ಸಕಲ ಸ್ವಾಸ್ಥ್ಯವನ್ನು ಕೆಡಿಸಿ ಆರೋಗ್ಯ ರಕ್ಷಣೆ ಸಾಧ್ಯವೇ?

ಸಕಲ ಸ್ವಾಸ್ಥ್ಯವನ್ನು ಕೆಡಿಸಿ ಆರೋಗ್ಯ ರಕ್ಷಣೆ ಸಾಧ್ಯವೇ? 

ವಾರ್ತಾಭಾರತಿ, ಎಪ್ರಿಲ್ 7, 2022 (ವಿಶ್ವ ಆರೋಗ್ಯ ದಿನ)

ನಮ್ಮ ಭೂಗ್ರಹ, ನಮ್ಮ ಆರೋಗ್ಯ – ಇದು ಈ ವರ್ಷ, ಎಪ್ರಿಲ್ 7, 2022ರ ವಿಶ್ವ ಆರೋಗ್ಯ ದಿನದ ಧ್ಯೇಯಘೋಷ. ಎಲ್ಲರಿಗೂ ಶುದ್ಧ ಗಾಳಿ, ಶುದ್ಧ ನೀರು, ಒಳ್ಳೆಯ ಆಹಾರ ದೊರೆಯುವ, ಜನರ ಕ್ಷೇಮ ಮತ್ತು ಆರೋಗ್ಯಗಳೇ ಅರ್ಥ ವ್ಯವಸ್ಥೆಗಳ ಗುರಿಯಾಗಿರುವ, ನಗರಗಳಲ್ಲಿ ಜೀವನವು ಸಹ್ಯವಾಗಿರುವ, ಮತ್ತು ಜನರು ತಮ್ಮ ಸ್ವಂತ ಹಾಗೂ ತಮ್ಮ ಗ್ರಹದ ಆರೋಗ್ಯದ ಮೇಲೆ ನಿಯಂತ್ರಣವನ್ನು ಹೊಂದಿರುವ ಜಗತ್ತನ್ನು ಮರುಕಲ್ಪಿಸಿಕೊಳ್ಳಲು ಸಾಧ್ಯವೇ ಎನ್ನುವ ಪ್ರಶ್ನೆಯನ್ನು ಈ ಧ್ಯೇಯಘೋಷದೊಡನೆ ಲಗತ್ತಿಸಲಾಗಿದೆ. ಆರೋಗ್ಯ ಎಂದರೆ ದೈಹಿಕ ಆರೋಗ್ಯವಷ್ಟೇ ಅಲ್ಲ, ಮಾನಸಿಕ, ಸಾಮಾಜಿಕ, ಆರ್ಥಿಕ, ಪರಿಸರಗಳ ಸ್ವಾಸ್ಥ್ಯವೆಲ್ಲವೂ ಸೇರಿದರಷ್ಟೇ ಆರೋಗ್ಯ ಎನ್ನುವ ಸಮಗ್ರ ಆರೋಗ್ಯದ ಪರಿಕಲ್ಪನೆಯೊಂದಿಗೆ ಈ ಧ್ಯೇಯವು ಸರಿಹೊಂದುತ್ತದೆಯಾದರೂ, ಈ ವರ್ಷ ಈ ಮೇಲಿನ ಪ್ರಶ್ನೆಯನ್ನು ನಮ್ಮ ಮುಂದೆಯೇ ಇಡಲಾಗಿದೆ, ಅದಕ್ಕೆ ಉತ್ತರವನ್ನು ನಾವೇ ಹುಡುಕಬೇಕಷ್ಟೇ.

ನಮ್ಮ ಭಾರತ, ನಮ್ಮ ಆರೋಗ್ಯ ಎಂಬುದಕ್ಕೆ ಸಂಬಂಧಿಸಿ ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರಗಳನ್ನು ಹುಡುಕಿ ತೆಗೆದರೆ ಅಷ್ಟೇನೂ ಆಶಾದಾಯಕವಾಗಿ ಕಾಣಿಸದು.

ಆರೋಗ್ಯ ರಕ್ಷಣೆಗೆ ನಮ್ಮಲ್ಲಿ ಹಣವಿಲ್ಲ

ಆರೋಗ್ಯ ರಕ್ಷಣೆಯು ನಮ್ಮ ಆದ್ಯತೆಯೇ ಅಲ್ಲ. ಆರೋಗ್ಯಕ್ಕಾಗಿ ತಲಾವಾರು ವೆಚ್ಚದಲ್ಲಿ ನಾವು 182 ದೇಶಗಳಲ್ಲಿ 144ರಲ್ಲಿದ್ದೇವೆ, ಅಂದರೆ ಅತಿ ಕಡಿಮೆ ವ್ಯಯಿಸುವ, ಅತ್ಯಂತ ಹಿಂದುಳಿದಿರುವ ದೇಶಗಳೊಡನೆ ನಾವೂ ಇದ್ದೇವೆ. ಆರೋಗ್ಯಕ್ಕಾಗಿ ನಮ್ಮ ವೆಚ್ಚವು 2001ರಲ್ಲಿ ರಾಷ್ಟ್ರೀಯ ಉತ್ಪನ್ನದ ಶೇ. 4.26 ಇದ್ದುದು, 2013ರಲ್ಲಿ ಶೇ. 3.75 ಆಗಿ, 2015ರ ಬಳಿಕ ಸತತವಾಗಿ ಇಳಿಯುತ್ತಲೇ ಸಾಗಿ 2019ಕ್ಕೆ ಶೇ. 3.01ಕ್ಕೆ ಇಳಿದಿದೆ. ನಾವು ಕೇವಲ ಶೇ.3ರಷ್ಟನ್ನು ವ್ಯಯಿಸುವಲ್ಲಿ, ಅಮೆರಿಕವು ಶೇ. 17, ನಾರ್ವೇ, ಸ್ವೀಡನ್ ಮತ್ತು ಕ್ಯೂಬಾ ಶೇ.11 ವ್ಯಯಿಸುತ್ತವೆ, ನಮ್ಮದೇ ನೆರೆಯ ದೇಶಗಳು ಕೂಡ ಆರೋಗ್ಯಕ್ಕಾಗಿ ನಮಗಿಂತ ಹೆಚ್ಚು ವ್ಯಯಿಸುತ್ತಿವೆ. ಡಾಲರ್ ಲೆಕ್ಕದಲ್ಲಿ ತಲಾವಾರು ವಾರ್ಷಿಕ ವೆಚ್ಚವು ಅಮೆರಿಕಾದಲ್ಲಿ 10623, ನಾರ್ವೇಯಲ್ಲಿ 8239, ಸ್ವೀಡನ್‌ನಲ್ಲಿ 5981, ವಿಶ್ವದ ಸರಾಸರಿ 1172 ಇದ್ದರೆ, ಭಾರತದಲ್ಲಿ ಕೇವಲ 64 ಡಾಲರ್ (4800 ರೂಪಾಯಿ) ಇದೆ. ಸಾರ್ವಜನಿಕ ಆರೋಗ್ಯ ಸೇವೆಗಳಿಗೆ ಮಾಡಲಾಗುತ್ತಿರುವ ವೆಚ್ಚವು ಶೇ.1ರಷ್ಟೇ ಇದೆ; ಕಳೆದ ವರ್ಷದ ಮುಂಗಡ ಪತ್ರದಲ್ಲಿ ಕೋವಿಡ್ ಲಸಿಕೆಗಾಗಿ ರೂ.30000 ಕೋಟಿ (ಈ ವರ್ಷ 5000 ಕೋಟಿ) ಅತಿರಿಕ್ತವಾಗಿ ಕೊಟ್ಟದ್ದನ್ನು ಬಿಟ್ಟರೆ ಈ ಮೂರ್ನಾಲ್ಕು ವರ್ಷಗಳಲ್ಲಿ ಸರಕಾರಿ ಅನುದಾನದಲ್ಲಿ ಯಾವ ಏರಿಕೆಯೂ ಆಗಿಲ್ಲ, ಈ ವರ್ಷದ ಮುಂಗಡ ಪತ್ರದಲ್ಲಿ ಕಳೆದ ವರ್ಷಕ್ಕಿಂತ ಕೇವಲ ಶೇ. 0.23 ಮಾತ್ರ ಹೆಚ್ಚಳವಾಗಿದೆ. ಈಗಿನ ಸರಕಾರವೇ 2017ರಲ್ಲಿ ಪ್ರಕಟಿಸಿದ ರಾಷ್ಟ್ರೀಯ ಆರೋಗ್ಯ ನೀತಿಯಲ್ಲಿ 2025ರ ವೇಳೆಗೆ ಸಾರ್ವಜನಿಕ ಆರೋಗ್ಯ ಸೇವೆಗಳಿಗೆ ಉತ್ಪನ್ನದ ಶೇ.2.5ರಷ್ಟು ಒದಗಿಸುವುದಾಗಿ ಹೇಳಿದ್ದರೂ, ಅದಕ್ಕೆ ತಕ್ಕ ಯಾವುದೇ ಪ್ರಯತ್ನಗಳು ಎಲ್ಲೂ ಕಾಣುತ್ತಿಲ್ಲ.

ಮೇಲೆ ಹೇಳಿದಂತೆ, ಆರೋಗ್ಯಕ್ಕಾಗಿ ವೆಚ್ಚದಲ್ಲಿ ಸರಕಾರದ ಪಾಲು ಕೇವಲ ಶೇ.28 ಮಾತ್ರವಿದ್ದು, ಇನ್ನುಳಿದ ಶೇ.72ರಷ್ಟನ್ನು ಜನರೇ ತಮ್ಮ ಕಿಸೆಯಿಂದ ಖರ್ಚು ಮಾಡುತ್ತಿದ್ದಾರೆ; ಹೋಲಿಕೆಯಾಗಿ, ಅತ್ಯುತ್ತಮವಾದ ಸಾರ್ವಜನಿಕ ಆರೋಗ್ಯ ಸೇವೆಗಳಿರುವ ನಾರ್ವೇ, ಸ್ವೀಡನ್‌ಗಳಲ್ಲಿ ಕೇವಲ ಶೇ. 11-15 ಮಾತ್ರವೇ ಜನರ ಕಿಸೆಗಳಿಂದ ಹೋಗುತ್ತದೆ. ಈ ಸರಕಾರದ ಆರೋಗ್ಯ ನೀತಿಯಂತೆ ಉತ್ಪನ್ನದ ಶೇ.2.5ರಷ್ಟು ಹಣವೊದಗಿಸಿದರೆ ಕಿಸೆಯಿಂದ ಖರ್ಚಾಗುವುದನ್ನು ಶೇ.30ಕ್ಕೆ ಇಳಿಸಬಹುದು ಎಂದು ಆರ್ಥಿಕ ಸಮೀಕ್ಷೆಯಲ್ಲಿ ಹೇಳಲಾಗಿದೆ, ಹಾಗೆಯೇ ಅಲ್ಲಿಗೇ ಬಿಡಲಾಗಿದೆ. ಆರೋಗ್ಯಕ್ಕಾಗಿ ಕಿಸೆಯಿಂದಲೇ ಖರ್ಚು ಮಾಡುವ ಕಾರಣಕ್ಕೆ ಪ್ರತೀ ವರ್ಷ ಸುಮಾರು 6 ಕೋಟಿಯಷ್ಟು ಜನರು ಬಡತನಕ್ಕೆ ತಳ್ಳಲ್ಪಡುತ್ತಿದ್ದಾರೆ ಎಂದು ನೀತಿ ಆಯೋಗ ಹೇಳಿದೆ, ಅನಾರೋಗ್ಯ ಮತ್ತು ಅದಕ್ಕಾಗುವ ಖರ್ಚುಗಳು 2019ರಲ್ಲಿ ಶೇ.19ರಷ್ಟು ಆತ್ಮಹತ್ಯೆಗಳಿಗೆ ಕಾರಣವಾದವು ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಕೇಂದ್ರವು ವರದಿ ಮಾಡಿದೆ, ಅವುಗಳೂ ಅಲ್ಲಲ್ಲಿಗೇ ಮುಗಿದಿವೆ.

ಮತ್ತೆ ಏರತೊಡಗಿರುವ ಶಿಶು ಮರಣಗಳು

ಶಿಶು ಮರಣ ಪ್ರಮಾಣ ಎಂಬ ಮಾನದಂಡವು ಸಾಮಾಜಿಕ-ಆರ್ಥಿಕ ಸ್ಥಿತಿಗತಿ, ಪೌಷ್ಠಿಕ ಆಹಾರ, ಆರೋಗ್ಯ ಸೇವೆಗಳ ಗುಣಮಟ್ಟ ಮತ್ತು ಲಭ್ಯತೆ ಎಲ್ಲವನ್ನೂ ಅವಲಂಬಿಸಿ, ಒಟ್ಟಾರೆಯಾಗಿ ಸಮಾಜದ ಸ್ವಾಸ್ಥ್ಯವನ್ನು, ಮಕ್ಕಳನ್ನು ಎಷ್ಟು ಚೆನ್ನಾಗಿ ರಕ್ಷಿಸುತ್ತೇವೆ ಎನ್ನುವುದನ್ನು ಸೂಚಿಸುತ್ತದೆ. ನಮ್ಮ ದೇಶವು 1947ರಲ್ಲಿ ಸ್ವತಂತ್ರಗೊಂಡಾಗ ಶಿಶು ಮರಣ ಪ್ರಮಾಣವು 200ರಷ್ಟಿತ್ತು, ಅಂದರೆ ಸಾವಿರಕ್ಕೆ 200 ಮಕ್ಕಳು ಹುಟ್ಟಿದ ಒಂದು ವರ್ಷದೊಳಗೆ ಸಾವನ್ನಪ್ಪುತ್ತಿದ್ದರು. ಆಗ ದೇಶದಲ್ಲಿ ಶೇ.72ರಷ್ಟು ಬಡತನವಿತ್ತು, ಸಾಕ್ಷರತೆಯು ಕೇವಲ ಶೇ. 20ರಷ್ಟಿತ್ತು, ನಿರೀಕ್ಷಿತ ಸರಾಸರಿ ಜೀವಿತಾವಧಿಯು 31 ವರ್ಷಗಳಷ್ಟೇ ಇತ್ತು. ನಂತರದ 70 ವರ್ಷಗಳಲ್ಲಿ ನಾವು ಸಾಮಾಜಿಕವಾಗಿ, ಆರ್ಥಿಕವಾಗಿ ಅಭಿವೃದ್ಧಿ ಹೊಂದಿ, ಆರೋಗ್ಯ ಸೇವೆಗಳೂ ಬಲಗೊಂಡು, ಸೋಂಕು ರೋಗಗಳ ವಿರುದ್ಧ ಮಕ್ಕಳಿಗೆ ವ್ಯಾಪಕವಾಗಿ ಲಸಿಕೆಗಳನ್ನು ಉಚಿತವಾಗಿ ನೀಡಿ, ಔಷಧ ಉತ್ಪಾದನೆಯಲ್ಲೂ ಸ್ವಾವಲಂಬಿಗಳಾಗಿ 2014ರ ವೇಳೆಗೆ ಬಡತನದ ಮಟ್ಟವು ಶೇ.17ಕ್ಕಿಳಿಯಿತು, ಸಾಕ್ಷರತೆಯು ಶೇ.78ಕ್ಕೇರಿತು, ನಿರೀಕ್ಷಿತ ಜೀವಿತಾವಧಿಯು 67 ವರ್ಷಗಳಷ್ಟಾಯಿತು. ಇದೇ ವೇಳೆಗೆ, ಶಿಶು ಮರಣ ಪ್ರಮಾಣವು 200ರಿಂದ ಕೇವಲ 36ಕ್ಕಿಳಿಯಿತು, ಕೇರಳ ಹಾಗೂ ಗೋವಾಗಳಲ್ಲೂ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲೂ 9-11ಕ್ಕಿಳಿಯಿತು. 

ಶಿಶು ಮರಣ ಪ್ರಮಾಣದಲ್ಲಿ ಮೊದಲ 70 ವರ್ಷಗಳ ನಿರಂತರ ಇಳಿಕೆಯು 2016ರ ನೋಟು ರದ್ದತಿಯ ಅವಾಂತರದ ಬಳಿಕ ನಿಧಾನಗೊಂಡಿದೆ, ಕೆಲವು ಹಿಂದುಳಿದ ಪ್ರದೇಶಗಳಲ್ಲಿ ಮತ್ತೆ ಏರತೊಡಗಿದೆ. ಈ ಮೊದಲು 2005ರಿಂದ 2016ರವರೆಗೆ ವರ್ಷಕ್ಕೆ ಸರಾಸರಿಯಾಗಿ ಶೇ.4.8ರಷ್ಟು ಇಳಿಯುತ್ತಿದ್ದ ಶಿಶು ಮರಣ ಪ್ರಮಾಣವು 2017ರಲ್ಲಿ ಶೇ. 2.9ರಷ್ಟು, ಮತ್ತು 2018ರಲ್ಲಿ ಶೇ.3.1ರಷ್ಟು ಮಾತ್ರ ಇಳಿಯಿತು. ಕಳೆದ ಐದು ವರ್ಷಗಳಲ್ಲಿ ಹೆಚ್ಚಿನ ನಗರಗಳಲ್ಲಿ ಅದು ಇಳಿಯುವ ಬದಲು ಮತ್ತೆ ಏರತೊಡಗಿದೆ; 2015-16 ಮತ್ತು 2019-20ರ ದಾಖಲೆಗಳಂತೆ 15 ರಾಜ್ಯಗಳ ಪೈಕಿ 7 ರಲ್ಲಿ ಅದು ಏರಿದೆ. ಆಂಧ್ರ ಪ್ರದೇಶ (20 ರಿಂದ 30ಕ್ಕೆ), ಬಿಹಾರ (34 ರಿಂದ 43ಕ್ಕೆ), ತ್ರಿಪುರಾ (12 ರಿಂದ 23ಕ್ಕೆ) ಮತ್ತು ಮೇಘಾಲಯ (16 ರಿಂದ 24ಕ್ಕೆ) ಗಳಲ್ಲಿ ಅತ್ಯಂತ ಹೆಚ್ಚು ಏರಿಕೆಯಾಗಿದೆ, ಕರ್ನಾಟಕದಲ್ಲಿ 19 ರಿಂದ 21ಕ್ಕೆ ಏರಿದೆ;  ಜಮ್ಮು-ಕಾಶ್ಮೀರ (37 ರಿಂದ 15ಕ್ಕೆ), ಕೇರಳ (6 ರಿಂದ 4ಕ್ಕೆ) ಮತ್ತು ಮಿಜೋರಂ (31 ರಿಂದ 21ಕ್ಕೆ) ಗಳಲ್ಲಿ ಮಾತ್ರವೇ ಅದು ಇಳಿಕೆಯಾಗಿದ್ದರೆ, ಬೇರೆಲ್ಲಾ ರಾಜ್ಯಗಳಲ್ಲಿ ಅಲ್ಲಿಗೇ ನಿಂತಿದೆ ಯಾ ಏರಿದೆ. ಒಟ್ಟಿನಲ್ಲಿ ಭಾರತದಲ್ಲಿ ವರ್ಷಕ್ಕೆ 5,26,000 ಶಿಶುಗಳು ಸಾವನ್ನಪ್ಪುತ್ತಿದ್ದಾರೆ, ಇಲ್ಲಿ ಮಾತ್ರವೇ ಹೆಣ್ಣು ಮಕ್ಕಳು ಶೇ. 8ರಷ್ಟು ಹೆಚ್ಚು ಸಾಯುತ್ತಿದ್ದಾರೆ.

ಕೊರೋನ ನೆಪದಲ್ಲಿ ಆರೆಂಟು ತಿಂಗಳು ಆರೋಗ್ಯ ಸೇವೆಗಳನ್ನು ಸ್ಥಬ್ಧಗೊಳಿಸಿದ್ಧರಿಂದ ಮಕ್ಕಳ ಆರೈಕೆ, ಮಕ್ಕಳಿಗೆ ಡಿಪಿಟಿ, ಪೋಲಿಯೋ ಇತ್ಯಾದಿ ಸಾರ್ವತ್ರಿಕ ಲಸಿಕೆ ಹಾಕುವಿಕೆ, ಸಾಮಾನ್ಯ ವೈದ್ಯಕೀಯ ಚಿಕಿತ್ಸೆಗಳು, ಪ್ರಸವಪೂರ್ವ ಪರೀಕ್ಷೆಗಳು ಎಲ್ಲಕ್ಕೂ ಅಡ್ಡಿಯಾಯಿತು, ಹೆರಿಗೆಗೆ ಆಸ್ಪತ್ರೆಗಳು ದೊರೆಯುವುದಕ್ಕೆ ತೊಡಕಾಯಿತು. ಈ ಕಾರಣಗಳಿಂದ ಲಸಿಕೆ ಹಾಕುವುದು ಶೇ. 35ರಷ್ಟು ಕಡಿಮೆಯಾಯಿತು, ಕುಪೋಷಿತ ಮಕ್ಕಳ ಆರೈಕೆಗೆ ಶೇ.80ರಷ್ಟು ಅಡ್ಡಿಯಾಯಿತು. ಇದರಿಂದಾಗಿ, ವಿವಿಧ ಕೋವಿಡೇತರ ಕಾರಣಗಳಿಂದ ಐದು ವರ್ಷಕ್ಕೆ ಕೆಳಗಿನ ಮಕ್ಕಳ ಸಾವಿನ ಪ್ರಮಾಣವು ಶೇ. 15 ರಷ್ಟು ಹೆಚ್ಚಿ ಸುಮಾರು 2 ಲಕ್ಷ ಮಕ್ಕಳು ಅಸುನೀಗಿರಬಹುದು, 7700ಕ್ಕೂ ಹೆಚ್ಚು ತಾಯಂದಿರು ಅಸುನೀಗಿರಬಹುದು, ಸುಮಾರು 60000 ಶಿಶುಗಳು ಗರ್ಭದಲ್ಲೇ ಮರಣ ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.

ಇದ್ದೂ ದೊರೆಯದಾಗಿರುವ ವೈದ್ಯರು

ಪ್ರಾಥಮಿಕ ಆರೋಗ್ಯ ಸೇವೆಗಳು, ರೋಗ ನಿಯಂತ್ರಣ, ಮಕ್ಕಳು-ಮಹಿಳೆಯರ ಆರೈಕೆ ಎಲ್ಲವೂ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲೇ ನಡೆಯಬೇಕಿದ್ದು, ಖಾಸಗಿ ವೈದ್ಯಕೀಯ ಸೇವೆಗಳು ಕೇವಲ ಚಿಕಿತ್ಸೆಯಲ್ಲಷ್ಟೇ ಆಸಕ್ತವಾಗಿರುತ್ತವೆ. ನಮ್ಮ ದೇಶದಲ್ಲಿ ತೊಂಬತ್ತರ ದಶಕದಿಂದೀಚೆಗೆ ಆರೋಗ್ಯ ಸೇವೆಗಳು ಹಾಗೂ ವೈದ್ಯಕೀಯ ಶಿಕ್ಷಣಗಳನ್ನು ಖಾಸಗೀಕರಣಗೊಳಿಸುತ್ತಿರುವುದರಿಂದ ಸಾರ್ವಜನಿಕ ಆರೋಗ್ಯ ಸೇವೆಗಳು ಶಿಥಿಲಗೊಳ್ಳುತ್ತಲೇ ಸಾಗಿವೆ. ದೇಶದಲ್ಲೀಗ ಸುಮಾರು 13 ಲಕ್ಷದಷ್ಟು ಆಧುನಿಕ ವೈದ್ಯರು ನೋಂದಾಯಿತರಿದ್ದು, ಅವರಲ್ಲಿ ಶೇ.80ರಷ್ಟು ಸಕ್ರಿಯರಾಗಿದ್ದಾರೆಂದರೂ, 1300 ಜನರಿಗೆ ಒಬ್ಬ ವೈದ್ಯರಿರುವಂತಾಗಿದೆ. ಆದರೆ ಇಷ್ಟೊಂದು ವೈದ್ಯರಿದ್ದರೂ, ಅವರ ನಿಯೋಜನೆಯೇ ಸರಿಯಾಗಿಲ್ಲದೆ, ಸಾರ್ವಜನಿಕ ಆರೋಗ್ಯ ಸೇವೆಗಳಲ್ಲಿ 11000 ಜನರಿಗೆ ಒಬ್ಬ ವೈದ್ಯನಷ್ಟೇ ಇರುವಂತಾಗಿದೆ. ಬಿಹಾರದಲ್ಲಿ 23400, ಉತ್ತರ ಪ್ರದೇಶದಲ್ಲಿ 20000, ಜಾರ್ಖಂಡ್‌ನಲ್ಲಿ 18000, ಛತ್ತೀಸಗಢದಲ್ಲಿ 16000 ಜನರಿಗೊಬ್ಬ ವೈದ್ಯರಿದ್ದರೆ, ಮಹಾರಾಷ್ಟ್ರ ಹಾಗೂ ಕರ್ನಾಟಕದಂತಹ ‘ಮುಂದುವರಿದ’ ರಾಜ್ಯಗಳಲ್ಲೂ ಸಾರ್ವಜನಿಕ ಆರೋಗ್ಯ ಸೇವೆಗಳಲ್ಲಿ ಕ್ರಮವಾಗಿ 17000 ಹಾಗೂ 14000 ಜನರಿಗೊಬ್ಬ ವೈದ್ಯರಷ್ಟೇ ಇದ್ದಾರೆ. ಅಂದರೆ ಕರ್ನಾಟಕದಲ್ಲಿ ಸುಮಾರು 80000 ವೈದ್ಯರಿದ್ದರೂ ಸಾರ್ವಜನಿಕ ಆರೋಗ್ಯ ಸೇವೆಗಳಲ್ಲಿ ವೈದ್ಯರ ಲಭ್ಯತೆಯು ಅಗತ್ಯಕ್ಕಿಂತ ಹದಿನೈದು ಪಟ್ಟು ಕಡಿಮೆಯೇ ಇದೆ. ಇದರಿಂದಾಗಿ, ಹೆಚ್ಚಿನ ಹಿಂದುಳಿದ ಭಾಗಗಳಲ್ಲಿ ಜನರು ಬದಲಿ ಪದ್ಧತಿಗಳವರನ್ನೋ, ನಕಲಿ ಚಿಕಿತ್ಸಕರನ್ನೋ ಅವಲಂಬಿಸುವಂತಾಗಿದೆ. ಆರೋಗ್ಯ ಸೇವೆಗಳಿಗಾಗಿ ಶೇ. 70ರಷ್ಟು ವೆಚ್ಚವನ್ನು ಖಾಸಗಿಯಾಗಿ ಕಿಸೆಯಿಂದಲೇ ಭರಿಸಬೇಕಾಗುತ್ತಿರುವುದಕ್ಕೂ ಇದುವೇ ಪ್ರಮುಖ ಕಾರಣವಾಗಿದೆ. ದಾದಿಯರು ಮತ್ತಿತರ ಆರೋಗ್ಯ ಸಿಬ್ಬಂದಿಯ ಕೊರತೆಯು ಇನ್ನೂ ಉತ್ಕಟವಾಗಿದೆ.

ಆದ್ದರಿಂದ ಈಗಿನ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮಾಡುತ್ತಿರುವಂತೆ ಆರೋಗ್ಯ ಸೇವೆಗಳನ್ನೂ, ವೈದ್ಯಕೀಯ ಶಿಕ್ಷಣವನ್ನೂ ಖಾಸಗಿ ಹಿತಾಸಕ್ತಿಗಳಿಗೊಪ್ಪಿಸಿ, ಇನ್ನಷ್ಟು ಖಾಸಗಿ ವೈದ್ಯಕೀಯ ಕಾಲೇಜುಗಳನ್ನೂ, ಬೃಹತ್ ಖಾಸಗಿ ಆಸ್ಪತ್ರೆಗಳನ್ನೂ ತೆರೆಯಲು ಉತ್ತೇಜನ ನೀಡುವುದರಿಂದ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಹಿಡಿದು ಜಿಲ್ಲಾಸ್ಪತ್ರೆಗಳವರೆಗೆ ಎಲ್ಲವನ್ನೂ ಖಾಸಗಿಯವರಿಗೆ ವಹಿಸುವುದರಿಂದ,  ಯಶಸ್ವಿನಿ ಇತ್ಯಾದಿ ಹೆಸರಲ್ಲಿ ಜನರನ್ನು ಖಾಸಗಿ ಆಸ್ಪತ್ರೆಗಳತ್ತ ತಳ್ಳಿ ಸರಕಾರವೇ ಅವುಗಳ ತಿಜೋರಿ ತುಂಬುವುದರಿಂದ ಈಗಿರುವ ಸಮಸ್ಯೆಗಳು ಇನ್ನಷ್ಟು ಬಿಗಡಾಯಿಸುವುದಲ್ಲದೆ ಸುಧಾರಣೆಯಾಗಲು ಸಾಧ್ಯವಿಲ್ಲ. ಆಯುಷ್ ಉತ್ತೇಜಿಸುವ ನೆಪದಲ್ಲಿ ಆಧುನಿಕ ವೈದ್ಯವಿಜ್ಞಾನವನ್ನೇ ಬದಿಗೊತ್ತಿ ನಾಶ ಮಾಡಹೊರಟಿರುವುದು ಇಡೀ ಆರೋಗ್ಯ ವ್ಯವಸ್ಥೆಗೆ ಮಾರಕವಾಗಲಿದೆ.

ಪರಿಸರದ ಸ್ವಾಸ್ಥ್ಯವು ಅತಿಯಾಗಿ ಕೆಟ್ಟಿದೆ

ನಮ್ಮ ಆರೋಗ್ಯ ಸೇವೆಗಳ ದುಸ್ಥಿತಿ ಇದಾದರೆ ನಮ್ಮಲ್ಲಿ ಶುದ್ಧ ಗಾಳಿ, ಶುದ್ಧ ನೀರು, ಒಳ್ಳೆಯ ಆಹಾರದ ಗತಿ ಇನ್ನೂ ಚಿಂತಾಜನಕವಿದೆ.

ನೀರಿನ ಗುಣಮಟ್ಟದಲ್ಲಿ ಭಾರತವು 122 ದೇಶಗಳಲ್ಲಿ 120ನೇ ಸ್ಥಾನದಲ್ಲಿದೆ. ದೇಶದ 351 ನದಿಗಳು ಅತಿಯಾಗಿ ಕಲುಷಿತಗೊಂಡಿವೆ, ಅಂತಹ 17 ನದಿಗಳು ಕರ್ನಾಟಕದಲ್ಲೇ ಇವೆ. ದೇಶದ ಶೇ.80 ಜನರಿಗೆ ಶುದ್ಧವಾದ ನೀರೇ ದೊರೆಯುತ್ತಿಲ್ಲ, ಪ್ರತೀ ವರ್ಷ ಒಂದೂವರೆ ಲಕ್ಷ ಮಕ್ಕಳು ಈ ಕಾರಣದಿಂದ ವಾಂತಿ-ಭೇದಿಯಿಂದಾಗಿ ಸಾವನ್ನಪ್ಪುತ್ತಿದ್ದಾರೆ.

ಅತಿ ಹೆಚ್ಚು ವಾಯುಮಾಲಿನ್ಯವಿರುವ ಜಗತ್ತಿನ 10 ನಗರಗಳಲ್ಲಿ 9 ನಮ್ಮ ದೇಶದಲ್ಲೇ ಇವೆ, 2019ರಲ್ಲಿ ದೇಶದ 102 ಊರುಗಳು ವಾಯುಮಾಲಿನ್ಯ ಪೀಡಿತವೆಂದು ಗುರುತಿಸಲ್ಪಟ್ಟಿದ್ದರೆ, 2021ಕ್ಕೆ ಅವು 132ಕ್ಕೆ ಏರಿವೆ. ದೇಶದ ಶೇ.93ರಷ್ಟು ಜನರ ಉಸಿರೊಳಗೆ ಇಂಥ ಮಲಿನ ಗಾಳಿಯೇ ಹೊಕ್ಕುತ್ತಿದೆ, ಇದೊಂದೇ ಕಾರಣಕ್ಕೆ ಭಾರತೀಯರ ಸರಾಸರಿ ಜೀವಿತಾವಧಿಯು ಒಂದೂವರೆ ವರ್ಷ ಕತ್ತರಿಸಲ್ಪಡುತ್ತಿದೆ. ಮಾತ್ರವಲ್ಲ, ನೆಲ-ಜಲ-ಗಾಳಿಗಳ ಮಾಲಿನ್ಯದಿಂದ ವರ್ಷಕ್ಕೆ 8000 ಕೋಟಿ ಡಾಲರ್, ಅಂದರೆ ಆರು ಲಕ್ಷ ಕೋಟಿ ರೂಪಾಯಿ, ನಷ್ಟವಾಗುತ್ತಿದೆ.

ಜಾಗತಿಕ ಹಸಿವಿನ ಸೂಚ್ಯಂಕದಲ್ಲೂ ಭಾರತದ ಸ್ಥಾನವು ಕುಸಿಯುತ್ತಲೇ ಸಾಗಿದ್ದು, 116 ದೇಶಗಳಲ್ಲಿ ನಾವು 101ನೇ ಸ್ಥಾನದಲ್ಲಿದ್ದೇವೆ, ಅಫಘಾನಿಸ್ಥಾನವನ್ನುಳಿದು ಉಪಖಂಡದ ಇತರೆಲ್ಲಾ ದೇಶಗಳ ಸ್ಥಿತಿಯು ನಮಗಿಂತ ಉತ್ತಮವಿದೆ. ಅತಿ ಗಂಭೀರ ಹಸಿವಿನ ಸಮಸ್ಯೆಯಿರುವ 31 ದೇಶಗಳಲ್ಲಿ ಭಾರತವೂ ಸೇರಿಕೊಂಡಿದೆ. ಮೊದಲೇ ಸುಮಾರು ಶೇ. 30 ಮಕ್ಕಳಲ್ಲಿ ಕುಪೋಷಣೆಯಿದ್ದುದು, ಕೋವಿಡ್ ಭಯದಲ್ಲಿ ಅವೈಜ್ಞಾನಿಕವಾಗಿ ಲಾಕ್ ಡೌನ್, ಶಾಲೆ ಮುಚ್ಚುಗಡೆ, ಬಿಸಿಯೂಟ ನಿಲುಗಡೆ ಮಾಡಿದ್ದರಿಂದಾಗಿ ಇನ್ನಷ್ಟು ವಿಷಮಿಸಿ ಶೇ. 40ನ್ನು ಮೀರುವಂತಾಗಿದೆ. ಹಾಗೆಯೇ, ಮಹಿಳೆಯರಲ್ಲಿ ರಕ್ತಹೀನತೆ, ಗರ್ಭಿಣಿಯರ ನ್ಯೂನಪೋಷಣೆಗಳೂ ಹೆಚ್ಚುತ್ತಲೇ ಇದ್ದು, ದೇಶದ ಭವಿಷ್ಯವನ್ನೇ ಕುಂಠಿತಗೊಳಿಸಲಿವೆ.

ಆರೋಗ್ಯ, ಶಿಕ್ಷಣ ಹಾಗೂ ಜೀವನ ಮಟ್ಟಗಳನ್ನು ಆಧರಿಸಿರುವ ಜಾಗತಿಕ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲೂ ಭಾರತದ ಸ್ಥಾನವು ಕುಸಿಯುತ್ತಿದ್ದು, 2020ರಲ್ಲಿ 189 ದೇಶಗಳಲ್ಲಿ 131ನೇ ಸ್ಥಾನಕ್ಕಿಳಿದಿದೆ. ಭಾರತದಲ್ಲಿ 2019ರಲ್ಲಿ ನಿರೀಕ್ಷಿತ ಜೀವಿತಾವಧಿಯು 69.7 ವರ್ಷಗಳಿದ್ದಲ್ಲಿ, ಬಾಂಗ್ಲಾದೇಶದಲ್ಲಿ ನಮ್ಮನ್ನೂ ಮೀರಿಸಿ 72.6 ವರ್ಷಗಳಷ್ಟಾಗಿದೆ. ಸಹಜವಾಗಿಯೇ, ಜಾಗತಿಕ ಸಂತೋಷದ ಸೂಚ್ಯಂಕದಲ್ಲಿ ಭಾರತವು 146 ದೇಶಗಳಲ್ಲಿ 139ನೇ ಸ್ಥಾನದಲ್ಲಿದೆ, ಕೊನೆಯ ಸ್ಥಾನದಲ್ಲಿರುವ ಅಫ್ಘಾನಿಸ್ತಾನವನ್ನು ಬಿಟ್ಟರೆ ಈ ಉಪಖಂಡದ ಎಲ್ಲಾ ದೇಶಗಳೂ ನಮಗಿಂತ ಹೆಚ್ಚು ಸಂತಸದಲ್ಲಿವೆ.

ಆರೋಗ್ಯ ರಕ್ಷಣೆಯೇ ಚರ್ಚೆಯ ವಿಷಯವಾಗಲಿ

ಹೀಗೆ ಭಾರತೀಯರ ಸಂತಸವನ್ನು ಹರಣ ಮಾಡಿ, ನೆಲ-ಜಲ-ಗಾಳಿಗಳನ್ನು ಮಲಿನ ಮಾಡಿ, ರಟ್ಟೆಯ ಕೆಲಸ, ಹೊಟ್ಟೆಯ ಅನ್ನವನ್ನು ಕಸಿದು, ಆರೋಗ್ಯ ಸೇವೆಗಳನ್ನು ಮಲಗಿಸಿರುವಾಗ ನಮ್ಮ ಆರೋಗ್ಯವು ನಮ್ಮ ನಿಯಂತ್ರಣದಲ್ಲಿರುವಂಥ ಸಮಾಜವನ್ನು ಕಲ್ಪಿಸಲು ಸಾಧ್ಯವೇ ಎಂದು ವಿಶ್ವ ಆರೋಗ್ಯ ದಿನದಂದು ಪ್ರಶ್ನಿಸುವುದು ಭೀಕರವಾದ ಕುಹಕವಾಗುತ್ತದೆ. ಪರಿಸರ ನಾಶ ಮಾಡಿ ಇಲೆಕ್ಟ್ರಿಕ್ ಕಾರು ಬಿಡುವುದು, ಔಷಧಗಳನ್ನೆಲ್ಲ ವಿಪರೀತ ತುಟ್ಟಿಯಾಗಿಸಿ ಒಂದಷ್ಟನ್ನು ಜನೌಷಧಿ ಎನ್ನುವುದು, ಕೆಲಸ ಕಸಿದು, ಬದುಕನ್ನು ಹೈರಾಣಾಗಿಸಿ ಒಂದಿಷ್ಟು ಉಚಿತ ರೇಷನ್ ಕೊಡುವುದು, ಶಿಕ್ಷಣವನ್ನು ಹಾಳುಗೆಡವಿ ಕೌಶಲಾಭಿವೃದ್ಧಿ ಎನ್ನುವುದು, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಶಿಥಿಲಗೊಳಿಸಿ, ಎಲ್ಲವನ್ನೂ ಖಾಸಗಿಯವರಿಗೊಪ್ಪಿಸಿ ಬಳಿಕ ಯಶಸ್ವಿನಿ, ಆಯುಷ್ಮಾನ್ ಭಾರತ್ ಹೆಸರಲ್ಲಿ ಅಲ್ಲಿಗೇ ದೂಡುವುದು ನಮ್ಮ ದೇಶವನ್ನು ಎಲ್ಲಾ ಸೂಚ್ಯಂಕಗಳಲ್ಲೂ ಇನ್ನಷ್ಟು ಕೆಳತಳ್ಳುವುದು ಖಂಡಿತ. ಇಂಥ ಜನವಿರೋಧಿಯಾದ, ಪರಿಸರ ವಿರೋಧಿಯಾದ, ದೈಹಿಕ, ಮಾನಸಿಕ, ಸಾಮಾಜಿಕ, ಆರ್ಥಿಕ ಸ್ವಾಸ್ಥ್ಯಕ್ಕೆ ಕಂಟಕವಾದ ನೀತಿಗಳನ್ನು ನಾವು ಪ್ರಶ್ನಿಸದಂತೆ ಮಾಡಲೆಂದೇ ಮಕ್ಕಳ ಬಟ್ಟೆ ಹೇಗಿರಬೇಕು, ಹಬ್ಬದ ಮಾಂಸ ಹೇಗೆ ಕತ್ತರಿಸಬೇಕು, ಯಾರು ಎಲ್ಲಿ ಮಾರಬೇಕು ಎಂಬಿತ್ಯಾದಿಗಳನ್ನೇ ದೊಡ್ಡದಾಗಿಸಿ ನಮ್ಮ-ನಮ್ಮೊಳಗೆ ಹೊಡೆದಾಡಿಸಲಾಗುತ್ತಿದೆ ಎನ್ನುವುದು ಅರ್ಥವಾಗದಿದ್ದರೆ ಆರೋಗ್ಯ ದಿನಾಚರಣೆಗೂ ಅರ್ಥವಿರದು.

Be the first to comment

Leave a Reply

Your email address will not be published.


*