗುತ್ತದೆ, ಹಿಮಾಲಯದ ಪ್ರದೇಶದಲ್ಲಿ ಆಗಾಗ ಭೂಕಂಪಗಳಾಗುವುದಕ್ಕೂ ಇದೇ ಕಾರಣ. ಭೂಪದರಗಳೊಳಗಿನ ಮಾಗ್ನಾ ದ್ರವದ ಚಲನೆಯು ಜ್ವಾಲಾಮುಖಿಗಳಿಗೆ ಕಾರಣ. ಆದ್ದರಿಂದಲೇ, ಭೂ ಖಂಡಗಳು ಒಡೆದು, ಜೊತೆ ಸೇರಿದ ವಲಯಗಳಲ್ಲೇ ಭೂಕಂಪ ಹಾಗೂ ಜ್ವಾಲಾಮುಖಿಗಳು ಆಗಾಗ ಉಂಟಾಗುತ್ತಿರುತ್ತವೆ.

ಭೂಭಾಗಗಳು ಒಡೆದು, ಕೂಡಿ, ಮತ್ತೆ ಒಡೆದು ಖಂಡಗಳಾಗುತ್ತಿದ್ದಂತೆ ಆ ಭೂಭಾಗಗಳಲ್ಲಿದ್ದ ಪ್ರಾಣಿ-ಸಸ್ಯಗಳೂ ಹಂಚಿ ಹೋದವು, ಜೀವ ವಿಕಾಸದ ಪ್ರಕ್ರಿಯೆಯೂ ಆಯಾ ಖಂಡಗಳಲ್ಲಿ ಪ್ರತ್ಯೇಕವಾಗಿ ಸಾಗುವಂತಾಯಿತು. ಹಿಂದೆ ನಾನೊಂದು ಪ್ರಶ್ನೆಯನ್ನು ಕೇಳಿದ್ದೆ: ಪ್ಲಾಟಿಪಸ್, ಎಕಿಡ್ನಾ, ಕಾಂಗರೂಗಳಂತಹ ಮೊದಲ ಸಸ್ತನಿಗಳು ಆಸ್ಟ್ರೇಲಿಯಾದಲ್ಲಷ್ಟೇ ಏಕಿವೆ?

‘ಸರ್, ಅವು ಆ ಭೂಭಾಗದಲ್ಲೇ ವಿಕಾಸ ಹೊಂದಿದವು ಸರ್’

‘ಮತ್ತೆ ನಮ್ಮ ದೇಶದಲ್ಲಿ ಏಕಿಲ್ಲ?’

‘ಅವು ಇಲ್ಲಿ ಬರ್ಲಿಲ್ಲ ಸರ್’

‘ಭೂಖಂಡಗಳು ಪ್ರತ್ಯೇಕಗೊಂಡು ದೂರ ಸರಿದಾಗ, ಆಸ್ಟ್ರೇಲಿಯಾ, ಮಡಗಾಸ್ಕರ್, ಗಲಪಗೋಸ್ ಮುಂತಾದ ದ್ವೀಪಗಳಲ್ಲಿ ಜೀವ ವಿಕಾಸದ ಪ್ರಕ್ರಿಯೆಯು ಅಲ್ಲಲ್ಲೇ ಬೇರೆಯಾಗಿ ಮುಂದುವರಿಯಿತು. ಈ ದ್ವೀಪಗಳು ಇತರ ಭೂಭಾಗಗಳಿಂದ ಬಹು ದೂರವಿದ್ದು, ನಡುವೆ ಆಳವಾದ ಸಾಗರಗಳಿದ್ದುದರಿಂದ ಈ ದ್ವೀಪಗಳಲ್ಲಿ ವಿಕಾಸ ಹೊಂದಿದ ಪ್ರಾಣಿಗಳೂ, ಸಸ್ಯಗಳೂ ಅಲ್ಲಲ್ಲಿಗೇ ಸೀಮಿತಗೊಳ್ಳುವಂತಾಯಿತು. ಚಾರ್ಲ್ಸ್ ಡಾರ್ವಿನ್ 1831ರಿಂದ ತನ್ನ ಎಚ್‍ಎಮ್‍ಎಸ್ ಬೀಗಲ್ ನೌಕೆಯಲ್ಲಿ ಜಗತ್ತನ್ನು ಸುತ್ತಿ ಜೀವ ವೈವಿಧ್ಯವನ್ನು ಅಧ್ಯಯನ ಮಾಡಿದಾಗ ಈ ಕೆಲವು ದ್ವೀಪಗಳಲ್ಲಿದ್ದ ವಿಶೇಷ ಪ್ರಾಣಿಗಳೂ, ಸಸ್ಯಗಳೂ ಆತನನ್ನು ಆಕರ್ಷಿಸಿದ್ದವು, ಜೀವ ವಿಕಾಸದ ಸಿದ್ಧಾಂತವನ್ನು ರೂಪಿಸುವಲ್ಲಿ ನೆರವಾಗಿದ್ದವು.’

‘ಜೀವಿಗಳ ವಿಕಾಸಕ್ಕೆ ಆಹಾರವೇ ಮುಖ್ಯ ಕಾರಣವಾಗಿತ್ತು, ಆಗಿದೆ. ಬಗೆಬಗೆಯ ಆಹಾರವನ್ನು ಹುಡುಕಿ, ಪಡೆದು, ಬಳಸಿಕೊಳ್ಳುವ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳುವುದೇ ಜೀವ ವಿಕಾಸದ ಮುಖ್ಯ ಉದ್ದೇಶ. ಯಾವ ಜೀವಿಯು ಹೆಚ್ಚು ಹೆಚ್ಚು ಆಹಾರವನ್ನು ಪಡೆಯಲು ಶಕ್ತವಾಯಿತೋ ಅದು ಉಳಿದುಕೊಂಡಿತು, ಉಳಿದವು ನಾಶವಾದವು. ಅತ್ಯಂತ ಬಲಿಷ್ಠ ಜೀವಿಗಳು ಉಳಿಯುತ್ತವೆ ಎಂಬ ಡಾರ್ವಿನ್ ಸಿದ್ಧಾಂತವು ಆಹಾರವನ್ನು ಬಳಸಿಕೊಳ್ಳುವ ಸಾಮರ್ಥ್ಯಕ್ಕೇ ಹೆಚ್ಚು ಅನ್ವಯಿಸುತ್ತದೆ. ಯಾವ ಜೀವಿಯು ಅತಿ ಹೆಚ್ಚು ಬಗೆಯ ಆಹಾರಗಳನ್ನು ಪಡೆದು, ಬಳಸಿಕೊಳ್ಳಲು ಸಮರ್ಥವಾಗಿದೆಯೋ ಅದು ಅತ್ಯಂತ ಯಶಸ್ವಿಯಾಗಿ ಬದುಕುತ್ತದೆ. ಹಿಮಯುಗದಲ್ಲಿ ಆಹಾರವು ದುರ್ಲಭವಾದಾಗ ಆಫ್ರಿಕಾದ ಸೀಳು ಕಣಿವೆಗಳಲ್ಲಿ ದೊರೆತ ಆಮೆ, ಮೊಸಳೆ, ಮೀನು ಇತ್ಯಾದಿಗಳನ್ನೆಲ್ಲ ತಿಂದು, ವಾನರರು ಮನುಷ್ಯರಾಗಿ ವಿಕಾಸ ಹೊಂದಿದರು, ಮಾನವರು ಸಣ್ಣ ಹುಳು-ಕೀಟಗಳಿಂದ ಹಿಡಿದು ಆನೆಯವರೆಗೆ, ಬೀಜಗಳಿಂದ ಮರದ ತೊಗಟೆ-ಕಾಂಡ-ಹೂವುಗಳವೆರೆಗೆ ಎಲ್ಲವನ್ನೂ ತಿಂದು ಬದುಕಬಲ್ಲರು, ಆದ್ದರಿಂದಲೇ ಮಾನವರು ಅತ್ಯಂತ ಬಲಿಷ್ಠ ಜೀವಿಗಳಾಗಿ ಉಳಿಯುವುದಕ್ಕೆ, ಇಂದು 700 ಕೋಟಿಯಷ್ಟು ಸಂಖ್ಯೆಯಲ್ಲಿ ಬೆಳೆಯುವುದಕ್ಕೆ ಸಾಧ್ಯವಾಗಿದೆ.

‘ಮನುಷ್ಯರೂ ಸೇರಿದಂತೆ ಪ್ರಾಣಿ-ಸಸ್ಯಗಳೆಲ್ಲ ದೇವರ ಸೃಷ್ಟಿ ಎನ್ನುವವರಿದ್ದಾರೆ. ನಮ್ಮ ದೇಶದ ಎಲ್ಲಾ ಶಾಲೆಗಳಲ್ಲಿ ಜೀವ ವಿಕಾಸವಾದವೊಂದನ್ನೇ ಕಲಿಸಲಾಗುತ್ತದೆ, ಆದರೆ ಅಮೆರಿಕದ ಕೆಲವು ಶಾಲೆಗಳಲ್ಲಿ ಈಗಲೂ ವಿಕಾಸವಾದದ ಜೊತೆಗೆ ಸೃಷ್ಟಿ ಸಿದ್ಧಾಂತವನ್ನೂ ಕಲಿಸಿ, ಮಕ್ಕಳಲ್ಲಿ ಗೊಂದಲವುಂಟು ಮಾಡಲಾಗುತ್ತಿದೆ. ಆದರೆ ಡಾರ್ವಿನನ ಜೀವ ವಿಕಾಸವಾದವನ್ನು ಪುಷ್ಠೀಕರಿಸುವ ಹಲವಾರು ಪುರಾವೆಗಳು ದೊರೆತಿವೆ, ಇನ್ನೂ ದೊರೆಯುತ್ತಿವೆ; ಆದ್ದರಿಂದ ಅದೀಗ ನಿರ್ವಿವಾದಿತವೆನಿಸಿಕೊಂಡಿದೆ.

ಭೂಖಂಡಗಳಲ್ಲಿರುವ ಹಳೆಯ ಶಿಲೆಗಳ ಪದರಗಳಲ್ಲಿ ಆಯಾ ಕಾಲಕ್ಕನುಗುಣವಾಗಿ ಸಿಕ್ಕಿ ಹಾಕಿಕೊಂಡ ಜೀವಿಗಳು ಅತಿ ಹಳೆಯ ಜೀವ ವೈವಿಧ್ಯಕ್ಕೆ ಸಾಕ್ಷಿಯಾಗಿವೆ. ಈ ಶಿಲೀಕೃತ ಉಳಿಕೆಗಳಲ್ಲಿ ಹಲವಾರು ಏಕಕೋಶ ಜೀವಿಗಳು, ಪ್ರಾಣಿಗಳು ಹಾಗೂ ಸಸ್ಯಗಳನ್ನು ಗುರುತಿಸಲಾಗಿದೆ. ಇಂತಹಾ ಪದರಗಳ ಹಲವು ಪ್ರಾಣಿ ಹಾಗೂ ಸಸ್ಯ ಜಾತಿಗಳ ಅಚ್ಚುಗಳು ಮತ್ತು ಎರಕಗಳು ಕೂಡ ದೊರೆತಿದ್ದು, ಜೀವ ವಿಕಾಸದ ಪ್ರಕ್ರಿಯೆಯನ್ನು ದೃಢ ಪಡಿಸಿವೆ. ಪ್ರಾಕೃತಿಕ ವಿಕೋಪಗಳು, ಮಹಾ ಉಲ್ಕಾಪಾತಗಳು, ಭೂ ಪರಿಸರ ಹಾಗೂ ವಾತಾವರಣದಲ್ಲಾದ ದೊಡ್ಡ ಪ್ರಮಾಣದ ಬದಲಾವಣೆಗಳು ನೆಲ-ಜಲಗಳಲ್ಲಿದ್ದ ಜೀವರಾಶಿಯ ಮೇಲೆ ಅಗಾಧ ಪರಿಣಾಮವನ್ನು ಬೀರಿದವು, ಸುಮಾರು 6-20 ಕೋಟಿ ವರ್ಷಗಳ ಹಿಂದೆ ಮೆರೆದಿದ್ದ ಡೈನೋಸಾರ್ ಗಳಂತಹ  ಬೃಹತ್ ಪ್ರಾಣಿಗಳು ಸಂಪೂರ್ಣವಾಗಿ ನಾಶವಾಗುವುದಕ್ಕೆ ಕಾರಣವಾದವು. ಇಂತಹಾ ವಿಕೋಪಗಳಲ್ಲಿ ಸತ್ತು ನೆಲ-ಜಲಗಳಡಿಯಲ್ಲಿ ಹೂತು ಹೋದ ಪ್ರಾಣಿ-ಪಕ್ಷಿ-ಸಸ್ಯಗಳ ಯಥಾರ್ಥ ಉಳಿಕೆಗಳು ದೊರೆತಿವೆ, ಇನ್ನೂ ದೊರೆಯುತ್ತಿವೆ. ಡೈನೋಸಾರ್‌ಗಳ ಅಸ್ಥಿಪಂಜರಗಳು, ಸರೀಸೃಪ ಹಾಗೂ ಪಕ್ಷಿಗಳ ನಡುವಿನ ಕೊಂಡಿಯೆನ್ನಲಾದ ಆರ್ಕಿಯಾಪ್ಟೆರಿಕ್ಸ್‌ನ ಪಳೆಯುಳಿಕೆಗಳು, ರಷ್ಯಾದಲ್ಲಿ ದೊರೆತ ಉಣ್ಣೆಯ ಮಹಾ ಗಜದ ಇಡೀ ಕಳೇಬರ ಎಲ್ಲವೂ ಇವಕ್ಕೆ ಉದಾಹರಣೆಗಳು. ಗುಜರಾತ್‌ನ ಕೆಲವೆಡೆ 1975ರಲ್ಲಿ ದೊರೆತ ಬರಪಸಾರಸ್ ಎಂಬ ಡೈನೋಸಾರ್‌ನ ಪಳೆಯುಳಿಕೆಗಳು, ಗೊಂಡ್ವಾನದ ಭಾಗವಾಗಿದ್ದ ಭರತಖಂಡದಲ್ಲೂ ಡೈನೋಸಾರ್ ಗಳು ಇದ್ದವು ಎನ್ನುವುದಕ್ಕೆ ಸಾಕ್ಷಿಯಾಗಿವೆ. ಮಂಗಗಳು ಹಾಗೂ ಮಾನವರ ನಡುವಿನ ಕೊಂಡಿಗಳೆನ್ನಲಾದ ವಾನರರು ಹಾಗೂ ಆದಿ ಮಾನವರ ಪಳೆಯುಳಿಕೆಗಳು ಆಫ್ರಿಕಾದಲ್ಲಿ ಆಗಾಗ ದೊರೆಯುತ್ತಿರುವುದು ಅಲ್ಲಿ ಮಾನವರ ವಿಕಾಸಕ್ಕೆ ಪುರಾವೆಯನ್ನೊದಗಿಸುತ್ತಿವೆ.

ಎರಡು ಪ್ರಾಣಿ ಜಾತಿಗಳ ಲಕ್ಷಣಗಳನ್ನು ಹೊಂದಿರುವಂಥ ಕೊಂಡಿಗಳಲ್ಲಿ ಕೆಲವು ಈಗಲೂ ಜೀವಂತವಿವೆ; ಇವನ್ನು ಜೀವಂತ ಪಳೆಯುಳಿಕೆಗಳು ಎನ್ನಲಾಗುತ್ತದೆ. ವಲಯವಂತಗಳು ಹಾಗೂ ಕೀಲ್ಗಾಲಿಗಳ ನಡುವಿನ ಕೊಂಡಿಯೆನ್ನಲಾಗುವ ಪೆರಿಪಾಟಸ್, ಮೀನುಗಳು ಹಾಗೂ ಉಭಯವಾಸಿಗಳ ನಡುವಿನ ಕೊಂಡಿಯೆನ್ನಲಾಗುವ ಪುಪ್ಫುಸ ಮೀನುಗಳು (ಪ್ರೊಟಾಪ್ಟಿರಸ್, ಸಿರಟೋಡಸ್, ಲೆಪಿಡೋಸೈರನ್), ಸರೀಸೃಪ-ಸಸ್ತನಿಗಳ ಕೊಂಡಿಗಳಾದ ಪ್ಲಾಟಿಪಸ್, ಎಕಿಡ್ನಾ, ಕಾಂಗರೂ ಅಂತಹಾ ಉದಾಹರಣೆಗಳಾಗಿವೆ.

ev2ಪ್ರಾಣಿಗಳ ಅಂಗರಚನೆಗಳನ್ನು ಹೋಲಿಸಿದಾಗಲೂ (ತುಲನಾತ್ಮಕ ಅಂಗರಚನಾ ಶಾಸ್ತ್ರ) ಜೀವ ವಿಕಾಸವಾದಕ್ಕೆ ಬಹಳಷ್ಟು ಪುರಾವೆಗಳು ದೊರೆಯುತ್ತವೆ. ಪ್ರಾಣಿಗಳ ಭ್ರೂಣಗಳ ಬೆಳವಣಿಗೆಯಲ್ಲೂ ವಿಕಾಸವಾದಕ್ಕೆ ಪುರಾವೆಗಳಿವೆ; ಏಕಕೋಶದ ಯುಗ್ಮವು ಬಹುಕೋಶದ ಭ್ರೂಣವಾಗಿ, ನಂತರ ಅಂಗಾಂಗಗಳು ಮೂಡಿ ಶಿಶುವಿನ ರೂಪವನ್ನು ತಲುಪುವಾಗ ಜೀವ ವಿಕಾಸದ ಮಜಲುಗಳು ಅನಾವರಣಗೊಳ್ಳುತ್ತಾ ಹೋಗುತ್ತವೆ!

ಮನುಷ್ಯನ ಕೈ, ಬೆಕ್ಕಿನ ಮುಂಗಾಲು, ತಿಮಿಂಗಿಲದ ಜಲಪಾದ, ಬಾವಲಿಯ ಪೊರೆ ರೆಕ್ಕೆ– ಇವೆಲ್ಲವುಗಳನ್ನು ಸಮರೂಪಿ ಅಂಗಗಳು (Homologous Organs) ಎನ್ನಲಾಗುತ್ತದೆ. ಹೊರಗೆ ಅವು ಭಿನ್ನವಾಗಿ ಕಾಣಿಸಿದರೂ, ಅವುಗಳ ಕೆಲಸಗಳು ಆಯಾ ಪ್ರಾಣಿಗೆ ಅನುಗುಣವಾಗಿ ಭಿನ್ನವಾಗಿದ್ದರೂ, ಒಳಗಡೆ ಅವೆಲ್ಲವೂ ಐದು ಬೆರಳುಗಳ (ಪಂಚಾಂಗುಲೀಯ) ರಚನೆಯನ್ನು ಹೊಂದಿವೆ. ಅಂದರೆ, ಈ ಎಲ್ಲಾ ಪ್ರಾಣಿಗಳೂ ಸಾಮಾನ್ಯ ಪೂರ್ವಜರಿಂದ, ಪರಸ್ಪರ ಸಂಬಂಧವುಳ್ಳವುಗಳಾಗಿ ವಿಕಾಸ ಹೊಂದಿದವು ಹಾಗೂ ಆಯಾ ಪ್ರಾಣಿಯ ಅಗತ್ಯಕ್ಕನುಸಾರವಾಗಿ ದೇಹದ ಭಾಗಗಳು ಮಾರ್ಪಾಡಾದವು ಎನ್ನುವುದನ್ನು ಇದು ಸೂಚಿಸುತ್ತದೆ.

ev3ಕೆಲವು ಸಮ ವೃತ್ತಿ ಅಂಗಗಳು (Analogous Organs) ಕೂಡಾ ಇವೆ. ಇವು ಹೊರಗಿಂದ ಒಂದೇ ರೀತಿ ಕಾಣಿಸುತ್ತವೆ, ಒಂದೇ ರೀತಿಯ ಕೆಲಸಕ್ಕೆ ಬಳಕೆಯಾಗುತ್ತವೆ, ಆದರೆ ಅವುಗಳ ಒಳ ರಚನೆ ಮತ್ತು ಬೆಳವಣಿಗೆ ಬೇರೆ ಬೇರೆಯಾಗಿರುತ್ತವೆ. ಉದಾಹರಣೆಗೆ, ಕೀಟಗಳು, ಪಕ್ಷಿಗಳು ಹಾಗೂ ಬಾವಲಿಗಳಿಗೆ ರೆಕ್ಕೆಗಳಿವೆ; ಕೀಟಗಳ ರೆಕ್ಕೆಗಳೂ, ಪಕ್ಷಿಗಳ ರೆಕ್ಕೆಗಳೂ ಹೊರಗಿಂದ ಒಂದೇ ಆಗಿವೆ, ಹಾರುವುದಕ್ಕೆ ನೆರವಾಗುತ್ತವೆ; ಆದರೆ ಇವೆರಡರ ಒಳ ರಚನೆಗಳು ಭಿನ್ನವಾಗಿವೆ. ಅಂದರೆ ಇವೆಲ್ಲವೂ ಒಂದೇ ಸಮಸ್ಯೆಗೆ ಒಂದೇ ವಿಧದ ಉತ್ತರಗಳಾಗಿದ್ದರೂ, ಅವು ವಿಕಾಸಗೊಂಡ ಕಾಲವು ಬೇರೆ-ಬೇರೆಯಾಗಿದೆ, ಅವುಗಳ ಮೂಲ ಪೂರ್ವಜರು ಬೇರೆ-ಬೇರೆಯಾಗಿವೆ. ಹಾಗೆಯೇ, ಡಾಲ್ಫಿನ್ ಮತ್ತು ಮೀನುಗಳೆರಡಕ್ಕೂ ಈಜು ರೆಕ್ಕೆಗಳಿವೆಯಾದರೂ, ಡಾಲ್ಫಿನ್ ಜಲವಾಸಿ ಸಸ್ತನಿಯಾಗಿದೆ, ಮೀನು ಜಲವಾಸಿ ಕಶೇರುಕವಾಗಿದೆ, ಇವುಗಳೊಳಗೆ ಕೇವಲ ದೂರದ ಸಂಬಂಧವಿದೆ, ಇವುಗಳ ಈಜು ರೆಕ್ಕೆಗಳಲ್ಲಿ ವಿಕಾಸದ ಸಂಬಂಧವಿಲ್ಲ.

ಇನ್ನು ಕೆಲವು ಅಂಗಗಳು ಪ್ರಾಣಿಗಳ ವಿಕಾಸದ ಪ್ರಕ್ರಿಯೆಯಲ್ಲಿ ಕಳೆದುಹೋಗುತ್ತವೆ ಅಥವಾ ಯಾವುದೇ ಕೆಲಸವಿಲ್ಲದ ಸಣ್ಣ ಅವಶೇಷಗಳಾಗಿ ಉಳಿದುಕೊಳ್ಳುತ್ತವೆ. ಇವನ್ನು ಅವಶೇಷ ಅವಯವಗಳು (Vestigial Organs) ಎನ್ನಲಾಗುತ್ತದೆ. ಉದಾಹರಣೆಗೆ, ಭೂವಾಸಿ ಸಸ್ತನಿಯು ಮತ್ತೆ ಜಲವಾಸಿ ತಿಮಿಂಗಿಲವಾಗಿ ವಿಕಾಸಗೊಂಡಾಗ, ಭೂವಾಸಿಯ ಹಿಂಗಾಲುಗಳ ಮೂಳೆಗಳೂ, ಸೊಂಟದ ಮೂಳೆಗಳೂ ಕಿರಿದಾಗುತ್ತಾ ಹೋಗಿ, ತಿಮಿಂಗಿಲದಲ್ಲಿ ಕೇವಲ ಕಿರು ಅವಶೇಷಗಳಾಗಿ ಉಳಿದಿವೆ. ಮನುಷ್ಯರಲ್ಲಿರುವ ಕರುಳು ಬಾಲ (ಅಪೆಂಡಿಕ್ಸ್), ಕಿವಿಯ ಮೇಲ್ಭಾಗದಲ್ಲಿರುವ ಸಣ್ಣ ಉಬ್ಬು, ಕಣ್ಣಿನ ಒಳಭಾಗದಲ್ಲಿರುವ ಸಣ್ಣ ಪೊರೆ, ಬುದ್ಧಿ ಹಲ್ಲು, ಬಾಲದ ಎಲುಬು ಇತ್ಯಾದಿಗಳು ಇಂಥವೇ ಅವಶೇಷ ಅವಯವಗಳಾಗಿವೆ.

ev4ಜೀವಿಗಳ ವರ್ಣತಂತುಗಳಲ್ಲಿರುವ ಡಿಎನ್‌ಎ ಹಾಗೂ ಅವುಗಳಿಂದ ಉಂಟಾಗುವ ಪ್ರೊಟೀನುಗಳಲ್ಲೂ ಜೀವ ವಿಕಾಸಕ್ಕೆ ಪುರಾವೆಗಳನ್ನು ಕಾಣಬಹುದು. ಉದಾಹರಣೆಗೆ, ಮನುಷ್ಯರ ವಂಶವಾಹಿಗಳಲ್ಲಿ ಶೇ. 8ರಷ್ಟು ವೈರಾಣು ಮೂಲದ ಡಿಎನ್‌ಎ, ಶೇ. 30ರಷ್ಟು ಬ್ಯಾಕ್ಟೀರಿಯಾ ಮೂಲದ ಡಿಎನ್‌ಎ ಇವೆ, ಶೇ. 50ರಷ್ಟು ವಂಶವಾಹಿಗಳು ಇತರ ಜೀವಿಗಳೊಂದಿಗೆ ತಾಳೆಯಾಗುತ್ತವೆ. ನಮ್ಮ ವಂಶವಾಹಿಗಳಿಗೂ, ರೀಸಸ್ ಮಂಗಗಳ ವಂಶವಾಹಿಗಳಿಗೂ ಶೇ. 93ರಷ್ಟು ಸಾಮ್ಯತೆಯಿದೆ, ಮನುಷ್ಯರು ಮತ್ತು ಗೊರಿಲ್ಲಾಗಳ ವಂಶವಾಹಿಗಳಲ್ಲಿ ಶೇ. 98.4ರಷ್ಟು, ಮನುಷ್ಯರು ಮತ್ತು ಚಿಂಪಾಂಜೀ ಹಾಗೂ ಬೊನೊಬೋಗಳ ವಂಶವಾಹಿಗಳಲ್ಲಿ ಶೇ. 98.8ರಷ್ಟು, ಭೂಮಿಯ ಮೇಲಿರುವ ಎಲ್ಲಾ ಮನುಷ್ಯರ ವಂಶವಾಹಿಗಳಲ್ಲಿ ಶೇ. 99.9ರಷ್ಟು ಸಾಮ್ಯತೆಯಿದೆ.

ಪ್ರಾಣಿಗಳ ಪ್ರೊಟೀನುಗಳಲ್ಲೂ ಸಾಮ್ಯತೆಗಳಿರುವುದು ಜೀವ ವಿಕಾಸವಾದವನ್ನು ಇನ್ನಷ್ಟು ಪುಷ್ಟೀಕರಿಸುತ್ತದೆ. ಉದಾಹರಣೆಗೆ, ಮೀನುಗಳ ಹಿಮೋಗ್ಲೋಬಿನ್ ಹಾಗೂ ಮನುಷ್ಯರ ಹಿಮೋಗ್ಲೋಬಿನ್ ನಡುವೆ 125 ಅಮೈನೋ ಆಮ್ಲಗಳ ವ್ಯತ್ಯಾಸವಿದ್ದರೆ, ಕಪ್ಪೆ ಹಾಗೂ ಮನುಷ್ಯರ ಹಿಮೋಗ್ಲೋಬಿನ್ ನಡುವೆ 67, ಕೋಳಿ ಹಾಗೂ ಮನುಷ್ಯರ ಹಿಮೋಗ್ಲೋಬಿನ್ ನಡುವೆ 45, ನಾಯಿ ಹಾಗೂ ಮನುಷ್ಯರ ಹಿಮೋಗ್ಲೋಬಿನ್ ನಡುವೆ 32, ಮಂಗ ಹಾಗೂ ಮನುಷ್ಯರ ಹಿಮೋಗ್ಲೋಬಿನ್ ನಡುವೆ 8, ಗೊರಿಲ್ಲಾ ಹಾಗೂ ಮನುಷ್ಯರ ಹಿಮೋಗ್ಲೋಬಿನ್ ನಡುವೆ ಕೇವಲ 2 ಅಮೈನೋ ಆಮ್ಲಗಳ ವ್ಯತ್ಯಾಸವಿದೆ, ಚಿಂಪಾಂಜೀ ಹಾಗೂ ಮನುಷ್ಯರ ಹಿಮೋಗ್ಲೋಬಿನ್ ಒಂದೇ ತೆರನಾಗಿವೆ.

ev5ಹೀಗೆ, ಜೀವ ವಿಕಾಸವಾದಕ್ಕೆ ಪ್ರಬಲವಾದ ಸಾಕ್ಷ್ಯಾಧಾರಗಳಿವೆ, ಭೂಗ್ರಹದ ಮೇಲಿರುವ ಪ್ರಾಣಿ-ಪಕ್ಷಿ-ಗಿಡ-ಮರಗಳೆಲ್ಲವೂ ಪರಸ್ಪರ ಸಂಬಂಧವುಳ್ಳವು ಎನ್ನುವುದನ್ನು ಇವು ದೃಢಪಡಿಸುತ್ತವೆ. ನಾವೆಲ್ಲರೂ ಈ ಬ್ರಹ್ಮಾಂಡದ ಜಲಜನಕ, ಆಮ್ಲಜನಕ, ಸಾರಜನಕ, ಇಂಗಾಲಗಳಿಂದಲೇ ಮಾಡಲ್ಪಟ್ಟವರು, ಸತ್ತು ಸುಡಲ್ಪಟ್ಟಾಗ ಯಾ ಹೂಳಲ್ಪಟ್ಟಾಗ ಈ ಧಾತುಗಳೆಲ್ಲವೂ ಮತ್ತೆ ಬ್ರಹ್ಮಾಂಡದೊಂದಿಗೇ ಲೀನವಾಗುತ್ತವೆ.

‘ಹ್ಞಾ ಸರ್, ದೆವ್ವ ಪಿಶಾಚಿ ಏನೂ ಇಲ್ಲ ಸರ್, ಅವೆಲ್ಲ ಸುಳ್ಳು ಸರ್’ ಅಂದಳೊಬ್ಬಳು.

‘ಹೌದು ಸರ್, ಅವೆಲ್ಲ ಸುಳ್ಳು’ ಅಂತ ಅಲ್ಲಾ ಮಕ್ಕಳು ದನಿಗೂಡಿಸುತ್ತಿದ್ದಾಗ ಒಬ್ಬ ಹುಡುಗ ‘ಸರ್, ನನ್ನ ಮಾವ ಬೈಕಲ್ಲಿ ಹೋಗ್ತಾ ಇದ್ದಾಗ ಹೆಣ್ಣು ಪಿಶಾಚಿ ಬಂತಂತೆ ಸರ್’ ಅಂದ. ಎಲ್ಲರೂ ಗೊಳ್ಳೆಂದರು, ‘ಏ ಸುಮ್ಮನೆ ಬುರುಡೆ ಬಿಡ್ಬೇಡ’ ಅಂದರು.

ನಮ್ಮೊಳಗಿನ ಭಯಗಳಿಗೆ ಈ ಪ್ರೇತ-ಪಿಶಾಚಿಗಳ ರೂಪ ಕೊಡ್ತೇವೆ, ಅಷ್ಟೇ, ಸತ್ತವರು ಯಾರಿಗೂ ತೊಂದರೆ ಮಾಡುವುದಿಲ್ಲ, ಸತ್ತವರು ಮತ್ತೆ ಅಣು-ಪರಮಾಣು, ಅಷ್ಟೇ. ಈಗೊಂದು ಪ್ರಶ್ನೆ ಕೇಳ್ತೇನೆ. ಮಣಿಪಾಲದ ಗಣೇಶ್ ಪೈ ಎಂಬ ವಿಚಾರವಾದಿಯೊಬ್ಬರ ಪುಸ್ತಕದಲ್ಲಿ ನಾನು ಇದನ್ನು ಓದಿದ್ದೆ. ನಿಮ್ಮ ಉತ್ತರ ಏನಿದೆ ನೋಡೋಣ. ನೀವು ಒಂದು ರೈಲಲ್ಲಿ ಹೋಗಲೇ ಬೇಕಾಗಿದೆ,  ಅದರಲ್ಲಿ ಎಲ್ಲಾ ಸೀಟುಗಳೂ ತುಂಬಿವೆ, ಎರಡೇ ಕೋಣೆ ಖಾಲಿಯಿವೆ, ಒಂದರಲ್ಲಿ ಶವ ಇದೆ, ಇನ್ನೊಂದರಲ್ಲಿ ಚಾಕು-ಚೂರಿ ಎಲ್ಲಾ ಹಿಡಿದಿರುವ ಡಕಾಯಿತನಿದ್ದಾನೆ. ನೀವು ಇವೆರಡರಲ್ಲಿ ಯಾವ ಕೋಣೆಯಲ್ಲಿ ಕುಳಿತುಕೊಳ್ಳುತ್ತೀರಿ?’

‘ಶವದ ಜೊತೆ ಸರ್’ ಎಂದರು ಹೆಚ್ಚಿನವರು, ‘ಡಕಾಯಿತನ ಜೊತೆಗೆ’ ಎಂದ ಒಂದಿಬ್ಬರಿಗೆ ಉಳಿದವರು ‘ಏ’ ಅಂತ ಹೀಯಾಳಿಸಿದ್ದಾಯಿತು, ‘ಶವ ಏನೂ ಮಾಡೋದಿಲ್ಲ, ಡಕಾಯಿತ ಕೊಂದೇ ಹಾಕ್ತಾನೆ’ ಎಂಬ ಬುದ್ಧಿವಾದವೂ ಬಂತು!

‘ಸರ್, ಜ್ಯೊತಿಷಿಗಳೆಲ್ಲಾ ಸುಳ್ಳೇ ಹೇಳ್ತಾರೆ ಸರ್’ ಅಂದನೊಬ್ಬ.

‘ಹೌದು, ಖಂಡಿತ ಸುಳ್ಳೇ’ ಅಂದೆ ನಾನು

‘ಸ್ವಾಮಿಗಳೂ ಹಾಗೆಯೇ ಸರ್’ ಅಂದ ಇನ್ನೊಬ್ಬ.

‘ಎಲ್ಲಾ ಸ್ವಾಮಿಗಳು ಸುಳ್ಳರು ಅಂತ ಹೇಳುವ ಹಾಗಿಲ್ಲ. ತುಂಬ ಚೆನ್ನಾಗಿ ಓದಿಕೊಂದಿರುವವರು, ಸಜ್ಜನರು, ಎಲ್ಲವನ್ನೂ ತ್ಯಜಿಸಿದವರೂ ಇದ್ದಾರೆ, ಜನರನ್ನು ವಿಚಾರಶೀಲರನ್ನಾಗುವಂತೆ ಪ್ರೇರೇಪಿಸುವವರಿದ್ದಾರೆ, ಕಂದಾಚಾರಗಳ ವಿರುದ್ಧ ದನಿಯೆತ್ತುವವರೂ ಇದ್ದಾರೆ. ಮೋಸ ಮಾಡುವವರು, ವ್ಯಾಪಾರ ಮಾಡುವವರು, ಸುಳ್ಳು ಹೇಳುವವರು, ಜಾತಿ-ಮತಗಳ ಹೆಸರಲ್ಲಿ ಸಮಾಜವನ್ನು ಒಡೆಯುವವರು, ಹಿಂಸೆಯನ್ನು ಪ್ರೇರೇಪಿಸುವವರು ಕೂಡ ಇದ್ದಾರೆ. ಅಂಥವರನ್ನು ಗುರುತಿಸಿ ದೂರವಿಡುವುದು ಮುಖ್ಯ. ಅಂತೂ ನೀವೆಲ್ಲಾ ಹೀಗೇ ಪ್ರಶ್ನೆಗಳನ್ನು ಕೇಳಬೇಕು, ಎಲ್ಲವನ್ನೂ ಪ್ರಶ್ನಿಸಬೇಕು. ಈಗ ಹೇಳಿ, 251 ರೂಪಾಯಿಗೆ ಮೊಬೈಲ್ ಫೋನ್ ಕೊಡ್ತೇವೆ ಅಂತ ಮೊನ್ನೆ ಒಂದು ಕಂಪೆನಿ ಹೇಳಿತ್ತಲ್ಲಾ, ಯಾರಾದರೂ ಅರ್ಜಿ ಹಾಕಿದೀರಾ?’

’ನಾನು ಸರ್’ ಅಂತ ಒಬ್ಬ ಕೈ ಎತ್ತಿದ

‘ಹೌದೇನೋ?’ ಅಂತ ಟೀಚರು ದನಿಯೇರಿಸಿದರು.’

‘ಹೋಯ್ತು ನಿನ್ನ ದುಡ್ಡು’ ಅಂದರು ಉಳಿದ ಮಕ್ಕಳು

‘251 ರೂಪಾಯಿಗೆ ಅಂತಹಾ ಮೊಬೈಲು ಕೊಡೋದು ಸಾಧ್ಯವಿದೆಯೇ ಅಂತ ಯೋಚನೆ ಮಾಡಬೇಕಿತ್ತಲ್ವಾ? ಜೀವನದಲ್ಲಿ ಎಲ್ಲವನ್ನೂ ಹೀಗೆಯೇ ಪರಿಶೀಲಿಸಬೇಕು, ಅದೇ ವೈಜ್ಞಾನಿಕ ಮನೋಭಾವ’ ಎಂದೆ.

‘ಸರ್, ಆತ್ಮ ಅಂತ ಇದೆಯಾ’

‘ನಾವು ಮಾಡುವ ಕೆಲಸ, ನಮ್ಮ ಚಿಂತನೆ, ಅದೇ ನಮ್ಮ ಆತ್ಮ, ಅದು ಬಿಟ್ಟರೆ ಬೇರೇನಿಲ್ಲ’

‘ಸರ್, ಕೆಲವರಿಗೆ ಬೆಕ್ಕಿನ ಕಣ್ಣು ಇರ್ತದೆ ಅಲ್ವಾ, ಯಾಕೆ ಸರ್?’

‘ನಮ್ಮ ಚರ್ಮಕ್ಕೆ ಬಣ್ಣವನ್ನು ನೀಡುವ ಕಣಗಳು ಹೇಗೆ ಅನುವಂಶೀಯವಾಗಿ ನಿರ್ಧರಿತವಾಗುತ್ತವೆಯೋ, ಹಾಗೆಯೇ ಕಣ್ಣಿನ ಪಾಪೆಯ (iris) ಬಣ್ಣವೂ ಕೂಡ ಅನುವಂಶೀಯವಾಗಿ ನಿರ್ಧರಿತವಾಗುತ್ತವೆ, ಪಾಪೆಯ ಕಣಗಳಲ್ಲಿ ಉತ್ಪಾದನೆಯಾಗುವ ಮೆಲನಿನ್ ಸಂಯುಕ್ತದ ಪ್ರಮಾಣಕ್ಕೆ ಅನುಗುಣವಾಗಿ ಅದರ ಬಣ್ಣವು ಕಡುಕಪ್ಪಿನಿಂದ ಕಂದು, ನೀಲಿ, ಇತ್ಯಾದಿಯಾಗಿರಬಹುದು’

‘ಮತ್ತೆ ರಾತ್ರಿ ಪ್ರಾಣಿಗಳ ಕಣ್ಣಿಗೆ ಬೆಳಕು ಬಿದ್ದಾಗ ಅವು ಹೊಳೆಯುವುದು ಯಾಕೆ ಸರ್?’

‘ಕೆಲವು ಪ್ರಾಣಿಗಳ ಕಣ್ಣಿನ ಮೇಲೆ ರಾತ್ರಿ ಹೊತ್ತಲ್ಲಿ ಬೆಳಕು ಬಿದ್ದಾಗ, ಅವುಗಳ ಅಕ್ಷಿಪಟಲದ ಹಿಂದೆ ಇರುವ ಪೊರೆಯು ಅದನ್ನು ಪ್ರತಿಫಲಿಸುವುದೇ ಇದಕ್ಕೆ ಕಾರಣ. ಹೀಗೆ ಬೆಳಕನ್ನು ಪ್ರತಿಫಲಿಸುವ ಈ ಪೊರೆಯಿಂದಾಗಿ ಈ ಪ್ರಾಣಿಗಳಿಗೆ ರಾತ್ರಿ ಹೊತ್ತಲ್ಲಿ ಚೆನ್ನಾಗಿ ಕಾಣುವುದಕ್ಕೆ ಸಹಾಯವಾಗುತ್ತದೆ, ಹೆಚ್ಚಾಗಿ ರಾತ್ರಿಯಲ್ಲಿ ತಿರುಗಾಡುವ ಪ್ರಾಣಿಗಳ ಕಣ್ಣುಗಳಲ್ಲೇ ಇಂತಹ ಪೊರೆಯಿರುತ್ತದೆ. ಮಂದ ಬೆಳಕಿನಲ್ಲಿ ತೆಗೆದ ನಮ್ಮ ಫೋಟೋಗಳಲ್ಲಿ ಕಣ್ಣು ಕೆಂಪಾಗಿ ಕಾಣುವುದನ್ನು ನೀವು ಗಮನಿಸಿರಬಹುದು. ಫೋಟೋ ತೆಗೆಯುವಾಗ ಒಮ್ಮೆಗೇ ಜಗಮಗಿಸುವ ಫ್ಲಾಷ್ ಬೆಳಕು ಅಕ್ಷಿಪಟಲದ ಮೇಲೆ ಬಿದ್ದಾಗ, ಅದರ ಹಿಂದಿರುವ ರಕ್ತನಾಳಗಳ ಬಣ್ಣವು ಪ್ರತಿಫಲಿಸುವುದೇ ಇದಕ್ಕೆ ಕಾರಣ.’

‘ಸರ್, ಲೇಸರ್ ಕಣ್ಣಿಗೆ ಬಿದ್ದರೆ ಏನಾಗ್ತದೆ ಸರ್?’

ಲೇಸರ್‌ನಲ್ಲಿ ಒಂದೇ ಬಣ್ಣದ ಬೆಳಕನ್ನು ಕ್ರೋಢೀಕರಿಸಿ ಹಾಯಿಸಲಾಗುವುದರಿಂದ ಅದು ಹೆಚ್ಚು ಶಕ್ತಿಯುತವಾಗಿರುತ್ತದೆ. ಅಕ್ಷಿಪಟಲಕ್ಕೆ ಅಂತಹಾ ಪ್ರಖರ ಬೆಳಕು ಬಿದ್ದಾಗ ತಾತ್ಕಾಲಿಕ ಹಾನಿಯೋ, ಶಾಶ್ವತ ಹಾನಿಯೋ ಆಗಬಹುದು. ಆದ್ದರಿಂದ ಲೇಸರ್ ಉಪಕರಣಗಳನ್ನು ಯದ್ವಾತದ್ವಾ ಬಳಸಬಾರದು, ಮುಖದತ್ತ ಹಿಡಿಯಬಾರದು’

‘ಲೇಸರ್‌ನಿಂದ ಉಪಯೋಗವಿಲ್ಲವೇ?” ಟೀಚರು ಕೇಳಿದರು

‘ಲೇಸರ್ ಕಿರಣಗಳನ್ನು ಹಲವು ಚಿಕಿತ್ಸಾ ಕ್ರಮಗಳಲ್ಲಿ ಬಳಸಲಾಗುತ್ತದೆ. ಕಣ್ಣಿನಲ್ಲಿ ಸಮೀಪ ದೃಷ್ಟಿಯ ಚಿಕಿತ್ಸೆ, ಗ್ಲೋಕೋಮ ಚಿಕಿತ್ಸೆ, ಅಕ್ಷಿಪಟಲದ ಸಮಸ್ಯೆಗಳ ಚಿಕಿತ್ಸೆಯಲ್ಲಿ ಲೇಸರ್ ಬಹಳ ಉಪಯುಕ್ತ. ಇವೆಲ್ಲವನ್ನೂ ನುರಿತ ವೈದ್ಯರಷ್ಟೇ ಬಳಸುತ್ತಾರೆ. ಹಾಗೆಯೇ, ಹಲತರದ ಶಸ್ತ್ರಚಿಕಿತ್ಸೆಗಳಲ್ಲೂ ಇಂದು ಲೇಸರ್ ಬಹಳ ಬಳಕೆಯಾಗುತ್ತಿದೆ, ಚರ್ಮದ ಸಮಸ್ಯೆಗಳ ಚಿಕಿತ್ಸೆಯಲ್ಲಿ, ಅಂದಗಾಣಿಸುವ ಚಿಕಿತ್ಸೆಯಲ್ಲಿ ಕೂಡ ಲೇಸರ್ ಬಳಕೆಯಾಗುತ್ತಿದೆ.”