ಆಹಾರ ಮತ್ತು ಆರೋಗ್ಯ, ವ್ಯಾಪಾರ, ರಾಜಕೀಯ

ಆಹಾರ ಮತ್ತು ಆರೋಗ್ಯ, ವ್ಯಾಪಾರ, ರಾಜಕೀಯ

ಡಾ॥ ಶ್ರೀನಿವಾಸ ಕಕ್ಕಿಲ್ಲಾಯ

ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನ ಕೇಂದ್ರ ಆಯೋಜಿಸಿರುವ ‘ಹೀನಗಳೆದವರಲ್ಲ ನಿನ್ನನು ನಾವು ಸಭೆಯೊಳಗೆ’: ಆಹಾರ ರಾಜಕಾರಣ – ಸಮಕಾಲೀನ ಸಂವಾದ ಸರಣಿಯಲ್ಲಿ ಡಿಸೆಂಬರ್ 7, 2015ರಂದು ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿದ್ಯಾಲಯದಲ್ಲಿ ನೀಡಿದ ಉಪನ್ಯಾಸ

(‘ಹೊಸತು’ ಮಾಸಪತ್ರಿಕೆಯ 2016ರ ವಿಶೇಷಾಂಕದಲ್ಲಿ ಪ್ರಕಟಿತ)

09-food-security-IndiaInk-superJumboಆಹಾರವೇ ಎಲ್ಲಕ್ಕೂ ಕಾರಣ. ಎಲ್ಲ ಜೀವಿಗಳ ವಿಕಾಸಕ್ಕೆ, ವಾನರರಿಂದ ಮಾನವರಾಗುವುದಕ್ಕೆ, ಆಹಾರವೇ ಮೂಲ ಕಾರಣ. ನಮ್ಮ ನಾಗರಿಕತೆ ಹುಟ್ಟಿ, ಬೆಳೆಯುವುದಕ್ಕೆ, ನಮ್ಮ ಶ್ರಮ ವಿಭಜನೆಯಾಗಿ ಬೇರೆ ಬೇರೆ ವೃತ್ತಿಗಳು ಹುಟ್ಟುವುದಕ್ಕೆ, ಆಸ್ತಿ-ರಾಜ್ಯ-ರಾಜ-ಮಾಲಕರಾದುದಕ್ಕೆ, ಜಗಳ-ಯುದ್ಧಗಳಿಗೆ, ವ್ಯಾಪಾರಕ್ಕೆ, ರೋಗಕ್ಕೆ ಎಲ್ಲಕ್ಕೂ ಕಾರಣ ಆಹಾರವೇ. ಅಂತಹ ಆಹಾರಕ್ಕೆ ಜೈವಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಆಯಾಮಗಳು ಹಿಂದಿನಿಂದಲೂ ಇದ್ದವು, ಇಂದಿಗೂ ಇವೆ. ಮೇಲ್ವರ್ಗಗಳ ಆಹಾರ, ಕೆಳವರ್ಗಗಳ ಆಹಾರ; ಬಡವರಿಗೆ ಅಪರೂಪಕ್ಕೆ ಸಿಗುವ ಆಹಾರ, ಶ್ರೀಮಂತರಿಗೆ ತಿಂದಷ್ಟೂ ಮುಗಿಯದ ಆಹಾರ; ನಾವೇ ಬೆಳೆಸಿ ಅಥವಾ ಹುಡುಕಿ ತಿನ್ನಬಹುದಾದ ಆಹಾರ, ಮಾರುಕಟ್ಟೆಯಲ್ಲಿ ಖರೀದಿಸುವ ಆಹಾರ; ಆರೋಗ್ಯಕರ ಆಹಾರ, ಅನಾರೋಗ್ಯಕರ ಆಹಾರ – ಹೀಗೆ ಆಹಾರದಲ್ಲಿ ಭಿನ್ನತೆಗಳು ಹಿಂದೆಯೂ ಇದ್ದವು, ಈಗಲೂ ಇವೆ.

ಆಹಾರದ ಈ ಪರಿಯ ವಿಭಜನೆಯನ್ನು ಎಲ್ಲ ಸಾಹಿತ್ಯದಲ್ಲಿ, ಪ್ರಾಚೀನ ಕೃತಿಗಳಲ್ಲಿ, ಮಹಾ ಕಾವ್ಯಗಳಲ್ಲಿ, ಧಾರ್ಮಿಕ ಗ್ರಂಥಗಳಲ್ಲಿ, ವೈದ್ಯಕೀಯ ಸಂಹಿತೆಗಳಲ್ಲಿ ಕಾಣಬಹುದು. ಈ ಹಲವು ನೆಲೆಗಳ ನಡುವೆ ವೈರುದ್ಧ್ಯಗಳೂ, ತಿಕ್ಕಾಟಗಳೂ ಸರ್ವಕಾಲಿಕವೇ. ಸಸ್ಯಾಹಾರವೇ ಶ್ರೇಷ್ಠ, ಅದುವೇ ಆರೋಗ್ಯಕ್ಕೆ ಒಳ್ಳೆಯದು, ಅದುವೇ ಸಾತ್ವಿಕ ಎಂಬ ಹೊಗಳಿಕೆ; ಮಾಂಸಾಹಾರ ಕೆಟ್ಟದು, ಅದರಿಂದ ರೋಗ ಬರುತ್ತದೆ, ಅದು ತಾಮಸಿಕ ಎಂಬ ತೆಗಳಿಕೆ; ಮಾಂಸಾಹಾರಿಗಳನ್ನೂ ಮದ್ಯಪಾನಿಗಳನ್ನೂ ಸಮೀಕರಿಸಿ ಅಂಥವರೊಡನೆ ಉಣ್ಣಲಾಗದೆಂಬ ಅಸ್ಪೃಶ್ಯತೆ ಈಗಲೂ ಪ್ರಚಲಿತವಾಗಿವೆ. ಕೆಲವು ನಿರ್ದಿಷ್ಟ ಮಾಂಸಗಳನ್ನು ಮತಧರ್ಮಗಳೊಂದಿಗೆ ಗಂಟು ಹಾಕಿ ಭಯೋತ್ಪಾದನೆಯೂ ಆಗುತ್ತಿದೆ. ಹೊಟ್ಟೆ ಸೇರಿ, ದೇಹವನ್ನು ಪೊರೆಯಬೇಕಾದ ಆಹಾರವು ಹೀಗೆ ಜಗಳದ ವಸ್ತುವಾಗಿ ಮುಂದುವರಿದಿದೆ.

ಆದರೆ ಇವೆಲ್ಲವನ್ನೂ ಮೀರಿ, ಮುಖ್ಯವಾಗುವ ಪ್ರಶ್ನೆಗಳು ಮೂರೇ: ಮನುಷ್ಯರು ಯಾರು ಎಂಬುದು ಮೊದಲನೆಯದು, ಮನುಷ್ಯರ ದೇಹಕ್ಕೆ ಹೊಂದಿಕೊಳ್ಳುವ ಆಹಾರ ಯಾವುದು ಎಂಬುದು ಎರಡನೆಯದು, ಇಂದು ಲಭ್ಯವಿರುವ ಆಹಾರಗಳಲ್ಲಿ ಒಳ್ಳೆಯ, ಆರೋಗ್ಯಕರ ಆಹಾರ ಯಾವುದು ಮತ್ತು ಅದು ಎಲ್ಲರಿಗೂ ದೊರೆಯುತ್ತಿದೆಯೇ ಇಲ್ಲವೇ ಎನ್ನುವುದು ಮೂರನೆಯದು.

ನಮ್ಮ ಅರಿಮೆಯು ಬಲಿಯುತ್ತಿರುವಂತೆ ಇವೆಲ್ಲಕ್ಕೆ ಉತ್ತರಗಳೂ ಸ್ಪಷ್ಟವಾಗುತ್ತಿವೆ. ಆದರೆ ಇಂದಿಗೆ ಐನೂರು ವರ್ಷಗಳ ಹಿಂದೆ, ಹದಿನಾರನೇ ಶತಮಾನದಲ್ಲಿ, ಬಾಳಿದ್ದ ಕನ್ನಡ ನಾಡಿನ ದಾಸಶ್ರೇಷ್ಠ ಕನಕದಾಸರ ಕೃತಿಗಳಲ್ಲೂ ಇವೇ ಉತ್ತರಗಳಿವೆ ಎನ್ನುವುದು ಅಚ್ಚರಿಯುಂಟು ಮಾಡುವುದಷ್ಟೇ ಅಲ್ಲ, ಕನಕದಾಸರ ದಾರ್ಶನಿಕತೆಯನ್ನೂ ಎತ್ತಿ ತೋರಿಸುತ್ತದೆ. ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಎನ್ನುವ ಮೂಲಕ ಮನುಷ್ಯರೊಳಗಿನ ಭೇದ- ಭಾವಗಳನ್ನು ಕನಕದಾಸರು ಪ್ರತಿಭಟಿಸಿದ್ದರು. ಮೇಲ್ವರ್ಗಗಳ ಆಹಾರ, ಕೆಳ ವರ್ಗಗಳ ಆಹಾರವೆಂದು ತುಚ್ಛೀಕರಿಸುತ್ತಿದ್ದುದನ್ನು ತಮ್ಮ ರಾಮಧಾನ್ಯ ಚರಿತ್ರೆ ಎಂಬ ಕೃತಿಯ ವಸ್ತುವನ್ನಾಗಿಸಿ, ಇವೆರಡರಲ್ಲಿ ಪರಮ ಸಾರದ್ದು ಯಾವುದು ಎನ್ನುವುದಕ್ಕೆ ರಾಮನ ಆಸ್ಥಾನದಲ್ಲೇ ಉತ್ತರ ಹೇಳಿಸಿದ್ದರು. ಆಹಾರದ ಈ ಮಹಾಕಥೆಯು ಭೂಮಿಗಚ್ಚರಿಯಾಗಿ, ಜನಸ್ತೋಮಕ್ಕೆಲ್ಲಾ ಆದರಣೀಯವಾಗಿರುತ್ತದೆ ಎಂದಿದ್ದರು ಕನಕದಾಸರು.[1] ಅವರೆಂದಂತೆಯೇ, ಆಹಾರದ ಒಳಿತು-ಕೆಡುಕುಗಳ ಬಗ್ಗೆ ಇತ್ತೀಚಿನ ವರ್ಷಗಳಲ್ಲಿ ಲಭ್ಯವಾಗುತ್ತಿರುವ ಮಾಹಿತಿಯೆಲ್ಲವೂ ಭೂಮಿಗಚ್ಚರಿಯಾಗಿಯೇ ಇದೆ!

ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ?

ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಎಂಬ ಕನಕದಾಸರ ಪ್ರಶ್ನೆಗೆ 19ನೇ ಶತಮಾನದೀಚೆಗಿನ ವಿಕಾಸವಾದದಲ್ಲಿ, ಆ ಬಳಿಕ ಹೊರಗೆತ್ತಿದ ಪಳೆಯುಳಿಕೆಗಳಲ್ಲಿ, ವಿಶ್ವದೆಲ್ಲೆಡೆಯ ಮನುಷ್ಯರ ವರ್ಣತಂತುಗಳ ಮೇಲೆ ಇತ್ತೀಚೆಗೆ ನಡೆಸಿದ ಪರೀಕ್ಷೆಗಳಲ್ಲಿ ಉತ್ತರಗಳು ಲಭ್ಯವಾಗಿವೆ. ಆಫ್ರಿಕಾದ ಸೀಳು ಕಣಿವೆಗಳ ಪ್ರದೇಶವೇ ಮನುಕುಲದ ಮೂಲ ನೆಲೆ, ಸುಮಾರು ಎರಡು ಲಕ್ಷ ವರ್ಷಗಳ ಹಿಂದೆ ಅಲ್ಲೇ ಮನುಷ್ಯನ ವಿಕಾಸವಾಯಿತು ಎನ್ನುವುದಕ್ಕೆ ಈಗ ಸಾಕಷ್ಟು ಆಧಾರಗಳಿವೆ. ಸುಮಾರು 1 ಲಕ್ಷ ವರ್ಷಗಳ ಹಿಂದೆ ಆಫ್ರಿಕಾದಿಂದ ಹೊರಕ್ಕೆ ಪಾದ ಬೆಳೆಸಿದ ಮಾನವರು ಭರತಖಂಡ, ಯೂರೋಪು, ಅಮೆರಿಕಗಳೆಲ್ಲೆಡೆಗೆ ತಲುಪಿದರು, ಅಲ್ಲಲ್ಲೇ ನೆಲೆ ನಿಂತು ಬೆಳೆದರು. ಇವತ್ತು ಭೂಮಿಯ ಮೇಲಿರುವ ಎಲ್ಲ 700 ಕೋಟಿ ಮನುಷ್ಯರು ಆಫ್ರಿಕಾದ ಈ ಮೂಲ ಕುಟುಂಬದಿಂದ ಕವಲೊಡೆದ ಹತ್ತು ಪುರುಷರು ಹಾಗೂ 18 ಸ್ತ್ರೀಯರ ಸಂತಾನಗಳಿಗೆ ಸೇರಿದವರು ಎನ್ನುವುದು ವರ್ಣತಂತುಗಳಲ್ಲೂ, ಮೈಟೋಕಾಂಡ್ರಿಯಾಗಳಲ್ಲೂ ನಡೆಸಿದ ಪರೀಕ್ಷೆಗಳಲ್ಲಿ ದೃಢಗೊಂಡಿದೆ.[2-6] ಕನಕದಾಸರು ಹೇಳಿದ್ದಂತೆ, ಮನುಷ್ಯರು ಹುಟ್ಟದ ಯೋನಿಗಳಿಲ್ಲ, ಮೆಟ್ಟದ ಭೂಮಿಗಳಿಲ್ಲ; ಅಂತಿರುವಾಗ, ಕುಲ ಕುಲ ಕುಲವೆಂಬ ಹೊಡೆದಾಟಗಳೇಕೆ?

journeyಇಂದು ಮನುಕುಲವು ಬೇರೆ ಬೇರೆ ದೇಶಗಳಾಗಿ, ಜನಾಂಗಗಳಾಗಿ, ಮತಗಳಾಗಿ, ಜಾತಿಗಳಾಗಿ ವಿಭಜಿಸಲ್ಪಟ್ಟಿದ್ದರೂ, ಮನುಷ್ಯರೆಲ್ಲರ ದೇಹದ ರಚನೆ ಒಂದೇ ತೆರನಾಗಿದೆ; ಇರುವ ಪ್ರದೇಶ, ಬದುಕಿನ ಸ್ಥಿತಿಗತಿಗಳಿಗೆ ಅನುಗುಣವಾಗಿ ದೇಹದ ಬಣ್ಣ, ಚರ್ಯೆಗಳಲ್ಲಿ ಸ್ವಲ್ಪ ವ್ಯತ್ಯಾಸವಿರಬಹುದಾದರೂ, ಉಳಿದಂತೆ 99.9% ಸಾಮ್ಯತೆಯಿದೆ.[7.8] ಕನಕದಾಸರೆಂದಂತೆ, ಮನುಷ್ಯರೊಳಗೆ ಹಿರಿದೇನು, ಕಿರಿದೇನು, ಸಮಾನ ಅವಕಾಶಗಳು ದೊರೆತರೆ ಎಲ್ಲರೂ ನೆಟ್ಟನೆ ಸರ್ವಜ್ಞನ ನೆಲೆಯಾಗಬಹುದು!

ಜಲವೆ ಸಕಲ ಕುಲಕ್ಕೆ ತಾಯಲ್ಲವೇ ಎಂಬ ಕನಕವಾಣಿಯೂ ನಿಜವೇ. ಎಲ್ಲಾ ಮನುಷ್ಯರೊಳಗೆ 53% ದಷ್ಟಿರುವುದು ಜಲಜನಕ-ಆಮ್ಲಜನಕಗಳ ಜಲ, ಇನ್ನುಳಿದದ್ದು ಸಾರಜನಕ, ಇಂಗಾಲ, ಇತರ ಖನಿಜ-ಲವಣಗಳು. ಇವೂ ನಮ್ಮವೇನಲ್ಲ; ಕ್ಷಣ ಕಾಲ ಬ್ರಹ್ಮಾಂಡದಿಂದ ಎರವಲು ಪಡೆಯುವಂಥವು! ಈ ಅಣು-ಪರಮಾಣುಗಳೇ ಹರಿಯೆಂದು ತಿಳಿದರೆ, ಕನಕದಾಸರು ಹೇಳಿದಂತೆ, ಹರಿಯೇ ಸರ್ವೋತ್ತಮ, ಹರಿಯೇ ಸರ್ವೇಶ್ವರ, ಎಲ್ಲವೂ ಹರಿಮಯ! ಎಲ್ಲಾ ಮನುಷ್ಯರೂ ಈ ಮಹಾ ಬ್ರಹ್ಮಾಂಡದ ತುಣುಕುಗಳು!

ಎಲ್ಲ ಮನುಷ್ಯರ ದೇಹರಚನೆಯು ಒಂದೇ ಎಂದ ಮೇಲೆ, ಎಲ್ಲ ಮನುಷ್ಯರ ದೇಹಕ್ಕೂ ಸರಿ ಹೊಂದುವ ಆಹಾರವಸ್ತುಗಳೂ ಒಂದೇ ತೆರನಾಗಿರಬೇಕು. ಎಲ್ಲ ಮನುಷ್ಯರೂ ಮಾಂಸ ತಿನ್ನುವುದಕ್ಕೆಂದು ವಿಕಾಸಗೊಂಡ ಮಿಶ್ರಾಹಾರಿಗಳೇ, ಸಸ್ಯಾಹಾರಿ ಮನುಷ್ಯ ಯಾರಿಲ್ಲ. ಸುಮಾರು 25 ಲಕ್ಷ ವರ್ಷಗಳ ಹಿಂದೆ ಹಿಮಯುಗದಿಂದ ಆಹಾರ ದುರ್ಲಭವಾದಾಗ ನಮ್ಮ ಪೂರ್ವಜರು ಜಲಚರಗಳನ್ನು ತಿನ್ನಬೇಕಾಯಿತು, ಅದಕ್ಕೆಂದು ಕೊಳಗಳೊಳಕ್ಕೆ ನಡೆಯಬೇಕಾಯಿತು. ಅದರಿಂದಾಗಿ ಎರಡು ಕಾಲುಗಳಲ್ಲಿ ನಿಲ್ಲುವಂತಾಯಿತು, ಜಲಚರಗಳ ತೈಲಗಳಿಂದ ಮಿದುಳು ಬಲಿಯಿತು. ಅದರೊಂದಿಗೆ ಕೌಶಲ್ಯಗಳೂ ಬೆಳೆದವು, ಇನ್ನಷ್ಟು ಬೇಟೆಯಾಡಿ, ಮತ್ತಷ್ಟು ಮಾಂಸ ತಿನ್ನಲಿಕ್ಕೆ ಸಾಧ್ಯವಾಯಿತು. ಮಾಂಸ ಸೇವನೆ ಹೆಚ್ಚಿದಂತೆ ಆದಿ ಮನುಷ್ಯರ ಫಲವತ್ತತೆಯೂ ಹೆಚ್ಚಿತು, ಅವರ ಸಂತತಿ ಬೆಳೆಯುತ್ತಲೇ ಹೋಯಿತು. ಹೀಗೆ ಆಧುನಿಕ ಮನುಷ್ಯರು ಬೀಜದಿಂದ ಕಾಂಡದವರೆಗೆ, ಮೊಟ್ಟೆಯಿಂದ ಆನೆಯವರೆಗೆ ಎಲ್ಲವನ್ನೂ ಆಹಾರವಾಗಿ ಬಳಸಬಲ್ಲ ಅತ್ಯಂತ ಬಲಿಷ್ಠ ಜೀವಿಗಳಾಗಿ ವಿಕಾಸ ಹೊಂದಿದರು, ಭೂಮಿಯ ಮೇಲಿನ ಬೇರಾವ ಪ್ರಾಣಿಗೂ ಇಲ್ಲದ ಆಹಾರದ ವೈವಿಧ್ಯತೆಯನ್ನು ಪಡೆದರು;[9,10] ಮನುಷ್ಯರು ಅಟ್ಟು ಉಣ್ಣದ ವಸ್ತುಗಳಿಲ್ಲ ಅಂತ ಕನಕದಾಸರು ಹೇಳಿದ್ದು ಅದಕ್ಕೇ ಇರಬಹುದೇ?!

ಅಟ್ಟು ಉಣ್ಣದ ವಸ್ತುಗಳಿರಲಿಲ್ಲ, ಆದರದು ಬದಲಾಯಿತು

ಮನುಷ್ಯರು ವಿಕಾಸಗೊಂಡಂದಿನಿಂದ ಮೊದಲ್ಗೊಂಡು, ಕೃಷಿಯನ್ನು ಆರಂಭಿಸುವ ಕಾಲದವರೆಗೂ ಅಲ್ಲಿಲ್ಲಿ ಅಲೆದಾಡಿ, ಬೇಟೆಯಾಡಿ, ಪ್ರಕೃತಿದತ್ತ ಆಹಾರವನ್ನು ಸಂಗ್ರಹಿಸಿ ತಿನ್ನುವವರಾಗಿದ್ದರು. ಅಂತಹಾ ಆಹಾರದಲ್ಲಿ ಮುಕ್ಕಾಲು ಭಾಗ ಮೀನು, ಮಾಂಸ, ಹುಳು, ಕೀಟ, ಮೊಟ್ಟೆಗಳ ಮಾಂಸಾಹಾರವಾಗಿದ್ದರೆ, ಇನ್ನುಳಿದ ಸಸ್ಯಾಹಾರದಲ್ಲಿ ತರಕಾರಿಗಳು, ಬೀಜಗಳು, ಹೂವುಗಳು, ಗೆಡ್ಡೆಗಳು ಹಾಗೂ ಅಪರೂಪಕ್ಕೊಮ್ಮೆ ಹಣ್ಣುಗಳಿರುತ್ತಿದ್ದವು. ಆಗಿನ ಸಸ್ಯಾಹಾರದಲ್ಲಿ ಧಾನ್ಯಗಳಿರಲೇ ಇಲ್ಲ. ಸುಮಾರು 10-13 ಸಾವಿರ ವರ್ಷಗಳ ಹಿಂದೆ ಈಗಿನ ಮಧ್ಯಪ್ರಾಚ್ಯದ ಪ್ರದೇಶದಲ್ಲಿ ಆಹಾರಕ್ಕಾಗಿ ಪ್ರಾಣಿಗಳನ್ನೂ, ಧಾನ್ಯಗಳನ್ನೂ ಪಳಗಿಸಿ, ಸಾಕುವ ಕ್ರಮವು ಆರಂಭವಾಯಿತು. ಮಧ್ಯಪ್ರಾಚ್ಯ ಹಾಗೂ ಚೀನಾದ ಹಲವೆಡೆ ನಡೆಸಲಾಗಿರುವ ಉತ್ಖನನಗಳಲ್ಲಿ ದೊರೆತಿರುವ ಸಲಕರಣೆಗಳನ್ನು ಪರಿಶೀಲಿಸಿದಾಗ, ಅಷ್ಟು ಹಿಂದೆಯೇ ಧಾನ್ಯಗಳಿಂದ ಮದ್ಯವನ್ನು ತಯಾರಿಸುತ್ತಿದ್ದರೆನ್ನುವುದಕ್ಕೆ ಕುರುಹುಗಳು ದೊರೆತಿವೆ. ಕೆಲವು ತಜ್ಞರ ಪ್ರಕಾರ, ಈ ಮದ್ಯದಾಸೆಗಾಗಿಯೇ ಧಾನ್ಯಗಳ ಕೃಷಿಯು ಆರಂಭವಾಯಿತು.[11-16]

ಕೃಷಿ ಹಾಗೂ ಪಶು-ಪಕ್ಷಿ ಸಾಕಣೆ ಹೆಚ್ಚಿದಂತೆ ಗೋಧಿ, ಬಾರ್ಲಿ, ಅಕ್ಕಿ, ರಾಗಿ ಮುಂತಾದ ಧಾನ್ಯಗಳು ಮತ್ತು ಸಾಕಿದ ಪಶು-ಪಕ್ಷಿಗಳು ನಮ್ಮ ಮುಖ್ಯ ಆಹಾರವಾದವು. ಧಾನ್ಯಗಳನ್ನು ಕುಟ್ಟಿ ರೊಟ್ಟಿ, ಬ್ರೆಡ್ಡು ಇತ್ಯಾದಿಗಳ ತಯಾರಿಯೂ ಆ ಕಾಲದಲ್ಲೇ ತೊಡಗಿತು, ಆಹಾರವನ್ನು ಹೆಚ್ಚು ಸಹ್ಯವಾಗಿಸುವ, ರುಚಿಕರವಾಗಿಸುವ ಇಂತಹ ಸಂಸ್ಕರಣಾ ಕ್ರಮಗಳು ನಿಧಾನಕ್ಕೆ ಹೆಚ್ಚಿದವು, ಧಾನ್ಯಗಳಿಂದ ತಯಾರಿಸಿದ ಬಗೆಬಗೆಯ ತಿನಿಸುಗಳು ಬಂದವು. ಮಾಂಸಕ್ಕಾಗಿ ಸಾಕುತ್ತಿದ್ದ ಪ್ರಾಣಿಗಳಿಂದ ಹಾಲನ್ನು ಪಡೆದು, ಅವುಗಳ ಉತ್ಪನ್ನಗಳನ್ನು ಬಳಸುವ ಅಭ್ಯಾಸವೂ ಸುಮಾರು 7000 ವರ್ಷಗಳಿಂದ ಬೆಳೆಯಿತು.[17] ಸುಮಾರು 2500 ವರ್ಷಗಳ ಹಿಂದೆ ಕಬ್ಬು ಹಾಗೂ ತದನಂತರ ಸಕ್ಕರೆ ಬಂತು, ಬರುಬರುತ್ತ ಅದರ ಬಳಕೆಯೂ ಹೆಚ್ಚಿತು.

ಹೀಗೆ ಹಳೆ ಶಿಲಾಯುಗದಲ್ಲಿ ಸೇವಿಸುತ್ತಿದ್ದ 70% ಮಾಂಸಾಹಾರ, 30% ಬೀಜ-ತರಕಾರಿಗಳ ಬದಲು ಧಾನ್ಯಗಳು, ಸಕ್ಕರೆಗಳಿಂದ ತಯಾರಿಸಿದ ಆಹಾರ ವಸ್ತುಗಳ ಸೇವನೆಯು ಹೆಚ್ಚುತ್ತಾ ಹೋಯಿತು; ಹಿಂದೆಂದೂ ತಿನ್ನದೇ ಇದ್ದ ಧಾನ್ಯಗಳೂ, ಸಕ್ಕರೆಯೂ ತಟ್ಟೆಯನ್ನೂ, ಹೊಟ್ಟೆಯನ್ನೂ ತುಂಬಿದವು, ಮೊದಲು ಮುಖ್ಯ ಆಹಾರಗಳಾಗಿದ್ದ ಮಾಂಸ ಹಾಗೂ ತರಕಾರಿಗಳು ಬದಿಗೆ ಸರಿದವು. ಧಾನ್ಯಗಳೇ ಮುಖ್ಯ ಆಹಾರವಾಗುವುದರೊಂದಿಗೆ ಬೊಜ್ಜು, ಮಧುಮೇಹ ಮುಂತಾದ ರೋಗಗಳೂ ತೊಡಗಿದವು. ಎರಡು-ಮೂರು ಸಾವಿರ ವರ್ಷಗಳ ಹಿಂದಿನ ದಾಖಲೆಗಳಲ್ಲೂ, ಚರಕ ಸಂಹಿತೆಯಂತಹ ವೈದ್ಯಕೀಯ ಗ್ರಂಥಗಳಲ್ಲೂ ಈ ರೋಗಗಳ ಬಗ್ಗೆ ಹೇಳಿರುವುದು ಇದಕ್ಕೆ ಪುರಾವೆಯಾಗಿವೆ. ಈಜಿಪ್ಟಿನ ಸಂಗ್ರಹಾಲಯದಲ್ಲಿರುವ ಮಮ್ಮಿಯೊಂದರೆದುರು ‘ಫೆರೋ ಮೆರೆನ್ತಾ (ಕ್ರಿ.ಪೂ. 1203) ರಕ್ತನಾಳಗಳ ಕಾಹಿಲೆ, ಸಂಧಿ ನೋವು ಹಾಗೂ ದಂತ ಕ್ಷಯಗಳಿಂದ 60ನೇ ವಯಸ್ಸಲ್ಲಿ ಸತ್ತರು’ ಎಂದು ಬರೆದಿದ್ದುದನ್ನು ಗಮನಿಸಿದ ತಜ್ಞರೊಬ್ಬರು ಆ ಮಮ್ಮಿಯನ್ನು ಎಂಆರ್‌ಐ ಸ್ಕಾನ್ ಮಾಡಿ ಆ ರೋಗಗಳ ಕುರುಹುಗಳಿದ್ದುದನ್ನು ದೃಢ ಪಡಿಸಿದುದು ಕೂಡ ಆಧುನಿಕ ರೋಗಗಳ ಮೂಲ ಕಾರಣವು ಅಷ್ಟು ಹಿಂದೆಯೇ ಇತ್ತು ಎನ್ನುವುದಕ್ಕೆ ಇನ್ನಷ್ಟು ಪುರಾವೆಯಾಗಿದೆ.[18]

ಆಹಾರ ದೊರೆಯದೆ ದೇಹ ಬದಲಾಯಿತು,  ಆಹಾರ ದೊರೆತು ಮನಸ್ಸು ಬದಲಾಯಿತು

ನಮ್ಮ ಆಹಾರವನ್ನು ನಾವೇ ಬೆಳೆಸತೊಡಗಿದ ಬಳಿಕ, ಪ್ರಕೃತಿದತ್ತ ಆಹಾರವನ್ನು ಹುಡುಕಿ ತಿನ್ನುತ್ತಿದ್ದವನು ಆಹಾರದ ಉತ್ಪಾದಕನಾದ ಬಳಿಕ, ದೇಹಕ್ಕೆ ರೋಗಗಳು ಹತ್ತಿದ್ದಷ್ಟೇ ಅಲ್ಲ, ಬಾಳುವೆಯೂ ಬದಲಾಯಿತು. ಹಿಮಯುಗದಲ್ಲಿ ಆಹಾರದ ಅಲಭ್ಯತೆಯು ಮನುಷ್ಯನ ದೇಹವನ್ನು ಬದಲಿಸಿ ಜೈವಿಕ ವಿಕಾಸಕ್ಕೆ ಕಾರಣವಾದರೆ, ಕೃಷಿ ತೊಡಗಿ, ಆಹಾರ ಲಭ್ಯವಾದುದು ಮನುಷ್ಯನ ಮನಸ್ಸನ್ನೂ, ವೃತ್ತಿಯನ್ನೂ ಬದಲಿಸಿ ಸಾಮಾಜಿಕ ವಿಕಾಸಕ್ಕೆ ಕಾರಣವಾಯಿತು. ಕೃಷಿ ಮಾಡಿ, ಒಂದೆಡೆ ನೆಲೆ ನಿಂತದ್ದರಿಂದ ಅಂಡಲೆಯುವುದು ತಪ್ಪಿತು, ಊರು-ಕೇರಿ-ರಾಜ್ಯಗಳ ನಾಗರಿಕತೆ ಬೆಳೆಯಿತು. ವಿಜ್ಞಾನ-ತಂತ್ರಜ್ಞಾನಗಳ ಬೆಳವಣಿಗೆಯಂತಹ ಒಳಿತೂ ಆದವು, ರೋಗ-ರುಜಿನ, ಅಸಮಾನತೆಗಳಂತಹ ಕೆಡುಕುಗಳೂ ಆದವು.

201443092553258782_8ಎಲ್ಲರಿಗೆ ಸೇರಿದ ಭೂಮಿಯು ಖಾಸಗಿ ಆಸ್ತಿಯಾಗಿ ಒಡೆಯಲಾರಂಭಿಸಿತು, ರಾಜ್ಯ ಬಂತು, ದೇಶ ಬಂತು, ಗಡಿಗಳು ಬಂದವು, ಸರಕಾರಗಳು ಬಂದವು. ಅಲೆದು ಬೇಟೆಯಾಡಿ ಸಂಗ್ರಹಿಸುತ್ತಿದ್ದ ಆಹಾರವನ್ನು ಎಲ್ಲರೂ ಹಂಚಿ ತಿನ್ನುತ್ತಿದ್ದರೆ, ಬೆಳೆದ ಬೆಳೆ, ಸಾಕಿದ ಪಶು-ಪಕ್ಷಿ, ಎತ್ತಿದ ನೀರು ಕೆಲವರ ಸ್ವತ್ತಾಯಿತು, ದುಡಿದವರದು-ದುಡಿಸಿದವರದು ಬೇರೆಯಾಯಿತು, ದುಡಿಯುವವರು-ದುಡಿಸುವವರು ಬೇರೆಯಾದರು, ಅವರು ಮೇಲಾದರು, ಇವರು ಕೀಳಾದರು. ದುಡಿಯುವವರು ಕಪ್ಪಾದರು, ದುಡಿಸುವವರು ಬಿಳಿಯಾದರು; ದುಡಿದವರು ತಾವು ಬೆಳೆದದ್ದನ್ನೆಲ್ಲ ದುಡಿಸಿದವರಿಗೆ ಕೊಡಬೇಕಾಗಿದ್ದುದರಿಂದ, ಮೇಲಿನವರು ಮರಳಿ ಒಂದಿಷ್ಟು ಕೊಟ್ಟರಷ್ಟೇ ಕೆಳಗಿನವರಿಗೆ ಊಟವೆಂಬ ಸ್ಥಿತಿಯುಂಟಾಯಿತು. ಅಂತಲ್ಲಿ, ದುಡಿಯುವವರು ಮತ್ತೆ ಅಂಡಲೆದು ಆಹಾರ ಹುಡುಕುವವರಾದರು, ಸಿಕ್ಕಿದ ಇಲಿ, ನಾಯಿ, ಏಡಿ, ಕಪ್ಪೆ, ಹಾವು, ಸಣ್ಣ ಮೀನು, ಬಸವನ ಹುಳು ಇತ್ಯಾದಿ ಪ್ರಕೃತಿದತ್ತ ಪ್ರಾಣಿ-ಪಕ್ಷಿಗಳೂ, ವನ್ಯ ಸೊಪ್ಪು-ತರಕಾರಿ-ಗೆಡ್ಡೆಗಳೂ ಅವರ ಆಹಾರವಾದವು. ಧಾನ್ಯ ತಿನ್ನುತ್ತಿದ್ದ ಧನಿಕರಿಗೆ ಬೊಜ್ಜು, ಮಧುಮೇಹಗಳಂತಹ ರೋಗಗಳು ತಪ್ಪಲಿಲ್ಲ; ಮತ್ತೆ ಪ್ರಕೃತಿಗೆ ಮೊರೆ ಹೋದ ಬಡವರನ್ನು ಈ ರೋಗಗಳು ತಟ್ಟಲಿಲ್ಲ.[19-21]

ಮೀರಿಸುವರಾರಿವರೊಳಗೆ ಗುಣಸಾರನಾವನು? [1]

ದುಡಿಯುವವರು ಮತ್ತು ದುಡಿಸುವವರ ನಡುವಿನ ಆಹಾರಗಳಲ್ಲಿದ್ದ ಈ ಅಸಮಾನತೆಯನ್ನು ಕನಕದಾಸರು ತಮ್ಮ ರಾಮ ಧಾನ್ಯ ಚರಿತ್ರೆಯಲ್ಲಿ ಚರ್ಚೆಗೆಳೆದರು. ಕನಕದಾಸರ ಈ ರಾಮಾಯಣದ ಕಥೆಯಲ್ಲಿ, ಲಂಕೆಯನ್ನು ಗೆದ್ದು ಅಯೋಧ್ಯೆಗೆ ಮರಳುವ ದಾರಿಯಲ್ಲಿ ಶ್ರೀರಾಮನಿಗೂ, ಜೊತೆಗಿದ್ದ ಮಹಾಮುನೀಶ್ವರರಿಗೂ, ವಾನರ ಸೇನೆಗೂ ಸವಿಯಲೆಂದು ಸುಭಕ್ಷಗಳೆಲ್ಲವನು ರಾಮನೋಲಗಕೆ ತರುತ್ತಾರೆ. ಹೀಗೆ ಹೆಡಗೆಗಳಲ್ಲಿ ಜೋಡಿಸಿ ಹೊರಿಸಿ ತಂದಖಿಳ ವಸ್ತುಗಳಲ್ಲಿ ನವಧಾನ್ಯಗಳೆಲ್ಲವೂ ಇದ್ದವು; ಕಪ್ಪಗಿನ ದುಡಿಯುವ ಜನರು ತಿನ್ನಬೇಕಾಗಿದ್ದ ಕಪ್ಪಗಿನ ರಾಗಿ, ಬಿಳಿ ಬಣ್ಣದ ದುಡಿಸುವವರು ತಿನ್ನುತ್ತಿದ್ದ ಬಿಳಿಯ ಅನ್ನವೂ ಅಲ್ಲಿದ್ದವು. ಈ ಮೆರೆವ ರಾಸಿಯ ಕಂಡುಯಿದರೊಳು ಪರಮಸಾರದ ಹೃದಯನಾರೆಂದರಸಿ ಶ್ರೀರಾಮನು ಅಲ್ಲಿರುತಿಹ ಮಹಾಮುನೀಶ್ವರರ ಕೇಳಲು, ಗೌತಮ ಮುನಿಯು ನಮ್ಮಯ ದೇಶಕತಿಶಯ ನರೆದಲೆಗನೇ (ರಾಗಿಯೇ) ಎಂದು ಯಾವ ಹಿಂಜರಿಕೆಯಿಲ್ಲದೆಯೇ ತೀರ್ಪಿತ್ತರು. ರಾಮನ ಒಡ್ಡೋಲಗದಲ್ಲಿ, ಗೌತಮ ಮುನಿಯ ಬಾಯಿಂದ, ದುಡಿಯುವ ಜನರ ಆಹಾರವಾಗಿದ್ದ ರಾಗಿಯನ್ನು ಕ್ಷಣ ಮಾತ್ರದಲ್ಲಿ ಗೆಲ್ಲಿಸಿದ ಬಳಿಕ ಕನಕದಾಸರು ಅಕ್ಕಿ-ರಾಗಿಗಳ ನಡುವೆ ವಾಗ್ಯುದ್ಧವನ್ನೇ ಏರ್ಪಡಿಸುತ್ತಾರೆ. ಮುನಿಪ ಗೌತಮ ಪಕ್ಷಪಾತವನೀಸು ಪರಿಯಲಿ ಮಾಡುವುದೇಕೆ ಎಂದು ಆಕ್ಷೇಪಿಸುತ್ತಲೇ ಅಕ್ಕಿಯು ರಾಗಿಯ ಮೇಲೆ ದಾಳಿಯನ್ನಾರಂಭಿಸಿ ಬಿಡುತ್ತದೆ.

ಅಕ್ಕಿಯು ತನ್ನನ್ನು ಮೇಲ್ಮಟ್ಟದವರ ಆಹಾರವೆಂದು, ಕ್ಷಿತಿಯಮರರುಪನಯನದಲಿ ಸುವ್ರತ ಸುಭೋಜನ ಪರಮ ಮಂತ್ರಾಕ್ಷತೆಗಳಲಿ ಶುಭಶೋಭನದಲಾರತಿಗೆ ಹಿರಿಯರಲಿ ಕ್ರತುಗಳೆಡೆಯೊಳಗರಮನೆಯಲಿ ಪ್ರತಿದಿನವು ರಂಜಿಸುವ ದೇವರಿಗತಿಶಯದ ನೈವೇದ್ಯ ತಾನಹೆನೆಂದು, ಹೊಗಳಿಕೊಳ್ಳುತ್ತದೆ, ಎಲ್ಲಾ ಶುಭ ಸಂದರ್ಭಗಳಲ್ಲೂ, ಹಬ್ಬ-ಹರಿದಿನಗಳಲ್ಲೂ, ಮದುವೆ, ಅರ್ಚನೆಗಳಲ್ಲೂ, ಮಂತ್ರ-ತಂತ್ರೋಚ್ಚರಣೆಯಲ್ಲೂ ತಾನು ಅತ್ಯಗತ್ಯವೆಂದು ಹೆಮ್ಮೆ ಪಡುತ್ತದೆ. ಅತ್ತ ರಾಗಿಯನ್ನು ನೀ ಶೂದ್ರಾನ್ನವಾದೆಯಲ ಎಂದು ಹಂಗಿಸಿ, ಕುಲ ಹೀನ, ಮತಿ ಹೀನ, ಒಣಗಿದ ಕಾಷ್ಠ, ಕುರಿಯ ಹಾಲು, ಮರದ ಕಪಿ, ಭ್ರಷ್ಟ, ಹಳ್ಳದ ನೀರು, ಹದ್ದು, ಬಕ, ಕಾಗೆ ಎಂಬಿತ್ಯಾದಿಯಾಗಿ ಕೀಳುಗಳೆಯುತ್ತದೆ. ಕೊನೆಗೆ, ಮಧುಪಾನವಾದೆಯಲಾ ದುರಾತ್ಮಕ ನಿನ್ನ ಸೇವಿಸಿದ ದಾನವರು ಮಾನವ ಕಿರಾತರು ಜ್ಞಾನವಳಿದು ವಿಕಾರದಲಿ ಮತಿ ಹೀನರಾದರು ಎಂದು ತೆಗಳುತ್ತದೆ. ರಾಗಿಯಿಂದ ಶರಾಬು ಸಿದ್ಧಗೊಳ್ಳುತ್ತಿತ್ತು ಮಾತ್ರವಲ್ಲ, ಕನಕದಾಸರ ಕಾಲದಲ್ಲೂ ಬಡವರ ಮದ್ಯಪಾನವನ್ನು ಶ್ರೀಮಂತರು, ವೈದಿಕರು ಹಂಗಿಸುತ್ತಿದ್ದರೆನ್ನುವುದನ್ನು ಇದು ಸೂಚಿಸುತ್ತದೆ. ಮದ್ಯಪಾನ ಮಾಡುವವರು ಹಾಗೂ ಮಾಂಸಾಹಾರಿಗಳ ಜೊತೆಗೆ ತಾನು ಕುಳಿತುಕೊಳ್ಳಲಾರೆ ಎಂದು ಕೆಲವು ಮಠಾಧಿಪತಿಗಳು ಈಗಲೂ ದುಡಿಯುವ ಜನರನ್ನು ಹೀಗೆಯೇ ದೂರ ತಳ್ಳುತ್ತಿಲ್ಲವೇ?

ರಾಮನ ಸಮ್ಮುಖದಲ್ಲಿ ತನಗಾದ ಅವಮಾನವನ್ನು ಕೇಳಿದ ನರೆದಲೆಗನಿಗೆ ಕೋಪ ನೆತ್ತಿಗೇರುತ್ತದೆ, ಅದೇ ಅವಕಾಶವನ್ನು ಬಳಸಿ ಅಕ್ಕಿಯ ಮೇಲೆ ಪ್ರಹಾರ ಮಾಡುತ್ತದೆ. ಭಂಡ, ಸತ್ಯಹೀನನು, ಬಡವರನು ಕಣ್ಣೆತ್ತಿ ನೋಡೆ ಧನಾಢ್ಯರನು ಬೆಂಬತ್ತಿ ನಡೆವವುಪೇಕ್ಷೆ ನಿನ್ನದು ಎಂದು ಶ್ರೀಮಂತರ ಕೈ-ಬಾಯಿಗಳಿಗಷ್ಟೇ ಎಟಕುತ್ತಿದ್ದ ಅಕ್ಕಿಯನ್ನು ಚುಚ್ಚುತ್ತದೆ. ನೀನು ರೋಗಿಗೆ ಪತ್ಯ, ಹೆಣದ ಬಾಯಿಗೆ ತುತ್ತು, ಪಿಂಡ, ವಾಯಸ ಕುಲದ ತುತ್ತು, ಕೀರ್ತಿಯ ಹೊತ್ತುಕೊಂಡ ದುರಾತ್ಮನೆಂದು ಅಕ್ಕಿಯನ್ನು ಹಳಿದು, ಬಲ್ಲಿದರು, ಬಡವರಲಿ ನಿನ್ನಲ್ಲಿಯುಂಟುಪೇಕ್ಷೆ ಎಂದು ದೂರುತ್ತದೆ. ತನ್ನಲ್ಲಿ ‘ಸಲ್ಲದೀ ಪರಿ ಪಕ್ಷಪಾತವದಿಲ್ಲ ಭಾವಿಸಲು ಬಲ್ಲಿದರು ಬಡವರುಗಳೆನ್ನೆದೆ ಎಲ್ಲರನು ರಕ್ಷಿಸುವೆ ನಿರ್ದಯನಲ್ಲ’ ಎನ್ನುವ ರಾಗಿಯು, ‘ಮಳೆದೆಗೆದು ಬೆಳೆಯಡಗಿ ಕ್ಷಾಮದ ವಿಲಯಕಾಲದೊಳನ್ನವಿಲ್ಲದೆ ಅಳಿವ ಪ್ರಾಣಿಗಳಾದರಿಸಿ ಸಲಹುವೆನು ಜಗವರಿಯೆ’ ಎಂದು ತನ್ನನ್ನು ಸಮರ್ಥಿಸಿಕೊಳ್ಳುತ್ತದೆ. ಕೊನೆಗೆ, ಸತ್ತವರ ಪ್ರತಿಬಿಂಬರೂಪನು ಬಿತ್ತರಿಸಿ ಪಿತೃನಾಮಗಳ ನಿನಗಿತ್ತು ಮೂವರ ಪೆಸರಿನಲಿ ಕರಕರೆದು ದರ್ಭೆಯಲಿ ನೆತ್ತಿಯನು ಬಡಿ ಬಡಿದು ಕಡೆಯಲಿ ತುತ್ತನಿಡುವರು ಪಶುಗಳಿಗೆ ನೀನೆತ್ತಿದೆಯೆಲಾ ತನುವ ಸುಡಬೇಕು ಎಂದು ರಾಗಿಯು ಅಕ್ಕಿಯನ್ನು ಜರೆಯುವ ಮೂಲಕ, ಕನಕದಾಸರು ಮೇಲ್ವರ್ಗಗಳಲ್ಲಿದ್ದ ಶ್ರಾದ್ಧಕರ್ಮದಂತಹ ಆಚರಣೆಗಳನ್ನು ಅಣಕಿಸುತ್ತಾರೆ.

ಬಡವರ ಆಹಾರ ಹಾಗೂ ಶ್ರೀಮಂತರ ಆಹಾರಗಳ ನಡುವಿನ ಈ ವ್ಯಾಜ್ಯವನ್ನು ಬಗೆಹರಿಸಲು ಶ್ರೀರಾಮನು ‘ಪರಮ ಧಾನ್ಯದೊಳಿಬ್ಬರೇ ಇವರಿರಲಿ ಸೆರೆಯೊಳಗಾರು ತಿಂಗಳು, ಹಿರಿದು ಕಿರಿದೆಂಬಿವರ ಪೌರುಷವರಿಯ ಬಹುದಿನ್ನು’ ಎಂದು ಎರಡೂ ಧಾನ್ಯಗಳನ್ನು ಸಮಾನವಾಗಿ ಶಿಕ್ಷಿಸಿ, ಆರು ತಿಂಗಳ ಕಾಲ ಸೆರೆಗೆ ತಳ್ಳುತ್ತಾನೆ. ಸೆರೆವಾಸದ ಬಳಿಕ ಎರಡೂ ಧಾನ್ಯಗಳನ್ನು ಕರೆಸಿ ಪರೀಕ್ಷಿಸಿ, ತೀರ್ಪು ನೀಡುವಂತೆ ಶ್ರೀರಾಮನು ಕೇಳಿದಾಗ ಎಲ್ಲರೂ ಸರ್ವಾನುಮತದಿಂದ ರಾಗಿಯನ್ನೇ ಆಯ್ದುಕೊಳ್ಳುತ್ತಾರೆ. ಜಂಭಾರಿ (ಇಂದ್ರ) ನಸುನಗುತ ಸಾರಹೃದಯನು ನರೆದಲೆಗ ನಿಸ್ಸಾರನೀ ವ್ರಿಹಿಯೆಂದರೆ, ನರೆದಲೆಗನೆ ಸಮರ್ಥನು ಬಹಳ ಬಲಯುತ ಸೆರೆಗೆ ಕಾಂತಿಗೆಡಲಿಲ್ಲ, ವ್ರಿಹಿ ಕರಗಿ ಕಂದಿದನು ಸೆರೆಯಲಿ ಎಂದು ನಾರದ ನುಡಿದರೆ, ಬಡವರ ಬಲ್ಲಿದರನಾರೈದು ಸಲಹುವನಿವಗೆ ಸರಿಯುಂಟೆ ನೆಲ್ಲಿನಲಿ ಗುಣವೇನು ಭಾಗ್ಯದಿ ಬಲ್ಲಿದರ ಪತಿಕರಿಸುವನು ಅವನಲ್ಲಿ ಸಾರವ ಕಾಣೆಯೆಂದನು ಕಪಿಲಮುನಿ ನಗುತ. ಅಂತೂ ಕನಕದಾಸರೂ, ಅವರ ಶ್ರೀರಾಮನೂ, ಮತ್ತಿತರ ಋಷಿಮುನಿಗಳೆಲ್ಲರೂ ಬಡವರ, ದುಡಿಯುವ ಜನರ ಆಹಾರವೇ ಗಟ್ಟಿಮುಟ್ಟಾದುದು, ಸಾರವುಳ್ಳದ್ದು ಎಂದೂ, ಶ್ರೀಮಂತರ ಆಹಾರವು ದುರ್ಬಲವಾದುದು, ನಿಸ್ಸಾರವಾದುದು ಎಂದೂ ಒಮ್ಮತದ ತೀರ್ಪನ್ನು ಕೊಡುತ್ತಾರೆ.

ಶೂದ್ರಾನ್ನವೂ, ಅತಿಶಯದ ನೈವೇದ್ಯವೂ

ಕನಕದಾಸರು ಆರೇ ತಿಂಗಳಲ್ಲಿ ದಮನಿತರ ಆಹಾರದ ಪರವಾಗಿ ತೀರ್ಪಿತ್ತರೂ, ಆಹಾರದ ಮೇಲು-ಕೀಳುಗಳ ವ್ಯಾಜ್ಯವು ಅಲ್ಲಿಗೇ ಮುಗಿಯಲಿಲ್ಲ. ಕನಕದಾಸರ ಕಾಲಾನಂತರ ತೊಡಗಿದ ಕೈಗಾರಿಕಾ ಕ್ರಾಂತಿಯು ಒಡೆತನದ ನಮೂನೆಗಳನ್ನು ಮತ್ತೆ ಬದಲಿಸಿತು. ಶ್ರೀಮಂತರ ಮೇಲೆ ಅತಿ ಶ್ರೀಮಂತರು ಬಂದರು, ಬಡವರು ಕಡು ಬಡವರಾದರು. ಬರುಬರುತ್ತಾ ಕೃಷಿ ಭೂಮಿಯು ದೊಡ್ಡ ಕಂಪೆನಿಗಳ ವಶವಾಗಿ, ಕೃಷಿಯು ಉದ್ಯಮವಾಯಿತು, ತಿನ್ನುವ ಆಹಾರವು ವ್ಯಾಪಾರದ ಸರಕಾಯಿತು. ಧಾನ್ಯಗಳನ್ನು ಸಂಸ್ಕರಿಸಿ, ಬ್ರೆಡ್ಡು, ಬಿಸ್ಕತ್ತು ತಯಾರಿಸಿ ಮಾರುವ ಉದ್ಯಮವೂ ಬಲು ದೊಡ್ಡದಾಗಿ ಬೆಳೆಯಿತು. ಭೂಮಿಯೊಳಗಿಂದ ತೆಗೆದ ತೈಲವೂ ಕಂಪೆನಿಗಳ ಪಾಲಾಯಿತು, ಆ ತೈಲದಿಂದ ತೆಗೆದ ರಾಸಾಯನಿಕಗಳು, ಆ ರಾಸಾಯನಿಕಗಳಿಂದ ತಯಾರಿಸಿದ ರಸಗೊಬ್ಬರಗಳು, ಕೀಟನಾಶಕಗಳು, ಕಳೆನಾಶಕಗಳು, ಮದ್ದುಗಳು, ಮದ್ದುಗುಂಡುಗಳು ಎಲ್ಲವೂ ಈ ಕೆಲವೇ ಕಂಪೆನಿಗಳ ಕೈಯೊಳಗಾದವು. ಕೃಷಿ, ರಸಗೊಬ್ಬರ, ತೈಲ, ಔಷಧ, ಯುದ್ಧಗಳೆಲ್ಲವೂ ಉದ್ಯಮಗಳಾಗಿ, ಒಂದಿನ್ನೊಂದನ್ನು ಪೋಷಿಸಿಕೊಂಡು ವಿಶ್ವದ ಸರಕಾರಗಳನ್ನೆಲ್ಲ ನಿಯಂತ್ರಿಸತೊಡಗಿದವು. ಇಪ್ಪತ್ತನೇ ಶತಮಾನದ ಮೊದಲಲ್ಲಿ ಜರ್ಮನಿಯ ಅತಿ ದೊಡ್ಡ ಕಂಪೆನಿಗಳು ಐ ಜಿ ಫಾಬೆನ್ ಎಂಬ ಹೆಸರಲ್ಲಿ ಜೊತೆಗೂಡಿ, ಹಿಟ್ಲರನಿಗೆ 4 ಲಕ್ಷ ಮಾರ್ಕ್ ನೆರವಿತ್ತು, ಆತನ ಗೆಲುವಿಗೆ ಕಾರಣವಾದವು; ನಂತರ ಆತನನ್ನೇ ನಿಯಂತ್ರಿಸಿ ಲಕ್ಷಗಟ್ಟಲೆ ಜನರನ್ನು ಪ್ರಯೋಗಪಶುಗಳಾಗಿ ಬಳಸಿಕೊಂಡವು. ಕೊನೆಗೆ ಹಿಟ್ಲರ್ ಆತ್ಮಹತ್ಯೆ ಮಾಡಿಕೊಳ್ಳಬೇಕಾಯಿತು, ಆದರೆ ಈ ಕಂಪೆನಿಗಳು ಮತ್ತೆ ಬೆಳೆದು ಇಪ್ಪತ್ತು ಪಟ್ಟು ದೊಡ್ಡದಾದವು. ಇಂದು ಕೂಡ ಭೂಲೋಕದ ಹೆಚ್ಚಿನ ಸರಕಾರಗಳನ್ನು ಆಹಾರ, ತೈಲ, ಔಷಧ ಹಾಗೂ ಯುದ್ಧ ಉದ್ಯಮಗಳೇ ನಿಯಂತ್ರಿಸುತ್ತಿವೆ, ಆ ಮೂಲಕ ಆಹಾರ, ತೈಲ, ಔಷಧ ಇತ್ಯಾದಿಗಳ ಪೂರೈಕೆಯನ್ನೂ, ಬೆಲೆಗಳನ್ನೂ ನಿಯಂತ್ರಿಸುತ್ತಿವೆ.

ಎರಡನೇ ಮಹಾಯುದ್ಧದ ಬಳಿಕ ಆಹಾರದ ಕೊರತೆ ನೀಗಿತು, ಆದರೆ ವಿಶ್ವದ ಹಲವೆಡೆ ಬಡತನ ಹೆಚ್ಚಿತು. ದೈತ್ಯ ಕಂಪೆನಿಗಳು ಧಾನ್ಯಗಳನ್ನು ಹೇರಳವಾಗಿ ಬೆಳೆಸಿ, ಸಂಸ್ಕರಿಸಿ, ಬ್ರೆಡ್ಡು-ಬಿಸ್ಕತ್ತುಗಳಂತಹ ತಿನಿಸುಗಳನ್ನು ಸಿದ್ಧ ಪಡಿಸಿ, ಮಾರುಕಟ್ಟೆಯನ್ನು ತುಂಬತೊಡಗಿದವು, ಅವಕ್ಕೆ ಸಕ್ಕರೆಯನ್ನೂ ಬೆರೆಸತೊಡಗಿದವು. ಈ ಕಂಪೆನಿಗಳ ನಿಯಂತ್ರಣದಡಿಯಲ್ಲಿ, ಶ್ರೀಮಂತ ದೇಶಗಳ ಜನರಿಗೆ ತಿಂದೆಸೆಯುವಷ್ಟು ಯಥೇಷ್ಟ ಆಹಾರ ದೊರೆಯತೊಡಗಿತು, ಬಡರಾಷ್ಟ್ರಗಳ ಜನರಿಗೆ ಊಟವೇ ಕಷ್ಟವಾಯಿತು. ಅಮೆರಿಕಾದಂತಹ ದೇಶಗಳಲ್ಲಿ ಈ ಕಂಪೆನಿಗಳು ಮಾರುವ ಸಕ್ಕರೆಭರಿತ ಸಂಸ್ಕರಿತ ಆಹಾರದ ಬಳಕೆಯು ಹೆಚ್ಚತೊಡಗಿತು, ಬಡ ದೇಶಗಳ ಜನರು ತಮ್ಮ ಕೈಗೆಟುಕಿದ ಸ್ಥಳೀಯ ಆಹಾರಗಳನ್ನೇ ಹುಡುಕಿ ಹೊಟ್ಟೆ ಹೊರೆಯಬೇಕಾಯಿತು.

ಈಗಲೂ ಜನಸಂಖ್ಯೆ ಹೆಚ್ಚಿದಂತೆ ಆಹಾರದ ಬೇಡಿಕೆ ಹೆಚ್ಚುತ್ತಿದೆಯಾದರೂ, ಪೂರೈಕೆ ಇಳಿಯುತ್ತಿದೆ, ಬೆಲೆ ಏರುತ್ತಿದೆ. ಬಡವರು ಹಾಗೂ ಮಕ್ಕಳ ಹೊಟ್ಟೆಗೆ ಊಟವಿಲ್ಲದಿರುವ ನಮ್ಮ ದೇಶದಿಂದಲೂ ವರ್ಷಕ್ಕೆ 75 ಲಕ್ಷ ಟನ್ ಗೋಧಿ, 80 ಲಕ್ಷ ಟನ್ ಅಕ್ಕಿ, 15 ಲಕ್ಷ ಟನ್ ಮಾಂಸ, 5 ಕೋಟಿ ಮೊಟ್ಟೆ, 5 ಲಕ್ಷ ಟನ್ ಕೋಳಿ, 6 ಲಕ್ಷ ಟನ್ ಮೀನನ್ನು ರಫ್ತು ಮಾಡುತ್ತಿದ್ದೇವೆ; ನಮ್ಮವರ ಜೀವಗಳಿಗಿಂತಲೂ ವಿದೇಶದಿಂದ ದೊರೆಯುವ ಚಿಕ್ಕಾಸೇ ನಮಗೆ ಮುಖ್ಯವಾಗಿದೆ. ಇದಲ್ಲದೆ, ಊಟಕ್ಕಿದ್ದವರು ತಿಂದೆಸೆಯುವ ಆಹಾರವು 40% ದಷ್ಟಿದ್ದು, ಎಲ್ಲರ ಹೊಟ್ಟೆಯನ್ನು ತುಂಬಿ ಇನ್ನೂ ಮಿಕ್ಕುಳಿಯುವಷ್ಟಾಗುತ್ತದೆ. ಜಾತಿ, ಮತ, ಮತ್ತಿತರ ಸಾಮಾಜಿಕ, ಧಾರ್ಮಿಕ, ರಾಜಕೀಯ ನಿರ್ಬಂಧಗಳು ಕೂಡ ಜನರ ಆಹಾರವನ್ನು ಕಿತ್ತುಕೊಳ್ಳುತ್ತಿವೆ.

ಶ್ರೀಮಂತರು ಹಾಗೂ ಬಡವರ ಆಹಾರಗಳು ಬೇರೆ-ಬೇರೆಯಾದಂತೆ ಅವರ ರೋಗಗಳೂ ಬೇರೆಯಾಗಿವೆ. ಇಂದು 140 ಕೋಟಿ ಜನ ಅಗತ್ಯಕ್ಕಿಂತ ಹೆಚ್ಚು ತಿಂದು ರೋಗಗ್ರಸ್ತರಾಗಿದ್ದಾರೆ, ಅತ್ತ 80 ಕೋಟಿ ಜನ ಊಟಕ್ಕಿಲ್ಲದೆ ನರಳುತ್ತಿದ್ದಾರೆ; ಆಸ್ತಿಹೀನರಿಗೆ ಊಟವಿಲ್ಲದೆ ರೋಗ, ಆಸ್ತಿವಂತರಿಗೆ ಊಟ ಸರಿಯಿಲ್ಲದೆ ರೋಗ! [22] ಹೊಟ್ಟೆ ಖಾಲಿಯಿರುವ 80 ಕೋಟಿ ಜನರಲ್ಲಿ 30 ಕೋಟಿ ನಮ್ಮಲ್ಲಿದ್ದಾರೆ, ಜಗತ್ತಿನಲ್ಲಿಂದು ವರ್ಷಕ್ಕೆ 4 ಕೋಟಿ ಜನರು ಹೊಟ್ಟೆಗಿಲ್ಲದೆ ಸಾಯುತ್ತಿದ್ದಾರೆ. ನಮ್ಮಲ್ಲಿ 39% ಮಕ್ಕಳಿಗೆ ನ್ಯೂನ ಪೋಷಣೆಯಿದೆ, ನಿತ್ಯ 3000 ಮಕ್ಕಳು ಅದರಿಂದಾಗಿ ಸಾಯುತ್ತಿದ್ದಾರೆ.

ಇಂದು ದೊರೆಯುತ್ತಿರುವ ಆಹಾರವು ದೈತ್ಯ ಕಂಪೆನಿಗಳ ಲಾಭವನ್ನು ಹೆಚ್ಚಿಸುತ್ತದೆಯೇ ಹೊರತು ತಿನ್ನುವವರ ಆರೋಗ್ಯವನ್ನು ಕಾಪಾಡುವುದಿಲ್ಲ. ಮಹಾ ಕೈಗಾರಿಕೆಗಳು, ರಸಗೊಬ್ಬರಗಳು, ಕೀಟನಾಶಕಗಳು, ವಾಹನಗಳು ಮುಂತಾದವುಗಳ ಅಬ್ಬರದಿಂದ ಹವೆ, ಪರಿಸರ ಕೆಡುತ್ತಿವೆ, ನೆರೆ-ಬರ ಬಂದು ಬೆಳೆಗಳು ನಾಶವಾಗುತ್ತಿವೆ. ಇನ್ನೊಂದೆಡೆ, ಮನುಷ್ಯರ ಆಹಾರ ಧಾನ್ಯಗಳು ಪಶು-ಪಕ್ಷಿ ಸಾಕಣೆಗೆ, ವಾಹನಗಳ ಇಂಧನಕ್ಕೆ ತಿರುಗಿಸಲ್ಪಟ್ಟು, ಕಾರು-ಬಸ್ಸುಗಳ ಟ್ಯಾಂಕುಗಳು ಮನುಷ್ಯರ ಹೊಟ್ಟೆಗೆ ಪ್ರತಿಸ್ಪರ್ಧಿಗಳಾಗಿವೆ. ಇಂದು ಎರಡು ಪೈಸೆ ಮೌಲ್ಯದ ಜೋಳದಿಂದ ಎರಡು ರೂಪಾಯಿ ಮೌಲ್ಯದ ತಿನಿಸುಗಳು, ಸಕ್ಕರೆ, ಶರಾಬು ಇತ್ಯಾದಿ ಸಿದ್ಧವಾಗುತ್ತಿವೆ, ಕಂಪೆನಿಗಳಿಗೆ ಹೇರಳ ಲಾಭವನ್ನು ತರುತ್ತಿವೆ. ಮತ್ತೊಂದೆಡೆ, ಆಹಾರ ಧಾನ್ಯಗಳ ಬದಲು ಸೂರ್ಯಕಾಂತಿ, ನೆಲಕಡಲೆ, ಸೋಯಾ, ಹೂವುಗಳು, ಹಣ್ಣುಗಳು ಮುಂತಾದ ನಗದು ಬೆಳೆಗಳಿಗೆ ಪ್ರಾಶಸ್ತ್ಯ ನೀಡಲಾಗುತ್ತಿದೆ. ಕಂಪೆನಿಗಳೂ, ಅವುಗಳ ನಿಯಂತ್ರಣದಲ್ಲಿರುವ ಸರಕಾರಗಳೂ ಸೃಷ್ಟಿಸಿರುವ ಈ ಆಹಾರ ಸಂಕಷ್ಟಕ್ಕೆ ಪರಿಹಾರವಾಗಿ ಅದೇ ಕಂಪೆನಿಗಳು ಸಿದ್ಧ ಪಡಿಸಿರುವ ಕುಲಾಂತರಿ ಬೆಳೆಗಳನ್ನೂ, ಅಂತಕ ಬೀಜಗಳನ್ನೂ ಮುಂದೊತ್ತಲಾಗುತ್ತಿದೆ. ಒಟ್ಟಿನಲ್ಲಿ ಪರಂಪರಾಗತ ಆಹಾರವು ಎಲ್ಲೋ ಮಾಯವಾಗಿದೆ, ನಾವು ಬೆಳೆಯಬಹುದಾದುದನ್ನೂ ಕಿತ್ತುಕೊಳ್ಳಲಾಗಿದೆ; ಬೆರಳೆಣಿಕೆಯ ಕಂಪೆನಿಗಳು ಬೆಳೆಸಿದ, ಸಂಸ್ಕರಿಸಿ ಎಸೆದ, ನಿಸ್ಸಾರವಾದ, ನಿರ್ಜೀವವಾದ ತಿನಿಸುಗಳನ್ನು ನಮ್ಮ ಗಂಟಲುಗಳೊಳಗೆ ತುರುಕಲಾಗುತ್ತಿದೆ.

ಕೃತಕ ರಸಗೊಬ್ಬರಗಳು ಹಾಗೂ ಕೈಗಾರಿಕಾ ತ್ಯಾಜ್ಯಗಳ ಕ್ಯಾಡ್ಮಿಯಂ, ಸೀಸ, ಪಾದರಸ, ಆರ್ಸೆನಿಕ್, ನಿಕಲ್, ಯುರೇನಿಯಂ ಮುಂತಾದವು, ಕಳೆ-ಕೀಟನಾಶಕಗಳ ಬಗೆಬಗೆಯ ರಾಸಾಯನಿಕಗಳು ನಮ್ಮ ನೆಲ-ಜಲ-ಗಾಳಿಗಳನ್ನೆಲ್ಲ ಕೆಡಿಸಿವೆ; ಇವುಗಳಿಂದಾಗಿ ಸಕಲ ಜೀವರಾಶಿಯ ಮೇಲೆ, ಆಹಾರಸಂಕಲೆಯ ಮೇಲೆ, ಸಸ್ಯ-ಮಾಂಸಾಹಾರಗಳ ಗುಣಮಟ್ಟದ ಮೇಲೆ, ಹಲಬಗೆಯ ದುಷ್ಪರಿಣಾಮಗಳಾಗಿವೆ. ರಸಗೊಬ್ಬರ-ಕೀಟನಾಶಕಗಳ ಬಳಕೆಯಿಂದ ಸಿಗುತ್ತಿರುವ ಒಂದಿಷ್ಟು ಆಹಾರವೂ ಸತ್ವಹೀನವಾಗಿ, ಉಪಯೋಗಕ್ಕಿಲ್ಲದಂತಾಗಿದೆ. ಇಂತಹಾ ಆಹಾರದಿಂದ 300 ಕೋಟಿ ಜನರಿಗೆ ನ್ಯೂನ ಪೋಷಣೆಯಾಗುತ್ತಿದೆ; ಲವಣ, ಖನಿಜಾಂಶಗಳು, ಅನ್ನಾಂಗಗಳ ಕೊರತೆಯಿಂದ ರೋಗರಕ್ಷಣಾ ಸಾಮರ್ಥ್ಯ, ಮಕ್ಕಳ ಮನೋದೈಹಿಕ ಬೆಳವಣಿಗೆ, ಬುದ್ಧಿಮತ್ತೆ, ಏಕಾಗ್ರತೆ ಎಲ್ಲವೂ ಬಾಧಿತವಾಗುತ್ತಿವೆ. ನೆಲ-ಜಲಗಳ ಸಾರವನ್ನೆಲ್ಲ ಕಿತ್ತು, ಆಹಾರವನ್ನು ನಿಸ್ಸಾರವಾಗಿಸಿ, ನಂತರ ಉಪ್ಪಿಗೆ ಅಯೊಡಿನ್ ಹಾಕಿ, “ರಾಮಣ್ಣಾ, ನಿನ್ನ ಹೆಂಡ್ತಿ ಗರ್ಭದಲ್ಲಿರೋ ಮಗುವಿನ ಬುದ್ಧಿ ಸರಿಯಾಗಬೇಕಿದ್ರೆ ಅಯೊಡೀನ್ ಮಿಶ್ರಿತ ಉಪ್ಪನ್ನೇ ಕೊಡು” ಎಂಬಂತಹ ಜಾಹೀರಾತು ಹಾಕುತ್ತಿದ್ದೇವೆ!

2-Overweight-woman-eating-fast-food-it-is-the-worst-foodಆಹಾರೋತ್ಪಾದನೆಯು ಬೆರಳೆಣಿಕೆಯ ಅತಿ ಶ್ರೀಮಂತರ ಕೈಯೊಳಗಾದ ಬಳಿಕ, ಸಣ್ಣ ಶ್ರೀಮಂತರ ಊಟವೂ ಕೆಡತೊಡಗಿದೆ. ತಾವೇ ಆಹಾರವನ್ನು ಹುಡುಕಲಾಗದೆ, ಅತ್ತ ಬೆಳೆಯಲೂ ಆಗದೆ, ಅತಿ ಶ್ರೀಮಂತರು ಮಾರಿದ್ದನ್ನೇ ತಿನ್ನಬೇಕಾದ ಸ್ಥಿತಿಯು ಅವರಿಗೊದಗಿದೆ. ಹಾಗೊಮ್ಮೆ ಧಾನ್ಯ-ತರಕಾರಿ ಇತ್ಯಾದಿ ಸಿಕ್ಕರೂ ಅಡುಗೆ ಮಾಡಲು ಪುರೊಸೊತ್ತಿಲ್ಲದೆ, ಮಾರುಕಟ್ಟೆಯಲ್ಲಿರುವ ಸಿದ್ಧ ಸಂಸ್ಕರಿತ ಆಹಾರವನ್ನೇ ಅವರು ತಿನ್ನಬೇಕಾಗಿದೆ; ಕೆಲವೊಮ್ಮೆ ತಿನ್ನುವುದಕ್ಕೂ ಪುರೊಸೊತ್ತಿಲ್ಲದೆ, ಸಿಕ್ಕಸಿಕ್ಕಾಗ, ಹೊತ್ತು-ಗೊತ್ತಿಲ್ಲದೆ ತಿನ್ನಬೇಕಾದ ದುಸ್ಥಿತಿಯೊದಗಿದೆ. ಜೊತೆಗೆ, ಸಾಮಾಜಿಕ, ಧಾರ್ಮಿಕ ಅಡಚಣೆಗಳು ಹಾಗೂ ವೈದ್ಯಕೀಯ ಸಲಹೆಗಳ ಕಾಟವನ್ನು ಅವರೂ ಅನುಭವಿಸಬೇಕಾಗಿದೆ.

ಈ ದೈತ್ಯ ಕಂಪೆನಿಗಳು ಹಾಗೂ ಅವಕ್ಕೆ ಗೋಣಾಡಿಸುವ ಸರಕಾರಗಳು ಯಾರು-ಎಷ್ಟು ತಿನ್ನಬೇಕು ಎಂಬುದನ್ನು ನಿರ್ಧರಿಸಿದ್ದಷ್ಟೇ ಅಲ್ಲ, ತಿನ್ನುವವರೆಲ್ಲರೂ ಏನನ್ನು ತಿನ್ನಬೇಕು ಎಂಬುದನ್ನೂ ನಿರ್ಧರಿಸಿದವು. ಎರಡನೇ ಮಹಾಯುದ್ಧದ ಬಳಿಕ ಆಹಾರೋತ್ಪಾದನೆ ಹೆಚ್ಚಿ, ಕಂಪೆನಿಗಳ ಹಿಡಿತವು ಬಲಗೊಂಡಾಗ, ಈ ಎರಡನೇ ಪ್ರಶ್ನೆಗೆ ಬಲ ತುಂಬಲಾಯಿತು. ಅಮೆರಿಕದ ಜನರಲ್ಲಿ ಹೃದಯಾಘಾತ, ಬೊಜ್ಜು ಇತ್ಯಾದಿ ಹೆಚ್ಚುತ್ತಿರುವುದಕ್ಕೆ ಅಲ್ಲಿ ಕೊಬ್ಬು, ಮಾಂಸ, ತೆಂಗಿನೆಣ್ಣೆ ಮುಂತಾದ ಪ್ರೊಟೀನು-ಮೇದಸ್ಸು ಭರಿತವಾದ ಆಹಾರವನ್ನು ಹೆಚ್ಚು ತಿನ್ನುತ್ತಿರುವುದೇ ಪ್ರಮುಖ ಕಾರಣ ಎಂಬ ಸಿದ್ಧಾಂತವನ್ನು 1955ರಲ್ಲಿ ಮಿನೆಸೊಟ ವಿವಿಯ ಪ್ರೊಫೆಸರ್ ಕೀಸ್ ಮುಂದಿಟ್ಟರು.[23]

ಲಂಡನ್‌ನ ಕ್ವೀನ್ಸ್ ಕಾಲೇಜಿನ ಜಾನ್ ಯುಡ್ಕಿನ್ ಕೀಸ್ ಅವರ ಈ ಸಿದ್ಧಾಂತವನ್ನು ಆ ಕೂಡಲೇ ಖಂಡಿಸಿದ್ದರು; ಜನತೆಯ ಸಂಪತ್ತು ಹೆಚ್ಚಿದಂತೆ ಕೊಬ್ಬಿನ ಸೇವನೆಯಷ್ಟೇ ಅಲ್ಲ, ಸಕ್ಕರೆಯ ಸೇವನೆಯೂ ಹೆಚ್ಚುತ್ತದೆ, ಆದ್ದರಿಂದ ಪರ್ಯಾಪ್ತ ಮೇದಸ್ಸಿನಿಂದ ರೋಗವುಂಟಾಗುತ್ತದೆ ಎಂಬ ಆನ್ಸೆಲ್ ಕೀಸ್ ಅವರ ತೀರ್ಮಾನವು ತಪ್ಪು ಎಂದು ಸಾಧಾರವಾಗಿ ತೋರಿಸಿಕೊಟ್ಟಿದ್ದರು. ಆದರೆ ಆಹಾರೋದ್ಯಮವು ಕೀಸ್ ಬೆನ್ನಿಗಿತ್ತು, ಅವರೇ ಗೆದ್ದರು; 1961ರಲ್ಲಿ ಟೈಮ್ಸ್ ಪತ್ರಿಕೆಯ ಮುಖಪುಟಕ್ಕೇರಿದರು. ಅತ್ತ ಜಾನ್ ಯುಡ್ಕಿನ್ ಅವರು ಉಪನ್ಯಾಸಗಳಿಗೆ ಕರೆಯಲ್ಪಡದೆ, ಲೇಖನಗಳು ಪ್ರಕಟಗೊಳ್ಳದೆ ಬಹಿಷ್ಕೃತರಾದರು; 1972ರಲ್ಲಿ ಸಕ್ಕರೆಯ ಹಾನಿಗಳ ಬಗ್ಗೆ ಪ್ಯೂರ್ ವೈಟ್ ಅಂಡ್ ಡೆಡ್ಲಿ ಎಂಬ ಪುಸ್ತಕವನ್ನು ತಾವೇ ಪ್ರಕಟಿಸಿ ನಿವೃತ್ತರಾದರು.[24-28]

ಅಮೆರಿಕದ ಹೃದ್ರೋಗ ಸಂಘವು ಕೀಸ್ ಸಿದ್ಧಾಂತವನ್ನು ಗಟ್ಟಿಯಾಗಿ ಹಿಡಿದುಕೊಂಡು ದೊಡ್ಡ ಹೇಳಿಕೆಯನ್ನೇ ಕೊಟ್ಟಿತು, ಜೊತೆಗೆ, ಅದಕ್ಕೆ ತಮ್ಮಲ್ಲಿ ಸಾಕಷ್ಟು ಆಧಾರಗಳಿಲ್ಲ ಅಂತಲೂ ಹೇಳಿತು.[29] ಅಂದರೆ ಯಾವುದೇ ಆಧಾರಗಳಿಲ್ಲದೆ ಮಾಂಸ, ಮೊಟ್ಟೆ, ತೆಂಗಿನೆಣ್ಣೆ ಬಿಡಬೇಕೆಂದು ಅಮೆರಿಕನ್ನರಿಗೆ, ಆ ಮೂಲಕ, ಲೋಕದ ಜನರಿಗೆಲ್ಲ, ಅಮೆರಿಕದ ಹೃದ್ರೋಗ ಸಂಘದ ಮೂಲಕ ಸೂಚಿಸಲಾಯಿತು. ನಂತರ 1980ರಲ್ಲಿ ಅಮೆರಿಕದ ಆಡಳಿತವು ಕೂಡ ಕೊಬ್ಬಿನಿಂದಲೇ ಕಾಯಿಲೆಯೆಂಬ ಸಿದ್ಧಾಂತವನ್ನು ಬೆಂಬಲಿಸಿತು; ಖಾದ್ಯ ತೈಲ, ಕೊಬ್ಬು, ಮಾಂಸಗಳನ್ನು ಕಡಿತಗೊಳಿಸಬೇಕೆಂದೂ, ಕೊಲೆಸ್ಟರಾಲ್ ಸೇವನೆಯು ದಿನಕ್ಕೆ 300ಮಿಗ್ರಾಂ ಮೀರಬಾರದೆಂದೂ ಹೇಳಿತು, ಬದಲಿಗೆ, ಧಾನ್ಯಗಳು, ಹಣ್ಣುಗಳು, ಹಾಲಿನ ಉತ್ಪನ್ನಗಳು ಹೆಚ್ಚಿನ ಪ್ರಮಾಣದಲ್ಲಿರಬೇಕೆಂದು ಸೂಚಿಸಿತು. ಅಲ್ಲಿಂದ 2010ರವರೆಗೆ ಪ್ರತಿ ಐದು ವರ್ಷಗಳಿಗೊಮ್ಮೆ ಪ್ರಕಟವಾದ ಅಮೆರಿಕ ಸರಕಾರದ ಆಹಾರ ಮಾರ್ಗದರ್ಶಿಗಳಲ್ಲಿ ಮಾಂಸ, ಮೊಟ್ಟೆ, ತೆಂಗಿನೆಣ್ಣೆ, ಕೊಲೆಸ್ಟರಾಲ್ ಕಡಿಮೆಯಿರುವ ಆಹಾರವನ್ನೇ ಸೂಚಿಸಲಾಯಿತು.[30,31]

ಹೀಗೆ, ಹಳೆ ಶಿಲಾಯುಗದ ಮನುಷ್ಯರು 70% ಮಾಂಸ, 30% ತರಕಾರಿ ತಿನ್ನುತ್ತಿದ್ದರೆ, ಕಳೆದ 50 ವರ್ಷಗಳಿಂದ ನಮ್ಮ ಆಹಾರವು ಶೇ. 70 ಪಾಲು ಧಾನ್ಯ, ಹಾಲು, ಹಣ್ಣುಗಳೆಂಬ ಸಸ್ಯಾಹಾರವಾಯಿತು, ಮಾಂಸ, ಮೀನು, ಮೊಟ್ಟೆ ಹಾಗೂ ತರಕಾರಿಗಳ ಪ್ರಮಾಣವು ಶೇ. 30 ಅಥವಾ ಅದಕ್ಕೂ ಕಡಿಮೆಯಾಯಿತು. ಕಡಿಮೆ ಕೊಬ್ಬಿನ ಆಹಾರದ ಬಗ್ಗೆ ಪ್ರಚಾರವು ಹೆಚ್ಚಿದಂತೆ ಕಡಿಮೆ ಕೊಬ್ಬಿನ ಹಾಲು, ಕಡಿಮೆ ಕೊಬ್ಬಿನ ಎಣ್ಣೆ ಇತ್ಯಾದಿಗಳು ಬಂದವು; ಮಾಂಸ ಬೇಡವೆಂದ ಮೇಲೆ ಬ್ರೆಡ್ಡು, ಬಿಸ್ಕತ್ತು, ಜೋಳದ ಫ್ಲೇಕ್ಸ್ ಇತ್ಯಾದಿ ಬಂದವು. ಇಂದು ಸುಮಾರು 80 ಸಾವಿರದಷ್ಟು ಸಂಸ್ಕರಿತ ಆಹಾರೋತ್ಪನ್ನಗಳು ಮಾರುಕಟ್ಟೆಯಲ್ಲಿದ್ದು, ಅವುಗಳಲ್ಲಿ 80%ರಷ್ಟು ಉತ್ಪನ್ನಗಳು ಕಡಿಮೆ ಕೊಬ್ಬು, ಹೆಚ್ಚು ಸಕ್ಕರೆಯುಳ್ಳದ್ದಾಗಿವೆ. ಇಂತಹ ಕಡಿಮೆ ಕೊಬ್ಬು-ಅಧಿಕ ಸಕ್ಕರೆಯ ತಿನಿಸುಗಳನ್ನು ತಯಾರಿಸುವ ಉದ್ಯಮವು ಇಂದು ವರ್ಷಕ್ಕೆ 4 ಲಕ್ಷ ಡಾಲರ್‌ಗಳ ವಹಿವಾಟು ನಡೆಸುವಷ್ಟು ಬೃಹತ್ತಾಗಿ ಬೆಳೆದಿದೆ!

ಒಟ್ಟಿನಲ್ಲಿ ಇಂದು ನಮ್ಮ ಆಹಾರವು ತಿರುಗುಮುರುಗಾಗಿದೆ; ನಾವು ವಿಕಾಸ ಹೊಂದುವಾಗಲೂ, ಆ ನಂತರದ 1,90,000 ವರ್ಷಗಳಲ್ಲೂ ತಿನ್ನುತ್ತಿದ್ದ ಹಲಬಗೆಯ ಮಾಂಸಾಹಾರ-ತರಕಾರಿಗಳನ್ನು ಕೆಟ್ಟದ್ದೆಂದೋ, ಸಿಗಲಾರದ್ದೆಂದೋ ತ್ಯಜಿಸಿದ್ದೇವೆ, ನಾವು ಆಗೆಲ್ಲ ತಿನ್ನದೇ ಇದ್ದ ಧಾನ್ಯಗಳು, ಸಕ್ಕರೆ, ಪಶುವಿನ ಹಾಲೆಂಬ ಸಸ್ಯಾಹಾರವನ್ನು ಅಮೃತವೆಂದೇ ಸೇವಿಸುತ್ತಿದ್ದೇವೆ. ಆಗ ಅಟ್ಟು ಉಣ್ಣದ ವಸ್ತುಗಳಿಲ್ಲದಂತೆ ಎಲ್ಲವನ್ನೂ ತಿನ್ನಬಲ್ಲವರಾಗಿದ್ದವರು ಈಗ ಸೀಮಿತ ಬಗೆಯ ಧಾನ್ಯ, ಹಣ್ಣು, ಮಾಂಸಗಳನ್ನು ಸೇವಿಸುವವರಾಗಿದ್ದೇವೆ. ಆಗ ಪ್ರಕೃತಿ ಕೊಟ್ಟ ಜೀವಂತ ಆಹಾರಗಳನ್ನು ಹುಡುಕಿ ತಿನ್ನುತ್ತಿದ್ದವರು, ಬೇಕಾದದ್ದನ್ನು ಸಾಕಿ-ಬೆಳೆಯುತ್ತಿದ್ದವರು, ಈಗ ಐದಾರು ಕಂಪೆನಿಗಳು ಕೊಟ್ಟ ನಿರ್ಜೀವ ಆಹಾರವನ್ನು ಮಾರುಕಟ್ಟೆ-ಮಾಲ್‌ಗಳಲ್ಲಿ ಹೆಕ್ಕಿ ತಿನ್ನುತ್ತಿದ್ದೇವೆ. ಇಂದಿನ ಮಕ್ಕಳಿಗಂತೂ ಸಿದ್ಧ ತಿನಿಸುಗಳೇ ಮುಖ್ಯ ಆಹಾರಗಳಾಗಿ, ಪಾರಂಪರಿಕ ಆಹಾರವಸ್ತುಗಳ ಪರಿಚಯವೇ ಇಲ್ಲವಾಗಿದೆ.

ಹಿಂದೆ ತಿನ್ನುತ್ತಿದ್ದ ಆಹಾರವು ನೈಸರ್ಗಿಕವಾಗಿ, ಜೀವಂತವಾಗಿ, ಕರುಳಲ್ಲಿ ನಿಧಾನಕ್ಕೆ ಸಾಗಿ, ಪೋಷಕಾಂಶಗಳನ್ನು ಒದಗಿಸಿ, ಸಂತೃಪ್ತಿಯನ್ನುಂಟು ಮಾಡಿ, ಹಸಿವನ್ನು ತಣಿಸುತ್ತಿದ್ದರೆ, ಇಂದಿನ ಆಹಾರವು ನಿರ್ಜೀವವಾಗಿ, ಕರುಳಲ್ಲಿ ವೇಗವಾಗಿ ಸಾಗಿ, ರುಚಿಯನ್ನಷ್ಟೇ ಹೆಚ್ಚಿಸಿ, ಸಂತೃಪ್ತಿಯನ್ನುಂಟು ಮಾಡದೆ, ಹಸಿವನ್ನು ಹೆಚ್ಚಿಸಿ, ಪೋಷಕಾಂಶಗಳಿಂದ ವಂಚಿಸುತ್ತಿದೆ. ಇಂತಹಾ ಆಧುನಿಕ ಆಹಾರವೇ ಇಂದು ಆಧುನಿಕ ರೋಗಗಳ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ದಂತಕ್ಷಯದಿಂದ ಮೂಳೆಸವೆತ-ಗಂಟುಬೇನೆಗಳು, ಬೊಜ್ಜು, ಮಧುಮೇಹ, ಮೇದಸ್ಸಿನ ಸಮಸ್ಯೆಗಳು, ಹೃದ್ರೋಗ, ಪಾರ್ಶ್ವವಾಯು, ರಕ್ತದ ಏರೊತ್ತಡ, ಪಾರ್ಕಿನ್‌ಸನ್ಸ್ ಕಾಯಿಲೆ, ಅಲ್ಝೀಮರ್ಸ್ ಕಾಯಿಲೆ ಇತ್ಯಾದಿಗಳು, ಬಗೆಬಗೆಯ ಕ್ಯಾನ್ಸರ್‌ಗಳು ಮುಂತಾದ ಆಧುನಿಕ ರೋಗಗಳು ಹೆಚ್ಚುತ್ತಿರುವುದಕ್ಕೆ, 8-10 ವಯಸ್ಸಿನ ಮಕ್ಕಳನ್ನೂ ಕಾಡತೊಡಗಿರುವುದಕ್ಕೆ ಆಧುನಿಕ ಆಹಾರವೇ ಕಾರಣ ಎನ್ನುವುದಕ್ಕೆ ಬಲವಾದ ಆಧಾರಗಳೀಗ ದೊರೆಯತೊಡಗಿವೆ.[32,33]

ಅತ್ತ, ಯಾವುದೇ ಸಂಸ್ಕರಿತ ತಿನಿಸುಗಳಾಗಲೀ ಸಾಕಷ್ಟು ಧಾನ್ಯಗಳಾಗಲೀ ದೊರೆಯದೆ, ತೀರಾ ವಂಚಿತರಾಗಿ, ಇಂದಿಗೂ ಹೊಲ-ಗದ್ದೆ-ಕಾಡುಗಳಲ್ಲಿ ಇಲಿ, ಹಾವು, ಇರುವೆ, ಏಡಿ, ಮೀನು ಇತ್ಯಾದಿಯಾಗಿ ಭೂಮಿ ತಾಯಿ ಕೊಟ್ಟ ಪ್ರೊಟೀನು-ಮೇದಸ್ಸು ಭರಿತವಾದ ಮೂಲಾಹಾರವನ್ನೇ ಹುಡುಕಿ ತಿನ್ನುತ್ತಿರುವ ಅದೆಷ್ಟೋ ದಲಿತರು, ಅಸ್ಪೃಶ್ಯರು ಹಾಗೂ ಮೂಲನಿವಾಸಿಗಳನ್ನು ಈ ಆಧುನಿಕ ರೋಗಗಳಾವುವೂ ತಟ್ಟುವುದಿಲ್ಲ ಎನ್ನುವ ಸತ್ಯವೂ ನಮ್ಮ ಕಣ್ಣ ಮುಂದಿದೆ.[20,34]

ಕನಕದಾಸರ ಶ್ರೀರಾಮ, ಇಂದ್ರ, ನಾರದ, ಗೌತಮ, ಕಪಿಲರು ಇಂದೆಲ್ಲಿ?

ಒಂದೆಡೆ ಹಳೆಯ, ಪರಂಪರಾಗತವಾದ, ಸುತ್ತಲಲ್ಲೇ ಲಭ್ಯವಿರುವ ಆಹಾರಗಳು, ಇನ್ನೊಂದೆಡೆ, ನಾವೇ ಉತ್ಪಾದಿಸಿ, ಸಂಸ್ಕರಿಸಿ ಸೇವಿಸುತ್ತಿರುವ ಆಧುನಿಕ ಆಹಾರ – ಇವುಗಳ ನಡುವೆ ಯಾವುದೊಳ್ಳೆಯದು ಎಂದು ನಿರ್ಧರಿಸುವುದೆಂತು? ಅಂಥ ತೀರ್ಪನ್ನು ನೀಡಲು ಕನಕದಾಸರ ಶ್ರೀರಾಮ, ಇಂದ್ರ, ನಾರದ, ಗೌತಮ, ಕಪಿಲರು ಇಂದೆಲ್ಲಿ ಸಿಗಬೇಕು? ನಮ್ಮ ಸರಕಾರಗಳು, ನ್ಯಾಯಾಲಯಗಳು, ವೈದ್ಯರುಗಳು, ಮಾಧ್ಯಮಗಳು ಎಲ್ಲವೂ ಪ್ರಭಾವಿತವಾದಂತಿರುವಾಗ ನ್ಯಾಯಕ್ಕೆಲ್ಲಿ ಹೋಗಬೇಕು?

ಪ್ರೊಟೀನು-ಮೇದಸ್ಸುಭರಿತವಾದ ಮೂಲಾಹಾರ ಹಾಗೂ ಪಶು ಹಾಲು-ಸಕ್ಕರೆ ಭರಿತವಾದ ಆಧುನಿಕ, ಸಂಸ್ಕರಿತ ಆಹಾರಗಳಲ್ಲಿ ಯಾವುದು ಹೆಚ್ಚು ರೋಗಕಾರಕವೆನ್ನುವುದಕ್ಕೆ ಬಹು ಹಿಂದಿನಿಂದಲೂ ಸಾಕಷ್ಟು ಸಾಕ್ಷ್ಯಾಧಾರಗಳಿದ್ದವು. ಆನ್ಸೆಲ್ ಕೀಸ್ ಹಾಗೂ ಜಾನ್ ಯುಡ್ಕಿನ್ ಅವರುಗಳು ಐವತ್ತರ ದಶಕದ ಮಧ್ಯದಲ್ಲಿ ತದ್ವಿರುದ್ಧವಾದ ನಿಲುವುಗಳನ್ನು ವ್ಯಕ್ತ ಪಡಿಸಿದಾಗಲೂ ಈ ಸಾಕ್ಷ್ಯಗಳು ಲಭ್ಯವಿದ್ದವು. ಆಧುನಿಕ ರೋಗಗಳಿಗೆ ಪ್ರೊಟೀನು-ಮೇದಸ್ಸುಗಳು ಕಾರಣವೆಂಬ ಕೀಸ್ ಸಿದ್ಧಾಂತಕ್ಕೆ ಸಾಕಷ್ಟು ಆಧಾರಗಳಿಲ್ಲವೆಂದು ಅಮೆರಿಕದ ಹೃದ್ರೋಗ ಸಂಘವೇ ಒಪ್ಪಿಕೊಂಡಿತ್ತು. ಅದೇ ಸಮಯದಲ್ಲಿ, ಆಧುನಿಕ ರೋಗಗಳಿಗೆ ಸಕ್ಕರೆಯೇ ಮುಖ್ಯ ಕಾರಣ ಎನ್ನುವುದಕ್ಕೆ ಯುಡ್ಕಿನ್ ಒದಗಿಸಿದ ಆಧಾರಗಳಲ್ಲದೆ, ಇನ್ನೂ ಹಲವು ಲಭ್ಯವಿದ್ದವು. ಆದರೆ ಸಕ್ಕರೆಯೇ ಕಾರಣವೆಂಬ ಆಧಾರಗಳನ್ನೆಲ್ಲ ಕಡೆಗಣಿಸಿ, ಮೇದಸ್ಸನ್ನೂ, ಕೊಲೆಸ್ಟರಾಲನ್ನೂ ದೂಷಿಸಲಾಯಿತು. ಅಮೆರಿಕದ ಸರಕಾರವು ಮೇದಸ್ಸನ್ನೇ ಹಳಿದು, ಸಕ್ಕರೆಯ ಪರವಹಿಸಿತು; ಮಾಂಸ, ಮೊಟ್ಟೆಗಳೇ ಆಧುನಿಕ ರೋಗಗಳಿಗೆ ಕಾರಣವೆಂದು ದೂರಿ, ಸಕ್ಕರೆಭರಿತ ಸಸ್ಯಾಹಾರವೇ ಆರೋಗ್ಯಕರವೆಂಬ ನೀತಿಯನ್ನು ಮುಂದೊತ್ತಿತು.

ನಂತರದಲ್ಲೂ, ಆಧುನಿಕ ರೋಗಗಳಿಗೆ ಸಕ್ಕರೆಯ ಅತಿ ಸೇವನೆಯೇ ಕಾರಣವೆಂದ ವರದಿಗಳನ್ನು ಮಟ್ಟ ಹಾಕಲಾಯಿತು. ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಆಹಾರ ಮತ್ತು ಕೃಷಿ ಸಂಸ್ಥೆಗಳ ತಜ್ಞರ ಜಂಟಿ ಸಮಿತಿಯು 2003ರಲ್ಲಿ ಪ್ರಕಟಿಸಿದ 916ನೇ ತಾಂತ್ರಿಕ ವರದಿಯಲ್ಲಿ ಬೊಜ್ಜಿನಂತಹಾ ಆಧುನಿಕ ಕಾಯಿಲೆಗಳ ಹೆಚ್ಚಳಕ್ಕೆ ಸಕ್ಕರೆ ಮತ್ತು ಸಕ್ಕರೆಯುಕ್ತ ಪೇಯಗಳು ಹಾಗೂ ತಿನಿಸುಗಳ ಅತಿಸೇವನೆಯೇ ಕಾರಣವೆಂದು ಸ್ಪಷ್ಟವಾಗಿ ಹೇಳಲಾಯಿತು.[35] ಆದರೆ ಅಮೆರಿಕದ ಸಕ್ಕರೆ ಸಂಘ, ರಾಷ್ಟ್ರೀಯ ಲಘು ಪೇಯ ಸಂಘ, ಹಾಗೂ ಬುಷ್ ಆಡಳಿತಗಳು ಇದನ್ನು ವಿರೋಧಿಸಿದವು, ವಿಶ್ವ ಆರೋಗ್ಯ ಸಂಸ್ಥೆಗೆ ಅಮೆರಿಕದ $406 ದಶಲಕ್ಷ ವಾರ್ಷಿಕ ನೆರವನ್ನು ನಿಲ್ಲಿಸುವ ಬೆದರಿಕೆಯೊಡ್ಡಿದವು. ಜಾರ್ಜ್ ಬುಷ್ ಆಡಳಿತದಲ್ಲಿ ಆರೋಗ್ಯ ಹಾಗೂ ಮಾನವ ಸೇವೆಗಳ ವಿಭಾಗದಲ್ಲಿ ವಿಶೇಷ ಸಹಾಯಕರಾಗಿದ್ದ ವಿಲಿಯಂ ಸ್ಟೀಗರ್ ಅವರು 2004, ಜನವರಿ 5ರಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕರಿಗೆ ಪತ್ರವನ್ನು ಬರೆದು, ಈ ವರದಿಯು ಅಮೆರಿಕ ಸರಕಾರದ ಆಹಾರದ ನೀತಿಗೆ, ಹಾಗೂ ಲಭ್ಯ ವೈಜ್ಞಾನಿಕ ಸಾಕ್ಷ್ಯಗಳ ಬಗ್ಗೆ ಅಮೆರಿಕ ಸರಕಾರದ ವ್ಯಾಖ್ಯಾನಗಳಿಗೆ ತಾಳೆಯಾಗುವುದಿಲ್ಲ ಎಂದು ಕಟುವಾಗಿಯೇ ತಿಳಿಸಿದರು. ಇದರೊಂದಿಗೆ, ಸಕ್ಕರೆಯ ಅಪಾಯಗಳ ಬಗ್ಗೆ 2003ರಷ್ಟು ಹಿಂದೆಯೇ ವಿಶ್ವ ಆರೋಗ್ಯ ಸಂಸ್ಥೆಯು ನೀಡಿದ್ದ ಎಚ್ಚರಿಕೆಯು ಅಲ್ಲಿಗೇ ಮುಚ್ಚಿ ಹೋಯಿತು.[36,37]

ಆ ನಂತರ ಇನ್ನಷ್ಟು ವರದಿಗಳು ಪ್ರಕಟವಾಗಿವೆ; ಅಮೆರಿಕ ಸರಕಾರವು ಮೇದಸ್ಸನ್ನು ಕಡಿತಗೊಳಿಸಿ, ಸಕ್ಕರೆಯುಕ್ತ ಸಸ್ಯಾಹಾರವನ್ನು ಹೆಚ್ಚು ತಿನ್ನಬೇಕೆಂದು ಸೂಚಿಸಿದ ಬಳಿಕ ಈ ಮೂರು ದಶಕಗಳಲ್ಲಿ ಬೊಜ್ಜು ಹಾಗೂ ಮಧುಮೇಹಗಳು ಮೂರು ಪಟ್ಟು ಹೆಚ್ಚಾಗಿವೆ [38-40], ಮಾತ್ರವಲ್ಲ, ಇವಕ್ಕೆ ಸಕ್ಕರೆಯ ಅತಿ ಸೇವನೆಯೇ ನೇರವಾದ ಕಾರಣ ಎನ್ನುವುದನ್ನು ದೃಢ ಪಡಿಸಿವೆ. ಸಕ್ಕರೆಯಲ್ಲಿರುವ ಹಾಗೂ ಹಣ್ಣುಗಳಲ್ಲಿರುವ ಫ್ರಕ್ಟೋಸ್ ನಮ್ಮ ಉಪಾಪಚಯದಲ್ಲಿ ಸಮಸ್ಯೆಗಳನ್ನುಂಟು ಮಾಡಿ, ರಕ್ತದಲ್ಲಿ ಟ್ರೈಗ್ಲಿಸರೈಡ್, ಎಲ್‌ಡಿಎಲ್‌ ಕೊಲೆಸ್ಟರಾಲ್, ಯೂರಿಕಾಮ್ಲಗಳನ್ನು ಹೆಚ್ಚಿಸುತ್ತದೆ, ಎಚ್‌ಡಿಎಲ್‌ ಕೊಲೆಸ್ಟರಾಲ್ ಪ್ರಮಾಣವನ್ನು ಇಳಿಸುತ್ತದೆ, ಇನ್ಸುಲಿನ್ ರೋಧವನ್ನೂ, ಉರಿಯೂತವನ್ನೂ ಹೆಚ್ಚಿಸುತ್ತದೆ ಎಂದು ಹಲವು ಅಧ್ಯಯನಗಳು ತೋರಿಸಿವೆ.[32,33] ಹೀಗೆ, ಸಸ್ಯಾಹಾರದಲ್ಲಿರುವ ಫ್ರಕ್ಟೋಸ್ ಹಾಗೂ ಗ್ಲೂಕೋಸ್ ಅತಿ ಸೇವನೆಯಿಂದ ಬೊಜ್ಜು, ಮಧುಮೇಹ, ರಕ್ತದ ಏರೊತ್ತಡ, ಹೃದ್ರೋಗ, ಪಾರ್ಶ್ವವಾಯು, ಯಕೃತ್ತಿನಲ್ಲಿ ಕೊಬ್ಬು ಮುಂತಾದ ಸಮಸ್ಯೆಗಳಿಗೆ ದಾರಿಯಾಗುತ್ತದೆ ಎನ್ನುವುದೀಗ ಸ್ಪಷ್ಟವಾಗತೊಡಗಿದೆ. ಅಷ್ಟೇ ಅಲ್ಲ, ಆತಂಕ, ಖಿನ್ನತೆ, ಇಚ್ಛಿತ್ತ ವಿಕಲತೆ, ಗಮನ ಕೊರತೆ ಮುಂತಾದ ಮಾನಸಿಕ ಸಮಸ್ಯೆಗಳಿಗೂ ಧಾನ್ಯಗಳು, ಸಂಸ್ಕರಿತ ಆಹಾರಗಳು, ಸಕ್ಕರೆ, ಸಿಹಿ ತಿನಿಸುಗಳು ಹಾಗೂ ಲಘು ಪೇಯಗಳು ಕಾರಣವಾಗುತ್ತವೆ ಎನ್ನುವುದಕ್ಕೆ ಹಲವು ಆಧಾರಗಳು ಲಭ್ಯವಾಗಿವೆ.[41-54] ಧಾನ್ಯ ಹಾಗೂ ಹಣ್ಣುಗಳಲ್ಲಿರುವ ಸಕ್ಕರೆಯು ಶರಾಬಿನ ಮೂಲವಾಗಿದ್ದು, ಶರಾಬಿನಂತೆಯೇ ವರ್ತಿಸುತ್ತದೆ; ಹಸಿವನ್ನು ಹೆಚ್ಚಿಸಿ ಚಟವನ್ನುಂಟು ಮಾಡುವುದಷ್ಟೇ ಅಲ್ಲದೆ, ಮನಸ್ಸಿನ ಮೇಲೂ, ಯಕೃತ್ತಿನ ಮೇಲೂ ಶರಾಬಿನಂತೆಯೇ ಪರಿಣಾಮ ಬೀರುತ್ತದೆ ಎನ್ನಲಾಗುತ್ತಿದೆ.[55,56] ಮಧುಪಾನವಾದೆಯಲಾ ದುರಾತ್ಮಕ, ನಿನ್ನ ಸೇವಿಸಿದ ದಾನವರು, ಮಾನವ ಕಿರಾತರು ಜ್ಞಾನವಳಿದು ವಿಕಾರದಲಿ ಮತಿಹೀನರಾದರು ಎಂದು ಕನಕದಾಸರು ರಾಗಿಯ ಕುರಿತು ಹೇಳಿದ್ದರಾದರೂ, ರಾಗಿಯಷ್ಟೇ ಅಲ್ಲ, ಇನ್ನುಳಿದ ಧಾನ್ಯಗಳೂ, ಹಣ್ಣುಗಳೂ, ಸಕ್ಕರೆಯೂ ಹೀಗೆ ಶರಾಬಿನಂತೆಯೇ ವರ್ತಿಸುತ್ತವೆ!

ಇದಕ್ಕಿದಿರಾಗಿ, ಸಕ್ಕರೆ, ಹಣ್ಣಿನ ಉತ್ಪನ್ನಗಳು ಹಾಗೂ ಧಾನ್ಯಗಳೆಂಬ ಸಸ್ಯಾಹಾರದ ಸೇವನೆಯನ್ನು ಕಡಿತಗೊಳಿಸಿದರೆ ರಕ್ತದ ಗ್ಲೂಕೋಸ್ ಇಳಿಕೆಯಾಗುತ್ತದೆ, ಮಧುಮೇಹ ನಿಯಂತ್ರಿಸಲ್ಪಡುತ್ತದೆ, ಟ್ರೈಗ್ಲಿಸರೈಡ್, ಎಲ್‌ಡಿಎಲ್‌ ಕೊಲೆಸ್ಟರಾಲ್, ಯೂರಿಕಾಮ್ಲಗಳೂ ಇಳಿಯುತ್ತವೆ, ಎಚ್‌ಡಿಎಲ್‌ ಕೊಲೆಸ್ಟರಾಲ್ ಏರುತ್ತದೆ, ರಕ್ತದೊತ್ತಡ ಹಾಗೂ ದೇಹ ತೂಕಗಳೂ ಇಳಿಯುತ್ತವೆ ಎಂದು ಹಲವು ಅಧ್ಯಯನಗಳು ತೋರಿಸಿವೆ.[57] ಅತ್ತ, ಮೇದಸ್ಸು ಹಾಗೂ ಪ್ರೊಟೀನುಗಳಿಂದ ಆಧುನಿಕ ರೋಗಗಳು ಹೆಚ್ಚುತ್ತವೆನ್ನುವುದಕ್ಕೆ ಐವತ್ತರ ದಶಕದ ಮಧ್ಯದಿಂದ ಇಂದಿನವರೆಗಿನ ಈ 60 ವರ್ಷಗಳಲ್ಲಿ ಯಾವುದೇ ಪ್ರಬಲ ಆಧಾರಗಳೂ ದೊರಕಿಲ್ಲ.[58-66] ಬದಲಿಗೆ, ಮಾಂಸ, ಏಡಿ, ಮೀನು, ಮೊಟ್ಟೆ, ತರಕಾರಿಗಳಂತಹ ಮೂಲಾಹಾರವನ್ನೇ ತಿಂದು ಬದುಕುಳಿದಿರುವ ಜನಸಮುದಾಯಗಳಲ್ಲಿ ಆಧುನಿಕ ರೋಗಗಳಿಲ್ಲ ಎನ್ನುವುದು ಸುಸ್ಪಷ್ಟವಾಗತೊಡಗಿದೆ![20,34,57]

ಬಡವರ ಬಲ್ಲಿದರನಾರೈದು ಸಲಹುವನಿವಗೆ ಸರಿಯುಂಟೆ?

ಧನಾಢ್ಯರನು ಬೆಂಬತ್ತಿ ನಡೆವ ಅನ್ನ ಹಾಗೂ ಶೂದ್ರಾನ್ನಗಳ ನಡುವೆ ಶೂದ್ರಾನ್ನವೇ ಮೇಲೆಂದು ಕನಕದಾಸರ ಶ್ರೀರಾಮಚಂದ್ರನು ಆರೇ ತಿಂಗಳಲ್ಲಿ ತೀರ್ಪು ನೀಡಿದರೆ, ಪ್ರೊಟೀನು-ಮೇದಸ್ಸು ಭರಿತ ಮೊಟ್ಟೆ-ಮೀನು- ಮಾಂಸಾಹಾರ ಹಾಗೂ ಧಾನ್ಯ-ಹಾಲು-ಸಕ್ಕರೆಗಳೆಂಬ ಸಸ್ಯಾಹಾರಭರಿತ ಆಧುನಿಕ ಆಹಾರಗಳಲ್ಲಿ ಯಾವುದು ಒಳ್ಳೆಯದೆನ್ನುವ ತೀರ್ಪಿಗೆ ಆರು ದಶಕಗಳ ಕಾಲ ನಾವು ಕಾಯಬೇಕಾಯಿತು. ಕೊನೆಗೂ ಸತ್ಯಕ್ಕೆ ಜಯವಾಗುವ ಲಕ್ಷಣಗಳು ಗೋಚರಿಸತೊಡಗಿದ್ದು, ಮೇದಸ್ಸು ರೋಗಕಾರಕವೆಂದು ಆಧಾರವಿಲ್ಲದೇ ಹೇಳಿದ್ದ ಅಮೆರಿಕದ ಸರಕಾರವು ಇದೀಗ ತನ್ನ ನಿಲುವನ್ನು ಬದಲಿಸಿ, ಸಕ್ಕರೆಯೇ ಎಲ್ಲ ರೋಗಗಳಿಗೆ ಕಾರಣವೆಂದು ಹೇಳಿದೆ. ಹೀಗೆ, ಕನಕದಾಸರ ಶ್ರೀರಾಮನ ಒಡ್ಡೋಲಗದಲ್ಲಿ ‘ಬಡವರ ಬಲ್ಲಿದರನಾರೈದು ಸಲಹುವನಿವಗೆ ಸರಿಯುಂಟೆ’ ಎಂದು ಹೇಳಿದ್ದಂತೆ, ಬಡವರು ತಿನ್ನುತ್ತಿರುವ ಮಾಂಸ-ಏಡಿ-ಮೀನು-ತರಕಾರಿಗಳ ಮೂಲಾಹಾರವೇ ಆರೋಗ್ಯಕರವೆನ್ನುವುದು ಮತ್ತೆ ಸಾಬೀತಾಗಿದೆ, ‘ಬಲ್ಲಿದರ ಪತಿಕರಿಸುವನು ಅವನಲ್ಲಿ ಸಾರವ ಕಾಣೆ’ ಎಂದು ಹೇಳಿದ್ದಂತೆ, ಶ್ರೀಮಂತರಿಗಾಗಿ ಕಂಪೆನಿಗಳು ತಯಾರಿಸಿ ಮಾರುತ್ತಿರುವ ಆಧುನಿಕ ಆಹಾರವು ನಿಸ್ಸಾರವೆಂದೂ, ರೋಗಕಾರಕವೆಂದೂ ಮತ್ತೆ ಎಲ್ಲರೂ ಒಪ್ಪಿಕೊಳ್ಳುವಂತಾಗಿದೆ.

20144309255586673_8ಬಡವರ ಮೂಲಾಹಾರವೇ ಆರೋಗ್ಯಕರ, ಶ್ರೀಮಂತರ ಆಧುನಿಕ ಆಹಾರವೇ ಹಾನಿಕರ ಎಂಬ ಈ ಅಂತಿಮ ತೀರ್ಪನ್ನು ಅಮೆರಿಕ ಸರಕಾರವು 2015ರ ಫೆಬ್ರವರಿಯಲ್ಲಿ ಪ್ರಕಟಿಸಿರುವ ಹೊಸ ಆಹಾರ ಮಾರ್ಗದರ್ಶಿಯ ಕರಡಿನಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ. ಆಹಾರದಲ್ಲಿರುವ ಕೊಲೆಸ್ಟರಾಲ್ ಪ್ರಮಾಣಕ್ಕೂ, ರಕ್ತದ ಕೊಲೆಸ್ಟರಾಲ್ ಪ್ರಮಾಣಕ್ಕೂ ಸಂಬಂಧವಿಲ್ಲ, ಆಹಾರದ ಕೊಲೆಸ್ಟರಾಲ್ ಪ್ರಮಾಣವನ್ನು ದಿನಕ್ಕೆ 300 ಮಿಗ್ರಾಂಗೆ ಮಿತಿಗೊಳಿಸಬೇಕೆಂದು ಈ ಹಿಂದೆ ನೀಡಿದ್ದ ಸಲಹೆಯನ್ನು ಇನ್ನು ಮುಂದೊತ್ತುವುದಿಲ್ಲ, ಕೊಲೆಸ್ಟರಾಲ್ ಅನ್ನು ಹೆಚ್ಚು ತಿನ್ನುವುದರಿಂದ ಆತಂಕವಿಲ್ಲ ಎಂದು ಆ ಕರಡಿನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಹಾಗೆಯೇ, ಸಕ್ಕರೆಭರಿತ ತಿನಿಸುಗಳು ಹಾಗೂ ಪೇಯಗಳು ಹೆಚ್ಚಿನೆಲ್ಲಾ ಆಧುನಿಕ ರೋಗಗಳಿಗೆ ಕಾರಣವೆನ್ನುವುದಕ್ಕೆ ಪ್ರಬಲ ಆಧಾರಗಳಿರುವುದರಿಂದ ಸಕ್ಕರೆ ಹಾಗೂ ಸಂಸ್ಕರಿತ ಧಾನ್ಯಗಳ ಸೇವನೆಯನ್ನು ಮಿತಿಗೊಳಿಸಬೇಕೆಂದೂ ಅದರಲ್ಲಿ ಹೇಳಲಾಗಿದೆ.[66]

ಕನಕದಾಸರು ಶ್ರೀಮಂತರ ಆಹಾರವನ್ನು ‘ದೀನರಲಿ ದಾರಿದ್ರ ಜನದಲಿ ನೀನು ನಿರ್ದಯನೆಂದೆವಲ್ಲದೆ, ಹೀನಗಳೆದವರಲ್ಲ ನಿನ್ನನು ನಾವು ಸಭೆಯೊಳಗೆ’ ಎಂದರು, ತಮ್ಮ ಹೃದಯ ವೈಶಾಲ್ಯತೆಯನ್ನು ಮೆರೆದರು. ಆದರೆ ನಾವಿಂದು ಹಾಗೆ ಮಾಡಬೇಕಾಗಿಲ್ಲ; ಕೋಟಿಗಟ್ಟಲೆ ಜನರಿಗೆ, ಅದರಲ್ಲೂ ಮಕ್ಕಳಿಗೆ, ಬಗೆಬಗೆಯ ರೋಗಗಳನ್ನುಂಟು ಮಾಡುತ್ತಿರುವ ಆಧುನಿಕ ಆಹಾರವನ್ನು ಖಂಡಿತಕ್ಕೂ ಹೀನಗಳೆಯುವೆವು ನಾವು ಸಭೆಯೊಳಗೆ. ಕೇಂದ್ರ ಸರಕಾರದ ಆಹಾರ ಸುರಕ್ಷೆ ಹಾಗೂ ಮಾನಕಗಳ ಪ್ರಾಧಿಕಾರವು 2015, ಅಕ್ಟೋಬರ್ 14ರಂದು ಪ್ರಕಟಿಸಿರುವ ಶಾಲಾ ಮಕ್ಕಳ ಆಹಾರ ಮಾರ್ಗದರ್ಶಿಯ ಕರಡಿನಲ್ಲಿ ಆಧುನಿಕ ಆಹಾರವನ್ನು ಹೀನಗಳೆಯಲಾಗಿದೆ; ಸಕ್ಕರೆಭರಿತ ತಿನಿಸುಗಳು ಹಾಗೂ ಸಂಸ್ಕರಿತ ಧಾನ್ಯಗಳಿಂದ ತಯಾರಿಸಿದ ತಿನಿಸುಗಳನ್ನು ಕೆಂಪು ಪಟ್ಟಿಗೆ ಸೇರಿಸಲಾಗಿದೆ, ಮಕ್ಕಳಿಗೆ ಅವು ದೊರೆಯದಂತೆ ಮಾಡಬೇಕೆಂದು ಹೇಳಲಾಗಿದೆ. ಬದಲಿಗೆ, ಮಾಂಸ, ಮೊಟ್ಟೆ, ಮೀನು, ತರಕಾರಿಗಳು ಹಾಗೂ ಇಡೀ ಧಾನ್ಯಗಳ ಆಹಾರವನ್ನೇ ನೀಡಬೇಕೆಂದು ಸಲಹೆ ನೀಡಲಾಗಿದೆ.[67]

ಒಟ್ಟಿನಲ್ಲಿ, ಪೌಷ್ಟಿಕವಾದ, ಆರೋಗ್ಯಕ್ಕೆ ಪೂರಕವಾದ ಆಹಾರವು ಯಾವುದೆಂದು ಎಲ್ಲರಿಗೂ ಸ್ಪಷ್ಟವಾಗಬೇಕು, ಮಾತ್ರವಲ್ಲ, ಎಲ್ಲರಿಗೂ ದೊರೆಯುವಂತಾಗಬೇಕು; ಅದಕ್ಕಿರುವ ಆರ್ಥಿಕ, ಸಾಮಾಜಿಕ, ಧಾರ್ಮಿಕ, ರಾಜಕೀಯ ಅಡ್ಡಿ-ಆತಂಕಗಳೆಲ್ಲವೂ ನಿವಾರಣೆಯಾಗಬೇಕು. ಕನಕದಾಸರು ತಮ್ಮ ರಾಮಧಾನ್ಯ ಚರಿತ್ರೆಯಲ್ಲಿ ಬಡವರ ಆಹಾರವನ್ನು ಗೆಲ್ಲಿಸಿ, ಶ್ರೀಮಂತರ ಆಹಾರವನ್ನೂ, ಆಚರಣೆಗಳನ್ನೂ ಅಣಕಿಸಿದ್ದರೆ, ಬುದ್ಧ, ಬಸವಣ್ಣ, ವಿವೇಕಾನಂದರಂತಹ ಮಾನವತಾವಾದಿಗಳೆಲ್ಲರೂ ಪೌಷ್ಟಿಕವಾದ ಆಹಾರದ ಸೇವನೆಯನ್ನು ಬೆಂಬಲಿಸಿದ್ದರು. ಎಡದ ಕೈಯಲಿ ಕತ್ತಿ, ಬಲದ ಕೈಯಲಿ ಮಾಂಸ, ಬಾಯಲ್ಲಿ ಸುರೆಯ ಗಡಿಗೆ, ಕೊರಳಲ್ಲಿ ದೇವರಿರಲು, ಅವರ ಲಿಂಗನೆಂಬೆ, ಸಂಗನೆಂಬೆ, ಕೂಡಲಸಂಗಮದೇವಾ, ಅವರ ಮುಖಲಿಂಗಿಗಳೆಂಬೆನು ಎಂದು ಬಸವಣ್ಣನವರು ಬಡವರ ಆಹಾರಕ್ರಮಕ್ಕೆ ಸಹಾನುಭೂತಿ ವ್ಯಕ್ತಪಡಿಸಿದ್ದರು.[68] ರಾಜಸಿಕ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ಮಾಂಸಾಹಾರವೊಂದೇ ದಾರಿಯಾಗಿದೆ, ಹಗಲಿರುಳು ದುಡಿಯುವ ಜನರನ್ನು ಸಸ್ಯಾಹಾರಿಗಳಾಗುವಂತೆ ಬಲಾತ್ಕರಿಸಿದರೆ ದೇಶದ ಸ್ವಾತಂತ್ರ್ಯವೇ ನಾಶವಾಗುತ್ತದೆ ಎಂದು ವಿವೇಕಾನಂದರು ಎಚ್ಚರಿಸಿದ್ದರು.[69] ಇನ್ನಾದರೂ ನಮ್ಮ ಜನರೆಲ್ಲರಿಗೂ ಆರೋಗ್ಯಕ್ಕೆ ಪೂರಕವಾದ ಊಟ ದೊರೆಯಲಿ, ಅವರು ಬಯಸಿದ್ದನ್ನು ತಿನ್ನುವ ಸ್ವಾತಂತ್ರ್ಯವಿರಲಿ.

ಆಕರಗಳ: 

 1. ಕನಕದಾಸರು. ರಾಮಧಾನ್ಯ ಚರಿತ್ರೆ. (ಸಂ). ದೇಜಗೌ. ಪ್ರಕಾಶಕರು: ಡಿವಿಕೆ ಮೂರ್ತಿ, ಮೈಸೂರು.
 2. Brown MD, Hosseini SH, Torroni A et al. mtDNA Haplogroup X: An Ancient Link between Europe/Western Asia and North America? The American Journal of Human Genetics. December 1998;63(6):1852–1861.
 3. Wallace DC, Brown MD, Lott MT. Mitochondrial DNA variation in human evolution and disease. 1999;238:211–230.
 4. Underhill1 PA, Shen P, Lin AA et al. Y chromosome sequence variation and the history of human populations. Nature Genetics 2000;26:358-361.
 5. Behar DM, Rosset S, Blue-Smith J et al. The Genographic Project public participation mitochondrial DNA database. PLoS Genet 2007;3:e104.
 6. Wade N. The Human Family Tree: 10 Adams and 18 Eves. The New York Times. May 2, 2000. Available at http://partners.nytimes.com/library/national/science/050200sci-genetics-evolution.html
 7. Rosenberg NA, Pritchard JK, Weber JL et al. Genetic Structure of Human Populations. 2002;298(5602):2381-2385. Available at https://web.stanford.edu/group/rosenberglab/papers/popstruct.pdf
 8. Jorde LB, Wooding SP. Genetic variation, classification and ‘race’. Nature Genetics. 2004;36:S28-S33.
 9. Braun DR et al. Early hominin diet included diverse terrestrial and aquatic animals 1.95 Ma in East Turkana, Kenya. 2010;107(2):10002-10007. Available at http://www.pnas.org/content/107/22/10002.full
 10. Steele TE. A unique hominin menu dated to 1.95 million years ago. 2010;107(24):10771-10772. Available at http://www.pnas.org/content/107/24/10771.full
 11. Cordain L, Miller JB, Eaton SB et al. Plant-animal subsistence ratios and macronutrient energy estimations in worldwide hunter-gatherer diets. Am J Clin Nutr. 2000;71(3):682-92. Available at http://ajcn.nutrition.org/content/71/3/682.long
 12. Diamond J. Evolution, consequences and future of plant and animal domestication. 2002;418:700-707. Available at http://www.nature.com/nature/journal/v418/n6898/full/nature01019.html
 13. Driscoll CA, Macdonald DW, O’Brien SJ. From wild animals to domestic pets, an evolutionary view of domestication. 2009;106(Suppl. 1):9971-9978. Available at http://www.pnas.org/content/106/Supplement_1/9971.full
 14. Hayden B, Canuel N, Shanse J. What Was Brewing in the Natufian? An Archaeological Assessment of Brewing Technology in the Epipaleolithic. Journal of Archaeological Method and Theory. 2013;20(1):102-150.
 15. Guerra-Doce E. The Origins of Inebriation: Archaeological Evidence of the Consumption of Fermented Beverages and Drugs in Prehistoric Eurasia. Journal of Archaeological Method and Theory. 2015;22(3):751-782.
 16. Symposium: Did man once live by beer alone? American Anthropologist. 1953;55(4):515–526.
 17. Curry A. Archaeology: The milk revolution. 2013;500:20–22.
 18. Allam AH, Thompson RC, Wann LS et al. Computed Tomographic Assessment of Atherosclerosis in Ancient Egyptian Mummies. 2009;302(19):2091-2094. Available at http://jama.ama-assn.org/cgi/content/full/302/19/2091-a
 19. Dhillon A. In India, caste system ensures you are what you eat. Available at http://www.scmp.com/magazines/post-magazine/article/1558061/you-are-what-you-eat
 20. Pallavi A. Against the grain. Down to Earth. Oct 31, 2008.
 21. Shafi S. In Pictures: The ‘rat eaters’ of India: Musahar community in Bihar’s Darbhanga district still live in extreme poverty and face social stigma. Al Jazeera. April 30, 2014. Available at http://www.aljazeera.com/indepth/inpictures/2014/04/pictures-rat-eaters-india-201443081544438226.html
 22. FAO, IFAD and WFP. 2015. The State of Food Insecurity in the World 2015. Meeting the 2015 international hunger targets: taking stock of uneven progress. Rome, FAO.
 23. Keys A, Anderson JT, Fidanza F, Keys MH, Swahnt B. Effects of Diet on Blood Lipids in Man: Particularly Cholesterol and Lipoproteins. Clinical Chemistry.1955;1(1):34-52. Available at http://clinchem.org/content/1/1/34.full.pdf
 24. Yudkin J. Diet and coronary thrombosis hypothesis and fact. 1957;273:155-62.
 25. Yudkin J. Dietary fat and dietary sugar in relation to ischaemic heart-disease and diabetes. 1964;2:4-5.
 26. Yudkin J, Roddy J. Levels Of Dietary Sucrose In Patients With Occlusive Atherosclerotic Disease. 1964;2(7349):6–8.
 27. Yudkin J. Evolutionary and Historical Changes in Dietary Carbohydrates. The American Journal of Clinical Nutrition. 1967;20(2):108-115.
 28. Grant WB. Saturated fat is not the major issue. 2013;347:f6340 Available at http://www.bmj.com/content/347/bmj.f6340/rr/669078
 29. Page IH, Allen EV, Chamberlain FL, Keys A et al. Dietary Fat and Its Relation to Heart Attacks and Strokes. Report by the Central Committee for Medical and Community Program of the American Heart Association. 1961;23:133-136. Available at http://circ.ahajournals.org/content/23/1/133.full.pdf+html
 30. US Gov. Nutrition and Your Health: Dietary Guidelines for Americans. Appendix G-5: History of the Dietary Guidelines for Americans. Available at http://gov/dietaryguidelines/dga2005/report/html/G5_History.htm
 31. Taubes G. Nutrition. The soft science of dietary fat. 2001;291(5513):2536-45. At http://garytaubes.com/wp-content/uploads/2011/08/Science-The-soft-science-of-dietary-fat-21.pdf
 32. Tappy L, Lê KA. Metabolic effects of fructose and the worldwide increase in obesity. Physiol Rev. 2010;90(1):23-46. Available at http://physrev.physiology.org/content/90/1/23.long
 33. Lim JS, Mietus-Snyder M, Valente A, Schwarz JM, Lustig RH. The role of fructose in the pathogenesis of NAFLD and the metabolic syndrome. Nature Reviews Gastroenterology & Hepatology. 2010;7:251-264.
 34. Lindeberg S. Paleolithic diets as a model for prevention and treatment of western disease. J. Hum. Biol. 2012;24(2):110–115. Available at http://onlinelibrary.wiley.com/doi/10.1002/ajhb.22218/full
 35. Joint WHO/FAO Expert Consultation on Diet, Nutrition and the Prevention of Chronic Diseases (2002: Geneva, Switzerland) Diet, nutrition and the prevention of chronic diseases: report of a joint WHO/FAO expert consultation, Geneva, 28 January – 1 February 2002. (WHO technical report series ; 916) Available at http://apps.who.int/iris/bitstream/10665/42665/1/WHO_TRS_916.pdf
 36. US government rejects WHO’s attempts to improve diet. BMJ 2004;328:1
 37. Leaked letter of Steiger W. Available at http://www.commercialalert.org/bushadmincomment.pdf
 38. Office of the Assistant Secretary for Planning and Evaluation. Facts and Figures on Overweight and Obesity. US Dept. of Health and Human Services. At http://aspe.hhs.gov/health/blueprint/scope.shtml
 39. Prevalence of Overweight, Obesity, and Extreme Obesity Among Adults: United States Trends 1960-1962 Through 2007 – 2008. At http://www.cdc.gov/NCHS/data/hestat/obesity_adult_07_08/obesity_adult_07_08.pdf
 40. Prevalence of Obesity Among Children and Adolescents: United States, Trends 1963-1965 Through 2007-2008. At http://www.cdc.gov/nchs/data/hestat/obesity_child_07_08/obesity_child_07_08.pdf
 41. Dohan FC. Cereals and schizophrenia: data and hypothesis. Acta Psychiat Scand. 1966;42(2):125-152.
 42. Dohan FC, Grasberger JC, Lowell FM et al. Relapsed Schizophrenics: More Rapid Improvement on a Milk-and Cereal-free Diet. Brit J Psychiat. 1969;115:595-596
 43. Singh MM, Kay SR. Wheat Gluten as a Pathogenic Factor in Schizophrenia. Science 1976;191:401-402.
 44. Zioudrou C, Streaty RA, Klee WA. Opioid peptides derived from food proteins. The Exorphins. J Biol Chem 1979;254:2446-2449
 45. Mycroft FJ, Wei ET, Bernardin JE, Kasarda DD. MIF-like sequences in milk and wheat proteins. 1982;307:895
 46. Dohan FC et al. Is Schizophrenia Rare if Grain is Rare? Biol Psychiat. 1984;19(3):385-399.
 47. Dohan FC. Is celiac disease a clue to pathogenesis of schizophrenia? Mental Hyg. 1969;53: 525-529
 48. Ashkenazi A, Krasilowsky D, Levin S et al. Immunologic reaction of psychotic patients to fractions of gluten. Am J Psychiat 1979;136(10):1306-1309
 49. Cheatham RA, Roberts SB, Das SK et al. Long-term effects of provided low and high glycemic load low energy diets on mood and cognition. Physiol Behav. 2009;98(3):374-379.
 50. Ledochowski M, Widner B, Bair H et al. Fructose- and sorbitol-reduced diet improves mood and gastrointestinal disturbances in fructose malabsorbers. Scand J Gastroenterol. 2000;35(10):1048-52.
 51. Westover AN, Marangell LB. A cross-national relationship between sugar consumption and major depression? Depress Anxiety. 2002;16(3):118-20.
 52. Peet M. International variations in the outcome of schizophrenia and the prevalence of depression in relation to national dietary practices: an ecological analysis. Br J Psychiatry. 2004;184:404-8.
 53. Howard AL, Robinson M, Smith GJ et al. ADHD Is Associated With a ‘Western’ Dietary Pattern in Adolescents. Journal of Attention Disorders. 2011;15(5):403-11.
 54. Amminger GP, Schäfer MR, Papageorgiou Ket al. Long-chain omega-3 fatty acids for Indicated Prevention of Psychotic Disorders: A Randomized, Placebo-Controlled Trial. Arch Gen Psychiatry. 2010;67(2):146-154.
 55. Lustig RH, Schmidt LA, Brindis CD. Public health: The toxic truth about sugar. 2012;482(7383):27-9. Available at http://www.connectwell.biz/pdf/comment_truth_about_sugar.pdf
 56. Lustig RH. Fructose: it’s “alcohol without the buzz”. Adv Nutr. 2013;4(2):226-35.
 57. Volek JS, Fernandez ML, Feinman RD, Phinney SD. Dietary carbohydrate restriction induces a unique metabolic state positively affecting atherogenic dyslipidemia, fatty acid partitioning, and metabolic syndrome. Prog Lipid Res. 2008;47(5):307-18.
 58. Anderson KM, Castelli WP, Levy D. Cholesterol and mortality. 30 y of follow-up from the Framingham study. 1987;257:2176–2180.
 59. Howard BV, Van Horn L, Hsia J et al. Low-fat dietary pattern and risk of cardiovascular disease: the Women’s Health Initiative randomized controlled dietary modification trial. 2006;295: 655–666. Available at http://jama.jamanetwork.com/article.aspx?articleid=202339
 60. Siri-Tarino PW, Sun Q, Hu FB, Krauss RM. Meta-analysis of prospective cohort studies evaluating the association of saturated fat with cardiovascular disease. Am J Clin Nutr. 2010;91:535–546. Available at http://ajcn.nutrition.org/content/91/3/535.full
 61. Siri-Tarino PW, Sun Q, Hu FB, Krauss RM. Saturated fat, carbohydrate, and cardiovascular disease. Am J Clin Nutr. 2010;91:502–509. Available at http://ajcn.nutrition.org/content/91/3/502.full
 62. Puaschitz NG, Strand E, Norekvål TM et al. Dietary Intake of Saturated Fat is not Associated with Risk of Coronary Events or Mortality in Patients with Established Coronary Artery Disease. J Nutr. 2015;145(2):299-305. Available at http://jn.nutrition.org/content/145/2/299.long
 63. Ravnskov U, Rosche PJ, Sutter MC, Houston MC. Should we lower cholesterol as much as possible? 2006;332:1330–1332.
 64. Yancy WS, Westman EC, French PA, Califf RM. Diets and clinical coronary events: The truth is out there. 2003;107:10–16. Available at http://circ.ahajournals.org/content/107/1/10.full
 65. Petursson H, Sigurdsson JA, Bengtsson C et al. Is the use of cholesterol in mortality risk algorithms in clinical guidelines valid? Ten years prospective data from the Norwegian HUNT 2 study. J Eval Clin Pract. 2012;18(1):159-68. Available at http://www.ncbi.nlm.nih.gov/pmc/articles/PMC3303886/
 66. USDA, USDH and HS. Scientific Report of the 2015 Dietary Guidelines Advisory Committee. Feb 2015. P 1. Available at http://gov/dietaryguidelines/2015-scientific-report/PDFs/Scientific-Report-of-the-2015-Dietary-Guidelines-Advisory-Committee.pdf
 67. Guidelines for making available wholesome, nutritious, safe and hygienic food to school children in India. FSSAI, Govt. of India. Oct 14, 2015. Available at http://www.fssai.gov.in/Portals/0/pdf/Order_Draft_Guidelines_School_Children.pdf
 68. ಬಸವರಾಜು ಎಲ್. ಬಸವಣ್ಣನವರ ಷಟ್‌ಸ್ಥಲದ ವಚನಗಳು. ಪು. 259
 69. Swami Vivekananda. Complete Works. 4;486