ಕೊರೋನ ಸೋಲಿಸಲಿಲ್ಲ, ನಾವೇ ಹೆದರಿ ಸೋತು ಶರಣಾದೆವು

ಕೊರೋನ ಸೋಲಿಸಲಿಲ್ಲ, ನಾವೇ ಹೆದರಿ ಸೋತು ಶರಣಾದೆವು

ಹೊಸತು, ಜೂನ್-ಜುಲೈ, 2021 

ನಮ್ಮ ದೇಶದೊಳಕ್ಕೆ ಹೊಸ ಕೊರೋನ ವೈರಸ್ ಹೊಕ್ಕಿ ಒಂದೂವರೆ ವರ್ಷ ಆಗಿದೆ; ಏನೇ ಮಾಡಿದರೂ ಅದರ ಹರಡುವಿಕೆಯನ್ನು ತಡೆಯ2021ಲು ಸಾಧ್ಯವಿಲ್ಲ, ಈ ವೈರಸ್‌ನ ವಿರುದ್ಧ ಯಾವ ಚಿಕಿತ್ಸೆಯೂ ಕೆಲಸ ಮಾಡುವುದಿಲ್ಲ, ಭಾರತದಲ್ಲಿ ಲಸಿಕೆಯನ್ನು ನಂಬಿಕೊಂಡಿದ್ದರೆ ಆಗದು ಎನ್ನುವುದು ಎಲ್ಲವೂ ದೃಢಪಟ್ಟಿದೆ. ಈ ಒಂದೂವರೆ ವರ್ಷದುದ್ದಕ್ಕೂ ಕೊರೋನ ವೈರಸ್, ಅದೆಷ್ಟೇ ರೂಪಗಳನ್ನು ಬದಲಿಸಿದ್ದರೂ ಕೂಡ, ಒಂದೇ ತೆರನಾಗಿ ವರ್ತಿಸಿದೆ; ಅದು ಸೋಂಕುವ ರೀತಿ, ಸಮಸ್ಯೆಗಳನ್ನುಂಟು ಮಾಡುವ ಸಾಧ್ಯತೆಗಳು ಯಾವುವೂ ಬದಲಾಗಿಲ್ಲ. ಆದರೆ ಈ ವೈರಸ್ ಅನ್ನು ಎದುರಿಸುವ ಹೆಸರಲ್ಲಿ ನಮ್ಮ ಒಕ್ಕೂಟ ಸರಕಾರ, ನಮ್ಮ ರಾಜ್ಯಗಳ ಸರಕಾರಗಳು ದಿನಕ್ಕೊಂದರಂತೆ, ವಾರಕ್ಕೊಂದರಂತೆ, ತಿಂಗಳಿಗೊಂದರಂತೆ ಆಧಾರರಹಿತವಾದ, ಜನವಿರೋಧಿಯಾದ ಕ್ರಮಗಳನ್ನು ಹೇರುತ್ತಲೇ ನಡೆದಿವೆ, ಅವುಗಳಿಂದಾದ ಹಾನಿಗಳಿಗೆ ಹೊಣೆ ಹೊರುವ ಬದಲಿಗೆ ವೈರಸ್‌ ಅನ್ನೇ ದೂಷಿಸುತ್ತಾ ಸಾಗಿವೆ.

ಚೀನಾದ ವುಹಾನ್ ನಗರದಲ್ಲಿ ಕಳೆದ ವರ್ಷದ ಆರಂಭದಲ್ಲಿ ಈ ಹೊಸ ಸೋಂಕು ಏನು, ಹೇಗೆ ಎಂದು ಸರಿಯಾಗಿ ಅರಿಯುವ ಮೊದಲು ವಿಪರೀತ ಎಚ್ಚರಿಕೆಯ ಕ್ರಮವಾಗಿ ಎರಡು ತಿಂಗಳ ಕಾಲ ಎಲ್ಲರನ್ನೂ ಮನೆಯೊಳಗೆ ಬೀಗ ಹಾಕಿ, ಲಾಕ್ ಡೌನ್ ಮಾಡಿ, ಕುಳ್ಳಿರಿಸಲಾಗಿತ್ತು, ಆದರೆ ಅವರಿಗೆ ಅಷ್ಟು ದಿನಗಳಲ್ಲೂ ಆಹಾರ, ಆರೋಗ್ಯ ಸೇವೆಗಳು ಇತ್ಯಾದಿ ಎಲ್ಲಾ ಅಗತ್ಯಗಳನ್ನು ಪೂರೈಸಲಾಗಿತ್ತು. ಈ ಅತಿರೇಕದ ಕ್ರಮದಿಂದ ಅಲ್ಲಿ ಕೊರೋನ ಸೋಂಕನ್ನು ನಿಯಂತ್ರಿಸಲು ಸಾಧ್ಯವಾಗಿತ್ತು.

ಆದರೆ 2020ರ ಮಾರ್ಚ್ ವೇಳೆಗೆ ಈ ಹೊಸ ಸೋಂಕಿನ ಬಗ್ಗೆ ಇನ್ನಷ್ಟು ವಿವರಗಳು ಸ್ಪಷ್ಟವಾದರೂ ಕೂಡ, ನಮ್ಮದೇ ಐಸಿಎಂಆರ್‌ನ ತಜ್ಞರೇ ಎಪ್ರಿಲ್ 2020ರ ಮೊದಲಲ್ಲೇ ಲಾಕ್ ಡೌನ್‌ನಿಂದ ಪ್ರಯೋಜನಕ್ಕಿಂತ ಹೆಚ್ಚು ಸಮಸ್ಯೆಗಳೇ ಆಗಬಹುದೆಂದು ಎಚ್ಚರಿಸಿದ್ದರೂ ಕೂಡ, ವಿಶ್ವದಲ್ಲೇ ಅತಿ ಬೇಗನೇ, ಕೇವಲ 562 ಪ್ರಕರಣಗಳಿದ್ದಾಗ, 137 ಕೋಟಿ ಜನರ ಇಡೀ ದೇಶವನ್ನು ಎರಡು ತಿಂಗಳಿಗೆ ಲಾಕ್ ಡೌನ್ ಮಾಡಲಾಯಿತು. ಚೀನಾದಲ್ಲಿ ಲಾಕ್ ಡೌನ್ ಎಂದು ಎಲ್ಲರನ್ನೂ ಮನೆಯಲ್ಲಿರಿಸಿ ಅವರ ಅಗತ್ಯಗಳನ್ನೆಲ್ಲ ಪೂರೈಸಿದ್ದರೆ ಇಲ್ಲಿ ಲಾಕ್ ಡೌನ್ ಹೆಸರಲ್ಲಿ ಅಂಗಡಿ, ರಸ್ತೆ, ಶಾಲೆ, ಕಾರ್ಖಾನೆ ಎಲ್ಲವನ್ನೂ ಮುಚ್ಚಿ ಹಾಕಿ ಎಲ್ಲರನ್ನೂ ಅವರವರ ಪಾಡಿಗೆ ಬಿಟ್ಟುಬಿಡಲಾಯಿತು. ಕಳೆದ ವರ್ಷದ ಲಾಕ್ ಡೌನ್ ನಿಂದ ದೇಶದ ಆಸ್ತಿ 23% ಕುಸಿಯಿತು, ಕೋಟಿಗಟ್ಟಲೆ ಜನರು ನಿರುದ್ಯೋಗಿಗಳಾದರು, ನಿರ್ವಸಿತರಾದರು, ನಿರಾಹಾರಿಗಳಾದರು, ಮಕ್ಕಳು ಒಂದು ವರ್ಷವಿಡೀ ಕಲಿಕೆಯಿಂದ ವಂಚಿತರಾದರು.

ಅಷ್ಟಾದರೂ ಕೊರೋನ ಸೋಂಕೇನೂ ಕಡಿಮೆಯಾಗಲಿಲ್ಲ; ನಗರಗಳಲ್ಲಿ ಶೇ. 30-40 ಸೋಂಕಿತರಾದರು, ಒಟ್ಟು ಸೋಂಕಿತರ ಸಂಖ್ಯೆ ಅಧಿಕೃತವಾಗಿ ಒಂದೂವರೆ ಕೋಟಿಯಾದರೆ ಒಟ್ಟು ಸಂಖ್ಯೆ ಅದರ 30-40 ಪಟ್ಟು, ಅಂದರೆ 40-60 ಕೋಟಿಯಾಯಿತು, ಮೃತರ ಸಂಖ್ಯೆಯು ಅಧಿಕೃತವಾಗಿ ಒಂದು ಲಕ್ಷ 20 ಸಾವಿರವಾದರೆ, ಒಟ್ಟು ಸಂಖ್ಯೆ ಅದರ 5-7 ಪಟ್ಟಾಯಿತು. ಸರಕಾರ ನಡೆಸಿದ ಸೋಂಕಿನ ಅಂದಾಜುಗಳು ಸೋಂಕಿನ ಪ್ರಮಾಣವನ್ನು 70% ಎಂದು ಹೇಳಿ, ಫೆಬ್ರವರಿ ಬಳಿಕ ಸೋಂಕಿನೆದುರು ಸಾಮೂಹಿಕ ರೋಗರಕ್ಷೆ ಉಂಟಾಗಿ ಸೋಂಕು ಹರಡುವುದು ವಿರಳವಾಗಲಿದೆ ಎನ್ನಲಾಯಿತು; ಮಂತ್ರಿಗಳೂ, ಪ್ರಧಾನಿಗಳೂ ಇದರ ಆಧಾರದಲ್ಲಿ ಸಂಭ್ರಮಿಸಿ, ವಿಶ್ವಕ್ಕೇ ಮಾದರಿಯಾದೆವು ಎಂದು ಹೇಳಿದ್ದೂ ಆಯಿತು! ಹೀಗೆ ವಿಶ್ವದ ಅತಿ ಕಠಿಣ ಲಾಕ್ ಡೌನ್ ಅನ್ನು ಹೊಗಳಿಕೊಂಡವರೇ, ಅದು ವಿಫಲವಾಗಿ ನೂರು ಕೋಟಿ ಸೋಂಕಿತರಾದರೆನ್ನುವುದನ್ನೂ ಮಹತ್ಸಾಧನೆಯೆಂದು ಹೊಗಳಿಕೊಂಡರು!

ಆದರೆ ಕೊರೋನ ವೈರಸ್ ತನ್ನ ಪಾಡಿಗೆ ಹರಡುವಿಕೆಯನ್ನು ಮುಂದುವರಿಸಿತು. ಕಳೆದ ವರ್ಷ ವಿದೇಶಗಳಿಂದ ಆಗಮಿಸಿದ್ದವರ ಸಂಬಂಧಿಕರು, ನಿಕಟವರ್ತಿಗಳು, ಅವರ ಸಂಪರ್ಕಿತರು, ನಗರಗಳಲ್ಲಿ ಸಕ್ರಿಯರಾಗಿ ಒಟ್ಟೊಟ್ಟಿಗೆ ಬೆರೆತವರು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರಾಗಿದ್ದರೆ, ಲಾಕ್ ಡೌನ್ ಕಾರಣಕ್ಕೆ ಹಳ್ಳಿಗಳಿಗೆ ಹೋಗಿದ್ದವರು, ಕಚೇರಿಗಳನ್ನು ಬಿಟ್ಟು ಮನೆಗಳಲ್ಲೇ ಇದ್ದು ದುಡಿದವರು, ತಮ್ಮ ವಸತಿ ಸಮುಚ್ಚಯಗಳನ್ನು ದಿಗ್ಬಂಧಿಸಿಕೊಂಡಿದ್ದವರು ಸೋಂಕಿನಿಂದ ತಪ್ಪಿಸಿಕೊಂಡಿದ್ದರು. ಡಿಸೆಂಬರ್ ಬಳಿಕ ಸೋಂಕು ಇಳಿಯತೊಡಗಿ, ಸರಕಾರವೂ ಜಯಘೋಷ ಮಾಡಿದ ಬಳಿಕ ಇಂಥವರೆಲ್ಲರೂ ಸೋಂಕಿಗೆ ತೆರೆದುಕೊಳ್ಳುವಂತಾಯಿತು – ವಸತಿ ಸಮುಚ್ಚಯಗಳು ಬಾಗಿಲು ತೆರೆದವು, ಹಳ್ಳಿಗಳಲ್ಲಿದ್ದವರು ಪೇಟೆಗೆ ಮರಳಿದರು, ಸಭೆ-ಸಮಾರಂಭ-ಮೇಳ-ಚುನಾವಣಾ ಪ್ರಚಾರಗಳು ಜೋರಾದವು. ಇವುಗಳಿಂದಾಗಿ ಕಳೆದ ಬಾರಿ ಸೋಂಕಿತರಾಗದೇ ಇದ್ದವರಲ್ಲಿ ಸೋಂಕು ಹರಡಲಾರಂಭಿಸಿತು, ಫೆಬ್ರವರಿ-ಮಾರ್ಚ್ ವೇಳೆಗೆ ಹೆಚ್ಚತೊಡಗಿತು. ಅದೇ ಸಮಯದಲ್ಲಿ ಲಸಿಕೆಯ ಶಿಬಿರಗಳೂ ಆರಂಭಗೊಂಡು, ಅದುವರೆಗೂ ಮನೆಗಳಲ್ಲೇ ಇದ್ದ ಹಿರಿವಯಸ್ಕರು ಲಸಿಕೆಗಳಿಗಾಗಿ ಆಸ್ಪತ್ರೆಗಳಿಗೆ ಹೋಗುವುದಾಯಿತು, ಅಲ್ಲೆಲ್ಲ ಗುಂಪುಗೂಡುವುದಾಯಿತು, ಬಹುಷಃ ಅದು ಕೂಡ ಕೆಲವರಿಗೆ ಸೋಂಕು ಹರಡುವುದಕ್ಕೆ ಕಾರಣವಾಗಿರಬಹುದು.

ಕಳೆದ ವರ್ಷ ಸೋಂಕಿನಿಂದ ತಪ್ಪಿಸಿಕೊಂಡಿದ್ದವರಲ್ಲಿ ಹಲವರು ಹೀಗೆ ಮಾರ್ಚ್-ಎಪ್ರಿಲ್ ಬಳಿಕ ಸೋಂಕಿತರಾದರು; ಡಿಸೆಂಬರ್ ವೇಳೆಗೆ ಸುಮಾರು 40% ಸೋಂಕಿತರಾಗಿದ್ದರೆ, ಉಳಿದವರಲ್ಲಿ ಅನೇಕರು ಈ ಬಾರಿ ಸೋಂಕನ್ನು ಪಡೆದರು. ಒಮ್ಮಿಂದೊಮ್ಮೆಗೇ ಅನೇಕರು ಸೋಂಕಿತರಾದುದರಿಂದ ಆರೋಗ್ಯ ಸೇವೆಗಳು ಒತ್ತಡಕ್ಕೊಳಗಾದವು. ವರ್ಶಃಆರಂಭಕ್ಕೆ ಸೋಂಕಿನ ಉಬ್ಬರ ತಗ್ಗಿ ಸಂಭ್ರಮಾಚರಣೆ ನಡೆಯುತ್ತಿದ್ದಂತೆ ಅನೇಕ ಕಡೆಗಳಲ್ಲಿ ಮೊದಲು ಮಾಡಲಾಗಿದ್ದ ವ್ಯವಸ್ಥೆಗಳನ್ನೆಲ್ಲ ತೆಗೆದು ಹಾಕಲಾಗಿದ್ದುದು ಇನ್ನಷ್ಟು ಸಮಸ್ಯೆಗಳಿಗೆ ಕಾರಣವಾಯಿತು. ಆಸ್ಪತ್ರೆಗಳಲ್ಲಿ ದಾಖಲಾಗುವುದಕ್ಕೆ ಅವಕಾಶವಿಲ್ಲದಾಯಿತು. ದೇಶದ ಅಲ್ಲಲ್ಲಿರುವ ಬೃಹತ್ ಉದ್ದಿಮೆಗಳಲ್ಲಿ ದ್ರವೀಕೃತ ಆಮ್ಲಜನಕವನ್ನು ಸಿದ್ದಪಡಿಸುವ ಸೌಲಭ್ಯಗಳು ವಿಪುಲವಾಗಿದ್ದರೂ, ಅಲ್ಲಿಂದ ಅದನ್ನು ಆಸ್ಪತ್ರೆಗಳಿಗೆ ತಲುಪಿಸುವುದಕ್ಕೆ ಕಳೆದ ವರ್ಷದಲ್ಲೇ ಮುಂದಾಲೋಚಿಸಿ ಸೂಕ್ತ ವ್ಯವಸ್ಥೆಗಳನ್ನು ಮಾಡಿರದ ಕಾರಣಕ್ಕೆ ಆಸ್ಪತ್ರೆಗಳಲ್ಲಿ ಆಮ್ಲಜನಕವಿಲ್ಲದೆ ಅನೇಕರು ಮೃತರಾದರು; ಈ ದುಸ್ಥಿತಿಯು ವಿಶ್ವದಲ್ಲಿಡೀ ಸುದ್ದಿಯಾದಾಗ, ಅನೇಕ ದೇಶಗಳು ಆಮ್ಲಜನಕದ ಟ್ಯಾಂಕರ್‌ಗಳನ್ನು ಇಲ್ಲಿಗೆ ರವಾನಿಸಿ ನೆರವಾದವು. ಸೋಂಕಿತರ ಸಂಖ್ಯೆಯನ್ನೂ, ಮೃತರ ಸಂಖ್ಯೆಯನ್ನೂ ಸಣ್ಣದಾಗಿಸುವುದಕ್ಕೆ ಹಲಬಗೆಯ ಪ್ರಯತ್ನಗಳಾದರೂ, ಮೃತ ದೇಹಗಳ ಅಂತ್ಯಸಂಸ್ಕಾರಕ್ಕೂ ಕಷ್ಟಗಳಾಗಿ ಉತತ್ರ ಪ್ರದೇಶ, ಗುಜರಾತ್, ಬಿಹಾರ್ ಮುಂತಾದೆಡೆ ರಸ್ತೆಬದಿಗಳಲ್ಲಿ, ಹೊಲಗಳಲ್ಲಿ ಚಿತೆಗಳುರಿಯುವ ಚಿತ್ರಗಳೂ, ಗಂಗೆಯಲ್ಲಿ ಮೃತದೇಹಗಳನ್ನು ಎಸೆಯುವ, ತೇಲಿಬರುವ ಚಿತ್ರಗಳೂ ದೇಶ-ವಿದೇಶಗಳ ಮಾಧ್ಯಮಗಳಲ್ಲಿ ಪ್ರಕಟವಾದವು. ಏನೇ ಆದರೂ ಸರಕಾರಗಳು ತಮ್ಮ ಬೆನ್ನನ್ನು ತಟ್ಟಿಕೊಳ್ಳುವುದನ್ನು ಬಿಡಲಿಲ್ಲ, ಬದಲಿ, ಅನ್ಯರ ಮೇಲೆಯೇ ದೂರು ಹೊರಿಸುವ ಕೆಲಸವನ್ನು ಮುಂದುವರಿಸಿದವು.

ಕೊರೋನ ಹರಡುವುದನ್ನು ತಡೆಯುವುದಕ್ಕೆ ಅದೇನೋ ಮಾಡಲಾಗುತ್ತಿದೆಯೆಂದು ತೋರಿಸುವುದಕ್ಕೆ ದೇಶದ ಹಲವೆಡೆ ಮತ್ತೆ ಲಾಕ್ ಡೌನ್ ವಿಧಿಸಲಾಯಿತು, ವಾರಕ್ಕೊಮ್ಮೆ ಮುಂದುವರಿಸಿಕೊಂಡು ಎರಡು ತಿಂಗಳಿಗೂ ಹೆಚ್ಚು ಕಾಲ ಮತ್ತೆ ಎಲ್ಲವನ್ನೂ ಮುಚ್ಚಿ ಹಾಕಲಾಯಿತು. ಇದರಿಂದ ಜನರ ಕಷ್ಟಗಳು ಇನ್ನಷ್ಟು ಹೆಚ್ಚಿದವು, ಸರಕಾರದ, ಹಾಗೂ ದೇಶದ ನಷ್ಟ ಉಲ್ಬಣಿಸಿತು. ವರ್ಶಃಆರಂಭಕ್ಕೆ ನಗರಗಳಲ್ಲಿ ಕೆಲಸಕ್ಕೆಂದು ಮರಳಿದ್ದವರು ಮತ್ತೆ ಹಳ್ಳಿಗಳಿಗೆ ಹೋದರು; ಕಳೆದ ಬಾರಿ ಲಾಕ್ ಡೌನ್ ವಿಧಿಸಿದ್ದಾಗ ದೇಶದಲ್ಲೆಲ್ಲೂ ಕೊರೋನ ಪ್ರಕರಣಗಳು ಇರಲಿಲ್ಲ, ಆದರೆ ಈ ಬಾರಿ ನಗರಗಳಲ್ಲಿ ಅದಾಗಲೇ ಇದ್ದುದರಿಂದ ಹೀಗೆ ಹಳ್ಳಿಗಳಿಗೆ ಮತ್ತೆ ಮರಳಿದವರು ತಮ್ಮೊಡನೆ ಕೊರೋನ ಸೋಂಕನ್ನೂ ಹೊತ್ತೊಯದ್ರು, ತಮ್ಮ ತಮ್ಮ ಹಳ್ಳಿಗಳಲ್ಲಿ ಹರಡಿದರು. ಲಾಕ್ ಡೌನ್ ಮಾಡಿ ಖರೀದಿಯ ಸಮಯವನ್ನು ನಿರ್ಬಂಧಿಸಿದ್ದರಿಂದ ಜನಜಂಗುಳಿ ಹೆಚ್ಚಿ ಕೊರೋನ ಹರಡುವುದು ಕಡಿಮೆಯಾಗುವುದಕ್ಕೆ ಸಾಧ್ಯವಾಗಲಿಲ್ಲ. ಆದರೂ ಲಾಕ್ ಡೌನ್ ಮುಂದುವರಿಯುತ್ತಲೇ ಹೋಯಿತು. ರಾಜ್ಯದ ಕಾರ್ಯಪಡೆಯ ಹಿರಿಯರೊಬ್ಬರು ವೆಬಿನಾರ್ ಒಂದರಲ್ಲಿ ಮಾತಾಡುತ್ತಾ, ಜನರು ಹೇಳಿದ್ದನ್ನು ಮಾಡುವುದಿಲ್ಲ, ಹಾಗಾಗಿ ಲಾಕ್ ಡೌನ್ ಒಂದೇ ಕೊರೋನ ನಿಯಂತ್ರಣಕ್ಕೆ ಬ್ರಹ್ಮಾಸ್ತ್ರ ಎಂದರು; ಅದೇ ಕಾರ್ಯಪಡೆಯ ಮತ್ತೊಬ್ಬರು ಅದೇ ವೆಬಿನಾರ್‌ನಲ್ಲಿ ಮಾತಾಡಿದಾಗ, ಲಾಕ್ ಡೌನ್‌ನಿಂದ ಅಂಥದ್ದೇನೂ ಉಪಯೋಗವಿಲ್ಲ, ಅದೊಂದು ಪ್ರಯತ್ನವಷ್ಟೇ ಎಂದರು!

ಅಂದರೆ, ಲಾಕ್ ಡೌನ್‌ನಿಂದ ಪ್ರಯೋಜನವೇನಿದೆಯೆಂಬ ಖಾತರಿಯಿಲ್ಲದ ಕಾರ್ಯಪಡೆಗಳು ಮನಬಂದಂತೆ ಜನರ ಜೀವನವನ್ನು ಧ್ವಂಸ ಮಾಡಲು ಹಿಂಜರಿಯಲಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಕೊರೋನ ಹೆಸರಲ್ಲಿ ಹೀಗೆ ಜನರನ್ನು ಮರ್ದಿಸಲು 1897ರ ಸಾಂಕ್ರಾಮಿಕ ರೋಗಗಳ ಕಾಯಿದೆಯನ್ನು ಇವರೆಲ್ಲರೂ ಬಳಸಿಕೊಂಡರು. ಆ 1897ರಲ್ಲಿ, ಯಾವ ಔಷಧಗಳೂ ಇಲ್ಲದಿದ್ದ ಕಾಲದಲ್ಲಿ, ನೂರಕ್ಕೆ 30 ಜನರನ್ನು ಕೊಲ್ಲುತ್ತಿದ್ದ ಪ್ಲೇಗ್ ಸೋಂಕನ್ನು ತಡೆಯುವುದಕ್ಕೆ, ಅತ್ಯಂತ ಅಪಾಯಕಾರಿಯಾದ ಸೋಂಕನ್ನು ನಿಯಂತ್ರಿಸಲು ತಾತ್ಕಾಲಿಕವಾದ ಕ್ರಮಗಳನ್ನು ಹೇರುವ ಅಧಿಕಾರವನ್ನು ಸರಕಾರಕ್ಕೆ ನೀಡಲು ಆ ಕಾಯಿದೆಯನ್ನು ತರಲಾಗಿತ್ತು. ಹತ್ತು ಸಾವಿರಕ್ಕೆ ಏಳು ಜನರ ಸಾವಿಗೆ ಕಾರಣವಾಗುವ (ಅದನ್ನೂ ತಡೆಯಲು ಸಾಧ್ಯವಿರುವ ಅವಕಾಶಗಳಿರುವ), ಆ ಪ್ಲೇಗ್‌ಗೆ ಹೋಲಿಸಿದರೆ 450 ಪಟ್ಟು ಕಡಿಮೆ ಅಪಾಯಕಾರಿಯಾಗಿರುವ ಈ ಹೊಸ ಕೊರೋನ ಸೋಂಕನ್ನು ನಿಯಂತ್ರಿಸುವುದಕ್ಕೆ, 1897ಕ್ಕೆ ಹೋಲಿಸಿದರೆ ಅದೆಷ್ಟೋ ಪಟ್ಟು ಹೆಚ್ಚು ಜೀವರಕ್ಷಕ ಚಿಕಿತ್ಸೆಗಳೆಲ್ಲವೂ ಲಭ್ಯವಿರುವ ಆ ಕಾಲದಲ್ಲಿ, ತಾತ್ಕಾಲಿಕವಾಗಿ ಬಳಸುವುದಕ್ಕೆಂದು ತರಲಾಗಿದ್ದ ಕಾಯಿದೆಯನ್ನು ತಿಂಗಳುಗಟ್ಟಲೆ ಎಲ್ಲವನ್ನೂ ನಿರ್ಬಂಧಿಸಲು ಬಳಸಿಕೊಂಡಿರುವುದು ಅತಿ ದೊಡ್ಡ ಅನ್ಯಾಯವೆಂದು ಹೇಳಲೇ ಬೇಕಾಗುತ್ತದೆ. ಅಂಥ ನಿರ್ಧಾರಗಳನ್ನು ಕೈಗೊಂಡ ತಥಾಕಥಿತ ಕಾರ್ಯಪಡೆಗಳೂ, ಅವುಗಳನ್ನು ಅನುಸರಿಸಿದ ಸರಕಾರಗಳೂ, ಉತ್ತೇಜಿಸಿದ ಮಾಧ್ಯಮಗಳೂ, ಸುಮ್ಮನಿದ್ದ ಅಥವಾ ಲಾಕ್ ಡೌನ್ ಮಾಡುವಂತೆ ಒತ್ತಡವನ್ನೇ ಹಾಕಿದ ರಾಜಕೀಯ ಪಕ್ಷಗಳೂ, ವೈದ್ಯಕೀಯ ಸಂಘಟನೆಗಳೂ ಅದಕ್ಕೆ ಒಟ್ಟಾಗಿ ಜವಾಬ್ದಾರರಾಗಬೇಕಾಗುತ್ತದೆ.

ಹೀಗೆ 1897ರ ಕಾಯಿದೆಯಡಿ ತಿಂಗಳುಗಟ್ಟಲೆ ನಮ್ಮ ಮೂಲಭೂತ ಹಕ್ಕುಗಳನ್ನು ಕಿತ್ತುಕೊಂಡದ್ದರಿಂದ ಸಾಧಿಸಿದ್ದೇನು? ಕೊರೋನ ಸೋಂಕು ಅದರಿಂದ ನಿಯಂತ್ರಣಕ್ಕೆ ಬಂತೇ? ಕೋವಿಡ್‌ನಿಂದ ಸಾವುಗಳು ತಡೆಯಲ್ಪಟ್ಟವೇ? ಸಂವಿಧಾನದ 21ನೇ ವಿಧಿಯಡಿಯಲ್ಲಿ ನಮಗೆಲ್ಲರಿಗೂ ನೀಡಲಾಗಿರುವ ಜೀವಿಸುವ ಹಕ್ಕು, ಮತ್ತು ಅದಕ್ಕೆ ತಳುಕು ಹಾಕಿಕೊಂಡಿರುವ ಊಟದ ಹಕ್ಕು, ಆರೋಗ್ಯದ ಹಕ್ಕು, ಕೆಲಸದ ಹಕ್ಕು, ಶಿಕ್ಷಣದ ಹಕ್ಕು, ಚಲನವಲನದ ಹಕ್ಕು ಎಲ್ಲವನ್ನೂ ಈ 1897ರ ಕಾನೂನಿನ ಹೆಸರಲ್ಲಿ ಕಿತ್ತುಕೊಂಡದ್ದರಿಂದ ಈ ದೇಶದ ಪ್ರತಿಯೋರ್ವ ನಾಗರಿಕನಿಗೂ ಆಗಿರುವ ಎಲ್ಲ ಬಗೆಯ ಕಷ್ಟನಷ್ಟಗಳಿಗೆ ತುಲನೆಯಾಗಿ ಅದಕ್ಕಿಂತಲೂ ಹೆಚ್ಚು ಪ್ರಯೋಜನಗಳನ್ನು ನೀಡುವಷ್ಟರ ಮಟ್ಟಿಗೆ ಕೊರೋನ ಸೋಂಕಿನ ನಿಯಂತ್ರಣ ಸಾಧ್ಯವಾಯಿತೇ, ಸಾವುಗಳು ತಡೆಯಲ್ಪಟ್ಟವೇ ಎಂಬ ಎಲ್ಲಾ ವಿವರಗಳನ್ನು ಪಾರದರ್ಶಕವಾಗಿ, ವೈಜ್ಞಾನಿಕವಾಗಿ, ವಸ್ತುನಿಷ್ಠವಾಗಿ ದೇಶದ ಜನರೆದುರು ಹೇಳಬೇಕಾದ ಜವಾಬ್ದಾರಿಯು ಈ ಕಾರ್ಯಪಡೆಗಳವರಿಗೂ, ಎಲ್ಲಾ ಸರಕಾರಗಳಿಗೂ ಇದೆ. ಪ್ರತಿಯೊಬ್ಬರೂ  ಕೂಡ ಬೇರೊಬ್ಬರನ್ನು ರಕ್ಷಿಸುವುದಕ್ಕೆಂದು ತಮ್ಮೆಲ್ಲಾ ಹಕ್ಕುಗಳನ್ನು ಒತ್ತೆಯಿಟ್ಟದ್ದಲ್ಲದೆ, ತಮ್ಮನ್ನು ಸ್ವತಃ ಎಲ್ಲ ರೀತಿಯ ಕಷ್ಟಗಳಿಗೆ ಒಡ್ಡಿಕೊಂಡದ್ದು ಎಷ್ಟರ ಮಟ್ಟಿಗೆ ಸಾರ್ಥಕವಾಯಿತೆನ್ನುವುದನ್ನು ಈ ಕಾರ್ಯಪಡೆಗಳವರೂ, ಸರಕಾರಗಳೂ ಹೇಳಬೇಕಾಗಿದೆ.

ಹೀಗೆ ಎಲ್ಲವನ್ನೂ ಧ್ವಂಸ ಮಾಡಿದಾಗ ಇಡೀ ದೇಶಕ್ಕೆ ಅನ್ವಯಿಸುವ, ಸಾಕ್ಷ್ಯಾಧಾರಿತವಾದ, ವಿಶ್ವದ ಇತರೆಲ್ಲಾ ದೇಶಗಳಲ್ಲಿ ಒಂದೇ ರೂಪದಲ್ಲಿದ್ದಂತಹ ಚಿಕಿತ್ಸಾ ಕಾರ್ಯಸೂಚಿಯನ್ನು ಮಾಡುವುದಕ್ಕೆ ನಮ್ಮ ದೇಶದಲ್ಲಿ ಸಾಧ್ಯವಾಗಲಿಲ್ಲ. ಕಳೆದ ವರ್ಷ ಮೇ 15ರಂದು ಕರ್ನಾಟಕ ಸರಕಾರವು ತೀರಾ ವೈಜ್ಞಾನಿಕವಾದ, ಅವೈಚಾರಿಕವಾದ ಚಿಕಿತ್ಸಾಕ್ರಮವನ್ನು ಪ್ರಕಟಿಸಿದಾಗಲೇ ಈ ಲೇಖಕ ಅದನ್ನು ವಿರೋಧಿಸಿ, ಅದನ್ನು ಹಿಂಪಡೆಯಬೇಕೆಂದು ಹೇಳಿಕೆ ನೀಡಿದ್ದಾಗಿತ್ತು. ಆದರೆ ಅದೇ ಚಿಕಿತ್ಸಾಕ್ರಮ ಮುಂದುವರಿದದ್ದು ಮಾತ್ರವಲ್ಲ, ಸ್ಟೀರಾಯ್ಡ್ ಮಾತ್ರೆಗಳು, ಹಲಬಗೆಯ ಪ್ರತಿಜೈವಿಕಗಳು, ರೆಮ್ಡಿಸಿವಿರ್‌ನಂತಹ ಔಷಧಗಳು ಟನ್ನುಗಟ್ಟಲೆಯಲ್ಲಿ ಬಳಕೆಯಾದವು, ಸರಕಾರಿ ಸಂಸ್ಥೆಗಳೇ ಅವನ್ನು ನೂರುಗಟ್ಟಲೆ ಕೋಟಿಯಲ್ಲಿ ಖರೀದಿಸಿ ಹಂಚಿದವು, ಜನಸಾಮಾನ್ಯರಂತೂ ಸಾವಿರಗಟ್ಟಲೆ ಕೋಟಿ ವ್ಯಯಿಸಿದ್ದು ಮಾತ್ರವಲ್ಲ, ಅವು ದೊರೆಯದಾಗ ಕಾಳಸಂತೆಯಲ್ಲಿ ಸಾವಿರಗಟ್ಟಲೆ ತೆತ್ತು ಖರೀದಿಸಿದರು, ಇಂಥ ತೀರಾ ನಿರುಪಯುಕ್ತವಾದ ಔಷಧಗಳನ್ನು ಒದಗಿಸುವುದಕ್ಕೆ ಸಂಘಸಂಸ್ಥೆಗಳೂ, ರಾಜಕೀಯ ಪಕ್ಷಗಳೂ ಸಹಾಯಕೇಂದ್ರಗಳನ್ನೂ ತೆರೆದವು, ನ್ಯಾಯಾಲಯಗಳು ಕೂಡ ಈ ಔಷಧಗಳನ್ನು ಒದಗಿಸಬೇಕೆಂದು ಆದೇಶ ನೀಡಿದವು. ಅದರ ಜೊತೆಗೆ, ಬಗೆಬಗೆಯ ಬದಲಿ ಚಿಕಿತ್ಸೆಗಳನ್ನು ಕೂಡ ಸರಕಾರದಿಂದ ಹಿಡಿದು ಸಾಮಾಜಿಕ ಮಾಧ್ಯಮಗಳ ವರೆಗೆ ಎಲ್ಲರೂ ಪ್ರಚಾರ ಮಾಡಿದ್ದೂ ಆಯಿತು, ಆಧುನಿಕ ಆಸ್ಪತ್ರೆಗಳಲ್ಲೂ ಅರಶಿನ ಹಾಲು, ಕಷಾಯಗಳು ಲೀಟರುಗಟ್ಟಲೆಯಲ್ಲಿ ಕುಡಿಸಲ್ಪಟ್ಟವು. ಗುಜರಾತ್ ಮುಂತಾದೆಡೆ ಸೆಗಣಿ ಅಭಿಷೇಕಗಳೂ ನಡೆದವು.

ದೇಶದಲ್ಲೊಂದು ಏಕರೂಪದ, ವೈಜ್ಞಾನಿಕವಾದ ಚಿಕಿತ್ಸಾ ಕಾರ್ಯಸೂಚಿಯೇ ಇಲ್ಲವೆಂದೂ, ಅಮೆರಿಕ, ಬ್ರಿಟನ್ ಸೇರಿದಂತೆ, ನಮ್ಮ ನೆರೆಹೊರೆಯ ದೇಶಗಳೂ ಒಳಗೊಂಡಂತೆ ಎಲ್ಲೆಡೆ ಒಂದೇ ಬಗೆಯ, ಸಾಕ್ಷ್ಯಾಧಾರಿತ ಚಿಕಿತ್ಸಾ ಕಾರ್ಯಸೂಚಿ ಇದೆಯೆಂದೂ ಇದೇ ಲೇಖಕ ಬರೆದಿದ್ದುದು ಮೇ 7, 2021ರಂದು ದಿ ನ್ಯೂಸ್ ಮಿನಿಟ್ ನಲ್ಲಿ ಪ್ರಕಟವಾಗಿತ್ತು. ಬಳಿಕ ಮೇ 27, 2021ರಂದು ಕೇಂದ್ರ ಆರೋಗ್ಯ ಸೇವೆಗಳ ನಿರ್ದೇಶನಾಲಯವು ಹೊಸತೊಂದು ಕಾರ್ಯಸೂಚಿಯನ್ನು ಪ್ರಕಟಿಸಿ, ತೀವ್ರ ಕಾಯಿಲೆಯಿದ್ದವರಲ್ಲಿ ಸ್ಟೀರಾಯ್ಡ್ ಮತ್ತು ರಕ್ತ ಹೆಪ್ಪುಗಟ್ಟದಂತೆ ತಡೆಯುವ ಔಷಧಗಳನ್ನು ಬಳಸುವುದನ್ನು ಬಿಟ್ಟರೆ, ಬೇರೆ ಯಾರಲ್ಲೂ ಯಾವುದೇ ಅನ್ಯ ಔಷಧಗಳನ್ನು ಬಳಸಬಾರದೆಂದು ಹೇಳಲಾಯಿತು. ಅಂದರೆ, ವಿಶ್ವದ ಎಲ್ಲಾ ದೇಶಗಳಲ್ಲಿ ಈ ಒಂದು ವರ್ಷದಿಂದಲೂ ಪಾಲಿಸುತ್ತಲೇ ಬಂದಿದ್ದ ಸಾಕ್ಷ್ಯಾಧಾರಿತವಾದ ಚಿಕಿತ್ಸಾ ಕ್ರಮವನ್ನು ನಮ್ಮ ದೇಶದಲ್ಲೂ ಪ್ರಕಟಿಸುವುದಕ್ಕೆ ಮೇ 27, 2021 ಬರಬೇಕಾಯಿತು. ಒಂದಿಡೀ ವರ್ಷ ಕೊರೋನ ಸೋಂಕಿತರಿಗೆ ಮಾಡಿದ್ದೆಲ್ಲವೂ, ಕೊಟ್ಟದ್ದೆಲ್ಲವೂ ಅನಗತ್ಯವಾಗಿತ್ತು, ಅವೈಜ್ಞಾನಿಕವಾಗಿತ್ತು ಎಂಬುದನ್ನು ಕೊನೆಗೂ ಸರಕಾರವೇ ಒಪ್ಪಿಕೊಂಡಂತಾಯಿತು.

ಕಾರ್ಯಸೂಚಿ ಬದಲಾದರೂ ಚಿಕಿತ್ಸೆಯೇನೂ ಬದಲಾದಂತೆ ಕಾಣುವುದಿಲ್ಲ. ಕಾರ್ಯಸೂಚಿಯು ಬದಲಾಗಿ ಈಗ ಒಂದು ತಿಂಗಳಾದರೂ ಅದೇ ಹಳೆಯ, ಅವಿಜ್ಞಾನಿಕ ಚಿಕಿತ್ಸಾಕ್ರಮವೇ ಇನ್ನೂ ಮುಂದುವರಿದಿದೆ, ಸರಕಾರಿ ಸಂಸ್ಥೆಗಳೂ, ಹೆಚ್ಚಿನ ವೈದ್ಯರೂ ತಾವು ಈ ಹಿಂದೆ ಕೊಡುತ್ತಲೇ ಇದ್ದ ಔಷಧಗಳನ್ನೇ ಕೊಡುವುದನ್ನು ಈಗಲೂ ಮುಂದುವರಿಸಿದ್ದಾರೆ, ಅವೇ ಬೇಕೆಂದು ಹಠ ಹಿಡಿಯುವ, ಕೇಳಿ ಪಡೆಯುವ ಜನರಿಗೂ ಕೊರತೆಯಿಲ್ಲ.

ಲಾಕ್ ಡೌನ್ ಹೆಸರಲ್ಲಿ ಸರ್ವನಾಶ ಮಾಡಿ, ಸರಿಯಾದ ಚಿಕಿತ್ಸಾಕ್ರಮವನ್ನೂ ಸೂಚಿಸಲಾಗದೇ ಹೋದದ್ದಲ್ಲದೆ, ಲಸಿಕೆ ನೀಡುವಿಕೆಯನ್ನೂ ಹಾಳುಗೆಡವಲಾಗಿದೆ. ಲಸಿಕೆ ತಯಾರಿಸಿದ ಮೊದಲ ದೇಶವಾಗಬೇಕೆಂಬ ಧಾವಂತದಲ್ಲಿ ಕಳೆದ ವರ್ಷವೇ ಆಗಸ್ಟ್ 15ರಂದು ಆ ಬಗ್ಗೆ ಘೋಷಣೆ ಮಾಡುವ ಅದೇನೋ ಉದ್ದೇಶದಿಂದ ಲಸಿಕೆಗಳ ಪರೀಕ್ಷೆಯನ್ನು ತರಾತುರಿಯಲ್ಲಿ 2 ತಿಂಗಳೊಳಗೆ ನಡೆಸಬೇಕೆಂದು ಐಸಿಎಂಆರ್‌ನಿಂದ ಪತ್ರ ಬರೆಸಲಾಗಿತ್ತು. ಅದರ ಬೆನ್ನಿಗೇ ಹಿರಿಯ ವಿಜ್ಞಾನಿ ಡಾ. ಗಗನ್‌ದೀಪ್ ಕಾಂಗ್ ರಾಜೀನಾಮೆ ನೀಡಿದ್ದರು. ಬಳಿಕ ರಷ್ಯಾ, ಅಮೆರಿಕಾ, ಆಕ್ಸ್‌ಫರ್ಡ್ ವಿವಿ, ಚೀನಾಗಳ ಲಸಿಕೆಗಳು ವರ್ಷಾಂತ್ಯಕ್ಕೆ ಬಳಕೆಗೆ ಬಂದವು, ನಾವೇನು ಕಡಿಮೆಯೆಂದು ಇಲ್ಲೂ ಜನವರಿಯಿಂದ ಅದೇ ಆಕ್ಸ್‌ಫರ್ಡ್ ಲಸಿಕೆ (ಕೋವಿಶೀಲ್ಡ್) ಅನ್ನೂ, ನಮ್ಮದೇ ಭಾರತ್ ಬಯೋಟೆಕ್ ಸಂಸ್ಥೆಯ ಕೊವಾಕ್ಸಿನ್ ಲಸಿಕೆಯನ್ನೂ ನೀಡಲಾರಂಭಿಸಲಾಯಿತು. ಆದರೆ ಭಾರತದಲ್ಲಿ ಕೋವಿಶೀಲ್ಡ್ ಲಸಿಕೆಯ ಮೂರನೇ ಹಂತದ ಪರೀಕ್ಷೆಗಳ ವರದಿಗಳು ಆಗಿನ್ನೂ ಪ್ರಕಟವಾಗಿರದಿದ್ದರೂ ತುರ್ತು ಅನುಮತಿ ನೀಡಲಾಯಿತು; ಕೊವಾಕ್ಸಿನ್ ಲಸಿಕೆಯ ಮೂರನೇ ಹಂತದ ಪರೀಕ್ಷೆಗಳು ನಡೆದೇ ಇರಲಿಲ್ಲವಾದರೂ, ಪ್ರಾಯೋಗಿಕ ಬಳಕೆಗೆಂದೇ ಅದಕ್ಕೆ ತುರ್ತು ಅನುಮತಿ ನೀಡಲಾಯಿತು.

ಹೀಗೆ ಸರಿಯಾದ ಪರೀಕ್ಷೆಗಳೇ ನಡೆಯದ ಲಸಿಕೆಗಳನ್ನು ತರಾತುರಿಯಲ್ಲಿ ಪ್ರಾಯೋಗಿಕವಾಗಿ ನೀಡಹೊರಟದ್ದನ್ನು ಡಾ. ಗಗನ್ ದೀಪ್ ಕಾಂಗ್, ಡಾ. ಶಾಹಿದ್ ಜಮಾಲ್, ಡಾ. ಜೇಕಬ್ ಜಾನ್ ಮುಂತಾದ ಅನೇಕ ಹಿರಿಯ ತಜ್ಞರು ಪ್ರಶ್ನಿಸಿದರು. ಮೊದಲ ಹಂತದ ಲಸಿಕೆಗಳನ್ನು ಪಡೆಯಬೇಕಾಗಿದ್ದ ಆರೋಗ್ಯ ಕಾರ್ಯಕರ್ತರಲ್ಲೂ ಗೊಂದಲ, ಆತಂಕಗಳಾದವು. ಲಸಿಕೆಗಾಗಿ ಕಡ್ಡಾಯಗೊಳಿಸಲಾಗಿದ್ದ ಕೋವಿನ್ ಆಪ್ ಕೂಡ ಸರಿಯಾಗಿ ಕೆಲಸ ಮಾಡದೆ ಇನ್ನಷ್ಟು ಗೊಂದಲಗಳಾದವು. ಇವುಗಳ ನಡುವೆ ಲಸಿಕೆ ಹಾಕಿಸಿಕೊಂಡ ಕೆಲವರಲ್ಲಿ ಅಡ್ಡ ಪರಿಣಾಮಗಳಾದವು, ಕೆಲವರು ಹೃದಯಾಘಾತ, ಪಾರ್ಶ್ವವಾಯು, ನರ ಸಂಬಂಧಿತ ಸಮಸ್ಯೆಗಳಿಗೆ ತುತ್ತಾದರು, ಆರಂಭದ ದಿನಗಳಲ್ಲೇ ಕೆಲವರು ಲಸಿಕೆಯ ಬಳಿಕ ಮೃತರಾದ ವರದಿಗಳೂ ಆದವು. ಇವಕ್ಕೆಲ್ಲ ಸೂಕ್ತವಾದ ಉತ್ತರಗಳು ಲಸಿಕೆ ಕಂಪೆನಿಗಳಲ್ಲಾಗಲೀ, ಸರ್ಕಾರದಲ್ಲಾಗಲೀ ದೊರೆಯದೆ ಜನರ ಸಂಶಯಗಳು ಇನ್ನಷ್ಟಾದವು. ಇವೆಲ್ಲ ಕಾರಣಗಳಿಂದ ಅರ್ಧಕ್ಕರ್ಧ ಆರೋಗ್ಯ ಕಾರ್ಯಕರ್ತರು ಲಸಿಕೆಗಳಿಂದ ದೂರವುಳಿದರು. ಈ ಸಮಸ್ಯೆಗಳನ್ನು ಸಮಾಧಾನಕರವಾಗಿ ಪರಿಹರಿಸುವ ಬದಲಿಗೆ ಸರಕಾರವು ಪ್ರತಿಪಕ್ಷಗಳನ್ನೂ, ಲಸಿಕೆಯ ಸಾಧಕಬಾಧಕಗಳ ಬಗ್ಗೆ ಪ್ರಶ್ನಿಸಿದವರನ್ನೂ ದೂಷಿಸಿತು.

ಆರೋಗ್ಯ ಕಾರ್ಯಕರ್ತರಲ್ಲಿ ಲಸಿಕೆ ಹಾಕುವುದು ಮುಗಿಯುವ ಮೊದಲೇ, ಮಾರ್ಚ್ ಮೊದಲಿಂದ, ಹಿರಿಯ ವಯಸ್ಕರಿಗೆ ಮತ್ತು ಅನ್ಯ ರೋಗಗಳುಳ್ಳ 45ಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ಹಾಕಲು ಆರಂಭಿಸಲಾಯಿತು. ಅದರಲ್ಲೂ ಗೊಂದಲಗಳು ಮುಂದುವರಿದವು, ಹಲವೆಡೆ ಸಾಕಷ್ಟು ಪ್ರಮಾಣದಲ್ಲಿ ಲಸಿಕೆಗಳೇ ದೊರೆಯದಾಯಿತು. ಇದರ ನಡುವೆಯೇ, 18ಕ್ಕೆ ಮೇಲ್ಪಟ್ಟವರಿಗೂ ಲಸಿಕೆ ನೀಡುವ ಘೋಷಣೆಯಾಯಿತು, ಏಪ್ರಿಲ್‌ನಲ್ಲಿ ಮೂರು ದಿನಗಳ ಹಬ್ಬವೂ ಆಯಿತು. ಆದರೆ ಯಾರಿಗೂ, ಯಾವುದಕ್ಕೂ ಸಾಕಷ್ಟು ಲಸಿಕೆಗಳೇ ದೊರೆಯದಾಯಿತು.

ದೇಶದೊಳಗೆ ಲಸಿಕೆಗಳು ದೊರೆಯದಾದಾಗ, ನ್ಯಾಯಾಲಯಗಳೂ ಚಾಟಿ ಬೀಸಿದಾಗ ಒತ್ತಡಕ್ಕೊಳಗಾದ ಒಕ್ಕೂಟ ಸರಕಾರವು ಲಸಿಕೆಗಳ ರಫ್ತನ್ನು ನಿರ್ಬಂಧಿಸಿತು. CEPI, GAVI, WHO ಮತ್ತು UNICEF ಸಂಸ್ಥೆಗಳು ಜಂಟಿಯಾಗಿ ಆರಂಭಿಸಿದ್ದ ಕೋವ್ಯಾಕ್ಸ್ ಯೋಜನೆಗೆ ಆಕ್ಸ್‌ಫರ್ಡ್ ಲಸಿಕೆಯ ಅಸ್ತ್ರ ಜೆನೆಕ ಕಂಪೆನಿಯು CEPI ಮತ್ತು GAVI ಗಳ ಜೊತೆ 30 ಕೋಟಿ ಲಸಿಕೆಗಳನ್ನು ಒದಗಿಸುವುದಕ್ಕೆ 5600 ಕೋಟಿ ರೂಪಾಯಿಗಳ (ಪ್ರತೀ ಡೋಸಿಗೆ 186ರೂ) ಮೌಲ್ಯದ ಒಪ್ಪಂದವನ್ನು ಮಾಡಿಕೊಂಡು, ಲಸಿಕೆಯ 100 ಕೋಟಿ ಡೋಸ್ ಗಳನ್ನು ಉತ್ಪಾದಿಸುವುದಕ್ಕೆ ಭಾರತದ ಸೀರಂ ಇನ್ ಸ್ಟಿಟ್ಯೂಟ್ ಜೊತೆಗೆ ಒಪ್ಪಂದ ಮಾಡಿಕೊಂಡಿತ್ತು. ಒಕ್ಕೂಟ ಸರಕಾರದ ನೀತಿಯಿಂದ ಇದಕ್ಕೆ ಅಡ್ಡಿಯಾದಾಗ ಅಸ್ತ್ರ ಜೆನೆಕ ಸೀರಂ ಸಂಸ್ಥೆಗೆ ನೋಟೀಸ್ ನೀಡಿತು. ಕೋವ್ಯಾಕ್ಸ್ ಯೋಜನೆಯಲ್ಲಿ ಲಸಿಕೆಯನ್ನು ಪಡೆಯಬೇಕಾಗಿದ್ದ ಆಫ್ರಿಕಾ ಮತ್ತು ಏಷ್ಯಾದ ಹಲವು ದೇಶಗಳೀಗೆ ಲಸಿಕೆ ದೊರೆಯದಂತಾಯಿತು. ಬಡ ರಾಷ್ಟ್ರಗಳಿಗೆ ಭಾರತವೇ ಲಸಿಕೆದಾತ ಎಂದು ಬೆನ್ನು ತಟ್ಟಿಕೊಂಡು, ಬಳಿಕ ಲಸಿಕೆಯೇ ಇಲ್ಲದಂತೆ ಮಾಡಲಾಯಿತು!

ಎಲ್ಲರಿಗೆ ಲಸಿಕೆ ಕೊಡಲು ಹೊರಟೂ ಯಾರಿಗೂ ಲಸಿಕೆ ಇಲ್ಲವಾದಾಗ ಲಸಿಕೆ ಹಾಕುವ ಕಾಲಕ್ರಮವನ್ಣೇ ಬದಲಿಸಲಾಯಿತು; ಜನವರಿಯಲ್ಲಿ ಲಸಿಕೆ ಹಾಕುವಿಕೆ ಆರಂಭಗೊಂಡಾಗ ವಿಶ್ವ ಆರೋಗ್ಯ ಸಂಸ್ಥೆಯು ಎರಡನೇ ಡೋಸನ್ನು 8-12 ವಾರಗಳಲ್ಲಿ ಹಾಕಿಸಬಹುದು ಎಂದು ಹೇಳಿದ್ದರೂ, ನಮ್ಮ ಸರಕಾರವು 4 ವಾರಗಳಲ್ಲೇ ಹಾಕಿಸಬೇಕು ಎಂದು ಅಪ್ಪಣೆ ಮಾಡಿತು. ಕೆಲವು ವಾರಗಳ ಬಳಿಕ ಅದನ್ನು 6-8 ವಾರ ಎಂದು ಬದಲಿಸಿ, ಲಸಿಕೆಗಳು ಇಲ್ಲದಾದಾಗ 12-16 ವಾರ ಎಂದು ಮಾಡಲಾಯಿತು! ವಿದೇಶಗಳಿಗೆ ಹೋಗಬೇಖಾದ ಕೆಲವರು ಲಸಿಕೆ ಹಾಕಿಸಿಕೊಳ್ಳುವುದು ಅಗತ್ಯವೆಂದಾದಾಗ, ಅಂಥವರು 4 ವಾರಗಳಲ್ಲೇ ಎರಡನೇ ಡೋಸನ್ನು ಹಾಕಿಸಿಕೊಳ್ಳಬಹುದು ಎನ್ನಲಾಯಿತು!! ಜೊತೆಗೆ, ಮೊದಲೇ ಸೋಂಕಿತರಾದವರು 6 ತಿಂಗಳವರೆಗೆ ಲಸಿಕೆ ಪಡೆಯಬೇಕಿಲ್ಲ ಎಂದೂ ಹೇಳಿತು!

ಕಳೆದ ಡಿಸೆಂಬರ್‌ನಲ್ಲಿ ಕೇಂದ್ರದ ತಜ್ಞರಲ್ಲೊಬ್ಬರಾದ ಎಐಐಎಂಎಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಅವರು, ಒಕ್ಕೂಟ ಸರಕಾರವು ಎಲ್ಲಾ ನಾಗರಿಕರಿಗೆ ಉಚಿತವಾಗಿ ಲಸಿಕೆಯನ್ನು ನೀಡಲಿದೆ ಎಂದು ಹೇಳಿದ್ದರು. ಬಳೀಕ ಫೆಬ್ರವರಿ ಮೊದಲಲ್ಲಿ ಬಜೆಟ್ ಮಂಡನೆಯಾದಾಗ 35000 ಕೋಟಿ ರೂಪಾಯಿಗಳನ್ನು ಲಸಿಕೆಗಳಿಗೆಂದು ಒದಗಿಸಿ, ಕೇಂದ್ರ ವಿತ್ತ ಸಚಿವಾಲಯದ ವ್ಯಯ ಕಾರ್ಯದರ್ಶಿ ಟಿವಿ ಸೋಮನಾಥನ್ ಅವರು ಇದರಿಂದ 50 ಕೋಟಿ ಜನರಿಗೆ ಲಸಿಕೆ ನೀಡಲು ಸಾಧ್ಯವೆಂದೂ, ಇನ್ನೂ ಹೆಚ್ಚು ಹಣ ಬೇಕಿದ್ದರೆ ಅದನ್ನೂ ಒದಗಿಸಲಾಗುವುದೆಂದೂ ಹೇಳಿದ್ದರು. ಆದರೆ ಎಲ್ಲರಿಗೂ ಲಸಿಕೆ ನೀಡಹೊರಟು ಲಸಿಕೆಗಳೇ ಇಲ್ಲದಾದಾಗ ಉಚಿತ ಲಸಿಕೆಗಳ ಭರವಸೆಯು ಮರೆತೇ ಹೋಗಿ, ಕೊವಿಶೀಲ್ಡ್ ಮತ್ತು ಕೊವಾಕ್ಸಿನ್ ತಯಾರಕರು ರಾಜ್ಯ ಸರಕಾರಗಳಿಗೆ ಪ್ರತೀ ಡೋಸಿಗೆ 400-600 ರೂಪಾಯಿ, ಖಾಸಗಿಯಾಗಿ 1000-1200 ರೂಪಾಯಿ ಎಂದು ಹೇಳಿದ್ದಾಯಿತು; ಕೇಂದ್ರ ಸರಕಾರವು ತಾನು ದೊಡ್ಡ ಪ್ರಮಾಣದಲ್ಲಿ ಖರೀದಿಸುವುದರಿಂದ ತನಗಷ್ಟೇ 150 ರೂಪಾಯಿಯೆಂದೂ, ಉಳಿದವರಿಗೆ ಹೆಚ್ಚಿನ ದರ ವಿಧಿಸುವುದು ವ್ಯವಹಾರ ಸಹಜ ನೀತಿಯೆಂದೂ ಮೇ 9 ರಂದು ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಿದ ಅಫಿಡವಿಟ್ಟಿನಲ್ಲಿ ಹೇಳಿತು. ಉಚಿತ ಲಸಿಕೆಯ ಆಸೆ ಹುಟ್ಟಿಸಿದ್ದ ರಾಜ್ಯ ಸರಕಾರಗಳು ಪೆಚ್ಚಾಗಿ ಜಾಗತಿಕ ಟೆಂಡರ್ ಮೊರೆ ಹೋದವು, ಆದರೆ ಅಲ್ಲೂ ಲಸಿಕೆಗಳು ಸಿಗದೆ ಇನ್ನಷ್ಟು ಪೆಚ್ಚಾದವು. ಈ ನಡುವೆ ರಾಹುಲ್ ಗಾಂಧಿ ಮತ್ತಿತರ ಅನೇಕ ನಾಯಕರು ಸತತವಾಗಿ ಒತ್ತಡ ಹೇರಿದ್ದರಿಂದಲೂ, ಸರ್ವೋಚ್ಚ ನ್ಯಾಯಾಲಯವು ಚಾಟಿ ಬೀಸಿದ್ದರಿಂದಲೂ ಸರಕಾರವು ಮಣಿದು, ಎಲ್ಲರಿಗೂ ಉಚಿತ ಲಸಿಕೆಯನ್ನು ನೀಡುವುದಾಗಿ ಹೇಳಿ, ತಾನೇ ಲಸಿಕೆಗಳನ್ನು ಪೂರೈಸುವ ಹೊಣೆಯನ್ನು ಹೊರುವುದಾಗಿ ಹೇಳಿತು.

ಅದಾಗಿ ಎರಡು ದಿನಗಳಲ್ಲಿ ಕೆಲವು ತಜ್ಞರೊಂದು ವರದಿ ಸಲ್ಲಿಸಿ, ಅದಾಗಲೇ ಸೋಂಕಿತರಾದವರು ಲಸಿಕೆ ಪಡೆಯಬೇಕಿಲ್ಲ, ಉಳಿದವರಲ್ಲೂ ಸೋಂಕು ತೀವ್ರಗೊಳ್ಳುವ ಅಪಾಯವುಳ್ಳವರಷ್ಟೇ ಆದ್ಯತೆಯ ಮೇರೆಗೆ ಲಸಿಕೆ ಪಡೆದರೆ ಸಾಕೆಂದು ಹೇಳಿತು. ಈ ಲೇಖಕ ಜನವರಿಯಲ್ಲೇ ಇದನ್ನು ಹೇಳಿದ್ದಾಗ, ಆ ಬಳಿಕ 35000 ಕೋಟಿಗೆ ಎಲ್ಲರಿಗೂ ಸರಕಾರವೇ ಲಸಿಕೆಗಳನ್ನು ನೀಡಬಹುದೆಂದು ಹೇಳಿದ್ದಾಗ ಕುಹಕವಾಡಿದ್ದವರು ಈಗ ಅವೇ ನಿಲುವನ್ನು ಸರಕಾರವೂ, ತಜ್ಞರೆನಿಸಿಕೊಂಡವರೂ ಹೇಳುತ್ತಿರುವಾಗ ಕುಣಿಯತೊಡಗಿರುವುದು ಈ ಕಾಲದ ಮಹಿಮೆಯೆಂದೇ ಹೇಳಬೇಕಾಗುತ್ತದೆ!

ಲಸಿಕೆಗಳನ್ನು ಹಾಕಿಸಿಕೊಳ್ಳುವುದು ಸಂಪೂರ್ಣವಾಗಿ ಐಚ್ಚಿಕವೆಂದು ಸರಕಾರವು ಅಧಿಕೃತ ಮಟ್ಟದಲ್ಲಿ ಹೇಳುತ್ತಲೇ ಬಂದಿದೆಯಾದರೂ, ಲಸಿಕೆ ಹಾಕಿಸಿಕೊಳ್ಳುವಂತೆ ಎಲ್ಲರ ಮೇಲೂ ಪರೋಕ್ಷವಾಗಿ ಒತ್ತಡ ಹೇರಲಾಗುತ್ತಿದೆ. ಲಸಿಕೆ ಹಾಕಿಸಿಕೊಳ್ಳದಿದ್ದರೆ ಶಾಲೆ, ಕಾಲೇಜುಗಳಿಗೆ ಪ್ರವೇಶವಿಲ್ಲ, ಪ್ರಯಾಣವಿರಲಾರದು, ಉದ್ದಿಮೆಗಳಲ್ಲೂ, ಇತರ ಸಂಸ್ಥೆಗಳಲ್ಲೂ ನೌಕರಿಯಲ್ಲಿ ಮುಂದುವರಿಯಲಾಗದು ಎಂಬಿತ್ಯಾದಿಯಾಗಿ ಬೆದರಿಸಲಾಗುತ್ತಿದೆ. ಅನೇಕರು ಇವಕ್ಕೆ ಹೆದರಿ ಲಸಿಕೆ ಹಾಕಿಸಿಕೊಳ್ಳುವ ಇಕ್ಕಟ್ಟಿಗೆ ಸಿಲುಕಿದ್ದಾರೆ. ಕೇಂದ್ರ ಆರೋಗ್ಯ ಸಚಿವರು ಮೊನ್ನೆ ಜಿ 7 ಶೃಂಗ ಸಭೆಯಲ್ಲಿ ಲಸಿಕೆಯನ್ನು ಕಡ್ಡಾಯಗೊಳಿಸುವ ಪಾಸ್ ಪೋರ್ಟ್ ಯೊಜನೆಯು ಭಾರತದಂತಹ ದೇಶಗಳಿಗೆ ತಾರತಮ್ಯವೆಸಗಿದಂತಾಗುತ್ತದೆ ಎಂದು ವಿರೋಧಿಸಿದ್ದಾರೆ. ಆದರೆ ದೇಶದೊಳಗೆ ಲಸಿಕೆ ಹಾಕದವರ ಮೇಲೆ ಎಲ್ಲ ಬಗೆಯ ತಾರತಮ್ಯಗಳೂ, ಅನ್ಯಾಯಗಳೂ ನಡೆಯಲಾರಂಭಿಸಿರುವಾಗ ಅದೇ ಸರಕಾರವು ಮೌನವಾಗಿ ಕುಳಿತಿದೆ. ಜನರ ಹಿತ ಕಾಯಬೇಕಾದ ವಿರೋಧ ಪಕ್ಷಗಳೂ, ಕಾರ್ಮಿಕ ಸಂಘಟನೆಗಳೂ ಇವನ್ನೆಲ್ಲ ಪ್ರಶ್ನಿಸಿ ವಿರೋಧಿಸುವ ಬದಲಿಗೆ ಲಸಿಕೆ ಹಾಕುವ ಶಿಬಿರಗಳನ್ನೇ ಆಯೋಜಿಸಹೊರಟಿವೆ.

ದೊಡ್ಡ ಲಸಿಕಾ ಕಾರ್ಯಕ್ರಮ ಎಂದು ಎಲ್ಲ ಪತ್ರಿಕೆಗಳ ಮುಖಪುಟಗಳಲ್ಲಿಡೀ ಜಾಹೀರಾತುಗಳನ್ನು ಹಾಕಿಕೊಳ್ಳುವ ಸರಕಾರವು ತನ್ನ ಕೆಲಸವನ್ನು ವಿಶ್ವದಲ್ಲೇ ಅತಿ ದೊಡ್ಡದು ಎನ್ನುವ ಬದಲು ವಿಶ್ವದಲ್ಲೇ ಅತ್ಯುತ್ತಮ ಅಥವಾ ಅತಿ ಜಾಣ್ಮೆಯ ಕಾರ್ಯಕ್ರಮ ಎಂದು ಹೇಳಿಕೊಳ್ಳುವಂತೆ ವರ್ತಿಸಿದ್ದರೆ ಈ ದೇಶದ ಜನರಿಗೆ ಈ ಹದಿನೈದು ತಿಂಗಳುಗಳಲ್ಲಿ ಬಂದೊದಗಿರುವ ಅಪಾರ ಸಂಕಷ್ಟಗಳನ್ನು ತಡೆಯಲು ಖಂಡಿತಕ್ಕೂ ಸಾಧ್ಯವಿತ್ತು.

Be the first to comment

Leave a Reply

Your email address will not be published.


*