ಫಾತಿಮಾ ರಲಿಯಾ ಅವರ ಹೊಸ ಕೃತಿ ಕೀಮೋ ಲೋಕಾರ್ಪಣೆ ಮಾಡುವ ಗೌರವ ನನ್ನದಾಗಿತ್ತು. ಈ ಕೃತಿಯಲ್ಲಿ ತನ್ನ ತಾಯಿಯ ಕ್ಯಾನ್ಸರ್ ಚಿಕಿತ್ಸೆಯ ಸುತ್ತ ನಡೆದ ಘಟನೆಗಳನ್ನು ಹೃದಯಸ್ಪರ್ಶಿಯಾಗಿ ರಲಿಯಾ ನಿರೂಪಿಸಿದ್ದಾರೆ.
ರಲಿಯಾರಂತಹ ಮಕ್ಕಳನ್ನು ಶಾಲೆ-ಕಾಲೇಜುಗಳಿಗೆ ಕಳಿಸಿ ಸುಶಿಕ್ಷಿತರನ್ನಾಗಿ ಮಾಡುವಲ್ಲಿ ತಮ್ಮ ಕುಟುಂಬ, ಸಮುದಾಯ, ಸುತ್ತಲಿನ ಸಮಾಜ ಎಲ್ಲರನ್ನೂ ದಿಟ್ಟವಾಗಿ ಎದುರಿಸಿ ಗೆದ್ದ ರಲಿಯಾ ಅವರ ಅಮ್ಮ ಆಯಿಷಾ ಮತ್ತು ಅವರಂತಹ ಎಲ್ಲಾ ಅಮ್ಮಂದಿರು ಎಲ್ಲರಿಗಿಂತಲೂ ದೊಡ್ಡ ಕ್ರಾಂತಿಕಾರಿಗಳು, ಅವರಿಗೆ ನಮ್ಮ ಅಭಿನಂದನೆಗಳು, ನಮನಗಳು ಸಲ್ಲಬೇಕು.
ಈ ಕೀಮೋ ಕೃತಿಯಲ್ಲಿ ರಲಿಯಾ ತಮ್ಮ ತಾಯಿಯ ಕ್ಯಾನ್ಸರ್ ರೋಗದ ಬಗ್ಗೆ ಮಾತ್ರವೇ ಹೇಳಿರುವುದಲ್ಲ. ಅದರ 90 ಪುಟಗಳಲ್ಲಿ ಅವರು ಗುರುತಿಸಿರುವ ಬಗೆಬಗೆಯ ಸಾಮಾಜಿಕ ಪಿಡುಗುಗಳನ್ನು ಪಟ್ಟಿ ಮಾಡಿದರೆ ಇಪ್ಪತ್ತೈದಾದರೂ ಆಗುತ್ತವೆ. ಮನುಷ್ಯನನ್ನು ಕಾಡುವ ರೋಗಗಳಿಗೆ ನಾವು ವೈದ್ಯರು ಕೆಲವಕ್ಕೆ ಚಿಕಿತ್ಸೆ ಬೇಕೇ ಬೇಕು ಎನ್ನುತ್ತೇವೆ, ಕೆಲವು ಅತಿ ಸೌಮ್ಯವಾದವು ತನ್ನಿಂತಾನೇ ವಾಸಿಯಾಗುತ್ತವೆ, ಮದ್ದು ಬೇಡ ಎನ್ನುತ್ತೇವೆ, ಇನ್ನು ಕೆಲವು ಮಾರಣಾಂತಿಕವಾದವು, ಏನು ಮಾಡಿದರೂ ವಾಸಿಯಾಗದವು, ಅವಕ್ಕೆ ಏನೂ ಮಾಡಲಾಗದು ಎನ್ನುತ್ತೇವೆ. ಹಾಗೆಯೇ ರಲಿಯಾ ಹೇಳಿರುವ ರೋಗಗಳಿಗೆ ಅವರೂ ಅವರ ಅಮ್ಮನೂ ಕೆಲವಕ್ಕೆ ಮದ್ದು ನೀಡುತ್ತಾರೆ, ಕೆಲವು ಹಾಗೆಯೇ ವಾಸಿಯಾಗಲೆಂದು ಹಾರೈಸುತ್ತಾರೆ, ಇನ್ನು ಕೆಲವನ್ನು ವಾಸಿಯಾಗದವೆಂದು ಬಿಡುತ್ತಾರೆ. ಅವರಿಬ್ಬರ ಈ ಚಿಕಿತ್ಸಕ ದೃಷ್ಠಿ ಎಲ್ಲರಿಗೂ ಕಲಿಸುವಂತದ್ದಾಗಿದೆ.
ನಾವು ದಕ್ಷಿಣ ಕನ್ನಡದವರಿಗೆ ನಮ್ಮ ಕನ್ನಡದ ಶೈಲಿಯ ಬಗ್ಗೆ, ನಮ್ಮ ಶಿಕ್ಷಣ, ಬ್ಯಾಂಕ್, ಆರೋಗ್ಯ ವ್ಯವಸ್ಥೆ ಹೀಗೆ ಎಲ್ಲದರ ಬಗ್ಗೆ ಮೇಲರಿಮೆ ಜಾಸ್ತಿ, ಅಹಮಿಕೆಯೂ ಜಾಸ್ತಿ. ಹೊರ ಜಿಲ್ಲೆಗಳಿಗೆ ಹೋದಾಗ ಇದೆಲ್ಲ ಠುಸ್ ಆಗುತ್ತದೆ. ಕೀಮೋ ವೃತ್ತಾಂತ ನಡೆಯುವಾಗ ಹದಿನೈದರ ವಯಸ್ಸಷ್ಟೇ ಆಗಿದ್ದ ರಲಿಯಾ ಕೂಡ ಈ ಮೇಲರಿಮೆಗಳನ್ನು ಹೊಂದಿದ್ದು ಜಿಲ್ಲೆಯ ಗೌರವ ಕಾಯಲು ಜಗಳಕ್ಕಿಳಿಯುತ್ತಿದ್ದರಂತೆ. ಆದರೆ ಅವರ ಅಮ್ಮನನ್ನು ನೋಡಿಕೊಳ್ಳುತ್ತಿದ್ದ ಬೆಳಗಾವಿ ಮೂಲದ ಕಿರಿಯ ವೈದ್ಯರೊಬ್ಬರು ಅದನ್ನು ಠುಸ್ ಮಾಡಿ, ನಿಮ್ಮ ಜಿಲ್ಲೆಯ ವೈದ್ಯರು ಹಿಂದೂ ಮುಸ್ಲಿಂ ಅಂತ ಮತೀಯವಾದಿಗಳಾಗಿದ್ದಾರೆ, ಹೀಗೆಯೇ ಹೋದರೆ ಕೆಲವೇ ವರ್ಷಗಳಲ್ಲಿ ದಾರಿಯಲ್ಲಿ ನಡೆಯಲಾಗದ ಸ್ಥಿತಿ ಬರಬಹುದು ಎಂದಿದ್ದರಂತೆ.
ಅದಾಗಿ ಎರಡೇ ವರ್ಷಕ್ಕೆ ಪಬ್ ದಾಳಿಯಾಯಿತು, ನಂತರ ಹೋಮ್ ಸ್ಟೇ ದಾಳಿಯಾಯಿತು, ಸ್ವತಃ ರಲಿಯಾ ಹಾಗೂ ಜೊತೆಗಿದ್ದ ಸ್ನೇಹಿತೆಯೂ ನೈತಿಕತೆಯ ನೆಪದ ದಾಳಿಯನ್ನು ಅನುಭವಿಸಬೇಕಾಯಿತು. ಬೆಳಗಾವಿಯ ಆ ಕಿರಿಯ ವೈದ್ಯರಿಗೆ 17 ವರ್ಷಗಳ ಹಿಂದೆ ಗೋಚರಿಸಿದ್ದ ಸತ್ಯವು ನಮಗೇಕೆ ಗೋಚರಿಸಲಿಲ್ಲ?
ಕೀಮೋ ಕಥನದ ತಿರುಳಾಗಿರುವ ಕ್ಯಾನ್ಸರ್ ರೋಗವು ಸಣ್ಣದಾಗಿ ಒಂದು ಕಣದ ಡಿಎನ್ಎಯಲ್ಲಿ ಸಣ್ಣ ಬಡಲಾವಣೆಯಿಂದ ಶುರುವಾಗಿ ನಿಧಾನಕ್ಕೆ ಬೆಳೆದು ಎಲ್ಲ ಕಡೆ ಹರಡಿ ಕೊನೆಗೆ ಜೀವ ತೆಗೆಯುವ ಹಾಗೆ ವ್ಯಾಪಿಸುತ್ತದೆ. ಸಣ್ಣದಿದ್ದಾಗ, ಕತ್ತರಿಸಬಹುದಾದಾಗ, ಅದನ್ನು ಕತ್ತರಿಸಲೇಬೇಕು. ಅಲ್ಲಿ ಬಾಕಿ ಉಳಿದಿದ್ದನ್ನು ನಾಶ ಮಾಡಲಿಕ್ಕೆ ರೇಡಿಯೇಷನ್ ಕೊಡಬೇಕು, ಅಲ್ಲಿಂದ ಹೊರಗೆ ಹರಡಿದ್ದರೆ ಅದನ್ನೂ ನಾಶ ಮಾಡಲಿಕ್ಕೆ ಕೀಮೋ ಕೊಡಬೇಕು. ಮತೀಯವಾದದ ರೋಗವೂ ಹೀಗೆಯೇ. ಒಬ್ಬಿಬ್ಬರಿಂದ ಶುರುವಾಗಿ ಜೊತೆಗಿದ್ದವರಿಗೆ ಹರಡುತ್ತದೆ, ಈಗ ವಾಟ್ಸಪ್, ಫೇಸ್ಬುಕ್ ಇತ್ಯಾದಿಗಳಲ್ಲಿ, ಮಾರಿಕೊಂಡ ಮಾಧ್ಯಮಗಳಲ್ಲಿ ಇನ್ನಷ್ಟು ಜೋರಾಗಿ ಹರಡುತ್ತಿದೆ. ಒಂದು ಕಾಲಕ್ಕೆ ಶಿಕ್ಷಣ, ಆರೋಗ್ಯ, ಬ್ಯಾಂಕಿಂಗ್ ಇತ್ಯಾದಿಗಳಿಗೆ ಹೆಸರಾಗಿ ಸುದ್ದಿಗಳಲ್ಲಿ ಅವೇ ತುಂಬಿರುತ್ತಿದ್ದ ನಮ್ಮ ಜಿಲ್ಲೆಯಲ್ಲಿ ಈಗ ಕೇವಲ ಮತೀಯವಾದ, ದ್ವೇಷ, ದಾಳಿಗಳು, ಮಂದಿರಗಳು, ಇವೇ ಸುದ್ದಿಗಳಾಗುತ್ತಿವೆ. ಇದಕ್ಕೆ ಎಲ್ಲರೊಂದಾಗಿ ಮದ್ದರೆಯದಿದ್ದರೆ ನಮ್ಮ ಮುಂದಿರುವ ಮಕ್ಕಳಿಗೆ ಅದೆಂಥ ನಾಡನ್ನು ನಾವು ಬಿಟ್ಟು ಹೋಗುತ್ತೇವೆ ಎಂದು ಯೋಚಿಸಬೇಕಿದೆ.
ನಮ್ಮ ಸಾರಾ ಅಬೂಬಕರ್, ನಮ್ಮ ಬಾನು ಮುಷ್ತಾಕ್ ಅವರ ಕೆಲಸಗಳನ್ನು, ಪ್ರಶಸ್ತಿಗಳನ್ನು ಇಡೀ ಕನ್ನಡ ನಾಡು, ಇಡೀ ದೇಶ ಸಂಭ್ರಮಿಸಿದಂತೆಯೇ ನಮ್ಮ ರಲಿಯಾಗೂ ಅಸಂಖ್ಯ ಪ್ರಶಸ್ತಿಗಳು ಬರಲಿ, ನಾವೊಟ್ಟಾಗಿ ಸಂಭ್ರಮಿಸುವಂತಾಗಲಿ.
Leave a Reply