ಪ್ರಜಾವಾಣಿ – ಅಂತರಾಳ: ಜೂನ್ 30, 2012

ಔಷಧಿಗೆ ಅಂಜುತ್ತಿರುವ ವೈದ್ಯರು [ನೋಡಿ]

ನಮ್ಮ ಆರೋಗ್ಯ ಕ್ಷೇತ್ರದ ಅಪ್ರತಿಮ ಸಾಧನೆಗಳು ಸುದ್ದಿ ಮಾಡುವಂತೆಯೇ ಅಲ್ಲಿನ ಕರಾಳ ಕಾರ್ಯಗಳೂ ಆಗಾಗ ಹೊರಬರುತ್ತಿರುತ್ತವೆ. ವಿಶ್ವದ ಯಾವುದೇ ಅತ್ಯುತ್ತಮ ಆರೋಗ್ಯ ವ್ಯವಸ್ಥೆಯನ್ನೂ ನಾಚಿಸುವಂತಹ ಅತಿ ನವೀನವಾದ ಚಿಕಿತ್ಸೆಗಳನ್ನು ನೀಡಬಲ್ಲ ಆಸ್ಪತ್ರೆಗಳೂ, ವೈದ್ಯರುಗಳೂ ನಮ್ಮಲ್ಲಿದ್ದಾರೆ. ಇನ್ನೊಂದೆಡೆ ತಮ್ಮ ಜ್ಞಾನವನ್ನು ದುರುಪಯೋಗ ಮಾಡಿಕೊಂಡು ಅಮಾನವೀಯವಾದ ಕಾರ್ಯಗಳನ್ನೆಸಗುವ ವೈದ್ಯರುಗಳೂ ಸಾಕಷ್ಟಿದ್ದಾರೆ. ಸಯಾಮಿ ಅವಳಿಗಳನ್ನು ಯಶಸ್ವಿಯಾಗಿ ಬೇರ್ಪಡಿಸಿದ ಸುದ್ದಿಯ ಮಗ್ಗುಲಲ್ಲೇ ಸಾವಿರಾರು ಹೆಣ್ಣು ಭ್ರೂಣಗಳನ್ನು ಗರ್ಭಪಾತ ಮಾಡಿಸಿದ ವೈದ್ಯ ದಂಪತಿಯ ಬಂಧನದ ಸುದ್ದಿಯೂ ಕಾಣಸಿಗುತ್ತದೆ. ಯಾವುದೇ ಮಹದಾಸೆಯಿಲ್ಲದೆ, ಲೋಲುಪತೆಗೆ ಒಳಗಾಗದೆ ಪ್ರಾಮಾಣಿಕತೆಯಿಂದ ದುಡಿಯುವ ವೈದ್ಯರ ಜೊತೆಗೇ ಐಷಾರಾಮಿ ಜೀವನಕ್ಕಾಗಿ ವೃತ್ತಿನಿಯಮಗಳನ್ನು ಗಾಳಿಗೆ ತೂರಲು ಹಿಂದುಮುಂದು ನೋಡದವರೂ ಇರುತ್ತಾರೆ. ಇಂತಹ ಸನ್ನಿವೇಶದಲ್ಲಿ ನಮ್ಮ ಆರೋಗ್ಯ ವ್ಯವಸ್ಥೆಯ ಎಲ್ಲ ಮಜಲುಗಳನ್ನೂ ನಿಯಂತ್ರಿಸುವ ಕ್ರಮಕ್ಕೆ ಸರ್ಕಾರವು ಮುಂದಾಗಿರುವಾಗ ವೈದ್ಯರ ಸಂಘಟನೆಗಳು ಅದನ್ನು ಕಟುವಾಗಿ ವಿರೋಧಿಸುತ್ತಿರುವುದನ್ನು ನಾವಿಂದು ಕಾಣುತ್ತಿದ್ದೆೀವೆ. ಇಲ್ಲಿ ಯಾರು ಸರಿ, ಯಾರು ತಪ್ಪು ಎನ್ನುವುದಕ್ಕಿಂತಲೂ ಆರೋಗ್ಯ ವ್ಯವಸ್ಥೆಯನ್ನು ಆದಷ್ಟು ಜನಸ್ನೇಹಿಯನ್ನಾಗಿಸುವ ದೃಷ್ಟಿಯಿಂದ ಯಾವುದು ಒಳ್ಳೆಯದು ಎನ್ನುವುದೇ ಮುಖ್ಯವಾಗುತ್ತದೆ.

ಪ್ರಸ್ತುತ ನಮ್ಮ ದೇಶದಲ್ಲಿ ಹಲಬಗೆಯ ವೈದ್ಯರಿದ್ದು, ಅವರ ತರಬೇತಿ ಹಾಗೂ ವೃತ್ತಿಗಳ ಮೇಲೆ ನಿಗಾ ವಹಿಸುವುದಕ್ಕೆ ಹಲವು ವೈದ್ಯಕೀಯ ಪರಿಷತ್ತುಗಳನ್ನು ಕೇಂದ್ರೀಯ ಕಾಯಿದೆಗಳಡಿಯಲ್ಲಿ ನಿಯುಕ್ತಗೊಳಿಸಲಾಗಿದೆ. ಭಾರತೀಯ ವೈದ್ಯಕೀಯ ಪರಿಷತ್ತು ಅಧಿನಿಯಮ 1956ರ ಅಡಿಯಲ್ಲಿ ಸ್ಥಾಪಿತವಾಗಿರುವ ಭಾರತೀಯ ವೈದ್ಯಕೀಯ ಪರಿಷತ್ತು ಆಧುನಿಕ ವೈದ್ಯ ವಿಜ್ಞಾನದಲ್ಲಿ ತರಬೇತಿ ನೀಡುವ ವೈದ್ಯಕೀಯ ಕಾಲೇಜುಗಳನ್ನು ನಿಯಂತ್ರಿಸುವುದು, ಆಧುನಿಕ ವೈದ್ಯರ ಹೆಸರುಗಳನ್ನೂ, ಪದವಿಗಳನ್ನೂ ನೋಂದಾಯಿಸುವುದು ಹಾಗೂ ಅವರ ವೃತ್ತಿಸಂಹಿತೆಯನ್ನು ರೂಪಿಸಿ ಅದರಂತೆ ನಿಗಾ ವಹಿಸುವುದು, ತಪ್ಪಿತಸ್ಥ ವೈದ್ಯರ ನೋಂದಣಿಯನ್ನು ರದ್ದು ಪಡಿಸಿ ಅವರು ವೃತ್ತಿಯನ್ನು ಮುಂದುವರಿಸದಂತೆ ತಡೆಯುವುದು ಇವೇ ಮುಂತಾದ ಅಧಿಕಾರಗಳನ್ನು ಹೊಂದಿದೆ.

ಭಾರತೀಯ ವೈದ್ಯಕೀಯ ಪದ್ಧತಿಗಳೆನಿಸಿಕೊಂಡಿರುವ ಆಯುರ್ವೇದ, ಸಿದ್ಧ ಹಾಗೂ ಯುನಾನಿಗಳ ವೈದ್ಯರನ್ನು 1970ರ ಭಾರತೀಯ ವೈದ್ಯಶಾಸ್ತ್ರಗಳ ಕೇಂದ್ರ ಪರಿಷತ್ತಿನ ಕಾಯಿದೆಯಡಿಯಲ್ಲಿ ಸ್ಥಾಪಿತವಾಗಿರುವ ಭಾರತೀಯ ವೈದ್ಯಶಾಸ್ತ್ರಗಳ ಕೇಂದ್ರ ಪರಿಷತ್ತು ನಿಯಂತ್ರಿಸಿದರೆ, ಹೋಮಿಯೋಪತಿ ವೈದ್ಯರನ್ನು ನಿಯಂತ್ರಿಸುವ ಕಾರ್ಯವನ್ನು 1973ರ ಹೋಮಿಯೋಪತಿ ಕೇಂದ್ರ ಪರಿಷತ್ತಿನ ಕಾಯಿದೆಯಡಿಯಲ್ಲಿ ಸ್ಥಾಪಿತವಾಗಿರುವ ಹೋಮಿಯೋಪತಿ ಕೇಂದ್ರ ಪರಿಷತ್ತು ಮಾಡುತ್ತದೆ. ಅದೇ ರೀತಿ, ದಂತ ವೈದ್ಯರು, ದಾದಿಯರು, ಔಷಧಿಕಾರರು ಹಾಗೂ ಇತರ ಸಹ ವೈದ್ಯಕೀಯ ವೃತ್ತಿಯವರನ್ನು ನಿಯಂತ್ರಿಸುವ ಆಯಾ ಪರಿಷತ್ತುಗಳೂ ಇವೆ. ಈಗಿರುವ ಪರಿಷತ್‌ಗಳು ಮುಖ್ಯವಾಗಿ ಆಯಾ ವೃತ್ತಿಗಳಲ್ಲಿ ಶಿಕ್ಷಣ ನೀಡುವ ಕಾಲೇಜುಗಳ ನಿಯಂತ್ರಣದಲ್ಲಿಯೇ ಬಹುಪಾಲು ಮುಳುಗಿದ್ದು ವೃತ್ತಿಗೆ ಸಂಬಂಧಿಸಿದ ಇತರ ವಿಚಾರಗಳತ್ತ ಅವು ಗಮನ ಹರಿಸುತ್ತಲೇ ಇಲ್ಲ ಎನ್ನಬಹುದು.

ವೈದ್ಯಶಿಕ್ಷಣದ ಉನ್ನತ ಗುಣಮಟ್ಟವನ್ನು ಕಾಯುವ ಮೂಲಕ ಎಲ್ಲಾ ಭಾರತೀಯರಿಗೆ ಉತ್ತಮ ಆರೋಗ್ಯ ಸೇವೆಯು ದೊರೆಯುವಂತೆ ಮಾಡುವುದೇ ಭಾರತೀಯ ವೈದ್ಯಕೀಯ ಪರಿಷತ್ತಿನ ಧ್ಯೇಯವಾಕ್ಯವೆಂದು ಅದರ ಜಾಲತಾಣದಲ್ಲಿ ಘೋಷಿಸಲಾಗಿದೆ. ಪರಿಷತ್ತು ಆ ಕೆಲಸವನ್ನಾದರೂ ಸರಿಯಾಗಿ ನಿಭಾಯಿಸುತ್ತಿದೆಯೇ ಎನ್ನುವುದು ಪ್ರಶ್ನಾರ್ಹವಾದರೂ, ಬೇರಾವ ಜವಾಬ್ದಾರಿಗಳ ಬಗ್ಗೆ ಅದು ತಲೆ ಕೆಡಿಸಿಕೊಳ್ಳುತ್ತಿಲ್ಲ ಎನ್ನುವುದಂತೂ ಇದರಿಂದ ಸ್ಪಷ್ಟವಾಗುತ್ತದೆ.

ಇಂತಹ ಸನ್ನಿವೇಶದಲ್ಲಿ ಆಧುನಿಕ ವೈದ್ಯ ವಿಜ್ಞಾನದ ಎಲ್ಲ ಅಂಗಗಳನ್ನು ಒಂದೇ ವ್ಯವಸ್ಥೆಯೊಳಗೆ ನಿಯಂತ್ರಿಸಲು ಸಾಧ್ಯವಾಗುವಂತೆ `ಆರೋಗ್ಯ ಸೇವೆಗಳಲ್ಲಿ ಮಾನವ ಸಂಪನ್ಮೂಲಗಳ ರಾಷ್ಟ್ರೀಯ ಆಯೋಗ`(ಎನ್‌ಸಿಎಚ್‌ಆರ್‌ಎಚ್)ವನ್ನು ಸ್ಥಾಪಿಸುವ ಮಸೂದೆಯನ್ನು 2011ರ ಡಿಸೆಂಬರ್‌ನಲ್ಲಿ ರಾಜ್ಯಸಭೆಯಲ್ಲಿ ಮಂಡಿಸಲಾಗಿದೆ. ಆಧುನಿಕ ವೈದ್ಯ ವಿಜ್ಞಾನಕ್ಕೆ ಸಂಬಂಧಿಸಿದ ವಿವಿಧ ವೃತ್ತಿ ವಿಶೇಷಗಳನ್ನು ನಿಯಂತ್ರಿಸುವುದಕ್ಕಾಗಿ ಈಗ ಅಸ್ತಿತ್ವದಲ್ಲಿರುವ ಎಲ್ಲ ಪರಿಷತ್ತುಗಳೂ ಇನ್ನು ಈ ಪ್ರಸ್ತಾವಿತ ಆಯೋಗದ ನಿಯಂತ್ರಣಕ್ಕೆ ಒಳಪಡಲಿದ್ದು, ಈ ಪರಿಷತ್ತುಗಳ ಸರ್ವಾಧಿಕಾರವು ಇದರಿಂದಾಗಿ ಕೊನೆಗೊಳ್ಳಲಿದೆ.

ಆಧುನಿಕ ವೈದ್ಯವಿಜ್ಞಾನದ ವಿವಿಧ ವಿಭಾಗಗಳಲ್ಲಿ ಅಧ್ಯಯನ ಹಾಗೂ ಸಂಶೋಧನೆಗಳನ್ನು ಯೋಜಿಸಿ, ಉತ್ತೇಜಿಸಲು ಹಾಗೂ ಎಲ್ಲೆಡೆ ಏಕರೂಪದ ವೃತ್ತಿ ಶಿಕ್ಷಣವನ್ನು ಸಾಧ್ಯವಾಗಿಸಲು ಹೊಸದಾದ ರಾಷ್ಟ್ರೀಯ ಆರೋಗ್ಯ ಶಿಕ್ಷಣ ಮಂಡಳಿಯನ್ನು ಈ ಆಯೋಗದಡಿಯಲ್ಲಿ ಸ್ಥಾಪಿಸಲಾಗುವುದು. ಆಧುನಿಕ ವೈದ್ಯವಿಜ್ಞಾನದಲ್ಲಿ ವೃತ್ತಿಪರ ಶಿಕ್ಷಣವನ್ನು ನೀಡುವ ಎಲ್ಲ ವಿದ್ಯಾಸಂಸ್ಥೆಗಳನ್ನು ಪರಿಶೀಲಿಸಿ ಅವುಗಳಲ್ಲಿರುವ ಸೌಲಭ್ಯಗಳ ಮೌಲ್ಯೀಕರಣ ಮಾಡುವುದಕ್ಕಾಗಿ ಪ್ರತ್ಯೇಕವಾದ ರಾಷ್ಟ್ರೀಯ ಮೌಲ್ಯೀಕರಣ ಹಾಗೂ ವಿಮರ್ಶಾ ಸಮಿತಿಯನ್ನೂ ಈ ಆಯೋಗದಡಿಯಲ್ಲಿ ಸ್ಥಾಪಿಸಲಾಗುವುದು. ಇದರಿಂದಾಗಿ ಈ ವರೆಗೆ ವಿವಿಧ ಪರಿಷತ್ತುಗಳ ವ್ಯಾಪ್ತಿಗೊಳಪಟ್ಟಿದ್ದ ವೈದ್ಯಕೀಯ ಹಾಗೂ ಸಹ ವೈದ್ಯಕೀಯ ಶಿಕ್ಷಣ ವ್ಯವಸ್ಥೆಗಳ ನಿಯಂತ್ರಣವು ಇನ್ನು ಮುಂದೆ ಅವುಗಳಿಂದ ಬೇರ್ಪಟ್ಟು ಈ ಹೊಸ ಆಯೋಗದಡಿಯಲ್ಲಿರುವ ಹೊಸ ಮಂಡಳಿಗಳ ವ್ಯಾಪ್ತಿಯೊಳಕ್ಕೆ ಬರಲಿವೆ ಹಾಗೂ ಪರಿಷತ್ತುಗಳ ಕಾರ್ಯವ್ಯಾಪ್ತಿಯು ಕೇವಲ ಆಯಾ ವೃತ್ತಿನಿರತರನ್ನು ನೋಂದಾಯಿಸಿ, ನಿಯಂತ್ರಿಸುವುದಕ್ಕಷ್ಟೇ ಸೀಮಿತಗೊಳ್ಳಲಿದೆ.

ವೈದ್ಯರು ತಮ್ಮ ವೃತ್ತಿ ಸಂಹಿತೆಯನ್ನು ಪಾಲಿಸುತ್ತಿರುವುದನ್ನು ಖಚಿತಪಡಿಸುವ ಜವಾಬ್ದಾರಿಯೂ ವೈದ್ಯಕೀಯ ಪರಿಷತ್ತಿನದ್ದಾಗಿದ್ದು, ಅದನ್ನು ತಪ್ಪಿ ಗಂಭೀರವಾದ ಲೋಪಗಳನ್ನೆಸಗಿದವರನ್ನು ಶಿಸ್ತುಕ್ರಮಕ್ಕೊಳಪಡಿಸುವ ಅಧಿಕಾರವನ್ನೂ ಅದು ಹೊಂದಿದೆ. ಆದರೆ ಮೊದಲೇ ಹೇಳಿದಂತೆ ಹೊಸ ಕಾಲೇಜುಗಳ ಗುಂಗಿನಲ್ಲಿರುವ ಪರಿಷತ್ತಿಗೆ ಇದನ್ನೆಲ್ಲ ಮಾಡಲು ಸಮಯವಿದ್ದಂತಿಲ್ಲ. ಅಮೀರ್ ಖಾನ್ ನಡೆಸುತ್ತಿರುವ `ಸತ್ಯಮೇವ ಜಯತೇ` ಕಾರ್ಯಕ್ರಮದಲ್ಲಿ ವೈದ್ಯಕೀಯ ಪರಿಷತ್ತಿನ ಅಧ್ಯಕ್ಷರಾದ ಡಾ. ಕೆ. ಕೆ. ತಲ್ವಾರ್ ಅವರೇ ಒಪ್ಪಿಕೊಂಡಂತೆ ಒಬ್ಬನೇ ಒಬ್ಬ ತಪ್ಪಿತಸ್ಥ ವೈದ್ಯನ ಮೇಲೂ ಪರಿಷತ್ತಿನ ವತಿಯಿಂದ ಶಿಸ್ತುಕ್ರಮಗಳನ್ನು ಕೈಗೊಂಡ ನಿದರ್ಶನಗಳಿಲ್ಲ. ಯಾವುದೇ ಔಷಧ ಕಂಪೆನಿಗಳಿಂದ ಪ್ರಾಯೋಜಕತ್ವವನ್ನಾಗಲೀ, ನೆರವನ್ನಾಗಲೀ ಪಡೆಯದಿರುವುದು, ತಮ್ಮ ವೃತ್ತಿಯಲ್ಲಿ ಒಬ್ಬರಿಂದೊಬ್ಬರು ಶುಲ್ಕವನ್ನು ಹಂಚಿಕೊಳ್ಳದಿರುವುದು ಇವೇ ಮುಂತಾದ ನಿರ್ಬಂಧಗಳನ್ನು ಪರಿಷತ್ತಿನ ವೃತ್ತಿ ಸಂಹಿತೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದ್ದರೂ, ಇವನ್ನೆಲ್ಲ ಹಾಡು ಹಗಲೇ ಗಾಳಿಗೆ ತೂರಲಾಗುತ್ತಿರುವುದು ಗುಟ್ಟಾಗೇನೂ ಉಳಿದಿಲ್ಲ.

ಐಎಂಎ ಸೇರಿದಂತೆ ಎಲ್ಲ ವೈದ್ಯಕೀಯ ಸಂಘಟನೆಗಳ ಎಲ್ಲ ಸಮ್ಮೇಳನಗಳೂ, ಎಲ್ಲ ವಿಚಾರಗೋಷ್ಠಿಗಳೂ ಕಂಪೆನಿಗಳ ಪ್ರಾಯೋಜಕತ್ವವಿಲ್ಲದೆ ನಡೆಯುವುದೇ ಇಲ್ಲವೆನ್ನುವ ಪರಿಸ್ಥಿತಿಯಿದ್ದು, ಹಲವು ವೈದ್ಯರು ಈ ಕಂಪೆನಿಗಳ ನೆರವಿನಿಂದ ಪದೇ ಪದೇ ವಿದೇಶಯಾತ್ರೆಗಳನ್ನು ಕೈಗೊಳ್ಳುತ್ತಿರುವುದೂ ಸಾಮಾನ್ಯವಾಗಿ ಬಿಟ್ಟಿದೆ. ಇತ್ತೀಚಿನ ವರ್ಷಗಳಲ್ಲಿ ರೋಗಿಗಳನ್ನೇ ಕತ್ತಲಲ್ಲಿಟ್ಟು ಹಲವು ಹೊಸ ಔಷಧಗಳ ಪ್ರಯೋಗಗಳಲ್ಲೂ ಸಾಕಷ್ಟು ವೈದ್ಯರು ಪಾಲ್ಗೊಳ್ಳುತ್ತಿರುವುದು ಮತ್ತು ಅದರಿಂದಾಗಿ ಕೆಲವೊಂದು ರೋಗಿಗಳು ಗಂಭೀರವಾದ ಸಮಸ್ಯೆಗಳಿಗೆ ತುತ್ತಾಗಿರುವುದು ಕೂಡಾ ವರದಿಯಾಗಿದೆ. ಈ ಎಲ್ಲ ಸಂದರ್ಭಗಳಲ್ಲಿ ಐಎಂಎ ನಿಲುವು ರೋಗಿಗಳ ಪರವಾಗಿಯಾಗಲೀ, ವೃತ್ತಿಯ ಘನತೆ-ಗೌರವಗಳ ಪರವಾಗಿಯಾಗಲೀ ಇದ್ದಂತಿಲ್ಲ. ಹಾಗಿರುವಾಗ, ವೈದ್ಯಕೀಯ ಪರಿಷತ್ತಿಗೆ ವೃತ್ತಿಯ ನಿಯಂತ್ರಣವಷ್ಟನ್ನೇ ವಹಿಸಿ ಅದರ ಮೂಲ ಜವಾಬ್ದಾರಿಯನ್ನು ನೆನಪಿಸುವ ಕೆಲಸವನ್ನು ಕೇಂದ್ರ ಸರಕಾರವು ಕೈಗೊಂಡರೆ ಅದನ್ನು ವಿರೋಧಿಸುವ ನೈತಿಕತೆಯು ಐಎಂಎಗೆ ಇದೆಯೇ?

ವೈದ್ಯಕೀಯ ಪರಿಷತ್ತು ಅದರ ಸದಸ್ಯರಿಂದ ಚುನಾಯಿಸಲ್ಪಟ್ಟ ಆಡಳಿತವನ್ನು ಹೊಂದಿರಬೇಕಾಗಿದ್ದರೂ ಕೇಂದ್ರ ಹಾಗೂ ರಾಜ್ಯಗಳಲ್ಲಿರುವ ವೈದ್ಯಕೀಯ ಪರಿಷತ್ತುಗಳಿಗೆ ಚುನಾವಣೆಗಳು ನಡೆದು ದಶಕಗಳೇ ಕಳೆದಿವೆ. ಕರ್ನಾಟಕ ವೈದ್ಯಕೀಯ ಪರಿಷತ್ತಿಗೆ ಹದಿನೇಳು ವರ್ಷಗಳ ಬಳಿಕ ಕಳೆದ ವರ್ಷದ ಆಗಸ್ಟ್‌ನಲಿ ್ಲನಡೆದ ಚುನಾವಣೆಯಲ್ಲಿ 51,500 ಸದಸ್ಯರ ಪೈಕಿ ಕೇವಲ 6600 ಸದಸ್ಯರು, ಅಂದರೆ ಶೇ. 13ರಷ್ಟು ಸದಸ್ಯರು, ಮಾತ್ರವೇ ಮತ ಚಲಾಯಿಸಿದ್ದು, ಅದೀಗ ಕೋರ್ಟು ಮೆಟ್ಟಿಲೇರಿ ಸ್ಥಗಿತಗೊಂಡಿದೆ. ವೈದ್ಯಕೀಯ ಪರಿಷತ್ತಿನ ಆಗುಹೋಗುಗಳಲ್ಲಿ ಅದರ ಘನತೆಯನ್ನು ಕಾಯುವಲ್ಲಿ ವೈದ್ಯರಿಗೇ ಆಸಕ್ತಿಯಿದ್ದಂತಿಲ್ಲ. ಐಎಂಎ ಇದಕ್ಕೆ ಹೊರತಲ್ಲ.

ವೈದ್ಯಕೀಯ ಪರಿಷತ್ತು ವಿಫಲವಾಗಿರುವಲ್ಲಿ ಹೊಸ ಮಸೂದೆಯಡಿಯಲ್ಲಿ ಸ್ಥಾಪಿಸಲಾದ ಆಯೋಗವಾಗಲೀ, ಸಮಿತಿ-ಮಂಡಲಿಗಳಾಗಲೀ ಯಶಸ್ವಿಯಾಗಿ ಕಾರ್ಯ ನಿರ್ವಹಿಸಬಹುದು ಎನ್ನುವ ಅಪೇಕ್ಷೆಯನ್ನೂ ಇಟ್ಟುಕೊಳ್ಳುವಂತಿಲ್ಲ. ಈ ಆಯೋಗ ಹಾಗೂ ಅದರಡಿಯ ಸಮಿತಿಗಳ ಸದಸ್ಯರನ್ನು ಸರಕಾರದಿಂದ ನೇರವಾಗಿ ನೇಮಿಸಲ್ಪಟ್ಟ ಆಯ್ಕೆ ಸಮಿತಿಯೇ ಆರಿಸಲಿರುವುದರಿಂದ ಹೊಸ ಕಾಲೇಜುಗಳ ಸ್ಥಾಪನೆಯು ಇನ್ನು ಮುಂದಕ್ಕೆ ಸರಕಾರದ ನೇರ ನಿಯಂತ್ರಣಕ್ಕೆ ಒಳಪಡಲಿದೆ. ಈಗಿನ ಮತ್ತು ಹಿಂದಿನ ಸರಕಾರಗಳು ವೈದ್ಯಕೀಯ ಪರಿಷತ್ತನ್ನು ನಡೆಸಿಕೊಂಡಿರುವ ರೀತಿಯನ್ನು ನೋಡಿದರೆ, ಹೊಸ ಕಾಲೇಜುಗಳ ಸ್ಥಾಪನೆಯ ಭರಾಟೆಯನ್ನೂ, ಅವುಗಳ ಗುಣಮಟ್ಟವನ್ನು ಕಾಯುವಲ್ಲಿ ಆಗಿರುವ ಸರ್ವವಿಧದ ಲೋಪಗಳನ್ನೂ ಗಮನಿಸಿದರೆ ಹೊಸ ವ್ಯವಸ್ಥೆಯಿಂದ ಹೆಚ್ಚಿನ ಒಳಿತನ್ನು ನಿರೀಕ್ಷಿಸುವುದು ಮೂರ್ಖತನವಾದೀತು. ಆದರೂ ಐಎಂಎ ಈ ಹೊಸ ವ್ಯವಸ್ಥೆಯನ್ನು ಸಾರಾ ಸಗಟಾಗಿ ವಿರೋಧಿಸುವ ಬದಲಿಗೆ ಅದನ್ನು ಇನ್ನಷ್ಟು ಹೆಚ್ಚು ಬಲಪಡಿಸುವಂತೆ ಹಾಗೂ ಅಲ್ಲಿನ ನೇಮಕಾತಿಗಳನ್ನು ಪ್ರಜಾಸತ್ತಾತ್ಮಕವಾಗಿಯೂ, ಪಾರದರ್ಶಿಯಾಗಿಯೂ ನಡೆಸುವಂತೆ ಒತ್ತಡ ಹೇರುವುದು ಉಚಿತವಾಗುತ್ತದೆ.

ನಮ್ಮ ದೇಶದ ಆರೋಗ್ಯ ವ್ಯವಸ್ಥೆ ಆಧುನಿಕ ವೈದ್ಯಕೀಯ ಶಿಕ್ಷಣ ಹಾಗೂ ವೃತ್ತಿಪರರ ಕೆಲಸಕಾರ್ಯಗಳನ್ನೂ ಉತ್ತಮಪಡಿಸುವ ನಿಜವಾದ ಇರಾದೆಯು ಸರ್ಕಾರಕ್ಕಿದ್ದರೆ, ವೈದ್ಯಕೀಯ ಶಿಕ್ಷಣವನ್ನು ಸಂಪೂರ್ಣವಾಗಿ ರಾಷ್ಟ್ರೀಕರಿಸಿ ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆ, ಚಂಢೀಗಡದ ಸ್ನಾತಕೋತ್ತರ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆ ಮುಂತಾದ ದೇಶದ ಅತ್ಯುನ್ನತ ವೈದ್ಯ ವಿಜ್ಞಾನ ಸಂಸ್ಥೆಗಳ ಉಸ್ತುವಾರಿಯಲ್ಲಿ ವೈದ್ಯ ಶಿಕ್ಷಣ ಕಾರ್ಯಕ್ರಮವನ್ನು ರೂಪಿಸುವುದೊಂದೇ ದಾರಿಯಾಗಿದೆ. ಎಲ್ಲ ವೈದ್ಯಕೀಯ ಕಾಲೇಜುಗಳಿಗೂ ಈ ಸಂಸ್ಥೆಗಳ ನೆರವಿನಿಂದ ಸಾಮಾನ್ಯ ಪ್ರವೇಶ ಪರೀಕ್ಷೆಗಳನ್ನು ನಡೆಸಿ, ಆ ಆರ್ಹತೆಯ ಆಧಾರದಲ್ಲಷ್ಟೆ ಪ್ರವೇಶಾವಕಾಶವನ್ನು ಒದಗಿಸಬೇಕು. ಅದಕ್ಕೆ ಬದಲಾಗಿ, ವೈದ್ಯ ವೃತ್ತಿ ಶಿಕ್ಷಣಕ್ಕೆ ಪ್ರವೇಶಾವಕಾಶವನ್ನು ನೀಡುವ ಅಧಿಕಾರವು ಖಾಸಗಿ ಕಾಲೇಜುಗಳ ಕೈಗಳಲ್ಲಿರುವವರೆಗೂ ವೈದ್ಯ ಶಿಕ್ಷಣದ ಮಟ್ಟವು ಸುಧಾರಿಸುವುದು ಸಾಧ್ಯವಿಲ್ಲ.

ನಮ್ಮ ದೇಶದ ಅತ್ಯುನ್ನತವಾದ ಹಾಗೂ ಅತ್ಯುತ್ತಮವಾದ ವೈದ್ಯ ವಿಜ್ಞಾನ ಸಂಸ್ಥೆಗಳೆನಿಸಿಕೊಂಡಿರುವ ದೆಹಲಿಯ ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆ, ಚಂಢೀಗಡದ ಸ್ನಾತಕೋತ್ತರ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆ, ಲಕ್ನೋದ ಸಂಜಯ ಗಾಂಧಿ ಸ್ನಾತಕೋತ್ತರ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆ, ಪುದುಚೇರಿಯ ಜವಹರಲಾಲ್ ನೆಹರೂ ಸ್ನಾತಕೋತ್ತರ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆ, ಬೆಂಗಳೂರಿನ ನಿಮ್ಹಾನ್ಸ್, ಜಯದೇವ ಆಸ್ಪತ್ರೆ, ಕಿದ್ವಾಯಿ ಆಸ್ಪತ್ರೆ ಹಾಗೂ ಬೆಂಗಳೂರು, ಮೈಸೂರು, ಹುಬ್ಬಳ್ಳಿ ಮತ್ತು ಬಳ್ಳಾರಿಗಳಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಎಲ್ಲವೂ ಸರ್ಕಾರಿ ಸಂಸ್ಥೆಗಳೇ ಆಗಿದ್ದು, ಸರ್ಕಾರದ ಬೆಂಬಲವಿದ್ದರೆ ಎಲ್ಲವನ್ನೂ ಸಾಧಿಸಬಹುದು ಎನ್ನುವುದಕ್ಕೆ ಅತ್ಯುತ್ತಮವಾದ ನಿದರ್ಶನಗಳಾಗಿವೆ.

ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯೆಂದು ಕೊಚ್ಚಿಕೊಳ್ಳುವ ನಮ್ಮ ಸರ್ಕಾರಕ್ಕೆ ದೇಶದ ಆರ್ಥಿಕತೆಯ ಬೆನ್ನೆಲುಬಾಗಿರುವ ಜನಸಾಮಾನ್ಯರ ಆರೋಗ್ಯರಕ್ಷಣೆಗಾಗಿ ಇನ್ನೊಂದಷ್ಟು ಖರ್ಚುಮಾಡುವುದೇನೂ ಅಸಾಧ್ಯವಲ್ಲ. ಆದರೆ ಅದಕ್ಕೆ ಸ್ವಹಿತಾಸಕ್ತಿಗಿಂತಲೂ ಸಾಮಾಜಿಕ ಕಳಕಳಿ ಹೆಚ್ಚಿರಬೇಕಾಗುತ್ತದೆ ಅಷ್ಟೇ. ಅಂತಹಾ ಆಡಳಿತಕ್ಕಾಗಿ ನಾವು ಕಾಯಬೇಕು, ಇಲ್ಲವೇ ಆರಿಸಿ ತರಬೇಕು.

ಐಎಂಎ ವಿರೋಧಿಸುತ್ತಿರುವುದೇಕೆ? [ನೋಡಿ]

ಆರೋಗ್ಯ ಸೇವೆಗಳಲ್ಲಿ ಮಾನವ ಸಂಪನ್ಮೂಲಗಳ ರಾಷ್ಟ್ರೀಯ ಆಯೋಗವನ್ನು ಸ್ಥಾಪಿಸುವ ಮಸೂದೆಯನ್ನು ಬದಲಿ ಪದ್ಧತಿಗಳ ವೈದ್ಯರು ವಿರೋಧಿಸುತ್ತಿರುವಂತೆಯೇ ಆಧುನಿಕ ವೈದ್ಯರೂ ವಿರೋಧಿಸುತ್ತಿದ್ದಾರೆ, ಅದಕ್ಕಾಗಿ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ನೇತೃತ್ವದಲ್ಲಿ ಒಂದು ದಿನದ ಮುಷ್ಕರವನ್ನೂ ಮಾಡಿದ್ದಾಗಿದೆ.

ಈ ಮಸೂದೆಯಿಂದ ತಮ್ಮ ವೃತ್ತಿಗೇ ಕುತ್ತು ಬರಬಹುದೆಂದು ಆಧುನಿಕ ವೈದ್ಯರ ಸಂಘಟನೆಗಳೂ, ಬದಲಿ ವೈದ್ಯರ ಸಂಘಟನೆಗಳೂ ಒಕ್ಕೊರಳಿನಿಂದ ಪ್ರತಿಭಟಿಸುತ್ತಿವೆ. ಬದಲಿ ಪದ್ಧತಿಗಳವರು ತಮ್ಮನ್ನು ಮಸೂದೆಯಿಂದ ಹೊರಗಿಟ್ಟದ್ದಕ್ಕಾಗಿ ವಿರೋಧಿಸುತ್ತಿದ್ದರೆ, ಆಧುನಿಕ ವೈದ್ಯರು ತಮ್ಮನ್ನು ಅದರಲ್ಲಿ ಸೇರಿಸಿರುವುದಕ್ಕಾಗಿ ವಿರೋಧಿಸುತ್ತಿದ್ದಾರೆ.
ಈ ಮಸೂದೆಯ ಹೆಸರಿನಲ್ಲಿ ಆಧುನಿಕ ವೈದ್ಯ ವಿಜ್ಞಾನದೊಂದಿಗೆ ಸಮಾನತೆಯನ್ನು ಗಳಿಸುವುದು ಬದಲಿಗಳ ಹವಣಿಕೆಯಾದರೆ, ತಮ್ಮ ಮೇಲೆ ಯಾವುದೇ ನಿಯಂತ್ರಣಗಳಿರಬಾರದೆನ್ನುವುದು ಆಧುನಿಕ ವೈದ್ಯರ ಬಯಕೆಯಾಗಿದೆ.
ಆದರೆ ಐಎಂಎ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಬೆರಳೆಣಿಕೆಯ ವೈದ್ಯರಷ್ಟೇ ಭಾಗವಹಿಸಿದ್ದನ್ನು ಗಮನಿಸಿದರೆ, ಬಹುಪಾಲು ವೈದ್ಯರು ಸಂಘದ ನಿಲುವನ್ನು ಬೆಂಬಲಿಸುತ್ತಿಲ್ಲವೆನ್ನುವುದು ವೇದ್ಯವಾಗುತ್ತದೆ.

ಇದಕ್ಕೂ ಕಾರಣಗಳಿಲ್ಲದಿಲ್ಲ. ನಮ್ಮ ಆರೋಗ್ಯ ವ್ಯವಸ್ಥೆಯ ವಿಶ್ವಾಸಾರ್ಹತೆಯು ಕುಸಿದಿರುವುದಕ್ಕೆ, ವೈದ್ಯಶಿಕ್ಷಣದ ಗುಣಮಟ್ಟವು ಸೊರಗಿ ಕಳಪೆಯಾಗಿರುವುದಕ್ಕೆ, ಭಾರತೀಯ ವೈದ್ಯಕೀಯ ಪರಿಷತ್ತು ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆಯಲ್ಲಷ್ಟೆ ಅತ್ಯಾಸಕ್ತವಾಗಿದ್ದು ತನ್ನ ಬೇರೆಲ್ಲ ಜವಾಬ್ದಾರಿಗಳಿಂದಲೂ ವಿಮುಖವಾಗಿರುವುದಕ್ಕೆ ಕೇಂದ್ರ ಸರಕಾರದಷ್ಟೇ ಐಎಂಎ ಕೂಡಾ ಹೊಣೆಯಾಗಿದೆ. ಊರು ಸೂರೆಗೊಳ್ಳುತ್ತಿದ್ದಾಗ ಸರ್ಕಾರವಾಗಲೀ, ಐಎಂಎಯಾಗಲಿ ಬಾಯಿ ಬಿಡಲಿಲ್ಲ. ಈಗ ದಿಡ್ಡಿ ಬಾಗಿಲು ಮುಚ್ಚಲು ಸರಕಾರವು ಹೊರಟಿದ್ದು, ಐಎಂಎ ಅದನ್ನೂ ತಡೆಯಲೆತ್ನಿಸಿದರೆ ಅದಕ್ಕೆ ಬೆಂಬಲ ಹೇಗೆ ಸಿಕ್ಕೀತು?

ತೊಂಭತ್ತರ ದಶಕದಿಂದೀಚೆಗೆ ನಮ್ಮ ದೇಶದಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆಯು ಒಮ್ಮಿಂದೊಮ್ಮೆಗೇ ದುಪ್ಪಟ್ಟಾಗಿದೆ: 1965ರ ವೇಳೆಗೆ ನಮ್ಮ ದೇಶದಲ್ಲಿ 86 ವೈದ್ಯಕೀಯ ಕಾಲೇಜುಗಳಿದ್ದರೆ, 1980 ರ ವೇಳೆಗೆ 112 ಆಗಿ, 1990ರ ವೇಳೆಗೆ 143ಕ್ಕೆ ಏರಿ, ಅಲ್ಲಿಂದೀಚೆಗೆ 336ಕ್ಕೆ ಜಿಗಿದಿದೆ. ಕಳೆದ ಐದು ವರ್ಷಗಳಲ್ಲಿ 76 ಹೊಸ ಕಾಲೇಜುಗಳಿಗೆ ಅನುಮತಿ ನೀಡಲಾಗಿದೆ. ಈ ಹೊಸ ಕಾಲೇಜುಗಳಲ್ಲಿ ಅಗತ್ಯವಿರುವ ಶಿಕ್ಷಕರನ್ನು ನೇಮಿಸುವುದೇ ದುಸ್ತರವಾಗಿದ್ದು, ಲಭ್ಯ ಶಿಕ್ಷಕರ ನಿವೃತ್ತಿಯ ವಯಸ್ಸನ್ನು ಈಗಾಗಲೇ ಹೆಚ್ಚಿಸಲಾಗಿದೆ. ಹಲವು ಕಾಲೇಜುಗಳಲ್ಲಿ ವಾರಕ್ಕೊಮ್ಮೆಯೋ, ತಿಂಗಳಿಗೊಮ್ಮೆಯೋ ಯಾ ಕೆಲವೆಡೆ ವರ್ಷಕ್ಕೊಮ್ಮೆಯೋ ಮುಖ ತೋರಿಸುವ, ವೈದ್ಯಕೀಯ ಪರಿಷತ್ತಿನ ಪರಿಶೀಲನೆಯ ಸಂದರ್ಭದಲ್ಲಷ್ಟೇ ಹಾಜರಾಗುವ ಶಿಕ್ಷಕರೂ ಸಾಕಷ್ಟಿದ್ದಾರೆ. ಆ ರೀತಿ ದುಡಿದಿದ್ದರೂ ಪೂರ್ಣಕಾಲಿಕ ಶಿಕ್ಷಕರಾಗಿದ್ದರೆಂದು ಪ್ರಮಾಣಪತ್ರವನ್ನು ಪಡೆದು ಆ ಆಧಾರದಲ್ಲಿ ಇನ್ನೊಂದು ಕಾಲೇಜನಲ್ಲಿ ಸೇವಾ ಬಡ್ತಿಯನ್ನು ಗಿಟ್ಟಿಸಿಕೊಂಡ ಕೆಲವರು ನ್ಯಾಯಾಲಯಗಳ ಕಟಕಟೆಯೇರಿರುವ ಸುದ್ದಿಗಳನ್ನೂ ನಾವೆಲ್ಲ ಓದಿದ್ದೆೀವೆ.

ಅನೇಕ ಹೊಸ ಕಾಲೇಜುಗಳಲ್ಲಿ ವೈದ್ಯಕೀಯ ಪರಿಷತ್ತಿನ ಪರಿಶೀಲನೆಯ ದಿನಗಳಂದು ಬಸ್ಸು-ಲಾರಿಗಳಲ್ಲಿ `ರೋಗಿಗಳನ್ನು` ಹೇರಿಕೊಂಡು ಬಂದು ಹಾಸಿಗೆಗಳಲ್ಲಿ ಮಲಗಿಸುವ ಹಾಗೂ ಹೊರರೋಗಿ ವಿಭಾಗಗಳೆದುರು ಸರದಿ ಕಾಯಿಸುವ ವ್ಯವಸ್ಥೆಯನ್ನು ಮಾಡುವ ಗುತ್ತಿಗೆದಾರರ ಬಗೆಗೂ ಪತ್ರಿಕೆಗಳು ವರದಿ ಮಾಡಿಲ್ಲವೇ? ವೈದ್ಯಕೀಯ ಪರಿಷತ್ತಿನ ಪ್ರತಿನಿಧಿಗಳು ಇಂತಹ ಕಾಲೇಜುಗಳಿಗೆ ಮಾನ್ಯತಾ ಪರಿಶೀಲನೆಗೆ ಆಗಮಿಸುವಾಗ ಆಸೆಗಣ್ಣುಗಳನ್ನು ಹೊತ್ತಿದ್ದು ನಿರ್ಗಮಿಸುವಾಗ ಕಣ್ಣುಮುಚ್ಚಿಕೊಳ್ಳುವುದಿಲ್ಲವೇ?

ಇನ್ನು ಹಲವು ಖಾಸಗಿ ಕಾಲೇಜುಗಳಲ್ಲಿ ಶಿಕ್ಷಣದ ಗುಣಮಟ್ಟದ ಬಗ್ಗೆ, ಪರೀಕ್ಷೆಗಳ ಗುಣಮಟ್ಟ ಹಾಗೂ ಪಾರದರ್ಶಕತೆಗಳ ಬಗ್ಗೆ ದೊಡ್ಡ ಪ್ರಶ್ನೆಗಳಿಲ್ಲವೇ? ಈ ಕಾಲೇಜುಗಳಲ್ಲಿ ಪ್ರಾಚಾರ್ಯರೂ, ಪ್ರಾಧ್ಯಾಪಕರೂ ವೈದ್ಯರುಗಳೇ ಆಗಿದ್ದು, ತಮ್ಮ ವೃತ್ತಿಯ ಘನತೆ, ಗೌರವಗಳನ್ನು ರಕ್ಷಿಸುವ ಪ್ರತಿಜ್ಞೆಯನ್ನು ಮಾಡಿದವರೇ ಆಗಿರುತ್ತಾರೆ, ಅವರಲ್ಲಿ ಬಹಳಷ್ಟು ಮಂದಿ ಐಎಂಎ ಸದಸ್ಯರೂ, ಪದಾಧಿಕಾರಿಗಳೂ ಆಗಿರುತ್ತಾರೆ. ಆಧುನಿಕ ವೈದ್ಯ ಶಿಕ್ಷಣದ ಗತಿ ಹೀಗೆ ಮಣ್ಣುಪಾಲಾಗುತ್ತಿರುವುದನ್ನು ಕಂಡೂ ಕಾಣದಂತೆ ಇವರೆಲ್ಲರೂ ವರ್ತಿಸುತ್ತಿರುವುದೇಕೆ? ಅದರಲ್ಲಿ ಭಾಗಿಗಳಾಗುತ್ತಿರುವುದೇಕೆ? ಇದನ್ನು ತಡೆಯಲು ಐಎಂಎ ಈ ವರೆಗೆ ಮಾಡಿದ್ದಾದರೂ ಏನು? ಕೇತನ್ ದೇಸಾಯಿ ಎಂಬ ಮಹಾಶಯನೊಬ್ಬ ವೈದ್ಯಕೀಯ ಪರಿಷತ್ತಿನ ಅಧ್ಯಕ್ಷನಾಗಿದ್ದು, ಒಮ್ಮೆ ಪದಚ್ಯುತನಾಗಿ ಮತ್ತೆ ಆ ಸ್ಥಾನವನ್ನು ಗಿಟ್ಟಿಸಿ, ಕೊನೆಗೆ ಭ್ರಷ್ಟಾಚಾರದ ಆರೋಪದಿಂದ ಸಿಬಿಐಯಿಂದ ಜೈಲು ಸೇರಿದ ಕಾಲದಲ್ಲಿ ಆತ ಜೊತೆಜೊತೆಗೆ ಐಎಂಎ ರಾಷ್ಟ್ರೀಯ ಅಧ್ಯಕ್ಷನೂ ಆಗಿದ್ದ ಹಾಗೂ ಜಾಗತಿಕ ವೈದ್ಯಕೀಯ ಸಂಘಟನೆಯ ಅಧ್ಯಕ್ಷನಾಗಿಯೂ ನಿಯುಕ್ತನಾಗಿದ್ದನೆಂದರೆ ಈ ಎಲ್ಲ ಸಂಘಟನೆಗಳ ಎಡೆಬಿಡಂಗಿತನವು ಬಯಲಾಗುವುದಿಲ್ಲವೇ?

ಲೋಕಸಭೆಯು ಈಗಾಗಲೇ ಒಪ್ಪಿಗೆ ನೀಡಿರುವ ವೈದ್ಯಕೀಯ ಸಂಸ್ಥೆಗಳ(ನೋಂದಣಿ ಮತ್ತು ನಿಯಂತ್ರಣ) ಮಸೂದೆಗೂ ಐಎಂಎ ವಿರೊಧ ವ್ಯಕ್ತಪಡಿಸಿದೆ. ಕರ್ನಾಟಕದಲ್ಲಿ ಹಾಗೂ ಇನ್ನೂ ಕೆಲವು ರಾಜ್ಯಗಳಲ್ಲಿ ಇಂತಹದೇ ಕಾಯಿದೆಯಡಿಯಲ್ಲಿ ವೈದ್ಯಕೀಯ ಸಂಸ್ಥೆಗಳ ನೋಂದಣಿ ಪ್ರಾಧಿಕಾರಗಳು ಈಗಾಗಲೇ ಅಸ್ತಿತ್ವಕ್ಕೆ ಬಂದಿದ್ದು, ಈ ಕಾಯಿದೆಯನ್ನು ರೂಪಿಸುವಲ್ಲಿಯೂ, ಪ್ರಾಧಿಕಾರಗಳ ರಚನೆ ಹಾಗೂ ನೋಂದಣಿ ಪ್ರಕ್ರಿಯೆಗಳಲ್ಲೂ ಐಎಂಎ ಪದಾಧಿಕಾರಿಗಳು ಸಕ್ರಿಯ ಪಾತ್ರಗಳನ್ನು ವಹಿಸಿರುವಾಗ ಅದೇ ರೂಪದ ಕೇಂದ್ರೀಯ ಕಾಯಿದೆಗೆ ವಿರೋಧವನ್ನು ವ್ಯಕ್ತ ಪಡಿಸುವುದರಲ್ಲಿ ಅರ್ಥವಿದೆಯೇ? ಈ ಕಾಯಿದೆಯನುಸಾರ ಎಲ್ಲ ಆಸ್ಪತ್ರೆಗಳು, ಪ್ರಯೋಗಾಲಯಗಳು ಹಾಗೂ ವೈದ್ಯರ ವೃತ್ತಿನಿಲಯಗಳಿಗೆ ಕೆಲವೊಂದು ಮಾನದಂಡಗಳನ್ನು ವಿಧಿಸಲಾಗಿದ್ದು, ಅದಾವುದರ ಅಗತ್ಯವೂ ಇಲ್ಲವೆಂದು ವಿರೋಧಿಸುತ್ತಿರುವುದೇಕೆ? ಈ ಕಾಯಿದೆಯಡಿಯಲ್ಲಿ ವೈದ್ಯನಾದವನು ತನ್ನ ವೃತ್ತಿ ತರಬೇತಿಯ ಪುರಾವೆಯನ್ನು ಕಡ್ಡಾಯವಾಗಿ ನೀಡಬೇಕಾಗುವುದರಿಂದ ಎಲ್ಲಾ ನಕಲಿ ವೈದ್ಯರನ್ನು ಗುರುತಿಸಿ ನಿಷ್ಕ್ರಿಯಗೊಳಿಸುವುದಕ್ಕೆ ಇದಕ್ಕಿಂತ ಉತ್ತಮವಾದ ಅವಕಾಶವು ದೊರೆಯಲಾರದು.

ಆದ್ದರಿಂದ ಐಎಂಎ ತನ್ನದೇ ಭಾಗೀದಾರಿಕೆಯಿದ್ದ ಈ ಮಸೂದೆಯನ್ನು ವಿರೋಧಿಸುವ ಬದಲು ಅದನ್ನು ಸರಿಯಾಗಿ ಜಾರಿಗೆ ತರುವಲ್ಲಿ ಹಾಗೂ ನಕಲಿ ವೈದ್ಯರ ಪಿಡುಗನ್ನು ಸಂಪೂರ್ಣವಾಗಿ ತೊಡೆದು ಹಾಕುವಲ್ಲಿ ಸರ್ಕಾರದೊಂದಿಗೆ ಸಹಕರಿಸುವುದೇ ಒಳ್ಳೆಯದು.

ಬದಲಿ ವೈದ್ಯಕೀಯ ಪದ್ಧತಿಗೆ ನಿಯಂತ್ರಣ ಬೇಕು [ನೋಡಿ]

ಪ್ರಸ್ತಾಪಿತ ಆಯೋಗದ ವ್ಯಾಪ್ತಿಯಲ್ಲಿ ಕೇವಲ ಆಧುನಿಕ ವೈದ್ಯ ವಿಜ್ಞಾನಕ್ಕೆ ಸಂಬಂಧಿಸಿದ ವೃತ್ತಿಗಳನ್ನಷ್ಟೇ ಸೇರಿಸಲಾಗಿದೆ. ಮಸೂದೆಯಲ್ಲಿ ಒದಗಿಸಲಾಗಿರುವ ವ್ಯಾಖ್ಯಾನ 2 (ಯು) ದಲ್ಲಿ ವೈದ್ಯಕೀಯ ಪದ್ಧತಿ ಅಂದರೆ ಶಸ್ತ್ರ ಚಿಕಿತ್ಸೆ, ಪ್ರಸೂತಿ ಚಿಕಿತ್ಸೆಗಳನ್ನೊಳಗೊಂಡಂತೆ ಆಧುನಿಕ ವೈದ್ಯ ವಿಜ್ಞಾನದ ಎಲ್ಲ ವಿಭಾಗಗಳೆಂದೂ, ಪಶು ವೈದ್ಯ ಶಾಸ್ತ್ರ ಹಾಗೂ ಶಸ್ತ್ರಚಿಕಿತ್ಸೆಗಳು ಇದರಲ್ಲಿ ಒಳಗೊಳ್ಳುವುದಿಲ್ಲವೆಂದೂ ಸ್ಪಷ್ಟವಾಗಿ ಹೇಳಲಾಗಿದೆ.

ಆಧುನಿಕ ವೈದ್ಯ ವಿಜ್ಞಾನಗಳಲ್ಲದ ಭಾರತೀಯ ವೈದ್ಯ ಪದ್ಧತಿಗಳನ್ನೂ, ಹೋಮಿಯೋಪತಿಯನ್ನೂ ಈ ಮಸೂದೆಯ ವ್ಯಾಪ್ತಿಯಿಂದ ಹೊರಗಿಡಲಾಗಿರುವುದು ನಿಜಕ್ಕೂ ಅತ್ಯಂತ ಸ್ವಾಗತಾರ್ಹವಾಗಿದೆ. ಈ ಪದ್ಧತಿಗಳು ರಾಷ್ಟ್ರದ ಆರೋಗ್ಯ ಸೇವೆಯಲ್ಲಿ ಗಣನೀಯವಾದ ಪಾತ್ರವನ್ನು ವಹಿಸುವುದಕ್ಕೆ ಸಾಧ್ಯವಿಲ್ಲ ಎನ್ನುವುದು ತಡವಾಗಿಯಾದರೂ ಕೇಂದ್ರ ಸರ್ಕಾರಕ್ಕೆ ಮನದಟ್ಟಾದಂತಿದೆ. ಆಯುಷ್ ಯೋಜನೆಯ ಹೆಸರಿನಲ್ಲಿ ಈ ಬದಲಿ ಪದ್ಧತಿಗಳನ್ನೂ, ರೋಗ ಚಿಕಿತ್ಸೆಗೆ ಯಾವುದೇ ಸಂಬಂಧವಿಲ್ಲದ ಯೋಗಾಭ್ಯಾಸವನ್ನೂ ನಮ್ಮ ಜನರ ಮೇಲೆ, ಅದರಲ್ಲೂ ಆಧುನಿಕ ಸೌಲಭ್ಯಗಳಿಂದ ವಂಚಿತರಾಗಿರುವ ಬಡ ಹಳ್ಳಿಗರ ಮೇಲೆ ಹೇರುವ ಬಗ್ಗೆ, ಹಾಗೂ ಅದಕ್ಕಾಗಿ ಪ್ರತೀ ವರ್ಷವೂ ನೂರಾರು ಕೋಟಿ ಹಣವನ್ನು ವ್ಯಯಿಸುತ್ತಿರುವ ಬಗ್ಗೆ ಇನ್ನಾದರೂ ಸರಕಾರವು ಮರುಚಿಂತನೆ ನಡೆಸಲಿದೆ ಎಂದು ನಾವು ಆಶಿಸಬಹುದೇನೋ?

ಅದೇ ವೇಳೆಗೆ, ಈ ಪದ್ಧತಿಗಳಲ್ಲಿ ತರಬೇತಾದ ವೈದ್ಯರನ್ನು ನಿಯಂತ್ರಿಸುವುದಕ್ಕೆ ಈಗಿರುವ ಭಾರತೀಯ ವೈದ್ಯಶಾಸ್ತ್ರಗಳ ಕೇಂದ್ರ ಪರಿಷತ್ತು ಹಾಗೂ ಹೋಮಿಯೋಪತಿ ಕೇಂದ್ರ ಪರಿಷತ್ತುಗಳನ್ನು ಇನ್ನಷ್ಟು ಬಲಪಡಿಸಿ, ಈ ವೈದ್ಯರು ಆಧುನಿಕ ವೈದ್ಯವಿಜ್ಞಾನದ ಚಿಕಿತ್ಸೆಗಳನ್ನು ಬಳಸದಂತೆ ಕಡ್ಡಾಯವಾದ ಕ್ರಮಗಳನ್ನು ಸರ್ಕಾರವು ಕೈಗೊಳ್ಳಬೇಕಾಗಿದೆ.

ಇನ್ನೊಂದೆಡೆ, ಯಾವುದೇ ತರಬೇತಿಯಿಲ್ಲದೆ, ವೈದ್ಯರೆಂಬ ಸೋಗಿನಲ್ಲಿ ಅಮಾಯಕರ ಜೀವ ಹಿಂಡುತ್ತಿರುವ ನಕಲಿಗಳನ್ನು ಸಂಪೂರ್ಣವಾಗಿ ತೊಡೆದು ಹಾಕುವುದಕ್ಕೂ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈ ಕೂಡಲೇ ಕಾರ್ಯೋನ್ಮುಖರಾಗಬೇಕಿದೆ.