ಡಾ॥ ಎ. ಸಿ. ಹೆಗ್ಡೆಯವರಿಗೆ ನಮನ

ಕನ್ನಡಪ್ರಭ, ಮಾರ್ಚ್ 20, 2016

20_03_2016_010_011.jpgಡಾ॥ ಎ. ಸಿ. ಹೆಗ್ಡೆಯವರಿಗೆ ನನ್ನ ನುಡಿ ನಮನ (ಫೆ. 27, 2016, ಕೋಟೇಶ್ವರ)

ಈ ದಿನ ಇಷ್ಟು ಬೇಗ ಬರಬಹುದು ಅಂತ ಅಂದುಕೊಂಡಿರಲಿಲ್ಲ. ಇನ್ನೂ ಕೆಲವು ವರ್ಷ ಪಾಠ ಮಾಡಬಹುದಿತ್ತು ಎನ್ನುವಾಗಲೇ ನಮ್ಮ ಪ್ರೊಫೆಸರು ಅದನ್ನು ಬಿಟ್ಟು ಬಂದರು. ಇನ್ನೂ ಹಲವು ವರ್ಷ ನಮ್ಮೆಲ್ಲರೊಂದಿಗೆ ಇರಬಹುದಿತ್ತು, ಆದರೆ ಬಿಟ್ಟು ಹೋಗಿದ್ದಾರೆ. ಪ್ರೊಫೆಸರ್ ಚಿತ್ತರಂಜನದಾಸ ಹೆಗ್ಡೆಯವರ ಈ ಅಕಾಲಿಕ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿ ಅವರ ಪತ್ನಿ, ಮಗಳು, ಅಳಿಯ, ಮೊಮ್ಮಗ, ಭಾವ, ಒಡಹುಟ್ಟಿದವರು, ಎಲ್ಲಾ ಬಂಧುಗಳು, ಸಹೋದ್ಯೋಗಿಗಳು, ವಿದ್ಯಾರ್ಥಿಗಳು ಎಲ್ಲರಿಗೂ ದೊರೆಯಲಿ ಅಂತ ಮೊದಲಾಗಿ ಆಶಿಸುತ್ತೇನೆ.

achegde2ನಾನು ಹುಬ್ಬಳ್ಳಿಯಲ್ಲಿ 1989 ರಿಂದ 1992 ರ ವರೆಗೆ ಎಂಡಿ ಓದುತ್ತಿದ್ದಾಗ ಹೆಗ್ಡೆ ಸರ್ ಅವರನ್ನು ಸ್ವಲ್ಪ ದೂರದಿಂದಲೇ ಅರಿತಿದ್ದೆ ಅಷ್ಟೇ. ಅವರು 1999 ರಲ್ಲಿ ಅಲ್ಲಿಂದ ನಿವೃತ್ತರಾಗಿ ಮಂಗಳೂರಿನ ಖಾಸಗಿ ವೈದ್ಯಕೀಯ ಕಾಲೇಜಿಗೆ ಸೇರುತ್ತಾರೆ ಎನ್ನುವ ಸುದ್ದಿ ಸಿಕ್ಕಿದಾಕ್ಷಣ, ಅದೇ ಕಾಲೇಜಿನಲ್ಲಿದ್ದ ನಾನು ಸ್ವಲ್ಪ ಪ್ರಭಾವ ಬೀರಿ ಅವರ ವಿಭಾಗದಲ್ಲೇ ನನ್ನನ್ನೂ ಹಾಕಿಸಿಕೊಂಡಿದ್ದೆ; ಅವರ ಸಹಾಯಕನಾಗಿ ಅವರಿಂದ ಇನ್ನಷ್ಟು ಕಲಿಯುವ ಅವಕಾಶವನ್ನು ಸೃಷ್ಟಿಸಿಕೊಂಡಿದ್ದೆ. ನಂತರದ ಐದು ವರ್ಷಗಳಲ್ಲಿ ಅವರಿಂದ ವೈದ್ಯ ವಿಜ್ಞಾನವನ್ನಷ್ಟೇ ಅಲ್ಲ, ಜೀವನದ ಹಲವು ಪಾಠಗಳನ್ನೂ, ಒಂದು ದೊಡ್ಡ ಸಂಸ್ಥೆಯ ಆಡಳಿತದೊಂದಿಗೆ, ಇತರ ಸಹೋದ್ಯೋಗಿಗಳೊಂದಿಗೆ ವ್ಯವಹರಿಸುವ ಸೂಕ್ಷ್ಮತೆಗಳನ್ನೂ ಅವರಿಂದ ಕಲಿತಿದ್ದೇನೆ. ಆದರೆ ಋಷಿಯಂತಿದ್ದ ಒಬ್ಬ ಮಹಾಗುರುವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳುವುದಕ್ಕೆ ಅವರ ವಿದ್ಯಾರ್ಥಿಗಳಿಗಾಗಲೀ, ಸಹೋದ್ಯೋಗಿಗಳಿಗಾಗಲೀ, ಸಂಬಂಧಿಕರಿಗಾಗಲೀ ಸಾಧ್ಯವಿದೆಯೇ ಎನ್ನುವುದು ನನಗಿನ್ನೂ ಗೊತ್ತಿಲ್ಲ. ಡಾ॥ ಹೆಗ್ಡೆಯವರ ಬಗ್ಗೆ ಇನ್ನಷ್ಟು ವಿಷಯಗಳನ್ನು ತಿಳಿದುಕೊಳ್ಳುವುದಕ್ಕಾಗಿ ಹುಬ್ಬಳ್ಳಿಯಲ್ಲಿ ಅವರ ಜೊತೆಗೇ ಇದ್ದ ಡಾ॥ ರಮೇಶ ಬಾಬು, ಆವರ ವಿಭಾಗದಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡಿದ ಡಾ॥ ಜಯಪ್ರಕಾಶ್, ಡಾ॥ ಶ್ರೀನಿವಾಸ ಪ್ರಭು, ಕಿರಿಯ ವೈದ್ಯರಾಗಿದ್ದ ಡಾ॥ ದಿನೇಶ್ ಕದಂ ಅವರನ್ನೆಲ್ಲ ಕೇಳಿದೆ. ಎಲ್ಲರೂ ಡಾ॥ ಹೆಗ್ಡೆಯವರ ವೈದ್ಯಕೀಯ ಜ್ಞಾನ, ಕೌಶಲಗಳ ಬಗ್ಗೆ ತಿಳಿದಿದ್ದರೇ ಹೊರತು ಅವರ ಬಗ್ಗೆ ವೈಯಕ್ತಿಕವಾಗಿ ಬೇರೇನು ಹೇಳುವುದಕ್ಕೂ ಗೊತ್ತಿಲ್ಲ ಎಂದರು. ಡಾ॥ ಚಿತ್ತರಂಜನದಾಸ ಹೆಗ್ಡೆ ಬದುಕಿದ್ದೇ ಹಾಗೆ: ತನ್ನ ಕೆಲಸವೇ ತನ್ನ ಗುರುತಾಗಿರಬೇಕು ಎನ್ನುವಂತೆ ಅವರು ಬದುಕಿದರು. ಎಲ್ಲೂ ತನ್ನ ಅಸ್ತಿತ್ವವನ್ನು ತೋರಿಸಿಕೊಳ್ಳುವ ಸ್ವಭಾವ ಅವರದ್ದಾಗಿರಲಿಲ್ಲ. ಹಾಗೆ ತನ್ನ ವೃತ್ತಿಗೇ ಬದ್ಧರಾಗಿ, ಸರಳವಾಗಿ, ಪರಿಶುದ್ಧರಾಗಿ ಬದುಕಿದ ಡಾ॥ ಚಿತ್ತರಂಜನದಾಸ ಹೆಗ್ಡೆ ಅಂಥವರು ನಮ್ಮಂಥವರಿಗೆ ಸುಲಭದಲ್ಲಿ ಅರ್ಥವಾಗುವವರಲ್ಲ ಅಂತ ಹಲವು ಸಲ ನಾನು ಅಂದುಕೊಂಡಿದ್ದೇನೆ. ಆದ್ದರಿಂದ ಅವರ ಬಗ್ಗೆ ನನ್ನ ಅರಿವಿಗೆ ನಿಲುಕಿದಷ್ಟು ವಿಷಯಗಳನ್ನು ನಿಮ್ಮ ಮುಂದೆ ಇಡುತ್ತೇನೆ.

ಡಾ॥ ಚಿತ್ತರಂಜನದಾಸ ಹೆಗ್ಡೆಯವರಷ್ಟು ಸ್ಥಿತಪ್ರಜ್ಞರನ್ನು ಕಾಣುವುದು ಕಷ್ಟ. ಅವರ ಕಿರಿಯ ತಮ್ಮ ಡಾ॥ ಸತ್ಯರಂಜನದಾಸ ಹೆಗ್ಡೆಯವರನ್ನೂ ನಾನು ಸ್ವಲ್ಪ ನೋಡಿದ್ದೇನೆ, ಹುಬ್ಬಳ್ಳಿಯಲ್ಲಿ ಎಂಡಿ ಓದುತ್ತಿದ್ದಾಗ ಮೂರೂವರೆ ತಿಂಗಳು ನಮ್ಮನ್ನು ಬೆಂಗಳೂರಿನ ನಿಮ್ಹಾನ್ಸ್ ನಲ್ಲಿ ನರರೋಗಗಳ ಬಗ್ಗೆ ವಿಶೇಷ ತರಬೇತಿಗೆ ಕಳುಹಿಸುತ್ತಾರೆ. ಹಾಗೆ ಡಾ॥ ಸತ್ಯರಂಜನದಾಸ ಹೆಗ್ಡೆಯವರನ್ನೂ ನೋಡುವ, ಕೇಳುವ ಅವಕಾಶ ಆಗ ಲಭಿಸಿತ್ತು, ಆ ಬಳಿಕವೂ ಹಲವು ಸಲ ಅವರ ಜೊತೆ ಮಾತಾಡಿದ್ದೇನೆ. ಅವರೂ ಕೂಡ ತನ್ನ ಅಣ್ಣನಂತೆಯೇ ಬಹಳ ಸ್ಥಿತಪ್ರಜ್ಞರು, ಅಪಾರ ಜ್ಞಾನವುಳ್ಳವರು. ಈ ಸಹೋದರರ ಸ್ಥಿತಪ್ರಜ್ಞತೆ, ಅತ್ಯಂತ ತಾಳ್ಮೆ, ಶಾಂತ ಸ್ವಭಾವ ಇವೆಲ್ಲಕ್ಕೆ ಅವರು ಹುಟ್ಟಿ, ಬೆಳೆದ ವಾತಾವರಣ ಸಾಕಷ್ಟು ಕೊಡುಗೆ ನೀಡಿದೆ ಅನ್ನಿಸುತ್ತದೆ. ಆ ಸ್ಥಿತಪ್ರಜ್ಞತೆ ಎನ್ನುವುದು ಒಂದು ದೊಡ್ಡ ಆಲದ ಮರದ ಹಾಗೆ, ಅಥವಾ ಅಶ್ವತ್ಥ ವೃಕ್ಷದ ಹಾಗೆ. ಬೇರುಗಳು ಬಹಳ ಅಳಕ್ಕೂ, ಅಗಲಕ್ಕೂ ಇಳಿದರೆ ಮಾತ್ರ ಅಂತಹ ಗಟ್ಟಿತನ ಸಾಧ್ಯ. ನಮ್ಮ ಈ ಗುರುಗಳು ಕೂಡ ಹಾಗೆಯೇ ಮಹಾವೃಕ್ಷಗಳ ಹಾಗೆ ಎನ್ನಬಹುದು. ಚಂಡಮಾರುತ ಬರಲಿ, ಭೂಕಂಪ ಆಗಲಿ, ಮಿಂಚು ಬಡಿಯಲಿ, ಮಳೆ ಬೀಳಲಿ, ಅವರು ಅಲ್ಲಾಡುವುದಿಲ್ಲ. ಅಂತಹಾ ಬೀಜಗಳು ಚಿಗುರೊಡೆದು, ಬೇರುಗಳು ಆಳಕ್ಕೆ ಇಳಿದದ್ದು ಇಲ್ಲಿ ಅಲಂಗಾರು ಮನೆತನದಲ್ಲಿ. ಹೆಬ್ರಿಬೀಡು ಸಚ್ಚಿದಾನಂದ  ಬಲ್ಲಾಳ್ ಹಾಗೂ ಅಲಂಗಾರು ವನಜಾಕ್ಷಿ ಹೆಗ್ಗಡ್ತಿಯವರ ಒಂಬತ್ತು ಮಕ್ಕಳ ತುಂಬು ಸಂಸಾರದಲ್ಲಿ ಐದನೆಯರು ನಮ್ಮ ಪ್ರೊಫೆಸರ್ ಚಿತ್ತರಂಜನದಾಸ ಹೆಗ್ಡೆಯವರು. ಆ ಒಂಬತ್ತು ಮಕ್ಕಳಲ್ಲಿ ನಾಲ್ವರು ವೈದ್ಯರು. ಆ ಕಾಲದಲ್ಲಿ ಒಂದು ಕೃಷಿಕ ಕುಟುಂಬದ ಮಕ್ಕಳು ತಮ್ಮ ಪ್ರತಿಭೆಯಿಂದಲೇ ಇಷ್ಟು ಉನ್ನತ ಸಾಧನೆ ಮಾಡಿದ್ದಾರೆಂದರೆ ಅದು ಅವರ ಇಡೀ ಮನೆತನದ ಹಿರಿಮೆಗೆ, ಅಲ್ಲಿ ಕಲಿಕೆಗೆ ನೀಡುತ್ತಿದ್ದ ಬೆಂಬಲಕ್ಕೆ ಸಾಕ್ಷಿ.

ಡಾ॥ ಚಿತ್ತರಂಜನದಾಸ್ ಹೆಗ್ಡೆಯವರಿಗೆ ಈ ಎಂಬಿಬಿಎಸ್ ಸೀಟು ಸುಲಭದಲ್ಲೇನೂ ಸಿಕ್ಕಿರಲಿಲ್ಲ. ಕಡಿಮೆ ಅಂಕಗಳಿದ್ದ ಅವರ ಸಹಪಾಠಿಗೆ ಸೀಟು ದೊರೆತಾಗ ಹೆಗ್ಡೆಯವರು ಕೋರ್ಟು ಹತ್ತಿ, ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಸೀಟು ಪಡೆಯಬೇಕಾಯಿತು. ಎಂಬಿಬಿಎಸ್ ಬಳಿಕ ಅದೇ ಕಾಲೇಜಿನಲ್ಲಿ ಎಂಡಿ ಓದಿ, ಆ ಮೇಲೆ ಅಲ್ಲೇ ಸುಮಾರು 13 ವರ್ಷ ವೈದ್ಯಕೀಯ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಅವರು ಕೆಲಸ ಮಾಡಿದರು. ನಂತರ 19 ವರ್ಷಗಳ ಕಾಲ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಕಾಲೇಜಿನಲ್ಲಿ ದುಡಿದರು. ಆ ಕಾಲದಲ್ಲಿ ಹುಬ್ಬಳ್ಳಿಯಲ್ಲಿ ಖಾಸಗಿ ವೃತ್ತಿಗೆ ಅವಕಾಶ ಕಡಿಮೆಯಿತ್ತೆನ್ನುವ ಕಾರಣಕ್ಕೆ ಹೊರ ಊರುಗಳ ಹಿರಿಯ ವೈದ್ಯರು ಕೆಎಂಸಿಗೆ ಬರಲು ಒಪ್ಪುತ್ತಿರಲಿಲ್ಲ. ಅಂತಲ್ಲಿ ಡಾ॥ ಹೆಗ್ಡೆ 19 ವರ್ಷ ಅಲ್ಲಿದ್ದರು. ನಾನು ಅಲ್ಲಿ ಕಲಿಯುತ್ತಿದ್ದಾಗ, ಹಿರಿಯ ಪ್ರಾಧ್ಯಾಪಕರ ಪೈಕಿ ಪರವೂರಿನವರು ಬಹುಷಃ ಡಾ॥ ಹೆಗ್ಡೆ ಮಾತ್ರವೇ ಇದ್ದರು. ಹೀಗೆ ಒಟ್ಟು 32 ವರ್ಷ ರಾಜ್ಯದ ಎರಡು ಅತ್ಯುತ್ತಮ ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ದುಡಿದ ಬಳಿಕ ಅವರು ನಿವೃತ್ತರಾದರು, ಆ ಮೇಲೆ ಮಂಗಳೂರಿನ ಖಾಸಗಿ ವೈದ್ಯಕೀಯ ಕಾಲೇಜನ್ನು ಸೇರಿದರು. ಅಲ್ಲೂ ಐದು ವರ್ಷ ಕೆಲಸ ಮಾಡಿ, ಇನ್ನೂ ಐದಾರು ವರ್ಷ  ದುಡಿಯುವ ಅವಕಾಶ ಇದ್ದರೂ ರಾಜೀನಾಮೆ ಕೊಟ್ಟು ಇಲ್ಲಿ ಕೊರ್ಗಿಗೆ ಬಂದು ಬಿಟ್ಟರು. ಹೀಗೆ, ಡಾ॥ ಚಿತ್ತರಂಜನದಾಸ ಹೆಗ್ಡೆಯವರು ಒಂದು ದಿನವೂ ಖಾಸಗಿ ವೈದ್ಯ ವೃತ್ತಿಯನ್ನು ಮಾಡಲಿಲ್ಲ. ಅವರ ಕೆಲಸಕ್ಕೆ ಸರಕಾರ ನೀಡುತ್ತಿದ್ದ ಸಂಬಳವನ್ನು ಬಿಟ್ಟರೆ ವೈದ್ಯ ವೃತ್ತಿಯಿಂದ ಬೇರೆ ಯಾವ ಹಣವನ್ನೂ ಅವರು ಪಡೆಯಲಿಲ್ಲ, ಒಬ್ಬನೇ ಒಬ್ಬ ರೋಗಿಯಿಂದ ಒಂದೇ ಒಂದು ಪೈಸೆಯನ್ನೂ ಅವರು ಪಡೆಯಲಿಲ್ಲ.

ಒಬ್ಬ ಯಶಸ್ವಿ ಗಂಡಿನ ಹಿಂದೆ ಹೆಣ್ಣು ಇದ್ದೇ ಇರುತ್ತಾಳೆ ಎನ್ನುವುದು ವಾಡಿಕೆ. ಆದರೆ ನಮ್ಮ ಪ್ರೊಫೆಸರ್ ಒಬ್ಬ ತಪಸ್ವಿಯಾಗಿದ್ದರು. ಆಸ್ಪತ್ರೆಯಲ್ಲಿ ರೋಗಿಗಳ ಚಿಕಿತ್ಸೆ, ಅಲ್ಲಿ ರೋಗಿಗಳ ಬಳಿ ನಿಂತು ವಿದ್ಯಾರ್ಥಿಗಳಿಗೆ ಕಲಿಸುವುದು, ವಾರಕ್ಕೊಮ್ಮೆಯೋ ಎರಡು ಸಲವೋ ಕಾಲೇಜಿನ ತರಗತಿಯಲ್ಲಿ ಪಾಠ ಮಾಡುವುದು, ಅದೆಲ್ಲ ಆದ ಮೇಲೆ ಕಾಲೇಜಿನ ಲೈಬ್ರರಿಯಲ್ಲಿ ಕುಳಿತು ಓದುವುದು – ಇದು ಅವರ ದಿನಚರಿಯಾಗಿತ್ತು, ಅಥವಾ ಅವರ ಪ್ರಪಂಚವೇ ಆಗಿತ್ತು ಎಂದರೂ ತಪ್ಪಾಗದೇನೋ? ಅಂತಹ ತಪಸ್ವಿಯನ್ನು ಅರ್ಥ ಮಾಡಿಕೊಂಡು, ಅವರಿಗೆ ಬೆಂಗಾವಲಾಗಿ ನಿಂತು, ಅವರು ತಮ್ಮ ಯಾವತ್ತಿನ ಶಾಂತಚಿತ್ತವನ್ನೂ, ಆ ಸಣ್ಣ ನಗುವನ್ನೂ, ತಾಳ್ಮೆಯನ್ನೂ ಕೊನೆಯ ದಿನದವರೆಗೆ ಕಾಪಾಡಿಕೊಂಡಿದ್ದುದರಲ್ಲಿ ಅವರ ಕೈ ಹಿಡಿದ ಧರ್ಮಪತ್ನಿ ಸರೋಜಿನಿ ಹೆಗ್ಡೆಯವರ ಪಾತ್ರ ಬಹಳ ದೊಡ್ಡದಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ನ್ಯಾಯಾಧೀಶರಾಗಿದ್ದ ಚಂದ್ರಶೇಖರ ಹೆಗ್ಡೆ ಮತ್ತು ಕೊರ್ಗಿ ಗಿರಿಜಾ ಹೆಗ್ಗಡ್ತಿಯವರ ಮಗಳು, ನಮ್ಮ ರಾಜ್ಯದ ಅತ್ಯಂತ ಪ್ರತಿಭಾವಂತ ರಾಜಕಾರಣಿಗಳಲ್ಲೊಬ್ಬರೂ, ಮಾಜಿ ಸಚಿವರೂ, ಮಾಜಿ ಸಂಸದರೂ ಆದ ಶ್ರೀ ಜಯಪ್ರಕಾಶ ಹೆಗ್ಡೆಯವರ ಸಹೋದರಿ ಸರೋಜಿನಿ ಹೆಗ್ಡೆಯವರು ನಮ್ಮ ಪ್ರೊಫೆಸರ್ ಅವರ ಹಿಂದಿನ ಚೈತನ್ಯವಾಗಿದ್ದರು, ತಮ್ಮ ನಗುಮುಖದಿಂದ ಪ್ರೊಫೆಸರ್ ಅವರಿಗೂ ಪ್ರೇರಣೆಯಾಗಿದ್ದರು. ಹುಬ್ಬಳ್ಳಿಯಲ್ಲಿ ಪ್ರೊಫೆಸರ್ ಅವರ ಯುನಿಟ್‌ನಲ್ಲಿದ್ದ ಎಲ್ಲಾ ಸ್ನಾತಕೋತ್ತರ ವಿದ್ಯಾರ್ಥಿಗಳು ಅವರಿಗೆ ಮನೆಮಂದಿಯಂತಿದ್ದರು, ವರ್ಷಕ್ಕೊಮ್ಮೆಯಾದರೂ ಪ್ರೊಫೆಸರ್ ಮನೆಯಲ್ಲಿ ಅವರಿಗೆ ಆದರಾತಿಥ್ಯ ಇದ್ದೇ ಇರುತ್ತಿತ್ತು, ಈಗಲೂ ಅವರೆಲ್ಲ ಅದನ್ನು ನೆನಪಿಸಿಕೊಳ್ಳುತ್ತಾರೆ. ಹುಬ್ಬಳ್ಳಿ ಕೆಎಂಸಿಯ ಎಲ್ಲಾ ವೈದ್ಯಕೀಯ ವಿದ್ಯಾರ್ಥಿಗಳ ಪರವಾಗಿ ಶ್ರೀಮತಿ ಸರೋಜಿನಿ ಹೆಗ್ಡೆಯವರಿಗೆ ನಾನು ಹೃದಯಾಂತರಾಳದಿಂದ ಕೃತಜ್ಞತೆಗಳನ್ನು ಸಲ್ಲಿಸಬಯಸುತ್ತೇನೆ.

ನಾನೊಬ್ಬ ವಿದ್ಯಾರ್ಥಿಯಾಗಿ ಪ್ರೊಫೆಸರನ್ನು ನೋಡಿದ್ದು ಹುಬ್ಬಳ್ಳಿ ಕೆಎಂಸಿಯಲ್ಲಿ. ಅಲ್ಲಿ ಪ್ರತೀ ವಾರ ಎಲ್ಲಾ ಪ್ರಾಧ್ಯಾಪಕರೂ, ನಾವು ಸ್ನಾತಕೋತ್ತರ ವಿದ್ಯಾರ್ಥಿಗಳೂ ಸೇರಿ ಕ್ಲಿಷ್ಟವೆನಿಸಿದ ರೋಗಿಗಳ ಬಗ್ಗೆ ಚರ್ಚೆ ಮಾಡುವುದಿತ್ತು. ಚರ್ಚೆ ಎಂದರೆ ಬಹಳ ಗಂಭೀರ ಚರ್ಚೆಗಳೇ. ಆಗ ಕೆಎಂಸಿಯಲ್ಲಿ ಸಿಟಿ ಸ್ಕಾನ್, ಅಲ್ಟ್ರಾ ಸೌಂಡ್ ಇತ್ಯಾದಿ ಇರಲಿಲ್ಲ. ಏನಿದ್ದರೂ ರೋಗಿಯನ್ನು ತಲೆಯಿಂದ ಬುಡದವರೆಗೆ ಸೂಕ್ಷ್ಮವಾಗಿ ಪರೀಕ್ಷಿಸಿ, ಒಂದೊಂದು ರೋಗಲಕ್ಷಣವನ್ನೂ ನೋಡಿ, ರೋಗ ಏನು ಅಂತ ನಿರ್ಧರಿಸಬೇಕಾಗಿತ್ತು. ಹಾಗೆ ಮಾಡುವಾಗ ಸಣ್ಣ ಸಣ್ಣ ರೋಗಲಕ್ಷಣಗಳ ಬಗ್ಗೆಯೂ ನಿಮಿಷಗಟ್ಟಲೆ ಚರ್ಚೆ ಆಗುತ್ತಿತ್ತು. ಹಲವು ಸಲ ಪ್ರಾಧ್ಯಾಪಕರೊಳಗೂ ಒಮ್ಮತಾಭಿಪ್ರಾಯ ಇರುತ್ತಿರಲಿಲ್ಲ. ಅಂತಹ ಸಂದರ್ಭ ಬಂದಾಗಲೆಲ್ಲ ನಮ್ಮ ವಿಭಾಗ ಮುಖ್ಯಸ್ಥರಾಗಿದ ಡಾ॥ ಅಕ್ಕಮಹಾದೇವಿ, ಅವರೂ ಇಲ್ಲಿದ್ದಾರೆ, ತಮ್ಮ ಬಲಕ್ಕೆ ತಿರುಗಿ, ಡಾ॥ ಹೆಗ್ಡೆ, ನೀವೇನಂತೀರಿ ಅಂತ ಕೇಳುವುದು, ಹೆಗ್ಡೆಯವರು ಚುಟುಕಾಗಿ ತಮ್ಮ ಅಭಿಪ್ರಾಯ ಹೇಳುವುದು, ಅಲ್ಲಿಗೆ ಚರ್ಚೆ ಕೊನೆಯಾಗುವುದು. ಉದಾಹರಣೆಗೆ, ಕಾಲಲ್ಲಿ ಬಲ ಇಲ್ಲದೆ ಇದ್ದರೆ, ಅದು ಮಿದುಳಿನ ಸಮಸ್ಯೆಯೋ ಅಥವಾ ಕೆಳಗೆ ನರಗಳ ಸಮಸ್ಯೆಯೋ ಅಂತ ನಿರ್ಧರಿಸುವುದಕ್ಕೆ ಪಾದವನ್ನು ಗೀರಿ ನೋಡುತ್ತೇವೆ. ಹೆಬ್ಬೆರಳು ಮೇಲೆದ್ದರೆ ಮಿದುಳಿನಲ್ಲಿ ಸಮಸ್ಯೆ ಅಂತ ಅರ್ಥ. ಕೆಲವೊಮ್ಮೆ ಇದು ಸ್ಪಷ್ಟವಿಲ್ಲದೆ ಮೇಲೋ ಕೆಳಗೋ ಅಂತ ಜೋರು ಚರ್ಚೆ ಆಗುತ್ತಿತ್ತು. ಆಗ ಹೆಗ್ಡೆ ಸರ್ ಅವರಲ್ಲಿ ಕೇಳಿದರೆ, ನಮ್ಮೂರಿನ ಧಾಟಿಯಲ್ಲಿ ‘ಇದು ಮೇಲೆ ಅಲ್ಲದಿದ್ದರೆ ಮತ್ತೆ ಯಾವುದಕ್ಕೆ ಮೇಲೆ ಅಂತ ಹೇಳುವುದು ಇಫ್ ದಿಸ್ ಇಸ್ ನಾಟ್ ಅಪ್ಗೋಯಿಂಗ್, ವಾಟ್ ಎಲ್ಸ್ ಇಸ್’ ಅಂತ ಹೇಳಿದರೆ ಮುಗೀತು, ಸುಪ್ರೀಂ ಕೋರ್ಟಿನ ತೀರ್ಪಿನ ಹಾಗೆ. ಹೃದಯದ್ದಿರಲಿ, ಶ್ವಾಸಕೋಶದ್ದಿರಲಿ, ಹೊಟ್ಟೆಯದ್ದಿರಲಿ, ರಕ್ತನಾಳದ್ದಿರಲಿ, ಯಾವ ಲಕ್ಷಣಗಳ ಬಗ್ಗೆ ಸಂಶಯ ಎದ್ದಾಗಲೂ ಡಾ॥ ಹೆಗ್ಡೆ ಅವರದ್ದೇ ಕೊನೆ ಮಾತು – ‘ನನಗೆ ಹಾಗೆ ತೋರುವುದಿಲ್ಲ’, ‘ನನಗೆ ಹೀಗೆ ತೋರುತ್ತದೆ’ ಅಂತ ಅವರೆಂದರೆ ಮುಗಿಯಿತು. ಇಲ್ಲಿ ಒಂದು ಮಾತು ಸೇರಿಸಿ ಬಿಡುತ್ತೇನೆ: ಹೇಗೆ ಡಾ॥ ಚಿತ್ತರಂಜನದಾಸ ಹೆಗ್ಡೆಯವರು ಹುಬ್ಬಳ್ಳಿಯ ಕೆಎಂಸಿಯಲ್ಲಿ ಅಂತಿಮ ತೀರ್ಪು ನೀಡುವವರಾಗಿದ್ದರೋ, ಹಾಗೆಯೇ ಅವರ ತಮ್ಮ ಡಾ॥ ಸತ್ಯರಂಜನದಾಸ ಹೆಗ್ಡೆಯವರು ನಿಮ್ಹಾನ್ಸ್ ನಲ್ಲಿ ಅಂತಿಮ ತೀರ್ಪುಗಾರರಾಗಿದ್ದುದನ್ನು ನಾನು ನೋಡಿದ್ದೇನೆ. ಅಲ್ಲಿ ಕೂಡಾ ಬಿಸಿಬಿಸಿ ಚರ್ಚೆಗಳಾದಾಗ ಡಾ॥ ಎ ಎಸ್ ಹೆಗ್ಡೆ ಏನಾದರೂ ಹೇಳಿದರೆ ಚರ್ಚೆ ಮುಗಿದು ಹೋಗುತ್ತಿತ್ತು. ಹೀಗೆ ಇವರಿಬ್ಬರೂ ಕೂಡ ತಮ್ಮ ಅಪಾರ ಜ್ಞಾನದಿಂದ, ತಮ್ಮ ಕೌಶಲಗಳಿಂದ, ತಮ್ಮ ನೇರ, ಪರಿಶುದ್ಧ ನಡೆನುಡಿಗಳಿಂದ ತಮ್ಮ ವಿದ್ಯಾರ್ಥಿಗಳು ಮಾತ್ರವಲ್ಲ, ತಮ್ಮ ಹಿರಿಯ-ಕಿರಿಯ ಸಹೋದ್ಯೋಗಿಗಳೆಲ್ಲರ ಗೌರವಕ್ಕೆ ಪಾತ್ರರಾಗಿದ್ದರು. ದೇಶದ ಅತ್ಯುತ್ತಮ ವೈದ್ಯಕೀಯ ಕಾಲೇಜೊಂದರಲ್ಲಿ, ದೇಶದ ಅತ್ಯುನ್ನತ ನರವಿಜ್ಞಾನ ಸಂಸ್ಥೆಯಲ್ಲಿ ಅಂತಹ ಗೌರವವನ್ನು ಹೊಂದುವುದು ಏನೇನೂ ಸುಲಭವಲ್ಲ ಎಂಬುದನ್ನು ನಾವು ನೆನಪಿಡಬೇಕು.

ಪ್ರೊ. ಹೆಗ್ಡೆಯವರ ಘಟಕದಲ್ಲೇ ಇದ್ದು, ಅವರನ್ನು ಹೆಚ್ಚು ಹತ್ತಿರದಿಂದ ನೋಡಿದ್ದ ಪ್ರಾಧ್ಯಾಪಕರಿಗೂ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೂ ಅವರ ಖಾಸಗಿ ಬದುಕಿನ ಬಗ್ಗೆ ಹೆಚ್ಚೇನೂ ತಿಳಿದಿಲ್ಲ. ಹಾಗೆಯೇ, ಪ್ರೊ. ಹೆಗ್ಡೆಯವರ ಮನೆಮಂದಿಗೆ ಅವರ ವೈದ್ಯಕೀಯ ಕೆಲಸಗಳ ಬಗ್ಗೆ, ಕಾಲೇಜಿನ ಪಾಠಗಳ ಬಗ್ಗೆ ಹೆಚ್ಚಿನ ಅರಿವಿಲ್ಲ. ಅಂದರೆ ಪ್ರೊ. ಹೆಗ್ಡೆಯವರು ಇವನ್ನೆಲ್ಲ ಅತ್ಯಂತ ಗುಟ್ಟಾಗಿಡುತ್ತಿದ್ದರು ಎಂಬರ್ಥವಲ್ಲ. ತನ್ನ ಬಗ್ಗೆ ತನ್ನ ಸಹೋದ್ಯೋಗಿಗಳಲ್ಲಾಗಲೀ, ವಿದ್ಯಾರ್ಥಿಗಳಲ್ಲಾಗಲೀ ಏನನ್ನೂ ಹೇಳುವ ಅಗತ್ಯ ಅವರಿಗೆ ಕಂಡಿರಲಾರದು, ಹಾಗೆಯೇ ತನ್ನ ವೃತ್ತಿ ವಿಚಾರಗಳನ್ನು ಮನೆಯೊಳಕ್ಕೆ ಒಯ್ಯುವುದು ಅವರಿಗೆ ಇಷ್ಟವಿದ್ದಿರಲಾರದು. ‘ಸಾಯಂಕಾಲ ಕೆಲಸವಿಲ್ಲದೇ ಇರುತ್ತೀರಲ್ಲಾ, ನೀವೇಕೆ ಖಾಸಗಿ ಪ್ರಾಕ್ಟೀಸ್ ಮಾಡಬಾರದು?’ ಅಂತ ಯಾರೋ ಸಹೋದ್ಯೋಗಿಯೊಬ್ಬರು ಪ್ರೊ. ಹೆಗ್ಡೆಯವರಲ್ಲಿ ಕೇಳಿದ್ದರಂತೆ. ’ಸಾಯಂಕಾಲ ಕೆಲಸವಿಲ್ಲದೇ ಇರೋದಿಲ್ಲ, ನನ್ನ ಹೆಂಡತಿ-ಮಗಳ ಜೊತೆಗೆ ಇರುತ್ತೇನಲ್ಲಾ?’ ಎಂದು ಅವರು ಉತ್ತರಿಸಿದ್ದರಂತೆ!

ಮೃದುಭಾಷಿಯಾಗಿದ್ದ ಪ್ರೊ. ಹೆಗ್ಡೆಯವರ ಸಾತ್ವಿಕತೆಯೇ ಅವರ ವಿದ್ಯಾರ್ಥಿಗಳೆಲ್ಲರಲ್ಲಿ ಭಯ-ಭಕ್ತಿಗಳನ್ನುಂಟು ಮಾಡುತ್ತಿತ್ತು. ಹುಬ್ಬಳ್ಳಿ ಕೆಎಂಸಿಯ ವೈದ್ಯಕೀಯ ವಿಭಾಗದಲ್ಲಿ ದಾಖಲಾಗುತ್ತಿದ್ದ ಒಳ ರೋಗಿಗಳ ಆರೈಕೆಯೆಲ್ಲವೂ ಸ್ನಾತಕೋತ್ತರ ವಿದ್ಯಾರ್ಥಿಗಳ ಜವಾಬ್ದಾರಿಯಾಗಿರುತ್ತಿತ್ತು; ಅದರಿಂದ ನಾವೆಲ್ಲರೂ ಕಲಿತುಕೊಂಡದ್ದೂ ಬಹಳವಿತ್ತು. ಆದರೆ ಪ್ರತೀ ರೋಗಿಯ ವಿವರಗಳೆಲ್ಲವನ್ನೂ ನಮ್ಮ ಪ್ರಾಧ್ಯಾಪಕರು ಅತಿ ಸೂಕ್ಷ್ಮವಾಗಿ ಗಮನಿಸುತ್ತಿದ್ದರು, ರೋಗಿಯ ದಾಖಲೆಗಳನ್ನೂ, ಪಾಳಿಯ ವಿವರಗಳ ದಾಖಲೆಗಳನ್ನೂ ಪ್ರತಿನಿತ್ಯ ಓದುತ್ತಿದ್ದರು. ಎಲ್ಲಾದರೂ ಲೋಪಗಳಿದ್ದರೆ ಅವರಿಗೆಲ್ಲವೂ ಕೂಡಲೇ ಗೊತ್ತಾಗಿಬಿಡುತ್ತಿತ್ತು. ಹೆಚ್ಚಾಗಿ ನಿತ್ಯದ ಗಸ್ತಿನ ವೇಳೆಯಲ್ಲಿ ಎಲ್ಲರೆದುರೇ ಇಂಥ ಲೋಪದೋಷಗಳು ಚರ್ಚಿಸಲ್ಪಡುತ್ತಿದ್ದವು. ಡಾ॥ ಹೆಗ್ಡೆಯವರು ಅಂತಹ ಸನ್ನಿವೇಶಗಳಲ್ಲೂ ತನ್ನ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮುಜುಗರವುಂಟು ಮಾಡುತ್ತಿರಲಿಲ್ಲ. ಯಾವುದಾದರೂ ಗಂಭೀರ ಲೋಪವೆಂದು ಅವರಿಗನಿಸಿದ್ದರೆ, ಆ ವಿದ್ಯಾರ್ಥಿಯನ್ನು ತನ್ನ ಕೋಣೆಗೆ ಕರೆಯಿಸಿ, ‘ನೀವು ಈ ರೀತಿ ಮಾಡಬಹುದಿತ್ತಲ್ಲಾ?’ ಎಂದು ಕೇಳುತ್ತಿದ್ದರು. ಡಾ॥ ಶ್ರೀನಿವಾಸ ಪ್ರಭು ನೆನಪಿಸಿಕೊಂಡಿರುವಂತೆ, ಪ್ರೊ. ಹೆಗ್ಡೆ ಅಷ್ಟನ್ನೇ ಹೇಳಿದರೂ ಆ ವಿದ್ಯಾರ್ಥಿ ಮತ್ತೊಂದು ವಾರ ಊಟ-ನಿದ್ದೆ ಬಿಟ್ಟು ಬೇಸರಗೊಳ್ಳುವಂತಾಗುತ್ತಿತ್ತು!

ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಎಂಬಿಬಿಎಸ್ ಓದುತ್ತಿದ್ದ ಕಿರಿಯ ವಿದ್ಯಾರ್ಥಿಗಳಿಗೆ ಡಾ॥ ಚಿತ್ತರಂಜನದಾಸ ಹೆಗ್ಡೆ ಕಲಿಸುತ್ತಿದ್ದ ರೀತಿಯೇ ಬಹಳ ವಿಶೇಷವಾಗಿತ್ತು. ಮೊದಲ ಎಂಬಿಬಿಎಸ್ ನಲ್ಲಿ ಕಲಿತ ಶರೀರ ರಚನೆ, ಶರೀರ ಕ್ರಿಯೆ ಎಲ್ಲವನ್ನೂ ಸೇರಿಸಿಕೊಂಡು, ಅದರ ಆಧಾರದಲ್ಲಿ ರೋಗಲಕ್ಷಣಗಳನ್ನು ಗುರುತಿಸುವ ಬಗೆಯನ್ನು ಅವರು ಹೇಳಿಕೊಡುತ್ತಿದ್ದರು, ಅದು ಅರ್ಥವಾಗದಿರಲು ಸಾಧ್ಯವೇ ಇರಲಿಲ್ಲ. ಅದೊಂದು ಸಣ್ಣ ನಗುವನ್ನು ಹೊತ್ತುಕೊಂಡು, ಎಲ್ಲವನ್ನೂ ಕೇಳುವ ತಾಳ್ಮೆಯನ್ನು ಇಟ್ಟುಕೊಂಡು, ಯಾರನ್ನೂ ಬಯ್ಯದೆ, ಯಾರ ಮೇಲೂ ಸಿಟ್ಟಾಗದೆ, ಯಾರ ಮೇಲೂ ತನ್ನ ಅಭಿಪ್ರಾಯಗಳನ್ನು ಹೇರದೆ, ಯಾರೊಬ್ಬರಿಗೂ ಅನ್ಯಾಯ ಮಾಡದೆ, ಕೇಡು ಬಗೆಯದೆ, ವ್ಯಾಸಂಗವನ್ನು ಮುಂದುವರಿಸಲು ಕಷ್ಟ ಪಡುತ್ತಿದ್ದ ಕೆಲವು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಸಹಾಯ ಮಾಡಿ, ಒಬ್ಬ ನಿಜವಾದ ಋಷಿಯ ಹಾಗೆ ಡಾ॥ ಚಿತ್ತರಂಜನದಾಸ ಹೆಗ್ಡೆ ಬದುಕಿದ್ದರು. ಅವರ ವಿದ್ಯಾರ್ಥಿಯಾಗಿದ ಡಾ. ದಿನೇಶ್ ಕದಂ ಹೇಳುವಂತೆ, ಅವರೊಬ್ಬ ಕೂಲ್ ಪ್ರೊಫೆಸರ್ ಆಗಿದ್ದರು.

ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿಗಳು ಹೇಳುವುದಿತ್ತು: ಈ ಹೆಗ್ಡೆ ಮಾಸ್ತರಿಗೆ ಇಷ್ಟೆಲ್ಲಾ ಗೊತ್ತಿದೆ, ಆದರೂ ಬುಧವಾರ ಬೆಳಗ್ಗೆ ಕ್ಲಾಸು ಮುಗಿದು ಮುಂದಿನ ಬುಧವಾರ ಕ್ಲಾಸು ಇದ್ದರೂ ಕೂಡ ಮತ್ತೆ ಅದೇ ಬುಧವಾರ ಸಂಜೆಯಿಂದ ಅವರು ಲೈಬ್ರರಿಯಲ್ಲಿರುತ್ತಾರೆ ಅಂತ. ಅಂದರೆ ಹೆಗ್ಡೆ ಮಾಸ್ಟ್ರು ಬರೇ ಕ್ಲಾಸಿಗೆ ಬೇಕಾಗಿ ಓದುತ್ತಿದ್ದವರಲ್ಲ, ಎಷ್ಟು ತಿಳಿದಿದ್ದರೂ ಇನ್ನೂ ತಿಳಿಯುವುದಿದೆ ಎಂಬ ಆ ಕಲಿಕೆಯ ಹಂಬಲ ಅವರಲ್ಲಿ ವಿಪರೀತವಾಗಿತ್ತು. ಮೊನ್ನೆ ಅವರು ಆಸ್ಪತ್ರೆಯಲ್ಲಿದ್ದಾಗ ನೋಡಲು ಹೋಗಿದ್ದೆ, ಆಗ ಅವರ ಪತ್ನಿ ಸರೋಜಿನಿ ಹೆಗ್ಡೆ ಹೇಳಿದಂತೆ, ರಾಜಿನಾಮೆ ಕೊಟ್ಟು ಈ ಹಳ್ಳಿಗೆ ಬಂದ ಮೇಲೂ ವೈದ್ಯಕೀಯ ಪುಸ್ತಕದ ಹೊಸ ಆವೃತ್ತಿಯನ್ನು ತರಿಸಿ ಅವರು ಓದುತ್ತಿದ್ದರು, ಅದರ ಟಿಪ್ಪಣಿಗಳನ್ನೂ ಮಾಡುತ್ತಿದ್ದರು. ಹೀಗೆ ಡಾ॥ ಹೆಗ್ಡೆಯವರಿಗೆ ತಮ್ಮ ವೈದ್ಯಕೀಯ ವಿಜ್ಞಾನವನ್ನು ಇನ್ನಷ್ಟು ತಿಳಿದುಕೊಳ್ಳುವುದು ಮತ್ತು ಅದನ್ನು ತನ್ನ ವಿದ್ಯಾರ್ಥಿಗಳಿಗೆ ಕಲಿಸಿಕೊಡುವುದು ಒಂದು ತಪಸ್ಸಾಗಿತ್ತು.

ಹೀಗೆ ಪ್ರೊ. ಹೆಗ್ಡೆ ನಮ್ಮಂತಹ ವಿದ್ಯಾರ್ಥಿಗಳ ಪಾಲಿಗೆ ಒಬ್ಬ ಪರಿಪೂರ್ಣರಾದ, ಪರಿಶುದ್ಧರಾದ, ಜ್ಞಾನದ ಭಂಡಾರದಂತೆ ಇದ್ದರೆ, ಮನುಷ್ಯರನ್ನು ಬೇರೆ ಮಾನದಂಡಗಳಿಂದ ಅಳೆಯುವವರಿಗೆ ಅವರು ಬೇರೆ ರೀತಿ ಕಾಣಿಸುತ್ತಿದ್ದರು. ನಾನು ಮೊದಲಲ್ಲೇ ಹೇಳಿದ ಹಾಗೆ, ಕೆಲವರಿಗೆ ಅವರು ಅರ್ಥವಾಗಿರಲಿಕ್ಕಿಲ್ಲ. ಅವರ ದೂರದ ಸಂಬಂಧಿಕರೊಬ್ಬರು ಒಮ್ಮೆ ನನ್ನಲ್ಲಿ, ‘ನಿಮ್ಮ ಪ್ರೊಫೆಸರ್ ಎಂಥದಪ್ಪ, ದುಡ್ಡೂ ಮಾಡ್ಲಿಲ್ಲ, ಒಂದು ಕಾರೂ ತೆಗೊಂಡಿಲ್ಲ’ ಎಂದಿದ್ದರು. ‘ಅವರಿಗೆ ಅದರ ಅಗತ್ಯ ಕಂಡಿರಲಾರದು’ ಅಂತ ನಾನು ಹೇಳಿದರೆ, ‘ಇಲ್ಲಪ್ಪ ಅವರಿಗೆ ದುಡ್ಡು ಮಾಡ್ಲಿಕ್ಕೆ ಬರೋದಿಲ್ಲ, ಅದಕ್ಕೆ’ ಅಂತ ಮತ್ತೆ ಹೇಳಿದ್ದರು. ಈ ದುಡ್ಡು ಮಾಡ್ಲಿಕ್ಕೆ ಬರುವುದು ಎಂಬ ವಿದ್ಯೆಯ ಹಿಂದೆ ಬಿದ್ದವರಿಗೆ ನಮ್ಮ ಪ್ರೊಫೆಸರ್ ಅರ್ಥವಾಗುವುದು ಕಷ್ಟವೇ. ದುಡ್ಡು ಮಾಡುವುದಿದ್ದರೆ ಅವರಿಗೂ ಮಾಡಬಹುದಿತ್ತು. ಸರಕಾರಿ ಆಸ್ಪತ್ರೆಯಲ್ಲೂ ದುಡ್ಡು ತೆಗೆದುಕೊಳ್ಳುವವರಿದ್ದಾರೆ, ಈಗೀಗ ವೈದ್ಯಕೀಯ ಕಾಲೇಜಿನ ಪರೀಕ್ಷೆಗಳಲ್ಲೂ ದುಡ್ಡು ತಿರುಗುತ್ತದಂತೆ, ಆಸ್ಪತ್ರೆಯ ಸುಪರಿಂಟೆಂಡೆಂಟೋ, ಕಾಲೇಜಿನ ಪ್ರಿನ್ಸಿಪಾಲೋ ಆಗುವುದು ಕೂಡ ದುಡ್ಡು ಮಾಡುವ ದಾರಿ ಅಂತ ಹೇಳ್ತಾರೆ. ಡಾ॥ ಚಿತ್ತರಂಜನದಾಸ ಹೆಗ್ಡೆಯವರಿಗೆ ಇವುಗಳ ಅಗತ್ಯವೇ ಕಾಣಲಿಲ್ಲ, ಅಂತಹ ಸ್ಥಾನಗಳನ್ನು ಪಡೆಯುವುದಕ್ಕೆ ವಶೀಲಿ, ಪ್ರಭಾವ, ಲಂಚಗಳಿಗೆ ಅವರು ಹೋಗಲಿಲ್ಲ. ಅಷ್ಟೇಕೆ, ಔಷಧ ಕಂಪೆನಿಗಳ ಕಾಣಿಕೆಗಳನ್ನೂ ಅವರು ಕಣ್ಣೆತ್ತಿ ನೋಡುತ್ತಿರಲಿಲ್ಲ. ಅದಾವುದೂ ಅವರಿಗೆ ಬೇಕಾಗಿರಲಿಲ್ಲ. ಹಾಗೆಂದು, ಆ ಸಾತ್ವಿಕ ಜೀವ ಅನ್ಯಾಯವನ್ನು ಸಹಿಸಲೂ ಇಲ್ಲ. ತನ್ನ ವಿಭಾಗದಲ್ಲಿ ತನ್ನ ಸಹಜ ಹಿರಿತನವನ್ನು ಕಡೆಗಣಿಸಿ ಬೇರೊಬ್ಬರಿಗೆ ಬಡ್ತಿ ನೀಡಿದಾಗ ತನ್ನ ಹಕ್ಕಿಗಾಗಿ ಮತ್ತೆ ಕೋರ್ಟಿಗೆ ಹೋಗಿ ಅದನ್ನು ಪಡೆದಿದ್ದರು. ತನ್ನ ಕಲಿಕೆ, ಕಲಿಸುವಿಕೆ, ತನ್ನ ಆದರ್ಶಗಳಿಗೆ ಅವರು ಬದ್ಧರಾಗಿದ್ದರು, ಅದರಲ್ಲೇ ಅವರಿಗೆ ಸಂಪೂರ್ಣ ಸಂತೃಪ್ತಿಯಿತ್ತು, ಸಂತೋಷವಿತ್ತು. ಹಿಂದೆಯೂ, ಇಂದೂ, ಮುಂದೆಯೂ ಯಾರೊಬ್ಬರೂ ಬೆರಳೆತ್ತಿ ಅವರ ಬಗ್ಗೆ ಏನನ್ನೂ ದೂರಲಾಗದಷ್ಟು ಪರಿಶುದ್ಧತೆ ಅವರಲ್ಲಿತ್ತು. ಈ ಸಂತೃಪ್ತಿ ನಮ್ಮಂಥವರಿಗೆ ಅರ್ಥವಾಗದಿರಬಹುದು

ಆದರೆ ದುಡ್ಡು ಮಾಡಲು ಬರುವವರ ಜೊತೆ ತನ್ನನ್ನು ಹೋಲಿಸಲಾಗುತ್ತದೆ ಎನ್ನುವುದರ ಅರಿವು ಪ್ರೊ. ಹೆಗ್ಡೆಯವರಿಗೂ ಇತ್ತು ಅಂತಲೇ ನನಗನಿಸುತ್ತದೆ. ಆದರೆ ಅವರ ನಿರ್ಲಿಪ್ತತೆ, ಅವರ ಮುತ್ಸದ್ಧಿತನದಿಂದಾಗಿ ಅಂಥವೆಲ್ಲಾ ಅವರನ್ನು ಕಾಡಲಿಲ್ಲವೇನೋ? ಅವರಿಗಿಂತ ಕಡಿಮೆ ಅಂಕ ತೆಗೆದಿದ್ದವರು, ಅಥವಾ ಅವರ ಸಹಪಾಠಿಗಳಾಗಿದ್ದು, ಓದಿನಲ್ಲಿ ಹಿಂದಿದ್ದವರು ಮುಂದೆ ಅದೆಷ್ಟೋ ಪಟ್ಟು ಹೆಚ್ಚು ದುಡ್ಡು ಮಾಡಿ, ಎಂಥೆಂಥದೋ ಸ್ಥಾನಗಳಿಗೆ ಏರಿದ್ದನ್ನೆಲ್ಲ ಅವರು ನೋಡಿದ್ದರು. ಅಂಥವರ ಬಗ್ಗೆ ಯಾರಾದರೂ ವಿಪರೀತವಾಗಿ ಹೊಗಳುತ್ತಿದ್ದರೆ ನಮ್ಮ ಪ್ರೊಫೆಸರ್ ಒಮ್ಮೆ ಕಣ್ಣಗಲಿಸಿ ನೋಡಿ ಒಂದು ಸಣ್ಣ ನಗೆ ಬೀರುತ್ತಿದ್ದರಲ್ಲದೆ, ಬೇರಾವ ಟಿಪ್ಪಣಿಯನ್ನೂ ಮಾಡುತ್ತಿರಲಿಲ್ಲ. ಆದರೆ ಅವರನ್ನು ಬಲ್ಲವರಿಗೆ ಅವರ ಈ ಒಂದು ನೋಟದಲ್ಲೇ ಎಲ್ಲಾ ಉತ್ತರಗಳೂ ಸಿಗುತ್ತಿದ್ದವು. ‘ನಾನು ಹೀಗೇ, ನಾನು ಆಯ್ದುಕೊಂಡ ಬದುಕು ಇದು, ನನಗೆ ಇದರಲ್ಲಿ ಸಂತೃಪ್ತಿ ಇದೆ, ನನ್ನನ್ನು ಇತರರ ಜೊತೆ ಹೋಲಿಸಬೇಡಿ’ ಎನ್ನುವುದೆಲ್ಲ ಅವರ ಮುಖದಲ್ಲೇ ವ್ಯಕ್ತವಾಗುತ್ತಿತ್ತು.

ಡಾ॥ ಚಿತ್ತರಂಜನದಾಸ ಹೆಗ್ಡೆಯವರು ದೇಶದ ಎರಡು ಅತ್ಯುತ್ತಮ ಸರಕಾರಿ ಕಾಲೇಜುಗಳಲ್ಲಿ, ಸ್ನಾತಕೋತ್ತರ ವಿದ್ಯಾರ್ಥಿಗಳೂ ಸೇರಿದಂತೆ ಪ್ರತಿಭೆಯಿಂದಲೇ ಸೀಟು ಪಡೆದ ಮಕ್ಕಳಿಗೆ ಕಲಿಸಿ, ಅದರಲ್ಲಿ ಸಾರ್ಥಕ್ಯ ಕಂಡವರು. ನಿವೃತ್ತರಾದ ಮೇಲೆ ಹೊಸ ಖಾಸಗಿ ವೈದ್ಯಕೀಯ ಕಾಲೇಜನ್ನು ಸೇರುವ ಬಗ್ಗೆ ಹಲವು ಸಲ ಯೋಚಿಸಿದ್ದರಂತೆ. ಕೊನೆಗೆ ಎಲ್ಲರ ಒತ್ತಾಯಕ್ಕೆ ಮಣಿದು ಸೇರಿದರಾದರೂ, ಹುಬ್ಬಳ್ಳಿಯಲ್ಲಿ ಅನುಭವಿಸಿದ ಸಂತೃಪ್ತಿ ಅವರಿಗಿಲ್ಲಿ ದೊರೆಯಿತೋ ಗೊತ್ತಿಲ್ಲ. ಅವರ ನೇರವಾಗಿ ಏನನ್ನೂ ಹೇಳದಿದ್ದರೂ ಹುಬ್ಬಳ್ಳಿಯಲ್ಲಿ ಅವರ ಮುಖದಲ್ಲಿದ್ದ ನಗು ಬಹುಷಃ ಇಲ್ಲಿ ಸ್ವಲ್ಪ ಮಾಸಿರಬಹುದು. ಮೂರೋ ನಾಲ್ಕೋ ವರ್ಷಗಳ ಬಳಿಕ ಅವಧಿಯನ್ನು ವಿಸ್ತರಿಸುವ ಘಳಿಗೆ ಬಂದಾಗಲೂ ಅವರು ಅದನ್ನು ಕೇಳಿರಲಿಲ್ಲ. ಅದೇನೋ ಸಿಕ್ಕಿತು; ಆದರೆ ಅದಾಗಿ ಕೆಲವು ತಿಂಗಳಲ್ಲಿ ನಾನು ಮತ್ತು ನನ್ನ ಪತ್ನಿ ಇಬ್ಬರೂ ಕಾಲೇಜನ್ನು ಬಿಡುವ ಪರಿಸ್ಥಿತಿ ಎದುರಾಯಿತು. ಅದಕ್ಕೆ ಕಾರಣವಾದ ಘಟನೆಗಳನ್ನು ಪ್ರೊ. ಹೆಗ್ಡೆಯವರ ಮನೆಗೆ ಹೋಗಿ ವಿವರಿಸಿದಾಗ ಅವರು ಬಹಳ ಬೇಸರಿಸಿಕೊಂಡಿದ್ದರು, ನಿಮ್ಮ ನಿರ್ಧಾರವೇ ಸರಿ ಎಂದಿದ್ದರು. ನಾವು ಹೊರಬಂದ ಒಂದೇ ತಿಂಗಳಲ್ಲಿ ನನಗೆ ಕರೆ ಮಾಡಿ, ‘ನಾನು ಊರಿಗೆ ಹೋಗ್ತಾ ಇದ್ದೇನೆ’ ಅಂದಿದ್ದರು. ‘ಸರ್, ಯಾಕೆ ಸರ್, ಇನ್ನೂ ನಾಲ್ಕೈದು ವರ್ಷ ಇರಬಹುದಲ್ಲಾ’ ಅಂದರೆ, ‘ಸಾಕು ಬಿಡಿ, ನೀವು ಯಾರೂ ಇಲ್ಲ, ಸಾಕು ಅನಿಸುತ್ತಿದೆ’ ಅಂದಿದ್ದರು. ಪ್ರೊ. ಹೆಗ್ಡೆ ದುಡ್ಡಿಗಾಗಿ ದುಡಿದವರಲ್ಲ, ಅದಕ್ಕಾಗಿ ಬದುಕಿದವರಲ್ಲ. ಯಾವತ್ತು ಅವರು ತನ್ನ ಕೆಲಸದಿಂದ ಸಂತೋಷವನ್ನು ಕಾಣಲಿಲ್ಲವೋ, ಅವತ್ತೇ ಬಿಟ್ಟು ಊರಿಗೆ ಹೊರಟಿದ್ದರು.

ಊರಿಗೆ ಹೋದ ಮೇಲೆ ಕೆಲವೊಮ್ಮೆ ಅವರಾಗಿ ಫೋನ್ ಮಾಡ್ತಿದ್ದರು, ಅಪರೂಪಕ್ಕೊಮ್ಮೆ ನಾನೂ ಮಾಡುತ್ತಿದ್ದೆ. ಆದರೆ ನಾನು ಇನ್ನೂ ಹೆಚ್ಚು ಸಲ ಮಾಡಬೇಕಾಗಿತ್ತು ಅಂತ ಈಗ ಅನಿಸುತ್ತಿದೆ. ಮಗನ ಫಲಿತಾಂಶ ಬಂದಾಗ ಮಾಡಿದ್ದೆ, ಅವರಿಬ್ಬರೂ ಖುಷಿ ಪಟ್ಟಿದ್ದರು. ಆ ಮೇಲೆ ತರಾತುರಿಯ ನಡುವೆ ಕರೆ ಮಾಡಲಾಗಿರಲಿಲ್ಲ, ಮಗನನ್ನು ಕಾಲೇಜಿಗೆ ದಾಖಲು ಮಾಡಲು ಹೊರಡಬೇಕಿದ್ದ ಮುನ್ನಾದಿನ ಅವರೇ ಮಾಡಿ ಕೇಳಿದ್ದರು, ನಮಗಂತೂ ಅದರಿಂದ ಮನಸ್ಸು ತುಂಬಿ ಬಂದಿತ್ತು.

ಪ್ರೊ. ಚಿತ್ತರಂಜನದಾಸ ಹೆಗ್ಡೆಯವರು ಇನ್ನೂ ಹಲವು ವರ್ಷ ಇರಬಹುದಾಗಿತ್ತು, ಇರಬೇಕಿತ್ತು. ಆದರೆ ಹಾಗಾಗಲಿಲ್ಲ. ಮೊನ್ನೆ ಮಿದುಳಿನ ರಕ್ತಸ್ರಾವವಾಗಿ ಅವರ ವಿದ್ಯಾರ್ಥಿಯೇ ಆಗಿರುವ ಡಾ॥ ಗಣೇಶ್ ಕಾಮತ್ ಅವರಲ್ಲಿ ಮೊದಲು ಹೋದಾಗ, ‘ಸುಮ್ಮನೆ ಬಿಡಿ, ಮನೆಯವರಿಗೆ ಹೇಳಿಬಿಡಿ, ಇದು ಸರಿಯಾಗುವುದು ಕಷ್ಟ’ ಎಂದಿದ್ದರಂತೆ. ಆಸ್ಪತ್ರೆಯಲ್ಲಿದ್ದಾಗಲೂ ಎಲ್ಲವನ್ನೂ ಗಮನಿಸಿ, ಆಗಾಗ ಎಚ್ಚರಿಸುತ್ತಿದ್ದರಂತೆ. ರೋಗಗಳ ಬಗ್ಗೆ ಎಲ್ಲವನ್ನೂ ತಿಳಿದಿದ್ದ ಅವರಿಗೆ ಇವನ್ನೆಲ್ಲ ಊಹಿಸುವುದು ಕಷ್ಟವಾಗಿರಲಾರದು. ಆದರೂ ನಮಗೆಲ್ಲ ಅವರು ಉಳಿಯಬೇಕೆಂಬ ಹಂಬಲವಿತ್ತು, ಅದಾಗಲಿಲ್ಲ.

ಡಾ॥ ಹೆಗ್ಡೆಯವರಲ್ಲಿ ತರಬೇತಾಗಿ, ಅವರಿಂದ ಪ್ರೇರೇಪಿತರಾಗಿರುವ ಮೈಸೂರು ಹಾಗೂ ಹುಬ್ಬಳ್ಳಿಯ ವಿದ್ಯಾರ್ಥಿಗಳ ಸಂಖ್ಯೆ ಬಹಳ ದೊಡ್ಡದಿದೆ. ಪ್ರೊ. ಹೆಗ್ಡೆಯವರಿಗೆ ಕಲಿಕೆಯಲ್ಲಿದ್ದ ಅದಮ್ಯ ಉತ್ಸಾಹ, ವೈದ್ಯ ವಿಜ್ಞಾನದ ಬಗ್ಗೆ ಅವರಿಗಿದ್ದ ಅಪಾರ ಪ್ರೀತಿ, ವೈದ್ಯಕೀಯ ಆದರ್ಶಗಳತ್ತ ಅವರಿಗಿದ್ದ ಬದ್ಧತೆಗಳನ್ನು ಖಂಡಿತಕ್ಕೂ ಅವರ ಹಲವು ವಿದ್ಯಾರ್ಥಿಗಳು ಮೈಗೂಡಿಸಿಕೊಂಡಿರುತ್ತಾರೆ, ಅದುವೇ ಪ್ರೊ. ಹೆಗ್ಡೆಯವರ ಅತಿ ದೊಡ್ಡ ಆಸ್ತಿ. ಅವರು ಇಷ್ಟೊಂದು ವರ್ಷಗಳಲ್ಲಿ ಬರೆದಿಟ್ಟಿರುವ ಟಿಪ್ಪಣಿಗಳು ಕೂಡ ವೈದ್ಯಲೋಕಕ್ಕೊಂದು ಅತ್ಯುತ್ತಮ ಕೊಡುಗೆಯಾಗಬಹುದು. ಅವನ್ನು ಒಟ್ಟು ಸೇರಿಸಿ ಒಂದು ಪುಸ್ತಕದ ರೂಪದಲ್ಲಿ ಪ್ರಕಟಿಸುವುದು ಅವರ ನೆನಪನ್ನು ಚಿರಸ್ಥಾಯಿಯಾಗಿಸುತ್ತದೆ. ಶಿಷ್ಯಂದಿರು ಗುರುವನ್ನು ಮೀರಿಸುವವರಾಗಬೇಕು ಎನ್ನುತ್ತಾರೆ. ಆದರೆ ಪ್ರೊ. ಚಿತ್ತರಂಜನದಾಸ ಹೆಗ್ಡೆಯವರನ್ನು ಮೀರಿಸುವುದಕ್ಕೆ ಅವರ ವಿದ್ಯಾರ್ಥಿಗಳಿಗೆ ಸುಲಭವಾಗಲಾರದು.