ಸೇವೆಯೋ? ಸುಲಿಗೆಯೋ? ಸೀಮಿತ ನೋಟ ಸರಿಯಲ್ಲ!

ಸಮಾಜಮುಖಿ, ಜೂನ್ 10, 2019

ನಾನು 1982ರಲ್ಲಿ ಎಂಬಿಬಿಎಸ್‍ ವ್ಯಾಸಂಗಕ್ಕೆ ಸೇರಿಕೊಂಡ ಕೆಲವೇ ದಿನಗಳಲ್ಲಿ ಹೊಸಬರ ದಿನ ಏರ್ಪಾಡಾಗಿತ್ತು. ಆಗ ಕಾಲೇಜಿನ ಪ್ರಿನ್ಸಿಪಾಲರಾಗಿದ್ದವರು ಅಧ್ಯಕ್ಷತೆ ವಹಿಸಿದ್ದರು.  ಅವರಿಗಿಂತ ಮೊದಲು ಪ್ರಿನ್ಸಿಪಾಲರಾಗಿದ್ದವರು ಮುಖ್ ಯಅತಿಥಿಗಳಾಗಿದ್ದರು. ಅಧ್ಯಕ್ಷರಾಗಿದ್ದವರು ಮಾತಾಡುತ್ತಾ, ಹೊಸ ವೈದ್ಯರೆಲ್ಲರೂ ಹಳ್ಳಿಗಳಿಗೆ ತೆರಳಿ ಸೇವೆ ಸಲ್ಲಿಸಬೇಕೆಂದು ಉಪದೇಶ ಮಾಡಿದರು. ಅವರ ಮಾತು ಮುಗಿಯುತ್ತಿದ್ದಂತೆ ಮುಖ್ಯ ಅತಿಥಿಗಳಾಗಿದ್ದವರು ಕುಳಿತಿದ್ದಲ್ಲೇ ಮೈಕ್‍ ಎತ್ತಿಕೊಂಡು,`ಸಾರ್, ನೀವು ಹಿರಿಯರು, ಅಪಾರ ಅನುಭವವುಳ್ಳ ವೈದ್ಯರು, ನಿಮ್ಮ ವಿಶ್ರಾಂತ ಜೀವನವನ್ನು ಹಳ್ಳಿಯಲ್ಲೇ ಕಳೆಯುವ ಬಗ್ಗೆ ಯೋಚಿಸಿ, ಈ ಯುವ ವೈದ್ಯರನ್ನೇಕೆ ಅಲ್ಲಿಗೆ ಓಡಿಸುತ್ತೀರಿ, ಅವರಿಗೆ ಹೊಸದಾಗಿ ವೃತ್ತಿಯಲ್ಲಿ ತೊಡಗಿಕೊಳ್ಳುವುದು ಸುಲಭವಿಲ್ಲ. ಅಗತ್ಯ ಸೌಲಭ್ಯಗಳಾದ ಎಕ್ಸ್ ರೇ, ಲ್ಯಾಬ್ ಇತ್ಯಾದಿಗಳೂ ಹಳ್ಳಿಗಳಲ್ಲಿ ಕಷ್ಟವೇ, ನಿಮಗಾದರೆ ಅವು ಯಾವುವೂ ಇಲ್ಲದೆ ವೃತ್ತಿಯನ್ನು ನಡೆಸುವುದಕ್ಕೆ ಸಾಧ್ಯವಿದೆ, ಆದ್ದರಿಂದ ನೀವೇ ಹಳ್ಳಿಯತ್ತ ಹೋಗಬೇಕು’ ಎಂದುಬಿಟ್ಟರು.

ಹೊಸ ವೈದ್ಯರಿಗೆ ಇಂಥ ಉಪದೇಶಗಳು ಈಗಲೂ ಮುಂದುವರಿದಿವೆ. ಹಿರಿಯ ವೈದ್ಯರಜೊತೆಗೆ ರಾಜಕಾರಣಿಗಳು, ನ್ಯಾಯಾಧೀಶರು, ಮಾಧ್ಯಮಗಳು, ಎಲ್ಲರೂ ಸೇರಿಕಿರಿಯ ವೈದ್ಯರಿಗೆ ಸೇವೆಯ ಬೋಧನೆಯನ್ನೇ ಮಾಡುತ್ತಿದ್ದಾರೆ. ನಮ್ಮ ರಾಜ್ಯ ಸರಕಾರವಂತೂ ಕಿರಿಯ ವೈದ್ಯರು ಹಳ್ಳಿಗಳಲ್ಲಿ ಸೇವೆ ಸಲ್ಲಿಸದಿದ್ದರೆ ವೈದ್ಯಕೀಯ ವ್ಯಾಸಂಗವನ್ನು ಪೂರ್ಣಗೊಳಿಸಿದ್ದಕ್ಕೆ ಪ್ರಮಾಣಪತ್ರವನ್ನೇ ನೀಡುವುದಿಲ್ಲ ಎಂಬ ನಿಯಮವನ್ನೇ ತಂದಿದೆ. ಉಚಿತವಾಗಿ ಅಥವಾ ತೀರಾ ಕಡಿಮೆ ಶುಲ್ಕಕ್ಕೆ ಚಿಕಿತ್ಸೆ ನೀಡುವುದನ್ನು ಅತ್ಯುತ್ತಮ ಸೇವೆ ಎಂದು ಹೊಗಳುವ ಬರಹಗಳು ಆಗಾಗ ಪ್ರಕಟವಾಗುವುದೂ ಉಂಟು. ಒಟ್ಟಿನಲ್ಲಿ, ವೈದ್ಯರಾದವರು ಹೀಗೆಯೇ ಸೇವೆ ಸಲ್ಲಿಸಬೇಕೆಂದು ಸರ್ವರೂ ನಿರೀಕ್ಷಿಸುತ್ತಾರೆಂದಾಯಿತು.

ಅತ್ತ ವೈದ್ಯರೆಲ್ಲರೂ ಧನಪಿಪಾಸುಗಳಾಗಿದ್ದಾರೆ, ದುಡ್ಡು ಮಾಡಿಕೊಳ್ಳುತ್ತಿದ್ದಾರೆ, ವ್ಯಾಪಾರಿಗಳಾಗಿದ್ದಾರೆ, ಸುಲಿಗೆಕೋರರಾಗಿದ್ದಾರೆ ಎಂಬ ದೂಷಣೆಗಳೂ ಸಾಮಾನ್ಯವಾಗುತ್ತಿವೆ, ಜೋರಾಗುತ್ತಿವೆ. ರಾಜಕಾರಣಿಗಳು, ಕೆಲವು ಹಿರಿಯ ವೈದ್ಯರು, ಹೆಚ್ಚಿನ ಮಾಧ್ಯಮಗಳು ಮತ್ತು ಜನಸಾಮಾನ್ಯರು ಇದನ್ನೇ ಹೇಳುತ್ತಿರುತ್ತಾರೆ. ಪ್ರಸ್ತು ತಚರ್ಚೆಯೂ ಈ ಸೇವೆ ಮತ್ತು ಸುಲಿಗೆಗಳ ಬಗ್ಗೆಯೇ ಆಗಿದೆ.

ವೈದ್ಯಕೀಯ ರಂಗವನ್ನು ಕೇವಲ ಸೇವೆ ಮತ್ತು ಸುಲಿಗೆಗಳೆಂದು ನೋಡುವುದರ ಬಗ್ಗೆ ಓರ್ವ ವೈದ್ಯನಾಗಿ ನನ್ನದಂತೂ ತೀವ್ರವಾದ ಆಕ್ಷೇಪವಿದೆ. ವೈದ್ಯಕೀಯ ರಂಗ ಎನ್ನುವಾಗ ಕೇವಲ ವೈದ್ಯರಷ್ಟೇ ಅಲ್ಲ, ಆಸ್ಪತ್ರೆಗಳು, ಔಷಧ ಹಾಗೂ ಉಪಕರಣಗಳ ಉತ್ಪಾದನೆ ಹಾಗೂ ಮಾರಾಟಗಳ ವ್ಯವಸ್ಥೆ ಎಲ್ಲವೂ ಸೇರುತ್ತವೆ. ವೈದ್ಯರ ಕೆಲಸವು ಸೇವೆ, ಸುಲಿಗೆ ಎಂಬೆರಡನ್ನು ಮೀರಿದ್ದಾಗಿದೆ; ಅದು ಎಲ್ಲಕ್ಕಿಂತ ಮೊದಲು ವಿಶ್ವದ ಅತ್ಯುನ್ನತವಾದ, ಅತ್ಯಂತ ವೈಜ್ಞಾನಿಕವಾದ, ಅತ್ಯಂತ ಸಂಕೀರ್ಣವಾದ ವೃತ್ತಿಯಾಗಿದೆ. ಇದನ್ನು ಪರಿಗಣಿಸದೆಯೇ ಇಡೀ ವೈದ್ಯಕೀಯ ರಂಗವನ್ನು ಒಟ್ಟಾಗಿ ಕೇವಲ ಸೇವೆ ಅಥವಾ ಸುಲಿಗೆ ಎಂದು ನೋಡುವುದು ಅಪಚಾರವಾಗುತ್ತದೆ, ಅನ್ಯಾಯವಾಗುತ್ತದೆ.

ವೈದ್ಯ ವೃತ್ತಿಯು ಅದೆಷ್ಟು ಸಂಕೀರ್ಣವೆನ್ನುವುದನ್ನು ವೈದ್ಯ ವಿಜ್ಞಾನದ ಪಿತಾಮಹನೆನಿಸಿದ ಹಿಪೊಕ್ರಾಟಿಸ್‍ನ (ಕ್ರಿ.ಪೂ. ನಾಲ್ಕನೇ ಶತಮಾನ) ಈ ಮೊದಲ ಸೂಕ್ತಿಯಲ್ಲಿ ಕಾಣಬಹುದು: Life is short, the Art long; opportunity fleeting, experiment treacherous, judgment difficult  (ಬಾಳುವೆ ಅಲ್ಪಕಾಲಿಕ, (ವೈದ್ಯಕೀಯ) ಕಲೆಬಹಳ ದೀರ್ಘವಾದುದು; ಒದಗಿರುವ ಅವಕಾಶವು ಅತಿ ಕ್ಷಣಿಕವಾದುದು; ಸ್ವಾನುಭವವನ್ನು ನೆಚ್ಚಿಕೊಳ್ಳುವುದು ಅಪಾಯಕರವಾದರೆ, ನಿರ್ಣಯವೋ ಅತಿ ಕಠಿಣವಾದುದು. ಅಂದರೆ, ಸಹಸ್ರಾರು ವರ್ಷಗಳಲ್ಲಿ ಬೆಳೆದಿರುವ, ಬೆಳೆಯುತ್ತಿರುವ ವೈದ್ಯ ವಿಜ್ಞಾನವನ್ನು ಅರಗಿಸಿಕೊಳ್ಳುವುದಕ್ಕೆ ವೈದ್ಯನಾದವನು ತನ್ನ ಅಲ್ಪ ಜೀವಿತಾವಧಿಯಲ್ಲಿ ಸಾಧ್ಯವಾದಷ್ಟು ಪ್ರಯತ್ನಿಸಬೇಕಾಗುತ್ತದೆ; ಅದನ್ನು ಬಳಸಿ ರೋಗಿಯ ಸಮಸ್ಯೆಗೆ ಸೂಕ್ತವಾದ ಪರಿಹಾರವನ್ನು ಒದಗಿಸುವುದಕ್ಕೆ ವೈದ್ಯನಿಗೆ ಕ್ಷಣಿಕವಾದ ಅವಕಾಶವಷ್ಟೇ ದೊರೆಯುತ್ತದೆ; ಅಂತಹ ಕೆಲಸವು ಸಾಕಷ್ಟು ಕಷ್ಟಕರವಾಗಿದ್ದು, ಕೇವಲ ತನ್ನ ಅನುಭವವನ್ನೇ ನೆಚ್ಚಿಕೊಂಡರೆ ರೋಗಿಯ ಪಾಲಿಗೆ ಅಪಾಯಕರವಾಗಬಹುದು ಎಂದರ್ಥ.

ಇಂತಹ ಅತಿ ಸಂಕೀರ್ಣವಾದ ವೃತ್ತಿಯನ್ನು ನಿಭಾಯಿಸಬಲ್ಲ ಸಾಮರ್ಥ್ಯವನ್ನು ಪಡೆಯಬೇಕಾದರೆ ಸಾಕಷ್ಟು ಬೆವರು ಹರಿಸಬೇಕಾಗುತ್ತದೆ, ವಿಜ್ಞಾನ ಹಾಗೂ ತಂತ್ರಜ್ಞಾನಗಳ ಬೆಳವಣಿಗೆಯು ವರ್ಷಕ್ಕೊಮ್ಮೆ ದುಪ್ಪಟ್ಟಾಗುತ್ತಿರುವಾಗ ಅವನ್ನು ಜನರಿಗೆ ತಲುಪಿಸುವುದಕ್ಕೆ ತನ್ನ ಸ್ವಂತ ಪ್ರಯತ್ನ ಹಾಗೂ ಖರ್ಚಿನಿಂದಲೇ ನಿರಂತರವಾಗಿ ಕಲಿಯುತ್ತಿರಬೇಕಾಗುತ್ತದೆ. ಜೊತೆಗೆ, ತನ್ನ ಸ್ವಂತ ನೋವು-ನಲಿವುಗಳನ್ನೂ, ಹಿತಾಸಕ್ತಿಗಳನ್ನೂ ಬದಿಗೊತ್ತಿ ಹಗಲಿರುಳೆನ್ನದೆ ರೋಗಿಗಳ ಚಿಕಿತ್ಸೆಗೆ ಲಭ್ಯನಿರಬೇಕಾಗುತ್ತದೆ. ನಮ್ಮ ದೇಶದಲ್ಲಿ, ಅದರಲ್ಲೂ ಹಳ್ಳಿಗಳಲ್ಲಿ, ವೈದ್ಯರ ಸಂಖ್ಯೆಯು ಅಗತ್ಯಕ್ಕಿಂತ ಕಡಿಮೆಯಿರುವುದರಿಂದ, ಪ್ರತಿಯೊಬ್ಬ ವೈದ್ಯನು ಎರಡು-ಮೂರು ಪಟ್ಟು ಹೆಚ್ಚು ದುಡಿಯಬೇಕಾಗುತ್ತದೆ. ಹಿಪಾಕ್ರಟಿಸ್‍ ತನ್ನ ಮೊದಲ ಸೂಕ್ತಿಯಲ್ಲಿ ಹೇಳಿದಂತೆ, ವೈದ್ಯನು ತನ್ನ ಈ ಎಲ್ಲಾ ಕರ್ತವ್ಯಗಳನ್ನು ತಾನೇ ನಿಭಾಯಿಸುವುದರ ಜೊತೆಗೆ, ರೋಗಿ, ಆತನ ಸಂಬಂಧಿಗಳು ಮತ್ತು ಹೊರಗಿನವರೆಲ್ಲರ ಸಹಕಾರವನ್ನು ಪಡೆದುಕೊಳ್ಳುವುದಕ್ಕೂ ಸದಾ ಸಿದ್ಧನಿರಬೇಕಾಗುತ್ತದೆ.

ಇಂತಹ ಸಂಕೀರ್ಣವಾದ, ಕಷ್ಟಕರವಾದ, ಜೀವದಾಯಿಯಾದ ಕೆಲಸವೆಂಬ ಕಾರಣಕ್ಕಾಗಿಯೇ ಪ್ರಾಚೀನ ಕಾಲದಿಂದಲೂ ವೈದ್ಯ ವೃತ್ತಿಗೆ ವಿಶೇಷ ಸ್ಥಾನಮಾನವಿತ್ತು, ಗೌರವವಿತ್ತು. ಋಗ್ವೇದದ ಕಾಲದಲ್ಲಿ ಹವಿಸ್ಸನ್ನು ಸ್ವೀಕರಿಸುವುದಕ್ಕೆ ಅಶ್ವಿನಿ ದೇವತೆಗಳಿಗೆ ಮೊದಲ ಪ್ರಾಶಸ್ತ್ಯವಿರುತ್ತಿತ್ತು. ಪ್ರಾಚೀನ ಗ್ರೀಕಿನ ಐತಿಹ್ಯಗಳಲ್ಲೂ ಜೀವವುಳಿಸಿ ಸಾವನ್ನು ದೂರವಿಡುತ್ತಿದ್ದ ವೈದ್ಯರಿಗೆ ಅಗ್ರ ಗೌರವವಿತ್ತು; ಅಲ್ಲಿನ ಮಹಾ ವೈದ್ಯನೆನಿಸಿಕೊಂಡಿದ್ದ ಎಸ್ಕಲೇಪಿಯಸ್‍ ಕೂಡ ದೈವತ್ವಕ್ಕೇರಿ, ಆತನ  ಸಾಮರ್ಥ್ಯ-ಅಧಿಕಾರಗಳ ದ್ಯೋತಕವಾಗಿದ್ದ ಹಾವು ಸುತ್ತಿದ ದಂಡವು ವೈದ್ಯ ವೃತ್ತಿಯ ಸಂಕೇತವಾಗಿ ಇಂದಿಗೂ ಉಳಿದಿದೆ.

ವೈದ್ಯರಾದವರಿಗೆ ವಿಶೇಷ ಸ್ಥಾನಮಾನದ ಜೊತೆಗೆ, ಅತ್ಯುತ್ತಮ ವೇತನಗಳೂ, ಸವಲತ್ತುಗಳೂ ಸಲ್ಲಬೇಕೆಂಬುದು ಕೂಡ ಯಾವತ್ತೂ ನಿರ್ವಿವಾದಿತವಾಗಿತ್ತು. ವೈದ್ಯರ ಸ್ಕಾಟ್ಲೆಂಡಿನ ಅರ್ಥಶಾಸ್ತ್ರಜ್ಞ ಆಡಂ ಸ್ಮಿತ್ 1776ರಲ್ಲಿ ಬರೆದ ದಿ ವೆಲ್ತ್ ಆಫ್ ನೇಶನ್ಸ್ ಎಂಬ ಕೃತಿಯಲ್ಲಿ, ಅತಿ ಹೆಚ್ಚು ಶ್ರಮದಿಂದ ಗಳಿಸಿಕೊಳ್ಳಬಲ್ಲ ಮತ್ತು ಬಳಸಬಲ್ಲ ವಿದ್ಯೆಗಳನ್ನು ಹೊಂದಿರುವ ವೈದ್ಯರು, ವಕೀಲರು ಮತ್ತು ಕಲಾವಿದರಿಗೆ ಅತಿ ಹೆಚ್ಚಿನ ವೇತನ ಹಾಗೂ ಸವಲತ್ತುಗಳನ್ನು ನೀಡುವುದು ಸಮಾಜದ ಆದ್ಯ ಕರ್ತವ್ಯವೆಂದು ಹೇಳಲಾಗಿದೆ. ಕಾರ್ಲ್ ಮಾರ್ಕ್ಸ್ ಕೂಡ ವೈದ್ಯ ವೃತ್ತಿಯಂಥವು ಸಂಕೀರ್ಣ ಶ್ರಮಗಳೆಂದು ಗುರುತಿಸಿದ್ದರು. ಇವನ್ನೆಲ್ಲ ಪರಿಗಣಿಸಿಯೇ, ಇಂದಿಗೂ ವಿಶ್ವದ ಹಲವು ದೇಶಗಳಲ್ಲಿ ವೈದ್ಯರಿಗೆ ಅತಿ ಹೆಚ್ಚಿನ ಸಂಭಾವನೆಗಳನ್ನು ನೀಡಲಾಗುತ್ತಿದೆ.

ಹಾಗಾದರೆ, ವೈದ್ಯಕೀಯ ಸೇವೆಗೆ ಅರ್ಥವೇನು? ಉಚಿತವಾಗಿ, ಅಥವಾ ಅತಿಕಡಿಮೆ ಶುಲ್ಕದಲ್ಲಿ ಚಿಕಿತ್ಸೆ ನೀಡುವುದಷ್ಟೇ ವೈದ್ಯಕೀಯ ಸೇವೆ ಎನಿಸುತ್ತದೆಯೇ? ದೇಶದಲ್ಲಿರುವ ಎಲ್ಲಾ ವೈದ್ಯರೂಯಾವುದೇ ಸಂಭಾವನೆಯ ಅಪೇಕ್ಷೆಯಿಲ್ಲದೆಯೇ ದುಡಿಯಬೇಕು ಎಂದು ಈ ನಮ್ಮ ಸಮಾಜವು ಬಯಸುತ್ತದೆಯೇ? ವೈದ್ಯನುತನ್ನ ವೃತ್ತಿಯಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳಬೇಕಾದರೆ ಆತನ ಹಾಗೂ ಆತನ ಕುಟುಂಬದ ವರ್ತಮಾನ ಹಾಗೂ ಭವಿಷ್ಯದ  ಎಲ್ಲಾ ಅಗತ್ಯಗಳನ್ನು ಪೂರೈಸುವ ಬದ್ಧತೆಯು ಸಮಾಜ ಹಾಗೂ ಸರಕಾರಗಳಿಗಿರಬೇಕು ಎಂಬ ಆಡಂ ಸ್ಮಿತ್ ಸಲಹೆಯು ಕೂಡ ಪಾಲನೆಯಾಗಬೇಡವೇ?

ಇಂದು ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿರುವ ಓರ್ವ ಪ್ರತಿಭಾವಂತನಾದ ಇಂಜಿನಿಯರಿಂಗ್ ವಿದ್ಯಾರ್ಥಿಯು ತನ್ನ ನಾಲ್ಕನೇ ವರ್ಷದ ವ್ಯಾಸಂಗಕ್ಕೆ ಪ್ರವೇಶಿಸುತ್ತಿದ್ದಂತೆಯೇ ವಾರ್ಷಿಕ 15-20 ಲಕ್ಷದಷ್ಟು ಸಂಬಳವಿರುವ ಕೆಲಸವನ್ನು ಗಿಟ್ಟಿಸಿಕೊಳ್ಳುತ್ತಾನೆ (ಅತಿಕಡಿಮೆ ಸಂಬಳದ ಕೆಲಸ ಪಡೆಯುವವರು ಅಥವಾ ಯಾವುದೇ ಕೆಲಸ ಪಡೆಯದವರೂ ಇಲ್ಲವೆಂದಲ್ಲ). ಅಷ್ಟೇ ಪ್ರತಿಭಾವಂತನಾದ, ಅಷ್ಟೇ ಒಳ್ಳೆಯ ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗೆ ನಾಲ್ಕನೇ ವರ್ಷದ ಆರಂಭದಲ್ಲಿ ಬಿಡಿ, ಐದೂವರೆ ವರ್ಷಗಳ ವ್ಯಾಸಂಗ ಮುಗಿದ ಬಳಿಕವೂ ಅಂತಹ ಉದ್ಯೋಗವು ದೊರೆಯುತ್ತದೆಯೇ? ಉದ್ಯೋಗ ಹೋಗಲಿ, ಆ ವೈದ್ಯಕೀಯ ವಿದ್ಯಾರ್ಥಿಯು ಹಳ್ಳಿಗೆ ಹೋಗಿ ಕೆಲಸ ಮಾಡದಿದ್ದರೆ ಪ್ರಮಾಣ ಪತ್ರವನ್ನೂ ನೀಡಲಾಗುವುದಿಲ್ಲ ಎಂದು ಸರಕಾರವೇ ಬೆದರಿಕೆ ಹಾಕುತ್ತದೆ. ಹಾಗೆ ಮಾಡುವ ತಾತ್ಕಾಲಿಕ ಕೆಲಸಕ್ಕೆ ತಿಂಗಳಿಗೆ ಹೆಚ್ಚೆಂದರೆ 30-40 ಸಾವಿರ ರೂಪಾಯಿ ಭತ್ಯೆಯನ್ನು ನೀಡಲಾಗುತ್ತದೆ. ಆ ಬಳಿಕ ಇನ್ನಷ್ಟು ಶ್ರಮ ವಹಿಸಿ ಹೇಗೋ ಸ್ನಾತಕೋತ್ತರ ವ್ಯಾಸಂಗಕ್ಕೆ ಸೇರಿ ಮೂರು ವರ್ಷಗಳ ಉನ್ನತ ತರಬೇತಿಯನ್ನು ಪಡೆದವರಿಗೆ, ಅಥವಾ ಇನ್ನೂ 3 ವರ್ಷ ಮುಂದುವರಿದು ವಿಶೇಷಜ್ಞರಾದವರಿಗೆ ಅದೆಷ್ಟು ವೇತನವನ್ನು ನೀಡಲಾಗುತ್ತಿದೆ?

‘ಬಂಡವಾಳಶಾಹಿಯು ಇದುವರೆಗೆ ಅತ್ಯಂತ ಗೌರವಯುತವೆನಿಸಿದ ಪ್ರತಿಯೊಂದು ವೃತ್ತಿಯ ಪ್ರಭೆಯನ್ನೂ  ತೆಗೆದು ಹಾಕಿದೆ; ವೈದ್ಯ, ವಕೀಲ, ಪುರೋಹಿತ, ಕವಿ, ವಿಜ್ಞಾನಿ ಎಲ್ಲರನ್ನೂ ಅದು ಕೂಲಿಯಾಳುಗಳಾಗಿ ಪರಿವರ್ತಿಸಿದೆ’ ಎಂದು ಕಮ್ಯೂನಿಸ್ಟ್ ಪ್ರಣಾಳಿಕೆಯ ಮೊದಲ ಅಧ್ಯಾಯದಲ್ಲೇ ಹೇಳಲಾಗಿದೆ. ಅಂತೆಯೇ ಬಂಡವಾಳಶಾಹಿ ವ್ಯವಸ್ಥೆಯಡಿಯಲ್ಲಿ ವೈದ್ಯಕೀಯ ಶಿಕ್ಷಣ, ಆಸ್ಪತ್ರೆಗಳು, ಔಷಧಗಳ ಹಾಗೂ ಉಪಕರಣಗಳ ಸಂಶೋಧನೆ, ಉತ್ಪಾದನೆ ಹಾಗೂ ಮಾರಾಟಗಳೆಲ್ಲವೂ ಮಹಾ ಬಂಡವಾಳಶಾಹಿಗಳ ಮುಷ್ಠಿಯೊಳಗಾಗಿವೆ, ಇವನ್ನು ನೆಚ್ಚಿಕೊಳ್ಳಲೇಬೇಕಾದ ಹೆಚ್ಚಿನ ವೈದ್ಯರು ಕೂಡಾ ಅದೇ ವ್ಯವಸ್ಥೆಯ ಕೈಗೊಂಬೆಗಳಾಗುವಂತಾಗಿದೆ. ಲಾಭದಾಸೆಯೊಂದಷ್ಟೇ ಜೀವಾಳವಾಗಿರುವ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಸುಲಿಗೆ, ವಂಚನೆಗಳು ಇರಬಾರದೆಂದರೆ ಸಾಧ್ಯವೇ?

ಇಂದು ಸಾರ್ವಜನಿಕ ಆರೋಗ್ಯ ಸೇವೆಗಳು ಕ್ಯೂಬಾ, ಇಂಗ್ಲೆಂಡ್, ಕೆನಡಾ ಮುಂತಾದ ಕೆಲವೇ ದೇಶಗಳಲ್ಲಿ ಮಾತ್ರವೇ ಪ್ರಮುಖ ಸ್ಥಾನವನ್ನು ಪಡೆದಿದ್ದು, ಅಲ್ಲಿ ವೈದ್ಯರಿಗೆ ಸಾಕಷ್ಟು ಉತ್ತಮ ಸೌಲಭ್ಯಗಳೂ, ಭತ್ಯೆಗಳೂ ದೊರೆಯುತ್ತವೆ. ಭಾರತದಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯು ದಿನೇದಿನೇ ಶಿಥಿಲವಾಗುತ್ತಿದೆ. ಮಾತ್ರವಲ್ಲ, ವೈದ್ಯರಿಗೆ ನೀಡಲಾಗುವ ವೇತನಗಳೂ ಹೆಚ್ಚೇನಿಲ್ಲ. ಅಂತಹ ಸೀಮಿತ ಸೌಲಭ್ಯಗಳನ್ನು ಬಳಸಿ ವಿಪರೀತ ಸಂಖ್ಯೆಯ ರೋಗಿಗಳಿಗೆ ಉತ್ತಮಚಿಕಿತ್ಸೆ ನೀಡಲು ಹೆಣಗಾಡುವ ಜೊತೆಗೆ, ರಾಜಕಾರಣಿಗಳ ದರ್ಪವೂ ಸೇರಿದಂತೆ ಎಲ್ಲ ಬಗೆಯ ಬಾಹ್ಯ ಒತ್ತಡಗಳನ್ನೂ ಅಲ್ಲಿನ ವೈದ್ಯರು ಅನುಭವಿಸಬೇಕಾಗುತ್ತದೆ. ಇನ್ನುಳಿದ ಹೆಚ್ಚಿನ ವೈದ್ಯರು ತಮ್ಮ ಕರ್ತವ್ಯಪಾಲನೆಯ ಜೊತೆಗೆ ತಮ್ಮ ವೈಯಕ್ತಿಕ ಅಗತ್ಯಗಳನ್ನು ತಾವೇ ನೋಡಿಕೊಳ್ಳಬೇಕಾದ ಸ್ಥಿತಿಯಿದೆ; ತಾವಾಗಿ ಸಣ್ಣ ಆಸ್ಪತ್ರೆಗಳನ್ನು ತೆರೆದರೆ ಅಧಿಕಾರಿಗಳ ಕಿರುಕುಳದಿಂದ ಹಿಡಿದು ಬಗೆಬಗೆಯ ಸಮಸ್ಯೆಗಳನ್ನು ದಿನವೂ ಎದುರಿಸಬೇಕಾಗುತ್ತದೆ. ವೈದ್ಯರತ್ತ ಸಮಾಜ ಹಾಗೂ ಸರಕಾರಗಳಿಗೆ ಬದ್ಧತೆಗಳಿಲ್ಲದಿದ್ದರೆ ವೈದ್ಯರೇನು ಮಾಡಲು ಸಾಧ್ಯವಿದೆ?

ವೈದ್ಯಕೀಯ ರಂಗದ ಎಲ್ಲಾ ಲೋಪಗಳಿಗೆ, ಸುಲಿಗೆಗಳಿಗೆ, ಲಾಭಕೋರತನಕ್ಕೆ ಕೇವಲ ವೈದ್ಯರನ್ನಷ್ಟೇ ದೂಷಿಸಲಾಗುತ್ತಿದೆಯೇ ಹೊರತು ಈ ದುಸ್ಥಿತಿಗೆ ಕಾರಣವಾಗಿರುವ ರಾಜಕೀಯ-ಸಾಮಾಜಿಕ-ಆರ್ಥಿಕ ವ್ಯವಸ್ಥೆಯ ಬಗ್ಗೆ ಚಕಾರವಿರುವುದಿಲ್ಲ. ಸರಕಾರವೂ, ರಾಜಕಾರಣಿಗಳೂ ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡು ಎಲ್ಲದಕ್ಕೂ ವೈದ್ಯರನ್ನೇ ಹೊಣೆಯಾಗಿಸುತ್ತಿದ್ದಾರೆ, ಮಾಧ್ಯಮಗಳೂ ವೈದ್ಯರನ್ನೇ ಗುರಿಯಾಗಿಸುತ್ತವೆ. ಇದರಿಂದಾಗಿಯೇ ಇಂದು ನಮ್ಮ ರಾಜ್ಯವೂ ಸೇರಿದಂತೆಎಲ್ಲೆಡೆ ವೈದ್ಯರ ಮೇಲೆ ಮಾರಣಾಂತಿಕ ದಾಳಿಗಳೂ ನಡೆಯತೊಡಗಿವೆ.

ಆದ್ದರಿಂದ ವೈದ್ಯರು ತಮ್ಮ ವೃತ್ತಿಯನ್ನು ಹಿಪಾಕ್ರಟಿಸನ ಆಶಯಗಳಿಗನುಗುಣವಾಗಿ ನಡೆಸಬೇಕಿದ್ದರೆ ಹಿಪಾಕ್ರಟಿಸನ ಕಾಲದಲ್ಲಿದ್ದ ಮನ್ನಣೆ, ಗೌರವ, ಅಂತಸ್ತುಗಳನ್ನು ವೈದ್ಯರಿಗೆ ನೀಡಬೇಕಾದ ತನ್ನ ಜವಾಬ್ದಾರಿಯನ್ನು ನಮ್ಮ ಸಮಾಜವೂ ನಿರ್ವಹಿಸಬೇಕಾಗುತ್ತದೆ. ವೈದ್ಯಕೀಯ ಶಿಕ್ಷಣವನ್ನು ಸರಕಾರಿ ರಂಗದಲ್ಲಿ, ಅತಿಕಡಿಮೆ ಶುಲ್ಕದಲ್ಲಿ, ಸಾಮಾಜಿಕ ನ್ಯಾಯದ ತತ್ವಗಳಿಗನುಗುಣವಾಗಿ ಪ್ರತಿಭಾವಂತರಿಗಷ್ಟೇ ಒದಗಿಸುವುದು, ಸಾರ್ವಜನಿಕ ರಂಗದ ಆರೋಗ್ಯ ಸೇವೆಗಳನ್ನು ಬಲಪಡಿಸುವುದು ಹಾಗೂ ರಾಷ್ಟ್ರೀಯ ಉತ್ಪನ್ನದ ಶೇ. 6-10ನ್ನು ಅದಕ್ಕೆ ಒದಗಿಸುವುದು, ಸಾರ್ವಜನಿಕ ಆಸ್ಪತ್ರೆಗಳಲ್ಲಿ ಎಲ್ಲಾ ಅತ್ಯಾಧುನಿಕ ತಂತ್ರಜ್ಞಾನವನ್ನೂ ಒದಗಿಸುವುದು ಮತ್ತು ಎಲ್ಲಾ ಸ್ತರಗಳಲ್ಲಿ ಖಾಲಿ ಹುದ್ದೆಗಳನ್ನು ತುಂಬಿಸಿ, ಇನ್ನಷ್ಟು ವೈದ್ಯರನ್ನು ನೇಮಿಸುವುದು, ಮತ್ತು ಅವರೆಲ್ಲರ ವೇತನ ಹಾಗೂ ಸೌಲಭ್ಯಗಳನ್ನು ನಾಲ್ಕೈದು ಪಟ್ಟು ಹೆಚ್ಚಿಸುವುದು, ವೈದ್ಯರ ನಿರಂತರ ಕಲಿಕೆ ಹಾಗೂ ಸಂಶೋಧನಾ ಕಾರ್ಯಗಳಿಗೆ ಅಗತ್ಯವಿರುವ ಹಣ ಹಾಗೂ ಇತರೆಲ್ಲ ಸವಲತ್ತುಗಳನ್ನು ಸರಕಾರವೇ ಒದಗಿಸುವುದು ಎಲ್ಲವೂ ಸಾಧ್ಯವಾದರೆ ವೈದ್ಯಕೀಯ ರಂಗದಲ್ಲಿ ಯಾವ ಸುಲಿಗೆಯೂ ನಡೆಯದು.

Be the first to comment

Leave a Reply

Your email address will not be published.


*