ತಟ್ಟೆಗಳನ್ನು ತಟ್ಟಿದ್ದು ವೈಜ್ಞಾನಿಕ ಸಾಧನೆಗಳನ್ನು ಕುಟ್ಟಿದಂತೆ

ತಟ್ಟೆಗಳನ್ನು ತಟ್ಟಿದ್ದು ವೈಜ್ಞಾನಿಕ ಸಾಧನೆಗಳನ್ನು ಕುಟ್ಟಿದಂತೆ

ಹೊಸತು ಮಾಸ ಪತ್ರಿಕೆ, ಜುಲೈ 2020

ಇಪ್ಪತ್ತೊಂದನೇ ಶತಮಾನದ ಮೂರನೇ ದಶಕದಲ್ಲಿ, ವಿಜ್ಞಾನ-ತಂತ್ರಜ್ಞಾನಗಳು ಎರಡು ತಿಂಗಳಿಗೊಮ್ಮೆ ದುಪ್ಪಟ್ಟಾಗುವ ಕಾಲದಲ್ಲಿ, ತಾವು ಜಗದೇಕ ವೀರರು, ಅಪ್ರತಿಮ ಬುದ್ಧಿವಂತರು, ವಿಶ್ವಕ್ಕೇ ಗುರುಗಳು ಎಂದೆಲ್ಲ ಹೇಳಿಕೊಳ್ಳುವ ನಾಯಕರುಗಳಡಿಯಲ್ಲಿ ಕೆಮ್ಮು-ನೆಗಡಿಗಳನ್ನುಂಟು ಮಾಡುವ ಹೊಸತೊಂದು ಸೋಂಕನ್ನು ನಿಭಾಯಿಸುವಲ್ಲಿ ಬಹುತೇಕ ಎಲ್ಲಾ ದೇಶಗಳೂ ಸೋತು ಹೋಗಿವೆ. ಇದು ಮನುಷ್ಯರು ತಮಗಾಗಿ ಕಟ್ಟಿಕೊಂಡಿರುವ ವ್ಯವಸ್ಥೆಯ ಘೋರ ಅಣಕವಷ್ಟೇ ಅಲ್ಲ, ಮುಂಬರಲಿರುವ ಆಪತ್ತುಗಳ ಸೂಚನೆಯೂ ಆಗಿದೆ. ಒಂದು ಸರಳವಾದ ಸೋಂಕನ್ನು ನಿಭಾಯಿಸುವಲ್ಲಿ ಹೀಗೆ ಬಲು ಕೆಟ್ಟದಾಗಿ ಸೋತಿರುವ ನಾವು, ಬರಲಿರುವ ಮಹಾ ವಿಪತ್ತುಗಳನ್ನು ಎದುರಿಸಲು ಸಾಧ್ಯವಾದೀತೇ?

ಆರು ತಿಂಗಳ ಹಿಂದೆ ಚೀನಾದ ವುಹಾನ್ ನಗರದಲ್ಲಿ ಕಾಣಿಸಿಕೊಂಡ ಈ ಹೊಸ ಕೊರೊನಾ ವೈರಸ್ ಸೋಂಕನ್ನು ನಿಭಾಯಿಸುವಲ್ಲಿ ಒಂದೊಂದು ದೇಶಗಳು ಒಂದೊಂದು ವಿಧಾನವನ್ನು ಅನುಸರಿಸಿವೆ. ರೋಗ ನಿಯಂತ್ರಣಕ್ಕೆ ಇಡೀ ವಿಶ್ವಕ್ಕೆ ಮಾರ್ಗದರ್ಶನ ನೀಡುತ್ತಿದ್ದ, ನೀಡಬೇಕಾಗಿದ್ದ ವಿಶ್ವ ಆರೋಗ್ಯ ಸಂಸ್ಥೆ, ಅಮೆರಿಕಾದ ರೋಗ ನಿಯಂತ್ರಣ ಕೇಂದ್ರ ಮುಂತಾದ ಅತ್ಯುನ್ನತ ಸಂಸ್ಥೆಗಳು ಎಲ್ಲ ಬಗೆಯ ಒತ್ತಡಗಳಿಗೆ ಸಿಲುಕಿ ಸೋಂಕಿನ ನಿಭಾವಣೆಯನ್ನು ಇನ್ನಷ್ಟು ಗೊಂದಲಮಯಗೊಳಿಸಿವೆ.

ಹತ್ತು ವರ್ಷಗಳ ಹಿಂದೆ ಹೊಸ ಫ್ಲೂ ಹರಡತೊಡಗಿದಾಗ ಇವೇ ಸಂಸ್ಥೆಗಳು ವಿಪರೀತವಾದ ಭಯವನ್ನು ಹುಟ್ಟಿಸಿದ್ದವು. ಆಗಲೂ, ನಮ್ಮ ದೇಶದಲ್ಲೂ ಕೂಡ, ಎಲ್ಲಾ ವಿಮಾನ ನಿಲ್ದಾಣಗಳಲ್ಲಿ, ರೈಲು-ಬಸ್ಸು ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ಪರೀಕ್ಷಿಸಲು ವೈದ್ಯರನ್ನೂ, ಆರೋಗ್ಯ ಕರ್ಮಿಗಳನ್ನೂ ಎಂಟೊಂಬತ್ತು ತಿಂಗಳವರೆಗೆ ನಿಯೋಜಿಸಲಾಗಿತ್ತು, ಎಲ್ಲರಿಗೂ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಘೋಷಿಸಲಾಗಿತ್ತು. ಆದರೆ ಆಗಿನ ಸರಕಾರ ಬೇರೆಯಿತ್ತು. ಇಂತಹಾ ಪರೀಕ್ಷೆಗಳಿಗೆ ಲಕ್ಷಗಟ್ಟಲೆ ಕೋಟಿ ವೆಚ್ಚವಾಗುತ್ತವೆ, ಅವುಗಳ ಅಗತ್ಯವೂ ಇಲ್ಲ ಎಂದು ತಜ್ಞರು ಮನವರಿಕೆ ಮಾಡಿಕೊಟ್ಟೊಡನೆ ವಿವೇಕದಿಂದ ನಿರ್ಣಯವನ್ನು ಬದಲಿಸಿ, ತೀವ್ರ ಸಮಸ್ಯೆಯುಳ್ಳವರಿಗಷ್ಟೇ ಪರೀಕ್ಷೆಗಳನ್ನು ನಡೆಸಿದರೆ ಸಾಕೆಂದು ಹೇಳಲಾಗಿತ್ತು. ಕ್ರಮೇಣ ಫ್ಲೂ ಬಗ್ಗೆ ಹುಟ್ಟಿಸಲಾಗಿದ್ದ ಭೀತಿಯೂ ಕರಗಿತು, ಲಸಿಕೆಗಳು ಭಾರತಕ್ಕೆ ಬಂದರೂ ಯಾರಿಗೂ ಬೇಡವಾದವು.

ದಶಕದ ಬಳಿಕ ಹೊಸ ಕೊರೋನಾ ಸೋಂಕು ಕಂಡುಬಂದಿರುವಾಗ ವಿಜ್ಞಾನ ಮತ್ತು ತಂತ್ರಜ್ಞಾನಗಳಲ್ಲಿ ಅಭೂತಪೂರ್ವ ಬೆಳವಣಿಗೆಗಳೂ ಆಗಿವೆ. ಆಧುನಿಕ ವೈದ್ಯ ವಿಜ್ಞಾನ, ತಳಿ ತಂತ್ರಜ್ಞಾನ, ಔಷಧ ಹಾಗೂ ಲಸಿಕೆಗಳ ತಂತ್ರಜ್ಞಾನ, ಸಂಪರ್ಕ ಮತ್ತು ನಿಗಾವಣೆಯ ತಂತ್ರಜ್ಞಾನಗಳು, ಮಾಹಿತಿ ತಂತ್ರಜ್ಞಾನ ಇತ್ಯಾದಿಗಳೆಲ್ಲವನ್ನೂ ಹೊಸ ಕೊರೋನಾ ಸೋಂಕಿಗಾಗಿ ಬಳಸಲಾಗಿದೆ, ಅದಕ್ಕಾಗಿಯೇ ಅನೇಕ ಹೊಸ ತಂತ್ರಗಳನ್ನು ರೂಪಿಸಿದ್ದೂ ಆಗಿದೆ. ಇವುಗಳ ನೆರವಿನಿಂದ ಸೋಂಕು ಗೋಚರಿಸಿದ ಕೆಲವೇ ವಾರಗಳಲ್ಲಿ ಹೊಸ ಕೊರೋನಾ ವೈರಸ್ ಅದೆಂದು ಗುರುತಿಸಲು ಸಾಧ್ಯವಾಗಿದೆ, ರೋಗದ ಎಲ್ಲ ಆಯಾಮಗಳನ್ನೂ, ಅತಿ ಸೂಕ್ಷ್ಮವಾದ ವಿವರಗಳನ್ನೂ ಅತಿ ಬೇಗನೆ ಅರಿತುಕೊಳ್ಳಲು ಸಾಧ್ಯವಾಗಿದೆ, ಬೇರೆ ಬೇರೆ ದೇಶಗಳಿಗೆ ಹರಡಿದಾಗ ಅಲ್ಲೆಲ್ಲ ಸೋಂಕಿನ ಸ್ವರೂಪವು ಹೇಗಿತ್ತೆನ್ನುವುದನ್ನು ದಾಖಲಿಸಿ ವಿಶ್ಲೇಷಿಸುವುದಕ್ಕೆ ಸಾಧ್ಯವಾಗಿದೆ, ರೋಗದ ಚಿಕಿತ್ಸೆಗೆ ಸೂಕ್ತವಾದ ಔಷಧಗಳನ್ನು ಹುಡುಕುವುದಕ್ಕೆ, ಹೊಸತನ್ನು ಅಭಿವೃದ್ಧಿಪಡಿಸುವುದಕ್ಕೆ, ವೈರಸ್‌ನ ತಳಿಯನ್ನು ವಿಷದವಾಗಿ ತಿಳಿಯುವುದಕ್ಕೆ, ಅದರಲ್ಲುಂಟಾಗುತ್ತಿರುವ ಬದಲಾವಣೆಗಳನ್ನು ಆಗಿಂದಾಗಲೇ ಗುರುತಿಸುವುದಕ್ಕೆ, ಹೊಸ ಲಸಿಕೆಗಳನ್ನು ರೂಪಿಸಿ ಪ್ರಯೋಗಿಸುವುದಕ್ಕೆ ಸಾಧ್ಯವಾಗಿದೆ. ಸೋಂಕನ್ನು ನಿಯಂತ್ರಿಸುವುದಕ್ಕೆ ಸೋಂಕಿತರ ಮೇಲೆ ಮೇಲೆ ನಿಗಾವಹಿಸುವುದಕ್ಕೂ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಲಾಗಿದ್ದು, ಆ ಮೂಲಕ ಸಾಮಾನ್ಯ ಜನರ ಖಾಸಗಿ ವಿವರಗಳಿಗೆ ಕನ್ನ ಹಾಕುವುದಕ್ಕೂ ಹಲವು ಸರಕಾರಗಳು ಪ್ರಯತ್ನಿಸಿವೆ. ವೈದ್ಯಕೀಯ ವಿಜ್ಞಾನದ ಪತ್ರಿಕೆಗಳು ಹೊಸ ಕೊರೋನಾ ಸೋಂಕಿನ ಕುರಿತಾದ ಸಂಶೋಧನೆಗಳನ್ನು ಅತಿ ತ್ವರಿತವಾಗಿ ಪ್ರಕಟಿಸಿವೆ. ಸಮೂಹ ಮಾಧ್ಯಮಗಳಂತೂ ಸೋಂಕಿನ ಮಾಹಿತಿಯನ್ನು ಜನರಿಗೆ ಬಿತ್ತರಿಸುವುದರಲ್ಲಿ ನಾಟಕೀಯವಾದ, ಅತಿರೇಕದ ವಿಧಾನಗಳನ್ನೆಲ್ಲ ಬಳಸಿಕೊಂಡಿವೆ. ಬಹುಷಃ ಒಂದು ಸೋಂಕಷ್ಟೇ ಅಲ್ಲ, ಈ ವಿಶ್ವಕ್ಕೂ, ಮನುಕುಲಕ್ಕೂ ಸಂಬಂಧಿಸಿದ ಯಾವುದೇ ವಿಷಯದ ಬಗ್ಗೆ ಇಷ್ಟೊಂದು ವಿಶ್ವವ್ಯಾಪಿಯಾಗಿ, ಇಷ್ಟೊಂದು ಧಾವಂತದಿಂದ, ಎಲ್ಲಾ ದೇಶಗಳು ಮತ್ತು ಕಾರ್ಯಕ್ಷೇತ್ರಗಳು, ಎಲ್ಲಾ ತಂತ್ರಜ್ಞಾನಗಳನ್ನೂ ಗರಿಷ್ಠವಾಗಿ ಬಳಸಿಕೊಂಡು ಜೊತೆಜೊತೆಯಾಗಿ ಕಾರ್ಯಾಚರಿಸಿದ್ದು ಇದೇ ಮೊದಲಿರಬಹುದು.

ಆದರೆ ವಿಜ್ಞಾನ ತಂತ್ರಜ್ಞಾನಗಳ ಈ ಬೆಳವಣಿಗೆಗಳು ಮತ್ತು ಮಾಹಿತಿಯ ಮಹಾಪೂರವು ನಮ್ಮಲ್ಲಿ ಹೊಸ ವಿವೇಕವನ್ನು, ಜಾಣ್ಮೆಯನ್ನು ಮೂಡಿಸಿದಂತೆ ಕಾಣುವುದಿಲ್ಲ. ಹೇರಳವಾಗಿ ರಾಶಿ ಬೀಳುತ್ತಿರುವ ಮಾಹಿತಿಯು ಅಷ್ಟೇ ಆಗಿ ಉಳಿದಿದ್ದು, ಅರಿವಿನ ಆಳ-ಅಗಲಗಳನ್ನು ವಿಸ್ತರಿಸಿದಂತೆ ಕಾಣುವುದಿಲ್ಲ; ಬದಲಿಗೆ ಕಾಳುಗಳ ಸುತ್ತ ಜೊಳ್ಳುಗಳ ರಾಶಿಯೇ ಬೆಳೆದಂತೆ, ವಿವೇಕವನ್ನು ಮರೆಸಿ ಮೌಢ್ಯವೇ ಬೆಳೆದಂತೆ ಆಗಿದೆ.

ಹೊಸ ಕೊರೋನಾ ಸೋಂಕಿನ ನಿಯಂತ್ರಣಕ್ಕೆ ಕೇಂದ್ರದಲ್ಲೂ, ಒಂದೊಂದು ರಾಜ್ಯ, ಒಂದೊಂದು ಜಿಲ್ಲೆಯಲ್ಲೂ ಪ್ರತಿನಿತ್ಯ ಬಗೆಬಗೆಯ ವ್ಯವಸ್ಥೆಗಳಾಗುತ್ತಿರುವುದನ್ನು ನೋಡುತ್ತಿರುವಾಗ, ಕೊರೋನಾ ನಿಯಂತ್ರಣದಲ್ಲಿ ವೈಜ್ಞಾನಿಕ ವಿಧಾನಗಳು ಮೂಲೆಗುಂಪಾಗಿರುವುದು ಸ್ಪಷ್ಟವಾಗಿದೆ. ಈ ಅನಿಶ್ಚಿತತೆಯಿಂದಾಗಿ ದೇಶದಾದ್ಯಂತ ಕೊರೋನಾ ಸೋಂಕಿನ ಬಗ್ಗೆ ವಿಪರೀತವಾದ ಭೀತಿಯು ಹರಡುವಂತಾಗಿದೆ, ಕೊರೋನಾ ಸೋಂಕನ್ನು ಅತಿ ಭೀಕರ ಕಾಯಿಲೆಯೆಂಬಂತೆ ಬಿಂಬಿಸುವ ಸುದ್ದಿಗಳು ಮಾಧ್ಯಮಗಳಲ್ಲಿ ಲಂಗುಲಗಾಮಿಲ್ಲದೆ ಬಿತ್ತರಗೊಳ್ಳುವಂತಾಗಿದೆ, ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳುಗಳು ಮತ್ತು ಭಯ ಹುಟ್ಟಿಸುವ ಮಾಹಿತಿಗಳು ಎಗ್ಗಿಲ್ಲದೆ ಪ್ರಚಾರವಾಗುವಂತಾಗಿದೆ, ಇವುಗಳ ಗದ್ದಲದಲ್ಲಿ, ಜೊತೆಗೆ ಸ್ಥಾಪಿತ ಹಿತಾಸಕ್ತಿಗಳ ಕುತಂತ್ರಗಳಲ್ಲಿ ಸರಕಾರವೂ ಒತ್ತಡಕ್ಕೆ ಸಿಲುಕಿ, ಅದರ ನಿರ್ಧಾರಗಳು ಇನ್ನಷ್ಟು ಗೊಂದಲಮಯವೂ, ಅವೈಜ್ಞಾನಿಕವೂ ಆಗುವಂತಾಗಿದೆ.

ಹತ್ತು ವರ್ಷಗಳ ಹಿಂದೆ ಫ್ಲೂ ಬಗ್ಗೆ ಹೀಗೆಯೇ ಭಯ ಹುಟ್ಟಿಸಿದ್ದಾಗಲೂ ವಿಮಾನ, ರೈಲು, ಬಸ್ಸು ಯಾನಗಳನ್ನೆಲ್ಲ ತಿಂಗಳುಗಟ್ಟಲೆ ರದ್ದು ಮಾಡಿರಲಿಲ್ಲ. ಆದರೆ ಈ ಬಾರಿ, ಹೊಸ ಜ್ಞಾನದ ಬಲದಲ್ಲಿ ನಾವು ಹೆಚ್ಚು ಜಾಣರಾಗಿರಬೇಕಾಗಿದ್ದಾಗ, ಹೊಸ ಕೊರೋನಾ ಸೋಂಕಿನ ಹೆಸರಲ್ಲಿ ವಿಶ್ವದಾದ್ಯಂತ ಅಂತರರಾಷ್ಟ್ರೀಯ ವಿಮಾನ ಯಾನವನ್ನೆಲ್ಲ ರದ್ದು ಮಾಡಲಾಯಿತು, ಹಲವು ದೇಶಗಳಲ್ಲಿ ರೈಲು, ಮೆಟ್ರೋ ಯಾನಗಳನ್ನೂ ರದ್ದು ಮಾಡಲಾಯಿತು. ನಮ್ಮ ದೇಶದಲ್ಲಿ ಇನ್ನೂ ಮುಂದೆ ಹೋಗಿ ವಾರಗಳ ಕಾಲ ವಿಮಾನ, ರೈಲು, ಮೆಟ್ರೋ, ಬಸ್ಸು, ಕಾರು, ತ್ರಿಚಕ್ರ, ದ್ವಿಚಕ್ರ ಎಲ್ಲಾ ವಾಹನಗಳನ್ನು ಯಾವ ಮುನ್ಸೂಚನೆಯನ್ನೂ ನೀಡದೆ ಒಮ್ಮಿಂದೊಮ್ಮೆಗೇ ಸ್ಥಬ್ಧಗೊಳಿಸಲಾಯಿತು. ಜೊತೆಗೆ ಎಲ್ಲಾ ಕಾರ್ಖಾನೆಗಳು, ಉದ್ದಿಮೆಗಳು, ಮಾಲ್‌ಗಳು, ಸಿನಿಮಾ ಮಂದಿರಗಳು, ಶಾಲೆ-ಕಾಲೇಜುಗಳು, ಕಚೇರಿಗಳು, ಮದುವೆ-ಮುಂಜಿ ಇತ್ಯಾದಿ ಸಮಾರಂಭಗಳು, ಸಭೆ-ಸಮಾವೇಶಗಳು, ದೇವಾಲಯಗಳು ಎಲ್ಲವನ್ನೂ ಮುಚ್ಚಲಾಯಿತು.

ಆದರೆ ಹೆಚ್ಚಿನ ದೇಶಗಳಲ್ಲಿ ಇಂಥ ಕಠಿಣವಾದ ನಿರ್ಧಾರಗಳು ಪ್ರಶ್ನಿಸಲ್ಪಡಲೇ ಇಲ್ಲ ಎನ್ನುವುದು ಮನುಕುಲದ ಗತಿ ಏನಾಗಿಬಿಟ್ಟಿದೆ ಎನ್ನುವುದನ್ನು ಸ್ಪಷ್ಟವಾಗಿ ಬಿಂಬಿಸುತ್ತದೆ! ಹತ್ತು ವರ್ಷಗಳ ಹಿಂದೆ ಹೆಚ್1 ಎನ್1 ಫ್ಲೂ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳನ್ನು ಪ್ರಶ್ನಿಸುವುದಕ್ಕೆ ಭಯ ಪಡಬೇಕಾದ ಸನ್ನಿವೇಶವಿರಲಿಲ್ಲ; ಹಾಗೆ ಪ್ರಶ್ನಿಸಿದವರನ್ನು ಅಥವಾ ವಿರೋಧಿಸಿದವರನ್ನು ಬೆದರಿಸುವ, ಹೀಗಳೆಯುವ, ಮಾಧ್ಯಮಗಳಲ್ಲಿ ಮಾನಗೆಡಿಸಲೆತ್ನಿಸುವ, ಪೋಲೀಸ್ ಠಾಣೆಗಳಲ್ಲಿ ದೂರಿಗೆ ಒಳಪಡಿಸುವ ಸ್ಥಿತಿಯಂತೂ ಇರಲೇ ಇಲ್ಲ. ಬಹುಷಃ ಅದೇ ಕಾರಣಕ್ಕೋ ಏನೋ, ಆಗಿನ ನಿರ್ಧಾರಗಳು ಕೂಡಲೇ ಪ್ರಶ್ನಿಸಲ್ಪಟ್ಟು, ವಿಮರ್ಶಿಸಲ್ಪಟ್ಟು, ಹಲವು ನಿರ್ಣಯಗಳು ಸರ್ಕಾರಗಳಿಂದ ಹಿಂದೆಗೆಯಲ್ಪಟ್ಟವು. ಈಗಿನ ಪರಿಸ್ಥಿತಿ ಭಿನ್ನವಾಗಿರುವುದರಿಂದ ವೈಜ್ಞಾನಿಕವಾಗಿ, ವೈಚಾರಿಕವಾಗಿ ಸಲಹೆಗಳನ್ನು ನೀಡಬಯಸುವವರು ತೆಪ್ಪಗಿರುವುದೇ ಹೆಚ್ಚಾಗಿದೆ. ಹಾಗೊಂದು ವೇಳೆ ಯಾರಾದರೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರೆ ಸರಕಾರಗಳು ಅವನ್ನು ಪರಿಗಣಿಸುವ ಸಾಧ್ಯತೆಗಳೂ ಅತಿ ಕ್ಷೀಣವಾಗಿಬಿಟ್ಟಿವೆ. ಆಳುವವರು ಆಡಿಸಿದಂತೆ ಎಲ್ಲರೂ ಆಡುವುದೇ ಕಾಣಿಸುತ್ತಿದೆ.

ಹೊಸ ಕೊರೋನಾ ಸೋಂಕಿನ ಬಗ್ಗೆ ಈ ಐದು ತಿಂಗಳ ಅವಧಿಯಲ್ಲಿ ಸುಮಾರು 20000ದಷ್ಟು ಸಂಶೋಧನಾ ಬರಹಗಳು ವಿಶ್ವದ ಎಲ್ಲಾ ಪ್ರತಿಷ್ಠಿತ ವಿದ್ವತ್ ಪತ್ರಿಕೆಗಳಲ್ಲಿ ಪ್ರಕಟವಾಗಿ ದಾಖಲೆಯನ್ನೇ ಮಾಡಿವೆ. ಇವು ಕೊರೋನಾ ಸೋಂಕಿನ ಬಗ್ಗೆ ವೈದ್ಯಕೀಯ ವಲಯಕ್ಕೂ, ಇತರೆಲ್ಲರಿಗೂ ಮಾಹಿತಿಯನ್ನೊನೊದಗಿಸುವಲ್ಲಿ ನೆರವಾಗಿವೆಯಾದರೂ, ಇಷ್ಟೊಂದು ಲೇಖನಗಳು ಪ್ರಕಟವಾದುದರಿಂದ ಕಾಳು-ಜೊಳ್ಳುಗಳನ್ನು ಪ್ರತ್ಯೇಕಿಸುವ ಕಷ್ಟದ ಜೊತೆಗೆ ಹಲಬಗೆಯ ಗೊಂದಲಗಳಿಗೂ, ಅನಿಶ್ಚಿತತೆಗಳಿಗೂ ಕಾರಣವಾಗಿದೆ. ಅವನ್ನು ಪ್ರಕಟಿಸುವಲ್ಲಿ ಹಲವಾರು ಎಡವಟ್ಟುಗಳಾಗಿರುವ ಬಗ್ಗೆ ಆತಂಕಕಾರಿಯಾದ ವಿವರಗಳೀಗ ಹೊರಬರುತ್ತಿವೆ. ಕೊರೋನಾ ಸಂಶೋಧನೆ/ಅಧ್ಯಯನದ ಹೆಸರಲ್ಲಿ ಸಲ್ಲಿಸಿದ ಬರಹಗಳನ್ನು ಎಂದಿನಂತೆ ಕಠಿಣವಾದ ವಿಮರ್ಶೆಗಳಿಗೆ ಒಳಪಡಿಸದೆ ತರಾತುರಿಯಿಂದ ಪ್ರಕಟಿಸಿ ವಿಜ್ಞಾನಲೋಕಕ್ಕೆ ಅಪಚಾರವೆಸಗಲಾಗಿದೆ ಎಂಬ ಆಪಾದನೆಗಳೀಗ ದಟ್ಟವಾಗುತ್ತಿವೆ. ಪ್ರತಿಷ್ಠಿತವೆನಿಸಿದ್ದ, ವಿಶ್ವಾಸಾರ್ಹವೆನಿಸಿದ್ದ, ಒಂದೆರಡು ಶತಮಾನಗಳಿಂದ ಪ್ರಕಟಗೊಳ್ಳುತ್ತಿರುವ ವೈದ್ಯಕೀಯ ಪತ್ರಿಕೆಗಳೂ ಕೂಡ ಈ ಸ್ಪರ್ಧೆಗೆ ಸಿಕ್ಕಿ ಎಡವಿ ಬಿದ್ದಿವೆ. ಕೊರೋನಾ ಚಿಕಿತ್ಸೆಯಲ್ಲಿ ಹೈಡ್ರೋಕ್ಸಿ ಕ್ಲೋರೋಕ್ವಿನ್ ಔಷಧದ ಉಪಯುಕ್ತತೆಯ ಬಗ್ಗೆ, ಕೊರೋನಾ ಸೋಂಕಿನಿಂದ ಸಾವುಗಳಾಗುತ್ತಿರುವ ಬಗ್ಗೆ ಅತ್ಯಂತ ಹಳೆಯ ವೈದ್ಯಕೀಯ ಪತ್ರಿಕೆಗಳಾದ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ಮತ್ತು ದಿ ಲಾನ್ಸೆಟ್‌ಗಳಲ್ಲಿ ಪ್ರಕಟಗೊಂಡು ಎರಡು ಬರಹಗಳು ಬಹಳಷ್ಟು ಸುದ್ದಿಯಾಗಿದ್ದವು; ಆದರೆ ಅವುಗಳಲ್ಲಿದ್ದ ಲೋಪಗಳೂ, ಮೋಸದಾಟಗಳೂ ಎರಡೇ ವಾರಗಳಲ್ಲಿ ಬಯಲಾಗಿ, ಆ ಬರಹಗಳನ್ನು ಹಿಂಪಡೆಯಬೇಕಾಗಿ ಬಂದದ್ದು ನಿಜಕ್ಕೂ ಶೋಚನೀಯವಾಗಿದೆ.

ಇಂತಹ ಇನ್ನೂ ಕೆಲವು ಅಧ್ಯಯನಗಳು ಮತ್ತು ಪ್ರಕಟಣೆಗಳ ಹಿಂದೆ ಸ್ಥಾಪಿತ ಹಿತಾಸಕ್ತಿಗಳ ಪ್ರಭಾವಗಳಿರುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು. ಹೆಚ್1 ಎನ್1 ಫ್ಲೂ ಹರಡಿದಾಗ ಅದರ ಚಿಕಿತ್ಸೆಗಾಗಿ ಒಸೆಲ್ಟಾಮಿವಿರ್ ಎಂಬ ಔಷಧವನ್ನು ಮುಂದೊತ್ತಲಾಗಿತ್ತು, ಫ್ಲೂ ಲಸಿಕೆಗಳ ಬಗ್ಗೆ ಅಬ್ಬರದ ಪ್ರಚಾರವನ್ನೂ ನಡೆಸಲಾಗಿತ್ತು. ಈಗ ಹೊಸ ಕೊರೋನಾ ಸೋಂಕಿಗಿದಿರಾಗಿಯೂ ಹಲಬಗೆಯ ಔಷಧಗಳ ಬಗ್ಗೆ ಪ್ರಚಾರ ನಡೆಸಲಾಗುತ್ತಿದೆ, ಲಸಿಕೆಗಳನ್ನು ಅಭಿವೃದ್ಧಿ ಪಡಿಸುವ ಬಗ್ಗೆ ನಿತ್ಯವೂ ಸುದ್ದಿ ಮಾಡಲಾಗುತ್ತಿದೆ, ಇವುಗಳ ಹಿಂದಿರುವ ದೈತ್ಯ ಕಂಪೆನಿಗಳ ಮೌಲ್ಯವು ಈ ಸುದ್ದಿಗಳ ಆಧಾರದಲ್ಲೇ ಮೇಲಕ್ಕೆ ಜಿಗಿಯತೊಡಗಿವೆ.

ವಿಶ್ವ ಆರೋಗ್ಯ ಸಂಸ್ಥೆ, ಅಮೆರಿಕದ ರೋಗ ನಿಯಂತ್ರಣ ಕೇಂದ್ರ (ಸಿ.ಡಿ.ಸಿ.) ಗಳಂತಹ ಉನ್ನತ ಸಂಸ್ಥೆಗಳು ಕೂಡ ಕೊರೋನಾ ವೈರಸ್‌ನ ಬಗ್ಗೆ, ಅದರ ಹರಡುವಿಕೆಯ ಬಗ್ಗೆ, ಚಿಕಿತ್ಸೆಯ ಬಗ್ಗೆ ಮತ್ತು ನಿಯಂತ್ರಣೋಪಾಯಗಳ ಬಗ್ಗೆ ಪದೇ ಪದೇ ತಮ್ಮ ನಿಲುವುಗಳನ್ನು ಬದಲಿಸುತ್ತಿರುವುದರಿಂದ ಅನಿಶ್ಚಿತತೆಗಳಿಗೂ, ಸಂದೇಹಗಳಿಗೂ ಇಂಬು ನೀಡಿದಂತಾಗಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವ ಆರೋಗ್ಯ ಸಂಸ್ಥೆಯ ಮೇಲೆ ಬಗೆಬಗೆಯ ಆರೋಪಗಳನ್ನು ಮಾಡಿ, ಅದಕ್ಕೆ ನೀಡುತ್ತಿದ್ದ 3000 ಕೋಟಿ ಡಾಲರ್ ವಾರ್ಷಿಕ ಧನಸಹಾಯವನ್ನು ನಿಲ್ಲಿಸುವ ಬೆದರಿಕೆಯೊಡ್ಡಿದ್ದು, ಇತರ ಕೆಲವು ದೇಶಗಳೂ, ಮಾಧ್ಯಮಗಳೂ ವಿಶ್ವ ಆರೋಗ್ಯ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದು, ಮಾಧ್ಯಮ ಗೋಷ್ಠಿಗಳಲ್ಲೂ ಅದರ ಉನ್ನತ ಅಧಿಕಾರಿಗಳನ್ನು ತುಚ್ಛೀಕರಿಸಿದ್ದು, ಅಮೆರಿಕದ ಅಧ್ಯಕ್ಷರೇ ತಮ್ಮದೇ ದೇಶದ ಅತಿ ಪ್ರತಿಷ್ಠಿತ ಸಂಸ್ಥೆಗಳಾದ ಸಿ.ಡಿ.ಸಿ. ಮತ್ತು ಕೇಂದ್ರೀಯ ಔಷಧ ಸಂಸ್ಥೆ (ಎಫ್ ಡಿ ಎ) ಗಳನ್ನು ಮಾನಗೆಡಿಸಿ ಬದಿಗೊತ್ತಿದ್ದು ವೈಜ್ಞಾನಿಕ ಸತ್ಯಗಳ ಗತಿಯೇನೆಂಬುದನ್ನು ಜಗತ್ತಿಗೇ ತೋರಿಸಿಕೊಟ್ಟಿವೆ. ನಮ್ಮ ದೇಶದಲ್ಲೂ ಕೂಡ ಐಸಿಎಂಆರ್ ನಂತಹ ಸಂಸ್ಥೆಗಳು ಆರಂಭದಲ್ಲಿ ನೀಡಿದ್ದ ಸಲಹೆಗಳನ್ನು ಅಲ್ಲಿಗೇ ಮುಚ್ಚಿ ಹಾಕುವಂತಾಯಿತು; ಪ್ರಧಾನಮಂತ್ರಿಗಳೂ, ಕೇಂದ್ರ ಸರಕಾರವೂ, ಕೆಲವೊಂದು ರಾಜ್ಯ ಸರ್ಕಾರಗಳೂ ಕೈಗೊಂಡ ನಿರ್ಧಾರಗಳನ್ನು ಹಾಗೂ ಹೀಗೂ ಸಮರ್ಥಿಸಲು ವೈದ್ಯಕೀಯ ಸಂಘಟನೆಗಳೂ, ಕೆಲವು ವಿಜ್ಞಾನಿಗಳೆನಿಸಿಕೊಂಡವರೂ ಏನೇನೋ ಲೆಕ್ಕಾಚಾರಗಳನ್ನು ಮುಂದಿಟ್ಟರು, ಅವು ತಲೆಕೆಳಗಾದಾಗ ಇನ್ನಷ್ಟು ಲೆಕ್ಕಗಳನ್ನು ತಂದರು. ಈ ಲೆಕ್ಕಾಚಾರಗಳು ಜನರ ದಿಕ್ಕುತಪ್ಪಿಸಿ ಇನ್ನಷ್ಟು ಹಾನಿಯುಂಟುಮಾಡಬಹುದೆಂಬ ಪ್ರಜ್ಞೆಯೂ ಇವರಾರಿಗೂ ಇಲ್ಲವಾಯಿತು.

ವೈದ್ಯರು ಮತ್ತು ವೈದ್ಯಕೀಯ ವಿಜ್ಞಾನಿಗಳು ತಮ್ಮ ಕ್ಷೇತ್ರವನ್ನು ದುಡ್ಡಿನ ಅಡಿಯಾಳಾಗಿಸಿ, ಆಳುತ್ತಿರುವವರೆದುರು ನಡು ಬಗ್ಗಿಸಿಕೊಂಡದ್ದು ಇದೇ ಮೊದಲಲ್ಲ, ಬಹಳ ಕಾಲವೇ ಯಿತು. ವಿಶ್ವ ಆರೋಗ್ಯ ಸಂಸ್ಥೆ, ಸಿ.ಡಿ.ಸಿ. ಇತ್ಯಾದಿಗಳ ನಡವಳಿಕೆಗಳು ಕೂಡ ಈ ಶರಣಾಗತಿಯ ಭಾಗಗಳೇ ಆಗಿವೆ. ಹೆಚ್1 ಎನ್1 ಫ್ಲೂ ವಿಚಾರದಲ್ಲೂ ಹೆಚ್ಚಿನ ವೈದ್ಯರು ಮತ್ತು ವೈದ್ಯಕೀಯ ಸಂಘಟನೆಗಳು ಸಾಕ್ಷ್ಯಾಧಾರಿತವಾಗಿ ವರ್ತಿಸಲಿಲ್ಲ; ಜನರಿಗೆ ವಸ್ತುನಿಷ್ಠ ಮಾಹಿತಿಯನ್ನು ತಿಳಿಸುವಲ್ಲಿ, ಬೇಕು-ಬೇಡಗಳ ಬಗ್ಗೆ, ಪರೀಕ್ಷೆ, ಚಿಕಿತ್ಸೆ ಮತ್ತು ಲಸಿಕೆಗಳ ಅಗತ್ಯಗಳ ಬಗ್ಗೆ ವಿವರಿಸುವಲ್ಲಿ ಉತ್ಸುಕತೆಯನ್ನು ತೋರಲಿಲ್ಲ; ಸರಕಾರಗಳಿಗೆ ವೈಜ್ಞಾನಿಕವಾದ ಮಾರ್ಗದರ್ಶನವನ್ನು ಮಾಡುವ ಬದ್ಧತೆಯನ್ನೂ ತೋರಲಿಲ್ಲ. ಈಗ ಹೊಸ ಕೊರೋನಾ ಸೋಂಕನ್ನು ನಿಯಂತ್ರಿಸುವ, ನಿಭಾಯಿಸುವ ವಿಚಾರದಲ್ಲೂ ವೈದ್ಯಕೀಯ ಸಮುದಾಯದ ದೌರ್ಬಲ್ಯಗಳು ಮತ್ತೊಮ್ಮೆ ಎದ್ದು ತೋರಿವೆ, ತಾವು ಪಾಲಿಸುವ ವಿಜ್ಞಾನದ ಆದರ್ಶಗಳನ್ನು ಎತ್ತಿ ಹಿಡಿಯುವುದಕ್ಕಿಂತ ಆಡಿಸುತ್ತಿರುವವರ, ಆಳುತ್ತಿರುವವರ ಮುಂದೆ ಮಂಡಿಯೂರುವುದೇ ವೃತ್ತಿಧರ್ಮವೆಂದು ಭಾವಿಸಿದಂತಿದೆ. ಅಮೆರಿಕಾದ ಕೊರೋನಾ ಕಾರ್ಯಪಡೆಗೆ ಸಲಹೆಗಾರರಾಗಿ ನಿಯುಕ್ತರಾಗಿದ್ದ ರಿಕ್ ಬ್ರೈಟ್, ಆಂಥನಿ ಫೌಚಿ ಅವರಂಥ ಹಿರಿಯ ವಿಜ್ಞಾನಿಗಳನ್ನೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಡೆಗಣಿಸಿ ದೂರ ಸರಿಸಿದರೆಂದರೆ ವೈದ್ಯ ವಿಜ್ಞಾನಗಳಿಗೆ ಈ ಕಾಲದಲ್ಲಿ ಬೆಲೆಯೆಷ್ಟೆನ್ನುವುದು ತಿಳಿಯುತ್ತದೆ. ನಮ್ಮ ದೇಶದಲ್ಲಿಯೂ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್)ಯ ವಿಜ್ಞಾನಿಗಳು, ಸಮುದಾಯ ಆರೋಗ್ಯ ತಜ್ಞರು, ರೋಗ ಪ್ರಸರಣ ನಿಯಂತ್ರಣ ತಜ್ಞರು, ಕೊರೋನಾ ಕಾರ್ಯಪಡೆಯ ತಜ್ಞರು ತಮಗನಿಸಿದ್ದನ್ನು ಹೇಳಲಾಗದಂತಾಯಿತು, ಧೈರ್ಯದಿಂದ ಹೇಳಿದವರ ಅಭಿಪ್ರಾಯಗಳಿಗೂ ಬೆಲೆಯಿಲ್ಲವಾಯಿತು. ವೈದ್ಯಕೀಯ ವಿಜ್ಞಾನಿಗಳು ಮತ್ತು ವಿಶೇಷಜ್ಞರ ಗತಿ ಹೀಗಾದರೆ, ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವ ವೈದ್ಯರನ್ನು ಪ್ರತಿನಿಧಿಸುವ ಭಾರತೀಯ ವೈದ್ಯಕೀಯ ಸಂಘ (ಐಎಂಎ), ಭಾರತದ ತಜ್ಞ ವೈದ್ಯರ ಸಂಘ (ಎಪಿಐ) ಮುಂತಾದವು ಸರಕಾರ ಹೇಳಿದ್ದಕ್ಕೆಲ್ಲ ತಲೆಯಾಡಿಸಿ, ಸರಕಾರದ ನಿರ್ಧಾರಗಳು ಅವೈಜ್ಞಾನಿಕವೂ, ಅನುಚಿತವೂ ಆಗಿದ್ದಾಗಲೂ ಅಂಥವನ್ನು ಸಮರ್ಥಿಸಲು ಏನೇನೋ ವಾದಗಳನ್ನು ಹೆಣೆದವಲ್ಲದೆ, ನಮ್ಮ ದೇಶಕ್ಕೆ ಸೂಕ್ತವೆನಿಸುವ ಸಲಹೆಗಳನ್ನು ವ್ಯಕ್ತಪಡಿಸುವಲ್ಲಿ ವಿಫಲವಾದವು. ಜನಸಾಮಾನ್ಯರಿಗೆ ವೈಜ್ಞಾನಿಕ ಮಾಹಿತಿಯನ್ನು ಕೊಡುವುದಿರಲಿ, ತಮ್ಮ ಸಹೋದ್ಯೋಗಿ ವೈದ್ಯರಿಗೂ, ದಾದಿಯರು ಮತ್ತಿತರರಿಗೂ ಸ್ಪಷ್ಟವಾದ, ವೈಜ್ಞಾನಿಕವಾದ ಮಾಹಿತಿಯನ್ನು ಕೊಡುವಲ್ಲಿಯೂ ಇವು ವಿಫಲವಾದವು. ಅದರಿಂದಾಗಿ, ಇಡೀ ದೇಶದ ಆರೋಗ್ಯ ಸೇವೆಗಳೇ ದಿಕ್ಕೆಟ್ಟು ಬಾಗಿಲು ಹಾಕಿಕೊಳ್ಳುವಂತಾಯಿತು. ಅತ್ತ ಕೊರೋನಾ ನಿಯಂತ್ರಣದಲ್ಲಿ ವೈದ್ಯಕೀಯ ತಜ್ಞರನ್ನು ಮುಂಚೂಣಿಯಲ್ಲಿಟ್ಟಿದ್ದ ಬ್ರಿಟನ್, ಜರ್ಮನಿ, ಸ್ವೀಡನ್, ತೈವಾನ್, ನ್ಯೂಜಿಲೆಂಡ್ ಮುಂತಾದ ದೇಶಗಳಲ್ಲಿ ಹೆಚ್ಚಿನ ಸ್ಪಷ್ಟತೆಯೊಂದಿಗೆ, ಧೈರ್ಯದೊಂದಿಗೆ ಈ ಹೊಸ ಸೋಂಕನ್ನು ಎದುರಿಸಲು ಸಾಧ್ಯವಾಯಿತು.

ಇಂತಹಾ ಸನ್ನಿವೇಶದಲ್ಲಿ ಮಾಧ್ಯಮಗಳು ತಮಗೆ ತೋಚಿದ್ದೇ ಸರಿ ಎಂಬಂತೆ ಕೊರೋನಾ ಸೋಂಕಿನ ಬಗ್ಗೆ ಭೀತಿ ಹುಟ್ಟಿಸುವ ಸುದ್ದಿಗಳನ್ನೇ ವರದಿ ಮಾಡತೊಡಗಿದವು. ನಮ್ಮ ದೇಶದಲ್ಲಂತೂ ಕೊರೋನಾ ಹರಡುತ್ತಿರುವುದಕ್ಕೆ ನಿರ್ದಿಷ್ಟ ಸಮುದಾಯದವರನ್ನು, ಕೆಲವು ಊರುಗಳವರನ್ನು, ಬಡವರನ್ನು, ಕಾರ್ಮಿಕರನ್ನು ದೂಷಿಸುತ್ತಾ ಎಲ್ಲಾ ಭಾಷೆಗಳಲ್ಲೂ ಹೆಚ್ಚಿನ ಟಿವಿ ವಾಹಿನಿಗಳು ವ್ಯಾಪಕವಾಗಿ 24X7 ಕಾಲ ಅಪಪ್ರಚಾರ ಮಾಡಿದವು. ವಾಟ್ಸಪ್, ಫೇಸ್‌ಬುಕ್ ಇತ್ಯಾದಿ ಜಾಲಕೂಟಗಳಲ್ಲಿ ಇವು ಇನ್ನಷ್ಟು ರೆಕ್ಕೆಪುಕ್ಕಗಳೊಂದಿಗೆ ಹಾರಾಡಿದ್ದರಿಂದಾಗಿ ಒಬ್ಬರನ್ನೊಬ್ಬರು ಸಂಶಯಿಸಿ ದೂರವಿರಿಸುವಂತಾಯಿತು, ವೈಯಕ್ತಿಕ ಮನಃಶಾಂತಿಗೂ, ಸಾಮಾಜಿಕ ಸೌಹಾರ್ದತೆಗೂ ಭಂಗವುಂಟಾಗುವಂತಾಯಿತು. ಆಧಾರರಹಿತವಾದ, ಬೇಜವಾಬ್ದಾರಿಯ, ದುರುದ್ದೇಶದ, ಸಂವೇದನಾಶೂನ್ಯವಾದ ಇಂತಹಾ ನಡವಳಿಕೆಗಳಿಂದಾಗಿ ಕೊರೋನಾ ಸೋಂಕಿನ ಬಗ್ಗೆ ದೇಶದೆಲ್ಲೆಡೆ ಅನಗತ್ಯವಾದ ಭಯವೂ, ಆತಂಕವೂ ಮೂಡುವಂತಾಯಿತು; ಇದರಿಂದಾಗಿ ಕೊರೋನಾ ಸೋಂಕನ್ನು ನಿಭಾಯಿಸುವಲ್ಲಿ ಹಲತರದ ಸಮಸ್ಯೆಗಳಿಗೆ ಕಾರಣವಾಯಿತು.

ಭಾರೀ ಲಾಭದಾಸೆಯ ದೈತ್ಯ ಕಂಪೆನಿಗಳು, ಅವುಗಳೆದುರು ಮಂಡಿಯೂರುವ ವೈದ್ಯರು-ವಿಜ್ಞಾನಿಗಳು, ತಾವು ಹೇಳುವುದಷ್ಟೇ ಪರಮ ಸತ್ಯವೆಂಬಂತೆ ಕಿರಿಚಾಡುವ ಮಾಧ್ಯಮಗಳು, ಭಯ-ಗೊಂದಲಗಳಲ್ಲೇ ಸಿಲುಕಿಸಲ್ಪಟ್ಟ ಜನಸಾಮಾನ್ಯರು ಇರುವಾಗ ಇವರೆಲ್ಲರನ್ನು ಬಳಸಿಕೂಂಡು ಜನರನ್ನು ಹದ್ದುಬಸ್ತಿನಲ್ಲಿಡುವುದಕ್ಕೆ ಸರಕಾರಗಳಿಗೆ ಸದವಕಾಶವು ದೊರೆತಂತಾಯಿತು. ಹಲವು ದೇಶಗಳಲ್ಲಿ ಕೊರೋನಾ ಸೋಂಕನ್ನು ನಿಯಂತ್ರಿಸುವ ನೆಪದಲ್ಲಿ ಜನರ ಚಲನವಲನಗಳ ಮೇಲೆ ದಿಗ್ಬಂಧನ ವಿಧಿಸಲಾಯಿತು, ವಾಣಿಜ್ಯ ಚಟುವಟಿಕೆಗಳನ್ನೂ, ಶಿಕ್ಷಣ ಸಂಸ್ಥೆಗಳನ್ನೂ ಮುಚ್ಚಲಾಯಿತು, ಜನರ ಕೈಗಳಲ್ಲಿರುವ ಫೋನ್‌ಗಳಲ್ಲಿ ಬೇಹುಗಾರಿಕಾ ತಂತ್ರಾಂಶಗಳನ್ನು ಹಾಕಿಸಲಾಯಿತು, ಜನರ ನಿತ್ಯ ಜೀವನವನ್ನೂ, ವೈಯಕ್ತಿಕ ವರ್ತನೆಗಳನ್ನೂ ನಿಯಂತ್ರಿಸುವ ಕಾನೂನುಗಳನ್ನು ಹೇರಲಾಯಿತು ಮತ್ತು ಇವುಗಳ ಪಾಲನೆಯ ಬಗ್ಗೆ ಅತ್ಯಾಧುನಿಕ ತಂತ್ರಜ್ಞಾನಗಳನ್ನೆಲ್ಲ ಬಳಸಿ ಕಠಿಣವಾದ ನಿಗಾ ವಹಿಸಲಾಯಿತು, ಹಲವು ದೇಶಗಳಲ್ಲಿ ಇಡೀ ಆಡಳಿತ ಮತ್ತು ಪೋಲೀಸ್ ವ್ಯವಸ್ಥೆಯನ್ನೇ ಈ ಕಾರ್ಯಕ್ಕಾಗಿ ನಿಯೋಜಿಸಲಾಯಿತು, ಕೆಲವೆಡೆ ಸೇನೆಯ ನೆರವನ್ನೂ ಬಳಸಿಕೊಳ್ಳಲಾಯಿತು. ಸರ್ವಾಧಿಕಾರಿ ಮನೋವೃತ್ತಿಯ ಆಡಳಿತಗಳಿರುವ ದೇಶಗಳಲ್ಲಿ ಅನೇಕ ಜನ ವಿರೋಧಿ, ಪರಿಸರ ವಿರೋಧಿ ನೀತಿಗಳನ್ನು, ದೈತ್ಯ ಬಂಡವಾಳವನ್ನು ಇನ್ನಷ್ಟು ಕೊಬ್ಬಿಸಲು ನೆರವಾಗುವ ನೀತಿಗಳನ್ನು, ಹೇರುವುದಕ್ಕೆ ಕೊರೋನಾ ಭೀತಿಯ ಅವಕಾಶವನ್ನು ಬಳಸಿಕೊಳ್ಳಲಾಯಿತು. ಖಾಸಗಿ ಕಂಪೆನಿಗಳು ನೌಕರರನ್ನು ಕಿತ್ತೊಗೆಯುವುದಕ್ಕೆ, ಸಂಬಳ-ಭತ್ಯೆಗಳನ್ನು ಕತ್ತರಿಸುವುದಕ್ಕೆ, ಹೊಸ ತಂತ್ರಜ್ಞಾನಗಳನ್ನು ಹೇರುವುದಕ್ಕೆ ಕೊರೋನಾ ಭೀತಿಯನ್ನು ಬಳಸಿಕೊಂಡವು, ಹಲವು ಸರಕಾರಗಳು ಇಂತಹಾ ಕಂಪೆನಿಗಳು ಕೇಳಿದ್ದೆಲ್ಲವನ್ನೂ ಕೊಟ್ಟವು.

ಕೊರೋನಾ ಸೋಂಕನ್ನು ನಿಭಾಯಿಸುವಲ್ಲಿ ಆಡಳಿತದಲ್ಲಿರುವ ನಾಯಕರ ರಾಜಕೀಯ ಮತ್ತು ವೈಯಕ್ತಿಕ ನಿಲುವುಗಳು ಪ್ರಭಾವ ಬೀರಿರುವುದು ಕೂಡ ನಿಚ್ಚಳವಾಗಿ ಕಾಣುತ್ತದೆ. ಸರ್ವಾಧಿಕಾರಿ ಮನೋವೃತ್ತಿಯ ನಾಯಕತ್ವಗಳು ತಮ್ಮ ದೇಶಗಳ ತಜ್ಞರನ್ನು ಕಡೆಗಣಿಸಿದ್ದು ಸ್ಪಷ್ಟವಾಗಿದೆ. ತನ್ನನ್ನು ಪ್ರಶ್ನಿಸುವ ಎಲ್ಲರನ್ನೂ ನೇರವಾಗಿ ಜರೆಯುವ ಡೊನಾಲ್ಡ್ ಟ್ರಂಪ್ ತನ್ನ ದೇಶದ ವಿಜ್ಞಾನಿಗಳನ್ನು ಕಡೆಗಣಿಸಿ, ಮೊದಮೊದಲಲ್ಲಿ ಕೊರೋನಾ ಸೋಂಕು ಒಂದು ಸಮಸ್ಯೆಯೇ ಅಲ್ಲ ಎಂದು ಹೇಳಿ, ಸೋಂಕು ಹರಡಿ ಸಾವುಗಳಾಗುತ್ತಿದ್ದಂತೆ ಚೀನಾ ದೇಶ ಹಾಗೂ ವಿಶ್ವ ಆರೋಗ್ಯ ಸಂಸ್ಥೆಗಳ ಮೇಲೆ ದೂರು ಹೊರಿಸಿದ್ದು, ಕೊರೋನಾ ಪತ್ತೆಯ ಪರೀಕ್ಷೆಗಳನ್ನು ನಡೆಸುವ ಬಗ್ಗೆಯೂ, ದಿಗ್ಬಂಧನವನ್ನು ವಿಧಿಸುವ ರೀತಿ-ನೀತಿಗಳ ಬಗ್ಗೆಯೂ ಸಾಕಷ್ಟು ಗೊಂದಲಗಳಾಗಿ, ಸಾವುಗಳು ಒಂದೇ ಸವನೆ ಏರುತ್ತಿದ್ದಂತೆ ಮಾಜಿ ರಾಷ್ಟ್ರಾಧ್ಯಕ್ಷರಿಂದ ಹಿಡಿದು ಎಲ್ಲರನ್ನೂ ದೂಷಿಸಿ, ಮಾಧ್ಯಮಗಳ ಮೇಲೆ ಹರಿಹಾಯ್ದದ್ದೆಲ್ಲವೂ ಆಯಿತು. ಬ್ರೆಜಿಲ್‌ನಲ್ಲೂ ಕೊರೋನಾ ಸೋಂಕನ್ನು ಎದುರಿಸುವ ಬಗ್ಗೆ ಅಧ್ಯಕ್ಷರು ಮತ್ತವರ ಸಂಪುಟ ಸದಸ್ಯರ ನಡುವೆ ಸಾಕಷ್ಟು ತಿಕ್ಕಾಟಗಳಾಗಿ, ಆರೋಗ್ಯ ಸಚಿವರನ್ನು ಪದಚ್ಯುತಗೊಳಿಸುವಂತಾಯಿತು, ದಿಗ್ಬಂಧನ ಮತ್ತಿತರ ಕ್ರಮಗಳ ಬಗ್ಗೆ ಅಧ್ಯಕ್ಷರ ಹಠಮಾರಿತನದಿಂದಾಗಿ ರೋಗ ನಿಯಂತ್ರಣಕ್ಕೆ ಸಮಸ್ಯೆಯಾಗಿ ಪ್ರಕರಣಗಳೂ, ಸಾವುಗಳೂ ಏರುತ್ತಲೇ ಹೋದವು, ಅಮೆಜಾನ್ ಕಾಡುಗಳಲ್ಲಿರುವ ಪ್ರಾಚೀನ ಬುಡಕಟ್ಟುಗಳವರಿಗೂ ಸೋಂಕು ವ್ಯಾಪಿಸಿ ಆತಂಕಕ್ಕೆ ಕಾರಣವಾಯಿತು. ಅಮೆರಿಕ ಮತ್ತು ಬ್ರೆಜಿಲ್‌ಗಳಲ್ಲಿ ದಿಗ್ಬಂಧನ ವಿಧಿಸುವ ಬಗ್ಗೆ ಒಮ್ಮತಾಭಿಪ್ರಾಯಗಳಿಲ್ಲದೆ ಗೊಂದಲವಾದರೆ, ನಮ್ಮ ದೇಶದಲ್ಲಿ ಕೇವಲ 560ರಷ್ಟು ಪ್ರಕರಣಗಳಿದ್ದಾಗ ರಾಷ್ಟ್ರವ್ಯಾಪಿ ದಿಗ್ಬಂಧನವನ್ನು ಯಾವುದೇ ತಜ್ಞರ ಸಲಹೆಗಳಿಲ್ಲದೆಯೇ, ಯಾವುದೇ ಪೂರ್ವತಯಾರಿಯಿಲ್ಲದೆಯೇ, ಏಕಾಏಕಿಯಾಗಿ ಘೋಷಿಸಲಾಯಿತು; ಅದರಿಂದ ಯಾವ ಯಾವುದೋ ಊರುಗಳಿಗೆ ಹೋಗಿದ್ದವರು ಅಲ್ಲಲ್ಲೇ ಸಿಲುಕಿಕೊಂಡು ಕಷ್ಟಕ್ಕೀಡಾದರು, ಕೆಲಸಕ್ಕಾಗಿ ವಲಸೆ ಹೋಗಿದ್ದ ಕೋಟಿಗಟ್ಟಲೆ ಕಾರ್ಮಿಕರು ತಮ್ಮ ಕೆಲಸಗಳನ್ನು ಕಳೆದುಕೊಂಡು, ಅಲ್ಲೂ ಉಳಿಯಲಾಗದೆ, ಸ್ವಂತ ಹಳ್ಳಿಗಳಿಗೂ ಮರಳಲಾಗದೆ, ವಾಹನಗಳೂ ದೊರೆಯದೆ, ಸರಿಯಾದ ಮಾಹಿತಿಯೂ ದೊರೆಯದೆ, ಹತಾಶೆಯಿಂದ ಸಾವಿರಗಟ್ಟಲೆ ಕಿಮೀ ದೂರಕ್ಕೆ ಕಾಲ್ನಡಿಗೆಯಲ್ಲಿ, ಸೈಕಲ್‌ಗಳಲ್ಲಿ ಸಾಗುವಂತಾಯಿತು, ಹಲವರು ತಮ್ಮ ದಾರಿಗಳಲ್ಲೇ ಬಸವಳಿದು ಸತ್ತದ್ದೂ ಆಯಿತು. ಎರಡು ತಿಂಗಳ ಕಾಲ ಮುಂದುವರಿದ ಈ ದಿಗ್ಬಂಧನದಿಂದ ಇಂತಹ ಅನೇಕ ಅನಾಹುತಗಳಾಗಿ, ಆರ್ಥಿಕತೆ ನಾಶವಾಗಿ, ಕೊರೋನಾ ಪ್ರಕರಣಗಳೂ ನಿಯಂತ್ರಿಸಲ್ಪಡದೆ, ಅವು ನೂರಿನ್ನೂರು ಪಟ್ಟು ಏರಿಕೆಯಾದರೂ ಬೇರೆ ದಾರಿಯಿಲ್ಲದೆ, ದಿಗ್ಬಂಧನವನ್ನು ಹಿಂಪಡೆಯಲೇ ಬೇಕಾದ ಸ್ಥಿತಿಯುಂಟಾಯಿತು. ಇವಕ್ಕಿದಿರಾಗಿ, ಮಹಿಳೆಯರ ನಾಯಕತ್ವವಿರುವ ತೈವಾನ್, ಜರ್ಮನಿ, ನ್ಯೂಜಿಲೆಂಡ್, ಫಿನ್ಲೆಂಡ್, ಐಸ್‌ಲ್ಯಾಂಡ್, ನಾರ್ವೆ ಮುಂತಾದ ದೇಶಗಳಲ್ಲಿ, ಸಮಾಜವಾದಿ, ಉದಾರವಾದಿ ಆಡಳಿತ ವ್ಯವಸ್ಥೆಯಿರುವ ಕ್ಯೂಬಾ, ವಿಯೆಟ್ನಾಂನಂತಹ ದೇಶಗಳಲ್ಲಿ ಮಾನವೀಯವಾದ, ಸಹ್ಯವಾದ, ಮೃದುವಾದ, ಆದರೆ ನಿಖರವಾದ, ವೈಜ್ಞಾನಿಕವಾದ ಕ್ರಮಗಳನ್ನು ಕೈಗೊಳ್ಳುವ ಮೂಲಕ ಕೊರೋನಾ ಸೋಂಕನ್ನು ನಿಯಂತ್ರಿಸಲು ಸಾಧ್ಯವಾಯಿತು, ಜನರಿಗಾಗಲೀ, ಆರ್ಥಿಕತೆಗಾಗಲೀ ಹೆಚ್ಚು ಸಮಸ್ಯೆಗಳೂ ಆಗಲಿಲ್ಲ. ಅಂತೆಡೆಗಳಲ್ಲಿ ಮಾಧ್ಯಮಗಳು ಮತ್ತು ಜನರೂ ಕೂಡ ಸರ್ಕಾರಗಳೊಂದಿಗೆ ಸಹಕರಿಸಿದರು.

ಇವೆಲ್ಲವುಗಳ ನಡುವೆ, ಕೊರೋನಾ ಸೋಂಕು ದೇಶದಿಂದ ದೇಶಕ್ಕೆ ಹರಡಿ ಕೋಟಿಗಟ್ಟಲೆ ಜನರನ್ನು (ಸೋಂಕಿತರ ಸಂಖ್ಯೆಯು ಪರೀಕ್ಷೆಗಳಲ್ಲಿ ದೃಢಪಟ್ಟವರ ಸಂಖ್ಯೆಗಿಂತ ನೂರಿನ್ನೂರು ಪಟ್ಟು ಹೆಚ್ಚು) ಬಾಧಿಸಿ ನಾಲ್ಕು ಲಕ್ಷದಷ್ಟು ಜನರ ಸಾವಿಗೆ ಕಾರಣವಾದಾಗ, ಸೋಂಕಿನ ತೀವ್ರತೆಯು ಭಯಾನಕವೆನಿಸುವಷ್ಟೇನೂ ಇಲ್ಲವೆಂದೂ, ಶೆ. 80-90ರಷ್ಟು ಸೋಂಕಿತರಲ್ಲಿ ರೋಗಲಕ್ಷಣಗಳೇ ಕಾಣಿಸಿಕೊಳ್ಳದೆ ಗುಣಮುಖರಾಗುತ್ತಾರೆಂದೂ, ಸಾಯುವವರ ಪ್ರಮಾಣವು ಒಟ್ಟು ಸೋಂಕಿತರ ಶೇ. 0.04ರಿಂದ 0.08ರಷ್ಟೇ ಇರುತ್ತದೆ ಎಂದೂ, ಅವರಲ್ಲೂ ಶೇ. 95ಕ್ಕೂ ಹೆಚ್ಚು ಮಂದಿ ಅದಾಗಲೇ ಇತರ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಾಗಿರುತ್ತಾರೆಂದೂ ಹಲವಾರು ವರದಿಗಳು ಪ್ರಕಟವಾದವು. ಐವತ್ತು ವರ್ಷದೊಳಗಿನ, ಯಾವುದೇ ಕಾಯಿಲೆಗಳಿಲ್ಲದ ಆರೋಗ್ಯವಂತರಲ್ಲಿ ಕೊರೋನಾ ಸೋಂಕಿನಿಂದ ಸಾವುಂಟಾಗುವ ಸಾಧ್ಯತೆಯು ಹತ್ತು ಲಕ್ಷಕ್ಕೆ ಮೂರರಷ್ಟು, ಇಲ್ಲವೇ ಇಲ್ಲವನ್ನುವಷ್ಟು, ತೀರಾ ನಗಣ್ಯವಾಗಿರುತ್ತದೆ ಎಂದು ಸೆಂಟರ್ ಫಾರ್ ಗ್ಲೋಬಲ್ ಡೆವಲಪ್ಮೆಂಟ್ ಪ್ರಕಟಿಸಿರುವ ವರದಿಯಲ್ಲಿ ಹೇಳಲಾಗಿದೆ.

ಆದರೆ ಇಂತಹಾ ವಾಸ್ತವಿಕ ವರದಿಗಳ ಆಧಾರದಲ್ಲಿ ನಿಯಂತ್ರಣೋಪಾಯಗಳನ್ನು ಪುನರ್‌ವಿಮರ್ಶಿಸಬೇಕಾಗಿದ್ದ ಆಡಳಿತಗಳು ಅದನ್ನು ಮಾಡಿದಂತಿಲ್ಲ, ಮಾಧ್ಯಮಗಳೂ ಕೂಡ ಬೆದರಿಸುವುದನ್ನು ನಿಲ್ಲಿಸಿದಂತಿಲ್ಲ. ಯಾವುದೇ ಆಧಾರವಿಲ್ಲದೆ, ಭಯಭೀತರಾಗಿ, ಅವೈಜ್ಞಾನಿಕವಾಗಿ ದಿಗ್ಬಂಧನ ವಿಧಿಸಿ, ಆರ್ಥಿಕತೆಯನ್ನು ಧ್ವಂಸ ಮಾಡಿ, ಜನರನ್ನು ನಿರ್ಗತಿಕರನ್ನಾಗಿಸಿ, ಮಕ್ಕಳಿಗೆ ಶಾಲೆ-ಕಾಲೇಜುಗಳಿಲ್ಲದಂತೆ ಮಾಡಿ, ಅತ್ತ ಕೊರೋನಾ ಸೋಂಕನ್ನು ನಿಯಂತ್ರಿಸಲಾಗದೆ, ಇತ್ತ ಜನಸಾಮಾನ್ಯರನ್ನೂ ಸಂಕಷ್ಟಕ್ಕಿಳಿಸಿರುವ ಈ ನಿರ್ಧಾರಗಳೆಲ್ಲವನ್ನೂ ಕೂಡಲೇ ಹಿಂಪಡೆದು, ವೈಜ್ಞಾನಿಕವಾದ ನಿಯಂತ್ರಣೋಪಾಯಗಳನ್ನು ತುರ್ತಾಗಿ ಕೈಗೊಳ್ಳಬೇಕಾಗಿದೆ.

ಮೊದಲನೆಯದಾಗಿ, ಕೊರೋನಾ ಸೋಂಕಿನ ಬಗ್ಗೆ ವಾಸ್ತವಾಂಶಗಳನ್ನು ಜನರಿಗೆ ತಿಳಿಸಬೇಕು; ಕೊರೋನಾ ಸೋಂಕಿನಿಂದ ಬಹುತೇಕ ಜನರಿಗೆ, ಅದರಲ್ಲೂ ಯುವಜನರಿಗೆ ಮತ್ತು ಮಕ್ಕಳಿಗೆ, ಯಾವುದೇ ಸಮಸ್ಯೆಗಳಾಗುವ ಸಾಧ್ಯತೆಗಳಿಲ್ಲವೆಂದೂ, 60ಕ್ಕೆ ಮೇಲ್ಪಟ್ಟವರು ಮತ್ತು ಮೊದಲೇ ಅನ್ಯ ಗಂಭೀರ ಕಾಯಿಲೆಗಳಿರುವವರು ಕೊರೋನಾ ಸೋಂಕಿನಿಂದ ಕಷ್ಟಕ್ಕೊಳಗಾಗುವ ಅಪಾಯವು ಹೆಚ್ಚು ಎಂದೂ ಸ್ಪಷ್ಟವಾಗಿ ತಿಳಿಸಬೇಕು.

ಎರಡನೆಯದಾಗಿ, ಯಾವ ನಿರ್ದಿಷ್ಟ ಸ್ಥಳಗಳಲ್ಲಿ ಎಷ್ಟು ಮಂದಿಗೆ ಸೋಂಕಿದೆ, ಅಲ್ಲಿನ ಜನರು ಕೈಗೊಳ್ಳಬೇಕಾದ ಕ್ರಮಗಳೇನು ಎನ್ನುವುದನ್ನು ಕೂಡ ಸ್ಪಷ್ಟವಾಗಿ, ಭಯವುಂಟಾಗದಂತೆ ತಿಳಿಸಬೇಕು; ಇಡೀ ಊರನ್ನು, ಅಥವಾ ಜಿಲ್ಲೆಯನ್ನು, ಅಥವಾ ರಾಜ್ಯವನ್ನು ಸ್ತಬ್ಧಗೊಳಿಸುವಂತಹ ಕ್ರಮಗಳನ್ನು ಕೈಗೊಳ್ಳಬಾರದು; ಅವು ಸಫಲವಾಗುವ ಸಾಧ್ಯತೆಗಳು ಕಡಿಮೆ, ಮಾತ್ರವಲ್ಲ, ಅವುಗಳಿಂದ ವೈದ್ಯಕೀಯ ಆರೈಕೆಗೂ ಅಡ್ಡಿಯಾಗುತ್ತದೆ, ನಿತ್ಯ ಜೀವನಕ್ಕೂ ಕಷ್ಟವಾಗುತ್ತದೆ.

ಮೂರನೆಯದಾಗಿ, ಸೋಂಕಿನ ಲಕ್ಷಣಗಳಿರುವವರು (ಜ್ವರ, ಕೆಮ್ಮು, ಗಂಟಲು ನೋವು, ವಾಸನೆ ತಿಳಿಯದಾಗುವುದು) ಮನೆಗಳಲ್ಲೇ ಉಳಿದು ಸಹಾಯವಾಣಿಗೆ ಕರೆ ಮಾಡಬೇಕೆನ್ನುವುದನ್ನು ಗಟ್ಟಿಯಾಗಿ ಹೇಳಬೇಕು. ಎಲ್ಲರೂ ಆಸ್ಪತ್ರೆಗಳಿಗೆ ಧಾವಿಸಿದರೆ ಅವರೆಲ್ಲರನ್ನೂ ನಿಭಾಯಿಸಲು ಸಾಧ್ಯವಾಗದು, ನಿಜಕ್ಕೂ ವೈದ್ಯಕೀಯ ನೆರವಿನ ಅಗತ್ಯವುಂಟಾಗುವ ತೀವ್ರ ಸ್ವರೂಪದ ಕಾಯಿಲೆಯುಳ್ಳವರಿಗೆ ಚಿಕಿತ್ಸೆ ನೀಡುವುದಕ್ಕೂ ಸಾಧ್ಯವಾಗದು. ಈಗಾಗಲೇ ಮುಂಬಯಿ, ಚೆನ್ನೈ, ದಿಲ್ಲಿಗಳಲ್ಲಿ ಆಸ್ಪತ್ರೆಗಳಲ್ಲಿ ಸ್ಥಳಾವಕಾಶವಿಲ್ಲದಂತಾಗಿರುವುದು ಪಾಠವಾಗಬೇಕು.

ನಾಲ್ಕನೆಯದಾಗಿ, ಹೀಗೆ ಮನೆಯಲ್ಲೇ ಉಳಿಯುವವರು ಸಹಾಯವಾಣಿಯನ್ನು ಸಂಪರ್ಕಿಸುವಾಗ ಅವರ ಜೊತೆಗೆ ನೇರವಾಗಿ ಮಾತನಾಡುವ ವ್ಯವಸ್ಥೆ ಇರಬೇಕು; ಯಾಂತ್ರೀಕೃತವಾದ ಪ್ರತಿಕ್ರಿಯೆ ನೀಡುವ ವ್ಯವಸ್ಥೆಯಿಂದ ಜನರ ಆತಂಕವು ಪರಿಹಾರವಾಗಲಾರದು. ಆದ್ದರಿಂದ ಪ್ರತೀ ಪ್ರಾಥಮಿಕ ಆರೋಗ್ಯ ಕೇಂದ್ರ, ನಗರ ಆರೋಗ್ಯ ಕೇಂದ್ರಗಳ ವ್ಯಾಪ್ತಿಗಳಲ್ಲೂ ಇಂತಹ ಸಹಾಯವು ದೊರೆಯುವಂತಾಗಬೇಕು.

ಐದನೆಯದಾಗಿ, ಹೀಗೆ ಕರೆ ಮಾಡಿದವರನ್ನು ಅವರ ಮನೆಗಳಲ್ಲೇ ಪರೀಕ್ಷಿಸಿ, ಸಮಸ್ಯೆಗಳಾಗಬಲ್ಲವರನ್ನು ಗುರುತಿಸುವುದಕ್ಕೆ ಸಂಚಾರಿ ಘಟಕಗಳನ್ನು ಏರ್ಪಡಿಸಬೇಕು, ಅವುಗಳಲ್ಲಿ ರೋಗಿಗಳ ರಕ್ತದ ಆಮ್ಲಜನಕದ ಮಟ್ಟವನ್ನು ಅಳೆಯುವುದಕ್ಕೆ ಪಲ್ಸ್ ಆಕ್ಸಿಮೀಟರ್ ನಂತಹ ಸರಳ ಸಾಧನಗಳು ಲಭ್ಯವಿರಬೇಕು. ಯಾವುದೇ ಸಮಸ್ಯೆಗಳಿಲ್ಲದವರಿಗೆ ಯಾವುದೇ ಪರೀಕ್ಷೆ ಅಥವಾ ಚಿಕಿತ್ಸೆಯ ಅಗತ್ಯವಿಲ್ಲದೇ ಸೋಂಕು ವಾಸಿಯಾಗುತ್ತದೆ ಎಂದು ಧೈರ್ಯ ತುಂಬಿ, ಅಗತ್ಯವಿದ್ದರೆ ಮತ್ತೆ ಪರೀಕ್ಷಿಸುವ ಆಶ್ವಾಸನೆಯನ್ನು ನೀಡಬೇಕು.

ಆರನೆಯದಾಗಿ, ಗಂಭೀರ ಸಮಸ್ಯೆಯಾದವರನ್ನು ಸೂಕ್ತ ಚಿಕಿತ್ಸೆಗಾಗಿ ಆರೋಗ್ಯ ಕೇಂದ್ರಗಳಿಗೆ ಅಥವಾ ಉನ್ನತ ಆಸ್ಪತ್ರೆಗಳಿಗೆ ದಾಖಲಿಸುವ ವ್ಯವಸ್ಥೆಯಾಗಬೇಕು. ಸಮಸ್ಯೆಗೀಡಾದ ಹೆಚ್ಚಿನ ರೋಗಿಗಳಿಗೆ ಆಮ್ಲಜನಕವಷ್ಟೇ ಅಗತ್ಯವಾಗುವುದರಿಂದ ಆರೋಗ್ಯ ಕೇಂದ್ರಗಳಲ್ಲೇ ಅವನ್ನು ವ್ಯವಸ್ಥೆ ಮಾಡಬಹುದು; ಗಂಭೀರ ಸಮಸ್ಯೆಗಳಿದ್ದು, ಕೃತಕ ಉಸಿರಾಟದ ಅಗತ್ಯವುಳ್ಳವರನ್ನಷ್ಟೇ ಉನ್ನತ ಆಸ್ಪತ್ರೆಗಳಲ್ಲಿ ದಾಖಲಿಸಬಹುದು.

ಏಳನೆಯದಾಗಿ, ಏಕಾಏಕಿಯಾಗಿ ಘೋಷಿಸಿದ ದಿಗ್ಬಂಧನದಿಂದಾಗಿ ಅಲ್ಲಲ್ಲಿ ಸಿಲುಕಿಕೊಂಡು ಎರಡು ತಿಂಗಳು ಕಷ್ಟಕ್ಕೀಡಾದವರೆಲ್ಲರಿಗೆ ಅವರವರ ಊರುಗಳಿಗೆ ಹಿಂತಿರುಗಲು ಎಲ್ಲಾ ವಿಧಗಳ ಪ್ರಯಾಣ ಸೌಲಭ್ಯಗಳನ್ನು ಕಲ್ಪಿಸಬೇಕು. ಹಾಗೆ ಮರಳಿದವರನ್ನು ಅವರವರ ಮನೆಗಳಲ್ಲೇ ಒಂದು ವಾರ ಕಾಲ ಪ್ರತ್ಯೇಕವಾಗಿ ಉಳಿಯಲು ಹೇಳಿದರೆ ಸಾಕು; ಅಂಥವರಿಗೆ ರೋಗಲಕ್ಷಣಗಳು ಉಂಟಾದರೆ ಮೇಲೆ ಹೇಳಿದ ವ್ಯವಸ್ಥೆಯನ್ನೇ ಅನುಸರಿಸಲು ಹೇಳಬೇಕು; ಈಗಾಗಲೇ ಅಲ್ಲಲ್ಲಿ ಸಮುದಾಯದೊಳಗೆ ಸೋಂಕು ಹರಡಲು ಆರಂಭವಾಗಿರುವುದರಿಂದ, ಪರವೂರುಗಳಿಂದ ಮರಳುವ ಪ್ರತಿಯೊಬ್ಬರಿಗೂ ಸಾಂಸ್ಥಿಕ ನಿಗಾವಣೆ, ವೈರಸ್ ಪತ್ತೆಯ ಪರೀಕ್ಷೆ ಇತ್ಯಾದಿಗಳನ್ನು ನಡೆಸುವುದರಿಂದ ವಿಶೇಷವಾದ ಪ್ರಯೋಜನವಾಗದು.

ಎಂಟನೆಯದಾಗಿ, ಶೈಕ್ಷಣಿಕ ವರ್ಷವು ಒಂದಿಷ್ಟೂ ಮೊಟಕಾಗದಂತೆ ಎಲ್ಲಾ ಶಾಲೆ-ಕಾಲೇಜುಗಳನ್ನು ಈ ಕೂಡಲೇ ಪುನರಾರಂಭಿಸಬೇಕು; ಮಕ್ಕಳಿಗೆ ಕೊರೋನಾ ಸೋಂಕು ಬಾಧಿಸುವ ಅಥವಾ ಯಾವುದೇ ಸಮಸ್ಯೆಗಳನ್ನುಂಟು ಮಾಡುವ ಸಾಧ್ಯತೆಗಳು ತೀರಾ ಅತ್ಯಲ್ಪವಾಗಿರುವುದರಿಂದಲೂ, ಮಕ್ಕಳಿಂದ ಇತರರಿಗೆ ಹರಡುವ ಸಾಧ್ಯತೆಗಳು ಕೂಡ ನಗಣ್ಯವಾಗಿರುವುದರಿಂದ ಶಾಲೆಗಳಲ್ಲಿ ಮಕ್ಕಳ ಚಟುವಟಿಕೆಗಳನ್ನು ಕಠಿಣವಾಗಿ ನಿರ್ಬಂಧಿಸುವ ಅಗತ್ಯವೂ ಇಲ್ಲ.

ಒಂಬತ್ತನೆಯದಾಗಿ, ಯಾವುದೇ ಸಮಸ್ಯೆಗಳಿಲ್ಲದ ಕೊರೋನಾ ಸೋಂಕಿತರಿಗೆ ಯಾವುದೇ ಪರೀಕ್ಷೆ ಅಥವಾ ಚಿಕಿತ್ಸೆಯ ಅಗತ್ಯವಿಲ್ಲ ಹಾಗೂ ಅಂಥವರು ಆಸ್ಪತ್ರೆಗಳಲ್ಲಿ ದಾಖಲಾಗದೆ ಮನೆಯಲ್ಲೇ ಉಳಿಯಬೇಕು ಎನ್ನುವುದನ್ನು, ಮತ್ತು ಸಮಸ್ಯೆಗಳಿಗೀಡಾದವರಿಗೆ ಯಾವ ಸ್ತರದ ಆಸ್ಪತ್ರೆಗಳಲ್ಲಿ ಯಾವ ಪರೀಕ್ಷೆ ಹಾಗೂ ಚಿಕಿತ್ಸೆಗಳನ್ನು ನೀಡಬೇಕೆನ್ನುವುದನ್ನು ಸಾಕ್ಷ್ಯಾಧಾರಿತವಾಗಿ, ಸುಸ್ಪಷ್ಟವಾಗಿ ತಿಳಿಸುವ ಸೂಚಿಯನ್ನು ಕೂಡಲೇ ಸಿದ್ಧಪಡಿಸಬೇಕು; ಈಗಾಗಲೇ ಪ್ರಕಟಿಸಿರುವ ಸೂಚಿಯು ಅನಗತ್ಯವಾದ ಪರೀಕ್ಷೆ, ಚಿಕಿತ್ಸೆ ಮತ್ತು ಆಸ್ಪತ್ರೆಗಳಿಗೆ ದಾಖಲಾಗುವುದಕ್ಕೆ ಕಾರಣವಾಗಲಿರುವುದರಿಂದ ಅದನ್ನು ಕೂಡಲೇ ಹಿಂಪಡೆಯಬೇಕು.

ಕೊನೆಯ ಹತ್ತನೆಯದಾಗಿ, ಮತ್ತು ಅತಿ ಮುಖ್ಯವಾಗಿ, ಈ ಎಲ್ಲಾ ಕ್ರಮಗಳನ್ನು ಒಳಗೊಂಡ ಸಂಪೂರ್ಣ ಮಾರ್ಗಸೂಚಿಯನ್ನು ಮುಂದಿನ ಮೂರು ತಿಂಗಳುಗಳಿಗೆ ಅನ್ವಯಿಸುವಂತೆ ಪ್ರಕಟಿಸಬೇಕು. ಈಗಿನಂತೆ ದಿನಕ್ಕೊಮ್ಮೆ ಅಥವಾ ದಿನಕ್ಕೆರಡು ಸಲದಂತೆ ಬಗೆಬಗೆಯ ನಿರ್ಧಾರಗಳನ್ನು ಕೈಗೊಳ್ಳುತ್ತಿರುವುದರಿಂದ ಜನಸಾಮಾನ್ಯರಾಗಲೀ, ಎಲ್ಲೆಲ್ಲೋ ಸಿಲುಕಿರುವ ಸಂತ್ರಸ್ತರಾಗಲೀ, ಸರಕಾರಿ ಅಧಿಕಾರಿಗಳು ಮತ್ತು ಸಿಬಂದಿಯಾಗಲೀ, ವೈದ್ಯರು ಮತ್ತು ವೈದ್ಯಕೀಯ ಸಿಬಂದಿಯಾಗಲೀ ತೀರಾ ಅತಂತ್ರರಾಗಿ, ನಾಳೆ ಅದೇನು ಕಾದಿದೆಯೋ ಎಂಬ ಅನಿಶ್ಚಿತತೆಯಿಂದ ಏನನ್ನೂ ನಿರ್ಧರಿಸಲಾಗದೆ ಚಡಪಡಿಸುವಂತಾಗಿರುವುದು ಕೊರೋನಾ ನಿಭಾಯಿಸುವಲ್ಲಿ ಅತಿ ದೊಡ್ಡ ಸಮಸ್ಯೆಯಾಗಿದೆ.

ವಸ್ತುನಿಷ್ಠ ಮಾಹಿತಿಗಳ ಆಧಾರದಲ್ಲಿ ವೈಜ್ಞಾನಿಕ ಮನೋವೃತ್ತಿ ಮತ್ತು ತಂತ್ರಜ್ಞಾನದ ಸದ್ಬಳಕೆಯಿಂದಷ್ಟೇ ಕೊರೋನಾ ಸೋಂಕನ್ನಾಗಲೀ, ಇತರ ಯಾವುದೇ ಸಮಸ್ಯೆಯನ್ನಾಗಲೀ ನಿಭಾಯಿಸಬಹುದಲ್ಲದೆ, ಸುಳ್ಳುಗಳು ಮತ್ತು ನಾಟಕೀಯ ಭಾಷಣ-ಆಚರಣೆಗಳಿಂದಲ್ಲ ಎನ್ನುವುದು ಕೊರೋನಾ ಸೋಂಕು ಕಲಿಸಿರುವ ಬಹು ಮುಖ್ಯವಾದ ಪಾಠವಾಗಿದೆ.

Jun 28

ಕೊರೋನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆಯನ್ನು ಒಂದಿಷ್ಟು ಜಾಗರೂಕತೆಯ ಕ್ರಮಗಳನ್ನು ಪಾಲಿಸುವ ಮೂಲಕ ಕುಟುಂಬದ ಸದಸ್ಯರೇ ನಡೆಸಬಹುದು ಎಂದು ಕೇಂದ್ರ ಸರ್ಕಾರವು ಪ್ರಕಟಿಸಿರುವ ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಹಾಗಿರುವಾಗ ಅಂತ್ಯಕ್ರಿಯೆಗಳನ್ನು ನಡೆಸುವುದಕ್ಕೆ ಮೃತರ ಮನೆಯವರಿಗೆ ಅವಕಾಶ ನೀಡದೆ, ಸರಕಾರಿ ಸಿಬಂದಿಯೇ ನಡೆಸುತ್ತಿರುವುದೇಕೆ ಎನ್ನುವುದನ್ನು ನಾವೆಲ್ಲರೂ ಪ್ರಶ್ನಿಸಲೇ ಬೇಕಾಗಿದೆ.
ಕೆಲವು ವಾರಗಳ ಹಿಂದೆ ಬಂಟ್ವಾಳದ ಮಹಿಳೆಯೊಬ್ಬರು ಮೃತಪಟ್ಟಾಗ ಅವರ ಅಂತ್ಯಕ್ರಿಯೆಯನ್ನು ನಡೆಸದಂತೆ ಮಂಗಳೂರಿನ ಶಾಸಕರು ತಡೆದು ಗದ್ದಲವೆಬ್ಬಿಸಿದ್ದು, ತನ್ನ ಕ್ಷೇತ್ರದಲ್ಲಿ ಯಾರದೇ ಅಂತ್ಯಕ್ರಿಯೆ ನಡೆಸುವುದಿದ್ದರೆ ತನ್ನ ಪೂರ್ವಾನುಮತಿಯನ್ನು ಪಡೆಯಬೇಕು ಎಂದು ಆ ಶಾಸಕರು ಅಪ್ಪಣೆ ಮಾಡಿದ್ದು ವರದಿಯಾಗಿದ್ದವು. ನಿನ್ನೆ ಮಂಗಳೂರಿನ ಸಂಸದರು ‘ಅಂತ್ಯಕ್ರಿಯೆ ನಡೆಸುವವರು ಪಿಪಿಇ ಧರಿಸಿರಬೇಕು, ಸಿಬಂದಿಯಲ್ಲದೆ ಬೇರೆಯವರು ಅಲ್ಲಿದ್ದರೆ ಅವರ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಆಜ್ಞಾಪಿಸಿರುವುದಾಗಿ ಇಂದಿನ ಪತ್ರಿಕೆಯಲ್ಲಿ ವರದಿಯಾಗಿತ್ತು. ಈಗ ಬಳ್ಳಾರಿಯಲ್ಲಿ ಅಂಥ ಸಿಬಂದಿಯೇ ಅಂತ್ಯಕ್ರಿಯೆ ನಡೆಸುವಾಗ ಮೃತದೇಹಗಳನ್ನು ಎತ್ತಿ ಎಸೆದಿರುವ ವಿಡಿಯೋ ಎಲ್ಲೆಡೆ ಬಿತ್ತರಗೊಂಡಿದೆ.

ಶಾಸಕರು ಮಾಡಿದ್ದಕ್ಕೆ, ಸಂಸದರು ಹೇಳಿದ್ದಕ್ಕೆ, ಬಳ್ಳಾರಿಯಲ್ಲಿ ನಡೆದದ್ದಕ್ಕೆ ಕಾನೂನಿನ ಮಾನ್ಯತೆಯಿಲ್ಲ. ಕೊರೋನಾ ಸೋಂಕಿತರ ಅಂತ್ಯಕ್ರಿಯೆಗಳನ್ನು ಸರಕಾರವೇ ನಡೆಸಬೇಕು ಎಂಬ ನಿಯಮವೇ ಇಲ್ಲ. ಮಾತ್ರವಲ್ಲ, ಅಂತ್ಯಕ್ರಿಯೆ ನಡೆಸುವವರೆಲ್ಲರೂ ಪಿಪಿಇ ಧರಿಸಿರಬೇಕೆಂಬ ನಿಯಮವೂ ಇಲ್ಲ, ಧರಿಸುವ ಅಗತ್ಯವೂ ಇಲ್ಲ.

ಕೊರೋನಾ ಸೋಂಕಿತರು ಮೃತಪಟ್ಟರೆ ಅವರ ಅಂತ್ಯಕ್ರಿಯೆಯನ್ನು ಅವರ ಕುಟುಂಬದ ಸದಸ್ಯರೇ ನಡೆಸಬೇಕು, ಸರ್ಕಾರವಲ್ಲ. ಆ ಸಂದರ್ಭದಲ್ಲಿ ಅವರ ಕುಟುಂಬದ ಸದಸ್ಯರನ್ನು ಕ್ವಾರಂಟೈನ್ ನಿಂದ ಮುಕ್ತಗೊಳಿಸಬೇಕು; ಕ್ವಾರಂಟೈನ್ ನೆಪವೊಡ್ಡಿ ಅಂತ್ಯಕ್ರಿಯೆ ನಡೆಸದಂತೆ ಅವರನ್ನು ತಡೆಯುವುದು ಸರಿಯಲ್ಲ. ಮೃತ ದೇಹವನ್ನು ಮುಟ್ಟದಿರುವುದು, ಮುಟ್ಟಲೇ ಬೇಕಾಗಿ ಬಂದ ಒಂದಿಬ್ಬರು ತಮ್ಮ ಕೈಗಳನ್ನು ಶುಚಿಗೊಳಿಸಿಕೊಳ್ಳುವುದು, ಅಂತ್ಯಕ್ರಿಯೆಯಲ್ಲಿ ಅತಿ ಕಡಿಮೆ ಜನರಷ್ಟೇ ಭಾಗಿಯಾಗುವುದು ಇತ್ಯಾದಿ ಅತಿ ಸರಳವಾದ ಕ್ರಮಗಳನ್ನು ಪಾಲಿಸಿದರೆ ಸಾಕು.

ಕೊರೋನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸುವುದಕ್ಕೆ ಮನೆಮಂದಿಗಷ್ಟೇ ಅಧಿಕಾರವಿದೆ, ಸರ್ಕಾರಕ್ಕಿಲ್ಲ.

Be the first to comment

Leave a Reply

Your email address will not be published.


*