ವಿಜಯ ಕರ್ನಾಟಕದಲ್ಲಿ ‘ಆರೋಗ್ಯ ಆಶಯ’ – 2

ಮೂವತ್ತೊಂಭತ್ತನೇ ಬರಹ : ಕೊಲೆಸ್ಟರಾಲನ್ನು ಬದಿಗಿಟ್ಟು ಕೊಲೆಸ್ಟರಾಲಿಗೆ ಚಿಕಿತ್ಸೆ [ಡಿಸೆಂಬರ್ 11, 2013, ಬುಧವಾರ] [ನೋಡಿ | ನೋಡಿ]

ರಕ್ತದ ಕೊಲೆಸ್ಟರಾಲ್ ಪ್ರಮಾಣಕ್ಕನುಗುಣವಾಗಿ ಸ್ಟಾಟಿನ್ ಔಷಧಗಳನ್ನು ಸೇವಿಸುವ ಅಗತ್ಯ ಇನ್ನಿಲ್ಲ

ಮಧ್ಯವಯಸ್ಕರ ಮಹಾಗುಮ್ಮ ಕೊಲೆಸ್ಟರಾಲ್. ಅದು ಹೆಚ್ಚಿದ್ದರೆ ಹೃದಯಾಘಾತ ಖಂಡಿತವೆಂದು ಹೆದರಿ ಬಹಳಷ್ಟು ಮಂದಿ ವರ್ಷಕ್ಕೆ 2-3 ಬಾರಿ ತಮ್ಮ ರಕ್ತದ ಕೊಲೆಸ್ಟರಾಲ್ ಅನ್ನು ಅಳೆಯುತ್ತಿರುತ್ತಾರೆ. ಅಂತಹಾ ಪರೀಕ್ಷೆಗಳಲ್ಲಿ ಕೊಲೆಸ್ಟರಾಲ್ ಮಟ್ಟವು ಒಂದಿಷ್ಟು ಹೆಚ್ಚಿದ್ದರೂ ಸಾಕು, ಅದನ್ನು ದಪ್ಪಕ್ಷರಗಳಲ್ಲಿ, ಅಡಿಗೆರೆ ಹಾಕಿ ಮುದ್ರಿಸಲಾಗುತ್ತದೆ. ಅದನ್ನು ಕಂಡಾಗಲೇ ಹೃದಯದ ಬಡಿತ ಕಿವಿಗೆ ಹತ್ತಿರವಾಗತೊಡಗುತ್ತದೆ. ಅಲ್ಲಿಂದ ಬಾಳಿನ ದಾರಿಯೇ ಬದಲಾಗಿ, ಆ ದಪ್ಪಕ್ಷರದ ಗುಮ್ಮನನ್ನು ತೆಳುವಾಗಿಸುವ ಹೋರಾಟ ಆರಂಭಗೊಳ್ಳುತ್ತದೆ.

ಇಂದು ಜಗತ್ತಿನ ಸುಮಾರು 30 ಕೋಟಿಗೂ ಹೆಚ್ಚು ಜನ, ಅಮೆರಿಕಾದಲ್ಲಿ 45 ವಯಸ್ಸಿಗೆ ಮೇಲ್ಪಟ್ಟವರಲ್ಲಿ ನಾಲ್ಕರಲ್ಲೊಬ್ಬರು, ಕೊಲೆಸ್ಟರಾಲ್ ಮಟ್ಟವನ್ನು ಕೆಳಗಿಳಿಸುವ ಸ್ಟಾಟಿನ್ ಇತ್ಯಾದಿ ಔಷಧಗಳನ್ನು ಪ್ರತಿನಿತ್ಯವೂ ಸೇವಿಸುತ್ತಾರೆ. ಈ ಔಷಧಗಳ ಜಾಗತಿಕ ವಹಿವಾಟು ವರ್ಷಕ್ಕೆ 155000 ಕೋಟಿ ರೂಪಾಯಿಗಳಷ್ಟು; ಎರಡೇ ಕಂಪೆನಿಗಳ ಎರಡೇ ಮಾತ್ರೆಗಳಿಗೆ ಅದರಲ್ಲಿ ಅರ್ಧದಷ್ಟು ಪಾಲು. ಭಾರತದಲ್ಲೂ ಅವುಗಳ ವಾರ್ಷಿಕ ವಹಿವಾಟು ರೂ. 350 ಕೋಟಿಗೂ ಹೆಚ್ಚು. ಅಂತಿರುವಲ್ಲಿ, ಜಗತ್ತಿನ ಎಲ್ಲ ಪ್ರಜೆಗಳೂ ತಮ್ಮ ರಕ್ತದ ಕೊಲೆಸ್ಟರಾಲ್ ಪ್ರಮಾಣವನ್ನು ಒಂದೇ ಮಟ್ಟಕ್ಕಿಳಿಸುವ ಅಗತ್ಯ ಇನ್ನಿಲ್ಲವೆಂದು ಇದೇ ನವೆಂಬರ್ 15ರಂದು ಘೋಷಿಸಲಾಗಿದೆ; ಕೊಲೆಸ್ಟರಾಲ್ ಪ್ರಮಾಣವನ್ನು ಕಟ್ಟುನಿಟ್ಟಾಗಿ ಇಂತಿಷ್ಟೇ ಮಟ್ಟಕ್ಕಿಳಿಸಿಕೊಳ್ಳುವುದರಿಂದ ವಿಶೇಷವಾದ ಲಾಭವಿಲ್ಲವೆಂದು ಹೇಳಲಾಗಿದೆ. ಅಂತಹಾ ನಿಯಂತ್ರಣದ ಅಗತ್ಯವಿದೆಯೆಂದು ಎಂಭತ್ತರ ದಶಕದಿಂದಲೂ ಸಲಹೆ ನೀಡುತ್ತಾ ಬಂದಿದ್ದವರೇ ಈಗ ಬೇಡವೆನ್ನುತ್ತಿದ್ದಾರೆ!

ರಕ್ತದಲ್ಲಿ ಕೊಲೆಸ್ಟರಾಲ್ ಪ್ರಮಾಣ ಎಷ್ಟಿರಬೇಕು, ಅದಕ್ಕೆ ಯಾವಾಗ ಚಿಕಿತ್ಸೆ ಬೇಕು ಇತ್ಯಾದಿಗಳನ್ನು ಹೇಳುವವರು ಯಾರು? ಅಮೆರಿಕಾದ ರಾಷ್ಟ್ರೀಯ ಆರೋಗ್ಯ ಸಂಸ್ಥೆಯಡಿಯಲ್ಲಿ ರಾಷ್ಟ್ರೀಯ ಹೃದಯ,ಶ್ವಾಸಾಂಗ ಹಾಗೂ ರಕ್ತ ಆರೋಗ್ಯ ಸಂಸ್ಥೆ ಎಂಬುದಿದೆ. ಹೃದ್ರೋಗಗಳು ಹಾಗೂ ರಕ್ತನಾಳಗಳ ಕಾಯಿಲೆಗಳ ಬಗ್ಗೆ ನಡೆಸಲಾಗುತ್ತಿರುವ ಅತ್ಯುನ್ನತ ಮಟ್ಟದ ಸಂಶೋಧನೆಗಳಿಗೆ ಈ ಸಂಸ್ಥೆಯ ಕೊಡುಗೆ ಪಾರವಿಲ್ಲದ್ದು. ಹಾಗಾಗಿ, ಈ ಸಂಸ್ಥೆಯಿಂದ ಹೊರಬರುವ ಸಲಹೆ-ಸೂಚನೆಗಳಿಗೆ ವಿಶೇಷವಾದ ಮಾನ್ಯತೆಯಿರುತ್ತದೆ. ರಾಷ್ಟ್ರೀಯ ಕೊಲೆಸ್ಟರಾಲ್ ಶಿಕ್ಷಣ ಕಾರ್ಯಕ್ರಮದ ಅಂಗವಾಗಿ 80ರ ದಶಕದಿಂದ ಇದುವರೆಗೆ ಈ ಸಂಸ್ಥೆಯಿಂದ ತಜ್ಞರ ನಾಲ್ಕು ಸಮಿತಿಗಳು (ಎಟಿಪಿ 1-4) ನೇಮಕಗೊಂಡಿದ್ದು, ಮೊನ್ನೆಯ ವರದಿಯು ಅವುಗಳಲ್ಲಿ ನಾಲ್ಕನೆಯದು.

ಕಾಲಕಾಲಕ್ಕೆ ಲಭ್ಯವಿರುವ ಹೊಸ ಸಂಶೋಧನೆಗಳ ಆಧಾರದಲ್ಲಿ ಈ ಸಮಿತಿಗಳು ಸಲಹೆಗಳನ್ನು ರೂಪಿಸುತ್ತವೆ. ಮೊದಲ ಎಟಿಪಿ ವರದಿಯಲ್ಲಿ (1988) ಹೃದ್ರೋಗವನ್ನು ತಡೆಯುವುದಕ್ಕಾಗಿ ಎಲ್ ಡಿ ಎಲ್ ಕೊಲೆಸ್ಟರಾಲ್ ಪ್ರಮಾಣವನ್ನು 130ಮಿಗ್ರಾಂ%ಗಿಂತ ಕೆಳಗಿಳಿಸಬೇಕೆಂದು ಹೇಳಿ, ಅದಕ್ಕಾಗಿ ಆಹಾರ ನಿಯಂತ್ರಣ ಹಾಗೂ ಔಷಧಗಳನ್ನು ಸೂಚಿಸಲಾಯಿತು. ಎರಡನೇ ಎಟಿಪಿ ವರದಿಯಲ್ಲಿ (1993),ಹೃದ್ರೋಗವುಳ್ಳವರು ಎಲ್ ಡಿ ಎಲ್ ಕೊಲೆಸ್ಟರಾಲ್ ಪ್ರಮಾಣವನ್ನು 100 ಮಿಗ್ರಾಂ%ಗೂ, ಇನ್ನುಳಿದವರು 130ಮಿಗ್ರಾಂ%ಗೂ ಇಳಿಸಿಕೊಳ್ಳಬೇಕೆಂದು ಹೇಳಲಾಯಿತು. ಮೂರನೇ ಎಟಿಪಿ ವರದಿಯಲ್ಲಿ (2002),ಕೊಲೆಸ್ಟರಾಲ್ ಜೊತೆಗೆ, ಧೂಮಪಾನ, ರಕ್ತದ ಏರೊತ್ತಡ ಇತ್ಯಾದಿಗಳಿಂದ ಹೃದ್ರೋಗದ ಅಪಾಯವು ಹೆಚ್ಚುಳ್ಳವರು ಕೂಡಾ ಈ ಔಷಧಗಳನ್ನು ಸೇವಿಸಬೇಕೆಂಬ ಸಲಹೆಯನ್ನು ಮುಂದಿಡಲಾಯಿತು. ಅದನ್ನು 2004ರಲ್ಲಿ ಪರಿಷ್ಕರಿಸಿ, ಹೃದ್ರೋಗವುಳ್ಳವರು ತಮ್ಮ ಎಲ್ ಡಿ ಎಲ್ ಕೊಲೆಸ್ಟರಾಲ್ ಪ್ರಮಾಣವನ್ನು 70 ಮಿಗ್ರಾಂ%ಗೆ ಇಳಿಸಿಕೊಳ್ಳಬೇಕೆಂದು ಸೂಚಿಸಲಾಯಿತು. ಈಗ ನವಂಬರ್ 15ರಂದು ಪ್ರಕಟವಾಗಿರುವ ಎಟಿಪಿ ನಾಲ್ಕನೇ ವರದಿಯಲ್ಲಿ ಕೊಲೆಸ್ಟರಾಲ್ ಮಟ್ಟವನ್ನು ಇಂತಿಷ್ಟೇ ಮಿಗ್ರಾಂಗಳಿಗೆ ಇಳಿಸಬೇಕೆಂಬ ಸಲಹೆಯನ್ನು ಕೈಬಿಡಲಾಗಿದೆ!

ಯಾಕೆ ಹೀಗೆ? ಈ ಹೊಸ ಸಮಿತಿಯು ಪರಿಶೀಲಿಸಿದ 25 ದೊಡ್ಡ ಅಧ್ಯಯನಗಳಲ್ಲಿ ಎಲ್ ಡಿ ಎಲ್ ಕೊಲೆಸ್ಟರಾಲ್ ಪ್ರಮಾಣವನ್ನು 100 ಅಥವಾ 70ಮಿಗ್ರಾಂ% ಮಟ್ಟಕ್ಕೆ ಇಳಿಸುವ ಪ್ರಯತ್ನಗಳೇ ಆಗಿರಲಿಲ್ಲ. ಅಂದರೆ, 1988ರಿಂದ 2013ರವರೆಗಿನ ಮೂರು ಎಟಿಪಿ ವರದಿಗಳ ಸಲಹೆಗಳನ್ನು ಪ್ರಮಾಣೀಕರಿಸುವ ಒಂದೇ ಒಂದು ಅಧ್ಯಯನವೂ ಎಟಿಪಿ 4ನೇ ಸಮಿತಿಗೆ ಕಾಣಸಿಗಲಿಲ್ಲ! ಇಲ್ಲಿಯವರೆಗೂ ರಕ್ತದ ಕೊಲೆಸ್ಟರಾಲ್ ಪ್ರಮಾಣವು ನೂರಕ್ಕಿಂತ ಹೆಚ್ಚಿದ್ದರೆ ದಪ್ಪಕ್ಷರಗಳಲ್ಲಿ, ಅಡಿಗೆರೆ ಹಾಕಿ ಹೆದರಿಸಿ, ಕೋಟಿಗಟ್ಟಲೆ ಜನರಿಗೆ ಲಕ್ಷ ಕೋಟಿಗಟ್ಟಲೆಯ ಮಾತ್ರೆಗಳನ್ನು ನುಂಗಿಸಿ ನೀರು ಕುಡಿಸಿದ್ದಕ್ಕೆ ಯಾವ ಆಧಾರವೂ ಈ ಸಮಿತಿಗೆ ದೊರೆಯಲಿಲ್ಲ.

ಕೊಲೆಸ್ಟರಾಲ್ ಪ್ರಶ್ನೆಗೆ ಮೊದಲಿನಿಂದಲೂ ಸಮರ್ಪಕವಾದ ಉತ್ತರಗಳಿರಲೇ ಇಲ್ಲ. ಕೊಲೆಸ್ಟರಾಲ್ ನಮ್ಮ ಕಣಕಣಗಳಲ್ಲೂ ಅಡಕವಾಗಿದ್ದು, ಅದಿಲ್ಲದೆ ನಾವು ಬದುಕಲಾರೆವು. ಜೀವಕಣಗಳ ಉಳಿಯುವಿಕೆಗೆ, ಅವುಗಳೊಳಗಿನ ಸಂವಹನಕ್ಕೆ, ರಕ್ತನಾಳಗಳ ಆರೋಗ್ಯಕ್ಕೆ, ನರಮಂಡಲದ ಸುಸೂತ್ರವಾದ ಕಾರ್ಯಗಳಿಗೆ, ರೋಗರಕ್ಷಣೆಗೆ, ಪಿತ್ತರಸಸ್ರಾವಕ್ಕೆ,  ಎ, ಡಿ, ಇ, ಕೆ ಮುಂತಾದ ಅನ್ನಾಂಗಗಳಿಗೆ, ಹಲಬಗೆಯ ಹಾರ್ಮೋನುಗಳ ತಯಾರಿಗೆ ಕೊಲೆಸ್ಟರಾಲ್ ಬೇಕೇ ಬೇಕು. ಮೂವತ್ತರ ದಶಕದಲ್ಲಿ ಪೆಡಸಾದ ರಕ್ತನಾಳಗಳ ಭಿತ್ತಿಯಲ್ಲಿ ಕೊಲೆಸ್ಟರಾಲ್ ಗುರುತಿಸಲ್ಪಡುವುದರೊಂದಿಗೆ ಅದರ ಮಾನಹರಣದ ಪಿಡುಗು ಆರಂಭಗೊಂಡಿತು. ರಕ್ತದ ಕೊಲೆಸ್ಟರಾಲಿಗೂ, ಪೆಡಸಾದ ನಾಳಗಳಲ್ಲಿ ಅದರ ಶೇಖರಣೆಗೂ ಸಂಬಂಧಗಳಿಲ್ಲವೆನ್ನುವುದನ್ನು ಅದೆಷ್ಟೋ ಅಧ್ಯಯನಗಳು ಸುಸ್ಪಷ್ಟವಾಗಿ ತೋರಿಸಿದರೂ, ಈ ತೆಗಳುವಿಕೆ ನಿಲ್ಲಲಿಲ್ಲ. ಕೊಲೆಸ್ಟರಾಲ್ ಸಂಶ್ಲೇಷಣೆಯನ್ನು ತಡೆಯಬಲ್ಲ ಸ್ಟಾಟಿನ್ ಔಷಧಗಳನ್ನು ಎಟಿಪಿ ವರದಿಗಳು ಬೆಂಬಲಿಸಿದ ಬಳಿಕ ಇದು ಇನ್ನಷ್ಟು ಗಟ್ಟಿಗೊಂಡಿತು.

ಸ್ಟಾಟಿನ್ ಔಷಧಗಳ ಸುರಕ್ಷತೆಯ ಬಗೆಗೂ ಪ್ರಶ್ನೆಗಳಿವೆ. ಅವನ್ನು ಬಳಸತೊಡಗಿದವರಲ್ಲಿ ಸ್ನಾಯುವೇದನೆ ಹಾಗೂ ಸ್ನಾಯುಗಳ ಗಂಭೀರ ಸಮಸ್ಯೆಗಳು, ಮಧುಮೇಹ, ಯಕೃತ್ತಿನ ತೊಂದರೆಗಳು, ಕಣ್ಣಿನ ಪೊರೆ, ಲೈಂಗಿಕ ನಿಶ್ಶಕ್ತಿ, ಮರೆಗುಳಿತನ ಮತ್ತಿತರ ನರಮಂಡಲದ ತೊಂದರೆಗಳು, ಮೂತ್ರಪಿಂಡಗಳ ವೈಫಲ್ಯ, ರಕ್ತನಾಳಗಳ ಕ್ಯಾಲ್ಸೀಕರಣ ಹಾಗೂ ಮುಚ್ಚವಿಕೆ, ಕೆಲವು ಕ್ಯಾನ್ಸರ್ ಗಳು, ಸೋಂಕುಗಳು ಇವೇ ಮುಂತಾದ ಹಲವು ಗಂಭೀರ ಸಮಸ್ಯೆಗಳನ್ನು ಗುರುತಿಸಲಾಗಿದೆ. ಹೃದಯದ ವೈಫಲ್ಯವುಳ್ಳವರಲ್ಲೂ, ಹಿರಿವಯಸ್ಕರಲ್ಲೂ ಈ ಔಷಧಗಳು ಲಾಭಕ್ಕಿಂತ ಹೆಚ್ಚು ಹಾನಿಯನ್ನೇ ಉಂಟುಮಾಡಬಹುದು. ಅದಾಗಲೇ ಹೃದಯಾಘಾತಕ್ಕೊಳಗಾಗಿರುವವರಲ್ಲಿ ಈ ಔಷಧಗಳಿಂದ ಅತ್ಯಲ್ಪ ಪ್ರಯೋಜನವಾಗಬಹುದಾದರೂ, ರಕ್ತನಾಳಗಳ ಕಾಯಿಲೆಯಿಲ್ಲದವರಲ್ಲಿ ಅವು ಉಪಯುಕ್ತವೆನ್ನಲು ಬಲವಾದ ಆಧಾರಗಳೇ ಇಲ್ಲ. (ಒಜೆಇಎಂಡಿ 2013;3:179)

ಆದರೆ, ಕೊಲೆಸ್ಟರಾಲ್ ಮಟ್ಟವನ್ನು ಇಳಿಸುವುದಕ್ಕಲ್ಲದಿದ್ದರೂ ಹೃದಯದ ಒಳಿತಿಗಾಗಿ ಇನ್ನೂ ಹೆಚ್ಚು ಜನರು ಸ್ಟಾಟಿನ್ ಗಳನ್ನು ಸೇವಿಸಬೇಕು ಎಂದು ಹೊಸ ಎಟಿಪಿ ಸೂತ್ರಗಳು ಸಲಹೆ ನೀಡಿವೆ! ಅದಾಗಲೇ ಹೃದಯಾಘಾತ, ಪಾರ್ಶ್ವವಾಯುಗಳಿಗೆ ತುತ್ತಾದವರು, ಅನುವಂಶೀಯವಾಗಿ ಕೊಲೆಸ್ಟರಾಲ್ ಹೆಚ್ಚುಳ್ಳವರು (ಎಲ್ ಡಿ ಎಲ್ >190ಮಿಗ್ರಾಂ%), 40-75 ವಯಸ್ಸಿನ ಎಲ್ಲಾ ಮಧುಮೇಹಿಗಳು ಹಾಗೂ ಇವಿಲ್ಲದಿದ್ದರೂ, ಮುಂದಿನ 10 ವರ್ಷಗಳಲ್ಲಿ ರಕ್ತನಾಳಗಳ ತೊಂದರೆಯುಂಟಾಗುವ ಸಾಧ್ಯತೆ ಶೇ. 7.5ಕ್ಕಿಂತ ಹೆಚ್ಚುಳ್ಳವರು ಸ್ಟಾಟಿನ್ ಗಳನ್ನು ಸೇವಿಸಬೇಕು ಎಂದು ಈ ವರದಿಯಲ್ಲಿ ಹೇಳಲಾಗಿದೆ. ಲಿಂಗ, ವಯಸ್ಸು, ಜನಾಂಗ, ಕೊಲೆಸ್ಟರಾಲ್ ಮಟ್ಟ, ರಕ್ತದೊತ್ತಡ, ಮಧುಮೇಹ ಹಾಗೂ ಧೂಮಪಾನಗಳ ಆಧಾರದಲ್ಲಿ ಹತ್ತು ವರ್ಷಗಳ ಅಪಾಯವನ್ನು ಲೆಕ್ಕ ಹಾಕುವುದಕ್ಕೆ ಒಂದು ಗಣಕವನ್ನು ಸಮಿತಿಯೇ ಅಂತರಜಾಲದಲ್ಲಿ ಉಚಿತವಾಗಿ ಒದಗಿಸಿದೆ! ರಕ್ತದೊತ್ತಡ >110, ಒಟ್ಟು ಕೊಲೆಸ್ಟರಾಲ್ >170, ಎಚ್ ಡಿ ಎಲ್ <50 ಇದ್ದರೆ ಈ ಗಣಕದ ಲೆಕ್ಕ ಶುರುವಾಗುತ್ತದೆ. ನಲುವತ್ತರ ವಯಸ್ಸನ್ನು ಮೀರಿದ ಹಲವರನ್ನೂ, 63 ಮೀರಿದ ಎಲ್ಲಾ ಪುರುಷರು ಹಾಗೂ 71 ಮೀರಿದ ಎಲ್ಲಾ ಮಹಿಳೆಯರನ್ನೂ ಇದು ಚಿಕಿತ್ಸೆಗೆ ದೂಡುತ್ತದೆ.

ಅಂತೂ ಇಂತೂ ಸ್ಟಾಟಿನ್ ಮಾತ್ರೆಗಳನ್ನು ನುಂಗಿಸಲೆಳಸುವ ಇಂತಹಾ ವರದಿಗಳನ್ನು ಬದಿಗೊತ್ತಬಾರದೇಕೆ? ಆಧುನಿಕ ಆಹಾರ ಹಾಗೂ ಜೀವನಶೈಲಿ, ದೈಹಿಕ ವ್ಯಾಯಾಮವಿಲ್ಲದ ಆಲಸ್ಯ, ಧೂಮಪಾನ, ನಿಯಂತ್ರಣದಲ್ಲಿಲ್ಲದ ರಕ್ತದೊತ್ತಡ ಹಾಗೂ ಮಧುಮೇಹಗಳು ರಕ್ತನಾಳಗಳ ಪೆಡಸಾಗುವಿಕೆಗೂ, ಕೊಲೆಸ್ಟರಾಲ್ ಹೆಚ್ಚಳಕ್ಕೂ ಮುಖ್ಯ ಕಾರಣಗಳಾಗಿವೆ. ಆದ್ದರಿಂದ ಹಾಲು, ಸಕ್ಕರೆ, ಇತರ ಸಿಹಿಪದಾರ್ಥಗಳು, ಸಂಸ್ಕರಿತ ಧಾನ್ಯಗಳು, ಕರಿದ ತಿನಿಸುಗಳು ಇತ್ಯಾದಿಗಳನ್ನು ಸಂಪೂರ್ಣವಾಗಿ ವರ್ಜಿಸುವುದು, ಧೂಮಪಾನ, ಮದ್ಯಪಾನಗಳಿಂದ ದೂರವಿರುವುದು, ರಕ್ತದೊತ್ತಡ ಹಾಗೂ ಮಧುಮೇಹಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವುದು ಅತ್ಯಗತ್ಯ. ತರಕಾರಿಗಳು, ಬೀಜಗಳು, ಮೀನು ಇತ್ಯಾದಿಗಳನ್ನು ಹೆಚ್ಚಾಗಿ ಸೇವಿಸುವುದು ರಕ್ತನಾಳಗಳ ಆರೋಗ್ಯಕ್ಕೆ ಒಳ್ಳೆಯದು. ಆಹಾರದಲ್ಲಿರುವ ಕೊಲೆಸ್ಟರಾಲ್ ರಕ್ತದ ಕೊಲೆಸ್ಟರಾಲ್ ಮೇಲೆ ಕೇವಲ 0-4%ದಷ್ಟೇ ಪ್ರಭಾವ ಬೀರುವುದರಿಂದ ಮೊಟ್ಟೆ ಹಾಗೂ ಮಾಂಸಾಹಾರವನ್ನು ಹಿತಮಿತವಾಗಿ ಸೇವಿಸಬಹುದು. ನಿತ್ಯವೂ ಒಂದಷ್ಟು ದೈಹಿಕ ವ್ಯಾಯಾಮದ ಜೊತೆಗೆ ಬಿಸಿಲಿಗೆ ಮೈಯೊಡ್ಡುವುದರಿಂದಲೂ ರಕ್ತನಾಳಗಳನ್ನು ಸುಸ್ಥಿತಿಯಲ್ಲಿಡಲು ನೆರವಾಗುತ್ತದೆ.

ಅಂತೂ ದಪ್ಪಕ್ಷರಗಳಲ್ಲಿ ಅಡಿಗೆರೆ ಹಾಕಿದ ಕೊಲೆಸ್ಟರಾಲ್ ವರದಿಗಳನ್ನು ಕಂಡು ಹೌಹಾರುವ ದಿನಗಳು ಮುಗಿದವೆನ್ನಲು ಅಡ್ಡಿಯಿಲ್ಲ. ಅದಾಗಲೇ ಹೃದಯಾಘಾತವಾದವರು ಅಡ್ಡಪರಿಣಾಮಗಳಿಲ್ಲದಿದ್ದರೆ ಕೆಲಕಾಲ ಸ್ಟಾಟಿನ್ ಔಷಧಗಳನ್ನು ಸೇವಿಸಬಹುದು; ಇನ್ನುಳಿದವರಲ್ಲಿ ಈ ಔಷಧಗಳಿಂದ ಪ್ರಯೋಜನವಿದೆಯೆನ್ನಲು ಸದ್ಯಕ್ಕೆ ಆಧಾರಗಳಿಲ್ಲ.

ಮೂವತ್ತೆಂಟನೇ ಬರಹ : ಸಾವಿನ ಸನಿಹದಲ್ಲಿರುವ ಜೀವರಕ್ಷಕ ಪ್ರತಿಜೈವಿಕಗಳು [ನವಂಬರ್ 27, 2013, ಬುಧವಾರ] [ನೋಡಿ | ನೋಡಿ]

ನಮ್ಮ ಅಜ್ಞಾನ, ಉದಾಸೀನದಿಂದ ಸೂಕ್ಷ್ಮಾಣು ನಿರೋಧಕ ಔಷಧಗಳು ನಿಷ್ಪ್ರಯೋಜಕವಾಗುವ ಭೀತಿಯುಂಟಾಗಿದೆ

ಕಳೆದ ಎಪ್ಪತ್ತೈದು ವರ್ಷಗಳಿಂದ ಕೋಟಿಗಟ್ಟಲೆ ಜೀವಗಳನ್ನುಳಿಸಿರುವ ಪ್ರತಿಜೈವಿಕ ಔಷಧಗಳ ಕಡೆಗಾಲವು ಸನ್ನಿಹಿತವಾದಂತಿದ್ದು, ವೈದ್ಯವಿಜ್ಞಾನಕ್ಕಷ್ಟೇ ಅಲ್ಲದೆ ವಿಶ್ವದೆಲ್ಲೆಡೆಯ ರಾಜಕೀಯ-ಆರ್ಥಿಕ ವ್ಯವಸ್ಥೆಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಬಗ್ಗೆ ಲಾನ್ಸೆಟ್ ಇನ್ಫೆಕ್ಷಿಯಸ್ ಡಿಸೀಸಸ್ ವಿದ್ವತ್ ಪತ್ರಿಕೆಯ ನವೆಂಬರ್ 17ರ ಸಂಚಿಕೆಯಲ್ಲಿ ಪ್ರಕಟವಾಗಿರುವ ವರದಿಗಳು [ಲಾ. ಇನ್. ಡಿಸೀ. 2013;13(12):1057-1098] ಎಚ್ಚರಿಕೆಯ ಕರೆಗಂಟೆಗಳಾಗಿವೆ.

ಬರಿಗಣ್ಣಿಗೆ ಕಾಣಿಸದ ಸೂಕ್ಷ್ಮಜೀವಿಗಳು 17ನೇ ಶತಮಾನದಲ್ಲಿ ಗುರುತಿಸಲ್ಪಟ್ಟು, 19ನೇ ಶತಮಾನದಲ್ಲಿ ಲೂಯಿ ಪಾಸ್ಚರ್, ರಾಬರ್ಟ್ ಕೋ ಮುಂತಾದವರ ಅವಿರತ ಪ್ರಯತ್ನಗಳಿಂದ ಅವು ನಮ್ಮ ಕೆಲ ರೋಗಗಳಿಗೂ ಕಾರಣವೆನ್ನುವುದು ದೃಢಗೊಂಡಿತು. ಇಪ್ಪತ್ತನೇ ಶತಮಾನದ ಆರಂಭದಲ್ಲಿ ಸೂಕ್ಷ್ಮಾಣುನಾಶಕ ಔಷಧಗಳ ಹುಡುಕಾಟವು ಬಿರುಸಾಗಿ, 1938ರಲ್ಲಿ ಸಲ್ಫಾ ಔಷಧಗಳ ಬಳಕೆಯೊಂದಿಗೆ ಸೂಕ್ಷ್ಮಾಣು ನಿರೋಧಕಗಳ ಸುವರ್ಣಯುಗವು ಆರಂಭಗೊಂಡಿತು. ಪೆನಿಸಿಲಿಯಂ ಎಂಬ ಶಿಲೀಂಧ್ರದಲ್ಲಿ ಫ್ಲೆಮಿಂಗ್ ಗುರುತಿಸಿದ ಪೆನಿಸಿಲಿನ್ ಎಂಬ ಬ್ಯಾಕ್ಟೀರಿಯಾನಾಶಕ ಪ್ರತಿಜೈವಿಕವು 1945ರಲ್ಲಿ ಬಳಕೆಗೆ ಬರುವುದರೊಂದಿಗೆ ಸೂಕ್ಷ್ಮಾಣು ವಿಜ್ಞಾನದಲ್ಲೂ, ಆರೋಗ್ಯ ರಕ್ಷಣೆಯಲ್ಲೂ ಬಹುದೊಡ್ಡ ಕ್ರಾಂತಿಯಾಯಿತೆನ್ನಬಹುದು.

ನಂತರದ ವರ್ಷಗಳಲ್ಲಿ ಕೃತಕ ಪೆನಿಸಿಲಿನ್ ಗಳೂ, ಇನ್ನಷ್ಟು ಸೂಕ್ಷ್ಮಾಣು ನಿರೋಧಕಗಳೂ ಲಭ್ಯವಾದವು. ಚಿಕಿತ್ಸೆಯಿಲ್ಲದೆ ಪ್ರತೀ ವರ್ಷ ಕೋಟಿಗಟ್ಟಲೆ ಸಾವು-ನೋವುಗಳಿಗೆ ಕಾರಣವಾಗುತ್ತಿದ್ದ ಪ್ಲೇಗ್, ಮಲೇರಿಯಾ,  ಕ್ಷಯ,  ಕೊಲೆರಾ,  ಟೈಫಾಯ್ಡ್,  ಆಮಶಂಕೆ,  ಧನುರ್ವಾತ, ಡಿಫ್ತೀರಿಯಾ, ಕುಷ್ಠ, ಗುಹ್ಯ ರೋಗಗಳು ಮುಂತಾದವು ನಿಯಂತ್ರಣಕ್ಕೆ ಬಂದವು. ಶಸ್ತ್ರಚಿಕಿತ್ಸೆಗಳೂ, ಹೆರಿಗೆ ಹಾಗೂ ನವಜಾತ ಶಿಶುಗಳ ಆರೈಕೆಗಳೂ ಸುರಕ್ಷಿತವಾಗಿ ಇನ್ನೊಂದಷ್ಟು ಕೋಟಿ ಜೀವಗಳು ಬದುಕುಳಿದವು. ಹೀಗೆ ಮನುಷ್ಯರ ಆಯುಸ್ಸನ್ನು ಕೆಲ ದಶಕಗಳಷ್ಟು ಹೆಚ್ಚಿಸಲು ಸಾಧ್ಯವಾದುದು ಇಪ್ಪತ್ತನೇ ಶತಮಾನದಲ್ಲಿ ಆಧುನಿಕ ವೈದ್ಯ ವಿಜ್ಞಾನದ ಮಹತ್ಸಾಧನೆಯಾಯಿತು.

ಆದರೀಗ ಈ ಸೂಕ್ಷ್ಮಾಣು ನಿರೋಧಕ ಔಷಧಗಳೆಲ್ಲ ನಿಷ್ಪ್ರಯೋಜಕವಾಗುವ ಭೀತಿಯುಂಟಾಗಿದೆ; ನಿಯಂತ್ರಿಸಲ್ಪಟ್ಟಿದ್ದ ಸೋಂಕುಗಳೆಲ್ಲವೂ ಮತ್ತೆ ತಾಂಡವವಾಡಿ, ಇಪ್ಪತ್ತನೇ ಶತಮಾನದ ಆರಂಭದಲ್ಲಿದ್ದಂತೆ ಅಸಂಖ್ಯ ಸಾವು-ನೋವುಗಳನ್ನುಂಟು ಮಾಡುವ ಅಪಾಯವು ಗೋಚರಿಸುತ್ತಿದೆ. ಹೀಗಾಗಲು ಹಲವು ಕಾರಣಗಳಿವೆ. ಮೊದಲ ಮೂರು ದಶಕಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಜಾತಿಯ ಸೂಕ್ಷ್ಮಾಣು ನಿರೋಧಕಗಳನ್ನು ಕಂಡುಹಿಡಿಯಲಾಯಿತಾದರೂ, ನಂತರ ಹೊಸ ಔಷಧಗಳ ಹುಡುಕಾಟ ತಣ್ಣಗಾಯಿತು. ಇದ್ದವುಗಳನ್ನೇ ಅಷ್ಟಿಷ್ಟು ಬದಲಿಸಿ ಇನ್ನೊಂದಷ್ಟನ್ನು ತಯಾರಿಸಿದ್ದಲ್ಲದೆ, ತೀರಾ ಹೊಸತಾದ ಔಷಧಗಳು ಬರಲೇ ಇಲ್ಲ. ನಾವು ಅತಿ ವಿಶ್ವಾಸದಿಂದ ಕೈಕಟ್ಟಿ ಸುಮ್ಮನಿದ್ದಾಗ ಸೂಕ್ಷ್ಮಾಣುಗಳು ಸುಮ್ಮನಿರಲಿಲ್ಲ. ಭೂಮಿಯ ಮೇಲೆ ಆಧುನಿಕ ಮನುಷ್ಯರು ಎರಡು ಲಕ್ಷ ವರ್ಷಗಳಿಂದಿದ್ದರೆ, ಸೂಕ್ಷ್ಮಾಣುಗಳು ಇನ್ನೂರು ಕೋಟಿಗೂ ಹೆಚ್ಚು ವರ್ಷಗಳಿಂದಿವೆ. ಶಿಲೀಂಧ್ರಗಳು ಸ್ರವಿಸುವ ಬ್ಯಾಕ್ಟೀರಿಯಾನಾಶಕ ಪ್ರತಿಜೈವಿಕಗಳೂ, ಅವನ್ನು ನಿಷ್ಕ್ರಿಯಗೊಳಿಸುವುದಕ್ಕೆ ಬ್ಯಾಕ್ಟೀರಿಯಾಗಳ ಪ್ರತಿತಂತ್ರಗಳೂ  ಅಂದಿನಿಂದಲೂ ಇವೆ. ಅಂತಲ್ಲಿ, ನಾವು ಬಳಸತೊಡಗಿದ ಶಿಲೀಂಧ್ರಜನ್ಯ ಯಾ ಕೃತಕ ಪ್ರತಿಜೈವಿಕಗಳನ್ನು ನಿಷ್ಕ್ರಿಯಗೊಳಿಸುವುದಕ್ಕೆ ಬ್ಯಾಕ್ಟೀರಿಯಾಗಳಿಗೆ ಕಷ್ಟವೇ ಆಗಲಿಲ್ಲ. ಪ್ರತಿಯೊಂದು ಹೊಸ ಔಷಧವನ್ನು ಬಳಸತೊಡಗಿದ ನಾಲ್ಕೈದು ವರ್ಷಗಳಲ್ಲೇ ಅದನ್ನು ನಿಷ್ಕ್ರಿಯಗೊಳಿಸುವ ತಂತ್ರವನ್ನು ಬ್ಯಾಕ್ಟೀರಿಯಾಗಳು ಬೆಳೆಸಿಕೊಂಡವು. ಹಳೆಯ ಮತ್ತು ಹೊಚ್ಚ ಹೊಸತಾದ ಔಷಧಗಳೆಲ್ಲಕ್ಕೂ ಪ್ರತಿರೋಧವೊಡ್ಡಬಲ್ಲ ಬ್ಯಾಕ್ಟೀರಿಯಾಗಳನ್ನು ವಿಶ್ವದೆಲ್ಲೆಡೆ ಈಗ ಗುರುತಿಸಲಾಗುತ್ತಿದ್ದು, ಈಗಿರುವ ಎಲ್ಲಾ ಪ್ರತಿಜೈವಿಕ ಔಷಧಗಳು ಸದ್ಯೋಭವಿಷ್ಯದಲ್ಲಿ ನಿರರ್ಥಕವೆನಿಸಬಹುದು.

ಬಹು ಪ್ರಯಾಸದಿಂದ, ಅಪಾರವಾದ ವೆಚ್ಚಗಳಿಂದ ಪಡೆದಿದ್ದ ಈ ಆಸ್ತ್ರಗಳನ್ನು ಆದಷ್ಟು ಮಟ್ಟಿಗೆ ಗುಟ್ಟಾಗಿಟ್ಟುಕೊಂಡು, ಎಷ್ಟು ಬೇಕೋ ಅಷ್ಟೇ ಬಳಸಿದ್ದರೆ ಈ ದುಸ್ಥಿತಿ ಬರುತ್ತಿರಲಿಲ್ಲವೇನೋ? ಆದರೆ ನಾವು ಅಷ್ಟು ಜಾಗರೂಕರಾಗಿರಲಿಲ್ಲ. ಔಷಧ ಕಂಪೆನಿಗಳು ಲಾಭದಾಸೆಗೆ ಬಿದ್ದು ಎಲ್ಲೆಂದರಲ್ಲಿ ಪ್ರತಿಜೈವಿಕಗಳ ಬಳಕೆಯನ್ನು ಪ್ರೋತ್ಸಾಹಿಸಿದವು. ಪ್ರತೀ ವರ್ಷ ಉತ್ಪಾದಿಸಲಾಗುತ್ತಿರುವ ಒಂದರಿಂದ ಎರಡು ಲಕ್ಷ ಟನ್ ಪ್ರತಿಜೈವಿಕಗಳಲ್ಲಿ ಬಹುಭಾಗವು ಕೃಷಿ, ತೋಟಗಾರಿಕೆ ಹಾಗೂ ಪಶು-ಪಕ್ಷಿ ಸಾಕಣೆಗಳಲ್ಲಿ ಬಳಕೆಯಾಗುತ್ತಿರುವುದು ಸೂಕ್ಷ್ಮಾಣುಗಳು ರೋಧವನ್ನು ಬೆಳೆಸಿಕೊಳ್ಳಲು ಮುಖ್ಯ ಕಾರಣವಾಯಿತು. ಮನುಷ್ಯರಲ್ಲೂ ಅನಗತ್ಯ ಬಳಕೆಯನ್ನು ಉತ್ತೇಜಿಸುವುದು; ಹೊಸತಾದ, ಹೆಚ್ಚು ಬೆಲೆಯ ಪ್ರತಿಜೈವಿಕಗಳನ್ನು ಪ್ರೋತ್ಸಾಹಿಸುವುದು; ಎರಡು-ಮೂರು ಪ್ರತಿಜೈವಿಕಗಳನ್ನು ಒಟ್ಟಿಗೆ ಬೆರೆಸಿ ಮಾರುವುದು ಅತಿಬಳಕೆಗೆ ಕಾರಣಗಳಾದವು. ಈ ಔಷಧಗಳನ್ನು ಎಲ್ಲಾ ರೋಗಗಳಿಗೆ ಮಂತ್ರದಂಡಗಳೆಂಬಂತೆ ದುರ್ಬಳಕೆ ಮಾಡಲಾಗುತ್ತಿದ್ದು, ವೈರಸ್ ಯಾ  ಪರೋಪಜೀವಿಜನ್ಯ ಸೋಂಕುಗಳಿಗೂ ಬ್ಯಾಕ್ಟೀರಿಯಾನಾಶಕ ಪ್ರತಿಜೈವಿಕಗಳನ್ನು ನೀಡುವುದು ಅತಿ ಸಾಮಾನ್ಯವಾಗಿಬಿಟ್ಟಿದೆ. ಸೋಂಕನ್ನು ಬೇಗನೇ ಗುಣಪಡಿಸಬೇಕೆಂಬ ರೋಗಿಗಳ ಒತ್ತಡಕ್ಕೆ ಮಣಿದು ಈ ಔಷಧಗಳನ್ನು ನೀಡುವುದು, ಸರಿಯಾದ ಪ್ರಮಾಣದಲ್ಲಿ ಬಳಸದಿರುವುದು, ಒಂದೆರಡು ದಿನಗಳಲ್ಲೇ ಬದಲಾಯಿಸುವುದು, ಯಾವುದೋ ಬ್ಯಾಕ್ಟೀರಿಯಾಕ್ಕೆ ಇನ್ಯಾವುದೋ ಬ್ಯಾಕ್ಟೀರಿಯಾನಾಶಕವನ್ನು ನೀಡುವುದು ಇತ್ಯಾದಿಗಳಿಂದಲೂ ರೋಧವು ಬೆಳೆಯುವ ಸಾಧ್ಯತೆಗಳು ಹೆಚ್ಚುತ್ತವೆ.

ರೋಗಿಗಳೂ ಕೂಡ ಮನಬಂದಂತೆ ಅವನ್ನು ಸೇವಿಸುವುದು, ದಿನಕ್ಕೊಬ್ಬರು ವೈದ್ಯರನ್ನು ಕಂಡು ಔಷಧಗಳನ್ನು ಬದಲಿಸಿಕೊಳ್ಳುವುದು ಅಥವಾ ಮದ್ದಿನಂಗಡಿಗಳಿಂದ ತಾವೇ ನೇರವಾಗಿ ಖರೀದಿಸುವ ಮೂಲಕ ಪ್ರತಿಜೈವಿಕಗಳ ದುರ್ಬಳಕೆಗೆ ಕಾರಣರಾಗುತ್ತಾರೆ. ಸೂಕ್ಷ್ಮಾಣುಜನ್ಯ ರೋಗಗಳ ಪರಿಕಲ್ಪನೆಯೇ ಇಲ್ಲದಿರುವ ಬದಲಿ ಪದ್ಧತಿಗಳ ಚಿಕಿತ್ಸಕರು ಬೇಕಾಬಿಟ್ಟಿಯಾಗಿ ಪ್ರತಿಜೈವಿಕಗಳನ್ನು ಬಳಸುವುದು ನ್ಯಾಯಬಾಹಿರವಷ್ಟೇ ಅಲ್ಲ, ಅಪಚಾರವೂ ಆಗಿದೆ. ಸೂಕ್ಷ್ಮಾಣುಶಾಸ್ತ್ರದ ಸೂಕ್ಷ್ಮಗಳನ್ನರಿಯದ ಆಡಳಿತಗಳು ಇಂತಹಾ ದುರ್ಬಳಕೆಯನ್ನು ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ.

ಲಭ್ಯ ಪ್ರತಿಜೈವಿಕಗಳಿಗೆ ಸೂಕ್ಷ್ಮಾಣುಗಳು ಬಗ್ಗದಂತಾಗಿರುವುದರಿಂದ ಸೋಂಕುಗಳ ಚಿಕಿತ್ಸೆಯು ಕಷ್ಟಕರವೂ, ಅತಿ ದುಬಾರಿಯೂ ಆಗುತ್ತಿದೆಯಲ್ಲದೆ, ಸಾವುಗಳೂ ಹೆಚ್ಚುತ್ತಿವೆ, ಗರ್ಭಿಣಿಯರು, ನವಜಾತ ಶಿಶುಗಳು,  ವಯೋವೃದ್ಧರು,  ಮೊದಲೇ ಗಂಭೀರ ರೋಗಗಳುಳ್ಳವರು ಹಾಗೂ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗುವವರಲ್ಲಿ ಸೋಂಕುಗಳನ್ನು ನಿಭಾಯಿಸುವುದು ಬಹು ದೊಡ್ಡ ಸವಾಲಾಗುತ್ತಿದೆ. ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಹೊಸ ಔಷಧಗಳ ಅತಿವೆಚ್ಚವು ಬಡಜನರ ಪಾಲಿಗೆ ಮತ್ತಷ್ಟು ಹೊರೆಯಾಗುತ್ತಿದೆ.

ಈ ವಿಪತ್ತನ್ನು ನಿಭಾಯಿಸುವ ಮಾರ್ಗೋಪಾಯಗಳನ್ನು ಲಾನ್ಸೆಟ್ ವರದಿಯಲ್ಲಿ ವಿವರಿಸಲಾಗಿದೆ. ಪ್ರತಿಜೈವಿಕಗಳ ಬಳಕೆ, ಸೂಕ್ಷ್ಮಾಣುಗಳಲ್ಲಿ ಪ್ರತಿರೋಧ ಹಾಗೂ ಅವುಗಳ ಪರಿಣಾಮಗಳ ಬಗ್ಗೆ ಇಂದು ಜಾಗತಿಕ ಮಟ್ಟದಲ್ಲಿ ನಿಗಾ ವಹಿಸುವ ತುರ್ತು ಅಗತ್ಯವಿದೆ. ಈ ಔಷಧಗಳ ತಯಾರಿ ಮತ್ತು ಮಾರಾಟವನ್ನು ಬಿಗಿಯಾಗಿ ನಿಯಂತ್ರಿಸುವುದು, ಅವುಗಳ ಜಾಹೀರಾತುಗಳನ್ನು ಹಾಗೂ ಅನಗತ್ಯ ಉತ್ತೇಜನವನ್ನು ನಿರ್ಬಂಧಿಸುವುದು, ಮನುಷ್ಯರಲ್ಲಿ ಬಳಸುವ ಪ್ರತಿಜೈವಿಕಗಳನ್ನು ಪಶು-ಪಕ್ಷಿಗಳಲ್ಲೂ, ಕೃಷಿಯಲ್ಲೂ ಬಳಸದಂತೆ ತಡೆಯುವುದು ಅತ್ಯಗತ್ಯವಾಗಿದೆ. ವೈದ್ಯರುಗಳಿಗೆ ಹಾಗೂ ಜನಸಾಮಾನ್ಯರಿಗೆ ಪ್ರತಿಜೈವಿಕಗಳ ಬಳಕೆಯ ಬಗ್ಗೆ ಸೂಕ್ತವಾದ ಮಾಹಿತಿಯೊದಗಣೆಯು ವ್ಯಾಪಕವಾಗಿ ನಡೆಯಬೇಕಾಗಿದೆ. ಆಸ್ಪತ್ರೆಗಳಲ್ಲಿ ಪ್ರತಿಜೈವಿಕಗಳ ಬಳಕೆ ಹಾಗೂ ಸೋಂಕುಗಳ ನಿಯಂತ್ರಣಗಳಿಗೆ ವಿಶೇಷವಾದ ಪ್ರಾಶಸ್ತ್ಯವಿತ್ತು, ಸ್ಪಷ್ಟವಾದ ಧೋರಣೆಗಳನ್ನು ರೂಪಿಸಬೇಕಿದೆ. ಹೊಸ ಪ್ರತಿಜೈವಿಕಗಳು ಹಾಗೂ ರೋಧನಿರೋಧಕ ಸಂಯುಕ್ತಗಳ ಸಂಶೋಧನೆಯು ಕಳೆದ ನಾಲ್ಕೈದು ದಶಕಗಳಿಂದ ಹಿಂದುಳಿದಿದ್ದು, ಅದನ್ನು ತುರ್ತಾಗಿ ಪುನಃಶ್ಚೇತನಗೊಳಿಸಬೇಕಾಗಿದೆ ಹಾಗೂ ಮುಂದಿನ 20-60 ವರ್ಷಗಳಲ್ಲಿ ಕನಿಷ್ಠ 20 ಹೊಚ್ಚಹೊಸ ಸೂಕ್ಷ್ಮಾಣು ನಿರೋಧಕಗಳನ್ನು ಅಭಿವೃದ್ಧಿಪಡಿಸಬೇಕಾಗಿದೆ.

ನಮ್ಮ ದೇಶದಲ್ಲಿ ಪ್ರತಿಜೈವಿಕಗಳ ಬಳಕೆಯು ತೀರಾ ಅನಿಯಂತ್ರಿತವಾಗಿದ್ದು,  ಯಾರಾದರೂ,  ಯಾವುದನ್ನಾದರೂ,  ಯಾವಾಗ-ಹೇಗಾದರೂ ಬಳಸಬಹುದೆನ್ನುವ ಪರಿಸ್ಥಿತಿಯಿದೆ. ಇದೇ ಕಾರಣಕ್ಕೆ ಪ್ರಬಲ ಪ್ರತಿಜೈವಿಕಗಳಿಗೂ ಬಗ್ಗದ ಬ್ಯಾಕ್ಟೀರಿಯಾಗಳು ನಮ್ಮ ಹಲವೆಡೆಗಳಲ್ಲಿವೆ. ಐದು ವರ್ಷಗಳ ಹಿಂದೆ ದೆಹಲಿಯ ಆಸ್ಪತ್ರೆಯೊಂದರಲ್ಲಿ ಕಾರ್ಬಾಪೆನೆಮ್ ಎಂಬ ಪ್ರಬಲ ಪ್ರತಿಜೈವಿಕಕ್ಕೂ ಬಗ್ಗದ ಬ್ಯಾಕ್ಟೀರಿಯಾಗಳನ್ನು ಗುರುತಿಸಿ, ಅವುಗಳಲ್ಲಿದ್ದ ಕಿಣ್ವಕ್ಕೆ ನ್ಯೂ ಡೆಲ್ಲಿ ಮೆಟಲೋ ಬೀಟಾ ಲಾಕ್ಟಮೇಸ್ 1 ಎಂದು ಹೆಸರಿಟ್ಟಾಗ ಭಾರೀ ಕೋಲಾಹಲವಾಗಿತ್ತು. ಆದರೆ ಅದರಿಂದಾಗಿ ಸರಕಾರವು ಎಚ್ಚೆತ್ತುಕೊಳ್ಳುವಂತಾಯಿತು. ಕೇಂದ್ರ ಸರಕಾರದ ರಾಜಪತ್ರದಲ್ಲಿ ಕಳೆದ ಆಗಸ್ಟ್ 30ರಂದು ಪ್ರಕಟಿಸಲಾಗಿರುವ ನೀತಿಯಂತೆ, ಮುಂದಿನ ಎಪ್ರಿಲ್ ಬಳಿಕ 24 ಬಗೆಯ ಪ್ರತಿಜೈವಿಕಗಳು ಹಾಗೂ 11 ಕ್ಷಯರೋಗ ನಿರೋಧಕ ಔಷಧಗಳನ್ನು ತಜ್ಞವೈದ್ಯರ ಸಲಹೆಯಿಲ್ಲದೆ ಖರೀದಿಸಲು ಸಾಧ್ಯವಾಗದು.

ಆದರೆ ಪ್ರತಿಜೈವಿಕಗಳ ಸದ್ಬಳಕೆಯನ್ನು ಉತ್ತೇಜಿಸಲು ಇಂತಹ ಕಾನೂನುಗಳಷ್ಟೇ ಸಾಕಾಗವು. ಈ ಔಷಧಗಳು ವೈದ್ಯರ ಬತ್ತಳಿಕೆಯಲ್ಲಿರುವ ಅಸ್ತ್ರಗಳಷ್ಟೇ ಆಗಿರದೆ ಸಮಸ್ತ ಮನುಕುಲದ ಅತ್ಯಮೂಲ್ಯವಾದ ಆಸ್ತಿಯೆನ್ನುವುದನ್ನು ಮರೆಯಬಾರದು. ಅನಗತ್ಯವಾಗಿ ಪ್ರತಿಜೈವಿಕಗಳನ್ನು ಬಳಸದಿರುವುದು, ಅವನ್ನು ನೇರವಾಗಿ ಖರೀದಿಸದಿರುವುದು, ವೈದ್ಯರು ಅವನ್ನು ಸೂಚಿಸಿದರೆ ಅವು ನಿಜಕ್ಕೂ ಅಗತ್ಯವೇ ಎಂದು ಪ್ರಶ್ನಿಸುವುದು, ಬದಲಿ ಯಾ ನಕಲಿ ವೈದ್ಯರಿಂದ ಪ್ರತಿಜೈವಿಕಗಳನ್ನು ಪಡೆಯದಿರುವುದು, ಹಾಗೊಮ್ಮೆ ಅವನ್ನು ಸೇವಿಸಬೇಕಾದಾಗ ಸೂಕ್ತ ಪ್ರಮಾಣದಲ್ಲಿ ಸರಿಯಾಗಿ ಸೇವಿಸುವುದು ಇತ್ಯಾದಿಗಳಿಂದ ಪ್ರತಿಜೈವಿಕಗಳ ರಕ್ಷಣೆಯಲ್ಲಿ ಎಲ್ಲರೂ ಕೈಜೋಡಿಸಬಹುದು.

ಮೂವತ್ತೇಳನೇ ಬರಹ : ಮೂಲಾಹಾರದಿಂದ ಮಧುಮೇಹ ವಿಮೋಚನೆ [ನವಂಬರ್ 13, 2013, ಬುಧವಾರ] [ನೋಡಿ | ನೋಡಿ]

ನಮ್ಮನ್ನು ಕಾಡುತ್ತಿರುವ ಆಧುನಿಕ ರೋಗಗಳಿಂದ ಮುಕ್ತಿ ಪಡೆಯಬೇಕೆಂದರೆ ಹಳೆ ಶಿಲಾಯುಗದ ಆಹಾರಕ್ಕೆ ಮರಳಬೇಕು

ಈಗ ವಿಶ್ವದಾದ್ಯಂತ ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆ ಸುಮಾರು 37 ಕೋಟಿ, ಅದರ ಚಿಕಿತ್ಸೆಗೆ ಮಾಡಲಾಗುತ್ತಿರುವ ಖರ್ಚು ಸುಮಾರು 46500 ಕೋಟಿ ಡಾಲರುಗಳು, ಇದರಲ್ಲಿ ಔಷಧಗಳ ವಹಿವಾಟು ಸುಮಾರು 3500 ಕೋಟಿ ಡಾಲರುಗಳು. ಇನ್ನೈದು ವರ್ಷಗಳಲ್ಲಿ ರೋಗಿಗಳ ಸಂಖ್ಯೆ ಸುಮಾರು 45 ಕೋಟಿಯಷ್ಟಾಗಿ, ಔಷಧಗಳ ವಹಿವಾಟು 5800 ಕೋಟಿ ಡಾಲರುಗಳನ್ನು ಮೀರಬಹುದೆನ್ನುವುದು ಕಂಪೆನಿಗಳ ಲೆಕ್ಕಾಚಾರ.

ಎಂಭತ್ತು ವರ್ಷಗಳಿಗೂ ಹಿಂದೆ ಇನ್ಸುಲಿನ್ ಸ್ರಾವವನ್ನು ಗುರುತಿಸಿದ್ದೊಂದು ಮನ್ವಂತರವಾಗಿತ್ತು. ಅದರೊಂದಿಗೆ, ನಮ್ಮ ಶರೀರವು ಆಹಾರವನ್ನು ಹೇಗೆ ಬಳಸಿಕೊಳ್ಳುತ್ತದೆ, ಇನ್ಸುಲಿನ್ ಹೇಗೆ ಸ್ರವಿಸಲ್ಪಡುತ್ತದೆ ಮತ್ತು ಹೇಗೆ ಕೆಲಸ ಮಾಡುತ್ತದೆ, ಮಧುಮೇಹವು ಹೇಗೆ ಉಂಟಾಗುತ್ತದೆ ಇತ್ಯಾದಿ ವಿವರಗಳೆಲ್ಲವೂ ಅನಾವರಣಗೊಂಡವು. ಮೇದೋಜೀರಕಾಂಗದ ಬೀಟಾ ಕಣಗಳು ನಾಶವಾಗಿ ಇನ್ಸುಲಿನ್ ಸ್ರಾವವೇ ಇಲ್ಲವಾದರೆ ಜೀವಕ್ಕೇ ಅಪಾಯವುಂಟಾಗುವುದನ್ನು ಒಂದನೇ ವಿಧದ ಮಧುಮೇಹವೆಂದೂ, ಇನ್ಸುಲಿನ್ ಸ್ರವಿಸುವಿಕೆ ಅಥವಾ ಅದರ ಕಾರ್ಯಕ್ಷಮತೆಯಲ್ಲಿ ವ್ಯತ್ಯಯವುಂಟಾದಾಗ ರಕ್ತದ ಗ್ಲೂಕೋಸ್ ಏರಿಕೆಯಾಗತೊಡಗುವುದನ್ನು ಎರಡನೇ ವಿಧದ ಮಧುಮೇಹವೆಂದೂ ಗುರುತಿಸಲಾಯಿತು. ಒಂದನೇ ವಿಧದ ಮಧುಮೇಹವುಳ್ಳವರು ಜೀವವುಳಿಸಿಕೊಳ್ಳಲು ಇನ್ಸುಲಿನ್ ಚುಚ್ಚುವಿಕೆ ಅತ್ಯಗತ್ಯವೆಂದಾಯಿತು; ಎರಡನೇ ವಿಧದ ಮಧುಮೇಹವನ್ನು ನಿಯಂತ್ರಿಸಲು ಮೊದಲಲ್ಲಿ ಮಾತ್ರೆಗಳನ್ನು, ಅದಾಗದಿದ್ದರೆ ಇನ್ಸುಲಿನ್ ಅನ್ನು ನೀಡುವ ಚಿಕಿತ್ಸಾ ಕ್ರಮವು ಗಟ್ಟಿಗೊಂಡಿತು.

ಮಧುಮೇಹವನ್ನು ತಡೆಯುವುದಕ್ಕಿಂತಲೂ ಅದರ ಚಿಕಿತ್ಸೆಯೇ ಆದ್ಯತೆಯಾಗಿ, ಹೊಸ ಹೊಸ ಔಷಧಗಳನ್ನು ಅಭಿವೃದ್ಧಿಪಡಿಸುವುದಕ್ಕೆ ಪೈಪೋಟಿಯುಂಟಾಯಿತು. ದುಬಾರಿಯಾದ ಹೊಸ ಬಗೆಯ ಇನ್ಸುಲಿನ್ ಗಳು, ಅವನ್ನು ಚುಚ್ಚುವ ಯಂತ್ರ-ತಂತ್ರಗಳು, ಹಲಬಗೆಯ ಮಾತ್ರೆಗಳು ಲಭ್ಯವಾದಂತೆ ಮಧುಮೇಹದ ವಹಿವಾಟು ಭರ್ಜರಿಯಾಗಿ ಬೆಳೆಯಿತು. ಆದರೆ, ಈ ಹೊಸ ಚಿಕಿತ್ಸೆಗಳು ಹಳೆಯ ಇನ್ಸುಲಿನ್ ಗಳನ್ನು ಯಾ ಔಷಧಗಳನ್ನು ಬಹಳಷ್ಟು ಮೀರಿಸುತ್ತವೆ ಎನ್ನಲಾಗದು, ತೆರುವ ಹೆಚ್ಚು ಹಣಕ್ಕೆ ತಕ್ಕಷ್ಟು ಹೆಚ್ಚು ಪರಿಣಾಮಕಾರಿಯಾಗಿವೆ ಎಂದೂ ಹೇಳಲಾಗದು.

ಇನ್ಸುಲಿನ್ ಬಳಕೆಗೆ ಬಂದ ಮೊದಲ ಆರು ದಶಕಗಳಲ್ಲಿ ಅದನ್ನು ಅನ್ಯ ಪ್ರಾಣಿಗಳ ಮೇದೋಜೀರಕಾಂಗಗಳಿಂದ ಪ್ರತ್ಯೇಕಿಸಿ, ಶುದ್ಧೀಕರಿಸಿ, ಸಿದ್ಧಪಡಿಸಲಾಗುತ್ತಿತ್ತು. ಎಂಭತ್ತರ ದಶಕದಿಂದೀಚೆಗೆ ತಳಿ ತಂತ್ರಜ್ಞಾನದಿಂದ ಕೃತಕವಾಗಿ ಉತ್ಪಾದಿಸಿದ ಇನ್ಸುಲಿನ್ ಬಳಕೆಯಲ್ಲಿದೆ. ಪ್ರಾಣಿಜನ್ಯ ಇನ್ಸುಲಿನ್ ಕೇವಲ 20 ರೂಪಾಯಿಗಳಿಗೆ ದೊರೆಯುತ್ತಿದ್ದರೆ, ಈ ಕೃತಕ ಇನ್ಸುಲಿನ್ ಆರು ಪಟ್ಟು ದುಬಾರಿಯಾಗಿದೆ. ಈಗ ನಾಲ್ಕು ವರ್ಷಗಳಿಂದ ಪ್ರಾಣಿಜನ್ಯ ಇನ್ಸುಲಿನ್ ಮರೆಯಾಗಿದ್ದು, ಎಲ್ಲರೂ ಕೃತಕ ಇನ್ಸುಲಿನ್ ಅನ್ನೇ ಚುಚ್ಚಿಕೊಳ್ಳುವಂತಾಗಿದೆ. ಮೊದಲು ಇನ್ಸುಲಿನ್ ಜೊತೆ ಬೇರೊಂದು ಪ್ರೊಟೀನನ್ನೋ, ಸತುವಿನ ಕಣಗಳನ್ನೋ ಬೆರೆಸಿ ಅದು ನಿಧಾನವಾಗಿ, ಹೆಚ್ಚು ಹೊತ್ತು ವರ್ತಿಸುವಂತೆ ಮಾಡಲಾಗುತ್ತಿತ್ತು. ಇತ್ತೀಚೆಗೆ ಇನ್ಸುಲಿನ್ ತಳಿಯನ್ನೇ ಬದಲಾಯಿಸಿ, ಕ್ಷಿಪ್ರವಾಗಿ ಅಥವಾ ನಿಧಾನವಾಗಿ ವರ್ತಿಸಬಲ್ಲ ಸದೃಶ ಇನ್ಸುಲಿನ್ ಗಳನ್ನು ಬಳಕೆಗೆ ತರಲಾಗಿದೆ. ಇವು ಸಾಮಾನ್ಯ ಇನ್ಸುಲಿನ್ ಗಿಂತ ನಾಲ್ಕರಿಂದ ಎಂಟು ಪಟ್ಟು ದುಬಾರಿಯಾಗಿವೆ. ಪ್ರತಿಷ್ಠಿತ ಕೊಕ್ರೇನ್ ವಿಮರ್ಶೆಯನುಸಾರ, ಈ ಕೃತಕ ಇನ್ಸುಲಿನ್ ಗಳು ಅಥವಾ ಸದೃಶ ಇನ್ಸುಲಿನ್ ಗಳು ಪ್ರಾಣಿಜನ್ಯ ಇನ್ಸುಲಿನ್ ಗಳಿಗಿಂತ ಹೆಚ್ಚು ಪ್ರಯೋಜಕ ಅಥವಾ ಸುರಕ್ಷಿತವಾಗಿವೆ ಎನ್ನುವುದಕ್ಕೆ ಇನ್ನೂ ಆಧಾರಗಳಿಲ್ಲ [ಕೊಕ್ರೇನ್ ವಿಮರ್ಶೆಗಳು 2005(1):ಸಿಡಿ003816; 2007(2):ಸಿಡಿ005613; 2006(2):ಸಿಡಿ003287].

ನಾವು ತಿನ್ನುವ ವಿವಿಧ ಶರ್ಕರಗಳು ಕರುಳಲ್ಲಿ ಹೀರಲ್ಪಡುವಲ್ಲಿಂದ ತೊಡಗಿ, ಮೇದೋಜೀರಕಾಂಗದ ಬೀಟಾಕಣಗಳಲ್ಲಿ ಇನ್ಸುಲಿನ್ ಸ್ರಾವವನ್ನು ಉತ್ತೇಜಿಸಿ, ದೇಹದ ವಿವಿಧ ಅಂಗಗಳಲ್ಲಿ ಅವು ಬಳಸಲ್ಪಡುವ ಸಂಕೀರ್ಣವಾದ ಪ್ರಕ್ರಿಯೆಗಳನ್ನು ಆಧುನಿಕ ವೈದ್ಯವಿಜ್ಞಾನವಿಂದು ಅರಿತುಕೊಂಡಿದೆ. ಈ ಪ್ರಕ್ರಿಯೆಗಳ ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸಿ,ರಕ್ತದ ಗ್ಲೂಕೋಸ್ ಪ್ರಮಾಣವನ್ನು ನಿಯಂತ್ರಿಸುವ ಅನೇಕ ಔಷಧಗಳು ಇಂದು ಲಭ್ಯವಿವೆ: ಆಹಾರದ ಶರ್ಕರಗಳು ಕರುಳಿನಲ್ಲಿ ಹೀರಲ್ಪಡದಂತೆ ತಡೆಯುವುದು, ಕರುಳಿನಲ್ಲಿರುವ ಗ್ರಾಹಿಗಳಿಂದ ಬೀಟಾ ಕಣಗಳ ಪ್ರಚೋದನೆಯನ್ನು ಹೆಚ್ಚಿಸುವುದು, ನೇರವಾಗಿ ಬೀಟಾ ಕಣಗಳಲ್ಲಿ ಇನ್ಸುಲಿನ್ ಸ್ರಾವವನ್ನು ಉತ್ತೇಜಿಸುವುದು ಮತ್ತು ಸ್ರವಿಸಲ್ಪಟ್ಟ ಇನ್ಸುಲಿನಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಇತ್ಯಾದಿ. ಎರಡನೇ ವಿಧದ ಮಧುಮೇಹವುಳ್ಳವರಿಗೆ ಈ ಔಷಧಗಳನ್ನು ಒಂಟಿಯಾಗಿ ಅಥವಾ ಜೊತೆಯಾಗಿ ನೀಡಲಾಗುತ್ತದೆ; ಅವು ವಿಫಲವಾದಾಗ ಇನ್ಸುಲಿನ್ ಚುಚ್ಚಬೇಕಾಗುತ್ತದೆ.

ಇನ್ಸುಲಿನ್ ಹಾಗೂ ಇತರ ಔಷಧಗಳ ನಿರಂತರ ಬಳಕೆಯಿಂದ ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು, ಮಧುಮೇಹದ ತೀವ್ರತರನಾದ ಸಮಸ್ಯೆಗಳನ್ನು ನಿಭಾಯಿಸಿ ಜೀವವುಳಿಸಬಹುದು ಹಾಗೂ ದೂರಗಾಮಿ ಸಮಸ್ಯೆಗಳನ್ನು ಮುಂದೂಡಬಹುದು. ಆದರೆ ಈ ಸಮಸ್ಯೆಗಳನ್ನು ಸಂಪೂರ್ಣವಾಗಿ ತಡೆಯುವುದಕ್ಕೆ, ರೋಗವನ್ನು ಗುಣಪಡಿಸುವುದಕ್ಕೆ ಅಥವಾ ಬಾರದಂತೆ ತಡೆಯುವುದಕ್ಕೆ ಇನ್ನೂ ಸಾಧ್ಯವಾಗಿಲ್ಲ. ಅಲ್ಲದೆ, ಮಧುಮೇಹ ಪೀಡಿತರಲ್ಲಿ ಸಾಮಾನ್ಯವಾಗಿರುವ ಬೊಜ್ಜು, ಮೇದಸ್ಸಿನ ಸಮಸ್ಯೆಗಳು, ರಕ್ತನಾಳಗಳ ಕಾಯಿಲೆಗಳು ಇವೇ ಮುಂತಾದ ಸಮಸ್ಯೆಗಳನ್ನು ಈ ಔಷಧಗಳು ಇನ್ನಷ್ಟು ಹೆಚ್ಚಿಸಬಹುದು. ಈ ಔಷಧಗಳನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿದರೆ ಅಥವಾ ತಿಂದ ಆಹಾರವು ಕಡಿಮೆಯಾದರೆ ರಕ್ತದ ಸಕ್ಕರೆಯು ಒಮ್ಮೆಗೇ ಕೆಳಗಿಳಿಯುವ ಸಮಸ್ಯೆಯೂ ಉಂಟಾಗುತ್ತದೆ. ಒಟ್ಟಿನಲ್ಲಿ,ಮಧುಮೇಹವುಳ್ಳವರಿಗೆ ಅತ್ತ ದರಿ, ಇತ್ತ ಪುಲಿ ಎನ್ನುವ ದುಸ್ಥಿತಿ.

ಆಧುನಿಕ ಚಿಕಿತ್ಸೆಯ ಇತಿಮಿತಿಗಳಿಂದಾಗಿ ಕೆಲವು ಮಧುಮೇಹಿಗಳು ಬದಲಿ ಚಿಕಿತ್ಸಾ ಪದ್ಧತಿಗಳ ದೊಡ್ಡ ಜಾಹೀರಾತುಗಳತ್ತ ಆಕರ್ಷಿತರಾಗುತ್ತಾರೆ. ವೈದ್ಯಕೀಯ ಪದ್ಧತಿಯೇ ಅಲ್ಲದ ಯೋಗಾಭ್ಯಾಸದಿಂದಲೂ ಮಧುಮೇಹ ಚಿಕಿತ್ಸೆ ಸಾಧ್ಯವೆಂದು ನಂಬಿ ಬಿಡುತ್ತಾರೆ. ಇಂದು ಇವೆಲ್ಲವುಗಳ ವ್ಯವಹಾರವೂ ಕೋಟಿಗಟ್ಟಲೆಯಾಗಿದೆ. ಆದರೆ ಆಯುರ್ವೇದ, ಹೋಮಿಯೋಪತಿ, ಪ್ರಕೃತಿ ಚಿಕಿತ್ಸೆ ಮುಂತಾದ ಯಾವುದೇ ಬದಲಿ ಪದ್ಧತಿಗಳಿಂದ ಯಾ ಯೋಗಾಭ್ಯಾಸದಿಂದ ಮಧುಮೇಹವನ್ನು ತಡೆಯುವಲ್ಲಿ ಅಥವಾ ಚಿಕಿತ್ಸೆಯಲ್ಲಿ ನಿರ್ದಿಷ್ಟವಾದ ಪ್ರಯೋಜನಗಳಿವೆಯೆನ್ನುವುದಕ್ಕೆ ದೃಢವಾದ ಆಧಾರಗಳು ಇದುವರೆಗೆ ದೊರೆತಿಲ್ಲ.

ಹಾಗೆಂದು ಮಧುಮೇಹಿಗಳು ಹತಾಶರಾಗಬೇಕಿಲ್ಲ. ಮಧುಮೇಹವನ್ನು ನಿಯಂತ್ರಿಸುವಲ್ಲಿ ನಿರೀಕ್ಷಿತ ಯಶಸ್ಸನ್ನು ಪಡೆಯಲಾಗದಿರುವುದು ಒಂದಷ್ಟು ಆಧುನಿಕ ವೈದ್ಯವಿಜ್ಞಾನಿಗಳಲ್ಲಿ ಹೊಸ ಚಿಂತನೆಯನ್ನು ಪ್ರೇರೇಪಿಸಿದೆ, ಹೊಸ ದಾರಿಗಳನ್ನು ತೆರೆದಿದೆ. ನಮ್ಮ ಶರೀರದ ಕಣಕಣಗಳಲ್ಲಿ ನಡೆಯುವ ಅತಿ ಸಂಕೀರ್ಣವಾದ ಪ್ರಕ್ರಿಯೆಗಳು, ನಮ್ಮ ಆಹಾರವು ಅವುಗಳ ಮೇಲುಂಟು ಮಾಡುವ ಪರಿಣಾಮಗಳು, ನಮ್ಮ ಹಸಿವು-ಸಂತೃಪ್ತಿಗಳ ನಿಯಂತ್ರಣ, ನಮ್ಮ ಪಚನಾಂಗಗಳಲ್ಲಿರುವ ಲಕ್ಷ ಕೋಟಿಗಟ್ಟಲೆ ಸೂಕ್ಷ್ಮಾಣುಗಳ ಪಾತ್ರ, ವಿಭಿನ್ನ ಜನಸಮುದಾಯಗಳ ಜೀವನಶೈಲಿಗಳಿಗೂ, ರೋಗಗಳಿಗೂ ಇರುವ ಸಂಬಂಧಗಳು ಇತ್ಯಾದಿಗಳ ಬಗ್ಗೆ ಅತ್ಯಂತ ಆಸಕ್ತಿದಾಯಕವಾದ ಅಧ್ಯಯನಗಳಾಗುತ್ತಿದ್ದು, ಮಧುಮೇಹವೂ ಸೇರಿದಂತೆ ಎಲ್ಲಾ ಆಧುನಿಕ ರೋಗಗಳ ಮೇಲೆ ಹೊಸ ಬೆಳಕನ್ನು ಚೆಲ್ಲುತ್ತಿವೆ.

ವಾನರರಿಂದ ಮಾನವರು ವಿಕಾಸಗೊಂಡ ಸುಮಾರು ಇಪ್ಪತ್ತೈದು ಲಕ್ಷ ವರ್ಷಗಳಿಂದ ಹತ್ತು ಸಾವಿರ ವರ್ಷಗಳ ಹಿಂದಿನ ಹಳೆ ಶಿಲಾಯುಗದ ಕಾಲದಲ್ಲಿ ಮೀನು, ಇತರ ಜಲಚರಗಳು, ಪ್ರಾಣಿಗಳು ಹಾಗೂ ಪಕ್ಷಿಗಳ ಮಾಂಸ, ಹಲಬಗೆಯ ಎಲೆಗಳು ಮತ್ತು ತರಕಾರಿಗಳು, ಬೀಜಗಳು ಹಾಗೂ ಅಪರೂಪಕ್ಕೊಮ್ಮೆ ದೊರೆಯುತ್ತಿದ್ದ ಹಣ್ಣುಗಳೇ ನಮ್ಮ ಪೂರ್ವಜರ ಆಹಾರವಾಗಿದ್ದವು. ಇಂದಿಗೂ ಹಳೆ ಶಿಲಾಯುಗದ ಆಹಾರಕ್ರಮವನ್ನೇ ಪಾಲಿಸುತ್ತಿರುವ ಭಾರತ, ಆಫ್ರಿಕಾ, ಅಮೆರಿಕಾ, ಆಸ್ಟ್ರೇಲಿಯಾ, ಪಪುಅ ನ್ಯೂಗಿನಿ ಮುಂತಾದೆಡೆ ವಾಸವಾಗಿರುವ ಹಲವು ಮೂಲನಿವಾಸಿ ಸಮುದಾಯಗಳಲ್ಲಿ ಮಧುಮೇಹ, ಬೊಜ್ಜು, ಮೂಳೆಸವೆತ, ಕ್ಯಾನ್ಸರ್, ರಕ್ತನಾಳಗಳ ಸಮಸ್ಯೆಗಳಂತಹಾ ಆಧುನಿಕ ರೋಗಗಳಾವುವೂ ಕಾಣಸಿಗುವುದಿಲ್ಲ. ನಮ್ಮ ಆಧುನಿಕ ಆಹಾರದಲ್ಲಿ ಶರ್ಕರಭರಿತವಾದ ಅಕ್ಕಿ,  ಗೋಧಿ,  ರಾಗಿ,  ಓಟ್ಸ್,  ಬಾರ್ಲಿ ಮುಂತಾದ ಧಾನ್ಯಗಳು, ಚಮಚದ ಸಕ್ಕರೆ, ಬಗೆಬಗೆಯ ಹಣ್ಣುಗಳು, ಹಾಲು ಮತ್ತದರ ಉತ್ಪನ್ನಗಳು ಹಾಗೂ ಸಂಸ್ಕರಿತ ಖಾದ್ಯ ತೈಲಗಳೇ ಯಥೇಷ್ಟವಾಗಿದ್ದು, ಹಳೆ ಶಿಲಾಯುಗಕ್ಕೆ ಸೇರಿದ ನಮ್ಮ ದೇಹಕ್ಕೆ ಇವು ಸರಿಹೊಂದದಿರುವುದೇ ಆಧುನಿಕ ರೋಗಗಳಿಗೆ ಕಾರಣವೆನ್ನುವುದು ಸ್ಪಷ್ಟವಾಗುತ್ತಲಿದೆ. ಈ ಆಧುನಿಕ ಆಹಾರದತ್ತ ಹೊರಳಿದ ಮೂಲನಿವಾಸಿಗಳು ಅತಿ ಬೇಗನೆ ಮಧುಮೇಹ ಪೀಡಿತರಾಗುವುದನ್ನೂ, ಮೂಲಾಹಾರಕ್ಕೆ ಮರಳಿದ ಮಧುಮೇಹಿಗಳಲ್ಲಿ ರಕ್ತದ ಸಕ್ಕರೆ ಹಾಗೂ ಮೇದಸ್ಸಿನ ಪ್ರಮಾಣಗಳು ಶೀಘ್ರವೇ ನಿಯಂತ್ರಿಸಲ್ಪಡುವುದನ್ನೂ ಹಲವು ಅಧ್ಯಯನಗಳಲ್ಲಿ ಗುರುತಿಸಲಾಗಿದೆ. (ಡಯಾ ಕೇರ್ 2006;29:1866, ಕಾರ್ಡಿವಾಸ್ಕ್ ಡಯಾಬಿಟೋ 2009;8:35, ಜ ಡಯಾ ಸಯ ಟೆಕ್ 2009;3:1229). ಆಹಾರದಲ್ಲಿ ಶರ್ಕರಗಳ ಪ್ರಮಾಣವನ್ನು ಕಡಿತಗೊಳಿಸುವುದರಿಂದ ಅನೇಕ ಲಾಭಗಳಿವೆಯೆನ್ನುವುದೀಗ ದಿಟವಾಗಿದೆ (ನ್ಯೂಟ್ರಿ ಮೆಟ 2005;2:16, ನ್ಯೂಟ್ರಿ ಮೆಟ 2008;5:9, ಅಮೆ ಜ ಕ್ಲಿನಿ ನುಟ್ರಿ 2007;86:276).

ಹೊಟ್ಟೆ ತುಂಬ ಶರ್ಕರಭರಿತವಾದ ಆಹಾರವನ್ನು ಸೇವಿಸಿ, ರಕ್ತದಲ್ಲಿ ಏರುವ ಗ್ಲೂಕೋಸನ್ನು ನಿಯಂತ್ರಿಸಲು ಬಾಯಿ ತುಂಬ ಔಷಧಗಳನ್ನು ನುಂಗಿ, ಎಲ್ಲಾ ಸಮಸ್ಯೆಗಳಿಂದ ನರಳಿ ಒದ್ದಾಡುವುದಕ್ಕಿಂತ ಆಹಾರವನ್ನೇ ಬದಲಿಸಿಕೊಂಡು ಮಧುಮೇಹ ಮಾತ್ರವಲ್ಲ, ಇತರೆಲ್ಲಾ ಆಧುನಿಕ ರೋಗಗಳಿಂದಲೂ ಮುಕ್ತರಾಗುವುದೇ ಒಳಿತಲ್ಲವೇ?

ಮೂವತ್ತಾರನೇ ಬರಹ : ಗ್ರಹಿಕೆಗಳ ಸಂಘರ್ಷದಲ್ಲಿ ನಲುಗುವ ನಂಬಿಕೆ [ಅಕ್ಟೋಬರ್ 30, 2013, ಬುಧವಾರ] [ನೋಡಿ | ನೋಡಿ]

ವಾಸ್ತವವನ್ನು ತಿರಸ್ಕರಿಸಿ ನಂಬಿಕೆಗಳನ್ನು ಪೋಷಿಸುತ್ತಿದ್ದರೆ ಸುಳ್ಳುಗಳಷ್ಟೇ ವಿಜೃಂಭಿಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ

ಪತ್ರಿಕೆಗಳಲ್ಲಿ, ದೃಶ್ಯವಾಹಿನಿಗಳಲ್ಲಿ, ಎಲ್ಲಿ ನೋಡಿದರಲ್ಲಿ ನಂಬಿಕೆಗಳಿಗೆ ಘಾಸಿಯಾಗಿ ಹುಯಿಲಿಡುವವರ ಮೇಲಾಟ; ನೋಯಿಸಿದವರು ಮತ್ತು ನೋವುಂಡವರ ಮಧ್ಯೆ ಎಡೆಬಿಡದ ವಾಗ್ವಾದ, ಅರಚಾಟ. ಏನಾದರೂ ಹೇಳುವ, ಬರೆಯುವ, ಚಿತ್ರಿಸುವ ಮೊದಲು ಭೂಲೋಕದ ಏಳ್ನೂರು ಕೋಟಿ ಮನಸ್ಸುಗಳೊಳಗೇನಿದೆ ಎಂದು ಲೆಕ್ಕ ಹಾಕಿಕೊಳ್ಳಬೇಕಾದ ಇಕ್ಕಟ್ಟು.

ನೋಡಿದ-ಕೇಳಿದ ಸಂಗತಿಗಳು ನಮ್ಮಲ್ಲಿ ಬೇಸರ, ಮುಜುಗರ, ಸಿಟ್ಟು ಇತ್ಯಾದಿಗಳನ್ನುಂಟು ಮಾಡುವುದಕ್ಕೆ ನಮ್ಮೊಳಗಿನ ಗ್ರಹಿಕೆಗಳ ತಾಕಲಾಟಗಳೇ ಕಾರಣ ಎನ್ನುವುದನ್ನು ಅಮೆರಿಕಾದ ಮನಃಶಾಸ್ತ್ರಜ್ಞ ಲಿಯಾನ್ ಫೆಸ್ಟಿಂಗರ್ 1956-57ರಲ್ಲಿ ಪ್ರತಿಪಾದಿಸಿದ ಸಿದ್ಧಾಂತವು ವಿವರಿಸುತ್ತದೆ. ಹುಟ್ಟಿದಂದಿನಿಂದ ನಾವು ನೋಡಿ, ಕೇಳಿ, ಓದಿ ಗ್ರಹಿಸಿದ ವಿಚಾರಗಳು ನಮ್ಮ ಮೆದುಳೊಳಗೆ ದಾಖಲಾಗುತ್ತಾ, ನಮ್ಮ ಅರಿವನ್ನೂ, ಚಿಂತನೆಯನ್ನೂ ರೂಪಿಸುತ್ತವೆ. ನಮ್ಮ ನೈತಿಕತೆ, ಆದರ್ಶಗಳು ಹಾಗೂ ನಂಬಿಕೆಗಳು ಈ ಗ್ರಹಿಕೆಗಳನ್ನೇ ಆಧರಿಸಿರುತ್ತವೆ. ಅವಕ್ಕೆ ಅನುಗುಣವಾಗಿಯೇ ಪ್ರತಿಯೊಬ್ಬರೂ ಸುತ್ತಲಿನ ಜಗತ್ತನ್ನು ನೋಡುತ್ತಿರುತ್ತಾರೆ, ಅಭಿಪ್ರಾಯಗಳನ್ನು ಹೇಳುತ್ತಿರುತ್ತಾರೆ, ಬರೆಯುತ್ತಿರುತ್ತಾರೆ. ಹೀಗೆ ಒಬ್ಬೊಬ್ಬರ ಯೋಚನೆಗಳೂ, ಯೋಜನೆಗಳೂ ಭಿನ್ನವಾಗಿರುವಾಗ, ನಮ್ಮ ಗ್ರಹಿಕೆಗಳಿಗೆ ಸರಿಹೊಂದದ ಅದೆಷ್ಟೋ ವಿಚಾರಗಳನ್ನು ನಾವು ಪ್ರತಿ ಕ್ಷಣವೂ ಎದುರಿಸಬೇಕಾಗುತ್ತದೆ; ನಮಗೆ ಸರಿಯೆನಿಸದ ಕೆಲಸಗಳನ್ನು ಮಾಡಬೇಕಾದ ಪ್ರಮೇಯಕ್ಕೂ ಸಿಲುಕಬೇಕಾಗುತ್ತದೆ. ಯಾವುದೋ ಕೆಲಸಕ್ಕೆ ಕೈಹಾಕಿ ಸೋತರೆ ನಮ್ಮ ಸಾಮರ್ಥ್ಯದ ಬಗ್ಗೆ ಸಂಶಯ ಮೂಡುತ್ತದೆ, ನಂಬಿರುವುದು ಸುಳ್ಳೆಂದು ರುಜುವಾದರೆ ನಮ್ಮ ಬುದ್ಧಿಶಕ್ತಿಯ ಬಗ್ಗೆ ಪ್ರಶ್ನೆಗಳೇಳುತ್ತವೆ, ಏನೋ ಮಾಡಬಾರದ್ದನ್ನು ಮಾಡಿಬಿಟ್ಟರೆ ನೈತಿಕ ಪ್ರಜ್ಞೆಯೇ ಘಾಸಿಗೊಳ್ಳುತ್ತದೆ. ಹೀಗೆ ನಮ್ಮ ಗ್ರಹಿಕೆಗಳಿಗೆ ಸರಿಹೊಂದದ ವಿಚಾರಗಳನ್ನು ನಾವು ಕಂಡು-ಕೇಳಿದಾಗ ಅಥವಾ ಮಾಡಿದಾಗ ತಾಕಲಾಟಗಳು ಹುಟ್ಟಿಕೊಂಡು, ನಮ್ಮೊಳಗೆ ಗೊಂದಲವನ್ನೂ, ನೋವನ್ನೂ ಉಂಟು ಮಾಡುತ್ತವೆ.

ಮನದೊಳಗಿನ ಗ್ರಹಿಕೆಗಳು ಮತ್ತು ಹೊರಜಗತ್ತಿನ ವಾಸ್ತವಗಳ ನಡುವಿನ ಸಂಘರ್ಷಗಳಿಂದಾಗುವ ಸಂಕಟವನ್ನು ಮನದೊಳಗೇ ಶಮನಗೊಳಿಸಲು ನಾವೆಲ್ಲರೂ ಸದಾ ಯತ್ನಿಸುತ್ತಿರುತ್ತೇವೆ. ಅದರಲ್ಲಿ ಸಫಲರಾಗಬೇಕಾದರೆ ಗ್ರಹಿಕೆ ಮತ್ತು ವಾಸ್ತವಗಳಲ್ಲಿ ಒಂದನ್ನು ತಿರಸ್ಕರಿಸಬೇಕು ಯಾ ಕಡೆಗಣಿಸಬೇಕು ಯಾ ಬದಲಾಯಿಸಬೇಕು. ಆದರೆ, ಹೊರಗಿನ ವಾಸ್ತವವನ್ನು ಬದಲಾಯಿಸಲಾಗದು, ಒಳಗಿನ ಗ್ರಹಿಕೆಯನ್ನು ಬದಲಾಯಿಸಲು ಮನವೊಪ್ಪದು. ಇದೇ ಕಾರಣಕ್ಕೆ ಹೆಚ್ಚಿನವರು, ಹೆಚ್ಚಿನ ಸಂದರ್ಭಗಳಲ್ಲಿ, ತಮ್ಮೊಳಗಿನ ಗ್ರಹಿಕೆಯನ್ನೇ ಬಲಪಡಿಸಿಕೊಂಡು, ಅದರೊಂದಿಗೆ ಸರಿಹೊಂದದ ವಾಸ್ತವವನ್ನು ತಿರಸ್ಕರಿಸುತ್ತಾರೆ: ತಾವು ತಿಳಿದಿರುವುದೇ ಸರಿ, ಮಾಡಿರುವುದೇ ಸರಿ ಎನ್ನುವುದಕ್ಕೆ ಸಮರ್ಥನೆಗಳನ್ನು ಹುಡುಕುತ್ತಾರೆ ಅಥವಾ ಸೃಷ್ಟಿಸಿಕೊಳ್ಳುತ್ತಾರೆ ಮತ್ತು ಸರಿಹೊಂದದ ಗ್ರಹಿಕೆಗಳತ್ತ ಕುರುಡಾಗುತ್ತಾರೆ, ಕಿವುಡಾಗುತ್ತಾರೆ, ಮರೆಗುಳಿಗಳಾಗುತ್ತಾರೆ. ಪದೇ ಪದೇ ಹೀಗೆ ಮಾಡಿದಾಗ ಒಳಗಿನ ನಂಬಿಕೆಗಳು ಇನ್ನಷ್ಟು ಗಟ್ಟಿಗೊಳ್ಳುತ್ತವೆ, ತಾನೇ ಸರಿ ಎನ್ನುವ ಭಾವನೆ ದಿಟವಾಗುತ್ತದೆ, ಸುಳ್ಳುಗಳು ಹುಟ್ಟಿ ಬೆಳೆದು, ವಾಸ್ತವ ಸತ್ಯ ದೂರವಾಗುತ್ತಲೇ ಹೋಗುತ್ತದೆ. ಮೂಢನಂಬಿಕೆಗಳು ಮತ್ತು ದೇವರು-ಧರ್ಮಗಳ ನಂಬಿಕೆಗಳು ಗಟ್ಟಿಗೊಳ್ಳುವುದು ಹೀಗೆಯೇ.

ಫೆಸ್ಟಿಂಗರ್ ಪ್ರತಿಪಾದನೆಗೆ ಕಾರಣವಾದ ಮೂಲ ಘಟನೆಗಳನ್ನೇ ನೋಡಿ. ಡಿಸೆಂಬರ್ 21ರ ಮುಂಜಾನೆ ಮಹಾಪ್ರಳಯವಾಗಿ ಭೂಮಿಯೇ ಮುಳುಗಲಿದೆಯೆಂಬ ಯೋಚನೆಯೊಂದು ಅಮೆರಿಕಾದ ಡೊರೊಥಿ ಮಾರ್ಟಿನ್ ಎಂಬ ಗೃಹಿಣಿಯ ತಲೆಯಲ್ಲಿ ಹುಟ್ಟಿತು. ಅದರಿಂದ ಉಳಿಯುವುದು ಹೇಗೆ? ಹಿಂದಿನ ರಾತ್ರಿ ಕ್ಲಾರಿಯನ್ ಎಂಬ ಗ್ರಹದಿಂದ ಆಕಾಶ ನೌಕೆಯೊಂದು ತನ್ನ ಮನೆಗೆ ಬರಲಿದೆ ಎಂಬ ಇನ್ನೊಂದು ಯೋಚನೆ ಹೊಳೆಯಿತು. ಕೆಲವರು ಅವಳನ್ನು ನಂಬಿದರು, ಹೆದರಿ ತಮ್ಮ ಕೆಲಸ, ಆಸ್ತಿ-ಪಾಸ್ತಿ ಎಲ್ಲವನ್ನೂ ತ್ಯಜಿಸಿಬಿಟ್ಟರು, ಡಿ. 20ರ ರಾತ್ರಿ ಅವಳ ಜೊತೆಗೂಡಿ ನೌಕೆಗಾಗಿ ಕಾಯತೊಡಗಿದರು. ಬೆಳಗಾಗುವವರೆಗೂ ಏನೂ ಘಟಿಸಲಿಲ್ಲ. ಗ್ರಹಿಕೆಗಳೆಲ್ಲವೂ ಸುಳ್ಳಾದವೆಂದು ಅವರು ಒಪ್ಪಿದರೆ? ಇಲ್ಲ. ತಮ್ಮೆಲ್ಲರ ತ್ಯಾಗ ಹಾಗೂ ಪ್ರಾರ್ಥನೆಗಳಿಗೆ ಮಣಿದು ದೇವರೇ ಪ್ರಳಯವನ್ನು ತಪ್ಪಿಸಿದನೆಂದು ಡೊರೊಥಿ ಘೋಷಿಸಿಬಿಟ್ಟಳು! ಇಡೀ ಭೂಲೋಕವನ್ನೇ ತಾವು ರಕ್ಷಿಸಿದೆವೆಂದು ಎಲ್ಲರೂ ಬೀಗಿದರು! ವಾಸ್ತವವನ್ನು ಒಪ್ಪುವ ಬದಲು ತಮ್ಮ ಸುಳ್ಳು ಗ್ರಹಿಕೆಗಳನ್ನೂ, ತಪ್ಪು ನಿರ್ಧಾರಗಳನ್ನೂ ಸಮರ್ಥಿಸಿಕೊಂಡರು!

ಕೈಗೆಟಕದ ಸಿಹಿಹಣ್ಣು ಹುಳಿಯೆಂದೆನಿಸುವುದು, ಪಾಲಿಗೆ ಬಂದ ವಿಷವೂ ಪಂಚಾಮೃತವೆನಿಸುವುದು ಹೀಗೆಯೇ. ಹೊಸದಾಗಿ ಖರೀದಿಸಿದ ದುಬಾರಿ ಮೊಬೈಲು ಕೈಕೊಟ್ಟರೆ ಅದರ ಬಣ್ಣಗಳ ವರ್ಣನೆಗೆ ತೊಡಗುವುದು; ಸಿಗರೇಟು ಸೇವನೆಯ ಹಾನಿಗಳ ಅರಿವಿದ್ದರೂ, ಬಗೆಬಗೆಯ ಸಬೂಬುಗಳಿಂದ ಧೂಮಪಾನವನ್ನು ಸಮರ್ಥಿಸಿಕೊಳ್ಳುವುದು; ವೈದ್ಯರು ಗುರುತಿಸಿದ ರೋಗವನ್ನು ಒಪ್ಪಲಾಗದೆ, ವೈದ್ಯರನ್ನೇ ಹಳಿದು ಬೇರೆಲ್ಲಿಗೋ ಹೋಗುವುದು; ಬಡಪಾಯಿಯೊಬ್ಬನಿಗೆ ವಿನಾ ಕಾರಣ ಹೊಡೆದದ್ದನ್ನು ಸಮರ್ಥಿಸಲು ಅವನ ತಪ್ಪುಗಳನ್ನೇ ಹುಡುಕುವುದು; ಮಹಾ ಚತುರನೆಂದು ಬೆಂಬಲಿಸಿದ್ದ ನಾಯಕನ ನಿಜ ಬಂಡವಾಳವನ್ನು ಯಾರಾದರೂ ಬಿಚ್ಚಿದರೆ ಅವರನ್ನೇ ಹಿಗ್ಗಾಮುಗ್ಗಾ ನಿಂದಿಸಿ, ಭಾರತ ರತ್ನವನ್ನೂ ಮರಳಿಸಬೇಕೆನ್ನುವುದು; ದೇವಾಂಶ ಸಂಭೂತನೆಂದು ಆರಾಧಿಸುತ್ತಿದ್ದ ಗುರುವು ಲಂಪಟನೆಂದು ದೂಷಿಸಲ್ಪಟ್ಟರೆ ಪೀಡಿತರನ್ನೇ ಹಳಿಯುವುದು; ಸಸ್ಯಾಹಾರವೇ ಉತ್ಕೃಷ್ಠವೆಂದು ಬೀಗುತ್ತಿರುವವರು ಮಾಂಸಾಹಾರದ ಬಗ್ಗೆ ಎರಡನೇ ತರಗತಿಯ ಪಠ್ಯದಿಂದ ವೇದಗಳವರೆಗೆ ಹೇಳಲಾಗಿರುವುದನ್ನೆಲ್ಲ ಕಡೆಗಣಿಸಿ, ಜ್ಞಾನಪೀಠ ಪುರಸ್ಕೃತರನ್ನೇ ಅಜ್ಞಾನಿಯೆನ್ನುವುದು; ಲೇಖನ, ಪುಸ್ತಕ, ಚಿತ್ರ, ಸಿನಿಮಾ ಇತ್ಯಾದಿಗಳನ್ನು ಅರ್ಥೈಸಿಕೊಳ್ಳುವ ಮೊದಲೇ ಅವನ್ನು ನಿಷೇಧಿಸಬೇಕೆಂದು ದಾಂಧಲೆ ಮಾಡುವುದು –  ಗ್ರಹಿಕೆಯ ತಾಕಲಾಟವನ್ನು ಶಮನಗೊಳಿಸಿಕೊಳ್ಳುವ ಪರಿಗಳಿವು.

ನಿರ್ಧಾರಗಳು ಮಹತ್ವದ್ದಾಗಿದ್ದಷ್ಟು, ಸನ್ನಿವೇಶಗಳು ಗಂಭೀರವಾಗಿದ್ದಷ್ಟು ಅವುಗಳ ಸಮರ್ಥನೆಯೂ ಬಲವಾಗಿರುತ್ತದೆ. ಘಟಿಸಿಹೋದ ಮಹಾಪ್ರಮಾದವನ್ನು ಹಾಗೂ ಹೀಗೂ ಸಮರ್ಥಿಸಿಕೊಳ್ಳುವುದು ಇದೇ ಕಾರಣಕ್ಕೆ. ಇದರಿಂದ ತಪ್ಪಿತಸ್ಥನ ಒಳಸಂಕಟವು ತಾತ್ಕಾಲಿಕವಾಗಿ ಶಮನಗೊಂಡರೂ, ವಾಸ್ತವದಲ್ಲಾದ ನಷ್ಟವನ್ನು ಸರಿಪಡಿಸಲಾದೀತೇ? ಸತ್ಯಕ್ಕೆ ಬೆನ್ನು ತಿರುಗಿಸುವುದರಿಂದ ಇನ್ನಷ್ಟು ಕಷ್ಟ-ನಷ್ಟಗಳಾಗಬಹುದು, ರೋಗವು ಬಿಗಡಾಯಿಸಬಹುದು, ಕೌಟುಂಬಿಕ ಹಾಗೂ ಸಾಮಾಜಿಕ ಅಶಾಂತಿ ಹೆಚ್ಚಬಹುದು. ಅಧಿಕಾರದಲ್ಲಿರುವವರು, ಸುರಕ್ಷತಾಕರ್ಮಿಗಳು, ನ್ಯಾಯಧೀಶರುಗಳು ಇಂತಹಾ ಸ್ವಸಮರ್ಥನೆಗಳಿಗೆ ದಾಸರಾದರೆ ಬಲು ದೊಡ್ಡ ಅವಾಂತರಗಳೇ ಘಟಿಸಬಹುದು. ಯುವಜನರ ಮೇಲಿನ ದಾಳಿಗಳಿಗೆ ಸಂಸ್ಕೃತಿ ರಕ್ಷಣೆಯ ನೆಪ, ಸಾವಿರಾರು ನಿರ್ದೋಷಿಗಳ ನರಮೇಧಗಳಿಗೆ “ದೊಡ್ಡ ಮರ ಉರುಳಿದಾಗ ಭೂಮಿ ನಡುಗುತ್ತದೆ” ಅಥವಾ “ಕ್ರಿಯೆಗೆ ತಕ್ಕ ಪ್ರತಿಕ್ರಿಯೆ” ಎಂಬ ವಾದಗಳು, ಸಮೂಹ ನಾಶದ ಅಸ್ತ್ರಗಳನ್ನು ವಶಪಡಿಸಿಕೊಳ್ಳುವ ಹೆಸರಲ್ಲಿ ಸಾರ್ವಭೌಮ ರಾಷ್ಟ್ರವೊಂದರ ಮೇಲೆ ದಾಳಿ ನಡೆಸಿ, ಏನೂ ಸಿಕ್ಕದಾಗ “ಅಲ್ಲಿ ಪ್ರಜಾಪ್ರಭುತ್ವ ನೆಲೆಗೊಳಿಸಿದ್ದೇವೆ” ಎಂಬ ಸಮರ್ಥನೆಗಳು ಅಂತಹಾ ಅಪಾಯಗಳ ಕೆಲವು ಉದಾಹರಣೆಗಳು. ದೊಡ್ಡವರ ದೊಡ್ಡ ಸುಳ್ಳುಗಳು ಮುಚ್ಚಲ್ಪಡುವುದು ಹೀಗೆಯೇ. ಹಿಟ್ಲರ್ ಹೇಳಿರುವಂತೆ, “ಮಹಾ ಸುಳ್ಳುಗಳನ್ನು ಹೆಚ್ಚಿನವರು ಪ್ರಶ್ನಿಸುವುದಿಲ್ಲ, ಅವುಗಳ ವಿರುದ್ಧ ಎಷ್ಟೇ ದೊಡ್ಡ ಸಾಕ್ಷ್ಯಾಧಾರಗಳಿದ್ದರೂ ನಂಬುವುದಿಲ್ಲ. ಇದು ಮಹಾಸುಳ್ಳುಗಾರರಿಗೆಲ್ಲ ಚೆನ್ನಾಗಿ ಗೊತ್ತಿದೆ, ಅದಕ್ಕೇ ಅವರೆಲ್ಲ ಒಟ್ಟಾಗಿ ಸಫಲರಾಗುತ್ತಾರೆ.”

ಗ್ರಹಿಕೆಗಳಿಗೆ ಜೋತು ಬಿದ್ದು ವಾಸ್ತವವನ್ನು ತಿರಸ್ಕರಿಸುವ ಬದಲು, ಸತ್ಯಕ್ಕನುಗುಣವಾಗಿ ಗ್ರಹಿಕೆಗಳನ್ನೇ ತಿದ್ದಿಕೊಳ್ಳಬಾರದೇ? ಬುದ್ಧ ಹೇಳಿದ್ದು ಅದನ್ನೇ: “ಯಾರೋ ಹೇಳಿದರೆಂದು ಯಾ ಎಲ್ಲೋ ಓದಿದಿರೆಂದು ನಂಬಬೇಡಿ, ನನ್ನನ್ನೂ ನಂಬಬೇಡಿ. ಹಳೆಯ ಲಿಖಿತವೆಂದು, ಲೋಕದ ನಂಬಿಕೆಯೆಂದು, ಎಳವೆಯಿಂದಲೇ ನಂಬಿದ್ದೆಂದು ನಂಬಬೇಡಿ. ಸರಿಯಾಗಿ ಪರೀಕ್ಷಿಸಿ, ವಿಶ್ಲೇಷಿಸಿದ ಬಳಿಕ ಎಲ್ಲರಿಗೂ ಒಳಿತಾಗುವ, ಅನುಕಂಪದ, ಕಲ್ಯಾಣಕರವಾದ ವಿಚಾರಗಳನ್ನು ಒಪ್ಪಿಕೊಳ್ಳಿ, ಅಳವಡಿಸಿಕೊಳ್ಳಿ, ಅನುಸರಿಸಿ.”

ಹೀಗೆ ನಂಬಿಕೆಗಳ ಸಂಘರ್ಷವನ್ನು ಮೆಟ್ಟಿ ನಿಂತು ಸತ್ಯಾನ್ವೇಷಣೆ ಮಾಡಿದವರಿಂದಲೇ ವೈಚಾರಿಕತೆ ಬೆಳೆಯಿತು, ವಿಜ್ಞಾನ-ತಂತ್ರಜ್ಞಾನಗಳೂ ಬೆಳೆದವು. ಆದರೆ ಸತ್ಯವು ಸ್ಫುಟಗೊಂಡಂತೆ ಅದೆಷ್ಟೋ ಮನಸ್ಸುಗಳಲ್ಲಿದ್ದ ನಂಬಿಕೆಗಳು ಘಾಸಿಗೊಂಡವು; ಕೆಲವರು ಕ್ರುದ್ಧರಾಗಿ ನಂಬಿಕೆಗಳನ್ನು ಪ್ರಶ್ನಿಸಿದ ವಿಚಾರಶೀಲರನ್ನೇ ಕೊಂದರು. ವೈದಿಕ ವ್ಯವಸ್ಥೆಯನ್ನು ಪ್ರಶ್ನಿಸಿದ್ದ ಚಾರ್ವಾಕರು, ಎಲ್ಲವನ್ನೂ ಪ್ರಶ್ನಿಸುತ್ತಿದ್ದ ಸಾಕ್ರಟಿಸ್, ಭೂಮಿ ಗೋಳವೆಂದ ಬ್ರುನೋ, ಕೋಮುವೈಷಮ್ಯವನ್ನು ವಿರೋಧಿಸಿದ್ದ ಬಾಪು, ಅಂಧಶ್ರದ್ಧೆ ನಿರ್ಮೂಲನೆಯ ಪಣ ತೊಟ್ಟಿದ್ದ ಡಾ. ದಾಭೋಲ್ಕರ್ ಮುಂತಾದವರೆಲ್ಲ ನಂಬಿ ಕೆಟ್ಟಿದ್ದವರ ಸಿಟ್ಟಿಗೆ ಬಲಿಯಾದರು. ಆದರೆ ಇಂತಹಾ ದಾಳಿಗಳಿಂದ ವೈಚಾರಿಕ ಚಿಂತನೆಯನ್ನು ಅಳಿಸಲಾಗದು, ಸತ್ಯವನ್ನು ದಮನಿಸಲಾಗದು.

ಸತ್ಯವನ್ನರಿಯುವುದು ಸುಲಭವಿಲ್ಲ, ಸುಮ್ಮನೆ ನಂಬುವುದಕ್ಕೆ ಕಷ್ಟವೇನಿಲ್ಲ. ನಮ್ಮ ಗ್ರಹಿಕೆಗೆ ಎದುರಾಗುವ ಸವಾಲುಗಳನ್ನು ವಸ್ತುನಿಷ್ಠವಾಗಿ ವಿಶ್ಲೇಷಿಸಿ, ಗ್ರಹಿಕೆಯು ಸರಿಯಿಲ್ಲದಿದ್ದರೆ ಅದನ್ನು ಬದಲಿಸಿಕೊಳ್ಳುವ ತೆರೆದ ಮನಸ್ಸು ನಮ್ಮನ್ನು ವಿವೇಕದತ್ತ ಒಯ್ಯುತ್ತದೆ; ವಾಸ್ತವವನ್ನು ತಿರಸ್ಕರಿಸಿ ನಂಬಿಕೆಗೆ ಅಂಟಿಕೊಳ್ಳುವುದರಿಂದ ಕ್ಷಣಿಕ ಸುಖ ದೊರೆತರೂ ಅಜ್ಞಾನಕ್ಕೆ ದಾರಿಯಾಗುತ್ತದೆ, ಇನ್ನಷ್ಟು ಸಂಕಟಗಳಿಗೆ ವೇದಿಕೆಯಾಗುತ್ತದೆ. ತಪ್ಪನ್ನು ಸರಿಪಡಿಸಿಕೊಳ್ಳದಿದ್ದರೆ ಇತಿಹಾಸ ಮರುಕಳಿಸುತ್ತದೆ.

ಮೂವತ್ತೈದನೇ ಬರಹ : ಊಟದ ತಟ್ಟೆಯಲ್ಲಿ ಕಾಂಚಾಣ ನರ್ತನ [ಅಕ್ಟೋಬರ್ 16, 2013, ಬುಧವಾರ] [ನೋಡಿ | ನೋಡಿ]

ಆಹಾರ ಉತ್ಪಾದನೆ ಉದ್ಯಮವಾದಂತೆಲ್ಲ ಹಸಿವು ನೀಗಿಸುವ ಗುರಿ ಕಳೆದುಹೋಗಿ ಲಾಭ-ನಷ್ಟದ ಲೆಕ್ಕಾಚಾರಗಳಷ್ಟೆ ಮೇಲುಗೈ ಸಾಧಿಸಿದವು

‘ಆಹಾರದ ಸುರಕ್ಷತೆಗಾಗಿ ಹಾಗೂ ಪೋಷಣೆಗಾಗಿ ಸುಸ್ಥಿರ ಆಹಾರ ವ್ಯವಸ್ಥೆಗಳು’ ಎಂಬ ಹೊಸ ಉದ್ಘೋಷದೊಂದಿಗೆ ಅಕ್ಟೋಬರ್ 16ರ ವಿಶ್ವ ಆಹಾರ ದಿನಾಚರಣೆ ಮತ್ತೆ ಬಂದಿದೆ. ವಿಶ್ವದೆಲ್ಲೆಡೆ ದಶಕಗಳಿಂದ ಇದನ್ನು ಆಚರಿಸಲಾಗುತ್ತಿದ್ದರೂ ವರ್ಷದಿಂದ ವರ್ಷಕ್ಕೆ ಆಹಾರದ ಪೂರೈಕೆ ಇಳಿಯುತ್ತಲೇ ಇದೆ, ಹಸಿದವರ ಸಂಖ್ಯೆ ಹಾಗೆಯೇ ಉಳಿದಿದೆ. ವರ್ಷಕ್ಕೆ ನಾಲ್ಕು ಕೋಟಿ ಜನ ಸರಿಯಾದ ಊಟವಿಲ್ಲದೆ ಸಾಯುತ್ತಿದ್ದಾರೆ, ಮೂರರಲ್ಲೊಂದು ಮಗು ನ್ಯೂನಪೋಷಣೆಯಿಂದ ನರಳುತ್ತಿದೆ.

ವಿಶ್ವದ ಜನರೆಲ್ಲರಿಗೆ ಸಾಕಾಗುವಷ್ಟು ಆಹಾರವು ಲಭ್ಯವಿಲ್ಲವೇ? ಇದೆ. ಏಳ್ನೂರು ಕೋಟಿ ಹೊಟ್ಟೆಗಳನ್ನು ತುಂಬುವುದಕ್ಕೆ ಸಾಕಾಗುವಷ್ಟು ಧಾನ್ಯಗಳನ್ನು ನಾವು ಬೆಳೆಯುತ್ತಿದ್ದೇವೆ. ಅದರ ಜೊತೆಗೆ ತರಕಾರಿಗಳು, ಬೀಜಗಳು, ಹಣ್ಣುಗಳು, ಮೀನು-ಮಾಂಸ-ಮೊಟ್ಟೆ ಇತ್ಯಾದಿಗಳೂ ಇವೆ. ಹಾಗಿದ್ದರೂ ನೂರು ಕೋಟಿ ಜನರಿಗೆ ಇವು ದಕ್ಕುವುದೇ ಇಲ್ಲ. ಕಳೆದ ವರ್ಷ 70 ಲಕ್ಷ ಟನ್ ಗೋಧಿಯನ್ನೂ, 85 ಲಕ್ಷ ಟನ್ ಅಕ್ಕಿಯನ್ನೂ ರಫ್ತು ಮಾಡಿದ ಭಾರತದಲ್ಲಿ ಪ್ರತಿ ನಿತ್ಯವೂ 30 ಕೋಟಿ ಜನ ಹಸಿವಿನಲ್ಲಿ ಮಲಗುತ್ತಾರೆ, 3000 ಮಕ್ಕಳು ಹಸಿವಿನಿಂದ ಸಾಯುತ್ತಾರೆ. ಅಂದರೆ, ನಾವು ಬೆಳೆಯುತ್ತಿರುವ ಆಹಾರವು ಬೇರೆ ದಾರಿ ಹಿಡಿಯುತ್ತಿದೆ ಎಂದಾಯಿತು.

ಎರಡು ಲಕ್ಷ ವರ್ಷಗಳಷ್ಟು ಹಿಂದೆ ಮಾನವ ಸಂತತಿ ವಿಕಾಸ ಹೊಂದಿದಾಗ ಎಲೆಯಿಂದ ಹಿಡಿದು ಬೀಜದವರೆಗೆ, ಇರುವೆಯಿಂದ ಹಿಡಿದು ಆನೆಯವರೆಗೆ ಪ್ರಕೃತಿದತ್ತವಾದ ಎಲ್ಲವನ್ನೂ ತಿನ್ನಬಲ್ಲ ಸಾಮರ್ಥ್ಯವು ಅವನಿಗೆ ದಕ್ಕಿತ್ತು. ಸುಮಾರು ಹತ್ತು ಸಾವಿರ ವರ್ಷಗಳ ಹಿಂದಿನವರೆಗೂ ಮನುಷ್ಯರು ಕಾಡುಮೇಡುಗಳಲ್ಲಿ ಅಲೆಯುತ್ತಾ ಬಗೆಬಗೆಯ ಸಸ್ಯ-ಮಾಂಸಗಳನ್ನು ತಿನ್ನುತ್ತಿದ್ದರು. ಅಲ್ಲಿಂದೀಚೆಗೆ ಶರಾಬಿನ ಆಸೆಗಾಗಿ ಧಾನ್ಯಗಳನ್ನು ಬೆಳೆಯತೊಡಗಿ, ಅದೇ ಮುಖ್ಯ ಆಹಾರವಾಗಿಬಿಟ್ಟಿತು. ಜೊತೆಗೆ ಕೆಲವೊಂದು ಪ್ರಾಣಿ-ಪಕ್ಷಿಗಳನ್ನು ಸಾಕಿ ಆಹಾರಕ್ಕಾಗಿ ಬಳಸುವ ಕ್ರಮವೂ ಆರಂಭಗೊಂಡಿತು. ಹೀಗೆ ಕೃಷಿ ಮತ್ತು  ನಾಗರಿಕತೆ ಹುಟ್ಟಿಕೊಂಡಲ್ಲಿಂದಲೇ ಆಹಾರದ ಸಂಕಟವೂ ಆರಂಭಗೊಂಡಿತು. ವೈವಿಧ್ಯತೆ ಕಡಿಮೆಯಾಗಿ ಸಾಕಿ-ಬೆಳೆಸಿದ್ದನ್ನಷ್ಟೇ ತಿನ್ನುವುದಾಯಿತು.

ಬೇಸಾಯದೊಂದಿಗೆ ಆಸ್ತಿ-ರಾಜ್ಯಗಳು ಹುಟ್ಟಿಕೊಂಡವು, ದುಡಿಯುವವರು ಮತ್ತು ದುಡಿಸುವವರು ಬೇರೆಯಾದರು. ದುಡಿದವನು ಬೆಳೆಸಿದ ಆಹಾರವು ದುಡಿಸಿದವನ ಸುಪರ್ದಿಗೆ ಸೇರಿತು; ದುಡಿಸಿದವನ ಹೊಟ್ಟೆ ಸದಾ ತುಂಬಿದ್ದರೆ, ದುಡಿದವನು ತಾನೇ ಬೆಳೆದ ಅನ್ನಕ್ಕಾಗಿ ಬೇಡಬೇಕಾದ ಅವಸ್ಥೆಯುಂಟಾಯಿತು. ಮುಂದೆ ಕೃಷಿ ಭೂಮಿಗಳೂ, ಧಾನ್ಯಗಳ ಉಗ್ರಾಣಗಳೂ ಜಮೀನ್ದಾರರು ಹಾಗೂ ರಾಜರುಗಳ ಪಾಲಾದವು. ಇವರೆಲ್ಲರೂ ಹಸಿದವರ ಸಿಟ್ಟನ್ನು ನೇರವಾಗಿ ಎದುರಿಸಬೇಕಾಗಿದ್ದುದರಿಂದ ಆಹಾರದ ವಿತರಣೆಯಲ್ಲಿ ಹೆಚ್ಚು ಮೋಸ ಮಾಡುವುದಾಗುತ್ತಿರಲಿಲ್ಲ.

ಬ್ರಿಟಿಷ್ ಚಕ್ರಾಧಿಪತ್ಯವು ಸೂರ್ಯ ಮುಳುಗದ ತನ್ನ ಸಾಮ್ರಾಜ್ಯದುದ್ದಕ್ಕೂ ಆಹಾರವಸ್ತುಗಳನ್ನು ಬೆಳೆದು ಬ್ರಿಟಿಷ್ ಪ್ರಜೆಗಳಿಗಾಗಿಯೂ, ಇತರೆಡೆ ಮಾರುವುದಕ್ಕಾಗಿಯೂ ಹೊತ್ತೊಯ್ಯುತ್ತಿತ್ತು. ಇತ್ತ ವಸಾಹತುಗಳಲ್ಲಿ ದುಡಿಯುತ್ತಿದ್ದವರು ತಮ್ಮ ಹೊಟ್ಟೆ ತುಂಬಿಸಲು ಬ್ರಿಟಿಷರೆದುರು ಕೈಯೊಡ್ಡಬೇಕಾಗಿತ್ತು. ಆ ಮೂರು ಶತಮಾನಗಳಲ್ಲಿ ಮೂರು ಭೀಕರ ಕ್ಷಾಮಗಳಾಗಿ, ಕೋಟಿಗಟ್ಟಲೆ ಭಾರತೀಯರು ಊಟಕ್ಕಿಲ್ಲದೆ ಸತ್ತರು, ಆದರೆ ಆಹಾರದ ರಫ್ತು ಮಾತ್ರ ನಿಲ್ಲಲಿಲ್ಲ: 1875-1900ರ ನಡುವೆ ಮೂರು ಕೋಟಿ ಜನ ಹಸಿವಿನಿಂದ ಸತ್ತರೆ, ಆಹಾರದ ರಫ್ತಿನ ಪ್ರಮಾಣವು ವರ್ಷಕ್ಕೆ ಮೂವತ್ತು ಲಕ್ಷ ಟನ್ ನಿಂದ ಒಂದು ಕೋಟಿ ಟನ್ನಿಗೇರಿತು.

ಹೊಸ ತಂತ್ರಜ್ಞಾನಗಳು, ಹೊಸ ರಾಜಕೀಯ-ಆರ್ಥಿಕ ವ್ಯವಸ್ಥೆಗಳು ನೆಲೆಗೊಂಡಂತೆ ಆಹಾರದ ಉತ್ಪಾದನೆ ಹಾಗೂ ವಿತರಣೆಗಳು ದುಡಿಯುವವರ ಕೈಗಳಿಂದ ಇನ್ನಷ್ಟು ದೂರವಾದವು. ಆಹಾರದ ಉತ್ಪಾದನೆಯು ಬೃಹತ್ ಉದ್ಯಮಗಳ ಪಾಲಾಯಿತು, ಆಹಾರವು ಜನರ ತಟ್ಟೆಗಳಿಂದ ಖಾಸಗಿ ಗೋದಾಮುಗಳನ್ನು ಸೇರಿತು, ಹೊಟ್ಟೆಗಳು ತುಂಬುವ ಬದಲು ಆರೇಳು ಬಹುರಾಷ್ಟ್ರೀಯ ಕಂಪೆನಿಗಳ ತಿಜೋರಿಗಳು ತುಂಬತೊಡಗಿದವು. ಆಹಾರವು ಬದುಕಿನ ಅನಿವಾರ್ಯತೆಗಿಂತಲೂ ಕಂಪೆನಿಗಳ ಲಾಭದ ಸರಕಾಯಿತು. ಈ ಲಾಭವನ್ನು ಹೆಚ್ಚಿಸುವುದಕ್ಕಾಗಿ ಆಹಾರದ ಉತ್ಪಾದನೆ ಹಾಗೂ ಸಂಸ್ಕರಣೆಗಳ ತಂತ್ರಜ್ಞಾನಗಳು ಅಭಿವೃದ್ಧಿಗೊಂಡವು. ಹಿಂದೆ ನೆಲದ ಸಾರವನ್ನು ಕಾಪಾಡುವುದಕ್ಕೆ ಬೆಳೆಗಳ ಆವರ್ತನೆಯಾಗುತ್ತಿತ್ತು. ಕೃತಕ ರಸಗೊಬ್ಬರಗಳು ಬಂದ ಬಳಿಕ ಬೆಳೆದದ್ದನ್ನೇ ಬೆಳೆಯುವುದಾಯಿತು. ಅಲ್ಲದೆ ಕೃಷಿಯು ನೈಸರ್ಗಿಕ ಅನಿಲ ಹಾಗೂ ತೈಲಗಳ ವ್ಯವಹಾರದೊಂದಿಗೆ ತಳುಕು ಹಾಕಿ ತೈಲದ ಬೆಲೆಯು ಆಹಾರದ ಬೆಲೆಗೂ ತಟ್ಟಿತು. ಮಣ್ಣಿನಲ್ಲಿ ಕೃತಕ ಸಾರಜನಕ ತುಂಬಿದಂತೆ ಪೈರಿನ ಶಕ್ತಿಗುಂದಿ ಕೀಟಗಳ ಕಾಟ ಹೆಚ್ಚಿತು; ಹೀಗೆ ಕೀಟನಾಶಕಗಳು ನಮ್ಮ ಆಹಾರದೊಳಕ್ಕೆ ಹೊಕ್ಕವು. ರೈತರು ರಸಗೊಬ್ಬರ ಮತ್ತು ಕೀಟನಾಶಕ ತಯಾರಕರ ದಾಸರಾದರು. ಉತ್ಪಾದನೆ ಹೆಚ್ಚಿತು, ಊಟ ಕೆಟ್ಟಿತು.

ದೈತ್ಯ ಕಂಪೆನಿಗಳ ದಾಹ ಇಷ್ಟಕ್ಕೇ ತೀರಲಿಲ್ಲ. ಹೆಚ್ಚು ಇಳುವರಿಯ ತಳಿಗಳು ಬಂದವು. ಕಳೆನಾಶಕಗಳನ್ನು ಸಹಿಸಿಕೊಳ್ಳುವ, ಕೀಟಗಳನ್ನು ನಿರೋಧಿಸುವ, ಮತ್ತೆ ಮೊಳೆಯದ ಅಂತಕ ಬೀಜಗಳ ಕುಲಾಂತರಿ ಸಸ್ಯಗಳು ಬಂದವು. ರೈತರ ದಾಸ್ಯ ಇನ್ನಷ್ಟು ಕಠಿಣವಾಗಿ ಬೀಜಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದೇ ಅಪರಾಧವಾಯಿತು. ಶತಮಾನಗಳಿಂದ ಮನುಕುಲದ ಬಳಿಯಿದ್ದ ಬೀಜ ವೈವಿಧ್ಯತೆ ನಶಿಸತೊಡಗಿ ಮೊನ್ಸಾಂಟೋ, ಕಾರ್ಗಿಲ್ ಮುಂತಾದ ದೈತ್ಯ ಕಂಪೆನಿಗಳ ಏಕಸ್ವಾಮ್ಯತೆ ಮೆರೆಯತೊಡಗಿತು. ಒಂದೊಂದೂರಿನ ಒಂದೊಂದು ಆಹಾರದ ಬದಲು ವಿಶ್ವದೆಲ್ಲೆಡೆ ಒಂದೇ ಆಹಾರವೆಂಬ ದುರ್ಗತಿ ಮೂಡಿತು.

ಆಹಾರದ ಉತ್ಪಾದನೆ ಹೆಚ್ಚಿದಂತೆ ವ್ಯಾಪಾರವೂ ಹೆಚ್ಚಬೇಕಲ್ಲ? ಆದರೆ ಜನಸಂಖ್ಯೆಯಾಗಲೀ, ತಿನ್ನುವ ಪ್ರಮಾಣವಾಗಲೀ ಹಾಗೆಲ್ಲ ಹೆಚ್ಚವು. ಇನ್ನು ದುಡ್ಡಿಲ್ಲದವರಿಗೆ ಆಹಾರವನ್ನು ಒದಗಿಸಿದರೆ ಲಾಭವಾಗದು. ಹಾಗಾಗಿ ಹೇರಳವಾಗಿ ಬೆಳೆಯುವ ಜೋಳವನ್ನು ಮಾಂಸಕ್ಕಾಗಿ ಸಾಕುವ ಪ್ರಾಣಿಗಳಿಗೆ ತಿನ್ನಿಸಲಾರಂಭಿಸಲಾಯಿತು. ಅಡ್ಡಾಡಿ ಹುಲ್ಲು ಮೇಯುವ ಪಶುಗಳು ಬಲಿಯುವುದಕ್ಕೆ ನಾಲ್ಕು ವರ್ಷಗಳಾಗುವಲ್ಲಿ ಕೂಡಿಹಾಕಿ ಜೋಳ ಮುಕ್ಕಿಸಿದವುಗಳು ಒಂದೂವರೆ ವರ್ಷಗಳಲ್ಲೇ ಬಲಿಯುವುದರಿಂದ ಮಾಂಸದ ವ್ಯಾಪಾರಕ್ಕೂ ಒಳಿತಾಯಿತು! ಧಾನ್ಯಗಳನ್ನು ತಿಂದ ಪಶುಗಳಿಗೆ ಸೋಂಕು ಹೆಚ್ಚುವುದರಿಂದ ಪ್ರತಿಜೈವಿಕಗಳ ಬಳಕೆಯೂ ಹೆಚ್ಚಿತು, ಅದರಲ್ಲೂ ಲಾಭ ಹುಟ್ಟಿತು. ಆಕಳು, ಹಂದಿಗಳು, ಕೋಳಿಗಳು ಹಾಗೂ ಕೆಲಬಗೆಯ ಮೀನುಗಳಿಗೆ ಇಂದು ಜೋಳ, ಸೋಯಾ ಮುಂತಾದ ಧಾನ್ಯಗಳನ್ನು ಆಹಾರವಾಗಿ ನೀಡಲಾಗುತ್ತಿದೆ. ಬ್ರೆಜಿಲಿನ ಅಮೆಜಾನ್ ಕಾಡುಗಳನ್ನು ಕತ್ತರಿಸಿ, ಅಲ್ಲಿ ಬೆಳೆದ ಸೋಯಾವನ್ನು ಚೀನಾ ಹಾಗೂ ಜಪಾನಿನ ಕೋಳಿಗಳಿಗಾಗಿ ರಫ್ತು ಮಾಡಲಾಗುತ್ತಿದೆ.

ವಾಹನಗಳ ಸಂಖ್ಯೆ ಹೆಚ್ಚಿ ತೈಲ ದುಬಾರಿಯಾದಂತೆ ಬದಲಿ ಇಂಧನವಾಗಿ ಜೋಳದಿಂದ ತಯಾರಿಸಿದ ಎಥನಾಲ್ ಬಳಕೆಗೆ ಬಂತು. ಹೀಗೆ ಆಹಾರದ ದೊಡ್ಡ ಪಾಲು ಸಾಕು ಪ್ರಾಣಿ-ಪಕ್ಷಿಗಳಿಗೂ, ಜೀವವಿಲ್ಲದ ವಾಹನಗಳಿಗೂ ಹಂಚಲ್ಪಟ್ಟಿತು. ಶ್ರೀಮಂತನೊಬ್ಬನ ಕಾರಿಗೆ ಒಮ್ಮೆ ತುಂಬುವ ಇಥನಾಲ್ ಗೆ ಬೇಕಾಗುವ ಜೋಳವು ಒಬ್ಬ ಬಡವನ ಹೊಟ್ಟೆಗೆ ಇಡೀ ವರ್ಷದ ಆಹಾರವಾಗಬಲ್ಲದು ಎಂದರೆ ಈ ವ್ಯವಸ್ಥೆಯ ಕ್ರೌರ್ಯವು ಸ್ಪಷ್ಟವಾಗುತ್ತದೆ.

ಆಹಾರ ಸಂಸ್ಕರಣೆಯೂ ದೊಡ್ಡ ಉದ್ಯಮವಾಗಿ ಬೆಳೆದಿದ್ದು ನಿಸರ್ಗದತ್ತ ಆಹಾರವೇನೆನ್ನುವುದು ನಮಗೆ ಮರೆತೇ ಹೋಗುವಂತಾಗಿದೆ. ಗೋಧಿ, ಜೋಳ ಹಾಗೂ ಸೋಯಾಗಳ ಸಿಪ್ಪೆಯಿಂದ ತಿರುಳಿನವರೆಗೆ ಎಲ್ಲವನ್ನೂ ಹಿಂಡಿ ಹಿಪ್ಪೆ ಮಾಡಿ ಸಕ್ಕರೆ, ಪಿಷ್ಠ ಹಾಗೂ ಎಣ್ಣೆಗಳನ್ನು ಬೇರ್ಪಡಿಸಿ, ಅತ್ತಿತ್ತ ಬೆರೆಸಿ, ಆಕರ್ಷಕ ಪೊಟ್ಟಣಗಳಲ್ಲಿರಿಸಿ ಅದನ್ನೇ ಆಹಾರವೆಂದು ಮಾರಲಾಗುತ್ತಿದೆ; ಎರಡು ರೂಪಾಯಿಯ ಜೋಳದಿಂದ ಇನ್ನೂರು ರೂಪಾಯಿಯ ಉತ್ಪನ್ನಗಳಾಗುತ್ತಿವೆ. ಇವುಗಳನ್ನು ತಿನ್ನುವವರನ್ನೂ ಇದೇ ದೈತ್ಯ ಕಂಪೆನಿಗಳು ಸಿದ್ಧ ಪಡಿಸುತ್ತವೆ. ಆಹಾರದ ಉತ್ಪಾದನೆ, ಶೇಖರಣೆ, ಸಂಸ್ಕರಣೆ ಹಾಗೂ ಮಾರಾಟಗಳೆಲ್ಲವೂ ಆರೇಳು ದೈತ್ಯ ಕಂಪೆನಿಗಳ ಅಧೀನವಾಗಿ, ಸಣ್ಣ ಕೃಷಿಕರು ತಮ್ಮ ಜಮೀನುಗಳನ್ನು ತೊರೆದು ನಗರಗಳ ಕೊಳೆಗೇರಿಗಳಿಗೆ ವಲಸೆ ಹೋಗುವಂತಾಗಿದೆ. ಹೀಗೆ ಗುಳೆ ಹೋದ ರೈತರು ಅಗ್ಗವಾಗಿ ದಿನವಿಡೀ ದುಡಿಯುತ್ತಾ, ಊಟಕ್ಕೂ ಸಮಯವಿಲ್ಲದೆ ಸಂಸ್ಕರಿತ ಬ್ರೆಡ್ಡು-ಬಿಸ್ಕತ್ತುಗಳನ್ನು ತಿಂದು ಬದುಕುವಂತಾಗಿದೆ. ಅದರಿಂದಾಗಿ ಬೊಜ್ಜು, ಮಧುಮೇಹ, ಹೃದ್ರೋಗ, ಕ್ಯಾನ್ಸರ್ ಮುಂತಾದ ಕಾಯಿಲೆಗಳೆಲ್ಲವೂ ವಿಪರೀತವಾಗುತ್ತಿದ್ದು, ದೈತ್ಯ ಕಂಪೆನಿಗಳಿಗೆ ಇನ್ನಷ್ಟು ಲಾಭವಾಗುತ್ತಿದೆ.

ಆಹಾರದ ಈ ಬಿಕ್ಕಟ್ಟಿನಿಂದ ವಿಮೋಚಿತರಾಗಲು ಪರಂಪರಾಗತ ಆಹಾರ ವ್ಯವಸ್ಥೆಯತ್ತ ಹೊರಳುವುದೊಂದೇ ದಾರಿಯಾಗಿದೆ. ತಮ್ಮ ಪರಂಪರಾಗತ ಆಹಾರವನ್ನು ಬಿಟ್ಟುಕೊಡದಿರುವ ಅದೆಷ್ಟೋ ಬುಡಕಟ್ಟುಗಳು ಈ ಕಷ್ಟಗಳಿಂದ ತಪ್ಪಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ ಇಂದು ವಿಶ್ವದ ಮೂಲೆ ಮೂಲೆಗಳಲ್ಲಿ ರೈತ ಸಂಘಟನೆಗಳು ಆಹಾರ ಸುರಕ್ಷತೆಯ ಬದಲಿಗೆ ಆಹಾರದ ಸಾರ್ವಭೌಮತೆಯ ಹಕ್ಕೊತ್ತಾಯಿಸತೊಡಗಿವೆ. ತಿನ್ನುವುದಕ್ಕೆಂದು ಏನನ್ನೋ ಒದಗಿಸಿದರಾಗದು, ನಮ್ಮ ಆಹಾರವೇನೆಂದು ನಿರ್ಧರಿಸುವ ಸ್ವಾತಂತ್ರ್ಯ ನಮಗೇ ಇರಬೇಕು. ಭೂ ಒಡೆತನ, ಕೃಷಿಗೆ ಅಗತ್ಯವಾದ ನೀರು ಮತ್ತಿತರ ಸಂಪನ್ಮೂಲಗಳ ಒದಗಣೆ,  ಕೃಷಿಸಂಬಂಧಿ ನೀತಿನಿರೂಪಣೆಯಲ್ಲಿ ಭಾಗೀದಾರಿಕೆಗಳಿಗಾಗಿ ಹಾಗೂ ಉದ್ಯಮಶಾಹಿಯಿಂದ ಪರಿಸರ ವಿನಾಶವನ್ನು ತಡೆಯುವುದಕ್ಕಾಗಿ ಹೋರಾಟಗಳು ಬಲಗೊಳ್ಳುತ್ತಿವೆ. ವಿವೇಕಹೀನವಾದ, ಮಾನವ ವಿರೋಧಿಯಾದ ಪ್ರಸಕ್ತ ವ್ಯವಸ್ಥೆಯು ಕೊನೆಗೊಂಡು ನಮ್ಮ ಪಕ್ಕದ ಹೊಲದಲ್ಲಿ ನಮ್ಮೂರಿನ ಬೀಜಗಳಿಂದ ನಮಗೆ ಬೇಕಾದ ಧಾನ್ಯಗಳನ್ನೂ, ನಮಗೆ ಬೇಕಾದ ಮೀನು-ಪ್ರಾಣಿ-ಪಕ್ಷಿಗಳನ್ನೂ ಸಾಕಿ-ಬೆಳೆಸಿ ನಮ್ಮ ಆಹಾರಕ್ಕಾಗಿ ಬಳಸಿಕೊಳ್ಳುವ ಸಾರ್ವಭೌಮ ಹಕ್ಕು ನಮಗೆ ದೊರೆಯಬೇಕು.

ಮೂವತ್ನಾಲ್ಕನೇ ಬರಹ : ಬೇಗ ಈಡೇರಲಿ ಬಾಪುವಿನ ಬಯಕೆ [ಅಕ್ಟೋಬರ್ 2, 2013, ಬುಧವಾರ] [ನೋಡಿ | ನೋಡಿ]

ಭಾರತದಲ್ಲಿ ಕುಷ್ಠ ರೋಗ ನಿರ್ಮೂಲನೆಯ ಆಂದೋಲನ ಹುಟ್ಟಿಕೊಳ್ಳಲು ಮಹಾತ್ಮನೇ ಮೂಲ ಪ್ರೇರಣೆ

ಈ ನೆಲದ ಜನರ ಯಾವುದೇ ನೋವು ಬಾಪುವನ್ನು ತಟ್ಟದೇ ಬಿಟ್ಟಿರಲಿಲ್ಲ. ಪರತಂತ್ರದ ಬೇಗೆ ಆ ಮಹಾತ್ಮನನ್ನು ಎಷ್ಟು ಕಾಡಿತ್ತೋ ಜನರನ್ನು ಕಟ್ಟಿ ಹಾಕಿದ್ದ ಕೋಮು ವಿದ್ವೇಷ, ಅಸ್ಪೃಶ್ಯತೆ, ಬಡತನ, ಗ್ರಾಮೀಣ ಬವಣೆಗಳು ಮುಂತಾದ ಸಂಕೋಲೆಗಳೂ ಅಷ್ಟೇ ಕಾಡಿದ್ದವು, ಕಲಕಿದ್ದವು. ಬಾಪು ದಿಟ್ಟತನದಿಂದ ಎದುರಿಸಿದ್ದ ಸಮಸ್ಯೆಗಳಲ್ಲಿ ಕುಷ್ಠ ರೋಗವೂ ಒಂದಾಗಿತ್ತು. ಒಂದು ಕಾಲದಲ್ಲಿ ಅತ್ಯಂತ ಬೀಭತ್ಸವೆನಿಸಿದ್ದ ಕುಷ್ಠ ರೋಗವು ಆಧುನಿಕ ವೈದ್ಯ ವಿಜ್ಞಾನದ ಸತತ ಪ್ರಯತ್ನಗಳಿಂದಾಗಿ ಇಂದು ಸಾಕಷ್ಟು ನಿಯಂತ್ರಣಕ್ಕೆ ಬಂದಿದ್ದರೂ, ಅದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕೆನ್ನುವ ಮಹಾತ್ಮನ ಕನಸು ನನಸಾಗಲು ಇನ್ನೂ ಕೆಲ ವರ್ಷ ಕಾಯಬೇಕಾಗಬಹುದು.

ಗಾಂಧೀಜಿ ಎಳೆಯರಿದ್ದಾಗಲೇ ಕುಷ್ಠ ರೋಗಿಗಳ ಬವಣೆಯನ್ನು ಕಂಡಿದ್ದರು. ಮುಂದೆ 1932ರಲ್ಲಿ ಅವರು ಎರವಾಡ ಜೈಲಿನಲ್ಲಿ ಬಂಧಿಯಾಗಿದ್ದಾಗ ದತ್ತಾತ್ರೇಯ ಪರ್ಚುರೆ ಶಾಸ್ತ್ರಿ ಎಂಬ ಸಂಸ್ಕೃತ ವಿದ್ವಾಂಸರೂ ಅಲ್ಲಿ ಸೆರೆಯಲ್ಲಿದ್ದರು. ಕುಷ್ಠ ಪೀಡಿತರಾಗಿದ್ದ ಶಾಸ್ತ್ರಿಗಳನ್ನು ಪ್ರತ್ಯೇಕ ಕೋಣೆಯೊಂದರಲ್ಲಿ ಕೂಡಿ ಹಾಕಿ, ಯಾರೂ ಅವರನ್ನು ನೋಡದಂತೆ ಪ್ರತಿಬಂಧಿಸಲಾಗಿತ್ತು. ಹಾಗಾಗಿ ಗಾಂಧೀಜಿ ಅವರೊಂದಿಗೆ ಜೈಲಿನೊಳಗೆ ಪತ್ರ ವಿನಿಮಯ ಮಾಡಿಕೊಳ್ಳುವ ಮೂಲಕ ನಿಗಾ ವಹಿಸಿದ್ದರು. ಜೈಲಿನಿಂದ ಹೊರಬಂದ ಬಳಿಕ ಶಾಸ್ತ್ರಿಗಳ ರೋಗವು ಇನ್ನಷ್ಟು  ಬಿಗಡಾಯಿಸಿತ್ತು. ಇನ್ನು ತನ್ನಿಂದ ಯಾರಿಗೂ ತೊಂದರೆಯೇ ಬೇಡವೆಂದು ನಿರ್ಧರಿಸಿದ ಶಾಸ್ತ್ರಿಗಳು 1939ರ ವೇಳೆಗೆ ಎಲ್ಲವನ್ನೂ ತ್ಯಜಿಸಿ ದೂರ ತೆರಳುವ ನಿರ್ಧಾರಕ್ಕೆ ಬಂದುಬಿಟ್ಟಿದ್ದರು. ಹಾಗೆ ತೆರಳುವ ಮೊದಲು ಬಾಪುವಿನ ದರ್ಶನ ಪಡೆಯುವುದಕ್ಕಾಗಿ ಅವರು ಸೇವಾಗ್ರಾಮದ ಆಶ್ರಮಕ್ಕೆ ಬಂದರು. ಶಾಸ್ತ್ರಿಗಳ ದುಸ್ಥಿತಿಗೆ ಮರುಗಿದ ಬಾಪುವಿಗೆ ಅವರನ್ನು ಕಳುಹಿಸುವ ಮನಸ್ಸಾಗಲಿಲ್ಲ. ಆದರೆ ತೀವ್ರವಾಗಿ ಪೀಡಿತರಾಗಿದ್ದ ಶಾಸ್ತ್ರಿಗಳಿಂದ ಆಶ್ರಮದಲ್ಲಿದ್ದ ಇತರರಿಗೆ, ವಿಶೇಷವಾಗಿ ಮಕ್ಕಳಿಗೆ, ತೊಂದರೆಯಾಗಬಹುದೆನ್ನುವ ಆತಂಕವೂ ಬಾಪುವಿಗಿತ್ತು. ಆ ರಾತ್ರಿ ನಿದ್ರಿಸದ ಬಾಪು ಮರುದಿನ ಬೆಳಗ್ಗೆ ತಮ್ಮ ದುಗುಡವನ್ನು ಎಲ್ಲ ಆಶ್ರಮವಾಸಿಗಳ ಮುಂದೆ ತೆರೆದಿಟ್ಟರು. ಶಾಸ್ತ್ರಿಗಳನ್ನು ಅಲ್ಲೇ ಉಳಿಸಿ ಆರೈಕೆ ಮಾಡುವುದಕ್ಕೆ ಎಲ್ಲರೂ ಒಪ್ಪಿದರು. ಸ್ವತಃ ಬಾಪು ಶಾಸ್ತ್ರಿಗಳ ಕೈಕಾಲುಗಳಲ್ಲಿದ್ದ ಹುಣ್ಣುಗಳಿಗೆ ಪಟ್ಟಿ ಕಟ್ಟಿ, ಶಾಸ್ತ್ರಿಯವರನ್ನು ಜತನದಿಂದ ನೋಡಿಕೊಂಡರು. ನಿಧಾನವಾಗಿ ಚೇತರಿಸಿಕೊಂಡ ಶಾಸ್ತ್ರಿಗಳು ಕೆಲ ತಿಂಗಳುಗಳ ಬಳಿಕ ಆಶ್ರಮದಲ್ಲಿ ನಡೆದ ವಿವಾಹದ ಪೌರೋಹಿತ್ಯವನ್ನು ವಹಿಸಿಕೊಳ್ಳುವವರಾದರು! ಬಾಪುವಿನ ಪ್ರೇರಣೆಯಿಂದ ಸೇವಾಗ್ರಾಮದಲ್ಲಿ 1952ರಲ್ಲಿ ಆರಂಭಗೊಂಡ ಗಾಂಧಿ ಸ್ಮಾರಕ ಕುಷ್ಠ ರೋಗ ಪ್ರತಿಷ್ಠಾನವು ದೇಶದಾದ್ಯಂತ ಆರಂಭಿಸಿದ ಕಾರ್ಯಕ್ರಮಗಳು ಮುಂದೆ ಈ ರೋಗದ ನಿಯಂತ್ರಣಕ್ಕೆ ಭದ್ರವಾದ ಬುನಾದಿಯನ್ನೊದಗಿಸಿದವು. ಇದೇ ಕಾರಣಕ್ಕೆ ಬಾಪು ಹುತಾತ್ಮರಾದ ದಿನವನ್ನು ವಿಶ್ವ ಕುಷ್ಟ ರೋಗ ದಿನವೆಂದು ಆಚರಿಸಲಾಗುತ್ತದೆ.

ಕುಷ್ಠ ರೋಗವು ಪ್ರಾಚೀನ ಕಾಲದಿಂದಲೂ ಮನುಷ್ಯನನ್ನು ಕಾಡುತ್ತಾ ಬಂದಿದ್ದು, ಸುಮಾರು 3500 ವರ್ಷಗಳ ಹಿಂದೆಯೇ ನಮ್ಮ ದೇಶದಲ್ಲಿ ಅದನ್ನು ಗುರುತಿಸಲಾಗಿತ್ತು. ಇಲ್ಲಿಂದಲೇ ಚೀನಾ, ಪರ್ಷಿಯಾ ಹಾಗೂ ಯೂರೋಪುಗಳಿಗೆ ಅದು ಹರಡಿರಬೇಕೆಂದು ಹೇಳಲಾಗುತ್ತದೆ. ಗಂಭೀರ ಸ್ವರೂಪದ ರೋಗವುಳ್ಳವರಲ್ಲಿ ಮುಖ ಹಾಗೂ ಕೈಕಾಲುಗಳು ವಿರೂಪಗೊಳ್ಳುವುದರಿಂದಾಗಿ ಚರಕ ಹಾಗೂ ಸುಶ್ರುತ ಸಂಹಿತೆಗಳಲ್ಲಿ ಅದನ್ನು ಕುಷ್ಠ (=ಅಂಗಗಳು ತಿನ್ನಲ್ಪಡುವ) ರೋಗವೆಂದು ಕರೆಯಲಾಗಿತ್ತು. ಅದರ ಭಯವೆಷ್ಟಿತ್ತೆಂದರೆ ರೋಗಿಗಳನ್ನೂ, ಅವರ ಇಡೀ ಕುಟುಂಬವನ್ನೂ  ಊರ ಹೊರಗೆ ಅಟ್ಟಲಾಗುತ್ತಿತ್ತು, ಅತ್ಯಂತ ಕೀಳಾಗಿ ಕಾಣಲಾಗುತ್ತಿತ್ತು. ಕುಷ್ಠ ರೋಗವು ದೈವ-ದೇವರುಗಳ ಕೋಪದಿಂದಾಗಿ, ಪಾಪ-ಶಾಪಗಳಿಂದಾಗಿ, ನಾಗ ದೋಷದಿಂದಾಗಿ, ಅಥವಾ ಅನುವಂಶೀಯವಾಗಿ ಉಂಟಾಗುತ್ತದೆ ಎಂಬ ಬಲವಾದ ನಂಬಿಕೆಗಳಿಂದಾಗಿ ಪಾಪ ಪರಿಹಾರಾರ್ಥವಾಗಿ ಬಗೆಬಗೆಯ ಪೂಜೆಗಳು, ಮಡೆ ಮಡಸ್ತಾನಗಳಂತಹ ಸೇವೆಗಳು ಇಂದಿಗೂ ನಡೆಯುತ್ತಿರುವುದನ್ನು ನಾವು ಕಾಣುತ್ತೇವೆ.

ಕುಷ್ಠ ರೋಗದ ನಿಜವಾದ ಕಾರಣವನ್ನು ಕಂಡುಹಿಡಿದ ಶ್ರೇಯಸ್ಸು ನಾರ್ವೆಯ ವೈದ್ಯ ವಿಜ್ಞಾನಿ ಗೆಹಾರ್ಡ್ ಹಾನ್ಸನ್ ಗೆ ಸೇರುತ್ತದೆ. ಹತ್ತೊಂಭತ್ತನೇ ಶತಮಾನದಲ್ಲಿ ಯೂರೋಪಿನಲ್ಲೂ ಕುಷ್ಠ ರೋಗವು ವ್ಯಾಪಕವಾಗಿತ್ತು. ನಾರ್ವೆಯ ಬರ್ಗೆನ್ ನಲ್ಲಿ ಕುಷ್ಠ ರೋಗಿಗಳಿಗಾಗಿಯೇ ವಿಶೇಷ ಆಸ್ಪತ್ರೆಯೊಂದನ್ನು ಸ್ಥಾಪಿಸಲಾಗಿತ್ತು. ಅಲ್ಲಿ 1840ರಿಂದ ಡಾನಿಯಲ್ ಡಾನಿಲ್ಸನ್ ಅವರ ನೇತೃತ್ವದಲ್ಲಿ ನಡೆದಿದ್ದ ಆಳವಾದ ಅಧ್ಯಯನಗಳಲ್ಲಿ ಕುಷ್ಠ ರೋಗವು ಒಬ್ಬರಿಂದೊಬ್ಬರಿಗೆ ಹರಡುವ ಸೋಂಕೆನ್ನುವುದು ಸ್ಪಷ್ಟವಾಗಿತ್ತು. ಡಾನಿಲ್ಸನ್ ಅವರ ಅಳಿಯನಾಗಿದ್ದ ಹಾನ್ಸನ್ 1868ರಲ್ಲಿ ಅದೇ ಆಸ್ಪತ್ರೆಯನ್ನು ಸೇರಿಕೊಂಡರು. ಕುಷ್ಠ ರೋಗಿಗಳ ಚರ್ಮದ ಗಂಟುಗಳಲ್ಲಿ ಸೂಕ್ಷ್ಮಾಣುಗಳಿರುವುದನ್ನು ಗುರುತಿಸಿದ ಹಾನ್ಸನ್, 1872ರ ಫೆಬ್ರವರಿ 28ರಂದು ಆ ವಿವರಗಳನ್ನು ಪ್ರಕಟಿಸಿದರು. ಮನುಷ್ಯನಿಗುಂಟಾಗುವ ರೋಗವೊಂದರಲ್ಲಿ ಸೂಕ್ಷ್ಮಾಣುಗಳನ್ನು ಗುರುತಿಸಿದ್ದು ಅದೇ ಮೊದಲಾಗಿತ್ತು!

ಹೀಗೆ ಕುಷ್ಠ ರೋಗವು ಮೈಕೋಬ್ಯಾಕ್ಟೀರಿಯಂ ಲೆಪ್ರೇ ಎಂಬ ಬ್ಯಾಕ್ಟೀರಿಯಾಗಳಿಂದ ಹರಡುವ ಸೋಂಕೆನ್ನುವುದು ದೃಢಗೊಂಡರೂ ರೋಗಿಗಳ ಕಷ್ಟವೇನೂ ಕಡಿಮೆಯಾಗಲಿಲ್ಲ. ವಿಪರ್ಯಾಸವೆಂದರೆ, ಅದು ಸೋಂಕೆನ್ನುವ ಕಾರಣಕ್ಕೆ ರೋಗಿಗಳನ್ನು ಪ್ರತ್ಯೇಕಿಸುವುದು ನ್ಯಾಯಸಮ್ಮತವಾಗಿಬಿಟ್ಟಿತು. ಕುಷ್ಠದ ಅಂಗವಿರೂಪತೆಗಳು ಹಾಗೂ ಸಾಮಾಜಿಕ  ಕಳಂಕಗಳ ಜೊತೆಗೆ ಸೋಂಕು ಹರಡಬಹುದೆನ್ನುವ ಭಯವೂ ಸೇರಿಕೊಂಡು ಪೀಡಿತರು ಮತ್ತವರ ಕುಟುಂಬದವರ ಯಾತನೆಗಳು ಇನ್ನಷ್ಟು ಹೆಚ್ಚಿದವು. ರೋಗದ ಜೊತೆಗೆ ಸಾಮಾಜಿಕ ಬಹಿಷ್ಕಾರ ಮತ್ತು ಅದರಿಂದುಂಟಾಗುವ ನಿರುದ್ಯೋಗ, ಬಡತನ ಹಾಗೂ ಕುಪೋಷಣೆಗಳ ವಿಷವರ್ತುಲಗಳಲ್ಲಿ ಅವರೆಲ್ಲರೂ ನರಳುವುದು ಸಾಮಾನ್ಯವಾಗಿಬಿಟ್ಟಿತು. ಅದರಿಂದ ಚಿಕಿತ್ಸೆಗೂ ಅಡ್ಡಿಯಾಗಿ, ರೋಗವು ಇನ್ನಷ್ಟು ಹರಡುವುದಕ್ಕೆ ಕಾರಣಯಿತು.

ಬ್ಯಾಕ್ಟೀರಿಯಾವನ್ನು ಗುರುತಿಸಿದ ಎಪ್ಪತ್ತು ವರ್ಷಗಳ ನಂತರ, 1941ರಲ್ಲಿ, ಬಳಕೆಗೆ ಬಂದ ಡಾಪ್ಸೋನ್ ಎಂಬ ಬ್ಯಾಕ್ಟೀರಿಯಾ ನಿರೋಧಕ ಔಷಧವು ಕುಷ್ಠ ರೋಗದ ಚಿಕಿತ್ಸೆಯಲ್ಲಿ ಹೊಸ ಶಕೆಯನ್ನೇ ತೆರೆಯಿತು. (ಅದುವರೆಗೆ ಆಯುರ್ವೇದದಲ್ಲಿ ಹೇಳಲಾದ,  ಹೆಚ್ಚೇನೂ ಪರಿಣಾಮ ಬೀರದ, ಚಾಲ್ಮೊಗರ (ಗರುಡ ಫಲ) ಎಣ್ಣೆಯನ್ನೇ ಬಳಸಲಾಗುತ್ತಿತ್ತು.) ನಂತರ (1981) ರಿಫಾಂಪಿಸಿನ್, ಕ್ಲೊಫಾಜಿಮಿನ್ ಮುಂತಾದ ಔಷಧಗಳಿಂದ ಕುಷ್ಠ ರೋಗದ ಚಿಕಿತ್ಸೆಯು ಇನ್ನಷ್ಟು ಹರಿತಗೊಂಡು, ಬಹುತೇಕ ರೋಗಪೀಡಿತರನ್ನು 6-24 ತಿಂಗಳುಗಳಲ್ಲಿ ಸಂಪೂರ್ಣವಾಗಿ ಗುಣಪಡಿಸುವುದಕ್ಕೆ ಸಾಧ್ಯವಾಯಿತು. ಇತ್ತೀಚಿನ ವರ್ಷಗಳಲ್ಲಿ ಇನ್ನೂ ಹಲವು ಔಷಧಗಳಿಗೆ ಕುಷ್ಠ ನಿರೋಧಕ ಗುಣವಿರುವುದನ್ನು ಗುರುತಿಸಲಾಗಿದ್ದು, ಕುಷ್ಠದ ವಿರುದ್ಧ ಜಯವು ನಿಶ್ಚಿತವೆನ್ನುವ ಧೈರ್ಯವನ್ನು ತುಂಬಿವೆ. ಹಲವು ಶಸ್ತ್ರ ಚಿಕಿತ್ಸಾ ವಿಧಾನಗಳಿಂದ ಹಾಗೂ ಕೈಕಾಲುಗಳಿಗೆ ಜೋಡಿಸಬಲ್ಲ ವಿನೂತನ ಸಲಕರಣೆಗಳ ನೆರವಿನಿಂದ ಗಂಭೀರವಾಗಿ ವಿರೂಪಗೊಂಡಿರುವ ಅಂಗಗಳನ್ನು ಸರಿಪಡಿಸಿ ಪುನಶ್ಚೇತನಗೊಳಿಸುವುದಕ್ಕೂ ಸಾಧ್ಯವಾಗಿದೆ. ಬಾಪುವಿನ ಪ್ರೇರಣೆಯಿಂದ ಮೊದಲ್ಗೊಂಡು ಹಲವು ಸಂಘ-ಸಂಸ್ಥೆಗಳು ನಡೆಸಿದ ಅವಿರತ ಪ್ರಯತ್ನಗಳಿಂದ ರೋಗಕ್ಕೆ ಅಂಟಿರುವ ಸಾಮಾಜಿಕ ಕಳಂಕವೂ ಸಾಕಷ್ಟು ಮಟ್ಟಿಗೆ ತೊಡೆಯಲ್ಪಟ್ಟಿದ್ದು, ಕುಷ್ಠರೋಗಿಗಳು ತಮ್ಮ ಮನೆಗಳಲ್ಲೇ ಚಿಕಿತ್ಸೆಯನ್ನು ಪಡೆದು, ಇತರೆಲ್ಲರಂತೆ ಸಾಮಾನ್ಯ ಬದುಕನ್ನು ನಡೆಸುವುದಕ್ಕೆ ಸಾಧ್ಯವಾಗಿದೆ. ಇವೆಲ್ಲವೂ ಕುಷ್ಠ ರೋಗಿಗಳಲ್ಲಿ ಹೊಸ ಜೀವನದ ಭರವಸೆಯನ್ನು ಮೂಡಿಸಿವೆ.

ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದ ಪರಿಶ್ರಮದಿಂದ 1980ರಲ್ಲಿ ಸುಮಾರು 40 ಲಕ್ಷದಷ್ಟಿದ್ದ ರೋಗಪೀಡಿತರ ಸಂಖ್ಯೆಯು 2013ರ ವೇಳೆಗೆ 92 ಸಾವಿರಕ್ಕೆ ಇಳಿದಿದೆ. ಆದರೆ ಕುಷ್ಠವು ನಿರ್ಮೂಲಗೊಂಡಿದೆಯೆಂದು ನಾವು ಕೈಕಟ್ಟಿ ಕೂರುವಂತಿಲ್ಲ. ಸಕಾಲದಲ್ಲಿ ರೋಗವು ಪತ್ತೆಯಾಗದೆ, ಚಿಕಿತ್ಸೆಯಿಂದ ವಂಚಿತರಾದವರು ಈಗಲೂ ಇತರರಿಗೆ ರೋಗವನ್ನು ಹರಡುತ್ತಿದ್ದು, ಕಳೆದ ವರ್ಷದಲ್ಲಿ ಅಂತಹಾ 1.35 ಲಕ್ಷ ಹೊಸ ಪ್ರಕರಣಗಳನ್ನು ಗುರುತಿಸಲಾಗಿದೆ (ಈ ಪೈಕಿ ಹೆಚ್ಚಿನವರು ಆರು ತಿಂಗಳ ಚಿಕಿತ್ಸೆಯಿಂದ ಗುಣಮುಖರಾಗುವುದರಿಂದ ಪೀಡಿತರ ಸಂಖ್ಯೆಯಲ್ಲಿ ಅವರು ಸೇರುವುದಿಲ್ಲ). ಕುಷ್ಠದ ಬ್ಯಾಕ್ಟೀರಿಯಾವು ಪೀಡಿತರ ಮೂಗು ಹಾಗೂ ಚರ್ಮಗಳಿಂದ ಹೊರಬಂದು ಬಹು ಮೆಲ್ಲಗೆ ಹರಡುತ್ತದೆ ಮತ್ತು ಕೈಕಾಲುಗಳು ಹಾಗೂ ಮುಖದ ನರಗಳನ್ನು ಸೇರಿ ಅತ್ಯಂತ ನಿಧಾನವಾಗಿ ವೃದ್ಧಿಯಾಗುತ್ತದೆ.  ಹಲವು ತಿಂಗಳುಗಳ ಬಳಿಕ ಚರ್ಮದಲ್ಲೂ, ಮುಖ ಹಾಗೂ ಕಿವಿಗಳ ಮೇಲೂ ಸಂವೇದನಾರಹಿತವಾದ ನಸು ಬಣ್ಣದ ಮಚ್ಚೆಗಳೂ, ಗಂಟುಗಳೂ ಕಾಣಿಸಿಕೊಳ್ಳುತ್ತವೆ. ಕೆಲವರಲ್ಲಿ ಕಣ್ಣಿನ ರೆಪ್ಪೆಗಳು ಹಾಗೂ ಹುಬ್ಬುಗಳು ನಷ್ಟವಾಗುವುದು, ಕಣ್ಣು ಕೆಂಪೇರುವುದು ಹಾಗೂ ಹುಣ್ಣಾಗುವುದು, ಮೂಗು ಸೋರುವುದು ಯಾ ರಕ್ತಸ್ರಾವವಾಗುವುದು ಕುಷ್ಠದ ಚಿಹ್ನೆಗಳಾಗಿರಬಹುದು. ಇನ್ನು ಕೆಲವರಲ್ಲಿ ಕೈ ಯಾ ಪಾದಗಳಲ್ಲಿ ದೌರ್ಬಲ್ಯವುಂಟಾಗಬಹುದು ಹಾಗೂ ಆಳವಾದ ಹುಣ್ಣುಗಳಾಗಬಹುದು. ಅಂಥವರಲ್ಲಿ ಕುಷ್ಠ ರೋಗವನ್ನು ಬೇಗನೇ ಗುರುತಿಸಿ, ಗುಣಪಡಿಸುವ ಮೂಲಕ ರೋಗವು ಹರಡದಂತೆ ತಡೆಯಬೇಕಾದದ್ದು ಅತಿ ಮುಖ್ಯ.

ಕುಷ್ಠ ರೋಗದ ಸಂಶೋಧನೆ ಹಾಗೂ ಚಿಕಿತ್ಸೆಗಳು ಆಧುನಿಕ ವೈದ್ಯವಿಜ್ಞಾನದ ಅತಿ ದೊಡ್ಡ ಸಾಧನೆಯಾಗಿದ್ದರೂ, ಅದನ್ನಿನ್ನೂ ಮೂಲೋತ್ಪಾಟನೆ ಮಾಡಲಾಗದಿರುವ ವೈಫಲ್ಯವನ್ನು ಮರೆಸಲಾಗದು. “ಕುಷ್ಠ ರೋಗಿಗಳಿಗೆ ಪ್ರತ್ಯೇಕ ಶುಶ್ರೂಷಾಲಯಗಳನ್ನು ಉದ್ಘಾಟಿಸುವುದಕ್ಕೆ ಬದಲು, ಅವನ್ನು ಶಾಶ್ವತವಾಗಿ ಮುಚ್ಚುವ ಸುಸಂದರ್ಭಕ್ಕಾಗಿ ಕಾಯುತ್ತೇನೆ” ಎಂಬ ಬಾಪುವಿನ ಬಯಕೆಯು ಶೀಘ್ರವಾಗಿ ಈಡೇರಲು ನಾವೆಲ್ಲರೂ ಪಣ ತೊಡಬೇಕಾಗಿದೆ.

ಮೂವತ್ಮೂರನೇ ಬರಹ :ಪುರುಷ ಪ್ರಧಾನ ವ್ಯವಸ್ಥೆ ಮತ್ತು ಪರಸಂಗ [ಸೆಪ್ಟೆಂಬರ್ 18, 2013, ಬುಧವಾರ] [ನೋಡಿ | ನೋಡಿ]

ಯುದ್ಧೋತ್ಸಾಹಿ ಮನಸ್ಥಿತಿ ಹಾಗೂ ವ್ಯಾಪಕ ಸೋಗಲಾಡಿತನಗಳೇ ಲೈಂಗಿಕ ದೌರ್ಜನ್ಯಗಳಿಗೆ ಪ್ರೇರಣೆ

ಕಳೆದ ತಿಂಗಳ ಒಂದೇ ವಾರದಲ್ಲಿ ಹಲವು ಮುಖವಾಡಗಳು ಕಳಚಿಬಿದ್ದವು, ಹಲವು ಸತ್ಯಗಳು ಪ್ರಕಟವಾದವು. ಮಹಾನಗರಗಳ ಸುಶಿಕ್ಷಿತ ಯುವತಿಯರಿಂದ ಹಿಡಿದು ಹಳ್ಳಿಗಳ ಪುಟ್ಟ ಬಾಲಕಿಯರವರೆಗೆ ಯಾವೊಬ್ಬ ಹೆಣ್ಣು ಮಗಳೂ ಕೂಡ ಬೀದಿಬದಿಯ ಪುಂಡರಿಂದ ಹಿಡಿದು ಆಶ್ರಮವಾಸಿ ಮುದಿ ಗುರುಗಳವರೆಗೆ ಯಾರೊಬ್ಬರಿಂದಲೂ ಸುರಕ್ಷಿತರಲ್ಲ ಎನ್ನುವುದು ಸ್ಪಷ್ಟವಾಯಿತು. ಹಲವು ರಾಜಕಾರಣಿಗಳು, ಕಾನೂನು ಪಾಲಕರು, ಮಾಧ್ಯಮದ ಕೆಲ ವಿಭಾಗಗಳವರು, ಧಾರ್ಮಿಕ ನಾಯಕರುಗಳು ಮುಂತಾದವರೆಲ್ಲರ ಸೋಗಲಾಡಿತನವು ಕೂಡಾ ಒಟ್ಟೊಟ್ಟಾಗಿ ಬೆತ್ತಲಾಯಿತು.

ತಾನು ನಂಬಿದ್ದ ಗುರುವೊಬ್ಬ ಮೋಸದಿಂದ ದೌರ್ಜನ್ಯಕ್ಕೆಳಸಿದನೆಂದು ಹಳ್ಳಿಯ ಬಾಲಕಿಯೊಬ್ಬಳು ದೂರಿತ್ತ ಮರುದಿನವೇ ಮಹಾನಗರದ ಯುವತಿಯೊಬ್ಬಳ ಮೇಲೆ ಕೊಳೆಗೇರಿಯ ಕೆಲ ಪುಂಡರು ದೌರ್ಜನ್ಯವೆಸಗಿದ ಘಟನೆಯೂ ನಡೆದಿತ್ತು. ಪುಂಡು ಹುಡುಗರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದವರಲ್ಲಿ ಕೆಲವರು ಹಳ್ಳಿಯ ಬಾಲಕಿಯ ಬೆಂಬಲಕ್ಕೆ ನಿಲ್ಲಲಿಲ್ಲ, ಬದಲಿಗೆ ಆಕೆಯನ್ನೇ ತಪ್ಪಿತಸ್ಥಳೆಂದು ಹೀಯಾಳಿಸಿ ಗುರುವನ್ನು ದೈವತ್ವಕ್ಕೇರಿಸಿದರು. ಹುಡುಗರನ್ನು ಕೂಡಲೇ ಬಂಧಿಸಿದವರು ಗುರುವನ್ನು ಬಂಧಿಸುವುದಕ್ಕೆ ಎರಡು ವಾರ ಕಾದರು. ನಗರಗಳಲ್ಲಿ ಠಳಾಯಿಸುತ್ತಿರುವ ಕಾಮುಕರ ಬಗ್ಗೆ ದಿನಗಟ್ಟಲೆ ಚರ್ಚಿಸಿದ ಮಾಧ್ಯಮಗಳು ಪೀಡಕ ಗುರುವಿನ ‘ಸತ್ಕಾರ್ಯಗಳ’ ಬಗ್ಗೆ ಉದ್ದುದ್ದ ಬಣ್ಣಿಸಿದವು. ಎರಡು ಮುಖ, ಎರಡು ನಾಲಗೆ, ಎರಡು ಜೀವನವುಳ್ಳ ಸೋಗಲಾಡಿಗಳು ಪರಸ್ಪರ ಪೋಷಿಸಿಕೊಂಡೇ ಬೆಳೆಯುತ್ತಾರೆ.

ಲೈಂಗಿಕ ದೌರ್ಜನ್ಯವು ಲೈಂಗಿಕತೆಗಿಂತ ಹೆಚ್ಚಾಗಿ ಕ್ರೌರ್ಯದ, ಬಲಪ್ರದರ್ಶನದ ಹಾಗೂ ನಿಯಂತ್ರಣದ ವಿಚಾರವಾಗಿದೆ. ದೌರ್ಜನ್ಯವೆಸಗುವ ಕ್ರೂರಿಗೆ ಒಂದು ಬಲಿಪಶುವಷ್ಟೇ ಬೇಕಾಗುತ್ತದೆ – ಹಾಲು ಹಸುಳೆಗಳಿಂದ ವಯೋವೃದ್ಧರವರೆಗೆ, ದೇಹವನ್ನಿಡೀ ಮುಚ್ಚಿಕೊಂಡವರಿಂದ ಆಧುನಿಕ ದಿರಿಸುಗಳನ್ನು ತೊಟ್ಟವರವರೆಗೆ ಯಾರಾದರೂ ಆಗುತ್ತದೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಐಲೀನ್ ಝುರ್ ಬ್ರಿಗೆನ್ ಹೇಳುವಂತೆ (ಸೈಕಾಲಜಿ ಆಫ್ ವಿಮೆನ್ ಕ್ವಾ. 2010;34:538) ಯುದ್ಧೋನ್ಮಾದದ, ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆಯಲ್ಲಿ ಅಡಕವಾಗಿರುವ ಹಿಂಸೆಯೇ ಇಂತಹಾ ದೌರ್ಜನ್ಯಗಳನ್ನು ಪ್ರೇರೇಪಿಸುತ್ತದೆ ಹಾಗೂ ಬೆಂಬಲಿಸುತ್ತದೆ. ಬಹುಷಃ ಅದೇ ಕಾರಣಕ್ಕೆ ಯುದ್ಧೋತ್ಸಾಹಿಗಳು ಹಾಗೂ ಸಾಮಾಜಿಕ ಹಿಂಸೆಯನ್ನು ಬೆಂಬಲಿಸುವವರು ಲೈಂಗಿಕ ದೌರ್ಜನ್ಯವೆಸಗಿದವರ ಬೆಂಬಲಕ್ಕೂ ನಿಲ್ಲುತ್ತಾರೆ. ಕೆಲವರು ಪ್ರತ್ಯಕ್ಷವಾಗಿಯೇ ಬೆಂಬಲಿಸಿದರೆ, ಇನ್ನು ಕೆಲವರು ಪರೋಕ್ಷವಾಗಿ ಬೆಂಬಲಿಸುತ್ತಾರೆ – ತೊಡುವ ಬಟ್ಟೆ, ತಿರುಗುವ ಹೊತ್ತು ಮತ್ತು ರೀತಿ, ಶಿಕ್ಷಣ, ಸಂಸ್ಕೃತಿ ಇತ್ಯಾದಿಗಳ ಹೆಸರಲ್ಲಿ ಪೀಡಿತರನ್ನೇ ದೂಷಿಸುತ್ತಾರೆ.

ಮನದಾಳದ ಕ್ರೌರ್ಯದಿಂದ ಲೈಂಗಿಕ ದೌರ್ಜನ್ಯಕ್ಕೆಳಸುವವರಲ್ಲಿ ಕೊಳೆಗೇರಿವಾಸಿಗಳಿಂದ ಬಂಗಲೆವಾಸಿಗಳವರೆಗೆ, ಅಶಿಕ್ಷಿತರಿಂದ ಸುಶಿಕ್ಷಿತರವರೆಗೆ, ಪುಂಡರಿಂದ ಸತ್ಸಂಗ ನಡೆಸುವ ಗುರುಗಳವರೆಗೆ ಹಲಬಗೆಯವರು ಕಾಣಸಿಗುತ್ತಾರೆ. ಈ ದೇಶದಲ್ಲಿ ಪ್ರತೀ ವರ್ಷ ವರದಿಯಾಗುತ್ತಿರುವ ಎರಡೂವರೆ ಲಕ್ಷದಷ್ಟು ಲೈಂಗಿಕ ದೌರ್ಜನ್ಯದ ಪ್ರಕರಣಗಳಲ್ಲಿ ಶೇ. 95ಕ್ಕೂ ಹೆಚ್ಚಿನವುಗಳಲ್ಲಿ ಪೀಡಿತರ ಕುಟುಂಬದವರು, ಅತಿ ಹತ್ತಿರದ ಸಂಬಂಧಿಗಳು ಹಾಗೂ ಪರಿಚಯಸ್ಥರೇ ಅಪರಾಧಿಗಳಾಗಿರುತ್ತಾರೆ. ಲೈಂಗಿಕ ದೌರ್ಜನ್ಯವೆಸಗುವವರಿಗೆ ಎಂತಹಾ ಮುಖವಾಡಗಳಿರುತ್ತವೆ ಎನ್ನುವುದಕ್ಕೆ ಬೇರಾವ ವಿವರಣೆಯೂ ಬೇಕಿಲ್ಲ. ಅಂಥವರಿಂದ ಪೀಡನೆಗೊಳಗಾದವರ ನೋವು ಮತ್ತು ಸಂಕಟಗಳೆಷ್ಟಿರಬಹುದು? ಇದೇ ಕಾರಣಕ್ಕೆ ಅದೆಷ್ಟೋ ಪ್ರಕರಣಗಳು ವರದಿಯಾಗುವುದೇ ಇಲ್ಲ; ಪೀಡಿತರು ಧೈರ್ಯ ತಳೆದು ದೂರಿದರೂ ನಂಬುವವರಿಲ್ಲ. ಒಟ್ಟಿನಲ್ಲಿ ಪುರುಷ ಪ್ರಧಾನವಾದ, ಯುದ್ಧೋನ್ಮಾದಿ ಸಮಾಜದಲ್ಲಿ,ಲೈಂಗಿಕ ಪೀಡಕರು ಹಾಗೂ ಅವರ ಬೆಂಬಲಕ್ಕೆ ನಿಲ್ಲುವ ಸ್ವಯಂಘೋಷಿತ ಸಂಸ್ಕೃತಿ ರಕ್ಷಕರು, ದೇಶಭಕ್ತರು, ಸ್ತ್ರೀಪೂಜಕರು,ವಾಗ್ಮಿಗಳು ಮುಂತಾದವರು ಮತ್ತು ಇಡೀ ವ್ಯವಸ್ಥೆಯ ಸೋಗಲಾಡಿತನದ ಅಬ್ಬರದಲ್ಲಿ, ಪೀಡಿತರ ನರಳಾಟವು ಮುಚ್ಚಿಹೋಗುವುದೇ ಹೆಚ್ಚು.

ಗುರುಗಳೆನಿಸಿಕೊಂಡವರು ನಡೆಸುವ ಲೈಂಗಿಕ ದೌರ್ಜನ್ಯಗಳನ್ನು ಇದೇ ಹಿನ್ನೆಲೆಯಲ್ಲಿ ನೋಡಬಹುದು. ಶಾಲೆ-ಕಾಲೇಜುಗಳ ಶಿಕ್ಷಕರು, ಎಲ್ಲಾ ಧರ್ಮಗಳಿಗೆ ಸೇರಿದ ಧರ್ಮಗುರುಗಳು, ಮಠಾಧಿಪತಿಗಳು, ಸ್ವಯಂಘೋಷಿತ ದೇವಮಾನವರು, ಆಧ್ಯಾತ್ಮ ಗುರುಗಳು, ಯೋಗಗುರುಗಳು, ಮಂತ್ರವಾದಿಗಳು, ಪ್ರಾರ್ಥನಾ ಚಿಕಿತ್ಸಕರು ಇವೇ ಮುಂತಾದವರು ತಮ್ಮನ್ನು ನಂಬಿ, ಭಕ್ತಿ-ಗೌರವಗಳಿಂದ ಬಳಿ ಬಂದ ಮಹಿಳೆಯರ ಮೇಲೂ, ಮಕ್ಕಳ ಮೇಲೂ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣಗಳು ವಿಶ್ವದೆಲ್ಲೆಡೆಯಿಂದ ಆಗಾಗ ವರದಿಯಾಗುತ್ತಿರುತ್ತವೆ. ತಮ್ಮ ಅಂತಸ್ತು, ವರ್ಚಸ್ಸು, ಪ್ರಭಾವ ಇತ್ಯಾದಿಗಳೆಲ್ಲವನ್ನೂ ಬಳಸಿಕೊಂಡು ಲೈಂಗಿಕ ದೌರ್ಜನ್ಯದ ಮೂಲಕ ಕ್ರೌರ್ಯದ ತೀಟೆಯನ್ನು ತೀರಿಸಿಕೊಳ್ಳುವ ಗುರುಗಳು ಇತರ ಪೀಡಕರಿಗಿಂತ ಹೆಚ್ಚು ಅಪಾಯಕಾರಿಯೆನಿಸುತ್ತಾರೆ. ಅವರಲ್ಲಿ ಹಲವರು ನಿರ್ದಿಷ್ಟ ವಯೋಮಾನದ ಮಕ್ಕಳನ್ನೇ ಪೀಡಿಸುವ ದುಷ್ಟರೆನ್ನುವುದು ಸಾರ್ವಕಾಲಿಕ ಸತ್ಯವಾಗಿದೆ.

ಗುರುಗಳಿಂದಾಗುವ ಲೈಂಗಿಕ ದೌರ್ಜನ್ಯದಲ್ಲಿ ಸೋಗಲಾಡಿತನದ ವಿರಾಟರೂಪವೇ ತೆರೆದುಕೊಳ್ಳುತ್ತದೆ. ಉದ್ದುದ್ದ ಕೂದಲು-ಗಡ್ಡಗಳನ್ನು ಇಳಿಬಿಟ್ಟು, ದೊಡ್ಡ ಕಣ್ಣುಗಳನ್ನರಳಿಸಿ, ನೀಳವಸ್ತ್ರಗಳನ್ನುಟ್ಟು (ಅಥವಾ ಕೆಲವು ಯೋಗಗುರುಗಳಂತೆ ಕನಿಷ್ಠ ಬಟ್ಟೆ ತೊಟ್ಟು), ಕೈಕಾಲು-ಕುತ್ತಿಗೆಗಳಲ್ಲಿ ಉದ್ದುದ್ದ ಮಾಲೆಗಳನ್ನೂ, ತಲೆಯ ಸುತ್ತಲೊಂದು ಹೂಗುಚ್ಛವನ್ನೋ, ಕಿರೀಟವನ್ನೋ ಇಟ್ಟು, ತುಟಿಗಳೆಡೆಯಿಂದ ಆಗೊಮ್ಮೆ ಈಗೊಮ್ಮೆ ಕಿಸಕ್ಕನೆ ನಗುವ ಮೂಲಕ ಗುರುಗಳಿಗೆ ವರ್ಚಸ್ಸು ಪ್ರಾಪ್ತಿಯಾಗಿ ಭಕ್ತರನ್ನು ಆಕರ್ಷಿಸುವುದು ಸಾಧ್ಯವಾಗುತ್ತದೆ. ನೈತಿಕತೆಯ ಬಗ್ಗೆ, ಸಾಮಾಜಿಕ ಸ್ವಾಸ್ಥ್ಯದ ಬಗ್ಗೆ, ಧರ್ಮ-ಕರ್ಮಗಳ ಬಗ್ಗೆ ಅವರು ನಡೆಸುವ ಪ್ರವಚನಗಳಿಂದ, ಸತ್ಸಂಗಗಳಿಂದ ಹಾಗೂ ಅವಕ್ಕೆ ದೊರೆಯುವ ಮಾಧ್ಯಮಗಳ ಪ್ರಚಾರದಿಂದ ಈ ಗುರುಗಳೆಲ್ಲ ಸಜ್ಜನರೆಂಬ ನಂಬಿಕೆ ಬೆಳೆಯತೊಡಗುತ್ತದೆ. ಗುರುಗಳ ಪ್ರತಿಷ್ಠೆಯು ಬೆಳೆದು ಭಕ್ತರ ಸಂಖ್ಯೆಯು ಹೆಚ್ಚಿದಂತೆ ಅವರ ಪ್ರಭಾವವೂ ಬೆಳೆಯುತ್ತದೆ; ಆಡಳಿತವೂ, ಕಾನೂನುಪಾಲನೆಯ ವ್ಯವಸ್ಥೆಯೂ ಅವರ ಅಡಿಯಾಳಾಗುತ್ತದೆ. ನಂಬಿದವರ ಹಣದಲ್ಲೇ ಎಕರೆಗಟ್ಟಲೆ ಭೂಮಿಯಲ್ಲಿ ಸಾವಿರಾರು ’ಆಶ್ರಮ’ಗಳೇಳುತ್ತವೆ. ಅಂತಹಾ ಗುರುಗಳಿಂದ ಯಾವುದೇ ತಪ್ಪುಗಳಾಗುವುದು ಸಾಧ್ಯವೇ ಇಲ್ಲ ಎನ್ನುವ ಭಾವನೆ ಗಟ್ಟಿಯಾಗುತ್ತದೆ. ಈ ಗುರುಗಳು ತಮ್ಮ ಭಕ್ತರಿಂದ ಸಂಪೂರ್ಣ ಶರಣಾಗತಿಯನ್ನು ಬಯಸುವುದರಿಂದ ಅವರು ತಮ್ಮಿಂದ ಮಾಡಿಸಿಕೊಳ್ಳುವುದೆಲ್ಲವೂ ಭಗವಂತನ ಸೇವೆಯೆಂಬ ಮಂಕು ಭಕ್ತರನ್ನು ಹೊಕ್ಕುತ್ತದೆ. ರೋಗ ಪರಿಹಾರ, ಭೂತೋಚ್ಛಾಟನೆ, ದೇವರ ಆವಾಹನೆ ಇತ್ಯಾದಿ ನೆಪಗಳಲ್ಲಿ ಗುರುವಿನ ಗುಲಾಮರಾಗಲು ಜನ ಸಾಲುಗಟ್ಟುತ್ತಾರೆ, ಅಂಥವರನ್ನು ಹುಡುಕಿ ತರುವ ದಲ್ಲಾಲಿಗಳೂ ತಿರುಗತೊಡಗುತ್ತಾರೆ.

ಅಂತಹಾ ಗುರುವಿನಿಂದ ದೌರ್ಜನ್ಯಗಳಾದರೆ ಪೀಡಿತರೂ, ಅವರ ನಿಕಟ ಸಂಬಂಧಿಗಳೂ,ಸುತ್ತಲಿನ ಸಮಾಜವೂ, ಕಾನೂನು ವ್ಯವಸ್ಥೆಯೂ ಅದನ್ನು ನಂಬದಂತಹ ಮಹಾಮಂಕು ಕವಿದುಬಿಡುತ್ತದೆ. ಸಾರ್ವಜನಿಕವಾಗಿ ನೈತಿಕತೆಯನ್ನೂ, ಲೈಂಗಿಕ ಪರಿಶುದ್ಧತೆಯನ್ನೂ ಬೋಧಿಸುವ ಗುರುವು ಏಕಾಂತದಲ್ಲಿ, ಗೋಪ್ಯವಾಗಿ, ದೈಹಿಕ ಸಂಪರ್ಕದ ಬೇಡಿಕೆಯನ್ನಿಟ್ಟರೆ, ದೇವರೇ ತನ್ನ ಮೂಲಕ ಈ ಕಾರ್ಯಗಳನ್ನು ಮಾಡಿಸಬಯಸುತ್ತಾನೆ ಎಂದು ಒತ್ತಾಯಿಸತೊಡಗಿದರೆ, ಭಕ್ತರ ನಿರಾಕರಣೆಯನ್ನೊಪ್ಪದೆ ಪೀಡಿಸತೊಡಗಿದರೆ, ಭಕ್ತರಾದವರ ಪ್ರಜ್ಞೆಯು ಜಾಗೃತವಾಗಲೇಬೇಕು. ಗುರುವು ಬಯಸುವ ಕ್ರಿಯೆಯು ಅಶ್ಲೀಲವೆಂದೂ, ಮುಜುಗರವೆಂದೂ, ತಪ್ಪೆಂದೂ ಅನಿಸಿದರೆ ಉಪಾಯದಿಂದ ದೂರ ಸರಿಯಬೇಕು. ಗುರುಗಳ ಸರಹದ್ದಿನೊಳಗಿರಬಹುದಾದ ಅಪಾಯವನ್ನು ಜಾಣ್ಮೆಯಿಂದ ನಿಭಾಯಿಸಬೇಕು.

ಇಂತಹಾ ಗುರುಗಳ ಮೇಲೆ ಲೈಂಗಿಕ ದೌರ್ಜನ್ಯದ ದೂರುಗಳು ದಾಖಲಾಗುವುದು ತೀರಾ ಅಪರೂಪ. ತಮಗಿರುವ ಪ್ರಭಾವದ ಬಗ್ಗೆ,ಶಿಷ್ಯಗಡಣದ ಬಗ್ಗೆ, ಶಕ್ತಿ-ಸಾಮರ್ಥ್ಯಗಳ ಬಗ್ಗೆ ಈ ಗುರುಗಳು ಮೊದಲೇ ಭಯವುಂಟು ಮಾಡಿರುವುದರಿಂದ ಹೆಚ್ಚಿನ ಪೀಡಿತರು ಹೆದರಿ ಸುಮ್ಮನಿರುತ್ತಾರೆ. ಆದರೆ ಈ ನೆಲದ ಕಾನೂನು ಗುರುಗಳ ಪರವಾಗಿಲ್ಲ, ಪೀಡಿತರ ಪರವಾಗಿದೆ. ಮಕ್ಕಳ ಮೇಲಾಗುವ ದೌರ್ಜನ್ಯಗಳ ವಿಷಯದಲ್ಲಂತೂ ಅದು ಇನ್ನಷ್ಟು ಕಠಿಣವಾಗಿದೆ. ಅಕ್ಟೋಬರ್ 2012ರ ಮಕ್ಕಳ ಲೈಂಗಿಕ ದೌರ್ಜನ್ಯ ರಕ್ಷಣಾ ಕಾನೂನಿನಲ್ಲಿ (ಪೊಕ್ಸೊ) ಲಿಂಗಬೇಧವಿಲ್ಲದೆ 18 ವರ್ಷಕ್ಕೆ ಕೆಳಗಿನ ಎಲ್ಲರನ್ನೂ ಮಕ್ಕಳೆಂದು ಪರಿಗಣಿಸಲಾಗಿದೆ. ಈ ಕಾನೂನಿನಲ್ಲಿ (ಸೆ. 5,9-ಎಫ್,ಎನ್,ಒ,ಪಿ) ವಿದ್ಯಾಸಂಸ್ಥೆ ಯಾ ಧಾರ್ಮಿಕ ಸಂಸ್ಥೆಗಳ ಆಡಳಿತ ವರ್ಗ ಯಾ ಸಿಬ್ಬಂದಿ, ಕುಟುಂಬದ ಸದಸ್ಯರು,ಹತ್ತಿರದ ಸಂಬಂಧಿಗಳು, ಪಾಲಕರು, ಮಕ್ಕಳಿಗೆ ಸೇವೆಯೊದಗಿಸುವ ಯಾವುದೇ ಸಂಸ್ಥೆಗಳ ಸದಸ್ಯರು, ಮಕ್ಕಳ ವಿಚಾರದಲ್ಲಿ ನಂಬಿಕೆ ಯಾ ಅಧಿಕಾರದ ಸ್ಥಾನಗಳಲ್ಲಿರುವವರು ಮಕ್ಕಳ ಮೇಲೆಸಗುವ ಲೈಂಗಿಕ ದೌರ್ಜನ್ಯಗಳನ್ನು ಹೆಚ್ಚು ತೀವ್ರವಾದ ಅಪರಾಧವೆಂದು ಪರಿಗಣಿಸಲಾಗಿದ್ದು, ಹೆಚ್ಚು ಪ್ರಮಾಣದ ಶಿಕ್ಷೆಯನ್ನು(ಸೆ. 6,10) ವಿಧಿಸಲಾಗಿದೆ, ಮಾತ್ರವಲ್ಲ, ಜಾಮೀನು ಪಡೆಯಲು ಅರ್ಹವಲ್ಲವೆಂದೂ ವಿಧಿಸಲಾಗಿದೆ. ಈ ಕಾನೂನಿನಂತೆ ಕೇವಲ ಲೈಂಗಿಕ ಬಲಾತ್ಕಾರವಷ್ಟೇ ಅಲ್ಲ, ಗುಪ್ತಾಂಗಗಳು, ಎದೆ, ಅಥವಾ ದೇಹದ ಯಾವುದೇ ಭಾಗವನ್ನು ಕಾಮಾಸಕ್ತಿಯಿಂದ ಸ್ಪರ್ಷಿಸುವುದನ್ನೂ ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲಾಗಿದೆ (ಸೆ 7). ಲೈಂಗಿಕ ಬಲಾತ್ಕಾರವಾಗದಿದ್ದರೆ ಅಪರಾಧವಲ್ಲವೆಂದು ತೀರ್ಪು ನೀಡುವ ಸೋಗಲಾಡಿ ಸಂಸ್ಕೃತಿ ರಕ್ಷಕರು ಇದನ್ನು ಸರಿಯಾಗಿ ಓದಬೇಕು.

ನಮ್ಮ ದೇಶದಲ್ಲಿ ಲೈಂಗಿಕ ದೌರ್ಜನ್ಯಗಳು ಇಳಿಯಬೇಕಾದರೆ ಯುದ್ಧೋನ್ಮಾದಿ ಮನಸ್ಥಿತಿಯೂ, ಸೋಗಲಾಡಿತನವೂ ಬದಲಾಗಬೇಕಾಗಿದೆ. ಪೀಡಕರು ಯಾರೇ ಇರಲಿ, ಅವರನ್ನು ಕಠಿಣವಾದ ಶಿಕ್ಷೆಗೊಳಪಡಿಸಿ ಪೀಡಿತರ ರಕ್ಷಣೆಗೆ ಕಟಿಬದ್ಧರಾಗಬೇಕಾಗಿದೆ.

ಮೂವತ್ತೆರಡನೇ ಬರಹ : ನೂರು ದಿನಗಳಲ್ಲಿ ಕಂಡ ಅವೈಚಾರಿಕತೆ [ಸೆಪ್ಟೆಂಬರ್ 4, 2013, ಬುಧವಾರ] [ನೋಡಿ | ನೋಡಿ]

ರಾಜ್ಯ ಸರಕಾರವು ಸಾಕ್ಷ್ಯಾಧಾರಿತ ಆಡಳಿತಕ್ಕೆ ಚಾಲನೆ ನೀಡುವ, ವೈಜ್ಞಾನಿಕ ಚಿಂತನೆ ಅಳವಡಿಸಿಕೊಳ್ಳುವ ಅಗತ್ಯವಿದೆ.

ರಾಜ್ಯದ ಹೊಸ ಸರಕಾರದ ನೂರು ದಿನಗಳ ನೂರಾರು ನಿರ್ಣಯಗಳ ಪಟ್ಟಿ ಹೊರಬಂದಿದೆ. ಕೊಟ್ಟಿದ್ದ ಆಶ್ವಾಸನೆಗಳಲ್ಲಿ ಎಷ್ಟು ಕಾರ್ಯಗತಗೊಂಡಿವೆಯೆನ್ನುವ ಲೆಕ್ಕವನ್ನು ಆಳುವವರು ಕೊಡುವಾಗ ಮಂಡಿಸಿದ್ದ ಬೇಡಿಕೆಗಳಲ್ಲಿ ಎಷ್ಟು ದಕ್ಕಿವೆಯೆನ್ನುವ ಲೆಕ್ಕವನ್ನು ಪ್ರಜೆಗಳೂ ಹೇಳಬೇಕಾಗುತ್ತದೆ. ರಾಜ್ಯದ ಮಕ್ಕಳಲ್ಲಿ ಹೆಚ್ಚುತ್ತಿರುವ ಕುಪೋಷಣೆಯನ್ನು ನಿಯಂತ್ರಿಸಬೇಕು, ಅದಕ್ಕಾಗಿ ಶಾಲೆಗಳಲ್ಲಿ ಬಿಸಿಯೂಟದ ಜೊತೆಗೆ ಮೊಟ್ಟೆಯನ್ನು ನೀಡಬೇಕು, ಜನರಿಗೆ ಮಾಂಸಾಹಾರವನ್ನು ತಿನ್ನುವ ಹಕ್ಕನ್ನು ಮರಳಿಸಬೇಕು, ಶಾಲೆಗಳಲ್ಲಿ ಕಡ್ಡಾಯ ಯೋಗಶಿಕ್ಷಣವನ್ನು ನಿಲ್ಲಿಸಬೇಕು, ನೈತಿಕತೆಯ ಹೆಸರಿನ ದಾಳಿಗಳಿಗೆ ಕೂಡಲೇ ಕಡಿವಾಣ ಹಾಕಬೇಕು ಮುಂತಾದ ನನ್ನ ನಿವೇದನೆಗಳಲ್ಲಿ ಹೆಚ್ಚಿನವು ಭಾಗಷಃವಾದರೂ ಈಡೇರಿವೆ. ಮೂಢನಂಬಿಕೆ ಹಾಗೂ ಮಾಟಮಂತ್ರಗಳ ಹೆಸರಲ್ಲಿ ಜನತೆಯ ಶೋಷಣೆಯನ್ನು ಶಿಕ್ಷಾರ್ಹಗೊಳಿಸುವ ಕಾಯಿದೆಯನ್ನು ತರುವುದಾಗಿ ಮಾನ್ಯ ಮುಖ್ಯಮಂತ್ರಿಯವರು ಆಶ್ವಾಸನೆ ನೀಡಿರುವುದು ನಮ್ಮ ಹುರುಪನ್ನು ಹೆಚ್ಚಿಸಿದೆ.

ಆದರೆ ಈ ನೂರು ದಿನಗಳಲ್ಲಿ ಕೈಗೊಳ್ಳಲಾದ ಕೆಲವೊಂದು ನಿರ್ಧಾರಗಳು ಅವೈಚಾರಿಕವಾಗಿದ್ದು, ಹಲವು ಅಪಾಯಗಳಿಗೆ ದಾರಿಯಾಗಬಹುದೆನ್ನುವುದನ್ನು ಸರಕಾರದ ಗಮನಕ್ಕೆ ತರಬೇಕಾಗಿದೆ. ಆಡಳಿತದ ನಿರ್ಣಯಗಳು ಸಾಕ್ಷ್ಯಾಧಾರಿತವಾಗಿದ್ದಷ್ಟು ಅವುಗಳ ಸಫಲತೆ ಹೆಚ್ಚುತ್ತದೆ, ಅವು ಚಿರಸ್ಥಾಯಿಯಾಗುತ್ತವೆ. ಇಂದು ಜಗತ್ತಿನ ಹಲವೆಡೆ, ಸ್ಥಳೀಯಾಡಳಿತಗಳಿಂದ ರಾಷ್ಟ್ರೀಯ ಸರಕಾರಗಳವರೆಗೆ, ಸಾಕ್ಷ್ಯಾಧಾರಿತ ಆಡಳಿತಕ್ಕೆ ಒತ್ತು ನೀಡಲಾಗುತ್ತಿದೆ. ಜನರ ನೈಜ ಅಗತ್ಯಗಳೇನು,ಆದ್ಯತೆಗಳೇನು, ಜನಪರ ಕಾರ್ಯಕ್ರಮಗಳಿಗೆ ಸಂಪನ್ಮೂಲಗಳ ಕ್ರೋಢೀಕರಣ ಮತ್ತು ಸದ್ಬಳಕೆ ಹೇಗೆ, ಹಿಂದಿನ ಕಾರ್ಯಕ್ರಮಗಳಲ್ಲಿ ಗೆದ್ದವೆಷ್ಟು, ಸೋತವೆಷ್ಟು,ಇತ್ಯಾದಿ ವಿಶ್ಲೇಷಣೆಗಳ ಆಧಾರದಲ್ಲಿ ಹೊಸ ಯೋಜನೆಗಳನ್ನು ರೂಪಿಸುವುದು ಹಾಗೂ ಜಾರಿಗೊಳಿಸುವುದನ್ನು ಸಾಕ್ಷ್ಯಾಧಾರಿತ ಆಡಳಿತ ಎನ್ನಲಾಗುತ್ತದೆ. ಇಂದು ಸರಕಾರಿ ಮಾಹಿತಿಯೆಲ್ಲವೂ ಗಣಕೀಕರಣಗೊಂಡಿರುವುದರಿಂದ ಸಾಕ್ಷ್ಯಾಧಾರಗಳನ್ನು ಹುಡುಕುವುದು ಕಷ್ಟವೇನಲ್ಲ. ಗಣಕೀಕರಣದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕದಲ್ಲಿ ಸಾಕ್ಷ್ಯಾಧಾರಿತ ಆಡಳಿತಕ್ಕೆ ಚಾಲನೆ ನೀಡುವುದು ಅತಿ ಸುಲಭವಿದ್ದು, ಮಾನ್ಯ ಮುಖ್ಯಮಂತ್ರಿಗಳು ಆ ದಿಕ್ಕಿನಲ್ಲಿ ಮೊದಲ ಹೆಜ್ಜೆಯಿಡುವ ಮನಸ್ಸು ಮಾಡಬೇಕು, ಅಷ್ಟೆ.

ಆದರೆ ಕ್ಷಣಿಕವಾದ ರಾಜಕೀಯ ಲಾಭಕ್ಕಾಗಿ, ಯಾವುದೋ ಸಣ್ಣ ಗುಂಪಿನ ಒತ್ತಡದಿಂದಾಗಿ, ಬೆರಳೆಣಿಕೆಯ ಕೆಲವರ ನಂಬಿಕೆ-ಸಂವೇದನೆಗಳಿಗಾಗಿ ಸಾಕಷ್ಟು  ಆಧಾರಗಳಿಲ್ಲದೆಯೇ ಅವಸರದ ನಿರ್ಣಯಗಳನ್ನು ಕೈಗೊಂಡರೆ ವೈಫಲ್ಯವೂ, ತೊಂದರೆಗಳೂ ತಪ್ಪುವುದಿಲ್ಲ. ಅದಕ್ಕೇ ಈ ನೂರು ದಿನಗಳಲ್ಲಿ ಕ್ಷೀರಭಾಗ್ಯದ ಭಾಗ್ಯವಿಲ್ಲ, ಆಯುಷ್ ಉತ್ತೇಜನಕ್ಕೆ ಆಯುಷ್ಯವಿಲ್ಲ, ಶಾಸಕರ ಯೋಗಾಭ್ಯಾಸದಲ್ಲಿ ಯೋಗವಿಲ್ಲ ಎಂಬಂತಾಗಿದೆ.

ಕ್ಷೀರಭಾಗ್ಯದಿಂದ ಭಾಗ್ಯದ ಬಾಗಿಲು ತೆರೆದಿರುವುದು ಹಾಲಿನ ಮಂಡಳಿಗಳಿಗೇ ಹೊರತು ರಾಜ್ಯದ ಮಕ್ಕಳಿಗಲ್ಲ. ಪಶುವಿನ ಹಾಲನ್ನು ಮಕ್ಕಳು ಇಷ್ಟ ಪಡುವುದಿಲ್ಲ, ಅದು ಅವರ ಆರೋಗ್ಯವನ್ನು ವೃದ್ಧಿಸುವುದೂ ಇಲ್ಲ. ಶಾಲಾ ಮಕ್ಕಳಿಗೆ ತಾಜಾ ಹಾಲನ್ನು ನೀಡುವುದು ಕಾರ್ಯಸಾಧುವಲ್ಲ ಎಂದು ಈ ಮೊದಲೇ ಹಿಂಜರಿಯಲಾಗಿತ್ತು. ಹಾಲಿನ ಪುಡಿಗೆ ನೀರು ಬೆರೆಸಿ ಕೊಡುವ ಈ ಹೊಸ ಯೋಜನೆಯೂ ನಿರೀಕ್ಷೆಯಂತೆ ಮುನ್ನಡೆಯುತ್ತಿಲ್ಲ. ಕೆಲವೆಡೆ ಹಾಲಿನ ಪುಡಿಯೇ ಇಲ್ಲ, ಪುಡಿಯಿದ್ದಲ್ಲಿ ನೀರಿಲ್ಲ, ನೀರಿದ್ದರೆ ಅದು ಬಿಸಿಯಿಲ್ಲ, ಎರಡೂ ಇದ್ದಲ್ಲಿ ಅವನ್ನು ಬೆರೆಸುವವರಿಲ್ಲ, ಬೆರೆಸಿದರೆ ಹಂಚುವುದಕ್ಕೆ ಲೋಟಗಳಿಲ್ಲ, ಕೊನೆಗೆ ಮಕ್ಕಳಿಗೇ ಅವು ಇಷ್ಟವಿಲ್ಲ. ಹಾಗಿದ್ದರೆ ಈ ಯೋಜನೆಯನ್ನು ಆರಂಭಿಸಿದ್ದಾದರೂ ಏಕೆ?

ದೇಶದಲ್ಲಿ 1.12 ಲಕ್ಷ ಟನ್, ನಮ್ಮ ರಾಜ್ಯದಲ್ಲಿ 18000 ಟನ್, ಹಾಲಿನ ಪುಡಿ ಖರೀದಿಯಾಗದೆ ಉಳಿದಿದೆ. ಹಾಲಿಗೆ ಬೆಂಬಲ ಬೆಲೆಯನ್ನು ಹೆಚ್ಚಿಸಿದ್ದರಿಂದ ಹಾಲಿನ ನಿಗಮಗಳಿಗೆ ಬರುವ ಹಾಲಿನ ಪ್ರಮಾಣ ಹೆಚ್ಚಿತು. ಆದರೆ ಹಾಲಿನ ಮಾರಾಟವನ್ನು ಹೆಚ್ಚುಸುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳದ ಕಾರಣ ಹೆಚ್ಚಿನ ಹಾಲು ಹಾಗೆಯೇ ಉಳಿಯಿತು. ಹಾಗೆ ಉಳಿದ ಹಾಲನ್ನು ಪುಡಿಯಾಗಿ ಪರಿವರ್ತಿಸಲಾಗಿ ಅದರ ರಾಶಿ ಬೆಳೆಯಿತು. ಹಾಲು ಪುಡಿಯ ರಫ್ತನ್ನು ಎರಡೆರಡು ಬಾರಿ ನಿಷೇಧಿಸಿದ್ದರಿಂದಾಗಿ ಹೊರ ದೇಶಗಳಿಂದ ಬೇಡಿಕೆ ಇಳಿಯಿತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಾಲು ಪುಡಿಯ ದರ ಕಿಲೋಗೆ ರೂ. 135-150 ಇದ್ದರೆ, ನಮ್ಮಲ್ಲಿ ಅದು ರೂ. 185 ಆಗಿರುವುದು ಕೂಡ ಸಮಸ್ಯೆಯಾಯಿತು. ಒಟ್ಟಿನಲ್ಲಿ ಯಾರಿಗೂ ಬೇಡವಾಗಿ ಗುಡ್ಡೆಯಾಗುತ್ತಿರುವ ಹಾಲುಪುಡಿ ಈಗ ಶಾಲಾ ಮಕ್ಕಳ ಗಂಟಲೊಳಕ್ಕೆ ಇಳಿಯುವಂತಾಗಿದೆ. ಹಾಲು ಖರೀದಿ, ಮಾರಾಟ ಹಾಗೂ ಅದರ ಉತ್ಪನ್ನಗಳ ರಫ್ತಿನ ವಿಚಾರಗಳಲ್ಲಿ ಕೈಗೊಂಡ ಹಲವು ತಪ್ಪು ನಿರ್ಧಾರಗಳ ಭಾರವೀಗ ನಮ್ಮ ಮೇಲೆ ಬಿದ್ದಿದೆ. ನೂರೈವತ್ತು ಮಿಲೀ ನೀರಲ್ಲಿ ಬೆರೆಯುವ 18 ಗ್ರಾಂ ಹಾಲು ಪುಡಿಗೆ ರಾಜ್ಯ ಸರಕಾರ ರೂ. 4.05 ನೀಡುತ್ತದೆ ಎಂದರೆ ಒಂದು ಕಿಲೋ ಹಾಲುಪುಡಿಗೆ ಎಷ್ಟು ಕೊಟ್ಟಂತಾಯಿತು?

ಶೇಖರಿಸಿಟ್ಟ ಹಾಲಿನ ಪುಡಿಯಲ್ಲಿ ಉತ್ಕರ್ಷಿತ ಕೊಲೆಸ್ಟರಾಲ್ ಹೆಚ್ಚಿರುತ್ತದೆ. ಅಂತಹ ಪುಡಿ ಹಾಲಿನ ಸೇವನೆಯಿಂದ ಮಕ್ಕಳ ಆರೋಗ್ಯದ ಮೇಲೆ ಸತ್ಪರಿಣಾಮಗಳಾಗುತ್ತವೆ ಎನ್ನುವುದಕ್ಕೆ ಆಧಾರಗಳು ಕಾಣಸಿಗುವುದಿಲ್ಲ. ಹಾಗಿರುವಾಗ ಇಷ್ಟವಿಲ್ಲದ ಮಕ್ಕಳಿಗೆ ಪುಡಿ ಹಾಲನ್ನು ಕುಡಿಸುವುದಕ್ಕಿಂತ ಮೊಟ್ಟೆ ತಿನ್ನಬಯಸುವ ಮಕ್ಕಳಿಗೆ ಹೆಚ್ಚು ಪೌಷ್ಠಿಕವಾದ ತಾಜಾ ಮೊಟ್ಟೆಯನ್ನೇ ಕೊಡುವ ದಿಟ್ಟತನ ಸರಕಾರಕ್ಕಿರಬೇಕು.

ಆರೋಗ್ಯ ಇಲಾಖೆಯ ಕೆಲವು ನಿರ್ಧಾರಗಳು ಕೂಡಾ ತೀರಾ ಅವೈಜ್ಞಾನಿಕವಾಗಿದ್ದು, ಅಪಾಯಕ್ಕೆ ರಹದಾರಿಯಾಗುವುದರಲ್ಲಿ ಸಂದೇಹವೇ ಇಲ್ಲ. ರಾಜ್ಯದ ಹಲವೆಡೆ ವ್ಯಾಪಿಸಿರುವ ಡೆಂಗಿ ಜ್ವರದ ಚಿಕಿತ್ಸೆಗೆ ಆಯುರ್ವೇದ, ಹೋಮಿಯೋಪತಿ ಹಾಗೂ ಯುನಾನಿ ಪದ್ಧತಿಗಳ ಔಷಧವನ್ನು ನೀಡಲು ಈ ಸರಕಾರವು ಮುಂದಾಗಿರುವುದು ಇಲಾಖೆಯ ದಿವಾಳಿತನವನ್ನು ಸೂಚಿಸುತ್ತದೆ. ಡೆಂಗಿ ಜ್ವರದ ಚಿಕಿತ್ಸೆಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ರಾಷ್ಟ್ರೀಯ ಕೀಟಜನ್ಯ ರೋಗ ನಿಯಂತ್ರಣ ಕಾರ್ಯಕ್ರಮಗಳ ವತಿಯಿಂದ ಸವಿವರವಾದ ಹಾಗೂ ಸುಸ್ಪಷ್ಟವಾದ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದ್ದು, ಅಲ್ಲೆಲ್ಲೂ ಬದಲಿ ಚಿಕಿತ್ಸೆಯ ಬಗ್ಗೆ ಒಂದಕ್ಷರವೂ ಕಾಣಿಸುವುದಿಲ್ಲ. ಡೆಂಗಿ ಜ್ವರದಲ್ಲಿ ಸಾಮಾನ್ಯವಾಗಿ ಕಂಡುಬರುವ ಪ್ಲೇಟ್ಲೆಟ್ ಕಣಗಳ ಕೊರತೆಗೆ ಯಾವುದೇ ಬದಲಿ ಚಿಕಿತ್ಸೆಯಿಂದ ಪ್ರಯೋಜನವಿದೆಯೆನ್ನುವುದಕ್ಕೆ ಆಧಾರಗಳೂ ಲಭ್ಯವಿಲ್ಲ. ಆದ್ದರಿಂದ, ರಾಜ್ಯ ಸರಕಾರವು ಮೇಲೆ ಹೇಳಿದ ಮಾರ್ಗಸೂಚಿಗಳಿಗೆ ವಿರುದ್ಧವಾಗಿ, ನಿರಾಧಾರವಾದ ಬದಲಿ ಚಿಕಿತ್ಸೆಯನ್ನು ಪ್ರೋತ್ಸಾಹಿಸುವ ಮೂಲಕ ಡೆಂಗಿ ರೋಗಿಗಳನ್ನು ಗೊಂದಲಕ್ಕೀಡು ಮಾಡಿ, ಅಪಾಯದ ಕೂಪಕ್ಕೆ ತಳ್ಳಿದಂತಾಗುತ್ತದೆ. ಡೆಂಗಿ ಚಿಕಿತ್ಸೆಯ ಬಗ್ಗೆ ಆಧುನಿಕ ವೈದ್ಯರಲ್ಲೇ ಮಾಹಿತಿಯ ಕೊರತೆಯಿದ್ದು, ಪ್ಲೇಟ್ಲೆಟ್ ಮರುಪೂರಣದಂತಹ ಅನಗತ್ಯ ಚಿಕಿತ್ಸೆಗೆ ಕಾರಣವಾಗುತ್ತಿರುವಲ್ಲಿ, ಮೇಲೆ ಹೇಳಿದ ಪ್ರಕಟಣೆಗಳನ್ನು ರಾಜ್ಯದ ಎಲ್ಲ ಆಧುನಿಕ ವೈದ್ಯರಿಗೆ ತಲುಪಿಸಿ, ಅವರಿಗೆ ಸರಿಯಾದ ತರಬೇತಿಯನ್ನು ನೀಡುವ ಕೆಲಸವನ್ನು ಮಾಡಬೇಕಾಗಿದೆಯಲ್ಲದೆ ಆಧಾರವಿಲ್ಲದ ಬದಲಿ ಚಿಕಿತ್ಸೆಯನ್ನು ಪೋಷಿಸುವುದಲ್ಲ.

ಆಯುಷ್ ಚಿಕಿತ್ಸಕರು ತುರ್ತು ಸ್ಥಿತಿಗಳಲ್ಲಿ ಆಧುನಿಕ ಔಷಧಗಳನ್ನು ಬಳಸುವುದಕ್ಕೆ ಪರವಾನಿಗೆಯನ್ನು ನೀಡುವ ನಿರ್ಧಾರವು ಅವಿವೇಚನೆಯ ಪರಾಕಾಷ್ಠೆಯಾಗಿದೆ. ರಾಜ್ಯದ ಆರೋಗ್ಯ ವಿಶ್ವವಿದ್ಯಾಲಯವು ಈಗಾಗಲೇ ಇದನ್ನು ವಿರೋಧಿಸಿದೆ. ಬದಲಿ ಪದ್ಧತಿಗಳ ವೈದ್ಯರು ಆಧುನಿಕ ಚಿಕಿತ್ಸೆಗೆಳಸುವುದು ವೈದ್ಯಕೀಯ ನಿರ್ಲಕ್ಷ್ಯವೆಂದೂ,ಮೋಸವೆಂದೂ, ಶಿಕ್ಷಾರ್ಹವೆಂದೂ ಸರ್ವೋಚ್ಛ ನ್ಯಾಯಾಲಯದ ಹಲವು ತೀರ್ಪುಗಳಿವೆ (ಪೂನಂ ವರ್ಮಾ – ಅಶ್ವಿನ್ ಪಟೇಲ್ 1996/2111; ಮುಖ್ತಿಯಾರ್ ಚಂದ್ – ಪಂಜಾಬ್ ಸರಕಾರ 1998 (7)/78; ಮಾರ್ಟಿನ್ ಡಿ ಸೋಜಾ – ಮೊಹಮದ್ ಇಶ್ಫಾಕ್ 3541/2002). ಇವೆಲ್ಲವನ್ನೂ ಕಡೆಗಣಿಸಿ ಬದಲಿ ವೈದ್ಯರಿಗೆ ಆಧುನಿಕ ಚಿಕಿತ್ಸೆಯನ್ನು ಬಳಸಗೊಡುವುದು ರಾಜ್ಯದ ಜನತೆಗೆ, ಅದರಲ್ಲೂ ಗ್ರಾಮೀಣ ಪ್ರದೇಶಗಳ ಬಡ ಜನತೆಗೆ, ಮಾಡುವ ದ್ರೋಹವಾಗುತ್ತದೆ. ಬಾಯಲ್ಲಿ ಆಧುನಿಕ ವೈದ್ಯ ವಿಜ್ಞಾನವನ್ನು ಹಳಿಯುತ್ತಾ  ಕೈಯಲ್ಲಿ ಆಧುನಿಕ ಔಷಧಗಳನ್ನು ಕೊಡುವ ಬದಲಿ ವೈದ್ಯರ ಅಪಾಯಕಾರಿ ಪ್ರವೃತ್ತಿಯನ್ನು ನ್ಯಾಯೋಚಿತಗೊಳಿಸುವ ಯೋಚನೆಯನ್ನು ಸರಕಾರವು ಈ ಕೂಡಲೇ ಕೈಬಿಡಬೇಕು. ಬದಲಿಗೆ, ಗ್ರಾಮೀಣ ಪ್ರದೇಶಗಳಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸುಸಜ್ಜಿತಗೊಳಿಸುವುದಕ್ಕೂ, ಆಧುನಿಕ ವೈದ್ಯರನ್ನು ಗ್ರಾಮೀಣ ಸೇವೆಯತ್ತ ಆಕರ್ಷಿಸುವುದಕ್ಕೂ ತಕ್ಕ ಕ್ರಮಗಳನ್ನು ಕೈಗೊಳ್ಳಬೇಕು. ಶಾಸಕರ ಭವನದಲ್ಲಿ ಪಂಚಕರ್ಮ ಚಿಕಿತ್ಸೆಗೆ ವ್ಯಯಿಸಲಾಗುತ್ತಿರುವ 25 ಲಕ್ಷ ರೂಪಾಯಿಗಳನ್ನು ಆರೋಗ್ಯ ಕೇಂದ್ರಗಳ ಸುಧಾರಣೆಗೆ ಬಳಸಬಹುದು.

ಆಡಳಿತವನ್ನು ಸಾಧಾರಗೊಳಿಸುವುದರ ಜೊತೆಗೆ ಶಾಸಕರು ತಮ್ಮ ಆರೋಗ್ಯ ರಕ್ಷಣೆಯಲ್ಲೂ ವೈಚಾರಿಕತೆಯನ್ನು ಅಳವಡಿಸಿಕೊಂಡರೆ ಅವರಿಗೇ ಒಳ್ಳೆಯದು. ತಮ್ಮ ಮನೋದೈಹಿಕ ಒತ್ತಡಗಳ ನಿರ್ವಹಣೆಗೆ ಯೋಗಾಭ್ಯಾಸವನ್ನು ನೆಚ್ಚಿಕೊಳ್ಳುವುದಕ್ಕಿಂತ ಅವುಗಳ ಕಾರಣಗಳನ್ನು ವಸ್ತುನಿಷ್ಠವಾಗಿ ವಿಶ್ಲೇಷಿಸಿ, ತಕ್ಕ ಪರಿಹಾರವನ್ನು ಕಂಡುಕೊಳ್ಳುವುದು ಕ್ಷೇಮಕರ. ಒಂದಷ್ಟು ಸಲ ಮೇಲೆ-ಕೆಳಗೆ ಉಸಿರಾಡುವುದು, ಹೊಟ್ಟೆಯನ್ನು ಅತ್ತಿಂದಿತ್ತ ಹೊರಳಿಸುವುದು ಯೋಗಾಭ್ಯಾಸವಲ್ಲ ಎನ್ನುವ ಸತ್ಯವನ್ನು ಶಾಸಕರು ಅರಿಯಬೇಕು. ಕರ್ನಾಟಕದ ಶಾಸಕರು ವಿಚಾರವಂತರಾಗಿರಬೇಕು, ಸುಲಭದಲ್ಲಿ ಮರುಳಾಗಬಾರದು.

ಮೂವತ್ತೊಂದನೇ ಬರಹ : ಮಕ್ಕಳ ಉಸಿರುಗಟ್ಟಿಸುವ ವೈರಿ [ಆಗಸ್ಟ್ 21, 2013, ಬುಧವಾರ] [ನೋಡಿ | ನೋಡಿ]

ನಾಡಿನಲ್ಲಿ ಕಾಡಿನಂತಹ ಶುಭ್ರ ಪರಿಸರ ನಿರ್ಮಾಣ ಮಾಡುವುದೊಂದೇ ಎಳೆಯರನ್ನು ಕಾಡುತ್ತಿರುವ ಉಸಿರಾಟದ ಕಾಯಿಲೆಗೆ ರಾಮಬಾಣ

ಬೆಳಗ್ಗಿನ ಹೊತ್ತು ಯಾವುದೇ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ಹೋದರೆ, ಒಂದಷ್ಟು ಮಕ್ಕಳು ಮುಖ ಕವಚದ ಮೂಲಕ ಔಷಧಗಳನ್ನು ಸೇದುತ್ತಿರುವುದನ್ನು ಕಾಣಬಹುದು. ಮಹಾನಗರಗಳಲ್ಲಿ ಇಂದು ತುರ್ತು ಚಿಕಿತ್ಸೆಗೆ ಬರುವವರಲ್ಲಿ ಶೇ.30ರಷ್ಟು ಹಾಗೂ ಆಸ್ಪತ್ರೆಗಳಲ್ಲಿ ದಾಖಲಾಗುವವರಲ್ಲಿ ಶೇ.10-30ರಷ್ಟು ಉಬ್ಬಸದಿಂದ (ಅಸ್ತಮಾ) ಬಳಲುತ್ತಿರುವ ಮಕ್ಕಳೇ ಆಗಿರುತ್ತಾರೆ. ಮಕ್ಕಳು ಶಾಲೆಗೆ ಹಾಜರಾಗದಿರಲು ಅತಿ ಮುಖ್ಯ ಕಾರಣಗಳಲ್ಲಿ ಉಬ್ಬಸವೂ ಒಂದು. ಇಂದು ವಿಶ್ವದ ಮೂವತ್ತು ಕೋಟಿ ಜನ ಉಬ್ಬಸದಿಂದ ಬಳಲುತ್ತಿದ್ದಾರೆ. ವರ್ಷಕ್ಕೆ ಎರಡೂವರೆ ಲಕ್ಷಕ್ಕೂ ಹೆಚ್ಚು ಜನ ಅದರಿಂದ ಸಾವನ್ನಪ್ಪುತ್ತಿದ್ದಾರೆ. ಅರುವತ್ತರ ದಶಕದಿಂದ ಈಚೆಗೆ ಮಕ್ಕಳಲ್ಲಿ ಉಬ್ಬಸದ ತೊಂದರೆಯು ಗಣನೀಯವಾಗಿ ಹೆಚ್ಚುತ್ತಲಿದ್ದು, ಪ್ರತೀ ಐದರಲ್ಲೊಂದು ಮಗುವಿಗೆ ಉಸಿರಾಡುವುದೇ ಕಷ್ಟಕರವಾಗುತ್ತಿದೆ.

ಉಬ್ಬಸವುಳ್ಳವರ ಶ್ವಾಸನಾಳಗಳಲ್ಲಿ ಉರಿಯೂತವು ಹೆಚ್ಚಿರುತ್ತದೆ. ಅದರಿಂದಾಗಿ ಅವು ಹೆಚ್ಚು ಸಂವೇದನಾಶೀಲವಾಗಿ, ಸುಲಭವಾಗಿ ಉದ್ರೇಕಗೊಳ್ಳುವಂತಾಗುತ್ತದೆ. ಈ ಶ್ವಾಸನಾಳಗಳು ಬಾಹ್ಯ ಕಾರಣಗಳಿಂದ ಉದ್ರೇಕಗೊಂಡಾಗ ವಿಪರೀತವಾಗಿ ಲೋಳೆಯನ್ನು ಸ್ರವಿಸಿ ಸಂಕೋಚಿಸುತ್ತವೆ. ಅದರಿಂದ ನಿಶ್ವಾಸಕ್ಕೆ ಅಡ್ಡಿಯುಂಟಾಗಿ ಕೆಮ್ಮು, ದಮ್ಮು ಹಾಗೂ ಉಸಿರಾಟದ ತೊಂದರೆಗಳು ಆಗಾಗ ಕಾಡುತ್ತಿರುತ್ತವೆ. ಮಕ್ಕಳ ಶ್ವಾಸನಾಳಗಳು ಹೀಗೆ ಊದಿಕೊಂಡು ಮುಂಗೋಪಿಗಳಾಗುವುದಕ್ಕೆ, ಅನುವಂಶೀಯವಾಗಿ ಪಡೆಯುವ ದೈಹಿಕ ಪ್ರಕತಿ, ವಾಯು ಮಾಲಿನ್ಯ, ಸಿಗರೇಟ್ ಹೊಗೆ, ಕೀಟನಾಶಕಗಳು, ಗಾಳಿಯಲ್ಲಿರುವ ಉದ್ರೇಕಕಾರಿ ಪದಾರ್ಥಗಳು ಮುಂತಾಗಿ ಹಲವು ಕಾರಣಗಳನ್ನು ಪಟ್ಟಿ ಮಾಡಲಾಗುತ್ತದೆ. ಶ್ವಾಸಾಂಗದ ಸೋಂಕುಗಳು, ವ್ಯಾಯಾಮ, ಧೂಳು ಹಾಗೂ ಹೊಗೆ, ಧೂಳಿನಲ್ಲಿರುವ ಸೂಕ್ಷ್ಮಕೀಟಗಳು, ಜಿರಳೆ ಹಾಗೂ ಸಾಕು ಪ್ರಾಣಿಗಳ ರೋಮ ಇತ್ಯಾದಿಗಳು ಉಬ್ಬಸವನ್ನು ಒಮ್ಮೆಗೇ ಉಲ್ಬಣಗೊಳಿಸುತ್ತವೆ ಎನ್ನಲಾಗುತ್ತದೆ.

ಆದರೆ, ಮಕ್ಕಳಲ್ಲಿ ಉಬ್ಬಸವು ಹೆಚ್ಚುತ್ತಿರುವುದಕ್ಕೆ ಇವಿಷ್ಟೇ ಕಾರಣಗಳೇ? ಅದು ಅನುವಂಶೀಯವೆಂದಾದರೆ, ಇತ್ತೀಚಿನ ವರ್ಷಗಳಲ್ಲಿ ಎಲ್ಲೆಡೆ ಇಷ್ಟೊಂದು ಹೆಚ್ಚುವುದಕ್ಕೆ ಸಾಧ್ಯವಿದೆಯೇ? ಪರಿಸರ ಮಾಲಿನ್ಯವು ಅಷ್ಟೊಂದಿಲ್ಲದ ಶ್ರೀಮಂತ ದೇಶಗಳ ಮಕ್ಕಳಲ್ಲಿ ಅಸ್ತಮಾ ಅತ್ಯಧಿಕವಾಗಿರುವುದೇಕೆ? ಧೂಳು, ಹೊಗೆ, ಜಿರಳೆ ಇತ್ಯಾದಿಗಳಿಂದಷ್ಟೆ ಉಬ್ಬಸವು ಉಲ್ಬಣಗೊಳ್ಳುವುದಾದರೆ ಬಹಳಷ್ಟು ಶುಚಿಯಾಗಿರುವವರಲ್ಲೂ ಅದು ಹೆಚ್ಚುತ್ತಿರುವುದೇಕೆ? ಶ್ರೀಮಂತ ರಾಷ್ಟ್ರಗಳಲ್ಲೂ, ಭಾರತದಂತಹ ಅಭಿವದ್ಧಿಶೀಲ ರಾಷ್ಟ್ರಗಳಲ್ಲೂ ಅಸ್ತಮಾ ಒಂದೇ ತೆರನಾಗಿ ಹೆಚ್ಚುತ್ತಿರುವುದಕ್ಕೆ ಸಾಮಾನ್ಯವಾದ ಕಾರಣಗಳೇನಿರಬಹುದು ಎಂಬ ಪ್ರಶ್ನೆಗಳು ಎದುರಾಗುತ್ತವೆ.

ಕಳೆದ ಕೆಲ ದಶಕಗಳಿಂದ ವಿಶ್ವದೆಲ್ಲೆಡೆ ಆಹಾರ ಸೇವನೆಯಲ್ಲೂ, ಜೀವನಶೈಲಿಗಳಲ್ಲೂ ಆಗಿರುವ ಗಣನೀಯ ಬದಲಾವಣೆಗಳು ಮನುಷ್ಯರ ಆರೋಗ್ಯದ ಮೇಲೆ ಹಲವು ಬಗೆಯ ದುಷ್ಪರಿಣಾಮಗಳನ್ನು ಉಂಟುಮಾಡುತ್ತಿವೆ ಎನ್ನುವುದನ್ನು ಸಾವಿರಾರು ಅಧ್ಯಯನಗಳು ಶ್ರುತಪಡಿಸಿವೆ. ಬಾಲ್ಯದಲ್ಲಿ ಅಸ್ತಮಾ ಹಾಗೂ ಅಲರ್ಜಿಗಳ ಅಂತಾರಾಷ್ಟ್ರೀಯ ಅಧ್ಯಯನ (ಐಸಾಕ್) ಎಂಬ ಬೃಹತ್ ಯೋಜನೆಯ ವರದಿಯು ಜನವರಿ 2013ರಲ್ಲಿ ಥೊರಾಕ್ಸ್ ಎಂಬ ವೈದ್ಯಕೀಯ ವಿದ್ವತ್ ಪತ್ರಿಕೆಯಲ್ಲಿ ಪ್ರಕಟವಾಗಿದ್ದು, ಮಕ್ಕಳಲ್ಲಿ ಹೆಚ್ಚುತ್ತಿರುವ ಉಬ್ಬಸಕ್ಕೂ ಹಾಗೂ ಆಧುನಿಕ ಆಹಾರಕ್ಕೂ ನಂಟಿದೆ ಎನ್ನುವುದನ್ನು ಸ್ಪಷ್ಟವಾಗಿ ತೋರಿಸಿದೆ. ಆ ಅಧ್ಯಯನದಲ್ಲಿ ಸುಮಾರು ನೂರು ದೇಶಗಳ ಇಪ್ಪತ್ತು ಲಕ್ಷ ಮಕ್ಕಳನ್ನು 1994ರಿಂದಲೇ ಪರೀಕ್ಷೆಗೊಳಪಡಿಸಲಾಗಿತ್ತು. ಅಸ್ತಮಾ ಹಾಗೂ ಅಲರ್ಜಿ ತೊಂದರೆಗಳ ಬಗೆಗೂ, ಆಹಾರಗಳ ಬಗೆಗೂ ಅವರನ್ನು ಸವಿವರವಾಗಿ ಪ್ರಶ್ನಿಸಲಾಗಿತ್ತು. ಆ ಪೈಕಿ ಸುಮಾರು ಮೂರು ಲಕ್ಷ ಮಕ್ಕಳು 13-14 ವಯಸ್ಸಿನವರಾಗಿದ್ದರೆ, 1,81,000 ಮಕ್ಕಳು 6-7 ವಯಸ್ಸಿನವರಾಗಿದ್ದರು. ಅವರಲ್ಲಿ ವಾರಕ್ಕೆ ಕನಿಷ್ಠ ಮೂರು ಸಲ ಶೀಘ್ರ ತಿನಿಸುಗಳನ್ನೂ, ಸಂಸ್ಕರಿತ ಆಹಾರವನ್ನೂ ತಿನ್ನುತ್ತಿದ್ದ ಹದಿಹರೆಯದವರಲ್ಲಿ ತೀವ್ರವಾದ ಉಬ್ಬಸವುಂಟಾಗುವ ಅಪಾಯವು ಶೇ.39ರಷ್ಟು ಹೆಚ್ಚಿದ್ದರೆ, 6-7 ವರ್ಷದ ಮಕ್ಕಳಲ್ಲಿ ಶೇ.27ರಷ್ಟು ಹೆಚ್ಚಿತ್ತು. ತರಕಾರಿಗಳಂತಹ ನಿಸರ್ಗದತ್ತ ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುತ್ತಿದ್ದ ಮಕ್ಕಳಲ್ಲಿ ಅಸ್ತಮಾದ ತೀವ್ರತೆಯು ಕಡಿಮೆಯಿತ್ತು. ಬೊಜ್ಜುಳ್ಳ ಮಕ್ಕಳಲ್ಲಿ ಉಬ್ಬಸವು ಹೆಚ್ಚು ಸಾಮಾನ್ಯವೂ, ತೀವ್ರವೂ ಆಗಿರುತ್ತದೆ ಎನ್ನುವುದು ಮೊದಲಿನಿಂದಲೂ ತಿಳಿದಿತ್ತಾದರೂ, ಬೊಜ್ಜು ಹಾಗೂ ಉಬ್ಬಸಗಳೆರಡಕ್ಕೂ ಆಧುನಿಕ ಆಹಾರವೇ ಮುಖ್ಯ ಕಾರಣವೆನ್ನುವುದನ್ನು ಐಸಾಕ್ ಅಧ್ಯಯನವು ಇನ್ನಷ್ಟು ಪುಷ್ಠೀಕರಿಸಿದಂತಾಯಿತು.

ಉರಿಯೂತವನ್ನು ಅತಿ ಸೂಕ್ಷ್ಮವಾಗಿ ನಿಯಂತ್ರಿಸುವ ವ್ಯವಸ್ಥೆಯು ನಮ್ಮ ದೇಹದ ಕಣಕಣದಲ್ಲೂ ಇದ್ದು, ನಾವು ತಿನ್ನುವ ಆಹಾರವು ಅದರ ಮೇಲೆ ಗಾಢವಾದ ಪರಿಣಾಮವನ್ನು ಬೀರುತ್ತದೆ. ತಿನ್ನುವ ಆಹಾರವು ನಿಸರ್ಗ ಸಹಜವಾಗಿದ್ದು, ಸಮತೋಲಿತವಾಗಿದ್ದರೆ ಈ ವ್ಯವಸ್ಥೆಯು ಹಸನಾಗಿರುತ್ತದೆ, ಉರಿಯೂತವು ನಿಯಂತ್ರಣದಲ್ಲಿರುತ್ತದೆ. ಸಂಸ್ಕರಿಸಲ್ಪಟ್ಟ, ಸಕ್ಕರೆ ಭರಿತವಾದ ಶೀಘ್ರ ತಿನಿಸುಗಳು ಹಾಗೂ ಟ್ರಾನ್ಸ್ ಮೇದೋಆಮ್ಲಗಳಿಂದ ತುಂಬಿರುವ ಕರಿದ ತಿನಿಸುಗಳು ಈ ವ್ಯವಸ್ಥೆಯನ್ನು ಹಳಿ ತಪ್ಪಿಸಿ ಉರಿಯೂತವನ್ನು ವಿಪರೀತವಾಗಿ ಹೆಚ್ಚಿಸುತ್ತವೆ. ಅದರಿಂದಾಗಿ ಅಸ್ತಮಾ ಮಾತ್ರವಲ್ಲ, ಬೊಜ್ಜು, ಮಧುಮೇಹ ಮುಂತಾದ ಹಲವು ಕಾಯಿಲೆಗಳಿಗೂ ದಾರಿಯಾಗುತ್ತದೆ.

ಮಕ್ಕಳ ಶರೀರವು ಕಿರಿದಾಗಿದ್ದು ತೂಕವೂ ಕಡಿಮೆಯಿರುವುದರಿಂದ, ವಯಸ್ಕರು ತಿನ್ನುವ ಆಹಾರವನ್ನು, ಅದೇ ಪ್ರಮಾಣದಲ್ಲಿ, ಮಕ್ಕಳಿಗೆ ನೀಡಿದರೆ ಅವರ ದೇಹದ ಮೇಲೆ ವಿಪರೀತವಾದ ಪರಿಣಾಮಗಳಾಗುತ್ತವೆ. ಮಕ್ಕಳ ಶ್ವಾಸಾಂಗವು ಇನ್ನೂ ಬೆಳೆಯುವ ಹಂತದಲ್ಲಿರುವುದರಿಂದ ಉರಿಯೂತದ ಹೊಡೆತವೂ ಹೆಚ್ಚಿರುತ್ತದೆ. ಸೇವಿಸುವ ಗಾಳಿಯಲ್ಲೂ, ತಿನ್ನುವ ಆಹಾರದಲ್ಲೂ ಇರಬಹುದಾದ ಹಾನಿಕಾರಕ ವಸ್ತುಗಳನ್ನು ನಿರ್ಮೂಲನೆ ಮಾಡುವಲ್ಲಿ ಇನ್ನೂ ಬೆಳೆಯುತ್ತಿರುವ ಅಂಗಾಂಗಗಳ ಕ್ಷಮತೆಯು ಕಡಿಮೆಯಿರುವುದು ಮಕ್ಕಳನ್ನು ಹೆಚ್ಚಿನ ಅಪಾಯಕ್ಕೀಡುಮಾಡುತ್ತವೆ. ಇಂದು ಮಕ್ಕಳಲ್ಲಿ ಉಬ್ಬಸದಂತಹ ರೋಗಗಳು ಹೆಚ್ಚುವುದಕ್ಕೆ ಇವೆಲ್ಲವೂ ಕಾರಣವಾಗುತ್ತಿವೆ.

ನಮ್ಮ ಉರಿಯೂತ ನಿಯಂತ್ರಣ ಹಾಗೂ ರೋಗ ರಕ್ಷಣಾ ವ್ಯವಸ್ಥೆಗಳು ಪಚನಾಂಗಗಳಲ್ಲಿರುವ ನೂರು ಲಕ್ಷ ಕೋಟಿ ಸೂಕ್ಷ್ಮಾಣುಗಳೊಂದಿಗೆ ನಿಕಟವಾದ ಸಂಬಂಧವನ್ನು ಹೊಂದಿವೆ. ಹುಟ್ಟಿದ ಗಳಿಗೆಯಿಂದ ದೇಹವನ್ನು ತುಂಬುವ ಈ ಸೂಕ್ಷ್ಮಾಣುಗಳಲ್ಲಿ ಏರುಪೇರಾದರೆ ಉರಿಯೂತವೂ, ಅಲರ್ಜಿಯಂತಹ ತೊಂದರೆಗಳೂ ಹೆಚ್ಚುತ್ತವೆ. ಯಥೇಚ್ಛವಾಗಿ ಸ್ತನಪಾನ ಮಾಡುವ ಮಕ್ಕಳು, ಹಳ್ಳಿಗಳಲ್ಲೂ-ಬಡ ರಾಷ್ಟ್ರಗಳಲ್ಲೂ ಪ್ರಕತಿಯ ಮಡಿಲಲ್ಲಿ ಆಡಿ ಬೆಳೆಯುವ ಮಕ್ಕಳು ತಮ್ಮ ದೇಹದಲ್ಲಿ ಆರೋಗ್ಯಕರವಾದ ಸೂಕ್ಷ್ಮಾಣುಗಳನ್ನು ಹೊಂದಿರುವುದರಿಂದ ಅಸ್ತಮಾದಂತಹ ರೋಗಗಳು ಅವರನ್ನು ಅಷ್ಟಾಗಿ ಕಾಡುವುದಿಲ್ಲ. ಅಂತೆಡೆ ಬಾಲ್ಯವನ್ನು ಕಳೆದಿದ್ದ ಮಕ್ಕಳು ಮುಂದೆ ಶ್ರೀಮಂತ ರಾಷ್ಟ್ರಗಳಿಗೆ ವಲಸೆ ಹೋದರೂ ಅಸ್ತಮಾದಿಂದ ಸುರಕ್ಷಿತರಾಗಿರುತ್ತಾರೆ. ಇದಕ್ಕೆ ತದ್ವಿರುದ್ಧವಾಗಿ ಶ್ರೀಮಂತ ರಾಷ್ಟ್ರಗಳಲ್ಲಿ ವಿಪರೀತವಾಗಿ ಶುಚಿಯಾಗಿರಲೆತ್ನಿಸುವ ಮಕ್ಕಳು, ಸ್ತನಪಾನದಿಂದ ವಂಚಿತರಾದ ಮಕ್ಕಳು, ಎಳವೆಯಲ್ಲಿ ಹಲವು ಸಲ ಅನಗತ್ಯವಾಗಿ ಸೂಕ್ಷ್ಮಾಣುನಾಶಕ (ಆಂಟಿಬಯಾಟಿಕ್) ಔಷಧಗಳನ್ನು ಸೇವಿಸಿದ ಮಕ್ಕಳು ಉಬ್ಬಸದಿಂದ ಹೆಚ್ಚು ಪೀಡಿತರಾಗುತ್ತಾರೆ.

ಪಶುಹಾಲಿನ ಸೇವನೆಯೂ ಕೆಲವು ಮಕ್ಕಳಲ್ಲಿ ಉಬ್ಬಸಕ್ಕೂ, ಅಲರ್ಜಿಗಳಿಗೂ ಕಾರಣವಾಗಬಹುದು. ಪಶುಹಾಲಿನ ಪ್ರೊಟೀನುಗಳಿಗೆ ಅಸಹಿಷ್ಣುತೆಯಿಂದಾಗಿ ಶ್ವಾಸಾಂಗದಲ್ಲಿ ಉರಿಯೂತವು ಹೆಚ್ಚುವ ಸಾಧ್ಯತೆಗಳಿವೆ. ಕೆಲವರಲ್ಲಿ ಜಠರವನ್ನು ಸೇರಿದ ಆಹಾರವು ಮತ್ತೆ ಅನ್ನನಾಳದಲ್ಲಿ ಮೇಲ್ಬರುವ ಸಮಸ್ಯೆಯುಂಟಾಗಿ, ಉಬ್ಬಸ ಹಾಗೂ ಕೆಮ್ಮಿಗೆ ಕಾರಣವಾಗುತ್ತದೆ. ಶೇ.30ರಷ್ಟು ಮಕ್ಕಳಲ್ಲಿ ಪಶುಹಾಲಿನ ಸೇವನೆಯೇ ಈ ಸಮಸ್ಯೆಗೆ ಮುಖ್ಯ ಕಾರಣವೆಂದು ಹೇಳಲಾಗಿದೆ.

ಸೂರ್ಯನ ಕಿರಣಗಳಿಗೆ ಮೈಯೊಡ್ಡಿದಾಗ ಚರ್ಮದಲ್ಲಿ ಸಿದ್ಧಗೊಳ್ಳುವ ವಿಟಮಿನ್ ಡಿ ರೋಗ ರಕ್ಷಣಾ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರವನ್ನು ಹೊಂದಿದೆ. ಮಾತ್ರವಲ್ಲ, ಗರ್ಭದಲ್ಲಿರುವ ಶಿಶುವಿನ ಶ್ವಾಸಾಂಗದ ಬೆಳವಣಿಗೆಗೂ ಅಗತ್ಯವಾಗಿದೆ. ಇಂದು ಗರ್ಭಿಣಿಯರು ಮತ್ತು ಮಕ್ಕಳು ಹೆಚ್ಚಿನ ಕಾಲವನ್ನು ಒಳಾಂಗಣಗಳಲ್ಲೇ ಕಳೆಯುತ್ತಿರುವುದು ಹಾಗೂ ಸಿದ್ಧ ಆಹಾರಗಳಲ್ಲಿ ಸಾಕಷ್ಟು ವಿಟಮಿನ್ ಡಿ ದೊರೆಯದಿರುವುದು ಅಸ್ತಮಾದಂತಹ ರೋಗಗಳು ಉಲ್ಬಣಗೊಳ್ಳುವುದಕ್ಕೆ ಕಾರಣವಾಗುತ್ತಿವೆ.

ಹೆಚ್ಚು ಮರಗಳಿರುವ ನಗರಗಳಲ್ಲಿ ಮಕ್ಕಳನ್ನು ಉಬ್ಬಸವು ಅಷ್ಟಾಗಿ ಕಾಡುವುದಿಲ್ಲ. ಮರಗಳು ಪರಿಸರ ಮಾಲಿನ್ಯದಿಂದ ರಕ್ಷಣೆಯನ್ನು ನೀಡುವುದಷ್ಟೆ ಅಲ್ಲದೆ, ಪರಿಸರದ ಜೀವ ವೈವಿಧ್ಯತೆಯನ್ನು ಹೆಚ್ಚಿಸುತ್ತವೆ. ಹಸಿರು ಹೊದಿಕೆಯ ಹೊರಾಂಗಣಗಳಲ್ಲಿ ಆಟವಾಡುವುದಕ್ಕೆ ಮಕ್ಕಳಿಗೆ ಅನುಕೂಲವಾಗುವುದರಿಂದ ಸುತ್ತಲಿನ ಸೂಕ್ಷ್ಮಾಣುಗಳು ದೇಹಕ್ಕೆ ಅಂಟಿಕೊಳ್ಳುವುದು ಸಾಧ್ಯವಾಗಿ, ರೋಗ ರಕ್ಷಣಾ ವ್ಯವಸ್ಥೆಯು ಬಲಗೊಳ್ಳುತ್ತದೆ. ಇದೇ ಕಾರಣಕ್ಕೆ ನಗರಗಳನ್ನು ಹಸಿರಾಗಿಸಿ, ಜೈವಿಕ ವೈವಿಧ್ಯತೆಯನ್ನು ಹೆಚ್ಚಿಸುವುದಕ್ಕೆ ನಗರಾಭಿವೃದ್ಧಿಯಲ್ಲಿ ಪ್ರಾಶಸ್ತ್ಯವಿರಬೇಕೆಂದು ಕಳೆದ ಅಕ್ಟೋಬರ್ ನಲ್ಲಿ ಹೈದರಾಬಾದಿನಲ್ಲಿ ನಡೆದಿದ್ದ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ಶೃಂಗಸಭೆಯಲ್ಲಿ ಒತ್ತಿ ಹೇಳಲಾಗಿದೆ.

ಅಸ್ತಮಾದಿಂದ ನಮ್ಮ ಮಕ್ಕಳನ್ನು ರಕ್ಷಿಸಿ ಅವರ ಉಸಿರಾಟವನ್ನು ಸಾಂಗಗೊಳಿಸಬೇಕಿದ್ದರೆ ಅವರನ್ನು ಕಾಂಕ್ರೀಟಿನ ಗುಹೆಗಳಿಂದ ಬಂಧಮುಕ್ತಗೊಳಿಸಿ ಮತ್ತೆ ಪ್ರಕೃತಿಯ ಮಡಿಲಿಗೆ ದೂಡಬೇಕಾಗಿದೆ. ಕಾರ್ಖಾನೆಯ ಕೃತಕ ತಿನಿಸುಗಳು ಹಾಗೂ ಪೇಯಗಳ ಬದಲಿಗೆ ನಿಸರ್ಗ ಸಹಜವಾದ ತರಕಾರಿ, ಮೀನು, ಮೊಟ್ಟೆ, ಧಾನ್ಯಗಳು ಮುಂತಾದ ಆಹಾರಗಳನ್ನಷ್ಟೆ ಅವರಿಗೆ ನೀಡಬೇಕಾಗಿದೆ. ಪಶುಹಾಲಿನ ಸೇವನೆಯನ್ನು ನಿರ್ಬಂಧಿಸುವುದರಿಂದಲೂ ಪ್ರಯೋಜನವಾಗಬಹುದು. ಜತೆಗೆ, ಹೆಚ್ಚು ಮರಗಿಡಗಳನ್ನು ನೆಟ್ಟು ಕಾಡನ್ನೇ ನಾಡಿಗೆ ತರುವ ಕೆಲಸವಾಗಬೇಕು. ಎಲ್ಲ ಮಕ್ಕಳು ಮಣ್ಣು-ಹುಲ್ಲುಗಳ ಮೇಲೆ ಬಿದ್ದು-ಓಡಾಡಿ ಪರಿಸರದ ಸೂಕ್ಷ್ಮಾಣುಗಳನ್ನೂ, ವಿಟಮಿನ್ ಡಿ ಯನ್ನೂ ಪಡೆಯುವಂತಾಗಬೇಕು.

ಮೂವತ್ತನೇ ಬರಹ : ವೈದ್ಯಾಧಿದೇವತೆಯ ಹಾವುಗಳು [ಆಗಸ್ಟ್ 7, 2013, ಬುಧವಾರ] [ನೋಡಿ | ನೋಡಿ]

ಗ್ರೀಸ್ ನ ಬರ್ಗಮದಿಂದ ಶುರುವಾದ ವೈದ್ಯ ವಿಜ್ಞಾನದ ಪಯಣ ನಂತರ ಕ್ರಮಿಸಿದ ಹಾದಿ ರೋಚಕ ಮತ್ತು ಕುತೂಹಲಕಾರಕ

ಆಧುನಿಕ ವೈದ್ಯ ವಿಜ್ಞಾನವು ಸಾಗಿ ಬಂದ ದಾರಿಯು ಕೌತುಕಮಯವಾದುದು. ಭಾರತ, ಚೀನಾ, ಗ್ರೀಸ್, ರೋಂ, ಪರ್ಷಿಯಾ ಮುಂತಾದ ಪ್ರಾಚೀನ ನಾಗರಿಕತೆಗಳಲ್ಲೆಲ್ಲ ಬಗೆಬಗೆಯ ಚಿಕಿತ್ಸಾ ಪದ್ಧತಿಗಳಿದ್ದವು. ಅವುಗಳ ನಡುವೆ ಜ್ಞಾನ ಹಾಗೂ ಕೌಶಲ್ಯಗಳ ವಿನಿಮಯವಿತ್ತು, ಸ್ಥಿತಿವಂತರಿಗೆ ಗಂಭೀರ ರೋಗಗಳಿದ್ದಾಗ ಪರದೇಶಗಳ ಖ್ಯಾತ ಚಿಕಿತ್ಸಕರನ್ನು ಕರೆಸಿಕೊಳ್ಳುವುದೂ ಇತ್ತು. ಸಮಯ ಸಂದಂತೆ ಹೆಚ್ಚು ಫಲಪ್ರದವೆನಿಸಿಕೊಂಡ ಚಿಕಿತ್ಸಾಕ್ರಮಗಳು ಇನ್ನಷ್ಟು ವಿಕಾಸಗೊಳ್ಳುತ್ತಾ ಸಾಗಿದವು, ಇನ್ನುಳಿದವಲ್ಲಿ ಕೆಲವು ಬಿದ್ದು ಹೋದವು, ಕೆಲವು ಅಲ್ಲೇ ಸ್ಥಗಿತಗೊಂಡವು. ಗ್ರೀಸ್ ಹಾಗೂ ರೋಂಗಳಲ್ಲಿ ಮೊದಲ್ಗೊಂಡ ಚಿಕಿತ್ಸಾಕ್ರಮಗಳು ಯೂರೋಪಿನ ವೈಜ್ಞಾನಿಕ ಕ್ರಾಂತಿಯಿಂದ ಇನ್ನಷ್ಟು ಬಲಗೊಂಡು, ಇಂದು ಅತಿ ಹೆಚ್ಚು ಪ್ರಚಲಿತವಿರುವ ಹಾಗೂ ಅತಿ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿರುವ ಆಧುನಿಕ ಸಾಕ್ಷ್ಯಾಧಾರಿತ ವೈದ್ಯಕೀಯ ಪದ್ಧತಿಯಾಗಿ ರೂಪುಗೊಂಡವು.

ಏಷ್ಯಾ ಮತ್ತು ಯೂರೋಪ್ ಖಂಡಗಳ ನಡುವಿನ ಸೇತುವೆಯಾಗಿರುವ ತುರ್ಕಿಯು ಹಲವು ನಾಗರಿಕತೆಗಳ ಸಂಗಮವೆನ್ನಬಹುದು. ಗ್ರೀಕ್ ಹಾಗೂ ರೋಮನ್ ಸಾಮ್ರಾಜ್ಯಗಳೆರಡರಿಂದಲೂ ಆಳಲ್ಪಟ್ಟಿದ್ದ ತುರ್ಕಿಯಲ್ಲಿ ಆ ಹಳೆಯ ನಾಗರಿಕತೆಗಳ ಬಹಳಷ್ಟು ಅವಶೇಷಗಳು ಇಂದಿಗೂ ಕಾಣಸಿಗುತ್ತವೆ. ತುರ್ಕಿಯ ಪಶ್ಚಿಮ ಭಾಗದಲ್ಲಿ ಬರ್ಗಮ (ಹಳೆಯ ಹೆಸರು ಪರ್ಗಮನ್) ಎಂಬ ನಗರವಿದೆ. ಅದು ಕ್ರಿ.ಪೂ. ನಾಲ್ಕನೇ ಶತಮಾನದಿಂದ ಗ್ರೀಕ್ ಸಾಮ್ರಾಜ್ಯದ ಪ್ರಮುಖ ಭಾಗವಾಗಿದ್ದು, ಕ್ರಿಸ್ತ ಶಕೆಯ ಆರಂಭದಲ್ಲಿ ರೋಮನ್ ಸಾಮ್ರಾಜ್ಯದ ತೆಕ್ಕೆಗೆ ಸೇರಿತ್ತು. ಬರ್ಗಮವು ಆ ಕಾಲದಲ್ಲಿ ಒಂದು ಪ್ರಮುಖವಾದ ಶೈಕ್ಷಣಿಕ ಹಾಗೂ ವೈದ್ಯಕೀಯ ಕೇಂದ್ರವಾಗಿತ್ತು.

ಬರ್ಗಮದಲ್ಲಿ ದೊಡ್ಡ ಶುಶ್ರೂಷಾಲಯವೊಂದರ ಭಗ್ನಾವಶೇಷಗಳನ್ನು ಕಾಣಬಹುದು. ಗ್ರೀಕರ ವೈದ್ಯಾಧಿದೇವತೆಯಾದ ಎಸ್ಕಲೀಪಿಯಸ್ ನ ಗೌರವಾರ್ಥ ಇದನ್ನು ಎಸ್ಕಲೀಪಿಯನ್ ಅಥವಾ ಎಸ್ಕಲೀಪಿಯಸ್ ಮಂದಿರ ಎಂದು ಕರೆಯಲಾಗುತ್ತಿತ್ತು. ಬರ್ಗಮದ ಈ ಮಂದಿರವು ಏಷ್ಯಾದ ಏಕೈಕ ಎಸ್ಕಲೀಪಿಯನ್ ಆಗಿದ್ದು, ಇನ್ನುಳಿದವು ಗ್ರೀಸ್ ನ ಎಪಿಡಾರಸ್, ಕೊಸ್ ಹಾಗೂ ತ್ರಿಕಲ ಎಂಬಲ್ಲಿವೆ. ಬರ್ಗಮದ ಶುಶ್ರೂಶಾಲಯದಲ್ಲಿ ರೋಗಿಗಳ ಶಯ್ಯಾಗಾರಗಳು, ಪವಿತ್ರವಾದ ಕೊಳ, ಸ್ನಾನದ ಮನೆಗಳು, ಜಲ ಚಿಕಿತ್ಸಾಲಯಗಳು, ದೊಡ್ಡದಾದ ರಂಗಮಂದಿರ, ವಾಚನಾಲಯ ಎಲ್ಲವೂ ಇದ್ದು, ಅಲ್ಲಿ ನೀಡಲಾಗುತ್ತಿದ್ದ ವಿಶೇಷವಾದ ಚಿಕಿತ್ಸಾಕ್ರಮಗಳಿಗೆ ಸಾಕ್ಷಿಯಾಗಿವೆ. ಹಲವು ರಾಜರುಗಳು ಹಾಗೂ ಖ್ಯಾತನಾಮರಿಂದ ಹಿಡಿದು ಜನಸಾಮಾನ್ಯರವರೆಗೆ ಸಹಸ್ರಾರು ರೋಗಿಗಳು ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದರಂತೆ. ಅದರಲ್ಲೂ ವಿಶೇಷವಾಗಿ ಮಾನಸಿಕ ಸಮಸ್ಯೆಗಳಿಗೆ ಅತಿ ವಿಶಿಷ್ಟವಾದ ಚಿಕಿತ್ಸೆಯನ್ನು ಅಲ್ಲಿ ನೀಡಲಾಗುತ್ತಿದ್ದುದರಿಂದ ಅದನ್ನು ಜಗತ್ತಿನ ಮೊತ್ತಮೊದಲ ಮನೋರೋಗ ಚಿಕಿತ್ಸಾಲಯವೆಂದು ಪರಿಗಣಿಸುವುದೂ ಇದೆ.

ಈ ಶುಶ್ರೂಷಾಲಯದ ಹೆಬ್ಬಾಗಿಲಿನ ಮೇಲೆ “ಮೃತ್ಯುವಿಗೆ ಇಲ್ಲಿ ಪ್ರವೇಶವಿಲ್ಲ” ಎಂದು ದೊಡ್ಡದಾಗಿ ಕೆತ್ತಲಾಗಿತ್ತು. ಸಾವಿನ ದವಡೆಯಲ್ಲಿದ್ದವರನ್ನೂ ಗುಣಪಡಿಸಿ ಮರುಜೀವ ನೀಡಬಹುದೆಂಬ ಆತ್ಮವಿಶ್ವಾಸವು ಅಲ್ಲಿನ ವೈದ್ಯರಿಗೆ ಇದ್ದಿರಬೇಕು (ಸಾಯುವಂಥವರನ್ನು ಒಳಗೆ ಸೇರಿಸಿಕೊಳ್ಳದೆ ಶುಶ್ರೂಷಾಲಯಕ್ಕೆ ಕೆಟ್ಟ ಹೆಸರು ಬಾರದಂತೆ ಕಾಯಲಾಗುತ್ತಿತ್ತು ಎಂಬ ವಿಶ್ಲೇಷಣೆಯೂ ಇದೆ!). ಗ್ರೀಕ್ ಐತಿಹ್ಯದನುಸಾರ ಎಸ್ಕಲೀಪಿಯಸ್ ಅತಿ ಪ್ರತಿಭಾವಂತನಾದ ವೈದ್ಯನಾಗಿದ್ದನಂತೆ. ಅವನು ಸಾವನ್ನು ಗೆಲ್ಲುತ್ತಿದ್ದುದು ಹಲವು ಗ್ರೀಕ್ ದೇವತೆಗಳ ಸಿಟ್ಟಿಗೆ ಕಾರಣವಾಯಿತಂತೆ. ಮಾಟ-ತಂತ್ರಗಳಿಗೆ ಅಗತ್ಯವಾಗಿದ್ದ ಪಿಶಾಚಿಗಳೇ ಇಲ್ಲದಂತಾಗುತ್ತದೆಂದು ಈ ದೇವತೆಗಳು ಗ್ರೀಕರ ಬ್ರಹ್ಮ ಝಿಯುಸ್ ನಿಗೆ ದೂರಿತ್ತರಂತೆ. ಒತ್ತಡಕ್ಕೆ ಮಣಿದ ಝಿಯುಸ್ ವಜ್ರಾಯುಧದಿಂದ ಎಸ್ಕಲೀಪಿಯಸ್ ನನ್ನು ಕೊಲ್ಲಿಸಿದನಾದರೂ ನಂತರ ಪರಿತಪಿಸಿ ಅವನನ್ನು ದೈವತ್ವಕ್ಕೇರಿಸಿದನಂತೆ.

ವಿಶ್ವ ಆರೋಗ್ಯ ಸಂಸ್ಥೆಯ ಚಿಹ್ನೆಯಲ್ಲಿ ಹಾವೊಂದು ಸುತ್ತಿಕೊಂಡಿರುವ ದಂಡವಿದೆ. ಅದು ಎಸ್ಕಲೀಪಿಯಸ್ ನ ದಂಡ. ಆ ಚಿಹ್ನೆಯ ಮೂಲ ರೂಪವನ್ನು ಬರ್ಗಮದ ಶುಶ್ರೂಷಾಲಯದ ದ್ವಾರದಲ್ಲಿ ಕಾಣಬಹುದು. ಈ ದಂಡಕ್ಕೂ ಒಂದು ಐತಿಹ್ಯವಿದೆ. ಎಸ್ಕಲೀಪಿಯಸ್ ತರುಣನಾಗಿದ್ದಾಗ ಒಂದು ಹಾವನ್ನು ತನ್ನ ದಂಡದಿಂದ ಹೊಡೆದನಂತೆ. ಸಾಯಹೊರಟಿದ್ದ ಆ ಹಾವಿಗೆ ಇನ್ನೊಂದು ಹಾವು ಮರುಜೀವ ನೀಡಿತಂತೆ. ಇದೇ ಎಸ್ಕಲೀಪಿಯಸ್ ಗೆ ಪ್ರೇರಣೆಯಾಗಿ ಮೃತ್ಯುವನ್ನು ಜಯಿಸಬಲ್ಲಷ್ಟು ದೊಡ್ಡ ವೈದ್ಯನಾಗಲು ಸಾಧ್ಯವಾಯಿತಂತೆ ಹಾಗೂ ದಂಡಕ್ಕೆ ಸುತ್ತಿದ ಹಾವೇ ಆತನ ಗುರುತಾಯಿತಂತೆ. ದಂಡವು ಶಕ್ತಿ-ಸಾಮರ್ಥ್ಯ-ಅಧಿಕಾರಗಳ ದ್ಯೋತಕವಾದರೆ ಪೊರೆ ಕಳಚಿ ಹೊಸ ಚರ್ಮ ಪಡೆದುಕೊಳ್ಳುವ ಹಾವು ನವಜೀವನ ಹಾಗೂ ಆರೋಗ್ಯದ ಸಂಕೇತ.

ದಂಡದ ಸುತ್ತಲೂ ಎರಡು ಹಾವುಗಳಿದ್ದು, ತುದಿಯಲ್ಲಿ ಎರಡು ರೆಕ್ಕೆಗಳಿರುವ ಇನ್ನೊಂದು ಚಿಹ್ನೆಯನ್ನೂ ಹಲವಾರು ವೈದ್ಯರು ಹಾಗೂ ವೈದ್ಯಕೀಯ ಸಂಸ್ಥೆಗಳು ಬಳಸುತ್ತಾರೆ. ಇದು ಇನ್ನೋರ್ವ ಗ್ರೀಕ್ ದೇವತೆಯಾದ ಹರ್ಮಿಸ್ ನ (ರೋಮನರ ಮರ್ಕುರಿ) ದಂಡವಾದ ಕಡುಷ್ಯಸ್ ನ ಪ್ರತಿರೂಪವಾಗಿದೆ. ಈ ಹರ್ಮಿಸ್ ದೇವತೆಗಳ ದೂತನಾಗಿದ್ದು ಮೃತರ ಆತ್ಮಗಳನ್ನು ನರಕಕ್ಕೆ ಒಯ್ಯುವ ಜವಾಬ್ದಾರಿಯುಳ್ಳವನು. ವ್ಯಾಪಾರಸ್ಥರು, ವಂಚಕರು ಹಾಗೂ ಕಳ್ಳರ ಅಧಿದೇವತೆಯೂ ಅವನೇ. ಇಂತಹಾ ಹರ್ಮಿಸ್ ನ ಸಂಕೇತವು ವೈದ್ಯಲೋಕದ ಗುರುತಾದದ್ದು ಹೇಗೆ? ಲಂಡನಿನ ಜಾನ್ ಚರ್ಚಿಲ್ ಎಂಬ ಪ್ರಕಾಶನ ಸಂಸ್ಥೆಯು 19ನೇ ಶತಮಾನದಲ್ಲಿ ಪ್ರಕಟಿಸುತ್ತಿದ್ದ ವೈದ್ಯಕೀಯ ಪುಸ್ತಕಗಳ ಮೇಲೆ ವ್ಯಾಪಾರದ ಸಂಕೇತವಾಗಿ ಹರ್ಮಿಸ್ ನ ದಂಡವನ್ನು ಮುದ್ರಿಸುತ್ತಿದ್ದುದು ಈ ಗೊಂದಲಕ್ಕೆ ಮೂಲ ಕಾರಣವೆಂದು ಹೇಳಲಾಗುತ್ತದೆ. ನಂತರ 1902ರಲ್ಲಿ ಅಮೆರಿಕಾದ ಸೇನೆಯಲ್ಲಿ ವೈದ್ಯನಾಗಿದ್ದ ಕ್ಯಾಪ್ಟನ್ ರೆನಾಲ್ಡ್ಸ್ ಎಂಬವನು ಇದೇ ದಂಡವನ್ನು ಆ ಸೇನೆಯ ವೈದ್ಯಕೀಯ ವಿಭಾಗದ ಸಂಕೇತವಾಗಿ ಬಳಸುವುದಕ್ಕೆ ಕಾರಣನಾದನು. ಹೀಗೆ ವೈದ್ಯೋತ್ತಮ ಎಸ್ಕಲೀಪಿಯಸ್ ನ ಒಂದು ಹಾವಿರುವ ದಂಡದ ಜೊತೆಗೆ ವಂಚಕರ ದೇವತೆ ಹರ್ಮಿಸ್ ನ ಎರಡು ಹಾವುಗಳ ಜೊತೆ ರೆಕ್ಕೆಗಳಿರುವ ದಂಡವು ಕೂಡಾ ವೈದ್ಯರ ಸಂಕೇತವಾಯಿತು. ವೈದ್ಯವೃತಿಯಲ್ಲಿ ವ್ಯಾಪಾರಿ ಪ್ರವೃತ್ತಿಯು ಗಾಢವಾಗುತ್ತಿರುವ ಈ ದಿನಗಳಲ್ಲಿ ಇದು ಅನ್ವರ್ಥಕವೆನಿಸುತ್ತಿರುವುದು ಸುಳ್ಳಲ್ಲವೆನ್ನೋಣವೇ?

ಬರ್ಗಮದ ಎಸ್ಕಲೀಪಿಯಸ್ ಮಂದಿರದಲ್ಲಿ ನೀಡಲಾಗುತ್ತಿದ್ದ ಚಿಕಿತ್ಸೆಯಲ್ಲಿ ಹಾವುಗಳಿಗೂ ಪಾತ್ರವಿತ್ತು. ಒಳಬಂದ ರೋಗಿಗಳಿಗೆ ನಿದ್ರೆ ಬರಿಸುವ ಪಾನಕವನ್ನು ಕುಡಿಸಿ ಶುಶ್ರೂಷಾಲಯದ ಕೋಣೆಗಳಲ್ಲಿ ಮಲಗಿಸಲಾಗುತ್ತಿತ್ತು. ಗಾಢವಾಗಿ ನಿದ್ರಿಸಿದವರ ಮೈಮೇಲೆ ರಾತ್ರಿಯಿಡೀ ವಿಷವಿಲ್ಲದ ಹಾವುಗಳನ್ನು ಹರಿಯಬಿಡಲಾಗುತ್ತಿತ್ತು. ವೈದ್ಯಾಧಿದೇವತೆಯಾದ ಎಸ್ಕಲೀಪಿಯಸ್ ಈ ಹಾವುಗಳ ರೂಪದಲ್ಲಿ ರೋಗಿಯ ಕನಸುಗಳಲ್ಲಿ ಪ್ರವೇಶಿಸಿ ಅವರೊಡನೆ ಸಂಭಾಷಿಸುತ್ತಾನೆಂದು ಹೇಳಲಾಗುತ್ತಿತ್ತು. ರೋಗಿಯು ಕಂಡ ಕನಸುಗಳನ್ನು ಮರುದಿನ ವಿಶ್ಲೇಷಿಸಿ ಸೂಕ್ತವಾದ ಪರಿಹಾರವನ್ನು ತಿಳಿಸಲಾಗುತ್ತಿತ್ತು. ಪವಿತ್ರ ಕೊಳದ ನೀರಿನಲ್ಲಿ ಅಭ್ಯಂಜನದಿಂದ ಹಿಡಿದು ರಂಗಮಂದಿರದಲ್ಲಿ ಸಂಗೀತ-ನೃತ್ಯಗಳವರೆಗೆ ಬಗೆಬಗೆಯ ಚಿಕಿತ್ಸಾಕ್ರಮಗಳನ್ನು ಅಲ್ಲಿ ಬಳಸಲಾಗುತ್ತಿತ್ತು.

ಆಧುನಿಕ ವೈದ್ಯವಿಜ್ಞಾನಕ್ಕೆ ಅಡಿಪಾಯ ಹಾಕಿದ ಹಲವರು ಈ ಎಸ್ಕಲೀಪಿಯನ್ ಗಳಲ್ಲೇ ಚಿಕಿತ್ಸಕರಾಗಿದ್ದವರು. ವೈದ್ಯಶಾಸ್ತ್ರದ ಪಿತಾಮಹನೆನಿಸಿಕೊಂಡಿರುವ ಹಿಪಾಕ್ರಟಿಸ್ ಕ್ರಿ.ಪೂ. 400ರ ಕಾಲದಲ್ಲಿ ಕೊಸ್ ನ ಎಸ್ಕಲೀಪಿಯನ್ ನಲ್ಲಿ ತಜ್ಞ ವೈದ್ಯನಾಗಿದ್ದವನು. ಇಂದಿಗೂ ವೈದ್ಯರೆಲ್ಲರಿಗೂ ಬೋಧಿಸಲಾಗುವ ಹಿಪಾಕ್ರಟಿಸನ ಪ್ರತಿಜ್ಞೆಯು ಎಸ್ಕಲೀಪಿಯಸನ ವಂದನೆಯಿಂದಲೇ ತೊಡಗುತ್ತದೆ. ಕ್ರಿಸ್ತ ಶಕೆಯ ಎರಡನೇ ಶತಮಾನದಲ್ಲಿ ಬರ್ಗಮದ ಎಸ್ಕಲೀಪಿಯನ್ ನಲ್ಲಿದ್ದ ಗಾಲೆನ್ ಮಾನವ ಶರೀರಶಾಸ್ತ್ರದಲ್ಲಿ ವಿಶೇಷ ಪರಿಣತನಾಗಿದ್ದನು. ಬರ್ಗಮದಲ್ಲೇ ಜನಿಸಿದ್ದ ಗಾಲೆನ್ ಅದೇ ಶುಶ್ರೂಷಾಲಯದಲ್ಲೂ, ಈಜಿಪ್ಟಿನ ಅಲೆಕ್ಸಾಂಡ್ರಿಯಾದಲ್ಲೂ ತರಬೇತಿ ಪಡೆದಿದ್ದನು. ಮನುಷ್ಯರ ಶವಗಳನ್ನು ಕತ್ತರಿಸುವುದು ನಿಷಿದ್ಧವಾಗಿದ್ದ ಆ ಕಾಲದಲ್ಲಿ ವಾನರ, ಎತ್ತು, ಕರಡಿ, ನಾಯಿ, ಕುರಿ ಮುಂತಾದ ಪ್ರಾಣಿಗಳನ್ನು ಸಿಗಿದು ಅವುಗಳ ಶರೀರದ ರಚನೆಯನ್ನು ಆಳವಾಗಿ ಅಧ್ಯಯನ ಮಾಡಿದ್ದ ಗಾಲೆನ್ ಅವುಗಳ ಆಧಾರದಲ್ಲಿ ಮನುಷ್ಯನ ಶರೀರದ ರಚನೆಯ ಬಗ್ಗೆ ಅಧಿಕಾರಯುತವಾಗಿ ಹೇಳುವವನಾಗಿದ್ದನು. ಮೆದುಳು ಹಾಗೂ ಅದರಿಂದ ಹೊರಡುವ ನರಗಳ ಬಗ್ಗೆ ಆತನಿಗೆ ವಿಶೇಷವಾದ ಜ್ಞಾನವಿದ್ದು, ಅರಿಸ್ಟಾಟಲ್ ನಂತಹ ವಿದ್ವಾಂಸರ ಸಿದ್ಧಾಂತಗಳನ್ನೂ ಆತ ಪ್ರಶ್ನಿಸುವವನಾಗಿದ್ದನು. ಮುಂದೆ 16-17ನೇ ಶತಮಾನಗಳಲ್ಲಿ ಮಾನವ ಶರೀರ ಶಾಸ್ತ್ರದ ಬಗ್ಗೆ ಹೆಚ್ಚು ನಿಖರವಾದ ಅಧ್ಯಯನಗಳಾಗುವವರೆಗೂ ಗಾಲೆನ್ ನ ಸಿದ್ಧಾಂತಗಳು ಪ್ರಶ್ನಾತೀತವಾಗಿ ಉಳಿದಿದ್ದವು. ಹುಟ್ಟೂರು ಬರ್ಗಮದ ಮುಖ್ಯ ವೃತ್ತದಲ್ಲಿ ಗಾಲೆನ್ ನ ಮೂರ್ತಿಯೊಂದನ್ನು ಸ್ಥಾಪಿಸಿ ಗೌರವಿಸಲಾಗಿದೆ.

ಬರ್ಗಮದ ನರ-ಮನೋರೋಗ ಶುಶ್ರೂಷಾಲಯಗಳಂತಹಾ ಕೇಂದ್ರಗಳಲ್ಲಿ ಮೊದಲ್ಗೊಂಡ ವೈದ್ಯವಿಜ್ಞಾನವು ಇಂದು ಅತ್ಯಾಧುನಿಕ ತಂತ್ರಜ್ಞಾನಗಳನ್ನೂ, ಚಿಕಿತ್ಸಾವಿಧಾನಗಳನ್ನೂ ಅಳವಡಿಸಿಕೊಂಡು ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯಂತಹಾ ಮಹಾನ್ ಸಂಶೋಧನಾ ಕೇಂದ್ರಗಳ ಮಟ್ಟಕ್ಕೆ ಬೆಳೆದಿರುವ ದಾರಿಯನ್ನು ನೋಡುವಾಗ ಅಚ್ಚರಿಯಾಗದಿರದು.

ಇಪ್ಪತ್ತೊಂಬತ್ತನೇ ಬರಹ : ವಿರೂಪಗೊಂಡಿರುವ ವೈದ್ಯಕೀಯ ಪ್ರವೇಶ ಪರೀಕ್ಷೆಗಳು [ಜುಲೈ 24, 2013, ಬುಧವಾರ] [ನೋಡಿ | ನೋಡಿ]

ಪ್ರಾಮಾಣಿಕ ವಿದ್ಯಾರ್ಥಿಗಳ ಹೋರಾಟದಿಂದ ಜಾರಿಗೆ ಬಂದ ಪ್ರವೇಶ ಪರೀಕ್ಷೆ ಖಾಸಗಿ ಸಂಸ್ಥೆಗಳ ಸೊತ್ತಾಗಿದೆ

ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಬಯಸುವ ವಿದ್ಯಾರ್ಥಿಗಳ ಗುಣಮಟ್ಟವನ್ನು ಕಾಯ್ದುಕೊಳ್ಳುವುದಕ್ಕಾಗಿ ರಾಷ್ಟ್ರಾದಾದ್ಯಂತ ಏಕರೂಪದ, ಕೇಂದ್ರೀಯ ನಿಯಂತ್ರಣದ ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ನಡೆಸಬೇಕೆನ್ನುವ ಭಾರತೀಯ ವೈದ್ಯಕೀಯ ಪರಿಷತ್ತಿನ ಯೋಜನೆಗೆ ಕೊಡಲಿ ಬಿದ್ದಿದೆ. ಆರಂಭದಲ್ಲಿ ಅದಕ್ಕೆ ಬೆಂಬಲ ನೀಡಿದ್ದ ಸರ್ವೋಚ್ಛ ನ್ಯಾಯಾಲಯವು ಈಗ ಮನಸ್ಸು ಬದಲಿಸಿದೆ. ಇದರೊಂದಿಗೆ ಪ್ರವೇಶ ಪರೀಕ್ಷೆಗಳಿಗಾಗಿಯೂ, ಅವುಗಳಲ್ಲಿ ಪಾರದರ್ಶಕತೆಗಾಗಿಯೂ ದಶಕಗಳ ಹಿಂದೆ ವಿದ್ಯಾರ್ಥಿಗಳು ನಡೆಸಿದ ಹೋರಾಟಗಳ ಆಶಯಗಳೆಲ್ಲ ಮಣ್ಣು ಮುಕ್ಕಿವೆ.

ಮೂವತ್ತು ವರ್ಷಗಳ ಹಿಂದಿನ ಮಾತು. ನಾನು ಫ್ರೌಢ ಶಿಕ್ಷಣ ಮುಗಿಸಿ ಪದವಿಪೂರ್ವ ಶಿಕ್ಷಣ ನಡೆಸುತ್ತಿದ್ದ ಕಾಲವದು. ಆಗ ವೃತ್ತಿ ಶಿಕ್ಷಣಕ್ಕೆ ಪ್ರವೇಶ ಪರೀಕ್ಷೆಗಳಿರಲಿಲ್ಲ. ಈಗಿರುವಷ್ಟು ವೃತ್ತಿಶಿಕ್ಷಣ ಸಂಸ್ಥೆಗಳೂ ಇರಲಿಲ್ಲ. ರಾಜ್ಯದಲ್ಲಿ ಇದ್ದ ನಾಲ್ಕು ಸರಕಾರಿ ಹಾಗೂ ಆರೇಳು ಖಾಸಗಿ ವೈದ್ಯಕೀಯ ಕಾಲೇಜುಗಳು ಆಯಾ ಊರಿನ ವಿಶ್ವವಿದ್ಯಾಲಯಗಳಡಿಯಲ್ಲಿದ್ದು, ವೈದ್ಯಕೀಯ ಶಿಕ್ಷಣ ಇಲಾಖೆಯ ನಿಯಂತ್ರಣಕ್ಕೊಳಪಟ್ಟಿದ್ದವು. ಎಲ್ಲ ಅಧಿಕಾರವೂ ಈ ಇಲಾಖೆಯ ನಿರ್ದೇಶಕರಲ್ಲೇ ಇದ್ದು, ಪದವಿಪೂರ್ವ ಪರೀಕ್ಷೆಗಳಲ್ಲಿ ಪಡೆದ ಅಂಕಗಳ ಆಧಾರದಲ್ಲೇ ಈ ಕಾಲೇಜುಗಳಿಗೆ ಪ್ರವೇಶ ನೀಡಲಾಗುತ್ತಿತ್ತು. ಸಹಜವಾಗಿಯೇ ಈ ಪ್ರಕ್ರಿಯೆಯ ಪಾರದರ್ಶಕತೆಯ ಬಗ್ಗೆ ಬಲವಾದ ಸಂಶಯಗಳು ಎಲ್ಲರಲ್ಲೂ ಇದ್ದವು. ಜೊತೆಗೆ ಪದವಿ ಪೂರ್ವ ಪರೀಕ್ಷೆಗಳ ಅಂಕಗಳೇ ನಿರ್ಣಾಯಕವಾಗಿದ್ದರಿಂದ ಆಗಿನ ಕೆಲ ವರ್ಷಗಳಲ್ಲಿ ಆ ಪರೀಕ್ಷೆಗಳಲ್ಲೂ ಮೋಸಗಳು ಹೆಚ್ಚತೊಡಗಿದ್ದವು. ಸಾಮೂಹಿಕ ನಕಲು, ಮೌಲ್ಯಮಾಪನದಲ್ಲಿ ವಶೀಲಿ, ಅಂಕಪಟ್ಟಿಯಲ್ಲಿ ತಿದ್ದುಪಡಿ, ಕೊನೆಗೆ ವೈದ್ಯಕೀಯ ಶಿಕ್ಷಣ ಇಲಾಖೆಯೊಳಗೂ ಪಿತೂರಿ – ಇವೆಲ್ಲವುಗಳಿಂದಾಗಿ ಪ್ರತಿಭಾವಂತರಾದ,  ಪ್ರಾಮಾಣಿಕರಾದ ವಿದ್ಯಾರ್ಥಿಗಳಿಗೆ ದಿಕ್ಕಿಲ್ಲದಂತಾಗಿತ್ತು. ಕೆರಳಿದ ವಿದ್ಯಾರ್ಥಿಗಳು ರಾಜ್ಯಾದಾದ್ಯಂತ ಬೀದಿಗಿಳಿದು ಹೋರಾಡಿದ ಫಲವಾಗಿ 1984ರಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಆರಂಭಿಸಲಾಯಿತು.

ಆಗ ಸ್ನಾತಕೋತ್ತರ ಪ್ರವೇಶವು ಕೂಡಾ ಅಂತಿಮ ಎಂಬಿಬಿಎಸ್ ನಲ್ಲಿ ಗಳಿಸಿದ ಅಂಕಗಳ ಆಧಾರದಲ್ಲೇ ನಡೆಯುತ್ತಿತ್ತು. ಖಾಸಗಿ ಕಾಲೇಜುಗಳಲ್ಲಿ ಎಂಬಿಬಿಎಸ್ ಕಲಿತ ವಿದ್ಯಾರ್ಥಿಗಳು ಸುಲಭದಲ್ಲಿ ಹೆಚ್ಚು ಅಂಕಗಳನ್ನು ಗಳಿಸುತ್ತಿದ್ದಲ್ಲಿ, ಹೆಚ್ಚು ಶಿಸ್ತಿನ ಸರಕಾರಿ ಕಾಲೇಜಿನ ವಿದ್ಯಾರ್ಥಿಗಳು ಕಡಿಮೆ ಅಂಕಗಳನ್ನು ಗಳಿಸಿ ಸ್ನಾತಕೋತ್ತರ ಪ್ರವೇಶದಿಂದ ವಂಚಿತರಾಗುತ್ತಿದ್ದುದು ಸಾಮಾನ್ಯವಾಗಿತ್ತು. ಆ ವಿದ್ಯಾರ್ಥಿಗಳ ನಿರಂತರ ಹೋರಾಟದಿಂದ ಸ್ನಾತಕೋತ್ತರ ಪ್ರವೇಶ ಪರೀಕ್ಷೆಯೂ ಆರಂಭವಾಯಿತು. ಮುಂದೆ ರಾಷ್ಟ್ರ ಮಟ್ಟದ ಪ್ರವೇಶ ಪರೀಕ್ಷೆಗಳೂ ಆರಂಭಗೊಂಡವು.

ಕಿಟಿಕಿಯಲ್ಲಿ ಹೊರಕಳಿಸಿದ ಪಿಶಾಚಿಯು ಗವಾಕ್ಷಿಯಲ್ಲಿ ನುಸುಳುವುದಕ್ಕೆ ಹೆಚ್ಚು ಸಮಯ ತಗಲಲಿಲ್ಲ. ಹಣದ ಬಲದಿಂದಲೋ, ವಶೀಲಿಯಿಂದಲೋ ಅಂಕಪಟ್ಟಿಗಳನ್ನು ಬದಲಿಸುತ್ತಿದ್ದವರು ಪ್ರವೇಶ ಪರೀಕ್ಷೆಯನ್ನು ಬೇಧಿಸುವ ದಾರಿಗಳನ್ನೂ ಕಂಡುಕೊಂಡರು. ಮೌಲ್ಯಮಾಪನವನ್ನು ಗಣಕೀಕರಿಸುವವರು, ಮೇಲಧಿಕಾರಿಗಳು ಹಾಗೂ ಉಸ್ತುವಾರಿ ಸಚಿವರುಗಳವರೆಗೆ ಹಣದ ಕೈಗಳು ಚಾಚಿಕೊಂಡು ಉನ್ನತ ಶ್ರೇಣಿಗಳೆಲ್ಲ ಬಿಕರಿಗೆ ಬಿದ್ದವು. ಪ್ರಶ್ನೆಪತ್ರಿಕೆಗಳು ಮಾತ್ರವಲ್ಲ, ಅತ್ಯಂತ ಗೌಪ್ಯವಾದ ಉತ್ತರಪಟ್ಟಿಗಳೂ ಸೋರತೊಡಗಿದವು. ಹೀಗೆ ಅಡ್ಡದಾರಿಯಿಂದ ಬೇಧಿಸಿದವರೇ ಸೀಟುಗಳನ್ನೆಲ್ಲ ಬಾಚಿಕೊಳ್ಳತೊಡಗಿದಾಗ ಪ್ರತಿಭಾವಂತ ಪ್ರಾಮಾಣಿಕರು ಮತ್ತೆ ಬೀದಿಗಿಳಿದರು. ಪ್ರವೇಶ ಪರೀಕ್ಷೆಗಳನ್ನು ಸಂಪೂರ್ಣವಾಗಿ ಪಾರದರ್ಶಕಗೊಳಿಸುವುದಕ್ಕಾಗಿ ಸರಿಯುತ್ತರಗಳ ಪಟ್ಟಿಯನ್ನು ಬಹಿರಂಗಗೊಳಿಸಬೇಕು, ಉತ್ತರ ಪತ್ರಿಕೆಗಳನ್ನು ಪರೀಕ್ಷಿಸಗೊಡಬೇಕು, ಎಲ್ಲಾ ಶ್ರೇಣಿಗಳವರ ಅಂಕಗಳನ್ನು ಹೊರಗೆಡಹಬೇಕು ಮುಂತಾದ ಬೇಡಿಕೆಗಳನ್ನಿಟ್ಟು ಅಂದಿನ ವಿದ್ಯಾರ್ಥಿಗಳು ಹೋರಾಡಿದ್ದರಿಂದಲೇ ಪ್ರವೇಶ ಪರೀಕ್ಷೆಗಳು ಇಂದಿನ ಈ ರೂಪವನ್ನು ಪಡೆದುಕೊಳ್ಳಲು ಸಾಧ್ಯವಾಯಿತೆನ್ನುವುದನ್ನು ಮರೆಯಬಾರದು.

ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರತಿಭೆಗೆ ಬಾಗಿಲು ಮುಚ್ಚಿ ಹಣದ ಚೀಲಗಳಿಗೆ ದಾರಿ ತೆರೆದಿಡುವುದು ಮೊದಲಿನಿಂದಲೂ ಇತ್ತು. ಖಾಸಗಿ ಕಾಲೇಜುಗಳು ಒಂದಿಲ್ಲೊಂದು ಕಾರಣ ಹೇಳಿ ಪ್ರವೇಶ ಪರೀಕ್ಷೆಗಳಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರವೇಶವನ್ನು ನಿರಾಕರಿಸುವ ಕ್ರಮವು ಅಂದಿನಿಂದ ಇಂದಿನವರೆಗೆ ನಡೆದೇ ಇದೆ. ಖಾಸಗಿ ಕಾಲೇಜುಗಳಲ್ಲಿ ಸರಕಾರಿ ಸೀಟುಗಳ ಸಂಖ್ಯೆಯ ಬಗ್ಗೆ ಹಾಗೂ ಆ ಸೀಟುಗಳಿಗೆ ವಿಧಿಸುವ ಶುಲ್ಕದ ಬಗ್ಗೆ ಜಗ್ಗಾಟವೂ ಪ್ರತಿ ವರ್ಷದ ಪರಂಪರೆಯಾಗಿಬಿಟ್ಟಿದೆ. ಎಂಬತ್ತು-ತೊಂಬತ್ತರ ದಶಕಗಳಲ್ಲಿ ವಿದ್ಯಾರ್ಥಿಗಳು ನಡೆಸಿದ ಹೋರಾಟಗಳಿಂದಾಗಿ ಸಾಮಾನ್ಯ ಪ್ರವೇಶ ಪರೀಕ್ಷೆಯ ಮೂಲಕ ಖಾಸಗಿ ಕಾಲೇಜುಗಳಲ್ಲಿ ಪ್ರವೇಶ ಪಡೆದವರಿಗೆ ಸರಕಾರಿ ಕಾಲೇಜುಗಳಲ್ಲಿರುವಂತೆ ಏಕರೂಪದ ಶುಲ್ಕ ನೀಡುವ ವ್ಯವಸ್ಥೆಯು ಜಾರಿಯಾಗಿತ್ತು. ಕೆಲವೇ ವರ್ಷಗಳಲ್ಲಿ ಇದು ಬದಲಾಗಿ, ಖಾಸಗಿ ಕಾಲೇಜುಗಳ ಶುಲ್ಕವು ಏರತೊಡಗಿತು. ಈಗ ಖಾಸಗಿ ಕಾಲೇಜುಗಳಲ್ಲಿ ಸರಕಾರಿ ಸೀಟುಗಳ ಪ್ರಮಾಣವು ಕಿರಿದಾಗುತ್ತಿದೆ, ಶುಲ್ಕವು ಇನ್ನಷ್ಟು ಏರುತ್ತಿದೆ. ಸರಕಾರಿ ಲೆಕ್ಕದ ಸೀಟುಗಳನ್ನು ಕೊನೆ ಘಳಿಗೆಯವರೆಗೆ ಹಿಡಿದಿಟ್ಟು ನಂತರ ಹಣವಿದ್ದವರಿಗೆ ವರ್ಗಾಯಿಸುವ ಮೋಸಗಳೂ ನಡೆಯುತ್ತಲಿವೆ. ಸ್ನಾತಕೋತ್ತರ ವ್ಯಾಸಂಗದಲ್ಲಿ ಕೋಟಿಗಟ್ಟಲೆ ಮೌಲ್ಯದ ಸೀಟುಗಳನ್ನು ತಾವೇ ಉಳಿಸಿಕೊಳ್ಳುವ ಖಾಸಗಿ ಕಾಲೇಜುಗಳು ಹೆಚ್ಚು ಬೇಡಿಕೆಯಿಲ್ಲದ ವಿಭಾಗಗಳ ಸೀಟುಗಳನ್ನು ಸರಕಾರಕ್ಕೆ ಬಿಟ್ಟುಕೊಟ್ಟು ಲೆಕ್ಕ ತುಂಬಿಸುವ ನಾಟಕವು ಕೂಡ ಅಂದಿನಿಂದಲೇ ನಡೆಯುತ್ತಿದೆ. ಯಾವುದೇ ಪಕ್ಷವು ಅಧಿಕಾರದಲ್ಲಿದ್ದರೂ ಸ್ವತಃ ಕಾಲೇಜುಗಳನ್ನು ನಡೆಸುತ್ತಿರುವವರೇ ಮಂತ್ರಿಗಳಾಗಿ ಕಣ್ಣು ಮುಚ್ಚಿಕೊಳ್ಳುವುದು ನಿಯಮವೇ ಆಗಿಬಿಟ್ಟಿದೆ.

ತೊಂಬತ್ತರ ದಶಕದಿಂದ ಖಾಸಗಿ ಕಾಲೇಜುಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗುವುದರೊಂದಿಗೆ ಅವುಗಳೊಳಗೆ ಸ್ಪರ್ಧೆಯೂ ಹೆಚ್ಚಿತು. ಕಾಲೇಜು ಭರ್ತಿ ಮಾಡಿಕೊಳ್ಳುವುದಕ್ಕೆ ಎಂಥವರನ್ನಾದರೂ ಸೇರಿಸಿಕೊಳ್ಳುವ ಪ್ರವೃತ್ತಿ ಸಾಮಾನ್ಯವಾಯಿತು. ವೈದ್ಯಕೀಯ ಪ್ರವೇಶಕ್ಕೆ ವಿದ್ಯಾರ್ಥಿಯ ಆಸಕ್ತಿ-ಪ್ರತಿಭೆಗಳಿಗಿಂತ ಹೆತ್ತವರ ಶ್ರೀಮಂತಿಕೆಯೊಂದೇ ಅರ್ಹತೆಯಾಯಿತು. ಹಣ ಕೊಟ್ಟರೆ ಎಂಥವರಿಗೂ ಪ್ರವೇಶವೊದಗಿಸುವ ದಲ್ಲಾಳಿ ದಂಧೆ ಆರಂಭವಾಯಿತು, ಇದರ ವಿರುದ್ಧವಾಗಿ ಮಾಧ್ಯಮಗಳಲ್ಲಿ ಗದ್ದಲವಾಗಿ, ಜನಾಭಿಪ್ರಾಯವು ಬಲಗೊಂಡಾಗ ಸರಕಾರಗಳೂ, ನ್ಯಾಯಾಲಯಗಳೂ ಎಚ್ಚೆತ್ತುಕೊಂಡು ವೈದ್ಯಕೀಯ ಪ್ರವೇಶಕ್ಕೆ ಪ್ರತಿಭೆಯೊಂದೇ ಮಾನದಂಡವಾಗಿರಬೇಕೆನ್ನುವ ನಿಯಮಗಳು ಬಂದವು.

ಆದರೆ ಹಣದ ಸದ್ದಿನಲ್ಲಿ ಇಂತಹಾ ನಿಯಮಗಳು ನಿಲ್ಲುತ್ತವೆಯೇ? ಖಾಸಗಿ ಕಾಲೇಜುಗಳು ಪ್ರವೇಶ ಪರೀಕ್ಷೆಗಳನ್ನೇ ನಿಯಂತ್ರಿಸಹೊರಟವು. ಸ್ವತಂತ್ರ ಸಂಸ್ಥೆಗಳು ನಡೆಸುವ ಪಾರದರ್ಶಕ ಪರೀಕ್ಷೆಗಳಲ್ಲಿ ಹಸ್ತಕ್ಷೇಪಕ್ಕೆ ಅವಕಾಶಗಳಿಲ್ಲದಿರುವುದರಿಂದ ಖಾಸಗಿ ಕಾಲೇಜುಗಳು ಒಗ್ಗೂಡಿ ತಮ್ಮದೇ ಆದ ಪ್ರವೇಶ ಪರೀಕ್ಷೆಗಳನ್ನು ಆರಂಭಿಸಿಬಿಟ್ಟವು. ಮೊದಲು ಅಂತಹಾ ಒಂದು ಪರೀಕ್ಷೆಯಷ್ಟೇ ಇದ್ದರೆ ಈಗ ಪ್ರತೀ ಕಾಲೇಜಿಗೂ ತನ್ನದೇ ಆದ ಪರೀಕ್ಷೆಯೆಂಬ ಸ್ಥಿತಿಯುಂಟಾಗಿದೆ.

ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯುವುದಕ್ಕೆ ಸ್ವತಂತ್ರವಾದ ಪ್ರವೇಶ ಪರೀಕ್ಷೆಗಳೊಂದೇ ಮಾನದಂಡವಾಗಿರಬೇಕೆಂಬ ಭಾರತೀಯ ವೈದ್ಯಕೀಯ ಪರಿಷತ್ತಿನ ಉಪಕ್ರಮಕ್ಕೆ ಈಗ ಸರ್ವೋಚ್ಛ ನ್ಯಾಯಾಲಯವೇ ಕೊಡಲಿಯೇಟು ನೀಡಿರುವುದರಿಂದ ಖಾಸಗಿ ಕಾಲೇಜುಗಳ ಹಾದಿಯು ನಿರಾಳವಾಗಿದೆ. ವಿವಿಧ ಮೈತ್ರಿ ಕೂಟಗಳು,ಜಾತಿ-ಧರ್ಮ-ಭಾಷೆಗಳ ಕೂಟಗಳು, ಪರಿಗಣಿತ ವಿಶ್ವವಿದ್ಯಾಲಯಗಳು ಇವೇ ಮುಂತಾದ ಹೆಸರುಗಳಲ್ಲಿ ಹಲವಾರು ಪ್ರವೇಶ ಪರೀಕ್ಷೆಗಳು ಈಗಾಗಲೇ ನಡೆಯುತ್ತಿದ್ದು,ಮುಂದೆ ಪ್ರತೀ ಕಾಲೇಜು ತನ್ನದೇ ಆದ ಪರೀಕ್ಷೆಗಳನ್ನು ನಡೆಸಬಹುದು. ಖಾಸಗಿ ಕಾಲೇಜುಗಳಿಗೆ ಈ ಪ್ರವೇಶ ಪರೀಕ್ಷೆಗಳಲ್ಲೂ ಸಾಕಷ್ಟು ಸಂಪಾದನೆಯಾಗುತ್ತದೆ. ಒಬ್ಬನಿಗೆ 1000 ರೂಪಾಯಿಯಂತೆ 5000 ವಿದ್ಯಾರ್ಥಿಗಳು ಪರೀಕ್ಷೆ ಬರೆದರೂ 50 ಲಕ್ಷ ರೂಪಾಯಿ ಗಿಟ್ಟುತ್ತದೆ; ಇನ್ನು ಹೆಚ್ಚಿನ ದರದಲ್ಲಿ ಸಾವಿರಗಟ್ಟಲೆ ವಿದ್ಯಾರ್ಥಿಗಳಿದ್ದರೆ ಸಂಪಾದನೆಯೆಷ್ಟೆಂದು ಲೆಕ್ಕ ಹಾಕಬಹುದು. ಈ ಪರೀಕ್ಷೆಗಳು ಸಂಪೂರ್ಣವಾಗಿ ಆಯಾ ಕಾಲೇಜುಗಳ ನಿಯಂತ್ರಣದಲ್ಲೇ ಇರುವುದರಿಂದ ಅವುಗಳ ಮೌಲ್ಯಮಾಪನದಲ್ಲಿ ಮೋಸವಾಗದೆನ್ನುವ ಖಾತರಿಯಿಲ್ಲ, ಮೊದಲೇ ಹಣ ಕೊಟ್ಟವರಿಗೆ ಉನ್ನತ ಶ್ರೇಣಿ ದೊರೆಯುವ ಸಾಧ್ಯತೆಗಳೂ ಇಲ್ಲದಿಲ್ಲ. ಎಂಬಿಬಿಎಸ್ ಪದವಿಗೆ 50-70 ಲಕ್ಷದಿಂದ ಹಿಡಿದು  ನಂತರ ಸ್ನಾತಕೋತ್ತರ ಹಾಗೂ ಅತಿ ವಿಶೇಷ ವ್ಯಾಸಂಗಕ್ಕೆ 1-5 ಕೋಟಿ ದರವಿದೆ (ವಾರ್ಷಿಕ ಶುಲ್ಕ ಪ್ರತ್ಯೇಕ) ಎಂದು ಬಲ್ಲವರು ಹೇಳುತ್ತಾರೆ. ಇಂತಹ ಪ್ರವೇಶಾತಿಗಳನ್ನಾಗಲೀ, ಆ ಸಂಸ್ಥೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನಾಗಲೀ, ಅಂತಿಮ ಪರೀಕ್ಷೆಗಳ ಸಾಚಾತನವನ್ನಾಗಲೀ ನಿಯಂತ್ರಿಸುವ ಯಾವ ಯೋಚನೆಯೂ ಸರಕಾರಗಳ ಬಳಿ ಇದ್ದಂತಿಲ್ಲ. ಪೋಷಕರಿಗೂ ತಮ್ಮ ಮಕ್ಕಳು ಒಳ್ಳೆಯ ವಿದ್ಯಾಭ್ಯಾಸವನ್ನು ಪಡೆಯುವುದಕ್ಕಿಂತಲೂ ಬೇಗನೇ ಪಡೆಯುವುದೇ ಮುಖ್ಯವಾಗಿರುವಂತೆ ತೋರುತ್ತದೆ.

ಒಟ್ಟಿನಲ್ಲಿ ಅಂದಿನ ವಿದ್ಯಾರ್ಥಿಗಳ ಹೋರಾಟಗಳಿಂದ ಜಾರಿಗೆ ಬಂದ ಪ್ರವೇಶ ಪರೀಕ್ಷೆಗಳನ್ನೂ, ಏಕರೂಪದ ಶುಲ್ಕ ವ್ಯವಸ್ಥೆಗಳನ್ನೂ ಕಳೆದುಕೊಳ್ಳುವ ಸ್ಥಿತಿ ಬಂದುಬಿಟ್ಟಿದೆ. ಅಂದಿನ ಹೋರಾಟಗಳಲ್ಲಿ ಭಾಗಿಗಳಾಗಿದ್ದವರ ಮಕ್ಕಳು ಈಗ ವೃತ್ತಿಪರ ಶಿಕ್ಷಣದ ಹೊಸ್ತಿಲಲ್ಲಿದ್ದು, ಹೆತ್ತವರಲ್ಲೂ, ವಿದ್ಯಾರ್ಥಿಗಳಲ್ಲೂ ಅಂದಿನ ಕೆಚ್ಚು ಮಾಯವಾಗಿದೆ, ಸಿಕ್ಕಿದ್ದು ಸಾಕೆಂದು ಕೈಮುಗಿದು ನಿಲ್ಲುವ ದೈನ್ಯತೆಗೆ ಇಂದಿನ ಪೀಳಿಗೆಯು ಶರಣಾದಂತಿದೆ. ವೃತ್ತಿಶಿಕ್ಷಣವನ್ನು ನಿಯಂತ್ರಿಸುವ ಪಗಡೆಯಾಟದಲ್ಲಿ ವೃತ್ತಿ ಘನತೆಯೇ ಮಣ್ಣುಪಾಲಾಗಿದೆ.

ಇಪ್ಪತ್ತೆಂಟನೇ ಬರಹ : ಹಳಿ ತಪ್ಪಿರುವ ಕ್ಷಯ ರೋಗ ನಿಯಂತ್ರಣ [ಜುಲೈ 10, 2013, ಬುಧವಾರ] [ನೋಡಿ | ನೋಡಿ]

ಸಾರ್ವತ್ರಿಕ ನಿರ್ಲಕ್ಷ್ಯದಿಂದ ಕ್ಷಯ ರೋಗವು ಪೆಡಂಭೂತವಾಗಿ ಬೆಳೆದಿದೆ

ಕವಿ ಮುದ್ದಣನ ಸಲ್ಲಾಪವನ್ನು ಮೂವತ್ತರ ಹರೆಯದಲ್ಲೇ ಮೊಟಕುಗೊಳಿಸಿದ್ದು ಕ್ಷಯ ರೋಗ. ಜಿನ್ನಾ, ಚೆಕೋವ್, ಕೀಟ್ಸ್, ಓರ್ವೆಲ್ ಮುಂತಾದವರು ಅಕಾಲಿಕವಾಗಿ ಸತ್ತಿದ್ದು ಅದರಿಂದಲೇ. ಆ ಕಾಲದಲ್ಲಿ ಕ್ಷಯ ರೋಗಕ್ಕೆ ಚಿಕಿತ್ಸೆಯೇ ಲಭ್ಯವಿರಲಿಲ್ಲ. ಈಗ ಕ್ಷಯರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಲ್ಲ ಹಲವು ಔಷಧಗಳಿದ್ದರೂ ನಮ್ಮಲ್ಲಿ ಎರಡು ನಿಮಿಷಗಳಿಗೊಬ್ಬರು ಅದರಿಂದ ಸಾಯುತ್ತಲೇ ಇದ್ದಾರೆ. ಹೀಗೇ ಮುಂದುವರಿದರೆ ಲಭ್ಯ ಔಷಧಗಳೂ ನಿರುಪಯುಕ್ತವಾಗಿ ಶತಮಾನಗಳ ಹಿಂದಿದ್ದ ದುಸ್ಥಿತಿಯು ಮರುಕಳಿಸುವ ಎಲ್ಲ ಸಾಧ್ಯತೆಗಳೂ ಗೋಚರಿಸುತ್ತಿವೆ.

ನಮ್ಮ ದೇಶದಲ್ಲಿ 30 ಲಕ್ಷಕ್ಕೂ ಹೆಚ್ಚು (ಅನಧಿಕೃತವಾಗಿ 85 ಲಕ್ಷ) ಜನ ಕ್ಷಯ ರೋಗದಿಂದ ಬಳಲುತ್ತಿದ್ದಾರೆಂದು ಅಂದಾಜಿಸಲಾಗಿದ್ದು, ಪ್ರತಿ ವರ್ಷ 20 ಲಕ್ಷಕ್ಕೂ ಹೆಚ್ಚು ಜನ ಹೊಸದಾಗಿ ಕ್ಷಯ ರೋಗವನ್ನು ಅಂಟಿಸಿಕೊಳ್ಳುತ್ತಾರೆ, 3 ಲಕ್ಷದಷ್ಟು ರೋಗಿಗಳು ಪ್ರತಿ ವರ್ಷ ಸಾವನ್ನಪ್ಪುತ್ತಾರೆ. ವರ್ಷಕ್ಕೆ ಸುಮಾರು ಒಂದು ಲಕ್ಷದಷ್ಟು ರೋಗಿಗಳಲ್ಲಿ ಔಷಧಗಳಿಗೆ ಬಗ್ಗದ ಕ್ಷಯ ರೋಗವು ಗುರುತಿಸಲ್ಪಡುತ್ತಿದ್ದು, ಅದಕ್ಕೆ ಸೂಕ್ತವಾದ ಚಿಕಿತ್ಸೆಯನ್ನು ಪಡೆಯುವವರ ಪ್ರಮಾಣವು ಶೇ. 1 ಕ್ಕೂ ಕಡಿಮೆಯಿರುವುದರಿಂದ ಅದು ಇನ್ನಷ್ಟು ವ್ಯಾಪಿಸುವ ಅಪಾಯವಿದೆ. ಜೊತೆಗೆ ಕ್ಷಯ ರೋಗಕ್ಕೆ ಸುಲಭದಲ್ಲಿ ತುತ್ತಾಗಬಲ್ಲ ಹೆಚ್ಐವಿ ಪೀಡಿತರ ಸಂಖ್ಯೆಯು ಸುಮಾರು 23 ಲಕ್ಷದಷ್ಟಿದೆ. ಕ್ಷಯ ರೋಗವನ್ನುಂಟು ಮಾಡುವ ಬ್ಯಾಕ್ಟೀರಿಯಾವನ್ನು ಗುರುತಿಸಿ 130 ವರ್ಷಗಳಾದವು; ಅದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿ, ರೋಗವನ್ನು ಗುಣಪಡಿಸಬಲ್ಲ ಔಷಧಗಳು ಬಂದು 70 ವರ್ಷಗಳಾದವು. ಹಾಗಿದ್ದರೂ ಅದನ್ನು ಹದ್ದುಬಸ್ತಿನಲ್ಲಿಡುವುದಕ್ಕೆ ಸಾಧ್ಯವಾಗಿಲ್ಲವೇಕೆ?

ಕ್ಷಯವನ್ನುಂಟು ಮಾಡುವ ಬ್ಯಾಕ್ಟೀರಿಯಾವು ಬಹಳ ನಿಧಾನವಾಗಿ ವೃದ್ಧಿಯಾಗುತ್ತದೆ, ನಿಧಾನವಾಗಿ ರೋಗವನ್ನುಂಟು ಮಾಡಿ ಒಂದೆರಡು ವರ್ಷಗಳಲ್ಲಿ ರೋಗಿಯನ್ನು ಕೊಲ್ಲುತ್ತದೆ. ಇದೇ ಕಾರಣಕ್ಕೆ ಕ್ಷಯ ರೋಗವನ್ನು ಗುರುತಿಸುವಲ್ಲೂ ತಡವಾಗುತ್ತದೆ, ಚಿಕಿತ್ಸೆಗೂ ಹೆಚ್ಚು ಕಾಲ ತಗಲುತ್ತದೆ ಹಾಗೂ ಅದು ಹರಡುವುದಕ್ಕೆ ಅನುಕೂಲವಾಗುತ್ತದೆ. ಹಿಂದೆ 1940-60ರ ದಶಕಗಳಲ್ಲಿ ಕ್ಷಯ ರೋಗಕ್ಕೆ ಒಂದೆರಡು ವರ್ಷಗಳವರೆಗೂ ಔಷಧಗಳನ್ನು ನೀಡಲಾಗುತ್ತಿತ್ತು ಹಾಗೂ ರೋಗಿಗಳನ್ನು ಊರ ಹೊರಗಿನ ಶುಶ್ರೂಷಾಲಯಗಳಲ್ಲಿರಿಸಲಾಗುತ್ತಿತ್ತು. ನಂತರ ರಿಫಾಂಪಿಸಿನ್, ಪೈರಜಿನಮೈಡ್ ಮುಂತಾದ ಉತ್ತಮ ಔಷಧಗಳು ಲಭ್ಯವಾದಾಗ ಮನೆಯಲ್ಲಿಯೇ ಆರು ತಿಂಗಳುಗಳ ಚಿಕಿತ್ಸೆಯನ್ನು ನೀಡಲು ಸಾಧ್ಯವಾಯಿತು, ಸರಿಯಾಗಿ ಚಿಕಿತ್ಸೆ ಪಡೆದ ಶೇ. 95ರಷ್ಟು ರೋಗಿಗಳು ಸಂಪೂರ್ಣವಾಗಿ ಗುಣ ಹೊಂದುವಂತಾಯಿತು. ಆದರೆ ಈಗ ಮತ್ತೊಮ್ಮೆ ರೋಗಿಗಳನ್ನು ದೂರವಿಟ್ಟು ಲಕ್ಷಗಟ್ಟಲೆ ವೆಚ್ಚದಲ್ಲಿ ವರ್ಷಗಟ್ಟಲೆ ಚಿಕಿತ್ಸೆ ನೀಡಬೇಕಾದ ಸ್ಥಿತಿಯುಂಟಾಗಿದೆ.

ಕ್ಷಯರೋಗಿಗಳು ಸರಿಯಾದ ಚಿಕಿತ್ಸೆಯನ್ನು ಸೇವಿಸುವಲ್ಲಿ ವಿಫಲರಾಗುತ್ತಿರುವುದು ಈ ದುಸ್ಥಿತಿಗೆ ಅತಿ ಮುಖ್ಯವಾದ ಕಾರಣ. ಬಡತನ, ಅಜ್ಞಾನ, ಮದ್ಯಪಾನ, ವೈದ್ಯಕೀಯ ಸೌಲಭ್ಯಗಳ ಕೊರತೆ ಇತ್ಯಾದಿಗಳಿಂದಾಗಿ ಹಲವರಲ್ಲಿ ರೋಗವೇ ಪತ್ತೆಯಾಗುವುದಿಲ್ಲ. ರೋಗವು ಗುರುತಿಸಲ್ಪಟ್ಟಿರುವವರಲ್ಲೂ ಹಲವರು, ಮುಖ್ಯವಾಗಿ ವೈದ್ಯರ ಹಾಗೂ ಮನೆಯವರ ನಿಗಾವಣೆಯಿಲ್ಲದವರು, ಊರಿಂದೂರು ಸುತ್ತುವವರು, ಪದೇ ಪದೇ ವೈದ್ಯರನ್ನು ಬದಲಾಯಿಸುವವರು, ಚಿಕಿತ್ಸೆಯಿಂದ ವಂಚಿತರಾಗುತ್ತಾರೆ ಯಾ ಅದನ್ನು ಅರೆಬರೆಯಾಗಿ ಸೇವಿಸುತ್ತಾರೆ. ಕ್ಷಯ ರೋಗವನ್ನು ಸಂಪೂರ್ಣವಾಗಿ ತೊಡೆದುಹಾಕಬೇಕಾದರೆ 2-4 ಔಷಧಗಳನ್ನು ಕನಿಷ್ಠ 6 ತಿಂಗಳ ಕಾಲ ಎಡೆಬಿಡದೆ ಸೇವಿಸಬೇಕಾಗುತ್ತದೆ. ಒಂದೆರಡು ತಿಂಗಳಲ್ಲಿ ರೋಗಲಕ್ಷಣಗಳು ವಾಸಿಯಾದೊಡನೆ ಔಷಧಗಳನ್ನು ನಿಲ್ಲಿಸಿದರೆ ರೋಗವು ಮರುಕಳಿಸುತ್ತದೆ. ಔಷಧಗಳನ್ನು ಅರೆಬರೆಯಾಗಿ ಸೇವಿಸಿದರೆ ರೋಗವು ವಾಸಿಯಾಗುವುದಿಲ್ಲ ಮಾತ್ರವಲ್ಲ, ರೋಗಾಣುವು ಔಷಧಗಳಿಗೆ ಒಗ್ಗಿಕೊಂಡು ಚಿಕಿತ್ಸೆಯೇ ನಾಟದಂತಾಗುತ್ತದೆ. ಅಂತಹವರಿಂದ ಇನ್ನೊಬ್ಬರಿಗೆ ಕ್ಷಯವು ಸೋಂಕಿದರೆ ಅವರಲ್ಲೂ ಚಿಕಿತ್ಸೆ ನಾಟದಂತಹ ರೋಗವುಂಟಾಗುತ್ತದೆ.

ನಮ್ಮ ದೇಶದಲ್ಲಿ ಅರ್ಧಕ್ಕೂ ಹೆಚ್ಚು ಕ್ಷಯ ರೋಗಿಗಳು ಖಾಸಗಿ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಾರೆ. ಆದರೆ ಬಹಳಷ್ಟು ವೈದ್ಯರಲ್ಲಿ ಕ್ಷಯ ರೋಗದ ಪತ್ತೆ ಹಾಗೂ ಚಿಕಿತ್ಸೆಯ ಬಗ್ಗೆ ಅರಿವಿನ ಕೊರತೆಯಿರುವುದರಿಂದ ಹಲವು ಪ್ರಮಾದಗಳಿಗೆ ಕಾರಣವಾಗಿ, ರೋಗ ನಿಯಂತ್ರಣದಲ್ಲಿ ದೊಡ್ಡ ತೊಡಕಾಗುತ್ತಿದೆ. ಕ್ಷಯ ರೋಗ ಚಿಕಿತ್ಸೆಯ ಬಗ್ಗೆ ಏನೇನೂ ತಿಳಿದಿಲ್ಲದ ಬದಲಿ-ನಕಲಿ ವೈದ್ಯರೂ ಅದರ ಚಿಕಿತ್ಸೆಗೆ ಮುಂದಾಗುತ್ತಿರುವುದು ಆತಂಕದ ಸಂಗತಿಯಾಗಿದೆ. ಸಾಮಾನ್ಯ ಔಷಧಗಳಿಗೆ ಬಗ್ಗದ ಕ್ಷಯರೋಗಕ್ಕೆ ನೀಡಲಾಗುವ ವಿಶೇಷ ಔಷಧಗಳು ದುರುಪಯೋಗವಾಗುತ್ತಿರುವುದು ಅತ್ಯಂತ ಕಳವಳಕಾರಿಯಾಗಿದೆ. ಆದರೆ ಕ್ಷಯರೋಗ ನಿಯಂತ್ರಣದ ಜವಾಬ್ದಾರಿ ಹೊತ್ತಿರುವ ಸರಕಾರಿ ಇಲಾಖೆಗಳು ಹಾಗೂ ಖಾಸಗಿ ವೈದ್ಯರ ನಡುವೆ ಯಾವೊಂದು ರೀತಿಯ ಸಂವಹನವೇ ಇಲ್ಲದಿರುವುದರಿಂದ ಆಧುನಿಕ ವೈದ್ಯರಿಗೆ ಈ ಬಗ್ಗೆ ಸೂಕ್ತ ಮಾಹಿತಿಯು ದೊರೆಯುತ್ತಿಲ್ಲವೆನ್ನುವುದೂ ಅಷ್ಟೇ ಸತ್ಯವಾಗಿದೆ.

ಇತ್ತ ಕ್ಷಯರೋಗ ನಿಯಂತ್ರಣಕ್ಕಾಗಿ ಸರಕಾರವು ಹಮ್ಮಿಕೊಂಡಿರುವ ಕಾರ್ಯಕ್ರಮಗಳೂ ಅಪೇಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಕ್ಷಯರೋಗಕ್ಕೆ ಚಿಕಿತ್ಸೆ ಪಡೆಯಲಾಗದವರನ್ನು ತಲುಪುವ ಉದ್ದೇಶದಿಂದ 1962ರಲ್ಲಿ ರಾಷ್ಟ್ರೀಯ ಕ್ಷಯ ರೋಗ ನಿಯಂತ್ರಣ ಕಾರ್ಯಕ್ರಮವನ್ನು ಆರಂಭಿಸಲಾಗಿತ್ತು. ಆದರೆ ಸಾಕಷ್ಟು ಹಣವಿಲ್ಲದೆ,ಬೇಕಾದಷ್ಟು ಔಷಧಗಳಿಲ್ಲದೆ, ಹೆಚ್ಚಿನ (ಶೇ. 70ರಷ್ಟು) ರೋಗಿಗಳನ್ನು ತಲುಪಲಾಗದೆ, ಅರ್ಧಕ್ಕೂ ಹೆಚ್ಚಿನವರಿಗೆ ಸಂಪೂರ್ಣ ಚಿಕಿತ್ಸೆಯನ್ನು ನೀಡಲಾಗದೆ ಈ ಕಾರ್ಯಕ್ರಮವು ಸೋತು ಹೋಯಿತು. ಇದನ್ನೆಲ್ಲ ಸರಿಪಡಿಸುವ ಉದ್ದೇಶದಿಂದ 1993ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಮಧ್ಯ ಪ್ರವೇಶಿಸಿತು. ಆದಷ್ಟು ಹೆಚ್ಚು ಸಂಖ್ಯೆಯ ರೋಗಿಗಳಿಗೆ ವಾರಕ್ಕೆ ಮೂರು ಸಲ ನೇರ ನಿಗಾವಣೆಯಲ್ಲಿ ಔಷಧಗಳನ್ನು ನೀಡುವ ಯೋಜನೆಯನ್ನು ಭಾರತವೂ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಆರಂಭಿಸಲಾಯಿತು. ವಾರಕ್ಕೆ ಮೂರು ದಿನಗಳ ಈ ಚಿಕಿತ್ಸೆಯಲ್ಲಿ ಗುಣ ಹೊಂದುವವರ ಪ್ರಮಾಣವು ಶೇ. 85ರಷ್ಟಾದರೂ (ನಿತ್ಯದ ಚಿಕಿತ್ಸೆಯಲ್ಲಿ ಶೇ. 95ಕ್ಕೂ ಹೆಚ್ಚು), ರೋಗದ ಹರಡುವಿಕೆಯನ್ನು ತಡೆಯುವುದಕ್ಕೆ ಅದು ಸಾಕಾಗುತ್ತದೆ ಎಂದು ವಾದಿಸಲಾಯಿತು. ರೋಗಿಗಳು ಚಿಕಿತ್ಸೆಯಿಂದ ತಪ್ಪಿಸಿಕೊಳ್ಳದಂತೆ ನಿಗಾ ವಹಿಸುವುದಕ್ಕೆಂದು ಮೇಲ್ವಿಚಾರಕರನ್ನು ನೇಮಿಸಿ ಅವರಿಗೆ ಬೈಕು, ಪೆಟ್ರೋಲು ಇತ್ಯಾದಿಗಳನ್ನೆಲ್ಲ ಒದಗಿಸಲಾಯಿತು. ಹಲವು ಖಾಸಗಿ ಸಂಸ್ಥೆಗಳು, ಮಹಾದಾನಿಗಳು ಮುಂತಾದವರ ಸಹಯೋಗವನ್ನೂ ಪಡೆಯಲಾಯಿತು. ನಮ್ಮ ದೇಶದಲ್ಲಿ 1997ರಿಂದ ಹಂತಹಂತವಾಗಿ ಜಾರಿಗೊಂಡ ಈ ಪರಿಷ್ಕೃತ ಕಾರ್ಯಕ್ರಮವು 2006ರ ವೇಳೆಗೆ ಅತ್ಯಂತ ಫಲಪ್ರದವಾಯಿತೆಂದು ಕೊಚ್ಚಿಕೊಂಡದ್ದೂ ಆಯಿತು. ಹಲವು ಅಧ್ಯಯನಗಳು ಈ ಯೋಜನೆಯ ಲೋಪದೋಷಗಳನ್ನು ಎತ್ತಿ ತೋರಿಸಿದ್ದರೂ ಅವನ್ನೆಲ್ಲ ಕಡೆಗಣಿಸಿ ಏನೋ ಮಹತ್ತರವಾದುದನ್ನು ಸಾಧಿಸಲಾಗುತ್ತಿದೆಯೆಂದು ಬಿಂಬಿಸಲಾಯಿತು. ಆದರೆ ಬದ್ಧತೆಯ ಕೊರತೆಯಿಂದಾಗಿ ನಿಗಾವಣೆಯು ಸರಿಯಾಗಿಲ್ಲದೆ ಚಿಕಿತ್ಸೆಯಿಂದ ತಪ್ಪಿಸಿಕೊಳ್ಳುವವರನ್ನು ತಡೆಯುವುದಕ್ಕೆ ಸಾಧ್ಯವಾದಂತಿಲ್ಲ. ಔಷಧಗಳ ನಿರಂತರ ಪೂರೈಕೆಗೂ ಸಂಚಕಾರವೊದಗಿದ್ದು, ಮಕ್ಕಳ ಚಿಕಿತ್ಸೆಗೆ ಅಗತ್ಯವಾದ ಔಷಧಗಳೀಗ ದೊರೆಯುತ್ತಲೇ ಇಲ್ಲ. ಖಾಸಗಿ ವೈದ್ಯರನ್ನು ದೂರವಿಟ್ಟಿರುವುದರಿಂದ ಆ ರೋಗಿಗಳೂ ಹೊರಗುಳಿಯಲ್ಪಟ್ಟಿದ್ದಾರೆ, ಗೊಂದಲಗಳೂ ಮುಂದುವರಿದಿವೆ.

ಈ ಹೊಸ ಕಾರ್ಯಕ್ರಮವು ಜಾರಿಗೊಳ್ಳುತ್ತಿದ್ದ ಕಾಲದಲ್ಲೇ ಔಷಧಗಳಿಗೆ ಬಗ್ಗದ ಕ್ಷಯ ರೋಗವುಳ್ಳವರ ಸಂಖ್ಯೆಯೂ ಗಣನೀಯವಾಗಿ ಹೆಚ್ಚತೊಡಗಿತು. ಅದಕ್ಕೆ ಕಾರಣಗಳೇನೆಂದು ಆಳವಾಗಿ ವಿಶ್ಲೇಷಿಸುವ ಬದಲು ಅಂತಹಾ ರೋಗಿಗಳಿಗೂ ಚಿಕಿತ್ಸೆಯನ್ನು ನೀಡುವ (ಪ್ಲಸ್!) ಯೋಜನೆಯನ್ನು ತರಾತುರಿಯಲ್ಲಿ ಹಾಕಿಕೊಳ್ಳಲಾಯಿತು. ಇದು ಸಂಪೂರ್ಣವಾಗಿ ವಿಫಲವಾಗಿದ್ದು, ವರ್ಷಕ್ಕೆ ಸುಮಾರು ಒಂದು ಲಕ್ಷದಷ್ಟಾಗುವ ಅಂತಹಾ ರೋಗಿಗಳ ಪೈಕಿ ಕೇವಲ 3600ರಷ್ಟು ರೋಗಿಗಳಷ್ಟೇ ಈ ವಿಶೇಷ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಔಷಧಗಳ ಕೊರತೆಯಿಂದಾಗಿ ಅದೂ ಸಾಧ್ಯವಾಗುತ್ತಿಲ್ಲ. ಇನ್ನುಳಿದವರೆಲ್ಲ ತಮ್ಮದೇ ದಾರಿಯನ್ನು ಕಂಡುಕೊಳ್ಳಬೇಕಾಗಿದೆ. ಹೀಗೆ ಚಿಕಿತ್ಸಾ ನಿರೋಧಕ ಕ್ಷಯವುಳ್ಳ ರೋಗಿಗಳು ಸಾವನ್ನಪ್ಪುವ ಹಾಗೂ ಚಿಕಿತ್ಸಾ ನಿರೋಧಕ ಬ್ಯಾಕ್ಟೀರಿಯಾಗಳು ಇತರರಿಗೂ ಹರಡುವ ಅಪಾಯವು ಹೆಚ್ಚುತ್ತಲಿದೆ.

ಒಟ್ಟಿನಲ್ಲಿ ನಮ್ಮ ದೇಶದಲ್ಲೀಗ ಕ್ಷಯ ರೋಗ ನಿಯಂತ್ರಣ ಕಾರ್ಯಕ್ರಮವು ದಿಕ್ಕೆಟ್ಟು ನಿಂತಿದೆ. ಯಾವ ಔಷಧಗಳಿಗೂ ಬಗ್ಗದ ಕ್ಷಯರೋಗವು ಹೆಚ್ಚುತ್ತಿದ್ದಂತೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಹಿಡಿದು ನಮ್ಮ ಆರೋಗ್ಯ ಇಲಾಖೆಗಳವರೆಗೆ ಎಲ್ಲರೂ ಕೈ ಚೆಲ್ಲಿ ಕುಳಿತಿದ್ದಾರೆ. ಹಿಂದೆ 1993ರಲ್ಲಿ ವಾರಕ್ಕೆ ಮೂರು ದಿನಗಳ ಚಿಕಿತ್ಸೆಯನ್ನು ಸೂಚಿಸಿದ್ದ ವಿಶ್ವ ಆರೋಗ್ಯ ಸಂಸ್ಥೆಯು 2010ರಲ್ಲಿ ಮತ್ತೆ ಪ್ರತಿ ನಿತ್ಯದ ಚಿಕಿತ್ಸೆಯೇ ಉತ್ತಮವೆನ್ನುವ ನಿಲುವಿಗೆ ಮರಳುವ ಮೂಲಕ ಇನ್ನಷ್ಟು ಗೊಂದಲಕ್ಕೆ ಕಾರಣವಾಗಿದೆ. ಅದರಿಂದಾಗಿ ಈಗಿನ ಕ್ಷಯ ರೋಗ ನಿಯಂತ್ರಣ ಕಾರ್ಯಕ್ರಮದ ತಳಹದಿಯೇ ಕುಸಿದು ಬಿದ್ದಿದೆ. ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮವನ್ನು ಆಮೂಲಾಗ್ರವಾಗಿ ಪರಿಷ್ಕರಿಸಬೇಕಾದ ತುರ್ತು ಅಗತ್ಯವಿದ್ದು ರಾಜ್ಯ ಹಾಗೂ ಕೇಂದ್ರ ಸರಕಾರಗಳೂ,ವೈದ್ಯಕೀಯ ಸಂಘಟನೆಗಳೂ ಅದನ್ನು ಕಡೆಗಣಿಸಿದರೆ ಇಡೀ ದೇಶಕ್ಕೆ ವಿಪತ್ತು ಖಂಡಿತ. ಮಠ-ಮಂದಿರಗಳ ಜೀರ್ಣೋದ್ಧಾರಕ್ಕೆ ಕೋಟಿಗಟ್ಟಲೆ ಚೆಲ್ಲುವ ನಮ್ಮ ಸರಕಾರಗಳು ಲಕ್ಷಗಟ್ಟಲೆ ಜನರನ್ನು ಕೊಂದು ಚಿಕಿತ್ಸೆಗೇ ಸಡ್ಡು ಹೊಡೆಯುತ್ತಿರುವ ಕ್ಷಯದ ಹೆಮ್ಮಾರಿಯನ್ನು ನಿಯಂತ್ರಿಸಲು ಹಣವಿಲ್ಲವೆನ್ನುವುದು ಅಕ್ಷಮ್ಯವಾಗುತ್ತದೆ.

ಇಪ್ಪತ್ತೇಳನೇ ಬರಹ : ಅಪಾಯಕಾರಿ ಚೌಚೌ ಮಾತ್ರೆಗಳು [ಜೂನ್ 26, 2013, ಬುಧವಾರ] [ನೋಡಿ | ನೋಡಿ]

ಅಡ್ಡ ಪರಿಣಾಮ, ಅನಗತ್ಯ ವೆಚ್ಚಗಳಿಗೆ ಕಾರಣವಾಗುವ ಕಲಸು ಮಾತ್ರೆಗಳನ್ನು ಮಾರುವುದು ಎಗ್ಗಿಲ್ಲದೆ ನಡೆದೇ ಇದೆ 

ಕನ್ನಡಿಗರಿಗೆಲ್ಲ ಚೌಚೌ ಭಾತ್ ಚಿರಪರಿಚಿತ. ಒಂದೇ ತಟ್ಟೆಯಲ್ಲಿ ಎರಡು ತಿಂಡಿಗಳು, ಉಪ್ಪು-ಸಕ್ಕರೆಗಳ ಜೋಡಿ. ವೈದ್ಯಲೋಕಕ್ಕೂ ಇದು ಪ್ರೇರಣೆಯಾಗಿದೆಯೇನೋ!? ಒಂದೇ ಗುಳಿಗೆಯೊಳಗೆ ಎರಡು-ಮೂರು ಬಗೆಯ ಔಷಧಗಳನ್ನು ಬೆರಸುವುದು ಇತ್ತೀಚಿನ ವರ್ಷಗಳಲ್ಲಿ ಅತಿ ಸಾಮಾನ್ಯವಾಗುತ್ತಿದೆ, ಅಂತಹಾ ಚೌಚೌ ಮಾತ್ರೆಗಳ ವಹಿವಾಟು ಸಾವಿರಾರು ಕೋಟಿಗಳಷ್ಟಾಗಿದೆ. ವೈದ್ಯರು, ಔಷಧ ಕಂಪೆನಿಗಳು, ಔಷಧ ನಿಯಂತ್ರಕರು ಹಾಗೂ ಇವರೆಲ್ಲರ ಮೇಲೆ ಕಣ್ಗಾವಲಿಡಬೇಕಾದ ಸರಕಾರ – ಎಲ್ಲರೂ ಈ ಅನ್ಯಾಯದಲ್ಲಿ ಪಾಲುದಾರರಾಗಿದ್ದಾರೆ.

ವೈದ್ಯನಾದವನು ಅತ್ಯಂತ ವಿವೇಚನೆಯಿಂದ ಔಷಧಗಳನ್ನು ಬಳಸಬೇಕಾಗುತ್ತದೆ. ರೋಗದ ಚಿಕಿತ್ಸೆಗೆ ಎಷ್ಟು ಬೇಕೋ ಅಷ್ಟೇ ಔಷಧಗಳನ್ನು, ಸೂಕ್ತವಾದ ಪ್ರಮಾಣದಲ್ಲಿ,ಅಗತ್ಯವಿರುವಷ್ಟು ಕಾಲ, ರೋಗಿಗೂ, ಸಮಾಜಕ್ಕೂ ಹೊರೆಯಾಗದಂತೆ ಸಾಧ್ಯವಾದಷ್ಟು ಕಡಿಮೆ ಖರ್ಚಿನಲ್ಲಿ ಒದಗಿಸಬೇಕೆಂದು ವಿಶ್ವ ಆರೋಗ್ಯ ಸಂಸ್ಥೆಯು ಹೇಳಿದೆ. ಈ ಆಶಯಗಳಿಗೆ ವ್ಯತಿರಿಕ್ತವಾಗಿ ಔಷಧಗಳನ್ನು ಬಳಸಿದರೆ ಅದನ್ನು ಅವಿವೇಚನೆಯ ಚಿಕಿತ್ಸೆಯೆಂದೇ ಪರಿಗಣಿಸಬೇಕಾಗುತ್ತದೆ.

ಸೋಂಕಿನ ಉದಾಹರಣೆಯನ್ನು ನೋಡೋಣ: ಮಲೇರಿಯಾ, ಡೆಂಗೀ, ಮೂತ್ರದ ಸೋಂಕು – ಹೀಗೆ ಪರೋಪಜೀವಿ, ವೈರಾಣು ಅಥವಾ ಬ್ಯಾಕ್ಟೀರಿಯಾದಂತಹ ಯಾವುದೇ ಸೂಕ್ಷ್ಮಜೀವಿಯಿಂದ ಸೋಂಕುಂಟಾದರೂ ಜ್ವರ, ತಲೆ ನೋವು, ಮೈಕೈ ನೋವು, ವಾಕರಿಕೆ ಮುಂತಾದ ಹಲವು ರೋಗಲಕ್ಷಣಗಳು ಸಾಮಾನ್ಯವಾಗಿ ಕಂಡುಬರುತ್ತವೆ. ವೈದ್ಯನಾದವನು ರೋಗಿಯನ್ನು ಕೂಲಂಕಷವಾಗಿ ಪರೀಕ್ಷಿಸಿ, ಸೋಂಕಿನ ಕಾರಣವನ್ನು ಗುರುತಿಸಿ, ಅದನ್ನು ಗುಣ ಪಡಿಸುವ ಔಷಧಗಳನ್ನಷ್ಟೇ ನೀಡಿದರೆ ಸಾಕಾಗುತ್ತದೆ; ಹೆಚ್ಚಿನ ರೋಗಿಗಳಲ್ಲಿ ಜ್ವರ ಮತ್ತಿತರ ಲಕ್ಷಣಗಳಿಗೆ ಪ್ರತ್ಯೇಕ ಔಷಧಗಳ ಅಗತ್ಯವಿರುವುದಿಲ್ಲ. ಡೆಂಗೀ ಮುಂತಾದ ವೈರಸ್ ಸೋಂಕುಗಳಿಗೆ ಜ್ವರನಿವಾರಕಗಳನ್ನು ನೀಡುವುದರಿಂದ ಪ್ರಯೋಜನಕ್ಕಿಂತ ಹೆಚ್ಚು ಹಾನಿಯೇ ಆಗಬಹುದು.

ಆದರೆ ಈಗೇನಾಗುತ್ತಿದೆ? ಎಲ್ಲಾ ಸೋಂಕುಗಳಿಗೂ – ವೈರಾಣುಗಳಿಂದ ಅಥವಾ ಮಲೇರಿಯಾದಂತಹ ಪರೋಪಜೀವಿಗಳಿಂದ ಉಂಟಾದವುಗಳಿಗೂ ಕೂಡ – ಒಂದು ಯಾ ಎರಡು ಬಗೆಯ ಬ್ಯಾಕ್ಟೀರಿಯಾ ನಿರೋಧಕ (ಆಂಟಿಬಯಾಟಿಕ್) ಔಷಧಗಳನ್ನು ನೀಡಲಾಗುತ್ತದೆ. ಜೊತೆಗೆ ಜ್ವರಕ್ಕೊಂದು ಮದ್ದು, ತಲೆ-ಮೈಕೈ ನೋವಿಗೆ ಇನ್ನೊಂದು, ವಾಕರಿಕೆಗೆ ಮತ್ತೊಂದು, ಜಠರದ ಆಮ್ಲೀಯತೆಯನ್ನು ಇಳಿಸುವುದಕ್ಕೆ ಮಗದೊಂದು – ಹೀಗೆ ಜ್ವರವಿದ್ದವರಿಗೆಲ್ಲ ನಾಲ್ಕೈದು ಬಗೆಯ ಔಷಧಗಳನ್ನು ಅನಗತ್ಯವಾಗಿ ನೀಡಲಾಗುತ್ತದೆ. ಇಂತಹಾ ಅವಿವೇಚನೆಯ ಚಿಕಿತ್ಸೆಯನ್ನು ಪ್ರೋತ್ಸಾಹಿಸುವಲ್ಲಿ ಎಲ್ಲಾ ಔಷಧ ಕಂಪೆನಿಗಳು ಜೊತೆಗೂಡಿವೆ; ಒಂದೇ ಮಾತ್ರೆಯೊಳಗೆ ಎರಡು-ಮೂರು ಔಷಧಗಳನ್ನು ಬೆರಸಿ ಮಾರತೊಡಗಿವೆ. ಹೀಗೆ  ಬೆರಸುವುದರಿಂದ ವೈದ್ಯರಿಗೆ ಬರೆಯುವ ಕೆಲಸವೂ, ರೋಗಿಗಳಿಗೆ ನುಂಗುವ ಕಷ್ಟವೂ ನೀಗುವುದಂತೆ!

ಇಂದು ಮಾರುಕಟ್ಟೆಯಲ್ಲಿರುವ ಸುಮಾರು 80000 ಹೆಸರಿನ (ಬ್ರಾಂಡ್) ಮಾತ್ರೆಗಳಲ್ಲಿ ಮೂರನೇ ಒಂದರಷ್ಟು ಇಂತಹಾ ಬೆರಕೆಗಳೇ ಆಗಿವೆ. ಅವುಗಳಲ್ಲಿ ಹೆಚ್ಚಿನವು ತೀರಾ ಹಾಸ್ಯಾಸ್ಪದವಾಗಿದ್ದರೆ, ಇನ್ನು ಕೆಲವು ಅತ್ಯಂತ ಅಪಾಯಕಾರಿಯಾಗಿವೆ. ಹಾಗಿದ್ದರೂ ಆಧುನಿಕ ವೈದ್ಯರಿಂದ ಹಿಡಿದು ಬದಲಿ-ನಕಲಿ ವೈದ್ಯರವರೆಗೆ ಎಲ್ಲರೂ ಅವನ್ನು ಬಳಸುತ್ತಿದ್ದಾರೆ, ಔಷಧದ ಅಂಗಡಿಗಳವರು ನೇರವಾಗಿಯೂ ಮಾರುತ್ತಿದ್ದಾರೆ.

ಎರಡು-ಮೂರು ಜ್ವರನಿವಾರಕ (ಉದಾ: ಪಾರಸಿಟಮಾಲ್) ಹಾಗೂ ಉರಿಯೂತ ನಿವಾರಕಗಳನ್ನು (ಉದಾ: ಇಬುಪ್ರೊಫೆನ್, ಡೈಕ್ಲೊಫೆನಾಕ್, ನಿಮೆಸುಲೈಡ್) ವಿವಿಧ ಪ್ರಮಾಣಗಳಲ್ಲಿ ಬೆರೆಸಲಾಗಿರುವ ಮಾತ್ರೆಗಳು ಸುಮಾರು 800 ಹೆಸರುಗಳಲ್ಲಿ ಲಭ್ಯವಿವೆ. ಹೆಚ್ಚಿನ ವೈದ್ಯರು ಈ ಬೆರಕೆಗಳನ್ನೇ ಬಳಸುತ್ತಾರೆಂದು ಕಂಪೆನಿಗಳು ಹೆಮ್ಮೆಯಿಂದ ಹೇಳಿಕೊಳ್ಳುತ್ತವೆ. ಆದರೆ ಜ್ವರ ಹಾಗೂ ಉರಿಯೂತ ನಿವಾರಕಗಳನ್ನು ಬೆರೆಸುವುದರಿಂದ ಪರಿಣಾಮವೇನೂ ತ್ವರಿತಗೊಳ್ಳುವುದಿಲ್ಲ. ಬದಲಿಗೆ, ಅಡ್ಡ ಪರಿಣಾಮಗಳೆಲ್ಲವೂ ಕೂಡಿಕೊಂಡು ಜಠರದ ರಕ್ತಸ್ರಾವದಂತಹ ಮಾರಣಾಂತಿಕ ಸಮಸ್ಯೆಗಳಿಗೂ ಕಾರಣವಾಗಬಹುದು. ಅಷ್ಟೇ ಅಲ್ಲ, ಅವುಗಳ ವೆಚ್ಚವೂ ಬಹುಪಾಲು ಹೆಚ್ಚುತ್ತದೆ: ಉದಾಹರಣೆಗೆ ಒಂದು ಸಾಮಾನ್ಯ ಉರಿಯೂತ ನಿವಾರಕಕ್ಕೆ ಒಂದು ರೂಪಾಯಿ ಹಾಗೂ ಜ್ವರ ನಿವಾರಕಕ್ಕೆ ಐವತ್ತು ಪೈಸೆಯಿದ್ದರೆ, ಅವೆರಡೂ ಬೆರೆತಿರುವ ಮಾತ್ರೆಗೆ 2-3 ರೂಪಾಯಿಗಳಷ್ಟಿರುತ್ತದೆ! ಅಂದರೆ ಯಾವ ಔಷಧವೂ ಅಗತ್ಯವಿಲ್ಲದಲ್ಲಿ ಎರಡನ್ನು ನುಂಗಿಸಿ, ಎರಡರ ಒಟ್ಟು ಕ್ರಯಕ್ಕಿಂತಲೂ ದುಪ್ಪಟ್ಟು ಹಣವನ್ನು ಪೀಕಿಸಲಾಗುತ್ತದೆ! ಅಡ್ಡ ಪರಿಣಾಮಗಳ ಕಷ್ಟದ ಜೊತೆಗೆ ಅನಗತ್ಯ ವೆಚ್ಚದ ನಷ್ಟ. ಇದಕ್ಕಿಂತ ಘೋರವಾದ ಅನ್ಯಾಯ ಬೇರೊಂದಿದೆಯೇ?

ಎರಡು-ಮೂರು ಬಗೆಯ ಸೂಕ್ಷ್ಮಾಣು ನಿರೋಧಕಗಳನ್ನು ಬೆರಸುವ ಕ್ರಮವು ವಿಶ್ವದ ಬೇರೆಲ್ಲೂ ಇರಲಾರದು (ಕೆಲವು ಕಂಪೆನಿಗಳು ಇದನ್ನೇ ದೊಡ್ಡದು ಮಾಡಿ, ‘ಇದು ವಿಶ್ವದ ಮೊತ್ತ ಮೊದಲ ಆಂಟಿಬಯಾಟಿಕ್ ಕೂಡು ಮಾತ್ರೆ’ ಎಂದು ಕೊಚ್ಚಿಕೊಳ್ಳುವುದೂ ಉಂಟು!). ನಮ್ಮ ದೇಹದಲ್ಲಿ ಎರಡು ವಿಭಿನ್ನ ಜಾತಿಯ ಸೂಕ್ಷ್ಮಾಣುಗಳು ಏಕಕಾಲಕ್ಕೆ ಸೋಂಕನ್ನುಂಟು ಮಾಡುವ ಸಾಧ್ಯತೆಗಳು ಅತಿ ವಿರಳವೆಂದೇ ಹೇಳಬಹುದು. ಹಾಗಿರುವಾಗ ಎರಡು-ಮೂರು ಬಗೆಯ ಸೂಕ್ಷ್ಮಾಣುಗಳನ್ನು ಒಮ್ಮೆಗೇ ಹೊಡೆಯುವುದಕ್ಕೆಂದು ಎರಡು-ಮೂರು ಬಗೆಯ ಔಷಧಗಳನ್ನು ಒಟ್ಟಿಗೇ ಕೊಡುವುದರಲ್ಲಿ ಯಾವ ಆರ್ಥವೂ ಇಲ್ಲ. ಆದರೂ ಅಂತಹ ಸುಮಾರು 1250ಕ್ಕೂ ಹೆಚ್ಚು ಬಗೆಯ ಬೆರಕೆಗಳು ನಮ್ಮಲ್ಲಿಂದು ಮಾರಲ್ಪಡುತ್ತಿವೆ. ಇವು ಅಡ್ಡ ಪರಿಣಾಮಗಳಿಗೂ, ಅನಗತ್ಯ ವೆಚ್ಚಕ್ಕೂ ಕಾರಣವಾಗುವುದಷ್ಟೇ ಅಲ್ಲ, ಸೂಕ್ಷ್ಮಾಣುಗಳಲ್ಲಿ ಈ ಔಷಧಗಳ ವಿರುದ್ಧ ರೋಧ ಶಕ್ತಿ ಹುಟ್ಟಿಕೊಳ್ಳುವುದಕ್ಕೂ ಕಾರಣವಾಗುತ್ತವೆ. ಜೀವವುಳಿಸುವ ಹಲವು ಪ್ರತಿಜೈವಿಕಗಳು ಇಂದು ನಿಷ್ಪ್ರಯೋಜಕವಾಗುತ್ತಿರುವುದಕ್ಕೆ ಇಂತಹಾ ದುರ್ಬಳಕೆಯೂ ಒಂದು ಮುಖ್ಯ ಕಾರಣವಾಗಿದೆ. ಈ ಬೆರಕೆಗಳು ಲಭ್ಯವಿರುವುದರಿಂದ ವೈದ್ಯನ ವಿವೇಚನೆಗೂ ಮಂಕು ಬಡಿಯುತ್ತದೆ; ಸೋಂಕನ್ನು ನಿರ್ದಿಷ್ಟವಾಗಿ ಗುರುತಿಸುವ ಗೋಜಿಗೆ ಹೋಗದೆ ಎಲ್ಲರಿಗೂ ಈ ಬೆರಕೆಗಳನ್ನು ಕೊಟ್ಟರಾಯಿತೆನ್ನುವ ಔದಾಸೀನ್ಯಕ್ಕೆ ಕಾರಣವಾಗುತ್ತದೆ.

ಇಂತಹ ಇನ್ನೂ ಹಲವಾರು ಉದಾಹರಣೆಗಳನ್ನು ಪಟ್ಟಿ ಮಾಡುತ್ತಾ ಹೋಗಬಹುದು. ರಕ್ತದ ಏರೊತ್ತಡ, ಮಧುಮೇಹ ಹಾಗೂ ಹೃದ್ರೋಗಗಳಿಗೆ ನೀಡುವ ಔಷಧಗಳನ್ನು ಹಲವು ಕ್ರಮಗಳಲ್ಲಿ, ವಿವಿಧ ಪ್ರಮಾಣಗಳಲ್ಲಿ ಬೆರಸಿರುವ ಸಾವಿರಾರು ಬಗೆಯ ಮಾತ್ರೆಗಳಿವೆ. ಊಟಕ್ಕೆ ಮೊದಲು ಹಾಗೂ ನಂತರ ಕೊಡಬೇಕಾದ ಔಷಧಗಳು, ಪರಸ್ಪರ ವಿರುದ್ಧವಾಗಿ ವರ್ತಿಸುವ  ಔಷಧಗಳು ಮತ್ತು ಒಂದಕ್ಕೊಂದು ಸಂಬಂಧವೇ ಇಲ್ಲದ ಯಾ ಪೂರಕವಾಗಿ ವರ್ತಿಸದ ಔಷಧಗಳು ಒಟ್ಟಿಗೇ ಬೆರಸಲ್ಪಟ್ಟಿರುವ ಹಲವು ಮಾತ್ರೆಗಳು ಮಾರಲ್ಪಡುತ್ತಿವೆ. ಈ ಔಷಧಗಳನ್ನು ವಿವಿಧ ವಿಟಮಿನ್ ಗಳೊಂದಿಗೆ ಬೆರಸಿರುವಂಥ ಅಸಂಬದ್ಧಗಳೂ ಇವೆ. ಹಾಗೆಯೇ 2-3 ಕೊಲೆಸ್ಟರಾಲ್ ನಿರೋಧಕಗಳ ಬೆರಕೆ, ಆಮ್ಲ ನಿರೋಧಕದ ಜೊತೆ ವಾಕರಿಕೆ ನಿರೋಧಕದ ಬೆರಕೆ, ನೋವು ನಿವಾರಕದ ಜೊತೆ ಆಮ್ಲ ನಿರೋಧಕದ ಬೆರಕೆ ಇವೇ ಮುಂತಾದ ತೀರಾ ಅಸಂಗತವಾದ, ಅನಗತ್ಯವಾದ ಮಿಶ್ರಣಗಳೂ ಮಾರುಕಟ್ಟೆಯಲ್ಲಿವೆ. ಇವೆಲ್ಲವುಗಳಿಂದ ಅಡ್ಡ ಪರಿಣಾಮಗಳ ಅಪಾಯ ಹಾಗೂ ವೆಚ್ಚಗಳಷ್ಟೇ ಹೆಚ್ಚುವುದಲ್ಲದೆ, ಪ್ರಯೋಜನವಂತೂ  ಸೊನ್ನೆಯೇ.

ಇಂತಹಾ ಅವೈಜ್ಞಾನಿಕವಾದ ಬೆರಕೆಗಳಿಗೆ ಯಾವ ಆಧಾರಗಳೂ ಇಲ್ಲ. ವಿಶ್ವ ಆರೋಗ್ಯ ಸಂಸ್ಥೆಯು 2011ರಲ್ಲಿ ಪ್ರಕಟಿಸಿರುವ ಅತ್ಯಾವಶ್ಯಕ ಔಷಧಗಳ ಪಟ್ಟಿಯಲ್ಲಿ ಒಟ್ಟು 367 ಔಷಧಗಳ ಪೈಕಿ 22 ಮಿಶ್ರಣಗಳಿದ್ದರೆ, ಅದೇ ವರ್ಷ ನಮ್ಮಲ್ಲಿ ಪ್ರಕಟವಾಗಿರುವ ಅತ್ಯಾವಶ್ಯಕ ಔಷಧಗಳ ರಾಷ್ಟ್ರೀಯ ಪಟ್ಟಿಯಲ್ಲಿ 348 ಔಷಧಗಳಲ್ಲಿ 12 ರಷ್ಟು  ಮಿಶ್ರಣಗಳನ್ನು ಹೆಸರಿಸಲಾಗಿದೆ. ಇವುಗಳಲ್ಲಿ ಹೆಚ್ಚಿನವು ಹೆಚ್ಐವಿ, ಕ್ಷಯ ಹಾಗೂ ಮಲೇರಿಯಾ ಔಷಧಗಳು, ಗರ್ಭನಿರೋಧಕಗಳು ಹಾಗೂ ಪುನರ್ಜಲೀಕರಣದ ಲವಣಗಳಾಗಿದ್ದು, ಮೇಲೆ ಹೇಳಿರುವ ಯಾವೊಂದು ಬೆರಕೆಯೂ ಈ ಪಟ್ಟಿಗಳಲ್ಲಿಲ್ಲ. ಅಂದರೆ, ಜನರನ್ನು ಮಾರಣಾಂತಿಕ ಅಪಾಯಗಳಿಗೆ ತಳ್ಳಬಲ್ಲ ಈ ಬೆರಕೆಗಳನ್ನು ಆಧುನಿಕ ವೈದ್ಯವಿಜ್ಞಾನದ ಮೂಲ ಆಶಯಗಳನ್ನೆಲ್ಲ ಕಡೆಗಣಿಸಿ ಮಾರಲಾಗುತ್ತಿದೆ.

ಇಂತಹಾ ದುರ್ಬಳಕೆಗೆ ಕಡಿವಾಣ ಹಾಕುವ ಕೆಲವು ಪ್ರಯತ್ನಗಳಾಗಿದ್ದರೂ ಇದುವರೆಗೆ ಅವು ಸಫಲವಾಗಿಲ್ಲ. ತೀರಾ ಅಸಂಬದ್ಧವಾದ 294 ಬೆರಕೆಗಳಿಗೆ ನೀಡಿರುವ ಪರವಾನಿಗೆಯನ್ನು ಹಿಂಪಡೆಯಬೇಕು ಹಾಗೂ 150 ಬೆರಕೆಗಳನ್ನು ಇನ್ನಷ್ಟು ಪರಿಶೀಲನೆಗೆ ಒಳಪಡಿಸಬೇಕು ಎಂದು ಮುಖ್ಯ ಔಷಧ ನಿಯಂತ್ರಕರು ಸಲಹೆಯನ್ನು ನೀಡಿದ್ದರೂ, ಔಷಧ ಉದ್ದಿಮೆಗಳ ಸಂಘವು ನ್ಯಾಯಾಲಯದಿಂದ ಅದಕ್ಕೆ ತಡೆಯಾಜ್ಞೆಯನ್ನು ತಂದಿದೆ. ಸಂಸತ್ತಿನ ಆರೋಗ್ಯ ಸ್ಥಾಯಿ ಸಮಿತಿಯು ಈ ಬಗ್ಗೆ ಆತಂಕ ವ್ಯಕ್ತಪಡಿಸಿದ ಬಳಿಕ ಸುಮಾರು 200 ಬೆರಕೆಗಳನ್ನು ಹಿಂಪಡೆಯುವ ಬಗ್ಗೆ ಆರೋಗ್ಯ ಇಲಾಖೆಯಲ್ಲಿ ಚಿಂತನೆ ನಡೆದಿದೆ ಎನ್ನಲಾಗಿದೆ. ಆದರೆ ಇವೆಲ್ಲ ಕಾರ್ಯರೂಪಕ್ಕೆ ಬರುವ ವೇಳೆಗೆ ಇನ್ನಷ್ಟು ವರ್ಷಗಳಾಗಿ, ಇನ್ನಷ್ಟು ರೋಗಿಗಳು ತೊಂದರೆಗೀಡಾಗಿರುತ್ತಾರೆ. ಆದ್ದರಿಂದ ರೋಗಿಗಳು ತಮ್ಮ ಆರೋಗ್ಯ ಹಾಗೂ ಖರ್ಚುಗಳೆರಡರ ದೃಷ್ಟಿಯಿಂದ ಇಂತಹಾ ಅಸಂಬದ್ಧವಾದ ಬೆರಕೆ ಮಾತ್ರೆಗಳನ್ನು ತಾವಾಗಿ ತಿರಸ್ಕರಿಸುವುದೊಳ್ಳೆಯದು. ಒಂದಕ್ಕಿಂತ ಹೆಚ್ಚು ಔಷಧಗಳು ನಿಜಕ್ಕೂ ಅಗತ್ಯವಿದ್ದಲ್ಲಿ,ವೈದ್ಯರಲ್ಲಿ ಆ ಬಗ್ಗೆ ಚರ್ಚಿಸಿ ಅವನ್ನು ಪ್ರತ್ಯೇಕವಾಗಿ ನೀಡಬೇಕೆಂದು ಕೇಳುವುದೊಳ್ಳೆಯದು.

ಇಪ್ಪತ್ತಾರನೇ ಬರಹ : ಲಿಕ್ಕರ್ ಕುಡಿಯದೆ ಲಿವರ್ ಕೆಡುವುದೇ? [ಜೂನ್ 12, 2013, ಬುಧವಾರ] [ನೋಡಿ | ನೋಡಿ]

ನಮ್ಮ ನಿತ್ಯಾಹಾರವೇ ಶರಾಬಿನಂತೆ ವರ್ತಿಸಿ ಯಕೃತ್ತಿನ ಕಾಯಿಲೆಗೆ ಕಾರಣವಾಗಬಹುದು

ಯಕೃತ್ತು ಕಮರಿ ಹೋಗಿ, ಗಂಭೀರ ಸಮಸ್ಯೆಗಳಿಗೆ ತುತ್ತಾಗಿದ್ದ ಮಧ್ಯವಯಸ್ಕರೊಬ್ಬರು ದೊಡ್ಡ ಆಸ್ಪತ್ರೆಯ ತಜ್ಞ ವೈದ್ಯರೊಬ್ಬರ ಬಳಿ ಹೋಗಿದ್ದರು. ‘ನೀವು ಶರಾಬು ಕುಡೀತಿದ್ರಾ?’ ಎನ್ನುವುದು ವೈದ್ಯರ ಮೊದಲ ಪ್ರಶ್ನೆಯಾಗಿತ್ತು. “ಇಲ್ಲ”. “ಹಾಗಾದರೆ ನಿಮ್ಮ ಲಿವರ್ ಹೀಗೇಕಾಯ್ತು?” “ನನಗೇನು ಗೊತ್ತು ಡಾಕ್ಟ್ರೇ? ನೀವೇ ಹೇಳ್ಬೇಕು”. “ಇಲ್ಲ, ನೀವು ಸುಳ್ಳು ಹೇಳ್ತಿದ್ದೀರಿ, ಕುಡಿಯದೇ ಈ ರೋಗ ಬರೋದೇ ಇಲ್ಲ, ನೀವು ಕುಡಿದಿರಲೇ ಬೇಕು”. ಶರಾಬು ಕುಡಿಯದೆಯೂ ರೋಗಿಯ ಯಕೃತ್ತು ಕೆಟ್ಟಿತ್ತಾದರೂ, ಹೇಗೆನ್ನುವುದಕ್ಕೆ ಆ ವೈದ್ಯರಲ್ಲಿ ಉತ್ತರವಿರಲಿಲ್ಲ.

ಯಕೃತ್ತಿನ ಹಲವು ಗಂಭೀರ ಸಮಸ್ಯೆಗಳಿಗೆ ಅತಿಯಾದ ಮದ್ಯಪಾನ ಹಾಗೂ ಹೆಪಟೈಟಿಸ್ ಬಿ ಅಥವಾ ಸಿ ಎಂಬ  ಸೋಂಕುಗಳೇ ಮುಖ್ಯವಾದ ಕಾರಣಗಳೆನ್ನುವುದು ಸಾಮಾನ್ಯವಾದ  ತಿಳಿವಳಿಕೆಯಾಗಿದೆ. ಮದ್ಯಪಾನಿಗಳ ಯಕೃತ್ತಿನಲ್ಲಿ ನಿಧಾನವಾಗಿ ಕೊಬ್ಬು ತುಂಬಿಕೊಳ್ಳುತ್ತದೆ, ಅದರಿಂದುಂಟಾಗುವ ಉರಿಯೂತದಿಂದ ಯಕೃತ್ತು ಕ್ರಮೇಣವಾಗಿ ಕ್ಷಯಿಸಿ ಸಣ್ಣಗಾಗುತ್ತದೆ ಹಾಗೂ ಅಪರೂಪಕ್ಕೊಮ್ಮೆ ಕ್ಯಾನ್ಸರ್ ಕೂಡಾ ಬೆಳೆಯುತ್ತದೆ. ಕೊನೆಗೆ ಯಕೃತ್ತಿನ ವೈಫಲ್ಯದಿಂದಾಗಿ ಸಾವು ಸಂಭವಿಸುತ್ತದೆ. ಆದರೆ ಮದ್ಯಪಾನ ಮಾಡದಿರುವವರಲ್ಲೂ, ಹೆಪಟೈಟಿಸ್ ಸೋಂಕಿಲ್ಲದವರಲ್ಲೂ ಯಕೃತ್ತಿನ ಈ ಕಾಯಿಲೆಗಳು ಹೆಚ್ಚುತ್ತಿರುವುದನ್ನು ಇತ್ತೀಚಿನ ವರ್ಷಗಳಲ್ಲಿ ಗುರುತಿಸಲಾಗಿದ್ದು, ಮಕ್ಕಳು ಹಾಗೂ ಹದಿಹರೆಯದವರಲ್ಲೂ ಈ ತೊಂದರೆಗಳು ಕಂಡುಬರುತ್ತಿರುವುದು ಆತಂಕಕ್ಕೆ ಕಾರಣವಾಗಿವೆ.

ಮದ್ಯ ಸೇವಿಸದೆಯೂ ಯಕೃತ್ತಿನಲ್ಲಿ ಕೊಬ್ಬು ತುಂಬುವ ಸಮಸ್ಯೆಯು ಪಾಶ್ಚಿಮಾತ್ಯ ದೇಶಗಳಲ್ಲಿ ಹಾಗೂ ನಮ್ಮ ಮಹಾನಗರಗಳಲ್ಲಿ 20-30% ಜನರನ್ನು ಬಾಧಿಸುತ್ತಿದೆ. ಅಂಥವರಲ್ಲಿ  ಶೇ. 20-30 ಮಂದಿ ಯಕೃತ್ತಿನ ಉರಿಯೂತಕ್ಕೀಡಾದರೆ, 1-2% ಮಂದಿ ಯಕೃತ್ತಿನ ಕ್ಷಯಿಸುವಿಕೆ ಹಾಗೂ ಕ್ಯಾನ್ಸರ್ ಗಳಿಗೆ ತುತ್ತಾಗುತ್ತಾರೆ. ಹಾಗಾದರೆ ಒಂದು ಕೋಟಿಯಷ್ಟು ಜನಸಂಖ್ಯೆಯುಳ್ಳ ಬೆಂಗಳೂರು ನಗರದಲ್ಲಿ ಅದೆಷ್ಟು ಜನ ಮದ್ಯ ಸೇವಿಸದೆಯೂ ಯಕೃತ್ತಿನ ರೋಗಗಳಿಗೆ ತುತ್ತಾಗುತ್ತಿದ್ದಾರೆಂದು ನೀವೇ ಲೆಕ್ಕ ಹಾಕಿಕೊಳ್ಳಬಹುದು. ಬೊಜ್ಜು ದೇಹವುಳ್ಳವರಲ್ಲಿ, ರಕ್ತದಲ್ಲಿ ಮೇದಸ್ಸಿನಂಶ (ಟ್ರೈಗ್ಲಿಸರೈಡ್) ಹೆಚ್ಚಿರುವವರಲ್ಲಿ, ಮಧುಮೇಹವುಳ್ಳವರಲ್ಲಿ ಹಾಗೂ ಹೃದಯದ ರಕ್ತನಾಳಗಳ ಕಾಯಿಲೆಯುಳ್ಳವರಲ್ಲಿ 50-90% ಮಂದಿ ಯಕೃತ್ತಿನಲ್ಲಿ ಕೊಬ್ಬನ್ನು ಹೊಂದಿರುತ್ತಾರೆ. ಸಾಮಾನ್ಯ ಮಕ್ಕಳಲ್ಲಿ ಶೇ. 3-10ರಷ್ಟು ಹಾಗೂ ಬೊಜ್ಜಿರುವ ಮಕ್ಕಳಲ್ಲಿ ಶೇ. 40-70ರಷ್ಟು ಯಕೃತ್ತಿನಲ್ಲಿ ಕೊಬ್ಬನ್ನು ಹೊಂದಿರುತ್ತಾರೆ.

ಶರಾಬು ಸೇವಿಸದ ಇಷ್ಟೊಂದು ಜನರಲ್ಲಿ, ಅದರಲ್ಲೂ ಮಕ್ಕಳಲ್ಲಿ, ಯಕೃತ್ತು ಕೆಡುವುದೇಕೆ? ಶರಾಬಿನ ಮೂಲವನ್ನು ಅರಿಯಲೆತ್ನಿಸಿದರೆ ಇದಕ್ಕೆ ಉತ್ತರ ದೊರೆಯುತ್ತದೆ:ಹಣ್ಣುಗಳಲ್ಲಿರುವ ಫ್ರಕ್ಟೋಸ್ ಅಥವಾ ಧಾನ್ಯಗಳಲ್ಲಿರುವ ಗ್ಲೂಕೋಸ್ ಜೊತೆ ಯೀಸ್ಟ್ ಎಂಬ ಸೂಕ್ಷ್ಮ ಜೀವಿಗಳನ್ನು ಬೆರೆಸಿ ಹುದುಗೆಬ್ಬಿಸಿದಾಗ ಇಥೈಲ್ ಆಲ್ಕಹಾಲ್ ಅಥವಾ ಮದ್ಯಸಾರವು ಉತ್ಪಾದನೆಯಾಗುತ್ತದೆ – ಕಬ್ಬಿನ ರಸ ಅಥವಾ ಕಾಕಂಬಿಯಿಂದ ಸಾರಾಯಿ, ರಂ; ದ್ರಾಕ್ಷಿಯಿಂದ ವೈನ್, ಬ್ರಾಂದಿ; ಗೇರುಹಣ್ಣಿನಿಂದ ಫೆನ್ನಿ; ತಾಳೆಹಣ್ಣಿನಿಂದ ಕಳ್ಳು; ಗೋಧಿ, ಅಕ್ಕಿ, ಜೋಳ, ರೈ, ಬಾರ್ಲಿ ಇತ್ಯಾದಿ ಧಾನ್ಯಗಳಿಂದ ಬಿಯರ್, ವಿಸ್ಕಿ, ಜಿನ್; ಬಟಾಟೆಯಿಂದ ವೋಡ್ಕಾ ಇತ್ಯಾದಿ.

ಇನ್ನೊಂದಷ್ಟು ಕೆದಕಿದರೆ ನಮ್ಮ ನಾಗರಿಕತೆಯ ಮೂಲದಲ್ಲೇ ಶರಾಬಿನ ಘಾಟು ಹೊಡೆಯುತ್ತದೆ! ನಮ್ಮ ಪೂರ್ವಜರಾದ ವಾನರರೂ ಸುರೆಯ ಬೆನ್ನು ಹತ್ತುವವರೇ! ನೆಲಕ್ಕೆ ಬಿದ್ದ ಹಣ್ಣುಗಳಿಗೆ ಮಣ್ಣಿನಲ್ಲಿರುವ ಯೀಸ್ಟ್ ಗಳು ಸೇರಿದಾಗ ಹುಟ್ಟುವ ಶರಾಬನ್ನು ನೆಕ್ಕಿದ ವಾನರರಿಗೂ, ಆದಿಮಾನವರಿಗೂ ಅದರ ನಶೆಯ ಅನುಭವವಿತ್ತು. ಅಂತಲ್ಲಿ, ಕೆಲ ಧಾನ್ಯಗಳು ಬಿದ್ದು ಕೊಳೆತಲ್ಲೂ ಮದ್ಯ ಹುಟ್ಟುವುದು ತಿಳಿಯಿತು. ಸುಮಾರು 13000 ವರ್ಷಗಳ ಹಿಂದೆ ಪೂರ್ವ ಮೆಡಿಟರೇನಿಯನ್ ಪ್ರದೇಶದಲ್ಲಿ ವಾಸಿಸುತ್ತಿದ್ದ ನತೂಫ್ ಪಂಗಡದ ಜನರು ಅಂತಹಾ ಧಾನ್ಯಗಳನ್ನು ಬೆಳೆದು ತಾವೇ ಮದ್ಯವನ್ನು ತಯಾರಿಸಲಾರಂಭಿಸಿದರಂತೆ. ಅಲ್ಲೂ, ಚೀನಾ, ಸಿಂಧೂ ಕಣಿವೆ ಮುಂತಾದೆಡೆಗಳಲ್ಲೂ ಹೀಗೆ ಆರಂಭಗೊಂಡ ಧಾನ್ಯಗಳ ಬೇಸಾಯದೊಂದಿಗೆ ನಾಗರಿಕತೆ ಬೆಳೆಯಿತು, ಕಾಲಕ್ರಮೇಣ ಆ ಧಾನ್ಯಗಳೇ ನಮ್ಮ ಮುಖ್ಯ ಆಹಾರಗಳಾಗಿಬಿಟ್ಟವು, ಇಂದಿಗೂ ನಾವು ಅವನ್ನೇ ತಿನ್ನುತ್ತಿದ್ದೇವೆ.

ಧಾನ್ಯಗಳ ಗ್ಲೂಕೋಸ್ ನಮ್ಮ ಪ್ರಮುಖ ಆಹಾರವಾದುದರ ಜೊತೆಗೆ, ನಮ್ಮ ಫ್ರಕ್ಟೋಸ್ ಸೇವನೆಯೂ ವಿಪರೀತ ಮಟ್ಟವನ್ನು ತಲುಪಿದೆ. ಸುಮಾರು 4000 ವರ್ಷಗಳ ಹಿಂದೆ ಕಬ್ಬಿನ ಸಕ್ಕರೆಯು ಬಳಕೆಗೆ ಬಂತು. ಹದಿನೆಂಟನೇ ಶತಮಾನದ ವೇಳೆಗೆ ಒಬ್ಬಾತ ವರ್ಷಕ್ಕೆ 2 ಕೆಜಿಯಷ್ಟು ಸಕ್ಕರೆಯನ್ನು ಬಳಸುತ್ತಿದ್ದರೆ ಈಗ ಅದು 82 ಕೆಜಿಗಳಷ್ಟಾಗಿದೆ. ಆದಿಮಾನವರು ಹಣ್ಣುಗಳನ್ನು ಹಾಗೂ ಜೇನನ್ನು ಅಪರೂಪಕ್ಕೊಮ್ಮೆ ತಿನ್ನುತ್ತಿದ್ದರೆ, ಇಂದು ಅವನ್ನು ಪ್ರತಿನಿತ್ಯ ಸೇವಿಸುತ್ತಿದ್ದೇವೆ ಹಾಗೂ ಜೋಳದ ಪಾನಕದಂತಹ ಸಿಹಿಕಾರಕಗಳನ್ನೂ ಯಥೇಷ್ಟವಾಗಿ ಬಳಸುತ್ತಿದ್ದೇವೆ. ಸಕ್ಕರೆ ಅಥವಾ ಸುಕ್ರೋಸಿನಲ್ಲಿ ಗ್ಲುಕೋಸ್ ಮತ್ತು ಫ್ರಕ್ಟೋಸ್ ಎರಡೂ ಸೇರಿದ್ದರೆ, ಹಣ್ಣುಗಳು, ಜೇನು ಹಾಗೂ ಜೋಳದ ಪಾನಕಗಳಲ್ಲಿ ಫ್ರಕ್ಟೋಸ್ ಪ್ರಮಾಣವು ಬಹಳಷ್ಟಿರುತ್ತದೆ. ಹೀಗೆ ವಿವಿಧ ಮೂಲಗಳಿಂದ ದಿನವೊಂದರ ಫ್ರಕ್ಟೋಸ್ ಸೇವನೆಯ ತಲಾ ಪ್ರಮಾಣವು ಇಪ್ಪತ್ತನೇ ಶತಮಾನಕ್ಕೆ ಮೊದಲು 10 ಗ್ರಾಂಗಿಂತ ಕಡಿಮೆಯಿದ್ದರೆ, ಈಗ 180 ಗ್ರಾಂಗಳಷ್ಟಾಗಿದೆ.

ಹೀಗೆ ನಾವು ಅತಿಯಾಗಿ ತಿನ್ನುತ್ತಿರುವ ಫ್ರಕ್ಟೋಸ್ ನಮ್ಮ ದೇಹದಲ್ಲಿ ಮದ್ಯಸಾರದಂತೆಯೇ ವರ್ತಿಸುತ್ತದೆ. ಫ್ರಕ್ಟೋಸ್ ಹಾಗೂ ಮದ್ಯಸಾರಗಳೆರಡೂ ಯಕೃತ್ತಿನಲ್ಲಿ ಮೇದೋಆಮ್ಲಗಳ ತಯಾರಿಯನ್ನು ಹೆಚ್ಚಿಸಿ, ಕೊಬ್ಬು ಶೇಖರಗೊಳ್ಳುವುದಕ್ಕೆ ಕಾರಣವಾಗುತ್ತವೆ. ಯಕೃತ್ತಿನ ಕಣಗಳ ಮೇಲೆ ಹಾಗೂ ಕರುಳಿನಲ್ಲಿರುವ ಬ್ಯಾಕ್ಟೀರಿಯಗಳ ಮೇಲೆ ಅವುಗಳ ದುಷ್ಪರಿಣಾಮಗಳಿಂದಾಗಿ ಉರಿಯೂತವುಂಟಾಗುತ್ತದೆ. ಫ್ರಕ್ಟೋಸ್ ಹಾಗೂ ಮದ್ಯಸಾರಗಳೆರಡೂ ಮೆದುಳಿನಲ್ಲಿ ಹಿತಕರವಾದ ಭಾವನೆಗಳನ್ನು ಪ್ರಚೋದಿಸುತ್ತವೆ ಹಾಗೂ ಇನ್ನಷ್ಟು ಸೇವಿಸುವ ಬಯಕೆಯನ್ನುಂಟು ಮಾಡುತ್ತವೆ, ಇದೇ ಕಾರಣಕ್ಕೆ ಸಿಹಿತಿನಿಸುಗಳು, ಹಣ್ಣಿನ ರಸಗಳು, ಸಕ್ಕರೆಭರಿತವಾದ ಲಘು ಪೇಯಗಳನ್ನು ಸೇವಿಸಲಾರಂಭಿಸಿದ ಕೆಲಕಾಲದಲ್ಲೇ ಅದು ಬಿಡಲಾಗದ ಚಟವಾಗಿ, ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಸೇವನೆಯನ್ನು ಪ್ರಚೋದಿಸುತ್ತದೆ, ನಿರಂತರವಾದ ಹಾನಿಗೆ ಕಾರಣವಾಗುತ್ತದೆ. ಗ್ಲೂಕೋಸ್ ಭರಿತವಾದ ಆಹಾರಗಳನ್ನು ಅತಿಯಾಗಿ ಸೇವಿಸುವುದರಿಂದಲೂ ಮೇದೋಆಮ್ಲಗಳ ತಯಾರಿಯು ಹೆಚ್ಚಿ ಯಕೃತ್ತಿನಲ್ಲಿ ಕೊಬ್ಬು ತುಂಬುವುದಕ್ಕೆ ಪ್ರಚೋದನೆಯಾಗುತ್ತದೆ.

ಹೀಗೆ ನಾವಿಂದು ಆಸೆಪಟ್ಟು ತಿನ್ನುತ್ತಿರುವ ಆಹಾರವಸ್ತುಗಳೇ ಯಕೃತ್ತಿನ ಸಮಸ್ಯೆಗಳಿಗೆ ಕಾರಣವಾಗುತ್ತಿರುವುದರಿಂದ ಅದನ್ನು ಬೇಗನೇ ಗುರುತಿಸುವುದು ಹಾಗೂ ತಡೆಯುವುದು ಅತಿ ಮುಖ್ಯ. ಸರಳವಾದ ಅಲ್ಟ್ರಾಸೌಂಡ್ ಪರೀಕ್ಷೆಯಿಂದ ಯಕೃತ್ತಿನಲ್ಲಿ ಕೊಬ್ಬಿನ ಶೇಖರಣೆ ಹಾಗೂ ಅದರಿಂದಾಗಿರುವ ಹಾನಿಯನ್ನು ಗುರುತಿಸಬಹುದು. ರಕ್ತದಲ್ಲಿ ಎಎಲ್ ಟಿ ಎಂಬ ಕಿಣ್ವದ ಮಟ್ಟವು ದುಪ್ಪಟ್ಟು ಏರಿಕೆಯಾಗಿದ್ದರೆ ಉರಿಯೂತದಿಂದಾಗಿ ಯಕೃತ್ತಿಗೆ ಹಾನಿಯಾಗಿರುವುದನ್ನು ಸೂಚಿಸುತ್ತದೆ. ಬೊಜ್ಜು,ಮಧುಮೇಹ, ಮೇದಸ್ಸಿನ ತೊಂದರೆಗಳು ಹಾಗೂ ಹೃದ್ರೋಗವುಳ್ಳವರು ಅಗತ್ಯವಾಗಿ ತಮ್ಮ ಯಕೃತ್ತಿನ ಸ್ಥಿತಿಯನ್ನು ಪರೀಕ್ಷಿಸಿಕೊಳ್ಳಬೇಕು. ಅದೇ ರೀತಿ, ಯಕೃತ್ತಿನಲ್ಲಿ ಕೊಬ್ಬುಳ್ಳವರು ಮಧುಮೇಹ ಹಾಗೂ ಮೇದಸ್ಸಿನ ಸಮಸ್ಯೆಗಳಿವೆಯೇ ಎಂದು ಪರೀಕ್ಷಿಸಿಕೊಳ್ಳಬೇಕು.

ಆಹಾರದಲ್ಲಿರುವ ಶರ್ಕರಗಳಿಂದ ಹಾಗೂ ಮದ್ಯಸಾರದಿಂದ ಯಕೃತ್ತಿನಲ್ಲುಂಟಾಗುವ ಕಾಯಿಲೆಗಳಿಗೆ ನಿರ್ದಿಷ್ಟವಾದ ಚಿಕಿತ್ಸೆಯಿಲ್ಲ. ಆದ್ದರಿಂದ ಯಕೃತ್ತಿನಲ್ಲಿ ಕೊಬ್ಬು ಶೇಖರಗೊಳ್ಳುತ್ತಿದ್ದರೆ ಹಾಗೂ ರಕ್ತದಲ್ಲಿ ಕೊಬ್ಬಿನ (ಟ್ರೈಗ್ಲಿಸರೈಡ್) ಪ್ರಮಾಣವು ಹೆಚ್ಚಿದ್ದರೆ ಕೂಡಲೇ ಅವನ್ನು ತಡೆಯಲುದ್ಯುಕ್ತರಾಗಬೇಕು. ಮದ್ಯಪಾನ ಸೇವನೆಯನ್ನು ಸಂಪೂರ್ಣವಾಗಿ ವರ್ಜಿಸಬೇಕು. ಮದ್ಯಪಾನಕ್ಕೆ ಸಮನಾದ ಫ್ರಕ್ಟೋಸ್ ಸೇವನೆಯನ್ನು ಕನಿಷ್ಠಗೊಳಿಸಿ, ಗ್ಲೂಕೋಸ್ ಸೇವನೆಯನ್ನೂ ಕಡಿತಗೊಳಿಸಬೇಕು. ಫ್ರಕ್ಟೋಸ್ ನಿಂದ ತುಂಬಿರುವ ಖರ್ಜೂರ, ಒಣ ದ್ರಾಕ್ಷಿ, ಒಣ ಅಂಜೂರ, ಜೇನು, ಲಘು ಪೇಯಗಳು, ಸಕ್ಕರೆ ಹಾಗೂ ಸಿಹಿ ತಿನಿಸುಗಳು, ಐಸ್ ಕ್ರೀಂ ಇವೇ ಮುಂತಾದವನ್ನು ದೂರವಿಡಬೇಕು. ಮಾವು, ಹಲಸು, ದ್ರಾಕ್ಷೆ, ಸೇಬು ಇವೇ ಮುಂತಾದ ಹಣ್ಣುಗಳು ಹಾಗೂ ಹಣ್ಣಿನ ರಸಗಳಲ್ಲೂ ಸಾಕಷ್ಟು ಫ್ರಕ್ಟೋಸ್ ಇರುವುದರಿಂದ ಅವುಗಳ ಅತಿ ಸೇವನೆಯೂ ಸಲ್ಲದು. ಬ್ರೆಡ್ಡು, ನೂಡಲ್ಸ್ ಮುಂತಾದ ಸಂಸ್ಕರಿತ ಆಹಾರಗಳು ಅತ್ಯಧಿಕ ಗ್ಲೂಕೋಸ್ ಒದಗಿಸುವುದರ ಜೊತೆಗೆ ಕರುಳಿನ ಬ್ಯಾಕ್ಟೀರಿಯಾಗಳಲ್ಲಿ ಉರಿಯೂತಜನಕ ಸಂಯುಕ್ತಗಳನ್ನು ಪ್ರಚೋದಿಸುವುದರಿಂದ ಅವುಗಳನ್ನು ಸೇವಿಸದಿರುವುದೇ ಕ್ಷೇಮಕರ. ಫ್ರಕ್ಟೋಸ್ ವಿರಳವಾಗಿರುವ ತರಕಾರಿಗಳು, ಮೊಟ್ಟೆ,ಮೀನು, ಮಾಂಸ ಹಾಗೂ ಬೀಜಗಳು ನಮ್ಮ ಆಹಾರದ ಬಹುಭಾಗವಾಗಿದ್ದರೆ ಯಕೃತ್ತನ್ನು ಕೊಬ್ಬಿನಿಂದ ರಕ್ಷಿಸಬಹುದು, ಹೆಚ್ಚಿನ ಆಧುನಿಕ ರೋಗಗಳನ್ನೂ ದೂರವಿಡಬಹುದು.

ಇಪ್ಪತ್ತೈದನೇ ಬರಹ : ವಿದ್ಯಾರ್ಥಿಗಳೇ, ಸೂಕ್ಷ್ಮ ಸಂಗತಿಗಳ ಪರಿಣತರಾಗಿ [ಮೇ 29, 2013, ಬುಧವಾರ] [ನೋಡಿ | ನೋಡಿ]

ಬಾಳಸಂಗಾತಿಯಾದ ವೃತ್ತಿಯು ನಮ್ಮ ಅಭಿರುಚಿ ಹಾಗೂ ಸಾಮರ್ಥ್ಯಗಳಿಗೆ ಹೊಂದುವಂತಿರಬೇಕು

ಹದಿನೆಂಟರ ಹೊಸ್ತಿಲಲ್ಲಿರುವ ಮಕ್ಕಳಿಗಿದು ಸಂಧಿಕಾಲ. ಪದವಿಪೂರ್ವ ಪರೀಕ್ಷೆ ಹಾಗೂ ವೃತ್ತಿ ಶಿಕ್ಷಣದ ಪ್ರವೇಶ ಪರೀಕ್ಷೆಗಳ ಫಲಿತಾಂಶಗಳು ಪ್ರಕಟವಾಗಿವೆ. ಹಲವರು ತಮ್ಮ ಕಠಿಣ ಶ್ರಮಕ್ಕೆ ತಕ್ಕ ಫಲಿತಾಂಶವನ್ನು ಪಡೆದಿದ್ದರೆ ಕೆಲವರು  ನಿರಾಶರಾಗಿರುತ್ತಾರೆ. ತಮ್ಮ ಕನಸಿನ ಭವಿಷ್ಯವನ್ನು ಸಾಕಾರಗೊಳಿಸುವುದಕ್ಕಾಗಿ ಅಹರ್ನಿಶಿ ದುಡಿದು ಸಫಲರಾದವರಿರುತ್ತಾರೆ; ಫಲಿತಾಂಶಗಳನ್ನು ನೋಡಿ ನಿರ್ಧರಿಸಿದರಾಯಿತು ಎಂದುಕೊಂಡಿದ್ದು, ಆ ಬಳಿಕವೂ  ಸ್ಪಷ್ಟತೆಯಿಲ್ಲದೆ ಗೊಂದಲದಲ್ಲಿ ಸಿಲುಕಿದವರಿರುತ್ತಾರೆ; ಎಲ್ಲದಕ್ಕೂ ತಮ್ಮ ಹೆತ್ತವರು ಯಾ ಬಂಧುಮಿತ್ರರ ಸಲಹೆಗಳನ್ನೇ ಎದುರು ನೋಡುತ್ತಿರುವವರೂ ಇರುತ್ತಾರೆ. ಏನೇ ಇದ್ದರೂ ಇನ್ನು ಕೆಲವೇ ದಿನಗಳಲ್ಲಿ ಇವರೆಲ್ಲರೂ ತಮ್ಮ ಬದುಕಿನ ದಾರಿಯನ್ನು ಕಂಡುಕೊಳ್ಳಬೇಕಾಗುತ್ತದೆ.

ಇಂದು ದಾರಿಗಳು ಬಹಳಷ್ಟಿವೆ. ವಿಜ್ಞಾನ ಹಾಗೂ ತಂತ್ರಜ್ಞಾನಗಳಲ್ಲಾಗುತ್ತಿರುವ ಅದ್ಭುತವಾದ ಬೆಳವಣಿಗೆಗಳು ಊಹೆಗೂ ನಿಲುಕದಷ್ಟು ಅವಕಾಶಗಳನ್ನು ತೆರೆಯುತ್ತಿವೆ. ಒಂದು ಕನಸಿದ್ದರೆ, ಸಾಧಿಸುವ ಛಲವಿದ್ದರೆ, ಕಠಿಣ ಪರಿಶ್ರಮವಿದ್ದರೆ ಎಣೆಯಿಲ್ಲದಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಿದೆ. ವೃತ್ತಿಯೆನ್ನುವುದು ನಮ್ಮ ಬಾಳಿನ ಸಂಗಾತಿ,ನಮ್ಮ ಜೀವನಾಧಾರವೂ ಹೌದು. ನಾವು ಅದನ್ನು ಅದಮ್ಯವಾಗಿ ಪ್ರೀತಿಸುವಂತಿರಬೇಕು. ಅದು ನಮಗೆ ಸಂತೋಷವನ್ನೂ, ಸಂತೃಪ್ತಿಯನ್ನೂ ನೀಡುವಂತಿರಬೇಕು. ಅದು ನಮ್ಮ ಆಸಕ್ತಿ ಹಾಗೂ ಸಾಮರ್ಥ್ಯಗಳಿಗೆ, ನಮ್ಮ ಜೀವನ ಮೌಲ್ಯಗಳಿಗೆ ಹೊಂದುವಂತಿರಬೇಕು. ಆಗ ನಮ್ಮ ಜೀವನವು ತಂತಾನೇ ಸಮೃದ್ಧವಾಗುತ್ತದೆ. ಆದ್ದರಿಂದ ಯಾವುದೇ ವೃತ್ತಿಯನ್ನು ಆಯ್ದುಕೊಳ್ಳುವಾಗ ಎಷ್ಟು ಹಣವನ್ನು ಗಳಿಸಬಹುದು ಎನ್ನುವುದಕ್ಕಿಂತ ಎಷ್ಟು ಸಂತಸವನ್ನು ಪಡೆಯಬಹುದು ಎನ್ನುವುದೇ ಮಾನದಂಡವಾಗಿರಬೇಕು. ಹೆತ್ತವರ ಒತ್ತಾಯಕ್ಕೆ, ಯಾರೋ ಹೇಳಿದರೆನ್ನುವ ಕಾರಣಕ್ಕೆ, ಸಹಪಾಠಿಗಳು ಆಯ್ದುಕೊಂಡರೆಂಬುದಕ್ಕೆ, ಪ್ರತಿಷ್ಠೆಯನ್ನು ಮೆರೆಸುವುದಕ್ಕೆ,ಅಥವಾ ಮದುವೆ ಸುಲಭವಾಗುತ್ತದೆನ್ನುವ ಕಾರಣಕ್ಕೆ ಯಾವುದೇ ವೃತ್ತಿಯನ್ನು ಆಯ್ದುಕೊಳ್ಳಬಾರದು. ಅನ್ಯರ ಸಲಹೆಯಂತೆ ವೃತ್ತಿಯನ್ನು ಆಯ್ದುಕೊಂಡು, ಅದರಲ್ಲಿ ಅನಾಸಕ್ತರಾಗಿ ಜೀವನಪರ್ಯಂತ ಗೊಣಗುವಂತಾಗಬಾರದು.

ಇದು ಜ್ಞಾನಸ್ಫೋಟದ ಕಾಲ; ಈಗ ನಮ್ಮ ಜ್ಞಾನಭಂಡಾರವು ಎರಡೇ ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತಿದ್ದರೆ, 2020 ರ ವೇಳೆಗೆ ಎರಡು ತಿಂಗಳಿಗೊಮ್ಮೆ ದುಪ್ಪಟ್ಟಾಗಲಿದೆಯಂತೆ. ಕಳೆದ ಹತ್ತು ವರ್ಷಗಳಲ್ಲಿ ಕಂಡರಿಯದಿದ್ದ ತಂತ್ರಜ್ಞಾನಗಳು ಇಂದು ನಮ್ಮೊಂದಿಗಿವೆ, ಇಂದು ತಿಳಿಯದ ಅದೆಷ್ಟೋ ರಹಸ್ಯಗಳು ಮುಂದಿನ ಒಂದೆರಡು ವರ್ಷಗಳಲ್ಲೇ ತೆರೆದುಕೊಳ್ಳಲಿವೆ. ಅಂದರೆ ವೈದ್ಯಕೀಯ ಅಥವಾ ತಾಂತ್ರಿಕ ತರಬೇತಿಗಾಗಿ ಇಂದು ಸೇರಿಕೊಂಡವರು ನಾಲ್ಕೈದು ವರ್ಷಗಳಲ್ಲಿ ಪದವೀಧರರಾಗುವ ವೇಳೆಗೆ ಅವರು ಕಲಿತಿರುವುದೆಲ್ಲ ಹಳತಾಗಿರುತ್ತದೆ! ಹಾಗಾಗಿ ಯಾವುದೇ ವೃತ್ತಿಯಲ್ಲಿ ಔನ್ನತ್ಯಕ್ಕೆ ಏರಬೇಕಿದ್ದರೆ ನಿರಂತರವಾದ ಕಲಿಕೆಗೆ ಸಿದ್ಧರಿರಲೇಬೇಕಾಗುತ್ತದೆ. ಈ ಜ್ಞಾನಸ್ಫೋಟದಿಂದಾಗಿ ಅನೇಕ ಹೊಸ ದಾರಿಗಳೂ ತೆರೆದುಕೊಳ್ಳುತ್ತಿವೆ. ಇಂದು ಅಂಗನವಾಡಿಗಳಲ್ಲಿ ಕಲಿಯುತ್ತಿರುವ ಶೇ. 65ರಷ್ಟು ಚಿಣ್ಣರು ವಯಸ್ಕರಾದಾಗ ಈಗ ಅಸ್ತಿತ್ವದಲ್ಲೇ ಇಲ್ಲದ ವೃತ್ತಿಗಳಲ್ಲಿ ತೊಡಗಿರುತ್ತಾರಂತೆ!

ಆದ್ದರಿಂದ ಇಂದಿನ ವಿದ್ಯಾರ್ಥಿಗಳು ಅತಿ ಸೀಮಿತವಾದ ವಸ್ತು-ವಿಷಯಗಳ ಬಗ್ಗೆ ಬಹಳಷ್ಟು ಕಲಿತು ವಿಶೇಷ ಪರಿಣತಿಯನ್ನು ಪಡೆಯುವ ಯೋಜನೆಯನ್ನು ಈಗಲೇ ಹಾಕಿಕೊಳ್ಳುವುದೊಳ್ಳೆಯದು. ವೈದ್ಯ ವೃತ್ತಿಯನ್ನೇ ನೋಡಿ. ನಾಲ್ಕೈದು ದಶಕಗಳ ಹಿಂದೆ ವೈದ್ಯರಾಗಿದ್ದವರು ಹೆರಿಗೆಯಿಂದ ಹಿಡಿದು ವೃದ್ಧರಿಗೆ ಚಿಕಿತ್ಸೆ ನೀಡುವವರೆಗೆ ಎಲ್ಲವನ್ನೂ ಮಾಡಬೇಕಾಗಿತ್ತು, ಈಗ ದೇಹದ ಒಂದೊಂದು ಅಂಗದ ಚಿಕಿತ್ಸೆಗೂ ವಿಶೇಷಜ್ಞರಿದ್ದಾರೆ, ಒಂದು ನಿರ್ದಿಷ್ಟ ತೊಂದರೆಯನ್ನಷ್ಟೇ ನೇರ್ಪಡಿಸುವ ಪರಿಣತರೂ ಇದ್ದಾರೆ. ಮೊದಲು ದೊಡ್ಡ ಶಸ್ತ್ರಕ್ರಿಯೆಯೇ ಬೇಕಾಗಿದ್ದ ಹಲವು ರೋಗಗಳನ್ನು ಈಗ ಔಷಧಗಳಿಂದಲೋ, ತೂರುನಳಿಕೆಗಳ ನೆರವಿನಿಂದಲೋ ಸರಿಪಡಿಸಲು ಸಾಧ್ಯವಿದೆ. ರಕ್ತನಾಳಗಳಲ್ಲಿ ಸೂಕ್ಷ್ಮನಳಿಕೆಗಳನ್ನು ತೂರಿಸಿ ದೇಹದ ಯಾವುದೇ ಮೂಲೆಯನ್ನು ತಲುಪಲು ಸಾಧ್ಯವಿದೆ, ಗರ್ಭದೊಳಗೆ ಬೆಳೆಯುತ್ತಿರುವ ಶಿಶುವಿಗೂ ಅತಿ ಸೂಕ್ಷ್ಮವಾದ ಚಿಕಿತ್ಸೆಗಳನ್ನು ನೀಡಬಹುದಾಗಿದೆ. ಮೊದಲು ದೇಹದೊಳಗಿನ ಭಾಗಗಳನ್ನು ಪರೀಕ್ಷಿಸುವುದಕ್ಕೆ ಕ್ಷಕಿರಣ ಮಾತ್ರವಿದ್ದರೆ ಈಗ ಶ್ರವಣಾತೀತ ತರಂಗಗಳು, ಅಣುಗಳಲ್ಲಿ ಅಯಸ್ಕಾಂತೀಯ ಪ್ರತಿಕಂಪನ, ಪಾಸಿಟ್ರಾನ್ ಉತ್ಸರ್ಜನೆ ಮುಂತಾದ ಅತ್ಯಾಧುನಿಕ ತಂತ್ರಜ್ಞಾನಗಳು ಬಂದಿವೆ. ದೇಹದ ಕಣಗಳೊಳಗಿರುವ ಹಲಬಗೆಯ ಸಂಯುಕ್ತಗಳನ್ನು ಗುರುತಿಸುವುದಕ್ಕೂ, ವಂಶವಾಹಿಗಳಲ್ಲಾಗಿರುವ ಬದಲಾವಣೆಗಳನ್ನು ಹುಡುಕುವುದಕ್ಕೂ ಪರೀಕ್ಷೆಗಳಿವೆ. ಮುಂದಿನ ದಿನಗಳಲ್ಲಿ ದೇಹದ ಇನ್ನಷ್ಟು ಸೂಕ್ಷ್ಮಗಳನ್ನು ತೆರೆದಿಡಬಲ್ಲ ತಂತ್ರಜ್ಞಾನಗಳೂ, ಹೊಚ್ಚ ಹೂಸ ಔಷಧಗಳೂ, ಚಿಕಿತ್ಸಾ ವಿಧಾನಗಳೂ ಬರಲಿವೆ. ಆದ್ದರಿಂದ ವೈದ್ಯರಿಗೆ ಹಳ್ಳಿಗಳಿಂದ ಮಹಾನಗರಗಳವರೆಗೆ, ಚಿಕಿತ್ಸಾಲಯಗಳಿಂದ ಮಹಾ ಆಸ್ಪತ್ರೆಗಳವರೆಗೆ, ಕುಟುಂಬ ವೈದ್ಯರಾಗುವಲ್ಲಿಂದ ಸೂಕ್ಷ್ಮ ಪರಿಣತಿಯ ತಜ್ಞರಾಗಿ ಅಥವಾ ವೈದ್ಯಕೀಯ ಸಂಶೋಧಕರಾಗಿ ದುಡಿಯುವವರೆಗೆ ಅಪರಿಮಿತವಾದ ಅವಕಾಶಗಳಿವೆ.

ಇವೆಲ್ಲ ಸಾಧ್ಯವಾಗಬೇಕಾದರೆ ವಿದ್ಯಾರ್ಥಿಗಳ ಆಸಕ್ತಿಯನ್ನು ಪೋಷಿಸುವ ಹಾಗೂ ಕಲಿಕೆಯ ಹಸಿವನ್ನು ಇನ್ನಷ್ಟು ಹೆಚ್ಚಿಸುವ ಶಿಕ್ಷಣವು ಅವರಿಗೆ ಲಭ್ಯವಾಗಬೇಕು. ಆದರೆ ಇಂದು ಶಿಕ್ಷಣದ ಗುಣಮಟ್ಟವು ಪ್ರಾಥಮಿಕ ಹಂತದಿಂದಲೇ ಕುಸಿಯತೊಡಗಿದೆ. ಕಲಿಯಬೇಕಾದದ್ದು ಬೆಟ್ಟದಷ್ಟಾಗುತ್ತಿರುವಲ್ಲಿ ಕಲಿಯುವ ಅಗತ್ಯವೇ ಇಲ್ಲವೆನ್ನುವ ಸ್ಥಿತಿಯು ನಿರ್ಮಾಣಗೊಳ್ಳುತ್ತಿದೆ. ವೃತ್ತಿ ಶಿಕ್ಷಣವಂತೂ ಕೇವಲ ಪದವಿಪತ್ರವನ್ನು ಅಚ್ಚೊತ್ತಿ ವಿತರಿಸುವ ವ್ಯಾಪಾರವಾಗುತ್ತಿದೆ. ಅಂತಲ್ಲಿ ಉತ್ತಮ ಶಿಕ್ಷಣವನ್ನು ಪಡೆಯುವತ್ತ ಸ್ವಯಂ ವಿದ್ಯಾರ್ಥಿಗಳೇ ಉತ್ಸುಕರಾಗಬೇಕು. ಒಳ್ಳೆಯ ವೈದ್ಯರಾಗಬೇಕಾದರೆ ಬಗೆಬಗೆಯ ರೋಗಗಳುಳ್ಳವರನ್ನು ಆದಷ್ಟು ಹೆಚ್ಚು ಸಂಖ್ಯೆಯಲ್ಲಿ ನೋಡಿ, ಬಗೆಬಗೆಯ ಸನ್ನಿವೇಶಗಳ ನಿಭಾವಣೆಯನ್ನು ಕಲಿತುಕೊಳ್ಳಬೇಕಾಗುತ್ತದೆ. ಅದಕ್ಕಾಗಿ ಖಾಸಗಿ ವೈದ್ಯಕೀಯ ಕಾಲೇಜುಗಳಿಗಿಂತ ಸರಕಾರಿ ವೈದ್ಯಕೀಯ ಕಾಲೇಜುಗಳನ್ನು, ಹೊಸ ಕಾಲೇಜುಗಳಿಗಿಂತ ಹಳೆಯ ಕಾಲೇಜುಗಳನ್ನು ಆಯ್ದುಕೊಳ್ಳುವುದೊಳ್ಳೆಯದು. ಸರಕಾರಿ ಕಾಲೇಜುಗಳಲ್ಲಿ ಖರ್ಚು ಕಡಿಮೆ, ಕಲಿಕೆ ಹೆಚ್ಚು; ಖಾಸಗಿ ಕಾಲೇಜುಗಳಲ್ಲಿ ಖರ್ಚು ವಿಪರೀತ, ಕಲಿಕೆ ಅಲ್ಪ.

ವೈದ್ಯಕೀಯ ವೃತ್ತಿಯಲ್ಲಿ ಆಸಕ್ತಿಯಿದ್ದರೂ ವೈದ್ಯಶಿಕ್ಷಣಕ್ಕೆ ಪ್ರವೇಶ ದೊರೆಯದಿದ್ದರೆ ನಿರಾಶರಾಗಬೇಕಿಲ್ಲ. ವೈದ್ಯಕೀಯ ಭೌತ ವಿಜ್ಞಾನ, ಸೂಕ್ಷಜೀವಿ ವಿಜ್ಞಾನ,ಜೀವರಸಾಯನ ವಿಜ್ಞಾನ, ಔಷಧ ವಿಜ್ಞಾನ, ತಳಿ ವಿಜ್ಞಾನ, ನರ ವಿಜ್ಞಾನ, ಮನೋ ವಿಜ್ಞಾನ, ಆಹಾರ ಮತ್ತು ಪೋಷಣೆ, ಶುಶ್ರೂಷೆ ಇವೇ ಮುಂತಾದ ಕ್ಷೇತ್ರಗಳಲ್ಲಿ ಉನ್ನತ ಅಧ್ಯಯನಕ್ಕೂ, ಒಳ್ಳೆಯ ವೃತ್ತಿಗೂ ದೇಶ-ವಿದೇಶಗಳಲ್ಲಿ ಅವಕಾಶಗಳಿವೆ. ಹೊಸ ಔಷಧಗಳನ್ನೂ, ಚಿಕಿತ್ಸಾಕ್ರಮಗಳನ್ನೂ, ವೈದ್ಯಕೀಯ ಉಪಕರಣಗಳನ್ನೂ ಅಭಿವೃದ್ಧಿ ಪಡಿಸುವುದು, ಸೂಕ್ಷ್ಮಜೀವಿಗಳು ಕಾಯಿಲೆಯುಂಟು ಮಾಡುವ ಬಗೆಯನ್ನು ಸಂಶೋಧಿಸುವುದು, ದೇಹದ ಜೀವಕಣಗಳ ರಹಸ್ಯವನ್ನು ಬೇಧಿಸುವುದು ಎಂದಿಗೂ ಮುಗಿಯದ, ಅತ್ಯಂತ ಸವಾಲಿನ ಕ್ಷೇತ್ರಗಳಾಗಿವೆ.

ಶಾರೀರಿಕ ಚಿಕಿತ್ಸೆಗೆ (ಫಿಸಿಯೋಥೆರಪಿ) ಎಲುಬು ಹಾಗೂ ಸಂಧಿರೋಗಗಳು, ನರಮಂಡಲದ ರೋಗಗಳು, ವೃದ್ಧಾಪ್ಯದ ಸಮಸ್ಯೆಗಳು ಇತ್ಯಾದಿಗಳ ನಿರ್ವಹಣೆಯಲ್ಲಿ ಮಹತ್ವದ ಪಾತ್ರವಿದೆ. ಕ್ರೀಡಾಳುಗಳ ದೈಹಿಕ ಕ್ಷಮತೆಯನ್ನು ಕಾಯ್ದಿಡುವುದು ಶಾರೀರಿಕ ಚಿಕಿತ್ಸೆಯ ವಿಶಿಷ್ಟತೆಗಳಲ್ಲೊಂದಾಗಿ ಬೆಳೆಯುತ್ತಿದೆ. ವೈದ್ಯವಿಜ್ಞಾನದಲ್ಲಿ ಅಭಿರುಚಿಯುಳ್ಳವರಾಗಿ, ಕ್ರೀಡೆಗಳಲ್ಲೂ ಅತ್ಯಾಸಕ್ತರಾಗಿರುವವರಿಗೆ ಇದು ಹೇಳಿ ಮಾಡಿಸಿದಂತಿದೆ.

ನಮ್ಮ ರಾಜ್ಯದಲ್ಲಿ ಬದಲಿ ವೈದ್ಯಕೀಯ ಪದ್ಧತಿಗಳ ಹಲವು ಕಾಲೇಜುಗಳಿವೆ. ಆಧುನಿಕ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ದೊರೆಯದ ಕೆಲವು ವಿದ್ಯಾರ್ಥಿಗಳು ಅದರತ್ತ ವಾಲುವುದಿದೆ. ಇನ್ನು ಕೆಲವರು ಆಸಕ್ತಿಯಿಂದಲೇ ಅತ್ತ ಹೋಗುವುದಿದೆ. ಆಯುರ್ವೇದ, ಹೋಮಿಯೋಪತಿ, ಸಿದ್ಧ, ಯುನಾನಿ, ಪ್ರಕೃತಿ ಚಿಕಿತ್ಸೆ ಇತ್ಯಾದಿಗಳು 300-3000 ವರ್ಷಗಳಷ್ಟು ಹಳೆಯವಾಗಿದ್ದು, ಹೊಸ ತಂತ್ರಜ್ಞಾನದ ಪ್ರಯೋಜನಗಳನ್ನು ಅಳವಡಿಸಿಕೊಳ್ಳಲಾಗದೆ ಅಲ್ಲೇ ಸ್ಥಗಿತಗೊಂಡಿವೆ. ಹಾಗಾಗಿ ಆ ಪದ್ಧತಿಗಳಲ್ಲಿ ಹೊಸ ಆವಿಷ್ಕಾರಗಳ ಸಾಧ್ಯತೆಗಳೂ, ಉನ್ನತ ವ್ಯಾಸಂಗದ ಅವಕಾಶಗಳೂ ನಗಣ್ಯವಾಗಿವೆ.

ಮಾನವಶಾಸ್ತ್ರ (ಆಂಥ್ರಪಾಲಜಿ), ಕೃಷಿ ವಿಜ್ಞಾನ, ಇತಿಹಾಸ, ಭಾಷಾಶಾಸ್ತ್ರ ಇತ್ಯಾದಿಗಳು ಕೂಡಾ ಅತ್ಯಂತ ಆಸಕ್ತಿದಾಯಕವಾಗಿದ್ದು, ಉದ್ಯೋಗಾವಕಾಶಗಳಿಗೂ ಕೊರತೆಯಿಲ್ಲ. ಸಂಗೀತ, ಚಿತ್ರಕಲೆ ಮುಂತಾದ ಲಲಿತಕಲೆಗಳಲ್ಲೂ ಉನ್ನತ ವ್ಯಾಸಂಗಕ್ಕೆ ಅವಕಾಶಗಳಿವೆ, ಹೊಸ ತಂತ್ರಜ್ಞಾನವನ್ನೆಲ್ಲ ಅವುಗಳಿಗೆ ಅಳವಡಿಸುವ ಹೊಚ್ಚ ಹೊಸ ಮಾರ್ಗಗಳೂ ತೆರೆದುಕೊಳ್ಳುತ್ತಿವೆ. ತಂತ್ರಜ್ಞಾನ ಹಾಗೂ ಮೂಲ ವಿಜ್ಞಾನಗಳಂತೂ ನಮ್ಮ ಅರಿವಿನ ಮುಂಚೂಣಿಯಲ್ಲಿದ್ದು ಆಸಕ್ತರನ್ನು ಕೈಬೀಸಿ ಕರೆಯುತ್ತಿವೆ. ಒಟ್ಟಿನಲ್ಲಿ ಸದಾ ಆಸಕ್ತಿಯುತವಾದ, ಆನಂದಕರವಾದ, ನಿರಂತರ ಕಲಿಕೆಗೆ ಅವಕಾಶವಿರುವ ವೃತ್ತಿಯನ್ನು ಆಯ್ದುಕೊಂಡು, ಅದರಲ್ಲಿ ಉನ್ನತ ಸಾಧನೆಗಾಗಿ ಶ್ರಮಿಸುವುದು ಜಾಣತನ. ಪದವಿಯಷ್ಟೇ ಅಲ್ಲ, ಜ್ಞಾನಾರ್ಜನೆಯೇ ಗುರಿಯಾಗಬೇಕು.

ಇಪ್ಪತ್ನಾಲ್ಕನೇ ಬರಹ : ಹೊಸ ಮುಖ್ಯಮಂತ್ರಿಗಳಲ್ಲಿ ಹಳೆಯ ನಿವೇದನೆಗಳು [ಮೇ 15, 2013, ಬುಧವಾರ] [ನೋಡಿ | ನೋಡಿ]

ಜನರ ಆಹಾರ, ಆರೋಗ್ಯ ಹಾಗೂ ನೆಮ್ಮದಿಗಳನ್ನು ಕಾಪಾಡುವುದಕ್ಕೆ ಆದ್ಯತೆ ನೀಡಿ

ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರೇ, ಕರ್ನಾಟಕದ ಪ್ರಜ್ಞಾವಂತ ಮತದಾರರು ಹಲವು ನಿರೀಕ್ಷೆಗಳನ್ನಿಟ್ಟುಕೊಂಡು ತಮ್ಮ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತಂದಿದ್ದಾರೆ, ತಾವು ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡಿರುವುದಕ್ಕೆ ನಾಡಿನೆಲ್ಲೆಡೆ ಸಂಭ್ರಮವಿದೆ. ತಮಗೆ ಹೃತ್ಪೂರ್ವಕವಾದ ಅಭಿನಂದನೆಗಳನ್ನು ಸಲ್ಲಿಸುವುದರ ಜೊತೆಗೆ, ನಾಡಿನ ಜನತೆಯ, ಅದರಲ್ಲೂ ಮಕ್ಕಳ, ಪರವಾಗಿ ಕೆಲವೊಂದು ನಿವೇದನೆಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ. ಕಳೆದ ಏಳು ವರ್ಷಗಳಿಂದ ರಾಜ್ಯವನ್ನಾಳುತ್ತಿದ್ದವರು ಯಾವುದೋ ಲೆಕ್ಕಾಚಾರಗಳಿಂದಾಗಿ ಇವನ್ನೆಲ್ಲ ಕಡೆಗಣಿಸಿದ್ದರು. ತಾವು ಇವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಪರಿಹಾರವನ್ನು ಒದಗಿಸಬಹುದೆಂದು ಆಶಿಸುತ್ತೇನೆ.

ಫೆಬ್ರವರಿ 3, 2006ರಂದು ಸಮ್ಮಿಶ್ರ ಸರಕಾರವು ಅಧಿಕಾರ ಹಿಡಿದಂದಿನಿಂದ ಸಂಪ್ರದಾಯವಾದ, ಅವೈಚಾರಿಕತೆ, ಸಾಮಾಜಿಕ ಅಸಮಾನತೆ ಹಾಗೂ ಭ್ರಷ್ಟಾಚಾರಗಳೆಲ್ಲವೂ ಮಕ್ಕಳ ಬಿಸಿಯೂಟದಲ್ಲಿ ಮೇಳೈಸಿದ್ದು ದೊಡ್ಡ ದುರಂತವೆಂದೇ ಹೇಳಬೇಕು. ಆ ದಿನಗಳಲ್ಲಿ ರಾಜ್ಯದ ಶಾಲೆಗಳಲ್ಲಿ ಕಲಿಯುತ್ತಿದ್ದ ಸುಮಾರು 58 ಲಕ್ಷ ಮಕ್ಕಳು ಏನನ್ನು ತಿನ್ನಬಯಸುತ್ತಾರೆನ್ನುವ ಬಗ್ಗೆ ಸಮೀಕ್ಷೆಯೊಂದನ್ನು ನಡೆಸಲಾಗಿತ್ತು. ಅವರಲ್ಲಿ 50 ಲಕ್ಷ ಮಕ್ಕಳು ತಮಗೆ ಮೊಟ್ಟೆ ಬೇಕೆಂದರೆ ಇನ್ನುಳಿದವರು ಬಾಳೆಹಣ್ಣಿನತ್ತ ಒಲವು ವ್ಯಕ್ತ ಪಡಿಸಿದ್ದರು. ಆದರೆ ಮಕ್ಕಳ ಬಯಕೆಯು ಕೆಲವು ಮಠಾಧಿಪತಿಗಳಿಗೂ, ಅವರ ಬಾಲಂಗೋಚಿ ರಾಜಕಾರಣಿಗಳಿಗೂ ಪಥ್ಯವಾಗಲಿಲ್ಲ. ಮೊಟ್ಟೆಯು ತಾಮಸ ಆಹಾರವೆಂದೂ, ಮಕ್ಕಳಲ್ಲಿ  ರಾಕ್ಷಸೀ ಗುಣಗಳಿಗೆ ಕಾರಣಾವಾಗುತ್ತದೆಂದೂ ಹುಯಿಲೆಬ್ಬಿಸಲಾಯಿತು. ಈ ಒತ್ತಡಗಳಿಗೆ ಮಣಿದು ಜನವರಿ 20, 2007 ರ ಸಚಿವ ಸಂಪುಟದ ಸಭೆಯು ಮಕ್ಕಳಿಗೆ ಮೊಟ್ಟೆ ನೀಡಬಾರದೆಂದು ನಿರ್ಧರಿಸಿತು, ಇಂದಿನವರೆಗೆ ಬಿಸಿಯೂಟದಲ್ಲಿ ಮೊಟ್ಟೆ ಇಲ್ಲವಾಯಿತು. ಅತ್ತ ಹಾಲನ್ನು ಕೊಡುವುದು ಕಷ್ಟಕರವೆಂದು ಶಿಕ್ಷಣ ಇಲಾಖೆಯು ಹಿಮ್ಮೆಟ್ಟಿತು. ಹೀಗಾಗಿ ಬಿಸಿಯೂಟದಲ್ಲಿ ಅನ್ನ ಮತ್ತು ಸಾಂಬಾರು, ವಾರಕ್ಕೊಮ್ಮೆ ಬಿಸಿ ಬೇಳೆ ಬಾತ್, ಉಪ್ಪಿಟ್ಟು ಮತ್ತು ಸ್ವಲ್ಪ ತರಕಾರಿ ಅಷ್ಟೇ ಉಳಿದುಕೊಂಡವು. ಈ ಅನ್ನ-ಸಾರಿನ ಊಟವೂ ಮಠಗಳು ಹಾಗೂ ಇಸ್ಕಾನ್ ನಂತಹ ಸಂಸ್ಥೆಗಳ ಕೃಪೆಗೆ ಸೇರಿ ಮೊಟ್ಟೆ ಕೇವಲ ಕನಸಾಯಿತು.

ರಾಜ್ಯದ ಅರ್ಧ ಕೋಟಿ ಮಕ್ಕಳಿಗಾದ ಈ ಅನ್ಯಾಯದ ವಿರುದ್ಧವಾಗಿ ದೊಡ್ಡ ಕೂಗೆದ್ದರೂ ಅದು ಅರಣ್ಯರೋದನವಾಯಿತು, ಧಾರ್ಮಿಕ-ರಾಜಕೀಯ ತಂತ್ರಗಾರಿಕೆಯಲ್ಲಿ ಬಡ ಮಕ್ಕಳ ಆರೋಗ್ಯ ಸೊರಗಿತು. ಜೊತೆಗೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಅಧಿಕಾರಿಗಳು ಹಾಗೂ ಖಾಸಗಿ ಸಂಸ್ಥೆಗಳು ಪುಟ್ಟ ಮಕ್ಕಳಿಗೆ ಕಳಪೆ ಆಹಾರವನ್ನು ಪೂರೈಸಿ, ಕೋಟಿಗಟ್ಟಲೆ ನುಂಗಿ ಲೋಕಾಯುಕ್ತರ ಬಲೆಗೆ ಬಿದ್ದರು. ಅರ್ಧದಷ್ಟು ಅಂಗನವಾಡಿಗಳಲ್ಲಿ ಅಡುಗೆ ಅನಿಲಕ್ಕೂ ವ್ಯವಸ್ಥೆ ಇಲ್ಲದಾಯಿತು. ಇಂದು ರಾಜ್ಯದ 38% ಮಕ್ಕಳು ನ್ಯೂನಪೋಷಣೆಯಿಂದ ನರಳುತ್ತಿದ್ದಾರೆ,ರಾಯಚೂರು ಜಿಲ್ಲೆಯಂತಹಾ ಹಿಂದುಳಿದ ಪ್ರದೇಶಗಳಲ್ಲಿ ನೂರಾರು ಮಕ್ಕಳು ಊಟಕ್ಕಿಲ್ಲದೆ ಸಾಯುತ್ತಿದ್ದಾರೆ. ಈ ಬಗ್ಗೆ ರಾಜ್ಯ ಮುಖ್ಯ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡ ಸರಕಾರವು ಅಂಗನವಾಡಿಗಳಲ್ಲಿರುವ ಮಕ್ಕಳಿಗೆ ಮೊಟ್ಟೆಯನ್ನು ನೀಡುವ ಭರವಸೆಯಿತ್ತು ಒಂದು ವರ್ಷ ಕಳೆದರೂ ವಸ್ತು ಸ್ಥಿತಿ ಬದಲಾದಂತಿಲ್ಲ.

ನಮ್ಮ ರಾಜ್ಯದ ಬಡ ಹಾಗೂ ಹಿಂದುಳಿದ ಮಕ್ಕಳಿಗಾಗುತ್ತಿರುವ ಈ ಅನ್ಯಾಯವನ್ನು ಸರಿಪಡಿಸಿ, ಅವರ ದೈಹಿಕ ಹಾಗೂ ಬೌದ್ಧಿಕ ಬೆಳವಣಿಗೆಯನ್ನು ಪೋಷಿಸುವುದು ಮಾನ್ಯ ಮುಖ್ಯಮಂತ್ರಿಗಳು ಕೈಗೊಳ್ಳಬೇಕಾದ ಮೊತ್ತಮೊದಲ ಕ್ರಮವಾಗಬೇಕು. ಬಿಸಿಯೂಟದಲ್ಲಿ ಪ್ರತಿ ನಿತ್ಯವೂ ಮೊಟ್ಟೆಯನ್ನು ನೀಡಲಾಗುವ ತಮಿಳುನಾಡಿನಲ್ಲೂ, ವಾರಕ್ಕೆ ಮೂರು ಸಲ ನೀಡಲಾಗುವ ಕೇರಳದಲ್ಲೂ ಮಕ್ಕಳ ಆರೋಗ್ಯದ ಸ್ಥಿತಿಯು ಉತ್ತಮವಾಗಿದ್ದು, ನ್ಯೂನ ಪೋಷಣೆಯ ಪ್ರಮಾಣವು ನಮ್ಮಲ್ಲಿಗಿಂತ ಮೂರು ಪಾಲು ಕಡಿಮೆಯಿರುವುದನ್ನು ಗಮನಿಸಿ, ನಮ್ಮಲ್ಲೂ ಬಿಸಿಯೂಟದ ಜೊತೆ ಪ್ರತಿ ನಿತ್ಯವೂ ಮೊಟ್ಟೆಯನ್ನು ಒದಗಿಸಬೇಕು. ಮೊಟ್ಟೆಯನ್ನು ತಿನ್ನಬಯಸದ ಮಕ್ಕಳಿಗೆ ಬದಲಿಯಾಗಿ ದ್ವಿದಳ ಧಾನ್ಯಗಳನ್ನು ನೀಡಬಹುದು. ಬಿಸಿಯೂಟ ವಿತರಣೆಯಲ್ಲಿ ಮಠಗಳು ಹಾಗೂ ಇಸ್ಕಾನ್ ನಂತಹ ಸಂಸ್ಥೆಗಳ ಪಾತ್ರವನ್ನು ತನಿಖೆಗೊಳಪಡಿಸಿ, ಲೋಪಗಳಿದ್ದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಶಾಲೆಗಳಲ್ಲೂ, ಅಂಗನವಾಡಿಗಳಲ್ಲೂ ಮಕ್ಕಳಿಗೆ ಅತ್ಯುತ್ತಮ ಪೌಷ್ಠಿಕ ಆಹಾರವನ್ನು ಒದಗಿಸುವುದಕ್ಕೆ ಸಕಲ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ, ಅಂತಲ್ಲಿ ನುಸುಳುವ ಜಾತಿಬೇಧದ ಪಿಡುಗನ್ನು ನಿರ್ದಾಕ್ಷಿಣ್ಯವಾಗಿ ತಡೆಯಬೇಕು.

ಜೊತೆಗೆ, ಮಕ್ಕಳಲ್ಲಿ ಬೊಜ್ಜು ಬೆಳೆಯುವುದಕ್ಕೆ ಕಾರಣವಾಗುತ್ತಿರುವ ಸಿಹಿತಿಂಡಿಗಳು, ಶೀಘ್ರ ತಿನಿಸುಗಳು, ಲಘು ಪೇಯಗಳು ಮುಂತಾದವನ್ನು ಶಾಲೆಗಳ ಬಳಿ ಮಾರಾಟ ಮಾಡದಂತೆ ನಿರ್ಬಂಧಿಸಬೇಕು ಮತ್ತು ಇವುಗಳಿಂದ ಮಕ್ಕಳ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ವ್ಯಾಪಕ ಜನಜಾಗೃತಿಯನ್ನು ಮೂಡಿಸುವ ಕೆಲಸವಾಗಬೇಕು.

ಒಂದರಿಂದ ಹತ್ತನೇ ತರಗತಿಯ ಎಲ್ಲ ಮಕ್ಕಳಿಗೂ ಯೋಗ ಶಿಕ್ಷಣವನ್ನು ಕಡ್ಡಾಯಗೊಳಿಸಿ ನಾಲ್ಕು ವರ್ಷಗಳಾದವು. ವೈದ್ಯಕೀಯ, ಶಿಕ್ಷಣ ಹಾಗೂ ಯೋಗ ಕ್ಷೇತ್ರಗಳ ತಜ್ಞರು, ವಿದ್ಯಾರ್ಥಿಗಳು ಹಾಗೂ ಹೆತ್ತವರು ಇದನ್ನು ವಿರೋಧಿಸಿದ್ದರೂ ಸರಕಾರವು ಲೆಕ್ಕಿಸಲಿಲ್ಲ. ಅದಕ್ಕಾಗಿ ಕೋಟಿಗಟ್ಟಲೆ ವೆಚ್ಚದಲ್ಲಿ 65000ಕ್ಕೂ ಮಿಕ್ಕಿ ಯೋಗ ಶಿಕ್ಷಕರನ್ನು ನಿಯುಕ್ತಿಗೊಳಿಸಲಾಯಿತು. ಸಾಮಾಜಿಕ ಚಟುವಟಿಕೆಗಳಿಗಾಗಿ ಅಥವಾ ಆಟೋಟಗಳಿಗಾಗಿ ಮೀಸಲಿಟ್ಟಿದ್ದ ಸಮಯವನ್ನು ಯೋಗಾಭ್ಯಾಸಕ್ಕೆ ನೀಡಲಾಯಿತು. ಆದರೆ ಯೋಗಾಭ್ಯಾಸವು ಮಕ್ಕಳಿಗೆ ಉಪಯುಕ್ತ ಅಥವಾ ಸುರಕ್ಷಿತವೆನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ, ಮಾತ್ರವಲ್ಲ, ಇನ್ನಿತರ ಆಟೋಟಗಳಿಗೆ ಸಮನಾದ ವ್ಯಾಯಾಮವನ್ನೂ ಅದು ಒದಗಿಸುವುದಿಲ್ಲ. ಮಕ್ಕಳಿಗೆ, ಅದರಲ್ಲೂ ಹುಡುಗಿಯರಿಗೆ, ಯೋಗಾಭ್ಯಾಸದ ಕಟ್ಟುಪಾಡುಗಳನ್ನು ಪಾಲಿಸಲಾಗದೆ ತೀವ್ರವಾದ ಮುಜುಗರಕ್ಕೂ ಕಾರಣವಾಗಬಹುದು. ಆದ್ದರಿಂದ ಕಡ್ಡಾಯ ಯೋಗಶಿಕ್ಷಣವನ್ನು ಈ ಕೂಡಲೇ ನಿಲ್ಲಿಸಿ, ಮಕ್ಕಳ ಮನೋದೈಹಿಕ ವಿಕಾಸವನ್ನು ಪ್ರಚೋದಿಸುವ ಚಟುವಟಿಕೆಗಳಿಗೆ ಆದ್ಯತೆ ನೀಡುವ ಬಗ್ಗೆ ಹೊಸ ಸರಕಾರವು ಚಿಂತಿಸಬೇಕು.

ಹಿಂದಿನ ಸರಕಾರವು ಜನರ ಊಟವನ್ನೂ ನಿಯಂತ್ರಿಸಲೆತ್ನಿಸಿತು. ಮಾಂಸಾಹಾರವನ್ನು ಅವಹೇಳನ ಮಾಡಿ, ಮಾಂಸಾಹಾರಿಗಳೆಲ್ಲ ಕ್ರೂರಿಗಳೆಂದು ಹೀಯಾಳಿಸಲಾಯಿತು. ರಾಜ್ಯದಾದ್ಯಂತ ನಡೆದ ಪ್ರತಿಭಟನೆಗಳನ್ನೂ ಲೆಕ್ಕಿಸದೆ ಗೋಹತ್ಯೆಯನ್ನು ನಿಷೇಧಿಸಿ ಪಶುಗಳ ಮಾಂಸದ ಮಾರಾಟವನ್ನು ತಡೆಯುವ ಪ್ರಯತ್ನಗಳಾದವು. ವಿರೋಧ ಪಕ್ಷದ ನಾಯಕರಾಗಿ ಇದನ್ನು ವಿರೋಧಿಸಿದ್ದ ಈಗಿನ ಮುಖ್ಯಮಂತ್ರಿಗಳು ಜನರ ಊಟದ ಹಕ್ಕನ್ನು ಮರಳಿಸುವುದಕ್ಕೆ ಆದ್ಯತೆ ನೀಡಬೇಕು. ಪಶು ಮಾಂಸ ಸೇವನೆಯ ಬಗ್ಗೆ ಮನುಸ್ಮೃತಿ, ಶತಪಥ ಬ್ರಾಹ್ಮಣಗಳಲ್ಲಿರುವ ಪ್ರಸ್ತಾಪಗಳು, ಎತ್ತಿನ ಮಾಂಸ ಸೇವನೆಯ ಲಾಭಗಳ ಬಗ್ಗೆ ಆದಿ ಶಂಕರಾಚಾರ್ಯರ ಟಿಪ್ಪಣಿ, (ಬೃಹದಾರಣ್ಯಕ ಉಪನಿಷತ್ತಿನ ಭಾಷ್ಯ, 6:4:18), ಹಿಂದುಗಳು, ಅದರಲ್ಲೂ ಬ್ರಾಹ್ಮಣರು, ಗೋಮಾಂಸ ಸೇವಿಸುವ ಬಗ್ಗೆ ಸ್ವಾಮಿ ವಿವೇಕಾನಂದರ ನಿಲುವುಗಳು (ಸಂಪೂರ್ಣ ಕೃತಿಗಳು, 3:174, 536), ರಾಮಾಯಣ, ಭಗವದ್ಗೀತೆ, ಚರಕ ಸಂಹಿತೆಗಳಲ್ಲಿ ಮಾಂಸ ಸೇವನೆಗೆ ನೀಡಲಾಗಿರುವ ಸಮರ್ಥನೆಗಳು ಮಾಂಸಾಹಾರವನ್ನು ಬಲವಾಗಿ ಬೆಂಬಲಿಸುತ್ತವೆ. ಅಡ್ಡಾಡಿ ಹುಲ್ಲು ಮೇಯ್ದು ಒಳ್ಳೆಯ ಕಸುವುಳ್ಳ ಪಶುಗಳ ಮಾಂಸವು ಹೆಚ್ಚು ಆರೋಗ್ಯಕರವೆನ್ನುವುದೂ ಇದಕ್ಕೆ ಪೂರಕವಾಗಿದೆ.

ಹಿಂದಿನ ಸರಕಾರವು ಜಾತಿ-ಜಾತಿಯ ಮಠ-ಮಂದಿರಗಳಿಗೆ ಕೋಟಿಗಟ್ಟಲೆ ಹಣವನ್ನು ಹಂಚಿತು. ಸರಕಾರಿ ವೆಚ್ಚದಲ್ಲಿ ಗಂಗೆಯ ನೀರು, ತಿಮ್ಮಪ್ಪನ ಲಡ್ಡು ಹಂಚಿದ್ದಲ್ಲದೆ ಪಂಚತೈಲದ ದೀಪಾರಾಧನೆಯನ್ನೂ ನಡೆಸಲಾಯಿತು. ಮಂತ್ರಿಗಳ ಕಛೇರಿಗಳಲ್ಲೂ, ಸರಕಾರಿ ನಿವಾಸಗಳಲ್ಲೂ ವಾಸ್ತು ದೋಷ ಪರಿಹಾರಕ್ಕೆ ಇನ್ನಷ್ಟು ಕೋಟಿಗಳಾದವು. ಮುಖ್ಯಮಂತ್ರಿಯಾದಿಯಾಗಿ ಸಚಿವ ಗಡಣವೆಲ್ಲ ಮಾಟ-ಮಂತ್ರ-ಜ್ಯೋತಿಷ್ಯಗಳ ಮೊರೆ ಹೋಯಿತು. ಹಾಗಿದ್ದರೂ ಸೋತು ಅಧಿಕಾರ ನಷ್ಟವಾಯಿತು, ಕೆಲವರಿಗೆ ಜೈಲೇ ಗತಿಯಾಯಿತು. ಪ್ರಖರ ಚಿಂತನೆಗೂ, ವೈಚಾರಿಕತೆಗೂ ಹೆಸರುಳ್ಳವರಾದ ತಾವು ಇನ್ನು ರಾಜ್ಯದ ಆಡಳಿತದಲ್ಲೂ ಅದೇ ವೈಚಾರಿಕತೆಯನ್ನು ಅಳವಡಿಸಿ ಜ್ಯೋತಿಷ್ಯ-ವಾಸ್ತು-ಹೋಮಗಳನ್ನೆಲ್ಲ ದೂರವಿರಿಸುತ್ತೀರೆಂದು ಆಶಿಸುತ್ತಿದ್ದೇವೆ.

ಹಾಗೆಯೇ, ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಸಂಸ್ಥೆಗಳಿಗೆ ಯಾ ಮಠಗಳಿಗೆ ವಹಿಸಿದರೆ ಮತ್ತು ಪ್ರಾಚೀನ ಪರಂಪರೆಯನ್ನು ರಕ್ಷಿಸುವ ಹೆಸರಲ್ಲಿ ಬದಲಿ ಚಿಕಿತ್ಸಾಲಯಗಳನ್ನು ಉತ್ತೇಜಿಸಿದರೆ ಹಿಂದುಳಿದ ಪ್ರದೇಶಗಳ ಜನರನ್ನು ಅತ್ಯಾಧುನಿಕ ಚಿಕಿತ್ಸೆಯಿಂದ ವಂಚಿಸಿದಂತಾಗುತ್ತದೆ ಮತ್ತು ಚಿಕಿತ್ಸೆಯಲ್ಲಿ ಗೊಂದಲಕ್ಕೂ ಕಾರಣವಾಗುತ್ತದೆ. ಆದ್ದರಿಂದ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಆಧುನಿಕ ಚಿಕಿತ್ಸಾ ಸೌಲಭ್ಯಗಳನ್ನು ಬಲಪಡಿಸಿ, ಅಲ್ಲಿ ನುರಿತ ವೈದ್ಯರ ಸೇವೆಯನ್ನು ಪ್ರೋತ್ಸಾಹಿಸುವ ಕ್ರಮಗಳನ್ನು ಕೈಗೊಳ್ಳಬೇಕು.

ರಾಜ್ಯದ ಕೆಲ ಭಾಗಗಳಲ್ಲಿ ನೈತಿಕತೆಯ ಹೆಸರಲ್ಲಿ ಯುವಜನರ ಮೇಲೆ ಅನೇಕ ದಾಳಿಗಳಾಗಿವೆ ಹಾಗೂ ಪೋಲೀಸರು ದಾಳಿಗೊಳಗಾದವರನ್ನೇ ಪೀಡಿಸಿದ ಪ್ರಕರಣಗಳು ವರದಿಯಾಗಿವೆ. ಇಂತಹಾ ಘಟನೆಗಳು ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸುವುದರ ಜೊತೆಗೆ ಯುವಜನರ ಸ್ವಾತಂತ್ರ್ಯಕ್ಕೆ ಧಕ್ಕೆಯುಂಟು ಮಾಡುವುದರಿಂದ ಅವನ್ನು ಮಟ್ಟ ಹಾಕಿ, ದಾಳಿಕೋರರನ್ನು ಶಿಕ್ಷೆಗೊಳಪಡಿಸುವುದಕ್ಕೆ ಕ್ರಮ ಕೈಗೊಳ್ಳಬೇಕು. ರಾಜ್ಯದ ಜನತೆ, ವಿಶೇಷವಾಗಿ ಮಕ್ಕಳು ಹಾಗೂ ಯುವಜನರು, ತಮ್ಮನ್ನು ಆಸೆಗಣ್ಣುಗಳಿಂದ ನೋಡುತ್ತಿದ್ದಾರೆ. ರಾಜ್ಯದ ಸುಖ-ಸಮೃದ್ಧಿಯನ್ನು ಕಾಯುವ ತಮ್ಮ ಪ್ರಯತ್ನಗಳಿಗೆ ಏಳು ಕೋಟಿ ಕನ್ನಡಿಗರ ಬೆಂಬಲ ಇದ್ದೇ ಇರುತ್ತದೆ.

ಇಪ್ಪತ್ಮೂರನೇ ಬರಹ : ಹೊಸ ಕಾಯಕಗಳ ಹೊಸ ಕಾಯಿಲೆಗಳು [ಮೇ 1, 2013, ಬುಧವಾರ] [ನೋಡಿ | ನೋಡಿ]

ಮೇ ದಿನದ ಬಲಿದಾನವನ್ನು ಮರೆತಿರುವುದು ಇಂದಿನವರಿಗೆ ಕುತ್ತಾಗುತ್ತಿದೆ

ಇಂದು ಕಾರ್ಮಿಕರ ದಿನ. ಎಂಟು ಗಂಟೆ ದುಡಿಮೆ, ಎಂಟು ಗಂಟೆ ವಿಶ್ರಾಂತಿ-ವಿನೋದ ಹಾಗೂ ಎಂಟು ಗಂಟೆ ನಿದ್ದೆಯ ಹಕ್ಕಿಗಾಗಿ ದುಡಿಯುವ ಜನರು ನಡೆಸಿದ್ದ ಧೀರೋದಾತ್ತ ಹೋರಾಟಗಳನ್ನು ಸ್ಮರಿಸುವ ದಿನ. ಹೊಸ ಆರ್ಥಿಕತೆ, ಹೊಸ ತಂತ್ರಜ್ಞಾನ, ಹೊಸ ಜೀವನ ಮೌಲ್ಯಗಳು ಹಾಗೂ ಹೊಸ ಉದ್ಯೋಗಗಳ ಈ ಕಾಲಕ್ಕೆ ಅವೆಷ್ಟು ಪ್ರಸ್ತುತವೆಂದು ಮಥಿಸಬೇಕಾದ ದಿನ.

ಹದಿನೆಂಟು-ಹತ್ತೊಂಭತ್ತನೇ ಶತಮಾನವು ಕೈಗಾರಿಕಾ ಕ್ರಾಂತಿಯ ಕಾಲವಾಗಿತ್ತು, ಬಂಡವಾಳಶಾಹಿ ಆರ್ಥಿಕತೆಯು ಬಲಗೊಳ್ಳಲಾರಂಭಿಸಿದ್ದ ಕಾಲವಾಗಿತ್ತು. ದೊಡ್ಡದಾಗಿ ಬೆಳೆಯತೊಡಗಿದ್ದ ಉದ್ದಿಮೆಗಳಲ್ಲಿ ಕಾರ್ಮಿಕರು ದಿನಕ್ಕೆ 12-20 ಗಂಟೆ ದುಡಿದು ಹೈರಾಣಾಗುತ್ತಿದ್ದರು. ಒಳ ಹೋದವರು ಹೊರಬರುವ ಖಾತರಿಯಿಲ್ಲದಿದ್ದ ಗಣಿಗಳು, ಉಸಿರುಗಟ್ಟಿಸುವಷ್ಟು ಮಲಿನವಾಗಿದ್ದ ಕಾರ್ಖಾನೆಗಳು, ಸ್ವಲ್ಪ ತಪ್ಪಿದರೆ ಚಚ್ಚುತ್ತಿದ್ದ ಯಂತ್ರಗಳು ದುಡಿಯುವವರ ಆರೋಗ್ಯಕ್ಕೂ, ಆಯುಸ್ಸಿಗೂ ಕಂಟಕವಾಗಿದ್ದವು. ಇಂತಹಾ ಅಮಾನವೀಯವಾದ, ಅಪಾಯಕಾರಿಯಾದ, ಅನಾರೋಗ್ಯಕರವಾದ ಸ್ಥಿತಿಗತಿಗಳ ವಿರುದ್ಧ ವಿಶ್ವದೆಲ್ಲೆಡೆ ಪ್ರತಿಭಟನೆಗಳಾಗುತ್ತಿದ್ದವು. ಆಸ್ಟ್ರೇಲಿಯಾದಿಂದ ಅಮೆರಿಕಾದವರೆಗೆ ಈ ಹೋರಾಟಗಳು ಒಗ್ಗಟ್ಟಾಗಿ ಬಲಗೊಂಡಂತೆ ಕಾರ್ಮಿಕರ ಆರೋಗ್ಯ ಹಾಗೂ ಸುರಕ್ಷತೆಗಾಗಿ ಸುಧಾರಣೆಗಳು ಆರಂಭಗೊಂಡವು. ದಿನಕ್ಕೆ ಎಂಟು ಗಂಟೆಗಳಿಗಿಂತ ಹೆಚ್ಚು ದುಡಿಸಬಾರದೆನ್ನುವ ಬೇಡಿಕೆಯೂ ಎಲ್ಲೆಡೆ ಜೋರಾಯಿತು. ‘ಮೇ 1, 1886 ರಿಂದ ಎಂಟೇ ಗಂಟೆಗಳ ಕೆಲಸ’ ಎಂಬ ಘೋಷಣೆಯೊಂದಿಗೆ ಅಮೆರಿಕಾದ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಮುಷ್ಕರಗಳು ನಡೆದವು. ಷಿಕಾಗೋ ನಗರದಲ್ಲಿ 40000ಕ್ಕೂ ಹೆಚ್ಚು ಕಾರ್ಮಿಕರು ಪಾಲ್ಗೊಂಡಿದ್ದ ಶಾಂತಿಯುತ ಪ್ರತಿಭಟನೆಯ ಮೇಲೆ ಮಾಲಕರು ಹಾಗೂ ಪೋಲೀಸರ ಅಮಾನುಷ ದಾಳಿಗಳಾದವು; ಹಲವರು ಸತ್ತರು, ಬಂಧಿತ ನಾಯಕರು ಗಲ್ಲಿಗೇರಿಸಲ್ಪಟ್ಟರು. ಈ ಬಲಿದಾನಗಳ ಫಲವಾಗಿ ಕೆಲಸದ ಅವಧಿಯು ವಿಶ್ವದಾದ್ಯಂತ ಎಂಟು ಗಂಟೆಗಳಿಗೆ ಮಿತಿಗೊಂಡಿತು. ಇಂತಹ ಸಂಘಟಿತ ಹೋರಾಟಗಳಿಂದ ಇನ್ನಷ್ಟು ಹಕ್ಕುಗಳನ್ನೂ, ಸವಲತ್ತುಗಳನ್ನೂ ಪಡೆದುಕೊಳ್ಳಲು ದುಡಿಯುವ ಜನತೆಗೆ ಸಾಧ್ಯವಾಯಿತು.

ಕಾಲ ಕಳೆದಂತೆ, ತಂತ್ರಜ್ಞಾನ ಬೆಳೆದಂತೆ ದುಡಿಮೆಯ ಸ್ವರೂಪವೂ ಬದಲಾಗುತ್ತಾ ಬಂತು. ಗಣಕ ತಂತ್ರಜ್ಞಾನದಲ್ಲಿ ಅದ್ಭುತ ಪ್ರಗತಿಯಿಂದಾಗಿ ಎಲ್ಲಾ ಯಂತ್ರಗಳೊಳಗೆ ತಂತ್ರಾಂಶಗಳು ಹೊಕ್ಕಿ ವಿವಿಧ ವೃತ್ತಿಗಳ ಕೌಶಲ್ಯಗಳಲ್ಲಿ ಬದಲಾವಣೆಗಳಾದವು. ಮಾಹಿತಿ ಜಾಲವು ವಿಶ್ವದ ಮೂಲೆಗಳನ್ನೆಲ್ಲ ತಲುಪಿ ನಿತ್ಯಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿತು. ಹೀಗೆ ಮಾಹಿತಿ ತಂತ್ರಜ್ಞಾನವು ಬಹು ದೊಡ್ಡ ಉದ್ಯಮವಾಗಿ ಬೆಳೆದು, ಹೊಸ ಪೀಳಿಗೆಗೆ ಲಕ್ಷಗಟ್ಟಲೆ ಉದ್ಯೋಗಗಳನ್ನು ಸೃಷ್ಟಿಸಿತು. ತೊಂಭತ್ತರ ದಶಕದಲ್ಲಿ ನಮ್ಮಲ್ಲೂ ಹಲವು ಹೊಸ ಕಂಪೆನಿಗಳು ಹುಟ್ಟಿಕೊಂಡವು. ಯಂತ್ರಗಳನ್ನೂ, ಅದನ್ನಾಡಿಸುವ ತಂತ್ರಜ್ಞರನ್ನೂ ತಂಪಾಗಿರಿಸುವ ಹವಾನಿಯಂತ್ರಿತ ಕೊಠಡಿಗಳು, ವಿದೇಶಿ ಗಿರಾಕಿಗಳು, ಹೆಚ್ಚು ಸಂಬಳ – ಹೊಸ ಕೆಲಸದ ಆಕರ್ಷಣೆ ಒಮ್ಮೆಗೇ ಹೆಚ್ಚಿತು. ಅದಕ್ಕೆಂದೇ ಅನೇಕ ಹೊಸ ಕಾಲೇಜುಗಳೂ ಹುಟ್ಟಿಕೊಂಡು, ವರ್ಷವೂ ಸಾವಿರಗಟ್ಟಲೆ ಗಣಕತಜ್ಞರು ಹೊರಬರತೊಡಗಿದರು. ಈ ಹೊಸ ವ್ಯವಹಾರದ ಗುಂಗಿನಲ್ಲಿ ಸರಕಾರಗಳೆಲ್ಲವೂ ಈ ಕಂಪೆನಿಗಳೊಂದಿಗೆ ತಾಳ ಹಾಕಿದವು.

ಆದರೀಗ ಗುಂಗು ಕರಗುವ ಸಮಯ ಬಂದಂತಿದೆ. ಮಾಹಿತಿ ಉದ್ಯಮವು ನಿಧಾನಗೊಳ್ಳುತ್ತಿದ್ದು, ಸ್ಪರ್ಧೆ ಕಠಿಣವಾಗುತ್ತಿದೆ. ಎಡೆಬಿಡದ ದೀರ್ಘ ದುಡಿಮೆ, ಕೆಲಸದ ಅತೀವ ಒತ್ತಡ ಹಾಗೂ ಅಭದ್ರತೆ, ಮಹಾನಗರಗಳ ಧಾವಂತ, ಆಧುನಿಕ ಜೀವನ ಶೈಲಿ, ಗಡಿಬಿಡಿಯ ಆಹಾರ, ದೈಹಿಕ ವ್ಯಾಯಾಮದ ಕೊರತೆ ಇತ್ಯಾದಿಗಳು ಮಾಹಿತಿಕರ್ಮಿಗಳ ಪಾಲಿಗೆ ಶಾಪವಾಗಿ ಪರಿಣಮಿಸುತ್ತಿವೆ. ಗಣಕ ಯಂತ್ರಗಳ ಬಳಕೆಯಿಂದಾಗುವ ದುಷ್ಪರಿಣಾಮಗಳು, ಆಧುನಿಕ ರೋಗಗಳು ಹಾಗೂ ಮಾನಸಿಕ ತೊಂದರೆಗಳೆಂಬ ತ್ರಿಶೂಲಕ್ಕೆ ಸಿಕ್ಕಿ ಅವರು ನರಳುತ್ತಿದ್ದಾರೆ.

ದೇಶದ ಅಭಿವೃದ್ಧಿಯ ನೆಪದಲ್ಲಿ, ಖಾಸಗಿ ಕಂಪೆನಿಗಳ ಜೋಳಿಗೆ ತುಂಬುವುದಕ್ಕಾಗಿ ಇಂದಿನ ಯುವ ಜನಾಂಗ ಸ್ವಂತ ಬದುಕನ್ನೇ ಒತ್ತೆಯಿಡುವಂತಾಗಿದೆ. ದಿನಕ್ಕೆ 10-12 ಗಂಟೆಗಳ ದುಡಿಮೆ ಹೊಸ ರೂಪ ಧರಿಸಿ ಮರಳಿ ಬಂದಿದೆ; ಮನೆಯೊಳಕ್ಕೂ ನುಗ್ಗಿ ವಿಧ್ವಂಸಕವಾಗತೊಡಗಿದೆ. ಗಣಕಯಂತ್ರಗಳಲ್ಲಿ ಒಂದೊಂದು ಕೀಲಿಹೊಡೆತವೂ ದಾಖಲಿಸಲ್ಪಡುವುದು ಹಾಗೂ ಸಂಸ್ಥೆಯ ಸಂದುಗೊಂದುಗಳಲ್ಲಿ ಅಡಗಿರುವ ಕ್ಯಾಮರಾಗಳಲ್ಲಿ ಚಲನವಲನಗಳೆಲ್ಲವೂ ಸೆರೆಹಿಡಿಯಲ್ಪಡುವುದು ಕೆಲಸದ ಒತ್ತಡವನ್ನು ಬಹಳಷ್ಟು ಹೆಚ್ಚಿಸುತ್ತಿವೆ. ದಿನದ 24 ಗಂಟೆಗಳಲ್ಲೂ ಚರವಾಣಿ, ಅಂತರ್ಜಾಲ, ನಿಸ್ತಂತುಗಳ ಸಂಪರ್ಕ ಜಾಲದಲ್ಲಿ ಬಂಧಿಯಾಗಿ ಎದುರಿಗಿರುವ ಮನುಷ್ಯರೊಂದಿಗೆ ಸಂವಹನ ಕಡಿಮೆಯಾಗುವಂತಾಗಿದೆ. ಅಮೆರಿಕಾದ ಹಗಲುಗಳನ್ನು ಭಾರತದ ರಾತ್ರಿಗಳಲ್ಲಿ ಗುತ್ತಿಗೆ ಪಡೆಯುತ್ತಿರುವುದರಿಂದ ನಮ್ಮ ಯುವ ಜನಾಂಗ ನಿದ್ದೆಗೆಡುತ್ತಿದೆ. ತಂತ್ರಜ್ಞಾನದ ಈ ಯುಗದಲ್ಲಿ ಕಾರ್ಮಿಕನು ಸಣ್ಣ ತುಂಡನ್ನಷ್ಟೇ ತಯಾರಿಸುವುದರಿಂದಾಗಿ, ತನ್ನ ಕ್ರಿಯಾಶೀಲತೆಯ ಅಂತಿಮ ಫಲವನ್ನು ನೋಡುವ ಆನಂದವೂ ಅವನಿಗೆ ಇಲ್ಲವಾಗಿದೆ.

ಕಾರ್ಮಿಕರನ್ನು ಶೋಷಿಸಿ ದುಡಿಸುವುದಕ್ಕೆ ಹೊಸ ತಂತ್ರಗಳನ್ನು ಹೆಣೆಯುವ ಆಡಳಿತ ಪಂಡಿತರಿಗೆ ಕಂಪೆನಿಗಳು ದೊಡ್ಡ ಸಂಬಳಗಳನ್ನೇ ನೀಡುತ್ತಿವೆ. ಜಾತಿ, ಮತ, ಭಾಷೆ, ಲಿಂಗ, ಕೌಶಲ್ಯ, ವಯಸ್ಸು ಮುಂತಾದವುಗಳ ಹೆಸರಲ್ಲಿ ಕಾರ್ಮಿಕರನ್ನು ಒಡೆದಿಡುವುದು, ಸ್ವಾಭಿಮಾನವನ್ನು ಮಣ್ಣಾಗಿಸಿ ಸ್ವಸಾಮರ್ಥ್ಯವನ್ನೇ ಸಂಶಯಿಸುವಂತೆ ಮಾಡುವುದು, ಸಹೋದ್ಯೋಗಿಗಳಲ್ಲೂ, ಕುಟುಂಬದವರಲ್ಲೂ ತನ್ನ ಕಷ್ಟಗಳನ್ನು ಹೇಳಿಕೊಳ್ಳಲಾಗದಂತೆ ನಿಕೃಷ್ಟತೆಯ ಭಾವನೆಯನ್ನು ಹುಟ್ಟಿಸುವುದು, ಪರಸ್ಪರ ಶಕ್ತಿ ತುಂಬಿ ಆಸರೆಯಾಗಬಲ್ಲ ಕಾರ್ಮಿಕ ಸಂಘಟನೆಗಳನ್ನು ಪ್ರತಿಬಂಧಿಸುವುದು ಇವೇ ಮುಂತಾದ ತಂತ್ರಗಳಿಂದಾಗಿ ಇಂದಿನ ಕಾರ್ಮಿಕರು ಹೆಚ್ಚು ಹೆಚ್ಚು ಒಬ್ಬಂಟಿಗಳಾಗುತ್ತಿದ್ದಾರೆ, ಇನ್ನಷ್ಟು ಒತ್ತಡಗಳ ಕೂಪಕ್ಕೆ ತಳ್ಳಲ್ಪಡುತ್ತಿದ್ದಾರೆ.

ಗಣಕಕರ್ಮಿಗಳ ಆರೋಗ್ಯದ ಮೇಲಾಗುತ್ತಿರುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ವಿಶ್ವದಾದ್ಯಂತ ಅಧ್ಯಯನಗಳಾಗುತ್ತಿವೆ. ಶೇ. 90ಕ್ಕೂ ಹೆಚ್ಚು ಗಣಕಕರ್ಮಿಗಳಲ್ಲಿ ಗಣಕ ಯಂತ್ರಗಳ ನಿರಂತರ ಬಳಕೆಯಿಂದ ಕುತ್ತಿಗೆ, ಭುಜ, ಮಣಿಗಂಟು, ಬೆರಳುಗಳು ಹಾಗೂ ಬೆನ್ನಿನ ಸಂಧಿಗಳ ನೋವು, ಕೈಯ ನರಶೂಲೆ ಹಾಗೂ ಕಣ್ಣಿನ ತೊಂದರೆಗಳಾಗುವುದನ್ನು ಗುರುತಿಸಲಾಗಿದೆ. ಬೊಜ್ಜು, ಮಧುಮೇಹ, ರಕ್ತದ ಏರೊತ್ತಡ, ಕೊಲೆಸ್ಟರಾಲ್ ಮತ್ತಿತರ ಮೇದಸ್ಸಿನ ಸಮಸ್ಯೆಗಳು, ಹೃದಯ ಹಾಗೂ ಮೆದುಳಿನ ರಕ್ತನಾಳಗಳ ಕಾಯಿಲೆಗಳು, ಮೂಳೆಸವೆತ ಹಾಗೂ ಕ್ಯಾನ್ಸರ್ ನಂತಹ ಆಧುನಿಕ ರೋಗಗಳು ಶೇ. 65ರಷ್ಟು ಗಣಕ ತಂತ್ರಜ್ಞರನ್ನು ಬಾಧಿಸುತ್ತಿದ್ದು, 25-35ರ ಹರೆಯದಲ್ಲೇ ಅವರು ಮುಪ್ಪಾಗುತ್ತಿದ್ದಾರೆ.

ಶೇ. 80ಕ್ಕೂ ಹೆಚ್ಚು ಗಣಕಕರ್ಮಿಗಳು ತಮ್ಮ ಕೆಲಸದಲ್ಲಿ ಸಾಕಷ್ಟು ಒತ್ತಡವನ್ನು ಅನುಭವಿಸುತ್ತಿದ್ದು, ಶೇ. 40ರಷ್ಟು ಮಂದಿ ಅದರಿಂದ ಖಿನ್ನತೆಗೂ, ಆತಂಕಕ್ಕೂ ಒಳಗಾಗುತ್ತಿದ್ದಾರೆ. ಶೇ. 60ರಷ್ಟು ಗಣಕಕರ್ಮಿಗಳು ನಿದ್ರಾಹೀನರಾಗಿದ್ದು, ಅದರಿಂದ ಹಲಬಗೆಯ ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಅವರಲ್ಲಿ ಹೆಚ್ಚುತ್ತಿರುವ ಧೂಮಪಾನ ಹಾಗೂ ಮದ್ಯಪಾನದ ಚಟಗಳಿಂದಾಗಿ ಸಮಸ್ಯೆಯು ಇನ್ನಷ್ಟು ಜಟಿಲವಾಗುತ್ತಿದೆ. ಆತ್ಮಹತ್ಯೆ ಹಾಗೂ ಕೊಲೆಗಳಂತಹ ವಿಪರೀತ ಘಟನೆಗಳೂ ಕೆಲವೆಡೆ ವರದಿಯಾಗಿವೆ. ಗಂಡ-ಹೆಂಡಿರಿಗೆ ಪರಸ್ಪರ ಬೆರೆಯುವುದಕ್ಕೂ ಸಮಯವಿಲ್ಲದೆ ವಿವಾಹ ವಿಚ್ಛೇದನವೂ ಸಾಮಾನ್ಯವಾಗತೊಡಗಿದೆ. ಬೆಂಗಳೂರಿನಂತಹ ನಗರಗಳ ಮನೋರೋಗ ತಜ್ಞರು ಮಾಹಿತಿಕರ್ಮಿಗಳಿಗೆ ಸಾಂತ್ವನ ಹೇಳುವುದಕ್ಕೆಂದೇ ಹೆಚ್ಚು ಸಮಯವನ್ನು ಮೀಸಲಿಡತೊಡಗಿದ್ದಾರೆ.

ಕೆಲವು ಸಂಸ್ಥೆಗಳಲ್ಲಿ ಒತ್ತಡ ಭಂಜನಕ್ಕೆ ಯೋಗಾಭ್ಯಾಸವನ್ನು ಬೋಧಿಸಲಾಗುತ್ತಿದೆ. ಉಸಿರಾಟವನ್ನು ಕಲಿಸುವ ಬಾಬಾಗಳೂ, ಬದುಕುವುದನ್ನು ಹೇಳಿಕೊಡುವ ಶ್ರೀಶ್ರೀಗಳೂ ಅಂತಲ್ಲಿ ನುಸುಳಿ, ಅಧ್ಯಾತ್ಮದ ಅಫೀಮು ನುಂಗಿಸಿ ಕೋಟ್ಯಾಧೀಶರಾಗುತ್ತಿದ್ದಾರೆ. ಆದರೆ ಯಾವುದೇ ಯೋಗ-ಧ್ಯಾನಗಳಿಂದ ಮಾನಸಿಕ ಒತ್ತಡವನ್ನಾಗಲೀ, ಆತಂಕ ಯಾ ಖಿನ್ನತೆಯನ್ನಾಗಲೀ, ದೈಹಿಕ ಸಮಸ್ಯೆಗಳನ್ನಾಗಲೀ ಸರಿಪಡಿಸಲು ಸಾಧ್ಯವಿಲ್ಲ ಎನ್ನುವುದನ್ನು ಹಲವು ವಿಮರ್ಶೆಗಳು ಸ್ಪಷ್ಟಪಡಿಸಿವೆ (ಒಸ್ಪಿನಾ, 2007; ಕೊಕ್ರೇನ್, 2009). ನಿಷ್ಪ್ರಯೋಜಕವಾದ ಈ ಯೋಗ-ಧ್ಯಾನಗಳು ವಸ್ತುನಿಷ್ಠವಾದ ಪರಿಹಾರಕ್ಕೆ ತೊಡಕಾಗಿಬಿಡುತ್ತವೆ.

ಎಂಟು ಗಂಟೆಗಳ ಪರಿಮಿತ ದುಡಿಮೆಗಾಗಿ 1886ರ ಮೇ 1 ರಂದು ವಿಶ್ವದೆಲ್ಲೆಡೆ ಎದ್ದಿದ್ದ ಕೂಗು ಮತ್ತೊಮ್ಮೆ ಮೊಳಗಬೇಕಾದ ಕಾಲ ಬಂದಿದೆ. ಬಾಯಿ ಬಾರದ, ಸಂವೇದನೆಗಳಿಲ್ಲದ ಯಂತ್ರಗಳ ಮುಂದೆ ಏಕಾಂಗಿಯಾಗಿರುವ ಬದಲು ತಮ್ಮ ಕಷ್ಟ-ಸುಖಗಳನ್ನು ಹಂಚಿಕೊಳ್ಳುವುದಕ್ಕೆ, ಸಾಮರ್ಥ್ಯ-ಸಾಧನೆಗಳನ್ನು ಒರೆ ಹಚ್ಚುವುದಕ್ಕೆ, ಸ್ವಾಭಿಮಾನವನ್ನು ಗಟ್ಟಿಗೊಳಿಸುವುದಕ್ಕೆ ಅವಕಾಶವನ್ನೀಯುವ ಕಾರ್ಮಿಕ ಸಂಘಟನೆಗಳನ್ನು ಬಲಪಡಿಸಬೇಕಾಗಿದೆ. ಮತ್ತಷ್ಟು ಅಂತರ್ಮುಖಿಯಾಗಿಸುವ ಯೋಗ-ಧ್ಯಾನಗಳಲ್ಲಿ ಕಾಲಹರಣ ಮಾಡುವ ಬದಲು ತನಗಿಷ್ಟವಾದವರ ಜೊತೆ ಬೆರೆತು, ತನಗಿಷ್ಟವೆನಿಸುವ ಚಟುವಟಿಕೆಗಳಿಂದ ಮನಸ್ಸನ್ನು ಹಗುರಗೊಳಿಸಬೇಕಾಗಿದೆ. ಮಧ್ಯಾಹ್ನದ ಕೆಲಹೊತ್ತು ಬಿಸಿಲಿಗೆ ಮೈಯೊಡ್ಡಿ ವಿಟಮಿನ್ ಡಿ ಪಡೆಯಬೇಕಾಗಿದೆ. ಗಂಟೆಗಟ್ಟಲೆ ಕುಳಿತು, ಸಿಕ್ಕಾಪಟ್ಟೆ ತಿಂದು-ಕುಡಿದು ರೋಗಿಗಳಾಗುವುದನ್ನು ತಡೆಯಬೇಕಾಗಿದೆ. ಖಾಸಗಿ ರಂಗದ ಶೇ. 85ರಷ್ಟು ನೌಕರರು ವಿವಿಧ ಮನೋದೈಹಿಕ ಸಮಸ್ಯೆಗಳಿಗೆ ತುತ್ತಾಗಿರುವಲ್ಲಿ, ಶೇ. 80ರಷ್ಟು ಸರಕಾರಿ ನೌಕರರು ಸುಭದ್ರ, ಪರಿಮಿತ ದುಡಿಮೆಯಿಂದಾಗಿ ಆರೋಗ್ಯವಂತರಾಗಿದ್ದಾರೆಂಬ ಅಸೋಚೆಮ್ ವರದಿಯು (ಎ 7, 2013) ಎಲ್ಲರ ಕಣ್ತೆರೆಸಬೇಕಿದೆ.

ಇಪ್ಪತ್ತೆರಡನೇ ಬರಹ : ದೊಡ್ಡ ಮನುಷ್ಯನೊಳಗಿನ ಸೂಕ್ಷ್ಮ ಜೀವಿಗಳು [ಎಪ್ರಿಲ್ 17, 2013, ಬುಧವಾರ] [ನೋಡಿ | ನೋಡಿ]

ನಮ್ಮ ಜೀರ್ಣಾಂಗದೊಳಗಿರುವ ಸೂಕ್ಷ್ಮಜೀವಿಗಳಿಗೆ ಹಿತವಾದುದನ್ನೇ ನಾವು ತಿನ್ನಬೇಕು

ನಮೆಲ್ಲರಿಗೆ ಒಂದೊಂದೇ ಹೆಸರು – ರಂಗ, ರಾಬರ್ಟ್, ರಹೀಮ್ ಇತ್ಯಾದಿ. ಒಂದು ದೇಹ, ಒಂದು ಜೀವ ಎಂಬ ಲೆಕ್ಕದಲ್ಲಿ ಒಂದೇ ಹೆಸರು. ಈ ಒಂಟಿ ದೇಹದ ಮೇಲೆ ನಮಗೆ ಬಲು ಮೋಹ, ಬಲು ಹೆಮ್ಮೆ. ಒಂದು ಜೀವಕ್ಕೆ ಒಂದು ಹೆಸರೇ? ಹಾಗಾದರೆ ಒಬ್ಬೊಬ್ಬ ಮನುಷ್ಯನಿಗೂ ಒಂದಲ್ಲ, ನೂರು ಲಕ್ಷ ಕೋಟಿ ಹೆಸರುಗಳಿರಬೇಕಾಗುತ್ತದೆ! ಏಕೆಂದರೆ ಪ್ರತೀ ಮನುಷ್ಯನ ದೇಹದಲ್ಲೂ ಅಷ್ಟೊಂದು ಜೀವಿಗಳು ಸೇರಿಕೊಂಡಿರುತ್ತವೆ! ಅತಿಯಾದ ಹೆಮ್ಮೆಗೂ ಇಂಬಿಲ್ಲ; ಈ ಅನ್ಯ ಜೀವಿಗಳ ನೆರವಿಲ್ಲದೆ ನಮ್ಮೀ ದೊಡ್ಡ ಜೀವವು ಆರೋಗ್ಯದಿಂದಿರಲಾರದು!

ನಮ್ಮ ವಿವಿಧ ಅಂಗಗಳಲ್ಲಿರುವ ಮಾನವ ಜೀವಕಣಗಳ ಸಂಖ್ಯೆ ಸುಮಾರು ಹತ್ತು ಲಕ್ಷ ಕೋಟಿ. ಬರಿ ಕಣ್ಣಿಗೆ ಕಾಣಿಸುವ ಹೇನುಗಳು ಹಾಗೂ ಹುಳುಗಳಂತಹಾ ಪರಾವಲಂಬಿಗಳು ಒಂದಷ್ಟು. ಇವನ್ನೆಲ್ಲ ಮೀರಿಸುವಂತೆ, ಬರಿ ಕಣ್ಣಿಗೆ ಕಾಣಿಸದ ಸಾವಿರಾರು ಬಗೆಯ ಸೂಕ್ಷ್ಮಜೀವಿಗಳು ನಮ್ಮ ದೇಹದಲ್ಲಿ ಹಾಸುಹೊಕ್ಕಾಗಿವೆ. ಹೊರ ಜಗತ್ತಿಗೆ ತೆರೆದುಕೊಂಡಿರುವ ನಮ್ಮ ಚರ್ಮ, ಬಾಯಿ, ಅನ್ನ ನಾಳ, ಕರುಳುಗಳು, ಮೂತ್ರಾಂಗಗಳು ಹಾಗೂ ಶ್ವಾಸನಾಳಗಳಲ್ಲಿ ಮನೆ ಮಾಡಿಕೊಂಡಿರುವ ಸೂಕ್ಷ್ಮಾಣುಗಳ ಸಂಖ್ಯೆ ನೂರು ಲಕ್ಷ ಕೋಟಿಗೂ ಹೆಚ್ಚು! ಅಂದರೆ ನಮ್ಮ ದೇಹದಲ್ಲಿ ನಮ್ಮ ಜೀವಕಣಗಳಿಗಿಂತ ನಾವಲ್ಲದ ಸೂಕ್ಷ್ಮಾಣುಗಳ ಸಂಖ್ಯೆ ಹತ್ತು ಪಟ್ಟು ಹೆಚ್ಚಿಗಿದೆ!

ಬಾಯಿಯಿಂದ ದೊಡ್ಡ ಕರುಳಿನವರೆಗಿನ ನಮ್ಮ ಜೀರ್ಣಾಂಗದಲ್ಲಿ ಈ ಸೂಕ್ಷ್ಮಾಣುಗಳೇ ತುಂಬಿವೆ. ನಮ್ಮ ಕರುಳಿನಲ್ಲಿರುವ ಮಡಿಕೆಗಳನ್ನೂ, ಬೆರಳಿನಂತಹ ವಿಲ್ಲೈಗಳನ್ನೂ ಬಿಡಿಸಿಟ್ಟರೆ ಸುಮಾರು 200 ಚದರ ಮೀಟರಿನಷ್ಟು, ಅಂದರೆ ಒಂದು ಟೆನಿಸ್ ಅಂಗಣದಷ್ಟಾಗುತ್ತದೆ. ಅಷ್ಟೊಂದು ವಿಶಾಲವಾದ ಜಾಗದಲ್ಲಿ 1000ಕ್ಕೂ ಹೆಚ್ಚು ಬಗೆಯ ಬ್ಯಾಕ್ಟೀರಿಯಾಗಳು ನೂರು ಲಕ್ಷ ಕೋಟಿಯಷ್ಟು ಸಂಖ್ಯೆಯಲ್ಲಿ ಜೀವಿಸುತ್ತಿರುತ್ತವೆ. ಅದಕ್ಕಾಗಿ ನಾವು ತಿನ್ನುವ ಆಹಾರವನ್ನೂ, ಕರುಳೊಳಗಿನ ಕೆಲ ಸ್ರಾವಗಳನ್ನೂ ಅವು ಬಳಸಿಕೊಳ್ಳುತ್ತವೆ. ಈ ಜಗತ್ತಿನಲ್ಲಿ ಒಳಿತು-ಕೆಡುಕು ಜೊತೆಗಿರುವಂತೆ ಕರುಳೊಳಗಿನ ಬ್ಯಾಕ್ಟೀರಿಯಾಗಳಲ್ಲೂ ಒಳ್ಳೆಯವು-ಕೆಟ್ಟವು ಇರುತ್ತವೆ. ಒಳ್ಳೆಯ ಬ್ಯಾಕ್ಟೀರಿಯಾಗಳು ಹಲ ತೆರನಾಗಿ ನಮಗೆ ನೆರವಾಗುತ್ತವೆ, ತಮ್ಮ ಋಣ ತೀರಿಸುತ್ತವೆ. ಪರಸ್ಪರ ಪ್ರಯೋಜನವಾಗುವಂತಹ ಸಹಭುಂಜನದ ಸಹಜೀವನ ಅದು. ಇತ್ತ ಕೆಟ್ಟ ಬ್ಯಾಕ್ಟೀರಿಯಾಗಳು ಅಲ್ಲೇ ಹೊಂಚು ಹಾಕುತ್ತಿದ್ದು, ಅವಕಾಶ ಸಿಕ್ಕಾಗ ತೊಂದರೆಯುಂಟು ಮಾಡುತ್ತವೆ, ಉಂಡ ಮನೆಗೇ ಕೇಡು ಬಗೆಯುತ್ತವೆ!

ಈ ಸೂಕ್ಷ್ಮಾಣುಗಳೊಂದಿಗೆ ನಮ್ಮ ಸಹಬಾಳ್ವೆಯು ಹುಟ್ಟಿನ ಮರುಕ್ಷಣದಿಂದಲೇ ತೊಡಗುತ್ತದೆ. ಹೆರಿಗೆಯಾಗಿ ಮಗು ಹೊರಲೋಕವನ್ನು ಪ್ರವೇಶಿಸುತ್ತಿದ್ದಂತೆ ಗರ್ಭನಾಳದಲ್ಲೂ, ಹೊರ ವಾತಾವರಣದಲ್ಲೂ ಇರುವ ಹಲಬಗೆಯ ಬ್ಯಾಕ್ಟೀರಿಯಾಗಳು, ವೈರಸ್ ಗಳು, ಆರ್ಕಿಯಾಗಳು, ಪರೋಪಜೀವಿಗಳು ಹಾಗೂ ಶಿಲೀಂಧ್ರಗಳು ಮಗುವಿನ ಚರ್ಮವನ್ನು ಮೆತ್ತಿಕೊಳ್ಳುತ್ತವೆ, ಶ್ವಾಸನಾಳಗಳನ್ನು ಹೊಕ್ಕುತ್ತವೆ. ತಾಯಿ ಹಾಲೂಡಿಸಲಾರಂಭಿಸಿದಾಗ ಇವು ಬಾಯಿ, ಗಂಟಲುಗಳ ಮಾರ್ಗವಾಗಿ ಶ್ವಾಸಾಂಗವನ್ನೂ, ಅನ್ನನಾಳ, ಜಠರ, ಕರುಳುಗಳನ್ನೂ ತಲುಪಿ ಅಲ್ಲಿ ನೆಲೆಯೂರುತ್ತವೆ. ಆ ಮೊದಲ ದಿನದಿಂದಲೇ ಅವು ನಮ್ಮ ದೇಹದ ಮೇಲೆ ಪ್ರಭಾವ ಬೀರಲಾರಂಭಿಸುತ್ತವೆ. ಅಂಗಗಳ ಬೆಳವಣಿಗೆಯನ್ನು ಪ್ರಚೋದಿಸುವುದು; ಮೆದುಳು ಹಾಗೂ ಜೀರ್ಣಾಂಗದ ನಡುವಿನ ಸಂವಹನವನ್ನು ಸುಸ್ಥಿರಗೊಳಿಸುವುದು; ಹೊರಜಗತ್ತಿನ ಜೀವಿಗಳನ್ನೂ, ಇನ್ನಿತರ ರೋಗಕಾರಕಗಳನ್ನೂ ನಮ್ಮ ರೋಗರಕ್ಷಣಾ ವ್ಯವಸ್ಥೆಗೆ ಪರಿಚಯಿಸಿ ಅದನ್ನು ಬಲಿಷ್ಠಗೊಳಿಸುವುದು ಹಾಗೂ ರೋಗಾಣುಗಳು ಬೆಳೆಯದಂತೆ ತಡೆಯುವುದು,ಬಗೆಬಗೆಯ ಔಷಧಗಳನ್ನೂ, ರಾಸಾಯನಿಕ ಸಂಯುಕ್ತಗಳನ್ನೂ ಒಡೆದು ಅವುಗಳಿಂದಾಗಬಹುದಾದ ಹಾನಿಯನ್ನು ತಡೆಯುವುದು ಇವೇ ಮುಂತಾದ ಅತಿ ಮುಖ್ಯವಾದ ಕೆಲಸಗಳು ಅವುಗಳಿಂದಾಗುತ್ತವೆ. ಅಂದರೆ ನಾವು ನಾವಾಗುವುದು ನಾವಲ್ಲದ ಈ ಸೂಕ್ಷ್ಮಾಣುಗಳಿಂದಲೇ!

ಮಗುವಿಗೆ ಒಂದು ವರ್ಷ ತುಂಬುವುದರೊಳಗೆ ಈ ಸೂಕ್ಷ್ಮಾಣುಗಳೆಲ್ಲ ಭದ್ರವಾಗಿ ತಳವೂರಿಬಿಡುತ್ತವೆ. ಮಗುವು ಮೊದಲ ಆರು ತಿಂಗಳ ಕಾಲ ಎದೆ ಹಾಲನ್ನಷ್ಟೇ ಕುಡಿಯುವುದರಿಂದ ಕರುಳಿನೊಳಗೆ ಆರೋಗ್ಯಕರವಾದ ಬ್ಯಾಕ್ಟೀರಿಯಾಗಳು ಬೆಳೆಯುವುದು ಸಾಧ್ಯವಾಗುತ್ತದೆ. ಇದರಿಂದಾಗಿ ಕರುಳಿನ ಸುಸ್ಥಿರ ಬೆಳವಣಿಗೆಯು ಪ್ರಚೋದಿಸಲ್ಪಡುತ್ತದೆ ಹಾಗೂ ಇಡೀ ದೇಹದ ರೋಗರಕ್ಷಣಾ ವ್ಯವಸ್ಥೆಯು ಬಲಗೊಳ್ಳುತ್ತದೆ. ಈ ಹಂತದಲ್ಲಿ ಎಡವಟ್ಟಾದರೆ ಮುಂದಕ್ಕೆ ಅಸ್ತಮಾ, ಅಲರ್ಜಿ, ಮಧುಮೇಹದಂತಹ ತೊಂದರೆಗಳಿಗೆ ಕಾರಣವಾಗಬಹುದು. ಕೃತಕ ಶಿಶು ಆಹಾರ, ಪ್ರಾಣಿಜನ್ಯ ಹಾಲು ಮುಂತಾದ ಅಸಹಜ ಆಹಾರಗಳಿಂದ ಹಾಗೂ ಪ್ರತಿಜೈವಿಕ (ಆಂಟಿಬಯಾಟಿಕ್) ಔಷಧಗಳನ್ನು ಅನಗತ್ಯವಾಗಿ ಪದೇ ಪದೇ ನೀಡುವುದರಿಂದ ಕರುಳಿನಲ್ಲಿ ಸೂಕ್ಷ್ಮಾಣುಗಳ ಆರೋಗ್ಯಕರ ಬೆಳವಣಿಗೆಗೆ ಅಡ್ಡಿಯಾಗುತ್ತದೆ.

ಮುಂದಕ್ಕೆ ಪೂರ್ಣ ಪ್ರಮಾಣದ ಆಹಾರವನ್ನು ಸೇವಿಸಲಾರಂಭಿಸಿದಾಗ ಅದನ್ನು ಜೀರ್ಣಿಸುವಲ್ಲಿಯೂ, ಅದರಿಂದ ಹಲವು ಪೋಷಕಾಂಶಗಳನ್ನು ಪ್ರತ್ಯೇಕಿಸುವಲ್ಲಿಯೂ ಈ ಬ್ಯಾಕ್ಟೀರಿಯಾಗಳು ನೆರವಾಗುತ್ತವೆ.ಮಿಶ್ರಾಹಾರಿಯಾಗಿರುವ ಮಾನವನ ಸಣ್ಣ ಕರುಳಿನಲ್ಲಿ ಸಸ್ಯಾಹಾರದ ಶರ್ಕರಗಳು ಸಂಪೂರ್ಣವಾಗಿ ಜೀರ್ಣವಾಗುವುದಿಲ್ಲ. ಜೀರ್ಣವಾಗದೇ ಉಳಿದ ಈ ಶರ್ಕರಗಳನ್ನು ದೊಡ್ಡ ಕರುಳಿನಲ್ಲಿರುವ ಬ್ಯಾಕ್ಟೀರಿಯಾಗಳು ಹುದುಗೆಬ್ಬಿಸಿ, ಪುಟ್ಟ ಮೇದೋ ಆಮ್ಲಗಳಾಗಿ ಪರಿವರ್ತಿಸಿ ಹೀರಲ್ಪಡುವಂತೆ ಮಾಡುತ್ತವೆ. ವಿಟಮಿನ್ ಕೆ,ಬಯೋಟಿನ್, ವಿಟಮಿನ್ ಬಿ12, ಫೋಲಿಕ್ ಆಮ್ಲ, ಪಿರಿಡಾಕ್ಸಿನ್, ಪಾಂಟೊಥೆನಿಕ್ ಆಮ್ಲ ಮುಂತಾದ ಅನ್ನಾಂಗಗಳು ಹಾಗೂ ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೇಸಿಯಂ ಮುಂತಾದ ಖನಿಜಾಂಶಗಳ ಹೀರುವಿಕೆಗೂ ಈ ಬ್ಯಾಕ್ಟೀರಿಯಾಗಳು ನೆರವಾಗುತ್ತವೆ. ಮಕ್ಕಳ ಕರುಳಲ್ಲಿ ಈ ಬ್ಯಾಕ್ಟೀರಿಯಾಗಳು ಸುಸ್ಥಿತಿಯಲ್ಲಿ ಇಲ್ಲದಿದ್ದರೆ ಪೋಷಕಾಂಶಗಳ ಹೀರುವಿಕೆಗೆ ತೊಡಕಾಗಿ ಕುಪೋಷಣೆಗೆ ಕಾರಣವಾಗುತ್ತದೆ.

ನಮ್ಮ ಜೀರ್ಣಾಂಗ ಹಾಗೂ ಮೆದುಳಿನ ನಡುವೆ ಅತಿ ಸಂಕೀರ್ಣವಾದ ಸಂಪರ್ಕ ಜಾಲವಿದೆ. ಕರುಳಿನ ವಿವಿಧ ಭಾಗಗಳಿಂದ ಸ್ರವಿಸಲ್ಪಡುವ ನೂರಕ್ಕೂ ಹೆಚ್ಚು ಹಾರ್ಮೋನುಗಳೂ, ಜೀರ್ಣಾಂಗದ ನರಮಂಡಲವೂ ಜೊತೆಯಾಗಿ ನಾವು ತಿಂದ ಆಹಾರದ ಸ್ವರೂಪ ಹಾಗೂ ಪ್ರಮಾಣವನ್ನು ತಕ್ಷಣವೇ  ನಮ್ಮ ಮೆದುಳಿಗೆ ತಿಳಿಸುತ್ತವೆ. ಈ ವ್ಯವಸ್ಥೆಯಿಂದಲೇ ನಮ್ಮ ಹಸಿವು-ಸಂತೃಪ್ತಿಗಳು ನಿಯಂತ್ರಿಸಲ್ಪಡುತ್ತವೆ. ಕರುಳಿನೊಳಗಿರುವ ಬ್ಯಾಕ್ಟೀರಿಯಾಗಳು ಮತ್ತು ಅವು ಬಿಡುಗಡೆಗೊಳಿಸುವ ಕೆಲ ಸಂಯುಕ್ತಗಳು ಈ ಜಾಲವನ್ನು ಪ್ರಚೋದಿಸಿ ಹಸಿವು-ಸಂತೃಪ್ತಿಗಳ ನಿಯಂತ್ರಣದಲ್ಲಿ ನೆರವಾಗುತ್ತವೆ. ಇದೇ ವ್ಯವಸ್ಥೆಯು ಹೃತ್ಕ್ರಿಯೆ, ರಕ್ತಸಂಚಾರ, ಸ್ನಾಯುಗಳ ಕಾರ್ಯ,ಸಂತಾನೋತ್ಪತ್ತಿ ಮುಂತಾದ ಅತಿ ಮುಖ್ಯ ಪ್ರಕ್ರಿಯೆಗಳ ಮೇಲೆ ನೇರವಾದ ಪ್ರಭಾವವನ್ನು ಬೀರುವುದರಿಂದ ಕರುಳೊಳಗಿನ ಸೂಕ್ಷ್ಮಾಣುಗಳು ಇಡೀ ದೇಹದ ಆಗುಹೋಗುಗಳ ಮೇಲೆ ಪ್ರಭಾವ ಬೀರುವಂತಾಗುತ್ತದೆ. ಅಂದರೆ ನಮ್ಮ ಇಡೀ ದೇಹದ ಆರೋಗ್ಯವು ನಮ್ಮ ಕರುಳೊಳಗಿನ ಸೂಕ್ಷ್ಮಾಣುಗಳನ್ನು, ನಾವು ತಿನ್ನುವ ಆಹಾರವನ್ನು ಅವಲಂಬಿಸಿರುತ್ತದೆ!

ನಮ್ಮ ದೇಹದ ಮೇಲೆ ಇಷ್ಟೊಂದು ಪರಿಣಾಮ ಬೀರಬಲ್ಲ ಸೂಕ್ಷ್ಮಾಣುಗಳನ್ನು ಸುಸ್ಥಿತಿಯಲ್ಲಿಡದಿದ್ದರೆ ತೊಂದರೆ ಖಂಡಿತ. ಮಕ್ಕಳ ನ್ಯೂನ ಪೋಷಣೆ, ಬೊಜ್ಜು, ಮಧುಮೇಹ, ಅಸ್ತಮಾ, ಪಿತ್ತಕೋಶದ ಹರಳುಗಳು, ಯಕೃತ್ತಿನ ಕೆಲ ಕಾಯಿಲೆಗಳು, ಮೇದೋಜೀರಕಾಂಗದ ಉರಿಯೂತ, ರಕ್ತನಾಳಗಳ ಕಾಯಿಲೆ, ಆಟಿಸಂ, ಮಲ್ಟಿಪ್ಲ್ ಸ್ಕ್ಲಿರೋಸಿಸ್ ಹಾಗೂ ಪಾರ್ಕಿನ್ಸನ್ಸ್ ಕಾಯಿಲೆಗಳಂತಹ ನರರೋಗಗಳು, ಸಂಧಿವಾತ, ದೊಡ್ಡ ಕರುಳಿನ ಉರಿಯೂತ (ಕೊಲೈಟಿಸ್), ಜೀರ್ಣಾಂಗದ ಕ್ಯಾನ್ಸರ್ ಗಳು ಇವೇ ಮುಂತಾದ ತೊಂದರೆಗಳಿಗೂ, ಕರುಳಿನ ಸೂಕ್ಷ್ಮಾಣುಗಳಿಗೂ ನಿಕಟವಾದ ಸಂಬಂಧವಿರುವುದನ್ನು ಇತ್ತೀಚಿನ ಅಧ್ಯಯನಗಳು ಸೂಚಿಸಿವೆ. ಮಾನಸಿಕ ಖಿನ್ನತೆ ಹಾಗೂ ಆತಂಕಗಳಂತಹ ತೊಂದರೆಗಳಿಗೂ ಅಂತಹದೇ ಸಂಬಂಧವಿರುವ ಸಾಧ್ಯತೆಗಳ ಬಗ್ಗೆ ಅಧ್ಯಯನಗಳಾಗುತ್ತಿವೆ.

ನಾವು ತಿನ್ನುವ ಆಹಾರವೇ ಕರುಳಿನಲ್ಲಿರುವ ಬ್ಯಾಕ್ಟೀರಿಯಾಗಳಿಗೂ ಆಹಾರವಾಗುವುದರಿಂದ, ನಮ್ಮ ಆಹಾರವು ಸರಿಯಿಲ್ಲದಿದ್ದರೆ ಉಪಕಾರಿ ಹಾಗೂ ಅಪಕಾರಿ ಬ್ಯಾಕ್ಟೀರಿಯಾಗಳ ಅತಿ ಸೂಕ್ಷ್ಮವಾದ ಸಮತೋಲನವು ಕೆಟ್ಟು ರೋಗಗಳಿಗೆ ಕಾರಣವಾಗಬಹುದೆನ್ನುವ ಆಸಕ್ತಿದಾಯಕವಾದ ಕೆಲವು ಊಹೆಗಳು ಇತ್ತೀಚೆಗೆ ಪ್ರಕಟವಾಗಿವೆ. ನಾವಿಂದು ಕಾಣುತ್ತಿರುವ ಆಧುನಿಕ ರೋಗಗಳಿಗೂ, ನಮ್ಮ ಆಧುನಿಕ ಆಹಾರಕ್ಕೂ ಈ ಸೂಕ್ಷ್ಮಾಣುಗಳೇ ಕೊಂಡಿಗಳಾಗಿರುವ ಸಾಧ್ಯತೆಗಳಿವೆ. ಮನುಷ್ಯನ ಮೂಲ ಆಹಾರವು ನಾರುಭರಿತವಾದ, ಜೀವಂತವಾದ ಸಸ್ಯಗಳಿಂದಲೂ, ಬಗೆಬಗೆಯ ಮೊಟ್ಟೆ, ಮೀನು ಹಾಗೂ ಮಾಂಸಗಳಿಂದಲೂ ಮಾಡಲ್ಪಟ್ಟಿದ್ದರೆ, ಇಂದು ನಾರೂ ಇಲ್ಲದ, ಜೀವವೂ ಇಲ್ಲದ ಸಕ್ಕರೆಭರಿತವಾಗಿರುವ ಸಂಸ್ಕರಿತ ಆಹಾರವನ್ನೇ ನಾವು ತಿನ್ನುತ್ತಿದ್ದೇವೆ. ಇಂತಹಾ ಸಕ್ಕರೆಯ ಮುದ್ದೆಯು ಬಾಯಿಯಲ್ಲೂ, ಕರುಳಲ್ಲೂ ಇರುವ ಉಪಕಾರಿ ಬ್ಯಾಕ್ಟೀರಿಯಾಗಳಿಗೆ ಒಗ್ಗದೆ, ಅಪಕಾರಿ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಪ್ರಚೋದಿಸುತ್ತದೆ ಹಾಗೂ ಹಾನಿಕಾರಕ ಸಂಯುಕ್ತಗಳನ್ನು ಬಿಡುಗಡೆಗೊಳಿಸುತ್ತದೆ. ಇದರಿಂದಾಗಿಯೇ ಒಸಡಿನ ಕಾಯಿಲೆಗಳೂ, ದಂತಕ್ಷಯವೂ ಉಂಟಾಗುತ್ತವೆ; ಹಸಿವು-ಸಂತೃಪ್ತಿಯ ಜಾಲದ ಮೇಲಿನ ದುಷ್ಪರಿಣಾಮಗಳಿಂದಾಗಿ ಬೊಜ್ಜು ಹೆಚ್ಚುತ್ತದೆ; ಉರಿಯೂತವೂ ಹೆಚ್ಚಿ ಕರುಳಿನಲ್ಲೂ, ಇತರ ಅಂಗಗಳಲ್ಲೂ ವಿವಿಧ ಕಾಯಿಲೆಗಳಿಗೆ ಕಾರಣವಾಗುತ್ತದೆ.

ಆದ್ದರಿಂದ ನಾವು ಆರೋಗ್ಯದಿಂದಿರಬೇಕಾದರೆ ನಮ್ಮೊಳಗಿರುವ ಉಪಕಾರಿ ಸೂಕ್ಷ್ಮಜೀವಿಗಳ ಹಿತವನ್ನು ಕಾಯಬೇಕು, ಅವುಗಳಿಗೆ ಹೊಂದುವ ನಿಸರ್ಗದತ್ತವಾದ ಆಹಾರವನ್ನೇ ತಿನ್ನಬೇಕು. ಅನಗತ್ಯವಾಗಿ ಪದೇ ಪದೇ ಆಂಟಿಬಯಾಟಿಕ್  ಗಳನ್ನು ಸೇವಿಸಬಾರದು. ಚರ್ಮವನ್ನು ತೊಳೆಯಲು ಕ್ರಿಮಿನಾಶಕ ಸೋಪುಗಳನ್ನು ಬಳಸದಿರುವುದೇ ಒಳ್ಳೆಯದು.

ಇಪ್ಪತ್ತೊಂದನೇ ಬರಹ : ಮುಟ್ಟಿನ ಪೊಟ್ಟು ಕಟ್ಟಳೆಯ ಸುಟ್ಟು ಒಳನುಗ್ಗಿ [ಎಪ್ರಿಲ್ 3, 2013, ಬುಧವಾರ] [ನೋಡಿ | ನೋಡಿ]

ಪುರುಷ ಪ್ರೇರಿತ ಮತಧರ್ಮಗಳ ಭಯ ಹೆಣ್ಣಿಗೇಕೆ ಉರುಳಾಗಬೇಕು?

ಆಕೆಗೆ ಮುಟ್ಟು, ಆದರೆ ಮುಟ್ಟಬಾರದು. ಮುಟ್ಟು ಬೇಕು, ಆಕೆ ಬೇಡ. ಮುಟ್ಟು ಹೆಣ್ಣಿನ ಪಾಲಿಗೆ ವೈರುದ್ಧ್ಯಗಳ ಗಂಟು. ಸ್ತ್ರೀಸಹಜವಾದ ಸರಳ ಜೈವಿಕ ಪ್ರಕ್ರಿಯೆಗೆ ಕೌಟುಂಬಿಕ, ಸಾಮಾಜಿಕ, ಧಾರ್ಮಿಕ, ನೈತಿಕ ಪ್ರತಿಬಂಧಗಳು. ಅವುಗಳಿಂದಾಗಿ ಮುಟ್ಟನ್ನು ಗುಟ್ಟಾಗಿಟ್ಟು ನಾಚಿಕೆ, ಭಯ, ಆತಂಕಗಳನ್ನು ಅನುಭವಿಸಬೇಕಾದ ಸಂದಿಗ್ಧತೆ ಒಂದೆಡೆ; ಕುಟುಂಬದಲ್ಲಿ, ಶಾಲೆ-ಕಾಲೇಜುಗಳಲ್ಲಿ, ಸಂಬಂಧಿಕರಲ್ಲಿ, ಅಥವಾ ಎಲ್ಲರೆದುರಲ್ಲಿ ಪಿಸುಮಾತಲ್ಲಿ ಹಂಚಿಕೊಳ್ಳಬೇಕಾದ ಅನಿವಾರ್ಯತೆ ಇನ್ನೊಂದೆಡೆ. ಈ ತೊಳಲಾಟದಲ್ಲಿ ಬೇಕಾದದ್ದು ಬೇಡವೆನಿಸುವಷ್ಟು ನೋವು; ಆರೋಗ್ಯದ ಲಕ್ಷಣವೇ ಆನಾರೋಗ್ಯಕ್ಕೂ, ಮಾನಸಿಕ ಆತಂಕಗಳಿಗೂ ಕಾರಣವಾಗಿ ಸಂಭ್ರಮವೇ ಬಂಧನವಾಗುವ ದುರವಸ್ಥೆ. ಹೆಣ್ಣಿನ ಶಕ್ತಿಯೇ ಅವಳ ದೌರ್ಬಲ್ಯವಾಗಿರುವ ವಿಪರ್ಯಾಸವಿದು; ಭಯಗೊಂಡ ಗಂಡಿನ ದೌರ್ಜನ್ಯಕ್ಕೂ, ಅದಕ್ಕೆ ತಗ್ಗಿ, ಒಗ್ಗಿಕೊಂಡಿರುವ ಹೆಣ್ಣಿನ ಸೌಜನ್ಯಕ್ಕೂ ಪುರಾವೆಯಿದು.

ಮುಟ್ಟಾದ ಹೆಣ್ಣನ್ನು ಮೂಲೆಗಟ್ಟುವ ಪದ್ಧತಿಯು ಮೂರ್ನಾಲ್ಕು ಸಾವಿರ ವರ್ಷಗಳಿಂದ ವಿಶ್ವವ್ಯಾಪಿಯಾಗಿದೆ. ನಮ್ಮ ದೇಶದಲ್ಲಿ ಪ್ರಚಲಿತವಿರುವ ಎಲ್ಲಾಮತಗಳು ಮುಟ್ಟಾದ ಹೆಣ್ಣನ್ನು ಅಪವಿತ್ರಳೆಂದು ದೂರವಿಟ್ಟಿವೆ. ದೇವರ ಬಳಿ ಸುಳಿಯಬಾರದು, ಪವಿತ್ರ ಗ್ರಂಥಗಳನ್ನು ಮುಟ್ಟಬಾರದು, ಪ್ರಾರ್ಥಿಸಬಾರದು, ಸ್ನಾನ-ಮೈಶುದ್ಧಿ ಮಾಡಿಕೊಳ್ಳಬಾರದು, ತಿಂದುಳಿದ ಆಹಾರವನ್ನು ನಾಯಿಗೂ ಎಸೆಯಬಾರದು, ಗಂಡಸರನ್ನು ನೋಡಬಾರದು, ಲೈಂಗಿಕ ಕ್ರಿಯೆಯಲ್ಲಿ ತೊಡಗಬಾರದು, ಅಲಂಕರಿಸಿಕೊಳ್ಳಬಾರದು, ಹೂಗಳನ್ನು ಮುಟ್ಟಬಾರದು, ಉಪ್ಪಿನಕಾಯಿ ಮುಟ್ಟಬಾರದು, ಅಡುಗೆ ಮಾಡಬಾರದು, ಮಾಂಸದೂಟ ಮಾಡಬಾರದು, ಪ್ರತ್ಯೇಕ ಕೋಣೆಯಲ್ಲಿ ಅಥವಾ ಹಟ್ಟಿಯಲ್ಲಿ ಹುಲ್ಲಿನಲ್ಲಿ ಮಲಗಬೇಕು, ಕೊಟ್ಟದ್ದನ್ನು ತಿನ್ನಬೇಕು, ತನ್ನ ಬಟ್ಟೆಗಳನ್ನೂ, ತಟ್ಟೆಗಳನ್ನೂ ಪ್ರತ್ಯೇಕವಾಗಿ ತೊಳೆಯಬೇಕು ಇತ್ಯಾದಿ ನಿರ್ಬಂಧಗಳಿಂದ ಪ್ರತೀ ತಿಂಗಳು ಆಕೆಯನ್ನು ಬಿಗಿಯಲಾಗುತ್ತಿದೆ. ಇವೆಲ್ಲವನ್ನೂ ಹೆಣ್ಣಿನ ಹಿತದೃಷ್ಟಿಯಿಂದಲೇ ವಿಧಿಸಲಾಗಿದೆ ಎನ್ನುವ ಸಮಜಾಯಿಷಿಯನ್ನೂ ನೀಡಲಾಗುತ್ತಿದೆ. ವಿದ್ಯಾವಂತರಾದ,ವೃತ್ತಿನಿರತರಾದ ಹೆಣ್ಮಕ್ಕಳಿಗೆ ಹೊರಗುಳಿಯುವಿಕೆಯಿಂದ ವಿನಾಯಿತಿಯನ್ನು ನೀಡಲಾಗಿದ್ದರೂ, ದೈವಿಕ-ಧಾರ್ಮಿಕ ಆಚರಣೆಗಳಲ್ಲಿ ಭಾಗಿಯಾಗುವುದಕ್ಕೆ ಈಗಲೂ ಅನುಮತಿಯಿಲ್ಲ. ಆಕೆ ತರುವ ಸಂಬಳ ಬೇಕು, ಆದರೆ ಪೂಜೆಯ ಹಕ್ಕಿಲ್ಲ, ಕುಟುಂಬದ ಅಧಿಕಾರದಲ್ಲಿ ಪಾಲಿಲ್ಲ!

ಮುಟ್ಟಾದಾಗ ಹೊರಗಟ್ಟುವುದರ ಮೂಲೋದ್ದೇಶವೂ ಅದುವೇ: ಹೆಣ್ಣನ್ನು ಕೌಟುಂಬಿಕ, ಆರ್ಥಿಕ, ಸಾಮಾಜಿಕ ಅಧಿಕಾರದಿಂದ ದೂರವಿಡುವುದು. ಋಗ್ವೇದ, ತೈತ್ತಿರೀಯ ಸಂಹಿತೆ, ಮಾರ್ಕಂಡೇಯ ಪುರಾಣ, ವಸಿಷ್ಠ ಧರ್ಮಶಾಸ್ತ್ರ, ಮಹಾಭಾರತ ಇತ್ಯಾದಿಗಳಲ್ಲೆಲ್ಲ ಪ್ರಮುಖವಾಗಿ ಕಾಣಸಿಗುವ ಇಂದ್ರನು ವೃತ್ರನನ್ನು ಕೊಂದ ಐತಿಹ್ಯವು ಇದನ್ನು ಸ್ಪಷ್ಟಪಡಿಸುತ್ತದೆ (ಅಂತಹದೇ ಐತಿಹ್ಯಗಳನ್ನು ಇತರ ದೇಶ-ಮತಗಳಲ್ಲೂ ಕಾಣಬಹುದು). ನಮ್ಮ ಮೂಲ ಸಮುದಾಯಗಳು ಮಾತೃಪ್ರಧಾನವಾಗಿದ್ದವು. ಎಲ್ಲರೂ ಒಟ್ಟಿಗೇ ದುಡಿದು, ಒಟ್ಟಿಗೇ ಅನುಭೋಗಿಸುವ ಕೂಡು ಒಡೆತನ ಅಲ್ಲಿತ್ತು. ವೃತ್ರನಂತಹವರು ಆ ನೆಲ-ಜಲಗಳನ್ನೆಲ್ಲ ಕಾಯುವವರಾಗಿದ್ದರು. ವೈದಿಕ ವ್ಯವಸ್ಥೆಯ ನಾಯಕನಾಗಿದ್ದ ಇಂದ್ರನು ಸೋಮರಸಭರಿತನಾಗಿ, ಕುಟಿಲೋಪಾಯದಿಂದ ವೃತ್ರನನ್ನು ಕೊಲ್ಲುವುದರೊಂದಿಗೆ ಫಲವತ್ತಾಗಿದ್ದ ನೆಲ, ಮರಗಳು ಹಾಗೂ ಹೆಣ್ಮಕ್ಕಳು ಇಂದ್ರನಿಗೆ ಅಧೀನರಾದರು. ಈ ಹೆಣ್ಮಕ್ಕಳು ಮುಟ್ಟಿಲ್ಲದಾಗ ಭೋಗಿಸಲ್ಪಟ್ಟು, ಮುಟ್ಟಾದಾಗ ಅಸ್ಪೃಶ್ಯರಾದರು. ಮಾತೃಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಮಕ್ಕಳ ಮುಟ್ಟಿನ ರಕ್ತವು ಪವಿತ್ರವೆಂದೆನಿಸಿದ್ದರೆ, ಇಂದ್ರನ ಪಿತೃಪ್ರಧಾನ ವ್ಯವಸ್ಥೆಯಲ್ಲಿ ಅದು ಮೈಲಿಗೆಯಾಯಿತು. ನಿತ್ಯವೂ ಹೊಸ ಬೆಳಕನ್ನು ತರುತ್ತಿದ್ದ ಉಷೆಯನ್ನು ಇಂದ್ರನು ಚಚ್ಚಿದ ವೃತ್ತಾಂತವೂ ಋಗ್ವೇದದಲ್ಲಿದ್ದು, ಅದು ಸ್ತ್ರೀ ದೌರ್ಜನ್ಯದ ಇನ್ನೊಂದು ದೃಷ್ಟಾಂತವೆಂದು ಹೇಳಲಾಗುತ್ತದೆ. (ನೋಡಿ: ದಿ ರಿಗ್ವೇದಿಕ್ ಸ್ಲೇಯಿಂಗ್ ಆಫ್ ವೃತ್ರ. ಮಾನುಷಿ. 1992;68:29-34.) ಭಾವನಾತ್ಮಕ ಒತ್ತಡಗಳಿಗೆ ಮಣಿಯುವ ಹೆಣ್ಮಕ್ಕಳು ಇಂದ್ರನ ಕಟ್ಟಳೆಗಳ ಮೈಲಿಗೆಯನ್ನು ಇಂದಿಗೂ ಅನುಭವಿಸುತ್ತಲೇ ಇದ್ದಾರೆ, ಅವನ ಅನುಯಾಯಿಗಳ ದೌರ್ಜನ್ಯಕ್ಕೆ ಸಿಕ್ಕಿ ತೊಳಲಾಡುತ್ತಿದ್ದಾರೆ.

ವೇದೋತ್ತರ ಕಾಲದಲ್ಲಿ ಹೆಣ್ಣಿನ ಸಾಮರ್ಥ್ಯದ ಬಗ್ಗೆ ಗಂಡಿನ ಭಯ ಹೆಚ್ಚಿದಂತೆ ದೌರ್ಜನ್ಯವೂ ಹೆಚ್ಚಿತು. ಬಲಶಾಲಿಯೆನಿಸಿದ್ದ ಗಂಡು ರಕ್ತಸ್ರಾವವಾದಾಗ ಸಾಯುತ್ತಿದ್ದರೆ, ಹೆಣ್ಣಾದವಳು ಪ್ರತೀ ತಿಂಗಳು ರಕ್ತವನ್ನು ಚೆಲ್ಲಿದರೂ ಸಾಯದೇ ಉಳಿದು, ಸಂತಾನವನ್ನೂ ಪಡೆಯುತ್ತಿದ್ದುದರಿಂದ ಆಕೆಯನ್ನು ಅಪಾಯಕಾರಿಯೆಂದೂ, ಮಾಯೆಯೆಂದೂ ಬಗೆದು, ಮುಟ್ಟಾದಾಗಲೆಲ್ಲ ಹೆದರಿ ಹೊರದಬ್ಬುವುದು ವಾಡಿಕೆಯಾಯಿತು. ಇಂತಹ ಭಯ ಮಿಶ್ರಿತ ಕಲ್ಪನೆಗಳು ವೈದ್ಯರನ್ನೂ, ಜ್ಞಾನಿಗಳೆನಿಸಿಕೊಂಡವರನ್ನೂ ಬಿಟ್ಟಿರಲಿಲ್ಲ. ಸುಮಾರು 2400 ವರ್ಷಗಳ ಹಿಂದೆ ಗ್ರೀಸಿನಲ್ಲಿ ವೈದ್ಯವಿಜ್ಞಾನದ ಪಿತಾಮಹನೆನಿಸಿಕೊಂಡಿದ್ದ ಹಿಪಾಕ್ರಟಿಸ್, ಹೆಂಗಸರು ಗಂಡಸರಂತೆ ಬೆವರು ಸುರಿಸದಿರುವುದರಿಂದ ಮುಟ್ಟಿನ ಮೂಲಕ ತಮ್ಮ ದೇಹವನ್ನು ಶುದ್ಧೀಕರಿಸಿಕೊಳ್ಳುತ್ತಾರೆಂದು ಭಾವಿಸಿದ್ದ. ಅದೇ ದೇಶ-ಕಾಲದವನಾಗಿದ್ದ ತತ್ವಜ್ಞಾನಿ ಅರಿಸ್ಟಾಟಲ್, ಸಂತಾನೋತ್ಪತ್ತಿಯಲ್ಲಿ ಹೆಣ್ಣಿನ ಪಾತ್ರವು ಜಡವಾದುದೆಂದು ಬಗೆದು ಮುಟ್ಟಾಗುವಿಕೆಯು ಆಕೆಯ ಕೀಳುತನದ ಲಕ್ಷಣವೆಂದು ವಿಶ್ಲೇಷಿಸಿದ್ದ. ಆ ಕಾಲದ ಆಯುರ್ವೇದ ಗ್ರಂಥಗಳಲ್ಲೂ ಮುಟ್ಟಾದ ಹೆಣ್ಣು ಅಶುದ್ಧಳೆಂದೂ, ಎಲ್ಲದರಿಂದ ದೂರವಿರಬೇಕೆಂದೂ ವಿಧಿಸಲಾಗಿತ್ತು. ರೋಮನ್ ಸಾಮ್ರಾಜ್ಯದಲ್ಲಿ ನಿಸರ್ಗತಜ್ಞನೆನಿಸಿದ್ದ ಪ್ಲೀನಿ (ಕ್ರಿ.ಶ.77) ಮುಟ್ಟಾದ ಮಹಿಳೆಯರ ಸ್ಪರ್ಶದಿಂದ ಮದ್ಯವು ಹುಳಿಯಾಗುತ್ತದೆ, ಬೀಜಗಳು ಜೊಳ್ಳಾಗುತ್ತವೆ, ಹಣ್ಣಿನ ಮರಗಳು ಒಣಗುತ್ತವೆ, ಕನ್ನಡಿ ಮಂಕಾಗುತ್ತದೆ, ಕಬ್ಬಿಣಕ್ಕೆ ತುಕ್ಕು ಹಿಡಿಯುತ್ತದೆ ಎಂದೆಲ್ಲ ಎಚ್ಚರಿಸಿದ್ದ. ಮುಟ್ಟಾದ ಮಹಿಳೆಯರು ಸೋಂಕಿದರೆ ಉಪ್ಪಿನಕಾಯಿಯಿಂದ ಹಿಡಿದು ಮಾಂಸದವರೆಗೆ ಹಲಬಗೆಯ ತಿನಿಸುಗಳು ಕೆಟ್ಟು ಹೋಗುತ್ತವೆಂದು ಬ್ರಿಟಿಷ್ ಮೆಡಿಕಲ್ ಜರ್ನಲ್ ನಲ್ಲಿ 1878ರಲ್ಲಿ ಹಲವು ವಾರಗಳ ಚರ್ಚೆಯೇ ನಡೆದಿತ್ತು!

ಹೀಗೆ ಸಹಸ್ರಾರು ವರ್ಷಗಳಿಂದ ಗಂಡಸರ ಭಯದ ಉರುಳು ಹೆಂಗಸರ ಸ್ವಾತಂತ್ರ್ಯವನ್ನು ಬಿಗಿದು, ಪ್ರತಿ ತಿಂಗಳೂ ಅವರನ್ನು ಹೊರಗಿಟ್ಟದ್ದಲ್ಲದೆ, ಶಿಕ್ಷಣದಿಂದಲೂ, ಮೇಲ್ಸ್ತರದ ವೃತ್ತಿಗಳಿಂದಲೂ, ಅಧಿಕಾರದಿಂದಲೂ ದೂರವಿಟ್ಟಿತು. ಈಗ ಮುಟ್ಟಿನ ಹಿಂದಿರುವ ಜೈವಿಕ ಕ್ರಿಯೆಗಳ ಬಗ್ಗೆ ಸ್ಪಷ್ಟವಾದ ಅರಿವಿದ್ದರೂ ಅದರ ಬಗೆಗಿನ ಕೀಳರಿಮೆಗಳೂ, ಹೆದರಿಕೆಗಳೂ ಹಾಗೆಯೇ ಉಳಿದುಕೊಂಡಿವೆ. ನಮ್ಮಲ್ಲಿ ಬಹುತೇಕ ಹೆಣ್ಮಕ್ಕಳಿಗೆ ಮುಟ್ಟಿನ ಕಾರಣಗಳ ಬಗ್ಗೆ ಇನ್ನೂ ಸ್ಪಷ್ಟವಾದ ಅರಿವಿಲ್ಲದೆ, ಸುರಕ್ಷತಾ ಕ್ರಮಗಳ ಬಗೆಗಿನ ಮಾಹಿತಿಯೂ, ಅಗತ್ಯ ಸೌಲಭ್ಯಗಳೂ ದೊರೆಯುವುದಕ್ಕೆ ಅಡ್ಡಿಯಾಗುತ್ತಿವೆ. ಮುಟ್ಟಾದ ಹೆಣ್ಮಕ್ಕಳು ರಕ್ಷಣೆಗಾಗಿ ಹಳೆ ಬಟ್ಟೆಯ ತುಂಡುಗಳನ್ನು ಗುಟ್ಟಿನಲ್ಲಿ ಬಳಸುವಂತಾಗಿ, ಗಂಭೀರವಾದ ಸಮಸ್ಯೆಗಳಿಗೂ ಕಾರಣವಾಗುತ್ತಿವೆ. ನಮ್ಮ ಹೆಣ್ಮಕ್ಕಳನ್ನು ಅಶುದ್ಧರೆಂದು ದೂರ ಮಾಡಿದ್ದಲ್ಲದೆ, ಶುಚಿಗೊಳಿಸುವ ಸೌಲಭ್ಯಗಳಿಂದಲೂ ವಂಚಿಸಿ ನರಕಯಾತನೆ ನೀಡಲಾಗುತ್ತಿದೆ.

ನಮ್ಮ ಹೆಣ್ಮಕ್ಕಳಿಗೆ ಮುಟ್ಟಿನ ಬಗ್ಗೆ ವೈಜ್ಞಾನಿಕವಾದ ವಿವರಣೆಗಳನ್ನಿತ್ತು, ಅದರ ವಿಶೇಷತೆಯ ಬಗ್ಗೆ ಹೆಮ್ಮೆಯನ್ನು ಮೂಡಿಸುವುದರ ಜೊತೆಗೆ, ಅದನ್ನು ಸಮರ್ಪಕವಾಗಿ ನಿಭಾಯಿಸುವುದಕ್ಕೆ ಅವರನ್ನು ಸಿದ್ಧಪಡಿಸಬೇಕಾದದ್ದು ಈಗಿನ ತುರ್ತು ಅಗತ್ಯವಾಗಿದೆ. ಮಕ್ಕಳು ಮುಟ್ಟಾಗುವ ಮೊದಲೇ ತಾಯಂದಿರಿಂದ ಈ ಕೆಲಸವಾದರೆ ಒಳ್ಳೆಯದು. ಇಂದು 8-10 ವರ್ಷ ವಯಸ್ಸಿಗೇ ಹೆಣ್ಮಕ್ಕಳು ಮುಟ್ಟಾಗತೊಡಗುವುದರಿಂದ 3-4 ನೇ ತರಗತಿಗಳಲ್ಲಿದ್ದಾಗಲೇ ಅವರನ್ನು ಸನ್ನದ್ಧರಾಗಿಸುವ ಕೆಲಸವಾಗಬೇಕು. ಇಲ್ಲದಿದ್ದರೆ ಮೊದಲ ಬಾರಿಗೆ ಮುಟ್ಟಾಗುವ ಅನುಭವವು ಭಯಕ್ಕೂ, ಗೊಂದಲಗಳಿಗೂ ಕಾರಣವಾಗಬಹುದು ಹಾಗೂ ಸಹಪಾಠಿಗಳಿಂದ ಅಥವಾ ಶಿಕ್ಷಕಿಯರಿಂದ ಇವನ್ನೆಲ್ಲ ತಿಳಿಯಬೇಕಾದ ಮುಜುಗರಕ್ಕೆ ಆಸ್ಪದವಾಗಬಹುದು. ಋತುಸ್ರಾವವನ್ನು ಹಿಡಿದಿಟ್ಟುಕೊಳ್ಳುವುದಕ್ಕೆ ಶುದ್ಧವಾದ ಹೊಸ ಬಟ್ಟೆಯನ್ನೋ, ಅಥವಾ ಸಾನಿಟರಿ ನಾಪ್ಕಿನ್ ಗಳನ್ನೋ ಬಳಸಬೇಕು. ಇಂತಹಾ ಬಟ್ಟೆಗಳನ್ನು ಬದಲಿಸುವುದಕ್ಕೂ, ಸೂಕ್ತವಾಗಿ ವಿಸರ್ಜಿಸುವುದಕ್ಕೂ ಎಲ್ಲಾ ಶಾಲೆ-ಕಾಲೇಜುಗಳಲ್ಲಿ ಸುರಕ್ಷಿತ ಸೌಲಭ್ಯಗಳನ್ನು ಕಲ್ಪಿಸಬೇಕು. ನಿಸರ್ಗದತ್ತವಾದ ಮುಟ್ಟು ಹೆಣ್ಮಕ್ಕಳ ಸ್ವಾತಂತ್ರ್ಯಕ್ಕೂ, ಕಲಿಕೆಗೂ, ಮನೋದೈಹಿಕ ಸಾಮರ್ಥ್ಯಗಳಿಗೂ ಅಡಚಣೆಯಾಗದಂತೆ ನೋಡಿಕೊಳ್ಳುವುದು ಸ್ವಸ್ಥ ಸಮಾಜದ ಆದ್ಯ ಕರ್ತವ್ಯವಾಗಿದೆ.

ಇಂದ್ರ ಮತ್ತವನ ಪುರೋಹಿತರ ಆಡಳಿತವು ಯಾವತ್ತೋ ಕೊನೆಗೊಂಡು, ಸಂವಿಧಾನಬದ್ಧ ಪ್ರಜಾಪ್ರಭುತ್ವವು ಸ್ಥಾಪನೆಯಾಗಿರುವಾಗ ನಮ್ಮ ಹೆಣ್ಮಕ್ಕಳು ಇಂದ್ರನ ಶಾಪದ ಕಟ್ಟಳೆಗಳನ್ನು ಮೀರುವ ಛಾತಿಯನ್ನು ತೋರಬೇಕು, ಗಂಡಸರೆಲ್ಲರೂ ಅವರ ಬೆಂಬಲಕ್ಕೆ ನಿಲ್ಲಬೇಕು. ಮುಟ್ಟಾದ ದಿನಗಳಲ್ಲಿ ತಮಗೆ ಶಕ್ಯವಿರುವ ಎಲ್ಲವನ್ನೂ ಮಾಡುವುದರ ಜೊತೆಗೆ ಹೊರಗಿಡುವ ಎಲ್ಲ ವ್ಯವಸ್ಥೆಗಳನ್ನೂ ಧಿಕ್ಕರಿಸಿ ಒಳನಡೆಯಬೇಕು. ಮಾತ್ರೆಗಳಿಂದ ಮುಟ್ಟನ್ನು ಮುಂದೂಡುವುದನ್ನು ನಿರಾಕರಿಸಬೇಕು. ಸ್ಖಲನವಾದ ಗಂಡು ಪೂಜೆ ಮಾಡಬಹುದಾದರೆ ಮುಟ್ಟಾದ ಹೆಣ್ಣಿಗೇಕೆ ಅಡ್ಡಿಯೆಂದು ಪ್ರಶ್ನಿಸಲೇಬೇಕು. ಮಹಿಳೆಯರ ಸ್ವಾತಂತ್ರ್ಯ, ಶಿಕ್ಷಣ, ಸಬಲೀಕರಣ ಹಾಗೂ ವಿಮೋಚನೆಯ ಹಾದಿಯು ಮುಟ್ಟಿನ ಕಟ್ಟಳೆಗಳ ಮುರಿಯುವಿಕೆಯಿಂದಲೇ ತೊಡಗಬೇಕು.

ಇಪ್ಪತ್ತನೇ ಬರಹ : ಆರಿದ ಬಾಯಿಗಳಿಗೆ ಎಲ್ಲಿದೆ ಸಾಂತ್ವನ? [ಮಾರ್ಚ್ 20, 2013, ಬುಧವಾರ] [ನೋಡಿ | ನೋಡಿ]

ಎಲ್ಲಾ ಜೀವಿಗಳ ಕಣಕಣದಲ್ಲೂ ಇರುವ ನೀರು ವ್ಯಾಪಾರದ ಸರಕಾಗಬಾರದು

ಅನಂತಾನಂತವಾದ ಈ ತಾರಾಮಂಡಲದಲ್ಲಿ ಭೂಮಿಯಂತಹ ಕೆಲ ಗ್ರಹಗಳಲ್ಲಷ್ಟೇ ನೀರಿರುವುದು, ಅಲ್ಲಷ್ಟೇ ಜೀವರಾಶಿಯಿರುವುದು. ನಮ್ಮ ದೇಹದೊಳಗೆ ನೀರಿನಂಶ ನೂರಕ್ಕೆ ಅರುವತ್ತರಷ್ಟು. ಯಾವ ಭೂಮಿಯಲ್ಲಿ ನೀರಿನಿಂದ ಜೀವಸಂಕುಲ ಬೆಳೆಯಿತೋ, ಅಲ್ಲೀಗ ಅದೇ ನೀರಿಗೆ ತತ್ವಾರ. ಅಂದಾಜಿನಂತೆ ಇನ್ನು ಹದಿನೈದೇ ವರ್ಷಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ. ಹೆಚ್ಚುತ್ತಿರುವ ಜನಸಂಖ್ಯೆಯೊಂದಿಗೆ ಏರುತ್ತಿರುವ ಬೇಡಿಕೆ, ಕ್ಷೀಣಿಸುತ್ತಿರುವ ಜಲಸಂಪನ್ಮೂಲಗಳ ಜೊತೆಗೆ ದುರ್ಬಲಗೊಳ್ಳುತ್ತಿರುವ ಜಲ ಸಂಗ್ರಹಣೆ, ಶೇಖರಣೆ ಹಾಗೂ ವಿತರಣೆ. ಜೀವದ ಹಕ್ಕಾದ ನೀರಿಗೂ ಗಂಟೆಗಟ್ಟಲೆ ನಿದ್ದೆಗೆಟ್ಟು ಕಾದು, ದುಡ್ಡು ಕೊಟ್ಟು ಬೇಡುವ ದುರವಸ್ಥೆ.

ಭೂಮಿಯ ಶೇ. 70 ಭಾಗ ಜಲಾವೃತವಾಗಿದ್ದರೂ, ಅದರಲ್ಲಿ ಸಿಹಿ ನೀರು ಶೇ. 3 ಮಾತ್ರ. ಅದರಲ್ಲೂ ಹಿಮದೊಳಗೂ, ಆಳ ನೆಲದೊಳಗೂ ಹುದುಗಿರುವ ನೀರು ದೊರೆಯುವಂತಿಲ್ಲ. ಸಿಕ್ಕಿದ್ದರಲ್ಲಿ ಕೃಷಿ ಹಾಗೂ ಹೈನುಗಾರಿಕೆಗೆ ಶೇ. 70 ಹಾಗೂ ಉದ್ದಿಮೆಗಳಿಗೆ ಶೇ. 10 ರಷ್ಟು ಬಳಕೆಯಾಗಿ ನಮಗುಳಿಯುವುದು ತೀರಾ ಅಲ್ಪ. ಜಲಸಂಪನ್ಮೂಲಗಳು ವಿರಳವಾದಂತೆ ತಲಾವಾರು ನೀರಿನ ಪೂರೈಕೆಯೂ ಇಳಿಯುತ್ತಲಿದೆ: ನಮ್ಮ ದೇಶದಲ್ಲಿ 1955ರಲ್ಲಿ ಪ್ರತಿಯೋರ್ವನಿಗೂ ವರ್ಷಕ್ಕೆ 5300 ಘನ ಅಡಿಯಷ್ಟು ನೀರು ದೊರೆಯುತ್ತಿದ್ದರೆ, 1996ಕ್ಕೆ ಅದು 2200 ಘನ ಅಡಿಯಷ್ಟಾಗಿದೆ; 2020ಕ್ಕೆ 1600 ಕ್ಕಿಳಿದು ನೀರಿನ ಸಂಕಟ ಉತ್ಕಟವಾಗಲಿದೆ. ನಮ್ಮಲ್ಲಿ ಶೇ. 80ಕ್ಕೂ ಹೆಚ್ಚು ಜನ ಅಂತರ್ಜಲವನ್ನೇ ನೆಚ್ಚಿಕೊಂಡಿದ್ದು, ಅದೀಗ ಬರಿದಾಗುತ್ತಿರುವುದಷ್ಟೇ ಅಲ್ಲ, ಮಲಿನವೂ ಆಗುತ್ತಿದೆ. ಜೀವಜಲ ಬಾಯಿಗೆಟಕುತ್ತಿಲ್ಲ, ಸಿಕ್ಕರೂ ಕುಡಿಯುವಂತಿಲ್ಲ.

ಮನುಷ್ಯನ ಚಟುವಟಿಕೆಗಳ ಹೊಲಸೆಲ್ಲವೂ ಕೆರೆ-ತೊರೆ-ನದಿಗಳಿಂದ ಸಾಗರಗಳವರೆಗೂ, ಭೂಮಿಯ ಮೇಲ್ಮೈಯಿಂದ ಆಗಸ-ಭೂತಳಗಳಿಗೂ ಸೋರಿ ಹೋಗುತ್ತಿವೆ, ಜೀವಜಲ ಕಲುಷಿತಗೊಂಡು ಮರಣಜಲವಾಗುತ್ತಿದೆ. ಮನುಷ್ಯರು ಹಾಗೂ ಸಾಕುಪ್ರಾಣಿಗಳ ಮಲಮೂತ್ರಗಳು ಹಾಗೂ ಬಚ್ಚಲ ಕೊಳೆಗಳು, ಕೈಗಾರಿಕೆಗಳಿಂದ ವಿಸರ್ಜಿಸಲ್ಪಡುವ ರಾಸಾಯನಿಕಗಳು, ಕೃಷಿಯಲ್ಲಿ ಬೇಕಾಬಿಟ್ಟಿ ಬಳಕೆಯಾಗುವ ರಸಗೊಬ್ಬರಗಳು ಹಾಗೂ ಕೀಟನಾಶಕಗಳು, ಭೂಮಿಯೊಳಕ್ಕೋ, ಸಾಗರದೊಳಕ್ಕೋ ಸುರಿಯುವ ಬಗೆಬಗೆಯ ತ್ಯಾಜ್ಯಗಳೆಲ್ಲವೂ ನಾವು ಕುಡಿಯುವ ನೀರಿನೊಂದಿಗೆ ಬೆರೆಯುತ್ತಿವೆ. ಹವಾಮಾನದ ವೈಪರೀತ್ಯಗಳು ಕೆರೆ-ನದಿ-ಸಾಗರಗಳ ನೀರಿನ ಮಟ್ಟದ ಮೇಲೆ ಪರಿಣಾಮ ಬೀರುವುದಷ್ಟೇ ಅಲ್ಲದೆ, ನೀರಿನ ಉಷ್ಣತೆ, ಅದರಲ್ಲಿರುವ ರಾಸಾಯನಿಕಗಳು ಹಾಗೂ ಸೂಕ್ಷ್ಮಾಣುಗಳ ಪ್ರಮಾಣಗಳ ಮೇಲೂ ಪರಿಣಾಮ ಬೀರುತ್ತಿವೆ. ಒಟ್ಟಿನಲ್ಲಿ ಜೀವನದ ಪ್ರತಿ ಸ್ತರದಲ್ಲೂ ದುಡ್ಡನ್ನಷ್ಟೇ ಎಣಿಸುತ್ತಿರುವ ಮನುಕುಲಕ್ಕೆ ತನ್ನ ಅಸ್ತಿತ್ವದ ಲೆಕ್ಕಾಚಾರವೇ ತಪ್ಪಿ ಹೋಗುತ್ತಿದೆ.

ಕುಡಿಯುವುದಕ್ಕೆ ಶುದ್ಧ ನೀರನ್ನೊದಗಿಸುವ 122 ದೇಶಗಳ ಪಟ್ಟಿಯಲ್ಲಿ ನಾವು 120 ರಲ್ಲಿದ್ದೇವೆ. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ಹಾಗೂ ಸ್ವಚ್ಛತೆಗಾಗಿ ಹನ್ನೊಂದು ಪಂಚವಾರ್ಷಿಕ ಯೋಜನೆಗಳಲ್ಲಿ 135000 ಕೋಟಿ ರೂಪಾಯಿ ವ್ಯಯಿಸಿದ್ದರೂ ಜಲಜನ್ಯ ರೋಗಗಳಿಂದಾಗಿ ಪ್ರತೀ ವರ್ಷ ಸುಮಾರು 36000 ಕೋಟಿ ರೂಪಾಯಿಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಮೂಲೆ-ಮೂಲೆಗಳಲ್ಲಿ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಲಾಗುತ್ತಿರುವ ನಮ್ಮಲ್ಲಿ ಎಪ್ಪತ್ತು ಕೋಟಿ ಜನರಿಗೆ ಶೌಚಾಲಯಗಳಿಲ್ಲದೆ ಪ್ರತಿ ದಿನ 20000 ಟನ್ನುಗಳಷ್ಟು ಮಲವು ಬಯಲಲ್ಲೇ ವಿಸರ್ಜಿಸಲ್ಪಟ್ಟು ಕುಡಿಯುವ ನೀರಿನ ಮೂಲಗಳನ್ನೂ, ಪುಣ್ಯತೀರ್ಥಗಳನ್ನೂ ಸೇರುತ್ತಿವೆ. ಶೌಚಾಲಯಕ್ಕಿಂತ ಮೊಬೈಲ್ ಫೋನ್ ಆದ್ಯತೆಯಾಗಿ, ಬಯಲ ಕಡೆ ವಿಸರ್ಜಿಸುವಾಗಲೂ ಅದನ್ನು ಕಿವಿಗೊತ್ತಲಾಗುತ್ತಿದೆ. ಬಯಲು ವಿಸರ್ಜನೆಯಿಂದ ಕಲುಷಿತಗೊಳ್ಳುವ ನೀರಿನಿಂದ ವಾಂತಿ-ಬೇಧಿ, ಹೆಪಟೈಟಿಸ್ ಎ ಮತ್ತು ಇ (ಕಾಮಾಲೆ), ಟೈಫಾಯ್ಡ್ ಜ್ವರ, ಎಂಟಮೀಬಾ ಹಾಗೂ ಜಿಯಾರ್ಡಿಯಾ ಆಮಶಂಕೆ, ಜಂತುಬಾಧೆ ಮುಂತಾದ ರೋಗಗಳುಂಟಾಗಿ ಪ್ರತೀ ವರ್ಷ ನಾಲ್ಕು ಕೋಟಿ ಭಾರತೀಯರು ಬಳಲುತ್ತಾರೆ, ಹದಿನೈದು ಲಕ್ಷ (ದಿನವೊಂದಕ್ಕೆ 5000) ಮಕ್ಕಳು ಬೇಧಿಯಿಂದಾಗಿ ಸಾವನ್ನಪ್ಪುತ್ತಾರೆ. ಪದೇ ಪದೇ ಇಂತಹಾ ರೋಗಗಳು ತಗಲುವುದರಿಂದ ಮಕ್ಕಳಲ್ಲಿ ಕುಪೋಷಣೆಗೂ, ಕುಂಠಿತ ಬೌದ್ಧಿಕ-ದೈಹಿಕ ಬೆಳವಣಿಗೆಗಳಿಗೂ ಕಾರಣವಾಗುತ್ತಿದೆ. ದೇಶದ ಕೆಲ ಭಾಗಗಳಲ್ಲಿ ಅಂತರ್ಜಲದಲ್ಲಿ ಬೆರೆತಿರುವ ಫ್ಲೋರೈಡ್, ಆರ್ಸೆನಿಕ್, ಕಬ್ಬಿಣ ಇತ್ಯಾದಿ ಲೋಹಾಂಶಗಳೂ ಕಾಹಿಲೆಗಳಿಗೆ ಕಾರಣವಾಗುತ್ತಿವೆ.

ನಾಗರಿಕರಿಗೆ ನಿರಂತರವಾಗಿ ಶುದ್ಧ ಕುಡಿಯುವ ನೀರನ್ನೊದಗಿಸುವಲ್ಲಿಯೂ, ವಿಸರ್ಜಿತ ಕಶ್ಮಲಗಳನ್ನು ಸರಿಯಾಗಿ ನಿಭಾಯಿಸುವಲ್ಲಿಯೂ ಹೆಚ್ಚಿನ ಪೌರಾಡಳಿತಗಳು ವಿಫಲವಾಗಿರುವುದು ಖಾಸಗಿ ದಂಧೆಗೆ ಹೆದ್ದಾರಿಯನ್ನೇ ತೆರೆದಿದೆ. ನೀರಿನ ಬಾಟಲು-ಪೊಟ್ಟಣಗಳ ಭರ್ಜರಿ ಮಾರಾಟದ ಜೊತೆಗೆ, ನೀರನ್ನು ಶುದ್ಧೀಕರಿಸುವ ಸಾಧನಗಳ ವ್ಯಾಪಾರವೂ ಭರಾಟೆಯಿಂದ ನಡೆಯುತ್ತಿದೆ. ನಾಲ್ಕು ದಶಕಗಳ ಹಿಂದೆ ಯಾರೂ ಗಂಭೀರವಾಗಿ ಪರಿಗಣಿಸದಿದ್ದ ಬಾಟಲು ನೀರಿನ ಉದ್ದಿಮೆ ಇಂದು ಲಕ್ಷ ಕೋಟಿಗಟ್ಟಲೆಯ ವಹಿವಾಟಾಗಿ ಬೆಳೆದಿದೆ. ಈ ಬಾಟಲಿಯ ನೀರೊಳಗೆ ಇಂದಿನ ಅರ್ಥವ್ಯವಸ್ಥೆಯ ಪ್ರತಿಬಿಂಬವಿದೆ: ಎಲ್ಲರಿಗೂ ಉಚಿತವಾಗಿ ಸಿಗಬೇಕಾದ ಅತ್ಯಮೂಲ್ಯ ಪ್ರಾಕೃತಿಕ ಸಂಪನ್ಮೂಲವಾದ ನೀರು, ಅದನ್ನು ಕಟ್ಟುವುದಕ್ಕೆ ಅಷ್ಟೇ ಅಮೂಲ್ಯವಾದ ನೈಸರ್ಗಿಕ ತೈಲದಿಂದ ತೆಗೆದ ಪಾಲಿಎಥಿಲೀನ್ ಟೆರಿಫ್ಥಾಲೇಟ್ (ಪಿಇಟಿ) ಬಾಟಲು, ಅದನ್ನು ಮಾರುವುದಕ್ಕೆ ದೊಡ್ಡ ತಾರೆಯರ ಜಾಹೀರಾತುಗಳು, ಇಡೀ ಬ್ರಹ್ಮಾಂಡದಲ್ಲಿ ಏಕರೂಪದಲ್ಲಿರುವ ನೀರು ಈ ಬಾಟಲುಗಳಲ್ಲಿ ಹತ್ತು ಹಲವು ರೂಪ ತಳೆಯುತ್ತದೆ! ಎಕ್ಸ್ ಟ್ರಾ ಆಕ್ಸಿಜನ್, ಮಿನರಲ್, ವಿಟಮಿನ್ ಎಂಬ ಸುಳ್ಳುಗಳು ಅದರಲ್ಲಿ ಸೇರುತ್ತವೆ! ‘ಸಾರ್, ಬರೇ ನೀರಾ, ಮಿನರಲ್ ವಾಟರಾ’ ಎಂಬ ಮಾಣಿಯೆದುರು ಪ್ರತಿಷ್ಠೆ ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯುಂಟಾಗುತ್ತದೆ! ಆಧುನಿಕ ಜೀವನಶೈಲಿಗೆ ನೀರಿನ ಕೋಡು!

ಈ ಬಾಟಲು ನೀರು ಅತಿ ಶುದ್ಧವೇ? ಅದೂ ಖಂಡಿತವಿಲ್ಲ. ಈ ಬಾಟಲುಗಳಲ್ಲಿರುವ ನೀರು ಬೇರೊಂದು ಲೋಕದಿಂದಲೋ, ಅತಿ ವಿಶೇಷ ಮೂಲದಿಂದಲೋ ಬಂದದ್ದಲ್ಲ. ಸಾಮಾನ್ಯವಾಗಿ ದೊರೆಯುವ ಭೂಜಲವನ್ನೇ ಶುದ್ಧೀಕರಿಸಿ ಈ ಬಾಟಲುಗಳಲ್ಲಿ ತುಂಬಲಾಗುತ್ತದೆ. ಭೂಜಲವನ್ನು ಶುದ್ಧೀಕರಿಸುವುದು ದುಬಾರಿಯೆನಿಸುವೆಡೆಗಳಲ್ಲಿ ನಳ್ಳಿ ನೀರನ್ನೇ ಬಳಸಲಾಗುತ್ತದೆ. ಒಂದು ಬಾಟಲು ತುಂಬಲು ಮೂರು ಬಾಟಲಿನಷ್ಟು ನೀರು ಪೋಲಾಗುತ್ತದೆ. ಗುಟುಕು ನೀರಿಗೆ ಬಾಯಿ ಬಿಡುವಲ್ಲಿ ಈ ಡೌಲು! ಈ ಬಾಟಲು ನೀರು ಕುದಿಸಿ ತಣಿಸಿದ ನೀರಿಗಿಂತ ಶ್ರೇಷ್ಠವೂ ಅಲ್ಲ. ಒಮ್ಮೆ ಈ ಬಾಟಲನ್ನು ತೆರೆದರೆ ಕುಡಿದು ಮುಗಿಸಲೇಬೇಕು, ಹಾಗೇ ಬಿಟ್ಟರೆ ಸೂಕ್ಷ್ಮಾಣುಗಳು ಸೇರಿಕೊಳ್ಳುವ ಸಾಧ್ಯತೆಗಳಿರುತ್ತವೆ. ನಕಲಿಗಳ ಕಾಟ ಬೇರೆ. ಬಾಟಲು ಚಂದವೆಂದು ಮರುಬಳಕೆ ಮಾಡುವುದೂ ಸುರಕ್ಷಿತವಲ್ಲ. ಹಾಗೆಂದು ಎಸೆದರೆ ಅವುಗಳಿಂದ ಪರಿಸರಕ್ಕೂ ಕೇಡು. ಒಟ್ಟಿನಲ್ಲಿ ಬಾಟಲು ನೀರನ್ನು ಮಾರುವವನನ್ನುಳಿದು ಇನ್ನೆಲ್ಲರಿಗೆ ನಷ್ಟವೇ.

ನೀರನ್ನು ಶುದ್ಧೀಕರಿಸುವುದಕ್ಕೆ ಬಗೆಬಗೆಯ ಸೋಸುಕಗಳು, ಅತಿನೇರಳೆ ಕಿರಣಗಳ ಸಾಧನಗಳು, ವಿಪರ್ಯಯ ಪರಾಸರಣ (ಆರ್ ಒ) ಸಾಧನಗಳು ಮುಂತಾದವು ಸಾವಿರಗಟ್ಟಲೆ ಬೆಲೆಗೆ ಭರದಿಂದ ಬಿಕರಿಯಾಗುತ್ತಿವೆ. ಆದರೆ ಇವುಗಳಲ್ಲಿ ನೀರು ಸಂಪೂರ್ಣವಾಗಿ ಶುದ್ಧವಾಗುತ್ತದೆಯೇ ಎನ್ನುವುದು ಯಕ್ಷಪ್ರಶ್ನೆಯೇ. ಪುಣೆಯ ರಾಷ್ಟ್ರೀಯ ವೈರಾಣು ಅಧ್ಯಯನ ಸಂಸ್ಥೆಯ ವರದಿಯಂತೆ, ಟೊಳ್ಳು ತಂತುಗಳ ಪೊರೆ (ಹಾಲೊ ಫೈಬರ್ ಮೆಂಬ್ರೇನ್) ಅಥವಾ ಸೂಕ್ಷ್ಮ ತಂತುಗಳ ಸೋಸುಕಗಳನ್ನುಳ್ಳ ಸಾಧನಗಳು ಮಾತ್ರವೇ ನೀರಿನಲ್ಲಿರುವ ವೈರಾಣುಗಳನ್ನೂ, ಇನ್ನಿತರ ರೋಗಕಾರಕಗಳನ್ನೂ ತಡೆಯುತ್ತವೆ. ಅತಿ ನೇರಳೆ ಕಿರಣಗಳಿಂದ ಶುದ್ಧೀಕರಿಸುವ ಸಾಧನಗಳು ಕೆಲವು ಬ್ಯಾಕ್ಟೀರಿಯಾಗಳನ್ನು ತಾತ್ಕಾಲಿಕವಾಗಿ ತಡೆಯುತ್ತವೆಯಾದರೂ, ಇತರ ಸೂಕ್ಷ್ಮಾಣುಗಳನ್ನು ನಿವಾರಿಸುವುದಿಲ್ಲ. ವಿಪರ್ಯಯ ಪರಾಸರಣ (ಆರ್ ಒ) ಸಾಧನಗಳಲ್ಲೂ ಎಲ್ಲಾ ರಾಸಾಯನಿಕಗಳು ಹಾಗೂ ಸೂಕ್ಷ್ಮಾಣುಗಳು ಪ್ರತ್ಯೇಕಿಸಲ್ಪಡುವುದಿಲ್ಲ. ಇಂತಹಾ ದುಬಾರಿ ಸಾಧನಗಳ ಬದಲಿಗೆ, ನೀರನ್ನು ಶುದ್ಧವಾದ ಬಟ್ಟೆಯಲ್ಲಿ ಅಥವಾ ಒಳ್ಳೆಯ ಸೋಸುಕದಲ್ಲಿ ಸೋಸಿ, ಒಂದು ನಿಮಿಷ ಕುದಿಸಿ ತಣಿಸುವುದರಿಂದ ಅತಿ ಸುಲಭವಾಗಿ ಹಾಗೂ ಪರಿಣಾಮಕಾರಿಯಾಗಿ ಶುದ್ಧೀಕರಿಸಬಹುದು. ಚಾರಣ ಯಾ ಇನ್ನಿತರ ಹೊರ ಪ್ರಯಾಣಗಳ ಸಂದರ್ಭದಲ್ಲಿ ಸೋಸಿದ ಲೀಟರ್ ನೀರಿಗೆ 5 ಬಿಂದು ಅಯೊಡಿನ್ ಟಿಂಕ್ಚರ್ ಬೆರೆಸಿ ಅರ್ಧ ಗಂಟೆಯ ಬಳಿಕ ಬಳಸಬಹುದು. ಆಡಳಿತದ ನೆರವಿನಿಂದ ಕುಡಿಯುವ ನೀರಿನ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಮಾಲಿನ್ಯವನ್ನು ಕಾಲಕಾಲಕ್ಕೆ ಪರೀಕ್ಷಿಸಬಹುದು.

ಲೋಕಾಂತ್ಯವಾಗಬೇಕಾಗಿದ್ದ ಜಲಪ್ರಳಯವು ಹುಸಿಗುಲ್ಲಾಗಿತ್ತು; ಆದರೆ ಬಿಗಡಾಯಿಸುತ್ತಿರುವ ಜಲಕ್ಷಾಮವು ಕಟು ಸತ್ಯವಾಗಿದೆ. ಹೊರಗಿರುವ ನೀರು ಬತ್ತಿ ಹೋದರೆ ದೇಹದೊಳಗಿರುವ ನೀರೂ ಉಳಿಯಲಾರದು. ಆದ್ದರಿಂದಲೇ, ಜಲಸಂಪನ್ಮೂಲಗಳ ಪುನಶ್ಚೇತನಕ್ಕೂ, ಅವುಗಳ ಸ್ವಚ್ಛತೆಯನ್ನು ಕಾಯುವುದಕ್ಕೂ ಪ್ರತಿಯೋರ್ವರೂ ಕಂಕಣಬದ್ಧರಾಗಬೇಕು. ಶುದ್ಧ ನೀರನ್ನು ಪಡೆಯುವುದು ನಮ್ಮೆಲ್ಲರ ಪ್ರಕೃತಿದತ್ತವಾದ, ಸಂವಿಧಾನದತ್ತವಾದ ಹಕ್ಕಾಗಿದೆ. ಸಂಪೂರ್ಣ ಸ್ವಚ್ಛತೆಗಾಗಿ ನಿರ್ಮಲ ಭಾರತ ಅಭಿಯಾನ, ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಕಾರ್ಯಕ್ರಮ ಹಾಗೂ ನಗರಾಡಳಿತಗಳ ಉಸ್ತುವಾರಿಯಲ್ಲಿರುವ ಕುಡಿಯುವ ನೀರಿನ ಯೋಜನೆಗಳೆಲ್ಲವೂ ಫಲಪ್ರದವಾಗಬೇಕಾದರೆ, ಅವುಗಳಿಗಾಗಿ ವ್ಯಯಿಸುತ್ತಿರುವ ಕೋಟಿಗಟ್ಟಲೆ ಹಣವು ಸದ್ಬಳಕೆಯಾಗಬೇಕಾದರೆ, ಆಡಳಿತದ ಮೇಲೆ ಜನರ ಒತ್ತಡವು ಬಿಗಿಯಾಗಬೇಕು. ಹಾಗಾದಾಗ ಮಾರ್ಚ್ 22ರ ವಿಶ್ವ ಜಲ ದಿನಾಚರಣೆ ಸಾರ್ಥಕವಾದೀತು.