ದೇಶದ ಆಸ್ತಿಯೆಲ್ಲ ಮಾರಿಯಾಯಿತು, ಇನ್ನು ನಾಗರಿಕರ ಮಾಹಿತಿ ಮಾರಾಟಕ್ಕೆ ಚಾಲನೆ

ದೇಶದ ಆಸ್ತಿಯೆಲ್ಲ ಮಾರಿಯಾಯಿತು, ಇನ್ನು ನಾಗರಿಕರ ಮಾಹಿತಿ ಮಾರಾಟಕ್ಕೆ ಚಾಲನೆ

ಹೊಸತು, ನವೆಂಬರ್ 2021, ಪುಟ 24-28

ದೇಶದ ಎಲ್ಲಾ ನಾಗರಿಕರಿಗೆ ಆರೋಗ್ಯ ಗುರುತು ಚೀಟಿ ನೀಡುವ ಯೋಜನೆಯನ್ನು ಮಾನ್ಯ ಪ್ರಧಾನಮಂತ್ರಿ ಸೆಪ್ಟೆಂಬರ್ 27, 2021ರಂದು ಘೋಷಿಸಿದ್ದಾರೆ, ಕೆಲವರಿಗೆ ಈಗಾಗಲೇ ಅದನ್ನು ನೀಡಿಯಾಗಿದೆ ಎಂದೂ ಹೇಳಿದ್ದಾರೆ. ಅದರ ಜೊತೆಯಲ್ಲೇ, ಕೊರೋನ ಲಸಿಕೆ ಹಾಕುವುದಕ್ಕೆ ಎಲ್ಲರ ಫೋನುಗಳೊಳಗೆ ತೂರಿಸಲಾಗಿರುವ ಕೋವಿನ್ ಆಪ್ ಒಂದು ಮಹತ್ಸಾಧನೆ ಎಂದು ಹೊಗಳಿಕೊಂಡಿದ್ದಾರೆ. ಈ ಸರಕಾರವು ಒಂದರ ಹಿಂದೊಂದರಂತೆ ಇಂಥ ಆಕರ್ಷಕವೆನಿಸುವ ಘೋಷಣೆಗಳನ್ನು ಮಾಡುತ್ತಲೇ ಸಾಗಿರುವಾಗ ಇವನ್ನು ವಿಮರ್ಶಿಸಿ ಪ್ರಶ್ನಿಸಬೇಕಾದ ಮಾಧ್ಯಮಗಳು, ವಿರೋಧ ಪಕ್ಷಗಳು, ಹಿತಾಸಕ್ತರು ತೆಪ್ಪಗಿದ್ದು ಸಹಿಸಿಕೊಳ್ಳುವುದು ಸಾಮಾನ್ಯವಾಗಿಬಿಟ್ಟಿದೆ. ಈ ಸರಕಾರದ ಯೋಜನೆಗಳೆಲ್ಲವೂ ದೇಶವಾಸಿಗಳ ಕತ್ತಿನುರುಳುಗಳಾಗುತ್ತಿರುವಾಗ ಈ ಹೊಸ ಯೋಜನೆಯ ಮರ್ಮವನ್ನು ಕೆದಕುವ ಅಗತ್ಯವಿಲ್ಲವೇ?

ಈ ಸರಕಾರವು ಹೇಳುವುದೊಂದು, ಮಾಡುವುದೇ ಇನ್ನೊಂದು ಎನ್ನುವುದೀಗ ನಿಯಮವೇ ಆಗಿದ್ದು, ಈ ಆರೋಗ್ಯ ಚೀಟಿಯ ಯೋಜನೆಯಲ್ಲೂ ಅದುವೇ ಕಂಡುಬರುತ್ತಿದೆ. ಸ್ವಾತಂತ್ರ್ಯಾನಂತರ ಈ ದೇಶದಲ್ಲಿ ಏನೇನೂ ಆಗಿಯೇ ಇಲ್ಲ, 70 ವರ್ಷಗಳು ವ್ಯರ್ಥವಾದವು ಎಂದು ಕಟಕಿಯಾಡುತ್ತ ಅಧಿಕಾರಕ್ಕೇರಿದವರು ಈಗ ಅದೇ 70 ವರ್ಷಗಳ ಸಾಧನೆಗಳನ್ನು ಕುಟ್ಟಿ ಮಾರುತ್ತಿದ್ದಾರೆ. ಆಧಾರ್ ಯೋಜನೆಯನ್ನು ಉಗ್ರವಾಗಿ ಟೀಕಿಸುತ್ತ ಅಧಿಕಾರಕ್ಕೇರಿದವರು ಈಗ ಈ ಆರೋಗ್ಯ ಚೀಟಿಯೂ ಸೇರಿದಂತೆ ಆಧಾರ್ ಆಧಾರಿತವಾಗಿರುವ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದ್ದಾರೆ. ಹಾಗಿರುವಾಗ ಇವರು ತರುತ್ತಿರುವ ಯೋಜನೆಗಳನ್ನು, ಮಾಡುತ್ತಿರುವ ನೀತಿಗಳನ್ನು, ಕಿರುಚುತ್ತಿರುವ ಘೋಷಣೆಗಳನ್ನು ಸರಿಯಾಗಿ ಬಗೆದು ನೋಡುವುದರಲ್ಲೇ ಎಲ್ಲರ ಕ್ಷೇಮವೂ ಇದೆ.

ಏನಿದು ಡಿಜಿಟಲ್ ಹೆಲ್ತ್ ಐಡಿ?

ಈ ಆರೋಗ್ಯ ಗುರುತು ಚೀಟಿಯ ಯೋಜನೆಯಡಿಯಲ್ಲಿ ದೇಶದ ಪ್ರತಿಯೋರ್ವ ನಾಗರಿಕನಿಗೂ ಒಂದು 14 ಅಂಕೆಗಳ ಗುರುತು ಸಂಖ್ಯೆಯನ್ನು ನೀಡಲಾಗುತ್ತದೆ. ಈಗಾಗಲೇ ಇರುವ ಹಲವು ಗುರುತು ಸಂಖ್ಯೆಗಳ (ಆಧಾರ್, ಮತದಾರ ಗುರುತು, ಪಡಿತರ, ಆದಾಯ ತೆರಿಗೆಯ ಪ್ಯಾನ್, ಆಯುಷ್ಮಾನ್ ಭಾರತ, ಪಾಸ್ ಪೋರ್ಟ್, ಚಾಲಕ ಲೈಸೆನ್ಸ್ ಇತ್ಯಾದಿ ಇತ್ಯಾದಿ) ಜೊತೆಗೆ ಇದೂ ಒಂದು ಸೇರಿಕೊಳ್ಳಲಿದೆ. ಈ ಗುರುತು ಸಂಖ್ಯೆಗೆ ವ್ಯಕ್ತಿಯ ಆರೋಗ್ಯ ದಾಖಲೆಯನ್ನು ಜೋಡಿಸಲಾಗುತ್ತದೆ ಮತ್ತು ಈ ದಾಖಲೆಯನ್ನು ಮಿಂಬಲೆಯಲ್ಲಿ, ಅಂದರೆ ಇಂಟರ್ ನೆಟ್ ನಲ್ಲಿ, ಇರಿಸಲಾಗುತ್ತದೆ. ಹಾಗಾಗಿ ಇದನ್ನು ಗಣಕೀಕೃತ ಆರೋಗ್ಯ ದಾಖಲೆಯೆಂದೂ, ಈ ಯೋಜನೆಯನ್ನು ರಾಷ್ಟ್ರೀಯ ಗಣಕೀಕೃತ ಆರೋಗ್ಯ ಅಭಿಯಾನ – ನೇಷನಲ್ ಡಿಜಿಟಲ್ ಹೆಲ್ತ್ ಮಿಷನ್ – ಎಂದೂ, ಗುರುತು ಚೀಟಿಯನ್ನು ರಾಷ್ಟ್ರೀಯ ಆರೋಗ್ಯ ವಿಶಿಷ್ಠ ಮಿಂದಾಖಲೆ ಸಂಖ್ಯೆ – ನೇಷನಲ್ ಯುನೀಕ್ ಹೆಲ್ತ್ ಐಡಿ – ಎಂದೂ ಕರೆಯಲಾಗಿದೆ. ಇವೆಲ್ಲವನ್ನೂ ನೇಷನಲ್ ಡಿಜಿಟಲ್ ಹೆಲ್ತ್ ಮಿಷನ್ ಅಡಿಯಲ್ಲಿ ಸಂಯೋಜಿಸಲಾಗಿದ್ದು, ಆಯುಷ್ಮಾನ್ ಭಾರತ್ ಯೋಜನೆಯನ್ನೂ ಅದರೊಂದಿಗೆ ಜೋಡಿಸಲಾಗಿದೆ.

ಈ ಆರೋಗ್ಯ ದಾಖಲೆಯು ಆರೋಗ್ಯ ಸೇವೆಗಳನ್ನು ಪಡೆಯುವುದನ್ನು ಸುಲಭಗೊಳಿಸಲಿದೆಯೆಂದೂ, ವ್ಯಕ್ತಿಯ ಆರೋಗ್ಯ ದಾಖಲೆಗಳೆಲ್ಲವೂ ಮಿಂಬಲೆಯಲ್ಲಿ ಸಂಗ್ರಹಿತವಾಗಿ ಎಲ್ಲಿ ಬೇಕೆಂದರಲ್ಲಿ ಲಭ್ಯವಾಗುವುದರಿಂದ ರೋಗಿಗಳಿಗೂ, ವೈದ್ಯರಿಗೂ ಬಹಳ ಪ್ರಯೋಜನಗಳಾಗುವುದೆಂದೂ ಪ್ರಧಾನಿಗಳು ಹೇಳಿದ್ದಾರೆ. ಮೇಲ್ನೋಟಕ್ಕೆ ಇವೆಲ್ಲವೂ ಅತ್ಯಾಕರ್ಷಕವಾಗಿ ಕಾಣುತ್ತವೆಯಾದರೂ ಹೇಳದೇ ಉಳಿಸಿರುವ ಒಳರಹಸ್ಯಗಳು ಬೇರೆಯೇ ಇವೆ.

ಈ ಗುರುತು ಚೀಟಿಯ ದಾಖಲೆಯನ್ನು ಆರಂಭದಲ್ಲೇ ಆಧಾರ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಗಳಿಗೆ ಜೋಡಿಸಲಾಗುತ್ತದೆ. ಆಧಾರ್ ಸಂಖ್ಯೆಯು ಈ ದಾಖಲೆಗಳು ಅದೇ ವ್ಯಕ್ತಿಗೆ ಸೇರಿದ್ದೆನ್ನುವ ಖಾತರಿಯನ್ನು ನೀಡಿದರೆ, ಮೊಬೈಲ್ ಜೋಡಣೆಯು ಆ ವ್ಯಕ್ತಿಯ ಎಲ್ಲಾ ಚಲನವಲನಗಳನ್ನು ಆರೋಗ್ಯ ದಾಖಲೆಗೆ ಸೇರಿಸುತ್ತದೆ. ಅಂದರೆ ಒಬ್ಬ ನಿರ್ದಿಷ್ಟ ವ್ಯಕ್ತಿಯು ಎಲ್ಲಿಗೆ, ಯಾವ ಆಸ್ಪತ್ರೆಗೆ, ಯಾವ ವೈದ್ಯರ ಬಳಿಗೆ, ಯಾವ ಮದ್ದಿನಂಗಡಿಗೆ, ಯಾವ ಪರೀಕ್ಷಾಲಯಕ್ಕೆ ಯಾವಾಗ ಹೋದನೆನ್ನುವುದು ತಾನಾಗಿ ಈ ದಾಖಲೆಗಳಲ್ಲಿ ಸೇರಿಕೊಳ್ಳಲು ಸಾಧ್ಯವಾಗುತ್ತದೆ. ಆಧಾರ್ ಗುರುತಿನಲ್ಲಿ ಲಭ್ಯವಿರುವ ಲಿಂಗ, ವಯಸ್ಸು, ವಿಳಾಸ ಇತ್ಯಾದಿ ವಿವರಗಳು ಜೋಡಿಸಲ್ಪಡುವುದರ ಜೊತೆಗೆ ಧರಿಸುವ ಸಾಧನಗಳು ಮತ್ತು ಬಳಸುವ ಫೋನ್‌ಗಳಲ್ಲಿ ದೊರೆಯಬಹುದಾದ ವ್ಯಕ್ತಿಯ ತೂಕ, ವ್ಯಾಯಾಮದ ಮಟ್ಟ ಇತ್ಯಾದಿ ವೈಯಕ್ತಿಕ ವಿವರಗಳನ್ನೂ ಈ ದಾಖಲೆಯೊಳಕ್ಕೆ ಸೆಳೆಯುವ ಸಾಧ್ಯತೆಗಳಿವೆ.

ಒಬ್ಬ ವ್ಯಕ್ತಿಯು ವೈದ್ಯರ ಬಳಿಗೆ, ಆಸ್ಪತ್ರೆಗಳಿಗೆ, ಪರೀಕ್ಷಾಲಯಗಳಿಗೆ, ಔಷಧಾಲಯಗಳಿಗೆ ಹೋದಾಗ ಅಲ್ಲಿನ ವೈದ್ಯರು ಯಾ ಸಿಬ್ಬಂದಿ ಮಿಂಬಲೆಯಿಂದ ಆ ವ್ಯಕ್ತಿಯ ಆರೋಗ್ಯ ದಾಖಲೆಯನ್ನು ತೆರೆದು ವ್ಯಕ್ತಿಯ ಅನಾರೋಗ್ಯ, ನಡೆಸಲಾದ   ಪರೀಕ್ಷೆಗಳು, ನೀಡಲಾಗಿರುವ ಚಿಕಿತ್ಸೆಗಳು, ಬಳಸಲಾಗುತ್ತಿರುವ ಔಷಧಗಳು ಇತ್ಯಾದಿ ವಿವರಗಳನ್ನು ಅದರಲ್ಲಿ ಸೇರಿಸಬೇಕಾಗುತ್ತದೆ. ಇದನ್ನು ಸಾಧ್ಯವಾಗಿಸಲು ನಾಗರಿಕನಿಗೆ ಗುರುತು ಚೀಟಿಯನ್ನು ನೀಡಲಾಗುವಂತೆ ಆರೋಗ್ಯ ಸೇವೆಗಳವರಿಗೂ, ವೈದ್ಯರಿಗೂ ಗುರುತು ಸಂಖ್ಯೆಯನ್ನು ನೀಡಿ ನಾಗರಿಕರ ಮಿಂದಾಖಲೆಗಳನ್ನು ತೆರೆಯುವ ಅವಕಾಶವನ್ನು ಕಲ್ಪಿಸಲಾಗುತ್ತದೆ.

ಅಂದರೆ ಈ ಆರೋಗ್ಯ ಮಿಂದಾಖಲೆಯಲ್ಲಿ ದೇಶದ ಪ್ರತಿಯೋರ್ವ ನಾಗರಿಕನ ಹುಟ್ಟಿನಿಂದ ಸಾವಿನವರೆಗೆ ಬೆರಳಚ್ಚು, ಕಣ್ಣಚ್ಚುಗಳಿಂದ ಹಿಡಿದು ಎಲ್ಲಾ ವೈಯಕ್ತಿಕ ವಿವರಗಳು, ಚಲನವಲನಗಳ ಮಾಹಿತಿ, ಆರ್ಥಿಕ ವಹಿವಾಟುಗಳ ವಿವರಗಳು, ದೈಹಿಕ ಹಾಗೂ ಮಾನಸಿಕ ಆರೋಗ್ಯ-ಅನಾರೋಗ್ಯಗಳ ಮಾಹಿತಿ, ತಿನ್ನುವ-ಕುಡಿಯುವ-ವ್ಯಾಯಾಮ ಮಾಡುವ ಅಭ್ಯಾಸಗಳ ವಿವರಗಳು, ಆಸ್ಪತ್ರೆ-ವೈದ್ಯರ ಭೇಟಿ, ನಡೆಸಲಾದ ಪರೀಕ್ಷೆಗಳು, ಸೇವಿಸುವ ಔಷಧಗಳು ಇತ್ಯಾದಿ ಸಕಲ ವಿವರಗಳು ಸೇರಿಕೊಳ್ಳಲಿವೆ.

ನೂರ ಮೂವತ್ತು ಕೋಟಿ ಜನರ ಇಷ್ಟೊಂದು ವಿವರಗಳ ಬಳಕೆಯ ಸಾಧ್ಯತೆಗಳು, ಅದರಿಂದಾಗಬಹುದಾದ ಲಾಭಗಳು, ನಷ್ಟಗಳು, ಅಪಾಯಗಳು ಊಹೆಗೂ ನಿಲುಕದಷ್ಟು ಅಗಾಧವಾಗಿವೆ. ಈ ಆರೋಗ್ಯ ಗುರುತು ಚೀಟಿ ಹಾಗೂ ಮಿಂದಾಖಲೆಗಳ ಈ ಬೃಹತ್ ಯೋಜನೆಯನ್ನು ಸಂಸತ್ತಿನ ಮುಂದಿರಿಸದೆ, ಅನುಮೋದನೆ ಪಡೆಯದೆ, ಯಾವುದೇ ಕಾನೂನುಗಳ ಭದ್ರತೆಯೊದಗಿಸದೆ ಜಾರಿಗೆ ತಂದಿರುವುದು ಇನ್ನಷ್ಟು ಸಂಶಯಗಳನ್ನು ಹುಟ್ಟಿಸುತ್ತದೆ, ಅಪಾಯದ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.

ಸಂಸತ್ತಿನ ಒಪ್ಪಿಗೆಯಿಲ್ಲ, ಕಾನೂನಿನ ಭದ್ರತೆಯಿಲ್ಲ

ಈ ಆರೋಗ್ಯ ಗುರುತು ಚೀಟಿ ಹಾಗೂ ಮಿಂದಾಖಲೆಗಳ ಯೋಜನೆಯ ದತ್ತಾಂಶಗಳ ನಿರ್ವಹಣೆಯ ವಿವರಗಳನ್ನು ಹಾಗೂ ಖಾಸಗಿತನಗಳ ನೀತಿಯನ್ನು ಡಿಜಿಟಲ್ ಹೆಲ್ತ್ ಮಿಷನ್ ಮಿಂದಾಣದಲ್ಲಿ ಇತ್ತೀಚೆಗೆ ಪ್ರಕಟಿಸಲಾಗಿರುವುದನ್ನು ಬಿಟ್ಟರೆ ಬೇರಾವ ಅಧಿಕೃತ ಆದೇಶವಾಗಲೀ, ಕಾಯಿದೆಯಾಗಲೀ ಸರಕಾರದಿಂದ ಯಾ ಸಂಸತ್ತಿನಲ್ಲಿ ಮಂಡಿತವಾಗಿಲ್ಲ, ಚರ್ಚಿತವಾಗಿಲ್ಲ, ಒಪ್ಪಿತವಾಗಿಲ್ಲ.

ಈ ಆರೋಗ್ಯ ಗುರುತು ಸಂಖ್ಯೆಗೆ ವೈಯಕ್ತಿಕ ಗುರುತಿನ ಆಧಾರವಾಗಿ ಆಧಾರ್ ಸಂಖ್ಯೆಯನ್ನು ಕೂಡ ಬಳಸಲಾಗುವುದೆಂದು ಹೇಳಲಾಗಿದೆ, ಈಗಾಗಲೇ ಕೊಡಲಾಗಿರುವ ಆರೋಗ್ಯ ಗುರುತು ಸಂಖ್ಯೆಯಲ್ಲಿ ಹೆಚ್ಚಿನವಕ್ಕೆ ಆಧಾರ್ ಸಂಖ್ಯೆಯನ್ನೇ ಆಧಾರವಾಗಿರಿಸಲಾಗಿದೆ. ಆದರೆ ಆಧಾರ್ ಯೋಜನೆಯ ಸಾರ್ವತ್ರಿಕ ಬಳಕೆಗೆ ಇದುವರೆಗೂ ನಮ್ಮ ಸಂಸತ್ತಿನಿಂದ ಅಂಗೀಕಾರ ದೊರೆತೇ ಇಲ್ಲ; ಮಾರ್ಚ್ 2016ರಲ್ಲಿ ಆಯವ್ಯಯ ಪತ್ರದೊಳಗೆ ಸೇರಿಸಿ ಅನುಮತಿ ಪಡೆಯಲಾದ ಆಧಾರ್ ಕಾಯಿದೆಯನುಸಾರ ಸರಕಾರದ ಹಣದ ನೆರವಿನ ಸವಲತ್ತುಗಳನ್ನು ಪಡೆಯುವುದಕ್ಕೆ (ಪಡಿತರ, ಆಯುಷ್ಮಾನ್ ಭಾರತ ಸೇವೆ ಇತ್ಯಾದಿ) ಮತ್ತು ಪ್ಯಾನ್ ಸಂಖ್ಯೆಗೆ ಜೋಡಿಸುವುದಕ್ಕೆ ಮಾತ್ರವೇ ಆಧಾರ್ ಸಂಖ್ಯೆಯನ್ನು ಬಳಸಬಹುದೆಂದೂ, ಬೇರಾವುದಕ್ಕೂ ಅದನ್ನು ಬಳಸುವಂತಿಲ್ಲ ಎಂದೂ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಕೂಡ ಆದೇಶಿಸಿದೆ. ಇದೇ ಆಧಾರ್ ಕಾಯಿದೆಯ ವಿಧಿ [2(ಕೆ)]ಯಲ್ಲಿ ವ್ಯಕ್ತಿಯ ವೈದ್ಯಕೀಯ ವಿವರಗಳನ್ನು ಸಂಗ್ರಹಿಸುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಇಷ್ಟೆಲ್ಲ ಇರುವಾಗ ಈ ಹೊಸ ಆರೋಗ್ಯ ಗುರುತು ಚೀಟಿಗೆ ಆಧಾರ್ ಅನ್ನು ಬಳಸಲಾಗುತ್ತದೆ, ಅದಕ್ಕೆ ಸಂಸತ್ತಿನ ಅನುಮತಿಯೂ ಇಲ್ಲ ಎಂದರೇನರ್ಥ?

ಡಿಜಿಟಲ್ ಹೆಲ್ತ್ ಮಿಷನ್ ಪ್ರಕಟಿಸಿರುವ ಮಾಹಿತಿಯಲ್ಲಿ ಈ ಗುರುತು ಸಂಖ್ಯೆಗಳಿಗೆ ಜೋಡಿಸಲಾಗುವ ಆರೋಗ್ಯ ಮಿಂದಾಖಲೆಗಳು ಸರಕಾರದ ಸ್ವತ್ತಾಗಿರುತ್ತವೆ ಎನ್ನಲಾಗಿದೆ. ಅಂದರೆ ನಾಗರಿಕರ ವೈಯಕ್ತಿಕ ಮಾಹಿತಿಯೆಲ್ಲವನ್ನೂ ತನ್ನ ಸೊತ್ತಾಗಿಸಿ ಕೇಳಿದವರಿಗೆಲ್ಲ ಅವನ್ನು ಹಂಚುವ ಅಧಿಕಾರವನ್ನು ಸಂಸತ್ತಿನ ಅನುಮೋದನೆಯಿಲ್ಲದೆ ಸರಕಾರವು ತನಗೆ ತಾನೇ ಪಡೆದುಕೊಂಡಂತಾಗಿದೆ. ದೇಶದ ನಾಗರಿಕರ ವೈಯಕ್ತಿಕ ಹಾಗೂ ಆರೋಗ್ಯ ಸಂಬಂಧಿ ಮಾಹಿತಿಯನ್ನು ಪಡೆಯುವುದಕ್ಕಾಗಲೀ, ಸಂಗ್ರಹಿಸಿಟ್ಟುಕೊಳ್ಳುವುದಕ್ಕಾಗಲೀ ಸರಕಾರಕ್ಕೆ ಯಾವುದೇ ಸಾಂವಿಧಾನಿಕ ಅಧಿಕಾರವಿಲ್ಲ, ಅಗತ್ಯವೂ ಇಲ್ಲ.

ವೈದ್ಯರು, ಆರೋಗ್ಯ ಸೇವಾ ಸಂಸ್ಥೆಗಳು, ಪರೀಕ್ಷಾಲಯಗಳು ಯಾವುದೇ ವ್ಯಕ್ತಿಯ ವೈಯಕ್ತಿಕ ಮಾಹಿತಿಯನ್ನು ಮತ್ತು ದೈಹಿಕ ಹಾಗೂ ಮಾನಸಿಕ ಸ್ಥಿತಿಗತಿಗಳ ಮಾಹಿತಿಯನ್ನು ಯಾರೊಬ್ಬರಿಗೂ ನೀಡುವಂತಿಲ್ಲ; ನ್ಯಾಯಾಲಯದ ಆದೇಶವಿದ್ದರೆ, ವ್ಯಕ್ತಿಯಿಂದ ಸಮಾಜಕ್ಕೆ ಅಥವಾ ಅನ್ಯರಿಗೆ ತೀವ್ರ ಅಪಾಯವಾಗಬಲ್ಲಂಥ ಸಾಧ್ಯತೆಗಳಿದ್ದರೆ ಮಾತ್ರ ಅವನ್ನು ಸಂಬಂಧಪಟ್ಟವರಿಗಷ್ಟೇ ನೀಡಬಹುದು. ಹಾಗಿರುವಾಗ, ಆಸ್ಪತ್ರೆಗಳೂ ಸೇರಿದಂತೆ ವಿವಿಧ ಆರೋಗ್ಯ ಸೇವಾ ಸಂಸ್ಥೆಗಳು ಮತ್ತು ವೈದ್ಯರು ತಮ್ಮಲ್ಲಿಗೆ ಬಂದವರ ವೈಯಕ್ತಿಕ ಹಾಗೂ ವೈದ್ಯಕೀಯ ಮಾಹಿತಿಯೆಲ್ಲವನ್ನೂ ಈ ಮಿಂದಾಖಲೆಗಳಲ್ಲಿ ಸೇರಿಸಿ ಅವನ್ನು ಸರಕಾರದ ಸೊತ್ತಾಗಿಸುವುದು ಮತ್ತು ಸರಕಾರದ ಮೂಲಕ ಕೇಳಿದವರಿಗೆಲ್ಲ ಲಭ್ಯವಾಗಿಸುವುದು ವ್ಯಕ್ತಿಗಳ ಮತ್ತು ವೈದ್ಯರ ಗೋಪ್ಯತೆಯ ಹರಣವಾಗುತ್ತದೆ, ವೈದ್ಯಕೀಯ ವೃತ್ತಿ ಸಂಹಿತಿಗೆ ವಿರುದ್ಧವಾಗುತ್ತದೆ, ದಂಡನೀಯವಾಗುತ್ತದೆ ಮತ್ತು ಆಯಾ ವ್ಯಕ್ತಿಗಳ ಪಾಲಿಗೆ ಅಪಾಯಕಾರಿಯೂ ಆಗಬಹುದು.

ಈ ಆರೋಗ್ಯ ಗುರುತು ಚೀಟಿ-ಮಿಂದಾಖಲೆಗಳ ಯೋಜನೆಯು ವೈದ್ಯಕೀಯ ವೃತ್ತಿ ಸಂಹಿತೆಯ ಗೋಪ್ಯತೆಯ ನಿಯಮಗಳನ್ನು ಉಲ್ಲಂಘಿಸುವುದಷ್ಟೇ ಅಲ್ಲ, ಇಂತಹಾ ಮಿಂದಾಖಲೆಗಳ ಗೋಪ್ಯತೆಯನ್ನು ರಕ್ಷಿಸಬಲ್ಲ ಕಾನೂನುಗಳು ಕೂಡ ನಮ್ಮ ದೇಶದಲ್ಲಿ ಜಾರಿಗೆ ಬಂದಿಲ್ಲ. ಈಗ ಇರುವ ಮಾಹಿತಿ ತಂತ್ರಜ್ಞಾನ ಕಾಯಿದೆ, 2000 ಮತ್ತು ಅದರಡಿಯಲ್ಲಿರುವ ಮಾಹಿತಿ ತಂತ್ರಜ್ಞಾನ ನಿಯಮಗಳು (2011) ಈ ಆರೋಗ್ಯ ಗುರುತು ಚೀಟಿ ಹಾಗೂ ಮಿಂದಾಖಲೆಗಳಿಗೆ ನಿಖರವಾದ ಸುರಕ್ಷೆಯನ್ನೊದಗಿಸುವುದಿಲ್ಲ. ವೈಯಕ್ತಿಕ ದತ್ತಾಂಶಗಳ ಸಂರಕ್ಷಣೆ ಮಸೂದೆಯನ್ನು 2019ರ ಡಿಸೆಂಬರ್‌ನಲ್ಲಿ ಲೋಕಸಭೆಯಲ್ಲಿ ಮಂಡಿಸಲಾಗಿದ್ದರೂ, ಅದಿನ್ನೂ ಸ್ಥಾಯೀ ಸಮಿತಿಯ ಪರಿಶೀಲನೆಯಲ್ಲಷ್ಟೇ ಇರುವುದರಿಂದ ಈ ಹೊಸ ಯೋಜನೆಗೆ ಸ್ಪಷ್ಟವಾದ ಸುರಕ್ಷತಾ ನಿಯಮಗಳು ಇಲ್ಲವಾಗಿವೆ. ಅಂತಲ್ಲಿ, ಜನರ ವೈಯಕ್ತಿಕ-ವೈದ್ಯಕೀಯ ಮಾಹಿತಿಯನ್ನು ಸಂಗ್ರಹಿಸಿ ಬೇಕುಬೇಕೆಂದವರಿಗೆ ಒಪ್ಪಿಸುವ ಸಾಧ್ಯತೆಗಳನ್ನು ರೂಪಿಸಿರುವುದು ತೀರಾ ಅಪಾಯಕಾರಿಯೂ, ಕಳವಳಕಾರಿಯೂ ಆಗಿವೆ. ಸಂಪೂರ್ಣವಾಗಿ ಉಚಿತ ಆರೋಗ್ಯ ಸೇವೆಗಳನ್ನೊದಗಿಸುವ ಬ್ರಿಟನ್‌ನ ರಾಷ್ಟ್ರೀಯ ಆರೋಗ್ಯ ಸೇವೆಗಳಲ್ಲಿ ಮತ್ತು ಯೂರೋಪಿನ ಅನ್ಯ ದೇಶಗಳಲ್ಲಿ ಆರೋಗ್ಯ ಸೇವೆಗಳು ದತ್ತಾಂಶಗಳನ್ನು ಸಂಗ್ರಹಿಸಿ, ಆರೋಗ್ಯ ಸೇವಾ ಸಂಸ್ಥೆಗಳಿಗೆ ಬಳಕೆಗೆ ಒದಗಿಸುತ್ತವೆ, ಅಮೆರಿಕಾದಲ್ಲೂ ಇಂಥದೇ ವ್ಯವಸ್ಥೆಯಿದೆ. ಆದರೆ ಅಲ್ಲೆಲ್ಲ ಅತ್ಯಂತ ಕಠಿಣವಾದ ದತ್ತಾಂಶ ಸುರಕ್ಷತಾ ಕಾಯಿದೆಗಳಿವೆ, ದತ್ತಾಂಶಗಳ ದುರ್ಬಳಕೆಯಾದರೆ ಕಠಿಣ ಕ್ರಮಗಳಿಗೆ ಅವಕಾಶಗಳನ್ನೂ ಕಲ್ಪಿಸಲಾಗಿದೆ; ಅಷ್ಟಿದ್ದರೂ ದತ್ತಾಂಶಗಳ ದುರ್ಬಳಕೆಯ ಬಗ್ಗೆ ಸಂದೇಹಗಳೂ, ಚರ್ಚೆಗಳೂ, ವಿರೋಧಗಳೂ ಅಲ್ಲಿ ನಡೆಯುತ್ತಲೇ ಇರುತ್ತವೆ. ಭಾರತದಲ್ಲಿ ಇಂತಹ ಯಾವುದೇ ಕಾನೂನಿನ ಭದ್ರತೆಯಿಲ್ಲದೆ ಆರೋಗ್ಯ ಮಾಹಿತಿಯನ್ನು ಸಂಗ್ರಹಿಸಹೊರಟಿರುವುದು ಎಲ್ಲಾ ರೀತಿಯಿಂದಲೂ ತಪ್ಪಾಗುತ್ತದೆ, ಸಂಶಯಾಸ್ಪದವಾಗುತ್ತದೆ.

ಯಾರ ಒಳಿತಿಗಾಗಿ ಈ ಹೆಲ್ತ್ ಐಡಿ?

ಈ ಯೋಜನೆಯ ರಹಸ್ಯಗಳನ್ನು ಹುಡುಕುತ್ತಾ ಹೋದರೆ ಇದರಲ್ಲಿ ಜನರ ಹಿತಾಸಕ್ತಿಗಳು ಒಂದಿನಿತೂ ಇಲ್ಲದೆ, ಎಲ್ಲವೂ ಕಾರ್ಪರೇಟ್ ಹಾಗೂ ಗಣಕ ತಂತ್ರಜ್ಞಾನದ ದೈತ್ಯರ ಲಾಭಕ್ಕಾಗಿ, ಅವರ ಆಣತಿಯಂತೆಯೇ ನಡೆಯುತ್ತಿರುವುದೆನ್ನುವುದು ಸ್ಪಷ್ಟವಾಗುತ್ತದೆ, ಇದೇ ಕಾರಣಕ್ಕೆ ಸಂಸತ್ತಿನ ಅನುಮೋದನೆ, ಕಾನೂನು ರಕ್ಷಣೆ ಇತ್ಯಾದಿಗಳ ಹಂಗಾಗಲೀ, ಭಯವಾಗಲೀ ಇಲ್ಲದೆಯೇ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.

ಸರಕಾರದ ಸೊತ್ತಾಗುವ ಈ ಮಿಂದಾಖಲೆಗಳನ್ನು ಸಂಬಂಧಿತ ನಾಗರಿಕನಲ್ಲದೆ ಆರೋಗ್ಯ ಸೇವಾ ಸಂಸ್ಥೆಗಳು, ವೈದ್ಯರು, ಸಂಶೋಧನಾ ಸಂಸ್ಥೆಗಳು, ಔಷಧ ಸಂಸ್ಥೆಗಳು/ವಹಿವಾಟುಗಳು ಮತ್ತಿತರರು ನೋಡಬಹುದು ಮತ್ತು ಬಳಸಬಹುದು ಎಂದು ಡಿಜಿಟಲ್ ಹೆಲ್ತ್ ಮಿಷನ್ ಪ್ರಕಟಿಸಿರುವ ಸಮಾಲೋಚನಾ ಪತ್ರದಲ್ಲಿ ಹೇಳಲಾಗಿದೆ.

ನಾಗರಿಕರ ಆರೋಗ್ಯ ದಾಖಲೆಗಳನ್ನು ಸಂಶೋಧನಾ ಸಂಸ್ಥೆಗಳಿಗೆ ಯಾಕೆ ಮತ್ತು ಹೇಗೆ ಒದಗಿಸಲಾಗುತ್ತದೆ ಎಂಬ ವಿವರಗಳು ಅಲ್ಲಿ ಲಭ್ಯವಿಲ್ಲ. ಇಂದು ಗಣಕ ತಂತ್ರಜ್ಞಾನದ ದೈತ್ಯ ಕಂಪೆನಿಗಳು ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ ಇತ್ಯಾದಿ ತಂತ್ರಜ್ಞಾನಗಳನ್ನು ಬೆಳೆಸುವ ರಹಸ್ಯ ಯೋಜನೆಗಳಲ್ಲಿ ತೊಡಗಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಬಲು ದೊಡ್ಡ ಸದವಕಾಶವಿರುವುದನ್ನು ಕಂಡುಕೊಂಡಿವೆ, ಈಗಾಗಲೇ ಅನೇಕ ಯೋಜನೆಗಳನ್ನು ಆರಂಭಿಸಿವೆ. ವಿಶ್ವದಾದ್ಯಂತ ಕೋಟಿಗಟ್ಟಲೆ ರೋಗಿಗಳ ವೈಯಕ್ತಿಕ ವಿಷಯಗಳು, ಕಾಯಿಲೆಗಳು ಮತ್ತು ಚಿಕಿತ್ಸೆಯ ವಿವರಗಳು ಈಗಾಗಲೇ ಗಣಕ ಯಂತ್ರಗಳೊಳಗೆ ದಾಖಲಾಗಿದ್ದು, ಗೋಪ್ಯತೆಯ ಒಂದೇ ಕಾರಣಕ್ಕೆ ಅವನ್ನು ಪಡೆಯುವುದಕ್ಕೆ ಈ ಕಂಪೆನಿಗಳಿಗೆ ಕಷ್ಟಕರವಾಗಿದೆ. ಅಂತಲ್ಲಿ ಭಾರತದ ಈ ಹೊಸ ಯೋಜನೆಯಿಂದ ಗೋಪ್ಯತೆ ಇತ್ಯಾದಿಗಳ ಹಂಗಿಲ್ಲದೆ ನೂರಮೂವತ್ತು ಕೋಟಿ ಜನರ ಮಾಹಿತಿಯು ದೊರೆತರೆ ಈ ದೈತ್ಯ ಕಂಪೆನಿಗಳಿಗೆ ದೊಡ್ಡ ಖಜಾನೆಯೇ ಸಿಕ್ಕಂತಾಗುತ್ತದೆ.

ಗೂಗಲ್‌ನ ಡೀಪ್ ಮೈಂಡ್, ಐಬಿಎಂನ ವಾಟ್ಸನ್, ಮತ್ತು ಸ್ಟಾನ್‌ಫರ್ಡ್, ಆಕ್ಸ್‌ಫರ್ಡ್, ಹಾವರ್ಡ್, ವಾಂಡರ್‌ಬಿಲ್ಟ್ ಮುಂತಾದ ವಿಶ್ವವಿದ್ಯಾಲಯಗಳು ಸೇರಿದಂತೆ ಹಲವು ಪ್ರತಿಷ್ಠಿತ ಸಂಸ್ಥೆಗಳು ಈಗಾಗಲೇ ವೈದ್ಯಕೀಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯನ್ನು ಬೆಳೆಸುವ ಕೆಲಸವನ್ನು ಆರಂಭಿಸಿದ್ದು, ನಮ್ಮ ಕಂಪೆನಿಗಳು ಈ ಹೊಸ ಯೋಜನೆಯ ದತ್ತಾಂಶಗಳನ್ನು ಪಡೆದು ಈ ಸಂಸ್ಥೆಗಳ ಜೊತೆ ಸೇರುವ ಎಲ್ಲ ಸಾಧ್ಯತೆಗಳೂ ಇವೆ. ಬ್ರಿಟನ್‌ನ ರಾಷ್ಟ್ರೀಯ ಆರೋಗ್ಯ ಸೇವಾ ಸಂಸ್ಥೆ, ಪ್ರತಿಷ್ಠಿತ ಮೂರ್‌ಫೀಲ್ಡ್ಸ್ ಕಣ್ಣು ಆಸ್ಪತ್ರೆ, ಕ್ಯಾನ್ಸರ್ ಸಂಶೋಧನಾ ಸಂಸ್ಥೆ ಮುಂತಾದವು ತಮ್ಮಲ್ಲಿರುವ ಲಕ್ಷಗಟ್ಟಲೆ ರೋಗಿಗಳ ಮಾಹಿತಿಯನ್ನು ವೈಯಕ್ತಿಕ ವಿವರಗಳಿಲ್ಲದಂತೆ ಅನಾಮಿಕವಾಗಿ ಗೂಗಲ್‌ಗೆ ಒದಗಿಸಿ, ಯಂತ್ರಕಲಿಕೆಯ ತಂತ್ರಾಂಶಗಳನ್ನು ರೂಪಿಸುವಲ್ಲಿ ಜೊತೆಗೂಡಿದಾಗ ಅನೇಕ ನೈತಿಕ ಹಾಗೂ ನ್ಯಾಯಿಕ ಪ್ರಶ್ನೆಗಳನ್ನು ಎತ್ತಲಾಗಿತ್ತು. ಆದರೆ ನಮ್ಮ ದೇಶದಲ್ಲಿ ಇಂಥ ಪ್ರಶ್ನೆಗಳೇ ಏಳದಂತೆ ಎಲ್ಲವನ್ನೂ ಹೊಗಹೊಗಳಿ ಮುನ್ನುಗ್ಗುತ್ತಿರುವುದು ಭಯ ಹುಟ್ಟಿಸುತ್ತಿದೆ.

ವೈದ್ಯಕೀಯ ಸಂಶೋಧನಾ ಸಂಸ್ಥೆಗಳಿಗೆ ಹಾಗೂ ಔಷಧ ಸಂಶೋಧನೆ ಹಾಗೂ ಉತ್ಪಾದನಾ ಸಂಸ್ಥೆಗಳಿಗೆ ನಾಗರಿಕರ ಮಾಹಿತಿಯನ್ನು ನೀಡುವುದರಿಂದಲೂ ಹಲವು ಸಮಸ್ಯೆಗಳಾಗಬಹುದು. ತಮ್ಮ ಸಂಶೋಧನಾ ಕಾರ್ಯಗಳಿಗೆ, ಔಷಧಗಳು, ಲಸಿಕೆಗಳು ಮುಂತಾದವುಗಳ ಪರೀಕ್ಷೆಗಳಿಗೆ ಅಗತ್ಯವಿರುವ ಆರೋಗ್ಯವಂತರನ್ನು ಹಾಗೂ ನಿರ್ದಿಷ್ಟ ರೋಗಗಳಿರುವವರನ್ನು ಗುರುತಿಸುವುದು, ಅಂಥವರನ್ನು ಸಂಪರ್ಕಿಸುವುದು, ತಮ್ಮ ಪರೀಕ್ಷೆಗಳಲ್ಲಿ ಭಾಗಿಗಳಾಗುವಂತೆ ಪ್ರೇರೇಪಿಸುವುದು, ಅದಕ್ಕಾಗಿ ಆಮಿಷಗಳನ್ನೊಡ್ಡುವುದು ಎಲ್ಲವನ್ನೂ ಮಾಡುವುದಕ್ಕೆ ಅವಕಾಶವಾಗಬಹುದು.

ವೈದ್ಯರು ಈ ದಾಖಲೆಗಳನ್ನು ತೆರೆದು ಮಾಹಿತಿಯನ್ನು ಬಳಸುವ, ಸೇರಿಸುವ, ಚಿಕಿತ್ಸೆಗಳನ್ನು ಸೂಚಿಸುವ ಅಧಿಕಾರವನ್ನು ಪಡೆಯುವುದರಿಂದ, ಇದೇ ವ್ಯವಸ್ಥೆಯನ್ನು ಬಳಸಿ ಆರೋಗ್ಯ ಸೇವೆಗಳನ್ನೊದಗಿಸುವ ಹೊಸ ಹೊಸ ತಂತ್ರಜ್ಞಾನಗಳು ರೂಪುಗೊಳ್ಳುವ ಸಾಧ್ಯತೆಗಳಿವೆ. ಕೊರೋನ ಕಾಲದಲ್ಲಿ ವೈದ್ಯರು ಮನೆಗಳಲ್ಲೇ ಉಳಿದು ಆನ್‌ಲೈನ್ ಸಲಹೆ ಹಾಗೂ ಚಿಕಿತ್ಸೆಗಳನ್ನು ನಡೆಸುವುದಕ್ಕೆ ಅನೇಕ ತಂತ್ರಾಂಶಗಳು ಬಂದಿದ್ದವು. ಈ ಹೊಸ ಮಿಂದಾಖಲೆಗಳ ವ್ಯವಸ್ಥೆಯು ಇದಕ್ಕೆ ಇನ್ನಷ್ಟು ಅವಕಾಶಗಳನ್ನು ಸೃಷ್ಟಿಸಲಿದೆ, ವೈದ್ಯರು ನೇರವಾಗಿ ರೋಗಿಗಳನ್ನು ಪರೀಕ್ಷಿಸುವ ಬದಲಿಗೆ ಟೆಲಿ ಮೆಡಿಸಿನ್ ಇತ್ಯಾದಿಗಳು ಸಾಮಾನ್ಯವಾಗಬಹುದು; ಕಾರ್ಪರೇಟ್ ಸಂಸ್ಥೆಗಳು ಇಂಥವನ್ನು ನಡೆಸಿ, ಸಾರ್ವಜನಿಕ ಆರೋಗ್ಯ ಸೇವೆಗಳಲ್ಲಿ, ಅದರಲ್ಲೂ ದುರ್ಗಮ, ಗ್ರಾಮೀಣ ಪ್ರದೇಶಗಳಲ್ಲಿ ಕೇವಲ ಇಂಥವನ್ನೇ ನೀಡಿ ಎಲ್ಲವನ್ನೂ ತಮ್ಮ ವಶಕ್ಕೆ ಪಡೆಯಬಹುದು. ಹೀಗೆ ದೂರದಿಂದ ಔಷಧಗಳನ್ನು ಬರೆಯಬಲ್ಲ ವೈದ್ಯರು ಮತ್ತು ಆನ್‌ಲೈನ್ ಔಷಧ ಮಾರಾಟಗಳು ಜೊತೆ ಸೇರಿಕೊಂಡು,ಆರೋಗ್ಯ ಸೇವೆಗಳನ್ನೇ ವಿಚ್ಚಿದ್ರಗೊಳಿಸುವ ಸಾಧ್ಯತೆಗಳಿವೆ. ಇವೆಲ್ಲದರಿಂದ ಜನರ ಮೇಲೆ ವ್ಯತಿರಿಕ್ತ ಪರಿಣಾಮಗಳಾಗುವ ಅಪಾಯಗಳು ಬಹಳಷ್ಟಿವೆ.

ವೈದ್ಯಕೀಯ ಪರೀಕ್ಷಾಲಯಗಳು, ಔಷಧ ಹಾಗೂ ವೈದ್ಯಕೀಯ ಉಪಕರಣಗಳನ್ನು ಮಾರಾಟ ಮಾಡುವ ಸಂಸ್ಥೆಗಳು ಕೂಡ ಈ ಮಿಂದಾಖಲೆಗಳನ್ನು ಪಡೆಯಬಹುದು ಎನ್ನಲಾಗಿರುವುದರಿಂದ ಅವು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದಕ್ಕೆ, ಅವುಗಳ ಬಳಕೆಯನ್ನು ಉತ್ತೇಜಿಸುವುದಕ್ಕೆ, ಯಾರು ಯಾವ ಔಷಧಗಳನ್ನು ಯಾ ಉಪಕರಣಗಳನ್ನು ಬಳಸುತ್ತಿದ್ದಾರೆಂದು ಪತ್ತೆ ಹಚ್ಚಿ ಅಂಥವರಿಗೆ ಅವೇ ಉತ್ಪನ್ನಗಳ ಯಾ ಪರೀಕ್ಷೆಗಳ ಜಾಹೀರಾತುಗಳನ್ನು ಕಳುಹಿಸಿ ಆಮಿಷವೊಡ್ಡುವುದಕ್ಕೆ ಸಾಧ್ಯವಾಗಲಿದೆ. ಇವೆಲ್ಲವುಗಳ ಆನ್‌ಲೈನ್ ಮಾರಾಟವು ಅತಿ ವೇಗವಾಗಿ, ಬೃಹತ್ತಾಗಿ ಬೆಳೆಯುತ್ತಿರುವುದರಿಂದ ಹೊಸ ತಂತ್ರಜ್ಞಾನವನ್ನು ಬಳಸಿ ಈ ಮಿಂದಾಖಲೆಗಳ ಮೂಲಕ ಗ್ರಾಹಕರನ್ನು ಗುರುತಿಸಿ ಉತ್ಪನ್ನಗಳನ್ನು ನೇರವಾಗಿ ಮಾರುವುದಕ್ಕೆ ಸಾಧ್ಯವಾಗಲಿದೆ.

ವೈದ್ಯಕೀಯ ಪರೀಕ್ಷಾಲಯಗಳು ಹಾಗೂ ಔಷಧಾಲಯಗಳು ಈ ಮಿಂದಾಖಲೆಗಳಲ್ಲಿ ವ್ಯಕ್ತಿಯ ಪರೀಕ್ಷೆಗಳು ಹಾಗೂ ಚಿಕಿತ್ಸೆಗಳ ವಿವರಗಳನ್ನು ನೋಡಲು ಮತ್ತು ಹೊಸದನ್ನು ಸೇರಿಸಲು ಅವಕಾಶಗಳನ್ನು ಪಡೆದರೆ ವ್ಯಕ್ತಿಯ ಗೋಪ್ಯತೆಗೆ ಧಕ್ಕೆಯಾಗುವ ಮತ್ತು ಈ ವಿವರಗಳು ಸೋರಿಕೆಯಾಗುವ ಅಪಾಯಗಳು ಹೆಚ್ಚಲಿವೆ.

ಈ ಮಿಂದಾಖಲೆಗಳನ್ನು ಈ ವೈದ್ಯಕೀಯ ವಲಯದ ಸಂಸ್ಥೆಗಳಲ್ಲದೆ ಇನ್ನಿತರರಿಗೂ ನೀಡಲಾಗುವುದೆಂದು ಸೂಚಿಸಿರುವುದು ಬಹಳಷ್ಟು ಸಂಶಯಗಳನ್ನು ಹುಟ್ಟಿಸುತ್ತದೆ. ಹೆಚ್ಚಿನವರ ವಿಮೆ ಹಾಗೂ ಬ್ಯಾಂಕ್ ಖಾತೆಗಳು ಈಗಾಗಲೇ ಆಧಾರ್ ಸಂಖ್ಯೆಗೆ ಜೋಡಿಸಲ್ಪಟ್ಟಿರುವುದರಿಂದ ನಾಗರಿಕರ ಆರೋಗ್ಯ ಮಾಹಿತಿಯನ್ನು ವಿಮಾ ಕಂಪೆನಿಗಳು ಹಾಗೂ ಬ್ಯಾಂಕ್ ಗಳಿಗೂ ನೀಡಿದರೆ ಆಗಬಹುದಾದ ಪರಿಣಾಮಗಳನ್ನು ಊಹಿಸುವುದು ಕಷ್ಟವಿಲ್ಲ. ವ್ಯಕ್ತಿಯ ಆರೋಗ್ಯದ ಸ್ಥಿತಿಯ ನೆಪವೊಡ್ಡಿ ವಿಮೆ ಯಾ ಸಾಲವನ್ನು ನಿರಾಕರಿಸುವುದು, ಬಡ್ಡಿ ಯಾ ಕಂತನ್ನು ಏಕಪಕ್ಷೀಯವಾಗಿ ಏರಿಸುವುದು, ವಿಮೆ ಹಾಗೂ ಬ್ಯಾಂಕ್ ಬಳಕೆಗೆ ಶರತ್ತುಗಳನ್ನು ವಿಧಿಸುವುದು ಇತ್ಯಾದಿಯಾಗಿ ಈ ಸಂಸ್ಥೆಗಳ ಲಾಭಕೋರತನವನ್ನು ಇನ್ನಷ್ಟು ರಕ್ಷಿಸಿ ಬೆಳೆಸುವುದಕ್ಕೆ ಸಾಧ್ಯವಾಗಬಹುದು. ಒಬ್ಬ ನಿರ್ದಿಷ್ಟ ವ್ಯಕ್ತಿಗೆ ಮಾತ್ರವಲ್ಲ, ಆತನ ಕುಟುಂಬ, ಪರಿಸರ, ಊರು ಇತ್ಯಾದಿಗಳ ನೆಪವೊಡ್ಡಿ ಅಂಥವರೆಲ್ಲರಿಗೂ ಶರತ್ತುಗಳನ್ನು ಅನ್ವಯಿಸುವ ವ್ಯವಸ್ಥೆಯೂ ಬರಬಹುದು.

ಈ ಆರೋಗ್ಯ ಮಿಂದಾಖಲೆಗಳನ್ನು ತೆರೆಯುವುದಕ್ಕೆ, ಮಾಹಿತಿಯನ್ನು ಬಳಸುವುದಕ್ಕೆ ಹಾಗೂ ಸೇರಿಸುವುದಕ್ಕೆ ಆಧುನಿಕ ವೈದ್ಯ ವಿಜ್ಞಾನದ ವೈದ್ಯರು ಹಾಗೂ ಸಂಸ್ಥೆಗಳಿಗೆ ಮಾತ್ರವಲ್ಲ, ಆಯುಷ್‌ನಂತಹ ಬದಲಿ ಪದ್ಧತಿಗಳವರಿಗೂ ಅವಕಾಶವಿರಲಿದೆ ಎನ್ನಲಾಗಿದೆ. ಆಧುನಿಕ ವೈದ್ಯ ವಿಜ್ಞಾನದ ಪರೀಕ್ಷಾ ವಿಧಾನಗಳನ್ನು, ಚಿಕಿತ್ಸಾಕ್ರಮಗಳನ್ನು, ಔಷಧಗಳನ್ನು ಬಳಸಲು ಆಯುಷ್ ಪದ್ಧತಿಗಳವರಿಗೆ ಜ್ಞಾನವಾಗಲೀ, ತರಬೇತಿಯಾಗಲೀ, ಕಾನೂನಿನ ಸಮ್ಮತಿಯಾಗಲೀ ಇಲ್ಲದಿರುವುದರಿಂದ, ಅದೇ ರೀತಿ, ಆಯುಷ್ ಪದ್ಧತಿಗಳ ರೋಗ ನಿದಾನ ಹಾಗೂ ಚಿಕಿತ್ಸಾಕ್ರಮಗಳ ಬಗ್ಗೆ ಆಧುನಿಕ ವೈದ್ಯ ವಿಜ್ಞಾನದವರಿಗೆ ಅರಿವಿಲ್ಲದಿರುವುದರಿಂದ, ಹೀಗೆ ಎಲ್ಲ ಪದ್ಧತಿಗಳವರೂ ಆರೋಗ್ಯ ದಾಖಲೆಗಳಲ್ಲಿ ವಿವರಗಳನ್ನು ತುಂಬಿಸಲು ಅವಕಾಶವಾದರೆ ಅನೇಕ ಗೊಂದಲಗಳಿಗೂ, ಸಮಸ್ಯೆಗಳಿಗೂ ದಾರಿಯಾಗುವುದು ಖಂಡಿತ. ಈ ಆರೋಗ್ಯ ದಾಖಲೆಗಳನ್ನು ಮೇಲೆ ಹೇಳಿದಂತೆ ಅನೇಕರಿಗೆ ಅನೇಕ ಉದ್ದೇಶಗಳಿಗೆ ಒದಗಿಸುವ ಸಾಧ್ಯತೆಗಳಿರುವುದರಿಂದ, ಯಾರು ಯಾರೋ ಏನೇನೋ ತುಂಬಿಸಿದ ವಿವರಗಳು ಸಂಬಂಧಿತ ವ್ಯಕ್ತಿಗಳಿಗೆ ಅನೇಕ ಕಷ್ಟಗಳನ್ನು ತಂದೊಡ್ಡಬಹುದು. ಗೋಪ್ಯತೆಯು ಕಳೆದು ಹೋಗುವ ಅಪಾಯವು ಇನ್ನಷ್ಟು ಹೆಚ್ಚುವ ಸಾಧ್ಯತೆಗಳಂತೂ ಇದ್ದೇ ಇರುತ್ತವೆ.

ಈ ಮಿಂದಾಖಲೆಗಳು ಆರೋಗ್ಯ ಸೇವೆಗಳನ್ನು ಸುಲಭಗೊಳಿಸಲಿವೆ ಎಂದು ಪ್ರಧಾನಿ ಹೇಳಿದ್ದಾರಾದರೂ ವಾಸ್ತವವು ತದ್ವಿರುದ್ಧವೇ ಆಗಲಿದೆ. ಪ್ರತೀ ಬಾರಿ ವೈದ್ಯರ ಬಳಿಗೆ ಯಾ ಆಸ್ಪತ್ರೆಗಳಿಗೆ ಹೋಗುವಾಗ ಈ ಮಿಂದಾಖಲೆಗಳಲ್ಲಿ ವಿವರಗಳನ್ನು ಸೇರಿಸುವುದಕ್ಕೆ ವೈದ್ಯರು ಮಾತ್ರವಲ್ಲ, ರೋಗಿಗಳೂ ತಮ್ಮ ಮೊಬೈಲ್ ಗಳಲ್ಲಿ ಎಸ್ಸೆಮ್ಮೆಸ್ ಕಾಯಬೇಕಾಗುತ್ತದೆ ಯಾ ಬೆರಳಚ್ಚು ಒತ್ತಬೇಕಾಗುತ್ತದೆ. ತುರ್ತು ಸ್ಥಿತಿಗಳಲ್ಲಿ ಇದು ಇನ್ನಷ್ಟು ಜಟಿಲವಾಗುತ್ತದೆ. ಎಲ್ಲೋ ಒಂದೆಡೆ ಮಾಹಿತಿಯನ್ನು ಸೇರಿಸುವಾಗ ತಪ್ಪಾಗಿದ್ದರೆ, ಸರಿಯಾಗಿ ತರಬೇತಾಗದವರು ಅಥವಾ ಆಯುಷ್ ಪದ್ಧತಿಗಳವರು ಏನೇನೋ ಸೇರಿಸಿದರೆ ಅದು ದಾಖಲಾಗಿ ಉಳಿದು ಅನೇಕ ಸಮಸ್ಯೆಗಳಾಗಬಹುದು, ಅಂಥ ತಪ್ಪುಗಳನ್ನು ಸರಿಪಡಿಸಲು ಮತ್ತಷ್ಟು ಹೆಣಗಾಡಬೇಕಾಗುತ್ತದೆ. ನಮ್ಮ ದೇಶದಲ್ಲಿ ರೋಗ ಪತ್ತೆ ಮತ್ತು ಚಿಕಿತ್ಸೆಯ ಕ್ರಮಗಳು, ಕೌಶಲ್ಯಗಳು, ಸೌಲಭ್ಯಗಳು ಹಲತೆರನಾಗಿರುವುದರಿಂದ ಇಂತಹ ಕೇಂದ್ರೀಕೃತ ವ್ಯವಸ್ಥೆಯಿಂದಾಗಬಹುದಾದ ತೊಂದರೆಗಳನ್ನು ಊಹಿಸಿಕೊಳ್ಳಬಹುದು. ವೈದ್ಯರೂ, ವೈದ್ಯಕೀಯ ಸಿಬಂದಿಯೂ ಈ ದಾಖಲೆಗಳನ್ನು ತುಂಬುವುದಕ್ಕೇ ಕಾಲವ್ಯಯ ಮಾಡಬೇಕಾಗುವುದರಿಂದ, ರೋಗಿಗಳ ಆರೈಕೆಯೂ ಬಳಲಲಿದೆ, ಹೊಟ್ಟೆಗೆ ಹಿಟ್ಟಿಲ್ಲದಲ್ಲಿ ಜುಟ್ಟಿಗೆ ಮಲ್ಲಿಗೆ ಹೂವಾಗಲಿದೆ. ಆಹಾರ ಮತ್ತು ಸರಕಾರಿ ಆರೋಗ್ಯ ಸೇವೆಗಳಿಗೆ ಆಧಾರ್ ಕಡ್ಡಾಯ ಮಾಡಿ ಬೆರಳಚ್ಚು ತಾಳೆಯಾಗದೆ, ಸರ್ವರ್ ದೊರಕದೆ, ಅನೇಕರಿಗೆ ಸಮಸ್ಯೆಗಳಾದ ಬಗ್ಗೆ ಈಗಾಗಲೇ ವರದಿಗಳಾಗಿವೆ. ಆಧಾರ್ ಅಥವಾ ಆರೋಗ್ಯ ಗುರುತು ಚೀಟಿ ಇಲ್ಲದೆ ಆರೋಗ್ಯ ಸೇವೆ ಇಲ್ಲ ಎಂಬಂತಾದರೆ, ಬೆರಳಚ್ಚು ತಪ್ಪಿದರೆ, ಸರ್ವರ್ ಮೌನವಾದರೆ ಚಿಕಿತ್ಸೆಯೇ ಸಿಗದಂತಾಗಬಹುದು.

ಈ ಮಿಂದಾಖಲೆಗಳಲ್ಲಿ ಮಾಹಿತಿಯನ್ನು ಸೇರಿಸುವುದು, ತೆಗೆಯುವುದು, ಬದಲಿಸುವುದು ಎಲ್ಲವೂ ಬಗೆಬಗೆಯ ಭ್ರಷ್ಟಾಚಾರಕ್ಕೆ, ಬೆದರಿಕೆಗೆ, ಸುಲಿಗೆಗೆ ದಾರಿ ಮಾಡಲಿವೆ. ಆರೋಗ್ಯದ ಗೋಪ್ಯತೆಯು ಕಳೆದುಹೋಗುವುದರಿಂದ ವ್ಯಕ್ತಿಯ ದೈಹಿಕ ಯಾ ಮಾನಸಿಕ ಸ್ಥಿತಿಯ ಮಾಹಿತಿಯನ್ನು ಪಡೆದುಕೊಳ್ಳುವವರು ಆ ವ್ಯಕ್ತಿಗೆ ಕಳಂಕವನ್ನು ಹಚ್ಚಿ, ಮಾಹಿತಿಯನ್ನು ಬಹಿರಂಗಪಡಿಸಿ, ಸತಾಯಿಸುವುದಕ್ಕೂ, ಬೆದರಿಸುವುದಕ್ಕೂ, ಸುಲಿಗೆಗಾಗಿ ಪೀಡಿಸುವುದಕ್ಕೂ ಅವಕಾಶವಾಗಬಹುದು. ಮಾಹಿತಿಯ ಶೇಖರಣೆ ಹಾಗೂ ರಕ್ಷಣೆಯ ವ್ಯವಸ್ಥೆಗಳು ಸಡಿಲವಾಗಿದ್ದರೆ ಅವನ್ನು ಭೇದಿಸಿ ಮಾಹಿತಿಯನ್ನು ಕದಿಯುವ ಅಪಾಯವೂ ಇದೆ. ಬ್ಯಾಂಕ್ ಗಳು, ಸಾಮಾಜಿಕ ಜಾಲಗಳು, ಅನೇಕ ಮಿಂದಾಣಗಳು, ಆಧಾರ್ ವ್ಯವಸ್ಥೆಯೂ ಕೂಡ ಇಂಥ ದಾಳಿಗಳಿಗೀಡಾಗಿ ಮಾಹಿತಿ ಸೋರಿಕೆಯಾಗಿರುವ ವರದಿಗಳು ಆಗಾಗ್ಗೆ ಬರುತ್ತಿರುವಾಗ, ನಾಗರಿಕರ ಸಕಲ ಮಾಹಿತಿಯನ್ನೂ ಸರಕಾರದ ಸುಪರ್ದಿಯಲ್ಲಿಡುವುದರ ಅಪಾಯವನ್ನು ಗ್ರಹಿಸುವುದು ಕಷ್ಟವೇನಲ್ಲ.

ಒಟ್ಟಿನಲ್ಲಿ, ದೇಶದ ಎಲ್ಲ ನಾಗರಿಕರ ಹುಟ್ಟಿನಿಂದ ಸಾವಿನವರೆಗಿನ ಎಲ್ಲ ವೈಯಕ್ತಿಕ ವಿವರಗಳು, ದೈಹಿಕ ಹಾಗೂ ಮಾನಸಿಕ ಸ್ಥಿತಿಗತಿಗಳು, ಚಿಕಿತ್ಸೆ ಹಾಗೂ ಔಷಧಗಳ ವಿವರಗಳು, ಚಲನವಲನಗಳು, ಆರ್ಥಿಕ ಚಟುವಟಿಕೆಗಳು, ಸಂಪರ್ಕ-ಸಂವಹನಗಳು ಎಲ್ಲವೂ ಮೊಬೈಲ್ ಇತ್ಯಾದಿ ಉಪಕರಣಗಳ ಮೂಲಕ ಸರಕಾರದ ಸೊತ್ತಾಗಿ, ಕಾರ್ಪರೇಟ್ ಹಾಗೂ ಖಾಸಗಿ ಕಂಪೆನಿಗಳಿಗೆ, ತಂತ್ರಜ್ಞಾನ ದೈತ್ಯರಿಗೆ ಮಾರುವ ಸರಕಾಗಿ, ಎಲ್ಲೆಲ್ಲೋ ಸೋರಿಕೆಯಾಗಿ ಪೀಡನೆಯ ವಸ್ತುವಾಗಿ ಕಾಡುವ ಎಲ್ಲಾ ಸಾಧ್ಯತೆಗಳೂ ಇವೆ. ಕರ್ನಾಟಕ ಸರಕಾರವು ತನ್ನಲ್ಲಿರುವ ಜನರ ಮಾಹಿತಿಯನ್ನು ವೈಯಕ್ತಿಕ ವಿವರಗಳನ್ನು ಮರೆಮಾಚಿ ಖಾಸಗಿ ಕಂಪೆನಿಗಳಿಗೆ ಮಾರುವ ನೀತಿಯನ್ನು ಇದೀಗ ಪ್ರಕಟಿಸಿರುವುದು ಮುಂದಿನ ದಿನಗಳ ಸಾಧ್ಯತೆಗಳನ್ನು ತೋರಿಸುತ್ತಿದೆ.

ಆಧಾರ್ ಜೊತೆಗೇ ಆರಂಭಗೊಂಡ ಯೋಜನೆ

ಈ ಆರೋಗ್ಯ ಗುರುತು ಚೀಟಿಯ ಯೋಜನೆಯನ್ನು ಈಗಷ್ಟೇ ಘೋಷಿಸಿದ್ದರೂ, ಇದರ ಸಿದ್ಧತೆಗಳು 2013ರಲ್ಲೇ ಆರಂಭವಾಗಿವೆ. ಯುಪಿಎ ಸರಕಾರವು ಆಧಾರ್ ಯೋಜನೆಯನ್ನು ಆರಂಭಿಸಿದಾಗಲೇ ಯೋಜನೆಯ ಬೀಜವನ್ನು ಹಾಕಲಾಗಿತ್ತು, ಆಧಾರ್ ರೂವಾರಿ ನಂದನ್ ನಿಲೇಕಣಿ 2013ರಲ್ಲೇ ಈ ಬಗ್ಗೆ ಬಹಳ ಉತ್ಸುಕತೆಯಿಂದ ಹೇಳಿಯೂ ಆಗಿತ್ತು. ಈಗ ಅಧಿಕಾರದಲ್ಲಿರುವವರು ತಮ್ಮ 2014ರ ಪ್ರಣಾಳಿಕೆಯಲ್ಲಿ ಆಧಾರ್ ಯೋಜನೆಯನ್ನು ವಿರೋಧಿಸಿದ್ದರಾದರೂ, ಅಧಿಕಾರಕ್ಕೇರಿದ ಕೆಲವೇ ದಿನಗಳಲ್ಲಿ, ನಿಲೇಕಣಿ ಭೇಟಿಯ ಬೆನ್ನಿಗೆ, ಆಧಾರ್ ಆಧಾರಿತವಾದ ಹಲವು ಯೋಜನೆಗಳನ್ನು ಇನ್ನಷ್ಟು ಹುರುಪಿನಿಂದ ಮುನ್ನಡೆಸಲಾಯಿತು. ಈ ಹೆಲ್ತ್ ಐಡಿ ಹಾಗೂ ಆರೋಗ್ಯ ಮಿಂದಾಖಲೆಯ ಯೋಜನೆಗಳು ಇದೇ ಮಹಾಯೋಜನೆಯ ಭಾಗಗಳಾಗಿವೆ. ಆಧಾರ್ ಯೋಜನೆಯನ್ನು ರೂಪಿಸಿದ ತಂತ್ರಜ್ಞರೇ ಈ ಯೋಜನೆಯ ರೂವಾರಿಗಳೂ ಆಗಿದ್ದಾರೆ. ನಂದನ್ ನಿಲೇಕಣಿ 2013ರಲ್ಲೇ ಆರೋಗ್ಯ ದಾಖಲೆಗಳನ್ನು ಆಧಾರ್‌ಗೆ ಜೋಡಿಸುವ ಬಗ್ಗೆ ಹೇಳಿದ್ದರೆ, ಆಧಾರ್ ಯೋಜನೆಯಲ್ಲಿ ದುಡಿದಿದ್ದ ತಂತ್ರಜ್ಞರಿರುವರೆನ್ನಲಾದ ಐಸ್ಪಿರ್ಟ್ ಸಂಸ್ಥೆಯು ಅನೇಕ ಆಧಾರ್ ಆಧಾರಿತ ತಂತ್ರಾಂಶಗಳನ್ನೂ, ಯೋಜನೆಗಳನ್ನೂ ರೂಪಿಸುತ್ತಿದ್ದು, ಈ ಹೆಲ್ತ್ ಐಡಿ ಹಾಗೂ ಅದರಡಿ ರೂಪುಗೊಳ್ಳಲಿರುವ, ಮೇಲೆ ಸೂಚಿಸಿದಂಥ, ಉಪಯೋಜನೆಗಳಿಗೆ ಅಡಿಪಾಯವೊದಗಿಸುವ ಸಾಧ್ಯತೆಗಳಿವೆ. ಆದರೆ ಇವೆಲ್ಲವೂ ರಹಸ್ಯವಾಗಿಯೇ ಇದ್ದು, ಈ ಯೋಜನೆಗಳು ಹಾಗೂ ತಂತ್ರಾಂಶಗಳ ಸ್ವರೂಪಗಳಾಗಲೀ, ಅವುಗಳ ಹಿಂದಿರುವ ತಂತ್ರಜ್ಞರ ವಿವರಗಳಾಗಲೀ ಮುಕ್ತವಾಗಿ ಕಾಣಸಿಗುವುದೇ ಇಲ್ಲ. ದೇಶದ ಎಲ್ಲಾ ನಾಗರಿಕರ ಎಲ್ಲಾ ಮಾಹಿತಿಯನ್ನು ಗೋಪ್ಯತೆಯ ಭದ್ರತೆಯಿಲ್ಲದೆ ಮಾರಾಟ ಮಾಡಹೊರಟಿರುವ ಸರಕಾರವು ಈ ಕೆಲಸಗಳ ಹಿಂದಿರುವವರ ಬಗ್ಗೆ ಅತ್ಯಂತ ಗೋಪ್ಯತೆಯನ್ನು ಕಾಯುತ್ತಿರುವುದು ಬಹಳಷ್ಟನ್ನು ಹೇಳುವುದಿಲ್ಲವೇ?

ಮೋದಿ ಸರಕಾರವು ಡಿಸೆಂಬರ್ 2014ರಲ್ಲಿ ಪ್ರಕಟಿಸಿದ ಹೊಸ ಆರೋಗ್ಯ ನೀತಿಯ ಕರಡಿನಲ್ಲೇ ಆಧಾರ್ ಆಧಾರಿತ ವಿಶಿಷ್ಟ ಹೆಲ್ತ್ ಐಡಿ ಮತ್ತು ರಾಷ್ಟ್ರೀಯ ಆರೋಗ್ಯ ಮಿಂದಾಖಲೆಗಳ ಬಗ್ಗೆ ಹೇಳಲಾಗಿತ್ತು. ಫೆಬ್ರವರಿ 2016ರಲ್ಲಿ ಆರೋಗ್ಯ ಮಿಂದಾಖಲೆಗಳ ಮಾನದಂಡಗಳನ್ನು ಪ್ರಕಟಿಸಲಾಯಿತು, ಅವನ್ನು ಆಧಾರ್‌‌ಗೆ ಜೋಡಿಸುವ ಬಗ್ಗೆಯೂ ಹೇಳಲಾಯಿತು. ಮಾರ್ಚ್ 2017ರಲ್ಲಿ ಪ್ರಕಟಿಸಿದ ರಾಷ್ಟ್ರೀಯ ಆರೋಗ್ಯ ನೀತಿಯಲ್ಲಿ ರಾಷ್ಟ್ರೀಯ ಗಣಕೀಕೃತ ಆರೋಗ್ಯ ಪ್ರಾಧಿಕಾರವನ್ನು ರಚಿಸುವ ಬಗ್ಗೆ,, 2025ರ ವೇಳೆಗೆ ದೇಶದ ನಾಗರಿಕರ ರೋಗಗಳು ಮತ್ತು ಆರೋಗ್ಯ ಸರ್ವೇಕ್ಷಣೆಯ ವಿವರಗಳಿರುವ ಆಧಾರ್ ಜೋಡಿತ ಆರೋಗ್ಯ ಮಾಹಿತಿ ಜಾಲವನ್ನೂ, ಆರೋಗ್ಯ ಮಾಹಿತಿ ವಿನಿಮಯ ವ್ಯವಸ್ಥೆಯನ್ನೂ ಎಲ್ಲೆಡೆ ಸ್ಥಾಪಿಸುವ ಬಗ್ಗೆ ಹೇಳಲಾಯಿತು. ದೇಶದ ಎಲ್ಲಾ ಖಾಸಗಿ ಹಾಗೂ ಸರಕಾರಿ ಆರೋಗ್ಯ ಸಂಸ್ಥೆಗಳಲ್ಲಿ, ಜನರ ಮೊಬೈಲ್ ಮತ್ತು ಇತರ ಧರಿಸುವ ಸಾಧನಗಳಲ್ಲಿ ಮತ್ತು ಮಿಂಬಲೆಯಲ್ಲಿ ಎಲ್ಲಾ ಭಾರತೀಯರ ಆರೋಗ್ಯ ಸಂಬಂಧಿ ಮಿಂದಾಖಲೆಗಳನ್ನು ಲಭ್ಯಗೊಳಿಸುವುದು ಮತ್ತು ಅವನ್ನು ಒಟ್ಟಿಗೆ ಸಂಯೋಜಿಸುವುದು ಈ ಪ್ರಾಧಿಕಾರದ ಉದ್ದೇಶವೆಂದೂ, ಈ ಮಾಹಿತಿಗಳ ಸಂಗ್ರಹ, ವಿಶ್ಲೇಷಣೆ ಹಾಗೂ ಹಂಚಿಕೆಗಳಲ್ಲಿ ಖಾಸಗಿ ವಲಯವು ಭಾಗಿಯಾಗಲಿದೆ ಎಂದೂ ಅದರಲ್ಲಿ ಹೇಳಲಾಯಿತು. ಇದರ ಬೆನ್ನಿಗೆ ಆಯುಷ್ಮಾನ್ ಭಾರತ ಯೋಜನೆಯನ್ನು ಆರಂಭಿಸಿ, ಅದರ ಫಲಾನುಭವಿಗಳ ದಾಖಲೆಗಳನ್ನೂ, ಆ ಸೇವೆಗಳನ್ನೊದಗಿಸುವ ಆಸ್ಪತ್ರೆಗಳು ಮತ್ತು ಅಲ್ಲಿನ ವೈದ್ಯರು ಮತ್ತು ಸಿಬ್ಬಂದಿಗಳ ವಿವರಗಳನ್ನೂ ಕೇಂದ್ರೀಕೃತ ಜಾಲದಲ್ಲಿ ಸೇರಿಸುವ ವ್ಯವಸ್ಥೆಯಾಯಿತು.

ಆಗಸ್ಟ್ 2018ರಲ್ಲಿ ನೀತಿ ಆಯೋಗವು ಪ್ರಕಟಿಸಿದ ರಾಷ್ಟ್ರೀಯ ಆರೋಗ್ಯ ಬಣವೆ ಎಂಬ ಯೋಜನೆಯ ಕರಡನ್ನು ನೋಡಿದರೆ ಈ ಗುರುತು ಚೀಟಿ ಯೋಜನೆಯ ನಿಜರೂಪದ ದರ್ಶನವಾಗುತ್ತದೆ. ಈ ಕರಡಿನ ಮೊದಲ ಪುಟದಲ್ಲಿ ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ಡಾ॥ ವಿನೋದ್ ಪೌಲ್ ಅವರು ರಾಷ್ಟ್ರೀಯ ಆರೋಗ್ಯ ಬಣವೆಯು ದೂರದರ್ಶಿತ್ವದ ಗಣಕೀಯ ಚೌಕಟ್ಟಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅದನ್ನು ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಬಳಸಬಹುದೆಂದೂ, ಕ್ಷಿಪ್ರವಾದ, ವಿಚ್ಛಿದ್ರಕಾರಿಯಾದ ಬದಲಾವಣೆಗಳನ್ನೂ, ಅನಿರೀಕ್ಷಿತವಾದ ತಿರುವುಗಳನ್ನೂ ಕಾಣಲಿರುವ (ಆರೋಗ್ಯ) ಕ್ಷೇತ್ರಕ್ಕೆ ಅದು ಭವಿಷ್ಯದ ಮಾಹಿತಿ ತಂತ್ರಜ್ಞಾನದ ಮಾರ್ಗೋಪಾಯಗಳನ್ನು ಒದಗಿಸಲಿದೆ ಎಂದೂ ಬರೆದಿದ್ದಾರೆ. ಅದೇ ಕರಡಿನ ಎರಡನೇ ಪುಟದಲ್ಲಿ ನೀತಿ ಆಯೋಗದ ಮುಖ್ಯ ಆಡಳಿತಾಧಿಕಾರಿ ಅಮಿತಾಭ್ ಕಾಂತ್ ಅವರು ಪ್ರಸ್ತಾವಿತ ಆರೋಗ್ಯ ಬಣವೆಯು ಶಕ್ತಿಶಾಲಿ ಸಾಧನ-ವಿಧಾನಗಳನ್ನು ಬಳಸಿ ಅಗಾಧ ಮಾಹಿತಿಯ ವಿಶ್ಲೇಷಣೆ, ಯಂತ್ರಕಲಿಕೆ, ಕೃತಕ ಬುದ್ದಿಮತ್ತೆ, ಮತ್ತು ಮುಂದಕ್ಕೆ, ನೀತಿ ನಿರೂಪಣೆ ಮಾಡಬಲ್ಲ ಅತ್ಯಾಧುನಿಕ ಗಣಕೀಯ ಭಾಷೆಗಳನ್ನು ಅಭಿವೃದ್ಧಿಪಡಿಸುವವರೆಗೆ ಬೆಳೆಯಲಿದೆ ಎಂದೂ, ಆ ಮೂಲಕ, ಜನತೆ, ಹಣ ಮತ್ತು ಮಾಹಿತಿಗಳ ಹರಿವನ್ನು ಮರುವಿನ್ಯಾಸಗೊಳಿಸಿ, ಎಲ್ಲಾ ರಾಜ್ಯಗಳಿಗೆ ಮತ್ತು ಯೋಜನೆಗಳಿಗೆ ಆರೋಗ್ಯದ ವಿಚಾರದಲ್ಲಿ ಸಮಗ್ರವಾದ ತಳಹದಿಯನ್ನು ಒದಗಿಸಿ, ಆರೋಗ್ಯ ರಕ್ಷಣೆಯ ವೆಚ್ಚವನ್ನು ಗಣನೀಯವಾಗಿ ಇಳಿಸಿ, ನಗದುರಹಿತವಾಗಿಸಿ ಆರೋಗ್ಯ ಸುಧಾರಣೆಗೆ ನೆರವಾಗಲಿದೆ ಎಂದು ಬರೆದಿದ್ದಾರೆ. ಅಂದರೆ ಈ ಗುರುತು ಚೀಟಿಯ ಯೋಜನೆಯ ಉದ್ದೇಶವು ಆರೋಗ್ಯ ರಕ್ಷಣೆಯ ನೆಪದಲ್ಲಿ ಎಲ್ಲಾ ನಾಗರಿಕರ ಎಲ್ಲಾ ಮಾಹಿತಿಯನ್ನು ಆಧಾರ್ ಸಂಖ್ಯೆಗೆ ಜೋಡಿಸಿ ಮೊಬೈಲ್ ಮತ್ತಿತರ ಸಾಧನಗಳ ಮೂಲಕ ಎಲ್ಲೆಡೆಗಳಿಂದಲೂ ಸಂಗ್ರಹಿಸಿ ಸರಕಾರದ ಸುಪರ್ದಿಗೆ ಪಡೆಯುವುದು, ಅವನ್ನು ಖಾಸಗಿ ಶಕ್ತಿಗಳಿಗೆ ನೀಡುವುದು, ಯಂತ್ರ ಕಲಿಕೆ ಹಾಗೂ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನಗಳನ್ನು ಬೆಳೆಸಲು ಬಳಸಿಕೊಳ್ಳುವುದು ಮತ್ತು ಇವುಗಳ ಮೂಲಕ ಎಲ್ಲಾ ನೀತಿಗಳನ್ನೂ ರೂಪಿಸಿಕೊಳ್ಳುವುದು, ಇವೆಲ್ಲವುಗಳ ಮೂಲಕ ಎಲ್ಲಾ ವ್ಯವಸ್ಥೆಗಳನ್ನೂ ಛಿದ್ರಗೊಳಿಸಿ, ನಾಶಪಡಿಸಿ, ಸಂಸದೀಯ ಸಾಂವಿಧಾನಿಕ ಪ್ರಜಾಸತ್ತೆಯನ್ನೂ ಗೌಣವಾಗಿಸಿ ಕೃತಕ ಬುದ್ಧಿಮತ್ತೆಗೂ, ಅವನ್ನು ನಿಯಂತ್ರಿಸುವ ಕಾರ್ಪರೇಟ್ ದೈತ್ಯರಿಗೂ ಇಡೀ ದೇಶವನ್ನೇ ಅಡಿಯಾಳಾಗಿಸುವುದು ಎನ್ನುವುದು ಸ್ಪಷ್ಟವಾಗುತ್ತದೆ.

ಈ ಗುರುತು ಚೀಟಿ ಹಾಗೂ ಮಿಂದಾಖಲೆ ಯೋಜನೆಗಳಿಗೆ ಸಂಸತ್ತಿನ ಅನುಮೋದನೆಯನ್ನೇ ಪಡೆಯಲಾಗಿಲ್ಲ ಮಾತ್ರವಲ್ಲ, ಅವುಗಳ ಬಗೆಗಿನ ಮೇಲ್ಕಾಣಿಸಿದ ಪ್ರಕಟಣೆಗಳ ಬಗ್ಗೆ ಮಾಧ್ಯಮಗಳಲ್ಲಾಗಲೀ, ಸಾರ್ವಜನಿಕ ವಲಯದಲ್ಲಾಗಲೀ ಚರ್ಚೆಗಳೂ ನಡೆದಿಲ್ಲ. ಅಷ್ಟು ಮಾತ್ರವಲ್ಲ, ಈ ಯೋಜನೆಯ ಬಗ್ಗೆ ಪ್ರಧಾನಿಯಾದಿಯಾಗಿ ಹೇಳುತ್ತಿರುವುದಕ್ಕೂ, ವಾಸ್ತವದಲ್ಲಿ ನಡೆಯುತ್ತಿರುವುದಕ್ಕೂ ಬಹಳಷ್ಟು ಅಂತರವಿದೆ. ಉದಾಹರಣೆಗೆ, ನಾಗರಿಕರು ಈ ಗುರುತು ಚೀಟಿಯನ್ನು ಪಡೆಯುವುದು ಮತ್ತು ಆರೋಗ್ಯ ಸಂಸ್ಥೆಗಳು ಹಾಗೂ ವೈದ್ಯರು ಈ ಯೋಜನೆಯ ಭಾಗಿಗಳಾಗುವುದು ಐಚ್ಛಿಕವಾಗಿದೆ ಎಂದು ಹೇಳಲಾಗಿದ್ದರೂ, ಯಾರ ಅರಿವಿಗೂ ಬಾರದೆ, ಯಾರ ಇಚ್ಛೆಯನ್ನೂ ಕೇಳದೆ ಲಕ್ಷಗಟ್ಟಲೆ ಜನರಿಗೆ ಗುರುತು ಸಂಖ್ಯೆಯನ್ನು ಈಗಾಗಲೇ ನೀಡಲಾಗಿದೆ. ಆಧಾರ್ ಸಂಖ್ಯೆಗೆ, ಅದಕ್ಕೆ ಮೊಬೈಲ್ ಸಂಖ್ಯೆಯ ಜೋಡಣೆಗೆ ಸಂಸತ್ತಿನ ಯಾ ಸರ್ವೋಚ್ಛ ನ್ಯಾಯಾಲಯದ ಅನುಮೋದನೆಯಿಲ್ಲದಿದ್ದರೂ, ಯಾವುದೇ ಕಾನೂನಿಗೊಳಪಡದ ಈ ಗುರುತು ಚೀಟಿಗೆ ಅವೆರಡನ್ನೂ ಜೋಡಿಸಲಾಗುತ್ತಿದೆ.

ಈ ಗುರುತು ಚೀಟಿಯನ್ನು ನೀಡುವುದಕ್ಕೆ, ಅದಕ್ಕೆ ಆಧಾರ್, ಮೊಬೈಲ್ ಜೋಡಿಸುವುದಕ್ಕೆ ಕೊರೋನ ಲಸಿಕೆ ಹಾಕುವ ಕಾರ್ಯಕ್ರಮವನ್ನು ಬಳಸಿಕೊಳ್ಳಲಾಗಿದೆಯೆನ್ನುವುದು ಈಗ ಬಹಿರಂಗಗೊಂಡಿದೆ. ಕೊರೋನ ಲಸಿಕೆ ಪಡೆಯಬೇಕಾದರೆ ಕೋವಿನ್ ಆಪ್ ಅನ್ನು ಮೊಬೈಲ್ ಫೋನುಗಳಲ್ಲಿ ಹಾಕಿಸಿಕೊಳ್ಳುವಂತೆ ಮಾಡಿದ್ದು, ಅಥವಾ ಕೋವಿನ್ ಮಿಂದಾಣದಲ್ಲಿ ವ್ಯಕ್ತಿಗಳ ಎಲ್ಲಾ ವಿವರಗಳನ್ನು ದಾಖಲಿಸಿ ಅವರವರ ಫೋನ್‌ಗಳಿಗೆ ಎಸ್ಸೆಮ್ಮೆಸ್ ಕಳಿಸಿ ಅವನ್ನು ಖಾತರಿ ಪಡಿಸಿಕೊಳ್ಳುವ ವ್ಯವಸ್ಥೆಯನ್ನು ಮಾಡಿದ್ದು ಈ ಆರೋಗ್ಯ ಗುರುತು ಸಂಖ್ಯೆ ನೀಡುವ ಯೋಜನೆಯ ಭಾಗವಾಗಿತ್ತೆನ್ನುವುದಕ್ಕೆ ಕೊರೋನ ಲಸಿಕೆ ಹಾಕಿಸಿಕೊಂಡವರೆಲ್ಲರಿಗೂ ನೀಡಲಾಗಿರುವ ಪ್ರಮಾಣ ಪತ್ರಗಳಲ್ಲಿ ವಿಶಿಷ್ಠ ಆರೋಗ್ಯ ಗುರುತು ಸಂಖ್ಯೆಯನ್ನು ನೀಡಲಾಗಿರುವುದೇ ಸಾಕ್ಷಿಯಾಗಿದೆ. ಕೊರೋನ ಲಸಿಕೆಯನ್ನು ಪಡೆಯುವುದು ಐಚ್ಛಿಕವಾಗಿದೆ ಎಂದು ಕೇಂದ್ರ ಸರಕಾರವು ಸ್ಪಷ್ಟವಾಗಿ ಹೇಳಿದ್ದರೂ, ತಳಮಟ್ಟದಲ್ಲೂ, ಹೆಚ್ಚಿನ ಕಚೇರಿಗಳು ಹಾಗೂ ಉದ್ಯಮಗಳಲ್ಲೂ ಲಸಿಕೆ ಹಾಕುವುದು ಕಡ್ಡಾಯವೆಂಬಂತೆ ಒತ್ತಡ ಹೇರಿದ್ದು, ಲಸಿಕೆ ಹಾಕಿಸಿಕೊಳ್ಳದಿದ್ದರೆ ಪ್ರವೇಶವನ್ನು, ಪಡಿತರವನ್ನು, ಇತರ ಸವಲತ್ತುಗಳನ್ನು ನಿರಾಕರಿಸುವುದಾಗಿ ಅನೇಕ ಜಿಲ್ಲಾಧಿಕಾರಿಗಳು ಹಾಗೂ ಇತರ ಇಲಾಖಾಧಿಕಾರಿಗಳು ಆದೇಶ ಹೊರಡಿಸಿ ಬೆದರಿಕೆ ಹಾಕಿದ್ದು ಎಲ್ಲವೂ ಈ ಐಚ್ಛಿಕವೆನ್ನಲಾದ ಆರೋಗ್ಯ ಗುರುತು ಸಂಖ್ಯೆಯ ಯೋಜನೆಗೆ ಒತ್ತಾಯದಿಂದ ಜನರನ್ನು ನೋಂದಾಯಿಸುವ ಪ್ರಯತ್ನವೇ ಆಗಿರುವ ಸಾಧ್ಯತೆಗಳಿವೆ.

ನಾಗರಿಕರ ಮಾಹಿತಿಯನ್ನು ಕಾರ್ಪರೇಟ್ ದೈತ್ಯರಿಗೊಪ್ಪಿಸಿ, ಅವರ ಹಿಡಿತದಲ್ಲಿರುವ ಯಂತ್ರಕಲಿಕೆಯ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನದಿಂದ ವಿಶ್ಲೇಷಿಸುವ,  ಈ ಯಂತ್ರಗಳಿಂದಲೇ ಸಾರ್ವಜನಿಕ ನೀತಿಗಳನ್ನುನಿರೂಪಿಸುವ, ಆ ಮೂಲಕ ಸಾಂವಿಧಾನಿಕ ಪ್ರಜಾಸತ್ತೆಯನ್ನು ನಾಶ ಪಡಿಸುವ ನೀತಿ ಆಯೋಗದ ತಂತ್ರವು ಈ ಆರೋಗ್ಯ ಮಿಂದಾಖಲೆಯ ಗುರುತು ಚೀಟಿಯ ರೂಪದಲ್ಲಿ ಜಾರಿಗೆ ಬಂದಿದೆ. ಇದಕ್ಕೆ ಸಂಸತ್ತಿನ ಅನುಮೋದನೆಯನ್ನಾಗಲೀ, ಯಾವುದೇ ಕಾನೂನಿನ ಆಧಾರವನ್ನಾಗಲೀ ಪಡೆಯದಿರುವುದನ್ನು ನೋಡಿದರೆ ಸಂಸದೀಯ ಪ್ರಜಾಸತ್ತೆಯನ್ನು ಛಿದ್ರಗೊಳಿಸುವ ಕೆಲಸವು ಅವ್ಯಾಹತವಾಗಿ ನಡೆಯುತ್ತಲೇ ಇದೆ ಎಂದೇ ತಿಳಿಯಬಹುದು. ಜೊತೆಗೆ, ಹೀಗೆ ಪಡೆದಿರುವ, ಪಡೆಯಲಿರುವ ಮಾಹಿತಿಯನ್ನು ಖಾಸಗಿ ಶಕ್ತಿಗಳಿಗೆ ಮಾರುವುದಾಗಿ ಕರ್ನಾಟಕ ಸರಕಾರವು ಘೋಷಿಸಿರುವುದು, ನೀತಿ ಆಯೋಗವು ಅದಕ್ಕೆ ಈ ಮೊದಲೇ ಪೀಠಿಕೆ ಹಾಕಿರುವುದು, ಏರ್ ಇಂಡಿಯಾದಿಂದ ತೊಡಗಿ ರಸ್ತೆಗಳವರೆಗೆ ಎಲ್ಲವನ್ನೂ ಖಾಸಗಿಯವರಿಗೆ ಮೂರು ಕಾಸಿಗೆ ಮಾರುತ್ತಿರುವ ಸರಕಾರಗಳು ಈ ದೇಶದ 137 ಕೋಟಿ ನಾಗರಿಕರ ವೈಯಕ್ತಿಕ ವಿವರಗಳನ್ನು ವಶ ಪಡಿಸಿಕೊಂಡು ಮಾರಾಟದ ಸರಕಾಗಿಸಿ ಅದೇ ಖಾಸಗಿ ಶಕ್ತಿಗಳಿಗೆ ಮಾರಹೊರಟಿವೆ ಎನ್ನುವುದನ್ನು ತೋರಿಸುತ್ತವೆ. ಇವನ್ನೆಲ್ಲ ಪ್ರಶ್ನಿಸಬೇಕಾದ ರಾಜಕೀಯ ಪಕ್ಷಗಳು ಇದಾವುದರ ಗೊಡವೆಗೂ ಹೋಗದೆ ಸುಮ್ಮನಿವೆ, ಖರೀದಿಸುವವರ ಕಂಪೆನಿಗಳ ಜಾಹೀರಾತುಗಳಿಗೆ ಬಾಯಿ ಬಿಡುವ ಮಾಧ್ಯಮಗಳು ಈ ಮಾರಾಟದ ಬಗ್ಗೆ ಬಾಯಿ ಮುಚ್ಚಿ ಕುಳಿತಿವೆ, ಜನಸಾಮಾನ್ಯರು ಇವನ್ನು ತಿಳಿಯದೆ, ಅಥವಾ ತಿಳಿದರೂ ತಮ್ಮೊಳಗಿನ ಮತೀಯ ವಿಷದ ಅಮಲಿನಲ್ಲಿ ಪ್ರಸಾದವೆಂದೇ ಭ್ರಮಿಸಿ, ತೆಪ್ಪಗಿದ್ದಾರೆ.

Be the first to comment

Leave a Reply

Your email address will not be published.


*