ಶಿಸ್ತು ಅಕ್ಕರೆಗಳ ನಗುಮೊಗದ ಗುರು ಡಾ। ಮನೋರಮಾ ರಾವ್

ಶಿಸ್ತು ಅಕ್ಕರೆಗಳ ನಗುಮೊಗದ ಗುರು ಡಾ। ಮನೋರಮಾ ರಾವ್

ಡಾ। ಶ್ರೀನಿವಾಸ ಕಕ್ಕಿಲ್ಲಾಯ

ವಾರ್ತಾಭಾರತಿ, ಜುಲೈ 18, 2021

https://bit.ly/3Bfpa4A

ತಮ್ಮ ವಿದ್ಯಾರ್ಥಿಗಳಿಂದ ಎಚ್‌ಟಿಎಂಆರ್ ಮೇಡಮ್ ಎಂದೇ ಕರೆಯಲ್ಪಡುತ್ತಿದ್ದ ಡಾ. ಹಳೆಯಂಗಡಿ ತಾತಿ ಮನೋರಮಾ ರಾವ್ ಅವರು ಸುಮಾರು ಅರುವತ್ತು ವರ್ಷಗಳಿಗೂ ಹೆಚ್ಚು ಕಾಲ ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ವಿವಾದಾತೀತವಾಗಿ ಎಲ್ಲರ ಗೌರವಾದರಗಳಿಗೆ ಪಾತ್ರರಾಗಿದ್ದ ಗುರುಗಳು, ಮಂಗಳೂರು ಮಾತ್ರವಲ್ಲ, ದಕ್ಷಿಣ ಕರ್ನಾಟಕ ಹಾಗೂ ಉತ್ತರ ಕೇರಳಗಳಲ್ಲಿ ಪ್ರಖ್ಯಾತರಾಗಿದ್ದ ಸ್ತ್ರೀ ರೋಗ ಹಾಗೂ ಪ್ರಸೂತಿ ತಜ್ಞರು. ಎಲ್ಲಾ ಕಷ್ಟಗಳನ್ನು ಕೆಚ್ಚೆದೆಯಿಂದ ಎದುರಿಸಿ, ತನ್ನ ಸ್ವಸಾಮರ್ಥ್ಯವನ್ನು ಅಪಾರ ವಿಶ್ವಾಸದಿಂದ ಬಳಸಿಕೊಂಡು, ಎಂಬತ್ತೊಂಬತ್ತು ವರ್ಷಗಳ ಸಾರ್ಥಕ ಬದುಕನ್ನು ಮುಗಿಸಿ ಹೋದ ಎಚ್‌ಟಿಎಂಆರ್ ಮೇಡಂ ಮರೆಯಲಾಗದ ಪಾಠಗಳನ್ನೂ, ನೆನಪುಗಳನ್ನೂ ಬಿಟ್ಟು ಹೋಗಿದ್ದಾರೆ.

ಐವತ್ತು-ಅರುವತ್ತರ ದಶಕದವರೆಗೆ ದೇಶದ ಈ ಭಾಗದಲ್ಲಿ ವೈದ್ಯಕೀಯ ಕಾಲೇಜುಗಳು ಇಲ್ಲದಿದ್ದ ಕಾಲದಲ್ಲಿ ನಮ್ಮೂರಿನ ಮಕ್ಕಳು ವೈದ್ಯ ವಿದ್ಯೆಗಾಗಿ ಮದರಾಸು, ಲಕ್ನೋ ಮುಂತಾದೆಡೆಗೆ ಹೋಗುತ್ತಿದ್ದರು. ಮಣಿಪಾಲ-ಮಂಗಳೂರುಗಳಲ್ಲಿ 1953ರಲ್ಲಿ ಕಸ್ತೂರ್ಬಾ ವೈದ್ಯಕೀಯ ಕಾಲೇಜು (ಕೆಎಂಸಿ) ಆರಂಭಗೊಂಡ ಬಳಿಕ ಪರವೂರುಗಳಲ್ಲಿ ಕಲಿತು ತಜ್ಞರಾದ ಹಲವರು ಕೆಎಂಸಿಯಲ್ಲಿ ಉಪನ್ಯಾಸಕರಾಗಿ ಸೇರತೊಡಗಿದರು. ಹಾಗೆ ಮದರಾಸಿನಲ್ಲಿ ಎಂಬಿಬಿಎಸ್ ಕಲಿತು ಮಂಗಳೂರಿನ ಕೆಎಂಸಿಯಲ್ಲಿ 1957ರಲ್ಲೇ ಉಪನ್ಯಾಸಕಿಯಾಗಿ ಸೇರಿದ್ದ ಎಚ್‌ಟಿಎಂಆರ್ 1992ರಲ್ಲಿ ನಿವೃತ್ತಿಯಾಗಿ, ಆ ಬಳಿಕವೂ, ತೀರಾ ಇತ್ತೀಚಿನವರೆಗೂ, ವೈದ್ಯಕೀಯ ವಿದ್ಯಾರ್ಥಿಗಳಿಗೆ, ಸ್ತ್ರೀರೋಗ ತಜ್ಞರಿಗೆ, ಶಸ್ತ್ರಚಿಕಿತ್ಸಜ್ಞರಿಗೆ ತನ್ನೊಳಗಿದ್ದ ಜ್ಞಾನವನ್ನು ಧಾರೆಯೆಯೆಯುತ್ತಲೇ ಇದ್ದರು. ಹಾಗಾಗಿ ಮಂಗಳೂರು ಕೆಎಂಸಿಯ ಇದುವರೆಗಿನ ಅಸ್ತಿತ್ವದುದ್ದಕ್ಕೂ ಬಹುತೇಕ ಎಲ್ಲಾ ವಿದ್ಯಾರ್ಥಿಗಳ ಮೇಲೂ ಒಂದಿಲ್ಲೊಂದು ರೀತಿಯಲ್ಲಿ ಅವರ ಪ್ರಭಾವ ಇದ್ದೇ ಇತ್ತೆನ್ನಬಹುದು.

ಮದರಾಸಿನ ಸ್ಟೇನ್ಲಿ ಮಡಿಕಲ್ ಕಾಲೇಜಿನಲ್ಲಿ 1956-57ರಲ್ಲಿ ಎಂಬಿಬಿಎಸ್ ವ್ಯಾಸಂಗ ಮುಗಿದ ಬಳಿಕ ಮಂಗಳೂರು ಕೆಎಂಸಿಯ ರೋಗ ವಿಜ್ಞಾನ ವಿಭಾಗದಲ್ಲಿ ಸಹಾಯಕ ಶಿಕ್ಷಕಿಯಾಗಿ ಸೇರಿದ್ದ ಎಚ್‌ಟಿ‌ಎಂಆರ್, ನಂತರ ಮದರಾಸಿನಲ್ಲಿ ಸ್ತ್ರೀರೋಗ ವಿಜ್ಞಾನದಲ್ಲಿ ಎರಡು ವರ್ಷಗಳ ಡಿಪ್ಲೋಮಾ ವ್ಯಾಸಂಗ ಮುಗಿಸಿ ಕೆಎಂಸಿಯ ಸ್ತ್ರೀ ರೋಗ ವಿಭಾಗಕ್ಕೆ ಬಂದರು, ಮತ್ತೆ ವಿಶಾಖಪಟ್ಟಣದಲ್ಲಿ ಇನ್ನೆರಡು ವರ್ಷ ಎಂಡಿ ವ್ಯಾಸಂಗಕ್ಕೆ ತೆರಳಿ 1962ರಿಂದ ಪುನಃ ಕೆಎಂಸಿಯಲ್ಲಿ ಸೇರಿಕೊಂಡರು. ಎಂಟೇ ವರ್ಷದಲ್ಲಿ, 1970ರಲ್ಲಿ, ಸ್ತ್ರೀರೋಗ ವಿಭಾಗದ ಪ್ರೊಫೆಸರ್ ಹಾಗೂ ಮುಖ್ಯಸ್ಥೆಯಾಗಿ ನಿಯುಕ್ತರಾದರು, 1992ರಲ್ಲಿ ನಿವೃತ್ತಿಯಾಗುವವರೆಗೆ ಅತಿ ದೀರ್ಘ ಕಾಲ ಆ ಹುದ್ದೆಯಲ್ಲಿದ್ದವರೆಂಬ ಹಿರಿಮೆ ಅವರದಾಯಿತು. ನಡುವೆ ಕೆಲಕಾಲ ಕೆಎಂಸಿಯ ಉಪಪ್ರಾಂಶುಪಾಲೆಯಾಗಿದ್ದ ಅವರಿಗೆ ಪ್ರಾಂಶುಪಾಲೆಯಾಗುವ ಅವಕಾಶವಿದ್ದರೂ ತನ್ನ ಅತಿ ಪ್ರೀತಿಯ ವಿಭಾಗದಲ್ಲಿ ಅತಿ ಪ್ರೀತಿಯ ವಿದ್ಯಾರ್ಥಿಗಳಿಗೆ ಪಾಠ ಮಾಡುವುದು ಹಾಗೂ ಮಹಿಳೆಯರಿಗೆ ಚಿಕಿತ್ಸೆ ನೀಡುವುದನ್ನೇ ಆಯ್ದುಕೊಂಡರು.

ಮಂಗಳೂರು ಕೆಎಂಸಿಯಲ್ಲಿ ನಾವು ಎಂಬಿಬಿಎಸ್ ಓದುತ್ತಿದ್ದ ಎಂಬತ್ತರ ದಶಕದ ಮೊದಲಲ್ಲಿ ಎಚ್‌ಟಿ‌ಎಂಆರ್ ಅವರ ಸ್ತ್ರೀ ರೋಗ ಹಾಗೂ ಪ್ರಸೂತಿ ವಿಜ್ಞಾನದ ಘಟಕದಲ್ಲಿ ಅವಕಾಶ ಪಡೆಯುವುದಕ್ಕೆ, ಎಂಬಿಬಿಎಸ್ ಕೊನೆಗೆ ಅವರ ಯೂನಿಟ್ ನಲ್ಲೇ ಇಂಟರ್ನ್ ಆಗಿ ಕೆಲಸ ಮಾಡುವುದಕ್ಕೆ ಎಲ್ಲಾ ವಿದ್ಯಾರ್ಥಿಗಳು ಹಾತೊರೆಯುತ್ತಿದ್ದರು, ಆ ಅವಕಾಶ ಸಿಕ್ಕಿಬಿಟ್ಟರೆ ‘ನಾನು ಮೇಡಮ್ ಯೂನಿಟ್’ ಎಂದು ಹೇಳಿಕೊಳ್ಳಲು ಒಂದೆರಡು ಕೋಡು ಮೇಲೇರಿಬಿಡುತ್ತಿತ್ತು.

ಆ ದಿನಗಳಲ್ಲಿ ಎಚ್‌ಟಿ‌ಎಂಆರ್ ಮಂಗಳೂರಿನ ಲೇಡಿ ಗೋಶನ್ ಆಸ್ಪತ್ರೆಯ ವಿಭಾಗ ಮುಖ್ಯಸ್ಥರಾಗಿ, ತನ್ನ ಯೂನಿಟ್‌ನ ಮುಖ್ಯಸ್ಥರಾಗಿ, ಹಾಗೂ ತನ್ನ ಖಾಸಗಿ ವೈದ್ಯವೃತ್ತಿಯಲ್ಲಿ ಎಲ್ಲದರಲ್ಲೂ ಅತಿ ವ್ಯಸ್ತರಾಗಿರುತ್ತಿದುದರಿಂದ, ಮತ್ತು ಅಲ್ಲಿ ಎಲ್ಲಾದರೂ ಶಸ್ತ್ರಕ್ರಿಯೆ ಯಾ ಹೆರಿಗೆಯ ತುರ್ತು ಅಗತ್ಯವುಂಟಾದಾಗ ಅವರು ಹೋಗಬೇಕಾಗಿದ್ದುದರಿಂದ ಹಲವು ಸಲ ಅವರ ಆಸ್ಪತ್ರೆ ಪಾಠಗಳು ರದ್ದಾಗಬೇಕಾಗುತ್ತಿತ್ತು. ಮೊಬೈಲ್ ಫೋನ್ ಆಗಲೀ, ಸರಿಯಾದ ಫೋನ್ ಸಂಪರ್ಕವಾಗಲೀ ಇಲ್ಲದಿದ್ದ ಆ ದಿನಗಳಲ್ಲಿ ತಾನು ಎಲ್ಲೇ ಇರಲಿ, ತನ್ನ ವಿದ್ಯಾರ್ಥಿಗಳಿಗೆ ಯಾರ ಮೂಲಕವಾದರೂ ಸಂದೇಶ ಕಳುಹಿಸಿ, ಕ್ಷಮೆ ಯಾಚಿಸಿ, ಬೇರೊಬ್ಬರಿಂದ ಪಾಠ ನಡೆಯುವಂತೆ ಖಚಿತ ಪಡಿಸುತ್ತಿದ್ದರು. ಅಂಥ ಸಂದರ್ಭಗಳೆದುರಾದಾಗ ಯಾವ ವಿದ್ಯಾರ್ಥಿಗಳೂ  ಬೇಸರಿಸದೆ ಮುಂದಿನ ಅವಕಾಶಕ್ಕೆ ಎದುರು ನೋಡುತ್ತಿದ್ದರು, ಮೇಡಂ ಒಂದು ಗಂಟೆ ಪಾಠ ಮಾಡಿದರೆ ಹತ್ತು ಹದಿನೈದು ಗಂಟೆಗಳಲ್ಲೂ ದೊರೆಯಲಾಗದಷ್ಟು ವಿವರಗಳನ್ನು ಕಲಿಸುತ್ತಾರೆನ್ನುವುದು ಎಲ್ಲ ವಿದ್ಯಾರ್ಥಿಗಳಿಗೂ ಗೊತ್ತಿತ್ತು.

ಗರ್ಭದೊಳಗಿನ ಶಿಶುವನ್ನು ಅಥವಾ ಗರ್ಭಕೋಶವನ್ನು ಸವಿವರವಾಗಿ ಪರೀಕ್ಷಿಸುವುದಕ್ಕೆ ಈಗಿರುವಂತಹ ಅಲ್ಟ್ರಾ ಸೌಂಡ್ ಪರೀಕ್ಷಾ ವಿಧಾನವು ಲಭ್ಯವಿಲ್ಲದಿದ್ದ ಆ ಕಾಲದಲ್ಲಿ ಮನೋರಮಾ ಮೇಡಂ ಮಹಿಳೆಯನ್ನು ಪರೀಕ್ಷಿಸಿ ಎರಡು ಪುಟಗಳಷ್ಟು ವಿವರಗಳನ್ನು ಬರೆದರೆಂದರೆ, ಬಳಿಕ ಅಂಥವರಿಗೆ ಶಸ್ತ್ರಕ್ರಿಯೆಯೇನಾದರೂ ನಡೆದರೆ ಮೇಡಂ ಹೊರಗಿನಿಂದ ಪರೀಕ್ಷಿಸಿ ಬರೆದಿದ್ದಂತೆಯೇ ಒಳಗೆ ಕಂಡುಬರುತ್ತಿತ್ತು. ತನ್ನ ವೃತ್ತಿ ಜೀವನದಲ್ಲಿ 35000ಕ್ಕೂ ಹೆಚ್ಚು ಹೆರಿಗೆಗಳನ್ನು ನಡೆಸಿದ್ದ ಎಚ್‌ಟಿಎಂಆರ್ ಮೇಡಂ ಹೆರಿಗೆಯ ಸೂಕ್ಷ್ಮಾತಿಸೂಕ್ಷ್ಮ ವಿವರಗಳನ್ನು ಒಮ್ಮೆ ಹೇಳಿಕೊಟ್ಟರೆ ಮರೆಯುವುದಕ್ಕೇ ಸಾಧ್ಯವಿಲ್ಲದಂತಿರುತ್ತಿತ್ತು. ಹೆರಿಗೆ ಕೊಠಡಿಯನ್ನು ಹೇಗೆ ನಿರ್ವಹಿಸುವುದು, ಹೆರಿಗೆಗೆ ಬಂದ ಗರ್ಭಿಣಿಯರನ್ನು ಹೇಗೆ ಸೂಕ್ಷ್ಮವಾಗಿ ಪರೀಕ್ಷಿಸುವುದು, ಕ್ಲಿಷ್ಟವಾದ ಹೆರಿಗೆಗಳನ್ನು ಹೇಗೆ ಮಾಡುವುದು, ಅತೀ ಅಗತ್ಯವಿದ್ದರೆ ಇಕ್ಕುಳವನ್ನು ಹೇಗೆ ಎಚ್ಚರಿಕೆಯಿಂದ ಬಳಸುವುದು, ಹೆರಿಗೆಗೆ ನಿರ್ವಾತವನ್ನು ಯಾವಾಗ, ಹೇಗೆ ಬಳಸುವುದು ಇತ್ಯಾದಿ ವಿಷಯಗಳನ್ನು ಎಚ್‌ಟಿ‌ಎಂಆರ್ ಕಲಿಸಿಕೊಟ್ಟರೆ ಎಷ್ಟು ದೊಡ್ಡ ಪುಸ್ತಕಗಳಲ್ಲೂ ದೊರೆಯದಷ್ಟು ಮಾಹಿತಿ  ದೊರೆತು ಬಿಡುತ್ತಿತ್ತು. ಸಿಸೇರಿಯನ್ ಮಾಡುವುದೇ ಆದಲ್ಲಿ ತಾಯಿ ಮಗು ಇಬ್ಬರ ಜೀವಗಳೂ ಉಳಿಯುವಂತಿರಬೇಕು, ಮಗುವು ಗರ್ಭದಲ್ಲೇ ಮೃತ ಪಟ್ಟಿದ್ದರೆ, ಅಥವಾ ಬದುಕುಳಿಯುವ ಸಾಧ್ಯತೆಗಳು ಇಲ್ಲವೇ ಇಲ್ಲವೆಂದಾದರೆ ತಾಯಿಯಾಗುವವರನ್ನು ಸಿಸೇರಿಯನ್ ಶಸ್ತ್ರಕ್ರಿಯೆಗೆ ಒಳಪಡಿಸುವ ಬಗ್ಗೆ ಆಳವಾಗಿ ಯೋಚಿಸಬೇಕು ಎಂದೆಲ್ಲ ಎಚ್‌ಟಿ‌ಎಂಆರ್ ಕಲಿಸಿದ್ದು ನಾಲ್ಕು ದಶಕಗಳಾದರೂ ಅಚ್ಚಳಿಯದೆ ಉಳಿದಿವೆ.

ಆ ಕಾಲದಲ್ಲಿ ಫೋನ್ ಮಾತ್ರವಲ್ಲ, ವಿದ್ಯುಚ್ಛಕ್ತಿಯೂ ಆಗಾಗ ಮರೆಯಾಗುತ್ತಿತ್ತು, ಹೆರಿಗೆ, ತುರ್ತು ಶಸ್ತ್ರಕ್ರಿಯೆಗಳೆಲ್ಲ ನಡೆಯುತ್ತಿದ್ದಾಗಲೇ ಕತ್ತಲೆಯಾಗುವ ಸ್ಥಿತಿಯಿತ್ತು. ಡಾ. ಮನೋರಮಾ ಲೇಡಿ ಗೋಷನ್ ಆಸ್ಪತ್ರೆಯಲ್ಲಿ ಅದೆಷ್ಟೋ ಸಲ ಪೆಟ್ರೋಮಾಕ್ಸ್ ಉರಿಸಿಟ್ಟು ಆ ಬೆಳಕಿನಲ್ಲೇ, ಅದು ಉರಿಯುವ ಅಲ್ಪ ಹೊತ್ತಿನೊಳಗೆಯೇ, ಕ್ಷಿಪ್ರವಾಗಿ ಅತಿ ಕ್ಲಿಷ್ಟಕರವಾದ ಶಸ್ತ್ರಕ್ರಿಯೆಗಳನ್ನು ಯಶಸ್ವಿಯಾಗಿ ಮಾಡಿಬಿಡುತ್ತಿದ್ದರು. ಪ್ರಸವೋತ್ತರ ತೀವ್ರ ರಕ್ತಸ್ರಾವವಿದ್ದವರೊಬ್ಬರ ಜೀವಕ್ಕೇ ಅಪಾಯವಿದ್ದಾಗ ಕೇವಲ ಏಳೇ ನಿಮಿಷಗಳಲ್ಲಿ ಶಸ್ತ್ರಕ್ರಿಯೆ ನಡೆಸಿ ಅವರನ್ನುಳಿಸಿದಂಥ ಘಟನೆಗಳನ್ನು ಅವರ ವಿದ್ಯಾರ್ಥಿಗಳಾಗಿದ್ದವರು ಈಗಲೂ ಅದೇ ಬೆರಗಿನಿಂದ ವಿವರಿಸುತ್ತಾರೆ.

ಎಚ್‌ಟಿ‌ಎಂ‌ಆರ್ ಪಾಠಗಳು ಐದಾರು ಪುಸ್ತಕಗಳ ಸಾರಸಂಗ್ರಹದಂತಿದ್ದರೆ, ಅವರ ಶಸ್ತ್ರಕ್ರಿಯೆಗಳು ಪುಸ್ತಕಗಳಲ್ಲಿ ವಿವರಿಸಲಾಗಿದ್ದ ವಿಧಾನಗಳನ್ನು ಗೆರೆಗೆರೆಯಾಗಿ ಅನುಸರಿಸುವಷ್ಟು ಕರಾರುವಾಕ್ಕಾಗಿ ನಡೆಯುತ್ತಿದ್ದವು. ಮೊನ್ನೆ ಫೆಬ್ರವರಿ 9ರಂದು ತನ್ನ 89ನೇ ಹುಟ್ಟುಹಬ್ಬವನ್ನಾಚರಿಸಿದ ಬಳಿಕ ಸೋದರಳಿಯ ವೈದ್ಯನು ನಡೆಸಿದ್ದ ಸಂಕೀರ್ಣ ಶಸ್ತ್ರಕ್ರಿಯೆಯ ವೇಳೆ ಅಲ್ಲೇ ಕುಳಿತು ತನ್ನಲ್ಲಿದ್ದ ಪುಸ್ತಕದಿಂದ, ಎಂದಿನದೇ ಅತ್ಯುತ್ಸಾಹದಿಂದ, ಎಳೆಎಳೆಯಾಗಿ ವಿವರಿಸುತ್ತಿದ್ದರೆನ್ನುವುದನ್ನು ಅಲ್ಲಿದ್ದವರೆಲ್ಲರೂ ಹೇಳುವಾಗ ತಾನು ಕಲಿತಿದ್ದ, ಸಾವಿರಾರು ವೈದ್ಯ ವಿದ್ಯಾರ್ಥಿಗಳಿಗೆ ಕಲಿಸಿದ್ದ, ವೈದ್ಯ ವಿಜ್ಞಾನದ ಬಗ್ಗೆ ಎಚ್‌ಟಿಎಂ‌ಆರ್ ಅವರಿಗಿದ್ದ ಪ್ರೀತಿ ಮತ್ತು ಬದ್ಧತೆಗಳು ವ್ಯಕ್ತವಾಗುತ್ತವೆ. ಕೆಎಂಸಿಯ ಆರಂಭದಿಂದ ಮೂರು ದಶಕಗಳ ಕಾಲ ಸ್ತ್ರೀ ರೋಗ ಹಾಗೂ ಪ್ರಸೂತಿ ವಿಭಾಗವನ್ನು ಅತ್ಯುತ್ತಮವಾಗಿ ಕಟ್ಟಿ ಬೆಳೆಸಿದ್ದಲ್ಲದೆ, ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಹೊಸ ಚಿಕಿತ್ಸಾಕ್ರಮಗಳ ಬಗ್ಗೆ ನಿರಂತರವಾಗಿ ಕಲಿಯುತ್ತಿರುವಂತೆ ಪ್ರೋತ್ಸಾಹಿಸುತ್ತಾ, ನಿವೃತ್ತರಾದ ಬಳಿಕವೂ ಎಲ್ಲರಲ್ಲಿ ಹುರುಪನ್ನು ತುಂಬುತ್ತಿದ್ದ ಎಚ್‌ಟಿ‌ಎಂ‌ಆರ್ ಚಿರಸ್ಮರಣೀಯರು.

ಎಚ್‌ಟಿ‌ಎಂ‌ಆರ್ ತನ್ನೆಲ್ಲಾ ವಿದ್ಯಾರ್ಥಿಗಳಿಂದ ಎಷ್ಟು ಕಠಿಣವಾದ ಶಿಸ್ತನ್ನು ಬಯಸುತ್ತಿದ್ದರೋ ಅದಕ್ಕಿಂತ ಬಹುಪಾಲು ಮಿಗಿಲಾದ ಅಕ್ಕರೆಯನ್ನು ತೋರುತ್ತಿದ್ದರೆನ್ನುವುದು ಎಲ್ಲರಿಗೂ ಚೆನ್ನಾಗಿ ತಿಳಿದಿತ್ತು. ತನ್ನ ವಿದ್ಯಾರ್ಥಿಗಳನ್ನು, ಸಹೋದ್ಯೋಗಿಗಳನ್ನು, ತನ್ನಲ್ಲಿಗೆ ಚಿಕಿತ್ಸೆಗೆ ಬರುತ್ತಿದ್ದವರನ್ನು ಎಲ್ಲರನ್ನೂ ಯಾವತ್ತೂ ನಗುಮೊಗದಿಂದ, ಪ್ರೀತಿಯಿಂದ, ಹೆಸರನ್ನು ನೆನಪಿಟ್ಟು ಮಾತಾಡಿಸುತ್ತಿದ್ದ ಡಾ. ಮನೋರಮಾ ರಾವ್ ತನ್ನೊಳಗೆ ಬಹಳಷ್ಟು ನೋವನ್ನು ಅದುಮಿಟ್ಟು ಗೆದ್ದಿದ್ದರೇನೋ? ಅವರ ತಂದೆ ಎಚ್ ಟಿ ಶ್ರೀಧರ ರಾಯರು 1930-40ರ ದಶಕಗಳಲ್ಲಿ ಮಂಗಳೂರಿನ ಬಹು ದೊಡ್ಡ ರಫ್ತು ವ್ಯಾಪಾರಿಯಾಗಿದ್ದರು, ಕಾಫಿ, ಚಹಾ, ಇತರ ಸಾಂಬಾರ ಪದಾರ್ಥಗಳನ್ನು ವಿಶ್ವದೆಲ್ಲೆಡೆಗೂ ಕಳುಹಿಸುವವರಾಗಿದ್ದರು. ಎರಡನೇ ಮಹಾಯುದ್ಧದ ಕಾಲದಲ್ಲಿ, 1943ರ ಸುಮಾರಿಗೆ, ಅಮೆರಿಕಾದ ಪರ್ಲ್ ಹಾರ್ಬರ್ ಬಳಿ ನಡೆದ ಕ್ಷಿಪಣಿ ದಾಳಿಗಳಲ್ಲಿ ಸಿಲುಕಿ ಶ್ರೀಧರ ರಾಯರ ರಫ್ತು ಸರಕುಗಳನ್ನು ಹೇರಿಕೊಂಡಿದ್ದ ಹಡಗು ಮುಳುಗಿ ಹೋಯಿತು, ಅದರಿಂದ ಅವರ ವಹಿವಾಟು ಮಾತ್ರವಲ್ಲ, ಇಡೀ ಕುಟುಂಬವೇ ಮುಳುಗುವಂತಾಯಿತು. ಅವರ ಹಿರಿಯ ಮಗಳಾಗಿದ್ದ ಮನೋರಮಾ ಶಾಲೆಯಲ್ಲಿದ್ದಾಗಲೇ ಅದ್ಭುತ ಪ್ರತಿಭಾವಂತೆಯಾಗಿದ್ದಳು, ಅಂತಹ ಕಷ್ಟದ ನಡುವೆಯೂ ತನ್ನ ಓದನ್ನು ಮುಂದುವರಿಸಿದ್ದಳು.

ಆಕೆಗೆ 16 ವರ್ಷ ವಯಸ್ಸಾದಾಗ ಶ್ರೀಧರ ರಾಯರ ಆಪ್ತ ಸ್ನೇಹಿತನ ಮಗನೊಡನೆ ವಿವಾಹವಾಯಿತು. ಆದರೆ ಅದಾಗಿ ಒಂದೂವರೆ ವರ್ಷದಲ್ಲೇ ಮನೋರಮಾ ಅವರ ಪತಿಯು ದೋಣಿ ದುರಂತದಲ್ಲಿ ಮೃತರಾದರು. ಈ ಕಷ್ಟಗಳನ್ನೂ, ಎಲ್ಲರ ಕುಹಕಗಳನ್ನೂ ಎದುರಿಸಿ ಮನೋರಮಾ ತನ್ನ ಓದನ್ನು ಮುಂದುವರಿಸಿ, ಮದರಾಸಿನ ಸ್ಟೇನ್ಲಿ ಮೆಡಿಕಲ್ ಕಾಲೇಜಿನಲ್ಲಿ ಪ್ರವೇಶ ಪಡೆದರು. ಆಗಲೂ, ಬಳಿಕ ವಿಶಾಖಪಟ್ಟಣದಲ್ಲಿ ಸ್ತ್ರೀ ರೋಗ ವಿಜ್ಞಾನದಲ್ಲಿ ಡಿಪ್ಲೊಮಾ, ನಂತರ ಮದರಾಸಿನಲ್ಲಿ ಅದರಲ್ಲೇ ಎಂಡಿ ವ್ಯಾಸಂಗ ಮಾಡುವಾಗಲೂ ಇನ್ನಷ್ಟು ಕಷ್ಟಗಳನ್ನು ಅವರು ಎದುರಿಸಬೇಕಾಯಿತು. ಅವರ ಒತ್ತಿನ ತಂಗಿಯಾಗಿದ್ದ ಕೌಸಲ್ಯ ಶಿಕ್ಷಕಿಯಾಗಿ ಆಗಲೇ ಕೆಲಸ ಮಾಡುತ್ತಿದ್ದು ತನ್ನ ಸಂಬಳದ ಅರ್ಧವನ್ನು ಅಕ್ಕನಿಗೆ ಕಳುಹಿಸುತ್ತಿದ್ದರು, ಇನ್ನೂ ಅಗತ್ಯ ಬಂದಾಗ ತಾಯಿಯ ಕರಿಮಣಿಯ ಚಿನ್ನವನ್ನೂ ತಂಗಿಯ ಬಳೆಯನ್ನೂ ಒತ್ತೆಯಿಡಬೇಕಾಯಿತು.

ಇಂಥ ಕಷ್ಟಗಳಲ್ಲಿ ಕಲಿತ ಮನೋರಮಾ ಸ್ತ್ರೀ ರೋಗ ತಜ್ಞೆಯಾಗಿ ಮಂಗಳೂರಿಗೆ ಮರಳಿ ವೃತ್ತಿನಿರತರಾದ ಬಳಿಕ ತನ್ನ ಒಡಹುಟ್ಟಿದವರೆಲ್ಲರನ್ನೂ ಓದಿಸಿದರು. ತಂಗಿ ಕೌಸಲ್ಯ ಅವರನ್ನು ಶಿಕ್ಷಕಿಯ ಕೆಲಸ ಬಿಟ್ಟು ವೈದ್ಯಕೀಯ ವ್ಯಾಸಂಗಕ್ಕೆ ಸೇರುವಂತೆ ಪ್ರೇರೇಪಿಸಿ ಬೆಂಬಲಿಸಿದರು. ಕೌಸಲ್ಯ ಸೇರಿದಂತೆ ಅವರ ಒಂಬತ್ತು ತಂಗಿಯರಲ್ಲಿ ಏಳು ವೈದ್ಯರಾದರು, ಅವರಲ್ಲಿ ನಾಲ್ವರು ಸ್ತ್ರೀ ರೋಗ ತಜ್ಞರಾದರೆ, ಒಬ್ಬರು ಅರಿವಳಿಕೆ ತಜ್ಞರೂ, ಇನ್ನೊಬ್ಬರು ಶಿಶು ತಜ್ಞರೂ ಆದರು, ಒಬ್ಬ ತಂಗಿ ಬ್ಯಾಂಕ್ ಅಧಿಕಾರಿಯಾದರು; ಮೂವರು ತಮ್ಮಂದಿರಲ್ಲಿ ಒಬ್ಬರು ಶಸ್ತ್ರಚಿಕಿತ್ಸಜ್ಞರಾದರು, ಒಬ್ಬರು ದಂತ ವೈದ್ಯರಾದರು, ಇನ್ನೊಬ್ಬರು ವಕೀಲರಾದರು. ಇವರೆಲ್ಲರ ವಿದ್ಯಾಭ್ಯಾಸ ಹಾಗೂ ಯಶಸ್ಸಿನ ಪ್ರೇರಣೆ ಹಾಗೂ ದೈತ್ಯ ಶಕ್ತಿ ಮನೋರಮಾ ಅವರೇ ಆಗಿದ್ದರು.

ಎಲ್ಲ ಕಷ್ಟಗಳನ್ನೂ ಎದುರಿಸಿ, ತನ್ನ ಸಾಮರ್ಥ್ಯವನ್ನರಿತು, ಕಲಿಯುವ ಛಲವನ್ನು ಬಿಡದೆ, ತಾನೂ ಕಲಿತು, ತನ್ನವರನ್ನೂ ಕಲಿಸಿ, ಸಾವಿರಾರು ವೈದ್ಯ ವಿದ್ಯಾರ್ಥಿಗಳಿಗೆ ತನ್ನೆಲ್ಲ ಜ್ಞಾನವನ್ನು ಧಾರೆಯೆರೆದು ಕೊನೆಯ ದಿನಗಳವರೆಗೆ ಸದಾ ಹಸನ್ಮುಖಿಯಾಗಿ ಎಲ್ಲರಿಗೆ ಅಕ್ಕರೆಯ ಅಕ್ಕ, ಗುರು, ವೈದ್ಯೆ, ಎಲ್ಲವೂ ಆಗಿದ್ದ ಎಚ್‍ಟಿಎಂಆರ್ ಎಲ್ಲರಿಗೂ ಎಲ್ಲ ಕಾಲಕ್ಕೂ ಪ್ರೇರಣೆಯಾಗಿರುತ್ತಾರೆ.

Be the first to comment

Leave a Reply

Your email address will not be published.


*