ದೇವರ ಆಟ ಎನ್ನುವ ಮನುಷ್ಯ ಕಾಟಗಳು

ದೇವರ ಆಟ ಎನ್ನುವ ಮನುಷ್ಯ ಕಾಟಗಳು: ಆಂದೋಲನ, ಸೆಪ್ಟೆಂಬರ್ 27, 2020
ಈ 2020ನೇ ವರ್ಷದ ಮೊದಲ ದಿನದಿಂದಲೇ ಎಲ್ಲ ಸುದ್ದಿಗಳಲ್ಲಿ, ಎಲ್ಲರ ಮನಗಳಲ್ಲಿ ವ್ಯಾಪಿಸಿರುವುದು ಕೊರೋನ ವೈರಸ್. ಈ ಹೊಸ ಕೊರೋನ ವೈರಸ್ ಹರಡುವುದಕ್ಕಿಂತ ಹೆಚ್ಚು ವೇಗದಲ್ಲಿ ಅದರ ಸುದ್ದಿ ಎಲ್ಲೆಡೆ ಹರಡಿತು, ಸೋಂಕಿನಿಂದ ಸಮಸ್ಯೆಗಳಾಗುವ ಮೊದಲೇ, ಅವಕ್ಕಿಂತ ಬಹು ಪಾಲು ಹೆಚ್ಚು, ಸೋಂಕಿನ ಭೀತಿಯೇ ಸಮಸ್ಯೆಯಾಯಿತು. ನಮ್ಮಲ್ಲಿ ಸೋಂಕು ಹರಡಲಿಕ್ಕೆ ಆರಂಭವಾಗುತ್ತಿದ್ದಂತೆ ದೇಶವನ್ನೇ ಮುಚ್ಚಿ ಹಾಕಲಾಯಿತು, ಜನರು ತಮ್ಮ ಮನೆಗಳಲ್ಲೇ ಬಂಧಿಗಳಾಗುವಂತೆ ಮಾಡಲಾಯಿತು. ಮನೆಯೊಳಗೇ ಒಬ್ಬರಿಂದೊಬ್ಬರಿಗೆ ಹರಡುವ ವೈರಸ್ ಅನ್ನು ಹೀಗೆ ತಡೆಯಲಾಗದ ಕಾರಣಕ್ಕೆ ಅದು ಹರಡುತ್ತಲೇ ಹೋಯಿತು, ಮನೆಯಿಂದ ಮನೆಗೆ ಹರಡಿ ದೇಶದಾದ್ಯಂತ ವ್ಯಾಪಿಸಿತು; ಭಾರತದಲ್ಲಿ ಅದೀಗ ದಿನಕ್ಕೆ ಹಲವು ಲಕ್ಷದಷ್ಟು ಜನರನ್ನು ಹೊಕ್ಕುತ್ತಿದೆ. ವಿಶ್ವದ ಎಲ್ಲ ದೇಶಗಳಲ್ಲೂ ಈ ಹೊಸ ಕೊರೋನ ಹರಡುತ್ತಿದೆ; ಅಧಿಕೃತವಾಗಿ ಪತ್ತೆಯಾಗಿರುವ ಪ್ರಕರಣಗಳು ಮೂರು ಕೋಟಿಯಷ್ಟಿದ್ದರೂ, ಒಟ್ಟು ಪ್ರಕರಣಗಳು ಅದರ 20-50 ಪಟ್ಟಾದರೂ ಹೆಚ್ಚಿರಬಹುದು; ಮೃತರಾದವರ ಸಂಖ್ಯೆಯು ಸುಮಾರು ಹತ್ತು ಲಕ್ಷದಷ್ಟಾಗಿದೆ.
ಈ ಹೊಸ ಕೊರೋನ ಸೋಂಕು ಮನುಕುಲವು ಎದುರಿಸಿದ ಅತಿ ದೊಡ್ಡ ವಿಪತ್ತು ಎಂದು ಹೇಳುವವರಿದ್ದಾರೆ. ಅತಿ ಹೆಚ್ಚು ಕೊರೋನ ಸೋಂಕಿತರನ್ನು ಹೊಂದಿರುವ ಅಮೆರಿಕಾದ ಅಧ್ಯಕ್ಷರು ಇದನ್ನು ಚೀನಾದ ಕಾಟ ಎಂದು ದೂಷಿಸಿದರೆ, ಎರಡನೇ ಅತಿ ಹೆಚ್ಚು ಸೋಂಕಿತರಿರುವ ಭಾರತದ ಹಣಕಾಸು ಸಚಿವರು ಇದೊಂದು ದೇವರ ಆಟ ಎಂದಿದ್ದಾರೆ; ಅವರೆಡೆಯಲ್ಲಿ, ಸೋಂಕು ಹರಡುವ ಮೊದಲೇ ದೇಶವ್ಯಾಪಿ ದಿಗ್ಬಂಧನವನ್ನು ಘೋಷಿಸಿದವರು ತಮ್ಮಷ್ಟಕ್ಕೆ ಮನೆಯೊಳಗೆ ತಣ್ಣಗಿದ್ದು ನವಿಲಿಗೆ ಕಾಳೂಡಿಸುತ್ತಿದ್ದಾರೆ. ಯಾರ ಕಾಟವೋ, ಯಾರ ಆಟವೋ ತಿಳಿಯದ ಜನಸಾಮಾನ್ಯರು ಮಾಡಲು ಕೆಲಸವಿಲ್ಲದೆ, ಕೈಗಳಲ್ಲಿ ಕಾಸಿಲ್ಲದೆ, ಊಟಕ್ಕೆ ಕಾಳಿಲ್ಲದೆ ಚಿಂತಿತರಾಗಿದ್ದಾರೆ.
ಕಾನೂನಿನ ಪರಿಭಾಷೆಯಲ್ಲಿ ‘ದೇವರ ಆಟ’ ಎನ್ನುವುದಕ್ಕೆ ವಿಶೇಷ ಮಹತ್ವವಿದೆ; ಮನುಷ್ಯರ ಅರಿವಿಗೆ ನಿಲುಕದ, ನಿಯಂತ್ರಣಕ್ಕೆ ಬಗ್ಗದ, ನೈಸರ್ಗಿಕ ವಿಕೋಪಗಳು ಕಷ್ಟ-ನಷ್ಟಗಳನ್ನುಂಟು ಮಾಡಿದಾಗ ಅವುಗಳಿಗೆ ಪರಿಹಾರವೊದಗಿಸದೆ ನುಣುಚಿಕೊಳ್ಳುವುದಕ್ಕೆ ‘ದೇವರ ಆಟ’ ಎಂಬ ದಾರಿಯನ್ನು ಬಳಸಲಾಗುತ್ತದೆ. ಭೂಕಂಪ, ಸುನಾಮಿಗಳಂತಹ ತೀರಾ ಅನಿರೀಕ್ಷಿತವಾದ, ಆಕಸ್ಮಿಕವಾದ, ಮನುಷ್ಯರನ್ನು ಅಸಹಾಯಕಗೊಳಿಸುವ, ನೈಸರ್ಗಿಕ ವಿಕೋಪಗಳು ‘ದೇವರ ಆಟಗಳು’ ಎನಿಸಿಕೊಳ್ಳುತ್ತವೆ. ಈ ಹೊಸ ಕೊರೋನ ಸೋಂಕು ‘ದೇವರ ಆಟ’ ಎಂದಾದರೆ, ಅದು ಅನಿರೀಕ್ಷಿತವಾಗಿತ್ತೇ, ಮನುಷ್ಯರನ್ನು ತೀರಾ ಅಸಹಾಯಕರನ್ನಾಗಿಸಿತೇ ಎಂಬ ಪ್ರಶ್ನೆಗಳೇಳುತ್ತವೆ. ಹೊಸ ಕೊರೋನ ಸೋಂಕು ಅತಿ ದೊಡ್ಡ ವಿಪತ್ತು ಎಂದಾದರೆ, ಅದಕ್ಕೆ ಮಾನದಂಡಗಳೇನು, ಜೀವಹಾನಿಯೇ, ಆರ್ಥಿಕ ನಷ್ಟವೇ, ಅವುಗಳಿಗೆ ಕೊರೋನ ವೈರಸ್‌ ಎಷ್ಟು ಕಾರಣ, ಮನುಷ್ಯರು ಮಾಡಿದ ದಿಗ್ಬಂಧನಗಳು ಎಷ್ಟು ಕಾರಣ ಎಂಬೆಲ್ಲಾ ಪ್ರಶ್ನೆಗಳನ್ನು ಕೇಳಲೇ ಬೇಕಾಗುತ್ತದೆ.
ಮನುಕುಲದ ಇತಿಹಾಸದಲ್ಲಿ ಘೋರ ವಿಪತ್ತುಗಳೆಂದು ಪರಿಗಣಿಸಲ್ಪಟ್ಟವು ಹಲವಿವೆ. ಸುಮಾರು ಎರಡು ವರ್ಷಗಳ ಹಿಂದೆ ಹಾವರ್ಡ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಪ್ರಕಟಿಸಿದ್ದ ಅಧ್ಯಯನವೊಂದರನುಸಾರ, ಕ್ರಿಶ 536ರಲ್ಲಿ ಐಸ್ ಲ್ಯಾಂಡ್ ಪ್ರದೇಶದಲ್ಲಿ ಎದ್ದಿದ್ದ ಭೀಕರ ಜ್ವಾಲಾಮುಖಿಯೇ ಮನುಕುಲಕ್ಕೆ ಬಂದೆರಗಿದ್ದ ಮಹಾ ವಿಪತ್ತಾಗಿತ್ತು. ಅದರಿಂದ ಎದ್ದಿದ್ದ ಹೊಗೆ-ಬೂದಿ-ಧೂಳುಗಳಿಂದಾದ ಕಾರ್ಮೋಡದ ಪ್ರಭಾವವು ಎಷ್ಟಿತ್ತೆಂದರೆ, ಸುಮಾರು ಒಂದೂವರೆ ವರ್ಷಗಳವರೆಗೆ ಇಡೀ ಉತ್ತರಾರ್ಧ ಗೋಳದ ಮೇಲೆ ಸೂರ್ಯನ ಪ್ರಭೆಯು ಬೆಳದಿಂಗಳಿನಷ್ಟಕ್ಕೆ ಇಳಿಯಿತು, ಅದರಿಂದಾಗಿ ಬೇಸಗೆಯು ಚಳಿಗಾಲವಾಗಿ, ಯೂರೋಪಿನಿಂದ ಚೀನಾದವರೆಗೆ ಬೆಳೆಗಳೆಲ್ಲ ನಾಶವಾಗಿ, ಊಟಕ್ಕಿಲ್ಲದೆ ಹಸಿವಿನಿಂದ ನರಳುವಂತಾಯಿತು. ಅದೇ ಸಮಯದಲ್ಲಿ ರೋಮನ್ ಸಾಮ್ರಾಜ್ಯದಲ್ಲಿ ಪ್ಲೇಗ್ ಸೋಂಕು ವಿಪರೀತವಾಗಿ ಹರಡಿ ಐದು ಕೋಟಿ ಜನರು, ಅಂದರೆ ಅಲ್ಲಿನ ಜನಸಂಖ್ಯೆಯ 30-55%ರಷ್ಟು, ಸಾವನ್ನಪ್ಪಿದರು. ಇವೆಲ್ಲವುಗಳಿಂದ ಚೇತರಿಸಿಕೊಳ್ಳಲು ನೂರು ವರ್ಷಗಳಿಗೂ ಹೆಚ್ಚು ಕಾಲ ತಗಲಿತು. ಆ ಬಳಿಕ 1316ರಲ್ಲಿ ಯೂರೋಪಿನಲ್ಲಾದ ಸತತ ಮಳೆ, 1340ರ ದಶಕದಲ್ಲಿ ಏಷ್ಯಾದಿಂದ ಯೂರೋಪಿಗೆ ಹರಡಿ 40 ಲಕ್ಷದಷ್ಟು ಜನರನ್ನು, ಜನಸಂಖ್ಯೆಯ 25-60%ರಷ್ಟು, ಕೊಂದ ಪ್ಲೇಗ್, 15-16ನೇ ಶತಮಾನಗಳಲ್ಲಿ ಯೂರೋಪನ್ನು ಕಾಡಿದ, ಯೂರೋಪಿಯನ್ ದಂಡಯಾತ್ರೆಗಳ ಮೂಲಕ ಅಮೆರಿಕಾಗಳನ್ನು ಕೂಡ ಹೊಕ್ಕಿದ, ಸಿಡುಬು ಇತ್ಯಾದಿ ಸೋಂಕುಗಳು, 1783ರಲ್ಲಿ ಮತ್ತೆ ಭುಗಿಲೆದ್ದ ಐಸ್ ಲ್ಯಾಂಡ್ ಜ್ವಾಲಾಮುಖಿ ಮತ್ತು ಅದರಿಂದ ಭಾರತವೂ ಸೇರಿದಂತೆ ಉತ್ತರಾರ್ಧ ಗೋಳವಿಡೀ ಉಂಟಾದ ಕಷ್ಟನಷ್ಟಗಳು, 1918ರಲ್ಲಿ 50-100 ಕೋಟಿ ಜನರನ್ನು ಬಾಧಿಸಿ 2-10 ಕೋಟಿ ಸಾವುಗಳಿಗೆ ಕಾರಣವಾದ ಸ್ಪಾನಿಷ್ ಫ್ಲೂ, 1940ರ ದಶಕದ ದ್ವಿತೀಯ ಮಹಾಯುದ್ಧ ಮತ್ತು ಭಾರತದಲ್ಲುಂಟಾದ ಭೀಕರ ಕ್ಷಾಮ, ಇವೆಲ್ಲವುಗಳ ನಡುವೆ ಆಗಾಗ ಅಲ್ಲಲ್ಲಿ ಕೋಟಿಗಟ್ಟಲೆ ಜನರನ್ನು ಕೊಂದ ಮಲೇರಿಯಾ, ಪ್ಲೇಗ್, ಕಾಲೆರಾ, ಸಿಡುಬು, ಕ್ಷಯ ರೋಗ ಇತ್ಯಾದಿಗಳು ಎಲ್ಲವೂ ಮನುಕುಲವನ್ನು ಭೀಕರವಾಗಿ ಕಾಡಿದ ಸಮಸ್ಯೆಗಳು ಎಂದು ದಾಖಲಾಗಿವೆ. ಇವೆಲ್ಲವುಗಳೊಂದಿಗೆ ಹೋಲಿಸಿ ಈ ಹೊಸ ಕೊರೋನ ಸೋಂಕನ್ನು ಕೂಡ ‘ಭೀಕರ ವಿಪತ್ತು’, ‘ದೇವರ ಆಟ’ ಎಂದೆಲ್ಲ ಕರೆಯಬಹುದೇ?
ಜೀವಹಾನಿಯಾದುದನ್ನು ಪರಿಗಣಿಸಿದರೆ, 1918ರಲ್ಲಿ ಸ್ಪಾನಿಷ್ ಫ್ಲೂ ಬಾಧಿಸಿದಾಗ ವಿಶ್ವದ ಜನಸಂಖ್ಯೆಯು 180 ಕೋಟಿಗಳಷ್ಟಿತ್ತು, ಹಾಗಾಗಿ, ಸಾವಿನ ಪ್ರಮಾಣವು ಒಟ್ಟು ಜನಸಂಖ್ಯೆಯ 1-5%ದಷ್ಟಿತ್ತು. ಇದಕ್ಕೆ ಹೋಲಿಸಿದರೆ, ಈಗ ಪ್ರತೀ ವರ್ಷ ಮೂರರಿಂದ ಐದು ಲಕ್ಷ ಜನರು, ಅಂದರೆ ಒಟ್ಟು ಜನಸಂಖ್ಯೆಯ 0.0052%, ಸಾಮಾನ್ಯ ಫ್ಲೂನಿಂದ ಸಾವನ್ನಪ್ಪುತ್ತಾರೆ. ಹೊಸ ಕೊರೋನ ಸೋಂಕಿನಿಂದ ಗರಿಷ್ಠ 25 ಲಕ್ಷದಷ್ಟು ಸಾವುಗಳಾದರೆ, ಒಟ್ಟು ಜನಸಂಖ್ಯೆಯ 0.04%ರಷ್ಟಾಗಬಹುದು. ಅಂದರೆ, 1918ರ ಸ್ಪಾನಿಷ್ ಫ್ಲೂ ಈಗಿನ ಸಾಮಾನ್ಯ ಫ್ಲೂ ಮತ್ತು ಹೊಸ ಕೊರೋನ ಸೋಂಕಿಗಿಂತ 50-200 ಪಟ್ಟು ಹೆಚ್ಚು ಸಾವುಗಳಿಗೆ ಕಾರಣವಾಗಿತ್ತು. ಸ್ಪಾನಿಷ್ ಫ್ಲೂ ಅನೇಕ ಮಕ್ಕಳು ಮತ್ತು ಯುವಜನರ ಸಾವಿಗೆ ಕಾರಣವಾಗಿದ್ದರೆ, ಹೊಸ ಕೊರೋನ ಸೋಂಕು ಹಿರಿಯ ವಯಸ್ಕರಲ್ಲಿ, ಸಕ್ಕರೆ ಕಾಯಿಲೆ, ರಕ್ತದ ಏರೊತ್ತಡ, ಹೃದ್ರೋಗ, ವಿಪರೀತ ಬೊಜ್ಜು ಇತ್ಯಾದಿ ಸಮಸ್ಯೆಗಳುಳ್ಳವರಲ್ಲೇ ಹೆಚ್ಚಿನ ಸಮಸ್ಯೆಗಳನ್ನುಂಟು ಮಾಡುತ್ತಿದೆ. ಸ್ಪಾನಿಷ್ ಫ್ಲೂ ಬಾಧಿಸಿದ್ದ ಕಾಲದಲ್ಲಿ ಹಸಿವು, ಬಡತನ, ಅನಾರೋಗ್ಯಗಳು ಈಗಿಗಿಂತ ಬಹಳಷ್ಟು ಹೆಚ್ಚಿದ್ದವು, ನೈರ್ಮಲ್ಯ, ಸಾರಿಗೆ ಮತ್ತು ಸಂಪರ್ಕ ವ್ಯವಸ್ಥೆ, ಆರೋಗ್ಯ ಸೇವೆಗಳು ಎಲ್ಲವೂ ನಿಕೃಷ್ಟವಾಗಿದ್ದವು. ಹಾಗಾಗಿ, ಇವೆರಡರ ತುಲನೆ ಮಾಡುವುದು ಅಷ್ಟೊಂದು ಸುಲಭ, ಸರಳವಲ್ಲದಿದ್ದರೂ, ಆ ಕಾಲದ ಸ್ಥಿತಿಗತಿಗಳಿಗೂ, ಈಗಿನವಕ್ಕೂ ಹೋಲಿಸಿದರೆ, ಕೊರೋನ ಸೋಂಕಿನಿಂದಾಗಬಹುದಾದ ಸಾವುಗಳನ್ನು ಇನ್ನಷ್ಟು ಕಡಿಮೆ ಮಾಡಲು ಸಾಧ್ಯವಿರಲಿಲ್ಲವೇ ಎಂಬ ಪ್ರಶ್ನೆಯು ಏಳುವುದು ಸಹಜವೇ ಆಗಿದೆ.
ಆ ಕಾಲಕ್ಕೆ ಹೋಲಿಸಿದರೆ ಈಗ ಮನುಷ್ಯನ ಸರಾಸರಿ ಆಯುಸ್ಸು ದುಪ್ಪಟ್ಟಿಗಿಂತಲೂ ಹೆಚ್ಚಾಗಿದೆ. ವಿಜ್ಞಾನ, ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ, ಮಾಹಿತಿಯ ಹಂಚುವಿಕೆ, ಜೈವಿಕ ಮತ್ತು ತಳಿ ತಂತ್ರಜ್ಞಾನ, ಔಷಧ ವಿಜ್ಞಾನ, ಆರೋಗ್ಯ ಸೇವೆಗಳು, ಸಾರಿಗೆ ವ್ಯವಸ್ಥೆ ಎಲ್ಲವೂ ಅತ್ಯದ್ಭುತವಾಗಿ ಬೆಳೆದಿವೆ. ಬಗೆಬಗೆಯ ಸೋಂಕುಗಳನ್ನು ಮಣಿಸುವುದಕ್ಕೆ ಲಸಿಕೆಗಳನ್ನು ಬಳಸುತ್ತಿದ್ದೇವೆ, 1940ರ ದಶಕದಿಂದೀಚೆಗೆ ಅತಿ ಪರಿಣಾಮಕಾರಿಯಾದ ಔಷಧಗಳನ್ನು ಕಂಡುಹಿಡಿದಿದ್ದೇವೆ; ಈ ಔಷಧಗಳು, ಲಸಿಕೆಗಳು, ಮತ್ತು ಸಾರ್ವಜನಿಕ ಆರೋಗ್ಯ ವ್ಯವಸ್ಥೆ, ನೈರ್ಮಲ್ಯ, ಪೌಷ್ಟಿಕತೆಗಳೆಲ್ಲವುಗಳ ಬಲದಿಂದ ಹಿಂದೆಲ್ಲ ಬಹು ಮಾರಕವೆನಿಸಿದ್ದ ಪ್ಲೇಗ್, ಕ್ಷಯ, ಮಲೇರಿಯಾ, ಕಾಲೆರಾ, ಸಿಡುಬು ಮುಂತಾದ ಸೋಂಕುಗಳನ್ನು ನಾವು ಬಹುಮಟ್ಟಿಗೆ ಸೋಲಿಸಿದ್ದೇವೆ. ಹಾಗೆಯೇ, ಎಂಬತ್ತರ ದಶಕದಲ್ಲಿ ಎಚ್‌ಐವಿ, 2002 ರಲ್ಲಿ ಸಾರ್ಸ್, 2009ರಲ್ಲಿ ಎಚ್1ಎನ್1, 2012ರಲ್ಲಿ ಮೆರ್ಸ್, 2018ರಲ್ಲಿ ನಮ್ಮದೇ ಕೋಯಿಕ್ಕೋಡಿನಲ್ಲಿ ನಿಪಾ ಮುಂತಾಗಿ ಹಲವು ಸೋಂಕುಗಳನ್ನು ಯಶಸ್ವಿಯಾಗಿ ನಿಭಾಯಿಸಲು ಸಾಧ್ಯವಾಗಿದೆ. ಇವೆಲ್ಲವೂ ಗುರುತಿಸಲ್ಪಟ್ಟ ಮೊದಲಲ್ಲಿ ಇವುಗಳ ಬಗ್ಗೆ ವಿಪರೀತ ಭೀತಿಯನ್ನು ಹುಟ್ಟಿಸಲಾಗಿತ್ತು, ಸ್ಪಾನಿಷ್ ಫ್ಲೂನಂತೆಯೇ ಇವು ಕೂಡ ಕೋಟಿಗಟ್ಟಲೆ ಜನರನ್ನು ಕೊಲ್ಲಲಿವೆ ಎಂದು ಹೇಳಲಾಗಿತ್ತಾದರೂ, ವೈಜ್ಞಾನಿಕ ವಿಧಾನಗಳಿಂದ ಆ ಭೀತಿಯನ್ನೆಲ್ಲ ಸುಳ್ಳಾಗಿಸಿದ್ದೇವೆ.
ಇಪ್ಪತ್ತೊಂದನೇ ಶತಮಾನದ ಮೂರನೇ ದಶಕದಲ್ಲಿ, ವೈದ್ಯವಿಜ್ಞಾನ, ತಂತ್ರಜ್ಞಾನಗಳು ಎರಡು ತಿಂಗಳಿಗೊಮ್ಮೆ ದುಪ್ಪಟ್ಟು ಬೆಳೆಯುತ್ತಿರುವ ಕಾಲದಲ್ಲಿ, ವೈಜ್ಞಾನಿಕ ಸಾಮರ್ಥ್ಯಗಳೂ, ಆಧುನಿಕ ವೈದ್ಯವಿಜ್ಞಾನದ ಪರಿಣತಿಗಳೂ ಈ ಹೊಸ ಕೊರೋನ ಸೋಂಕನ್ನು ಗುರುತಿಸಿ, ನಿಭಾಯಿಸುವುದನ್ನು ಇನ್ನಷ್ಟು ಸುಲಭಗೊಳಿಸಬೇಕಿತ್ತು. ಈ ಸೋಂಕು ಚೀನಾದ ವುಹಾನ್ ನಗರದಲ್ಲಿ ಗುರುತಿಸಲ್ಪಟ್ಟ ಮೊದಲಲ್ಲಿ ಅದು ಆಯಿತೆಂದೇ ಹೇಳಬಹುದು. ವುಹಾನ್‌ನಲ್ಲಿ ಈ ಸೋಂಕಿನ ಲಕ್ಷಣಗಳಿದ್ದವರನ್ನು 2019ರ ನವೆಂಬರ್ 17ರಂದು ಮೊದಲ ಬಾರಿಗೆ ಗುರುತಿಸಲಾಯಿತು; ಡಿಸೆಂಬರ್ 12ರಂದು ಅದರಿಂದ ತೀವ್ರ ಸಮಸ್ಯೆಗೀಡಾಗಿದ್ದವರು ಅಲ್ಲಿನ ಆಸ್ಪತ್ರೆಗಳಲ್ಲಿ ದಾಖಲಾದರು; ಅದಾಗಿ ಎರಡೇ ವಾರಗಳಲ್ಲಿ, ಡಿಸೆಂಬರ್ 27ರ ವೇಳೆಗೆ, ಅದು ಯಾವ ವೈರಸ್, ಅದರ ತಳಿಯ ರಚನೆ ಹೇಗಿದೆ, ಪ್ರೋಟೀನ್‌ಗಳು ಯಾವುವು, ಅದು ಹೇಗೆ ಸೋಂಕುತ್ತದೆ ಎಂಬುದೆಲ್ಲವನ್ನೂ ಸ್ಪಷ್ಟವಾಗಿ ಗುರುತಿಸಲಾಯಿತು. ಎಚ್‌ಐವಿ ಗುರುತಿಸಲು ದಶಕಗಳು, ಎಚ್1ಎನ್1 ಗುರುತಿಸಲು ತಿಂಗಳುಗಳು ಆಗಿದ್ದಲ್ಲಿ, ಈ ಹೊಸ ಸೋಂಕಿಗೆ ಕಾರಣವಾದ ವೈರಸ್ ಮತ್ತದರ ವಿವರಗಳೆಲ್ಲವನ್ನೂ ಭೇದಿಸಲು ಕೇವಲ ಹದಿನೈದೇ ದಿನಗಳಲ್ಲಿ ಸಾಧ್ಯವಾಯಿತು. ಇವುಗಳನ್ನು ಬಳಸಿ ಈ ಹೊಸ ಸೋಂಕನ್ನು ಪತ್ತೆ ಹಚ್ಚುವ ಆರ್‌ಟಿ ಪಿಸಿಆರ್ ಪರೀಕ್ಷೆಗಳೂ ಕೂಡಲೇ ಸಿದ್ಧಗೊಂಡವು. ನಂತರ ಎರಡು ತಿಂಗಳಲ್ಲಿ ವುಹಾನ್‌ನಲ್ಲಿ ದಾಖಲಾಗಿದ್ದ 72000ಕ್ಕೂ ಹೆಚ್ಚು ರೋಗಿಗಳು ಮತ್ತು ಮೃತರಾಗಿದ್ದ ಸುಮಾರು 2500 ರೋಗಿಗಳ ವಿವರಗಳನ್ನೆಲ್ಲ ವಿಶ್ಲೇಷಿಸಿ, ಯಾರಲ್ಲಿ, ಯಾವ ವಯಸ್ಸಿನವರಲ್ಲಿ, ಯಾವ ಅನ್ಯ ಕಾಯಿಲೆಗಳುಳ್ಳವರಲ್ಲಿ ಈ ಹೊಸ ಸೋಂಕು ಹೇಗಿರುತ್ತದೆ, ಏನೇನು ಮಾಡುತ್ತದೆ, ಅವರಿಗೆ ನೀಡಲಾಗಿದ್ದ ಚಿಕಿತ್ಸೆಗಳೇನು ಎಂಬ ವಿವರಗಳೆಲ್ಲವನ್ನೂ ಪ್ರಕಟಿಸಲಾಯಿತು. ಮಾರ್ಚ್ ಮೊದಲಿಗೆ ಈ ಸೋಂಕು ಚೀನಾದಿಂದ ಯೂರೋಪ್, ಅಮೆರಿಕಾಗಳನ್ನು ತಲುಪಿ ಹರಡತೊಡಗಿದಾಗ ಇವೆಲ್ಲವೂ ಸ್ಪಷ್ಟವಾಗಿ ಅರಿವಾಗಿದ್ದವು, ಎಲ್ಲೆಡೆ ಮುಕ್ತವಾಗಿ ಲಭ್ಯವಾಗಿದ್ದವು.
ವುಹಾನ್‌ನಲ್ಲಿ ಜನವರಿ ಮಧ್ಯದ ವೇಳೆಗೆ ಈ ಹೊಸ ಸೋಂಕು ವಿಪರೀತವಾಗಿ ಏರತೊಡಗಿದಾಗ ಜನವರಿ 23ರಿಂದ ವುಹಾನ್ ನಗರವನ್ನು ದಿಗ್ಬಂಧನಕ್ಕೊಳಪಡಿಸಲಾಯಿತು. ಸೋಂಕು ಹರಡುತ್ತಿದ್ದ ವಲಯಗಳ ನಿವಾಸಿಗಳನ್ನು ಮನೆಗಳೊಳಗೇ ಇರಿಸಿ, ಅವರ ಅಗತ್ಯಗಳನ್ನೆಲ್ಲ ಪೂರೈಸಿ, ರೋಗವುಂಟಾದವರಿಗಾಗಿ ವಿಶೇಷ ಆಸ್ಪತ್ರೆಗಳನ್ನು ನಿರ್ಮಿಸಿ ಸೋಂಕಿನ ಹರಡುವಿಕೆಯನ್ನು ಮತ್ತು ಅದರಿಂದ ಉಂಟಾದ ಗಂಭೀರ ಸಮಸ್ಯೆಗಳನ್ನು ಯಶಸ್ವಿಯಾಗಿ ನಿಭಾಯಿಸಲಾಯಿತು. ಫೆಬ್ರವರಿ-ಮಾರ್ಚ್ ವೇಳೆಗೆ ಇಟೆಲಿ, ಬ್ರಿಟನ್, ಅಮೆರಿಕಾ ಮುಂತಾದ ದೇಶಗಳಲ್ಲಿ ಸೋಂಕು ವಿಪರೀತವಾಗಿ ಏರತೊಡಗಿದಾಗ ಅಲ್ಲೂ ಇದೇ ವುಹಾನ್ ಮಾದರಿಯನ್ನು ಬಳಸುವ ಬಗ್ಗೆ ಚರ್ಚೆಗಳಾದವು, ಒತ್ತಡಗಳಾದವು. ಆರಂಭದಲ್ಲಿ ಸೋಂಕನ್ನು ಗಂಭೀರವಾಗಿ ಪರಿಗಣಿಸದಿದ್ದ ಇರಾನ್, ಇಟೆಲಿಗಳಲ್ಲಿ ಅನೇಕರು ಒಮ್ಮೆಗೇ ಸೋಂಕಿತರಾಗಿ, ತೀವ್ರ ಸಮಸ್ಯೆಗೀಡಾದವರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳು ದುರ್ಲಭವಾದವು; ಇಂತಹಾ ಅನುಭವಗಳು ಕೂಡ ಇತರ ದೇಶಗಳಿಗೆ ಪಾಠವಾಗಬಹುದಿತ್ತು.
ಮಾರ್ಚ್ ಮೊದಲಲ್ಲಿ ಭಾರತದಲ್ಲಿ ಕೊರೋನ ಸೋಂಕಿನ ಪ್ರಕರಣಗಳು ಗುರುತಿಸಲ್ಪಡುವ ವೇಳೆಗೆ, ಚೀನಾ, ಯೂರೋಪ್ ಮತ್ತು ಅಮೆರಿಕಾಗಳಿಂದ ಎಲ್ಲಾ ಮಾಹಿತಿಗಳೂ ನಮಗೆ ದೊರೆತಿದ್ದವು. ನಮ್ಮ ಐಸಿಎಂಆರ್‌ನಂತಹ ಅತ್ಯುನ್ನತ ಸಂಸ್ಥೆಗಳ ತಜ್ಞರು ಅದಾಗಲೇ ಈ ಸೋಂಕನ್ನು ನಿಯಂತ್ರಿಸುವ ಬಗ್ಗೆ ಯೋಜನೆಗಳನ್ನು ಸಿದ್ಧಪಡಿಸಿದ್ದರು, ಚೀನಾದಲ್ಲಿ ಮಾಡಿದ್ದ ಲಾಕ್ ಡೌನ್ ಭಾರತಕ್ಕೆ ಹಿಡಿಸದು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದರು. ಅಂದರೆ, ಈ ಹೊಸ ಕೊರೋನ ಸೋಂಕು ಭೂಕಂಪ, ಸುನಾಮಿಗಳಂತೆ ಯಾವ ಮುನ್ಸೂಚನೆಯೂ ಇಲ್ಲದೆ ಧುತ್ತೆಂದು ಇಲ್ಲಿಗೆ ಬಂದೆರಗಿದ್ದಲ್ಲ, ಏನೆಂದೇ ತಿಳಿದಿರದ ಮಹಾ ಸಮಸ್ಯೆಯೂ ಅದಾಗಿರಲಿಲ್ಲ. ಹಿಂದಿನ ಅನುಭವಗಳ ಜೊತೆಗೆ, ಹೊಸ ಕೊರೋನ ಸೋಂಕಿನ ಬಗ್ಗೆ ಎರಡು-ಮೂರು ತಿಂಗಳುಗಳಲ್ಲಿ ನಮಗೆ ದೊರೆತಿದ್ದ ವೈಜ್ಞಾನಿಕ ಮಾಹಿತಿಯನ್ನೆಲ್ಲ ಬಳಸಿ, ಜಾಣ್ಮೆಯಿಂದ, ತಾಳ್ಮೆಯಿಂದ, ವೈಜ್ಞಾನಿಕವಾಗಿ, ನಮ್ಮದೇ ತಜ್ಞರ ನೆರವಿನಿಂದ ಈ ಹೊಸ ಸವಾಲನ್ನು ನಾವು ನಿಭಾಯಿಸಬಹುದಿತ್ತು.
ಆದರೆ ಹಾಗಾಗಲಿಲ್ಲ. ಮೊದಲಲ್ಲಿ ಭವ್ಯ ಭಾರತಕ್ಕೆ ಈ ಸೋಂಕು ಬರಲಾರದೆಂಬ ಆಸೆ ಹುಟ್ಟಿಸಿ, ಹಾಗೊಮ್ಮೆ ಬಂದರೂ ಇಲ್ಲಿನ ಸಾರು-ಸಾಂಬಾರು-ನಮಸ್ತೆ-ಮೂತ್ರ-ಸೆಗಣಿ-ಅರಿಸಿನ-ಕಷಾಯಗಳು ಅದನ್ನು ತಡೆಯುತ್ತವೆ ಎಂದೆಲ್ಲ ನಂಬಿಸಿ, ಇದು ಚೀನಾದ ಷಡ್ಯಂತ್ರವೆಂದು ತೆಗಳಲಾಯಿತು. ಬಳಿಕ ಸೋಂಕು ಹರಡುವುದು ಖಚಿತವಾಗುತ್ತಿದ್ದಂತೆ ಚೀನಾದಲ್ಲಿ ಲಾಕ್ ಡೌನ್ ಮಾಡಿದ್ದರೆಂಬುದನ್ನು ಅನುಸರಿಸಿ ಇಲ್ಲಿ ಕೇವಲ 564 ಪ್ರಕರಣಗಳಾದಾಗ ಯಾವುದೇ ಮುನ್ಸೂಚನೆಯಿಲ್ಲದೆ, ಒಮ್ಮಿಂದೊಮ್ಮೆಗೇ, ಇಡೀ ದೇಶವನ್ನು ಅತಿ ಕಠಿಣವಾದ ದಿಗ್ಬಂಧನಕ್ಕೆ ಒಳಪಡಿಸಲಾಯಿತು. ರಸ್ತೆಗಳು, ಸಾರಿಗೆ, ಹೋಟೆಲುಗಳು, ಅಂಗಡಿಗಳು ಎಲ್ಲವೂ ಮುಚ್ಚಲ್ಪಟ್ಟು ಊಟ, ವಸತಿಗಳಿಲ್ಲದೆ, ಜನರು ಅಲ್ಲಲ್ಲೇ ಸಿಲುಕಿಕೊಂಡು ನರಳುವಂತಾಯಿತು. ಮುಂದೇನೆಂದು ಸರಕಾರವೂ ಹೇಳದೆ, ಜನರಿಗೂ ತೋಚದೆ, ಹಲವರು ಸಾವಿರಗಟ್ಟಲೆ ಕಿಮೀ ದೂರದ ತಮ್ಮೂರುಗಳಿಗೆ ನಡೆದೇ ಹೊರಟರು, ಕೆಲವರು ದಾರಿಯಲ್ಲೇ ಪ್ರಾಣ ತೆತ್ತರು. ಎರಡು ತಿಂಗಳಿಗೂ ಹೆಚ್ಚು ಕಾಲ ಇಡೀ ದೇಶವು ಸ್ತಬ್ಧಗೊಂಡದ್ದರಿಂದ ದೇಶದ ಆರ್ಥಿಕತೆ 23% ಕುಸಿಯಿತು, ಕೋಟಿಗಟ್ಟಲೆ ಜನರು ನಿರುದ್ಯೋಗಿಗಳಾದರು. ಅತ್ತ ಕೊರೋನ ಸೋಂಕು ಮನೆಯಿಂದ ಮನೆಗೆ ಹರಡಿ ಏರುತ್ತಲೇ ಹೋಯಿತು; ದಿಗ್ಬಂಧನದ ಮೊದಲ ದಿನ 564 ಪ್ರಕರಣಗಳು, 10 ಸಾವುಗಳಿದ್ದುದು, ಆರು ತಿಂಗಳ ಬಳಿಕ 60 ಲಕ್ಷ ಪ್ರಕರಣಗಳು, 92 ಸಾವಿರ ಸಾವುಗಳಾಗುವಂತಾಯಿತು. ಜನರಲ್ಲಿ ಭೀತಿ, ಆಡಳಿತದಲ್ಲಿ ಗೊಂದಲ, ಮಾಧ್ಯಮಗಳಲ್ಲಿ ಗದ್ದಲ, ಆರೋಗ್ಯ ಸೇವೆಗಳಲ್ಲಿ ಸಂಪನ್ಮೂಲಗಳ ಅತೀವ ಕೊರತೆಗಳಿಂದಾಗಿ ಹೊಸ ಕೊರೋನ ಸೋಂಕಿನ ನಿಭಾವಣೆಯು ದಿಕ್ಕು ತಪ್ಪಿತು. ಎಷ್ಟು ಜನ ವಲಸೆ ಕಾರ್ಮಿಕರು ಕಷ್ಟಕ್ಕೀಡಾದರು, ಎಷ್ಟು ಆರೋಗ್ಯ ಕರ್ಮಿಗಳು ಸಾವಿಗೀಡಾದರು, ಎಷ್ಟು ಉದ್ಯಮಗಳು ಮುಚ್ಚಿ ಹೋದವು ಎಂಬ ಲೆಕ್ಕವೇ ತನ್ನಲ್ಲಿಲ್ಲ ಎಂದ ಸರಕಾರವು, ಕೊರೋನ ಸೋಂಕಿತರ ಸಂಖ್ಯೆಯೆಷ್ಟೆಂದು ಹೇಳದಂತೆ ಐಸಿಎಂಆರ್ ತಜ್ಞರನ್ನು ತಡೆಯಿತು.
ವಿಜ್ಞಾನ, ತಂತ್ರಜ್ಞಾನಗಳು ಅದೆಷ್ಟೇ ಬೆಳೆದಿದ್ದರೂ, ಕೇವಲ ಎರಡೇ ವಾರಗಳಲ್ಲಿ ಹೊಸ ಸೋಂಕನ್ನು ಭೇದಿಸಿದ್ದರೂ, ಜನರನ್ನೂ, ಆರೋಗ್ಯ ವ್ಯವಸ್ಥೆಯನ್ನೂ ವೈಜ್ಞಾನಿಕ ಮಾಹಿತಿಯ ಆಧಾರದಲ್ಲಿ ಸಜ್ಜುಗೊಳಿಸಿ ಸೋಂಕನ್ನು ನಿಭಾಯಿಸುವುದಕ್ಕೆ ಸಾಕಷ್ಟು ಕಾಲಾವಕಾಶವಿದ್ದರೂ ಅತಿ ಉತ್ತೇಜಿತ ರಾಜಕಾರಣಿಗಳು ಮತ್ತು ಭಯಂಕರವಾಗಿ ವರ್ತಿಸುವ ಮಾಧ್ಯಮಗಳು ಮಧ್ಯ ಪ್ರವೇಶಿಸಿದರೆ ಎಂಥ ಒಳ್ಳೆಯ ಸಾಧನೆಯೂ ಮಣ್ಣುಪಾಲಾಗಬಹುದು ಎನ್ನುವುದನ್ನು ಹೊಸ ಕೊರೋನ ತೋರಿಸಿದೆ. ಸ್ಪಾನಿಷ್ ಫ್ಲೂ ಬಾಧಿಸಿದಾಗ ಬೇಕೆಂದರೂ ಏನೂ ದೊರೆಯುವಂತಿರಲಿಲ್ಲವಾಗಿ ಕೋಟಿಗಟ್ಟಲೆ ಜನ ಅಸುನೀಗಿದರು, ಒಂದು ಶತಮಾನದ ಬಳಿಕ ಎಲ್ಲವೂ ಸಾಕಷ್ಟಿದ್ದರೂ ಏನೂ ಮಾಡದಂತಹ ಅಡ್ಡಿಗಳಾಗಿ ಹಲವಾರು ಜನರು ರೋಗದಿಂದ ನರಳುವಂತಾಯಿತು, ಮಾತ್ರವಲ್ಲ, ಇಡೀ ಅರ್ಥ ವ್ಯವಸ್ಥೆಯೇ ನಾಶವಾಗುವಂತಾಯಿತು. ಭೂಕಂಪ, ಸುನಾಮಿ, ಜ್ವಾಲಮುಖಿಗಳು ‘ದೇವರ ಆಟ’ಗಳೆನಿಸಬಹುದು, ಶತಮಾನಗಳ ಹಿಂದಿನ ಪ್ಲೇಗ್, ಸ್ಪಾನಿಷ್ ಫ್ಲೂ ಎದುರು ನಾವು ಅಸಹಾಯಕರಿದ್ದಿರಬಹುದು, ಆದರೆ 2020ರ ಹೊಸ ಕೊರೋನವನ್ನು ನಿಭಾಯಿಸುವಲ್ಲಿ ತಪ್ಪುಗಳೆನ್ನೆಸಗಿದ ಕಾರಣಕ್ಕಾಗಿಯೇ ಇಷ್ಟೊಂದು ನರಳಬೇಕಾಗಿ ಬಂದುದರಿಂದ ಅದನ್ನು ‘ದೇವರ ಆಟ’ ಎನ್ನುವ ಬದಲು ‘ಮನುಷ್ಯರ ಕಾಟ’ ಎನ್ನುವುದೇ ಸರಿಯೆನಿಸೀತು.

Be the first to comment

Leave a Reply

Your email address will not be published.


*